ಸಂಭ್ರಮ: ಯಶವಂತ ಚಿತ್ತಾಲ ಹಾಗು ಚನ್ನವೀರ ಕಾಣವಿಯವರಿಗೆ ಎಪ್ಪತ್ತೈದು. ಈ ಅವರ ಕೃತಿಗಳನ್ನು ಸ್ಮರಿಸಿಕೊಳ್ಳುವುದರ ದೃಷ್ಟಿಯಿಂದ ಈ ಸಂಚಿಕೆಯ ಬಹುಭಾಗ ಆ ದೊಡ್ಡಜೀವಗಳಿಗೆ ಮೀಸಲಾಗಿಟ್ಟಿರುವುದು ಸ್ಪಷ್ಟವಾಗಿದೆ.
ಅಹಂಕಾರವೋ- ಕೃತಿಗಿಂತಲೂ ಅಧಿಕವಾದದ್ದನ್ನು ಲೇಖಕ ಹೇಳಲಾಗದು ಎಂಬ ಹುಂಬ ವಾದವೋ-ನಿಮ್ಮ ಕೃತಿಗಳಿಗಿಂತ ಹೆಚ್ಚಾಗಿ “ಜನ” ನನಗೆ ಮುಖ್ಯ ಎಂಬ ಅವಿವೇಕವೊ ಅಂತೂ ನಾನು ಲೇಖಕರನ್ನು ಲೇಖಕರನ್ನಾಗಿ ನೋಡಲು ಇಷ್ಟ ಪಡುವುದೇ ಇಲ್ಲ. ಹಾಗೆ ಎಂದೂ ನೋಡಿದ್ದೇ ಇಲ್ಲ. ಅಮೆರಿಕೆಯಿಂದ ಹಿಂತಿರುಗುವಾಗ ಮುಂಬೈಯಲ್ಲಿ ಒಂದು ದಿನ ಉಳಿದುಕೊಂಡಿದ್ದೆ. ಮಾರನೆ ದಿನ ಬೆಂಗಳೂರು ವಿಮಾನ ಹತ್ತಿದಾಗ, ವಿಮಾನದಲ್ಲಿ ಕಣ್ಮುಚ್ಚಿದ್ದಾಗ- ನನಗೆ ಕಾಡುತ್ತಿದ್ದುದು ಎರಡು ಬಲಹಸ್ತಗಳು.
ಯಶವಂತ ಚಿತ್ತಾಲರು ತಾವು ಕುಳಿತಿದ್ದ ಡಿನ್ನರ್ ಕುರ್ಚಿಯಿಂದ ಪಕ್ಕದಲ್ಲಿದ್ದ ಸೋಫಾವನ್ನು ಬಲಹಸ್ತದಿಂದ “ನೋಡಿ ಇದೇ ಜಾಗ” ಎಂದು ಬಲವಾಗಿ ಕುಟ್ಟಿದ್ದರು. ” ಇಲ್ಲೇ ನಾನು ಕುಳಿತು ಬೆಳಗ್ಗೆಯೇ ಬರೆಯಲು ಆರಂಬಿಸುತ್ತೇನೆ- ಅಗೋ ಆ ಸಮುದ್ರ ನೋಡುತ್ತ..” – ಹೊರಗಡೆ ರೊಯ್ಯೆಂದು ರಭಸವಾದ ಮಳೆ. ಅವರ ಮಾತುಗಳು ನನ್ನ ತಲೆಗೆ ಹೋಗುತ್ತಲೇ ಇರಲಿಲ್ಲ. ಅವರ ಅಂಗೈಯಲ್ಲಿದ್ದ ಬಲ-ಹಂಬಲ-ಮಮಕಾರ-ಮುಗ್ಧತೆ ಮಾತ್ರ ನನ್ನನ್ನು ತಟ್ಟಿತ್ತು. ಅವರು ಹೇಳುವುದಕ್ಕಿಂತ ಹೆಚ್ಚಿಗೆ, ಅವರ ಕೃತಿಗಳಿಗಿಂತ ಹೆಚ್ಚಿಗೆ ಅವರ ಅಂಗೈ ಹೇಳುತ್ತಿದೆಯೇನೋ ಎನ್ನಿಸುವಷ್ಟು ಬಲವಾಗಿ ಕುಟ್ಟಿದ್ದರು. ಈ ಮುದುಕರ ಬಲ ಇರುವುದೇ ಅವರುಗಳ ಅಂಗೈಯಲ್ಲಿ, ನೀವು ಯಾರನ್ನಾದರೂ ನಿಮ್ಮ ತಾತನನ್ನೋ- ಅಜ್ಜಿಯನ್ನೋ- ಕಲ್ಪಿಸಿಕೊಂಡು ನೋಡಿ: ಅವರುಗಳ ಅಂಗೈಯಲ್ಲಿ ಅಧಿಕ ಶಕ್ತಿ ಇರುವುದನ್ನು ನೀವು ಮನಗಾಣಬಲ್ಲಿರಿ. ಆ ಶಕ್ತಿಯನ್ನು ಎದುರಿಸಲಾಗದೆಯೋ- ಮುಖಾಮುಖಿ ಬೇಡವೇ ಬೇಡ ಎಂದೋ ಹಿಂಜರಿದದ್ದನ್ನು ಅಲ್ಲಿಂದಾಚೆಗೆ ಅವರುಗಳ ಬಗೆಗೆ ಅವ್ಯಕ್ತ ಭಯವನ್ನೋ, ಅಪ್ರತಿಮ ಗೌರವವನ್ನೋ ರೂಢಿಸಿಕೊಂಡು ಹೋಗಿರುತ್ತೇವೆ. ಆ ರೀತಿಯ ಗೌರವದಿಂದ ಚಿತ್ತಾಲರು ತಮ್ಮ ಸಾಹಿತ್ಯವನ್ನು ಬಳಸಿಕೊಳ್ಳಬಹುದೆಂದು ನೀಡಿದ್ದ ಅನುಮತಿ ಪತ್ರವನ್ನು ಸಂಭ್ರಮದಿಂದ ಹಿಡಿದು ಹೊರಬಂದಿದ್ದೆ..
ವಾಷಿಂಗ್‌ಟನ್ನಿನಲ್ಲಿ ಇದೇ ರಿತಿಯ ಹಸ್ತವನ್ನು ಅದರ ಬಲವನ್ನು ನೋಡಿದ್ದೆ..ಕನ್ನಡಸಾಹಿತ್ಯ.ಕಾಂ- ಮುಂದೇನು ಎಂಬ ಪ್ರಶ್ನೆ ಆಗಲೇ ಚರ್ಚೆಯಾಗುತ್ತಿತ್ತು. ವಿಜಯಾ ಕುಲಕರ್ಣಿ, ಮನೋಹರ ಕುಲಕರ್ಣಿಯವರ ಮೆನೆಯಲ್ಲಿ. ‘ಭೂಮಿಕಾ’ದಲ್ಲಿ ಆಗತಾನೆ ಕಾರ್ಯಕ್ರಮ ಮುಗಿದಿತ್ತು. ಕಾರ್ಯಕ್ರಮಕ್ಕೆ ಬಂದಿದ್ದವರು ಮತ್ತೆ ವಿಸ್ತೃತ ಚರ್ಚೆಗೆ ಅಲ್ಲಿ ಸೇರಿದ್ದರು. ರಿಚ್‌ಮಂಡ್ ನಗರದಿಂದ ಭೂಮಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ರಾಜುರವರು ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಿದ್ದರು. “ನಿಮ್ಮ ಪ್ರಶ್ನೆಗಳೆಲ್ಲ ಆಮೇಲೆ. ಈಗ ಕನ್ನಡಸಾಹಿತ್ಯ.ಕಾಂ ಉಳಿಯಬೇಕು- ನೀವು ಈಗ..ಈಗ…” ನೆಲಕ್ಕೆ ತಮ್ಮ ಹಸ್ತವನ್ನು ಗುದ್ದಿ”ಈಗ ಈಗ ಏನ್ಮಾಡ್ತ್ತೀನೀಂತ ಹೇಳ್ರಿ..ನೀವು ಏನ್ಮಾಡೋಕ್ಕಾಗುತ್ತೇಂತ ಹೇಳ್ರಿ..ನನ್ನದು ಇನ್ನೂರು ಡಾಲರ್ ಇರಲಿ..” -ಹೀಗೆ ನೆಲಕ್ಕೆ ತಮ್ಮ ಹಸ್ತವನ್ನು ಗುದ್ದಿ ತಮ್ಮ ಬೆಂಬಲವನ್ನು ವ್ಯಕ್ತ ಪಡಿಸುತ್ತ ನನ್ನಲ್ಲಿ ಆತ್ಮ ಸ್ಥೈರ್ಯ ಮೂಡಿಸಿದ್ದವರು ಸಂಕಲ್ಪ ಚಿತ್ರದ ನಿರ್ದೇಶಕ ಶ್ರೀನಿವಾಸ್‌ರವರು (ಪ್ರತಿವಾದಿ ಶ್ರೀನಿವಾಸ್).
-ವಿಪರ್ಯಾಸವೆಂದರೆ ಈಗಲೂ ಅದೇ ಚರ್ಚೆ ನಡೆಯುತ್ತಿದೆ. ಆಸಕ್ತಿಯುಳ್ಳವರು ಬೆಂಬಲಕ್ಕಾಗಿ ಇರುವ ಯಾಹೂ ಗ್ರೂಪ್ ಗೆ ಭೇಟಿ ನೀಡಬಹುದು. ವ್ಯತ್ಯಾಸವೆಂದರೆ ಈಗ ಜನ ಚರ್ಚೆಯಲ್ಲಿ-ಕನ್ನಡಸಾಹಿತ್ಯ.ಕಾಂ ಮುಂದುವರೆಸಬೇಕು ಎನ್ನುವುದರ ಹಂಬಲಕ್ಕೆ ಕಾರ್ಯಾಸಕ್ತವಾಗಿ, ಕನ್ನಡಸಾಹಿತ್ಯ.ಕಾಂ “ಸಮೂಹದಿಂದ ಸಮೂಹಕ್ಕಾಗಿ” ಎಂಬ ರೂಪು ರೇಷೆ ತಿದ್ದಿಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದು ಸಂಭ್ರಮಿಸಬೇಕಾದ ಸಂಗತಿಗಳೆ. ನೀವೂ ಸಹ ಕೈ ಜೋಡಿಸಿದರೆ ಕನ್ನಡಸಾಹಿತ್ಯ.ಕಾಂ ಮುಂದುವರೆಯುತ್ತದೆ-ವಿಸ್ತರಿಸಿಕೊಳ್ಳುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಇಲ್ಲದಿದ್ದರೆ…ಕಾಲವೇ ನಿರ್ಣಯಿಸುತ್ತದೆ. ಕಾಲದ ಹಿಂದೆ ನಾವು ಅಡಗಿರುತ್ತೇವೆ. ವೈಯಕ್ತಿಕ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಜಾಣತನವೆಂದು ಇದನ್ನು ಪರಿಗಣಿಸದಿರಿ ಎಂದಷ್ಟೆ ಕೋರಿಕೊಳ್ಳುತ್ತೇನೆ.
ಈ ತಿಂಗಳ ಹತ್ತನೆ ದಿನಾಂಕದಂದು ಬೆಂಗಳೂರಿನಲ್ಲಿ ಕನ್ನಡಸಾಹಿತ್ಯ.ಕಾಂ ನಲ್ಲಿ ಸಮಾನ ಮನಸ್ಕರ ಸಭೆ (ಗ್ರೂಪ್) ಸೇರಲಿದೆ. ಆ ಸಭೆ ಎಲ್ಲ ನಿರ್ಧಾರಗಳಿಗೂ ನಿರ್ಣಾಯಕ ಪಾತ್ರ ವಹಿಸುತ್ತದೆಂದು ಅನ್ನಿಸಿದೆ. ಆ ನಿರ್ಣಾಯಕ ಸನ್ನಿವೇಶವನ್ನು ಗ್ರೂಪ್‌ಗೆ ಹೋಗಿ ಅಲ್ಲಿ ಆಗುತ್ತಿರುವ ಚರ್ಚೆಯಲ್ಲಿ ಪಾಲ್ಗೊಳ್ಳುವ ಮೂಲಕ ನೀವೂ ಸಹ ನೆರವಾಗಬಹುದು.
ಕನ್ನಡಸಾಹಿತ್ಯ.ಕಾಂ ನಿಲ್ಲಿಸುವುದೇ ಆದರು ಅದು ಸೆಪ್ಟೆಂಬರ್ ಕೊನೆಯಲ್ಲೇ. ಮುಂದುವರೆಸುವುದಾದರೂ ಸೆಪ್ಟೆಂಬರ್ ಕೊನೆಯಲ್ಲೇ..
ಶೋಕ: ಕನ್ನಡದ ಸಾಹಿತ್ಯದ ಗೊತ್ತುಗುರಿಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದ ಕೀರ್ತಿನಾಥ ಕುರ್ತುಕೋಟಿ ದಂಪತಿಗಳು ಒಂದೇ ದಿನ ಇಲ್ಲವಾದದ್ದು. ಕಳೆದ ತಿಂಗಳು ತಾನೆ ಅವರ ಕೃತಿಗಳನ್ನು ಪ್ರಕಟಿಸುವ ದೃಷ್ಟಿಯಿಂದ ಅವರನ್ನು ಬಲ್ಲ ಮಂದಾಕಿನಿ ಪುರೋಹಿತ್‌ರ ಮೂಲಕ ಪ್ರಯತ್ನಿಸಲಾಗಿತ್ತು. ಕುರ್ತುಕೋಟಿಯವರು ನನ್ನ ಬಳಿ ಮಾತನಾಡಲು ಅವರ ಸ್ನೇಹಿತರಿಗೆ ಸೂಚಿಸಿದ್ದರು. ಅವರ ಸ್ನೇಹಿತರು ಟೆಲಿಫೋನ್ ಮಾಡಿ ಅನುಮತಿಯ ಬಗೆಗೆ ಮಾತನಾಡಿ “ಅವರಿಗೆ ಹುಷಾರಿಲ್ಲ, ಸ್ವಲ್ಪ ಚೇತರಿಸಿಕೊಳ್ಳಲಿ, ಅವರೊಡನೆ ಮಾತನಾಡಿ ಅನುಮತಿ ಪತ್ರ ಕಳುಹಿಸುತ್ತೇನೆ” ಎಂದು ತಿಳಿಸಿದ್ದರು.
ಕುರ್ತುಕೋಟಿಯವರಂತೆ ಸಾಹಿತ್ಯವನ್ನು ನಾವೆಲ್ಲ ಗಂಭೀರವಾಗಿ ಪರಿಗಣಿಸುವ ಬಲ ಬರಲಿ- ಎಂದು ಹಾರೈಸುತ್ತ ಅವರನ್ನು ಸ್ಮರಿಸಬಹುದೇನೊ..
-ಶೇಖರ್‌ಪೂರ್ಣ