ಇನ್ನೂ ಕತ್ತಲು ಕತ್ತಲು ಎನ್ನುವಾಗ ನಾನು ಎದ್ದು ಕಣ್ಣುಜ್ಜಿಕೊಳ್ಳುತ್ತ ಅಂಗಳಕ್ಕೆ ಬಂದು ನೋಡಿದರೆ ಕೈಯ್ಯಲ್ಲೊಂದು ಗಂಟು ಹಿಡಿದು ಶೇಷಗಿರಿ ಉಡುಪರು ಹೊರಟು ನಿಂತಿದ್ದರು. ನನ್ನನ್ನು ನೋಡಿ “ಕುಡುಮಲ್ಲಿಗೆಗೆ ಹೋದವನು ನಿನ್ನ ಅಪ್ಪಯ್ಯ ಅಮ್ಮನನ್ನು ನೋಡುತ್ತೇನೋ” ಎಂದರು. ಅಪ್ಪಯ್ಯ ಅಮ್ಮ ಎಂದು ಅವರೆಂದ ಕೂಡಲೆ, ಊರಿನಲ್ಲಿದ್ದಿದ್ದರೆ ಇಷ್ಟು ಹೊತ್ತಿಗೆ ಅಮ್ಮನ ಸೀರೆ ಹೊದ್ದು ಬೆಚ್ಚಗೆ ಮಲಗಿರುತ್ತಿದ್ದೆ. ಆಮೇಲೆ ಅಮ್ಮ ಏಳಿಸಿ ಮುಖ ತೊಳೆಸಿ ಕಾಫಿ ಕೊಡುತ್ತಿದ್ದಳು ಎಂದು ನೆನಪಾಗಿ ವ್ಯಥೆಯಾಯಿತು. ಬೇಲಿ ದಾಟುವುದಕ್ಕೆ ಮುಂಚೆ ನಿಂತು ಶೇಷಗಿರಿ ಉಡುಪರು ‘ಯಮುನಾ’ ಎಂದು ಅವರ ಮಗಳನ್ನು ಕರೆದರು. ತಲೆಯ ಮೇಲೆ ಕೆಂಪು ಸೀರೆಯ ಸೆರಗನ್ನು ಎಳೆದುಕೊಳ್ಳುತ್ತ ಯಮುನಕ್ಕ ಬಾಗಿಲಲ್ಲಿ ಬಂದು ನಿಂತರು. ಶೇಷಗಿರಿ ಉಡುಪರು ಉಣುಗೋಲು ಹಾಕುತ್ತ ಹೇಳಿದರು. “ಹಾಗಾದರೆ ನಾನು ಹೋಗಿ ಬರ್ತೇನೆ . ಏನು? ಮಕ್ಕಳ ಮೇಲೆ ನಿಗಾ ಇರಲಿ . ಹೊಳೆಯಲ್ಲಿ ಹೆಚ್ಚು ಹೊತ್ತು ಈಸಲು ಬಿಡಬೇಡ. ಗೋಕರ್ಣದಲ್ಲಿ ಯಾಗ ಮುಗಿಸಿಕೊಂಡು ಉದ್ಯಾವರಕ್ಕೆ ಹೋಗಿಬರೋದು ಮೂರು ತಿಂಗಳಾದರೂ ಆದೀತು. ಮಕ್ಕಳು ನಿತ್ಯ ಬಾಯಿಪಾಠ ಮಾಡಲಿ. ಉಪಾಧ್ಯರಿಗೆ ಉಳಿದದ್ದೆಲ್ಲ ಹೇಳಿದ್ದೇನೆ.” ನನ್ನ ಅಪ್ಪಯ್ಯನಿಗಿಂತ ದೊಡ್ಡವರಾಗಿ ಕಾಣುತ್ತಿದ್ದ ಶೇಷಗಿರಿ ಉಡುಪರೆಂದರೆ ನನಗೆ ಭಯ. ಆದರೆ ಅಮ್ಮನಿಗಿಂತ ಚಿಕ್ಕವರಾಗಿದ್ದ ಯಮುನಕ್ಕ ಎಂದರೆ ಸಲಿಗೆ. ಉಡುಪರು ನನಗೆ ಬೆನ್ನು ತಿರುಗಿಸಿದ ಕೂಡಲೇ ಯಮುನಕ್ಕ ನಾನೂ ಊರಿಗೆ ಹೋಗಬೇಕೆಂದು ಹಠಮಾಡಿದೆ. ‘ಇಕೊ ಸುಮ್ಮನಿರು. ಮುಖ ತೊಳೆದು ಹೋಗಿ ತುಳಸಿ ಕೊಯ್ದುಕೊಂಡು ಬಾ’ ಎಂದು ಅವರು ಒಳಗೆ ಹೋದರು. ಅವರು ಒಳಗೆ ಹೋಗುತ್ತಿದ್ದಂತೆ ವಿಶ್ವನಾಥ ಶಾಸ್ತ್ರಿ, ಗಣೇಶ ಎದ್ದು ಬಂದರು. ಶೇಷಗಿರಿ ಉಡುಪರ ಬೆನ್ನು ಕತ್ತಲಿನಲ್ಲಿ ಮಾಯವಾಗುವುದನ್ನು ನೋಡುತ್ತ, ಅಳುತ್ತ ನಿಂತಿದ್ದ ನನ್ನನ್ನು ನೋಡಿ ನಕ್ಕರು. ಅವರ ಜೊತೆ ನಾನು ಬಾವಿಕಟ್ಟೆಗೆ ಮುಖ ತೊಳೆಯಲು ಹೋದೆ. ಶಾಸ್ತ್ರಿ “ಏನೋ ಹೆಣ್ಣಿಗ” ಎಂದು ನನ್ನನ್ನು ವಿಚಾರಿಸಿದ. ಗಣೇಶ ಬಿಂದಿಗೆಯನ್ನು ಸರ್ರನೆ ಬಾವಿಗಿಳಿಸುತ್ತ – “ಅಲ್ಲೋ ಶಾಸ್ತ್ರಿ. ಈ ಪೆಚ್ಚು ಉಪನಯನದ ಹಿಂದಿನ ರಾತ್ರಿ ತೊಡೇನ ಕೊಯ್ದು ಕಪ್ಪೆ ತುಂಬುತ್ತಾರೇಂತಾ ಚೇಷ್ಟೆ ಮಾಡಿದ್ರೆ ನಂಬಿಕೊಂಡು ಅಳ್ತಾ ಕೂತಿತ್ತಂತೆ” ಎಂದು ಬಿಂದಿಗೆಯ ನೀರು ತುಂಬುತ್ತಿರಲು ನಕ್ಕ. ನಾನು ಅಳುತ್ತ ಅಡಿಗೆ ಮನೆಗೆ ಹೋದೆ. ‘ನೀರು ಸೇದಿಕೊಡುತ್ತೇವೆ ಬಾರೊ” ಎಂದು ಅವರಿಬ್ಬರೂ ಕೂಗಿ ಕರೆದರು. ಯಮುನಕ್ಕ ಮಜ್ಜಿಗೆ ಕಡೆಯುತ್ತಿದ್ದರು. ಅವರ ಮುಖವೂ ಅಳುಬುರುಕಾಗಿ ಕಂಡಿತು. ಎರೆಡೆರಡು ಸಾರಿ ನಾನು ಹೇಳಿದ ಮೇಲೆ ಅವರು ನನ್ನ ಕಡೆಗೆ ತಿರುಗಿ “ಹೋಗಲಿ ಬಿಡು, ನೀನು ಅವರ ಜೊತೆ ತುಳಸಿ ಕೊಯ್ಯಲು ಹೋಗಬೇಡ. ನಿನಗೆ ನಾನು ಮುಖ ತೊಳಿಸುತ್ತೇನೆ ” ಎಂದು ಸಮಾಧಾನ ಹೇಳಿದರು. ಮುಖ ತೊಳೆಸಿಯಾದ ಮೇಲೆ ನಾನು ಒಬ್ಬನೇ ಬುಟ್ಟಿ ಹಿಡಿದು ಪೂರ್ವದಿಕ್ಕಿಗೆ ಹೊರಟೆ. ದಾರಿಯಲ್ಲಿ ಬೆಳೆದಿದ್ದ ತುಂಬೆಹೂವನ್ನೆಲ್ಲ ಕೊಯ್ದೆ. ನಾನಿನ್ನೂ ಸಣ್ಣವನು, ಕುಳ್ಳಗಿದ್ದೇನೆಂದು, ಶಾಸ್ತ್ರಿ – ‘ತುಂಬೇಗಿಡಕ್ಕ ಏಣಿ ಹಾಕೋನು’ ಎಂದು ಹಾಸ್ಯ ಮಾಡುತ್ತಿದ್ದನು. ಶಾಸ್ತ್ರಿ ನನಗಿಂತ ದೊಡ್ಡ ಹುಡುಗ: ತುಂಬ ದೊಡ್ಡ ಹುಡುಗನಂತೆ ಕಾಣಿಸುತ್ತಿದ್ದ. ಅವನಿಗೆ ಅಪ್ಪ ಅಮ್ಮ ಇರಲಿಲ್ಲ; ಉಡುಪರ ಹತ್ತಿರ ವೇದ ಕಲಿಯುತ್ತಿದ್ದ ನನ್ನ ಹಾಗೆ. ಅವನಿಗೆ ಒಂದು ಕಣ್ಣು ಸಣ್ಣ, ಇನ್ನೊಂದು ದೊಡ್ಡಗಿದ್ದುದರಿಂದ ಗಣೇಶ ಅವನನ್ನು ಒಕ್ಕಣ್ಣಿನ ಶುಕ್ರಾಚಾರಿ ಎಂದು ಹಾಸ್ಯ ಮಾಡುತ್ತಿದ್ದ. ಅವರಿಬ್ಬರೂ ಒಂದು ಜೊತೆ; ನಾನೇ ಬೇರೆ. ಬುಟ್ಟಿ ಹಿಡಿದು ನಡೆಯುತ್ತ ಹಾಗೇ ಗೋಪಾಲ ಜೋಯಿಸರ ಮನೆಗೆ ಹೋದೆ. ಅಲ್ಲಿ ಬಿಲ್ವಪತ್ರೆಯ ಮರವಿದ್ದುದರಿಂದ ಅದರ ಪತ್ರೆ ಕೊಯ್ಯಲು ಗೋಪಾಲ ಜೋಯಿಸರ ಅಕ್ಕ ಗೋದಾವರಮ್ಮನನ್ನು ದೋಟಿಗಾಗಿ ಕೇಳಿದೆ. ಗೋದಾವರಮ್ಮನೂ ಯಮುನಕ್ಕನಂತೆ ಮಡಿ ಹೆಂಗಸು. ಆದರೆ ಯಮುನಕ್ಕ ಅವರಿಗಿಂತ ತುಂಬ ಚಿಕ್ಕವರು: ಕೆಂಪಗೆ ಗುಂಡುಗುಂಡಗೆ ಅಮ್ಮನಿಗಿಂತಲೂ ಚೆನ್ನಾಗಿ ಯಮುನಕ್ಕ ಕಾಣುತ್ತಿದ್ದರು. ಯಮುನಕ್ಕನಿಗೆ ಮದುವೆಯಾದ ಸ್ವಲ್ಪ ದಿನದಲ್ಲೆ ಅವರ ಗಂಡ ಹಾವು ಕಚ್ಚಿದ್ದರಿಂದ ಸತ್ತರಂತೆ. ಶೇಷಗಿರಿ ಉಡುಪರ ಹೆಂಡತಿ ಸತ್ತ ಮೇಲೆ – ಅಪ್ಪನನ್ನು ನೋಡಿಕೊಳ್ಳಲು ಒಂದು ಜನ ಬೇಕಲ್ಲ – ಎಂದು ಯಮುನಕ್ಕ ಉಡುಪರ ಜೊತೆಗೇ ಇರುವುದಂತೆ. ಹೀಗೆಂದು ಗಣೇಶ ನನಗೆ ಹೇಳಿದ್ದ. ಗಣೇಶ ಉಡುಪರಿಗೆ ದೂರದಿಂದ ಸಂಬಂಧ. ಕೈಯಿಂದ ದೋಟಿಯನ್ನು ಎತ್ತಿ ನೆಗೆಯುತ್ತ ಬಿಲ್ವಪತ್ರೆ ಕೊಯ್ಯುತ್ತಿದ್ದ ನನ್ನನ್ನು ಕಂಡು ಗೋದಾವರಮ್ಮ, ಬಿಡು ನಾನು ಕೊಯ್ದು ಕೊಡುತ್ತೇನೆಂದು ಕೊಯ್ದುಕೊಟ್ಟರು. ಆಮೇಲೆ ನಾನು ಅವರ ಹಿತ್ತಲಿನಲ್ಲಿದ್ದ ತುಳಸಿ ಕೊಯ್ಯುತ್ತಿರಲು,
“ಉಡುಪರು ಗೋಕರ್ಣಕ್ಕೆ ಹೋದರೇನೊ?” ಎಂದರು . ನಾನು ‘ಹೌದು’ ಎಂದೆ.
“ಯಮುನ ಹೇಗಿದ್ದಾಳೆ” ಎಂದರು.
“ಚೆನ್ನಾಗಿದ್ದಾರೆ” ಎಂದೆ.
“ಎರಡು ಮೂರು ದಿನದಿಂದ ದೇವಸ್ಥಾನಕ್ಕೇ ಬರ್ತಿಲ್ಲ- ಹುಷಾರಿಲ್ಲಾಂತ ಕೇಳಿದೆ” ಎಂದರು.
“ನನಗೆ ಗೊತ್ತಿಲ್ಲ” ಎಂದೆ.
“ಗೊತ್ತಿಲ್ಲಾಂದರೆ ಏನೊ? ಮಲಗಿರೋದಿಲ್ಲವ ಅವರು ? ಉಡುಪರು ಏನೂ ಹೇಳಲಿಲ್ಲವ?”
“ತಲೆ-ಸುತ್ತು ಬರ್ತದೆ ಅಂತ ಹೇಳಿ ಮೊನ್ನೆ ಮಲಗಿಕೊಂಡಿದ್ದರು. ಉಡುಪರು ಅದಕ್ಕೆ ಮದ್ದುಕೊಟ್ಟರು ಅಷ್ಟೆ. ಇನ್ನೇನೂ ಇಲ್ಲ”, ಎಂದೆ ನಾನು.
“ಓ ಹಾಗೊ?” ಎಂದು ಗೋದಾವರಮ್ಮ ನಕ್ಕರು. ಒಳಗೆ ಹೋಗುತ್ತ ಗೋಪಾಲ ಜೋಯಿಸರಿಗೆ- “ಕೇಳಿದೆಯೇನೊ? ಯಮುನಾಗೆ ಜ್ವರ ಬರ್ತಿಲ್ವಂತೆ. ಜ್ವರ ಬರದೇನೇ ಜ್ವರಗೆಡ್ಡೆ ಬೆಳೆದಿರಬೇಕು ಪಾಪ” ಎಂದು ನಕ್ಕರು. ಅವರ ಮನೆಯಿಂದ ಹೊರಟು ಬರುವಾಗ ಅಗ್ನಿಕಾರ್ಯಕ್ಕಾಗಿ ಅಶ್ವತ್ಥವೃಕ್ಷದ ಒಣಗಿದ ಸಮಿಧೆಗಳನ್ನು ಕೇರಿಯ ತುದಿಯಲ್ಲಿದ್ದ ಮರದ ಬುಡದಿಂದ ಆರಿಸಿಕೊಂಡು ಬಂದೆ. ಯಮುನಕ್ಕ ನಾನು ಬರೋದನ್ನೆ ಕಾಯುತ್ತಿದ್ದರು. “ಎಷ್ಟು ಹೊತ್ತು? ಉಪಾಧ್ಯರು ಕಾದಿದ್ದಾರೆ ನೋಡು” ಎಂದು ಅವಸರವಾಗಿ ಬಾವಿಯಿಂದ ಎರಡು ಬಿಂದಿಗೆ ತಣ್ಣೀರನ್ನು ನನ್ನ ತಲೆಯ ಮೇಲೆ ದಡದಡ ಹೊಯ್ದು, ‘ಬೇಗ ಹೋಗಿ ಜಪಕ್ಕೆ ಕೂತುಕೊ’ ಎಂದರು. ಒದ್ದೆ ಪಂಚೆಯನ್ನು ಹಿಂಡಿ ಅದರಿಂದ ನನ್ನ ದೊಡ್ಡ ಜುಟ್ಟನ್ನು ಒರೆಸಿ ಅದನ್ನು ಇಳಿಬಿಟ್ಟು ತುದಿಗೊಂದು ಗಂಟು ಹಾಕಿ, ಒದ್ದೆ ಬಟ್ಟೆಯಲ್ಲೆ ನಡುಮನೆಗೆ ಓಡಿ ಬಂದು ಯಮುನಕ್ಕನಿಂದ ಮಡಿಯಲ್ಲಿ ಒಣಗಿಸಿದ ಅಂಗವಸ್ತ್ರವನ್ನು ಇಸಕೊಂಡು ಉಟ್ಟು ಇನ್ನೊಂದು ಅಂಗವಸ್ತ್ರವನ್ನು ಹೊದ್ದು ಪಂಚಪಾತ್ರೆ ಹಿಡಿದು ಹೊರಟೆ. “ಏ ಕೌಪೀನ ಹಾಕಿಕೊಂಡಿದೀಯೇನೊ” ಎಂದರು ಯಮುನಕ್ಕ. ಅದನ್ನು ಮರೆತಿದ್ದೆ. ಯಮುನಕ್ಕ ನಕ್ಕು ನನ್ನ ಬೆಳ್ಳಿಯ ಉಡದಾರಕ್ಕೆ ಕೌಪೀನವನ್ನು ಅವರೇ ಸಿಕ್ಕಿಸಿ ಇನ್ನು ಹೋಗೆಂದರು. ಮೆಲೆ-ಕಜ್ಜಿ ಮುಖದ ಉಪಾಧ್ಯರು ‘ಎಷ್ಟು ಹೊತ್ತೆಂದು’ ನನಗೆ ಗದರಿಸಿದರು. ಉಡುಪರು ಒಂದು ದಿನ ನನಗೆ ಗದರಿಸಿದ್ದಿಲ್ಲ. ‘ಇನ್ನೂ ಜಪದ ಮಂತ್ರವನ್ನು ನೀನು ಕಲಿತಿಲ್ಲವಲ್ಲ’ ಎಂದು ಬೈಯುತ್ತ ಜಪ ಮಾಡಿಸಿದರು. ನನಗೆ ಅವರು ಬೆಯ್ದರೆಂದು ಜಪಮಾಡುತ್ತ ಕೂತಿದ್ದ ಶಾಸ್ತ್ರಿಗೆ ಖುಷಿಯಾಗಿ, ಅವನು ನಕ್ಕು, ಒಕ್ಕಣ್ಣಿನಲ್ಲಿ ಗಣೇಶನ ಕಡೆ ನೋಡಿದ. ಜಪ ಮುಗಿದ ಮೇಲೆ ಅಗ್ನಿಕಾರ್ಯ ಮಾಡಿದೆ. ಉಪಾಧ್ಯರು ಇದಾದ ಮೇಲೆ ದೇವಸ್ಥಾನಕ್ಕೆ ಪೂಜೆಗೆಂದು ಹೋಗುವವರು“ಗಂಜಿಯೂಟವಾದ ಮೇಲೆ ಬಂದು ಗಂಧ ತೇದು ಕೊಡಿ” ಎಂದರು. ಸಾಲಾಗಿ ಬಳ್ಳೆ ಹಾಕಿದ್ದರು ಒಳಗೆ. ನಾವು ಮೂವರೂ ಅವಸರದಿಂದ ಓಡಿ ಕೂತುಕೊಂಡೆವು. ಯಮುನಕ್ಕ ಅಕ್ಕಿ ನುಚ್ಚಿನ ಗಂಜಿಯನ್ನು ಬಡಿಸಿ, ತೆಂಗಿನ ಎಣ್ಣೆಯನ್ನು ಹಾಕಿದರು. ಬಾಡಿಸಿಕೊಳ್ಳಲು ಮಿಡಿ ಉಪ್ಪಿನಕಾಯಿಯನ್ನು ಕೊಟ್ಟರು. ತೆಂಗಿನಕಾಯಿ ಮಸ್ತಾಗಿದ್ದ ಕಾಲದಲ್ಲಿ ನಂಗೆ ಕಾಯಿಹಾಲಿನ ಗಂಜಿ ಸಿಗುತ್ತಿತ್ತು.
ನಾವು ಗಂಜಿಯನ್ನು ಶಬ್ದಮಾಡುತ್ತ ಸುರಿದು ಎದ್ದೆವು. ಶಾಸ್ತ್ರಿ ಮತ್ತು ಗಣೇಶ ಹೊರಗೆ ಹೋದರು. ನಾನು ಅಡಿಗೆ ಮನೆಯಲ್ಲೆ ಉಳಿದೆ. “ನಿಮಗೆಲ್ಲ ಇವತ್ತು ಸಾಹುಕಾರರ ಮನೇಲಿ ಊಟ. ನಿನ್ನೆ ಬಂದು ಹೇಳಿಕೆ ಹೇಳಿ ಹೋದರಲ್ಲ” ಎಂದರು ಯಮುನಕ್ಕ . ಹಾಗಾದರೆ ದೇವಸ್ಥಾನದಲ್ಲಿ ಪೂಜೆಯಾದ ಮೇಲೆ ಪಾಯಸದ ಊಟವೆಂದು ನನಗೆ ಗೆಲುವಾಯಿತು. ಜೊತೆಗೆ ದಕ್ಷಿಣೆ ಸಿಗುತ್ತದೆ. ಉಪನಯನಕ್ಕೆ ಮುಂಚೆ ಬರೆ ಒಂದು ಬಿಲ್ಲೆ ದಕ್ಷಿಣೆ ಸಿಗುತ್ತಿತ್ತು. ಆದರೆ ಉಪನಯನವಾದ ಮೇಲೆ ಒಂದಾಣೆಯೆಂದು, ನನಗೆ ಮುಂಜಿಯಾಗಿದೆಯೆಂದು ಸಂತೋಷ. ಮರಕೋತಿಯಾಡುವ ಹಾಗಿಲ್ಲ, ನಾಯಿಗಳಿಗೆ ಕಲ್ಲು ಹೊಡೆದು ಬೆದರಿಸುವ ಹಾಗಿಲ್ಲ,ಚೆಡ್ಡಿ ಹಾಕಿಕೊಳ್ಳುವ ಹಾಗಿಲ್ಲ, ಊಟಕ್ಕೆ ಕೂತಾಗ ಮಾತಾಡುವ ಹಾಗಿಲ್ಲ ಎಂಬುದೆಲ್ಲ ಮುಂಜಿಯಾದ ಮೇಲೆ ಬೇಜಾರಾದರೂ ಎಲೆಯ ಪಕ್ಕದಲ್ಲಿಟ್ಟುಕೊಂಡ ಪಂಚಪಾತ್ರೆಯಲ್ಲಿ ಒಂದಾಣೆ ಬೀಳುವುದೆಂದು ಸಂತೋಷ. ಯಮುನಕ್ಕನ ಹತ್ತಿರ ಒಂದು ತೂತದ ಡಬ್ಬಿಯಿತ್ತು. ಅದರಲ್ಲಿ ಬಂದ ದಕ್ಷಿಣೆಯನ್ನೆಲ್ಲಾ ಹಾಕಿ ಕೂಡಿಸುತ್ತಿದ್ದೆ. ಮನೆಗೆ ಹೋದಾಗ ಅಮ್ಮನಿಗೆ ಕೊಡು ಎಂದಿದ್ದರು ಯಮುನಕ್ಕ . ಜಿಪುಣ ಎಂದು ಹಂಗಿಸುತ್ತಿದ್ದ ಶಾಸ್ತ್ರಿ.
ನಾನು ಗೋದಾವರಮ್ಮನ ಮನೆಗೆ ಬಿಲ್ವಪತ್ರೆಗೆಂದು ಹೋಗಿದ್ದು ಅಲ್ಲಿ ಅವರು ಕೇಳಿದ್ದು ಹೇಳಿದೆ. ಯಮುನಕ್ಕನ ಮುಖ ಪೆಚ್ಚಾಯಿತು. ‘ಇನ್ನೇನು ಕೇಳಿದರು ಹೇಳು. ಹೇಳು’ ಎಂದು ಒತ್ತಾಯ ಮಾಡಿದರು. ‘ಏನೋ ಜ್ವರಗಡ್ಡೆಯೆಂದು ಅವರವರೆ ಮಾತಾಡಿಕೊಂಡು ನಕ್ಕರೆಂದು’ ಹೇಳಿದೆ . ಯಮುನಕ್ಕ ಸೆರಗಿನಿಂದ ಮುಖ ಮುಚ್ಚಿಕೊಂಡು ಅತ್ತರು. “ಇನ್ನು ಯಾರಾದರೂ ಕೇಳಿದರೆ ಜ್ವರ ಬರ್ತಿದೆ ಅಂತ ಹೇಳು” ಎಂದರು. ಯಮುನಕ್ಕ ಬಿಡುವು ಸಿಕ್ಕಾಗಲೆಲ್ಲ ಮಲಗಿಯೇ ಇರುತ್ತಿದ್ದುದರಿಂದ, ದೇವಸ್ಥಾನಕ್ಕೆ ಬರೋದು ಬಿಟ್ಟಿದ್ದರಿಂದ ನಾನು ಇರಬಹುದು ಎಂದುಕೊಂಡೆ. ಮತ್ತೆ ಮಧ್ಯಾಹ್ನಕ್ಕೆ ಸಮಯವಾದ್ದರಿಂದ ಜಪಕ್ಕೆ ಕೂತೆ. ದೇವಸ್ಥಾನದಲ್ಲಿ ಪೂಜೆಯಾದ ಮೇಲೆ ಯಮುನಕ್ಕನ ಹೊರತು ನಾವೆಲ್ಲ ಸಾಹುಕಾರರ ಮನೇಲಿ ಗಡದ್ದಾಗಿ ಊಟ ಮಾಡಿದೆವು. ಅವರ ಅಮ್ಮನ ಶ್ರಾದ್ಧವಂತೆ. ಊಟ ಮುಗಿದ ಮೇಲೆ ಉಪಾಧ್ಯರು ನಮ್ಮನ್ನು ಕರೆದು, “ಇವತ್ತು ನನಗೆ ಬರಲು ಆಗೋದಿಲ್ಲ ಕಣ್ರೋ . ನೀವು ನೀವೇ ಕೂತು ಚಿಂತನೆ ಮಾಡಿಕೊಳ್ರಿ . ಏ ಶಾಸ್ತ್ರಿ, ನೀನು ಈ ಮಾಣಿ ಸರಿಯಾಗಿ ಕಲ್ತಿದೆಯೋ ಇಲ್ಲವೋ ನೋಡಿಕೊ” ಎಂದು ನನ್ನನ್ನು ಶಾಸ್ತ್ರಿಗೆ ಒಪ್ಪಿಸಿ ಹೋದರು. ಊಟವಾದ ಮೇಲೆ ನಿತ್ಯ ಮಧ್ಯಾಹ್ನ ನಮಗೆ ಶ್ರೀಸೂಕ್ತ, ಪುರುಷಸೂಕ್ತ ಇತ್ಯಾದಿ ಮಂತ್ರಗಳನ್ನು ಉಡುಪರು ತಕಲಿ ಹಿಡಿದು ಜನಿವಾರ ಮಾಡುತ್ತ ಬಾಯಿಪಾಠ ಮಾಡಿಸುತ್ತಿದ್ದರು. ದೂರದಲ್ಲಿ ಯಮುನಕ್ಕ ಕೂತು ದೇವಸ್ಥಾನಕ್ಕೆಂದು ಹೂಬತ್ತಿ ಹೊಸೆಯುತ್ತಿದ್ದರು. ಉಡುಪರು ಮನೆಯಲ್ಲಿದ್ದಾಗ ಈ ಪಾಠ ಒಂದು ದಿನ ತಪ್ಪಿದ್ದಿಲ್ಲ. ಆದರೆ ಇವತ್ತು ತಪ್ಪಿತೆಂದು ನನಗೆ ಖುಷಿಯಾಯಿತು.
ಶಾಸ್ತ್ರಿ ನನ್ನನ್ನು ಕರೆದು “ಎಲ್ಲಿ ಪುರುಷಸೂಕ್ತವನ್ನು ಹೇಳು” ಎಂದ. ಅವನಿಗೆ ನನಗಿಂತ ಹೆಚ್ಚು ಪಾಠವಾಗಿತ್ತು. ಒಳ್ಳೆ ಕುಂಟೆಕೋಣನ ಹಾಗೆ ಇದ್ದಾನೆಂದು ಯಮುನಕ್ಕ ಅವನನ್ನು ಬಯ್ಯುತ್ತಿದ್ದರು. ನಾನು ಪೆಚ್ಚು ಮುಖ ಹಾಕಿ ಅವನೆದುರು ನಿಂತೆ. “ಹೋಗಲಿ ನಿನ್ನ ಪ್ರವರ ಗೋತ್ರಗಳನ್ನಾದರೂ ಸರಿಯಾಗಿ ಹೇಳು” ಎಂದ. ಗಣೇಶ ನಗುತ್ತಿದ್ದ. ನಾನು “ಆಂಗೀರಸ, ಅಂಬರೀಷ ಯೌವನಾಶ್ವ ತ್ರಯಾರ್ಷೇಯ ಪ್ರವರಾನ್ವಿತ, ಆಂಗೀರಸ ಗೋತ್ರ ಆಶ್ವಲಾಯನ ಸೂತ್ರ ಋಕ್ಷಾಖಾಧ್ಯಾಯೀ ನಾರಾಯಣ ಶರ್ಮ…..” ಎನ್ನುತ್ತಿದ್ದಂತೆ “ಎಲ್ಲಿ ನಿಂತುಕೊಂಡು ಕಿವಿಗಳನ್ನು ಮುಟ್ಟಿ ಸರಿಯಾಗಿ ಹೇಳು” ಎಂದ. ನಾನು ಪುನಃ ಅದನ್ನೆಲ್ಲ ಹೇಳಿ “ಅಹಂ ಭೋ ಅಭಿವಾದಯೇ” ಎಂದೆ. “ಎಲ್ಲಿ ನಮಸ್ಕಾರವನ್ನೂ ಮಾಡು” ಎಂದ . ನನಗೆ ಹಿಗ್ಗಿತು. ಹೋಗು ಎಂದಾಕ್ಷಣ ಓಡಿ ಯಮುನಕ್ಕನಿದ್ದಲ್ಲಿಗೆ ಬಂದೆ. ಯಮುನಕ್ಕ ಊಟವನ್ನು ಬಡಿಸಿಕೊಂಡು ಬಳ್ಳೆಯ ಎದುರು ತಲೆಮೇಲೆ ಕೈಹೊತ್ತು ಕೂತಿದ್ದರು. ಅನ್ನದ ಮೇಲೆ ಮಾವಿನಕಾಯಿ ಗೊಜ್ಜನ್ನು ಸುರಿದಿದ್ದರು. ಆದರೆ ಒಂದು ತುತ್ತು ಅನ್ನವನ್ನೂ ಉಂಡ ಹಾಗೆ ಕಾಣಲಿಲ್ಲ. ನಾನು ಅಲ್ಲಿಗೆ ಹೋಗಿ ಕೂತ ಮೇಲೆ ನಾಲ್ಕು ತುತ್ತು ಅನ್ನವನ್ನು ಉಂಡಹಾಗೆ ಮಾಡಿ ಉಳಿದದ್ದನ್ನೆಲ್ಲ ಗೊಬ್ಬರದ ಗುಂಡಿಗೆ ಎಸೆದು ಬಂದರು. ‘ಯಾಕೆ ಯಮುನಕ್ಕ’ ಎಂದೆ. ಅವರಿಗೆ ಮಾವಿನ ಗೊಜ್ಜು ಇಷ್ಟವೆಂದು ನನಗೆ ಗೊತ್ತಿತ್ತು. ‘ಯಾಕೋ ಸೇರೋದೆ ಇಲ್ಲ’ ಎಂದು ನಿಟ್ಟುಸಿರು ಬಿಟ್ಟರು. ನನಗೆ ಬಂದ ದಕ್ಷಿಣೆಯನ್ನು ಅವರ ಕೈಮೇಲೆ ಇಟ್ಟೆ. ಅದನ್ನವರು ತೂತದ ಡಬ್ಬಿಗೆ ಹಾಕುತ್ತ, “ಶಿವಪುರಕ್ಕೆ ಹೋಗಿ ಅಂಗಡೀಂದ ಒಂದು ಸೇರು ಒಣಮೆಣಸಿನಕಾಯಿ, ಕೊತ್ತಂಬರಿ ತರಬೇಕಲ್ಲ. ಶಾಸ್ತ್ರಿಗೆ ಹೋಗಿ ಹೇಳು” ಎಂದರು. ನಾನು ಶಾಸ್ತ್ರಿಯನ್ನು ಹುಡುಕಿಕೊಂಡು ಸಾಹುಕಾರರ ಮನೆಗೆ ಹೋದೆ. ಕೆಲಸದ ಆಳು ಮಹಡಿಯ ಮೇಲೆ ಇದ್ದಾನೆಂದು ಹೇಳಿದ. ಮೇಲೆ ಹೋಗಿ ನೋಡಿದರೆ ಜಮಖಾನ ಹಾಸಿತ್ತು. ಸುತ್ತಲೂ ಸಾಹುಕಾರರ ಮಗ ರಂಗಣ್ಣ, ಇನ್ನಿಬ್ಬರು ಅಗ್ರಹಾರದ ಯುವಕರು ಮತ್ತು ಶಾಸ್ತ್ರಿ ಕೂತಿದ್ದರು. ಏನೋ ಒಂದಷ್ಟು ಎಲೆಗಳನ್ನು ಕೈಗಳಲ್ಲಿ ಜೋಡಿಸಿ ಮುಚ್ಚಿ ಹಿಡಕೊಂಡು ಆಡುತ್ತಿದ್ದರು. ಗಣೇಶ ನೋಡುತ್ತ ಕೂತಿದ್ದ. ನಾನು ನೋಡುತ್ತ ನಿಂತೆ. ಎಕ್ಕ, ನೆಲ, ರಾಜ, ರಾಣಿ ಎಂದು ಜಮಖಾನದ ಮಧ್ಯಕ್ಕೆ ಎಲೆಯನ್ನು ಎಸೆಯುತ್ತ ಒಬ್ಬರ ಮುಖವನ್ನು ಇನ್ನೊಬ್ಬರು ನೋಡುತ್ತ ಆಡುವ ಆಟ ಏನೆಂದು ಕೇಳಿದ್ದಕ್ಕೆ ಗಣೇಶ ಇಸ್ಪೀಟು ಎಂದ. ಯಮುನಕ್ಕ ಹೇಳಿದ್ದನ್ನು ಶಾಸ್ತಿಗೆ ಹೇಳಿದೆ. ‘ಶಿವಪೂಜೆಯ ಮಧ್ಯದಲ್ಲಿ ಕರಡಿ’ ಎಂದು ರೇಗಿ ತನ್ನ ಎಲೆಯನ್ನು ಗಣೇಶನ ಕೈಯಲ್ಲಿ ಕೊಟ್ಟು ಶಾಸ್ತ್ರಿ ಎದ್ದ. “ನಾನು ಆಡುತ್ತಿದ್ದೆ ಎಂದು ಬಾಯಿಬಿಟ್ಟರೆ ಹಲ್ಲು ಮುರಿದುಬಿಡ್ತೇನೆ ಗೊತ್ತಾಯ್ತ” ಎಂದು ಗದರಿಸಿ ನನ್ನ ಜೊತೆಗೆ ಹೊರಗೆ ಬಂದ.
ಶಿವಪುರಕ್ಕೆ ತನ್ನ ಜೊತೆಗೆ ಬರುವಂತೆ ನನಗೆ ಕೇಳಿದ. “ಯಮುನಕ್ಕನನ್ನು ಕೇಳಬೇಕು” ಎಂದೆ. “ ಶುದ್ಧ ಹೆಣ್ಣಿಗನಾಗಿಯೇ ಇರಬೇಡ” ಎಂದು ಗದರಿಸಿದ. ನನಗೂ ಶಿವಪುರಕ್ಕೆ ಹೋಗುವ ಆಸೆಯಾದ್ದರಿಂದ ಅವನ ಜೊತೆ ಹೊರಟೆ. ಅಗ್ರಹಾರ ದಾಟಿದ ಮೇಲೆ ಒಂದು ಕೆರೆ. ಅದನ್ನು ದಾಟಿದ ನಂತರ ದೊಡ್ಡ ಕಾಡಿನಲ್ಲಿ ಸಣ್ಣದು ಒಂದು ಗುಡ್ಡ-ದಾರಿ. ಅದರಲ್ಲಿ ನಾವಿಬ್ಬರೂ ನಡೆದು ಹೋದೆವು. ಸ್ವಲ್ಪ ದೂರ ಹೋದ ಮೇಲೆ ನೇರವಾದ ದಾರಿ ಬಿಟ್ಟು ಅಡ್ಡಕ್ಕೆ ತಿರುಗಿ ಬಾ ನನ್ನ ಜೊತೆ ಎಂದು ಕರೆದುಕೊಂಡು ಹೋದ. ಅಲ್ಲೊಂದು ದೊಡ್ಡ ಮರವಿತ್ತು . ಆ ಮರಕ್ಕೆ ಆಳೆತ್ತರದಲ್ಲೊಂದು ದೊಡ್ಡ ಪೊಟರೆಯಿತ್ತು. ಅದರ ಒಳಗೆ ಶಾಸ್ತ್ರಿ ಕೈಹಾಕಿದ್ದನ್ನು ನಾನು ಕುತೂಹಲದಿಂದ ನೋಡುತ್ತ ನಿಂತೆ. ಒಳಗಿನಿಂದ ಏನನ್ನೊ ತೆಗೆದು ಮುಷ್ಟಿಯಲ್ಲಿ ಹಿಡಿದುಕೊಂಡು, “ನನ್ನ ಕೈಯಲ್ಲಿ ಇರುವುದೇನು ಹೇಳು” ಎಂದ. ನನಗೆ ಗೊತ್ತಿಲ್ಲ ಎಂದ ಮೇಲೆ ಕೈಬಿಡಿಸಿ ತೋರಿಸಿದ. ಬೀಡಿ-ಕಟ್ಟು ಇತ್ತು. ಇನ್ನೊಂದು ಸಾರಿ ಕೈ ಹಾಕಿ ಬೆಂಕಿಪೊಟ್ಟಣವನ್ನು ತೆಗೆದ. ‘ಕೂತುಕೋ’ ಎಂದ. ನಾನು ಕೂತುಕೊಂಡೆ. “ಮೂಗಿನಿಂದ ಹೊಗೆ ಬಿಡೋದು ಎಷ್ಟು ಚೆನ್ನಾಗಿರುತ್ತೆ ಅಂತೀಯ” ಎಂದು ಹೊಗೆ ಬಿಟ್ಟು ತೋರಿಸುತ್ತ “ನೀನೂ ಒಂದು ಸೇದು” ಎಂದು ಒತ್ತಾಯ ಮಾಡಿದ. ಬಾಯಿಬಿಟ್ಟು ನೋಡುತ್ತಿದ್ದ ನಾನು ಗಾಬರಿಯಾಗಿ ‘ಬೇಡ’ ಎಂದೆ. “ಯಮುನಕ್ಕನ ಹತ್ತಿರ ಮಾತ್ರ ಹೇಳಬೇಡ ಗೊತ್ತಾಯಿತ? ಚಾಡಿ ಹೇಳಬಾರದು” ಎಂದ. ನಾನು ‘ಆಗಲಿ’ ಎಂದೆ.
“ನೀನು ಹೇಳಿದರೂ ನಾನು ಹೆದರೋದಿಲ್ಲ ಗೊತ್ತಾಯಿತ? ನನಗೆ ಗೊತ್ತಿಲ್ಲವ ಯಮುನಕ್ಕನ ವಿಷಯ. ಇನ್ನೊಂದು ಸಾರಿ ನಂಗೆಲ್ಲಾದರೂ ಬಯ್ಯಲಿ- ನಾನು ಎಲ್ಲಾನೂ ಬಯಲಿಗೆಳೆದು ಬಿಡ್ತೇನೆ . ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತಂತೆ.” ಶಾಸ್ತ್ರಿಯ ಮಾತು ನನಗೆ ಅರ್ಥವಾಗಲಿಲ್ಲ. ಆದರೆ ಭಯವಾಯಿತು. ಯಮುನಕ್ಕನಿಗೆ ಹೇಳದೆ ಬರಬಾರದಿತ್ತು ಎನಿಸಿತು. ಗೋಪಾಲ ಕಮ್ತಿಯ ಅಂಗಡಿಯಿಂದ ಸಾಮಾನು ಕೊಂಡು, ಶಿವಪುರದ ಗುಡ್ಡವಿಳಿಯುತ್ತಿದ್ದಾಗ ಶಾಸ್ತ್ರಿ, “ಹೋಗುವಾಗ ಬೇರೆ ದಾರಿಯಲ್ಲಿ ಹೋಗುವ. ಹೊಳೆಯ ದಂಡೆಯ ಮೇಲಾಗಿ” ಎಂದ. ನನಗೆ ಬೇಡವೆನ್ನಲು ಭಯ. ಶಾಸ್ತ್ರಿಯ ಒಕ್ಕಣ್ಣನ್ನು ನೋಡಿದರೆ, ಅವನು ಮಡುವೆಮೊಡವೆಗಳನ್ನು ಚೂಟಿಕೊಳ್ಳುತ್ತ ನನಗೆ ಹಾಸ್ಯ ಮಾಡುವುದನ್ನು ನೆನೆದರೆ ಅವನು ಹಾಕಿದ ಗೆರೆಯನ್ನು ದಾಟಿ ಹೋಗುವ ಧೈರ್ಯವಾಗುತ್ತಿರಲಿಲ್ಲ. ಬರುವಾಗ ದಾರಿಯಲ್ಲಿ, “ಈಗ ನಿನಗೊಂದು ತಮಾಷೆ ತೋರಿಸುತ್ತೇನೆ. ನೋಡಿದ ಮೇಲೆ ನಿನಗೇ ಗೊತ್ತಾಗುತ್ತದೆ ಎಲ್ಲ ವಿಷಯ. ಹೇಳಿ ನಾನೇಕೆ ಕೆಟ್ಟವನಾಗಬೇಕು?” ಎಂದ. ನಾವು ಸುಮಾರು ದೂರ ನಡೆದು ಒಂದು ಹಾಳು ಬಿದ್ದ ಅಗ್ರಹಾರದ ಹತ್ತಿರ ಬಂದೆವು. ಅದು ಹೊಳೆಯ ದಂಡೆಯ ಮೇಲಿತ್ತು. ಹೊದಲ ಎಂದು ಅದರ ಹೆಸರು. ಹಿಂದೊಂದು ದಿನ ನಾನು ಅಲ್ಲಿಗೆ ಯಮುನಕ್ಕನ ಜೊತೆ ಕಟ್ಟಿಗೆ ಆರಿಸಿಕೊಂಡು ಬರಲು ಹೋಗಿದ್ದೆ. ಮನೆಗಳೆಲ್ಲ ಬಿದ್ದು ಅಲ್ಲಿ ಮೋಟುಗೋಡೆಗಳು, ತಳಪಾಯಗಳು ಮಾತ್ರ ಉಳಿದಿದ್ದವು. ಹಳೆಯ ಕಾಲದ ಒಂದು ಜೈನರ ಬಸ್ತಿ ಮತ್ತು ದೇವರಿಲ್ಲದ ಒಂದು ಗುಡಿಯ ತುಂಬ ಬಾವಲಿಗಳು ಓಡಾಡುತ್ತಿದ್ದವು. “ಹಿಂದೊಂದು ಕಾಲದಲ್ಲಿ ಇಲ್ಲಿ ಜನ ವಾಸವಾಗಿದ್ದರು. ಈಗ ಹಾಳುಬಿದ್ದಿದೆ” ಎಂದು ಯಮುನಕ್ಕ ಹೇಳಿದ್ದರು. ಅಲ್ಲಿ ದೆವ್ವವಿರಬಹುದೆಂದು ನನಗೆ ಭಯ. ಅಯ್ಯೊ ಪುಕ್ಕ ಎಂದು ಶಾಸ್ತ್ರಿ ನಕ್ಕು ಹಳವುಗಳು ಬೆಳೆದಲ್ಲೆಲ್ಲ ಕಳ್ಳಹೆಜ್ಜೆ ಇಡುತ್ತ ನನ್ನನ್ನು ಕರೆದುಕೊಂಡು ಹೋಗಿ ಒಂದು ಮೋಟುಗೋಡೆಯ ಹಿಂದಕ್ಕೆ ನನ್ನನ್ನು ನಿಲ್ಲಿಸಿ, ಈ ಬಿರುಕಿನಿಂದ ನೀನು ನೋಡು ಎಂದು, ತಾನು ಇನ್ನೊಂದು ಕಂಡಿಯ ಹತ್ತಿರ ನಿಂತ.
ಸ್ವಲ್ಪ ಹೊತ್ತಾದ ಮೇಲೆ ದೂರದಿಂದೊಬ್ಬ ಮನುಷ್ಯ ಬರುವುದು ಕಂಡಾಕ್ಷಣ ನನಗೆ ಹೆದರಿಕೆಯಾಗಿ ಹೋಗೋಣ ಹೋಗೋಣ ಎಂದೆ. ಶಾಸ್ತ್ರಿ,“ನಿನಗೂ ತಿಳಿಯಬೇಕೊ ಇಲ್ಲವೊ? ಹೀಗೆ ನೀನು ಗುಗ್ಗಾಗಿಯೇ ಇರುತ್ತೀಯಾ? ಶುಕಮುನಿಯ ಅಪರಾವತಾರ ನೀನು” ಎಂದು ಗದರಿಸಿದ. ನಾನು ಹೆದರಿ ನೋಡುತ್ತ ಕೂತೆ. ಕಚ್ಚೆ ಹಾಕಿ ಪಂಚೆಯುಟ್ಟು, ಅಂಗಿ ಹಾಕಿ, ಕ್ರಾಪು ಬಿಡಿಸಿ ಬರುತ್ತಿದ್ದ ಮನುಷ್ಯ ಯಾರೆಂದು ತಿಳಿದು ನನ್ನ ಭಯ ಕಡಿಮೆಯಾಯಿತು, ಅವನನ್ನು ನಾನು ನಿತ್ಯ ನೋಡುತ್ತಿದ್ದೆ. ಉಡುಪರ ಮನೆ ಪಕ್ಕದ ಶಾಲೆಯಲ್ಲಿ ಅವನು ಮೇಷ್ಟರು. ತುಮಕೂರಿಂದ ಬಂದು ಶಿವಪುರದಲ್ಲಿದ್ದಾನಂತೆ. ನಿತ್ಯ ಸೈಕಲ್ಲಿನ ಮೇಲೆ ಬಂದು ಹೋಗ್ತಾನೆ. ರಾಮನವಮಿಯಲ್ಲಿ ದೇವಸ್ಥಾನದಲ್ಲಿ ಹಾರ್ಮೋನಿಯಂ ಬಾರಿಸಿದ್ದ. ನೋಡಲು ತೆಳ್ಳಗೆ ಉದ್ದಗೆ ಪೇಟೆಯವನಂತೆ ಇದ್ದ.
ನಾನು ಹೋಗೋಣ ಎಂದೆ. ಶಾಸ್ತ್ರಿ ಇನ್ನು ಸ್ವಲ್ಪ ಇರು ಎಂದ. ಬಿರುಕಿನಿಂದ ನೋಡುತ್ತಿದ್ದ ನನಗೆ ಒಂದು ಹಾವು ಕಂಡಿತು. ಹೆದರಿ ‘ಹಾವು ಅಲ್ಲಿ’ ಎಂದೆ. ‘ಸ್ವಲ್ಪ ಸುಮ್ಮನಿರು’ ಎಂದು ಶಾಸ್ತ್ರಿ ಗದರಿಸಿದ. ಸ್ವಲ್ಪ ಹೊತ್ತಾದ ಮೇಲೆ ಇನ್ನೊಬ್ಬ ಅಲ್ಲಿಗೆ ದೊಡ್ಡ ಮೀಸೆ ಬಿಟ್ಟವನು ಬಂದ. ಅವನು ಯಾರೆಂದು ನನಗೆ ಗೊತ್ತಿರಲಿಲ್ಲ. ಅವರಿಬ್ಬರೂ ಮಾತನಾಡುತ್ತ ನಿಂತರು. ಹಾವು ಕಂಡಿದ್ದರಿಂದ ನನಗೆ ಆದಷ್ಟು ಬೇಗ ಹೋಗಬೇಕೆಂದು ಪುಕ್ಕಲು ಹತ್ತಿಕೊಂಡಿತ್ತು. ಶಾಸ್ತ್ರಿಗೂ ಕಂಡಿಯಿಂದ ನೋಡಿ ಬೇಜಾರು ಬಂದಿರಬೇಕು. ‘ಹೋಗೋಣ ನಡಿ, ನೀನೊಬ್ಬ ಶುದ್ದ ಪುಕ್ಕು’ ಎಂದು ನನ್ನನ್ನು ಕಳ್ಳಹೆಜ್ಜೆ ಇಟ್ಟು ಬಗ್ಗಿ ನಡೆಯುತ್ತ ಗಾಡಿ-ದಾರಿಗೆ ಕರೆದುಕೊಂಡು ಬಂದ. ಅಲ್ಲಿಂದ ನೇರವಾಗಿ ಮನೆಗೆ ಬಂದಾಗ ಸಂಜೆಯಾಗಿತ್ತು. ಬೇಜಾರಿನಿಂದ ಕೂತಿದ್ದ ಯಮುನಕ್ಕನಿಗೆ ಅಂಗಡಿಗೆ ಹೋದ ವಿಷಯ ಮಾತ್ರ ಹೆದರಿ ಹೆದರಿ ಹೇಳಿದೆ. ಹಾಳು ಬಿದ್ದ ಅಗ್ರಹಾರಕ್ಕೆ ಹೋಗಿ ಕಂಡಿಯಲ್ಲಿ ಇಣುಕಿದ್ದು, ಅಲ್ಲೊಂದು ಹಾವು ಕಂಡದ್ದು ಹೇಳಲು ಧೈರ್ಯವಾಗಲಿಲ್ಲ. ನಾವು ಸ್ನಾನ ಮಾಡಿ ಸಂಧ್ಯಾವಂದನೆಗೆ ಕೂತೆವು. ಅದಾದ ಮೇಲೆ ಊಟ ಮಾಡಿದೆವು. ಯಮುನಕ್ಕ ಅರಳನ್ನು ಮಜ್ಜಿಗೆಯಲ್ಲಿ ಕಲಿಸಿ ತಿಂದರು. ರಾತ್ರೆ ನಾನು, ಶಾಸ್ತ್ರಿ, ಗಣೇಶ ಚಾವಡಿಯಲ್ಲಿ ಹಾಸಿಗೆ ಹಾಸಿಕೊಂಡೆವು. ಯಮುನಕ್ಕ ನಡುಮನೆಯಲ್ಲಿ ಮಲಗಿದರು. ಅವತ್ತು ರಾತ್ರೆ ನಮ್ಮ ಜೊತೆ ಚಾವಡಿಯಲ್ಲಿ ಮಲಗಲು ಉಡುಪರು ಇಲ್ಲದ್ದರಿಂದ, ಸಾಯಂಕಾಲ ನಾನು ಹಾಳುಬಿದ್ದ ಅಗ್ರಹಾರದಲ್ಲಿ ಹಾವನ್ನು ನೋಡಿ ಬಂದಿದ್ದರಿಂದ ಭಯವಾಯಿತು. ನಡುಮನೆಯಲ್ಲಿ ಯಮುನಕ್ಕನ ಜೊತೆ ಮಲಗುತ್ತೇನೆ ಎಂದರೆ ಶುದ್ಧ ಹೆಣ್ಣಿಗ, ಪುಕ್ಕ ಎಂದು ಶಾಸ್ತ್ರಿ ಗೇಲಿ ಮಾಡಿದ. ಆದ್ದರಿಂದ ನಾನು ಅಲ್ಲೇ ಮಲಗಿದೆ. ಭಯವಾಗಿದ್ದರಿಂದ ನಿದ್ದೆ ಹತ್ತಲು ತುಂಬ ತಡವಾಯಿತು. ಅಪ್ಪಯ್ಯ ಅಮ್ಮನ ನೆನಪಾಯಿತು. ನಾನು ಯಾರ ಮನೆಯಲ್ಲೊ ಯಾರ ಸಂಗಡವೊ ಇದ್ದೇನೆಂದು ಅಳು ಬಂದಿತು. ನನ್ನ ಪಕ್ಕದಲ್ಲಿ ಶಾಸ್ತ್ರಿ ಮೆತ್ತಗೆ ನನ್ನ ಮೇಲೆ ಕೈಹಾಕಿ ಹತ್ತಿರಕ್ಕೆ ಸರಿದ. ಅವನ ಬಾಯಿಂದ ಬೀಡಿಯ ವಾಸನೆ ಬರುತ್ತಿದ್ದುದರಿಂದ ನನಗೆ ಅಸಹ್ಯವಾಯಿತು. ನನ್ನ ಪಂಚೆಯ ಗಂಟನ್ನು ಬಿಚ್ಚಿ ಕೌಪೀನಕ್ಕೆ ಕೈಹಾಕಿದ. ನಾನು ದಡಕ್ಕನೆ ಎದ್ದು ಸೀದ ನಡುಮನೆಗೆ ಹೋಗಿ ಯಮುನಕ್ಕನ ಜೊತೆ ಮಲಗಿದೆ. ಯಮುನಕ್ಕನಿಗೆ ನಿದ್ದೆ ಹತ್ತಿರಲಿಲ್ಲ. ‘ಭಯವಾಗುತ್ತೆ’ ಎಂದೆ. ‘ಬಾ ಮಲಗಿಕೊ’ ಎಂದು ತಮ್ಮ ಸೀರೆಯನ್ನು ನನಗೆ ಹೊದಿಸಿದರು.
ಇನ್ನು ಸ್ವಲ್ಪ ಹೊತ್ತಾಗಿ ನನಗೆ ಕಣ್ಣು ಭಾರವಾಗುವ ಹೊತ್ತಿಗೆ ಮನೆಯ ಸುತ್ತ ಯಾರೋ ನಡೆಯುವ ಶಬ್ದವಾಯಿತು. ನಾನು ಬೆಚ್ಚಿ ಎಚ್ಚರವಾದೆ. ದೆವ್ವವಿರಬೇಕೆಂದು ನಡುಗಿದೆ. ಯಮುನಕ್ಕ ನನ್ನನ್ನು ತಬ್ಬಿಕೊಂಡರು. ಆಮೇಲೆ ಹಿತ್ತಲ ಬಾಗಿಲಿನ ಹತ್ತಿರ ಯಾರೋ ಬಂದು ನಿಂತ ಶಬ್ದವಾಯಿತು. ಬಾಗಿಲನ್ನು ತಟ್ಟಿದ ಹಾಗಾಯಿತು. ನಾನು ಯಮುನಕ್ಕನನ್ನು ಗಟ್ಟಿಯಾಗಿ ಹಿಡಿದುಕೊಂಡೆ. ‘ಬಾಗಿಲು ಬಾಗಿಲು’ ಎಂದು ಮೆತ್ತಗೆ ಕೂಗಿದ ಹಾಗಾಯಿತು. ಕತ್ತಲಿನಲ್ಲಿ ಹೀಗೆ ಕಳ್ಳಹೆಜ್ಜೆಯಿಟ್ಟು ಮನೆಯನ್ನು ಅಪ್ರದಕ್ಷಿಣೆ ಸುತ್ತಿ ಬಾಗಿಲು ತಟ್ಟುವುದು ಬ್ರಹ್ಮರಾಕ್ಷಸನೆ ಎಂದು ನನಗೆ ಗಾಬರಿಯಾಯಿತು. ಯಮುನಕ್ಕ ಎದ್ದರು. ನಾನು ಅವರ ಕೈ ಹಿಡಿದು ಹೋಗಬೇಡಿ ಎಂದೆ. ಅವರು ಎದ್ದು ಹೊರಟರು. ನಾನು ಅವರ ಜೊತೆ ಎದ್ದೆ. ಬರಬೇಡ, ದೆವ್ವವಿರಬಹುದು. ಅದು ಒಳಗೆ ಬರದಂತೆ ಬಾಗಿಲಲ್ಲಿ ಪೊರಕೆಯಿಟ್ಟು ಬರುತ್ತೇನೆ” ಎಂದು ನನ್ನನ್ನು ನಡುಮನೆಯಲ್ಲೆ ಬಿಟ್ಟು ಹೋದರು. ನಾನು ಅಳುತ್ತ ಅವರಿಗಾಗಿ ಕಾದೆ. ಯಮುನಕ್ಕ ಹಿತ್ತಲಬಾಗಿಲಿಗೆ ಹೋದವರು ಬಾಗಿಲನ್ನು ತೆರೆಯಲಿಲ್ಲ. ತೆರೆದಿದ್ದರೆ ಡರ್ರೋ ಎಂದು ಕರ್ಕಶ ಶಬ್ದವಾಗುತ್ತಿತ್ತು. “ಹೋಗಿ, ಹೋಗಿ, ಇಲ್ಲಿಗೆ ಬರಬೇಡಿ” ಎಂದು ಅವರು ಹೇಳಿದ್ದು ಮಾತ್ರ ಕೇಳಿಸಿತು. ಹಿಂದಕ್ಕೆ ಬಂದ ಯಮುನಕ್ಕನನ್ನು ಕಂಡು ನನಗೆ ಇನ್ನಷ್ಟು ಭಯವಾಯಿತು. ಅವರು ಬ್ರಹ್ಮರಾಕ್ಷಸನ ಜೊತೆ ಮಾತಾಡಿ ಬಂದಿದ್ದಾರೆಂದು. ನನ್ನನ್ನು ಅವರು ಎಳೆದು ಒತ್ತಾಯ ಮಾಡಿ ಮಲಗಿಸಿಕೊಂಡರು. ಬಹಳ ಹೊತ್ತಿನ ಮೇಲೆ ನನಗೆ ನಿದ್ದೆ ಬಂತು.
*
*
*
ಸೂರ್ಯ ಹುಟ್ಟುವುದಕ್ಕೆ ಮೊದಲೇ ಎದ್ದ ನನಗೆ ಒಬ್ಬನೇ ತಂಬಿಗೆ ತೆಗೆದುಕೊಂಡು ಹೋಗಲು ಭಯವಾದ್ದರಿಂದ ಯಮುನಕ್ಕನನ್ನೂ ಜೊತೆಗೆ ಕರೆದುಕೊಂಡು ಹೋಗಿ ನಿಲ್ಲಿಸಿಕೊಂಡೆ. ಇದು ಶಾಸ್ತ್ರಿಗೆ ಗೊತ್ತಾದರೆ ನನ್ನನ್ನು ಹಂಗಿಸಿ ಹಿಂಸಿಸುತ್ತಾನೆಂದು ಮತ್ತಷ್ಟು ಭಯವಾಯಿತು. ನಾನು ಒಬ್ಬನೇ ಬುಟ್ಟಿ ಹಿಡಿದು ಪತ್ರೆ ತುಳಸಿ ಹೂವು ತರಲು ಹೊರಟಾಗ ಶಾಸ್ತ್ರಿ ‘ನಾನೂ ನಿನ್ನ ಜೊತೆ ಬರ್ತೇನೆ’ ಎಂದ. ಬೇಡವೆನ್ನಲು ನನಗೆ ಭಯ. ಅಲ್ಲದೆ ರಾತ್ರೆ ಬ್ರಹ್ಮರಾಕ್ಷಸ ಮನೆಯ ಸುತ್ತ ತಿರುಗಾಡಿದ್ದರಿಂದ, ಹಾವನ್ನು ಕಂಡದ್ದರಿಂದ ಒಂಟಿಯಾಗಿ ಹೋಗಲೂ ಭಯ. ದಾರಿಯಲ್ಲಿ ಶಾಸ್ತ್ರಿ, “ಬ್ರಹ್ಮರಾಕ್ಷಸ ಯಮುನಕ್ಕನಿಗೆ ಏನು ಹೇಳಿತು?”
ಎಂದು ಕೇಳಿದ. ‘ನನಗೆ ಗೊತ್ತಿಲ್ಲ’ ಎಂದೆ.
“ಯಮುನಕ್ಕ ಎದ್ದು ಹೋದರು. ಏನೂ ಹೇಳಲಿಲ್ಲವ?”
“ಬರಬೇಡ, ಹೋಗು ಹೋಗು ಎಂದರು. ಬಾಗಿಲಲ್ಲಿ ಪೊರಕೆಯಿಟ್ಟು ಬಂದರು”.
“ಆ ಬ್ರಹ್ಮರಾಕ್ಷಸ ಯಾರು ಗೊತ್ತ? ನಿನಗಿನ್ನೂ ತಿಳುವಳಿಕೆಯಿಲ್ಲ. ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತಂತೆ. ಹೋಗಲಿ, ಬಿಡು. ನಿಂಗೇ ಒಂದು ದಿನ ಗೊತ್ತಾಗುತ್ತೆ. ಯಮುನಕ್ಕನಿಗೆ ನನ್ನನ್ನ ಕಂಡರೆ ಆಗಲ್ಲ ಅಲ್ಲವ? ನಿಂಗಾದರೆ ಗುಟ್ಟಾಗಿ ರವೆವುಂಡೆ, ಕೋಡುಬಳೆ ಕೊಡ್ತಾರೆ, ಅಲ್ಲವೇನೋ?” ಎಂದ. ನನಗೆ ಏನು ಹೇಳಬೇಕೆಂದು ಗೊತ್ತಾಗದೆ ಸುಮ್ಮನಾದೆ. ಬಿಲ್ವಪತ್ರೆಗಾಗಿ ನಾವು ಗೋದಾವರಮ್ಮನ ಮನೆಗೆ ಹೋದಾಗ ಅವರು,
“ಯಮುನ ಹೇಗಿದ್ದಾಳೆ?” ಎಂದು ಕೇಳಿದರು.
ನಾನು ‘ಯಮುನಕ್ಕನಿಗೆ ಜ್ವರ ಬರ್ತಿರೋದು ನಿಜ’ ಎಂದೆ.
“ಜ್ವರಾನೂ ಇಲ್ಲ ಗಿರಾನೂ ಇಲ್ಲ. ನಿನ್ನೆ ರಾತ್ರೆ ಮನೇಸುತ್ತ ಒಂದು ಬ್ರಹ್ಮರಾಕ್ಷಸ ಓಡಾಡಿತು. ಹಿತ್ತಲಕಡೆ ಬಂದು ಬಾಗಿಲು ತಟ್ಟಿತು”.
ಎಂದು ಶಾಸ್ತ್ರಿ ಒಕ್ಕಣ್ಣಿನಿಂದ ನಗುತ್ತ ಗೋದಾವರಮ್ಮನಿಗೆ ಹೇಳಿದ. ಗೋದಾವರಮ್ಮ ಎಲ್ಲ ವಿಷಯನೂ ಕೇಳಿ ಕೇಳಿ ತಿಳಿದುಕೊಂಡರು.
ಬಿಲ್ವಪತ್ರೆ ಕೊಯ್ದಾದ ಮೇಲೆ ಶಾಸ್ತ್ರಿ ನನಗೆ “ಏ ಭೃಗು – ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಒಂದಷ್ಟು ಸಂಪಗೆಹೂ ಕೊಯ್ದುಕೊಂಡು ಬರೋಣ” ಎಂದ. ನಾವು ಒಂದು ಗದ್ದೆ ದಾಟಿ ಅಲ್ಲಿಗೆ ಹೋಗಿ ಹೂವು ಕೊಯ್ದೆವು. ಶಾಸ್ತ್ರಿ ನನಗೆ,
“ಸುಬ್ರಹ್ಮಣ್ಯ ದೇವರನ್ನ ಮೈಲಿಗೇಲಿ ಮುಟ್ಟುತೀಯೇನೊ? ನಿನಗೆ ಧೈರ್ಯವಿದೆಯ?”
ಎಂದು ಕೇಳಿದ. ಸುಬ್ರಹ್ಮಣ್ಯ ದೇವರಿಗೆ ಮೈಲಿಗೆಯಾದರೆ ಹಾವು ಕಾಡುತ್ತೆ ಅಂತಾರೆ. ನನಗೆ ಅದರ ಸುದ್ದಿ ಬೇಡ ಎಂತ ಅಂದಿದ್ದಕ್ಕೆ ಶಾಸ್ತ್ರಿ,
“ಅದಕ್ಕೇ ಹೇಳೋದು ನೀನು ಅಜ್ಜಿಗೊಡ್ಡು, ಹೆಣ್ಣಿಗ, ಭೃಗು ಅಂತ. ಎಂಥಾ ಪುಕ್ಕನಯ್ಯ ನೀನು? ಮನೆ ಸುತ್ತ ಓಡಾಡಿದ್ದು ಬ್ರಹ್ಮರಾಕ್ಷಸ ಅಂತ ಹೇಳಿದ್ರೆ ನಂಬಿಕೊಂಡುಬಿಟ್ಟಿ. ಅಲ್ಲವ? ಇಗೋ ನೋಡು ನಾನು ಮುಟ್ಟಿ ಬರ್ತೇನೆ.”
ಎಂದು ಸೀದ ಗರ್ಭಗುಡಿಯ ಒಳಗೆ ಹೋಗಿ ದೇವರನ್ನು ಮುಟ್ಟಿದ. ನನಗೆ ನಾಚಿಕೆ, ಭಯ, ಆಯಿತು. ‘ನೀನೂ ಮುಟ್ಟು’ ಎಂದು ನನ್ನನ್ನು ಎಳೆದುಕೊಂಡು ಹೋಗಿ ದೇವರನ್ನು ಮುಟ್ಟಿಸಿದ. ಆಮೇಲೆ ನಗುತ್ತ “ನನ್ನ ಕೈಯಲ್ಲಿ ಗರುಡ ಮಚ್ಚೆಯಿದೆ. ಅದಕ್ಕೇ ಧೈರ್ಯವಾಗಿ ನಾನು ಮುಟ್ಟಿದೆ. ನಿನ್ನನ್ನ ಖಂಡಿತ ಹಾವು ಬಂದು ಕಚ್ಚುತ್ತೆ” ಎಂದು ಕುಣಿದ. ನಾನು ಗಟ್ಟಿಯಾಗಿ ಅಳತೊಡಗಿದೆ. “ನಾನು ಹೇಳಿದ ಹಾಗೆ ಕೇಳಿದ್ರೆ ಏನೂ ಆಗಲ್ಲ. ನಿನಗೆ ಹಾವು ಕಚ್ಚದಂತೆ ನೋಡಿಕೊತೇನೆ. ಯಮುನಕ್ಕನಿಗೆ ಮಾತ್ರ ನಾನು ಹೇಳಿದ್ದೇನನ್ನೂ ಹೇಳಬಾರ್ದು. ಹೇಳಿದ್ರೆ ನೀನು ಹೋಗಿ ದೇವರನ್ನ ಮೈಲಿಗೇಲಿ ಮುಟ್ಟಿದೀಂತ ಹೇಳಿಬಿಡ್ತೇನೆ” ಎಂದ. ನಾನು ಕಣ್ಣೊರಿಸಿಕೊಳ್ಳುತ್ತ ಮನೆಗೆ ಬಂದೆ. ಯಮುನಕ್ಕ ಏನಾಯಿತೆಂದು ಕೇಳಿದರೆ ನಾನು ಹೆದರಿ ಸುಮ್ಮನಿದ್ದೆ. ಅವರು ಶಾಸ್ತ್ರಿಯನ್ನು ಕರೆದು “ತಿಂದ ಅನ್ನ ನಿನ್ನ ನೆತ್ತಿಗೇರಿತು ಅಲ್ಲವ?” ಎಂದು ಬೆದರು. ನಾನು ಅವತ್ತೆಲ್ಲ ಶಾಸ್ತ್ರಿಯ ಜೊತೆಯೇ ಸೇರಲಿಲ್ಲ. ಕೂತಲ್ಲಿ, ನಿಂತಲ್ಲಿ ಹಾವು ಬಂದೀತೆಂದು ಹೆದರಿಕೆಯಾಗುತ್ತಿತ್ತು. ಯಾವಾಗಲೂ ಗಾಯತ್ರೀ ಜಪ ಮಾಡುತ್ತ ಓಡಾಡಿದೆ. ರಾತ್ರೆ ಯಮುನಕ್ಕನ ಜೊತೆ ಮಲಗಿದೆ. ಬ್ರಹ್ಮರಾಕ್ಷಸ ಮನೇ ಸುತ್ತ ಓಡಾಡಲಿಲ್ಲ.
ಅವತ್ತಿನಿಂದ ನಾನು ಶಾಸ್ತ್ರಿ ಜೊತೆ ಸೇರುತ್ತಿರಲಿಲ್ಲ. ನಾನು ಒಂಟಿಯಾಗಿ ಸಿಕ್ಕಾಗಲೆಲ್ಲ ಒಕ್ಕಣ್ಣಿನಿಂದ ಚೂಪಗೆ ನನ್ನ ಕಡೆ ನೋಡಿ ‘ಹಾವು ಬಂದು ನಿನ್ನನ್ನ ಕಚ್ಚತ್ತೆ, ಯಮುನಕ್ಕನಿಗೆ ಹೇಳಂತೆ’ ಎಂದು ಗದರಿಸುತ್ತಿದ್ದ. ನಾನು ಮಾತೇ ಆಡುತ್ತಿರಲಿಲ್ಲ. ಯಮುನಕ್ಕ ಎಲ್ಲಿ ಹೋದರೆ ಅಲ್ಲಿ ಅವರ ಜೊತೆಗಿರಲು ಪ್ರಾರಂಭಿಸಿದೆ. ಶಾಸ್ತ್ರಿ ಮತ್ತು ಗಣೇಶ ಯಾವಾಗಲೂ ಸಾಹುಕಾರರ ಮಗ ರಂಗಣ್ಣನ ಜೊತೆ ಗುಟ್ಟಾಗಿ ಮಾತಾಡುತ್ತ ಇರುತ್ತಿದ್ದರು. ಒಂದು ದಿನ ಯಮುನಕ್ಕ ‘ಕಟ್ಟಿಗೆ ತರಬೇಕು ಬಾ’ ಎಂದು ಹಾಳು ಅಗ್ರಹಾರದ ದಾರಿಯಲ್ಲಿ ಕರೆದುಕೊಂಡು ಹೋದರು. ಅರ್ಧ ದೂರ ಹೋಗುವುದರೊಳಗೆ ನನಗೆ ಭಯವಾಯಿತು. ಕೂತುಬಿಟ್ಟು ಅಳತೊಡಗಿದೆ. ‘ಅಲ್ಲಿ ಹಾವಿದೆ ನಾನು ಬರೋದಿಲ್ಲ’ ಎಂದು ಚಂಡಿ ಹಿಡಿದೆ. ಯಮುನಕ್ಕ ಗದರಿಸಿದರು. ಅಂಗಲಾಚಿದರು. ನಾನು ಕೇಳಲಿಲ್ಲ. ಗೊಣಗುತ್ತ ನನ್ನ ಜೊತೆ ಮನೆಗೆ ಹಿಂದಕ್ಕೆ ಬಂದರು. ಇನ್ನೊಂದು ದಿನ ನಾನು ಒಬ್ಬನೆ ಬಿಲ್ವಪತ್ರೆಗೆಂದು ಗೋದಾವರಮ್ಮನ ಮನೆಗೆ ಬೆಳಗ್ಗೆ ಹೋದೆ.ಗೋದಾವರಮ್ಮ ನನ್ನನ್ನು ನೋಡಿ ಬಾ ಒಳಗೆ’ ಎಂದು ಬೆನ್ನಿನ ಮೇಲೆ ಕೈಹಾಕಿ ಒಳಗೆ ಕರೆದುಕೊಂಡು ಹೋದರು. ಅಡಿಗೆಮನೆಯಲ್ಲಿ ಕೂರಿಸಿಕೊಂಡು ಕಾಫಿ ಕೊಟ್ಟರು. ನಾನು ಬೇಡವೆಂದೆ. ‘ಒಂದೊಂದು ಸಾರಿ ಕುಡೀಬಹುದು ಕಣೊ’ ಎಂದರು. ಕಾಫಿಯನ್ನು ನೋಡಿ ತುಂಬ ಆಸೆಯಾಯಿತು. ಕುಡಿಯಬೇಕು ಎನ್ನಿಸಿತು. ಕುಡಿಯುತ್ತ ಕೂತೆ. ಗೋದಾವರಮ್ಮ ನಗುತ್ತ, “ನೀನು ಪರವಾಗಿಲ್ಲ ಕಣೋ, ನೇಮನಿಷ್ಠೆಯಿರೋ ಹುಡುಗ. ಬೇರೆ ಹುಡುಗರಂತಲ್ಲ. ಈಗಿನ ಕಾಲದವು ಹೇಳಿದ ಮಾತು ಕೇಳುತ್ತಾವೆಯೆ? ‘ಜಪ ಜಾರಿಹೋಯ್ತು. ಅಗ್ನಿಕಾರ್ಯ ಅಟ್ಟಕ್ಕೆ ಹತ್ತಿತು.’ ಅಂತ ಗಾದೇನೇ ಇದೆಯಲ್ಲ. ಈಗ ಸಾಹುಕಾರರ ಮಗ ರಂಗಣ್ಣನೇ ನೋಡು ಬೇಕಾದರೆ. ಒಳ್ಳೇ ಬೀದಿ ಬಸವ. ಕುಂಟೆಕೋಣನಷ್ಟು ವಯಸ್ಸಾಗಿ ಮೀಸೆ ಬಂದಿದೆ.”
ಎಂದು ನನ್ನನ್ನು ಹೊಗಳಿದರು. ನಾನು ಹೊರಡಲೆಂದು ಎದ್ದಾಗ,
“ಯಾಕೋ ಯಮುನ ದೇವಸ್ಥಾನಕ್ಕೇ ಬರ್ತಿಲ್ಲ ? ಮಲಗಿದಲ್ಲಿಂದ ಏಳೋದೇ ಇಲ್ಲವೆ?”
ಎಂದರು. ನಾನು ಇಲ್ಲವೆಂದೆ.
“ನಿಮಗೆಲ್ಲ ಅಡಿಗೆ ಮಾಡಿ ಹಾಕೋರು ಯಾರು ಪಾಪ. ಉಡುಪರೂ ಮನೇಲಿ ಇಲ್ಲ . ಆ ಬ್ರಹ್ಮರಾಕ್ಷಸ ಈಗಲೂ ಮನೇ ಸುತ್ತ ಓಡಾಡುತ್ತ?”
ಎಂದರು. ಅವತ್ತಿನಿಂದ ಅದು ಕಾಣಿಸಿಕೊಂಡಿಲ್ಲ ಎಂದೆ.
“ಏನೋ ಯಮುನಕ್ಕನಿಗೆ ವಾಂತಿ-ಗೀಂತಿ ಆಗುತ್ತ? ಜ್ವರಗೆಡ್ಡೆಯಾದರೆ ತುಂಬ ವಾಂತಿಯಾಗುತ್ತೆ ಅಂತಾರೆ. ಔಷಧಿ ತಗೊಳ್ಳೊಕ್ಕೆ ನಾನು ಅವಳಿಗೆ ಮೊನ್ನೆ ಹೇಳಿದೆ. ಏನಾದರೂ ತಗೋತಿದಾಳ?”
ಎಂದು ಕೇಳಿದರು. ನನಗೆ ಏನು ಹೇಳಬೇಕೊ ತಿಳಿಯದೆ ಹೊತ್ತಾಯಿತೆಂದು ಸರಸರನೆ ಹೆಜ್ಜೆ ಹಾಕಿ ಮನೆಗೆ ಬಂದೆ. ಯಮುನಕ್ಕನಿಗೆ ಅವರು ಹೀಗೆ ಹೀಗೆ ಕೇಳಿದ್ದಕ್ಕೆ ನಾನು ಹೀಗೆ ಹೇಳಿದೆ ಎಂದೆ. ಯಮುನಕ್ಕ ನನ್ನ ಮಾತನ್ನು ಕೇಳಿ ಗಾಬರಿಯಾಗಿ ಕೂತರು. ಅವರ ಕಣ್ಣಿನ ತುಂಬ ನೀರು ತುಂಬಿತು. ‘ನೀನು ಆ ಕಡೆ ಇನ್ನು ಹೋಗಬೇಡ’ ಎಂದರು. ನಾನು ‘ಆಗಲಿ’ ಎಂದೆ.
ಅವತ್ತು ಮಧ್ಯಾಹ್ನ ಗಣೇಶನ ಅಪ್ಪ ತಿಪ್ಪಶಾಸ್ತ್ರಿಗಳು ಹೊರಣಿಯಿಂದ ಬಂದರು. ಯಮುನಕ್ಕ ಮಾತಾಡಿಸಿದರೂ ಅವರು ಮಾತಾಡಲಿಲ್ಲ. ಯಮುನಕ್ಕ ಮಾಡಿಕೊಟ್ಟ ಪಾನಕವನ್ನು ಮುಟ್ಟಲಿಲ್ಲ. ಗಣೇಶನಿಗೆ ‘ನಿನ್ನ ಚಾಪೆ ಬಟ್ಟೆಗಳನ್ನು ಕಟ್ಟಿಕೊ’ ಎಂದು ಕರೆದುಕೊಂಡು ಹೋಗಿಬಿಟ್ಟರು. ಆಮೇಲೆ ಮನೆಯಲ್ಲಿ ಯಮುನಕ್ಕ ಕೂತು ಬಹಳ ಹೊತ್ತು ಅತ್ತರು. ಆ ದಿನ ರಾತ್ರೆ ಊಟ ಮಾಡಿ ನಾನು ಕೈ ತೊಳೆಯಲು ಹಿತ್ತಲಿಗೆ ಹೋದಾಗ ಕತ್ತಲಿನಲ್ಲಿ ಯಾರೋ ಜಿಗ್ಗಿನ ಮೇಲೆ ನಡೆದು ಬರುವ ಸರಸರ ಶಬ್ದವಾಯಿತು. ‘ಯಮುನಕ್ಕ’ ಎಂದು ಕಿರುಚಿಕೊಂಡೆ. ಯಮುನಕ್ಕ, ಶಾಸ್ತ್ರಿ ಓಡಿಬಂದರು. ಯಾರೋ ಒಬ್ಬ ಮನುಷ್ಯ ದಡದಡನೆ ಓಡಿಹೋಗಿದ್ದು ಕಾಣಿಸಿತು. “ಈ ಬ್ರಹ್ಮರಾಕ್ಷಸನ ಕಾಟಕ್ಕೆ ಏನು ಮಾಡಬೇಕು?” ಎಂದು ಶಾಸ್ತ್ರಿ ಯಮುನಕ್ಕನ ಕಡೆ ನೋಡಿದ. “ನೀನು ಮಾತಾಡಬೇಡ, ಸುಮ್ಮನಿರು” ಎಂದು ಯಮುನಕ್ಕ ಗದರಿಸಿದರು. ಗಣೇಶನನ್ನು ಅವರ ಅಪ್ಪ ಬಂದು ಕರೆದುಕೊಂಡು ಹೋದ ಹಾಗೆ ನನ್ನ ಅಪ್ಪಯ್ಯನೂ ಯಾಕೆ ನನ್ನನ್ನು ಕರೆದುಕೊಂಡು ಹೋಗಲಿಲ್ಲೆಂದು ನಾನು ರಾತ್ರೆ ಮಲಗಿಕೊಂಡವನು ಅತ್ತೆ. ಯಮುನಕ್ಕ ನನ್ನನು ತಬ್ಬಿಕೊಂಡು, “ನೀನು ನನ್ನನ್ನು ಬಿಟ್ಟುಹೋಗಬೇಡ” ಎಂದು ಬಿಕ್ಕಿ ಬಿಕ್ಕಿ ಅತ್ತರು. ಯಮುನಕ್ಕ ಮೂರೂ ಹೊತ್ತೂ ಮನೆಯ ಒಳಗೇ ಇರುತ್ತಿದ್ದರು. ಗೋದಾವರಮ್ಮ ಒಂದು ದಿನ ಬಂದು ಬಾಗಿಲು ತಟ್ಟಿದರೆ – ಸಾಯಂಕಾಲದ ಸಮಯ- ಮನೆಯಲ್ಲಿಲ್ಲವೆಂದು ಹೇಳೆಂದು ನನಗೆ ಹೇಳಿಕಳುಹಿಸಿದರು. ಮಧ್ಯಾಹ್ನ ನಮಗೆ ವೇದವನ್ನು ಹೇಳಿಕೊಟ್ಟಾದ ಮೇಲೆ ಹೊರಟು ನಿಂತ ಉಪಾಧ್ಯರಿಗೆ ಕುಡಿಯಲು ಪಾನಕ ತಂದಿಟ್ಟರೆ “ನನಗೆ ಇದು ಬೇಡಮ್ಮ” ಎಂದು ಹೊರಟು ಹೋದರು. ಯಮುನಕ್ಕ ಸದಾ ಮೂಲೆಮೂಲೆಯಲ್ಲಿ ನಿಂತು ಯೋಚಿಸುತ್ತ ಅಳುತ್ತ ಇರುತ್ತಿದ್ದರು. ಒಂದು ದಿನ ನಮಗೆಲ್ಲ ವೇದಪಾಠವನ್ನು ಬೇಗ ಮುಗಿಸಿ ಉಪಾಧ್ಯರು ಹೊರಟು ಹೋದರು. ಶಾಸ್ತ್ರಿ ರಂಗಣ್ಣನ ಜೊತೆ ಮಾತಾಡಲು ಹೋದ. ನಾನು, ಯಮುನಕ್ಕ ಇಬ್ಬರೇ ಮನೆಯಲ್ಲಿ ಇದ್ದೆವು. ಆಗ ಪುಟ್ಟರಂಗಿ ಎನ್ನುವ ಕೊಂಕಣಿಗರ ಹೆಂಗಸೊಬ್ಬಳು ಹಿತ್ತಲ – ಬಾಗಿಲಲ್ಲಿ ಅಮ್ಮಾ ಎಂದು ಕರೆದು ಯಮುನಕ್ಕನ ಹತ್ತಿರ ಮಾತಾಡುತ್ತ ಕೂತಳು. ಮಾತಿನ ಮಧ್ಯೆ, ಏನು ಯಮುನಮ್ಮ, ಈಚೆಗೆ ನೀವು ನೋಡಲು ತುಂಬ ಚೆನ್ನಾಗಿ ಕಾಣಿಸುತ್ತೀರಿ. ಗುಂಡಗುಂಡಗೆ, ದಪ್ಪಗೆ ಆಗಿದ್ದೀರಿ“ಎಂದು ಅವಳು ಹೇಳಿದ ಕೂಡಲೆ ಮಾತನ್ನು ಅಲ್ಲಿಗೆ ನಿಲ್ಲಿಸಿ ಯಮುನಕ್ಕ ಒಳಕ್ಕೆ ಬಂದವರು ಮತ್ತೆ ಹೊರಗೇ ಹೋಗಲಿಲ್ಲ. ಪುಟ್ಟರಂಗಿ ಕಾದು ಕಾದು “ಯಾಕೆ ಅಮ್ಮನಿಗೆ ಸಿಟ್ಟು ಬಂತೇ?” ಎಂದು ಹೊರಟುಹೋದಳು. ಅವತ್ತು ರಾತ್ರೆ ಯಮುನಕ್ಕ ನನ್ನನ್ನು ಪಕ್ಕದಲ್ಲಿ ಮಲಗಿಸಿಕೊಂಡು ಬಹಳ ಹೊತ್ತು ಅತ್ತರು. ಆಮೇಲೆ ಮಡಿಲಿನ ಗಂಟನ್ನು ಬಿಚ್ಚಿ, ಸೀರೆಯನ್ನು ಕೆಳಕ್ಕೆ ಸರಿಸಿ, ಅವರ ಕಿಬ್ಬೊಟ್ಟೆಯ ಹತ್ತಿರ ನನ್ನ ಕಿವಿಯನ್ನು ಇಡಿಸಿ, ,ಮಲಗಿಕೊಂಡು, “ನಾಣಿ ಏನಾದರೂ ನಿನಗೆ ಕೇಳಿಸುತ್ತದ?” ಎಂದರು. ಅವರ ಮೆತ್ತಗೆ ಬೆಚ್ಚಗೆ ಇದ್ದ ಹೊಟ್ಟೆಯ ಮೇಲೆ ಕೆನ್ನೆ ಇಟ್ಟ ನನಗೆ ತುಂಬ ಸುಖವಾಗಿ, ಅಮ್ಮನ ನೆನಪಾಗಿ, ಯಮುನಕ್ಕ ಅಳುತ್ತಿದ್ದರಿಂದ ನನಗೂ ಅಳು ಬಂತು. ಮತ್ತೆ ನನ್ನ ಮುಖವನ್ನು ಅವರ ಮೊಲೆಗಳಿಗೊತ್ತಿಕೊಂಡು ಬೆನ್ನಿನ ಮೇಲೆ ಕೈಯಾಡಿಸಿದರು. “ನೀನು ಎಲ್ಲಿಗೂ ನನ್ನನ್ನ ಬಿಟ್ಟು ಹೋಗಬೇಡ ಆಯಿತ?” ಎಂದರು. ನಾನು ಸುಖವಾಗಿ ಅವತ್ತು ನಿದ್ದೆ ಮಾಡಿದೆ.
ಅದರ ಮಾರನೆ ದಿನ ಉಪಾಧ್ಯರು ನಮಗೆ ಜಪ ಹೇಳಿಕೊಡಲಾಗಲಿ, ವೇದ ಹೇಳಿಕೊಡಲಾಗಲಿ ಬರಲಿಲ್ಲ. ದೇವಸ್ಥಾನಕ್ಕೆ ಬಂದು ಪೂಜೆಯನ್ನು ಮುಗಿಸಿಕೊಂಡು ಹಾಗೇ ಹೊರಟುಹೋದರು. ಆಮೇಲಿಂದ ಅವರು ಮನೆಕಡೆ ಸುಳಿಯಲೇ ಇಲ್ಲ. ತ್ರಿಕಾಲ ಸ್ನಾನ ಸಂಧ್ಯಾವಂದನೆ ತಪ್ಪಿತೆಂದು ನನಗೆ ಗೆಲುವಾಯಿತು. ಒಂದು ದಿನ ತುಳಸಿ – ಪತ್ರೆಗೆಂದು ಹೋದ ಶಾಸ್ತ್ರಿ ಮನೆಗೆ ಬರಲೇ ಇಲ್ಲ. ಸಾಹುಕಾರರ ಮನೆಯಲ್ಲೇ ಇರತೊಡಗಿದ. ನನ್ನ ಮುಖ ಕಂಡರೆ ದೂರದಿಂದಲೇ ಅಣಕಿಸುತ್ತಿದ್ದ.
ಈ ದಿನಗಳಲ್ಲೆಲ್ಲ ನನ್ನನ್ನ ಮನೆಯಿಂದ ಹೊರಗೆ ಹೋಗಲು ಯಮುನಕ್ಕ ಬಿಡುತ್ತಿರಲಿಲ್ಲ. ನನಗೆ ಸಿಟ್ಟು ಬರುತ್ತಿತ್ತು. ಕಿಟಕಿಯಿಂದ ನೋಡುತ್ತ ಕೂತಿರುತ್ತಿದ್ದೆ. ಒಕ್ಕಣ್ಣಿನ ಶಾಸ್ತ್ರಿ ರಂಗಣ್ಣನ ಜೊತೆ ಹರಟುತ್ತ ಅಡ್ಡಾಡುತ್ತಿದ್ದ. ಪ್ರೈಮರಿ ಸ್ಕೂಲಿನ ಹುಡುಗರು ಮರಕೋತಿಯಾಡುತ್ತ, ಬುಗುರಿಯಾಡುತ್ತ, ಗಲಾಟೆ ಮಾಡಿಕೊಂಡಿರುತ್ತಿದ್ದರು. ನಮ್ಮ ಮನೆಯ ಹತ್ತಿರ ಒಂದು ನರಹುಳವೂ ಬರುತ್ತಿರಲಿಲ್ಲ. ನಾನು ಮತ್ತು ಯಮುನಕ್ಕ ಹೀಗೆ ಮನೆಯಲ್ಲೆ ಒಂದು ವಾರ ಹಗಲು-ರಾತ್ರೆಗಳನ್ನು ಕಳೆದೆವು. ಅಪ್ಪಯ್ಯ ಯಾಕೆ ಬಂದು ನನ್ನನ್ನು ಕರೆದುಕೊಂಡು ಹೋಗಲಿಲ್ಲೆಂದು ಅಳು ಬರುತ್ತಿತ್ತು. ಯಮುನಕ್ಕನ ಮುಖ ಕಂಡರೆ ರೇಗುತ್ತಿತ್ತು. ನಾನು ರೇಗಿದರೆ ಯಮುನಕ್ಕ ಕಣ್ಣುತುಂಬ ನೀರು ತುಂಬಿಕೊಂಡು, “ನನ್ನನ್ನು ಬಿಟ್ಟು ಹೋಗಬೇಡ” ಎಂದು ಅಳಲು ಪ್ರಾರಂಭಿಸುತ್ತಿದ್ದರು. ಒಂದು ದಿನ ನನ್ನನ್ನು ಯಮುನಕ್ಕ ಮುದ್ದುಮಾಡಲು ಬಂದಾಗ ನಾನು ಅವರನ್ನು ಒದ್ದೆ. ಆಮೇಲೆ ತಪ್ಪಾಯಿತೆಂದು ಕೇಳಿಕೊಂಡೆ. ಅವತ್ತು ರಾತ್ರೆ ಯಮುನಕ್ಕ ಅಗ್ರಹಾರದಲ್ಲಿ ಎಲ್ಲರೂ ಮಲಗಿಯಾದ ಮೇಲೆ ನನ್ನನ್ನು ಎಬ್ಬಿಸಿ ಕರೆದುಕೊಂಡು ದೇವಸ್ಥಾನಕ್ಕೆ ಹೋದರು. ಅಲ್ಲಿ ದೇವರಿಗೊಂದು ದೀಪ ಹಚ್ಚಿಟ್ಟು ಬಹಳ ಹೊತ್ತು ಕಣ್ಣುಮುಚ್ಚಿ ಕೂತು, ಬಗ್ಗಿ ನಮಸ್ಕಾರ ಮಾಡಿ ಹಿಂದಕ್ಕೆ ಬಂದರು.
*
*
*
ಅವತ್ತೊಂದು ಮಧ್ಯಾಹ್ನ ನಾನೊಬ್ಬನೇ ಕಿಟಕಿಯ ಹತ್ತಿರ ಕೂತಿದ್ದೆ. ಯಮುನಕ್ಕನ ಮೇಲೆ ನನಗೆ ಸಿಟ್ಟು ಬಂದಿತ್ತು. ನನ್ನ ಯಾಕೆ ಅಪ್ಪಯ್ಯ ಕರೆದುಕೊಂಡು ಹೋಗಲಿಲ್ಲ. ನನಗೆ ಹೋಗಬೇಕು ಮನೆಗೆ ಎಂದು ಅಳು ಬಂತು. ಹೊರಗೆ ಬೀದಿಯಲ್ಲಿ ಹುಡುಗಿಯರು ಕುಂಟು-ಬಿಲ್ಲೆ ಆಟ ಆಡುತ್ತಿದ್ದರು. ರಂಗಣ್ಣನ ಜೊತೆಗೆ ಶಾಸ್ತ್ರಿ ಬೀದಿಗೆ ಬಂದು ನನ್ನನ್ನು ನೋಡಿದ. ಕಿಟಕಿಯ ಹತ್ತಿರ ಬಂದು ಕೈಸನ್ನೆ ಮಾಡಿ ಕರೆದ. ನಾನು ‘ಬರೋದಿಲ್ಲ’ ಎಂದು ತಲೆಯಾಡಿಸಿದೆ. ‘ಓಡಾಡಿಕೊಂಡು ಬರೋಣ ಬಾ’ ಎಂದ. ನನಗೆ ಹೊರಗೆ ಹೋಗಿ ಬರುವ ಆಸೆಯಾಯಿತು. ‘ಯಮುನಕ್ಕನನ್ನು ಕೇಳಿ ಬರುತ್ತೇನೆ’ ಎಂದೆ. ‘ಯಮುನಕ್ಕ ಮನೆಯಲ್ಲಿಲ್ಲ ಬಾ’ ಎಂದ. ನಾನು ಒಳಗೆ ಹೋಗಿ ಯಮುನಕ್ಕ ಮನೆಯಲ್ಲಿಲ್ಲವಲ್ಲ ಎಂದು ಆಶ್ಚರ್ಯಪಟ್ಟು ಅವನ ಜೊತೆ ಹೊರಟೆ.
ರಂಗಣ್ಣ ಮತ್ತು ಶಾಸ್ತ್ರಿ ಜೊತೆ ಇನ್ನು ಮೂವರು ಅಗ್ರಹಾರದ ಯುವಕರು – ಅವತ್ತು ಇಸ್ಪೀಟು ಆಡುತ್ತ ಕೂತಿದ್ದವರು – ಬಂದರು. ಕೆರೆಯ ಹತ್ತಿರ ಹೋಗುತ್ತಿದ್ದಂತೆ ಅವರು ಹಾಳುಬಿದ್ದ ಅಗ್ರಹಾರದ ಕಡೆ ನನ್ನನ್ನು ಕರೆದುಕೊಂಡು ಹೋದಾರೆಂದು ನನಗೆ ಹೆದರಿಕೆಯಾಯಿತು. “ನಾನು ಬರೋದಿಲ್ಲ” ಎಂದು ಹಠ ಹಿಡಿದೆ. ಅದಕ್ಕೆ ರಂಗಣ್ಣ ಶಾಸ್ತಿಗೆ “ಹೋಗಲಿ ಬಿಡೊ, ಅದೊಂದು ಶುದ್ಧ ಹೆಣ್ಣಿಗ” ಎಂದ. ಶಾಸ್ತ್ರಿ ಕೇಳಲಿಲ್ಲ. ನನ್ನನ್ನು ಎಳೆದುಕೊಂಡು ಹೋದ. “ನಿನ್ನ ಅಪ್ಪಯ್ಯನಿಗೆ ಕಾಗದ ಹಾಕಿದ್ದೇವೆ, ಕಣೊ, ನಿನ್ನನ್ನ ಕರೆದುಕೊಂಡು ಹೋಗೋದಕ್ಕೆ . ಅದಕ್ಕಿಂತ ಮುಂಚೆ ನಿನಗೊಂದು ತಮಾಷೆ ತೋರಿಸ್ತೇವೆ” ಎಂದು ಶಾಸ್ತ್ರಿ ನನ್ನ ಕೈ ಹಿಡಿದು ಪ್ರೀತಿಯಿಂದ ಹೇಳಿದ. ನನ್ನನ್ನು ಹೆಣ್ಣಿಗನೆಂದು ಹಾಸ್ಯ ಮಾಡುತ್ತಾರೆಂದು ಹೆದರಿ ಅವರ ಜೊತೆ ಹೋದೆ. ದಾರಿಯುದ್ದಕ್ಕೂ ನನಗೆ ಸುಬ್ರಹ್ಮಣ್ಯ ದೇವರನ್ನು ನಾನು ಮೈಲಿಗೆಯಲ್ಲಿ ಮುಟ್ಟಿದ್ದು, ಹಾವನ್ನು ಕಂಡಿದ್ದು, ಮನೆಯ ಸುತ್ತ ಬ್ರಹ್ಮರಾಕ್ಷಸ ಸುತ್ತಾಡಿದ್ದು ನೆನಪಾಗಿ ಭಯವಾಯಿತು. ಜೊತೆಗೆ ಇದ್ದ ಐದು ಜನರು ನನಗೆ ಗೇಲಿ ಮಾಡುತ್ತಾರೆಂದು ಇನ್ನಷ್ಟು ದಿಗಿಲಾಯಿತು. ಉದ್ದಕ್ಕೆ, ದೋಟಿಯ ಹಾಗೆ ಬೆಳೆದಿದ್ದ ರಂಗಣ್ಣನನ್ನು ಕಂಡರೆ ನನಗೆ ಅಪ್ಪಯ್ಯನನ್ನು ನೋಡಿದ್ದಕ್ಕಿಂತ ಹೆಚ್ಚು ಗಾಬರಿಯಾಗುತ್ತಿತ್ತು.
ಕಾಡಿನಲ್ಲಿ ತುಂಬ ದೂರದವರೆಗೆ ಬಳಸು – ದಾರಿಗಳಲ್ಲಿ ಹೋಗಿ, ಹಾಳುಬಿದ್ದ ಅಗ್ರಹಾರದ ಒಂದು ತುದಿಯಲ್ಲಿ ಕಾಡಿನ ನಡುವೆ ಇದ್ದ ಬಸ್ತಿಯ ಹತ್ತಿರ ಬಂದೆವು. ಹೊಳೆಯ ಶಬ್ದ ಅಲ್ಲಿಗೆ ಕೇಳಿಸುತ್ತಿತ್ತು. ಶಾಸ್ತ್ರಿ ಗುಟ್ಟಾಗಿ ಹೇಳಿದ ‘ಇಲ್ಲಿಂದ ಮುಂದೆ ಮೆತ್ತಗೆ ನಡೆಯುತ್ತ ನನ್ನ ಹಿಂದೆ ಬನ್ನಿ’ ಅಂತ. ಅವನು ಮುಂದಾಗಿ ನಾವೆಲ್ಲ ಹಿಂದಾಗಿ ಸದ್ದು ಮಾಡದೆ ನಡೆದು, ಅವತ್ತು ನಾನು ಶಾಸ್ತ್ರಿ ಅಡಗಿ ಕೂತಿದ್ದ ಮೋಟು ಗೋಡೆಯ ಹಿಂದೆ ಬಂದೆವು. ನಾನು ಮತ್ತು ಶಾಸ್ತ್ರಿ ಗೋಡೆ ಬಿರುಕು ಬಿಟ್ಟಲ್ಲಿ ಕಣ್ಣಿಟ್ಟು ಕೂತೆವು. ಉಳಿದ ನಾಲ್ವರು ಎತ್ತರಕ್ಕಿದ್ದುದರಿಂದ ಗೋಡೆಗೆ ಆತು ನಿಂತುಕೊಂಡು ಇಣುಕಿದರು. ನನಗೆ ಹಾವಿನ ನೆನಪಾಗಿ ಎದೆ ಹೊಡೆದುಕೊಳ್ಳಲು ಪ್ರಾರಂಭಿಸಿತು.
ಶಾಸ್ತ್ರಿ ‘ಎದುರಿಗೆ ಏನು ಕಾಣಿಸ್ತಿದೆ, ನೋಡು’ ಎಂದ. ನಮಗಿಂತ ಸ್ವಲ್ಪ ದೂರದಲ್ಲಿ ಯಮುನಕ್ಕ ನಮಗೆ ಬೆನ್ನು ಹಾಕಿ ಕಲ್ಲು-ಚಪ್ಪಡಿಯೊಂದರ ಮೇಲೆ ಕೂತಿದ್ದರು. ಎರಡು ಕೈಗಳ ಮೇಲೆ ತಲೆಹೊತ್ತು ಬಗ್ಗಿ ಕೂತಿದ್ದರು. ಇವರು ಇಷ್ಟು ದೂರ ಬಂದು ಒಬ್ಬರೇ ಕೂತಿದ್ದಾರಲ್ಲ, ಹೆದರಿಕೆಯಾಗಲ್ಲವೆ, ಇಲ್ಲಿ ಹಾವಿದೆ ಎಂದು ಇವರಿಗೆ ಗೊತ್ತಿಲ್ಲವೆ ಎಂದು ನಾನು ಆಶ್ಚರ್ಯಪಟ್ಟೆ. ಸ್ವಲ್ಪ ಹೊತ್ತಿನ ನಂತರ ಯಮುನಕ್ಕ ಎದ್ದು ನಿಂತದ್ದು ಕಂಡು ಗೋಡೆಯ ಮೇಲಿಂದ ಇಣಿಕಿ ನೋಡುತ್ತಿದ್ದವರು ಕೂತುಬಿಟ್ಟರು. ಯಮುನಕ್ಕ ಯಾರನ್ನೊ ಹುಡುಕುವವರ ಹಾಗೆ ನಮ್ಮ ಕಡೆಯೇ ನಡೆದು ಬಂದರು. “ಯಮುನಕ್ಕ ನಾವೆಲ್ಲ ಇಲ್ಲಿ ಇದ್ದೇವೆ, ಕದ್ದು ನೋಡುತ್ತಿದ್ದೇವೆ. ಇಲ್ಲೊಂದು ಹಾವಿದೆ” ಎಂದು ನನಗೆ ಹೇಳಬೇಕೆನಿಸಿತು. ಆದರೆ ನಾನು ಬಾಯಿ ತೆರೆದ ಕೂಡಲೆ ಶಾಸ್ತ್ರಿ ನನ್ನ ಬಾಯಿ ಮುಚ್ಚಿದ. ರಂಗಣ್ಣ ಮೂಗಿನ ಮೇಲೆ ಬೆರಳಿಟ್ಟು ನನಗೆ ಹೆದರಿಸಿದ. ನಾನು ಸುಮ್ಮನಾದೆ.
ಯಮುನಕ್ಕ ನಮ್ಮ ಕಡೆ ಬರುತ್ತಿದ್ದವರು ನಿಂತು ಮೋಟು-ಗೋಡೆಯನ್ನೆ ಎವೆಯಿಕ್ಕದೆ ನೋಡಿದರು. ಶಾಸ್ತ್ರಿ ಉಸಿರು ಹಿಡಿದು ಕೂತು ನನ್ನ ಬಾಯನ್ನು ಕೈಯಿಂದ ಮುಚ್ಚಿದ. ಯಮುನಕ್ಕ ಸೆರಗಿನಿಂದ ಕಣ್ಣೊರಸಿಕೊಂಡು ಕುರುಡರ ಹಾಗೆ ಪರದಾಡುತ್ತ ನಡೆದು ಹಿಂದಕ್ಕೆ ಹೋಗಿ ಅದೇ ಕಲ್ಲಿನ ಮೇಲೆ ಕೂತರು. ಹಿಂದೆ ಕೂತ ರೀತಿಯಲ್ಲೆ.
ನನಗೆ ಕೂತು ಕೂತು ಬೇಜಾರಾಯಿತು. ಸಾಹುಕಾರರ ಮಗ ರಂಗಣ್ಣ ಮತ್ತು ಉಳಿದವರು ನಿಂತು ಸಾಕಾಗಿ ಕೂತರು. ಶಾಸ್ತಿಯ ಕಿವಿಯಲ್ಲಿ ಕಂಡಕೂಡಲೆ ಹೇಳು ಎಂದರು. ರಂಗಣ್ಣ ಸಿಗರೇಟು ಹೊತ್ತಿಸಿ, ಇನ್ನೊಂದನ್ನು ಶಾಸ್ತಿಗೆ ಕೊಟ್ಟ. ಶಾಸ್ತ್ರಿ ನನಗೆ, “ಇನ್ನು ಸ್ವಲ್ಪ ಹೊತ್ತಿಗೆ ಬ್ರಹ್ಮರಾಕ್ಷಸ ಬರುತ್ತಾನೆ, ನೀನು ಕಣ್ಣಾರೆ ನೋಡಬಹುದು” ಎಂದ . ನನಗೆ ತುಂಬ ಗಾಬರಿಯಾಯಿತು. ಇನ್ನಷ್ಟು ಹೊತ್ತಾಗಿ ಬೇಜಾರಾಗಿ ಸಾಯಂಕಾಲವಾಯಿತು.
ನನಗೆ ಅಪ್ಪಯ್ಯ ಅಮ್ಮನ ಜ್ಞಾಪಕವಾಯಿತು. ಯಾರ ಕೈಯಲ್ಲೊ ಸಿಕ್ಕಿಹಾಕಿಕೊಂಡೆ, ಇನ್ನು ನಾನು ಮನೆಗೆ ಹೋಗುತ್ತೇನೋ ಇಲ್ಲವೊ ಎಂಬ ದುಃಖವಾಯಿತು. ‘ಹಿಂದಕ್ಕೆ ಹೋಗೋಣ’ ಎಂದು ಶಾಸ್ತಿಗೆ ಹೇಳಿದೆ. “ನೀನು ಬೇಕಾದರೆ ಒಬ್ಬನೇ ಹೋಗು, ದಾರಿಯಲ್ಲಿ ಮಾತ್ರ ಹಾವು ಅಟ್ಟಿಸಿಕೊಂಡು ಬರುತ್ತದೆ. ನನ್ನ ಕೈಯಲ್ಲಿ ಗರುಡ-ಮಚ್ಚೆಯಿದೇಂತ ನಿನಗೆ ಗೊತ್ತಿಲ್ಲವ” ಎಂದು ಶಾಸ್ತ್ರಿ ನನಗೆ ಗದರಿಸಿ ನಕ್ಕ. ನಾನು ಸುಮ್ಮನಾದೆ.
ಸ್ವಲ್ಪ ಹೊತ್ತಾದ ಮೇಲೆ ದೂರದಿಂದ ಒಬ್ಬ ಬರುವುದು ಕಾಣಿಸಿತು. ತೆಳ್ಳಗೆ, ಉದ್ದಗೆ ಇದ್ದ. ಕಚ್ಚೆ ಹಾಕಿ ಪಂಚೆಯುಟ್ಟಿದ್ದ; ಕ್ರಾಪು ಬಿಡಿಸಿದ್ದ. ಹತ್ತಿರ ಬಂದ ಮೇಲೆ ಇವನೇ ಹಿಂದಿನ ಸಾರಿ ನಾನಲ್ಲಿ ಕದ್ದು ನೋಡಿದಾಗ ಬಂದು ಕೂತಿದ್ದವ ಎಂದು ಗೊತ್ತಾಯಿತು. ತುಮಕೂರಿನಿಂದ ವರ್ಗವಾಗಿ ಬಂದು, ಸೈಕಲ್ಲಿನ ಮೇಲೆ ಶಿವಪುರದಿಂದ ನಮ್ಮೂರಿನ ಸ್ಕೂಲಿಗೆ ಬಂದು ಹೋಗುತ್ತಿದ್ದ ಆ ಎಣ್ಣೆಗೆಂಪು ಬಣ್ಣದ ಪೇಟೆಯವನ ಹೆಸರು ನನಗೆ ಗೊತ್ತಿರಲಿಲ್ಲ.
ಶಾಸ್ತ್ರಿ ಚಿಟಿಕೆ ಹೊಡೆದು ‘ಬ್ರಹ್ಮರಾಕ್ಷಸ ಬಂದ’ ಎಂದ. ಕೂತಿದ್ದವರೆಲ್ಲ ನಿಂತು ಮೋಟು-ಗೋಡೆಯಿಂದ ಇಣಿಕಿದರು.
ಯಮುನಕ್ಕನ ಪಕ್ಕದಲ್ಲಿ ಅವನು ನಮಗೆ ಬೆನ್ನು ಮಾಡಿ ಕೂತದ್ದನ್ನು ನೋಡಿ ನನಗೆ ಆಶ್ಚರ್ಯವಾಯಿತು. “ನೋಡು, ನೋಡು, ಸರಿಯಾಗಿ ನೋಡು – ಏ ಶುಕಮುನಿ” ಎಂದು ಶಾಸ್ತ್ರಿ ನನಗೆ ಚುಚ್ಚಿದ. ಅವನು ಯಮುನಕ್ಕನಿಗೆ ಏನೋ ಹೇಳಿದ. ಯಮುನಕ್ಕ ಗಡಗಡ ನಡುಗಿದರು. ಅವನು ಯಮುನಕ್ಕನ ಕೈ ಹಿಡಿದುಕೊಂಡ. ಯಮುನಕ್ಕ ಕೈಕೊಸರಿಕೊಂಡು ದೂರ ಸರಿದರು.
ಶಾಸ್ತ್ರಿ ಸಿಳ್ಳೆ ಹಾಕುತ್ತ ಸಿಗರೇಟು ಹಚ್ಚಿಸಿ, ಹುಬ್ಬನ್ನು ಎತ್ತಿ ನನ್ನ ಕಡೆ ನೋಡಿದ.
ಬಿರುಕಿನಿಂದ ನೋಡುತ್ತ ಕೂತ ನನಗೆ ಒಂದು ಹಾವು ನಿಧಾನವಾಗಿ ಹರಿಯೋದು ಕಾಣಿಸಿತು. ‘ಹಾವು’ ಎಂದೆ. ಎಲ್ಲರೂ ಅದನ್ನು ನೋಡಿದರು. ಕೇರೆ ಹಾವಿರಬೇಕು ಸುಮ್ಮನಿರು ಎಂದರು. ನಾನು ಕೂಗಿಕೊಳ್ಳುವುದರಲ್ಲಿದ್ದೆ. ರಂಗಣ್ಣ ಒಂದೇಟು ಹೊಡೆದು ನನ್ನ ಬಾಯಿ ಮುಚ್ಚಿದ. ಅಳುತ್ತಿದ್ದ ನನಗೆ ಶಾಸ್ತ್ರಿ, “ಅಳಬೇಡ, ಮುಂದೆ ಇನ್ನೂ ತುಂಬ ಮಜವಿದೆ. ಕಾದು ನೋಡು” ಎಂದ. ನಾನು ಸುಮ್ಮನಾದೆ.
ಕೆನ್ನೆಯನ್ನು ಉಜ್ಜಿಕೊಳ್ಳುತ್ತ ಕೂತೆ. ಹಾವು ಮೆತ್ತಗೆ ಸದ್ದು ಮಾಡದೆ ಯಮುನಕ್ಕ ಕೂತ ಕಡೆ ಹರಿಯುತ್ತಿತ್ತು. ಬೆನ್ನು ಹಾಕಿ ಕೂತ ಅವರು ತಿರುಗಿ ನೋಡಲೇ ಇಲ್ಲ. ಹಾವು ಬಳಕುತ್ತ ಹೊಳೆಯುತ್ತ, ಮೂಸಿ ಮೂಸಿ ನೋಡುತ್ತ ಹರಿಯುತ್ತಿತ್ತು. “ಕೇರೆ-ಹಾವು ಹೆದರಬೇಡ ” ಎಂದು ಶಾಸ್ತ್ರಿ ಹೇಳಿದ. “ಹಾವಿನ ಕಡೆ ನೋಡಬೇಡ. ಅದು ಹರಿದು ಹುತ್ತಕ್ಕೆ ಹೋಗುತ್ತದೆ. ಅವರಿಬ್ಬರ ಮಜ ನೋಡು” ಎಂದ. ಹಾವು ಎಡಗಡೆಗೆ ತಿರುಗಿತು. ಯಮುನಕ್ಕ ಕೂತ ಕಡೆ ಅದು ಹೋಗಲಿಕ್ಕಿಲ್ಲವೆಂದುಕೊಂಡರೆ ಮತ್ತೆ ಬಲಕ್ಕೆ ತಿರುಗಿ ಹರಿಯಿತು. ನಮ್ಮ ಜೊತೆ ಬಂದವನೊಬ್ಬ, “ಈ ಮುಂಡೆಯಿಂದಾಗಿ ದೇವರಿಗೆ ಮೈಲಿಗೆಯಾಗಿದೆ. ಅದಕ್ಕಾಗಿ ಈ ಹಾವು” ಎಂದ. ಎಲ್ಲರೂ ನಿಜ ನಿಜವೆಂದು ತಲೆಯಾಡಿಸಿದರು.ನನಗೆ ಸುಬ್ರಹ್ಮಣ್ಯ ದೇವರನ್ನು ಮೈಲಿಗೆಯಲ್ಲಿ ಮುಟ್ಟಿದ್ದು ನೆನಪಾಗಿ ಮೈ ನಡುಗಿತು. ನನ್ನ ಸುತ್ತಲೂ ನೋಡಿಕೊಂಡೆ. ರಂಗಣ್ಣ ಹೇಳಿದ: “ದೇವರೇ ಈ ಹಾವನ್ನು ಕಳಿಸಿದ್ದರೆ ಇದು ಅವಳನ್ನು ಕಚ್ಚಿ ಸಾಯಿಸುತ್ತದೆ. ಪಾಪಕ್ಕೆ ತಕ್ಕ ಶಾಸ್ತ್ರಿ.”
ಹಾವು ಸಿಂಬೆ ಸುತ್ತಿ ಕೂತುಕೊಂಡು ಹೆಡೆಯನ್ನು ಬಿಚ್ಚಿ ಸುತ್ತಲೂ ನೋಡಿತು. ನನ್ನನ್ನು ಅದು ನೋಡಬಹುದೆಂದು ನನಗೆ ದಿಗಿಲಾಯಿತು. ‘ಹಾ ಸರ್ಪ ಸರ್ಪ’ ಎಂದು ಎಲ್ಲರ ಬಾಯಿಂದ ಬಂದಿತು. ನಾನು ಎದ್ದು ನಿಂತೆ. ಶಾಸ್ತ್ರಿ, ಜಗ್ಗಿ ನನ್ನನ್ನು ಎಳೆದು ಕೂರಿಸಿದ. ಹಾವು ಮತ್ತೆ ಹರಿಯುತ್ತ ಕಲ್ಲು – ಚಪ್ಪಡಿಯ ಕಡೆ ಹೋಯಿತು.
ಯಮುನಕ್ಕನಿಗೆ ಅವನು ಏನೋ ಹೇಳುತ್ತಲೇ ಇದ್ದ. ಆದರೆ ಯಮುನಕ್ಕ ಕೈಯಲ್ಲಿ ಮುಖ ಮುಚ್ಚಿಕೊಂಡೆ ಕೂತಿದ್ದರು. ಅವನು ಹತ್ತಿರ ಹೋಗಿ ಅವರ ಹೆಗಲಿನ ಮೇಲೆ ಕೈಹಾಕಿದ. ಯಮುನಕ್ಕ ಮತ್ತೆ ಕೊಸರಿಕೊಂಡು, ಈ ಸಾರಿ ಎದ್ದು ನಿಂತರು.
ಗೋಡೆಯಿಂದ ಇಣುಕುತ್ತಿದ್ದವರು ಕೂತರು. ಹರಿಯುತ್ತ ತಮ್ಮ ಕಡೆ ಬರುವ ಹಾವನ್ನು ಯಮುನಕ್ಕ ನೋಡಬಹುದು ಎಂದು ನನ್ನ ಮನಸ್ಸು ಹಗುರವಾಯಿತು. ಆದರೆ ಅವರು ಅದನ್ನು ನೋಡಲೇ ಇಲ್ಲ. ಮತ್ತೆ ಅವನ ಪಕ್ಕಕ್ಕೆ ಕೂತರು. ನನಗೆ ಅಳು ಬರುವಷ್ಟು ಭಯವಾಯಿತು. ಹಾವು ಹರಿದು ಅವರು ಕೂತಿದ್ದ ಕಲ್ಲು-ಚಪ್ಪಡಿಯ ಹತ್ತಿರ ಹೋಯಿತು. ‘ಸುಬ್ರಹ್ಮಣ್ಯ ಸುಬ್ರಹ್ಮಣ್ಯ’ ಎಂದು ನಾನು ಕಣ್ಣು ಮುಚ್ಚಿ ದೇವರನ್ನು ಪ್ರಾರ್ಥಿಸಿದೆ. ಕಲ್ಲು-ಚಪ್ಪಡಿಯ ಹತ್ತಿರ ಹೋದ ಹಾವು ಅದರ ಬಾಯಿಂದ ಚಪ್ಪಡಿಯನ್ನು ಮುಟ್ಟಿ ಮುಟ್ಟಿ ನೋಡಿತು. ನಾನು ನಡುಗತೊಡಗಿದೆ. ಶಾಸ್ತ್ರಿ ನನ್ನ ಕೈ ಹಿಡಿದು – “ತಪ್ಪಿಗೆ ತಕ್ಕ ಶಿಕ್ಷೆ” ಎಂದ.
ಹಾವು ಕಲ್ಲು-ಚಪ್ಪಡಿಯ ಸಂದಿಯಲ್ಲಿ ಹೋಯಿತು. ಯಮುನಕ್ಕ ಮತ್ತು ಅವನು ಕಾಲನ್ನು ಇಳಿಬಿಟ್ಟು ಕೂತಿದ್ದರಿಂದ ಅವರ ಕಾಲನ್ನದು ಕಡಿಯಬಹುದೆಂದು ನನಗೆ ಮೈಯ ಕೂದಲೆಲ್ಲ ಎದ್ದು ನಿಂತುಕೊಂಡಿತು.
ಕಲ್ಲು-ಚಪ್ಪಡಿಯ ಸಂದಿಯಲ್ಲಿ ಅದಕ್ಕೆ ಸಾಕಷ್ಟು ಜಾಗ ಸಿಗಲಿಲ್ಲವೆಂದು ಕಾಣುತ್ತೆ. ಮತ್ತೆ ಹೊರಗೆ ಬಂದಿತು. ಮೋಡದಿಂದ ತೂರಿಕೊಂಡು ಹೊರಗೆ ಬಂದ ಸಂಜೆಯ ಸೂರ್ಯನ ಬೆಳಕಿನಲ್ಲಿ ಹಾವು ಪಳಪಳ ಹೊಳೆಯುತ್ತಿತ್ತು.
ಅವನು ಮತ್ತೆ ಏನೋ ಹೇಳುತ್ತ ಯಮುನಕ್ಕನ ಹೆಗಲಿನ ಮೇಲೆ ಕೈಹಾಕಿದ. ಅವನು ಹೆಗಲಿನ ಮೇಲೆ ಕೈಹಾಕಿದ್ದರಿಂದ ಯಮುನಕ್ಕ ಸಿಟ್ಟಿನಿಂದ ಕೊಸರಿಕೊಂಡು ಎದ್ದು ನಿಲ್ಲುತ್ತಾರೆ, ಆಗ ಹಾವು ಕಲ್ಲು-ಚಪ್ಪಡಿಯನ್ನು ಬಾಯಿಂದ ಮುಟ್ಟಿ ಮುಟ್ಟಿ ನೋಡುವುದನ್ನು ಕಣ್ಣಾರೆ ನೋಡುತ್ತಾರೆ, ಪರವಾಯಿಲ್ಲ, ಎಂದು ನಾನು ನಿಟ್ಟುಸಿರು ಬಿಟ್ಟೆ. ಆದರೆ ನಾನು ಎಣಿಸಿದ್ದಂತೆ ಯಮುನಕ್ಕ ಎದ್ದು ನಿಲ್ಲಲಿಲ್ಲ. ಅವನಿಗೆ ಒತ್ತಿ ಕೂತು ಅಳುತ್ತಾ ಅವನನ್ನು ತಬ್ಬಿಕೊಂಡರು. ಅವನ ತೊಡೆಯ ಮೇಲೆ ತಲೆಯಿಟ್ಟರು.
ನಾನು ನನ್ನ ಕೈಯನ್ನು ಕೊಸರಿಕೊಂಡು ಚಂಗನೆ ನೆಗೆದೆ. ರಂಗಣ್ಣ, ಶಾಸ್ತ್ರಿ ನನ್ನನ್ನು ಹಿಡಿಯುವುದರ ಒಳಗೆ ಮೋಟು ಗೋಡೆಯನ್ನು ಬಳಸಿ, ಒಂದೇ ಉಸುರಿಗೆ, “ಅಯ್ಯೋ ಅಲ್ಲಿ ಹಾವಿದೆ ಯಮುನಕ್ಕಾ” ಎಂದು ಕಿರುಚುತ್ತಾ ಅವರ ಕಡೆ ಓಡಿದೆ.
ಯಮುನಕ್ಕ ಎದ್ದು ನಿಂತರು. ಗಾಬರಿಯಿಂದ ಹತ್ತು ಹೆಜ್ಜೆ ಓಡಿ ಕಂಗಾಲಾದವರಂತೆ ನಿಂತರು. ಮೋಟು ಗೋಡೆಯ ಹಿಂದೆ ನಿಂತಿದ್ದವರೆಲ್ಲ ಹಾರಿ ಓಡಿದರು. ಯಮುನಕ್ಕನ ಜೊತೆಗಿದ್ದವ ಅವರನ್ನು ಕಂಡಕ್ಷಣವೇ ಇನ್ನೊಂದು ದಿಕ್ಕಿಗೆ ಪಂಚೆಯನ್ನು ಎತ್ತಿಕೊಂಡು ಓಡಿಬಿಟ್ಟ. ನಾನು ಓಡುತ್ತಿದ್ದವನು ಅಲ್ಲೇ ಬಿದ್ದಿದ್ದ ಒಂದು ಕಲ್ಲೆತ್ತಿಕೊಂಡು ಚಪ್ಪಡಿಯ ಕಡೆ ಓಡಿದೆ. ನನ್ನ ಶಕ್ತಿಯನ್ನೆಲ್ಲ ಉಪಯೋಗಿಸಿ ಹಾವಿನ ಮೇಲೆ ಆ ಕಲ್ಲನ್ನು ಎಸೆದು, ಜಲ್ಲೆಂದು ಭಯವಾಗಿ ಮೈ ಬೆವರಲು, ಓಡಿ ಹೋಗಿ ಯಮುನಕ್ಕನನ್ನು ತಬ್ಬಿಕೊಂಡೆ. ಹಾವಿಗೆ ಏಟು ಬಿದ್ದಿರಬೇಕು; ಅದು ಹೆಡೆಯನ್ನು ಇಷ್ಟಗಲ ಬಿಚ್ಚಿ ಬು ಎಂದು ಕಲ್ಲು-ಚಪ್ಪಡಿಯನ್ನು ಕುಟ್ಟಿತು. ಯಮುನಕ್ಕನ ಹೊಟ್ಟೆಯ ಮೇಲೆ ತಲೆಯಿಟ್ಟು ಕೈಗಳಿಂದ ಅವರನ್ನು ಬಿಗಿದು ನಿಂತಿದ್ದ ನನಗೆ ಪ್ರಾಣಾಂತಿಕ ಭಯವಾಯಿತು. ಇನ್ನೊಂದು ಕಲ್ಲನ್ನು ಎತ್ತಿ ಅದರ ಕಡೆ ಎಸೆದೆ. ಹಾವು ಸರಸರನೆ ಹರಿದು ಕಲ್ಲು-ಚಪ್ಪಡಿಯಿಂದ ಇಳಿಯಿತು. ಅಷ್ಟುದ್ದದ ತನ್ನ ನೀಳವಾದ ಮೈಯನ್ನು ಹೀಗೆ ಹೀಗೆ ಹೀಗೆ ಬಳುಕಿಸುತ್ತ ಬು ಎಂದು ನಮ್ಮನ್ನು ಅಟ್ಟಿಸಿಕೊಂಡು ಬಂತು. ನಾವಿಬ್ಬರೂ ಓಡಿದೆವು. ಯಮುನಕ್ಕನ ಕೈಯನ್ನು ದರದರನೆ ಹಿಡಿದೆಳೆಯುತ್ತ ನಾನೇ ಮುಂದಾಗಿ ಅಷ್ಟು ದೂರ ಓಡಿ, ಯಮುನಕ್ಕನಿಗೆ ಸುಸ್ತಾಗಲು ನಿಂತೆ. ಯಮುನಕ್ಕ ಕುಸಿದು ಕೂತರು. ನನಗೆ ಮೈ ಬೆವತು ಕಣ್ಣು ಕತ್ತಲೆಕಟ್ಟಿ ಬಂತು. ಯಮುನಕ್ಕನ ಜೊತೆ ಕೂತು ಸುಧಾರಿಸಿಕೊಂಡು ಕಣ್ಣುಬಿಟ್ಟೆ. ನಮ್ಮ ಎದುರಿಗೇ ಇದ್ದ ಒಂದು ಹುತ್ತದ ಒಳಕ್ಕೆ ಹಾವು ತಲೆ ಹಾಕಿತು. ಮೆಲ್ಲ ಮೆಲ್ಲಗೆ ತನ್ನ ನೀಳವಾದ ಮೆಯನ್ನು ಎಳೆದುಕೊಳ್ಳುತ್ತ, ಕೊನೆಗೊಂದು ಬಾಲ ಮಾತ್ರ ಚೂಪಾಗಿ ಉಳಿದು, ಕೊನೆಗೆ ಅದೂ ಮಾಯವಾಯಿತು. ಎವೆಯಿಕ್ಕದೆ ಇದನ್ನು ನಾನು ನೋಡುತ್ತ ಕೂತೆ. ಆ ನಿರ್ಜನವಾದ ಹಾಳುಬಿದ್ದ ಅಗ್ರಹಾರದಲ್ಲಿ ಆಗ ಉಳಿದಿದ್ದವರು – ಯಮುನಕ್ಕ, ನಾನು ಮತ್ತು ಯಾವ ಹುತ್ತದೊಳಗಿನ ಕತ್ತಲೆಗೊ ಮಾಯವಾದ, ಗಾಯಗೊಂಡರೂ ಸಾಯದ, ರಚ್ಚಿನಲ್ಲಿ ಬುಸುಗುಟ್ಟುವ ಹಾವು.
ಯಮುನಕ್ಕನನ್ನು ಕೈ ಹಿಡಿದು ಎಬ್ಬಿಸಿ ನಾನು ಕರೆದುಕೊಂಡು ಹೋಗಿ ಹಿತ್ತಲ ಬಾಗಿಲಿಂದ ಮನೆ ತಲುಪಿದೆ. ನನಗೆ ಕಾಲುಗಳು ಜಗಿಯುತ್ತಿದ್ದವು. ಒಂದು ಸಾಹಸವನ್ನು ಮಾಡಿ ಮುಗಿಸಿದವನ ಭಾವನೆಯಲ್ಲಿ ನಾನು ಇದ್ದುದರಿಂದ ಮನೆಗೆ ಹೋದವನೆ ಅಳಲಿಲ್ಲ. ಎಲ್ಲ ಬಾಗಿಲಿನ ಅಗಳಿಗಳನ್ನೂ ಹಾಕಿ ನಡುಮನೆಗೆ ಬಂದೆ. ಅಲ್ಲಿ ಯಮುನಕ್ಕ ನೆಲದ ಮೇಲೆ ಬಿದ್ದು ಹೊರಳುತ್ತಿದ್ದರು. ಸಾಯುವವರು ಸಂಕಟಪಡುವ ಹಾಗೆ ನರಳುತ್ತಿದ್ದರು. ನಾನು ಸುಮ್ಮನೇ ನಿಂತೆ. ಎಲ್ಲ ಬಾಗಿಲುಗಳನ್ನೂ ಹಾಕಿದ್ದರಿಂದ ನಡುಮನೆಯ ತುಂಬ ಕತ್ತಲಾಗಿತ್ತು. ಯಮುನಕ್ಕ ಕಾಣಿಸುತ್ತಿರಲಿಲ್ಲ. ಅವರು ನರಳುತ್ತ ಹೊರಳುವ ಶಬ್ದ ಮಾತ್ರ ಕೇಳಿಸುತ್ತಿತ್ತು. ಬಹಳ ಹೊತ್ತು ನಾನು ಮೂಲೆಯಲ್ಲಿ ಹಾಗೆ ನಿಂತೆ.
ಹೊರಳುವುದನ್ನು ನಿಲ್ಲಿಸಿ ಯಮುನಕ್ಕ ನನ್ನನ್ನು ‘ಬಾ’ ಎಂದು ಕರೆದರು. ಕತ್ತಲಿನಲ್ಲಿ ತಡಕಾಡುತ್ತ ನಾನು ಅವರಿದ್ದಲ್ಲಿಗೆ ಹೋದೆ. ನನ್ನನ್ನು ಎರಡು ಕೈಗಳಿಂದಲೂ ಬಾಚಿ ಅವಚಿಕೊಂಡರು. ಯಮನಕ್ಕ ಸಂಪೂರ್ಣ ಬೆತ್ತಲೆಯಾಗಿದ್ದಾರೆಂದು ಆಗ ನನಗೆ ಅನುಭವವಾಯಿತು. ನನ್ನ ಮುಖವನ್ನು ಎತ್ತಿ ತನ್ನ ಹೊಟ್ಟೆಯ ಮೇಲೆ ಇಟ್ಟುಕೊಂಡು ಅಯ್ಯೋ ಉರಿ ಉರಿ ಎಂದು ಅತ್ತರು. ಮೆತ್ತಗೆ ಬೆಚ್ಚಗೆ ಇದ್ದ ಹೊಟ್ಟೆಗೆ ಒತ್ತಿದ್ದ ನನ್ನ ಮುಖ ಬೆವರಿತು. ಉಸಿರಾಡುವುದು ಕಷ್ಟವಾಯಿತು. “ಅಯ್ಯೋ ನನ್ನ ಬಿಡಿ,ಬಿಡಿ” ಎಂದು ನಾನು ಕಷ್ಟದಿಂದ ಬಿಡಿಸಿಕೊಂಡು ಎದ್ದೆ. ಯಮುನಕ್ಕ ಸುಮ್ಮನಾಗಿಬಿಟ್ಟರು. ನಿಶ್ಚಲರಾಗಿ ಅಂಗಾತನೆ ಮಲಗಿದರು.
ನಾನು ಸ್ವಲ್ಪ ಹೊತ್ತು ಹಾಗೇ ಕೂತಿದ್ದೆ. ಗಣೇಶನ ಹಾಗೆ ನಾನೂ ಮನೆಗೆ ಹೋಗಿಬಿಡಬೇಕಿತ್ತು ಎನ್ನಿಸಿತು. ಈ ಯಮುನಕ್ಕ ಸತ್ತುಹೋದರೆ ಸಾಕು, ನಾನು ಸೀದ ಮನೆಗೆ ಎದ್ದುಬಿಡಬಹುದು ಎಂದು ಯೋಚಿಸಿ, ಈಗಲೇ ಎಲ್ಲಾದರೂ ಯಮುನಕ್ಕ ಸತ್ತುಬಿಟ್ಟಿದ್ದಾರೊ ಎಂದು ಭಯಪಟ್ಟೆ. “ಯಮುನಕ್ಕ ಯಮುನಕ್ಕ” ಎಂದು ಕೂಗಿದೆ. ಉತ್ತರ ಬರಲಿಲ್ಲ – ಭಯವಾಯಿತು. ‘ಯಮುನಕ್ಕ ಹಸಿವು’ ಎಂದು ಅಳತೊಡಗಿದೆ. ಯಮುನಕ್ಕ ಎದ್ದು ಸೀರೆಯನ್ನುಟ್ಟುಕೊಂಡು, ಅಡಿಗೆ-ಮನೆಗೆ ಹೋಗಿ ಅರಳು-ಹಿಟ್ಟನ್ನು ಮಜ್ಜಿಗೆಯಲ್ಲಿ ಕಲಸಿ ನನಗೆ ಕೊಟ್ಟರು. “ನಿಮಗೆ?” ಎಂದು ಕೇಳಿದೆ. “ನೀನು ತಿನ್ನು” ಎಂದು ಅವರು ಕತ್ತಲಿನಲ್ಲಿ ಕೂತರು. ಕತ್ತಲಲ್ಲೇ ಅರಳು-ಹಿಟ್ಟನ್ನು ತಿನ್ನುತ್ತ ನನಗೆ ಅಳು ಬಂತು. ‘ಅಳಬೇಡ’ ಎಂದರು ಯಮುನಕ್ಕ ಮೃದುವಾಗಿ.
ಹೊರಗೆ ಬಾಗಿಲನ್ನು ಬಡಿಯುವ ಶಬ್ದವಾಯಿತು. ಬಾಗಿಲು ಬಾಗಿಲು ಎಂದು ನಾಲ್ಕೆದು ಜನರ ಗಂಟಲು ಕೇಳಿಸಿತು. ಯಮುನಕ್ಕ ಏಳಲಿಲ್ಲ: ಮಾತೂ ಆಡಲಿಲ್ಲ. ರಂಗಣ್ಣನ ಧ್ವನಿ ಕೇಳಿಸಿತು- ನನ್ನನ್ನು ಹೊರಗೆ ಕಳಿಸುವಂತೆ ಅವನು ಹೇಳಿದ. ಯಮುನಕ್ಕ ನನಗೆ “ಬೇಕಾದರೆ ಹೋಗು” ಎಂದರು. “ನಾನು ಹೋಗೋದಿಲ್ಲ” ಎಂದೆ: ಯಮುನಕ್ಕನ ಕೈ ಹಿಡಿದು ಕೂತೆ. ಮತ್ತೆ ಹೊರಗಿದ್ದವರು ಅಗಳಿ ಮುರಿಯುವ ಹಾಗೆ ಬಾಗಿಲನ್ನು ತಟ್ಟಿದರು. ಮತ್ತೆ ಎಲ್ಲ ನಿಶ್ಶಬ್ದವಾಯಿತು. ಕೊನೆಗೊಂದು ಧ್ವನಿ ಕೇಳಿಸಿತು: “ದೇವರನ್ನು ಮುಟ್ಟಿ ಮೆಲಿಗೆ ಮಾಡಬೇಡ. ದೇವಸ್ಥಾನಕ್ಕೆ ಬರಬೇಡ. ನಾಳೆಯೊ ನಾಡಿದ್ದೊ ಉಡುಪರು ಬರುತ್ತಾರೆ – ಅವರು ಬಂದ ಮೇಲೆ ವಿಚಾರವಾಗಲಿ…” ಜೀ, ಜೀ, ಬಿಕೊ ಎಂದು ಮತ್ತೆ ಮೌನ ಕವಿಯಿತು. ಕತ್ತಲೆಯಾಗಿ ತುಂಬ ಹೊತ್ತಾಗಿರಬೇಕು. ಕೂತಲ್ಲೆ ಎಷ್ಟು ಹೊತ್ತಿಗೆ ನನಗೆ ನಿದ್ದೆ ಬಂತೊ ತಿಳಿಯದು.
*
*
*
ಥಟ್ಟನೆ ಕಣ್ಣುತೆರೆದು ನೋಡಿದಾಗ ನಾನು ಒಂದು ಹಾಸಿಗೆಯ ಮೇಲೆ ಮಲಗಿದ್ದೆ. ಮೈಮೇಲೆ ಹೊದಿಕೆ ಹೊದಿಸಿತ್ತು. ಕೈಗಳಿಂದ ತಡವಿದಾಗ ಪಕ್ಕದಲ್ಲಿ ಯಮುನಕ್ಕ ಇರಲಿಲ್ಲ. ಎದ್ದು ಭಯವಾಗಿ ಯಮುನಕ್ಕ ಎಂದು ಕರೆದೆ. ಹಿತ್ತಲಿಗೆ ಹೋಗಿ ನೋಡಿದೆ-ಇರಲಿಲ್ಲ. ಬಾವಿಕಟ್ಟೆಯ ಹತ್ತಿರ ನಿಂತು ಅಳಲು ಪ್ರಾರಂಭಿಸಿದೆ. ನನ್ನನ್ನು ಎತ್ತಿ ಹಾಸಿಗೆ ಮೇಲೆ ಮಲಗಿಸಿ ಯಮುನಕ್ಕ ಎಲ್ಲಿ ಹೋದರೆಂದು ಸಿಟ್ಟು ಬಂತು. ದೂರದಲ್ಲಿ ಒಂದು ಮನೆಯ ಚಾವಡಿಯ ಮೇಲೆ ಯಾರೋ ಲಾಟೀನಿನ ಸುತ್ತ ಕೂತು ಮಾತನಾಡುತ್ತಿದ್ದರು. ಎಷ್ಟು ಹೊತ್ತೆಂದು ನನಗೆ ತಿಳಿಯಲಿಲ್ಲ. ಅರ್ಧ ರಾತ್ರೆಯ. ಬೆಳಗಾಗುತ್ತಿದೆಯೇ. ಇನ್ನೂ ಸಂಜೆ ಕಳೆದು ಪ್ರಾರಂಭವಾದ ರಾತ್ರೆಯೆ? ಆಕಾಶವನ್ನು ನೋಡಿದೆ. ಬರೇ ನಕ್ಷತ್ರಗಳು. ಜಪ ಮಾಡದೆ ಬಹಳ ದಿನಗಳಾದ್ದರಿಂದ ತಿಥಿ, ವಾರ, ನಕ್ಷತ್ರ ಏನೂ ನನಗೆ ಗೊತ್ತಿರಲಿಲ್ಲ. ಅಮಾವಾಸ್ಯೆಯ ರಾತ್ರೆಯೆಂದು ನನಗೆ ಭಯವಾಯಿತು. ಬ್ರಹ್ಮರಾಕ್ಷಸನ ನೆನಪಾಯಿತು. ಹಾಳು ಯಮುನಕ್ಕ ಎಲ್ಲಿ ಸತ್ತರು ಎಂದು ಶಪಿಸಿಕೊಂಡೆ. ನನ್ನನ್ನು ಕೈಬಿಟ್ಟು ಹೋದರಲ್ಲ ಎಂದು ಅತ್ತು ಅತ್ತು ಸಾಕಾಗಿ ಬಾವಿಕಟ್ಟೆಗೊರಗಿ ನಿಂತೆ. ಹಿತ್ತಲಲ್ಲಿ ದೂರದಿಂದ ಅಮ್ಮ ಎನ್ನುವ ಶಬ್ದ ಕೇಳಿ ಬೆಚ್ಚಿದೆ: ಅಮ್ಮ ಅಮ್ಮ ಎಂದು ಜೋರಿಂದ ಕೂಗಿದ ಹಾಗಾಯಿತು. ‘ಯಾರು’ ಎಂದೆ. ನಾನಯ್ಯ ಕಟೀರ. ನನಗೆ ಇವತ್ತು ಕೂಳಿಲ್ಲವ?” ಎಂದು ಬೇಲಿಯ ಹತ್ತಿರದಿಂದ ಶಬ್ದ ಬಂತು. “ಏ ಕಟೀರ ಬಾರೊ ಇಲ್ಲಿ” ಎಂದೆ. “ಅಲ್ಲಿ ನಾನು ಬರುವ ಹಾಗಿಲ್ಲಯ್ಯ” ಎಂದ. ನಾನೇ ಅವನ ಹತ್ತಿರ ಹೋಗಿ, ‘ಅಮ್ಮ ಮನೇಲಿಲ್ಲ. ನನ್ನ ಜೊತೆ ಬಾ’ ಎಂದೆ. ನನಗೆ ಕೂಡಲೆ, ಯಮುನಕ್ಕ ಹೊಳೆ ಬದಿಯ ಹಾಳು ಅಗ್ರಹಾರಕ್ಕೆ ಮತ್ತೆ ಹೋಗಿದ್ದಾರೆ. ಅಲ್ಲಿಗೆ ಅವರೆಲ್ಲ ಮತ್ತೆ ಬಂದಿರುತ್ತಾರೆ ಎಂದು ದುಃಖವಾಯಿತು.
ಕಟೀರ ನನಗಿಂತ ಸ್ವಲ್ಪ ಮುಂದಾಗಿ ನಡೆದ. ನನಗೆ ಕಾಡಿನಲ್ಲಿ ಕತ್ತಲಿನಲ್ಲಿ ನಿಶ್ಯಬ್ದವಾಗಿ ನಡೆಯೋದು ಭಯವಾದ್ದರಿಂದ ಗಟ್ಟಿಯಾಗಿ ಕಟೀರನ ಹತ್ತಿರ ಸಾಯಂಕಾಲ ನಡೆದದ್ದನ್ನೆಲ್ಲ ಹೇಳತೊಡಗಿದೆ. ಆದರೆ ನಾನು ಹೇಳಿದ್ದು ಏನೂ ಅವನಿಗೆ ಅರ್ಥವಾದ ಹಾಗೆ ಕಾಣಲಿಲ್ಲ. ಸುಮ್ಮನೆ ಹೂಗುಡದೆ, ಮುಂದೆ ನಡೆದ. ಕೆರೆಯ ಹತ್ತಿರ ಬಂದೆವು. ಅಲ್ಲಿ ಒಂದಷ್ಟು ಜನ ಅವನ ಜಾತಿಯ ಹೊಲೆಯರು ಕೈಯಲ್ಲಿ ದೊಂದಿ ಹಿಡಿದು ಮೀನು ಹಿಡಿಯುತ್ತಿದ್ದರು. ಅವನ ಕೈಯಿಂದ ಕೇಳಿ ಒಂದು ದೊಂದಿಯನ್ನು ಇಸಿದುಕೊಂಡು, “ಇಲ್ಲೊಂದು ಒಳದಾರಿಯಿದೆಯಯ್ಯ ಬನ್ನಿ” ಎಂದು ಕುರುಚಲು-ಗಿಡಗಳು ಒತ್ತಾಗಿ ಬೆಳೆದಿದ್ದ ದಾರಿಯಲ್ಲಿ ಕರೆದುಕೊಂಡು ಹೋದ. ಸ್ವಲ್ಪ ದೂರ ನಡೆದ ಮೇಲೆ ನನಗೆ ಭಯ ಹೆಚ್ಚಾಯಿತು. ಕಟೀರ ತನ್ನಷ್ಟಕ್ಕೆ ಹಾಡಿಕೊಳ್ಳಲು ತೊಡಗಿದ. ಅವನು ತುಂಬ ಮುಂದಾಗಿ ನಡೆಯುತ್ತಿದ್ದುದರಿಂದ ನನಗೆ ಹಾದಿ ಕಾಣಿಸುತ್ತಿರಲಿಲ್ಲ. ಮೊಟ್ಟಿನಲ್ಲಿ ಬಗ್ಗಿ ಕೆಲವು ಕಡೆ ತೆವಳುತ್ತ ನಡೆಯಬೇಕಾಯಿತು. ಕಟೀರ ಬಗ್ಗಿ ತೆವಳುವಾಗಲೆಲ್ಲ ಹು ಹು ಎನ್ನುತ್ತಿದ್ದ. ಆಗ ಸರ ಸರ ಸರ ಎಂದು ಮೊಟ್ಟಿನ ಸಂದಿಗಳಿಂದ ಏನೇನೋ ಓಡಿಹೋಗುತ್ತಿದ್ದವು. “ಹಿಂದಕ್ಕೆ ಹೋಗೋಣ ಕಟೀರ” ಎಂದೆ. ಅಳಲು ಪ್ರಾರಂಭಿಸಿದೆ. “ಇಕೊ ಬಂದು ಬಿಟ್ಟಿತು” ಎಂದು ಅವನು ಹೇಳಿದ. ನಾವು ಸ್ವಲ್ಪ ಬಯಲಾದ ಜಾಗದಲ್ಲಿ ಬಂದು ನಿಂತಿದ್ದೆವು. “ಕಟೀರ ನನ್ನ ಕೈ ಹಿಡಿದುಕೊ” ಎಂದೆ. “ಅದು ಹೇಗೆ ಆಗ್ತದಯ್ಯ? ನಾನು ಹೊಲೆಯನಲ್ಲವ?” ಎಂದು ಇನ್ನಷ್ಟು ದೂರ ಹೋಗಿ ದೊಂದಿ ಹಿಡಿದು ನಿಂತ. ಕೌಪೀನ ಮಾತ್ರ ಹಾಕಿದ ಅವನ ಕಪ್ಪಾದ, ಉದ್ದಗೆ ನೀಳವಾದ ಬೆತ್ತಲೆಯ ದೇಹವನ್ನು ದೊಂದಿಯ ಬೆಳಕಿನಲ್ಲಿ ಕಂಡು ನನಗೆ ಹೆದರಿಕೆಯಾಯಿತು. ಕೆದರಿದ ಕೂದಲಿನ ಸ್ವರೂಪ ಪಂಜುರ್ಲಿಯನ್ನು ನೆನಪಿಗೆ ತಂದಿತು. “ಕಟೀರ, ಕಟೀರ, ನೀನು ಕಟೀರನಲ್ಲವ” ಎಂದೆ. “ಹೌದಯ್ಯ” ಎಂದ. ನಾನು ಓಡಿಹೋಗಿ ಅವನನ್ನು ಮುಟ್ಟಲು ಪ್ರಯತ್ನಿಸಿದೆ. ಅವನು ದೊಂದಿಯನ್ನು ಕೆಳಗೆ ಹಾಕಿ ಓಡಿದ. ನಾನು ದೊಂದಿಯನ್ನು ಎತ್ತಿಕೊಂಡು ಅಳಲು ಪ್ರಾರಂಭಿಸಿದೆ. ಅವನು ಹಿಂದಿನಿಂದ ಬಂದು “ನೀವು ಮುಂದೆ ನಡೆಯಿರಿ” ಎಂದ. ದೊಂದಿಯ ಬೆಳಕಿನ ಸಣ್ಣ ವೃತ್ತದಲ್ಲಿ ನಿಂತ ನನಗೆ ಕಾಡಿನ ಎಲ್ಲ ಮೂಲೆಗಳಿಂದಲೂ ಏನೇನೋ ಪ್ರಾಣಿಗಳು, ನೆರಳುಗಳಂತಹ ದೆವ್ವಗಳು ಮೆತ್ತಗೆ ಕದ್ದು ನನ್ನ ಕಡೆಗೇ ಕೈ ಚಾಚಿ ಬರುತ್ತಿವೆ ಎನ್ನಿಸಿತು. ಕಾಲನ್ನು ಇಟ್ಟಲ್ಲೆಲ್ಲ ಹಾವು ಇದೆ ಎನ್ನಿಸಿತು. ಮೃತ್ಯುಂಜಯ ಜಪ ಮಾಡುತ್ತ ಮುಂದೆ ನಡೆದೆ. ಇದ್ದಕ್ಕಿದ್ದಂತೆ ನನಗೆ ಭಯವೆಲ್ಲ ಮಾಯವಾಯಿತು. ಈ ಕತ್ತಲೆ ಕಳೆದ ಮೇಲೆ ಬೆಳಕಾಗಿ ಸುತ್ತಲು ಇರುವುದೆಲ್ಲ ಮರಗಳು, ಮೊಟ್ಟುಗಳು ಎಂದು ಗೊತ್ತಾಗುತ್ತದೆ. ನಾನು ಯಾಕೆ ಹೆದರಬೇಕು ಎನ್ನಿಸಿತು. ಯಮುನಕ್ಕನನ್ನು ಉಳಿಸುವುದರ ಭಾರ ನನ್ನ ಮೇಲಿದೆ. ಈಗ ನಾನು ಚಿಕ್ಕ ಮಾಣಿಯಲ್ಲ. ಉಪನಯನದಲ್ಲಿ ಗಾಯತ್ರಿಯ ಉಪದೇಶವಾದ್ದರಿಂದ ಈಗ ನಾನು ದೊಡ್ಡವನು ಎಂದು ಧೈರ್ಯಬಂತು. ಕಟೀರ ತನ್ನ ಪಾಡಿಗೆ ಹಾಡಿಕೊಳ್ಳುತ್ತ ನನ್ನನ್ನು ಹಿಂಬಾಲಿಸಿದ.
ಹುತ್ತವಿದ್ದಲ್ಲಿಗೆ ಬಂದು ನೋಡಿದರೆ ಅಲ್ಲಿ ಯಮುನಕ್ಕ ಒಬ್ಬರೇ ಇದ್ದರು. ಹುತ್ತಕ್ಕೆ ಮೈಯನ್ನು ಆತುಕೊಂಡಿದ್ದರು. ಅವರ ಒಂದು ಕೈ ಹುತ್ತದೊಳಗಿತ್ತು. ನೋಡಿದ ಕೂಡಲೆ ನನಗೆ ಭಯವಾಗಲಿಲ್ಲ. ಇನ್ನೇನು ಮಾಡೋದು. ಯಮುನಕ್ಕ ಸತ್ತುಹೋಗಿಬಿಟ್ಟಿದ್ದಾರೆ ಎನ್ನಿಸಿತು. ಮತ್ತೊಂದು ಕ್ಷಣದಲ್ಲಿ ಮೈಯೆಲ್ಲ ನಡುಗತೊಡಗಿತು. “ಕಟೀರ ಯಮುನಕ್ಕನನ್ನು ಎಬ್ಬಿಸೋ” ಎಂದು ಕೂಗಿದೆ. ಕಟೀರ ನಿಂತಲ್ಲಿಂದ ಕದಲಲಿಲ್ಲ. ನನಗೆ ಆ ಹುತ್ತದ ಒಳಗೆ ಗಾಯವಾಗಿ ಸೇರಿದ ಹಾವಿನ ನೆನಪಾಯಿತು. ಹಾವಿಗೆ ಹನ್ನೆರಡು ವರ್ಷ ರಚ್ಚಿರುತ್ತದೆ ಎಂದು ಅಮ್ಮ ಹೇಳುತ್ತಿದ್ದುದು ನೆನೆದು ಗಾಬರಿಯಾಯಿತು. ದೊಂದಿಯನ್ನು ಬೀಸುತ್ತ ನನ್ನ ಕಾಲುಬುಡದಲ್ಲೆಲ್ಲ ನೋಡಿಕೊಂಡೆ. ಒಂದು ಉದ್ದ ಕೋಲಿನಿಂದ ಯಮುನಕ್ಕನನ್ನು ಚುಚ್ಚಿದೆ. ಅವರು ಎದ್ದುನಿಂತು, “ಹೋಗು, ಹೋಗು” ಎಂದರು. ನಾನು, “ಹೋಗಲ್ಲ – ನನ್ನ ಜೊತೆ ಬನ್ನಿ” ಎಂದೆ. ಅವರು ಮಾತಾಡದೆ ಎದ್ದು ನಮ್ಮ ಜೊತೆ ಬಂದರು. ಕಟೀರ ಒಂದೂ ಮಾತಾಡದೆ ಅಗ್ರಹಾರದ ತನಕ ಬಂದು ನಮ್ಮನ್ನು ಮನೆಗೆ ಮುಟ್ಟಿಸಿ, ಯಾವುದೊ ಹಾಡನ್ನು ಗೊಣಗಿಕೊಳ್ಳುತ್ತ ಹೊರಟು ಹೋದ.
ಮತ್ತೆ ಮನೆಗೆ ಬಂದ ಮೇಲೆ ಯಮುನಕ್ಕ ಕತ್ತಲೆಯಲ್ಲಿ ಮಾತಾಡದೆ ಸ್ವಲ್ಪ ಹೊತ್ತು ಕೂತರು. “ನನ್ನನ್ನು ಯಾಕೆ ಸಾಯಲು ಬಿಡಲಿಲ್ಲ” ಎಂದು ಬೈದರು. ನಾನು ಸುಮ್ಮನೆ ಕೂತೆ. “ನಿದ್ದೆ ಬರ್ತಿದೆ ಮಲಗಿಕೊಳ್ಳೋಣ ಬನ್ನಿ” ಎಂದೆ. “ಎಲ್ಲಿಗೊ ನಾನು ಹೋಗಬೇಕು” ಎಂದರು. ನನಗೆ ಸಿಟ್ಟು ಬಂದು ಅಳಲು ಪ್ರಾರಂಭಿಸಿದೆ. “ನೀನೂ ನನ್ನ ಜೊತೆ ಬಾ” ಎಂದರು. “ನಾನು ಬರಲ್ಲ” ಎಂದೆ. “ನನ್ನನ್ನು ಅಮ್ಮನ ಹತ್ತಿರ ಕಳಿಸಿಕೊಡಿ” ಎಂದೆ. “ಅಷ್ಟು ದೂರವಿಲ್ಲ. ನನ್ನ ಜೊತೆ ಬಾ” ಎಂದರು. “ಅಯ್ಯೋ ನನಗೆ ಕೂಡಲ್ಲ. ಕಾಲು ನೋಯುತ್ತಿದೆ” ಎಂದೆ. ನನ್ನನ್ನು ತಬ್ಬಿಕೊಂಡು ತೆಂಗಿನ ಎಣ್ಣೆಯನ್ನು ಕಾಲಿಗೆ ಹಚ್ಚಿ ಒತ್ತಿದರು. ಆಮೇಲೆ “ನೀನು ಮಲಗಿಕೊ” ಎಂದು ಒಬ್ಬರೇ ಹೊರಗೆ ಹೊರಟರು. ನನಗೆ ಇರಲು ಭಯವಾಗಿ ಅವರ ಜೊತೆಗೆ ಹೊರಟೆ.
ಕದ್ದಿಂಗಳಿನ ರಾತ್ರೆಯಲ್ಲಿ ಅಗ್ರಹಾರ ಹಾಳು ಸುರಿಯುತ್ತಿತ್ತು. ನರಹುಳವೂ ಕಾಣಿಸುತ್ತಿರಲಿಲ್ಲ. ಇಬ್ಬರೇ ನಡೆದುಕೊಂಡು ಹೊರಟೆವು. ಯಾವುದೋ ಕಬ್ಬಿನ ಗದ್ದೆ ಹೊಕ್ಕ ನರಿ ಕೂಗಿದ್ದು ಕೇಳಿಸಿತು. ನಾನು ನಡುಗಿದೆ. ಯಮುನಕ್ಕ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡರು.
“ಆ ಹಾಳು ಬಿದ್ದ ಅಗ್ರಹಾರಕ್ಕಾದರೆ ನಾನು ಬರಲ್ಲ” ಎಂದು ಅತ್ತೆ. “ಅಲ್ಲಿಗಲ್ಲ. ನಿನ್ನಾಣೆ ಅಲ್ಲಿಗಲ್ಲ” ಎಂದರು. “ಮತ್ತೆಲ್ಲಿಗೆ?” ಎಂದು ಕೇಳಿದೆ. “ಅದೊಬ್ಬನ ಮನೆಗೆ. ನಾನು ನೀನು ಅಲ್ಲಿಗೆ ಹೋಗಿದ್ದೆವೂಂತ ನೀನು ಯಾರಿಗೂ ಹೇಳಕೂಡದು. ನಾಳೆ ನನ್ನ ಅಪ್ಪಯ್ಯ ಬಂದು ಕೇಳಿದರೆ ಏನೂ ಗೊತ್ತಿಲ್ಲ ಅಂತ ಸುಮ್ಮನಿದ್ದುಬಿಡು” ಎಂದರು. ನಾನು ಹೂ ಎಂದೆ. ತುಂಬ ದೂರ ಗಾಡಿ-ದಾರಿಯಲ್ಲಿ ನಡೆದು ಆಮೇಲೊಂದು ಸೀಳು-ದಾರಿಯನ್ನು ಹಿಡಿದು, ಒಂದು ದಿಬ್ಬವನ್ನು ಹತ್ತಿ ಇಳಿದು, ಗದ್ದೆಯ ಅಂಚಲ್ಲಿ ಅಷ್ಟು ದೂರ ನಡೆದು ಕೊನೆಗೊಂದು ಮನೆಯನ್ನು ತಲುಪಿದೆವು.
ಆ ಮನೆಯಲ್ಲಿ ಇನ್ನೂ ದೀಪ ಉರಿಯುತ್ತಿತ್ತು. ಸೆಕಲ್ಲಿನ ಮೇಲೆ ಬಂದು ಹೋಗುತ್ತಿದ್ದ ಸ್ಕೂಲಿನ ಮೇಷ್ಟ್ರು ಅಲ್ಲಿದ್ದ. ಅವನು ಮತ್ತೆ ಯಮುನಕ್ಕನ ಹೆಗಲಿನ ಮೇಲೆ ಕೈಹಾಕುತ್ತಾನೆಂದು ನನಗೆ ದಿಗಿಲಾಯಿತು. ಅವನು ಯಮುನಕ್ಕನನ್ನು ಕ್ರೂರವಾಗಿ ನೋಡಿ ಹೇಳಿದ:
“ಯಾಕೆ ಇಷ್ಟೊತ್ತು? ಎಷ್ಟು ಹೊತ್ತೂಂತ ನಾನು ಕಾದಿರಬೇಕು? ಕತ್ತಲಾದ ಕೂಡಲೇ ಬಾ ಅಂತ ಹೇಳಿರಲಿಲ್ಲವ?”
ಯಮುನಕ್ಕ ಮಾತಾಡಲಿಲ್ಲ. “ಏ ಪರ್ಬು” ಎಂದು ಕೂಗಿ ಅವನು ಯಮುನಕ್ಕನನ್ನು ಒಳಗೆ ಕರೆದುಕೊಂಡು ಹೋದ. ನಾನು ಹೊರಗೇ ಕೂತೆ.
ಅದು ಬ್ರಾಹ್ಮಣರ ಮನೆಯ ಹಾಗೆ ಕಾಣದ್ದರಿಂದ ನನಗೆ ಹೇಸಿಗೆಯಾಯಿತು. ಅದೇ ಮೊದಲಿನ ಸಾರಿ ನಾನು ಅಂತಹ ಮನೆಯಲ್ಲಿ ಹೋಗಿ ಕೂತಿದ್ದು. ಸ್ನಾನವಾದ ಮೇಲೆ ನಾನು ಶೂದ್ರರ ಹುಡುಗರ ಜೊತೆ ಮಾತನ್ನು ಸಹ ಆಡುತ್ತಿರಲಿಲ್ಲ. ನನಗೆ ಅಲ್ಲಿ ಕೂತಿರೋದಕ್ಕೆ ಒಂದು ಥರ ಗಾಬರಿಯಾಯಿತು. ಅಂಗಳದಲ್ಲಿ ಕೋಳಿಗೂಡಿತ್ತು. ಮತ್ತೆ ಮನೆಯ ಎದುರಿಗೇ ಸ್ನಾನದ ಹಂಡೆಯಿತ್ತು. ಜಗುಲಿಯ ಮೇಲೆ ನಿಂತು ಪರ್ಬು ಪಿಚಕ್ಕನೆ ಉಗುಳಿ ಹೋದ. ಅಲ್ಲಿ ಜುಟ್ಟಕಟ್ಟಿಕೊಂಡು ಅಂಗವಸ್ತ್ರ ಹೊದ್ದು ಅಂಗವಸ್ತ್ರ ಉಟ್ಟು ಕೂತಿದ್ದ ನನಗೆ, ಇಲ್ಲಿಗೆ ಯಾಕೆ ಬಂದೆ, ನಾನು ಎಲ್ಲಿ ಇದ್ದೇನೆ ಎಂದು ದುಃಖವಾಯಿತು. ಈ ಯಮುನಕ್ಕನ ದೆಸೆಯಿಂದ ಇಷ್ಟೆಲ್ಲ- ಅಪ್ಪಯ್ಯ ಬರಲಿ, ಹೇಳಿ ಮಾಡಿಸುತ್ತೇನೆ ಎಂದು ಸಿಟ್ಟು ಬಂತು. ಯಾರೋ ಅಂಗಳದಲ್ಲಿ ನಿಂತು, ‘ಪರ್ಬುಗಳೇ’ ಎಂದು ಕೂಗಿದ. ಆಮೇಲೆ ಚಾವಡಿಗೆ ಹತ್ತಿರ ಬಂದು ‘ಓ ಇದೇನು ಭಟ್ಟರು ಇಲ್ಲಿ’ ಎಂದ. ಮತ್ತೆ ಒಳಗಿನಿಂದ ದೀಪ ಹಿಡಿದು ಬಂದ ಪರ್ಬುವನ್ನು ನಾನು ಗುರ್ತಿಸಿದೆ. ಮೊದಲನೆಯ ಸಾರಿ ಮೋಟು-ಗೋಡೆಯ ಬಿರುಕಿನಿಂದ ಅವನನ್ನು ಕಂಡಿದ್ದೆ. ದೊಡ್ಡ ಮೀಸೆಯ ದೊಡ್ಡಗೆ ಬೆಳೆದ ಮನುಷ್ಯ. ಬರಿ ಚೆಡ್ಡಿಯೊಂದನ್ನು ಹಾಕಿಕೊಂಡು ಬರಿ ಮೈಯಲ್ಲಿ ಇದ್ದ. ಕತ್ತಿನ ಸುತ್ತ ಏನೋ ಕಟ್ಟಿಕೊಂಡಿದ್ದ. ಪರ್ಬು ಚಾವಡಿಯ ಮೇಲಿದ್ದ ಒಂದು ದೊಡ್ಡ ಮಡಿಕೆಯಿಂದ ಹುಳಿ ವಾಸನೆ ಬರುವುದೊಂದನ್ನು ಬಗ್ಗಿಸಿ ಅಂಗಳದಲ್ಲಿ ನಿಂತವನಿಗೆ ಕೊಟ್ಟ. ಒಳಗಿನಿಂದ ಒಂದು ಹೆಂಗಸು ಎಲೆಯ ಚೂರಿನ ಮೇಲೆ ಕೆಟ್ಟ ವಾಸನೆ ಬರುತ್ತಿದ್ದ ವಸ್ತುವನ್ನು ತಂದುಕೊಟ್ಟಳು. ಕುಡುಮಲ್ಲಿಗೆ ಪೇಟೆಗೆ ಕನ್ನಡಾ ಜಿಲ್ಲೆಯಿಂದ ಗಾಡಿಗಳಲ್ಲಿ ಬರುತ್ತಿದ್ದ ಈ ಹೇಸು ವಾಸನೆಯ ವಸ್ತು ಮೀನಿರಬಹುದು. ಬಂಗಡೆ ಮೀನು ಎಂದು ಅಸಹ್ಯಪಟ್ಟೆ. ಅಂಗಳದಲ್ಲಿ ಅವನು ತಿನ್ನುತ್ತ, ಕುಡಿಯುತ್ತ ಕೂತ, ಹಾಡಿಕೊಳ್ಳುತ್ತ ಅಂಗಳದಲ್ಲೆಲ್ಲ ವಾಲಾಡಿದ. ಕೂಡಲೆ ನನಗೆ ಪರ್ಬು ಅವನಿಗೆ ಬಗ್ಗಿಸಿಕೊಟ್ಟಿದ್ದು ಹೆಂಡವೆಂದು ತಿಳಿಯಿತು. ಅಂಗಳದಲ್ಲಿ ಕುಡಿದುಬಿಟ್ಟವ ನನ್ನ ಮೇಲೆಲ್ಲಿ ಬಂದು ಎರಗುತ್ತಾನೊ ಎಂದು ದಿಗಿಲಾಯಿತು. ಅವನು “ಭಟ್ಟರೇ, ಏ ಭಟ್ಟರೇ, ಪೂಜೆ-ಭಟ್ಟರೇ” ಎಂದು ಹಿ ಹಿ ಹಿ ಎಂದು ನಕ್ಕ. ನಾನು ಎದ್ದು ನಿಂತೆ. ಒಳಗೆ ಓಡಿಹೋದೆ.
ಅಲ್ಲಿ ಯಮುನಕ್ಕನನ್ನು ಬೆತ್ತಲೆಯಾಗಿ ಮಲಗಿಸಿದ್ದರು. ಉಚ್ಚೆ ಹೊಯ್ಯುವ ಜಾಗವನ್ನು ಮಾತ್ರ ಮುಚ್ಚಿದ್ದರು. ಹೊಟ್ಟೆಯ ಮೇಲೆ ಸಗಣಿಯನ್ನು ಮೆತ್ತಿ ಮೇಲೊಂದು ಹಣತೆಯಲ್ಲಿ ದೀಪವನ್ನು ಇಟ್ಟಿದ್ದರು. ನಾನು ನೋಡುತ್ತ ನಿಂತಂತೆ ಪರ್ಬು ಒಂದು ಬೋಗುಣಿಯನ್ನು ಅದರ ಮೇಲೆ ನಿಧಾನಕ್ಕೆ ಮುಚ್ಚಿ, “ಹಾಗೇ ಬಿಡಿ, ಎಳೆದುಕೊಳ್ಳಲಿ” ಎಂದ. ಯಮುನಕ್ಕನ ಸುತ್ತ ಪರ್ಬು ಮತ್ತು ಒಂದು ಹೆಂಗಸು ಮತ್ತು ‘ಅವನು’ ಇದ್ದರು. ಕೈಗಳನ್ನು ಚಾಪೆಯ ಮೇಲೆ ಚೆಲ್ಲಿ, ಕಣ್ಣು ಮುಚ್ಚಿ ಅಂಗಾತನೆ ಮಲಗಿದ್ದ ಯಮುನಕ್ಕನನ್ನು ನೋಡಿ ನನಗೆ ಭಯವಾಯಿತು. ಅವರು ಬೆತ್ತಲೆಯಿದ್ದಿದ್ದರಿಂದ ನಾನು ಹೊದ್ದ ಅಂಗವಸ್ತ್ರವನ್ನು ಹತ್ತಿರ ಹೋಗಿ ಅವರ ಎದೆಯ ಮೇಲೆ ಹಾಕಿದೆ. ಪರ್ಬು ನನ್ನನ್ನು ದೂಡಿದ. ನಾನು ಅಳುತ್ತ ಹೇಳಿದೆ:
“ಯಮುನಕ್ಕ ಬನ್ನಿ, ಮನೆಗೆ ಹೋಗೋಣ ಬನ್ನಿ. ನಿದ್ದೆ ಮಾಡಬೇಕು…. ನನಗೆ ಹೆದರಿಕೆ….ಬನ್ನಿ.”
ಯಮುನಕ್ಕ ಕಣ್ಣು ಬಿಡಲಿಲ್ಲ. ‘ಅವನು’ ಅವನು ನನ್ನನ್ನು ಎಳೆದುಕೊಂಡು ಹೋದ. ಆ ಹೆಂಗಸು ಕವಳ ತುಂಬಿದ ಬಾಯಲ್ಲಿ ಪರ್ಬುಗೆ ಏನೋ ಕೊಂಕಣಿಯಲ್ಲಿ ಹೇಳಿದಳು. ಮತ್ತೆ ಹೊರಗೆ ಹೋಗಿ ಉಗಿದು ಬಂದಳು. ಅವಳಿಗೆ ಹಣೆಯ ಮೇಲೆ ಕುಂಕುಮವಿರಲಿಲ್ಲ. ಆದರೆ ಕೆದರಿದ ಕೂದಲು ತಲೆಯ ತುಂಬ ಇತ್ತು.
ಪರ್ಬು ‘ಅವನ’ನ್ನು ಹೊರಗೆ ಕರೆದುಕೊಂಡು ಹೋದ. ನಾನೂ ಹೊರಗೆ ಹೋದೆ. “ನಾನೆಲ್ಲ ಮಾಡ್ತೇನೆ. ಇನ್ನು ನೀವು ಹೋಗಿ” ಎಂದು ಪರ್ಬು ಹೇಳಿದ. ‘ಅವನು’ ಜೇಬಿನಿಂದ ಒಂದಷ್ಟು ದುಡ್ಡನ್ನು ತೆಗೆದುಕೊಡುತ್ತ,
“ನಾನು ಈಗಲೇ ಕುಡುಮಲ್ಲಿಗೆಗೆ ಸೆಕಸೈಕಲ್ ಮೇಲೆ ಹೋಗಬೇಕು. ಅಲ್ಲಿಂದ ಮುಂದೆ ಬ ಬಸ್ ಹತ್ತಿ ಹೊರಟು ಹೋಗ್ತೇನೆ” ಎಂದು ಕಿವಿಯಲ್ಲಿ ಇನ್ನೇನೊ ಹೇಳಿದ. ಅವನು ಕುಡುಮಲ್ಲಿಗೆ ಎಂದ ಕೂಡಲೆ ನನಗೆ ನನ್ನ ಮನೆಯ ನೆನಪಾಗಿ ನನಗೂ ಅಲ್ಲಿಗೆ ಹೋಗಬೇಕೆಂದು ಅಳು ಬಂತು.
‘ಅವನು’ ಸೆಕಸೈಕಲ್ ಹಿಡಿದು ಹೊರಟವನು, ‘ಗುಟ್ಟಾಗಿರಲಿ, ಮತ್ತೆ’ ಎಂದು ಪರ್ಬುವಿಗೆ ಹೇಳಿದ. ‘ನಾನೂ ಬರುತ್ತೇನೆ’ ಎಂದು ನಾನು ಕೂಗಿದೆ. ‘ಅವನು’ ನನ್ನ ಮಾತನ್ನು ಗಮನಿಸದೆ ಹೊರಟು ಹೋದ.
ಅಂಗಳದಲ್ಲಿ ಕುಡಿಯುತ್ತಿದ್ದವನು ಮತ್ತೆ ನಗಲು ಹಾಡಲು ಪ್ರಾರಂಭಿಸಿದ. ಒಳಗಿನಿಂದ ಯಮುನಕ್ಕ ನರಳುತ್ತಿದ್ದರು. ‘ಆಹಾ ಭಟ್ಟರೇ’ ಎಂದು ಕುಡಿದವನು ಕಿರುಚುತ್ತ ಹಾಡಿದ. ಪರ್ಬು ಅವನನ್ನು ಗದರಿಸಿ, ಅಳುತ್ತಿದ್ದ ನನಗೆ ಸುಮ್ಮನಿರು ಎಂದ. ಒಳಗೆ ನರಳುತ್ತಿದ್ದ ಯಮುನಕ್ಕನಿಗೆ “ಯಮುನಕ್ಕಾ ನಾನು ಹೋಗಬೇಕು” ಎಂದು ಕೂಗಿ ಹೇಳಿದೆ. ಪರ್ಬು ನನಗೆ ಗದರಿಸಿದ.
ಇನ್ನೊಂದು ಧ್ವನಿ ಅಂಗಳದಲ್ಲಿ ಕೇಳಿಸಿತು. ಆ ಧ್ವನಿ ಕಟೀರನದ್ದೆಂದು ಗೊತ್ತಾಗಿ ನನಗೆ ಜೀವ ಬಂದ ಹಾಗಾಯಿತು. “ಏ ಕಟೀರ” ಎಂದು ಕೂಗಿಕೊಂಡೆ. ಪರ್ಬು ಮತ್ತೆ ನನಗೆ ಗದರಿಸಿ ಹೊಡೆಯಲು ಬರುವವನಂತೆ ಕೈ ತೋರಿಸಿದ. ನಾನು ಸುಮ್ಮನೇ ಕೂತೆ. ಆಮೇಲೆ ಸ್ವಲ್ಪ ಹೊತ್ತಿನ ಮೇಲೆ ಕಟೀರನೂ ಹಾಡಲು, ತನ್ನಷ್ಟಕ್ಕೆ ಗಟ್ಟಿಯಾಗಿ ಹರಟಿಕೊಳ್ಳಲು ಪ್ರಾರಂಭಿಸಿದ. ‘ಏ ಕಟೀರ ’ ಎಂದು ಮತ್ತೆ ಕೂಗಿದೆ. ಕಟೀರ ‘ಓ’ ಎಂದು ಹತ್ತಿರ ಬಂದು, ‘ಎಲ್ಲಿ ಇನ್ನೊಂದಷ್ಟು ಹಾಕಿ’ ಎಂದ. ‘ಏ ಕಟೀರ ನಾನು ಕಣೊ’ ಎಂದು ಹೇಳಿದೆ. ಅವನು ಅದಕ್ಕೆ “ಯಾರೋ!” ಎನ್ನುತ್ತ ವಾಲಾಡಿಕೊಂಡು, ತೂರಾಡಿಕೊಂಡು ಹೋದ. ಕಟೀರನೂ ಹೀಗೆ ಮಾಡಿದನೆಂದು ನನಗೆ ಕಸಿವಿಸಿಯಾಯಿತು. ಎಷ್ಟು ಕರೆದು ಹೇಳಿದರೂ ಅವನಿಗೆ ನನ್ನ ಗುರುತೇ ಸಿಗಲಿಲ್ಲ.
ಒಳಗಿನಿಂದ ಯಮುನಕ್ಕ ‘ಅಯ್ಯೋ ಅಯ್ಯೋ ಅಯ್ಯೊ’ ಎಂದು ಕೂಗಿದರು. ಅಮ್ಮಾ ಎಂದು ಕೂಗಿದರು. ನಾನು ಹೊರಗಿನಿಂದ “ಯಮುನಕ್ಕಾ ಯಮುನಕ್ಕಾ, ಇಲ್ಲಿ ನಾನಿದ್ದೇನೆ, ಬನ್ನಿ, ಹೋಗೋಣ” ಎಂದು ಕಿರುಚುತ್ತ ಅತ್ತೆ. ಪರ್ಬು ಬಂದು “ಮಲಗಿಕೊ, ಬೆಳಗ್ಗೆ ಎದ್ದು ಹೋದರೆ ಸರಿ” ಎಂದು ಒಂದು ಬಟ್ಟಲನ್ನು ತಂದು ನನ್ನ ಎದುರು ಇಟ್ಟು ‘ಕುಡಿ’ ಎಂದ. ನಾನು ‘ಊಹೂ’ ಎಂದೆ. “ಇದು ಹೆಂಡವಲ್ಲ, ಹಾಲು” ಎಂದು ಅವನು ನಕ್ಕ. ನಾನು ಒಪ್ಪಲಿಲ್ಲ. ಎಣ್ಣಿ ಎಣ್ಣಿ ಅಳುತ್ತ ಕೂತೆ.
ಮತ್ತೆ ನನಗೆ ಎಚ್ಚರವಾದಾಗ ಬೆಳಿಗ್ಗೆ. ಎಷ್ಟು ಬೆಳಗ್ಗೆಯೊ, ನಾನೆಲ್ಲಿ ಇದ್ದೇನೊ, ಇಲ್ಲಿಗೆ ಹೇಗೆ ಬಂದೆನೊ ಎಂದು ಗಾಬರಿಯಾಯಿತು. ನಡೆದದ್ದನ್ನೆಲ್ಲ ನೆನಸಿಕೊಳ್ಳಲು ಪ್ರಯತ್ನಿಸಿದೆ. ಯಾವತ್ತೊ ಉಪನಯನವಾದ ಮೇಲೆ ಕುಡುಮಲ್ಲಿಗೆಯಿಂದ ಒಂದು ಎತ್ತಿನ ಗಾಡಿಯಲ್ಲಿ ಅಮ್ಮ ಬೆಳ್ಳಂಬೆಳಗಿನ ಹೊತ್ತು… ಉಡುಪರ ಮನೆಗೆ ಮಂತ್ರ ಕಲಿಯಲೆಂದು ಕಳಿಸಿದ್ದು ಮಾತ್ರ ನೆನಪಿಗೆ ಬರುತ್ತಿತ್ತು. ಗಾಡಿಯಲ್ಲಿ ಹೊರಟವನು ಮತ್ತೆ ಇಲ್ಲಿಗೆ ಬಂದುಬಿಟ್ಟೆನೆ ಎಂದು ಅಳು ಬಂದಿತು. ಎಲ್ಲಿ ನೋಡಿದರೂ ಕೋಳಿಗಳು ಓಡಾಡುತ್ತಿದ್ದವು. ಹೆಂಡದ ಹುಳಿ ವಾಸನೆ ಬರುತ್ತಿತ್ತು. ಕಣ್ಣುಜ್ಜಿಕೊಳ್ಳುತ್ತ ಚಾವಡಿ ಮೇಲೆ ಕೂತಿದ್ದ ನನ್ನ ಎದುರು ನನ್ನ ವಾರಿಗೆಯ ಒಬ್ಬ ಹುಡುಗನಿದ್ದ. ಅವನು ಕ್ರಾಪು ಬಿಡಿಸಿ, ಕೊಳಕಾದ ಅಂಗಿ ಚಡ್ಡಿಯನ್ನು ಹಾಕಿಕೊಂಡಿದ್ದ. ಅಂಗವಸ್ತ್ರವನ್ನು ಉಟ್ಟು ಜುಟ್ಟು ಕಟ್ಟಿ ಕೂತಿದ್ದ ನನ್ನನ್ನು ಕಂಡು,
“ಭಟ್ಟ ಭಟ್ಟ ಕೋಳಿ ಸುಟ್ಟ – ನೆರೆಮನೆಗೆಲ್ಲ ನಾತ ಕೊಟ್ಟ” ಎಂದು ಗೇಲಿ ಮಾಡಿದ. ನಾನು ತಬ್ಬಿಬ್ಬಾಗಿ ಕೂತೆ.
ಹಿಂದಿನ ರಾತ್ರೆ ನಾನು ನೋಡಿದ ಹೆಂಗಸು ಅವನಿಗೆ ಕೊಂಕಣಿಯಲ್ಲಿ ಏನೋ ಹೇಳಿದರು. ಆ ಹುಡುಗ ಅಂಗಳಕ್ಕಿಳಿದು ಒಂದು ಕೋಳಿಯನ್ನು ಅಟ್ಟುತ್ತ ಓಡಿದ. ಕ್ಕೊ ಕ್ಕೊ ಕ್ಕೊ ಎನ್ನುತ್ತ ಕೋಳಿ ಸಂದಿ – ಮೂಲೆಗಳಲ್ಲಿ ಓಡುತ್ತ, ರೆಕ್ಕೆ ಬಡಿಯುತ್ತ ಅವನಿಂದ ತಪ್ಪಿಸಿಕೊಳ್ಳುತ್ತಿತ್ತು. ಕೊನೆಗೆ ಅವನು ಅದನ್ನು ಹಿಡಿದು ತಳಕಾ-ಪಳಕ ಎತ್ತಿಕೊಂಡ. ಆದರೂ ಅದು ಒದ್ದಾಡಿತು. ಕೊನೆಗೆ ತಲೆಯನ್ನು ಕೆಳಕ್ಕೆ ಹಾಕಿ ‘ಕೊ ಕೊ’ ಎನ್ನತೊಡಗಿತು. ಅದನ್ನು ಅವನು ಒಳಗೆ ತೆಗೆದುಕೊಂಡು ಹೋದ. ಸ್ವಲ್ಪ ಹೊತ್ತಿನ ಮೇಲೆ ಮತ್ತೆ ಕೋಳಿ ಬಡಿದುಕೊಳ್ಳುವ, ಜೀವ ಹೋಗುವ ಹಾಗೆ ಕೂಗುತ್ತ ಒದ್ದಾಡುವ ಶಬ್ದ ಕೇಳಿಸಿತು. ಮತ್ತೆ ಎಲ್ಲ ನಿಶ್ಯಬ್ದವಾಯಿತು. ನಾನು ಗಡಗಡ ನಡುಗಿದೆ.
“ಯಮುನಕ್ಕಾ ಯಮುನಕ್ಕಾ” ಎಂದು ಕೂಗುತ್ತ ಅತ್ತೆ, ‘ಮನೆಗೆ ಹೋಗಬೇಕು’ ಎಂದು ಒಂದೇ ಮಾತನ್ನು ಹೇಳುತ್ತ ಕೂತೆ.
ಯಮುನಕ್ಕಾ ಗೋಡೆಯನ್ನು ಹಿಡಿದು ತಡವುತ್ತ ಬಂದರು. ಅವರ ಮುಖ ಬಿಳಚಿಗೊಂಡಿತ್ತು. ನಾನು ಅವರನ್ನು ಹೋಗಿ ತಬ್ಬಿಕೊಂಡೆ. ಅವರು ಅಳಲು ಪ್ರಾರಂಭಿಸಿದರು. ಪರ್ಬು ಅವರಿಗೆ,
“ಸ್ವಲ್ಪ ಹೊತ್ತು ಇದ್ದು ಸುಧಾರಿಸಿಕೊಂಡು ಹೋಗಿ” ಎಂದ. ಆದರೆ ಯಮುನಕ್ಕ “ಹೋಗೋಣ ಬಾ” ಎಂದು ಕೈ ಹಿಡಿದರು.
ಆ ಹೊತ್ತಿಗೆ ಸರಿಯಾಗಿ ಅಲ್ಲಿಗೊಬ್ಬ ಉದ್ದ ಅಂಗಿ ಹಾಕಿಕೊಂಡು ಗಡ್ಡಬಿಟ್ಟಿದ್ದ ಮನುಷ್ಯ ಬಂದ. ಅವನಿಗೆ ಪರ್ಬು ಏನೋ ಕೊಂಕಣಿಯಲ್ಲಿ ಹೇಳಿ ಒಳಗೆ ಕರೆದುಕೊಂಡು ಹೋದ. ನಾವು ಮೆಲ್ಲಗೆ ಅಂಗಳಕ್ಕೆ ಇಳಿದೆವು. ಆ ಮನುಷ್ಯ ಒಳಗಿನಿಂದ ಏನೋ ಕೆಂಪನೆಯ ತುಂಡುಗಳನ್ನು ಎಲೆಯಲ್ಲಿ ಕಟ್ಟಿಕೊಂಡು ಹೊರಗೆ ಬಂದ. ಎಲೆಯಿಂದ ಹೊರಗೆ ಕಾಣಿಸುತ್ತಿದ್ದ ಕೆಂಪನೆಯ ತುಂಡುಗಳನ್ನು ನೋಡಿ ನನಗೆ ಮತ್ತು ಯಮುನಕ್ಕನಿಗೆ ವಾಂತಿ ಬರುವ ಹಾಗಾಯಿತು. ಇಬ್ಬರೂ ಮುಖವನ್ನು ತಿರುಗಿಸಿದೆವು.
ಹೊರಗೆ ಬಂದ ಅವನು ಯಮುನಕ್ಕನಿಗೆ ‘ಸ್ವಲ್ಪ ನಿಲ್ಲಿ’ ಎಂದು ಹತ್ತಿರ ಬಂದ. ಬಿಡಿಸಿ ಬಿಡಿಸಿ ಮಾತಾಡಿದ:
“ಪಾಪಿಗಳನ್ನು ದೇವರು ರಕ್ಷಿಸುತ್ತಾನೆ. ನೀವು ಹೆದರುವುದು ಬೇಡ”.
ಯಮುನಕ್ಕ ಹೆದರಿ ನಡೆಯತೊಡಗಿದರು. ಅವನು ನಮ್ಮ ಹಿಂದಕ್ಕೆ ಬಂದು ಹೇಳಿದ:
“ಭಯಪಡಬೇಡಿ. ನಿಮ್ಮ ಅಗ್ರಹಾರದ ಜನ ನಿಮ್ಮನ್ನು ದೂರ ಹಾಕುತ್ತಾರೆ. ಆದರೆ ನಮ್ಮ ಕರ್ತನನ್ನು ನೀವು ನಂಬಿದರೆ ಅವನು ನಿಮ್ಮನ್ನು ಕಾಪಾಡುತ್ತಾನೆ . ಇಗರ್ಜಿಗೆ ನನ್ನ ಜೊತೆ ಬನ್ನಿ. ಅಲ್ಲಿ ನಿಮಗೆ ರಕ್ಷಣೆ ಕೊಡುತ್ತೇವೆ.”
ಯಮುನಕ್ಕ ಎಲ್ಲಿ ಅವನ ಜೊತೆಯೂ ಹೋಗಿಬಿಡುತ್ತಾರೊ ಎಂದು ನಾನು ಕಂಗಾಲಾದೆ. ಆದರೆ ಯಮುನಕ್ಕ ಗಡ್ಡದವನನ್ನು ಭಯದಿಂದ ನೋಡಿ, ತಲೆತುಂಬ ಸೆರಗು ಹೊದ್ದು ಮಾತಾಡದೆ ನನ್ನ ಜೊತೆ ನಡೆದರು. ಅವನು ಮತ್ತೆ ಹೇಳಿದ:
“ನಿಮ್ಮ ಕಲ್ಲಿನ ದೇವರಿಗೆ ಕಲ್ಲಿನ ಹೃದಯ. ಆದರೆ ನಮ್ಮ ದೇವರು ಏಸುವನ್ನು ನಂಬಿದವರನ್ನು ಕಾಪಾಡುತ್ತಾನೆ. ನಾನು ಹೇಳಿದ ಹಾಗೆ ಇಗರ್ಜಿಗೆ ಬನ್ನಿ.”
ಯಮುನಕ್ಕ ಮತ್ತು ನಾನು ಅವಸರವಾಗಿ ನಡೆದು ಬಿಟ್ಟೆವು. ಪರ್ಬು ಮತ್ತು ಅವನು ಕೊಂಕಣಿಯಲ್ಲಿ ಮಾತಾಡಿಕೊಳ್ಳುತ್ತಿದ್ದುದು ದೂರದಿಂದ ಕೇಳಿಸಿತು.
ನನಗೆ ತಿರುಗಿ ಮನೆಗೆ ಹೋಗುತ್ತಿದ್ದೇವೆಂದು ತುಂಬ ಸಂತೋಷವಾಗಿ ಹುಮ್ಮಸ್ಸು ಬಂದಿತು. ಯಮುನಕ್ಕ ಏದುತ್ತ ನರಳುತ್ತ ನಡೆದರು. ಅವರ ಮಾಸಿದ ಕೆಂಪು ಸೀರೆಯ ಮೇಲೆ ರಕ್ತ ಕಾಣಿಸಿಕೊಂಡಿತೆಂದು ನನಗೆ ಭಯವಾಯಿತು. ‘ಯಮುನಕ್ಕ ನಿಮ್ಮ ಹಿಂದೆ ಸೀರೆಯ ಮೇಲೆಲ್ಲ ರಕ್ತ” ಎಂದೆ. ಯಮುನಕ್ಕ ಕುಸಿದು ಕೂತುಬಿಟ್ಟರು. ನಾನು ಅವರ ಜೊತೆ ಕೂತು ಅವರನ್ನು ಹಿಡಿದುಕೊಂಡೆ. ಮುಚ್ಚಿದ್ದ ಕಣ್ಣನ್ನು ಅವರು ಬಿಟ್ಟರು.
“ಏಳಿ ಯಮುನಕ್ಕ ಮನೆಗೆ ಹೋಗೋಣ” ಎಂದೆ. ಅವರು ನಿಟ್ಟುಸಿರಿಟ್ಟು,
“ನನಗೆ ಕೂಡುತ್ತಿಲ್ಲಪ್ಪ. ನೀನು ಹೋಗು” ಎಂದರು.
“ಏಳಿ, ಏಳಿ, ಯಮುನಕ್ಕ” ಎಂದು ಕೈ ಹಿಡಿದು ಎಳೆಯುತ್ತ ಚಂಡಿ ಮಾಡಿದೆ.
“ನನಗೆ ದಾಹವಾಗುತ್ತಿದೆಯಪ್ಪ. ಬರಲಾರೆ. ನೀನು ಹೋಗು” ಎಂದರು.
“ನೀವು ಜೊತೆಗೆ ಬರದ ಹೊರ್ತು ನಾನು ಹೋಗೋದಿಲ್ಲ” ಎಂದೆ.
“ಮನೆಗೆ ಇನ್ನೆಷ್ಟು ದೂರವಿದೆಯಪ್ಪ” ಎಂದರು. ನನಗೆ ದೂರದಿಂದ ಅಗ್ರಹಾರದ ಬ್ರಾಹ್ಮಣರ ಜೊತೆ ಶಾಸ್ತ್ರಿ, ರಂಗಣ್ಣ ಬರೋದು ಕಾಣಿಸಿತು.
“ಯಮುನಕ್ಕ – ಅವರೆಲ್ಲ ಬರುತ್ತಿದ್ದಾರೆ. ಯಮುನಕ್ಕ ನಾವು ಫಕ್ಕನೆ ಹೋಗಿಬಿಡೋಣ ಯಮುನಕ್ಕ. ನಿಮ್ಮನ್ನು ನಾನು ಮನೆಗೆ ಕರಕೊಂಡು ಹೋಗ್ತೀನಿ ಯಮುನಕ್ಕ” ಎಂದೆ. ನನಗೆ ಅಳು ಬಂತು. ಯಮುನಕ್ಕ ಏಳಲಿಲ್ಲ. ನಿಧಾನವಾಗಿ ಉಸಿರುಬಿಡುತ್ತ ಮಾತಾಡಿದರು :
“ಬಂದರೆ ಬರಲಿ ಪುಟ್ಟ. ನನಗೆ ಎದ್ದು ನಡೆಯಲು ಕೂಡೋದಿಲ್ಲ. ಯಾರು ಬೇಕಾದರೂ ಬಂದು ನೋಡಲಿ. ನಾನು ಇಲ್ಲೇ…”
ನಾನು ಯಮುನಕ್ಕನ ಮೈ ಅಲುಗಿಸುತ್ತ ಮಾತಾಡಿಸಿದೆ. ‘ನನಗೆ ಹೋಗಬೇಕೆ’ಂದು ಹಠ ಮಾಡಿದೆ. ಯಮುನಕ್ಕ ನನ್ನನ್ನು ತಬ್ಬಿಕೊಂಡು ಬೆನ್ನಿನ ಮೇಲೆ ಕೈಯಾಡಿಸಿದರು.
ಅವರೆಲ್ಲ ಬಂದು ಸುತ್ತುಗಟ್ಟಿ ನಿಂತರು. ನನ್ನನ್ನು ಶಾಸ್ತ್ರಿ ಎಳೆದ. ನಾನು ಅವನಿಗೆ ಹೊಡೆದು ಅವನ ಕೈಯನ್ನು ಬಲವಾಗಿ ಕಚ್ಚಿ ಅಳತೊಡಗಿದೆ. ‘ಯಮುನಕ್ಕ, ಯಮುನಕ್ಕ’ ಎಂದೆ. ಯಮುನಕ್ಕ ಎತ್ತಲೋ ದೃಷ್ಟಿಯನ್ನು ಹರಿಸಿ ಯಾರ ಕಡೆಗೂ ನೋಡದೆ ಕೂತಿದ್ದರು. ಅವರ ಕಣ್ಣಿನ ತುಂಬ ನೀರು ತುಂಬಿ ಕೆನ್ನೆಯ ಮೇಲೆ ಹರಿಯುತ್ತಿತ್ತು.
*
*
*
ಅಪ್ಪಯ್ಯ ಬಂದು ನನ್ನನ್ನು ಕರೆದುಕೊಂಡು ಹೋದರೆಂದು ನನಗೆ ತುಂಬ ಖುಷಿಯಾಯಿತು. ಮನಗೆ ಹೋದ ಕೂಡಲೆ ನನಗೆ ಬೇರೆ ಜನಿವಾರ ಹಾಕಿಸಿ ಪಂಚಗವ್ಯ ಮಾಡಿಸಿ ಶುದ್ಧ ಮಾಡಿದರು. ಅಮ್ಮ ಕೇಳಿದ್ದಕ್ಕೆ ಅಲ್ಲಿ ನಡೆದದ್ದನ್ನೆಲ್ಲ ಹೇಳಿದೆ. “ಹಾಳು ಮುಂಡೆ ಯಾಕೆ ಬಸುರಿಯಾಗಬೇಕಿತ್ತು” ಎಂದು ಅಮ್ಮ ಹೇಳಿದಳು. ಅಮ್ಮ ಬಸುರಿಯಾಗಲ್ಲವೆ: ಯಮುನಕ್ಕನೂ ಯಾಕೆ ಬಸುರಾಗಬಾರದು ; ಇಷ್ಟೆಲ್ಲ ಯಾಕೆ ಅವಾಂತರ ಎಂದು ನಾನು ಆಶ್ಚರ್ಯಪಟ್ಟೆ. ಸ್ವಲ್ಪ ದಿನಗಳಾದ ಮೇಲೆ ಯಮುನಕ್ಕನಿಗೆ ಜೀವವಿದ್ದಂತೆಯೇ ಉಡುಪರು ಶ್ರಾದ್ಧ ಮಾಡಿ ಜಾತಿಯಿಂದ ಹೊರಗೆ ಹಾಕಿದರೆಂದು ಸುದ್ದಿ ಬಂತು. ಅಪ್ಪಯ್ಯ ಅಮ್ಮ, ‘ಉಡುಪರು ಎಷ್ಟು ಒಳ್ಳೆಯವರೆಂದು ಹೊಗಳಿ, ಯಮುನಕ್ಕನನ್ನು ‘ನೀತಿಗೆಟ್ಟವಳೆಂದು’ ಬೈದರು. ಇನ್ನೊಂದು ದಿನ ಉಡುಪರಿಗೆ ಮದುವೆಯೆಂದು ನಮಗೆ ಅಕ್ಷತೆ ಬಂತು. ಅಪ್ಪಯ್ಯನಿಗಿಂತ ಮುದುಕರಾದ ಉಡುಪರು ಒಂದು ಪುಟ್ಟ ಹುಡುಗಿಯ ಜೊತೆ ಹಸೆಮಣೆಯ ಮೇಲೆ ಕೂತು ಆರತಿ ಎತ್ತಿಸಿಕೊಳ್ಳುತ್ತಾರೆಂದು ಯೋಚಿಸಿ, ನಾನು ‘ಥ’ ಎಂದೆ. ಅಪ್ಪಯ್ಯ ನನಗೆ “ಯಾಕೋ” ಎಂದರು. “ಇವಳು ನೀತಿಗೆಟ್ಟ ಮೇಲೆ ಉಡುಪರಿಗೆ ಸಂಸಾರ ನಡೆಯೋದು ಬೇಡವೆ. ಬೇಯಿಸಿ ಹಾಕಲೊಂದು ಜನ ಬೇಡವೆ. ಅಂತೂ ಕಾಲ ಕೆಟ್ಟಿತು” – ಎಂದು ಅಮ್ಮ ಹೇಳಿದಳು.
*****
೩೦-೩-೧೯೬೨
ಕೀ ಇನ್ ದೋಷ ತಿದ್ದಿದವರು: ಶ್ರೀಕಾಂತ ಮಿಶ್ರಿಕೋಟಿ
೦೮-೧೨-೨೦೦೫
ಪೂರಕ ಓದು:
ಘಟಶ್ರಾದ್ಧ ಸಿನಿಮಾ ಬಗೆಗೆ ಅನಂತಮೂರ್ತಿಯವರು ಬರೆದಿರುವ ಲೇಖನ