ನರಕ, ಯಮಧರ್ಮರಾಯರ ವೈಭವೋಪೇತ ಆಸ್ಥಾನ. ಮುಖ್ಯ ಪೀಠದಲ್ಲಿ ನ್ಯಾಧೀಶನಾಗಿ ಯಮರಾಯರು ಕುಳಿತಿದ್ದಾರೆ. ಅವನ ಪಕ್ಕದಲ್ಲಿ ಚಿತ್ರಗುಪ್ತರು, ಅವನೆದುರು ದೂಡ್ಡ ಒಂದು ಪುಸ್ತಕ. ಅಡ್ಜರಲ್ಲಿ ಮಾನವ ಜೀವಿಗಳ ಇಡೀ ಚರಿತ್ರೆಯೇ ಇದೆ. ಅದನ್ನು ಪರಿಶೀಲಿಸಿ, ಅದರಲ್ಲಿ ಏನು ದಾಖಲಾಗಿದೆಯೋ ಅದನ್ನು ಆಧರಿಸಿ ಸತ್ತ ವ್ಯಕ್ತಿಯ ಮರಣೋತ್ತರ ಭವಿಷ್ಯ ನಿರ್ಧಾರವಾಗುತ್ತದೆ.
ಇವತ್ತು ಸಿದ್ದಪ್ಪನ ವಿಚಾರಣೆ. ಅವನು ಎದುರು ನಿಂತಿದ್ದಾನೆ.
ಇದೇ ಮೊದಲ ಬಾರಿ ಚಿತ್ರಗುಪ್ತನು ಇಂತಹ ಗೊಂದಲದಲ್ಲಿ ಬಿದ್ದಿದ್ದು. ಪುಸ್ತಕದ ಪುಟಗಳನ್ನು ಮೊದಲಿನಿಂದ ಕೊನೆಯ ತನಕ ತಿರುವಿದರೂ ಅಲ್ಲಿ ಸಿದ್ದಪ್ಪನ ಹೆಸರೇ ಇಲ್ಲ. ಚಿತ್ರಗುಪ್ತ ಅವನ ವಿಚಾರಣೆ ನಡೆಸಬೇಕು. ತನ್ನ ಪುಸ್ತಕದಲ್ಲಿ ಅವನ ಚರಿತ್ರೆಯನ್ನು ಹುಡುಕುತ್ತಿದ್ದಾನೆ. ಹುಡುಕುತ್ತಲೇ ಇದ್ದಾನೆ.
ತಲೆ ಕೆದರಿಕೊಂಡು, ಗಡ್ಡ ನೀವಿಕೊಂಡು, ಹಣೆ ಒತ್ತಿಕೊಂಡು ಪರದಾಡುತ್ತಿರುವ ಚಿತ್ರಗುಪ್ತರನ್ನು ಕಂಡ ಯಮಧರ್ಮ ಕೇಳಿದರು, ‘ ಏನು ಗುಪ್ತರೇ, ಈ ನರಹುಳುವಿನ ವಿಚಾರಣೆ ನಡೆಸುವಿರೋ ಅಥವಾ…”
‘ ಮಹಾ ಪ್ರಭು… ಬಹಳ ಸಂದಿಗ್ಧವಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಯಾವುದೇ ಕಾಲದಲ್ಲ್ಲೂ ಇಂತಹ ಸಮಸ್ಯೆ ನಮ್ಮನ್ನು ಕಾಡಿಲ್ಲ.’ ಚಿತ್ರಗುಪ್ತ ವಿವರಿಸಿದರು.
‘ಏನಾಯಿತೆಂದು ಸುಸ್ಪಷ್ಟವಾಗಿ ಹೇಳಬಾರದೆ? ನೀವು ನೀವೆ ಯಾವುದೋ ಕ್ಷುಲ್ಲಕ ಘಟನೆಯನ್ನು ದೊಡ್ಡದು ಮಾಡಿಕೊಂಡು ತಲೆ ಬಿಸಿ ಮಾಡಿಕೊಳ್ಳುತ್ತೀರಿ. ಟೆನ್ಷನ್ ಮಾಡಿಕೋಬೇಡಿ. ಯಾಕೋ ಈಗೀಗ ನೀವೂ ಹುಲುಮಾನವರ ಹಾಗೆ ವರ್ತಿಸುತ್ತಿದ್ದೀರಿ.. ತಾವೇ ಗೊಣಗುಟ್ಟುತ್ತೀರೆಯೇ ಹೊರತು ವಿಷಯವೇನೆಂದು ಅರುಹುವುದಿಲ್ಲ. ಹೇಳದಾಗ ಪರಿಹರಿಸುವುದಾದರೂ ಹೇಗೆ? ಅದಿರಲಿ, ಈ ಸಿದ್ದಪ್ಪನ ವಿಚಾರಣೆಯಲ್ಲಿ ಏಕೆ ವೃಥಾ ವಿಳಂಬ?’
‘ಮನುಷ್ಯ ಸತ್ತಮೇಲೆ ಅವನ ಆತ್ಮ ಸ್ವರ್ಗಕ್ಕೆ ಹೋಗಬೇಕು ಇಲ್ಲವಾದರೆ ನರಕಕ್ಕೆ. ಅದು ನಮ್ಮ ನರಕದ ನಿಯಮದಂತೆ, ನಮ್ಮ ನಿರ್ಧಾರದಂತೆ ಅನುಷ್ಠಾನಕ್ಕೆ ಬರುತ್ತದೆ. ಜನರೆಲ್ಲ ತಿಳಿದುಕೊಂಡಂತೆ ಪಾಪಿಗೆ ನರಕದಲ್ಲಿ ಶಿಕ್ಷೆ. ಒಳ್ಳೇಯ ಕೆಲಸ ಮಾಡಿದವನಿಗೆ ಸ್ವರ್ಗದಲ್ಲಿ ಸುಖ ಪ್ರಾಪ್ತಿ. ಎರಡೂ ಮಾಡದವರು ಹೋಗುವ ಯಾವುದೇ ಜಾಗವಿಲ್ಲ ಸದ್ಯಕ್ಕೆ. ಆದರೆ ಸಿದ್ದಪ್ಪನು ಪಾಪವನ್ನೂ ಮಾಡಿಲ್ಲ. ಪುಣ್ಯ್ವನ್ನೂ ಮಾಡಿಲ್ಲವಾದ ಕಾರಣ ಅವನ ದಾಖಲೆ ಸಂಪೂರ್ಣ ಖಾಲಿ. ಅಂದ ಮೇಲೆ ವಿಚಾರಣೆ ಹೇಗೆ ನಡೆಸುವುದು. ಅವನನ್ನು ಎಲ್ಲಿಗೆ ಕಳುಹಿಸುವುದು?’ ಚಿತ್ರಗುಪ್ತರೆಂದರು.
ಹೌದು ಇಂತಹ ಕೇಸು ಇದೇ ಮೊದಲ ಬಾರಿಗೆ ನರಕಕ್ಕೆ ಬಂದಿದ್ದು. ಯಮನಿಗೂ ಮಂಡೆ ಬೆಚ್ಚಗಾಯಿತು.
ಕಚೇರಿಯ ಬಾಸ್ ತಲೆ ಬಿಸಿಯಾದರೆ ಎಲ್ಲಾ ಸಹೋದ್ಯೋಗಿಗಳೂ ಯೋಚನೆ ಮಾಡ ಬೇಕು ಇಲ್ಲಾ ಯೋಚನೆ ಮಾಡುವಂತೆ ನಟಿಸಬೇಕು; ಅದು ಬದುಕುವವರ ಜಾಣತನ. ಯಮನ ಆಸ್ಥಾನದಲ್ಲಿಯೂ ಹಾಗೆಯೇ ಆಯಿತು. ಸಮಸ್ಯೆಗಳ ಮಹಾಪರ್ವತವೇ ತಲೆಯ ಮೇಲೆ ಬಿದ್ದವರ ಹಾಗೆ ನೌಕರ-ಚಾಕರರೆಲ್ಲಾ ಮುಖ ಮಾಡಿಕೊಂಡು ನಿಂತರು. ಸಿದ್ದಪ್ಪ ಎಲ್ಲರ ಮುಖ ಮುಖ ನೋಡುತ್ತಿದ್ದಾನೆ. ಆದರೆ ಅವರ ಸಮಸ್ಯೆಯನ್ನು ಬಿಡಿಸುವುದು ಅವನ ಕೆಲಸವಲ್ಲ.
ಭೂಲೋಕದ ನ್ಯಾಯಾಲಯಗಳಲ್ಲಿ ಇಂತಹ ಸಮಸ್ಯೆ ಉದ್ಭವಿಸುವುದೇ ಇಲ್ಲ. ಉದ್ಭವಿಸಿದರೂ ಬೆನಿಫಿಟ್ ಆಫ್ ಡೌಟ್ ಆಧಾರದಲ್ಲಿ ಆಪಾದಿತ ಬಿಡುಗಡೆಯಾಗುತ್ತಾನೆ. ಅಥವಾ ನ್ಯಾಯವಾದಿಗಳ ಚಾಕಚಕ್ಯತೆಯ ಮೇಲೆ ನಿರಪರಾಧಿಯೂ ಮರಣದಂಡನೆಗೆ ಗುರಿಯಾಗಬದುದು. ಈ ಎಲ್ಲಾ ನಿಯಮಗಳಿಗೆ ನರಕ ಹೊರತು.
‘ಆ ವ್ಯಕ್ತಿ ತನ್ನ ಬದುಕಿನಲ್ಲಿ ಮಾಡಿದ ಪಾಪ ನಿವೇದನೆ ಮಾಡಿಕೊಳ್ಳಲಿ ಅಥವಾ ಮಾಡಿದ ಸತ್ಕಾರ್ಯದ ಬಗ್ಗೆ ವಿವರಿಸಲಿ. ಅದರ ಆಧಾರದ ಮೇಲೆ ನಾವು ನಿರ್ಣಯ ತೆಗೆದುಕೊಳ್ಳೋಣ’ ಯಮ ಉವಾಚ.
ಈ ಸಲಹೆಯೂ ಸರಿ ಎನಿಸಿತು ಚಿತ್ರಗುಪ್ತರಿಗೆ. ಅವರ ಸಲಹೆಯ ಮೇರೆಗೆ ಸಿದ್ದಪ್ಪ ಯೋಚಿಸಿದ. ಕೊನೆಗೆ ಅವನಿಗೆ ತನ್ನ ಜೀವನದಲ್ಲಿ ನಡೆದ ಒಂದು ಮಹತ್ತರ ಘಟನೆ ನೆನಪಿಗೆ ಬಂತು.
‘ನಾನು ಒಬ್ಬ ತರುಣಿ ಮಾನಾಪಹರಣಗೊಳ್ಳುವುದನ್ನು ತಪ್ಪಿಸಿದೆ ಮಹಾಸ್ವಾಮಿ’ ಸಿದ್ದಪ್ಪನೆಂದ.
ಚಿತ್ರಗುಪ್ತರ ಮುಖದಲ್ಲಿ ಚಿಂತೆಯ ಗೆರೆಗಳು ಮಾಯವಾಗಿ ಸಂತೋಷ ಕಾಣಿಸಿಕೊಂಡಿತು. ‘ ಹೌದಾ? ಹೇಳು…ಹೇಳು…’ ಎಂದು ಅವಸರಿಸಿದರು.
‘ನನ್ನ ಕಚೇರಿಯ ಕೆಲಸ ಮುಗಿಯೋದು ಸಂಜೆ ಆರಕ್ಕೆ. ನಾನು ಕೆಲಸ ಮುಗಿಸಿ ನನ್ನ ಸ್ಕೂಟರ್ನಲ್ಲಿ ಮನೆಗೆ ಹೋಗುತ್ತಿದ್ದೆ.’ ಸಿದ್ದಪ್ಪ ಹೇಳತೊಡಗಿದ.
‘ಮಹಾಸ್ವಾಮಿ, ಬೆಂಗಳೂರಿನ ರಸ್ತೆಗಳಲ್ಲಿ ಸಂಚರಿಸುವುದೆಂದರೆ ತುಂಬಾ ಅಪಾಯದ ಕೆಲಸ.’ ಚಿತ್ರಗುಪ್ತರೆಂದರು. ‘ ಕಾರ್ಗಿಲ್ ಯುದ್ದದಲ್ಲಿ ಭಾಗವಹಿಸಿ ಜೀವಸಹಿತ ವಾಪಾಸು ಬರಬಹುದು. ಆದರೆ ಬೆಂಗಳೂರಿನ ರಸ್ತೆಯಲ್ಲಿ ಪ್ರಯಾಣಿಸಿದವನು ಜೀವಸಹಿತ ವಾಪಾಸು ಬಂದನೆಂದರೆ ಅದೊಂದು ಅಪಘಾತವೇ ಸರಿ.’
ಯಮಧರ್ಮರು ಅವರತ್ತ ಕೆಂಗಣ್ಣು ಬೀರಿದರು. ಚಿತ್ರಗುಪ್ತರು ಬಾಯಿ ಮುಚ್ಚಿಕೊಂಡರು. ‘ ಸಿದ್ದಪ್ಪ , ನೀನು ಏನು ನಡೆಯಿತೆಂಬುದನ್ನು ಹೇಳು.’ ಎಂದರು.
‘ಅಂದು ನಾನು ಬನ್ನೇರುಘಟ್ಟ ರಸ್ತೆಯಲ್ಲಿ ಬರುತ್ತಿದ್ದಾಗ..’ ಸಿದ್ದಪ್ಪ ಶುರುಮಾಡಿದ್ದನಷ್ಟೆ.
ಚಿತ್ರಗುಪ್ತರು ತನ್ನ ಅನುಭವವನ್ನು ವಿವರಿಸತೊಡಗಿದರು. ‘ಅದು ಭಯಂಕರ ರಸ್ತೆ ಸ್ವಾಮಿ. ರಿಪೇರಿ ಮಾಡುವುದೇ ಇಲ್ಲ. ಸದಾ ಹೊಂಡ. ಕಲ್ಲು, ನೀರುಗಳು ತುಂಬಿರುತ್ತವೆ. ಅಗೆತ ದಿನನಿತ್ಯದ ಕ್ರಿಯೆ. ಖಾಸಗಿ ಮತ್ತು ಸರ್ಕಾರಿ ವಾಹನಗಳು ಪೈಪೋಟಿಯ ಮೇಲೆ ಶರವೇಗದಲ್ಲಿ ಚಲಿಸುತ್ತವೆ. ಕಾಲ್ದಾರಿಯೇ ಇಲ್ಲ. ಇದ್ದರೂ ಬೆಳಾಗಾಗುವಷ್ಟರಲ್ಲಿ ಅಲ್ಲೊಂದು ದೇವಸ್ಥಾನ ಏಳುತ್ತದೆ.’
‘ಹೌದು ಮಹಾಸ್ವಾಮಿ. ಈ ರಸ್ತೆಯಲ್ಲಿ ಪ್ರಯಾಣಿಸಿದವನಿಗೆ ದೇವರ ಮೇಲೆ ಭಕ್ತಿ ಜಾಸ್ತಿ ಮೂಡುತ್ತದೆ. ಇಲ್ಲಿಯ ತನಕ ಜೀವ ಸಹಿತ ತಾನು ಉಳಿಯುವಂತೆ ಮಾಡಿದ್ದೀಯಲ್ಲ ಎಂದು ಅವನು ಭಗವಂತನನ್ನು ಸದಾ ಸ್ಮರಿಸುತ್ತಾನೆ.’ ಸಿದ್ದಪ್ಪ ವಿವರಿಸಿದ.
‘ಕಳೆದ ವರ್ಷ ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ಸತ್ತವರಲ್ಲಿ ಶೇಕಡಾ ಇಪ್ಪತ್ಟು ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದ್ದು.’ ಚಿತ್ರಗುಪ್ತರು ಉಲ್ಲೇಖಿಸಿದರು.
‘ನೋಡಿ ಚಿತ್ರಗುಪ್ತರೆ, ನೀವು ವೃಥಾ ಮಾತನಾಡುತ್ತೀರಿ. ಕಡಿಮೆ ಮಾತನಾಡಿ, ಹೆಚ್ಚು ಕೆಲಸ ಮಾಡಿ ಎಂಬುದು ನಮ್ಮ ಮನಸ್ಸಿನಲ್ಲಿ ಸದಾ ಇರಬೇಕು,’ ಯಮಧರ್ಮರು ಎಚ್ಚರಿಸಿದರು. ‘ಇದು ಇಂದಿರಾಗಾಂಧಿಯವರು ಹೇಳಿದ ಮಾತು ಎಂಬುದು ನಿಮ್ಮ ನೆನಪಿರಲಿ.’
ಸಿದ್ದಪ್ಪ ಮುಂದುವರಿಸಿದ, ‘ಸುತ್ತ ಕತ್ತಲು ಕಂದಿತ್ತು ಆಗ…’
‘ಹೌದು ಸ್ವಾಮಿ,’ ಚಿತ್ರಗುಪ್ತರು ಮತ್ತೆ ತನ್ನ ಷರಾ ಸೇರಿಸಿದರು. ‘ ಈ ರಸ್ತೆಯಲ್ಲಿ ಹಗಲೆಲ್ಲಾ ಬೀದಿ ದೀಪ ಉರಿಯುತ್ತಿರುತ್ತದೆ. ಆದರೆ ರಾತ್ರಿ ಕತ್ತಲು.’
ಸಿದ್ದಪ್ಪ ಹೇಳತೊಡಗಿದ, ‘ಅಲ್ಲಿ ಸಾಗುತ್ತಿದ್ದ ನನಗೆ ಹೆಲ್ಪ್ ಮಿ, ಹೆಲ್ಪ್ ಮೀ, ಎಂಬ ಸಹಾಯ ಯಾಚನೆಯ ದನಿ ಕೇಳಿಸಿತು. ಅದು ಹೆಣ್ಣಿನ ದನಿ. ನಾನು ವಾಹನದ ವೇಗ ಕಡಿಮೆ ಮಾಡಿ ದನಿ ಎಲ್ಲಿಂದ ಬಂದಿರಬದುದು ಎಂದು ಆಲಿಸಿದೆ. ಪಕ್ಕದ ಕಾಂಪೌಂಡಿನ ಒಳಗಿನಿಂದ ಅದು ಕೇಳಿಸುತ್ತಿತ್ತು.’
‘ಚಿತ್ರಗುಪ್ತರೆ, ಇವನು ನಮ್ಮ ಶಬ್ದಭಂಡಾರದಲ್ಲಿ ಇರದ ಯಾವುದೋ ಭಾಷೆಯ ಶಬ್ದಗಳನ್ನು ಬಳಸುತ್ತಿದ್ದಾನೆ. ಅವುಗಳ ಅರ್ಥವೇನೆಂದು ತಿಳಿ ಹೇಳುವಿರಾ?’ ಯಮಧರ್ಮರು ಕೇಳಿದರು.
‘ಇದು ಬೆಂಗಳುರಿನ ಕನ್ನಡ ಮಹಾಸ್ವಾಮಿ. ಕೆಲವರು ಇದನ್ನು ಕಂಗ್ಲಿಷ್ ಎಂದು ಕರೆಯುತ್ತಾರೆ. ಬೆಂಗಳೂರಿನ ಮಂದಿ ಇಂಗ್ಲಿಷ್, ಕನ್ನಡ, ತಮಿಳು, ತೆಲುಗು, ಉರ್ದು ಮಾತನಾಡಿದರೆ ಯಾರಿಗೂ ತಿಳಿಯುವುದಿಲ್ಲ.’ ಚಿತ್ರಗುಪ್ತರು ವಿವರಣೆ ನೀಡಿದರು.
‘ಸರಿ ಕನ್ನಡ ಅವಸಾನದಲ್ಲಿದೆ ಎನ್ನಿ. ಈಗ ಇವನೆಂದ ಹೆಲ್ಪ್ ಮಿ ಎಂಬುದರ ಅರ್ಥವೇನು?’ ಯಮಧರ್ಮರು ಕೇಳಿದರು.
‘ಸಹಾಯ ಮಾಡಿ ಎಂಬ ಕೂಗು ಅದು.’ ಸಿದ್ದಪ್ಪನೇ ಅಂದ. ‘ನಾಲ್ವರು ದಾಂಡಿಗರು ಹೆಣೊಬ್ಬಳನ್ನು ಹಿಗ್ಗಮುಗ್ಗಾ ಎಳೆಯುತ್ತಿದ್ದರು. ನಾನು ಅವರಿಗೆ ಸಹಾಯ ಮಾಡಲು ಮುಂದೆ ಹೋದೆ.’
ಚಿತ್ರಗುಪ್ತರು ಸಂತೋಷಪೂರ್ವಕವಾಗಿ ಚಪ್ಪಾಳೆ ತಟ್ಟಿದರು. ‘ಮಹಾಸ್ವಾಮಿ, ಬೆಂಗಳೂರಿನ ಜನ ಯಾವುದೇ ಸಂದರ್ಭದಲ್ಲಿಯೂ ಪರರಿಗೆ ಸಹಾಯ ಮಾಡುವವರಲ್ಲ. ಹಾಗೆ ಮಾಡಿದರೆ ವೃಥಾ ಕೋರ್ಟುಕಚೇರಿಗಳಿಗೆ ಅಲೆಯಬೇಕಾಗುತ್ತದೆ. ಊರಿನಲ್ಲಿ ಹೋಗುವ ಮಾರಿಯನ್ನು ಮನೆಗೆ ಕರೆತಂದಂತೆ ಎಂದುಕೊಳ್ಳುವವರು ಅವರು. ಇಂತಹ ಸಂರ್ಭಗಳಲ್ಲಿ ಎಲ್ಲಿಂದಲಾದರೂ ‘ಸಹಾಯ ಮಾಡಿ,’ ಎಂಬ ಕೂಗುಕೇಳಿಸಿದರೆ ತಮ್ಮ ಮನೆಯ ಬಾಗಿಲೆಳೆದು, ದೀಪ ಆರಿಸಿ, ಕಿವಿಗೆ ಬಿರಡೆ ತೂರಿಮಲಗಿಬಿಡುವರು.ಆದರೆ ಕನ್ನಡ ಮತ್ತು ಹಿಂದಿ ಸಿನೆಮಾಗಳಲ್ಲಿ ಮಾತ್ರ ನಾಯಕ ಮುಂದೆ ಬರುತ್ತಾನೆ. ನಾಯಕಿಯನ್ನು ರಕ್ಷಿಸುತ್ತಾನೆ. ನಂತರ ಇಬ್ಬರೂ ಯುಗಳ ಗೀತೆ ಹಾಡುತ್ತಾ ಮರ ಸುತ್ತುತ್ತಾರೆ, ಕಾಶ್ಮೀರ, ಊಟಿಗಳಿಗೆ ಹೋಗುತ್ತಾರೆ. ದುಃಖದ ವಿಷಯವೆಂದರೆ ನಾಯಕಿಯ ವಿನಃ ಇನ್ನಾರದೆ ಕೂಗು ನಾಯಕನ ಕಿವಿಗಳಿಗೆ ಬೀಳುವುದಿಲ್ಲ.’
ಯಮಧರ್ಮರು ರೇಗಿದರು, ‘ಚಿತ್ರಗುಪ್ತರೇ, ನೀವು ಸಿನೆಮಾ ವಿಮರ್ಶೆ ಅಮಾಡ್ತಿದ್ದೀರೋ ಇಲ್ಲಾ ಸಿದ್ದಪ್ಪನ ವಿಚಾರಣೆ ಮಾಡ್ತಿದ್ದೀರೋ? ವಿಷಯಾಂತರಿಸುವುದರಲ್ಲಿ ನೀವು ಸಿದ್ದ ಹಸ್ತರು. ಹೇಳು ಸಿದ್ದಪ್ಪಾ.. ನಂತರ ಏನಾಯಿತು?’
‘ನಾನು ಸ್ಕೂಟರ್ ನಿಲ್ಲಿಸಿ ಅಲ್ಲಿಗೆ ಹೋದೆ. ಎದೆ ನಡುಗಿಸುವ ದೃಶ್ಯ. ಕೂಡಲೇ ನಾನು ನನ್ನಲ್ಲಿ ಇದ್ದಬದ್ದ ಎಲ್ಲ ಶಕ್ತಿಗಳನ್ನು ಸೇರಿಸಿಕೊಂಡು ಅಲ್ಲಿದ್ದವರಿಗೆ ಎರ್ರಾಬಿರ್ರಿ ಹೊಡೆಯತೊಡಗಿದೆ.’ ಸಿದ್ದಪ್ಪನೆಂದ. ಅಷ್ಟರಲ್ಲಿ ಚಿತ್ರಗುಪ್ತರು ಮತ್ತೆ ಚಪ್ಪಾಳೆ ತಟ್ಟತೊಡಗಿದರು.
ಈ ಬಾರಿ ಯಮಧರ್ಮರು ಸಂತೈಸುವ ದನಿಯಲ್ಲಿ ಎಂದರು.‘ಚಿತ್ರಗುಪ್ತರೇ, ನಿಮಗೆ ಸಭಾ ಮರ್ಯಾದೆ ಗೊತ್ತಿಲ್ವೆ? ಏಕೆ ವೃಥಾ ಕರತಾಡನ ಮಾಡುತ್ತಿರುವಿರಿ?’
‘ನನಗೆ ತುಂಬಾ ಆನಂದವಾಗಿದೆ ಸ್ವಾಮಿ, ಅದಕ್ಕೇ ಈ ಕರತಾಡನ. ಬೆಂಗಳೂರಿನ ಕಲಬೆರಕೆ ನೀರು ಕುಡಿದು, ಅಪರಿಶುದ್ಧ ಗಾಳಿ ಸೇವಿಸಿ, ಕೊಳೆತ ತರಕಾರಿ ತಿಂದು ಕೂಡಾ ಮಧ್ಯಮ ದರ್ಜೆಯ ಒಬ್ಬ ವ್ಯಕ್ತಿ ಗೂಂಡಾಗಳೆದುರು ಡಿಶುಂಡಿಶುಂ ಮಾಡುತ್ತಾನೆ ಎಂದರೆ ಅದು ಸಾಹಸವೇ ಸರಿ. ನನ್ನ ಅಭಿನಂದನೆಗಳನ್ನು ಈ ಮೂಲಕ ಪ್ರತಿಕ್ರಿಯಿಸಿದೆ, ಅಷ್ಟೆ.’ ಚಿತ್ರಗುಪ್ತರೆಂದರು.
‘ಸರಿ ಮುಂದೇನಾಯಿತು?’ ಯಮಧರ್ಮರು ಸಿದ್ದಪ್ಪನನ್ನು ಕೇಳಿದರು.
‘ನಮ್ಮ ಈ ಹೋರಾಟದಲ್ಲಿ ಅವರಿಂದ ಆ ಮಹಿಳೆಯು ತಾತ್ಕಾಲಿಕವಾಗಿ ಬಚಾವಾದಳು. ಆದರೆ ತಮ್ಮ ಕಾಲುಗಳಿಗೆ ಗೂಂಡಾಗಳು ಬುದ್ದಿ ಹೇಳಲಿಲ್ಲ.’ ಸಿದ್ದಪ್ಪನೆಂದ.
‘ಕಾಲಿಗೆ ಬುದ್ದಿ ಹೇಳುವುದೆಂದರೆ ಓಡಿ ಹೋಗುವುದು ಎಂದು ಅರ್ಥ.’ ಚಿತ್ರಗುಪ್ತರು ವಿವರಿಸಿದರು. ‘ ಈ ಭೂಲೋಕದವರು ಏನೋ ಹೇಳುತ್ತಾರೆ, ಅದರ ಒಳಾರ್ಥ ಬೇರೆಯೇ ಇರುತ್ತದೆ. ಅಂತಹ ಅನೇಕ ಪದ ಪುಂಜಗಳ ವಿವರಣೆಯನ್ನು ನಾನಿಲ್ಲಿ ಕೊಡಬದುದು.’
‘ಸರಿ. ಅದಕ್ಕಾಗಿ ವಿಶೇಷ ಸಂದರ್ಭವನ್ನು ಹಮ್ಮಿಕೊಳ್ಳೋಣ. ಹೇಳು ಸಿದ್ದಪ್ಪ, ಮುಂದೇನಾಯಿತು?’
‘ ಆ ನಾಲ್ಕೂ ದಾಂಡಿಗರು ನನ್ನ ಸುತ್ತ ಸೇರಿದರು. ಒಬ್ಬನು ಸೈಕಲ್ ಚೈನ್ ತೆಗೆದ., ಇನ್ನೊಬ್ಬನ ಕೈಲಿ ಚೂರಿ, ಮತ್ತೊಬ್ಬನು ಕ್ರಿಕೆಟ್ ಬ್ಯಾಟ್ ಎತ್ತಿದ…’
ಸಿದ್ದಪ್ಪ ಮಾತನ್ನು ಯಮಧರ್ಮರೇ ತುಂಡರಿಸಿದರು, ‘ಒಬ್ಬನ ಮೇಲೆ ನಾಲ್ವರು…ಇದು ಯುದ್ಧದ ನಿಯಮಗಳಿಗೆ ಬಾಹಿರವಾದುದು. ಇದನ್ನು ಧರ್ಮ ಯುದ್ಧ ಎಂದು ಕರೆಯುವುದಿಲ್ಲ. ಅನ್ಯಾಯ… ಅನ್ಯಾಯ…’
‘ಹೌದು ಮಹಾಸ್ವಾಮಿ. ಈ ನಿಯಮಗಳೆಲ್ಲಾ ಮಹಾಭಾರತ, ರಾಮಾಯಣ ಕಾಲದಲ್ಲಿತ್ತು. ಈಗ ಭಾರತದೇಶದಲ್ಲಿ ಇಲ್ಲ.” ಸಿದ್ದಪ್ಪ ಸ್ಪಷ್ಟ ಪಡಿಸಿದ.
‘ಸರಿ, ಈ ಘಟನೆ ನಡೆದು ಎಷ್ಟು ಕಾಲದ ಹಿಂದೆ?’ ಯಮಧರ್ಮರ ಪ್ರಶ್ನೆ.
‘ಕೇವಲ ಕೆಲ ನಿಮಿಷಗಳ ಹಿಂದೆ ಮಹಾಸ್ವಾಮಿ,’ ಸಿದ್ದಪ್ಪನೆಂದ. ‘ಮರುಕ್ಷಣ ನಾನಿಲ್ಲಿದ್ದೆ.’ ಬಿ. ಎ. ಪದವಿಧರರಾಗಿರುವ ಸೂರಿ ಹಾರ್ದಳ್ಳಿಯವರು ಬರೆದಿರುವುದು ಒಟ್ಟು ಆರು ಕಾದಂಬರಿಗಳನ್ನು. ‘ಹೆಂಡತಿಯನ್ನು ಪ್ರೀತಿಸಿದರೆ ’ – ಇವರ ಲಲಿತ ಪ್ರಬಂಧಗಳ ಸಂಗ್ರಹಕ್ಕೆ ‘ಗೊರೂರು ಪ್ರಶಸ್ತಿ’ ದೊರಕಿದೆ. ದೂರದರ್ಶನದ ಧಾರಾವಾಹಿಗಳಿಗೂ ಸಂಭಾಷಣೆ ಬರೆಯುತ್ತಾರೆ. ಪ್ರಸಕ್ತ ಇವರು ಬೆಂಗಳೂರಿನ ಮೈಕೊ ಕಾರ್ಖಾನೆಯಲ್ಲಿ ಉದ್ಯೋಗಿ. ಇವರಿಗೆ ಈ ಮೈಲ್ ಮಾಡಲು ಇಲ್ಲಿ ಕ್ಲಿಕ್ಕಿಸಿ.