ತಾಂತ್ರಿಕವಾದ ವಿಸ್ತರಣೆ ಬಗೆಗೆ ಅನೇಕ ರೀತಿಯ ಗಮನ ಕೊಡಲೇ ಬೇಕಾಗಿ ಬಂದದ್ದರಿಂದ ಈ ಬಾರಿಯ ಅಪ್‌ಡೇಟ್ ತಿಳಿಸಿದ್ದಕ್ಕಿಂತಲೂ ಎರಡು ವಾರ ತಡವಾಗಿ ಆಗುತ್ತಿದೆ. “ಎಲ್ಲದಕ್ಕೂ ಒಬ್ಬನೇ ಗಮನ ಕೊಡಬೇಕಾದಾಗ” ಹೀಗೆ ಆಗುವುದು ಸಹಜ. ಈ ಕಾರಣಗಳು “ಲಾಭ ತರದ”, “ಅರ್ಥಿಕ ಉದ್ದೇಶಗಳಿರದ”-ಎಲ್ಲ ಚಟುವಟಿಕೆಗಳು ಎದುರಿಸುವಂತಹುದೆ. ಅದನ್ನು ವೈಯಕ್ತಿಕವಾಗಿ ಹಾಗು ಕನ್ನಡಸಾಹಿತ್ಯ.ಕಾಂ ನ ನಿರ್ವಾಹಕನಾಗಿ ಈಗ ನಾನು ಎದುರಿಸುತ್ತ ಸುಸ್ತಾಗಿ ಹೋಗಿದ್ದೇನೆ. ಒಪ್ಪಿಕೊಂಡಂತೆ, ಮತ್ತೊಂದು ಸಂಚಿಕೆಯನ್ನು ಅಪ್‌ಡೇಟ್ ಮಾಡಿ, ನಂತರ ವಿಶ್ರಾಂತಿ ತೆಗೆದುಕೊಳ್ಳಲು ಬಯಸುತ್ತೇನೆ. ’ಯಾರಾದರೂ ಒಂದು ಸಮರ್ಥವಾದ ತಂಡ ಕಟ್ಟಲು ಮುಂದೆ ಬಂದರೆ ಸಂತೋಷ.” -ಇಲ್ಲದಿದ್ದರೆ ಕನ್ನಡಸಾಹಿತ್ಯ.ಕಾಂನ ಚಟುವಟಿಕೆಗಳು ಕುಂಟುತ್ತಲೇ ಇರುತ್ತದೆ. ಪ್ರಗತಿ, ವಿಸ್ತರಣೆ ಇತ್ಯಾದಿಗಳೆಲ್ಲ ಅಸಾಧ್ಯವೆಂದಾಗಿ ಬಿಡುತ್ತದೆ.
ಕನಡಸಾಹಿತ್ಯ.ಕಾಂ ನಿಯಮಿತವಾಗಿ ಹೊರಬರಬೇಕಾದರೆ ಅನೇಕ ಅಗತ್ಯಗಳು ಕಂಡು ಬರುತ್ತದೆ. ಅದನ್ನು ಇಲ್ಲಿ ಪಟ್ಟಿ ಮಾಡಿಬಿಡುತ್ತೇನೆ:
೧. ನಿರ್ವಹಣೆಗೆ ಆದಳಿತ ಮಂಡಲಿ. ಕರ್ತವ್ಯಗಳು: ಸಂಪಾದಕೀಯ ಮಂಡಳಿಯ ಸಮಾಲೋಚನೆಯೊಂದಿಗೆ ಯೋಜನೆಯ ಸಿಧ್ಧತೆ, ಯೋಜನೆಗಾಗಿ ಬೇಕಾಗುವುದೆಲ್ಲವನ್ನು ಒದಗಿಸಿಕೊಳ್ಳುವುದು ಇತ್ಯಾದಿ. ಬೇಕಾದ ಉಪಮಂಡಳಿಗಳನ್ನು ರಚಿಸಿ ಅದಕ್ಕೆ ಬೇಕಾದ ಗೊತ್ತು-ಗುರಿಗಳನ್ನು ನಿಗದಿ ಪಡಿಸುವುದು. ಖರ್ಚು-ವೆಚ್ಚದ ಉಸ್ತುವಾರಿ.
೨. ಸಂಪಾದಕೀಯ ಮಂಡಳಿ. ಕರ್ತವ್ಯಗಳು: ಕನಡಸಾಹಿತ್ಯ.ಕಾಂ ಗೆ ಬೇಕಾದ ಪಠ್ಯವನ್ನು ಆಯ್ಕೆ ಮಾಡುವುದು, ಬೇಕಾದವರಿಂದ ಅನುಮತಿ ಪಡೆಯುವುದು, ಉತ್ಪಾದನೆಯ ಹಂತದ ಮಂಡಳಿಗೆ ಸೂಚನೆ ನೀಡುವುದು.
೩. ಉತ್ಪಾದನಾ ಮಂಡಳಿ: ಇದರ ಕೆಳಗೆ ತಾಂತ್ರಿಕ ಹಾಗು ಅರೆ ತಾಂತ್ರಿಕ ಕಾರ್ಯಕರ್ತರು: ವೆಬ್‌ಸೈಟ್ ನಿರ್ವಹಣೆ ಎಲ್ಲ ಸಂದರ್ಭದಲ್ಲೂ ಒಂದೇ ತರವಾಗಿರುವುದಿಲ್ಲ. ತಾಂತ್ರಿಕವಾಗಿ ಸಿಗುವ ಉಚಿತ ಸಲಕರಣೆಗಳನ್ನು ಕನ್ನಡಕ್ಕೆ ಒಗ್ಗಿಸುವುದೂ ಸುಲಭವಲ್ಲ. ಎಲ್ಲರೂ ಕೈ ಜೋಡಿಸಿದರೆ ಇದು ಅಗಾಧವಾಗಿ ಬೆಳೆಯುತ್ತಲೇ ಹೋಗುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಮ್ಮದೇ ಆದ ತಾಂತ್ರಿಕ ಸಲಕರಣೆಗಳನ್ನು ರೂಪಿಸಿ, ಅದಕ್ಕೆ ಬೇಕಾದ ಪರಿಣಿತರು ಒಟ್ಟುಗೂಡಿ ತಯಾರಿಸಬೇಕು. (ಈ ವಿಚಾರದಲ್ಲಿ ಕನ್ನಡಿಗರು ಬಹಳ ಹಿಂದೆ ಉಳಿದಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಕನ್ನಡದ ದುರಂತ. ಇಂದಿನ ತಾಂತ್ರಿಕತೆಯಲ್ಲಿ ಮುಂದಿರುವ ವಿಚಾರವಂತ, ಪ್ರಜ್ಞಾವಂತ ಯುವಕರ ನಾಚಿಕೆಗೇಡಿನ ಪ್ರವೃತ್ತಿ…ಅಲ್ಲಲ್ಲಿ ಶೇಷಾದ್ರಿವಾಸುರಂತವರೂ ಇದ್ದಾರೆ ಎನ್ನುವುದೇ ಸದ್ಯದ ತೃಪ್ತಿ). ತಾಂತ್ರಿಕ ಯೋಜನೆ ತಯರಿಸುವಾಗ, ಆಡಳೀತ ಮಂಡಳಿ ಸಂಪಾದಕೀಯ ಮಡಳಿಯ ಅಗತ್ಯ ಮತ್ತು ಪೂರೈಕೆಗಳನ್ನು ಗಮನದಲ್ಲಿರಿಸ್ಕೊಳ್ಳಲು ಸಮಾಲೋಚನೆ ಅಗತ್ಯ. ಇನ್ನುಳಿದಂತೆ, ಸಂಪಾಕೀಯ್ಯ ಮಡಳಿಯ ಚಟುವಟಿಕೆಗಳಲ್ಲಿ ನೆರವಾಗುವುದು. ಬರಹ ಕ್ಕೆ ಕೀ ಇನ್ ಮಆಡುವುದು, ಕೀ ಇನ್ ಮಾಡಿದ್ದನ್ನು ತಪ್ಪುಗಳಿಲ್ಲದಂತೆ ನೋದಿಕೊಳ್ಳುವುದು. ಇದು ನಿಗದಿತ ವೇಳಯಲ್ಲಿ ಸದಾ ಆಗಬೇಕಾದ ಕೆಲಸ. ( ಈ ವಿಷಯದಲ್ಲಿ ಅತ್ಯಂತ ನಿಷ್ಠೆಯಿರುವವರೆಂದರೆ ನಮ್ಮ ಕಿಶೋರ್ ಚಂದ್ರ. ವೈದೇಹಿಯವರ ಎಷ್ಟೊಂದು ಸಣ್ಣಕತೆಗಳನ್ನು ಈಗಾಗಲೇ ಬರಹಕ್ಕೆ ಇಳಿಸಿಬಿಟ್ಟಿದ್ದಾರೆ..ಧನ್ಯವಾದಗಳು ಕಿಶೋರ್)
ಇವು ಮುಖ್ಯವಾದರೆ ಇವುಗಳಡಿ ಉಪಮಂಡಳಿಗಳು, ಇದಕ್ಕೆಲ್ಲ ದುಡಿಯಲು ಬೇಕಾದ ಕಾರ್ಯಕರ್ತರು ಸಿಗಬೇಕು. ಮುಂದೆ ಬಂದವರ ಉದ್ದೇಶ, ಪರಿಣತಿಗಳನ್ನು ಕೊಂಚಮಟ್ಟಿಗಾದರೂ ಪರಿಶೀಲಿಸಬೇಕು. ಮೊನ್ನೆ ನಡೆದ ಅನೌಪಚಾರಿಕವಾದ ಚರ್ಚೆಯೊಂದರಲ್ಲಿ ಇದು ಹೇಗಿರಬೇಕು, ಅಗತ್ಯಗಳೇನು ಎಂಬುದರ ಬಗೆಗೆ ವಿಸ್ತಾರವಾಗಿ ಬರೆಯಲು ಒಪ್ಪಿಕೊಂಡಿದ್ದೇನೆ. ಈ ವಾರ ಅದೇ ಕೆಲಸ. ಅದು ತಡವಾದರೆ, ಅದನ್ನು ಇಲ್ಲಿ ಸ್ಥೂಲವಾಗಿ ವಿವರಿಸಿಬಿಟ್ಟಿದ್ದೇನೆ. ಅಲ್ಲಿಯವರೆಗೂ ಎಲ್ಲರೂ “ಅಲೋಚಿಸಲಿ” ಎಂದು.
-ಇದೆಲ್ಲವನ್ನು ನಾನೋಬ್ಬನೇ ಸಾಧಿಸಲಾಗುವುದಿಲ್ಲ. ಇಲ್ಲಿಯವರೆಗೆ ಕುಂಟುತ್ತಲೋ ದೇಕುತ್ತಲೋ ನಡೆಸಿಕೊಂಡು ಬಂದಿದ್ದೇನೆ. ಯಾಹೂ ಗ್ರೂಪ್ ತಂಡ ಇದನ್ನು ಚರ್ಚೆಗೆತ್ತಿಕೊಳ್ಳುತ್ತದೆಂದು ನನ್ನ ಆಶಯ. ಚರ್ಚೆಯಲ್ಲಿ ಯಾಹೂ ತಂಡದ ಪ್ರತಿಯೊಬ್ಬರೂ ಭಾಗವಹಿಸ ಬೇಕಾಗಿ ಮನವಿ. ಚರ್ಚೆ ಅಗುವಾಗ ನಾನು ಮಧ್ಯೆ ಪ್ರವೇಶಿಸುವುದಿಲ್ಲ. ಚರ್ಚೆಯನ್ನು ಕ್ರೋಢೀಕರಿಸಿದಾಗ ಸರಿಯಾದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂಬುದಷ್ಟೆ ನನ್ನ ಕಾಳಜಿ. ಆದರೆ, ಈ ಚರ್ಚೆಯನ್ನು ನಿಗದಿತವೇಳೇಗೆ ಆರಂಭಿಸಿ-ಮುಗಿಸಿ. ಚರೆಚೆಯಲಿ ಭಾಗವಹಿಸದೇ ಮೌನವಾಗಿ ಉಳಿಯುವವರನ್ನು ಹೇಗೆ ವರ್ಗೀಕರಿಸಬೇಕು, ಕನ್ನಡಸಾಹಿತ್ಯ.ಕಾಂ ಬೆಂಬಲಕ್ಕೆ ಎಂದಿರುವ ಗುಂಪಿನಲ್ಲಿ ಅಂತಹವರ ಅಗತ್ಯವಿದೆಯೆ? ಬರಿಯ ಸಂಖ್ಯೆಯ ದೊಂಬರಾಟವಾಗಿಬಿಡುವುದಿಲ್ಲವೆ? ಇದನ್ನೆಲ್ಲ ನಾನು ಗ್ರೂಪ್‌ನಲ್ಲೇ ಹೇಳಬಹುದಾಗಿತ್ತು. ಅಲ್ಲಿ ಹೇಳಿದರೆ ಅದನ್ನು ಗೌಪ್ಯವಾಗಿಟ್ಟಂಟೆ ಆಗುವುದಿಲ್ಲ. ಆದುದರಿಂದ ಈ ಪುಟದಲ್ಲಿ ಇದನ್ನು ಕಾಣಿಸಿದ್ದೇನೆ. ಯಾರೊಬ್ಬರೂ ಅನ್ಯಥಾ ಭಾವಿಸಬಾರದಾಗಿ ಮೊದಲೇ ಕೇಳಿಕೊಂಡು ಬಿಡುತ್ತಿದ್ದೇನೆ.
ಇಷ್ಟು ಹೇಳಿದನಂತರ ಈ ಸಂಚಿಕೆಯ ಬಗೆಗೆ..
*
*
*
ನಾನು ಅನಂತಮೂರ್ತಿಯವರನ್ನು ನೋಡಿ, ಮಾತನಾಡಿ ಎರಡು ವರ್ಷಗಳ ಮೇಲೇ ಆದವು. ಈ ತಿಂಗಳು ಅವರಿಗೆ ೭೨ ತುಂಬಲಿದೆ (ಜನ್ಮ ದಿನಾಂಕ: ೨೧-೧೨-೧೯೩೨). ಕನ್ನಡಸಾಹಿತ್ಯ.ಕಾಂ ಆರಂಭವಾದದ್ದೇ ಅವರ ಎಲ್ಲ ಸಾಹಿತ್ಯವನ್ನು; ಅಧ್ಯಯನಕ್ಕಾಗಿ, ಅಂತರ್ಜಾಲದ ಮೂಲಕ ಹೆಚ್ಚು ಜನರಿಗೆ ತಲುಪಿಸಲೆಂದು. ಆ ಮೂಲಕ ಕನ್ನಡ ಅಂತರ್ಜಾಲದಲ್ಲಿ ಒಂದು ಗೌರವವಾದ ಸ್ಥಾನ ಗಳಿಸಿಕೊಳ್ಳುತ್ತದೆ ಎಂಬ ಉದ್ದೇಶದಿಂದ ಹಿನ್ನೆಲೆಯಲ್ಲಿ. ಅಂತರ್ಜಾಲವನ್ನು “ಕನ್ನಡ”ಕ್ಕಾಗಿ ಹುಡುಕಿದರೆ ಗೌರವದಿಂದ ನೋಡಬಹುದಾದ ಯತ್ನಗಳು ಅತ್ಯಂತ ಕಡಿಮೆ. “ಕನ್ನಡ ಸಾಹಿತ್ಯವೆಂದರೆ ಬರಿ ಅನಂತಮೂರ್ತಿಯವರ ಸಾಹಿತ್ಯ ಮಾತ್ರವಲ್ಲ ಎಂದು ಯು ಆರ್ ಎಲ್ ಆಧಾರಿತ ತರ್ಕವನ್ನು” ಸಾಕಷ್ಟು ಜನ ಮುಂದಿಟ್ಟಿದ್ದರು. ಇದರಲ್ಲಿ, ಜಾತಿ ರಾಜಕಾರಣದ ಉದ್ದೇಶಗಳೂ ಇದ್ದವು.
ಉದ್ದೇಶವನ್ನು, ಸಾಕಷ್ಟು ಲೇಖಕರ ಕೃತಿಗಳನ್ನು ಅಳವಡಿಸುವುದೆಂದು ತೀರ್ಮಾನ ಮಾಡಿಕೊಂಡು ಅದಕ್ಕಾಗಿ ಕೆಲಸ ಮಾಡುತ್ತಾ ಸಾಗಿದ್ದೇವೆ, ಪ್ರಾತಿನಿಧಿಕವಾಗಿಯಾದರೂ ಆ ಪ್ರಯತ್ನ ಸಾಗಿದೆ ಎಂಬುದಕ್ಕೆ, ಇನ್ನೂ ಅಪ್‌ಡೇಟ್ ಆಗದ ಲೇಖಕರ ಪಟ್ಟಿ ನೋಡಿದರೆ, ಅರ್ಕೈವ್ ವಿಭಾಗ ನೋಡಿದರೆ ಸ್ಪಷ್ಟವಾಗುತ್ತದೆ. ಅನಂತಮೂರ್ತಿಯವರ ವಿರುಧ್ಧ ರಾಡಿಯ ಎರಚಾಟ ಸಾಗುತ್ತಲೇ ಬಂದಿದೆ. ಅದರತ್ತ ವಿಷಯವನ್ನು ಕೇಂದ್ರಿಕರಿಸುವುದು ಇಲ್ಲಿಯ ಉದ್ದೇಶವಲ್ಲ. ಮೊದಲು ನನಗೆ ಅನಂತಮೂರ್ತಿಯವರೆಂದರೆ ಏಕೆ ಗೌರವವೆಂದು ಹೇಳಿಬಿಡುತ್ತೇನೆ: ಅವರು ಎಂದೂ ಬಹುಸಂಸ್ಕೃತಿಗೆ ಧಕ್ಕೆ ತರುವಂತಹ ಬಹಿರಂಗ ನಿಲುವುಗಳನ್ನು ತೆಗೆದುಕೊಳ್ಳಲಿಲ್ಲ. ಬಹಿರಂಗ ನಿಲುವುಗಳನ್ನು ತೆಗೆದುಕೊಂಡಾಗ ಸಾಧ್ಯವಾದಷ್ಟೂ ಅಸ್ಪಸಂಖ್ಯಾತರ ಹಿತಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ. ಇದೆಲ್ಲ, “ಒಳಗೊಳಗೇ ಆತ ಬ್ರಾಹ್ಮಣ” ಎಂದು ಜಾತಿ ರಾಜಕಾರಣ ಎರಚಾಟದ ನಡುವೆಯೂ. ಆದರೆ, ಅನಂತಮೂರ್ತಿಯವರು ಜಾತಿ ರಾಜಕಾರಣದಲ್ಲಿ ಎಂದೂ ಆಸಕ್ತಿವಹಿಸಿಲ್ಲ ಎನ್ನುವುದನ್ನು ಅವರ ಸಾಕಷ್ಟು ಲೇಖನಗಳನ್ನು ಓದಿದಾಗ ತಿಳಿಯುತ್ತದೆ. ಅವರ ಲೇಖನಗಳು “ಭಾರತೀಯ ಚಿಂತನೆಗಳಿಗೆ” ಒಂದು ಹೊಸ ದಿಕ್ಕನ್ನು ಸೂಚಿಸಿದ್ದನ್ನು ಯಾರೊಬ್ಬರೂ ಮರೆಯುವ ಹಾಗೆ ಇಲ್ಲ. ಸಮಗ್ರತೆಯ ನಡುವೆ-ಪ್ರಾದೇಶಿಕತೆಯನ್ನು, ಪ್ರಾದೇಶಿಕತೆಯ ನಡುವೆ ಸಮಗ್ರತೆಯನ್ನು ತರುವ ಅವರ ಪರಿಗೆ ನಾನು ಎಂದೂ ಬೆರಗಾಗಿದ್ದೇನೆ. ಅವರ ಸಾಹಿತ್ಯದ ಬಗೆಗೆ ಹೆಚ್ಚಿನ ಚರ್ಚೆಯನ್ನಂತೂ ಈಗಿನ ಸಂದರ್ಭದ ಅಗತ್ಯ.
ಅನಂತಮೂರ್ತಿಯವರ ಎಲ್ಲ ಸಾಹಿತ್ಯ, ಆಗಿದಾಂಗ್ಯೆ ಅವರ ನೀಡುವ ಪ್ರತಿಕ್ರಿಯೆಗಳು, ಅವರ ಭಾಷಣ ಇತ್ಯಾದಿಗಳ ಸಮಗ್ರತೆಗಾಗಿ ಒಂದು ಪ್ರತ್ಯೇಕ ವಿಭಾಗವನ್ನೇ ತೆರೆಯಬೇಕು, ಅಲ್ಲಿ ಅವರ ಅನುವಾದಗಳು ಪ್ರಕಟವಾಗಬೇಕು. ಇದಕ್ಕಾಗಿ, ಕನ್ನಡಸಾಹಿತ್ಯ.ಕಾಂ ತನ್ನ ಕೈಯಲಾದದ್ದನ್ನ ತಾನು ಮಾಡುತ್ತದೆ. ಈಗಾಗಲೇ ಅವರ ಎಲ್ಲ ಸಣ್ಣಕತೆಗಳನ್ನು, ಪ್ರಮುಖವಾದ ಲೇಖನಗಳನ್ನು ಕನ್ನಡಸಾಹಿತ್ಯ.ಕಾಂ ಪ್ರಕಟಿಸಿದೆ. ಉಳಿದದ್ದನ್ನು ಅಯೋಜಿಸಿದಾಗ ಅವರದೇ ಪ್ರತ್ಯೇಕ ವಿಭಾಗ ಮಾಡಬಹುದು. ನಮ್ಮ ಕಾಲದ ಒಬ್ಬ ಉತ್ತಮ ಚಿಂತಕನಿಗೆ ಇದು ನಾವು ತೋರಬಹುದಾದ ಕನಿಷ್ಟ ಗೌರವ.
ಅಪ್‌ಡೇಟ್ ವೇಳೆಗೆ ಸಾಂದರ್ಭಿಕವಾಗಿರಲೆಂದು ಅವರ “ಅವಸ್ಥೆ” ಕಾದಂಬರಿಯನ್ನು ಸಂಪೂರ್ಣವಾಗಿ ಈ ಸಂಚಿಕೆಯಲ್ಲಿ ನೀಡಲಾಗಿದೆ. ಜೊತೆಗೆ ಅವಸ್ಥೆ ಸಂದರ್ಭದ ಅವರ ಹೇಳಿಕೆಗಳುಳ್ಳ “ಪ್ರತಿಕ್ರಿಯೆ”ಗಳನ್ನು ನೀಡಲಾಗಿದೆ. ಅವರ ಹಿಂದಿನ ಎಲ್ಲ ಕೃತಿಗಳನ್ನು (ಮಿಥುನ-ಕವನ ಸಂಕಲನವೊಂದನ್ನು ಹೊರತು ಪಡಿಸಿ) ಮುಂದಿನ ಪುಟಕ್ಕೆ ತರಲಾಗಿದೆ.
*
*
*
ಕನ್ನಡದ ಒಬ್ಬ ಉತ್ತಮ ಸಿನಿಮಾಸಕ್ತ-ನಿರ್ದೇಶಕ ಪಿ ಶೇಷಾದ್ರಿಯವರು ಭೇಟಿಯಾಗಿದ್ದರು. ನನ್ನ ಜೀವನದ ಒಂದು ನಾಚಿಕೆಗೇಡಿನ ಸಂದರ್ಭವನ್ನು ಇಲ್ಲಿ ನೆನಪಿಸಿಕೊಳ್ಳಬೇಕು. “ಶಾಂತಿ ಶಾಂತಿ ಶಂತಿ” ಎಂಬ ಚಿತ್ರಕ್ಕೆ ನಾನು ಚಿತ್ರಕತೆ ಹಾಗು ಸಂಭಾಷಣೆ ರಚಿಸುವ ಹೊಣೆಗಾರಿಕೆಯಲ್ಲಿ ಪಾಲುಗೊಂಡಿದ್ದೆ. ಬೆಂಗಳೂರಿನ ಪತ್ರಕರ್ತರಲ್ಲಿ ಸಿನಿಮ ಬಗೆಗೆ ಆಸಕ್ತಿ ಉಳ್ಳವರಲ್ಲಿ, ಸ್ವಲ್ಪ ಅಧಿಕೃತವಾಗಿ ಮಾತನಾಡಬಲ್ಲೆ ಎಂಬ ಕಾರಣದಿಂದಲೋ ಏನೋ ಲಂಕೇಶ್ ಪತ್ರಿಕೆಯ ಸದಶಿವ ಶಣೈಯಂತಹವರಿಗೆ ನನ್ನ ಬಗ್ಗೆ ಮುಜುಗರ ತರಿಸುವಷ್ಟು ಗೌರವ. ಅವರು, ಬೆಂಗಳೂರು ಪ್ರೆಸ್ ಕ್ಲಬ್ ಕಾರ್ಯದರ್ಶಿಯವರಾಗಿದ್ದಾಗ (ಈಗ ಅವರು ಪ್ರಧಾನ ಕಾರ್ಯದರ್ಶಿ) ಸಿನಿಮಾ ಕ್ಶೇತ್ರದಲ್ಲಿ ನೇರವಾಗಿ ಪಾಲ್ಗೊಂಡಿದ್ದ ಕೆಲವು ಪತ್ರಕರ್ತ ಮಿತ್ರರಿಗೆ ಪ್ರೆಸ್ ಕ್ಲಬ್‌ನಲ್ಲಿ ಸನ್ಮಾನ ಇಟ್ಟುಕೊಂಡಿದ್ದಾಗ, ಮೇಲಿನ ಶಾಂತಿ ಕಾರಣದಿಂದ ನಾನೂ ಅದರಲ್ಲಿ ಭಾಗಿಯಾಗಬೇಕಾಯಿತು. ಆಗ ಶೇಶಾದ್ರಿಯವರೂ ಒಬ್ಬರು. ಅಲ್ಲಿ ಆದ ಭೇಟಿ. ಇಲ್ಲಿನ ತನಕ ಆಗಿರಲಿಲ್ಲ. ಅವರ ರಭಸ ಚಟುವಟಿಕೆಗಳ ನಡುವೆ ನನ್ನನ್ನು ಅವರು ನೆನಪಿಟ್ಟುಕೊಳ್ಳುವುದೂ ಸಾಧ್ಯವಿರಲಿಲ್ಲ.
ವಿನ್‌ಸ್ಟನ್ ಗ್ಯಾರೆಟ್‌ನ, “ಚಿತ್ರಕತೆಗಳನ್ನು ಸಾಹಿತ್ಯವೆಂದು ಏಕೆ ಪರಿಗಣಿಸಬಾರದು? ಎಂಬ ಪ್ರಶ್ನೆಯನ್ನು ಎತ್ತಿಕೊಂಡಿರುವ – “ಸ್ಚ್ರೀನ್‌ಪ್ಲೇಸ್ ಆಸ್ ಲಿಟರೇಚರ್” ಓದಿದ ಮೇಲೆ ನನಗೆ ಸಿನಿಮಾ ಚಿತ್ರಕತೆಗಳ ಬಗೆಗೆ ಒಂದು ಕಣ್ಣು. ಸಿಕ್ಕರಲ್ಲವೆ? ಘಟಶ್ರಾದ್ಧ ಚಿತ್ರಕತೆ ಪ್ರಕಟವಾಗಿದೆ. ಅದನ್ನು ಬಿಟ್ಟರೆ ಯಾವುದೇ ಚಿತ್ರಕತೆ ಮುದ್ರಣಗೊಂಡಂತೆ ಕಾಣುವುದಿಲ್ಲ. ಉದಾಹರಣೆಗಾದರೂ ಇರಲಿ ಎನ್ನುವುದಕ್ಕಾಗಿ, ಕುತೂಹಲಿಗಳಿಗೆ, ಚಿತ್ರದ ಅಧ್ಯಯನಕ್ಕೆ ಆಕರವಾಗಿ ಬಳಸುವವರಿಗೆ ಇರಲಿ ಎನ್ನುವ ಕಾರಣಕ್ಕಾಗಿ “ಬೇರು” ಚಿತ್ರದ ಚಿತ್ರಕ್ತೆ ದೊರಕುತ್ತದೆಯೆ ಎಂದು ಅವರನ್ನು ಕೇಳಿದೆ. ಕೊಟ್ಟಿದ್ದಾರೆ. ಅದನ್ನು ಪ್ರಕಟಿಸಲಾಗಿದೆ.
ಉಳಿದಂತೆ: ಬೇರು ಚಿತ್ರ ಬಿಡುಗಡೆಯಾಗಿದ್ದಾಗ ನಮ್ಮ ಶಿವಕುಮಾರ್ ರೊಂದಿಗೆ ಮಲ್ಟಿಪ್ಲೆಕ್ಸ್ (!!!) ನಲ್ಲಿ ನೋಡಿದ್ದೆ. ಆಗ ಒಂದೆರಡು ಸಾಲುಗಳನ್ನಾದರೂ ಬರೆಯಬೇಕಿತ್ತು. ಆಗಿರಲಿಲ್ಲ. ಮತ್ತೆ ಅದೇ ಚಿತ್ರವನ್ನು ನೋಡಿದೆ. ಅದರ ಬಗೆಗೆ ಬರೆಯಬೇಕೆಂದಾಗ:
ಅತ್ತ ಕಾಂಗ್ರೆಸ್ ಪಕ್ಷವನ್ನು ನೋಡಿ: ನಟವರ್ ಸಿಂಗ್‌ರಂತಹವರು “ಭ್ರಷ್ಟಾಚಾರದ” ಅರೋಪಕ್ಕೊಳಗಾಗಿದ್ದಾರೆ. ೧೧ ಸಂಸದರು ಸಿಕ್ಕಿಬಿದ್ದಾಗಿದೆ. ಇದು ಯಾವುದೂ ನಮ್ಮನ್ನು ಬೆಚ್ಚಿಬೀಳಿಸುವುದಿಲ್ಲ. ಆ ಮಟ್ಟಿಗೆ, ಲಂಚಗುಳಿತನ ಬದುಕಿನ ಒಂದು ಭಾಗವಾಗಿದೆ ಎನ್ನುವ ವಾದದ ಹಿನ್ನೆಲೆಯಲ್ಲಿ ಒಂದು ರೀತಿಯ ಉಪೇಕ್ಷೆ. ಬೇರು ಭ್ರಷ್ಟಾಚಾರದ ಬಗೆಗೆ ಹೆಚ್ಚಿನ ಮಟ್ಟಿಗೆ ಮಾತನಡುತ್ತಾ ಹೋಗಿ ಅದು ಹೇಗೆ ಸಾಮಾನ್ಯರನ್ನು ದುರಂತಕ್ಕೀಡು ಮಾಡಿಬಿಡುತ್ತದೆ ಎಂದು ವಾದಿಸುತ್ತಾ ಹೋಗುತ್ತದೆ -ಜಾಗತೀಕ ಸಂದರ್ಭದಲ್ಲಿ ಸೂರ್ಯನ ಕುದುರೆ ಇದ್ದಂತೆ. ಚಿತ್ರಕತೆಗಾರಿಗೆ, ನಿರ್ದೇಶಕರಿಗೆ ಚೆನ್ನಾಗಿ ಗೊತ್ತು. ಈ ಭ್ರಷ್ಟಾಚಾರದ ಪ್ರಕರಣದ ಚಿತ್ರಣ ಪ್ರೇಕ್ಷಕನ್ನು ತಟ್ಟುವುದೇ ಇಲ್ಲವೆಂದು. ಹೀಗಾಗಿ, ಅದರ ಬದಲಿಗೆ ಅದರ “ಕೇಂದ್ರ ವಸ್ತು: ಲಂಚಗುಳಿತನವನ್ನು ಬ್ಯುರೋಕ್ರಸಿಯ ಜಡತ್ವದ ಮಧ್ಯದಲ್ಲಿ ಸಹಿಸಿಕೊಳ್ಳಬೇಕೆ-ಸಹಿಸಿಕೊಳ್ಳಬೇಕಾಗುತ್ತದೆ, ಇಲ್ಲದಿದ್ದರೆ ಅಮಾನವೀಯವಾದ ಒಂದು ನಿರ್ಧಾರಕ್ಕೆ ಬಂದಂತಾಗುತ್ತದೆ ಎಂಬ ಸಮರ್ಥನೆಯ ಧ್ವನಿಯೂ ಚಿತ್ರದಲ್ಲಿ ಸಹಜವಾಗಿ ಮೂಡಿಬಂದಿದೆ. ಇದರ ತುಮುಲ ಭ್ರಷ್ಟಾಚಾರದ ಖಂಡನೆಯಲ್ಲ- ಸಮರ್ಥನೆಯೂ ಅಲ್ಲ. ಆದುದರಿಂದಲೇ ಈ ಚಿತ್ರ ಒಂದು ರೀತಿಯ ಸಾರ್ವಜನಿಕ ಒಪ್ಪಿಗೆಯನ್ನು ಪಡೆದುಕೊಂಡು ಬಿಡುತ್ತದೆ. ಕೊರತೆಗಳೇನೇ ಇರಲಿ, ಎಲ್ಲರೂ ನೋಡಬೇಕಾದ ಚಿತ್ರ. ಸಂದರ್ಭ ಸಿಕ್ಕಾಗ ತಪ್ಪದೇ ನೋಡಿ. ಯುವ ಜನತೆಯ ಕೆಟ್ಟ ಸಾಂಧರ್ಭಿಕ ಪ್ರಾಮಾಣಿಕತೆಯನ್ನು ಚೆನ್ನಾಗಿಯೇ ಚಿತ್ರ ತೋರಿಸುತ್ತದೆ. ಸುಚೀಂದ್ರ ಪ್ರಸಾದ್, ದತ್ತ ಮುಂತಾದ ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ.
*
*
*
ಸಾಹಿತ್ಯಕ್ಕೆ ಸಂಬಂಧಿಸಿದಂತೆ ಒಂದು ವಿಚಿತ್ರವಾದ ಸಂದರ್ಭವನ್ನು ನೋಡಬಹುದು. ಇದು ಕನ್ನಡ ಸಾಹಿತ್ಯ ಅಧ್ಯಯನದ ಆರಂಭ ಹಾಗು ಇಂಗ್ಲಿಷ್ ಸಾಹಿತ್ಯದ ಕುರಿತಂತೆ ಆಸಕ್ತಿ ಹುಟ್ಟಿಕೊಳ್ಳುವ ಸಂದರ್ಭದಲ್ಲಿ ಇದನ್ನು ಅನೇಕರು ಗಮನಿಸಿರಬಹುದು. ಕನ್ನಡದ ಸಾಹಿತ್ಯ (ಅದರಲ್ಲೂ ಹೆಚ್ಚಿನ ಮಟ್ಟಿಗೆ ಗಂಡಸರಿಗೆ) ಆರಂಭವಗುವುದೇ ರೋಮಾಂಚಕಾರಿ, ಪತ್ತೆದಾರಿ ಕಾದಂಬರಿಗಳನ್ನು ಪ್ರೌಢಾವಸ್ಥೆಯಲ್ಲಿ ಓದಿನ ಮೂಲಕ: ಎನ್ ನರಸಿಂಹಯ್ಯ, ಜಿಂದೆ ನಂಜುಂಡಸ್ವಾಮಿ, ಮ ರಾಮ ಮೂರ್ತಿ ಈ ವರ್ಗದಲ್ಲೇ ಸ್ವಲ್ಪ ಕ್ಲಾಸಿಕ್ ಬೇಕೆಂದರೆ ಟಿ ಕೆ ರಾಮರಾವ್. ಇಂಗ್ಲಿಷನ್ನು ಕೈಗೆತ್ತಿಕೊಳ್ಳುವುದೇ ಕ್ಲಾಸಿಕ್‌ಗಳ ಮೂಲಕ: ದಾಸ್ತೊವೆಸ್ಕಿ, ಟಾಲ್‌ಸ್ಟಾಯ್, ಪ್ಲಾಬೆ ..ಹೀಗೆ ಸಾಗುತ್ತದೆ. ನಂತರ ತ್ರಿಲ್ಲರ್‌ಗಳಿಗೆ ತಿರುಗುತ್ತದೆ. ಇರ್ವಿಂಗ್ ವ್ಯಾಲೆಸ್, ಚೇಸ್, ಲುಡ್ಲುಮ್ ಎಂದು ಅದರಲ್ಲಿ ಸ್ವಲ್ಪ ವ್ಯತ್ಯಾಸದ್ದು ಎಂದರೆ: ಲೆಕಾರ್ ಹಾಗು ಇತ್ತೀಚಿನ ಸ್ಕಾಟ್ ಟ್ಯೂರೊ. ಸ್ಕಾಟ್ ಟ್ಯೂರೋ ನ್ಯಾಯಾಲಯ, ರಾಜಕೀಯ, ಪತ್ತೆದಾರಿಕೆ ಇತ್ಯಾದಿ ಅಂಶಗಳನ್ನು ಬೆರೆಸುವ ಚಾಣಾಕ್ಷ ಬರಹಗಾರ. ಸೀತಾರಾಂ ರವರ “ಮುಕ್ತ” ಧಾರವಾಹಿಯಲ್ಲೂ ಈ ಅಂಶಗಳಿವೆ. ಮುಂದಕ್ಕೆ ಗಾವ್ರಾಸ್‌ನ ’ಜಿ’ಯನ್ನೂ ನೋಡಬಹುದು ಎಂದು ಈಗಲೇ ಊಹಿಸಲು ಬೇಕಾದಷ್ಟು ಗ್ರಾಸ ಒದಗಿಸಿದೆ.
ನನ್ನ ಸಾಹಿತ್ಯಾಸಕ್ತಿಯಂತೂ ಮೇಲಿನ ಕ್ರಮವನ್ನೇ ಹಾದು ಬಂದದ್ದು: ಕನ್ನಡಸಾಹಿತ್ಯ.ಕಾಂ ಈವರೆಗೂ ಪತ್ತೆದಾರಿ ಕಾದಂಬರಿಗಳನ್ನು ಪ್ರಕಟಿಸಿಯೇ ಇರಲಿಲ್ಲ. ಮಡಿವಂತಿಕೆಯೇನೂ ಇಲ್ಲ. ಸಂದರ್ಭ ಒದಗಿರಲಿಲ್ಲ. ಈಗ ಪ್ರೇಂ ಕುಮಾರ್‌ರವರ “ಪರಾವಲಂಬಿ” ಕಾದಂಬರಿಯನ್ನು ಪ್ರಕಟಿಸಲಾಗಿದೆ. ಕಣ್ಣಾಡಿಸಿದಾಗ, ನನ್ನ ಮೆಚ್ಚುಗೆಯ ಲೆಕಾರ್ ಹಾಗು ಟ್ಯೂರೋ ಗತಿಗೆ ತಕ್ಕಂತೆ ಇದೆ ಎಂದನ್ನಿಸಿತು. ಬಿಡುವಾದಾಗ, ಪೂರ್ತಿ ಓದಬೇಕು. ರೋಮಾಂಚಕಾರಿ, ಪತ್ತೇದಾರಿಯಲ್ಲಿ ಅಸಕ್ತಿ ಇರುವವರು ನೋಡಬಹುದು.
ಪ್ರೇಂಕುಮಾರ್ ಬರಿಯ ಥ್ರಿಲ್ಲರ್‌ಗಳನ್ನು ಮಾತ್ರ ಬರೆದಿಲ್ಲ. ಇತ್ತೀಚೆಗೆ ಅವರು ಪಾಂಡಿಚೆರಿಯಲ್ಲಿ (ಪುದುಚೆರಿ) ಅವರ “ಯಾನ” ಸಣ್ಣಕತೆಯ ಸಂಗ್ರಹ ಬಿಡುಗಡೆಯಾಗಿದೆ. ಅದರಿಂದ ಒಂದು ಸಣ್ಣಕತೆಯನ್ನು ಪ್ರಕಟಿಸಲಾಗಿದೆ.
ಕಳೆದ ಭಾನುವಾರ, ನಮ್ಮ ವಿವೇಕ ಶಾನಭಾಗರವರು “ಮತ್ತೊಬ್ಬನ ಸಂಸಾರ” ಸಣ್ಣಕತೆಗಳ ಸಂಗ್ರಹವನ್ನು ಬಿಡುಗಡೆ ಮಾಡಿದ್ದಾರೆ. ಹೋಗಲಾಗಲಿಲ್ಲ. ಈ ಕೆ ಎಸ್ ಸಿಯ ಕೆಲಸದ ಭಾರ ಹಾಗು ಜರೂರಿನ ನಡುವೆ ನಾನು ಹೋಗದಿರುವುದನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ.
ಇಷ್ಟು ಹೇಳಿ-ಗ್ರೂಪ್ ನಲ್ಲಿ ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂದು ಎಲ್ಲರನ್ನೂ ಕೇಳಿಕೊಳ್ಳುತ್ತಾ- ಮುಂದಿನ ಸಂಚಿಕೆ ಫೆಬ್ರುವರಿ ಮೊದಲವಾರದಲ್ಲಿ ಎಂದು ನೆನಪಿಸುತ್ತಾ..
೧೮-೧೨-೨೦೦೫ ರಂದು ಸೇರಿಸಿದ್ದು: ಈ ಪುಟಕ್ಕೆ ಟಿಪ್ಪಣಿ ಬರೆಯುವಾಗ ತೀರಾ ಸುಸ್ತಾಗಿದ್ದಾಗ ಒಂದು ಹೇಳುವುದನ್ನು ಮರೆತಿದ್ದೆ. ಆದಕ್ಕಾಗಿ ಈ ಮರು ಟಿಪ್ಪಣಿ: ಭಾರತದಿಂದ “ಅವಸ್ಥೆ” ಕಾದಂಬರಿ ತರಿಸಿಕೊಂಡು, ಎಲ್ಲವನ್ನೂ ಕೀ ಇನ್ ಮಾಡಿ ಕಳಿಸಿದ್ದು ತಿಂಗಳುಗಳೇ ಆಗಿದ್ದವು. ಅನೇಕ ತಾಂತ್ರಿಕ ಅವಘಡಗಳಲ್ಲಿ ನನ್ನ ಸಾಕಷ್ಟು ಈಮೈಲುಗಳು ಹೋಗಿವೆ. ಅವಸ್ಥೆ ಕಾದಂಬರಿ ಕೀ ಇನ್ ಮಾಡಿದವರು ಅಡಿ ಟಿಪ್ಪಣಿಯನ್ನೂ ಸೇರಿಸಿಲ್ಲ. ನನಗೆ ಅವರ ಹೆಸರೂ ನೆನಪಿಗೆ ಬರುತ್ತಿಲ್ಲ. ಈ ಕಾದಂಬರಿಯನ್ನು ಸಂಪೂರ್ಣವಾಗಿ ಕಿ ಇನ್ ಮಾಡಿದವರ ಹೆಸರನ್ನು ಸ್ಮರಿಸದಿರುವುದು ಒಂದು ತರಹ ಮುಜುಗರಕ್ಕೆ ಕಾರಣವಾಗಿದೆ. ಅವರು ಯಾರೇ ಆಗಿದ್ದರೂ “ದಯವಿಟ್ಟು ನನ್ನನ್ನು ಸಂಪರ್ಕಿಸಬೇಕಾಗಿ ಮನವಿ”.
ದಿನಾಂಕ ೨೨-೧೨-೨೦೦೫ರಂದು ಸೇರಿಸಿದ್ದು: ಸುದ್ಧಿ ತಿಳಿದು ಅತ್ಯಂತ ಸಂತೋಷವಾಯಿತು. ನಮ್ಮ ರಾಘವೇಂದ್ರ ಪಾಟೀಲರ “ತೇರು” ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಈ ಸಾಲಿನ ಪ್ರಶಸ್ತಿ ಸಿಕ್ಕಿದೆ. ಇದನ್ನು ಕೆಳೆದ ಮೂರು ತಿಂಗಳ ಹಿಂದೆಯೆ ಕನ್ನಡಸಾಹಿತ್ಯ.ಕಾಂ ಪ್ರಕಟಿಸಿತ್ತು ಅದರ ಲಿಂಕ್ ಇಲ್ಲಿದೆ.
“ಸಾಕಷ್ಟು ವಿಮರ್ಶಕರು, ಸ್ನೇಹಿತರು ಈ ಕೃತಿಯ ಹಿಂದೆ ಇದ್ದಾರೆ. ಪ್ರಶಸ್ತಿ ನನ್ನದೊಬ್ಬನದಲ್ಲ” ಎಂದು ವಿನಯದಿಂದ ಪಾಟೀಲರು ಪ್ರತಿಕ್ರಿಯಿಸಿರುವುದು ಅವರ ದೊಡ್ಡತನವನ್ನು ತೋರಿಸುತ್ತದೆ. ಜೊತೆಗೆ ಅವರ ಸ್ನೇಹಿತರ ಬಳಗದ್ದೂ ಸಹ. ಅವರಿಗೆಲ್ಲ ಕನ್ನಡಸಾಹಿತ್ಯ.ಕಾಂನ ಧನ್ಯವಾದ ಹಾಗು ಅಭಿನಂದನೆಗಳು
ಭೈರಪ್ಪನವರಿಗೆ ಪಂಪ ಪ್ರಶಸ್ತಿ
ದಿನಾಂಕ ೧೧-೦೧-೨೦೦೬ ರಂದುಸೇರಿಸಿದ್ದು: ನಾನು ಆರನೆ ತರಗತಿಗೆ ಶಾಲೆ ಬಿಟ್ಟುದ್ದರಿಂದ ಕುಟುಂಬದ ಎಲ್ಲ ಸದಸ್ಯರ ಅವಗಣನೆಗೆ ಗುರಿಯಾದದ್ದು ಸಹಜವೆ. ಆದರೂ, ಒಳಗಿನ ನೋವು-ಅದನ್ನು ಮೀರಲು ನಾನು ಕೈಗೊಂಡ ಕ್ರಮಗಳು: ದುಡಿತ. ಇಟ್ಟಿಗೆ ಹೊರುವ ಕೂಲಿಕೆಲಸ, ಎಂಜಲು ತಟ್ಟೆ ತೊಳೆದದ್ದು, ಟೂರಿಂಗ್ ಟಾಕೀಸಿನಲ್ಲಿ ಕೆಲಸ ಮಾಡಿದ್ದು ಇವೆಲ್ಲ ನನ್ನೊಳಗೆ “ಕ್ರಮಬಧ್ಧ ಶಿಕ್ಷಣಕ್ಕೊಳಗಾದವರ” ಸಂವೇದನಿಗಿಂತಲೂ ಕೊಂಚ ಭಿನ್ನವಾದ ಸಂವೇದನೆಯನ್ನೇ ತಂದು ಕೊಟ್ಟಿತ್ತು. ಭೈರಪ್ಪನವರ ಗೃಹಭಂಗ ನನಗೆ ಅತ್ಯಂತ ಪ್ರಿಯವಾದ ಕಾದಂಬರಿ. ನಾನು ಅವರನ್ನು ಗೃಹಭಂಗ ಕಾದಂಬರಿಯ ಪ್ರಕಟಣೆಗೆ ಅನುಮತಿ ಕೋರಲು ಮೈಸೂರಿಗೆ ಹೋದಾಗ ನನಗಿದ್ದ ಸಹಜವಾದ “ಕ್ರಮಬದ್ಧ ಶಿಕ್ಷಣ ಪಡೆದವರ ಸ್ಥಾನದಲ್ಲಿದ್ದ” ಭೈರಪ್ಪನವರ ಬಗೆಗೆ ಅನಗತ್ಯವಾದ ಕಹಿ ಇತ್ತು ಎಂದೇ ಹೇಳಬಹುದು. ಆದರೆ, ಅವರು ನನ್ನನ್ನು ಉಪಚರಿಸಿದ ರೀತಿ ನಿಜಕ್ಕೂ ನಾನು ಒಳಗೇ ಹಿಡಿಹಿಡಿಯಾಗಿ ಹೋದದ್ದಂತೂ ನಿಜ. “ನಿಮಗೆ ಏಕೆ ಗೃಹಭಂಗ ಇಷ್ಟವಾದ ಕೃತಿ” ಎಂದು ಅವರು ಕೇಳಿದಾಗ ನಾನು ನನ್ನ ಬದುಕನ್ನು ಬೆರೆಸಿಯೇ ಕಾರಣಗಳನ್ನು ಹೇಳಿದ್ದೆ. ಯೋಚಿಸುತ್ತೇನೆ ಎಂದ ಭರಪ್ಪನವರು ಹದಿನೈದು ದಿನಗಳೊಳಗೆ “ಎಕ್ಸ್‌ಕ್ಲೂಸಿವ್” ಆದ ಅನುಮತಿ ಪತ್ರವನ್ನು ಅಂಚೆಯಲ್ಲಿ ಕಳಿಸಿದರು. ನೀವು ಅನುಮತಿ ನೀಡಿದರೂ ಸರಿ, ಇಲ್ಲದಿದ್ದರೂ ಸರಿ ಬಹುಶಃ ನಾನು ಇದೇ ನಿಮ್ಮನ್ನು ಕಡೆಯ ಬಾರಿ ನೋಡುವುದು ಎಂದು ಅವರಿಗೆ ತಿಳಿಸಿದ್ದೆ. ಕಸಾಕಾಂನಲ್ಲಿ ಭೈರಪ್ಪನವರ ಗೃಹಭಂಗ ಪ್ರಕಟವಾಗಿದೆ. ಈ ಕಾದಂಬರಿಯ ಬಗೆಗೆ ಹೆಚ್ಚು ಚರ್ಚೆಯಾಗಿಯೇ ಇಲ್ಲ. ನಿಜಕ್ಕೂ, ಇದೊಂದು ಅಪರೂಪದ ಕೃತಿ. ಕಸಾಕಾಂನ ಎಲ್ಲರೂ ಇದನ್ನು ಓದಿದರೆ (ಅದರಲ್ಲೂ ಈ ಐಟಿಯ ಯುವ ಜನ) ಸ್ವಲ್ಪವಾದರೂ ಜನಪರವಾದ ಸಂವೇದನೆ ಹುಟ್ಟಿಕೊಳ್ಳಬಹುದೇನೋ ಎಂದು ನನ್ನ ಆಶಯ.ಇತರರೂ ಮತ್ತೊಮ್ಮೆ ಓದಿ ಚರ್ಚಿಸಬಹುದಾದ ಕೃತಿ.
ಅವರಿಗೆ ಪಂಪ ಪ್ರಶಸ್ತಿ ತಡವಾಗಿಯಾದರೂ ಸಿಕ್ಕಿರುವುದು ನಿಜಕ್ಕೂ ಸಂತೋಷ. ಅವರಿಗೆ ಅಭಿನಂದನೆಗಳು.
ಸಿಜಿಕೆಯವರು ಇನ್ನಿಲ್ಲ
ಈ ಮಧ್ಯೆ ಕನ್ನಡ ನಾಟಕ ರಂಗದಲ್ಲಿ ಪರಿಚಿತರಾದ ಸಿಜಿಕೆಯವರು ಇಂದು ನಿಧನರಾಗಿದ್ದಾರೆ. ಅತ್ಯುತ್ತಮ ಸಂಘಟಕರೂ ಆಗಿದ್ದ ಸಿಜಿಕೆಯವರ ನಿಧನ ನಮ್ಮ ತಲೆಮಾರಿನ ಮತ್ತೊಂದು ಕೊಂಡಿ ಕಳಚಿಬಿದ್ದಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸಿಜಿಕೆಯವರ ಬಗೆಗೆ ಹೆಚ್ಚು ತಿಳಿದಿರುವವರು ಯಾರಾದರೂ ಏನನ್ನಾದರೂ ಬರೆದರೆ ಹೆಚ್ಚು ಸೂಕ್ತ.
-ಶೇಖರ್‌ಪೂರ್ಣ
೧೭-೧೨-೨೦೦೫
*****