ವಿಕಾರಿ

‘ಬಿಕೊ’ ಎನ್ನುತಿದೆ, ಹಾಳು ನೀಲಿಯ ಸುರಿವ ಆಕಾಶ.
ಅಲ್ಲಿ ಒಂದೇ ಸಮನೆ ಚಕ್ರ ಹಾಕುವ ಹದ್ದು-
ಅದಕೆ ಮದ್ದು.
ವಕ್ರ ಹಳಿಗಳಗುಂಟ ಹೊಟ್ಟೆ ಹೊಸೆಯುತ ಹೊರಟು ನಿಂತಿಹುದು ರೈಲು.
ಬಿಸಿಲ ನೆತ್ತಿಯ ಬಿರಿವ ಸಿಳ್ಳು, ಕಪ್ಪು ಹೊಗೆ;
ಒಟ್ಟರಸಿ ಬಿಟ್ಟ ನಿಟ್ಟುಸಿರು!
ಬಡಕಲು ಗಿಡದ ಬುಡದಲ್ಲಿ ತಳಿರು-ನಾಲಗೆ ಚಾಚಿ
ದಸದಸ ತೇಕುತಿದೆ ನಾಯಿ;
ಪಾತಾಳದಾಳಕ್ಕೆ ಸೇದು ಹಗ್ಗವ ಹಾಕಿ ಜಗ್ಗಿದಂತಿಹುದದರ ಬಾಯಿ!
ಊರು ಕೇರಿಯ ದಾಟಿ, ಕೋಲಿ ಹೊಲಗಳ ತುಳಿದು
ಕೆಮ್ಮಣ್ಣು ಮರಡಿಯಾಚೆ-
ಬಿಸಿಲ ಚಾಪೆಯ ಸುರುಳಿ ಬಿಚ್ಚಿ ಓಡುತ್ತಿಹವು ಎಲ್ಲಿಗೋ ಬಿಸಿಲುಗುದುರೆ.

ವರುಷದುದ್ದಕೂ ವಟಗುಟ್ಟಿತು ಕಪ್ಪೆ; ಈ ಜಗವೇ ಕೆಟ್ಟಿದೆಯೆಂದು,
ಸುತ್ತು ಸುತ್ತಿಗೂ ಬಾಳಿನ ಗಾಣಕೆ ಪ್ರಾಣವ ಹೂಡಿದೆಯೆಂದು,
ಕೀಲಿ ಜಡಿದಿರುವ ಗುದಾಮಿನೊಳಗೆ ಖಾಲಿ ಚೀಲಗಳೆ ಒಟ್ಟಿವೆಯೆಂದು,
ತುಂಬಿ ಬೆಳೆದ ಹೊಲ ನೋಡಿಕೊಂಡು ದನ ತುಡುಗಿಗೆ ಬಿಟ್ಟಿಹರೆಂದು.
ಕಟ್ಟಡದಲ್ಲಿಯ ಕಲ್ಲು ಸಿಡಿದು ತಾವಿಟ್ಟಲ್ಲಿರಲಾರೆವು ಎಂದು-
ಕೂಡಿ ಕಟ್ಟಿ, ಬೆಳೆಸುವುದನೆ ಮರೆತಿವೆ ಬುದ್ಧಿಯೊ ತಲೆಗೊಂದು.
ಸೊಟ್ಟ ನಾಣ್ಯವೂ ದಿಟ್ಟಿಸಿ ನೋಡಿದೆ ಮನುಜನ ಮುಖವನ್ನು
ಬಟ್ಟೆಯ ಒಳಗೇ ಬೆಳೆಯುತ್ತಿದ್ದರು ಕಾಣದು ಬಿಳಿ ತೊನ್ನು-
ಆಗ ಈಗ ಲೊಚಗುಟ್ಟಿದ ಹಲ್ಲಿ, ಒಳತೋ ಒಳಿತೆನ್ನು.

ತೊಟ್ಟು ನೀರಿರದ ಬಟ್ಟ ಬಯಲಿನಲ್ಲಿ ಸುಂಟರಗಾಳಿ-
ಕುಣಿವ ತಾಂಡವ ಮೂರ್‍ತಿ ಅಟ್ಟಹಾಸ!
ಮರ ಮರದ ಕೊಂಬೆಯಲಿ ಏನೊ ಪವಾಡ
ಚೆಂದುಟಿಯ ಮಂದಹಾಸ.
ಅಗ್ನಿಗೆಂಡವ ಹಾಯ್ದು ತಳಿರ ಪಲ್ಲಕ್ಕಿಯಲಿ
ಚಿಗುರು-ಹೂ-ಮಿಡಿ ಛತ್ರ ಚಾಮರವ ಹಿಡಿದು;
‘ದೇವತಾ ಪೃಥಿವಿ’
ವರುಷ ವರುಷವು ತಪ್ಪದಂತೆ ಹೂವಿನ ತೇರು
ಬಾನ ಹರುಷಕ ನೆಲವು ತಾಯಿ ಬೇರು.
ಕೋಗಿಲೆಯ ಮೈದುಂಬಿ ಹೊಸ ಜೀವ ಬಂದಂತೆ
ಬರುವ ಸಂವತ್ಸರದ ಹೇಳಿಕೆಯ ಸಾರು.

ಯುಗ ಯುಗದ ವಿಸ್ಮೃತಿಯ ಬಾವಿ ತಳದಿಂದ ಕಪ್ಪಲಿ ಹೊಡೆದು
ಜೀವಕ್ಕೆ ನೀರು ಹಾಯಿಸುವ ಜುಳುಜುಳು ನಿನಾದ;
ಬದುಕಿನೆಲೆವಳ್ಳಿ, ತೋಟ ಸೊಂಪಾಗಿ, ಕಬ್ಬಿನಾಲಿಯು ಹಾಲು ಹಬ್ಬವಾಗಿ,
ಊರೂರ ಹಾದಿಯಲಿ ಬೆಳೆದ ಬೇವಿನ ಮರದ ನೆಳಲು ತಂಪಾಗಿ,
ಬಳಲಿಕೆಯ ಹೂದುಟಿಗೆ ಬೆಲ್ಲದಚ್ಚಾಗಿ-
ಸವಿಗೊಳಿಸಿ ಸಮರಸವ ಎದೆಗಿಳಿಸಲೆಂದಿತ್ತು ಆ ವಿಳಂಬಿ.
ಅದಕೆ ಬೆಂಬಲವಾಗಿ ಬಂದೆಯಾ,
ಬಾ, ವಿಕಾರಿ.
(ಆ ಹೆಸರು ನಿನಗಲ್ಲ, ನಮಗೇ ಸರಿ.)
ಒಳಗು ಹೊರಗೂ ನಿನ್ನ ಹರಿದು ತಿನ್ನುವರಿಹರು ಬಲು ಹುಷಾರಿ.
ನೀನಾಗದಿರು ಕಂಡ ಕಂಡವರ ಮೋರೆ ಪರಚಿಕೊಳ್ಳುವ ಮಾರಿ,
ಆಗು ಸುವಿಚಾರಿ, ಜನತೆಗುವಕಾರಿ, ಜಗಕೆ ಮಂಗಲಕಾರಿ.
ಭೂತ ಭವಿಷತ್ತುಗಳ ಕಾದಾಟದಲಿ ನಿನ್ನ ವರ್‍ತಮಾನದ ಜೋಲಿ ತಪ್ಪದಿರಲಿ
ನೀನಾಗು ತುಮುಲದಲಿ ತಲೆಯನೆತ್ತುವ ಕಲಿ
ನಿನ್ನ ಹೊಂಗನಸುಗಳು ನನಸಾಗಲಿ.
*****