ಕನಕಾಂಗಿ ಕಲ್ಯಾಣ

ಒಂದೆರಡು ಮಾತುಗಳು

‘ಕನಕಾಂಗಿ ಕಲ್ಯಾಣ’ ಎಂಬ ಈ ನೀಳ್ಗಥೆಯನ್ನು ಬರೆದದ್ದು ಕೆಲವು ಜನಪ್ರಿಯ ಒತ್ತಡದಿಂದಾಗಿ…. ಅದೂ ಸುಮಾರು ಎಂಟೊಂಬತ್ತು ವರ್ಷಗಳ ಹಿಂದೆ ಶ್ರೀ ಜಿ.ಎಸ್. ಸದಾಶಿವ, ಸುಧಾ ಯುಗಾದಿ ವಿಶೇಷಾಂಕಕ್ಕಾಗಿ ಹೀಗೆ ಇರಬೇಕು ಅಂತ ಹೇಳಿ ಬರೆಯಿಸಿ ಪ್ರಕಟಿಸಿದರು. ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ಸಿನಿಮಾಟೋಗ್ರಾಫರೂ ಗೆಳೆಯರೂ ಆದ ಬಿ.ಇ.ಗೌರಿಶಂಕರ್‍ ಇದು ಸಿನಿಮಾ ಮಾಡ್ಲಿಕ್ಕೆ ಹೇಳಿ ಮಾಡಿಸಿದಂತಿದೆ ಎಂದು ಒತ್ತಾಯಿಸದಿದ್ದಲ್ಲಿ ನಾನು ಇದನ್ನು ಎರಡನೆ ಬಾರಿ ಓದುವ ಪ್ರಯತ್ನ ಮಾಡುತ್ತಿರಲಿಲ್ಲ. ಓದಿದಾಗ ಯಾರಾದರೂ ಸಿನಿಮಾ ಮಾಡಬಹುದೆಂದೆನ್ನಿಸೀತು. ಅಂತ ಕಮರ್ಷಿಯಲ್ ಭಾವ ಮೂಡಿದಾಗ ಕಂನಾಡಿಗಾ ನಾರಾಯಣ ಎಂಬ ಗಾಡಿಕೊಪ್ಪದ ಸಹೋದರ ಈ ನೀಳ್ಗಥೆಯೊಂದನ್ನೇ ಪುಸ್ತಿಕೆಯಾಗಿ ಪ್ರಕಟಿಸಿದರೆ ಹೇಗೆ ಎಂಬ ಭಾವನೆ ಪ್ರಕಟಿಸಿದ. ಉತ್ತಮ ಲೇಖಕನೂ ಆದ ನಾರಾಯಣಗೆ ಪ್ರಕಟಿಸಿ ಬಿಡು ಎಂದು ಒಪ್ಪಿಗೆ ಕೊಟ್ಟು ಬಿಟ್ಟೆ. ಆದ್ದರಿಂದ ಈ ಸಿನಿಮೀಯ ನೀಳ್ಗಥೆಯಾದ ‘ಕನಕಾಂಗಿ ಕಲ್ಯಾಣ’ ಎಂಬುದು ಪ್ರಟವಾಗ್ತಿದೆ.

ಇದನ್ನು ಪ್ರಕಟಿಸಲು ಆಸಕ್ತಿ ತೋರಿಸಿದ ಕಂನಾಡಿಗಾ ನಾರಾಯಣನಿಗೆ, ಪ್ರಕಟಿಸಿರುವ ಮಾ ಪ್ರಿಂಟ್-ಪಬ್ಲಿಷರ್ಸ್ ಗೆಳೆಯರಿಗೆ, ಇದನ್ನು ಬರೆಯಿಸಿದ ಜಿ.ಎಸ್.ಸದಾಶಿವ ಅವರಿಗೆ ಇದನ್ನು ಒಳ್ಳೆಯ ಸಿನಿಮಾ ಮಾಡಿಸಬೇಕೆಂದು ಯೋಚಿಸಿರುವ ಮಿತ್ರ ಬಿ.ಸಿ.ಗೌರಿಶಂಕರ್‌ಗೆ, ನಾನು ಕೃತಜ್ಞನಾಗಿರುವೆ.

-ಕುಂ.ವೀ.

ಕನಕಾಂಗಿ ಕಲ್ಯಾಣ

ಅಕ್ಷತೆ ಎಸೆದಂತೆ ಆಗಸದ ತುಂಬ ಚದುರಿರುವ ಪಾರಿವಾಳಗಳು : ರೆಕ್ಕೆ ಬಡಿಯುತ್ತ ದಿಕ್ಕು ಬದಲಿಸುತ್ತಿರುವ ಕೆಲವು. ರೆಕ್ಕೆ ಬಿಚ್ಚಿಕೊಂಡೇ ತೇಲುತ್ತಿರುವ ಕೆಲವು. ಹುಲಿಗುಡ್ಡದ ಆಚೆಯ ಕನಕದುರ್ಗೆಯ ದಿಕ್ಕಿನಲ್ಲಿರುವ ಆಲದ ಮರದ ಮೇಲಿಂದ ಕರಿಯ ತೂರಿರಬಹುದಾದ ಸೊಗಸುಗಾರ ಅರ್ಜುನ ಇನ್ನೂ ಕಾಣಿಸಿಕೊಳ್ಳಲಿಲ್ಲವಲ್ಲ! ಪರಮೇಸಿ ಶಿವಕ್ಕನ ದಿಬ್ಬದ ಮೇಲೇರಿ ತನ್ನ ಕಾಮನಬಿಲ್ಲಿನಂಥ ಹುಬ್ಬಿಗೆ ಕೈ ಹಚ್ಚಿ ತನ್ನ ಚಿಗುರುಗಂಗಳನ್ನು ಹರಿಬಿಟ್ಟ ಅಶ್ವಿನಿ ಕಾರ್ತಿಯ ಹಿಂಜಿದ ಅರಳೆಯಷ್ಟೆ ಬೆಳ್ಳಗಿರುವ ಅರ್ಜುನ ಬಿಟ್ಟ ಬಾಣದಂತೆ ಸುರುಗಿ ಬರುತ್ತಿರುವುದು ಗೋಚರಿಸಲಿಲ್ಲ. ಅಲ್ಲಿಂದ ಕುಪ್ಪಳಿಸಿದ ಮರದಿಂದ, ಮಾವಿನ ಮರದಿಂದ ಮಾಗಿ ಮಾವಿನ ಹಣ್ಣು ನೆಲಕ್ಕುದುರಿದಂತೆ… ಗರಡಿ ಮನೆಯ ಸಹಚರರಾದ ಕರಿಲಿಂಗ, ಕಾಳರ ಸಹಾಯದಿಂದ ಸೀತಾಳಯ್ಯನ ಗುಡಿಯ ಎತ್ತರದ ಗೋಪುರ ಏರಿದ. ಮುಂಗಾರ ಚೆಲುವ ಸೂರ್ಯ ಕಿರಣಗಳ ಶಾಖಕ್ಕೆ ಗಿಣಿ ಮೂಗಿನ ಕೆಳಗೆ, ಕಂದುವರ್ಣದ ಚಿಗುರು ಮೀಸೆಯ ಮೇಲೆ ಮುತ್ತು ಪೋಣಿಸಿದಂತೆ ಮೂಡಿದ ಬೆವರಹನಿಗಳು ಒಂದೊಂದಾಗಿ ಚೂಪನೆಯ ಗದ್ದದ ಮೇಲಕ್ಕೆ ಜಾರುತ್ತಿರುವುದನ್ನು ಕಿಟಕಿ ಮರೆಯಲ್ಲಿ ಆಸೆಗಣ್ಣಿಂದ ನೋಡುತ್ತಿದ್ದ ಗೌರವ ವರ್ಣದ ಕೆಂಪಿಯ ಕಡೆ ಅವನ ಗಮನವಿರಲಿಲ್ಲ. ಹಾಗೆಯೇ ಕೆಲವು ಮಾರು ದೂರದಲ್ಲಿ ಹರಿವ ಕೃಷ್ಣೆ ಕಡೆ ಹೋಗದೆ ತಾಮ್ರದ ಕೊಡಗಳಿಗೆ ಗದ್ದ ಊರಿ ಬೊಗಸೆ ಗಣ್ಣುಗಳಿಂದ ಗಬಗಬನೆ ತಿನ್ನುತ್ತಿದ್ದ ಸಾವಿತ್ರಿ, ನೀಲಾ, ಸುಶೀಲಾ, ಹೇಮಾ, ಕಮಲಿಯರ ಕಡೆಗೂ ಅವನ ಗಮನವಿರಲಿಲ್ಲ. ಬಸವ ವಿಗ್ರಹದ ಮೇಲೆ ಬಲಿಷ್ಟ ತೊಡೆಗಳನ್ನೂರಿ ಗುಡ್ಡದ ಸಾಲಿನಾಚೆಗೆ ಕಣ್ಣು ತೂರಿದರೂ ಸುಳಿವಿಲ್ಲ ಅರ್ಜುನನದು… ಅಲ್ಲಲ್ಲಿ ಯಾವು ಯಾವುವೋ ಕಾಡು ಪಕ್ಷಿಗಳು; ಮುಂಗಾರಿಗೆ ಮೊಳೆವ ಕ್ರಿಮಿಕೀಟಗಳನ್ನು ಗಬಕಾಯಿಸುವವು.

“ಕೆಳಕ್ಕಿಳಿಯೋ, ಬಿದ್ದು ಕಾಲು ಮುರ್‍ಕೊಂಡೀ” ಸೊಂಟಕ್ಕೆ ಕೈ ಊರಿ ಶಿವ ಧನಸ್ಸಿನಂತೆ ಬಾಗಿ ಬಂದ ನಿಂಗಜ್ಜಿ ಕೈಯಲ್ಲಿದ್ದ ಬೆತ್ತ ಝಳಪಿಸಿತು. “ಇಲ್ಲಂದ್ರೆ ನೋಡು ಸೊಂಟ ಮುರೀತೀನಿ.” ಬಬ್ರುವಾಹನ ಪುರ್‍ರನೆ ಹಾರಿ ಬಂದು ಬಿಳಿ ಜೋಳದ ತೆನೆಯಂಥ ತನ್ನ ತಲೆ ಮೇಲೆ ಕೂಡಲೆತ್ನಿಸುತ್ತಲೇ ತಪ್ಪಿಸಿಕೊಳ್ಳಲು ಪರದಾಡುತ್ತ ‘ಅಲಲಲಾ’ ಎಂದು ದೂರ ಸರಿಯಿತು. ಬಸವಃ ಸಂಗ ತಡೆಯದೆ ನಗಾಡಿದರು. ಅವನನ್ನು ಇಳಿಸಿಕೊಳ್ಳಲೆಂದೇ ಕಾದಿರುವ ಶ್ಯಾಮಲ ವರ್ಣದ ತರುಣಿಯರು ಪರಸ್ಪರ ಒತ್ತಿ ಕುಳಿತಿದ್ದವರು ಥಳ ಥಳ ಹೊಳೆವ ತಾಮ್ರದ ಕೊಡಗಳನ್ನು ತಮ್ಮ ಹೊಳೆಹೊಳೆವ ಸೊಂಟಕ್ಕಿಟ್ಟುಕೊಂಡು ಬೇಸರದ ನಿಟ್ಟುಸಿರು ಚೆಲ್ಲಿದ ಸ್ವಲ್ಪ ಹೊತ್ತಿಗೆ ಹುಲಿಗುಡ್ಡದ ತುದಿಯಲ್ಲಿ ಅಂದರೆ ಜಾಗಟಗೆರೆ ಬೇಡರು ಅಪಹರಿಸುವ ಕಲ್ಲು ಲೋಬಾನದ ಸೀಳು ಶಿಖರದ ತುದಿಯಲ್ಲಿ ಅರ್ಜುನ ಬೆಳ್ಳಿ ತಟ್ಟೆಯಂತೆ ಕಾಣಿಸಿಕೊಂಡೊಡನೆ ಶಂಭು ಸೀಟಿ ಹಾಕಿ ಹರ್ಷ ಪ್ರಕಟಿಸಿದ. ಪರಮೇಶಿಯೂ ಹಾಕಿದ ಸೀಟಿಯ ಸಂಮೋಹನಕ್ಕೆ ಅದು ಬಾಣದಂತೆ ಹತ್ತಿರವೇನೋ ಸುರುಗಿ ಬಂತು…. ಆದರೆ ತುಂಟತನಕ್ಕೆ ಹೆಸರಾದ ಅದು ಚೆಂಡಿನಂತೆ ಪುಟಿದು ಮೇಲೇರಿ ಬಿಡಬೇಕೆ! ಅಲಕನಂದಿ ತೀರ ಬಳಸಿ ದೊಡ್ಡ ದೊಡ್ಡ ಪ್ರದಕ್ಷಿಣಿ ಹಾಕಲಾರಂಭಿಸಿದ ಅದು ತನ್ನ ಯಾವುದೇ ಸಂಜ್ಞೆ ಸೂಕ್ಷ್ಮಗಳಿಗೆ ಮಣಿಯದಿದ್ದಾಗ ಸಿಟ್ಟು ಬಾರದಿರುತ್ತದೆಯೇ ಪರಮೇಶಿಗೆ! ಮೊಳಕೆ ಬಿಡೆದ ಕೂಡಲೇ ಕಾಳುಗಳನ್ನಾಗಲೀ; ಬೆಳ್ಳಿ ಮರಡಿಯ ಸಿಹಿ ಜಂಬು ನೇರಲಹಣ್ಣುಗಳನ್ನಾಗಲೀ ಹಾಕುವುದಿಲ್ಲ ಎಂದು ಗೊಣಗಿಕೊಂಡ… ನಿನ್ನೆ ಇಟ್ಟಿದ್ದೆರಡು ಮೊಟ್ಟೆಗಳ ಮೇಲೆ ರೆಕ್ಕೆ ಹರಡಿ ಕೂತಿದ್ದ ಸುಭದ್ರಾಳಿಗೋ ಜಂಬು ನೇರಲ ಹಣ್ಣೆಂದರೆ ಪಂಚ ಪ್ರಾಣ. ಎಷ್ಟಿದ್ದರೂ ಬಾಣಂತಿ… ಕೂಡಲೇ ಹಾರಿ ಬಂದು ಅವನ ವಿಶಾಲ ಭುಜದ ಮೇಲೆ ಹಾರಿ ಕೂತಿತು.

ಪರಮೇಶಿ ಸುಭದ್ರಳನ್ನು ತೋರಿಸಿ “ನೋಡು…. ಆ ನಿನ್ ಅರ್ಜುನ ರೆಕ್ಕೆ ಮುಚ್ಕೊಂಡು ಸುರುಗಲಿಲ್ಲಾ… ನನ್ನೆಸ್ರು ಸಾವಿತ್ರೀನೇ ಅಲ್ಲ….” ಕಡೆದ ಶಿಲ್ಪದಂಥ ಸಾವಿತ್ರಿಯ ತುಂಟ ಮಾತಿಗೆ ಕೊಡಗಳು ಪರಸ್ಪರ ತಾಕಾಡಿ ಮುಲುಗುಟ್ಟಿದ್ದವು.

ಆಗಲೇ ಮುಂಗೈ ಏರಿ ಕೂತಿರುವಳು ಸುಭದ್ರ! ಸೀಟಿ ಹಾಕಿ ಆಕೆಯನ್ನು ತೂರಿದ ಬಯಲಿಗೆ. ತೀಕ್ಷ್ಣ ಗಮನೆಯಾದ ಆಕೆ ಮುಗಿಲೊಳಗಿದು ಮತ್ತೆ ಹೆಗಲನಲಂಕರಿಸಿದಳು, ಮೊದಲೇ ಮಾಟಗಾತಿ! ಆಕೆಯ ಕಣ್ಣೋಟದ ಬಲೆಗೆ ಬೀಳದೆ ಇರಲಿಲ್ಲ. ಅರ್ಜುನ, ಕೆಳಕ್ಕಿಳಿದು ನಾಟಕ ಆರಂಭಿಸಿದ, ಅದಕ್ಕೆ ಹುಸಿ ಏಟು ಕೊಟ್ಟು ಕೆಳಕ್ಕೆ ಬಿಟ್ಟ. ಅವೆರಡು ಪರಸ್ಪರ ಕೊಕ್ಕು ತಾಕಾಡಿ ತಮ್ಮ ಪಕ್ಷಿ ಭಾಷೆಯಲ್ಲಿ ರಮ್ಯ ಕಾವ್ಯ ಸಮಾನವಾಗಿ ಮತಾಡುತ್ತಾ ಮೊಟ್ಟೆ ಕಡೆ ಹೋಗಿ ಒತ್ತಿ ಕುಳಿತವು.

ಸುಭದ್ರಳೊಳಗೆ ಅದೆಂಥ ಸಮ್ಮೋಹಕ ಶಕ್ತಿ ಇದ್ದೀತು! ಬೆರಗಾದ ಪರಮೇಶಿಗೆ ಶ್ರಾವಣದ ಮೂರನೇ ಸೋಮವಾರ ದಾಟಿದರೆ ಇಪ್ಪತ್ತನ್ನು ಪ್ರವೇಶಿಸುವ ಪ್ರಾಯ…. ಸರದಾರ ಬರುವಾಗ ಸುರಿದಾವ ಮಲ್ಲೀಗೆ…. ಶ್ಯಾಮಲ ವರ್ಣದ ತರುಣಿಯರು ಪದ ಹಾಡುತ್ತಾ ತಮ್ಮ ಕೊಡಗಳೊಂದಿಗೆ ಬಾಳೆ ನಡುವೆ ಜುಳುಜುಳು ಹರಿವ ಹಳ್ಳದ ಕಡೆ ಬಳುಕುತ್ತ ಹೆಜ್ಜೆ ಹಾಕಿದರು.

ಮೊಳಕೆ ಹೊಡೆದ ಕಡಲೆ ಕಾಳುಗಳಿಗೆ ಕುಸುಬಿ ಕಾಳು ಬೆರೆಸಿ ಪಾರಿವಾಳಗಳ ಗೂಡುಗಳಿಗೆ ಹಾಕುತ್ತಿದ್ದಾಗ “ಪರಮೇಶಾ… ಪರಮೇಶಾ….” ಎಂದು ಎದುರುಸಿರು ಬಿಡುತ್ತಲೇ ಬಂದ ಸಿದ್ಧ. ಗುಮುಟೆಯಾಕಾರದ ಅವನ ಇಡೀ ದೇಹ ಬೆವರಲ್ಲಿ ಜಳಕ ಮಾಡುತ್ತಿತ್ತು. ಚಾವಡಿ ಹತ್ರ ದೇವಸ್ಥರು ಸೇರವ್ರೆ… ಜಾಗಟಗೆರೆ, ಗೀಗಟಗೆರೆ…. ಅಂತ ಗುಸ್ಗುಸು ಮಾತು ನಡೆದೈತೆ… ನಡಿ ಹೋಗೋಣ.”

ಜಾಗಟಗೆರೆ ಎಂಬ ಶಬ್ದಕ್ಕೆ ಪರಮೇಶಿಯ ಕಿವಿಗಳು ನಿಮಿರಿದವು. ಕಣ್ಣುಗಳಿಗೆ ರಕ್ತ ನುಗ್ಗಿ ಇಳಿಯಿತು. ಮುಷ್ಠಿ ಬಿಗಿದ. ಸೆಡ್ಡೊಡೆದು ಅಖಾಡಕ್ಕೆ ಆಹ್ವಾನಿಸುವ ಕುಸ್ತಿ ಪೈಲ್ವಾನನಂಥ ಊರು ಅದು.

“ಉಣ್ಣೋಕೆ ಹೋತ್ತಾಗ್ಲಿಲ್ವೇನೋ ನಿಂಗೆ” ತುಸು ದೂರದಲ್ಲಿ ಬಿಲ್ಲಿನಾಕಾರದ ಅಜ್ಜಿ “ಚಪ್ಪರದಳ್ಳಿ ಉರುಕುಂದಿ ಜೇನಿಳಿಸೋಕೆ ಕರ್‍ಯೋಕೆ ಬಂದಿದಾನೆ…. ಎಷ್ಟು ಕೊಟ್ರೂ ಹೋಗ್‌ಬ್ಯಾಡ… ಬೆಳ್ಳಿ ರೂಪೈ ಕೊಟ್ರೂ ಒಪ್ಕೋಬ್ಯಾಡ”! ಮನೆಯ ಮುಂದೆ ಎಕ್ಕೆ ಎಲೆ ಬತ್ತಿ ಹಚ್ಚಿ ಬುಸು ಬುಸು ಹೊಗೆ ಬಿಡುತ್ತಾ ಕೂತಿರುವ ಒಕ್ಕಣ್ಣಿನ ಉರುಕುಂದಿಗೆ ಕೇಳಿಸಲೆಂದೇ ಗಟ್ಟಿಯಾಗಿ ಹೇಳಿತು. ಗುಡೇಕೋಟೆಯವರೊಂದಿಗೆ ಕರಡಿ ಹಿಡಿಯಲು ಹೋಗಿ ಕಾಲು ಕಳೆದುಕೊಂಡಿಲ್ಲವೇ ಮಗ ಮಾಲಿಂಗ.!

ಅದರ ಯಾವ ಮಾತು ಕೇಳಿಸಿಕೊಳ್ಳಲು ತಯಾರಿದ್ದರೆ ತಾನೆ ಮೊಮ್ಮಗ… ಬೇಕು ಬೇಡ ಉತ್ತರ ಕೊಟ್ಟು ಸಿದ್ದನೊಂದಿಗೆ ಚಾವಡಿ ಕಡೆ ಓಡಿದ. ಹಾಳಾದೋನೆ…. ಅಜ್ಜಿಯ ಪ್ರೀತಿಯ ಕೋಪ ತನ್ನ ಪಾಡಿಗೆ ತಾನು ಟುಸ್ಸ್ ಎಂದಿತ್ತು.

ಚಾವಡಿ ಕಟ್ಟೆ ಕೇವಲ ಚಾವಡಿ ಕಟ್ಟೆ ಅಲ್ಲ…. ಅದು ಇಡೀ ಹೊನ್ನೂರಿನ ತ್ರಿಕಾಲ ಸತ್ಯ ಹೇಳುವ ಜಾತಕ….

ಕಟ್ಟೆ ಮೇಲೆ ಆತಂಕ ಮುಖದ ದೈವಸ್ಥರು…. ಅವರ ನಡುವೆ ಪೊದೆ ಪೊದೆ ಬೆಳ್ಳಿ ಮೀಸೆಯ ಹೊನ್ನಜ್ಜ… ಕೆಳಗೆ ಕೂತಿರುವ ನಿಂತಿರುವ ಜನ…. ಎಲ್ಲರಿಗೆ ಮೈತುಂಬ ಬಾಯಿಗಳು… ಕಿವಿಗಳು… ಕುಂಬಾರರ ಆವಿಗೆಯಂತೆ ಬೇಯುವ ದೇಹಗಳ ಜನ…. ಪಂಚಾಯ್ತಿಗೆ ಸಾಟಿ ಇಲ್ಲದ ಪರಮೇಶಿ ಚಾವಡಿ ಗಂಗಳದ ತುದಿಯಲ್ಲಿದ್ದ ಬುಗುಟೇ ಕಲ್ಲನ್ನು ಏರಿ ಬಸವನ ಆಸರೆಯಲ್ಲಿ ಕೂತಿದ್ದ… ಅವನಿಗೆ ಸ್ಪಲ್ಪ ದೂರದಲ್ಲಿ ಪಳಕೂಪಿಳಕೂ ಕಣ್ಣು ಬಿಟ್ಟು ಕೂತಿರುವ ಕಾಗೆ.

ಹೊನ್ನೂರಿನಲ್ಲಿ ಬರುವ ಕಾರುಣುವಿಯಂದು ನಡೆವ ಕರಿ ಕಳೆದ ಇಪ್ಪತ್ತೈದು ವರ್ಷಗಳಿಂದ ನಡೆದಿಲ್ಲ… ಅದನ್ನು ಹರಿದು ತರುವ ಕುರಿತು ಪಂಚಾಯ್ತಿ ಚರ್ಚೆ ನಡೆಸಿತ್ತು. ಕರಿ ಕೇವಲ ಒಂದು ಆಭರಣವಲ್ಲ… ಅದು ಸಂಜೀವಿನಿ!

“ನಮ್ಮೂರ್‍ಗೆ ರೋಗರುಜಿನ ಬರದಂಗೆ ಊರಿನ ಪಶೂಪಕ್ಷಿ ನೆಮ್ಮದಿಯಿಂದ ಇರಬೇಕೆಂದ್ರೆ ಹೊನ್ನೂರಿನ ಕರಿ ತರಲೇಬೇಕು.” ರುದ್ರಗೌಡನ ಕೈಯಲ್ಲಿ ವೀರಭದ್ರನ ಗುಗ್ಗುಳದಂತೆ ದಗ್ಗೆಂದು ಉರಿಯುತ್ತಿರುವ ಚಿಲುಮೆ.

“ಅಲಕನಂದೀಲಿ ನಮ್ಮೂರು ಮುಳುಗಬಾರದಂದ್ರೆ ಕರಿ ನಮ್ಮೂರ್‍ಗೆ ಬರ್‍ಲೇಬೇಕು!” ಗುಡೇ ಕೋಟೆ ದೊರೆಗಳ ಆಸ್ಥಾನ ಪೈಲ್ವಾನ ನರಸಿಂಹ ಜೆಟ್ಟಿಯನ್ನು ಮಹಾನಮವಿ ಹಬ್ಬದಲ್ಲಿ ಸೋಲಿಸಿ ಹೆಸರು ಮಾಡಿರುವ ಹನುಮ ಜೆಟ್ಟಿಗೆ ಕೆಮ್ಮು ಒತ್ತರಿಸಿ ಬಂತು ಅಷ್ಟರಲ್ಲಿ.

ಬ್ರಹ್ಮಗಿರಿ ಪರ್ವತ ಶ್ರೇಣಿಯಲ್ಲಿ ಹುಟ್ಟುವ ಶ್ವೇತಾ, ಮಾಣಿಕ್ಯಧಾರ, ಕಪಿಲತೀರ್ಥದಂಥ ಚಿಕ್ಕಪುಟ್ಟ ತೊರೆಗಳ ಸಂಗಮವಾದ ಆಲಕನಂದಿ ಬೇಸಗೆಯಲ್ಲಿ ಅದೇ ಋತುಮತಿಯಾದ ಬಾಲಕೆಯಂತೆ ಕಂಡರೆ ಮಳೆಗಾಲದ ಒಂದೊಂದು ದಿನಗಳಲ್ಲಂತೂ ಇಕ್ಕೆಲಗಳನ್ನು ಆಪೋಶನಗೈಯುತ್ತ ರುದ್ರತಾಂಡವ ಮಾಡುವ ಮಹಾಕಾಳಿಯೆ ಸರಿ.

ಈ ಊರು ಕನಕದುರ್ಗೆಯ ತವರ್‍ಮನೆ. ಆಕೆ ಮ್ಯಾಲೆ ಆ ಜಾಗಟಗೆರೋರ್‍ಗೆ ಎಷ್ಟು ಅಧಿಕಾರ ಐತೋ ಹೊನ್ನೂರಿನವರಾದ ನಮ್ಗೂ ಅಷ್ಟೇ ಅಧಿಕಾರ ಐತೆ…. ಯಾವ ಬೂಪನಾದ್ರೂ ಆ ಕರಿ ತಂದಾ ಅಂದ್ರೇ ಮಾತಾಯಿ ನಮ್ಮೂರ್‍ಗೆ ಬಂದಂಗೇನೇ!…. ಹೊನ್ನೂರಿಗೆ ಬದ್ರಕೋಟೆಯಂತಿರುವ ಹೊನ್ನಜ್ಜ ತನ್ನ ತಲೆ ಪೇಟವನ್ನು ಸರಿಪಡಿಸಿಕೊಂಡ.

ಹೌದು! ಕನಕದುರ್ಗೆ ಊರ ಹೊರಗಿನ ಸುತ್ತಲ ಮರದಲ್ಲಿ ಹುಟ್ಟಿದವಳು. ಆಕೆ ಜಾಗಟಗೇರೆ ಸೇರಿ ಎಷ್ಟೋ ವರ್ಷಗಳುರುಳಿರಬಹುದು! ಆಕೆಗೆ ಹರಕೆ ಹೊತ್ತ ಮೇಲೆಯೇತಾನು ಬದುಕಿದ್ದಂತೆ! ಪರಮೇಶಿ ಭಕ್ತಿ ಪರವಶನಾಗಿ ಕಂಪಿಸಿದ.

“ಕರಿ ಹೊನ್ನೂರಿನ ಸ್ವಾಭಿಮಾನದ ಪ್ರಶ್ನೆ…”

“ಅದನ್ನು ತರೋ ಗಂಡಸರು ಮುಂದೆ ಬರ್‍ರಿ” ವೆಂಕಟಾಚಲ ಶಾಸ್ತ್ರಿಗಳ ಮಾತು ಗಂಡಸರ ನರಗಳನ್ನೇ ಕೆಣಕಿತು. ಪರಸ್ಪರ ಮುಖ ನೋಡಿಕೊಂಡು ತಲೆ ತಗ್ಗಿಸಿದರು.

ಮುಳ್ಳಿನ ಮೇಲೆ ಕೂತವರಂತೆ ಚಡಪಸಿದರು ಹಿರಿಯರು, ಅವರ ಹಣ್ಣಾದ ಮೀಸೆಗಳು ಸ್ಪುರಿಸಿದವು.

ತಾನು ಬಿಟ್ಟ ನಿಟ್ಟುಸಿರಿಗೆ ಕಂಪಿಸುತ್ತಿದ್ದ ವೀಳ್ಯದೆಲೆಗಳ ನಡುವೆ ವಜ್ರದ ಹರಳಿನ ಹೊನ್ನಿನುಂಗುರವಿಟ್ಟ ಹೊನ್ನಜ್ಜ.

“ಕರಿ ತರ್‍ತೀನಿ ಅನ್ನೋ ಗಂಡಸರ್‍ಯಾರಾದ್ರೂ ಮುಂದೆ ಬಂದು ವೀಳ್ಯೆ ಸ್ವೀಕರಿಸಿ ಈ ಉಂಗುರ ಧರಿಸಬಹ್ದು” ಒಂದು ಕಾಲಕ್ಕೆ ಪರಾಕ್ರಮ ಮೆರೆದ ಹೊನ್ನಜ್ಜನ ಮಾತಿಗೆ ಗುಸುಗುಸು ಸದ್ದು. ಮರುಕ್ಷಣ ಮೌನ; ಕೊರೆದ ಚಿತ್ರದಂತೆ ನಿಶ್ಯಬ್ದ ಮರುಕ್ಷಣ.

ಹಸಿರು ಹೆಪ್ಪುಗಟ್ಟಿದ ವೀಳ್ಯದೆಲೆ ನಡುವೆ ಮೇಲೆ ನೋಡುವವರ ಶುಕ್ಲ ಪಟಲಕ್ಕಿರಿಯುವ ಉಂಗುರದ ವಜ್ರದ ಹರಳು. ಆಸೆಗಣ್ಣಿಂದ ನೋಡಿದವರ ದೃಷ್ಟಿ ಮಂಕಾಯಿತು. ಲಾಲಾರಸ ಹನಿದ ಬಾಯಿಗಳು ಬತ್ತಿ ಒಣಗಿದವು.

ಅಶ್ವಿನಿ ಭರಣಿಗೆ ಗರ್ಭಿಣಿಯಂತೆ ತುಂಬಿ ಹರಿಯುತ್ತಿರುವ ಅಲಕನಂದಿಯ ಒಡಲು ಕ್ರೂರ ಮೊಸಳೆಗಳ ತಾಣ. ಅದರಾಚೆ ನರರಕ್ತ ಕುಡಿದು ಅರಗಿಸಿಕೊಳ್ಳಬಲ್ಲ ತಾಕತ್ತಿನ ಬೇಟೆಗಾರ ಬೇಡರೇ ತುಂಬಿರುವ ಜಾಗಟಗೆರೆ.

ಕೆಲ ಮುತ್ತೈದೆಯರು ಬಂದು ತಂತಮ್ಮ ಕುಂಕುಮ ಭಾಗ್ಯವನ್ನು ಕರೆದೊಯ್ದರು ಉಪಾಯಾಂತರದಿಂದ ಕೆಲ ಗೃಹಿಣಿಯರಿಗೆ ತಮ್ಮ ಗಂಡಂದಿರು ಪರಾಕ್ರಮ ಮೆರೆಯಲೆಂಬಾಸೆ….

ನರಗಳ ಸಾಮರ್ಥ್ಯ ಅಣಕಿಸುವಂತೆ ಸುಳಿಯಿತು ತಂಗಾಳಿ….

ಹೊನ್ನಜ್ಜನ ದೇಹವಂತೂ ಸುಣ್ಣದ ಹರಳಿನಂತೆ ಅರಳಿತು.

‘ಥೂ ನಿಮ್ಮ ಗಂಡಸುತನಕ್ಕೆ ಬೆಂಕಿ ಹಾಕ…. ಆ ಜಗಟಗೇರೆ ಹಂದಿಗಳು ನಾಳೆ ಬಂದು ನಿಮ್ಮ ಹೆಂಡ್ರನ್ನ ಹೊತ್ಕೊಂಡೊಯ್ದರು ನೀವ್ಯಾರು ಪ್ರತಿಭಟಿಸೊಲ್ಲ….” ಹೊನ್ನಜ್ಜನ ದೇಹದ ಸಾವಿರ ಸುಕ್ಕುಗಳು ಅಪಮಾನದಿಂದ ಕಂಪಿಸಿದವು.

ಗಂಡಸರ ತಲೆಗಳು ಬಾಡಿ ಕಂಪಿಸಿದವು.

ಪರಮೇಶಿ ಹುಲಿಮರಿಯಂತೆ ಮುನ್ನುಗಿದ. ಕೈ ಬೀಸಿ ಕರೆಯುತ್ತಿದ್ದ ವೀಳ್ಯದ ಕಡೆ ನಡೆದು ಕೈ ಹಚ್ಚಿದ.

ಗಾಳಿಗೆ ಕಂಪಿಸುವ ತರಗೆಲೆಗಳಂಥ ಮಾತುಗಳು….

ಹೊನ್ನಜ್ಜನ ಮಾಗಿದ ಕಣ್ಣುಗಳು ಹನಿದವು. ಬಾಚಿ ತಬ್ಬಿಕೊಂಡ. ದೈವದ ಸಮಕ್ಷಮದಲ್ಲಿ ಪರಮೇಶಿಯ ಬೆರಳಿಗೆ ಉಂಗುರ ತೊಡಿಸಿದ.

ಈ ಸುದ್ದಿ ಊರ್‍ತುಂಬ ಹರಡಲು ವಿಳಂಬವಾಗಲಿಲ್ಲ. ವಿಚಿತ್ರ ಕಸಿವಿಸಿ…. ಕಳವಳ…. ವಿಲಕ್ಷಣ ಆನಂದ….

“ಉಂಗುರದಾಸೆ ತೋರ್‍ಸಿ ನನ್‌ಮೊಮ್ಮಗನ್ನ ಬಲಿಕೊಡೋಕೆ ನೋಡ್ತಿದೀರಲ್ಲ. ನೀವು ಮನುಷ್ಯರು ಅಲ್ಲ” ತಾಯಿ ಇಲ್ಲದ ತಬ್ಬಲಿಯನ್ನು ಸಾಕಿ ಬೆಳೆಸಿದ ನಿಂಗಜ್ಜಿ ಕನಲಿದಳು.

“ಉಂಗುರ ವಾಪಾಸು ಕೊಟ್‌ಬಿಡು” ಜಾಗಟಗೇರೆ ಬೇಡರ ಬಾಣದ ರುಚಿ ಬಲ್ಲ ತಂದೆ ಮಾಲಿಂಗ ಪರಿಪರಿಯಾಗಿ ಹೇಳಿದ.

ಹುಲಿ ಮರಿ ಪ್ರಾಣವನ್ನಾದರೂ ಬಿಟ್ಟೀತು! ವೀಳ್ಯೆ ಮರಳಿಸುವುದೇನು!…

ತಾಯಿ ಮಗ ಊರದೈವದ ಮುಂದೆ ಕರುಳು ಕಿತ್ತಿಟ್ಟರು.

“ಮಾಲಿಂಗ… ಇವ್ನು ನಿನ್ ಮಗ ಮಾತ್ರ ಅಲ್ಲ…. ಇಡೀ ಗ್ರಾಮದ ಹೆಮ್ಮೆಯ ಪುತ್ರ…. ಇವನ ಯೋಗಕ್ಷೇಮಾನ ಆ ತಾಯಿ ನೋಡ್ಕೊಳ್ತಾಳೆ…. ಕಳವಳ ಬೇಡ…..” ಹೊನ್ನಜ್ಜನ ಮಾತಿಗೆ ಪ್ರತಿನುಡಿಯಲಿಲ್ಲ ಯಾರೂ.

-೨-

ಆ ಕ್ಷಣದಿಂದ ಪರಮೇಶಿಯನ್ನು ತನ್ನ ಐವತ್ತಂಕಣದ ಮನೆಗೆ ಕರೆಸಿಕೊಂಡ ಹೊನ್ನಜ್ಜ… ತುಪ್ಪದಲ್ಲಿ ನೆನೆದ ಉತ್ತುತ್ತಿ ಕೊಬ್ಬರಿ ಬೆಲ್ಲ ತಿನ್ನಲು…. ಮೈ ಮಾಂಸಖಂಡಗಳನ್ನು ಪಳಗಿಸಲು ಹನುಮ ಜೆಟ್ಟಿಯನ್ನು ನಿಯಮಿಸಲಾಯಿತು.

ಶ್ಯಾಮಲ ವರ್ಣದ ತರುಣಿಯರಂತೂ ತಮ್ಮ ತುಂಬು ಸ್ತನಗಳ ಮರೆಯಲ್ಲಿ ಕೆನೆ ಮೊಸರು, ಕೆನೆ ಹಾಲು ತಂದು ತಮ್ಮ ಕಣ್ಮಣಿಗೆ ತಿನ್ನಿಸತೊಡಗಿದ್ದನ್ನೂ…. ಶುಕ್ಲ ವರ್ಣದ ಹಾರವ ತರುಣಿಯರು ಪರಮೇಶಿಯನ್ನು ತಡೆಯಲರಿಯದೆ ಹಾಸಿಗೆ ಹಿಡಿದಿದ್ದನ್ನೂ ಕಂಡು ಕೇಳಿ, ಗರಡಿಯ ಪಡ್ಡೆಗಳು ಸಾಂದರ್ಭಿಕವಾಗಿ ಆಡಿಕೊಂಡು ನಗಾಡಿದವು.

ಆದರೆ ಪರಮೇಶಿ ತನ್ನ ಪಂಚೇಂದ್ರಿಯಗಳನ್ನು ಜಾಗಟಗೇರಿಯ ಕೇರಿಕಡೆ ಕೇಂದ್ರಿಕರಿಸಿದ್ದ. ತಾನು ಬಹು ಹಿಂದೆ ಆ ಊರ ಹೊರವಲಯದಲ್ಲಿ ರುಚಿಗೆ ಹೆಸರಾದ ಹಲಸಿನ ಹಣ್ಣು ತಿಂದಿದ್ದ ನೆನಪು…. ಬೆಟ್ಟಗಳ ತಪ್ಪಲ ಇಳಿಜಾರಿನಲ್ಲಿರುವ ಗ್ರಾಮದ ಮಸಕು ಚಿತ್ರ… ಬೇಡರ ಆಧೀನದಲ್ಲಿರುವ ಕನಕ ದುರ್ಗೆಯ ದೇವಾಲಯ…. ಗುಳಾಪುಕಣ್ಣುಗಳ ತಾಯಿ…. ಶಂಕ ಚಕ್ರಗದಾಹಸ್ತೆ… ಆಕೆಯ ವರ್ಣನೆಯನ್ನು ಸವಾರೆಕ್ಕನ ಬಾಯಿಯಿಂದ ಕೇಳಿ ಕೇಳಿ ದಣಿಯಲ್ಲೊಲ್ಲದ ಕಿವಿಗಳು…. ಕ್ರಮೇಣ ಜಾಗಟಗೇರಿ ಅಚ್ಚೊತ್ತಿತ್ತು ಅವನ ಮನದೊಳಗೆ….

“ಅಮ್ಮನ ಗುಡ್ಯಾಗ ನಿಮ್ಮಜ್ಜ ಕಟ್ಟಿರೋ ಗಂಟೆ ಐತೆ…. ಅದ್ನ ಬಾರಿಸಿ ಬರೋದ್ನ ಮರೀಬ್ಯಾಡ…” ಅಜ್ಜನ ಓರಿಗೆಯವನಾದ ಕವಳೆಜ್ಜ ಬೆನ್ನಟ್ಟಿ ಹುರಿದುಂಬಿಸಿದ.

ಒಂದೆರಡು ದಿನ ಕಳೆದರೆ ಕಾರುಣ್ಣುವಿ… ಮುರುಕು ಚಂದ್ರನ ಮಂಕು ಬೆಳದಿಂಗಳು ಸುತ್ತಲು…. ಹೊನ್ನಜ್ಜನ ಮನೆ ಅಂಗಳದ ಹುಲ್ಲು ಮೆತ್ತೆಯ ಮೇಲೆ ಕಡೆದ ವಿಗ್ರಹದಂತೆ ಕೂತಿದ್ದ ಪರಮೇಶಿಯ ಸುತ್ತ ಒಬ್ಬರಲ್ಲಾ ಒಬ್ಬರು… ಒಬ್ಬೊಬ್ಬರದು ಒಂದೊಂದು ಮಾತು. ಆದರೆ ಅವನು ತಾನು ಈಜಿ ದಾಟಬೇಕಿರುವ ಆಲಕನಂದೆ…. ಮರದಿಂದ ಮರಕ್ಕೆ ಜಿಗಿಯಬೇಕಿರುವ ಕಾಡು…. ತನ್ನ ಮೇಲೆ ಸುರುಗಬಹುದಾದ ಈಚಿ, ಭರ್ಜಿಗಳ ದಾಳಿ ಕುರಿತು ಯೋಚಿಸುತ್ತಿದ್ದ. ಅವನ ಮನಸ್ಸೇ ಅವನ ಪಾಲಿನ ಅಭೇದ್ಯ ಕೋಟೆಯಾಗಿತ್ತು.

“ಈ ನಾವು ಕರಿ ಹರಿಯಲು ಖಂಡಿತ ಬರಲಾರರೆಂದೇ ಊಹಿಸಿರ್‍ತಾರೆ. ಆ ಜಾಗಟಗೇರೆ ಹೆಡ್ಡರು… ಆದ್ರು ನೀನು ಮೈ ತುಂಬ ಕಣ್ಣಾಗಿರೋದ್ನ ಮಾತ್ರ ಮರೀಬ್ಯಾಡ….” ರಾಮ ಮಂದಿರದ ಶೀನಪ್ಪನವರಿಗೇನು ಗೊತ್ತು ಜಾಗಟಗೇರಿ ಕಡೆ ಗೂಢಾಚಾರಿ ಗಿಡುಗ ಹಾರಿ ಹೋದ ಸಂಗತಿ.

ಕುಂಕುಮ ವರ್ಣದ ಮುಂಬೆಳಕಿನಲ್ಲಿ ದ್ಯಾಮವ್ವ ಜಳಕ ಮಾಡಿದ್ದಳೆನ್ನಲಾದ ಪುಷ್ಕರಣಿಯೊಂದು ಊರಿಗೆ ಕೂಗಳತೆ ದೂರದಲ್ಲಿರುವುದು. ಅದರಲ್ಲಿ ಬೆವರುವಂತೆ ಈಜಿದ ಪರಮೇಶಿ. ಹೊನ್ನಜ್ಜನೇ ಖುದ್ದು ನಿಂತು ಗ್ರಾಮದ ಸಮಸ್ತ ದೇವತೆಗಳಿಗೆ ವಿಶೇಷ ಪೂಜೆ ಮಾಡಿಸಿ ತೀರ್ಥ ಪ್ರಸಾದ ನೀಡಿದ….

ದುಗುಡವೇ ಮೈವೆತ್ತಂಥ ವಾತಾವರಣದ ನಡುವೆ ಜಾಗಟಗೆರೆ ಕಡೆ ಮುಖ ಮಾಡಿನಿಂತ ಅವನಿಗೆ ಗ್ರಾಮದ ಸಮಸ್ತ ಮಹಿಳೆಯರು ತಮ್ಮ ತುಂಬಿದ ಕಣ್ಣುಗಳಿಂದ ಆರತಿ ಬೆಳಗಿದರು.

ಕಾನನದ ಬಗ್ಗೆ ಇಂಚಿಂಚು ಗೊತ್ತಿರುವ ಕೆಂಜೆಡೆಯ ಗಿಡದೊಳಗೆ ಗಿಡವಾಗತ್ತ ಹಸಿರು ಹಾವಿನಂತೆ ಪುಟಿದು ಜಾರುವ ಕುರಿತ ಹೇಳುತ್ತಲೇ ಹಿಡಿಗತ್ತಿಯೊಂದನ್ನು ಅವನ ಸೊಂಟಕ್ಕೆ ಬಿಗಿದ.

ಎಲ್ಲರೂ ಅವನನ್ನು ಬಲವಾಗಿ ಅಪ್ಪಿಕೊಂಡು ಬೀಳ್ಕೊಟ್ಟರು.

ಹೊನ್ನಜ್ಜನೂ ಅಪ್ಪಿಕೊಳ್ಳದಿರಲಿಲ್ಲ.

“ಪರಮೇಶಿ ನೀನು ಕರಿ ಸಂಗಡಬಂದ್ರೆ ತಲೆ ಮೇಲೆ ಹೊತ್ಕೊಂಡು ಮೆರೆಸ್ತೀನಿ. ಇಲ್ಲಾಂದ್ರೆ ನಿನ್ ಹೆಸ್ರಲ್ಲಿ ವೀರಗಲ್ಲು ನೆಡೆಸಿ ತ್ರಿಕಾಲ ಪೂಜೆ ನಡೆಯೋ ಏರ್ಪಾಡು ಮಾಡ್ತೀನಿ” ಎಂದು ನುಡಿದ ಹೊನ್ನಜ್ಜನ ಅಡಿಗಳಿಗೆರಗಿದ ಪರಮೇಶಿ.

“ಹಿಂಭಾಗದ ಮೂಲಕ ಜಾಗಟಗೇರೆ ಪ್ರವೇಶಿಸೋದು ಮೇಲು…” ಬಸವ ತನ್ನ ನೆಚ್ಚಿನ ಗೆಳೆಯನನ್ನು ನೈರುತ್ಯಾ ಭಾಗದಲ್ಲಿ ಚಕ್ರದಂತೆ ಸುತ್ತುವ ನೀರೊಳಗೆ ದೂಡಿದ. ಕ್ಷಣಾರ್ಧದಲ್ಲಿ ಮೀನಿನಂತೆ ಈಜಿ ಆಚೆದಡ ಸೇರಿದ ಪರಮೇಶಿ ಗೆಳೆಯರ ಕಡೆ ಕೈ ಬೀಸಿ ಕಾಡೊಳಗೆ ಕರಗಿ ಮರೆಯಾದ.

ದಟ್ಟ ಕಾಡಿನ ನಡುವೆ ಪ್ರಾಣಿಗಳು ಮಾಡಿದ್ದ ಕಿರಿದಾದ ಹಾದಿ. ಹಾದಿ ತುಂಬ ಪ್ರಾಣಿಗಳ ಹೆಜ್ಜೆ ಗುರುತುಗಳು…. ಕಿವಿಗಡುಚಿಕ್ಕುವ ಜೀರುಂಡೆ ಸದ್ದು. ದೂರದಲ್ಲೆಲ್ಲೋ ಚಿರತೆ ಹೊನ್ನಿಗಳು ರಾಸಲೀಲೆಯಲ್ಲಿ ತೊಡಗಿರುವ ಸದ್ದು… ಎಷ್ಟಿದ್ದರೂ ತಾನು ಕಾಡಿನ ಉತ್ಪಾದನೆಯನ್ನವಲಂಬಿಸಿ ಬದುಕುತ್ತಿರುವ ಕಾಡಿನ ಮಗ. ಹೆಜ್ಜೇನು ಬಿಡಿಸುವಲ್ಲಿ ತನಗೆ ಸಾಟಿಯಾದವರು ಯಾರಿಹರು? ರಕ್ತನಾಳ ಕಚ್ಚಿ ಹಿಡಿಯಲು ವಿಫಲಗೊಂಡು ಉದುರಿ ಬೀಳುತ್ತಿರುವ ಜಿಗಣಿಗಳನ್ನು ನೋಡಿ ನಗು ಬಂತು ಅವನಿಗೆ… ಹಾದಿಯುದ್ದಕ್ಕೂ ತಿನ್ನು ಬಾ ಎಂದು ಕೈ ಬೀಸಿ ಕರೆಯುತ್ತಿರುವ ಕವಳೆ, ಕಾರೆ, ಬಿಕ್ಕಿ, ಹಲಸು, ಮಾವು…. ಪರಿಮಳ ಚೆಲ್ಲತ್ತಿರುವ ಜಾಜಿ, ಮಲ್ಲಿಗೆ, ಕಣಗಿಲೆ, ನೆಲಸಂಪಿಗೆ….

ಹಣ್ಣು ತಿನ್ನುವುದರಲ್ಲಿ ಮಗ್ನವಾಗಿರುವ ಮಂಗನ ಕಡೆ ಗುರಿ ಇಟ್ಟು ಸಾಗಿರುವ ಹೆಬ್ಬಾವನ್ನು ನೋಡಿ ವಿಲವಿಲನೆ ಒದ್ದಾಡುತ್ತಿದ್ದ ಜಿಂಕೆ ಮರಿಯೊಂದನ್ನು ಕಚ್ಚಿಕೊಂಡು ಪಲಾಯನ ಮಾಡುತ್ತಿದ್ದ ಚಿರತೆಯನ್ನೂ ನೋಡಿದ. ತಾನು ನಡೆಯಬೇಕಿರುವ ದಾರಿ ಖಚಿತಪಡಿಸಿಕೊಳ್ಳಲು ಬೂರುಗದ ಮರದ ತುದಿಗೇರಿ ಇಣುಕಿದ. ತೀರಾ ಹತ್ತಿರದಲ್ಲೇ ಕೇಳಿಬರುತ್ತಿರುವ ಡೊಳ್ಳು; ಹಲಗೆ ಕಹಳೆ ಬಾಜಬಜಂತ್ರಿ ಸದ್ದು. ಬೀಸಿ ನಡೆದರೆ ಎರಡು ದಮ್ಮಿನ ಹಾದಿ.

ಸನಿಹದಲ್ಲಿ ನೇತಾಡುತ್ತಿದ್ದ ಮಾಲಿಂಗನ ಬಳ್ಳಿ ಹಿಡಿದುಕೊಂಡೊಡನೆ ಅರ್ಜುನ ಬಂದು ಹೆಗಲ ಮೇಲೆ ಕೂತಿತು. ಸಂತೋಷ ಮತ್ತು ದಿಗ್ಭ್ರಮೆಯಿಂದ ಅರ್ಜುನಾ… ಅರ್ಜುನಾ… ಎಂದು ಅದಕ್ಕೆ ಮುದ್ದಿಸಿ ಬಯಲಿಗೆ ತೂರಿದನಾದರೂ ಅದು ಹೋಗಬೇಕಲ್ಲ!

ಮಾಲಿಂಗನ ಬಳ್ಳಿಯಿಂದ ಇನ್ನೊಂದು ಮರಕ್ಕೆ ಜೀಕಿಳಿದು ಪಯಣ ಮುಂದುವರಿಸಿದ. ನಡೆದೂ ನಡೆದು ಊರಿಗೆ ಬೆಸೆದಿದ್ದ ಬಂಡಿ ಹಾದಿಗೆ ಬಂದಿದ್ದ. ಬಂಡಿಗಳು ಜಾಗಟಗೆರೆ ಮುಖವಾಗಿ ಹೋಗುತ್ತಿರುವ ಸದ್ದು.

ಹತ್ತಿರದಲ್ಲೇನಾದರೂ ಬೇಡರು ವಿಷಪೂರಿತ ಬಾಣಗಳನ್ನು ಹೆದೆಗೇರಿಸಿ ಹೊಂಚಿರಬಹುದೆಂದು ಪೊದೆಯಲ್ಲವಿತು ಬಿಸಿಯುಸಿರು ಬಿಟ್ಟ. ಅವನುಸಿರ ಬಿಸಿಗೆ ಕಂಪಿಸಿದ ನಾಗರವೊಂದು ನಿಧಾನವಾಗಿ ಪೊಟರೆ ಸೇರಿತು. ಮೈಗೆ ಗಿಡದ ರೆಂಬೆಗಳನ್ನು ಮುಡಿದು, ಗ್ರಾಮಕ್ಕೆ ಹತ್ತಿರದಲ್ಲಿದ್ದ ಶಂಖತೀರ್ಥದ ಬಳಿಗೆ ಬಂದ. ಅವನ ಮನಸ್ಸಿಗೆ ಮುದ ನೀಡಿತು ಆ ಸುಂದರ ದಿಟ್ಟ ಜಲಪಾತ. ಅದರ ಸಿಹಿ ಜಲ ಕುಡಿದು ಕೊರಕಲಲ್ಲಿ ವೇಷ ಬದಲಿಸಿಕೊಂಡು ನೀರೊಳಗಿಣುಕಿದ. ಅಸ್ಪಷ್ಟ ಪ್ರತಿಬಿಂಬ.

ದಾರಿ ಪಕ್ಕ ಅಶ್ವತ್ಥ ಮರದ ಕೆಳಗೆ ಪದ್ಮಾಸನ ಹಾಕಿ ಕಳ್ಳಗಣ್ಣಿಂದ ಹತ್ತಿರ ಬರುತ್ತಿದ್ದ ಸವಾರಿ ಬಂಡಿ ನೋಡಿದ. ನಿಂತ ಬಂಡಿಯಿಂದಿಳಿದ ಗೌಡ್ತಿ ವೈರಾಗ್ಯ ಮೂರ್ತಿಯ ತೇಜಸ್ಸಿಗೆ ಬೆರಗಾಗಿ ಧೀರ್ಘದಂಡ ನಮಸ್ಕಾರ ಸಲ್ಲಿಸಿದಳು. ಆಕೆಯ ಗಂಡನೂ ಅಷ್ಟೇ. ಕೆಲವು ತಿಂಗಳಲ್ಲಿ ಸಂತಾನ ಪ್ರಾಪ್ತಿರಸ್ತು ಅಂದ ಯುವ ಸನ್ಯಾಸಿ. ಅವರ ಒತ್ತಾಯಕ್ಕೆ ಮಣಿದು ಬಂಡಿ ಏರದೇ ಇರಲಿಲ್ಲ. ಸ್ಪರ್ಶಿಸುವ ಕಳ್ಳ ಸಡಗರದಲ್ಲಿದ್ದ ಗೌದರ ನಾದಿನಿಯ ಹಿಂಸೆಯನ್ನು ಅನಿವಾರ್‍ಯವಾಗಿ ಸಹಿಸಿಕೊಳ್ಳುತ್ತಲೇ ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ಚಕಚಕ ಉತ್ತರಿಸುತ್ತಾ ತಮ್ಮದು ಕಾಶಿ ಕಡೆ ಎಂದೂ ತಮಗೆ ಪಂಚಾಕ್ಷರಿ ಬೋಧಿಸಿದ ಚಿದಾನಂದಾವದೂತರಿಗೆ ದೇವಿಯೊಲುಮೆಯಾಗಿರುವುದೆಂದೂ ಅವರ ಉತ್ತರಾಧಿಕಾರಿಯಾದ ತಾವು ಅವರ ಅಪ್ಪಣೆ ಮೇರೆಗೆ ಕನಕದುರ್ಗೆಯ ದರ್ಶನಕ್ಕಾಗಿ ಉತ್ತರ ದೇಶದಿಂದ ನಡೆದು ಬಂದಿರುವುದಾಗಿ ಹೇಳಿದ.

ಮಾತಿನ ನಡುವೆ ಅಗಸೆ ಬಾಗಿಲು ಸಮೀಪಿಸಿತು ಬಂಡಿ. ಸುತ್ತ ಇಪ್ಪತ್ತು ಹಳ್ಳಿಗಳಿಂದ ತಾಯಿಯ ಒಕ್ಕಲುಮಂದಿ ತಂಡೋಪತಂಡವಾಗಿ ಬರತೊಡಗಿತ್ತು. ಕಪ್ಪು ಬಣ್ಣದ ಬೇಡರ ಕ್ರೂರ ಕಣ್ಣುಗಳು ಹೊನ್ನೂರಿನ ಸಿಂಹಕ್ಕಾಗಿ ಹುಡುಕಾಟ ನಡೆಸಿದ್ದವು. ಕಾಡು ಹಂದಿಯಂತಹ ಒಂದಿಬ್ಬರು ಬಂದು ಯುವ ಸನ್ಯಾಸಿಯನ್ನು ಅಪಾದಮಸ್ತಕ ದಿಟ್ಟಿಸಿದರು. ಇಲ್ಲಾವ ಸುಭದ್ರೆಯನ್ನಪಹರಿಸಲು ಬಂದಿರುವನೋ ಈ ಅರ್ಜುನ ಸನ್ಯಾಸಿ ಎಂದು ಅನುಮಾನಿಸುತ್ತಲೇ ಅಡಿಗೆರಗಿದರು.

ಹೊನ್ನೂರಿನವರು ಕರಿ ಹರಿಯುತ್ತಾರಂತೆ ಆಗ ಅದೆಷ್ಟು ರಕ್ತಪಾತವಾಗುವುದೋ? ತಾಯಿ ನಮ್ಮ ಹೆಂಡಿರು ಮಕ್ಕಳಿಗೆ ಅಪಾಯ ಸಂಭವಿಸದಂತೆ ನೋಡಿಕೋ….

ಹುಲಿಯೂರಿನ ಹಿರಿ ಜಮೀನ್ದಾರ ರಾಮಕೋಟಿ ಮತ್ತವನ ಲಘುಪರಿವಾರ ಇಳಿದುಕೊಳ್ಳಲು ಬೇಡರ ಮುಖಂಡ ದುರ್ಗೋಜಿಯೇ ಖುದ್ದು ಏರ್ಪಾಟು ಮಾಡಿದ್ದ. ಎಷ್ಟಿದ್ದರೂ ತಮ್ಮವರು ಕೊಲೆ, ಸುಲಿಗೆ ಮಾಡಿ ತರುವ ನಗ ನಾಣ್ಯವನ್ನು ಕೊಂಡುಕೊಳ್ಳುವ ಗಟ್ಟಿ ಕುಳಗಳ ಪೈಕಿ ರಾಮಕೋಟಿಯೂ ಒಬ್ಬನಲ್ಲವೇ? ಆದ್ದರಿಂದ ದುರ್ಗೋಜಿಯೇ ರಾಮಕೋಟಿ ಇಳಿದಿದ್ದ ಬಿಡಾರಕ್ಕೆ ಭೇಟಿಕೊಟ್ಟು ಸತ್ಕಾರ ಪರಾಮರ್ಶಿಸಿದ. ಹಾಗೆಯೇ ಯುವ ಸನ್ಯಾಸಿಯ ತೇಜಸ್ಸಿಗೆ ಬೆರಗಾಗಿ ಸ್ನಾನ, ಸಂಧ್ಯಾವಂದನೆಗೂ ಏರ್ಪಾಟು ಮಾಡಿದ. ಬರುವ ಶ್ರಾವಣ ಮಾಸದ ಪೂಜೆಯನ್ನು ತಮ್ಮ ಮನೆಯಲ್ಲೇ ನಡೆಸುವಂತೆ ವಿನಂತಿಸಿದ. ಇದರಿಂದ ಪರಮೇಶಿಗೆ ಮತ್ತಷ್ಟು ಪೇಚಿಗಿಟ್ಟುಕೊಂಡಿತ್ತು. ಪೆಟ್ಟಿಗೆ ಕಾಳಪ್ಪನ ಶಿಷ್ಯನಾಗಿ ಅನೇಕ ಬಯಲಾಟಗಳಲ್ಲಿ ಪಾತ್ರವಹಿಸಿದ್ದರಿಂದಲೇ ಪರಮೇಶಿಗೆ ಅತ್ಯುತ್ತಮವಾಗಿ ನಿಜ ಜೀವನದಲ್ಲಿ ನಟಿಸಲು ಸಾಧ್ಯವಾದದ್ದು. ಬರೀ ಬೇಡರದೊಂದೇ ಅಲ್ಲ ಕಾಟ. ಪರಸ್ಥಳದ ಯಾತ್ರಾರ್ಥಿಗಳಿಂದಲೂ ಒಬ್ಬೊಬ್ಬರದು ಒಂದೊಂದು ಬೇಡಿಕೆ.

ಮರುದಿನ ಬೆಳಿಗ್ಗೆ ಕಟುಕರ ನಡುವೆಯೇ ದೇವಿಗುಡಿಗೆ ಹೋಗಿ ತನ್ನಜ್ಜಿ ಕಟ್ಟಿರಬಹುದಾದ ಗಂಟೆಯನ್ನು ಬಾರಿಸಿ. ಧ್ಯಾನಾಸಕ್ತನಾದ.

“ತಾಯಿ ವೇಷ ಬದಲಿಸಿಕೊಂಡು ಬಂದೀನಿ ಅಂತ ಕ್ವಾಪ ಮಾಡ್ಕೋಬ್ಯಾಡ…. ನಿನ್ನ ತವರ ಮನಿ ಕಡೆಯೋನು ನಾನು. ನಿನ್ನ ಆಶೀರ್ವಾದ ನಿನ್ನ ಹೊನ್ನೂರಿನ ಸಮಸ್ತ ಜೀವಗಳ ಮ್ಯಾಲೆ ಯವತ್ತೂ ಇರಲಿ”.

ವಿಶೇಷ ಪೂಜೆ ಸಲ್ಲಿಸಿ ವಿತರಿಸಿದ ತೀರ್ಥ ಪ್ರಸಾದವನ್ನು ಭದ್ರವಾಗಿ ಕಟ್ಟಿಕೊಂಡ. ಎಲುಬಿನ ಆಭರಣಗಳನ್ನು ಯಥೇಷ್ಟವಾಗಿ ಧರಿಸಿದ್ದ ಆದಿವಾಸಿಗಳ ಗಮಟೆಯಾಕಾರದ ಗೂಡುಗಳ ನಡುವೆ ಮಿಂಚಿನ ಚಿಲುಮೆಯಾಗಿದ್ದ ತನ್ನ ಕಣ್ಣುಗಳಿಂದ ನಕ್ಷೆ ತೆಗೆಯುತ್ತಾ ರಾಜ ಗಾಂಭೀರ್ಯದಿಂದ ನಡೆದ.

ಇಡೀ ರಾತ್ರಿ ಉದ್ದೇಶಿತ ನಿವಾಸದಲ್ಲಿ ಕಳೆಯುವುದು ನೀರಸವೆನಿಸಿತು. ಎರಡನೇ ಜಾವದಲ್ಲಿ ಕೋಣೆಯ ಗವಾಕ್ಷಿ ಮೂಲಕ ಹೊರ ಸುರುಗಿದ. ಚಂದಿರನಿಗಡ್ಡದಟ್ಟೈಸಿದ್ದ ಮೋಡಗಳಿಂದಾದ ಮಬ್ಬುಗತ್ತಲು ಸುತ್ತಲು ಬೆಳದಿಂಗಳೊಳಗೆ ಬೆಳೆದಿಂಗಳಂತಿದ್ದ ಅವನು ಸುಲಭವಾಗಿ ಮನೆಯಿಂದ ಮೆನಗೆ ಮರದಿಂದ ಮರಕ್ಕೆ ಜಿಗಿಯುತ್ತ ಅಗಸೆ ಬಾಗಿಲ ಕಡೆ ಸಾಗಿದ್ದನ್ನು ಕುಡಿದ ಅಮಲಿನಲ್ಲಿದ್ದ ಯಾರೂ ಗುರುತಿಸಲಿಲ್ಲ. ಅಗಸೆ ಬಾಗಿಲ ಮುಂದಿದ್ದ ಜೋಡು ಶ್ರೀಗಂಧದ ಮರದ ಮೇಲೆ ಅಡಗಿಕೂತ.

ಹೊತ್ತು ಹುಟ್ಟಿದ ಮೇಲೆ ಸಂಭ್ರಮ ನೂರು ಬಣ್ಣ ಪಡೆಯಿತು. ದೇವಿಯನ್ನು ಗಂಗೆಗೆ ವಿಜೃಂಭಣೆಯಿಂದ ಹೊರಡಿಸಿದಾಗ ಹೆಜ್ಜೆಗೊಂದೊಂದರಂತೆ ಬಲಿಕೊಟ್ಟರು. ಆ ನೀರವತೆಯಲ್ಲಿ ಕಾಡಜ್ಜ ಕೊಟ್ಟಿದ್ದ ತೈಲವನ್ನು ಲೇಪಿಸಿಕೊಂಡು ಉಸಿರಾಟದ ವ್ಯಾಯಾಮ ನಡೆಸಿ ಸ್ನಾಯುಗಳನ್ನು ಹುರಿಗೊಳಿಸಿದ.

ದೇವಿಗುಡಿಯಿಂದ ತಂದ ಕರಿಯನ್ನು ವಿಜೃಂಭಣೆಯಿಂದ ಮೆರೆಸಿಕೊಂಡು ಬಂದು ಅಗಸೆ ಬಾಗಿಲನ್ನು ಪ್ರವೇಶಿಸುವಾಗ ಬೇಡರು ಮಾಡಿದ ಸಾಂಪ್ರದಾಯಿಕ ನೃತ್ಯ ಪ್ರಕಾರದಿಂದ ಕೂಡಿತ್ತು. ಬಾಗಿಲು ಪ್ರವೇಶಿದ ಕರಿಯ ಸುತ್ತ ಒಳಗೊಳಗೇ ಆಯುಧಗಳನ್ನಲಂಕರಿಸಿಕೊಂಡು ನಿಂತಿರುವ ಬೇಡರ ಸಂಗತಿ ಗೊತ್ತಿಲ್ಲದವರೇ ಪಾಪಿ. ಸಾಲಂಕೃತ ಎತ್ತುಗಳನ್ನು ಓಡಿಸಿಕೊಂಡು ಬರುವ ಸ್ಪರ್ಧೆ ನಡೆಯುತ್ತಿದ್ದಾಗ ಪರಮೇಶಿ ಅಗಸೆ ಬಾಗಿಲ ಮೇಲೆ ಕುಂಬಿ ಮರೆಯಲ್ಲಿ ಅವಿತುಕೊಂಡ.

ಆ ಕರಿಯಿಂದಲ್ಲವೇ ಜಾಗಟಗೆರೆ ಬೇಡರು ಮಣ್ಣು ಮುಟ್ಟಿದರೂ ಹೊನ್ನಾಗುತ್ತಿರುವುದು…. ಹೊನ್ನಜ್ಜನ ಕಾಲಕ್ಕೇ ಮುಗಿಯಿತು ಹೊನ್ನೂರಿನವರು ಕರಿ ಹರಿಯುವುದು ಅಮಲಿಗೊಳಗಾದವರಂತೆ ಮಾತಾಡಿಕೊಳ್ಳುತ್ತಿರುವ ಜನ.

ಗಗನದ ಬಯಲಲ್ಲಿ ಜಾಗಟಗೆರೆ ಬೇರೆಗಿಡದ ಕೈಗೆ ಸಿಕ್ಕದೆ ತಪ್ಪಿಸಿಕೊಳ್ಳುತ್ತಿರುವ ಹೊನ್ನೂರಿನ ಪಾರಿವಾಳ ಕೇವಲ ಪಾರಿವಾಳವಲ್ಲ! ಅದು ಗರುಡ!

ಜಯಃ ನಮಃ ಪಾರ್ವತಿ ಹರಹರ ಮಾದೇವ… ಒಕ್ಕೊರಲಿನಿಂದ ಕೂಗುತ್ತಾ ಜನಸಮೂಹ ಮೈಮರೆತಿರುವ ಆ ಕ್ಷಣದಲ್ಲಿ ಕುಪ್ಪಳಿಸಿ ಕರಿಯನ್ನು ಬಂಧನದಿಂದ ಬೇರ್ಪಡಿಸಿ ಸೊಂಟಕ್ಕೆ ಕಟ್ಟಿಕೊಂಡಾಗಲೇ ಜನಕ್ಕೆ ಪರಿಸ್ಥಿತಿಯ ಅರಿವಾದದ್ದು!

ತಮ್ಮ ಕಣ್ಣುಗಳನ್ನು ತಾವು ನಂಬುವುದು ಹೇಗೆ! ನಂಬದೆ ಇರುವುದು ಹೇಗೆ!

ಶಹಬ್ಬಾಷ್… ಜನ ಮೈಮರೆತು ಕೂಗಿದರು ಮುಗಿಲಿಗೆ ಮುಟ್ಟುವಂತೆ ಬೇಡರು ಆಯುಧಗಳನ್ನು ಹಿಡಿದು ಮುನ್ನುಗ್ಗಿದರು ಬಿರುಗಾಳಿಯಂತೆ. ಆದರೆ ಹೊನ್ನೂರಿನ ತಾರುಣ್ಯದ ಹುಲಿ ಬೇಟೆನಾಯಿಗಳಂಥ ಬೇಡರ ಕೈಗೆ ಸಿಲುಕದೆ ಬಾಣಕ್ಕಿಂತಲೂ ವೇಗವಾಗಿ ಸಾಗಿತ್ತು ಮುಂದಕ್ಕೆ.

ಊರು ದಾಟಿ ಮಾರಿಕಣಿವೆಯ ಸನಿಹಕ್ಕೆ ಬಂದಿರಬಹುದು. ಅಷ್ಟರಲ್ಲಿ ಸಾಕ್ಷಾತ್ ದುರುಗೋಜಿ ಬಿಟ್ಟ ಬಾಣ ರವ್ವನೆ ಬಂದು ಪರಮೇಶಿಯ ಬಲಿಷ್ಟ ತೊಡೆಗೆ ಆಳವಾಗಿ ನೆಟ್ಟಿಬಿಟ್ಟಿತು. ಅದನ್ನು ಕಿತ್ತೆಸೆದು ಅಸದಳ ಬೇನೆ ನುಂಗಿಕೊಂಡು ಬೂರುಗದ ಮರಗಳ ಮರೆಗೆ ಓಡಿದ್ದ. ಹಿಂದೆ ಹತ್ತಾರು ಹಸಿದ ಬೇಟೆನಾಯಿಗಳು ಬೊಗಳುತ್ತಿರುವ ಬಯಾನಕ ಸದ್ದು. ತಡಮಾಡದೆ ಹತ್ತಿರದ ಗೋಡಂಬಿ ತೋಟಕ್ಕೆ ನುಗ್ಗಿ, ಹುಲ್ಲು ಬಣವೆಯೊಳಗೆ ಅವಿತು ಕೂತ.

ದುರ್ಗೋಜಿಯ ನೇತೃತ್ವದ ಮುಂಗೋಪದ ಹೆಡ್ಡಪಡೆ ಹ್ಹಾ… ಹ್ಹೂ… ಎಂದರಚುತ್ತ ಕಾಡೊಳಕ್ಕೆ ನುಗ್ಗಿ ಮರೆಯಾಯಿತು.

ರಕ್ತ ಸುರಿಯದಂತೆ ಎಷ್ಟೊತ್ತು ಕೈಲಿ ಬಿಗಿದಿಡಲು ಸಾಧ್ಯ. ಬಟ್ಟೆಗಾಗಿ ತಡಕಾಡುತ್ತಿದ್ದಾಗ ಕೋಮಲ ಹಸ್ತವೊಂದು ಒಳಹರಿದು ತನ್ನನ್ನು ಸ್ಪರ್ಶಿಸಿದಾಗ ಗಾಬರಿಯಾದ ಪರಮೇಶಿ. ಮಂತ್ರಮುಗ್ಧನಾಗಿ ಹೊರಬಂದು ನೋಡುತ್ತಾನೆ…. ಅಪೂರ್ವ ಸೌಂದರ್ಯದ ಸಾಕಾರಮೂರ್ತಿ ಆಕೆಯೂ ಅಷ್ಟೆ. ಪರಸ್ಪರರ ಕಣ್ಣುಗಳಲ್ಲಿ ಪರಸ್ಪರರು ಒಂದುಕ್ಷಣ ಕರಗಿ ಹೋದರು!

ಮರುಕ್ಷಣ ಎಚ್ಚೆತ್ತ ಆ ಕೋಮಲೆ ಬಣವೆಯ ಹಿಂಭಾಗದ ಗುಟ್ಟಾದ ಗೂಡಿಗೆ ಕರೆದೊಯ್ದಳು. ಅದಾವುದೋ ಸೊಪ್ಪಿನ ರಸ ಹಿಂಡಿ ಸೆರಗು ಹರಿದು ಗಾಯಕ್ಕೆ ಬಿಗಿಯಾಗಿ ಬಟ್ಟೆ ಬಿಗಿದಳು.

ಎಷ್ಟು ಧೈರ್ಯ ನಿಂಗೆ… ನಮ್ಮ ಬೇಡರಂದ್ರೆ ಏನ್ತಿಳ್ಕಂಡೀಯಾ… ಹುಲಿಯನ್ನೇ ಸಿಗಿದು ತೋರಣ ಕಟ್ಟೋರು ತನ್ನ ಮಾತಿಗೆ ಮುಗುಳ್ನಕ್ಕ ಅವನು ಮತ್ತಷ್ಟು ಆಕರ್ಷಕವಾಗಿ ಕಂಡ ಆಕೆಗೆ.

ಮತ್ತೆ ಹತ್ತಿರದಲ್ಲೆಲ್ಲೋ ಹೆಜ್ಜೆ ಸಪ್ಪಳ ಕೂಡಲೆ ಅವನು ಅವಿತಿದ್ದ ಗೂಡಿನ ಮೇಲೆ ಕಲ್ಲು ಚಪ್ಪಡಿ ಎಳೆದು ಅದರ ಮೇಲೆ ನಿಂತು ಕೈಯಲ್ಲಿ ಕಂಚಿನ ಭರ್ಜಿ ಝಳಪಿಸಿದಳು. ಸಂಜೆಯ ಸಮಯದಲ್ಲೂ ನಗುವ ಸೂರ್ಯ…

ಅಷ್ಟರಲ್ಲಿ ದುರ್ಗೋಜಿ ಪಡೆಯೊಂದಿಗೆ ತೋಟದೊಳಗೆ ನುಗ್ಗಿದ….

“ಕನಕಾ… ನೀನಿಲ್ಲಿ!” ಬೇಟೆಯನ್ನರಸುವ ಕ್ರೂರ ಮೃಗದಂತೆ ಸುತ್ತ ಕಣ್ಣಾಡಿಸಿದ ದುರ್ಗೋಜಿ.

ಅಪ್ಪಾ…. ಆ ಹೊನ್ನೂರಿನೋನು ನನ್ ಕೈಯ್ಗೆಸಿಕ್‌ಬೇಕಾಗಿತ್ತು ನೋಡು… ಕೊಚ್ಚಿ ಕೊಚ್ಚಿ ಹಾಕ್ತಿದ್ದೆ. ಕೃತಕ ಕೋಪದಿಂದ ಆಕೆಯ ದುಂಡು ಮುಖ ಕೆಂಡ ಸಂಪಿಗೆಯಾಯಿತು.

ದುರ್ಗೋಜಿಗೆ ಹೆಮ್ಮೆ ಎನಿಸಿತು ಮಗಳ ಮಾತು ಕೇಳಿ; ಸಾಕ್ಷಾತ್ ಚಾಮುಂಡಿಯಂತೆ ಗೋಚರಿಸಿದಳು, ತಂದೆಯ ಕಣ್ಣಿಗೆ.

ಬೇಡರು ಇಡೀ ತೋಟವನ್ನೆಲ್ಲ ಜಾಲಡಿದರು…. ಬೇಟೆಯ ಸುಳಿವು ಸಿಗಲಿಲ್ಲ…. ದೂರದಲ್ಲೆಲ್ಲೋ ನಾಯಿಗಳ ಬೊಗಳೂ….

“ಕನಕಾ… ಆ ಬೇಟೆನಾ ನಾವು ಮುಗಿಸ್ತೀವಿ…. ನೀನು ಮನೆಗ್ಹೋಗು!” ದುರ್ಗೋಜಿ ಪಡೆಯೊಡನೆ ಮತ್ತೆ ಕಾಡೊಳಗೆ ಮಾಯವಾದ.

ತಡಮಾಡದೆ ಗೂಡಿನಿಂದ ಅವನನ್ನು ಹೊರಕ್ಕೆಳೆದು ಕೈಗೆ ಕಂಚಿನ ಥಳಥಳ ಭರ್ಜಿಕೊಟ್ಟು ತನ್ನ ಬಟ್ಟಲುಗಂಗಳಿಂದ ದಿಟ್ಟಿಸಿದಳು…. ತಕ್ಕ ಪ್ರಮಾಣದ ಪುರುಷಾಕೃತಿಯನ್ನು ಹೃದಯದ ತುಂಬಾ ತುಂಬಿಕೊಂಡಳು. ಪ್ರಾಣಾಪಾಯದಲ್ಲೂ ಕುಡಿ ಮೀಸೆ ಕೆಳಗೆ ಅಳಿರುವ ಮುಗುಳು ನಗು! ಇಂಥ ಧೈರ್ಯ ಸಿಂಹಕ್ಕೂ ಇರಲಾರದು.

ಅಂಜುತ್ತಾ ಅಳುಕುತ್ತಾ ನೀಳ ಬೆರಳುಗಳಿದ್ದ ಆಕೆಯ ಮುಂಗೈ ಸ್ಪರ್ಶಿಸಿದ. ಕಣ್ಣುಗಳು ಒದ್ದೆಯಾಗುವಷ್ಟು ಅನಿರ್ವಚನೀಯ ಅನುಭವ….!

ಹತ್ತರಿದ ಸಾಗುವಾನಿ ಮೇಲೆ ತಲಿಬ್ಯಾನಿ ಎದ್ದು ಅಳುತ್ತಿದ್ದ ನವಿಲು ಬಣ್ಣದ ಪಕ್ಷಿಯೊಂದು ನಗುತ್ತಾ ಮತ್ತೊಂದು ಮರಕ್ಕೆ ಪುಟಿದು ಓಡಿಹೋಯಿತು.

ತನ್ನ ಮುಂಗೈ ಮೇಲೆ ಬಿಂದು ಹನಿದ ಅವನ ರೆಟ್ಟೆ ಹಿಡಿದು ತೋಟದ ಮೂಲೆಗೆ ಕರೆದೊಯ್ದು ಕಿರಿದಾದ ಹಾದಿ ತೋರಿಸಿದಳು! ಆಕೆಗೆ ಕೃತಜ್ಞತೆ ಹೇಳುವುದು ಹೇಗೆ? ತಡವರಿಸಿದ ಅಲ್ಲೇ ಬೇಲಿಯಲ್ಲಿ ತಮಗೆಂದೇ ಅರಳಿದ ಹೂವು ಕಿತ್ತು ಆಕೆಯ ರೇಶಿಮೆ ನುಣುಪಿನ ಮುಡಿಗಿರಿಸಿದ. ದೃಷ್ಟಿಯ ಸೆರೆ ಬಿಡಿಸಿಕೊಂಡು ತಂಗಾಳಿಯಂತೆ ಮರೆಯಾದ.

-೩-

ಅವನು ಬರುವ ದಿಕ್ಕಿನಲ್ಲಿ ಗಾಳಿಯನ್ನೂ ತೊರೆದು ಕೂತಿದ್ದ ಹೊನ್ನೂರಿನ ಗಂಡು ಹೆಣ್ಣುಗಳೆಲ್ಲ ತಮ್ಮ ದೃಷ್ಟಿಗನತಿ ದೂರದಲ್ಲಿ ಪರಮೇಶಿ ನದಿಗೆ ಧುಮುಕಿದ್ದು ಕಂಡೊಡನೆ ಹೋ! ಎಂದು ಹರ್ಷೋದ್ಗಾರ ಮಾಡಿದರು.

ಮೊಸಳೆ ದವಡೆಗೆ ಸಿಲುಕದೆ ವೇಗವಾಗಿ ಈಜಿ ದಡ ಸೇರಿ ಅವನನ್ನು ಎಲ್ಲರೂ ಅಪ್ಪಿಕೊಂಡರು. ಎತ್ತಿಕೊಂಡರು…. ತೆರೆದ ಬಾಯಿಯ ಮೊಸಳೆ ನಿರಾಸೆಯಿಂದ ನಿಟ್ಟಿಸಿತು.

ಗ್ರಾಮದ ಶಾಮಲವರ್ಣ ತರುಣಿಯರು ಹೂವಿನಾರತಿ ಬೆಳಗಿದ ಮೇಲೆ ಮೆರವಣಿಗೆ ಮೂಲಕ ಅವನನ್ನು ಊರೊಳಗೆ ಕರೆದೊಯ್ದರು….

ಜಾಗಟಗೆರೆಯಿಂದ ಕರಿ ತಂದ ದೀರಾ ನಿನಗಾರು ಸರಿ!

ಸರಿ ಎಂದವರ ಹಲ್ಲು ಮುರಿ! ಬಹುಪರಾಕ್! ಜನ ಒಕ್ಕೊರಲಿನಿಂದ ಕೂಗಿದರು, ಮುಗಿಲಿಗೆ ಮುಟ್ಟುವಂತೆ. ಇಂಥ ಹಬ್ಬದ ವಾತಾವರಣ ಇಪ್ಪತ್ತೈದು ವರ್ಷಗಳ ನಂತರ ನಾವು ನೋಡುತ್ತಿರುವುದು!

“ಬೇ ನಿಂಗವ್ವಾ… ಇವ್ನು ನಿನ್ ಮೊಮ್ಮಗ ಮಾತ್ರ ಅಲ್ಲ… ಇವತ್ನಿಂದ ಇಡೀ ಊರಿನ ಮಗ ಇವ್ನು. ಇವ್ನ ಯೋಗ ಕ್ಷೇಮ ಇಡೀ ಗ್ರಾಮಕ್ಕೆ ಸೇರಿದ್ದು….” ಗ್ರಾಮದ ಸಮಸ್ತ ಹಿರಿಯರ ಪರವಾಗಿ ನುಡಿದ ಹೊನ್ನಜ್ಜ, ಅಲ್ಲಿಂದ ಮನೆಗೆ ಹೋದ ಕೂಡಲೆ ವೀರಗಲ್ಲಿನ ರಚನೆಯಲ್ಲಿ ತೊಡಗಿದ್ದ ಶಿಲ್ಪಿ ಮಾನಪ್ಪಾಚಾರಿ ಕೈಗೆ ಸಾಕಷ್ಟು ಹಣಕೊಟ್ಟು ಸವಾರಿ ಬಂಡಿ ಕಟ್ಟಿಸಿ ಪೃಥ್ವೇಶ್ವರಕ್ಕೆ ಮರಳಿಸಿದ.

ಆವತ್ತಿನಿಂದ ಗ್ರಾಮದ ಕಣ್ಮಣಿಯಾದ ಪರಮೇಶಿ ತನ್ನನ್ನು ಬದುಕಿಸಿದ ಕನಕಳ ಧ್ಯಾನದಲ್ಲಿ ಮಂಕಾದ… ಈ ಎಲ್ಲ ಗೌರವ; ಸಡಗರ ಸಂಭ್ರಮ ಆಕೆಗೇ ಸಲ್ಲಬೇಕು! ಇದನ್ನು ಹೊನ್ನೂರಿನವರಿಗೆ ಬಿಡಿಸಿ ಹೇಗೆ ಹೇಳುವುದು!… ಶಾಮಲ ವರ್ಣದ ತರುಣಿಯರ ತುಂಬಿದೆದೆಯಲ್ಲಿ ಪ್ರೇಮದ ನೊರೆವಾಲು ಉಕ್ಕಿ ಹರಿಯತೊಡಗಿದ್ದನ್ನು ಅವನು ಎಡಗಣ್ಣಿಂದ ನೋಡಲೂ ಸಿದ್ಧನಿರಲಿಲ್ಲ.

ಎಲ್ಲರ ಹಾಗೆ ಕೆಲಸ ಮಾಡಲು ಅವನನ್ನು ಯಾರೂ ಬಿಡಲಿಲ್ಲ. ಎಲ್ಲ ಕೆಲಸವನ್ನು ತಾವು ಮಾಡುತ್ತೇವೆ ಎನ್ನುವವರೇ. ಕೂತುಂಡು ಸುಖವಾಗಿರೆಂದು ಹೇಳುವವರೇ ಎಲ್ಲ. ಆದರೆ ದಿನನಿತ್ಯ ಬೆವರು ಹನಿದು ಅನುಭವವಿರುವವನಿಗೆ ಆಸ್ಥೆ ಅಕ್ಕರೆ ಹಿಂಸೆ ಎನ್ನಿಸಿತು. ಇಡೀ ಗ್ರಾಮ ತನ್ನ ಪಾಲಿಗೆ ಚಿನ್ನದ ಪಂಜರವೆನಿಸಿತು.

ಜಾಲಿ ಕಡಿದರೆ ಕೆಚ್ಚು, ಚೆಂಬು ಕಡಿದರೆ ಮೆಚ್ಚು.

ನನ್‌ಗಲ್ಲವ ಕಡಿದರೆ ಬೆಲ್ಲದ ರುಚಿಯೋ…

ಬಾರೋ ಬಾ ತೋಟಕ್ಕೋಗೋಣ… ಎಂದು ಪದ ಹಾಡುವ ಶಾಮಲ ವರ್ಣದ ತರುಣಿಯರ ಕಾಟವಂತೂ ಹೆಚ್ಚಾಯಿತು. ಅವನಿಗೆ ಅವರಿಂದ ಬಿಡಿಸಿಕೊಂಡು ಹುಡುಕಾಡಿ ಅದು ಇದು ಕೆಲಸ ಮಾಡುವವನು ಬೇಸರವಾದರೆ ತನ್ನ ಜೀವನದ ಗೆಳೆಯರಾದ ಪಾರಿವಾಳಗಳನ್ನು ಎದುರಿಗೆ ಹರಡಿಕೊಂಡು ಕೂಡುವನು. ತಾನೂ ಹಿಂದಿನ ಜನುಮದಲ್ಲಿ ಪಾರಿವಾಳವಾಗಿದ್ದೇನೇನೋ ಎಂದು ಅನುಮಾನಿಸುತ್ತಾ ಅವುಗಳೊಂದಿಗೆ ತನ್ಮಯನಾಗುವನು.

ಆರಿದ್ರ ಉದುರಿ ನೆಲ ಬಾಣಂತಿಯ ಕಿಬ್ಬೊಟ್ಟೆಯಂತೆ ಮೆತ್ತಗಾಗಿದ್ದ ಮಧ್ಯಾಹ್ನ ಗಗನದಿಂದ ಅರ್ಜುನ ಕಂಡು ಬಣ್ಣದ ಹೆಣ್ಣು ಪಾರಿವಾಳದೊಂದಿಗೆ ಇಳಿಯಿತು. ಹೊಸ ಪಾರಿವಾಳವನ್ನು ಎಲ್ಲರೂ ಪ್ರೀತಿಯಿಂದ ಸ್ವಾಗತಿಸಿ ತಲೆ ನೇವರಿಸಿದರು. ಏನಾದರೊಂದು ತಿನ್ನಲು ಕೊಡುತ್ತ ಪ್ರೀತಿ ಪ್ರಕಟಿಸತೊಡಗಿದರು. ಅದರಲ್ಲೂ ತರುಣಿಯರಂತೂ ಅಲ್ಲೇ ಠಿಕಾಣಿ ಹೂಡಿದರು. “ಯಾವುರಮ್ಮಣ್ಣಿನಿಂದು” ಎಂದು ಮೆಳ್ಳೆಗಣ್ಣಿನ ಸಾವಿತ್ರಿ ಕೇಳಿದರೆ ನೀಳಾಯದ ನೀಲಾ “ನಮ್ಮ ಅರ್ಜುನನ್ನ ಪ್ರೇಮಿಸಿ ಓಡಿ ಬಂದಿದ್ದೀಯ ಕಳ್ಳಿ” ಎಂದು ಪರಮೇಶಿ ಕಡೆ ನೋಡಿ ತುಂಟ ನಗು ಚೆಲ್ಲುವಳು.

“ಅಯ್ಯೋ ಪೆದ್ದಮ್ಮಗಳೇ ಈ ಚಲುವೇನಾ ಜಾಗಟಗೆರೆ ದುರ್ಗೋಜಿಯ ಖಾಸಾ ಗೂಡುಗಳಿಂದ ಹಾರಿಸಿಕೊಂಡು ಬಂದಿದ್ದೀನಿ: ಅರ್ಜುನನೇ ಮುಂದೆ ಬಂದು ಗುಕ್ ಗುಕ್ ಎಂದು ಪಕ್ಷಿಭಾಷೆಯಲ್ಲಿ ಹೇಳಿ ಮೀಸೆ ತೀಡಿಕೊಂಡಿದ್ದು ಹುಲುನರರಿಗೆ ಅರ್ಥವಾಗುವುದಾದರೂ ಹೇಗೆ!

ಎಲ್ಲರೂ ಸೇರಿ ವೆಂಕಟಾಚಲ ಶಾಸ್ತ್ರಿಗಳನ್ನು ಕರೆದುಕೊಂಡು ಬಂದು ಚಲುವೆಗೆ ಚಿತ್ರಾಂಗದಾ ಎಂದು ಅಮಿತೋತ್ಸಾಹದಿಂದ ನಾಮಕರಣ ಮಾಡಿಸಿದರು. ನಿಲುವಂಜಿ ಗುರುವ ಸಂತಸದಿಂದ ತಂಬಿಟ್ಟು ಉಂಡೆಗಳನ್ನು ವಿತರಿಸಿದ.

ತನ್ನ ಅರ್ಜುನ ತನ್ನ ಮೇಲೆ ಸವತಿಯ ತರಬಹುದೆ! ಹೀಗೆ ಯೋಚಿಸುತ್ತ ಸುಭದ್ರೆ ಜೋಲು ಮೋರೆ ಮಾಡಿ ಮೂಲೆ ಹಿಡಿಯಲಿಲ್ಲ. ಸವತಿ ಮೇಲೆ ಬಿದ್ದು ಆಕೆಯ ಸುಂದರ ಪುಕ್ಕ ಕಿತ್ತು ಬರುವಂತೆ ಕಚ್ಚಿ ರಂಪಾಟ ಮಾಡಿತ್ತು. ಇಬ್ಬರ ಹೆಂಡಿರ ಕಾಟದಿಂದ ಬೇಸತ್ತು ಅರ್ಜುನ ಹುಸಿ ಮುನಿಸು ತೋರಿ ಚಾವಡಿ ಮೇಲೆ ಕೂಡ್ರುವುದು. ಆಗ ಸುಭದ್ರಾ ಚಿತ್ರಾಂಗದಳೊಂದಿಗೊಡಗೂಡಿ ಹಾರಿಹೋಗಿ ಪತಿರಾಯನನ್ನು ರಮಿಸಿ ಗೂಡಿಗೆ ಕರೆತರುವವು.

ಅವುಗಳದು ಎಂಥ ಅನ್ಯೋನ್ಯತೆ! ಇಂಥ ಅರ್ಥವತ್ತಾದ ದಾಂಪತ್ಯ ಹುಲುನರರಿಂದ ಸಾಧ್ಯವೆ! ತಾನೂ ಪಕ್ಷಿಯಾಗಿದ್ದರೆ ಕನಕಳನ್ನು ಕರೆತರದೆ ಬಿಡುತ್ತಿದ್ದೆನೇ!….

ಪಾರಿವಾಳಗಳೆದುರು ತಾಸುಗಟ್ಟಲೆ ಮೈಮರೆತು ಕೂಡ್ರುತ್ತಿದ್ದ ತನ್ನ ಪ್ರೀತಿಯ ಮೊಮ್ಮಗನನ್ನು ನಿಂಗಜ್ಜಿ ಬಲವಂತದಿಂದ ಅಡುಗೆ ಮನೆಗೆ ಕರೆದೊಯ್ದು ಸಣ್ಣಕ್ಕಿ ಬಾನಕ್ಕೆ ಕಪಿಲೆಯ ಕೆನೆ ಮೊಸರು ಕಲೆಸಿ ತುತ್ತು ಮಾಡಿ ತಿನ್ನಿಸುವುದು….

ಮತ್ತೆ ಸೂರ್ಯ ಪಶ್ಚಿಮಕ್ಕೆ ವಾಲಿದನೆಂದರೆ ಅಲಕನಂದಿಯ ದಡಕ್ಕಿರುವ ಬೆಳ್ಳಿ ಮರಡಿ ಏರಿ ಜಾಗಟಗೆರೆ ದಿಕ್ಕಿನತ್ತ ದಿಟ್ಟಿಸುತ್ತ ಕೂಡ್ರುತ್ತಿದ್ದ ಪರಮೇಶಿಗೆ ಸಂಜೆ ಆದದ್ದೂ ತಿಳಿಯುತ್ತಿರಲಿಲ್ಲ. ತನಗೆ ಮತ್ತೊಂದು ಜನುಮ ನೀಡಿದ ಕನಕ ತನ್ನ ಕಣ್ಣಿನಲ್ಲಿ ತುಂಬಿರುವಾಗ ಯಾವುದು ಹಗಲೋ! ಯಾವುದು ರಾತ್ರಿಯೋ….!

“ಇಂಥಲೆಲ್ಲಾ ಒಬ್ನೆ ಕೂಡ್ರೋದು ಅಪಾಯ” ಜೀವದ ಗೆಳೆಯ ಬಸವ ಪರಮೇಶಿಯನ್ನು ಬಲವಂತವಾಗಿ ಕರೆದೊಯ್ಯುತ್ತ ಕೇಳುವನು “ಯಾಕೋ ಇತ್ತೀಚ್ಗೆ ಒಂಥರಾ ಇರ್‍ತಿದ್ದೀ… ನಿನ್ ಮನಸ್ನಾಗೆ ಏನು ಇಟ್ಕೊಂಡಿದ್ದೀ… ಬಿಚ್ಚಿ ಹೇಳಬಾರ್‍ದೇನು!”

ಕೆಲ ದಿನಗಳವರೆಗೆ ಬಿಡದೆ ಪೀಡಿಸಿದ ಮಿತ್ರನಿಗೆ ಹೇಳದೆ ಇರಲು ಪರಮೇಶಿಗೂ ಸಾಧ್ಯವಾಗಲಿಲ್ಲ. ಪುಷ್ಕರಣಿಯ ಪ್ರಶಾಂತ ತಟಕ್ಕೆ ಮಿತ್ರನನ್ನು ಕರೆದೊಯ್ದು ತನ್ನನ್ನು ಪ್ರಾಣಾಪಾಯದಿಂದ ಕಾಪಾಡಿದ ದುರ್ಗೋಜಿಯ ಮಗಳನ್ನು ಯಾವತ್ತೂ ಸಂಗತಿಯನ್ನು ಬಿಡಿಸಿ ಹೇಳಿ ಗದ್ಗದಿತನಾದ ಪರಮೇಶಿ.

ಅದನ್ನು ಕೇಳಿ ಬಸವ ಗಾಬರಿಯಾದ…

“ಕರಿ ಸಂಗಡ ಹುಡ್ಗಿ ಹೃದಯವನ್ನೂ ಅಪಹರಿಸಿಕೊಂಡು ಬಂದಿದ್ದೀಯಲ್ಲಾ!?” ಮೇಲ್ನೋಟಕ್ಕೆ ಮಾತ್ರ ನಗಾಡಿದ… ಈ ವಿಷಯ ತಿಳಿದರೆ ದುರ್ಗೋಜಿ ಹೇಗೆ ತನ್ನ ಕರುಳಿನ ಕುಡಿಯನ್ನು ಚೆಲ್ಲುವನೋ! ಹಾಗೆಯೇ ಹೊನ್ನೂರಿನವರೂ ಸಹ!….

ಚಿತ್ರಾಂಗದೆ ಜಾಗಟೆಗೆರೆಯವಳೆಂದು ತಿಳಿದರೆ ಹೊನ್ನಜ್ಜ ಆಕೆಯನ್ನು ತನ್ನ ಮುದ್ದಿನ ಕಾಡು ಬೆಕ್ಕಿಗೆ ಬಲಿಕೊಡದೆ ಇರಲಾರ….

ಈ ವಿಷಯವನ್ನು ಗೋಪ್ಯವಾಗಿರಿಸಲು ನಿರ್ಧರಿಸಿದರು ಈರ್ವರು ಮಿತ್ರರು.

“ಬಸವಾ… ಹೇಗಾದ್ರೂ ಮಾಡಿ ಕನಕಳನ್ನು ಒಮ್ಮೆ ಭೇಟಿ ಮಾಡಿಸ್ತೀಯಾ” ಪ್ರಾಣಭಿಕ್ಷೆ ಬೇಡುವವನಂತೆ ಕೇಳಿದ ಪರಮೇಶಿ…

“ಧೈರ್ಯವಾಗಿರು ಆ ಕಾಲ ದೂರವಿಲ್ಲ” ಜೀವದ ಗೆಳೆಯನಿಗೆ ಜೀವ ತುಂಬಿದ ಬಸವ.

ಮರುದಿನವೇ ಆರಿದ್ರದ ಕೊನೇ ಪಾದ. ಬಿರುಮಳೆ ಸುರಿಯಿತು.

ನೀರಿನಿಂದ ತೋಯ್ದು ಒದ್ದೆಯಾದ ಗೂಡುಗಳನ್ನು ತೊಳೆಯುವುದರಲ್ಲಿ ತಲ್ಲೀನನಾಗಿದ್ದ ಮೊಮ್ಮಗನನ್ನು ಹುಡುಕಿಕೊಂಡು ನಿಂಗಜ್ಜಿ ಉಷ್ಟ್ರಪಕ್ಷಿಯಂತೆ ಬಂತು… “ಹೊನ್ನಜ್ಜ ಬಾ ಅಂತ ಹೇಳಿ ಕಳಿಸವ್ನೆ ಹೊಂಡು; ಬ್ಯಾಗ್ನೆ” ಮೈನಾ ಹಕ್ಕಿಯಂತೆ ಉಲಿಯಿತು. ಅದು ಅವನ ರಟ್ಟೆ ಹಿಡಿದು ಎಳೆದೊಯ್ಯಿತು. ಮೆನಗೆ ಬರೀ ಎಳೆದೊಯ್ಯಲಿಲ್ಲ ವಿಶೇಷ ಸ್ನಾನ ಮಾಡಿಸಿ ಇದ್ದೊಂದು ರೇಶಿಮೆ ಅಂಗಿ ತೊಡಿಸಿ, ದೋತರ ಉಡುಸಿತು. ಬರೀ ದೋತರವನ್ನಷ್ಟೇ ಉಡಿಸಲಿಲ್ಲ; ತಲೆಗೂದಲ್ಲನು ಒಪ್ಪ ಓರಣ ಮಾಡಿ ತಲೆಯ ಹಿಂದೆ ಪುಟ್ಟ ತುರುಬು ಕಟ್ಟಿತು. ಬರೀ ತುರುಬನ್ನಷ್ಟೇ ಕಟ್ಟಲಿಲ್ಲ. ಹಣೆಗೆ ವಿಭೂತಿ ಹಚ್ಚಿ ನಡುವೆ ದೊಡ್ಡದೊಂದು ಕುಂಕುಮ ಬೊಟ್ಟು ಇರಿಸಿತು. ಬರೀ ಬೊಟ್ಟನಷ್ಟೇ ಇರಿಸಲಿಲ್ಲ. ಅವನ ಕಿವಿಗಳಿಗೆ ಚಿನ್ನದ ಕಡುಪುಗಳನ್ನು ಚುಚ್ಚಿತು….

ಹೀಗೆ ಅಲಂಕೃತನಾದ ಅವನಿಗೆ ಉಸಿರಾಡುವುದಕ್ಕೂ ಅವಕಾಶ ಕೊಡದೆ ಅವನ ಪಾದಗಳಿಗೆ ಜಿರುಕು ಮೆಟ್ಟು ತೊಡಲು ಒತ್ತಾಯಿಸಿ ಬೀದಿ ನಡೆಸಿಕೊಂಡೊಯ್ಯಿತು.

“ಏಯ್ ವಿರುಪಾಕ್ಷಿ ನೀ ಬಾ… ಏಯ್ ಕಾಳವ್ವ ನೀ ಬಾರೇ… ಏಯ್ ಸಾಂಬಶಿವ ನೀ ಬಾ… ಏಯ್ ಪಾರವ್ವ ನೀ ಬಾರೇ…” ಜಿರಕೂ ಜಿರಕೂ ಸದ್ದು ಮಾಡುತ್ತಿದ್ದ ಮೊಮ್ಮಗನ್ನು ಗ್ರಾಮದ ಹೆಸರಾಂತ ಮುದುಕಿಯಾದ ತಾನು ಕರೆದೊಯ್ಯುತ್ತಿರುವುದನ್ನು ನೋಡುತ್ತಾ ನಿಂತವರ ಪೈಕಿ ಕೆಲವರನ್ನು ಆಯ್ದು ದಿಬ್ಬಣಕ್ಕೆ ಸೇರಿಸಿಕೊಂಡಿತು.

ಮುದುಕಿ ನೇತೃತ್ವದ ದಿಬ್ಬಣವನ್ನು ಹೊನ್ನಜ್ಜ ತಲಬಾಗಿಲಿಗೆ ಬಂದು ಸ್ವಾಗತಿಸಿ ಒಳಗೆ ಕರೆದೊಯ್ದು ಚೀಟಿ ಚಾಪೆಯ ಮೇಲೆ ಸುಖಾಸೀನರಾದ ಅವರೆಲ್ಲರಿಗೆ ಬೆಳ್ಳಿ ಕಪ್ಪುಗಳಲ್ಲಿ ಬೆಲ್ಲ ಯಾಲಕ್ಕಿ ಮಿಶ್ರಿತ ನೀರನ್ನು ಕೊಡಲಾಯಿತು.

ಒಂದೂ ತಿಳಿಯದೆ ನಾಚಿ ಮುದ್ದೆಯಾಗಿ ತಲೆ ತಗ್ಗಿಸಿ ಕೂತಿದ್ದ ಪರಮೇಶಿ ಮುಂದೆ ಹಾಸಿದ ಹಸಿರು ಬಣ್ಣದ ಸುಪ್ಪತ್ತಿಗೆ ಮೇಲೆ ದಕ್ಷಿಣ ಘಟ್ಟಗಳಲ್ಲಿ ಬಳೆವ ಕಿತ್ತಳೆ ವರ್ಣದ ಷೋಡಷಿಯನ್ನು ಮುತ್ತೈದೆಯರು ನಡೆಸಿಕೊಂಡು ಬಂದು ಕುಳ್ಳಿರಿಸಿದರು.

“ನಿಂಗಜ್ಜಿ…. ನೋಡು ನನ್ ಮೊಮ್ಮಗ್ಳು… ಹೇಗವ್ಳೆ” ತಗ್ಗಿಸಿದ್ದ ತಲೆ ಎತ್ತದಂತೆ ಕೂತಿದ್ದ ಪರಮೇಶಿಗೆ ತಿಳಿಯಲೆಂದೇ ಕವಳಮೆದ್ದು ಒದ್ದೆಯಾಗಿ ಹುರಿ ಮೀಸೆ ತಿರುವಿದ ಹೊನ್ನಜ್ಜ.

“ಇಬ್ಬರ ಗ್ರಹಗತಿಗಳು ಅದ್ಭುತವಾಗಿವೆ… ವಿವಾಹ ಯೋಗ ಕೂಡಿ ಬಂದಿವೆ” ವೆಂಕಟಾಚಲ ಶಾಸ್ತ್ರಿಗಳು ಸಂದರ್ಭವನ್ನು ಸರಳಗೊಳಿಸಿದರು.

“ದೇವ್ರೇ ಮಾಡಿಸಿದಂತಿದೆ ಜೋಡಿ” ದೀವಿಟಿಗೆ ಧ್ಯಾಮಜ್ಜ ನಾಲಗೆಯನ್ನು ಬೆಳಗಿಸಿದ. “ಏನಂತೀ ನಿಂಗವ್ವತ್ತೆ!” ಮುದುಕಿ ಕನ್ಯಾರತ್ನದ ಮುಂದೆ ಕೂತು ಮುಖದಲ್ಲಿ ಮುಖ ಇಟ್ಟು ನೋಡಿ, ಎರ್‍ಡೂ ಕೈಗಳಿಂದ ಚಟಚಟಾಂತ ಲಟ್ಟಿಗೆ ತೆಗೆಯಿತು…

ನೋಡೆಲೋ…. ನೀನು ಮದ್ವೆ ಆಗೋ ಹುಡ್ಗೀನಾ… ಒಳ್ಳೆ ಮಾಲಕ್ಷ್ಮೀಯಂಗವ್ಳೆ!” ಮೊಮ್ಮಗನ ಮುಖವನ್ನು ತನ್ನೆರಡು ಕೈಗಳಿಂದ ಮೇಲಕ್ಕೆತ್ತಿತು.

ತಲೆಯೆತ್ತಿ ನೋಡಿದ; ಹೌದು ! ಸಾಕ್ಷಾತ್ ಮಹಾಲಕ್ಷ್ಮೀಯೇ ಆದರೆ ಕನಕಳಲ್ಲವಲ್ಲ. ಮತ್ತೆ ತಲೆ ತಗ್ಗಿಸಿದ. ಮುಖದ ಬೆವರೊರೆಸಿಕೊಳ್ಳಲು ಅಂಗಿ ಎತ್ತಿದರೆಲ್ಲಿ ಅವಳಿಗೆ ಹೊಟ್ಟೆ ಕಾಣಿಸುವುದೋ ಎಂದು ಹೆದರಿದ.

ಅಜ್ಜನ ಒತ್ತಾಯಕ್ಕೆ ಹುಡುಗಿಯೂ ಅಷ್ಟೇ. ಹೂವಿಂದ ಭಾರವಾಗಿದ್ದ ತಲೆಯೆತ್ತಿ ಬಟ್ಟಲುಗಳಿಂದ ಬೆಳಕು ಚೆಲ್ಲಿದಳು. ಪರಮೇಸಿಯ ರೂಪ ಆಕೆಯ ಕಂಗಳ ಮೂಲಕ ಹೃದಯದ ತುಂಬಾ ಬಲವಾದ ಮುದ್ರೆಯೊತ್ತಿ ಬಿಟ್ಟಿತು.

“ಪರಮೇಶಾ… ನನ್ನೀ ಮೊಮ್ಮೊಗ್ಳು ಬರೀ ಹೆಸ್ರಲ್ಲಷ್ಟೇ ಲಕ್ಷ್ಮೀ ಅಲ್ಲ… ಇವಳಪ್ಪನ ಮುಂದೆ ಕುಬೇರ ಏನೂ ಅಲ್ಲ. ಮದುವೆಯಾದ ಮೇಲೆ ಸಾವಿರ ಕುದುರೆ ಸರದಾರನಾಗಿ ಆ ಜಗಟಗೆರೆ ಬೇಡರನ್ನು ಹೊಸಕಿ ಹಾಕುವಂತೀ…” ಹೊನ್ನಜ್ಜನ ಹಲ್ಲುಗಳು ಮಾಡಿದ ಸದ್ದು ಅಂಗಳದಲ್ಲಿ ನಿಂತಿದ್ದ ಭಿಕ್ಷುಕನಿಗೂ ಕೇಳಿಸಿತು. ಮುಖ ತಿಳಿಗೊಳಿಸಿಕೊಂಡು ಮತ್ತೆ ಹೇಳಿದ ‘ನಿನ್ ಪರಾಕ್ರಮ ಕೇಳಿ ತಾನೇ ಒಪ್ಪಿ ಬಂದಿದ್ದಾಳೆ. ನಿನ್ ಮದುವೆ ಆಗೋಕೆ…. ಏನಂತೀರಪ್ಪಾ ನೀವೆಲ್ಲಾ….’ ಹೊನ್ನಜ್ಜ ಕಂಚಿನ ಪೀಕದಾನಿಗೆ ಕವಳದ ರಸ ಉಗುಳಿದ.

ಕಾರ್ತಿಕ ಮಾಸದಲ್ಲಿ ಹೋಳಿಗೆ ಊಟ ಇಟ್ಟುಕೊಳ್ಳುವುದೆಂದು ನಿಷ್ಕರ್ಷೆಯಾಯಿತು. ಹೌದು… ಹೌದು… ಎಲ್ಲರೂ ತಲೆಯಾಡಿಸಿ, ಒಪ್ಪಿಗೆ ಸೂಚಿಸಿದರು.

ಸಂಜೆಯ ಊಟಕ್ಕೆ ಎಲ್ಲರಿಗೂ ಏರ್ಪಾಡು ಮಾಡಿಸಿದ್ದ ಹೊನ್ನಜ್ಜ ಅಲ್ಲಿಯೇ.

ಕಿಟಕಿಯ ಜರತಾರಿ ಪರದೆ ಮರೆಯಲ್ಲಿ ಲಕ್ಷ್ಮೀ ತನ್ನ ಕಡೆ ಕದ್ದು ನೋಡುತ್ತಿದ್ದುದರಿಂದ ಐದನೇ ತುತ್ತು ಗಂಟಲಿಗಿಳಿಯಲಿಲ್ಲ ಪರಮೇಸಿಗೆ. ಬಲವಂತಕ್ಕೆ ಮಣಿಯದೆ ಎಡೆಯಲ್ಲಿ ಕೈ ತೊಳೆದುಕೊಂಡಿದ್ದನಲ್ಲದೇ ಕುಂಟು ನೆಪ ಹುಡುಕಿ ಮೆಲ್ಲಗೆ ಹೊರ ಜಾರಿದ.

ಹೊನ್ನಜ್ಜನ ಮೊಮ್ಮಗಳನ್ನು ಕೈ ಹಿಡಿಯುವನೆಂದು ಗೊತ್ತಾದ ಮೇಲೆ ಪರಮೇಶಿ ಹೊರಗೆ ಅಪ್ಪಿತಪ್ಪಿ ಅಡ್ಡಾಡುವುದು ಕಷ್ಟವಾಯಿತು. ಕನಕ ಆಗಲೇ ಪರಮೇಶಿಯ ಹೃದಯಲ್ಲಿ ವಸಾಹತು ಸ್ಥಾಪಿಸಿದಳು. ಆದರೆ ಲಕ್ಷ್ಮೀ ಹೃದಯದ ಬಾಗಿಲು ಬಡಿಯುತ್ತಿದ್ದಳಷ್ಟೇ….

ಪರಮೇಶಿಯನ್ನು ನೋಡಿದ ಕ್ಷಣದಿಂದ ಲಕ್ಷ್ಮೀಯ ಮನಸ್ಸು ದೀಪದ ಸೊಡರಾಗಿತ್ತು. ಪರಮೇಶಿಯ ನೆನಪು ಅವಳ ದಿನಚರಿಯನ್ನು ಕೆಡಿಸುತ್ತಿತ್ತು. ಯಾವುದಾದರೂ ನೆಪ ಹುಡುಕಿ ಪರಮೇಶಿಯನ್ನು ಸಂಧಿಸತೊಡಗಿದಳು. ಇದಕ್ಕೆ ಗ್ರಾಮದ ಶ್ಯಾಮಲ ವರ್ಣದ ತರುಣಿಯರ ಬೆಂಬಲ ಎಂದ ಮೇಲೆ ಕೇಳಬೇಕೆ!… ಪರಮೇಶಿ ಎಲ್ಲಿದ್ದರೂ, ಏನು ಮಾಡಿದರೂ ಲಕ್ಷ್ಮೀಗೆ ಗೊತ್ತಾಗಿ ಬಿಡುತ್ತಿತ್ತು. ನಾಳೆ ಅವರಿಬ್ಬರೂ ಮದುವೆಯಾಗುವವರು ತಾನೇ! ಜನ ಕೂಡ ಅಪಾರ್ಥ ಕಲ್ಪಿಸದೆ ಸಹಕರಿಸತೊಡಗಿದರು… ಅವರಿಗೆಲ್ಲ ತಮ್ಮ ಪರಮೇಶಿ ಲಕ್ಷ್ಮೀ ಮದುವೆಯಾಗಿ ಸಾವಿರ ಕುದುರೆ ಸರದಾರನಾಗುವುದು! ಜಾಗಟಗೆರೆಯನ್ನು ಬಗ್ಗು ಬಡಿಯುವುದು ಅವರಿಗೆಲ್ಲ ಇದೇ ಕನಸು!…

ತನ್ನ ಹೃದಯದಲ್ಲಿ ಹೊಯ್ದಾಡುವ ಇಕ್ಕೆಲ್ಲದ ಪಗಡೆಗಳ ನಡುವೆ ಶಕ್ತಿ ಗುಂದಿರುವ ಸಂಗತಿ ಪರಮೇಶಿಗೆ ತಿಳಿದದ್ದು ಶ್ರಾವಣದಲ್ಲಿ ಬಸಂದೇವರ ಗುಡಿ ಪವುಳಿಯಲ್ಲಿ ಜೂಜುಗಾಯಿಯನ್ನು ಒಂದೇ ಏಟಿಗೆ ಗುದ್ದಿ ಪುಡಿ ಪುಡಿ ಮಾಡದಿದ್ದಾಗ ಲೀಲಾಜಾಲವಾಗಿ ಕಲ್ಲಿನ ಗುಂಡನ್ನು ಮೇಲೆತ್ತದಿದ್ದಾಗ!

ಇದರಿಂದ ಮನಸ್ಸಿಗಾದ ನೋವಿಗೋ! ಸುರಿವ ಜಡಿ ಮಳೆಯಲ್ಲಿ ಬೆಳ್ಳಿ ಮರಡಿಯ ಮೇಲೆ ಒಂದೆರಡು ತಾಸು ಕೂತ ಕಾರಣಕ್ಕೋ; ಮೈ ಬಿಸಿಯಾಗಿ ವಿಷಮಶೀತ ಜ್ವರ ಕಾಣಿಸಿತು ಪರಮೇಶಿಗೆ.

ಸುದ್ದಿ ಗೊತ್ತಾದರೆ ಊರಿಗೆ ಊರೇ ನೆರೆತು ತನ್ನ ಮೊಮ್ಮಗನ ನಿದ್ದೆ ಹಾಳು ಮಾಡುತ್ತಾರೆಂದು ನಿಂಗಜ್ಜಿ ಜ್ವರದ ಸಂಗತಿಯನ್ನು ಗುಟ್ಟಾಗಿರಿಸಿತು. ಸ್ಥಳೀಯ ವೈದ್ಯರ ಬದಲಿಗೆ ವೆಂಕಟಾಪುರದ ಅರಳೆಲೆ ಪಂಡಿತ ರಾಮಣ್ಣನನ್ನು ಸುತ್ತಿ ಬಳಸಿ ಗ್ರಾಮಕ್ಕೆ ಕರೆತಂದು ಬಸವ ಚಿಕಿತ್ಸೆ ಮಾಡಿಸಿದ ಸಂಗತಿಯನ್ನು ಎರಡು ದಿನಗಳಾದ ಮೇಲೆ ಪತ್ತೆ ಹಚ್ಚಿದಳು.

ತಲೆ ಮೇಲಿದ್ದ ಮಣ್ಣಿನ ಕೊಡವನ್ನು ದೊಪ್ಪನೆ ನೆಲಕ್ಕೆ ಕೆಡವಿ ಊಟ ಮಾಡುತ್ತಿದ್ದ ಲಕ್ಷ್ಮೀಯ ವಜ್ರದ ಓಲೆಗಳಿದ್ದ ಕಿವಿಯಲ್ಲಿ ಉಸುರಿದಳು. ತಲೆ ಸುತ್ತಿದಂತಾಗಿ ಆಕೆ ಮತ್ತೊಂದು ತುತ್ತು ಮುಟ್ಟುವುದಿರಲಿ, ಉಡುಪು ಲೆಕ್ಕಿಸದೇ ಊರಮ್ಮನ ಬಯಲ ಮುಂದಿದ್ದ ನಿಂಗಜ್ಜಿಯ ಮನೆ ಕಡೆ ಓಡಿದಳು. ಮನೆಯ ಹೆಂಚಿನ ಮೇಲೆ ವೈಶಂಪಾಯನ ಪಕ್ಷಿಯಂತೆ ಕೂತಿದ್ದ ಪಾರಿವಾಳಗಳೆಲ್ಲ ಸಂತೋಷದಿಮದ ಪುರ್‍ರನೆ ಹಾರಿಹೋದವು.

ಹಗ್ಗದ ವರಸಿನ ಮೇಲೆ ಅರೆ ನಿದ್ರೆಯಲ್ಲಿದ್ದ ಪರಮೇಶಿಯನ್ನು ನೋಡುತ್ತಲೇ ಆಕೆಯ ಕಣ್ಣುಗಳಿಂದ ನೀರು ದುಮ್ಮಿಕ್ಕದೇ ಇರಲಿಲ್ಲ. ತನ್ನೆದೆಯ ಹೂಗೂದಲ ಮೇಲೆ ಕಣ್ಣೀರಿನ ಸ್ಪರ್ಶಕ್ಕೆ ಕಣ್ತೆರೆದು ಲಕ್ಷ್ಮೀ… ನೀ… ನು… ಇಲ್ಲಿ… ಮೇಲೆದ್ದು ಕೂಡ್ರಲು ಯತ್ನಿಸಿದ. ಅವನನ್ನು ಹಾಗೇ ಹಾಸಿಗೆ ಮೇಲೆ ಒರಗಿಸಿದಳು.

“ಅಜ್ಜೀ… ನಿಮ್ ಪಾಲಿಗೆ ನಾನು ಏನೂ ಅಲ್ವೇನು! ಈ ವಿಷಯ ತಿಳಿಸ್ದೇ ಯಾಕೆ ಗುಟ್ಟಾಗಿಟ್ರೀ!?” ಗದ್ಗದಿತಳಾದ ಲಕ್ಷ್ಮೀಯನ್ನು ಸಂತೈಸಲು ಅಜ್ಜಿಯ ಬಾಯಿಯ ಬತ್ತಳಿಕೆಯಲ್ಲಿ ಮಾತುಗಳಿರಲಿಲ್ಲ. ಕಂಠ ಕಟ್ಟಿ ಆಕೆ ಹೊರಹೋದಳು. ನಾಳೆ ನೀವು ಗಂಡ ಹೆಂಡ್ತಿ ಆಗೋರು. ಏನಾದ್ರೂ ಮಾಡ್ಕಳ್ಳಿ! ಅಂತ ಗೊಣಗುತ್ತ…

ಪರಮೇಸಿಯ ಶುಶ್ರೂಷೆಯನ್ನು ಲಕ್ಷ್ಮೀ ತಾನು ವಹಿಸಿಕೊಂಡ ಕ್ಷಣದಿಂದ ಸುಮ್ಮನೆ ಕೂಡ್ರಲಿಲ್ಲ. ಹೊತ್ತು ಹೊತ್ತಿಗೆ ಕಷಾಯ ಕುಡಿಸುವುದು. ಅವನ ಬೆನ್ನು ಹಣೆಗೆ ಅಂಜನ ಲೇಪಿಸುವುದು! ಗಂಜಿ ಕಾಯಿಸುವುದು ಇತ್ಯಾದಿ.

ಹೊನ್ನಜ್ಜನೂ ಎರಡು ಮೂರು ಬಾರಿ ಬಂದು ಆರೋಗ್ಯ ಲಾಭ ವಿಚಾರಿಸಿಕೊಂಡು ಹೋದ.

ವಿಚಿತ್ರ ಪೇಚಿಗಿಟ್ಟುಕೊಂಡಿತು ಪರಮೇಶಿಗೆ.

ಲಕ್ಷ್ಮೀ ಅಪ್ರತಿಮ ಸುಂದರಿ ಅಷ್ಟೇ ಆಗಿರದೆ ವಾತ್ಸಲ್ಯ ಮೂರ್ತಿ ಎಂಬ ಬಗ್ಗೆ ಎರಡು ಮಾತಿಲ್ಲ. ಆದರೆ ಕನಕಳ ವಶವಾಗಿರುವ ಪರಮೇಶಿಯ ಹೃದಯ ಸ್ಪಂದಿಸುವುದಾದರೂ ಹೇಗೆ!…

ಶ್ರಾವಣದ ಮಧ್ಯಾಹ್ನ ಸಂಜೆಯನ್ನು ಹೋಲುತ್ತಿತ್ತು. ಊರ್‍ತುಂಬ ವಿಚಿತ್ರ ಮಂಪರು. ಎಲ್ಲರೂ ಅವರವರ ಮನೆ ಸೇರಿಕೊಂಡಿದ್ದರಿಂದ ಬೀದಿಗಳು ನಿರ್ಮಾನುಷವಾಗಿದ್ದವು. ಲಕ್ಷ್ಮೀ ಮುಟ್ಟಾಗಿ ಮೂಲೆ ಸೇರಿದ್ದರಿಂದ ಪರಮೇಶಿ ತಮ್ಮ ಮನೆ ಪಡಸಾಲೆಯಲ್ಲಿ ಕವಣಿಯೊಂದನ್ನು ಸಿದ್ದಪಡಿಸುವುದರಲ್ಲಿ ಮಗ್ನನಾಗಿದ್ದ. ಅವನೆದುರಿಗೆ ಅರ್ಜುನನೊಂದಿಗೆ ಸುಭದ್ರ ಮತ್ತು ಚಿತ್ರಾಂಗದೆಯರು ತೊಡಗಿದ್ದು ಜಗಳವೋ! ಸರಸವೋ! ದೇವರಿಗೇ ಗೊತ್ತು.

ಶಕುನದ ಹಕ್ಕಿ ನುಡಿತೈತೆ
ಕನಕ ಎಂಬ ಹಕ್ಕಿಬಿಕ್ಕಿ ಬಿಕ್ಕಿ ಅಳುತ್ತ ಕುಂತೈತೆ…
ಪಾರ್ವತೀ ಪತಿ ಸಂತೈಸು ಬಾರಯ್ಯ…ಠರ್‍ರ್‍… ಠರ್‍ರ್‍…

ಕೊರವಂಜಿ ಕಿನ್ನರಿ ನುಡಿಸುತ್ತ ಅಂಗಳದಲ್ಲಿ ಹಾಡುತ್ತಿರುವುದು ಕೇಳಿಸಿತು. ಕೆಲಸದಲ್ಲಿ ಕರಗಿದ್ದ ಅಜ್ಜಿ ಮುಂದಕ್ಕೆ ಹೋಗು ಎಂದೆರಡು ಮೂರು ಬಾರಿ ಗದರಿಕೊಂಡಿತು…. ಆದರೆ ಕೊರವಂಜಿ ಕನಕಾ ಎಂಬ ಹಕ್ಕಿ…. ಎಂದು ಜೋರಾಗಿ ಕೂಗಿತು ಮತ್ತೆ….

ಅದನ್ನು ಕೇಳಿದ ಪರಮೇಶಿಗೆ ಏನೋ ಹೊಳೆಯಿತು. ದಿಗ್ಗನೆ… ಓಯ್ ಕೊರವಂಜೀ ಬಾ ಇಲ್ಲಿ ಎಂದು ಕೂಗಿದ… ಆಗಲೆ ಮುಂದಿನ ಮನೆಗೆ ಹೋಗಿದ್ದ ಕೊರವಂಜಿ ಠುರ್‍ರ ಎಂದು ಬಂದಿತ್ತು. ಆಕೆಯನ್ನು ಮನೆಯ ಪಡಸಾಲೆಯಲ್ಲಿ ಕುಳ್ಳಿರಿಸಿಕೊಂಡು ಕನಕ ಎಂಬ ಹಕ್ಕಿ ಎಂದು ಕೂಗ್ತಿದ್ದೆಯಲ್ಲಾ?”… ಎಂದು ಆತುರದಿಂದ ಕೇಳಿದ. “ಏಯ್ ರಾಜಕುಮಾರ ಕನಕ ಎಂಬ ಹಕ್ಕಿಯ ಸರದಾರ ನೀನೇ ಏನು! ಠರ್‍ರ್‍” ಎಂದಿತು. ತೊಲೆಯ ಸಂದೂರದಲ್ಲಿದ್ದ ಎರಡು ಬೆಳ್ಳಿ ರೂಪೈಗಳನ್ನು ತಂದು ಸಾಲಂಕೃತಳಾಗಿದ್ದ ಕೊರವಂಜಿಯ ಮುಂದಿರಿಸಿ “ಅದೇನು ಬಿಡಿಸಿ ಹೇಳಿ ಪುಣ್ಯ ಕಟ್ಟಿಕೋ” ಎಂದು ದೀನನಾದ…

ಪ್ರೀತಿಯಿಂದ ಅವನ ಮೋರೆ ಸವರಿದ ಕೊರವಂಜಿ ಕುಪ್ಪಸದೊಳಗಿನ ಕರವಸ್ತ್ರ ತೆಗೆದು ಅವನ ಕೈಗಿರಿಸುತ. ಯಮಸಂಧಿ ಜಾತ್ರೇಲಿ ಕನಕ ಎಂಬ ಹಕ್ಕಿಗೆ ಬೆಂಡು ಬತ್ತಾಸು ಕೊಡಿಸುವಂತಿ ಇಟ್ಕೋ ಎಂದು ಬೆಳ್ಳಿರೂಪಾಯಿಗಳನ್ನು ಮರಳಿಸಿದ ಕೊರವಂಜಿ ತಾನು ಕನಕಳ ಜೀವದ ಗೆಳತಿ ಸುಂಕಲಿಯಾದ್ದರಿಂದ ಬೇಗನೆ ಎದ್ದು ಹೊರಹೊರಟಿತು ಮತ್ತೆ ‘ಶಕುನದ ಹಕ್ಕಿ’ ಎಂದು ಕೂಗುತ್ತ.

ಹಂದಿಬೇಟೆಗೆ ಹೋಗಿದ್ದ ಬಸವನನ್ನು ಹುಡುಕಿಕೊಂಡು ಪರಮೇಶಿ ಕಾಡಿಗೆ ಹೋದ. ಮಿತ್ರ ಎಲ್ಲೂ ಕಾಣಿಸದಿದ್ದಾಗ ಬೆಟ್ಟದ ಕೋಡುಗಲ್ಲನೇರಿ “ಎಲೇ ಗೆಣೆಕಾರ ಬಸವಾ… ನಾನು ನಿನ್ನ ಜೀವದ ಗೆಳೆಯ ಪರಮೇಶಿ ಕೂಗ್ತಾ ಇದ್ದೀನಿ… ಎಲ್ಲಿದ್ರೂ ಓಡಿ ಬರುವಂತವನಾಗಲೀ ಸಾರಥಿ ಅತಿ ಜಾಗ್ರತಿ” ಎಂದು ಹತ್ತು ಹದಿನೈದು ಸಾರಿ ಕೂಗಿದೇಟಿಗೆ ಕಾಡಿಗೆ ಕಾಡೇ ಅಲ್ಲಾಡಿತು. ಸ್ವಲ್ಪ ಹೊತ್ತಾದ ಮೇಲೆ ‘ಲೋ ಪರಮೇಶಿ’ ಎಂದು ಬಸವನ ಧ್ವನಿ ಕಾಡಿನಾಳದಿಂದ ಕೇಳಿ ಬಂತು. ಇನ್ನೂ ಸ್ವಲ್ಪ ಹೊತ್ತಿಗೆ ಅವನ ಆಕೃತಿ ಕಣಗಿಲೆ ಪೊದೆ ಪಕ್ಕ ಕಂಡದ್ದೇ ಪರಮೇಶಿ ಗುಂಡಿನಿಂದ ಗುಂಡಿಗೆ ಜಿಗಿಯುತ್ತ ಓಡಿ ಬಂದು ಮಿತ್ರನನ್ನು ತಬ್ಬಿಕೊಂಡು ನೆಲದ ಮುಳ್ಳುಕಲ್ಲು ಲೆಕ್ಕಿಸದೆ ಹುಲ್ಲು ಮೇಲೆ ಉರುಳಾಡಿದ.

ಸೊಂಟದಲ್ಲಿ ಬಚ್ಚಿಟ್ಟುಕೊಂಡಿದ್ದ ಬೆಲ್ಲದಕಣ್ಣೆಯನ್ನು ತೆಗೆದು ಏದುಸಿರುಬಿಡುತ್ತಿದ್ದ ಬಸವನ ಬಾಯಿಗೆ ತುರುಕಿದ ಮೇಲೆಯೇ ಕೊರವಂಜಿ ಕೊಟ್ಟ ಕರವಸ್ತ್ರ ತೆಗೆದು ಅವನ ಕೈಗಿತ್ತದ್ದು.

ಕಾಡಿನ ಜ್ಞಾನದ ಜೊತೆಗೆ ಅಕ್ಷರ ಜ್ಞಾನವನ್ನೂ ಬಲ್ಲ ಬಸವಗೆ ಕರವಸ್ತ್ರದ ಮೇಲಿದ್ದ ಕೆಂಪು ಬಣ್ಣದ ಅಸ್ಪಷ್ಟ ಗೆರೆಗಳು ಕೂಡಲೆ ಅರ್ಥವಾಗಲಿಲ್ಲ. ಕ್ರಮೇಣ ಅರ್ಥವಾಗುತ್ತಲೆ ಪರಮೇಶಿಯನ್ನು ತಬ್ಬಿಕೊಂಡು ‘ನಿನ್ನ ಕನಕ ನಿನ್ಗೆ ಮುಂದಿನವಾರ ಯಮಸಂಧಿ ಜಾತ್ರೀಲಿ ಸಿಕ್ತಾಳೆ ಮಿತ್ರಾ’ ಎಂದು ಕಿವಿಕಚ್ಚಿ ಪಿಸುನುಡಿದ. ಎಲ್ಲಿ ಗಿಡಮರಗಳು ಕೇಳಿಸಿಕೊಂಡು ಹೊನ್ನಜ್ಜಗೆ ತಿಳಿಸಿಬಿಡುವವೋ ಎಂಬ ಹೆದರಿಕೆಯಿಂದ.

-೪-

ನಂದಿಬೆಟ್ಟ, ಮುತ್ತೋಡಿ, ಮೊದಲ ಘಟ್ಟಗಳನ್ನು ಬಳಸಿ ಹೋದರೆ ಮಾತ್ರ ಹೊನ್ನೂರಿನಿಂದ ಯಮಸಂಧಿ ಏಳೆಂಟು ಗಾವುದದೂರ. ಯಮಸಂಧಿಯ ಮಾಂಕಾಳಿ ಸಿಡಿ ಆಡುವುದೆಂದರೆ ಜಾಗಟಗೆರೆ ಬೇಡರಿಗೆ ಆಟ. ಮನೆಗೊಂದು ಆಳಾದರೂ ಅಲ್ಲಿ ನೆರೆದಿರುತ್ತಾರೆ. ಆದ್ದರಿಂದ ಪರಮೇಶಿಯನ್ನು ಜೋಪಾನವಾಗಿ ಕರೆದೊಯ್ದು ಕರೆತರುವ ಜವಾಬ್ದಾರಿಯನ್ನು ಹೆಗಲಿಗೆ ಧರಿಸಿ ಬಸವ ಜಾತ್ರೆಗೆ ಎರಡು ದಿನಕ್ಕೆ ಮೊದಲು ಅಂದರೆ ಶನಿವಾರ ರಾತ್ರಿ ಒಂದು ಜಾವ ಕಳೆದ ಮೇಲೆ ಬಸರಕೋಡಿನ ಬಣಜಿಗರ ಸಣ್ಣಾಯನ ಎರಡು ಬಲಿಷ್ಠ ಕತ್ತೆಗಳನ್ನು ಹೊಡೆದುಕೊಂಡು ಬಂದು ಊರನೈರುತ್ಯಕ್ಕಿರುವ ಕನ್ನೀರವ್ವನ ಬಾವಿ ಪಕ್ಕದ ಖರ್ಜೂರದ ಮರಕ್ಕೆ ಕಟ್ಟಿದ್ದ. ಏಳೂರಿಗೆ ಕೇಳಿಸುವಂತೆ ಒದರುವಲ್ಲಿ ಹೆಸರಾದ ಅವುಗಳ ಬಾಯಿಗೆ ಭದ್ರವಾಗಿ ಹಗ್ಗಬಿಗಿದು ಕಟ್ಟಿದ್ದ. ನಿಜಕ್ಕೂ ಗಂಡ ಹೆಂಡತಿಗಳಾದ ಅವುಗಳು ಅಧಂಬರ್ಧ ರಾಸಲೀಲೆಗೆ ತೊಡಗಲು ಅನುವು ಮಾಡಿಕೊಟ್ಟು ಮಾಳಿಗೆ ಮೇಲೆ ಮಲಗಿದ್ದ ಪರಮೇಶಿಯನ್ನು ಎಬ್ಬಿಸಿಕೊಂಡು ಕೆಳಕ್ಕಿಳಿದ ಸದ್ದಾಗದಂತೆ. ಪಟ ಪಟ ರೆಕ್ಕೆ ಬಡಿಯುತ್ತ ಅರ್ಜುನ ಬಂದು ತನ್ನ ಹೆಗಲ ಮೇಲೆ ಕೂತಾಗ ಅಲ್ಲಿಂದಾವ ಉಲೂಪಿಯನ್ನು ಹಾರಿಸಿಕೊಂಡು ಬರಲು ಬೆಂಬತ್ತಿರುವುದೋ ಈ ರಸಿಕಲಲಾಮಣಿ ಎಂದು ಪರಮೇಶಿ ಗೊಣಗುತ್ತಲೆ ಕಳ್ಳಮಾರ್ಗದ ಮೂಲಕ ಬಾವಿ ತಲುಪಿ ನೋಡುತ್ತಾರೆ. ಕಟ್ಟಿದ ಜಾಗದಲ್ಲಿ ಕತ್ತೆಗಳಿಲ್ಲ. ಅಷ್ಟು ದೂರದಲ್ಲಿ ಓಡುತ್ತಿದ್ದ ಅವುಗಳನ್ನು ಹಿಡಿದು ತರುವ ಹೊತ್ತಿಗೆ ಬಸವನಿಗೆ ಸಾಕು ಸಾಕಾಗಿ ಹೋಯಿತು. ತಲಾ ಒಂದೊಂದು ಕತ್ತೆಯ ಮೇಲೆ ಕುತು ಪಯಣ ಬೆಳೆಸಿದರು.

ಅಮೃತಾಪುರದ ಕುಸ್ತಿ ಪಂದ್ಯದಲ್ಲಿ ಭಾಗವಹಿಸುವಾಗೊಂದೆ ಪರಮೇಶಿ ಕತ್ತೆ ಮೇಲೆ ಪಯಣಿಸಿದ್ದು, ಕಾಡಿನ ಅಂಚಿನಲ್ಲಿರುವ ಬಯಲುಸೀಮೆಯ ಯಮಸಂಧಿಯನ್ನು ಬಸವ ಎರಡು ಮೂರು ಬಾರಿ ನೋಡಿರುವುದರಿಂದ ಪ್ರಯಾಣ ನಿರಾತಂಕವಾಗಿ ಸಾಗಿತು.

ಎಳಸುಮೊಗ್ಗಿನ ಸೀರೆಯನ್ನುಟ್ಟು! ಕುಶಲಽದಿಂದಲೆ ಸಿಂಬಿಯ ಸುತ್ತಿ! ಹೆದರುತ್ತ ಬೆದರುತ್ತ ಇಳಿದಾಳಣ್ಣ! ಅವಳೊಂದೆಂದೆ ಮೆಟಿಗೆಯನ್ನು… ಎಂದು ಏರುದನಿಯಲ್ಲಿ ಬಸವ ಹಾಡಿದರೆ

ಊರಸುತ್ತ ಜ್ವಳಾಬಿತ್ತಿ,
ಜ್ವಾಳದ್ ಸುತ್ತ ಬೇಲೀ ನೆಟ್ಟು….,
ಜ್ವಾಳಾದೊಳ್ಗೆ ನಿಂತುಕೊಂಡು ತೋಳ ಬೀಸಿ ಕರೆಯುತ್ತಾಳೆ.
… ಎಂದು ಪರಮೇಶಿ ತುಂಬುಕಂಠದಿಂದ ಹಾಡಿದನು…. ಪಯಣದುದ್ದಕ್ಕೂ….

ನಂದಿ ಬೆಟ್ಟದ ವಿಠೋಬಯ್ಯನ ಪಳಾರದಂಗಡಿಯಲ್ಲಿ ತಲಾ ಸೇರು ಸೇರು ಕರ್ಚಿಕಾಯಿ ತಿಂದ ಅವರು ಮತ್ತೆ ಪಟ್ಟಾಗಿ ಊಟ ಬಿಗಿದದ್ದು ಮೊದಲ ಘಟ್ಟದ ಅನ್ನ ಛತ್ರದಲ್ಲಿಯೇ ಬಾಯಿಗೆ ಹೆತ್ತಿಕಾಳು ಕುಕ್ಕೆ ಕಟ್ಟದಿದ್ದರೂ ಕತ್ತೆಗಳು ಯಮಸಂಧಿಯನ್ನು ತಲುಪುವ ಹೊತ್ತಿಗೆ ದಣಿದುಬಿಟ್ಟಿದ್ದವು. ಅವುಗಳಿಗೆ ಕಾಲುಕಟ್ಟಿ ಹೊಳಿದಂಡೀಲಿರುವ ಕರಿಕೀಯ ಕುಡಿ ಮೇಯಲು ಬಿಟ್ಟು ತಾವಿಬ್ಬರೂ ಕನಕಳನ್ನು ಈ ಜಾತ್ರೆ ಗಜಿಬಿಜಿಯಲ್ಲಿ ಎಲ್ಲಿ ಹುಡುಕುವುದೆಂದು ಚಿಂತಿಸುತ್ತ ತುಸು ಹೊತ್ತು ಬಂದಳಿಕೆ ಗಿಡಗಳ ನಡುವೆ ಕೂತಿ ಯೋಚಿಸಿದರು. ಹುಡುಕುವಾಗ ಬೇಡರ ಕಣ್ಣಿಗೇನಾದರೂ ಬಿದ್ದರೆ ತನ್ನ ಮಿತ್ರ ಉಳಿಯುವುದಿಲ್ಲೆನಿಸಿತು. ಬಸವನಿಗೆ ವೇಷ ಬದಲಿಸಬೇಕು, ಅದಕ್ಕೆ ತಕ್ಕ ಸಾಮಗ್ರಿಬೇಕಲ್ಲ! ಕೂಡಲೇ ತಾನೊಬ್ಬನೆ ಜಾತ್ರೆಯೊಳಕ್ಕೆ ಹೋಗಿ ಒಂದೂವರೆ ಬೆಳ್ಳಿ ರೂಪೈ ಖರ್ಚು ಮಾಡಿ ಒಂದು ಧಡಿ ಅಂಚಿನ ಮೊಣಕಾಲ್ಮೂರು ಸೀರೆ ಮತ್ತು ಜರಿ ಅಂಚಿನ ಕುಪ್ಪಸ ತಂದ. ತಾನೇ ಮಿತ್ರನ ಮೀಸೆ ಬೋಳಿಸಿ ಸೀರೆ ಉಡಿಸಿದನಲ್ಲದೇ ಹೇಗೋ ಇದ್ದ ನೀಳ ಕೂದಲಿಗೆ ಉದ್ದನೆಯ ಜಡೆ ಎಣೆದು ಮುಡಿಗೆರಡು ತಾವರೆಗಳನ್ನಿಟ್ಟು ‘ನೀನು ನನ್ನ ಹೆಂಡ್ತಿ… ನಾನು ನಿನ್ ಗಂಡ ನಡೀ ಹುಡುಕೋಣ ನಿನ್ ಕನಕಳನ್ನು….” ಎಂದು ಜಾತ್ರೆಯೊಳಕ್ಕೆ ಕರೆದುಕೊಂಡು ಹೊರಟ….

ಸಾಲು ಸಾಲು ಅಂಗಡಿಗಳು, ಸಾವಿರಾರು ಜನರ ಗಜಿಬಿಜಿ ನಡುವೆ ಕನಕಳಿಗಾಗಿ ಹೆಣ್ಣು ವೇಷದ ಪರಮೇಶಿಯ ಕಣ್ಣುಗಳು ಹುಡುಕಾಟ ನಡೆಸಿದ್ದವು. ಆದರೆ ಜಾತ್ರೆಗೆ ಬಂದಿದ್ದ ಕೆಲ ಕಿಡಿಗೇಡಿ ಗಂಡಸರ ಕಣ್ಣುಗಳು ಪರಮೇಶಿಯನ್ನು ಚುಚ್ಚಿ ತಿನ್ನದೇ ಇರಲಿಲ್ಲ. ಕೆಲವರಂತೂ ಅವನನ್ನು ಹಿಂಬಾಲಿಸುತ್ತ ಮೈಗೆ ಮೈ ತಾಕಿಸುತ್ತ ಚುಡಾಯಿಸತೊಡಗಿದರು. “ಹೊಸದಾಗಿ ಮದ್ವೆಯಾಗಿ ಜಾತ್ರೆಗೇಂತ ಕರ್‍ಕೊಂಡು ಬಂದಿದ್ದೀನಿ ಕಣ್ರಪಾ, ಕೈ ಮುಗಿತೀನಿ ನನ್ ಹೆಂಡ್ತೀಗೆ ಗೋಳು ಹೊಯ್ಕೋಬೇಡ್ರಿ.” ಬಸವ ಕಾಮಣ್ಣಗಳೆದುರು ಅಂಗಲಾಚಿದ. “ನಿನ್‌ಗ್ಯಾಕೋ ಈ ಗೊಂಬಿಮಾಟದ ಹೆಣ್ಣು” ಎಂದೊಬ್ಬ ಪರಮೇಸಿಯ ಗಲ್ಲ ಸವರಿದ. ತಡೆಯಲಾಗದೆ ಬಸವ ಕಾಮಣ್ಣಗಳನ್ನು ಸ್ವಲ್ಪ ದೂರ ಕರೆದೊಯ್ದು ನಿಮ್ಗೇನು ಅಕ್ಕತಂಗೇರು ಹೆಂಡ್ರು ಇಲ್ವೇನ್ರೋ ಅಂತ ಸಿಟ್ಟಿನಿಂದ ಎರಡು ಚಚ್ಚುತ್ತಲೇ ಅವು ಬದುಕಿದೆಯಾ ಬಡ ಜೀವವೇ ಎಂದು ಓಟಕಿತ್ತವು.

“ಮುಂದಿನ ಜನುಮದಲ್ಲಾದ್ರೂ ನಾವಿಬ್ರು ಗಂಡ ಹೆಂಡ್ರಾಗಿ ಹುಟ್ಟೋಣ ಕಣ್ಣಾ” ಎಂದು ಬಸವ ಪರಮೇಶಿಯ ಗಲ್ಲ ಚಿವುಟಿದ.

ಜಾಗಟಗೆರೆ ಬೇಡರು ಸಿಡಿನಡೆಯೋ ಸ್ಥಳದಲ್ಲಿ ಠಿಕಾಣಿ ಹೂಡಿರಬಹುದೆಂದೂಹಿಸಿ ಆ ಪ್ರದೇಶಕ್ಕೆ ಹೋದರು, ಕಾಳಾಪುರದ ಡೊಳ್ಳುಗಳು, ಹಾಳ್ಪಾದ ಹಲಗೆಗಳು, ಹರಪನಹಳ್ಳಿಯ ಬಾಜಾಬಜಂತ್ರಿಯ ಕಿವಿಗಡುಚಿಕ್ಕುವ ಸದ್ದಿನಿಂದಾಗಿ ಜನ ತಂಡೋಪತಂಡವಾಗಿ ಸಿಡಿ ಸ್ಥಳದ ಸುತ್ತನೆರೆಯ ತೊಡಗಿದ್ದರು. ಒನಪು ಒಯ್ಯಾರದಿಂದ ಒನೆಯುತ್ತಲೇ ಪರಮೇಶಿ ಕನಕಳಿಗಾಗಿ ಹುಡುಕಾಟ ನಡೆಸಿದ್ದ.

ಸೂಲದಹಳ್ಳಿಯ ರುಮ್ಮಿಗಳ ರುಮ್ ರುಮ್ ಧ್ವನಿ ನಡುವೆ ಮಾಂಕಾಳಿಯನ್ನು ತಂದು ಕಟ್ಟೆ ಮೇಲೆ ಪ್ರತಿಷ್ಠಾಪಿಸುತ್ತಲೆ ಸಿಡಿ ಆಡುವ ಗಂಡುಗಳು ಹ್ಹಾ… ಹ್ಹೂ… ಅಂತ ಕೇಕೆ ಹಾಕುತ್ತ ಪ್ರದಕ್ಷಿಣೆ ಹಾಕಿದವು. ಕುಂಕುಮದಲ್ಲಿ ಅದ್ದಿತೆಗೆದಂತಿದ್ದ ಒಂದಿಬ್ಬರ ಬೆನ್ನ ಹುರಿಗೆ ಪೂಜಾರಿ ಸಿಡಿಯ ಥಳಥಳ ಕೊಕ್ಕೆಸಿಕ್ಕಿಸಿ ಬೇವಿನತೊಪ್ಪಲಿಂದ ಪಟಪಟ ಬಡಿದ. ತಮ್ಮ ದೇಹಗಳಿಂದ ಸುರಿಯುತ್ತಿದ್ದ ರಕ್ತ ಲೆಕ್ಕಿಸದೆ ಇತ್ತಿಂದತ್ತ ಅತ್ತಿಂದಿತ್ತ ಸಿಡಿ ಆಡುತ್ತಿದ್ದ ಅವರ ಪೈಕಿ ಒಬ್ಬ ಜಾಗಟಗೆರೆಯವನೆಂದು ಪರಮೇಶಿ ಗುರುತಿಸಿದ…. ಹಾಗೆಯೇ ಎತ್ತರ ಸ್ಥಳದ ಮೇಲೆ ಗುಂಪಾಗಿ ನಿಂತಿದ್ದವರನ್ನೂ…. ಭಲಾ… ಭಲಾ… ಭಲಾ… ಕಾಳೋಜಿ… ಎಂದುದ್ಗರಿಸುತ್ತಿದ್ದ ದುರ್ಗೋಜಿಯ ಪಕ್ಕ ನಿಂತಿದ್ದ ಕನಕಳ ಬೆದರುಗಂಗಳು ತನಗಾಗಿ ಅರಸುತ್ತಿರುವುದನ್ನು ಗುರುತಿಸಿದ ಪರಮೇಶಿ ಸಂತಸದ ಪ್ರವಾಹದಲ್ಲಿ ಕೊಚ್ಚಿ ಹೋದ.

ಎಚ್ಚರ ತಪ್ಪಿದರೆ ಪ್ರಮಾದ…. ಎಂದು ಎಚ್ಚರಿಸಿಯೇ ಅವನನ್ನು ಆ ಕಡೆ ಕರೆದೊಯ್ದು ಗುಂಪುಗೂಡಿದ ಬಸವ. ದುರ್ಗೋಜಿಯ ಪಕ್ಕದಲ್ಲಿ ತಾನು… ಕನಕಳ ಪಕ್ಕದಲ್ಲಿ ಪರಮೇಶಿ… “ನಮ್ ಕನಕಳ ಕೈ ಹಿಡಿಯೋ ಗಂಡು ಹೇಗಾಡ್ತಾವ್ನೆ ನೋಡು ಸಿಡಿಯಾ….” ಸಂತಸದ ಭರದಲ್ಲಿ ದುರುಗೋಜಿ ಕೈಯಿಂದ ಬಸವನ ಬೆನ್ನಿಗೆ ಅಪ್ಪಳಿಸಿದ…. ಅದನ್ನು ಸಹಿಸಿಕೊಂಡು ಬಸವ ತಾವು ಬಳ್ಳಾರಿ ದೇಸದ ಕಂಪಲಿಯ ಶ್ರೀಮಂತರೆಂದೂ; ಅಗೋ ಅಲ್ಲಿರುವ ತಮ್ಮ ಧರ್ಮ ಪತ್ನಿ ಸಂಗಮೇಶ್ವರದ ಶ್ರೀಮಂತರ ಸಿದ್ಧರಾಜರವರ ಏಕಮಾತ್ರ ಪುತ್ರಿ ಎಂದೂ ನಂಬುವಂತೆ ಪರಿಚಯಿಸಿಕೊಂಡ. ಹಾಗೆಯೇ ಬೀದಿ ಕಾಮಣ್ಣಗಳ ಬಗೆಗೂ ಹೇಳಿದ. ತಾವಿರುವಷ್ಟು ಕಾಲ ತಮ್ಮ ಬಿಡಾರದಲ್ಲೇ ಇರಬಹುದೆಂದು ದುರುಗೋಜಿ ಸ್ವತಃ ಹೇಳಿದ ಮೇಲೆ ಕೇಳುವುದೇನಿದೆ? ಅಲ್ಲದೆ ಹೆಣ್ಣು ವೇಷದ ಪರಮೇಶಿ ಉಪಾಯದಿಂದ ಕನಕಳೊಂದಿಗೆ ಸಲಿಗೆ ಬೆಳೆಸಿದ್ದ ಆಗಲೇ….

ತಮ್ಮ ಅಳಿಯನಾಗುವ ಕಾಳೋಜಿ ಯಶಸ್ವಿಯಾಗಿ ಸಿಡಿ ಆಡಿದ್ದಕ್ಕೆ ದುರುಗೋಜಿ ತಮ್ಮ ಬಿಡಾರದ ಮುಂದೆ ದೊಡ್ಡದೊಂದು ಪಾನ ಸಮಾರಾಧನೆ ಏರ್ಪಡಿಸಿದ್ದ. ಗುಟ್ಟಾಗಿ ಕಳ್ಳಮಾಲನ್ನು ಖರೀದಿಸುವ ವರ್ತಕರೂ ಅಲ್ಲಿ ಪಾಲ್ಗೊಳ್ಳದೆ ಇರಲಿಲ್ಲ. ದುರುಗೋಜಿಯ ಅಳಿಯನನ್ನು ಹೀಗೆ ಪರಿಚಯಿಸಿದ.

“ಈ ಸಿಡಿ ಆಡಿ ಪರಾಕ್ರಮಿ ಬರುವ ಕಾರ್ತೀಕ ಮಾಸ್ದಲ್ಲಿ ನನ್ ಮಗ್ಳ ಕೈ ಹಿಡಿಯ್ಯೋನು ಇವ್ನು ಹೆಸ್ರು ಕೇಳಿದ್ರೆ ಆಂದ್ರ ದೇಸ್ದಲ್ಲಿ ಜನ ಗಡಗಡ ನಡುಗ್ತಾರೆ ಹ್ಹ… ಹ್ಹ…” ಸಿಡಿಯ ಗಾಯಕ್ಕೆ ಪಟ್ಟು ಬಿಗಿದಿದ್ದ ಕಾಳೋಜಿ ಗಟಗಟ ಅಂತ ಕೊಡವನ್ನೆತ್ತಿ ಕುಡಿದು ಕನಕಳ ಮುಖ ಕಂದಿ ಹೋಗುವಂತೆ ನೋಡಿದ. ಆಗ ಪರಮೇಶಿ ಊಹಿಸಿದ್ದು ಬೆಳಗಾಗುತ್ತಲೆ ನಿಜವಾಯಿತು.

ಕುಡಿದ ಅಮಲಿನಲ್ಲಿ ಕನಕಳ ಮೇಲೆ ಅತ್ಯಾಚಾರ ಮಾಡಲೆತ್ನಿಸಿದಾಗ ಸಿಡಿಯ ಗಾಯದಿಂದ ಮಾರಗಲ ರಕ್ತಪಾತವಾಯಿತು. ಬಸವ ದುರುಗೋಜಿ ಮಧ್ಯೆ ಪ್ರವೇಶಿಸಿ ಕಾಳೋಜಿಯನ್ನು ಬೇರೊಂದು ಬಿಡಾರಕ್ಕೆ ಕರೆದೊಯ್ದರು. ಹೋಗುವಾಗ ಹೆಣ್ಣು ವೇಷದ ಪರಮೇಶಿ ಕಡೆ ನೋಡಿ ಕಣ್ಣೊಡೆದ. ಕಾಳೋಜಿ ಭಯದಿಂದ ಪರಮೇಶಿಯನ್ನು ಬಿಗಿದಪ್ಪಿಕೊಂಡು ಮಲಗಲೆತ್ನಿಸಿದಳು ಕನಕ. ಒಡಲೆಣ್ಣೆದೀಪದ ಮಂದ ಬೆಳಕಿನಲ್ಲಿ ಫಳ ಫಳ ಹೊಳೆಯುತ್ತಿದ್ದ ಅವಳ ಹೂಗೆನ್ನೆಗೆ ಮುದ್ದು ಕೊಟ್ಟು “ಮನಸ್ನಲ್ಲಿ ಯಾರ್‍ನಾದ್ರು ಪ್ರೀತಿಸ್ತಿದ್ದೀ ಏನು!” ಎಂದು ಕೇಳಿದ; ಹ್ಹೂ ಅಂದಳು ಕಣ್ತುಂಬ ನೀರು ತುಂಬಿಕೊಂಡ ಕನಕಳಿಗೆ ನಾಳೆ ನಿನ್ನ ಪ್ರೇಮಿಯನ್ನು ತೋರಿಸ್ತೀನಿ ಹಳ್ಳ ಆಚೇಲಿರೋ ದೇವಿ ಗುಹೆಗೆ ಹೋಗೋಣ” ಎಂದು ಪಿಸುಗುಟ್ಟಿ ತಾನೂ ತಬ್ಬಿ ಮೇಲೆ ಕಂಬಳಿ ಎಳೆದುಕೊಂಡ.

ಕಳ್ಳನಿದ್ದೆಯಲ್ಲಿದ್ದ ಅವರಿಬ್ಬರು ಬೆಳಗಾಗುವ ಮೊದಲೇ ಎಚ್ಚರಾದರು. ತಂದೆಗೆ ಪಿಳ್ಳೆ ನೆವ ಹೇಳಿ ಹೊರಟಳು…. ನನ್ ಮಗ್ಳೂನ ಜೋಪಾನವಾಗಿ ಕರ್‍ಕಂಡ್ಹೋಗಿ ಕರ್‍ಕೊಂಡು ಬಾರಮ್ಮಾ” ಎಂದು ಆಕಳಿಸುತ್ತ ನಿದ್ದೆ ಹೋದ ದುರುಗೋಜಿ… ದಾರಿಯುದ್ದಕ್ಕೂ ಕನಕ ತನ್ನ ಪರಮೇಶಿಯ ಕುರಿತು ನೂರೊಂದು ಪ್ರಶ್ನೆ ಕೇಳಿದಳು. ಪರಮೇಶಿ ಒಳಗೊಳಗೆ ನಗುತ್ತ ಹೆಣ್ಣುದನಿಯಲ್ಲಿ ಕಯ್ ಕುಯ್ ಎಂದು ಉತ್ತರಿಸಿದ ಜಾಣತನದಿಂದ. ಸ್ವಲ್ಪ ದೂರದಲ್ಲಿ ಹಿಂಬಾಲಿಸುತ್ತಿದ್ದ ಬಸವನಿಗೆ ನಗುವೋ ನಗು….

ಶುಂಬ ನಿಶುಂಭರನ್ನು ಕೊಲೆ ಮಾಡಿದ ದೇವಿ ಕೋಪಶಮನಕ್ಕಾಗಿ ತಪಸ್ಸು ಮಾಡಿದ್ದೆಂದು ಹೇಳುವ ಗವಿಯೊಳಕ್ಕೆ ಆತುರತೆಯಿಂದೋಡಿ ಪರಮೇಶೀ… ಹೋ ಪರಮೇಶಿ… ಎಂದು ಕೂಗಿದಳು…. ಕಾಣದಿದ್ದಾಗ ಗೆಳತಿಯ ಸೆರಗಿಗೆ ಹೈ ಹಚ್ಚಿ ತೋರ್‍ಸೆ ಎಲ್ಲವ್ನೇ ತೋರ್‍ಸೇ… ಸುಳ್ ಹೇಳಿ ಯಾಕೆ ಕರ್‍ಕೊಂಡು ಬಂದೆ ನನ್ನ ಎಂದು ಪೀಡಿಸತೊಡಗಿದಳು. ಇನ್ನು ಗುಟ್ಟಾಗಿಡುವುದು ಅವನಿಂದ ಅಸಾಧ್ಯವೆನಿಸಿತು. ಬಾಚಿ ತಬ್ಬಿಕೊಂಡು “ನಾನೇ ಕಣೆ ನಿನ್ ಪರಮೇಶಿ” ಎಂದು ಆಕೆಯ ಮುಖದ ತುಂಬ ಮುತ್ತಿನ ಮಳೆ ಸುರಿದ. ಆಕೆಗೂ ಕ್ರಮೇಣ ಅರ್ಥವಾಯಿತು ನಾವಿಬ್ರೂ ಎಲ್ಲಾದ್ರೂ ಹೋಗಿ ಬದುಕೋಣ… ಕರ್‍ಕೊಂಡು ಹೋಗು” ಎಂದಪ್ಪಿಕೊಂಡು ಕಣ್ಣೀರು ಕರೆದಳು….

ಬಸವ ಗವಿಯ ಬಾಗಿಲು ಬಳಿ ಕಾವಲಿರುವಾಗ ಯಾತರ ಭಯ!

ಅದು ಇದು! ಇದು ಅದು ಮಾತಾಡಿದರು! ತಾವಿಬ್ಬರು ಎಷ್ಟೋ ಜನುಮಗಳಿಂದ ದಂಪತಿಗಳೆಂಬಂತೆ. ಪ್ರೇಮಿಗಳೀರ್ವರ ಬಾಯಿಯಿಂದ ಮಾತು ನೊರೆನೊರೆಯಾಗಿ ಉಕ್ಕಿ ಹರಿಯಿತು. ಅರ್ಜುನ ಪಟಪಟ ರೆಕ್ಕೆ ಬಡಿಯುತ್ತ ಅವರ ನಡುವೆ ಹಾರಿ ಕೂತು ಇನ್ನು ಹೊರಡಿ ಎಂದು ಎಚ್ಚರಿಸಿದಿದ್ದಲ್ಲಿ ಅವರು ಹಾಗೆ ಕೂಡ್ರುತಿದ್ದರೇನೋ!

ಕಾಳೋಜಿಯಿಂದ ತೊಂದರೆ ಒದಗದ ಹಾಗೆ ನೋಡಿಕೊಳ್ಳಲು ಬಸವನನ್ನು ಜಾಗಟಗೆರೆಗೆ ಕಳಿಸುವುದಾಗಿಯು; ಒಳ್ಳೆ ಸಮಯ ನೋಡಿಕೊಂಡು ದೂರ ಹೊರಟು ಹೋಗೋಣವೆಂದೂ ಹೇಳುತ್ತ ತನ್ನ ಬೆರಳಿನಲ್ಲಿ ಹೊಳೆಯುತ್ತಿದ್ದ ವಜ್ರದ ಉಂಗುರ ತೆಗೆದು ಅವಳ ಎಡಗೈಯ ನೀಳ ಬೆರಳಿಗೆ ಅಲಂಕರಿಸಿದನು.

ಸಂಪಿಗೆ ಮರದಲ್ಲಿ ಕೂತಿದ್ದ ಬಸವ ಟಿಟ್ಟಿಭ ಹಕ್ಕಿಯಂತೆ ಕೂಗಿ ಎಚ್ಚರಿಸಿದ ನಂತರ ಯುವ ಗಿಳಿ ಗೊರವಂಕಗಳು ಗುಹೆಯಿಂದ ಹೊರ ಬಂದವು.

-೫-

ಮೂರು ನಾಲ್ಕು ದಿನಗಳ ನಂತರ ಪರಮೇಶಿ ತನ್ನ ಸಂಗಡಿಗ ಬಸವನೊಂದಿಗೆ ಕಾಣಿಸಿಕೊಂಡ ಮೇಲೆಯೇ ಹೊನ್ನೂರು ಸಮಾಧಾನದ ಉಸಿರು ಬಿಟ್ಟಿದ್ದು. ಮಾಳಿಗೆ ಮೇಲೆ ಮಲಗಿಕೊಂಡಿದ್ದ ಪರಮೇಶಿಯೂ ತೆಂಗಿನ ತೋಟದ ಅಟ್ಟದ ಗೂಡಿನಲ್ಲಿ ಮಲಗಿಕೊಂಡಿದ್ದ ಬಸವನೂ ರಾತ್ರೋರಾತ್ರಿ ಕಾಣೆಯಾದರೆಂದರೆ ಊರಿಗೆ ಗಾಬರಿಯಾಗದಿರುತ್ತದೆಯೇ! ಎಲ್ಲಿ ಜಾಗಟಗೆರೆ ಬೇಡರು ಅಪಹರಿಸಿಕೊಂಡು ಹೋದರೋ ಎಂಬ ಭಯದಿಂದ ಕಂಗಾಲಾಗಿದ್ದರು.

“ಅವ್ವೋ ತಾಯಿ… ನಂ ಪರಮೇಶೀನ ಕ್ಷೇಮವಾಗಿ ಮರಳಿಸಿದ್ದಿಯಲ್ಲಾ ಪ್ರತಿ ಮಂಗಳವಾರ ಉಪವಾಸ ಇದ್ದು ನಿನ್ ಋಣ ತೀರಿಸ್ತೀನಿ…” ಲಕ್ಷ್ಮೀ ದೇವಿಗೆ ಹರಕೆ ಹೊತ್ತಳಲ್ಲದೆ ಮರುದಿನವೇ ಮಂಗಳವಾರ ಒಂದು ಹನಿ ನೀರು ಸಹ ಮುಟ್ಟದೆ ಉಪವಾಸ ಇದ್ದು ವ್ರತ ಪ್ರಾರಂಭಿಸಿದಳು.

ಎಲ್ಲಿ ಹೋಗಿದ್ದಿರಿ ಏನು ಕಥೆ…. ಎಂದು ತಲಾ ಒಂದೊಂದು ಪ್ರಶ್ನೆ ಕೇಳುವವರೆ ಎಲ್ಲ! ಬಾಯ ಬತ್ತಳಿಕೆ ತುಂಬ ತಕ್ಕ ಉತ್ತರಗಳನ್ನು ತುಂಬಿಕೊಂಡಿದ್ದ ಬಸವನೇ ತನ್ನ ಗೆಳೆಯನ ಪರವಾಗಿ ಉತ್ತರಿಸಿದ…..

ಹೀಗೆ ದಿನಗಳನ್ನು ಕಳೆಯುವುದು ಪರಮೇಶಿಗೆ ಅಸಹನೀಯವಾಗಿತ್ತು. ಒಂದು ದಿನ ಬಸವನ ಕಿವಿ ಹಿಂಡಿ ಬೆಳ್ಳೆ ಮರಡಿಗೆ ಕರೆದೊಯ್ದು ನೀನು ಈಗಿಂದೀಗ್ಲೆ ಜಾಗಟಗೆರೆಗೆ ಹೊರಡಿದಿದ್ದರೆ ನಾನು ಅಗೋ ಅಲ್ಲಿ ಬಾಯಿ ತೆರ್‍ಕೊಂಡು ಕಾಯ್ತಿರೋ ಮೊಸಳೆಗೆ ಸಿಕ್ಕು ಸಾಯ್ತೀನಿ. ಅಲ್ಲಿ ಆ ಕಾಳೋಜಿಯಿಂದ ಏನೇನು ಹಿಂಸೆ ಅನುಭವಿಸ್ತಿದ್ದಾಳೋ ಏನೋ ಎಂದು ಅವುಡುಗಚ್ಚಿದ. ಅದನ್ನು ನೋಡಿ ಬಸವನ ಕರುಳಿಗೆ ಚೂರಿ ಇಕ್ಕಿದಂತಾಯಿತು.

ಪರಮೇಶಿ ಕನಕರು ಒಂದಾಗುವುದಾದರೆ ತಾನು ಯಾಕೆ ಪ್ರಾಣದ ಹಂಗು ತೊರೆಯಬಾರದೆನ್ನಿಸಿತು! ತನಗೇನು ತಂದೆಯೇ ತಾಯಿಯೇ; ಇದೇ ಪರಮೇಶಿ ಹಿಂದೊಮ್ಮೆ ಹುಲಿಯ ಬಾಯಿಯಿಂದ ರಕ್ಷಿಸಿದ್ದನ್ನು ನೆನಪು ಮಾಡಿಕೊಂಡೊಡನೆ ಕಣ್ಣುಗಳು ಒದ್ದೆಯಾದವು. ಅವನು ನಾಳೆಯೇ ಹೊರಟು ಕನಕಳ ಯೋಗಕ್ಷೇಮ ನೋಡಿಕೊಳ್ಳುವುದಾಗಿ ಮಾತು ನೀಡಿದ.

ಬಯಲು ಸೀಮೆಯ ಹೂವಿನಗಡಲಿಯಲ್ಲಿರುವ ತನ್ನ ಅಜ್ಜಿ ಬಳಿಗೆ ಹೋಗುವುದಾಗಿ ಎಲ್ಲರಿಗೂ ಸುದ್ದಿ ಮಾಡಿದ ಬಸವ ಪರಮೇಶಿಯಿಂದ ಬೀಳ್ಕೊಂಡ. ಸುತ್ತಿ ಬಳಸೀ ಜಾಗಟಗೆರೆ ದಾರಿ ಹಿಡಿದ. ಜಾತ್ರೆಯಲ್ಲಿ ತಾನು ಮಾರುವೇಷದಲ್ಲಿದ್ದುದು ಈಗ ಸಹಾಯಕ್ಕೆ ಬಂತೆಂದುಕೊಂಡ. ಯಾವ ವೇಷ ಧರಿಸಿ ಹೇಗೆ ದುರುಗೋಜಿಯ ಮನೆಯಲ್ಲಿ ಜಾಗ ಗಿಟ್ಟಿಸಿಕೊಳ್ಳುವುದೆಂದು ದಾರಿಯುದ್ದಕ್ಕೂ ಯೋಚಿಸುತ್ತ ಹಾಗೂ ಹೀಗೂ ಜಾಗಟಗೆರೆ ಸಮೀಪಕ್ಕೆ ಹೋದ.

ಜಾಗಟಗೆರೆ ಬೇಡರು ಕಾಡು ಮೃಗಕ್ಕಿಂತಲೂ ಅಪಾಯ ಎಂದು ಗೊತ್ತು! ಅಂಥವರ ನಡುವೆ ಇದ್ದುಕೊಂಡೇ ಪರಮೇಶಿ ಮತ್ತು ಕನಕರ ನಡುವೆ ಸೇತುವೆಯಾಗಬೇಕಿರುವುದರಿಂದ ಅಪಾಯಕ್ಕೆ ಹೆದರುವುದೇ?!

ಊರ ಹೊರವಲಯದಲ್ಲಿದ್ದ ಗೇರು ತೋಟದ ಹೆಬ್ಬಲಸಿನ ಮರದಲ್ಲಿ ಇಡೀ ಒಂದು ದಿನ ಅವಿತು ದುರುಗೋಜಿಯ ಚಲನವಲನದ ಮೇಲೆ ನಿಗಾ ಇಟ್ಟ. ಕೊನೆಗೆ ಕನಕಳಾದರೂ ಬರಬಹುದೆಂದು ಕಾದ… ನಿರಾಸೆಯಾಯಿತು. ಕನಕ ಕಾಳೋಜಿಯ ದೆಸೆಯಿಂದ ಗೃಹಬಂಧನದಲ್ಲಿರಬಹುದೆನಿಸಿತು.

ಶ್ರಾವಣದ ಕೊನೆ ದಿನಗಳಲ್ಲಿ ಮೋಡಗಳ ಆರ್ಭಟ ಹೇಳತೀರದಿತ್ತು. ಕಾಲು ಹಾದಿಗೆ ಸ್ವಲ್ಪ ದೂರದಲ್ಲಿ ಅಂದರೆ ಹೊಂಗೆ ಮರಗಳ ನಡುವೆ ಮುಳ್ಳು ಕಂಟೆಗಳಿಂದ ಮೈ ಬಟ್ಟೆ ಹರಿದುಕೊಂಡು ರಕ್ತ ರಂಭಾಟ ಮಾಡಿಕೊಂಡ. ಹೋ ಅಂತ ಮೂಗನಂತೆ ಊಳಿಡತೊಡಗಿದ. ಅದನ್ನು ಕೇಳಿಸಿಕೊಂಡ ಬೇಡರಿಬ್ಬರು ಓಡಿ ಬಂದು ಉಪಚರಿಸುತ್ತ ಏನು ಅಂತ ಕೇಳಿದರು. ಮೂಕ ಎಂದು ಸನ್ನೆ ಮಾಡಿ ಹೇಳಿದ. ಚಿರತೆಯೊಂದಿಗೆ ತಾನು ಹೋರಾಡಿದ್ದಾಗಿ ಸನ್ನೆ ಮೂಲಕ ಸುಳ್ಳು ಹೇಳಿದ. ಅವನನ್ನು ಸೀದ ದುರುಗೋಜಿಯ ಮನೆಗೆ ಕರೆದೊಯ್ದರು. ಮೊದಲೇ ಅನುಮಾನಿಸುವಲ್ಲಿ ಹೆಸರಾದ ದುರುಗೋಜಿಯು ನೂರು ಪ್ರಶ್ನೆ ಕೇಳಿದರೆ ಹತ್ತು ಉತ್ತರಗಳನ್ನು ಸಂಜ್ಞೆ ಮೂಲಕ ಕೊಟ್ಟು ಗಟ್ಟಿಯಾಗಿ ಕಾಲು ಹಿಡಿದುಕೊಂಡು ತಾನು ಅನಾಥ ಎಂದು ಸಾದರಪಡಿಸಿದ. ಕೆಲ ದಿನಗಳವರೆಗೆ ಅವರು ಒಡ್ಡಿದ ಪರೀಕ್ಷೆಗಳೆಲ್ಲ ತೇರ್ಗಡೆಯಾಗಿ ಅವರೆಲ್ಲರಿಗೆ ಪರಮಾಪ್ತನಾದ ಹಾಗೆಯೇ ಕನಕಳೂ ಬಸವನನ್ನು ಗುರುತಿಸಿ ಹೆಚ್ಚು ಸಂತಸಗೊಂಡಳು. ಮೂಗ ಬಸವನನ್ನು ತನ್ನ ಸಹಾಯಕನಾಗಿ ಇಟ್ಟುಕೊಳ್ಳಲು ಕನಕ ಬಹಳ ಪ್ರಯತ್ನಿಸಿದ ನಂತರವೇ ತಂದೆ ದುರುಗೋಜಿಯ ಒಪ್ಪಿಗೆ ಸಿಕ್ಕಿದ್ದು.

ಗೇರು ತೋಟದಲ್ಲಿ ಹೆಜ್ಜೇನಿನ ದಾಳಿಯಿಂದ ಕನಕಳನ್ನು ರಕ್ಷಿಸಿದಾಗ ಬಸವ ಇನ್ನೇನು ನಂಜೇರಿ ಸಾಯುವನೆಂದು ಸ್ಥಳೀಯ ವೈದ್ಯರಂಗಪ್ಪ ನಾಯಕನೇ ಬಗೆದ. ಆದರೆ ಪರಮೇಶಿಯ ಪುಣ್ಯ… ಅವನು ಬದುಕಿ ಉಳಿದ. ಅಂದಿನಿಂದ ಅವನ ಸ್ವಾತಂತ್ರ್‍ಯ ಎಲ್ಲೆ ತುಸು ವಿಸ್ತರಿಸಿತು. ಕನಕಳೂ ಅಷ್ಟೆ ಪ್ರತಿಯೊಂದು ಕೆಲಸಕ್ಕೂ ಅವನ ಸಹಾಯ ಪಡೆಯತೊಡಗಿದಳು. ಪ್ರತಿದಿನ ಸಂಜೆ ಕನಕದುರ್ಗೆಯ ದೇವಸ್ಥಾನದಿಂದ ಕಪಿಲತೀರ್ಥದವರೆಗೆ ಜೊತೆಯಾಗಿ ನಡೆಯುವುದು ನಿಂಬೆ ತೋಟದಲ್ಲಿ ತನಗೆ ಬೇಕಾದ ನಿಂಬೆ ಹಣ್ಣನ್ನು ಅವನಿಂದ ಕೊಯ್ಯಿಸಿಕೊಳ್ಳುವುದು…. ಸಮಯ ಸಂದರ್ಭ ನೋಡಿ ಆಕೆಯನ್ನು ಸಮಾಧಾನ ಪಡಿಸುತ್ತಿರದೆ ಇರಲಿಲ್ಲ ಬಸವ… ಜೇನು ದಾಳಿಗೆ ಸಿಕ್ಕಂದಿನಿಂದ ರೂಪವೇ ಬದಲಿಸಿಕೊಂಡಿದ್ದ ತನ್ನ ಎದುರು ಕಾಳೋಜಿ, ಎರಡು ಮೂರು ಬಾರಿ ಕನಕಳ ಮೇಲೆ ಆಕ್ರಮಣ ಮಾಡಲೆತ್ನಿಸಿದ್ದನ್ನು ಪರಿಣಾಮಕಾರಿಯಾಗಿ ತಡೆದ. ಒಮ್ಮೊಮ್ಮೆ ಕಾಳೋಜಿಯನ್ನು ಮುಗಿಸಿ ಬಿಡಲೇ ಎಂದು ಯೋಚಿಸಿ, ತನ್ನನ್ನು ತಾನೇ ಬಯ್ದುಕೊಂಡ. ಅದರೆ ಕಾಳೋಜಿ ಮಾತ್ರ ಬಸವನ ಮೇಲೆ ತನ್ನ ಎರಡೂ ಕಣ್ಣುಗಳನ್ನು ನಿಗಾ ಇಟ್ಟಿದ್ದ.

ಈ ನಡುವೆ ಅರ್ಜುನ ಏನೋ ಜಾಗಟಗೆರೆ ಮೇಲೆ ಒಂದು ಸುತ್ತು ಪ್ರದಕ್ಷಿಣೆ ಹಾಕಿತಾದರೂ, ಗಿಡುಗನ ಕಾಟಕ್ಕೋ, ಕಾಳೋಜಿ ಗುರಿ ಇಟ್ಟಿದ್ದ ಬಾಣಕ್ಕೋ ಇಳಿಯದೆ ವಾಪಾಸು ಮರಳಿತ್ತು. ಇನ್ನೊಮ್ಮೆ ಚಿತ್ರಾಂಗದೆ ಏನೋ ಹಾರಿ ಬಂದು ಕನಕಳ ಹೆಗಲ ಮೇಲೆ ಕೂತು ಅರೆಚಣವಾಗಿದ್ದಾಗ ಯಾರದೋ ಹೆಜ್ಜೆ ಸಪ್ಪಳಕ್ಕೆ ಹೆದರಿ ಹೆಂಚಿನ ಮೇಲೆ ಕೂತಿತು. ಎಷ್ಟೋ ದಿನಗಳಿಂದ ಕಾಣೆಯಾಗಿದ್ದ ತಮ್ಮ ಪಾರಿವಾಳ! ಹಿಡಿಯಲೆತ್ನಿಸಿದವರ ಕೈಗೆ ಸಿಕ್ಕದೆ ಈಶಾನ್ಯ ದಿಕ್ಕನ್ನು ಬಳಸಿಕೊಂಡು ಹೊನ್ನೂರಿನ ಕಡೆ ಹಾರಿತು. ಹೀಗಾಗಿ ಮಾಹಿತಿ ಕಳಿಸಲಿಕ್ಕಾಗಲೀ; ತಿಳಿದುಕೊಳ್ಳುವುದಕ್ಕಾಗಲಿ ಸಾಧ್ಯವಾಗದಿದ್ದಾಗ ಕಳವಳ ಹೆಚ್ಚಿತು.

ಇಲ್ಲಿ ಮದುವೆಯ ದಿನಕ್ಕಾಗಿ ದೇಹದಾದ್ಯಂತ ಹಸಿದು ಕಾಯುತ್ತಿರುವ ಕಾಳೋಜಿ….

ಅಲ್ಲಿ ಲಕ್ಷ್ಮಿಯ ಕೊರಳಿಗೆ ತಾಳಿ ಬಿಗಿಸಿ ಪರಮೇಶಿಯನ್ನು ಸಾವರ ಕುದುರೆ ಸರದಾರನನ್ನಾಗಿ ಮಾಡಿ ಜಾಗಟಗೆರೆಯ ಬೀದಿಗಳಲ್ಲಿ ರಕ್ತದ ಕೋಡಿ ಹರಿಸುವ ತವಕದಲ್ಲಿರುವ ಹೊನ್ನಜ್ಜ….

ಮತ್ತೆ ಸುಂಕಲಿಗೆ ಕೊರವಂಜಿ ವೇಷ ತೊಡಿಸಿ ಹೊನ್ನೂರಿಗೆ ಕಳಿಸಿದರು. ಹುಲಿ ಬಂದರೂ ಸಿಗಿದು ತೋರಣ ಕಟ್ಟಬಲ್ಲ ಅಜಾನುಬಾಹು ಸುಂಕಲಿ ಹೊನ್ನೂರು ತಲುಪುವುದು ಕಷ್ಟವೇನೂ ಆಗಲಿಲ್ಲ. ಊರಮ್ಮನ ಬಯಲು ಮನೆ ಮುಂದೆ ನಿಂತು ಠುರ್‍ರ್‍ ಶಕುನದ ಹಕ್ಕೀ ಎಂದು ಹಾಡಿದಳು ಜೋರಾಗಿ… ಅದನ್ನು ಕೇಳಿ ತುತ್ತು ಬಿಟ್ಟು ಎದ್ದು ಬಂದ ಪರಮೇಶಿಗೆ ಕೊರವಂಜಿ ನೋಡಿ ಕೊಪ್ಪರಿಗೆ ಸಂತಸವಾಯಿತು. ಇರುವೆ ಕೂಡ ತನ್ನ ಚಲನವಲನದ ಮೇಲೆ ನಿಗಾ ಇರಿಸಿರುವುದರಿಂದ ಹೊತ್ತು ತುಸು ವಾಲಿದಾಗ ಸುತ್ತಲದ ತೋಪಿಗೆ ಆಕೆಯನ್ನು ಕರೆದೊಯ್ದು ಆತುರತೆಯಿಂದ ಕನಕಳ ಬಗ್ಗೆ ಪ್ರಶ್ನೆಗಳ ಮಳೆ ಕರೆದ. ಕೊರವಂಜಿ ಅವನ ಮುಖದಿಂದ ಲಟ್ಟಿಗೆ ತೆಗೆದು ಎಲ್ಲ ವಿವರಿಸಿ ನಿನ್ ಗೆಣೆಕಾರ ಬಸ್ವ ಇಲ್ದಿದ್ರೆ ಆ ಹುಡ್ಗಿ ಇಷ್ಟೊತ್ಗೆ ಏನಾಗ್ತಿಗ್ತೋ ಎಂದಳು. ಗೆಳೆಯನಿಗೆ ಮನದಲ್ಲಿ ಕೋಟಿ ಕೃತಜ್ಞತೆ ಅರ್ಪಿಸಿದ. ತನ್ನ ಕೊರಳಿಗೆ ಲಕ್ಷ್ಮೀಯನ್ನು ಬಲವಂತವಾಗಿ ಕಟ್ಟುವ ಪ್ರಯತ್ನದಲ್ಲಿರುವ ತನ್ನೂರಿನ ಹಿರಿಯರ ಕರಾಮತ್ತನ್ನು ಆದ್ಯಂತ ವಿವರಿಸಿದ. ಆಶ್ವೀಜ ಶುದ್ಧ ದಶಮಿಯಂದು ಹೊನ್ನಜ್ಜ ಮದುವೆ ಮಾಡಲು ನಿಶ್ಚಯಿಸಿರುವುದನ್ನು ಅವನು ಹೇಳಿದರೆ ಕೊರವಂಜಿ ಅದೇ ಆಶ್ವೀಜ ಶುದ್ಧ ಚತುರ್ದಶಿಯಂದು ಕನಕಳ ಮದುವೆಯನ್ನು ಕಾಳೋಜಿಯೊಂದಿಗೆ ದುರುಗೋಜಿ ನಡೆಸಲಿರುವ ಸೂಚನೆಯನ್ನು ನೀಡಿದಳು. ನವಮಿ ಅಥವಾ ದಶಮಿಯಂದು ತಾನು ಬರುವುದಾಗಿಯೂ ತಕ್ಕ ಏರ್ಪಾಟುಗಳನ್ನು ಮಾಡುವಂತೆ ಬಸವಗೆ ಹೇಳಬೇಕೆಂತಲೂ ವಿವರಿಸಿ ಆಕೆಯನ್ನು ಕೃತಜ್ಞತಾಭಾವದೊಂದಿಗೆ ಬೀಳ್ಕೊಟ್ಟ.

ನೆಪಕ್ಕೆ ಗುಣಸಾಗರ, ಬಲಕುಂದಿ, ಬೊಮ್ಮನ ಪಾಳ್ಯಗಳಲ್ಲಿ ಠುರ್‍ರ್‍ ಶಕುನದ ಹಕ್ಕಿ ಬಂದೈತಿ ಅಂತ ಸುತ್ತಾಡಿ ಜೋಳಿಗೆಗೆ ಬಿದ್ದ ಕಾಳು ಕಡ್ಡಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು ಬಲ್ಲೂರು, ಮಾಸುವಳ್ಳಿ ಹಾಯ್ದು ಜಾಗಟಗೆರೆ ತಲುಪಿದಳು. ಆಗಲೇ ಭಾದ್ರಪದ ಮಾಸದ ದಿನಗಳು ಉರುಳುತ್ತಿದ್ದುದರಿಂದ ಮದುವೆಯ ಏರ್ಪಾಟು ಬಿರುಸಿನಿಂದ ಸಾಗಿತ್ತು. ತಮ್ಮೊಂದಿಗೆ ಲೇವಾದೇವಿ ಇಟ್ಟುಕೊಂಡಿರುವ ಸುತ್ತ ಇಪ್ಪತ್ಮೂರು ಊರುಗಳ ಗೌಡರು, ರೆಡ್ಡಿಗಳಿಗೆ ವಿವಾಹದ ಶುಭ ಸಮಾಚಾರ ಮುಟ್ಟಿಸಿ ಜೊತೆಗೆ ಕಾಣಿಕೆ ವಸೂಲಿ ಮಾಡಿಕೊಂಡು ಬರಲು ಐವತ್ತು ಆಳುಗಳನ್ನು ಆಗಲೆ ಅಟ್ಟಿಯಾಗಿತ್ತು.

ಕಪಿಲತೀರ್ಥದ ಪಕ್ಕದ ತೋಪಿನಲ್ಲಿ ತನ್ನನ್ನು ಸಂಧಿಸಿದ ಕನಕಳಿಗೂ, ಬಸವನಿಗೂ ಹೊನ್ನೂರಿನ ಯಾವತ್ತೂ ಸಮಾಚಾರ ವಿವರಿಸಿ ನವಮಿ ದಶಮಿಯಂದು ಅವನು ಬರಲಿರುವ ಸುಳಿವು ನೀಡಿದರು. ಪರಮೇಶಿಯನ್ನು ಕುರಿತು ಸಾವಿರ ಪ್ರಶ್ನೆಗಳನ್ನು ಕೇಳುವ ಆತುರದಲ್ಲಿ ಕನಕ ಕಂಠ ಬಿಗಿದು ಕಣ್ತುಂಬ ನೀರು ತುಂದುಕೊಂಡಳು. “ಹುಚ್ಚೀ ಯಾಕಳ್ತೀ ಸುಮ್ಕಿರು… ನಿಮ್ಮಿಬ್ರನ್ನು ಆ ತ್ರಿಮೂರ್ತಿಗಳೂ ಬೇರ್ಪಡಿಸಲಾರರು” ಎಂದು ತಲೆ ನೇವರಿಸುತ್ತ ಸುಂಕಲಿ ಬಸವನ ಕಡೆ ಅರ್ಥಪೂರ್ಣ ನೋಟ ಬೀರಿ ಮುಗುಳ್ನಕ್ಕಳು… ಅವನೂ ಅಷ್ಟೆ, ಅವರಿಬ್ಬರಲ್ಲಿ ಪರಸ್ಪರ ಪ್ರೇಮಾಂಕುರವೋ ಏನೋ!

ಆಶ್ವೀಜ ಪ್ರಾರಂಭವಾದ ಮೇಲಂತೂ ಊರಿಗೆ ಊರೇ ಸಂಭ್ರಮದ ಮೊಟ್ಟೆಯಾಗಿ ಕುಲುಕುಲ ನಗತೊಡಗಿತು. ಕನಕದುರ್ಗೆ ದೇವಸ್ಥಾನ ಮುಂದೆ ಸಾವಿರ ಜನ ಒಂದೇ ಸಾರಿಕೂತು ಬಾಡು ಬುರ್‍ರ ಕತ್ತರಿಸುವಂತೆ ಏರ್ಪಾಟು ಮಾಡಲಾಯಿತು. ರಾಂಪುರ, ಹಿರ್‍ಯಾಳುಗಳಿಂದ ರೇಶಿಮೆ ಪೀತಾಂಬರ ಸೀರೆಗಳು ಬಂದರೆ ಹೊಸಪೇಟೆಯ ಕಂಸಾಲಿ ಕುಲ್ಡಾಚಾರಿ ಅರ್ಧಕೇಜಿ ಅಪ್ಪಟ ಚಿನ್ನ ಒಯ್ದು ಬಗೆಬಗೆಯ ಆಭರಣಗಳನ್ನು ಮಾಡಿಕೊಂಡು ತಂದ.

ಫಳಫಳ ಹೊಳೆಯುತ್ತಿದ್ದ ಆಭರಣಗಳನ್ನು ನೋಡಿದೊಡನೆ ಜೋಲು ಮೋರೆ ಹಾಕಿದ ಚವುಡವ್ವಗೆ ಸಿಟ್ಟಿನಿಂದ ಗಂಡ ದುರುಗೋಜಿಯನ್ನು ತರಾಟೆಗೆ ತೆಗೆದುಕೊಂಡಾಗ ಒಂದನೆ ಜಾವದ ಕೂಗು ಮೊಳಗಿತ್ತು. ಊರ್‍ತುಂಬ ಕಾಳೋಜಿ ವಕ್ರಿಸಿಯಾನೆಂಬ ಕಾರಣದಿಂದ ಕನಕಳ ಕೋಣೆ ಹೊಸ್ತಿಲಿಗೆ ತಲೆ ಮಾಡಿ ಮಲಗಿದ್ದರೂ ಎಚ್ಚರಿದ್ದ ಬಸವಗೆ ದುರುಗೋಜಿ ದಂಪತಿಗಳ ಕಟಿಪಿಟಿ ಅಲ್ಪಸ್ವಲ್ಪ ಕೇಳಿಬರುತ್ತಿತ್ತು.

“ಈ ಮೂಳಕ್ಕೇ ಈಟೊಂದು ಖರ್ಚು ಮಡ್ತೀಯಲ್ಲ…. ಸ್ವಂತ ಮಗ್ಳಾಗಿದ್ರೆ ಯೇಚು ಮಾಡ್ತೀದ್ಯೋ…” ಚವುಡವ್ವನಾಡಿದ ಬೇಸರದ ಮಾತಿನ ಉಣುಕೊಂಡು ಕಿವಿಗೆ ಬಿದ್ದು ಬಸವಗೆ ಇಡೀ ರಾತ್ರಿ ರೆಪ್ಪೆಗೆ ರೆಪ್ಪೆ ಅಂಟಿಸಲಾಗಲೇ ಇಲ್ಲ.

ಮರುದಿನವೇ ಬಸವ ಕನಕಳ ಜನುಮ ವೃತ್ತಾಂತವನ್ನು ತಿಳಿದುಕೊಳ್ಳುವ ನಿಮಿತ್ತ ಎರಡುಮಗಿ ಭಗಿಸಿ ಹೆಂಡದೊಡನೆ ನಿಂಬೆತೋಟದ ಅಟ್ಟದ ಮೇಲೆ ಅಂಗೈಯಲ್ಲಿ ಗಾಂಜಾದ ಎಲೆ ತಿಕ್ಕುತ್ತಿದ್ದ ವೃದ್ಧ ದ್ಯಾಮಜ್ಜನ ಬಳಿಗೆ ಹೋದ.. ಹೆಂಡದ ಸವಿಗೆ ಅವನ ನಾಲಗೆ ಉದ್ದಕ್ಕೆ ಹರಿಯಿತು.

ಸುಮಾರು ವರ್ಷಗಳ ಹಿಂದಿನ ಮಾತು. ಜಾಗಟಗೆರೆ ಕರಿಯನ್ನು ಅಪಹರಿಸುವ ಯತ್ನದಲ್ಲಿ ಹೊನ್ನಜ್ಜ ಬದುಕಿದ್ದೇ ಹೆಚ್ಚಿನ ಸಂಗತಿ. ಹೊನ್ನಜ್ಜನನ್ನು ಮುಗಿಸಲು ದುರುಗೋಜಿ ಅನೇಕ ಸಾರಿ ಪ್ರಯತ್ನಿಸಿ ವಿಫಲನಾದ. ಒಂದು ದಿನ ಯಾರಿಗೂ ತಿಳಿಯದ ಹಾಗೆ ಹಲ್ಲಿಯಂತೆ ಹೊನ್ನಜ್ಜನ ಮನೆಗೆ ಪ್ರವೇಶಿಸಿ ತೊಲೆ ಅಡರಿದ್ದ. ಕೊಲ್ಲೆಲ್ಲೆಂದು ಒಳಕೋಣೆ ಪ್ರವೇಶಿಸಿದ ಅವನ ಕಾಲಿಗೆ ಬಾಣಂತಿ ಪಕ್ಕದಲ್ಲಿದ್ದ ಹೆಣ್ಣು ಮಗು ತೊಡರಿತು. ಬೆಳದಿಂಗಳಂತೆ ಕುಲುಕುಲು ನಗುತ್ತಿದ್ದ ಆ ಮಗು ತನ್ನೆದೆ ತುಂಬ ತಣ್ಣಗೆ ಬೆಳದಿಂಗಳನ್ನಾವರಿಸುತ್ತಲೆ ಅವನು ಸುಮ್ಮನಿರಲಿಲ್ಲ. ಹೇಗೂ ತಮಗೆ ಮಕ್ಕಳಿಲ್ಲ. ಒಯ್ದು ಸಾಕಿಕೊಳ್ಳುವುದೆಂದು ಜೋಳಿಗೆಗೆ ಇಳಿ ಬಿಟ್ಟುಕೊಂಡು ಹಲ್ಲಿಯಂತೆಯೇ ಮನೆ ದಾಟಿದ. ಮಗು ಕಳೆದುಕೊಂಡ ದುಃಖಕ್ಕೊ, ಅಲಕನಂದೆಯ ಸಿಟ್ಟಿಗೋ ಅದರ ತಾಯಿ ತಂದೆಯರು ಪ್ರವಾಹದಲ್ಲಿ ಕೊಚ್ಚಿ ಹೋದರು. ತಾನು ಕಳೆದುಕೊಂಡಿರುವ ಹೆಣ್ಣು ಮಗುವೇ ದುರುಗೋಜಿಯ ಮಗಳು ಕನಕ ಎಂಬ ಅರಿವು ಇಂದಿನವರೆಗೆ ಹೊನ್ನಜ್ಜಗೆ ಬಂದಿಲ್ಲ. ಬಂದರೆ ಆತ ಮಾತ್ರ ಮೊಮ್ಮಗಳಿಗಾಗಿ ಏನು ತ್ಯಾಗ ಮಾಡಲು ತಯಾರು.

ಬಸವ ಇದು ಕನಕಳಿಗೆ ಗೊತ್ತಿಲ್ಲದಿರುವುದನ್ನು ಖಚಿತಪಡಿಸಿಕೊಂಡ. ಯಾರ ಒಡಲೊಳಗೆ ಯಾರ ಕರುಳೋ, ವಿಚಿತ್ರವೆನಿಸಿತು. ಪರಮೇಶಿಯ ನಿರೀಕ್ಷೆಯಲ್ಲಿದ್ದ ಆಕೆಗೆ ಅನ್ನದಲ್ಲಿ ರುಚಿ ಇರಲಿಲ್ಲ; ನೀರಿನಲ್ಲಿ ಸ್ವಾದವರಿಲಿಲ್ಲ; ಗಾಳಿಯೊಳಗೆ ಉಸಿರುಗಟ್ಟಿದ ಅನುಭವವಾಗಿ ಕೆಮ್ಮು ಬಿತ್ತರಿಸಿ ಬರುತ್ತಿತ್ತು. ‘ಅಪ್ಪಾಜಿ ನನಗಾ ಕಾಳೋಜಿ ನೋಡಿದ್ರೆ ಭಯ ಆಗ್ತತೆ’ ಮಗಳ ಮಾಮೂಲಿ ರಾಗವನ್ನು ಕೇಳಲು ದುರುಗೋಜಿ ತಯಾರಿರಲಿಲ್ಲ. ಅಲ್ಲದೆ ಆತಗೆ ಕಾಳೋಜಿ ಒಂಥರಾ ಭಯ; ಒಳಗೊಳಗೆ ಅಳಿಯ ಮಾವಂದಿರ ಒಪ್ಪಂದವೇನಿಹುದೋ… ಆ ಮೃಗದ ಹೆಂಡತಿಯಾಗು ಕ್ಷಣದಲ್ಲಿ ಪರಮೇಶಿ ಕೊಟ್ಟಿರುವ ಉಂಗುರದ ವಜ್ರದ ಹರಳನ್ನು ಕಡಿದುನುಂಗಿ ಸವನ್ನಪ್ಪುವುದೆಂದು ನಿರ್ಧರಿಸಿದ್ದ ಕನಕ ಗೇರು ತೋಟದ ಹಾದಿಯಲ್ಲಿ ಕುಡಿಯಲೊಂದು ಎಳೆ ನೀರು ಕಡಿದುಕೊಟ್ಟ ಬಸವನ ಕಿವಿಯಲ್ಲಿ “ನಿಜವಾಗ್ಲು ಅವ್ನು ಬರ್‍ತಾನೇನೋ” ಎಂದು ಕಣ್ಣಿಗೆ ನೀರು ತುಂಬಿಕೊಂಡಳು. ದಶಮಿಯೊಳಗೆ ಅವನು ಬರದಿದ್ದಲ್ಲಿ ತಾನೇ ಕನಕಳನ್ನು ಅವನ ಬಳಿಗೆ ಹೊತ್ತೊಯ್ಯುವುದಾಗಿ ವಚನವಿತ್ತು ಹೊನ್ನೂರಿನ ಕಡೆ ದೃಷ್ಟಿ ಹಾಯಿಸಿ ನಿಟ್ಟುಸಿರು ಚೆಲ್ಲಿದ.

ದಶಮಿಯ ಸಂಜೆಯಾಗುತ್ತಿದ್ದಂತೆ ದಶಮಾಪುರದ ಅಂಕಿರೆಡ್ಡಿಯ ಇಪ್ಪತ್ತು ಎತ್ತಿನ ಬಂಡಿಗಳು ದಡಕೂ ಬಡಕೂ ಸದ್ದು ಮಾಡುತ್ತ ಬಂದು ಅಗಸೆ ಮುಂದಿನ ಬಯಲಲ್ಲಿ ಬೀಡು ಬಿಟ್ಟವು. ಶರಭ ಎಂಬಾತ ಮದುವೆ ಗಡಿಬಿಡಿಯಲ್ಲಿ ದುರುಗೋಜಿಗೆ ಅಂಕಿರೆಡ್ಡಿಯ ಪತ್ರ ಕೊಟ್ಟ. ಅದರಲ್ಲಿ ಬರಗಾಲದ ವಿಷಯವನ್ನೂ, ಮೇವಿನ ಅಭಾವವನ್ನೂ ತಿಳಿಸುತ್ತ ರೆಡ್ಡಿ ಇಪ್ಪತ್ತು ಬಂಡಿ ಸೊಪ್ಪೆ ಕಳಿಸಿಕೊಡುವಂತೆ ಬರೆದಿದ್ದ. ಅಲ್ಲೇ ಹಂದರ ಹಾಕುವುದರಲ್ಲಿದ್ದ ಮೂಕ ಬಸವನಿಗೆ ಬಂಡಿಗಳಿಗೆ ಮೇವು ತುಂಬಿಸಿಕೊಡುವ ಕೆಲಸವನ್ನು ವಹಿಸಿದ. ಮೇವಿನ ಏರ್ಪಾಟು ಮಾಡುವಾಗ ಶರಭನ ವೇಷದಲ್ಲಿ ಪರಮೇಶಿ ಬಂದಿರುವುದು ತಿಳಿದು ಉಸಿರು ಬಿಗಿ ಹಿಡಿದ. ಅವರೆಲ್ಲ ರಾತ್ರಿ ಊಟ ಮಾಡುವಾಗ ಕನಕಳಿಗೆ ಬಸವನು ವಿಷಯ ತಿಳಿಸಿದ ಕಿಟಕಿ ಮೂಲಕ ನೋಡಿ ಪರಮೇಶಿಯನ್ನು ಗುರುತಿಸಿ ಆನಂದಪರವಶಳಾದಳು. ಮಧ್ಯದಾರಿಯಲ್ಲಿ ದಶಮಾಪುರದ ಇಪ್ಪತ್ತು ಕಟ್ಟುಮಸ್ತು ಆಳುಗಳು ಈ ವಿಷಯದಲ್ಲಿ ಸಕಲ ಸಹಾಯ ಮಾಡುವುದಾಗಿ ಪರಮೇಶಿಗೆ ಮಾತುಕೊಟ್ಟಿದ್ದಲ್ಲದೆ ಅವನನ್ನೂ ಮಾರುವೇಷದಲ್ಲಿ ಕರೆತಂದಿದ್ದರಿಂದ ಬಸವನ ಕೆಲಸ ಸುಗಮವಾಯಿತು. ಮದುವೆ ಕೆಲಸಗಳಲ್ಲಿ ಮುಳುಗಿದ್ದ ಸುಪ್ರಸಿದ್ದ ಬೇಟೆಗಾರ ಬೇಡರಿಗೂ ತಪಶೀಲು ನಡೆಸಲು ಪುರುಸೊತ್ತಿರದಿದ್ದುದರಿಂದ ಬಂಡಿಗಳಿಗೆ ಮೇವು ತುಂಬುವ ಕಾರ್ಯ ದಶಮಿಯ ಚಂದ್ರನ ಮಂದ ಬೆಳಕಿನಲ್ಲಿ ಸಾಂಗೋಪಾಂಗವಾಗಿ ನೆರವೇರಿತು. ಗೋಣಿ ಚೀಲದಲ್ಲಿ ಕನಕಳನ್ನು ಹುದುಗಿಸಿ ಶರಭನ ಬಂಡಿ ಮೇವಿನೊಳಗೆ ಅಡಗಿಸಿಡುವಲ್ಲಿ ಯಶಸ್ವಿಯಾದ. ಬಂಡಿಗಳು ದಡಕೂ ಬಡಕೂ ಸದ್ದು ಮಾಡುತ್ತ ದಶಮಾಪುರದ ಕಡೆ ಮುಖ ಮಾಡಿದವು.

ಊರುದಾಟುವವರೆಗೆ ಹಿಂಬಾಲಿಸಿದ ಬಸವ ಅರಿಶಿಣದಿಂದ ಒದ್ದೆಯಾಗಿದ್ದ ಮೈಯ ಪರಮೇಶಿಯ ಹಣೆಯನ್ನು ಚುಂಬಿಸಿ ತಾನು ಸುಂಕಲಿಯನ್ನು ಪ್ರೀತಿಸುತ್ತಿರುವುದಾಗಿಯೂ ಆದ್ದರಿಂದ ಆಕೆಯನ್ನು ಮುಂಗೋಳಿ ಕೂಗುವುದರೊಳಗೆ ಈ ಊರಿನಿಂದ ಬಹುದೂರ ಕರೆದೊಯ್ಯುವುದಾಗಿಯೂ ಹೇಳಿ ಬೀಳ್ಕೊಟ್ಟನು. ಬಸವನು ಲಗುಬಗೆಯಿಂದ ಸುಂಕಲಿಯ ಮನೆ ಕಡೆ ಕಾಲು ಹಾಕಲು ಬಂಡಿಗಳು ವೇಗವಾಗಿ ಹಗರಿಹಳ್ಳಿ ದಾಟಿ ನಿರ್ವಾಣಸ್ವಾಮಿ ಮಠದ ದಿಬ್ಬ ಏರಿದಾಗ ದೂರದಲ್ಲೆಲ್ಲೋ ಮುಂಗೋಳಿ ಕೂಗಿದ ಸದ್ದು ಕೇಳಿಸಿತು.

ಅಲ್ಲಿ ಕಾಯುತ್ತ ಕೂತಿದ್ದ ಶರಭನಿಗೆ ಬಂಡಿ ಒಪ್ಪಿಸಿ ಅದರಿಂದ ಗೋಣಿ ಮೂಟೆ ಇಳಿಸಿಕೊಂಡ. ಜೋಡಿಗೆ ಶುಭ ಹಾರೈಸಿದರು ಅವರೆಲ್ಲರು. ಹೊತ್ತು ಹುಟ್ಟುವುದರೊಳಗಾಗಿ ಈ ಕಾಡನ್ನು ದಾಟಿ ಬಹುದೂರ ಹೊರಟುಹೋಗದಿದ್ದಲ್ಲಿ ಜಾಗಟಗೆರೆ ಬೇಡರ ಬಾಣಗಳಿಗೆ ಬಲಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಶರಭ ಮಠದ ಪಕ್ಕದಲ್ಲಿದ್ದ ಕಿರಿದಾದ ಹಾದಿತೋರಿಸಿದ. ಅವರೆಲ್ಲರ ಕಡೆ ಕೃತಜ್ಞತಾ ದೃಷ್ಟಿಯಿಂದ ನೋಡಿದ ಆ ಚಕೋರಿ ಪಕ್ಷಿಗಳ ಜೋಡಿ ಕಾಡಿನಲ್ಲಿಳಿದು ಕ್ಷಣಾರ್ಧದಲ್ಲಿ ಕಣ್ಮರೆಯಾಯಿತು.

ಎರಡು ರಾತ್ರಿ ಮೂರು ಹಗಲು ಸತತ ನಡೆದ ಬಿದಿರು ಮೆಳೆಗಳಿಂದಾವೃತವಾಗಿದ್ದ ವಿಷ್ಣುಸಮುದ್ರ ತಲುಪಿದರು. ಕಲ್ಲು ಮುಳ್ಳು ತುಳಿದ ಪರಿಣಾಮವಾಗಿ ಕನಕಳ ಬಂಗಾರದ ಪಾದಗಳ ತುಂಬ ಗಾಯಗಳಾಗಿದ್ದವು. ಊರ ಮೂಲೆಯಲ್ಲಿದ್ದ ಛತ್ರದಲ್ಲಿ ಆಕೆಯ ಕಾಲುಗಳಿಗೆ ಶುಶ್ರೂಷೆ ಮಾಡಿ ದೋತರದ ಚುಂಗಿನಿಂದ ಕಟ್ಟಿದ. ಅದೇ ದೋತರದ ಮತ್ತೊಂದು ಮೂಲೆಯಲ್ಲಿದ್ದ ಕೆಲ ರೂಪಾಯಿಗಳ ಪೈಕಿ ಒಂದನ್ನು ಮುರಿಸಿ ಊಟ ತಂದ. ಹಸಿದು ಕಂಗಾಲಾಗಿದ್ದ ಕನಕ ಗಬಗಬ ಊಟ ಮಾಡುವಾಗ ಪರಮೇಶಿಯ ಎದೆ ಮೇಲೆ ತಲೆ ಇರಿಸಿ ಬಿಕ್ಕಿ ಬಿಕ್ಕಿ ಅತ್ತಳು. ಸಮಾಧಾನಪಡಿಸಿದ. ಎದೆಮೇಲೆ ತಲೆ ಇಟ್ಟು ನಿದ್ದೆ ಹೋದ ಆಕೆಯ ಮುಖವನ್ನು ನೇವರಿಸಿದ. ಆಕೆಯ ಕಣ್ಣೀರಿನಿಂದ ಒದ್ದೆಯಾಗಿದ್ದ ಎದೆಯ ಕೂದಲ ನಡುವೆ ಮುದದ ಚಳಕು. ಹವಳದಂತೆ ಕೆಂಪಗಿದ್ದ ತುಟಿಗಳನ್ನು ಬೆರಳಿನಿಂದ ನೇವರಿಸಿದ. ಹಾಗೆ ಕನ್ನಡಿಯಂಥ ದುಂಡನೆಯ ಕದಪುಗಳನ್ನೂ ಸಹ. ನಿದ್ದೆಯ ನಡುವೆ ಬೆಚ್ಚಿ ಬೀಳುತ್ತ ಭಯದಿಂದ ಗಟ್ಟಿಯಾಗಿ ಅವುಚಿಕೊಳ್ಳುತ್ತಿದ್ದಳು… ಮಧ್ಯೆ ಮಧ್ಯೆ ಏನೇನನ್ನೋ ಕನವರಿಸುತ್ತಿದ್ದಳು ಅಸ್ಪಷ್ಟವಾಗಿ.

ತನಗಾಗಿ ಹೊನ್ನೂರಿನಲ್ಲಿ ಹೊನ್ನಜ ಹುಡುಕಾಟ ಶುರು ಮಾಡಿರಬಹುದು ಈಗಾಗಲೇ! ತಾನು ಮದುವೆ ಸಡಗರ ಒಂದಿಷ್ಟು ತೋರಿಸದಿದ್ದಾಗ ಹೊನ್ನಜ್ಜ ಬಲವಂತ ಮಾಡಿದ್ದು ನೆನಪಾಯಿತು. ತನ್ನನ್ನು ದೊಡ್ಡ ಮಣಿ ಮೇಲೆ ಬಲವಂತವಾಗಿ ಕೂಡ್ರಿಸಿ ಮುತ್ತೈದೆಯರು ಮೈಗೆ ಅರಿಷಿಣ ಲೇಪಿಸಿದ್ದು ನೆನಪಾಯಿತು. ಲಕ್ಷ್ಮೀ ಮದ್ವೆ ಆಗೋಕೆ ನಂಗಿಷ್ಟ ಇಲ್ಲ ಎಂದು ಅಜ್ಜಿಗೆ ತಾನು ಹೇಳಿದ್ದು ನೆನಪಾಯಿತು. ‘ಎಲೋ…. ನದಿ ಮ್ಯಾಲೆ ತೇಲಿ ಹೋಗ್ತಿದ್ದ ಬಿದ್ರು ಪುಟ್ಟಿಯಿಂದ ನಿನ್ ಬದುಕಿಸಿ ಸಾಕಿದ್ಕೆ ಸರ್‍ಯಾಗಿ ಮರ್‍ಯಾದೆ ಕೊಟ್ಟೆ” ಎಂದು ಮುದುಕಿ ಬಿಕ್ಕಿ ಬಿಕ್ಕಿ ಅತ್ತದ್ದು ನೆನಪಾಯಿತು. ಹಾಗಾದರೆ ತನ್ನನ್ನು ಹೆತ್ತವರು ಯಾರು ಎಂದು ಪೀಡಿಸಿದ್ದು ನೆನಪಾಯಿತು. ದಿಕ್ಕೂದೆಸೆ, ಜಾತಿಗೋತ್ರ ಒಂದೂ ಇಲ್ಲದೆ ತನ್ನನ್ನು ಸಾಕಿ ಬೆಳೆಸಿದ ಅಜ್ಜಿಗೆ ಕೃತಜ್ಞತೆ ಹೇಳಿ ತಪ್ಪಿಸಿಕೊಂಡು ಜಾಗಟಗೆರೆ ಕಡೆ ದೌಡಾಯ್ದದ್ದೆಲ್ಲ ನೆನಪು ಮಾಡಿಕೊಂಡು ನಿಟ್ಟುಸಿರು ಚೆಲ್ಲುತ್ತಿದ್ದ. ಪ್ರತಿ ನಿಟ್ಟುಸಿರಿನ ಏಟಿಗೂ ಕನಕಳ ಬಂಗಾರದ ನೊಸಲು ಮೇಲಿಳಿಬಿದ್ದಿದ್ದ ಮುಂಗುರುಳು ಕಂಪಿಸುತ್ತಿತ್ತು.

ಬಸವ, ಸುಂಕಲಿಯರು ಸಿಕ್ಕು ಬಾಯಿಬಿಟ್ಟಿರಲಿಕ್ಕಿಲ್ಲ. ತಮ್ಮಂತೆ ಅವರಿಬ್ಬರೂ ಓಡಿ ದುರ ಮರೆಯಾಗಿರಬಹುದೆ! ಎಂದು ಯೋಚಿಸಿದ. ಒಂದು ದಿಕ್ಕಿನಿಂದ ಜಾಗಟಗೆರೆ ಬೇಡರು ಹುಡುಕುತ್ತಿದ್ದರೆ ಇನ್ನೊಂದು ದಿಕ್ಕಿನಿಂದ ಹೊನ್ನಜ್ಜ ತನ್ನ ಬಂಟರನ್ನು ಛೂ ಬಿಟ್ಟಿರಬಹುದು…. ಈ ದೂರದ ವಿಷ್ಣುಸಮುದ್ರಕ್ಕೆ ದೋತರದ ತುದಿಯಲ್ಲಿದ್ದ ಬೆಳ್ಳಿ ರೂಪಾಯಿಗಳಿಲ್ಲ! ಯಾರೋ ಕದ್ದಿರುವರು!… ಮುಂದೇನು ಮಾಡುವುದೆಂದು ಯೋಚಿಸುತ್ತ ಸಡಿಲವಾಗಿದ್ದ ತನ್ನ ತುರುಬನ್ನು ಕಟ್ಟಿಕೊಂಡ.

ಬೆಳಗಿನ ಅರುಣೋದಯದ ಕುಂಕುಮದ ಬೆಳಕಿನಲ್ಲಿ ಮತ್ತಷ್ಟು ಬಲವಾಗಿ ತನ್ನನ್ನು ಅಪ್ಪಿಕೊಂಡಿದ್ದ ಕನಕಳ ಕಣ್ಣಾಲಿಗಳು ಕಂಪಿಸುತ್ತಿರುವುದನ್ನು ಗಮನಿಸಿದ. ಆಕೆಯ ಕಣ್ಣುಗಳ ಬಟ್ಟಲ ತುಂಬ ಬಣ್ಣ ಬಣ್ಣದ ಕನಸುಗಳು. ಒಂದೊಂದು ಕನಸಿಗೂ ಒಂದೊಂದು ಭಾವಗಳು….

ಕಾಸು ಕಳೆದುಕೊಂಡಿದ್ದರೂ ಕಕ್ಕಾಬಿಕ್ಕಿಯಾಗದೆ ಸ್ಥಿತಪ್ರಜ್ಞನಂತೆ ಕಂಡು ಬಂದ ಕಂದ ಪದ್ಯ, ಸೀಸ ಪದ್ಯಗಳನ್ನು ಬರೆಯುತ್ತ ಕೂತಿದ್ದ ಕವಿಯೊಬ್ಬನಿಗೆ. ಅವನಿಗೂ ಬರೆದು ಸಾಕಾಗಿತ್ತು. ಏನು ಎತ್ತ ಅಂತ ಕೇಳಿದ್ದಕ್ಕೆ ಹೆಸರು ಊರು ಮರೆಮಾಚಿ ಹೇಳಿದ. ಆದರೆ ಕವಿಗೆ ಸುಳ್ಳು ಭಯ ಅರ್ಥವಾಯಿತು. ಅವರೀರ್ವರು ಯುವ ಪ್ರೇಮಿಗಳೆಂದೂಹಿಸಿ ಸಹಾನುಭೂತಿ ವ್ಯಕ್ತಪಡಿಸಿದ. ವಿಷ್ಣುಸಮುದ್ರದ ಜಮೀನ್ದಾರ ನಾರಾಯಣ ದೊರೆ ಹೇಗೆ ಮಾನವ ಪ್ರೇಮಿಯಾದ ಎಂಬ ಬಗ್ಗೆ ತಾನು ಯಕ್ಷಗಾನ ಬಯಲಾಟ ಬರೆಯುವುದೋ ಚಂಪೂ ಕಾವ್ಯ ಬರೆಯುವುದೋ ಎಂಬ ಗೊಂದಲದಲ್ಲಿ ಬಿದ್ದಿರುವುದಾಗಿ ಹೇಳುತ್ತಲೇ ಸದರೀ ಗ್ರಾಮ ಕುರಿತಂತೆ ಅನೇಕ ಸಂಗತಿಗಳನ್ನು ಹೊರಕಾಕಿದ. ಅದರ ತಳಬುಡ ಅರ್ಥವಾಗದೆ ಪರಮೇಶಿ ತನ್ನ ತಲೆಗೂದಲನ್ನು ಒಪ್ಪ ಓರಣವಾಗಿ ಕಟ್ಟಿಕೊಳ್ಳುವ ಕಾರ್ಯದಲ್ಲಿ ಮಗ್ನನಾಗಿದ್ದ. ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ಹುಟ್ಟಿ ಬೆಳೆದ ಅವನಿಗೆ ವಿಷ್ಣುಸಮುದ್ರದ ಜನರ ರೀತಿ ನಡವಳಿಕೆ ವಿಚಿತ್ರವಾಗಿ ಕಂಡವು. ಅವರಾಡುತ್ತಿದ್ದ ಭಾಷೆ ಸಹ ಅವರಷ್ಟೆ ವಿಚಿತ್ರವಾಗಿ ಕಂಡಿತು.

ಅದೇ ಊರಲ್ಲಿ ನೆಲೆಸುವುದೋ ಮುಂದಿನ ಊರಿಗೆ ಪ್ರಯಾಣ ಬೆಳೆಸುವುದೋ? ಗಾಯ ಬೊಬ್ಬೆಗಳಿಂದ ಜರ್ಜರಿತವಾಗಿರುವ ಕನಕಳ ಬಂಗಾರದ ಪಾದಗಳು ನಡೆಯಲು ಅಸಮರ್ಥವಾಗಿರುವುದರಿಂದ ಒಂದೆರಡು ದಿನ ಅಲ್ಲೇ ಇರುವುದೆಂದು ನಿರ್ಧರಿಸಿದ. ಒಬ್ಬರ ಮುಖ ಒಬ್ಬರು ನೋಡುತ್ತ ಎಷ್ಟೊತ್ತು ಕೂಡ್ರುವುದು! ಎಷ್ಟೋ ಜನುಮಗಳಿಂದಲೂ ತಾವು ಸಂಗಾತಿಗಳೆಂಬಂತೆ; ತಮ್ಮಿಬ್ಬರೊಳಗೆ ನಿಗೂಢವಾಗಿ ಅದಾವುದೋ ಶಕ್ತಿ ಇದೆ ಎಂಬಂತೆ ತಮಗೆ ತಾವೇ ಬೆರಗಾಗಿದ್ದರು. ತಮ್ಮಿಬ್ಬರು ದೇಹಗಳು ಯಾಕೆ ಬಿಡಿ ಬಿಡಿಯಾಗಿವೆ ಎಂದೂ ಮೌನವಾಗಿ ಯೋಚಿಸಿ ನಿಸಿಡುಸುಯ್ದರು. ಕಣ್ಣುಗಳ ಮೂಲಕ, ಸ್ಪರ್ಶದ ಮೂಲಕ ಭಾಷೆಗೂ ಮೀರಿ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಿರುವುದರ ರೀತಿಗೆ. ಬೆರಗಾದಾಗೆಲ್ಲ ತಂತಮ್ಮ ಕಣ್ಣುಗಳನ್ನು ಇದ್ದಕ್ಕಿದ್ದಂತೆ ಕಣ್ಮುಚ್ಚಿ ದೂರದೂರ ತೇಲಿತೇಲಿ ಮಂಡಲಗಳನ್ನು ದಾಟಿ ಗಂಧರ್ವ ಲೋಕ ತಲುಪಿಬಿಡುವರು.

ಎಷ್ಟೊತ್ತು ಹಾಗೆ ಕೂಡ್ರುವುದು! ಹೊಸ ಊರು ನೋಡದೆ ಇರಲಾದೀತೆ! ಪರಮೇಶಿ ಕನಕಳನ್ನು ಕರೆದುಕೊಂಡು ಅಪರಿಚಿತ ಊರೊಳು ಹೊಕ್ಕನು. ಯಮಸಂಧಿಗಿಂತ ದೊಡ್ಡ ಊರೆನ್ನಿಸಿತದು. ಸಾಲು ಸಾಲು ಉಪ್ಪರಿಗೆ ಮನೆಗಳೂ, ಬೀದಿಗಳ ಮೇಲೆ ಓಡುತ್ತಿರುವ ಸಾರೋಟುಗಳು; ಬಂಡಿಗಳು, ಗಾಡಿಗಳು, ಕೆಲವನ್ನು ಎತ್ತುಗಳೂ, ಕೆಲವನ್ನು ಕುದುರೆಗಳೂ, ಕೆಲವನ್ನು ಬಲಿಷ್ಠ ಟಗರುಗಳೂ ಎಳೆಯುತ್ತ ವೇಗವಾಗಿ ಸಾಗುತ್ತಿರುವುದನ್ನು ಪ್ರೇಮಿಗಳೀರ್ವರು ಕುತೂಹಲದಿಂದ ನೋಡಿದರು. ಬಯಲಲ್ಲಿ ಗಗನದ ತುಂಬ ಗಾಳಿಪಟಗಳನ್ನು ಹಾರಿಸಿ ಅವುಗಳೊಂದಿಗೆ ಆಟ ಆಡುತ್ತಿದ್ದ ಹುಡುಗರನ್ನು ಸಂತೋಷ ತುಂಬಿದ ಮುಖದಿಂದ ನೋಡುತ್ತಿದ್ದ ಹುಡುಗಿಯರು ಬಹಳ ಮುದ್ದಾಗಿ ಕಂಡರು ಅವರಿಗೆ. ಇನ್ನು ಮುಂದೆ ಹೋಗಲು ಪುಟ್ಟ ಉದ್ಯಾನವನ ಬಂದಿತು. ಬೀದಿ ಪಕ್ಕದಲ್ಲಿ ಸಿಹಿ ತಿಂಡಿ ಮಾರುತ್ತಿದ್ದರು. ತಿನ್ನುವ ಆಸೆಯಾಯಿತು ಕನಕಳಿಗೆ. ಪರಮೇಶಿಯ ದೋತರದ ಗಂಟಿನಲ್ಲಿದ್ದ ಬೆಳ್ಳಿ ರೂಪಯಿಗಳು ಕಳನವಾದರೇನಂತೆ; ಲಂಗ ಮತ್ತು ದಾವಣಿಯ ಬಿಗಿಗೆಕಟ್ಟಿದ್ದ ಎರಡು ಬೆಳ್ಳಿ ರೂಪಾಯಿಗಳು ಕನಕಳ ಬಳಿ ಇದ್ದುವಲ್ಲ! ಅವುಗಳ ಪೈಕಿ ಒಂದನ್ನು ಮುರಿಸಿ ಇಷ್ಟವಾದ ತಿಂಡಿ ಕೊಂಡು ಉಪವನದ ಕಲ್ಲು ಚಪ್ಪಡಿ ಮೇಲೆ ತಿನ್ನುತ್ತಕೂತು ಯಮಸಂಧಿ ಜಾತ್ರೆಯನ್ನು ನೆನಪಿಗೆ ತಂದುಕೊಂಡು ಕೆಲವು ಮಾತುಗಳನ್ನು ಬಹಿರಂಗವಾಗಿಯೂ; ಕೆಲವು ಮಾತುಗಳನ್ನು ಕಿವಿಗಳಲ್ಲಿ ಪಿಸು ನುಡಿದು ಆಡಿ ಸಂತಸಿಸಿದರು. ಅಲ್ಲಿಂದ ಊರ ಹೊರ ವಲಯದಲ್ಲಿದ್ದ ಪನ್ನಗಶಯನನ ದೇವಾಲಯ ಹೊಕ್ಕರು. ದೇವರೇ ನಮಗೆ ಒಳ್ಳೆಯದು ಮಾಡಪ್ಪಾ…. ನಮ್ಮನ್ನು ಅಗಲಿಸಬೇಡಪ್ಪಾ…. ಸಾವು ಕೊಟ್ಟರೆ ನಮ್ಮಿಬ್ಬರಿಗೂ ಕೊಡು ಎಂದು ಅವೆರಡು ಯುವ ಹೃದಯಗಳು ಬೇಡಿಕೊಂಡವು. ಸ್ಥಳೀಯ ಪ್ರಸಿದ್ಧ ವಜ್ರ ವ್ಯಾಪಾರ ಶ್ರೀನಿವಾಸಶಟ್ಟರು ಮದುವೆಯಾದ ನಲವತ್ತು ವರ್ಷಕ್ಕೆ ಅಪರೂಪಕ್ಕೊಂದು ಗಂಡು ಮಗು ಜನಿಸಿದ್ದರಿಂದ ಗುಡಿಯಲ್ಲೇ ಅನ್ನ ಸಂತರ್ಪಣೆ ಏರ್ಪಾಟು ಮಾಡಿದ್ದರಷ್ಟೆ! ಹಸಿವೆ ಅಸಹಾಯಕತೆಯ ಮುಂದೆ ಸಂಕೋಚ ಓಡಿದ ಕಾರಣ ಅವರಿಬ್ಬರು ಅಲ್ಲಿಯೇ ಅಂಜುತ್ತ ಅಳುಕುತ್ತ ಕವಳ ಕತ್ತರಿಸಿ ಹೊರಟರು. ದಾರಿಯಲ್ಲಿ ‘ಗುನ್ ಗುನಾರೇ ಗುನ್‌ಗುನಾ’ ಎಂದು ಹಾಡುತ್ತಾ ಬಣ್ಣದ ಮೇನೆ ಹೊರುವ ಒಬ್ಬ ಚಪ್ಪಾಳೆ ತಟ್ಟಿ ಪರಮೇಶಿಯ ಗಮನ ಸೆಳೆದು ಬರುವಂತೆ ಸೂಚಿಸಿದ. ಪರಮೇಶಿ ಏನು ಗ್ರಹಚಾರ ಕಾದಿದೆಯೋ ಎಂದು ಹೆದರುತ್ತಲೇ ಹೋದ. ಮೇನೆಯ ಪರದೆ ಸರಿಸಿ ಪರಮೇಶಿಯನ್ನು ಅಪಾದಮಸ್ತಕ ನಿಟ್ಟಿಸಿದಳೊಬ್ಬ ಅಪ್ರತಿಮ ಸುಂದರಿ. ಓಹ್… ನರ್ತಕಿ ಸುವರ್ಣ ಜನ ಅಲ್ಲಲ್ಲಿ ನಿಂತು ಆಸ್ವಾದಿಸಿದರು! ಜನರ ಭಯದಿಂದ ಮೇನೆ ಮತ್ತೆ ಮುಂದಕ್ಕೆ ಹೋಯಿತು. ಆದರೆ ಆಕೆಯ ಪರಿಚಾರಕನೊಬ್ಬ ಬೆಂಬತ್ತಿದ. ಅವನಿಂದ ತಪ್ಪಿಸಿಕೊಂಡು ಕನಕಳೊಂದಿಗೆ ಛತ್ರ ಸೇರುವ ಹೊತ್ತಿಗೆ ಸಾಕುಸಾಕಾಗಿ ಹೋಯಿತು. ಕನಕಳಿಗೂ ಅದೇ ಅನುಭವ. ಗಂಡಸರ ಇರಿವ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಪಟ್ಟಶ್ರಮ ಅಷ್ಟಿಷ್ಟಲ್ಲ.

ರಾತ್ರಿಯಂತೂ ಹೊಸ ಜನರಿಂದ ಗಿಜಿಬಿಜಿ ಗುಟ್ಟತೊಡಗಿತ್ತು. ಒಬ್ಬೊಬ್ಬರದು ಒಂದೊಂದು ತರದ ಮಾತುಕತೆ. ಮರುದಿನ ನೈಜಾಮು ದೇಶದಿಂದ ಕುಸ್ತಿ ಮಾಡಲು ಗ್ರಾಮಕ್ಕೆ ಆಗಮಿಸಲಿರುವ ಸರ್ದಾರ್‍ ವೆಂಕಾಜೆಟ್ಟಿಯ ಬಗೆಗೆ ಒತ್ತುಕೊಟ್ಟು ಎಲ್ಲರೂ ಮಾತಾಡುತ್ತಿದ್ದುದರ ಕಡೆಗೆ ಪರಮೇಶಿ ಕಿವಿ ತೆರೆದ. ಎಷ್ಟಿದ್ದರೂ ತಾನು ಹನುಮಜೆಟ್ಟಿಯ ಪ್ರಿಯಶಿಷ್ಯನಲ್ಲವೇ! ಹನುಮ ಜೆಟ್ಟಿಯ ಸಹಾಯವಿಲ್ಲದಿದ್ದರೆಲ್ಲಿ ತಾನು ಹೊನ್ನಿಗನಂತ ಹೊನ್ನಜ್ಜನ ಗೃಧ್ರ ಕಣ್ಣುಗಳಿಂದ ತಪ್ಪಿಸಿಕೊಂಡು ಬರುತ್ತಿದ್ದೇನೆನಿಸಿತು! ಹನುಮಜೆಟ್ಟಿಗೆ ಉದ್ದರಿ ಈ ದೇಶದಲ್ಲಿ ಯಾರಿದ್ದಾರು! ಪರಮೇಶಿ ನೀನು ಕಲ್ತಿರೋ ಕುಸ್ತಿಯಿಂದಲೇ ಜೀವನ ಮಾಡಬಹ್ದು… ಹೆದರಬೇಡ…. ಕನಕಳೊಂದಿಗೆ ಎಲ್ಲಾದ್ರೂ ಹೋಗಿ ಸುಖವಾಗಿರು…..” ಎಂದು ಅಪ್ಪಿಕೊಂಡು ಆಶೀರ್ವದಿಸಿ ಕಳಿಸದಿದ್ದರೆಲ್ಲಿ ತಾನು ಎಲ್ಲಾ ಕಂಟಕಗಳನ್ನು ದಾಟಿ ಇಲ್ಲಿವಯವರೆಗೂ ತಲುಪಲು ಸಾಧ್ಯವಾಗುತ್ತಿತ್ತು.

ವೆಂಕಾಜೆಟ್ಟಿಯ ಪುಟಿದ ಮಾಂಸಕಂಡಗಳನ್ನು ಒಬ್ಬ ಹಾಡಿ ಹೊಗಳಿದರೆ ಮತ್ತೊಬ್ಬ ಎದುರಾಳಿಯ ಶಕ್ತಿಯನ್ನು ಆಪೋಶನ ತೆಗೆದುಕೊಳ್ಳುವಂಥ ಅವನ ಕಣ್ಣುಗಳ ಬಗೆಗೆ ಹೇಳಿದನು…. ಇದನ್ನೆಲ್ಲ ಕೇಳಿದ ಪರಮೇಶಿಗೆ ತಾನು ಯಾಕೆ ನಾಳೆ ದಿನ ವೆಂಕಾಜೆಟ್ಟಿಯನ್ನು ನೋಡಬಾರದೆನಿಸಿತು. ಮರುದಿನ ಸಂಗಾತಿಯೊಂದಿಗೆ ಅಖಾಡದ ಕಡೆ ಹೊರಟ. ತಾನು ಆಡಿದ ಕುಸ್ತಿ ಬಗ್ಗೆ ದಾರಿಯುದ್ದಕ್ಕೂ ವರ್ಣಿಸಿದ. ಕುಸ್ತಿಯನ್ನು ನೋಡಿ ಅರಿಯದ ಕನಕ ಕುತೂಹಲದಿಂದ ಕೇಳುತ್ತಿದ್ದಳು. ಆಗಲೇ ಸೇರಿದ್ದ ಜನರ ನಡುವೆ ಜಾಗ ಮಾಡಿ, ಕನಕಳನ್ನು ಕೂಡ್ರಿಸಿದ. ಜಮೀನ್ದಾರ ನಾರಾಯಣ ದೊರೆಗಳು ಬಂದು ಉನ್ನತಾಸನದ ಮೇಲೆ ಕೂಡ್ರುತ್ತಲೇ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಸ್ವಲ್ಪ ಹೊತ್ತಿಗೆ ಅಜಾನುಬಾಹು ಒಬ್ಬ ಬಂದು ದೊರೆಗೆ ವಂದಿಸಿ, ತೊಡೆ ತಟ್ಟಿಸಿಂಹನಾದ ಮಾಡಿದ. ದೇಸದಿಂದ ದೇಸಕ್ಕೆ ಸಂಚರಿಸುತ್ತಾ ತಾನು ಗೆದ್ದಿರುವ ಬಿರುದು ಬಾವಲಿಗಳನ್ನು ಪ್ರದರ್ಶಿಸಿ, ಮತ್ತೊಮ್ಮೆ ತೊಡೆ ತಟ್ಟಿ ತನ್ನ ದೇಹದ ಮಾಂಸಖಂಡಗಳನ್ನು ಕುಣಿಸಿದ. ತನ್ನನ್ನು ಸೋಲಿಸಿದವರಿಗೆ ಈ ಬಿರುದು ಬಾವಲಿಗಳನ್ನು ನೀಡುವುದಾಗಿ ಆತ ಪ್ರಕಟಿಸುತ್ತಲೇ ಸದರಿ ಗ್ರಾಮದ ಜೆಟ್ಟಿಗಳಾದ ರುದ್ರ, ಕಾಳ, ಸಿದ್ದೋಜಿ, ಗಿರಿಯ ಮೊದಲಾದ ಹೇಮಾಹೇಮಿಗಳು ಅಖಾಡ ಪ್ರವೇಶಿಸಿದರು. ತಮ್ಮ ದೊರೆಗೂ ಗುರುವಿಗೂ ವಂದಿಸಿ ಅಖಾಡವನ್ನು ಮೂರು ಸಾರಿ ಪ್ರದಕ್ಷಿಣೆ ಹಾಕುವಾಗ ಅಖಂಡ ಜನಸ್ತೋಮ ಚಪ್ಪಾಳೆ ತಟ್ಟಿ ಹರ್ಷೋದ್ಗಾರ ಮಾಡಿ ಪ್ರೋತ್ಸಾಹಿಸಿತು. ತಮ್ಮ ಪೈಲ್ವಾನರು ವೆಂಕಾಜೆಟ್ಟಿಯನ್ನು ಮುಗಿಸಿಬಿಡುತ್ತಾರೆಂದು ಗ್ರಾಮಸ್ಥರು ಊಹಿಸಿದ್ದು ಒಂದು ತಾಸು ಎಂಟು ಘಳಿಗೆಯಲ್ಲಿ ಸುಳ್ಳಾಯಿತು. ಅವರನ್ನೆಲ್ಲ ಕೇವಲ ಎರಡೇಪಟ್ಟು ಉಪಯೋಗಿಸಿ ಅವರವರ ಬೆನ್ನುಗಳಿಗೆ ಮಣ್ಣಿನ ರುಚಿ ತೋರಿಸಿದ ವೆಂಕಾಜೆಟ್ಟಿ. “ನನ್ನ ಸೋಲಿಸೋ ಗಂಡಸು ಈ ಊರಲ್ಲಿ ಇಲ್ವೇನ್ರೀ ದೊರೆಗಳೇ ಎಂದವನು ಸೊಕ್ಕಿ ನುಡಿದದ್ದು, ತಮ್ಮ ಮರ್ಮಾಘಾತಕ್ಕಿರಿಯಿತು ದೊರೆಗಳಿಗೆ. ತಲೆ ತಗ್ಗಿಸಿ ನಿಂತಿದ್ದ ಜನತೆ ಕಡೆ ನೋಡಿ ಕೈ ಕೈ ಹಿಚುಕಿಕೊಂಡರು.

ತಾನೊಂದು ಕೈಯಾಕೆ ನೋಡಬಾರದೆನಿಸಿತು ಪರಮೇಶಿಗೆ. ಕಾಡಿ ಬೇಡಿ ಕನಕಳಿಂದ ಅನುಮತಿ ಗಿಟ್ಟಿಸಿಕೊಂಡು ಅಖಾಡಕ್ಕೆ ಕುಪ್ಪಳಿಸಿದ. ತಮ್ಮ ಕಡೆ ವಂದಿಸಿ ಅಖಾಡದ ತುಂಬ ಪಾದರಸದಂತೆ ಹರಿದಾಡತೊಡಗಿದ. ಈ ಎಳೆಯನೆಲ್ಲಿ, ರಾಕ್ಷಸಾಕಾರದ ವೆಂಕಾಜೆಟ್ಟಿಯೆಲ್ಲಿ! ಎಂದು ಯೋಚಿಸಿದರು. ಜನ ಚಪ್ಪಾಳೆ ತಟ್ಟದೇ ನಿರಾಸಕ್ತಿ ಪ್ರಕಟಿಸಿತು. ಕನಕಳ ನೋಡಿದ. ಮುಗುಳ್ನಗೆ ಚೆಲ್ಲಿ ಉತ್ಸಾಹ ತುಂಬುತ್ತಿರುವ ಚಂದನೆಯಮೊಗ! ಆತ್ಮವಿಶ್ವಾಸವೇ ಮೂರ್ತಿವೆತ್ತಂತೆ ಕಂಗೊಳಿಸಿದ. ಹಣಾಹಣಿ ಆರಂಭವಾಗುತ್ತಲೇ ಅದೇ ಜನ ಬೆರಗಾದರು. ‘ಛಿತ್’ ಮಾಡಲೆತ್ನಿಸುತ್ತಿದ್ದ ಪಟ್ಟುಗಳಿಗೆ, ವೆಂಕಾಜೆಟ್ಟಿಯು ಕಕ್ಕಾಬಿಕ್ಕಿಯಾದ ಆ ಪಟ್ಟುಗಳಿಗೆ ಸುಮಾರು ಎರಡು ಮೂರು ತಾಸು ನಡೆದ ಹಣಾಹಣಿಯಲ್ಲಿ ಯಾರೂ ಸೋಲಲೂ ಇಲ್ಲ, ಗೆಲ್ಲಲೂ ಇಲ್ಲ. ವೆಂಕಾಜೆಟ್ಟಿ ಎಳೆಯ ಪರಮೇಶಿಯನ್ನು ಹೆಗಲಮೇಲೆ ಹೊತ್ತುಕೊಂಡು “ದೊರೆಗಳೇ…. ನಿಮ್ಮೂರಿನ ಮರ್‍ಯಾದೆ ಉಳಿಸೋ ಹುಲಿಮರಿ ಇದೊಂದೇ ನೋಡ್ರಿ” ಎಂದು ಕುಣಿದಾಡಿದನಲ್ಲದೇ ಇರಾನ್ ದೇಶದ ಜೆಟ್ಟಿಯನ್ನು ಸೋಲಿಸಿದಾಗ ರಾಯಲಸೀಮೆಯ ಗಜಪತಿಗಳು ತನಗೆ ಬಹುಮಾನವಾಗಿ ನೀಡಿದ್ದ ಪದಕವನ್ನು ಅವನ ಕೊರಳಿಗೆ ಹಾಕಿದ. ಪರಮೇಶಿ ಗದ್ಗದಿತನಾಗಿ ವೆಂಕಾಜೆಟ್ಟಿಯ ಪಾದಗಳನ್ನು ಮುಟ್ಟಿ ನಮಸ್ಕರಿಸಿದ. ಜನರ ಕಂಠಗಳು ಬಿಗಿದುಬಿಟ್ಟು ಕಣ್ಣಿಂದ ಎರಡು ಹನಿ ಉದುರಿಸಿದರು. ಆ ಪದಕವಿದ್ದ ಹಾರವನ್ನು ಕನಕಳ ಕೊರಳಿಗೆ ಹಾಕಿ ಛತ್ರಕ್ಕೆ ಕರೆದುಕೊಂಡು ಹೋದ. ಮರುಗಳಿಗೆಯಲ್ಲಿ ಜಮೀನ್ದಾರರ ವೃದ್ಧ ಕಾರಖೂನ ಶಂಕರಪ್ಪ ಬಂದು ಪರಮೇಶಿಯನ್ನು ಕನಕಳನ್ನು ದೊರೆ ಬಳಿಗೆ ಕರೆದೊಯ್ದರು. ಊಟ ಉಪಚಾರವಾದ ನಂತರ ಏನು, ಎತ್ತ ಅಂತ ಕೇಳಿದರು. ನಿಜ ಹೇಳುವುದೋ ಬೇಡವೋ ಎಂದು ಕನಕಳ ಮುಖ ನೋಡಿದ. ಶಂಕರಪ್ಪ “ಹೇಳಿ ಬಿಡು ಮಗಾ ಒಂದೂ ಮುಚ್ಚಿಟ್ಕೋಬ್ಯಾಡ” ಅವ್ರು ಹಾಲ್ನಲ್ಲಾದ್ರೂ ಹಾಕ್ಲಿ ನೀರ್‍ನಲ್ಲಾದ್ರೂ ಹಾಕ್ಲಿ….” ಎಂದು ಬೆನ್ನು ತಟ್ಟಿದ. ಪರಮೇಶಿ ನಿಟ್ಟುಸಿರೊಂದು ಬಿಟ್ಟು ತಮ್ಮ ಪ್ರೇಮ ಪ್ರಸಂಗವನ್ನು ಆಮೂಲಾಗ್ರ ವಿವರಿಸಿ, ಕಣ್ತುಂಬಿಕೊಂಡ. ಕನಕಳೂ ಅಷ್ಟೇ. ದೊರೆ ಬಂದು ಪರಮೇಶಿಯನ್ನು ಅಪ್ಪಿಕೊಂದು ಸಂತೈಸಿದರೆ, ಗೌಡ್ತಿ ನೀಲವ್ವ ಬಿಕ್ಕುತ್ತಿದ್ದ ಕನಕಳನ್ನು ತಬ್ಬಿಕೊಂಡು ಸಂತೈಸಿದಳು. ಕೂದಲು ಕೊಂಕದ ಹಾಗೆ ನೋಡಿಕೊಳ್ಳುವುದಾಗಿ ಮಾತು ನೀಡಿದ ದೊರೆ ಅವರಿಬ್ಬರನ್ನು ತಮ್ಮ ಬಳಿಯೇ ಕೆಲಸಕ್ಕಿಟ್ಟುಕೊಂಡರು.

-೬-

ವಿಷ್ಣುಸಮುದ್ರದ ಜಮೀನ್ದಾರರೆಂದರೆ ಸಾಮಾನ್ಯರೇನು! ಸುತ್ತ ಐವತ್ತು ಹಳ್ಳಿಗಳಲ್ಲಿ ಅವರದೇ ಆಸ್ತಿ! ನಾಲ್ಕು ಮುಕ್ಕಾಲೆಕರೆ ಕಲ್ಲಿನ ಮನೆಯೊಳಗೆ ಕಂಭಗಳೆಷ್ಟೋ ಅವರಿಗೇ ಗೊತ್ತಿಲ್ಲ. ಚಿನ್ನ ದೋಚಲು ಕಳ್ಳನೊಬ್ಬ ಮೂರು ತಿಂಗಳು ಮನೆಯೊಳಗೆ ನಿಗೂಢವಾಗಿ ಬಿಡಾರ ಹಾಕಿ ಕೊನೆಗೆ ಶರಣಾಗತನಾಗಿ ಸೇರೂವರೆ ಬೆಳ್ಳಿಕಡಗ ಬಹುಮಾನ ಪಡೆದಿರುವನಂತೆ. ಅಂತ ಮನೆಯೊಳಗೆ ಪರಮೇಶಿ ಮತ್ತು ಕನಕರ ಮದುವೆಯನ್ನು ದೊರೆಗಳು ತುಂಬ ವಿಜೃಂಭಣೆಯಿಂದ ನೆರವೇರಿಸಿದರು. ಕಾಣಿಕೆಯಾಗಿ ಐದುಕೂರಿಗೆ ಹೊಲವನ್ನೂ ಮೂರಂಕಣದ ಮನೆಯನ್ನೂ ನೀಡಿ ಪ್ರೀತಿ ಪ್ರಕಟಿಸಿದರು. ಹೊಸ ಮನೆಯೊಳಗೆ ಹೊಸಪಲ್ಲಂಗದ ಮೇಲೆ ಯುವ ದಂಪತಿಗಳು ಆನಂದದ ಪ್ರತಿಕ್ಷಣಗಳನ್ನು ಅದ್ಭುತವಾಗಿ ಅನುಭವಿಸಿದರು. ಅವರೀರ್ವರು ದಿನಕ್ಕೊಂದು ಚಂದದಲ್ಲಿ ಅರಳಿದರು.

ಈ ನಡುವೆ ವಿಷ್ಣುಸಮುದ್ರಕ್ಕೆ ಎರಡು ಮೂರು ಹರದಾರಿ ದೂರದಲ್ಲಿ ಕಾಡಾನೆಗಳ ಹಾವಳಿ ತಡೆಯಲು ಸರಕಾರ ಚಂದ್ರಕಾಂತ ಎಂಬ ಅಧಿಕಾರಿಯೊಬ್ಬನ್ನು ನೇಮಿಸಿತು. ಗೌಡತ್ತಿ ನೀಲವ್ವನ ದೊಡ್ಡಪ್ಪನ ಮಗನಾದ ಚಂದ್ರಕಾಂತ ಅಲ್ಲಿಗೆ ಬಂದ ಕೆಲವೇ ದಿನಗಳಲ್ಲಿ ಬಹುಜನಪ್ರಿಯನಾದ. ಅವಿವಾಹಿತನಾಗಿದ್ದರೂ ಪರನಾರಿ ಸಹೋದರನೆಂದು ಹೆಸರು ಪಡೆದ. ಕಾಡಾನೆಗಳನ್ನು ನಡುಗಿಸುವ ಬಲಿಷ್ಠ ಅಧಿಕಾರಿ ಕೆಳಗೆ ಕೆಲಸ ಮಾಡಲು ದೊರೆಯ ವಶೀಲಿಯಿಂದ ಪರಮೇಶಿ ನಿಯುಕ್ತನಾದ. ಕೈತುಂಬ ಸಂಬಳದ ಸರಕಾರಿ ನೌಕರಿ; ಗ್ರಾಮಕ್ಕೂ ಕಾಡಾನೆ ಪಳಗಿಸುವ ಕೇಂದ್ರಕ್ಕೂ ನಡುಗೆ ತಿರುಗಾಡಲು ಕೈಗೊಂದು ಜಾತಿ ಕುದುರೆ ಬೇರೆ. ಅಂದಮೇಲೆ ಕೇಳುವುದೇನಿದೆ! ಬೆಟ್ಟದ ತಪ್ಪಲು ಪ್ರದೇಶದಲ್ಲಿ ಹುಟ್ಟಿ ಬೆಳೆದು ಗೊತ್ತಿರುವ ಕನಕಳನ್ನು ಎದುರಿಗೆ ಕೂಡ್ರಿಸಿಕೊಂಡು ಪರಮೇಶಿ ಆನೆಯನ್ನು ಹೀಗೆ ಪಳಗಿಸಿದೆ; ಈ ಆನೆಯನ್ನು ಹಾಗೆ ಪಳಗಿಸಿದೆ ಎಂದು ರಾತ್ರೆಲ್ಲ ಹೇಳಿ ತಬ್ಬಿಕೊಂಡು ಮಲಗುವನು. ಮಲಗಿದಾಗ, ಕನಕಳ ಕನಸಿನಲ್ಲಿ ಆನೆಗಳೇ ಆನೆಗಳು! “ನನ್ನೂ ಆನೆಮ್ಯಾಲೆ ಕುಂಡ್ರಿಸಿ ತಿರುಗಾಡಿಸ್ತೀಯಾ” ಎಂದು ಗಂಡನನ್ನು ವಾರದಿನ ಮಾನ ಪೀಡಿಸಿದಳು. ಪರಮೇಶಿ ಅಧಿಕಾರಿ ಚಂದ್ರಕಾಂತರೆದುರು ತನ್ನ ಅಹವಾಲು ಇಟ್ಟ. ಅದಕ್ಕೇನಂತೆ ಹಾಗೇ ಆಗ್ಲಿ ಎಂದು ಒಪ್ಪಿಗೆ ನೀಡಿದ ಅಧಿಕಾರಿ ಆನೆಯನ್ನೂ ಗೊತ್ತು ಮಾಡಿ ಹೊಸದೊಂದು ಅಂಕುಶವನ್ನು ಕೈಗೆ ನೀಡಿ ಯಾವ ಕಾರಣಕ್ಕೂ ಆ ಪ್ರದೇಶದಿಂದಾಚೆ ದೂರ ಹೋದರೆ ಅಪಾಯವೆಂದು ಎಚ್ಚರಿಸಿದ.

ನಿರ್ದಿಷ್ಟ ದಿನದಂದು ಬೆಳಿಗ್ಗೆ ಸಾಲಂಕೃತಳಾದ ಕನಕಳನ್ನು ಕುದುರೆ ಮೇಲೆ ಕೂಡ್ರಿಸಿಕೊಂಡು ತನ್ನ ಕಾರ್ಯಕ್ಷೇತ್ರಕ್ಕೆ ಕರೆದೊಯ್ದ. ಆನೆಗಳ ನಡವಳಿಗೆ ಬಗ್ಗೆ ಸಂಶೋಧನೆ ಮಾಡಲು ಹಡಗಿನ ಮೂಲಕ ಬಂದಿದ್ದ ಕೆಂಪು ಮನುಷ್ಯನೊಂದಿಗೆ ಕಾಡೊಳಕ್ಕೆ ಹೋಗಿದ್ದ ಚಂದ್ರಕಾಂತ, ರಹುತ ಜೇಕಬ್ ಮತ್ತು ಉಮಾಪತಿ ಕಬ್ಬಿನ ಹೊರೆಗಳನ್ನು ತಿಂದು ನಾಶ ಮಾಡುತ್ತಿದ್ದ ಬಿಳಿ ಆನೆಯೊಂದನ್ನು ಕರೆತಂದರು. ಹತ್ತಿರಕ್ಕೆ ಇಂಗ್ಲೇಂಡಿನ ರಾಣಿ ವಿಕ್ಟೋರಿಯಾ ಮುಂದಿನೆರಡು ತಿಂಗಳಲ್ಲಿ ಈ ದೇಶಕ್ಕೆ ಭೆಟ್ಟಿ ನೀಡಿದಾಗ ಕಾಣಿಕೆಯಾಗಿ ನೀಡಬೇಕೆಂದಿರುವ ಆನೆ; ಎರಡು ಮೂರು ತಿಂಗಳಲ್ಲಿ ತಿಂಗಳ ಕಾಲ ಹಡಗಿನಲ್ಲಿ ಪ್ರಯಾಣ ಮಾಡಿ ಇಂಗ್ಲೆಂಡ್ ತಲುಪಲಿರುವ ಆನೆ; ಅಂಥ ಆನೆಯ ಮೇಲೆ ಪರಮೇಶಿ ದಂಪತಿಗಳು ಸವಾರಿ ಮಾಡುವುದನ್ನು ನೋಡಲು ಖೆಡ್ಡಾದ ಎಲ್ಲಾ ಕೆಲಸಗಾರರು ಸುತ್ತನೆರೆದು ಬೀಳ್ಕೊಟ್ಟರು.

ತೂಗುವ ತೊಟ್ಟಿಲ್ಲಿ ಸಾಗುತ್ತಿರುವ ಅನುಭವದಿಂದ ಮೊದಮೊದಲು ಹೆದರಿದ ಕನಕ ಒಂದಿಷ್ಟು ದೂರ ಪಯಣಿಸಿದ ಮೇಲೆ ಆನೆ ಸವಾರಿಯ ಆನಂದವನ್ನು ಸವಿಯ ತೊಡಗಿದಳು. ಪರಮೇಶಿಯ ಎಡಗೈ ಆಕೆಯ ಕಿಪ್ಪೊಟ್ಟೆಯನ್ನು ಬಳಸಿದ್ದರಿಂದ ಭಯಕ್ಕೆ ಕಾರಣವಿರಲಿಲ್ಲ. ‘ಅಪ್ಸರಾ’ ಎಂಬ ಹೆಸರಿನ ಯುವ ಆನೆ ಅಕ್ಕಪಕ್ಕ ಗಿಡ ಮರಗಳ ಕೊಂಬೆ ರೆಂಬೆ ಮುರಿದು ತಿನ್ನುತ್ತಾ ಮೆಲ್ಲ ಮೆಲ್ಲಗೆ ಹೆಜ್ಜೆ ಇಡುತ್ತ ಸಾಗಿತ್ತು ನಿರಾತಂಕವಾಗಿ. ಅದರ ಮೇಲೆ ಪರಸ್ಪರರನ್ನು ಒಂದೇ ದೇಹವೆಂಬಂತೆ ಬಳಸಿ ಕೂತಿದ್ದ ಯುವ ದಂಪತಿಗಳು ತಮ್ಮ ಪ್ರೇಮದ ಆಖ್ಯಾನಕ್ಕೆ ಪ್ರಕೃತಿಯ ರಮಣೀಯತೆಯನ್ನು ಸಾಮಗ್ರಿಯಾಗಿ ತೆಗೆದುಕೊಂಡರು. ನಂತರ ತಾವು ಬದುಕುತ್ತಿರುವ ಸ್ವರ್ಗ ಸಮಾನ ಪರಿಸರವನ್ನೂ ವ್ಯಕ್ತಿಗಳನ್ನೂ ಉದಾಹರಿಸಿಕೊಂಡು ಮಾತಾಡಿದರು. ನಂತರ ಹೊನ್ನೂರಿನ ಹೊನ್ನಜ್ಜನ ಕಡೆಯವರೂ; ಜಾಗಟಗೆರೆಯ ದುರುಗೋಜಿಯ ಕಾಳೋಜಿ ಕಡೆಯವರು ಈಗಾಗಲೇ ತಮ್ಮೀರ್ವರನ್ನು ಎಲ್ಲೆಲ್ಲಿ ಹುಡುಕಾಡಿರಬಹುದೆಂದು ಮಾತಾಡತೊಡಗಿದರು. ಕ್ರೌರ್ಯವೇ ಸಾಕಾರಗೊಂಡಂಥ ವ್ಯಕ್ತಿಗಳ ನಡುವೆ ತಾವಿಬ್ಬರೂ ಹುಟ್ಟಿರುವ ಬಗ್ಗೆ ಸೋಜಿಗಗೊಂಡರು. ಆ ಬೇಟೆನಾಯಿಗಳು ತಮ್ಮನ್ನು ಮುತ್ತಿದರೇನು ಮಾಡುವುದೆಂದು ಭಯಪಟ್ಟರು. ಅವರ ಭಯದ ಕಣ್ಣುಗಳಿಗೆ ಸುತ್ತಮುತ್ತಲ ಗಿಡಮರಗಳಲೆಲ್ಲಾ ತಮ್ಮನ್ನು ಬೆಂಬತ್ತಿರುವ ಬೇಟೆನಾಯಿಗಳು ಅವಿತಿರುವಂತಯೂ; ಹಕ್ಕಿಪಕ್ಕಿಗಳ ಕಂಠದೊಳಗೆ ಕರ್ಕಶ ಧ್ವನಿ ಅಡಗಿರುವಂತೆಯೂ ಭಾಸವಾಗಿ ಜಲಜಲ ಬೆವೆತರು ಒಂದುಕ್ಷಣ. ಮರುಕ್ಷಣದಲ್ಲಿ ಅವರು ವಾಸ್ತವಕ್ಕೆ ಮರಳದೆ ಇರಲಿಲ್ಲ.

ಬಿದಿರು ಮೆಳೆಗಳ ಸರಹದ್ದಿನಲ್ಲಿ ಮೆಲ್ಲಗೆ ಮದುಮಗಳಂತೆ ನಡೆಯುತ್ತಿದ್ದ ಅಪ್ಸರ ಪುಟ್ಟ ಜಲಪಾತದ ಮಗ್ಗುಲು ಜಪ್ಪಯ್ಯ ಅಂದರೂ ಚಲಿಸದೆ ನಿಂತುಬಿಟ್ಟಿತು. ಕೆಳಕ್ಕಿಳಿಯುತ್ತಲೆ ಅದು ಹಳ್ಳಕ್ಕಿಳಿದು ಜಲಕ್ರೀಡೆ ಆರಂಭಿಸಿತು. ಸೊಂಡಲಿಂದ ನೀರೆಳೆದುಕೊಂಡು ದಡದ ಮೇಲೆ ಮಂಕರಂತೆ ನಿಂತಿದ್ದ ಯುವದಂಪತಿಗಳ ಮೇಲೆ ಕಾರಂಜಿಯಂತೆ ಸುರಿಯತೊಡಗಿತು. ಅದರ ಮನೋ ಇಂಗಿತವನ್ನು ಅರ್ಥಮಾಡಿಕೊಂಡು ಅವರಿಬ್ಬರು ಉಡುಪಿನ ಹಂಗು ತೊರೆದು ನೀರಿಗಿಳಿದು ಉರುಳಾಡಿದರು. ಗಂಧರ್ವರಂತೆ…. ಅವರೀರ್ವರು ಹರಿವ ನೀರೊಳಗೆ ನಡೆಸುತ್ತಿದ್ದ ರಾಸಕ್ರೀಡೆಯಿಂದ ಉತ್ತೇಜಗೊಂಡು ಕೆಲವು ಪಕ್ಷಿಗಳೂ, ಕೆಲವು ಪ್ರಾಣಿಗಳೂ ತಾವೂ ನೀರಿಗಿಳಿದು ಆಟವಾಡುತ್ತ ರಾಸಲೀಲೆಗೆ ತೊಡಗಿದವು. ಹೊಟ್ಟಕಿಚ್ಚಿನ ಸೂರ್ಯ ಆಗಲೆ ಪಶ್ಚಿಮಕ್ಕಿಳಿಯಲಾರಂಭಿಸಿದ್ದಾಗಲೇ ಅಪ್ಸರೆ ದಂಡೆಗೆ ಹೋಗಿ ಕೆಲವು ಕಾಡುಹೂಗಳನ್ನು ಕಿತ್ತು ನೀರೊಳಗೆ ಒಬ್ಬರೊಳಗೊಬ್ಬರು ಕರಗಿದ್ದ ದಂಪತಿಗಳ ಮೇಲೆ ಎಸೆದು ಸಮಯ ಪ್ರಜ್ಞೆಯನ್ನು ಜಾಗೃತಗೊಳಿಸಿತು. ಅವರು ದಡದಮೇಲಿದ್ದ ಉಡುಪಿನ ಹಂಗಿಗೆ ಮತ್ತೆ ಒಳಗಾಗಿ ಅಪ್ಸರೆ ಏರಿ ಖೆಡ್ಡಾ ಕೇಂದ್ರದ ಕಡೆ ಪಯಣಿಸಿದರು.

ಅಲ್ಲಿ ಆಗಲೇ ವಿದೇಶಿ ಮಿತ್ರನ್ನು ಕಳಿಸಿ ಬಂದಿದ್ದ ಚಂದ್ರಕಾಂತ ಗಾಬರಿಗೊಂಡು ಅಪ್ಸರೆಗಾಗಿ ಎದುರು ನೋಡುತ್ತಿದ್ದ ಕಾರಣ ಸರಿಯಾಗಿ ಪಳಗಿರದ ಯುವ ಆನೆ ಅದು. ಪುಟ್ಟ ಜೇನ್ನೊಣ ಕಡಿದರೆ ಹುಚ್ಚು ಹಿಡಿದಂತೆ ಓಡಿ ಕಾಡೊಳಗೆ ಮಾಯವಾಗಿಬಿಡುವ ಆನೆ ಅದು. ಪರಮೇಶಿ ದಂಪತಿಗಳನ್ನು ಕಾಡೊಳಗೆ ಎಲ್ಲಿ ಎಸೆಯಿತೋ! ಏನು ಅಪಾಯ ಮಾಡಿರುವುದೋ ಎಂದು ಕೆಲಸಗಾರರ ಮೇಲೆ ಸಿಡಿಮಿಡಿಗುಟ್ಟುತ್ತಲೇ ಹುಡುಕಲು ಹೋಗಬೇಕೆಂದು ಕುದುರೆ ಏರಿ ಒಂದಿಷ್ಟು ದೂರಕ್ರಮಿಸಿಸಿದಾಗ ದಂಪತಿಗಳೊಂದಿಗೆ ಅಪ್ಸರೆ ಕಾಬಾಳೆಗೊನೆಯನ್ನು ಬಾಯಲ್ಲಿ ಕಚ್ಚಿ ಜಮಡುತ್ತ ಎದುರಿಗೇ ಬಂತು.

ಸೊಂಟ ಬಳಸಿಕೊಂಡು ತನ್ನ ಹೆಂಡತಿಯನ್ನು ಕೆಳಕ್ಕಿಳಿಸಿದ ಪರಮೇಶಿ ಕನಕಳನ್ನು ತನ್ನ ಮೇಲಾಧಿಕಾರಿಗೆ ಪರಿಚಯಿಸಿದ. ಕನಕಳ ಸೌಂದರ್ಯ ಚಂದ್ರಕಾಂತನ ಕಣ್ಣು ಕುಕ್ಕದೆ ಇರಲಿಲ್ಲ. ಆ ಕ್ಷಣದಿಂದ ಅವನ ಭಾವನೆಗಳೆಲ್ಲ ಅದಲುಬದಲಾದವು. ಸಣ್ಣ ಪುಟ್ಟ ಹುಡುಕಿ ವಿಷ್ಣುಸಮುದ್ರಕ್ಕೆ ಹೋಗಿ ಕನಕಳನ್ನು ಬಲೆಗೆ ಕೆಡವಿಕೊಳ್ಳಲು ಬಗೆಬಗೆಯಾಗಿ ಪ್ರಯತ್ನಿಸತೊಡಗಿದ. ಆದರೆ ಸಫಲವಾಗಲಿಲ್ಲ. ಅದಕ್ಕಾಗಿ ಒಂದು ವ್ಯೂಹ ರಚಿಸಿದ.

ಕಾಗದ ಪತ್ರಗಳು ತುಂಬಿದ್ದ ಚೀಲ ಕೊಟ್ಟು ಈ ಕೂಡಲೆ ಹೊರಟ ಜಿಲ್ಲಾಧಿಕಾರಿಗಳ ಕಛೇರಿಗೆ ಕೊಟ್ಟು ಬರಬೇಕೆಂದು ಆಜ್ಞಾಪಿಸಿದ ಪರಮೇಶಿಗೆ ಉಸಿರಾಡಲಿಕ್ಕೂ ಪುರಸೊತ್ತು ಸಿಗಲಿಲ್ಲ. ನಿಗದಿಪಡಿಸಿದ್ದ ಮೋಟಾರುಗಾಡಿಯಲ್ಲಿ ಹೊರಟ. ಜಿಲ್ಲಾಧಿಕಾರಿಗಳ ಕಛೇರಿ ಇರುವುದು ಸುಮಾರು ದೂರದ ರತ್ನಗಿರಿಯಲ್ಲಿ. ಆಗಲೇ ಹತ್ತು ಹರದಾರಿ ದೂರ ಬಂದಿರಬಹುದು ಗಾಡಿ. ಯಾಕೋ ಅನುಮಾನ ಬಂದು ಗಾಡಿಯಿಂದ ಇಳಿಯಲು ಯತ್ನಿಸಿದ. ಡ್ರೈವರ್‍ ದಿನೇಶ್ ಮತ್ತು ರಾಹುತ ಜೇಕಬ್ ಉಗ್ರವಾಗಿ ತಡೆದಾಗ ತನ್ನ ಅನುಮಾನ ನಿಜವಾಯಿತು. ಜಾಗಟಗೆರೆ ಕರಿ ಹರಿದು ತಂದವನಿಗೆ; ವೆಂಕಾಜೆಟ್ಟಿಗೇ ಬೆವರಿಳಿಸಿದವನಿಗೆ ಅವರಿಬ್ಬರು ಯಾವ ಲೆಕ್ಕ! ಹಾಗೂ ಹೀಗೂ ಗಾಡಿ ಬಿಡುವುದನ್ನು ಕಲಿತಿದ್ದ ಅವನು ಅಪಘಾತವನ್ನು ಲೆಕ್ಕಿಸದೆ ಅಂತೂ ಇಂತೂ ಖೆಡ್ಡಾ ಪ್ರದೇಶ ತಲುಪಿದ. ಅದೂ ಮರಕ್ಕೆ ಡಿಕ್ಕಿ ಹೊಡದು.

ಪಾರಜ್ಜಿ ಓಡಿ ಬಂದು “ಆ ಮನಿಹಾಳ ನಿನ್‌ಹೆಂಡ್ತೀನ ಬಿಡಾರ್‍ದೊಳ್ಗೆ ಹೋರಿಸ್ಕೊಂಡೋಗವ್ನೆ ಓಡು” ಎಂದು ಹೇಳಿತು. ನಿನ್ನ ಗಂಡನನ್ನು ಆನೆ ತುಳಿದು ಕೊಂದಿದೆ ಎಂದು ಸುಳ್ಳು ಮಾಹಿತಿ ನೀಡಿ ಕನಕಳನ್ನು ಕರೆಸಿಕೊಂಡಿದ್ದ ಬಿಡಾರದೊಳಕ್ಕೆ ಮಿಂಚಿನಂತೆ ಹೋಗಿ ಚಾಕುವಿನಿಂದ ಪರದೆಯನ್ನು ಕೊಯ್ದು ಒಳನುಗ್ಗಿದ. ಉಗ್ರವಾಗಿ ಪ್ರತಿಭಟಿಸುತ್ತಿದ್ದ ಕನಕಳ ಮೇಲೆ ಅತ್ಯಾಚಾರಕ್ಕೆ ತೊಡಗಿದ್ದ ಅವನ ಕೊರಳ ಪಟ್ಟಿ ಹಿಡಿದೆತ್ತಿದ. ಸ್ವಲ್ಪಹೊತ್ತು ಅವರಿಬ್ಬರಿಗೂ ಮಾರಾಮಾರಿಯೇ ಆಯಿತು. ಪರಮೇಶಿಯ ಕೈಯಲ್ಲಿ ಚಂದ್ರಕಾಂತ ಎಲ್ಲಿ ಸತ್ತು ಬಿಡುವನೋ! ತಮ್ಮ ಪರಮೇಶಿ ಎಲ್ಲಿ ಮರಣದಂಡನೆಗೆ ತುತ್ತಾಗುವನೋ ಎಂದು ಹೆದರಿ ಕೆಲಸಗಾರರು ಪರಮೇಶಿಯ ಉಡಹಿಡಿತದಿಂದ ಚಂದ್ರಕಾಂತನನ್ನು ಬೇರ್ಪಸಿಡಿಸಿದರು.

ಜರ್ಝರಿತಳಾಗಿದ್ದ ಕನಕ ಗಂಡನ ಎದೆ ಮೇಲೆ ಕಣ್ಣೀರಿನ ಕೋಡಿ ಹರಿಸಿದಳು. ತಮಗೆ ಒಂಚೂರು ಅನ್ನ ನೆರಳು ನೀಡಿದವರ ಕರುಳಿಗೆ ಹತ್ತಿರದವನೆಂಬ ಒಂದೇ ಕಾರಣಕ್ಕಾಗಿ ಪರಮೇಶಿ ಅವನನ್ನು ಬದುಕಲುಬಿಟ್ಟಿದ್ದ. ಕಾಡಿನ ಅಧಿಕಾರಿ ಕನಕಳ ಮೇಲೆ ಅತ್ಯಾಚಾರವೆಸಗಲೆತ್ನಿಸಿದ ಸಂಗತಿ ಕಾಳ್ಗಿಚ್ಚಿನಂತೆ ಊರ್‍ತುಂಬ ಹಬ್ಬಿತು. ಜನ ತಂಡೋಪತಂಡವಾಗಿ ಬಂದು ಕನಕಳ ಯೋಗಕ್ಷೇಮ ವಿಚಾರಿಸಿಕೊಂಡು ಇಂಥ ನೀಚರಿರುವುದರಿಂದಲೇ ಮಳೆ ಬೆಳೆ ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲವೆಂದು ಮಾತಾಡಿಕೊಳ್ಳುತ್ತ ಕೆಲವರು ಹೋದರೆ. ಇನ್ನೂ ಕೆಲವರು ಇವತ್ತು ಇವ್ನ ಹೆಂಡ್ತಿ, ನಾಳೆ ನಮ್ ಹೆಂಡ್ತಿ ಎಲ್ರು ಸೇರ್‍ಕಂಡು ಅವ್ನೀಗೆ ಸರ್‍ಯಾಗಿ ಬುದ್ಧಿಕಲ್ಸಿ ದೂರ ಓಡಿಸ್ಬೇಕು” ಎಂದಾಡಿಕೊಳ್ಳುತ್ತ ಆಗುಹೋಗುಗಳ ಮೇಲೆ ನಿಗಾ ಇಟ್ಟರು.

ಟಗರುಗಳ ಸಾರೋಟಿನಲ್ಲಿ ದೊರೆ ಮತ್ತು ಗೌಡ್ತಿ ಬಂದು ಕನಕಳಿಗೆ ಸಮಾಧಾನ ಹೇಳಿದರು. ತುರ್ತಾಗಿ ಪಂಚಾಯ್ತಿ ಸೇರಿಸಿ ಚಂದ್ರಕಾಂತನನ್ನು ಬಲವಂತದಿಂದ ಕರೆ ಕಳಿಸಿ ದೊರೆಯೇ ಛೀಮಾರಿ ಹಾಕಿದ. ದೈವಸ್ಥರ ಪರವಾಗಿ ನೂರೊಂದು ಬೆಳ್ಳಿ ರೂಪಾಯಿಗಳನ್ನು ದಂಡ ಹಾಕಿದ. ಆದರೆ ಚಂದ್ರಕಾಂತ ಒಂದಿಷ್ಟು ಪಶ್ಚಾತ್ತಾಪ ಪ್ರಕಟಿಸದೆ ಪಂಚಾಯ್ತಿ ತೀರ್ಮಾನವನ್ನು ಸಾರಾಸಗಟ ತಿರಸ್ಕರಿಸಿದ. “ನನಗವ್ಳು ಬೇಕೇಬೇಕು. ಅವ್ರೀಗೆ ರಕ್ಷಣೆ ಕೊಡೋಕೆ ನೀವೊಂದೇ ಅಲ್ಲ. ಆ ತ್ರಿಮೂರ್ತಿಗಳೇ ಈ ಭೂಮಿಗಿಳ್ದು ಬಂದ್ರೂ ಸಾಧ್ಯವಿಲ್ಲ” ಎಂದು ಗಟ್ಟಿಯಾಗಿ ಮಾತಾಡಿ ದುರ್ದಾನ ತೆಗೆದು ಕೊಂಡವನಂತೆ ಅಲ್ಲಿಂದ ಕದಲಿದ. ತಮಗೆಲ್ಲ ಅವಮಾನವಾಯ್ತೆಂದು ಪಂಚಾಯ್ತಿಯ ದೈವಸ್ಥರೆಲ್ಲರು ಕನಲಿದರಲ್ಲದೆ ಪರಮೇಶಿಗೂ ಕನಕಳಿಗೂ ತಕ್ಕ ರಕ್ಷಣೆ ನೀಡುವುದೆಂದು ತೀರ್ಮಾನಿಸಿದರು.

ಕಾಡಿನ ಕಡೆ ಬಂದರೆ ತುಪಾಕಿಯಿಮದ ಕೊಲ್ಲುವುದೆಂದು ಕಣ್ಣಿಟ್ಟ ಚಂದ್ರಕಾಂತ ಪರಮೇಶಿಯ ಮೇಲೆ. ಅವನು ಕನಕಳನ್ನು ಅಪಹರಿಸಲು ಹೂಡಿದ ಎರಡು ಮೂರು ವ್ಯೂಹಗಳು ವಿಫಲಗೊಂಡವು. ಇದರಿಂದ ಕೆರಳಿದ ಅವನು ಕೈಕಟ್ಟಿ ಕೂಡ್ರಲಿಲ್ಲ. ಆನೆಗಳನ್ನು ಬಿಟ್ಟು ವಿಷ್ಣುಸಮುದ್ರದ ಸುತ್ತಲಿನ ಹೊಲಗದ್ದೆಗಳಲ್ಲಿ ಬೆಳೆದು ನಿಂತ ಪೈರನ್ನು ತುಳಿಸಿ ನಾಶಮಾಡಿಸುವುದು. ಆನೆಗಳಿಗೆ ಕಳ್ಳಭಟ್ಟಿ ಕುಡಿಸಿ ಊರೊಳಕ್ಕೆ ಬಿಟ್ಟು ಸಂತಸಪಡುವುದು. ಹೀಗೆ ಹಲವು ಹನ್ನೊಂದು ಕಿರುಕುಳ ನೀಡಲಾರಂಭಿಸಿದ. ಇದರಿಂದ ಬೇಸತ್ತ ಊರ ಪ್ರಮುಖರು ಪಟ್ಟಣಕ್ಕೆ ಹೋಗಿ ಜಿಲ್ಲಾಧಿಕಾರಿಗೆ ದೂರು ಇತ್ತರೂ ಪ್ರಯೋಜನವಾಗಲಿಲ್ಲ. ಶಿಶುಪಾಲನನ್ನು ಸಮಯ ನೋಡಿ ಕೃಷ್ಣತಳಿಗೆಯಿಂದ ಕೊಂದಂತೆ ತಾವೇ ಅವನಿಗೊಂದು ಗತಿ ಕಾಣಿಸುವುದೆಂದು ನಿರ್ಧರಿಸಿ ಆ ಸಮಯಕ್ಕಾಗಿ ಕಾಯತೊಡಗಿದರು.

-೭-

ಮಾಘಮಾಸದ ಕೊರೆವ ಚಳಿ ನಿವಾರಣೆಗಾಗಿ ಸೂರ್ಯನೆಳೆಬಿಸಿಲೆಂದು ಕಾಯಿಸಲೆಂದು ಯುವ ದಂಪತಿಗಳು ಮನೆಮಾಳಿಗೆ ಏರಿದ್ದರಷ್ಟೆ. ಚಂದ್ರಕಾಂತನನ್ನು ಹೆಡಮುರಿಗೆ ಕಟ್ಟಿತಂದು ಊರ ಅಗಸೆ ಬಾಗಿಲಿಗೆ ಕಟ್ಟುವಷ್ಟು ತಾಕತ್ತು; ಸಿಟ್ಟು ಎರಡೂ ಇರುವ ತನಗೆ ಅವಕಾಶ ಕೊಡದ ದೈವಸ್ಥರನ್ನು ಕುರಿತು ಬೇಸರದಿಂದ ಮಾತಾಡುತ್ತಿದ್ದ ಪರಮೇಶಿಯ ಹರವಾದ ತೊಡೆಮೇಲೆ ತಲೆ ಇರಿಸಿ ತಮ್ಮ ಅರ್ಥವಾಗದ ಬದುಕನ್ನು ಕುರಿತು ಚಿಂತಿಸುತ್ತ ಮಂಕಾಗಿ ಕನಕ ಸಂದೇಶವನ್ನು ಹೊತ್ತೊಯ್ಯುತ್ತಿರುವಂತೆ ಮೆಲ್ಲಗೆ ಚಲಿಸುತ್ತಿದ್ದ ಕಿರುಮೇಘಗಳತ್ತ ದೃಷ್ಟಿ ನೆಟ್ಟಿದ್ದಳು. ಒಂದೊಂದು ಚಣಕ್ಕೆ ಒಂದೊಂದು ಆಕಾರ ಪಡೆಯುತ್ತಿರುವ ಮೇಘಗಳ ಪರಿಗೆ ಬೆರಗಾಗಿದ್ದಳು. ಇದ್ದಕ್ಕಿದ್ದಂತೆ ಬೆಚ್ಚಿ ಬೆವರುತ್ತಿದ್ದಳು. ಆಗ ಪರಮೇಶಿ ಅವಳ ಗಲ್ಲಗಳಿಗೆ ಹೂ ಚುಂಬನ ನೀಡಿ ಧೈರ್ಯ ತುಂಬುತ್ತಿದ್ದ.

‘ಪರಮೇಶಾ…. ನನ್ಗಿಲ್ಲಿರೋದ್ಕೆ ಬಯ ಆಗತೈತೆ…. ಎಲ್ಲಾದ್ರು ದೂರ ಹೊರಟೋಗೋಣೇನು’ ಗಂಡನ ಒಳತೊಡೆಯನ್ನು ಕಚ್ಚಿಬಿಕ್ಕಿದಳು.

“ಹೆತ್ತೋರ್‍ಗಿಂತ ಹೆಚ್ಚಾಗಿ ಕಾಣ್ತಿರೋ ಈ ಊರು ಬಿಟ್ಟು ಹೋದ್ರೆ ತಾಯಿ ಮೆಚ್ತಾಳೇನು, ಹುಚ್ಚಿ ಧೈರ್ಯವಾಗಿರು” ರೇಶಿಮೆಗಿಂತ ನುಣಪಾಗಿ ಸೂರ್ಯನೆಳೆಬಿಸಿಲೊಳಗೆ ಬೆಳಕಿನ ರೇಖೆಗಳಂತೆ ಫಳಫಳ ಹೊಳೆಯುತ್ತಿದ್ದ ತಲೆಯ ನೀಳ ಕೂದಲೊಳಗೆ ಬೆರಳಾಡಿಸಿ ಮುಡಿಯನ್ನು ಮುದ್ದಿಸುತ್ತ ಹೇಳಿದ ಪರಮೇಶಿ.

ಮತ್ತೆ ಸಮಾಧಾನದಿಂದ ಹಗುರಾದ ಮನಸ್ಸಿನೊಡನೆ ಮೋಡಗಳ ಕಡೆ ದೃಷ್ಟಿ ನೆಟ್ಟಳು. ಆ ಮಳೆತರದ ಮೋಡಗಳ ಕಡೆ ನೋಡಬೇಡ. ಚಣಕ್ಕೊಂದೊಂದು ರೂಪ ಧರಿಸಿ ಹೆದರಿಸುತ್ತವೆ ಅವು ಎಂದು ಅವನು ಆಕೆಯ ಬಟ್ಟಲುಗಣ್ಣುಗಳನ್ನು ಕಿರುನೆಲ್ಲಿ ಮರಕ್ಕಡರಿದ್ದ ಕೆಂಪು ಹೂವಿನ ಬಳ್ಳಿ ಕಡೆ ತಿರುಗಿಸಲೆತ್ನಿಸಿದ. ಆ ಬಳ್ಳಿಯ ಹೂಗಳು ಕೂಡ ಆ ಚಲುವೆ ತಮ್ಮತ್ತ ನೋಡಿ ತಮ್ಮನ್ನು ಈ ಕರುಳಬಂಧನದಿಂದ ಬಿಡಿಸಿ ತನ್ನ ಸುಂದರ ಮುಡಿಗಿರಿಸಿ ಪಾವನಗೊಳಿಸಬಾರದೇಕೆ ಎಂಬಂತೆ ಆಕರ್ಷಕವಾಗಿ ಬಳುಕುತ್ತಿದ್ದವು. ಅವುಗಳ ಇಂಗಿತ ಅರ್ಥ ಮಾಡಿಕೊಂಡವನಂತೆ ಪರಮೇಸಿ ಹೋಗಿ ಹೂವೊಂದನ್ನು ಕಿತ್ತುತಂದು ತನ್ನ ಸಂಗಾತಿಯ ಮುಡಿಯಲ್ಲಿರಿಸಿದ. ಆಕೆ ಅವನ ತುಟಿಯ ಮೇಲೆ ಬೆರಳಾಡಿಸಿ ಕ್ರಮೇಣ ಬಾಯಿ ಒಳಕ್ಕೆ ಸರಿಸಿ ನಂತರ ಚೀಪಿದಳು. ಮತ್ತೆ ಯಾಂತ್ರಿಕವಾಗಿ ಗಗನದತ್ತ ದೃಷ್ಟಿ ಹೊರಳಿಸಿದಳು…. ಭೂಮಿಗಿಂತ ಗಗನವೇ ಹೆಚ್ಚು ಜೀವಂತಿಕೆಯಿಂದ ಸ್ಪುರಿಸುತ್ತಿರುವುದೆನಿಸಿತು ಆಕೆಗೆ.

ಇದ್ದಕ್ಕಿದ್ದಂತೆ ಆಕೆ ಪರಮೇಶಿಯ ಗಮನವನ್ನು ಗಗನದಲ್ಲಿ ವೇಗವಾಗಿ ವರ್ತುಳಾಕಾರವಾಗಿ ತಿರುಗುತ್ತಿದ್ದ ಪಕ್ಷಿಗಳ ಜೋಡಿ ಕಡೆ ಸೆಳೆದಳು. ಹುಬ್ಬಿಗೆ ಕೈ ಹಚ್ಚಿ ನೋಡಿದ. ಅವು ಪಾರಿವಾಳಗಳೆಂದು ಗುರುತಿಸಿ ಕುಪ್ಪಳಿಸಿ ಎದ್ದು ನಿಂತ. ಅರೆ ಅವು ಅರ್ಜುನ ಮತ್ತವನ ಚಿತ್ರಾಂಗದೆ ಆಗಿರಬಾರದೇಕೆ! ಅರ್ಜುನಾ…. ಅರ್ಜುನಾ…. ಅರ್ಜುನಾ…. ಮೇಲಿಂದ ಮೇಲೆ ಅವನ ಕೂಗು ಗ್ರಾಮದ ಸಮಸ್ತ ಗೋಡೆಗಳಿಗೆ ಅಪ್ಪಳಿಸಿತು. ಮನೆಗಳಲ್ಲಿದ್ದವರೆಲ್ಲ ಹೊರಬಂದು ಸುತ್ತ ನೆರೆದು ತಮ್ಮ ಪರಮೇಶಿಗೇನಾದ್ರು ಹುಚ್ಚುಗಿಚ್ಚು ಹಿಡಿಯಿತೇ ಎಂಬಂತೆ ನೋಡಿದರು.

ತುಂಟ ಅರ್ಜುನ ಪರಮೇಶಿಯನ್ನು ತುಸು ಹೊತ್ತು ಗೋಳಾಡಿಸಿ ನಂತರ ಅದು ಸೀದ ಬಂದು ಅವನ ಹೆಗಲ ಮೇಲೆ ಕೂತರೆ ಚಿತ್ರಾಂಗದೆ ಸೀದ ಕನಕಳ ತುಂಬಿದೆದೆ ಮೇಲಿಳಿದು ತುಂಟಾಟ ಮಾಡಿ ತೊಡೆಗೆ ಜಾರಿತು. ಅವರಿಬ್ಬರು ಅವುಗಳನ್ನು ಚುಂಬಿಸಿ ಚುಂಬಿಸಿ ಕಣ್ಣೀರು ತಂದುಕೊಂಡರು ಉತ್ಕಂಠಿತರಾಗಿ ಮತ್ತೆ ಅರ್ಜುನ ಗೆಳೆಯನ ತೆಕ್ಕೆಯಿಂದ ಬಿಡಿಸಿಕೊಂಡು ಮೇಲೆ ಹಾರಿ ಮಾಯವಾಗಿ ಮರುಚಣದಲ್ಲಿ ಪಾರಿವಾಳಗಳ ದಂಡಿನೊಡನೆ ಮಾಳಿಗೆ ಮೇಲಿಳಿಯಿತು. ಎಲ್ಲ ಪಾರಿವಾಳಗಳು ಪ್ರೇಮಿಗಳೀರ್ವರನ್ನು ಮುತ್ತಿ ಗಲಿಬಿಲಿಗೊಳಿಸಿದವು. ಗುಕು ಗುಕು ಎಂದು ಸದ್ದು ಮಾಡುತ್ತ ಪಕ್ಷಿ ಭಾಷೆಯಲ್ಲಿ ಏನೇನೋ ಹೇಳಲೆತ್ನಿಸಿದಾಗ ಸಂಗೀತ ಕಛೇರಿ ನಡೆಯಲಿದೆ ಎಂಬಂತೆ ಗೋಚರಿಸಿತು ಕೆಳಗಿನವರಿಗೆ. ಜನ ಸಂತೋಷದಿಂದ ಹೋ ಎಂದು ಉದ್ಗರಿಸಿದರು.

“ಓಯ್ ಪರಮೇಶೀ… ಓಯ್ ಕನಕಮ್ಮೊ… ಇವ್ರೆಲ್ಲ ನಿಂತವರೂರಿನ ಕಡ್ಯೋರೇನು ಏನಾದ್ರು ಕರ್ಚಿಕಾಯ ಬುತ್ತಿ ಕಟ್ಕೊಂಡು ಬಂದಿದಾರೇನ್ರಮ್ಮೋ” ಗಂಡು ಹೆಣ್ಣು ಕೂಗಿ ನಗಾಡಿ ಮೆನಗೆ ಮರಳಿದರು.

ಕರ್ಚಿಕಾಯಿ ಬುತ್ತಿಗೂ ಮಿಗಿಲಾದ ಚೀಟಿಗಳು ಬಹುಪಾಲು ಪಾರಿವಾಳಗಳ ಕಾಲಿಗೆ ಇದ್ದವು. ನಂದು ಮೊದಲು…. ನಂದು ಮೊದಲು…. ಎಂದು ಮುನ್ನುಗ್ಗಿದ ಆ ಮೂಲ ಪಕ್ಷಿಗಳ ಕಾಲುಗಳಿಗೆ ಮೂಗನಂತೆ ನಟಿಸಿದ ಬಸವ ಕಟ್ಟಿದ್ದ ಚೀಟಿಗಳಿದ್ದವು. ಅವುಗಳನ್ನೆಲ್ಲ ಬಿಡಿಸಿಕೊಂಡ ಪರಮೇಶಿ ಅವುಗಳಲ್ಲಿದ್ದ ಕಾಗೆಕಾಲು ಗುಬ್ಬಿಕಾಲು ಅಕ್ಷರಗಳತ್ತ ಮಿಕಿಮಿಕಿ ನೋಡಿದನಷ್ಟೆ. ಅವುಗಳನ್ನೋದಿ ಅರ್ಥ ಬಿಡಿಸಿ ಹೇಳುವಂಥ ಮಹಾನುಭಾವನನ್ನು ಕರೆತರಲು ಓಣಿಯೊಳಗೆ ಹೋದ ಪರಮೇಶಿ. ಇತ್ತ ಕನಕ ಗಡಿಕೆಯಲ್ಲಿದ್ದ ಕಡಲೆ ಗೋದಿಕಾಳುಗಳನ್ನು ತಂದು ಚೆಲ್ಲಿ…. ಕುಡಿಯಲೆಂದು ಬಟ್ಟಲ ತುಂಬ ಸಿಹಿ ನೀರನ್ನಿರಿಸಿದಳು. ಕ್ಷಣಾರ್ಧದಲ್ಲಿ ಅವುಗಳನ್ನೆಲ್ಲ ಖಾಲಿ ಮಾಡಿದ ಅವು ಚಿಲಿಪಿಲಿಗುಟ್ಟಿದವು ಬಯಲು ತುಂಬ ಹೂವು ಚೆಲ್ಲಿದಂತೆ.

ಕೆಲ ಹೊತ್ತಿನಲ್ಲಿ ಎಳೆ ವಯಸ್ಸಿಗೇ ಮಹಾಕಾವ್ಯಗಳನ್ನು ನಾಲಿಗೆ ಮೇಲಿಟ್ಟಿಕೊಂಡಿದ್ದ ದಾಸರ ಹುಡುಗ ಕೃಷ್ಣನನ್ನು ಕರೆತಂದು ಚೀಟಿಗಳನ್ನು ಓದಿಸಿದ. ಒಂದೊಂದು ಚೀಟಿಯಲ್ಲಿ ಒಂದೊಂದು ಸಂಗತಿ. ಬಸವ ಬರೆದು ಕಟ್ಟಿರುವುದೆಂದು ಖಚಿತವಾಯಿತು. ಒಂದು ಚೀಟಿಯಲ್ಲಿ ಕಳೆದುಹೋದ ತಮ್ಮ ಮೊಮ್ಮಗಳೇ ಕನಕಳೆಂದು ಹೊನ್ನಜ್ಜನನ್ನು ಒಪ್ಪಿಸಿರುವುದಾಗಿ ಬರೆದಿದ್ದರೆ ಇನ್ನೊಂದು ಚೀಟಿಯಲ್ಲಿ ಜಾಗಟಗೆರೆಯ ಕನಕದುರ್ಗೆಯ ವಿಗ್ರಹ ನಾಪತ್ತೆಯಾಗಿರುವುದಾಗಿಯೂ ಅದರಿಂದ ದುರುಗೋಜಿ ಪಾತಾಳಕ್ಕಿಳಿದು ಹೋಗಿರುವನೆಂದೂ ಮತ್ತೊಂದು ಚೀಟಿಯಲ್ಲಿ ಕಾಳೋಜಿ ನಿಮ್ಮೀರ್ವರನ್ನು ಮುಗಿಸಲೆಂದು ಕಾಡು ಕಾಡು ಅಲೆಯುತ್ತಿರುವನೆಂದೂ ಎಚ್ಚರಿದಿಂದ ಇರಬೇಕೆಂದೂ ಮಗದೊಂದು ಚೀಟಿಯಲ್ಲಿ ನಿಂಗಜ್ಜಿ ಅನ್ನ ನೀರು ಬಿಟ್ಟು ಪರಮೇಶಿ ಪರಮೇಶಿ ಎಂದು ಕನವರಿಸುತ್ತಿರುವುದೆಂದೂ; ಇನ್ನೊಂದು ಚೀಟಿಯಲ್ಲಿ ನೀವಿರುವ ಯಾವತ್ತು ಸಂಗತಿಯನ್ನು ಕೂಡಲೇ ಪಾರಿವಾಳಗಳ ಕಾಲಿಗೆ ಕಟ್ಟಿ ಕಳಿಸಬೇಕೆಂದೂ ಬರೆಯಲಾಗಿತ್ತು. ತಡಮಾಡದೆ ಚೀಟಿಗಳನ್ನು ಕೃಷ್ಣನಿಂದ ಬರೆಸಿ ಪಾರಿವಾಳಗಳ ಕಾಲಿಗೆ ಕಟ್ಟಿದರು. ಚಿತ್ರಾಂಗದೆಯನ್ನು ಅರ್ಜುನ ಅಲ್ಲೆ ಇರಿಸಿತು. ಎಷ್ಟಾದರೂ ಎಲ್ಲ ಪಾರಿವಾಳಗಳಿಗೆ ಮುಖಂಡ ಅದು. ಪುರ್‍ರನೆ ಗಗನಕ್ಕೆ ಕುಪ್ಪಳಿಸಿದ ಅದನ್ನು ಎಲ್ಲ ಪಾರಿವಾಳಗಳು ಹಿಂಬಾಲಿಸಿದವು. ಪಶ್ಚಿಮ ದಿಕ್ಕಿನ ಕಡೆ ಗುರಿ ಇಟ್ಟು ವೇಗವಾಗಿ ಹಾರಿದ ಅವು ಚುಕ್ಕಿಯಾಗಿ ಕರಗಿಹೋದವು. ಚಿತ್ರಾಂಗದೆ ತನ್ನ ಕಾಲಲ್ಲಿ ಮಡಚಿಟ್ಟುಕೊಂಡಿದ್ದ ಚೀಟಿಯನ್ನು ಕೊನೆಗೆ ನೀಡಬೇಕೆ? ತುಂಟಿ, ಅದರಲ್ಲಿ ‘ನೀನು ಕನಕಳೊಂದಿಗೆ ಸುಖವಾಗಿರು. ನನ್ನ ಅಭ್ಯಂತರವಿಲ್ಲ. ನಾನು ಪಟ್ಟಣಕ್ಕೆ ಹೋಗುತ್ತಿದ್ದೇನೆ, ಇಂತಿ ನಿನ್ನ ಶ್ರೇಯೋಭಿಲಾಷಿ ಲಕ್ಷ್ಮೀ’ ಎಂದು ಸ್ವತಃ ಲಕ್ಷ್ಮೀಯೇ ಬರೆದ ಚೀಟಿ ಇತ್ತು.

ಸಮಾಜಕ್ಕೆ ಕೇಡು ಬಯಸುವವನೊಬ್ಬ ಬಂದು ಚಂದ್ರಕಾಂತನೊಂದಿಗೆ ಸೇರಿಕೊಂಡಿರುವನೆಂದೂ ಅವನೇ ಕಾಳೋಜಿ ಇರಬೇಕೆಂದೂ ಕೆಲವರು ದೊರೆಗಳಿಗೆ ಸುದ್ದಿ ಮುಟ್ಟಿಸಿದರು. ಆದ್ದರಿಂದ ದೊರೆಗಳು ಪರಮೇಶಿ ದಂಪತಿಗಳ ರಕ್ಷಣೆಗೆ ವಿಶೇಷ ಗಮನ ನೀಡಿದರು. ಅದೂ ಅಲ್ಲದೆ ರಾಜಿ ಮಾಡಿಸಲೆಂದು ಜಾಗಟಗೆರೆ ದುರುಗೋಜಿಗೂ, ಹೊನ್ನೂರಿನ ಹೊನ್ನಜ್ಜನಿಗೂ ಬರುವಂತೆ ಹೇಳಿಕಳಿಸಿದರು.

ಚಂದ್ರಕಾಂತ ಅಂದಾಜಿನಂತೆ ಯಕ್ಷಗಾನ ಬಯಲಾಟದ ದಿನ. ಛತ್ರದಲ್ಲಿ ಪರಮೇಶಿಯ ಬಾಯಿಯಿಂದ ಕತೆ ಕೇಳಿದ್ದ ಮತ್ತು ಹೇಳಿದ್ದ ಕವಿ ‘ಪ್ರೇಮವೇ ಸ್ವರ್ಗ’ ಎಂಬ ಕಥಾನಕವೋ ಎಂಬೊಂದು ಯಕ್ಷಗಾನವೇ ಅವತ್ತು ನಡೆಯುತ್ತಿದ್ದುದು ಪರಮೇಶಿ ಮತ್ತು ಕನಕರೇ ಅದರ ನಾಯಕ ನಾಯಿಕೆಯರು. ನಮ್ಮ ಜೀವನವೇ ಯಕ್ಷಗಾನವಾಗಿ ಅಭಿನಯಿಸಲ್ಪಡುತ್ತಿರುವುದೆಂದ ಮೇಲೆ ನೋಡದೆ ಇರಲಾದೀತೇನು! ನೋಡುವುದೆಂದು ನಿರ್ಧರಿಸಿದ ಅವರು ನೋಡಲು ಹೊರಟೇ ಬಿಟ್ಟರು. ಹಿಂದೆ ಮುಂದೆ ಹತ್ತಿಪ್ಪತ್ತು ಜನರ ಕಾವಲಿನ ನಡುವೆ! ವ್ಯೂಹದ ಪ್ರಕಾರ ಕಾಳೋಜಿಯ ಬಂಟರು ಮಾರುವೇಷದಲ್ಲಿ ಆಗಲೇ ರಂಗಮಂದಿರದ ಮುಂದೆ ಜಮಾಯಿಸಿರುವುದು ಯಾರಿಗೆ ತಾನೆ ಗೊತ್ತು! ಅಲ್ಲದೆ ಸುತ್ತಮುತ್ತಲ ಹಳ್ಳಿ ಜನರು ಬೇರೆ ತಂಡೋಪತಂಡವಾಗಿ ಜಮಾಯಿಸಿದ್ದರು.

ಆಟ ಪರಮೇಶಿ ಕರಿ ಹರಿಯುವುದರಿಂದ ಆರಂಭವಾಯಿತು. ಕನಕ ಪರಮೇಶಿಯ ಪ್ರೇಮಾಖ್ಯಾನ ನೋಡುವಾಗಂತೂ ಜನ ಕಣ್ಣೀರು ಕರೆದರು. ನಾರಾಯಣ ದೊರೆಯು ಪಾತ್ರವಂತೂ ಅದ್ಭುತವಾಗಿ ಆರಂಭವಾಯಿತು. ಅವರೇ ನೋಡು ಆ ಯುವ ದಂಪತಿಗಳು, ಪಿಯಾನು ನುಡಿಸುತ್ತಿರುವಾತನೇ ನೋಡು ಯಕ್ಷಗಾನ ರಚಿಸಿದ ಕವಿಕುಲತಿಲಕ. ಹೀಗೆ ಒಬ್ಬೊಬ್ಬರು ಒಂದೊಂದು ಮಾತಾಡುತ್ತ ತಲ್ಲೀನರಾಗಿರಲು ಪಾರಿವಾಳಗಳ ವೇಷ ತೊಟ್ಟಿದ್ದ ದಾಸರಯ್ಯನ ಶಾಲಾ ಬಾಲಕರು ರಂಗಪ್ರವೇಶ ಮಾಡಿ ಪ್ರೇಮಿಗಳಿಗೆ ಸಂದೇಶವನ್ನು ಬಿತ್ತರಿಸಬೇಕು ಅಷ್ಟರಲ್ಲಿ…. ಯಾವನೋ ಕ್ಷಣಾರ್ಧದಲ್ಲಿ ಭಯಂಕರ ಗೊಂದಲ ಸೃಷ್ಟಿಯಾಯಿತು. ಅದಕ್ಕೆ ಪೂರಕವಾಗಿ ಕವಿದ ಕತ್ತಲೆ ಬೇರೆ! ಕೆಲವು ಕುದುರೆಗಳ ಖುರಪುಟದ ಸದ್ದು ಕೇಳಿ ಮರೆಯಾಯಿತು.

ಆಮೇಲೆ ನೋಡುತ್ತಾರೆ ಪರಮೇಶಿ ಕನಕರು ಇಲ್ಲ. ಊರ ಎಲ್ಲ ಕಡೆ ಹುಡುಕಿದರೂ ಸಿಗಲಿಲ್ಲ. ಉನ್ಮತ್ತ ಜನರ ಹಿಂಡು ಖೆಡ್ಡಾ ಕಾರ್ಯಕ್ಷೇತ್ರ ತಲುಪಿ ಅಲ್ಲೂ ಹುಡುಕಿತು. ಯಾರ ಸುಳಿವೂ ಇಲ್ಲ. ಚಂದ್ರಕಾಂತ ಕಾಳೋಜಿ ಇವರಿಬ್ಬರ ಕೃತ್ಯವೆಂದು ಎಲ್ಲರಿಗೂ ಅರ್ಥವಾಯಿತು. ಸ್ವಲ್ಪ ತಡವಾದರೆ ಯುವ ದಂಪತಿಗಳ ಪ್ರಾಣಕ್ಕೆ ಕುತ್ತು. ‘ಓಯ್ ಕನಕವ್ವ’ ಎಂದು ಗಟ್ಟಿಯಾಗಿ ಕೂಗಿದರು. ಅವೇ ಮಾತುಗಳನ್ನು ಕಾಡು ಮಾರ್ದನಿಸಿತು. ಜನ ಹಿಂಡು ಹಿಂಡಾಗಿ ಹತ್ತು ದಿಕ್ಕುಗಳಿಗೆ ಚದುರಿದರು. ನಾರಾಯಣದೊರೆ ಅಲ್ಲೇ ಕ್ಯಾಂಪಾಕಿಬಿಟ್ಟ. ಸ್ವಲ್ಪ ಹೊತ್ತಿಗೆ ಜಾಗಟಗೆರೆಯ ದುರುಗೋಜಿ ಮತ್ತು ಹೊನ್ನೂರಿನ ಹೊನ್ನಜ್ಜನ ದುಃಖಕ್ಕೆ ಮೇರೆಯೇ ಇರದಂತಾಗಿತ್ತು. ಆನಂತರ ಸುಂಕಲಿಯೊಡನೆ ಬಂದ ಬಸವ ಬಗಬಗೆಯಾಗಿ ಸಮಾಧಾನಪಡಿಸಿದರೂ ಸಾಧ್ಯವಾಗಲಿಲ್ಲ. ಹಿಂದೆಯೇ ಪಾರಿವಾಳಗಳ ದೊಡ್ಡದೊಂದು ಹಿಂಡೇ ಆಗಮಿಸಿ ಗಗನದ ತುಂಬ ಚೆಲ್ಲಾಪಿಲ್ಲಿಯಾಗಿ ವೇಗವಾಗಿ ಹಾರತೊಡಗಿದವು.

ಮಧ್ಯಾಹ್ನ ದಾಟಿದಾಗ ಬಸವ ಸುಂಕಲಿ ಪಾರಿವಾಳಗಳ ಸಂಜ್ಞೆ ಮೇರೆಗೆ ಕಾಡಿನ ನಡುವಿನ ಬಯಲಲ್ಲಿ ಏನೋ ಕೋಲಾಹಲ ನಡೆದಿರುವುದನ್ನು ಗಮನಿಸಿದ. ಜಾಗಟಗೆರೆ ಬೇಡರ ಪಡೆಯೊಂದಿಗೆ ಬಯಲ ಸುತ್ತ ಕೊರಕಲಲ್ಲಿ ಅವಿತುಕೊಂಡ ಸ್ವಲ್ಪ ಹೊತ್ತಿಗೆ ದುರುಗೋಜಿಯೂ ಬಂದ. ಒಂದು ಕಡೆ ಆನೆ ಕಾಲಿಗೆ ಸಿಕ್ಕದೆ ಉರುಳುತ್ತಿದ್ದ ಪರಮೇಸಿ ಕೈಕಾಲುಗಳನ್ನು ಹಗ್ಗದಿಂದ ಬಿಗಿಯಲಾಗಿತ್ತು. ಬಾಯಿಗೆ ಬಟ್ಟೆ ತುರುಕಿದ್ದರಿಂದ ಅವನು ಕೂಗಲು ಸಾಧ್ಯವಿರಲಿಲ್ಲ. ಇನ್ನೊಂದು ಕಡೆ ಅಸಹಾಯಕತೆಯೇ ಮೈವೆತ್ತಂತೆ ನಿಂತಿದ್ದ ಕನಕಳ ಮೇಲೆ ಅತ್ಯಾಚಾರ ನಡೆಸಲು ನಾಮುಂದು ತಾಮುಂದು ಅಂತ ಪರಸ್ಪರ ಹೊಡೆದಾಡುತ್ತಿರುವ ಚಂದ್ರಕಾಂತ ಮತ್ತು ಕಾಳೋಜಿ.

ಹೆಂಡ ಕುಡಿದು ಉನ್ಮತ್ತವಾಗಿದ್ದ ಆನೆ ಮುಂದೆ ಪರಮೇಶಿಯನ್ನು ಹೆಡಮುರುಗೆ ಕಟ್ಟಿ ಉರುಳಿಬಿಟ್ಟಿದ್ದರು. ತುಳಿದು ಸಾಯಿಸಲೆಂದು ಆನೆಗೆ ಹಿಂದಿನಿಂದ ಅಂಕುಶದಿಂದ ಇರಿಯುತ್ತಿರುವ ಜೇಕಬ್…. ಆದರೆ ಪಾದರಸದಂಥ ಪರಮೇಶಿ ಆನೆಯ ಕಾಲಿಗೆ ಸಿಕ್ಕದೆ ಚೆಂಡಿನಂತೆ ಉರುಳುತ್ತಿದ್ದ. ಬೇವಿನ ಮರಕ್ಕೆ ಕಟ್ಟಲ್ಪಟ್ಟಿದ್ದಳು ಕನಕ. ಕಿರುಚದಂತೆ ಬಾಯಿಗೆ ಬಟ್ಟೆಯನ್ನೂ ಬಿಗಿದಿದ್ದರು. ಆಕೆ ತನಗೆ ಬೇಕೆಂದು ಚಂದ್ರಕಾಂತನೂ; ಆಕೆ ತನಗೆ ಬೇಕೆಂದು ಕಾಳೋಜಿಯೂ…. ಪರಸ್ಪರ ಜಗಳವಾಡುತ್ತಿದ್ದವರು ತಮ್ಮ ಸುತ್ತ ಬೆಟ್ಟದ ಕೋಡುಗಲ್ಲುಗಳ ಮೇಲೆ ಜನ ನೆರೆದಿರುವುದನ್ನು ಕಂಡಾಗ ಜಗಳ ನಿಲ್ಲಿಸಿ ಕೈಗೆ ತಲಾ ಒಂದೊಂದು ಆಯುಧ ತೆಗೆದುಕೊಂಡು ಸಜ್ಜಾದರು. ಅವರನ್ನು ತಾನು ಮೊದಲು ಬಲಿತೆಗೆದುಕೊಳ್ಳಬೇಕೆಂದು ಹೊನ್ನಜ್ಜ; ಅವೆರಡು ತನ್ನ ಬೇಟೆಗಳೆಂದು ದುರುಗೋಜಿ ಇಬ್ಬರೂ ಮುನ್ನುಗಿದರು.

ಕನಕಳತ್ತ ಓಡುತ್ತಿದ್ದ ಚಂದ್ರಕಾಂತನ ಕಡೆ ಅಪ್ಸರೆ ವೇಗವಾಗಿ ದಾವಿಸಿದ್ದ ಅವನನ್ನು ಸೊಂಡಲಿನಿಂದೆತ್ತಿ ಎಸೆದೇಟಿಗೆ ಅವನು ಬೆಟ್ಟದ ತುದಿಗೆ ಅಪ್ಪಳಿಸಿದನು…. ಅಪ್ಸರೆ ಹೆಂಡಕುಡಿದು, ಅಮಲಿನಲ್ಲಿದ್ದ ಆನೆ ಮೇಲೆ ಘೀಳಿಡುತ್ತ ಆಕ್ರಮಣ ಮಾಡಿತು. ಅದೇ ನೆವವೆಂದು ಓಡುತ್ತಿದ್ದ ಕಾಳೋಜಿಯನ್ನು ಆಗತಾನೆ ನಿಶೆ ಇಳಿದಿದ್ದ ಆನೆ ಸೊಂಡಲಿನಿಂದ ಗಟ್ಟಿಯಾಗಿ ಹಿಡಿದುಕೊಂಡು ಕ್ರುದ್ಧ ಜನರಿಗೊಪ್ಪಿಸಿತು.

ಬಸವ ಪರಮೇಶಿ ಮೈ ಬಿಗಿದಿದ್ದ ಕಟ್ಟುಗಳನ್ನು ಬಿಚ್ಚಿ ಅಪ್ಪಿಕೊಂಡು ಕನಕಳ ಪ್ರೀತಿಗಾಗಿ ಪರದಾಡುತ್ತಿರುವ ಎರಡು ಜೀವಗಳಾದ ದುರುಗೋಜಿ ಹೊನ್ನಜ್ಜರ ಕಡೆ ಮಿತ್ರನ ಗಮನ ಸೆಳೆದ.

“ಅಮ್ಮಾ ಕನಕಾ…. ನನ್ ಮಗಳಲ್ಲವ್ವ ನೀನು… ಆ ಹೊನ್ನಜ್ಜನ ಮೊಮ್ಮಗ್ಳು…. ನೀನು… ಹೋಗು ನಿಮ್ಮಜ್ಜನೊಂದಿಗೆ ಹೊರಟು ಹೋಗು… ನಾನು ಏನು ಅಲ್ಲ ನಿನ್ಗೆ….” ದುಃಖದ ಸೆಳೆವಿಗೆ ಸಿಕ್ಕು ಗದ್ಗದಿತನಾದ ದುರುಗೋಜಿಯನ್ನು ನೋಡಿ ಹೊನ್ನಜ್ಜನ ಕರುಳು ಕತ್ತರಿಸಿತು. ನೀರು ದುಮ್ಮಿಕ್ಕಿದವು. ಆದರೆ ಕನಕ ಮೊದಲು ಪರಮೇಶಿ ಕಡೆ ಓಡಿದಳು. ಅವನೂ ಎದ್ದೆನೋ ಬಿದ್ದೆನೋ ಅಂತ ಓಡಿ ಬಂದ ತನ್ನವಳ ಬಳಿಗೆ ಒಂದರೊಳಗಿನ್ನೊಂದೆರಕ ಹೊಯ್ದಂತೆ ಅವೆರಡು ದೇಹಗಳು ಒಂದಾಗಿ ನೀರ ಕೋಡಿ ಹರಿದವು.

ಆ ದೃಶ್ಯ ನೋಡುವಾಗ ದುರುಗೋಜಿ ಮತ್ತು ಹೊನ್ನಜ್ಜರ ದೇಹಗಳೊಳಗೆ ಸೇಡಿನ ಹೆಡೆ ನಿಷ್ಕ್ರಿಯಗೊಂಡು ಕರಗಿ ಮಾಯವಾಯಿತು.

ಜನ ಕಾಳೋಜಿಯನ್ನು ಹಿಗ್ಗಾ ಮುಗ್ಗಾ ಎಳೆದಾಡುತ್ತಿದ್ದರು…. ಮಿಠಾಯಿ ತುಂಡಿಗೆ ಹತ್ತಾರು ಮಕ್ಕಳು ಜಗಳ ಕಾದಂತೆ.

“ಇವ್ನೀಗೆ ಏನು ಶಿಕ್ಷೆ ಕೊಡೋದಂತ ದೊರೆಗಳೇ ತೀರ್ಮಾನಿಸಿ” ಲಚ್ಚನ್ನ ನುಡಿದದ್ದು ಸಮಂಜಸವೆನಿಸಿತು.

ಎದೆ ನೀವಿಸಿಕೊಳ್ಳುತ್ತ ಕೈಲಿ ಕೋವಿ ಹಿಡಿದು ಕೂತಿದ್ದ ದೊರೆಗಳು ಪರಮೇಶಿ, ಕನಕರನ್ನು ನೋಡಿದ್ದೆ ಎಳೆಮಗುವಿನಂತೆ ಓಡಿ ಹೋಗಿ ಅವರಿಬ್ಬರನ್ನು ಆಲಂಗಿಸಿಕೊಂಡರು. ಅವರೀರ್ವರ ಹೆಗಲ ಮೇಲೆ ಕೈ ಹಾಕಿ ದುರುಗೋಜಿ ಕಡೆಗೂ; ಹೊನ್ನಜ್ಜನ ಕಡೆಗೂ ನೋಡಿದರು ಅರ್ಥಪೂರ್ಣವಾಗಿ.

’ನೋಡಿದ್ರೇನಪ್ಪಾ ನಿಮ್ಮ ಸೇಡು ಸೆಡವಿನಿಂದಾಗಿ ಈ ಎಳೆ ಜೀವಗಳು ಎಷ್ಟೊಂದು ಅವಸ್ಥೆ ಅನುಭವಿಸಬೇಕಾಯ್ತು” ಹೋಗಿ ಅವರಿಬ್ಬರ ಭುಜ ಸ್ಪರ್ಶಿಸಿದರು. “ಕನಕಳನ್ನು ಪಾಲನೆ ಪೋಷಣೆ ಮಾಡಿ ಸಲಹಿದ ದುರುಗೋಜಿ ನಿನಗೆ ಮಗ್ನಾಗಬೇಕಲ್ವೆ ಹೊನ್ನಜ್ಜ” ಎಂದು ದೊರೆಗಳು ಮಾರ್ಮಿಕವಾಗಿ ನುಡಿದರು. ಇನ್ನು ಹೊನ್ನಜ್ಜಗೆ ದೂರ ಇರಲಾಗಲಿಲ್ಲ. ದುರುಗೋಜಿಯನ್ನು ಬರಸೆಳೆದು ಅಪ್ಪಿಕೊಂಡ.

ಕಾಳೋಜಿಯನ್ನು ಅಪಾದಮಸ್ತಕ ನೋಡಿದ ದೊರೆಗಳು “ಇವ್ನೀಗೆ ಏನು ಶಿಕ್ಷೆಕೊಡಬೇಕೂಂತ ವಿಷ್ಣುಸಮುದ್ರದ ದೈವಸ್ಥರೇ ತೀರ್ಮಾನಿಸ್ಲಿ” ಎಂದರು.

ವಿಷ್ಣುಸಮುದ್ರದ ಕೋಟೆಯ ನೆಲಮಾಳಿಗೆಯಲ್ಲಿ ಕಾಳೋಜಿಯನ್ನು ಇಡೀ ರಾತ್ರಿ ಬಂಧಿಸಿಡಲಾಯಿತು. ತಳವಾರ ಟಾಂಟಾಂ ಹಾಕಿದ. ಮಧ್ಯಾಹ್ನ ಪನ್ನಗಶಯನನ ದೇವಸ್ಥಾನದ ಮುಂದೆ ಪಂಚಾಯ್ತಿ ಸೇರಿತು. ಶಿಕ್ಷೆಯ ವಿವರ ತಿಳಿಯಲು ಸಾವಿರಾರು ಜನ ಉಸಿರು ಬಿಗಿ ಹಿಡಿದು ನೆರೆದರು.

ವಿಚಾರಣೆ ಆರಂಭವಾಯಿತು. ಕಾಳೋಜಿಯ ಅಪರಾಧಗಳನ್ನು ದೈವಸ್ಥರು ಶ್ರದ್ಧೆಯಿಂದ ಕೇಳಿದರು. ಆಗಲೇ ಕಾಳೋಜಿಯನ್ನು ತಂತಮ್ಮ ಕಣ್ಣುಗಳ ಕೆಂಪಿಗೆ ಆಹಾರ ಮಾಡಿಕೊಂಡಿದ್ದ ಜನರೂ ಉಸಿರು ಬಿಗಿ ಹಿಡಿದು ವಿಚಾರಣೆ ಆಲಿಸುತ್ತಿದ್ದರು.

ಅಪರಾಧಗಳ ಸರಮಾಲೆಯೇ ಕಾಳೋಜಿಯ ಕೊಪಳಿಗಿರುವುದು. ಏನು ಶಿಕ್ಷೆ ಕೊಡುವುದು? ದೈವಸ್ಥರು ಪರಸ್ಪರ ಮುಖನೋಡಿ ಗೊಣಗಿಕೊಂಡರಾದರೂ ಒಂದು ನಿರ್ಣಯಕ್ಕೆ ಬರಲಾಗಲಿಲ್ಲ. ಅವರೆಲ್ಲರೂ ಒಮ್ಮತದಿಂದ ದೊರೆಗಳೇ ಶಿಕ್ಷೆ ಕೊಡಬೇಕೆಂದು ವಿನಂತಿಸಿಕೊಂಡರು.

ಕೋವಿಯನ್ನು ಕರವಸ್ತ್ರದಿಂದ ಸ್ವಚ್ಫಗೊಳಿಸುತ್ತಿದ್ದ ದೊರೆಗಳು ಎದ್ದು ನಿಂತು ದೈವಕ್ಕೆ ಗೌರವಸೂಚಿಸಿ ಗಂಟಲು ಸರಿಪಡಿಸಿಕೊಂಡರು. ತಾವು ಕೊಡುವ ಶಿಕ್ಷೆಯನ್ನು ದೈವಸ್ಥರು ಅನುಮೋದಿಸುವ ಬಗ್ಗೆ ಖಚಿತಪಡಿಸಿಕೊಂಡು ಮಾತು ಆರಂಭಿಸಿದರು.

“…. ಇವನಿಗೆ ನಾನು ಕೊಡಬೇಕೆಂದಿರೋ ಶಿಕ್ಷೆ ಏನ್ರಪ್ಪಾ ಅಂದ್ರೆ!” ಕೋವಿಕಡೆ ದಿಟ್ಟಿಸಿದರು ಮೌನವಾಗಿ… ಸಭೆಯಲ್ಲಿ ಕೇಳುತ್ತಿದ್ದದು ಹೃದಯ ಬಡಿತ ಮಾತ್ರ. ಕೋವಿಯಿಂದ ಹೊಡೆದು ಸಾಯಿಸಬಹುದೆಂದು ಕೆಲವರು ಯೋಚಿಸಿದರೆ ಕೆಲವರು ಆನೆಕಾಲಿಗೆ ಕಟ್ಟಿ ತುಳಿಸಬಹುದೆಂದು ಯೋಚಿಸಿದರು. ಸಾರ್ವಜನಿಕ ಸ್ಥಳದಲ್ಲಿ ಕಲ್ಲಿನಿಂದ ಹೊಡೆದು ಸಾಯಿಸಬಹುದೆಂದು ಇನ್ನು ಕೆಲವರು ಯೋಚಿಸಿದರೆ ಮತ್ತೂ ಕೆಲವರು ದೊರೆಗಳ ಮನೆ ನೆಲಮಾಳಿಗೆಯಲ್ಲಿ ರಾಮಿರೆಡ್ಡಿಯನ್ನು ಉರುಳು ಹಾಕಿ ಕೊಂದಂತೆ ಇವನಿಗೆ ಹಾಕಬಹುದೆಂದು ಯೋಚಿಸಿದರು. ತುಸು ಹೊತ್ತು ಗುಸುಗುಸು ಮರುಕ್ಷಣದಲ್ಲಿ ಮತ್ತೆ ನಿಶ್ಯಬ್ದ.

“ಚಂದ್ರಕಾಂತನಂಥ ಅಧಿಕಾರಿಗೆ ಗಜರಾಜನೆ ಮರಣದಂಡನೆ ಕೊಟ್ಟಿರೋದು ನಿಮ್ಗೆಲ್ಲ ಗೊತ್ತಿರೋ ಸಂಗತಿ” ದೊರೆಗಳು ಗಂಟಲು ಸರಿಪಡಿಸಿಕೊಂಡು ಮಾತು ಆರಂಭಿಸಿದರು “ಆದ್ರೆ ನಾನು ಈ ಕಾಳೋಜಿಗೆ ಹೊಲಮನೆ ಕೊಟ್ಟು ದುಡಿಯಲು ಹಚ್ತೀನಿ…. ಇದೇ ನಾನಿವನಿಗೆ ಕೊಡ್ತಿರೋ ಕಠಿಣ ಶಿಕ್ಷೆ”. ತೀರ್ಪು ಕೇಳಿದ ಜನರೆದೆ ಧಸಕ್ಕೆಂದಿತು. ನಾವು ಊಹಿಸಿರದ ಶಿಕ್ಷೆ ಇದು. ಅದನ್ನು ಕೇಳಿದ ಕೂಡಲೇ ಕಾಳೋಜಿ ಪಾತಾಳಕ್ಕಿಳಿದು ಹೋದ ನೆಲದ ಮೇಲೆ ಬಿದ್ದು ಎದೆ ಎದೆ ಬಡಿದುಕೊಂಡು ಅಳತೊಡಗಿದ. ದೊರೆಗಳ ಕಾಲು ಹಿಡಿದುಕೊಂಡು ಗದ್ಗದಿತನಾದ.

ಪರಮೇಶಿ ಓಡಿ ಬಂದು ಕಾಳೋಜಿಯನ್ನು ಆಲಂಗಿಸಿಕೊಂಡ.

ದುರುಗೋಜಿ, ಹೊನ್ನಜ್ಜ ತುಂಬಿದ ತಮ್ಮ ಕಣ್ಣುಗಳನ್ನು ಒರೆಸಿಕೊಂಡರು.

ಎರಡೂರಿನ ಎಲ್ಲರಿಗೂ ದೊರೆಗಳು ತಮ್ಮ ಮನೆಯಲ್ಲಿ ಎಂಟು ದಿನಗಳ ಕಾಲ ದಿನಕ್ಕೊಂದು ಬಗೆಬಗೆಯ ಊಟ ನೀಡಿ ಸಹಪಂಕ್ತಿ ಭೋಜನ ಮಾಡಿದರು. ಆ ಹೊತ್ತಿಗಾಗಲೇ ಕಳಚಿದ್ದ ಕೊಂಡಿಗಳು ಅಪರೂಪಕ್ಕೆ ಗಟ್ಟಿಯಾಗಿ ಬೆಸೆದಿದ್ದವು.

ಅತಿಥಿಗಳು ಹೊರಟು ನಿಂತರು. ತಂತಮ್ಮ ಮನೆ ಮಠ ನೆನಪು ಮಾಡಿಕೊಂಡು. ಅವರ ಒತ್ತಾಯಕ್ಕೆ ಮಣಿದು ದೊರೆಗಳು ಪರಮೇಶಿ ಕನಕರನ್ನು ಒಲ್ಲದ ಮನಸ್ಸಿನಿಂದ ಬೀಳ್ಕೊಟ್ಟರು. ಅಂದಿನಿಂದ ಆ ಅಲಕನಂದೆಯ ತೀರ ಪ್ರದೇಶದ ಪ್ರತಿಯೊಂದು ಹಳ್ಳಿಗಳಲ್ಲಿ ಪರಮೇಶಿ ಮತ್ತು ಕನಕಾರ ಪ್ರೇಮ – ವಿವಾಹ ಮನೆಮಾತಾಯಿತು. ಅವರು ಗ್ರಾಮಗಳ ಜಾನಪದರ ನಾಲಗೆ ಮೇಲೆ ವಿರಾಜಮಾನರಾದರು. ಕಥೆ, ಕಾವ್ಯಗಳಲ್ಲಿ ನಾಯಕ ನಾಯಕಿಯರಾದರು. ಅಪ್ಪೇನಹಳ್ಳಿ ತಿಮ್ಮಣ್ಣ ಭಟ್ಟರು ಪರಮೇಶಿ ಮತ್ತು ಕನಕರ ಪ್ರೇಮವನ್ನು ಆಧಾರವಾಗಿಟ್ಟುಕೊಂಡು ‘ಕನಕಾಂಗಿ ಕಲ್ಯಾಣ’ ಎಂಬ ಬಯಲಾಟವನ್ನು ರಚಿಸಿದರು. ಈ ಮೂಡಲಪಾಯ ಯಕ್ಷಗಾನ ಬಯಲಾಟವು ಜಾಗಟಗೆರೆ, ಯಮಸಂಧಿ, ಧರ್ಮಾಪುರವೇ ಮೊದಲಾದ ಛಪ್ಪನ್ನಾರು ಹಳ್ಳಿಗಳಲ್ಲಿ ಪ್ರಸಿದ್ಧಿ ಪಡೆಯಿತು. ಕ್ರಮೇಣ ‘ಕನಕಾಂಗಿ ಕಲ್ಯಾಣ’ ಇಡೀ ಅರ್ಧರಾಜ್ಯದಲ್ಲೆಲ್ಲ ಮನೆಮಾತಾಗಿರುವುದು.
******

ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.