ತೋಟದ ಸಂಕ ದಾಟಿ, ದರೆಗೆ ಬಂದು ಮನೆಯತ್ತ ತಿರುಗಿದಾಗ ಶರಾವತಿ ಕಂಡಳು. ಹೇರಂಬನಲ್ಲಿಗೆ ಬಂದ ಮುಳುಗಡೆ ಆಫೀಸಿನ ಮುದಿ ಜವಾನ ನನ್ನತ್ತ ನೋಡಿ-
“ಈ ಮಳೆಗಾಲದಲ್ಲಿ ಹೊಸಮನೆ ಗುಡ್ಡ ಮುಳುಗಿಹೋಗಬಹುದು.”
ಎಂದು ಹೇಳಿದ್ದು ಕಿವಿಯಲ್ಲಿ ಪ್ರತಿಧ್ವನಿಸಿತು.
ಹೋದ ವರುಷ ಕೂಡ ಈತ ಹೀಗೆಯೇ ಹೇಳಿಹೋಗಿದ್ದ. ಲಿಂಗನಮಕ್ಕಿ ಡ್ಯಾಮು ಹತ್ತು ಅಡಿಯೂ ಎದ್ದಿರಲಿಲ್ಲ ಆಗ. ಈ ವರುಷ ಡ್ಯಾಮಿನಲ್ಲಿ ನೀರು ನಿಲ್ಲುವುದಿಲ್ಲವೆಂದು ಬೇರೆ ಸರ್ವೆಗೆ ಬಂದಿದ್ದವರು ಹೇಳಿಹೋಗಿದ್ದರು. ಆದರೂ ಮುದುಕನ ಮಾತಿಗೆ ಹೇರಂಬ, ಪರಮೇಶ್ವರಯ್ಯ ತಾನು ಕಾರ್ಗಲ್ಲಿನೆ ಮುಳುಗಡೆ ಆಫೀಸಿಗೆ ಓಡಿ ಅಲ್ಲಿ ವಿಚಾರಿಸಿದಾಗ ಅವರು ಬಯ್ದು ಕಳುಹಿಸಿದ್ದರು –
“ಇಲ್ಲ ಹೋಗ್ರಿ. ನಿಮಗೆ ಪರಿಹಾರ ಕೊಟ್ಟು ಬೇರೆ ಬೇರೆ ಜಮೀನು ಕೊಡೋ ತನಕ ನೀವಿಲ್ಲೆ ನಿಶ್ಚಿಂತೆಯಿಂದ ಇರಿ”
ಎಂದರು. ಹೋದವರುಷ ನಿಶ್ಚಿಂತೆಯಿಂದ ಇದ್ದುದಾಯಿತು. ಶರಾವತಿಯಲ್ಲಿ ನೀರೇನೂ ಏರಲಿಲ್ಲ. ಹೊಸಮನೆ ಹಳ್ಳಿ ಮುಳುಗಲಿಲ್ಲ. ಎಂದಿನಂತೆ ತೋಟ-ಹೊಲಗಳಲ್ಲಿ ಅಡಿಕೆ-ಭತ್ತ ಬೆಳೆದು, ಕೊಯ್ದು, ಮಾರಿ ತಾವು ಆನಂದದಿಂದಲೇ ಉಳಿದುಬಿಟ್ಟೆವು.
ಆದರೆ ಇದೀಗ ಡ್ಯಾಮು ದೊಡ್ಡ ಗೋಡೆಯೋಪಾದಿಯಲ್ಲಿ ಎದ್ದು ನಿಂತಿದೆ, ಈ ವರುಷ ಡ್ಯಾಮಿನಲ್ಲಿ ನೀರು ನಿಲ್ಲುವುದು ಖಚಿತವೆಂದು ಹೇಳಲಾಗಿದೆ. ಆ ಮುದುಕ ಹೇಳಿದ ಹಾಗೆ ಹೊಸಮನೆಹಳ್ಳಿ ಮುಳುಗಿ ಹೋಗುತ್ತದೋ ಏನೋ. ಹೀಗೇನಾದರೂ ಆದರೆ ತನ್ನ ಮನೆಯ ಗತಿ?
ನದಿಯನ್ನೇ ನೋಡುತ್ತ ದರೆಯ ಮೇಲೆ ನಿಂತುಬಿಟ್ಟ. ಮನೆಗಳ ಸಾಲಿನಿಂದ ಒಂದು ಕೂಗಳತೆಯಷ್ಟು ದೂರದಲ್ಲಿದೆ ಶರಾವತಿ, ಬೇಸಿಗೆಯಲ್ಲಿ ನದಿಯಲ್ಲಿ ನೀರಿರುವುದಿಲ್ಲ. ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುತ್ತದೆ. ದಡವುಕ್ಕಿ ನೀರು ಹೊಲಗಳವರೆಗೂ ಬರುತ್ತದೆ. ಅಷ್ಟೆ. ಆದರೆ ಹೊಲತೋಟಗಳಿಗೇನೂ ಅಪಾಯವಿಲ್ಲ. ಈಗ ಡ್ಯಾಮು ಕಟ್ಟಿದ ಮೇಲೆ ನೀರು ಇನ್ನೂ ಏರಿ ಬರಬಾರದೆಂದೇನಿಲ್ಲ. ಡ್ಯಾಮು ಪೂರ್ಣವಾಗಿ ಕಟ್ಟಿ ಮುಗಿದ ಮೇಲೆ ನೀರು ಇಲ್ಲಿಯವರೆಗೂ ಏರುತ್ತದೆಂದು ಹಳ್ಳಿಯ ಹಿಂಬದಿಯ ಸೀತಾಪರ್ವತದ ನೆತ್ತಿಯ ಮೇಲೆ ಕೆಂಪು ಕಲ್ಲು ನೆಟ್ಟು ಹೋಗಿದ್ದಾರೆ. ಈ ಮುದುಕ ಈ ವರ್ಷವೇ ಹಳ್ಳಿ ಮುಳುಗುತ್ತದೆಂದು ಹೇಳುತ್ತಿದ್ದಾನೆ.
ಈ ವರ್ಷವೇಕೆ ಈಗಲೇ ಮುಳುಗಲಿ. ನೂರಾರು ಹಳ್ಳಿ, ಸಾವಿರಾರು ಮನೆಮಠಗಳನ್ನು ಮುಳುಗಿಸಲು ಹೊರಟಿರುವ ಸರ್ಕಾರಕ್ಕೆ ತನ್ನ ಮನೆ, ಹಳ್ಳಿ ಮುಳುಗಿಸುವುದೇನು ದೊಡ್ಡ ವಿಷಯವೆ? ಆದರೆ ಅದೇನೋ ಜಮೀನೋ ಪರಿಹಾರವೋ ಕೊಡುವುದಾಗಿ ಹೇಳುತ್ತಿದ್ದರಲ್ಲ ಅದು ತನಗೆ ಬರುವುದು ಯಾವಾಗ?
ಯಾರು ಯಾರೋ ಸುಡುಗಾಡಿನವರೆಲ್ಲ ಇಲ್ಲಿಗೆ ಬಂದು ತೋಟ ಅಳೆದು, ಹೊಲ ಅಳೆದು, ಮನೆ, ಕೊಟ್ಟಿಗೆ, ಸೌದೆ ಹಾಕುವ ಮನೆ, ತೋಟದ ಮನೆಗಳಿಗೆಲ್ಲ ಬೆಲೆಕಟ್ಟಿ, ನಿಮಗೆಲ್ಲಿ ಜಮೀನು ಬೇಕು ಎಂದು ವಿಚಾರಿಸಿಕೊಂಡು ಹೋಗಿ ಒಂದು ವರ್ಷವೇ ಆಯಿತು. ಇವರು ಬಂದುಹೋದಮೇಲೆ ಮಳೆಗಾಲ, ಛಳಿಗಾಲ, ಬೇಸಿಗೆಕಾಲ ಬಂದುಹೋಗಿ ಈಗ ಮತ್ತೆ ಮಳೆಮೋಡ ಗುಡುಗುತ್ತಿದೆ. ಹಳ್ಳಿಯ ಐದು ಕುಟುಂಬಗಳಲ್ಲಿ ಎರಡು ಕುಟುಂಬಗಳು ಹುಟ್ಟಾಳುಗಳವು. ಅವರಿಗೆ ಪರಿಹಾರವೇನಿಲ್ಲ. ಉಳಿದ ಮೂರು ಕುಟುಂಬಗಳಿಗೆ ತಕ್ಕ ಪರಿಹಾರ ಸಿಗುತ್ತದೆಂದರು.
ಪರಮೇಶ್ವರಯ್ಯ ಆಫಿಸಿಗೆ ಹೋಗಿ ಅವರ ಪಿಂಡಕ್ಕೆ ಒಂದಿಷ್ಟು ಸುರಿದುಬಂದನೇನೋ. ಅವನಿಗೆ ಬೇಗನೆ ಪರಿಹಾರ ಸಿಕ್ಕಿತು. ಸಾಗರದ ಹತ್ತಿರ ಜಮೀನೂ ಕೊಟ್ಟರು. ಹೇರಂಬನೂ ಅದೇನೋ ಮಾಡಿರಬೇಕು. ಅವನಿಗೂ ಸಧ್ಯದಲ್ಲಿ ಪರಿಹಾರದ ಹಣ ಕೊಡುತ್ತಾರಂತೆ. ಆದರೆ ತನಗೆ? ನಿಮಗೆ ಸಂಬಂಧಪಟ್ಟ ಫೈಲೇ ಕಳೆದು ಹೋಗಿದೆ ಎನ್ನುತ್ತಾನೆ ಆ ಮುಳುಗಡೆ ಆಫೀಸ್ ಸರ್ವೇಯರ್ ಶೆಟ್ಟಿ. ಈ ವರೆಗೂ ಹತ್ತುಸಾರಿ ಆಯಿತು ಹೋಗಿಬಂದುದು. ನಾಳೆ ಮತ್ತೊಮ್ಮೆ ಹೋಗಿಬರಬೇಕು….ಗಣಪಯ್ಯ ಹೊರಟ ಮನೆಯತ್ತ.
ಹೊಸಮನೆಹಳ್ಳಿಯ ಒಂದು ಬದಿಯಲ್ಲಿ ಶರಾವತಿ, ಇನ್ನೊಂದು ಬದಿಯಲ್ಲಿ ಗುಡ್ಡ. ಈ ಗುಡ್ಡಕ್ಕೆ ಸೀತಾಪರ್ವತ ಎಂದೂ ಕರೆಯಲಾಗುತ್ತದೆ. ರಾಮಾಯಣ ಕಾಲದಲ್ಲಿ ಶ್ರೀರಾಮ, ಸೀತೆ, ಲಕ್ಷ್ಮಣ ವನವಾಸ ಮಾಡುತ್ತ ಇಲ್ಲಿಗೆ ಬಂದಿದ್ದರಂತೆ. ಶರಾವತಿ ದಾಟಿ ಈ ಗುಡ್ಡದ ಗುಹೆಯಲ್ಲಿ ವಾಸವಾಗಿದ್ದರಂತೆ ಸ್ವಲ್ಪದಿನ, ಗುಡ್ಡದ ನೆತ್ತಿಯ ಮೇಲೆ ಹತ್ತಾರು ಹೆಬ್ಬಂಡೆಗಳಿವೆ, ಗುಹೆಯಾಕಾರದ ಪೊಟರೆ ಇದೆ. ಮಳೆಗಾಳಿ ಹೊಡೆತಕ್ಕೆ ಮಂಚದಾಕಾರ ತಾಳಿರುವ ಬಂಡೆ ಸೀತಾರಾಮರ ಮಂಚ ಎಂಬ ಹೆಸರು ತಾಳಿದೆ. ಹೆಸರೇನೋ ಸೀತಾಪರ್ವತ, ಆದರೆ ಇದೇನೂ ಪರ್ವತವಲ್ಲ. ಅಷ್ಟೇನೂ ಎತ್ತರವಲ್ಲದ, ವಿಸ್ತಾರವಾಗಿರುವ ಒಂದು ಗುಡ್ಡ ಇದು. ಗುಡ್ಡದ ಬೆನ್ನ ಮೇಲಕ್ಕೆ ಕಾಡು. ನೆತ್ತಿ ಬರಿಯ ಬೋಳು. ಗುಡ್ಡದ ಪಾದದಲ್ಲಿ ಸುತ್ತಲೂ ಚದುರಿದಂತೆ ಐದು ಕುಟುಂಬಗಳು. ಮೂರು ಅಡಿಕೆ ತೋಟಗಳು. ಮೂರು ಗದ್ದೆಗಳು. ಐದು ಕುಟುಂಬಗಳಲ್ಲಿ ಮೂರು ಶ್ರೀಮಂತ ಕುಟುಂಬಗಳು. ಎರಡು ಹುಟ್ಟಾಳುಗಳ ಕುಟುಂಬಗಳು.
ಶ್ರೀಮಂತರೆಂದರೆ ಹೇರಂಬಹೆಗಡೆ ಹಾಗು ಪರಮೇಶ್ವರಪ್ಪ. ಇವರ ತೋಟ ಹೊಲಗಳಲ್ಲಿ ಬಿಟ್ಟಿ ದುಡಿಯುವ ಹಸಲರ ಬೈರನದೊಂದು ಮನೆ. ಹಾಗು ಹಸಲರ ಹಾಲನದೊಂದು ಮನೆ. ಐದನೆಯವನಾಗಿ ಗಣಪಯ್ಯ. ಅತ್ತ ಶ್ರೀಮಂತನೂ ಅಲ್ಲ, ಇತ್ತ ಬಡವನೂ ಅಲ್ಲ. ಇರುವುದೆಂದರೆ ಎರಡು ಎಕರೆ ಬಾಗಾಯಿತು, ನಾಲ್ಕು ಎಕರೆ ಖುಷ್ಕಿ, ತೋಟದಲ್ಲಿ ಹೊಲದಲ್ಲಿ ಕೆಲಸ ಮಾಡಲು ಹುಟ್ಟಾಳುಗಳಿಲ್ಲ. ಕೂಲಿಕೊಟ್ಟು ಆಳುಗಳನ್ನು ಕರೆತರಬೇಕು. ಈ ಪದ್ಧತಿ ಹಿಂದಿನಿಂದಲೂ ನಡೆದುಬಂದಿದೆ.
ಶರಾವತಿ ನದಿಯನ್ನು ದಾಟಿಹೋದರೆ ತಾಳಗುಪ್ಪ, ಹಿರೇಮನೆ, ಸಾಗರ ಇತ್ಯಾದಿ ಊರುಗಳು. ಇದು ಮೂಡಣ ದಿಕ್ಕಿನ ವಿಷಯ. ಪಡುವಣಕ್ಕೆ ಹೊರಳಿದರೆ ಅರಲಗೋಡು, ಭೀಮೇಶ್ವರ ಇತ್ಯಾದಿ. ಹೊಸಮನೆಯವರ ಸಂಪರ್ಕವೆಲ್ಲ ಮೂಡಣದವರೊಡನೆ. ಬೇಸಿಗೆಯಲ್ಲಿ ನದಿ ದಾಟುವುದು ಸುಲಭ. ವಿಶಾಲವಾಗಿರುವ ನದಿಯ ಪಾತ್ರದಲ್ಲಿಯ ಬಂಡೆಗಳ ಮೇಲೆ ಹಾರಿ ಕುಪ್ಪಳಿಸಿದರೆ ಆ ದಂಡೆ. ಆದರೆ ಮಳೆಗಾಲದಲ್ಲಿ ಮಾತ್ರ ಇದು ನಿಷಿದ್ಧ. ತುಂಬಿ ಹರಿಯುತ್ತಿರುತ್ತಾಳೆ ಶರಾವತಿ ಆಗ. ಒಂದು ಬಂಡೆಯೂ ಕಾಣಿಸುವುದಿಲ್ಲ. ನೀರು ಮಂದವಾಗಿ ಮಲಿನವಾಗಿ ಹರಿಯುತ್ತಿರುತ್ತದೆ. ಮಳೆಗಾಲದಲ್ಲಿ ನದಿದಾಟುವ ಪ್ರಮೇಯ ಬರುವುದೂ ಇಲ್ಲ. ಮಳೆಗಾಲ ಆರಂಭವಾಗುತ್ತದೆ ಎನ್ನುವಾಗ ನಾಲ್ಕು ತಿಂಗಳುಗಳಿಗೆ ಬೇಕಾದ ಎಲ್ಲ ಸಾಮಾನು-ಸರಂಜಾಮು ತಾಳಗುಪ್ಪ-ಸಾಗರದಿಂದ ಬಂದುಬಿಡುತ್ತದೆ. ಅಷ್ಟೂ ಸಾಗರಕ್ಕೆ ಹೋಗಬೇಕೆಂದರೆ ತುಮ್ರಿ ಬ್ಯಾಕೋಡಿನ ದಾರಿ ಇದ್ದೇ ಇದೆ.
ಇದು ಸುಮಾರು ಐವತ್ತು ವರ್ಷಗಳಿಂದ ನಡೆದುಬಂದಿರುವ ರೀತಿ. ಹೇರಂಬ ಹೆಗಡೆಯ ಮನೆಯ ಎದುರಿರುವ ತೆಂಗಿನಮರಗಳು, ಹಲಸಿನ ಮರ ಹೊಸಮನೆಯ ಪ್ರಾಚೀನತೆಯನ್ನು ಹೇಳುತ್ತವೆ. ಹೇರಂಬಹೆಗಡೆಯದೇ ಈ ಸ್ಥಳದ ಹಳೇಮನೆ. ಹೆಗಡೆಯ ಅಜ್ಜ ಮಾವಿನಗುಂಡಿಯ ಹತ್ತಿರದ ಹೊಸಮನೆಹಳ್ಳ ಬಿಟ್ಟುಬಂದು ಇಲ್ಲಿ ಮನೆ ಕಟ್ಟಿದಾಗ ಈ ಮನೆ ಹೊಸಮನೆಯಾಯಿತು. ಆದರೆ ಆ ನಂತರ ಗಣಪಯ್ಯನ ತಂದೆ, ಪರಮೇಶ್ವರನ ತಂದೆ ಇಲ್ಲಿ ಬಂದು ಜಮೀನು ಮಾಡಿ ಮನೆ ಕಟ್ಟಿಸಿದಾಗ, ಇವರ ಮನೆಗಳು ಹೊಸಮನೆಗಳಾದವು. ಹೇರಂಬನ ಮನೆ ಹಳೆಯದಾಯಿತು. ಹಳ್ಳಿಗೆ ಮಾತ್ರ ಹೊಸಮನೆ ಎಂಬ ಹೆಸರೇ ಉಳಿಯಿತು.
ಹೊಸಮನೆ ಮುಳುಗುವ ಕಾಲ ಈಗ ಬಂದಿದೆ. ಮಳೆಗಾಲದಲ್ಲಿ ಹಳ್ಳಿಯ ಬಳಿಗೆ ಬಾರದೆ ದೂರದಿಂದಲೇ ಅಬ್ಬರಿಸುತ್ತಿದ್ದ ಶರಾವತಿ ಈಗ ಹಳ್ಳಿಯನ್ನು ನುಂಗುವ ವಿಚಾರ ಮಾಡುತ್ತಿದ್ದಾಳೆ. ಈಗೀಗ ಶರಾವತಿಯ ಹರಿಯುವಿಕೆ ಕಡಿಮೆಯಾಗಿ ನೀರು ಮುಂದೆ ಸರಿಯುವುದರ ಬದಲಿಗೆ ನಿಂತು ಮಡುಗಟ್ಟುವುದು ಕಂಡುಬರುತ್ತಿದೆ.
ಗಣಪಯ್ಯ ತೋಟದಿಂದ ಮನೆಯತ್ತ ತಿರುಗಿದಾಗ ಕಣ್ಣಿಗೆ ಬಿದ್ದ ಶರಾವತಿಯಲ್ಲಿ ಗಮನಿಸಿದ್ದು ಇದನ್ನೇ, ನದಿಯ ಪ್ರವಾಹ ಹರಿದುಹೋದರೆ ಒಂದು ಗಂಡಾಂತರ ಕಡಿಮೆಯಾದ ಹಾಗೆ. ಆದರೆ ಪ್ರವಾಹವಾಗಿ ಏರಿ ಬಂದು ನೀರು ನಿಂತರೆ? ನೀರು ಒಂದೇ ಸಮನೇ ಹರಿದು ಬರುತ್ತಲೇ ಇದ್ದರೆ? ಮುಳುಗಡೆ ಆಫೀಸಿನ ಜವಾನ ಹೇಳಿದ ಮಾತು ಕಿವಿಯಲ್ಲಿ ಮಾರ್ದನಿಗೊಟ್ಟಿದ್ದು ಈ ಸಮಯದಲ್ಲೆ.
ಹೊಸಮನೆಯ ಒಂದೇ ಬದಿಯಲ್ಲಿದ್ದ ಶರಾವತಿ, ಲಿಂಗನಮಕ್ಕಿ ಡ್ಯಾಮು ಕಟ್ಟಿದ್ದರಿಂದ ನಾಲ್ಕೂ ಕಡೆಗಳಲ್ಲಿ ತುಂಬಿಕೊಳ್ಳುವ ಸಾಧ್ಯತೆ ಇತ್ತು. ನದಿ ಕವಲಾಗಿ ಒಡೆದುಕೊಂಡು ಸೀತಾಪರ್ವತವನ್ನು ಬಳಸಿಕೊಂಡು ಮತ್ತೆ ಮುಂದೆ ಒಂದಾಗಿ ಹರಿಯುವುದೇ ಅಲ್ಲದೆ ಹೆಚ್ಚು ಹೆಚ್ಚು ನೀರು ಬಂದ ಹಾಗೆಲ್ಲ ಸೀತಾಪರ್ವತವನ್ನು ಸ್ವಲ್ಪ ಸ್ವಲ್ಪವಾಗಿ ಕಬಳಿಸುತ್ತ ಕೊನೆಗೊಂದು ಸಾರಿ ಇಡೀ ಪರ್ವತವನ್ನೇ ಹೊಟ್ಟೆಯಲ್ಲಿ ಹಾಕಿಕೊಂಡು ಗುಳುಂ ಮಾಡುವ ವಿಷಯವೂ ಅಸಂಭವವೇನಲ್ಲ, ಸೀತಾಪರ್ವತವೇ ಹೋದಮೇಲೆ ಹೊಸಮನೆಹಳ್ಳಿಯಾಗಲೀ, ಗಣಪಯ್ಯ, ಹೇರಂಬ ಪರಮೇಶ್ವರಪ್ಪನ ಮನೆ-ತೋಟ-ಹೊಲಗಳಾಗಲಿ ಉಳಿದಾವೆಂಬ ಭರವಸೆ ಎಲ್ಲಿ? ಒಡೆಯರ ಮನೆಗಳೇ ಮುಳುಗಿದ ಮೇಲೆ ಹುಟ್ಟಾಳುಗಳ ಗುಡಿಸಲುಗಳು ಪಾಡು ಏನಾಗಬೇಡ?
ಹೀಗೆಂದೇ ಸರಕಾರ ಹೊಸಮನೆಹಳ್ಳಿಯ ಕೆಲವರಿಗೆ ಪರಿಹಾರ ಕೊಟ್ಟಿತ್ತು. ಎಕರೆ ಬಾಗಾಯಿತಿಗೆ ಇಷ್ಟು, ಖುಷ್ಕಿಗೆ ಇಷ್ಟು, ಮನೆ, ಕೊಟ್ಟಿಗೆ, ಬಾವಿಗೆ ಇಷ್ಟಿಷ್ಟು ಎಂದೆಲ್ಲ ಹಣ ಸಂದಾಯವಾಗಿತ್ತು. ಬೇರೆಡೆಗಳಲ್ಲಿ ಜಮೀನು ಕೊಟ್ಟಿತ್ತು. ಅಲ್ಲಿಗೆ ಮರಮಟ್ಟುಗಳನ್ನು ಸಾಗಿಸಲು ವಾಹನ ಸೌಕರ್ಯ ಒದಗಿಸಿತ್ತು. ಇಂತಿಷ್ಟು ದಿನಗಳಲ್ಲಿ ಈ ಹಳ್ಳಿಬಿಟ್ಟು ಹೊರಡಬೇಕೆಂದು ನೋಟೀಸು ಜಾರಿಮಾಡಿತ್ತು. ಈ ನೋಟೀಸಿಗೆ ಹೆದರಿಕೊಂಡೇ ಎಂಬಂತೆ ಪರಮೇಶ್ವರಪ್ಪ ಹಳ್ಳಿಬಿಟ್ಟು ಹೊರಟ. ಇವನ ಹಿಂದೆ ಹಸಲರ ಹಾಲನ ಬಿಡಾರವೂ ಹೋಯಿತು.
ಈಗ ಹೊಸಮನೆಹಳ್ಳಿಯಲ್ಲಿರುವ ಮನೆಗಳೆಂದರೆ ಮೂರೆ, ಹೇರಂಬ ಹಾಗು ಇವನ ಹುಟ್ಟಾಳು ಹಸಲರ ಬೈರನದು ಮತ್ತು ಗಣಪಯ್ಯನದು. ಹೇರಂಬ ಮನೆ-ತೋಟ-ಹೊಲಗಳಿಗೆ ಇನ್ನೇನು ಪರಿಹಾರ ಮಂಜೂರಾಗಿ ಆತ ಇಲ್ಲಿಂದ ಹೊರಟರೂ ಹೊರಟನೆ ಎಂಬ ಗಾಳಿ ಮಾತೂ ಇದೆ. ಹೇರಂಬನೇನೋ ಇಲ್ಲೇ ಇರುವ ವಿಚಾರಮಾಡಿ ಭತ್ತ ಬಿತ್ತಿದ್ದಾನೆ. ಆದರೆ ಪರಿಹಾರ ಕೊಟ್ಟ ಮೇಲೆ ಬಿಟ್ಟು ಹೊರಡು ಎಂದು ಸರಕಾರ ಹೇಳಿದರೆ ಆತ ಹೊರಡಬೇಕಾಗುತ್ತದೆ. ಹೀಗೆ ಹೇರಂಬ ಹೊರಟರೆ ಅವನ ಹುಟ್ಟಾಳು ಬೈರನೂ ಅವನ ಹಿಂದೆ ಹೊರಟನೆ. ಅನಂತರ ಹೊಸಮನೆಹಳ್ಳಿಯಲ್ಲಿರುವುದೆಂದರೆ ತನ್ನ ಮನೆಯೊಂದೆ!
ಹುಲಿ ಹೊಕ್ಕ ಕಾಡಿನಲ್ಲಿ ಹೊರಟವನಂತೆ ಗಣಪಯ್ಯ ಮನೆಗೆ ಬಂದ. ಚಪ್ಪರದಲ್ಲಿ ಕಾಲಿಡುತ್ತಿರುವ ಹಾಗೆಯೇ ಜಗುಲಿಯ ಮೇಲಿನ ಮಂಚದಲ್ಲಿ ಮಲಗಿದ್ದ ಅಪ್ಪ ತಾನು ಬಂದುದನ್ನು ಗಮನಿಸಿ, ಕೆಮ್ಮಿ ನರಳಿ ಎಂದ-
“ಗಣಪಾ….ಹೇರಂಬ ಸಿಕ್ಕಿದ್ನೇನೋ?”
“ಇಲ್ಲ….ನಾನು ತೋಟದಿಂದ ಬಂದೆ. ಇಲ್ಲಿಗೆ ಬಂದಿದ್ನಾ ಅವನು?”
“ಹೌದು, ನಿನ್ನ ನೋಡಬೇಕು ಅಂದ… ಅವನು ಈ ವರ್ಷ ಇಲ್ಲಿಂದ ಹೊರಡೋ ಯೋಚನೆ ಮಡ್ತಿದಾನೆ ಅಂತ ಕಾಣುತ್ತೆ…”
“ಹೌದಾ”
ಹುಲಿ ಯಾವ ಮರದ ಮರೆಯಲ್ಲಿ, ಯಾವ ಬಂಡೆಯ ಹಿಂಬದಿಯಲ್ಲಿ ಅಡಗಿದೆಯೋ? ಎಲ್ಲಿಂದ ಮೈಮೇಲೆ ಹಾರುತ್ತದೋ ಎಂದು ಹೆದರಿ ಹೆದರಿ ಬಂದುದಕ್ಕೂ, ಇಲ್ಲಿ ಹುಲಿ ಹಾರಿದ್ದಕ್ಕೂ ಸರಿಹೋಯಿತು. ಕಳಚದ ಚಪ್ಪಲಿ ಸಿಕ್ಕಿಕೊಂಡು ಮತ್ತೆ ಹೊರಟ. ಹೆಂಡತಿ ಬಾಗಿಲಲ್ಲಿ ನಿಂತಾಕೆ ಒಳಗೆ ಹೋದಳು.
ಹೇರಂಬ ಈ ವರುಷ ಇಲ್ಲೇ ಕಳೆಯೋಣ ಎಂದು ಹೇಳಿದ್ದ. ಅವನೇನೋ ಅನಂತಪುರದ ಹತ್ತಿರ ಜಮೀನು ಕೇಳಿದ್ದ. ಆದರೂ ಈ ಮಳೆಗಾಲವನ್ನು ಇಲ್ಲೇ ಕಳೆದು ಅನಂತರ ಹೊಸ ಜಮೀನಿಗೆ ಹೋಗುವುದಾಗಿ ಹೇಳುತ್ತಿದ್ದ. ಆದರೆ ಈಗ ಇದೇನಾಯಿತು? ಹೆಗಲಮೇಲಿನ ವಸ್ತ್ರಕ್ಕೆ ಮುಖ ತಿಕ್ಕಿಕೊಂಡು ದರೆಯ ಮೇಲಿನಿಂದ ಹೇರಂಬನ ತೋಟಕ್ಕೆ ಇಳಿದ.
ಹೇರಂಬನ ತೋಟದಲ್ಲಿ ಗಡಿಬಿಡಿ, ತೋಟದ ಮನೆಯ ಮಾಡಿಗೆ ಹೊದಿಸಿದ್ದ ಸೋಗೆಯನ್ನು ತೆಗೆಯುವ ಸನ್ನಾಹ. ಅವನ ಮನೆಯ ಹತ್ತಿರವೂ ಗದ್ದಲ. ಕೊಟ್ಟಿಗೆಯ ಮೇಲಿನಿಂದ ಮರದ ತೊಲೆಗಳನ್ನು ಕೆಳಗಿಳಿಸಲಾಗುತ್ತಿತ್ತು. ಅರಲಗೋಡಿನ ದೀವ್ರ ಆಳುಗಳು ಓಡಿಯಾಡುತ್ತಿದ್ದರು. ಹೇರಂಬ ಹೊರಡುವುದಂತೂ ಖಚಿತವೆಂದಾಯಿತು. ಕಾರಣವೇನಿರಬಹುದು?
ಗಣಪಯ್ಯ ತೋಟದ ಮೆಟ್ಟಿಲುಗಳನ್ನು ಹತ್ತಿ ಮೇಲೆ ಬರುತ್ತಿರುವುದನ್ನು ನೋಡಿ ಹೇರಂಬ ಮುಂದೆ ಬಂದ.
“ಗಣಪಯ್ಯ ನಿನ್ ಮನೆಗೆ ಹೋಗಿದ್ದೆ. ಅಪ್ಪಯ್ಯ ಹೇಳಿದ್ರ ನಾನು ಬಂದಿದ್ದೆ ಅಂತ?”
“ಹೌದು, ಇದೇ ಈಗ ತೋಟದಿಂದ ಬಂದೆ. ನೀನು ಬಂದಿದ್ದ ವಿಷಯ ತಿಳೀತು. ಈ ಕಡೆ ಬಂದೆ. ಅಲ್ಲ! ಇದೆಲ್ಲ ಏನು ಅಂತ?”
“ಈ ವಿಷಯ ಹೇಳೋಣ ಅಂತನೇ ನಾನು ಬಂದಿದ್ದೆ. ಬಾ ಹೀಗೆ”
ಹೇರಂಬನ ಹಿಂದೆ ಜಗುಲಿ ಏರಿ ಚಾಪೆಯ ಮೇಲೇರಿ ಕುಳಿತಾಗ, ಹೇರಂಬ ಒಳ ಬಾಗಿಲತ್ತ ತಿರುಗಿ-
“ಕೂಸೇ, ಗಣಪಯ್ಯ ಬಂದಾನೆ ಅಂತ ಹೇಳು”
ಎಂದು ಹೆಂಡತಿಗೆ ಕೇಳುವಂತೆ ಮಗಳಿಗೆ ಕೂಗಿ ಹೇಳಿ ಗಣಪಯ್ಯನತ್ತ ತಿರುಗಿದ.
“ಮುಳುಗಡೆ ಆಫೀಸಿನಲ್ಲಿ ನನ್ನ ರಿಕಾರ್ಡೆಲ್ಲ ತೀರ್ಮಾನವಾಗಿದೆ. ನಾನೇ ಹೋಗಿ ನೋಡಿಬಂದೆ. ತೋಟ-ಹೊಲ-ಮನೆ ಬಾಬ್ತು ಸದ್ಯಕ್ಕೆ ಐವತ್ತು ಸಾವಿರ ರೂಪಾಯಿ ಮಂಜೂರಾಗಿದೆ. ಅನಂತಪುರದ ಜಮೀನು ನನ್ನ ಹೆಸರಿಗೇನೇ ಮಂಜೂರಾಗಿದೆ. ಅಲ್ಲಿ ಕಾಡು ಕಡಿದು ಸಾಗುವಳಿ ಮಾಡೋದಕ್ಕೂ ಬೇರೆ ಹಣ ಮಂಜೂರು ಮಾಡಿದಾರೆ. ಈ ಕೂಡಲೇ ಹೊಸಮನೆಹಳ್ಳಿ ಬಿಟ್ಟು ಹೊರಡಿ ಅಂತ ಆಜ್ಞೇನೂ ಮಾಡಿದ್ದಾರೆ…ಈವತ್ತಲ್ಲ ನಾಳೆ ಇಲ್ಲಿಂದ ಹೋಗ್ಲೇಬೇಕು. ತೋಟದಲ್ಲಿ ಗೊನೇ ಬಿಟ್ಟಿರೋ ಅಡಿಕೆ ಆಸೆಗೆ, ಹೊಲದಲ್ಲಿ ಬಿತ್ತಿರೋ ಭತ್ತದ ಆಸೆಗೆ ಇಲ್ಲಿ ನಿಂತು ಪರದಾಡೋದು ಯಾಕೆ? ನೀರು ಈ ವರುಷ ಎಲ್ಲಿಗೆ ಏರುತ್ತೋ? ಗುಡ್ಡ ಮುಳುಗೋದಿಲ್ಲ. ಆದ್ರೆ ಮನೆ-ತೋಟ ಉಳಿಯುತ್ತೆ ಅಂತ ಏನು ಗ್ಯಾರಂಟಿ? ಅದಕ್ಕೆ ಹಳ್ಳಿ ಬಿಡೋದು ಅಂತ ನಿರ್ಧಾರ ಮಾಡಿದೀನಿ. ನಾಳೆ ಸರಕಾರಿ ಲಾರಿ ಬರುತ್ತೆ, ಸಾಮಾನು ಸಾಗಿಸಲಿಕ್ಕೆ”.
ಹೇರಂಬನ ಮಗಳು ಕಾಫಿ ಲೋಟ ತಂದಿರಿಸಿದಳು. ಹೇರಂಬ ‘ತೆಗೆದುಕೋ’ ಎಂದ. ಗಣಪಯ್ಯ ಯಾಂತ್ರಿಕವಾಗಿ ಅದನ್ನೆತ್ತಿಕೊಂಡು ತುಟಿಗಿರಿಸಿದ. ಹೇರಂಬನ ಮಾತಿಗೆ ಏನು ಉತ್ತರ ಕೊಡುವುದೆಂಬುದೇ ಅರಿಯದೆ ಕೊರಡಿನ ಏಟು ತಿಂದವನಂತೆ ನಾಲಿಗೆ ಕಚ್ಚಿಕೊಂಡು ಕುಳಿತ.
“ಹೇರಂಬ….ನಿನ್ನ ಕೆಲಸ ಆಯ್ತು. ನಾನು ಎಲ್ಲಿಗೆ ಹೋಗಲಿ? ಏನು ಮಾಡಲಿ? ಸರಕಾರ ಜಮೀನು ಪರಿಹಾರ ಕೊಡೋತನಕ ನಾನಂತೂ ಇಲ್ಲಿಂದ ಹೋಗಬಾರದು ಅಂತ ತೀರ್ಮಾನ ಮಾಡಿದೀನಿ. ನೀರು ಏರಿ ಹಳ್ಳಿ ಮುಳುಗಿ ನಾವೆಲ್ಲ ಸತ್ರೂ ಚಿತೆಯಿಲ್ಲ….ಇಲ್ಲಿಂದ ಹೋಗೋದಂತೂ ಸುಳ್ಳು”
“ಮತ್ತೂ ಒಂದ್ಸಾರಿ ಆಫೀಸಿಗೆ ಹೋಗಿ ಬಾ ಗಣಪಯ್ಯ, ಹತ್ತೋ ಐದೋ ಕೊಟ್ರೆ ಕೆಲಸ ಬೇಗ ಆದೀತು.”
ಕೊಟ್ಟಾಯ್ತು. ನೂರರ ಮೇಲಾಯ್ತು ಕೊಟ್ಟಿದ್ದು; ಇನ್ನು ಪ್ರಾಣ ಕೊಡೋದೇ ಬಾಕಿ”.
ಹೆಗಲಮೇಲಿನ ವಸ್ತ್ರವನ್ನು ಫಟೀರನೆ ಝಾಡಿಸಿ ಮತ್ತೆ ಹೆಗಲಮೇಲೆ ಅದನ್ನು ಹಾಕಿಕೊಂಡು ಹೊರಟ ಗಣಪಯ್ಯ-
“ನಾನು ಬರ್ತೀನಿ ಹೇರಂಬ”
ಎಂದವನೇ ಹೇರಂಬನ ಮನೆಯಿಂದ ಹೊರಬಿದ್ದ.
ಅಂದುಕೊಂಡಹಾಗೆಯೇ ಆಯಿತು. ಹೇರಂಬ, ಹಸಲರ ಬೈರ ಇಲ್ಲಿಂದ ಹೋದಮೇಲೆ ಹೊಸಮನೆ ಹಳ್ಳಿಯಲ್ಲಿ ನಾವು ಮೂವರೆ. ತಾನು, ತನ್ನ ತಂದೆ, ಹೆಂಡತಿ ನಾಗವೇಣಿ. ಶರಾವತಿ ಹಳ್ಳಿಯ ಸುತ್ತ ಆಕ್ರಮಣ ಮಾಡಿಕೊಂಡು, ಮೇಲೆ ಮೇಲೆ ಏರುತ್ತಿರಲು ನಾವು ಮೂವರೇ ಈ ದ್ವೀಪದಲ್ಲಿ ನಾಲ್ಕು ತಿಂಗಳುಗಳನ್ನು ಕಳೆಯಬೇಕು. ಈ ಮಳೆಗಾಲ ಮುಗಿಯುವ ತನಕ ಈ ದ್ವೀಪಕ್ಕೆ ಯಾವುದೇ ರೀತಿಯ ಹೊರಗಿನ ಸಂಪರ್ಕವಿರುವುದು ಸಾಧ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಇಲ್ಲಿ ಬದುಕುವುದು ಹೇಗೆ? ಈ ರಗಳೆಯೇ ಬೇಡ. ಎಲ್ಲಿಗಾದರೂ ಹೋಗೋಣವೆಂದರೆ, ಎಲ್ಲಿಗೆ ಹೋಗುವುದು? ತೋಟ, ಹೊಲಗಳ ಮೇಲೆ ಅವಲಂಬಿಸಿಕೊಂಡಿರುವ ತಾನು ಬದುಕುವುದಾದರೂ ಹೇಗೆ?
ಮನೆಗೆ ಬರುತ್ತಿರುವಂತೆಯೇ ಅಪ ಕಾತರದ ಧ್ವನಿಯಲ್ಲಿ ಕೇಳಿದ-
“ಮಾಣಿ, ಹೇರಂಬ ಏನಂತೆ?”
“ಅವನು ಹೊರಟಿದಾನೆ ಅಪ್ಪಯ್ಯ, ಅವನಿಗೆ ಸರಕಾರ ಜಮೀನು ಕೊಟ್ಟಿದೆಯಂತೆ….ಹಣಾನ ಮಂಜೂರು ಮಾಡಿದೆಯಂತೆ….ಹೊಸ ಜಮೀನಿಗೆ ಹೋಗಿ ಸಾಗುವಳಿ ಮಾಡ್ತೀನಿ ಅಂತಿದಾನೆ ಅವನು….ಕೊಟ್ಟಿಗೆಮನೆ ಕೀಳ್ತಿದಾನೆ….ನಾಳೆ ನಾಡಿದ್ದರಲ್ಲಿ ಅವನು ಇಲ್ಲಿಂದ ಸಂಸಾರಸಮೇತ ಹೋಗೋದಂತೂ ನಿಜ….”
“ಹೌದಾ”
ಮುದುಕ ಅಡಿಕೆ ಮರದ ಗರಿಗಳು ಗಾಳಿಗೆ ಕಂಪಿಸುವುದನ್ನೇ ನೋಡಿದ.
“ಮಾಣಿ ಈ ವರ್ಷ ನೀರು ಇಲ್ಲಿಗೆಲ್ಲ ಬರುತ್ತಂತ?”
“ಅದೇನಾಗುತ್ತೋ….ನಾವು ಮಾತ್ರ ಇಲ್ಲಿಂದ ಹೋಗೋ ಹಾಗಿಲ್ಲ…”
ಮಗ ನೆಲವನ್ನು ಒದೆಯುತ್ತ ಒಳಹೋದುದನ್ನು ನೋಡಿ ಮುದುಕ ನಿಟ್ಟುಸಿರು ಬಿಟ್ಟ.
ಈ ಒಂದು ವರ್ಷವನ್ನೂ ಇಲ್ಲಿ ಕಳೆದರಾಗುತ್ತಿತ್ತು ಎಂಬುದು ಮುದುಕನ ಬಯಕೆ ಹೊಸಮನೆಹಳ್ಳಿ ಬಿಟ್ಟು ಹೊರಡಬೇಕೆನ್ನುವ ವಿಚಾರ ಬಂದರೆ ಮುದುಕನ ಕೈಕಾಲು ಬಿದ್ದುಹೋಗುತ್ತವೆ. ಆತ ನೆಲಹಿಡಿದು ಕುಳಿತುಬಿಡುತ್ತಾನೆ. ಈ ತುಂಡು ನೆಲದ ಮೇಲೆ ಅದೇನೋ ಪ್ರೀತಿ, ವ್ಯಾಮೋಹ, ಹೆಣ್ಣು ತನ್ನ ತೌರಿಗಾಗಿ ಹಂಬಲಿಸುವಂತಹಾ ಮನೋಭಾವ. ಈ ಪ್ರದೇಶವನ್ನು ಬಿಟ್ಟು ಹೋಗಬಾರದೆನ್ನುವ ಛಲ. ಮುಳುಗಿದ ಮೇಲೂ ಇಲ್ಲಿ ನಿಲ್ಲಲು ಸಾಧ್ಯವಿಲ್ಲವೆ ಎಂದಾತ ಯೋಚಿಸಿದ್ದು ನೂರು ಸಲ. ಡ್ಯಾಮು ನಿಲ್ಲದೆ ಒಡೆದುಹೋಗಲಿ ಎಂದು ಹಾರೈಸಿದ್ದು ಸಾವಿರ ಬಾರಿ, ಬಂದ ಬಂದ ಸರಕಾರಿ ನೌಕರರನ್ನೆಲ್ಲ ಅಡ್ಡಗಟ್ಟಿ ಮುದುಕ ಕೇಳುತ್ತಿದ್ದ-ಸೀತಾಪರ್ವತ ನಿಜವಾಗಿಯೂ ಮುಳುಗಿಹೋಗುತ್ತದೆಯೇ? ಎಂದು. ಆ ನೌಕರರು ಏನೇನೋ ಉಡಾಫೆಯ ಮಾತನಾಡುವುದಿತ್ತು. ಹಲವರು ಇರುವ ವಿಷಯ ಹೇಳುತ್ತಿದ್ದರು. ಗುಡ್ಡದ ಮೇಲೆ ಹತ್ತು ಅಡಿ ನಿರು ನಿಲ್ಲುತ್ತದೆಂದೂ, ಆದರೆ ಇಷ್ಟು ನೀರು ನಿಲ್ಲಲು ಡ್ಯಾಮು ಪೂರ್ಣವಾಗಿ ಕಟ್ಟಿ ಮುಗಿಯಬೇಕೆಂದೂ ಅವರು ಹೇಳುತ್ತಿದ್ದರು. ಇನ್ನೂ ಮೂರು ವರ್ಷಗಳ ವರೆಗೆ ಹೊಸಮನೆಹಳ್ಳಿಗೆ ಯಾವ ಅಪಾಯವೂ ಇಲ್ಲವೆಂಬ ಭರವಸೆಯನ್ನೂ ಕೆಲವರು ನೀಡಿದ್ದರು.
ಅಲ್ಲಿಯವರೆಗಾದರೂ ಇಲ್ಲಿರಬಹುದಲ್ಲ ಎಂಬುದು ಮುದುಕನ ವಾದ. ಈಗಲೇ ಪರಿಹಾರಕ್ಕೆ, ಜಮೀನಿಗೆ ಏಕೆ ವರಾತ ಹಚ್ಚಬೇಕು. ಅದು ನಿಧಾನವಾಗಿ ಬರಲಿ. ಈಗಂತೂ ಉಣ್ಣಲು ಕಡಿಮೆಯಾಗದಷ್ಟು ಇದೆಯಲ್ಲ-ಇದು ಮುದುಕಳಿ ವಾದ. ಏನೋ ಹಳ್ಳಿಯ ಸುತ್ತ ನೀರು ನಿಲ್ಲಬಹುದು. ಕೂಲಿಯಾಳುಗಳು ಸಿಗದೇ ಹೋಗಬಹುದು, ಇಷ್ಟಕ್ಕೇ ಗಾಬರಿಯಾಗುವುದೇಕೆ? ಒಂದು ಮಳೆಬಿದ್ದಾಕ್ಷಣ ತೋಟದ ಹೊಲದ ಕೆಲಸಗಳನ್ನು ಮುಗಿಸಿದರೆ, ಮತ್ತೆ ಮಳೆಗಾಲ ಮುಗಿದ ಮೇಲೆ ತಾನೆ ಕೊಯಿಲು ಇತ್ಯಾದಿ. ಮಧ್ಯದ ಚಿಲ್ಲರೆ ಕೆಲಸಗಳನ್ನು ಮಾಡಲು ಯಾರನ್ನಾದರೂ ಇಟ್ಟುಕೊಂಡರಾಯಿತು. ಮುದುಕನೇನೋ ಒಂದು ನಿರ್ಧಾರಕ್ಕೆ ಬಂದ. ಆದರೆ ಅವನ ಮಗ?
ಗಣಪಯ್ಯ ಸರಕಾರವನ್ನು ಶಪಿಸಿಹಾಕಿದ. ನಾಳೆ ಹೋಗಿ ಮುಳುಗಡೆ ಆಫೀಸನ್ನೇ ಕೆಡವಿಹಾಕುವವನಂತೆ ಕೂಗಾಡಿದ. ನಾಗವೇಣಿ ಇಲ್ಲಿರುವುದು ಬೇಡ, ನಾಲ್ಕು ತಿಂಗಳ ಮಟ್ಟಿಗೆ ಹೋಗಿ ತನ್ನ ತಂದೆಯ ಮನೆಯಲ್ಲಿರೋಣ ಎಂದಾಗ-
“ನಾಲ್ಕು ತಿಂಗಳಾದ ಮೇಲೇನು ಶೆಗಣಿ ತಿನ್ನೋದ” ಎಂದು ಹೆಂಡತಿಯ ಮೇಲೆ ತಿರುಗಿಬಿದ್ದ.
“ಸರಕಾರದೋರು ನನಗೆ ಜಮೀನು, ಪರಿಹಾರ ಕೊಟ್ರು ಅದು ಈಗ ನಾನು ತೊಕೊಳೋ ಕುಳ ಅಲ್ಲ. ಈ ಮಳೆಗಾಲದಲ್ಲಿ ನಾನಿಲ್ಲಿ ಇದ್ದು ಬೆಳೆ ಬೆಳೆಯೋನೇ ಸೈ…. ಅದೇನು ಬೇಕಾದ್ರೂ ಆಗಲಿ…”
ಎಂದು ತೋಳೇರಿಸಿದ. ತಂದೆ ಒಳಬಂದು ತನ್ನ ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದಾಗ ಇನ್ನೂ ಖುಷಿಪಟ್ಟ. ನಿನಗೆ ಅಷ್ಟೊಂದು ಬೇಸರವಾಗಿರುವುದಾದರೆ ನೀನು ನಿನ್ನ ತಂದೆಯ ಮನೆಗೆ ಹೋಗು ಎಂದು ಬೇರೆ ಹೆಂಡತಿಗೆ ಬೆದರಿಕೆ ಹಾಕಿದ. ಹೇರಂಬ ಹೊಲ-ತೋಟ ಬಿಟ್ಟು ಹೋಗುತ್ತಿದ್ದಾನೆ. ಅದನ್ನೂ ತಾನೇ ನೋಡಿಕೊಳ್ಳಬಾರದೇಕೆ ಎಂದು ಕೋಪದ ನಡುವೆ ಹೊಸದೊಂದು ವಿಚಾರ ತಲೆಯಲ್ಲಿ ಹೊಕ್ಕಿದ್ದರಿಂದ ಶಾಂತನಾದ. ಹೇರಂಬ ಅಡಕೆ ಮರಗಳನ್ನು, ಭತ್ತದ ಸಸಿಗಳನ್ನು ಕಿತ್ತು, ಒಯ್ಯುವುದು ಸಾಧ್ಯವಿಲ್ಲ. ಅವುಗಳನ್ನು ನೋಡಿಕೊಳ್ಳಲು ಇಲ್ಲಿಯಾರೂ ಇರುವುದಿಲ್ಲ. ಅವನು ಹೋಗುವಾಗ ಒಂದು ಮಾತು ಕೇಳಿದರೆ, ಆಯಿತು ಎಂದಾನು. ಜೊತೆಗೆ ಫಸಲು ಬಂದ ಮೇಲೆ ಏನಾದರೂ ತಂದುಕೊಡುತ್ತೇನೆಂದು ಹೇಳುವುದು. ಹೀಗೆ ಆದರೆ ಒಳ್ಳೆಯದೆ. ಮುಳುಗಡೆ ಆಫೀಸಿನವರು ಬಂದು ತಕರಾರು ಮಾಡಿದರೆ ಒಂದೆರಡು ಕಾಸು ಎಸೆದರಾಯಿತು. ನೋಡೋಣ.
ಹೆಂಡತಿಯತ್ತ ತಿರುಗಿ ಹುಮ್ಮಸ್ಸಿನಿಂದ ಕೇಳಿದ-
“ನೀರು ಕಾದಿದೆ ಏನೆ?”
ನಾಗವೇಣಿ ಒಣಗಿದ ಬದನೆಕಾಯಿ ಮುಖ ಮಾಡಿಕೊಂಡಿದ್ದವಳು ಹುಂಞ್ ಎಂದಳು.
ಜಗುಲಿಯ ಮೇಲಿನ ಅಡ್ಡಗಳುವಿನಲ್ಲಿದ್ದ ಪಾಣೀಪಂಚೆಯನ್ನು ತೆಗೆದು ಸೊಂಟಕ್ಕೆ ಸುತ್ತಿಕೊಂಡ. ಉಟ್ಟಪಂಚೆ ಸಡಿಲಿಸಿ, ಮೌಂಜಿಯನ್ನು ಪಾಣೀ ಪಂಚೆಯ ಮೇಲೆ ಎಳೆದುಕೊಂಡ. ತೋಳು ಕೆರೆದುಕೊಳ್ಳುತ್ತ ಬಚ್ಚಲಿಗೆ ನಡೆದ.
ಸೀತಾಪರ್ವತದ ನೆತ್ತಿಯಮೇಲಿನ ನೀರ ಝರಿಯೊಂದರ ತಿಳಿನೀರು, ಅಡಿಕೆ ಮರದ ದೋಣಿಯ ಮೂಲಕ ಹರಿದು ನೇರವಾಗಿ ಬಚ್ಚಲು ಮನೆಗೇನೇ ಬಂದು ಬೀಳುತ್ತಿತ್ತು. ನೀರಿನ ತೊಟ್ಟಿಯಲ್ಲಿ ನೀರು ಧಪಧಪ ಎಂದು ಬೀಳುವ ಸದ್ದು ಕಿವಿಗಳಿಗೆ ಹೊಂದಿಕೊಂಡು ಹೋಗಿತ್ತು. ನಾಗವೇಣಿ ತೊಟ್ಟಿಯ ನೀರನ್ನು ಹಂಡೆಗೆ ಮೊಗೆದಳು. ಬಚ್ಚಲು ಒಲೆಗೆ ಕುಂಟೆಯೊಂದನ್ನು ತುರುಕಿ, ಸೀಗೇ ಪುಡಿಯನ್ನು ಬಚ್ಚಲ ಕಟ್ಟೆಯ ಮೇಲೆ ತಂದಿರಿಸಿ, ತೆಂಗಿನ ಕತ್ತ ತರಲು ಒಳ ಹೋದಾಗ, ಗಣಪಯ್ಯ ಬಿಸಿಬಿಸಿ ನೀರನ್ನು ತಲೆಯ ಮೇಲೆ ಸುರಿದುಕೊಂಡು ಹಾಂ ಎಂದ. ಆ ವರೆಗಿನ ಆಯಾಸ ದಣಿವು ಎಲ್ಲವೂ ಮಾಯವಾದಂತಿತ್ತು.
ಹೇರಂಬನದು ಒಂದು ರೀತಿಯ ಸ್ವಭಾವ. ಅತಿಯಾಸೆ ಎನ್ನುವುದೇ ಇಲ್ಲದ ವ್ಯಕ್ತಿ ಆತ. ಮೊದಲು ಹೊಸಮನೆಯಲ್ಲೇ ಇದ್ದು ತೋಟ-ಹೊಲ ನೋಡಿಕೊಂಡು ಮಳೆಗಾಲ ಮುಗಿದ ಮೇಲೆ ಹೊಸ ಜಮೀನಿಗೆ ಹೊರಟುಬಿಡುವುದೆಂದು ಯೋಚಿಸಿದನಾದರೂ ಆ ನಂತರ ಸರಕಾರ ಪರಿಹಾರ ಕೊಟ್ಟು ಹೊಸ ಜಮೀನು ಕೊಟ್ಟಮೇಲೂ ಈ ಹಳೆಯದರ ಮೇಲೆಯೇ ಏಕೆ ಅವಲಂಬಿಸಿಕೊಂಡಿರಬೇಕು ಎಂದು ಯೋಚಿಸಿದ. ಅನಂತಪುರದ ಹತ್ತಿರದ ಆ ಹೊಸ ಸ್ಥಳವು ಅವನ ಮನಸ್ಸಿಗೆ ತುಂಬಾ ಹಿಡಿಸಿತಲ್ಲದೇ ಪಟ್ಟಣದ ವ್ಯಾಮೋಹವೂ ಸ್ವಲ್ಪ ಇದ್ದುದರಿಂದ ಇಲ್ಲಿಗೆ ಹೊಸಮನೆಯ ವ್ಯಾಮೋಹ ಸಾಕು ಎಂದು ನಿರ್ಧರಿಸಿದ. ನಾಳೆ ಹೇಗೋ, ತನ್ನದು ತುಂಬಿದಮನೆ. ಹೆಂಡತಿ ತುಂಬಿದ ಬಸುರಿ ಬೇರೆ, ಚಿಕ್ಕಚಿಕ್ಕ ಮಕ್ಕಳು, ಶರಾವತಿಯ ನೀರು ಹಳ್ಳಿಯ ಸುತ್ತ ಘೇರಾಯಿಸಿಕೊಂಡಾಗ ಏನಾದರೂ ಬೇಕಾದರೆ? ಘೇರಾಯಿಸಿಕೊಂಡ ನೀರು ಇಳಿಯದೇ ಹೋದರೆ? ಇಂಜಿನಿಯರುಗಳ ಲೆಕ್ಕಾಚಾರದಲ್ಲಿ ಹೆಚ್ಚುಕಡಿಮೆಯಾಗಿ ನೀರು ಏರಿ ಹಳ್ಳಿ ಮುಳುಗಿದರೆ? ಇಷ್ಟು ದಿನ ಇಲ್ಲಿ ಇದ್ದುದೇ ಸಾಕು, ಇನ್ನು ಹೊರಡಬೇಕು…
ಹೇರಂಬ ಹೊರಟಿದ್ದೂ ಆಯಿತು. ಸರಕಾರಿ ಲಾರಿಗಳು ಬಂದು ಅವನ ಸಾಮಾನುಗಳನ್ನೆಲ್ಲ ಹೊತ್ತುಕೊಂಡು ಹೋದವು. ಮರ, ಹಂಚು, ಹುಲ್ಲು, ಎಲ್ಲವನ್ನೂ ಆತ ಸಾಗಿಸಿದ.
ಗಣಪಯ್ಯ ಹೋಗಿ-
‘ಹೇರಂಬ, ನನ್ನ ವಿಚಾರ ಹೀಗಿದೆ”
ಎಂದಾಗ ಹೇರಂಬ-
“ನಾನೇ ಹೇಳಬೇಕೂಂತಿದ್ದೆ…ನೀನು ಇಲ್ಲೇ ಉಳೀಯೋದಾದ್ರೆ ನಾನು ಈವರೆಗೂ ನೋಡ್ಕೋತಿದ್ದ ತೋಟ-ಹೊಲಾನ ನೀನೇ ನೋಡ್ಕೋ. ಹಾಗೆ ನೋಡಲಿಕ್ಕೆ ಹೋದರೆ ಇದು ನಂದಲ್ಲ…ನಂದಾಗಿತ್ತು. ಅಷ್ತೆ…ಒಂದು ಅಡಕೇನೂ ನೀನು ನನಗೆ ಕೊಡೋದು ಬೇಡ…ಭತ್ತ ನಾನು ಬಿತ್ತಿದೀನಿ…ಅದನ್ನು ಕೊಡೋದು ಬಿಡೋದು ನಿನಗೆ ಸೇರಿದ್ದು…ಯಾಕೆ ಅಂದ್ರೆ ನೀನು ಮುಂದೆ ನನಗಿಂತ ಹೆಚ್ಚಾಗಿ ಕೆಲಸ ಮಾಡಬೇಕಲ್ಲ…”
ಎಂದ. ಕೊನೆಗೆ ಅವನೇ ಮತ್ತೆ-
“ಈಗ ಇಲ್ಲಿ ಇರೋವ್ರು ನೀವು ಮೂವರು…ನಿನ್ ತಂದೆ ಏನೂ ಕೆಲಸ ಮಾಡಲಾರ…ನೀನು ನಿನ್ ಹೆಣ್ತಿ ಅದೆಷ್ಟು ಮಾಡ್ತೀರ…ಬೇಕಾದ್ರೆ ಯಾರಾದ್ರೂ ದೀವ್ರನಾಯ್ಕರು ಸಿಕ್ರೆ ಕೆಲಸಕ್ಕೆ ಇಟ್ಕೊ…”
ಎಂದ. ಗಣಪಯ್ಯ ತಲೆಯಾಡಿಸಿದ.
“ನೀನು ಹೇಳೋದು ಸರಿಯೆ…ಧೈರ್ಯಕ್ಕೆ ಆಸರೆಗೆ ಒಂದಿಬ್ರು ಬೇಕು…ಅರಲಗೋಡಿನಲ್ಲಿ ಇಲ್ಲ ಹಿರೇಮನೇಲಿ ಯಾರಾದ್ರು ಸಿಗ್ತಾರೋ ನೋಡ್ತೀನಿ…”
ಎಂದ ಗಣಪಯ್ಯ.
ಹೇರಂಬ ಹೆಗಡೆ ಅವನ ಹೆಂಡತಿ ಮಕ್ಕಳು, ಹಸಲರ ಬೈರ ಅವನ ಹೆಂಡತಿ ಮಕ್ಕಳು ಹೊಸಮನೆಹಳ್ಳಿಗೆ ವಿದಾಯ ಹೇಳಿ ಹೊರಟರು. ಮೂರು ದಿನಗಳಿಂದ ಓಡಿಯಾಡುತ್ತಿದ್ದ ಎರಡು ಲಾರಿಗಳು ಕೊನೆಯ ಬಾರಿಗೆ ಹೇರಂಬ ಹೆಗಡೆ ಹಾಗೂ ಅವನ ಮನೆಯವರನ್ನು, ಬೈರ ಹಾಗೂ ಅವನ ಹೆಂಡತಿ ಮಕ್ಕಳನ್ನು ಹತ್ತಿಸಿಕೊಂಡು ಶರಾವತಿ ನದಿಯ ಮಗ್ಗುಲಲ್ಲಿಯೇ ತಾತ್ಕಾಲಿಕವಾಗಿ ಮಾಡಿದ ರಸ್ತೆ ಹಿಡಿದು ತಾಳಗುಪ್ಪದ ಹೆದ್ದಾರಿಯತ್ತ ನಡೆದವು.
ಎರಡೂ ಲಾರಿಗಳು ಅತ್ತ ಹೊರಟುಹೋದ ಮೇಲೆ ಹೊಸಮನೆಯ ಮೂವರಿಗೆ ತುಂಬಾ ಬೇಸರವಾಯಿತು. ಅಂಜಿಕೆಯಾಯಿತು. ಕೆಡುಕೆನಿಸಿತು. ಈಗಿಂದೀಗ ಹೊರಟು ಬಿಡಬೇಕು ಎನಿಸಿತು. ಆದರೆ ಇದೆಲ್ಲ ತಾತ್ಕಾಲಿಕ. ಗಣಪಯ್ಯ ಮಳೆಗಾಲಕ್ಕೆ ಸೌದೆ ಮಾಡಬೇಕೆಂದು ಹೆಗಲಮೇಲೆ ಕೊಆಡಲಿ ಹಾಕಿಕೊಂಡು ಹೊರಟ. ನಾಗವೇಣಿ ಕೊಟ್ಟಿಗೆಯತ್ತ ಬಂದ ಬೆಳ್ಳಿ ಕರುವಿಗೆ ಹಾಲು ಕುಡಿಸಬಹುದೆಂದು ಅತ್ತ ಓಡಿದಳು. ಮುದುಕ ಚಪ್ಪರದ ಹೊರಗೆ ಕುಳಿತು ಒಣಹಾಕಿದ್ದ ಉದ್ದಿನ ಹಪ್ಪಳಕ್ಕೆ ಕಾಗೆ ಬಾರದಂತೆ ನೋಡಿಕೊಳ್ಳತೊಡಗಿದ. ದೂರದ ಶರಾವತಿಯ ಮೇಲಿನಿಂದ ಬೀಸಿಬಂದ ಗಾಳಿ ತಣ್ಣಗಿತ್ತು. ನೀಲಿ ಆಕಾಶದಲ್ಲಿ ಬಿಳಿ ಮುಗಿಲೊಂದು ತೆಳುವಾಗಿ ತೇಲುತ್ತಿತ್ತು.
*
*
*
ಗಣಪಯ್ಯ ಕಾರ್ಗಲ್ಲಿನ ಮುಳುಗಡೆ ಆಫೀಸಿಗೆ ಹೋದ. ಮುದಿ ಜವಾನ ಸಾಹೇಬರ ಬಾಗಿಲು ಕಾಯುತ್ತ ಕುಳಿತವ-
“ಏನು ಸ್ವಾಮಿ, ಬೋ ದೂರ ಬಂದ್ರಿ”
ಎಂದು ಹುಳುಕು ಹಲ್ಲು ತೋರಿಸಿದ. ಗಣಪಯ್ಯ ಅವನನ್ನು ಪಕ್ಕಕ್ಕೆ ತಳ್ಳಿ ಸಾಹೇಬರ ಎದುರು ಹೋಗಿ ನಿಂತು ಹೊಸಮನೆಹಳ್ಳಿಯ ಹೇರಂಬನಿಗೂ, ಪರಮೇಶ್ವರಪ್ಪನಿಗೂ ಪರಿಹಾರ, ಜಮೀನು ಕೊಟ್ಟಿರುವ ವಿಷಯ ಹೇಳಿ-
“ನಾನೇನು ಪಾಪ ಮಾಡಿದ್ದೆ ಸ್ವಾಮಿ….ನಾನು, ನನ್ನ ತಂದೆ, ಹೆಂಡತಿ ಈ ವರುಷದ ಮಳೆಗಾಲದ ಜಲಸಮಾಧಿಯಾಗಲಿ ಅಂತ ನಿಮ್ಮಾಸೆಯೋ ಹೇಗೆ?”
ಎಂದು ಕೇಳಿದ.
ಸಾಹೇಬರು ಕೊಂಚ ಸೌಮ್ಯ ಸ್ವಾಭಾವದವರು. ಹೆಚ್ಚು ತಾಳ್ಮೆಯುಳ್ಳವರು. ಹಳ್ಳಿಗರ ದುಡುಕು ಸ್ವಾಭಾವವನ್ನು ಅರಿತವರು. ಗಣಪಯ್ಯನ ಜೋರು ಇಳಿದಮೇಲೆ ಹತ್ತಿರದ್ ಖುರ್ಚಿಯನ್ನು ತೋರಿಸಿ ಅವರೆಂದರು-
“ಕೂತ್ಕೊಳ್ಳಿ ಇವ್ರೆ….”
ಗಣಪಯ್ಯ ಸ್ಟೂಲಿನ ಮೇಲೆ ಕುಳಿತ. ತಾನು ಹಾಗೆಲ್ಲ ಕೂಗಿಕೊಳ್ಳಬಾರದಿತ್ತು ಎಂದು ಈಗ ಅವನಿಗೂ ಅನ್ನಿಸಿತು. ಮತ್ತೆ ಹೊಸದಾಗಿ ಹೇಳುವವನಂತೆ ಎಲ್ಲವನ್ನೂ ಅರಿಕೆ ಮಾಡಿಕೊಂಡ. ಪರಮೇಶ್ವರಯ್ಯ, ಹೇರಂಬರು ಪರಿಹಾರ ಪಡೆದು ಹೋದುದು ತಾನು ಯಾವ ಪರಿಹಾರವೂ ಇಲ್ಲದೇ ಮುಳುಗಡೆಯಾಗಲಿರುವ ಆ ಹಳ್ಳಿಯಲ್ಲಿ ಇರಬೇಕಾಗಿ ಬಂದಿರುವುದನ್ನು ಹೇಳಿದ. ಸಾಹೇಬರು ಬೆಲ್ಲು ಕುಟ್ಟಿ ಜವಾನನನ್ನು ಕರೆದು ಅದಾರ ಹೆಸರನ್ನೋ ಹೇಳಿ-
“ಅವರನ್ನ ಕರಿ”
ಎಂದರು. ಅಂಜುತ್ತ ಅಳುಕುತ್ತ ಎದುರುಬಂದು ನಿಂತವ ಹೊಸಮನೆಗೆ ಬಂದು ಹೋಗಿದ್ದೆ ಸರ್ವೇಯರ್.
“ಏನ್ರಿ ಸೆಟ್ರೆ… ಇವರದೇನೋ ಕೇಸ್ ಸೆಟ್ಲ್ ಆಗಿಲ್ವಂತೆ ಯಾಕೆ?”
“ಆಗಿದೆಯಲ್ಲ ಸಾರ್… ಚೆಕ್ ರೆಡಿಯಾಗಿದೆ…”
ಸೆಟ್ಟಿ ಮೈ ಪರಚಿಕೊಂದ.
“ಏನ್ರಿ ಆಗಿರೋದು… ಹೊಸಮನೆಹಳ್ಳಿಲಿರೋ ಎಲ್ಲರಿಗೂ ಜಮೀನು, ಪರಿಹಾರ ಕೊಟ್ಟಿದೀರೇನ್ರಿ ನೀವು?”
ಸೆಟ್ಟಿಯ ಹಾವಭಾವ ಕಂಡೇ ಸಾಹೇಬರು ಎಲ್ಲವನ್ನೂ ಅರ್ಥಮಾಡಿಕೊಂಡರು.
“ಪರಮೇಶ್ವರಪ್ಪ, ಹೇರಂಬ ಹೆಗಡೆ ಇವರಿಗೆ ಕೊಟ್ಟಿದೆ ಸಾರ್”
“ಈ ಇವರಿಗೆ ಹೇಳ್ರಿ-”
“ಇಲ್ಲ ಸಾರ್”
“ಯಾಕೆ?”
ಶೆಟ್ಟಿ ಸಣ್ಣಗೆ ಬೆವರಲಾರಂಭಿಸಿದ.
“ಇವರು ಸಾಕಷ್ಟು ಕೊಡಲಿಲ್ವೇನೋ ಪಾಪ ನಿಮಗೆ”
ಸಾಹೇಬರು ಹಗುರವಾಗಿ ಮೊಟಿಕಿಸಿದರು. ಶೆಟ್ಟಿ ನಾಲಿಗೆ ಕಚ್ಚಿಕೊಂಡ. ಚೌಕದಲ್ಲಿ ಚಪ್ಪಲಿ ಏಟು ತಿಂದವನಂತೆ. ತಲೆತಗ್ಗಿಸಿ ನಿಂತಾಗ ಸಾಹೇಬರೆಂದರು-
“ಏನ್ರಿ ಆಯ್ತು ಇವರ ಕೇಸಿಗೆ?”
“ಫೈಲ್ ಕಳೆದು ಹೋಗಿದೆ ಸಾರ್”
“ಹೀಗೋ…’
ಸಾಹೇಬರು ಗಣಪಯ್ಯನತ್ತ ತಿರುಗಿದರು. ಅವರಿಗೂ ಬೇಸರವೆನಿಸಿತ್ತು. ಯಾವ ಪಾಪದಲ್ಲೂ ಭಾಗಿಗಳಲ್ಲದ ರೈತಾಪಿಜನ ವಿನಾ ಕಾರಣ ತೊಂದರೆ ಅನುಭವಿಸುವುದನ್ನು ಅವರೂ ಸಹಿಸದಾದರು. ಶೆಟ್ಟಿಯನ್ನು ನಿಲ್ಲಿಸಿಕೊಂಡು, ಗಣಪಯ್ಯನಿಗೆ ಅವರೆಂದರು.
“ನೋಡಿ ಇವ್ರೆ, ನಿಮಗೆ ಬರಬೇಕಾಗಿರೋ ಹಣ, ಜಮೀನು ಇತ್ಯಾದಿ ಏನಿದೆ ಅದನ್ನು ಈ ಮಳೆಗಾಲ ಮುಗಿದ ತಿಂಗಳಿಗೇನೇ ನಿಮಗ ಕೊಡಿಸೋ ಜವಾಬ್ದಾರಿ ನನಗಿರಲಿ…ಹೊಸಮನೆಹಳ್ಳಿ ಸುತ್ಲೂ ನೀರು ನಿಂತ್ರೂ ಅದು ಅನಂತರ ಇಳಿದುಹೋಗುತ್ತೆ. ನೀವೇನೂ ಗಾಬ್ರಿಯಾಗಬೇಡ್ರಿ, ಹೋಗಿಬನ್ನಿ”
ಗಣಪಯ್ಯ ಅವರ ಮೆದುದನಿಗೆ ಮುಗ್ಧನಾಗಿ ಅಲ್ಲಿಂದ ಹೊರಟ. ಬಾಗಿಲು ದಾಟುತ್ತಿರುವಾಗ ಸಾಹೇಬರು ಶೆಟ್ಟಿಯ ಮೇಲೆ ರೇಗಿ ಬೀಳುತ್ತಿರುವುದು ಕೇಳಿಸಿತು. ಮನಸ್ಸಿಗೆ ಸಂತೋಷವೂ ಆಯಿತು.
ಗಣಪಯ್ಯ ಬಸ್ಸು ಹತ್ತಿ ಅರಲಗೋಡಿಗೆ ಬಂದ. ಅಲ್ಲಿಂದ ಕಾಲುದಾರಿ ಹಿಡಿದು ಹೊಸಮನೆಯತ್ತ ತಿರುಗಿದ. ಹೊಸಮನೆಯ ಋಣ ಇನ್ನೂ ಇದೆ ಎಂಬುದು ಖಚಿತವಾಗಿತ್ತು. ನೋಡೋಣ ಏನಾಗುತ್ತದೋ ಎಂದುಕೊಂಡು ಗಣಪಯ್ಯ ಹಾದಿ ತುಳಿಯಲಾರಂಭಿಸಿದ. ದೂರದಿಂದ ಸೀತಾಪರ್ವತ ಕಣ್ಣಿಗೆ ಬಿತ್ತು. ಸೀತಾಪರ್ವತದ ನೆತ್ತಿಯ ಮೆಲೆ ಕಪ್ಪು ಮೋಡಗಳ ಹಿಂದು ತೇಲುತ್ತಿತ್ತು.
ರೋಹಿಣಿ
ಅಷ್ಟು ದೂರದಲ್ಲಿ ಶರಾವತಿ ಹರಿಯುತ್ತದೆಂದರೆ ಶರಾವತಿಯ ಈ ದಡದ ಮೇಲೆ ಹೊಲಗಳ ಸಾಲು. ಗುಡ್ದದ ಇಳಿಜಾರು ಮೈಯನ್ನೇ ಬಯಲನ್ನಾಗಿ ಮಾಡಿಕೊಂಡ ಹೊಲಗಳು. ಪರಮೇಶ್ವರಪ್ಪನ ಹೊಲಗಳೆಲ್ಲ ಈಗ ಹಾಳುಬಿದ್ದಿವೆ. ಅಲ್ಲೆಲ್ಲ ಗಿಡಗಳು ಪೊದೆಗಳು ಬೆಳೆದಿವೆ. ಅವನ ಅಡಿಕೆ ತೋಟವನ್ನು ನೆಲಸಮ ಮಾಡಿದ್ದು ಆರು ತಿಂಗಳುಗಳ ಹಿಂದೆ. ಸಾಗರಕ್ಕೆ ಅದಾರೋ ಮಂತ್ರಿಗಳು ಬರುತ್ತಾರೆಂದು ಇಲ್ಲಿಯ ಅಡಿಕೆ ಮರಗಳನ್ನೆಲ್ಲ ಕೊಯ್ದುಕೊಂಡು ಹೋದರು.
ಈಗ ಗಣಪಯ್ಯನ ಹೊಲದ ಹಸಿಮಣ್ಣಿನಲ್ಲಿ ಬೆರಳುದ್ದದ ಹಸಿರು ಸಸಿಗಳೆದ್ದು ನಿಂತಿವೆ. ಹೇರಂಬನ ಹೊಲದಲ್ಲೂ ಅಷ್ಟೆ. ಒಂದು ಹದ ಮಳೆ ಬಿದ್ದಾಗ ಬಿತ್ತಿದ ಬೀಜಗಳೆಲ್ಲ ಈಗ ಎದ್ದುನಿಂತಿವೆ. ಈಗ ಮತ್ತೆ ಮಳೆ ಬೀಳಬೇಕು.
ಈ ಹೊಲಗಳಿಗೆ ಅಂಟಿಕೊಂಡೇ ಅಡಿಕೆ ತೋಟ. ಗುಡ್ಡದ ಒಂದು ಪಾರ್ಶ್ವದಲ್ಲಿ ಗೇಣಗಲ ಜಾಗದಲ್ಲಿ ಗಣಪಯ್ಯನ ತೋಟ. ಮಧ್ಯದಲ್ಲಿ ಅವನ ಮನೆ. ಅನಂತರ ಬಹಳಷ್ಟು ಜಾಗವನ್ನು ಆಕ್ರಮಿಸಿಕೊಂಡಿರುವ ಹೇರಂಬನ ಅಡಿಕೆ ತೋಟ. ಕೊನೆಯದಾಗಿ ಹಿಂದೆ ತುಂಬಿಕೊಂಡು ಕಳಕಳಿಸುತ್ತಿದ್ದು ಈಗ ಪಾಳುಬಿದ್ದಿರುವ ಪರಮೇಶ್ವರಯ್ಯನ ಮನೆ-ತೋಟವಿದ್ದ ಜಾಗ. ಹಸಲರುಗಳ ಮನೆಗಳಿದ್ದುದು ಅಡಕೆ ತೋಟಗಳ ಪಾರ್ಶ್ವದಲ್ಲಿ. ಈಗ ಮಾತ್ರ ಈ ಮನೆಗಳಿಲ್ಲ.
ಈಗ ಅಲ್ಲಿರುವ ಮನೆಯೊಂದೇ ಗಣಪಯ್ಯನದು. ಹೊಸಮನೆ ಹಳ್ಳಿಗೆಲ್ಲ ಒಂದೇ ಮನೆ.
ತೋಟದಲ್ಲಿಯ ಚೂರುಪಾರು ಕೆಲಸ ಮುಗಿಸಿಕೊಂಡು ಹೊರಟಾಗ ನಾಗವೇಣಿ ತೋಟದತ್ತ ಇಳಿಯುವುದು ಕಂಡಿತು. ತೋಟದ ಹಳ್ಳದಲ್ಲಿ ಕೈಕಾಲು ಮುಖಕ್ಕೆ ನೀರು ಉಗ್ಗಿಕೊಂಡು ದಂಡೆಗೆ ಬರುವಾಗ ನಾಗವೇಣಿ ಹತ್ತಿರ ಬಂದು-
“ಹೌದಾ….ಬೆಳ್ಳಿ ದನ ಬರ್ಲೇ ಇಲ್ವಲ್ಲ”
ಎಂದಳು. ಮಾತನಾಡಲು ಬಾಯಿ ತೆರೆದರೆ ಹೌದಾ ಎನ್ನುವ ಶಬ್ದ ಮೊದಲು ಅವಳ ಬಾಯಿಂದ ಹೊರಬೀಳಬೇಕು. ತನ್ನ ಹತ್ತಿರ ಮಾತನಾಡುವಾಗಲಂತೂ ಈ ಶಬ್ದ ಬಂದೇ ಮರುತ್ತದೆ.
“ಹೌದಾ?”
ಎಂದು ತಾನು ಅವಳ ದಾಟಿಯಲ್ಲೇ ಕೇಳಿದಾಗ ಅವಳು ತಲೆಕೊಡವಿ-
“ಶ್ಶೀ…ನಿಮಗೆ ತಮಾಷೆಯಾ?” ಎಂದಳು.
ಮುಖದ ಮೇಲಿನ ಆತಂಕದ ಜೊತೆಗೆ ನಾಚಿಕೆಯೂ ಸೇರಿಕೊಂಡಿತು. ಇಳಿ ಬಿಸಿಲು ತೋಟದಲ್ಲಿ ರಂಗುರಂಗಾಗಿ ಬಿದ್ದಿರಲು. ಈ ಬಿಸಿಲಿಗೆ ಮಯ್ಯೊಡ್ಡಿ ನಿಂತ ನಾಗವೇಣಿ ಚಿಗುರುಚಿಗುರಾಗಿ ಕಂಡು ಮೈಮನಸ್ಸು ಹುರುಪುಗೊಂಡಿತು. ಹಸಿವು – ಆಸೆಯಿಂದ ಅವಳತ್ತ ನೋಡಿದಾಗ ಆಕೆ-
“ಏನು, ನಾನು ಹೇಳಿದ್ದು ಕೇಳಸ್ತಾ…. ಬೆಳ್ಳಿ ಬಂದಿಲ್ಲ.”
ಎಂದಳು ಮತ್ತೂ ಒಂದು ಸಾರಿ.
“ನಾನೂ ಅದೇ ಕೇಳಿದ್ದು. ಹೌದಾ ಅಂತ.”
“ಹೌದು?”
“ಮಳಲಿ ಗೌಡ್ರ ಗೂಳಿ ಬಂದಿತ್ತಪ್ಪ…. ಅದ್ರ ಹಿಂದೆ ಹೋತೋ ಏನೋ….”
“ಶ್ಶೀ….”
ಎಂದಳು ನಾಗವೇಣಿ.
ಅಡಿಕೆ ತೋಟದ ತುಂಬ ದೃಷ್ಟಿ ಹಾಯಿಸಿದ. ತೋಟದ ಕೆಲಸಕ್ಕೆಂದು ಬಂದ ಅರಲಗೋಡಿನ ಜನ ಹೋಗಿ ಬಹಳ ಹೊತ್ತಾಗಿತ್ತು. ಯಾರ ಸುಳಿವೂ ಇರಲಿಲ್ಲ. ಅಪ್ಪ ಮನೆಬಿಟ್ಟು ಹೊರಬರಲಾರ. ಬೇರೆ ಯಾರಾದರೂ ಇಲ್ಲಿಗೆ ಬಂದಾರಾದರೂ ಯಾಕೆ?
ನಾಗವೇಣಿ ಅನುಮಾನದಿಂದ ನೋಡುತ್ತಿರಲು ಮುಂದೆನುಗ್ಗಿ ಅವಳನ್ನು ಬಾಚಿ ತಬ್ಬಿಕೊಂಡ. ಅಯ್ಯೋ ಬಿಡಿ ಬಿಡಿ ಎಂದವಳು ಕೊಸರಾಡುತ್ತಿದ್ದರೂ ಕೇಳದೇ ಅವಳ ಮೃದು ಮೈಯನ್ನು ತನ್ನ ಮೈಗವಚಿಕೊಂಡು, ತುಟಿಯನ್ನು ಅವಳ ಕೆನ್ನೆಗೊತ್ತಿ, ‘ನಾಗೂ’ ಎಂದ, ನಾಗವೇಣಿ ತಪ್ಪಿಸಿಕೊಂಡಳು.
“ಏನಿದು ಹುಡುಗಾಟ”
ಎಂದವಳೇ ತೋಟದಿಂದ ಹೊರಬಿದ್ದಳು. ತಾನು ಅವಳ ಬೆನ್ನು ಹತ್ತಿ ಹೊರಟ. “ಬೆಳ್ಳಿ ಗುಡ್ಡದಮೇಲೆ ಮೇಯುತ್ತಿತ್ತು. ನಾನು ನೋಡ್ಕೊಂಡ್ ಬರ್ತೀನಿ ಹೋಗು”
ಎಂದ. ನಾಗವೇಣಿ ಕೇಳಲಿಲ್ಲ. ‘ನಡೀರಿ ನಾನೂ ಬರ್ತೀನಿ’ ಎಂದಳು. ಇಬ್ಬರೂ ಗುಡ್ಡ ಹತ್ತಿದರು.
ಸೀತಾಪರ್ವತವನ್ನು ತಾವಿಬ್ಬರೂ ಏರುತ್ತಿರುವುದು ಇದು ನಾಲ್ಕನೇ ಬಾರಿ. ಮದುವೆಯಾಗಿ ಬಂದ ಹೊಸದರಲ್ಲಿ ಒಂದುಬಾರಿ ನಾಗವೇಣಿಯೊಡನೆ ತಾನು ಸೀತಾರಾಮರ ಮಂಚ, ಗುಹೆಯವರೆಗೂ ಹೋಗಿಬಂದಿದ್ದ. ಅನಂತರ ಕೃಷ್ಣಯ್ಯ ಬಂದಾಗ. ಬೆಳ್ಳಿ, ಗುಹೆಯ ಹತ್ತಿರ ಕರುಹಾಕಿದಾಗ ಮತ್ತೊಂದುಸಾರಿ. ಇದು ನಾಲ್ಕನೇ ಬಾರಿ ನಾಗವೇಣಿ ಇಲ್ಲಿಗೆ ಬಂದ ಮೂರು ವರ್ಷಕ್ಕೆ ಮನೆಯ ಹಿಂದಿನ ಗುಡ್ಡ ಹತ್ತುತ್ತಿರುವುದು ನಾಲ್ಕನೇ ಬಾತಿ. ತಾನು ಹೆಚ್ಚಾಗಿ ಗುಡ್ಡ ಹತ್ತುವವನಲ್ಲ. ಸೌದೆ ಕಡಿಯಲು ತುದಿಗೇನೂ ಹೋಗಬೇಕಾಗಿಲ್ಲ. ಅಷ್ಟು ದೂರ ಹೋಗಬೇಕೆಂದರೆ ಹೀಗೇ ಏನಾದರೊಂದು ಪ್ರಮೇಯ ಒದಗಿಬರಬೇಕಷ್ಟೆ. ದನಕರು ಕಳೆದುಹೋದರೆ ಅಲ್ಲಿಯವರೆಗೂ ಹೋಗಬೇಕು. ಆದರೆ ಕಳೆದುಹೋದ ದನಕರು ಕೆಳಗಿನ ಬಯಲಿನಲ್ಲಿ ಇಲ್ಲವೆ ಅರಲಗೋಡಿನ ಕಾಡಿನಲ್ಲಿ ಸಿಕ್ಕಿಬಿಡುತ್ತವೆ. ದನಕರು ಗುಡ್ಡದ ತುದಿಗೆ ಹೋಗುವುದೂ ಅಪರೂಪ. ಬೆಳ್ಳಿ ಮಾತ್ರ ಗುಡ್ಡದತ್ತ ಹೋಗುತ್ತಿರುವುದನ್ನು ತಾನು ನೋಡಿದ್ದೆ. ಹಿಂದೆ ಅದು ಗುಹೆಯ ಎದುರು ಕರುಹಾಕಿತ್ತು. ಈಗ ಮತ್ತೆ ಅತ್ತ ಹೋಗಿರಬಹುದೆ?
ಗುಡ್ಡದ ಬೆನ್ನು ಮೇಲಿನ ಕಾಲುಹಾದಿ ಹಿಡಿದು ನಡೆಯಲಾರಂಭಿಸಿದಾಗ ನಾಗವೇಣಿ ಹಿಂದಿನಿಂದ ಬಂದು ಸೇರಿಕೊಂಡಳು. ಗಂಡನ ಜೊತೆ ಹೆಜ್ಜೆ ಹಾಕುತ್ತ, ಬೆಳ್ಳೀ ಬಾ ಬಾ ಎಂದು ಕೂಗುತ್ತ ಮುನ್ನಡೆಯುತ್ತಿರಲು ಗಣಪಯ್ಯ ಹೆಂಡತಿಯತ್ತ ಬಾರಿ ಬಾರಿಗೂ ತಿರುತಿರುಗಿ ನೋಡುತ್ತ ಅದೇನೋ ಒಂದು ರೀತಿಯಲ್ಲಿ ನಕ್ಕ.
“….ಹೌದಾ ಈ ತಮಾಷೆ ಯಾಕೆ?”
ನಾಗವೇಣಿ ಮುಖ ಊದಿಕೊಂಡಳು.
*****
ಮುಂದುವರೆಯುವುದು
ಕೀಲಿಕರಣ: ಸೀತಾಶೇಖರ್