ಬುಗುರಿ

ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ ವರೆಸಿಕೊಳ್ಳುತ್ತ ಸುಮಾರು ಹೊತ್ತು ಅಲ್ಲೇ ಒಂಟಿ ಕಾಲಲ್ಲೇ ನಿಂತಿದ್ದ. ಅಜ್ಜಿಯ ಹಳೆಸೀರೆ ಬಟ್ಟೆಯಿಂದ ತುಂಡು ಮಾಡಿ ಆತನ ತಾತನಿಂದ ದಾರ ಮಾಡಿಸಿಕೊಂಡು ಬುಗುರಿ ಸುತ್ತಿ ಪಡಸಾಲೆಯ ಗಾರೆ ನೆಲದ ಮೇಲೆ ಬಿಟ್ಟು ಅದು ಗುಯ್ ಎಂದು ನಿದ್ದೆಕೊರೆಯುವಾಗ ಕಿವಿಗೊಟ್ಟು ತಲ್ಲೀನನಾಗಿ ಆನಂದಗೊಂಡು ಅದರ ನಾದಕ್ಕೆ ತಾನೇ ಇನ್ನೊಂದು ನಾದ ಎಂಬಂತೆ ಸಂತೋಷಗೊಳ್ಳುತ್ತಿದ್ದ. ಬಣ್ಣದ ಹಸಿರು ಬಿಳಿ ಕೇಸರಿ ಬಣ್ಣದ ರಂಗು ಬುಗುರಿ ಈಗ ಚೆಲುವನ ದುರಂತವೋ , ಅವನ ಅಪ್ಪನ ಹಣೆಬರಹವೋ ಇಲ್ಲವೇ ಇಡೀ ಆ ಮನೆ ಮತ್ತು ಕೇರಿ ಜನರ ದುರಾದೃಷ್ಟವೋ ಎಂಬಂತೆ , ಹಿಂದೆ ಹಿತ್ತಲಲ್ಲಿ ಮದುವೆ ಸಂದರ್ಭದಲ್ಲಿ ಕಟ್ಟಿಸಿದ್ದ ಕಕ್ಕಸು ಗುಂಡಿಯ ನರಕದಲ್ಲಿ ಬಿದ್ದುಹೋಗಿತ್ತು.

ಬೇಸರವಾಗಿ ಚೆಲುವ ಹಿತ್ತಲಿಗೆ ಬಂದು; ಸಾವಿರಾರು ಕಣ್ಣಿಂದ ಚಿಗುರಿ ಬರವಾಗಿ ಹಸಿರು ಕಕ್ಕುತ್ತಾ ಕಂಗೊಳಿಸಿದ್ದ ಹೊಂಗೆ ಮರದ ಮೇಲೆ ಹತ್ತಿ ಕುಳಿತ. ಮೇಲಿಂದ ಕಾಣುತ್ತಿರುವ ಇಡೀ ಹೊಲಗೇರಿ ಅವನ ಕಣ್ಣಿಗೆ ರಾಚಿ ; ಅಸ್ತವ್ಯಸ್ತವಾಗಿ ಚಿಂದಿ ಬಟ್ಟೆಯಂತೆ ತೂತೂತಾಗಿ ಕೊಳಕಾಗಿ ಕಾಣಿಸಿತು. ಧ್ಯಾನಸ್ಥ ಮೌನಿಯಂತೆ ರೆಂಬೆಗಳ ಮೇಲೆ ಕುಳಿತು ಆ ಹೊಂಗೆ ಹೂಗಳಿಗೆ ಮುತ್ತಿಕೊಳ್ಳುತ್ತಿರುವ ಸಣ್ಣ ಸಣ್ಣ ಹುಳುಗಳನ್ನೇ ಮುತ್ತಿಡುವವನಂತೆ ನೋಡಿದ. ಆದರೂ ಬುಗುರಿ ಎಡೆಬಿಡದೆ ಅವನ ತಲೆಯೊಳಗೆ ತಿರುಗುತ್ತಲೇ ಇತ್ತು. ಏನಾದರೂ ಮಾಡಿ ಅದನ್ನು ಹೊರತೆಗೆಯಲೇ ಬೇಕು . ಮತ್ತೆ ಮತ್ತೆ ಹೊಸ ಬುಗುರಿಗಳನ್ನು ಕೊಂಡುಕೊಳ್ಳಲು ಇನ್ನು ಮುಂದೆ ಸಾಧ್ಯವಾಗುವುದಿಲ್ಲ. ಅಂತಹ ಬುಗುರಿ ಮತ್ತಿನ್ನೆಂದೂ ಸಿಗುವುದಿಲ್ಲ. ಯಾಕಾದರೂ ಅಪ್ಪನಿಗೆ ತನ್ನ ಬುಗುರಿಗಳ ಬಗ್ಗೆ ಇಂತಹ ಸಿಟ್ಟು ಎಂದುಕೊಂಡು ದುಃಖಿತನಾದ. ಇದ್ದಕ್ಕಿದ್ದಂತೆ ಆ ಹಿತ್ತಲುಗಳ ಕಸದ ರಾಶಿಗಳ ನಡುವಿನಿಂದ , ರೋಜುವಾಳದ ಅಂತಿಂತಹ ಮುಳ್ಳು ಪೊದೆಗಳಿಂದ ನಾಯಿಗಳು ವಿಪರೀತ ಸಿಟ್ಟಿನಿಂದ ರಭಸವಾಗಿ ಅಟ್ಟಿಸಿಕೊಂಡು ಬರುತ್ತಿರುವುದನ್ನು ತಿರುಗಿ ನೋಡಿದ. ನಾಯಿಗಳ ಬೊವ್‌ಗುಟ್ಟುವಿಕೆಯ ಹಿಂದೆಯೇ ‘ ಕೀಕ್ ’ ಎಂಬ ಇನ್ನೊಂದು ಸದ್ದು ಬಂತು. ಹಂದಿಯೊಂದನ್ನು ನಾಯಿಗಳು ಅಟ್ಟಿಸಿಕೊಂಡು ಬರುತ್ತಿದ್ದು ಇನ್ನೇನೋ ತನ್ನ ಹಿಂಬದಿಯನ್ನು ಕಚ್ಚಿ ಕೊಲ್ಲುತ್ತವೆ ಎಂಬ ಭಯದಿಂದ ಹಿಂದುಮುಂದು ನೋಡಲಾರದೆ ‘ ಕುಯ್ಯೋ ’ ಎಂದು ದೊಡ್ಡ ಶಬ್ದ ಮಾಡಿ ಓಡಿಬಂದು ‘ ಧಢಕ್ ’ ಎಂದು ಅದೇ ಕಕ್ಕಸು ಗುಂಡಿಯ ಒಳಕ್ಕೆ ಬಿದ್ದುಹೋಯಿತು . ಚೆಲುವ ಏನನ್ನೂ ಮಾಡಲಾರದಂತಾಗಿ ಓಹ್ ; ಎಂದುಕೊಂಡು ‘ ಹಂದಿ ಏಲ್ ಗುಂಡಿಗೆ ಬಿದ್ದೋಯ್ತು ’ ಎನ್ನುತ್ತಾ ಮರದಿಂದ ಕೆಳಗಿಳಿದು ಓಡಿಬಂದು ಮನೆಯೊಳಗಿದ್ದ ತನ್ನ ಅವ್ವನಿಗೆ ‘ ಅವೋ ಅವ್ವ ನಮ್ಮಿತ್ಲು ಕಕ್ಕಸ್ ಗುಂಡಿವೊಳಗೆ ಅದ್ಯಾರದ್ದೋ ಹಂದಿ ಬಂದ್ ಬಿದ್ದೋಯ್ತು ’ ಎಂದ. ಅವನ ಅವ್ವ ‘ ಹಾ ! ’ ಎನ್ನುತ್ತಾ ‘ ಅದ್ಯಾರುದ್ಲಾ ಹಾಳಾದ್ ಹಂದಿಗೆ ನಮ್ಮಿತ್ಲು ಗುಂಡೀಲೆ ಇತ್ತೆ ಸಾಯುದು , ಇನ್ನೆಲ್ಲು ಜಾಗಿರಲಿಲ್ವೆ ’ ಎನ್ನುತ್ತಾ ಹೊರಗೆ ಬಂದು ನೋಡಿದಳು. ಯಾಕೋ ಇದ್ದಕ್ಕಿದ್ದಂತೆ ಅವಳ ಮನಸ್ಸು ಬೇಸರಗೊಂಡು ಈ ಹಾಳ್ ಕಕ್ಕಸುಗುಂಡಿಯನ್ನು ಮುಚ್ಚಿಸಲು ಗಂಡ ಎಂಬ ಕಠೋರನಿಂದ ಆಗುತ್ತಿಲ್ಲವಲ್ಲಾ ಎಂದು ಮನಸೊಳಗೇ ನೊಂದುಕೊಂಡು ‘ ಲೋ ಚೆಲ್ವ ವೋಟ್ಲೆಲಿ ನಿಮ್ಮಯ್ಯ ಇರ್‍ಬೋದು ಕರ್‍ಕಬರೋಗು , ಏನಾರ ಮಾಡಿ ಎತ್ತಾಕ್ ಬುಡ್ಲಿ ಈಚ್ಗೆ ’ ಎಂದು ಹೇಳಿ ‘ ಯಾರ್‍ಯಾರ್‍ಗೋ ಯೇಳ್‌ಗೀಳೀಯ ಜ್ವಾಕೆ . ಆಮೆಕದೊಂದು ಜಗಳಾದದು. ’ ಎನ್ನುತ್ತಾ ಹೇಳಿ ಕಳಿಸಿದಳು.

ಚೆಲುವ ತನ್ನ ಬಣ್ಣದ ಬುಗುರಿಗೆ ಇಂಥಾ ಗತಿ ಬಂತಲ್ಲಾ , ಅದನ್ನು ಯಾವ ರೀತಿಯಲ್ಲೂ ಈಗ ಮೇಲೆತ್ತಲು , ಮತ್ತೆ ದಾರ ಸುತ್ತಿ ಗಾರೆ ನೆಲದ ಮೇಲೆ ಬಿಟ್ಟು ಆಡಲು ಆಗುವುದಿಲ್ಲಾ ಎಂದು ಇನ್ನಷ್ಟು ನೊಂದುಕೊಂಡ. ಮನೆಯವರು ಆ ಕಡೆ ಈ ಕಡೆ ಎಲ್ಲಿಯಾದರೂ ಹೋದಾಗ ಕಕ್ಕಸ್ಸು ಗುಂಡಿಯ ಮೇಲೆ ಹೊದಿಸಿರುವ ತೆಂಗಿನ ಗರಿಗಳನ್ನು ಸರಿಸಿ ಕೊಕ್ಕೆ ಹಾಕಿ ಬುಗುರಿ ಎತ್ತಿಕೊಳ್ಳಬೇಕೆಂದಿದ್ದ ತೃಣಮಾತ್ರ ಆಸೆ ಈಗ ಮತ್ತಷ್ಟು ನುಚ್ಚುನೂರಾಗಿತ್ತು. ಆ ಹಂದಿ ಏಲಿನ ಬಗ್ಗಡದಲ್ಲಿ ಜಿಗಿದಾಡಿ , ಬುಗುರಿ ಬಿದ್ಡಿರುವ ಗುರುತನ್ನೇ ಧ್ವಂಸಮಾಡಿಬಿಟ್ಟಿರುತ್ತದೆ.; ಅಕಸ್ಮಾತ್ ಹಂದಿಯನ್ನು ಎತ್ತುವಾಗ ಬೇರೆಯವರಿಗೆ ಸಿಕ್ಕಿದರೂ ಕೂಡ ಅಪ್ಪನಿಂದ ತನ್ನ ಕೈಗೆ ಬರುವುದಿಲ್ಲ ಎಂದುಕೊಂಡ . ಹಾಗೆ ಯೋಚಿಸುತ್ತಾ ಹೋಟೆಲಿಗೆ ಬಂದು , ತನ್ನ ಅಪ್ಪ ಗಲ್ಲಾದ ಮೇಲೆ ಕುಳಿತಿರುವ ವಿಶೇಷ ಭಂಗಿಯನ್ನು ಗಮನಿಸಿ ಮೆಲ್ಲಗೆ ತನ್ನ ತಾತ ಗುಂಜಾರಯ್ಯನ ಬಳಿ ಬಂದು ಹಂದಿ ಬಿದ್ಡಿರುವ ಸುದ್ದಿಯನ್ನು ಮುಟ್ಟಿಸಿದ. ಗುಂಜಾರಯ್ಯ ಒಮ್ಮೆ ಬೆಚ್ಚಿದಂತೆ ಮಾಡಿ ಬೇಯಿಸುತ್ತಿದ್ದ ಬಾಂಡ್ಲಿಯೊಳಗೆ ಹಿಟ್ಟನ್ನು ಹಾಕುತ್ತ, ‘ ಯೇಯ್ , ನಿಜಯೇಳೀಯೋ ಏನ್ ತಮಾಸೆಯಾಡಿಲಾ , ಅದೆಂಗ್ ಬಿದ್ದೋಯ್ತು ಅದ್ರೊಳಕೆ , ಏನೆಂತದು , ದೊಡ್‌ದೋ , ಚಿಕ್‌ದೋ ’ ಎಂದ. ‘ ವೋಗಪ್ಪೋ ಸರ್ರುನ್ ಬಾ, ಇಲ್ಲೇ ಕುಂತಿದ್ರೆ ಆಮೇಕದೇ ಪೋಯ ’ ಎಂದು ಬೇಸರಿಸಿ , ಬೇಗ ಬಂದು ಏನಾದರೂ ಮಾಡಿ ಹಂದಿ ಎತ್ತಿದರೆ ಬುಗುರಿ ಸಿಗಬಹುದು ಎಂದು ಊಹಿಸಿಕೊಂಡಂತೆಯೇ ‘ ತಾಡ್ಲ ಇನ್ನೊಂದೊಬ್ಬೆ ಬೋಂಡ ಬೇಯಿಸ್ ಬುಟ್ಟು ಬತ್ತೀನಿ ’ ಎಂದ. ಚೆಲುವ ಸಿಟ್ಟಿನಿಂದ ಹಿತ್ತಲಿಗೆ ಬಂದು ಹೊಂಗೆ ಮರದ ನೆರಳಿನಲ್ಲಿ ಕುಳಿತು ಸಾಯುತ್ತಿರುವ ಹಂದಿಯ ವಿಚಾರ ತಿಳಿದರೆ ಏನಾಗುತ್ತದೆಂದು ಭಾವಿಸುತ್ತಾ, ತನ್ನ ಬುಗುರಿ ಹೀಗಾಯಿತಲ್ಲ ಎಂದು ಸಂಕಟಗೊಳ್ಳುತ್ತಾ ಆಕಾಶವನ್ನು ನೋಡಿದ.

ಚೆಲುವನ ತಾತ ಗುಂಜಾರಯ್ಯ ಹೋಟೆಲಲ್ಲಿ ಬೋಂಡವನ್ನು ಬೇಯಿಸಿಯೇ ಹಿತ್ತಲಿಗೆ ಬರಬೇಕಾಗಿತ್ತು. ಆತುರದಲ್ಲಿ ಹಸಿಹಸಿಯಾಗಿಯೇ ಚೆನ್ನಾಗಿ ಬೇಯಿಸದೆ ಬೋಂಡವನ್ನು ಬಾಂಡ್ಲಿಯಿಂದ ಎತ್ತಿ ಹಾಕಿ , ಇನ್ನೊಂದು ‘ ವಬ್ಬೆ ’ ಹಾಕುವ ತೀರ್ಮಾನದಲ್ಲಿ ಭರಭರನೆ ಬೋಂಡದ ಹಿಟ್ಟನ್ನು ಕೈಯಿಂದ ಬಾಂಡ್ಲಿಗೆ ಹಾಕುತ್ತಾ, ಕೈಸುಟ್ಟುಕೊಳ್ಳುತ್ತ , ಕಕ್ಕಸು ಗುಂಡಿಗೆ ಬಿದ್ದಿರುವ ಹಂದಿಯ ದೃಶ್ಯವನ್ನೇ ಯೋಚಿಸಿದ . ಕಳೆದ ಬಾರಿ ಊರೂರು ಸುತ್ತಿ ಅಲೆದು ಮೇಯುವ ತಿಪ್ಪೇಗೌಡರ ಕೋಣ ಮೇಯುತ್ತ ಬಂದು ಇದೇ ಕಕ್ಕಸುಗುಂಡಿಗೆ ಬಿದ್ದಿದ್ದಾಗ ಯಮ ಪ್ರಯತ್ನ ಪಟ್ಟು ಅದನ್ನು ಮೇಲೆತ್ತಿದ್ದಾಗ ಉಂಟಾಗಿದ್ದ ರೇಜಿಗೆ ,ವಾಸನೆ, ಅಸಹ್ಯಗಳೆಲ್ಲ ನೆನಪಾದವು. ಆ ‘ ಏಲ್‌ಗುಂಡಿ ’ ಯನ್ನು ಮುಚ್ಚಿಸುವ ಯೋಜನೆಯನ್ನು ಬಹಳಾ ಸಲ ಹಾಕಿಕೊಂಡಿದ್ದರೂ ಕೂಡ ಅದು ತನ್ನ ಹಿರಿಮಗ ಚಿಕ್ಕಣ್ಣನಿಂದ ಸಾಧ್ಯವಾಗದೆ ವಿಫಲವಾಗಿತ್ತು. ಇಂಥಾ ಎಷ್ಟೋ ದೂರುಗಳು ಚಿಕ್ಕಣ್ಣನ ಆ ಕಕ್ಕಸು ಗುಂಡಿಯ ಮೇಲೆ ಬಂದಿದ್ದವು. ತಿಪ್ಪೇಗೌಡರ ಕೋಣ ಆ ಗುಂಡಿಗೆ ಬಿದ್ದುಹೋಗಿದ್ದಾಗ ‘ ಹತ್ತಾಳು ’ ಬಂದು ಹಗ್ಗ ಬಿಗಿದು ಒಂದು ದೊಡ್ಡ ಬಂಡೆಯನ್ನೇ ಎಳೆಯುವಂತೆ ಎಳೆದಿದ್ದಾಗ ಆಗಿನ ಈ ಏಲುಗುಂಡಿ ಅದರ ಎರಡು ಪಟ್ಟು ವಿಸ್ತಾರವಾಗಿ ದೊಡ್ಡ ಗುಂಡಿಯೇ ಆಗಿತ್ತು. ಕೊನೆಗೂ ಕೋಣ ಒಂದು ದಿನವೆಲ್ಲ ಆ ಗುಂಡಿಯಲ್ಲೇ ಇದ್ದಿದ್ದರಿಂದ ಹೊರಗೆ ಬಂದ ಸ್ವಲ್ಪದರಲ್ಲೇ ಸತ್ತುಹೋಗಿತ್ತು. ಮುಖ್ಯವಾಗಿ ಅದನ್ನು ಮೇಲೆತ್ತಲು ಮಾಡಿದ್ದ ಹಿಂಸಾತ್ಮಕ ತಂತ್ರದಿಂದಲೇ ಬಹುಪಾಲು ನೋವುಂಟಾಗಿ ಸತ್ತಿತ್ತು. ಹಾಗೆ ಸತ್ತಿದ್ದಕ್ಕೆ ತಿಪ್ಪೇಗೌಡರು ದಂಡರೂಪವಾಗಿ ಹಣ ಕೇಳಿದಾಗ ಚಿಕ್ಕಣ್ಣ ರೌಡಿಗಳ ತರ ಮಾತನಾಡಿ- ‘ ಅಲ್ಲಾ ಗೌಡ್ರೆ ಆ ಏಲ್‌ಗುಂಡಿಗೆ ನಾವು ಏಳ್ಕೊಟ್ಟಿದ್ದೆವೆ ಏನಾರ . ಇಂಥಿಂತೆವ್ರ ಯಮ್ಮೆ ಬತ್ತವೆ , ಕುರಿಗೋಳ್ ಬತ್ತವೆ. ಅವೆಲ್ಲನು ಒಳ್ಕ್‌ಎಳ್ಕಬುಡು ಅಂತಾ , ನಿಮ್ಮೆಮ್ಮೆಗೆ ಬುದ್ದಿ ಇದ್ದಿದ್ರೆ ಅದ್ಯಾಕ್ ಬತ್ತಿತ್ತು ನಮ್ ತಿಪ್ಪೆತಕೆ – ಇದೊಳ್ಳೇ ಸರೋಯ್ತಪ್ಪಾ . ನಮ್ಮನುಕೂಲಕೆ ನಾವು ಕಕ್ಕಸ್‌ಗುಂಡಿ ಮಾಡ್ಕಂಡಿದ್ದೋ- ಬಂದ್ ಬಿದ್ದು ಸಾಯ್ತು . ಅದ್ಕೆ , ನಮ್ಮೊಣೆ ಏನಿದ್ದದು. ಯಾವ್ ದಂಡನು ಇಲ್ಲ .‘ಏನೂ ಇಲ್ಲ ಸ್ವಾಮಿ ’ – ಎಂದು ರೋಪು ಹಾಕಿ ಕಳಿಸಿ ಬಿಟ್ಟಿದ್ದ. ಆಗಿನಿಂದಲೂ ಈ ಏಲ್‌ಗುಂಡಿಗೆ ಒಂದು ದೊಡ್ಡ ಇತಿಹಾಸವೇ ಬಂದು ಬಿಟ್ಟಿದೆ. ಊರವರೆಲ್ಲ ಏಲ್‌ಗುಂಡಿಯ ಮೇಲೆ ಯವುದಾದರೂ ತಗಡನ್ನು ಹೊದಿಸು ಇಲ್ಲವೆ ಕಲ್ಲುಚಪ್ಪಡಿ ಹಾಕಿಸು ಎಂದು ಹೇಳಿದ್ದರೂ ಕೂಡ ಯಾವುದನ್ನು ಮಾಡಿಸಲು ಆಗಿರಲಿಲ್ಲ. ಕೋಣ ಬಿದ್ದಿದ್ದರಿಂದ ಗುಂಡಿ ವಿಸ್ತಾರವಾಗಿಬಿಟ್ಟಿತ್ತು. ಮಣ್ಣು ಕುಸಿದು ಹಾಳಾಗಿತ್ತು. ಹೀಗಾಗಿ ಇಷ್ಟಗಲಕ್ಕೂ ಕಲ್ಲು ಇಲ್ಲವೆ ತಗಡನ್ನು ಮುಚ್ಚಿಸಲು ಚಿಕ್ಕಣ್ಣನಿಗೆ ಅಸಾಧ್ಯವಾಗಿತ್ತು. ಸುಲಭವಾಗಿ ಸಿಗುವ ತೆಂಗಿನಗರಿಗಳನ್ನು ಈಗ ಮೇಲೆ ಮುಚ್ಚಿದ್ಡ. ಹೀಗೆ ಮುಚ್ಚಿದ್ದೇ ಆ ನಂತರ ಊರಿನ ಸುತ್ತಲೂ ಹಬ್ಬಿಕೊಳ್ಳುವ ಎಷ್ಟೋ ತಮಾಸೆಗಳಿಗೆ , ದುರಂತಗಳಿಗೆ ದಾರಿ ಮಾಡಿಕೊಟ್ಟಿತ್ತು.ಗೌಡರ ಆ ಕೋಣವನ್ನು ಆ ನಂತರ ಮಾದಿಗರ ಯಾಲಕ್ಕಯ್ಯ ಬಂದು ನೋಡಿ , ಚೆನ್ನಾಗಿ ಬಿಸಿನೀರಿನಿಂದ ತೊಳೆಸಿ , ಕೊಯ್ದು ಮಂಕರಿ ತುಂಬ ಬಾಡು ಮಾಡಿ ಕೊಂಡು ಹೋಗಿದ್ದನ್ನು ಕೇಳಿ ಗೌಡರ ತಲೆ ತಿರುಗಿತ್ತು . ‘ ಆ ಹೊಲ್‌ಮಾದುಗೆ ನನ್ ಮಕ್ಕಳು ಬೇಕೆಂತ್ಲೆ ಕೋಣುನ್ನ ಏಲ್‌ಗುಂಡಿಗೆ ಬೀಳ್ಸಿ ತಿನ್ನುಕೆ ಈ ಕರಾಮತ್ ಮಾಡವರೆ ’ ಎಂದು ಊರಲ್ಲೆಲ್ಲ ಮಾತಾಯಿತು. ಆದರೂ ಆ ಕೋಣನ ಬಾಡು ಬಹಳಷ್ಟು ಜನರಿಗೆ ತಲುಪಿದ್ದರಿಂದ ಯಾರೂ ಹೆಚ್ಚಾಗಿ ಆಗ ತಲೆ ಕೆಡಿಸಿಕೊಂಡಿರಲಿಲ್ಲ.
ಕೆಲವು ದಿನದ ನಂತರ ಪೇಟೆಯಲ್ಲಿ ಓದಿ ಬಂದಿದ್ದ ಪಡ್ಡೆ ಹುಡುಗರು ‘ ಚಿಕ್ಕಣ್ಣನ ಏಲ್‌ಗುಂಡಿ ಕೋಣನನ್ನ ಹಿಡಿಯೋ ಖೆಡ್ಡಾ ಕಣ್ರೋ ’ ಎಂದು ಗೇಲಿ ಮಾಡುತ್ತಿದ್ದರಾದರೂ ಚಿಕ್ಕಣ್ಣ ಅದಕ್ಕೆ ಸೊಪ್ಪು ಹಾಕಿರಲಿಲ್ಲ . ಹೀಗೆ ಇದೆಲ್ಲವನ್ನೂ ಬೋಂಡ ಹಾಕುತ್ತಿದ್ದಂತೆಯೇ ನೆನೆಸಿಕೊಂಡಾಗ ಇಡೀ ಬಾಂಡ್ಲಿಯೇ ಕಕ್ಕಸು ಗುಂಡಿಯಂತೆ ವಾಕರಿಕೆ ಬಂದು , ‘ ತಥ್ ಇವುನವ್ವುನ್ನಾ ಕೇಯೇನೆಣ್ವಿ ಸರಿಯಿಲ್ಲಾ ’ ಎಷ್ಟೊತ್ತಾಯ್ತು ಎಣ್ಣೆಗಾಕಿ , ಇನ್ನೂ ಬೇಯ್ಲಿಲ್‌ವಲ್ಲಾ ಎಂದು ಬೆಂಕಿಯನ್ನು ಹೆಚ್ಚುಮಾಡಿ – ಕೊನೆಗೂ ಬೇಯಿಸಿ ತನ್ನ ಮಗ ಚಿಕ್ಕಣ್ಣನಿಗೆ ಇದನ್ನು ಗುಟ್ಟಾಗಿ ತಿಳಿಸಿ ಹಿತ್ತಲಿಗೆ ಬಂದ.

ಚೆಲುವ ತನ್ನ ತಾತನಿಗೆ ಬುಗುರಿ ಬಗ್ಗೆ ಹೇಳಬೇಕೆಂದುಕೊಂಡು ಒಮ್ಮೆ ನಿರ್ಧರಿಸಿ ಬೇಡ ಎಂದುಕೊಂಡು , ‘ ಯೀಗೆಂಗಪ್ಪಾ ಯೀಚುಕ್ ತೆಗೆದಾಕುದು ಹಂದಿಯಾ ’ ಎಂದ. ಗುಂಜಾರಯ್ಯ ಗುಂಡಿಯ ಗರಿಗಳನ್ನು ಮೆಲ್ಲಗೆ ಸರಿಸಿ ನೋಡಿದ. ಒಂದೇ ಬಾರಿಗೆ ಹಂದಿ ನೆಗೆಯುವ ಪ್ರಯತ್ನ ಮಾಡಿ ಬಡಕ್ ಎಂದು ಒಳಗೇ ಬಿದ್ದುಕೊಂಡು ಕೊಯ್‌ಗುಟ್ಟಿತು. ಹಾಗೆ ಜಿಗಿದದ್ದರಿಂದ ಗುಂಜಾರಯ್ಯನ ಮೂಗಿನ ಮೇಲೆ ಅವರೆ ಕಾಳಿನಗಾತ್ರದ ಏಲಿನ ಸಣ್ಣ ಕಣ ಬಂದು ನೊಣದಂತೆ ಕುಳಿತುಬಿಟ್ಟಿತು.. ಸಾದ್ವಿತನದ ಗುಂಜಾರಯ್ಯ ಅತ್ಯಂತ ಸಿಟ್ಟಿನಿಂದ , ಅವಮಾನಿತನಾದವನಂತೆ ಭಾವಿಸಿ , ಧರ್ಮರಾಯ ಸ್ವರ್ಗಾರೋಹಣದ ಕೊನೆಯಲ್ಲಿ ಕಿರುಬೆರಳನ್ನು ನರಕಕ್ಕೆ ಅದ್ದಿದಂತೆ ಆಗಿದ್ದಾಗ ಆದಂತೆಯೇ ತನಗೂ ಆಯಿತೇನೋ ಎಂದುಕೊಂಡು ಎಲೆಯೊಂದರಿಂದ ಮೂಗು ಸೀಟಿಕೊಂಡು ವಾಪಸ್ಸು ಬಂದು , ‘ ಒಳಗೇ ಸಾಯ್ಲಿ ಅವುಳ್ ರತ್ತನಾ ಕೇಯುಂದು ’ ಎಂದು ಬೈಯುತ್ತಾ , ಇದರ ಯವಾರವನ್ನು ಮಗನಿಗೇ ವಹಿಸುವುದು ಸರಿ ಎಂದು ಹೋಟೆಲಿಗೆ ಬಂದು ಬಿಟ್ಟ.

ಚೆಲುವ ನಿರಾಶೆಯಿಂದ ತನ್ನ ಬುಗುರಿ ಇನ್ನು ಯಾವತ್ತೂ ಕೂಡ ತನ್ನ ಕೈಗೆ ಬರುವುದಿಲ್ಲವೇನೋ ಎನ್ನುತ್ತಾ ತನಗೆ ಅರಿವಿಲ್ಲದೆಯೇ ಬುಗುರಿಯ ದಾರವನ್ನು ಬೆರಳಿಗೆ ಸುತ್ತಿಕೊಳ್ಳುತ್ತಾ ಫಳಕ್ ಎಂದು ಕಣ್ಣೀರನ್ನು ಬೀಳಿಸಿದ. ಇದ್ದಕ್ಕಿದ್ದಂತೆ ಇಡೀ ಹಂದಿ ಏಲ್‌ಗುಂಡಿ ಮತ್ತು ಊರಿನ ಎಲ್ಲ ಆಗುಹೋಗುಗಳು ಕೂಡ ವಿಷ್ಣುವಿನ ವರಾಹ ಅವತಾರದ ಬಗ್ಗೆ ಹರಿಕತೆ ದಾಸರು ಹೇಳಿದ್ದ ವಿವರದಂತೆ ಕಂಡು ಬಂದು ಹೆದರಿಕೆ ಮತ್ತು ವ್ಯಾಕುಲದಿಂದ ಒಳಗೊಳಗೇ ಹಿಂಸೆಪಡತೊಡಗಿದ. ಗುಂಡಿಗೆ ಬಿದ್ದ ಹಂದಿ ಚೆಲುವನ ಬುಗುರಿಯ ಯಾವ ಕುರುಹೂ ಉಳಿಯದಂತೆ ಅಳಿಸಿಹಾಕಿತ್ತು. ಆ ಬುಗುರಿಯನ್ನು ಆತ ಗಾರೆ ನೆಲದ ಮೇಲೆ ಬಿಟ್ಟು ಗುಯ್‌ಗುಡಿಸುವಾಗ ಬೀದಿ ಹೈಕಳು ಅದರ ಸೊಬಗು , ಹೊನಪು . ತಿರುಗುವ ರೀತಿಗಳೆಲ್ಲದರ ಬಗ್ಗೆ ಕಂಡು ಹೊಟ್ಟೆಕಿಚ್ಚು ಪಡುತ್ತಿದ್ದಾಗ ಆನಂದಾತಿರೇಕದಲ್ಲಿ ಒಳಗೊಳಗೇ ಖುಷಿ ಪಡುತ್ತಿದ್ದುದೆಲ್ಲ ಲವಲೇಶವೂ ಈಗ ಇಲ್ಲದಂತಾಗಿ ತನ್ನ ಅಪ್ಪನ ಬಗ್ಗೆ ಚೆಲುವ ಸಿಟ್ಟುಗೊಂಡ.

‘ ಅವುನು ಯಾಕಾರು ಸಾಯುವುದಿಲ್ಲ ಬೇವರ್ಸಿ , ನನ್ ಬುಗುರಿನೆಲ್ಲ ಇಂಗೇ ಮಾಡ್ದ . ಅವತ್ತು ಕೊಡ್ಲಿಯಿಂದ ವಳ್ಕಿ ಮೂರು ಬುಗುರಿಗೊಳ್ನೂ ಸೀಳಾಕಿ ವಲೆಗಾಕ್ದ. ಇನ್ನೊಂದು ಕಣ್ಣುಗ್ ಕಾಣ್ದಂಗೆ ದೂರಸ ಬಿಸಾಕ್ದ. ಇವತ್ತು ನೋಡುದ್ರೆ ‘ ಯಾವ ಬುಗ್ರಿಯೊ ನೀ ಆಡುದು; ತತ್ತರೋ ಸೂಳೆಮಗ್ನೆ ’ ಅಂತಾ ಕಿತ್ಕಂದು ‘ ಇನ್ನೊಂದ್ಸಾರಿ ನಿನ್ ಕೈಲೇನಾರ ಬುಗ್ರಿ ಕಂಡ್ರೆ ಆಮೆಕೆ ನಿನ್ನೇ ಸೀಳಾಕ್ತೀನಿ ’ ಅಂತಾ ಬೈಯ್ದು ಕಕ್ಕಸ್ ಗುಂಡಿಗೆ ಹಾಕ್ದ…. ಎಂದು ಯೋಚಿಸುತ್ತ ಮತ್ತೆ ಹೊಂಗೆ ಮರಕ್ಕೆ ಹತ್ತಿ ಕುಳಿತು, ಅದೇ ಕಕ್ಕಸು ಗುಂಡಿಯನ್ನು ನೋಡುತ್ತಾ ಲೆಕ್ಕ ಹಾಕ ತೊಡಗಿದ. ಯಾರು ಯಾರದೋ ಕೋಳಿಗಳು, ಕುರಿಗಳು ಬಂದು ಅದರೊಳಗೆ ಬಿದ್ದು ಸತ್ತಿದ್ದಾಗ ಉಂಟಾಗಿದ್ದ ಜಗಳಗಳಲ್ಲಿ ಅಪ್ಪ ವಿಕಾರವಾಗಿ ಕುಣಿದಾಡಿ ದೊಡ್ಡ ಚಾಕು ತಂದು ಹೆದರಿಸಿ ಸುಮ್ಮನಾಗಿಸುತ್ತಿದ್ದುದೆಲ್ಲ ನೆನಪಾಯಿತು. ಬುಗುರಿಯ ಗಿರಿಗಿರಿ ಸುತ್ತುವಿಕೆ ಆತನ ಮನಸ್ಸು ತಲೆ ಇಡೀ ದೇಹದ ಸುತ್ತ ಬುಗಬುಗನೆ ಸುತ್ತು ಹಾಕತೊಡಗಿತು. ಆ ನಡುವೆ ಅಸ್ತವ್ಯಸ್ತವಾದ ಕಲಸುಮೇಲೋಗರವಾದ ಇಡೀ ಮನೆಯ ಚಿತ್ರಗಳು ಸೇರಿಕೊಂಡು ಹಿಂಸೆಯಾಗಿ ತಳಮಳಗೊಂಡ.

ಚಿಕ್ಕಣ್ಣನ ಹಿತ್ತಲಲ್ಲಿ ಕಟ್ಟಿಸಿದ್ದ ಕಕ್ಕಸುಗುಂಡಿ ಇಡೀ ಊರಲ್ಲೇ ಮೊದಲನೆಯದು. ಅದು ಊರಿಗೆ ಹೊಸ ವ್ಯವಸ್ಥೆಯಾಗಿ ಸೇರಿಕೊಂಡಿತ್ತು. ತನ್ನ ತಮ್ಮ ಶಾಂತರಾಜನ ಮದುವೆಗೆ ಮೈಸೂರಿನಿಂದ ಹೆಣ್ಣು ತಂದಿದ್ದಾಗ , ಆ ನೆಂಟರಿಗೆ , ಹೆಂಗಸರಿಗೆ ಕಕ್ಕಸು ಹೋಗಲು ತೊಂದರೆಯಾಗುತ್ತದೆಂದು ಯೋಚಿಸಿ ಕಟ್ಟಿಸಿದ್ದ ಈ ವ್ಯವಸ್ಥೆ ಮದುವೆ ದಿನದಲ್ಲೇ ಕೈಕೊಟ್ಟಿತ್ತು. ಭರ್ಜರಿ ಊಟದ ನಂತರ ಆ ಕಕ್ಕಸ್ಸು ಗುಂಡಿ ಬಂದಿದ್ದ ಹಲವಾರು ಹೆಂಗಸರ ಪಾಯಿಖಾನೆಯಿಂದ ತುಂಬಿಹೋಗಿತ್ತು. ಯಥಾವತ್ ಆಧುನಿಕ ಕಕ್ಕಸ್ಸು ಮನೆಯಂತೆ ಕಟ್ಟಿಸಿದ್ದರಾದರೂ ಆ ಕಕ್ಕಸ್ಸೆಲ್ಲ ಸಂಗ್ರಹಗೊಳ್ಳಲು ಡ್ರೈನೇಜ್ ವ್ಯವಸ್ಥೆಗೆ ಬದಲು ಹಿಂಭಾಗಕ್ಕೆ ಒಂದೂವರೆ ಆಳುದ್ದ ಗುಂಡಿ ತೆಗೆದು ಅದೆಲ್ಲವೂ ಅಲ್ಲಿ ಬೀಳುವ ವ್ಯವಸ್ಥೆ ಮಾಡಲಾಗಿತ್ತು. ಅಂದು ಮದುವೆಯ ಮಾರನೇ ದಿನವೇ ಗುಂಡಿ ತುಂಬಿಹೋಗಿ ಭಯಾನಕ ವಾಸನೆ ಮದುವೆ ಮನೆಯನ್ನು ಕವುಚಿಕೊಂಡು ಎಲ್ಲರ ತಾಳ್ಮೆ ಪರೀಕ್ಷೆಗೆ ಒಡ್ಡಿತ್ತು . ಹೆಣ್ಣಿನ ಕಡೆಯ ಯಾವನೋ ಒಬ್ಬ ಆ ಗದ್ದಲದಲ್ಲಿ ಯಾರೋ ಒಬ್ಬಳ ಜೊತೆ ಲೈಂಗಿಕ ಸಂಬಂಧ ಏರ್ಪಡಿಸಿಕೊಳ್ಳಲು ಸಂಚು ಮಾಡಿ ಆ ರಾತ್ರಿ ಹಿತ್ತಲಲ್ಲಿದ್ದ ಕಕ್ಕಸ್ ಗುಂಡಿಯ ಬಳಿ ಗೊತ್ತಿಲ್ಲದೆ ಆಕೆ ಜೊತೆ ಹೋಗಿ ತನಗರಿವಿಲ್ಲದೆಯೇ ಗುಂಡಿಗೆ ಕಾಲು ಜಾರಿ ಬಿದ್ದು ಬಚಾವಾಗಿ ಕಾಲು ತುಂಬ ಏಲುಮಯ ನೀರನ್ನು ಮೆತ್ತಿಸ್ಕೊಂಡು ಬಂದು ಎಲ್ಲರಿಗೂ ದೊಡ್ಡ ಹಾಸ್ಯದ ಸಂಗತಿಯಾಗಿಬಿಟ್ಟಿದ್ದ. ಆಗ ತಾನೆ ಒಂದು ವಾದವನ್ನು ಹೂಡಿ – ‘ ಈ ಜುಜುಬಿ ಹಳ್ಳಿಗಳಿಗೆ ಹೆಣ್ಣು ಕೊಡೋದು ಬ್ಯಾಡಾ ರಂಗಪ್ಪನೋರೆ ಅಂತಾ ಫಾದರ್‌ಇನ್ಲಾ ಅತ್ರ ಸಾವುರ್ ಸರಿ ಬಾಯ್ ಬಡ್ಕಂದೆ. ಆದ್ರೆ ಆ ಹಲ್ಕಾ ಫಾದರ್‌ಇನ್ಲಾ ನನ್ ಮಾತ ಕೇಳ್‌ಲಿಲ್ಲ. ಯಾವುದೋ ದೆವ್ವ ನನ್ನನ್ನು ಆ ಕಕ್ಕಸ್ ಗುಂಡಿತನಕ ದರದರ ಎಳೆದುಕೊಂಡುಹೋಗಿ ಅದರೊಳಕ್ಕೆ ತಳ್ಳುವ ಪ್ರಯತ್ನ ಮಾಡ್ತು. ಬೈಚಾನ್ಸ್ ತಪ್ಪಿಸ್ಕಂದ್ ಓಡ್‌ಬಂದೆ, ಥೂ ಥೂ ಎಂತಾ ವಾಸನೆ. ಹಾಳಾದ್ ಹಳ್ಳೀ ಜನ ಅದೇನ ತಿಂತಾರೋ ನನಗೆ ಗೊತ್ತಾಗೋಲ್ಲಪ್ಪ,. ಇಂಥಾ ದೆವ್ವ ಪಿಶಾಚಿಗಳಿರೋ ಮನೆಗೆ ಹೆಣ್ಣು ಕೊಡಬಾರದಿತ್ತು ಎಂದು ಅನುಮಾನ ತಡೆಯಲಾಗದೆ ಹೀನಾಮಾನವಾಗಿ ಗಂಡಿನ ಮನೆಯವರನ್ನ ಹಳಿಯ ತೊಡಗಿದ. ಆ ವೇಳೆಗೆ ಕುಡಿತದಲ್ಲಿ ಊರಿಗೆ ಚಾಂಪಿಯನ್ ಆಗಿದ್ದ ಅತಾರಿ ಬಂದವನು ಹೆಣ್ಣಿನ ಕಡೆಯವನ ಮೇಲೆ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿ ಕೊನೆಗೆ ಗಂಡು ಬಂದು ಇಬ್ಬರಿಗೂ ಕೈಮುಗಿದಿದ್ದಾಗ ಗದ್ದಲ ಮುಗಿದಿತ್ತು. ಇಂಥಾ ಹತ್ತಾರು ಹಗರಣಗಳ ಕಕ್ಕಸು ಗುಂಡಿ ಈಗ ಒಂದೊಂದೂ ಇತಿಹಾಸದ ಹೊಲಗೇರಿಯ ಬದುಕಿನ ಪುಟಗಳನ್ನು ತೆರೆದಿಡುವಂತೆ ಗುಂಜಾರಯ್ಯನ ತಲೆ ಒಳಗೆ ಬಿಡಿಸಿಕೊಳ್ಳುತ್ತಾ ಬಂದವು. ಚಿಕ್ಕಣ್ಣನಿಗೆ ಹಂದಿ ಬಿದ್ದಿರುವ ಸಂಗತಿ ತಿಳಿದ ಮೇಲಂತೂ ಆನಂದಾತಿರೇಕಕ್ಕೊಳಗಾಗಿ ಬಯಸದೆ ಬಂದ ಭಾಗ್ಯ ಎನ್ನುತ್ತಾ ಆ ಬಗ್ಗೆ ಯೋಜನೆ ಹಾಕತೊಡಗಿದ. ಮನೆಯ ಹೆಂಗಸರು ಈ ಘಟನೆಯಲ್ಲಿ ಯಾವುದೋ ಕೇಡಿನ ಸೂಚನೆ ಎನ್ನುವಂತೆ ಲೆಕ್ಕಹಾಕತೊಡಗಿದರು. ಚೆಲುವನ ಅವ್ವ ಯಾಕೋ ಹೆದರಿ ಮಗನನ್ನು ಕೂಗಿಕೊಂಡಳು. ಹರಿಕತೆಯಲ್ಲಿ ಹೇಳಿದ್ದ ಕತೆ ಅವಳಿಗೂ ನೆನಪಾಗಿ ‘ ಅಯ್ಯೋ ದೇವ್ರೆ. ಸ್ವಾಮಿ ಹಂದಿ ರೂಪ ತಾಳಿತ್ತು ಅಂತಾ ಹೇಳ್ತಿದ್ರಲ್ಲಪ್ಪಾ. ರಾಕ್ಷಸುನ್ನಾ ಸಾಯ್ಸುಕ್ಕೆ ಆ ಅವುತಾರ ಎತ್ತಿ ಏಲ್‌ಮನೆವೊಳಗಿದ್ದೋನ್ನ ಸಿಗುದಾಕ್ತಂತಲ್ಲಾ….ಎಂದು ಅಸ್ಪಷ್ಟವಾಗಿ ನೆನಪಿಸಿಕೊಂಡಳು. ‘ ಲೋ ಚೆಲುವ , ಚೆಲುವಾ. ಬಾರೋ ನಿನ ಬಾಯಾಗ್ ನನ್ ರಕ್ತ ಹಾಕ. ಎಲ್ಲಿದ್ದಿಯೋ ’ ಎಂದು ಜೋರಾಗಿ ಕೂಗಿಕೊಂಡಳು. ಯಾವತ್ತೂ ಇಲ್ಲದ ಅವ್ವ ಇವತ್ತು ಏಕೆ ಹೀಗೆ ಬೈಯುತ್ತಿದ್ದಾಳೆಂದು ಚೆಲುವ ಮನೆಯೊಳಗೆ ಬಂದು ಏನವ್ವಾ ಎಂದು ನಿಂತ. ಹಿತ್ತಲ ಮನೆ ಬಾಗಿಲಿನಿಂದ ಕಕ್ಕಸು ಗುಂಡಿಯ ವಾಸನೆ ನಿಧಾನವಾಗಿ ಮನೆಯನ್ನ ಆವರಿಸಿ ವಾಸನೆ ತರಿಸುತ್ತಿದೆ ಎಂದು ಮೂಗು ಮುಚ್ಚಿಕೊಂಡ.

ವಿಷಾದವೆಂದರೆ ಚೆಲುವನ ಬುಗುರಿ ಯಾವ ಕಾರಣಕ್ಕೂ ಕೈಗೆ ಬರುತ್ತದೆ ಎಂಬ ಯಾವ ಅಂಶವೂ ಉಳಿಯಲ್ಲಿಲ್ಲ. ‘ ಆ ಗುಂಡಿ ತಂಟೆಗೆ ವೋಗ್ಬೇಡ. ಸಿಲೇಟ್ ತಕಂದು ಪಡಸಾಲೆ ಮ್ಯಾಲೆ ಕಂತ್ಕ ಬರಿಯೋಗು. ರಜಾ ಇದ್ರೆ ವೋದ್ ಬ್ಯಾಡಾ ಅಂತಿದ್ದೇನೋ ’ ಎಂಬ ಮಾತು ಅವನಿಗೆ ಬಿತ್ತು. ಹೋಟೆಲ್ ತಿಂಡಿಗಾಗಿ ಅವನ ಅವ್ವ ಏನೇನೋ ಕೆಲಸ ಮಾಡುತ್ತಿದ್ದಳು. ಚೆಲುವ ಬೀದಿಗೆ ಬಂದು ಎಲ್ಲವನ್ನು ಜಗಿಯತೊಡಗಿದ. ಅಪ್ಪ ಹಂದಿಯನ್ನು ಹೇಗೆ ಮೇಲೆತ್ತುತ್ತಾನೆ, ಹಾಗೆ ಎತ್ತುವಾಗ ತನ್ನ ಬುಗುರಿ ಏನಾದರೂ ಸಿಕ್ಕಿದರೆ ಏನು ಮಾಡುತ್ತಾನೆ ಎಂದು ಲೆಕ್ಕಿಸಿದ. ಯಾವ ಪರಿಹಾರವೂ ಗೋಚರಿಸಲಿಲ್ಲ. ಸಪ್ಪೆ ಮೋರೆ ಹಾಕಿಕೊಂಡು ‘ ನಾನು ಬುಗುರಿಯಾಡುದ್ರೆ ಅವುನಿಗೇನ್ ಕಷ್ಟ ’ ಎಂದು ತನ್ನೊಳಗೇ ಅಂದುಕೊಂಡ. ಬೆಳಿಗ್ಗೆ ಬೀದೀಲಿ ಬುಗುರಿ ಆಡುತ್ತಿದ್ದಾಗ ಬಾರುಗೋಲು ತಂದು ಚಟೀರೆಂದು ಹೊಡೆದು ಬುಗುರಿಯನ್ನು ಕಿತ್ತುಕೊಂಡು ಹೋಗಿ, ಅವನ ಅಪ್ಪ ಆ ಕಕ್ಕಸು ಗುಂಡಿಗೆ ಬಿಸಾಡಿದ್ದ. ಅಪ್ಪನೇ ಒಂದು ದೊಡ್ಡ ರಾಕ್ಷಸನಂತೆ ಚೆಲುವನ ಮನಸ್ಸಿನಲ್ಲಿ ಸುಳಿದು ಬಂದ. ಹಾಗೆಯೇ ಆ ಮನೆಯ ಅವನ ಅವ್ವ , ಅಜ್ಜಿ, ಅತ್ತೆಯಂದಿರು ಇತ್ಯಾದಿಗಳ ಪೇಲವ ವಿಷಣ್ಣ ಮುಖಗಳು ಎದುರಾಗಿ ಅವರು ಎಂಥದೋ ಭಯಂಕರ ರೋಗಗಳಿಂದ ಬಳಲುತ್ತಿರಬೇಕೆಂದು ಭಾವಿಸಿಕೊಂಡ. ಅವನ ಅವ್ವನ ಮಾತನ್ನು ಮೀರಿ ಹೋಟೆಲಿಗೆ ಬಂದ . ಅಲ್ಲಿ ಪರ್ಮಿನೆಂಟ್ ಗಿರಾಕಿಗಳಂತೆ ಸದಾ ಅತಾರಿ ಅಪ್ಪನ ಜೊತೆ ಇದ್ದೇ ಇರುತ್ತಿದ್ದುದನ್ನುನೋಡಿದ. ಹಂದಿ ಮೇಲೆತ್ತುವ ಬಗ್ಗೆ ಏನೇನು ನಿರ್ಣಯ , ಚರ್ಚೆಗಳನ್ನು ಕೈಗೊಳ್ಳುತ್ತಾರೆಂದು ತಿಳಿಯಲು ಚಲುವ ಬರುವ ಹೊತ್ತಿಗಾಗಲೇ ಸಾಕಷ್ಟು ಚರ್ಚೆ ಮುಗಿದಿತ್ತು. ಚಿಕ್ಕಣ್ಣ ಮತ್ತು ಅತಾರಿಯ ನೀಲಿ ನಕ್ಷೆಯಂತೆ ; ಬಿದ್ಡಿರುವ ಹಂದಿಯನ್ನು ಲಪಟಾಯಿಸುವುದೇ ಸರಿ ಎಂದಾಗಿತ್ತು. ಆದರೆ ಒಳಗಿರುವ ಹಂದಿಯನ್ನು ಕೊಲ್ಲುವ ಕೆಲಸ ದುಸ್ಸಾಧ್ಯವಾಗಿತ್ತು. ಗುಂಡಿಯೊಳಗೆ ಅದನ್ನು ಕೊಲ್ಲುವುದು ಸಾಧ್ಯವೇ ಇರಲಿಲ್ಲ. ಹಂದಿ ಜಾತಿಯಂತಹ ಪ್ರಾಣಿಗಳು ‘ ಸುಲಬ್‌ರೇಟೆಲಿ ’ ಪ್ರಾಣವನ್ನು ಕಳೆದುಕೊಳ್ಳುವಂತಹವಾಗಿರಲಿಲ್ಲ. ಹಾಗೇನಾದರೂ ತಿವಿದು , ಚಚ್ಚಿ ಕೊಲ್ಲಲು ಹೊರಟರೆ ಅದು ಇಡೀ ಊರಿಗೆ ಗುಟ್ಟು ಗೊತ್ತಾಗುವಂತೆ ಶಬ್ದ ಮಾಡಿ ಕೊನೆಗೆ ಅದರ ಮಾಲೀಕನಿಗೆ ಸಂಗತಿ ತಿಳಿದು ರಂಪವಾಗಿ ತಮ್ಮ ನೀಲಿನಕ್ಷೆ ಹಾಳಾಗುತ್ತದೆಂದು ಯೋಚಿಸಿದರು. ಕೊನೆಗೆ ಅವರ ಯೋಚನೆಯಂತೆ ಇಷ್ಟು ತೀರ್ಮಾನಗಳಿಗೆ ಬಂದರು.

ಹಂದಿಯನ್ನು ಸಂಜೆ ತನಕ ಗುಂಡಿಯಲ್ಲೇ ಉಳಿಯಲು ಬಿಡಬೇಕು. ಅದು ವದ್ದಾಡಿ ವದ್ದಾಡಿ ಸುಸ್ತಾಗಿ ಸಾಯುವ ಸ್ಥಿತಿಗೆ ಬಂದಾಗ ಭರ್ಜಿಯಿಂದ ತಿವಿಯುವ ಕೆಲಸ ಮಾಡಬೇಕು. ಹಾಗೂ ಸಾಯಲಿಲ್ಲ ಎಂದರೆ ಕಕ್ಕಸು ಗುಂಡಿಯೊಳಕ್ಕೆ ಇಳಿದು ಹಗ್ಗ ಬಿಗಿದು ಮೇಲೆತ್ತಿ ಮುಂದಿನ ಕೆಲಸ ಮಾಡಬೇಕು ಎಂದು ತೀರ್ಮಾನಿಸಿದರು. ಇಷ್ಟೆಲ್ಲ ನಡೆಯುವ ಕೊನೆ ಹಂತವನ್ನು ಕೇಳಿಸಿಕೊಂಡ ಚೆಲುವ ತನ್ನ ಬುಗುರಿಯ ಜೊತೆಗೆ ಹಂದಿ ಸಾಯುವುದನ್ನು ಕಲ್ಪಿಸಿಕೊಂಡ. ಅದನ್ನು ಸಾಯಿಸುವುದಾದರೂ ಯಾಕೆಂದು ಅವನಿಗೆ ತಿಳಿಯಲಿಲ್ಲ. ತನ್ನ ತಾತ ಇಂಥಾ ದುಸ್ಸಾಧ್ಯ ನೀಲಿನಕ್ಷೆಯ ಯೋಜನೆ ಸರಿಯಲ್ಲಾ ಎಂದು ಹೇಳಿದಾಗ ತಾತ ಮಾತ್ರವೇ ಸರಿ ಎನಿಸಿಬಿಟ್ಟಿತು. ಅಂತೂ – ಹೋಟೆಲಿಗೆ ಗಿರಾಕಿಗಳು ಬಂದರು ಹೋದರು . ಬೋಂಡಗಳ ತಿಂದರು, ಟೀ ಹೀರಿದರು. ಅಂತಾ ಇಂತಾ ಮಾತಾಡಿ ಬಿಸಿಲಿನ ಬಗ್ಗೆ ಬೈಯ್ದರು. ಮಳೆ ಈ ವರ್ಷವೂ ಕೈಕೊಡುತ್ತದೆಂದು ನಿರಾಶರಾದರು. ಹಾಗೆಯೇ ಬಂದ ಒಬ್ಬೊಬ್ಬರೂ – ‘ ಥೂ ; ಇದೇನ್ ಚಿಕ್ಕಣ್ಣಾ ಇಂತಾ ವಾಸ್ಣೆ ಬತ್ತದಲ್ಲಾ , ಇವತ್ತು ಏನ್ ಎಲ್ಲಾರ ನಾಯಿಗೀಯಿ ಸತ್ತಿದ್ದದೇ ನಿಮಿತ್ಲೆಲಿ ? ಥೂ ಬರೀ ಅಮಾದಿ ವಾಸ್ನೆ ಕನಪ್ಪಾ ’-‘ ಟೀಯೆ ಬಾಯ್ಗೆ ಬಿಡೂಕೆ ಆಗುದಿಲ್ಲ. ’ – ಎನ್ನುವ ಮಾತುಗಳನ್ನು ಆಡಿದ್ದರು. ಹೀಗೆ ದೈನಂದಿನ ಬದುಕಿನ ಚಟುವಟಿಕೆಗಳೆಲ್ಲದರ ಬಗ್ಗೆ ವಿಚಾರ ಮಾಡಿ ಅವರವರ ಕೆಲಸಕ್ಕೆ ಹೋಗಿದ್ದರು. ಬಿಸಿಲು ಆಗತಾನೆ ಇಳಿಯುವ ಸೂಚನೆ ತೋರಿತು.

ಅತಾರಿ ತನ್ನ ನೀಲಿನಕ್ಷೆಗೆ ತಕ್ಕಂತೆ ಎಲ್ಲವನ್ನು ಸಿದ್ಧಮಾಡಿಕೊಂಡಿದ್ದ. ಒಂದು ಮಡಕೆ ಎಂಡವನ್ನು ಈ ಕಾರ್ಯಕ್ಕಾಗಿ ಪೇಟೆಯಿಂದ ತಂದು ಹಿತ್ತಲಲ್ಲೇ ಇಟ್ಟಿದ್ದ. ಭಯಂಕರವಾಗಿ ಕುಡಿದು , ಅನಂತರ ವಿಪರೀತ ನಿಶೆಯೇರಿದ ಮೇಲೆಯೇ ತಾವು ಕಾರ್ಯಾಚರಣೆಗೆ ತೊಡಗುವುದು ಸರಿ ಎಂಬುದು ಅವನ ವಾದ. ಯಾಕಂದರೆ , ವಿಪರೀತವಾದ ಆ ಕೆಟ್ಟ ಏಲಿನ ವಾಸನೆಯಿಂದ ಹಂದಿಯನ್ನು ಮೇಲೆತ್ತುವುದಕ್ಕೆ ಕಷ್ಟವಾಗುತ್ತದೆಯಾದ್ದರಿಂದ ಸಂಪೂರ್ಣ ನಿಶೆಯಿದ್ದರೆ ಯಾವ ವಾಸನೆಯನ್ನು ಲೆಕ್ಕಿಸದೆ ಕೆಲಸ ಮಾಡಬಹುದು ಎಂದು ನಿರ್ಣಯಿಸಿ ಚಿಕ್ಕಣ್ಣನ ಶಹಬ್ಬಾಸ್‌ಗಿರಿ ಪಡೆದಿದ್ದ. ಅಂತೂ ಎಲ್ಲವೂ ಸಿದ್ಧವಾಯಿತು. ಮನೆಯ ಹೆಂಗಸರು ಈ ನೀಲಿನಕ್ಷೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಾದರೂ ಕೂಡ ಅವರ ಧ್ವನಿಗೆ ಯಾವ ಮೈಕೂ ಇರಲಿಲ್ಲ. ಗುಟ್ಟಾಗಿ ಬೇಗ ಕೆಲಸ ಮುಗಿಸಬೇಕೆಂದು ಎಂಡ ಕುಡಿಯುವುದರಲ್ಲಿ ಇಬ್ಬರೂ ತೊಡಗಿದರು. ಚೆಲುವ ಇದನ್ನೆಲ್ಲ ಕದ್ದು ಗಮನಿಸುತ್ತಾ, ಮನುಷ್ಯರು ಏಲುಗುಂಡಿಗೆ ಹೇಗೆ ಇಳಿಯುತ್ತಾರೆಂಬುದನ್ನು ನೋಡಲು ಆಶ್ಚರ್ಯದಿಂದಲು ಬುಗುರಿ ಏನಾದರೂ ಸಿಗಬಹುದೇ ಎಂದು ಅಣುವಿನಷ್ಟು ಆಸೆಯಿಂದಿರಲು ಕಾದು ತಾನೊಂದು ಕಡೆ ಮರೆಯಲ್ಲಿ ಕುಳಿತ. ಚಿಕ್ಕಣ್ಣ ಒಂದು ಸುತ್ತು ಗಟಗಟ ಕುಡಿದು ಎದ್ದು ಬಂದು ಕಕ್ಕಸ್ಸು ಗುಂಡಿಯನ್ನು ತೆಗೆದು ನೋಡಿ ಅಸಾಧ್ಯ ವಾಸನೆಗೆ ಬೆಚ್ಚಿ ವಾಪಸ್ಸು ಓಡಿಬಂದು ಪುನಃ ಕುಡಿಯತೊಡಗಿದ. ಆ ಗಬ್ಬು ಇಡೀ ಊರಿನ ಗಬ್ಬಿನಂತೆ , ಮನುಷ್ಯನ ಗಬ್ಬಿನಂತೆ ಊರ ಸುತ್ತ ಗಾಳಿಯ ಜೊತೆ ಅಲೆಯತೊಡಗಿತು. ಅತಾರಿಗೆ ವಿಪರೀತ ನಿಶೆ ಏರುತ್ತಿತ್ತು , ತೊದಲುತ್ತ , ‘ ಯಂಗೋ ವತಾರಿಂದ ಒಳ್ಗೇ ಬಿದ್ಕಂದು ಸಾಯುಮಟ್ಟುಕ್ಕೋಗದೆ.: ಈಗ ಉಪಾಯ್ದಲ್ಲಿ ಅಮರ್‌ಕತ್ತ ಚಿಂಕಿ ಸಾಯಸ್‌ಬೋದು ’ – ಎಂದ. ಚಿಕ್ಕಣ್ಣ ಗುರುಗುಟ್ಟುತ್ತ ‘ ಅಂಗ್ಮಾಡುದ್ರೆ ಆದಾದ್ಲಾ ಅತಾರಿ. ಅಂದಿ ಸಕ್ನೆ ವತ್ಕಂಟ ಜೀಮ ಇಡ್ಕಂದಿರ್‍ತದೆ. ಅದ್ಕೇ ಕತ್ತ ಚಿಮ್ಮಿ ಸಾಯ್ಲುಮಾತಾ ಅತ್ಲಾಗ್ ಬಿಸಾಕು ’ ಎಂದ. ನೀನೇಳೂದು ಸರಿಯೇ ಕನ್‌ಲಣ್ಣ , ಯೀಗಾ ಇಂಗ್ಮಾಡ್ವ. ಒಂದ್ ದೊಡ್ಡ ಕಂಬ್ಳ ಚೀಲ್ಕೆ ಅದ ಸೇರುಸ್‌ಬುಟ್ಟು , ಆಮೇಕೆ ಅಗ್ಗ ಕಟ್ಟಿ ಮ್ಯಾಕೆಳಕಮ ’ ಎಂದ. ‘ ಸೈಕಲಾ ಅತಾರಿ ’ ಎಂದು ಚಿಕ್ಕಣ್ಣ ಹಾಗೆಯೇ ಒಪ್ಪಿಕೊಂಡು ಕಕ್ಕಸು ಗುಂಡಿಗೆ ಇಳಿಯುವ ಕಾಯಕಕ್ಕೆ ಅಣಿಯಾದರೂ ಚೆಲುವ ಇದನ್ನೆಲ್ಲ ನೋಡುತ್ತಲೇ ಬುಗುರಿ ಸಿಕ್ಕಿದರೂ ಕೂಡ ಅಪ್ಪ ಅದನ್ನು ಕಣ್ಣಿಗೆ ಕಾಣದಂತೆ ದೂರ ಎಸೆಯುತ್ತಾನೆಂದುಕೊಂಡು ದುಃಖಿತನಾದ. ತನ್ನ ಆತ್ಮೀಯರಾರೋ ಕಳೆದುಹೋದರು ಎಂಬಂತೆ ಬುಗುರಿಯ ಬಗ್ಗೆ ಚಿಂತೆಪಡತೊಡಗಿದ.
ಹೊದಿಸಿದ್ದ ತೆಂಗಿನಗರಿಗಳನ್ನು ಅತಾರಿ ಮೆಲ್ಲಗೆ ಎಳೆದು ಹಾಕಿದ. ಗಬ್ಬುನಾತ ಅಡರಿಕೊಂಡಿತು. ಕುಡಿದು ಅಮಲಾಗಿದ್ದ ಅವರ ಕಣ್ಣುಗಳು ಆ ವಾಸನೆಗೆ ಸ್ಪಂದಿಸುತ್ತಿರುವಂತೆ ಆ ನರಕದೊಳಗೆ ಹಂದಿಗಾಗಿ ಕಣ್ಣಾಡಿಸಿದರು. ‘ ಎತ್ತಾಗೋಯ್ತಣ್ಣಾ ಕಾಣುದೆ ಇಲ್ವಲ್ಲಾ ’ ಎಂದ ಅತಾರಿ. ‘ ಏಯ್ ಮಟ್ವಾಗ್ ನೋಡ್ಲಾ , ಅಲ್ಲೇ ಯೇಲ್ ಮೆರ್ಕಂದು ಬಿದ್ದದಲ್ಲಾ ’ ಎನ್ನಲೂ ಚಿಕ್ಕಣ್ಣ : ‘ ವೂಂಕನಣ್ಣೋ ಯೇಲೆಲಿ ವುಂಟಾಡಿ ವುಂಟಾಡಿ ಗುರ್ತೇ ಕಾಣ್ದಂಗಾಗದೆ ’ ಎಂದು ಅಸಾಧ್ಯ ವಾಸನೆಯನ್ನು ಸಹಿಸಿಕೊಂಡು ನೋಡಿಯೇ ನೋಡಿದನಾದರೂ ಏನೂ ಕಾಣಲಿಲ್ಲ. ಈಗ ಇಬ್ಬರಲ್ಲಿ ಒಬ್ಬರು ಕೆಳಕ್ಕೆ ಇಳಿಯುವುದೇ ಸರಿ ಎಂದು ತೀರ್ಮಾನಿಸಿದರು. ಇಷ್ಟೆಲ್ಲದರ ನಡುವೆ ಮಹಾ ಧೈರ್ಯ ತುಂಬಿಕೊಂಡು ಚೆಲುವ , ಬುಗುರಿ ಏನಾದರೂ ಅಲ್ಲಿ ಕಾಣಬಹುದೇ ಎಂದು ಬಂದು ಬಗ್ಗಿ ನೋಡಿದ. ಬುಗುರಿಯ ಆಸೆಗಾಗಿ ಆ ವಾಸನೆಯನ್ನು ಸಹಿಸಿಕೊಂಡು ನೋಡಿಯೇ ನೋಡಿದನಾದರೂ ಏನೂ ಕಾಣಲಿಲ್ಲ. ಚಿಕ್ಕಣ್ಣ ಸಿಟ್ಟು ಮಾಡಿಕೊಂಡು ‘ ಲೇಯ್ ಅದೇನಂಗ್ ಬಗ್ಗಿ ನೋಡೀಯೇ; ವೋಗತ್ತಗ್ ನಿಂತ್ಕಂದ್ ಯಾರಾರ ನೋಡ್೬ಗೀಡಾರ್ ಅನ್ನುದಾ ನೋಡ್ಕ ವೋಗು ’ ಎಂದು ಕಾಯುವ ಕೆಲಸವನ್ನು ಮಗನಿಗೆ ಚಿಕ್ಕಣ್ಣ ವಹಿಸಿದ.ಚೆಲುವನಿಗೆ . ಚೆಲುವನಿಗೆ ಧೈರ್ಯ ಬಂದಂತಾಗಿ ‘ ಆಯ್ತು ’ ಎನ್ನುವಂತೆ ಅವರ ಪಾಡಿಗೆ ಅವರು ಹಂದಿ ಎತ್ತುವ ಕಾಯಕ ಮಾಡಿದಂತಾಗಲಿ ಎಂದುಕೊಂಡು ಸ್ವಲ್ಪ ದೂರಕ್ಕೆ ಹೋಗಿ ನಿಂತು ಬುಗುರಿಯ ಗುಯ್‌ಗುಟ್ಟುವಿಕೆಗಾಗಿ ಕಾತರಿಸಿದ. ಹಂದಿಯು ವಿಕಾರ ರೂಪವಾಗಿ ಇಡೀ ಮೈತುಂಬ ಅಮಾದಿ ಮೆತ್ತಿಕೊಂಡು ‘ ವರಾಹ ಅವತಾರ ’ ದ ವಿಷ್ಣುವನ್ನು ನೆನಪಿಸುವಂತೆ ಬಿದ್ದಿತ್ತು. ಅದರ ದುರಂತವೊ , ಅತಾರಿಯ ದುರಂತವೋ , ಯಾರ ದುರಂತವೋ ಏನೋ – ಅದು ಅತ್ಯಂತ ನಿಶ್ಶಕ್ತಿಗೊಳಗಾಗಿ ಸಾಯುವ ಸ್ಥಿತಿ ತಲುಪಿದ್ದರಿಂದ ಅವರ ಯೋಜನೆ ಸುಲಭವಾಗತೊಡಗಿತು. ಆದರೂ ಇಬ್ಬರಲ್ಲಿ ಒಬ್ಬ ಗುಂಡಿಗೆ ಇಳಿಯಲೇ ಬೇಕಾದ್ದರಿಂದ ಚಿಕ್ಕಣ್ಣನೇ ಒಳಗೆ ಇಳಿಯುವ ಮನಸ್ಸು ಮಾಡಿ ಆ ವಿಪರೀತವಾದ ಗಬ್ಬನ್ನು ಸಹಿಸಿಕೊಂಡು ಇಳಿಯತೊಡಗಿದ. ಹಿಂದೆ ಗೌಡರ ಕೋಣ ಒಳಕ್ಕೆ ಬಿದ್ದು ಮಣ್ಣು ಕುಸಿದು ಅಗಲ ಮಾಡಿದ್ದರಿಂದಲೂ , ಆಳ ಕಡಿಮೆಯಾಗಿದೆ ಎಂತಲೂ , ಕೆಳಗೆ ನೆಲ ಗಟ್ಟಿಯಾಗಿದೆ ಎಂದುಕೊಂಡು ಕಾಲುಬಿಟ್ಟು ಇಳಿಯುತ್ತಿರುವಂತೇ ಆ ಅಸಾಧ್ಯ ವಾಸನೆಯಲ್ಲಿ ಆಯ ತಪ್ಪಿ , ಅಮಲಿನಿಂದ ನಿಶ್ಶಕ್ತನಾಗಿ ಒಂದೇ ಬಾರಿಗೆ ‘ ಪರ್ ’ ಎಂದು ಜಾರಿಕೊಂಡು ಹೋಗಿ ಥೇಟ್ ಹಂದಿಯಂತೆಯೇ ಆ ಕಕ್ಕಸ್ಸು ಗುಂಡಿಗೆ ಬಿದ್ದು ಸೊಂಟದ ತನಕ ಏಲು ಮೆತ್ತಿಸಿಕೊಂಡು ಮುಖವನ್ನೆಲ್ಲ ವಿಕಾರವಾಗಿ ಕೊಕ್ಕರಿಸಿಕೊಂಡು ಬಿದ್ದಿದ್ದ ಹಂದಿಯ ಮುಂದೆಯೇ ಹೋಗಿ ನಿಂತ. ಹಂದಿ ಒಮ್ಮೆ ಜೀವ ಬಿಡುವಂತೆ ಗುಟುಕ್ ಪಟರ್ ಎಂದು ಕ್ಷೀಣವಾಗಿ ಶಬ್ದಿಸಿ ಕಣ್ಣು ಬಿಡುವ ಪ್ರಯತ್ನ ಮಾಡಿತಾದರೂ ಅವುಗಳ ಮೇಲೂ ಅಮಾದಿ ಮೆರೆದುಕೊಂಡಿತ್ತು. ಹೀಗೆ ಆಯತಪ್ಪಿ ಜಾರಿಬಿದ್ದ ಚಿಕ್ಕಣ್ಣನ ಅವಸ್ಥೆಯನ್ನು ಕಂಡು ಮೇಲೆ ನಿಂತಿದ್ದ ಅತಾರಿ ಜೋರಾಗಿ ನಕ್ಕು ‘ ಇದೇನಣ್ಣಾ ಅಂದಿ ತರ್‌ದೆಲೇ ನೀನೂ ಹೋಗಿ ವೋಗಿ ಬಿದ್ಕಂದಲ್ಲಾ ’ ಎಂದ. ಚಿಕ್ಕಣ್ಣನಿಗೆ ಸಿಟ್ಟು ನೆತ್ತಿಗೇರಿ , ಆದರೂ ತಾನೀಗ ಏಲು ಗುಂಡಿಯಲ್ಲಿ ನಾಟಿ ಕೊಂಡಿರುವುದರಿಂದ ಕೋಪ ಮಾಡಿದರೆ ಕೆಲಸ ಆಗುವುದಿಲ್ಲ ಎಂದುಕೊಂಡು ‘ ಬೊಡ್ಡೀಮಗ್ನೇ ಮೊದ್ಲು ಚೀಲ ಕೊಡು , ನಗುವಂತೇ ಆಮೇಕೆ ’ ಎಂದ. ಅತಾರಿ ಆತುರದಿಂದಲೇ ಚೀಲಕೊಟ್ಟು , ನಗುತ್ತಲೇ ‘ ತಕೋ ಈ ಅಗ್ಗಾನು ’ ಎಂದ. ಭಯಾನಕ ಚಿತ್ರವನ್ನು ತಾನು ನೋಡುತ್ತಿರುವಂತೆ ಚೆಲುವ ಇದನ್ನು ನೋಡಿ ವಾಕರಿಕೆ ಪಟ್ಟುಕೊಂಡು ಏನೇನೋ ಗೊಂದಲದಿಂದ ಸಪ್ಪಗಾಗಿಬಿಟ್ಟ. ಚಿಕ್ಕಣ್ಣನಿಗೆ ಈ ಅಸಾಧ್ಯ ವಾಸನೆಯಲ್ಲಿ , ಸಿಟ್ಟಿನಲ್ಲಿ , ಅವಮಾನದಲ್ಲಿ ಕುಡಿದಿದ್ದೆಲ್ಲ ವಾಂತಿಯಾಗಿ ನಿಶೆಯೆಲ್ಲ ಇಳಿದು ‘ ಹಲವಾರು ತರದ ಕೋಪಗಳು ’ ಬೆಳೆಯತೊಡಗಿದವು. ಒಳಗೆ ಬಿದ್ದಿರುವ ಹಂದಿ ಕುಂಟಣ್ಣನದೇ ಎಂದು ತಿಳಿಯಲ್ಪಟ್ಟಿತು. ಇಷ್ಟರೊಳಗೆ ಚೆಲುವ ತನ್ನ ಅಪ್ಪನ ಹಣೆಬರಹ ಹೀಗಾಗಿದೆ ಎಂಬಂತೆ ತಾತನಿಗೆ ಹೋಗಿ ತಿಳಿಸಿದ. ಚಿಕ್ಕಣ್ಣನ ಅಪ್ಪ ಗುಂಜಾರಯ್ಯ ಸಿಟ್ಟಿನಿಂದ ಬಂದು- ‘ ಇಂಗ್ಮಾಡ್ರಪ್ಪ ಅಂತೇಳಿದ್ನೆ ನಾನು . ಮ್ಯಾಲೆ ನಿಂತ್ಕಂಡು ಉಪಾಯ್ದೆಲೆ ಕೊಕ್ಕೆಲೆ ಕುತ್ಗೆಗೆ ಅಗ್ಗ ಹಾಕಂದು ಮ್ಯಾಕೆತ್ತಿ ಅಂತಲು ಹೇಳಿತ್ತು , ಥೂ ರಾಮ ರಾಮ – ಯಾವ್ ಕರ್‍ಮ ಮಾಡಿದ್ರೋ ಪಾಪಿಗೊಳಾ , ಯಾರಾರ ಏಲ್ ಗುಂಡಿಗೆ ಬಿದ್ದು ಬಟ್‌ಬರೆ ಮೈಯೆಲ್ಲನೂ ಯೇಲ್ ಮಾಡ್ಕಂದರೇ, ನನ್ ಕಣ್ಣೆದುರ್‍ಗೇ ನರ್‍ಕುಕ್ ಬಿದ್ದಲ್ಲಾ ನೀನು. ಏನ್ ಮಾಡೀಯೇ ಅದು ನಿನ್ ಕರ್‍ಮ ಕನಪ್ಪಾ ’ ಎಂದು ಹಳಿಯುತ್ತಾ ತಾನು ಹೇಳಿದಂತೆ ಮಾಡಿಲ್ಲ ಎಂದು ಗುಂಜಾರಯ್ಯ ಬೈಯತೊಡಗಿದ್ದ.

ಚಿಕ್ಕಣ್ಣ ಹಂದಿಯನ್ನು ಚೀಲಕ್ಕೆ ಹಾಕಿ ಹಗ್ಗ ಬಿಗಿದು ಕಣ್ಣನ್ನು ಮಳ್ಳಿಸುತ್ತಿದ್ದ. ಗುಂಜಾರಯ್ಯ ಬೇಸರಗೊಂಡು , ತನ್ನ ಮನೆತನದ ಪೂಜಾರಿಕೆ ವಂಶವಲ್ಲವೇ, ಅದು ಹೀಗಾಗಬೇಕಿತ್ತೆ , ಏಲು , ಎಂಡ , ವುಚ್ಚೆ ಎಲ್ಲಾನೂ ಒಂದು ಮಾಡಿಕೊಂಡು ಮನೆತನದ ಶುದ್ಧ ಸೂಕ್ಷ್ಮಗಳನ್ನು ಹಾಳುಮಾಡಿದರಲ್ಲ ಎಂದುಕೊಂಡ. ಊರ ದೇವರ ಪೂಜಾರಿಕೆಗೆ ಅಪವಿತ್ರವಾಯಿತು ಎಂದು ನೋವುಪಟ್ಟ. ಚಿಕ್ಕಣ್ಣ ಹಗ್ಗ ಬಿಗಿದು ‘ ಹೂಂ ’ ಎಂದಮೇಲೆ ಅತಾರಿ ಹಂದಿಯನ್ನು ಮೇಲೆ ಎಳೆದು ಹಾಕಿದ. ಹಾಗೆಯೇ ಅತಾರಿ ಮಾತನಾಡಿ ‘ ಬಾ ಇಪಟು ಮ್ಯಾಕೆ , ಅಗ್ಗವ ಬಿಗಿಯಾಗ್ ಇಡ್ಕ ಅತ್ಯಪ್ಪೋ ; ಆಮೆಕ್ ತಿರ್‍ಗ ತಳ್‌ತಳುಕ್ಕಾಗಿ ಮಗುಚ್ಕಂದೀಯೇ ’ ಎಂದು ನಗಾಡಿದ. ಚಿಕ್ಕಣ್ಣನ ನಿಶಾಯೆಲ್ಲ ಮಂಗಮಾಯವಾಗಿತ್ತು. ಅವಮಾನಿತನಾಗಿ ಮೇಲೆ ಬಂದು ತನ್ನ ಸೊಂಟದ ತನಕ ರೊಚ್ಚು ನೀರು ಇಳಿಯುತ್ತಿರುವುದನ್ನು ಒಮ್ಮೆ ನೋಡಿಕೊಂಡು ಅತ್ಯಂತ ಸಿಟ್ಟಿನಿಂದ ಅಪ್ಪನ ಕಡೆ ಬಂದ- ಏನಂದೆ ನೀನು , ನನ್ ಕಣ್ಣೆದುರ್‍ಗೆ ನರ್‍ಕ ಕಂಡಲ್ಲಾ, ನಿನ್ ಹಣೇಬರಾ – ನಿನ್ ಕರ್‍ಮಾ ’ ಅಂತಲು ಅಂದದ್ದು ನೀನು. ನೋಡೀಯಾ ಈಗ ಯಾರ್ ನರ್‍ಕ ಕಂಡರು ಅನ್ನುದಾ ’ ಎಂದು ತನ್ನ ಅಪ್ಪನ ಮೇಲೆಯೇ ಸಿಟ್ಟಿನಿಂದ , ಹಿಂದಿನ ಯಾವುದಾವುದೋ ಅಸಮಾಧಾನಗಳನ್ನು ಕಕ್ಕಿಕೊಳ್ಳುವವನಂತೆ ನುಗ್ಗತೊಡಗಿದ. ಪಾಪ ಗುಂಜಾರಯ್ಯ ‘ ಅಯ್ಯೋ ಹೋಗೋ ಅತ್ಲಾಗಿ , ಮುಟ್ಟಿಸ್ಕಬ್ಯಾಡಾ , ನನ್ನೂ ಆಳ್ ಮಾಡ್‌ಬ್ಯಾಡಾ ’ ಎಂದು ಹೇಳಿದರೂ ಕೇಳದೆ ಆತನ ಕುತ್ತಿಗೆ ಪಟ್ಟಿ ಹಿಡಿದು ಎಳೆದಾಡಿ ‘ ನಿನ್ನೇ ನರ್‍ಕುಕ್ ತಳ್ತೀನಿಕನ್ನೋ ಬೊಡ್ಡೀಮಗ್ನೇ ’ ಎಂದು ತಾರಾಮಾರಾ ವಯಸ್ಸಾದ ಅಪ್ಪನ ಮೇಲೆ ಎರಗಿದ. ಚೆಲುವನಿಗೆ ಬುಗುರಿ ಬೇಕು ಎನಿಸಲಿಲ್ಲ. ಅಳು ಬರುವಂತಾಯಿತು. ಅತಾರಿ ಸಮಯ ಪ್ರಜ್ಞೆಯರಿತು , ಕೆಲಸವೆಲ್ಲ ಹಾಳಾಗಿ ಗುಟ್ಟು ಬಯಲಾಗುತ್ತದೆಂದುಕೊಂಡು ‘ ಅಣ್ಣೋ, ಇದೇನೆಂದಾರು ತಗಿಯಪ್ಪಾ ಪಾಪ ವಯ್ಸಾದೋನ್ ಮ್ಯಾಲೆ ಯಾವ್ ಜಗ್ಳಂದಾರು . ಬಿಡನೋ , ಅವುನ್ ತಾನೆ ಯಾರ್‍ಗಂದ. ಮಗ ಅಂತಲ್ಲುವಂದದ್ದು; ಬಿಡು ಬಿಡು ’ ಎಂದು ಮತ್ತಿನಲ್ಲೇ ಸಿಟ್ಟಿನಿಂದ ಚಿಕ್ಕಣ್ಣನ ರಟ್ಟೆಗಳನ್ನು ಹಿಡಿದು ದರದರ ಎಳೆದುಬಿಟ್ಟ. ಹಾಗೆ ಬಲವಾಗಿ ಅತಾರಿ ಎಳೆದದ್ದರಿಂದ ಆಯ ತಪ್ಪಿದ ಚಿಕ್ಕಣ್ಣನ ಕಾಲು ಉಳುಕಿದಂತಾಗಿ ‘ ಲೋ ಅತಾರಿ , ನೀನೂ ನನ್ ತಳ್ಳೀಯಾ , ಒಳುಗ್ ಬಿದ್ದಿದ್ರೆ ನೀನೂ ನಗೂನಾಗೋದಲ್ಲಾ, ಈಗ ನೋಡುದ್ರೆ ಅವುನ್ ಮಾತೇ ಸರಿ ಅಂತಾ ನನ್ನ ತಳ್ತೀಯಲ್ಲಾ ’ ಎಂದು ರೇಗಿದ. ರೇಗಿದರೂ ಬಿಡದೆ ಅತಾರಿ ಆತನನ್ನು ‘ ಬಾಣ್ಣೊ ಇಸಾರಿ ’ ಎಂದು ‘ ಕೆಲ್ಸ ಬ್ಯಾರೆ ಬಿದ್ದದೆ ’ ಎನ್ನುತ್ತ ಎಳೆದ. ಮೂವರೂ ದುರ್ದೈವಿಗಳು ಕಕ್ಕಸು ಗುಂಡಿಯ ಬಳಿಯೇ ನಿಂತಿದ್ದರು. ಅತಾರಿ ಜಗಳ ಬಿಡಿಸಬೇಕೆಂದು ಚಿಕ್ಕಣ್ಣನ ಸೊಂಟವನ್ನು ಬಿಗಿಯಾಗಿ ಹಿಡಿದು ‘ ಯೇಯ್ , ನನುಗ್ ಕ್ವಾಪ ಬರಿಸ್ ಬ್ಯಾಡ ಬಾಪ್ಪಾ ನೀನಿಪಟು ’ ಎಂದು ಜಗ್ಗಿದ. ಚಿಕ್ಕಣ್ಣ ಸಿಟ್ಟಿನಿಂದ ‘ ಯೇಯ್ ಬಿಡೋ ಸೂಳೆಮಗ್ನೆ ’ ಎಂದು ಬಲವಾಗಿ ಬಿಡಿಸಿಕೊಂಡು ನೂಕಿದ. ಅತಾರಿ ಆ ನೂಕುವಿಕೆಗೆ ನಿಶೆ ಸಹಿತವಾಗಿ ಆಯ ತಪ್ಪಿ ಯಾವ ತಡೆಯೂ ಯಾವ ನಿರ್ಬಂಧವೂ, ಯಾವ ಸಹಾಯವೂ ಇಲ್ಲದಂತೆ ಅತ್ಯಂತ ಸುಲಭವಾಗಿ ಅದೇ ಕಕ್ಕಸು ಗುಂಡಿಯೊಳಕ್ಕೆ ಹಂದಿಯಂತೆಯೇ ಬಿದ್ದು ಹೋದ. ಬಿದ್ದವನ ದುರಂತವೆಂದರೆ – ಅಡ್ಡಡ್ಡಲಾಗಿ ಬಿದ್ದಿದ್ದರಿಂದ ಪೂರಾ ತಲೆಯಿಂದ ಹಿಡಿದು ಕಾಲಿನ ತನಕ ಏಲು ಮೆತ್ತಿಕೊಂಡು ಭಯಾನಕ ಅವಮಾನವಾಗಿ ಕ್ರೋಧದಿಂದ ಬಿದ್ಡು ತಕ್ಷಣವೇ ಎದ್ದು ನಿಂತು ಮೇಲತ್ತುವ ಪ್ರಯತ್ನ ಮಾಡಿದ.

ಈ ಅಚಾನಕ್ಕಾದ ಘಟನೆಯಿಂದ ಚೆಲುವ ನಕ್ಕಿದನಾದರೂ ಇದೆಲ್ಲ ಯಾವುದೋ ಇನ್ನೊಂದು ಆಯಾಮಕ್ಕೆ ಎಳೆದೊಯ್ಯುತ್ತದೆನಿಸಿ, ಮರೆಗೆ ಬಂದು ನಿಂತುಕೊಂಡ . ಮನೆಯ ಹೆಂಗಸರು ಆ ನರಕದ ದರ್ಶನವಾಗದಿದ್ದರೆ ಸಾಕೆಂದು ಅಸಾಧ್ಯ ವಾಸನೆಗೆ ಬಾಗಿಲು , ಕಿಟಕಿ ಮುಚ್ಚಿಕೊಂಡು ಒಳಗೆ ಸೇರಿಬಿಟ್ಟಿದ್ದರು. ಅಪ್ಪ ಮಗ ಇಬ್ಬರೂ ಈಗ ಜಗಳ ಬಿಟ್ಟು ಬಿದ್ದ ಅತಾರಿಯನ್ನು ಮೇಲಕ್ಕೆ ಎತ್ತಿಕೊಂಡರು. ಅತಾರಿಯು ಗಂಭೀರವಾಗಿ ಮೇಲಕ್ಕೆ ಬಂದು ಇಬ್ಬರನ್ನೂ ನೋಡಿ ಮಾತಿಲ್ಲದೆ ದೊಡ್ಡ ಪಾನಿಯಿಂದ ಎಲ್ಲವನ್ನೂ ತೊಳೆದುಕೊಂಡು – ‘ ಅಹಾ , ಅಪಾ ಚಿಕ್ಕಣ್ಣಪ್ನೋರೆ , ನಿನ್ ಅನಾಯ್ದಲಿ ನನ್ನ ಗುಂಡಿಗೆ ತಳ್‌ದಲ್ಲಾ; ಅಕುಸ್ಮಾತ್ ತಲೆ ಏನರ ವಳಾಕ್ ನೆಟ್ಕಂಡಿದ್ರೆ ಏನಪ್ಪಾ ಮಾಡ್ತಿದ್ದೆ ನೀನು. ಥೂ ಸೂಳೆಮಗ್ನೆ , ಇರ್‍ಲಿ , ಇದಾ ಇಷ್ಟುಕ್ಕೇ ನಾ ಬಿಡುಮಗ್ನಲ್ಲಾ, ಅಂತೂ ನಿನ್ ಸಂಗುಕ್ ಒಂದ್ ದೊಡ್ ನಮಸ್ಕಾರ ಕನಪಾ ’ ಎಂದು ಹೊರಟು ಹೋದ.

ಈ ಸಂಗತಿ ಊರಿಗೆಲ್ಲ ತುಂಬಿಹೋಯಿತು. ಅತಾರಿ ಈ ಘಟನೆಯನ್ನು ಬೇರೆಯದೇ ರೀತಿಯಲ್ಲಿ ಪ್ರಚಾರ ಮಾಡಿ ತನಗೆ ಇನ್ನಿಲ್ಲದ ಅವಮಾನವನ್ನು ಅಪ್ಪ ಮಗ ಸೇರಿಕೊಂಡು ಮಾಡಿದರೆಂದು ಹೇಳಿ , ಆ ರಾತ್ರಿಯೇ ಈ ಬಗ್ಗೆ ನ್ಯಾಯ ಮಾಡುವಂತೆ ಎಲ್ಲವನ್ನೂ ಏರ್ಪಾಟು ಮಾಡಿಬಿಟ್ಟಿದ್ದ. ಚಿಕ್ಕಣ್ಣನ ಹಿತ್ತಿಲಲ್ಲಿದ್ದ ಈ ಏಲುಗುಂಡಿ ಈ ಹಿಂದೆ ಇಂಥ ಎಷ್ಟೋ ಅನಾಹುತಗಳಿಗೆ ಕಾರಣವಾಗಿದ್ದರಿಂದ ಅವರು ಅತರಿಯ ವಿಷಯ್ದಿಂದಾಗೆ ರೇಗಿ ನ್ಯಾಯ ಕಟ್ಟೆ ಹತ್ತಿದ್ದರು.

ಇತ್ತಲಾಗಿ ಆ ಹಂದಿಯನ್ನು ಎತ್ತಿದನಂತರ ಬಿಸಿನೀರಿನಿಂದ ಮೈತೊಳೆದು ಕೊಯ್ದ ನಾಳಿನ ಸಾದರಳ್ಳೀ ಸಂತೆಯಲ್ಲಿ ಮಾರಿ ಹಣ ಹಂಚಿಕೊಳ್ಳಬೇಕೆಂದಿದ್ದ ಇಬ್ಬರ ನೀಲಿನಕ್ಷೆಯು ಚೂರುಚೂರಾಗಿ ಗಾಳಿಗೆ ಹಾರಿ, ಏಲಿನ ವಾಸನೆಯಮುಖಾಂತರ , ಅತಾರಿಯ ಅವಮಾನದ ಮೂಲಕ , ಊರಿನ ಕ್ಷುದ್ರತೆಯ ಆಳ ಒಳ ಎಳೆಯ ದುರಂತದ ಮೂಲಕ ವಿಚಿತ್ರ ಘಟನೆಯಾಗಿ ಎಲ್ಲರಿಗೂ ಮೋಜಾಗಿ ಬಿಟ್ಟಿತು. ಚೆಲುವ ಈ ಆಯಾಮಗಳಿಂದೆಲ್ಲ ಖುಷಿಪಡುತ್ತಾ , ಹೀಗೆ ನ್ಯಾಯಪಾಯ ಆದರೆ ಗುಂಡಿಯನ್ನು ಮುಚ್ಚಿಸಿಬಿಟ್ಟಾದ ಮೇಲೆ ಅಪ್ಪ ಬುಗುರಿಯನ್ನು ಏಲುಗುಂಡಿಗೆ ಹಾಕಲು ಸಾಧ್ಯವಿಲ್ಲ ಎಂದುಕೊಂಡ. ಅಂತೂ ಇದೆಲ್ಲ ಆಗಿ ಸಂಜೆಗೆ ನ್ಯಾಯಕ್ಕೆ ಎಲ್ಲರನ್ನೂ ಕರೆದರು. ಆದರೆ ಚಿಕ್ಕಣ್ಣ ಮಾತ್ರ ಅಲ್ಲಿಗೆ ಬರಲಿಲ್ಲ. ಊರಿನ ಪಡ್ಡೆ ಹುಡುಗರು ಈ ತಮಾಷೆ ದೂರಿನ ನಗುತ್ತ ಅವರದೇ ಲೋಕದಲ್ಲಿ ಮುಳುಗಿದ್ದರು. ಚಿಕ್ಕಣ್ಣನ ಅಪ್ಪ ಗುಂಜಾರಯ್ಯನು , ತನ್ನ ಮಗ ಮಾಡಿರುವುದೆಲ್ಲ ತಪ್ಪೆಂದು ಮನವರಿಕೆ ಮಾಡಿಕೊಂಡು , ಕೇಳಿದಂತೆ ದಂಡ ಕೊಟ್ಟು ತಪ್ಪಾಯ್ತು , ಎಂದು ಹೇಳಿ ಬರುವುದೇ ಲೇಸೆಂದುಕೊಂಡಿದ್ದ. ಎಲ್ಲರೂ ಸೇರಿ ಚರ್ಚೆ ಮುಗಿಯುತ್ತಿರುವಾಗ ಯಜಮಾನ ಕಡುಂಬಯ್ಯ ಮಾತನಾಡಿ- ‘ ಅತಾರಿಯನ್ನ ನಿನ್ನ ಮಗ ಏಲ್ ಗುಂಡಿಗೆ ತಳ್ಳಿದ್ದು ತಪ್ಪು. ಆಮೆಕೆ , ಆ ಕುಂಟಣ್ಣನ್ ಹಂದಿಯ ಬೇಕೆಂತ್ಲೆ ನೀವು ಒಳಕ್ ಬೀಳ್ಸಿ ; ಅದಾ ಸಾದರವಳ್ಳಿ ಸಂತೆಲಿ ಮಾರುವ ಏರ್ಪಾಟ್ ಮಾಡಿದ್ರಂತೆ. ಅದಾ ಅತಾರಿಯೇ ಯೇಳ್ತಾವ್ನೆ. ಇದೂ ಅಲ್ದೆಯೇ , ಏಲ್ ಗುಂಡಿಗೆ ಇಳಿದು , ಆ ಏಲೆಲೆಲ್ಲಾ ವುಂಟಾಡಿ , ಬಂದು : ನಮ್ಗೆ ನಾಷ್ಟ , ಟೀ ಬ್ಯಾರೆ ಕೊಟ್ಟವ್ನೆ. ಇದೆಲ್ಲ ಸರಿಯಲ್ಲ. ಯಂಗೂ ನಿಂಗೆ ಗೊತ್ತದೆ. ಮುನ್ನೂರೊಂದ್ ರೂಪಾಯ್ ಮಡುಗ್ಬುಟ್ಟು ಸಭೆಗೆ ತಪ್ಪಾಯ್ತು ಅಂತಾ ವಪ್ಕಪಾ . ಆಮೆಕೆ , ಆ ಅತಾರಿ ಅದೇನೋ ಸೂತ್ಕ ಕೊಳ್ತನಾ ಕಳೀಲಿ ಅಂತ ದೇವುರ್ ಮಾಡ್ತಾನಂತೆ. ಅದ್ಕೆ ಬ್ಯಾರೆ ನೂರ್ ರೂಪಾಯ್ ಕೊಟ್‌ಬುಡಿ ’ ಎಂದು ನಿರ್ಣಯ ಹೇಳಿದ.

ಇದೆಲ್ಲವನ್ನೂ ನ್ಯಾಯಕಟ್ಟೆಯ ಸಂಪಲ್ಲಿ ಕೇಳಿಸಿಕೊಂಡು ನಿಂತಿದ್ದ ಚಿಕ್ಕಣ್ಣಾ ಬಂದವನೇ ‘ ಯಾಕ್ರಪ್ಪಾ ದಂಡ ಕೊಡ್‌ಬೇಕಾಗಿರುದು. ಯಾರ್ನಾ ಯಾರು ಏಲ್ ಗುಂಡಿಗೆ ತಳ್ಳಿದುದು. ವಸಿ ಮಟ್ಟಾಗಿ ಮಾತಾಡಿ, ಅತಾರಿ ಏನೂ ಕಾಣ್ದ ಹೈದ್ನಲ್ಲ , ತಳ್ದೀಟ್ಗೆ ಬಿದ್ದೋಗುಕೆ. ಅಲ್ಲಪ್ಪಾ , ಅವನಾ ತಳುಕೆ ಜಿದ್ದಿದ್ದದೆ ಇಬ್ಬುರ್‌ಗು , ಇಲ್ಲಾ ನಾನೇನರ ಕೊಡುದಿದ್ದದೋ , ಅವನೇನಾರ ನನುಗ್ ಕೊಡುದಿದ್ದದೋ..? ಎಲ್ಲಾ ತಂಟೆ ತಕರಾರ್ ಮಾಡ್ಕಂಡು ಗಾಳಿ ಗಂಟ್ಲಾಕಂದು ದಂಡತಕಂದು ಸರಾಪ್ ನಕ್ಕಮ ಅಂತಾ ಮಾಡಿರಾ ನ್ಯಾವಾ, ಅಪ್ಪೋ ಎದ್ನಡಿ ನೀನು. ಯಾವ್ ದಂಡ್ವ ಕೊಡುದು ಇವರ್‌ಗೆ. ನಾನಂತು ಒಂದು ಚಿಟ್ಟಿ ಪೈಸನು ಕೊಡುದುಲ್ಲಾ. ’ ಎಂದು ರ,ಪ ಮಾಡಿ , ಕೊನೆಗೆ ಕೈ ಕೈ ಮಿಲಾಯಿಸುವ ತನಕ ನ್ಯಾಸ್ಥಾನ ನಿಂತುಹೋಯಿತು. ಚಿಕ್ಕಣ್ಣ ತನ್ನ ಅಪ್ಪನನ್ನು ಬಲವಂತವಾಗಿ ಎಳ್ದುಕೊಂಡು ಮನೆಗೆ ಬಂದುಬಿಟ್ಟ.

ಚೆಲುವ ಆ ರಾತ್ರಿಯಲ್ಲಿ ಅಪ್ಪನೇ ಒಂದು ದೊಡ್ಡ ಪಿಶಾಚಿ ಎಂದು ಕಲ್ಪಿಸಿಕೊಳ್ಳುತ್ತಾ ನಿದ್ದೆ ಬರದೆ ವದ್ದಾಡತೊಡಗಿದ. ರಾತ್ರಿಯ ತಣ್ಣನೆ ಗಾಳಿ ಹೊರಗೆ ಬೀಸುತ್ತಿದೆ ಎನಿಸಿದರೂ ಮನೆಯೊಳಗೆ ಬೆಚ್ಚನೆಯ ಕೆಟ್ಟ ವಾಸನೆಯ ಗಾಳಿ ಸುತ್ತಿ ಹಾಕಿ ಕೊಂಡಿದೆ ಎನಿಸಿತು. ಚೆಲುವ ಕುಂಟಣ್ಣನ ಅಸಹಾಯಕತೆಗೆ ಮರುಗಿದ. ಊರಿಗೆ ಆತ ಎಲ್ಲಿಂದಲೋ ಬಂದು ಸೇರಿಕೊಂಡಿದ್ದಾನಾದ್ದರಿಂದ ಅವನಿಗೆಂತಲೇ ಅಣ್ಣ ತಮ್ಮಂದಿರು ಬೆಂಬಲಿಗರು ಇರಲಿಲ್ಲ. ಅಪ್ಪನ ಎದಿರು ಆತ ಅನ್ಯಾಯಕ್ಕೆ ಒಳಗಾಗಿದ್ದಕ್ಕೆ ನೊಂದುಕೊಂಡ. ಹಿಂದೆ ತಿಪ್ಪೇಗೌಡರ ಕೋಣದ ರೀತಿಯಲ್ಲೇ ಹಂದಿ ಕೂಡ ಗುಂಡಿಯೊಳಗೆ ಮುಳುಗಿ ಸಾವಿನೊಡನೆ ಸೆಣೆಸಾಡಿ ಬೆಳಿಗ್ಗೆಯಿಂದ ಸಂಜೆ ತನಕ ಅಲ್ಲೇ ಅದು ಬಿದ್ದಿದ್ದರಿಂದ ಸತ್ತು ಹೋಗಿತ್ತು. ಅದನ್ನು ನೀಲಿನಕ್ಷೆ ಪ್ರಕರ ಕೊಯ್ದು ಮಾರುವಂತೆಯೂ ಇರಲಿಲ್ಲ. ಕಕ್ಕಸು ಗುಂಡಿಯ ಬಳಿಯೇ ಅದು ಹೆಣದಂತೆ ಸಾವಿರಾರು ನೊಣಗಳನ್ನು ಮುತ್ತಿಸಿಕೊಂಡು ಬಿದ್ದಿತ್ತು. ಚೆಲುವ ಮಲಗಿದಂತೆಯೇ ಇದೆಲ್ಲವನ್ನು ನೆನೆದು ಹೆದರಿ ಹಂದಿ ಏನಾದರೂ ದೆವ್ವವಾದರೆ , ಅದು ಮನುಷ್ಯ ರೂಪವಾಗಿ ಬಂದರೆ , ಹೇಗಿರಬಹುದೆಂದು ಕಲ್ಪಿಸಿಕೊಂಡ. ಹಾಗೆ ಕಲ್ಪಿಸುತ್ತಿರುವಂತೆಯೇ ಅದು ಚಿನ್ನದ ಬಣ್ಣದ ಬುಗುರಿಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು , ಇನ್ನೊಂದು ಕೈಯಲ್ಲಿ ಚೂರಿ ಹಿಡಿದುಕೊಂಡು ಮೆಲ್ಲಗೆ ಅಪ್ಪನ ಬಳಿಗೆ ಹೋಗಿ ನಿಂತು ಏನೋ ಮಾಡುತ್ತಿದೆ ಎಂಬ ಚಿತ್ರ ಸುಳಿಯಿತು. ಚೆಲುವ ಬೆಚ್ಚಿ ಅಜ್ಜಿಯನ್ನು ತಬ್ಬಿಕೊಂಡ . ಬಗ್ ಎಂದು ವಾಸನೆ ಬಡಿಯಿತು. ಅನಿವಾರ್ಯವಾಗಿ ವಾಸನೆಯನ್ನೇ ಅಪ್ಪಿಕೊಂಡು ಆಕೆ ಆಗಲೇ ನಿದ್ದೆ ಹೋಗಿದ್ದಳು. ಆ ಹಂದಿಯ ಪಿಶಾಚಿರೂಪದ ಮನುಷ್ಯ ಮನೆಯೊಳಗೆಲ್ಲ ಕುಣಿದಾಡಿ, ಥೇಟ್ ಅಪ್ಪನ ರೀತಿಯಲ್ಲೇ ರೂಪು ಪಡೆದು ಮಲಗಿರುವ ಒಬ್ಬೊಬ್ಬರ ತಲೆಗೂ ಬುಗುರಿಯಿಂದ , ಚಾಕುವಿನಿಂದ ತೂತು ಕೊರೆದು ಅದರೊಳಕ್ಕೆಲ್ಲ ಏಲು ತುಂಬುತ್ತಿರುವಂತೆ ಕಂಡ. ಇಡೀ ಊರಿನ ಸುತ್ತ ಮನೆ ಮನೆಯ ಪ್ರತಿಯೊಂದಕ್ಕೂ ತೂತು ಕೊರೆದು ಅಮಾದಿ ತುಂಬಿ ಗಬ್ಬಿನ ಉಸಿರಾಟವನ್ನು ಆ ಹಂದಿಯ ರೂಪದ ಪಿಶಾಚಿ ಸೃಷ್ಟಿಸಿ ನಗುತ್ತಾ ಕೇಕೆ ಹೊಡೆಯುತ್ತಿದೆ ಎಂದು ಕಂಡ. ಆ ಪಿಶಾಚಿ ತನ್ನ ಬಳಿ ಬರುತ್ತಿದೆ ಎಂದುಕೊಂಡು ‘ ಅಜ್ಜೀ ಅಜ್ಜೀ ’ ಎಂದು ಈಕರಿಸಿ ‘ ಹುಚ್ಚೆ ಉಯ್ಯಬೇಕು ಏಳು ಮ್ಯಾಕೆ ’ ಎಂದ. ಇಡೀ ಮನೆ ನಿಶ್ಶಬ್ದವಾಗಿ ಕತ್ತಲಿನಿಂದ ತುಂಬಿತ್ತು. ಅದರೊಳಗೆ ಯಾವುದನ್ನು ಗುರುತಿಸಲಾರದೆ , ಹಿಡಿಯಲಾರದೆ, ಆ ಹಾಳು ಬುಗುರಿಯಿಂದಲೇ ಹೀಗಾಗುತ್ತಿದೆಯೇನೋ ಎಂದು ಒಳಗೊಳಗೇ ಬಿಕ್ಕಿದ. ಹೆದರಿಕೆಯಿಂದ ಮತ್ತಷ್ಟು ಬಿಗಿಯಾಗಿ ಕಣ್ಣನ್ನು ಮುಚ್ಚಿಕೊಂಡ. ಅವನ ಅಪ್ಪ ವಿಕಾರವಾಗಿ ಗೊರಕೆ ಹೊಡೆಯುತ್ತಿರುವುದು ಕೇಳಿಸಿತು. ಹಿತ್ತಲೆಲ್ಲ ಕಾಗೆಯೊಂದು ನೀರವತೆಯನ್ನು ಸೀಳುವಂತೆ ನಿದ್ದೆಗಣ್ಣಿನ ಸ್ವರದಲ್ಲಿ ವರ್ರ್‌ಗುಟ್ಟಿ ಪಟಪಟ ಎಂದು ರೆಕ್ಕೆ ಬಡಿದಂತಾಯಿತು. ಆ ಹಂದಿ ಈಗ ಕಾಗೆ ರೂಪವಾಗಿ ಊರ ಸುತ್ತ ಹಾರಾಡಲು ಹೋಗುತ್ತಿರಬಹುದು ಎಂದುಕೊಂಡು , ಅಜ್ಜಿಯ ಸೀರೆಗೆ ಮೆಲ್ಲಮೆಲ್ಲಗೆ ಹುಚ್ಚೆ ಹೊಯ್ದುಕೊಂಡು ನಿದ್ದೆಗಾಗಿ ಕಾದ. ಆ ಕತ್ತಲ ಮನೆಯೊಳಗೆಲ್ಲ ಅಪ್ಪನಂತದೇ ದೊಡ್ಡ ಸಪ್ಪಳದ ಹೆಜ್ಜೆಗಳು ನೆರಳೂ ಚಲಿಸಿದಂತೆ ಕಂಡು ಅಪ್ಪನಂತಹ ಕ್ರೂರಿ ಇನ್ನಾರೂ ಈ ಊರಿನಲ್ಲಿ ಇಲ್ಲವೇನೋ ಎಂದು ಮಲಗಿದ.

ಇಷ್ಟೆಲ್ಲಾ ಆಗಿದ್ದಾದರೂ ಯಾಕೆ, ಯಾವ ಹಿನ್ನೆಲೆಯಿಂದ ಎಂದು ಸ್ವಂತ ಚಿಕ್ಕಣ್ಣನಿಗೇ ಗೊತ್ತಾಗಲಿಲ್ಲ. ಗುಂಜಾರಯ್ಯ ಚಿಂತೆಯಿಂದ ಬೆಳಿಗ್ಗೆ ಎದ್ದು ಬೀಡಿ ಸೇದುತ್ತಾ ಕುಳಿತಿದ್ದ. ಆ ರಾತ್ರಿ ನ್ಯಾಯಕಟ್ಟೆಯಲ್ಲಿ ಕಂಪ್ಲೇಟ್ ಕೊಡಬೇಕು ಎನ್ನುತ್ತಿದ್ದ ಮಾತುಗಳ ಸುಳಿದು ಏನಾಗುತ್ತದೋ ಎಂದು ಹೆದರಿದ. ಚೆಲುವ ಎದ್ದಿದ್ದವನು ಯತಾಪ್ರಕಾರ ಹಿತ್ತಿಲಿಗೆ ಹುಚ್ಚೆ ಹೊಯ್ಯಲು ಬಂದು ನಿಂತಾಗ ಹಂದಿಯ ವಿಕಾರ ರೂಪವನ್ನು ನೋಡಿ ಬಂದು ಮೆಲ್ಲಗೆ ‘ ಅಪ್ಪೋ ಹಿತ್ಲೇಲಿ ಆ ಹಂದಿಯ ನಾಯ್ಗೋಳು ತಿಂತಾವೆ ’ ಎಂದ . ‘ ಅಯ್ಯೋ ! ಥೂ ಹಾಳಾದೋರ, ವತಾರೆ ಎದ್ದೇಟ್ಗೆ ಯಂತಾ ಸುದ್ದಿ ಯೇಳುಕ್ ಬಂದವ್ನೆ ನೋಡು ” ಎಂದು ಬೈದುಕೊಂಡು ಹಿತ್ತಲಿಗೆ ಬಂದು ಆ ನಾಯಿಗಳನ್ನು ಹೊಡೆದು ಅಟ್ಟಿದ. ಇಷ್ಟಕ್ಕೆಲ್ಲ ಕಾರಣ ‘ ಚಿಕ್ಕ ಹೈದನೆ ’ ಎಂದು ವಿಕಾರವಾಗಿ ಹೊಟ್ಟೆ ಬಗೆಸಿಕೊಂಡು ಬಿದ್ದಿದ್ದ ಹಂದಿಯನ್ನು ಕಂಡು ‘ ಬ್ಯಾಡ ಕಲಾ ಬ್ಯಾಡಾ ಅಂತ ಬಾಯ್ಬಡ್ಕಂಡು ಮುಚ್ಚಿಸ್ಲಾ ಗುಂಡಿಯ ಅಂತ ಯೇಳುದ್ರು ನನ್ ಮಾತ ಲೆಕ್ಕ ಜಮಕ್ಕೇ ತಕವೋದ್ನಲ್ಲ … ಅಂದ್ಗೋಳ್ ಬಿದ್ದೋ , ಕುರಿಗೋಳ್ ಬಿದ್ದೋ , ಕೋಳಿ , ನಾಯಿ , ಕ್ವಾಣಾ , ಏನೇನೋ ಬಿದ್ದೋ … ಅಯ್ಯೋ , ಈ ಗುಂಡಿ ವೋಳಗೆ ಏನೇನ್ ಬಿದ್ವೋ ಕಾಣ್‌ನಲ್ಲಪ್ಪಾ, ಎಲ್ಲೆಲ್ಲೋ ಅವ ಅನ್ಕಂದಿದ್ದೇ ನರುಕ್ವಾ, ಅದು ಇಲ್ಲೇ ನನ್ ಮನೇಲೆ ಅದಲ್ಲಾಪ್ಪಾ ’ ಎಂದು ನಿಟ್ಟುಸಿರು ಬಿಟ್ಟ. ಅಸಹಾಯಕತೆಯಿಂದ ಮಗನ ಎದಿರು ಆತನ ಎಷ್ಟೋ ಬುದ್ದಿಗಳೆಲ್ಲಾ ಧೂಳಾಗಿ ಬಿಟ್ಟಿದ್ದವು . ಆತನ ಸಹಜ ಸಾದ್ವಿತನ ಕೆರಳಿ , ‘ ಈ ನರುಕ್ವಾ ತಪ್ಪುಸುಕೆ ಯಾರಿದ್ದಾರಪ್ಪಾ , ಲೋಕ್‌ವೆಲ್ಲಾ ಒಂದುತರಾ ಇದ್ರೆ, ಈ ವೂರೊಂದೇ ಒಂದ್ ತರ್‌ವಲ್ಲಾ . ಯೇಲೊಳಗ್ ಬಿದ್ದ ಅಂದಿಯ ತಿನ್ನುಕೆ, ಮೂರ್‌ಕಾಸ್ ಮಾಡ್ಕೊಕೆ ಇಪಾಟಿ ಇಕ್‌ಮತ್ ಮಾಡ್ಬೋದಾಗಿತ್ತೆ. ಥೂ ತೂ ನರಕಾ ನರಕಾ ಇದ್ರೊಳಗೆ ಎಲ್ರುನ್ನೂ ತಳ್ತಾ ಕುಂತಿರು ದೇವ್ರು ಅದೆಂಗ್ ಎಲ್ಲನೂ ನೋಡ್ತಾ ಕುಂತಿದ್ದನೋ …’ ಎಂದು ಒಳಗೊಳಗೇ ತರ್ಕಿಸುತ್ತಾ, ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಕಂಗಾಲಾದ.
*****

ವ್ಯಾಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.