ಕನ್ನಡಸಾಹಿತ್ಯ.ಕಾಂ ನ ಚಾರಣಿಗರಿಗೆಲ್ಲ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
ನಾನು ಸಿಟ್ಟಿನ ಭರದಲ್ಲಿ ಒಮ್ಮೆ ಈ ತಾಣವನ್ನು ನನ್ನ ಪ್ರತಿಭಟನೆಯ ಸಂಕೇತವಾಗಿ ಸ್ಥಗಿತಗೊಳಿಸಿದಾಗ, ಕನ್ನಡದಲ್ಲಿ ಆಸಕ್ತಿ ಇರುವ ವಿಮರ್ಶೆ ಅನುವಾದಗಳಲ್ಲಿ ತೊಡಗಿಸಿಕೊಂಡಿರುವ ನಮ್ಮ ಓ ಎಲ್ ನಾಗಭೂಷಣಸ್ವಾಮಿಯವರು ಯು ಆರ್ ಅನಂತಮೂರ್ತಿಯವರಿಗೆ ‘ಜಾಗತೀಕರಣದ ಸಂದರ್ಭದಲ್ಲಿ ಕನ್ನಡಸಾಹಿತ್ಯ.ಕಾಂ ನಂತಹ ಪ್ರಯತ್ನ ಆಗದಿದ್ದರೆ ಕನ್ನಡ ಭಾಷೆ ಹಾಗು ಸಂಸ್ಕೃತಿ ಉಳಿಯದೆ ಹೋಗುವ ಅಪಾಯವಿದೆ, ನಿಮ್ಮ ಪ್ರಭಾವ ಬಳಸಿ ಕನ್ನಡಸಾಹಿತ್ಯ.ಕಾಂ ಪುನರಾಂಭಿಸುವಂತೆ ಮಾಡಿ’ ಎಂದು ಪತ್ರ ಬರೆದಿದ್ದರು. ಅವರ ಕಳಕಳಿಯ ದಿಕ್ಕನ್ನು ಹಿಡಿದು ಹೋದಾಗ ತಟಕ್ಕನೆ ಹೊಳೆಯುವ ನಿಜ ನಮ್ಮ ಸಂಭ್ರಮವೆಲ್ಲ ಎಷ್ಟು ಹುಸಿಯಾದುದು ಎಂದು ಮನವರಿಕೆಯಾಗುವುದು ಯಾರ ದುರಂತ ಎನ್ನುವುದನ್ನು ಹೇಳಬೇಕಾಗಿಲ್ಲ. ಕನ್ನಡದ ವಾತಾವರಣದಿಂದ ದೂರವಿರುವವರಿಗೆ ಈ ನಿಜ ಮತ್ತಷ್ಟು ಗಾಢವಾಗಿ ಹೊಳೆದಾತು. ದೂರವಿರುವುದು ಅನಿವಾರ್ಯ, ಅರೋಗ್ಯಕರ ಎಂಬ ವಾದವನ್ನೂ ಕೆಲವರು ಮುಂದಿಡದೆ ಇಲ್ಲ. ಅವರ ವಾದದಲ್ಲಿ ಯಾವುದೇ ಹುರುಳಿಲ್ಲವೆನ್ನುವುದು ಅವರಿಗೆ ತಿಳಿದಿರುತ್ತದೆಯಾದ್ದರಿಂದ ಇಲ್ಲಿ ಅದರ ಪ್ರಸ್ತಾಪ ಹೆಚ್ಚು ಬೇಕಿಲ್ಲ. ‘ಇಲ್ಲಿ ರಾತ್ರಿಯಾದಾಗ ಅಲ್ಲಿ ಬೆಳಕಾಗಿರುತ್ತದೆ ಆದರೆ ಅಲ್ಲಿ ರಾತ್ರಿಯಾದಾಗ ಇಲ್ಲಿ ಬೆಳಕಿರಬೇಕಲ್ಲವೇ, … ಅರೆ ತನಗೇನಾಗಿದೆ, ಹಾಗೆಯೇ ಅಲ್ಲವೇ ಇರುವುದು ಅನ್ನಿಸಿತು. ಇಲ್ಲಿ ಮೊದಲು ರಾತ್ರಿಯಾಗುತ್ತದೆ ಅನ್ನಿಸಿತು. ಹಗಲೂ ಇಲ್ಲೇ ಮೊದಲಲ್ಲವೇ…’ – ಈ ಸಂಚಿಕೆಗೆ ಕತೆಯೊಂದನ್ನು ಬರೆದಿರುವ ಗುರುಪ್ರಸಾದ್ ಕಾಗಿನೆಲೆಯವರ ಅಪ್ರಕಟಿತ ಕತೆಯೊಂದರ ಸಾಲುಗಳನ್ನು ಇಲ್ಲಿ ಹೇಳಿ ಕನ್ನಡಸಾಹಿತ್ಯ.ಕಾಂನ ಕೆಲಸ ಮುಂದುವರಿಸುತ್ತೇನೆ. ಯೋಗಣ್ಣನ ಕಾರ್ಡಿಯಾಲಜಿ.. ಓದಿ ನೋಡಿ ಪ್ರತಿಕ್ರಿಯಿಸಿ ಎಂದು ಎಲ್ಲರಲ್ಲೂ ಕೇಳಿಕೊಳ್ಳಬಲ್ಲೆ.
ಅನಮತಮೂರ್ತಿಯವರ ಅಧಿಕೃತ ಅಂತರ್ಜಾಲ ತಾಣವೆಂದು ನಾವು ಇದನ್ನು ಕರೆದಿದ್ದೆವು. ಅದರಿಂದಾಗಿ ತರ್ಕ-ಕುತರ್ಕಗಳೆಲ್ಲ ಆದದ್ದು ಒಂದು ರೀತಿಯ ನೋವಿನ ಸಂಗತಿ. ಇದರಿಂದಾಗಿ ಕೆಲವರು ಅವರ ವಿರುದ್ಧ – ಮತ್ತು ಅವರ ವಿರುದ್ಧದ ಕೆಲವರು ಕನ್ನಡಸಾಹಿತ್ಯ.ಕಾಂ ಬಗೆಗೆ ಕಲ್ಪಿಸಿದ ವಾತಾವರಣ ರೇಜಿಗೆಯದು. ನಮ್ಮನ್ನು ನಂಬಿ, ವಿಶ್ವಾಸವಿರಿಸಿ ತಮ್ಮ ಕೃತಿಗಳನ್ನೆಲ್ಲ ಎಕ್ಸ್‌ಕ್ಲೂಸಿವ್ ಆಗಿ ಬಳಸಿಕೊಳ್ಳಲು ಉಚಿತವಾಗಿ ಅನುಮತಿ ನೀಡಿದ ಅವರ ಹೃದಯ ವೈಶಾಲ್ಯವನ್ನು ನಾವು ಮರೆಯುವ ಹಾಗಿಲ್ಲ. ’ಕನ್ನಡಸಾಹಿತ್ಯ ನನಗಿಂತಲೂ ದೊಡ್ದದು. ಕನ್ನಡ ಸಾಹಿತ್ಯವನ್ನು ಅನಂತಮೂರ್ತಿ ಸಾಹಿತ್ಯಕ್ಕೆ ಸೀಮಿತಗೊಳಿಸಬೇಡ’ ಎಂದು ಅವರೇ ಹೇಳಿದ್ದನ್ನು ಮನ್ನಿಸಿ ಇದನ್ನು ನಿಜವಾದ ಅರ್ಥದಲ್ಲಿ ಕನ್ನಡ ಸಾಹಿತ್ಯವನ್ನು ಪ್ರತಿನಿಧಿಸುವ ತಾಣವಾಗಿ ಮಾಡುವಲ್ಲಿ ಎಲ್ಲ ಪ್ರಂiತ್ನಗಳನ್ನು ಮಾಡುತ್ತೇನೆ ಎಂಬ ಭರವಸೆ ನೀಡಬಲ್ಲೆ. ( ಒಮ್ಮೊಮ್ಮೆ, ಅಲ್ಲ, ಈ ಪ್ರಯತ್ನ ಎಂದಿಗೆ ಕಮ್ಮಿಯಾಗಿತ್ತು ಎಂದು ನಾನೇ ಯೋಚಿಸುವಂತಾಗುತ್ತದೆ)
ಕೊಟ್ರೇಶ ಉತ್ತಂಗಿಯವರಿಂದ ಆರಂಭಿಸಿ ಹರೀಶ್ ಕಡ್ಲಬಾಳುರವರನ್ನು ಸೇರಿಸಿದಂತೆ ಅನೇಕರು ಇಂದು ಕನ್ನಡಸಾಹಿತ್ಯ.ಕಾಂನ ಬೆಂಬಲಕ್ಕೆ/ನೆರವಿಗೆ ನಿಂತಿದ್ದಾರೆ. ಅವರಿಗೆಲ್ಲ ಧನ್ಯವಾದಗಳು. ದಯವಿಟ್ಟು ಪ್ರಕಟಿಸಿರುವ ಮನವಿಯನ್ನು ಓದಿ ಪ್ರತಿಕ್ರಿಯಿಸಬೇಕಾಗಿ ಮನವಿ.
ಶೇಖರ್‌ಪೂರ್ಣ
೧೩-೧೧-೨೦೦೧