‘ಹಾರ್ಟ್‌ಬೀಟ್‌’ ಮತ್ತು ‘ಪ್ರೆಸ್ ಮೀಟ್’

ಬ್ಯೂಟಿಫುಲ್ ಆದ ಬೊಂಬಾಟ್ ಫಿಗರ್ ಬಂದು ಸೊಂಟ ಕುಲುಕಿಸುತ್ತ ಕಾಲೇಜ್ ಕ್ಯಾಂಪಸ್ ಎಂಟರ್ ಆದ ಮರುಘಳಿಗೆ ‘ಹಾರ್ಟ್‌ಬೀಟ್’ ಆರಂಭವಾಗಿ ‘ಡೌ’ ಹಾಕಿ ‘ಲೌ’ ಮಾಡಲು ಅದು ಫಸ್ಟ್‌ಸ್ಟೆಪ್ ಎನಿಸುತ್ತದೆ ಕೆಲವರಿಗೆ. ಆಗ ಪಡ್ಡೆ ಹುಡುಗರಿಂದ ರ್ಯಗಿಂಗು, ಬೆಳಿಗ್ಗೆ ಅವಳ ಹಿಂದೆ ಜಾಗಿಂಗು, ನಂತರ ಫೈಟಿಂಗು-ಕಡೆಗೆ ರೋಮಿಯೋ ಜ್ಯೂಲಿಯಟ್‌ಗಳಾಗ ಬಯಸಿದ ಯುವ ಪ್ರೇಮಿಗಳ ಕಥೆ ಒಂದೊಂದು ರೀತಿ ಎಂಡಿಂಗು.

ಹುಡುಗಿಯ ಹೃದಯ ತಾನೊಪ್ಪಿದ ಪ್ರೇಮಿಗಾಗಿ ಹಾರ್ಟ್‌ ಬೀಟ್ ಮಾಡುತ್ತಿದ್ದರೆ, ನೂರಾರು ಪ್ರೇಮಿಗಳ ಹೃದಯ ಆಕೆಗಾಗಿ ‘ಹಾರ್ಟ್‌ಬೀಟ್’ ಮಾಡುತ್ತಿರುತ್ತವೆ ಕಾಲೇಜಿನಂಗಳದಲ್ಲಿ. ಆದರೆ ಚಿತ್ರ ನಿರ್ಮಾಪಕ, ನಿರ್ದೆಶಕ, ನಟ-ನಟಿಯರಿಗೆ ಮೊದಲ ಪ್ರೆಸ್‌ಮೀಟ್ ಎಂದಾಗ ‘ಹಾರ್ಟ್‌ಬೀಟ್’ ಕಾಮನ್. ಮೊಂಡು ಬಿದ್ದ ರಾಜಕಾರಣಿಗಳಿಗೆ ಪುಡಾರಿಗಳಿಗೆ ‘ಹಾರ್ಟ್‌’ ಎನ್ನುವುದೇ ಇಲ್ಲದಿರುವುದರಿಂದ ‘ಬೀಟ್’ ಸಾಧ್ಯವೇ ಇಲ್ಲ. ಏನಕೇನ ಪ್ರಕಾರೇಣ ಮೀಡಿಯಾದವರನ್ನು ಮಡಿಚಿ ತಮ್ಮ ಜೇಬಲ್ಲಿ ಇಟ್ಟುಕೊಳ್ಳುವುದು ಹೇಗೆಂದು ಅವರಿಗೆ ಗೊತ್ತು. ಎಲ್ಲ ಪತ್ರಿಕೆಗಳನ್ನು ತಮ್ಮ ತುತ್ತೂರಿ ಮಾಡಿಕೊಳ್ಳುವ ಜಾಣರವರು.

ಚಿತ್ರರಂಗದಲ್ಲೂ ಈಗ ಕನ್ನಡ ಚಿತ್ರಕ್ಕೆ ಇಂಗ್ಲೀಷ್ ಹೆಸರಿಡುವ ‘ಜಾಣರು’ ಹೆಚ್ಚುತ್ತಿದ್ದಾರೆ. ಆದರೆ ಇಂಗ್ಲೀಷ್ ಟೈಟಲ್‌ನ ‘ಸ್ಪೆಲಿಂಗ್’ ಏನು ಎಂದು ಕೇಳುವಷ್ಟು ಬಿಡುವು ಯಾರಿಗೂ ಇಲ್ಲ. ಹೀಗಾಗಿಯೆ ಕಲರ್ಸ್, ಲವ್ಯೂ, ಕ್ರೇಜಿ ಬಾಯ್ಸ್, ಕ್ರೇಜಿ ಗರ್ಲ್ಸ್, ಪಂಜಾಬಿ ಹೌಸ್, ಹಾರ್ಟ್‌ಬೀಟ್ ಮುಂತಾದ ಚಿತ್ರಗಳು ಮುಂದೆ ತೆರೆಯ ಮೇಲೆ ರಾರಾಜಿಸಲಿವೆ. ಹೊಸಾ ಕಾಂಪ್ಲೆಕ್ಸ್ ಕಟ್ಟಿಸುವ ಸಂಭ್ರಮದಲ್ಲಿರುವ ‘ಫಿಲಂ ಚೇಂಬರ್ಸ್‌’ಗೆ ಚಿತ್ರದ ಗುಣಮಟ್ಟ ಇಂಗ್ಲೀಷ್ ಚಿತ್ರದಂತೆ ಇರದಿದ್ದರೂ ಟೈಟಲ್ ಆದರೂ ಇಂಗ್ಲೀಷಿನಲ್ಲಿದೆಯಲ್ಲ ಎಂಬ ಸಮಾಧಾನ.

ಇಂಥ ಕಾರಣಕ್ಕೆ ಟಿ.ಪಿ. ಕೈಲಾಸಂ ಯಾವುದೋ ಕಾಲದಲ್ಲಿ ಜನರ ನಡೆ ನುಡಿ ಗೇಲಿಮಾಡಲು ಆಂಗ್ಲ ಕನ್ನಡ ಬಳಸಿದರು. ಆ ಮೂಲಕ ಅನೇಕರ ಸ್ವಭಾವಕ್ಕೆ ಕನ್ನಡಿ ಹಿಡಿದು ‘ಹೋಂರೂಲಿ’ನಲ್ಲಿ ‘ಹೊರಗೆ ಹುಲಿ ಮನೇಲಿಲಿ’ ಎಂದರು. ಮೈದಾನದ ಹೆಬ್ಬುಲಿಯನ್ನು ‘ಮನೆಯಲ್ಲಿ ಮೂಗಿಲಿ’ ಎಂದರು. ತ್ರಿಶಂಕು ಸ್ವರ್ಗವನ್ನು ‘ತ್ರಿಶಂಕು ನರಕ’ ಎಂದು ‘ಸತ್ತವನ ಸಂತಾಪ’ ಬರೆದರು. ಉದರ ನಿಮಿತ್ತಂ ಬಹುವಿಧವೇಷಂ ಎಂದು ತೋರಲು ‘ಅನ್ಕೂಲಕ್ಕೊಬ್ಬಣ್ಣ’ ಬರೆದರು.

ಅಂಥ ಪಾತ್ರಗಳು ಪ್ರತಿನಿತ್ಯ ನಮ್ಮ ಪಕ್ಕದಲ್ಲಿರುವುದನ್ನು ನಾವು ಗಮನಿಸಿರುವುದಿಲ್ಲ ಅಷ್ಟೆ ಸಾಕಷ್ಟು ಅಧ್ಯಯನ ಸಿದ್ಧತೆ ಮಾಡಿಕೊಳ್ಳದೆ ಬರೆಯಕೂತರೆ ಅಪಕ್ವಕೃತಿಯೊಂದು ಆಣಿಯಾಗುವಂತೆ-ದಿಢೀರ್ ಚಿತ್ರ ಮಾಡಹೊರಟರೆ ಇಂಗ್ಲೀಷ್ ಟೈಟಲ್ ಒಂದು ಕಡೆ-ಕಥೆ ಮತ್ತೊಂದು ಕಡೆಯಾಗಿ-ನಾವು ಯಾವ ಕಡೆ ನೋಡಬೇಕೆಂಬುದೇ ಗೊಂದಲವಾಗಿ ಗಲಿಬಿಲಿಯಾಗುವುದು ನಿಜ.

ಅದಕ್ಕೆ ಕೈಲಾಸಂ ಸಾಹಿತ್ಯ ಸಮ್ಮೇಳನದಲ್ಲಿ ಭಾಷಣ ಮಾಡುತ್ತಾ ‘ಅಪಕ್ವಾನುಭವದ ಅಸಂಪೂರ್ಣ ಚೇತನದ ಎಳಕರು ಸಾಹಿತ್ಯ ಕ್ರಾಂತಿಗೆ ಕೈಹಾಕಿ ಹೀಚು-ಮಿಡಿಗಳನ್ನು ತಂದು ಬಾಯಿರುಚಿಯನ್ನೇ ಕೆಡಿಸುತ್ತಿದ್ದಾರೆ ಎಂದು ಕೇಳಿದ್ದೇನೆ’ ಎಂದದ್ದು.

ಈ ಮಾತು ಚಿತ್ರರಂಗದಲ್ಲೂ ಈಗ ಅಕ್ಷರಶಃ ನಿಜವಾಗುತ್ತಿದೆ ಎನಿಸುತ್ತದೆ, ಬಹಳಷ್ಟು ಪ್ರೀತಿ-ಪ್ರೇಮದ ಕತೆಗಳನ್ನು, ಕಾಮೆಡಿ ಹೆಸರಿನ ಕಲಸುಮೇಲೋಗರಗಳನ್ನು ಕಂಡಾಗ.

ತುಂಬ ಒಳ್ಳೆ ಚಿತ್ರ ತೆಗೆವ ಗಂಭೀರ ಪ್ರಯತ್ನ ಮಾಡುವ ನಿರ್ಮಾಪಕ ನಿರ್ದೇಶಕರೂ ನಮ್ಮಲ್ಲಿದ್ದಾರೆ.

ಆದರೆ ಅದಕ್ಕೂ ಹೆಚ್ಚು ಪ್ರಮಾಣದಲ್ಲಿ ಉಡಾಫೆ ಮಾತುಗಳಾಡುತ್ತ ತಾವು ಹೇಳಿದ ಸುಳ್ಳು-ಜಳ್ಳುಗಳು ಮರುವಾರ ಅಕ್ಷರಶಃ ಅಚ್ಚಾಗಬೇಕೆಂದು ಆಶಿಸುವವರೂ ಇದ್ದಾರೆ. ತಮ್ಮನ್ನು ತಾವೇ ‘ಕಾಂಟ್ರಿಡಿಕ್ಟ್’ ಮಾಡಿಕೊಂಡು ತೆಗಳುತ್ತ ಬರೆಯುವ ‘ಪೀಕೇಶಿ’ಯಂಥವರನ್ನು ಕಂಡೇ ಹಲವರಿಗೆ ಪ್ರೆಸ್‌ಮೀಟ್ ಎಂದರೆ ‘ಹಾರ್ಟ್‌ಬೀಟ್’ ಆರಂಭವಾಗುತ್ತದೆ. ಈ ಸಾಲು ಬರೆಯುವಾಗ ನನಗೆ ಖ್ಯಾತಕವಿ ಜಿ.ಎಸ್. ಶಿವರುದ್ರಪ್ಪನವರ ಈ ದೇಶದಲ್ಲಿ ಕವನದ ಹಲವು ಸಾಲುಗಳು ನೆನಪಾಗುತ್ತಿವೆ.

ಈ ದೇಶದಲ್ಲಿ ಎಲ್ಲವೂ ಆಮೂಲಾಗ್ರವಾಗಿ ಬದಲಾಗಬೇಕು
ಆದರೆ ನಾ ಕೂತ ಕುರ್ಚಿ, ಅದರ ಕೆಳಗಿನದೊಂದಿಷ್ಟಗಲ ನೆಲ
ಇದ್ದಂತೆಯೇ ಇರಬೇಕು

ಈ ದೇಶದಲ್ಲಿ ಎಲ್ಲರೂ ಮಾತಾಡುವುದನ್ನು ನಿಲ್ಲಿಸಿ ತೆಪ್ಪಗಿರಬೇಕು ಆದರೆ ನಾನಾಡುವ ಮಾತಿಗೆ ಸದಾ ಕಿವಿತೆರದು ತಲೆದೂಗಬೇಕು… ಹಾಗಾದರೆ ಅದು ಡಿಕ್ಟೇಟರ್‌ಷಿಪ್ ಆದೀತು. ಸಾಹಿತ್ಯ ಕೃತಿ ಮನಕ್ಕೆ ಮುದ ನೀಡಬೇಕು. ಸಾಮಾಜಿಕ ಹೊಣೆ ಹೊತ್ತು ಚಿತ್ರರಂಜನೆ ನೀಡುತ್ತ ಯುವ ಜನಾಂಗಕ್ಕೊಂದು ಕೈಮರವೂ ಆಗಬೇಕು ಎನ್ನುವವನು ನಾನು.

ಅದಿರಲಿ… ಮೊನ್ನೆ ನಮ್ಮ ಮನೆಯವರೆಲ್ಲ ‘ದಿ ಲೆಜೆಂಡ್ ಆಫ್ ಭಗತ್‌ಸಿಂಗ್’ ನೋಡಿ ಬಂದರು. ದೇಶ ಪ್ರೇಮದ ಬಗ್ಗೆ ಯುವ ಜನಾಂಗವನ್ನು ಬಡಿದೆಬ್ಬಿಸುವ ಆ ಚಿತ್ರ ನನ್ನ ಮೊಮ್ಮಗನಿಗೂ ಪ್ರಿಯವಾಯಿತು. ಅದೆಷ್ಟು ಮೆಚ್ಚಿಕೆಯಾಯಿತೆಂದರೆ ತಾನೊಬ್ಬ ಸೈನಿಕನಾಗಬೇಕೆಂಬುದು ಅವನ ತಕ್ಷಣದ ಆಶಯವಾಗಿತ್ತು.

ಆ ಮಾತಾಗುತ್ತಿದ್ದಾಗಲೆ ವರಾಂಡದಲ್ಲೊಂದು ಮೂಗಿಲಿ ಓಡಿ ಬಂತು ದುಡ-ದುಡ. ಪ್ರತಿನಿತ್ಯ ಹೆದರಿ ಕಿರುಚುತ್ತಿದ್ದವ, ಅಂದು ಅವರಪ್ಪನೊಂದಿಗೆ-ತಾನೂ ಒಂದು ಬಡಿಗೆ ಹಿಡಿದು ಅದನ್ನು ಬಗ್ಗ ಬಡಿಯಲು ಮುಂದಾದ, ಇಲಿಯನ್ನು ಬಡಿದೆಸೆದಾಗ ತಾನೊಂದು ಮಹತ್ತರ ಸಾಧನೆ ಮಾಡಿದ ಸಂಭ್ರಮದಲ್ಲಿದ್ದ. ನಾಳೆ ಅವನು ಸೈನಿಕನಾಗಬಹುದು ಆಗದಿರಬಹುದು ಅದು ಬೇರೆ ಪ್ರಶ್ನೆ. ಆದರೆ ‘ಭಗತ್ಸಿಂಗ್’ನಂತಹ ಚಿತ್ರ ಅವನಲ್ಲಿ ಹುಮ್ಮಸ್ಸು, ಧೈರ್ಯ ತುಂಬಲು ಸ್ಫೂರ್ತಿಯಾಗಿತ್ತು ಎಂಬುದಂತೂ ಸುಳ್ಳಲ್ಲ.

ಆದರೆ ಈಗ ಬರುತ್ತಿರುವಂಥ ವಿಕೃತ ಪ್ರೇಮದ ಚಿತ್ರಗಳು ಯುವಜನಾಂಗವನ್ನು ಎತ್ತ ಕೊಂಡೊಯ್ಯುತ್ತವೆ ಎಂಬ ಚಿತ್ರ ಕಣ್ಮುಂದೆ ಬಂದಾಗ ದಿಗ್ಭ್ರಮೆಯಾಗಿ ‘ಹಾರ್ಟ್‌ಬೀಟ್’ ಆರಂಭ ವಾಗುತ್ತದೆ ಎಂಥವರಿಗಾದರೂ.

ಎಲ್ಲರ ‘ಹಾರ್ಟ್‌ಬೀಟ್’ ನಾರ್ಮಲ್ ಆಗಿರಲು. ಪ್ರೆಸ್‌ ಮೀಟ್‌ಗಳೂ ಸೌಹಾರ್ದಯುತ ವಾಗಿರಬೇಕಾದ್ದು ಮುಖ್ಯ.
*****
(೨೮-೦೬-೨೦೦೨)