ವಿಸರ್ಜನೆ

ಭಾಗ: ಒಂದು

ಕೆಲವು ತಿಂಗಳ ಹಿಂದೆ ನಾನು ಸೇವಾ ನಿವೃತ್ತನಾದ ಮೇಲೆ ಹೀಗೇ ಊರಿನ ಕಡೆಗೆ ಕೆಲವು ದಿನ ಸುತ್ತಾಡಿ ಬಂದರೆ ಹೇಗೆ ಎಂದು ವಿಚಾರ ಮಾಡುತ್ತಿದ್ದ ಹೊತ್ತಿಗೇ ಕುಮಟೆಯಲ್ಲಿ ಸದ್ಯವೇ ಹೊಸ ಮನೆ ಕಟ್ಟಿಸಿದ್ದ ನನ್ನ ಸೋದರ ಸೊಸೆ ವನಿತಾಳ ಪತ್ರ ಬಂದಿತು: ‘ಈಗಂತೂ ನಿವೃತ್ತನಾಗಿದ್ದೀಯಾ, ನೀನು-ಮಾಮಿ ಕೆಲವು ದಿನ ನಮ್ಮಲ್ಲಿ ನಿಲ್ಲಲು ಬನ್ನಿ. ಹೊಸಾ ಮನೆ, ನಾವು ಹಲವು ವರ್ಷಗಳಿಂದ ಕನಸು ಕಂಡಿದ್ದು, ನಿಮಗಾಗಿ ಕಣಿವೆಯ ಕಡೆಯ ಕೋಣೆಯನ್ನು ಕಾದಿರಿಸಿದ್ದೇವೆ. ಅಲ್ಲಿಂದ ಕಾಣುವ ದೃಶ್ಯವನ್ನು ನೀವೆಲ್ಲೂ ನೋಡಲಾರಿರಿ’ ಎಂದು ಮುಂತಾಗಿ ಪುಸಲಾಯಿಸುವ ಮಾತುಗಳಲ್ಲಿ ಬರಲು ಒತ್ತಾಯಿಸಿದ್ದಳು. ನಾನು ಕುಮಟೆಯ ಕಡೆಗೆ ಹೋಗದೇ ನಾಲ್ಕು ದಶಕಗಳ ಮೇಲಾಗಿತ್ತು. ಒಮ್ಮೆ ಹಾಯ್‌ಸ್ಕೂಲು ಶಿಕ್ಷಣ ಮುಗಿಸಿ ಕಾಲೇಜು ಶಿಕ್ಷಣಕ್ಕಾಗಿ ನೌಕರಿಗಾಗಿ ಧಾರವಾಡಕ್ಕೆ ಆಮೇಲೆ ಮುಂಬಯಿಗೆ ಹೊರಟು ಹೋದವನು ಮತ್ತೆ ಕುಮಟೆಗೆ ಹೋಗಿರಲಿಲ್ಲ. ವನಿತಾಳ ಕರೆಯನ್ನು ಖುಶಿಯಿಂದ ಒಪ್ಪಿಕೊಂಡೆವು.

ಮಣಕೀ ಬೇಣದ ಅತಿ ಪೂರ್ವಕ್ಕೆ ಎತ್ತರವಾದ ಗುಡ್ಡವೊಂದರ ನೆತ್ತಿಯಲ್ಲಿದ್ದ ಹೊಸ ವಸತಿಯಲ್ಲಿ ಕಟ್ಟಿಸಿದ ಮನೆಯಿಂದ ಕಾಣುತ್ತಿದ್ದ ನೋಟ ನಿಜಕ್ಕೂ ನಯನಮನೋಹರವಾಗಿತ್ತು. ಸೋದರ ಸೊಸೆ ‘ಕಣಿವೆ’ಯೆಂದು ಕರೆದ, ಸುಮಾರು ನೂರಿನ್ನೂರು ಅಡಿ ಕೆಳಗೆ ಸಾಗುವ, ಇಳಿಜಾರು ಕೊನೆಗೊಳ್ಳುವ ಸಮತಟ್ಟಿನ ಮೇಲೆ ಹಬ್ಬಿದ ಹಳೇ ಕೇರಿಯಲ್ಲಿ ದೃಷ್ಟಿ ಹಾಯುವ ವರೆಗೂ ಒತ್ತಾಗಿ ಬೆಳೆದ ತೆಂಗು-ಅಡಿಕೆ ಮರಗಳ ಚೆಂಡುಗಳಷ್ಟೇ ಕಣ್ಣಿಗೆ ಬೀಳುತ್ತಾ ಗಾಳಿಯಲ್ಲಿ ತೇಲಾಡುತ್ತವೆ ಎಂಬ ಭ್ರಮೆ ಹುಟ್ಟಿಸುತ್ತಿದ್ದವು. ಮುಂಬಯಿ ಮಹಾನಗರಗಳಲ್ಲಿ ಸಿಮೆಂಟ್ ಕಟ್ಟಡಗಳ ನಿರ್ಜೀವತೆಯಿಂದ ಚಿಟ್ಟು ಹಿಡಿದ ಮನಸ್ಸು, ಇಷ್ಟೊಂದು ಲವಲವಿಕೆ ತುಂಬಿದ ಹಸಿರಿನ ಆತ್ಮೀಯ ಸಹವಾಸದಲ್ಲಿ ತಾನೂ ಹಸಿರೊಡೆಯುತ್ತಿದೆ ಎನ್ನುವ ಹಾಗೆ ಪುಲಕಗೊಳ್ಳುತ್ತಿತ್ತು. ಈ ಗುಡ್ಡದ ತುದಿಯಿಂದ ಕಂಡ ಸೂರ್ಯೋದಯ ಸೂರ್ಯಾಸ್ತಗಳು; ದಿನದಲ್ಲಿ ಹತ್ತುಹಲವು ಸಾರೆ ಬಣ್ಣ ಬದಲಾಯಿಸುವಬೆಳಕಿನಲ್ಲಿ ನಲಿದಾಡುತ್ತಿದ್ದ ಬಿನ್ನಾಣಗಿತ್ತಿ ವನಶ್ರೀ ಇವುಗಳಿಂದಾಗಿ ಈ ಭೇಟಿ ಮರೆಯಲಾಗದ ಅನುಭವವಾಗಿ ನೆನಪಿನಲ್ಲಿ ಉಳಿಯುತ್ತದೆ ಎನ್ನುವುದರಲ್ಲಿ ನನಗೆ ಸಂಶಯವಿಲ್ಲ. ಆದರೆ ನಾನು ಇದೀಗ ಹೇಳಲು ಹೊರಟಿದ್ದು ಬೇರೆಯೇ ಒಂದು ಅನುಭವದ ಬಗ್ಗೆ : ಸೋದರ ಸೊಸೆಯ ಮನೆಯಿದ್ದ ವಸತಿಯ ಹಾಗೇ ಕುಮಟಾ ಹಾಗೂ ಸುತ್ತಲ ಪ್ರದೇಶಗಳಲ್ಲಿ ಹಲವು ಹೊಚ್ಚ ಸೊಸ ಜನವಸತಿಗಳನ್ನು ಅಭಿವೃದ್ಧಿಗೊಳಿಸಿದ ಪ್ರಖ್ಯಾತ ಗೃಹ ನಿರ್ಮಾಣ ಸಂಸ್ಥೆ ‘ವಿಲ್ಸನ್ ಬಿಲ್ಡರ್ಸ್’ನ ಮಾಲೀಕನ ಮುಖಾಂತರ ತೆರೆದುಕೊಂಡ, ಮೈಮೇಲೆ ಮುಳ್ಳು ನಿಲ್ಲಲು ಕಾರಣವಾದ, ಒಂದು ವಿಲಕ್ಷಣ ಲೋಕದ ಬಗ್ಗೆ, ಬಾಲ್ಯದಲ್ಲಿ ಸಾಂತಪ್ಪಾ ಎಂದೇ ನಮಗೆಲ್ಲ ಪರಿಚಿತನಾಗಿದ್ದ ಈತ ಶಾಂತಾರಾಮ್ ಎಂದು ಹೆಸರನ್ನು ಯಾವಾಗ ಬದಲಾಯಿಸಿಕೊಂಡನೋ. ಬಹುಶಃ ‘ಎಸ್ಸೆಲ್ ಬಿಲ್ಡರ್ಸ್’ನ ಮಾಲೀಕನೆಂದು ಬಹು ಪ್ರಸಿದ್ಧನಾದ ಇತ್ತೀಚಿನ ವರ್ಷಗಳಲ್ಲೇ ಇರಬೇಕು. ಸಂಸ್ಥೆಯ ಹೆಸರಿನೊಳಗಿನ ‘ಎಸ್‌ಎಲ್’ ಇದು ಶಾಂತಾರಾಮ್ ಲಕ್ಷ್ಮಣ್ ಇದರ ಸಂಕ್ಷಿಪ್ತ ರೂಪವೆಂದು ಸಾಂತಪ್ಪನಿಂದಲೇ ಗೊತ್ತಾಯಿತು.

ನಾನು ಕುಮಟೆಗೆ ಬರುವ ಸುದ್ದಿಯನ್ನು ಯಾರಿಂದಲೋ ಕೇಳಿ ತಿಳಿದ ದಿನವೇ ವನಿತಾಳ ಮನೆಗೆ ಓಡೋಡಿಬಂದಂತೆ ಬಂದಿದ್ದನಂತೆ. ಮನೆ ಕಟ್ಟುವ ಕೆಲಸ ನಡೆದಾಗ ಇವರನ್ನು ಸತಾಯಿಸಿದ್ದನೇನೋ! ವನಿತಾಳ ಗಂಡ, ತುಂಬಾ ಸೌಮ್ಯ ಸ್ವಭಾವದ ರಾಮಕೃಷ್ಣ,ಕುಮಟೆಯ ಜನರ ಬಾಯಲ್ಲಿ ಕಾಯಮ್ ನಿಂತ ಬೈಗುಳದಿಂದಲೇ ಆರಂಭ ಮಾಡಿದ್ದ: “ಬೋಳಿಮಗ ಹಿಂದೆಂದೂ ನೋಡಿ ಗೊತ್ತಿರದಷ್ಟು ಮೆತ್ತಗಾಗಿ , ನೀರಿನಲ್ಲಿ ಅದ್ದು ಮುದ್ದೆಯಾದ ಇಲಿಯ ಹಾಗೆ ಮೈ ಮುದುಡಿ ನಿಂತು, ‘ನಾರಾಯಣ ಬರುತ್ತಾನಂತೆ.ದೇವರೇ ಕಳಿಸಿದ ಹಾಗೆ ಬರುತ್ತಿದ್ದಾನೆ. ನಾನವನ್ನು ಭೇಟಿಯಾಗಬೇಕು. ಅವನನ್ನು ಕಾಣದೇ ಎಷ್ಟು ವರ್ಷಗಳಾದವು, ಒಮ್ಮೆ ಭೇಟಿಮಾಡಿಸಿ, ನಿಮ್ಮ ಉಪಕಾರ ಮರೆಯಲಾರೆ’ ಎಂಬಂಥ ಮಾತಿನಲ್ಲಿ ದಮ್ಮಯ್ಯ ಹಾಕಿದ್ದ.”

ಅದೆಂಥ ಜರೂರಿನ ಕೆಲಸವಿದ್ದಿತೋ , ಇಷ್ಟು ವರ್ಷ ಊರಿಗೆ ಬಂದಿರದ ನಾನು ಊರಿಗೆ ಬರುವ ಹೊತ್ತಿಗೇ ಯಾಕೆ ಧುತ್ ಎಂದೆದ್ದಿತೋ ಎಂದು ನಾನು ದಿಗಿಲುಗೊಂಡಿದ್ದನ್ನು ನೋಡಿ ವನಿತಾ ರಾಮಕೃಷ್ಣ- ಇಬ್ಬರೂ ಸಮಾಧಾನ ಹೇಳಿದರು: ಕಾಳಜಿ ಮಾಡುವುದು ಬೇಡ. ಭೇಟಿಯ ವಿಷಯ ಎಲ್ಲರಿಗೂ ಜಾಹೀರಾದದ್ದು: ಅಪ್ಪನ ವಿರುಧ್ಧ ಬಂಡೆದ್ದು ಮನೆಯಿಂದ ಹೊರಬಿದ್ದ ಅವರ ಕಿರಿಯ ಮಗ! ಹರಿಜನ ಹುಡುಗಿಯನ್ನು ಮದುವೆಯಾಗಿ, ನಮ್ಮ ಜಾತಿಯವರು ಮಾಡಬಾರದ ಕೆಲಸಗಳನ್ನು ಮಾಡುತ್ತ ಅಪ್ಪನ ಶ್ರೀಮಂತಿಕೆಯನ್ನು, ಊರಿನಲ್ಲಿ ಅವನಿಗಿದ್ದ ಪ್ರತಿಷ್ಠೆಯನ್ನು ಧಿಕ್ಕರಿಸುತ್ತಿದ್ದ ಮಗನ ಬಗ್ಗೆ ತಕರಾರು ಮಾಡಲು ಅವನು ಊರಿಗೆ ಹೊಸತಾಗಿ ಬಂದ ಯಾರನ್ನೂ ಬಿಟ್ಟವನಲ್ಲ ತಕರಾರಿನ ಧಾಟಿ ಮಾತ್ರ ಕಾಲಕಾಲಕ್ಕೆ ಬದಲಾಗಿದೆಯಂತೆ;ಮಗನಿಗೆ ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎಂಬಂಥ ಬಯಲಾಟದ ಆರ್ಭಟದಲ್ಲಿ ಆಡಿದ ಢಮಕಿಯ ಮಾತುಗಳಿಂದ ಆರಂಭವಾದದ್ದು ಬರುಬರುತ್ತ ಅವನು ಹೀಗಾಗಲು ಕಾರಣ ಅವನು ತನಗೆ ಹುಟ್ಟಿದವನೇ ಅಲ್ಲವೆದು ಸಾರಿ ಬಹಳ ವರ್ಷಗಳ ಹಿಂದೆಯೇ ಸ್ವರ್ಗಸ್ಥಳಾದ ಹೆಂಡತಿಯ ಶೀಲಕ್ಕೆ ಧಕ್ಕೆ ತಗಲಿಸುವಂಥ ಹೇಯ ಮಾತುಗಳಿಂದ ಮಗನ ಮನಸ್ಸನ್ನು ನೋಯಿಸುವ ಕ್ಷುದ್ರತೆಗೆ ಇಳಿದವನು ಈಗ ಅವನನ್ನು ಹೇಗಾದರೂ ಮಾಡಿ ಸನ್ಮಾರ್ಗಕ್ಕೆ ಹಚ್ಚುವಂತೆ ದುಂಬಾಲು ಬೀಳುತ್ತಾನಂತೆ! ಈ ಮಾತುಗಳು ಮಾಡಿದ ರಹಸ್ಯ ಸ್ಫೋಟದಿಂದ ಭೇಟಿಯ ಬಗೆಗಿನ ನನ್ನ ಕುತೂಹಲ ಇನ್ನಷ್ಟು ಹೆಚ್ಚೇ ಆಯಿತೇ ಹೊರತು ಕಡಿಮೆಯಾಗಲಿಲ್ಲ.

ಒಂದನ್ನು ಒಪ್ಪಿಕೊಳ್ಳಬೇಕು: ವನಿತಾ-ರಾಮಕೃಷ್ಣರ ಮಾತು ಕೇಳುತ್ತಿದ್ದಂತೆ ಸಾಂತಪ್ಪ ಹೆಸರಿನ ಹುಡುಗನೊಬ್ಬ ನನ್ನ ವರ್ಗದಲ್ಲಿದ್ದದ್ದು ನೆನಪಾಯಿತೇ ಹೊರತು ಎಷ್ಟು ಪ್ರಯತ್ನಪಟ್ಟರೂ ಅವನ ರೂಪವನ್ನು ನೆನೆಯದಾದೆ. ಅವನನ್ನು ಕಂಡದ್ದು ಬಹುಶಃ ಗಿಬ್ ಹಾಯ್‌ಸ್ಕೂಲಿನಲ್ಲಿ ಕಲಿಯುತ್ತಿದ್ದಾಗ ಇರಬೇಕು. ಬಹುಶಃ ನಾಲ್ಕನೇ ಇಯತ್ತೆಯವರೆಗೇ ನಾವು ಜತೆಯಾಗಿರಬೇಕು. ಅದಕ್ಕೂ ಮುಂದೆ ಅವನು ಕಲಿಯಲೇ ಇಲ್ಲವೆ ? ಸಾಲೆ ಬಿಟ್ಟು ಹೋದನೆ? ಊರನ್ನೇ ತೊರೆದನೆ ? ನೆನಪಾಗಲಿಲ್ಲ. ಅವನಿಂದಲೇ ಕೇಳಿ ತಿಳಿದರಾಯಿತು ಎಂದುಕೊಂಡವನ ಎದುರು ಸಾಂತಪ್ಪ ಖುದ್ದು ಬಂದು ಹಾಜರಾದಾಗಲೂ ಅವನ ಯಾವ ಭಾಗದಲ್ಲೂ ನಾಲ್ವತ್ತು ನಾಲ್ವತ್ತೈದು ವರ್ಷಗಳ ಹಿಂದೆ ಕಂಡಿರಬಹುದಾದುದನ್ನು ಗುರುತಿಸುವುದಾಗಲಿಲ್ಲ. ಅವನ ಸ್ಥಿತಿಯೂ ಅದೇ ಆಗಿರಬೇಕು ಅನ್ನಿಸಿತು.

ಅವನು ಮಾತುಕತೆಯನ್ನು ಅಲ್ಲಿಂದಲೇ ಆರಂಭಿಸಬಹುದು ಎಂಬ ನನ್ನ ಎಣಿಕೆ ಮಾತ್ರ ತಪ್ಪಾಯಿತು. ನನ್ನನ್ನು ಆತ್ಮೀಯತೆ ತುಂಬಿದ ಕಣ್ಣುಗಳಿಂದ ನೋಡುತ್ತ ಮುಗುಳ್ನಕ್ಕ. ನಾನೂ ಅವನ ಆರು ಪೂಟು ಎತ್ತರದ ಆಜಾನುಬಾಹು ಕಾಯವನ್ನು ನಿರುಕಿಸುತ್ತ ಕುಳಿತುಕೊಂಡೆ, ಮರ್ಸರಾಝ್ಡ ಬಟ್ಟೆಯ ಅಚ್ಛ ಬಿಳಿಯ ಧೋತರ, ಮುತ್ತಿನ ಬಣ್ಣದ ಸಿಲ್ಕ್ ಜುಬ್ಬಾ. ಕಾಲಲ್ಲಿ ಮೆಟ್ಟಿದ ಕೊಲ್ಹಾಪುರೀ ಚಪ್ಪಲಿಗಳನ್ನು ಬಾಗಿಲಲ್ಲೇ ಬಿಟ್ಟು ಬಂದಿದ್ದರಿಂದ ಬರಿದಾದ ಉದ್ದ ಪಾದಗಳು, ಕೊರಳಲ್ಲಿ ಜುಬ್ಬಾದ ಒಳಗಡೆ ಹೊಳೆಯುತ್ತ ಒಂದೆರಡು ಕಡೆ ಇಣುಕಿಕ್ಕುವ ಬಂಗಾರದ ಒಂದೆಳೆಯ ನಾಜೂಕು ಚೇನು. ಕೈಬೆರಳುಗಳಲ್ಲಿ ಹಲವು ಬಗೆಯ ಉಂಗುರಗಳು: ಎಲ್ಲವೂ ಹಣವಂತಿಕೆಯ ದರ್ಪ ಸಾರುತ್ತಿದ್ದರೂ ಅದರಿಂದಾಗಿಯೇ ಇರಬೇಕಾಗಿದ್ದ ಆತ್ಮವಿಶ್ವಾಸ ಮಾತ್ರ ಇರಲಿಲ್ಲ. ಎಂತಹದೋ ಅಳಕು ಅವನ ಬಾಯಿಯನ್ನು ಕಟ್ಟಿದಂತಿತ್ತು.

ನಾನು ಸಾಂತಪ್ಪ ಮಾತನಾಡುವ ಕ್ಷಣಕ್ಕಾಗಿ ಕಾದೆ. ಕಾಯುತ್ತಿದ್ದ ಹಾಗೆ ಸಂಶಯವೊಂದು ಮನಸ್ಸನ್ನು ತಟ್ಟಿ ಹೋಯಿತು. ಅರೆ! ಇವನು ನಮ್ಮ ಅವನಲ್ಲವಷ್ಟೆ ? ವರ್ಗದ ಹುಡುಗರು, ‘ನೀನು ಅಡಿಗೆ ಮಾಮನ ಮಗನಲ್ಲವೇನೋ’ ಎಂದು ಚುಡಾಯಿಸಿದಾಗೆಲ್ಲ ಲಜ್ಜೆಯಿಂದ ಮುದುಡಿಕೊಂಡು ಕಣ್ಣಲ್ಲಿ ನೀರು ತರುತ್ತಿದ್ದ ಹುಡುಗ? ಇರಲಾರ. ಅವನು ಕುರೂಪನಿದ್ದ. ಬಡಕಲಾಗಿದ್ದ. ಮೋರೆಯ ಮೇಲೆ ಸದಾ ದೈನ್ಯದ ಕಳೆಯಿರುತ್ತಿತ್ತು. ಬಂದ ನೆನಪಿನಿಂದ ಮನಸ್ಸು ಮ್ಲಾನಗೊಂಡಿತು. ಬಹುಶಃ ಸಾಂತಪ್ಪನ ಮೋರೆಗೆ ಅಂಟಿಕೊಂಡ-ಅವನ ವೇಷಭೂಷೆಗೆ ಸರಿಹೋಗದ-ಒಂದು ತರಹ ಪೆದ್ದುತನದ ಕಳೆ ಈ ನೆನಪಿಗೆ ಕಾರಣವಾಗಿರಬೇಕು, ಅನ್ನಿಸಿತು. ಕೊನೆಗೊಮ್ಮೆ ಸಾಂತಪ್ಪ ಬಾಯಿಬಿಟ್ಟ :

“ನಾನು ಯಾಕೆ ಬಂದಿದ್ದೇನೆ ಎನ್ನುವುದರ ಬಗ್ಗೆ ನಿನ್ನ ಸೋದರ ಸೊಸೆ, ಅವಳ ಗಂಡ ಸ್ವಲ್ಪವಾದರೂ ಕಲ್ಪನೆ ಕೊಟ್ಟಿರಬೇಕು” ಎಂದ.
“ಇಲ್ಲ, ಬಹುಶಃ ನೀನೂ ಅವರಿಗೆ ಅದರ ಸುಳುಹು ಕೊಟ್ಟಿರಲಾರಿ. ನನ್ನನ್ನು ನೋಡಲೇ ಬೇಕು ಅಂದಿಯಂತೆ.”
“ಅದರಲ್ಲಿ ಹಾಗೆ ಅಡಗಿಸುವಂಥದ್ದು ಏನೂ ಇಲ್ಲ. ನನ್ನ ಕಿರಿಯ ಮಗನಿಂದಾಗಿ ಬಹಳ ದೊಡ್ದ ಸಂಕಟಕ್ಕೊಳಗಾಗಿದ್ದೇನೆ. ಕಳೆದ ಮೂವಾತು ವರ್ಷಗಳಲ್ಲಿ ಏನೆಲ್ಲ ಸಾಧಿಸಿರುವಾಗಲೂ, ಎಷ್ಟೆಲ್ಲ ಗಳಿಸಿರುವಾಗಲೂ ಎಲ್ಲವೂ ವ್ಯರ್ಥ ಅನ್ನಿಸಹಚ್ಚಿದ್ದಾನೆ.”
“ಅವನೇ ಹಾಗೆ ಅಂದಿರಲಾರ.”
“ಮಾತಿನಲ್ಲಿ ಹೇಳಿಲ್ಲ.”
“ನಾನಿದರಲ್ಲಿ ಏನು ಮಾಡಬಲ್ಲೆ? ಮಾಡಬಲ್ಲೆನೆಂದು ಯಾಕೆ ಅನ್ನಿಸಿತು?” ನನ್ನ ಪ್ರಶ್ನೆಗೆ ಕೂಡಲೆ ಉತ್ತರ ಬರಲಿಲ್ಲ. ನಾವು ಕೂತ ಜಾಗ ಉತ್ತರ ಕೊಡಲು ಸರಿಯಾದದ್ದಲ್ಲವೆಂದು ತೋರಿತೋ. ಬೆಳಗಿನ ಹೊತ್ತು ಇಂಥದ್ದಕ್ಕೆ ಯೋಗ್ಯವಾದದ್ದಲ್ಲವೆಂದು ಬಗೆದನೋ! ತುಸು ಹೊತ್ತಿನ ಮೇಲೆ:

“ವನಿತಾ-ರಾಮಕೃಷ್ಣರಿಗೆ ಆಗ ಬಂದಕೂಡಲೇ ಹೇಳಿಬಿಟ್ಟಿದ್ದೇನೆ. ಇವತ್ತು ರಾತ್ರಿಯ ಊಟಕ್ಕೆ ಎಲ್ಲರಿಗೆ ನಮ್ಮಲ್ಲೆ ಕರೆದಿದ್ದೇನೆ. ಕಾರು ಕಳುಹಿಸುತ್ತೇನೆ. ಬೇಗ ಬನ್ನಿ. ನಾವಿಬ್ಬರೇ ಮಾಳಿಗೆಯ ಮೇಲೆ ಕುಳಿತು ಮಾತನಾಡೋಣ” ಎಂದ. ನಾನು ಈ ಮೊದಲು ಕೇಳಿದ ಒಂದು ಪ್ರಶ್ನೆಗೆ ಉತ್ತರವೆಂಬಂತೆ: “ನಿನ್ನ ಬಗ್ಗೆ ಎಲ್ಲ ಕೇಳಿ ಗೊತ್ತುಂಟಪ್ಪಾ. ಎಷ್ಟೆಲ್ಲ ಕಲಿತವನು, ಓದಿಕೊಂಡವನು, ದೇಶ ವಿದೇಶ ಸುತ್ತಾಡಿದವನು. ನಾನೋ ಕಲಿಯುವುದರಲ್ಲಿ ದಡ್ಡ. ನಿನಗೆ ಗೊತ್ತೇ ಉಂಟು. ಹಳ್ಳಿಯ ಹುಂಬನಾಗೇ ಉಳಿದೆ” ಎಂದ. ಮಾತಿನಲ್ಲಿ ತುಸು ನಾಟಕೀಯತೆ ಇತ್ತು. ಆದರೆ ಆತ್ಮನಿಂದನೆಯಿರಲಿಲ್ಲ ಅನ್ನಿಸಿತು. ನನ್ನಿಂದ ಬೀಳ್ಕೊಡುವ ಕೊನೆಯ ಕ್ಷಣದಲ್ಲಿ ನಮ್ಮ ಮಾತುಕತೆಗೆ ವಿಷಯ ಏನೆಂಬುದನ್ನು ಈಗಲೇ ಸ್ಪಷ್ಟಪಡಿಸುವವನ ಹಾಗೆ, “ಐಶ್ವರ್ಯ, ಐಶಾರಾಮ ಎಲ್ಲಾ ಭರ ಪೂರಾ ಉಂಟಪ್ಪಾ. ಐನು ಸುಖವೇ ಇಲ್ಲ” ಎಂದ. ಬಾಯಿಂದ ಹೊರಟಂತೆ ಕೇಳಿಸಿದ ಸಂಸ್ಕಾರ ಪ್ರಾಮಾಣಿಕವಾದದ್ದು ಅನ್ನಿಸಿ ಕೆಡುಕೆನ್ನಿಸಿತು. ಸುಖದ ಬಗ್ಗೆ ಉಪದೇಶ ಮಾಡುವ ಇಲ್ಲ ಸಲಹೆ ಕೊಡುವ ಜಾಯಮಾನವಂತೂ ನನ್ನದಲ್ಲ. ಹಾಗೆಂದೋ ಏನೋ ಸಾಂತಪ್ಪನ ಮಾತು ನನ್ನನ್ನು ತಕ್ಷಣ ಅಷ್ಟಾಗಿ ತಟ್ಟಲಿಲ್ಲ. ಅವನನ್ನು ಘಾಸಿಗೊಳಿಸುತ್ತಿದ್ದ ಸಂಕಟ ನನ್ನ ಭಾವನೆಗಳ ಪರಿಧಿಯ ಆಚೆಯೇ ಉಳಿಯಿತು.

ಸಾಂತಪ್ಪ ಬಂದಾಗ ಮನೆಯಲ್ಲಿ ರಾಮಕೃಷ್ಣನನ್ನು ಬಿಟ್ಟು ಉಳಿದೆಲ್ಲರೂ ಇದ್ದರು. ವನಿತಾ, ಕಾಲೇಜಿಗೆ ಈಗ ರಜೆಯಿದ್ದ ಅವಳ ಇಬ್ಬರೂ ಹುಡುಗಿಯರು, ನನ್ನ ಹೆಂಡತಿ, ನಾವಿಬ್ಬರೂ ಹಾಲಿನಲ್ಲಿ ಕೂತು ಮಾತನಾಡುತ್ತಿದ್ದಾಗ ಇವರೆಲ್ಲ ಬದಿಯ ಕೋಣೆಯಲ್ಲಿ ಸೇರಿ ಕೇಳುತ್ತಿದ್ದದ್ದು ನನ್ನ ಲಕ್ಷಕ್ಕೆ ಬಂದಿತ್ತು. ಇವರಲ್ಲಿ ಯಾರಾದರೂ ಇದೀಗ ನಡೆದದ್ದರ ಬಗ್ಗೆ ಮಾತನಾಡಬಹುದೆಂದು ಎಣಿಸಿದ್ದೆ. ಯಾರೂ ಚಕಾರವೆತ್ತಲಿಲ್ಲ. ಇಷ್ಟೇ ಅಲ್ಲ, ಚಕಾರವೆತ್ತಕೂಡದೆಂದು ತಮ್ಮತಮ್ಮಲ್ಲಿಯೇ ಬೇತು ಮಾಡಿಕೊಂಡವರಂತೆ ಕಂಡರು. ನಿಜ ಸಂಗತಿಯೆಂದರೆ ಅವರು ಸಾಂತಯ್ಯನ ಬಗ್ಗೆ, ಅವನು ಊಟಕ್ಕಿತ್ತ ಆಮಂತ್ರಣದ ಬಗ್ಗೆ ಮಾತನಾಡಿದ್ದರೆ ಕೇಳುವ ಮೂಡಿನಲ್ಲಿದ್ದೆ. ಆದರೆ ಅದನ್ನು ತೋರಿಸಿಕೊಳ್ಳದೇ-

“ರಾಮಕೃಷ್ಣ ಮನೆಯಲ್ಲಿದ್ದಂತಿಲ್ಲ?” ಎಂದೆ.
“ಅವರು ಹೊರಗೆ ಹೋದಾಗ ನೀನು ಸ್ನಾನಕ್ಕೆ ಹೋಗಿದ್ದೆ. ಅಂಗಡಿಯತ್ತ ಕಣ್ಣುಹಾಯಿಸಿ ಬರುತ್ತೇನೆಂದು ಹೇಳಿ ಹೋಗಿದ್ದಾರೆ. ಊಟಕ್ಕೆ ಬರುತ್ತಾರೆ” ಅಂದಳು ವನಿತಾ. “ಮಧ್ಯಾಹ್ನ ಮತ್ತೆ ಅಂಗಡಿಗೆ ಹೋಗಲಾರರು. ಅಮ್ಮ ಹುಬ್ಬಳ್ಳಿಯಿಂದ ಇವತ್ತೇ ಬಂದರೂ ಬರಬಹುದಂತೆ. ಮೂರು ಗಂಟೆಯ ಸುಮಾರಿಗೆ ಒಮ್ಮೆ ಬಸ್‌ಸ್ಟ್ಯಾಂಡಿಗೆ ಹೋಗಿಬರುತ್ತೇನೆ ಎಂದಿದ್ದಾರೆ.” ಈ ಬಾರಿ ಹುಬ್ಬಳ್ಳಿಗೆ ಹೋಗುವ ವಿಚಾರವಿಲ್ಲವಾದ್ದರಿಂದ ಅಕ್ಕನನ್ನೇ ಇಲ್ಲಿಗೆ ಕರೆಯಿಸಲು ಕೇಳಿಕೊಂಡಿದ್ದೆ. ಸಾಂತಪ್ಪನ ಭೇಟಿಯ ಬಗ್ಗೆ ಚಕಾರವೆತ್ತಿರದ ಸೋದರ ಸೊಸೆಯ ಮಾತಿನಿಂದ ಈ ಭೇಟಿಗೂ ಅಕ್ಕ ಬರುವ ಸುದ್ದಿಗೂ ಸಂಬಂಧವಿದ್ದ ಅನುಮಾನವಾಯಿತು.

ಅಕ್ಕ, ವೈಧವ್ಯ ಬಂದ ಈ ಕೆಲವು ವರ್ಷಗಳಿಂದ, ತನ್ನ ಮಗನ ಜೊತೆಗೆ ಹುಬ್ಬಳ್ಳಿಯಲ್ಲಿರುತ್ತಿದ್ದರೂ, ಮೂಲತಃ ಕುಮಟೆಯವಳೇ. ತನ್ನ ವೈವಾಹಿಕ ಜೀವನವನ್ನು ಇಲ್ಲಿ ಕಳೆದವಳೇ. ಸಾಂತಪ್ಪನ ಹಕೀಕತ್ತು ಇವಳಿಗೆ ಗೊತ್ತಿಲ್ಲದಿರುವುದು ಶಕ್ಯವುಂಟೆ? ಈ ವಿಚಾರ ಬಂದದ್ದೇ ಹೊಳೆಯಿತು: ಹೇಗೂ ಅಕ್ಕ ಬರುತ್ತಾಳೆ; ಸಾಂತಪ್ಪನ ಬಗ್ಗೆ ಬೇಕಾದರೆ ಅವಳೇ ಹೇಳಲಿ ಎಂದು ಕೊಂಡಿರಬಹುದು., ಇವರೆಲ್ಲ. ಅಂತೂ ಅನೇಕ ವರ್ಷಗಳ ಮೇಲೆ ನಾವೆಲ್ಲ ಕುಮಟೆಯ ನೆಲದ ಮೇಲೆ ಒಂದೆಡೆ ಸೇರುತ್ತಿದ್ದ ಅಪರೂಪದ ಘಟನೆಗೆ ಈ ಸಾಂತಪ್ಪನಿಂದಾಗಿ ವಿಶೇಷ ಆಕಾರ ಬರತೊಡಗಿದ್ದು ಕಂಡು ಮೋಜೆನ್ನಿಸಿತು.

ಸಾಂತಪ್ಪ ಬಂದಾಗ ಒಂದು ಕಪ್ಪು ಚಹ ಕೂಡ ಕೊಟ್ಟಿರದ್ದು ನೆನಪಿಗೆ ಬಂತು. ಹೀಗೇಕೆ ನಡೆದುಕೊಂಡಳೋ ಎಂದು ಆಶ್ಚರ್ಯವಾಗಿ, “ಸಾಂತಪ್ಪನ ಜೊತೆಗೆ ನನಗೂ ಒಂದು ಕಪ್ಪು ಚಹ ಸಿಗುತ್ತದೆ ಎಂದು ಕಾದಿದ್ದೆ” ಎಂದೆ. “ಮನೆ ಬಾಗಿಲಿಗೆ ಬಂದವನಿಗೆ ಚಹ ಕೂಡ ಕೊಡದಷ್ಟು ಅನ್ನಾಡಿಯಲ್ಲ ಬಿಡು ನಿನ್ನ ಸೊಸೆ. ಈಗ ನಿನಗೆ ಬೇಕಾದರೆ ಸ್ಪೆಶಲ್ಲಾಗಿ ಮಾಡಿಕೊಡುತ್ತೇನೆ. ನಿನ್ನ ಆ ಸಾಂತಪ್ಪ ಇತರರ ಮನೆಯಲ್ಲಿ ಚಹವುಳಿಯಲಿ ನೀರನ್ನು ಕೂಡ ಮುಟ್ಟುವುದಿಲ್ಲ. ಊಟದ ಮಾತಂತೂ ದೂರವೇ ಉಳಿಯಿತು” ಎಂದಳು. ಸೊಸೆ ನನ್ನನ್ನು ಮಾತನಾಡಿಸುತ್ತಿದ್ದಾಗಲೇ ಅವಳ ಹಿರಿಯ ಮಗಳು ಚಹ ತಂದಳು.

“ತಾನೇ ಬೇರೆಯವರ ಮನೆಯಲ್ಲಿ ಊಟ ಮಾಡುವುದಿಲ್ಲವಾದರೂ ತಾನು ಮನೆಗೆ ಕರೆಸಿದವರ ಆತಿಥ್ಯದಲ್ಲಿ ಮಾತ್ರ ಎತ್ತಿದ ಕೈ. ಇವತ್ತು ನೀನೇ ನೋಡುವಿಯಂತೆ. ನನಗೆ ಈ ಮೇಜವಾನಿಯನ್ನು ತಪ್ಪಿಸುವ ಮನಸ್ಸಾಗಲಿಲ್ಲ. ಹಾಗೆಂದೇ ಊಟಕ್ಕೆ ಕರೆ ಬಂದಾಗ ಹರೆಕತ್ತು ಮಾಡಲಿಲ್ಲ. ನನಗೆ ಬರುವ ಮನಸ್ಸಿರಲಿಲ್ಲ. ಆದರೆ ನೀವಿಬ್ಬರೂ ಮಾಳಿಗೆಯ ಮೇಲೆ ಮಾತಾಡಲು ಕೂತರೆ ಕೆಳಗೆ ಮಾಮಿ ಆ ವಿಚಿತ್ರ ಹೆಂಗಸರ ಮಧ್ಯೆ ಒಬ್ಬಳೇ ಆದಾಳು ಎಂದು ನಾನೂ ಬರಲು ಒಪ್ಪಿದೆ. ಇವರು, ಮಕ್ಕಳು ಮನೆಯಲ್ಲೇ ಇರುತ್ತಾರೆ. ಅಮ್ಮ ಬರಬಹುದಾದ ಸಬೂಬು ಕೊಟ್ಟಿದ್ದೇನೆ. ಅಮ್ಮನನ್ನೂ ಕರಕೊಂಡು ಬಾ ಎನ್ನುವ ಧೈರ್ಯವಿಲ್ಲ ಅವನಿಗೆ.”

ಸೋದರ ಸೊಸೆಯ ಮಾತುಗಳಲ್ಲಿ ಬಂದುಹೋದ ಹಲವು ಸಂಗತಿಗಳು ನನ್ನ ಕುತೂಹಲಕ್ಕೆ ಕಾರಣವಾದವು. ಜೊತೆಗೇ ಅವನು ಹೀಗೆ ಊಟಕ್ಕೆ ಕರೆದಿಲ್ಲ; ನನ್ನಿಂದೇನೋ ಸಹಾಯ ಬಯಸಿದ್ದಾನೆ ಎನ್ನುವುದು ನೆನಪಾಗಿ, ನನ್ನಿಂದ ಸಹಾಯವಾಗುವಂತಿದ್ದರೆ ಯಾಕೆ ಮಾಡಬಾರದು ಎಂದು ಸಮಾಧಾನ ತಂದುಕೊಂಡೆ.

ಅಕ್ಕ ಅಂದು ನಾಲ್ಕು ಗಂಟೆಯ ಸುಮಾರಿಗೆ ಬಂದು ಮುಟ್ಟಿದಳು. ರಾಮಕೃಷ್ಣ ಮೂರು ಗಂಟೆಗೇ ಬಸ್‌ಸ್ಟ್ಯಾಂಡಿಗೆ ಹೊಗಿ ಕಾದನಂತೆ. ಸಾಂತಪ್ಪ ಮನೆಗಿತ್ತ ಭೇಟಿಯ ಬಗ್ಗೆ ರಾಮಕೃಷ್ಣ ಅಕ್ಕನಿಗೆ ಬಸ್‌ಸ್ಟ್ಯಾಂಡಿನಲ್ಲೇ ತಿಳಿಸಿದ್ದ ಎನ್ನುವುದನ್ನು ಅವಳು ಮನೆ ಹೊಕ್ಕ ರಭಸವೇ ಜಾಹೀರುಗೊಳಿಸಿತ್ತು. “ಯಾವಾಗ, ನಿನ್ನೆ ಬಂದೆಯೊ? ನಿನ್ನ ಹೆಂಡತಿ ಎಲ್ಲಿ. ಒಳಗಿರುವಳೊ? ಮಕ್ಕಳಿಬ್ಬರೂ ಆರಾಮವಲ್ಲವೆ? ಒಬ್ಬ ಬೆಂಗಳೂರು ಇನ್ನೊಬ್ಬ ಕಲ್ಕತ್ತೆಯಲ್ಲಲ್ಲವೆ?” ಎಂದು ನಾಲ್ಕು ಚುಟುಕಾದ ಪ್ರಶ್ನೆಗಳನ್ನು-ಒಂದನ್ನು ಅಂಗಳದಲ್ಲಿ, ಇನ್ನೊಂದನ್ನು ಹೊರ ಜಗಲಿಯ ಮೇಲೆ, ಎರಡನ್ನು ಹಾಲಿನಲ್ಲಿ ನಿಂತು-ಕೇಳಿದವಳು ನನ್ನ ಉತ್ತರದ ಹಾದಿ ಕಾಯದೇ ನನ್ನ ಹೆಂಡತಿಯನ್ನು, ಸೊಸೆಯನ್ನು ಹುಡುಕಿ ಸೀದಾ ಒಳಗಿನ ಕೋಣೆಗೆ ನಡೆದೇಬಿಟ್ಟಳು

ರಾಮಕೃಷ್ಣ ಕೊಟ್ಟ ಸುದ್ದಿಯಿಂದ ಅವಳಿಗೆ ಸಿಟ್ಟು ಬಂದಿದೆಯೆನ್ನುವುದು ಸ್ಪಷ್ಟವಿತ್ತು. ನಾನೂ ಅವಳ ಹಿಂದೆಯೆ ಅವಳು ಹೋದ ಕೋಣೆಗೆ ನಡೆದೆ. ವನಿತಾ ನನ್ನನ್ನು ನೋಡಿ ಕಣ್ಣು ಮಿಟುಕಿಸಿ ಕೆಲ ಹೊತ್ತು ಸುಮ್ಮನಿರುವಂತೆ ಸನ್ನೆ ಮಾಡಿದಳು. ಅಕ್ಕ ಅವಳ ಬೆನ್ನ ಹಿಂದೆ ನಿಂತ ನನ್ನನ್ನು ಪೂರ್ತಿಯಾಗಿ ಕಡೆಗಣಿಸಿ ನನ್ನ ಹೆಂಡತಿಯನ್ನು ಮೊದಲು ತರಾಟೆಗೆ ತೆಗೆದುಕೊಳ್ಳುವವಳ ಹಾಗೆ “ಏನೇ ಸುಮತೀ, ಇಲ್ಲಿಗೆ ಬಂದು ಪೂರ್ತಿ ಒಂದು ದಿನವೂ ಆಗಿಲ್ಲ. ಅಷ್ಟರಲ್ಲೇ ಈ ಊರಿನ ಹಾಳು ಉಪದ್ವ್ಯಾಪದಲ್ಲಿ ಬೀಳುವ ತಲಬು ಬಂದುಬಿಟ್ಟಿತೋ?” ಎಂದು ಕೇಳಿದವಳು ವನಿತಾಳತ್ತ ತಿರುಗಿ, “ನಿನಗೂ ತಿಳಿಯಬೇಡವೇನೆ? ಅತ್ತೆ-ಮಾವಂದಿರಿಗೆ ನಿನ್ನ ಮನೆಯಲ್ಲಿ ಇನ್ನೂ ಎರಡು ಊಟಗಳನ್ನೂ ಹಾಕಲಾರಿ. ಆಗಲೇ ಬೇರೆಯವರ ಮನೆಯ ಔತಣಕ್ಕೆ ಒಪ್ಪಿದೆಯಾ? ನೀವು ಕೂತಿರಿ. ಮೊದಲು ಬಚ್ಚಲಮನೆಗೆ ಹೋಗಿ ಸ್ನಾನ ಮಾಡಿ ಬರುತ್ತೇನೆ. ಮೈಯಲ್ಲ ಧೂಳಾಗಿಬಿಟ್ಟಿದೆ. ಹಂಡೆಯಲ್ಲಿ ನೀರುಂಟಲ್ಲವೆ?” ಎಂದಳು, ವನಿತಾ ಏನೋ ಹೇಳಲು ಹೊರಡುವಷ್ಟರಲ್ಲಿ. “ನನಗೆ ತಣ್ಣೀರು ನಡೆಯುತ್ತದೆ. ಅಬ್ಬಾ~ ಮೈಯಲ್ಲಿ ಎಂಥಾ ಉರಿ!” ಎಂದು ತಾನಿದ್ದ ಮೂಡಿನ ಕಲ್ಪನೆ ಮಾಡಿಕೊಂಡಳು.

ಅವಳು ಸ್ನಾನಕ್ಕೆ ಹೊರಟು ಹೋದ ಮೇಲೆ ನಾವೆಲ್ಲ ಗಪ್‌ಚಿಪ್ ಹೊರಗೆ ಬಂದು ಹಾಲಿನಲ್ಲಿ ಕಲೆತೆವು. ಅವಳು ಸ್ನಾನ ಮುಗಿಸಿ ಬಂದಮೇಲೆ ನಮಗೆ ಏನೆಲ್ಲ ಕಾದಿದೆ ಎನ್ನುವುದರ ಬಗ್ಗೆ ಅನುಮಾನವಿರಲಿಲ್ಲ. ಅಕ್ಕನಿಗೆ ಸಾಂತಪ್ಪನ ಬಗ್ಗೆ ಹೇಳುವುದೇ ಇದ್ದಲ್ಲಿ ನಾವು ಅವನ ಮನೆಯಲ್ಲಿ ಊಟ ಮುಗಿಸಿ ಬಂದ ನಂತರವೇ ಹೇಳಿದರೆ ಒಳ್ಳೆಯದೇನೋ ಎಂದು ಅನ್ನಿಸದೇ ಇರಲಿಲ್ಲ. ಏನೇ ಆಗಲಿ, ಅಕ್ಕನಿಂದ ತಿಳಿದ ಮಾಹಿತಿಯಿಂದ ಸಾಂತಪ್ಪನ ಬಗ್ಗೆ ಮೊದಲೇ ಮನಸ್ಸನ್ನು ಕೆಡಿಸಿಕೊಳ್ಳಲಾರೆನೆಂದು ನಿರ್ಧರಿಸಿದೆ. ಮೊದಲ ಬಾರಿಗೇ ಎನ್ನುವಂತೆ ನನ್ನಿಂದಾಗಬಹುದಾದ ಸಹಾಯ ಮಾಡುವುದಕ್ಕೆ ಒಳಗೊಳಗೇ ಬದ್ಧನಾಗತೊಡಗಿದ್ದೆ.

– ೨ –

ಸ್ನಾನ ಮುಗಿಸಿ ಮಡಿ ಸೀರೆ ಉಟ್ಟು ಮುಗುಳ್ನಗುತ್ತ ಹೊರ ಬಂದ ಅಕ್ಕ ನಮ್ಮ ಎಂದಿನ ಅಕ್ಕನಾಗಿದ್ದಳು. ಅಡುಗೆಮನೆಯಲ್ಲಿ ಸುಮತಿ, ವನಿತಾ ಏನೋ ಅಂದಿರಬೇಕು. ಹೊರಗೆ ಬಂದದ್ದೇ ನೇರವಾಗಿ ಸಾಂತಪ್ಪನ ವಿಷಯಕ್ಕೇ ಬಂದಳಾದರೂ ಮಾತಿನ ಧಾಟಿ ಬದಲುಗೊಂಡಿತ್ತು.

“ಅವನಲ್ಲಿ ಊಟಕ್ಕೆ ಹೋಗುವುದರ ಬಗ್ಗೆ ನನ್ನ ತಕರಾರಿಲ್ಲ. ನಿನ್ನ ಬಾಲ್ಯದ ಸಹಪಾಠಿಯಂತಲ್ಲ. ನಿನ್ನ ಹೆಂಡತಿ ಹೇಳಿದಳು. ನನಗಂತೂ ನೆನಪಿಲ್ಲ. ಇಷ್ಟೇ, ಕರೆದ ತಕ್ಷಣ ಒಪ್ಪಿಕೊಳ್ಳುವ ಗರಜು ಇರಲಿಲ್ಲವೇನೋ. ಅವನ ಎಲ್ಲ ಕೆಲಸಗಳೇ ಹೀಗೆ, ಕುದುರೆಯ ಮೇಲೆ ಕೂತು ಬಂದ ತರ. ಕಾಯುವ ತಾಳ್ಮೆಯಿಲ್ಲ. ಜರೂರು ಹೋಗಿ ಬನ್ನಿ. ನನ್ನನ್ನು ಕರೆದರೆ ನಾನೂ ಬರುತ್ತಿದ್ದೆ. ಆದರೆ ಕರೆಯಲಾರ. ಅವನ ಮಗ-ಸೊಸೆಯಂದಿರನ್ನು ಹತ್ತಿರ ಮಾಡಿದ ಯಾರನ್ನೂ ಅವನು ಸಹಿಸಲಾರ. ನಾನು ನಿನ್ನನ್ನು ಕಾಣಲು ಬಂದೇಬರುತ್ತೇನೆಂದು ಅವನಿಗೆ ಗೊತ್ತು. ಹಾಗೆಂದೇ ಇಷ್ಟು ಉತಾವಳಿ; ನಾನು ಬಂದು ಮುಟ್ಟುವ ಮೊದಲೇ ನಿನ್ನನ್ನು ಮಾತನಾಡಿಸುವ ಆತುರ. ನನಗೂ ಅವನ ಬಗ್ಗೆ ಇಲ್ಲದ್ದನ್ನು ಹೇಳಿ ನಿನ್ನ ಮನಸ್ಸನ್ನು ಕೆಡಿಸುವ ಇಚ್ಛೆಯಿಲ್ಲ. ನನಗೆ ಸಂಬಂಧವೇ ಇಲ್ಲದವನ ಬಗ್ಗೆ ನಾನೇಕೆ ಚಾಡಿ ಹೇಳಲಿ? ಮೇಲಾಗಿ ಅವನ ಖುದ್ದು ಪರಿಚಯ ನನಗೆ ಅಷ್ಟಕ್ಕಷ್ಟೆ. ಅವರಿವರು ಹೇಳಿದ್ದರಿಂದ ಅಷ್ಟಿಷ್ಟು ಗೊತ್ತು. ಆದರೆ ಅವನ ಮಗ ಸೊಸೆಯಂದಿರನ್ನು ಮಾತ್ರ ಚೆನ್ನಾಗಿ ಬಲ್ಲೆ. ಹುಬ್ಬಳ್ಳಿಯಲ್ಲಿ ನಮ್ಮ ಮನೆಗೆ ಹತ್ತಿರದಲ್ಲೇ ಹಳೇ ಚಾಳೊಂದರಲ್ಲಿ ಅವರ ವಾಸ್ತವ್ಯ. ನಮ್ಮ ವಾಸುದೇವ ರತ್ನದಂತಹ ಹುಡುಗ. ಅವನ ಹೆಂಡತಿಯೂ ಹಾಗೇ. ಉಮಾ ಅವಳ ಹೆಸರು. ನಮ್ಮ ಜಾತಿಯವಳಲ್ಲ. ಜಾತಿ ಏನು ಮಾಡುತ್ತದೆ? ದೇವರು ಹುಟ್ಟಿಸಿದ್ದಲ್ಲವಲ್ಲ. ಅಸ್ಪೃಶ್ಯಳಂತೆ. ನನಗೆ ಗೊತ್ತಿಲ್ಲ. ನನಗೆ ಅದರ ದಾದೂ ಇಲ್ಲ. ನನ್ನ ಮಗನ ಮನೆಯಲ್ಲಿ ಯಾರಿಗೂ ಇಲ್ಲ. ಎಂಥಾ ರಾಮ-ಸೀತೆಯರಂಥ ಜೋಡಿ ಎನ್ನುತ್ತೀ! ನೋಡಿದ್ದರೆ ನೀನೂ ಸೈ ಎನ್ನುತ್ತಿದ್ದೆ. ಮಗನನ್ನು ಇವನು ದ್ವೇಷಿಸುವುದಕ್ಕೆ ಸೊಸೆಯ ಜಾತಿಯೊಂದೇ ಕಾರಣವಿರಲಾರದು. ಇವನ ಬಗ್ಗೆ ಕೆಟ್ಟದ್ದನ್ನು ನಾನು ಹೇಳಬಾರದಾದರೆ ನೀನಿನ್ನೂ ನೋಡಿರದ ಈ ಇಬ್ಬರನ್ನು ನಾನು ಹೊಗಳಲೂಬಾರದೇನೋ! ಇಷ್ಟೇ. ಅವನ ಭುಲ್ಲವಣೆಗೆ ಒಮ್ಮೆಲೇ ಮರುಳಾಗಬೇಡ. ಎಲ್ಲವನ್ನೂ ಕೇಳಿಕೋ. ಕೂಡಲೇ ಮಾಡುತ್ತೇನೆಂದು ಮಾತು ಕೊಡಬೇಡ. ನಿನಗೆ ಮೃಷ್ಟಾನ್ನ ಉಣಿಸುವ ಪುಳಕ ಹುಟ್ಟಿದ್ದು ನೀನು ಬಾಲ್ಯದ ಗೆಳೆಯನೆಂದು ಇರಲಾರದು. ತುಂಬಾ ಮುತ್ಸಬೀ ಮನುಷ್ಯ. ಅವನ ಮಾತಿನ ಜೋರು ನಿನ್ನನ್ನು ಕೊಚ್ಚಿಕೊಂಡು ಹೋಗದಿರಲಿ ಎಂದು ಅವನ ಮಗ ಸೊಸೆಯಂದಿರ ಬಗ್ಗೆ ಅವರ ಮುತ್ತಿನಂಥ ಎರಡು ಸಣ್ಣ ಮಕ್ಕಳ ಬಗ್ಗೆ ಎರಡು ಮಾತು ಹೇಳಿಬಿಡುತ್ತೇನೆ. ನನಗೆ ಈ ಪುಟಾಣಿಗಳದೇ ಚಿಂತೆ. ಒಂದು ಗಂಡು, ಒಂದು ಹೆಣ್ಣು. ಅವನು ಹೇಳಿದ್ದನ್ನೆಲ್ಲ ನಂಬುವ ಮೊದಲು ಈ ಇವರ ಬಗ್ಗೆ ಒಂದೆರಡು ಪ್ರಶ್ನೆಗಳನ್ನಾದರೂ ಕೇಳುವುದು ಸಾಧ್ಯವಾಗಲಿ ಎಂದು ಹೇಳುತ್ತೇನೆ” ಎಂದಳು.

ರಾಮಕೃಷ್ಣ ಒಬ್ಬನನ್ನು ಬಿಟ್ಟು ಅಕ್ಕನ ಶ್ರೋತೃವರ್ಗದಲ್ಲಿ ಮನೆಯೊಳಗಿನ ಎಲ್ಲರೂ ಇದ್ದರು. ಅಕ್ಕನ ಮಾತಿನ ಧಾಟಿ ನನಗೆ ಮೆಚ್ಚುಗೆಯಾಯಿತು. ಚಾಡಿ ಹೇಳುವ ಇಲ್ಲ ಅನಾವಶ್ಯಕ ಕುತೂಹಲ ಕೆರಳಿಸುವ ಚಾಪಲ್ಯದ ಲವಲೇಶವೂ ಅದರಲ್ಲಿರಲಿಲ್ಲ. ಮೇಲಾಗಿ ಅನೇಕ ವರ್ಷಗಳ ಮೇಲೆ ಊರಿಗೆ ಬಂದವನು ಸಲ್ಲದ ಲಫಡಾದಲ್ಲಿ ಸಿಕ್ಕಿಬೀಳುವುದು ಬೇಡವೆಂದು. ನನ್ನ ಬಗೆಗೆ ಹೇಗೋ ಹಾಗೇ ಸಾಂತಪ್ಪನ ಸಂಕಟಕ್ಕೆ ಕಾರಣನಾದ ಅವನ ಕಿರಿಯ ಮಗನ ಬಗೆಗೂ ಅಷ್ಟೇ ಆತಂಕಗೊಂಡವಳ ಹಾಗೆ ಕಂಡಳು. ಅವಳು ಸಾಂತಪ್ಪನ ಬಗ್ಗೆ ಈಗಲೇ ಹೆಚ್ಚು ಹೇಳಲು ಹಿಂದೆಗೆದದ್ದಕ್ಕೆ ಬಹುಶಃ ಶ್ರೋತೃವರ್ಗದಲ್ಲಿ ವನಿತಾಳ ಹುಡುಗಿಯರಿದ್ದದ್ದು ಕಾರಣವಾಗಿರಬಹುದೆಂದು ಅನುಮಾನವಾಯಿತು. ಇಲ್ಲವಾದರೆ ಇನ್ನೊಬ್ಬರ ಬಗ್ಗೆ ಮಾತನಾಡುವ ಇಂಥ ಅವಕಾಶವನ್ನು ಸಹಜಾಸಹಜೀ ಬಿಟ್ಟುಕೊಡುವ ಜಾಯಮಾನದವಳಲ್ಲ ಅವಳು-ಮತ್ತೆ ಯಾರಿಗೆ ಗೊತ್ತು. ಅಕ್ಕ ಈ ಕೆಲವು ವರ್ಷಗಳಲ್ಲಿ ಬದಲಾಗಿರಲೂಬಹುದು, ಅನ್ನಿಸಿತು.

ಅಕ್ಕನ ಮಾತಿನೊಳಗಿನ ನಿಗ್ರಹ ಅಸಹಜತೆ ಹೆಂಡತಿಯ ಲಕ್ಷ್ಯಕ್ಕೂ ಬಂದಿರಬೇಕು.

“ಕಾವೇರಕ್ಕಾ, ಸಾಂತಪ್ಪನ ಬಗ್ಗೆ ನಮಗೇನೂ ಗೊತ್ತಿಲ್ಲ. ಇವರು ಅವನನ್ನು ಈ ಮೊದಲು ಕಂಡಿದ್ದು ಅವರು ಹದಿನಾಲ್ಕು ವರ್ಷದವರಿದ್ದಾಗಂತೆ. ಇವರ ಸ್ವಭಾವ ನಿನಗೆ ಗೊತ್ತಿದ್ದದ್ದೇ. ಯಾರೂ ಕರೆಯಲಿ, ತಪ್ಪಿಸಿಕೊಳ್ಳುವ ಖುಬಿಯೇ ಅವರಿಗೆ ಗೊತ್ತಿಲ್ಲ. ಸಾಂತಪ್ಪನಿತ್ತ ಆಮಂತ್ರಣವನ್ನು ಒಪ್ಪದಿರಲು ಅಂಥ ಬಲವಾದ ಕಾರಣವೂ ಇರಲಿಲ್ಲ. ಸಾಂತಪ್ಪನ ಬಗ್ಗೆ ಹೇಳಬೇಕೆನ್ನಿಸಿದರೆ ಹೇಳು, ನಾವು ತಪ್ಪು ತಿಳಿಯಲಾರೆವು. ನಾವು ಊಟಕ್ಕೆ ಹೋಗುವ ಮನೆಯವರ ಬಗ್ಗೆ ತುಸುವಾದರೂ ಗೊತ್ತಿರುವುದು ಒಳ್ಳೆಯದೇ” ಎಂದು ಹೇಳಲು ಪುಸಲಾಯಿಸಿದಳು. ವನಿತಾ ಕೂಡ “ಹೇಳಮ್ಮ. ಮಾಮನಿಗೆ ಗೊತ್ತಾಗಲಿ” ಎಂದು ಒತ್ತಾಯಿಸಿದಳು. ‘ಏನು ಗೊತ್ತಾಗಲಿ’ ಎನ್ನುವುದನ್ನು ಮಾತ್ರ ಅಮ್ಮನಿಗೇ ಬಿಟ್ಟುಕೊಟ್ಟಳು.

ತನ್ನದೇ ಗುಂಗಿನಲ್ಲಿದ್ದ ಅಕ್ಕ ಇದಾವುದನ್ನೂ ಕಿವಿಗೆ ಹಾಕಿಕೊಂಡಿರದವಳ ಹಾಗೆ ಮುಂದುವರಿಸಿದಳು :

“ನಾನು ಬಸ್ಸಿನಿಂದಿಳಿದು ರಿಕ್ಷಾದಲ್ಲಿ ಕುಳಿತುಕೊಂಡದ್ದೇ ರಾಮಕೃಷ್ಣ ಸಾಂತಪ್ಪನ ಮಾತು ತೆಗೆದಾಗ ನನಗೆ ಆಶ್ಚರ್ಯದ ಧಕ್ಕೆಯಾಯಿತು. ಯಾಕೆಂದರೆ ಕುಮಟೆಯ ನೆಲಕ್ಕೆ ಕಾಲು ತಾಗಿಸಿದ ಮೇಲೆ ತಲೆಯಲ್ಲಿ ಹೊಕ್ಕ ಮೊದಲ ವಿಚಾರ ಈ ಸಾಂತಪ್ಪನನ್ನು ಕುರಿತದ್ದಾಗಿತ್ತು. ನಾನು ಇಲ್ಲಿಗೆ ಬರುವುದು ನಿಶ್ಚಯವಾಗುತ್ತಲೇ ಅವನ ಸೊಸೆಯನ್ನು ಕಾಣಲು ಹೋಗಿದ್ದೆ. ಅವಳನ್ನು ಕಾಣದೇ ಕುಮಟೆಗೆ ಬರುವುದು ಶಕ್ಯವೇ ಇರಲಿಲ್ಲ. ಮದುವೆಯಾದಂದಿನಿಂದಲೂ ಈ ದುರ್ದೈವಿ ಹೆಣ್ಣುಮಗಳು ಪಡುತ್ತಿದ್ದ ಪಾಡು ಯಾರಿಗೂ ಬರಕೂಡದು. ಆದರೆ ಈ ಪಾಡಿಗೆ ಮೂಲ ಕಾರಣವಾದ ಸಾಂತಪ್ಪನ ದುಷ್ಟ ಅಹಂಕಾರಕ್ಕೆ ಬಗ್ಗದೇ ಎಲ್ಲವನ್ನೂ ಎದುರಿಸುವ ಧೈರ್ಯ ತುಂಬುತ್ತಿದ್ದ ಎಂಟೆದೆಯ ಬಂಟ ಗಂಡನೇ ಮನೆಯಿಂದ ಬೇಪತ್ತೆಯಾದರೆ ದುರ್ದೈವಿಯ ತಲೆಯ ಮೇಲೆ ಆಕಾಶ ಕಳಚಿ ಬೀಳದೇ ಉಳಿದೀತೆ? ಈ ಮಾತಿಗೆ ಈಗ ಮೂರು ದಿನಗಳಾದವು. ಗಂಡ ಬೇಪತ್ತೆಯಾದ ದಿನ ಅವಳು ಸೀದ ಓಡಿ ಬಂದದ್ದು ನನ್ನ ಬಳಿಗೇ ಆಗಿತ್ತು. ಆಜುಬಾಜಿನ ಜನ ಧೈರ್ಯ ಕೊಡುವ ಬದಲು, ‘ಬೇಪತ್ತೆಯಾಗಿಲ್ಲ. ಅವನನ್ನು ಬೇಪತ್ತೆಯಾಗಿಸಿದ್ದಾರೆ’ ಎನ್ನುವ ಮಾತುಗಳಲ್ಲಿ ಸಲ್ಲದ ಭಯವನ್ನು ತಲೆಯಲ್ಲಿ ಹಾಕಿದಾಗ ದಿಕ್ಕುಗಾಣದೇ ಅರೆಹುಚ್ಚಿಯಂತಾದವಳಿಗೆ ನಾನು ಕುಮಟೆಗೆ ಹೋಗುವುದರಲ್ಲಿ ಏನೋ ದೊಡ್ಡ ಆಶಾಕಿರಣ ಹೊಳೆದಂತಾಗಿರಬೇಕು. “ಅಕ್ಕ! ನನ್ನ ಸಲುವಾಗಿಯಾದರೂ ಅವರನ್ನು ಹೋಗಿ ನೋಡಿ ಹಕೀಕತ್ತು ತಿಳಿಯಿರಿ” ಎಂದು ಕೂಡಲೇ ಮಾವನನ್ನು ಕಾಣಲು ದುಂಬಾಲು ಬಿದ್ದಳು. ನಾನು, ನೀನು ಮುಂಬಯಿಯಿಂದ ಬಂದದ್ದನ್ನು ತಿಳಿಸಿ, ನಿನ್ನನ್ನು ಕಾಣಲೆಂದೇ ಇಲ್ಲಿಗೆ ಬರುತ್ತಿರುವ ಬಗ್ಗೆ ಹೇಳಿದಾಗಂತೂ, “ಹೌದೆ! ಹಾಗಾದರೆ ದೇವರೇ ಕಳಿಸಿರಬೇಕು. ಅವರನ್ನೂ ಕರಕೊಂಡು ಹೋಗಿ ಹಕೀಕತ್ತು ಏನೆಂದು ತಿಳಿದರೆ ಸಾಕು ಬಾಕಿ ಏನನ್ನೂ ಮಾಡಲು ನಿಮ್ಮನ್ನು ಕೇಳಲಾರೆ” ಎಂದಳು. ಅವಳ ಮಾತಿನ ಕೊನೆಯಲ್ಲಿ ಕೇಳಿಸಿದ ನಿರ್ಧಾರದ ಧಾಟಿಯನ್ನು ನೆನೆದರೇ ನನಗೆ ಭಯವಾಗುತ್ತದೆ.”

ಅಕ್ಕ ನಿರೂಪಿಸಿದ ಘಟನೆಗೂ ಸಾಂತಪ್ಪನ ಮೇಲೆ ಎರಗಿದ ಆಪತ್ತಿಗೂ ಸಂಬಂಧವಿದೆಯೆಂದು ತಿಳಿಯಲು ಕಷ್ಟವಾಗಲಿಲ್ಲ. ಅಕ್ಕನ ದುಗುಡಕ್ಕೂ ಈಗ ಕಾರಣ ಹೊಳೆಯಿತು. “ನೀನು ಎಂಟೆದೆಯ ಬಂಟನೆಂದು ಹೊಗಳಿದ ಹುಡುಗ ಆತಹತ್ಯೆ-ಗಿತ್ಯೆ ಮಾಡಿಕೊಳ್ಳುವ ಪೈಕಿ ಅಲ್ಲ ತಾನೆ?” ಎಂದು ಕೇಳಬೇಕು, ಅನ್ನಿಸಿತು. ಆದರೆ ಅಕ್ಕ ಇವರನ್ನು ಹಚ್ಚಿಕೊಂಡ ರೀತಿಗೆ ದೈರ್ಯವಾಗಲಿಲ್ಲ. ಆದರೆ ಅದನ್ನೇ ಬೇರೆ ರೀತಿಯಲ್ಲಿ ಸೂಚಿಸುತ್ತ “ನಿನ್ನ ಈ ಎಂಟೆದೆಯ ಬಂಟ ಯಾವ ವಿಕೋಪಕ್ಕೂ ಹೋಗುವ ತರುಣನಲ್ಲವೆಂದು ತಿಳಿಯುತ್ತೇನೆ” ಎಂದನಷ್ಟೆ. ಅಕ್ಕ ಬಿಳಚಿಕೊಳ್ಳುವಷ್ಟು ಗಾಬರಿಯಿಂದ, “ಬಿಡ್ತು ಬಿಡ್ತು! ನಿನಗೆ ಅಂಥ ವಿಚಾರ ಏಕೆ ಬಂದಿತೋ. ಕೈ ಹಿಡಿದ ಹೆಂಡತಿಯನ್ನು, ಹೊಟ್ಟೆಯ ಮಕ್ಕಳನ್ನು ನಡುನೀರಿನಲ್ಲಿ ಕೈ ಬಿಡುವ ಸ್ವಭಾವದವನಂತೂ ಅಲ್ಲ. ಅವರ ಬಗ್ಗೆ ಏನೂ ಮಾಡಲು ಸಿದ್ಧನಿದ್ದವನು ಇಂಥ ಹೇಡಿತನಕ್ಕೆ ಮನಸ್ಸು ಮಾಡಲಾರ” ಎಂದಳು. ಅಕ್ಕನ ಆವೇಶದಲ್ಲಿ ಭರವಸೆಗಿಂತ ಹಾರೈಕೆಯ ಧ್ವನಿಯೇ ದೊಡ್ಡದಾಗಿರುವ ಭಾಸವಾಗಿ ಸನ್ನಿವೇಶ ನನ್ನ ಶಕ್ತಿಯ ಹೊರಗಿನದೇನೋ ಎಂದು ಅಳುಕು ಉಂಟಾಯಿತು.

“ಉಮಾಗೆ ನೌಕರಿಯಿದೆಯೆ?” ಎಂದು ಕೇಳಿದೆ. ಹಾಗೇಕೆ ಕೇಳಿದೆನೋ ಗೊತ್ತಿಲ್ಲ. ನನ್ನ ಪ್ರಶ್ನೆಗೆ ಕಾರಣವಾಗಿರಬಹುದಾದ ಭಯದ ಕಲ್ಪನೆ ನನಗೇ ಮಾಡಿಕೊಡುವವಳ ಹಾಗೆ, “ಹುಬ್ಬಳ್ಳಿಯ ದೊಡ್ಡ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾಳೆ. ಆದರೆ ಅದರಿಂದೇನು ಪ್ರಯೋಜನ? ಗಂಡನಿಗೆ ಏನಾದರೂ ಹೆಚ್ಚು ಕಡಿಮೆಯಾದರೆ….” ಅಕ್ಕ ತನ್ನ ವಾಕ್ಯವನ್ನು ಅರ್ಧಕ್ಕೇ ಬಿಟ್ಟಳು. ಸುಮಾರು ಹೊತ್ತಿನ ಮೇಲೆ, “ಆ ಅರಿಯದ ಮಕ್ಕಳ ಹಣೆಬರಹ ಎಂಥದ್ದೋ ನೋಡಬೇಕು” ಎಂದವಳು ಮೌನ ಧರಿಸಿ ಕುಳಿತುಬಿಟ್ಟಳು.

ಅವಳು ಮತ್ತೆ ಬಾಯಿ ತೆರೆದಾಗ ನೇರವಾಗಿ ಸಾಂತಪ್ಪನ ಬಗ್ಗೆ ಮಾತನಾಡುತ್ತಾಳೆ ಹಾಗೂ ಆ ಮಾತು ಅಷ್ಟೊಂದು ಹಿತಕರವಾಗಿರಲಾರದು ಎಂಬುದನ್ನು ಊಹಿಸಿದ ವನಿತಾ, “ನೀವು ಮಾತನಾಡಿಕೊಳ್ಳಿ. ನಾನು ಎಲ್ಲರಿಗೆ ಚಹ-ತಿಂಡಿ ತರುತ್ತೇನೆ” ಎನ್ನುತ್ತ ಕೂತಲ್ಲಿಂದ ಎದ್ದು ಅಡುಗೆಯ ಮನೆಯ ಕಡೆಗೆ ಸಾಗಿದಳು. ಅವಳ ಇಬ್ಬರೂ ಹುಡುಗಿಯರು ಅಮ್ಮನಿಗೆ ನೆರವಾಗುತ್ತೇವೆಂದು ಹೇಳಿ ತಾವೂ ಅವಳನ್ನು ಕೂಡಿಕೊಂಡರು.

ಅಜ್ಜಿ ಹೇಳಲು ಹೊರಟಿದ್ದನ್ನು ಅವರೂ ಊಹಿಸಿರಬೇಕು.

ಅವರೆಲ್ಲ ಒಳಗೆ ಹೋದ ಕೆಲ ಹೊತ್ತಿನ ಮೇಲೆ ಅಂಗಡಿಗೆ ಹೋಗಿದ್ದ ರಾಮಕೃಷ್ಣನೂ ಒಳಗೆ ಬಂದು ನಮ್ಮನ್ನು ಕೂಡಿಕೊಂಡ. ಅವನದು ಟಿವಿ, ರೇಡಿಯೋಗಳನ್ನು ಮಾರುವ, ಸರ್ವಿಸಿಂಗ್ ಮಾಡುವ ಅಂಗಡಿಯಂತೆ. ಭರಭರಾಟೆಯಲ್ಲವಾದರೂ ತನ್ನ ಚಿಕ್ಕ ಚೊಕ್ಕ ಸಂಸಾರಕ್ಕೆ ಸಾಕಾಗುವಷ್ಟು ಗಳಿಕೆಯಂತೆ. ಕರ್ತಬುಗಾರ. ತನ್ನ ಕಾಲ ಮೇಲೆ ತಾನು ನಿಲ್ಲುವ ಧೈರ್ಯದ, ಸ್ವಾಭಿಮಾನದ ಹುಡುಗ. ಆಗ ಅಕ್ಕ ಸಾಂತಪ್ಪನ ಮಗನ ಬಗ್ಗೆ ಹೇಳುತ್ತಿದ್ದಾಗ ಅವನನ್ನು ಮನಸ್ಸಿನಲ್ಲೇ ಚಿತ್ರಿಸಿಕೊಂಡದ್ದು ಇದೇ ರೀತಿಯಲ್ಲಾಗಿತ್ತು ಎಂದು ಲಕ್ಷ್ಯಕ್ಕೆ ಬಂದಿತು. ಊರಿನ ಎಲ್ಲ ಸಣ್ಣ ದೊಡ್ಡ ವಿದ್ಯಮಾನಗಳ ಬಗ್ಗೆ ಕುಲಂಕುಷ ಮಾಹಿತಿಯುಳ್ಳ ರಾಮಕೃಷ್ಣನಿಗೆ ಸಾಂತಪ್ಪನ ಬಗ್ಗೆ ಗೊತ್ತಿಲ್ಲದೇ ಇದ್ದೇತೆ? ಆದರೇಕೋ ತನ್ನ ಬಗ್ಗೆ ಬಹಳ ಗೌರವ ಇಟ್ಟುಕೊಂಡವನಿಗೆ ಸಂದರ್ಭವಿಲ್ಲದೇ ಮಾತನಾಡಲು ಸಂಕೋಚವಾಗುತ್ತಿರಬೇಕು ಅಥವಾ ಸಾಂತಪ್ಪನಂಥವನ ಬಗ್ಗೆ ಮಾತನಾಡಲು ತನ್ನ ಅತ್ತೆಯೇ ಸರಿಯಾದ ವ್ಯಕ್ತಿಯೆಂದು ಬಗೆದಿರಬೇಕು. ನಾವು ಮೌನ ಧರಿಸಿ ಕುಳಿತುಬಿಟ್ಟದ್ದನ್ನು ನೋಡಿ:

“ನೀವೆಲ್ಲ ಸಾಂತಪ್ಪನ ಬಗ್ಗೆ ಮಾತನಾಡಿಕೊಳ್ಳುತ್ತಿರಬೇಕು ಎಂದುಕೊಂಡು ಅಂಗಡಿಯಲ್ಲಿ ನನ್ನ ಅಸಿಸ್ಟೆಂಟ್‌ಗೆ ಕೆಲಸ ಒಪ್ಪಿಸಿ ಓಡೋಡಿ ಬಂದೆ. ಮಾತು ಆಗಲೇ ಮುಗಿದೇಹೋಯಿತೋ? ಅಥವಾ ಇನ್ನೂ ಶುರುವಾಗಲೇ ಇಲ್ಲವೋ?” ಎಂದು ಕೇಳಿದ.

“ಸಾಂತಪ್ಪನ ಬಗ್ಗೆ ಒಮ್ಮೆ ಮಾತು ಶುರುವಾದರೆ ಅದೇನು ಮುಗಿಯುವಂಥದ್ದೇ!” ಎಂದು ಮೌನ ಮುರಿದ ಅಕ್ಕ ಮಾತು ಈಗ ಶುರುವಾಗುವುದರ ಇಷಾರೆ ಕೊಟ್ಟಳು. ರಾಮಕೃಷ್ಣನನ್ನೂ ಮಾತಿನಲ್ಲಿ ತೊಡಗಿಸುವ ಮನಸ್ಸಾಗಿ, ನಾನು “ಅಕ್ಕ ನಿನ್ನದೇ ಹಾದಿ ಕಾಯುತ್ತಿದ್ದಳು ” ಎಂದೆ.

“ಒಂದು ರೀತಿಯಿಂದ ಅದು ಸುಳ್ಳಲ್ಲ. ಸಾಂತಪ್ಪನ ಬಗ್ಗೆ ನನಗಿಂತ ಅವನೇ ಹೆಚ್ಚು ಗೊತ್ತಿದ್ದವನು. ಆದರೆ ಎಲ್ಲವೂ ಇವತ್ತೇ ಬೇಡ. ವಾಸುದೇವ ಏಕಾ‌ಏಕಿ ಮನೆಯಿಂದ ಓಡಿಹೋದದ್ದಕ್ಕೆ ಕಾರಣವೇನು. ಅವನು ಈಗೆಲ್ಲಿದ್ದಾನು ಎನ್ನುವುದನ್ನು ತಿಳಿಯುವುದಕ್ಕೆ ಬೇಕಾಗುವಷ್ಟನ್ನು ಮಾತ್ರ ಈಗ ಸ್ವಲ್ಪದರಲ್ಲಿ ಹೇಳುತ್ತೇನೆ. ವನಿತಾಳ ಮಕ್ಕಳಿಬ್ಬರೂ ಹಿಂದಿರುಗಿ ಬರುವ ಮೊದಲೇ. ಮದುವೆಗೆ ಬೆಳೆಯುತ್ತಿರುವ ಹೆಣ್ಣುಮಕ್ಕಳ ಕಿವಿಯ ಮೇಲೆ ಇಂಥದ್ದೆಲ್ಲ ಬೀಳಕೂಡದು” ಎಂದು ಶುರು ಮಾಡಿದಳು. ಸಾಂತಪ್ಪನ ಲೈಂಗಿಕ ಚಾರಿತ್ರ್ಯ ಅಷ್ಟೊಂದು ಸ್ವಚ್ಛವಾಗಿದ್ದಿರಲಾರದೆಂದೂ ಇವರೆಲ್ಲ ಆಗಿನಿಂದಲೂ ಹೇಳಲು ಧಡಪಡಿಸುತ್ತಿದ್ದದ್ದು ಆ ಚಾರಿತ್ರ್ಯಕ್ಕೆ ಸಂಬಂಧಪಟ್ಟದ್ದೆಂದೂ ನಾನು ಆಗಲೇ ಊಹಿಸಿದ್ದೆ.

“ಲಂಪಟರಲ್ಲಿ ಲಂಪಟ. ಮೊದಲಿನಿಂದಲೇ ಅಂಥವನೋ, ಕೈಯಲ್ಲಿ ಹಣ ಬಂದು ಸೇರಿದ ಮೇಲೆ ಹೀಗಾದನೋ, ಮಹಾ ಹೊಲಸು ಮನುಷ್ಯ. ಊರಿನ ಪರವೂರಿನ ಸೂಳೆಗೇರಿಗಳಂತೂ ಆದುವೇ. ಮನೆಯಲ್ಲಿ ಕೆಲಸಕ್ಕಿಟ್ಟುಕೊಂಡ ಹೆಣ್ಣಾಳುಗಳನ್ನು ಕೂಡ ಬಿಟ್ಟವನಲ್ಲ. ಕುರೂಪಿ ಹೆಂಗಸರ ಬಗ್ಗೆ ಅದರಲ್ಲೂ ಅಡಿಗೆ ಹೆಂಗಸರ ಬಗ್ಗೆ ವಿಚಿತ್ರ ಮೋಹ. ಆರಾರು ತಿಂಗಳಿಗೆ ಅಡಿಗೆ ಹೆಂಗಸು ಬದಲಾಗಬೇಕು. ಒಬ್ಬಳಿಗಿಂತ ಒಬ್ಬಳು, ಕಾಣಲು ಕುರೂಪಳಿರಬೇಕು. ಜಾತಿಪಾತಿಯ ಲೆಕ್ಕವಿಲ್ಲ. ಅಂತಸ್ತು, ಸ್ವಚ್ಛತೆಗಳದೂ ಇಲ್ಲ. ಇವನ ಕೈ ಹಿಡಿದ ಹೆಣ್ಣು ಮಾತ್ರ ಏನು ಚೆಂದವೆನ್ನುತ್ತೀ-ರಂಭೆ ಊರ್ವಶಿಯರನ್ನು ನಿವಾಳಿಸಿ, ಒಗೆಯಬೇಕು ಅವಳೆದುರು. ಹಳ್ಳಿಯವಳಂತೆ. ತುಂಬಾ ಬಡ ಕುಟುಂಬದವಳಂತೆ. ಹೆಂಡತಿ ಚೆಂದವಾದ್ದರಿಂದಲೇ ಇವನಿಗೆ ಕುರೂಪ ಹೆಣ್ಣುಗಳ ಹುಚ್ಚು ಹಿಡಿಯಿತೋ? ಅವಳ ಸೌಂದರ್ಯದ ಮೇಲೆ ಇವನು ಸೇಡು ತೀರಿಸಿಕೊಳ್ಳುತ್ತಿದ್ದಾನೋ? ಸ್ವತಃ ತಾನೇ ಚೆಂದನಲ್ಲವಲ್ಲ! ನನಗೆ ತಿಳಿದದ್ದಲ್ಲ ಇದೆಲ್ಲ. ಹುಬ್ಬಳ್ಳಿಯ ನಿನ್ನ ಪ್ರೊಫೆಸರ್ ಸೋದರಳಿಯ ಹೇಳಿದ್ದು. ಬರೇ ರೂಪ ಏನು ಮಾಡುತ್ತದೆ? ಹೆಣ್ಣಿಗೆ ಗಂಡನ ಗುಣ ಮುಖ್ಯ. ಮದುವೆಯಾದ ಮೊದಲ ಕೆಲವು ವರ್ಷ ಹೆಂದತಿಯೊಡನೆ ಚೆನ್ನಾಗಿಯೇ ಸಂಸಾರ ಮಾಡಿದನಂತೆ. ಎರಡು ಗಂಡು ಮಕ್ಕಳೂ ಆದವು-ಅವಳಿಜವಳಿ. ಆದರೆ ಮೂರನೆಯವನಾದ ನಮ್ಮ ವಾಸುದೇವ ಹುಟ್ಟಿದ ಕೆಲವೇ ವರ್ಷಗಳಲ್ಲಿ ಈ ಸಂಸಾರಕ್ಕೆ ಯಾರ ಕೆಟ್ಟ ದೃಷ್ಟಿ ತಾಕಿತೋ ! ಇವನು ಈ ರೀತಿಯಾಗಿ ಬದಲಾಗಹತ್ತಿದ. ಹಿರಿಯ ಮಕ್ಕಳಿಬ್ಬರೂ ಕಲಿಯಲು ಅಷ್ಟೇನೂ ಚುರುಕರಲ್ಲ ಆದರೂ ಅಪ್ಪನ ಹಣದ ಬಲದಿಂದಲೇ ಆಗಲಿ ದೂರದೂರದ ಊರುಗಳಿಗೆ ಹೋಗಿ ಕಲಿತು ಈಗ ಇನ್ನಷ್ಟು ದೂರ ಹೋಗಿ ಅಮೇರಿಕೆಯಲ್ಲೋ ಇನ್ನೆಲ್ಲೋ ನೆಲೆಸಿದ್ದಾರಂತೆ. ಯಾರಿಗೂ ಸರಿಯಾಗಿ ಗೊತ್ತಿಲ್ಲ. ಇಬ್ಬರೂ ಎಂಜಿನಿಯರ್ ಅಂತೆ. ಈಗ ಮದುವೆಗಿದುವೆ ಆಗಿ ಅಲ್ಲೇ ಗಟ್ಟಿಯಾಗಿರಬೇಕು. ಇಲ್ಲಿದ್ದಾಗ ಅಪ್ಪನ ದುಷ್ಕರ್ಮಗಳನ್ನು ನೋಡಿಯೂ ನೋಡದವರ ಹಾಗೆ ಚಕಾರವೆತ್ತದೇ ಸಹಿಸಿಕೊಂಡವರು ಈಗ ದೂರ, ಕಾಣದ ದೇಶಗಳಲ್ಲಿ ತಲೆ ಮರೆಸಿ ಜೀವಿಸುತ್ತಿರಬೇಕು.

“ಹಾಗೆ ನೋಡಿದರೆ, ಮನೆಯಿಂದ ಓಡಿಹೋಗುವುದು, ತಲೆ ಮರೆಸಿ ಜೀವಿಸುವುದು ಇವರ ಮನೆತನಕ್ಕೆ ಬಡಿದ ಶಾಪವೇ ಇರಬೇಕು. ನಿನ್ನ ಸಾಂತಪ್ಪ ಕೂಡ ತೀರಾ ಹುಡುಗ ಪ್ರಾಯದಲ್ಲಿ ಮನೆಯಿಂದ ಓಡಿಹೋದವನೇ. ಯಾಕೆ ಓಡಿಹೋದ, ಎಲ್ಲಿಗೆ ಹೋಗಿ ಏನೇನು ಮಾಡಿದ-ಸರಿಯಾಗಿ ಯಾರೂ ಅರಿಯರು. ಅವನು ನಿಜಕ್ಕೂ ಯಾರ ಮಗ ಎನ್ನುವುದು ಕೂಡ ಯಾರಿಗೂ ಗೊತ್ತಿಲ್ಲ. ಗೊತ್ತಿದ್ದರೂ ಬಾಯಿಬಿಟ್ಟು ಹೇಳಿ ಸಾಂತಪ್ಪನನ್ನು ಎದುರುಹಾಕಿಕೊಳ್ಳುವ ಧೈರ್ಯವಿಲ್ಲ. ಯಾಕೆಂದರೆ ಊರು ಬಿಟ್ಟು ಹೋದ ಇಪ್ಪತ್ತು-ಇಪ್ಪತ್ತೈದು ವರ್ಷಗಳಾದಮೇಲೆ, ಮದುವೆಯಾದ ಹೆಂಡತಿ ಮೂವರು ಮಕ್ಕಳ ಜೊತೆಗೆ ದುಡ್ಡಿನ ದೊಡ್ಡ ಗಂಟೇ ಹೊತ್ತುಕೊಂಡು ಬಂದವನ ಹಾಗೆ ಬಂದು ಕುಮಟೆಯಲ್ಲಿ ಕಾಲಿರಿಸುವ ಹೊತ್ತಿಗೆ ನಿನ್ನ ಸಾಂತಪ್ಪ ಬಹಳ ದೊಡ್ಡ ಶ್ರೀಮಂತನಾಗಿಬಿಟ್ಟಿದ್ದ. ಊರಿನಲ್ಲಿ ಆಗ ಇದ್ದ ಏಕಮಾತ್ರ ಬಂಗಲೆಯನ್ನು ರೋಖ್ ಹಣ ಕೊಟ್ಟು ಖರೀದಿಸಿದ ಘಟನೆಯಂತೂ ಎಲ್ಲರ ಬಾಯಲ್ಲಿ ನಿಂತ ಪವಾಡವಾಯಿತು. ಮುಂಬಯಿಯಲ್ಲಿ ಮುತ್ತು ಹವಳಗಳ ವ್ಯಾಪಾರವುಳ್ಳ ಗುಜರಾಥಿ ಮುದುಕನೊಬ್ಬ ಕಟ್ಟಿಸಿದ ಬಂಗಲೆಯಂತೆ ಇದು. ಮೂಲತಃ ಇಲ್ಲಿಯವನೇ. ಆದರೆ ಅವನ ಮಕ್ಕಳಿಗೆ ಈ ಊರಿನಲ್ಲಿ ಆಸ್ಥೆ ಇರಲಿಲ್ಲ. ಕೆಲವು ಹಿರಿಯರ ಪ್ರಕಾರ ಈ ಬಂಗಲೆಯನ್ನು ಸಾಂತಪ್ಪ ಖರೀದಿಸಿದ ಗಳಿಗೆಯೇ ಕೆಟ್ಟದಿರಬೇಕಂತೆ. ಇವನ ಗೃಹಜೀವನಕ್ಕೆ ಶುಭವಾಗಲಿಲ್ಲ.

“ಇವತ್ತು ನೀನೇ ನೋಡುವೆಯಂತೆ ಅವನ ಬಂಗಲೆಯನ್ನು. ಅದರ ಬಗ್ಗೆ ಬಹಳಷ್ಟು ಕೇಳಿದ್ದೇನೆ. ಹತ್ತು-ಹದಿನೈದು ಕೋಣೆಗಳಿವೆಯಂತೆ. ಇರಬಹುದೆ? ಜನ ಹೇಳಿದ್ದಪ್ಪಾ. ಇವತ್ತು ನನ್ನನ್ನೂ ಕರೆದಿದ್ದರೆ ಆ ಮನೆ ನೋಡಲೆಂದೇ ಬರುತ್ತಿದ್ದೆ. ಇಂಥಾ ದೊಡ್ಡ ಮನೆಯಲ್ಲಿ ತನ್ನ ಶೃಂಗಾರ ಲೀಲೆಯನ್ನು-ಲೀಲೆ ಎಂಥದ್ದು, ಮಣ್ಣು! ಯಾರ ಕಣ್ಣಿಗೂ ಬೀಳದ ಹಾಗೆ ನಡೆಸುವುದು ಕಷ್ಟವಾಗುತ್ತಿರಲಿಲ್ಲ. ಇಲ್ಲ! ಈ ನೀಚನಿಗೆ ಇಂಥದ್ದು ಕೂಡ ರಾಜಾರೋಷವಾಗಿಯೇ ಆಗಬೇಕು. ನೀನು ನಂಬಿದರೆ ನಂಬು: ಇಲ್ಲೆಲ್ಲರಿಗೆ ಗೊತ್ತಿದ್ದ ಸಂಗತಿಯೇ ಇದು. ನಾನು ಹುಟ್ಟಿಸಿ ಹೇಳಿದ್ದಲ್ಲ. ಈ ನಿರ್ಲಜ್ಜ ಒಮ್ಮೊಮ್ಮೆ ಮೈಮೇಲಿನ ಭಾವ ತಪ್ಪಿದವನ ಹಾಗೆ ತನ್ನ ಹಾದಗಿತ್ತಿಯರನ್ನು ಹೆಂಡತಿಯ ಮಲಗುವ ಕೋಣೆಗೇ ಎಳೆದು ತರುತ್ತಿದ್ದನಂತೆ! ‘ದಮ್ಮಯ್ಯ! ನಿಮ್ಮಿಬ್ಬರ ಕಾಲು ಹಿಡಿಯುತ್ತೇನೆ ಬೇರೆ ಕೋಣೆಗೆ ಹೋಗಿ ಹಾಳಾಗಿ’ ಎಂದು ಚೀರಾಡಿದರೆ ಇವನು ಇನ್ನಷ್ಟು ಉತ್ತೇಜಿತನಾಗುತ್ತಿದ್ದದ್ದು ನೋಡಿ ಆ ಸಾಧ್ವಿ ಈ ಎಲ್ಲದಕ್ಕೂ ತನ್ನ ಮನಸ್ಸನ್ನು ಮುಚ್ಚಿಕೊಳ್ಳುವುದನ್ನು ಕಲಿತುಕೊಂಡಳು. ಬೆಳೆಯುವ ಎಳೆಯ ಜೀವಗಳ ಮೇಲೆ ಮಾತ್ರ ದೇವರೇ ಯಾವ ದುಷ್ಟ ಪರಿಣಾಮವೂ ಆಗದಿರಲಿ ಎಂದು ಪ್ರಾರ್ಥಿಸಿದಳು” ಎಂದಳು. ಹಾಗೂ ಅಡುಗೆಮನೆಯಲ್ಲಿದ್ದ ವನಿತಾಗೆ ಕೇಳಿಸುವ ಹಾಗೆ, “ನಿನ್ನ ಮಾಮಿ-ಮಾಮ ಎಂದಿನಿಂದ ಚಹದ ಹಾದಿ ಕಾಯುತ್ತಿದ್ದಾರೆ. ಇನ್ನೂ ತಯಾರಾಗಲಿಲ್ಲವೇನೇ?” ಎಂದು ಕೇಳಿ ಮಕ್ಕಳು ಕೇಳಬಾರದ್ದು ಹೇಳಿ ಮುಗಿದಿದೆ ಎಂದು ಇಷಾರ ಮಾಡಿದಳು.

ತುಸು ಹೊತ್ತಿನ ಮೇಲೆ ಅಡುಗೆಮನೆಯಲ್ಲಿದ್ದ ಮೂವರೂ ಚಹ ತಿಂಡಿಗಳ ಸರಂಜಾಮು ಹೊತ್ತು ಹೊರಗೆ ಬಂದರು. ಅಕ್ಕನ ಮಾತು ತಾತ್ಪೂರ್ತಿಕವಾಗಿ ನಿಂತಿತ್ತು.

ಮನುಷ್ಯನ ಲಂಪಟತನದ ಸುತ್ತವೇ-ವಾಸ್ತವ ಹಾಗೂ ಕಲ್ಪನೆಗಳ ಅತ್ಯದ್ಭುತ ಕಲಸುಮೇಲೋಗರವಾಗಿ-ಎದ್ದ ಇಂಥ ಪುರಾಣಸೃಷ್ಟಿ ಖಾಸಾ ಕುಮಟೆಯ ನೆಲದ್ದು. ಇಲ್ಲಿಯ ಹಲವು ಮನೆತನಗಳ ಸುತ್ತ ಇಂಥ ಪುರಾಣಗಳಿದ್ದದ್ದು ನನಗೆ ನನ್ನ ವಿದ್ಯಾರ್ಥಿ ದಿನಗಳಲ್ಲೇ ಗೊತ್ತಿಗಿತ್ತು. ಇವೆಲ್ಲ ದೊಡ್ಡ ಸಾಹಸದ ಕಥೆಗಳೋ ಎನ್ನುವ ಹಾಗೆ ಈ ಪುರಾಣಗಳ ಬಗ್ಗೆ ಇವರಿಗೆ ಅಭಿಮಾನವಿದ್ದದ್ದು ತಿಳಿದಾಗ ಮಾತ್ರ ಆಶ್ಚರ್ಯವಾಗಿತ್ತು. ನಮ್ಮ ಸಾಂತಪ್ಪ ಇಂಥದ್ದಕ್ಕೆ ಅಪವಾದ ಹೇಗಾದಾನು!

ಆದರೂ ಅಕ್ಕನ ಸರಳ ಮಾತುಗಳಲ್ಲಿ ಮೂಡಿಬರುತ್ತಿದ್ದ ವ್ಯಕ್ತಿ ಸಹಜನೆಂದು ತೋರಲಿಲ್ಲ. ಕುರೂಪಕ್ಕೆ ಆಕರ್ಷಿತನಾಗುವ ಈತನ ಅನಾರೋಗ್ಯಕ್ಕೂ ಅವನ ಐಶ್ವರ್ಯಕ್ಕೂ ಸಂಬಂಧವಿರಬಹುದಾದ ಅನುಮಾನವಾಯಿತು. ಬರೇ ಒಬ್ಬ ಬಿಲ್ಡಿಂಗ್ ಕಂಟ್ರ್ಯಾಕ್ಟರ್ ಆಗಿ ಇಷ್ಟೆಲ್ಲವನ್ನೂ ಗಳಿಸಿರಲಾರ. ಕೇಳಿ ನೋಡುವ ಮನಸ್ಸಾಯಿತು. ಆದರೆ ಅದಾಗಲೇ ಅಕ್ಕನ ದುಗುಡಕ್ಕೆ ಕಾರಣನಾದ ಹುಡುಗ ನನ್ನ ಅಂತಃಕರಣವನ್ನು ವ್ಯಾಪಿಸತೊಡಗಿದ ಹೊತ್ತಿನಲ್ಲಿ ಇದು ಕೇವಲ ಕುತೂಹಲ ತಣಿಸುವ ಪ್ರಶ್ನೆಯಾಗಿ ತೋರಿ ಕೇಳುವುವು ಬೇಡವೆನ್ನಿಸಿತು. ನನ್ನ ವರ್ಗದಲ್ಲಿದ್ದ ಒಬ್ಬ ಬಡ ಹುಡುಗನನ್ನು ಸಾಲೆಯ ಹುಡುಗರು ‘ಅಡಿಗೆ ಮಾಮನ ಮಗ’ನೆಂದು ಚುಡಾಯಿಸುತ್ತಿದ್ದರು. ಇವನು ಅವನೇ ಆಗಿರಬಹುದೆ? ಎಂಬ ಪ್ರಶ್ನೆಯನ್ನು ಈಗ ಅಕ್ಕನಿಗೇ ಕೇಳಿದರೆ ಹೇಗೆ ಅನ್ನಿಸಿತು. ಬರೇ ಮಾಹಿತಿ ಒಟ್ಟು ಮಾಡುವ ಈ ಹವ್ಯಾಸ ಕೂಡ ಸದ್ಯದ ಸನ್ನಿವೇಶದಲ್ಲಿ ಅನೈತಿಕವಾಗಿ ತೋರಿ ಬಿಟ್ಟುಕೊಟ್ಟೆ.

“ಮೊದಲು ತಿಂಡಿ ಚಹವಾಗಲಿ. ನಿನ್ನ ಪ್ರೀತಿಯ ಶಿರಾ ಮಾಡಿದ್ದೇನೆ. ಅಮ್ಮ ಹುಬ್ಬಳ್ಳಿಯಿಂದ ಬರುವಾಗ ತಂದ ಕೋಡುಬಳೆ ಇರಿಸಿದ್ದೇನೆ. ಎಲ್ಲವನ್ನೂ ಈಗಲೇ, ಇವತ್ತೇ ಮಾತನಾಡಬೇಕಾಗಿಲ್ಲ” ಎಂದು, ಸೋದರ ಸೊಸೆ ನನ್ನನ್ನು ಹತ್ತಿದ ತಂದ್ರಿಯಿಂದ ಎಚ್ಚರಿಸಿದಳು. “ಮೇಲಾಗಿ ಇದನ್ನೆಲ್ಲ ನೀನೂ ಅಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳುವುದು ಬೇಡ. ನೀನು ಹುಟ್ಟಿಸಿದ ಸಮಸ್ಯೆಯಲ್ಲವಲ್ಲ ಇದು. ನೀನು ಇದೇ ಹೊತ್ತಿಗೆ ನಿವೃತ್ತನಾಗಿರದಿದ್ದರೆ ಅಥವಾ ನನ್ನ ಕರೆಯನ್ನು ಮನ್ನಿಸಿ ಕುಮಟೆಗೆ ಬಂದಿರದಿದ್ದರೆ ಅಥವಾ ನೀನು ಬಂದೂ ಬಂದದ್ದು ಸಾಂತಪ್ಪನಿಗೆ ಗೊತ್ತಾಗಿರದಿದ್ದರೆ….

“ಅಥವಾ ಹುಬ್ಬಳ್ಳಿಯಿಂದ ಹೊರಡುವ ಮೊದಲು ಅಕ್ಕ ವಾಸುದೇವನ ಮನೆಗೇ ಹೋಗಿರದಿದ್ದರೆ…. ಈ ‘ರೆ’ಗಳಿಗೆ ಕೊನೆಯಲ್ಲಿ ಪೋರಿ? ನನಗೆ ಇದಾವುದರಲ್ಲೀ ತೊಡಗಿಸಿಕೊಳ್ಳುವ ಮನಸ್ಸಿಲ್ಲವಾದರೆ ಇದೆಲ್ಲ ಕೇವಲ ಆಕಸ್ಮಿಕಗಳಾಗಿಯೇ ಉಳಿಯುತ್ತವೆ. ತೋರುತ್ತವೆ. ಅದೇ. ಏನಾದರೂ ಮಾಡಬೇಕು ಎಂದು ನಿಶ್ಚಯಿಸಿದ್ದೇ ಆದರೆ ಇವು ಯಾವೂ ಆಕಸ್ಮಿಕಗಳೇ ಆಗಿ ಉಳಿಯಲಾರವು. ಅಲ್ಲವೆ? ನಿನ್ನ ಮಾಮಿಯನ್ನೇ ಕೇಳು! ನನ್ನನ್ನು ಈಗಲೂ ಆಗೀಗ ಚುಡಾಯಿಸುತ್ತಿರುತ್ತಾಳೆ. ಅವಳು ಆ ವರ್ಷ ಬೇಸಗೆಯ ಸೂಟಿಗೆ ಮುಂಬಯಿಗೆ ಬಂದಿರದಿದ್ದರೆ, ಅವಳ ಚಿಕ್ಕಮ್ಮನ ಮನೆ ನನ್ನ ಮನೆಯ ಮಗ್ಗುಲಲ್ಲಿರದಿದ್ದರೆ, ಎಲ್ಲಕ್ಕೂ ಮಿಗಿಲಾಗಿ ಇವಳ ತಂಗಿಗೆ ಐನ್ ಹೊತ್ತಿಗೆ ಜ್ವರ ಬಂದು ಅವಳಿಗಾಗಿ ಕೊಂಡಿಟ್ಟ ಟ್ರೇನ್ ಟಿಕೆಟ್ ಮೇಲೆ ಇವಳು ಮುಂಬಯಿಗೆ ಪ್ರಯಾಣ ಬೆಳೆಸಿರದಿದ್ದರೆ ಅವಳು ನನ್ನನ್ನು ಮದುವೆಯಾಗುತ್ತಿರಲೇ ಇಲ್ಲವಂತೆ. ನನಗನ್ನಿಸುತ್ತದೆ: ನಾವು ಪರಸ್ಪರರನ್ನು ನೋಡಿದ ಕ್ಷಣದಲ್ಲೇ ಈ ‘ರೆ’ಗಳ ಅರ್ಥ ಬದಲಾಗತೊಡಗಿತ್ತು…. ಮನುಷ್ಯ ಜಗತ್ತಿನಲ್ಲೆಲ್ಲಿ ಆಕಸ್ಮಿಕಗಳು?”

ಈ ಮಾತುಗಳನ್ನು ಬಹುಶಃ ನಾನು ವನಿತಾಗಿಂತ ಹೆಚ್ಚಾಗಿ ನನಗೇ ಹೇಳಿಕೊಳ್ಳುತ್ತಿದ್ದೇನೆ ಎಂಬ ಅರಿವಿನಿಂದ ಮುಜುಗರವಾಯಿತು. ಬಹುಶಃ ಸಾಂತಪ್ಪ ನನ್ನಿಂದ ಬಯಸುವುದಾದರೂ ಏನೆಂದು ನಿಶ್ಚಿತವಾಗಿ ತಿಳಿದಮೇಲೆ ನನ್ನ ನಿರ್ಧಾರ ಗಟ್ಟಿಯಾದೀತು ಎಂದು ಸಮಾಧಾನ ತಂದುಕೊಂಡೆ. ಅಕ್ಕನ ತೊಳಲಾಟವೂ ಇದೇ ಆಗಿರಬೇಕು. ವಾಸುದೇವನ ಬಗ್ಗೆ ನನ್ನ ಭಾವನೆಗಳನ್ನು ಕೆರಳಿಸಿ ಸಲ್ಲದ ಬಿಕ್ಕಟ್ಟಿಗೆ ನನ್ನನ್ನು ಒಡ್ಡುತ್ತಿಲ್ಲ ತಾನೆ ಎಂದು ಹೆದರಿರಬೇಕು. ನಮ್ಮ ಚಹ-ತಿಂಡಿ ಮುಗಿದ ಎಷ್ಟೋ ಸಮಯದವರೆಗೆ ಅದು ಇದು ಎಂದು ಹಲವು ಮಾತುಗಳನ್ನು ಆಡಿಕೊಂಡೆವಾದರೂ ಈ ಮೊದಲು ಅರ್ಧಕ್ಕೇ ಬಿಟ್ಟ ವಾಸುದೇವನ ಮಾತಿಗೆ ಹಿಂದಿರುಗಲಾಗಲಿಲ್ಲ. ನಾನೇ ಆ ಮಾತಿಗೆ ಮತ್ತೆ ಚಾಲನೆ ಕೊಡಲೆಂಬಂತೆ, ಹಿಂದೊಮ್ಮೆ ಕೇಳುವುದು ಬೇಡವೆಂದು ನಿಶ್ಚಯಿಸಿ ಬಿಟ್ಟುಕೊಟ್ಟ ಪ್ರಶ್ನೆಯನ್ನೇ ಈಗ ಕೇಳಿದೆ_

“ಸಾಂತಪ್ಪ ಬಹಳ ಹಣ ಮಾಡಿದ್ದಾನೆ ಎಂದು ನೀನೂ ಹೇಳಿದೆ. ಸ್ವತಃ ಅವನೂ ತುಸು ಗರ್ವದಿಂದಲೇ ಹೇಳಿಕೊಂಡ. ಇಷ್ಟೆಲ್ಲ ಹಣ ಬರೇ ಬಿಲ್ಡಿಂಗ್ ಕಂಟ್ರ್ಯಾಕ್ಟರ್‍ನಾಗೇ ಗಳಿಸಿರಲಾರ ಅಲ್ಲವೆ?”

ನಾನು ಕೇಳಿದ್ದೇನಷ್ಟೇ. ಆಗಿನಿಂದಲೂ ಈ ಅವಕಾಶಕ್ಕಾಗಿಯೇ ಕಾದು ಕುಳಿತಿದ್ದನೆನ್ನುವಂತೆ ರಾಮಕೃಷ್ಣ ಗಬಕ್ಕನೆ ಉತ್ತರ ಕೊಡಲು ಮುಂದಾದ. ಎಲ್ಲರಿಗೂ ಆಶ್ಚರ್ಯವಾಗುವಷ್ಟು ತಗ್ಗಿದ ದನಿಯಲ್ಲಿ.

“ಒಂದು ಕಾಲಕ್ಕೆ ಬಹಳ ದೊಡ್ಡ ಸ್ಮಗ್ಲರ್ ಈತ. ಬೆಳಗಾಂವ್‌ನಲ್ಲಿದ್ದ ಆಗ, ಹೆಸರಿಗೆ ಎಸ್, ಎಲ್, ಟ್ರಾನ್ಸ್‌ಪೋರ್ಟ್ ಕಾರ್ಪೋರೇಶನ್, ಟ್ರಕ್ಕುಗಳಿಂದ ಮಾಲು ಸಾಗಿಸುವ ಬಿಜಿನೆಸ್. ಸಾಗಿಸುತ್ತಿದ್ದುದು ಬಂಗಾರದ….”

ಅಕ್ಕನಿಗೆ ಈ ಹೊಸ ತಿರುವು ಧೋಕೆಯದಾಗಿ ಕಂಡಿತೋ ತಾನು ಯೋಚಿಸಿಕೊಂಡಿದ್ದರಿಂದ ದೂರ ಹೋಗುವುದು ಬೇಡವೆನ್ನಿಸಿತೋ, ಅಳಿಯನಿಗೆ ಕೂಡಲೇ ಮಾತು ನಿಲ್ಲಿಸುವಂತೆ ಕಣ್ಣರಳಿಸಿ ಸನ್ನೆ ಮಾಡಿದಳು. “ಈಗ ಯಾರೂ ಅದರ ಬಗ್ಗೆ ಮಾತನಾಡುವುದಿಲ್ಲವಲ್ಲ. ನಾವೇ ಯಾಕೆ ಹೇಳಬೇಕು? ನಮಗೆ ಸರಿಯಾಗಿ ಗೊತ್ತಿಲ್ಲದ್ದು ಕೂಡ. ಎಷ್ಟು ಸುಳ್ಳೋ, ಎಷ್ಟು ಖರೆಯೊ. ಇಂಥದ್ದರಲ್ಲಿ ನಮ್ಮ ಕುಮಟೆಯ ಜನರ ತಲೆ ಸುವೇಕ ಅಲ್ಲವೆ?” ಎಂದಳು. ಗೋಣು ಕೊಂಕಿಸುತ್ತ.

“ಅಮ್ಮಾ, ನಾನಿದನ್ನು ಬರೇ ತಮಾಷೆಗಾಗಿ ಹೇಳಿದ್ದಲ್ಲ. ಅವನ ಈ ಕಳ್ಳ ಸಾಗಾಣಿಕೆಗೂ ವಾಸುದೇವನ ಬೇಪತ್ತೆಗೂ ಸಂಬಂಧವಿದ್ದಿದ್ದರೆ? ಮಾಮನ ಸಂಶಯವೂ ಅದೇ ಆಗಿರಬೇಕು?” ಎನ್ನುತ್ತ ರಾಮಕೃಷ್ಣ ನನ್ನತ್ತ ಪ್ರಶ್ನಾರ್ಥಕ ದೃಷ್ಟಿ ಬೀರಿದ. ನನಗೆ ಇಂಥ ಸಂಯಮ ಬಂದಿರಲಿಲ್ಲ. ರಾಮಕೃಷ್ಣನ ಸಂಯಮಕ್ಕೆ ನಮ್ಮ ಸಿನೇಮಾ ಕಾರಣವಾಗಿರಬೇಕು ಅನ್ನಿಸಿ ಬರೇ ಮುಗುಳ್ನಕ್ಕೆ. ಅಕ್ಕನಿಗೂ ನಂಬಿಕೆಯಾದಂತಿರಲಿಲ್ಲ.

“ಇಪ್ಪತ್ತು-ಇಪ್ಪತ್ತೆರಡು ವರ್ಷಗಳ ಹಿಂದಿನ ಕತೆಯಿದು. ನೀನು ಬಹಳ ಸಣ್ಣವನಿದ್ದೆ. ಆಗ ನಿನಗಾರು ಹೇಳಿದರು?” ಎಂದು ಕೇಳಿದವಳು, ಸಂಕ್ಷಿಪ್ತವಾಗಿ ಹೇಳಿ ಮುಗಿಸುವ ಧಾಟಿಯಲ್ಲಿ, “ಗೋವೆಯಿಂದ ಮಾಲು ಹೊತ್ತು ಬರುತ್ತಿದ್ದ ಇವನ ಟ್ರಕ್ಕಿನಲ್ಲಿ ಬಂಗಾರದ ಗಟ್ಟಿಗಳಿದ್ದ ಪೆಟ್ಟಿಗೆ ಅಡಗಿಸಿ ಇಟ್ಟಿದ್ದರಂತೆ. ಯಾರೂ ನೋಡದ್ದಲ್ಲ. ಪೊಲೀಸರ ಕೈಗೆ ಸಿಕ್ಕಿ ಬಿದ್ದ ಕಳ್ಳರೇ ಪೊಲೀಸರಿಗೆ ತಿಳಿಸಿದ್ದು. ಪೊಲೀಸರ ಹೊಡೆತಕ್ಕೆ ಹೆದರಿ ಏನಾದರೂ ಹೇಳಿರಬಹುದು. ನಿಜಕ್ಕೂ ಬಂಗಾರ ಹೊತ್ತ ಟ್ರಕ್ಕಿನಿಂದ ಬೇರೆ ಕಡೆಗೆ ಲಕ್ಷ್ಯ ಹರಿಯಿಸಲು ಈ ಟ್ರಕ್ಕಿನ ನಂಬರ್ ಕೊಟ್ಟಿರಬಹುದು. ಈ ಟ್ರಕ್ಕಿನಲ್ಲೇ ಬಂಗಾರ ಇದ್ದಿದ್ದರೂ ಅದು ಅವನಿಗೆ ದಕ್ಕಿತೆ? ಇನ್ಯಾರ ಕೈಗೆ ಹೋಯಿತೆ? ಯಾರಿಗೂ ಗೊತ್ತಿಲ್ಲ. ಪೊಲೀಸರು ತಪಾಸಣೆಗೆಂದು ಇವನ ಮನೆಗೂ ಬಂದಿದ್ದರು. ಎನ್ನುವ ಒಂದೇ ಕಾರಣಕ್ಕೆ ಏನೆಲ್ಲ ಊಹಾಪೋಹ ನಡೆಯಿತು. ಪರ-ವಿರುದ್ಧ ಎರಡೂ ಮಾತನಾಡಿಕೊಂಡರು. ಈ ಪ್ರಕರಣವೇ ಮುಂದವನು ಈಗಿನ ದಂಧೆಗೆ ತಿರುಗಲು ಕಾರಣವಾಯಿತೆಂದು ತಿಳಿದವರಿದ್ದಾರೆ. ಈಗ ನೀನೇ ಹೇಳು. ವಾಸುದೇವ ಮನೆಯಿಂದ ನಾಪತ್ತೆಯಾದದ್ದಕ್ಕೂ ಈ ಪ್ರಕರಣಕ್ಕೂ ಸಂಬಂಧವಿದ್ದೀತೆ?” ಅಕ್ಕ ನನ್ನ ಉತ್ತರಕ್ಕಾಗಿ ಕಾದಳು. ಅದು ಏನೆಂದು ಮೊದಲೇ ಗೊತ್ತಿದ್ದವಳ ಧರ್ತಿಯಲ್ಲಿ.

“ನನಗನ್ನಿಸುವುದಿಲ್ಲ” ಎಂದೆ. ರಾಮಕೃಷ್ಣನಿಗೆ ನನ್ನ ಉತ್ತರದಿಂದ ನಿರಾಶೆಯಾಗಿರಬೇಕು. ಅವನ ಸಮಾಧಾನಕ್ಕೆ, “ಮತ್ತೆ ಯಾರಿಗೆ ಗೊತ್ತು? ಸಾಂತಪ್ಪ ಹೇಳಿದರೆ ಗೊತ್ತಾಗಬೇಕು” ಎಂದು ಜೋಡಿಸಿದೆ.

“ಸಾಂತಪ್ಪನಿಂದ ನಿನಗೆ ಇಂಥದ್ದೆಲ್ಲ ಗೊತ್ತಾಗಲಾರದು ಬಿಡು. ಎಂಥಾ ಬಿಲಂದರ್ ಮನುಷ್ಯ! ತನ್ನ ಐಶ್ವರ್ಯದ ಬಗ್ಗೆ ರಾಜವಾಡೆಯ ಬಗ್ಗೆ ಕೊಚ್ಚಿಕೊಂಡಾನು. ಆದರೆ ಇಷ್ಟೆಲ್ಲ ಹೇಗೆ ಸಾಧ್ಯವಾಯಿತು? ಗುಟ್ಟು ಬಿಟ್ಟುಕೊಡುವವನಲ್ಲ. ಗುಟ್ಟು ಬಿಡಿಸಲು ಬಂದವರನ್ನು ಸುಮ್ಮನೆ ಬಿಡುವವನೂ ಅಲ್ಲ. ಮಹಾ ಭಯಂಕರ ಮನುಷ್ಯ. ಅವನ ವ್ಯಭಿಚಾರದ ಬಗ್ಗೆ ಬೇಕಾದರೆ ಜನ ಅವನ ಎದುರೇ ಆಡಿಕೊಳ್ಳಲಿ. ತುಟಿ ಪಿಟ್ಟೆನ್ನದೆ ಸಹಿಸಿಯಾನು. ಅದೇ ಅವನು ಹಣ ಮಾಡಿದ ವಾಮಮಾರ್ಗದ ಬಗ್ಗೆ ಯಾರಾದರೂ ಗುಸುಗುಸು ಎಂದದ್ದು ಕಿವಿಯ ಮೇಲೆ ಬಿತ್ತೋ ಹೊಡೆದಾಟಕ್ಕೂ ಹಿಂಜರಿದವನಲ್ಲ. ನೀನು ಇಂಥದ್ದರ ಗೊಡವೆಗೆ ಹೋಗಲೇಬೇಡ. ರಾಮಕೃಷ್ಣಾ. ಈ ಮಾತು ನಿನಗೂ ಹೇಳಿದ್ದು ತಿಳಿಯಿತೋ? ಬಂಗಾರದ ಗಟ್ಟಿ! ಕಪ್ಪು ಹಣ! ನಮಗೇನಾಗಬೇಕು? ನಾವೇನು ಪಾಲು ಬೇಡಲು ಹೊರಟವರಲ್ಲ.”

ನಾನು ತಮಾಷೆಗೆಂದು ಆಡಿದ ಮಾತೂ ಅಕ್ಕನ ಸಿಟ್ಟಿಗೆ ಕಾರಣವಾಗಿತ್ತು. ಮುಖ್ಯವಾಗಿ, ಇದೇ ಊರಿನವನಾದ ರಾಮಕೃಷ್ಣನೂ ಸಾಂತಪ್ಪನನ್ನು ಸ್ಮಗ್ಲರ್ ಎಂದು ಕರೆದದ್ದು ಅವಳನ್ನು ಹೆದರಿಸಿರಬೇಕು.

“ಇಲ್ಲ, ಇಂಥದ್ದರ ಬಗ್ಗೆ ಅವನಿಗೆ ಏನೂ ಕೇಳಲು ಹೋಗುವುದಿಲ್ಲ. ಆಯಿತೆ?” ಎಂದು ಆಶ್ವಾಸನವಿತ್ತೆ.

“ಸಾಂತಪ್ಪ ನಿನ್ನನ್ನು ಇಂದು ಕರೆದದ್ದು ತನ್ನ ಶ್ರೀಮಂತಿಕೆಯ ಬಗ್ಗೆ ಕೊಚ್ಚಿಕೊಳ್ಳಲಲ್ಲ. ಮಗನ ಬಗ್ಗೆ ಚಾಡಿ ಹೇಳಲು ಮಗ ಮನೆಯಿಂದ ನಾಪತ್ತೆಯಾದದ್ದು ಅವನಿಗೆ ತಿಳಿದಿಲ್ಲವೆಂದೆ? ಮಗನ ಮನೆಯಲ್ಲಿ ಹೂಸಿದರೆ ಸಾಕು, ತೇಗಿದರೆ ಸಾಕು, ಅಪ್ಪನಿಗೆ ಸುದ್ದಿ ಮುಟ್ಟಿಸುವ ಬೇಹುಗಾರ ಜನ ಎಷ್ಟೆಲ್ಲ ಇದ್ದಾರೆ ಹುಬ್ಬಳ್ಳಿಯಲ್ಲಿ.”

“ವಾಸುದೇವನ ಹೆಂಡತಿ ಏನೋ ಕೆಟ್ಟದ್ದನ್ನು ಊಹಿಸಿಕೊಂಡವಳ ಹಾಗೆ ಮಾತನಾಡಿದ್ದು ಯಾಕೆ?”

“ನಾನು ಖುಲಾಸೆ ಕೇಳಲು ಹೋಗಲಿಲ್ಲ. ಅವಳಿದ್ದ ಸ್ಥಿತಿಯಲ್ಲಿ ಕೇಳುವ ಧೈರ್ಯವೂ ಆಗಲಿಲ್ಲ. ಪ್ರತಿಯೊಬ್ಬರ ಸಹನಶಕ್ತಿಗೂ ಒಂದು ಮಿತಿಯೆಂಬುದು ಇದೆಯಲ್ಲವೆ? ತನ್ನ ಸಹನಶಕ್ತಿ ಅಂಥ ಮಿತಿಯನ್ನು ಮುಟ್ಟಿದೆಯೆಂದು ಸೂಚಿಸುತ್ತಿರಬೇಕು. ವಾಸುದೇವ ತೀರಾ ಚಿಕ್ಕ ವಯಸ್ಸಿನಲ್ಲೇ ಅಪ್ಪನ ವಿರುದ್ಧ ದಂಗೆಯೆದ್ದ ಹತ್ತು ವರ್ಷದವನಾಗಿದ್ದಾಗಿನಿಂದಲೂ ತಂದೆಯೊಡನೆ ಮಾತನಾಡುವುದನ್ನು ನಿಲ್ಲಿಸಿದ್ದನಂತೆ. ತಾಯಿಯ ಯಾತನೆಗೆ ಕಾರಣವಾದ ಅಪ್ಪನ ದುಷ್ಟ ವರ್ತನೆಗೆ ತೀವ್ರ ಪ್ರತಿಕ್ರಿಯೆ ತೋರಿಸಿದವನು ಅವನೊಬ್ಬನೇ. ಇವನಿಗಿಂತ ಐದಾರು ವರ್ಷಗಳಿಂದ ದೊಡ್ಡವರಾದ ಹಿರಿಯರಿಬ್ಬರೂ ಬಲು ಪುಕ್ಕರು. ಕೋಣೆಯಲ್ಲಿ ಕದ ಮುಚ್ಚಿ ಅಡಗಿ ಕುಳಿತಿರುತ್ತಿದ್ದರು. ಕಿರಿಯ ಮಗನೊಬ್ಬನೇ ಬಡಪಾಯಿ ತಾಯಿಗೆ ಜೊತೆಯಾದ. ತನ್ನ ಮಾತಿನ ಅರ್ಥವಾಗುವ ವಯಸ್ಸಿನವನಲ್ಲವೆಂದು ಗೊತ್ತಿದ್ದೂ ತನ್ನ ಅಳಲೆಲ್ಲವನ್ನೂ ಅವನೆದುರು ತೋಡಿಕೊಳ್ಳುತ್ತಿದ್ದಳಂತೆ. ಮುಂದೆ ಇವನು ಸುಮಾರು ಹದಿನಾಲ್ಕು ವರ್ಷದವನಿದ್ದಾಗ ಇವನನ್ನು ಮನೆಯಿಂದ ಓಡಿಹೋಗುವಂತೆ ಹುರಿದುಂಬಿಸಿದಳಂತೆ. “ಎಲ್ಲೂ ಹೋಗು, ಏನೂ ಕೆಲಸ ಮಾಡು. ಬಸ್‌ಸ್ಟಾಂಡಿನಲ್ಲಿ ಕೂಲಿಮಾಡು. ಹೊಟೆಲ್ಲಿನಲ್ಲಿ ಮಾಣಿಯಾಗು. ಆದರೆ ನಿನ್ನ ಅಣ್ಣಂದಿರ ಹಾಗೆ ಇವರ ಪಾಪದ ಹಣಕ್ಕೆ ಕೈ ಹಚ್ಚಬೇಡ. ಆದಷ್ಟು ಬೇಗ ಈ ನರಕದಿಂದ ಹೊರಬೀಳು” ಎಂದು ಹೇಳಿ ಅತ್ತಳಂತೆ. ತಾನು ಸಾಲೆಗೆ ಹೋದಾಗ ಈವರೆಗೂ ನಡೆದಿರದಂಥದ್ದು ಏನೋ ಮನೆಯಲ್ಲಿ ನಡೆದಿದೆಯೆಂದು ಅರಿತ ಹುಡುಗ, “ನೀನು?” ಎಂದು ಕೇಳಿದನಂತೆ. “ನನ್ನದೇನು ಮಗೂ! ಇಷ್ಟು ವರ್ಷ ಕಳೆದಂತೆಯೇ ಇನ್ನು ಕೆಲವು ದಿನ ಹೇಗೂ ಸರಿದುಹೋದಾವು. ಹೋಗು ಮಗು. ಹೋದಲ್ಲಿ ನೀನು ಇಂಥವರ ಮಗನೆಂದು ಹೇಳಿಕೊಳ್ಳಲು ನಾಚಿಕೆಯಾದರೆ ಹೇಳಿಕೊಳ್ಳಬೇಕೆಂದಿಲ್ಲ” ಎಂದಳಂತೆ. ಹುಡುಗ ಇದಕ್ಕೆಲ್ಲ ಏನು ಅರ್ಥ ಹಚ್ಚಿದನೋ ಕೆಲವೇ ದಿನಗಳಲ್ಲಿ ಮನೆಯಿಂದ ಓಡಿಹೋದ. ಮುಂದೆ ಒಂದೇ ವಾರದಲ್ಲಿ ತಾಯಿ ಜೀವ ತೆಗೆದುಕೊಂಡಳು.”

ನನ್ನ ಹಾಗೂ ಹೆಂಡತಿಯ ಬಾಯಿಂದ “ಅರೆ! ಇದು ಗೊತ್ತಿರಲಿಲ್ಲ.” “ಬದುಕಿದ್ದಾಳೆ ಎಂದೇ ತಿಳಿದಿದ್ದೆವು” ಎಂಬ ಉದ್ಗಾರಗಳು ಹೊರಟವು.

“ವಿಷ ತೆಗೆದುಕೊಂಡಳು. ಅದು ಯಾವ ಮನೆಯಲ್ಲೂ ಸಹಜವಾಗಿ ಇರುವ ವಸ್ತುವಲ್ಲವಾಗಿತ್ತಂತೆ. ಆದ್ದರಿಂದ ಮತ್ತೆ ಸಲ್ಲದ ಊಹಾಪೋಹಕ್ಕೆ ಎಡೆ ಮಾಡಿಕೊಟ್ಟಿತು. ಮುಂದೆ ಎಲ್ಲವೂ ತಣ್ಣಗಾಯಿತು.”

ಸಾಂತಪ್ಪನ ಬಗ್ಗೆ ಮನಸ್ಸು ಕೆಡಿಸಲೆಂದೇ ಆಡಿದ ಮಾತಲ್ಲವಾಗಿತ್ತಾದರೂ ಅವನ ಮನೆಗೆ ಊಟಕ್ಕೆ ಹೋಗುವ ಬಗ್ಗೆ ಮೊದಲಿನ ಉತ್ಸಾಹ ಉಳಿಯಲಿಲ್ಲ. ಇಲ್ಲಿಯವರ ಚೂರುಚೂರು ಮಾತುಗಳಲ್ಲು ಸ್ಪಷ್ಟವಾಗುತ್ತ ನಡೆದ ಈ ಮನುಷ್ಯ ನನ್ನ ಸಹಜ ಗ್ರಹಿಕೆಗೆ ಸಿಗದೇ ಹೋಗಬಹುದೇನೋ ಎಂದು ಅನುಮಾನವಾಯಿತು.

“ಮುಂದಿನದು ನಂಬಿದರೆ ನಂಬು ಎನ್ನುವಂಥ ವಿದ್ಯಮಾನ. ಸುಮಾರು ಆರೇಳು ತಿಂಗಳ ಮೇಲೆ ಇವನಿಗೆ ಅದೇನಾಯಿತೋ! ಹೆಂಡತಿ ಸತ್ತದ್ದು ಈಗ ಲಕ್ಷ್ಯಕ್ಕೆ ಬಂದಿತು ಎನ್ನುವಂತೆ ಮನೆಯಿಂದ ಓಡಿಹೋದ ಮಗನ ವಿರುದ್ಧ ಎಂಥಾ ಆರ್ಭಟ ಶುರುಮಾಡಿದನೆಂದರೆ, ಜನ ಇವನಿಗೆ ಹುಚ್ಚು ಹಿಡಿದಿದೆಯೆಂದೇ ತಿಳಿದರು. ಹೋದಹೋದ ಕಡೆಗೆಲ್ಲ ಡಂಗುರಾ ಸಾರುವ ತರಾ ಅವನು ತನಗೆ ಹುಟ್ಟಿದ ಮಗನೇ ಅಲ್ಲವೆಂದೂ, ಅವನಿಂದಾಗಿಯೇ ತನ್ನ ಹೆಂಡತಿ ಜೀವ ತೆಗೆದುಕೊಂಡಳೆಂದೂ, ಅವಳು ಪ್ರಾಶಿಸಿದ ವಿಷ ಇವನೇ ತಂದುಕೊಟ್ಟಿರಬೇಕೆಂದೂ, ಒಮ್ಮೆ ಕೈಗೆ ಸಿಗಲಿ ಪೊಲೀಸರ ಹವಾಲೆ ಮಾಡಿ ಜೈಲಿಗೆ ಕಳಿಸುತ್ತೇನೆಂದೂ ಅಬದ್ಧವಾಗಿ ಆಕ್ರೋಶ ಮಾಡುತ್ತಿದ್ದನಂತೆ. ಊರಿನ ಹಿರಿಯರೊಬ್ಬರು, ಪೊಲೀಸರ ಮಾತೆತ್ತಬೇಡ ಸಾಂತಪ್ಪಾ! ಒಮ್ಮೆ ತನಿಖೆ ಶುರುವಾಯ್ತು ಅಂತೆಂದರೆ ವಿಷ ಸೇವಿಸಲಿಕ್ಕೆ ಕಾರಣವೇನಾಯ್ತು ಎಂದು ತಿಳಿಯುವತನಕ ಮುಂದುವರಿಯುತ್ತದೆ ಹುಷಾರ್! ಎಂದು ಗದರಿಸಿದಾಗ ಇವನ ಬಡಬಡಿಕೆ ನಿಂತಿತಂತೆ. ಪೊಲೀಸು ಕಾಯದೆಯೆಂದರೆ ತತ್ತ ಹೆದರುತ್ತಾನಂತೆ. ಈಗಲೂ ಇನ್ನೊಂದು ವದಂತಿಯಿದೆ. ಇಷ್ಟೆಲ್ಲವನ್ನೂ ಹೇಳಿಯಾಗಿದೆ. ಅದನ್ನೂ ಹೇಳಿಬಿಡುತ್ತೇನೆ: ಇವನು ಮನೆಗೆ ತರುತ್ತಿದ್ದ ಹೆಂಗಸರೇ, “ಆ ಸಾಧ್ವೀಮಣಿಯ ಶೀಲದ ಬಗ್ಗೆ ಹಾಗೆಲ್ಲ ಸುಳ್ಳು ಹೇಳಬೇಡಿ. ಶಾಪ ಹಾಕಿಯಾಳು, ಭೂತವಾಗಿ ನಮ್ಮನ್ನೆಲ್ಲ ಕಾಡಿಯಾಳು” ಎಂದು ಹೆದರಿಸಿದರಂತೆ. ಆಮೇಲೆ ಇವನು ಬದಲಾದನಂತೆ. ಟ್ರಕ್ ಬಿಝಿನೆಸ್ ಬಿಟ್ಟು ಕೊಟ್ಟು ಈಗಿನ ದಂಧೆ ಶುರುಮಾಡಿದನಂತೆ. ಸಿಕ್ಕಸಿಕ್ಕ ಹೆಂಗಸರನ್ನು ಮನೆಗೆ ತರುವುದೂ ನಿಂತಿತಂತೆ.”

“ಇವನ ಹೊಸ ದಂಧೆಯ ಭರಭರಾಟೆಗೆ ಚಕಿತರಾದವರು ಕ್ರಮೇಣ ಹಿಂದಿನದೆಲ್ಲ ಮರೆಯತೊಡಗಿದರು. ಊರಿನ ಪರವೂರಿನ ದೇವಸ್ಥಾನಗಳು, ಶಾಲೆ ಕಾಲೇಜುಗಳು, ಸಾರ್ವಜನಿಕ ಸಂಘ ಸಂಸ್ಥೆಗಳು, ಕಣ್ಣು ಕುಕ್ಕಿಸುವ ಇವನ ದೇಣಿಗೆಗಳಿಂದ ಉಪಕೃತವಾದಂತೆ ಇವನ ಪ್ರತಿಷ್ಠೆ ಕೀರ್ತಿಗಳು ಜಿಲ್ಲೆಯ ತುಂಬ ಹೆಸರು ಮಾಡುತ್ತ ಹಿಂದಿನದೆಲ್ಲಕ್ಕೆ ದಂತಕತೆಯ ಕಳೆಯೇರಿದರೆ ಆಶ್ಚರ್ಯವಲ್ಲ. ಕುರೂಪಿ ಹೆಣ್ಣುಗಳನ್ನು ಮನೆಗೆ ತರುವ ಚಾಳಿ ನಿಂತ ಮೇಲೆ ಚಂದಾವರದಿಂದಲೋ ಇನ್ನೆಲ್ಲಿಂದಲೋ ಇಬ್ಬರು ಕಲಾವಂತ ಹೆಂಗಸರನ್ನು ಮನೆಯಲ್ಲಿ ತಂದಿರಿಸಿದ್ದನ್ನು ಕೂಡ ಜನ ಎಲ್ಲಿಲ್ಲದ ಔದಾರ್ಯದಿಂದ ಮಾಪು ಮಾಡಿದರಷ್ಟೇ ಅಲ್ಲ, ಈ ಹೆಣ್ಣುಗಳೂ ಇವನ ವೈಭವದ ಭಾಗವೆಂದು ತಿಳಿದರು. ತುಂಬಾ ಚಂದ ಹೆಣ್ಣುಗಳಂತೆ. ಚಂದ ಹೆಣ್ಣುಗಳತ್ತ ಇವನ ಮನವೊಲಿದದ್ದೂ ಇವನೊಳಗಿನ ಬದಲಾವಣೆಗೆ ಸಾಕ್ಷಿಯೆಂದು ತಿಳಿದವರಿದ್ದಾರೆ. ಇದು ಇಲ್ಲಿಯ ಜನರ ಖಾಸಾ ರೀತಿ. ರಂಗೇಲತನಕ್ಕೆ ಇಲ್ಲಿ ಯಾವಾಗಲೂ ಅಗ್ರಪೂಜೆ.”

ತಾನು ಹೇಳಿದ್ದ ಎಲ್ಲವೂ ದಂತಕತೆಯಲ್ಲ ಎಂಬುದನ್ನು ಸ್ಪಷ್ಟಪಡಿಸಲೆಂಬಂತೆ, ತಾಸು ತಡೆದು, “ಇವತ್ತು ನೀನು ಈ ಸುಂದರಿಯರನ್ನು ನೋಡಿದರೂ ನೋಡಬಹುದು” ಎಂದಳು.

“ನಾನೂ ಉತ್ಸುಕನಾಗಿದ್ದೇನೆ ಹೆದರಬೇಡ. ಅವರ ಸೌಂದರ್ಯಕ್ಕೆ ಮರುಳಾಗದೇ ಸುರಕ್ಷಿತವಾಗಿ ಮನೆಗೆ ಬರುತ್ತೇನೆ.”

ನಾನು ನಗಲು ಯತ್ನಿಸಿದೆ. ಆಗಲಿಲ್ಲ.

ಅಕ್ಕ ತಾನು ವಿಕ್ಷಿಪ್ತ ಸ್ವಭಾವದ ಸಾಂತಪ್ಪನೊಬ್ಬನ ಬಗ್ಗೆ ಹೇಳುತ್ತಿದ್ದೇನೆ ಎಂದು ತಿಳಿದುಕೊಂಡಿರಬಹುದು. ನನಗಂತೂ ಅವಳು ಸಾಂತಪ್ಪನ ಬಗ್ಗೆ ಹೇಳುತ್ತಲೇ ಅವನನ್ನು ರೂಪಿಸಿದ ಇಡೀ ಒಂದು ಸಮುದಾಯದ ಬಗೆಗೂ ಹೇಳುತ್ತಿದ್ದಾಳೆ ಅನ್ನಿಸಿತು. ಸಾಂತಪ್ಪ ಸಂಪೂರ್ಣವಾಗಿ ಕುಮಟೆಯ ಮಣ್ಣಿನ ಫಸಲು. ಅಷ್ಟೇ ಅಲ್ಲ: ಅವನ ಬಗ್ಗೆ ಹೇಳಿದವಳು ಕುಮಟೆಯವಳೇ ಆದ ವಯೋವೃದ್ಧ ವಿಧವೆಯಾಗಿರದೇ ರಾಮಕೃಷ್ಣನಂಥ ನಿರುತ್ಸಾಹದ ತರುಣನಾಗಿದ್ದರೆ ಈ ವರದಿಯ ರೂಪ ತೀರ ಬೇರೆಯಾಗುತ್ತಿತ್ತೇನೋ ಎಂದೂ ತೋರಿತು. ಅವನ ವರದಿಗೆ ಕಳವಾದ ಬಂಗಾರದ ಗಟ್ಟಿಗಳು ಕೇಂದ್ರವಾಗುತ್ತಿದ್ದವೇನೋ!

ಹತ್ತಿದ ಸಣ್ಣ ತಂದ್ರಿಯಿಂದ ಎಚ್ಚತ್ತುಕೊಳ್ಳುವಷ್ಟರಲ್ಲಿ ಅಕ್ಕ ಆಗ ಅರ್ಧಕ್ಕೇ ಬಿಟ್ಟ ವಾಸುದೇವನ ಕಥೆಗೆ ಹಿಂದಿರುಗಿದಳು_

“ಮನೆಯಿಂದ ಓಡಿಹೋದ ಮಗ ಆರೇಳು ವರ್ಷಗಳ ಮೇಲೆ ಒಂದು ದಿನ ಹುಬ್ಬಳ್ಳಿಯಲ್ಲಿದ್ದಾನೆಂದು ಪತ್ತೆಯಾದದ್ದು ಮುಂದಿನ ಎಂಟು ವರ್ಷಗಲಲ್ಲಿ ಹಲವು ಅವಾಂತರಗಳಿಗೆ ಮೂಲವಾಯಿತು. ಈವರೆಗೂ ಒಮ್ಮೆಯು ತಪ್ಪಿ ಕೂಡ ಪರಸ್ಪರರನ್ನು ಕಂಡವರಲ್ಲ. ಅವರಿವರು ಕೊಟ್ಟ ಸುದ್ದಿಯ ಮೂಲಕವೇ ಒಬ್ಬರಿಗೊಬ್ಬರು ಮುಟ್ಟುತ್ತಿದ್ದರು. ಇವರಿಬ್ಬರಲ್ಲಿ ಅಪ್ಪ ಎಷ್ಟು ಉಗ್ರನೋ ಮಗ ಅಷ್ಟೇ ಶಾಂತ, ನಿರ್ಲಿಪ್ತ. ತಂದೆಗೆ ಸಂಬಂಧಪಟ್ಟ ಎಲ್ಲದಕ್ಕೂ ತಾಯಿಯ ಹಾಗೇ ಮನಸ್ಸು ಮುಚ್ಚಿಕೊಂಡಿದ್ದ. ನಿಜಕ್ಕೂ ಎಳೆ ವಯಸ್ಸಿನಲ್ಲೇ ಸಾಧುಸಂತರ ನೆನಪು ತರುತ್ತಿದ್ದ ಸ್ಥಿತಪ್ರಜ್ಞ. ತನ್ನನ್ನು ಕಡೆಗಣಿಸಲೆಂದೇ ಬುದ್ಧಿಪೂರ್ವಕವಾಗಿ ಹೀಗೆ ನಡೆದುಕೊಳ್ಳುತ್ತಿದ್ದಾನೆಂದು ಅಪ್ಪ ತಿಳಿದ. ಅವನ ಪ್ರತಿಯೊಂದು ಚಟುವಟಿಕೆ-ಯಾರಿಗು ಕಾಣದ ದೂರದ ಮುಂಬಯಿಗೆ ಹೋಗಿ ಹಾಳಾಗುವುದನ್ನು ಬಿಟ್ಟು-ತನ್ನ ಪರಿಚಯದ ಜನ ಕಿಕ್ಕಿರಿದ ಹುಬ್ಬಳ್ಳಿಗೇ ಬಂದದ್ದು: ಯಾರೊಬ್ಬರ ಹಂಗೂ ಬೇಡವೆಂದು ಅವರಿವರ ಮನೆಗಳಲ್ಲಿ, ಹೊಟೆಲ್ಲುಗಳಲ್ಲಿ, ಕೆಲಸ ಮಾಡಿ ಸಾಲೆ ಕಲಿತದ್ದು; ಎಸ್ಸೆಸ್ಸೆಲ್ಸೀಯಲ್ಲಿ ಒಳ್ಳೇ ಅಂಕಗಳನ್ನು ದೊರಕಿಸಿಯೂ ತನ್ನಂಥ ಅನಾಥನಿಗೇಕೆ ಕಾಲೇಜು ಶಿಕ್ಷಣವೆಂದು ಹೇಳಿಕೊಳ್ಳುತ್ತಾ ದೊಡ್ಡ ಆಸ್ಪತ್ರೆಯೊಂದರಲ್ಲಿ ಸಾದಾ ಕಾರಕೂನನಾದದ್ದು” ಆಸ್ಪತ್ರೆಯ ನರ್ಸ್ ಒಬ್ಬಳನ್ನು, ಅವಳು ಹರಿಜನ ಹುಡುಗಿಯೆಂದು ಗೊತ್ತಿದ್ದೂ, ಮದುವೆಯಾದದ್ದು: ನೀನು ಇಂಥಿಂಥವರ ಮಗನಲ್ಲವೇನೋ ಎಂದು ಕೇಳಿದರೆ ಚಿಕ್ಕಂದಿನಲ್ಲೇ ಅಪ್ಪ-ಅಮ್ಮಂದಿರನ್ನು ಕಳಕೊಂಡ ಬಡ ಅನಾಥ ತಾನೆಂದು ಹೇಳಿದ್ದು-ಎಲ್ಲ ತನ್ನನ್ನು ತನ್ನ ಪರಿಚಯದವರಲ್ಲಿ ಅವಮಾನಗೊಳಿಸಿ ಸೇಡು ತೀರಿಸಿಕೊಳ್ಳಲೆಂದೇ ಮಾಡಿದ್ದಾಗಿ ಕಂಡಿತು.

“ದಿನ ಹೋದ ಹಾಗೆ ಬರೇ ಸುದ್ದಿಯಾಗಿ ಕಿವಿಗೆ ಬರುತ್ತಿದ್ದ ಹುಡುಗ ವಿಚಿತ್ರ ರೀತಿಯಲ್ಲಿ ಸಮಸ್ಯೆಯಾಗಿ ಕಾಡಹತ್ತಿದ. ಮಗನು ತನ್ನನ್ನು ಅಪ್ಪನೆಂದು ಗುರುತಿಸಲು ನಿರಾಕರಿಸಿದಷ್ಟೂ ಮಗನ ಬಗೆಗಿನ ಮೋಹವೂ ಹೆಚ್ಚುತ್ತಾ ಹೋಗಿ ಇತ್ತೀಚಿನ ತಿಂಗಳಲ್ಲಿ ಮನಶ್ಯಾಂತಿಯನ್ನೂ ಕಳೆದುಕೊಂಡಂತಿದೆ. ಹಲವರ ಕಾಲು ಹಿಡಿದು ಒಮ್ಮೆ ಅವನನ್ನು ಈ ಮನೆಗೆ ತಂದು ತನ್ನ ಭೇಟಿ ಮಾಡಿಸಿ ಎಂದು ದುಂಬಾಲು ಬೀಳುತ್ತಾನಂತೆ.ಕೆಲವು ತಿಂಗಳ ಹಿಂದೊಮ್ಮೆ ಇಂಥ ಪ್ರಯತ್ನ ನಡೆದು ಅದು ಸಫಲವಾಗದೇ ಹೋದಾಗ ಇಡೀ ಮನೆ ತುಂಬ ಬಯಲಾಟದ ಕುಣಿತ ಮಾಡುತ್ತ ‘ನನ್ನನ್ನು ಇಷ್ಟೊಂದು ಸತಾಯಿಸುವ ಈ ಸೈತಾನ ಒಂದು ದಿನ ತಾಯಿ ತೆಗೆದುಕೊಂಡದ್ದನ್ನೇ ತೆಗೆದುಕೊಳ್ಳದೇ ಇರಲಾರ’ ಎಂದು ಶಾಪ ಹಾಕುವ ವಿಕೋಪಕ್ಕೆ ಹೋದನಂತೆ.

“ಸುದ್ದಿ ಮಗನ ಕಿವಿಗೂ ಹೋಗಿತ್ತು. ಮಗ ಎಳ್ಳಷ್ಟೂ ವಿಚಲಿತನಾಗಲಿಲ್ಲ. ಎಂದಿನಂತೆ ಶಾಂತ, ಗಂಭೀರ, ನಿಜ ಹೇಳಬೇಕೆಂದರೆ, ಒಂದು ದಿನವೂ ತಪ್ಪಿ ಕೂಡ ತಂದೆಯ ಬಗ್ಗೆ ಕೆಟ್ಟದ್ದನ್ನು ಆಡಿದವನಲ್ಲ. ಸಂದರ್ಭ ಬಂದಾಗ, ಅಮ್ಮನ ನೆನಪಾದಾಗ ಹೆಂಡತಿಯ ಎದುರು ಶಾಂತಚಿತ್ತನಾಗಿ ಹೇಳಿದ್ದು ಹೆಂಡತಿಯನ್ನು ಕೆರಳಿಸುತ್ತಿತ್ತೇ ಹೊರತು ಇವನನ್ನಲ್ಲ. ನಾನಿದೀಗ ಹೇಳಿದ್ದು ಅವಳ ಬಾಯಿಂದಲೇ ಕೇಳಿದ್ದು. ನನ್ನೆದುರೇ ಒಮ್ಮೆ ಹೆಂಡತಿಗೆ ಸಮಾಧಾನ ಹೇಳಿದ್ದು ನೆನಪಿದೆ: ‘ಶ್ರೀಮಂತಿಕೆಯ ಅಮಲೊಂದೇ ಅಪ್ಪನ ವರ್ತನೆಗೆ ಕಾರಣವಿದ್ದಿರಲಾರದು. ಯಾರಿಗೆ ಗೊತ್ತು. ಅವನ ಅಪ್ಪ-ಅಮ್ಮ ಹೇಗಿದ್ದರೋ; ಯಾರುಯಾರಿಂದ ಅವಮಾನಿತನಾಗಿದ್ದನೋ. ಮುಖ್ಯ, ಅವನಿಗೆ ಸುಖವಿಲ್ಲ. ಅಮ್ಮ ಸತ್ತುಹೋದಳು. ನಾನು ಓಡಿಹೋದೆ. ಅಣ್ಣಂದಿರಂತೂ ದೇಶವನ್ನೇ ಬಿಟ್ಟು ನಡೆದರು. ನನ್ನನ್ನು ಮರೆತುಬಿಡಬಹುದಾಗಿತ್ತು. ಹೀಗೇಕೆ ನನ್ನ ಬೆನ್ನು ಹತ್ತಬೇಕೋ. ಈ ವಯಸ್ಸಿನಲ್ಲಿ ಒಬ್ಬಂಟಿಯಾದವನನ್ನು ಜಗತ್ತು ಹೇಗೆ ಹೆದರಿಸುತ್ತದೆಯೋ, ಊಹಿಸುವುದು ಕಷ್ಟ. ನಾನು ಅವನ ಮಗನೇ ಅಲ್ಲವೆಂದದ್ದು ಅವನು ನನ್ನ ಬಗ್ಗೆ ಆಡಿದ್ದಕ್ಕೆ ಪ್ರತೀಕಾರವಾಗಿ ಅಲ್ಲವೇ ಅಲ್ಲ. ಸುಳ್ಳು ಬಂಡಾಯದ ಭಾವನೆಯಿಂದಲೂ ಅಲ್ಲ. ಅಮ್ಮನ ಮಾತಿಗೆ ಕಟ್ಟುಬಿದ್ದು ಹಾಗೆ ಅಂದನೆ? ನನಗೆ ಗೊತ್ತಿಲ್ಲ. ಒಮ್ಮೆ ಅವನ ಮಗನು ಅಲ್ಲವೆಂದು ಹೇಳಿದ ಮೇಲೆ, ಮುಗಿಯಿತು-ಮಗನಲ್ಲ, ಎಂದಿದ್ದ. ಈಗ ನೀನೇ ಹೇಳು. ಇಂಥ ಹುಡುಗ-ಎಂಥ ಅರಿರೇಕಕ್ಕೂ ದುಡುಕದ ಹುಡುಗ-ಇದ್ದಕ್ಕಿದ್ದ ಹಾಗೆ ಮನೆಯಿಂದ ಅದೃಶ್ಯನಾದರೆ ಅವನ ಹೆಂಡತಿ ಏನು ತಿಳಿಯಬೇಕು? ನಾನೇ ಏನೆಂದು ಸಮಾಧಾನ ಹೇಳಬೇಕು? ಈಗ ಮೂರು ದಿನಗಳಾದವು. ಇನ್ನೂ ಸುದ್ದಿಯಿಲ್ಲ. ತಂದೆಯ ಕ್ರೋಧಕ್ಕೂ ಈ ಬೇಪತ್ತೆಗೂ ಸಂಬಂಧವಿಲ್ಲ ಎನ್ನುತ್ತಿಯಾ?”

‘ತಂದೆಯ ಕ್ರೋಧ’ ಎನ್ನುವಾಗ ಅಕ್ಕನ ಮನಸ್ಸಿನಲ್ಲಿ ‘ಮಗ ಒಂದಿಲ್ಲೊಂದು ದಿನ ವಿಷ ತಿಂದು ಸಾಯುತ್ತಾನೆ’ ಎಂಬರ್ಥದ, ಸಿಟ್ಟಿನಿಂದ ಸಿಡಿದ, ಭವಿಷ್ಯವಾಣಿ ಇದ್ದಿರಬೇಕು ಅನ್ನಿಸಿತು. ಸನ್ನಿವೇಶ ನಾನು ತಿಳಿದದ್ದಕ್ಕಿಂತ ಜಟಿಲವಾಗುತ್ತ ನಡೆದಿತ್ತು. ಮಗನ ಬಗ್ಗೆ ಏಕಕಾಲಕ್ಕೆ ಅನ್ನಿಸುತ್ತಿದ್ದ ಮೋಹ-ತಿರಸ್ಕಾರಗಳಲ್ಲಿ ಬೇರುಬಿಟ್ಟ ಈ ವಿಕೃತ ವರ್ತನೆ ಇವನು ಎಣಿಸಿಯೇ ಇರದ ಅನಾಹುತಕ್ಕೇನಾದರೂ ಈಗಾಗಲೇ ಎಡೆಮಾಡಿಕೊಟ್ಟಿರಬಹುದೆ? ನಾನು ಅಕ್ಕನ ಪ್ರಶ್ನೆಗೆ ಉತ್ತರ ಕೊಡದಾದೆ. ನಾನು ಇನ್ನೂ ಕಂಡಿರದ ಈ ಸಂತ ಬಂಡಾಯಗಾರ ನನ್ನ ಅಂತಃಕರಣವನ್ನು ವ್ಯಾಪಿಸತೊಡಗಿದಂತೆ ಮನಸ್ಸಿನಲ್ಲೇ ಅವನ ಸುರಕ್ಷತೆಯ ಬಗ್ಗೆ ಪ್ರಾರ್ಥಿಸಿದೆ. ನಾನು ಬಿಡಿಸಬೇಕಾದ ಪ್ರಶ್ನೆ ಸ್ಪಷ್ಟವಾಯಿತಾದರೂ ಬಿಡಿಸುತ್ತೇನೆಂಬ ಧೈರ್ಯ ಮಾತ್ರ ಮೂಡದಾಯಿತು.

ಅಕ್ಕ, ‘ಹೇಳುತ್ತೇನೆ ಹೇಳುವುದಿಲ್ಲ’ ಎನ್ನುತ್ತಲೇ ಇಬ್ಬರ ಬಗೆಗೂ ಎಷ್ಟೆಲ್ಲ ಹೇಳಿ ಮುಗಿಸಿದ್ದಳು. ಮಾತಿನಲ್ಲಿ ನಮಗೆ ಹೊತ್ತು ಸರಿದದ್ದೇ ತಿಳಿಯಲಿಲ್ಲ. ಎಲ್ಲ ಕೇಳುಗರೂ ಕೂತ ಜಾಗಕ್ಕೆ ಅಂಟಿಬಿದ್ದವರಂತೆ ಕೂತೇ ಇದ್ದರು. ಹೊರಗೆ ಆಗಲೇ ಅಸ್ತಕ್ಕೆ ಸಾಗಿದ ಸೂರ್ಯನ ಬಾಡಿದ ಬಿಸಿಲು ಅಂಗಳದ ಕೆಂಪು ಮಣ್ಣಿಗೆ ಬಂಗಾರ ಹೊದಿಸಿತ್ತು. ತೆರೆದಿಟ್ಟ ಬಾಗಿಲು ಕಿಡಕಿಗಳಿಂದ ಕಾಣಿಸುತ್ತಿದ್ದ ಆದಿಬದಿಯ ಮನೆಗಳು, ಹಿತ್ತಲ ಗಿಡಮರಗಳು, ಹೋಬಿಸಿಲಲ್ಲಿ ಹೊಳೆಯುತ್ತ ನಾವು ಮಾತಾಡಿದ್ದೆಲ್ಲವನ್ನೂ ಕೇಳಿಸಿಕೊಂಡವುಗಳ ಹಾಗೆ ಗಂಭೀರಮೌನ ಧರಿಸಿ ನಿಂತಿದ್ದು ನೋಡಿ ಮನಸ್ಸು ಭಾರವಾಯಿತು.

ಹೊರಗೆ ಕಾರು ಬಂದು ನಿಂತ ಸದ್ದು ಕೇಳಿಸಿ, ‘ಅರೆ! ಕಾರು ಬಂದುಬಿಟ್ಟೆತೆ? ಇಷ್ಟು ಬೇಗ!” ಎಂದು ಆಶ್ಚರ್ಯಪಟ್ಟೆವು. ಕಾರು ಅಂಗಳದವರೆಗೆ ಬರುವುದು ಶಕ್ಯವಿರಲಿಲ್ಲ. ದೂರವೆಲ್ಲೋ ನಿಂತಿರಬೇಕು. ವನಿತಾಳ ಕಿರಿಯ ಹುಡುಗಿ ಅಂಗಳಕ್ಕೆ ಓಡಿಹೋಗಿ ಕಾರು ಬಂದದ್ದು ನಿಜವೆಂದು ಸಾರಿದಳು. ಕೆಲ ಹೊತ್ತಿನ ಮೇಲೆ ಡ್ರೈವರ್ ಬಂದ:

“ಶಕ್ಯವಾದರೆ ತುಸು ಮೊದಲೇ ಬರಲು ಕೇಳಿಕೊಂಡಿದ್ದಾರೆ. ಅಂಥ ಅರ್ಜೆಂಟ್ ಏನೂ ಇಲ್ಲವಂತೆ. ಹೊತ್ತು ಮುಳುಗುವ ಮೊದಲೇ ಬಂದರೆ ಮನೆಯೆದುರಿನ ಬಗೀಜಾದಲ್ಲಿ ಕೆಲ ಹೊತ್ತು ಕೂರಬಹುದಾಗಿತ್ತು ಅನ್ನಿಸಿತಂತೆ. ಕಾರಿಗೆ ಹೇಗೂ ಬಿಡುವೇ ಇತ್ತು. ಅಲ್ಲಿ ನಿಲ್ಲುವ ಬದಲು ಇಲ್ಲಿ ಬಂದು ನಿಲ್ಲಲು ಹೇಳಿದರು. ನಿಮ್ಮ ಸವಡಿನ ಪ್ರಕಾರ ತಯಾರಾಗಿರಿ” ಎಂದ. ಅಕ್ಕನನ್ನು ನೋಡಿದಮೇಲೆಯೇ ನೆನಪಾದವನ ಹಾಗೆ, “ಹುಬ್ಬಳ್ಳಿಯಿಂದ ಯಾರೋ ಬರುವವರಿದ್ದಾರಂತೆ. ಬಂದಿದ್ದರೆ ಅವರನ್ನೂ ಕರಕೊಂಡು ಬರಲು ಹೇಳಿದ್ದಾರೆ” ಎಂದ. ಬೇರೆ ಸಮಯದಲ್ಲಾದರೆ ಅಕ್ಕ ಈ ಆಮಂತ್ರಣದ ಬಗ್ಗೆ ಏನಾದರೂ ಆಡದೆ ಇರುತ್ತಿರಲಿಲ್ಲ. ವಾಸುದೇವನ ಬಗ್ಗೆ ಆಡಿಕೊಂಡು ಮನಸ್ಸು ಮ್ಲಾನಗೊಂಡಿರುವಾಗ ಮಾತು ಬೇಡವೆನ್ನಿಸಿರಬೇಕು. ನನಗೂ ಅಷ್ಟೇ. ರಾಮಕೃಷ್ಣ “ಅವರು ಸಿದ್ಧವಾಗುತ್ತಾರೆ. ನೀನು ಕಾರಿನಲ್ಲಿ ಹೋಗಿ ಕುಳಿತು ದಾರಿ ಕಾಯು” ಎಂದು ಆದೇಶವಿತ್ತ. ಅವನೇ ಹೊರಟುಹೋದಮೇಲೆ ನಮ್ಮತ್ತ ತಿರುಗಿದ.

“ಬೋಳೀಮಗನಿಗೆ ನೀವು ಅವನ ಮನೆಯನ್ನೂ ಮೆಚ್ಚಬೇಕು, ಎದುರಿನ ಬಗೀಚಾವನ್ನು ನೋಡಿ ವಾಹವಾ ಎನ್ನಬೇಕು. ಬಗೀಚಾ ಇದ್ದದ್ದೂ ಹಾಗೆಯೆ! ನಿಮ್ಮ ಹ್ಯಾಂಗಿಂಗ್ ಗಾರ್ಡನ್‌ನನ್ನು ಹಿಂದೆ ಹಾಕುತ್ತದೆ. ಅಲ್ಲಿಯ ಹಾಗೇ ಹೂವಿನ ಗಿಡಗಳಿವೆ. ನೀರಿನ ಕಾರಂಜಿಗಳಿವೆ. ಕೂರಲು ಬೆಂಚುಗಳಿವೆ. ಆದರೆ ನೋಡಿದವರನ್ನು ಥಕ್ಕುಗೊಳಿಸುವುದು ಅವಾಢವ್ಯವಾದ ಅದರ ಕಬ್ಬಿಣದ ಗೇಟು. ಗೇಟಿನ ಎರಡೂ ಕಂಬಗಳಿಗೆ ಬಳ್ಳಿಯಂತೆ ಸುತ್ತಿಕೊಂಡು ಮೇಲೆ ಸಾಗಿ, ಕಮಾನಿನ ಮೇಲೂ ಹಬ್ಬಿದ ಬೋಗನ್‌ವಿಲ್ಲ ಮೈತುಂಬ ಕೆಂಪು ಹೂವನ್ನು ಬಿಟ್ಟಿರುವ ಸೊಗಸನ್ನು ನೀವು ನೋಡಿ ನಂಬಬೇಕು.”

ರಾಮಕೃಷ್ಣನಿಗೆ ನನ್ನ ಸದ್ಯದ ಮೂಡಿನ ಕಲ್ಪನೆ ಇದ್ದಂತಿರಲಿಲ್ಲ. “ಈಗಿನ್ನೂ ಆರೂವರೆ ಗಂಟೆ. ಏಳೂವರೆಯ ಸುಮಾರಿಗೆ ಹೊರಟರೆ ಸಾಕು. ನಾಳೆ ಆ ಬದಿಗೆ ತಿರುಗಾಡಲು ಹೋದರೆ ರಸ್ತೆಯಿಂದಲೇ ಗೇಟನ್ನು ನೋಡಿದರಾಯಿತು. ಸಾಂತಪ್ಪ ನನ್ನೊಡನೆ ಮಾತಾಡಲು ಬಯಸಿದ್ದಾದರೂ ಏನು ಎಂದು ಗೊತ್ತಾದ ಹೊರತು ನನ್ನ ಮನಸ್ಸಿಗೆ ಚೈನು ಇಲ್ಲ. ಈಗ ಬೇಕಾದರೆ ಹೀಗೇ ಈ ಗುಡ್ಡವನ್ನು ಸುತ್ತಾಡಿ ಬರೋಣ. ಆಗಿನಿಂದ ಒಂದೇ ಜಾಗದಲ್ಲಿ ಕೂತು ಕಾಲು ಮರಗಟ್ಟಿವೆ. ಒಂದೇ ವಿಷಯದ ಬಗ್ಗೆ ಮಾತನಾಡಿ ತಲೆ ಸುನ್ನವಾಗಿದೆ. ನಾವು ಹಿಂದಿರುಗಿ ಬರುವಷ್ಟರಲ್ಲಿ ಹೆಂಗಸರು ಸಿದ್ಧವಾಗಲಿ” ಎಂದೆ. ವನಿತಾ ಸುಮತಿಯರ ಜೊತೆಗೆ ತನ್ನನ್ನೂ ಸೇರಿಸಿಕೊಂಡಿರಬಹುದೆಂದು ಬಗೆದ ಅಕ್ಕ, “ನಾ ಬರಲಾರೆ. ನೀವುನೀವೇ ಹೋಗಿಬನ್ನಿ” ಎಂದಳು. ನಾನೂ ಒತ್ತಾಯಿಸಲು ಹೋಗಲಿಲ್ಲ. ನಾವು ಹೊರಡುವ ಹೊತ್ತು ಹತ್ತಿರವಾಗುತ್ತಿದ್ದ ಹಾಗೆ ಅಕ್ಕನ ದುಗುಡ ಹೆಚ್ಚುತ್ತಿದ್ದದ್ದು ನೋಡಿ ಕೆಡುಕೆನ್ನಿಸಿತು.

– ೩ –

ಈ ಮೊದಲೇ ಯೋಜಿಸಿಕೊಂಡಂತೆ ಕಾರಿನಲ್ಲಿ ನಾನು, ಸುಮತಿ, ವನಿತಾ ಮೂವರೇ ಹೊರಟೆವು. “ಇಲ್ಲಿಂದ ಹದಿನೈದು ಮಿನಿಟುಗಳ ಹಾದಿ, ಚಿತ್ರಿಗೆಗೆ ಹೋಗುವ ಹಾದಿಯಲ್ಲಿ” ಎಂದು ಡ್ರೈವರ್ ಕಾರಿನೊಳಗಿನ ಮೌನಕ್ಕೆ ಭಂಗ ತಂದ. ಹೊರಗೆ ಆಗಲೇ ಮಬ್ಬುಗತ್ತಲೆ ಕವಿದಿತ್ತು. ಇಲ್ಲಿಗೆ ಬಂದಂದಿನಿಂದ ಮೊದಲಬಾರಿಗೇ ಹೊರಬಿದ್ದವನಿಗೆ ನಾನ್ವತ್ತು ವರ್ಷಗಳಿಗೂ ಹಿಂದೆ ನೋಡಿದ ಊರಿನ ‘ಏನು-ಎಲ್ಲಿ’ಗಳ ಗುರುತು ಹಿಡಿಯುವುದಾಗಲಿಲ್ಲ. ಸೋದರ ಸೊಸೆಯೇ, ಇದು ನೆನಪಿದೆಯೇ? ಅದು ನೆನಪಿದೆಯೇ? ಎಂದು ನನ್ನ ನೆನಪು ಕೆದಕುತ್ತಲೇ ಚಿಕ್ಕಂದಿನಲ್ಲಿ ನಾನು ನೋಡಿರಬಹುದಾದ ಜಾಗಗಳನ್ನು ಹೆಂಡತಿಗೆ ಪರಿಚಯಿಸಿದಳು: ಹುಲಿದೇವರ ಗುತ್ತ: ಹೈಸ್ಕೂಲು ಗುಡ್ಡ, ಗುಡ್ಡದ ಸಾಲು ಪಾವಟಿಗೆಗಳು: ಗುಡಿಗಾರ ಪೇಟೆ: ಮಠ ಕೇರಿ: ಶಾಂತೇರಿ ಕಾಮಾಕ್ಷಿ ಕಾವೇರಿ ಕಾಮಾಕ್ಷಿ ಮ್ಹಾಳಸಾ ದೇವಾಲಯಗಳು, ಕಿವಿಯ ಮೇಲೆ ಬಿದ್ದ ಹೆಸರುಗಳು ನೆನಪಿನ ಮುಸುಕುಗತ್ತಲೆಯಲ್ಲಿ, ರೋಮಾಂಚನಕಾರೀ ಪ್ರತಿಮೆಗಳನ್ನು ಮಿಂಚಿಸಿದವು. ಕೇಳಿದ ಹೆಸರುಗಳಿಗೇ ಮರುಳಾದಂತಿದ್ದ ಸುಮತಿ “ನಾಳೆ ಹಗಲಿಗೆ ಇವುಗಳನ್ನೆಲ್ಲ ಇನ್ನೊಮ್ಮೆ ನೋಡಬೇಕು” ಎಂದಳು.

“ಯಜಮಾನರೇ ನಾಳೆ ನಿಮಗೆ ಊರು ತೋರಿಸುವ ಯೋಜನೆ ಹಾಕಿಕೊಂಡಿದ್ದಾರೆ. ಶಿರಾಲಿ ಮುರ್ಡೇಶ್ವರಗಳ ದೇವಾಲಯಗಳನ್ನು ತೋರಿಸುವಾ ಎಂದಿದ್ದರು” ಎಂದ ಡ್ರೈವರ್.

ಈ ಯೋಜನೆಯ ಬಗ್ಗೆ ನಮಗಾರಿಗೂ ಉತ್ಸಾಹವಿರಲಿಲ್ಲ. ಯಾರೂ ಮಾತಿಗೆ ಪ್ರತಿಕ್ರಿಯಿಸಲು ಹೋಗಲಿಲ್ಲ. ಡ್ರೈವರ್ ಹಿಂದೆಗೆಯದೇ “ನೀವೆಲ್ಲ ಬರುತ್ತೀರೆಂದು ತುಂಬಾ ಖುಷಿಯಲ್ಲಿದ್ದಾರೆ, ಯಜಮಾನರು” ಎಂದು ವರದಿ ಒಪ್ಪಿಸಿದ. ಕೆಲ ಹೊತ್ತಿನ ಮೇಲೆ “ಇದೋ! ಬಂದೇಬಿಟ್ಟೆವು” ಎಂದು ಸಾರಿದ. “ಇದು ಮುಖ್ಯ ಗೇಟು. ಒಳಗೆ ಕಾಲಿರಿಸಿದ್ದೇ ಬಗೀಜಾ. ವಾಚ್ ಮನ್ ನಿಮ್ಮನ್ನು ಬಂಗಲೆಗೆ ಮುಟ್ಟಿಸುತ್ತಾನೆ. ತುಸು ಒಳಗಿದೆ. ಕಾರು ಈ ಗೇಟಿನಿಂದ ಒಳಗೆ ಹೋಗುವುದಿಲ್ಲ. ಇನ್ನೊಂದು ಗೇಟಿದೆ. ಯಜಮಾನರು ನಿಮ್ಮನ್ನು ಈ ಗೇಟಿನಿಂದಲೇ ಕರೆತರಲು ಹೇಳಿದ್ದಾರೆ” ಎನ್ನುತ್ತ ನಮ್ಮನ್ನು ಕಂಪೌಂಡಿನ ಮಹಾದ್ವಾರದ ಎದುರು ಇಳಿಸಿದ.

ನಿಯಾನ್ ದೀಪದ ಬೆಳಕಿನಲ್ಲಿ ಬೆಳಗಿಕೊಂಡ ಆ ಭವ್ಯ ಮಹಾದ್ವಾರದ ಎದುರು ನಿಂತು ಕಂಪೌಂಡಿನಲ್ಲಿ ದೂರವೆಲ್ಲೋ ಇದೆಯೆಂದು ಹೇಳಿದ ಮನೆಯನ್ನು ಹುಡುಕುತ್ತಿದ್ದಂತೆ ಕೆಲ ಹೊತ್ತಿನ ಮೊದಲಷ್ಟೇ ಡ್ರೈವರ್ ಆಡಿದ ತೀರ ಸರಳವಾದ ಮಾತುಗಳು ಅರಿವಿನಲ್ಲಿ ಮರುಕಳಿಸಿ ಬಾಲ್ಯದಲ್ಲಿ ಅಮ್ಮನಿಂದ ಕೇಳಿದ ಜಾನಪದ ಕತೆಯೊಂದು ಚೂರುಚೂರಾಗಿ ನೆನಪಾಯಿತು. ದುರ್ಗಮವಾದ ಕೋಟೆ. ಅದರ ಹೆಬ್ಬಾಗಿಲ ಕಾವಲಿಗೊಬ್ಬಳು ಅಕರಾಳ ವಿಕರಾಳ ರಕ್ಕಸಿ. ಕೋಟೆಯ ಒಳಗೊಂದು ಅರಮನೆ. ತೀರ ಒಳಗಿನ ಕೋಣೆಯೊಂದರಲ್ಲಿ ಮಹಾ ಭಯಂಕರ ಸರ್ಪಗಳ ಕಾವಲಿನಲ್ಲಿ ಕಣ್ಣು ಕುಕ್ಕಿಸುವಂತೆ ಬೆಳಕು ಬಿಡುವ ಅತ್ಯಮೂಲ್ಯವಾದ ವಜ್ರದ ಹರಳು. ಮಲತಾಯಿಗಾಗಿ ಅದನ್ನು ದೊರಕಿಸ ಹೊರಟ ರಾಜಕುಮಾರ ಆ ರಕ್ಕಸಿಯನ್ನು ಮೊದಲು ಕೊಲ್ಲಬೇಕು. ಅವನು ಒಲಿಸಿಕೊಂಡ ದೇವತೆಯೊಬ್ಬಳು ರಾಕ್ಷಸಿಯನ್ನು ಕೊಲ್ಲುವ ಗುಟ್ಟನ್ನು ಹೇಳಿಕೊಡುತ್ತಾಳೆ. ರಾತ್ರಿ ಮಲಗುವಾಗ ರಾಕ್ಷಸಿ ತನ್ನ ಪ್ರಾಣವನ್ನು ಪಂಜರದೊಳಗಿನ ಗಿಳಿಯೊಂದರಲ್ಲಿ ಅಡಗಿರಿಸುತ್ತಾಳೆ. ಗಿಳಿಯ ಕತ್ತು ಹಿಚುಕಿದರೂ ಸಾಕು, ರಾಕ್ಷಸಿ ಸಾಯುತ್ತಾಳೆ. ರಾಜಕುಮಾರ ಆ ಗಿಳಿಯ ಪಂಜರವನ್ನು ಮೊದಲು ಹುಡುಕಿ ತೆಗೆಯಬೇಕು!

ನಾವು ಗೇಟಿಗೆ ಬರುವಷ್ಟರಲ್ಲಿ ಖಾಕಿ ಯೂನಿಪಾರ್ಮ್‌ನಲ್ಲಿದ್ದ ಮುದಿ ಚೌಕಿದಾರ ಎದ್ದು ನಿಂತು ಸಲಾಮು ಹೊಡೆದು “ಬನ್ನಿ” ಎಂದ. ಸರಿಯಾಗಿ ಅದೇ ಹೊತ್ತಿಗೆ ಕಂಪೌಂಡಿನಿಂದ ಹೊರಬಿದ್ದು ರಸ್ತೆ ಸೇರುವ ತರಾತುರಿಯಲ್ಲಿ ವ್ಯಕ್ತಿಯೊಬ್ಬ, ಗೇಟನ್ನು ದಾಟುತ್ತ “ಒಳಗೆ ಹೋಗಿ, ಮನೆಯ ಯಜಮಾನ ಮನೆಯೊಳಗೆ ಇದ್ದಾರೆ” ಎಂದು ನಿಮ್ಮದೇ ಹಾದಿ ಕಾಯುತ್ತಿದ್ದಾರೆ ಎನ್ನುವ ಧಾಟಿಯಲ್ಲಿ ಸುದ್ದಿ ಕೊಟ್ಟು ಅವಸರಾವಸರವಾಗಿ ರಸ್ತೆ ಸೇರಿದ. ಅವನನ್ನು ಇನ್ನೊಮ್ಮೆ ನೋಡೋಣವೆಂದರೆ ಕತ್ತು ತಿರುಗಿಸಲೂ ಪುರುಸತ್ತು ಕೊಡದೆ, ನಮ್ಮನ್ನು ಮನೆಯ ಕಡೆಗೆ ಕರೆದೊಯ್ಯುತ್ತಿದ್ದ ಚೌಕಿದಾರ, “ತುಂಬ ತಡಮಾಡಿ ಬಂದಿರಲ್ಲ. ಬೆಳಕಿದ್ದಾಗ ನೋಡಬೇಕು ಈ ಬಗೀಜಾವನ್ನು, ಇವತ್ತು ಬೆಳ್ದಿಂಗಳೂ ಕೂಡ ಇಲ್ಲ. ಇನ್ನೆರಡು ದಿನಗಳಲ್ಲಿ ಅಮಾವಾಸ್ಯೆಯಲ್ಲವೆ?” ಎಂದು ಕೇಳಿದ.

ಇಲ್ಲಿಯ ಜನರೇ ಗುಪ್ತ ಸಂಕೇತಗಳಂಥ ಭಾಷೆ ಮಾತಾಡುತ್ತಾರೋ ಅಥವಾ ನನಗೇ, ನನ್ನ ಇಂದಿನ ಮಾನಸಿಕ ಸ್ಥಿತಿಯಲ್ಲಿ ಹಾಗೆ ಕೇಳಿಸುತ್ತದೆಯೋ? ಇಂಥ ಮನೆಗೆ ಬರುವದಿದ್ದಲ್ಲಿ ಸಾಂತಪ್ಪನೇ ಸೂಚಿಸಿದ ಹಾಗೆ ಬೆಳಕಿದ್ದಾಗಲೇ ಬರಬೇಕಾಗಿತ್ತೇನೋ. ಹೆಂಡತಿ ಸೋದರ ಸೊಸೆಗೆ ನನ್ನ ಅನಿಸಿಕೆಯನ್ನು ಇಂಗ್ಲಿಷ್‌ನಲ್ಲಿ ಆಡಿ ತೋರಿಸಿದೆ. ಸುಮತಿ ನನ್ನ ಮಾತನ್ನು ತಕ್ಷಣ ಅನುಮೋದಿಸುತ್ತ “ಙou geಣ ಚಿಟಿ eeಡಿie ಜಿeeಟiಟಿg,ಅಲ್ಲವೆ? ಎಂದಳು.

ನಾನು ಆಗಲೇ ಒಂದು ಗಟ್ಟಿಯಾದ ನಿರ್ಧಾರಕ್ಕೆ ಬಂದೆದ್ದೆ: ಏನೇ ಆಗಲಿ! ನಾನು, ಸಾಂತಪ್ಪ ಇಬ್ಬರೇ ಮಾಳಿಗೆಯ ಮೇಲೆ ಕೂತು ಮಾತನಾಡುವುದನ್ನು ತಪ್ಪಿಸಬೇಕು. ಸಾಂತಪ್ಪ ಕೂಡ ನನಗಿಂತ ಮೊದಲೇ ಇಂಥದ್ದೇ ನಿರ್ಧಾರಕ್ಕೆ ಬಂದತಿತ್ತು. ಮನೆಯ ಮೊಗಸಾಲೆಯಲ್ಲಿ ನಮ್ಮನ್ನು ಎದುರುಗೊಂಡವನು “ಬನ್ನಿ ಬನ್ನಿ, ಬೆಳಕಿದ್ದಾಗಲೇ ಬರುವಿರೆಂದು ಎಣಿಸಿದ್ದೆ. ಸಾಧ್ಯವಾಗಲಿಲ್ಲವೇನೋ. ನಿಮ್ಮ ಅಕ್ಕ ಬಂದಿದ್ದಾರಂತೆ, ಡ್ರೈವರ್ ತಿಳಿಸಿದ. ಅವರೂ ಬರಬಹುದಾಗಿತ್ತು” ಎನ್ನುತ್ತ ನಮ್ಮನ್ನೆಲ್ಲ ದಿವಾಣಖಾನೆಗೆ ಕರೆದೊಯ್ದು.

“ಕೆಲ ಹೊತ್ತು ಇಲ್ಲಿ ಇಲ್ಲಿ ದಿವಾಣಖಾನೆಯಲ್ಲೇ ಕೂರೋಣ. ಊಟದ ಮೊದಲು ಏನಾದರೂ ಕುಡಿಯಲು ಮಾಡಿಸಲೇ?” ಎಂದು ಕೇಳಿ, ನಾವಲ್ಲ ಏಕಕಂಠದಲ್ಲಿ ಬೇಡವೆಂದಮೇಲೆ “ವನಿತಾ, ಇವರನ್ನು ಬೇಕಾದರೆ ಒಳಗೆ ಕರೆದುಕೊಂಡು ಹೋಗು. ಎಲ್ಲರೂ ಈ ಪರದೆಯ ಆಚೆಯ ಕೋಣೆಯಲ್ಲೇ ಇದ್ದಾರೆ ನೋಡು” ಎನ್ನುತ್ತಿರುವಾಗಲೇ ಅವನು ಬೆರಳು ಮಾಡಿದ ಕೋಣೆಯೊಳಗಿಂದ ಹೆಂಗಸೊಬ್ಬಳು ಹೊರಗೆ ಬಂದು, ನಮ್ಮತ್ತ ನೋಡಿ, ತುಂಬಾ ಚಂದವಾಗಿ ಮುಗುಳ್ನಕ್ಕು “ಬನ್ನಿ” ಎಂದಳು. ಸಪೂರವಾದ ನೀಲಿ ದಡಿಯ ಅಚ್ಚ ಬಿಳಿಯ ಸೀರೆ, ತೀರ ಜುಜುಬಿಯಾಗಿ ಬಾಚಿ ಮುಡಿ ಹಾಕಿದ ಕೂದಲು. ಹಣೆಯಲ್ಲಿ ದೊಡ್ಡ ಕುಂಕುಮದ ಬೊಟ್ಟು, ಗೌರವರ್ಣದ ನೀಳಕಾಯದ ಸುಮಾರು ನಾಲ್ವತ್ತರ ಲಾವಣ್ಯವತಿಯನ್ನು ನೋಡಿ ಖುಷಿಪಟ್ಟೆ. ಅಕ್ಕ ಹೇಳಿದ ಹೆಣ್ಣುಗಳಲ್ಲಿ ಒಬ್ಬಳಿರಬೇಕು, ಅನ್ನಿಸಿತು. ಹೆಂಡತಿ ಬದುಕಿರುವವರೆಗೂ ಕುರೂಪಿ ಹೆಣ್ಣುಗಳ ಬೆನ್ನು ಹತ್ತಿದ ಈತ ಈಗ ಇಷ್ಟೊಂದು ಬದಲು ಗೊಳ್ಳಲು ಕಾರಣವೇನು? ಅವಳು, ಸುಮತಿ ವನಿತಾರ ಜೊತೆಗೆ ಕೋಣೆ ಸೇರುವವರೆಗೆ ಅವಳನ್ನು ಎವೆಯಿಕ್ಕದೆ ಕಣ್ಣುಗಳಿಂದ ನೋಡುತ್ತಾ ನಿಂತೆ. ಆಮೇಲೆ ನನ್ನನ್ನು ಸಾವರಿಸಿಕೊಳ್ಳುತ್ತ ಸಾಂತಪ್ಪನತ್ತ ತಿರುಗಿ, “ನಾವು ಇಲ್ಲೇ ಕೂರೋಣ ಅಲ್ಲವೇ?” ಎಂದು ಕೇಳಿದೆ.

“ಮೇಲೆ ಕೂರಬಹುದಾಗಿತ್ತು. ಒಂದೆರಡು ದಿನಗಳ ಮಾತಿಗೆ ಹತ್ತಿರದ ಸಂಬಂಧಿಯೊಬ್ಬರು ಬಂದಿದ್ದಾರೆ. ಅವರೀಗ ಮೇಲಿದ್ದಾರೆ. ಊಟದ ಹೊತ್ತಿಗೆ ನಮ್ಮನ್ನು ಕೂಡಿಕೊಳ್ಳುತ್ತಾರೆ. ಹಾಲಿನಲ್ಲಿ ಬೇಡ. ಪಕ್ಕದಲ್ಲೇ ಇನ್ನೊಂದು ಕೋಣೆಯಿದೆ, ಅಲ್ಲಿ ಕೂರೋಣ.”

ಸಾಂತಪ್ಪ ನನ್ನನ್ನು ಆ ಕೋಣೆಗೆ ಕರೆದೊಯ್ದ, ಅಕ್ಕ ಹೇಳಿದ ಹಾಗೆ ಬಹಳ ಕೋಣೆಗಳುಳ್ಳ ಮೆನೆಯಿರಬೇಕು, ಅನ್ನಿಸಿತು. ಮನೆಯಲ್ಲಿಂದು ಯಾರು ಯಾರೆಲ್ಲ ಇದ್ದಾರೋ! ತಿಳಿಯುವ ಕುತೂಹಲವಾದರೂ ಕೂಡಲೇ ತಿಳಿಯುವ ಸಾಧ್ಯತೆ ತೋರಲಿಲ್ಲ. ಈಗ ನಾವು ಕೂತ ಕೋಣೆಯಲ್ಲಿ ಕೂರುವ ಯೋಜನೆ ಮೊದಲೇ ಸಿದ್ಧಗೊಂಡಿರಬೇಕು. ಅದು ಇನ್ನೊಂದು ಸಣ್ಣ ದಿವಾನಖಾನೆಯ ಹಾಗೆ ಸಜ್ಜುಗೊಂಡಿತ್ತು.

“ಭಿಡೆ ಮಾಡಿಕೊಳ್ಳಬೇಡ. ಒಳ್ಳೇ ಇಂಪೋರ್ಟೆಡ್ ಸ್ಕ್ಯಾಚ್ ವಿಸ್ಕಿ ಇದೆ. ನಾನು ಕುಡಿಯುತ್ತೇನೆ. ನೀನೂ ಜೊತೆಯಾದರೆ ಖುಷಿಯಾಗುತ್ತದೆ. ಮಾಳಿಗೆಯ ಮೇಲಿನವರು ಕುಡಿಯುವುದಿಲ್ಲ. ಹಾಗೆಂದೇ ಅವರನ್ನು ಕೂಡಲೇ ಕೆಳಗೆ ಕರೆಯಲಿಲ್ಲ.”

ಸಾಂತಪ್ಪನ ಸೂಚನೆ ನನ್ನ ಇಂದಿನ ಸ್ಥಿತಿಯಲ್ಲಿ ಕೆಟ್ಟದಲ್ಲ ಅನ್ನಿಸಿ “ವ್ಹಿಸ್ಕಿಯ ಜೊತೆಗೆ ಸೋಡಾ ಹಾಗೂ ಐಸ್ ಸಿಗಬಹುದೆ?” ಎಂದೆನಷ್ಟೆ. ಸಾಂತಪ್ಪ ಕುಣಿದು ಕುಪ್ಪಳಿಸುವ ಹುರುಪಿನಿಂದ ಕೋಣೆ ಹೊರಗೆ ನಡೆದ. ಇದೀಗ ನೋಡಿದ ಸಾಂತಪ್ಪ ಬೆಳಿಗ್ಗೆ ವನಿತಾಳ ಮನೆಯಲ್ಲಿ ನೋಡಿದವನಿಂದ ತೀರ ಬೇರೆಯಾಗಿದ್ದ. ಯಾರಿಗೆ ಗೊತ್ತು. ಅವನ ನಿಜವಾದ ವ್ಯಕ್ತಿತ್ವದ ಪ್ರಕಟಣೆಗೆ ಇಂಥ ವಾತಾವರಣ ಅವಶ್ಯವಾದದ್ದೇನೊ! ನಾನು ಹೀಗೆ ಯೋಚಿಸುತ್ತಿರುವಾಗಲೇ ಹೊರಗೆ ಹೋದಾಗಿನವರ ಇಮ್ಮಡಿ ಉತ್ಸಾಹದಿಂದ ಒಳಗೆ ಬಂದವನು “ಈಗ ಬರುತ್ತದೆ. ನೀನು ಜೊತೆ ಕೂಡಲು ಒಪ್ಪಿದ್ದರಿಂದ ಬಹಳ ಖುಷಿಯಾಯಿತು ಎಂದ.

ಮನೆಯಲ್ಲಿ ಬರೇ ಹೆಂಗಸರೇ ತುಂಬಿರಬಹುದು ಎಂದು ಕಲ್ಪಿಸಿಕೊಂಡ ನನಗೆ ವ್ಹಿಸ್ಕಿಯ ಸರಂಜಾಮನ್ನು ಹೊತ್ತು ಯಾರು ಬರುತ್ತಾರೂ ಎಂದು ಕುತೂಹಲವಾಯಿತು. ಮುಂದಿನ ಕೆಲವೇ ನಿಮಿಷಗಳಲ್ಲಿ ಸುಮಾರು ಹದಿನೈದು ವರುಷಗಳ ಪೋರನೊಬ್ಬ ದೊಡ್ಡ ಟ್ರೇನಲ್ಲಿ ಐಸ್ ಬಕೆಟ್, ನಾಲ್ಕು ಸೋಡಾ ಬಾಟಲಿಗಳನ್ನು, ಎರಡು ಗ್ಲಾಸುಗಳನ್ನು, ಒಂದು ಪ್ಲೇಟ್‌ನಲ್ಲಿ ಹುರಿದ ಗೇರುಬೀಜ, ಇನ್ನೊಂದರಲ್ಲಿ ಹಲಸಿನ ಬಾಳಕ ತೆಗೆದುಕೊಂಡು ಬಂದ. ಸರಂಜಾಮನ್ನು ನೋಡಿ ಕುಮಟೆ ತುಂಬ ಮುಂದುವರಿದಿದೆ ಎಂದುಕೊಂಡೆ. ಟ್ರೇನೊಳಗಿನ ಎಲ್ಲ ವಸ್ತುಗಳನ್ನು ಟೀಪಾಯಿಗೆ ರವಾನಿಸಿದ ಹುಡುಗ ಒಂದೇ ಒಂದು ನಿಮಿಷದ ಮಟ್ಟಿಗೆ ನನ್ನತ್ತ ನೋಡಿ, ಖಾಲಿ ಮಾಡಿದ ಟ್ರೇದೊಡನೆ ಅಲ್ಲಿಂದ ಕಾಲು ಕಿತ್ತ. ಅಡ್ಡಿಯಿಲ್ಲ. ಮನೆಯಲ್ಲಿರುವವರು ಹೆಂಗಸರು ಮಾತ್ರವಲ್ಲ ಹಾಗಾದರೆ, ಎಂದುಕೊಳ್ಳುವ ಹೊತ್ತಿಗೇ-ಅರೇ! ಈ ಹುಡುಗ ಈ ಮನೆಗೆ ಸೇರಿದವನಲ್ಲ. ಈ ಸಂಜೆಯ ಮಟ್ಟಿಗೆ ಹೋಟೆಲ್ಲೊಂದರಿಂದ ಬಾಡಿಗೆಗೆ ತಂದವನಿರಬೇಕು. ಅನ್ನಿಸಿಹೋಯಿತು. ಅಡುಗೆಗೂ ಗಂಡಸೇ ಇದ್ದಲ್ಲಿ ಅವನೂ ಈ ಒಂದು ದಿನದ ಮಾತಿಗೇ ಬಂದವನಿರಬಹುದೆ? ಎಂದು ಊಹಿಸುತ್ತಿರುವಾಗಲೇ ಸಾಂತಪ್ಪ ಮೂಲೆಯೊಳಗಿನ ಕಪಾಟು ಒಂದರೊಳಗಿಂದ ವ್ಹಿಸ್ಕಿಯ ಬಾಟಲಿಯೊಂದನ್ನು ಹೊರತೆಗೆದು ಟೀಪಾಯಿಯ ಮೇಲಿರಿಸಿದ. ನಾವಿಬ್ಬರೂ ನಮ್ಮ ನಮ್ಮ ರೀತಿಯಲ್ಲಿ ನಮ್ಮ ನಡುವೆ ತೆರೆದುಕೊಳ್ಳಲಿದ್ದುದಕ್ಕೆ ಸಿದ್ಧರಾಗುತ್ತಿದ್ದೇವೆ. ಎನ್ನುವ ಅರಿವು ಇಬ್ಬರಿಗೂ ಇದ್ದಹಾಗಿತ್ತು. ವ್ಹಿಸ್ಕಿಯ ಎರಡು ಗುಟುಕುಗಳ ನಂತರ ನಾನೇ ಮಾತಿಗೆ ಚಾಲನೆಯಿತ್ತೆ.

“ಹೇಳು ಸಾಂತಪ್ಪ! ನೇರವಾಗಿ ವಿಷಯಕ್ಕೆ ಬಂದುಬಿಡು. ಅಕ್ಕನಿಂದ ವಿಷಯವೇನೆಂಬುದರ ಸಾಧಾರಣ ಕಲ್ಪನೆ ಬಂದಿದೆ. ಆದರೆ ಇದರಲ್ಲಿ ನಾನು ಏನು ಮಾಡಬೇಕು, ಏನು ಮಾಡಬಹುದು ಇನ್ನೂ ಸ್ಪಷ್ಟವಾಗಿಲ್ಲ. ನಾವಿಲ್ಲಿಗೆ ಬಂದದ್ದು ನಾಲ್ಕು ದಿನಗಳ ಮಾತಿಗೆ, ಅದೂ ತೀರ ಆಕಸ್ಮಿಕವಾಗಿ, ವಿಶ್ರಾಂತಿಯ ನಂತರದ ಈ ಮೊದಲ ದಿನಗಳನ್ನು ನಾನು ಎಲ್ಲೂ ಕಳೆಯಬಹುದಿತ್ತು. ಎಲ್ಲೂ ಹೋಗದೆ ಮುಂಬಯಿಯ ನಮ್ಮ ಮನೆಯಲ್ಲೇ ಉಳಿಯಬಹುದಾಗಿತ್ತು. ನಾವು ಇನ್ನು ಮುಂದೆ ಭೇಟಿಯಾಗುತ್ತೇವೆ ಎನ್ನುವ ಖಾತ್ರಿಯೂ ಇಲ್ಲ. ಆದ್ದರಿಂದಲೇ ಹೇಳುತ್ತೇನೆ. ನಿನ್ನದು ‘ಈಗ ನೇನೇ ಹೇಳು, ಇದರಲ್ಲಿ ನನ್ನ ತಪ್ಪುಂಟೆ?’ ಎಂಬಂಥ ಪ್ರಶ್ನೆಗೆ ಒಯ್ಯುವ ಅಹವಾಲಾದರೆ ಅದರಿಂದೇನೂ ಪ್ರಯೋಜನವಿಲ್ಲ. ಅಥವಾ ‘ಇದೆಲ್ಲದರ ಒಂದು ಬಾಜಿ ನಿನಗೆ ಈಗಾಗಲೇ ಇತರರಿಂದ ಗೊತ್ತಾಗಿದೆ. ಅದಕ್ಕಿರುವ ಇನ್ನೊಂದು ಬಾಜು ಈಗ ನಾನು ತಿಳಿಸುತ್ತೇನೆ’ ಎಂಬಂಥ ಸತ್ಯಾಸತ್ಯಗಳ ಒಣ ಚರ್ಚೆಯಾದಲ್ಲಿ ಅದರಲ್ಲೂ ನನಗೀಗ ಆಸ್ಥೆಯಿಲ್ಲ. ನಿನ್ನ ಕಿರಿಯ ಮಗ ಅವನ ಹುಬ್ಬಳ್ಳಿಯ ಮನೆಯಿಂದ ಕಾಣೆಯಾಗಿದ್ದಾನೆ. ಹೆಂಡತಿ ಮಕ್ಕಳು ಪಾಪ! ಹೆದರಿ ಕಂಗಾಲಾಗಿದ್ದಾರೆ. ನಿನ್ನ ಜನ ಅವರನ್ನು ಅಪಹರಿಸಿದ್ದಾರೆ ಎನ್ನುವ ಗುಮಾನಿ ಅವರಿಗೆಲ್ಲ. ಇದು ದಿಟವೋ ಸುಳ್ಳೋ? ಮುಚ್ಚುಮರೆಯಿಲ್ಲದೇ ಉತ್ತರ ಕೊಡುವುದು ನಿನಗೆ ಶಕ್ಯವಿದ್ದರೆ ಮಾತ್ರ ಅವನ ಬಗ್ಗೆ ಮಾತನಾಡೋಣ. ಇಲ್ಲವಾದರೆ ನಿನ್ನ ಈ ಬಂಗಲೆಯ ಬಗ್ಗೆ ಅದರ ಇದಿರಿನ ಬಗೀಜಾದ ಬಗ್ಗೆ ಮಾತನಾಡುತ್ತ ವ್ಹಿಸ್ಕಿ ಕುಡಿಯೋಣ. ಆಮೇಲೆ ಊಟ ಮುಗಿಸಿದ್ದೇ ನಿನ್ನ ಆದರಾತಿಥ್ಯವನ್ನು ಹೊಗಳಿ ಧನ್ಯವಾದ ಅರ್ಪಿಸಿ ಹೊರಟುಹೋಗುತ್ತೇನೆ.”

ಆಗಲೇ ಸಾಂತಪ್ಪ ಮೊದಲು ಗ್ಲಾಸನ್ನು ಮುಗಿಸಿ ಎರಡನೆಯದಕ್ಕೆ ಕೈ ಹಾಕಿದ್ದ. ನಾನು ಮಾತನಾಡುತ್ತಿದ್ದಾಗ ಒಮ್ಮೆ ಕೂಡ ಕಣ್ಣೆತ್ತಿ ನನ್ನತ್ತ ನೋಡಲಿಲ್ಲ. ಬೇರೆ ಯಾವ ಸಮಯದಲ್ಲೂ ಉದ್ಧಟತನವೆಂದು ತೋರಬಹುದಾದ ನನ್ನ ಮಾತುಗಳು ಈಗಲೂ ಬೇಕಾದ್ದಕ್ಕಿಂತ ನಿಷ್ಠುರವಾದುವೋ ಅನ್ನಿಸಿಯೂ ನನಗೆ ಕೆಡುಕೆನ್ನಿಸಲಿಲ್ಲ. ಅಕ್ಕನಿಂದ ತಿಳಿದದ್ದರ ಹಿನ್ನೆಲೆಯಲ್ಲಿ ಇವನಂಥವನನ್ನು, ಸುಳ್ಳು ಭಾವನಾತ್ಮಕತೆಗೆ ಎಡೆ ಕೊಡದೇ, ನೇರವಾಗಿ ಮುದ್ದೆಗೆ ಎಳೆಯಲು ಬೇರೆ ಉಪಾಯ ಹೊಳೆಯಲಿಲ್ಲ.

“ನನ್ನ ಜೀವನಕ್ಕೆ ನಿಮಗಾರಿಗೂ ಗೊತ್ತಿಲ್ಲದ ಇನ್ನೊಂದು ಬಾಜು ಇದ್ದದ್ದು ಸುಳ್ಳಲ್ಲ ನಾರಾಯಣ!” ಸಾಂತಪ್ಪನ ದನಿಯಲ್ಲಿಯದೇನೋ ನನ್ನನ್ನು ಬಲವಾಗಿ ತಟ್ಟಿತು.

“ಇಷ್ಟೇ, ಅದು ನಿಮಗೆಲ್ಲ ಗೊತ್ತಿದ್ದ ಬಾಜುವಿಗಿಂತ ಒಳ್ಳೆಯದೆಂದು ನಾನು ತಿಳಿದಿಲ್ಲ. ನನ್ನ ಬಗ್ಗೆ ನಿಮಗೆಲ್ಲ ಆಗಿರಬಹುದಾದ ಕಲ್ಪನೆಯನ್ನು ತಿದ್ದಲೂ ನಾನು ನಿನ್ನನ್ನು ಕರೆದಿಲ್ಲ. ನನ್ನ ಆಯುಷ್ಯ ಈ ಹಂತಕ್ಕೆ ಕಾಲಿಟ್ಟಾಗ ಇದೆಲ್ಲ ನಿಷ್ಪ್ರಯೋಜಕ ಎನ್ನುವುದನ್ನು ಬಲ್ಲೆ. ಇದರಲ್ಲಿ ನನ್ನದೇನೂ ತಪ್ಪಿಲ್ಲವೆಂದು ತಿಳಿಯುವುದು ನನಗೆ ಶಕ್ಯವಾಗಿದ್ದರೆ ಇಷ್ಟೆಲ್ಲ ಅನಾಹುತಗಳು ಆಗುತ್ತಿರಲೇ ಇಲ್ಲವೇನೋ. ವಿಚಾರ ಮಾಡಿದಷ್ಟೂ ತಪ್ಪೆಲ್ಲ ನನ್ನೊಬ್ಬನದೇ ಎಂದು ತೋರಬೇಕು. ಅದನ್ನು ಸರಿಪಡಿಸಲು ಮಾಡಿದ ಪ್ರಯತ್ನವೇ ಇನ್ನೊಂದಕ್ಕೆ ದಾರಿ ಮಾಡಿಕೊಡಬೇಕು. ಸೋತೆ, ದಣಿದೆ. ಈಗ ಕಟ್ಟ ಕೊನೆಯ ಪ್ರಯತ್ನವೆಂಬಂತೆ ಹೊಸತೊಂದಕ್ಕೆ ಮನಸ್ಸು ಮಾಡುತ್ತಿರುವ ಹೂತ್ತಿಗೇ ನೀನು ಈ ಊರಿಗೆ ಬರುವ ಸುದ್ದಿ ತಿಳಿಯಿತು. ನಿನ್ನನ್ನು ಕೇಳಿ ಮುಂದುವರಿದರೆ ಹೇಗೆ ಎನ್ನುವ ವಿಚಾರ ಬಂದದ್ದೇ ವನಿತಾಳ ಮನೆಗೆ ಧಾವಿಸಿದ್ದೆ. ಈ ಮೊದಲು ಈ ವಿಚಾರ ಬಂದಿರಲಲ್ಲವೆಂದಲ್ಲ ಪ್ರಯತ್ನ ಮಾಡುವ ಮೊದಲು ಯಾರನ್ನಾದರೂ ಕೇಳೋಣವೆಂದರೆ ಅಂಥವರು ಈ ಊರಲ್ಲಿ ಯಾರು ಸಿಗಬೇಕು? ಎಲ್ಲ ತಲೆಯ ಮೇಲೆ ಕಲ್ಲು ಜಜ್ಜುವವರೇ! ಮೊದಲು ಬಡವನೆಂದು ದೂರವಿರಿಸಿದರು. ಈಗ ಶ್ರೀಮಂತನೆಂದು ಹತ್ತಿರ ಬಾರರು. ನಿನ್ನನ್ನು ಕೇಳಲು ಬಯಸಿದ್ದು ಇಷ್ಟು ಮಾತ್ರ: ನಾನು ಈ ಬಾರಿ ಮಾಡಲು ಹೊರಟಿದ್ದಾದರೂ ಒಳ್ಳೆಯದೊ? ಕೆಟ್ಟದ್ದು ಎಂತ ನಿನ್ನ ಅಭಿಪ್ರಾಯವಾದರೆ ಮರುಮಾತಿಲ್ಲದೇ ಒಪ್ಪಿಕೊಂಡು, ಸುಮ್ಮನಿದ್ದುಬಿಡುತ್ತೇನೆ, ಎಂದು ನಿರ್ಧಾರ ಮಾಡಿದ್ದೆ.”

ಇವನ ನಾಟಕದಲ್ಲಿ ನನ್ನ ಪ್ರವೇಶವಾಗುವ ಮೊದಲೇ ಮತ್ತೇನೋ, ಇವನು ಎಣಿಸದೇ ಇದ್ದದ್ದು ನಡೆದುಹೋಗಿದೆಯೆಂದು ಗೊತ್ತಾಯಿತಾದರೂ ಅದು ಇಂಥಾ ದೊಡ್ಡ ಅನಹುತವಲ್ಲವೆಂದು ಅವನ ದನಿಯೇ ಸಾರಿದ್ದರಿಂದ ನಿರ್ಧಾಸ್ತನಾದೆ. ನನಗಾಗಿ ಪಾನೀಯದ ಎರಡನೇ ಗ್ಲಾಸನ್ನೂ, ತನಗಾಗಿ ಮೂರನೆಯದನ್ನೂ ಸಿದ್ಧಪಡಿಸಿ ನನ್ನ ಗ್ಲಾಸನ್ನು ನನ್ನ ಕೈಗೆ ಒಪ್ಪಿಸುತ್ತ ಹೇಳಿದ:

“ನಾನು ನನ್ನ ಮಗನನ್ನು ಅಪಹರಿಸಿ ತಂದಿಲ್ಲ. ನಾನು ಕರೆ ಕಳಿಸಿದಾಗ ಅವನಾಗಿ ಇಲ್ಲಿಗೆ ಬಂದಿದ್ದಾನೆ. ಮೊನ್ನೆ ಬಂದ ನಾನು ಕರೆಕಳಿಸಿದ ರೀತಿಯೇ ಅಂಥದಾಗಿತ್ತು. ಒಪ್ಪುತ್ತೇನೆ. ‘ಒಮ್ಮೆ ಬಂದು ಅವರನ್ನು ಅವರ ಮನೆಯಲ್ಲೇ ಕಾಣು. ಏನು ಹೇಳುವುದಿದ್ದರೂ ಅವರ ಸಮ್ಮುಖದಲ್ಲಿ ಹೇಳು. ನಿನ್ನ ಬಗ್ಗೆ ಹುಟ್ಟಿಸಿಕೊಂಡ ಭ್ರಮೆಯಾದರೂ ದೂರವಾದೀತು. ಇಲ್ಲವಾದರೆ ಒಂದೇ ಅವರಿಗೆ ಹುಚ್ಚು ಹಿಡಿದೀತು. ಇಲ್ಲವೇ ಆತ್ಮಘಾತ ಮಾಡಿಕೊಂಡರೂ ಮಾಡಿಕೊಂಡಾರು’, ಎಂದು ನನ್ನ ಜನ ಬೆದರಿಸಿದರಂತೆ. ಕೊನೆಗೂ ಬಂದಾಗ ಅಷ್ಟರ ಮಟ್ಟಿಗಾದರೂ ಅಪ್ಪನ ಬಗ್ಗೆ ಕಾಳಜಿಯಾಯಿತಲ್ಲ ಎಂದು ಉಬ್ಬಿಹೋದೆ. ಹೀಗೇ ನೀವು ಇವತ್ತು ಬಂದ ಹೊತ್ತಿಗಿಂತ ತುಸು ಮೊದಲು ಬಂದು ಮುಟ್ಟಿದ. ಹೊರಗಿನ್ನೂ ಬೆಳಕಿತ್ತು ಆಗ. ಅಂದು ಬರುತ್ತಾನೆಂದು ನಿರೀಕ್ಷೆಯಿರಲಿಲ್ಲ. ಆದರೆ ಅಂಥ ನಿರೀಕ್ಷೆಯಲ್ಲಿದ್ದವನ ಹಾಗೆ ಪೋರ್ಚ್‌ನಲ್ಲಿ ಶತಪಥ ಹಾಕುತ್ತಿದ್ದೆ. ಗೇಟಿನಲ್ಲಿ ಚೌಕೀದಾರನನ್ನು ಏನೋ ಕೇಳಿ ಸೀದಾ ಮನೆಯ ಕಡೆ ಬರುತ್ತಿದ್ದುದನ್ನು ನೋಡಿದೆ. ಮನೆಯನ್ನಿನ್ನೂ ಮರೆತಿಲ್ಲ. ಸರಿಯಾಗಿಯೇ ಬರುತ್ತಿದ್ದಾನೆ: ಬಿಳಿಯ ಪೈಜಾಮ, ತಿಳಿ ನೇರಿಲ ಬಣ್ಣದ ಸಾದಾ ಬಟ್ಟೆಯ ಜುಬ್ಬ, ಹೆಗಲಿಗೆ ತೂಗುಬಿಟ್ಟ ಬಗಲುಚೀಲ, ಕಾಲಲ್ಲಿ ಚರ್ಮದ ಚಪ್ಪಲಿ, ನನ್ನ ಹಾಗೇ ಎತ್ತರದ ನಿಲುವು, ಮಗನೆಂದು ಗುರುತು ಹಿಡಿಯುವುದು ಶಕ್ಯವಿರಲಿಲ್ಲ. ನಡುವೆ ಬೈತಲ ತೆಗೆದ ಗುಂಗುರು ಕೂದಲು, ಹುಲುಸಾಗಿ ಬೆಳೆದ ದಾಡಿ ಮೀಸೆ, ಪ್ಲಾಸ್ಟಿಕ್ ಫ್ರೇಮಿನ ಚಷ್ಮಾ. ಹದಿನೈದು ವರ್ಷಗಳಲ್ಲಿ ಎಷ್ಟೊಂದು ಬೆಳೆದುಬಿಟ್ಟಿದ್ದಾನೆ. ಬದಲಾಗಿದ್ದಾನೆ! ನನ್ನಿಂದ ಅನ್ಯಾಯಕ್ಕೆ ಗುರಿಯಾದವನು, ಸಲ್ಲದ ಅಪವಾದಕ್ಕೆ ಈಡಾದವನು_ಇಂಥ ಯಾವ ಪಾಪದ ಭಾವನೆಯೂ ನನ್ನನ್ನು ಆ ಕ್ಷಣದಲ್ಲಿ ಕಾಡಲಿಲ್ಲ. ಹಿಂದೆಂದೂ ಅನುಭವಿಸದ ಕೇವಲ ವಾತ್ಸಲ್ಯ ಭಾವದಿಂದ ಬಂದೆಯಾ? ಬರುತ್ತೀಯೆಂದು ಗೊತ್ತಿತ್ತು. ಬಾ-ಎಂದು ಕೈ ಕುಲುಕಿ ಬರಮಾಡಿಕೊಂಡೆ. ಅವನೂ ತುಸುವೇ ಹಲ್ಲು ಕಾಣಿಸಿ ಸುಂದರವಾಗಿ ಮುಗುಳ್ನಕ್ಕ. ಒಳಗೆ ಬರುತ್ತಲೇ ನಾನು, ‘ಮಾಳಿಗೆಯ ಮೇಲೆ ನೀವು ಮೊದಲು ಅಭ್ಯಾಸಕ್ಕೆ ಕೂರುತ್ತಿದ್ದ ಕೋಣೆಯಲ್ಲೇ ನಿನ್ನ ಇರುವ ವ್ಯವಸ್ಥೆಯಾಗಿದೆ. ಮೇಲೆ ಹೋಗಿ ಡ್ರೆಸ್ಸು ಬದಲಿಸಿ ಬಾ. ಸ್ನಾನವಾಗಬೇಕಿದ್ದರೆ ಇಲ್ಲೇ ಈ ಮಲಗುವ ಕೋಣೆಯ ಬಚ್ಚಲಮನೆಯಲ್ಲೇ ಮಾಡಬಹುದು. ಮನೆ ಮೊದಲು ಇದ್ದ ಹಾಗೇ ಇದೆ’ ಎಂದೆನಷ್ಟೆ. ‘ನಾನು ಈ ಮೊದಲು ಈ ಮನೆಗೆ ಬಂದವನಲ್ಲ. ನೀವೇ ತೋರಿಸಿದರೆ ಒಳ್ಳೆಯದು’ ಎಂದ. ಎಳ್ಳಷ್ಟೂ ವಿಚಲಿತನಾಗದೇ, ನನ್ನ ಗೊಂದಲ ಆರಂಭವಾದದ್ದು ಇಲ್ಲಿಂದಲೇ.”

ನಾವಿಬ್ಬರೂ ಒಂದೇ ಹೊತ್ತಿಗೆ ಬಹಳ ಹೊತ್ತಿನವರೆಗೆ ಕೈ ಹಚ್ಚಿರದ ಗ್ಲಾಸುಗಳಿಗೆ ಕೈ ಹಾಕಿದೆವು. ಅಡ್ಡಿಯಿಲ್ಲ. ಹುಡುಗ ಸುರಕ್ಷಿತವಾಗಿದ್ದಾನೆ. ಅಪ್ಪನ ಮನೆಯಲ್ಲೇ ಇದ್ದಾನೆಂದು ಗೊತ್ತಾಗಿ ಮನಸ್ಸಿಗೆ ನಿರಂಬಳವಾಯಿತು. ಅಪ್ಪ-ಮಗ ಇಬ್ಬರನ್ನೂ ಜೊತೆಯಾಗಿ ಕಾಣುವ ಯೋಗಾಯೋಗದ ಬಗ್ಗೆ ಚಿಂತಿಸುತ್ತಿದ್ದಾಗ ಸಾಂತಪ್ಪ ವಿಷಯ ಬದಲಿಸುವ ಧಾಟಿಯಲ್ಲಿ ಅರ್ಧಕ್ಕೇ ಬಿಟ್ಟ ಮಾತಿಗೆ ಹೀತಿರುಗಿದ_

“ಅವನು ಮನೆಯಲ್ಲಿ ಹೇಳಿ ಬಂದಿಲ್ಲವೆಂದು ಗೊತ್ತಿರಲಿಲ್ಲ.ಇವತ್ತು ಬೆಳಿಗ್ಗೆ ಹಿಂತಿರುಗಿ ಹೋಗಲು ಹೊರಟು ನಿಂತಾಗ, ನೀನಿಂದು ಊಟಕ್ಕೆ ಬರುವ ಸುದ್ದಿ ಕೊಟ್ಟು ನೀನು ಯಾರೆಂದು ತಿಳಿಸಿದ ಮೇಲೇ ಈ ಒಂದು ದಿನ ಹೆಚ್ಚಿಗೆ ನಿಲ್ಲಲು ಒಪ್ಪಿಕೊಂಡ.ಮನೆಯಲ್ಲಿ ಹೇಳಿ ಬಂದಿಲ್ಲವೆಂದು ಗೊತ್ತಾದದ್ದು ಆವಾಗ, ನಾನು ಕೂಡಲೇ ಹುಬ್ಬಳ್ಳಿಯ ಮನೆಗೆ ತಂತಿ ಕೊಟ್ಟು ತಿಳಿಸಿದ್ದೇನೆ. ನಂಬು ನಾರಾಯಣಾ! ಈ ಮೂರು ದಿನ ಅವನ ಸಹವಾಸದಲ್ಲಿ ಕಳೆದ ಕ್ಷಣಗಳು ನನ್ನ ಬದುಕಿನ ಅತ್ಯಂತ ಸುಖದ ಕ್ಷಣಗಳಲ್ಲಿ ಎಣಿಸುವಂಥವು.”

ಸಾಂತಪ್ಪನ ಮಾತು ಮೊದಲಿನ ಉದ್ವೇಗವನ್ನು ಕಳೆದುಕೊಂಡು ಸ್ಥಿಮಿತಕ್ಕೆ ಬಂದಿತ್ತಾದರೂ ಆಳದಲ್ಲೆಲ್ಲೋ ಪ್ರಚಂಡವಾಗಿ ನಿಗ್ರಹಿಸಿದ ಬಿಕ್ಕಳಿಕೆ ಕೇಳಿಸಿದಂತಾಯಿತು. ಸಾಂತಪ್ಪನೇ ಹೇಳಲಿ. ಹೇಳುವ ಮನಸ್ಸಾದರೆ. ನಾನೇ ನಡೆದದ್ದನ್ನು ಊಹಿಸುವ ಪ್ರಯತ್ನ ಮಾಡಲಾರೆ. ಹೇಳೆಂದು ಒತ್ತಾಯಿಸಲೂ ಆರೆ-ಎಂದು ನಿರ್ಧಾರ ಮಾಡಿ ಅವನು ಮುಂದುವರಿಯುವುದನ್ನು ಕಾದೆ.

“ತಮಾಷೆ ನೋಡು! ಯೋಜಿಸಿಕೊಂಡ ಎಲ್ಲ ಘಟನೆಗಳೂ ನಡೆದುವು: ಯೋಜಿಸಿದ ಕ್ರಮದಲ್ಲಿ ನಡೆಯಲಿಲ್ಲ. ಹಾಗಾಗಿ ಹಿಂದೆ ಆದಹಾಗೆ ಈ ಬಾರಿಯೂ ಆಗಬಾರದ್ದೆಲ್ಲ ಆಯಿತು ಹೊರತು ಆಗಬೇಕಾದದ್ದು ಆಗಲೇ ಇಲ್ಲ. ಉದಾಹರಣೆಗೆ, ನೀನು ಈ ಊರಿಗೆ ಬರುತ್ತೀಯೆಂದು ತಿಳಿದಕೂಡಲೇ ನೀನು ಇಲ್ಲಿದ್ದಾಗಲೇ ಅವನನ್ನೊಮ್ಮೆ ಕರೆಯಿಸುವ ಮನಸ್ಸಾಯಿತು. ಉದ್ದೇಶ: ನಮ್ಮಿಬ್ಬರ ನಡುವೆ ಇಷ್ಟು ದಪ್ಪ ಗೋಡೆ ಎದ್ದು ನಿಲ್ಲಲು ಕಾರಣವಾಗಿರಬಹುದಾದ ಒಂದು ಘಟನೆಯನ್ನು ನಿನ್ನಂಥ-ಬದುಕಿನ ಬಗ್ಗೆ ಅಪಾರ ತಿಳುವಳಿಕೆ ಉಳ್ಳವನ-ಅನುಭವ ಉಳ್ಳವನ ಸಮಕ್ಷಮ ಅವನಿಗೆ ನಿರೂಪಿಸುವುದು. ಹೇಳಿ ಕಳಿಸಿದರೆ ಬರದೇ ಹೋಗಬಹುದು. ಬಂದರೂ ಕೂಡಲೇ ಬರಲಾರ ಎಂದು ತಿಳಿದು ನೀನು ಬರುವ ನಾಲ್ಕು ದಿನ ಮೊದಲೇ ಕರೆಕಳಿಸಿದೆವು. ಅವನು ಕೂಡಲೇ ಬಂದನಷ್ಟೇ ಅಲ್ಲ. ನೀನು ನಮ್ಮಲ್ಲಿಗೆ ಬರುವ ಮೊದಲೇ ತಿರುಗಿ ಹೋಗಲು ಹೊರಟೂ ನಿಂತ! ಹೆಚ್ಚೆಂದರೆ ಒಂದು ದಿನದ ಮಾತಿಗೆ ಬರುತ್ತಾನೆಂದು ಲೆಕ್ಕ ಹಾಕಿದ್ದೆ. ಅವನಾಗಿಯೇ ಎರಡು ದಿನ ನಿಲ್ಲಲು ಸಿದ್ಧನಾಗಿ ಬಂದ. ಪರಿಣಾಮ: ನಮ್ಮಿಬ್ಬರ ಸಂಬಂಧ ಕೆಡಲು ಕಾರಣವಾದ ತಪ್ಪು ತಿಳುವಳಿಕೆ ದೂರವಾದಮೇಲೆ-ಹೀಗೇ ಮಾತುಮಾತಿನಲ್ಲಿ ತೀರ ಸಹಜವಾಗಿ-ಬರಬೇಕಾಗಿದ್ದ ಆಸ್ತಿಯ ಹಿಸ್ಸೆಗೆ ಸಂಬಂಧಪಟ್ಟ ಮಾತು ಎಲ್ಲಕ್ಕಿಂತ ಮೊದಲು ಬಂದು ತನ್ನನ್ನು ಕೆರಳಿಸಿದ ಉದ್ದೇಶವೇ ಇದಾಗಿತ್ತು. ಎನ್ನುವ ಕಲ್ಪನೆ ಅವನಿಗೆ ಆದದ್ದು. ಪರಿಣಾಮ: ಯಾವ ಮಾತನ್ನು ಆಡಲು ನೀವಿಬ್ಬರೂ ನನ್ನ ಸಮ್ಮುಖದಲ್ಲಿ ಇರಬೇಕೆಂದು ಬಯಸಿದ್ದೆನೋ ಅದನ್ನೀಗ ಆಡಲು ಬಾರದ, ಆಡಿದರೂ ಯಾವ ಪ್ರಯೋಜನವೂ ಆಗಲಾರದ ಪರಿಸ್ಥಿತಿಯನ್ನು ಹುಟ್ಟಿಸಿಬಿಟ್ಟದ್ದು! ಸುತ್ತು ಬಳಸು ಮಾತು ಬೇಡ. ನೇರವಾಗಿ ಮುದ್ದೆಗೇ ಬಂದುಬಿಡುತ್ತೇನೆ. ಅದೆಲ್ಲ ನಡೆದ ಕ್ರಮದಲ್ಲಲ್ಲ. ನಾನೀಗ ಸಿಲುಕಿಕೊಂಡ ಪರಿಸ್ಥಿತಿಯನ್ನು ನಿನಗೆ ಸ್ಪಷ್ಟವಾಗಿಸುವ ಕ್ರಮದಲ್ಲಿ.”

ಸಾಂತಪ್ಪ ಐನ್ ಮುದ್ದೆಗೆ ಬರುತ್ತಿದ್ದಾಗ ಅವನನ್ನು ತಡೆಯುವ ಮನಸ್ಸಾಗಲಿಲ್ಲ. ಅದೇ ಹೊತ್ತಿಗೆ ಮಾಳಿಗೆಯ ಮೇಲೆ ಕೂತವನು ಈಗಾಗಲೇ ಬೇಸರಗೊಂಡಿರಲಾರನಷ್ಟೇ ಎಂದು ಆತಂಕವಾಯಿತು. ನಾನು ನನ್ನ ಆತಂಕವನ್ನು ಆಡಿ ತೋರಿಸಿದೆ.

“ಹೆದರಬೇಡ. ಅವನೇ ಹೇಳಿದ್ದಾನೆ. ‘ನನ್ನ ಬಗ್ಗೆ ಕಾಳಜಿ ಮಾಡಬೇಡಿ. ಬೇಸರ ಬಂದರೆ ಹೀಗೇ ಸಣ್ಣ ಬಂದರಿನವರೆಗೆ ತಿರುಗಾಡಿ ಬರುತ್ತೇನೆ. ಊಟದ ಹೊತ್ತಿಗೆ ನಿಮ್ಮನ್ನು ಕೂಡಿಕೊಳ್ಳುತ್ತೇನೆ’ ಎಂದು. ಅವನೀಗ ರೂಮಿನಲ್ಲಿ ಇದ್ದಿರಲಿಕ್ಕೂ ಇಲ್ಲ. ತುಂಬಾ ಸಂಕೋಚದ ಹುಡುಗ” ಎಂದು ಸಾಂತಪ್ಪ ಸಂತವಿಸಿದಾಗ ನನಗೆ ಹಾಯೆನಿಸಿತು. ಆಗ ನಾವು ಗೇಟು ಹತ್ತಿರ ಹೋಗುವಾಗ ಹೊರಬಿದ್ದವನು ಇವನೇ ಇರಲಾರನಷ್ಟೆ! ನಾನವನನ್ನು ಸರಿಯಾಗಿ ನೋಡಿರಲೇ ಇಲ್ಲ. ಸಾಂತಪ್ಪನಿಗೆ ನನ್ನ ಅನುಮಾನ ತಿಳಿಸಲು ಹೋಗಲಿಲ್ಲ.

“ನೆನಪಿದೆಯೆ? ಅವನು ಮನೆಯ ಬಗ್ಗೆ ಮಾತನಾಡುತ್ತ ಈ ಮನೆಯ ಪರಿಚಯ ತನಗೆ ಇಲ್ಲವೆಂದ ಎಂದು ನಾನು ಹೇಳಿದ್ದು? ನಾನಾಗ ಗೊಂದಲದಲ್ಲಿ ಬಿದ್ದೆ. ಅದರ ಬಗ್ಗೆ ಹೆಚ್ಚು ಮಾತಾಡಲು ಹೋದರೆ ತಾನು ನನ್ನ ಮಗನಲ್ಲವೆಂದು ಈಗಲೇ ಸಾರಬಹುದೋ ಎಂದು ಭಯವಾಯಿತು. ಆಸ್ತಿಯ ಪಾಲಿನ ಬಗ್ಗೆ ಮಾತನಾಡುವುದಿದ್ದರೆ ಅವನು ಹಾಗೆ ಸಾರುವ ಮೊದಲೇ ಮಾತನಾಡಬೇಕು. ಆಮೇಲಾದರೆ ಅವನನ್ನು ಸಲ್ಲದ ಮುಜುಗುರಕ್ಕೆ ಒಳಪಡಿಸಿದಂತಾದೀತು. ಅಲ್ಲವೆ? ಸ್ವಲ್ಪದರಲ್ಲಿ, ನಾನು ಗಳಿಸಿದ್ದೆಲ್ಲವನ್ನೂ-ಸ್ಥಿರಚರ ಹಿಡಿದು ಕೆಲವು ಲಕ್ಷಗಳಾಗಬಹುದಾದ ಆಸ್ತಿಯನ್ನು-ಮೂವರೂ ಅಣ್ಣತಮ್ಮಂದಿರಲ್ಲಿ ಹಂಚಿಕೊಟ್ಟು ನಾನು ಈಗಿನ ದಂಧೆಯಿಂದ ನಿವೃತ್ತನಾಗಿ ಹೀಗೇ ದಿಕ್ಕು ಗುರಿಯಿಲ್ಲದ ದೇಶಾಟನೆಗೆ ಹೋಗಬೇಕು ಎಂಬಂಥ ಹುಚ್ಚು ವಿಚಾರ ಅದೆಷ್ಟು ಬಾರಿ ಮನಸ್ಸನ್ನು ತಟ್ಟಿ ಹೋದದ್ದುಂಟು. ಹಿರಿಯ ಹುಡುಗರಂತೂ ಒಮ್ಮೆ ದೇಶ ಬಿಟ್ಟು ಹೋದಮೇಲೆ ನನ್ನೊಡನೆ ಯಾವ ಸಂಪರ್ಕವನ್ನೂ ಇಟ್ಟುಕೊಂಡವರಲ್ಲ. ಅವರು ಇಲ್ಲಿದ್ದಾಗಲೂ ಅಷ್ಟೇ. ನನ್ನನ್ನು ಅಷ್ಟಾಗಿ ಹಚ್ಚಿಕೊಂಡವರೇ ಅಲ್ಲ. ಮುಚ್ಚುಮರೆಯಿಲ್ಲದೇ ಹೇಳುವುದಾದರೆ ತುಂಬಾ ಸ್ವಾರ್ಥಿಗಳು. ಇಲ್ಲಿರುವ ತನಕ ನನ್ನನ್ನು ಭರಪೂರ ಬಳಸಿಕೊಂಡರು. ಹಂಚಿಕೆಯ ವಿಚಾರವನ್ನು ಸಧ್ಯಕ್ಕಾದರೂ ಬಿಟ್ಟುಕೊಟ್ಟು ಈಗ ಕಿರಿಯ ಮಗನನ್ನೇ ನನ್ನ ದಂಧೆಯಲ್ಲಿ ಸೇರಿಸಿಕೊಂಡರೆ ಹೇಗೆ? ಮೊದಲಲ್ಲೇ ಅನುಭವ ಇರಬೇಕೆಂದಿಲ್ಲ… ನಷ್ಟ ಸಹಿಸುವ ಹಿಮ್ಮತ್ತಿರಬೇಕು. ಹಣ ತೊಡಗಿಸುವ ಖುಬಿ ಗೊತ್ತಿರಬೇಕು. ಎರಡನ್ನೂ ನಾನು ಕಲಿಸಬಲ್ಲೆ. ಉಳಿದದ್ದಕ್ಕೆಲ್ಲ ನುರಿತ ನೌಕರರಿದ್ದಾರೆ. ಮೇಲಿನ ಮಾಳಿಗೆಯೇ ನಮ್ಮ ಆಫೀಸು. ಈ ಮೂರು ದಿನ ಎಲ್ಲರಿಗೂ ಸೂಟಿ ಕೊಟ್ಟಿದ್ದೇನೆ. ಮಾತನಾಡಲು ನಾವಿಬ್ಬರೂ ಇದೇ ಕೋಣೆಯಲ್ಲಿ ಸೇರುತ್ತಿದ್ದೆವು. ಇದೇ ಸೋಫಾದಲ್ಲಿ ಕೂರುತ್ತಿದ್ದೆವು. ನಾನು ಇಲ್ಲಿ, ಈಗ ಕೂತಲ್ಲಿ. ಅವನು ಅಲ್ಲಿ ನನಗೆ ಸಮ್ಮುಖವಾಗಿ, ನಂಬುತ್ತೀಯಾ? ಬಾಯಿ ತೆರೆದಾಗ ನನ್ನ ಮಾತು ಆರಂಭವಾದದ್ದು ಆಸ್ತಿಯ ಹಿಸ್ಸೆಗೆ ಸಂಬಂಧಪಟ್ಟ ಯೋಚನೆಯಿಂದ? ಪೀಠಿಕೆಯ ಮೊದಲ ವಾಕ್ಯಗಳನ್ನು ಕೇಳಿದ್ದೇ ತುಂಬಾ ಖುಬಿಯಿಂದ ನನಗೆ ತಡೆಯುವಂತೆ ಸನ್ನೆ ಮಾಡಿದ.

“ನನಗೆ ಅರ್ಥವಾಯಿತು. ನೀವು ಈಗ ಏನು ಹೇಳಲು ಹೊರಟಿದ್ದೀರೋ ಅದರ ಅಸ್ಪಷ್ಟ ಸೂಚನೆಯನ್ನು ನನ್ನನ್ನು ಕರೆಯಲು ಬಂದ ನಿಮ್ಮ ಜನರೇ ಕೊಟ್ಟಿದ್ದರು. ಆಸ್ತಿಪಾಸ್ತಿಯ ಅಂದಾಜು ಕಲ್ಪನೆಯನ್ನು ಕೂಡ ಅವರೇ ನಿಮ್ಮ ಬಗ್ಗೆ ಹೇಳಿದ ಅಷ್ಟು-ಇಷ್ಟರಿಂದಲೇ. ಚಿಕ್ಕಂದಿನಲ್ಲೇ ಓಡಿಹೋದ ನಿಮ್ಮ ಮಗನ ಸಲುವಾಗಿ ನೀವು ಪಡುತ್ತಿದ್ದ ಯಾತನೆಯನ್ನು ಸ್ವಲ್ಪವಾದರೂ ಊಹಿಸಬಲ್ಲೆ ಸಣ್ಣಬಾಯಲ್ಲಿ ದೊಡ್ಡ ಮಾತು ಎಂದು ನೀವು ತಿಳಿಯದಿದ್ದರೆ ಮಾತ್ರ ಹೇಳುತ್ತೇನೆ. ನಿಮ್ಮ ಆ ಮಗ ಒಂದಿಲ್ಲೊಂದು ದಿನ ಬಂದೇ ಬರುತ್ತಾನೆ. ಅವನಿಗಾಗಿ ಕಾಯಿರಿ. ಆದರೆ ನಾನು ಓಡಿಹೋದ ಆ ಹುಡುಗನಲ್ಲ ಎಂಬುದನ್ನು ನಂಬಿರಿ. ನಾನೇ ಆ ಹುಡುಗನೆಂದು ಹೇಳಿ ಯಾರೋ ನಿಮ್ಮನ್ನು ಮೊದಲಿನಿಂದಲೂ ತಪ್ಪು ಹಾದಿಯಲ್ಲಿರಿಸಿದ್ದಾರೆ’ ಎಂದ.

“ಅವನ ಶಾಂತ, ಗಂಭೀರ, ಆತ್ಮವಿಶ್ವಾಸ ತುಂಬಿದ ಮಾತನ್ನು ಕೇಳುತ್ತಿದ್ದಂತೆ ನಾನು ನನ್ನ ಕಣ್ಣಿನಲ್ಲೇ ಕುಗ್ಗುತ್ತ ಹೋದೆ. ಇದೇ ಕೋಣೆಯಲ್ಲಿ ಕುಳಿತಿದ್ದೆವು ಅಂದಿದ್ದೆನಲ್ಲ. ಇದು ಮೊದಲು ನಮ್ಮ ಶಯ್ಯಾಗೃಹವಾಗಿತ್ತು. ನನ್ನ ಹೆಂಡತಿ ಬದುಕಿದ್ದಾಗ, ಆತ ಸಣ್ಣವನಿದ್ದಾಗ ಇಬ್ಬರೂ ನನ್ನ ದುಷ್ಟ ಕೈಗಳಿಂದ ಯಾತನೆ ಪಟ್ಟಿದ್ದು ಇದೇ ಕೋಣೆಯಲ್ಲಾಗಿತ್ತು. ಹಣದ ಅಮಿಷಕ್ಕೆ ಬಗ್ಗಲಿಲ್ಲ. ಈ ಕೋಣೆ ಕೆಣಕುತ್ತಿದ್ದ ನೆನಪುಗಳಿಗೆ ವಿಚಲಿತನಾಗಲಿಲ್ಲ. ಮಾತನಾಡುತ್ತಿದ್ದ ಹುಡುಗ ಕೂತಲ್ಲೇ ಬೆಳೆಯುತ್ತ ನಡೆದಿದ್ದ. ಕೇಳುತ್ತಿದ್ದ ನಾನೇ ಕುಬ್ಜನಾದೆ.

“ನಾನೊಡ್ಡಿದ ಹಣದ ಪ್ರಲೋಭನೆಗೆ ಪ್ರತಿಕ್ರಿಯೆಯೆನ್ನುವಂತೆ, ‘ನಾನು ನನ್ನ ಹೆಂಡತಿ ನಮ್ಮ ಚಿಕ್ಕ ಸಂಸಾರಕ್ಕೆ ಸಾಕಾಗುವಷ್ಟು ಗಳಿಸುತ್ತೇವೆ. ಸುಖವಾಗಿ ಬಾಳುತ್ತಿದ್ದೇವೆ. ಬಾಳಬೇಕು ಎನ್ನುವ ಹುಮ್ಮಸ್ಸಿದೆ’ ಎಂದ. ಮುಂದೆ ತನ್ನ ಬಾಲ್ಯದ ಬಗ್ಗೆ, ಅಪ್ಪ-ಅಮ್ಮರ ಬಗ್ಗೆ ಎಷ್ಟೊಂದು ಸಣ್ಣ ಸಣ್ಣ ವಿವರಗಳನ್ನು ಕೊಟ್ಟನೆಂದರೆ ಅವನನ್ನು ನಂಬದೇ ಇರುವುದು ಶಕ್ಯವೇ ಇರಲಿಲ್ಲ. ಈಗ ಅನ್ನಿಸುತ್ತಿದೆ. ಬಹುಶಃ ಅವನು ತನಗೆ ದಕ್ಕದೇ ಹೋದ ಬಾಲ್ಯವನ್ನು, ತಂದೆ-ತಾಯಿಗಳಿಂದ ಪಡೆಯದೇ ಹೋದ ಸುಖವನ್ನು ವರ್ಣಿಸುತ್ತಿದ್ದನೇನೋ! ಆಗ ಮಾತ್ರ ಅವನು ಮಾತನಾಡುತ್ತಿದ್ದ ರೀತಿಯಿಂದ ನನಗೆ ಎಷ್ಟೊಂದು ಮೆಚ್ಚುಗೆಯಾದನೆಂದರೆ ಆತ್ಮೀಯನಾದನೆಂದರೆ ಅವನು ನನ್ನ ಮಗನೇ ಆಗಿರಬೇಕೆಂಬ ಹಠ ನನ್ನಿಂದ ಹೊರಟುಹೋಗುತ್ತ ನಾನು ಒಳಗೊಳಗೇ ಮೆದುವಾಗತೊಡಗಿದೆ.

“ಅಂಥ ಹೊತ್ತಿಗೇ ಅವನಾಡಿದ ಮಾತು ನನ್ನನ್ನು ದಂಗುಬಡಿಸಿತು. ‘ಮೇಲಾಗಿ ನಾನು ನಿಮ್ಮ ಮಗನೇ ಆಗಿರಬೇಕೆಂಬ ಆಗ್ರಹ ಯಾಕೆ? ಈ ಆಗ್ರಹ ಕೆಟ್ಟ ಮೋಹದಲ್ಲಿ ಹುಟ್ಟಿರುವಂಥದ್ದು ಎಂದು ತೋರುವುದಿಲ್ಲವೆ? ನೀವು ನನಗಿಂತ ಬಹಳ ಹಿರಿಯರು. ಉಪದೇಶ ಮಾಡುವುದುಳಿಯಲಿ, ಅಂಥದ್ದರ ಛಾಯೆಯುಳ್ಳ ಮಾತನ್ನು ಕೂಡ ನಾನು ಆಡಕೂಡದು. ಆದರೆ ನನ್ನ ಮನಸ್ಸಿನ ಸ್ವಾಸ್ಥ್ಯದ ಸಲುವಾಗಿ ನಿಮ್ಮನ್ನು ಬೇಡಿಕೊಳ್ಳುವ ಹಕ್ಕಾದರೂ ನನಗಿದೆಯಲ್ಲವೆ? ಈ ಬಾರಿ ಕರೆಕಳಿಸಿದಾಗ, ನಾನು ಬರಲು ನಿರಾಕರಿಸಿದರೆ ನಿಮಗೆ ಹುಚ್ಚೇ ಹಿಡಿಯಬಹುದು ಎಂದರು ನಿಮ್ಮ ಜನ. ನಾನು ನಿಮ್ಮ ಮಗನು ಹೌದೋ ಅಲ್ಲವೋ ಎಂದು ಖಾತ್ರಿ ಮಾಡಿಕೊಳ್ಳುವ ಪ್ರಯತ್ನವನ್ನು ನೀವು ಇದೇ ಪ್ರಕಾರ ಜಾರಿ ಇಟ್ಟರೆ ನನಗೇ ಹುಚ್ಚು ಹಿಡಿಯಬಹುದೆಂಬ ಭಯವಾಯಿತು. ಹಾಗೆಂದೇ ಇದೆಲ್ಲದರ ಸೋಕ್ಷ-ಮೋಕ್ಷವಾಗಲೇ ಬೇಕು. ಇಬ್ಬರಿಗೂ ಪರಸ್ಪರರಿಂದ ಬಿಡುಗಡೆಯಾಗಬೇಕು ಎಂದು ನಿರ್ಧಾರ ಮಾಡಿ ಹೊರಟು ಬಂದೆ. ನನ್ನ ಹೆಂಡತಿ ಇದಕ್ಕೆ ಅಡ್ಡ ಬರುತ್ತಿರಲಿಲ್ಲ. ತುಂಬಾ ನರ್ವಸ್ ಸ್ವಭಾವದವಳು. ನಿಮ್ಮ ಜನವೂ ಅವಳಿಗೆ ನಿಮ್ಮ ಬಗ್ಗೆ ಒಳ್ಳೇ ಅಭಿಪ್ರಾಯವಾಗುವ ಹಾಗೆ ನಡೆದುಕೊಳ್ಳಲಿಲ್ಲ. ಹಾಗೆಂದೇ ಅವಳಿಗೆ ತಿಳಿಸದೇ ಸೀದಾ ಆಫೀಸಿನಿಂದಲೇ ಹೊರಟುಬಂದಿದ್ದೇನೆ. ಸಲ್ಲದ ಊಹಾಪೋಹ ನಡೆಯುತ್ತದೆಯೆಂದು ಗೊತ್ತಿದ್ದೂ ಆಫೀಸಿಗೆ ರಜೆ ಹಾಕಲಿಲ್ಲ. ನಿಮಗೆ ಬೇಕು ಅನ್ನಿಸಿದರೆ ಎರಡು ದಿನ ನಿಮ್ಮ ಜೊತೆಗಿರುತ್ತೇನೆ. ಬೇಕಾದಷ್ಟು ಪ್ರಶ್ನೆ ಕೇಳಿರಿ. ನನಗೆ ಬೇಸರವಿಲ್ಲ. ನಿಮ್ಮ ಸಂಶಯ ದೂರವಾಗಿ ಕಳೆದುಕೊಂಡ ಶಾಂತಿಯನ್ನು ನೀವು ದೊರಕಿಸುವುದು ನನಗೆ ಮುಖ್ಯ. ಯಾಕೆಂದರೆ ನನ್ನ ಮನಶ್ಯಾಂತಿ ನಿಮ್ಮದಕ್ಕೆ ಕಟ್ಟಿಬಿದ್ದಿದೆ.”

ಸಾಂತಪ್ಪನ ನಿರೂಪಣೆಯ ಕೊನೆಕೊನೆಯ ಮಾತುಗಳು ತೀರಾ ಕೆಳ ದನಿಯಲ್ಲಿ ಆಡಿದ ಪಿಸುಮಾತಿನಂತೆ ಕೇಳಿಸಿದವು. ಗ್ರಹಿಸಲು ಅವನತ್ತ ಬಾಗ ಬೇಕಾಯಿತು. ಬಹಳ ಹೊತ್ತಿನವರೆಗೆ ಪಾನೀಯದ ಗ್ಲಾಸಿಗೆ ಕೈ ಹಚ್ಚಿರದವನು ಅದನ್ನು ಕೈಗೆತ್ತಿಕೊಂಡು ಸೀಪುತ್ತಾ ಮೌನವಾದ. ನಾನೂ ಅವನನ್ನು ಮಾತನಾಡಿಸಲು ಹೋಗಲಿಲ್ಲ. ಬಂದವನನ್ನು ಈತ ಮೆಚ್ಚಿಕೊಂಡಿದ್ದಾನೆ. ಹಾಗೆ ಮೆಚ್ಚಿಕೊಳ್ಳಲು, ಬಂದವನು ಮಗನೇ ಆಗಿರಬೇಕೆಂದಿಲ್ಲ ಎಂಬುದನ್ನು ತಾತ್ಪೂರ್ತಿಕವಾಗಿಯಾದರೂ ಮನಗಂಡಿದ್ದಾನೆ. ಆದರೆ ಬಂದವನು ಮಗನಲ್ಲ ಎಂಬುದರ ಬಗೆಗೇ ಖಾತ್ರಿಯಿಲ್ಲ. ಅದು ಇಲ್ಲದೇ ಇವನಿಗೆ ಬಿಡುಗಡೆ ಶಕ್ಯವೆ? ಬಂದವನು ತುಂಬಾ ಸಂತ ರೀತಿಯಲ್ಲಿ ಹೇಳಿದ್ದೆಂದು ಅರುಹುವಾಗಿನ ಇವನ ಧಾಟಿ ಉದ್ವೇಗಪೂರ್ಣವಾದುದಾಗಿತ್ತು. ಅವನು ಸಿಲುಕಿಕೊಂಡ ಪರಿಸ್ಥಿತಿಯ ಬಗ್ಗೆ ನನಗೆ ಕೆಡುಕೆನ್ನಿಸಿತು.

ನೇರವಾಗಿ ಮುದ್ದೆಗೇ ಬರುತ್ತೇನೆಂದು ಹೇಳಿ ಬಹಳ ಹೊತ್ತಾದರೂ ಅದಕ್ಕೆ ಬರುವ ಯಾವ ಲಕ್ಷಣವೂ ತೋರಲಿಲ್ಲ. ನಾನೂ ನೆನಪು ಮಾಡಿ ಕೊಡಲು ಹೋಗಲಿಲ್ಲ. ನಮ್ಮಿಬ್ಬರಿಗೂ ಹೊಸತಾಗಿ ಪಾನೀಯವನ್ನು ತಯಾರಿಸುತ್ತ “ಇದು ಮುಗಿದ ಕೂಡಲೇ ಅವನನ್ನು ಕೆಳಗೆ ಕರೆಸೋಣ. ಸವಾಲು ಅವನು ನನ್ನ ಮಗನೋ ಅಲ್ಲವೋ ಎನ್ನುವುದಲ್ಲ ನಾರಾಯಣ! ಅವನು ಮಗನಲ್ಲವೆಂದು ನಂಬಲು ನನಗೇನು ಹುಚ್ಚು ಹಿಡಿದಿದೆಯೇ? ಅವನೂ ನನ್ನನ್ನು ಹಾಗೆ ನಂಬಿಸಲು ಬಂದಿಲ್ಲ. “ನೀನು ನನ್ನ ಅಪ್ಪನೆಂದು ಗೊತ್ತಿದ್ದೂ ಅಪ್ಪನೆಂದು ಗುರುತಿಸಲು ನಾನು ಸಿದ್ಧನಿಲ್ಲ’ ಎಂಬುದನ್ನೇ ಬೇರೆ ರೀತಿಯಲ್ಲಿ, ಆದರೆ ಅತ್ಯಂತ ಸೂಕ್ಷವಾಗಿ, ನನ್ನ ಮನಸ್ಸಿಗೆ ನೋವಾಗದ ಹಾಗೆ ತಿಳಿಸಲು ಬಂದಿದ್ದಾನೆ. ಇದರಲ್ಲಿ ಹುಡುಗನ ತಪ್ಪಿಲ್ಲ. ಈ ತಣ್ಣಗಿನ ನಿರಾಕರಣೆಗೆ ಕಾರಣವಾಗಿರಬಹುದಾದ ತಪ್ಪು ತಿಳುವಳಿಕೆಯನ್ನು ದೂರಮಾಡಲೆಂದೇ ಕರೆಸಿಯೂ ದೂರ ಮಾಡದೇ ಹೋದೆ. ನನ್ನ ಇಡೀ ಆಯುಷ್ಯವನ್ನು ಹಾಳುಮಾಡಿದ ಮಹಾ ಭಯಂಕರ ಗುಟ್ಟನ್ನು ಅವನೆದುರು ಬಯಲು ಮಾಡಲು ಬಯಸಿದಾಗ ಅಡ್ಡ ಬಂದದ್ದೇನು? ಈಗಲೂ ಗೊತ್ತಿಲ್ಲ. ನಾನೂ ಎಂಥ ದಡ್ಡ ನೋಡು! ಅಪ್ಪನ ಶ್ರೀಮಂತಿಕೆಯ ವಿರುದ್ಧ ಬಂಡೆದ್ದ ಹುಡುಗನ ಎದುರು ಎಲ್ಲ ಬಿಟ್ಟು ಆಸ್ತಿಯಿಂದ ಮಾತು ಶುರು ಮಾಡಿದರೆ ಮತ್ತೇನಾದೀತು!”

ವಾಸುದೇವನ ಆಗಮನಕ್ಕೆ ಸಾಂತಪ್ಪ ಹಚ್ಚಿದ ಅರ್ಥ ನನಗೆ ಈ ಮೊದಲು ಹೊಳೆದಿರಲಿಲ್ಲ. ಆ ಅರ್ಥದ ಹಾಗೇ ಅದನ್ನು ನನಗೆ ಅರುಹುವಾಗಿನ ಅವನ ಧಾಟಿ ಎಲ್ಲ ಹೊಯ್ದಾಟ ನಿಂತು ಸ್ವಚ್ಛವಾದ ತೀರ್ಮಾನಕ್ಕೆ ಬಂದವನ ನಿಶ್ಚಯದ ಧಾಟಿ ನನಗೆ ಸಮಾಧಾನ ಕೊಟ್ಟಿತು. ಅದೇ ಸಮಯಕ್ಕೆ ವಾಸುದೇವನಿಗೆ ನನ್ನ ಸಮಕ್ಷಮ ನಿರೂಪಿಸಬೇಕೆಂದುಕೊಂಡೂ ನಿರೂಪಿಸಲು ಆಗದೇ ಹೋದ ‘ಘಟನೆ’ಗೆ ಈಗ ಇದ್ದಕ್ಕಿದ್ದ ಹಾಗೆ ‘ಇಡೀ ಆಯುಷ್ಯವನ್ನು ಹಾಳು ಮಾಡಿದ ಮಹಾಭಯಂಕರ ಗುಟ್ಟು’ ಎಂದು ನಾಮಕರಣವಾದದ್ದು ನೋಡಿ ಕಾತರಗೊಂಡೆ.

“ಈಗ ಹೇಳುತ್ತೇನೆ: ಆದದ್ದೆಲ್ಲ ಒಳ್ಳೆಯದಕ್ಕೇ ಆಯಿತು. ನಿನ್ನೆ ರಾತ್ರಿ ನಾನು ಶಾಂತಾ ಬಹಳ ಹೊತ್ತಿನವರೆಗೆ ವಾಸುದೇವನ ಭೇಟಿಯ ಬಗೆಗೇ ಮಾತನಾಡಿಕೊಂಡೆವು. ಹಾಗೂ ಹಿಂದೆ ಎಷ್ಟೊಂದು ಸಾರೆ ಪ್ರಯತ್ನಿಸಿದರೂ ಬರಲು ಆಗಿರದ ಒಂದು ದೊಡ್ಡ ನಿರ್ಧಾರಕ್ಕೆ ಬಂದೆವು. ಇನ್ನೊಬ್ಬನ ಎದುರು ಆಡಿ ತೋರಿಸಿದಾಗಲೇ ಗಟ್ಟಿಯಾಗುವ ನಿರ್ಧಾರವದು. ಏಕೆ ಅನ್ನಿಸುತ್ತದೆಯೋ ಗೊತ್ತಿಲ್ಲ. ಮೇಲೆ ಕೂತವನು ಸಹ ಇಂಥದ್ದೇ ನಿರ್ಧಾರಕ್ಕೆ ಬರುತ್ತಿರಬೇಕು ಅಥವಾ ಈಗಾಗಲೇ ಬಂದಿರಬೇಕು” ಎಂದ. ಸುಮಾರು ಹೊತ್ತಿನ ಮೌನದ ನಂತರ ನನ್ನ ಆಸ್ತಿ ಹಣ ಎಲ್ಲ ತ್ಯಜಿಸಲು ನಿರ್ಧರಿಸಿದ್ದೇನೆ” ಎಂದ.

ಮಾತಿನಲ್ಲಿ ನಾಟಕೀಯತೆಯ ಸೋಂಕೂ ಇರಲಿಲ್ಲ. ತ್ಯಜಿಸುವುದು ಎಂದರೆ ನಿಶ್ಚಿತವಾಗಿ ಏನು ಮಾಡುವುದು ಎಂದು ಸ್ಪಷ್ಟಗೊಳಿಸದಿದ್ದರೂ ಅವನ ನಿರ್ಧಾರದ ಗಟ್ಟಿತನದ ಬಗ್ಗೆ ಮಾತ್ರ ನನಗೆ ಸಂಶಯವಿರಲಿಲ್ಲ. ಶಾಂತಾ ಆಗ ಸುಮತಿ ಹಾಗು ವನಿತಾರನ್ನು ಒಳಗೆ ಕರೆದುಕೊಂಡು ಹೋದ ಹೆಂಗಸಿರಬೇಕು ಎಂದುಕೊಂಡೆ.

“ಶಾಂತಾ ಹುಡುಗನನ್ನು ತುಂಬಾ ಮೆಚ್ಚಿಕೊಂಡಿದ್ದಾಳೆ. ಹುಡುಗನೂ ಅಷ್ಟೇ! ಊಟ ತಿಂಡಿಗಳ ಹೊತ್ತಿಗೆ ಶಾಂತಾಳ ಜೊತೆ ಮಾತನಾಡುವಾಗ ಅವನು ಕೆಂಪಾಗುವುದನ್ನು ನೋಡಬೇಕು. ಶಾಂತಾ ನನ್ನ ಕೈ ಹಿಡಿದ ಹೆಂಡತಿಯೆಂದು ಅವನಿಗೆ ಗೊತ್ತಾಗಿದೆಯೋ ಇಲ್ಲವೋ. ನಿನಗೂ? ಮನೆ ಬಿಟ್ಟು ಹೋಗುವಾಗಿನ ಅವನ ಮೂಡಿನ ಅಂದಾಜು ಇಲ್ಲದೇ ಪರಿಚಯದಂಥ ಔಪಚಾರಿಕತೆಗೆ ಮುಂದಾಗಲು ಧೈರ್ಯವಾಗಲಿಲ್ಲ. ಹೊಸತೇ ಒಂದು ರಾದ್ಧಾಂತಕ್ಕೆ ಎಡೆಯಾದೀತೆಂದು ಹೆದರಿ ಎಲ್ಲವನ್ನು ಸದ್ಯ ಅವನ ಊಹೆಗೇ ಬಿಟ್ಟುಕೊಟ್ಟೆ. ವಾಸುದೇವನ ತಾಯಿಯ ತಂಗಿ ಇವಳು. ಅವಳಿಗಿಂತ ಹತ್ತು ವರ್ಷಗಳಿಂದ ಚಿಕ್ಕವಳು. ದೇವಸ್ಥಾನವೊಂದರಲ್ಲಿ ದೇವರನ್ನು ಸಾಕ್ಷಿಯಾಗಿಸಿ ಕೈ ಹಿಡಿದವರು ನಾವು. ವಾಸುದೇವನ ತಾಯಿಯನ್ನು ನಾನು ಮದುವೆಯಾದದ್ದು ಕೂಡ ಹೀಗೆಯೇ. ಆಗ ನಾನು ಬೆಳಗಾಂವ್‌ನಲ್ಲಿದ್ದೆ. ಊರಿಗೆ ಬಂದಾಗ ಅವಳು ಮೂರು ಮಕ್ಕಳ ತಾಯಿಯಾಗಿಯೇ ಬಂದಿದ್ದಳು. ಶಾಂತಾ ಇವಳ ತಂಗಿಯೆಂದು ಇಲ್ಲಿಯ ಯಾರಿಗೂ ಗೊತ್ತಿಲ್ಲ. ಊಟದ ಹೊತ್ತಿಗೆ ಅವಳನ್ನು ನಿಮ್ಮಿಬ್ಬರಿಗೂ ಪರಿಚಯಿಸುತ್ತೇನೆ.”

ದಿನಬಳಕೆಯ ಮಾತಿನಂಥ ಕೆಲವೇ ಚುಟುಕಾದ ವಾಕ್ಯಗಳಲ್ಲಿ ತುಂಬಿಕೊಂಡ ಸತ್ಯಸಂಗತಿಗಳು ನನ್ನ ಮಟ್ಟಿಗೆ ಒಂದಕ್ಕಿಂತ ಒಂದು ಕ್ರಾಂತಿಕಾರಿಯಾಗಿದ್ದೂ ಯಾವ ಒಂದರ ಮೇಲೂ ಒತ್ತುಕೊಡದೇ ಸಾಂತಪ್ಪ ಮಾತನಾಡಿದ ಸರಳ ರೀತಿ ಅಂತಃಕರಣವನ್ನು ತಟ್ಟಿತು. ಈ ಹೆಣ್ಣುಗಳ ಜಾತಿ ಪಾತಿಯ ಬಗ್ಗೆ ನಾನು ಇತರರಿಂದ ಕೇಳಿರಬಹುದಾದ್ದರ ವಿವೇಚನೆಯನ್ನು ನನಗೇ ಬಿಟ್ಟುಕೊಟ್ಟು ಅವರೊಡನೆಯ ತನ್ನ ಸಂಬಂಧವನ್ನಷ್ಟೇ ಸ್ಪಷ್ಟಪಡಿಸಿದಾತ ನನಗೆ ಪ್ರಿಯವಾಗತೊಡಗಿದ್ದ. ವಾಸುದೇವನಂತೆ ಶಾಂತಾಳನ್ನೂ ಭೇಟಿಯಾಗಲು ಉತ್ಸುಕನಾದೆ. ಶಾಂತಾಳ ಜೊತೆಗಿದ್ದಾಳೆ ಎನ್ನಲಾದ ಆ ಆ ಇನ್ನೊಬ್ಬ ಚೆಂದದ ಹೆಣ್ಣನ್ನು ಶಾಂತಪ್ಪ ಪರಿಚಯಿಸಬಹುದೆ?

“ಬಾ, ನಾವಿಬ್ಬರೂ ಜೊತೆಯಾಗಿಯೇ ಮೇಲೆ ಹೋಗಿ ವಾಸುದೇವನನ್ನು ಕಾಣೋಣ. ಊಟಕ್ಕೆ ಹೋಗುವ ಮೊದಲು ಕೆಲಹೊತ್ತು ಅಲ್ಲೇ ಕೂತು ಅವನೊಡನೆ ಮಾತನಾಡೋಣ. ನೀನೇ ಮಾತನಾಡಿಸು. ನಾನು ಬರೀ ಕೇಳುತ್ತೆನೆ. ಯಾವ ಸ್ವಾರ್ಥವೂ ಇಲ್ಲದೇ ಇನ್ನೊಬ್ಬನನ್ನು ಕಾಣುವುದರಲ್ಲಿ ಎಷ್ಟೊದು ಮಜವಿದೆ
ನೋಡು.” ಎನ್ನುತ್ತ ಕೈಯಲ್ಲಿದ್ದ ಗ್ಲಾಸನ್ನು ಖಾಲಿ ಮಾಡಿದ. ನಾನೂ ಹಾಗೇ ಮಾಡಿದೆ. ಪ್ರಾಯಶಃ ಇವನ ಆಯುಷ್ಯವನ್ನು ಹಾಳುಮಾಡಿದ ಗುಟ್ಟಿನ ಬಗ್ಗೆ ಇವತ್ತು ಹೇಳಲಾರನೇನೋ ಎಂದುಕೊಳ್ಳುವಷ್ಟರಲ್ಲಿ-

“ನನ್ನ ಬದುಕಿನ ರೂಪವನ್ನೇ ಕೆಡಿಸಿಬಿಟ್ಟ ಒಂದು ಗೂಢದ ಬಗ್ಗೆ ಹೇಳುವವನಿದ್ದೆ. ಈಗ ಬೇಡ. ಊಟವಾದ ಮೇಲೆ ನೋಡೋಣ. ಅದು ಹಾಗೆ ಮಾತಿನಲ್ಲಿ ವರ್ಣಿಸಬಹುದಾದ ಘಟನೆಯಲ್ಲ; ಒಂದು ಮಾಮೂಲಿ ವಸ್ತು! ನನ್ನ ಪಾಲಿಗೆ ಮಾತ್ರ ಮಹಾ ಭಯಂಕರ ವಸ್ತುವಾಗಿದೆ. ನೀನು ವಾಸುದೇವ ಇಬ್ಬರೂ ಇವತ್ತು ಜೊತೆಯಾಗಿಯೇ ಅದನ್ನು ನೋಡುವಿರಂತೆ. ಇದೇ ಮನೆಯಲ್ಲಿದೆ. ಅಗದೀ ಕೆಳಗೆ ನೆಲಮಾಳಿಗೆಯ ಮೂಲೆಯೊಳಗಿನ ಕತ್ತಲ ಕೋಣೆಯಲ್ಲಿ ಹೋಗುವ ದಾರಿಯಲ್ಲೆಲ್ಲ ಜೇಡರ ಬಲೆಗಳು ಹುಟ್ಟಿಕೊಂಡು ಧೂಳು ತುಂಬಿತ್ತು. ನಾನು ಸ್ವತಃ ಹೋಗಿ ಸಾಪು ಮಾಡಿ ಬಂದಿದ್ದೇನೆ. ಇಲೆಕ್ಟ್ರಿಕ್ ಬಲ್ಬು ತೆಗೆದುಹಾಕಿತ್ತು. ಈಗ ಮತ್ತೆ ಹಾಕಿದ್ದೇನೆ. ಎಲ್ಲವನ್ನೂ-ಮಗನ ಬಗೆಗಿನ ಮೋಹವನ್ನು ಕೂಡ-ಬಿಟ್ಟುಕೊಡಲು ಮನಸ್ಸು ಗಟ್ಟಿ ಮಾಡಿದ್ದೇ ಎಂಥ ಧೈರ್ಯ ನೋಡು! ಇಲ್ಲವಾದರೆ ಆ ವಸ್ತುವನ್ನು ಇತರರಿಗೆ ತೋರಿಸುವುದುಳಿಯಲಿ, ಅದರ ಬಗ್ಗೆ ನನಗೆ ನಾನೇ ಹೇಳುವುದಕ್ಕೂ ಹೆದರುತ್ತಿದ್ದೆ. ಅಷ್ಟೊಂದು ಪುಕ್ಕನಾಗಿಬಿಟ್ಟಿದ್ದೆ. ನಮ್ಮ ಶಾಂತಾ ಕಲಿತವಳು. ಅವಳ ಕಡುಬಡತನ ಕೊಡುವ ಅವಮಾನದ ಭಾವನೆ, ಅತಿ ಶ್ರೀಮಂತಿಕೆ ತರುವ ಕಳಕೊಳ್ಳುವ ಭಯ ಎರಡೂ ಅಷ್ಟೇ ಕೆಟ್ಟವುಗಳಂತೆ. ಎರಡೂ ಬದುಕನ್ನು ಕುರೂಪಗೊಳಿಸುತ್ತದೆಯಂತೆ. ನನ್ನ ಬಗ್ಗೆ ತಿಳಿಯುವುದಿದ್ದರೆ ಅವಳನ್ನೇ ಕೇಳು. ನನ್ನನ್ನು ನನಗಿಂತಲೂ ಚೆನ್ನಾಗಿ ಬಲ್ಲವಳು. ಅವಳ ಪ್ರಕಾರ ನಾನು, ನೀವು ಯಾರೂ ತಿಳಕೊಂಡಷ್ಟು ಕೆಟ್ಟವನು ಅಲ್ಲವೇ ಅಲ್ಲವಂತೆ. ನನಗೇ ನಂಬಿಕೆಯಾಗುವುದಿಲ್ಲ. ಅಂದಹಾಗೆ ನೀನಿದ್ದಾಗಲೇ ವಾಸುದೇವನನ್ನು ಇಲ್ಲಿಗೆ ಕರೆಸುವ ವಿಚಾರ ಅವಳದೇ. ಕಲಿತವರ ಬಗ್ಗೆ ಅವಳಿಗೆ ಕಂಡಾಪಟ್ಟೆ ಅಭಿಮಾನವಪ್ಪಾ! ಊಟದ ಹೊತ್ತಿಗೆ ನೀನೇ ನೋಡುವಿಯಂತೆ. ಹಾಗೀಕೆ ನೋಡುತ್ತಿ? ಕುಡಿತದ ಅಮಲಿನಲ್ಲಿದ್ದೇನೆಂದು ತಿಳಿದೆಯಾ? ಬಾ, ಮಾಳಿಗೆ ಮೆಟ್ಟಿಲು ಏರುವಾಗ ಗೊತ್ತಾದೀತು.”

ಅವನು ಕುಡಿತದ ಅಮಲಿನಲ್ಲಿ ಮಾತನಾಡುತ್ತಿಲ್ಲ ಎನ್ನುವುದು ಅವನಿಗಿಂತ ನನಗೇ ಚೆನ್ನಾಗಿ ಗೊತ್ತಿತ್ತು. ನನ್ನ ಇದೀಗಿನ ಖುಷಿಗೆ ಕೇವಲ ಅವನು ಕಾರಣನಾಗಿದ್ದ ಎನ್ನುವ ಸತ್ಯ ಮಾತ್ರ ಅವನಿಗೆ ತಿಳಿದಿತ್ತೋ ಇಲ್ಲವೋ!

ಇಬ್ಬರೂ ಕೋಣೆಯ ಹೊರಗೆ ನಡೆಯಲು ಅನುವಾಗಿ ಕುಳಿತಲ್ಲಿಂದ ಎದ್ದು ನಿಂತರು

– ೪ –

ಕೋಣೆಯ ಹೊರಗೆ ಬಂದು ಮಾಳಿಗೆಯ ಮೆಟ್ಟಿಲುಗಳ ಕಡೆಗೆ ಹೆಜ್ಜಿಹಾಕುತ್ತಿದ್ದಂತೆ. ಸಂಜೆ ಗೇಟಿನಲ್ಲಿ ನಮ್ಮನ್ನು ಸಂಧಿಸಿ ನಾನು ಸರಿಯಾಗಿ ನೋಡುವ ಮೊದಲೇ ಹೊರಗೆ ನಡೆದ ವ್ಯಕ್ತಿ ನೆನಪಿಗೆ ಬಂದ. ಅವನು ವಾಸುದೇವನೇ ಇರಬೇಕು. ಅವನು ತಿರುಗಾಡಲಿಕ್ಕೆ ಹೋಗುತ್ತಿರಲಿಕ್ಕಿಲ್ಲ. ಬದಲು ನಾವು ಈ ಮನೆಗೆ ಬಂದು ಮುಟ್ಟುವ ಮೊದಲೇ ಮನೆ ಬಿಟ್ಟು ಹೋಗುವ ಅವಸರದಲ್ಲಿದ್ದಿರಬೇಕು, ಅನ್ನಿಸಿತು. ಈ ಅನ್ನಿಸಿಕೆಗೆ ಯಾವ ಆಧಾರವೂ ಇರಲಿಲ್ಲ. ಸಾಂತಪ್ಪ ಈಗ ದೊರಕಿಸಿದ ಆಂತರಿಕ ಸ್ಥೈರ್ಯ ನಿಜವಾಗಿದ್ದ ಪಕ್ಷದಲ್ಲಿ ವಾಸುದೇವನ ಈ ರೀತಿಯ ನಿರ್ಗಮನ ಅವನ ಮೇಲೆ ಪರಣಾಮ ಮಾಡಕೂಡದು, ಮಾಡಲಿಲ್ಲ.

ವಾಸುದೇವ ಕೋಣೆಯಲ್ಲಿರಲಿಲ್ಲ. ಕೋಣೆಯಲ್ಲಿ ದೀಪ ಕೂಡ ಇರಲಿಲ್ಲ. ತಿರುಗಾಡಲು ಹೋದವನು ಇನ್ನೂ ಬರದಿರಬಹುದೆ? ಸಾಂತಪ್ಪ ದೀಪ ಹಾಕಿದ: ಕೋಣೆಯಲ್ಲಿ ಅವನ ಚೀಲವೂ ಇರಲಿಲ್ಲ. “ಇಲ್ಲ, ಹೊರಟುಹೋಗಿದ್ದಾನೆ” ಎಂದ. ದನಿ ಸರಿಯಾಗಿದ್ದು ನೋಡಿ ನಿರಂಬಳವೆನ್ನಿಸಿತು. ಕೋಣೆಯಿಂದ ಹೊರಬೀಳಬೇಕು ಎನ್ನುವಷ್ಟರಲ್ಲಿ ಮಂಚದ ಮೇಲೆ ಪತ್ರವಿದ್ದದ್ದು ಕಂಡಿತು. ನಾಲ್ಕು ಮಡಿ ಮಡಿಚಿದ ಬಿಳಿಯ ಹಾಳೆ. ಎತ್ತಿ ಅವನ ಕೈಗೆ ಕೊಡುತ್ತಿದ್ದಾಗ “ನೀನೇ ಓದಿ ನೋಡು” ಎಂದ. ಈಗಲೂ ದನಿ ಸರಿಯಾಗಿತ್ತು. ಚೀಟಿ ತೆರೆದು ಓದಿದೆ: ಒಂದೇ ವಾಕ್ಯವಿತ್ತು: “ಅಪ್ಪಾ! ನನ್ನನ್ನು ಕ್ಷಮಿಸು-ನಿನ್ನ ವಾಸು.” ಸರಕ್ಕನೆ ನನ್ನ ಕೈಯಿಂದ ಚೀಟಿಯನ್ನು ಕಸಿದುಕೊಂಡು ತಾನೇ ಓದಿದ. ತನ್ನ ಕಣ್ಣುಗಳನ್ನು ತಾನೇ ನಂಬದವನ ಹಾಗೆ ಮತ್ತೊಮ್ಮೆ ಓದಿದ. “ಕೊನೆಗೂ ಒಪ್ಪಿಕೊಂಡ ಹುಡುಗ. ಬಸ್! ಇನ್ನೇನೂ ಅಪೇಕ್ಷಿಸಿರಲಿಲ್ಲ. ದೇವರಾಣೆಗೂ” ದನಿ ಮೊದಲ ಬಾರಿಗೇ ತುಸು ಗದ್ಗದಿಸಿದಂತೆ ಕೇಳಿಸಿತು. ಆ ಕ್ಷಣದ ಮಟ್ಟಿಗೆ ನಾನು ಎದುರಲ್ಲಿದ್ದುದನ್ನು ಮರೆತಿದ್ದನೇನೋ. ಲಕ್ಷ್ಯಕ್ಕೆ ಬಂದದ್ದೇ ತನ್ನನ್ನು ಸಾವರಿಸಿಕೊಂಡ:

“ಹುಡುಗ ನೆಲಮಾಳಿಗೆಗೆ ಹೋಗಿ ನೋಡಿ ಬಂದಿರಬೇಕು. ಬಹುಶಃ ಶಾಂತಾ ತೋರಿಸಿರಬೇಕು. ಬಾ! ಕೆಳಗೆ ಹೋಗೋಣ. ಶಾಂತಾ ಒಪ್ಪಿದರೆ ಊಟದ ಮೊದಲೇ ನಾವೂ ಕೆಳಗೆ ಹೋಗಿ ಬರೋಣ. ‘ಆಗದೆ? ಹೆಂಗಸರು ಬರುವುದು ಬೇಡ. ರಾತ್ರಿಯ ಹೊತ್ತು ಹೋಗುವ ದಾರಿಯೂ ಸರಿಯಿಲ್ಲ. ”

ಶಾಂತಾಗೆ ನಾವು ಮೇಲೆ ಹೋಗಿದ್ದರ ಸುಳುಹು ಹತ್ತಿರಬೇಕು. ಜಿನೆಯ ಅಡಿಗೆ ನಿಂತು ನಮ್ಮ ದಾರಿ ಕಾಯುತ್ತಿದ್ದಳು:

“ಮೇಲೆ ಹೋಗಿ ಬಂದಿರಾ?”

“ನನಗಾಗಿ ಈ ಚೀಟಿ ಇಟ್ಟುಹೋಗಿದ್ದಾನೆ” ಎನ್ನುತ್ತ ಚೀಟಿಯನ್ನು ಶಾಂತಾಳ ಕೈಗೆ ಒಪ್ಪಿಸಿದ. ಅದರಲ್ಲೇನಿದೆ ಎನ್ನುವುದು ತನಗೆ ಗೊತ್ತೇ ಇದ್ದವಳ ಹಾಗೆ ಒಮ್ಮೆ ಕಣ್ಣಾಡಿಸಿದಳು. “ಹೊರಡುವ ಮೊದಲು ತುಂಬಾ ಮೆತ್ತಗಾಗಿದ್ದ ಹುಡುಗ. ಬೆಳಿಗ್ಗೆ ನೀವು ವನಿತಾಳ ಮನೆಗೆ ಹೋಗಿದ್ದಾಗ ಕೆಳಗಿಳಿದು ಬಂದು ನನ್ನನ್ನು ಹುಡುಕುತ್ತ ಸೀದಾ ನನ್ನ ಕೋಣೆಯವರೆಗೂ ಬಂದು ಬಹಳ ಹೊತ್ತು ನನ್ನನ್ನು ಮಾತನಾಡಿಸಿದ. ನಾನು ಯಾರೆಂದು ತಿಳಿದದ್ದೇ, ಆ ಸಂಶಯ ಬಂದೇ, ಹೀಗೆ ಇಲ್ಲಿ ಬಂದು ಮಾತನಾಡಿಸುವ ಧೈರ್ಯ ಮಾಡಿದ. ಥೇಟು ಅಮ್ಮ ಎಂದು ಬಿಕ್ಕಳಿಸಿದ. ಮಾತುಮಾತಿನಲ್ಲಿ ಎಲ್ಲವೂ ಹೊರಗೆ ಬಂತು, ಬೇಡವೆಂದರೂ ಕೆಳಗೆ ಹೋಗಿ ನೋಡುವ ಹಠ ಹಿಡಿದ. ನಾನೇ ಹೋಗಿ ತೋರಿಸಿ ಬಂದೆ. ನಂಬುವಿರಾ? ಹೋಗುವ ಮೊದಲು ನನಗೆ ಅಮ್ಮಣಿಗೆ ಕಾಲುಮುಟ್ಟಿ ನಮಸ್ಕರಿಸಿ ನಮ್ಮಿಂದ ಬೀಳ್ಕೊಂಡ? ನಿಮಗೂ ನಮಸ್ಕಾರ ತಿಳಿಸಿದ್ದಾನೆ. ಖುದ್ದು ಭೇಟಿಯಾಗುವ ಮನಸ್ಸಿತ್ತು. ನೀವು ಹೋಗಲು ಬಿಡಲಾರಿರಿ ಎಂದು ಹೆದರಿ ಚೀಟಿ ಬರೆದಿಟ್ಟು ಹೋಗಿದ್ದಾನೆ. ರಾತ್ರಿ ಯಾರದೋ ಟ್ರಕ್ಕಿನಿಂದ ಹುಬ್ಬಳ್ಳಿಗೆ ಹೋಗುತ್ತಾನಂತೆ. ಹೋಗುವ ಮೊದಲು ಇವರ ಅಕ್ಕನನ್ನು ನೋಡಿ ಹೋಗುತ್ತೇನೆ ಎಂದಿದ್ದಾನೆ” ಎಂದು ನನ್ನತ್ತ ತಿರುಗಿ, “ಸಾಧ್ಯವಾದರೆ ನಿಮ್ಮನ್ನು ಅಲ್ಲೇ ನೋಡುತ್ತೇನೆ ಎಂದಿದ್ದ. ನಿಮ್ಮಿಬ್ಬರಿಗೂ ತಪ್ಪುಗಂಟಾಗಿರಬೇಕು,” ಎಂದಳು. “ನೀವೀಗ ಕೆಳಗೆ ಹೊರಟಿರುವಿರಾದರೆ ಬೇಗ ಹೋಗಿ ಬನ್ನಿ. ಇನ್ನು ಹತ್ತು ಮಿನಿಟುಗಳಲ್ಲಿ ಊಟ ಸಿದ್ಧವಾಗಿರುತ್ತದೆ. ನೋಡಿ ಬಂದದ್ದರ ಬಗ್ಗೆ ಊಟದ ಹೊತ್ತಿಗೆ ಚರ್ಚೆ ಬೇಡ. ವನಿತಾ ಏನೆಂದರೂ ಇದೇ ಊರಿನವಳು” ಎಂದು ಎಲ್ಲವನ್ನು ಅವಸರ ಅವಸರದಲ್ಲಿ ಹೇಳಿ ಮುಗಿಸದವಳು ಒಳಗೆ ಬಿಟ್ಟು ಬಂದವರನ್ನು ಕೂಡಿಕೊಳ್ಳಲು ಹೊರಟು ನಿಂತು, “ಮೇಲೆ ಬಂದವರು ಸೀದಾ ಊಟದ ಟೇಬಲ್ಲಿಗೇ ಬನ್ನಿ. ಬರುವ ಮೊದಲೊಮ್ಮೆ ಅಮ್ಮಣ್ಣಿಯ ಬಗ್ಗೆ ಇವರಿಗೆ ಸೂಚನೆ ಕೊಟ್ಟಿರಿ. ತುಂಬಾ ಉಮೇದಿನಲ್ಲಿದ್ದಾಳೆ ಹುಡುಗಿ” ಎಂದಳು.

ಸಾಂತಪ್ಪ ಇನ್ನಾವುದೋ ಕೋಣೆಗೆ ಹೋಗಿ ಮೊದಲೇ ಸಿದ್ಧಮಾಡಿಟ್ಟಂತಿದ್ದ ದೊಡ್ಡ ಟಾರ್ಚ್ ಒಂದನ್ನು ಕೈಯಲ್ಲಿ ಹಿಡಿದು ಬಂದ:

“ಬಾ! ನನ್ನ ಹಿಂದೆಯೇ ಬಾ. ಮೆಟ್ಟಿಲ ಮೇಲೆ ಮುಗ್ಗರಿಸಿ ಬಿದ್ದೀಯಾ. ನಾವು ಸಹಸಾ ಇಲ್ಲಿ ಬರುವುದಿಲ್ಲ. ಹಾಗೆಂದು ಮೆಟ್ಟಲ ಮೇಲೆ ದೀಪ ಹಾಕಿಸಿಲ್ಲ. ನೀನು ಇಲ್ಲೇ ತಡೆ. ನಾನು ಮುಂದೆ ಹೋಗಿ ಕೋಣೆಯ ಕದ ತೆರೆದು ದೀಪ ಹಾಕುತ್ತೇನೆ. ಸ್ವಿಚ್ಚೂ ಒಳಗಡೆಯಿದೆ. ನಾವು ಕೊಳ್ಳುವ ಮೊದಲು ಈ ಮನೆಯವರು ಈ ಕೋಣೆಯನ್ನು ಯಾವ ಕೆಲಸಕ್ಕೆ ಬಳಸುತ್ತಿದ್ದರೋ, ಇದು ಇಲ್ಲಿ ಇಲ್ಲದೆ ಹೋದರೆ ನಾನು ಮಾತ್ರ ಏನು ಮಾಡುತ್ತಿದ್ದೆನೋ!”

ಪಿಸುಮಾತಿನಲ್ಲಿ ನಡೆದ ಸಾಂತಪ್ಪನ ಬಡಬಡಿಕೆ ಕೇಳಿ ಇವನಿನ್ನೂ ಒಳಗೆ ಹೆದರಿಕೊಂಡಿದ್ದಾನೆ ಅನ್ನಿಸಿತು. ನಾನೂ ಅಷ್ಟೇ. ಒಳಗಿರುವ ವಸ್ತು ಭಯಾನಕವಾದದ್ದು. ಆಕಾರದಲ್ಲೋ? ಅದರ ಕೀರ್ತಿಯಲ್ಲೋ? ಅಸ್ಥಿಪಂಜರ, ಒಣಗಿಸಿಟ್ಟ ಹಾವಿನ ಹೆಡೆ ಇಂಥ ಆಕೃತಿಗಳು ಕಲ್ಪನೆಯಲ್ಲಿ ಮೂಡುತ್ತಿದ್ದಂತೆ ಸಾಂತಪ್ಪ ಕೋಣೆಯ ಕದ ತೆರೆದಿದ್ದ. ಒಳಗೆಲ್ಲೋ ತಡಕಾಡಿ ಸ್ವಿಚ್ ಒತ್ತಿದ. “ಮುಂದಕ್ಕೆ ಸರಿ, ನೋಡು” ಎಂದು ಪಿಸುನುಡಿದ. ನಾಲ್ವತ್ತು ವಾಟ್ಸ್ ಬಲ್ಬಿನ ಬೆಳಕಿನಲ್ಲಿ ಬೆಳಗಿ ನಿಂತದ್ದು ಕಣ್ಣಿಗೆ ಸ್ಪಷ್ಟವಾಗಲು ಹೊತ್ತು ಹಿಡಿಯಿತು. ಕಣ್ಣಿಗೆ ಪ್ರತ್ಯಕ್ಷ ಕಂಡದ್ದಕ್ಕಿಂತ ಅದರ ಬಗ್ಗೆ ಮಾಡಿಕೊಂಡ ಕಲ್ಪನೆಗೇ ಹೆದರಿದ್ದೆನೇನೋ, ಇನ್ನೂ ಮುಂದಕ್ಕೆ ಸರಿದೆ. ಅಮಮಾ! ಮೂಗಿಗೆ ಬಂದು ಬಡಿದ ಗಬ್ಬು ವಾಸನೆಯ ಜೋರಿಗೆ ಸರಕ್ಕನೆ ಹಿಂದೆ ಸರಿದೆ.

“ನಂಬುವೆಯಾ? ಕಳೆದ ಇಪ್ಪತ್ತು ವರ್ಷಗಳಲ್ಲಿ ಒಮ್ಮೆಯೂ ತೆರೆದಿರಲಿಲ್ಲ ಈ ಕೋಣೆಯನ್ನು? ಜಂಗು ತಿಂದ ಚಿಲಕ, ಬೀಗ, ಈ ದುರ್ಗಂಧ. ಈ ಧೂಳು. ಇದೆಲ್ಲ ಈ ಸಂಗತಿಗೆ ಸಾಕ್ಷಿ ಹೇಳುವುದಿಲ್ಲವೆ? ಸಾಕ್ಷಿ ಹೇಳಲೆಂದೇ ತೆರೆದಿರಲಿಲ್ಲ.”

“ಸಾಕ್ಷಿ” ಎನ್ನುವಾಗ ಸಾಂತಪ್ಪನ ದನಿ ತುಸು ನಡುಗಿದ ಭಾಸವಾಯಿತು. ಪೊಲೀಸು, ಕಾಯದೆ ಎಂದರೆ ಸಾಂತಪ್ಪ ಈ ವಯಸ್ಸಿನಲ್ಲೂ ಹೆದರುತ್ತಾನೆಂದು ಅಕ್ಕ ಹೇಳಿದ್ದು ನೆನಪಿಗೆ ಬಂದಿರಬೇಕು ಪೊಲೀಸರ ಕಣ್ಣು ತಪ್ಪಿಸಿದ ಮಾಲು ಅಲ್ಲ ತಾನೇ! ನಾನು ಊಹಿಸುವುದನ್ನು ನಿಲ್ಲಿಸಿದೆ.

ಕ್ರಮೇಣ ಕೋಣೆಯೊಳಗಿನ ಧೂಳು ಮುಚ್ಚಿದ, ಜೇಡರ ಬಲೆ ಹಾಕಿಕೊಂಡ ವಸ್ತುಗಳು ದೄಷ್ಟಿಗೋಚರವಾಗತೊಡಗಿದವು. ಮೋಡಕಾ ಬಜಾರಿನಿಂದ ತಂದಂತಿದ್ದ ಜುನಾಪುರಾಣಾ ವಸ್ತುಗಳು ಸಾಂತಪ್ಪ ಮಾಡಿದ ವರ್ಣನೆಯಲ್ಲಿ ಒಂದೊಂದಾಗಿ ಹೆಸರುಪಡೆಯತೊಡಗಿದವು.

“ಆ ಹಂಡೆ, ತಂಬಿಗೆ, ಇಲ್ಲಿಟ್ಟ ಅಡುಗೆ ಪಾತ್ರೆಗಳು, ಅಲ್ಲಿ ತೂಗಿದ ಕಸಬರಿಗೆ, ಗರಸಿ, ಬುಟ್ಟಿಗಳು, ಸುತ್ತಿಟ್ಟ ಚಾಪೆ, ಹಾಸಿಗೆ, ಮೇಲಿಟ್ಟ ತಲೆದಿಂಬು ಈ ಬದಿಗಿರಿಸಿದ ಮಣಿಗಳು, ಈಳಿಗೆ, ನನ್ನ ಅಪ್ಪ-ಅಜ್ಜರ ಕಾಲದ ವಸ್ತುಗಳು, ಅವರಿಗೇ ಸೇರಿದವುಗಳಲ್ಲ; ಎಲ್ಲೆಲ್ಲಿಂದಲೋ ಒಟ್ಟು ಮಾಡಿದವುಗಳು. ಅವರ, ನನ್ನ ಬಾಲ್ಯದ ಬಡತನದ ನೆನಪಿಗಾಗಿ ಶೇಖರಿಸಿದವುಗಳಲ್ಲ. ಮತ್ತೆ ಯಾರಾದರೂ ಕೇಳಿದ್ದರೆ ಹಾಗೆ ಹೇಳುವುದೆಂದು ನಿಶ್ಚಯಿಸಿದ್ದೆ. ಆ ಮಾತು ಬೇರೆ. ಇವನ್ನು ಒಟ್ಟು ಮಾಡಿದ ಮೂಲ ಉದ್ದೇಶ ಆ ಅದನ್ನು ಅಡಗಿಸಲು. ಇಪ್ಪತ್ತು ವರ್ಷಗಳ ಹಿಂದೆ ಒಮ್ಮೆ ಅಡಗಿಸಿಟ್ಟ ನಂತರ ಮತ್ತೆ ನೋಡುತ್ತಿದ್ದದ್ದು ಇದೇ ಮೊದಲ ಬಾರಿ. ಕಾಣುತ್ತದೆಯೆ? ನಟ್ಟನಡುವೆ ಹಾಸಿಗೆಯ ಸುರುಳಿಯ ಕೆಳಗೆ ಲೋಹದ ಟ್ರಂಕು ಇದೆ. ಮೂಲೆಯಷ್ಟೇ ಕಾಣಿಸುತ್ತದೆ. ಸರಿಯಾಗಿ ನೋಡು. ಅದು ನನ್ನ ವಶಕ್ಕೆ ಬಂದಾಗ ನೋಡಬೇಕಿತ್ತು. ನೀಲಿ ಹಸಿರು ಬಣ್ಣ ಬಳಿದುಕೊಂಡು ಲಕಲಕಿಸುತ್ತ ದಷ್ಟಪಷ್ಟವಾಗಿತ್ತು. ಸರಪಳಿ ಸುತ್ತಿದೆ. ಇಷ್ಟು ದೊಡ್ಡ ಬೀಗವಿದೆ. ಈಗ ಬಣ್ಣವೆಲ್ಲ ಹಾರಿಹೋಗಿ ತುಸು ಸೊರಗಿದಹಾಗಿದೆ. ಜಂಗೂ ಹಿಡಿದಂತಿದೆಯಲ್ಲವೆ?”

ಸಾಂತಪ್ಪನ ದನಿ ಇನ್ನೂ ಕೆಳಗಿಳಿಯತೊಡಗಿತು-

“ಆ ಟ್ರಂಕಿನ ಒಳಗೆ ಏನಿರಬಹುದು, ಊಹಿಸಬಲ್ಲೆಯಾ? ಅಂದರೆ ನಾನು ಪಟ್ಟ ಭಯದ ಕಲ್ಪನೆ ಬಂದೀತು.” ನನಗೆ ವಿಚಾರ ಮಾಡಲೂ ಸಮಯ ಕೊಡದೇ ತಾನೇ ಉತ್ತರವಿತ್ತ: “ಬಂಗಾರದ ಗಟ್ಟಿಗಳು! ಅಕ್ಕ ಇಲ್ಲ ವನಿತಾ ಇವುಗಳ ಬಗೆಗೂ ನಿನ್ನೊಡನೆ ಮಾತನಾಡಿರುವುದಾದರೆ ನಾನು ಯಾವ ಪ್ರಕರಣದ ಬಗ್ಗೆ ಹೇಳುತ್ತಿದ್ದೇನೆ. ಹೊಳೆದಿರಬೇಕು. ನನ್ನ ಮುಖಕ್ಕಿಷ್ಟು ಮಸಿ ಬಳಿದ ಪ್ರಕರಣವದು. ಈ ಟ್ರಂಕಿನ ಒಳಗೆ ಬಂಗಾರದ ಗಟ್ಟಿಗಳಿರಬಹುದೆ? ನನಗೆ ಗೊತ್ತಿಲ್ಲ ನಾನಿನ್ನೂ ತೆರೆದು ನೋಡಿಯೇ ಇಲ್ಲ. ನಿಜಕ್ಕೂ ಇದ್ದುಬಿಟ್ಟರೆ ಏನು ಮಾಡುತ್ತಿದ್ದೆ? ವಿಚಾರ ಮಾಡದಾದೆ. ಬಂಗಾರದ ಗಟ್ಟಿಗಳು ಹೇಗಿರುತ್ತವೆ? ಈವರೆಗೂ ನೋಡಿಲ್ಲ. ಅವುಗಳನ್ನು ಕಲ್ಪಿಸಬಲ್ಲೆ. ಆದರೆ ಅವುಗಳಿಂದ ಏನು ಮಾಡಲು ಬರುತ್ತದೆ ಎನ್ನುವುದು ಗೊತ್ತಿಲ್ಲದೇ ಏನು ಪ್ರಯೋಜನ? ಹೇಳು! ನೀನೇ ಏನು ಮಾಡುತ್ತಿದ್ದೆ? ಅದು ತಿನ್ನುವ ವಸ್ತುವಲ್ಲ. ಅಂಗಡಿಗೆ ಹೋಗಿ ಮಾರುವ ವಸ್ತುವೂ ಅಲ್ಲ. ವಿಚಾರ ಮಾಡಿ ನೋಡು. ನೀನು ಸ್ವತಃ ಸ್ಮಗ್ಲರ್ ಆಗಿರದೇ ಈ ಗಟ್ಟಿಗಳು ಯಾವ ಕೆಲಸಕ್ಕೂ ಬಾರದವೆಂದು ಹೊಳೆದೀತು.”

ಮಧ್ಯಾಹ್ನ ರಾಮಕೃಷ್ಣ-ಅಕ್ಕರಿಂದ ಚೂರುಚೂರು ತಿಳಿದಿದ್ದು, ಈಗ ಸಾಂತಪ್ಪ ಹೇಳಿದ್ದು ಒಂದಕ್ಕೊಂದು ಹೊಂದಿಕೊಳ್ಳುತ್ತಿದ್ದಂತೆ ಅವನು ಸಿಲುಕಿಕೊಂಡಿದ್ದ ಪರಿಸ್ಥಿತಿಯ ಚಿತ್ರವೂ ಸ್ಪಷ್ಟವಾಗುತ್ತ ಅವನು ಪಟ್ಟ ಯಾತನೆಯ ಬಗ್ಗೆ ತಲ್ಲಣಿಸಿದೆ.

“ಅದರೊಳಗೆ ಬಂಗಾರದ ಗಟ್ಟಿಗಳಿವೆಯೆಂದು ಗೊತ್ತಾದದ್ದು ಕೂಡ ಪೇಪರುಗಳಲ್ಲೆಲ್ಲ ಈ ಟ್ರಂಕು ಸುದ್ದಿ ಮಾಡಿದ ಮೇಲೇ. ಆಗಲೇ ಅದು, ಮೊದಲು ನಮ್ಮ ಬೆಳಗಾಂವಿಯ ಮನೆಯಲ್ಲಿ, ಮುಂದೆ ಕುಮಟೆಯ ಈ ಮನೆಯಲ್ಲಿ ನನ್ನ ವಶದಲ್ಲುಳಿದು ಮೂರು ತಿಂಗಳ ಮೇಲಾಗಿತ್ತು.”

ಸಾಂತಪ್ಪ ವರ್ಣಿಸುತ್ತಿದ್ದದ್ದು ವರ್ಷಗಳ ಹಿಂದೆ ಅನುಭವಿಸಿದ ಭಯದ ಆಕಾರವೆಂದು ಗೊತ್ತಿತ್ತು. ವಿವರಗಳು ಬೇಕಾಗಿರಲಿಲ್ಲ. ಆದರೆ ವಿವರಗಳನ್ನು ಅವನು ಕೊಡುತ್ತಿದ್ದದ್ದು ನನಗಿಂತ ಹೆಚ್ಚಾಗಿ ತನ್ನ ಸಲುವಾಗಿಯೇ ಎಂದು ಹೊಳೆದದ್ದರಿಂದ ಅವನನ್ನು ತಡೆಯಲು ಹೋಗಲಿಲ್ಲ.

“ನಮ್ಮ ಸಂಬಂಧಿಗಳು, ಗೆಳೆಯರು ತಮ್ಮ ಸಾಮಾನುಗಳ ಮಾಮೂಲು ಪಾರ್ಸಲ್ಲುಗಳನ್ನು ಬೇರೆ ಊರುಗಳಿಗೆ ಕಳಿಸುವಾಗ ನಮ್ಮ ಟ್ರಕ್ಕುಗಳ ಮೂಲಕ ಕಳಿಸಿದ್ದಿದೆ. ಟ್ರಕ್ ಮಾಲೀಕರು ನಮ್ಮ ಗೆಳೆಯರಿಗೆ ಒದಗಿಸುವ ಸರ್ವೇಸಾಮಾನ್ಯ ಸೌಕರ್ಯವಿದು. ಇಂಥ ಪಾರ್ಸೆಲ್ಲುಗಳ ಭದ್ರತೆಯ ಜವಾಬ್ದಾರಿ ಅವರದೇ. ಯಾರಿಂದ ಯಾರಿಗೆ ಎಂದು ತಿಳಿಸುವ ವಿಳಾಸಗಳನ್ನು ಹೊತ್ತ ಇವು ಮೊದಲು ನಮ್ಮ ಗುದಾಮುಗಳಿಗೆ ಹೋಗಿ, ಸಂಬಂಧಪಟ್ಟವರು ಅಲ್ಲಿಂದಲೇ ತೆಗೆದುಕೊಂಡು ಹೋಗುವುದು ವಾಡಿಕೆ. ಆದರೆ ಯಾವ ವಿಳಾಸವೂ ಇಲ್ಲದ ಈ ಟ್ರಂಕನ್ನು ಮಾತ್ರ ಡ್ರೈವರ್ ನಮ್ಮ ಮನೆಗೇ ತಂದಾಗ ನಾನು ಮನೆಯಲ್ಲಿರಲಿಲ್ಲ. ಈ ಟ್ರಂಕು ತಾನು ಗೋವಾದಿಂದ ಮಾಲು ತಂದ ಟ್ರಕ್ಕಿನಲ್ಲಿತ್ತೆಂದೂ, ವಿಳಾಸವಿಲ್ಲದ್ದರಿಂದ ಗುದಾಮಿನಲ್ಲಿರಿಸುವುದು ಸುರಕ್ಷಿತವಲ್ಲವೆಂದೂ, ಕಳಿಸಿದವರು ನಿಮಗೆ ಪತ್ರ ಬರೆದು ತಿಳಿಸದೇ ಇರಲಾರರೆಂದೂ ಹೆಂಡತಿಗೆ ವಿವರಿಸಿದ. ಅವಳ ಆದೇಶದ ಮೇರೆಗೆ ನಮ್ಮ ಸಾಮಾನಿನ ಕೋಣೆಯಲ್ಲಿಟ್ಟು ಹೋದ. ಈ ಟ್ರಂಕು ನನ್ನ ಲಕ್ಷ್ಯಕ್ಕೆ ಬಂದದ್ದು, ಅದರ ಬಗ್ಗೆ ಹೆಂಡತಿಯಿಂದ ಗೊತ್ತಾದದ್ದು ಕುಮಟೆಯ ಈ ಮನೆಯಲ್ಲಿ ಸಾಮಾನು ಹಚ್ಚಿಡುವಾಗ! ಆಗಲೂ ಈ ಟ್ರಂಕಿನ ಹಿಂದೆ ದುಷ್ಟ ಉದ್ದೇಶವಿರಬಹುದೆಂದು ಶಂಕಿಸಲು ಆಸ್ಪದವಿರಲಿಲ್ಲ. ಬೇರೊಬ್ಬ ಮಾಲೀಕನ ಟ್ರಕ್ಕಿಗೆ ಹೋಗಬೇಕಾದದ್ದು ಕೈ ತಪ್ಪಿ ನಮ್ಮದಕ್ಕೆ ಬಂದಿರಬಹುದೆಂದು ನಾನಾಗ ಬಗೆದಿರಲೂಬಹುದು. ಟನ್ನುಗಟ್ಟಲೆ ಮಾಲು ಸಾಗಿಸುವ ವ್ಯವಹಾರದಲ್ಲಿ ಇಂಥ ಠುಸ್‌ಪುಸ್ ಹೇಗೆ ಲಕ್ಷ್ಯದಲ್ಲಿರಬೇಕು!

“ಮುಂದೆ-ಗೋವಾದಲ್ಲಿ-ಎಲ್ಲಿಂದಲೋ ಬಂದು ಕಿನಾರೆಗೆ ಹತ್ತಿದ ಮಚವೆಯೊಂದರಲ್ಲಿ ಬಂಗಾರದ ಗಟ್ಟಿಗಳಿದ್ದುವೆಂದೂ, ಕಸ್ಟಮ್ಸ್ ಖಾತೆಯ ದಡ್ಡರು ಎಚ್ಚರಗೊಂಡು ಕಾರ್ಯಕ್ಕಿಳಿಯುವ ಹೊತ್ತಿಗೆ, ಕಳ್ಳರು ಗಟ್ಟಿಗಳಿದ್ದ ಟ್ರಂಕನ್ನು ಗೋವಾದಿಂದ ಹೊರಗೆ ಹೊರಟ ಟ್ರಕ್ ಒಂದರಲ್ಲಿ ಅಡಗಿಸಿ ಬೇರೆ ಕಡೆಗೆ ಸಾಗಿಸಿ ಆಗಲೇ ಮೂರು ತಿಂಗಳಾಗಿದ್ದುವೆಂದು ಪೇಪರುಗಳಲ್ಲಿ ಸುದ್ದಿಯಾದಾಗ ಅಲ್ಲಿಯವರೆಗೂ ಕೋಣೆಯೊಂದರಲ್ಲಿ ಮಂಚದಡಿಗೆ ಮೈ ಮುದುಡಿ ಬಿದ್ದ ಈ ಕ್ಷುಲ್ಲಕ ಜಂತು ಒಮ್ಮೆಲೇ ಬಾಲ ಮೆಟ್ಟಿಸಿಕೊಂಡ ನಾಗರದ ಹಾಗೆ ಪೂತ್ಕರಿಸಿದ್ದು ಕೇಳಿಸಿದಾಗ ತಲೆಯ ಮೇಲೆ ಆಕಾಶ ಕುಸಿಯಿತು. ನಮ್ಮ ಟ್ರಕ್ ಡ್ರೈವರನೇ ವಿಶ್ವಾಸಘಾತ ಮಾಡಿದನೋ, ಅವನಿಗೂ ಗೊತ್ತಿರಲಿಲ್ಲವೋ, ತಿಳಿಯುವ ಉಪಾಯವಿರಲಿಲ್ಲ.

“ನಾನಾಗಲೇ ಈ ಜೋಬದ್ರದ ಅಸ್ತಿತ್ವವನ್ನೇ ಅಲ್ಲಗಳೆಯಲು ನಿರ್ಧರಿಸಿದ್ದೆ. ನದಿಗೆ ಇಲ್ಲ ಅಮುದ್ರಕ್ಕೆ ಒಯ್ದು ನೀರಿನಲ್ಲಿ ಮುಳುಗಿಸುವ ವಿಚಾರ ಬಂದಿತ್ತು. ಧೈರ್ಯವಾಗಲಿಲ್ಲ. ಒಯ್ಯುವಾಗಲೇ ಸಿಕ್ಕುಬಿದ್ದರೆ! ಟ್ರಂಕು ನಾವು ಯಾರೂ ಉಪಯೋಗಿಸದ ಒಂದು ಕೋಣೆಯಲ್ಲಿತ್ತು. ಮಧ್ಯರಾತ್ರಿ ದಾಟಿದ ಹೊತ್ತಿನಲ್ಲಿ ನಾನೊಬ್ಬನೇ ಎದ್ದು ಅದನ್ನು ಎತ್ತಿ ಇಲ್ಲಿಗೆ ತಂದೆ. ಈ ಮೊದಲು ಟ್ರಂಕನ್ನು ಬರೇ ಕಣ್ಣಿನಿಂದ ನೋಡಿದ್ದೆ; ಎತ್ತಿ ನೋಡಿರಲಿಲ್ಲ. ಒಬ್ಬನೇ ಎತ್ತಿ ಇಲ್ಲಿ ತರುವಷ್ಟರಲ್ಲಿ ಸಾಕುಬೇಕಾಯಿತು. ಅದರ ಭಾರ ನೋಡಿದ ಮೇಲೆ ನನಗೆ ಸಂಶಯವುಳಿಯಲಿಲ್ಲ. ಪೇಪರುಗಳಲ್ಲಿ ಸುದ್ದಿ ಮಾಡಿದ ಟ್ರಂಕೇ ಇದು, ದೇವರೇ! ಎಲ್ಲ ಬಿಟ್ಟು ನನ್ನ ಟ್ರಕ್ಕು ಬೇಕಾಯಿತೇ ಇವರಿಗೆ…..

“ಇಷ್ಟು ರಾತ್ರಿಯಲ್ಲಿ ಹೆಂಡತಿ ಮಕ್ಕಳು ಗಾಢನಿದ್ರೆಯಲ್ಲಿರುವರೆಂದು ತಿಳಿದಿದ್ದೆ. ನನ್ನ ದುರ್ದೈವ-ಹೆಂಡತಿಗೆ ಎಚ್ಚರವಿತ್ತೆಂದು ತೋರುತ್ತದೆ. ಅಥವಾ, ನಾನು ಮಾಡಿದ ಸದ್ದಿನಿಂದ ಎಚ್ಚರವಾಯಿತೋ, ಬೆಳಗಾಗಲು ಪುರುಸೊತ್ತಿಲ್ಲ. ಇವಳಿಂದಲೇ ನನ್ನ ತನಿಖೆಗೆ ಶುರು. ಮುಂದೆ ಗೋವಾದಿಂದ ಬಂದ ಟ್ರಕ್ಕುಗಳ ಮಾಲೀಕರ ಗುದಾಮುಗಳ ಮೇಲೆಲ್ಲ ಛಾಪಾ ಹಾಕಿದ ಪೊಲೀಸರು ನಮ್ಮ ಬೆಳಗಾಂವಿನ ಗುದಾಮಿನ ಝಡತಿ ಮುಗಿಸಿ ಇಲ್ಲಿಗೂ ಬಂದಮೇಲಂತೂ ಮುಗಿದೇಹೋಯಿತು. ಅವಳಿಗೆ ದೇವರ ಭಯ. ನನಗೆ ಪೊಲೀಸರ ಭಯ. ಪೊಲೀಸರಿಗೆ ಏನೂ ಸಿಗಲಿಲ್ಲ. ನೆಲಮಾಳಿಗೆವರೆಗೆ ಅವರು ಹೋಗಲೇ‌ಇಲ್ಲ. ಹೋದರೂ ಪತ್ತೆಯಾಗುತ್ತಿರಲಿಲ್ಲ! ಊರಿನಲ್ಲಿ ನನ್ನ ಮಾನ ಕಾಯ್ದುಕೊಳ್ಳುವುದಕ್ಕೆ ಪೊಲೀಸರು ಮತ್ತೆ ಬಾರದ ಹಾಗೆ ಮಾಡಲು ಬಹಳ ಖರ್ಚು ಮಾಡಬೇಕಾಯಿತು. ಆದರೆ ಹೆಂಡತಿಯ ಬಾಯಿ ಮುಚ್ಚಿಸುವುದು ಮಾತ್ರ ನನ್ನಿಂದಾಗಲೇ ಇಲ್ಲ. ನಂದನವನ ಆಗಬಹುದಾದ್ದು ನರಕವಾಯ್ತು.

“ಇವಳದೊಂದೇ ಹಠ. ಆ ಪಾಪದ ವಸ್ತು ನಮಗೆ ಬೇಡ. ನಾನಾಗಿ ಅದನ್ನು ಪೊಲೀಸರ ವಶಕ್ಕೆ ಕೊಡಬೇಕು. ನಾನು ಇದು ಏಕೆ ಸಾಧ್ಯವಿಲ್ಲವೆಂದು ಪರಿಪರಿಯಾಗಿ ತಿಳಿಸಿ ಹೇಳಿದೆ. ಪೊಲೀಸರ ವಶಕ್ಕೆ ಕೊಡುವುದಿದ್ದರೆ ನಾನದಕ್ಕೆ ಕೈ ಹಚ್ಚಲೇಬಾರದಿತ್ತು. ಅಂದರೆ ಮಾತ್ರ ನಾನು ಅವರ ಕಣ್ಣಲ್ಲಿ ನಿರ್ದೋಷಿಯಾಗುತ್ತಿದ್ದೆ. ನಾನು ಇಷ್ಟು ದಿನ ಮನೆಯೊಳಗೆ ಏಕೆ ಅಡಗಿಸಿಟ್ಟೆ? ಕಳಿಸಿದ್ದು ಯಾರು? ಅದರಲ್ಲಿ ಇದ್ದದ್ದು ಏನು-ಇದಾವುದೂ ಗೊತ್ತಿಲ್ಲದೇ ನೀವು ಈ ವಸ್ತುವನ್ನು ಮನೆಯೊಳಕ್ಕೆ ತೆಗೆದುಕೊಂಡಿರಾದರೂ ಹೇಗೆ? ಈ ಯಾವ ಪ್ರಶ್ನೆಗಳಿಗೂ ನನ್ನಲ್ಲಿ ಉತ್ತರವಿರಲಿಲ್ಲ. ಈಗ ಟ್ರಂಕನ್ನು ಪೊಲೀಸರ ಹವಾಲೆ ಮಾಡಿದೆವು ಎಂದೇ ತಿಳಿಯೋಣ. ಪೊಲೀಸರು ಬೀಗ ಒಡೆದು ನೋಡುತ್ತಾರೆ: ಅದರಲ್ಲಿ ಬಂಗಾರವಿಲ್ಲ; ಭಾರವಾದ ಕಲ್ಲುಗಳಿವೆ! ಅಂದರೆ ಕಳ್ಳರೇ ಬಂಗಾರದ ಗಟ್ಟಿಗಳುಳ್ಳ ನಿಜವಾದ ಟ್ರಂಕನ್ನು ನನ್ನ ಟ್ಯಾಕ್ಸಿಗೆ ಸಾಗಿಸಿ, ಅವರಿಗೆ ನಮ್ಮ ಮೇಲೆ ಸಂಶಯ ಬರುವ ಹಾಗೆ ಮಾಡಿರಬಾರದೇಕೆ? ಇದು ಸಾಧ್ಯವೋ ಅಲ್ಲವೋ? ಸಾಧ್ಯ ಹೌದಾದರೆ ಟ್ರಂಕಿನಲ್ಲಿದ್ದ ಕಲ್ಲುಗಳಿಗೆ ಪೊಲೀಸರು ಏನು ಅರ್ಥ ಹಚ್ಚುತ್ತಾರೆ, ಗೊತ್ತಿದೆಯೇ? ನಾನೇ ಟ್ರಂಕನ್ನು ತೆರೆದು ಬಂಗಾರವನ್ನು ಗುಲ್ಲಾ ಮಾಡಿ ಬರೇ ಕಲ್ಲು ತುಂಬಿದ್ದ ನಾಟಕ ಮಾಡುತ್ತಿದ್ದೇನೆ! ನಂಬು ನಾರಾಯಣಾ! ಅವಳು ಎತ್ತಿದ ಆ ಶಂಕೆಗಳಿಗೆ ಲೆಕ್ಕವಿರಲಿಲ್ಲ. ಶಮನಾರ್ಥ ನಾನಿತ್ತ ವಿವರಣೆಗಳಿಗೂ! ಅವಳು ಕೇಳಿದ ಪ್ರತಿ ಪ್ರಶ್ನೆಗೆ ಉತ್ತರ ಕೊಡುತ್ತ ಕೊಡುತ್ತ ಈ ಟ್ರಂಕಿನ ಬಗ್ಗೆ ಕಳ್ಳ ಸಾಗಣೆಯ ಒಳಮರ್ಮಗಳ ಬಗ್ಗೆ ಎಷ್ಟೊಂದು ಕೂಲಂಕುಷವಾಗಿ ವಿಚಾರ ಮಾಡಿದ್ದೆನೆಂದರೆ ನಾನು ನಿಜಕ್ಕೂ ಆ ದಂಧೆಯನ್ನು ಸೇರದ ಹಾಗೆ ದೇವರೇ ನನ್ನನ್ನು ರಕ್ಷಿಸಿರಬೇಕು ಎನ್ನಿಸಿದ್ದುಂಟು. ಇಲ್ಲವಾದರೆ ಈ ದಂಧೆಯಲ್ಲೂ ನಾನೊಬ್ಬ ನಿಸ್ಸೀಮ ನಿಷ್ಣಾತನಾಗುತ್ತಿದ್ದೆ, ಖಂಡಿತವಾಗಿ.

“ನಾವಿತ್ತ ವಿವರಣವೇ ಇವಳಿಗೆ ನನ್ನ ಅಪರಾಧಕ್ಕೆ ಪುರಾವೆಯಾಗಿ ತೋರಿದೆಯೆಂದು ತಿಳಿದಾಗ ನನ್ನ ಸೂಕ್ಷ್ಮ ಮರ್ಮಕ್ಕೆ ತಗಲಿದ ಧಕ್ಕೆ ಅಷ್ಟಿಷ್ಟಲ್ಲ: ‘ಈ ದಂಧೆಯ ಇಷ್ಟೆಲ್ಲ ಸೂಕ್ಷ್ಮಗಳನ್ನು ಬರೇ ಪತ್ರಿಕೆಗಳಿಂದ ಸಂಗ್ರಹಿಸಿರಲಾರಿರಿ, ಅಲ್ಲವೆ?’ ‘ಅಲ್ಲವೆ?’ ಎಂದಾಗ ಅವಳ ದನಿಯೊಳಗಿದ್ದ ಕಟಕಿ ನೀನು ಕೇಳಬೇಕಿತ್ತು! ನಾನು ತಗ್ಗಿದ ದನಿಯಲ್ಲಿ ಮಾತನಾಡಲು ಪ್ರಯತ್ನಿಸಿದಷ್ಟೂ ಅವಳು ದೊಡ್ಡ ದನಿಯಲ್ಲಿ ಮಾತನಾಡಲು ಶುರು ಮಾಡಿದಳು. ‘ದಮ್ಮಯ್ಯಾ ಮಾರಾಯ್ತಿ! ನಿನ್ನ ಕಾಲೂ ಹಿಡಿಯುತ್ತೇನೆ. ಸಾಕು ಮಾಡು. ನಿನಗೆ ನಂಬಿಕೆಯುಳ್ಳ ಯಾವ ದೇವರ ಇದಿರು ಬೇಕಾದರೂ ಆಣೆ ಮಾಡಲು ಸಿದ್ಧನಿದ್ದೇನೆ: ನೀನು ಕಲ್ಪಿಸಿಕೊಂಡಂಥ ಯಾವ ಪಾಪವನ್ನೂ ನಾನು ಮಾಡಿಲ್ಲ. ನನ್ನಂಥ ಪುಕ್ಕನಿಗೆ ಇದು ಸಾಧ್ಯವೂ ಇಲ್ಲ. ಮತ್ತೆಮತ್ತೆ ಪೊಲೀಸರ ಹೆಸರನ್ನು ನನ್ನೆದುರು ಎತ್ತಬೇಡ. ನನಗೆ ಹುಚ್ಚೇ ಹಿಡಿದೀತು. ಇಲ್ಲ ಜೈಲು ವಾಸವಾದೀತು. ಆಳುಕಾಳುಗಳಿದ್ದಾರೆ. ಬೆಳೆಯುವ ಮಕ್ಕಳಿದ್ದಾರೆ. ಅವರ ಕಿವಿಯ ಮೇಲೆ ಬೀಳದಿರಲಿ. ಬೇಕಾದರೆ ಈಗಿನ ದಂಧೆಯನ್ನೂ ಬಿಡುತ್ತೇನೆ. ಇಷ್ಟು ಕಷ್ಟಪಟ್ಟು, ಮೆಹನತ್ತಿನಿಂದ ಗಳಿಸಿದ ಮಾನವನ್ನು ಧೂಳೀಪಟ ಮಾಡಬೇಡ’ ಎಂದು ಅಂಗಲಾಚಿದೆ. ಏನು ಹೇಳಿದಳು ಗೊತ್ತೆ? ‘ನಿಮಗೆ ಜೈಲುವಾಸವಾದರೂ ಅಡ್ಡಿಯಿಲ್ಲ, ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವೆಂದು ತಿಳಿಯುತ್ತೇನೆ. ನನ್ನ ಮಕ್ಕಳು ಇಂಥ ಪಾಪದ ಹಣದ ಮೇಲೆ ದೊಡ್ಡವರಾಗುವುದು ಬೇಡ.’

“ಇದನ್ನು ಕೇಳಿದಾಗಿನ ನಿಷ್ಠುರ ಫರ್ಮಾನು ಹೊರಡಿಸುವ ಧಾಟಿ ಕೇಳಿದ್ದೇ ನನ್ನೊಳಗಿನ ರಾಕ್ಷಸ ಎದ್ದುಬಂದ ನೋಡ್! ಅಲಲಲ ಕೀಹಾ ಎಂದು ಆರ್ಭಟಿಸಿದ ನೋಡ್! ಇಷ್ಟು ವರ್ಷ ನನ್ನ ಬೆಳಕಾಗಿದ್ದ ಈ ಸುಂದರ ಹೆಣ್ಣು ದಿನಬೆಳಗಾಗುವುದರಲ್ಲಿ ಅಸಹ್ಯ ಅಸಡ್ಡಾಳಳಾಗಿ ನನ್ನ ದ್ವೇಷಕ್ಕೆ ವಸ್ತುವಾದಳು ನೋಡ್!

“ಮುಂದೆ ನನ್ನ ಮನೆಯಲ್ಲಿ ನಡೆದದ್ದು ಎಲ್ಲರಿಗೂ ತಿಳಿದದ್ದೇ. ಬಹಳ ಉತ್ಪ್ರೇಕ್ಷೆಯಿದೆ ಅದರಲ್ಲಿ. ಆದರೂ ನಾನು ತಿದ್ದಲು ಹೋಗಲಾರೆ. ಜನ ನನ್ನನ್ನು ಲಂಪಟನೆಂದರು. ನಿರ್ಲಜ್ಜ ಕಾಮುಕನೆಂದರು. ನನಗೆ ಎಳ್ಳಷ್ಟೂ ಕೆಡುಕೆನಿಸಲಿಲ್ಲ. ಆದರೆ ಹೆಂಡತಿ ನನ್ನನ್ನು ಸ್ಮಗ್ಲರ್ ಎಂದು ಕರೆಯುವುದು ನಿಂತದ್ದು ನೋಡಿ ನಿರಂಬಳವೆನ್ನಿಸಿತು. ಲಂಪಟನೆನ್ನು, ಕಾಮುಕನೆನ್ನು, ಕಳ್ಳನೆನ್ನಬೇಡ-ಎಂದು ಬೇಡುವಂತಿತ್ತು ನನ್ನ ಆಗಿನ ವರ್ತನೆ. ಒಂದೆರಡು ದಿನಗಳ ಕಥೆಯಲ್ಲವಿದು. ನಾರಾಯಣಾ! ವರ್ಷಗಟ್ಟಳೆ ಸಾಗಿದ್ದು. ಹೆಂಡತಿ ನನ್ನ ಈ ಹೊಸ ಅವತಾರ ನೋಡಿ ಅರೆಹುಚ್ಚಿಯಾದಳು. ನಾನೂ ಬದಲಾಗಹತ್ತಿದೆ. ನನ್ನೊಳಗಿನ ಸಾಂತಪ್ಪ ಸಾಯಹತ್ತಿದ. ಅಡಿಗೆ ಮಾಮನ ಮಗನಲ್ಲವೇನೋ ಎಂದು ಹೀಯಾಳಿಸಿದವರಿಗೆಲ್ಲ ತೋರಿಸುತ್ತೇನೆಂದು ಹೇಳಿ ತೀರಾ ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಹೋದ ಈ ಸಾದಾಸೀದಾ ಸಾಂತಪ್ಪ ಸೇಠ್ ಶಾಂತಾರಾಮ್ ಆಗಲು ಹೊರಟು, ಈಗ ಕುರೂಪಿ ಹೆಣ್ಣುಗಳ ಬೆನ್ನುಹತ್ತಿದ ಲಂಪಟನೆಂದು ಕರೆಸಿಕೊಳ್ಳುತ್ತ, ತಲೆಮರೆಸಿ ಬದುಕತೊಡಗಿದ್ದ. ಸಾಕಾಯ್ತು! ಈ ರೀತಿ ಬದುಕುವುದಕ್ಕಿಂತ ಮಾಡಿಯೇ ಇರದ ಕಳ್ಳತನದ ಆಪಾದನೆಗೆ ಹೆದರಿ ದೇಶಾಂತರಕ್ಕೆ ಹೊರಟು ಹೋಗಿದ್ದ ಅಪ್ಪನ ಹಾಗೇ ನಾನೂ…..”

ಸಾಂತಪ್ಪ ಮತ್ತೆ ಬಹಳ ಹೊತ್ತಿನವರೆಗೆ ಮಾತನಾಡಲಾರ ಎನ್ನುವಷ್ಟು ಮೌನವಾದ. ನಾವಿಬ್ಬರೂ ಇನ್ನೂ ನೆಲಮಾಳಿಗೆಯ ಮೆಟ್ಟಲುಗಳ ಮೇಲೇ ಕುಳಿತುಳಿದಿದ್ದೆವು. ಅರ್ಧ ತೆರೆದಿಟ್ಟ ಬಾಗಿಲಿಂದ ಬರುತ್ತಿದ್ದ ಧೂಸರ ಬೆಳಕಿನಲ್ಲಿ ಸಾಂತಪ್ಪನ ಮಾತು ಕೇಳುತ್ತಿದ್ದಂತೆ ತೀರ ಅಪರಿಚಿತ ಲೋಕವೊಂದು ಕಣ್ಣೆದುರು ತೆರೆದುಕೊಂಡಾಗ ದಿಗ್ಭ್ರಮೆಗೊಂಡೆ. ಮಧ್ಯಾಹ್ನ ಅಕ್ಕನ ಮಾತು ಕೇಳುತ್ತಿದ್ದಾಗ ಜನಸಮುದಾಯವೊಂದು ಕಟ್ಟಿಕೊಡುವ ವ್ಯಕ್ತಿಯ ಚಿತ್ರದಲ್ಲಿ ವಾಸ್ತವಾಂಶಕ್ಕಿಂತ ಪುರಾಣದ ಅಂಶವೇ ದೊಡ್ಡದಾಗಿದ್ದರೆ ಆಶ್ಚರ್ಯವಲ್ಲವೇನೋ ಎಂದುಕೊಂಡಿದ್ದೆ: ಸಮುದಾಯ ವ್ಯಕ್ತಿಯನ್ನು ಇನ್ನು ಹೇಗೆ ಗ್ರಹಿಸೀತು! ಈಗ ಸಾಂತಪ್ಪನ ಮಾತು ಕೇಳುತ್ತಿದ್ದಂತೆ ವ್ಯಕ್ತಿ ತನ್ನ ಆಂತರ್ಯದ ಪಾತಾಳವನ್ನು ಗ್ರಹಿಸುವುದು ಕೂಡ ಇಂಥ ಪುರಾಣದ ಮೂಲಕವೇ ಎಂದೂ, ಹಾಗೂ ಆ ಪುರಾಣ ಎಷ್ಟೊಂದು ಭಯಾನಕವಾಗಿರಬಲ್ಲುದೆಂದೂ ದಿಗಿಲುಗೊಂಡೆ.

“ಬಗೀಜಾದ ಗಿಡಗಳಿಗೆ ಸಿಂಪಡಿಸುವ ಕೀಟನಾಶಕದ ಕ್ಯಾನ್ ಇತ್ತು ಗರಾಜಿನಲ್ಲಿ. ಯಾರಿಗೂ ಸಂಶಯ ಬರಕೂಡದೆಂದು ಖಾಲಿಯಾದ ವ್ಹಿಸ್ಕಿ ಬಾಟಲಿಯಲ್ಲಷ್ಟು ತುಂಬಿ ವ್ಹಿಸ್ಕಿಯಿಡುವ ಕಪಾಟಿನಲ್ಲಿ ತಂದಿರಿಸಿದ್ದೆ. ವ್ಹಿಸ್ಕಿಯ ಬೇಹೋಷದಲ್ಲಿ ಇದನ್ನು ಕುಡಿದು ಎಲ್ಲವನ್ನೂ ಒಮ್ಮೆಲೇ ಮುಗಿಸಿಬಿಡುವ ವಿಚಾರ ಬಂದಿತ್ತು. ಯಾವುದೋ ಆವೇಶದ ಭರದಲ್ಲಿ ಮಾಡಿದ ವಿಚಾರವನ್ನು ಕೃತಿಗಿಳಿಸಬೇಕು ಎನ್ನುವಾಗ ಮನಸ್ಸು ಹೊಯ್ದಾಡುತ್ತಿತ್ತು. ನನಗಿನ್ನೂ ತುಂಬಿದ ಪ್ರಾಯ ಅವಾಗ, ಏನೆಲ್ಲ ಮಾಡಿ ತೋರಿಸಬೇಕು ಎನ್ನುವ ಹುಮ್ಮಸ್ಸಿತ್ತು: ಮಾಡುವ ಹಿಮ್ಮತ್ತಿತ್ತು. ನನ್ನ ಕಪಾಟಿನಲ್ಲಿಟ್ಟ ಆ ಬಾಟಲಿಯನ್ನು ಯಾರೂ ನೋಡಿಲ್ಲ ಎಂದುಕೊಂಡಿದ್ದೆ. ಯಾರು ನೋಡಿದ್ದರೋ! ಅದು ಹೆಂಡತಿಯ ಕೈಗೆ ಹೇಗೆ ಹೋಯಿತೋ!….”

“ಅಕ್ಕ ಎಲ್ಲ ಹೇಳಿದ್ದಾಳೆ. ಮತ್ತೆ ಬೇಡ. ಸಾವರಿಸಿಕೋ” ಎನ್ನುತ್ತ ಅವನ ಭುಜ ತಟ್ಟಿದೆ. ಮಾತುಮಾತಿನಲ್ಲಿ ಬಂದು ಹೋದ ಅಪ್ಪನ ಬಗೆಗಿನ ವಿವರಗಳಿಂದ ಮನಸ್ಸು ತುಂಬಾ ಮಿದುವಾಯಿತು. “ಮೇಲಿನವರು ನಮ್ಮ ಹಾದಿ ಕಾಯುತ್ತಿರಬಹುದು ಹೋಗೋಣವೇ?” ಎಂದು ಕೇಳಿದೆ. ಕಿವಿಯಲ್ಲಿ ಹಾಕಿ ಕೊಂಡಿರದವನ ಹಾಗೆ-

“ಅವಳು ಕೂಡಾ ತುಂಬಾ ನೋವು ಅನುಭವಿಸಿರಬೇಕು. ಕೊನೆವರೆಗೆ ಅವಳ ಭಯ ನನಗೆ ಅರ್ಥವಾಗದೇ ಹೋಯಿತು. ಬರೇ ಈ ಟ್ರಂಕಿನಲ್ಲಿ ಇದ್ದುದಕ್ಕಷ್ಟೇ ಹೆದರಿರಲಿಲ್ಲ. ಒಟ್ಟೂ ನನ್ನ ದಂಧೆಯ ಭರಭರಾಟೆಗೇ ಹೆದರಿದ್ದಳು. ನಾನು ಗಳಿಸಿದ್ದು ನನ್ನ ಮೆಹನತ್ತಿನಿಂದ: ವಾಮಮಾರ್ಗದಿಂದಲ್ಲ ಎನ್ನುವುದರಲ್ಲಿ ಅವಳಿಗೆ ಕೊನೆವರೆಗೆ ವಿಶ್ವಾಸ ಮೂಡದಾಯಿತು. ಹಾಗೆ ನೋಡಿದರೆ ಬರೇ ಸಾಚಾ ಮಾರ್ಗದಿಂದ ಹಣ ಮಾಡಿದವರು ಯಾರಿದ್ದಾರೆ? ಪ್ರತಿಯೊಂದು ದಂಧೆಗೆ ಅದಕ್ಕೇ ಸೇರಿದ ಕೆಲವು ಖುಬಿಗಳಿರುತ್ತವೆ. ನಾನು ಅವುಗಳ ಹದ್ದು ಮೀರಿಲ್ಲವೆಂದು ತಿಳಿಹೇಳಿದೆ. ಅವಳದು ಪದೇಪದೇ ಒಂದೇ ಮಾತು: “ಶ್ರೀಮಂತಿಕೆ ಒಳ್ಳೆಯದಕ್ಕಲ್ಲ. ನಮಗೆ ಬಹಳ ಹಣ ಬೇಡ. ಬಹಳ ಮೇಲೇರಿದರೆ ಇಳಿಯುವಾಗ ಕಷ್ಟವಾದೀತು.”

“ಈ ಮನೆ ಕೊಂಡಲಾಗಾಯ್ತು ಅವಳ ಭಯ ಇನ್ನಷ್ಟು ಹೆಚ್ಚಾಯಿತೇನೋ. ಈ ಊರಿಗೇ ಬರುವ ಮನಸ್ಸಿರಲಿಲ್ಲ. ನನಗೋ, ನನ್ನ ಕರ್ತುಬುಗಾರಿಯನ್ನು ಇದೇ ಊರಿನಲ್ಲಿ ಮೆರೆಸುವ ಚಾಪಲ್ಯ” ಎಂದವನು ನನ್ನ ಭುಜಬಡೆದು, “ಹೇಳು! ನನ್ನಂಥವನೂ ನಿವೃತ್ತಿಯನ್ನು ಸಹಿಸುವುದು ಸಾಧ್ಯವೆ?” ಎಂದು ಕೇಳಿದ. ಪ್ರಶ್ನೆಯ ತಲೆ-ಬಡ ತೊತ್ತಾಗದೇ ಗೊಂದಲದಲ್ಲಿ ಬಿದ್ದಾಗ, “ಏಳು!” ಎಂದ. “ಇಗೋ, ಈ ಟಾರ್ಚು ಹಿಡಿದು ಬೆಳಕು ಬಿಡು. ನಾನು ದೀಪ ತೆಗೆದು ಕದ ಮುಚ್ಚುತ್ತೇನೆ. ಮತ್ತೆ ತೆರೆಯುವುದು ಯಾವಾಗಲೋ ಅಂದಹಾಗೆ ಶಾಂತಾಳನ್ನು ನೀನು ಸರಿಯಾಗಿ ಭೇಟಿಯಾಗಿಲ್ಲ. ಅವಳ ಅಕ್ಕನ ಪ್ರಕೃತಿಗೆ ಸರೀ ವಿರುದ್ಧ ಪ್ರಕೃತಿಯವಳು. ಮಹಾ ದಿಟ್ಟಳು. ನಿನ್ನ ಬಗ್ಗೆಯೂ ನಾವು ಮಾತನಾಡಲೇ ಇಲ್ಲ. ನೀನು ಹೆಂಡತಿ ಎರಡು ದಿನ ನಮ್ಮಲ್ಲಿ ನಿಲ್ಲಲಿಕ್ಕೆ ಬರುತ್ತೀರೋ ನೋಡಿ.”

“ಇನ್ನೊಮ್ಮೆ ಬಂದಾಗ ನೋಡೋಣ.”

“ನಿನ್ನ ಮರ್ಜಿ. ಇನ್ನೊಮ್ಮೆ ಬಂದಾಗ ಬಹುಶಃ ನಾನು ಈ ಮನೆಯಲ್ಲಿ ಇರಲಾರೆ.”

ಜಿನ್ನೆಯ ಮೆಟ್ಟಿಲು ಏರುತ್ತಿದ್ದಾಗ: “ಆಗ ಶಾಂತಾಳ ಸೌಂದರ್ಯಕ್ಕೆ ಮಾರುಹೋದವನಂತೆ ಕಂಡೆ. ಈಗ ಅಮ್ಮಣಿಯನ್ನು ನೋಡಿದಾಗ ಏನು ಮಾಡುತ್ತೀಯೋ, ನೋಡುತ್ತೇನೆ. ಅಡುಗೆಯ ಕಲೆಯಲ್ಲೂ ನಿಷ್ಣಾತಳು. ಇವತ್ತಿನ ಅಡುಗೆ ಬಹುಶಃ ಅವಳ ಕೈಯಿನದು. ಶಾಂತಾಳ ಊರಿನವಳೇ. ಅಮ್ಮ-ಅಪ್ಪರಿಲ್ಲದ ಅನಾಥೆಯನ್ನು ಶಾಂತಾಳೇ ಇಲ್ಲಿ ತಂದು ದೊಡ್ಡವಳು ಮಾಡಿದ್ದು. ಎಂಥ ದುರ್ದೈವ ನೋಡು. ಇಷ್ಟು ಸಣ್ಣ ಪ್ರಾಯದಲ್ಲೇ ಪಾರ್ಶ್ವ ವಾಯುವಿನ ಹೊಡೆತದಿಂದಾಗಿ ಮೋರೆಯಲ್ಲೊಂದು ಐಬು ಉಳಿದಿದೆ. ನಗುವಾಗ ಮೋರೆಯ ಬಲಭಾಗ ತುಸು ವಿಕೃತಗೊಳ್ಳುತ್ತದೆ. ನೋಡಿ ವಿಚಲಿತನಾಗಬೇಡ. ಆದರೂ ತೋರಿಸಿಕೊಳ್ಳಬೇಡ. ತುಂಬಾ ಸೂಕ್ಷ್ಮ ಬುದ್ಧಿಯ ಹುಡುಗಿ. ಹೆದರಬೇಡ. ಅಷ್ಟೇ ವಿನೋದಿ ಸ್ವಭಾವದವಳು.”

ನಾವು ಆಗಲೇ ಹಾಲಿಗೆ ಬಂದು ಮುಟ್ಟಿದ್ದೆವು. ಮನೆಯೊಳಗಿನ ನಾಲ್ಕೂ ಹೆಂಗಸರು ನಮ್ಮ ಹಾದಿ ಕಾಯುತ್ತಾ ಸೋಫಾದಲ್ಲಿ ಕುಳಿತಿದ್ದರು. ಈ ಮೊದಲು ಶಾಂತಾಳ ಸೌಂದರ್ಯದ ಗಾಂಭೀರ್ಯವನ್ನು ಮೆಚ್ಚಿಕೊಂಡವನು ಈಗ ಅಮ್ಮಣಿಯ ಸೌಂದರ್ಯದ ಅಲೌಕಿಕತೆ ಭುಲ್ಲವಿಸಿದೆ.

“ಕೆಳಗೆ ಹೋಗಿ ಬಂದಿದ್ದರಿಂದ ದಣಿವಾಗಿರಬೇಕು. ಕೆಲ ಹೊತ್ತು ಇಲ್ಲಿ ಕೂತು ವಿರಮಿಸಿ. ಬೇಕಾದರೆ ಕೈ ತೊಳೆದುಕೊಂಡು ಬನ್ನಿ. ಅಮ್ಮಣಿ ಟೊಮ್ಯಾಟೋ ಸೂಪು ಮಾಡಿದ್ದಾಳೆ. ಇಲ್ಲೇ ತರುತ್ತೇನೆ. ಆಮೇಲೆ ಊಟದ ಟೇಬಲ್ಲಿಗೆ ಹೋಗೋಣ. ಆಗದೆ?” ಎಂದು ಕೇಳಿದ ಶಾಂತಾ ಅಮ್ಮಣಿಯ ಜೂತೆ ಅಡುಗೆ ಮನೆಗೆ ಧಾವಿಸಿದಳು.

ಸೂಪು ಸವಿಯುತ್ತ ತೊಡಗಿಸಿಕೊಂಡ ಹರಟೆಗೆ ಕುಮಟೆಯ ಜನರ ವೈಚಿತ್ಯ್ರಗಳು ವಿಷಯವಾದವು. ಶಾಂತಾಳೇ ಚಾಲನೆಯಿತ್ತಳಾದರೂ ಕೆಲ ಹೊತ್ತಿನಲ್ಲೇ ಅಮ್ಮಣಿ ಅದರ ಮುಂದಾಳುವಾದಳು. ಯಾರುಯಾರನ್ನೆಲ್ಲ-ಸಾಂತಪ್ಪನನ್ನೂ ಹೊರತುಪಡಿಸದೇ-ತಮಾಷೆ ಮಾಡುತ್ತ ನಮ್ಮನ್ನೆಲ್ಲ ಹೊಟ್ಟೆ ನೋಯುವಂತೆ ನಗಿಸುತ್ತಿದ್ದ ಹುಡುಗಿ ಸ್ವತಃ ತಾನೇ ಎಷ್ಟು ಮಾತ್ರಕ್ಕೂ ನಗುತ್ತಿರಲಿಲ್ಲ. ನೋಡಿ ತುಸು ಖಿನ್ನನಾದೆ. ಆದರೂ ಅವಳಿಂದಾಗಿಯೇ ಹಾಲಿನಲ್ಲಿ ನೆಲೆಸತೊಡಗಿದ ಪ್ರಸನ್ನತೆಯ ವಾತಾವರಣಕ್ಕೆ ಖುಷಿಪಟ್ಟೆ. ನಾವು ಈ ಮನೆ ಕಂಪೌಂಡನ್ನು ಹೊಕ್ಕಾಗ ಅನುಭವಿಸಿದ್ದಕ್ಕೆ ತೀರ ವ್ಯತಿರಿಕ್ತವಾದ ಭಾವನೆಯಾಗಿತ್ತಿದು. ನನ್ನ ಈಗಿನ ಮೂಡಿನಲ್ಲೇನಾದರೂ ಸಾಂತಪ್ಪ, ಕೆಳಗೆ ಹೋಗಿ ನೋಡಿ ಬಂದಿದ್ದರ ಬಗ್ಗೆ ನನ್ನ ಸಲಹೆ ಕೇಳಿದ್ದರೆ, ನಿಶ್ಚಿತವಾಗಿ ನೆಲಮಾಳಿಗೆಗೆ ಹೋಗುವ ದಾರಿಯನ್ನು ಕಾಯಮ್ಮಾಗಿ ಮುಚ್ಚಲು ಹೇಳುತ್ತಿದ್ದೆ. ನನ್ನ ಸಲಹೆಯನ್ನು ಒಪ್ಪಿಕೊಳ್ಳುತ್ತಿದ್ದನೋ ಇಲ್ಲವೋ, ಆ ಮಾತು ಬೇರೆ. ಅವನಮಟ್ಟಿಗೆ ಈ ನೆಲಮಾಳಿಗೆ ಕೇವಲ ಒಂದು ಮನೆಯ ಭೌತಿಕ ವಿನ್ಯಾಸಕ್ಕೆ ಸೇರಿದ ಬಾಬು ಅಲ್ಲವಾಗಿತ್ತು ತಾನೆ!

– ೫ –

ನಾವು ಮುಂಬಯಿಗೆ ವಾಪಸ್ಸಾಗಿ ಆಗಲೇ ಮೂರು ತಿಂಗಳಾಗುತ್ತ ಬಂದಿತ್ತು. ಈ ಮೂರು ತಿಂಗಳಲ್ಲಿ ಸಾಂತಪ್ಪನ ಬಗ್ಗೆ, ಶಾಂತಾ ಅಮ್ಮಣಿಯರ ಬಗ್ಗೆ, ಕೊನೆಗೂ ಭೇಟಿಯಾಗದೇ ಹೋದ ವಾಸುದೇವನ ಬಗ್ಗೆ ಮಾತನಾಡಿಕೊಂಡ ಸಂದರ್ಭಗಳಿಗೆ ಲೆಕ್ಕವಿರಲಿಲ್ಲ. ಪ್ರತಿಸಾರಿ ನಮ್ಮ ಮಾತು, ಹೇಳಲು ಹೋದರೆ ತೀರ ಅಸಂಗತವಾಗಿ ತೋರುವ-ಕೊನೆವರೆಗೆ ತೆರೆಯದೇ ಉಳಿದ-ಆ ಟ್ರಂಕಿನ ಖಟನೆಗೇ ಬಂದು ಮುಟ್ಟುತ್ತಿತ್ತು. ನಾವೇ ಸಾಂತಪ್ಪನ ಜಾಗದಲ್ಲಿದ್ದರೆ ಏನು ಮಾಡುತ್ತಿದ್ದೆವೋ ಎನ್ನುವ ಪ್ರಶ್ನೆಗೆ ನಮ್ಮ ಬಳಿ ಉತ್ತರವಿರಲಿಲ್ಲ. ಸದ್ಯ ನಾವು ಆ ಜಾಗದಲ್ಲಿಲ್ಲವಲ್ಲ ಎನ್ನುವ ಹಾರಿಕೆಯ ಅರಿವು ಸಮಾಧಾನ ತರುತ್ತಿರಲಿಲ್ಲ.

ಹಿಗಿರುತ್ತ ಒಂದು ದಿನ ವನಿತಾಳ ಪತ್ರ ಬಂದಿತು. ಪತ್ರ ಸಾಕಷ್ಟು ದೀರ್ಘವಾಗಿದೆ ಎನ್ನುವುದನ್ನು ಲಕೋಟೆಯ ದಪ್ಪವೇ ಹೇಳುತ್ತಿತ್ತು. ವನಿತಾ ಎಂದೂ ಇಷ್ಟು ದಪ್ಪ ಪತ್ರ ಬರೆದವಳಲ್ಲ. ಪತ್ರ ಸಾಂತಪ್ಪನ ಬಗ್ಗೆ ಇದೆ. ಹಾಗೂ ನಾವು ಇತ್ತ ಬಂದಮೇಲೆ ಮತ್ತೇನೋ ನಡೆದಿದೆ-ಎಂಬ ಭಾವನೆಯಿಂದ ಮನಸ್ಸು ಕಳವಳಿಸಿತು. ಒಳಗೆ ಅಡುಗೆಮನೆಯಲ್ಲಿದ್ದ ಹೆಂಡತಿಯನ್ನು ಕರೆದು ವನಿತಾಳ ಪತ್ರ ಬಂದ ಸುದ್ದಿ ತಿಳಿಸಿದೆ. ಅವಳು ಹೊರಗೆ ಬಂದ ಮೇಲೇ ಪತ್ರ ತೆರೆದು ಓದಿದೆ.

ನನ್ನ ಭಯ ನಿಜವಾಗಿತ್ತು. ಸಾಂತಪ್ಪ ದೊಡ್ಡ ಸುದ್ದಿ ಮಾಡುವ ರೀತಿಯಲ್ಲಿ ಸತ್ತಿದ್ದ. ದೊಡ್ಡ ಬಂದರಿನ ಅಳವೆಯಲ್ಲಿ ಜಂಗು ಹಿಡಿದ ಟ್ರಂಕ್ ಒಂದನ್ನು ಮುಳುಗಿಸಲು ಹೋಗಿ ಟ್ರಂಕ್ ಸಮೇತ ತಾನೂ ಮುಳುಗಿದ್ದ. ಅಪಘಾತವೋ, ಆತ್ಮಘಾತವೋ, ಅವರವರ ಊಹೆಗೇ ಬಿಟ್ಟು ಬದುಕಿನಲ್ಲಿ ಹೇಗೋ ಹಾಗೆ ಸಾವಿನಲ್ಲೂ ಒಗಟಾಗಿದ್ದ. ನಸುಕಿನ ಐದು ಗಂಟೆಗೇ ಡ್ರೈವರನನ್ನು ಮನೆಗೆ ಕರೆಸಿದ್ದನಂತೆ. ತಾನಾಗಿಯೆ, ಅಪ್ಪ-ಅಮ್ಮರ ಅಸ್ಥಿಗಳಿವೆ. ಹೊತ್ತು ಮೂಡುವ ಮೊದಲೇ ನೀರಿನಲ್ಲಿ ಮುಳುಗಿಸಬೇಕು, ಎಂದಿದ್ದನಂತೆ. ಕ್ರಿಶ್ಚಿಯನ್ನನಾದ ಡ್ರೈವರನಿಗೆ ಇದೆಲ್ಲ ಹೇಗೆ ಅರ್ಥವಾಗಬೇಕು! ಸಮುದ್ರದಂಡೆಗೆ ಹೋದಮೇಲೆ ಡ್ರೈವರನಿಗೆ ಕಾರಿನಲ್ಲೇ ಕುಳಿತಿರಲು ಹೇಳಿ, ತಾನೊಬ್ಬನೇ ಟ್ರಂಕನ್ನು ಮರಳಿನಮೇಲೆ ದರದರನೆ ಎಳೆದುಕೊಂಡು ಹೋಗಿ ಸೀದಾ ನೀರಿನೊಳಕ್ಕೆ ಹೋಗಿಬಿಟ್ಟನಂತೆ. ಅಪಘಾತ ಎನ್ನುವವರು ಜೋಲಿ ತಪ್ಪಿರಬೇಕು ಎನ್ನುತ್ತಾರೆ. ಆತ್ಮಘಾತ ಎನ್ನುವವರು ಈವರೆಗೂ ಹೆಣ ಮೇಲೆ ಬಂದಿರದ್ದನ್ನೇ ಪುರಾವೆ ಮಾಡಿ, ಟ್ರಂಕನ್ನು ಸೊಂಟಕ್ಕೆ ಕಟ್ಟಿಕೊಂಡಿರಬೇಕು; ಪೆದ್ದ ಡ್ರೈವರ್ ನೋಡಿರಲಾರ. ಅಷ್ಟು ನಸುಕಿನಲ್ಲಿ ಹೇಗೆ ಕಾಣಿಸಬೇಕು ಮೇಲಾಗಿ, ಎನ್ನುತ್ತಾರೆ.

ಒಂದು ತಿಂಗಳ ಹಿಂದೆ ನಡೆದ ಅನಾಹುತದ ಆಘಾತದಿಂದ ಶಾಂತಾ, ಅಮ್ಮಣಿ ಈವರೆಗೂ ಚೇತರಿಸಿಕೊಂಡಿಲ್ಲವಂತೆ, ಪಾಪ! ಟ್ರಂಕನ್ನು ನೀರಿನಲ್ಲಿ ಬಿಡುವ ಯೋಜನೆ ಇವರಿಗೆ ಗೊತ್ತಿರಬೇಕು; ಅದಕ್ಕೆ ತೆಕ್ಕೆ ಹಾಕಿಕೊಂಡಿದ್ದ ಇನ್ನೊಂದಲ್ಲ.

ಕುಮಟೆಯಲ್ಲಿ ಸಾಂತಪ್ಪನ ಸಾವಿಗಿಂತ, ಸಾಯುವ ಮೊದಲು ಅವನು ಮಾಡಿದ ಆಸ್ತಿಯ ವಿಲೇವಾರಿಯೇ ಹೆಚ್ಚಿನ ಸುದ್ದಿಯಾದಂತಿತ್ತು. ಅವನ ಮರಣದಿಂದ ಗಾಸಿಗೊಂಡಿದ್ದ ವನಿತಾ-ರಾಮಕೃಷ್ಣರಿಗೆ ಕೂಡ ಈ ವಿಲೇವಾರಿ ತುಸುವಾದರೂ ಸಮಾಧಾನ ತಂದಂತಿತ್ತು: ಪತ್ರದಲ್ಲಿ ಅದರ ವಿವರಗಳೇ ತುಂಬಿದ್ದವು. ತನ್ನ ಬದುಕಿನಲ್ಲಿ ಬಂದ ಹಲವರನ್ನು-ಸಣ್ಣವರು ದೊಡ್ಡವರು ಎನ್ನದೇ-ನೆನೆದಿದ್ದ. ಮೂವರು ಗಂಡುಮಕ್ಕಳನ್ನು ಬಿಟ್ಟು ಪ್ರತಿಯೊಬ್ಬರ ಪಾಲಿಗೆ ಏನಲ್ಲ ಏನನ್ನು ಬಿಟ್ಟಿದ್ದ. ತನ್ನ ಇಬ್ಬರೂ ಮೊಮ್ಮಕ್ಕಳ ಹೆಸರಿಗೆ ಶಿಕ್ಷಣಕ್ಕೆಂದು ಬ್ಯಾಂಕಿನಲ್ಲಿ ತಲಾ ಇಪ್ಪತ್ತೈದು ಸಾವಿರದ ಎಫ್.ಡಿ ಅದಕ್ಕಿಂತ ದೊಡ್ಡ ಮೊತ್ತಕ್ಕೆ ಅವುಗಳ ಅಪ್ಪನೇ ಅಡ್ಡ ಬಂದನಂತೆ. ಸೊಸೆಗೆ ಹೆಂಡತಿ ಬಿಟ್ಟು ಹೋದ ದಾಗಿನೆಗಳೊಳಗಿಂದ ನಾಲ್ಕು ಬಳೆಗಳು, ಒಂದು ಮಂಗಳಸೂತ್ರ. ಇಲ್ಲಿಯೂ ಇದಕ್ಕಿಂದ ಹೆಚ್ಚಿನದಕ್ಕೆ ಗಂಡನೇ ತಾಕೀತು ಮಾಡಿದನಂತೆ. ಬಗೀಜಾದ ಮಾಳಿ, ಚೌಕೀದಾರ್, ಡ್ರೈವರ್, ಹಿಂದೆ ಅಡುಗೆಯ ಕೆಲಸಕ್ಕಿದ್ದ ಹೆಂಗಸರು, ಸಂಸ್ಥೆಯ ಸಿಬ್ಬಂದಿಗಳು ಇತ್ಯಾದಿ-ಇವರಿಗೆಲ್ಲ ರೋಖು ಹಣ. ಶಾಂತಾಳ ಹೆಸರಿಗೆ ಮನೆ, ಬಗೀಜಾ, ಶಾಂತಾಳಿಗೆ, ಅಮ್ಮಣಿಗೆ-ಒಬ್ಬಳಿಗೆ ಸಾವಿರ, ಇನ್ನೊಬ್ಬಳಿಗೆ ಐದುನೂರು ಮಾಶಾಸನ ಸಿಗುವಂತೆ ಬ್ಯಾಂಕ್ ವ್ಯವಸ್ಥೆ. ಉಳಿದೆಲ್ಲ ಹಣ ಯಾವಯಾವ ಸಾಲೆಗಳಿಗೆ, ಕಾಲೇಜುಗಳಿಗೆ, ಆಸ್ಪತ್ರೆಗೆ, ಹೆಂಡತಿಗೆ ವಿಶ್ವಾಸವಿದ್ದ ದೇವಸ್ಥಾನಗಳಿಗೆ ಎಷ್ಟೆಷ್ಟು ಹೋಗಬೇಕು ಎನ್ನುವ ವಿವರಪೂರ್ಣವಾದ ಯೋಜನೆಯನ್ನು ವಕೀಲರ ಕೈಗೆ ಕೊಟ್ಟು, ಅದನ್ನು ಕಾರ್ಯಗತ ಮಾಡುವ ಸಂಪೂರ್ಣ ಅಧಿಕಾರವನ್ನು ಅವರಿಗೇ ಕೊಟ್ಟಿದ್ದನಂತೆ, ಎಂದು ಮುಂತಾಗಿ,

ವಿವರಗಳನ್ನು ಓದುತ್ತಿದ್ದಂತೆ, ‘ನನ್ನಂತಹನೂ ನಿವೃತ್ತಿಯನ್ನು ಸಹಿಸುವುದು ಸಾಧ್ಯವೆ?’ ಎಂದು ಕೇಳಿದ್ದು ನೆನಪಾಯಿತು. ಸಾಯುವುದನ್ನು ನಿಶ್ಚಯಿಸಿಯೇ ಇಷ್ಟೆಲ್ಲವನ್ನೂ ಮಾಡಿರಬೇಕೆಂದು ಅನುಮಾನವಾಯಿತು. ಮತ್ತೆ ಯಾರಿಗೆ ಗೊತ್ತು. ಇಷ್ಟೆಲ್ಲ ವ್ಯವಸ್ಥೆ ಮಾಡಿದಮೇಲೇ ಸಾಯುವ ವಿಚಾರ ಬಂದಿರಲೂಬಹುದು. ಒಂದರ ಬಾಲವನ್ನು ಇನ್ನೊಂದು ನುಂಗುತ್ತ ವೃತ್ತ ಸಣ್ಣದಾಗುತ್ತ ಹೋದಂತೆ, ಒಳಗಿನ ವಿಷದಂತೆ ಹೆಚ್ಚುತ್ತ ಹೋಯಿತು.

ಎಂಥ ಪಾತಾಳಗರಡಿಗೂ ನಿಲುಕದಷ್ಟು ಆಳವಾದ ನೀರಿನ ತಳದಲ್ಲಿ ತಂಗಿದ-ಬೀಗ ಹಾಕಿದ-ಟ್ರಂಕು, ಅದಕ್ಕೆ ತೆಕ್ಕೆ ಬಿದ್ದ ಹೆಣ, ಎರಡೂ ಮನುಷ್ಯಜೀವನದ ಇನ್ನೊಂದೇ ನೆಲೆಗೆ ಸೇರಿದ ನಿಗೂಢಗಳಿಗೆ ಸಂಕೇತಗಳಾಗಿ ಕಣ್ಣೆದುರು ನಿಂತಾಗ ಹಿಂದೆಂದೂ ಅನುಭವಿಸಿರದ ವಿಷಾದವೊಂದು ಅಂತಃಕರಣವನ್ನು ಆವರಿಸತೊಡಗಿತು.
*****
೧೯೯೯

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.