ಕಾವ್ಯದ ಚರಿತ್ರೆಯಲ್ಲಿ ಸಂಪ್ರದಾಯವಾದಿಗಳು ಮತ್ತು ವಾಮಪಂಥೀಯರು ತಮ್ಮೆಲ್ಲ ಶಕ್ತಿಗಳೊಂದಿಗೆ ರಂಗಕ್ಕೆ ಬಂದು ನಿಂತಾಗ ವಿಮರ್ಶಾ ಪರಂಪರೆಯೊಂದರ ಮೂಲಭೂತ ಗುಣವಾದ ಬಹುಮುಖೀ ಪ್ರಜ್ಞೆ ಅಲುಗಾಡತೊಡಗುತ್ತದೆ. ಮೇಲಿನೆರಡು ಮಾರ್ಗಗಳ ಕವಿಗಳು ತಮ್ಮ ಒಳದ್ರವ್ಯವನ್ನು ಕಾಪಾಡಿಕೊಳ್ಳುವುದು ತಮ್ಮ ಆಕ್ರಮಣಶೀಲತೆಯ ಮೂಲಕ. ಅವರ ಈ ತೀವ್ರ ಏಕಾಗ್ರತೆಯ ಸೃಷ್ಟಿಯನ್ನು ನಿಟ್ಟಿಸಿ ನೋಡ ನೋಡುತ್ತಿದ್ದ ಹಾಗೆ ವಿಮರ್ಶೆ ಕೂಡಾ ಅದೇ ಬಗೆಯ ಏಕಾಗ್ರತೆಗೆ ತಲಪುತ್ತದೆ; ತಾನು ಧ್ಯಾನಿಸುತ್ತಿದ್ದ ವಸ್ತುವಿನ ಜೊತೆಗೇ ಬೆರೆತು ಹೋಗುತ್ತದೆ.
೧೯೫೦ರ ದಶಕದಿಂದಾಚೆಗೆ ಕನ್ನಡ ಕಾವ್ಯ ಮತ್ತು ವಿಮರ್ಶೆಯ ಕ್ಷೇತ್ರದಲ್ಲಿ ಇದೇ ಬಗೆಯ ವಿದ್ಯಮಾನ ಸಂಭವಿಸುತ್ತಿದೆ ಎಂದು ಈ ಲೇಖಕನ ಅನಿಸಿಕೆ. ಮೊದಲು ಗೋಪಾಲಕೃಷ್ಣ ಅಡಿಗರ ಅಯಸ್ಕಾಂತ ಪ್ರತಿಭೆ, ನಂತರ ೭೦ರ ದಶಕದಲ್ಲಿ ವಾಮಪಂಥೀಯ ಮೌಲ್ಯಗಳ ಸಾಹಿತ್ಯ ವಿಜೃಂಭಣೆ-ಹೀಗಾಗಿ, ಒಟ್ಟಾರೆಯಾಗಿ ಕನ್ನಡ ವಿಮರ್ಶೆ ಸೃಜನಶೀಲತೆಯ ಬಗೆಗೆ ಬಹುಮುಖೀ ಪ್ರಜ್ಞೆಯನ್ನು ಮಸುಕಾಗಿಸಿಕೊಂಡಿತು.
ಈ ಕಾರಣದಿಂದಾಗಿ ಮೇಲಿನೆರಡೂ ಕಾವ್ಯ ಮಾರ್ಗಗಳಿಗಿಂತ ಭಿನ್ನವಾಗಿ ಸೃಷ್ಟಿಸುವ ಕವಿಗಳ ಬಗೆಗೆ ಅವಶ್ಯಕವಿದ್ದಷ್ಟು ಗಮನ ಬೀಳದೆಹೋಯಿತು. ಅದರಲ್ಲೂ, ಉದಾರವಾದಿ ಕಾವ್ಯ ಮಾರ್ಗದ ಪ್ರಮುಖ ಕವಿಗಳಾದ ಗಂಗಾಧರ ಚಿತ್ತಾಲ, ಕೆ.ಎಸ್. ನರಸಿಂಹಸ್ವಾಮಿ, ಜಿ.ಎಸ್. ಶಿವರುದ್ರಪ್ಪ, ಚಿನ್ನವೀರ ಕಣವಿ ಅವರ ಕಾವ್ಯದ ವೈಶಿಷ್ಟ್ಯತೆಯ ಬಗೆಗೆ ಗಾಢ ಚರ್ಚೆ ಆಗಲೇ ಇಲ್ಲ. ಈ ಕವಿಗಳ ಕಾವ್ಯದ ಬಗ್ಗೆ ಚರ್ಚಿಸುವಾಗಲೂ ತೀವ್ರ ಏಕಾಗ್ರತೆಯ ಕಾವ್ಯದ ಪ್ರಭಾವಲಯದಲ್ಲಿ ನಿಂತೇ ಅರ್ಥೈಸುವ ಪ್ರಯತ್ನ ಮಾಡಲಾಯಿತು. ಆಧುನಿಕ ಕನ್ನಡ ಕಾವ್ಯದ ಮೊದಲ ನಟ ಗೋಪಾಲಕೃಷ್ಣ ಅಡಿಗರು (ನೀಷೆ ತನ್ನ ಮೇಲಿನ ಪ್ರಭಾವಗಳಲ್ಲೊಂದಾದ ಸಂಗೀತಗಾರ ವ್ಯಾಗ್ನರನನ್ನು ಕುರಿತು ಬಳಸಿದ ಮಾತು ಇದು) ಎಂಬ ಅಂಶವನ್ನು ಗಮನಿಸಿದಾಗ ಕಳೆದೆರಡು ದಶಕಗಳಲ್ಲಿ ವಿಮರ್ಶೆಯನ್ನು ಬರೆದವರ ಸಮಸ್ಯೆಗಳು ಸ್ಪಷ್ಟವಾಗುತ್ತವೆ. ಅದು ಕಣ್ಣು ಕೀಳಲಾರದಷ್ಟು ಬೆರಗಿನ ನೋಟ.
ಆದರೆ ಅಡಿಗರ ಕಾವ್ಯದಲ್ಲಿ ಕಾಣದಿರುವ, ಈಗಿನ ವಾಮ ಪಂಥೀಯ ಕಾವ್ಯ ಇನ್ನೂ ಒಳಗೊಳ್ಳದಿರುವ ಅನೇಕ ಮಹತ್ವದ ಅನುಭವ ವಲಯಗಳು ಮೇಲೆ ಹೆಸರಿಸಿದ ಕವಿಗಳಲ್ಲಿ ಸಾಕಷ್ಟು ಶಕ್ತಿಯುತವಾಗಿಯೇ ಪ್ರಕಟವಾಗಿವೆ. ಕನ್ನಡ ನವೋದಯದ ಪ್ರಮುಖ ಸತ್ವಾಂಶಗಳ ಮುಂದುವರಿಕೆ ಇದು ಎಂದರೂ ಸಲ್ಲುತ್ತದೆ. ನಿಸರ್ಗದ ಚೇತೋಹಾರಿ ಅನುಭವ, ಅನುಭಾವೀ ಕಂಪನಗಳು, ಆಶಾವಾದೀ ನೆಲೆಗಳಿಂದ ಹೊರಡುವ ಮಾರ್ದವತೆ, ಮಾನವತಾವಾದ-ಈ ಎಲ್ಲ ಅಂಶಗಳನ್ನು ಕನ್ನಡದ ಉದಾರವಾದಿ ಕಾವ್ಯ ಮಾರ್ಗದಲ್ಲಿ ಕಾಣುತ್ತೇವೆ. ಅಡಿಗರ, ವಾಮಪಂಥೀಯರ, ಆಕರ್ಷಕ ತೀವ್ರತೆಯಿಂದಾಚೆಗೆ ಹೋಗಿ ಕಾವ್ಯಜೀವನದ ಈ ಉಲ್ಲಾಸಕರ ಅನುಭವಗಳನ್ನು ಪಡೆಯಬೇಕು ಎಂಬ ಅನುಭವ ಎಲ್ಲ ಕಾವ್ಯಾಭಿಮಾನಿಗಳಲ್ಲೂ ಸಹಜವಾಗಿಯೇ ಹರಿಯುತ್ತಿರುತ್ತದೆ ಎಂಬುದಕ್ಕೆ ಈ ಕವಿಗಳಿಗೆ ಸಾಮಾನ್ಯ ಕಾವ್ಯಾಭಿಮಾನಿಗಳಿಂದ ಸಿಕ್ಕಿರುವ ಮೌನ ಬೆಂಬಲವೇ ಸಾಕ್ಷಿ.
ಕನ್ನಡ ನವೋದಯದ ತುಂಬುಸಮೃದ್ಧತೆಯಿಂದ ಬಹಳಷ್ಟನ್ನು ಪಡೆದು ಮನದುಂಬಿಸಿಕೊಂಡು ತಮ್ಮ ದಾರಿ ಹುಡುಕುತ್ತ ಹೊರಟ ಪಥಿಕರು ಇವರು. ಕಹಿತನದ, ಒಂಟಿತನದ, ಬಿಕ್ಕಟ್ಟಿನ ತೀವ್ರ ಅನುಭವವನ್ನೂ ತಮ್ಮ ಕಾವ್ಯದಲ್ಲಿ ಹೇಳಿಯೂ ನವೋದಯದ ಉಲ್ಲಾಸವನ್ನು ಮತ್ತೆಮತ್ತೆ ಬದುಕ ಬಯಸಿದ ಕವಿಗಳು ನಾಲ್ಕು ಜನ. ನವೋದಯದ ಪ್ರಮುಖ ಗುಣವಾದ ಉದಾರವಾದವನ್ನು ಎಲ್ಲ ಹೊಡೆತಗಳಿಂದ ಸಾಧ್ಯವಿದ್ದಷ್ಟು ರಕ್ಷಿಸಿ ಮುನ್ನಡೆಸಿದ ಈ ಕವಿಗಳ ವಿಶೇಷ ಅಧ್ಯಯನ ನಡೆದರೆ, ಅದು ಕನ್ನಡ ವಿಮರ್ಶೆಯ ಮತ್ತೊಂದು ಬಗೆಯ ಜೀವನ ದರ್ಶನದ ವೈಶಿಷ್ಟ್ಯವನ್ನು ಮನಗಾಣಿಸಲಿದೆ.
ಜಿ. ಎಸ್. ಶಿವರುದ್ರಪ್ಪನವರ ಕಾವ್ಯದ ಸ್ಥೂಲ ಸಮೀಕ್ಷೆಯನ್ನು ಮಾಡುವ ಆಶಯವನ್ನು ಹೊಂದಿರುವ ಈ ಪುಟ್ಟ ಬರಹದ ಹಿನ್ನೆಲೆಯಲ್ಲಿ ಕೆಲಸಮಾಡಿರುವ ತಾತ್ವಿಕ ನೆಲೆ ಮೇಲಿನದು.
– ೨ –
ಜಿ. ಎಸ್. ಎಸ್. ರ ಕಾವ್ಯದ ಮೊದಲ ಘಟ್ಟವನ್ನು ಸೌಂದರ್ಯಾತ್ಮಕ ಘಟ್ಟ ಎಂದು ಕರಯಬಹುದು; ಆ ಕಾವ್ಯ ಮಿರಾಂಡಳ ರೀತಿಯದು. ಮೇಲೆ ಕಣ್ಣಿಟ್ಟ ಕಡೆಗೆಲ್ಲ ಜ್ಯೋತಿರ್ಮಾಲೆ ಕಾಣುವಂಥ ಆ ಕಾವ್ಯಲೋಕ ಅತ್ಯಂತ ಬಿಕ್ಕಟ್ಟಿನ ಗಳಿಗೆಗಳಲ್ಲಿ, ಮೆಲ್ಲನೆ ಮನಸ್ಸನ್ನು ತೇಲಿಸುವಂಥದು. ಕಾವ್ಯದ ಬಗೆಗೆ ನಾವೆಷ್ಟೇ ಕ್ರಿಯಾಶೀಲ ಸಿದ್ಧಾಂತಗಳನ್ನು ಹೇಳಿದರೂ, ಒಳಗೆಲ್ಲೋ ಮನಸ್ಸು ತುಡಿಯುವುದು ಈ ಬಗೆಯ ಕಾವ್ಯಾನುಭಾವಕ್ಕೇ. ಬಹುಶಃ ಕಾವ್ಯದ ಉತ್ಕಟ ಕ್ರಿಯಾಶೀಲತೆ ಇರುವುದು ಈ ಪ್ರತಿಲೋಕ ಸೃಷ್ಟಿಯಲ್ಲೇ. ಹೀಗಾಗಿ, ಜಿ.ಎಸ್.ರ ಮೊದಲ ಘಟ್ಟದ ಭಾವಗೀತೆಗಳು ಈಗಲೂ ನನಗೆ ಪ್ರಿಯವಾದವುಗಳೇ. ಶಬ್ದಗಳ ಗುಂಗಿಗೆ ಪ್ರತಿಸ್ಪಂದಿಸಲು ಆಗ ತಾನೆ ಕಿವಿತೆರೆಯುತ್ತಿದ್ದ ದಿನಗಳಲ್ಲಿ ಕೇಳಿದ ಒಂದಷ್ಟು ಹಾಡುಗಳು ಈಗಲೂ ಕಿವಿಯಲ್ಲಿ ತೇಲುತ್ತವೆ.(ಅವನ್ನು ಹಾಡಿದ ಹುಡುಗಿಯರ ನೆನಪು ನನ್ನ ಮಟ್ಟಿಗೆ ಈ ಗೀತೆಗಳಿಗೆ ಮತ್ತಷ್ಟು ಶೋಭೆ ತಂದಿದೆ). ‘ಅಲ್ಲಿ-ಇಲ್ಲಿ’,‘ನೆಲದ ಕರೆ’,‘ಹಳೆಯ ಹಾಡು’,‘ತೃಪ್ತಿ’,‘ಶಾಕುಂತಲ ಸಂಧ್ಯೆ’ ಮುಂತಾದ ಕವನಗಳು ಅವುಗಳ ಭಾವನಾ ವಾತಾವರಣದ ಮಾರ್ದವತೆಯ ಕಾರಣಕ್ಕಾಗಿಯೇ ಹೆಚ್ಚು ಪ್ರಿಯವಾಗುವಂಥವು. ಜಿ. ಎಸ್. ಎಸ್. ರ ಮೊದಲ ಮೂರು ಕವನ ಸಂಕಲನಗಳು ಈ ಘಟ್ಟಕ್ಕೆ ಸೇರುತ್ತವೆ.
ಒಂದು ಬಗೆಯ ಸಾತ್ವಿಕ ಹುಚ್ಚುತನ ಈ ಘಟ್ಟದ ಮುಖ್ಯಗುಣ. ಚೆಲುವಿನ ಆರಾಧನೆ ಇಲ್ಲಿಯ ಪ್ರಮುಖ ಅನುಭವವಾದರೂ ಅದು ಎಲ್ಲಿಯೂ ಬೊಹೀಮಿಯನ್ ಆಗುವುದಿಲ್ಲ. ನೀತಿ ಅನೀತಿಗಳ ಲೋಕಗಳ ವ್ಯತ್ಯಾಸವನ್ನು ಕತ್ತರಿಸಿ ಹಾಕುವ ಇಂದ್ರಿಯ ಗಮ್ಯ ಅನುಭವಗಳ ಉತ್ಕಟ ಶೋಧನೆ ಇಲ್ಲಿಲ್ಲ. ಬದಲಾಗಿ, ಚೆಲುವೆಂಬುದು ಮನಸ್ಸನ್ನು ಉನ್ನತೀಕರಿಸುವ ಒಂದು ಅನುಭವವಾಗಿ ಪ್ರಕಟವಾಗುತ್ತದೆ. ಹುಚ್ಚುತನ ಬೋದಿಲೇರ್‌ನ ಅನುಭವದ ಹಾಗೆ ಗಾಜಿನಂಗಡಿಯೊಳಗೆ ನುಗ್ಗಿದ ಜೋಡಿಗೂಳಿಯಾಗುವುದಿಲ್ಲ. ಬದಲಾಗಿ ಒಂದು ದಿವ್ಯ ವಿಸ್ಮಯದ ಎತ್ತರಕ್ಕೆ ಓದುಗನನ್ನು ಅದು ಕರದೊಯ್ಯುತ್ತದೆ. ‘ಜಡೆ’ ಕವನ ಇದಕ್ಕೆ ಚೆಲುವಿನ ಪ್ಯಾಂತಿಸ್ಟ್ ಆರಾಧನೆಯಂತೆ ಬೆಳೆದುನಿಲ್ಲುವ ಈ ಕವನ ಕೊನೆಗೆ ಸಾಧಿಸುವ ವಿಸ್ಮಯ ಇಡೀ ಕವನದ ಅನುಭವವನ್ನೇ ಪರಿವರ್ತಿಸಿಬಿಡುತ್ತದೆ.
ಜಿ.ಎಸ್.ಎಸ್. ಅವರ ಸೌಂದರ್ಯಾರಾಧನೆಗೂ, ಹತ್ತೊಂಬತ್ತನೇ ಶತಮಾನದ ಯುರೋಪಿಯನ್ ಸೌಂದರ್ಯಾರಾಧಕರ ನಿಲುವುಗಳಿಗೂ ಇರುವ ವ್ಯತ್ಯಾಸ ಅಪಾರವಾದದ್ದು. ಭಗ್ನಗೊಂಡ ಬದುಕಿನ ನೆಲೆಗಳಿಂದ, ತೀವ್ರ ಬಿಕ್ಕಟ್ಟಿನ ಅರಿವಿನಿಂದ ಹುಟ್ಟಿದ ಸೌಂದರ್ಯಾರಾಧನೆ ಅದು. ಜೀವನ ಮತ್ತು ಸೌಂದರ್ಯಾನ್ವೇಷಣೆ ಪರಸ್ಪರ ವಿರೋಧಿಗಳು ಎಂಬ ನೆಲೆಗಳಿಂದ ಹೊರಟು ಎರಡನೆಯದನ್ನು ಒಂದು ಬಗೆಯ ಹತಾಶೆಯಿಂದ ತಬ್ಬಿಕೊಂಡವರು ಅವರು. ಆದರೆ ಇಲ್ಲಿ ಅದು ಜೀವನದ ಸುಸಂಗತತೆಯ, ಅರ್ಥವಂತಿಕೆಯ ಸಂಕೇತ.
ಈ ಘಟ್ಟದ ಇನ್ನೊಂದು ಮುಖ್ಯ ಗುಣವೆಂದರೆ ಅದು ಒಂದು ಕ್ಷಣದ ಅನುಭವವನ್ನು ಹೇಳುವಂಥದು. ಅದು ಒಂದು ನಿರ್ದಿಷ್ಟ ಕಾಲಾವಧಿಯ, ಮನಃಸ್ಥಿತಿಯ ಅಭಿವ್ಯಕ್ತಿ. ಕುವೆಂಪು ಅವರ ಪ್ರಭಾವದಲ್ಲಿದ್ದೂ ಒಂದು ಮನಃಸ್ಥಿತಿ ಪುನರ್ ನಿರ್ಮಾಣದ ದೃಷ್ಟಿಯಿಂದ ಇದು ಪು.ತಿ.ನ. ಕಾವ್ಯಕ್ಕೆ ಹೆಚ್ಚು ಸಮೀಪ. ಈ ಘಟ್ಟದ ಕವನಗಳನ್ನು ನಾನು ಈಗ ಮತ್ತೊಮ್ಮೆ ಓದುತ್ತಿದ್ದ ಹಾಗೆ ನನಗೆ ದಕ್ಕಿದ ಮುಖ್ಯ ಅನುಭವವೆಂದರೆ ನಿರಂತರವಾಗಿ ಹರಿಯುತ್ತಿರುವ ಕಾಲಪ್ರವಾಹದೊಳಗೆ ಕೆಲವು ನಿರ್ದಿಷ್ಟ ಅವಧಿಯ ಅನುಭವಗಳನ್ನು, ಭಾವನಾ ವಿಶೇಷಗಳನ್ನೂ ಕಡೆದು ನಿಲ್ಲಿಸುವ ಕ್ರಿಯೆ; ಅನುಭವದ ಪೂರ್ಣತೆಗಿಂತ ಆ ಅವಧಿಯ ಅನುಭೂತಿಗಳ ಉನ್ನತೀಕರಣ.
ಇಲ್ಲಿಯ ಭಾವಗೀತಾತ್ಮಕತೆ ಜಿ.ಎಸ್.ಎಸ್. ಅವರ ಕಾವ್ಯಜೀವನದುದ್ದಕ್ಕೂ ಹರಿದು ಬಂದಿರುವುದನ್ನು ಕಾಣಬಹುದು. ಆದರೆ ಇಲ್ಲಿಯಷ್ಟೇ ತುಂಬಿ ಹರಿಯುತ್ತದೆ ಎಂದೇನೂ ಹೇಳಲಾಗುವುದಿಲ್ಲ. ಜೀವನದ ವೈಷಮ್ಯಗಳ ಮರಳಿಗೆ ಅದು ನುಗ್ಗಿದಾಗ ತನ್ನ ಮೊದಲಿನ ಸಮೃದ್ಧತೆಯನ್ನು ಕಳೆದುಕೊಂಡರೂ ಮೆಲ್ಲಗೆ ಹಾಗೇ ಜಿನುಗುತ್ತಾ ಮುಂದುವರಿಯಿತು.
ಈ ಲೋಕದ ಸ್ವಯಂಪೂರ್ಣತೆ, ಮಾಧುರ್ಯ ಆಶ್ಚರ್ಯಕರವಾದದ್ದು. ಈ ಅಂಶ ಈ ಬಗೆಯ ಕಾವ್ಯದ ಮೇಲೆ ಮಾಡಬಹುದಾದ ಪರಿಣಾಮಕಾರಿ ಟೀಕೆ ಕೂಡಾ ಹೌದು. ಈ ಕಾರಣಕ್ಕಾಗಿಯೇ ಕಾವ್ಯದಲ್ಲಿ ಘರ್ಷಣೆಗಳ ಮಂಥನವನ್ನು ಆಕ್ರಮಣಕಾರಿ ಏಕಾಗ್ರತೆಯನ್ನು ನಿರೀಕ್ಷಿಸುವ ನನ್ನಂಥವರಿಗೆ ಇದು ಅನೇಕ ಕುತೂಹಲಗಳ ಲೋಕವೂ ಹೌದು. ಏಕೆಂದರೆ, ಬಾಳಿನಾಸೆಗೆ ಹಾಲನ್ನೆರೆಯುವ ಭಾವಗೀತೆಗಳು ಎಂದರೆ ಒಂದು ಹಂತದಲ್ಲಿ ಇಂಥವೇ.
ಈ ಘಟ್ಟದ ಕಾವ್ಯಾನುಭವಕ್ಕೆ ಒಂದು ಸಮರ್ಥ ವಿಮರ್ಶಾರೂಪಕಕ್ಕಾಗಿ ಹುಡುಕುತ್ತಿರುವಾಗ ಶೇಕ್ಸ್‌ಪಿಯರ್‌ನ ‘ದಿ ಟೆಂಪೆಸ್ಟ್’ ನಾಟಕದ ಒಂದು ಬಾಗ ನೆರವಾಗಿದೆ. ಮೊದಲ ಬಾರಿಗೆ ಅಷ್ಟೊಂದು ಜನರನ್ನು ಕಂಡ ಆ ಹುಡುಗಿ ಮಿರಾಂಡ ತನ್ನೆಲ್ಲ ಜೀವನೋಲ್ಲಾಸಗಳ ಶೃಂಗ ತಲುಪಿದಂತೆ ಆನಂದದಿಂದ ಕೂಗುತ್ತಾಳೆ ಜಗತ್ತಿನ ಕ್ರೂರತೆಯ ಪರಿಚಯ ಇನ್ನೂ ಆಗಿರದ ಹುಡುಗಿ ಅವಳು. ಎಲ್ಲೆಲ್ಲೂ; ಚೆಲುವನ್ನೇ ಆಕೆ ಕಾಣುತ್ತಾಳೆ.
ಜೀವನದ ಹೊಡೆತಗಳಿಂದ ಜರ್ಝರಿತನಾಗಿದ್ದ ತಂದೆ ಪ್ರಾಸ್ಪೆರೊ ಮೆಲ್ಲಗೆ ಹೇಳಿದ.
ಮಿರಾಂಡಳ ಶಕ್ತಿ ಬೇರೆ ರೀತಿಯದು, ಪ್ರಾಸ್ಪೆರೋನ ಶಕ್ತಿ ಬೇರೆ ರೀತಿಯದು; ಆತನದು ರುದ್ರ ತಿಳಿವಿನ ಶಕ್ತಿ. ಆತನಿಗೆ ಮತ್ತೆ ಮಿರಾಂಡಳ ಶುಭ್ರ ವಿಸ್ಮಯ ಸಾಧ್ಯವಿಲ್ಲ ಎಂಬುದು ನಿಜಕ್ಕೂ ದೊಡ್ಡ ನೋವಿನ ಸಂಗತಿ.
– ೩ –
ಎರಡನೆಯ ಘಟ್ಟವನ್ನು ಮೆಟಫಿಸಿಕಲ್ ಕಾವ್ಯ ಎಂದು ಕರೆಯಬಹುದು. ಇಲ್ಲಿಯ ಸೌಂದರ್ಯಾರಾಧನೆ ಮೆಟಫಿಸಿಕಲ್ ತಾತ್ವಿಕತೆಯಿಂದ ಪರಿಷ್ಕೃತವಾಗಿದೆ. ‘ದೀಪದ ಹೆಜ್ಜೆ’ಯಿಂದ ‘ತೆರೆದ ದಾರಿ’ ತನಕದ ಕವನಗಳನ್ನು ಸ್ಥೂಲವಾಗಿ ಈ ಘಟ್ಟಕ್ಕೆ ಸೇರಿಸಬಹುದು. ‘ದೀಪದ ಹೆಜ್ಜೆ’ಯಿಂದ ಪ್ರಾರಂಭವಾದ ಈ ಘಟ್ಟದಲ್ಲಿ ಅತ್ಯಂತ ಮಹತ್ವಾಕಾಂಕ್ಷೀ ಕವನಗಳನ್ನು ಕಾಣಬಹುದು. ಜೊತೆಗೆ, ಕನ್ನಡ ವಿಮರ್ಶೆ ಈ ಘಟ್ಟದ ಕೆಲವು ಕವನಗಳನ್ನು ಸಾಕಷ್ಟು ಗಾಢವಾಗಿಯೇ ಚರ್ಚಿಸಿದೆ. ‘ಹುಟ್ಟಿದಹಬ್ಬ’, ‘ಇವನು’, ‘ಸಂಜೆದಾರಿ’, ‘ಗಡಿಯಾರದಂಗಡಿಯಲ್ಲಿ’, ‘ಮಬ್ಬಿನಿಂದ ಮಬ್ಬಿಗೆ’, ‘ಜಡಿಮಳೆಯ ಇರುಳಿನಡಿ’, ‘ಶಾರದೆ’, ‘ಮಳೆರಾತ್ರಿಯ ಒಂದುಕ್ಷಣ’, ‘ಕನಸಿನಿಂದ ಕನಸಿಗೆ’, ‘ಶಾಕುಂತಲದ ಐದನೆಯ ಅಂಕ’ ಮುಂತಾದ ಶ್ರೇಷ್ಠ ಕವನಗಳು ಅಧುನಿಕ ಕನ್ನಡ ಕಾವ್ಯದ ಇತಿಹಾಸದಲ್ಲಿ ಕವಿಗೆ ವಿಶಿಷ್ಟ ಸ್ಥಾನ ದೊರಕಿಸಿ ಕೊಡುವಂಥವು.
ಕಾವ್ಯಶಿಲ್ಪದ ದೃಷ್ಟಿಯಿಂದಂತೂ ಕವಿ ಇಲ್ಲಿ ಆಶ್ಚರ್ಯಕರ ಪ್ರಬುದ್ಧತೆ ತಲುಪಿದ್ದಾರೆ. ಈ ದೃಷ್ಟಿಯಿಂದ ಅಡಿಗರಿಗೆ ‘ಚಂಡೆ ಮದ್ದಳೆ’ ಇದ್ದ ಹಾಗೆ, ಜಿ.ಎಸ್.ಎಸ್.ಅವರಿಗೆ ‘ದೀಪದ ಹೆಜ್ಜೆ’ ಎನ್ನಬಹುದು.
ಜಿವನ ದರ್ಶನದ ದೃಷ್ಟಿಯಿಂದಂತೂ ಎರಡೂ ಕೃತಿಗಳು ಬೇರೆಬೇರೆ ಲೋಕಗಳಿಂದ ಬಂದಂಥವು. ಒಂದು ‘ಅಗ್ರೆಸಿವ್’ ಆದದ್ದು, ಇನ್ನೊಂದು ಉದಾರವಾದಿ ಮನೋಧರ್ಮಕ್ಕೆ ಸಹಜವಾದ ತಾಳ್ಮೆ ಮತ್ತು ಚಿಂತನಪರತೆಗಳಿಂದ ಹುಟ್ಟಿದ್ದು.
ಇಲ್ಲಿಯ ಕಾವ್ಯಶಿಲ್ಪದ ಮುಖ್ಯ ಗುಣವೆಂದರೆ, ಅನುಭವಪೂರ್ಣತೆ. ಮೊದಲಿನ ಸೌಂದರ್ಯಾತ್ಮಕ ಘಟ್ಟದಲ್ಲಿ ಒಂದು ನಿರ್ದಿಷ್ಟ ಅವಧಿಯ ಅನುಭವ ಮುಖ್ಯವಾದರೆ, ಇಲ್ಲಿಯ ಅನುಭವಗ್ರಹಣ ಕ್ರಮಕ್ಕೆ ಪ್ರಾರಂಭ, ಶೃಂಗ, ಮುಕ್ತಾಯ ಮೂರೂ ಇರುತ್ತವೆ. ಜೀವನದ ಉಳಿದೆಲ್ಲ ಅನುಭವಗಳು ಕಾವ್ಯದಿಂದ ಮಾಯವಾಗಿ ಬಿಟ್ಟಿವೆ ಎಂಬಂಥ ವಾತಾವರಣದಲ್ಲೂ ಈ ಕವನಗಳು ಹುಟ್ಟಿದವು ಎಂಬ ಅಂಶ ಕವಿಗೆ ನವೋದಯದ ಜೊತೆಗಿದ್ದ ಸುಭದ್ರ ಸಂಬಂಧವನ್ನು ಹೇಳುತ್ತದೆ.
ಈ ಘಟ್ಟದಲ್ಲಿ ನಾಟಕೀಯತೆ ಜಿ.ಎಸ್.ಎಸ್. ಅವರ ಕಾವ್ಯವನ್ನು ಪ್ರವೇಶಿಸಿತು. ವಿವಿಧ ಬಗೆಯ ಮನಸ್ಥಿತಿಗಳು, ಅನುರಾಗಗಳು ಇಲ್ಲಿ ಪ್ರಕಟವಾದವು. ಜೊತೆಗೆ ಇಲ್ಲಿಯ ಮುಖ್ಯ ತಾತ್ವಿಕನೆಲೆಯೆಂದರೆ ಒಂದು ಬಗೆಯ ಧೀರೋದಾತ್ತ ಆಶಾವಾದ. ಘರ್ಷಣೆಗಳ ಅರಿವಿದ್ದೂ ಅದನ್ನು ದಾಟಬಲ್ಲೆ ಎಂಬ ಆದಿಭೌತಿಕ ಆಶಾವಾದ ಈ ಕವನಗಳ ಶಿಲ್ಪವನ್ನು ಕಟ್ಟಿದೆ. ಅಶಿಕ್ಷಿತ ಆಶಾವಾದದಂತೆ ಕಾಣದೆ ತಾನು ಬದುಕುತ್ತಿರುವ ಸ್ಥಿತಿಯ ನೈತಿಕ ಏಷಮತೆಗೆ ಪ್ರತಿಸ್ಪಂದಿಸಿಯೇ ಹುಟ್ಟಿದ ತಾತ್ವಿಕ ನಿಲುವು ಅದು. ಅತಿರೇಕದ ಸಂಪ್ರದಾಯವಾದೀ ನಿಲುವುಗಳಿಗೆ ಹೋಗದೆಯೂ ಜೀವನ ಶ್ರದ್ದೆಯನ್ನು, ಉಳಿಸಿಕೊಳ್ಳುವ ಕ್ರಮಕ್ಕೆ ಈ ಘಟ್ಟದ ಶ್ರೇಷ್ಠ ಕವನಗಳು ಸಾಕ್ಷಿ.
ಮೆಟಫಿಸಿಕಲ್ ಅಂಶಗಳು ಇಲ್ಲಿ ದಟ್ಟವಾಗಿದ್ದರೂ ಅವು ಎಲ್ಲಿಯೂ ಧಾರ್ಮಿಕ ನಿಗೂಢವಾದೀ ನೆಲೆಗಳಿಗೆ ಹೋಗಿ ತಲುಪುವುದಿಲ್ಲ; ಪರಂಪರಾಗತ ಮೌಲ್ಯಗಳ ಮಡಿಲಿಗೆ ಬೀಳುವುದಿಲ್ಲ. ಏಕೆಂದರೆ, ಸಮಕಾಲೀನ ಜೀವನದ ಸವಾಲುಗಳ ತೀವ್ರತೆಯನ್ನು ಇವು ತೆಳ್ಳಗೆ ಮಾಡಿಬಿಡುತ್ತವೆ. ಜೀವನದ ಸೊಗಸು ವಿಷಮತೆಗಳನ್ನು, ಜೀವನದ ಮೂಲಭೂತ ಶ್ರದ್ಧೆಯೊಂದರ ಮೂಲಕವೇ ಒಳಗೊಳ್ಳುತ್ತವೆ. ಚರಿತ್ರೆಯ ಪ್ರಗತಿಪರ ಸತ್ವದ ಬಗ್ಗೆ ಅಪಾರ ಗೌರವವಿರಿಸಿಕೊಂಡಿರುವ ಶ್ರದ್ಧೆ ಅದು. ಹೀಗಾಗಿ, ಅಧುನಿಕ ಭಾರತೀಯ ನಾಗರೀಕತೆ ಒಪ್ಪಿಕೊಂಡಿರುವ ಮೌಲ್ಯಗಳ ಬಗ್ಗೆ ಎಲ್ಲಿಯೂ ಮೂಲಭೂತವಾದ ತಿರಸ್ಕಾರ ಮೂಡುವುದಿಲ್ಲ. ಸಮಕಾಲೀನ ಪರಿಸ್ಥಿತಿಯ ಬಗ್ಗೆ ಅರಿವಿದ್ದರೂ ಮುಗಿಲಗಲದೆದೆಯಲ್ಲಿರುವ ಚಿಕ್ಕೆಗಳ ದಂಡೆಯ ಮೇಲೊಂದು ಕಣ್ಣು ಇದ್ದೇ ಇರುತ್ತದೆ ಇಲ್ಲಿಯ ಕಾವ್ಯ ಪ್ರಜ್ಞೆಗೆ. ಎಲ್ಲಕ್ಕಿಂತ ಹೆಚ್ಚಾಗಿ ಇಲ್ಲಿ ಅತಿರಂಜಿತ ಆತ್ಮಕಥನವಿಲ್ಲ, ಸಾತ್ವಿಕ ವಿನಯ ಈ ಘಟ್ಟದಲ್ಲಿ ಎಲ್ಲ ಕವನಗಳಿಗೂ ಶೃತಿ ಹಿಡಿದಿದೆ.
– ೪ –
ಮುಂದಿನ ಘಟ್ಟ ರುದ್ರ ತಿಳಿವಿನ ಘಟ್ಟ. ‘ತೆರೆದ ದಾರಿ’ಯಲ್ಲಿ ಸಾಕಷ್ಟು ಸ್ಪಷ್ಟವಾಗಿ ಮೂಡಿದ ಈ ಕಾವ್ಯ ತನ್ನ ಶೃಂಗವನ್ನು ತಲುಪಿದ್ದು ‘ಗೋಡೆ’ ಸಂಕಲನದಲ್ಲಿ. ಈ ಎರಡೂ ಕವನ ಸಂಕಲನಗಳ ಮುಖ್ಯ ಕವನಗಳ ಅನುಭವ ಮೂಲತಃ ಟ್ರ್ಯಾಜಿಕ್ ಆದದ್ದು. ಸುತ್ತಲೂ ಮೊರೆವ ಕತ್ತಲಿನ, ಕೆಡುಕಿನ, ಪ್ರೀತಿಹೀನ ಸ್ಥಿತಿಯ ಕಾವ್ಯ ಅದು. ಹೃದಯ ಹೃದಯಗಳ ಸಂಬಂಧ ಕಡಿದುಬಿದ್ದ ಒಂದು ವಿಷಮ ವಾತಾವರಣದ ಕಾವ್ಯ ಅದು.
‘ಮುಂಬೈ ಜಾತಕ’, ‘ರೈಲು ಬರುತ್ತದೆ’, ‘ವಿಫಲ’, ‘ಸಂಕ್ರಮಣ’, ‘ವ್ಯರ್ಥ’, ‘ಗೋಡೆ’, ‘ನನ್ನಸುತ್ತ’, ‘ನನ್ನ ನಿನ್ನ ನಡುವೆ’, ‘ಖಾಲಿ ಸೈಟಿನ ಕಡೆಗೆ’ ಕವನಗಳ ದಟ್ಟ ವಿಷಾದ ಬೆರಗು ಹುಟ್ಟಿಸುವಂಥದ್ದು. ಅತ್ಯಂತ ವೈಯಕ್ತಿಕ ಲೋಕವೊಂದನ್ನು ಇಲ್ಲಿಯ ಕವನಗಳು ನಿರ್ಮಿಸುತ್ತವೆ. ಕಾವ್ಯದಲ್ಲಿ ಬರುವ ಮನುಷ್ಯ ಅಖಂಡವಾದವನು ಎಂದು ನಾವು ಹೊರಟರೆ ಕೊನೆಗೆ ಅಲ್ಲಿ ಸಿಗುವುದು ಸಾಮಾಜಿಕ ಮನುಷ್ಯನೇ. ಆದರೆ ಇಲ್ಲಿಯ ಅನುಭವ ಆ ರೀತಿಯದಲ್ಲ. ಮನುಷ್ಯರ ನಡುವಿನ ಸಂವಹನದ ಸಮಸ್ಯೆ ಇಲ್ಲಿ ತನ್ನೆಲ್ಲ ತೀವ್ರತೆಯೊಂದಿಗೆ ಪ್ರಕಟವಾಗುತ್ತದೆ.
ಈ ಘಟ್ಟದ ಜಗತ್ತಿನಲ್ಲಿ ಪ್ರಕಟವಾಗುವ ಬಿಕ್ಕುಗಳು, ನಿಟ್ಟುಸಿರು, ಆಕ್ರಂದನ, ಮೌನ ರೊಮ್ಯಾಂಟಿಕ್ಕರ ಕವನಗಳನ್ನು ನೆನಪಿಸುವಂಥವು. ಜಗತ್ತಿನೆಲ್ಲದರ ಬಗ್ಗೆ ನಿರ್ಲಕ್ಷ್ಯ ತಾಳಿ ವ್ಯಕ್ತಿ ಸಂಬಂಧಗಳ ಬಗ್ಗೆ ಬರೆಯಬಲ್ಲ ದಿಟ್ಟತನವೇ ಆ ಕವನಗಳಿಗೆ ವಿಚಿತ್ರ ಅಂತರ್ಮುಖೀ ಗುಣವನ್ನು ನೀಡಿವೆ. ವೈಯಕ್ತಿಕ ಹಂತದಲ್ಲಿ ದಟ್ಟವಾಗಿ ಹಬ್ಬುವ ಸಂವಹನ ಹೀನಸ್ಥಿತಿ ಇಡೀ ಸಮಾಜಕ್ಕೆ ಹಬ್ಬಿ ನಿಂತಿರುವುದನ್ನು ಕೂಡ ಹೇಳಲಾಗಿದೆ.
ವೈಯಕ್ತಿಕ ಸಂಬಂಧಗಳ ಪಾವಿತ್ರ್ಯತೆಯನ್ನು ಉಳಿಸಗೊಡದ ಹೃದಯಹೀನ ಜಗತ್ತು ಇದು. ಲಾಭಕ್ಕೆ ಹಾತೊರೆವ, ಯಾವ ಥರದ ಪ್ರಬುದ್ಧ ಸ್ವಯಂಪೂರ್ಣತೆಗೂ ಅವಕಾಶ ಕೊಡದ, ಕುರುಡು ಕಾಂಚಾಣದ ಚಾರಿತ್ರಿಕ ಜಗತ್ತು ಇದು. ಇಂಥ ಸ್ಥಿತಿಯಲ್ಲಿ ಕೆಲವು ಕವಿಗಳು ಆ ಜಗತ್ತನ್ನು ಅದರ ಶರತ್ತುಗಳ ಮೇಲೆಯೇ ವಿರೋಧಿಸುತ್ತಾರೆ. ಪ್ರಖರ ಸಾಮಾಜಿಕ ಸತ್ಯವನ್ನು ಅನ್ವೇಷಿಸುವ ಕಾವ್ಯ ಬರೆಯುತ್ತಾರೆ. ಶ್ರೇಷ್ಠ ವಾಮಪಂಥೀಯ ಕವಿಗಳು ಈ ಬಗೆಯವರು. ಆದರೆ ಇನ್ನೊಂದು ರೀತಿಯ ಕವಿಗಳು ಈ ಜಗತ್ತನ್ನು ಬೇರೆ ನೆಲೆಗಳಿಂದ ವಿರೋಧಿಸುತ್ತಾರೆ. ಆ ಜಗತ್ತು ಕೊಲ್ಲಬಯಸುವ, ಕರಗಿಸಬಯಸುವ ಕ್ಷೇತ್ರಗಳಿಗೆ ಗಟ್ಟಿಯಾಗಿ ಆತುಕೊಳ್ಳುವುದರ ಮೂಲಕ ತಮ್ಮ ಅನುಭವಗಳ ಮೌಲಿಕತೆಯನ್ನು ಸಾರುತ್ತಾರೆ. ಪ್ರಕೃತಿಗೆ, ಪ್ರೇಮಕ್ಕೆ, ಚೆಲುವಿಗೆ, ಗಾಢವಾಗಿ ಅಂಟಿಕೊಂಡ ರೊಮ್ಯಾಂಟಿಕ್ ಕವಿಗಳು ಇಂಥವರು. ಅರ್ಥಪೂರ್ಣ ರೊಮ್ಯಾಂಟಿಕ್ ಕಾವ್ಯದ ಉಗಮ ಇಲ್ಲಿಂದಲೇ.
ಈ ದೃಷ್ಟಿಯಿಂದ ‘ತೆರೆದ ದಾರಿ’, ‘ಗೋಡೆ’ ಯಂಥ ಮುಖ್ಯ ಕವನ ಸಂಗ್ರಹಗಳು ನಿಜವಾಗಿಯೂ ಕುತೂಹಲಕಾರಿಯಾದವುಗಳು. ನವೋದಯದ ನಂತರ ವೈಯಕ್ತಿಕ ಸಂಬಂಧಗಳ ಲೋಕದಲ್ಲಿ ಉಂಟಾಗುವ ಅಲ್ಲೋಲ ಕಲ್ಲೋಲವನ್ನು ಪ್ರಮುಖ ವಸ್ತುವನ್ನಾಗಿ ಕಾವ್ಯದಲ್ಲಿ ತಂದದ್ದನ್ನು ಇಲ್ಲಿಯ ತನಕದ ಕನ್ನಡ ವಿಮರ್ಶೆ ಗಮನಿಸದೇ ಇದ್ದದ್ದು ನಿಜಕ್ಕೂ ಆಶ್ಚರ್ಯದ ಸಂಗತಿ.
ಇಲ್ಲಿ ಗಮನಿಸಬೇಕಾದ ಇನ್ನೊಂದು ವಸ್ತುವೆಂದರೆ ಒಂಟಿತನದ್ದು. ‘ಅನಾವರಣ’ ಸಂಕಲನದ ‘ಹೋಟೆಲಿನಲ್ಲಿ’ ಕವನದಲ್ಲೇ ಸ್ಪಷ್ಟವಾಗಿ ಕಾಣಿಸಿಕೊಂಡ ಈ ವಸ್ತು ತನ್ನ ಪ್ರಬುದ್ಧ ಘಟ್ಟವನ್ನು ತಲುಪಿದ್ದು ‘ಗೋಡೆ’ ಕೃತಿಯಲ್ಲಿ. ಅಲ್ಲಿ ಈ ವಸ್ತು ಇನ್ನಿತರ ಅನುಭವ ವಲಯಗಳ ಜೊತೆ ಕರಗಿ ಹೋದರೂ, ಅದರ ಆಳದಲ್ಲಿ ಒಂಟಿತನ ಮೌನವಾಗಿ ಚಲಿಸುತ್ತಲೇ ಇರತ್ತದೆ. ‘ಅನಾವರಣ’ ದಿಂದಾಚೆಗಿನ ಕವನಗಳಲ್ಲಿ ಮೂಡುವ ಈ ಒಂಟಿತನ ಈ ಕವಿಯಲ್ಲಿ ಕಾಣಿಸಿಕೊಳ್ಳುವುದು ಅನೇಕ ರೀತಿಯಲ್ಲಿ. ಅಧುನಿಕ ನಾಗರಿಕತೆಯೇ ಎಲ್ಲ ಥರದ ಪ್ರೀತಿಯ ಸೆಲೆಗಳನ್ನು ಬತ್ತಿಸಿ ಹಾಕಿದೆ ಎಂಬ ನೆಲೆಯಿಂದ ಅದು ಬಂದಿರಬಹುದು; ಅಥವಾ ಮನುಷ್ಯನ ಮೂಲಭೂತ ಸ್ಥಿತಿಯೇ ಇದಾಗಿರಬಹುದು. ಒಟ್ಟಾರೆಯಾಗಿ ಒಂಟಿತನದ ದ್ರವ್ಯದಲ್ಲೇ ಉಳಿದ ವಿಷಾದದ ಅನುಭವಗಳೂ ರೂಪುಗೊಂಡಿವೆ. ‘ತೆರೆದ ದಾರಿ’ ಯ ‘ವಾಲ್ಮೀಕಿ’ ಅಂಥ ಪರಿಣಾಮಕಾರಿ ಕವನಗಳಲ್ಲೊಂದು.
ಅಧುನಿಕ ಯುಗದ ಅತ್ಯಂತ ಕ್ರೂರಸತ್ಯಗಳಲ್ಲೊಂದು ಈ ಒಂಟಿತನ. ಅಧುನಿಕ ಯುಗದ ಈ ಮಾನವನಿಗೆ ಉಂಟಾಗುವ ದಿವ್ಯ ತಿಳಿವು ಎಂದರೆ ಮೂಲತಃ ಈ ಒಂಟಿತನದ್ದೇ. ಹೀಗಾಗಿ, ಈ ಅನುಭವ ಉಳಿದ ಬಿಕ್ಕಟ್ಟುಗಳನ್ನು, ವೈಯಕ್ತಿಕ ಸಂಕಟಗಳನ್ನು ರೂಪಿಸುವ ಕೇಂದ್ರ ಭೂಮಿಕೆಯಾಗಿ ಅಲ್ಲಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ.
– ೫ –
ಚರಿತ್ರೆಗೆ ಋತುಗಳ ರೀತಿಯ ಬದುಕು ಇದೆ. ( ಆದರೆ ವಸಂತ ಮಾತ್ರ ನಿಜವಾಗಿಯೂ ಯುಟೋಪಿಯಾ ಏನೋ!) ಈಗಂತೂ ನಾವು ಬದುಕುತ್ತಿರುವುದು ಖಾಂಡವಾಗ್ನಿಯ ಋತು. ಗ್ರೀಷ್ಮದುರಿಬಿಸಿಲು ಎಲ್ಲ ಜೀವ ಚೈತನ್ಯವನ್ನು ಬತ್ತಿಸಿ ಹಾಕುತ್ತಿದೆ. ಧಗೆ, ದಾಹಗಳು ನಮ್ಮ ಕೇಂದ್ರ ಅನುಭವಗಳಾಗಿವೆ.ಸ್
ಎಲ್ಲ ನಾಗರೀಕತೆಗಳೂ ಈ ಬಿಕ್ಕಟ್ಟನ್ನು ಒಂದಲ್ಲ ಒಂದುಬಾರಿ ಎದುರಿಸಲೇ ಬೇಕಾಗುತ್ತದೆ. ಇಂಥ ಉರಿಬಿಸಿಲಿನ ಋತು ಬಂದಾಗ ಎಲ್ಲೆಲ್ಲೂ ಬರೀ ಬೋಳು ಬಯಲು. ಹಸಿರೇ ಕಾಣದ ಬೆಂಗಾಡು, ಸುಡುವ ಬಂಡೆಗಳು. ಹತ್ತೊಂಬತ್ತನೇ ಶತಮಾನದ ಜರ್ಮನಿ ಹೆಗೆಲ್ಲನಿಗೆ ಇದೇ ಬಗೆಯ ತಲ್ಲಣವನ್ನು ಅನುಭವಿಸುತ್ತಿರುವಂತೆ ಕಂಡಿತು. ಆತ ಈ ಋತುವಿನ ಅನುಭವವನ್ನೇ ಪಡೆದು, ಇದನ್ನೇ ನೀರಸ ಗದ್ಯಯುಗ ಎಂದು ಕರೆದ. ಆಸ್ತಿತ್ವದ ನೀರಸ ಗದ್ಯ ಮತ್ತು ಹೃದಯದ ಕಾವ್ಯಗಳ ನಡುವೆ ತೀವ್ರ ರೀತಿಯ ಸಂಘರ್ಷ ಈ ಯುಗದಲ್ಲಿ ಇದ್ದದ್ದೇ ಎಂದು ಸಾರಿದ. ಬಹುಶಃ ಈಗ ನಾವು ಭಾರತದಲ್ಲಿ ಬದುಕುತ್ತಿರುವುದು ಅಂಥದೇ ಋತುವಿನಲ್ಲಿ.
ಎಪ್ಪತ್ತನೆಯ ದಶಕ ಭಾರತೀಯ ಚರಿತ್ರೆಯಲ್ಲಿ ದಟ್ಟ ವಿಷಾದದ ದಶಕ. ವಿನಾಶದ ಅಂಚಿನಲ್ಲಿರುವ ವ್ಯವಸ್ಥೆಯ ರಾಕ್ಷಸೀಶಕ್ತಿ ಘನೀಕೃತವಾಗಿ ಈ ಒಂದೇ ದಶಕದಲ್ಲಿ ತನ್ನ ಪಂಜಗಳಿಂದ ತೀವ್ರವಾಗಿ ಹೊಡೆಯಿತು. ಭೀಕರವಾದ ಅರಿವಿನ ಹತ್ತಿರ ನಾವು ಸಾಗುತ್ತಿದ್ದೇವೆ. ನಮ್ಮ ಪ್ರಜ್ಞೆಯೊಳಗೆ ಅದು ಪೂರಾ ಇಳಿದು ಬಿಟ್ಟಿದೆ ಎಂಬುದಕ್ಕೆ ಈ ದಶಕದ ಕಾವ್ಯ ಸಾಕ್ಷಿ.
ಉದಾರವಾದಕ್ಕಂತೂ ಇವು ಸೃಜನಶೀಲ ಬಿಕ್ಕಟ್ಟಿನ ದಿನಗಳೂ ಹೌದು. ತಮ್ಮ ಸೃಜನಶೀಲತೆಯ ಮೂಲದ್ರವ್ಯವನ್ನು ಕಾಪಾಡಿಕೊಳ್ಳಲು ಹೊಸಬಗೆಯ ನುಡಿಕಟ್ಟು, ರೂಪಕ, ಸಂವೇದನಾಕ್ರಮಗಳನ್ನು ರೂಢಿಸಿಕೊಳ್ಳುವ ಮೂಲಕ ಇವರು ಈ ಬಿಕ್ಕಟ್ಟಿನಿಂದ ಪಾರಾಗಲು ಸಾಧ್ಯವಿದೆ. ಜಿ.ಎಸ್.ಎಸ್. ಅವರ ‘ಕಾಡಿನ ಕತ್ತಲಲ್ಲಿ’ ಕೃತಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕಾದದ್ದು ಈ ಹಿನ್ನೆಲೆಯಲ್ಲಿಯೇ.
ಎಪ್ಪತ್ತರ ದಶಕದಲ್ಲಿ ಸಾಹಿತ್ಯವನ್ನು ಸಮಾಜಮುಖಿಯನ್ನಾಗಿ ಮಾಡಲು ಯತ್ನಿಸಿದ ಪ್ರಮುಖ ಸಾಹಿತ್ಯಿಕ ಮೌಲ್ಯಗಳ ಪ್ರಭಾವ ಈ ಸಂಕಲನದ ಮೇಲೆ ಸ್ಪಷ್ಟವಾಗಿ ಕಾಣುತ್ತದೆ. ಸ್ಥೂಲ ಸಮಾಜವಾದೀ ಆಶಯಗಳನ್ನು ಒಳಗೊಳ್ಳುವ ಪ್ರಯತ್ನ ಈ ಕೃತಿಯ ಸತ್ವ. ‘ಗೋಡೆ’ ಕೃತಿಯಲ್ಲಿ ಶೃಂಗವನ್ನು ತಲುಪಿದ್ದ ರುದ್ರ ತಿಳಿವಿನ ಘಟ್ಟ ಇಲ್ಲಿ ಸಾಮಾಜಿಕ ಆಯಾಮವನ್ನು ಒಳಗೊಳ್ಳಲು ಯತ್ನಿಸಿದೆ. ಈ ದೃಷ್ಟಿಯಿಂದ ಇಲ್ಲಿಯ ‘ದುಃಸ್ವಪ್ನ’ ಇಡೀ ಕೃತಿಯ ಶ್ರೇಷ್ಠ ಕವನ.
ನಮ್ಮ ಬದುಕಿನೆಲ್ಲ ಕ್ಷೇತ್ರಗಳು ಭ್ರಷ್ಟಗೊಂಡಿರುವ ಸ್ಥಿತಿಯ ಮೇಲೆ ಮಾರ್ಮಿಕ ವ್ಯಾಖ್ಯಾನ ಈ ಕವನ.
ಕಂಡೆ
ಗೊಮ್ಮಟನಾಗಿ ನಿಂತಿದ್ದ ಮಹಾಮೂರ್ತಿ
ಕರಗಿ ಕೊಚ್ಚೆಯಾಗಿ ಹರಿದಿದ್ದ ಕಂಡೆ
ಇಂದ್ರನೈರಾವತಕ್ಕೆ ತೊಣಚಿ ಹತ್ತಿ
ಬೀದಿ ನಾಯಾಗಿ ಬೀದಿಯಲ್ಲಿ ಹೊರಳಾಡಿದ್ದ ಕಂಡೆ.
ನಿಗಿ ನಿಗಿ ಉರಿದ ಉಜ್ವಲವಾದ ಮಾತೆಲ್ಲ
ಬರೀ ಬುದಿಯಾಗಿ ತೆಪ್ಪಗಾದದ್ದ ಕಂಡೆ
ಹೀಗೆ ಬೆಳೆಯುತ್ತಾ ಹೋಗುವ ಕವನದ ಕೊನೆ ತುಂಬ ನಾಟಕೀಯವಾದದ್ದು. ಪರಿಸರ ಪ್ರಜ್ಞೆಯ ಮೇಲೆ ಪರಿಣಾಮ ಬೀರುವ ರೀತಿ ಕವನದ ಕೊನೆಯಲ್ಲಿ ಪರಿಣಾಮಕಾರಿಯಾಗಿ ಮೂಡುತ್ತದೆ: ‘ಕಂಡು ಎಚ್ಚರಗೊಂಡೆ ಎಚ್ಚರವೆಲ್ಲ ನಿಗಿನಿಗಿ ಉರಿವ ಕೆಂಡದ ಉಂಡೆ’. ಈ ಕವನವನ್ನು ಇಲ್ಲಿಯ ಅನುಭವ ಗ್ರಹಣ ಕ್ರಮದ ಕೇಂದ್ರ ರೂಪಕವೆನ್ನಬಹುದು.
‘ಕಾಡಿನ ಕತ್ತಲಲ್ಲಿ’, ‘ಇನ್ನೆಂದು ಬೆಳಗು ನಿಮಗೆ’, ‘ಉತ್ತರಾಧಿಕಾರಿ’, ‘ವಸಂತ ಮೂಡುವುದೆಂದಿಗೆ’ ಕವನಗಳು ಈ ದೇಶದ ಜನಸಾಮಾನ್ಯನ ವಿಮೋಚನೆಯ ಆಶಯವನ್ನು ಹೊತ್ತ ಕವನಗಳು. ಜಿ.ಎಸ್.ಎಸ್. ರಿಗೆ ಸಿದ್ಧಿಸಿರುವ ಸರಳ ಭಾವಗೀತಾತ್ಮಕ ಶೈಲಿಯಲ್ಲಿ ಈ ಕವನಗಳು ರಚಿತವಾಗಿವೆ. ಜೀವನದಲ್ಲಿಯ ಮೂಲಭೂತ ಘರ್ಷಣೆಗಳ ಅಂತರ್ಮುಖೀ ಅರಿವಿನಿಂದ ಈ ಕವನಗಳು ಹುಟ್ಟಿಲ್ಲವಾದ್ದರಿಂದ ಇವು ಸರಳ ಭಾವಗೀತೆಗಳ ಹಂತಕ್ಕೆ ನಿಂತುಬಿಡುತ್ತವೆ. ಅದರಾಚೆ ಏರುವುದಿಲ್ಲ.
ಹೀಗಾಗಿ, ಇಂಥ ಸಾಮಾಜಿಕ ವಾಸ್ತವವನ್ನು ಕುರಿತ ಕವನಗಳು ಅಂಥ ಗಾಢ ಅನುಭವವನ್ನು ನೀಡುವುದಿಲ್ಲ. ಕವಿಗೆ ತನ್ನನ್ನು ಆವರಿಸಿರುವ ಸೃಜನಶೀಲತೆಯ ಬಿಕ್ಕಟ್ಟಿನ ಅರಿವಿದೆ. ‘ಸ್ವಗತ’ ಪದ್ಯದಲ್ಲಿ ಇದರ ಮಾರ್ಮಿಕ ಕಥನವಿದೆ. ‘ಕಾರಂಜಿಗಳ ಬಾಯಿಗೆ ಮಣ್ಣು ಮೆತ್ತಿಕೊಂಡು ಒಳಗಿನಿಂದ ನೀರು’ ಏರುವುದೇ ಇಲ್ಲ. ಗರಿ ತೆರೆದು ನಿಂತ ಮರಗಳ ತುಂಬ ಹಕ್ಕಿಗಳ ಗುಜಗುಂಪಲೂ ಇಲ್ಲ. ಎಲ್ಲ ಕವಿಗಳಲ್ಲೂ ಮತ್ತೆ ಹೊಸ ಹಾರುವಿಕೆಗಾಗಿ ಅಪ್ರಜ್ಞಾನಪೂರ್ವಕವಾಗಿ ಕವಿ ಪ್ರಜ್ಞೆ ಸಿದ್ಧವಾಗುತ್ತಿದ್ದಾಗಿನ ಮಂಪರು ಇದು. ತಮ್ಮ ಸೃಜನಶೀಲತೆಯ ಒರತೆ ಬತ್ತಿಹೋಗಿದೆ. ತಾನಿನ್ನು ಬರೆಯಲಾರೆ ಎಂದ ಕವಿಗಳು ನಂತರ ಕೆಲವೇ ದಿನಗಳಲ್ಲಿ ಅದ್ಭುತವಾದ ಕಾವ್ಯ ರಚಿಸಿರುವ ಪ್ರಸಂಗಗಳೂ ಕಾವ್ಯ ಚರಿತ್ರೆಯಲ್ಲಿ ಅನೇಕವಿವೆ.
ಹೀಗಾಗಿ, ಈ ಸಂಕಲನದ ಇನ್ನೊಂದು ರೀತಿಯ ಕವನಗಳ ಬಗ್ಗೆ ನನಗೆ ಕುತೂಹಲವಿದೆ; ನಂಬಿಕೆಯಿದೆ. ಕವಿ ತನ್ನನ್ನು ಪುನರುಜ್ಜೀವಿಸಿಕೊಳ್ಳುತ್ತಿರುವ ಒಂದು ಮಾರ್ಗ ಇದು. ಎಲ್ಲ ರೀತಿಯ ತೆಳು ಸಾಮಾಜಿಕ ವಾಸ್ತವಗಳಿಂದಾಚೆಗೆ ಇರುವ, ನಿಗೂಢವಾದ, ಅವೈಚಾರಿಕವಾದ ಅನುಭವಗಳನ್ನು ಹೇಳುವ ಕವಿತೆಗಳು ಇವು. ಹೃದಯದ ಕಾವ್ಯದ, ಗೊತ್ತಿಲ್ಲದ ಲೋಕವೊಂದರ ಛಾಯೆಗಳು ತಾನೇ ತಾನಾಗಿ ಇಲ್ಲಿಮೂಡುತ್ತವೆ. ‘ಸಾಲುಮರಗಳ ಕೆಳಗೆ’, ‘ಚೈತ್ರದಲ್ಲಿ’, ನಿನ್ನ ನಗು’, ‘ಕೇರಳದಲ್ಲಿ’ ಕವನಗಳು ಈ ರೀತಿಯ ಕುತೂಹಲಕಾರೀ ರಚನೆಗಳು. ‘ನಿನ್ನ ನಗು’ ಕವನ ‘ಜಡೆ’ ಕವನದಂತೆ ‘ಪ್ಯಾಂಥಿಸ್ಟ್ ವಿಷನ್’ ಅನ್ನು ಹೊಂದಿರುವಂಥದು. ಮತ್ತೆ ಅದೇ ವಗೆಯ ಸಾತ್ವಿಕ ಹುಚ್ಚುತನ ಈ ಕವನದಲ್ಲಿ ಹಿಂದಿರುಗಿದೆ.
‘ದುಃಸ್ವಪ್ನ’ದ ರುದ್ರ ತಿಳಿವನ್ನು ಮತ್ತು ಈ ಕವನಗಳ ಅನುಭವ ಗ್ರಹಣ ಕ್ರಮವನ್ನು ಜಿ.ಎಸ್.ಎಸ್. ಬೆಸೆಯಬಲ್ಲರಾದರೆ ಅಲ್ಲಿಂದ ಜಿ.ಎಸ್.ಎಸ್.ರ ಕಾವ್ಯ ಜೀವನದ ಹೊಸ ಘಟ್ಟದ ಪ್ರಾರಂಭ; ಕನ್ನಡದಲ್ಲಿ ಇನ್ನೂ ಹುಟ್ಟಬೇಕಾಗಿರುವ ರೊಮ್ಯಾಂಟಿಕ್ ಕಾವ್ಯದ ಬೇರುಗಳು ಇರುವುದು ಇಂಥ ನೆಲೆಗಳಲ್ಲಿಯೇ. ಗಾರ್ಕಿ ಇಂಥದ್ದನ್ನೆ ಕ್ರಾಂತಿಕಾರೀ ರೊಮ್ಯಾಂಟಿಸಿಸಂ ಎಂದು ಕರೆದ. ಅಸ್ತಿತ್ವದ ನೀರಸ ಗದ್ಯ, ಪ್ರತಿಭೆಯ ಗರಿಗಳನ್ನು ಕತ್ತರಿಸಿ ಹಾಡುತ್ತದೆ; ಸುಟ್ಟು ಬೂದಿಮಾಡುತ್ತದೆ. ಆದರೆ ಮನುಷ್ಯನ ಪ್ರತಿಭೆ ಅಷ್ಟು ಸುಲಭವಾಗಿ ಸಾಯುವಂಥದ್ದಲ್ಲ. ಬೂದಿಯಿಂದ ಮತ್ತೆ ಅದು ಅರಳಿ ಹಾರಾಡುತ್ತದೆ. ಆ ಹಕ್ಕಿ ಹಾರುವದನ್ನು ಅಸಮಾನತೆಯ ಮೇಲೆ ನಿಂತ ವ್ಯವಸ್ಥೆ ಎವೆ ತೆಗೆದಿಕ್ಕದೆ ನೋಡುತ್ತದೆ.
ಅಂಥೆ ಅರ್ಥಪೂರ್ಣ ರೊಮ್ಯಾಂಟಿಕ್ ಕಾವ್ಯವನ್ನು ಪ್ರಾರಂಭಿಸಲು ಜಿ.ಎಸ್.ಎಸ್.ರಂಥವರಿಗೆ ಅವರ ಇಡೀ ಕಾವ್ಯ ಜೀವನ ಸಿದ್ಧತೆ ನೀಡಿರುತ್ತದೆ. ತಮ್ಮ ನಂಬಿಕೆಗಳ ಸ್ವರೂಪದ ಕಾರಣಕ್ಕಾಗಿಯೇ ಈ ಕವಿಗಳು ಅಂತರಂಗದ ಹಾಡನ್ನು ಗೆಲ್ಲಿಸಬಲ್ಲರು. ಸುಲಭವಾಗಿ ಬಿಚ್ಚಿಕೊಳ್ಳದ, ನಿಗೂಢ,ಅವೈಚಾರಿಕ (ಗದ್ಯಾತ್ಮಕ ‘ವಿಚಾರ’ಕ್ಕಿಂತ ಭಿನ್ನವಾದದ್ದು ಎಂದರ್ಥ) ಕಾವ್ಯ ಅವರ ಕಾವ್ಯ ಜೀವನದ ಸತ್ವ ಸಮಸ್ತವನ್ನೂ ಬಳಸಿಕೊಂಡರೆ ಹುಟ್ಟಬಲ್ಲದು. ಬಹುಶಃ ಈ ಕಾರಣಕ್ಕಾಗಿಯೊ ಏನೊ, ಅವರ ‘ಚೈತ್ರದಲ್ಲಿ’ ಪದ್ಯ ನನಗೆ ವಿಶಿಷ್ಟವಾಗಿ ಕಂಡಿತು. ಸಾಮಾಜಿಕ ಪ್ರಜ್ಞೆಯ ಕಾವ್ಯದ ಹೆಸರಿನಲ್ಲಿ ನಮ್ಮ ಸುತ್ತಲೂ ಸರಳ ಪ್ರತಿಕ್ರಿಯೆಗಳೇ ತುಂಬಿರುವಾಗ ಇಂಥ ಕವನಗಳು ಕಾವ್ಯಕ್ಕಿರುವ ಸಾಧ್ಯತೆಗಳನ್ನು ಸೂಚಿಸಬಲ್ಲವ್ಯ್.
ಕಾವ್ಯ ಉಂಟುಮಾಡುವ ಪ್ರಜ್ಞೆಯ ಕ್ರಾಂತಿಕಾರೀ ಪಲ್ಲಟ ಮೂಲತಃ ಈ ಸ್ವರೂಪದ್ದೇ. ಅದಕ್ಕಾಗಿಯೇ ಖ್ಯಾತ ವಾಮಪಂಥೀಯ ಚಿಂತಕ ಹಾರ್ಬರ್ಟ್ ಮಾರ್ಕ್ಯೂಸ್ ಹೇಳಿದ: ಬೋದಿಲೇರ್ ಮತ್ತು ರಿಂಬಾ ಕವಿಗಳ ನಿಗೂಢ ಪದ್ಯಗಳು ಬ್ರೆಕ್ಟನ ಸರಳ ಉಪದೇಶಾತ್ಮಕ ನಾಟಕಗಳಿಗಿಂತ ಹೆಚ್ಚು ತೀವ್ರವಾದ ಕ್ರಾಂತಿಕಾರೀ ಪಾತ್ರವನ್ನು ನಿರ್ವಗಿಸುತ್ತವೆ.
ಗ್ರೀಷ್ಮದುರಿಬಿಸಿಲಿನಲ್ಲಿ ಕಾವ್ಯಾಭಿಮಾನಿಗಳು ಇಂಥ ಕಾವ್ಯಕ್ಕಾಗಿ ಕಾಯುತ್ತಾರೆ. ದಟ್ಟ ಕಾರ್ಮೋಡದ ಆಕಾಶದ ಎದೆವೊಡೆದಂತೆ ಭೋರೆಂದು ನುಗ್ಗುವ, ಧೋ-ಧೋ ಎಂದು ಸುರಿಯುವ ಆ ಮಳೆಗಾಗಿ ಕಾಯುತ್ತಾರೆ. ಒಣಗಿ ಬೆಗಾಡಾದ ಹೃದಯಗಳು ಮತ್ತೆ ನೀರುಂಡು ತಣಿದು ಬದಲಾವಣಿಯ ರಥಕ್ಕೆ ಕೈ ಹಚ್ಚುತ್ತವೆ. ಅಂಥ ದೈತ್ಯ ಸಂಕಟಗಳ ಹೊತ್ತಿನಲ್ಲೂ ದೇವರು, ಧರ್ಮಗಳ ಸರಳ ಸಮಾಧಾನಗಳಿಲ್ಲದ ಕಾವ್ಯ ಅದು.
ಜಿ.ಎಸ್.ಎಸ್.ಅವರ ಐವತ್ತೈದರ ಹೊತ್ತಿಗೆ ಬಂದ ಈ ಕೃತಿಯಲ್ಲೂ ದೇವರ, ಧರ್ಮದ ಸುಳಿವಿಲ್ಲ. ಆಧುನಿಕ ಯುಗದಲ್ಲಿ ಅಂತರ್ಮುಖಿಯಾದವನಿಗೆ ಈ ರೀತಿಯ ನಂಬಿಕೆ ಸಾಧ್ಯವೂ ಇಲ್ಲ. ಏಕೆಂದರೆ ಹೆಗೆಲ್ ಹೇಳಿದ ಹಾಗೆ; ನಮ್ಮ ಅಂತರ್ಮುಖೀ ಬೆಂಕಿಯಲ್ಲಿ ದೇವರುಗಳು ಉರಿದು ಬೂದಿಯಾಗಿದ್ದಾರೆ.
ಈ ಕವಿಯ ಮುಂದಿನ ದಾರಿಯ ಬಗ್ಗೆ ಕುತೂಹಲ ಹುಟ್ಟುವುದು ಇದೇ ಕಾರಣಕ್ಕಾಗಿ.
*****
೧೯೮೧.
