ಏತನ್ಮಧ್ಯೆ

ನುಗ್ಗೇಕಾಯಿ ಸಾಂಬಾರಿನ
ಪರಿಮಳದ ಓಣಿಗಳಲ್ಲಿ ದಾರಿ ಬದಿ
ಮನೆ ಮನೆಯಂಗಳದಿ
ತುಳಸೀಕಟ್ಟೆಗೆ ಸುತ್ತು ಹಾಕುವ
ಹಳದೀ ಮುತ್ತೈದೆಯರು
ಅಂಗಡಿ ಗಲ್ಲಾಗಳಲ್ಲಿ
ದಿಂಬು ಕೂತ
ಮೂರು ನಾಲ್ಕು ಲಾರಿಗಳುಳ್ಳ
ಅವರ ದೊಗಳೆ ಗಂಡಂದಿರು

ಊರ ಹೊರಗೆ
ಇವರುಗಳು ತಪ್ಪಿಯೂ ಮೂಸದ
ಹೇಮಮಾಲಿನಿ ಜಿತೇಂದ್ರ
ಸಿನೇಮಾ ಥೇಟರು
ಆಕಾಶದಲ್ಲೆಲ್ಲೋ ಚಂದ್ರ ಎಲ್ಲೋ ಸೂರ್‍ಯೋದಯ
ಸಾಹಿತ್ಯಕಲೆ ಯುದ್ಧ ಒಪ್ಪಂದ ಚುನಾವಣೆ ಪೋಸ್ಟರು
ಎಲ್ಲೋ ತೀರದ ಗುಂಟ
ಕೈ ಕುಲುಕುವ ನೀರು

ಆದರೂ
ಅಕ್ಕಿ ಗೋಧಿ ಧಾರಣೆ ಫೋನಿನ
ಉತಾವಳಿಯ ನಡುವೆ
ಅಷ್ಟಮಿ ಸಂಕಷ್ಟಿ ಲಕ್ಷ್ಮೀಪೂಜೆ
ಮಂಗಳಾರತಿ ನಡುವೆ
ಬಿಡುವು ಮಾಡಿಕೊಂಡು
ಮನೆ ತುಂಬ
ಮಕ್ಕಳನ್ನು ಹಡೆದರು
*****