ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್
ಕನ್ನಡಕ್ಕೆ: ಎ. ಎನ್. ಪ್ರಸನ್ನ
ಉರ್ಸುಲಾ ಇದನ್ನು ಹೇಳಿದ ಮೊದಲನೆ ವ್ಯಕ್ತಿಯೇ ಮತ್ತು ಅವಳು ಕಾಗದವನ್ನು ತೋರಿಸಿದ ಮೊದಲನೆ ವ್ಯಕ್ತಿಯೇ ಯುದ್ಧ ಮುಗಿದ ಕಾಲದಿಂದ ಮಕೋಂದೋದ ಮೇಯರ್ ಆದ ಸಂಪ್ರದಾಯವಾದಿ ಜನರಲ್ ಹೊಸೆ ರಾಕೆಲ್ ಮೊಂಕಾದ. ಮೊಂಕಾದ, “ಈ ಅವ್ರೇಲಿಯಾನೋ ಸಂಪ್ರದಾಯವಾದಿ ಆಗಿಲ್ಲವಲ್ಲ, ಏನನ್ಯಾಯ” ಎಂದ. ಅವನು ಅವನನ್ನು ಮೆಚ್ಚಿಕೊಂಡಿದ್ದ. ಅನೇಕ ಸಂಪ್ರದಾಯವಾದಿ ಪ್ರಜೆಯಂತೆ ಹೊಸೆ ರಾಕೆಲ್ ಮೊಂಕಾದ ತನ್ನ ಪಾರ್ಟಿಯ ರಕ್ಷಣೆಗಾಗಿ ಯುದ್ಧದಲ್ಲಿ ಭಾಗಿಯಾಗಿದ್ದ ಮತ್ತು ಅವನು ಮಿಲಿಟರಿ ವೃತ್ತಿಯವನಲ್ಲದಿದ್ದರೂ ರಣರಂಗದಲ್ಲಿ ಜನರಲ್ ಪದನಾಮ ಪಡೆದಿದ್ದ. ಅದಕ್ಕೆ ವಿರುದ್ಧವಾಗಿ ಪಾರ್ಟಿಯ ಇತರೆ ಅನೇಕ ಸದಸ್ಯರಂತೆ ಅವನು ಮಿಲಿಟರಿ ವಿರೋಧಿಯಾಗಿಯಾಗಿದ್ದ. ಮಿಲಿಟರಿಯವರು ತತ್ವಹೀನರು, ಅತಿ ಹೆಚ್ಚಿನದಕ್ಕೆ ಯೋಜನೆ ರಚಿಸುವವರು, ವ್ಯವಸ್ಥೆ ಕುಸಿದಾಗ ತಮ್ಮ ಏಳಿಗೆಗಾಗಿ ಸಾಮಾನ್ಯರನ್ನು ಕನಿಷ್ಠರನ್ನಾಗಿ ಕಾಣುವುದಲ್ಲದೆ, ಹುಂಜದ ಚಪಲ ಮತ್ತು ಅದರ ಕಾದಾಟವನ್ನು ನೋಡಲು ಬಯಸುವರೆಂದು ಪರಿಗಣಿಸಿದ್ದ. ಅವನು ಒಂದು ಕಾಲದಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಭಯ ಹುಟ್ಟಿಸಿದ ಕಟ್ಟಾ ವಿರೋಧಿಯಾಗಿದ್ದ. ಅವನು ಸಮುದ್ರ ತೀರದ ವಿಸ್ತಾರವಿದ್ದ ಅಧಿಕಾರಿಗಳ ಅಭಿವೃದ್ಧಿಯ ಮೇಲೆ ತನ್ನ ಅಧಿಕಾರ ಹೇರುವುದರಲ್ಲಿ ಯಶಸ್ವಿಯಾಗಿದ್ದ. ಒಂದು ಸಲ ಅವನು ಶಕ್ತಿಯುತ ಸ್ಥಳವೊಂದನ್ನು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ದಳಕ್ಕೆ ಬಿಟ್ಟುಕೊಡಬೇಕಾದ ಸಂದರ್ಭದಲ್ಲಿ, ಅವನಿಗಾಗಿ ಎರಡು ಕಾಗದಗಳನ್ನು ಬರೆದಿಟ್ಟು ಹೋಗಿದ್ದ. ಒಂದು, ಯುದ್ಧವನ್ನು ಮತ್ತಷ್ಟು ಮಾನವೀಯವಾಗಿ ಮಾಡಬೇಕೆನ್ನುವ ಹೋರಾಟದಲ್ಲಿ ತನ್ನ ಜೊತೆ ಸೇರಬೇಕೆಂಬ ಆಹ್ವಾನ. ಮತ್ತೊಂದು, ಉದಾರವಾದಿ ಪ್ರಾಂತದಲ್ಲಿದ್ದ ತನ್ನ ಹೆಂಡತಿಗಾಗಿ ಮತ್ತು ಅವನು ಅದನ್ನು ನಿರ್ಧರಿತ ಸ್ಥಳಕ್ಕೆ ತಲುಪಿಸಬೇಕೆನ್ನುವ ವಿನಂತಿಯಿತ್ತು. ಅಲ್ಲಿಂದ ಮುಂದೆ ರಕ್ತ ಕೋಡಿ ಹರಿದ ಯುದ್ಧದಲ್ಲಿಯೂ ಪರಸ್ಪರ ಖೈದಿಗಳ ವಿನಿಮಯಕ್ಕಾಗಿ ಯುದ್ಧ ವಿರಾಮವನ್ನು ಇಬ್ಬರು ದಳಪತಿಗಳು ಏರ್ಪಾಡು ಮಾಡಿಕೊಳ್ಳುತ್ತಿದ್ದರು. ಅವು ಕೆಲವು ಹಬ್ಬದ ವಾತಾವರಣದ ಬಿಡುವುಗಳಾಗಿರುತ್ತಿದ್ದವು. ಜನರಲ್ ಮೊಂಕಾದ ಅಂಥವನ್ನು ಉಪಯೋಗಿಸಿಕೊಂಡು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಚೆಸ್ ಆಡುವುದನ್ನು ಹೇಳಿಕೊಟ್ಟ, ಅವರಿಬ್ಬರೂ ಒಳ್ಳೆಯ ಸ್ನೇಹಿತರಾದರು. ಅವರು ಪರಸ್ಪರ ಪಾರ್ಟಿಯಲ್ಲಿ ಇರುವ ಜನಪ್ರಿಯ ಅಂಶಗಳನ್ನು ಹೊಂದಿಸುವ ಮಿಲಿಟರಿಯವರು ಮತ್ತು ವೃತ್ತಿಪರ ರಾಜಕಾರಣಿಗಳ ಪ್ರಭಾವದಿಂದ ದೂರವಾದ ಒಡಂಬಡಿಕೆ ರೂಪಿಸುವ ಸಾಧ್ಯತೆಯ ಬಗ್ಗೆ ಕೂಡ ಯೋಚಿಸಿದ್ದರು. ಅಲ್ಲದೆ ಎರಡರ ಒಳ್ಳೆಯ ಅಂಶಗಳನ್ನು ಒಳಗೊಂಡ ಮಾನವೀಯ ಆಳ್ವಿಕೆಯನ್ನು ಸ್ಥಾಪಿಸುವುದನ್ನು ಕೂಡ ಯುದ್ಧ ಮುಗಿದ ನಂತರ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಶಾಶ್ವತವಾಗಿ ಬುಡಮೇಲು ಮಾಡಬೇಕೆನ್ನುವ ಸಣ್ಣ ವಲಯದಲ್ಲಿ ಮಚ್ಚುಮರೆಯಲ್ಲಿ ಓಡಾಡಿಕೊಂಡಿದ್ದರೆ ಜನರಲ್ ಮೊಂಕಾದ ಮಕೋಂದೋದ ಮ್ಯಾಜಿಸ್ಟ್ರೇಟ್ ಆಗಿ ನೇಮಕಗೊಂಡ. ಅವನು ಜನಸಾಮಾನ್ಯರ ಉಡುಪು ತೊಟ್ಟು, ಸೈನಿಕರ ಬದಲಿಗೆ ಶಸ್ತ್ರಧಾರಿಗಳಲ್ಲದ ಪೋಲೀಸರನ್ನು ನೇಮಿಸಿ ಕ್ಷಮಾದಾನ ಶಾಸನವನ್ನು ಜಾರಿಗೆ ತಂದ ಮತ್ತು ಯುದ್ಧದಲ್ಲಿ ಸತ್ತ ಕೆಲವು ಉದಾರವಾದಿಗಳ ಸಂಸಾರಕ್ಕೆ ಸಹಾಯ ಮಾಡಿದ. ಅವನು ಮಕೋಂದೋವನ್ನು ಮುನಿಸಿಪಾಲಿಟಿ ದರ್ಜೆಗೆ ಏರಿಸುವುದರಲ್ಲಿ ಯಶಸ್ವಿಯಾದ ಮತ್ತು ಅದಕ್ಕಾಗಿ ಅವನು ಅದರ ಮೊದಲ ಮೇಯರ್ ಆದ. ಅವನು ಮಕೋಂದೋದ ಜನರಿಗೆ ಯುದ್ಧ ಎನ್ನುವುದು ಕಳೆದು ಹೋದ ಅಸಂಗತವಾದ ದುಃಸ್ವಪ್ನ ಎಂದು ಭಾವಿಸುವಂತೆ ಮಾಡುವ ವಾತಾವರಣವನ್ನು ಸೃಷ್ಟಿಸಿದ. ಶ್ವಾಸಕೋಶದ ಕಾಯಿಲೆಯಿಂದ ಸತ್ತ ಫಾದರ್ ನಿಕನೋರ್ ಸ್ಥಾನಕ್ಕೆ ‘ಪಪ್‘ ಎಂದು ಕರೆಯಲ್ಪಡುತ್ತಿದ್ದ ಮೊದಲನೆ ಸಂಯುಕ್ತವಾದಿಗಳ ಯುದ್ಧದ ಅನುಭವಿ ಫಾದರ್ ಕಾರೊನೆಲ್ ಬಂದ. ಆಂಪೆರೋ ಮೊಸ್ಕೋತೆಯನ್ನು ಮದುವೆಯಾಗಿದ್ದ ಬ್ರುನೋ ಕ್ರೆಪ್ಸಿಯ ಆಟದ ಮತ್ತು ಸಂಗೀತ ವಾದ್ಯಗಳ ಅಂಗಡಿ ಅಭಿವೃದ್ಧಿಗೊಂಡಿತಲ್ಲದೆ ಅವನು ಸ್ಪೇನಿನ ಕಂಪನಿಗಳು ಪಟ್ಟಿಯಲ್ಲಿ ಸೇರಿಸಿದ್ದಂಥ ಥಿಯೇಟರ್ ಒಂದನ್ನು ಕಟ್ಟಿಸಿದ. ಅದಕ್ಕೆ ಮರದ ಬೆಂಚುಗಳು, ಗಿಣಿ ಮುಖವಾಡಗಳ ವೆಲ್‌ವೆಟ್ ಕರ್ಟನ್ನುಗಳಿದ್ದ ಭಾರಿ ಹಜಾರವಿತ್ತು ಮತ್ತು ಸಿಂಹದ ತಲೆಗಳ ಆಕಾರದಲ್ಲಿದ್ದ ಮೂರು ಬಾಕ್ಸ್‌ಗಳ ಮೂಲಕ ಟಿಕೆಟ್‌ಗಳನ್ನು ಕೊಡಲಾಗುತ್ತಿತ್ತು. ಸುಮಾರು ಅದೇ ಸಮಯದಲ್ಲಿ ಸ್ಕೂಲನ್ನು ಮತ್ತೆ ಕಟ್ಟಲಾಯಿತು. ಅದನ್ನು ದಾನ್ ಮೆಲ್‌ಚರ್ ಎಸ್ಕಲೋನ ಎಂಬ ಜೌಗು ಪ್ರದೇಶದಿಂದ ಕರೆದು ತಂದ ಹಳೆಯ ಅಧ್ಯಾಪಕರ ಸುಪರ್ದಿಗೆ ಬಿಡಲಾಯಿತು. ಅವನು ಸೋಮಾರಿ ವಿದ್ಯಾರ್ಥಿಗಳಿಗೆ ಅಂಗಳದಲ್ಲಿ ಹರವಿದ ಕಾದ ಸಣ್ಣದ ಮೇಲೆ ಮಂಡಿಯ ಮೇಲೆ ನಡೆಯುವಂತೆ ಮಾಡುತ್ತಿದ್ದ ಮತ್ತು ಕ್ಲಾಸ್ ರೂಮಿನಲ್ಲಿ ಮಾತಾಡುತ್ತಿದ್ದವರಿಗೆ ಅವರ ತಂದೆ ತಾಯಿಯ ಒಪ್ಪಿಗೆ ಪಡೆದು ಸುಡುಮೆಣಸಿನಕಾಯಿ ತಿನ್ನುವಂತೆ ಮಾಡುತ್ತಿದ್ದ. ಸಾಂತ ಸೋಫಿಯಾ ದೆಲಾ ಪಿಯಾದೆಸ್ ಅವಳ ಮಕ್ಕಳಾದ ಅವ್ರೇಲಿಯಾನೋ ಸೆಗುಂದೋ ಮತ್ತು ಹೊಸೆ ಅರ್ಕಾದಿಯೋ ಸೆಗುಂದೋ ಸ್ಲೇಟು, ಬಳಪ ಮತ್ತು ತಮ್ಮ ಹೆಸರು ಬರೆದ ಅಲ್ಯುಮಿನಿಯಮ್ ಬೋಗುಣಿ ಜೊತೆ ಕ್ಲಾಸ್ ರೂಮಿನಲ್ಲಿ ಕುಳಿತ ಮೊದಲಿಗರು. ತನ್ನ ತಾಯಿಯ ರೂಪವನ್ನು ಬಳುವಳಿ ಪಡೆದಿದ್ದ ರೆಮಿದಿಯೋಸ್ ಸುಂದರಿ ರೆಮಿದಿಯೋಸ್ ಎಂದು ಹೆಸರು ಗಳಿಸಲು ಪ್ರಾರಂಭಿಸಿದಳು. ಕಾಲ ಉರುಳುತ್ತಿದ್ದರ ಜೊತೆಗೆ, ಒಂದರ ಹಿಂದೆ ಮತ್ತೊಂದು ದುರಂತ ಸೇರಿದ ವ್ಯಥೆ ಇದ್ದರೂ, ಉರ್ಸುಲಾ ಮುದಿಯಾಗುವುದನ್ನು ನಿರೋಧಿಸಿದ್ದಳು. ಸಾಂತ ಸೋಫಿ ದೆಲಾ ಪಿಯಾದಾದ್‌ಳ ಬೆಂಬಲದಿಂದ ಉರ್ಸುಲಾ ತನ್ನ ಕೋಳಿ ಮಾಂಸ ಮಾರಾಟದ ಉದ್ಯಮದಲ್ಲಿ ಹೊಸ ಉಮೇದಿನಿಂದ ತೊಡಗಿಕೊಂಡಳು ಮತ್ತು ಕೆಲವೇ ವರ್ಷಗಳಲ್ಲಿ, ಅವಳ ಮಗ ಯುದ್ಧದಲ್ಲಿ ಕಳೆದ ಸಂಪತ್ತೆಲ್ಲವನ್ನೂ ಮರು ಪಡೆದಳಷ್ಟೇ ಅಲ್ಲದೆ, ಬೆಡ್‌ರೂಮಿನಲ್ಲಿ ಹೂತಿಟ್ಟ ಸೋರೆ ಬುರುಡೆಯಲ್ಲಿ ಮತ್ತೆ ಅಪ್ಪಟ ಬಂಗಾರವನ್ನು ತುಂಬಿ ಇಟ್ಟಳು. ಅವಳು, “ಎಲ್ಲಿ ತನಕ ನಂಗೆ ಜೀವ ಇರುತ್ತೋ ಈ ತಲೆ ಕೆಟ್ಟ ಮನೇಲಿ ಸಂಪತ್ತಿರತ್ತೆ” ಎನ್ನುತ್ತಿದ್ದಳು. ಅವ್ರೇಲಿಯಾನೋ ಹೊಸೆ ನಿಕರಾಗುವಾದಲ್ಲಿ ಜರ್ಮನಿಯ ನೌಕೆಯೊಂದರಲ್ಲಿ ಅದರ ಸಿಬ್ಬಂದಿ ಎಂದು ಸಹಿ ಮಾಡಿ ಒಡಂಬಡಿಕೆಯ ಸೈನ್ಯವನ್ನು ತ್ಯಜಿಸಿದ ಸಮಯದಲ್ಲಿ ಮತ್ತು ಇಂಡಿಯನ್‌ನ ಹಾಗೆ ಕಪ್ಪಾಗಿ ಉದ್ದ ಕೂದಲು ಬಿಟ್ಟುಕೊಂಡು, ಕುದುರೆಯಷ್ಟು ಬಲಿಷ್ಠನಾಗಿ ಹಾಗೂ ಅಮರಾಂತಳನ್ನು ಮದುವೆಯಾಗಬೇಕೆಂಬ ಒಳನಿರ್ಧಾರದಿಂದ ಅಡುಗೆ ಮನೆಯಲ್ಲಿ ಕಾಣಿಸಿಕೊಂಡಾಗ ವಸ್ತುಸ್ಥಿತಿ ಹಾಗೆಯೇ ಇತ್ತು.
ಅಮರಾಂತ ಅವನು ಒಳಗೆ ಬಂದದ್ದನ್ನು ನೋಡಿದಾಗ ಅವನೇನೂ ತಿಳಿಸದಿದ್ದರೂ ಅವೇಳೆಗೆ ತಕ್ಷಣ ಹಿಂತಿರುಗಿ ಬಂದಿದ್ದು ಏಕೆಂದು ಗೊತ್ತಾಯಿತು. ಆದರೆ ಒಂದು ಎರಡು ವಾರದ ನಂತರ, ಉರ್ಸುಲಾಳ ಜೊತೆಗಿದ್ದ ಅಮರಾಂತಳ ಕಡೆ ನೋಡಿ ಅವನು, “ನಾನು ಯಾವಾಗ್ಲೂ ನಿನ್ನ ಯೋಚ್ನೇಲೆ ಇದ್ದೆ” ಎಂದ. ಅವಳು ಅವನ ಕಣ್ಣು ತಪ್ಪಿಸಿದಳು. ಅವಳು ಆಕಸ್ಮಿಕ ಭೇಟಿಗೆ ಅವಕಾಶ ಕೊಡಲಿಲ್ಲ, ಉರ್ಸುಲಾ ಸುಂದರಿ ರೆಮಿದಿಯೋಸ್‌ಳಿಂದ ದೂರವಿರದಂತೆ ನೋಡಿಕೊಂಡಳು. ಅವಳ ಸಂಬಂಧಿ, “ಎಷ್ಟು ದಿನ ಕೈಗೆ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡಿರಬೇಕೆಂದು ಮಾಡಿದೀಯ” ಎಂದು ಕೇಳಿದ ದಿನ ತನಗೆ ಲಜ್ಜೆ ಆವರಿಸಿದ್ದಕ್ಕಾಗಿ ಅವಳಿಗೆ ನಾಚಿಕೆಯಾಗಿತ್ತು. ಏಕೆಂದರೆ ಅದನ್ನು ಅವಳು ತನ್ನ ಕನ್ಯತ್ವ ಕುರಿತದ್ದೆಂದು ತಿಳಿದುಕೊಂಡಳು. ಅವನು ಬಂದ ಹೊಸದರಲ್ಲಿ ಅವಳು ತನ್ನ ಬೆಡ್‌ರೂಮಿನ ಬಾಗಿಲನ್ನು ತೆಗೆಯುತ್ತಿರಲಿಲ್ಲ. ಆದರೆ ಪಕ್ಕದ ರೂಮಿನ ಅನೇಕ ರಾತ್ರಿ ಅವನ ಶಾಂತ ಉಸಿರಾಟ ಕೇಳಿಸುತ್ತಿದ್ದರಿಂದ ಅವಳು ಎಚ್ಚರಿಕೆ ತೆಗೆದುಕೊಳ್ಳುವುದನ್ನು ಕೈಬಿಟ್ಟಳು. ಒಂದು ದಿನ ಬೆಳಿಗ್ಗೆ, ಊರಿಗೆ ಬಂದು ಎರಡು ತಿಂಗಳಾದ ನಂತರ ಅವನು ತನ್ನ ಬೆಡ್‌ರೂಮಿಗೆ ಬಂದದ್ದನ್ನು ಕೇಳಿಸಿಕೊಂಡಳು. ಅವಳು ಭಾವಿಸಿದ್ದಂತೆ ಓಡಿ ಹೋಗುವ ಅಥವಾ ಕೂಗುವ ಬದಲು ತನ್ನೊಳಗೆ ಮೃದು ಭಾವ ತುಂಬಲು ಬಿಟ್ಟಳು. ಅವನು ಚಿಕ್ಕ ಹುಡುಗನಾಗಿದ್ದಾಗ ಯಾವಾಗಲೂ ಮಾಡಿದಂತೆ ಸೊಳ್ಳೆ ಪರದೆಯ ಒಳಗೆ ನುಸುಳಿ ಬಂದದ್ದು ಅವಳಿಗೆ ಗೊತ್ತಾಯಿತು. ಅವನು ಸಂಪೂರ್ಣ ಬೆತ್ತಲಾಗಿದ್ದಾನೆಂದು ತಿಳಿದಾಗ ಅವಳಿಗೆ ತಣ್ಣನೆಯ ಬೆವರು ಮತ್ತು ಹಲ್ಲುಗಳ ಕಟಕಟವನ್ನು ತಡೆಯಲಾಗಲಿಲ್ಲ ಅವಳು ಕುತೂಹಲದಿಂದ ಉಸುರುಗಟ್ಟಿ, “ಹೊರಟು ಹೋಗು, ಇಲ್ದಿದ್ರೆ ಕೂಗಿಕೊಳ್ತೀನಿ” ಎಂದು ಪಿಸುಗುಟ್ಟಿದಳು. ಆದರೆ ಆಗ ಅವ್ರೇಲಿಯಾನೋ ಹೊಸೆಗೆ ಏನು ಮಾಡಬೇಕೆಂದು ತಿಳಿದಿತ್ತು. ಏಕೆಂದರೆ ಅವನು ಚಿಕ್ಕ ಹುಡುಗನಾಗಿರದೆ ದಂಡಿನ ಪಾಳೆಯದ ಪ್ರಾಣಿಯಾಗಿದ್ದ. ಆ ರಾತ್ರಿಯಿಂದ ಮಂಕಾದ, ಪರಿಣಾಮವಿರದ ಘರ್ಷಣೆಗಳು ಮತ್ತೆ ಪ್ರಾರಂಭವಾದವು. ಇದೇ ರೀತಿ ಮುಂಜಾವಿನ ತನಕ ಮುಂದುವರಿಯುತ್ತಿತ್ತು. ಅಮರಾಂತ ಸುಸ್ತಾಗಿ, “ನಾನು ನಿನ್ನ ಚಿಕ್ಕಮ್ಮ… ಹೆಚ್ಚು ಕಮ್ಮಿ ತಾಯಿಯ ಹಾU. ಕೇವಲ ವಯಸ್ನಿಂದ ಅಲ್ಲ. ಆದ್ರೆ ನಾನು ನಿನ್ನ ಬೆಳೆಸಿದ್ದೀನಿ. ಅದೊಂದನ್ನೇ ನಾನು ಮಾಡಿರೋದು” ಎಂದು ಮುಲುಗುಟ್ಟುತ್ತಿದ್ದಳು. ಅವ್ರೇಲಿಯಾನೋ ಬೆಳಿಗ್ಗೆ ಹರಿಯುತ್ತಲೆ ಎದ್ದು ಹೋಗುತ್ತಿದ್ದ ಮತ್ತು ಮಾರನೆ ದಿನ ಬೆಳಿಗ್ಗೆ ಬೇಗ ಬರುತ್ತಿದ್ದ. ಅವಳು ಬಾಗಿಲು ಹಾಕಿಕೊಂಡಿರದ ಪುರಾವೆಯಿಂದ ಅವನು ಪ್ರತಿ ಬಾರಿ ಹೆಚ್ಚು ಉತ್ಸುಕನಾಗಿರುತ್ತಿದ್ದ. ಅವನು ಅವಳನ್ನು ಬಯಸುವುದನ್ನು ಒಂದು ಕ್ಷಣ ನಿಲ್ಲಿಸಿರಲಿಲ್ಲ. ಅವನು ವಶಪಡಿಸಿಕೊಂಡ ಊರುಗಳ ಕತ್ತಲ ಕೋಣೆಗಳಲ್ಲಿ, ಮುಖ್ಯವಾಗಿ ತುಚ್ಛವಾದ ಸ್ಥಳಗಳಲ್ಲಿ ಮತ್ತು ಗಾಯಾಳುಗಳ ಬ್ಯಾಂಡೇಜಿನ ಒಣಗಿದ ರಕ್ತದ ವಾಸನೆಯಲ್ಲಿ, ಸಾವಿನ ಹಠಾತ್ ಭೀಕರತೆಯ ಕ್ಷಣದಲ್ಲಿ, ಎಲ್ಲ ವೇಳೆ ಮತ್ತು ಸ್ಥಳದಲ್ಲಿ ಅವಳನ್ನು ಕಂಡಿದ್ದ. ಅವನು ಅವಳ ನೆನಪನ್ನು ತೊಡೆದು ಹಾಕಲು ಅವಳಿಂದ ದೂರ ಹೋಗಿದ್ದ. ಕೇವಲ ಅಂತರದಿಂದಲ್ಲದೆ ದಿಗ್ಬ್ರಮೆಗೊಳಿಸುವ ಆದೇಶದಿಂದ ಅವನ ಸಂಗಾತಿಗಳು ಅದನ್ನು ಸಾಹಸವೆಂದು ತಿಳಿದುಕೊಂಡರು. ಆದರೆ ಯುದ್ಧದ ಹೊಲಸಿನಲ್ಲಿ ಹೊರಳಾಡುತ್ತಿದ್ದಷ್ಟ್ಟೂ, ಅಮರಾಂತಳ ಕಲ್ಪನೆ ಹೆಚ್ಚಾಗುತ್ತಿತ್ತು. ಇಡೀ ಯುದ್ಧ ಅಷ್ಟೇ ಹೆಚ್ಚಾಗಿ ಅಮರಾಂತಳನ್ನು ಹೋಲುತ್ತಿತ್ತು, ಹಾಗಾಗಿ ಅವನು ತನ್ನ ಸಾವಿನಿಂದ ಅವಳನ್ನು ಕೊಲ್ಲುವ ಮಾರ್ಗವನ್ನು ಹುಡುಕುತ್ತ ತಲೆ ತಪ್ಪಿಸಿಕೊಂಡು ಯಾತನೆ ಪಡುತ್ತಿದ್ದ. ಆಗ ಅವನಿಗೆ ಯಾವನೋ ಮುದುಕ ಸಂಬಂಧಿಯಾದ ತನ್ನ ಚಿಕ್ಕಮ್ಮನನ್ನೇ ಮದುವೆಯಾಗಿ, ಅವನ ಮಗನೇ ಮೊಮ್ಮಗನಾಗಿ ಕೊನೆಗೊಂಡ ಕಥೆಯನ್ನು ಹೇಳಿದ್ದು ತಿಳಿದು ಬಂತು.
ಅವನು ದಿಗ್ಭ್ರಮೆಗೊಂಡು, “ಯಾರೇ ಆದ್ರೂ ಅವನ ಚಿಕ್ಕಮ್ಮನ್ನ ಮದ್ವೆ ಆಗ್ಬಹುದಾ?” ಎಂದು ಕೇಳಿದ.
ಒಬ್ಬ ಸೈನಿಕ, “ಅವ್ನು ಹಾಗೇ ಮಾಡಿದ್ದು. ಅಷ್ಟೇ ಅಲ್ಲ, ನಾವು ಈ ಯುದ್ಧಾನ ಯಾರೇ ಆಗ್ಲಿ ಅವ್ನ ತಾಯಿಯನ್ನೇ ಮದ್ವೆ ಆಗ್ಬಹುದು ಅನ್ನೋದಕ್ಕೆ, ಪಾದ್ರಿಗಳ ವಿರುದ್ಧ ಹೋರಾಡ್ತೊರೋದು” ಎಂದು ಉತ್ತರಿಸಿದ.
ಎರಡು ವಾರಗಳ ನಂತರ ಅವನು ಅದನ್ನು ತೊರೆದು ಬಂದ. ಅಮರಾಂತ ಅವನ ನೆನಪಿಗಿಂತಲೂ ಹೆಚ್ಚಾಗಿ ಸೊರಗಿದ ಹಾಗೆ, ಹೆಚ್ಚು ನಾಚಿಕೆ ಹಾಗೂ ದುಃಖಿತಳಾಗಿ ಮತ್ತು ನಿಜವಾಗಲೂ ತನ್ನ ಪ್ರಬುದ್ಧತೆಯ ಕೊನೆಯ ತಿರುವಿನಲ್ಲಿರುವಂತೆ, ಆದರೆ ಬೆಡ್‌ರೂಮಿನ ಕತ್ತಲಲ್ಲಿ ಎಂದಿಗಿಂತಲೂ ಹೆಚ್ಚು ತಾಪಗೊಂಡವಳಂತೆ, ಅಲ್ಲದೆ ಅವಳ ಪ್ರತಿರೋಧದಲ್ಲಿ ಉಗ್ರತೆ ಹೆಚ್ಚಾದಂತೆ ಅವನಿಗೆ ಕಂಡಿತು. ಅಮರಾಂತ ಅವನಿಗೆ, “ನೀನೊಬ್ಬ ರಾಕ್ಷಸ” ಎಂದು ಅವನ ಕೆರಳುವಿಕೆಯಿಂದ ಕಿರುಕುಳಗೊಂಡು ಹೇಳುತ್ತಿದ್ದಳು. ಜೊತೆಗೆ, “ನೀನು ಪೋಪ್‌ನ ಒಪ್ಪಿಗೆ ಇಲ್ದೆ ನಿನ್ನ ಚಿಕ್ಕಮ್ಮಂಗೆ ಹೀಗೆಲ್ಲ ಮಾಡೋ ಹಾಗಿಲ್ಲ” ಎಂದಳು. ಅವ್ರೇಲಿಯಾನೋ ಹೊಸೆ ಅವಳು ಸಹಕರಿಸುವುದಕ್ಕಾಗಿ, ತನ್ನ ಮಂಡಿಯ ಮೇಲೆ ನಡೆದುಕೊಂಡು ಯೂರೋಪಿಗೆ ಹೋಗಿ, ಪಾದ್ರಿಗಳ ಚಪ್ಪಲಿಗಳಿಗೆ ಮುತ್ತಿಕ್ಕುವುದಾಗಿ ಮಾತು ಕೊಟ್ಟ.
ಅಮರಾಂತ, “ಅದಷ್ಟೇ ಅಲ್ಲ, ಮಕ್ಕಳು ಹುಟ್ಟಿದ್ರೂ, ಅವಕ್ಕೆ ಹಂದಿ ಬಾಲ ಇರತ್ತೆ” ಎಂದು ತಿರುಗೇಟು ಹಾಕಿದಳು.
ಅವನು ಅವಳ ಎಲ್ಲ ವಾದಕ್ಕೂ ಕಿವುಡನಾಗಿದ್ದ.
ಅವನು, “ಅವು ಬರಿ ಮೂಳೆ ಇಟ್ಕೊಂಡು ಹುಟ್ಟಿದರೂ ನಾನು ಯೋಚ್ನೆ ಮಾಡಲ್ಲ” ಎಂದ.
ಒಂದು ದಿನ ಬೆಳಿಗ್ಗೆ ತಡೆ ಹಿಡಿದ ಗಂಡಸುತನದ ಅಸಾಧ್ಯ ನೋವಿಗೆ ತುತ್ತಾಗಿ ಅವನು ಕತಾವುರೆಯ ಸ್ಟೋರಿಗೆ ಹೋದ. ಅವನಿಗೆ ವಿಶ್ವಾಸದಿಂದ ಕಮ್ಮಿ ದುಡ್ಡಿಗೆ ಜೋತು ಬಿದ್ದ ಮೊಲೆಗಳ ಹೆಂಗಸೊಬ್ಬಳು ಕಂಡು ಅವಳು ಅವನ ಹೊಟ್ಟೆಯೊಳಗಿನ ಉರಿಯನ್ನು ಸ್ವಲ್ಪ ಕಾಲ ಶಮನಮಾಡಿದಳು. ಅವನು ಅಮರಾಂತಳ ಬಗ್ಗೆ ನಿರ್ಲಕ್ಷ ತೋರಿಸುವ ಪ್ರಯೋಗ ಮಾಡಿದ. ಅವಳು ಹೊರಾಂಗಳದಲ್ಲಿ, ಹೊಲಿಗೆ ಯಂತ್ರದಲ್ಲಿ ಮೆಚ್ಚತಕ್ಕ ನಿಪುಣತೆಯನ್ನು ಕೆಲಸ ಮಾಡುವುದನ್ನು ನೋಡುತ್ತಿದ್ದ. ಆದರೆ ಅವಳ ಜೊತೆ ಮಾತನಾಡುತ್ತಿರಲಿಲ್ಲ. ಅಮರಾಂತ ತಾನು ಬದುಕಿದೆ ಎಂದುಕೊಂಡಳು. ತಾನೇಕೆ ಈಗ ಮತ್ತೆ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಕುರಿತು ಯೋಚಿಸುತ್ತಿದ್ದೇನೆ ಅಲ್ಲದೆ ಮಧ್ಯಾಹ್ನದಲ್ಲಿ ಆಡುತ್ತಿದ್ದ ಚೀನೀಯರ ಚದುರಂಗವನ್ನು ನೋವಿನಿಂದ ನೆನಪಿಸಿಕೊಳ್ಳುತ್ತಿರುವುದು ಏಕೆ ಎಂದು ಅವಳಿಗೇ ಅರ್ಥವಾಗಿರಲಿಲ್ಲ. ಜೊತೆಗೆ ತನ್ನ ಬೆಡ್‌ರೂಮಿನಲ್ಲಿ ಅವನನ್ನು ಬಯಸುತ್ತಿರುವುದು ಏಕೆ ಎನ್ನುವುದು ಕೂಡ. ಅವ್ರೇಲಿಯಾನೋ ಹೊಸೆಗೆ ತನ್ನ ನಿರ್ಲಕ್ಷದ ತೋರಿಕೆಯಿಂದ ರಾತ್ರಿಯ ಸಮಯದಲ್ಲಿ ಕಳೆದುಕೊಂಡದ್ದು ಎಷ್ಟೆಂದು ಅರಿವಾಗಲಿಲ್ಲ. ಅವನು ಮತ್ತೆ ಅಮರಾಂತಳ ರೂಮಿಗೆ ಹೋದ. ಅವಳು ಯಾವುದೇ ಮುಲಾಜಿಲ್ಲದೆ ಖಡಾಖಂಡಿತವಾಗಿ ಅವನನ್ನು ನಿರಾಕರಿಸಿದಳು ಮತ್ತು ಬೆಡ್‌ರೂಮಿನ ಬಾಗಿಲನ್ನು ಮತ್ತೆಂದೂ ಹಾಕದೆ ಇರಲಿಲ್ಲ.
ಅವ್ರೇಲಿಯಾನೋ ಹೊಸೆ ಹಿಂತಿರುಗಿ ಬಂದು ಕೆಲವು ತಿಂಗಳ ನಂತರ ಮಲ್ಲಿಗೆ ಸುವಾಸನೆ ದ್ರವವನ್ನು ಹಚ್ಚಿಕೊಂಡು ಚುರುಕಾಗಿದ್ದ ಹೆಂಗಸೊಬ್ಬಳು, ಐದು ವರ್ಷದ ಹುಡುಗನ ಜೊತೆ ಮನೆಯ ಮುಂದೆ ಕಾಣಿಸಿಕೊಂಡಳು. ಆ ಹುಡುಗ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಮಗನೆಂದು ಮತ್ತು ಅವನಿಗೆ ಹೆಸರಿಡಲು ಉರ್ಸುಲಾ ಳಿ ಕರೆದುಕೊಂಡು ಬಂದಿರುವುದಾಗಿ ತಿಳಿಸಿದಳು. ಹೆಸರಿಲ್ಲದ ಆ ಹುಡುಗನ ಹುಟ್ಟಿನ ಮೂಲವನ್ನು ಯಾರೂ ಅನುಮಾನಿಸಲಿಲ್ಲ. ಏಕೆಂದರೆ ಅವನು ಮೊಟ್ಟ ಮೊದಲ ಐಸ್ ನೋಡಲು ಹೋದ ಸಮಯದಲ್ಲಿ ಕರ್ನಲ್ ಇದ್ದ ಹಾಗೆಯೇ ಇದ್ದ. ಆ ಹುಡುಗ ಕಣ್ಣು ತೆರೆದುಕೊಂಡೇ ಹುಟ್ಟಿದನೆಂದೂ, ಜನರ ಕಡೆ ದೊಡ್ಡವರಂತೆ ಅಳೆಯುವ ಹಾಗೆ ನೋಡುತ್ತಾನೆಂದೂ ಮತ್ತು ವಸ್ತುಗಳ ಕಡೆ ಕಣ್ಣು ಮಿಟುಕಿಸದೆ ನೋಡುವ ರೀತಿಯಿಂದ ತನಗೆ ಭಯವಾಗಿದೆಯೆಂದು ಆ ಹೆಂಗಸು ಹೇಳಿದಳು. ಉರ್ಸುಲಾ, “ಅವನ ಹಾಗೆಯೇ ಇದಾನೆ. ಒಂದೇ ವ್ಯತ್ಯಾಸ ಅಂದ್ರೆ, ಸುಮ್ನೆ ನೋಡ್ತಿದ್ದ ಹಾಗೆ ಕುರ್ಚಿಗಳನ್ನ ಅವನು ಅಲ್ಲಾಡಿಸ್ತಿದ್ದ ಹಾಗೆ, ಇವನ್ಗೆ ಆಗ್ತಿಲ್ಲ ಅಷ್ಟೆ” ಎಂದಳು. ಅವನಿಗೆ ಅವ್ರೇಲಿಯಾನೋ ಹೆಸರಿನೊಂದಿಗೆ ಅವನ ತಾಯಿಯ ಹೆಸರನ್ನು ಕೊನೆಯಲ್ಲಿ ಸೇರಿಸಿದರು. ಏಕೆಂದರೆ ತಂದೆಯಾದವನು ಬಂದು ಅವನನ್ನು ಗುರುತು ಹಿಡಿಯುವ ತನಕ ಅವನ ಹೆಸರನ್ನು ಇಟ್ಟುಕೊಳ್ಳುವಂತಿಲ್ಲ ಎಂದು ಕಾನೂನು ನಿಷೇಧಿಸಿತ್ತು. ಜನರಲ್ ಮೊಂಕಾದ ಅವನ ಜವಾಬ್ದಾರಿ ವಹಿಸಿಕೊಂಡ. ಅಮರಾಂತ ಅವನು ಹೋಗಲಿ, ತಾನು ಅವನು ಬೆಳೆಯುವುದನ್ನು ನೋಡಿಕೊಳ್ಳುವುದಾಗಿ ಒತ್ತಾಯಿಸಿದರೂ, ಅವನ ತಾಯಿ ಒಪ್ಪಲಿಲ್ಲ.
ಉರ್ಸುಲಾಗೆ ಆ ಸಮಯದಲ್ಲಿ ಕೋಳಿಗಳನ್ನು ಒಳ್ಳೆಯ ತಳಿಗೆಂದು ಬಿಡುವ ಹಾಗೆ ಯೋಧರ ಬೆಡ್‌ರೂಮಿಗೆ ಕನ್ಯೆಯರನ್ನು ಕಳಿಸಿಕೊಡುವ ಪದ್ಧತಿ ಇರುವುದು ಗೊತ್ತಿರಲಿಲ್ಲ. ಆದರೆ ಒಂದು ವರ್ಷದ ಅವಧಿಯಲ್ಲಿ ಅವಳಿಗೆ ಅದು ಗೊತ್ತಾಯಿತು. ಆ ವರ್ಷದಲ್ಲಿ ಹೆಸರಿಡಬೇಕೆಂದು ಇನ್ನೂ ಒಂಬತ್ತು ಜನ ಹುಡುಗರನ್ನು ಅವಳ ಮನೆಗೆ ಕರೆದುಕೊಂಡು ಬಂದರು. ಎಲ್ಲರಿಗಿಂತ ಹೆಚ್ಚು ವಯಸ್ಸಾದ ವಿಚಿತ್ರ ಕಪ್ಪಗೆ ಹಸಿರುಗಣ್ಣಿನ ತಂದೆಯ ಹಾಗೆ ಸ್ವಲ್ಪವೂ ಇರದ ಹುಡುಗನಿಗೆ, ಹತ್ತು ವರ್ಷಕ್ಕಿಂತ ಹೆಚ್ಚಾಗಿತ್ತು. ಎಲ್ಲ ವಯಸ್ಸಿನ, ಎಲ್ಲ ಬಣ್ಣದ ಮಕ್ಕಳನ್ನು ಕರೆದುಕೊಂಡು ಬಂದರು ಮತ್ತು ಎಲ್ಲರಲ್ಲಿ ಇರದ ನಿಸ್ಸಂಗತ್ವ ಗುಣ ಅವರ ಸಂಬಂಧದ ಬಗ್ಗೆ ಯಾವುದೇ ಅನುಮಾನ ಬರದಂತೆ ಮಾಡಿತ್ತು. ಕೇವಲ ಇಬ್ಬರು ಮಾತ್ರ ವಿಶೇಷವಾಗಿದ್ದರು. ವಯಸ್ಸಿಗಿಂತ ಹೆಚ್ಚಿಗೆ ಬೆಳೆದಿದ್ದವನೊಬ್ಬ ಚೀನೀ ಹೂವಿನ ಕುಂಡಗಳನ್ನು ಪುಡಿಪುಡಿ ಮಾಡುತ್ತಿದ್ದ. ಏಕೆಂದರೆ ಅವನ ಕೈಗಳಿಗೆ ಏನನ್ನಾದರೂ ಮುಟ್ಟಿದರೆ ಒಡೆಯುವ ಗುಣವಿದ್ದಂತೆ ಕಾಣುತ್ತಿತ್ತು. ಇನ್ನೊಬ್ಬನಿಗೆ ಕೆಂಗೂದಲಿನ ಅವನ ತಾಯಿಯ ಹಾಗೆ ಕಾಂತಿಯುಕ್ತ ಕಣ್ಣುಗಳಿತ್ತು ಮತ್ತು ಆಕೆಯ ಹಾಗೆ ಕೂದಲನ್ನು ಉದ್ದವಾಗಿ, ಹೆಂಗಸಿನ ಹಾಗೆ ಗುಂಗುರು ಗುಂಗುರಾಗಿ ಬೆಳೆಯುವಂತೆ ಬಿಟ್ಟಿದ್ದ. ಅವನು ಅಲ್ಲಯೇ ಇದ್ದು ಮನೆಗೆ ತೀರ ಪರಿಚಿತನಾದವನಂತೆ ಒಳಗೆ ಬಂದ ಮತ್ತು ನೇರವಾಗಿ ಉರ್ಸುಲಾಳ ಬೆಡ್‌ರೂಮಿಗೆ ಹೋಗಿ, “ನಂಗೆ ಬೇಕು . .ಕುಣಿಯೋ ಹುಡುಗಿ ಬೇಕು” ಎಂದು ಹಠ ಹಿಡಿದ. ಉರ್ಸುಲಾ ನಿಬ್ಬೆರಗಾದಳು. ಅವಳು ಕಪಾಟು ತೆಗೆದು, ಮೆಲ್‌ಕಿಯಾದೆಸ್‌ನ ಕಾಲದಿಂದ ಅಲ್ಲಿ ಬಿದ್ದಿದ್ದ ಹಳೆಯ ಧೂಳು ಹಿಡಿದ ವಸ್ತುಗಳಲ್ಲಿ ಹುಡುಕಿ, ಉದ್ದನೆ ಕಾಲು ಚೀಲದಲ್ಲಿ ಸುತ್ತಿದ್ದ ಪಿಯತ್ರೋ ಕ್ರೆಪ್ಸಿ ಹಿಂದೆ ಮನೆಗೆ ತಂದಿದ್ದ ಯಾಂತ್ರಿಕ ಹುಡುಗಿಯನ್ನು ಪತ್ತೆ ಮಾಡಿದಳು. ಅದನ್ನು ಎಲ್ಲರೂ ಮರೆತು ಬಿಟ್ಟಿದ್ದರು. ಹನ್ನೆರಡು ವರ್ಷಗಳ ಒಳಗೆ ಕರ್ನಲ್ ಯುದ್ಧದಲ್ಲಿ ಮುಳುಗಿದ್ದಾಗ ಹುಟ್ಟಿಸಿದ ಹದಿನೇಳು ಗಂಡು ಮಕ್ಕಳಿಗೆ, ಅವ್ರೇಲಿಯಾನೋ ಮತ್ತು ಅವರವರ ತಾಯಂದಿರ ಹೆಸರುಗಳನ್ನು ಜೋಡಿಸಿ ಹೆಸರಿಟ್ಟರು. ಪ್ರಾರಂಭದಲ್ಲಿ ಉರ್ಸುಲಾ ಅವರ ಪಾಕೆಟ್ಟುಗಳಿಗೆ ದುಡ್ಡು ತುಂಬುತ್ತಿದ್ದಳು ಮತ್ತು ಅಮರಾಂತ ಅಲ್ಲೇ ಇರಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಳು. ಆದರೆ ಕೊನೆಗೆ ಅವರಿಗೆ ಕೊಡುಗೆಗಳನ್ನು ಕೊಡುತ್ತ ಮತ್ತು ಜವಾಬ್ದಾರಿ ವಹಿಸಿಕೊಳ್ಳುವುದರಷ್ಟಕ್ಕೆ ಮಿತಿಗೊಳಿಸಿದರು. ಉರ್ಸುಲಾ, “ಅವರಿಗೆ ಹೆಸರಿಟ್ಟು ನಮ್ಮ ಕರ್ತವ್ಯ ನಾವು ಮಾಡಿದೀವಿ” ಎಂದು ಒಂದು ಖಾತೆಯಲ್ಲಿ ಮಕ್ಕಳ ತಾಯಿ, ಅವು ಹುಟ್ಟಿದ ಸ್ಥಳ ಮತ್ತು ತಾ;ರೀಖನ್ನು ಬರೆದಿಡುತ್ತ, “ಅವ್ರೇಲಿಯಾನೋಗೆ ಎಲ್ಲ ಚೊಕ್ಕವಾಗಿಡ್ಬೇಕು, ಯಾಕೆಂದರೆ ಅವನ್ಗೆ ವಾಪಸು ಬಂದ ಮೇಲೆ ನಿರ್ಧಾರ ಮಾಡಕ್ಕಾಗುತ್ತೆ” ಎಂದು ಹೇಳುತ್ತಿದ್ದಳು. ಊಟ ಮಾಡುವಾಗ ಒಮ್ಮೆ ಅವಳು, ಜನರಲ್ ಮೊಂಕಾದಗೆ, ಹೊಂದಾಣಿಕೆ ಇಲ್ಲದೆ ಸಂತಾನ ಹೆಚ್ಚುತ್ತಿರುವುದರ ಬಗ್ಗೆ ಟೀಕೆ ಮಾಡುತ್ತ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬೇಗ ಹಿಂತಿರುಗಿ ಬಂದು ಅವನ ಎಲ್ಲ ಮಕ್ಕಳನ್ನು ಮನೆಯಲ್ಲಿ ಒಗ್ಗೂಡಿಸಬೇಕೆಂಬ ತನ್ನ ಅಭಿಲಾಷೆಯನ್ನು ವ್ಯಕ್ತಪಡಿಸಿದಳು.
ಜನರಲ್ ಮೊಂಕಾದ, “ನೀವೇನೂ ಯೋಚ್ನೆ ಮಾಡ್ಬೇಡಿ. ನೀವು ಅಂದುಕೊಂಡಿರೋದಕ್ಕಿಂತ್ಲೂ ಮುಂಚೆ ಬರ್‍ತಾನೆ” ಎಂದು ಗುಟ್ಟು ಬಿಡದೆ ಹೇಳಿದ.
ಜನರಲ್ ಮೊಂಕಾದಾಗೆ ಗೊತ್ತಿದ್ದರೂ ಊಟದ ಸಮಯದಲ್ಲಿ ಹೊರಗೆಡವದ ವಿಷಯವೆಂದರೆ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅಲ್ಲಿಯ ತನಕ ಪ್ರಾರಂಭಿಸಿದ ಕ್ರೂರವಾದ ದಂಗೆಗಿಂತ ಹೆಚ್ಚು ದೀರ್ಘವಾz, ತೀವ್ರ ಸುಧಾರಣವಾದದ್ದರ ನೇತೃತ್ವವನ್ನು ವಹಿಸಿಕೊಳ್ಳುವ ಮಾರ್ಗದಲ್ಲಿದ್ದಾನೆ, ಎಂದು.
ಮೊದಲ ಯುದ್ಧದ ಮುಂಚಿನಂತೆಯೇ ಮತ್ತೆ ವಾತಾವರಣ ಬಿಗಿಯಾಯಿತು. ಸ್ವತಃ ಮೇಯರ್ ವ್ಯವಸ್ಥೆಗೊಳಿಸಿದ ಹುಂಜದ ಕಾಳಗವನ್ನು ನಿಷೇಧಿಸಲಾಯಿತು. ಕಾವಲು ಪಡೆಯ ದಂಡನಾಯಕನಾದ ಕರ್ನಲ್ ಅಕ್ವಿಲಿಸ್ ರಿಕಾದೊ ಮುನಿಸಿಪಲ್ ಅಧಿಕಾರದ ಚಲಾವಣೆಯನ್ನು ವಹಿಸಿಕೊಂಡ. ಉದಾರವಾದಿಗಳು ಅವನನ್ನು ಹುಚ್ಚೆಬ್ಬಿಸುವ ಮನುಷ್ಯನಂತೆ ಭಾವಿಸಿದರು. ಉರ್ಸುಲಾ ಅವ್ರೇಲಿಯಾನೋ ಹೊಸೆಗೆ, “ಏನೋ ಅನಾಹುತ ಆಗೋದ್ರಲ್ಲಿದೆ. ಸಾಯಂಕಾಲ ಆರು ಗಂಟೆ ಆದ ಮೇಲೆ ರಸ್ತೆಗೆ ಹೋಗ್ಬೇಡ” ಎಂದಳು. ಹೇಳಿದ್ದೆಲ್ಲ ವ್ಯರ್ಥವಾಯಿತು. ಅವ್ರೇಲಿಯಾನೋ ಹೊಸೆ, ಹಿಂದೆ ಅರ್ಕಾದಿಯೋ ಇದ್ದ ಹಾಗೆ ಅವಳಿಂದ ದೂರವಾಗಿದ್ದ. ಅವನು ಮನೆಗೆ ಹಿಂತಿರುಗಿ ಬಂದ ಮೇಲೆ ದಿನನಿತ್ಯದ ಅಗತ್ಯಗಳಿಗೆ ಕಾಳಜಿ ಇಲ್ಲದಂತಾಗಿ, ಅವನ ಚಿಕ್ಕಪ್ಪ ಹೊಸೆ ಅರ್ಕಾದಿಯೋನಂತೆ ಸೋಮಾರಿಯಾಗುವ ಹಾಗೆ ಮಾಡಿತ್ತು. ಅವನಿಗೆ ಅಮರಾಂತಳ ಕಡೆ ಇದ್ದ ವ್ಯಾಮೋಹ ಯಾವುದೇ ಗಾಯ ಮಾಡದೇ ಮಾಯವಾಗಿತ್ತು. ಅವನು ಎಲ್ಲಂದರಲ್ಲಿ ತಿರುಗುತ್ತ, ಆಟವಾಡುತ್ತ, ಆಗೀಗ ಹೆಂಗಸರ ಜೊತೆ ಕಳೆದು ಏಕಾಂತವನ್ನು ಕಡಿಮೆ ಮಾಡಿಕೊಳ್ಳುತ್ತ, ಉರ್ಸುಲಾ ದುಡ್ಡನ್ನು ಎಲ್ಲೋ ಗುಟ್ಟಾಗಿಟ್ಟು ಮರೆತಿರುವ ಜಾಗಗಳನ್ನು ಹುಡುಕುತ್ತಿದ್ದ. ಕೊನೆಗೆ ಅವನು ಬಟ್ಟೆ ಬದಲಾಯಿಸುವುದಕ್ಕೆ ಮಾತ್ರ ಮನೆಗೆ ಬರುವ ಹಾಗಾದ. ಉರ್ಸುಲಾ ಗೊಣಗುತ್ತ, “ಅವರೆಲ್ಲ ಒಂದೇ ರೀತಿ… ಮೊದ್ಲು ಒಳ್ಳೆಯವರಾಗಿ ಹೇಳಿದ ಹಾಗೆ ಕೇಳ್ಕೊಂಡು, ಒಂದು ನೋಣನೂ ಹೊಡೆಯಲಿಕ್ಕೆ ಆಗಲ್ಲವೇನೋ ಅನ್ನೋ ಹಾಗಿರ್‍ತಾರೆ. ಆದ್ರೆ ಗಡ್ಡ ಮೀಸೆ ಬಂದ ಕೂಡ್ಲೆ ಹಾಳಾಗಿ ಹೋಗ್ತಾರೆ” ಹೇಳಿದಳು. ತನ್ನ ತಂದೆ ಯಾರು ಎಂದು ತಿಳಿಯದೇ ಇದ್ದ ಅರ್ಕಾದಿಯೋನ ಹಾಗಲ್ಲz, ತಾನು ಪಿಲರ್ ಟೆರ್‍ನೆರಾಳ ಮಗನೆಂದು, ಹಾಸಿಗೆಯನ್ನು ಅವಳ ಮನೆಗೆ ತೆಗೆದುಕೊಂಡು ಹೋಗಿ ಹಾಕಿದ. ತಾಯಿ ಮತ್ತು ಮಗ ಎನ್ನುವುದಕ್ಕಿಂತ ಹೆಚ್ಚಾಗಿ ಅವರು ಪರಸ್ಪರ ಏಕಾಂತದಲ್ಲಿ ಸಹಭಾಗಿಗಳಾಗಿದ್ದರು. ಪಿಲರ್ ಟೆರ್‍ನೆರಾ ಎಲ್ಲ ಆಸೆಗಳನ್ನು ಬಿಟ್ಟಿದ್ದಳು. ಅವಳ ಧ್ವನಿ ಉಡುಗಿತ್ತು, ಕೊನೆಯಿಲ್ಲದ ನೇವರಿಕೆಯಿಂದ ಅವಳ ಮೊಲೆಗಳು ಜೋತು ಬಿದ್ದಿದ್ದವು. ಅವಳ ಹೊಟ್ಟೆ ಮತ್ತು ತೊಡೆಗಳು ಹಂಚಿಕೊಂಡ ಹೆಂಗಸಿನ ಗತಿ ಕಾಣದ ದುರ್ವಿಧಿಗೆ ಒಳಗಾಗಿತ್ತು. ಆದರೆ ಅವಳ ಹೃದಯ ಕಹಿ ಇಲ್ಲದೆ ಬೆಳೆಯಿತು. ದಡೂತಿಯಾದ, ವಾಚಾಳಿಯಾದ, ಅವಮಾನಿತಳಾದ, ಸೂಲಗಿತ್ತಿಯಂತಿದ್ದ ಅವಳು ತನ್ನ ಕಾರ್ಡುಗಳ ಬಗ್ಗೆ ಇದ್ದ ಗೌರವವನ್ನು ಕೈಬಿಟ್ಟಳು ಮತ್ತು ಇತರರ ಜೀವನದಲ್ಲಿರುವ ಪ್ರೀತಿಯಲ್ಲಿ ಶಾಂತಿಯನ್ನು ಕಂಡುಕೊಂಡಳು. ಅವ್ರೇಲಿಯಾನೋ ಮಧ್ಯಾಹ್ನ ನಿದ್ದೆ ಮಾಡುತ್ತಿದ್ದ ಮನೆಯಲ್ಲಿ ಅಕ್ಕಪಕ್ಕದಲ್ಲಿದ್ದ ಹುಡುಗಿಯರು, ತಮ್ಮ ಪ್ರೇಮಿಗಳನ್ನು ಬರಮಾಡಿಕೊಳ್ಳುತ್ತಿದ್ದರು. ಅವರು ಮನೆಯ ಒಳಗಡೆಯೇ ಬಂದು, “ಪಿಲರ್ ನಿನ್ನ ರೂಮನ್ನ ಸ್ವಲ್ಪ ಕೊಡು” ಎಂದು ಸಲೀಸಾಗಿ ಕೇಳುತ್ತಿದ್ದರು. ಅವಳು, “ಅದಕ್ಕೇನೀಗ” ಎಂದು ಒಪ್ಪಿ, ಅಲ್ಲಿ ಬೇರೆ ಇನ್ನು ಯಾರಾದರೂ ಇದ್ದರೆ, “ಜನರು ಹಾಸಿಗೇಲಿ ಖುಷಿಯಾಗಿರ್‍ತಾರಲ್ಲ ಅಂತ ನಂಗೆ ಸಂತೋಷ” ಎಂದು ಹೇಳುತ್ತಿದ್ದಳು.
ಅವಳು ಮಾಡಿ ಕೊಡುತ್ತಿದ್ದ ಅನುಕೂಲಕ್ಕೆ ಅವರಿಂದ ಕಾಸು ವಸೂಲು ಮಾಡುತ್ತಿರಲಿಲ್ಲ. ಯೌವನದ ದಿನಗಳಲ್ಲಿ ಅವಳನ್ನು ಬಳಸಿಕೊಂಡು ಆಗೀಗ ಕೊಂಚ ಸಂತೋಷ ಬಿಟ್ಟರೆ, ದುಡ್ಡು ಕೊಡದೆ ಪ್ರೀತಿಯನ್ನೂ ಕೊಡದೆ ಹೋದ ಲೆಕ್ಕವಿಲ್ಲದಷ್ಟು ಜನರನ್ನು ಹೇಗೆ ನಿರಾಕರಿಸಲಿಲ್ಲವೋ, ಅದೇ ರೀತಿಯಲ್ಲಿ, ಉಪಕಾರ ಮಾಡುವುದನ್ನು ನಿರಾಕರಿಸಲಿಲ್ಲ. ಅವಳು ಐದು ಜನ ಹೆಣ್ಣು ಮಕ್ಕಳು ಹದಿವಯಸ್ಸಿನಲ್ಲಿ ಜೀವನದ ಕವಲು ದಾರಿಯಲ್ಲಿ ಕಳೆದು ಹೋದರು. ಅವಳು ಬೆಳೆಸಲು ಸಾಧ್ಯವಾದ ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಸೈನ್ಯದಲ್ಲಿ ಹೋರಾಡುತ್ತ ಸತ್ತ ಮತ್ತು ಇನ್ನೊಬ್ಬ ಹದಿನಾಲ್ಕನೇ ವಯಸ್ಸಿನಲ್ಲಿ ಜೌಗು ಪ್ರದೇಶದ ಊರೊಂದರಲ್ಲಿ ಕೋಳಿಗಳ ಬುಟ್ಟಿಯನ್ನು ಕದಿಯುತ್ತಿದ್ದಾಗ ಗಾಯಗೊಂಡಿದ್ದ. ಒಂದು ವಿಧದಲ್ಲಿ ಕಪ್ಪಗೆ ಎತ್ತರವಿದ್ದ ಅವನಿಗೆ, ಕಾರ್ಡುಗಳಿಂದ ಅರ್ಧ ಶತಮಾನದ ಆಶ್ವಾಸನೆ ಕೊಡಲಾಗಿತ್ತು ಮತ್ತು ಕಾರ್ಡುಗಳು ತಿಳಿಸಿದ ಎಲ್ಲ ಜನರ ಹಾಗೆ, ಅವಳಲ್ಲಿ ಪ್ರೇಮದ ಭಾವನೆ ಹುಟ್ಟಿದಾಗ, ಅವನ ಮೇಲೆ ಆಗಲೆ ಸಾವಿನ ಮುದ್ರೆ ಬಿದ್ದಿತ್ತು. ಅವಳು ಅದನ್ನು ಕಾರ್ಡುಗಳಲ್ಲಿ ಕಂಡಳು.
ಅವಳು, “ಇವತ್ತು ರಾತ್ರಿ ಹೊರಗೆ ಹೋಗ್ಬೇಡ. ಇಲ್ಲೇ ಮಲಕ್ಕೋ. ಏಕೆಂದರೆ ನಿನ್ನ ರೂಮಿಗೆ ಕಳಿಸು ಅಂತ ಕಾಮೆಲಿಟಾ ಮೊಂತಿಯಲ್ ನನ್ನನ್ನ ಸಾಕಷ್ಟು ಸಲ ಕೇಳಿದಾಳೆ” ಎಂದಳು.
ಅವಳು ಕೇಳಿಕೊಂಡಿದ್ದರಲ್ಲಿ ಇದ್ದ ಭಾವತೀವ್ರತೆ ಅವನಿಗೆ ತಿಳಿಯಲಿಲ್ಲ.
ಅವನು “ಅವಳಿಗೆ ಇವತ್ತು ರಾತ್ರಿ ನಂಗೋಸ್ಕರ ಕಾಯಕ್ಕೆ ಹೇಳು” ಎಂದ.
ಅವನು ಥಿಯೇಟರ್‌ಗೆ ಹೋದ. ಅಲ್ಲಿ ಸ್ವಾನಿಷ್ ಕಂಪನಿಯೊಂದು ‘ಡ್ಯಾಗರ್ ಆಫ್ ದ ಫಾಕ್ಸ್\’ ಎಂಬ ನಾಟಕವನ್ನು ಕ್ಯಾಪ್ಟನ್ ಆಕೈಲಿನ್ ರಿಕಾರ್ಡೋನ ಅಪ್ಪಣೆಯಂತೆ ಹೆಸರನ್ನು ಬದಲಾಯಿಸಿ ಪ್ರದರ್ಶಿಸುವವರಿದ್ದರು. ಏಕೆಂದರೆ ಉದಾರವಾದಿಗಳು ಸಂಪ್ರದಾಯವಾದಿಗಳನ್ನು ಅನಾಗರಿಕರು ಎಂದು ಕರೆದಿದ್ದರು. ಅವ್ರೇಲಿಯಾನೋ ಹೊಸೆ ಬಾಗಿಲಲ್ಲಿ ಟಿಕೆಟ್ ಕೊಟ್ಟಾಗಲೆ ಅವನಿಗೆ ಕ್ಯಾಪ್ಟನ್ ಆಕ್ವಿಲಿಸ್ ರಿಕಾರ್ಡೋ ಮತ್ತು ಬಂದೂಕು ಹೊಂದಿದ್ದ ಇಬ್ಬರು ಸೈನಿಕರು ಪ್ರೇಕ್ಷಕರಲ್ಲಿ ಹುಡುಕುತ್ತಿದ್ದಾರೆಂದು ತಿಳಿದದ್ದು.
ಅವ್ರೇಲಿಯಾನೋ ಹೊಸೆ, “ಹುಷಾರಾಗಿರು ಕ್ಯಾಪ್ಟನ್ … ನನ್ನ ಮೇಲೆ ಕೈ ಮಾಡೋನು ಇನ್ನೂ ಹುಟ್ಟಿಲ್ಲ” ಎಂದ. ಕ್ಯಾಪ್ಟನ್ ಬಲವಂತವಾಗಿ ಅವನ ತಪಾಸಣೆಗೆ ಪ್ರಯತ್ನಿಸಿದ ಮತ್ತು ಆಯುಧವಿರದ ಅವ್ರೇಲಿಯಾನೋ ಹೊಸೆ ಓಡಲು ಪ್ರಾರಂಭಿಸಿದ. ಗುಂಡು ಹೊಡಿಯಬೇಡಿರೆಂದು ಮಾಡಿದ ಅಪ್ಪಣೆಯನ್ನು ಸೈನಿಕರು ಪಾಲಿಸಲಿಲ್ಲ. ಅವರಲ್ಲೊಬ್ಬ, “ಅವನೊಬ್ಬ ಬ್ಯುಂದಿಯಾ” ಎಂದ. ರೋಷಗೊಂಡ ಕ್ಯಾಪ್ಟನ್ ಬಂದೂಕನ್ನು ಕಿತ್ತುಕೊಂಡು ರಸ್ತೆಯ ಮಧ್ಯೆ ಬಂದು ಗುರಿ ಹಿಡಿದ.
ಅವನು, “ಹೇಡಿಗಳು, ಅವ್ನು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಆಗಿರ್‍ಲಿ ಅಂದ್ಕೊಳ್ತೀನಿ” ಎಂದು ಕೂಗಿದ.
ಇಪ್ಪತ್ತು ವರ್ಷದ ಕನ್ಯೆ ಕಾರ್ಮೆಲಿಟ ಮೊಂತಿಯಲ್ ಕಿತ್ತಲೆ ಹಣ್ಣು ಮಿಶ್ರಿತ ನೀರಿನಲ್ಲಿ ಸ್ನಾನ ಮಾಡಿ, ಪಿಲರ್ ಟೆರ್‍ನೆರಾಳ ಹಾಸಿಗೆಯ ಮೇಲೆ ಗುಲಾಬಿ ಪಕಳೆಗಳನ್ನು ಸಿಂಪಡಿಸುತ್ತಿದ್ದಾಗ ಗುಂಡಿನ ಶಬ್ದ ಕೇಳಿಸಿತು. ಅಮರಾಂತ ಕೊಡದ ಸುಖವನ್ನು ಅವ್ರೇಲಿಯಾನೋ ಹೊಸೆ ಅವಳಲ್ಲಿ ಪಡೆಯಬೇಕಿತ್ತು. ಆದರೆ ಅವನ ಬೆನ್ನಲ್ಲಿ ಹೊಕ್ಕ ಗುಂಡು ಎದೆಯನ್ನು ಸೀಳಿತ್ತು, ಕಾರ್ಡುಗಳ ವ್ಯಾಖ್ಯಾನದ ರೀತಿ ತಪ್ಪಾಗಿತ್ತು. ಆ ರಾತ್ರಿ ನಿಜವಾಗಿಯೂ ಸಾಯಬೇಕಾಗಿದ್ದ ಕ್ಯಾಪ್ಟನ್ ಆಕ್ವಿಲಿಸ್ ರಿಕಾರ್ಡೋ, ಅವ್ರೇಲಿಯಾನೋ ಹೊಸೆಗಿಂತ ನಾಲ್ಕು ಗಂಟೆ ಮುಂಚಿತವಾಗಿ ಸತ್ತ. ಗುಂಡಿನ ಶಬ್ದ ಕೇಳಿದ ಕೂಡಲೆ ಎಲ್ಲಿಂದ ಬಂದದ್ದೆಂದು ತಿಳಿಯದ ಎರಡು ಗುಂಡುಗಳು ಅವನನ್ನು ಉರುಳಿಸಿದವು ಮತ್ತು ಅನೇಕ ಧ್ವನಿಗಳು ರಾತ್ರಿಯನ್ನು ನಡುಗಿಸಿತು.
“ಉದಾರವಾದಿಗಳು ಚಿರಕಾಲ ಬಾಳಲಿ! ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಚಿರಾಯುವಾಗಲಿ”
ಹನ್ನೆರಡು ಗಂಟೆಗೆ, ಅವ್ರೇಲಿಯಾನೋ ಹೊಸೆ ರಕ್ತ ಸುರಿದು ಸತ್ತ ಮತ್ತು ಕಾರ್ಮೆಲಿಟ ಮೊಂತಿಯಲ್‌ಗೆ ಕಾರ್ಡುಗಳು ತನ್ನ ಭವಿಷ್ಯ ಶೂನ್ಯ ಎಂದು ತೋರಿಸುತ್ತಿದೆ ಎಂದು ಅರಿತಾಗ ನಾನೂರಕ್ಕೂ ಹೆಚ್ಚು ಜನರು ಥಿಯೇಟರ್‌ನಿಂದ ಆಚೆಗೆ ಓಡಿ, ಬಿಟ್ಟೋಡಿದ್ದ ಕ್ಯಾಪ್ಟನ್ ಆಕ್ವಿಲಿಸ್ ಕಾರ್ಡೋನ ದೇಹದೊಳಗೆ ತಮ್ಮ ರಿವಾಲ್ವರುಗಳ ಗುಂಡುಗಳನ್ನು ಖಾಲಿ ಮಾಡಿದರು. ಕಾವಲು ದಳದವರು ಸೀಸ ತುಂಬಿದ ಮತ್ತು ನೀರಿನಿಂದ ತೊಯ್ದ ಬ್ರೆಡ್ಡಿನಂತೆ ಪುಡಿಯಾದ ಆ ದೇಹವನ್ನು ತೆಗೆದುಕೊಂಡು ಹೋಗಲು ಕೈಮಂಚವನ್ನು ಉಪಯೋಗಿಸಬೇಕಾಯಿತು.
ಸೈನ್ಯದಲ್ಲಿ ಉಂಟಾಗುತ್ತಿದ್ದ ಕೋಪಾವೇಶದಿಂದ ವ್ಯಗ್ರನಾದ ಜನರಲ್ ಹೊಸೆ ರಾಕೆಲ್ ಮೊಂಕಾದ ತನ್ನ ರಾಜಕೀಯ ಪ್ರಭಾವವನ್ನು ಬಳಸಿಕೊಂಡು ಮಕೋಂದೋದ ಸಿವಿಲ್ ಮತ್ತು ಮಿಲಿಟರಿ ನಾಯಕತ್ವವನ್ನು ವಹಿಸಿಕೊಂಡ. ತನ್ನ ದೃಷ್ಟಿಕೋನದಿಂದ ಅನಿವಾರ್ಯವಾದದ್ದನ್ನು ತಡೆ ಹಿಡಿಯುತ್ತದೆ ಎನ್ನುವುದನ್ನು; ನಿರೀಕ್ಷಿಸಲಿಲ್ಲ. ಸೆಪ್ಟೆಂಬರ್‌ನಲ್ಲಿ ಬಂದ ಸುದ್ದಿ ವ್ಯತಿರಿಕ್ತವಾಗಿತ್ತು. ಇಡೀ ದೇಶದಲ್ಲಿ ನಿಯಂತ್ರಣವನ್ನು ಕಾಪಾಡಿಕೊಳ್ಳಲಾಗಿದೆ ಎಂದು ಸರ್ಕಾರ ಪ್ರಕಟಿಸಿದರೂ ಆಂತರಿಕ ಭಾಗಗಳಲ್ಲಿ ಸೈನಿಕರ ದಂಗೆಗಳಾಗುತ್ತವೆ ಎನ್ನುವ ಗುಪ್ತ ವಾರ್ತೆ ಉದಾರವಾದಿಗಳಿಗೆ ಬರುತಿತ್ತು. ಆಡಳಿತ ನಡೆಸುತ್ತಿದ್ದವರು, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಸಾವೇ ಗತಿ ಎನ್ನುವ ಕಟ್ಟಳೆಯನ್ನು ಮಿಲಿಟರಿ ನ್ಯಾಯಾಲಯದಲ್ಲಿ ಅವನ ಗೈರು ಹಾಜರಿಯಲ್ಲಿ ಘೋಷಿಸುವ ತನಕ, ಯುದ್ಧದ ಪರಿಸ್ಥಿತಿ ಇದೆ ಎಂದು ಒಪ್ಪಿಕೊಳ್ಳಲು ಸಿದ್ಧವಾಗಿರಲಿಲ್ಲ. ಅವನನ್ನು ಸೆರೆ ಹಿಡಿದ ಮೊದಲನೆ ತಂಡಕ್ಕೆ ದಂಡನೆಯನ್ನು ಜಾರಿ ಮಾಡುವ ಅಪ್ಪಣೆ ಕೊಟ್ಟರು. ಜನರಲ್ ಮೊಂಕಾದಗೆ ಉರ್ಸುಲಾ ಸಂತೋಷದಿಂದ, “ಹಾಗಾದ್ರೆ ಅವ್ನು ವಾಪಸು ಬಂದಿದ್ದಾನೆ” ಎಂದಳು. ಆದರೆ ಅವನಿಗೆ ಅದರ ಬಗ್ಗೆ ಏನೂ ಗೊತ್ತಿರಲಿಲ್ಲ.
ವಾಸ್ತವವಾಗಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಒಂದು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ದೇಶದಲ್ಲಿದ್ದ. ಅವನು ಒಂದೇ ಕಾಲದಲ್ಲಿ ದೂರದ ಸ್ಥಳಗಳಲ್ಲಿ ಇದ್ದಾನೆಂಬ ವದಂತಿಗಳು ಬರುತ್ತಿದ್ದವು ಮತ್ತು ಜನರಲ್ ಮೊಂಕಾದ ಕೂಡ, ಅವನು ತೀರ ಪ್ರದೇಶದ ಎರಡು ರಾಜ್ಯಗಳನ್ನು ವಶಪಡಿಸಿಕೊಂಡಿದ್ದಾನೆಂದು ಅಧಿಕೃತವಾಗಿ ಪ್ರಕಟವಾಗುವ ತನಕ, ಅವನು ವಾಪಸು ಬರುವುದನ್ನು ನಂಬಿರಲಿಲ್ಲ. ಅವನು ಉರ್ಸುಲಾಗೆ ಟೆಲಿಗ್ರಾಂ ತೋರಿಸುತ್ತ, “ಅಭಿನಂದನೆಗಳು … ಅವ್ನು ನಿಮಗೆ ಇಲ್ಲೇ ಸಿಗ್ತಾನೆ” ಎಂದ. ಮೊಟ್ಟ ಮೊದಲ ಬಾರಿಗೆ ಉರ್ಸುಲಾ ಚಿಂತೆಗೀಡಾದಳು. ಅವಳು, “ನೀವೇನು ಮಾಡ್ತೀರಿ” ಎಂದು ಕೇಳಿದಳು. ಜನರಲ್ ಮೊಂಕಾದ ಅದೇ ಪ್ರಶ್ನೆಯನ್ನು ತನಗೆ ತಾನೆ ಅನೇಕ ಸಲ ಕೇಳಿಕೊಂಡಿದ್ದ.
ಅವನು, “ಅವನ ಥರಾನೇ … ನನ್ನ ಕರ್ತವ್ಯ ನಾನು ಮಾಡ್ತೀನಿ” ಎಂದ.
ಅಕ್ಟೋಬರ್ ಒಂದರಂದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಒಂದು ಸಾವಿರ ಆಯುಧ ಹೊಂದಿದವರಿಂದ ಮಕೋಂದೋ ಮೇಲೆ ದಾಳಿ ಮಾಡಿದ. ರಕ್ಷಣಾ ಪಡೆಯವರಿಗೆ ಕೊನೆಯ ತನಕ ನಿಗ್ರಹಿಸಲು ಅಪ್ಪಣೆಯಾಯಿತು. ನಡುಮಧ್ಯಾಹ್ನ ಜನರಲ್ ಮೊಂಕಾದ ಉರ್ಸುಲಾಳ ಜೊತೆ ಊಟ ಮಾಡುತ್ತಿರುವಾಗ ದಂಗೆಯವರ ಫಿರಂಗಿ ಹೊಡೆತ ಇಡೀ ಊರಿನಲ್ಲಿ ಪ್ರತಿಧ್ವನಿಸಿ, ಮುನಿಸಿಪಾಲಟಿ ಟ್ರಜರಿಯ ಮುಂಭಾಗವನ್ನು ನೆಲಸಮ ಮಾಡಿತು. ಜನರಲ್ ಮೊಂಕಾದ, “ಅವ್ರ ಹತ್ರಾನೂ ನಮ್ಮಲ್ಲಿ ಇರೋವಷ್ಟೇ ಒಳ್ಳೆಯ ಆಯುಧಗಳಿವೆ … ಅಲ್ದೆ ಅವ್ರು ಇಷ್ಟಪಟ್ಟು ಹೊಡೆದಾಡ್ತಾ ಇದಾರೆ” ಎಂದ. ಮಧ್ಯಾಹ್ನ ಎರಡು ಗಂಟೆ ಹೊತ್ತಿಗೆ ಎರಡೂ ಕಡೆಯ ಗುಂಡಿನ ಕಾಳಗದಿಂದ ಭೂಮಿ ಅದುರುತ್ತಿದ್ದಾಗ, ತಾನು ಸೋಲುವ ಯುದ್ಧದಲ್ಲಿ ತೊಡಗಿರುವುದು ನಿಶ್ಚಿತ ಎಂದುಕೊಂಡು ಉರ್ಸುಲಾಳಿಗೆ ವಿದಾಯ ಹೇಳಿ ಹೊರಟ.
ಅವನು, “ದೇವರ ದಯದಿಂದ ಅವ್ರೇಲಿಯಾನೋ ಇವತ್ತು ಮನೇಲಿ ಇರದಿದ್ರೆ ಸಾಕು. ಒಂದು ಪಕ್ಷ ಅವನು ಬಂದ್ರೆ ನಾನು ಕೇಳಿದೆ ಅಂತ ಹೇಳಿ. ಏಕೆಂದರೆ ನಾನು ಅವನ್ನ ಮತ್ತೆ ನೋಡ್ತೀನಿ ಅಂತ ಕಾಣಲ್ಲ” ಎಂದ.
ಅವನು ಆ ರಾತ್ರಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾU, ತಮ್ಮಿಬ್ಬರಲ್ಲಿ ಇರುವ ಯುದ್ಧದಲ್ಲಿ ಮಾನವೀಯತೆಯ ಗುರಿಯನ್ನು ನೆನಪಿಸಿ, ಮಿಲಿಟರಿಯವರಲ್ಲಿನ ಭ್ರಷ್ಟತೆ ಮತ್ತು ಎರಡೂ ಪಾರ್ಟಿಯ ರಾಜಕಾರಣಿಗಳ ಮಹತ್ವಾಕಾಂಕ್ಷೆಯ ವಿರುದ್ಧ ಉದ್ದನೆ ಕಾಗದ ಬರೆದ. ಅವನಿಗೆ ಜಯ ಹಾರೈಸಿದ ನಂತರ ಮಕೋಂದೋದಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಸೆರೆ ಸಿಕ್ಕ. ಮಾರನೆಯ ದಿನ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅವನ ಜೊತೆ ಉರ್ಸುಲಾಳ ಮನೆಯಲ್ಲಿ ಊಟ ಮಾಡಿದ. ಕ್ರಾಂತಿಕಾರಿ ಮಿಲಿಟರಿ ನ್ಯಾಯಾಲಯ ಅವನ ಹಣೆ ಬರಹವನ್ನು ನಿರ್ಧರಿಸುವ ತನಕ ಅವನನ್ನು ಅವಳ ಮನೆಯಲ್ಲೇ ಇಡಲಾಗಿತ್ತು. ಅದೊಂದು ಸ್ನೇಹ ಕೂಟವಾಗಿತ್ತು. ಪರಸ್ಪರ ಶತ್ರುಗಳು ಹಿಂದಿನದನ್ನು ನೆನಪಿಸಿಕೊಳ್ಳಲು ಯುದ್ಧವನ್ನು ಮರೆತಿದ್ದರೆ, ಸಪ್ಪಗಿದ್ದ ಉರ್ಸುಲಾಗೆ ತನ್ನ ಮಗನೇ ಹೊರಗಿನವನು ಎಂಬ ಭಾವನೆ ಮೂಡಿತ್ತು. ಅವಳಿಗೆ ಅಬ್ಬರದ ಮಿಲಿಟರಿ ರಕ್ಷಣೆಯಲ್ಲಿ ಅವನು ಬಂದು, ಬೆಡ್‌ರೂಮಿನ ತಳಬುಡ ಶೋಧಿಸಿ, ಯಾವ ಅಪಾಯವಿಲ್ಲವೆಂದು ಮನದಟ್ಟು ಮಾಡಿಕೊಂಡಾಗಿನಿಂದಲೂ ಆ ಭಾವನೆ ಇತ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅದನ್ನೆಲ್ಲ ಒಪ್ಪಿಕೊಂಡಿದ್ದ ಮತ್ತು ಅವನ ರಕ್ಷಣಾ ದಳದವರು ಮನೆಯ ಸುತ್ತಲೂ ಕಾವಲು ನಿಲ್ಲಿಸುತ್ತಿದ್ದರೆ ಉರ್ಸುಲಾಳನ್ನೂ ಸೇರಿದಂತೆ ಯಾರೂ ಅವನಿಗೆ ಹತ್ತು ಅಡಿಗಿಂತ ಹತ್ತಿರ ಬರುವಂತಿರಲಿಲ್ಲ. ಅವನು ವಿಶೇಷ ಲಾಂಛನಗಳಿಲ್ಲದ, ಸಾಮಾನ್ಯ ಡೆನಿಮ್ ಸಮವಸ್ತ್ರ ತೊಟ್ಟು, ಕೊಚ್ಚೆಯಾದ ಮತ್ತು ಒಣಗಿದ ರಕ್ತ ಮೆತ್ತಿದ ಉದ್ದನೆ ಹಿಮ್ಮಡಿಯ ಶೂ ಹಾಕಿಕೊಂಡಿದ್ದ. ಸೊಂಟಕ್ಕೆ ಪಿಸ್ತೂಲು ಸಿಕ್ಕಿಸಿಕೊಂಡು, ಕೈಯನ್ನು ಅದರ ಕುದುರೆಯ ಮೇಲೆ ಇಟ್ಟುಕೊಂಡಿದ್ದ. ನೋಟದಲ್ಲಿ ಅದೇ ತೀಕ್ಷ್ಣತೆ ಮತ್ತು ದೃಢತೆಯಿತ್ತು. ಅಲ್ಲಲ್ಲಿ ಸಾಕಷ್ಟು ಕೂದಲು ಕಡಿಮೆಯಾಗಿದ್ದ ಅವನ ತಲೆಯನ್ನು ಓವನ್‌ನಲ್ಲಿ ಕಾಯಿಸಿ ಹದ ಮಾಡಿದಂತಿತ್ತು. ಅವನ ಮುಖ ಕ್ಯಾರಿಬಿಯಾದ ಉಪ್ಪುಪ್ಪಾದ ವಾತಾವರಣದಲ್ಲಿ ಬಣ್ಣ ಕಳೆದುಕೊಂಡು ಲೋಹದ ಗಡುಸಾಗಿತ್ತು. ತನ್ನ ಒಳಗಿನ ಶೀತಲತೆಗೆ ಒಂದು ರೀತಿಯಲ್ಲಿ ಸಂಬಂಧವಿದ್ದ ಚೈತನ್ಯದಿಂದ ತಲೆದೋರಲಿದ್ದ ಮುದಿತನದ ವಿರುದ್ಧ ಕಾಪಾಡಿಕೊಂಡಿದ್ದ. ಅವನು ಅಲ್ಲಿಂದ ಹೊರಟಾಗ ಇದ್ದದ್ದಕ್ಕಿಂತ ಎತ್ತರವಾಗಿದ್ದ, ಸಪ್ಪೆಯಾಗಿದ್ದ ಮೂಳೆಮೂಳೆಯಾಗಿದ್ದ. ಅವನು ಹಳೆಯದಕ್ಕೆಲ್ಲ ಪ್ರತಿರೋಧಿಸಿದ ವ್ಯಕ್ತಪಡಿಸಿದ್ದನ್ನು ಕಂಡು ಉರ್ಸುಲಾ, “ದೇವರೇ, ಅವನೀಗ ಏನು ಬೇಕಾದ್ರೂ ಮಾಡಬಲ್ಲ” ಎಂದು ತನಗೆ ತಾನೇ ಹೇಳಿಕೊಂಡಳು. ಹೌದು. ಅವನು ಹಾಗೆಯೇ ಇದ್ದ. ಅವನು ಅಮರಾಂತಳಿಗೆ ತಂದ ಆಜ್ಟ್‌ಕ್ ಶಾಲು, ಊಟದ ಸಮಯದಲ್ಲಿ ಹಳೆಯ ನೆನಪುಗಳನ್ನು ಕುರಿತು ಮಾತಾಡುತ್ತಿದ್ದದ್ದು ಮತ್ತು ತಮಾಷೆಯ ಕಥೆಗಳನ್ನು ಹೇಳುತ್ತಿದ್ದದ್ದೆಲ್ಲ, ಇನ್ನೂ ಉಳಿದ್ದಿದ್ದ ಯಾವುದೋ ಕಾಲದ ಹಾಸ್ಯ ಚಟಾಕಿಗಳಂತಿದ್ದವು. ಸತ್ತವರೆಲ್ಲರನ್ನು ಒಟ್ಟಾಗಿ ಹೂಳುವ ಅಪ್ಪಣೆ ಜಾರಿಯಾದ ನಂತರ ಕರ್ನಲ್ ರೋಕ್ ಕಾರ್ನಿಸಿರೋಗೆ ಮಿಲಿಟರಿ ನ್ಯಾಯಾಲಯವನ್ನು ವ್ಯವಸ್ಥಿಸುವ ಕೆಲಸ ವಹಿಸಿಕೊಟ್ಟ ಮತ್ತು ಅವನು ಸಾಂಪ್ರದಾಯಿಕ ಆಳ್ವಿಕೆಯ ಎಲ್ಲವನ್ನು ಮರುವ್ಯವಸ್ಥೆಗೊಳಿಸಿ, ಆಮೂಲಾಗ್ರ ಸುಧಾರಣೆಯನ್ನು ಕಾರ್ಯರೂಪಕ್ಕೆ ಬರುವಂತೆ ಮಾಡುವ, ಮೈಕೈ ನುಜ್ಜಾಗುವ ಕೆಲಸದಲ್ಲಿ ತೊಡಗಿದ. ಅವನು ತನಗೆ ನೆರವು ನೀಡುತ್ತಿದ್ದವರಿಗೆ, “ನಾವು ಪಾರ್ಟಿ ರಾಜಕಾರಣಿಗಳಿಗಿಂತ ಮುಂದಿರ್‍ಬೇಕು. ಅವರು ವಾಸ್ತವಕ್ಕೆ ಕಣ್ಣು ತೆರೆಯೋ ಹೊತ್ತಿಗೆ ಎಲ್ಲ ಮಾಡಿ ಪೂರೈಸಿರ್‍ಬೇಕು” ಎಂದು ಹೇಳುತ್ತಿದ್ದ. ಆಗಲೆ ಅವನು ಒಂದು ನೂರು ವರ್ಷಗಳ ಹಿಂದಿನಿಂದಲೂ ಇರುವ ಭೂಮಿಯ ಶಿರೋನಾಮೆಯ ಪರಿಷ್ಕರಣವನ್ನು ಮಾಡಲು ನಿರ್ಧರಿಸಿದ್ದು ಮತ್ತು ಆಗ ಅವನಿಗೆ ಹೊಸೆ ಅರ್ಕಾದಿಯೋನ ನ್ಯಾಯನಿಂದನೆಗಳು ಕಂಡು ಬಂತು. ಅವನು ಒಂದೇ ಸಲಕ್ಕೆ ಆ ದಾಖಲಾತಿಗಳನ್ನು ಅನೂರ್ಜಿತಗೊಳಿಸಿದ. ಅವನು ಅದೆಲ್ಲ ವ್ಯವಹಾರಗಳನ್ನು ಒಂದು ಗಂಟೆಕಾಲ ಬದಿಗಿಟ್ಟು, ಸೌಜನ್ಯವೆಂಬಂತೆ ರೆಬೇಕಳನ್ನು ಭೇಟಿಯಾಗಿ ತಾನು ಮಾಡಲು ಉದ್ದೇಶಿಸಿರುವುದನ್ನು ತಿಳಿಸಿದ.
ಆ ಮನೆಯ ನೆರಳುಗಳಲ್ಲಿ, ಈಗ ಒಂಟಿ ವಿಧವೆಯಾಗಿ, ಹಿಂದೆ ಅವನ ಒತ್ತಿಟ್ಟ ಪ್ರೇಮಗಳನ್ನು ತಿಳಿಸುವ ವಿಶ್ವಾಸದ ವ್ಯಕ್ತಿಯಾಗಿದ್ದ ಮತ್ತು ಬಿಡದೆ ಪಟ್ಟು ಹಿಡಿದಿದ್ದರಿಂದ ಅವನ ಜೀವವನ್ನು ಉಳಿಸಲು ಸಾಧ್ಯವಾದ ವಿಷಯ, ಗತಕಾಲದ ಸಂಗತಿಯಾಗಿತ್ತು. ಮಂಡಿಯ ತನಕ ಇಳಿಬಿಟ್ಟ ಕಪ್ಪು ಗೌನ್ ತೊಟ್ಟು ಹೃದಯವನ್ನು ಹಿಡಿಬೂದಿ ಮಾಡಿಕೊಂಡ ಅವಳಿಗೆ ಯುದ್ಧದ ಬಗ್ಗೆ ಏನೂ ಗೊತ್ತಿರಲಿಲ್ಲ. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಅವಳ ಶಿಥಿಲ ಮೂಳೆಯ ಕೆಟ್ಟ ವಾಸನೆ ಚರ್ಮದಿಂದಾಚೆಗೂ ಹರಡುತ್ತಿದ್ದದ್ದು ಕಂಡಿತು ಮತ್ತು ಅವಳು ಸಂತ ಎಲ್‌ಮೋ ಅಗ್ನಿಕುಂಡದ ಸುತ್ತಮುತ್ತ ನಡೆಯುತ್ತಿರುವಂತೆ ಕಾಣಿಸಿತು. ಅಲ್ಲಿಯ ಗಾಳಿಯಲ್ಲಿ ಯಾರೇ ಆದರೂ ಸಿಡಿಮದ್ದಿನಂತಿರುವ ವಾಸನೆಯನ್ನು ಗ್ರಹಿಸಬಹುದಾಗಿತ್ತು. ಅವನು ಅವಳಿಗೆ ಶೋಕಾಚರಣೆಯ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಲು ತಿಳಿಸಿ ಹೇಳುವುದರಿಂದ ಪ್ರಾರಂಭಿಸಿ, ಮನೆಗೆ ಗಾಳಿ ಬೆಳಕು ಬರುವಂತೆ ಮಾಡಿಕೊಳ್ಳುವುದಲ್ಲದೆ, ಹೊಸೆ ಅರ್ಕಾದಿಯೋನ ಸಾವಿಗೆ ಕಾರಣವಾದ ಜಗತ್ತನ್ನು ಕ್ಷಮಿಸಬೇಕೆಂದು ಹೇಳಿದ. ಆದರೆ ರೆಬೇಕಗೆ ಯಾವುದೇ ಪ್ರತಿಷ್ಠೆ ಇರಲಿಲ್ಲ. ಅದನ್ನು ಅವಳು ಮಣ್ಣು ತಿನ್ನುವುದರಲ್ಲಿ, ಪಿಯತ್ರೋ ಕ್ರೆಪ್ಸಿಯ ಸುಗಂಧ ಲೇಪಿತ ಕಾಗದಗಳಲ್ಲಿ, ಗಂಡನ ಜೊತೆ ಸುಖದ ಅಮಲಿನ ಹಾಸಿಗೆಯಲ್ಲಿ ಹುಡುಕಿದ ನಂತರ, ನೆನಪುಗಳು ಭಾವೋಕ್ಕರ್ಷದಿಂದ ಸಾಕಾರಗೊಂಡು, ಮನುಷ್ಯರ ಹಾಗೆ ಒಂಟಿ ರೂಮಿನಲ್ಲಿ ಓಡಾಡುತ್ತ ಇರುವುದರಲ್ಲಿ ಶಾಂತಿಯನ್ನು ಕಂಡುಕೊಂಡಿದ್ದಳು. ಹಗ್ಗದ ಕುರ್ಚಿಯಲ್ಲಿ ಹಿಂದಕ್ಕೊರಗಿ ಕುಳಿತು, ಕಳೆದ ದಿನಗಳ ಭೂತದಂತೆ ಕಾಣುತ್ತಿದ್ದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ನೋಡುತ್ತ, ಹೊಸೆ ಅರ್ಕಾದಿಯೋನ ಹೆಸರಿನಲ್ಲಿದ್ದ ಭೂಮಿಯನ್ನು ಮತ್ತೆ ಅವುಗಳ ಮೊದಲಿನ ಒಡೆಯರಿಗೆ ಹಿಂತಿರುಗಿಸುತ್ತಾರೆಂಬ ಸುದ್ದಿಯಿಂದ ಅವಳು ಕೊಂಚ;ವೂ ವಿಚಲಿತಗೊಂಡಿರಲಿಲ್ಲ.
ಅವಳು, “ನೀವು ಏನು ನಿರ್ಧಾರ ಮಾಡ್ತೀರೋ ಅದನ್ನ ನಾನು ಮಾಡ್ತೀನಿ” ಎಂದು ನಿಟ್ಟುಸಿರಿಟ್ಟು, “ಯಾವಾಗ್ಲೂ ನೀನು ಒಂದು ತತ್ವಾನ ಬಿಟ್ಟು ಮತ್ತೊಂದನ್ನ ಹಿಡಿತೀಯ ಅಂತ ಅಂದ್ಕೊಂಡಿದ್ದೆ, ಅದಕ್ಕೀಗ ಪುರಾವೆ ಸಿಕ್ಕಿದೆ” ಎಂದಳು.
ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಅಧ್ಯಕ್ಷತೆಯಲ್ಲಿ ಮಿಲಿಟರಿ ವಿಚಾರಣೆ ನಡೆದು ಕ್ರಾಂತಿಕಾರಿಗಳು ಖೈದಿಗಳನ್ನಾಗಿ ತೆಗೆದುಕೊಂಡ ಮಾಮೂಲು ಸೈನ್ಯದ ಎಲ್ಲ ಅಧಿಕಾರಿಗಳಿಗೆ ಮರಣದಂಡನೆ ವಿಧಿಸುವಲ್ಲಿ ಮುಕ್ತಾಯವಾದ ಸಮಯದಲ್ಲಿಯೇ ಭೂಮಿ ಪತ್ರಗಳ ಶಿರೋನಾಮೆಯ ಪರಿಷ್ಕರಣೆ ನಡೆಯಿತು. ಹೊಸೆ ರಾಕೆಲ್‌ನದೇ ಮಂಕಾದೋದಲ್ಲಿ ನಡೆದ ಕೊನೆಯ ಮಿಲಿಟರಿ ವಿಚಾರಣೆ. ಉರ್ಸುಲಾ ಮಧ್ಯೆ ಬಾಯಿ ಹಾಕಿ “ಮಕೋಂದೋದಲ್ಲಿ ಇದ್ದ ಎಲ್ಲ ಸರ್ಕಾರಗಳ ಪೈಕಿ ಅವನ್ದೇ ಒಳ್ಳೇದಿತ್ತು” ಎಂದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಹೇಳಿದಳು. ಅಲ್ಲದೆ, “ಅವ್ನ ಒಳ್ಳೇತನದ ಬಗ್ಗೆ, ನಮ್ಮಲ್ಲಿಟ್ಟಿದ್ದ ವಿಶ್ವಾಸದ ಬಗ್ಗೆ ನಾನೇನು ನಿಂಗೆ ಹೇಳ್ಬೇಕಾಗಿಲ್ಲ. ಯಾಕೆಂದರೆ ನಿಂಗೇ ಅದು ಚೆನ್ನಾಗಿ ಗೊತ್ತಿದೆ . .” ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅದನ್ನೊಪ್ಪದೆ ಅವಳ ಕಡೆ ನೋಡಿದ.
ಅವನು, “ನಾನು ತೀರ್ಪು ಕೊಡೋ ಕೆಲ್ಸ ಮಾಡಕ್ಕಾಗಲ್ಲ. ನಿಂಗೇನಾದ್ರೂ ಹೇಳೋದಿದ್ರೆ ಮಿಲಿಟರಿ ವಿಚಾರಣೆಯವರಿಗೆ ಹೇಳು” ಎಂದ.
ಉರ್ಸುಲಾ ಹಾಗೆ ಮಾಡಿದಳಷ್ಟೇ ಅಲ್ಲದೆ ಮಕೋಂದೋದಲ್ಲಿದ್ದ ಕ್ರಾಂತಿಕಾರಿ ಅಧಿಕಾರಿಗಳ ಹೆಂಡತಿಯರನ್ನೂ ಅದನ್ನು ಹೇಳಲು ಕರೆದುಕೊಂಡು ಬಂದಳು. ಒಬ್ಬೊಬ್ಬರಾಗಿ ಆ ಊರನ್ನು ಕಟ್ಟಿದ ವಯಸ್ಸಾದ ಹೆಂಗಸರು, ಪರ್ವತಗಳನ್ನು ದಾಟುವುದರಲ್ಲಿ ಧೈರ್ಯವಹಿಸಿ ಪಾಲ್ಗೊಂಡವರಲ್ಲಿ ಕೆಲವರು, ಜನರಲ್ ಮೊಂಕಾದನ ಗುಣಗಳನ್ನು ಹೊಗಳಿದರು. ಅವರ ಸಾಲಿನಲ್ಲಿ ಉರ್ಸುಲಾ ಕೊನೆಯವಳಾಗಿದ್ದಳು. ಅವಳ ಗಂಭೀರ ಮುಖಮುದ್ರೆ, ಅವಳ ಹೆಸರಿಗಿದ್ದ ಶಕ್ತಿ, ಒಪ್ಪಿಗೆಯಾಗುವಂಥ ಖಂಡತುಂಡವಾದ ಅವಳ ಹೇಳಿಕೆ, ನ್ಯಾಯದ ತಕ್ಕಡಿಗೆ ಇರುಸುಮುರುಸು ಉಂಟುಮಾಡಿತು. ಅವಳು ನ್ಯಾಯಾಲಯದ ಸದಸ್ಯರಿಗೆ, “ನೀವು ಈ ದರಿದ್ರ ಆಟಾನ ತುಂಬ ಗಂಭೀರವಾಗಿ ತೊಗೊಂಡಿದೀರಿ. ಅಲ್ದೆ ನೀವು ನಿಮ್ಮ ಕರ್ತವ್ಯ ಮಾಡ್ತಿರೋದ್ರಿಂದ ಚೆನ್ನಾಗೇ ಮಾಡ್ತಿದೀರಿ. ಆದರೆ ದೇವ್ರು ಎಲ್ಲೀ ತನಕ ನಮ್ಗೆ ಜೀವ ಕೊಟ್ಟಿರ್‍ತಾನೋ ಅಲ್ಲೀ ತನಕ ನಾವು ತಾಯಂದಿರೇ ಆಗಿರ್‍ತೀವಿ. ನೀವೆಷ್ಟೇ ಕ್ರಾಂತಿಕಾರಿಗಳಾಗಿದ್ರೂ ನಮ್ಗೆ ಅಗೌರವ ತೋರಿಸಿದ ಮೊದಲ್ನೇ ಸಲಕ್ಕೇ ನಿಮ್ಮ ಚಡ್ಡಿ ಎಳೆದು, ಕುಂಡಿ ಮೇಲೆ ಬಾರಿಸೋ ಹಕ್ಕಿದೆ ನಮ್ಗೆ” ಎಂದಳು. ಆ ಮಾತುಗಳು ಸೈನಿಕ ಸ್ಥಳವಾಗಿ ಮಾರ್ಪಟ್ಟ ಸ್ಕೂಲ್‌ನಲ್ಲಿ ಪ್ರತಿಧ್ವನಿತವಾಗುತ್ತಿದ್ದ ಹಾಗೆ ನ್ಯಾಯಾಲಯ ವಿಚಾರಣೆಯನ್ನು ನಿಲ್ಲಿಸಿತು. ಮಧ್ಯ ರಾತ್ರಿಯ ಹೊತ್ತಿಗೆ ಕರ್ನಲ್ ಹೊಸೆ ರಾಕೆಲ್ ಮೊಂಕಾದಗೆ ಮರಣದಂಡನೆ ವಿಧಿಸಲಾಯಿತು. ಉರ್ಸುಲಾ ಇನ್ನಿಲ್ಲದಂತೆ ಕೂಗಿ, ಅರಚಿ ಕೇಳಿದರೂ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅವರಿಗೆ ಹೇಳಲು ನಿರಾಕರಿಸಿದ. ಬೆಳಗಿನ ಜಾವ ದಂಡನೆಗೆ ಗುರಿಯಾದವನನ್ನು ರೂಮಿನಲ್ಲಿ ಭೇಟಿಯಾದ.
ಅವನು, “ನೀನು ನನ್ನ ಹಳೆ ಸ್ನೇಹಿತ. ಆದ್ರೆ ನೆನಪಿಟ್ಟುಕೋ, ನಾನು ನಿನ್ನ ಶೂಟ್ ಮಾಡ್ತಿಲ್ಲ. ಕ್ರಾಂತಿ ನಿನ್ನನ್ನ ಶೂಟ್ ಮಾಡ್ತಿದೆ” ಎಂದ.
ಜನರಲ್ ಮೊಂಕಾದ ಅವನು ಬರುತ್ತಿರುವುದನ್ನು ಕಂಡಾಗ ಮಂಚದ ಮೇಲಿಂದ ಏಳಲೂ ಇಲ್ಲ.
“ಹಾಳಾಗಿ ಹೋಗು” ಎಂದು ಉತ್ತರಿಸಿದ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ವಾಪಸು ಬಂದಾಗಿನಿಂದ ಅವನನ್ನು ಗಮನವಿಟ್ಟು ನೋಡಿರಲಿಲ್ಲ. ತುಂಬ ವಯಸ್ಸಾಗಿ ನಡುಗುತ್ತಿದ್ದ ಅವನ ಕೈಗಳನ್ನು ಕಂಡು ಅವನಿಗೆ ಆಶ್ಚರ್ಯವಾಯಿತು ಮತ್ತು ಅವನು ಸಾವನ್ನು ಗೌರವಪೂರ್ಣ ಅನುಸರಣೆಯೊಂದಿಗೆ ಎದುರು ನೋಡುತ್ತಿದ್ದ ರೀತಿಗಾಗಿ. ಅನಂತರ ಅವನಿಗೆ ತನ್ನ ಮೇಲೆಯೇ ಜಿಗುಪ್ಸೆ ಉಂಟಾಗಿ ಕ್ರಮೇಣ ಮರುಕ ಹುಟ್ಟಿಕೊಂಡಿತು.
ಅವನು, “ನನಗಿಂತ ನಿಂಗೇ ಚೆನ್ನಾಗಿ ಗೊತ್ತಿದೆ. ಎಲ್ಲಾ ಮಿಲಿಟರಿ ವಿಚಾರಣೆ ಒಂದು ತಮಾಷೆ. ಅಲ್ದೆ, ಬೇರೆ ಯಾರೋ ಮಾಡಿದ ತಪ್ಪಿಗೆ ನೀನು ಬಲಿಯಾಗ್ತಿದೀಯ ಅಂತ. ಯಾಕೆಂದರೆ ಈ ಸಲ ನಾವು ಗೆದ್ದೇ ಗೆಲ್ತೀವಿ. ನನ್ನ ಜಾಗದಲ್ಲಿ ನೀನಿದ್ರೂ ಹೀಗೇ ಮಾಡ್ತಿರ್‍ಲಿಲ್ವ?”
ಜನರಲ್ ಮೊಂಕಾದ ತನ್ನ ದಪ್ಪ ಕನ್ನಡಕದ ಗಾಜನ್ನು ಶರಟಿನ ಅಂಚಿನಿಂದ ಒರೆಸಲು ಎದ್ದು ನಿಂತ. ಅವನು, “ಇರ್‍ಬೋದು. ಆದ್ರೆ ನಂದೇನು ಯೋಚ್ನೆ ಅಂದ್ರೆ, ನೀನು ನನ್ನ ಶೂಟ್ ಮಾಡ್ತೀಯ ಅಂತ ಅಲ್ಲ. ಯಾಕೆ ಅಂದ್ರೆ ನನ್ನಂಥೋರಿಗೆ ಇದು ಸಹಜವಾದ ಸಾವು” ಎಂದ. ಅವನು ಕನ್ನಡಕವನ್ನು ಹಾಸಿಗೆಯ ಮೇಲಿಟ್ಟು ವಾಚ್ ಮತ್ತು ಚೈನ್ ತೆಗೆದ. ಅವನು ಮುಂದುವರಿದು, “ಅಲ್ಲ, ಮಿಲಿಟರಿಯವರ ಬಗ್ಗೆ ಅಷ್ಟೊಂದು ದ್ವೇಷ ಇದ್ದು, ಅಷ್ಟೊಂದು ಅವರ ವಿರುದ್ಧ ಹೋರಾಟ ಮಾಡ್ತಿದ್ದ, ಯೊಚ್ನೆ ಮಾಡ್ತಿದ್ದ ನೀನು, ಕೊನೆಗೆ ಅವರಷ್ಟೇ ಕೆಟ್ಟವನಾಗಿಬಿಟ್ಟೆಯಲ್ಲ ಅಂತ. ಜೀವನದ ಯಾವುದೇ ಆದರ್ಶಾನೂ ಇಷ್ಟೊಂದು ನೀಚನಾಗೋದಕ್ಕೆ ಬಿಡಲ್ಲ” ಎಂದ. ಅವನು ಮದುವೆಯ ಉಂಗುರ ಮತ್ತು ವರ್ಜಿನ್ ಆಫ್ ಹೆಲ್ಪ್ ಮೆಡಲನ್ನು ತೆಗೆದು ಕನ್ನಡಕ ಮತ್ತು ವಾಚಿನ ಪಕ್ಕದಲ್ಲಿಟ್ಟ.
ಅವನು, “ನೀನು ಮಾಡ್ತಾ ಇರೋ ರೀತೀನ ನೋಡಿದ್ರೆ ನಮ್ಮ ಇತಿಹಾಸದಲ್ಲೇ ಇರದಂಥ ಅತ್ಯಂತ ಕ್ರೂರ ಮತ್ತು ರಕ್ತ ಪಿಪಾಸಿನ ಸರ್ವಾಧಿಕಾರಿಯಾಗ್ತಿಯ. ಅಲ್ದೆ, ನಿಂಗೆ ಸಮಾಧಾನ ಸಿಗೋ ಪ್ರಯತ್ನದಲ್ಲಿ ನನ್ನ ಆಪ್ತಳಾದ ಉರ್ಸುಲಾಳನ್ನೂ ಶೂಟ್ ಮಾಡ್ತೀಯ” ಎಂದ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅಲ್ಲೇ ಅಲುಗಾಡದೆ ನಿಂತ. ಅನಂತರ ಜನರಲ್ ಮೊಂಕಾದ ಅವನಿಗೆ ಕನ್ನಡಕ, ಮೆಡಲ್, ವಾಚ್ ಮತ್ತು ಉಂಗುರವನ್ನು ಕೊಟ್ಟು, ಧ್ವನಿ ಬದಲಿಸಿ, “ಆದರೆ ನಿಂಗೆ ಹೇಳಿ ಕಳಿಸಿದ್ದು ನಿನ್ನನ್ನ ಬೈಯಬೇಕು ಅಂತಲ್ಲ. ಇವನ್ನೆಲ್ಲ ನನ್ನ ಹೆಂಡತಿಗೆ ಕಳಿಸಿಕೊಡೋ ಉಪಕಾರ ಮಾಡು ಅಂತ ಕೇಳೋದಕ್ಕೆ” ಎಂದ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅವುಗಳನ್ನೆಲ್ಲ ಜೇಬಿಗೆ ಹಾಕಿಕೊಂಡ.
“ಅವರಿನ್ನೂ ಮನಾರೇಲೆ ಇದಾರ?”
“ಅಲ್ಲೆ ಇದಾರೆ, ನೀನು ಕಾಗದ ಕಳಿಸಿದ್ದ ಚರ್ಚ್ ಹಿಂದಿನ ಮನೇಲಿ” ಎಂದ ಜನರಲ್ ಮೊಂಕಾದ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ನಾನು ಅದನ್ನ ಮಾಡ್ತೀನಿ, ಹೊಸೆ ರಾಕೆಲ್” ಎಂದ.
ಅವನು ಹೊರಗೆ ಮಂಜಿನ ನೀಲಿ ಗಾಳಿಯ ಮಧ್ಯೆ ಹೋದ ಮೇಲೆ ಹಿಂದಿನ ಇತರ ಮುಂಜಾವಿನಂತೆ ಅವನ ಮುಖ ತೇವಗೊಂಡಿತು. ತೀರ್ಪನ್ನು ಸ್ಮಶಾನದ ಗೋಡೆಯಲ್ಲದೆ ಅಂಗಳದಲ್ಲಿಯೇ ಜಾರಿಗೊಳಿಸಬೇಕೆಂದು ತಾನು ಅಪ್ಪಣೆ ಕೊಟ್ಟಿದ್ದು ಅವನಿಗೆ ಅರಿವಿಗೆ ಬಂದದ್ದು ಆಗಲೇ. ಬಾಗಿಲಿಗೆ ಎದುರಾಗಿ ನಿಂತ ಗುಂಡಿಕ್ಕುವ ತಂಡದವರು ಅವನಿಗೆ ರಾಷ್ಟ್ರ ಗೌರವ ಸೂಚಿಸಿದರು.
ಅವನು, “ಅವರನ್ನೀಗ ಕರ್‍ಕೊಂಡು ಬನ್ನಿ” ಎಂದು ಅಪ್ಪಣೆ ಕೊಟ್ಟ.
೯
ಯುದ್ಧದ ಖಾಲಿತನದ ಬಗ್ಗೆ ಮೊದಲು ಪರಿಕಲ್ಪಿಸಿದವನು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್. ಮಕೋಂದೋದ ಸಿವಿಲ್ ಮತ್ತು ಮಿಲಿಟರಿ ನಾಯಕನಾದ ಅವನು ವಾರಕ್ಕೆ ಎರಡು ಬಾರಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಜೊತೆ ತಂತಿ ಸಂಭಾಷಣೆ ನಡೆಸುತ್ತಿದ್ದ. ಪ್ರಾರಂಭದಲ್ಲಿ ಅವು ಯುದ್ಧದ ದಿಕ್ಕನ್ನು ನಿರ್ಧರಿಸುತ್ತಿದ್ದವು. ಯಾವುದೇ ಗೊತ್ತಾದ ವೇಳೆ ಹಾಗೂ ಸ್ಥಳದಲ್ಲಿ ಅವುಗಳ ಸ್ವರೂಪವನ್ನು ಮತ್ತು ಮುಂದಿನ ದಿಕ್ಕನ್ನು ತಿಳಿಸುತ್ತಿದ್ದವು. ತನ್ನ ತೀರ ಆತ್ಮೀಯ ಗೆಳೆಯರಿಗೂ ನಂಬಿಕೆಯ ನೆಲೆಗೆ ಸೆಳೆಯಲು ಅವಕಾಶ ಕೊಡದಿದ್ದರೂ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಆಪ್ತ ಧಾಟಿಯನ್ನು ತಂತಿಯ ಇನ್ನೊಂದು ತುದಿಯಲ್ಲಿರುವವರು ಗುರುತಿಸಬಹುದಾಗಿತ್ತು. ಅದೆಷ್ಟೋ ಸಲ ಅವನು ನಿರೀಕ್ಷಿತ ಮಿತಿಗಳನ್ನು ದಾಟಿ, ಕೌಟುಂಬಿಕ ವಿಷಯಗಳ ಬಗ್ಗೆ ವ್ಯಾಖ್ಯಾನ ಮುಂದುವರಿಸುತ್ತಿದ್ದ. ನಿಧಾನವಾಗಿ, ಯುದ್ಧದ ಸಾಂದ್ರತೆ ಮತ್ತು ವಿಸ್ತಾರ ಹೆಚ್ಚಿದಂತೆ, ಅವನ ಇಡೀ ದೃಷ್ಟಿಕೋನ ಅವಾಸ್ತವ ಜಗತ್ತಿನ ಕಡೆ ಜಾರಿ ಹೋಗುತ್ತಿತ್ತು. ಅವನ ಮಾತಿನ ಶೈಲಿ ಹೆಚ್ಚು ಹೆಚ್ಚು ಅನಿರ್ದಿಷ್ಟವಾಗಿ, ಎಲ್ಲ ಅರ್ಥಗಳನ್ನು ಕಳೆದುಕೊಂಡ ಕೇವಲ ಪದಪುಂಜಗಳಾಗುತ್ತಿತ್ತು. ಆಗ ಕರ್ನಲ್ ಗೆರಿನೆಲ್ಡೋ ಮಾರ್ಕೆಜ್ ಕೇಳುವಷ್ಟಕ್ಕೆ ಮಾತ್ರ ತನ್ನನ್ನು ಮಿತಿಗೊಳಿಸಿಕೊಳ್ಳುತ್ತಿದ್ದನಲ್ಲದೆ, ಬೇರೆ ಯಾವುದೋ ಪ್ರಪಂಚದ ಅಪರಿಚಿತನೊಡನೆ ತಂತಿ ಸಂಭಾಷಣೆಯಲ್ಲಿ ತೊಡಗಿರುವಂತೆ ಭಾವಿಸುತ್ತಿದ್ದ.
ಅವನು, “ನಂಗೆ ಅರ್ಥವಾಗತ್ತೆ ಅವ್ರೇಲಿಯಾನೋ, ಉದಾರವಾದಿ ಪಾರ್ಟಿ ಚಿರಾಯುವಾಗಲಿ” ಎಂದು ಹೇಳಿ ಮುಗಿಸುತ್ತಿದ್ದ.
ಕೊನೆಗೆ ಅವನು ಯುದ್ಧದೊಂದಿಗೆ ಎಲ್ಲ ಸಂಪರ್ಕವನ್ನು ಕಳೆದುಕೊಂಡ. ಹಿಂದೆಂದೋ ವಾಸ್ತವ ಸಂಗತಿಯಾಗಿದ್ದು, ಹರೆಯದಲ್ಲಿ ತಡೆಯಲಾಗದ ಉತ್ಸಾಹವಾಗಿತ್ತೋ ಅದು ಈಗ ದೂರದ ಖಾಲಿತನವನ್ನು ಸೂಚಿಸುವ ವಿಷಯವಾಯಿತು. ಅವನಿಗೆ ಆಶ್ರಯ ಪಡೆಯಲು ಇದ್ದ ಸ್ಥಳವೆಂದರೆ ಅಮರಾಂತಳ ಹೊಲಿಗೆ ರೂಮು. ಪ್ರತಿದಿನ ಮಧ್ಯಾಹ್ನ ಅಲ್ಲಿಗೆ ಹೋಗುತ್ತಿದ್ದ. ಆ ಯಂತ್ರವನ್ನು ಸುಂದರಿ ರೆಮಿದಿಯೋಸ್ ಚಾಲನೆಯಲ್ಲಿ ಇಡುತ್ತಿದ್ದಂತೆ, ಪೆಟಿಕೋಟಿನ ಬಟ್ಟೆಗೆ ಅದರಲ್ಲಿ ಮಡಿಕೆಗಳನ್ನು ಮೂಡಿಸುತ್ತಿದ್ದ ಅವಳ ಬೆರಳುಗಳನ್ನು ನೋಡಲು ಅವನಿಗೆ ಇಷ್ಟವಾಗುತ್ತಿತ್ತು. ಅವರು ಅನೇಕ ಗಂಟೆಗಳನ್ನು ಒಬ್ಬರಿಗೊಬ್ಬರು ಮಾತಾಡಿ ಪರಸ್ಪರ ಸಹವಾಸದಿಂದ ತ;ಪ್ತರಾಗಿ ಕಳೆಯುತ್ತಿದ್ದಾU, ಅವನೊಳಗಿದ್ದ ಆರಾಧನಾ ಭಾವವನ್ನು ಜ್ವಲಂತವಾಗಿಟ್ಟಿರುವುದಕ್ಕೆ ಅಮರಾಂತಳಿಗೆ ಒಳಗೊಳಗೇ ಸಂತೋಷವಾದರೂ ಅವನಿಗೆ ಅವಳ ಒಳಗಿನ ವೇದನೆ ಅರಿವಾಗುವುದು ಅಸಾಧ್ಯವಾಗುತ್ತಿತ್ತು. ಅವನು ಹಿಂತಿರುಗಿ ಬರುವುದರ ಸುದ್ದಿ ತಲುಪಿದಾಗ ಅವಳು ಆತಂಕದಿಂದ ಮೆತ್ತಗಾಗಿದ್ದಳು. ಆದರೆ ರಕ್ಷಣಾ ದಳದವರ ಮಧ್ಯೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಗದ್ದಲದ ಮನೆಯಲ್ಲಿ ನೋಡಿದಾಗ ಮತ್ತು ಕಠಿಣವಾದ ಪರದೇಶವಾಸ ಅವನನ್ನು ಎಷ್ಟು ಕೆಟ್ಟದಾಗಿ ಪ್ರಭಾವಿಸಿತ್ತೆಂದು ತಿಳಿದಾಗ, ವಯಸ್ಸು ಹೆಚ್ಚಾಗಿ ವಿಸ್ಮೃತಿ ಮುತ್ತಿ, ಮೈಯಲ್ಲ ಧೂಳು ಹಿಡಿದ ಬೆವರಿನಿಂದ ಕೊಳಕಾಗಿ, ಕೆಟ್ಟ ವಾಸನೆ ಹೊರಡಿಸುತ್ತ, ಎಡಗೈಗೆ ದಾರ ಕಟ್ಟಿ ಕುತ್ತಿಗೆಗೆ ನೇತು ಹಾಕಿಕೊಂಡಿದ್ದ ಅವನನ್ನು ನೋಡಿದಾಗ ಭ್ರಮನಿರಸಗೊಂಡ ಅವಳಿಗೆ ಪ್ರಜ್ಞೆ ತಪ್ಪುವಂತಾಗಿತ್ತು. ಅವಳು, “ಅಯ್ಯೋ, ನಾನು ಕಾಯತ್ತ ಕುಳಿತೋನು ಇವನಲ್ಲ” ಎಂದುಕೊಂಡಳು. ಆದರೆ ಮಾರನೆಯ ದಿನ ಅವನು ಶುಭ್ರವಾಗಿ, ಶೇವ್ ಮಾಡಿಕೊಂಡು, ಮೀಸೆಗೆ ಸುಗಂಧ ಹಚ್ಚಿಕೊಂಡು, ಕೈ ಕಟ್ಟಿದ್ದ ರಕ್ತದ ಲೇಪವಿದ್ದ ದಾರ ಬಿಚ್ಚಿ ಹಾಕಿ ಬಂದಿದ್ದ. ಅವಳಿಗೆ ಮುತ್ತುಗಳಿಂದ ರಟ್ಟು ಹಾಕಿದ ಪುಸ್ತಕವೊಂದನ್ನು ಪ್ರಾರ್ಥಿಸುವ ಸಲುವಾಗಿ ತಂದಿದ್ದ.
ಅವಳು, “ಈ ಗಂಡಸ್ರು ಎಷ್ಟು ವಿಚಿತ್ರ. ಇಡೀ ಜೀವನ ಪಾದ್ರಿಗಳ ವಿರುದ್ಧ ಹೋರಾಡ್ತಾ ಕಳೀತಾರೆ. ಆ ಮೇಲೆ ಪ್ರಾರ್ಥನೆ ಮಾಡಲಿಕ್ಕೆ ಪುಸ್ತಕಾನ ಉಡುಗೊರೆ ಕೊಡ್ತಾರೆ” ಎಂದು ಬೇರೆ ಏನೂ ಹೊಳೆಯದೆ ಹೇಳಿದಳು.
ಆ ಸಮಯದಿಂದ ಯುದ್ಧದ ಅತ್ಯಂತ ಆತಂಕದ ದಿನಗಳಲ್ಲಿಯೂ ಕೂಡ, ಅವನು ಪ್ರತಿ ದಿನ ಮಧ್ಯಾಹ್ನ ಅವಳನ್ನು ಭೇಟಿಯಾಗುತ್ತಿದ್ದ. ಅನೇಕ ಬಾರಿ ಸುಂದರಿ ರೆಮಿದಿಯೋಸ್ ಇರದಿದ್ದಾಗ ಹೊಲಿಗೆ ಯಂತ್ರದ ಚಕ್ರವನ್ನು ಅವನೇ ತಿರುಗಿಸುತ್ತಿದ್ದ. ಅಮರಾಂತಳಿಗೆ ಅಷ್ಟೊಂದು ಅಧಿಕಾರ ಹೊಂದಿದ ಅವನ ತಗ್ಗಿ ನಡೆವ, ಪಟ್ಟು ಹಿಡಿದ ವರ್ತನೆಯಿಂದ ಮನೋಸ್ತಿಮಿತ ಕಳೆದುಕೊಳ್ಳುತ್ತಿದ್ದಳು. ಇಷ್ಟಿದ್ದರೂ ಅವನು ಹೊಲಿಗೆ ಇರುವ ರೂಮಿಗೆ ಆಯುಧವಿಲ್ಲದೆ ಹೋಗಲು, ಪಕ್ಕದಲ್ಲಿ ಸಿಕ್ಕಿಸಿಕೊಳ್ಳುವ ಆಯುಧಗಳನ್ನು ಹಜಾರದಲ್ಲಿ ತೆಗೆದಿಡುತ್ತಿದ್ದ. ನಾಲ್ಕು ವರ್ಷಗಳ ಕಾಲ ಅವಳಿಗೆ ತನ್ನ ಪ್ರೇಮದ ಬಗ್ಗೆ ಮತ್ತೆ ಮತ್ತೆ ಹೇಳುತ್ತಿದ್ದರೂ ಅವನನ್ನು ನೋಯಿಸದೆ ಅದನ್ನು ತಿರಸ್ಕರಿಸಲು ಅವಳು ಯಾವುದಾದರೊಂದು ಕಾರಣ ಹುಡುಕುತ್ತಿದ್ದಳು. ಏಕೆಂದರೆ ಅವಳಿಗೆ ಅವನನ್ನು ಪ್ರೇಮಿಸಲು ಸಾಧ್ಯವಾಗದಿದ್ದರೂ ಅವನಿಲ್ಲದೆ ಬದುಕಲಾಗುತ್ತಿರಲಿಲ್ಲ. ಸುಂದರಿ ರೆಮಿದಿಯೋಸ್‌ಗೆ ಎಲ್ಲದರ ಬಗ್ಗೆ ಅಲಕ್ಷವಿದ್ದರೂ ಮತ್ತು ಅವಳನ್ನು ಬುದ್ಧಿ ಮಾಂದ್ಯಳೆಂದು ಭಾವಿಸಲಾಗುತ್ತಿದ್ದರೂ, ಅವನ ಬಗ್ಗೆ ಸೂಕ್ಷ್ಮರಹಿತಳಾಗಿ ಇರುವುದಕ್ಕೆ ಸಾಧ್ಯವಾಗಲಿಲ್ಲ. ಅವಳು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಪರವಾಗಿ ಆಸಕ್ತಿ ವಹಿಸಿದಳು. ಅಮರಾಂತಳಿಗೆ, ಈಗಷ್ಟೇ ಹರೆಯಕ್ಕೆ ಕಾಲಿಡುತ್ತಿರುವ, ತಾನು ಬೆಳೆಸಿದ ಹುಡುಗಿ, ಇಡೀ ಮಕೋಂದೋ ಅಲ್ಲಿಯ ತನಕ ಕಂಡ ಅತ್ಯಂತ ಸುಂದರಿಯಾಗಿದ್ದಾಳೆ ಎನ್ನುವುದು ತಕ್ಷಣವೇ ಅರಿವಾಯಿತು. ರೆಬೇಕಳ ವಿಷಯದಲ್ಲಿ ಆ ದಿನಗಳಲ್ಲಿ ಉಂಟಾಗುತ್ತಿದ್ದ ತೀವ್ರ ದ್ವೇಷ ಮರುಹುಟ್ಟು ಪಡೆದಂತೆ ಅವಳಿಗೆ ಭಾಸವಾಯಿತು. ಅವಳ ಸಾವನ್ನು ಬಯಸದಿರುವಂತಾಗಲಿ ಎಂದು ದೇವರನ್ನು ದೀನಳಾಗಿ ಪ್ರಾರ್ಥಿಸುತ್ತಿದ್ದಳು. ಮತ್ತು ಅವಳನ್ನು ಹೊಲಿಗೆ ರೂಮಿನಿಂದ ಹೊರಗಿಟ್ಟಳು. ಆ ದಿನಗಳಲ್ಲಿಯ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ಯುದ್ಧದಿಂದ ತಲೆ ಚಿಟ್ಟು ಹಿಡಿದಂತಾಗಿತ್ತು. ಅವನು ಪಟ್ಟು ಹಿಡಿಯಲು ತನ್ನೊಳಗಿನ ಎಲ್ಲದನ್ನೂ ಒಗ್ಗೂಡಿಸಿದ. ಅಮರಾಂತಳಿಗಾಗಿ ತನ್ನ ಜೀವಮಾನದ ಮಹತ್ವದ ವರ್ಷಗಳ ತ್ಯಾಗದಿಂದ ಲಭಿಸಿದ್ದ ಘನತೆಯನ್ನು ಬಿಟ್ಟುಕೊಡಲು ಸಿದ್ಧನಿದ್ದ. ಆದರೆ ಅವಳನ್ನು ಒಪ್ಪಿಸಲು ಅವನಿಗೆ ಸಾಧ್ಯವಾಗಲಿಲ್ಲ. ಆಗಸ್ಟ್ ತಿಂಗಳ ಒಂದು ಮಧ್ಯಾಹ್ನ ಅಮರಾಂತ ತನಗಾಗಿ ಹಂಬಲಿಸಿದವನಿಗೆ ಕಟ್ಟ ಕಡೆಯ ಉತ್ತರ ಕೊಟ್ಟು, ತನ್ನ ಹಠಮಾರಿತನದ ಭಾರಕ್ಕೆ ಕುಸಿದು, ಸಾಯುವ ತನಕ ಒಂಟಿಯಾಗಿರಬೇಕಾದುದಕ್ಕೆ ಕಣ್ಣೀರಿಟ್ಟಳು.
ಅವಳು ಅವನಿಗೆ, “ನಾವು ಇದನ್ನು ಎಂದೆಂದಿಗೂ ಮರ್‍ತು ಬಿಡೋಣ, ಇಂಥದೆಲ್ಲ ಯೋಚ್ನೆ ಮಾಡಕ್ಕೆ ಆಗದಷ್ಟು ನಮ್ಗೆ ವಯಸ್ಸಾಗಿದೆ”. ಎಂದಳು.
ಆ ದಿನ ಮಧ್ಯಾಹ್ನ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಂದ ತಂತಿಯ ಕರೆ ಬಂತು. ಅದೊಂದು ಎಂದಿನ ಮಾತುಕಥೆಯಂತಾಗಿ ಯುದ್ಧಕ್ಕೆ ಅಡೆತಡೆ ಉಂಟಾಗುವಂತಿರಲಿಲ್ಲ. ಕೊನೆಯಲ್ಲಿ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ವಿಷಣ್ಣನಾಗಿ ರಸ್ತೆಯ ಕಡೆ, ಅಲ್ಲಿದ್ದ ಬಾದಾಮಿ ಮರದಲ್ಲಿದ್ದ ನೀರ ಹನಿಗಳ ಕಡೆ ನೋಡಿz. ಅವನಿಗೆ ತನ್ನನ್ನು ತಾನು ಏಕಾಂತದಲ್ಲಿ ಮುಳುಗಿಸಿದಂತಾಯಿತು.
ಅವನು ಬೇಸರದಿಂದ ಕೀ ಅದುಮುತ್ತ, “ಅವ್ರೇಲಿಯಾನೋ, ಮಕೋಂದೋದಲ್ಲಿ ಮಳೆ ಬರ್‍ತಿದೆ” ಎಂದು ಹೇಳಿದ.
ಆ ಕಡೆ ಲೈನ್‌ನಲ್ಲಿ ದೀರ್ಘಕಾಲ ಮೌನ ಆವರಿಸಿತು. ಇದ್ದಕ್ಕಿದ್ದ ಹಾಗೆ ಆ ಉಪಕರಣ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಂದ ಸಾಕಷ್ಟು ಭಾವರಹಿತ ಒಕ್ಕಣೆಯನ್ನು ರವಾನಿಸಿತು.
“ಮುಟ್ಠಾಳನ ಥರ ಆಡ್ಬೇಡ ಗೆರಿನೆಲ್ಡೊ…. ಆಗಸ್ಟ್‌ನಲ್ಲಿ ಮಳೆ ಬರೋದು ತೀರ ಸಹಜ” ಎಂದು ಸಂದೇಶಗಳು ತಿಳಿಸಿದವು.
ಅವರಿಬ್ಬರು ಬಹಳ ದಿನಗಳಿಂದ ಒಬ್ಬರನ್ನೊಬ್ಬರು ನೋಡುತ್ತಿರಲಿಲ್ಲ. ಹೀಗಾಗಿ ಗೆರಿನೆಲ್ಡೊ ಮಾರ್ಕೆಜ್‌ಗೆ ಅವನ ಧೋರಣೆಯಿಂದ ಮನಸ್ಸು ಕಲಕಿತು. ಎರಡು ತಿಂಗಳ ನಂತರ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬಂದಾಗ ಅವನ ಕ್ಷೆಭೆ ನಿಬ್ಬೆರಗಾಗಿ ಬದಲಾಯಿತು. ಉರ್ಸುಲಾಳಿಗೂ ಅವನೆಷ್ಟು ಬದಲಾಗಿದ್ದಾನೆಂದು ಆಶ್ಚರ್ಯವಾಯಿತು. ಅವನು ಯಾವುದೇ ಅಬ್ಬರವಿಲ್ಲದೆ, ರಕ್ಷಣಾ ದಳದವರಿಲ್ಲದೆ, ಆ ಬಿರು ಬೇಸಿಗೆಯಲ್ಲಿಯೂ ಕೋಟು ಹಾಕಿಕೊಂಡು ಪ್ರೇಯಸಿಯರ ಜೊತೆ ಬಂದಿದ್ದ. ಅವರನ್ನು ಆ ಮನೆಯಲ್ಲಿಯೇ ಇರಲು ಬಿಡಲಾಗಿತ್ತು. ಅವನು ಹೆಚ್ಚಿನ ಸಮಯವನ್ನು ಹಾಸಿಗೆಯಲ್ಲಿ ಮಲಗಿಕೊಂಡೇ ಕಳೆಯುತ್ತಿದ್ದ. ಮಾಮೂಲು ಕಾರ್ಯಾಚರಣೆಯನ್ನು ಕಳಿಸುತ್ತಿದ್ದ ಟೆಲಿಗ್ರಾಫ್ ಸಂದೇಶವನ್ನು ಓದುತ್ತಲೇ ಇರಲಿಲ್ಲ. ಒಂದು ಸಂದರ್ಭದಲ್ಲಿ ಗೆರಿನೆಲ್ಡೊ ಮಾರ್ಕೆಜ್, ಅಂತರ ರಾಷ್ರ್ಟೀಯ ಘರ್ಷಣೆಯ ಅಪಾಯವಿರುವ ಸ್ಥಳದಿಂದ ತೆರವು ಮಾಡುವುದರ ಬಗ್ಗೆ ಅವನ ಸಲಹೆಯನ್ನು ಕೇಳಿದ.
ಅವನು, “ಇಂಥ ಪುಟಗೋಸಿ ವಿಷಯಗಳನ್ನೆಲ್ಲ ಕೇಳಿ ತಲೆ ಕೆಡಿಸಬೇಡಿ… ಅದೆಲ್ಲ ದೈವ ನಿಯಾಮಕ” ಎಂದ.
ಬಹುಶಃ ಅದು ಯುದ್ಧದ ಅತ್ಯಂತ ಸಂದಿಗ್ಧ ಸಮಯ. ಪ್ರಾರಂಭದಲ್ಲಿ ಕ್ರಾಂತಿಯನ್ನು ಬೆಂಬಲಿಸಿದ್ದ ಉದಾರವಾದಿ ಭೂ ಮಾಲೀಕರು, ಸಂಪ್ರದಾಯವಾದಿ ಭೂ ಮಾಲೀಕರ ಜೊತೆ, ಗುಪ್ತ ಆಸ್ತಿ ಶಿರೋನಾಮೆಯ ಪರಿಷ್ಕರಣದ ಬಗ್ಗೆ, ರಹಸ್ಯ ಹೊಂದಾಣಿಕೆಯನ್ನು ಮಾಡಿಕೊಂಡಿದ್ದರು. ಯುದ್ಧಕ್ಕಾಗಿ ಪರದೇಶಗಳಿಂದ ಹಣ ಒದಗಿಸುತ್ತಿದ್ದ ರಾಜಕಾರಣಿಗಳು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಗುರಿಯನ್ನು ಸಾರ್ವಜನಿಕವಾಗಿ ಖಂಡಿಸುತ್ತಿದ್ದರು. ಅಲ್ಲದೆ ಪ್ರಮಾಣೀಕರಿಸುವುದನ್ನು ಹಿಂತೆಗೆದುಕೊಂಡಿದ್ದೂ ಕೂಡ, ಅವನನ್ನು ಕಾಡಿದ ಹಾಗೆ ಕಾಣಲಿಲ್ಲ. ಅವನು ಕಾವ್ಯವನ್ನು ಮತ್ತೆ ಓದಲು ತೊಡಗಲಿಲ್ಲ. ಐದು ಗ್ರಂಥಗಳಲ್ಲಿದ್ದ ಅವು ಮರೆವಿಗೆ ಒಳಗಾಗಿ ಟ್ರಂಕಿನ ತಳ ಸೇರಿದ್ದವು. ರಾತ್ರಿಯಲ್ಲಿ ಅಥವಾ ಮಧ್ಯಾಹ್ನ ಮಲಗುವ ಸಮಯದಲ್ಲಿ, ಅವನು ಯಾರಾದರೊಬ್ಬ ಹೆಂಗಸರನ್ನು ಹಾಸಿಗೆಗೆ ಕರೆಯುತ್ತಿದ್ದ ಮತ್ತು ತೆವಲು ತೀರಿಸಿಕೊಂಡು ಖುಷಿಪಡುತ್ತಿದ್ದ. ಅನಂತರ ಕಲ್ಲಿನ ಹಾಗೆ, ಕಿಂಚಿತ್ ಯೋಚನೆ ಇಲ್ಲದೆ ಮಲಗಿ ಬಿಡುತ್ತಿದ್ದ. ಆದರೆ ಆ ಸಮಯದಲ್ಲಿ ಗೊಂದಲಕ್ಕೆ ಸಿಕ್ಕಿಕೊಂಡ ಆ ಹೃದಯಕ್ಕೆ, ಎಂದೆಂದಿಗೂ ಅನಿಶ್ಚಿತವಾಗಿರುವುದೇ ಗತಿ ಎನ್ನುವುದು ಅವನೊಬ್ಬನಿಗೆ ಮಾತ್ರ ಗೊತ್ತಿತ್ತು. ಮೊದಮೊದಲು ಹಿಂತಿರುಗಿ ಬಂದದ್ದರ ಖ್ಯಾತಿಯ ನಿಶೆಯಲ್ಲಿ ತನ್ನ ಅದ್ಭುತ ಜಯಭೇರಿಯಿಂದ ದೊಡ್ಡಸ್ಥಿಕೆಯ ಕೂಪದಲ್ಲಿದ್ದ. ಅವನಿಗೆ ಬಲಗೈಯಲ್ಲಿ, ತನಗೆ ಯುದ್ಧದಲ್ಲಿ ಮಹಾನ್ ಗುರುವಾದ ಮತ್ತು ಚರ್ಮದ ವೇಷಭೂಷಣ ಹಾಗೂ ಹುಲಿಯುಗುರುಗಳಿಂದ ದೊಡ್ಡವರಲ್ಲಿ ಗೌರವವನ್ನು ಮತ್ತು ಮಕ್ಕಳಲ್ಲಿ ಭಯವನ್ನು ಹುಟ್ಟಿಸುತ್ತಿದ್ದ, ‘ಮಾರ್ಲ್‌ಬರೋದ ರಾಜ\’ನನ್ನು ಇಟ್ಟುಕೊಂಡಿರಲು ಸಂತೋಷವೆನಿಸುತ್ತಿತ್ತು. ಆಗಲೇ ಅವನು ಯಾವ ನರಪ್ರಾಣಿಯೂ – ಉರ್ಸುಲಾ ಕೂಡ – ಹತ್ತು ಅಡಿಗಿಂತ ಒಳಗೆ ಅವನ ಹತ್ತಿರಕ್ಕೆ ಬರಬಾರದೆಂದು ನಿರ್ಧರಿಸಿದ. ಅವನ ಬೆಂಬಲಿಗರು ಅವನು ಎಲ್ಲಿ ನಿಂತರೆ ಅಲ್ಲಿ ಬರೆದ ಸುಣ್ಣದ ಸುತ್ತಿನ ಮಧ್ಯದಲ್ಲಿ ನಿಂತು ಮರುಮನವಿಗೆ ಅವಕಾಶವಿರದೆ, ಪ್ರಪಂಚದ ವಿಧಿಯನ್ನು ನಿರ್ಧರಿಸುವ ಚುಟುಕಾದ ಅಪ್ಪಣೆಗಳನ್ನು ಕೊಡುತ್ತಿದ್ದ. ಜನರಲ್ ಮೊಂಕಾದನನ್ನು ಗುಂಡಿಕ್ಕಿದ ಮೇಲೆ ಮೊದಲ ಸಲ ಅವನು ಮನಾರೆಯಲ್ಲಿದ್ದಾಗ, ಸತ್ತವನ ಕೊನೆಯ ಆಸೆಯನ್ನು ಪೂರೈಸಲು ಹೋದ. ಆತನ ವಿಧವೆ ಕನ್ನಡಕ, ಮೆಡಲು, ವಾಚು ಹಾಗೂ ಉಂಗುರವನ್ನು ತೆಗೆದುಕೊಂಡಳು. ಆದರೆ ಅವನನ್ನು ಬಾಗಿಲಿಂದ ಒಳಗೆ ಬರಲು ಬಿಡಲಿಲ್ಲ.
ಅವಳು, “ಕರ್ನಲ್, ನೀವು ಒಳಗೆ ಬರೋ ಹಾಗಿಲ್ಲ. ನೀವು ನಿಮ್ಮ ಯುದ್ಧದ ಸೇನಾಧಿಪತಿ ಇರಬಹುದು. ಆದರೆ ನನ್ನ ಮನೆ ನನ್ನ ಆಧಿಪತ್ಯದಲ್ಲಿದೆ” ಎಂದಳ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಯಾವುದೇ ರೀತಿಯ ಕೋಪವನ್ನು ವ್ಯಕ್ತಪಡಿಸಲಿಲ್ಲ. ಆದರೆ ಅವನ ರಕ್ಷಣಾ ದಳದವರು ಮನೆಯನ್ನು ಕೆಡವಿ, ಬೂದಿ ಮಾಡಿದ ಮೇಲೆ ಅವನಿಗೆ ಸಮಾಧಾನವಾಯಿತು. ಆಗ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್, “ನಿನ್ನೊಳಗೆ ನೊಡ್ಕೋ ಅವ್ರೇಲಿಯಾನೋ……. ಜೀವಂತವಾಗಿದ್ದೇ ಕೊಳೆತು ಹೋಗ್ತಿದೀಯ” ಎಂದು ಹೇಳುತ್ತಿದ್ದ. ಅದೇ ವೇಳೆಗೆ ಪ್ರಮುಖ ಕ್ರಾಂತಿಕಾರಿ ಸೇನಾಧಿಕಾರಿಗಳ ಎರಡನೆ ಸಭೆಯನ್ನು ಕರೆದ. ಅದರಲ್ಲಿ ಎಲ್ಲ ರೀತಿಯವರಿದ್ದರು: ಆದರ್ಶವಾದಿಗಳು, ಮಹತ್ವಾಕಾಂಕ್ಷಿಗಳು, ಸಾಹಸಿಗಳು, ಸಾಮಾಜಿಕ ವ್ಯವಸ್ಥೆಯ ಟೀಕೆದಾರರು ಅಲ್ಲದೆ ಕ್ರಿಮಿನಲ್‌ಗಳು. ಅವರಲ್ಲೊಬ್ಬ ತನ್ನ ಮೇಲಿರುವ ಹಣ ದುರುಪಯೋಗದ ತೀರ್ಪಿನಿಂದ ತಪ್ಪಿಸಿಕೊಳ್ಳಲು ದಂಗೆಯಲ್ಲಿ ಆಶ್ರಯಪಡೆದ ಸಂಪ್ರದಾಯವಾದಿ ಕಾರ್ಯಾಚರಣೆಯವನೊಬ್ಬನಿದ್ದ. ಬಹಳಷ್ಟು ಜನರಿಗೆ ತಾವೇಕೆ ಹೋರಾಡುತ್ತಿರುವುದು ಎನ್ನುವುದೇ ಗೊತ್ತಿರಲಿಲ್ಲ. ಆ ಗುಂಪಿನ ವಿವಿಧ ಬಗೆಯ ಜನರ ಮೌಲ್ಯಗಳಲ್ಲಿದ್ದ ವ್ಯತ್ಯಾಸ, ಆಂತರಿಕ ಸಿಡಿತದ ಮಟ್ಟವನ್ನು ತಲುಪಿತ್ತು. ಅವರ ಪೈಕಿ ಎದ್ದು ಕಾಣುತ್ತಿದ್ದವನೆಂದರೆ ಸಪ್ಪೆ ಮುಖದ ಜನರಲ್ ಟೋಫಿಲೋ ವಾರ್ಗಾಸ್. ಅವನೊಬ್ಬ ಅನಕ್ಷರಸ್ಥನಾದ, ಪಳಗದಿರುವ ಮೈ ತುಂಬಿಕೊಂಡ ಇಂಡಿಯನ್. ಅವನಲ್ಲಿ ಕುಯುಕ್ತಿಯಿತ್ತು ಮತ್ತು ಉದ್ಧಾರಕ್ಕಾಗಿ ಅವತರಿಸಿದ್ದಾನೆ ಎಂಬ ಹುಚ್ಚು ನಂಬಿಕೆ, ಅವನ ದುರಭಿಮಾನಿ ಜನರಲ್ಲಿತ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ರಾಜಕಾರಣಿಗಳ ಪಿತೂರಿಯ ವಿರುದ್ಧ, ಕ್ರಾಂತಿಯನ್ನು ಒಟ್ಟಾಗಿಸುವ ಗುರಿಯಿಂದ ಸಭೆಯನ್ನು ಕರೆದಿದ್ದ. ಆಗ ಕೆಲವೇ ಗಂಟೆಗಳಲ್ಲಿ ಜನರಲ್ ಟೋಫಿಲೋ ವಾರ್ಗಾಸ್ ತನ್ನ ಉದ್ದೇಶಗಳಿಂದ ಪ್ರಭಾವ ಬೀರಿದ. ಅವನು ಆಗಲೇ ಇದ್ದ ಉತ್ತಮ ಸೇನಾಧಿಪತಿಯ ಹೊಂದಾಣಿಕೆಯನ್ನು ಧೂಳೀಪಟಮಾಡಿ ಪ್ರಧಾನ ಸೇನಾಧಿಪತಿ ಸ್ಥಾನವನ್ನು ವಹಿಸಿಕೊಂಡ. ಆಗ ಕರ್ನಲ್ ಬ್ಯುಂದಿಯಾ, “ಅವರೇನು ಮಾಡ್ತಾರೆ ಅಂತ ನೋಡೋಣ . . ಅವ್ರು ನಮ್ಮ ಯುದ್ಧ ಮಂತ್ರಿಗಿಂತ ಅಪಾಯಕಾರಿ” ಎಂದು ತನ್ನ ಅಧಿಕಾರಿಗಳಿಗೆ ಹೇಳಿದ. ಆಗ ಯಾವಾಗಲೂ ಮೆತ್ತಗಿರುತ್ತಿದ್ದ ಯುವ ಅಧಿಕಾರಿ ಜಾಗರೂಕತೆಯ ಸೂಚನೆ ಕೊಟ್ಟ.
ಅವನು “ಕರ್ನಲ್, ಅದು ಬಹಳ ಸರಳ…. ಅವನನ್ನ ಕೊಂದು ಹಾಕ್ಬೇಕು ಅಷ್ಟೆ” ಎಂದು ಸಲಹೆ ಕೊಟ್ಟ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಅವನ ತಣ್ಣನೆಯ ಕೊರೆಯುವ ಸಲಹೆಯಿಂದ ಆಶ್ಚರ್ಯವಾಗಲಿಲ್ಲ. ಆದರೆ ಅರೆಕ್ಷಣದಲ್ಲಿ ತನ್ನ ಯೋಚನೆಯನ್ನೇ ಮುಂಚಿತವಾಗಿ ನಿರೀಕ್ಷಿಸಿದಂತಾಯಿತು. ಅವನು, “ನಾನು ಆ ರೀತಿ ಆರ್ಡರ್ ಕೊಡ್ಲಿ ಅಂತ ಕಾಯ್ತಿರ್‍ಬೇಡಿ” ಎಂದ.
ಅವನು ಹಾಗೆ ಆರ್ಡರ್ ಕೊಡಲಿಲ್ಲ. ಆದರೆ ಎರಡು ವಾರಗಳ ನಂತರ ಜನರಲ್ ಟೋಫಿಲೋ ವಾರ್ಗಾಸ್ ಹೊಡೆದಾಟದಲ್ಲಿ ತುಂಡು ತುಂಡಾಗಿ ಕತ್ತರಿಸಲ್ಪಟ್ಟ ಮತ್ತು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಪ್ರಧಾನ ಸೇನಾಧಿಪತಿಯಾದ. ಕ್ರಾಂತಿಕಾರಿ ಸೇನಾಧಿಪತಿಗಳಿಂದ ಅವನ ಅಧಿಕಾರ ಅಂಗೀಕೃತವಾದ ಅದೇ ರಾತ್ರಿ ಅವನು ಬೆಚ್ಚಿಬಿದ್ದು ಎಚ್ಚರಗೊಂಡು ಬೆಚ್ಚಗಿನ ಹೊದಿಕೆಯನ್ನು ಕೇಳಿದ. ಒಳಗಿನ ಕೊರೆತ ಅವನ ಮೂಳೆಗಳನ್ನು ಹಿಡಿದು ಹಿಪ್ಪೆ ಮಾಡಿ ಅದೇ ಅಭ್ಯಾಸವಾಗುವ ತನಕ ಅನೇಕ ತಿಂಗಳುಗಳ ಕಾಲ ಅವನಿಗೆ ನಿದ್ದೆ ಮಾಡಲು ಬಿಡಲಿಲ್ಲ. ಅನೇಕ ಮುಜುಗರಗಳ ಅಲೆಯಲ್ಲಿ ಅಧಿಕಾರದ ಅಮಲು ಚೂರಾಗಲು ಪ್ರಾರಂಭಿಸಿತ್ತು. ಒಳಗಿನ ಮಂಜಿನಿಂದ ಗುಣಮುಖನಾಗಲು ಹುಡುಕುತ್ತಿದ್ದಾಗ, ಜನರಲ್ ಟೋಫಿಲೋ ವಾರ್ಗಾಸ್‌ನನ್ನು ಗುಂಡಿಕ್ಕಲು ಸೂಚಿಸಿದ ಯುವ ಅಧಿಕಾರಿ ಜೊತೆಗಿದ್ದ. ಅವನ ಆರ್ಡರ್‌ಗಳನ್ನು, ಅವುಗಳನ್ನು ಕೊಡುವುದಕ್ಕೆ ಮುಂಚೆಯೇ, ಯೋಚಿಸುವ ಮುಂಚೆಯೇ ಜಾರಿಗೊಳಿಸಲಾಗುತ್ತಿತ್ತು ಮತ್ತು ಯಾವಾಗಲೂ ಅವನು ಜಾರಿಗೊಳಿಸಬೇಕೆಂದು ಧ್ಯೆರ್ಯ ವಹಿಸುತ್ತಿದ್ದಕ್ಕಿಂತ ಸಾಕಷ್ಟು ಅಧಿಕವಾಗಿರುತ್ತಿತ್ತು. ಏಕಾಂತತೆಯ ಅಗಾಧ ಅಧಿಕಾರದಲ್ಲಿ ಮುಳುಗಿ ಹೋಗಿ ಅವನಿಗೆ ದಿಕ್ಕು ತಪ್ಪಿತು. ಅವನಿಗೆ ಅಕ್ಕಪಕ್ಕದ ಹಳ್ಳಿಯವರ ಜೈಕಾರ ಹಿಂಸೆಯಾಗುತ್ತಿತ್ತು ಮತ್ತು ಅವರು ಶತ್ರುಗಳಿಗೆ ಹಾಕುತ್ತಿದ್ದದ್ದೂ ಅದೇ ಜೈಕಾರವೆಂದು ಕಲ್ಪಿಸಿಕೊಂಡ. ಎಲ್ಲಂದರಲ್ಲಿ ತನ್ನನ್ನೇ ಕಾಣುತ್ತಿದ್ದ, ತಾನು ಅಪನಂಬಿಕೆಯಿಂದ ಅವರಿಗೆ ಒಳ್ಳೆಯದನ್ನು ಹಾರೈಸಿದಂತೆ ತನಗೂ ಹಾರೈಸುತ್ತಿದ್ದ ಮತ್ತು ತನ್ನ ಮಕ್ಕಳೆಂದು ಹೇಳಿಕೊಳ್ಳುತ್ತಿದ್ದ ಹದಿವಯಸ್ಸಿನವರನ್ನು ಭೇಟಿಯಾಗುತ್ತಿದ್ದ. ಅವನಿಗೆ ಎಂದಿಗಿಂತಲೂ ಹೆಚ್ಚು ಚದುರಿಹೋದಂತೆ, ಬಹುವಿಧವಾದಂತೆ ಮತ್ತು ಹೆಚ್ಚು ಏಕಾಂತದಲ್ಲಿರುವಂತೆ ಭಾಸವಾಗುತ್ತಿತ್ತು. ಅವನಿಗೆ ತನ್ನ ಅಧಿಕಾರಿಗಳೇ ತನಗೆ ಸುಳ್ಳು ಹೇಳುತ್ತಿದ್ದಾರೆಂದು ಖಚಿತವಾಯಿತು. ಅವನು ಮಾರ್ಲ್‌ಬರೋ ರಾಜನೊಂದಿಗೆ ಸೆಣೆಸಾಡಿದ. ಆಗ ಅವನು ಹೇಳಿದ್ದು, “ಯಾರಿಗೇ ಆಗಲಿ, ಈಗಷ್ಟೇ ಸತ್ತವನು ಎಲ್ಲರಿಗಿಂತ ಒಳ್ಳೆಯ ಸ್ನೇಹಿತ” ಎಂದ ಅವನು ಅನಿಶ್ಚಯತೆಯಿಂದ, ಯಾವಾಗಲೂ ಇದ್ದಲ್ಲೆ ಇರುವಂತೆ ಕಾಣುತ್ತಿದ್ದ, ಎಂದೆಂದೂ ಮುಗಿಯದ ಯುದ್ಧದ ವಿಷವರ್ತುಲದಿಂದ ರೋಸಿಹೋಗಿದ್ದ. ಆದರೆ ಅವನು ಯಾವಾಗಲೂ ಹಿರಿಯನಾಗಿ, ನೊಂದವನಾಗಿ, ಇದ್ದ ಸ್ಥಾನದಲ್ಲಿ ಏಕೆ ಹೇಗೆ ಮತ್ತು ಯಾವಾಗ ಎಂದು ಅರಿಯದೆ ಮತ್ತಷ್ಟು ತಳವೂರಿ ಇರುತ್ತಿದ್ದ. ಜೊತೆಗೆ ಸುಣ್ಣದ ಸುತ್ತಿನ ಆಚೆ ಯಾವಾಗಲೂ ಒಬ್ಬನಿರುತ್ತಿದ್ದ. ಹಣದ ಅಗತ್ಯದವನೊಬ್ಬ, ಬಿಡಲಾರದ ಕೆಮ್ಮಿರುವ ಮಗ ಇರುವನೊಬ್ಬ ಅಥವಾ ಯುದ್ಧದ ಈ ಅಸಹ್ಯ ಮಲವನ್ನು ಬಾಯಲ್ಲಿ ಇಟ್ಟುಕೊಳ್ಳಲಾಗದೆ, ಎಲ್ಲೋ ಹೋಗಿ ಮತ್ತೆ ಎದ್ದೇಳದಂತೆ ಮಲಗಬೇಕು ಎನ್ನುವನೊಬ್ಬನಿದ್ದರೂ ಕೂಡ, “ಕರ್ನಲ್ ಪ್ರತಿಯೊಂದೂ ಸಹಜ ಸ್ಥಿತಿಯಲ್ಲಿದೆ” ಎಂದು ತಿಳಿಸಲು ಸೆಟೆದು ನಿಲ್ಲುತ್ತಿದ್ದ. ಸಹಜ ಸ್ಥಿತಿಯೇ ನಿರಂತರ ಯುದ್ಧದಲ್ಲಿ ಎಲ್ಲಕ್ಕಿಂತ ಭಯಾನಕವಾದ ಅಂಶವಾದರೂ ಹಾಗೆ ಎಂದೂ ಆಗಲಿಲ್ಲ. ಏಕಾಂಗಿಯಾಗಿ, ಮುನ್ಸೂಚನೆಗಳು ಕೈ ಬಿಟ್ಟು ಹೋಗಿ, ಸಂಗಾತಿಯಾಗಲಿದ್ದ ಚಳಿಯಿಂದ ದೂರ ಹೋಗುತ್ತ, ಕೊನೆಗೆ ಮಕೋಂದೋದಲ್ಲಿ ಅತ್ಯಂತ ಬೆಚ್ಚನೆಯ ಹಳೆಯ ನೆನಪುಗಳಲ್ಲಿ ಆಶ್ರಯ ಪಡೆದ. ಅವನ ಸೋಮಾರಿತನ ಎಷ್ಟು ತೀವ್ರವಾಗಿತ್ತೆಂದರೆ, ಯುದ್ಧ ಇತ್ಯರ್ಥವಾಗದಿರುವುದನ್ನು ಚರ್ಚಿಸಲು ಅವನ ಪಾರ್ಟಿಯವರು ಅಧಿಕೃತವಾಗಿ ರಚಿಸಿದ ಆಯೋಗದವರು ಬ ರುವರಿದ್ದಾರೆ ಎಂದು ಅವರು ಪ್ರಕಟಿಸಿದಾಗ, ಅವನು ಎದ್ದೇಳದೆ ಹಾಸಿಗೆಯಲ್ಲಿ ಹೊರಳಿ, “ಅವರನ್ನ ಸೂಳೆಯರ ಹತ್ರ ಕರ್‍ಕೊಂಡು ಹೋಗಿ” ಎಂದ.
ಅವರು ಫ್ರಾಕು ಕೋಟು ಮತ್ತು ಹ್ಯಾಟ್ ಹಾಕಿಕೊಂಡು ನವಂಬರ್‌ನ ತೀವ್ರ ಸೆಖೆಯನ್ನು ಸಂಯಮದಿಂದ ತಾಳಿಕೊಂಡ ಆರು ಜನ ಲಾಯರುಗಳಾಗಿದ್ದರು. ಉರ್ಸುಲಾ ಅವರನ್ನು ಮನೆಯಲ್ಲಿರಲು ಅನುವು ಮಾಡಿ ಕೊಟ್ಟಳು. ಅವರು ದಿನದ ಬಹುಭಾಗವನ್ನು ಬೆಡ್‌ರೂಮಿನಲ್ಲಿ ರಸತಂತ್ರದ ಮಾತುಕಥೆಯಲ್ಲಿ ಕಳೆದು ಸಂಜೆಯಾಗುತ್ತಲೆ ಕೆಲವು ಅಕಾರ್ಡಿನ್ ನುಡಿಸುವವರ ಜೊತೆ ಹೋಗಿ ಕತಾವುರೆ ಅಂಗಡಿಯನ್ನು ಸುಪರ್ದಿಗೆ ತೆಗೆದುಕೊಳ್ಳುತ್ತಿದ್ದರು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ಅವರಷ್ಟಕ್ಕೆ ಅವರನ್ನು ಬಿಟ್ಟು ಬಿಡಿ. ಇನ್ನೇನಿದೆ, ಅವರಿಗೆ ಏನು ಬೇಕು ಅಂತ ನಂಗೊತ್ತು” ಎಂದು ಅಪ್ಪಣೆ ಕೊಟ್ಟ. ಡಿಸೆಂಬರ್‌ನ ಪ್ರಾರಂಭದಲ್ಲಿ ಎಂದಿಗೂ ಮುಗಿಯುತ್ತದೆಯೋ ಇಲ್ಲವೋ ಎಂದು ಭಾವಿಸಿದ್ದ ತುಂಬ ದಿನದಿಂದ ಕಾದಿದ್ದ ಭೇಟಿ, ಒಂದು ಗಂಟೆಗೂ ಕಡಿಮೆಯ ಅವಧಿಯಲ್ಲಿ ಇತ್ಯರ್ಥವಾಯಿತು.
ಸುಡುತ್ತಿದ್ದ ನಡುಮನೆಯಲ್ಲಿ, ಬಿಳಿಯ ಹೊದಿಕೆ ಹೊದಿಸಿದ ಪಿಯಾನೋ ಪಕ್ಕದಲ್ಲಿ ಅವನ ಬೆಂಬಲಿಗರು ಹಾಕಿದ ಸುಣ್ಣದ ಸುತ್ತಿನ ಮಧ್ಯದಲ್ಲಿ ಆ ಬಾರಿ ಕುಳಿತುಕೊಳ್ಳಲಿಲ್ಲ, ಅವನ ರಾಜಕೀಯ ಸಲಹೆಗಾರರ ನಡುವೆ ಕುರ್ಚಿಯಲ್ಲಿ ಉಲನ್ ಹೊದಿಕೆ ಹೊದ್ದುಕೊಂಡು ಕುಳಿತು, ಮೌನವಾಗಿ, ಚುಟುಕಾಗಿ ಹೇಳಿದ ಬಂದವರ ಸೂಚನೆಗಳನ್ನು ಕೇಳಿದ. ಅವರು ಮೊದಲು ಉದಾರವಾದಿ ಭೂಮಾಲೀಕರ ಬೆಂಬಲ ಪಡೆಯಲು ಭೂಮಿ ಶಿರೋನಾಮೆಯನ್ನು ಕೈ ಬಿಡಲು ಹೇಳಿದರು. ಎರಡನೆಯದಾಗಿ ಕ್ಯಾಥೊಲಿಕ್ ಸಮುದಾಯದ ಬೆಂಬಲ ಪಡೆಯಲು ಪಾದ್ರಿಗಳ ಪ್ರಭಾವದ ವಿರುದ್ಧ ಹೋರಾಡುವುದನ್ನು ಕೈ ಬಿಡಬೇಕೆಂದರು. ಕೊನೆಯದಾಗಿ ನ್ಯಾಯಸಮ್ಮತವಾಗಿ ಹುಟ್ಟಿದ ಮಕ್ಕಳಿಗೂ ಮತ್ತು ಹಾದರಕ್ಕೆ ಹುಟ್ಟಿದ ಮಕ್ಕಳಿಗೂ, ಸಮಾನ ಹಕ್ಕುಗಳನ್ನು ನೀಡುವ ಗುರಿಯನ್ನು, ಸಂಸಾರದ ವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಕೈ ಬಿಡಲು ಹೇಳಿದರು.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ಹಾಗಾದ್ರೆ ನಾವು ಹೋರಾಡ್ತಿರೋದು ಯಾತಕ್ಕೆಂದರೆ, ಅಧಿಕಾರಕ್ಕೆ ಮಾತ್ರ” ಎಂದು ಅವರು ಓದಿ ಮುಗಿಸಿದ ನಂತರ ನಗುತ್ತ ಹೇಳಿದ.
ಒಬ್ಬ ಪ್ರತಿನಿಧಿ, “ಇವೆಲ್ಲ ಜಾಣತನದ ಬದಲಾವಣೆಗಳು. ಈಗ ಮುಖ್ಯವಾದ ವಿಷಯ ಅಂದ್ರೆ, ಯುದ್ಧದ ಜನಪ್ರಿಯ ಬುನಾದಿಯನ್ನು ವಿಸ್ತಾರಗೊಳಿಸೋದು. ಉಳಿದದ್ದನ್ನ ಮತ್ತೊಮ್ಮೆ ಯೋಚಿಸಿದರಾಯ್ತು” ಎಂದ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ರಾಜಕೀಯ ಸಲಹೆಗಾರರಲ್ಲೊಬ್ಬ ತಕ್ಷಣವೇ ಬಾಯಿ ಹಾಕಿದ.
ಅವನು, “ಅದು ಒಂದಕ್ಕೊಂದು ವಿರೋಧವಾಯ್ತು. ಈ ಬದಲಾವಣೆಗಳು ಸರಿ ಇದೆ ಅಂದ್ರೆ, ಸಂಪ್ರದಾಯವಾದಿಗಳ ಆಡಳಿತ ಚೆನ್ನಾಗಿದೆ ಅಂತ ಆಯ್ತು. ನೀವು ಹೇಳೋ ಹಾಗೆ, ಅವರನ್ನೆಲ್ಲ ಜೊತೆಗೆ ಸೇರಿಸ್ಕೊಂಡು, ಜನಪ್ರಿಯ ಬುನಾದೀನ ಹೆಚ್ಚಿಸೋದ್ರಲ್ಲಿ ನಾವು ಯಶಸ್ವಿಯಾಗ್ಬೇಕು. ಅದರರ್ಥ, ಅವ್ರ ಆಳ್ವಿಕೇಗೆ ಜನಪ್ರಿಯ ಬುನಾದಿ ಇದೆ ಅಂತ. ಇದನ್ನು ಸ್ವಲ್ಪದರಲ್ಲಿ ಹೇಳೋದಾದ್ರೆ, ಸುಮಾರು ಇಪ್ಪತ್ತು ವರ್ಷದಿಂದ ನಾವು ದೇಶದ ಜನರ ಭಾವನೆಗಳನ್ನ ತಿಳೀದೆ ಹೋರಾಡ್ತಿದೀವಿ ಅಂತ”ಎಂz.
ಅವನು ಮಾತು ಮುಂದುವರಿಸುವುದರಲ್ಲಿದ್ದ. ಆದರೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕೈ ಸನ್ನೆ ಮಾಡಿ ನಿಲ್ಲಿಸಿದ. ಅವನು, “ಸಮಯ ಹಾಳು ಮಾಡ್ಬೇಡಿ. ಮುಖ್ಯವಾದ ವಿಷಯ ಅಂದ್ರೆ ಇನ್ಮೇಲೆ ನಾವು ಕೇವಲ ಅಧಿಕಾರಕ್ಕೆ ಮಾತ್ರ ಹೋರಾಡೋದು” ಎಂದ. ಇನ್ನೂ ನಗುತ್ತಿದ್ದ ಅವನು, ಪ್ರತಿನಿಧಿಗಳು ಕೊಟ್ಟ ದಾಖಲೆ ಪತ್ರಗಳನ್ನು ತೆಗೆದುಕೊಂಡು ಸಹಿ ಮಾಡಲು ತಯಾರಾದ.
ಅವನು, “ಅದು ಹಾಗೇ ಇರೋದ್ರಿಂದ ಒಪ್ಪಿಕೊಳ್ಳಲಿಕ್ಕೆ ನಮ್ದೇನೂ ಅಭ್ಯಂತರವಿಲ್ಲ” ಎಂದು ಮುಕ್ತಾಯಗೊಳಿಸಿದ.
ಅವನು ಸುತ್ತಲಿದ್ದವರು ನಂಬದಂತೆ ಪರಸ್ಪರ ಮುಖ ನೋಡಿಕೊಂಡರು.
ಕರ್ನಲ್ ಗೆರಿನೆಲ್ಡೊ ಮಾರ್ಕೆಜ್, “ಕ್ಷಮಿಸಿ ಕರ್ನಲ್, ಇದು ದ್ರೋಹ ಬಗೆದ ಹಾಗೆ” ಎಂದು ಮೃದುವಾಗಿ ಹೇಳಿದ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತನ್ನನ್ನು ಹಾಗೆಯೇ ಗಾಳಿಯಲ್ಲಿ ಎತ್ತಿ ಹಿಡಿದು ತನ್ನ ಅಧಿಕಾರದ ಬಲವನ್ನು ಅವನ ಮೇಲೆ ಹೇರಿದ.
ಅವನು, “ನಿಮ್ಮ ಆಯುಧಗಳನ್ನು ಒಪ್ಪಿಸಿ” ಎಂದು ಆರ್ಡರ್ ಮಾಡಿದ.
ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಎದ್ದು ನಿಂತು ಆಯುಧಗಳನ್ನು ಟೇಬಲ್ಲಿನ ಮೇಲೆ ಇಟ್ಟ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ಸೈನಿಕರ ಸ್ಥಳಕ್ಕೆ ಹೋಗಿ, ಕ್ರಾಂತಿಕಾರಿ ನ್ಯಾಯಾಲಯಕ್ಕೆ ಒಪ್ಪಿಸಿಕೊಳ್ಳಿ” ಎಂದು ಅಪ್ಪಣೆ ಕೊಟ್ಟ.
ಅನಂತರ ಅವನು ಹೇಳಿಕೆಗಳಿಗೆ ಸಹಿ ಮಾಡಿ ಪ್ರತಿನಿಧಿಗಳಿಗೆ ಕಾಗದ ಪತ್ರಗಳನ್ನು ಕೊಟ್ಟು, “ಪತ್ರಗಳು ಇಲ್ಲಿವೆ. ಇದರಿಂದ ನೀವು ಸ್ವಲ್ಪ ಪ್ರಯೋಜನ ಪಡೀತೀರಿ ಅಂತ ನಿರೀಕ್ಷಿಸ್ತೀನಿ” ಎಂದು ಹೇಳಿದ.
ಎರಡು ದಿನಗಳ ನಂತರ ರಾಷ್ಟ್ರದ್ರೋಹಿ ಎಂದು ಆಪಾದಿತನಾದ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ಮರಣದಂಡನೆ ವಿಧಿಸಲಾಯಿತು. ಹಾಸಿಗೆಯಲ್ಲಿ ಮೈಚಾಚಿದ್ದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕ್ಷಮಾದಾನದ ಮನವಿಗಳಿಗೆ ಕಿವುಡನಾಗಿದ್ದ, ದಂಡನೆಗೆ ಮುಂಚೆ ಯಾರೂ ತೊಂದರೆ ಕೊಡಬಾರದು ಎಂದು ವಿಧಿಸಲಾಗಿದ್ದನ್ನು ಪಾಲಿಸದೆ ಉರ್ಸುಲಾ ಅವನ ರೂಮಿಗೆ ಹೋದಳು. ಕಪ್ಪು ಬಟ್ಟೆ ಹಾಕಿಕೊಂಡು, ಗಂಭೀರಳಾಗಿ, ಮೂರು ನಿಮಿಷಗಳ ಭೇಟಿಯ ಕಾಲದಲ್ಲಿ, ಅವನ ಮುಂದೆ ನಿಂತಿದ್ದಳು. ಅವಳು ತೀರ ಸಮಾಧಾನದಿಂದ, “ನಂಗೊತ್ತು ನೀನು ಗೆರಿನೆಲ್ಡೊನ ಶೂಟ್ ಮಾಡ್ತೀಯ ಅಂತ. ಅದನ್ನ ತಪ್ಪಿಸಕ್ಕೆ ನಾನೇನೂ ಮಾಡಕ್ಕಾಗಲ್ಲ. ಆದ್ರೆ ನಾನು ನಿಂಗೊಂದು ಎಚ್ಚರಿಕೆ ಕೊಡ್ತಾ ಇದೀನಿ. ಅವನ ದೇಹಾನ ನೋಡ್ತಿದ್ದ ಹಾಗೇನೆ, ನನ್ನ ಅಪ್ಪ ಅಮ್ಮಂದಿರ ಮೇಲೆ ಆಣೆಯಿಟ್ಟು, ಹೊಸೆ ಅರ್ಕಾದಿಯೋ ಬ್ಯುಂದಿಯಾನ ನೆನಪಿನ ಮೇಲೆ ಆಣೆಯಿಟ್ಟು, ದೇವರ ಮೇಲೆ ಆಣೆಯಿಟ್ಟು, ನೀನೆಲ್ಲೇ ಬಚ್ಚಿಟ್ಟುಕೊಂಡಿದ್ರೂ ಎಳೆದು, ನನ್ನ ಕೈಯಿಂದ್ಲೇ ನಿನ್ನ ಕೊಲ್ತೀನಿ ಅಂತ ಪ್ರಮಾಣ ಮಾಡ್ತೀನಿ” ಎಂದಳು. ಅವಳು ಮುಂದುವರೆದು, ಅವನ ಪ್ರತಿಕ್ರಿಯೆಗೆ ಕಾಯದೆ, “ನೀನು ಹಂದಿ ಬಾಲ ಇಟ್ಕೊಂಡು ಹುಟ್ಟಿದ್ರೂ ಅಷ್ಟೇನೆ” ಎಂದು ಮುಗಿಸಿದಳು.
ಆ ಕೊನೆಯಿರದ ರಾತ್ರಿಯಲ್ಲಿ ಕರ್ನಲ್ ಗೆರಿನೆಲ್ಡೊ ಅಮರಾಂತಳ ಹೊಲಿಗೆ ರೂಮಿನಲ್ಲಿ ಕಳೆದ ನಿರ್ಜೀವ ಮಧ್ಯಾಹ್ನಗಳನ್ನು ಕುರಿತು ಯೋಚಿಸಿದರೆ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅದೆಷ್ಟೋ ಹೊತ್ತು ಕೂದಲು ಕಿತ್ತುಕೊಂಡು, ಏಕಾಂತದ ಭಾರವನ್ನು ನಿವಾರಿಸಿಕೊಳ್ಳಲು ನೋಡಿದ. ಹಿಂದೆಂದೋ ಐಸ್ ನೋಡಲು ಅವನ ತಂದೆ ಕರೆದುಕೊಂಡು ಹೋಗಿದ್ದ, ಒಂದೇ ಒಂದು ಸಂತೋಷದ ಕ್ಷಣಗಳ ನಂತರ ಮತ್ತೆ ಅದು ಉಂಟಾಗಿದ್ದು, ಅವನ ಬೆಳ್ಳಿಯ ವರ್ಕ್‌ಶಾಪಿನಲ್ಲಿ ಬಂಗಾರದ ಮೀನುಗಳನ್ನು ಒಟ್ಟೊಟ್ಟಿಗೆ ಇಡುತ್ತಿದ್ದಾಗ. ಅವನು ನಲವತ್ತು ವರ್ಷಗಳ ನಂತರ ಸರಳ ಜೀವನದ ಅನುಕೂಲತೆಗಳನ್ನು ಕಂಡು ಹಿಡಿಯಲು ಮೂವತ್ತೆರಡು ಯುದ್ಧಗಳನ್ನು ಮಾಡಬೇಕಾಯಿತು ಹಾಗೂ ಸಾವಿನೊಡನೆ ಮಾಡಿಕೊಂಡ, ಎಲ್ಲ ರಾಜಿಯನ್ನು ಮುರಿಯಬೇಕಾಯಿತು ಮತ್ತು ಖ್ಯಾತಿಯ ಸಗಣಿ ತಿಪ್ಪೆಯಲ್ಲಿ ಹಂದಿಯ ಥರ ಹೊರಳಾಡಬೇಕಾಯಿತು.
ಅವನು ಹಿಂಸೆಪಟ್ಟುಕೊಳ್ಳುತ್ತ ಎಚ್ಚರಿಕೆಯಿಂದ ಇದ್ದದ್ದಕ್ಕೆ ಸುಸ್ತಾಗಿ, ಬೆಳಿಗ್ಗೆ ದಂಡನೆ ಜಾರಿಗೊಳಿಸುವುದಕ್ಕೆ ಒಂದು ಗಂಟೆ ಮುಂಚೆ ಸೆಲ್‌ಗೆ ಬಂದ. ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ, “ನಾಟ್ಕ ಎಲ್ಲ ಮುಗೀತು ಗೆಳೆಯ. ಇಲ್ಲಿರೋ ಸೊಳ್ಳೆಗಳು ನಮ್ಮನ್ನ ಮುಗಿಸೋಕಿಂತ ಮೊದಲು ಇಲ್ಲಿಂದ ಹೊರಟು ಹೋಗೋಣ” ಎಂದು ಹೇಳಿದ. ಆ ಮಾತಿನಲ್ಲಿದ್ದ ಅಸಡ್ಡೆಯನ್ನು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ತಡೆದುಕೊಳ್ಳಲಾಗಲಿಲ್ಲ.
ಅವನು, “ಬೇಡ ಅವ್ರೇಲಿಯಾನೋ.. ನೀನು ಅಳತೆಗೆಟ್ಟ ಕ್ರೂರಿಯಾಗಿ ಬದಲಾಗೋದನ್ನು ನೋಡಕ್ಕಿಂತ, ನಾನು ಸಾಯೋದು ಒಳ್ಳೇದು” ಎಂದ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ನೀನು ಅದನ್ನ ನೋಡಲ್ಲ. ಶೂ ಹಾಕ್ಕೊ. ಈ ಗಬ್ಬು ಯುದ್ಧದಿಂದ ಹೊರಗೆ ಬರಲಿಕ್ಕೆ ಸಹಾಯ ಮಾಡು” ಎಂದ.
ಅವನು ಆ ಮಾತು ಹೇಳಿದಾಗ ಯುದ್ಧ ಶುರು ಮಾಡುವುದು ಅದನ್ನು ನಿಲ್ಲಿಸುವುದಕ್ಕಿಂತ ಸುಲಭsವೆಂದು ಗೊತ್ತಿರಲಿಲ್ಲ. ಕ್ರಾಂತಿಕಾರಿಗಳಿಗೆ ಅನುಕೂಲವಾಗುವಂಥ ಸೂಚನೆಗಳನ್ನು ಕೂಡಲು ಸರ್ಕಾರವನ್ನು ಒತ್ತಾಯಿಸುವುದಕ್ಕೆ ಅವನಿಗೆ ಸುಮಾರು ಒಂದು ವರ್ಷದ ತೀವ್ರವಾದ ಹೋರಾಟ ಬೇಕಾಯಿತು. ಜೊತೆಗೆ ಅದನ್ನು ಒಪ್ಪುವಂತೆ ತಮ್ಮ ಪಾರ್ಟಿಯವರಿಗೆ ಮನದಟ್ಟು ಮಾಡಲು ಮತ್ತೊಂದು ವರ್ಷ ಬೇಕಾಯಿತು. ಅವನ ಪಾರ್ಟಿಯಲ್ಲೆ ತಿರುಗಿ ಬಿದ್ದವರನ್ನು ಅಡಗಿಸುವುದಕ್ಕೆ ಯೋಚನೆ ಮಾಡಲಿಕ್ಕೂ ಅಸಾಧ್ಯವಾದಂಥ ಕ್ರೂರ ಕ್ರಮಗಳನ್ನು ಕೈಗೊಂಡ ಮತ್ತು ಕೊನೆಗೆ ಅವರನ್ನು ತಹಬಂದಿಗೆ ತರುವುದಕ್ಕೆ ಶತ್ರುಗಳ ಸೇನೆಯನ್ನು ಅವಲಂಬಿಸಬೇಕಾಯಿತು. ಅವನು ಆ ಅವಧಿಯಲ್ಲಿ ಎಂದೂ ಉತ್ತಮ ಯೋಧನಾಗಿರಲಿಲ್ಲ. ಕೊನೆಗೆ ತನ್ನ ಬಿಡುಗಡೆಗಾಗಿ ಹೋರಾಟ ಮಾಡುತ್ತಿರುವುದಲ್ಲದೆ, ಯಾವುದೇ ಅಮೂರ್ತ ಆದರ್ಶಕ್ಕಾಗಲಿ, ಸಂದರ್ಭಕ್ಕೆ ತಕ್ಕಂತೆ ಎಡಕ್ಕೂ ಬಲಕ್ಕೂ ತಿರುಚುವ ರಾಜಕಾರಣಿಗಳ ಘೋಷಣೆಗಳಿಗಲ್ಲವೆಂದು ಖಚಿತವಾಗಿ, ಅವನಲ್ಲಿ ಇನ್ನಿಲ್ಲದ ಉತ್ಸಾಹ ತುಂಬಿತು. ಹಿಂದೆ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಗೆಲ್ಲುವುದಕ್ಕಾಗಿ ಯಾವ ನಂಬಿಕೆ ಮತ್ತು ನಿಷ್ಠೆಯಿಂದ ಹೋರಾಡಿದ್ದನೋ ಅದೇ ರೀತಿ ಸೋಲುವುದಕ್ಕಾಗಿ ಹೋರಾಡುತ್ತಿದ್ದು, ಅವನ ಕೆಲಸಕ್ಕೆ ಬಾರದ ದುಡುಕಿಗಾಗಿ ತೆಗಳಿದ. ಅವನು, “ನೀನೇನೊ ಯೋಚ್ನೆ ಮಾಡ್ಬೇಡ. ಸಾಯೋದು ಹೀಗೆ ಅಂತ ಊಹಿಸಿಕೊಳ್ಳೋದಕ್ಕಿಂತ ಕಷ್ಟ” ಎಂದು ನಗುತ್ತ ಹೇಳುತ್ತಿದ್ದ. ಅವನಿಗೆ ಸಂಬಂಧಪಟ್ಟಂತೆ ಅದು ನಿಜವಾಯಿತು. ದಿನವನ್ನು ಗೊತ್ತುಪಡಿಸಿದ್ದು ಖಚಿತವಾದಾಗ, ಅದು ಅವನಿಗೆ ನಿಗೂಢವಾದ ರಕ್ಷಣೆಯನ್ನು ಹಾಗೂ ಒಂದು ನಿಶ್ಚಿತ ಅವಧಿಗೆ ಯುದ್ಧದ ಅಪಾಯಗಳಿಗೆ ಸಿಕ್ಕಿ ಬೀಳದ ಹಾಗೆ ಅಮರತ್ವವನ್ನು ತಂದುಕೊಟ್ಟಿತು. ಕೊನೆಯಲ್ಲಿ ಗೆಲುವಿಗಿಂತ ಹೆಚ್ಚು ದುಬಾರಿಯಾದ, ಕಷ್ಟಕರವಾದ, ರಕ್ತ ಹರಿಸಿದ ಸೋಲನ್ನು ಪಡೆಯಬೇಕಾಯಿತು.
ಸುಮಾರು ಇಪ್ಪತ್ತು ವರ್ಷಗಳ ಯುದ್ಧದ ಅವಧಿಯಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅವನ ಮನೆಗೆ ಅನೇಕ ಸಲ ಹೋಗಿದ್ದ. ಆದರೆ ಪ್ರತಿ ಸಲ ಬಂದಾಗಲೂ ಇರುತ್ತಿದ್ದ ಅವಸರ, ಯಾವಾಗಲೂ ಅವನ ಜೊತೆಗಿರುತ್ತಿದ್ದ ಮಿಲಿಟರಿ ಪರಿವಾರ ಮತ್ತು ಉರ್ಸುಲಾಳಿಗೂ ಗೊತ್ತಿದ್ದಂತೆ, ಅವನು ಇದ್ದ ಕಡೆ ಹಬ್ಬಿರುತ್ತಿದ್ದ ಅವನ ಜೀವನಗಾಥೆಯ ಪ್ರಭೆ, ಕೊನೆಗೆ ಅವನನ್ನು ಅಪರಿಚಿತನನ್ನಾಗಿ ಮಾಡಿತು. ಅವನು ಕಳೆದ ಬಾರಿ ಮಕೋಂದೋದಲ್ಲಿ ಇದ್ದಾಗ, ಮೂರು ಜನ ಇಟ್ಟುಕೊಂಡವರಿಗೆ ಒಂದು ಮನೆಯನ್ನು ಮಾಡಿದ್ದ ಮತ್ತು ಎರಡು ಮೂರು ಸಂದರ್ಭಗಳಲ್ಲಿ ಮಾತ್ರ ಮನೆಯಲ್ಲಿ ಊಟಕ್ಕೆ ಬರಬೇಕೆಂದು ಕೇಳಿಕೊಂಡಾಗ ಬಂದಿದ್ದ. ಯುದ್ಧದ ದಿನಗಳ ಮಧ್ಯ ಭಾಗದಲ್ಲಿ ಹುಟ್ಟಿದ ಸುಂದರಿ ರೆಮಿದಿಯೋಸ್ ಮತ್ತು ಅವಳಿ ಮಕ್ಕಳಿಗೆ ಅವನು ಗೊತ್ತೇ ಇರಲಿಲ್ಲ. ಅಮರಾಂತಳಿಗಂತೂ ಹದಿವಯಸ್ಸಿನಲ್ಲಿ ಬಂಗಾರದ ಮೀನುಗಳನ್ನು ಮಾಡುತ್ತಿದ್ದ ತನ್ನ ಸೋದರನಿಗೂ ಮತ್ತು ಈಗ ಎಲ್ಲ ಮನುಷ್ಯರನ್ನು ತನ್ನಿಂದ ಹತ್ತು ಅಡಿ ದೂರ ಇಟ್ಟಿರುವ ದಂತಕಥೆಯಂಥ ಯೋಧನಾದವನಿಗೂ, ಹೊಂದಾಣಿಕೆ ಮಾಡಿಕೊಳ್ಳುವುದು ಸಾಧ್ಯವಾಗಲಿಲ್ಲ. ಆದರೆ ಯುದ್ಧ ವಿರಾಮ ಹತ್ತಿರವಾಗುತ್ತಿದೆ ಎಂದು ತಿಳಿದಾಗ ಮತ್ತೆ ಮಾನವನಾಗಿ ಬದಲಾಗಿ, ಕೊನೆಗೂ ತನ್ನ ಜನರ ಹೃದಯಗಳಿಗೆ ಲಭ್ಯವಾಗುತ್ತದೆ. ಅದುವರೆಗೂ ಹುದುಗಿದ್ದ ಸಂಸಾರದ ಭಾವನೆಗಳಿಗೆ, ಮೊದಲಿಗಿಂತ ಹೆಚ್ಚು ಶಕ್ತಿಯುತವಾಗಿ ಮರುಹುಟ್ಟು ಪಡೆದು ಬರುತ್ತಾನೆಂದು ಭಾವಿಸಿದರು.
ಉರ್ಸುಲಾ, “ಕೊನೆಗೂ ಮನೇಲಿ ಒಬ್ಬ ಗಂಡಸು ಅನ್ನೋನು ಇರ್‍ತಾನೆ‘ ಎಂದಳು.
ಅವನನ್ನು ತಾವು ಎಂದೆಂದಿಗೂ ಕಳೆದುಕೊಂಡಿದ್ದೇವೆ ಎಂದು ಅನುಮಾನಿಸಿದವರಲ್ಲಿ ಅಮರಾಂತ ಮೊದಲಿಗಳು. ಯುದ್ಧ ವಿರಾಮಕ್ಕೆ ಒಂದು ವಾರ ಮುಂಚೆ ಯಾವ ರಕ್ಷಣಾ ದಳದವರೂ ಇಲ್ಲದೆ ಮನೆಗೆ ಬಂದಾಗ ಅವನ ಜೊತೆಗಿದ್ದ ಇಬ್ಬರು ಬರಿಗಾಲಿನ ಸೇವಕರು ಹೇಸರಗತ್ತೆಯ ಜೀನನ್ನು ಮತ್ತು ಅವನ ಹಿಂದಿನ ವೈಭವದ ಸಾಮಾನುಗಳಲ್ಲಿ ಒಂದು ಕವನಗಳಿರುವ ಟ್ರಂಕನ್ನು ಅಂಗಳದಲ್ಲಿ ತಂದಿಟ್ಟರು. ಅವನು ಹೊಲಿಗೆ ರೂಮನ್ನು ಹಾದು ಹೋಗುವಾಗ ಅವಳು ಅವನನ್ನು ಕರೆದಳು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಅವಳನ್ನು ಗುರುತಿಸುವುದು ಕಷ್ಟವಾಯಿತು.
ಅವನು ಹಿಂತಿರುಗಿ ಬಂದದ್ದಕ್ಕೆ ಸಂತೋಷಗೊಂಡು, ನಗು ಬೆರೆಸಿ, “ನಾನು ಅಮರಾಂತ” ಎಂದು ಹೇಳಿ ಕಪ್ಪು ಪಟ್ಟಿ ಕಟ್ಟಿಕೊಂಡ ಕೈ ತೋರಿಸಿ, “ನೋಡು ಇದನ್ನು” ಎಂದಳು.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮರಣದಂಡನೆಗೆ ಗುರಿಯಾಗಿ ಮಕೋಂದೋಗೆ ಬಂದ ಬೆಳಿಗ್ಗೆ ಕಪ್ಪು ಪಟ್ಟಿ ಕಟ್ಟಿಕೊಂಡ ಅವಳನ್ನು ಮೊದಲ ಬಾರಿ ನಕ್ಕು ನೋಡಿದ ಹಾಗೆಯೇ ಈಗಲೂ ಮಾಡಿದ.
ಅವನು, “ಅಲ್ಲ! ದಿನಗಳು ಹೇಗೆ ಕಳೆದು ಹೋಗತ್ತೆ!” ಎಂದ.
ಎಂದಿನ ಸೈನ್ಯದ ತುಕಡಿ ಅವನ ಮನೆಯನ್ನು ಕಾಯಬೇಕಾಯಿತು. ಅವನು ಅವಮಾನಗಳ ನಡುವೆ, ಉಗಿಸಿಕೊಂಡು, ಹೆಚ್ಚಿನ ಬೆಲೆಗೆ ಮಾರುವ ಉದ್ದೇಶದಿಂದ ಯುದ್ಧದ ಗತಿಯನ್ನು ಹೆಚ್ಚಿಸಿದನೆಂಬ ಆಪಾದನೆಗೊಳಗಾಗಿ ಬಂದಿದ್ದ. ಅವನು ಜ್ವರ ಮತ್ತು ಚಳಿಯಿಂದ ನಡುಗುತ್ತಿದ್ದ. ಅಲ್ಲದೆ ಅವನ ಕಂಕುಳಲ್ಲಿ ಮತ್ತೆ ಬೊಬ್ಬೆಗಳಾಗಿದ್ದವು. ಆರು ತಿಂಗಳ ಮುಂಚೆ ಉರ್ಸುಲಾ ಯುದ್ಧ ವಿರಾಮದ ಸುದ್ದಿ ಕೇಳಿದಾಗ, ಅವಳು ಮದುವಣಗಿತ್ತಿಯ ಕೋಣೆಯನ್ನು ತೆರೆದು, ಕಸಗುಡಿಸಿ, ಅವನಿಗೆ ರೆಮಿದಿಯೋಸ್‌ಳ ಧೂಳು ತುಂಬಿದ ಗೊಂಬೆಗಳ ಸಂಗಡ ನಿಧಾನವಾಗಿ ವಯಸ್ಸಾಗುವುದೆಂದು ಭಾವಿಸಿ, ಮೂಲೆ ಮೂಲೆಗಳಲ್ಲಿ ಸಾಂಬ್ರಾಣಿ ಹೊಗೆಯನ್ನು ಹರಡಿದ್ದಳು. ಆದರೆ ಕಳೆದ ಎರಡು ವರ್ಷಗಳಲ್ಲಿ ಅವನು ವಯಸ್ಸಾಗುವುದನ್ನೂ ಸೇರಿದಂತೆ ತನ್ನ ಜೀವದ ಕೊನೆಯ ಬಾಕಿಯನ್ನು ತೀರಿಸಿದ್ದ. ಅವನು ಉರ್ಸುಲಾ ತೀವ್ರ ಶ್ರದ್ಧೆಯಿಂದ ಸಿದ್ಧಗೊಳಿಸಿದ್ದ ಬೆಳ್ಳಿ ಅಂಗಡಿಯನ್ನು ಹಾದು ಹೋಗುವಾಗ, ಅದರ ಬೀಗದಲ್ಲಿಯೇ ಬೀಗದ ಕೈಗಳಿವೆ ಎನ್ನುವುದನ್ನು ಗಮನಿಸಿರಲಿಲ್ಲ. ಅವನು ಕಾಲ ಮನೆಯನ್ನು ಹಾಳುಗೆಡವಿದ್ದರ ಸೂಕ್ಷ್ಮಗಳನ್ನು ಗಮನಿಸಲಿಲ್ಲ ಮತ್ತು ಅಷ್ಟು ದೀರ್ಘ ಅವಧಿ ಅಲ್ಲಿ ಇರದೆ, ಅದರ ನೆನಪುಗಳನ್ನು ಉಳಿಸಿಕೊಂಡ ಯಾರಿಗೇ ಆದರೂ ಅದೊಂದು ದುರಂತವಾಗಿ ಕಾಣುತ್ತಿತ್ತು. ಅವನಿಗೆ ಮಾಸಲು ಬಿಳಿ ಬಣ್ಣದ ಗೋಡೆಗಳ ಚಕ್ಕಳಗಳಿಂದಾಗಲಿ ಅಥವಾ ಧೂಳು ತುಂಬಿದ ಮೂಲೆಗಳಲ್ಲಿದ್ದ ಜೇಡರ ಬಲೆಗಳಿಂದಾಗಲಿ, ಗೆದ್ದಲು ಹತ್ತಿದ ತೊಲೆಗಳಾಗಲಿ ಅಥವಾ ತುಕ್ಕು ಹಿಡಿದ ಬಾಗಿಲ ಕೀಲುಗಳಾಗಲಿ ಮತ್ತು ಹಳೆಯ ನೆನಪು ತೆರೆದಿಟ್ಟ ಯಾವುದರಿಂದಾಗಲೀ ನೋವಾಗಲಿಲ್ಲ. ಬೂಟುಗಳನ್ನು ಹಾಕಿಕೊಂಡಿದ್ದಂತೆಯೇ ಅವನು ಅಂಗಳದಲ್ಲಿ ಹೊದಿಕೆ ಹೊದ್ದುಕೊಂಡು, ಪ್ರತಿಯೊಂದೂ ಸ್ವಷ್ಟವಾಗುವುದಕ್ಕೆ ಕಾಯುತ್ತಿರುವಂತೆ ಕುಳಿತಿದ್ದ ಮತ್ತು ಇಡೀ ದಿನ ಬೆಗೋನಿಯಾ ಗಿಡಗಳ ಮೇಲೆ ಮಳೆ ಸುರಿಯುವುದನ್ನು ನೋಡುತ್ತ ಕಳೆದ. ಅವನು ತಮ್ಮೊಂದಿಗೆ ಬಹಳ ಕಾಲ ಇರುವುದಿಲ್ಲವೆಂದು ಉರ್ಸುಲಾಗೆ ಆಗಲೇ ಗೊತ್ತಾಯಿತು. ಅದು ಯುದ್ಧ ಅಲ್ಲದಿದ್ದರೆ ಸಾವು ಮಾತ್ರ ಆಗಿರಲು ಸಾಧ್ಯ ಎಂದು ಯೋಚಿಸಿದಳು. ಅದೊಂದು ಊಹೆ ಎಷ್ಟು ಸ್ಪಷ್ಟವಾಗಿತ್ತು ಮತ್ತು ನಂಬಿಕೆ ಬರುವಂತಿತ್ತು ಎಂದರೆ ಅವಳು ಅದನ್ನು ಮುನ್ಸೂಚನೆ ಎಂದುಕೊಂಡಳು.
ಅಂದು ರಾತ್ರಿ ಊಟ ಮಾಡುವಾಗ ಅವ್ರೇಲಿಯಾನೋ ಸೆಗುಂದೋ ಎಂದು ಇದ್ದವನು ಬ್ರೆಡ್ಡನ್ನು ಬಲಗೈಯಿಂದ ಹೊಡೆದು ಸೀಳಿದ ಮತ್ತು ಸೂಪನ್ನು ಎಡಗೈಯಿಂದ ಕುಡಿದ. ಅವನ ಸೋದರ ಹೊಸೆ ಅರ್ಕಾದಿಯೋ ಸೆಗುಂದೋ ಎಂದು ಇದ್ದವನು ಬ್ರೆಡ್ಡನ್ನು ಎಡಗೈಯಿಂದ ಹೊಡೆದು ಸೀಳಿದ ಮತ್ತು ಸೂಪನ್ನು ಬಲಗೈಯಲ್ಲಿ ಕುಡಿದ. ಅವರಿಬ್ಬರಲ್ಲಿ ಎಷ್ಟು ಹೊಂದಾಣಿಕೆ ಇತ್ತೆಂದರೆ ಅವರು ಒಬ್ಬರ ಎದುರು ಮತ್ತೊಬ್ಬರು ಕುಳಿತ ಹಾಗಿರಲಿಲ್ಲ. ಆದರೆ ಕನ್ನಡಿಯ ಬಿಂಬದಂತಿದ್ದರು. ತಾವಿಬ್ಬರೂ ಪರಸ್ಪರ ಸಮ ಎಂದು ಅರಿವಾದ ನಂತರ ಅವರು ಈ ಪ್ರಯೋಗವನ್ನು ಹೊಸದಾಗಿ ಬಂದವರ ಗೌರವಾರ್ಥವಾಗಿ ಸಿದ್ಧಪಡಿಸಿದ್ದರು. ಆದರೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅದನ್ನು ಗಮನಿಸಲಿಲ್ಲ. ಅವನು ಎಲ್ಲದಕ್ಕೂ ಎಷ್ಟು ಹೊರತಾಗಿದ್ದನೆಂದg, ಸುಂದರಿ ರೆಮಿದಿಯೋಸ್ ಬೆತ್ತಲೆಯಾಗಿ ತನ್ನ ಬೆಡ್‌ರೂಮಿಗೆ ಹಾದು ಹೋದದ್ದನ್ನು ಅವನು ಗಮನಿಸಲಿಲ್ಲ. ಕೇವಲ ಉರ್ಸುಲಾ ಮಾತ್ರ ಅವನ ಅನ್ಯಮನಸ್ಕತೆಯನ್ನು ದೂರ ಮಾಡುವ ಧೈರ್ಯ ವಹಿಸಿದಳು.
ಅವಳು ಊಟ ಮಾಡುವಾಗ, “ನೀನು ಮತ್ತೆ ಹೋಗಲೇ ಬೇಕಾಗಿದ್ರೆ, ನಾವು ಹೇಗಿದ್ವಿ ಅನ್ನೋದನ್ನ ನೆನಪು ಮಾಡಿಕೋ” ಎಂದಳು.
ಆಗ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಆಶ್ಚರ್ಯಗೊಳ್ಳಲಿಲ್ಲ. ತನ್ನ ಯಾತನೆಗಳನ್ನು ಅರ್ಥಮಾಡಿಕೊಂಡ ಒಬ್ಬಳೇ ಮನುಷ್ಯಳೆಂದರೆ ಉರ್ಸುಲಾ ಎಂದು ಅರಿವಾಯಿತು ಮತ್ತು ಅದೆಷ್ಟೋ ವರ್ಷಗಳಾದ ಮೇಲೆ ಅವಳ ಮುಖವನ್ನು ಗಮನವಿಟ್ಟು ನೋಡಿದ. ಅವಳ ಚರ್ಮ ಸುಕ್ಕುಗಟ್ಟಿತ್ತು. ಹಲ್ಲುಗಳು ಸವೆದು ಹೋಗಿದ್ದವು, ಕೂದಲು ಬಣ್ಣಗೆಟ್ಟು ಮಾಸಿತ್ತು ಮತ್ತು ಅವಳ ನೋಟ ಗಾಬರಿಗೊಳಿಸಿತು. ಅವನು ಕುದಿಯುತ್ತಿದ್ದ ಸಾರಿನ ಪಾತ್ರೆ ಟೇಬಲ್‌ನಿಂದ ಕೆಳಗೆ ಬೀಳುತ್ತೆಂದು ಮುನ್ಸೂಚನೆ ಕೊಟ್ಟ ಆ ದಿನದ ಮಧ್ಯಾಹ್ನದ ಅವಳ ಅತ್ಯಂತ ಹಳೆಯ ನೆನಪಿನೊಂದಿಗೆ ಅವಳನ್ನು ಹೋಲಿಸಿದಾಗ ಚಿಂದಿಯಾದಂತೆ ಕಂಡಳು. ಒಂದು ಕ್ಷಣದಲ್ಲಿ ಐವತ್ತು ವರ್ಷಗಳ ದೈನಂದಿನ ಬದುಕಿನಲ್ಲಿ ಉಳಿದುಕೊಂಡಿದ್ದ ಕಲೆಗಳನ್ನು, ಗೀರುಗಳನ್ನು, ಗಾಯದ ಗುರುತುಗಳನ್ನು, ಉಬ್ಬುಗಳನ್ನು ಕಂಡ ಮತ್ತು ಆ ಕುಂದಿದ ಸ್ಥಿತಿ ತನ್ನಲ್ಲಿ ಮರುಕದ ಭಾವನೆಯನ್ನು ಹುಟ್ಟಿಸಲಿಲ್ಲ ಎನ್ನುವುದನ್ನು ಮನಗಂಡ. ಅವನು ತನ್ನಲ್ಲಿದ್ದ ಪ್ರೀತಿಯ ಭಾವನೆ ಎಲ್ಲಿ ಕೊಳೆತು ಹೋಯಿತು ಎಂದು ಅವನ ಹೃದಯದಲ್ಲಿ ಹುಡುಕಲು ಪ್ರಯತ್ನಿಸಿದ. ಆದರೆ ಅವನಿಗೆ ಸಿಗಲಿಲ್ಲ. ಇನ್ನೊಂದು ಸಂದರ್ಭದಲ್ಲಿ, ಉರ್ಸುಲಾಳ ವಾಸನೆ ಅವನ ಚರ್ಮದ ಮೇಲೆ ಕಂಡು ಬಂದಾಗ ಅವನಿಗೆ ಗೊಂದಲ ಮುತ್ತಿ, ನಾಚಿಕೆ ಉಂಟಾಗಿತ್ತು. ಮತ್ತು ಅನೇಕ ಸಲ ಅವಳ ಆಲೋಚನೆಗಳು ಅವನ ಆಲೋಚನೆಗಳ ಮಧ್ಯದಲ್ಲಿ ತಲೆ ಹಾಕುತ್ತಿದ್ದವು. ಆದರೆ ಇವೆಲ್ಲ ಯುದ್ಧದಿಂದ ಅಳಿಸಿಹೋಗಿತ್ತು. ಆ ಕ್ಷಣದಲ್ಲಿ ಅವನ ಹೆಂಡತಿ ರೆಮಿದಿಯೋಸ್ ಕೂಡ, ಅವನ ಮಗಳಾಗಿರಬಹುದಾದಷ್ಟು ಮಸುಕಾದ ಚಿತ್ರವಾಗಿತ್ತು. ಪ್ರೇಮದ ಮರಳುಗಾಡಿನಲ್ಲಿ ಪರಿಚಿತರಾದ ಲೆಕ್ಕವಿಲ್ಲದಷ್ಟು ಹೆಂಗಸರು ಮತ್ತು ಸಮುದ್ರ ತೀರದ ಉದ್ದಕ್ಕೂ ಅವನ ಬೀಜವನ್ನು ಬಿತ್ತಿಸಿಕೊಂಡ ಅವರು, ಅವನಲ್ಲಿ ಯಾವುದೇ ರೀತಿಯ ಕಿಂಚಿತ್ ಭಾವನೆಯನ್ನು ಬಿಟ್ಟು ಹೋಗಿರಲಿಲ್ಲ. ಬಹಳಷ್ಟು ಜನರು ಕತ್ತಲಲ್ಲಿ ಅವನ ರೂಮಿಗೆ ಬರುತ್ತಿದ್ದರು ಮತ್ತು ಬೆಳಗಾಗುವ ಮುಂಚೆ ಹೋಗುತ್ತಿದ್ದರು ಮತ್ತು ಮಾರನೆಯ ದಿನ ಅವನ ಮೈಯ ದಣಿವಿಗೆ ನೆನಪಾದವರಲ್ಲದೆ ಬೇರೇನೂ ಆಗಿರಲಿಲ್ಲ. ಈ ಅವಧಿ ಮತ್ತು ಯುದ್ಧವನ್ನು ಮೀರಿ ಉಳಿದುಕೊಂಡ ವಿಶ್ವಾಸವೆಂದರೆ ಅದು ಅವನ ಸೋದರ ಹೊಸೆ ಅರ್ಕಾದಿಯೋ ಬಗ್ಗೆ. ಅದು ಅವರು ಹುಡುಗರಾಗಿದ್ದಾಗ ಇದ್ದದ್ದು ಮತ್ತು ಅದಕ್ಕೆ ಪ್ರೀತಿ ಆಧಾರವಾಗಿರಲಿಲ್ಲ. ಆದರೆ ಅನೇಕ ಕೆಲಸಗಳಲ್ಲಿ ಭಾಗಿಯಾದದ್ದರಿಂದ ಉಂಟಾದದ್ದು.
ಅವನು ಉರ್ಸುಲಾಳ ಮಾತಿಗೆ, “ಈ ಯುದ್ಧ ಪ್ರತಿಯೊಂzನ್ನೂ ಮುಗಿಸಿಬಿಟ್ಟಿದೆ” ಎಂದ.
ಅನಂತರದ ಕೆಲವು ದಿನಗಳಲ್ಲಿ ಅವನು ಈ ಪ್ರಪಂಚದಲ್ಲಿ ಜರುಗಿದ ತನ್ನ ಎಲ್ಲ ಕುರುಹುಗಳನ್ನು ನಾಶಮಾಡುವುದರಲ್ಲಿ ಉದ್ಯುಕ್ತನಾದ. ಅವನು ಬೆಳ್ಳಿಯ ಅಂಗಡಿಯನ್ನು ವೈಯಕ್ತಿಕವಲ್ಲದ ವಸ್ತುಗಳನ್ನು ಬಿಟ್ಟು ಉಳಿದದ್ದನ್ನು ಧ್ವಂಸ ಮಾಡಿದ. ತನ್ನ ಬಟ್ಟೆಗಳನ್ನು ಸೇವಕರಿಗೆ ಕೊಟ್ಟ. ತನ್ನ ಆಯುಧಗಳನ್ನು, ತನ್ನ ತಂದೆ ಪ್ರುಡೆನ್ಸಿಯೋ ಅಗಿಲಾರ್‌ನನ್ನು ಕೊಂದ ಭರ್ಜಿಯನ್ನು ಹೂತ ಜಿಗುಪ್ಸೆಯ ಭಾವನೆಯಿಂದಲೇ ಹೂತು ಹಾಕಿದ. ಅವನು ಒಂದೇ ಗುಂಡು ಇರುವ ಪಿಸ್ತೂಲನ್ನು ಇಟ್ಟುಕೊಂಡ. ಉರ್ಸುಲಾ ಅವನಿಗೆ ಅಡ್ಡ ಬರಲಿಲ್ಲ. ಅವನನ್ನು ತಡೆಯಲು ಮಾಡಿದ ಒಂದೇ ಕೆಲಸವೆಂದರೆ ಅವನು ನಡುಮನೆಯಲ್ಲಿ ದೀಪ ಹಚ್ಚಿ ಬೆಳಗಿಸಿದ ರೆಮಿದಿಯೋಸ್‌ಳ ಭಾವಚಿತ್ರವನ್ನು ನಾಶ ಮಾಡುವುದರಲ್ಲಿದ್ದಾಗ ಅವಳು, “ಆ ಚಿತ್ರ ನಿಂಗೆ ಸಂಬಂಧವಿಲ್ಲದೇ ಹೋಗಿ ಬಹಳ ಕಾಲವಾಯ್ತು. ಅದು ಸಂಸಾರದ ಅವಶೇಷ” ಎಂದಳು. ಯುದ್ಧ ವಿರಾಮದ ಮುಂಚೆ ಅವನು ನೆನಪಿಸಿಕೊಳ್ಳುವಂಥ ಯಾವ ವಸ್ತು ಕೂಡ ಮನೆಯಲ್ಲಿ ಇಲ್ಲದಿದ್ದಾಗ, ಅವನು ಕವನಗಳನ್ನು ತುಂಬಿದ ಟ್ರಂಕನ್ನು ತೆಗೆದುಕೊಂಡು ಸಾಂತ ಸೋಫಿ ದೆಲಾ ಪಿಯದಾದ್ ಒಲೆ ಹೊತ್ತಿಸುವುದಕ್ಕೆ ಸಿದ್ಧಪಡಿಸುತ್ತಿದ್ದ ಬೇಕರಿಗೆ ಹೋದ.
ಅವನು ಅವಳಿಗೆ, “ಇದರಿಂದ ಬೆಂಕಿ ಹಚ್ಚು” ಎಂದು ಹಳದಿ ಬಣ್ಣದ ಕಾಗದಗಳ ಮೊದಲನೆ ಸುರುಳಿಯನ್ನು ಕೊಟ್ಟ. ಇದು ಚೆನ್ನಾಗಿ ಉರಿಯತ್ತೆ. ಯಾಕೆಂದರೆ ಬಹಳ ಹಳೇದು” ಎಂದ.
ಸದಾ ಮೌನಿಯಾಗಿರುತ್ತಿದ್ದ, ತಗ್ಗಿ ನಡೆಯುತ್ತಿದ್ದ ತನ್ನ ಮಕ್ಕಳನ್ನೂ ಸೇರಿದಂತೆ ಯಾರನ್ನೂ ವಿರೋಧಿಸದ. ಸಾಂತ ಸೋಫಿಯಾ ದೆಲಾ ಪಿಯದಾದ್‌ಗೆ ಅದು ಮಾಡಬಾರದ ಕೆಲಸ ಎನ್ನಿಸಿತು.
ಅವಳು, “ಅವು ಮುಖ್ಯವಾದ ಕಾಗದಗಳು” ಎಂದಳು.
ಕರ್ನಲ್, “ಹಾಗೇನಿಲ್ಲ… ಅವು ನನಗೆ ನಾನೇ ಬರೆದುಕೊಂಡದ್ದು” ಎಂದ.
ಅವಳು, “ಹಾಗಿದ್ರೆ ಕರ್ನಲ್, ನೀವೇ ಅವನ್ನು ಸುಟ್ಟು ಬಿಡಿ” ಎಂದಳು.
ಅವನು ಹಾಗೆ ಮಾಡಿದ್ದಷ್ಟೇ ಅಲ್ಲದೆ ಸುತ್ತಿಗೆಯಿಂದ ಟ್ರಂಕನ್ನು ತುಂಡು ತುಂಡು ಮಾಡಿ ಅದನ್ನೂ ಬೆಂಕಿಗೆ ಹಾಕಿದ.
ಕೆಲವು ಗಂಟೆಗಳ ಮುಂಚೆ ಪಿಲರ್ ಟೆರ್‍ನೆರಾ ಅವನನ್ನು ಭೇಟಿ ಮಾಡಲು ಬಂದಿದ್ದಳು. ಎಷ್ಟೋ ವರ್ಷಗಳಿಂದ ಅವಳನ್ನು ನೋಡಿರದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಅವಳೆಷ್ಟು ವಯಸ್ಸಾಗಿ ಮತ್ತು ದಡೂತಿಯಾಗಿದ್ದಾಳೆಂದು ಮತ್ತು ತನ್ನ ನಗುವಿನ ಮೋಹಕತೆಯನ್ನು ಕಳೆದುಕೊಂಡಿದ್ದಾಳೆ ಎಂದು ಕಂಡು ದಿಗ್ಭ್ರಮೆಯಾಯಿತು. ಅಲ್ಲದೆ ಅವಳು ಕಾರ್ಡುಗಳನ್ನು ಓದುವುದರಲ್ಲಿ ಸಾಧಿಸಿರುವುದನ್ನು ಕಂಡು ಸೋಜಿಗವಾಯಿತು. ಅವಳು, “ನಿನ್ನ ಬಾಯಿ ಬಗ್ಗೆ ಹುಷಾರು” ಎಂದು ಹೇಳಿದ್ದಳು ಮತ್ತು ಅವನು ಖ್ಯಾತಿಯ ಉತ್ತುಂಗದಲ್ಲಿದ್ದಾಗ ಹಾಗೆ ಹೇಳಿದ್ದು ಆಶ್ಚರ್ಯಕರವಾದ ವಿಧಿ ನಿಯಾಮಕವನ್ನು ನಿರೀಕ್ಷಿಸಿದ ದೂರ ದೃಷ್ಟಿಯಿಂದಲ್ಲವೇ ಎಂದುಕೊಂಡ. ಸ್ವಲ್ಪ ಸಮಯದ ನಂತರ ಅವನ ಡಾಕ್ಟರ್ ಹುಣ್ಣುಗಳನ್ನು ಒರೆಸುತ್ತಿದ್ದಾಗ, ಯಾವುದೇ ಆಸಕ್ತಿ ತೋರಿಸದೆ ತನ್ನ ಹೃದಯ ಇರುವುದು ಎಲ್ಲಿ ಎಂದು ಕೇಳಿದ. ಡಾಕ್ಟರ್ ಸ್ಟೆಥಸ್ಕೋಪಿನಿಂದ ಕೇಳಿಸಿಕೊಂಡ ನಂತರ, ಹತ್ತಿಯನ್ನು ಐಯೋಡಿನ್‌ನಲ್ಲಿ ಅದ್ದಿ, ಅವನ ಎದೆಯ ಮೇಲೆ ಒಂದು ವೃತ್ತ ಬಳಿದ.
ಯುದ್ಧ ವಿರಾಮದ ಮಂಗಳವಾರ ಬೆಳಿಗ್ಗೆ ಧಗೆ ಮತ್ತು ಮಳೆಯನ್ನು ತಂದಿತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬೆಳಗಿನ ಜಾವ ಐದು ಗಂಟೆಗೆ ಮೊದಲೇ ಅಡುಗೆ ಮನೆಯಲ್ಲಿ ಕಾಣಿಸಿಕೊಂಡು, ಸಕ್ಕರೆಯಿಲ್ಲದ ಬ್ಲಾಕ್ ಕಾಫಿ ಕುಡಿದ. ಉರ್ಸುಲಾ ಅವನಿಗೆ, “ಇಂಥದೊಂದು ದಿನ ನೀನು ಹುಟ್ಟಿದೆ… ನೀನು ಕಣ್ಣು ಬಿಟ್ಟುಕೊಂಡಿದ್ದರಿಂದ ಪ್ರತಿಯೊಬ್ರಿಗೂ ಆಶ್ವರ್ಯವಾಗಿತ್ತು” ಎಂದು ಹೇಳಿದಳು. ಅವನು ಅದರ ಕಡೆ ಗಮನ ಕೊಡಲಿಲ್ಲ. ಏಕೆಂದರೆ ಅವನು ಸೈನಿಕರು ಗುಂಪಾಗುತ್ತಿದ್ದ ರೀತಿಯನ್ನು, ಕಹಳೆಯ ಶಬ್ದವನ್ನು ಕೇಳಿಸಿಕೊಳ್ಳುತ್ತಿದ್ದ ಮತ್ತು ‘ಅಧಿಕಾರ ವಾಣಿಗಳ‘ ಶಬ್ದ ಬೆಳಗನ್ನು ಆಕ್ರಮಿಸುತ್ತಿದ್ದವು. ಅನೇಕ ವರ್ಷಗಳ ಯುದ್ಧದ ಕಾರಣ ಆ ಶಬ್ದಗಳು ಅವನಿಗೆ ರೂಢಿಗತವಾಗಿರಬೇಕಾಗಿದ್ದರೂ ಕೂಡ, ಈ ಸಲ ಅದು ಅವನಿಗೆ ಯೌವನದಲ್ಲಿ ಬೆತ್ತಲೆ ಹೆಂಗಸಿನ ಎದುರು ಉಂಟಾದಂತೆ, ಮಂಡಿಯಲ್ಲಿ ನಡುಕ ಮತ್ತು ಮೈ ನವಿರೇಳುವಂತೆ ಮಾಡಿತು. ಅವನಿಗೆ ಗೊಂದಲ ಉಂಟಾಗಿ ಕೊನೆU, ಅವಳನ್ನು ಮದುವೆಯಾಗಿದ್ದರೆ ತಾನು ಯುದ್ಧವರಿಯದ ಮನುಷ್ಯನಾಗಿ ಮತ್ತು ಖ್ಯಾತಿ ಇಲ್ಲದೆ, ಹೆಸರಿಲ್ಲದ ಕಸುಬುದಾರನಾಗಿ, ಸಂತೋಷದಿಂದಿರುವ ಪ್ರಾಣಿಯಾಗಿರುತ್ತಿದ್ದೆ ಎಂಬ ಮನೋವ್ಯಥೆಯಲ್ಲಿ ಮುಳುಗಿದ. ಅವನ ಮುಂದಾಲೋಚನೆಯಲ್ಲಿ ಕಾಣಿಸಿಕೊಳ್ಳದೆ ಹೋದ ಆ ನಡುಕ ಬೆಳಗಿನ ಉಪಹಾರವನ್ನು ಕಹಿಯಾಗಿಸಿತು. ಬೆಳಿಗ್ಗೆ ಏಳು ಗಂಟೆಗೆ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಅವನನ್ನು ಕರೆದುಕೊಂದು ಹೋಗಲು ಬಂದಾಗ, ಕ್ರಾಂತಿಕಾರಿ ಅಧಿಕಾರಿಗಳ ಜೊತೆಯಲ್ಲಿ ಎಂದಿಗಿಂತ ಹೆಚ್ಚು ಆಲೋಚನಾ ಮಗ್ನನಾದಂತೆ, ಮಿತಭಾಷಿಯಂತೆ ಮತ್ತು ಒಂಟಿಯಾದವನಂತೆ ಕಂಡ. ಉರ್ಸುಲಾ ಅವನ ಭುಜದ ಮೇಲೆ ಬಟ್ಟೆ ಹೊದಿಸಲು ಪ್ರಯತ್ನಿಸಿದಳು. ಅವಳು, “ಸರ್ಕಾರ ಏನು ತಿಳ್ಕೊಳತ್ತೆ? ನಿಂಗೊಂದು ಬಟ್ಟೆ ಕೂಡ ಕೊಂಡುಕೊಳ್ಳಲಿಕ್ಕೆ ಆಗಲ್ಲ ಅಂತ ಶರಣಾಗಿದ್ದೀಯ ಅಂದ್ಕೋತಾರೆ” ಎಂದಳು. ಆದರೆ ಅದನ್ನು ಅವನು ಒಪ್ಪಲಿಲ್ಲ. ಅವನು ಬಾಗಿಲ ಹತ್ತಿರ ಹೋದಾಗ ಅವಳು ಹೊಸೆ ಅರ್ಕಾದಿಯೋ ಬ್ಯುಂದಿಯಾನ ಹಳೆಯ ಹ್ಯಾಟನ್ನು ತಲೆಯ ಮೇಲೆ ಇಟ್ಟಾಗ ಸುಮ್ಮನಿದ್ದ.
ಆಗ ಉರ್ಸುಲಾ ಅವನಿಗೆ, “ಅವ್ರೇಲಿಯಾನೋ, ಅಲ್ಲಿಗೆ ಹೋದ ಮೇಲೆ ಇದು ಕೆಟ್ಟ ಗಳಿಗೆ ಅನ್ನಿಸಿದ್ರೆ ಅಮ್ಮನ್ನ eಪಿಸಿಕೊಳ್ತೀನಿ ಅಂತ ಮಾತು ಕೊಡು” ಎಂದಳು.
ಅವನು ಬೆರಳುಗಳನ್ನು ನೆಟ್ಟಗೆ ಮಾಡಿ ಕೈಯೆತ್ತಿ ಅವಳ ಕಡೆ ಸಣ್ಣ ನಗು ತೂರಿದ. ಒಂದು ಮಾತನ್ನೂ ಆಡದೆ ಮನೆಯಿಂದ ಹೊರಟ ಮತ್ತು ಊರು ಬಿಡುವ ತನಕ ಕೂಗಾಟ ಅವಹೇಳನ ಮತ್ತು ನಿಂದನೆಗಳನ್ನು ಕೇಳಬೇಕಾಯಿತು. ಇಡೀ ಜೀವಮಾನ ತೆಗೆಯುವುದಿಲ್ಲವೆಂದು ನಿರ್ಧರಿಸಿ ಉರ್ಸುಲಾ ಬಾಗಿಲಿಗೆ ಅಡ್ಡಪಟ್ಟಿ ಹಾಕಿದಳು. ಅವಳು, “ನಾವು ಇಲ್ಲಿ ಗಂಡಸರಿಲ್ಲದೇ ಕೊಳೆತು ಹೋಗ್ತೀವಿ. ಗಂಡಸರಿಲ್ಲದೇ ಈ ಮನೇಲಿ ಬೂದಿಯಾಗ್ತೀನಿ. ಆದರೆ ಈ ದರಿದ್ರ ಊರಿಗೆ ನಾವು ಅಳೋದನ್ನ ಕಂಡು ಖುಷಿಪಡಕ್ಕೆ ಬಿಡಲ್ಲ.” ಎಂದು ಯೋಚಿಸಿದಳು. ಅವಳು ತನ್ನ ಆಳದ ಮೂಲೆಯಲ್ಲಿ ಅಡಗಿದ ನೆನಪಿನಲ್ಲಿ ತನ್ನ ಮಗನನ್ನು ಹುಡುಕಲು ಇಡೀ ಮುಂಜಾನೆ ಪ್ರಯತ್ನಿಸಿದಳು. ಆದರೆ ಅವಳಿಗೆ ಸಾಧ್ಯವಾಗಲಿಲ್ಲ.
ಇಡೀ ಸಮಾರಂಭ ಮಕೋಂದೋದಿಂದ ಹದಿನೈದು ಮೈಲಿಗಳಾಚೆ ಅಗಾಧವಾದ ಸೀಬೆ ಮರದ ಕೆಳಗೆ ಮುಂದೆ ಅದರ ಸುತ್ತಮುತ್ತ ನೀರ್ಲಾಂದಿಯಾ ಎಂಬ ಊರು ಹುಟ್ಟಿದ ಸ್ಥಳದಲ್ಲಿ ನೆರವೇರಿತು. ಸರ್ಕಾರದ, ಪಾರ್ಟಿಯ ಮತ್ತು ಶರಣಾಗತರಾಗುವ ಕ್ರಾಂತಿಕಾರಿಗಳ ನಿಯೋಗದವರಿಗೆ ಮಳೆಯಿಂದ ಬೆದರಿದ ಬಾತುಕೋಳಿಗಳ ಗುಂಪಿನಂತೆ ಕಂಡ ಬಿಳಿಯುಡುಗೆಯನ್ನು ತೊಟ್ಟ ಹೊಸಬರ ಗುಂಪು, ಗದ್ದಲ ಮಾಡುತ್ತ ಉಪಚರಿಸಿತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕೊಳಕಾದ ಚಿಂದಿ ಬಟ್ಟೆಯಲ್ಲಿ ಬಂದ. ಅವನು ಶೇವ್ ಮಾಡಿಕೊಂಡಿರಲಿಲ್ಲ. ತನ್ನ ಕನಸು ನುಚ್ಚು ನೂರಾಗಿದ್ದಕ್ಕಿಂತ ಹೆಚ್ಚಾಗಿ, ಹುಣ್ಣುಗಳ ನೋವಿನಿಂದ ಹೆಚ್ಚು ಹಿಂಸೆಗೊಳಗಾಗಿದ್ದ. ಏಕೆಂದರೆ ಅವನು ಎಲ್ಲ ಆಸೆಗಳ ಕೊನೆಯನ್ನು ಮೀರಿದ ಖ್ಯಾತಿಯನ್ನು ಮತ್ತು ಖ್ಯಾತಿಯ ಮನೋವ್ಯಥೆಯನ್ನು ತಲುಪಿದ್ದ. ಅವನು ವ್ಯವಸ್ಥೆಗೊಳಿಸಿದ ಹಾಗೆ ಯುದ್ಧ ವಿರಾಮದ ದುಃಖ ಸೂಚಕ ಗುಣವನ್ನು ಬದಲಿಸದಂತೆ ಯಾವುದೇ ಹಾಡು, ಪಟಾಕಿಗಳ ಸಿಡಿತ, ಗಂಟೆಗಳ ಶಬ್ದ, ಜಯಭೇರಿಯ ಅಬ್ಬರ ಅಥವಾ ಮತ್ತಾವುದೂ ಇರಲಿಲ್ಲ. ಅಲ್ಲಿಯೇ ಸುತ್ತುತ್ತಿದ್ದ ಫೋಟೋಗ್ರಾಫರ್‌ನೊಬ್ಬ ಫೋಟೋ ತೆಗೆz. ಸಂಗ್ರಹಿಸಲು ಸಾಧ್ಯವಾಗಬಹುದಾಗಿದ್ದ ಅವನ ಒಂದೇ ಒಂದು ಚಿತ್ರವನ್ನು ಪರಿಷ್ಕರಿಸಲಾಗದಂತೆ ಅದನ್ನು ಬಲವಂತವಾಗಿ ಚಚ್ಚಿ ಹಾಕಲಾಯಿತು.
ಇಡೀ ಸಮಾರಂಭ ಪ್ರಮಾಣ ಪತ್ರಗಳಿಗೆ ಸಹಿ ಮಾಡುವ ಅವಧಿಯಷ್ಟು ಮಾತ್ರ ನಡೆಯಿತು. ಸರ್ಕಸ್ ಟೆಂಟಿನ ಮಧ್ಯದಲ್ಲಿ ಇಟ್ಟಿದ್ದ ಟೇಬಲ್ ಸುತ್ತಲೂ ಕುಳಿತ ಪ್ರತಿನಿಧಿಗಳು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ವಿಧೇಯರಾಗಿದ್ದ ಕೊನೆಯ ಅಧಿಕಾರಿಗಳಾಗಿದ್ದರು. ಸಹಿ ತೆಗೆದುಕೊಳ್ಳುವುದಕ್ಕೆ ಮುಂಚೆ ಗಣತಂತ್ರದ ಅಧ್ಯಕ್ಷರ ಆಪ್ತ ಪ್ರತಿನಿಧಿ ಶರಣಾಗತಿಯ ವಿಧೇಯಕವನ್ನು ಗಟ್ಟಿಯಾಗಿ ಓದಲು ಪ್ರಯತ್ನಿಸಿದ. ಆದರೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅದಕ್ಕೆ ವಿರೋಧಿಯಾಗಿದ್ದ. ಅವನು, “ಔಪಚಾರಿಕ ವಿಷಯಗಳಲ್ಲಿ ಸಮಯವನ್ನ ಹಾಳು ಮಾಡೋದು ಬೇಡ” ಎಂದು ಹೇಳಿದ ಮತ್ತು ಅವುಗಳನ್ನು ಓದದೇ ಸಹಿ ಮಾಡಲು ಸಿದ್ಧನಾಗಿದ್ದ. ಟೆಂಟ್‌ನಲ್ಲಿ ಮುತ್ತಿದ್ದ ಮೌನವನ್ನು ಅಧಿಕಾರಿಯೊಬ್ಬ ಮುರಿದ.
ಅವನು, “ಕರ್ನಲ್, ದಯವಿಟ್ಟು ನೀವು ಮೊದಲು ಸಹಿ ಮಾಡದೆ ನಮಗಷ್ಟು ಉಪಕಾರ ಮಾಡಿ” ಎಂದ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಒಪ್ಪಿಕೊಂಡ.
ಪ್ರಮಾಣ ಪತ್ರಗಳನ್ನು ಟೇಬಲ್ಲಿನ ಸುತ್ತಲೂ ಕಳಿಸಿದಾಗ ಅಲ್ಲಿ ಎಷ್ಟು ಮೌನ ಆವರಿಸಿತ್ತೆಂದರೆ ಕಾಗದದ ಮೇಲೆ ಪೆನ್ನು ಮೂಡಿಸುವ ಕರಕರ ಶಬ್ದದಿಂದ ಸಹಿಗಳನ್ನು ಗೊತ್ತುಮಾಡಿಕೊಳ್ಳಬಹುದಿತ್ತು. ಮೊದಲನೆಯ ಪ್ರತಿ ಇನ್ನೂ ಖಾಲಿ ಇತ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅದನ್ನು ಭರ್ತಿ ಮಾಡಲು ಸಿದ್ಧನಾದ.
ಇನ್ನೊಬ್ಬ ಅಧಿಕಾರಿ, “ಕರ್ನಲ್, ಎಲ್ಲಾ ಸರಿಹೋಗಕ್ಕೆ ಇನ್ನೂ ಸಮಯ ಇದೆ.” ಎಂದ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮುಖಮುದ್ರೆಯನ್ನು ಬದಲಿಸದೆ ಮೊದಲ ಪ್ರತಿಯಲ್ಲಿ ಸಹಿ ಮಾಡಿದ. ಅವನು ಕೊನೆಯದರಲ್ಲಿ ಸಹಿ ಮಾಡಿ ಮುಗಿಸಿರಲಿಲ್ಲ. ಆಗ ಕ್ರಾಂತಿಕಾರಿ ಕರ್ನಲ್ ಒಬ್ಬ ಹಂದಿಯ ಮೇಲೆ ಎರಡು ಪೆಟ್ಟಿಗೆಯನ್ನು ಹೇರಿಕೊಂಡು ಬಾಗಿಲ ಹತ್ತಿರ ಕಾಣಿಸಿಕೊಂಡ. ಅವನು ಹದಿಹರೆಯದವನಾಗಿದ್ದರೂ ಕಳೆ ಇರದೆ ತಾಳ್ಮೆಯಿಂದಿದ್ದ. ಕ್ರಾಂತಿಯಲ್ಲಿ ಮಕೋಂದೋ ಪ್ರದೇಶದ ಖಜಾಂಚಿಯಾಗಿದ್ದ ಅವನು ಯುದ್ಧ ವಿರಾಮದ ಸಂದರ್ಭಕ್ಕೆ ಸಮಯಕ್ಕೆ ಸರಿಯಾಗಿ ಬರಬೇಕೆಂದು ಆರು ದಿನಗಳ ಕಾಲ ಪ್ರಯಾಣ ಮಾಡಿ ಹಸಿವಿನಿಂದ ಸಾಯುತ್ತಿದ್ದ ಹಂದಿಯನ್ನು ಎಳೆದುಕೊಂಡು ಬಂದಿದ್ದ. ಅವನು ಅತ್ಯಂತ ಎಚ್ಚರಿಕೆಯಿಂದ ಪೆಟ್ಟಿಗೆಗಳನ್ನು ಕೆಳಗಿಳಿಸಿ, ತೆಗೆದು, ಒಂದಾದ ಮೇಲೆ ಒಂದರಂತೆ ಎಪ್ಪತ್ತೆರಡು ಬಂಗಾರದ ಇಟ್ಟಿಗೆಗಳನ್ನು ಟೇಬಲ್ಲಿನ ಮೇಲಿಟ್ಟ. ಆ ಸಂಪತ್ತಿನ ಬಗ್ಗೆ ಎಲ್ಲರೂ ಮರೆತು ಬಿಟ್ಟಿದ್ದರು. ಕಳೆದ ವರ್ಷದ ಅವ್ಯವಸ್ಥೆಯಲ್ಲಿ ಆe ಕೇಂದ್ರ ಕುಸಿದು ಬಿದ್ದಾಗ ಮತ್ತು ಪರಸ್ಪರ ಕಟ್ಟಾ ವಿರೋಧಿ ನಾಯಕರಾಗುವ ಮಟ್ಟಿಗೆ ಕ್ರಾಂತಿ ದುರ್ಬಲಗೊಂಡಾಗ, ಯಾವುದೇ ಜವಾಬ್ದಾರಿಯನ್ನು ನಿರ್ಧರಿಸಲು ಅಸಾಧ್ಯವಾಗಿತ್ತು, ಕ್ರಾಂತಿ ಕಾಲದ ಬಂಗಾರ ಕರಗಿಸಿ ಇಟ್ಟಿಗೆಗಳನ್ನಾಗಿ ಮಾಡಿ ಅನಂತರ ಸುಟ್ಟ ಮಣ್ಣಿನಿಂದ ಮುಚ್ಚಿದ ಮೇಲೆ, ಅದು ಎಲ್ಲ ನಿಯಂತ್ರಣದಿಂದ ತಪ್ಪಿಸಿಕೊಂಡಿತ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ವಸ್ತುಗಳ ಪಟ್ಟಿಯಲ್ಲಿ ಎಪ್ಪತ್ತೆರಡು ಬಂಗಾರದ ಗಟ್ಟಿಗಳನ್ನು ಸೇರಿಸಿದ ಮತ್ತು ಇಡೀ ಸಮಾರಂಭವನ್ನು ಯಾವುದೇ ಭಾಷಣಗಳಿಲ್ಲದೆ ಮುಗಿಸಿದ. ಕೊಳಕಾಗಿದ್ದ ಆ ಹುಡುಗ ಅವನಿಗೆದುರಾಗಿ ನಿಂತು ಶಾಂತವಾಗಿ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ಇನ್ನೇನಾದರೂ ಇದ್ಯಾ” ಎಂದು ಅವನನ್ನು ಕೇಳಿದ.
ಯುವ ಕರ್ನಲ್ ತುಟಿ ಬಿಗಿ ಹಿಡಿದು, “ರಸೀತಿ” ಎಂದ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ತನ್ನ ಕೈಯಿಂದಲೇ ಅದನ್ನು ಬರೆದು ಕೊಟ್ಟ. ಅನಂತರ ಅವನು ಹುಡುಗರು ಆಚೀಚೆ ಕಳಿಸುತ್ತಿದ್ದ ಒಂದು ಗ್ಲಾಸ್ ಶರಬತ್ ಮತ್ತು ಒಂದು ತುಂಡು ಬಿಸ್ಕತ್ ತೆಗೆದುಕೊಂಡ. ಅವನು ಒಂದು ಪಕ್ಷ ವಿಶ್ರಾಂತಿ ಪಡೆಯಲು ಬಯಸಿದರೆ ಇರಲೆಂದು ಸಿದ್ದಪಡಿಸಿದ್ದ ಆಚೆಯ ಟೆಂಟ್‌ಗೆ ಹೋದ. ಅಲ್ಲಿ ಅವನು ಶರಟು ತೆಗೆದು, ಕುರ್ಚಿಯಲ್ಲಿ ಕುಳಿತುಕೊಂಡ ಮತ್ತು ಮಧ್ಯಾಹ್ನ ಮೂರೂ ಹದಿನೈದಕ್ಕೆ ಪಿಸ್ತೂಲು ತೆಗೆದುಕೊಂಡು, ಅವನ ಡಾಕ್ಟರು ಎದೆಯ ಮೇಲೆ ಗುಂಡಗೆ ಬಣ್ಣ ಬಳಿದಿದ್ದಲ್ಲಿ ಇಟ್ಟುಕೊಂಡು, ಹಾರಿಸಿಕೊಂಡ. ಅದೇ ವೇಳೆಗೆ ಉರ್ಸುಲಾ ಸ್ಟೋವ್ ಮೇಲೆ ಇಟ್ಟಿದ್ದ ಹಾಲಿನ ಪಾತ್ರೆಯ ಮುಚ್ಚಳ ತೆಗೆದು, ಅದು ಕುದಿಯಲು ಇಷ್ಟೊಂದು ಸಮಯ ತೆಗೆದುಕೊಳ್ಳುತ್ತಿರುವುದು ಏಕೆ ಎಂದುಕೊಳ್ಳುತ್ತ, ಅದರ ತುಂಬ ಹುಳುಗಳನ್ನು ಕಂಡಳು.
ಅವಳು, ” ಅವ್ರು ಅವ್ರೇಲಿಯಾನೋನ ಕೊಂದಿದ್ದಾರೆ” ಎಂದು ಕೂಗಿದಳು.
ಅವಳು ಏಕಾಂತದಲ್ಲಿದ್ದ ರೂಢಿಯಂತೆ ಅಂಗಳದ ಕಡೆ ನೋಡಿದಳು. ಅವಳಿಗೆ ಮಳೆಯಲ್ಲಿ ತೊಯ್ದು ಹೋಗಿ, ದುಃಖಿತನಾಗಿ ಮಳೆಯಲ್ಲಿ ನಿಂತ ಮತ್ತು ಸತ್ತಾಗ ಇದ್ದದ್ದಕ್ಕಿಂತ ಹೆಚ್ಚಿಗೆ ವಯಸ್ಸಾದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಕಂಡ. ಅವಳು ಹೆಚ್ಚು ನಿಖರವಾಗಿ, “ಅವನಿಗೆ ಬೆನ್ನಲ್ಲಿ ಗುಂಡು ಹಾಕಿದರು. ಅಲ್ದೆ ಅವನ ಕಣ್ಣನ್ನ ಮುಚ್ಚುವಷ್ಟು ಯಾರಿಗೂ ಮನಸ್ಸಾಗ್ಲಿಲ್ಲ” ಎಂದಳು. ಸಾಯಂಕಾಲ ಕಣ್ಣೀರಿನ ಮೂಲಕ, ಆಕಾಶದ ಅಗಲಕ್ಕೂ ಆವಿಯಂತೆ ಓಡುವ, ಮಿನುಗುವ ವೃತ್ತಗಳನ್ನು ಕಂಡಳು ಮತ್ತು ಅವಳು ಅದನ್ನು ಸಾವಿನ ಸಂಕೇತವೆಂದು ತಿಳಿದುಕೊಂಡಳು. ಅವರು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ತಂದಾಗ ಅವಳಿನ್ನೂ ಗಂಡನ ಮಂಡಿಯ ಬಳಿ ಬಾದಾಮಿ ಮರದ ಕೆಳಗೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅವನಿಗೆ ಹೊದಿಸಿದ್ದ ಹೊದಿಕೆ ಒಣಗಿದ ರಕ್ತದಿಂದ ಬಿಗಿಯಾಗಿತ್ತು ಮತ್ತು ರೋಷದಿಂದ ಕಣ್ಣು ತೆರೆದುಕೊಂಡಿತ್ತು.
ಅವನು ಅಪಾಯದಿಂದ ಪಾರಾಗಿದ್ದ. ಗುಂಡು ಅವನಲ್ಲಿ ಯಾವ ರೀತಿಯ ಮಾರ್ಗ ಅನುಸರಿಸಿತ್ತೆಂದರೆ, ಐಯೋಡಿನ್‌ನಲ್ಲಿ ತೋಯಿಸಿದ ದಾರವನ್ನು ಎದೆಯೊಳಗೆ ಹಾಕಿ ಬೆನ್ನಿನಿಂದ ಅದನ್ನು ಹೊರಗೆಳೆಯಲು ಡಾಕ್ಟರ್‌ಗೆ ಸಾಧ್ಯವಾಯಿತು. ಅವನು ಸಂತೃಪ್ತಿಯಿಂದ “ಇದು ನನ್ನ ಅತ್ಯಂತ ಒಳ್ಳೆಯ ಕೆಲಸ. ಯಾವುದೇ ಮುಖ್ಯವಾದ ಭಾಗಕ್ಕೆ ಹಾನಿಯಾಗದ ಹಾಗೆ ಹೋಗಕ್ಕೆ ಇದ್ದದ್ದು ಅದೊಂದೇ ಜಾಗ” ಎಂದ. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ, ತನ್ನ ಆತ್ಮ ಸ್ಥಿರವಾಗಿದ್ದದ್ದಕ್ಕೆ ಪ್ರಾರ್ಥನಾ ಗೀತೆಗಳನ್ನು ಹಾಡುತ್ತಿದ್ದ ಸುತ್ತುವರಿದಿದ್ದ ಹುಡುಗರು ಕಂಡರು. ಅನಂತರ ಅವನಿಗೆ ತನ್ನ ಬಾಯಲ್ಲಿ ಗುಂಡು ಹೊಡೆದುಕೊಳ್ಳದಿರುವುದಕ್ಕೆ ಖೇದವೆನಿಸಿತು. ಏಕೆಂದರೆ ಅವನು ಅದನ್ನು ಪಿಲರ್ ಟೆರ್‍ನೆರಾ ಮುನ್ಸೂಚನೆ ಕೊಟ್ಟಿದ್ದನ್ನು ಅಣಕು ಮಾಡಲು ಮಾತ್ರ ಮಾಡಲು ಯೋಚಿಸಿದ್ದ.
ಅವನು ಡಾಕ್ಟರ್‌ಗೆ, “ನಂಗಿನ್ನೂ ಅಧಿಕಾರ ಇದ್ದಿದ್ದಿದ್ರೆ ಶೂಟ್ ಮಾಡಿಸಿ ಬಿಡ್ತಿದ್ದೆ. ನನ್ನ ಜೀವಾನ ಉಳಿಸಿದ್ದಕ್ಕಲ್ಲ, ನನ್ನನ್ನ ಮೂರ್ಖನನ್ನಾಗಿ ಮಾಡಿದ್ದಕ್ಕೆ” ಎಂದ.
ಅವನು ಸಾಯದೇ ಹೋದದ್ದು ಕೆಲವೇ ಗಂಟೆಗಳಲ್ಲಿ ಕಳೆದು ಹೋದ ಅವನ ಘನತೆಯನ್ನು ವಾಪಸು ತಂದು ಕೊಟ್ಟಿತು. ಯುದ್ಧವನ್ನು ಬಂಗಾರದ ಇಟ್ಟಿಗೆಗಳ ರೂಮಿಗಾಗಿ ಮಾರಿಕೊಂಡನೆಂದು ಕಥೆ ಕಟ್ಟಿದ ಅದೇ ಜನ ಅವನ ಆತ್ಮಹತ್ಯೆಯ ಪ್ರಯತ್ನವನ್ನು ರಾಷ್ಟ್ರಭಕ್ತಿ ಎಂದು ಘೋಷಿಸಿದರು. ಅನಂತರ ಅವನು ಗಣತಂತ್ರದ ಅಧ್ಯಕ್ಷರ ಆರ್ಡರ್ ಆಫ್ ಮೆರಿಟ್ ಪ್ರಶಸ್ತಿಯನ್ನು ತಿರಸ್ಕರಿಸಿದಾಗ, ಅವನ ಅತ್ಯಂತ ಕಟ್ಟಾ ವಿರೋಧಿಗಳು ಕೂಡ ಅವನ ರೂಮಿಗೆ ಕಾಲಿಟ್ಟು, ಯುದ್ಧ ವಿರಾಮ ಮನ್ನಣೆಯನ್ನು ಹಿಂತೆಗೆದುಕೊಂಡು ಮತ್ತೆ ಯುದ್ಧ ಶುರು ಮಾಡಲು ಕೇಳಿಕೊಂಡರು. ಮಾಡಿದ ತಪ್ಪನ್ನು ಸರಿತೂಗಲು ಎನ್ನುವಂತೆ ಮನೆಯ ತುಂಬ ಕೊಡುಗೆಗಳಿಂದ ತುಂಬಿ ಹೋಯಿತು. ಕೊನೆಗೆ ತನ್ನ ಜೊತೆಗಿದ್ದ ಹಿಂದಿನ ಸಹವರ್ತಿಗಳಿಂದ ದೊರೆತ ಅಗಾಧ ಬೆಂಬಲ ಅವನ ಮೇಲೆ ಪರಿಣಾಮ ಬೀರಿ, ಅವನು ಅವರನ್ನು ಮೆಚ್ಚಿಸುವ ಸಾಧ್ಯತೆಯನ್ನು ತಳ್ಳಿ ಹಾಕಲಿಲ್ಲ. ಅದಕ್ಕೆ ಪ್ರತಿಯಾಗಿ ಒಂದು ಸಂದರ್ಭದಲ್ಲಿ ಹೊಸ ಯುದ್ಧದ ಬಗ್ಗೆ ಎಷ್ಟು ಉತ್ಸುಕನಾಗಿದ್ದನೆಂದg, ಅವನು ಯಾವುದಾದರೊಂದು ನೆಪಕ್ಕಾಗಿ ಕಾಯುತ್ತಿರುವುದಾಗಿ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ಕಂಡಿತು. ಅಂಥದೊಂದು ನೆಪ, ಗಣತಂತ್ರದ ಅಧ್ಯಕ್ಷರು ಹಿಂದಿನ ಹೋರಾಟಗಾರರಿಗೆ, ಉದಾರವಾದಿಗಳಾಗಿರಲಿ ಸಂಪ್ರದಾಯವಾದಿಗಳಾಗಿರಲಿ, ಪ್ರತಿಯೊಂದು ಕೇಸನ್ನು ನಿಯೋಗ ಪರೀಕ್ಷಿಸಿ ಕಾಂಗ್ರೆಸ್ ಒಪ್ಪಿಗೆ ನೀಡುವ ತನಕ ಯಾವುದೇ ವಿಧವಾದ ಮಿಲಿಟರಿ ನಿವೃತ್ತಿ ವೇತನವನ್ನು ಕೊಡಲು ತಿರಸ್ಕರಿಸಿದಾಗ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ಅವ್ರು ಕಾಗದ ಬರೋದಕ್ಕೆ ಕಾಯ್ತಾ, ಕಾಯ್ತಾ, ಸತ್ತು ಹೋಗ್ತಾರೆ” ಎಂದು ಅಬ್ಬರಿಸಿದ. ಅವನು ವಿಶ್ರಾಂತಿ ಪಡೆಯುವುದಕ್ಕಾಗಿ ಉರ್ಸುಲಾ ತಂದಿದ್ದ ತುಯ್ದಾಡುವ ಕುರ್ಚಿಯಿಂದ ಮೊದಲ ಬಾರಿಗೆ ಎದ್ದು, ಬೆಡ್‌ರೂಮಿನಲ್ಲಿ ಅತ್ತಿತ್ತ ಓಡಾಡುತ್ತ, ಗಣತಂತ್ರದ ಅಧ್ಯಕ್ಷರಿಗೆ ಒಂದು ಕಾಗದಕೆ ಉಕ್ತ ಲೇಖನ ಕೊಟ್ಟ. ಸಾರ್ವಜನಿಕ ಮಾಡದ ಆ ಟೆಲಿಗ್ರಾಂನಲ್ಲಿ ನೀರ್ಲಾಂದಿಯಾ ಒಪ್ಪಂದವನ್ನು ಮೊದಲ ಸಲ ಮೀರಿದ್ದನ್ನು ದೂಷಿಸಿದ್ದ ಮತ್ತು ಎರಡು ವಾರದ ಒಳಗೆ ನಿವೃತ್ತಿ ವೇತನ ಕೊಡುವುದನ್ನು ತೀರ್ಮಾನಿಸದಿದ್ದರೆ, ಸಾಯುವ ತನಕ ಯುದ್ಧ ಮಾಡುವುದಾಗಿ ಬೆದರಿಕೆ ಹಾಕಿದ್ದ. ಅವನ ಧೋರಣೆ ಎಷ್ಟು ನ್ಯಾಯ ಸಮ್ಮತವಾಗಿತ್ತೆಂದರೆ ಹಿಂದಿನ ಸಂಪ್ರದಾಯವಾದಿ ಹೋರಾಟಗಾರರ ಬೆಂಬಲ ಕೂಡ ದೊರಕುವುದೆಂಬ ಆಸೆಗೆ ಕಾರಣವಾಯಿತು. ಸರ್ಕಾರದಿಂದ ಬಂದ ಒಂದೇ ಉತ್ತರದಲ್ಲಿ ಅವನು ರಕ್ಷಿಸಬೇಕೆಂಬ ನೆಪದಿಂದ ಅವನ ಮನೆಯ ಬಾಗಿಲ ಬಳಿ ಒದಗಿಸಿದ್ದ ರಕ್ಷಣಾ ಸಿಬ್ಬಂದಿಯನ್ನು ಹೆಚ್ಚಿಸುವುದಾಗಿ ತಿಳಿಸಲಾಗಿತ್ತು ಮತ್ತು ಎಲ್ಲ ಬಗೆಯ ಭೇಟಿಗೆ ನಿಷೇಧವಿತ್ತು. ಇಡೀ ದೇಶದಲ್ಲಿ, ಕಣ್ಣಿಡಲಾಗಿದ್ದ ಇತರ ನಾಯಕರಿಗೂ ಇದೇ ವಿಧಾನವನ್ನು ಅನುಸರಿಸಲಾಗಿತ್ತು. ಆ ಕಾರ್ಯಾಚರಣೆ ಎಷ್ಟು ಸಮಯಯುಕ್ತ ಮತ್ತು ಯಶಸ್ವಿಯಾಗಿತ್ತೆಂದರೆ, ಯುದ್ಧ ವಿರಾಮದ ಎರಡು ತಿಂಗಳ ನಂತರ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಚೇತರಿಸಿಕೊಂಡ ಮೇಲೆ, ಅವನಿಗೆ ಅತ್ಯಂತ ಸಮೀಪವರ್ತಿಗಳಾಗಿದ್ದ ಬೇಹುಗಾರರು ಸತ್ತಿದ್ದರು ಅಥವಾ ತಲೆ ತಪ್ಪಿಸಿಕೊಂಡಿದ್ದರು ಅಥವಾ ಸಾರ್ವಜನಿಕ ಆಡಳಿತದೊಳಕ್ಕೆ ಎಂದೆಂದಿಗೆಂದು ಸೇರಿಸಿಕೊಳ್ಳಲಾಗಿತ್ತು.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಡಿಸೆಂಬರ್‌ನಲ್ಲಿ ರೂಮಿನಿಂದ ಹೊರಗೆ ಹೊರಟ ಮತ್ತು ಯುದ್ಧದ ಬಗ್ಗೆ ಯೋಚಿಸದಿರುವುದಕ್ಕೆ ಅವನಿಗೆ ಕೈಸಾಲೆಯ ಕಡೆ ನೋಡುವುದು ಸಾಕಾಗಿತ್ತು. ಆ ವಯಸ್ಸಿಗೆ ಅಸಾಧ್ಯವೆಂದು ತೋರುತ್ತಿದ್ದ ಚೈತನ್ಯದಿಂದ ಉರ್ಸುಲಾ ಮನೆಗೆ ಮತ್ತೆ ಮರುಜೀವ ಕೊಟ್ಟಿದ್ದಳು. ತನ್ನ ಮಗ ಬದುಕಿರುತ್ತಾನೆ ಎಂದು ತಿಳಿದ ಬಳಿಕ ಅವಳು, “ನಾನೇನು ಅಂತ ಅವ್ರಿಗೆ ಗೊತ್ತಾಗತ್ತೆ. ಇದಕ್ಕಿಂತ ಚೆನ್ನಾಗಿರೋ, ಮುಕ್ತವಾಗಿರೋ, ತಲೆಕೆಟ್ಟ ಮನೆ ಇಡೀ ಪ್ರಪಂಚದಲ್ಲೇ ಯಾವುದೂ ಇರಲ್ಲ” ಎಂದಳು. ಅವಳು ಅದನ್ನು ತೊಳೆಸಿ ಬಣ್ಣ ಬಳಿಸಿ, ಪೀಠೋಪಕರಣ ಬದಲಾಯಿಸಿ, ಉದ್ಯಾನವನದಲ್ಲಿ ಹೊಸ ಹೂ ಗಿಡಗಳನ್ನು ನೆಡಿಸಿ ಮರು ಸ್ಥಾಪಿಸಿದಳು. ಕಿಟಕಿ ಬಾಗಿಲುಗಳನ್ನು ಬೇಸಿಗೆಯ ಬೆಳಕು ಬೆಡ್‌ರೂಮಿಗೂ ಹಬ್ಬಲೆಂದು ತೆರೆದಿಟ್ಟಳು. ಅವಳು ಹೇರಿಕೊಂಡಿದ್ದ ಅನೇಕ ಸೂತಕದ ಅವಧಿಗಳಿಗೆ ಮಂಗಳಹಾಡುವ ಅಪ್ಪಣೆ ಮಾಡಿದಳು. ಅವಳೇ ತನ್ನ ತಾತನ ಕಾಲದ ಗೌನುಗಳನ್ನು ಬದಲಾಯಿಸಿ ಹರೆಯ ಬಿಂಬಿಸುವ ಬಟ್ಟೆಗಳನ್ನು ಹಾಕಿಕೊಂಡಳು. ಪಿಯಾನೋ ಸಂಗೀತ ಮತ್ತೆ ಮನೆಯೊಳಗೆ ಮುದ ತಂದಿತು. ಅದನ್ನು ಕೇಳಿದಾಗ ಅಮರಾಂತಳಿಗೆ ಸಂಜೆಯ ಬಿಳಿಯ ಹೂಗಳ ಸುವಾಸನೆಯಲ್ಲಿ ಪಿಯತ್ರೋ ಕ್ರೆಪ್ಸಿಯ ಅವನ ಸಹವಾಸ ಮತ್ತು ಅವನು ಬಳಿದುಕೊಳ್ಳುತ್ತಿದ್ದ ಪರಿಮಳದ ನೆನಪಾಯಿತು. ಆದರೆ ಕಾಲನ ಪ್ರಭಾವದಿಂದ ಅವಳ ಬಾಡಿದ ಹೃದಯದಲ್ಲಿ ಕೇವಲ ದ್ವೇಷ ಮನೆಮಾಡಿತ್ತು. ಒಂದು ದಿನ ಮಧ್ಯಾಹ್ನ ಅವಳು ನಡುಮನೆಯನ್ನು ಚೊಕ್ಕವಾಗಿಡಲು ಪ್ರಯತ್ನಿಸುತ್ತಿದ್ದಾಗ ಮನೆಯ ರಕ್ಷಣೆಯಲ್ಲಿದ್ದ ಸೈನಿಕನ ಸಹಾಯ ಕೇಳಿದಳು. ಆತನ ಕಮಾಂಡರ್ ಅದಕ್ಕೆ ಅನುಮತಿ ಕೊಟ್ಟ. ಉರ್ಸುಲಾ ಕ್ರಮೇಣ ಅವರಿಗೆ ಮನೆಗೆಲಸಗಳನ್ನು ಕೊಟ್ಟಳು. ಅವರನ್ನು ಊಟಕ್ಕೆ ಕರೆದಳು, ಅವರಿಗೆ ಬಟ್ಟೆ ಹಾಗೂ ಶೂಗಳನ್ನು ಕೊಟ್ಟಳು ಮತ್ತು ಅವರಿಗೆ ಓದಲು, ಬರೆಯಲು ಹೇಳಿಕೊಟ್ಟಳು. ಸರ್ಕಾರ ರಕ್ಷಣೆಯಲ್ಲಿದ್ದವನನ್ನು ಹಿಂತೆಗೆದುಕೊಂಡಾಗ ಇನ್ನೊಬ್ಬ ಅವರ ಮನೆಯಲ್ಲಿ ವಾಸ ಮಾಡುವುದನ್ನು ಮುಂದುವರಿಸಿದ ಮತ್ತು ಅವಳ ಸೇವೆಯಲ್ಲಿ ಅನೇಕ ವರ್ಷಗಳಿದ್ದ.
ಹೊಸ ವರ್ಷದ ದಿನ, ಸುಂದರಿ ರೆಮಿದಿಯೋಸ್ ತಿರಸ್ಕರಿಸಿದ್ದರಿಂದ ಹುಚ್ಚನಂತಾದ ರಕ್ಷಣಾ ದಳದ ಯುವ ಕಮಾಂಡರ್ ಕಿಟಕಿಯ ಪಕ್ಕದಲ್ಲಿ ಸತ್ತು ಬಿದ್ದದ್ದು ಕಾಣಿಸಿತು.
೧೦
ಅನೇಕ ವರ್ಷಗಳ ನಂತರ ಸಾಯುವ ಸ್ಥಿತಿಯಲ್ಲಿ ಮಲಗಿದ್ದ ಅವ್ರೇಲಿಯಾನೋ ಸೆಗುಂದೋ ಅದೊಂದು ಜೂನ್ ತಿಂಗಳ ಮಧ್ಯಾಹ್ನ ತನ್ನ ಮಗನನ್ನು ನೋಡಲು ಬೆಡ್‌ರೂಮಿಗೆ ;ದದ್ದು ನೆನಪಾಯಿತು. ಮಗು ನಿತ್ರಾಣಗೊಂಡು ಅಳುತ್ತಿದ್ದು ಬ್ಯುಂದಿಯಾನೆನ್ನುವ ಯಾವ; ಕುರುಹೂ ಇಲ್ಲದಿದ್ದರೂ ಅವನಿಗೆ ಹೆಸರಿಡಲು ಅವನು ಹೆಚ್ಚು ಯೋಚಿಸುವುದೇ ಬೇಕಾಗಿರಲಿಲ್ಲ.
ಅವನು, “ಇವನಿಗೆ ಹೊಸೆ ಅರ್ಕಾದಿಯೋ” ಎಂದು ಕರೆಯೋಣ ಎಂದ.
ಅವನು ಕಳೆದ ವರ್ಷ ಮದುವೆಯಾಗಿದ್ದ ಚಲುವೆ ಫೆರ್ನಾಂಡ ಡೆಲ್ ಕಾರ್ಪಿಯೋ ಒಪ್ಪಿದಳು. ಆದರೆ ಉರ್ಸುಲಾಗೆ ಬಂದ ಅಸ್ಪಷ್ಟ ಅನುಮಾನವನ್ನು ಮುಚ್ಚಿಡಲಾಗಲಿಲ್ಲ. ಅವರ ಸಂಸಾರದ ವಂಶವೃಕ್ಷದಲ್ಲಿ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದ್ದ ಹೆಸರುಗಳಿಂದ ಅವಳಿಗೆ ಕೆಲವು ತಿರ್ಮಾನಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗಿತ್ತಲ್ಲದೆ ಅವು ಖಚಿತವಾಗಿ ಕಾಣುತ್ತಿದ್ದವು. ಅವ್ರೇಲಿಯಾನೋಗಳು ಅಂತರ್ಮುಖಿಯಾಗಿದ್ದ ಸರಳ ಮನಸ್ಸಿನವರಾದರೆ ಹೊಸೆ ಅರ್ಕಾದಿಯೋಗಳು ಹಠಾತ್ ಮತ್ತು ಸಾಹಸ ಪ್ರವೃತ್ತಿಯವರಾದರೂ ಅವರಿಗೆ ದುರಂತದ ನಂಟಿತ್ತು. ಹಾಗೆ ಪ್ರತ್ಯೇಕಿಸಲು ಸಾಧ್ಯವಾಗದವರೆಂದರೆ ಹೊಸೆ ಅರ್ಕಾದಿಯೋ ಸೆಗುಂದೋ ಮತ್ತು ಅವ್ರೇಲಿಯಾನೋ ಸೆಗುಂದೋ. ಅವರಿಬ್ಬರಿಗೂ ಚಿಕ್ಕಂದಿನಲ್ಲಿ ಎಷ್ಟು ಹೋಲಿಕೆ ಮತ್ತು ತುಂಟತನವಿತ್ತೆಂದರೆ ಬೇರೆ ಬೇರೆ ಇದ್ದಾಗ ಸಾಂತ ಸೋಫಿಯಾ ದೆಲಾ ಪಿಯದಾದ್‌ಗೂ ಕೂಡ ಯಾರೆಂದು ಹೇಳಲು ಆಗುತ್ತಿರಲಿಲ್ಲ. ಅವರಿಗೆ ಹೆಸರಿಟ್ಟ ದಿನ, ಅಮರಾಂತ ಅವರಿಬ್ಬರ ಹೆಸರಿರುವ ಪಟ್ಟಿಗಳನ್ನು ಹಾಕಿ, ಇಬ್ಬರಿಗೂ ಬೇರೆ ಬೇರೆ ಬಣ್ಣದ ಇನಿಷಿಯಲ್‌ಗಳಿರುವ ಬಟ್ಟೆಗಳನ್ನು ತೊಡಿಸಿದಳು. ಆದರೆ ಅವರು ಸ್ಕೂಲ್‌ಗೆ ಹೋಗಲು ಪ್ರಾರಂಭಿಸಿದಾಗ, ಅವರು ಪಟ್ಟಿಗಳನ್ನೂ ಬಟ್ಟೆಗಳನ್ನೂ ಅದಲು ಬದಲು ಮಾಡಿಕೊಳ್ಳಲು ನಿಶ್ಚಯಿಸಿದರು ಮತ್ತು ಹೆಸರನ್ನು ಬದಲಿಸಿ ಕರೆದುಕೊಂಡರು. ಹೊಸೆ ಅರ್ಕಾದಿಯೋ ಸೆಗುಂದೋ ಹಸಿರು ಬಣ್ಣದ ಶರಟು ಹಾಕಿಕೊಂಡಿರುತ್ತಿದ್ದದ್ದು ಗೊತ್ತಿದ್ದ ಅವರ ಉಪಾಧ್ಯಾಯರಾದ ಮೆಲ್‌ಚರ್ ಎಸ್ಕಲೋನನಿಗೆ, ಅವನು ಅವ್ರೇಲಿಯಾನೋ ಸೆಗುಂದೋನ ಪಟ್ಟಿ ಹಾಕಿಕೊಂಡಿದ್ದು ನೋಡಿ ಗೊಂದಲ ಉಂಟಾಯಿತು ಮತ್ತು ಬಿಳಿಯ ಶರಟು ಮತ್ತು ಹೊಸೆ ಅರ್ಕಾದಿಯೋ ಸೆಗುಂದೋವಿನ ಪಟ್ಟಿ ಹಾಕಿಕೊಂಡಿದ್ದವನು ತನ್ನ ಹೆಸರನ್ನು ಅವ್ರೇಲಿಯಾನೋ ಸೆಗುಂದೋ ಎಂದು ಹೇಳಿದ. ಅಂದಿನಿಂದ ಅವನಿಗೆ ಇಬ್ಬರಲ್ಲಿ ಯಾರು ಯಾರು ಎಂದು ಖಚಿತವಾಗಿ ತಿಳಿಯುತ್ತಿರಲಿಲ್ಲ. ಅವರು ದೊಡ್ಡವರಾದ ಮೇಲೆ ಕೂಡ ಉರ್ಸುಲಾಗೆ, ಅವರಾಗಿಯೇ ಗೊಂದಲದ ಕ್ಷಣಗಳಲ್ಲಿ ತಪ್ಪುಮಾಡಿರಲಾರರ ಮತ್ತು ಎಂದಿಗೂ ಬದಲಾಗಿಯೇ ಬಿಟ್ಟರೇ ಎಂದುಕೊಂಡಳು. ಹರೆಯಕ್ಕೆ ಮುಂಚೆ ಅವರು ಒಬ್ಬರಿಗೊಬ್ಬರು ಅನುರೂಪವಾದ ಯಂತ್ರಗಳಂತಿದ್ದರು. ಒಂದೇ ಸಮಯಕ್ಕೆ ಏಳುತ್ತಿದ್ದರು, ಕಕ್ಕಸ್ಸಿಗೆ ಹೋಗುವ ಒತ್ತಡ ಒಂದೇ ಹೊತ್ತಿಗೆ ಉಂಟಾಗುತ್ತಿತ್ತು, ಆರೋಗ್ಯದಲ್ಲಿ ಒಂದೇ ವಿಧವಾದ ಏರುಪೇರು ಉಂಟಾಗಿ ಯಾತನೆ ಅನುಭವಿಸುತ್ತಿದ್ದರು ಮತ್ತು ಒಂದೇ ವಿಷಯದ ಬಗ್ಗೆ ಕನಸುಗಳನ್ನು ಕಾಣುತ್ತಿದ್ದರು. ಮನೆಯಲ್ಲಿ ಗೊಂದಲ ಉಂಟುಮಾಡುವ ಒಂದೇ ಉದ್ದೇಶದಿಂದ ಕೆಲಸ ಕಾರ್ಯಗಳನ್ನು ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದರು ಎನ್ನುವ ತಿಳುವಳಿಕೆ ಇತ್ತು. ಆದರೆ ಒಂದು ದಿನ ಸಾಂತ ಸೋಫಿಯಾ ದೆಲಾ ಪಿಯದಾದ್ ಅವರಲ್ಲೊಬ್ಬನಿಗೆ ನಿಂಬೆ ಹಣ್ಣಿನ ಪಾನಕವನ್ನು ಕೊಡುವ ತನಕ ಏನಾಗುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ ಮತ್ತು ಅವನು ಅದರ ರುಚಿ ನೋಡಿದ ಕೂಡಲೆ ಮತ್ತೊಬ್ಬ ಅದಕ್ಕೆ ಸಕ್ಕರೆ ಹಾಕಿಲ್ಲ, ಎಂದ. ಸಕ್ಕರೆ ಹಾಕುವುದನ್ನು ಮರೆತಿದ್ದ ಸಾಂತ ಸೋಫಿಯಾ ದೆಲಾ ಪಿಯದಾದ್ ಈ ವಿಷಯವನ್ನು ಉರ್ಸುಲಾಗೆ ಹೇಳಿದಳು. ಉರ್ಸುಲಾ ಆಶ್ವರ್ಯಗೊಳ್ಳದೆ, “ಅವ್ರು ಹಾಗೇ ಇರೋದು, ಹುಟ್ಟಿದಾಗಿಂದ್ಲೂ ಅಷ್ಟೆ” ಎಂದಳು. ಕಾಲ ಕಳೆದಂತೆ ಎಲ್ಲವೂ ವ್ಯವಸ್ಥಿತವಾಗತೊಡಗಿದವು. ಗೊಂದಲಮಯ ಆಟದಿಂದ ಅವ್ರೇಲಿಯಾನೋ ಸೆಗುಂದೋ ಎಂದು ಹೊರಬಂದವನು ಅವನ ಅಜ್ಜನ ಹಾಗೆ ಆಜಾನುಬಾಹುವಾಗಿ ಬೆಳೆದ ಮತ್ತು ತನ್ನ ಹೆಸರನ್ನು ಹೊಸೆ ಅರ್ಕಾದಿಯೋ ಸೆಗುಂದೋ ಎಂದಿಟ್ಟುಕೊಂಡವನು ಕರ್ನಲ್‌ನ ಹಾಗೆ ಸಪೂರನಾದ. ಅಲ್ಲದೆ ಅವರಿಬ್ಬರಲ್ಲಿ ಇದ್ದ ಸಮಾನ ಅಂಶವೆಂದರೆ ಮನೆತನದ ಏಕಾಂತತೆ. ಬಹುಶಃ ಅವರಿಬ್ಬರ ಆಕಾರ, ಹೆಸರು ಮತ್ತು ಸ್ವಭಾವ ಅದಲು ಬದಲಾಗುತ್ತಿದ್ದ ರೀತಿ ಉರ್ಸುಲಾಗೆ ಚಿಕ್ಕಂದಿನಿಂದಲೂ ಅವರಿಬ್ಬರು ಕಾರ್ಡಿನ ಹಾಗೆ ಒಬ್ಬರಿಂದೊಬ್ಬರಿಗೆ ವಿಂಗಡಿಸುತ್ತಿದ್ದರು ಎಂದು ಅನುಮಾನಿಸಲು ಕಾರಣವಾಗಿತ್ತು.
ಯುದ್ಧದ ಮಧ್ಯದಲ್ಲಿ ಹೊಸೆ ಅರ್ಕಾದಿಯೋ ಬ್ಯುಂದಿಯಾ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ಮರಣ ಡಂಡನೆ ವಿಧಿಸುವುದನ್ನು ನೋಡುವ ಅವಕಾಶ ಕೊಡಬೇಕೆಂದು ಕೇಳಿದಾಗ, ಅವರಿಬ್ಬರಲ್ಲಿದ್ದ ಮಹತ್ವಪೂರ್ಣ ವ್ಯತ್ಯಾಸ ಬೆಳಕಿಗೆ ಬಂತು. ಉರ್ಸುಲಾಳ ಹೆಚ್ಚು ಯುಕ್ತವಾದ ಅಭಿಪ್ರಾಯದ ವಿರುದ್ಧವಾಗಿ ಅವನ ಅಪೇಕ್ಷೆಯನ್ನು ಪೂರೈಸಲಾಯಿತು. ಇದಕ್ಕೆ ವಿರುದ್ಧವಾಗಿ ಅವ್ರೇಲಿಯಾನೋ ಸೆಗುಂದೋ ಮರಣ ದಂಡನೆಯನ್ನು ವಿಧಿಸುವುದನ್ನು ನೋಡುವುದರ ಆಲೋಚನೆಯಿಂದಲೇ ನಡುಕ ಹುಟ್ಟಿ, ಮನೆಯಲ್ಲಿಯೇ ಉಳಿದ. ಅವನು ಹನ್ನೆರಡನೆ ವಯಸ್ಸಿನಲ್ಲಿ ಉರ್ಸುಲಾಗೆ ಬೀಗ ಹಾಕಿರುವ ರೂಮಿನಲ್ಲಿ ಏನಿದೆ ಎಂದು ಕೇಳಿದ. ಅವಳು, “ಪೇಪರುಗಳಿವೆ, ಮೆಲ್‌ಕಿಯಾದೆಸ್‌ನ ಪುಸ್ತಕಗಳಿವೆ, ಅಲ್ದೆ ಅವನ ಕೊನೆಗಾಲದಲ್ಲಿ ಬರೆದ ಏನೇನೊ ವಿಚಿತ್ರಗಳಿವೆ” ಎಂದಳು. ಅವಳ ಉತ್ತರ ಅವನನ್ನು ಸುಮ್ಮನಾಗಿಸುವ ಬದಲು ಕುತೂಹಲ ಹುಟ್ಟಿಸಿತು. ತಾನು ಅಲ್ಲಿರುವುದನ್ನು ಹಾಳು ಮಾಡುವುದಿಲ್ಲವೆಂದು ಮಾತುಕೊಟ್ಟು, ಮತ್ತೆ ಮತ್ತೆ ಪೀಡಿಸಿದಾಗ ಉರ್ಸುಲಾ ಅದರ ಬೀಗದ ಕೈ ಕೊಟ್ಟಳು. ಮೆಲ್‌ಕಿಯಾದೆಸ್‌ನ ದೇಹವನ್ನು ಅಲ್ಲಿಂದ ತೆಗೆದ ನಂತರ ಯಾರೂ ಆ ರೂಮಿಗೆ ಹೋಗಿರಲಿಲ್ಲ, ಅದಕ್ಕೆ ಹಾಕಿದ ಬೀಗದ ಭಾಗಗಳು ತುಕ್ಕು ಹಿಡಿದು ಒಂದಕ್ಕೊಂದು ಮೆತ್ತಿಕೊಂಡಿದ್ದವು. ಆದರೆ ಅವ್ರೇಲಿಯಾನೋ ಸೆಗುಂದೋ ಕಿಟಕಿಯನ್ನು ತೆಗೆದಾಗ ಪ್ರತಿ ದಿನವೂ ರೂಮನ್ನು ಬೆಳಗುತ್ತಿದ್ದಂತೆ ಕಂಡ ಪರಿಚಿತವಾದ ಬೆಳಕು ಪ್ರವೇಶಿಸಿತು. ಅಲ್ಲಿ ಕಿಂಚಿತ್ ಧೂಳು, ಇಲ್ಲಣಗಳಿರಲಿಲ್ಲ. ಪ್ರತಿಯೊಂದು ಶುಭ್ರ, ಸ್ವಚ್ಛವಾಗಿತ್ತು. ಇಂಕ್ ಬಾಟಲ್‌ನಲ್ಲಿನ ಇಂಕ್ ಒಣಗಿರಲಿಲ್ಲ, ರಾಸಾಯನಿಕ ಕ್ರಿಯೆ ಲೋಹಗಳ ಮೇಲಿನ ಮಿರುಗನ್ನು ಕಡಿಮೆ ಮಾಡಿರಲಿಲ್ಲ. ಅಲ್ಲದೆ ಹೊಸೆ ಅರ್ಕಾದಿಯೋ ಬ್ಯುಂದಿಯಾ ಪಾದರಸವನ್ನು ಆವಿ ಮಾಡುತ್ತಿದ್ದಾಗ ಉಪಯೋಗಿಸುತ್ತಿದ್ದ ನೀರಿನ ಪೈಪಿನ ಕೆಳಗಿದ್ದ ನಸುಕೆಂಡದ ಕಾವು ಕಡಿಮೆಯಾಗಿರಲಿಲ್ಲ. ಶೆಲ್ಫ್‌ನಲ್ಲಿ ಕಾರ್ಡ್‌ಬೋರ್ಡ್‌ನಂಥ, ಪೇಲವವಾಗಿದ್ದ, ಹದಮಾಡಿದ ಮನುಷ್ಯನ ಚರ್ಮದಂತಿದ್ದ ವಸ್ತವಿನಿಂದ ರಟ್ಟು ಹಾಕಿದ ಪುಸ್ತಕಗಳಿದ್ದವು ಮತ್ತು ಹಸ್ತಪ್ರತಿಗಳು ಸುಸ್ಥಿತಿಯಲ್ಲಿದ್ದವು. ಅನೇಕ ವರ್ಷಗಳ ಕಾಲ ಆ ರೂಮಿನ ಬಾಗಿಲು ಹಾಕಿದ್ದರೂ ಅದರೊಳಗಿನ ಗಾಳಿ ಮನೆಯ ಇತರ ಕಡೆಗಳಿಗಿಂತ ಚೇತೋಹಾರಿಯಾಗಿತ್ತು. ಎಲ್ಲವೂ ನವೀನವಾಗಿದ್ದು, ಕೆಲವು ವಾರಗಳ ನಂತರ ಉರ್ಸುಲಾ ಅಲ್ಲಿಗೆ ನೀರು ಮತ್ತು ಬ್ರಷ್‌ನಿಂದ ನೆಲವನ್ನು ಸಾರಿಸಲು ಹೋದಾಗ, ಅವಳಿಗೆ ಮಾಡಲು ಏನೂ ಇರಲಿಲ್ಲ. ಅವ್ರೇಲಿಯಾನೋ ಸೆಗುಂದೋ ಪುಸ್ತಕವೊಂದನ್ನು ಓದುವುದರಲ್ಲಿ ಮಗ್ನನಾಗಿದ್ದ. ಅದಕ್ಕೆ ಹೊದಿಕೆ ಮತ್ತು ಎಲ್ಲೂ ಹೆಸರು ಇರಲಿಲ್ಲವಾದರೂ ಅವನಿಗೆ ಟೇಬಲ್ ಮೇಲಿದ್ದ ಪಿನ್‌ನಿಂದ ಎತ್ತಿಕೊಳ್ಳುತ್ತಿದ್ದ, ಅನ್ನದ ಕಾಳನ್ನು ಬಿಟ್ಟು ಬೇರೆ ಏನನ್ನೂ ತಿನ್ನದಿದ್ದ ಹೆಂಗಸೊಬ್ಬಳ ಕಥೆ ಖುಷಿ ಕೊಟ್ಟಿತ್ತು. ಜೊತೆಗೆ ಮೀನು ಹಿಡಿಯುವವನ ಕಥೆಯಲ್ಲಿ, ಪಕ್ಕದವರಿಂದ ಬಲೆಗೆ ಭಾರವೊಂದನ್ನು ಸಾಲವಾಗಿ ಪಡೆದು ನಂತರ ಅದರ ಬಾಬ್ತಿಗಾಗಿ ಕೊಟ್ಟ ಮೀನಿನ ಹೊಟ್ಟೆಯಲ್ಲಿ ವಜ್ರ ಇದ್ದ ಕಥೆ ಹಾಗೂ ಇಷ್ಟಾರ್ಥಗಳನ್ನು ಪೂರೈಸುವ ದೀಪ ಅಲ್ಲದೆ ಹಾರುವ ಜಮಖಾನ. ಅವನು ಆಶ್ಚರ್ಯದಿಂದ ಉರ್ಸುಲಾಗೆ ಅದೆಲ್ಲ ನಿಜವೇ ಎಂದು ಕೇಳಿದಾಗ, ಅವಳು ಹೌದೆಂದು ಹೇಳಿ, ಜಿಪ್ಸಿಗಳು ಅನೇಕ ವರ್ಷಗಳ ಹಿಂದೆ ಮಾಯಾ ದೀಪ ಮತ್ತು ಹಾರುವ ಜಮಖಾನಗಳನ್ನು ಮಕೋಂದೋಗೆ ತಂದಿದ್ದರು ಎಂದಳು.
ಅವಳು ನಿಟ್ಟುಸಿರು ಬಿಡುತ್ತ, “ಈಗೇನಾಗ್ತಿದೆ ಅಂದ್ರೆ, ನಿಧಾನವಾಗಿ ಪ್ರಪಂಚ ಕೊನೆಯಾಗ್ತಿದೆ. ಅಲ್ದೆ, ಅವೆಲ್ಲ ಇಲ್ಲಿ ಮತ್ತೆ ಬರಲ್ಲ” ಎಂದಳು.
ಅವನು ಪುಸ್ತಕದಲ್ಲಿ ಹಾಳೆಗಳು ಹರಿದಿದ್ದರಿಂದ, ಮುಕ್ತಾಯವಿರದ ಅನೇಕ ಕಥೆಗಳನ್ನು ಓದಿ ಮುಗಿಸಿದ ಮೇಲೆ, ಅವ್ರೇಲಿಯಾನೋ ಸೆಗುಂದೋ ಹಸ್ತಪ್ರತಿಗಳಲ್ಲಿ ಏನಿದೆ ಎಂದು ಬಗೆದು ನೋಡಲು ಪ್ರಾರಂಭಿಸಿದ. ಅದು ಸಾಧ್ಯವಾಗಲಿಲ್ಲ. ಅಕ್ಷರಗಳು ಹಗ್ಗದ ಮೇಲೆ ಒಣಗಲು ನೇತು ಹಾಕಿದ ಬಟ್ಟೆಗಳಂತೆ ಕಂಡಿತು ಮತ್ತು ಬರವಣಿಗೆಗಿಂತ ಹೆಚ್ಚಾಗಿ ಸಂಗೀತದ ಚಿಹ್ನೆಗಳಂತೆ ಕಾಣಿಸಿತು. ಒಂದು ಸುಡುತ್ತಿದ್ದ ದಿನದ ಸುಮಾರು ಮಧ್ಯಾಹ್ನದ ವೇಳೆಗೆ ಹಸ್ತಪ್ರತಿಗಳನ್ನು ತಿರುವಿ ಹಾಕುತ್ತಿರುವಾಗ, ಅವನಿಗೆ ರೂಮಿನಲ್ಲಿ ತಾನೊಬ್ಬನೇ ಇಲ್ಲ ಎಂದು ಭಾಸವಾಯಿತು. ಕಿಟಕಿಯಿಂದ ಬಿದ್ದ ಬೆಳಕಿಗೆ ಎದುರಾಗಿ, ತನ್ನ ಎರಡು ಕೈಗಳನ್ನು ಮಂಡಿಯ ಮೇಲೆ ಇಟ್ಟುಕೊಂಡು ಕುಳಿತಿದ್ದವನು ಮೆಲ್‌ಕಿಯಾದೆಸ್ ಆಗಿದ್ದ. ನಲವತ್ತು ವರ್ಷದೊಳಗಿದ್ದ ಅವನು ಅದೇ ಹಳೇ ರೀತಿಯ ಅರ್ಧ ಕೋಟು ಮತ್ತು ಹಕ್ಕಿಯ ರೆಕ್ಕೆಯ ಹಾಗಿದ್ದ ಹ್ಯಾಟ್ ಹಾಕಿಕೊಂಡಿದ್ದ. ಅವ್ರೇಲಿಯಾನೋ ಮತ್ತು ಹೊಸೆ ಅರ್ಕಾದಿಯೋ ಹುಡುಗರಾಗಿದ್ದಾಗ ನೋಡಿದ್ದಂತೆ ಅವನ ಹಣೆಯ ಮೇಲೆ ಇದ್ದ ಗ್ರೀಸ್, ಬಿಸಿಲಿಗೆ ಕರಗಿ ಕೂದಲಿಂದ ಇಳಿದು ಜಿನುಗಿತ್ತು. ಅವ್ರೇಲಿಯಾನೋ ಸೆಗುಂದೋ ಅವನನ್ನು ತಕ್ಷಣವೇ ಗುರುತು ಹಿಡಿದ, ಏಕೆಂದರೆ ವಂಶಪಾರಂಪರ್‍ಯವಾಗಿ ಬಂದ ನೆನಪು ತಲೆಮಾರಿನಿಂದ ತಲೆಮಾರಿಗೆ ರವಾನಿಸಲ್ಪಟ್ಟು ಅವನ ಅಜ್ಜನ ಮೂಲಕ ಅವನಿಗೆ ತಲುಪಿತ್ತು.
ಅವ್ರೇಲಿಯಾನೋ ಸೆಗುಂದೋ, “ಹಲ್ಲೊ” ಎಂದ.
ಮೆಲ್‌ಕಿಯಾದೆಸ್, “ಹಲ್ಲೊ” ಎಂದ.
ಅಂದಿನಿಂದ ಅನೇಕ ವರ್ಷಗಳವರೆಗೆ ಅವರಿಬ್ಬರೂ ಪ್ರತಿ ಮಧ್ಯಾಹ್ನ ಒಬ್ಬರನ್ನೊಬ್ಬರು ಕಾಣುತ್ತಿದ್ದರು. ಮೆಲ್‌ಕಿಯಾದೆಸ್ ಅವನ ಜೊತೆ ಪ್ರಪಂಚದ ಬಗ್ಗೆ ಮಾತನಾಡಿದ, ತನ್ನ ಪುರಾತನ eನದಿಂದ ಉತ್ತೇಜಿಸಲು ಪ್ರಯತ್ನಿಸಿದ. ಆದರೆ ಹಸ್ತಪ್ರತಿಗಳನ್ನು ಅನುವಾದ ಮಾಡಲು ನಿರಾಕರಿಸಿದ. ಅವನು, “ಯಾರಿಗೇ ಆಗಲಿ ನೂರು ವರ್ಷವಾಗುವ ತನಕ ಅವುಗಳ ಅರ್ಥ ತಿಳಿಯುವುದು ಬೇಡ” ಎಂದು ವಿವರಿಸಿದ. ಅವ್ರೇಲಿಯಾನೋ ಆ ಭೇಟಿಗಳನ್ನು ಎಂದೆಂದಿಗೂ ಗುಪ್ತವಾಗಿಟ್ಟ. ಒಂದು ಸಂದರ್ಭದಲ್ಲಿ ಅವನ ಖಾಸಗಿ ಪ್ರಪಂಚ ಕಡಿದು ಬಿತ್ತೆ ಹೇಗೆ ಎಂದು ಆತಂಕಗೊಂq. ಏಕೆಂದರೆ ಮೇಲ್‌ಕಿಯಾದೆಸ್ ಅವನ ರೂಮಿನಲ್ಲಿದ್ದಾಗ ಉರ್ಸುಲಾ ಅಲ್ಲಿಗೆ ಬಂದಿದ್ದಳು. ಆದರೆ ಅವನನ್ನು ನೋಡಲಿಲ್ಲ.
ಅವಳು, “ನೀನು ಯಾರ ಹತ್ರ ಮಾತಾಡ್ತಿದ್ದದ್ದು” ಎಂದು ಕೇಳಿದಳು.
ಅವ್ರೇಲಿಯಾನೋ ಸೆಗುಂದೋ, “ಯಾರಿಲ್ಲ” ಎಂದ.
ಉರ್ಸುಲಾ, “ನಿಮ್ಮ ಮುತ್ತಜ್ಜ ಮಾಡ್ತಿದ್ದದ್ದೂ ಇದನ್ನೇ… ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ತಿದ್ದ” ಎಂದಳು.
ಈ ಮಧ್ಯೆ ಹೊಸೆ ಅರ್ಕಾದಿಯೋ ಸೆಗುಂದೋ ಶೂಟ್ ಮಾಡುವುದನ್ನು ನೋಡುವ ತನ್ನ ಅಪೇಕ್ಷೆಯನ್ನು ಪೂರೈಸಿಕೊಂಡ. ಒಂದೇ ಬಾರಿಗೆ ಆರು ಗುಂಡುಗಳ ಹೊಡೆತವನ್ನು, ಬೆಟ್ಟಗಳಿಂದ ಹೊರಟ ಪ್ರತಿಧ್ವನಿ, ಗುಂಡು ಹೊಡೆಸಿಕೊಂಡ ಮನುಷ್ಯನ ವಿಚಿತ್ರ ನಗು, ಗಲಿಬಿಲಿಗೊಂಡ ಕಣ್ಣುಗಳು, ರಕ್ತ ಸೋರಿ ಅವನ ಶರಟು ತೊಯ್ದ ಹೋಗಿದ್ದರೂ ನೆಟ್ಟಗೆ ನಿಂತಿದ್ದು, ಕಂಬದಿಂದ ಬಿಚ್ಚಿಟಾಗಲೂ ಇನ್ನೂ ನಗುತ್ತಿದ್ದದ್ದು ಮತ್ತು ಅವನನ್ನು ಸುಣ್ಣ ತುಂಬಿದ ಪೆಟ್ಟಿಗೆಯಲ್ಲಿ ಇಟ್ಟಿದ್ದನ್ನು ತನ್ನ ಇಡೀ ಜೀವನ ನೆನಪಿಟ್ಟುಕೊಳ್ಳುವಂತಾಯಿತು. ಅವನು, “ಅವನಿನ್ನೂ ಬದುಕಿದಾನೆ . . ಬದುಕಿದ್ದ ಹಾಗೇ ಅವನ್ನ ಹೂತು ಬಿಡ್ತಾರೆ” ಎಂದುಕೊಂಡ. ಅದು ಅವನ ಮೇಲೆ ಎಂತಹ ಪ್ರಭಾವ ಬೀರಿತೆಂದರೆ ಅಂದಿನಿಂದ ಮಿಲಿಟರಿ ಅಭ್ಯಾಸಗಳು ಮತ್ತು ಯುದ್ಧವನ್ನು ದ್ವೇಷಿಸತೊಡಗಿದ. ಏಕೆಂದರೆ ಮರಣದಂಡನೆ ವಿಧಿಸುವುದಕ್ಕಲ್ಲ. ಆದರೆ ಬದುಕಿದ್ದ ದುರ್ದೈವಿಗಳನ್ನು ಹೂಳುವ ಭಯಾನಕವಾದ ಪದ್ಧತಿಯಿಂದ. ಅವನು ಪ್ರಾರ್ಥನಾ ಸಭೆಯಲ್ಲಿ ಚರ್ಚಿನ ಗಂಟೆಗಳನ್ನು ಬಾರಿಸಿ, ಫಾದರ್ ಆಂಟೋನಿಯೋ ಇಸಬೆಲ್‌ಗೆ ನೆರವಾಗುವುದನ್ನು ಮತ್ತು ಅವನು ಪಾದ್ರಿಗಳ ಮನೆಯ ಅಂಗಳದಲ್ಲಿ ನಡೆಯುವ ಹುಂಜದ ಕಾಳಗದ ಉಸ್ತುವಾರಿಯನ್ನು ಯಾವಾಗ ಪ್ರಾರಂಭಿಸಿದನೆಂದು ಯಾರಿಗೂ ತಿಳಿದಿರಲಿಲ್ಲ. ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ಇದು ಗೊತ್ತಾದಾಗ ಉದಾರವಾದಿಗಳು ದ್ವೇಷಿಸುವ ಕೆಲಸವನ್ನು ಮಾಡುತ್ತಿರುವುದಕ್ಕಾಗಿ ಅವನನ್ನು ಕಟುವಾಗಿ ಬೈದ. ಅದಕ್ಕವನು, “ಈಗ ಆಗಿರೋದೇನು ಅಂದ್ರೆ, ನಾನು ಸಂಪ್ರದಾಯವಾದಿಯಾಗಿ ಬದಲಾಗಿದೀನಿ” ಎಂದ. ಅದು ವಿಧಿ ನಿಯಾಮಕವೇನೋ ಎನ್ನುವಂತೆ ಅದನ್ನು ನಂಬಿದ್ದ. ಅವಮಾನಿತನಾದ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಉರ್ಸುಲಾಗೆ ಅದರ ಬಗ್ಗೆ ಹೇಳಿದ.
ಅವಳು, “ಹಾಗಾಗೋದೇ ಒಳ್ಳೇದು. ಕೊನೆಗೆ ಅವ್ನು ಪಾದ್ರಿಯಾಗಿ ಅದರಿಂದ ಈ ಮನೆಗೆ ದೇವರು ಬರ್‍ತಾನೆ ಅಂತ ಆಸೆ ಇಟ್ಕೋಳ್ಳೋಣ” ಎಂದಳು.
ಫಾದರ್ ಆಂಟೋನಿಯೋ ಅವನನ್ನು ಮೊದಲನೆ ಸಂಸರ್ಗಕ್ಕೆ ಸಿದ್ಧಪಡಿಸುತ್ತಿದ್ದಾನೆಂದು ಬಹಳ ಬೇಗನೆ ಗೊತ್ತಾಯಿತು. ಕೋಳಿಗಳ ಕತ್ತನ್ನು ಶೇವ್ ಮಾಡುವಾಗ ಅವನಿಗೆ ಪ್ರಶ್ನೋತ್ತರ ಪಾಠ ಹೇಳಿಕೊಡುತ್ತಿದ್ದ. ಸರಳ ಉದಾಹರಣೆಗಳ ಮೂಲಕ ಅವನು ಕಾವು ಕೊಡುವ ಕೋಳಿಗಳನ್ನು ಗೂಡಿನಲ್ಲಿ ಇಡುತ್ತಿದ್ದಾಗ ಸೃಷ್ಟಿಯ ಎರಡನೆ ದಿನ ದೇವರಿಗೆ ಮೊಟ್ಟೆಯಲ್ಲಿ ಕೋಳಿ ಮರಿ ಆಗುವುದು ಹೇಗೆಂದು ಹೊಳೆದದ್ದನ್ನು ವಿವರಿಸಿದ. ಆ ಸಮಯದಿಂದ ಅವನು ಅರಳು ಮರಳಿನ ಚಿಹ್ನೆಗಳನ್ನು ತೋರಿಸಿದ. ಕೆಲವು ವರ್ಷಗಳ ನಂತರ ಮೋಸಮಾಡಿ, ತಾನು ಯಾರು ಎನ್ನುವುದನ್ನು ತೋರಿಸಿಕೊಳ್ಳದೆ, ಬಹುಶಃ ದೇವರ ವಿರುದ್ಧ ದೆವ್ವ ಜಯ ಸಾಧಿಸಿರಬೇಕೆಂದು ಹೇಳುವುದಲ್ಲದೆ, ನಿಜವಾಗಿಯೂ ಸ್ವರ್ಗದ ಸಿಂಹಾಸನದ ಮೇಲೆ ಕುಳಿತಿದ್ದಾಗಿ ಹೇಳಿದ. ತನ್ನ ಗುರು ಪಟ್ಟು ಹಿಡಿದಿದ್ದರಿಂದ ಉತ್ಸಾಹಗೊಂಡ ಹೊಸೆ ಅರ್ಕಾದಿಯೋ ಸೆಗುಂದೋ ಕೆಲವು ತಿಂಗಳುಗಳಲ್ಲಿ ಹುಂಜದ ಕಾಳಗದಲ್ಲಿನ ಉಪಾಯಗಳಲ್ಲಿ ಎಷ್ಟು ನಿಷ್ಣಾತನಾಗಿದ್ದನೋ ದೆವ್ವಗಳಿಗೆ ಗೊಂದಲ ಉಂಟುಮಾಡುವ ಸೂತ್ರ, ಮೀಮಾಂಸೆಯ ವಿಷಯದಲ್ಲೂ ಅಷ್ಟೇ ತಯಾರಾದ. ಅಮರಾಂತ ಅವನಿಗೆ ಹತಿಯ ಬಟ್ಟೆಯ ಸೂಟ್ ಹಾಗೂ ಕಾಲರ್, ಟೈ ಸಿದ್ಧಪಡಿಸಿ ಮತ್ತು ಜೊತೆಗೆ ಒಂದು ಜೊತೆ ಬಿಳಿಯ ಶೂ ತಂದುಕೊಟ್ಟಳು. ಅಲ್ಲದೆ ಕ್ಯಾಂಡಲ್‌ನ ರಿಬ್ಬನ್ ಮೇಲೆ ಮಿರುಗುವ ಅಕ್ಷರದಿಂದ ಅವನ ಹೆಸರನ್ನು ಮೂಡಿಸಿದಳು. ಮೊದಲನೆ ಸಂಸರ್ಗಕ್ಕೆ ಎರಡು ರಾತ್ರಿಗಳ ಮುಂಚೆ ಫಾದರ್ ಆಂಟೋನಿಯೋ ಪಾಪಗಳ ನಿಘಂಟಿನ ಸಹಾಯದಿಂದ ಅವನ ತಪ್ಪೊಪ್ಪಿಗೆಯನ್ನು ಕೇಳಲು ಚರ್ಚ್‌ನ ಉಗ್ರಾಣದಲ್ಲಿ ಕೂರಿಸಿಕೊಂಡ. ಆ ಪಟ್ಟಿ ಎಷ್ಟು ಉದ್ದವಾಗಿತ್ತೆಂದರೆ, ಸಾಮಾನ್ಯವಾಗಿ ಆರು ಗಂಟೆಗೆ ಮಲಗುವ ಅಭ್ಯಾಸವಿದ್ದ ಸಾಕಷ್ಟು ಮಯಸ್ಸಾಗಿದ್ದ ಆ ಪಾದ್ರಿ, ಆದು ಮುಗಿಯುವ ಮೊದಲೇ ಕುರ್ಚಿಯಲ್ಲೆ ನಿದ್ದೆ ಹೋದ. ಆ ಪ್ರಶ್ನಾವಳಿ ಹೊಸೆ ಅರ್ಕಾದಿಯೋ ಸೆಗುಂದೋಗೆ ಹೊಸ ಅರಿವಿಗೆ ಕಾರಣವಾಯಿತು. ಹೆಂಗಸರೊಂದಿಗೆ ಏನಾದರೂ ಕೆಟ್ಟ ಕೆಲಸಗಳನ್ನು ಮಾಡಿದ್ದೀಯಾ ಎಂದು ಪಾದ್ರಿ ಕೇಳಿದ್ದಕ್ಕೆ ಅವನಿಗೆ ಆಶ್ಚರ್ಯವಾಗಿರಲಿಲ್ಲ ಮತ್ತು ಅವನು ಪ್ರಾಮಾಣಿಕವಾಗಿ ಇಲ್ಲವೆಂದು ಉತ್ತರಿಸಿದ್ದ. ಆದರೆ ಅವನಿಗೆ ಪ್ರಾಣಿಗಳ ಜೊತೆ ಏನಾದರೂ ಮಾಡಿದ್ದೀಯಾ ಎಂದು ಕೇಳಿದ್ದರಿಂದ ರೇಗಿತು. ಕುತೂಹಲದಿಂದ ಹಿಂಸೆಗೊಳಗಾಗಿದ್ದ ಅವನು ಮೇ ತಿಂಗಳ ಮೊದಲನೆ ಶುಕ್ರವಾರ ಸಂಸರ್ಗವನ್ನು ಸ್ವೀಕರಿಸಿದ. ಅನಂತರ ಅವನು ಚರ್ಚ್‌ನ ಕಾಗದ ಪತ್ರಗಳ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಘಂಟಾಗೋಪುರದಲ್ಲಿ ವಾಸಮಾಡುತ್ತಿದ್ದ ಮತ್ತು ಅವರಿವರು ಹೇಳಿದಂತೆ ಬಾವಲಿಗಳನ್ನು ತಿಂದು ಜೀವಿಸುತ್ತಿದ್ದ ಪಿಯತ್ರೋನಿಯೋನನ್ನು ಅದರ ಬಗ್ಗೆ ಕೇಳಿದ. ಅದಕ್ಕೆ ಅವನು, “ಕೆಲವು ಭ್ರಷ್ಟ ಕ್ರಿಶ್ಚಿಯನ್ನರು ಹೆಣ್ಣು ಕತ್ತೆಗಳನ್ನಿಟ್ಟುಕೊಂಡು ವ್ಯಾಪಾರ ಮಾಡ್ತಾರೆ” ಎಂದ. ಹೊಸೆ ಅರ್ಕಾದಿಯೋ ಸೆಗುಂದೋ ಅದೆಷ್ಟು ಕುತೂಹಲ ವ್ಯಕ್ತಪಡಿಸಿದನೆಂದರೆ ಮತ್ತು ಎಷ್ಟೊಂದು ಪ್ರಶ್ನೆ ಕೇಳಿದನೆಂದರೆ ಪಿಯತ್ರೋನಿಯೋ ತಾಳ್ಮೆ ಕಳೆದುಕೊಂಡ.
ಅವನು, “ನಾನು ಪ್ರತಿ ಮಂಗಳವಾರ ಹೋಗ್ತೀನಿ” ಎಂದು ಒಪ್ಪಿಕೊಂಡವನು, “ನೀವು ಯಾರಿಗೂ ಹೇಳಲ್ಲ ಅಂದ್ರೆ ಮುಂದಿನ ಮಂಗಳವಾರ ನಿನ್ನನ್ನ ಕರ್‍ಕೊಂಡು ಹೋಗ್ತೀನಿ” ಎಂದ.
ನಿಜವಾಗಿಯೂ ಆ ನಂತರದ ಮಂಗಳವಾರ ಗೋಪುರದ ಕಟ್ಟಡದಿಂದ, ಅಲ್ಲಿಯ ತನಕ ಹೇಗೆ ಉಪಯೋಗಿಸಬೇಕೆಂದು ಯಾರಿಗೂ ತಿಳಿಯದಿದ್ದ ಸ್ಟೂಲೊಂದನ್ನು ತೆಗೆದುಕೊಂಡು ಬಂದ ಮತ್ತು ಹೊಸೆ ಅರ್ಕಾದಿಯೋ ಸೆಗುಂದೋನನ್ನು ಹತ್ತಿರದ ಗೋಮಾಳಕ್ಕೆ ಕರೆದುಕೊಂಡು ಹೋದ. ಅಲ್ಲಿ ರಾತ್ರಿ ನಡೆಯುವ ಚಟುವಟಿಕೆಗಳಿಂದ ಆ ಹುಡುಗನ ಮೇಲೆ ಎಷ್ಟು ಪ್ರಭಾವ ಬೀರಿತ್ತೆಂದರೆ, ಬಹಳ ದಿನಗಳಾದ ಮೇಲೆ ಅವನು ಕತಾವುರೆಯ ಅಂಗಡಿನಲ್ಲಿ ಕಾಣಿಸಿಕೊಂಡ. ಅವನು ಹುಂಜದ ಕಾಳಗದ ಮನುಷ್ಯನಾz. ಅವನು ಮೊದಲನೆಯ ಸಲ ಕಾದಾಡುವ ಅವುಗಳನ್ನು ಮನೆಗೆ ತಂದಾಗ ಉರ್ಸುಲಾ, “ಅವನ್ನ ಬೇರೆ ಎಲ್ಲಾದ್ರೂ ತೊಗೊಂಡು ಹೋಗು. ಅವು ಈ ಮನೆಗೆ ಸಾಕಷ್ಟು ಅನಾಹುತ ಮಾಡಿವೆ. ನೀನು ತಂದು ಇನ್ನೂ ಹೆಚ್ಚಾಗೋದು ಬೇಡ” ಎಂದಳು. ಹೊಸೆ ಅರ್ಕಾದಿಯೋ ಸೆಗುಂದೋ ಏನೂ ಮಾತಾಡದೆ ತೆಗೆದುಕೊಂಡು ಹೋದ ಮತ್ತು ಅವನ ಅಜ್ಜಿ ಪಿಲರ್ ಟೆರ್‍ನೆರಾಳ ಮನೆಯಲ್ಲಿ ಅವುಗಳನ್ನು ಬೆಳೆಸಲು ಮುಂದುವರಿಸಿದ. ಅವಳು ಅವನು ತನ್ನ ಮನೆಯಲ್ಲಿ ಇರುವುದಕ್ಕಾಗಿ ಅವನಿಗೆ ಅಗತ್ಯವಾದದ್ದನ್ನೆಲ್ಲ ಕೊಟ್ಟಳು. ಅವನು ಬೇಗನೆ ಫಾದರ್ ಆಂತೋನಿಯೋ ಇಸಬೆಲ್ ಕಲಿಸಿಕೊಟ್ಟದ್ದನ್ನು ಹುಂಜದ ಕಾಳಗದಲ್ಲಿ ಪ್ರದರ್ಶಿಸಿದ ಮತ್ತು ಅವನು ಅವುಗಳನ್ನು ವೃದ್ಧಿಸುವುದಕ್ಕೆ ಹಾಗೂ ಸಮಾಧಾನವಾಗುವಷ್ಟು ಬೇಕಾಗುವಷ್ಟು ಹಣವನ್ನು ಸಂಪಾದಿಸಿದ. ಆ ಸಮಯದಲ್ಲಿ ಉರ್ಸುಲಾ ಅವನನ್ನು ಅವನ ಸೋದರನೊಂದಿಗೆ ಹೋಲಿಸಿದಳು ಮತ್ತು ಅವಳಿಗೆ ಚಿಕ್ಕಂದಿನಲ್ಲಿ ಒಂದೇ ತೆರನಾಗಿ ಕಂಡಿದ್ದ ಅವಳಿ ಮಕ್ಕಳು, ಕೊನೆಗೆ ಹಾಗೆ ವ್ಯತ್ಯಾಸಗೊಂಡದ್ದು ಹೇಗೆ ಎಂದು ಅರ್ಥವಾಗಲಿಲ್ಲ. ಅವಳ ಅನುಮಾನ ಬಹಳ ಕಾಲ ಉಳಿಯಲಿಲ್ಲ. ಏಕೆಂದರೆ ಬಹಳ ಬೇಗ ಅವ್ರೇಲಿಯಾನೋ ಸೆಗುಂದೋ ಸೋಮಾರಿತನದ ಹಾಗೂ ಹಾಳಾಗುವ ಸೂಚನೆಗಳನ್ನು ತೋರಿಸಲು ಪ್ರಾರಂಭಿಸಿದ. ಮೆಲ್‌ಕಿಯಾದೆಸ್‌ನ ರೂಮಿನಲ್ಲಿ ಇರುವಾಗ ಅವನು, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಹರೆಯದಲ್ಲಿ ಮಾಡಿದಂತೆ ತನ್ನಷ್ಟಕ್ಕೆ ತಾನು ಇದ್ದು ಬಿಡುತ್ತಿದ್ದ. ಆದರೆ ನೀರ್ಲಾಂದಿಯ ಒಪ್ಪಂದವಾದ ಸ್ವಲ್ಪ ಸ;ಮಯದಲ್ಲಿಯೇ ಒಂದು ಘಟನೆ ತನ್ನಷ್ಟಕ್ಕೆ ತಾನಿದ್ದ ಅವನನ್ನು ಹೊರಗೆಳೆದು, ಪ್ರಪಂಚದ ವಾಸ್ತವವನ್ನು ಎದುರಿಸುವಂತೆ ಮಾಡಿತು. ಅಕಾರ್ಡಿಯನ್ ಗೆಲ್ಲುವುದಕ್ಕೊಸ್ಕರ ಲಾಟರಿ ಟಿಕೇಟುಗಳನ್ನು ಮಾರುತ್ತಿದ್ದ ಹುಡುಗಿಯೊಬ್ಬಳು ತುಂಬ ಆತ್ಮೀಯತೆಯಿಂದ ಅವನನ್ನು ಸ್ವಾಗತಿಸಿ ಮಾತನಾಡಿಸಿದಳು. ಸಾಮಾನ್ಯವಾಗಿ ತನ್ನ ಸೋದರನೆಂದು ಭಾವಿಸುತ್ತಿದ್ದರಿಂದ ಅವ್ರೇಲಿಯಾನೋ ಸೆಗುಂದೋಗೆ ಆಶ್ಚರ್ಯವಾಗಲಿಲ್ಲ. ಅವಳು ಅವನನ್ನು ಪ್ರಭಾವಿಸಲು ಉಮ್ಮಳಿಸಿದರೂ ಅವನು ಉಂಟಾದ ತಪ್ಪನ್ನು ಬಗೆಹರಿಸಲಿಲ್ಲ. ಕೊನೆಗೆ ಅವಳು ಅವನನ್ನು ರೂಮಿಗೆ ಕರೆದುಕೊಂಡು ಹೋದಳು. ಅವಳು ಅವನನ್ನು ಮೊದಲನೆ ಬಾರಿಗೆ ಎಷ್ಟು ಇಷ್ಟಪಟ್ಟಳೆಂದರೆ ಅಕಾರ್ಡಿಯನ್ ಗೆಲ್ಲಲು ಅಗತ್ಯವಾದ ಸಿದ್ಧತೆ ಮಾಡಿದಳು. ಎರಡು ವಾರದ ಕೊನೆಯಲ್ಲಿ ಅವ್ರೇಲಿಯಾನೋ ಸೆಗುಂದೋಗೆ ಆ ಹೆಂಗಸು ತನ್ನನ್ನ ಮತ್ತು ತನ್ನ ಸೋದರನನ್ನು ಒಬ್ಬನೇ ವ್ಯಕ್ತಿ ಎಂದುಕೊಂಡು ಇಬ್ಬರ ಜೊತೆಗೂ ಮಲಗುತ್ತಿದ್ದಾಳೆ ಎಂದು ಗೊತ್ತಾಯಿತು. ಅವನು ಪರಿಸ್ಥಿತಿಯನ್ನು ನಿವಾರಣೆ ಮಾಡುವುದರ ಬದಲು ಅದನ್ನೇ ಮುಂದುವರಿಸುವುದಕ್ಕೆ ಏರ್ಪಾಡು ಮಾಡಿಕೊಂಡ. ಅವನು ಮೇಲ್‌ಕಿಯಾದೆಸ್‌ನ ರೂಮಿಗೆ ವಾಪಸಾಗಲಿಲ್ಲ. ಅವನು ಅಂಗಳದಲ್ಲಿ ಮಧ್ಯಾಹ್ನದ ಹೊತ್ತು ಉರ್ಸುಲಾ ಕೂಗಾಡುತ್ತಿದ್ದರೂ ಬಿಡದೆ ಕಿವಿಯ ಹತ್ತಿರ ಇಟ್ಟುಕೊಂಡು ಅಕಾರ್ಡಿಯನ್ ಕಲಿಯುತ್ತಿದ್ದ. ಅವಳು ಸೂತಕವಿದ್ದದ್ದರಿಂದ ಮನೆಯಲ್ಲಿ ಸಂಗೀತವನ್ನು ನಿಷೇಧಿಸಿದ್ದಳಲ್ಲದೆ ಅಕಾರ್ಡಿಯನ್ ವಾದ್ಯವನ್ನೆ ಇಷ್ಟಪಡz, ಅದು ಫ್ರಾನ್ಸಿಸ್ಕೋನ ಅಲೆಮಾರಿ ಸಂತತಿಯವರಿಗೆ ಮಾತ್ರ ಯೋಗ್ಯ ಎಂದು ಪರಿಗಣಿಸಿದ್ದಳು. ಆದರೂ ಅವ್ರೇಲಿಯಾನೋ ಸೆಗುಂದೋ ಅಕಾರ್ಡಿಯನ್ ನುಡಿಸುವುದರಲ್ಲಿ ನಿಪುಣನಾz. ಅಲ್ಲದೆ ಮದುವೆಯಾಗಿ ಮಕ್ಕಳಾದರೂ ಹಾಗೆಯೇ ಇದ್ದ ಮತ್ತು ಮಕೋಂದೋದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದ.
ಸುಮಾರು ಎರಡು ತಿಂಗಳ ಕಾಲ ಅವನು ತನ್ನ ಸೋದರನ ಜೊತೆಗೆ ಅವಳನ್ನು ಹಂಚಿಕೊಂಡ. ರಾತ್ರಿ ಹೊತ್ತು ತನ್ನ ಅವಳಿ ಸೋದರ ತಮ್ಮಿಬ್ಬರಿಗೂ ಇದ್ದ ಒಬ್ಬಳೇ ಪ್ರೇಯಸಿಯ ಬಳಿಗೆ ಹೋಗುವುದಿಲ್ಲವೆಂದು ಸರಿಯಾಗಿ ಗಮನಿಸಿ, ಖಚಿತಪಡಿಸಿಕೊಂಡು, ಅವಳ ಜೊತೆ ಮಲಗುತ್ತಿದ್ದ. ಅದೊಂದು ದಿನ ಅವನಿಗೆ ಕಾಯಿಲೆಯಾಗಿರುವುದನ್ನು ಕಂಡ. ಎರಡು ದಿನಗಳ ನಂತರ ಅವನ ಸೋದರ ಬಚ್ಚಲು ಮನೆಯ ಕಂಬವನ್ನು ಹಿಡಿದುಕೊಂಡು, ಬೆವರಿನಿಂದ ತೊಯ್ದು ಹೋಗಿ ಕಣ್ಣೀರಿಡುತ್ತಿದ್ದುದು ಕಾಣಿಸಿತು. ಅದು ಅನಂತರ ಅವನಿಗೆ ಅರ್ಥವಾಯಿತು. ಆಯಸ್ಸು ಕಡಿಮೆ ಆಗುವಂಥ ಕಾಯಿಲೆ ಕೊಟ್ಟಿದ್ದಾನೆಂದು ತಿಳಿದ ಆ ಹೆಂಗಸು, ಅವನನ್ನು ಕಳಿಸಿಬಿಟ್ಟಳೆಂದು ಅವನ ಸೋದರ ಹೇಳಿದ. ಅಲ್ಲದೆ ಪಿಲರ್ ಟೆರ್‍ನೆರಾ ಅವನನ್ನು ಗುಣಪಡಿಸುವುದಕ್ಕೆ ಪ್ರಯತ್ನಿಸುತ್ತಿದ್ದಾಳೆಂದೂ ಹೇಳಿದ. ಅವ್ರೇಲಿಯಾನೋ ಸೆಗುಂದೋ ರಹಸ್ಯವಾಗಿ ರಾಸಾಯನಿಕದ ಮತ್ತು ಹೆಚ್ಚು ಉಚ್ಚೆ ಹೊಯ್ಯುವಂತೆ ಮಾಡುವ ನೀರಿನಲ್ಲಿ ಸ್ನಾನ ಮಾಡುತ್ತಿದ್ದ. ಮೂರು ತಿಂಗಳ ಗುಪ್ತ ಯಾತನೆಯ ನಂತರ ಇಬ್ಬರೂ ಪ್ರತ್ಯೇಕವಾಗಿ ಗುಣ ಹೊಂದಿದರು. ಹೊಸೆ ಅರ್ಕಾದಿಯೋ ಸೆಗುಂದೋ ಮತ್ತೆ ಆ ಹೆಂಗಸನ್ನು ನೋಡಲಿಲ್ಲ. ಅವ್ರೇಲಿಯಾನೋ ಸೆಗುಂದೋ ಅವಳ ಕ್ಷಮೆ ಕೇಳಿ ಸಾಯುವ ತನಕ ಅವಳ ಜೊತೆಗಿದ್ದ.
ಅವಳ ಹೆಸರು ಪೆತ್ರಾ ಕೊತೆಸ್. ಅವಳು ಆಕಸ್ಮಿಕವಾಗಿ ದೊರಕಿದ ಲಾಟರಿ ವ್ಯಾಪಾರದ ಗಂಡನ ಜೊತೆ ಯುದ್ಧದ ಮಧ್ಯದಲ್ಲಿ ಮಕೋಂದೋಗೆ ಬಂದಿದ್ದಳು ಮತ್ತು ಅವನು ಸತ್ತಾಗ ವ್ಯಾಪಾರವನ್ನು ಮುಂದುವರಿಸಿದ್ದಳು. ಅವಳು ಐರೋಪ್ಯ ಮತ್ತು ನೀಗ್ರೋದ ಮಿಶ್ರ ಸಂತಾನದ ಯುವತಿಯಾಗಿದ್ದಳು. ಹಳದಿ ಬಾದಾಮಿ ಆಕಾರದ ಅವಳ ಕಣ್ಣುಗಳು ಅವಳ ಮುಖಕ್ಕೆ ಚಿರತೆಯ ರೌದ್ರತೆಯನ್ನು ಕೊಟ್ಟಿತ್ತು. ಅವಳು ವಿಶಾಲ ಹೃದಯಿಯಾಗಿದ್ದಳು ಹಾಗೂ ಪ್ರಣಯಕ್ಕೆ ಅದ್ಭುತವಾದ ಪ್ರೇರಣೆ ಕೊಡುವಂಥವಳಾಗಿದ್ದಳು. ಹೊಸೆ ಅರ್ಕಾದಿಯೋ ಸೆಗುಂದೋ ಹುಂಜದ ಕಾಳಗದ ಮನುಷ್ಯನಾಗಿ ಮತ್ತು ಅವ್ರೇಲಿಯಾನೋ ಸೆಗುಂದೋ ಅವನು ಇಟ್ಟುಕೊಂಡವಳ ಮನೆಯ ಗದ್ದಲದ ಪಾರ್ಟಿಗಳಲ್ಲಿ ಅಕಾರ್ಡಿಯನ್ ನುಡಿಸುತ್ತಿದ್ದಾನೆಂದು ಉರ್ಸುಲಾಗೆ ಅರಿವಾದಾಗ, ಅವಳು ತನಗೆ ಹುಚ್ಚು ಹಿಡಿಯುತ್ತದೆ ಎಂದುಕೊಂಡಳು. ಸಂಸಾರದ ಯಾವ ಸುಗುಣಗಳಿಲ್ಲದೆ ದುರ್ಗುಣಗಳು ಮಾತ್ರ ಅವರಲ್ಲಿ ತುಂಬಿಕೊಂಡಂತಿತ್ತು. ಅವಳು ಆಗ ಯಾರಿಗೂ ಅವ್ರೇಲಿಯಾನೋ ಅಥವಾ ಹೊಸೆ ಅರ್ಕಾದಿಯೋ ಎಂದು ಹೆಸರಿಡುವುದಿಲ್ಲವೆಂದು ನಿರ್ಧರಿಸಿದಳು. ಆದರೆ ಅವ್ರೇಲಿಯಾನೋ ಸೆಗುಂದೋಗೆ ಮೊದಲ ಗಂಡು ಮಗುವಾದಾಗ ಅವನ ಇಚ್ಛೆಯ ವಿರುದ್ಧ ಹೋಗಲು ಧೈರ್ಯವಾಗಲಿಲ್ಲ.
ಅವಳು, “ಆಗಲಿ ಆದರೆ ಒಂದು ಷರತ್ತು: ಅವನನ್ನ ನಾನು ಬೆಳೆಸ್ತೀನಿ” ಎಂದಳು.
ಅವಳಿಗೆ ಆಗಲೆ ನೂರು ವರ್ಷವಾಗಿ ಕಣ್ಣಿನ ಪೊರೆಯಿಂದ ಕುರುಡಾಗುವ ಹಂತಕ್ಕೆ ಬಂದಿದ್ದರೂ ಇನ್ನೂ ದೈಹಿಕ ಸಾಮರ್ಥ್ಯ, ಸದೃಢ ಸ್ವಭಾವ ಮತ್ತು ಮನಸ್ಥಿತಿ ಸ್ತಿಮಿತವಾಗಿತ್ತು. ಸಂಸಾರದ ಘನತೆಯನ್ನು ಮರುಸ್ಥಾಪಿಸುವ ಯಾವ ಗುಣವಂತನಿಗೇ ಆಗಲಿ ಅವಳಿಗಿಂತ ಚೆನ್ನಾಗಿ ಯುದ್ಧದ ಬಗ್ಗೆ, ಕಾದಾಡುವ ಹುಂಜದ ಬಗ್ಗೆ, ಕೆಟ್ಟ ಹೆಂಗಸರ ಬಗ್ಗೆ ಅಥವಾ ಅತಿರೇಕದ ಕೆಲಸಗಳ ಬಗ್ಗೆ, ವಿಪತ್ತುಗಳ ಬಗ್ಗೆ, ಎಂದೂ ಕೇಳಿರದ ಹಾಗೆ ರೂಪುಕೊಡಲು ಸಾಧ್ಯವಾಗುತ್ತಿರಲಿಲ್ಲ ಆ ವಿಪತ್ತುಗಳೆ ಅವರು ದಾರಿ ತಪ್ಪಲು ಕಾರಣವಾಗಿದ್ದವು. ಅವಳು ಭರವಸೆಯಿಂದ, “ಇವನೊಬ್ಬ ಪಾದ್ರಿಯಾಗ್ತಾನೆ” ಎಂದವಳು ಗಂಭೀರಳಾಗಿ, “ದೇವರು ನಂಗೆ ಆಯಸ್ಸು ಕೊಟ್ರೆ ಅವನೊಂದು ದಿನ ಪೋಪ್ ಆಗೋದನ್ನ ನೋಡ್ತೀನಿ” ಎಂದಳು. ಅವಳು ಹಾಗೆ ಹೇಳಿದ್ದನ್ನು ಕೇಳಿ ರೂಮಿನಲ್ಲಿ ಇದ್ದವರಷ್ಟೇ ಅಲ್ಲ ಮನೆಯೊಳಗೆಲ್ಲ ಸೇರಿದ್ದ ಅವ್ರೇಲಿಯಾನೋ ಸೆಗುಂದೋನ ರೌಡಿ ಸ್ನೇಹಿತರೂ ಕೂಡ ನಕ್ಕರು. ಹಳೆಯ ನೆನಪುಗಳ ಅಟ್ಟಕ್ಕೆ ಸೇರಿಸಿದ್ದ ಯುದ್ಧವನ್ನು ಶಾಂಪೇನ್ ಬಾಟಲುಗಳ ಮುಚ್ಚಳ ಎಗರಿಸುವುದರೊಂದಿಗೆ ಮತ್ತೆ ನೆನಪಿಸಿಕೊಂಡರು.
ಅವ್ರೇಲಿಯಾನೋ ಸೆಗುಂದೋ, “ಪೋಪ್‌ನ ಆರೋಗ್ಯಕ್ಕಾಗಿ” ಎಂದು ಗ್ಲಾಸ್ ಎತ್ತಿದ. ಅತಿಥಿಗಳು ಅವನ ಜೊತೆ ದನಿಗೂಡಿಸಿದರು. ನಂತರ ಮನೆಯಾತ ಆಕಾರ್ಡಿಯನ್ ನುಡಿಸಿದ, ಪಟಾಕಿಗಳನ್ನು ಹಚ್ಚಿದರು ಮತ್ತು ಇಡೀ ಊರಿನಲ್ಲಿ ಡೋಲು ಬಾರಿಸಿ ಸಂಭ್ರಮಿಸಿದರು. ಕಂಠಮಟ್ಟ ಶಾಂಪೇನ್ ಕುಡಿದ ಅತಿಥಿಗಳು ಬೆಳಿಗ್ಗೆ ಆರು ಹಸುಗಳನ್ನು ಬಲಿಕೊಟ್ಟರು ಮತ್ತು ಅವುಗಳನ್ನು ನೆರೆದವರೆಲ್ಲ ತೆಗೆದುಕೊಂಡು ಹೋಗಲೆಂದು ರಸ್ತೆಯಲ್ಲಿ ಇಟ್ಟರು. ಯಾರಿಗೂ ಬೇಸರವಾಗಲಿಲ್ಲ. ಅವ್ರೇಲಿಯಾನೋ ಸೆಗುಂದೋ ಮನೆಯನ್ನು ನೋಡಿಕೊಳ್ಳುವುದಕ್ಕೆ ಪ್ರಾರಂಭಮಾಡಿದ ಸಮಯದಿಂದ ಅಂಥ ಸಮಾರಂಭಗಳು ‘ಪೋಪ್\’ ಹುಟ್ಟಿದನೆಂಬ ರೀತಿಯ ಸಮಂಜಸವಾದ ಕಾರಣದಿಂದ ಸಾಮಾನ್ಯವಾಗಿದ್ದವು. ಅವನು ಕೆಲವೇ ವರ್ಷಗಳಲ್ಲಿ ಕೇವಲ ಅದೃಷ್ಟದಿಂದ, ಅಲೌಕಿಕವಾದ ಪ್ರಾಣಿಗಳ ಸಂತಾನಾಭಿವೃದ್ಧಿಯ ಫಲವಾಗಿ, ಆ ಜೌಗು ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಆಸ್ತಿವಂತರಲ್ಲಿ ಒಬ್ಬನಾದ. ಅವನ ಹೆಣ್ಣು ಕುದುರೆಗಳು ಮೂರಕ್ಕೆ ಜನ್ಮ ಕೊಡುತ್ತಿದ್ದವು. ಕೋಳಿಗಳು ದಿನಕ್ಕೆ ಎರಡು ಸಲ ಮೊಟ್ಟೆ ಇಡುತ್ತಿದ್ದವು. ಮಾಟ ಮಾಡುವುದನ್ನು ಬಿಟ್ಟರೆ ಬೇರೆ ಯಾವ ರೀತಿಯಿಂದ ವಿವರಿಸಲು ಸಾಧ್ಯವಾಗದ ಹಾಗೆ, ಅವನ ಹಂದಿಗಳು ಎರ್ರಾ ಬಿರ್ರಿ ವೇಗವಾಗಿ ಮೈಯಿನ ಕೊಬ್ಬು ಹೆಚ್ಚಿಸಿಕೊಳ್ಳುತ್ತಿದ್ದವು. ಉರ್ಸುಲಾ ತನ್ನ ಮೊಮ್ಮಗನಿಗೆ, “ಈಗ ಒಂದಿಷ್ಟನ್ನು ಉಳಿತಾಯ ಮಾಡು, ಈ ಅದೃಷ್ಟ ಇಡೀ ಜೀವಮಾನ ಇರಲ್ಲ” ಎಂದಳು. ಆದರೆ ಅವ್ರೇಲಿಯಾನೋ ಸೆಗುಂದೋ ಅವಳ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಅವನು ಅವನ ಸ್ನೇಹಿತರಿಗೆ ಶಾಂಪೇನ್ ಕುಡಿಸಿದಷ್ಟು ಅವನ ಪ್ರಾಣಿಗಳು ಹೆಚ್ಚು ಹೆಚ್ಚು ಮರಿ ಹಾಕುತ್ತಿದ್ದವು ಮತ್ತು ತನ್ನ ಅದೃಷ್ಟಕ್ಕೆ ತಾನು ನಡೆಸುತ್ತಿದ್ದಕ್ಕಿಂತಲೂ, ಇಟ್ಟುಕೊಂಡಿದ್ದ ಪೆತ್ರಾ ಕೊತೆಸ್‌ಳ ಪ್ರೇಮಕ್ಕೆ, ಸಹಜ ಪ್ರಕೃತಿಯನ್ನೇ ತೀವ್ರಗೊಳಿಸುವ ಪ್ರಭಾವವಿದೆ ಎಂದು ಅವನು ನಂಬಿದ್ದ. ತನ್ನ ಸಂಪತ್ತಿಗೆ ಅದೇ ಮೂಲ ಎಂದು ಅವನೆಷ್ಟು ನಂಬಿದ್ದನೆಂದರೆ ಅವನು ಸಂತಾನೋತ್ಪತ್ತಿಯ ಸ್ಥಳದಿಂದ ಪಿಯತ್ರೋ ಕೊತೆಸ್‌ಳನ್ನು ಎಂದೂ ದೂರವಿಡಲಿಲ್ಲ. ಅವನಿಗೆ ಮದುವೆಯಾಗಿ ಮಕ್ಕಳಾದರೂ ಫೆರ್‍ನಾಂಡಳ ಒಪ್ಪಿಗೆಯಿಂದ ಅವಳ ಸಂಗ ಹೊಂದಿದ್ದ. ಅವನ ಅಜ್ಜಂದಿರ ಹಾಗೆ ಭಾರಿ ಮೈಕಟ್ಟಿನ ಮತ್ತು ಅವರಿಗೆ ಇರದಿದ್ದ ಹಾಸ್ಯ ಮನೋಭಾವವನ್ನು ಹೊಂದಿದ್ದ ಅವ್ರೇಲಿಯಾನೋ ಸೆಗುಂದೋಗೆ ಪ್ರಾಣಿಗಳನ್ನು ನೋಡಿಕೊಳ್ಳಲು ಏನೂ ಸಮಯವಿರಲಿಲ್ಲ. ಅವನಿಗೆ ಪ್ರಾಣಿಗಳ ಸಂತಾನೋತ್ಪತ್ತಿ ಸ್ಥಳಕ್ಕೆ ಪಿಯತ್ರೋ ಕೊತೆಸ್‌ಳನ್ನು ಕರೆದುಕೊಂಡು ಹೋಗಿ, ಅತಿ ಸಂತಾನೋತ್ಪತ್ತಿಗಾಗಿ ಪ್ರತಿಯೊಂದು ಪ್ರಾಣಿಯ ಮೇಲೆ ಗುರುತು ಮಾಡಿಸುವುದಷ್ಟೆ ಕೆಲಸವಾಗಿತ್ತು.
ಅವನ ದೀರ್ಘ ಜೀವನದಲ್ಲಿ ಸಂಭವಿಸಿದ ಒಳ್ಳೆಯ ಸಂಗತಿಗಳಂತೆ ಅವನ ಆಗಾಧ ಸಂಪತ್ತಿನ ಮೂಲ ದೊರಕಿದ ಅವಕಾಶದಲ್ಲಾಗಿತ್ತು. ಯುದ್ಧ ಮುಗಿಯುವ ತನಕ ಲಾಟರಿಯಿಂದ ಬಂದ ವರಮಾನದಿಂದ ಪೆತ್ರಾ ಕೊತೆಸ್ ತನ್ನನ್ನು ತಾನು ನೋಡಿಕೊಳ್ಳುತ್ತಿದ್ದಳು ಮತ್ತು ಅವ್ರೇಲಿಯಾನೋ ಸೆಗುಂದೋ ಕಾಲಕಾಲಕ್ಕೆ ಉರ್ಸುಲಾಳ ಉಳಿತಾಯವನ್ನು ಕಬಳಿಸುತ್ತಿದ್ದ. ಅವರು ತಿಳಿಗೇಡಿಗಳಾಗಿದ್ದು, ನಿಷಿದ್ಧವಾದ ದಿನಗಳೂ ಸೇರಿದಂತೆ, ಪ್ರತಿದಿನವೂ ಒಟ್ಟಿಗೆ ಮಲಗುವುದನ್ನು ಬಿಟ್ಟರೆ, ಬೇರೆ ಯಾವ ಪೇಚಾಟವೂ ಇರಲಿಲ್ಲ. ಉರ್ಸುಲಾ, “ನೀನು ಹಾಳಾಗಕ್ಕೆ ಆ ಹೆಂಗಸೇ ಕಾರಣ” ಎಂದು ನಿದ್ದೆಯಲ್ಲಿ ನಡೆಯುವನಂತೆ ಮನೆಗೆ ಬರುತ್ತಿದ್ದ ತನ್ನ ಮರಿಮಗನನ್ನು ನೋಡಿ ಹೇಳುತ್ತಿದ್ದಳು. ಅಲ್ಲದೆ, “ಅವ್ಳು ನಿಂಗೆ ಮೋಡಿ ಹಾಕ್ಬಿಟ್ಟಿದಾಳೆ. ಹೀಗೇ ಆದ್ರೆ ಕಾಡುಗಪ್ಪೆ ಹೊಕ್ಕವರ ಹಾಗೆ ಹೊಟ್ಟೆ ನೋವಿಂದ ಒದ್ದಾಡಬೇಕಾಗತ್ತಷ್ಟೆ” ಎಂದಳು. ತನಗೆ ಮೋಸವಾಗಿದೆಯೆಂದು ತಿಳಿದುಕೊಳ್ಳಲು ಬಹಳ ಸಮಯ ತೆಗೆದುಕೊಂಡ ಹೊಸೆ ಅರ್ಕಾದಿಯೋ ಸೆಗುಂದೋಗೆ ತನ್ನ ಸೋದರನ ಮೋಹ ಅರ್ಥವಾಗಲಿಲ್ಲ. ಅವನಿಗೆ ಗೊತ್ತಿದ್ದಂತೆ ಪೆತ್ರಾ ಕೊತೆಸ್ ಒಬ್ಬ ಸಾಧಾರಣ ಹೆಂಗಸು. ಹಾಸಿಗೆಯಲ್ಲಿ ಸಾಕಷ್ಟು ಸೋಮಾರಿ ಮತ್ತು ಪ್ರಣಯದಲ್ಲಿ ಹೊಸ ಬಗೆಯ ಕಲ್ಪನೆ ಇಲ್ಲದವಳು. ಉರ್ಸುಲಾಳ ಕೂಗಾಟಕ್ಕೆ ಮತ್ತು ಅವನ ಸೋದರನ ಕೀಟಲೆಗೆ ಕಿವುಡಾಗಿ ಆ ಸಮಯದಲ್ಲಿ ಅವ್ರೇಲಿಯಾನೋ ಸೆಗುಂದೋ ಪೆತ್ರಾ ಕೋತಸ್‌ಳಿಗೆ ಒಂದು ಮನೆಮಾಡಿಕೊಟ್ಟು, ಅದನ್ನು ನಿಭಾಯಿಸುವಂಥ ವ್ಯಾಪಾರವನ್ನು ಹುಡುಕುವುದಷ್ಟೇ ಕೆಲಸವಾಗಿತ್ತು ಮತ್ತು ಒಂದು ದಿನ ಕಾಮದ ಜ್ವರದಲ್ಲಿ ಅವಳ ಮೇಲೋ ಅಥವಾ ಕೆಳಗೋ ಸಾಯುವುದಷ್ಟೇ ಮನಸ್ಸಿನಲ್ಲಿತ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ವರ್ಕ್‌ಶಾಪನ್ನು ಮತ್ತೆ ತೆರೆದಾಗ ಅವನ ಹೆಚ್ಚಿನ ವಯಸ್ಸಿನ ಪ್ರಶಾಂತತೆಯ ಸೊಬಗಿಗೆ ಮಾರು ಹೋಗಿ, ಅವ್ರೇಲಿಯಾನೋ ಸೆಗುಂದೋಗೆ ಸಣ್ಣ ಬಂಗಾರದ ಮೀನುಗಳನ್ನು ಮಾಡುವ ಉದ್ಯೋಗವೇ ಒಳ್ಳೆಯದೆಂದು ಭಾವಿಸಿದ. ಕರ್ನಲ್ ಲೋಹದ ಶೀಟುಗಳ ಸಂಗಡ ಭ್ರಾಂತಿಯುಕ್ತನಾಗಿ ತಾಳ್ಮೆಯಿಂದ ಕೆಲಸ ಮಾಡಿ ಅವು ನಿಧಾನವಾಗಿ ಬಂಗಾರದ ಹೆಕ್ಕಳಗಳಾಗುತ್ತಿದ್ದನ್ನು ಅನೇಕ ಗಂಟೆಗಳ ಕಾಲ ನೋಡಿದ. ಅವನಿಗೆ ಆ ಕೆಲಸ ಶ್ರಮ ವಹಿಸಬೇಕಾದದ್ದೆಂದು ಕಂಡಿತು ಮತ್ತು ಪಿಯತ್ರೋ ಕೊತೆಸ್‌ಳ ಬಗ್ಗೆ ಆಲೋಚನೆ ಎಷ್ಟು ಮೇಲಿಂದ ಮೇಲೆ ಒತ್ತಡ ಹೇರಿತ್ತೆಂದರೆ ಮೂರು ವಾರದ ನಂತರ ಅವನು ವರ್ಕ್‌ಶಾಪ್‌ನಿಂದ ಕಾಣೆಯಾದ. ಆ ಅವಧಿಯಲ್ಲಿಯೇ ಪೆತ್ರಾ ಕೊತೆಸ್‌ಗೆ ಮೊಲಗಳ ಲಾಟರಿ ಬಗ್ಗೆ ಹೊಳೆದದ್ದು. ಅವುಗಳ ಸಂತಾನೋತ್ಪತ್ತಿ ಮತ್ತು ಬೆಳವಣಿಗೆ ತೀರ ಹೆಚ್ಚಿನ ಗತಿಯಲ್ಲಿದ್ದು, ಲಾಟರಿ ಟಿಕೆಟ್ಟುಗಳನ್ನು ಮಾರುವುದಕ್ಕೇ ಸಮಯ ಸಿಗುತ್ತಿರಲಿಲ್ಲ. ಪ್ರಾರಂಭದಲ್ಲಿ ಅವ್ರೇಲಿಯಾನೋ ಸೆಗುಂದೋ ಅವುಗಳ ಸಂತಾನೋತ್ಪತ್ತಿಯ ಅಗಾಧ ಪ್ರಮಾಣವನ್ನು ಗಮನಿಸಲಿಲ್ಲ. ಒಂದು ರಾತ್ರಿ ಊರಿನಲ್ಲಿ ಯಾರೂ ಮೊಲದ ಲಾಟರಿ ಬಗ್ಗೆ ಇನ್ನು ಕೇಳುವುದಕ್ಕೆ ಇಷ್ಟವಿರದಿದ್ದಾಗ, ಅಂಗಳದ ಬಾಗಿಲಲ್ಲಿ ಸದ್ದೊಂದು ಅವನಿಗೆ ಕೇಳಿಸಿತು. ಪೆತ್ರಾ ಕೊತೆಸ್, “ಏನೂ ಯೋಚ್ನೆ ಮಾಡ್ಬೇಡಿ, ಅವು ಮೊಲ” ಎಂದಳು. ಅವುಗಳ ಕೂಗಾಟದಿಂದ ಅವರಿಗೆ ಮಲಗಲಾಗಲಿಲ್ಲ. ಅವ್ರೇಲಿಯಾನೋ ಬೆಳಿಗ್ಗೆ ಬಾಗಿಲು ತೆಗೆದಾಗ ಬೆಳಗಿನ ಬೆಳಕಲ್ಲಿ ನೀಲಿಯ ಮೊಲಗಳು ಇಡೀ ಅಂಗಳದಲ್ಲಿ ಹರಡಿರುವುದನ್ನು ಕಂಡ. ಹುಚ್ಚಾಪಟ್ಟೆ ನಗುತ್ತ ಪೆತ್ರಾ ಕೊತೆಸ್ ಅವನನ್ನು ರೇಗಿಸಿ, “ಅವೆಲ್ಲ ನಿನ್ನೆ ರಾತ್ರಿ ಹುಟ್ಟಿದ್ದು” ಎಂದಳು.
“ಅಯ್ಯೊ ದೇವರೇ, ನೀನ್ಯಾಕೆ ಹಸುಗಳ ಲಾಟರಿ ಮಾಡಲ್ಲ” ಎಂದು ಕೇಳಿದ.
ಕೆಲವು ದಿನಗಳ ನಂತರ ಅಂಗಳವನ್ನು ಸ್ಚಚ್ಛಗೊಳಿಸಬೇಕೆಂದು ಮೊಲಗಳನ್ನು ಕೊಟ್ಟು ಹಸುವೊಂದನ್ನು ಅದಲುಬದಲು ಮಾಡಿಕೊಂಡಳು. ಅದು ಎರಡು ತಿಂಗಳಲ್ಲಿ ತ್ರಿವಳಿಗಳನ್ನು ಹಾಕಿತು. ಅದು ಶುರುವಾದದ್ದು ಹಾಗೆ. ಅಲ್ಲದೆ ರಾತ್ರೋರಾತ್ರಿ ಅವ್ರೇಲಿಯಾನೋ ಭೂಮಿಯ ಮತ್ತು ಪ್ರಾಣಿಗಳ ಒಡೆಯನಾದ ಹಾಗೂ ಉಕ್ಕೇರುತ್ತಿದ್ದ ಉಗ್ರಾಣವನ್ನು ದೊಡ್ಡದು ಮಾಡುವುದಕ್ಕೂ ಸಮಯವಿರಲಿಲ್ಲ. ಅಷ್ಟೊಂದು ಎಣೆ ಇಲ್ಲದ ಅಭಿವೃದ್ಧಿ ಅವನಿಗೂ ಕೂಡ ನಗು ತರಿಸಿತ್ತು. ಅವನು ತನ್ನ ಹಾಸ್ಯ ಪ್ರವೃತ್ತಿಯನ್ನು ತಣಿಸಲು ಹುಚ್ಚಾಟ ಮಾಡುವುದನ್ನು ತಡೆಯಲಾಗಲಿಲ್ಲ. ಅವನು, “ಹಸುಗಳಿದ್ದು ಬಿಟ್ಟು ಬಿಡು ಸಾಕು. ಬದುಕು ಅರೆಗಳಿಗೆ” ಎಂದು ಕೂಗಾಡುತ್ತಿದ್ದ. ಅವನು ಏನಾದರೂ ತೊಡಕಿಗೆ ಸಿಕ್ಕಿಹಾಕಿಕೊಂಡಿದ್ದಾನೋ, ಕಳವು ಮಾಡುತ್ತಿದ್ದಾನೋ, ಹೇಗೆ ಎಂದು ಯೋಚಿಸಿದಳು ಮತ್ತು ಪ್ರತಿಬಾರಿ ಅವನು ಕೇವಲ ಖುಷಿಗಾಗಿ ಶಾಂಪೇನ್ ಬಾಟಲಿಯ ಮುಚ್ಚಳ ಎಗರಿಸಿ, ಅದರ ಬುರುಗನ್ನು ನೆತ್ತಿಯ ಮೇಲೆ ಹಾಕಿಕೊಳ್ಳುತ್ತಿದ್ದಾಗ, ಹಣ ವ್ಯರ್ಥ ಮಾಡುತ್ತಿರುವುದಕ್ಕೆ ಕೂಗಾಡಿ ಬೈಯುತ್ತಿದ್ದಳು. ಅದರಿಂದ ಅವನಿಗೆ ಎಷ್ಟು ಸಿಟ್ಟು ಬಂತೆಂದರೆ ಒಂದು ದಿನ ಸಂತೋಷದ ಲಹರಿಯಲ್ಲಿದ್ದಾಗ ದುಡ್ಡಿನ ಒಂದು ಪೆಟ್ಟಿಗೆ, ಅಂಟು, ಬ್ರಶ್ ಹಿಡಿದುಕೊಂಡು ಬಂದು ಇಡೀ ಮನೆಯ ಒಳಗೆ-ಹೊರಗೆ ಮೇಲಿನಿಂದ ಕೆಳಕ್ಕೆ ಒಂದು ಪೇಸೋ ಬ್ಯಾಂಕ್ ನೋಟುಗಳನ್ನು ಫ್ರಾನ್ಸಿಸ್ಕೋನ ಹಳೆಯ ಹಾಡುಗಳನ್ನು ಗಟ್ಟಿಯಾಗಿ ಹಾಡುತ್ತ, ಅಂಟಿಸಿದ. ಅವರು ಪಿಯಾನೊವನ್ನು ತಂದ ಮೇಲೆ ಆ ಹಳೆ ಬಂಗಲೆಗೆ ಬಿಳಿ ಬಣ್ಣ ಬಳಿದದ್ದು ಈಗ ವಿಚಿತ್ರವಾದ ಮಸೀದಿಯ ಹಾಗೆ ಕಂಡಿತು. ಮನೆಯವರ ಉತ್ಸಾಹ, ಉರ್ಸುಲಾಳ ಅವಮಾನ, ದುಂದುತನದ ಪರಾಕಾಷ್ಠೆಯನ್ನು ನೋಡಲು ಸಂತೋಷದಿಂದ ನೆರೆದ ಜನರ ನಡುವೆ ಅವ್ರೇಲಿಯಾನೋ ಸೆಗುಂದೋ ಮನೆಯ ಮುಂದುಗಡೆಯಿಂದ ಬಚ್ಚಲು ಮನೆ, ಬೆಡ್‌ರೂಮುಗಳನ್ನು ಸೇರಿದಂತೆ ಅಡುಗೆ ಮನೆಗೂ ನೋಟುಗಳನ್ನು ಅಂಟಿಸುವುದನ್ನು ಮುಗಿಸಿದ ಮತ್ತು ಉಳಿದದ್ದನ್ನು ಅಂಗಳಕ್ಕೆ ಎಸೆದ.
ಕೊನೆಗೆ ಅವನು, “ಈಗ, ಈ ಮನೇಲಿ ಎಂದೂ, ಯಾರೂ ನನ್ನ ಹತ್ರ ದುಡ್ಡಿನ ಬಗ್ಗೆ ಮಾತಾಡಲ್ಲ ಅಂದ್ಕೊಳ್ತೀನಿ” ಎಂದ.
ಆಗಿದ್ದು ಅದು. ಉರ್ಸುಲಾ ಗೋಡೆಗೆ ಮೆತ್ತಿಕೊಂಡಿದ್ದ ನೋಟುಗಳನ್ನು ಕೀಳಿಸಿದಳು ಮತ್ತು ಮನೆಗೆ ಮತ್ತೊಂದು ಸಲ ಬಿಳಿ ಬಣ್ಣ ಹೊಡೆಯಲಾಯಿತು. ಅವಳು, “ದೇವರೇ, ನಾವು ಈ ಊರನ್ನ ಹುಟ್ಟಿ ಹಾಕಿದಾಗ ಬಡವರಾಗಿದ್ದಂತೆ ಈಗ್ಲೂ ಮಾಡು. ಯಾಕೆಂದರೆ ಮುಂದಿನ ಜನ್ಮದಲ್ಲಿ ಈ ರೀತಿ ದುಂದುಗಾರಿಕೇಗೆ ನೀನು ದಂಡ ವಸೂಲು ಮಾಡೋದು ಬೇಡ” ಎಂದು ಪ್ರಾರ್ಥಿಸಿದಳು. ಅವಳ ಪ್ರಾರ್ಥನೆಗೆ ವಿರುದ್ಧವಾದ ಪ್ರತಿಫಲ ಸಿಕ್ಕಿತು. ನೋಟುಗಳನ್ನು ಕೀಳುತ್ತಿದ್ದ ಕೆಲಸಗಾರ ಪ್ಲಾಸ್ಟರ್‌ನ ಸಂತ ಜೋಸಫ್ ಮೂರ್ತಿಗೆ ಡಿಕ್ಕಿ ಹೊಡೆದ. ಅದನ್ನು ಕಳೆದ ವರ್ಷದ ಯುದ್ಧದಲ್ಲಿ ಯಾರೋ ಬಿಟ್ಟು ಹೋಗಿದ್ದರು. ಒಳಗೆ ಟೊಳ್ಳಾಗಿದ್ದ ಆ ವಿಗ್ರಹ ಬಿದ್ದು ಚೂರು ಚೂರಾಗಿ ನೆಲದ ಮೇಲೆ ಬಿತ್ತು. ಬಂಗಾರದ ನಾಣ್ಯಗಳನ್ನು ಅದರೊಳಗೆ ಒತ್ತಿಡಲಾಗಿತ್ತು. ಮನುಷ್ಯನಾಕಾರದ ಆ ವಿಗ್ರಹವನ್ನು ಯಾರು ತಂದಿಟ್ಟರೆಂಬ ನೆನಪು ಯಾರಿಗೂ ಇರಲಿಲ್ಲ. ಅಮರಾಂತ, “ಮೂರು ಜನ ಅದನ್ನು ತಂದಿದ್ದರು. ಮಳೆಗಾಲ ಮುಗಿಯುವ ತನಕ ಇಲ್ಲಿರಲಿ. ಅಂತ ಕೇಳಿಕೊಂಡರು. ನಾನು ಯಾರೂ ಅದಕ್ಕೆ ಡಿಕ್ಕಿ ಹೊಡಿಬಾರ್‍ದು ಅಂತ ಆ ಮೂಲೇಲಿ ಇಡಲಿಕ್ಕೆ ಹೇಳಿದ್ದೆ. ಅವ್ರು ಅದನ್ನ ಹುಷಾರಾಗಿ ಅಲ್ಲಿಟ್ಟರು. ಅದು ಅವತ್ತಿಂದ ಅಲ್ಲಿದೆ. ಯಾಕೆಂದರೆ ಯಾರೂ ಅದನ್ನು ವಾಪಸು ತೊಗೊಂಡು ಹೋಗಲಿಕ್ಕೆ ಬರ್‍ಲಿಲ್ಲ” ಎಂದು ವಿವರಿಸಿದಳು. ಆ ಮೇಲೆ ಉರ್ಸುಲಾ ಅದರ ಮೇಲೆ ಕ್ಯಾಂಡಲ್‌ಗಳನ್ನು ಇಟ್ಟಿದ್ದಳು ಮತ್ತು ತಿಳಿಯದೆ, ಸಂತನಿಗೆ ಬದಲಾಗಿ ಸುಮಾರು ನಾನೂರು ಪೌಂಡ್‌ಗಿಂತ ಹೆಚ್ಚು ಬಂಗಾರಕ್ಕೆ ಬಾಗಿ ನಮಸ್ಕಾರ ಮಾಡುತ್ತಿದ್ದಳು. ನಿಜವಾದ ದೇವರನ್ನು ಪೂಜಿಸದೆ ಇರುವುದಕ್ಕೆ ದೊರೆತ ಸಾಕ್ಷಿಯಿಂದ ಅವಳ ಮನಸ್ಸು ಮತ್ತಷ್ಟು ಕಲಕಿ ಹೋಯಿತು. ಅವಳು ನಾಣ್ಯದ ಗುಪ್ಪೆಯ ಮೇಲೆ ಉಗಿದು, ಮೂರು ಕ್ಯಾನ್‌ವಾಸ್ ಚೀಲದಲ್ಲಿ ತುಂಬಿ, ಯಾವಾಗಲಾದರೂ ಆ ಮೂರು ಜನ ಬಂದು ಕೇಳುತ್ತಾರೆಂದು ಗುಟ್ಟಾದ ಸ್ಥಳದಲ್ಲಿ ಹೂತುಬಿಟ್ಟಳು. ಬಹಳ ಕಾಲವಾದ ಮೇಲೆ ಅವಳು ಸಾಕಷ್ಟು ಜೀರ್ಣವಾದ ಅವಧಿಯಲ್ಲಿ, ಮನೆಯ ಬಳಿ ಬರುತ್ತಿದ್ದ ಅನೇಕ ಪ್ರಯಾಣಿಕರ ಸಂಭಾಷಣೆಯಲ್ಲಿ ಮಧ್ಯೆ ಪ್ರವೇಶಿಸಿ ಅವರೇನಾದರೂ ಮಳೆಗಾಲ ಮುಗಿಯುವ ತನಕ ನೋಡಿಕೊಳ್ಳಲು ಯುದ್ಧದ ಸಮಯದಲ್ಲಿ ಸಂತ ಜೋಸಫ್‌ನ ವಿಗ್ರಹವನ್ನು ಬಿಟ್ಟು ಹೋಗಿದ್ದುಂಟೆ ಎಂದು ಕೇಳುತ್ತಿದ್ದಳು.
ಆ ದಿನಗಳಲ್ಲಿ ಉರ್ಸುಲಾಗೆ ಗಾಬರಿ ಹುಟ್ಟಿಸುವಂಥ ಸಂಗತಿಗಳು ಸಾಮಾನ್ಯವಾಗಿದ್ದವು. ಮಕೋಂದೋಗೆ ಸಂಪತ್ತು ಒಟ್ಟಿಗೆ ಬಂತು. ಸಂಸ್ಥಾಪಕರ ಮನೆಗಳು ಮರದ ತೊಲೆಗಳಿರುವ, ಸಿಮೆಂಟ್ ನೆಲದ ಇಟ್ಟಿಗೆ ಮನೆಗಳಾಗಿ ಬದಲಾದವು. ಇದರಿಂದ ಉಸಿರುಗಟ್ಟಿಸುತ್ತಿದ್ದ ಮಧ್ಯಾಹ್ನ ಎರಡು ಗಂಟೆಯ ಬಿಸಿಲನ್ನು ಸಹಿಸಿಕೊಳ್ಳುವುದು ಸ್ವಲ್ಪ ಸುಲಭವಾಯಿತು. ಆ ಸಮಯದಲ್ಲಿ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಆ ಪುರಾತನ ಹಳ್ಳಿಯಲ್ಲಿ ಕಷ್ಟಗಳ ಸಂದರ್ಭವನ್ನು ಎದುರಿಸಲು ಉಳಿದದ್ದು, ಧೂಳು ಮೆತ್ತಿದ ಬಾದಾಮಿ ಮರಗಳು ಮತ್ತು ಹೊಸೆ ಅರ್ಕಾದಿಯೋ ಸೆಗುಂದೋ ಚಾನಲ್ ತೆಗೆದು ದೋಣಿಯ ಸಂಪರ್ಕವನ್ನು ಏರ್ಪಡಿಸಲು ಹೊರಟಾಗ, ಇತಿಹಾಸಪೂರ್ವ ಕಲ್ಲುಗಳಿದ್ದ ತಿಳಿನೀರಿನ ನದಿ ಮಾತ್ರ. ಅದೊಂದು ಮುತ್ತಜ್ಜನಿಗೆ ಹೋಲಿಸಬಹುದಾದ ಹುಚ್ಚು ಕನಸು. ಏಕೆಂದರೆ ಬಂಡೆಗಳಿದ್ದ ಮತ್ತು ಅನೇಕ ಸೆಳವುಗಳಿದ್ದ ನದಿ ಮಕೋಂದೋಯಿಂದ ಸಮುದ್ರಕ್ಕೆ ನೌಕಾಯಾನವನ್ನು ತಡೆಹಿಡಿದಿದ್ದವು. ಆದರೆ ಯಾರೂ ಕಾಣದ ಹುಚ್ಚು ಸಾಹಸದಿಂದ ಹೊಸೆ ಅರ್ಕಾದಿಯೋ ಸೆಗುಂದೋ ತನ್ನ ಯೋಜನೆಯಲ್ಲಿ ನಿರತನಾದ. ಅಲ್ಲಿಯ ತನಕ ಅವನು ಬೇರೆ ಯಾವುದೇ ಕಲ್ಪನೆಯ ಕುರುಹನ್ನು ತೋರಿಸಿರಲಿಲ್ಲ. ಪಿಯತ್ರೋ ಕೊತೆಸ್‌ನೊಂದಿಗೆ ನಡೆಸಿದ ಸೂಕ್ಷ್ಮವಾದ ಸಾಹಸವನ್ನು ಬಿಟ್ಟರೆ ಅವನಿಗೆ ಬೇರೆ ಯಾವ ಹೆಂಗಸಿನ ಸಂಗವಿರಲಿಲ್ಲ. ಇಡೀ ಸಂಸಾರದಲ್ಲಿ ಅಲ್ಲಿಯವರೆಗೆ ಇರದ ಅತ್ಯಂತ ಸೌಮ್ಯ ಸ್ವಭಾವದ, ಹುಂಜದ ಕಾಳಗದ ಉಸ್ತುವಾರಿಯನ್ನು ಕೂಡ ನೋಡಿಕೊಳ್ಳಲು ಸಾಧ್ಯವಿಲ್ಲವೆಂದು ಉರ್ಸುಲಾ ಪರಿಗಣಿಸಿದ್ದಳು, ಅವನಿಗೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಸಮುದ್ರದಿಂದ ಸುಮಾರು ಎಂಟು ಮೈಲಿ ದೂರದಲ್ಲಿರುವ ಸ್ಪೇನಿನ ದೊಡ್ಡ ಹಡಗು ಹಾಗೂ ಯುದ್ಧದಲ್ಲಿ ತಾನು ಇದ್ದಲಿನ ಚೌಕಟ್ಟನ್ನು ನೋಡಿದ್ದಾಗಿ ಹೇಳಿದಾಗ, ಅನೇಕ ಜನರಿಗೆ ಅದ್ಭುತವಾಗಿ ತೋರಿದ ಆ ಕಥೆ, ಹೊಸೆ ಅರ್ಕಾದಿಯೋ ಸೆಗುಂದೋಗೆ ಒಂದು ರೀತಿಯಲ್ಲಿ ಅರಿವು ಮೂಡಿಸಿತು. ಅವನು ಅತಿ ಹೆಚ್ಚು ಹಣ ಕೊಡುತ್ತೇನೆಂದು ಹೇಳಿದವರಿಗೆ ಕೋಳಿಗಳನ್ನು ಮಾರಿ, ಜನರನ್ನು ನೇಮಿಸಿಕೊಂಡು, ಸಲಕರಣೆಗಳನ್ನು ಖರೀದಿಸಿದ ಮತ್ತು ಕಲ್ಲುಗಳನ್ನು ಒಡೆಯುವ, ಕಾಲುವೆಗಳನ್ನು ತೋಡುವ, ಸೆಳವುಗಳನ್ನು ಅತ್ತ ಸರಿಸುವ ಅಲ್ಲದೆ ಜಲಾಶಯಗಳನ್ನು ಉಪಯೋಗ ಮಾಡುವ ಕಷ್ಟಕರ ಕೆಲಸದಲ್ಲಿ ತೊಡಗಿದ. ಉರ್ಸುಲಾ, “ನಂಗಿದೆಲ್ಲ ಬಾಯಿಪಾಠವಾಗಿದೆ. ಇದೆಲ್ಲ ಕಾಲ ಹಿಂದಕ್ಕೋಡಿ ನಾವೆಲ್ಲ ಮೊದಲಿದ್ದ ಥರ ಆದ ಹಾಗೆ” ಎಂದು ಕೂಗಿದಳು. ಅವನಿಗೆ ನದಿಯಲ್ಲಿ ಯಾನ ಮಾಡಬಹುದೆಂದು ಹೊಳೆದಾಗ ತನ್ನ ಸೋದರನಿಗೆ ಆ ಯೋಜನೆಯ ಬಗ್ಗೆ ವಿಸ್ತೃತವಾಗಿ ತಿಳಿಸಿದ ಮತ್ತು ಅವನು ಅದಕ್ಕೆ ಅಗತ್ಯವಾದ ಹಣವನ್ನು ಕೊಟ್ಟ. ಅನಂತರ ಅವನು ಬಹಳ ಸಮಯ ನಾಪತ್ತೆಯಾದ. ಅದೆಲ್ಲ ಅವನ ದೋಣಿ ಕೊಳ್ಳದ ಯೋಜನೆ ಸೋದರನಿಂದ ಹಣ ದೋಚುವ ಸನ್ನಾ, ಎಂದು ಜನರು ಆಡಿಕೊಳ್ಳುತ್ತಿದ್ದಾಗ ವಿಚಿತ್ರವಾದ ಒಂದು ದೋಣಿ ಊರಿನ ಹತ್ತಿರ ಬರುತ್ತಿದೆ ಎಂಬ ಸುದ್ದಿ ಹರಡಿತು. ಹೊಸೆ ಅರ್ಕಾದಿಯೋ ಬ್ಯುಂದಿಯಾನ ಅದ್ಭುತವಾದ ಕಾರ್ಯಗಳನ್ನು ಮರೆತು ಹೋಗಿದ್ದ ಮಕೋಂದೋ ವಾಸಿಗಳು ನದಿಯ ದಂಡೆಗೆ ಓಡಿದರು ಮತ್ತು ನಂಬದೆ ಬಿಟ್ಟ ಕಣ್ಣು ಬಿಟ್ಟುಕೊಂಡು ಅಲ್ಲಿಗೆ ಬಂದು ನಿಂತ ಮೊದಲನೆ ಮತ್ತು ಕೊನೆಯದಾದ ದೋಣಿಯನ್ನು ನೋಡಿದರು. ಅದು ದಡದಲ್ಲಿದ್ದ ಇಪ್ಪತ್ತು ಜನರಿಂದ ಎಳೆಯಲ್ಪಡುತ್ತಿದ್ದ ಭಾರಿ ಗಾತ್ರದ ಮರದ ದಿಮ್ಮಿಯಾಗಿತ್ತು. ಮುಂದುಗಡೆ ಸಮಾಧಾನದಿಂದ ಕಣ್ಣು ಹೊಳೆಸುತ್ತಿದ್ದ ಹೊಸೆ ಅರ್ಕಾದಿಯೋ ಸೆಗುಂದೋ ಕಷ್ಟಕರವಾದ ಆ ಕೆಲಸವನ್ನು ನಿರ್ದೇಶಿಸುತ್ತಿದ್ದ. ಅವನ ಜೊತೆ ಬಂದಿದ್ದ ಅನೇಕ ಹೆಂಗಸರು ಉರಿಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಬಣ್ಣ ಬಣ್ಣದ ಛತ್ರಿ ಹಿಡಿದುಕೊಂಡಿದ್ದರು. ಅಲ್ಲದೆ ಭುಜದ ಮೇಲೆ ಸಿಲ್ಕಿನ ಕರ್ಚೀಫ್‌ಗಳನ್ನು ಇಳಿಬಿಟ್ಟುಕೊಂಡು, ಮುಖಕ್ಕೆ ಬಣ್ಣದ ಕ್ರೀಮ್ ಹಚ್ಚಿಕೊಂಡು, ಹೂ ಮುಡಿದುಕೊಂಡು, ಕೈಗೆ ಬಂಗಾರದ ಹಾವುಗಳು ಹಾಗೂ ಹಲ್ಲುಗಳಿಗೆ ವಜ್ರದ ಲೇಪ ಹೊಂದಿದವರಾಗಿದ್ದರು. ಹೊಸೆ ಅರ್ಕಾದಿಯೋ ಸೆಗುಂದೋಗೆ ಅಗಾಧ ಗಾತ್ರದ ಮರದ ದಿಮ್ಮಿಯನ್ನು ಒಮ್ಮೆ ಮಾತ್ರ ಮಕೋಂದೋಗೆ ತರಲು ಸಾಧ್ಯವಾಗಿತ್ತು. ಆದರೆ ಅದು ತನ್ನ ಸಾಹಸದ ಸೋಲು ಎಂದು ಪರಿಗಣಿಸಿರಲಿಲ್ಲ ಮತ್ತು ತಾನು ಮಾಡಿದ್ದನ್ನು ತನ್ನ ಸಂಕಲ್ಪ ಶಕ್ತಿಯ ವಿಜಯವೆಂದು ಸಾರಿದ. ಅವನ ಸೋದರನಿಗೆ ಚಾಚೂ ತಪ್ಪದೆ ಲೆಕ್ಕ ಕೊಟ್ಟು ಮತ್ತೆ ಎಂದಿನ ಹುಂಜದ ಕಾಳಗಗಳಲ್ಲಿ ತೊಡಗಿದ. ಅವನ ಹುಚ್ಚು ಸಾಹಸದಿಂದ ಉಳಿದದ್ದು, ಫ್ರಾನ್ಸ್‌ನಿಂದ ಆ ಹೆಂಗಸರು ತಂದ ಹೊಸತನದ ಗಾಳಿ. ಅವರ ಅದ್ಭುತವಾದ ಕಲಾವಂತಿಕೆ, ಸಾಂಪ್ರದಾಯಿಕ ಪ್ರೇಮದ ಶೈಲಿಯನ್ನು ಪರಿವರ್ತಿಸಿತು ಮತ್ತು ಅವರ ಸಾಮಾಜಿಕ ಹಿತ, ಹಳತಾದ ಕತಾವುರೆಯ ಅಂಗಡಿಯನ್ನು ಮುಚ್ಚುವಂತೆ ಮಾಡಿ ಇಡೀ ರಸ್ತೆಯನ್ನು ಜಪಾನಿನ ದೀಪಗಳು ಮತ್ತು ಪಳಿಯುಳಿಕೆಯ ವಾದ್ಯಗಳು, ಬಜಾರ್ ಮಾಡಿತು. ಮಕೋಂದೋವನ್ನು ಮೂರು ದಿನಗಳ ಕಾಲ ಉನ್ಮಾದದಲ್ಲಿ ಮುಳುಗಿಸಿದಂಥ ಆ ಜಾತ್ರೆಯನ್ನು ವ್ಯವಸ್ಥೆಗೊಳಿಸಿದ್ದು ಅವರೇ. ಅದರಿಂದ ಉಂಟಾದ ದೀರ್ಘಕಾಲದ ಪರಿಣಾಮವೆಂದರೆ ಹೊಸೆ ಅರ್ಕಾದಿಯೋ ಸೆಗುಂದೋಗೆ ಫೆರ್ನಾಂಡ ಡೆಲ್ ಕಾರ್ಪಿಯೋಳನ್ನು ಭೇಟಿಯಾಗುವ ಅವಕಾಶ ತಂದುಕೊಟ್ಟಿತು.
ಸುಂದರಿ ರೆಮಿದಿಯೋಸ್ ಘೋಷಿತ ಸುಂದರಿಯಾಗಿದ್ದಳು. ಮಾತಿಲ್ಲದಂತೆ ಮಾಡುವಷ್ಟು ಅವಳ ಸೌಂದರ್ಯವಿದ ತನ್ನ ಮರಿಮಗಳ ಆಯ್ಕೆಯನ್ನು ಉರ್ಸುಲಾಗೆ ತಡೆಯಲಾಗಲಿಲ್ಲ. ಅಲ್ಲಿಯ ತನಕ ಅಮರಾಂತಳ ಜೊತೆ ಸಾಮೂಹಿಕ ಪ್ರಾರ್ಥನೆಗೆ ಹೋಗುವುದಕ್ಕೆ ಬಿಟ್ಟರೆ ಅವಳನ್ನು ರಸ್ತೆಯಲ್ಲಿ ಓಡಾಡದಿರುವಂತೆ ಮಾಡಲು ಅವಳು ಯಶಸ್ವಿಯಾಗಿದ್ದಳು. ಆದರೆ ಈಗ ಅವಳು ಮುಖಕ್ಕೆ ಕಪ್ಪು ಬಟ್ಟೆಯಿಂದ ಮುಚ್ಚಿಕೊಳ್ಳುವಂತೆ ಮಾಡಿದಳು. ಅತ್ಯಂತ ಅಧಾರ್ಮಿಕರಾದ ಕತಾವುರೆ ಅಂಗಡಿಯಲ್ಲಿ, ಅಪವಿತ್ರ ಪ್ರಾರ್ಥನೆ ನಡೆಸಿಕೊಡುವ ಪಾದ್ರಿಗಳಂತೆ ವೇಷ ಮರೆಸಿಕೊಳ್ಳುತ್ತಿದ್ದವರು, ಒಂದು ಕ್ಷಣದ ಮಟ್ಟಿಗಾದರೂ ಆ ಪ್ರದೇಶದಲ್ಲೆಲ್ಲ ಹೆಸರುವಾಸಿಯಾಗಿದ್ದ ಸುಂದರಿ ರಿಮಿದಿಯೋಸ್‌ಳ ಮುಖವನ್ನು ನೋಡುವ ಉದ್ದೇಶದಿಂದ ಚರ್ಚ್‌ಗೆ ಹೋಗುತ್ತಿದ್ದರು. ಅವರಿಗದು ಸಾಧ್ಯವಾಗಲು ಬಹಳ ಸಮಯ ಕಾಯಬೇಕಾಯಿತು ಮತ್ತು ಅವರಿಗೆ ಸಾಧ್ಯವಾಗದಿದ್ದರೆ ಒಳ್ಳೆಯದಾಗುತ್ತಿತ್ತು. ಏಕೆಂದರೆ ಶಾಂತವಾಗಿ ಮಲಗುವ ಅವರ ಅಭ್ಯಾಸವನ್ನು ಅವರು ಮರಳಿ ಪಡೆಯಲಿಲ್ಲ. ಅಂಥವನೊಬ್ಬ ಪರದೇಶದವನು, ಎಂದೆಂದಿಗೂ ಸ್ತಿಮಿತ ಕಳೆದುಕೊಂಡು, ಯಾತನೆ ಅನುಭವಿಸಿದ ಮತ್ತು ವರ್ಷಗಳ ನಂತರ ರೈಲು ಹಳಿಗಳ ಮೇಲೆ ಮಲಗಿ ತುಂಡು ತುಂಡಾಗಿದ್ದ. ಚರ್ಚ್‌ಗೆ ಬಂದ ಕ್ಷಣದಿಂದ ಅವನನ್ನು ನೋಡಿದವರು ಅವನು ಬಹಳ ದೂರದಿಂದ ಬಹುಶಃ ದೇಶದ ಹೊರಗಿನ ಪಟ್ಟಣವೊಂದರಿಂದ ಸುಂದರಿ ರೆಮಿದಿಯೋಸ್‌ಳ ಮಾಂತ್ರಿಕ ಸೌಂದರ್ಯದಿಂದ ಆಕರ್ಷಿತನಾಗಿ ಬಂದವನೆನ್ನುವುದರ ಬಗ್ಗೆ ಯಾರಿಗೂ ಅನುಮಾನವಿರಲಿಲ್ಲ. ಅವನೆಷ್ಟು ಚೆಲುವನಾಗಿ, ನಾಜೂಕಿನ, ಗೌರವಪೂರ್ಣವಾಗಿದ್ದನೆಂದರೆ ಪಿಯತ್ರೋ ಕ್ರೆಪ್ಸಿ ಅವನ ಎದುರು ಸಪ್ಪೆ ಎನ್ನಿಸುತ್ತಿದ್ದ ಮತ್ತು ಅನೇಕ ಹೆಂಗಸರು, ನಿಜವಾಗಿಯೂ ಮುಖಕ್ಕೆ ಪರದೆ ಹಾಕಿಕೊಂಡು ಓಡಾಡಬೇಕಾದವನು ಅವನು ಎಂದು ಪಿಸುಗುಟ್ಟಿಕೊಳ್ಳುತ್ತಿದ್ದರು. ಅವನು ಮಕೋಂದೋದಲ್ಲಿ ಯಾರ ಜೊತೆಯೂ ಮಾತನಾಡಲಿಲ್ಲ. ದಂತಕಥೆಯ ರಾಜಕುಮಾರನಂತೆ ಭಾನುವಾರ ಬೆಳಿಗ್ಗೆ ಜೀನಿಗೆ ಬೆಳ್ಳಿ ಪಟ್ಟಿಗಳಿಂದ ಕಟ್ಟಿದ್ದ ಮತ್ತು ವೆಲ್ವೆಟ್ ಹೊದಿಕೆಯಿದ್ದ ಕುದುರೆ ಸವಾರಿ ಮಾಡಿಕೊಂಡು ಒಂದು ಸಾಮೂಹಿಕ ಪ್ರಾರ್ಥನೆಯಾದ ಕೂಡಲೆ ಊರು ಬಿಟ್ಟು ಹೊರಟ.
ಅವನು ಮೊದಲ ಬಾರಿ ಚರ್ಚ್‌ಗೆ ಬಂದಾಗಿನಿಂದಲೂ ಅಲ್ಲಿ ಇರುತ್ತಿದ್ದರಿಂದ ಅದರ ಪ್ರಭಾವ ಎಷ್ಟು ಹೆಚ್ಚಿತ್ತೆಂದರೆ ಅವನು ಮತ್ತು ಸುಂದರಿ ರೆಮಿದಿಯೋಸ್‌ಳ ನಡುವೆ ಒಂದು ಮೌನ ಯುದ್ಧ ನಡೆದಿದೆ ಎಂದು ಪ್ರತಿಯೊಬ್ಬರೂ ತಿಳಿದುಕೊಂಡಿದ್ದರು ಮತ್ತು ಪ್ರೇಮದಲ್ಲಿ ಮಾತ್ರವಲ್ಲದೆ ಸಾವಿನಲ್ಲಿ ಕೂಡ ಸಮಾಪ್ತಿಯಾಗುವ ರಹಸ್ಯವಾದ ಒಪ್ಪಂದ ಇದೆ ಎಂದು ಭಾವಿಸಿದ್ದರು. ಅದೊಂದು ಭಾನುವಾರ ಅವನು ಕೈಯಲ್ಲಿ ಹಳದಿ ಗುಲಾಬಿಯೊಡನೆ ಕಂಡ. ಅವನು ಯಾವಾಗಿನಂತೆ ನಿಂತುಕೊಂಡೇ ಪ್ರಾರ್ಥನೆ ಕೇಳಿಸಿಕೊಂಡ ಮತ್ತು ಅದು ಮುಗಿದಾಗ ಅವನು ಸುಂದರಿ ರೆಮಿದಿಯೋಸ್‌ಳ ಮುಂದೆ ಹೋಗಿ, ಗುಲಾಬಿ ಹೂ ಕೊಟ್ಟ. ಅವಳು ಅದಕ್ಕೆ ಸಿದ್ಧವಾಗಿದ್ದಳು ಎನ್ನುವ ಹಾಗೆ ಸಹಜವಾಗಿ ಸ್ವೀಕರಿಸಿದಳು ಮತ್ತು ಮುಖದ ಪರದೆ ಸರಿಸಿ ನಸುನಕ್ಕು ಕೃತಜ್ಞತೆ ವ್ಯಕ್ತಪಡಿಸಿದಳು. ಅವಳು ಅಷ್ಟೇ ಮಾಡಿದ್ದು. ಅದು ಅವನೊಬ್ಬನಿಗೇ ಅಲ್ಲ, ಅವಳನ್ನು ಕಾಣುವ ದೌರ್ಭಾಗ್ಯವಿದ್ದ ಗಂಡಸರಿಗೆಲ್ಲ ಅದೊಂದು ಮರೆಯಲಾಗದ ಕ್ಷಣವಾಗಿತ್ತು.
ಅದಾದ ನಂತರ ಅವನು ಸುಂದರಿ ರೆಮಿದಿಯೋಸ್‌ಳ ಕಿಟಕಿಯ ಪಕ್ಕದಲ್ಲಿ ಕೆಲವು ಸಲ ಬೆಳಗಿನ ತನಕ ವಾದ್ಯಗೋಷ್ಠಿಯನ್ನು ವ್ಯವಸ್ಥೆಗೊಳಿಸಿದ್ದ. ಅವ್ರೇಲಿಯಾನೋ ಸೆಗುಂದೋ ಮಾತ್ರ ಅವನ ಬಗ್ಗೆ ಮರುಕ ವ್ಯಕ್ತಪಡಿಸಿದ್ದ ಮತ್ತು ಹಿಡಿದ ಪಟ್ಟಿನಿಂದ ಬಿಡಿಸಲು ಪ್ರಯತ್ನ ಪಟ್ಟ. ಅದೊಂದು ರಾತ್ರಿ ಅವನು, “ಈ ಮನೆ ಹೆಂಗಸರೆಲ್ಲ ಹಂದಿಗಳಿಗಿಂತ ಅತ್ತತ್ತ” ಎಂದ. ಅವನಿಗೆ ತನ್ನ ಸ್ನೇಹಿತನಾಗಿರಲು ಕರೆದ ಮತ್ತು ಶಾಂಪೇನ್‌ನಲ್ಲಿ ಮುಳುಗುವಂತೆ ಆಹ್ವಾನಿಸಿದ. ತನ್ನ ಮನೆಯ ಹೆಂಗಸರು ಬಂಡೆಗಲ್ಲಿನಂಥವರು ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರೂ ಅವನ ಹಠವನ್ನು ಕಡಿಮೆ ಮಾಡಲಾಗಲಿಲ್ಲ. ಅವನ ಕೊನೆಯಿರದ ವಾದ್ಯಗೋಷ್ಠಿಗಳಿಂದ ಕೆರಳಿದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, ಅವನ ವ್ಯಥೆಯನ್ನು ಒಂದೆರಡು ಪಿಸ್ತೂಲು ಗುಂಡುಗಳಿಂದ ಗುಣಪಡಿಸುತ್ತೇನೆಂದು ಬೆದರಿಸಿದ. ಅವನ ತುಂಬಿದ ಆತ್ಮ ಸ್ಥ್ಯೆರ್ಯವನ್ನು ಬಿಟ್ಟರೆ ಯಾವುದೂ ಅವನನ್ನು ತಡೆಯಲಾಗಲಿಲ್ಲ. ಅಚ್ಚುಕಟ್ಟಾಗಿ ಬಟ್ಟೆ ಹಾಕಿಕೊಂಡಿರುತ್ತಿದ್ದವನು ಕೊಳಕಾಗಿ, ಅವಲಕ್ಷಣವಾಗಿ ಬದಲಾದ. ಅವನ ಮೂಲ ಯಾವುದೆಂದು ಸರಿಯಾಗಿ ಗೊತ್ತಿರದಿದ್ದರೂ ದೂರದ ದೇಶದಲ್ಲಿದ್ದ ಅಧಿಕಾರ ಮತ್ತು ಸಂಪತ್ತನ್ನು ತೊರೆದು ಬಂದಿದ್ದಾನೆಂದು ಮಾತನಾಡಿಕೊಳ್ಳುತ್ತಿದ್ದರು. ಅವನು ವೃಥಾ ಚರ್ಚೆಗಿಳಿಯುತ್ತಿದ್ದ. ಅಲ್ಲದೆ ಕುಡಿದು ಕಾದಾಡುವಂಥವನಾದ ಮತ್ತು ಕತಾವುರೆಯ ಅಂಗಡಿನಲ್ಲಿ ತನ್ನ ಕೊಳಕಿನಲ್ಲಿ ತಾನೆ ಹೊರಳಾಡುತ್ತಿದ್ದ. ಈ ಘಟನೆಯ ಅತ್ಯಂತ ದುಃಖಪೂರ್ಣ ಸಂಗತಿಯೆಂದರೆ ಚರ್ಚ್‌ನಲ್ಲಿ ಅವನು ರಾಜಕುಮಾರನಂತೆ ಸಿಂಗರಿಸಿಕೊಂಡು ಬಂದರೂ ಕೂಡ ಅವಳು ಅವನನ್ನು ಗಮನಿಸಲಿಲ್ಲ. ಅವಳು ಹಳದಿ ಗುಲಾಬಿ ಹೂವನ್ನು ಯಾವ ದುರುದ್ದೇಶವಿಲ್ಲದೆ, ತಮಾಷೆ ಎನ್ನುವಂತೆ ಹಾಗೆ ಮಾಡಿದ ಧೈರ್ಯಕ್ಕಾಗಿ ಸ್ವೀಕರಿಸಿದ್ದಳು ಮತ್ತು ಅವನ ಮುಖ ಸರಿಯಾಗಿ ನೋಡಬೇಕೆಂದಲ್ಲದೆ ತನ್ನ ಮುಖವನ್ನು ತೋರಿಸುವುದಕ್ಕೆಂದು ಪರದೆಯನ್ನು ಸರಿಸಿರಲಿಲ್ಲ.
ನಿಜಕ್ಕೂ ಸುಂದರಿ ರೆಮಿದಿಯೋಸ್ ಈ ಪ್ರಪಂಚದವಳಾಗಿರಲಿಲ್ಲ. ಅವಳು ಖುತುಮತಿಯಾಗಿ ಬಹಳ ಕಾಲವಾಗಿದ್ದರೂ ಸಾಂತ ಸೋಫಿಯಾ ದೆಲಾ ಪಿಯದಾದ್ ಅವಳಿಗೆ ಸ್ನಾನ ಮಾಡಿಸಿ ಬಟ್ಟೆ ಹಾಕಬೇಕಾಗಿತ್ತು. ಅವಳು ತನ್ನನ್ನು ತಾನು ನೋಡಿಕೊಳ್ಳಲು ಸಾಧ್ಯವಾದಾಗಲೂ, ಗೋಡೆಯ ಮೇಲೆ ಪ್ರಾಣಿಗಳನ್ನು ಚಿತ್ರಿಸದಿರುವಂತೆ ಅವಳ ಮೇಲೆ ಕಣ್ಣಿಡಬೇಕಾಗಿತ್ತು. ಓದು ಬರಹ ಕಲಿಯದೆ ಅವಳಿಗೆ ಇಪ್ಪತ್ತು ವರ್ಷವಾಗಿತು. ಟೇಬಲ್ ಮೇಲಿನ ಬೆಳ್ಳಿಯ ಸಲಕರಣೆಗಳನ್ನು ಉಪಯೋಗಿಸಲು ಬರುತ್ತಿರಲಿಲ್ಲ ಮತ್ತು ಎಲ್ಲ ರೀತಿಯ ನಡವಳಿಕೆಯನ್ನು ತಿರಸ್ಕರಿಸಿದ್ದ ಸ್ವಭಾವದಿಂದಾಗಿ ಅವಳು ಮನೆಯಲ್ಲಿ ಬೆತ್ತಲೆ ಓಡಾಡುತ್ತಿದ್ದಳು. ರಕ್ಷಣೆಗಳಿರದ ಯುವ ಕಮಾಂಡರ್ ಅವಳ ಬಗ್ಗೆ ತನ್ನ ಪ್ರೇಮವನ್ನು ತಿಳಿಸಿದಾU, ಅವಳು ಅವನನ್ನು ನಿರಾಕರಿಸಿದಳು. ಏಕೆಂದರೆ ಅವನ ಅವಿವೇಕ ಅವಳಿಗೆ ಗಾಬರಿ ಹುಟ್ಟಿಸಿತ್ತು. ಅವಳು ಅಮರಾಂತಳಿಗೆ, “ನೋಡು, ಅವನೆಷ್ಟು ಸರಳ ವ್ಯಕ್ತಿ. ಅವ್ನು ನನ್ನಿಂದಾಗಿ ಸಾಯ್ತಾನಂತೆ, ನಾನು ವಿಷ ಅನ್ನೋ ಹಾಗೆ” ಎಂದಳು. ಅವನು ನಿಜವಾಗಿಯೂ ಅವಳ ಕಿಟಕಿಯ ಹತ್ತಿರ ಸತ್ತು ಬಿದ್ದದ್ದನ್ನು ಅವರು ಕಂಡ ಮೇಲೆ, ಸುಂದರಿ ರೆಮಿದಿಯೋಸ್ ಅವನ ಬಗ್ಗೆ ಇದ್ದ ಮೊದಲಿನ ಅಭಿಪ್ರಾಯವನ್ನು ಸ್ಥಿರಗೊಳಿಸಿದಳು.
ಅವಳು, “ಹೇಳಿದ್ನಲ್ಲ, ಅವನು ನಿಜವಾಗ್ಲೂ ಸರಳ ಮನುಷ್ಯ” ಎಂದಳು. ಅವಳಿಗೆ ಹೊರಗಿನ ನಡವಳಿಕೆಯ ಆಚೆಗಿನ ವಾಸ್ತವತೆಯನ್ನು ಕಾಣಲು ತೂರಿ ಬಂದ ಬೆಳಕೊಂದು ಅವಕಾಶವನ್ನು ದೊರಕಿಸಿ ಕೊಟ್ಟಹಾಗಾಯಿತು. ಕನಿಷ್ಠ ಪಕ್ಷ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ದೃಷ್ಟಿಕೋನ ಅದಾಗಿತ್ತು. ಏಕೆಂದರೆ ಅವನಿಗೆ ಎಲ್ಲರೂ ತಿಳಿದ ಹಾಗೆ ಸುಂದರಿ ರೆಮಿದಿಯೋಸ್ ಬುದ್ಧಿಮಾಂದ್ಯೆಯಲ್ಲ ಆದರೆ ಅದಕ್ಕೆ ವ್ಯತಿರಿಕ್ತವಾದವಳು ಎಂದು ಭಾವಿಸಿದ್ದ. ಅವನು, “ಇದೊಂದು ರೀತೀಲಿ ಇಪ್ಪತ್ತು ವರ್ಷದ ಯುದ್ಧದಿಂದ ವಾಪಸು ಬಂದ ಹಾಗೆ” ಎನ್ನುತ್ತಿದ್ದ. ಉರ್ಸುಲಾ ಮಾತ್ರ ಇಡೀ ಸಂಸಾರಕ್ಕೆ, ಅತ್ಯಂತ ಪರಿಶುದ್ಧವಾದವಳನ್ನು ಕೊಟ್ಟಿದ್ದಕ್ಕೆ ತನ್ನಷ್ಟಕ್ಕೆ ದೇವರನ್ನು ವಂದಿಸಿದಳು. ಆದರೆ ಅದೇ ಸಮಯದಲ್ಲಿ ಅವಳ ಸೌಂದರ್ಯದಿಂದ ವಿಚಲಿತಗೊಂಡಿದ್ದಳು. ಏಕೆಂದರೆ ಅದು ಅವಳ ಮುಗ್ಧತೆಯ ಕೇಂದ್ರದಲ್ಲಿದ್ದ ಪೈಶಾಚಿಕ ಬಲೆಯಂತೆ ಕಂಡಿತ್ತು. ಅದಕ್ಕಾಗಿಯೇ ಅವಳನ್ನು ಹೊರ ಜಗತ್ತಿನಿಂದ ದೂರವಿಡಲು ಪ್ರಪಂಚದ ಎಲ್ಲ ಪ್ರಲೋಭನೆಗಳಿಂದ ರಕ್ಷಿಸಲು ನಿರ್ಧರಿಸಿದ್ದಳು. ಆದರೆ ಅವಳಿಗೆ ಸುಂದರಿ ರೆಮಿದಿಯೋಸ್, ಅವಳ ತಾಯಿಯ ಗರ್ಭದಲ್ಲಿರುವಾಗಲೇ ನೀತಿ ಭ್ರಷ್ಟತೆಯಿಂದ ಸುರಕ್ಷಿತವಾಗಿದ್ದಳು ಎನ್ನುವುದರ ಅರಿವಿರಲಿಲ್ಲ. ಅವಳನ್ನು ಗೊಂದಲದ ಜಾತ್ರೆಯ ಸುಂದರಿ ಎಂದು ಆರಿಸುವರೆಂದು ಅವಳಿಗೆ ಹೊಳೆಯಲೇ ಇಲ್ಲ. ಆದರೆ ಹುಲಿಯ ವೇಷ ಹಾಕಿ ವಿಚಿತ್ರವಾಗಿ ವರ್ತಿಸಬಹುದೆಂಬ ಉತ್ಸಾಹದಿಂದ ಜಾತ್ರೆ ಎಂದರೆ ಅವಳು ಭಾವಿಸಿದ್ದಂತೆ ಸೌಂದರ್ಯ ಸ್ವರ್ಧೆ ಅಲ್ಲವೆಂದೂ, ಅದೊಂದು ಕ್ಯಾಥೊಲಿಕ್ ಸಂಪ್ರದಾಯವೆಂದೂ ಅವಳಿಗೆ ಮನದಟ್ಟು ಮಾಡಿಸಲು ಫಾದರ್ ಆಂಟೋನಿಯೋ ಇಸಬಲ್‌ನನ್ನು ಮನೆಗೆ ಕರೆದುಕೊಂಡು ಬಂದ. ಕೊನೆಗೆ ಮನಸ್ಸಿಲ್ಲದೆ ಕಿರೀಟಧಾರಣೆಗೆ ಒಪ್ಪಿಗೆ ಕೊಟ್ಟಳು.
ರೆಮಿದಿಯೋಸ್ ಬ್ಯುಂದಿಯಾ ಹಬ್ಬದ ಸ್ವತಂತ್ರ ಆಡಳಿತ ವಹಿಸುತ್ತಾಳೆನ್ನುವ ಸುದ್ದಿ ಕೆಲವೇ ಗಂಟೆಗಳಲ್ಲಿ ಆ ಪ್ರದೇಶವನ್ನು ದಾಟಿ, ಅವಳ ಸೌಂದರ್ಯದ ಹಿರಿಮೆ ಗೊತ್ತಿರದ ದೂರದ ಸ್ಥಳಗಳಿಗೆ ತಲುಪಿತು ಅವಳನ್ನು ವ್ಯವಸ್ಥೆಯನ್ನು ಬುಡಮೇಲು ಮಾಡುವ ಸಂಕೇತವೆಂದು ಇನ್ನೂ ತಿಳಿದವರಲ್ಲಿ ಆತಂಕವನ್ನು ಹುಟ್ಟಿಸಿತು. ಆದರೆ ಅವರ ಆತಂಕಕ್ಕೆ ಕಾರಣವಿರಲಿಲ್ಲ. ಆ ಸಮಯದಲ್ಲಿ ಯಾರಾದರೂ ಅಪಾಯವಿಲ್ಲದ ಮನುಷ್ಯನಿದ್ದಿದ್ದರೆ, ಅದು ದೇಶದ ವಾಸ್ತವದೊಡನೆ ಎಲ್ಲ ಸಂಪರ್ಕಗಳನ್ನು ನಿಧಾನವಾಗಿ ಕಳೆದುಕೊಳ್ಳುತ್ತಿದ್ದ, ವಯಸ್ಸಾಗುತ್ತಿದ್ದ ಹಾಗೂ ಭ್ರಮನಿರಸನಗೊಂಡ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ. ವರ್ಕ್‌ಶಾಪ್‌ನಲ್ಲಿ ಸೇರಿಹೋಗಿದ್ದ ಅವನಿಗೆ ಉಳಿದ ಪ್ರಪಂಚದ ಜೊತೆ ಇದ್ದ ಸಂಬಂಧ, ಬಂಗಾರದ ಸಣ್ಣ ಮೀನುಗಳ ತಯಾರಿಕೆ ಮಾತ್ರ. ಶಾಂತಿಯ ಮೊದಲ ದಿನಗಳಲ್ಲಿ ಅವನ ಮನೆಯ ರಕ್ಷಣೆಗಿದ್ದ ಸೈನಿಕರಲ್ಲೊಬ್ಬ ಆ ಪ್ರದೇಶದ ಹಳ್ಳಿಗಳಲ್ಲಿ ಅವುಗಳನ್ನು ಮಾರುತ್ತಿದ್ದ ಮತ್ತು ನಾಣ್ಯ ಹಾಗೂ ಸುದ್ದಿಗಳ ಜೊತೆ ವಾಪಸು ಬರುತ್ತಿದ್ದ. ಸಂಪ್ರದಾಯವಾದಿಗಳ ಸರ್ಕಾರ ಉದಾರವಾದಿಗಳ ಬೆಂಬಲದಿಂದ ಒಂದು ಸೂಚಿಪಟ್ಟಿ ರೂಪಿಸಿ ಅದರ ಪ್ರಕಾರ ಪ್ರತಿಯೊಬ್ಬ ಅಧ್ಯಕ್ಷನೂ ನೂರು ವರ್ಷ ಅಧಿಕಾರದಲ್ಲಿ ಇರುವಂತೆ ಮಾಡುತ್ತದೆ ಎಂದು ಅವನು ಹೇಳುತ್ತಿದ್ದ. ಪೂಜ್ಯ ಪೀಠದ ಜೊತೆ ಹೊಂದಾಣಿಕೆಗೆ ಕೊನೆಗೆ ಸಹಿ ಬಿದ್ದಿದ್ದಾಗಿಯೂ, ರೋಮ್‌ನಿಂದ ವಜ್ರಗಳ ಕಿರೀಟ ಮತ್ತು ಬಂಗಾರದ ಸಿಂಹಾಸನದ ಜೊತೆ ಧರ್ಮಾಧ್ಯಕ್ಷನೊಬ್ಬ ಬಂದಿರುವುದಾಗಿಯೂ ಮತ್ತು ಮಂಡಿಯೂರಿ ಕುಳಿತ ಉದಾರವಾದಿಗಳು ಅವನ ಉಂಗುರಕ್ಕೆ ಮುತ್ತಿಡುವ ಫೋಟೋಗಳನ್ನು ತೆಗೆಸಿಕೊಂಡಿದ್ದಾಗಿಯೂ ತಿಳಿಸಿದ. ಜೊತೆಗೆ ರಾಜಧಾನಿಯ ಮುಖಾಂತರ ಹಾದು ಹೋಗುತ್ತಿದ್ದ ಸ್ಪ್ಯಾನಿಷ್ ಕಂಪನಿಯ ಪ್ರಮುಖ ಮಹಿಳೆಯನ್ನು, ಮುಸುಕು ಹಾಕಿಕೊಂಡಿದ್ದ ದಾರಿಹೋಕರು ಎತ್ತಿಕೊಂಡು ಹೋದರು ಮತ್ತು ಅನಂತರದ ಭಾನುವಾರ ಗಣತಂತ್ರದ ಅಧ್ಯಕ್ಷರ ಬೇಸಿಗೆ ಮನೆಯಲ್ಲಿ, ಅವಳು ಬೆತ್ತಲೆ ನರ್ತಿಸಿದಳೆಂದು ಹೇಳಿದ. ಕರ್ನಲ್ ಅವನಿಗೆ, “ನಂಗೆ ರಾಜಕೀಯದ ಬಗ್ಗೆ ಹೇಳ್ಬೇಡ ನಮ್ಮ ಕೆಲ್ಸ ಸಣ್ಣ ಮೀನುಗಳನ್ನು ಮಾರೋದಷ್ಟೆ” ಎಂದು ಹೇಳುತ್ತಿದ್ದ. ಅವನು ವರ್ಕ್‌ಶಾಪ್‌ನಿಂದ ಸಿರಿವಂತನಾಗುತ್ತಿದ್ದರಿಂದಲೇ ದೇಶದ ಪರಿಸ್ಥಿತಿಯ ಬಗ್ಗೆ ಕೇಳಿಸಿಕೊಳ್ಳಲು ಇಷ್ಟಪಡದಿರುವುದಕ್ಕೆ ಕಾರಣ, ಎಂಬ ಗಾಳಿಮಾತು ಉರ್ಸುಲಾಳ ಕಿವಿಗೆ ಬಿದ್ದಾಗ, ಅವಳು ನಕ್ಕಳು. ವ್ಯವಹಾರ eನ ಹೆಚ್ಚಿಗೆ ಇದ್ದ ಅವಳಿಗೆ ಕರ್ನಲ್‌ನ ಉದ್ದಿಮೆ ಸರಿ ಕಾಣಲಿಲ್ಲ. ಏಕೆಂದರೆ ಅವನು ಬಂಗಾರದ ನಾಣ್ಯಗಳಿಗಾಗಿ ಸಣ್ಣ ಮೀನನ್ನು ಕೊಡುತ್ತಿದ್ದ ಮತ್ತು ಬಂಗಾರದ ನಾಣ್ಯಗಳನ್ನು ಸಣ್ಣ ಮೀನುಗಳಾಗಿ ಪರಿವರ್ತಿಸುತ್ತಿದ್ದ. ಇದು ಹೀಗೆಯೇ ಮುಂದುವರೆಯುತ್ತಿತ್ತು. ಇದರಿಂದಾಗಿ ಅವನು ಹೆಚ್ಚಿಗೆ ಮಾರಿದಷ್ಟೂ ಆ ವಿಷವೃತ್ತವನ್ನು ಸಮಾಧಾನ ಪಡಿಸಲು, ಇನ್ನೂ ಹೆಚ್ಚು ಕಷ್ಟ ಪಟ್ಟು ಕೆಲಸ ಮಾಡಬೇಕಾಗಿತ್ತು.
ಆದರೆ ನಿಜವಾಗಲೂ ಅವನಿಗೆ ಆಸಕ್ತಿ ಇದ್ದದ್ದು ತಯಾರಿಕೆಯಲ್ಲಲ್ಲ, ಕೆಲಸ ಮಾಡುವುದರಲಿ. ಅವನಿಗೆ ಈಜುರೆಕ್ಕೆಗಳನ್ನು ಹೊಂದಿಸಲು, ಕಣ್ಣಿಗೆ ಮಾಣಿಕ್ಯ ಜೋಡಿಸಿಡಲು, ಪುಪ್ಫಸಗಳಿಗೆ ಮಿರುಗು ಕೊಡಲು ಮತ್ತು ಪೊರೆಗಳನ್ನಿಡಲು, ಮನಸ್ಸನ್ನು ಕೇಂದ್ರೀಕರಿಸುವ ಅಗತ್ಯವಿದ್ದರಿಂದ ಯುದ್ಧದ ಭ್ರಮನಿರಸನ ತುಂಬಲು ಖಾಲಿಯಿದ್ದ ಅರೆಕ್ಷಣವೂ ಇರಲಿಲ್ಲ. ಅದರೆ ಕಲಾವಂತಿಕೆ ಎಷ್ಟು ಸೂಕ್ಷ್ನವಾಗಿತ್ತೆಂದರೆ, ಯುದ್ಧದ ಅಷ್ಟೂ ವರ್ಷಗಳಲ್ಲಿ ವಯಸ್ಸಾದಕ್ಕಿಂತ ಅತಿ ಕಡಿಮೆ ಸಮಯದಲ್ಲಿ ಹೆಚ್ಚಿಗೆ ವಯಸ್ಸಾದವನಂತಾದ ಮತ್ತು ಅವನು ಕುಳಿತುಕೊಳ್ಳುವ ಭಂಗಿ ಬೆನ್ನನ್ನು ಬಾಗಿಸಿತ್ತು, ಸೂಕ್ಷ್ಮ ಗಮನ ಕಣ್ಣನ್ನು ದಣಿಸಿತ್ತು. ಆದರೆ ಮನಸ್ಸನ್ನು ತೀವ್ರವಾಗಿ ಕೇಂದ್ರಿಕರಿಸುತ್ತಿದ್ದದ್ದು, ಅವನಿಗೆ ಪ್ರಶಾಂತ ಭಾವನೆಯನ್ನು ತಂದುಕೊಟ್ಟಿತ್ತು. ಅವನು ಕೊನೆಯ ಬಾರಿಗೆ ಯುದ್ಧಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಆಸಕ್ತಿ ತೋರಿಸಿದ್ದು ಯಾವಾಗೆಂದರೆ ಜೀವನಾದ್ಯಂತದ ನಿವೃತ್ತಿ ವೇತನಕ್ಕಾಗಿ ಎರಡೂ ಪಾರ್ಟಿಯ ಹಳಬರು ಅವನ ಬೆಂಬಲವನ್ನು ಅಪೇಕ್ಷಿಸಿದಾಗ. ಅದರ ಬಗ್ಗೆ ಮುಂಚೆಯಿಂದಲೂ ವಾಗ್ದಾನವಿತ್ತು ಮತ್ತು ಇನ್ನೇನು ಅದು ಕಾರ್ಯರೂಪಕ್ಕೆ ಬರುವುದರಲ್ಲಿತ್ತು. ಅವನು ಅವರಿಗೆ, “ಅದನ್ನು ಮರ್‍ತು ಬಿಡಿ…. ಸಾಯುವ ದಿನದ ತನಕ ಅದಕ್ಕಾಗಿ ಕಾಯುವ ಹಿಂಸೆಯಿಂದ ತಪ್ಪಿಸಿಕೊಳ್ಳೋದಕ್ಕೆ, ಪೆನ್ಷನ್‌ನ ನಾನು ಕಣ್ಣೆತ್ತಿ ನೋಡೋದಿಲ್ಲ” ಎಂದ. ಪ್ರಾರಂಭದಲ್ಲಿ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಸಾಯಂಕಾಲ ಬರುತ್ತಿದ್ದ ಮತ್ತು ಅವರಿಬ್ಬರೂ ಮುಂಬಾಗಿಲಲ್ಲಿ ಕುಳಿತುಕೊಂಡು ಹಳೆಯ ದಿನಗಳ ಬಗ್ಗೆ ಮಾತಾಡುತ್ತಿದ್ದರು. ಆದರೆ ಬೋಳಾದ ತಲೆಯ, ಅಕಾಲ ವೃದ್ಧಾಪ್ಯಕ್ಕೆ ಜಾರುತ್ತಿದ್ದ ಆ ಮನುಷ್ಯ ತನ್ನಲ್ಲಿ ಹುಟ್ಟಿಸುತ್ತಿದ್ದ ನೆನಪುಗಳನ್ನು, ಅಮರಾಂತಳಿಗೆ ತಡೆದುಕೊಳ್ಳಲಾಗಲಿಲ್ಲ. ಅವನನ್ನು ಇರಿತದ ಮಾತುಗಳಿಂದ ಯಾತನೆಗೆ ಗುರಿಪಡಿಸಿ, ವಿಶೇಷ ಸಂದರ್ಭಕ್ಕಲ್ಲದೆ ಮತ್ತೆ ಬಾರದಿರುವಂತೆ ಮಾಡಿದಳು. ಅವನು ಕೊನೆಗೆ ಪಾರ್ಶ್ವವಾಯುವಿನಿಂದ ಕಣ್ಮರೆಯಾದ. ಮಿತಭಾಷಿಯಾಗಿ, ಮೌನವಾಗಿ, ಇಡೀ ಮನೆಯನ್ನು ಅಲ್ಲಾಡುವಂತೆ ಮಾಡುತ್ತಿದ್ದ, ಸಂವೇದನೆ ರಹಿತನಾಗಿದ್ದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಒಳ್ಳೆಯ ವೃದ್ಧಾಪ್ಯದ ಗುಟ್ಟು, ಏಕಾಂತದ ಜೊತೆ ಗೌರವಯುತವಾದ ಒಪ್ಪಂದ ಎನ್ನುವುದು ಮಾತ್ರ ಅರ್ಥವಾಗುತ್ತಿತ್ತು. ಅವನು ಸಣ್ಣ ನಿದ್ದೆಯ ನಂತರ ಬೆಳಗಿನ ಜಾವ ಐದು ಗಂಟೆಗೆ ಎದ್ದು ಅಡುಗೆ ಮನೆಯಲ್ಲಿ ಎಂದಿನಂತೆ ಒಂದು ಮಗ್ ಕಹಿ ಕಾಫಿ ಕುಡಿದು ಬಾಗಿಲು ಹಾಕಿಕೊಂಡು ವರ್ಕ್‌ಶಾಪ್‌ನಲ್ಲಿ ಇದ್ದು ಬಿಡುತ್ತಿದ್ದ. ಮಧ್ಯಾಹ್ನ ನಾಲ್ಕಕ್ಕೆ ಸ್ಟೂಲ್ ಎಳೆದುಕೊಂಡು ಗುಲಾಬಿ ಪೂದೆಗಳ ಝಳಪನ್ನು ಗಮನಿಸದೆ ಅಥವಾ ಆ ಸಮಯದ ಸಂಭ್ರಮದ ಬೆಳಕನ್ನು ಅಥವಾ ಸಾಯಂಕಾಲ ಸ್ವಷ್ಟವಾಗಿ ಗೋಚರಿಸುತ್ತಿದ್ದ ಕುದಿಯುವ ಪಾತ್ರೆಯಂಥ ವೇದನೆಯನ್ನು ಗಮನಿಸದೆ, ಅಂಗಳಕ್ಕೆ ಹೋಗಿ ಸೊಳ್ಳೆಗಳು ಮುತ್ತುವ ತನಕ ಮುಂಬಾಗಿಲಲ್ಲಿ ಕುಳಿತಿರುತ್ತಿದ್ದ. ಒಮ್ಮೆ ಯಾರೋ ಒಬ್ಬರು ಅವನನ್ನು ಏಕಾಂತದಿಂದ ಕದಲಿಸುವ ಧೈರ್ಯ ಮಾಡಿದರು.
ಅವರು, “ಹೇಗಿದ್ದೀರಿ, ಕರ್ನಲ್?” ಎಂದು ಲೋಕಾಭಿರಾಮವಾಗಿ ಕೇಳಿದರು.
ಅವನು ಅದಕ್ಕೆ, “ಇಲ್ಲೆ ಕೂತ್ಕೊಂಡಿದೀನಿ. ನನ್ನ ಶವಯಾತ್ರೆ ಹಾದು ಹೋಗೋದಕ್ಕೆ ಕಾಯ್ತಾ ಇದೀನಿ” ಎಂದ.
ಇದರಿಂದ ಕಿರೀಟ ಧಾರಣೆಗೆ ಸಂಬಂಧಿಸಿದಂತೆ ಅವನ ಮನೆತನದ ಹೆಸರು ಮತ್ತೆ ಕಾಣಿಸಿಕೊಂಡದ್ದರಿಂದ ಉಂಟಾದ ಆತಂಕಕ್ಕೆ ಕಾರಣವಿರಲಿಲ್ಲ. ಆದರೂ ಬಹಳ ಜನ ಆ ರೀತಿಯಲ್ಲಿ ಯೋಚನೆ ಮಾಡಿರಲಿಲ್ಲ. ಆ ಅನಾಹುತದ ಸರಳತೆ ಆ ಭೀತಿಯನ್ನು ಹುಟ್ಟಿಸಿತ್ತು. ಇಡೀ ಊರು ಮುಖ್ಯ ಚೌಕದ ಬಳಿ ಸಂತೋಷ, ಸಡಗರದಿಂದ ನೆರೆದಿತ್ತು. ಜಾತ್ರೆ ತನ್ನ ಹುಚ್ಚಿನ ಪರಮಾವಧಿಯನ್ನು ಮುಟ್ಟಿತ್ತು ಮತ್ತು ಅವ್ರೇಲಿಯಾನೋ ಸೆಗುಂದೋ ಹುಲಿಯ ವೇಷ ಹಾಕಬೇಕೆಂಬ ಬಹಳ ದಿನಗಳ ಕನಸನ್ನು ಪೂರೈಸಿಕೊಂಡ ಮತ್ತು ಕೇಕೆ ಹಾಕುತ್ತಿದ್ದ ಜನ ಸಮುದಾಯದ ಮುಂದೆ ನಡೆದ ಹಾಗೂ ತುಂಬ ಹೆಚ್ಚು ಗರ್ಜಿಸಿ ಗಂಟಲು ಅವನ ಕಟ್ಟಿತು. ಆಗ ಹೊರಗೆ ರಸ್ತೆಯಲ್ಲಿ, ಕಲ್ಪಿಸಿಕೊಳ್ಳಲು ಸಾಧ್ಯವಾಗುವ ಅತ್ಯಂತ ಸುಂದರವಾದ ಹೆಣ್ಣನ್ನು ಬಂಗಾರದ ಲೇಪದ ಡೋಲಿಯಲ್ಲಿ ಅನೇಕ ಜನರು ಹೊತ್ತು ತರುತ್ತಿದ್ದರು. ಮಕೋಂದೋ ವಾಸಿಗಳು ಪಚ್ಚೆಗಳಿದ್ದ ಕಿರೀಟ ಧರಿಸಿ ಚರ್ಮದ ಜುಬ್ಬ ತೊಟ್ಟು ಮಿರುಗುತ್ತಿದ್ದವಳನ್ನು ಸರಿಯಾಗಿ ನೋಡಬೇಕೆಂದು ತಮ್ಮ ಮುಖವಾಡಗಳನ್ನು ತೆಗೆದರು. ಅವಳಿಗೆ ನೈತಿಕವಾದ ಅಧಿಕಾರವಿದ್ದಂತಿತ್ತು ಮತ್ತು ಶ್ರೇಷ್ಠವಾದ ಬಳೆ ಮತ್ತು ಕ್ರೇಪ್ ಪೋಷಾಕಿನವಳಾಗಿರಲಿಲ್ಲ. ಸಾಕಷ್ಟು ಒಳಗಿನ ವಿಷಯವನ್ನು ತಿಳಿದವರು ಅದೊಂದು ಪ್ರಚೋದನೆಯ ಅಂಶವೆಂದು ಅನುಮಾನಿಸಿದರು. ಆದರೆ ಅವ್ರೇಲಿಯಾನೋ ಸೆಗುಂದೋ ತಬ್ಬಿಬ್ಬಾದದ್ದನ್ನು ನಿಯಂತ್ರಿಸಿಕೊಂಡು ಮತ್ತು ಹೊಸದಾಗಿ ಬಂದವರನ್ನು ಗೌರವಪೂರ್ಣ ಅತಿಥಿಗಳೆಂದು ಘೋಷಿಸಿದ ಮತ್ತು ಬುದ್ಧಿವಂತಿಕೆಯಿಂದ ಸುಂದರಿ ರೆಮಿದಿಯೋಸ್ ಹಾಗೂ ಆಗಮಿಸಿದ್ದ ರಾಣಿಯನ್ನು ಒಂದೇ ವೇದಿಕೆಯ ಮೇಲೆ ಕೂಡಿಸಿದ. ಮಧ್ಯ ರಾತ್ರಿಯ ತನಕ ಅರಬ್ಬೀಗಳ ಹಾಗೆ ಮರೆಮಾಚಿಕೊಂಡವರು ಸಂಭ್ರಮದಲ್ಲಿ ಪಾಲುಗೊಂಡರು ಮತ್ತು ಪಟಾಕಿ ಹೊಡೆದು, ದೊಂಬರಾಟದಿಂದ ಜಿಪ್ಸಿಗಳನ್ನು ನೆನಪಿಗೆ ತಂದು, ಹೆಚ್ಚು ಸೊಬಗನ್ನು ಒದಗಿಸಿಕೊಟ್ಟರು. ಇದ್ದಕ್ಕಿದ್ದಂತೆ ಸಮಾರಂಭದ ಉತ್ತುಂಗದಲ್ಲಿ ಯಾರೋ ಒಬ್ಬ ಪರಿಸ್ಥಿತಿಯನ್ನು ಏರುಪೇರು ಮಾಡಿದ.
ಅವನು, “ಉದಾರವಾದಿ ಪಾರ್ಟಿ ಚಿರಾಯುವಾಗಲಿ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಚಿರಾಯುವಾಗಲಿ” ಎಂದು ಕೂಗಿದ.
ಬಂದೂಕಿನ ಗುಂಡಿನ ಶಬ್ದಗಳು ಪಟಾಕಿಯ ಸಂಭ್ರಮದ ಶಬ್ದವನ್ನು ಮುಳುಗಿಸಿದವು ಮತ್ತು ಆರ್ತನಾದ ಸಂಗೀತವನ್ನು ಮುಳುಗಿಸಿತು ಹಾಗೂ ಸಂತೋಷ ಗಾಬರಿಯಾಗಿ ಮಾರ್ಪಟ್ಟಿತು. ಅನೇಕ ವರ್ಷಗಳ ನಂತರವೂ ಆಗಮಿಸಿದ ರಾಣಿಯ ರಾಜರಕ್ಷಣಾ ದಳದವರು ತಮ್ಮ ವಿಚಿತ್ರ ಉಡುಪಿನೊಳಗೆ ಸರ್ಕಾರ ಕೊಟ್ಟ ಬಂದೂಕುಗಳನ್ನು ಅಡಗಿಸಿಟ್ಟುಕೊಂಡ ಆಯುಧಧಾರಿ ಸೈನಿಕರೆಂದೇ ಹೇಳುವವರಿದ್ದರು. ಸರ್ಕಾರ ವಿಶೇಷ ಹೇಳಿಕೆಯೊಂದರಿಂದ ಅದನ್ನು ಅಲ್ಲಗಳೆಯಿತು ಮತ್ತು ಆ ಘೋರ ಘಟನೆಯ ಬಗ್ಗೆ ಸಂಪೂರ್ಣ ವಿಚಾರಣೆ ನಡೆಸಲು ವಾಗ್ದಾನ ಮಾಡಿತು. ಆದರೆ ಸತ್ಯ ಸಂಗತಿ ಬೆಳಕಿಗೆ ಬರಲಿಲ್ಲ ಮತ್ತು ಯಾವಾಗಲೂ ದೊರೆತ ವಿವರಣೆಯೆಂದರೆ ರಾಜರಕ್ಷಣಾ ದಳದವರು ಯಾವ ಬಗೆಯ ಪ್ರಚೋದನೆಯೂ ಇಲ್ಲದೆ, ಅವರ ಕಮಾಂಡರ್‌ನ ಸೂಚನೆಯ ಮೇರೆಗೆ ಆಯಕಟ್ಟು ಸ್ಥಳಗಳಲ್ಲಿ ನಿಂತುಕೊಂಡು, ಗುಂಪಿನ ಮೇಲೆ ಯಾವುದೇ ಕರುಣೆಯಿಲ್ಲದೆ ಗುಂಡು ಹಾರಿಸಿದರು. ಎಲ್ಲವೂ ಮತ್ತೆ ಶಾಂತ ಸ್ಥಿತಿಗೆ ಬಂದ ಮೇಲೆ ಒಬ್ಬನೇ ಒಬ್ಬ ಸುಳ್ಳು ಅರಬ್ಬೀ ವೇಷದವನೂ ಊರಿನಲ್ಲಿ ಇರಲಿಲ್ಲ. ಚೌಕದಲ್ಲಿ ಸತ್ತವರು, ಗಾಯಾಳುಗಳು ಅನೇಕರಿದ್ದರು: ಒಂಬತ್ತು ವಿದೂಷಕರು, ನಾಲ್ವರು ಸ್ಥಳೀಯರು, ಹದಿನೇಳು ಪ್ಲೇಯಿಂಗ್ ಕಾರ್ಡ್ ರಾಜರು, ಒಬ್ಬ ಭೂತದ ವೇಷದವನು, ಮೂವರು ಸಹಾಯಕರು, ಫಾನ್ಸ್‌ನ ಇಬ್ಬರು ಶ್ರೀಮಂತರು ಮತ್ತು ಮೂವರು ಜಪಾನಿನ ರಾಜಕುಮಾರಿಯರು. ಆ ಗಾಬರಿಯ ಗೊಂದಲದಲ್ಲಿ ಹೊಸೆ ಅರ್ಕಾದಿಯೋ ಸೆಗುಂದೋ ಸುಂದರಿ ರೆಮಿದಿಯೋಸ್‌ಳನ್ನು ರಕ್ಷಿಸಲು ಅವಕಾಶ ಮಾಡಿಕೊಂಡ ಮತ್ತು ಅವ್ರೇಲಿಯಾನೋ ಸೆಗುಂದೋ ಬಟ್ಟೆ ಹರಿದ, ಚರ್ಮದ ಜುಬ್ಬಕ್ಕೆ ರಕ್ತ ಅಂಟಿದ್ದ ಆಗಂತುಕ ರಾಣಿಯನ್ನು, ತನ್ನ ಕೈಯಲ್ಲಿ ಹೊತ್ತುಕೊಂಡು ಮನೆಗೆ ಹೋದ. ಅವಳ ಹೆಸರು ಫೆರ್ನಾಂಡ ದೆಲ್ ಕಾರ್ಪಿಯೋ. ಅವಳನ್ನು ಆ ಪ್ರದೇಶದ ಐದು ಸಾವಿರ ಸುಂದರಿಯರಲ್ಲಿ ಅತ್ಯಂತ ಸುಂದರಿ ಎಂದು ಆರಿಸಲಾಗಿತ್ತು ಮತ್ತು ಅವರು ಅವಳನ್ನು ಮಡಗಾಸ್ಕರ್‌ನ ರಾಣಿಯೆಂದು ಹೆಸರಿಸುವುದಾಗಿ ಮಾತುಕೊಟ್ಟು, ಮಕೋಂದೋಗೆ ಕರೆದುಕೊಂಡು ಬಂದಿದ್ದರು. ಉರ್ಸುಲಾ ಅವಳನ್ನು ತನ್ನ ಸ್ವಂತ ಮಗಳಂತೆ ನೋಡಿಕೊಂಡಳು. ಊರಿನವರು ಅವಳ ಮುಗ್ಧತೆಯನ್ನು ಅನುಮಾನಿಸುವುದಕ್ಕಿಂತ, ಅವಳ ಅವಸ್ಥೆಗೆ ಮರುಕ ತೋರಿಸಿದರು. ಹತ್ಯಾಕಾಂಡ ನಡೆದು ಆರು ತಿಂಗಳ ನಂತರ ಗಾಯಾಳುಗಳು ಗುಣವಾದ ಮೇಲೆ ಮತ್ತು ಸಾಮೂಹಿಕ ಗೋರಿಯ ಮೇಲಿನ ಹೂಗಳು ಹುಡಿಯಾದ ಮೇಲೆ, ಅವ್ರೇಲಿಯಾನೋ ಸೆಗುಂದೋ ತನ್ನ ತಂದೆಯ ಜೊತೆ ದೂರದ ಪಟ್ಟಣದಲ್ಲಿ ಇದ್ದ ಅವಳನ್ನು ಕರೆದುಕೊಂಡು ಬರಲು ಹೋದ ಮತ್ತು ಇಪ್ಪತ್ತು ದಿನ ನಡೆದ ಗದ್ದಲದ ಸಮಾರಂಭದಲ್ಲಿ ಮಕೋಂದೋದಲ್ಲಿ ಮದುವೆಯಾದ.
೧೧
ಮದುವೆಯಾದ ಎರಡು ತಿಂಗಳ ನಂತರ ಅದು ಮುರಿದು ಬೀಳುವ ಹಂತಕ್ಕೆ ಬಂದಿತ್ತು. ಏಕೆಂದರೆ ಅವ್ರೇಲಿಯಾನೋ ಸೆಗುಂದೋ ಪೆತ್ರಾ ಕೊತೆಸ್‌ಗೆ ಸಮಾಧಾನ ಮಾಡುವ ಪ್ರಯತ್ನದಲ್ಲಿ ಅವಳಿಗೆ ಮಡಗಾಸ್ಕರ್‌ನ ರಾಣಿಯ ಹಾಗೆ ಉಡುಪು ತೊಡಿಸಿ ಒಂದು ಫೋಟೋ ತೆಗೆಸಿದ್ದ. ಈ ಸಂಗತಿ ಫೆರ್ನಾಂಡಳಿಗೆ ತಿಳಿದಾಗ ಮದುವಣಗಿತ್ತಿಯ ಸಾಮಾನುಗಳನ್ನು ಗಂಟು ಮೂಟೆ ಕಟ್ಟಿಕೊಂಡು ಯಾರಿಗೂ ಹೇಳದೆ ಕೇಳದೆ ಮಕೋಂದೋ ಬಿಟ್ಟು ಹೊರಟಳು. ಅವ್ರೇಲಿಯಾನೋ ಸೆಗುಂದೋ ಧಾವಿಸಿ ಹೋಗಿ, ಊರಾಚೆಯ ದಾರಿಯಲ್ಲಿ ತಡೆದ. ಅನೇಕ ರೀತಿಯಲ್ಲಿ ಕೇಳಿಕೊಂಡು ಮತ್ತು ತಾನು ಸುಧಾರಿಸುವುದಾಗಿ ಮಾತು ಕೊಟ್ಟ ಮೇಲೆ, ಅವಳನ್ನು ಮತ್ತೆ ಮನೆಗೆ ಕರೆದುಕೊಂಡು ಬರಲು ಸಾಧ್ಯವಾಯಿತು ಮತ್ತು ಇಟ್ಟುಕೊಂಡವಳನ್ನು ಕೈ ಬಿಟ್ಟ.
ತನ್ನ ಶಕ್ತಿಯ ಬಗ್ಗೆ ಅರಿವಿದ್ದ ಪೆತ್ರಾ ಕೊತೆಸ್ ಯಾವುದೇ ರೀತಿಯ ಆತಂಕವನ್ನು ವ್ಯಕ್ತಪಡಿಸಲಿಲ್ಲ. ಅವಳು ಅವನನ್ನು ಗಂಡಸನ್ನಾಗಿ ಮಾಡಿದ್ದಳು. ವಿಚಿತ್ರ ಆಲೋಚನೆಗಳನ್ನು ತಲೆಯಲ್ಲಿ ತುಂಬಿಕೊಂಡ ಅವಳು ಅವನನ್ನು ಮೆಲ್‌ಕಿಯಾದೆಸ್‌ನ ರೂಮಿನಿಂದ ಸೆಳೆದಾಗ ಅವನಿನ್ನೂ ಚಿಕ್ಕವನಾಗಿದ್ದ ಮತ್ತು ವಾಸ್ತವದ ಜೊತೆ ಸಂಪರ್ಕದ ಕೊರತೆ ಇತ್ತು. ಅವಳು ಅವನಿಗೆ ಈ ಪ್ರಪಂಚದಲ್ಲಿ ಒಂದು ಸ್ಥಾನವನ್ನು ದೊರಕಿಸಿಕೊಟ್ಟಿದ್ದಳು. ಸ್ವಭಾವತಃ ಅವನು ತನ್ನಷ್ಟಕ್ಕೆ ಅಂತರ್ಮುಖಿಯಾಗಿದ್ದು ಏಕಾಂತದ ಕಡೆ ಒಲವಿತ್ತು. ಅವಳು ಅದಕ್ಕೆ ವಿರುದ್ಧವಾದ ಮುಖ್ಯವಾದ, ಮುಕ್ತವಾದ ಸ್ವಭಾವವನ್ನು ಅವನಲ್ಲಿ ಮೈಗೂಡಿಸಿದಳು ಮತ್ತು ಬದುಕಲು ಉತ್ಸಾಹವನ್ನು ತುಂಬಿದ್ದಳು. ತಾನು ಹುಡುಗಿಯಾಗಿದ್ದಾಗಿನಿಂದಲೂ ಕಲ್ಪಿಸಿಕೊಂಡ ಹಾಗೆ ಅವನನ್ನು ವ್ಯಯಮಾಡುವ, ಸಂಭ್ರಮಿಸುವ ಮನುಷ್ಯನನ್ನಾಗಿ ಪರಿವರ್ತಿಸಿದ್ದಳು. ಕಾಲಕ್ರಮೇಣ ಎಲ್ಲರೂ ಮದುವೆಯಾಗುವ ಹಾಗೆ ಅವನೂ ಮದುವೆಯಾದ. ಅವಳಿಗೆ ಆ ಸುದ್ದಿಯನ್ನು ಹೇಳಲು ಅವನಿಗೆ ಧೈರ್ಯವಾಗಲಿಲ್ಲ. ಆ ಸಂದರ್ಭದಲ್ಲಿ ಅವನು ಸಿಟ್ಟು, ಸೆಡವುಗಳ ಹುಡುಗುತನದ ಧೋರಣೆ ತಳೆದ. ಇದರಿಂದ ಪೆತ್ರಾ ಕೊತೆಸ್ ಸಂಬಂಧ ಮುರಿಯುತ್ತಾಳೆ ಎಂದುಕೊಂಡ. ಒಂದು ದಿನ ವಿನಾಕಾರಣ ಅವಳನ್ನು ಬೈದ ಹಾಗೆ ಮಾಡಿದಾಗ ಅವಳು ಅದರ ಉದ್ದೇಶ ಸಫಲವಾಗಲು ಬಿಡದೆ ನಿಜಾಂಶ ತೆರೆದಿಟ್ಟಳು,
“ಇದರರ್ಥ ಏನಂದ್ರೆ, ನೀವು ರಾಣೀನ ಮದ್ವೆ ಆಗ್ಬೇಕು,ಅಲ್ವ” ಎಂದಳು.
ಅವ್ರೇಲಿಯಾನೋ ಸೆಗುಂದೋ ರೋಷ ಉಕ್ಕಿದವನ ಹಾಗೆ ತೋರಿಸಿಕೊಂಡು ತನ್ನನ್ನು ತಪ್ಪು ತಿಳಿದುಕೊಂಡಿದ್ದಾಗಿ ಮತ್ತು ಅವಮಾನ ಮಾಡಿದ್ದಾಗಿ ಹೇಳಿ ಮತ್ತೆ ಅವಳ ಬಳಿಗೆ ಹೋಗಲಿಲ್ಲ. ಆದರೆ ಪೆತ್ರಾ ಕೊತೆಸ್ ಒಂದು ಕ್ಷಣವೂ ತನ್ನ ಸ್ತಿಮಿತ ಕಳೆದುಕೊಳ್ಳದೆ ಮದುವೆಯ ಸಂಗೀತ, ಪಟಾಕಿ ಸಿಡಿತ ಮತ್ತು ಸಂಭ್ರಮದ ಅಬ್ಬರಗಳನ್ನು, ಅವ್ರೇಲಿಯಾನೋ ನಡೆಸುತ್ತಿರುವ ಯಾವುದೋ ಹೊಸ ತುಂಟತನದ ರೀತಿಯೆಂದು ಕೇಳಿಸಿಕೊಂಡಳು. ಅವಳ ಬಗ್ಗೆ ಮರುಕ ತೋರಿಸಿದವರಿಗೆ ಮುಗುಳ್ನಕ್ಕು, “ಏನೂ ಯೋಚ್ನೆ ಮಾಡ್ಬೇಡಿ. ರಾಣಿ ನಂಗೋಸ್ಕರ ತಪ್ಪು ಮಾಡ್ತಾಳೆ” ಎಂದಳು. ನೆರಮನೆಯ ಹೆಂಗಸೊಬ್ಬಳು ಅವಳಿಗೆ ತನ್ನ ಪ್ರಿಯತಮನ ಚಿತ್ರದ ಎದುರು ಹಚ್ಚಿಡಲೆಂದು ಕ್ಯಾಂಡಲ್‌ಗಳನ್ನು ತಂದು ಕೊಟ್ಟಾಗ, “ಅವ್ರು ವಾಪಸು ಬರೋ ಹಾಗೆ ಮಾಡುವ ಕ್ಯಾಂಡಲ್ ಯಾವಾಗ್ಲೂ ಉರೀತಿರತ್ತೆ” ಎಂದು ನಿಗೂಢ ಭದ್ರ್ರತೆಯಿಂದ ಹೇಳಿದಳು.
ಅವಳು ನಿರೀಕ್ಷಿಸಿದ ಹಾಗೆ ಅವ್ರೇಲಿಯಾನೋ ಸೆಗುಂದೋ ಹನಿಮೂನ್ ಮುಗಿದ ಕೂಡಲೆ ಅವಳ ಬಳಿಗೆ ಹೋದ. ಅವನು ತನ್ನೊಂದಿಗೆ ಎಂದಿನ ಹಳೆಯ ಸ್ನೇಹಿತ, ತಿರುಗಾಟದ ಛಾಯಾಚಿತ್ರಗಾರನನ್ನು ಮತ್ತು ಜಾತ್ರೆಯಲ್ಲಿ ಫೆರ್ನಾಂಡ ತೊಟ್ಟುಕೊಂಡು, ರಕ್ತದ ಕಲೆಗಳಿದ್ದ ಗೌನ್ ಮತ್ತು ಪ್ರಾಣಿಯ ಚರ್ಮದ ಹೊದಿಕೆ ತಂದಿದ್ದ. ಅಂದಿನ ಸಾಯಂಕಾಲದ ಸಂತೋಷದ ತೀವ್ರತೆಯಲ್ಲಿ ಅವನು ಪೆತ್ರಾ ಕೊತೆಸ್‌ಗೆ ರಾಣಿಯ ಹಾಗೆ ಉಡುಪು ತೊಡಿಸಿ, ಜೀವನ ಪರ್‍ಯಂತ ಮಡಗಾಸ್ಕರ್‌ನ ರಾಣಿಯೆಂದು ಸಾರಿ ಕಿರೀಟ ಹಾಕಿದ ಮತ್ತು ಅದರ ಭಾವಚಿತ್ರಗಳನ್ನು ಸ್ನೇಹಿತರಿಗೆ ಕೊಟ್ಟ. ಅವಳು ಹಾಗೆಯೇ ಆಟದಲ್ಲಿ ಮುಂದುವರಿದಿದ್ದಲ್ಲದೆ, ಒಳಗೊಳಗೆ ಅವನ ಬಗ್ಗೆ ಮರುಗುತ್ತ, ಇಷ್ಟೊಂದು ಅದ್ದೂರಿಯ ರೀತಿಯಲ್ಲಿ ಸಮಾಧಾನ ಪಡಿಸಲು ಅವನು ನಿಜಕ್ಕೂ ಭಯಗೊಂಡಿರಬೇಕೆಂದು ಯೋಚಿಸಿದಳು. ಸಾಯಂಕಾಲ ಏಳು ಗಂಟೆಗೆ ಅವಳಿನ್ನೂ ರಾಣಿಯ ತೊಡುಗೆಯಲ್ಲಿ ಇರುವಂತೆಯೋ ಅವನನ್ನು ಹಾಸಿಗೆಯಲ್ಲಿ ಜೊತೆಗೂಡಿದಳು. ಅವನಿಗೆ ಮದುವೆಯಾಗಿ ಇನ್ನೂ ಎರಡು ತಿಂಗಳು ಕಳೆದಿರಲಿಲ್ಲ ಆದರೆ ಹಾಸಿಗೆಯಲ್ಲಿ ಎಲ್ಲವೂ ಸುಸೂತ್ರವಾಗಿಲ್ಲ ಎಂದು ಅವಳಿಗೆ ತಕ್ಷಣವೇ ಅರಿವಾಯಿತು ಮತ್ತು ತನ್ನ ದ್ವೇಷ ತೀರಿಸಿಕೊಂಡ ಸಂತೋಷ ಸಿಕ್ಕಿತು. ಆದರೆ ಎರಡು ದಿನಗಳ ನಂತರ, ಮಧ್ಯವರ್ತಿಯೊಬ್ಬನನ್ನು ಪರಸ್ಪರ ಬೇರ್ಪಡಲು ನಿಯಮಾವಳಿಗಳನ್ನು ಸಿದ್ಧಪಡಿಸಲು ಕಳಿಸಿದಾಗ ತಾನು ಭಾವಿಸಿದ್ದಕ್ಕಿಂತ ಹೆಚ್ಚಿನ ತಾಳ್ಮೆ ಬೇಕಾಗುತ್ತದೆ, ಏಕೆಂದರೆ ಅವನು ತೋರಿಕೆಗಾಗಿ ತನ್ನನ್ನು ತಾನೆ ತ್ಯಾಗಮಾಡುವ ಹಾಗಿದ್ದಾನೆ ಎಂದು ಅವಳಿಗೆ ಮನವರಿಕೆಯಾಯಿತು. ಅವಳು ಆಗ ಕಳವಳಗೊಳ್ಳಲಿಲ್ಲ. ಆದರೆ ಮತ್ತೊಮ್ಮೆ, ಅವಳೊಂದು ದರಿದ್ರ ಪಿಶಾಚಿ ಎಂದು ಸಾಮಾನ್ಯವಾಗಿ ಇದ್ದ ನಂಬಿಕೆಯನ್ನು ಬೆಂಬಲಿಸುವಂತೆ ನಡೆದುಕೊಂಡಳು ಮತ್ತು ಅವ್ರೇಲಿಯಾನೋ ಸೆಗುಂದೋನ ನೆನಪಿನ ಕಾಣಿಕೆಯಾಗಿ ಅವನ ಚರ್ಮದ ಒಂದು ಜೊತೆ ಬೂಟುಗಳನ್ನು ಮಾತ್ರ ಇಟ್ಟುಕೊಂಡಳು. ಅವನೇ ಹೇಳುತ್ತಿದ್ದ ಹಾಗೆ, ಅವನು ಅವುಗಳನ್ನು ತನ್ನ ಶವದ ಪೆಟ್ಟಿಗೆಯಲ್ಲಿ ಮಾತ್ರ ತೊಟ್ಟುಕೊಳ್ಳಲು ಬಯಸಿದ್ದ. ಅವಳು ಅವುಗಳನ್ನು ಬಟ್ಟೆಯಲ್ಲಿ ಸುತ್ತಿ ಟ್ರಂಕಿನ ಕೆಳಗಿಟ್ಟಳು ಮತ್ತು ಯಾವುದೇ ಹತಾಶೆಯಿಲ್ಲದೆ ಕಾಯುತ್ತ, ನೆನಪುಗಳ ಮೇಲೆ ಜೀವಿಸಿರಲು ಅಣಿಯಾದಳು.
ಅವಳು, “ಅವ್ನು ಈ ಶೂಸ್ ಹಾಕ್ಕೊಳ್ಳೋಕಾದ್ರೂ ಇವತ್ತಲ್ಲ ನಾಳೆ ಬಂದೇ ಬರ್‍ತಾನೆ” ಎಂದು ತನ್ನಷ್ಟಕ್ಕೆ ಹೇಳಿಕೊಂಡಳು.
ಅವಳು ತಾನು ಕಲ್ಪಿಸಿದ ಸಮಯದ ತನಕ ಕಾಯಬೇಕಾಗಿರಲಿಲ್ಲ. ವಾಸ್ತವವಾಗಿ ಅವ್ರೇಲಿಯಾನೋ ಸೆಗುಂದೋಗೆ ಮದುವೆಯಾದ ರಾತ್ರಿಯಿಂದಲೇ ಪೆತ್ರಾ ಕೊತೆಸ್ ಬಳಿಗೆ ಚರ್ಮದ ಶೂ ಹಾಕಿಕೊಳ್ಳಬೇಕಾಗುವ ಬಹಳಷ್ಟು ಮುಂಚೆಯೇ ಹಿಂತಿರುಗುತ್ತೇನೆಂದು ಭಾಸವಾಗಿತ್ತು. ಫೆರ್ನಾಂಡ ಈ ಪ್ರಪಂಚದಲ್ಲಿ ದಿಕ್ಕೆಟ್ಟ ಹೆಂಗಸಾಗಿದ್ದಳು. ಅವಳು ಹುಟ್ಟಿ ಬೆಳೆದದ್ದು ಆರು ನೂರು ಮೈಲಿಗಳಾಚೆಯ, ಗಾಬರಿ ಹುಟ್ಟಿಸುವ ರಾತ್ರಿಗಳಲ್ಲಿ. ಈಗಲೂ ವೈಸ್‌ರಾಯ್‌ಗಳ ವಾಹನಗಳು ಅಲುಗಾಡಿ ಶಬ್ದಮಾಡುತ್ತ ರಸ್ತೆಗಳಲ್ಲಿ ಚಲಿಸುವ ಮಂಕು ಬಡಿದ ಪಟ್ಟಣವೊಂದರಲ್ಲಿ. ಮೂವತ್ತೆರಡು ಘಂಟಾಗೋಪುರಗಳು ಬೆಳಿಗ್ಗೆ ಆರು ಗಂಟೆಗೆ ಸ್ಮಶಾನಗೀತೆ ಮೊಳಗುವ, ಗೋಪುರದಂತೆ ಜೋಡಿಸಿದ ಚಪ್ಪಡಿಗಳ ಆ ಹೆಂಗಸಿನ ಮನೆಯಲ್ಲಿ, ಎಂದೂ ಸೂರ್ಯನ ಪ್ರವೇಶವಿರಲಿಲ್ಲ ಅಂಗಳದ ಮೂಲೆಗಳಲ್ಲಿ, ಬೆಡ್‌ರೂಮಿನ ಮಂಕು ಗೂಡುಗಳಲ್ಲಿ, ಕಳೆಗೆಟ್ಟ ಕೈತೋಟದ ತೊಟ್ಟಿಕ್ಕುವ ಕಮಾನುಗಳಲ್ಲಿ ಗಾಳಿ ಸತ್ತು ಹೋಗಿತ್ತು. ದೊಡ್ಡವಳಾಗುವ ತನಕ ಫೆರ್ನಾಂಡಗೆ, ಹತ್ತಿರದ ಮನೆಯೊಂದರಲ್ಲಿ ವರ್ಷಗಟ್ಟಲೆ, ಮಧ್ಯಾಹ್ನದ ನಿದ್ದೆಯನ್ನು ಮಾಡಬಾರದೆಂಬ ಹಠದ ಮನುಷ್ಯನೊಬ್ಬನ ಪಿಯಾನೋದ ಜೋಬದ್ರ ಕ್ಲಾಸುಗಳನ್ನು ಬಿಟ್ಟರೆ, ಅವಳಿಗೆ ಪ್ರಪಂಚದ ಬಗ್ಗೆ ಬೇರೆ ಯಾವ ಪರಿeನವಿರಲಿಲ್ಲ. ಅವಳ ಕಾಯಿಲೆಯ ತಾಯಿ ಇದ್ದ, ಕಿಟಕಿಯ ಬಾಗಿಲಿನ ಪುಡಿಯಿಂದ ಉಂಟಾದ ಹಸಿರು, ಹಳದಿ ಬೆಳಕು ಹರಡಿದ ರೂಮಿನಲ್ಲಿ, ಗೊತ್ತಾದ ಕ್ರಮದ, ಪಟ್ಟು ಹಿಡಿದ ಹೃದಯಹೀನ ಧ್ವನಿಯ ಏರಿಳಿತಗಳನ್ನು ಕೇಳಿಸಿಕೊಳ್ಳುತ್ತಿದ್ದಳು ಮತ್ತು ಪ್ರಪಂಚದಲ್ಲಿ ಸಂಗೀತವಿz, ಆದರೆ ತನಗೆ ಮಾತ್ರ ಶವಸಂಸ್ಕಾರಕ್ಕೆ ಹೂವಿನ ಹಾರ ಹೆಣೆಯುವ ಕೆಲಸ ಕೊಟ್ಟಿದ್ದಾರೆಂದು ಅವಳು ತಿಳಿದಳು. ಅವಳ ತಾಯಿ, ಜ್ವರದ ತಾಪದಿಂದ ಐದು ಗಂಟೆಗೆ ಬೆವರು ಸುರಿಸುತ್ತ ಗತಕಾಲದ ವೈಭsವವನ್ನು ಹೇಳುತ್ತಿದ್ದಳು. ಅವಳು ಚಿಕ್ಕ ಹುಡುಗಿಯಾಗಿದ್ದಾಗ ಒಮ್ಮೆ, ಹುಣ್ಣಿಮೆಯ ರಾತ್ರಿಯಲ್ಲಿ ಬಿಳಿಯ ಉಡುಗೆ ತೊಟ್ಟ ಸುಂದರಿಯೊಬ್ಬಳು ಕೈತೋಟದಿಂದ ಆರಾಧನಾ ಮಂದಿರದ ಕಡೆಗೆ ಹೋದದ್ದನ್ನು ನೋಡಿದಳು. ಅವಳನ್ನು ಹೆಚ್ಚಾಗಿ ಕಾಡಿದ್ದೇನೆಂದರೆ ಹಾದು ಹೋದ ದೃಶ್ಯದಲ್ಲಿ ಆಕೆ, ಇಪ್ಪತ್ತು ವರ್ಷಗಳ ನಂತರ ತಾನಿರಬಹುದಾದ ಹಾಗೆ ಇದ್ದಳು, ಎಂದು. ಅವಳ ತಾಯಿ, ಕೆಮ್ಮುವುದನ್ನು ತಡೆ ಹಿಡಿದು, “ಅವಳು ರಾಣಿ, ನಿನ್ನ ಮುತ್ತಜ್ಜಿ, ಹಾರವನ್ನು ತುಂಡು ಮಾಡುವಾಗ ಅದೆಂಥದೋ ಕೆಟ್ಟದ್ದನ್ನು ಕುಡಿದು ಸತ್ತಳು” ಎಂದಳು. ಅನೇಕ ವರ್ಷಗಳ ನಂತರ ಮುತ್ತಜ್ಜಿಯಂತೆ ತಾನಿರುತ್ತೇನೆ ಎಂಬ ಭಾವನೆ ಬಂದು ಫೆರ್ನಾಂಡ, ತಾನು ಚಿಕ್ಕಂದಿನಲ್ಲಿ ಕಂಡದ್ದನ್ನು ಅನುಮಾನಿಸಿದಾಗ ಅವಳ ತಾಯಿ, “ನಾವು ಭಾರಿ ಶ್ರೀಮಂತರು ಮತ್ತು ಶಕ್ತಿಶಾಲಿಗಳು. ಒಂದಿನ ನೀನೂ ರಾಣಿಯಾಗ್ತೀಯ” ಎಂದು ಅವಳ ಅಪನಂಬಿಕೆಗಾಗಿ ಬೈದಳು.
ಅವರು ಹತ್ತಿ ಬಟ್ಟೆಯ ಟೇಬಲ್ ಕ್ಲಾತ್ ಹಾಕಿದ್ದ ಉದ್ದನೆ ಟೇಬಲ್‌ನ ಬಳಿ ಕುಳಿತಿದ್ದರೂ ಅವಳು ಅದನ್ನು ನಂಬಿದಳು. ಎದುರಿಗೆ ಬೆಳ್ಳಿ ತಟ್ಟೆಯಲ್ಲಿ ನೀರಲ್ಲಿ ನೆನೆಸಿದ ಚಾಕಲೇಟ್ ಮತ್ತು ಸಿಹಿ ಬನ್ ಇತ್ತು. ಅವಳ ತಂದೆ ದಾನ್ ಫೆರ್ನಾಂಡೋ ಮದುವಣಗಿತ್ತಿಯ ವಸ್ತ್ರಾಭರಣಗಳನ್ನು ಕೊಳ್ಳುವುದಕ್ಕೆ ಮನೆಯನ್ನು ಅಡವಿಡಬೇಕಾಗಿ ಬಂದರೂ ಅವಳು ಮದುವೆಯ ದಿನದ ತನಕ ಐತಿಹ್ಯಗಳ ಸಾಮ್ರಾಜ್ಯವೊಂದರ ಕನಸು ಕಾಣುತ್ತಿದ್ದಳು. ಅದು ಮುಗ್ಧತೆಯಿಂದಲ್ಲ ಅಥವಾ ವೈಭವದ ಮೋಹದಿಂದಲ್ಲ. ಅವರು ಅವಳನ್ನು ಬೆಳೆಸಿದ್ದು ಹಾU. ಅವಳಿಗೆ ವಿಚಾರ ಶಕ್ತಿ ಇದ್ದದ್ದರಿಂದ ಮನೆತನದ ಲಾಂಛನವಿದ್ದ ಬಂಗಾರದ ಪಾತ್ರೆಯಲ್ಲಿ ತನ್ನ ಕರ್ತವ್ಯವನ್ನು ನೇರವೇರಿಸಿದ್ದಾಗಿ ಅವಳಿಗೆ ನೆನಪಿತ್ತು. ಅವಳು ಹನ್ನೆರಡು ವರ್ಷದವಳಾಗಿದ್ದಾಗ, ಮನೆಯಿಂದ ಹೊರಗೆ ಮೊಟ್ಟ ಮೊದಲ ಸಲ ಕುದುರೆ ಗಾಡಿಯಲ್ಲಿ ಎರಡು ಬ್ಲಾಕುಗಳ ದೂರದಲ್ಲಿದ್ದ ಕಾನ್ವೆಂಟ್‌ಗೆ ಹೋಗಿದ್ದಳು. ಅವಳು ಪ್ರತ್ಯೇಕವಾಗಿ ಕ್ಲಾಸ್‌ನಲ್ಲಿ ಎತ್ತರದ ಹಿಂಭಾಗವಿದ್ದ ಕುರ್ಚಿಯಲ್ಲಿ ಕುಳಿತಾಗ ಅವಳ ಸಹಪಾಠಿಗಳಿಗೆ ಆಶ್ಚರ್ಯವಾಗಿತ್ತು. ಅಲ್ಲದೆ ಅವಳು ವಿರಾಮದ ವೇಳೆಯಲ್ಲಿ ಅವರಿವರ ಜೊತೆ ಬೆರೆಯುತ್ತಿರಲಿಲ್ಲ. ನನ್‌ಗಳು, “ಅವ್ನು ಬೇರೆ ಥರ… ಅವಳು ರಾಣಿಯಾಗ್ತಾಳೆ” ಎಂದು ಹೇಳುತ್ತಿದ್ದರು. ಅವಳ ಸಹಪಾಠಿಗಳು ಅದನ್ನು ನಂಬಿದರು. ಏಕೆಂದರೆ ಅವಳಾಗಲೇ ಅವರು ಅಲ್ಲಿಯ ತನಕ ಕಾಣದ ಅತ್ಯಂತ ರೂಪವತಿಯಾದ, ವಿಶಿಷ್ಟವಾದ ವಿವೇಚನೆಯುಳ್ಳ ಹುಡುಗಿಯಾಗಿದ್ದಳು. ಎಂಟು ವರ್ಷಗಳ ನಂತರ ಲ್ಯಾಟಿನ್ ಕಾವ್ಯ, ಪಿಯಾನೋ ನುಡಿಸುವುದು, ಮತ್ತು ಗಣ್ಯರ ಜೊತೆ ಡೇಗೆ ಸಾಕಣೆಯ ವಿಷಯ, ಆರ್ಚ್ ಬಿಷಪ್ ಜೊತೆ ಪಶ್ಚಾತ್ತಾಪ ಸೂಚಕ, ಪರದೇಶವನ್ನು ಆಳುವವರ ಜೊತೆ ದೇಶಕ್ಕೆ ಸಂಬಂಧಿಸಿದ ವಿಷಯಗಳ ಚರ್ಚೆ ಹಾಗೂ ಪೋಪ್ ಬಳಿ ದೇವರ ವಿಷಯ ಮಾತಾಡುವುದನ್ನು ಕಲಿತು, ತಂದೆ ತಾಯಿಯ ಮನೆಗೆ ಹಿಂತಿರುಗಿದ ನಂತರ ಅವಳು ಶವಸಂಸ್ಕಾರದ ಹಾರಗಳನ್ನು ಹೆಣೆಯುವುದರಲ್ಲಿ ನಿರತಳಾದಳು. ಅದು ಸುಲಿಗೆ ಮಾಡುವ ಕೆಲಸವೆಂದು ಅವಳಿಗೆ ಗೊತ್ತಾಯಿತು. ಮನೆಯಲ್ಲಿ ತೀರ ಅಗತ್ಯವಾದ ಪೀಠೋಪಕರಣ ಮಾತ್ರ ಉಳಿದಿತ್ತು. ಕ್ಯಾಂಡಲ್‌ಗಳ ಬೆಳ್ಳಿ ಬುಡ, ಟೇಬಲ್ ಮೇಲಿನ ಸಲಕರಣೆಗಳು, ದಿನನಿತ್ಯದ ಪಾತ್ರೆ ಪಡಗಗಳು ಒಂದಾದ ಮೇಲೋಂದನ್ನು ಅವಳ ವಿದ್ಯಾಭ್ಯಾಸಕ್ಕೆಂದು ಮಾರಲಾಗಿತ್ತು. ಅವಳ ತಾಯಿ ಜ್ವರಕ್ಕೆ ತುತ್ತಾಗಿದ್ದಳು. ಬಿಗಿ ಕಾಲರಿನ ಕಪ್ಪನೆ ಉಡುಪು ತೊಟ್ಟು ಬಂಗಾರದ ವಾಚ್ ಚೈನ್ ಹಾಕಿಕೊಂಡು ಅವಳ ತಂದೆ ದಾನ್ ಫೆರ್ನಾಂಡೋ ಪ್ರತಿ ಸೋಮವಾರ ದೈನಂದಿನ ಖರ್ಚಿಗೆಂದು ಅವಳಿಗೆ ಒಂದು ಬೆಳ್ಳಿಯ ನಾಣ್ಯ ಕೊಟ್ಟು, ಕಳೆದ ವಾರ ಸಿದ್ಧಪಡಿಸಿದ್ದ ಶವಸಂಸ್ಕಾರದ ಹೂವಿನ ಹಾರಗಳನ್ನು ತೆಗೆದುಕೊಂಡು ಹೋಗುತ್ತಿದ್ದ. ಅವನು ಹೆಚ್ಚಿನ ಸಮಯವನ್ನು ತನ್ನ ಅಭ್ಯಾಸದ ಕೋಣೆಯಲ್ಲಿ ಕಳೆಯುತ್ತಿದ್ದ ಮತ್ತು ಕೆಲವು ಸಲ ಹೊರಗೆ ಹೋದ ಮೇಲೆ ಅವಳ ಜೊತೆ ಪ್ರಾರ್ಥನಾವಳಿಗಳನ್ನು ಹೇಳಲು ಹಿಂತಿರುಗುತ್ತಿದ್ದ. ಅವಳಿಗೆ ಯಾರ ಜೊತೆಗೂ ಆತ್ಮೀಯ ಸ್ನೇಹ ಇರಲಿಲ್ಲ. ಇಡೀ ದೇಶದಲ್ಲಿ ರಕ್ತ ಹರಿಸುತ್ತಿದ್ದ ಯುದ್ಧದ ಬಗ್ಗೆ ಎಂದೂ ಕಿವಿಗೆ ಬೀಳಿಸಲಿಲ್ಲ. ಅವಳು ಮಧ್ಯಾಹ್ನ ಮೂರು ಗಂಟೆಯ ತನ್ನ ಪಿಯಾನೋ ಪಾಠಗಳನ್ನು ಮುಂದುವರಿಸಿದ್ದಳು. ಅವಳು ಇನ್ನೇನು ತಾನು ರಾಣಿಯಾಗಬೇಕೆಂಬ ಭ್ರಮೆಯನ್ನು ಕಳೆದುಕೊಳ್ಳುವುದರಲ್ಲಿದ್ದಾಗ, ಅದು ಲಭ್ಯವಾಯಿತು ಎನ್ನುವ ಹಾಗೆ ಎರಡು ಬಾರಿ ಬಾಗಿಲು ಬಡಿತವಾಯಿತು ಮತ್ತು ಕೆನ್ನೆಯ ಮೇಲೆ ಗಾಯದ ಗುರುತ್ತಿದ್ದ, ಅಂದವಾದ ಶಿಷ್ಟಾಚಾರದ ಮಿಲಿಟರಿ ಅಧಿಕಾರಿಯೊಬ್ಬನಿಗೆ ಬಾಗಿಲು ತೆಗೆದಳು. ಅವನು ಅವಳ ತಂದೆಯ ಜೊತೆ ಅವನ ಅಭ್ಯಾಸದ ಕೋಣೆಯೊಳಗೆ ಹೋದ. ಎರಡು ಗಂಟೆಯ ನಂತರ ಅವಳ ತಂದೆ ಹೊಲಿಗೆಯ ರೂಮಿನಲ್ಲಿ ಅವಳಿದ್ದ ಕಡೆ ಬಂದು, “ಸಾಮಾನೆಲ್ಲ ಜೋಡಿಸಿಕೋ…..ನೀನು ಬಹಳ ದೂರ ಟ್ರಿಪ್ ಹೋಗ್ಬೇಕು” ಎಂದು ಹೇಳಿದ. ಅವಳನ್ನು ಅವರು ಮಕೋಂದೋಗೆ ಕರೆದುಕೊಂಡು ಹೋದದ್ದು ಹೀಗೆ. ಅದುವರೆಗೂ ಅವಳಿಂದ ಅವಳ ತಂದೆತಾಯಿ ಮುಚ್ಚಿಟ್ಟಿದ್ದ ಕಟು ವಾಸ್ತವತೆಯನ್ನು ಕಪಾಳಕ್ಕೆ ಹೊಡೆದ ಹಾಗೆ ಒಂದೇ ದಿನದಲ್ಲಿ ತೆರೆದಿಟ್ಟಿತು. ವಾಪಸು ಬಂದ ಮೇಲೆ ಅವಳು ತನ್ನ ರೂಮಿನಲ್ಲಿ ಬಾಗಿಲು ಹಾಕಿಕೊಂಡು ಅತ್ತಳು ಮತ್ತು ದಾನ್ ಫೆರ್ನಾಂಡೋನ ಮನವಿಗಳಿಗೆ ಮತ್ತು ಅದರಿಂದ ಉಂಟಾದ ಕಹಿ ಗುರುತುಗಳನ್ನು ಅಳಿಸಲು ಮಾಡಿದ ಪ್ರಯತ್ನಗಳಿಗೆ ಪ್ರತಿಕ್ರಿಯಿಸಲಿಲ್ಲ. ಅವಳು ತಾನು ಸಾಯುವ ತನಕ ಬೆಡ್‌ರೂಮಿನಿಂದ ಹೊರಗೆ ಹೋಗುವುದಿಲ್ಲ ಎಂದು ಪ್ರಮಾಣ ಮಾಡಿದಾಗಲೆ ಅವ್ರೇಲಿಯಾನೋ ಸೆಗುಂದೋ ಅವಳನ್ನು ಕರೆದುಕೊಂಡು ಹೋಗಲು ಬಂದ. ಅದೊಂದು ಅಸಾಧ್ಯವಾದ ವಿಧಿಯ ಆಟ. ಏಕೆಂದರೆ ಅವಳು ರೋಷದಿಂದಾದ ಗೊಂದಲದಲ್ಲಿ, ಅವಮಾನದ ಉರಿಯಲ್ಲಿ, ಅವನಿಗೆ ತನ್ನ ನಿಜ ಸ್ಧಿತಿ ತಿಳಿಯದಿರಲಿ ಎಂದು ಸುಳ್ಳು ಹೇಳಿದ್ದಳು. ಅವಳನ್ನು ಹುಡುಕಲು ಹೊರಟಾಗ ಅವ್ರೇಲಿಯಾನೋ ಸೆಗುಂದೋಗೆ ಇದ್ದ ನಿಜವಾದ ಸೂಚನೆಯೆಂದರೆ, ತಪ್ಪು ಮಾಡಲಾರದಂಥ ಅವಳ ಮಾತಿನ ವಿಶಿಷ್ಟ ರೀತಿ ಮತ್ತು ಅವಳ ಶವಸಂಸ್ಕಾರದ ಹೂವಿನ ಹಾರದ ಕೆಲಸ. ಅವನು ಅವಳನ್ನು ಎಡಬಿಡದೆ ಹುಡುಕಿದ. ಹುಚ್ಚು ಸಾಹಸದಿಂದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಪರ್ವತಗಳನ್ನು ದಾಟಿ ಮಕೋಂದೋವನ್ನು ಸ್ಥಾಪಿಸಿದ ಹಾಗೆ, ಕುರುಡು ಹಮ್ಮಿನಿಂದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ವಿಫಲ ಯುದ್ಧಗಳಲ್ಲಿ ನಿರತನಾದ ಹಾಗೆ, ಎಣೆಯಿಲ್ಲದ ಜಿಗುಟಿನಿಂದ ಉರ್ಸುಲಾ ಉಳಿದವರ ಉಸ್ತುವಾರಿ ಮಾಡಿದ ಹಾಗೆ, ಅವ್ರೇಲಿಯಾನೋ ಸೆಗುಂದೋ ಫೆರ್ನಾಂಡಳನ್ನು ಒಂದು ಕ್ಷಣವೂ ವಿಶ್ರಾಂತಿಯಿಲ್ಲದೆ ಹುಡುಕಿದ. ಅವನು ಶವಸಂಸ್ಕಾರದ ಹೂವಿನ ಹಾರ ಎಲ್ಲಿ ಸಿಗುತ್ತೆಂದು ಕೇಳಿದಾಗ ಅವರು ಚೆನ್ನಾಗಿರುವುದನ್ನು ಆರಿಸಿಕೊಳ್ಳಲೆಂದು ಮನೆಯಿಂದ ಮನೆಗೆ ಕರೆದುಕೊಂಡು ಹೋದರು. ಅವನು ಭೂಮಿಯ ಮೇಲೆ ಕಂಡಿರದ ಅತ್ಯಂತ ಸುಂದರಿಯನ್ನು ಕೇಳಿದಾಗ ಅವರು ತಮ್ಮ ತಮ್ಮ ಹೆಣ್ಣು ಮಕ್ಕಳನ್ನು ಕರೆತಂದರು. ಅವನು ಮಂಜು ಮುಸುಕಿದ ದಾರಿಗಳಲ್ಲಿ, ಅನೇಕ ವೇಳೆ ವಿಸ್ಮೃತಿಯಲ್ಲಿ ಹಾಗೂ ನಿರಾಶೆಯ ಕಗ್ಗಂಟಿನಲ್ಲಿ ಕಳೆದು ಹೋದ. ಅವನು ಆಲೋಚನೆಗಳು ಪ್ರತಿಧ್ವನಿತವಾಗುವ ಹಳದಿ ಹರಹುಗಳನ್ನು ಮತ್ತು ಆತಂಕಗಳು ಮುಂದಾಗುವುದರ ಸೂಚನೆಯ ಬಿಸಿಲುಗುದುರೆಗಳ ತಾಣವನ್ನು ದಾಟಿದ. ಪೇಲವ ವಾರಗಳ ನಂತರ, ಅವನು ಎಲ್ಲ ಗಂಟೆಗಳು ಸ್ಮಶಾನಗೀತೆ ಧ್ವನಿಸುತ್ತಿದ್ದ ಅರಿಯದ ಊರೊಂದಕ್ಕೆ ಬಂದ. ಅವನು ಅಲ್ಲಿಯ ತನಕ ನೋಡಿರದಿದ್ದರೂ ಮತ್ತು ಯಾರೂ ವಿವರಿಸದಿದ್ದರೂ, ಮಾಸಲು ಬಡಿದ ಗೋಡೆಗಳನ್ನು, ಬೀಳುವಂತಿದ್ದ ಗೂಸಲು ಹಿಡಿದ ಮರದ ಬಾಲ್ಕನಿಗಳನ್ನು, ಹೊರಗಿನ ಬಾಗಿಲಿಗೆ ಮೊಳೆ ಹೊಡೆದಿದ್ದ ಮಳೆ ನೀರಿನಿಂದ ಅಳಿಸಿ ಹೋಗಿದ್ದ, ಪ್ರಪಂಚದಲ್ಲೆ ಅತ್ಯಂತ ಜೋಲು ಮುಖದ ಕಾರ್ಡ್ ಬೋರ್ಡ್‌ನ ನಾಮ ಫಲಕ ‘ಶವಸಂಸ್ಕಾರದ ಹೂವಿನ ಹಾರಗಳು ಮಾರಾಟಕ್ಕಿವೆ‘ ಎನ್ನುವುದನ್ನು ತಕ್ಷಣವೇ ಗುರುತಿಸಿದ. ಆ ಕ್ಷಣದಿಂದ ಫೆರ್ನಾಂಡ ಕೊರೆಯುವ ಚಳಿಯ ಬೆಳಿಗ್ಗೆ, ಮದರ್ ಸುಪೀರಿಯರ್ ಜೊತೆ ಹೊರಡುವ ತನಕ ಮದುವಣಗಿತ್ತಿಯ ವಸ್ತ್ರಾಭರಣಗಳನ್ನು ಸಿದ್ಧಗೊಳಿಸಲು ಕ್ರೈಸ್ತ ಸನ್ಯಾಸಿಯರಿಗೆ ಸಮಯವೇ ಇರಲಿಲ್ಲ. ಅವರು ಆರು ಟ್ರಂಕುಗಳಲ್ಲಿ ಮೇಣದ ಬತ್ತಿಯ ಪೀಠ, ಬೆಳ್ಳಿಯ ಸಲಕರಣೆ ಮತ್ತು ಬಂಗಾರದ ಪಾತ್ರೆಯನ್ನು ಮತ್ತು ಎರಡು ಶತಮಾನದ ಸಾಂಸಾರಿಕ ದುರಂತದಲ್ಲಿನ ಕೆಲಸಕ್ಕೆ ಬಾರದ ವಸ್ತುಗಳನ್ನು ತುಂಬಿದರು. ಜೊತೆಗೆ ಬರಬೇಕೆಂದು ಕೇಳಿದ ಮನವಿಯನ್ನು ದಾನ್ ಫೆರ್ನಾಂಡೋ ಒಪ್ಪಲಿಲ್ಲ. ತನ್ನ ವಿಷಯಗಳೆಲ್ಲ ಬಗೆಹರಿದ ಮೇಲೆ ಬರುವುದಾಗಿ ಮಾತುಕೊಟ್ಟ. ತನ್ನ ಮಗಳಿಗೆ ಆಶೀರ್ವಾದ ಮಾಡಿದ ಗಳಿಗೆಯಿಂದ ಅವನು ವ್ಯಾಸಂಗ ಕೋಣೆಯಲ್ಲಿ ಮತ್ತೆ ಬಾಗಿಲು ಹಾಕಿಕೊಂಡು, ಚಿತ್ರಗಳ ಸಮೇತ ದುಃಖಸೂಚಕ ಹೇಳಿಕೆಗಳನ್ನು ಹಾಗೂ ಮನೆತನದ ಬಿರುದಾವಳಿಗಳ ಲಾಂಛನವನ್ನು ಬರೆಯುವುದಕ್ಕೆ ಕುಳಿತ. ಇದು ಫೆರ್ನಾಂಡ ಮತ್ತು ಅವನ ತಂದೆ ಇತರೆ ಮನುಷ್ಯರ ಜೊತೆ ಅವರ ಇಡೀ ಜೀವನದಲ್ಲಿ ಪಡೆದ ಮೊದಲನೆ ಸಂಪರ್ಕ. ಅದು ಅವಳ ನಿಜವಾದ ಹುಟ್ಟಿದ ದಿನ. ಅವ್ರೇಲಿಯಾನೋ ಸೆಗುಂದೋಗೆ ಅದು ಹೆಚ್ಚು ಕಡಿಮೆ ಏಕಕಾಲಕ್ಕೆ ಸಂತೋಷದ ಪ್ರಾರಂಭ ಮತ್ತು ಮುಕ್ತಾಯವಾಗಿತ್ತು.
ಫೆರ್ನಾಂಡ ಒಂದು ಸೂಕ್ಷ್ಮವಾದ ಬಂಗಾರದ ಕೀಗಳಿದ್ದ ಒಂದು ಸೂಚಿಪಟ್ಟಿ ತಂದಿದ್ದಳು. ಅದರಲ್ಲಿ ಅವಳ ಆಧ್ಯಾತ್ಮಿಕ ಸಲಹೆಗಾರ ನೇರಳೆ ಬಣ್ಣದ ಇಂಕ್‌ನಲ್ಲಿ ಸಂಭೋಗ ವರ್ಜನೆಯನ್ನು ನಮೂದಿಸಿದ್ದ. ಪವಿತ್ರವಾದ ವಾರ, ಭಾನುವಾರಗಳು, ನಿರ್ಬಂಧಿತವಾದ ಪವಿತ್ರ ದಿನಗಳು, ಮೊದಲ ಶುಕ್ರವಾರಗಳು, ನಿಸ್ಸಂಗತ್ವ ದಿನಗಳು, ಬಲಿದಾನಗಳು ಮತ್ತು ಆವರ್ತದ ಆಡಚಣೆಗಳು, ಇವುಗಳನ್ನು ಬಿಟ್ಟರೆ ಅವಳ ವಾಸ್ತವವಾದ ವರ್ಷ ನೇರಳೆ ನೇಯ್ಗೆಯಲ್ಲಿ ಹರಡಿದ ನಲವತ್ತೆರಡು ದಿನಗಳಿಗೆ ಇಳಿಯುತ್ತಿತ್ತು. ಅಂಥದೊಂದು ಬಿಗಿ ಬಂಧವನ್ನು ಕಾಲ ತುಂಡರಿಸುತ್ತದೆ ಎಂಬ ನಂಬಿಕೆಯಿಂದ ಅವ್ರೇಲಿಯಾನೋ ಸೆಗುಂದೋ, ಮದುವೆಯ ಸಮಾರಂಭವನ್ನು ನಿರೀಕ್ಷಣೆಗಿಂತ ಹೆಚ್ಚಿನ ಅವಧಿಗೆ ಮುಂದುವರಿಸಿದ. ಮನೆಯನ್ನು ಗಲೀಜು ಮಾಡುತ್ತಾರೆಂದು ಬ್ರಾಂದಿ ಮತ್ತು ಶಾಂಪೇನ್ ಬಾಟಲಿಗಳನ್ನು ಹೊರಗೆಸೆದು ಉರ್ಸುಲಾ ಸುಸ್ತಾದಳು ಮತ್ತು ಅದೇ ವೇಳೆಗೆ ಹೊಸದಾಗಿ ಮದುವೆಯಾದವರು ಪಟಾಕಿಗಳ ಸಿಡಿತ, ಮೊಳಗುತ್ತಿದ್ದ ಸಂಗೀತ ಮತ್ತು ದನಕರುಗಳನ್ನು ಕಡಿಯುವುದು ಜರುಗುತ್ತಿರುವಾಗ, ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೂಮಿನಲ್ಲಿ ಮಲಗುತ್ತಿದ್ದರಿಂದ ಸಂದಿಗ್ಧಗೊಂಡಿದ್ದಳು. ಅವಳು ಫೆರ್ನಾಂಡ ಏನಾದರೂ ಶೀಲದ ಬೆಲ್ಟ್ ಕಟ್ಟಿಕೊಂಡಿದ್ದಾಳೆಯೋ ಹೇಗೆಂದು ಅನುಮಾನಿಸಿದಳು ಹಾಗೂ ಬಹಳ ಬೇಗನೆ ಊರಿನಲ್ಲಿ ತಮಾಷೆ ಹುಟ್ಟಿಸಿ ಅನಾಹುತಕ್ಕೆ ಕಾರಣವಾಗುತ್ತದೆ ಎಂದುಕೊಂಡಳು. ಆದರೆ ಫೆರ್ನಾಂಡ ಗಂಡನ ಸಂಪರ್ಕಕ್ಕೆ, ಎರಡು ವಾರ ಕಳೆಯಲಿ ಎಂದು ಕಾದಿರುವುದಾಗಿ ಅವಳಿಗೆ ಹೇಳಿದಳು. ನಿಜವಾಗಲೂ ಅವಳು ಆ ಅವಧಿ ಕಳೆದ ನಂತರ ಪ್ರಾಯಶ್ಚಿತ್ತಕ್ಕೆ ಸಿಲುಕಿದ ವ್ಯಕ್ತಿಯ ಭಾವನೆಯಿಂದ ತನ್ನ ಬೆಡ್ ರೂಮನ್ನು ತೆರೆದಳು. ಅವ್ರೇಲಿಯಾನೋ ಸೆಗುಂದೋ ಭಯ ಬೆರೆತ ಕಣ್ಣುಗಳ, ಪ್ರಪಂಚದಲ್ಲೆ ಅತ್ಯಂತ ಸುಂದರಿಯನ್ನು ನೋಡಿದ. ಅವಳ ತಾಮ್ರದ ಬಣ್ಣದ ಕೂದಲು ತಲೆದಿಂಬಿದ ಅಗಲಕ್ಕೂ ಹರಡಿತ್ತು. ತಾನು ಕಂಡದ್ದರಿಂದ ಅವನೆಷ್ಟು ಮೋಹಗೊಂಡಿದ್ದನೆಂದರೆ ಫೆರ್ನಾಂಡ ಮಂಡಿಯ ತನಕ ಇಳಿಬಿದ್ದಿದ್ದ ಗೌನ್ ರೀತಿಯದೇನನ್ನೋ ಹಾಕಿಕೊಂಡಿದ್ದಾಳೆಂದು ಗಮನಿಸಲು ಕೆಲವು ಕ್ಷಣಗಳೇ ಬೇಕಾಯಿತು. ಅದಕ್ಕೆ ಉದ್ದ ತೋಳುಗಳು, ಹೊಟ್ಟೆಯ ಮಟ್ಟದಲ್ಲಿದ್ದ ಸೂಕ್ಷ್ಮವಾಗಿ ಕತ್ತರಿಸಿದ ದೊಡ್ಡ ದುಂಡನೆಯ ಒಳಉಡುಪಿತ್ತು. ಅವ್ರೇಲಿಯಾನೋ ಸೆಗುಂದೋಗೆ ಒತ್ತರಿಸಿಕೊಂಡು ಬಂದ ನಗುವನ್ನು ತಡೆಯಲಾಗಲಿಲ್ಲ.
ಅವನು, “ನನ್ನ ಇಡೀ ಜೀವನದಲ್ಲಿ ಇಷ್ಟು ಅಸಹ್ಯವಾದದ್ದನ್ನ ನೋಡಿಲ್ಲ” ಎಂದು ಇಡೀ ಮನೆಗೆ ಕೇಳಿಸುವಷ್ಟು ನಕ್ಕು, “ನಾನೊಳ್ಳೆ ಗೌರಮ್ಮನ್ನ ಮದ್ವೆ ಆದೆ ಅಂತ ಕಾಣತ್ತೆ” ಎಂದು ಹೇಳಿದ.
ಒಂದು ತಿಂಗಳು ಕಳೆದರೂ ಅವಳಿಂದ ಗೌನನ್ನು ತೆಗೆಸಲು ಅಸಮರ್ಥನಾದ ನಂತರ ಅವನು ಪೆತ್ರಾ ಕೊತೆಸ್‌ಗೆ ರಾಣಿಯಂತೆ ಉಡುಗೆ ತೊಡಿಸಿ ಭಾವಚಿತ್ರ ತೆಗೆಸಿದ. ಅನಂತರ ಫೆರ್ನಾಂಡಳನ್ನು ಮತ್ತೆ ಮನೆಗೆ ಕರೆತರಲು ಅವನು ಯಶಸ್ವಿಯಾದಾಗ ಅವಳು ಅವನ ಒಪ್ಪಂದದ ಅಪೇಕ್ಷೆಗಳಿಗೆ ಮಣಿದಳು. ಆದರೆ ಮೂವತ್ತೆರಡು ಸ್ಮಶಾನಗೀತೆಯನ್ನು ಮೊಳಗುವ ಗಂಟೆಗಳ ಪಟ್ಟಣಕ್ಕೆ ಅವಳನ್ನು ಕರೆತರಲು ಹೋದಾಗ, ಅವನು ಕಲ್ಪಿಸಿದಂಥ ಪರಿಹಾರವನ್ನು ಕೊಡಲಿಲ್ಲ. ಅವ್ರೇಲಿಯಾನೋಗೆ ಅವಳಲ್ಲಿ ಆಳವಾಗಿ ನೆಲೆಯೂರಿರುವ ಅನಾಥ ಭಾವನೆ ಇರುವಂತೆ ಕಂಡು ಬಂತು. ಅವರಿಗೆ ಮೊದಲ ಮಗು ಹುಟ್ಟುವ ಸ್ವಲ್ಪ ದಿನಗಳ ಮುಂಚಿನ ರಾತ್ರಿ ಫೆರ್ನಾಂಡಗೆ, ತನ್ನ ಗಂಡ ಗುಟ್ಟಾಗಿ ಪೆತ್ರಾ ಕೊತೆಸ್ ಸಂಗಕ್ಕೆ ಹಿಂತಿರುಗಿದ್ದಾನೆಂದು ತಿಳಿಯಿತು. ಅವನು, “ಅದಾಗಿದ್ದಾದರೂ ಹೀಗೆ” ಎಂದು ಅದನ್ನು ಒಪ್ಪಿಕೊಂಡು,”ನಾನು ಹಾಗೆ ಮಾಡ್ಲೇ ಬೇಕಾಗಿತ್ತು ಯಾಕೆಂದರೆ ಪ್ರಾಣಿಗಳು ಹೆಚ್ಗೆ ಮರಿ ಹಾಕ್ಬೇಕಾ;ಗಿತ್ತಲ್ಲ, ಅದಕ್ಕೆ” ಎಂದು ವಿನೀತನಾಗಿ ವಿವರಣೆ ಕೊಟ್ಟ.
ಅವನಿಗೆ ಅಂಥ ಒಂದು ಸಂಗತಿಯ ಮೇಲೆ ನಂಬಿಕೆ ಬರುವಂತೆ ಮಾಡಲು ಸ್ವಲ್ಪ ಸಮಯ ಬೇಕಾಯಿತು. ಆದರೆ ಕೊನೆಗೆ ಅವನು ತಗಾದೆ ಮಾಡದಂಥ ಆಧಾರಗಳನ್ನು ಒದಗಿಸಲು ಸಮರ್ಥನಾದ ಮೇಲೆ ಫೆರ್ನಾಂಡ ಅವನಿಂದ ಒತ್ತಾಯಿಸಿದ ಒಂದೇ ವಾಗ್ದಾನವೆಂದರೆ, ಅವನು ಇಟ್ಟುಕೊಂಡವಳ ಹಾಸಿಗೆಯಲ್ಲಿ ಸಾಯುವಂಥ ಸ್ಥಿತಿಗೆ ಹೋಗಬಾರದು ಎಂದು. ಈ ರೀತಿಯಲ್ಲಿ ಒಬ್ಬರು ಮತ್ತೊಬ್ಬರ ಬಗ್ಗೆ ತಲೆಕೆಡಿಸಿಕೊಳ್ಳದೆ ಮೂವರೂ ಬದುಕು ಮುಂದುವರಿಸಿದರು. ಕಾಲನಿಷ್ಠೆ ಮತ್ತು ಇಬ್ಬರನ್ನೂ ಪ್ರೀತಿಸುತ್ತ ಅವ್ರೇಲಿಯಾನೋ ಸೆಗುಂದೋ, ರಾಜಿಯ ಚೌಕಟ್ಟಿನಲ್ಲಿ ಪೆತ್ರಾ ಕೊತೆಸ್ ಮತ್ತು ಸತ್ಯವನ್ನು ಅರಿಯದಂತೆ ತೋರ್ಪಡಿಸುತ್ತಿದ್ದ ಫೆರ್ನಾಂಡ ಹೊಂದಾಣಿಕೆಯಲ್ಲಿದ್ದರು.
ಫೆರ್ನಾಂಡಳನ್ನು ಸಂಸಾರದಲ್ಲಿ ಒಂದುಗೂಡಿಸಿಕೊಳ್ಳುವಷ್ಟು ಈ ಒಡಂಬಡಿಕೆ ಯಶಸ್ವಿಯಾಗಲಿಲ್ಲ. ಅವಳಿಗೆ ಪ್ರಣಯದಾಟದ ನಂತರ ಏಳುವಾಗ ಧರಿಸುತ್ತಿದ್ದ ಉಣ್ಣೆಯ ಕೊರಳಸುತ್ತನ್ನು ತೆಗೆಯಲು ಉರ್ಸುಲಾ ಮಾಡಿದ ಒತ್ತಾಯ ವಿಫಲವಾಯಿತು. ಅದು ಸುತ್ತಮುತ್ತಲಿನವರ ಪಿಸುಮಾತಿಗೆ ಕಾರಣವಾಯಿತು. ಅವಳಿಗೆ ಬಾತ್ ರೂಮನ್ನು ಅಥವಾ ಕಕ್ಕಸ್ಸನ್ನು ಉಪಯೋಗಿಸಬೇಕೆಂದು ಮತ್ತು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ಬಂಗಾರದ ಉಚ್ಚೆ ಪಾತ್ರೆಯನ್ನು ಬಂಗಾರದ ಮೀನುಗಳನ್ನಾಗಿ ಪರಿವರ್ತಿಸುವಂತೆ ಮಾಡದಿರುವಂತೆ ಮನದಟ್ಟು ಮಾಡಲಾಗಲಿಲ್ಲ. ಅವಳ ಮಾತಿನಲ್ಲಿನ ತಪ್ಪು ಉಚ್ಚಾರಣೆ ಮತ್ತು ಯಾವಾಗಲೂ ಅಸ್ವಷ್ಟವಾಗಿ, ತಪ್ಪು ತಪ್ಪಾಗಿ ಮಾತಾಡುತ್ತ್ತಿದ್ದರಿಂದ ಅಮರಾಂತಳಿಗೆ ಮುಜುಗರವಾಗಿತ್ತು.
ಅವಳು, “ಫವಳು ಏಫನು ಬೇಕಫಂತ ಹೇಳಕಾಪ್ಪದೇ ಇರೋವೋತವ್ಳು” ಎಂದು ಹೇಳುತ್ತಿದ್ದಳು.
ಅದೊಂದು ದಿನ ಅಣಕಿಸಿದ್ದರಿಂದ ರೇಗಿದ ಫೆರ್ನಾಂಡಳಿಗೆ ಅಮರಾಂತ ಹೇಳುತ್ತಿರುವುದು ಏನು ಎಂದು ತಿಳಿದುಕೊಳ್ಳಬೇಕೆಂದು ಇಷ್ಟವಾಯಿತು. ಅವಳು ಉತ್ತರ ಹೇಳಲು ತಪ್ಪು ತಪ್ಪು ಉಚ್ಚಾರಣೆ ಮಾಡಲಿಲ್ಲ.
ಅವಳು, “ನಾನು ಹೇಳ್ತಾ ಇದ್ದೆ . . ನೀನು ಕುಡಿ ಮತ್ತು ಕುಂಡಿ ಅನ್ನೋದನ್ನ ಒಂದಕ್ಕೊಂದು ಸೇರಿಸುವಂಥವರಲ್ಲಿ ಒಬ್ಬಳು ಅಂತ” ಎಂದಳು.
ಅಂದಿನಿಂದ ಅವರು ಮತ್ತೆ ಪರಸ್ಪರ ಮಾತನಾಡಲಿಲ್ಲ. ಅಂತಹ ಸಂದರ್ಭ ಬಂದಾಗ ಚೀಟಿಗಳಲ್ಲಿ ಬರೆದು ಕಳಿಸುತ್ತಿದ್ದರು. ಮನೆಯಲ್ಲಿ ಎದ್ದು ಕಾಣುವಷ್ಟು ದ್ವೇಷವಿದ್ದರೂ ಫೆರ್ನಾಂಡ ತನ್ನ ಮನೆತನದವರ ಪದ್ಧತಿಗಳನ್ನು ಒತ್ತಾಯದಿಂದ ಹೇರುವ ತನ್ನ ಪ್ರಯತ್ನವನ್ನು ಬಿಡಲಿಲ್ಲ. ಯಾರಿಗೇ ಹಸಿವಾದರೂ ಅಡುಗೆ ಮನೆಯಲ್ಲಿ ತಿನ್ನುವುದನ್ನು ನಿಲ್ಲಿಸಿದಳು. ಒಂದು ಗೊತ್ತಾದ ವೇಳೆಯಲ್ಲಿ ಡೈನಿಂಗ್ ರೂಮಿನಲ್ಲಿ ಟೇಬಲ್ ಕ್ಲಾತ್ ಹರಡಿದ ಟೇಬಲ್ಲಿನ ಮೇಲೆ ಬೆಳ್ಳಿಯ ಬುಡದ ಕ್ಯಾಂಡಲ್‌ಗಳು ಮತ್ತು ಇತರ ಸಲಕರಣೆಗಳ ಜೊತೆ ಊಟ ಮಾಡುವಂತೆ ಒತ್ತಾಯಿಸಿದಳು. ವೈಭವಯುತವಾಗಿ ಕಂಡ ಈ ಕ್ರಿಯೆ ಉರ್ಸುಲಾಗೆ ದೈನಂದಿನ ಜೀವನದಲ್ಲಿ ಅತ್ಯಂತ ಸರಳ ಎಂದು ತೋರಿದರೂ ಬಿಗಿಯಾದ ವಾತಾವರಣವನ್ನು ಉಂಟು ಮಾಡಿ, ಅದರ ವಿರುದ್ಧ ಎಲ್ಲರಿಗಿಂತ ಮೊದಲು ಮೌನಿಯಾಗಿರುತ್ತಿದ್ದ ಹೊಸೆ ಅರ್ಕಾದಿಯೋ ಸೆಗುಂದೋ ತಿರುಗಿಬಿದ್ದ. ಆದರೆ ಅದನ್ನು ಊಟದ ಮುಂಚೆ ಪ್ರಾರ್ಥನಾ ವಿಧಿಗಳನ್ನು ಹೇಳುವ ರೀತಿಯಲ್ಲಿ ಹೊರೆಸಲಾಯಿತು. ಇದು ಸುತ್ತಮುತ್ತಲಿನವರ ಗಮನ ಸೆಳೆದು ಬ್ಯುಂದಿಯಾ ಮನೆಯವರು ಎಲ್ಲ ಮನುಷ್ಯರಂತೆ ಸುಮ್ಮನೆ ಟೇಬಲ್ ಮೇಲಿಟ್ಟುಕೊಂಡು ಊಟಮಾಡುವುದಿಲ್ಲ, ಅವರು ತಿನ್ನುವುದನ್ನು ಸಾಮೂಹಿಕ ಪ್ರಾರ್ಥನೆಯಂತೆ ಮಾಡುತ್ತಿದ್ದಾರೆ ಎನ್ನುವ ವದಂತಿ ಹಬ್ಬಿತು. ಸಂಪ್ರದಾಯವಲ್ಲದೆ ಕೇವಲ ಸಮಯ ಸ್ಫೂರ್ತಿಯಿಂದ ಹೊರಡುತ್ತಿದ್ದ ಉರ್ಸುಲಾಳ ಮೂಢನಂಬಿಕೆಗಳೂ ಸಹ ಫೆರ್ನಾಂಡಳಿಗೆ, ತಮ್ಮ ತಂದೆ-ತಾಯಿಯಿಂದ ಪಡೆದ ಮತ್ತು ಪ್ರತಿಯೊಂದನ್ನೂ ವಿವರಿಸಿ ಮತ್ತು ಪಟ್ಟಿ ಮಾಡಿದವುಗಳ ಜೊತೆ ತಾಕಲಾಡುತ್ತಿದ್ದವು. ಉರ್ಸುಲಾಗೆ ಶಕ್ತಿ ಇರುವ ತನಕ ಹಳೆಯ ಪದ್ಧತಿಗಳು ಉಳಿದಿದ್ದವು ಮತ್ತು ಅವಳು ಕುರುಡಾಗಿ, ವಯಸ್ಸಾಗಿ, ಮನೆಯ ಮೂಲೆ ಸೇರಿದ ಮೇಲೆ ಗಡಸು ನಿಲುವನ್ನು ಬಂದ ಗಳಿಗೆಯಿಂದಲೇ ಪ್ರಾರಂಭಿಸಿದ ಫೆರ್ನಾಂಡ, ಕೊನೆಗೆ ಪೂರ್ಣಗೊಳಿಸಿದಳು. ಮನೆಯ ಆಗುಹೋಗುಗಳನ್ನು ಅವಳಲ್ಲದೆ ಬೇರೆ ಯಾರೂ ನಿರ್ಧರಿಸುತ್ತಿರಲಿಲ್ಲ. ಉರ್ಸುಲಾಳ ಅಪೇಕ್ಷೆಯಂತೆ ಸಾಂತ ಸೋಫಿಯಾ ದೆಲಾ ಪಿಯದಾದ್ ನಡೆಸುತ್ತಿದ್ದ ಮಾಂಸದ ತಿನಿಸುಗಳ ಉದ್ದಿಮೆ ಅಯೋಗ್ಯವಾದದ್ದೆಂದು ಫೆರ್ನಾಂಡ ಪರಿಗಣಿಸಿದಳು ಮತ್ತು ಅದನ್ನು ತಕ್ಷಣವೇ ನಿಲ್ಲಿಸಿದಳು. ಬೆಳಿಗ್ಗೆಯಿಂದ ರಾತ್ರಿ ಮಲಗುವ ಸಮಯದ ತನಕ ತೆರೆದಿರುತ್ತಿದ್ದ ಮನೆಯ ಬಾಗಿಲುಗಳನ್ನು, ಮಧ್ಯಾಹ್ನದ ಮಲಗುವ ಹೊತ್ತಿನಲ್ಲಿ ಬೆಡ್ ರೂಮುಗಳ ಧಗೆ ಹೆಚ್ಚಿಸುತ್ತವೆಂಬ ಕಾರಣದಿಂದ ಹಾಕಲಾಯಿತು ಮತ್ತು ಕೊನೆಗೆ ಅವುಗಳನ್ನು ಮುಚ್ಚಿಡಲಾಯಿತು. ಬಾಗಿಲ ಮೇಲೆ ಸಂಸ್ಥಾಪನೆಯ ಕಾಲದಿಂದಲೂ ತೂಗಾಡುತ್ತಿದ್ದ ಬಳ್ಳಿ ಮತ್ತು ಬ್ರೆಡ್ ತುಂಡುಗಳಿಗೆ ಬದಲಾಗಿ, ಸೇಕ್ರೆಡ್ ಹಾರ್ಟ್ ಆಫ್ ಕ್ರೈಸ್ಟ್ ಇರುವ ಪ್ರತಿಮೆಯನ್ನು ಇಡಲಾಯಿತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಹೇಗೋ ಬದಲಾವಣೆಗಳ ಅಂದಾಜು ಸಿಕ್ಕಿತು ಮತ್ತು ಅದರ ಪರಿಣಾಮವನ್ನು ಮುಂದಾಲೋಚಿಸಿದ. ಅವನು, “ನಾವು ಮೇಲ್ಮಟ್ಟದವರಾಗ್ತಿದೀವಿ. ಹೀಗೇ ಇದ್ರೆ ನಾವು ಮತ್ತೆ ಸಂಪ್ರದಾಯವಾದಿ ಆಳ್ವಿಕೆ ವಿರುದ್ಧ ಹೋರಾಡ್ಬೇಕಾಗತ್ತೆ. ಆದ್ರೆ ಈ ಸರ್‍ತಿ ರಾಜನ್ನ ಕೂಡಿಸಬೇಕಾಗತ್ತೆ” ಎಂದು ವಿರೋಧ ವ್ಯಕ್ತಪಡಿಸಿದ. ತುಂಬ ಚಾಲೂಕಿನಿಂದ ಫೆರ್ನಾಂಡ ಅವನ ದಾರಿಗೆ ಅಡ್ಡ ಬರದಂತೆ ಪ್ರಯತ್ನಿಸಿದಳು. ಒಳಗೊಳಗೇ ಅವಳಿಗೆ ಅವನ ಸ್ವತಂತ್ರ ಧೋರಣೆ, ಎಲ್ಲ ರೀತಿಯ ಸಾಮಾಜಿಕ ಬಿಗಿತಕ್ಕೆ ಪ್ರತಿರೋಧ ಇದ್ದದ್ದರ ಬಗ್ಗೆ ಚಿಂತೆಯಿತ್ತು. ಅವನಿಗೆ ಬೆಳಿಗ್ಗೆ ಐದು ಗಂಟೆಗೆ ಕಾಫಿ ಚೆಂಬುಗಳು, ವರ್ಕ್‌ಶಾಪಿನ ಅವ್ಯವಸ್ಥೆ, ಅವನ ಮೇಲು ಹೊದಿಕೆ ಮತ್ತು ಸಾಯಂಕಾಲ ಮುಂಬಾಗಿಲಲ್ಲಿ ಕುಳಿತುಕೊಳ್ಳುವ ಅಭ್ಯಾಸ, ಇವುಗಳಿಂದ ತಲೆ ಚಿಟ್ಟು ಹಿಡಿದು ಹೋಗಿತ್ತು. ಇಡೀ ಸಂಸಾರದ ಮೆಷಿನ್‌ನಲ್ಲಿದ್ದ ಆ ಒಂದು ಸಡಿಲ ವಸ್ತುವನ್ನು ಅವಳು ಸಹಿಸಿಕೊಳ್ಳಬೇಕಾಗಿತ್ತು. ಏಕೆಂದರೆ ಕರ್ನಲ್ ಅನೇಕ ವರ್ಷಗಳಿಂದ ಪಳಗಿಸಿದ ಮತ್ತು ನಿರಾಶೆಗೊಂಡ ಪ್ರಾಣಿಯೆಂದೂ ಹಾಗೂ ಅವನು ನಿರರ್ಥಕ ದಂಗೆಯಿಂದ ಇಡೀ ಸಂಸಾರದ ಅಡಿಪಾಯವನ್ನೇ ಬುಡಮೇಲು ಮಾಡುವುದಕ್ಕೆ ಶಕ್ತನಾಗಿದ್ದಾನೆಂದು ಅವಳಿಗೆ ಖಚಿತವಾಗಿತ್ತು. ಅವರ ಮೊದ ಮಗನಿಗೆ, ಅವಳ ಗಂಡ, ಅವನ ಮುತ್ತಜ್ಜನ ಹೆಸರಿಡಲು ನಿರ್ಧರಿಸಿದಾಗ ಅವಳಿಗೆ ಅದನ್ನು ವಿರೋಧಿಸುವ ಧೈರ್ಯವಾಗಲಿಲ್ಲ. ಏಕೆಂದರೆ ಅವಳು ಅಲ್ಲಿಗೆ ಬಂದು ಒಂದು ವರ್ಷವಷ್ಟೇ ಆಗಿತ್ತು. ಆದರೆ ಮೊದಲ ಹೆಣ್ಣು ಮಗುವಾದಾಗ, ಅವಳು ಅದಕ್ಕೆ ತನ್ನ ತಾಯಿ ರೆನಾಟಳ ಹೆಸರಿಡಬೇಕೆಂದು ನಿರ್ಧರಿಸಿಕೊಂಡಿದ್ದಾಗಿ ಹೇಳಿದಳು. ಉರ್ಸುಲಾ ಅವಳನ್ನು ರೆಮಿದಿಯೋಸ್ ಎಂದು ಕರೆಯಬೇಕೆಂದಿದ್ದಳು. ಅವ್ರೇಲಿಯಾನೋ ಸೆಗುಂದೋ ಇಬ್ಬರ ಮಧ್ಯೆ ಸೂತ್ರಧಾರನಂತೆ ನಡೆದುಕೊಂಡ. ಬಿಸಿ ಬಿಸಿ ಚರ್ಚೆಯ ನಂತರ ಅವಳಿಗೆ ರೆನಾಟಾ ರೆಮಿದಿಯೋಸ್ ಎಂದು ಹೆಸರಿಟ್ಟಳು. ಫೆರ್ನಾಂಡ ಅವಳನ್ನು ಕೇವಲ ರೆನಾಟ ಎಂದು ಕರೆಯಲು ತೊಡಗಿದರೆ, ಅವಳ ಗಂಡನ ಮನೆಯವರು ಮತ್ತು ಊರಿನವರು ಅವಳನ್ನು ರೆಮಿದಿಯೋಸ್‌ಳ ಅಡ್ಡ ಹೆಸರಿಂದ ಮೆಡಮ್ ಎಂದು ಕರೆದರು.
ಪ್ರಾರಂಭದಲ್ಲಿ ಫೆರ್ನಾಂಡ ತನ್ನ ಮನೆಯ ಬಗ್ಗೆ ಮಾತನಾಡುತ್ತಿರಲಿಲ್ಲ ಆದರೆ ಕ್ರಮೇಣ ತನ್ನ ತಂದೆಯನ್ನು ಆದರ್ಶ ಪಾಲಿಸಲು ಪ್ರಾರಂಭಿಸಿದಳು. ಟೇಬಲ್‌ನಲ್ಲಿ ಕುಳಿತಾಗ ಅವನು ಎಲ್ಲ ರೀತಿಯ ಅಹಂಕಾರ ತೊರೆದ ವಿಶಿಷ್ಟ ವ್ಯಕ್ತಿ ಮತ್ತು ಸಂತನಾಗುವ ಪ್ರಕ್ರಿಯೆಯಲ್ಲಿ ಇದ್ದಾನೆಂದು ಹೇಳಿದಳು. ತನ್ನ ಮಾವನನ್ನು ವೈಭವೀಕರಿಸುವುದರಿಂದ ಚಕಿತನಾಗಿ, ತನ್ನ ಹೆಂಡತಿಯ ಬೆನ್ನ ಹಿಂದೆ ಅದರ ತಮಾಷೆ ಮಾಡುವ ಇರಾದೆಯನ್ನು ತಡೆಯಲಾಗಲಿಲ್ಲ. ಮನೆಯಲ್ಲಿ ಉಳಿದವರು ಅದನ್ನೇ ಅನುಸರಿಸಿದರು. ಸಂಸಾರದ ಸಾಂಗತ್ಯವನ್ನು ಕಾಪಾಡಿಕೊಂಡು ಬರುವುದರಲ್ಲಿ ತೀರ ಜಾಗರೂಕಳಾಗಿದ್ದ ಮತ್ತು ಸಾಂಸಾರಿಕ ಘರ್ಷಣೆಗಳಿಂದ ತನ್ನಷ್ಟಕ್ಕೆ ನೊಂದಿದ್ದ ಉರ್ಸುಲಾ ಕೂಡ, ಒಮ್ಮೆ ತನ್ನ ಮರಿ ಮಗನಿಗೆ ಅದ್ಭುತವಾದ ಭವಿಷ್ಯವಿದೆ, ಏಕೆಂದರೆ ಅವನು ಸಂತನೊಬ್ಬನ ಮೊಮ್ಮಗ ಮತ್ತು ರಾಣಿಯೊಬ್ಬಳ ಮಗ ಹಾಗೂ ಆಚಾರ್ಯ ಧೋರಣೆ ಹೊಂದುವ ಭವಿಷ್ಯವಿದೆ, ಎಂದು ಹೇಳುವ ಸಲಿಗೆ ವಹಿಸಿದಳು. ಇಷ್ಟೆಲ್ಲ ನವಿರಾದ ನಗುವಿನ ನಡುವೆಯೂ ತಮ್ಮ ಅಜ್ಜ, ಕಾಗದಗಳಲ್ಲಿ ಸಾತ್ವಿಕ ಕವನಗಳನ್ನು ಬರೆಯುವ, ಪ್ರತಿ ಕ್ರಿಸ್‌ಮಸ್‌ನಲ್ಲಿ ಹೊರಬಾಗಿಲು ಹಿಡಿಸಲು ಕಷ್ಟವಾದ ಪೆಟ್ಟಿಗೆಯಲ್ಲಿ ಉಡುಗೊರೆ ಕಳಿಸುವ, ಐತಿಹ್ಯಪೂರ್ಣ ಮನುಷ್ಯನೆಂದು ಆ ಮಕ್ಕಳು ಭಾವಿಸುವುದು ಸಾಮಾನ್ಯವಾಯಿತು. ವಾಸ್ತವವಾಗಿ ಅವು ಅವನಲ್ಲಿ ಪರಂಪಾಗತವಾಗಿ ಬಂದಿದ್ದ ವೈಭವದ ಅವಶೇಷಗಳು. ಅವರು ಅದನ್ನು ಮಕ್ಕಳ ಬೆಡ್‌ರೂಮಿನ ಮನುಷ್ಯಾಕಾರದ ಸಂತರ ಪವಿತ್ರ ಸ್ಥಾನವನ್ನಾಗಿ ನಿರ್ಮಿಸಲು ಉಪಯೋಗಿಸಿದರು. ಸಂತರಿಗೆ ಗಾಜಿನ ಕಣ್ಣುಗಳಿದ್ದದ್ದರಿಂದ, ಅವಕ್ಕೆ ಜೀವವಿರುವಂತೆ ತೋರುತ್ತಿತ್ತು ಹಾಗೂ ಉಡುಪು ಕಲಾಪೂರ್ಣವಾಗಿ ಕಸೂತಿ ಮಾಡಿದ ಬಟ್ಟೆಗಳಾಗಿದ್ದು, ಮಕೋಂದೋದಲ್ಲಿ ಯಾವುದೇ ವ್ಯಕ್ತಿ ತೊಟ್ಟಿದ್ದಕ್ಕಿಂತ ಚೆನ್ನಾಗಿದ್ದವು. ಕ್ರಮೇಣ ಪುರಾತನ ಮತ್ತು ಹಿಮಮಯವಾದ ಸಾವಿನ ನರ್ತನವಿದ್ದ ಆ ಬಂಗಲೆ, ಬ್ಯುಂದಿಯಾರ ವೈಭವದ ಮನೆಯಾಯಿತು. ಒಂದು ದಿನ ಅವ್ರೇಲಿಯಾನೋ ಸೆಗುಂದೋ, “ಅವರಾಗಲೇ ಹುಲ್ಲು ಕಡ್ಡೀನೂ ಬಿಡದೆ, ಮನೇಲಿದ್ದ ಎಲ್ಲವನ್ನೂ ಕಳಿಸೀದಾರೆ. ಈಗ ಉಳಿದಿರೋದು ಕಣ್ಣೀರಿರುವ ದಿಂಬುಗಳು, ಗೋರಿಕಲ್ಲುಗಳು ಮಾತ್ರ” ಎಂದ. ಮಕ್ಕಳು ಆಡಿಕೊಳ್ಳುವಂಥ ಯಾವುದೂ ಪೆಟ್ಟಿಗೆಯಲ್ಲಿ ಬರದಿದ್ದರೂ ಅವರು ಡಿಸೆಂಬರ್ ತನಕ ಕಾಯುತ್ತಿದ್ದರು. ಏಕೆಂದರೆ ಆಗಲೆ ಹಳೆಯ ಹಾಗೂ ಅನಿರೀಕ್ಷಿತ ಉಡುಗೊರೆಗಳು ಮನೆಗೆ ಹೊಸದಾಗಿರುತ್ತಿದ್ದವು. ಹತ್ತನೆಯ ಕ್ರಿಸ್‌ಮಸ್ ದಿನ ಚಿಕ್ಕವನಾದ ಹೊಸೆ ಅರ್ಕಾದಿಯೋ ಸ್ಕೂಲಿಗೆ ಹೋಗಲು ಸಿದ್ಧನಾಗುತ್ತಿದ್ದಾಗ, ಎಂದಿಗಿಂತ ಮುಂಚಿತವಾಗಿ ಅವನ ಅಜ್ಜನಿಂದ ಭಾರಿ ಪ್ರಮಾಣದ ಪೆಟ್ಟಿಗೆಯೊಂದು ಬಂತು. ಅದರ ಮೇಲೆ ಗೊತ್ತಾದ ಅಂತರದಲ್ಲಿ ಮೊಳೆಗಳಿಂದ ಹೊಡೆದಿತ್ತು ಮತ್ತು ಅಡ್ಡಾದಿಡ್ಡಿ ಅಕ್ಷರದಲ್ಲಿ ಶ್ರೀಮತಿ ದೋನ್ಯಾ ಫೆರ್ನಾಂಡ ದೆಲ್ ಕಾರ್ಪಿಯೋ ಬ್ಯುಂದಿಯಾ ಎಂಬ ವಿಳಾಸ ಬರೆದಿತ್ತು. ಅವಳು ಕಾಗದವನ್ನು ಓದುತ್ತಿದ್ದಂತೆ ಮಕ್ಕಳು ಪೆಟ್ಟಿಗೆಯನ್ನು ತೆಗೆಯಲು ಹೊರಟರು. ಎಂದಿನಂತೆ ಅವರ ಜೊತೆ ಅವ್ರೇಲಿಯಾನೋ ಸೆಗುಂದೋ ಸೇರಿಕೊಂಡು ಸೀಲುಗಳನ್ನು ಒಡೆದರು. ಕವರ್ ತೆಗೆದು ರಕ್ಷಣೆಗಿದ್ದ ಮರದ ಹೊಟ್ಟನ್ನು ಹೊರಕ್ಕೆ ತೆಗೆದರು. ಅವರಿಗೆ ತಾಮ್ರದ ಬೋಲ್ಟ್‌ಗಳನ್ನು ಹಾಕಿದ ಉದ್ದನೆಯ ಪೆಟ್ಟಿಗೆ ಕಂಡಿತು. ಮಕ್ಕಳು ತಾಳ್ಮೆಗೆಟ್ಟು ನೋಡುತ್ತಿದ್ದಂತೆ ಅವ್ರೇಲಿಯಾನೋ ಸೆಗುಂದೋ ಎಂಟು ಬೋಲ್ಟ್‌ಗಳನ್ನು ತೆಗೆದ. ಅವನು ಸೀಸದ ಕವರನ್ನು ತೆಗೆದಾಗ ಮಕ್ಕಳನ್ನು ಪಕ್ಕಕ್ಕೆ ತಳ್ಳಿ ಕೂಗಲೂ ಕಾಲಾವಕಾಶವಿರಲಿಲ್ಲ. ಅವನು ಕಂಡದ್ದು ಕಪ್ಪು ಉಡುಗೆಯಲ್ಲಿದ್ದ, ಎದೆಯ ಮೇಲೆ ಶಿಲುಬೆಯಿದ್ದ ಮಾರಕ ಗಾಯಗಳಿದ ಸುರುಟಿ ಹೋದ ಚರ್ಮವಿದ್ದ, ಕುದ್ದು ಬೇಯುತ್ತ ಜೀವಂತ ಹರಳುಗಳಂತೆ ನೀರ್ಗುಳ್ಳೆಗಳಿದ್ದ ದೋನ್ಯಾ ಫೆರ್ನಾಂಡನನ್ನು.
ಮಗಳು ಹುಟ್ಟಿದ ಸ್ವಲ್ಪ ಕಾಲದ ನಂತರ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗಾಗಿ ಉತ್ಸವ ಆಚರಿಸಲು ಸರ್ಕಾರ ಆಜ್ಞೆ ಹೊರಡಿಸಿದ ಮೇಲೆ, ನಿರ್ಲಾಂದಿಯಾ ಒಪ್ಪಂದದ ಉತ್ಸವವನ್ನು ಆಚರಿಸಲು ಮತ್ತೊಂದು ಘೋಷಣೆ ಹೊರಡಿಸಲಾಯಿತು. ಅದು ಅಧಿಕೃತ ರೀತಿಗೆ ತೀರ ಹೊರತಾದದ್ದರಿಂದ, ಕರ್ನಲ್ ಅದರ ವಿರುದ್ಧ ವ್ಯಗ್ರವಾಗಿ ಹೇಳಿ ಗೌರವಾರ್ಪಣೆಯನ್ನು ನಿರಾಕರಿಸಿದ. ಅವನು, “ನಾನು ಆಚರಣೆ ಅನ್ನೋದನ್ನ ಮೊದಲ್ನೆ ಸಲ ಕೇಳ್ತಿದೀನಿ. ಅದರರ್ಥ ಏನೇ ಇದ್ರೂ, ಅದರಲ್ಲೇನೋ ಕುತಂತ್ರ ಇದೆ” ಎಂದ. ಅವನ ಬಂಗಾರದ ಅಂಗಡಿ ಪ್ರತಿನಿಧಿಗಳಿಂದ ತುಂಬಿ ಹೋಯಿತು. ವಯಸ್ಸಾಗಿ, ಗೌರವಪೂರ್ಣವಾಗಿ, ಈ ಮೊದಲು ಕರ್ನಲ್ ಸುತ್ತ ಕಾಗೆಗಳ ಥರ ಮುತ್ತುತ್ತಿದ್ದ, ಕಪ್ಪು ಬಟ್ಟೆ ಧರಿಸಿದ ಲಾಯರುಗಳು ಮತ್ತೆ ವಾಪಸಾದರು. ಹಿಂದೊಂದು ಕಾಲದಲ್ಲಿ ಯುದ್ಧವನ್ನು ನಿಲ್ಲಿಸಲು ಬಂದ ಅವರು ಮತ್ತೆ ಕಾಣಿಸಿಕೊಂಡಾಗ, ಅವರ ಹೊಗಳಿಕೆಯಲ್ಲಿನ ಕಪಟವನ್ನು ಅವನಿಗೆ ತಡೆದುಕೊಳ್ಳಲಾಗಲಿಲ್ಲ. ಅವನ ಪಾಡಿಗೆ ಅವನನ್ನು ಬಿಟ್ಟಿರಲು ಅವರಿಗೆ ಹೋಗುವಂತೆ ಹೇಳಿದ. ಅವರು ಹೇಳಿದಂತೆ ತಾನು ದೇಶದ ಪ್ರಖ್ಯಾತ ವೀರನಲ್ಲ, ಆದರೆ ತಾನೊಬ್ಬ ವಿಸ್ಮೃತಿಯಲ್ಲಿ ಮತ್ತು ಬಂಗಾರದ ಸಣ್ಣ ಮೀನುಗಳ ಗೋಳಾಟದಲ್ಲಿ ಸಾಯಬೇಕೆಂಬ ಒಂದೇ ಕನಸು ಕಾಣುತ್ತಿರುವ ನೆನಪುಗಳಿಲ್ಲದ, ಕುಶಲಕರ್ಮಿ ಎಂದು ಹೇಳಿದ. ಅವನಿಗೆ ಅತ್ಯಂತ ರೋಷ ಉಂಟು ಮಾಡಿದ ಪದವೆಂದರೆ ಅವನಿಗೆ ಆರ್ಡರ್ ಆಫ್ ಮೆರಿಟ್‌ನಿಂದ ಅಲಂಕೃತಗೊಳಿಸಲು, ಮಕೋಂದೋದಲ್ಲಿ ಗಣತಂತ್ರದ ಅಧ್ಯಕ್ಷರು ಖುದ್ದಾಗಿ ಹಾಜರಿರಲು ಉದ್ದೇಶಿಸಿದ್ದಾರೆ ಎನ್ನುವುದು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಪದಕ್ಕೆ ಪ್ರತಿ ಪದ ತಿಳಿಸುವಂತೆ ಹೇಳಿ, ತಾನು ಚಿಂದಿಯಾಗಿದ್ದರೂ, ಯೋಗ್ಯಪೂರ್ಣವಾದ ಆ ಸಮಾರಂಭದಲ್ಲಿ ಅವನಿಗೆ ಗುಂಡು ಹೊಡೆಯುವುದಕ್ಕೆ ಕಾಯುವುದಾಗಿ ಯೋಚಿಸಿದ. ಹೀಗೆ ಮಾಡುವುದು ಮನಸ್ಸಿಗೆ ಬಂದಂಥ ಮತ್ತು ಕಾಲ ವಿರೋಧಿ ನಡವಳಿಕೆಯ ಆಳ್ವಿಕೆಗೆ ತಿರುಗೇಟಲ್ಲವಾದರೂ, ಯಾರಿಗೂ ಏನೂ ತೊಂದರೆ ಮಾಡದ ಮುದುಕನೊಬ್ಬನಿಗೆ ತೋರಿಸಿದ ಅಗೌರವಕ್ಕಾಗಿ ಎಂದು ಹೇಳಿದ. ಅವನು ಉಂಟುಮಾಡಿದ ಬೆದರಿಕೆ ಎಷ್ಟು ಆವೇಶಪೂರಿತವಾಗಿತ್ತೆಂದg, ಗಣತಂತ್ರದ ಅಧ್ಯಕ್ಷರು ಪ್ರವಾಸವನ್ನು ಕೊನೆಗಳಿಗೆಯಲ್ಲಿ ರದ್ದುಗೊಳಿಸಿದರು ಮತ್ತು ಆ ಕೆಲಸವನ್ನು ಮಾಡಲು ಆಪ್ತ ಪ್ರತಿನಿಧಿಯನ್ನು ಕಳಿಸಿದರು. ಪಾರ್ಶ್ವವಾಯು ಪೀಡಿತನಾಗಿದ್ದ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ತನ್ನ ಹಳೆಯ ಚಾಂಪಿಯನ್ನನ ಮನವೊಲಿಸಲು ಹಾಸಿಗೆಯಿಂದ ಎದ್ದು, ಹರೆಯದವನಾಗಿದ್ದ ಕಾಲದಿಂದ ತನ್ನ ಅನೇಕ ವಿಜಯಗಳಲ್ಲಿ ಮತ್ತು ಸೋಲುಗಳಲ್ಲಿ ಸಹಭಾಗಿಯಾಗಿದ್ದ. ಗಾಲಿ ಕುರ್ಚಿಯಲ್ಲಿ ದಿಂಬುಗಳ ಮಧ್ಯೆ ಕುಳಿತ ಅವನನ್ನು ನಾಲ್ಕು ಜನ ಹೊತ್ತು ತರುತ್ತಿದ್ದನ್ನು ನೋಡಿದ ಕರ್ನಲ್‌ಗೆ ತನಗೆ ಸಹಮತ ತೋರಿಸಲು ಹೀಗೆ ಪ್ರಯತ್ನಿಸುತ್ತಿದ್ದಾನೆ ಎನ್ನುವುದರ ಬಗ್ಗೆ ಕಿಂಚಿತ್ ಅನುಮಾನವಿರಲಿಲ್ಲ. ಆದರೆ ಅವನ ಭೇಟಿಯ ನಿಜವಾದ ಉದ್ದೇಶವನ್ನು ಅರಿತ ಮೇಲೆ ಅವನನ್ನು ವರ್ಕ್‌ಶಾಪ್‌ನಿಂದ ಹೊರಗೆ ತೆಗೆದುಕೊಂಡು ಹೋಗುವಂತೆ ಹೇಳಿದ.
ಅವನು, “ನಂಗೆ ತುಂಬ ತಡವಾಗಿ ಮನದಟ್ಟಾಗ್ತಿದೆ…… ಅವ್ರು ನಿಂಗೆ ಗುಂಡಿಟ್ಟು ಸಾಯಿಸಲು ಬಿಟ್ಟಿದ್ದರೆ ಒಳ್ಳೇದಾಗ್ತಿತ್ತು” ಎಂದ.
ಇದರಿಂದ ಮನೆಯವರು ಯಾರೂ ಪಾಲ್ಗೊಳ್ಳದೆ ಉತ್ಸವ ಆಚರಿಸಲ್ಪಟ್ಟಿತು. ಕಾಕತಾಳೀಯವೆಂಬಂತೆ ಜಾತ್ರೆ ಅದೇ ವಾರವಿತ್ತು. ಆದರೆ ಕ್ರೌರ್ಯದ ಅಣಕನ್ನು ಹೆಚ್ಚಿಸುವ ಸಲುವಾಗಿಯೆ ಕಾಕತಾಳೀಯವನ್ನು ಸರ್ಕಾರ ಮುಂದಾಲೋಚಿಸಿತ್ತು ಎಂದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ತಲೆಯಲ್ಲಿ ಗಟ್ಟಿಯಾಗಿ ಬೇರೂರಿದ್ದನ್ನು ಯಾರಿಗೂ ಹೊರದೂಡಲಾಗಲಿಲ್ಲ. ಒಬ್ಬಂಟಿಯಾಗಿದ್ದ ಅವನ ವರ್ಕ್‌ಶಾಪಿನಿಂದಲೇ ಮಿಲಿಟರಿ ಸಂಗೀತ, ತುಪಾಕಿಗಳ ವಂದನೆಗಳು, ದೇವರ ಪ್ರಾರ್ಥನೆ ಮತ್ತು ಅವರು ರಸ್ತೆಗೆ ಅವನ ಮನೆ ಎದುರು ನಿಂತು ರಸ್ತೆಗೆ ಅವನ ಹೆಸರಿಡುತ್ತ ಮಾಡುತ್ತಿದ್ದ ಭಾಷಣದ ಕೆಲವು ಮಾತುಗಳು ಅವನಿಗೆ ಕೇಳಿಸುತ್ತಿತ್ತು. ಕೈಲಾಗದ ಕೋಪವುಕ್ಕಿ ಅವನ ಕಣ್ಣುಗಳು ರೋಷದಿಂದ ಮಂಜಾಯಿತು ಮತ್ತು ಸೋತ ನಂತರ ಮೊದಲ ಬಾರಿಗೆ ಸಂಪ್ರದಾಯವಾದಿಗಳ ಆಳ್ವಿಕೆಯನ್ನು ನೆಲಸಮ ಮಾಡುವಂಥ ರಕ್ತಸಿಕ್ತ ಯುದ್ಧವನ್ನು ಪ್ರಾರಂಭಿಸುವುದಕ್ಕೆ, ಹರೆಯದಲ್ಲಿದ್ದ ಶಕ್ತಿ ಇರದೇ ಹೋದದ್ದಕ್ಕೆ ಅತೀವ ನೋವುಂಟಾಯಿತು. ಗೌರವಾರ್ಪಣೆಗಳ ಪ್ರತಿಧ್ವನಿಗಳು ಇನ್ನೂ ಮುಗಿಯುವ ಮುಂಚೆಯೇ, ಉರ್ಸುಲಾ ವರ್ಕ್‌ಶಾಪಿನ ಹತ್ತಿರ ಬಂದು ಬಾಗಿಲು ಬಡಿದಳು.
ಅವನು, “ಯಾರ್‍ಗೂ ತೊಂದರೆ ಕೊಡ್ಬೇಡಿ. ನಾನು ಕೆಲಸ ಮಾಡ್ತಿದೀನಿ” ಎಂದ. ಉರ್ಸುಲಾ, “ಬಾಗಿಲು ತೆಗಿ. ಈ ಸಮಾರಂಭಕ್ಕೂ ಇದಕ್ಕೂ ಏನೂ ಸಂಬಂಧವಿಲ್ಲ” ಎಂದು ಸಹಜ ಧ್ವನಿಯಲ್ಲಿ ಹೇಳಿದಳು.
ಆಗ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅಡ್ಡ ಪಟ್ಟಿ ಕೆಳಗಿಳಿಸಿದ ಮತ್ತು ಬಾಗಿಲ ಹತ್ತಿರ ಬೇರೆ ಬೇರೆ ರೀತಿ ಕಾಣುತ್ತಿದ್ದ, ಎಲ್ಲ ಬಗೆಯ ಹಾಗೂ ಬಣ್ಣದ ಹದಿನೇಳು ಹುಡುಗರನ್ನು ಕಂಡ. ಅವರೆಲ್ಲರಲ್ಲೂ ಪ್ರಪಂಚದ ಯಾವುದೇ ಭಾಗದಲ್ಲೂ ಗುರುತು ಹಿಡಿಯಬಹುದಾದ ಒಂಟಿತನದ ಅಂಶವಿತ್ತು. ಅವರು ಅವನ ಮಕ್ಕಳಾಗಿದ್ದರು. ಯಾವುದೇ ಪೂರ್ವಸಂಪರ್ಕವಿರದೆ, ಒಬ್ಬರಿಗೊಬ್ಬರು ಪರಿಚಯವಿರದೆ, ದೂರದ ಮೂಲೆಗಳಿಂದ ಗೌರವಾರ್ಪಣೆಯ ಮಾತುಗಳಿಗೆ ಮಾರು ಹೋಗಿ ಬಂದಿದ್ದರು. ಅವರು ತುಂಬ ಹೆಮ್ಮೆಯಿಂದ ಅವ್ರೇಲಿಯಾನೋ ಹೆಸರು ಮತ್ತು ತಮ್ಮ ತಾಯಿಯ ಹೆಸರನ್ನು ಕೊನೆಯಲ್ಲಿ ಇಟ್ಟುಕೊಂಡಿದ್ದರು. ಉರ್ಸುಲಾಳ ಸಮಾಧಾನಕ್ಕಾಗಿ ಮತ್ತು ಫೆರ್ನಾಂಡಳ ಗೌರವಕ್ಕೆ ಹಾನಿಯಾಗಿ, ಮೂರು ದಿನ ಆ ಮನೆಯಲ್ಲಿ ಅವರು ಇದ್ದದ್ದು ಒಂದು ರೀತಿಯ ಯುದ್ಧದ ವಾತಾವರಣದಲ್ಲಿ. ಅಮರಾಂತ ಹಳೆಯ ಕಾಗದಗಳ ನಡುವೆ ಎಲ್ಲರ ಹೆಸರು ಹುಟ್ಟಿದ ತಾರೀಖುಗಳನ್ನು ಉರ್ಸುಲಾ ಬರೆದಿಟ್ಟಿದ್ದ ಪುಸ್ತಕವನ್ನು ಹುಡುಕಿದಳು ಮತ್ತು ಅವರವರ ಹೆಸರಿನ ಮುಂದಿನ ಸ್ಥಳದಲ್ಲಿ ಈಗಿನ ವಿಳಾಸವನ್ನು ಬರೆದಳು. ಇಪ್ಪತ್ತು ವರ್ಷಗಳ ಯುದ್ಧವನ್ನು ಮತ್ತೆ ನೆನಪು ಮಾಡಿಕೊಳ್ಳುವುದಕ್ಕೆ ಆ ಪಟ್ಟಿ ಸಾಧನವಾಗಿತ್ತು. ಅದರಿಂದ ಕರ್ನಲ್ ಆ ಮುಂಜಾನೆ, ಇಪ್ಪತ್ತೊಂದು ಜನರ ಮುಂದಾಳಾಗಿ ಮಕೋಂದೋವನ್ನು ಬಿಟ್ಟು ದಂಗೆ ಏಳಲು ಹೊರಟ ದಿನದಿಂದ, ಕೊನೆಯಲ್ಲಿ ಅವನು ಒಣಗಿದ ರಕ್ತದ ಕಲೆಗಳ ಹೊದಿಕೆ ಹೊದ್ದು ವಾಪಸು ಬರುವ ತನಕ, ರಾತ್ರಿಯ ವೇಳೆಯಲ್ಲಿ ನಡೆಯುತ್ತಿದ್ದ ಕಾರ್ಯಾಚರಣೆಗಳನ್ನು ಮತ್ತೆ ಸೃಷ್ಟಿಸಬಹುದಿತ್ತು. ಅವ್ರೇಲಿಯಾನೋ ಸೆಗುಂದೋ ತನ್ನ ಸೋದರ ಸಂಬಂಧಿಗಳಿಗೆ, ಶಾಂಪೇನ್ ಮತ್ತು ಅಕಾರ್ಡಿಯನ್ ಔತಣಕೊಡಲು ಸಿಕ್ಕ ಅವಕಾಶವನ್ನು ಕೈ ಬಿಡಲಿಲ್ಲ. ಗೌರವಾರ್ಪಣೆಯ ಕಾರಣದಿಂದ ಅವಲಕ್ಷಣವಾಗಿ ಕಂಡ ಅದನ್ನು, ಜಾತ್ರೆಯ ಲೆಕ್ಕವನ್ನು ಸರಿಪಡಿಸುವುದಕ್ಕಾಗಿ ಮಾಡಿದ್ದು ಎಂದು ಕೆಲವರು ಮಾತಾಡಿಕೊಂಡರು. ಅವರು ಅರ್ಧದಷ್ಟು ಪಾತ್ರೆಗಳನ್ನು ಒಡೆದು ಹಾಕಿದರು. ಕಟ್ಟಿ ಹಾಕಲು ಉದ್ದೇಶಿಸಿದ್ದ ಹೋರಿಯನ್ನು ಅಟ್ಟಿಸಿಕೊಂಡು ಹೋಗಿ ಗುಲಾಬಿ ಪೊದೆಗಳನ್ನು ಹಾಳ; ಮಾಡಿದರು, ಕೋಳಿಗಳಿಗೆ ಗುಂಡಿಕ್ಕಿ ಕೊಂದರು, ಅಮರಾಂತಳನ್ನು ಪಿಯತ್ರೋ ಕ್ರೆಪ್ಸಿಯ ವಿಷಾದಪೂರ್ಣ ವಾಲ್ಜ್‌ಗೆ ನರ್ತಿಸುವಂತೆ ಮಾಡಿದರು, ಸುಂದರಿ ರೆಮಿದಿಯೋಸ್ ಗಂಡಸರ ಪ್ಯಾಂಟ್ ತೊಟ್ಟು ಗ್ರೀಸ್ ಹಚ್ಚಿದ ಏಣಿಯನ್ನು ಹತ್ತುವಂತೆ ಮಾಡಿದರು ಮತ್ತು ಊಟದ ಮನೆಯಲ್ಲಿ ಉಪ್ಪು ಹಚ್ಚಿದ ಹಂದಿ ಮಾಂಸವನ್ನು ಅಡ್ಡಾದಿಟ್ಟಿ ತೆಗೆದುಕೊಂಡು ಹೋಗುವಾಗ ಅದು ಫೆರ್ನಾಂಡಳ ಮುಂದೆ ಕೆಳಗೆ ಬಿತ್ತು. ಆದರೆ ಯಾರೂ ಹೀಗೆ ಹಾಳುಗೆಡವಿದ್ದಕ್ಕೆ ಪಶ್ಚಾತ್ತಾಪ ಪಟ್ಟುಕೊಳ್ಳಲಿಲ್ಲ. ಏಕೆಂದರೆ ಇಡೀ ಮನೆ ಆರೋಗ್ಯಪೂರ್ಣ ಅಬ್ಬರದಾಟದಿಂದ ಅಲ್ಲಾಡಿಹೋಗಿತ್ತು. ಮೊದಲು ಅಪನಂಬಿಕೆಯಿಂದ ಅವರನ್ನು ಬರಮಾಡಿಕೊಂಡು, ಕೆಲವರಿಗೆ ತಾನು ತಂದೆ ಎನ್ನುವುದನ್ನೂ ಅನುಮಾನಿಸಿದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, ಅವರ ಹುಚ್ಚಾಟದಿಂದ ಖುಷಿಗೊಂಡ ಮತ್ತು ಅವರು ಹೊರಡುವ ಮುಂಚೆ ಪ್ರತಿಯೊಬ್ಬರಿಗೂ ಬಂಗಾರದ ಸಣ್ಣ ಮೀನೊಂದನ್ನು ಕೊಟ್ಟ. ಅಂತರ್ಮುಖಿಯಾಗಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಈಗ ವಿನಾಶದಲ್ಲಿ ಕೊನೆಗೊಳ್ಳುವ ಹಂತದಲ್ಲಿದ್ದ ಮಧ್ಯಾಹ್ನದ ಹುಂಜದ ಕಾಳಗವನ್ನು ನೋಡಲು ಆಮಂತ್ರಿಸಿದ. ಏಕೆಂದರೆ ಅದರ ಅಖಾಡದಲ್ಲಿ ಈಗ ಅವ್ರೇಲಿಯಾನೋಗಳೆಲ್ಲ ಎಷ್ಟು ಪರಿಣತರಾಗಿದ್ದರೆಂದರೆ, ಅವರು ಫಾದರ್ ಇಸೆಬಲ್‌ನ ತಂತ್ರಗಳನ್ನು ತಕ್ಷಣವೇ ಕಂಡು ಹಿಡಿದು ಬಿಡುತ್ತಿದ್ದರು. ಅವ್ರೇಲಿಯಾನೋ ಸೆಗುಂದೋ ಆ ಸಂಬಂಧೀಕರ ಹುಚ್ಚಾಟಗಳಲ್ಲಿ ಮಿತಿಯಿಲ್ಲದ ಸಾಧ್ಯತೆಗಳನ್ನು ಕಂಡು, ಅವರೆಲ್ಲ ಅಲ್ಲಿಯೆ ಇದ್ದು ತನಗಾಗಿ ಕೆಲಸ ಮಾಡಬೇಕೆಂದು ಇಷ್ಟಪಟ್ಟ. ಅದನ್ನು ಒಪ್ಪಿಕೊಂಡವನು ಮಿಶ್ರ ಸಂತಾನದವನಾದ ಭಾರಿ ಆಕಾರದ ಉತ್ಸಾಹವಿದ್ದ ಮತ್ತು ಅಜ್ಜನ ಪರಿಶೋಧಕ ಗುಣ ಹೊಂದಿದ್ದ ಅವ್ರೇಲಿಯಾನೋ ಟ್ರೀಸ್ತೆ. ಅವನು ಅರ್ಧ ಪ್ರಪಂಚದಲ್ಲೆಲ್ಲ ತನ್ನ ಅದೃಷ್ಟ ಪರೀಕ್ಷೆ ಮಾಡಿದ್ದ ಮತ್ತು ಅವನಿಗೆ ಇರುವ ಸ್ಥಳ ಮುಖ್ಯವಾಗಿರಲಿಲ್ಲ. ಉಳಿದವರು ಮದುವೆಯಾಗಿರದಿದ್ದರೂ ಸಹ ಹಣೆಬರಹವಿದ್ದಂತೆ ಗುತ್ತದೆ ಎಂದುಕೊಂಡಿದ್ದರು. ಅವರೆಲ್ಲ ಕುಶಲಕರ್ಮಿಗಳಾಗಿದ್ದರು. ಗಂಡಸಾಗಿ ಮನೆಯನ್ನು ನಿಭಾಯಿಸುತ್ತಿದ್ದರು, ಶಾಂತಿ ಪ್ರಿಯರಾಗಿದ್ದರು. ಬೂದಿ ಬುಧವಾರ ಅವರು ದಂಡೆಯಲ್ಲಿ ತಿರುಗಾಡಲು ಹೋಗುವ ಮುಂಚೆ ಅಮರಾಂತ ಅವರಿಗೆ ಭಾನುವಾರದ ಉಡುಪು ಹಾಕಿಕೊಳ್ಳುವಂತೆ ಮಾಡಿ ತನ್ನ ಜೊತೆ ಚರ್ಚ್‌ಗೆ ಬರುವಂತೆ ಮಾಡಿದಳು. ಶ್ರದ್ಧೆಯಿಂದಲ್ಲದೆ ತಮಾಷೆಗಾಗಿ ಫಾದರ್ ಆಂಟೋನಿಯೋ ಇಸೆಬಲ್ ಅವರ ಹಣೆಯ ಮೇಲೆ ಬೂದಿಯಿಂದ ಶಿಲುಬೆಯಾಕಾರದಲ್ಲಿ ಮಾಡಿದ ಪವಿತ್ರ ಸ್ಥಾನಕ್ಕೆ ತಮ್ಮನ್ನು ಕರೆದುಕೊಂಡು ಹೋಗಲು ಒಪ್ಪಿದರು. ವಾಪಸು ಬಂದ ಮೇಲೆ ಅವರಲ್ಲಿ ಎಲ್ಲರಿಗಿಂತ ಚಿಕ್ಕವನು ಹಣೆಯನ್ನು ಒರೆಸಿಕೊಂಡಾಗ ಆ ಚಿಹ್ನೆಯನ್ನು ಅಳಿಸಲಾಗುವುದಿಲ್ಲ ಎಂದು ಗೊತ್ತಾಯಿತು ಮತ್ತು ಅವನ ಸೋದರರಿಗೂ ಇದೇ ರೀತಿ ಆಯಿತು. ಅವರು ಸೋಪಿನಿಂದ ತೊಳೆಯಲು ಪ್ರಯತ್ನಿಸಿದರು, ಮಣ್ಣು ಹಚ್ಚಿ ಬ್ರಷ್‌ನಿಂದ ಉಜ್ಜಿದರು. ಅಲ್ಲದೆ ಕೊನೆಯಲ್ಲಿ ಸ್ಪಂಜಿನ ರೂಪದ ಕಲ್ಲಿನಿಂದ ಉಪ್ಪು ನೀರು ಹಾಕಿ ತಿಕ್ಕಿದರು. ಆದರೆ ಶಿಲುಬೆಯಾಕಾರವನ್ನು ತೆಗೆಯಲಾಗಲಿಲ್ಲ. ಆದರೆ ಸಾಮೂಹಿಕ ಪ್ರಾರ್ಥನೆಗೆ ಹೋದ ಅಮರಾಂತ ಮತ್ತು ಇತರರು ಯಾವುದೇ ತೊಂದರೆ ಇಲ್ಲದೆ ಅದನ್ನು ಅಳಿಸಿ ಹಾಕಿದರು. ಉರ್ಸುಲಾ ಅವರಿಗೆ ವಿದಾಯ ಹೇಳುತ್ತ, “ಹಾಗಿದ್ರೇ ಒಳ್ಳೇದು, ಇನ್ಮೇಲೆ ನೀವು ಯಾರು ಅಂತ ಎಲ್ಲರಿಗೂ ಗೊತ್ತಾಗತ್ತೆ” ಎಂದಳು. ಅವರು ಸೈನಿಕರಂತೆ ಕೂಡಿ, ವಾದ್ಯ ವೃಂದ ಮತ್ತು ಪಟಾಕಿಗಳ ಸದ್ದುಗಳ ಜೊತೆ ಹೊರಟರು ಮತ್ತು ಬ್ಯುಂದಿಯಾ ಸಂತತಿ ಅನೇಕ ಶತಮಾನಗಳ ತನಕ ಇರುತ್ತದೆ ಎಂಬ ಭಾವನೆ ಅವರಲ್ಲಿ ನೆಲೆಯೂರುವಂತೆ ಮಾಡಿದರು. ಹಣೆಯ ಮೇಲೆ ಬೂದಿಯ ಶಿಲುಬೆಯಾಕಾರವಿದ್ದ ಅವ್ರೇಲಿಯಾನೋ ಟ್ರೀಸ್ತೆ, ಹೊಸೆ ಅರ್ಕಾದಿಯೋ ಬ್ಯುಂದಿಯಾ ಆವಿಷ್ಕಾರಗಳ ವಿಭ್ರಾಂತಿಯಲ್ಲಿ ಕನಸು ಕಂಡ ಹಾU, ಊರಿನ ಅಂಚಿನಲ್ಲಿ ಐಸ್ ಫ್ಯಾಕ್ಟರಿ ಶುರು ಮಾಡಿದ.
ಅವನು ಬಂದು ಕೆಲವು ತಿಂಗಳಾದ ಮೇಲೆ ಸಾಕಷ್ಟು ಪ್ರಸಿದ್ಧಿ ಮತ್ತು ಜನಾನುರಾಗ ಪಡೆದಾಗ ಅವ್ರೇಲಿಯಾನೋ ಟ್ರೀಸ್ತೆ ತನ್ನ ತಾಯಿ ಮತ್ತು ಮದುವೆಯಾಗದ ಸೋದರಿಯನ್ನು (ಅವಳು ಕರ್ನಲ್‌ನ ಮಗಳಲ್ಲ) ಕರೆದುಕೊಂಡು ಬರಲು ಮನೆಯೊಂದನ್ನು ಹುಡಕಲು ತೊಡಗಿದ ಮತ್ತು ಜೌಕದ ಮೂಲೆಯಲ್ಲಿದ್ದ ತೊರೆದು ಬಿಟ್ಟಂತಿದ್ದ ಭಾರಿ ಮನೆಯ ಬಗ್ಗೆ ಆಸಕ್ತಿ ವಹಿಸಿದ. ಆ ಮನೆಯ ಯಾರದು ಎಂದು ವಿಚಾರಿಸಿದ. ಯಾರೋ ಒಬ್ಬ, ಅದು ಯಾರಿಗೂ ಸೇರಿಲ್ಲವೆಂದೂ ಹಿಂದೊಮ್ಮೆ ಅಲ್ಲಿ ಬರಿ ಮಣ್ಣು ಮತ್ತು ಗೋಡೆಯ ಹೆಕ್ಕಳ ತಿಂದು ಬದುಕುತ್ತಿದ್ದ ವಿಧವೆಯೊಬ್ಬಳು ವಾಸವಾಗಿದ್ದಳೆಂದೂ ಮತ್ತು ಅವಳ ಅಂತಿಮ ವರ್ಷಗಳಲ್ಲಿ, ಕೇವಲ ಎರಡು ಸಲ, ಕೃತಕ ಹೂಗಳಿರುವ ಹ್ಯಾಟ್ ಹಾಕಿಕೊಂಡು ಹಳೆಯ ಬಿಳಿ ಬಣ್ಣದ ಶೂ ತೊಟ್ಟುಕೊಂಡು ಬಿಷಪ್‌ಗೆ ಕಾಗದ ಹಾಕಲು, ಜೌಕವನ್ನು ದಾಟಿ ಪೋಸ್ಟಾಫೀಸಿಗೆ ಹೋಗಲು ರಸ್ತೆಯಲ್ಲಿ ಕಾಣಿಸಿಕೊಂಡಳೆಂದು ಹೇಳಿದ. ಅವನಿಗೆ ಹಲವರು ಅವಳಿಗಿದ್ದ ಒಬ್ಬಳೇ ಸಂಗಾತಿಯೆಂದರೆ ಒಬ್ಬಳೇ ಸೇವಕಿಯೆಂದೂ ಮತ್ತು ಅವಳು ಮನೆಗೆ ನುಗ್ಗಿದ ನಾಯಿ, ಬೆಕ್ಕು ಮತ್ತು ಯಾವುದೇ ಪ್ರಾಣಿಯನ್ನು ಕೊಂದು ಅದರ ಕೊಳೆತ ಮಾಂಸ ಕಂಡು ಜನರಿಗೆ ಸಿಟ್ಟು ತರಿಸಲು, ರಸ್ತೆಯ ಮಧ್ಯಕ್ಕೆ ಸತ್ತ ಪ್ರಾಣಿಗಳನ್ನು ಎಸೆಯುತ್ತಿದ್ದಳೆಂದು ತಿಳಿಸಿದರು. ಸೂರ್ಯನ ಉರಿ ಬಿಸಿಲಿನ ಶಾಖ ಅಂಥ ಕೊನೆಯ ಪ್ರಾಣಿಯ ಚರ್ಮದ ಮೇಲೆ ಬಿದ್ದು ಎಷ್ಟು ದಿನಗಳಾಯಿತೆಂದರೆ, ಪ್ರತಿಯೊಬ್ಬರಿಗೂ ಆ ಮನೆಯ ಒಡತಿ ಮತ್ತು ಸೇವಕಿಯರಿಬ್ಬರೂ ಯುದ್ಧ ಮುಗಿಯುವ ಬಹಳ ಮುಂಚೆಯೇ ಸತ್ತು ಹೋಗಿದ್ದಾರೆ ಎಂದು ತಮ್ಮಷ್ಟಕ್ಕೆ ಭಾವಿಸಿದರು. ಆ ಮನೆ ಇನ್ನೂ ಉಳಿದುಕೊಂಡಿರುವುದಕ್ಕೆ ಇತ್ತೀಚಿನ ವರ್ಷಗಳಲ್ಲಿ ಅಂಥ ಭಾರಿ ಮಳೆಯಾಗಲಿ ಅಥವಾ ಬಿರುಗಾಳಿ ಬೀಸಿಲ್ಲ ಎಂದರು. ಬಾಗಿಲ ತಿರುಗಣಿಗಳಲ್ಲಿ ತುಕ್ಕು ಹಿಡಿದು ಮರುಟಿದ್ದವು, ಬಾಗಿಲುಗಳು ತಿರುಗಣಿಗಳ ಆಧಾರದಿಂದ ನಿಂತಿದ್ದವು, ತೇವದಿಂದ ಬೆಸೆದುಕೊಂಡಿದ್ದವು, ಹುಲ್ಲು ಗಿಡ ಬೆಳೆದು ನೆಲ ಸೀಳು ಬಿಟ್ಟಿತ್ತು ಮತ್ತು ಸೀಳುಗಳಲ್ಲಿ, ಹಲ್ಲಿ ಮತ್ತಿತರ ಜಂತುಗಳು ಮನೆ ಮಾಡಿಕೊಂಡಿದ್ದವು. ಇವೆಲ್ಲದರಿಂದ ಆ ಮನೆಯಲ್ಲಿ ಕೊನೆಯ ಪಕ್ಷ ಐವತ್ತು ವರ್ಷ ಯಾವ ನರಪ್ರಾಣಿ ಅಲ್ಲಿರಲಿಲ್ಲವೆಂಬ ಭಾವನೆಯನ್ನು ಉಂಟುಮಾಡುತ್ತಿತ್ತು. ಆದರೆ ಹಠಾತ್ ಪ್ರವೃತ್ತಿಯವನಾದ ಅವ್ರೇಲಿಯಾನೋ ಟ್ರೀಸ್ತೆಗೆ ಮುಂದುವರೆಯಲು ಅವೆಲ್ಲ ಆಧಾರಗಳು ಬೇಕಿರಲಿಲ್ಲ. ಅವನು ಮುಂಬಾಗಿಲನ್ನು ಭುಜದಿಂದ ತಳ್ಳಿದಾಗ ಹುಳು ತಿಂದು ಮರದ ಚೌಕಟ್ಟು ಕಟ್ಟಿದ್ದ ಇಲ್ಲಣಗಳ ನಡುವೆ ಧೂಳೆಬ್ಬಿಸಿ, ನಿಶ್ಯಬ್ದವಾಗಿ ಕೆಳಗೆ ಬಿತ್ತು. ಅವ್ರೇಲಿಯಾನೋ ಟ್ರೀಸ್ತೆ ಧೂಳು ಕರಗಿ ತಿಳಿಯಾಗುವ ತನಕ ಹೊರಗಡೆಯೇ ನಿಂತಿದ್ದ. ಅನಂತರ ಅವನು ರೂಮಿನ ಮಧ್ಯದಲ್ಲಿ ಕೊಳಕಾದ, ಕಳೆದ ಶತಮಾನದ ಉಡುಗೆ ತೊಟ್ಟಿದ್ದ, ತಲೆ ಮೇಲೆ ಅಲ್ಪ ಸ್ವಲ್ಪ ಹಳದಿ ಕೂದಲುಗಳಿದ್ದ ಬೋಳಾಗಿದ್ದ ಮತ್ತು ಇನ್ನೂ ಸುಂದರವಾಗಿದ್ದು ಆಸೆ ಕಳೆದುಕೊಂಡಿದ್ದ ಎರಡು ದೊಡ್ಡ ಕಣ್ಣುಗಳಿದ್ದ, ಹಾಗೂ ಏಕಾಂತದ ಭಾರದಿಂದ ಮುಖದ ಚರ್ಮ ಸುಕ್ಕಾಗಿದ್ದ ಹೆಂಗಸನ್ನು ಕಂಡ ಮತ್ತು ಅವಳ ಬೇರೆ ಯಾವುದೋ ಪ್ರಪಂಚದ ನೋಟವನ್ನು ಕಂಡದ್ದರಿಂದ ಅಲ್ಲಾಡಿ ಹೋದ. ಅವ್ರೇಲಿಯಾನೋ ಟ್ರೀಸ್ತೆ ಆ ಹೆಂಗಸು ಪುರಾತನ ಕಾಲದ ಪಿಸ್ತೂಲಿನಿಂದ ತನ್ನ ಕಡೆ ಗುರಿ ಹಿಡಿದುಕೊಂಡಿರುವುದನ್ನು ಗಮನಿಸಲಿಲ್ಲ.
ಅವನು “ದಯವಿಟ್ಟು ಕ್ಷಮಿಸಿ” ಎಂದು ಮೆಲುದನಿಯಲ್ಲಿ ಹೇಳಿದ.
ನಾಜೂಕಿನ ಪೀಠೋಪಕರಣಗಳು ತುಂಬಿದ್ದ ಆ ರೂಮಿನ ಮಧ್ಯೆ ಅಲ್ಲಾಡದೆ ಇದ್ದ ಅವಳು, ಭಾರಿ ಅಗಲದ ಭುಜದ ಮತ್ತು ಹಣೆಯ ಮೇಲೆ ಬೂದಿಯ ಹಚ್ಚೆಯಿದ್ದ ಮನುಷ್ಯನ ಪ್ರತಿ ಇಂಚಿಂಚನ್ನು ಪರೀಕ್ಷಿಸಿದಳು ಮತ್ತು ಧೂಳಿನ ಕಣಗಳ ಮೂಲಕ ಇತರೆ ವಸ್ತುಗಳ ಜೊತೆ ಅವನ ಭುಜದ ಮೇಲಿದ್ದ ಡಬಲ್ ಬ್ಯಾರಲ್ ಗನ್ ಹಾಗೂ ಕೈಯಲ್ಲಿ ಮೊಲಗಳ ಸರವನ್ನು ನೋಡಿದಳು.
ಅವಳು ಕೆಳದನಿಯಲ್ಲಿ “ದೇವರೇ ….. ಈಗ ಅವರು ಆ ನೆನಪುಗಳನ್ನು ಹೊತ್ತು ತರೋದು ಸರಿಯಲ್ಲ” ಎಂದಳು.
ಅವ್ರೇಲಿಯಾನೋ ಟ್ರೀಸ್ತೆ, “ನಾನು ಮನೇನ ಬಾಡಿಗೆಗೆ ತೊಗೋ ಬೇಕೂಂತ ಇದೀನಿ” ಎಂದ.
ಆಗ ಹೆಂಗಸು ಪಿಸ್ತೂಲನ್ನು ಮೇಲೆತ್ತಿ ಬೂದಿಯ ಕ್ರಾಸ್‌ಗೆ ಬಿಗಿ ಮುಂಗೈಯಿಂದ ಗುರಿ ಹಿಡಿದಳು ಮತ್ತು ಅದರ ಕುದುರೆಯ ಮೇಲೆ ನಿರ್ಧಾರದಿಂದ ಬೆರಳಿಟ್ಟಳು.
ಅವಳು, “ಹೊರಟು ಹೋಗು” ಎಂದು ಅಬ್ಬರಿಸಿದಳು.
ಆ ರಾತ್ರಿ ಅವ್ರೇಲಿಯಾನೋ ಟ್ರೀಸ್ತೆ ಮನೆಯವರಿಗೆ ಆ ಘಟನೆಯ ಬಗ್ಗೆ ಹೇಳಿದ. ಆಗ ಉರ್ಸುಲಾ ದಿಗ್ಭ್ರಾಂತಳಾಗಿ ಅತ್ತಳು. ಅವಳು, “ದೇವರೇ, ಅವಳಿನ್ನೂ ಬದುಕಿದ್ದಾಳೆ” ಎಂದು ತಲೆ ಹಿಡಿದುಕೊಂಡು, ಆಶ್ಚರ್ಯದಿಂದ ಹೇಳಿದಳು. ಕಾಲ, ಯುದ್ಧ ಮತ್ತು ಲೆಕ್ಕವಿಲ್ಲದಷ್ಟು ಅನಾಹುತಗಳು ರೆಬೇಕಳನ್ನು ಮರೆಯುವಂತೆ ಮಾಡಿದ್ದವು. ಆ ಬಿಲದಲ್ಲೇ ಕೊಳೆಯುತ್ತಿದ್ದಾ, ಅವಳಿನ್ನೂ ಬದುಕಿದ್ದಾಳೆ ಎನ್ನುವುದನ್ನು ಒಂದು ನಿಮಿಷವೂ ಮರೆಯದೆ ಇದ್ದ ಒಂದೇ ವ್ಯಕ್ತಿ ಎಂದರೆ, ಅತ್ಯಂತ ಕಠೋರಳಾದ ಮತ್ತು ವಯಸ್ಸಾಗುತ್ತಿದ್ದ ಅಮರಾಂತ. ಅವಳ ಮಂಜಿನ ಹೃದಯ, ಏಕಾಂತದಲ್ಲಿದ್ದ ಅವಳನ್ನು ಜಾಗೃತಗೊಳಿಸಿದಾಗ, ಸಂಜೆ ಅವಳ ಬಗ್ಗೆ ಯೋಚಿಸಿದ್ದಳು ಮತ್ತು ಜೋತು ಬಿದ್ದ; ಮೊಲೆಗಳನ್ನು ತೆಳು ಹೊಟ್ಟೆಯನ್ನು ಸೋಪಿನಿಂದ ತೊಳೆದುಕೊಳ್ಳುವಾಗ, ಗಂಜಿ ಹಾಕಿದ ಒಳಲಂಗವನ್ನು ತೊಟ್ಟುಕೊಳ್ಳುವಾಗ, ವಯಸ್ಸಾದವರ ಒಳಕುಪ್ಪಸವನ್ನು ಹಾಕಿಕೊಳ್ಳುವಾಗ ಮತ್ತು ಘೋರ ಪ್ರಾಯಶ್ಚಿತ್ತದ ಕೈಯಿನ ಕಪ್ಪು ಬ್ಯಾಂಡೇಜನ್ನು ಬದಲಾಯಿಸುವಾಗ, ಅವಳ ಬಗ್ಗೆ ಯೋಚಿಸಿದ್ದಳು. ಯಾವಾಗಲೂ ಪ್ರತಿಕ್ಷಣವೂ, ನಿದ್ದೆಯಲ್ಲಿ, ಎಚ್ಚರದಲ್ಲಿ, ಅತ್ಯಂತ ಮೇಲ್ಮಟ್ಟದ ಮತ್ತು ತುಚ್ಛವಾದ ಆಲೋಚನೆಗಳಲ್ಲಿ, ಅಮರಾಂತ ಅವಳ ಬಗ್ಗೆ ಯೋಚಿಸುತ್ತಿದ್ದಳು. ಏಕೆಂದರೆ ಏಕಾಂತ ಅವಳ ನೆನಪಿನಲ್ಲೊಂದು ಆಯ್ಕೆಯನ್ನು ಮಾಡಿತ್ತು ಮತ್ತು ಜೀವನ ಅವಳ ಹೃದಯದಲ್ಲಿ ಸೇರಿಸಿಟ್ಟ ಮನೋವ್ಯಥೆಯ ಕಂತೆಯನ್ನು ಸುಟ್ಟು ಹಾಕಿತ್ತು ಹಾಗೂ ಪರಮ ನೋವು ಕೊಟ್ಟ ಇತರರನ್ನು ಪರಿಶುದ್ಧವಾಗಿಸಿ, ವಿಸ್ತೃತಗೊಳಿಸಿ, ಸದಾ ಇರುವಂತೆ ಮಾಡಿತ್ತು. ಸುಂದರಿ ರೆಮಿದಿಯೋಸ್‌ಗೆ ರೆಬೇಕ ಬದುಕಿರುವ ಬಗ್ಗೆ ಅವಳಿಂದ ತಿಳಿದಿತ್ತು. ಪ್ರತಿ ಬಾರಿ ಅವರು ಆ ಹಾಳು ಬಿದ್ದ ಮನೆಯನ್ನು ಹಾದು ಹೋಗುವಾಗ, ಅವಳು ಆ ಕಹಿ ಘಟನೆಯ ಬಗ್ಗೆ, ದ್ವೇಷದ ಕಥೆಯ ಬಗ್ಗೆ ಹೇಳುತ್ತಿದ್ದಳು. ಆ ಮೂಲಕ ಲಂಬಿತ ಮತ್ಸರವನ್ನು ಹಂಚಿಕೊಳ್ಳಲು ಮತ್ತು ಸತ್ತ ನಂತರವೂ ಅದನ್ನು ವಿಸ್ತರಿಸುವುದಕ್ಕೆ ಪ್ರಯತ್ನಿಸುತ್ತಿದ್ದಳು. ಆದರೆ ಅವಳ ಯೋಜನೆ ಫಲಕಾರಿಯಾಗಲಿಲ್ಲ. ಏಕೆಂದರೆ ರೆಮಿದಿಯೋಸ್ ಯಾವುದೇ ರೀತಿಯ ತೀವ್ರವಾದ ಆವೇಶವನ್ನು ಸ್ವೀಕರಿಸಲು ಸಿದ್ಧಳಿರಲಿಲ್ಲ, ಅದರಲ್ಲೂ ಮತ್ತೊಬ್ಬರಿಗೆ ಸಂಬಂಧಪಟ್ಟಿದ್ದನ್ನು. ಇನ್ನೊಂದು ಕಡೆ ಉರ್ಸುಲಾ, ಅಮರಾಂತಳಿಗೆ ವಿರುದ್ಧವಾದ ಯಾತನೆಗೆ ಒಳಗಾಗಿದ್ದಳು ಮತ್ತು ರೆಬೇಕಳನ್ನು ಅವಗುಣಗಳಿಂದ ಮುಕ್ತವಾದ ನೆನಪುಗಳಿಂದ ಪರಿಭಾವಿಸುತ್ತಿದ್ದಳು. ಏಕೆಂದರೆ ತಮ್ಮ ವಂಶವೃಕ್ಷಕ್ಕೆ ಸಂಬಂಧಿಸಿದಂತೆ ಅಯೋಗ್ಯವಾದ ಕೆಲಸ ಮಾಡಿದ್ದನ್ನೂ, ಚೀಲದಲ್ಲಿ ತನ್ನ ತಂದೆ ತಾಯಿಯ ಮೂಳೆಗಳನ್ನು ತಂದ ಶೋಚನೀಯ ಸ್ಥಿತಿಯಲ್ಲಿದ್ದ ಚಿಕ್ಕ ಹುಡುಗಿಯ ನೆನಪು ಅವಳಿಗಿತ್ತು. ಅವ್ರೇಲಿಯಾನೋ ಸೆಗುಂದೋ ಅವಳನ್ನು ಮನೆಗೆ ಕರೆದುಕೊಂಡು ಬರಬೇಕೆಂದು ನಿರ್ಧರಿಸಿದ. ಆದರೆ ಅವನ ಉದ್ದೇಶ ರೆಬೇಕಳ ತೀವ್ರ ವಿರೋಧದಿಂದ ನೆರವೇರಲಿಲ್ಲ. ಏಕೆಂದರೆ ಅನೇಕ ವರ್ಷಗಳ ಯಾತನೆ ಮತ್ತು ದುಃಖ, ಅವಳಿಗೆ ಏಕಾಂತವನ್ನು ಪಡೆಯಲು ಅಗತ್ಯವಾಗಿತ್ತು ಮತ್ತು ಅವಳು ಅದನ್ನು ಮುದುಕಿಯೊಬ್ಬಳಿಗೆ ದಾನವಾಗಿ ದೊರಕುವ ಸುಳ್ಳು ಆಕರ್ಷಣೆಗೆ ಬದಲಾಗಿ ಕಳೆದುಕೊಳ್ಳಲು ಇಷ್ಟವಿರಲಿಲ್ಲ.
ಫೆಬ್ರವರಿಯಲ್ಲಿ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಇನ್ನೂ ಬೂದಿಯ ಶಿಲುಬೆಯಾಕಾರವಿದ್ದ ಹದಿನಾರು ಗಂಡು ಮಕ್ಕಳು ಹಿಂತಿರುಗಿದಾಗ ಅವ್ರೇಲಿಯಾನೋ ಟ್ರೀಸ್ತೆ ಅವರಿಗೆ ರೆಬೇಕಳ ಬಗ್ಗೆ ಉತ್ಸಾಹದಿಂದ ಹೇಳಿದ. ಅವರು ಅರ್ಧ ದಿನದಲ್ಲಿ ಮನೆಯ ಲಕ್ಷಣವನ್ನೆ ಮರುಸ್ಥಾಪಿಸಲು ಕಿಟಕಿ, ಬಾಗಿಲುಗಳನ್ನು ಬದಲಾಯಿಸಿ ಮನೆಯ ಮುಂಭಾಗಕ್ಕೆ ಸಂತೋಷ ತರಿಸುವ ಬಣ್ಣ ಬಳಿದರು. ಗೋಡೆ ಮತ್ತು ನೆಲಕ್ಕೆ ಸಿಮೆಂಟಿನಿಂದ ಹಸನುಗೊಳಿಸಿದರು. ಆದರೆ ಅವರಿಗೆ ಮನೆಯ ಒಳಗಡೆ ಕೆಲಸ ಮುಂದುವರಿಸಲು ಯಾವುದೇ ಅಧಿಕೃತ ಪರವಾನಗಿ ಸಿಗಲಿಲ್ಲ. ರೆಬೇಕ ಬಾಗಿಲ ಹತ್ತಿರ ಕೂಡ ಬರಲಿಲ್ಲ. ಅವರು ಉಸಿರುಗಟ್ಟಿ ಮಾಡುತ್ತಿದ್ದ ಬದಲಾವಣೆಯ ಕೆಲಸ ಮುಗಿಸಲು ಅವಳು ಅನುವು ಮಾಡಿಕೊಟ್ಟಳು. ಅನಂತರ ಅವಳು ಅದಕ್ಕೆ ತಗಲುವ ವೆಚ್ಚವನ್ನು ಲೆಕ್ಕ ಹಾಕಿದಳು ಮತ್ತು ಅವಳ ಸೇವಕಿಯಾಗಿದ್ದ ವಯಸ್ಸಾದ ಆರ್ಗೆನಿಡಾಳ ಜೊv, ಕೊನೆಯ ಬಾರಿ ಯುದ್ಧವಾದ ಮೇಲೆ, ಚಲಾವಣೆಯನ್ನು ನಿಲ್ಲಿಸಿದ್ದ ಒಂದು ಬೊಗಸೆ ನಾಣ್ಯವನ್ನು ಅವರಿಗೆ ಕಳಿಸಿದಳು. ರೆಬೇಕ ಅವುಗಳಿಗಿನ್ನೂ ಸಾಕಷ್ಟು ಬೆಲೆ ಇದೆ ಎಂದೇ ತಿಳಿದಿದ್ದಳು. ಆಗಲೇ ಅವರಿಗೆ ಪ್ರಪಂಚದಿಂದ ಅವಳು ಬೇರ್ಪಡೆಯಾಗಿರುವ ಬಗ್ಗೆ ಅರಿವಾಯಿತು ಮತ್ತು ಸಧ್ಯದ ಸ್ಥಿತಿಯಿಂದ, ಅವಳ ಉಸಿರು ಇರುವ ತನಕ, ಮೊಂಡುತನದ ಸ್ವಭಾವದಿಂದ ಅವಳನ್ನು ರಕ್ಷಿಸುವುದು ಅಸಾಧ್ಯವೆಂದು ಅವರಿಗೆ ಗೊತ್ತಾಯಿತು.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಮಕ್ಕಳು ಎರಡನೆ ಬಾರಿ ಮಕೋಂದೋಗೆ ಭೇಟಿ ಕೊಟ್ಟ ಕಾಲದಲ್ಲಿ ಅವರಲ್ಲಿ ಅವ್ರೇಲಿಯಾನೋ ಸೆಂಟೆಂದೋ ಎನ್ನುವನೊಬ್ಬ ಅವ್ರೇಲಿಯಾನೋ ಟ್ರೀಸ್ತೆಯ ಜೊತೆ ಕೆಲಸ ಮಾಡಲು ಉಳಿದುಕೊಂಡ. ನಾಮಕರಣಕ್ಕಾಗಿ ಅವರ ಮನೆಗೆ ಕರೆತರಲಾದವರಲ್ಲಿ ಅವನು ಮೊದಲಿಗನಾಗಿದ್ದ. ಉರ್ಸುಲಾ ಮತ್ತು ಅಮರಾಂತ ಅವನನ್ನು ಬಹಳ ಚೆನ್ನಾಗಿ ನೆನಪಿಟ್ಟುಕೊಂಡಿದ್ದರು. ಏಕೆಂದರೆ ಕೆಲವೇ ಗಂಟೆಗಳಲ್ಲಿ ಅವನ ಕೈಗೆ ಸಿಕ್ಕು ಒಡೆಯಬಹುದಾಗಿದ್ದ ಎಲ್ಲವನ್ನೂ ಧ್ವಂಸಮಾಡಿದ್ದ. ಶೀಘ್ರವಾಗಿ ಬೆಳೆಯುವ ಅವನ ಪ್ರವೃತ್ತಿಯನ್ನು ಕಾಲ ತಹಬಂದಿಗೆ ತಂದಿತ್ತು ಮತ್ತು ಅವನು ಸಿಡುಬಿನ ಕಲೆಗಳ ಸಾಮಾನ್ಯದ ಎತ್ತರದವನಾಗಿದ್ದ. ಆದರೆ ಎಲ್ಲವನ್ನೂ ಹಾಳುಗೆಡಿಸುವ ಅವನ ಅಸಾಧ್ಯ ಶಕ್ತಿ ಹಾಗೆಯೇ ಇತ್ತು. ಅವನು ಮುಟ್ಟಲಿಕ್ಕೂ ಹೋಗದೆ ಅದೆಷ್ಟೋ ಪ್ಲೇಟುಗಳನ್ನು ಒಡೆದನೆಂದರೆ ಫೆರ್ನಾಂಡ ತನ್ನ ಬಳಿ ಇದ್ದ ಕೊನೆಯ ಕೆಲವು ಬೆಲೆ ಬಾಳುವ ಚೈನಾದ ಪಾತ್ರೆಗಳನ್ನು ಅವನು ಒಡೆಯುವ ಮೊದಲು ಲೋಹದ ಪಾತ್ರೆ ಪಡಗಗಳನ್ನು ಕೊಳ್ಳಲು ನಿರ್ಧರಿಸಿದಳು ಮತ್ತು ಆ ಲೋಹದ ಪ್ಲೇಟುಗಳೂ ಕೂಡ ಆಂಕುಡೊಂಕಾದವು, ನುಗ್ಗಾದವು. ಆ ಅಸಾಧ್ಯ ಶಕ್ತಿಯನ್ನು ಸರಿದೂಗಿಸುವಂಥ ಸೌಜನ್ಯಪೂರ್ಣ ನಡವಳಿಕೆ ಅವನಲ್ಲಿ ಇದ್ದದ್ದರಿಂದ ಇತರರ ವಿಶ್ವಾಸವನ್ನು ಗಳಿಸಿಕೊಟ್ಟಿತ್ತು. ಅಲ್ಲದೆ ಅವನಲ್ಲಿ ಕೆಲಸ ಮಾಡುವ ಅಗಾಧ ಸಾಮರ್ಥ್ಯವಿತ್ತು. ಸ್ವಲ್ಪ ಕಾಲದಲ್ಲಿಯೇ ಅವನು ಐಸ್ ಉತ್ಪಾದನಾ ಪ್ರಮಾಣವನ್ನು ಎಷ್ಟು ಹೆಚ್ಚಿಸಿದನೆಂದರೆ ಸ್ಥಳೀಯ ಮಾರುಕಟ್ಟೆಗೆ ಅದು ತೀರ ಹೆಚ್ಚಾಯಿತು. ಅವ್ರೇಲಿಯಾನೋ ಟ್ರೀಸ್ತೆ ತನ್ನ ಉದ್ದಿಮೆಯನ್ನು ಆ ಪ್ರದೇಶದ ಇತರೆ ಊರುಗಳಿಗೂ ವಿಸ್ತರಿಸುವ ಸಾಧ್ಯತೆಯನ್ನು ಯೋಚಿಸಬೇಕಾಯಿತು. ಆಗಲೇ ಅವನು ನಿರ್ಧಾರಿತ ಕ್ರಮದ ಬಗ್ಗೆ ಆಲೋಚಿಸಿದ್ದು. ಅದು ಕೇವಲ ಅವನ ಉದ್ದಿಮೆಯನ್ನು ನವೀಕರಿಸುವುದಕ್ಕೆ ಮಾತ್ರವಲ್ಲದೆ ಪ್ರಪಂಚದ ಉಳಿದ ಕಡೆ ಆ ಊರಿನ ಸಂಪರ್ಕವನ್ನು ಕಲ್ಪಿಸುವುದಾಗಿತ್ತು.
ಅವನು, “ನಾವಿಲ್ಲಿ ರೈಲು ಮಾರ್ಗ ಹಾಕ್ಬೇಕು” ಎಂದ.
ಮಕೋಂದೋದಲ್ಲಿ ಎಂದೂ ಕೇಳದ ಆ ಪದ ಕೇಳಿ ಬಂದದ್ದು ಅದೇ ಮೊದಲು. ಅವ್ರೇಲಿಯಾನೋ ಟ್ರೀಸ್ತೆ ಟೇಬಲ್ ಮೇಲೆ ಹಾಕಿದ ನಕ್ಷೆ, ಹೊಸೆ ಅರ್ಕಾದಿಯೋ ಬ್ಯುಂದಿಯಾ ತಯಾರಿಸಿದ್ದ ಸೌರಶಕ್ತಿ ಯೋಜನೆಯ ನೇರ ಅಳವಡಿಕೆಯಾಗಿ ಉರ್ಸುಲಾಗೆ ಕಂಡು, ಕಾಲ ವೃತ್ತಾಕಾರವಾಗಿ ಕ್ರಮಿಸುತ್ತಿದೆ ಎಂಬ ಅವಳ ಭಾವನೆಯನ್ನು ಸಮರ್ಥಿಸಿತು. ಆದರೆ ಅವನಂತೆ ಅವ್ರೇಲಿಯಾನೋ ಟ್ರೀಸ್ತೆ ನಿದ್ದೆಗೆಡಿಸಿಕೊಳ್ಳಲಿಲ್ಲ, ಊಟ ಬಿಡಲಿಲ್ಲ ಅಥವಾ ಅತಿರೇಕಗಳಿಂದ ಯಾರಿಗೂ ಹಿಂಸೆ ಕೊಡಲಿಲ್ಲ. ಅದನ್ನು ಅತ್ಯಂತ ತ್ವರಿತ ಸಾಧ್ಯತೆಗಳ ಯೋಜನೆಯೆಂದು ಪರಿಗಣಿಸಿ, ಖರ್ಚು-ವೆಚ್ಚ ಹಾಗೂ ಅವಧಿಯ ಬಗ್ಗೆ ಯುಕ್ತಾಯುಕ್ತವಾಗಿ ಲೆಕ್ಕಾಚಾರಮಾಡಿದ ಮತ್ತು ಯಾವುದೇ ಉದ್ರೇಕವಿಲ್ಲದೆ ಪೂರೆಸಿದ. ಒಂದು ಪಕ್ಷ ಅವ್ರೇಲಿಯಾನೋ ಸೆಗುಂದೋನಲ್ಲಿ ಮುತ್ತಜ್ಜನ ಸ್ವಲ್ಪ ಅಂಶವಿದ್ದು ಮತ್ತು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಲ್ಲಿ ಇರದಿದ್ದ ಸ್ವಲ್ಪ ಅಂಶವೆಂದg, ಅದು ಅವಹೇಳನದ ಬಗ್ಗೆ ಇದ್ದ ನಿರ್ಲಕ್ಷ. ಅವನು ರೈಲುದಾರಿಯನ್ನು ತರುವುದಕ್ಕೆಂದು ಸೋದರನ ನೌಕಾಯಾನದ ಅಸಂಗತ ಯೋಜನೆಗೆ ಹಗುರ ಮನಸ್ಸಿನಿಂದ ದುಡ್ಡು ಕೊಟ್ಟ ರೀತಿಯಿಂದಲೇ ದುಡ್ಡು ಕೊಟ್ಟ. ಅವ್ರೇಲಿಯಾನೋ ಟ್ರೀಸ್ತೆ ಋತುಕ್ರಮವನ್ನು ಪರ್‍ಯಾಲೋಚಿಸಿ ಆ ನಂತರದ ಬುಧವಾರ ಮಳೆಗಾಲ ಕಳೆದ ಮೇಲೆ ಹಿಂತಿರುಗುವ ಅಂದಾಜಿನಿಂದ ಹೊರಟ. ಆ ಮೇಲೆ ಅವನಿಂದ ಹೆಚ್ಚಿನ ಸುದ್ದಿ ಇರಲಿಲ್ಲ. ಫ್ಯಾಕ್ಟರಿಯ ಉತ್ಪಾದನೆಯಿಂದ ಉತ್ತೇಜಿತನಾದ ಅವ್ರೇಲಿಯಾನೋ ಸೆಂಟಿನೋ, ನೀರಿನ ಬದಲಾಗಿ ಹಣ್ಣುಗಳ ಸರಕು ಹೊಂದಿದ ಪಾಸ್ ತಯಾರಿಸುವ ಪ್ರಯೋಗವನ್ನು ಪ್ರಾರಂಭಿಸಿದ್ದ ಮತ್ತು ಗೊತ್ತಿಲ್ಲದೆಯೇ ಅಥವಾ ಯೋಚಿಸದೆಯೋ ಅವನು ಶರಬತ್ತನ್ನು ತಯಾರಿಸುವ ಮೂಲ ಅಂಶಗಳನ್ನು ಆಯೋಜಿಸಿದ್ದ. ಆ ರೀತಿಯಲ್ಲಿ ಅವನು ತನ್ನದೆಂದು ಪರಿಗಣಿಸಿದ್ದ ಉದ್ದಿಮೆಯ, ಬೇರೆ ರೀತಿಯ ಉತ್ಪಾದನೆಯನ್ನು ಮಾಡಲು ಯೋಜಿಸಿದ. ಏಕೆಂದರೆ ಮಳೆಗಾಲ ಕಳೆದರೂ ಅವನ ಸೋದರ ಹಿಂತಿರುಗುವ ಸೂಚನೆ ಇರಲಿಲ್ಲ ಮತ್ತು ಅವನಿಂದ ಯಾವುದೇ ಸುದ್ದಿ ಇರದೆ, ಬೇಸಿಗೆ ಕಾಲವೂ ಪೂರ್ತಿಯಾಗಿ ಕಳೆಯಿತು. ಆದರೆ ಇನ್ನೊಂದು ಮಳೆಗಾಲದ ಪ್ರಾರಂಭದಲ್ಲಿ ಮಧ್ಯಾಹ್ನದ ಉರಿಬಿಸಿಲಿನಲ್ಲಿ ನದಿಯಲ್ಲಿ ಬಟ್ಟೆ ಒಗೆಯುತ್ತಿದ್ದ ಹೆಂಗಸೊಬ್ಬರು ಊರಿನ ಮುಖ್ಯ ರಸ್ತೆಯಲ್ಲಿ ಆಶ್ಚರ್ಯದಿಂದ ಕಿರುಚುತ್ತಾ ಓಡಿ ಬಂದಳು.
ಕೊನೆಗೆ ಅವಳು ವಿವರಿಸಿ ಹೇಳಿದ್ದು, “ಅದು ಬರ್‍ತಾ ಇದೆ… ಭೂತಾಕಾರದ್ದು, ಇಡೀ ಹಳ್ಳಿನ ಎಳ್ಕೊಂಡು ಬರ್‍ತಿರೋ ಅಡುಗೆ ಮನೆ ಥರ” ಎಂದು,
ಆ ಕ್ಷಣದಲ್ಲಿ ಭಾರಿಯಾದ ಏದುಸಿರಿನ ಜೊತೆಗೆ ಭಯ ಹುಟ್ಟಿಸುವ ಶಿಳ್ಳೆಯ ಪ್ರತಿಧ್ವನಿಯಿಂದ ಇಡೀ ಊರು ನಡುಗಿತು. ಕೆಲವು ವಾರಗಳ ಹಿಂದೆ ಗುಂಪು ಗುಂಪು ಜನರು ಹಳಿಗಳನ್ನು ಜೋಡಿಸಿ ಹೊಡೆದು ಬಿಗಿಯುತ್ತಿದ್ದದ್ದನ್ನು ಅವರು ನೋಡಿದ್ದರೂ ಯಾರೂ ಅವರ ಕಡೆ ಗಮನ ಕೊಟ್ಟಿರಲಿಲ್ಲ. ಏಕೆಂದರೆ ಅದು ನಗಾರಿ ಮತ್ತು ಶಿಳ್ಳೆ ಹಾಕುತ್ತ ವಾಪಸು ಬರುವ ಜಿಪ್ಸಿಗಳ ಹೊಸ ತಂತ್ರವಿರಬೇಕೆಂದು ತಿಳಿದುಕೊಂಡರು. ಅಲ್ಲದೆ ಹಾದಿ ಹೋಕರು ಜರೂಸಲಂನ ಅಧಿದೇವತೆಯ ಬಗ್ಗೆ ಸೃಷ್ಟಿಸಿದ್ದ ಹಳೆಯ ಹೂರಣವಿಲ್ಲದ ಹಾಡು ಕುಣಿತ ಜೊತೆಗಿದೆ ಎಂದು ತಿಳಿದರು. ಆದರೆ ಅವರು ಶಿಳ್ಳೆಗಳ ಮತ್ತು ಏದುಸಿರಿನ ಶಬ್ದದಿಂದ ತಹಬಂದಿಗೆ ಬಂದ ಮೇಲೆ, ಊರಿನ ಜನರೆಲ್ಲ ಓಡಿದರು ಮತ್ತು ಉಗಿಬಂಡಿಯಲ್ಲಿದ್ದ ಅವ್ರೇಲಿಯಾನೋ ಟ್ರೀಸ್ತೆ, ಕೈ ಬೀಸುವುದನ್ನು ಕಂಡರು ಹಾಗೂ ಎಂಟು ತಿಂಗಳು ತಡವಾಗಿ ಬಂದ ಹೂವಿನಿಂದ ಅಲಂಕೃತವಾದ ರೈಲನ್ನು ನೋಡಿದರು. ಹಳದಿ ಬಣ್ಣದ ಮುಗ್ಧವಾಗಿ ಕಾಣುತ್ತಿದ್ದ ರೈಲು, ಅದೆಷ್ಟೋ ಅಸ್ಪಷ್ಟವಾದ ಮತ್ತು ಖಚಿತವಾದವುಗಳನ್ನು, ಅದೆಷ್ಟೋ ಹಿತವಾದ ಮತ್ತು ಅಹಿತವಾದ ಕ್ಷಣಗಳನ್ನು, ಅದೆಷ್ಟೋ ಬದಲಾವಣೆಗಳನ್ನು, ಅನಾಹುತಗಳನ್ನು ಮತ್ತು ಮನೋವ್ಯಥೆಗಳನ್ನು ಮಕೋಂದೋಗೆ ತರುವುದಿತ್ತು.
೧೨
ಅಷ್ಟೊಂದು ಅಮೋಘ ಆವಿಷ್ಕಾರಗಳಿಂದ ನಿಬ್ಬೆರಗಾದ ಮಕೋಂದೋದ ಜನರಿಗೆ ಸೋಜಿಗ ಶುರುವಾದದ್ದು ಎಲ್ಲಿಂದ ಎಂದು ತಿಳಿಯಲಿಲ್ಲ. ಎರಡನೆ ಬಾರಿ ರೈಲು ಬಂದಾಗ ಅವ್ರೇಲಿಯಾನೋ ಟ್ರೀಸ್ತೆ ತಂದ ಸ್ಥಾವರ ಒದಗಿಸಿದ ಶಕ್ತಿಯಿಂದ ಮಂಕಾಗಿ ಉರಿಯುವ ಬಲ್ಬುಗಳನ್ನು ಇಡೀ ರಾತ್ರಿ ನೋಡುತ್ತ ಕಳೆದರು. ಮತ್ತು ಅದರ ಟಾಮ್-ಟಾಮ್ ಶಬ್ದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಾಲ ಹಿಡಿಯಿತು. ಅವರು ಬ್ರುನೋ ಕ್ರೆಸ್ಪಿ ಸಿಂಹದ ತಲೆಯ ಆಕಾರದ ಟಿಕೆಟ್ ಕೊಡುವ ಕಿಟಕಿಗಳಿದ್ದ ಥಿಯೇಟರ್‌ನಲ್ಲಿ ಚಲಿಸುವ ಸಜೀವ ರೀತಿಯ ಚಿತ್ರಗಳನ್ನು ನೋಡಿ ರೋಷಗೊಂಡರು. ಏಕೆಂದರೆ ಚಲನ ಚಿತ್ರವೊಂದರಲ್ಲಿ ಸತ್ತ ನಂತರ ಹೂಳಿದ್ದಕ್ಕೆ ಮತ್ತು ಅದರ ದುರದೃಷ್ಟಕ್ಕಾಗಿ ಕಣ್ಣೀರು ಸುರಿಸಿದ ನಂತರ ತಂತ್ರವೊಂದರಿಂದ ಅದು ಮತ್ತೆ ಕಾಣಿಸಿಕೊಂಡು, ಮತ್ತೊಂದರಲ್ಲಿ ಅರಬನಾಗಿ ಪರಿವರ್ತಿತಗೊಳ್ಳುತ್ತಿತ್ತು. ನಂತರ ಕಷ್ಟಕೋಟಲೆಯಲ್ಲಿ ಪಾಲುಗೊಳ್ಳಲು ಎರಡು ಸೆಂಟ್ ಕೊಡುತ್ತಿದ್ದ ಪ್ರೇಕ್ಷಕರು ಈ ಬಗೆಯ ಸಾರಾಸಗಟು ಮೋಸವನ್ನು ಸಹಿಸಲಾರದೆ ಸೀಟುಗಳನ್ನು ಹರಿದು ಕಿತ್ತರು. ಬ್ರುನೋ ಕ್ರೆಪ್ಸಿಯ ಕೋರಿಕೆಯ ಮೇರೆಗೆ ಮೇಯರ್ ಜನರಿಗೆ ಸಿನಿಮಾ ಎಂದರೆ ವಿಭ್ರಾಂತಿಯನ್ನು ಹುಟ್ಟಿಸುವ ಒಂದು ಮೆಷಿನ್ ಎಂದು ಮತ್ತು ಪ್ರೇಕ್ಷಕರಿಗೆ ಅಂಥ ಭಾವಾವೇಶ ಅಸಂಗತವೆಂದು ಹೇಳಿಕೆ ಕೊಟ್ಟ. ಪ್ರೋತ್ಸಾಹದಾಯಕವಲ್ಲದ ಅಂಥ ಹೇಳಿಕೆಯಿಂದ ಬಹಳಷ್ಟು ಜನರಿಗೆ ಜಿಪ್ಸಿಗಳ ಕೋರಿಕೆ ರೀತಿಯ ಹೊಸದೊಂದರಿಂದ ಮೋಸ ಹೋದ ಭಾವನೆ ಉಂಟಾಗಿ ಸಿನಿಮಾ ನೋಡಲು ಹೋಗಬಾರದೆಂದು ತೀರ್ಮಾನಿಸಿದರು. ಏಕೆಂದರೆ ಕಲ್ಪಿತ ಜೀವಿಗಳ ದುರದೃಷ್ಟದ ಅತಿರೇಕದ ಅಭಿನಯಕ್ಕಾಗಿ ಅಳುವುದಕ್ಕಿಂತ ತಮಗಾಗಲೇ ಸಾಕಷ್ಟು ತೊಂದರೆಗಳಿವೆ ಎಂದು ಭಾವಿಸಿದರು. ಹೆಚ್ಚು ಕಡಿಮೆ ಇದೇ ರೀತಿ ಹಳೆಯ ವಾದ್ಯಗಳಿಗೆ ಬದಲಾಗಿ ಚಲ್ಲಾಟದ ಹೆಂಗಸರು ಫ್ರಾನ್ಸ್‌ನಿಂದ ತಂದ ಧ್ವನಿಲೇಖಕ್ಕೂ ಉಂಟಾಯಿತು ಮತ್ತು ಸ್ವಲ್ಪ ಕಾಲ ವಾದ್ಯಗೋಷ್ಠಿಯವರ ಜೀವನಾಧಾರದ ಮೇಲೆ ಗಂಭೀರವಾದ ಪರಿಣಾಮ ಬೀರಿತು. ಪ್ರಾರಂಭದಲ್ಲಿ ಆ ನಿಷೇಧಿತ ರಸ್ತೆಗೆ ಕುತೂಹಲದ ಕಾರಣದಿಂದ ಹೋಗಿ ಬರುವವರು ಹೆಚ್ಚಾಗಿದ್ದರು ಮತ್ತು ಮರ್ಯಾದಸ್ಥ ಹೆಂಗಸರೂ ಕೂಡ ಕಾರ್ಮಿಕರಂತೆ ಮರೆಮಾಚಿಕೊಂಡು ಧ್ವನಿಲೇಖದ ಹೊಸತನವನ್ನು ಖುದ್ದಾಗಿ ಕಾಣಲು ಹೋಗಿದ್ದರೆಂಬ ಮಾತು ಹಬ್ಬಿತ್ತು. ಆದರೆ ಸಾಕಷ್ಟು ಹಾಗೂ ಬಹಳ ಸಮೀಪದ ನೋಟದಿಂದ ಅದು ಎಲ್ಲರೂ ಭಾವಿಸಿದ ಹಾಗೆ ಮತ್ತು ಆ ಹೆಂಗಸರು ಹೇಳಿದ ಹಾಗೆ ಮನೋಲ್ಲಾಸಕಾರಕ ಘಟಕವಲ್ಲವೆಂದು ಕಂಡುಕೊಂಡರು. ಅದೊಂದು ಯಾಂತ್ರಿಕ ತಂತ್ರವಾಗಿದ್ದು ಮನ ಕರಗಿಸುವ, ಮಾನವೀಯವಾದ ದೈನಂದಿನ ಸತ್ಯ ತುಂಬಿದ್ದ ವಾದ್ಯಗೋಷ್ಠಿಗೆ ಹೋಲಿಸುವಂತಿಲ್ಲವೆಂಬ ತೀರ್ಮಾನಕ್ಕೆ ಬಂದರು. ಅದೊಂದು ತೀರ ನಿರಾಶೆಯ ವಿಷಯವಾಯಿತು. ಏಕೆಂದರೆ ಧ್ವನಿಲೇಖ ತುಂಬ ಜನಪ್ರಿಯವಾದಾಗ ಪ್ರತಿಯೊಂದು ಮನೆಯಲ್ಲೂ ಅದು ವಯಸ್ಕರಿಗೆ ಮನರಂಜನೆ ಒದಗಿಸುವಂಥದಲ್ಲ ಆದರೆ ಮಕ್ಕಳು ಭಾಗವಹಿಸಿ ಅವಕ್ಕೆ ಉಪಯೋಗವಾಗುವಂಥದ್ದು ಎಂದು ಭಾವಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಊರಿನ ಯಾರಿಗೇ ಆದರೂ ರೈಲ್ವೆ ಸ್ಟೇಷನ್‌ನಲ್ಲಿ ವ್ಯವಸ್ಥಿಸಲಾಗಿದ್ದ ಟೆಲಿಫೋನಿನ ವಾಸ್ತವತೆಯನ್ನು ಪರೀಕ್ಷಿಸುವ ಅವಕಾಶ ಒದಗಿದ್ದರೆ, ಅದೊಂದು ತೀರ ಪ್ರಾಥಮಿಕ ಹಂತದಲ್ಲಿರುವ ಯಾಂತ್ರಿಕ ವಸ್ತುವಾದ ಧ್ವನಿಲೇಖವೆಂದು ಪರಿಗಣಿಸಿದ್ದರೂ ಅದನ್ನು ನಂಬದವರೂ ಕೂಡ ಕ್ಷೆಭೆಗೊಂಡಿದ್ದರು. ಮಕೋಂದೋ ಜನರು ಅಚ್ಚರಿಗೊಳ್ಳುವ ಸಾಮರ್ಥ್ಯದ ಬಗ್ಗೆ ದೇವರು ಪರೀಕ್ಷೆ ಮಾಡುತ್ತಿದ್ದಾನೆಯೋ ಎನ್ನುವಂತೆ ಅವರನ್ನು ಸದಾಕಾಲ ಉದ್ವೇಗ ಮತ್ತು ನಿರಾಶೆ, ಸಂದೇಹ ಮತ್ತು ಮನವರಿಕೆಯ ಹೊಯ್ದಾಟದಲ್ಲಿ ಎಷ್ಟರ ಮಟ್ಟಿಗೆ ಇಟ್ಟಿದ್ದನೆಂದರೆ ಯಾರಿಗೂ ವಾಸ್ತವದ ಮಿತಿಗಳೇನು ಎನ್ನುವುದು ಖಚಿತವಾಗಿ ತಿಳಿದಿರಲಿಲ್ಲ. ಅದು ಸತ್ಯ ಮತ್ತು ಭ್ರಮೆಯ ಕಗ್ಗಂಟಾಗಿ ಬಾದಾಮಿ ಮರದ ಕೆಳಗಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಭೂತವನ್ನು ಕಲಕಿತು ಮತ್ತು ಹಗಲಿನಲ್ಲೇ ಮನೆಯಲ್ಲೆಲ್ಲ ಓಡಾಡುವಂತೆ ಮಾಡಿತು. ರೈಲು ಸಂಚಾರ ಅಧಿಕೃತವಾಗಿ ಉದ್ಘಾಟನೆಯಾದ ಕಾಲದಿಂದ ಮತ್ತು ಅದು ಪ್ರತಿ ಬುಧವಾರ ಹನ್ನೊಂದು ಗಂಟೆಗೆ ಬರುವುದು ವಾಡಿಕೆಯಾಯಿತು. ಅಲ್ಲಿ ಹಳೆಯ ಮರದ ಸ್ಟೇಷನ್‌ನಲ್ಲಿ ಡೆಸ್, ಟೆಲಿಫೋನ್ ಮತ್ತು ಟಿಕೀಟ್ ಕೊಡುವ ಸ್ಥಳವನ್ನು ನಿರ್ಮಿಸಲಾಯಿತು. ಜೊತೆಗೆ ಮಕೋಂದೋದ ರಸ್ತೆಗಳಲ್ಲಿ ದಿನನಿತ್ಯದ ಸಾಮಾನ್ಯ ಪದ್ಧತಿ ಹಾಗೂ ಸಾಮಾನ್ಯ ನಡವಳಿಕೆಗಳ ಗಂಡಸರು, ಹೆಂಗಸರು ಕಂಡರೂ ಕೂಡ ಅವರು ಯಾವುದೋ ಸರ್ಕಸ್ಸಿನವರಂತೆ ಕಾಣುತ್ತಿದ್ದರು. ಜಿಪ್ಸಿಗಳ ತಂತ್ರಗಳ ಆಘಾತಕ್ಕೆ ಸಿಕ್ಕು ನುಜ್ಜಾದ ಆ ಊರಿನಲ್ಲಿ ಶಿಳ್ಳೆ ಹೊಡೆಯುವ ಕೆಟಲ್ ಮತ್ತು ಏಳನೆ ದಿನಕ್ಕೆ ಆತ್ಮೋದ್ಧಾರ ಖಚಿತವಾದ ದೈನಂದಿನ ವಿಧಿಗಳನ್ನು ತಿಳಿಸಿಕೊಡುತ್ತೇವೆಂದು ನಾಚಿಕೆಗೆಟ್ಟು ಹೇಳುವ ವಾಣಿಜ್ಯದ ದೊಂಬರಾಟಕ್ಕೆ ಯಾವುದೇ ಭವಿಷ್ಯವಿರಲಿಲ್ಲ. ಅವರನ್ನು ನಂಬಿದ ಕೆಲವರಿಂದ ಮತ್ತು ಯಾವಾಗಲೂ ಖಚಿತ ನಿಲುವಿಲ್ಲದವರಿಂದ ತುಂಬ ಹೆಚ್ಚು ಅನುಕೂಲ ಪಡೆದರು. ನಾಟಕದವರಂತೆ ಚಡ್ಡಿ ಹಾಕಿಕೊಂಡು, ಮಂಡಿಯ ತನಕ ಕಾಲುಕಾಪು ತೊಟ್ಟಿದ್ದ, ತಲೆಗೆ ಟೋಪಿ ಮತ್ತು ಸ್ಟೀಲಿನ ಕನ್ನಡಕ ಹಾಕಿಕೊಂಡಿದ್ದ, ನೀಲಿ ಕಣ್ಣು ಮತ್ತು ಕೋಳಿ ಚರ್ಮದ ರೀತಿಯ ಮನುಷ್ಯನೊಬ್ಬ ಮಕೋಂದೋಗೆ ಒಂದು ಬುಧವಾರ ಬಂದ. ಅವನು ಬ್ಯುಂದಿಯಾರ ಮನೆಯಲ್ಲಿ ಊಟ ಮಾಡುತ್ತಿದ್ದ ಮಿಸ್ಟರ್ ಹರ್ಬಟ್.
ಅವನು ಮೊದಲ ಬಾಳೆಗೊಂಚಲನ್ನು ತಿನ್ನುವವರೆಗೂ ಟೇಬಲ್‌ನಲ್ಲಿ ಇರುವುದನ್ನು ಯಾರೂ ಗಮನಿಸಿರಲಿಲ್ಲ. ಹರಕು ಮುರುಕು ಸ್ವ್ಯಾನಿಷ್‌ನಲ್ಲಿ ಹೊಟೆಲ್ ಜಾಕೊಬ್‌ನಲ್ಲಿ ರೂಮುಗಳಿಲ್ಲ ಎಂದು ಕೂಗಾಡುತ್ತಿದ್ದಾಗ ಆಕಸ್ಮಾತ್ತಾಗಿ ಅವ್ರೇಲಿಯಾನೋ ಸೆಗುಂದೋಗೆ ಕಂಡ. ಅವನು ಅಪರಿಚಿತರಿಗೆ ಆಗಾಗೆ ಮಾಡುತ್ತಿದ್ದ ಹಾಗೆ ಅವನನ್ನು ಮನೆಗೆ ಕರೆದುಕೊಂಡು ಹೋದ. ಅವನು ಹಾರಾಡುವ ಬಲೂನಿನ ವ್ಯಾಪಾರಿಯಾಗಿದ್ದು ಅದಕ್ಕಾಗಿ ಅರ್ಧ ಪ್ರಪಂಚ ಸುತ್ತಿ ತುಂಬ ಲಾಭ ಮಾಡಿಕೊಂಡಿದ್ದ. ಆದರೆ ಮಕೋಂದೋದಲ್ಲಿ ಯಾರೊಬ್ಬರನ್ನೂ ಹಾರಾಟಕ್ಕೆ ಕರೆದುಕೊಂಡು ಹೋಗುವುದರಲ್ಲಿ ವಿಫಲನಾಗಿದ್ದ. ಏಕೆಂದರೆ ಜಿಪ್ಸಿಗಳ ಹಾರಾಡುವ ಜಮಖಾನಗಳನ್ನು ನೋಡಿ ಹಾಗೂ ಅದರ ಮೇಲೆ ಏರಿದ ಅವರಿಗೆ ಆ ಆವಿಷ್ಕಾರ ಹಳೆಯದೆಂದು ತೋರಿತು. ಅದರಿಂದಾಗಿ ಅವನು ಮುಂದಿನ ರೈಲಿನಲ್ಲಿ ಹೊರಡುವವನಿದ್ದ. ಹುಲಿಯ ಪಟ್ಟಿಯ ರೀತಿಯ ಬಾಳೆ ಗೊಂಚಲನ್ನು ಡೈನಿಂಗ್ ರೂಮಿನಲ್ಲಿ ಅವರು ಅಭ್ಯಾಸದಂತೆ ತೂಗು ಬಿಟ್ಟಿದ್ದ ಗೊನೆಯಿಂದ ತಂದಾಗ, ಅವನು ಮೊದಲನೆ ಹಣ್ಣನ್ನು ಹೆಚ್ಚಿನ ಉತ್ಸಾಹವಿಲ್ಲದೆ ತೆಗೆದುಕೊಂಡ. ಅವನು ಅದನ್ನು ಮಾತನಾಡುತ್ತ, ಅಗಿಯುತ್ತ, ರುಚಿನೋಡುತ್ತ, ಖುಷಿಯಿಂದ ತಿನ್ನುವವನಂತಲ್ಲದೆ ಜಾಣನೊಬ್ಬನಿಗೆ ಉಂಟಾದ ಚಿತ್ತಭ್ರಮಣೆಯಿಂದ ತಿಂದ. ಅವನು ಮೊದಲನೆ ಗೊಂಚಲನ್ನು ಮುಗಿಸಿದ ಮೇಲೆ ಅವರಿಗೆ ಮತ್ತೊಂದನ್ನು ತರುವಂತೆ ಹೇಳಿದ. ಅನಂತರ ಅವನು ತನ್ನೊಂದಿಗೆ ಯಾವಾಗಲೂ ತೆಗೆದುಕೊಂಡು ಹೋಗುತ್ತಿದ್ದ ಸಲಕರಣೆಗಳ ಪೆಟ್ಟಿಗೆಯಿಂದ ವಜ್ರದ ವ್ಯಾಪಾರಿಗಿರುವ ಸಂಶಯಾತ್ಮಕ ಗಮನದಿಂದ ಬಾಳೆಹಣ್ಣನ್ನು ಆಮೂಲಾಗ್ರವಾಗಿ ಪರೀಕ್ಷಿಸಿದ. ಅವನು ಅದನ್ನು ವಿಶೇಷ ಚೂರಿಯಿಂದ ಕತ್ತರಿಸಿ ಅದರ ಚೂರುಗಳನ್ನು ಔಷಧಿಗಳನ್ನು ಅಳೆಯುವ ತಕ್ಕಡಿಯಲ್ಲಿಟ್ಟು ತೂಕ ಮಾಡಿದ ಮತ್ತು ಅದರ ಅಗಲವನ್ನು ಸಲಕರಣೆಯೊಂದರಿಂದ ಅಳೆದ. ಅನಂತರ ಇನ್ನೊಂದು ಪೆಟ್ಟಿಗೆಯಿಂದ ತೆಗೆದ ಉಪಕರಣಗಳಿಂದ ವಾತಾವರಣದ ಉಷ್ಣಾಂಶ, ತೇವಾಂಶ ಮತ್ತು ಬೆಳಗಿನ ಸಾಂದ್ರತೆಯನ್ನು ಅಳೆದ. ಇದೆಲ್ಲ ತೀರ ವಿಸ್ತೃತವಾದ ಕಾರ್ಯವಾದ್ದರಿಂದ ಯಾರೂ ನೆಮ್ಮದಿಯಿಂದ ಊಟ ಮಾಡಲಿಲ್ಲ ಏಕೆಂದರೆ ಪ್ರತಿಯೊಬ್ಬರೂ ಮಿಸ್ಟರ್ ಹರ್ಬಟ್ ಅರಿವು ಮೂಡಿಸುವಂಥ ಕೊನೆಯ ಮಾತನ್ನು ಹೇಳಲಿ ಎಂದು ಕಾದಿದ್ದರು. ಆದರೆ ಅವನು ಯಾರೇ ಆಗಲಿ ಅವನ ಉದ್ದೇಶವನ್ನು ಊಹಿಸಲು ಸಾಧ್ಯವಾಗುವಂಥ ಏನನ್ನೂ ಹೇಳಲಿಲ್ಲ.
ಅನಂತರದ ದಿನಗಳಲ್ಲಿ ಅವನು ಊರ ಹೊರಗೆ ಚಿಟ್ಟೆಗಳನ್ನು ಹಿಡಿಯುವುದಕ್ಕೆ ಒಂದು ಸಣ್ಣ ಬುಟ್ಟಿ, ಬಲೆ ಇಟ್ಟುಕೊಂಡು ಓಡಾಡುತ್ತಿದ್ದದ್ದು ಕಾಣಿಸಿತು. ಬುಧವಾರ ಎಂಜಿನಿಯರುಗಳು, ಕೃಷಿ ತಜ್ಞರು, ಜಲಧರ್ಮ ಪರಿಣಿತರು, ಭೂ ಪ್ರದೇಶದ ನಕ್ಷೆ ಬರೆಯುವವರು ಮತ್ತು ಸರ್‍ವೆ ಮಾಡುವವರ ಗುಂಪು ಬಂದು ಹರ್ಬಟ್ ಚಿಟ್ಟೆಗಳನ್ನು ಹಿಡಿಯಲು ಓಡಾಡಿದ ಸ್ಥಳಗಳನ್ನು ಪರೀಕ್ಷಿಸಿದರು. ಅನಂತರ ಹಳದಿ ರೈಲಿಗೆ ಅಳವಡಿಸಿದ ಬೆಳ್ಳಿಯ ಲೇಪ ಮಾಡಿದ, ವೆಲ್‌ವೆಟ್ ಆಸೀನವಿದ್ದ, ನೀಲಿ ಬಣ್ಣದ ಗಾಜಿನ ತಾರಸಿಯಿದ್ದ ವಿಶೇಷ ಬೋಗಿಯಲ್ಲಿ ಮಿಸ್ಟರ್ ಜಾಕ್ ಬ್ರೌನ್ ಬಂದ. ಅದೇ ವಿಶೇಷ ಬೋಗಿಯಲ್ಲಿ ಮಿಸ್ಟರ್ ಬ್ರೌನ್ ಜೊತೆಯಲ್ಲಿ ಕಪ್ಪು ಕೋಟು ಧರಿಸಿದ ಮಿಸ್ಟರ್ ಬ್ರೌನ್‌ನ ಸುತ್ತಮುತ್ತ ಓಡಾಡಿಕೊಂಡಿದ್ದ ಇಬ್ಬರು ಲಾಯರು ಬಂದರು. ಹಿಂದೊಮ್ಮೆ ಅವರು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಹೋದ ಕಡೆಯಲ್ಲೆಲ್ಲ ಜೊತೆಗಿದ್ದರು. ಇದರಿಂದ ಜನರಿಗೆ ಕೃಷಿ ತಜ್ಞರು ಜಲಧರ್ಮ ಪರಿಣತರು ಭೂಪ್ರದೇಶಗಳ ನಕ್ಷೆ ಹಾಕುವವರು, ಸರ್‍ವೆಯವರು ಮತ್ತು ಹಾರಾಡುವ ಬಲೂನುಗಳ ಮಿಸ್ಟರ್ ಹರ್ಬಟ್ ಹಾಗೂ ರುದ್ರ ವೈಭವದ ವಿಸ್ಟರ್ ಬ್ರೌನ್ ಅಲ್ಲದೆ ರೌದ್ರ ರೂಪದ ಜರ್ಮನ್ ಶೆಪರ್ಡ್ ನಾಯಿಗಳು – ಇವೆಲ್ಲ ಕೊಂಚ ಯುದ್ಧಕ್ಕೆ ಸಂಬಂಧಪಟ್ಟವು ಎಂದು ಯೋಚಿಸುವಂತಾಯಿತು. ಆದರೆ ಅವರಿಗೆ ಯೋಚಿಸಲು ಹೆಚ್ಚು ಸಮಯವಿರಲಿಲ್ಲ. ಏಕೆಂದರೆ ಸಂದೇಹ ಹೊಂದಿದ ಮಕೋಂದೋ ವಾಸಿಗಳು ಇದೇನಾಗುತ್ತಿದೆ ಎಂದು ಅಚ್ಚರಿ ಪಡುವಷ್ಟರಲ್ಲಿ, ಊರು ಪರದೇಶಿಗಳ ಜಿಂಕ್ ಶೀಟು ತಾರಸಿ ಹೊಂದಿದ ಮರದ ಮನೆಗಳ ಬೀಡಾಗಿತ್ತು. ಅವರು ಅರ್ಧ ಪ್ರಪಂಚದ ಎಲ್ಲಾ ಕಡೆಯಿಂದ ರೈಲಿನ ಸೀಟಿನಲ್ಲಿ ಕುಳಿತು, ಅಷ್ಟೇ ಏಕೆ ಬೋಗಿಯ ಮೇಲೆ ಕುಳಿತು ಬಂದಿದ್ದರು. ಅವರು ಅನಂತರ ಮಸ್ಲಿನ್ ಬಟ್ಟೆ ಧರಿಸಿದ ಮತ್ತು ದೊಡ್ಡ ಹ್ಯಾಟ್ ಇಟ್ಟುಕೊಂಡಿದ್ದ ತಮ್ಮ ಜೋಬದ್ರ ಹೆಂಡತಿಯರನ್ನು ಕರೆದು ತಂದು ರೈಲ್ವೆ ಹಳಿಗಳ ಪಕ್ಕದಲ್ಲಿ ಹೊಸ ಊರನ್ನು ನಿರ್ಮಿಸಿದರು. ಅದರಲ್ಲಿ ತೆಂಗಿನ ಮರಗಳನ್ನು ನೆಟ್ಟರು, ಮನೆಯ ಕಿಟಕಿಗಳಿಗೆ ಪರದೆಗಲನ್ನು ಇಳಿಬಿಟ್ಟರು, ಟೆರೇಸಿನಲ್ಲಿ ಸಣ್ಣ ಬಿಳಿಯ ಟೇಬಲ್‌ಗಳನ್ನಿಟ್ಟರು, ತಾರಸಿಯಲ್ಲಿ ಫ್ಯಾನುಗಳನ್ನು ಹೊಂದಿಸಿದರು. ನವಿಲು ಹಾಗೂ ಲಾವಕ್ಕಿಗಳಿರುವ ಹುಲ್ಲು ಹಾಸುಗಳನ್ನು ನಿರ್ಮಿಸಿದರು. ಆ ಭಾಗಕ್ಕೆ ವಿದ್ಯುತ್ ಹರಿಯುವ ಲೋಹದ ಬೇಲಿಯಿದ್ದು ಅದು ಬೇಸಿಗೆ ತಂಪಾದ ಬೆಳಗಿನ ಹೊತ್ತಿನಲ್ಲಿ ಕಪ್ಪು ಬಣ್ಣಕ್ಕೆ ತಿರುಗುತ್ತಿತ್ತು. ಅವರಿಗೇನು ಬೇಕೆಂದು ಯಾರಿಗೂ ಗೊತ್ತಿರಲಿಲ್ಲ ಅಥವ ಅವರು ನಿಜವಾಗಿ ಜನೋಪಕಾರಿಗಳಾಗಿರಬಹುದೇ ಹೇಗೆ, ಎಂದು ತಿಳಿದಿರಲಿಲ್ಲ. ಅವರಾಗಲೇ ಹಳೆಯ ಜಿಪ್ಸಿಗಳಿಗಿಂತಲೂ ಹೆಚ್ಚಿನ ಮಹತ್ವದ ಏರುಪೇರು ಉಂಟುಮಾಡಿದ್ದರು, ಅವು ಬಹಳಷ್ಟು ಕಾಯಂ ಆದ, ಅರ್ಥವಾಗುವಂಥವು. ಹಿಂದಿನ ಕಾಲದಲ್ಲಿ ದೈವ ನಿಯಾಮಕವೆಂದು ಪರಿಗಣಿಸುತ್ತಿದ್ದ ರೀತಿಯಲ್ಲಿ ಅವರು ಮಳೆಯ ರೂಪರೇಷೆಗಳನ್ನು ಬದಲಿಸಿದರು, ಸುಗ್ಗಿಯ ಆವರ್ತಗಳನ್ನು ತ್ವರಿತಗೊಳಿಸಿದರು ಅಲ್ಲದೆ ಇದ್ದ ಸ್ಥಳದಿಂದ ನದಿಯನ್ನು ಬದಲಿಸಿ ಅದರೊಳಗೆ ಬಿಳಿಯ ಕಲ್ಲುಗಳನಿಟ್ಟು, ತಣ್ಣೀರು ಝರಿಯನ್ನು ಊರಿನ ಮತ್ತೊಂದು ಭಾಗದಲ್ಲಿ, ಸ್ಮಶಾನದ ಹಿಂದೆ ವ್ಯವಸ್ಥಿಸಿದರು. ಆ ಸಮಯದಲ್ಲಿ ಅವರು ಹೊಸೆ ಅರ್ಕಾದಿಯೋನ, ಮಾಸಿದ ಬಣ್ಣದ ಸಮಾಧಿಯ ಮೇಲೆ ಹೆಣದ ಪೌಡರಿನ ವಾಸನೆ, ನೀರನ್ನು ಕಲುಷಿತಗೊಳಿಸದಿರಲೆಂದು ಕಾಂಕ್ರೀಟಿನ ರಕ್ಷಣಾ ಕಟ್ಟಡವನ್ನು ನಿರ್ಮಿಸಿದರು. ಪ್ರಿಯತಮೆಯರನ್ನು ಕರೆದುಕೊಂಡು ಬರದಿದ್ದ ವಿದೇಶಿಯರಿಗಾಗಿ ಫ್ರಾನ್ಸ್‌ನ ಹೆಂಗಸರ ರಸ್ತೆಯನ್ನು ಮೊದಲಿದ್ದದ್ದಕ್ಕಿಂತ ವೈಭವದ ಸ್ಥಳವಾಗಿ ಪರಿವರ್ತಿಸಿದರು ಮತ್ತು ಅಲ್ಲಿಗೆ ಒಂದು ಅಮೋಘ ಬುಧವಾರ ಇಡೀ ರೈಲು ಭರ್ತಿ ವಿಚಿತ್ರ ಸೂಳೆಯರನ್ನು ತಂದರು. ನೀತಿಗೆಟ್ಟ ಹೆಂಗಸರಾದ ಅವರು ಪುರಾತನ ಕಾಲದ ರೀತಿಯ ಮತ್ತು ಎಲ್ಲ ವಿಧದ ಕಾಮಕೇಳಿಯಲ್ಲಿ ನಿಷ್ಣಾತರಾಗಿದ್ದರು ಮತ್ತು ಉದ್ರೇಕಗೊಳ್ಳದವರನ್ನು ಪ್ರಚೋದಿಸುವ, ಅಧೈರ್ಯವಂತರಿಗೆ ಧೈರ್ಯ ತುಂಬುವ, ಸಂಪನ್ನರನ್ನು ಹೊಗಳುವ, ಮತ್ತೆ ಮತ್ತೆ ಬರುವವರಿಗೆ ಪಾಠ ಕಲಿಸುವ ಮತ್ತು ಒಂಟಿಬಡಕರನ್ನು ಸರಿಪಡಿಸುತ್ತಿದ್ದರು. ಟರ್ಕಿಗಳ ರಸ್ತೆ ಹೊರದೇಶದ ವಸ್ತುಗಳಿಂದ ತುಂಬಿ ಜಗಮಗಿಸುವ ದೀಪದ ಅಲಂಕಾರ ಹೊಂದಿತ್ತು ಮತ್ತು ಹಳೆಯ ಅಂಗಡಿಗಳು ಮಿರುಗುವ ಬಣ್ಣಗಳಿಂದ ಬದಲಾಗಿತ್ತು. ಅಲ್ಲಿ ಶನಿವಾರದ ರಾತ್ರಿ ಸಾಹಸ ಪ್ರವೃತ್ತಿಯ ಗುಂಪುಗಳ ಜನರು ಜೂಜಾಟದ ಟೇಬಲ್ಲುಗಳಿಗೆ, ಶೂಟ್ ಮಾಡುವ ಪ್ರದರ್ಶನಗಳಿಗೆ, ಭವಿಷ್ಯ ಸೂಚಿಸುವ ಹಾಗೂ ಕನಸುಗಳನ್ನು ವ್ಯಾಖ್ಯಾನಿಸುವ ಸ್ಥಳಗಳಿಗೆ ಮತ್ತು ತಿನಿಸುಗಳು ಹಾಗೂ ಕುಡಿಯಲು ಸಿಗುವ ಕಡೆ ನುಗ್ಗುತ್ತಿದ್ದರು. ಅನೇಕ ವೇಳೆ ಭಾನುವಾರ ಬೆಳಿಗ್ಗೆಯೇ ಹಲವರು ಕಂಠ ಮಟ್ಟ ಕುಡಿದು ಬಿದ್ದಿರುತ್ತಿದ್ದರು. ಮತ್ತೆ ಮತ್ತೆ ಕುಡಿಯುತ್ತ ಸುಮ್ಮನೆ ನೋಡುತ್ತಿದ್ದವರಲ್ಲಿ ಗುಂಡು ಹೊಡೆಸಿಕೊಂಡವರು, ಮುಷ್ಟಿ, ಚಾಕುಗಳ ಸೆಣಸಾಟದಲ್ಲಿ ಬಿದ್ದವರು ಇರುತ್ತಿದ್ದರು. ಅದೆಷ್ಟು ಕೋಲಾಹಲವಾದ ಮತ್ತು ಮಿತಿಮೀರಿದ ಆಕ್ರಮಣವೆಂದರೆ ಅದರ ಪ್ರಾರಂಭದ ದಿನಗಳಲ್ಲಿ ಪೀಠೋಪಕರಣ ಮತ್ತು ಟ್ರಂಕುಗಳು ಹರಡಿದ ರಸ್ತೆಯಲ್ಲಿ ನಡೆಯುವುದೇ ಕಷ್ಟವಾಗಿತ್ತು. ಅಲ್ಲಿ ಯಾರ ಅನುಮತಿ ಪಡೆಯದೆ ಯಾವುದೇ ಖಾಲಿಯಿಂದ ಜಾಗದಲ್ಲಿ ಮನೆಗಳನ್ನು ಕಟ್ಟುತ್ತಿದ್ದ ಮರಗೆಲಸದ ಶಬ್ದ ಕೇಳಿಸುತ್ತಿತ್ತು. ಅಲ್ಲದೆ ಬಾದಾಮಿ ಮರಗಳಿಗೆ ಹಾಸಿಗೆ ಕಟ್ಟಿಕೊಂಡು, ಹಾಡೆಹಗಲಿನಲ್ಲೇ ಎಲ್ಲರಿಗೂ ಕಾಣುವಂತೆ ಗಂಡು ಹೆಣ್ಣುಗಳು ಕಾಮಕೇಳಿಯಲ್ಲಿ ತೊಡಗುತ್ತಿದ್ದರು. ಶಾಂತಿ ಪ್ರಿಯ ವೆಸ್ಟ್ ಇಂಡಿಯನ್ ನೀಗ್ರೋಗಳು ನಿರ್ಮಿಸಿದ್ದ ಮೂಲೆಯೊಂದೇ ಪ್ರಶಾಂತವಾಗಿದ್ದು, ಅವರು ಪಕ್ಕದ ರಸ್ತೆಯಲ್ಲಿ ದಿಮ್ಮಿಗಳ ಮೇಲೆ ಮರದ ಮನೆಗಳನ್ನು ಕಟ್ಟಿ ಸಾಯಂಕಾಲ ಅವರು ಬಾಗಿಲು ಬಳಿ ಕುಳಿತು ವಿಷಾದಪೂರ್ಣ ಹಾಡುಗಳನ್ನು ತಮಗೆ ತೋಚಿದಂತೆ ಗುನುಗುನಿಸುತ್ತಿದ್ದರು, ಅತ್ಯಂತ ಕಡಿಮೆ ಸಮಯದಲ್ಲಿ ಅಷ್ಟೊಂದು ಬದಲಾವಣೆಗಳಾಗಿ ಮಿಸ್ಟರ್ ಹರ್ಬಟ್ ಅಲ್ಲಿಗೆ ಬಂದು ಎಂಟು ತಿಂಗಳಾದ ಮೇಲೆ, ಅಲ್ಲಿನ ಹಳಬರಿಗೆ ತಮ್ಮ ಊರನ್ನು ಗುರುತು ಹಿಡಿಯುವುದೇ ಕಷ್ಟವಾಯಿತು.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ, “ನಮ್ದೆಂಥ ನಾಯಿಪಾಡಾಗಿದೆ ನೋಡಿ” ಎಂದು ಆ ವೇಳೆಯಲ್ಲಿ ತಿಳಿಸಿ, “ಇದೆಲ್ಲ ಯಾವನೋ ತಲೆ ತಿರುಕನನ್ನ ಬಾಳೆಹಣ್ಣನ್ನ ತಿನ್ನಕ್ಕೆ ಕರೆದದ್ದಕ್ಕೆ” ಹೇಳಿದ.
ಇದಕ್ಕೆ ವ್ಯತಿರಿಕ್ತವಾಗಿ ಅವ್ರೇಲಿಯಾನೋ ಸೆಗುಂದೋಗೆ ವಿದೇಶಿಗಳ ಪ್ರವಾಹದಿಂದ ಉಂಟಾದ ಸಂತೋಷವನ್ನು ತಡೆಹಿಡಿಯಲಾಗಲಿಲ್ಲ. ಇದ್ದಕ್ಕಿದ್ದ ಹಾಗೆ ಮನೆ ಅಪರಿಚಿತ ಅತಿಥಿಗಳಿಂದ, ಮಿತಿಮೀರಿ ಕುಡಿಯುವವರಿಂದ ತುಂಬಿ ಹೋಗಿತ್ತು ಮತ್ತು ನಡುಮನೆಯ ಆಚೆ ಒಂದಿಷ್ಟು ಬೆಡ್‌ರೂಮುಗಳನ್ನು ಸೇರಿಸುವ, ಡೈನಿಂಗ್ ರೂಮುಗಳನ್ನು ದೊಡ್ಡದು ಮಾಡುವ ಅಗತ್ಯವುಂಟಾಯಿತು. ಹಳೆಯ ಟೇಬಲ್‌ಗೆ ಬದಲಾಗಿ ಹದಿನಾರು ಜನರು ಕೂಡುವ ಜೊತೆಗೆ ಮತ್ತು ಬೆಳ್ಳಿಯ ಸಲಕರಣೆಗಳಿದ್ದರೂ ಪಾಳಿಯ ಮೇಲೆ ಊಟ ಮಾಡಬೇಕಾಗಿತ್ತು. ಫೆರ್ನಾಂಡ ತನ್ನ ಆಕ್ಷೇಪಣೆಗಳನ್ನು ನುಂಗಿಕೊಳ್ಳಬೇಕಾಗಿತ್ತು ಮತ್ತು ತಮ್ಮ ಬೂಟುಗಳಿಂದ ಅಂಗಳವನ್ನು ಗಲೀಜು ಮಾಡುವ ಕೈತೋಟದಲ್ಲಿ ಉಚ್ಚೆ ಹೂಯ್ಯುವ, ಎಲ್ಲಂದರಲ್ಲಿ ಮಧ್ಯಾಹ್ನದ ನಿದ್ದೆ ಮಾಡಲು ಚಾಪೆ ಹಾಸುವ ಮತ್ತು ಹೆಂಗಸರ ಬಗ್ಗೆ ಯಾವ ಸೂಕ್ಷ್ಮತೆಯೂ ಇಲ್ಲದೆ ಮಾತನಾಡುವ ಅಥವಾ ಗಣ್ಯರಂತೆ ನಡೆದುಕೊಳ್ಳುದ ಕಳಪೆ ದರ್ಜೆಯ ಅತಿಥಿಗಳನ್ನು ಸತ್ಕರಿಸಬೇಕಾಗಿತ್ತು. ಅಮರಾಂತಳಿಗೆ ಸಂಸ್ಕೃತಿಹೀನ ಜನರ ಆಕ್ರಮಣದಿಂದ ಜಿಗುಪ್ಸೆ ಉಂಟಾಗಿ ಹಿಂದಿನ ದಿನಗಳಂತೆ ಅಡುಗೆ ಮನೆಯಲ್ಲಿ ಊಟ ಮಾಡಲು ಶುರು ಮಾಡಿದಳು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾಗೆ ತನ್ನನ್ನು ವರ್ಕ್‌ಶಾಪಿನಲ್ಲಿ ಕಾಣಲು ಬರುವ ಹೆಚ್ಚಿನ ಜನರು ತಾನೊಂದು ಐತಿಹಾಸಿಕ ಅವಶೇಷ ಅಥವಾ ಮ್ಯೂಸಿಯಂನ ವಸ್ತುವಿನಂತೆ ಕುತೂಹಲದಿಂದ ಇರುವ ಹಾಗೆ ಮಾಡುತ್ತಾರಲ್ಲದೆ ಗೌರವದಿಂದಾಗಲಿ ಅಥವಾ ಮರುಕದಿಂದಾಗಲಿ ಅಲ್ಲವೆಂದು ಮನವರಿಕೆಯಾಗಿತ್ತು. ಇದರಿಂದಾಗಿ ಅವನು ಬಾಗಿಲು ಹಾಕಿಕೊಂಡು ಬಿಡುತ್ತಿದ್ದ ಮತ್ತು ಆಗೀಗ ಅಪರೂಪದ ಸಂದರ್ಭಗಳಲ್ಲಿ ಮುಂಬಾಗಿಲಲ್ಲಿ ಕುಳಿತುಕೊಂಡಿರುತ್ತಿದ್ದನ್ನು ಬಿಟ್ಟರೆ ಉಳಿದಂತೆ ಅವನು ಕಾಣಿಸಿಕೊಳ್ಳುತ್ತಿರಲಿಲ್ಲ. ಆದರೆ ಕಾಲನ್ನು ಎಳೆದು ಹಾಕುತ್ತ ಮತ್ತು ಗೋಡೆಯನ್ನು ಹಿಡಿದುಕೊಂಡು ನಡೆಯುತ್ತಿದ್ದ ಉರ್ಸುಲಾ, ರೈಲು ಬರುವ ಸಮಯವಾಗುತ್ತಿದ್ದಂತೆ ಉತ್ಸಾಹಭರಿತಳಾಗುತ್ತಿದ್ದಳು. ನಾಲ್ವರು ಅಡುಗೆ ಮಾಡುವವರಿಗೆ, “ನಾವು ಒಂದಿಷ್ಟು ಮಾಂಸ ಮತ್ತು ಮೀನಿಂದ ಮಾಡ್ಬೇಕು” ಎಂದು ಹೇಳುತ್ತಿದ್ದಂತೆ ಅವರು ಸಾಂತ ಸೋಫಿಯಾ ದೆಲಾ ಪಿಯದಾದ್‌ಳ ಆದೇಶದಂತೆ ಎಲ್ಲವನ್ನು ಸಿದ್ಧಪಡಿಸಿಕೊಳ್ಳಲು ತೊಡಗುತ್ತಿದ್ದರು. ಅವಳು, “ನಾವು ಎಲ್ಲಾನೂ ಮಾಡ್ಬೇಕು. ಯಾಕೆಂದರೆ ಗೊತ್ತಿಲ್ಲದೋರು ಬತ್ತಾರೆ, ಅವರೇನು ಇಷ್ಟ ಪಡ್ತಾರೆ ಅಂತ ಹೆಂಗೊತ್ತಿರತ್ತೆ” ಎಂದು ಒತ್ತಾಯಿಸುತ್ತಿದ್ದಳು. ದಿನದ ತೀರ ಹೆಚ್ಚು ಶೆಖೆ ಇರುವ ಸಮಯದಲ್ಲಿ ಟ್ರೈನ್ ಬರುತ್ತಿತ್ತು. ಊಟದ ಸಮಯದಲ್ಲಿ ಮನೆ ಮಾರ್ಕೆಟ್ಟಿನ ಚಟುವಟಿಕೆಯ ರೀತಿಯಲ್ಲಿತ್ತು ಮತ್ತು ಬೆವರಿಳಿಯುತ್ತಿದ್ದ ಅತಿಥಿಗಳು _ ತಮ್ಮ ಅತಿಥೇಯರು ಯಾರು ಎಂದು ಕೂಡ ತಿಳಿಯದದ್ದವರು, ಟೇಬಲ್ ಬಳಿ ಒಳ್ಳೆಯ ಸ್ಥಾನಗಳಲ್ಲಿ ಕುಳಿತುಕೊಳ್ಳುವುದಕ್ಕೆ ಧಾವಿಸುತ್ತಿದ್ದರು. ಆಗ ಅಡುಗೆಯವರು ದೊಡ್ಡ ಪಾತ್ರೆಗಳಲ್ಲಿ ಸೂಪ್, ಮಾಂಸವನ್ನು ಮತ್ತು ಬೋಗುಣಿಗಳಲ್ಲಿ ಪಲ್ಯ, ಅನ್ನ ತೆಗೆದುಕೊಂಡು ಒಬ್ಬರಿಗೊಬ್ಬರು ಡಿಕ್ಕಿ ಹೊಡೆಯುವಂತೆ ಓಡಾಡುತ್ತಿದ್ದರು. ಅಲ್ಲದೆ ಪೀಪಾಯಿಗಟ್ಟಲೆ ಪಾನಕವನ್ನು ಕಳಿಸುತ್ತಿದ್ದರು. ಅಲ್ಲಿ ಎಷ್ಟು ಅವ್ಯವಸ್ಥೆ ಇತ್ತೆಂದರೆ ಫೆರ್ನಾಂಡಳಿಗೆ ಅನೇಕರು ಎರಡು ಸಲ ಊಟ ಮಾಡುತ್ತಿದ್ದಾರೆಂಬ ಅನುಮಾನ ಬಂತು ಮತ್ತು ಒಂದೆರಡು ಬಾರಿ ತರಕಾರಿ ಮಾರುವರಂತೆ ಕೂಗಾಡುವುದರಲ್ಲಿದ್ದಳು. ಏಕೆಂದರೆ ಟೇಬಲ್‌ನಲ್ಲಿ ಕುಳಿತ ಯಾವನೋ ಗೊಂದಲದಲ್ಲಿ ಸಿಕ್ಕವನೊಬ್ಬ ಅವಳಿಗೆ ಚೆಕ್ ಕೇಳಿದ. ಮಿಸ್ಟರ್ ಹರ್ಬಟ್ ಬಂದು ಹೋಗಿ ಒಂದು ವರ್ಷ ಕಳೆದಿತ್ತು ಮತ್ತು ಹೊಸೆ ಅರ್ಕಾದಿಯೋ ಬ್ಯುಂದಿಯಾನ ಪುಷ್ಕಳ ಜಮೀನಿನಲ್ಲಿ ಬಾಳೆ ತೋಟ ಬೆಳೆಸಲು ಅವರು ಉದ್ದೇಶಿಸಿದ್ದಾರೆಂದು ತಿಳಿಯಿತು. ಅವನ ಸಂಗಡಿಗರು ಆವಿಷ್ಕಾರಗಳ ಹುಡುಕಾಟದಲ್ಲಿ ದೂರ ಪ್ರದೇಶಗಳಿಗೆ ಹೋಗಿದ್ದಾರೆಂದು ಗೊತ್ತಾಯಿತು. ಹಣೆಯ ಮೇಲೆ ಶಿಲುಬೆಯ ಬೂದಿಯಿದ್ದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಇಬ್ಬರು ಮಕ್ಕಳು ಭಾರಿ ತುಪಾಕಿಗಳ ಶಬ್ದಗಳಿಂದ ಆಕರ್ಷಿತರಾಗಿ ಬಂದರು ಮತ್ತು ಅವರು ತಮ್ಮ ಸಮರ್ಥನೆಗೆ ಎಲ್ಲರ ಕಾರಣಗಳನ್ನು ವಿವರಿಸುವ ರೀತಿಯಲ್ಲಿ ಒಂದೇ ವಾಕ್ಯದಲ್ಲಿ ಹೇಳಿದರು.
“ನಾವು ಬಂದ್ವು, ಯಾಕೆಂದರೆ ಎಲ್ರೂ ಬರ್‍ತಿದಾರೆ.” ಸುಂದರಿ ರೆಮಿದಿಯೋಸ್ ಮಾತ್ರ ಬಾಳೆ ಮೋಡಿಯಿಂದ ಪ್ರಭಾವಿತಳಾಗದೆ ಇದ್ದವಳು. ಅವಳು ಚೆಂದದ ಬಾಲ್ಯಾವಸ್ಥೆಯ ಶಾಂತತೆಯಲ್ಲಿದ್ದು, ಔಪಚಾರಿಕ ಸಂಗತಿಗಳಿಗೆ ಹೆಚ್ಚು ಹೆಚ್ಚು ಹೊರತಾಗಿದ್ದಳು. ಅಸೂಯೆ ಮತ್ತು ಅನುಮಾನಗಳನ್ನು ಹೆಚ್ಚು ಹೆಚ್ಚು ನಿರ್ಲಕ್ಷಿಸಿ ತನ್ನದೇ ಆದ ಸರಳ ವಾಸ್ತವದಲ್ಲಿ ಸಂತೋಷವಾಗಿದ್ದಳು. ಅವಳಿಗೆ ಹೆಂಗಸರು ಏತಕ್ಕಾಗಿ ಒಳಕುಪ್ಪಸ ಮತ್ತು ಒಳಲಂಗದಿಂದ ತಮ್ಮ ಜೀವನವನ್ನು ಗೋಜಲು ಮಾಡಿಕೊಂಡಿದ್ದಾರೆಂದು ಅರ್ಥವಾಗಲಿಲ್ಲ. ಅದರಿಂದ ಅವಳು ಒರಟು ಬಟ್ಟೆಯನ್ನು ತಾನೇ ಹೊಲಿದುಕೊಂಡು ತೊಟ್ಟುಕೊಂಡಳು ಮತ್ತು ಹೆಚ್ಚಿನ ತೊಂದರೆ ಇಲ್ಲದೆ ಉಡುಪಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಂಡಳು. ಇದರಿಂದ ಅವಳಿಗೆ ಬೆತ್ತಲೆಯಾಗಿರುವ ಭಾವನೆಯನ್ನು ಬಿಟ್ಟುಕೊಡದಂತೆ ಮನೆಯಲ್ಲಿ ಹಗುರವಾದದ್ದರಿಂದ ಮಾತ್ರ ಮನೆಯಲ್ಲಿ ಲಕ್ಷಣವಾಗಿರಲು ಸಾಧ್ಯವಾಯಿತು. ಅವರು ಅವಳ ಜಫನದ ತನಕ ಆಗಲೇ ಬೆಳೆದ ಕೂದಲ ರಾಶಿಯನ್ನು ಕತ್ತರಿಸಿಕೊಳ್ಳಬೇಕೆಂದು ಮತ್ತು ಬಾಚಣಿಕೆಯಿಂದ ಸುರುಳಿ ಸುತ್ತಿ ಜಡೆ ಹಾಕಿ ರಿಬ್ಬನ್‌ನಿಂದ ಕಟ್ಟಿಕೊಳ್ಳಬೇಕೆಂದು ಎಷ್ಟು ಗೋಳು ಹುಯ್ದುಕೊಂಡರೆಂದರೆ, ಅವಳು ಸುಮ್ಮನೆ ತಲೆ ಬೋಳಿಸಿಕೊಂಡಳು ಮತ್ತು ಆ ಕೂದಲಿಂದ ಸಂತರಿಗೆ ಕೃತಕ ಕೂದಲು ಮಾಡುವುದಕ್ಕೆ ಉಪಯೋಗಿಸಿದಳು. ಎಲ್ಲವನ್ನೂ ಸರಳಗೊಳಿಸುವ ಅವಳ ಸಹಜ ಪ್ರವೃತ್ತಿಯ ಆಶ್ಚರ್ಯಕರ ಸಂಗತಿಯೆಂದರೆ ಅವಳು ಅನುಕೂಲದ ಕಾರಣಕ್ಕೆ ಫ್ಯಾಷನ್ ತೊರೆದರೂ ಮತ್ತು ಪರಂಪರಾಗತವಾಗಿ ನಡೆದುಕೊಂಡು ಬಂದದ್ದನ್ನು ಬಿಟ್ಟು ಸ್ವಯಂ ಪ್ರೇರಣೆಗೆ ತಕ್ಕುದಾಗಿರುತ್ತಿದ್ದರಿಂದ ಅವಳ ಸೌಂದರ್ಯ ಗಂಡಸರಿಗೆ ಮತ್ತಷ್ಟು ಮನಕದಡುವ ಹಾಗಾಯಿತು ಮತ್ತು ಇನ್ನಷ್ಟು ಪ್ರಚೋದಕವಾಯಿತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ಮಕ್ಕಳು ಮೊದಲ ಸಲ ಮಕೋಂದೋಗೆ ಬಂದಾಗ ಉರ್ಸುಲಾಗೆ ಅವರ ಮೈಯಲ್ಲೂ ತನ್ನ ಮರಿಮಗಳ ರೀತಿಯ ರಕ್ತ ಹರಿಯುತ್ತಿದೆ ಎನ್ನುವುದು ನೆನಪಾಯಿತು ಅಲ್ಲದೆ ಅವಳಿಗೆ ಮರೆತು ಹೋಗಿದ್ದ ವಿಷಯದಿಂದ ಮೈ ನಡುಗಿತು, ಅವಳು, “ನಿನ್ನ ಹುಷಾರಲ್ಲಿ ನೀನು ಇರು” ಎಂದು ಎಚ್ಚರಿಸಿ, “ಅವರು ಯಾರಿಂದ್ಲೇ ಆಗ್ಲಿ ಹೆಚ್ಚು ಕಮ್ಮಿ ಆದ್ರೆ ನಿಂಗೆ ಹಂದಿ ಬಾಲ ಇರೋ ಮಕ್ಕಳು ಹುಟ್ಟತ್ವೆ” ಎಂದಳು. ಆ ಹುಡುಗಿ ಅದಕ್ಕೆ ಕಿಂಚಿತ್ ಗಮನ ಕೊಡಲಿಲ್ಲ ಮತ್ತು ಗಂಡಸರಂತೆ ಬಟ್ಟೆ ಹಾಕಿಕೊಂಡು, ಗ್ರೀಸ್ ಹಚ್ಚಿದ ಕಂಬಿಯ ಮೇಲೆ ಹತ್ತಲು ಮರಳಲ್ಲಿ ಹೊರಳಾಡಿದಳು. ಆ ನೋಟ ತಡೆಯಲು ಅಸಾಧ್ಯವಾದದ್ದರಿಂದ ಹುಚ್ಚು ಹಿಡಿದ ಆ ಹದಿನೇಳು ಜನರಲ್ಲಿ ಅವಳು ಭಯಂಕರವಾದ ಅಪಾಯವನ್ನು ತರುವಂತಾದಳು. ಇದರಿಂದಾಗಿ ಊರಲ್ಲಿದ್ದಾಗ ಅವರಲ್ಲಿ ಯಾರೂ ಮನೆಯಲ್ಲಿ ಮಲಗುತ್ತಿರಲಿಲ್ಲ. ಅಲ್ಲೆ ಇದ್ದ ನಾಲ್ವರು ಉರ್ಸುಲಾಳ ಒತ್ತಾಯದಿಂದ ಬಾಡಿಗೆ ರೂಮಿನಲ್ಲಿದ್ದರು. ಆದರೆ ಸುಂದರಿ ರೆಮಿದಿಯೋಸ್‌ಗೆ ಆ ಹಿತರಕ್ಷಣೆಯ ಬಗ್ಗೆ ತಿಳಿದಿದ್ದರೆ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿದ್ದಳು. ಈ ಭೂಮಿಯ ಮೇಲಿನ ಕೊನೆ ಕ್ಷಣದ ತನಕ ಅವಳಿಗೆ ಅನಾಹುತ ಉಂಟುಮಾಡುವಂಥ, ಬದಲಿಸಲಾಗದ ವಿಧಿ ತನ್ನ ದಿನನಿತ್ಯದ ಪಾಡು ಎನ್ನುವ ಅರಿವು ಅವಳಿಗಿರಲಿಲ್ಲ. ಉರ್ಸುಲಾಳ ಅಪ್ಪಣೆಗೆ ವಿರುದ್ಧವಾಗಿ ಪ್ರತಿಬಾರಿ ಅವಳು ಡೈನಿಂಗೆ ರೂಮಿಗೆ ಬಂದಾಗ ಹೊರಗಿನವರಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡುತ್ತಿದ್ದಳು. ಅವಳು ಒರಟು ರಾತ್ರಿ ಉಡುಪಿನ ಒಳಗೆ ಸಂಪೂರ್ಣ ಬೆತ್ತಲಾಗಿರುವುದು ಎಲ್ಲರಿಗೂ ಸಲೀಸಾಗಿ ತಿಳಿಯುತ್ತಿತು. ಅವಳ ಬೋಳು ತಲೆ ಅದೇ ರೀತಿಯ ಸವಾಲಲ್ಲವೆಂದು ಅರ್ಥವಾಗುವಂತಿರಲಿಲ್ಲ. ಅಲ್ಲದೆ ತೊಡೆಗಳನ್ನು ಅವಳು ಧೈರ್ಯದಿಂದ ತೆರೆಯುತ್ತಿದ್ದದ್ದು ಪ್ರಚೋದಿಸುವ ಕಾರಣವಾಗಿರಲಿಲ. ಚೊತೆಗೆ ಊಟವಾದ ಮೇಲೆ ಬೆರಳು ಚೀಪುವ ಅವಳ ಅಭ್ಯಾಸವೂ ಕೂಡ. ಮನೆಯವರಿಗೆ ತಿಳಿಯದಿದ್ದ ಸಂಗತಿಯೆಂದರೆ, ಸುಂದರಿ ರೆಮಿದಿಯೋಸ್ ಗೊಂದಲಗೊಳಿಸುವಂಥ ಉಸಿರು ಹೊರಡಿಸುವುದನ್ನು ಹೊರಗಿನವರು ಗಮನಿಸುವುದಕ್ಕೆ ಬಹಳ ಕಾಲ ತೆಗೆದುಕೊಳ್ಳಲಿಲ್ಲ ಎನ್ನುವುದು. ಅವಳು ಬಂದು ಹೋಗಿ ಅನೇಕ ಗಂಟೆಗಳಾದ ಮೇಲೆ ಕೂಡ, ಚಿತ್ರಹಿಂಸೆಗೆ ಗುರಿಪಡಿಸುವ ಗಾಳಿಯಿಂದ, ಪ್ರೇಮದ ವಿಷಯದಲ್ಲಿ ಯಾತನೆಗೆ ಒಳಗಾದವರು, ಪ್ರಪಂಚದೆಲ್ಲ ಕಡೆ ಪ್ರೇಮದ ವಿಷಯದಲ್ಲಿ ನೋವನ್ನು ಅನುಭವಿಸಿರುವವರು, ಸುಂದರಿ ರೆಮಿದಿಯೋಸ್‌ಳ ಸಹಜ ವಾಸನೆಯಿಂದ ಉಂಟಾದ ಆತಂಕಕ್ಕೆ ಸಮಾನವಾದ ಯಾತನೆಯನ್ನು ಎಂದೂ ಅನುಭವಿಸಿಲ್ಲವೆಂದು ಹೇಳಿದರು. ಬೆಗೋನಿಯಾ ಗಿಡಗಳಿರುವ ಹೊರಗಿನ ಅಂಗಳದಲ್ಲಿ ನಡುಮನೆಯಲ್ಲಿ ಮತ್ತು ಮನೆಯ ಯಾವುದೇ ಭಾಗದಲ್ಲಿ ಅವಳು ಬಂದು ಹೋದ ಸ್ಥಳ ಯಾವುದು ಮತ್ತು ಅವಳು ಅಲ್ಲಿಂದ ಹೋಗಿ ಎಷ್ಟು ಸಮಯ ಆಗಿದೆ ಎಂದು ಗೊತ್ತುಪಡಿಸಲು ಸಾಧ್ಯವಾಗಿತ್ತು. ಅದು ಖಚಿತವಾಗಿತ್ತು. ಮತ್ತು ಮನೆಯಲ್ಲಿರುವ ಯಾರಿಗೂ ಅದನ್ನು ಪ್ರತ್ಯೇಕಿಸಲು ಸಾಧ್ಯವಾಗದಿದ್ದದ್ದು ಏಕೆಂದರೆ ಅದು ಬಹಳ ಕಾಲದಿಂದ ದೈನಂದಿನ ವಾಸನೆಯಲ್ಲಿ ಸೇರಿ ಹೋಗಿತ್ತು. ಆದರೆ ಹೊರಗಿನವರು ಅದನ್ನು ತಕ್ಷಣವೇ ಗುರುತಿಸುತ್ತಿದ್ದರು. ಆದ್ದರಿಂದ ರಕ್ಷಣಾ ದಳದ ಯುವ ಕಮಾಂಡರ್ ಪ್ರೇಮದಿಂದ ಸತ್ತದ್ದು ಹೇಗೆ ಮತ್ತು ದೂರನಾಡಿನವನೊಬ್ಬ ತೀವ್ರ ನಿರಾಸೆಗೆ ತುತ್ತಾದದ್ದು ಹೇಗೆ ಎನ್ನುವುದು ಅರ್ಥವಾಗುವಂತಿತ್ತು. ಕಳವಳದ ವೃತ್ತದಲ್ಲಿ ಅರಿಯದೆ ಚಲಿಸುತ್ತಿದ್ದ ಅವಳಿಗೆ ತಾನು ಕಾಲಿಟ್ಟ ಕಡೆ ತಕ್ಷಣ ಭರಿಸಲಾಗದಂಥ ಅನಾಹುತವನ್ನು ಹುಟ್ಟು ಹಾಕುತ್ತಿದ್ದೇನೆ ಎನ್ನುವುದರ ಅರಿವಿಲ್ಲದೆ ಸುಂದರಿ ರೆಮಿದಿಯೋಸ್ ಗಂಡಸರ ಬಗ್ಗೆ ಸ್ವಲ್ಪವೂ ದ್ವೇಷವಿಲ್ಲದೆ ನಡೆದುಕೊಳ್ಳುತ್ತಿದ್ದಳು. ಅವರನ್ನು ಸೌಜನ್ಯಪೂರ್ಣ ಉಪಚಾರದಿಂದ ತಬ್ಬಿಬ್ಬು ಮಾಡುತ್ತಿದ್ದಳು. ಉರ್ಸುಲಾ ಅಮರಾಂತಳ ಜೊತೆ ಹೊರಗಿನವರು ಕಾಣದಿರಲೆಂದು ಅವಳು ಅಡುಗೆ ಮನೆಯಲ್ಲಿ ಊಟ ಮಾಡುವಂತೆ ಒತ್ತಾಯಿಸಿದಾಗ ಅವಳಿಗೆ ಇನ್ನೂ ಅನುಕೂಲವಾದಂತೆ ಕಂಡಿತು. ಏಕೆಂದರೆ ಅವಳು ಎಲ್ಲ ಶಿಸ್ತಿಗೂ ಹೊರತಾಗಿದ್ದಳು. ವಾಸ್ತವವಾಗಿ ಅವಳಿಗೆ ಎಲ್ಲಿ ಯಾವಾಗ ತಿಂದರೂ ವ್ಯತ್ಯಾಸವಿರಲಿಲ್ಲ. ಆದರೆ ಅವಳಿಗೆ ತೋಚಿದ ಹಾಗೆ, ಹಸಿವಾದಾಗ ತಿನ್ನುತ್ತಿದ್ದಳು. ಕೆಲವು ಸಲ ಅವಳು ಬೆಳಗಿನ ಜಾವ ಮೂರು ಗಂಟೆಗೆ ಊಟ ಮಾಡಲು ಏಳುತ್ತಿದ್ದಳು, ಇಡೀ ದಿನ ಮಲಗುತ್ತಿದ್ದಳು. ಅವಳು ಯಾವುದಾದರೊಂದು ಸಾಮಾನ್ಯ ಘಟನೆ ಅವಳನ್ನು ವ್ಯವಸ್ಥೆಗೆ ವಾಪಸು ತರುವ ತನಕ ಹಲವಾರು ತಿಂಗಳುಗಳನ್ನು ಮೂರಾಬಟ್ಟೆಯಾದ ವೇಳಾಕ್ರಮದಲ್ಲಿ ಕಳೆಯುತ್ತಿದ್ದಳು. ಎಲ್ಲವೂ ಚೆನ್ನಾಗಿ ನಡೆಯುತ್ತಿರುವಾಗ ಅವಳು ಬೆಳಿಗ್ಗೆ ಹನ್ನೊಂದು ಗಂಟೆಗೆ ಎದ್ದು ಬಾತ್‌ರೂಮಿನಲ್ಲಿ ಬಾಗಿಲು ಹಾಕಿಕೊಂಡು ಎರಡು ಗಂಟೆಯ ತನಕ ಚೇಳುಗಳನ್ನು ಕೊಲ್ಲುತ್ತ ಬೆತ್ತಲಾಗಿರುತ್ತಿದ್ದಳು. ಅನಂತರ ಚೊಂಬಿನಿಂದ ತೊಟ್ಟಿಯಲ್ಲಿರುವ ನೀರನ್ನು ಹುಯ್ದುಕೊಳ್ಳುತ್ತಿದ್ದಳು. ಅದು ಎಷ್ಟು ದೀರ್ಘವಾದ, ಅಚ್ಚುಕಟ್ಟಾದ, ವೈಭವಪೂರ್ಣವಾದ ಕ್ರಿಯೆ ಆಗಿರುತ್ತಿತ್ತು ಎಂದರೆ ಅವಳು ಗೊತ್ತಿರದ ಯಾರಿಗೇ ಆದರೂ ಅವಳು ತನ್ನ ದೇಹವನ್ನು ತಾನೇ ಆರಾಧಿಸುತ್ತಿದ್ದಾಳೆ ಎನ್ನುವ ಆಲೋಚನೆ ಬರುತ್ತಿತ್ತು. ಆದರೆ ಅವಳಿಗೆ ಅದು ಎಲ್ಲ ಸಂವೇದನೆಯನ್ನು ತೊರೆದ ಏಕಾಂತದ ವಿಷಯವಾಗಿತ್ತು ಮತ್ತು ಹಸಿವಾಗುವ ತನಕ ಹೊತ್ತು ಕಳೆಯುವ ಹವ್ಯಾಸವಾಗಿತ್ತು. ಒಂದು ದಿನ ಅವಳು ಸ್ನಾನ ಮಾಡಲು ಶುರು ಮಾಡಿದಾಗ ಅಪರಿಚಿತನೊಬ್ಬ ತಾರಸಿಯಿಂದ ಹೆಂಚೊಂದನ್ನು ತೆಗೆದ. ಅವಳು ಅವಳ ಅದ್ಭುತವಾದ ಬೆತ್ತಲೆ ರೂಪವನ್ನು ನೋಡಿ ಉಸಿರುಗಟ್ಟಿತು. ಅವಳಿಗೆ ಮುರಿದ ಹೆಂಚುಗಳ ಮೂಲಕ ಅವನ ಕಂಗೆಟ್ಟ ಕಣ್ಣುಗಳನ್ನು ನೋಡಿದಳು. ಅವಳಿಗೆ ನಾಚಿಕೆಯಾಗಲಿಲ್ಲ. ಆದರೆ ಬೆಚ್ಚಿ ಬಿದ್ದಳು.
ಅವಳು, “ಹುಷಾರು, ಬಿದ್ದುಬಿಡ್ತೀಯ” ಎಂದು ಕಣ್ಣರಳಿಸಿದಳು.
ಅವನು, “ನಾನು ನಿನ್ನನ್ನ ನೋಡಬೇಕೂಂತ ಇದ್ದೆ” ಎಂದು ಮುಲುಗುಟ್ಟಿದ.
ಅವಳು, “ಸರಿ, ಸರಿ…. ಆದ್ರೆ ಹುಷಾರು. ಆ ಹೆಂಚುಗಳು ಜೀರ್ಣವಾಗಿವೆ” ಎಂದಳು.
ಅಪರಿಚಿತನ ಮುಖದಲ್ಲಿ ಅತೀವ ವೇದನೆ ಮೂಡಿ ಅವನು ಪ್ರಾಥಮಿಕ ಸಹಜ ಪ್ರವೃತ್ತಿಗಳ ವಿರುದ್ಧ ಮೌನವಾಗಿ ಸೆಣೆಸಾಡುತ್ತಿರುವುದು ಕಂಡು ಬಂತು. ಸುಂದರಿ ರೆಮಿದಿಯೋಸ್ ಹೆಂಚುಗಳು ತುಂಡಾಗಬಹುದೆಂದು ಅವನಿಗೆ ಹೆದರಿಕೆಯಾಗಿದೆ ಎಂದು ಭಾವಿಸಿದಳು. ಅವನಿಗೆ ಅಪಾಯ ಆಗದಿರಲಿ ಎಂದು ಎಂದಿಗಿಂತ ಬೇಗನೆ ಸ್ನಾನ ಮಾಡಲು ತೊಡಗಿದಳು. ನೀರನ್ನು ಹುಯ್ದುಕೊಳ್ಳುತ್ತ ತಾರಸಿ ಆ ಸ್ಥಿತಿಯಲ್ಲಿ ಇರುವುದಕ್ಕೆ ಅದರ ತೊಲೆಗಳ ಬುಡ ಮಳೆ ನೀರಿನಿಂದ ಕೊಳೆತು ಹೋಗಿದೆ ಮತ್ತು ಅದರಿಂದಾಗಿ ಬಾತ್‌ರೂಮಿನಲ್ಲಿ ಚೇಳುಗಳು ತುಂಬಿವೆ ಎಂದು ಹೇಳಿದಳು, ಆ ಮಾತುಗಳು ಸೌಜನ್ಯದಿಂದ ಕೂಡಿದ್ದಾಗಿ ಅಪರಿಚಿತನಿಗೆ ಕಂಡಿದ್ದರಿಂದ ಅವಳು ಸೋಪು ಹಚ್ಚಿಕೊಳ್ಳುವುದಕ್ಕೆ ಪ್ರಾರಂಭಿಸಿದಾಗ ಅದರಿಂದ ಪ್ರಚೋದನೆ ಹೊಂದಿ ಮತ್ತಷ್ಟು ಮುಂದುವರಿದ.
ಅವನು, “ನಾನು ನಿಮ್ಗೆ ಸೋಪ್ ಹಚ್ತೀನಿ” ಎಂದು ಮುಲುಗಿದ.
ಅವಳು, “ಅದೇನೋ ಸರಿ. ಆದ್ರೆ ಅದಕ್ಕೆ ನನ್ನ ಎರಡು ಕೈಯೇ ಸಾಕು” ಎಂದಳು.
ಅಪರಿಚಿತ, “ಕೊನೇ ಪಕ್ಷ ಬೆನ್ನಾದರೂ ಸರಿಯೆ” ಎಂದು ಅಂಗಲಾಚಿದ.
ಅವಳು, “ಇದೇನು ಅಪದ್ಧ. ಯಾರೂ ಬೆನ್ನಿಗೆ ಸೋಪು ಹಚ್ಕೊಳ್ಳೋದಿಲ್ಲ” ಎಂದಳು.
ಅನಂತರ ಅವಳು ಒರೆಸಿಕೊಳ್ಳುತ್ತಿರುವಾಗ ಕಣ್ಣಲ್ಲಿ ಹನಿಗೂಡಿಸಿಕೊಂಡು ಅವನನ್ನು ಮದುವೆಯಾಗಲು ಗೋಗರೆದ. ಅವಳು ಊಟವನ್ನು ಮಾಡz, ಒಂದು ಗಂಟೆ ಸಮಯವನ್ನು ಸ್ನಾನ ಮಾಡುತ್ತಿರುವ ಹೆಂಗಸನ್ನು ನೋಡಲು ವ್ಯರ್ಥ ಮಾಡುವಷ್ಟು ಸರಳವಾಗಿರುವ ಮನುಷ್ಯನನ್ನು ತಾನು ಮದುವೆಯಾಗುವುದಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಿದಳು. ಕೊನೆಗೆ ಅವಳು ಬಟ್ಟೆ ಹಾಕಿಕೊಂಡ ಮೇಲೆ ಎಲ್ಲರೂ ಅನುಮಾನಿಸುತ್ತಿದ್ದ ಹಾಗೆ ಅವಳು ಯಾವುದೇ ಒಳ ಉಡುಪು ಹಾಕಿಕೊಳ್ಳದಿರುವುದಕ್ಕೆ ಸಿಕ್ಕ ಸಮರ್ಥನೆಯನ್ನು ಅವನಿಗೆ ತಡೆದುಕೊಳ್ಳಲಾಗಲಿಲ್ಲ. ಆ ಗುಟ್ಟು ರಟ್ಟಾಗಿ ಕಾದ ಕಬ್ಬಿಣ ಗುರುತು ತನ್ನ ಮೇಲೆಯೇ ಬಿದ್ದಂತಾಯಿತು. ಆ ಮೇಲೆ ಅವನು ಕೆಳಗೆ ಧುಮುಕುವ ಸಲುವಾಗಿ ಇನೆರಡು ಹೆಂಚುಗಳನ್ನು ತೆಗೆದ.
ಅವಳು, “ಅದು ತುಂಬ ಮೇಲಿದೆ. ನೀನು ಸತ್ತು ಹೋಗ್ತೀಯ ಅಷ್ಟೆ” ಎಂದು ಎಚ್ಚರಿಕೆ ಕೊಟ್ಟಳು.
ಲೊಡ್ಡಾಗಿದ್ದ ಹೆಂಚುಗಳು ಪಟಪಟನೆ ಮುರಿದವು ಮತ್ತು ಭಯದಿಂದ ಕೂಗಲೂ ಅವಕಾಶವಿರದೆ ಕೆಳಗೆ ಬಿದ್ದ ಅವನ ತಲೆ ಹೋಳಾಯಿತು ಮತ್ತು ಸಿಮೆಂಟ್ ನೆಲದ ಮೇಲೆ ಬಿದ್ದು ಸತ್ತ. ಆ ಶಬ್ದ ಡೈನಿಂಗ್ ರೂಮಿನಲ್ಲಿದ್ದ ವಿದೇಶಿಯರಿಗೆ ಕೇಳಿಸಿತು ಮತ್ತು ಅವರು ಆ ದೇಹವನ್ನು ತೆರವು ಮಾಡುತ್ತಿದ್ದಾಗ ಅವನ ಚರ್ಮದ ಮೇಲೆ ಉಸಿರುಗಟ್ಟಿಸುವ ಸುಂದರಿ ರೆಮಿದಿಯೋಸ್‌ಳ ವಾಸನೆಯನ್ನು ಗಮನಿಸಿದರು. ಅದು ಅವನ ದೇಹದಲ್ಲಿ ಎಷ್ಟು ಆಳವಾಗಿತ್ತೆಂದರೆ ಸೀಳಿದ ತಲೆಯಿಂದ ರಕ್ತ ಹೊರಬರz, ಬಂಗಾರದ ಬಣ್ಣದ ನಿಗೂಢಭರಿತ ಸುಗಂಧ ಪೂರಿತ ಎಣ್ಣೆಯನ್ನು ಸೂಸುತ್ತಿತ್ತು. ಅನಂತರ ಅವರಿಗೆ ಸುಂದರಿ ರೆಮಿದಿಯೋಸ್‌ಳ ವಾಸನೆ, ಗಂಡಸರಿಗೆ ಸಾವಿನಾಚೆಗೂ ಮೂಳೆಗಳು ಹುಡಿಯಾಗುವ ತನಕ ಚಿತ್ರಹಿಂಸೆ ಕೊಡುವುದೆಂದು ಅರ್ಥವಾಯಿತು. ಆದರೂ ಕೂಡ ಆ ಘೋರ ಆಕಸ್ಮಿಕವನ್ನು ಸುಂದರಿ ರೆಮಿದಿಯೋಸ್‌ಳ ಕಾರಣದಿಂದ ಸತ್ತ ಇನ್ನಿಬ್ಬರಿಗೆ ಸಂಬಂಧ ಕಲ್ಪಿಸಲಿಲ್ಲ. ಹೊರಗಿನವರು ಮತ್ತು ಮಕೋಂದೋದ ಹಳೆಯ ವಾಸಿಗಳಿಗೆ ಸುಂದರಿ ರೆಮಿದಿಯೋಸ್ ಹೊರಡಿಸುತ್ತಿರುವುದು ಪ್ರೇಮದ ಉಸಿರಾಟವಲ್ಲದೆ ಸಾವಿನದು ಎಂಬ ಪ್ರಗಾಥೆಯಲ್ಲಿ ನಂಬಿಕೆ ಹೊಂದಲು ಬಲಿಪಶುವೊಂದು ಇನ್ನೂ ಬೇಕಾಗಿತ್ತು. ಅನೇಕ ತಿಂಗಳಾದ ಮೇಲೆ ಒಂದು ಮಧ್ಯಾಹ್ನ ಸುಂದರಿ ರೆಮಿದಿಯೋಸ್ ತನ್ನ ಗೆಳತಿಯರ ಜೊತೆ ಗಿಡಗಳನ್ನು ಹುಡುಕಲು ಹೊರಟಾಗ ಅದರ ಸಮರ್ಥನೆಗೆ ಸಂದರ್ಭ ಒದಗಿ ಬಂತು. ಮಕೋಂದೋದ ಹುಡುಗಿಯರಿಗೆ ಆ ನವೀನವಾದ ಆಟ ನಗಲು, ಅಚ್ಚರಿಪಡಲು, ಹೆದರಲು ಮತ್ತು ತಮಾಷೆ ಮಾಡಲು ಒಂದು ಕಾರಣವಾಗಿತ್ತು. ಅಲ್ಲದೆ ರಾತ್ರಿಯ ಹೊತ್ತಿನಲ್ಲಿ ತಾವು ನಡೆದಾಡುತ್ತಿದ್ದನ್ನು ಕನಸಿನಲ್ಲಾದ ಅನುಭವ ಎನ್ನುವಂತೆ ಮಾತನಾಡಿಕೊಳ್ಳುತ್ತಿದ್ದರು. ಆ ಮೌನದ ಘನತೆ ಎಷ್ಟಿತ್ತೆಂದರೆ ಉರ್ಸುಲಾಗೆ ಸುಂದರಿ ರೆಮಿದಿಯೋಸ್‌ಗೆ ಆ ಸಂತೋಷ ಸಿಗದಂತೆ ಮಾಡಲು ಮನಸ್ಸು ಒಪ್ಪಲಿಲ್ಲ. ಅವಳು ಒಂದು ಮಧ್ಯಾಹ್ನ ಅವಳೊಂದು ಹ್ಯಾಟ್ ಮತ್ತು ಲಕ್ಷಣವಾದ ಬಟ್ಟೆ ಹಾಕಿಕೊಳ್ಳ್ಳಲು ಒಪ್ಪಿದ ಮೇಲೆ ಹೋಗಲು ಬಿಟ್ಟಳು. ಗೆಳತಿಯರೆಲ್ಲ ಗಿಡಗಳಿರುವ ಸ್ಥಳವನ್ನು ತಲುಪಿದಾಗ ಗಾಳಿಯಲ್ಲಿ ಸಾವಿನ ಪರಿಮಳ ತುಂಬಿಕೊಂಡಿತು. ಸಾಲು ಗಿಡಗಳಲ್ಲಿ, ಕೆಲಸ ಮಾಡುತ್ತಿದ್ದ ಗಂಡಸರಿಗೆ ವಿಚಿತ್ರವಾದ ಸೆಳೆತ ಮುತ್ತಿಕೊಂಡಂತಾಯಿತು ಮತ್ತು ಅದರಲ್ಲಿ ಕಾಣದ ಅಪಾಯದ ಸೂಚನೆಯಿತ್ತು. ಅವಳಲ್ಲಿ ಕೆಲವರು ತಕ್ಷಣವೇ ಅಳುವುದಕ್ಕೆ ಪ್ರಾರಂಭಿಸಿದರು. ಸುಂದರಿ ರೆಮಿದಿಯೋಸ್ ಮತ್ತು ಗೆಳತಿಯರಿಗೆ ಗಾಬರಿಯಾಗಿ ಕೆಲವು ಭಯಂಕರವಾದ ಗಂಡಸರ ಕೀಟಲೆಯಿಂದ ತಪ್ಪಿಸಿಕೊಳ್ಳಲು ಅವರು ಅಕ್ಕಪಕ್ಕದ ಮನೆಯಲ್ಲಿ ಆಶ್ರಯ ಪಡೆದರು. ಸ್ವಲ್ಪ ಸಮಯವಾದ ಮೇಲೆ ನಾಲ್ವರು ಅವ್ರೇಲಿಯಾನೋ ಅವರನ್ನು ರಕ್ಷಿಸಿ ಕರೆದುಕೊಂಡು ಹೋದರು. ಅವರ ಹಣೆಯ ಮೇಲಿನ ಬೂದಿಯ ಶಿಲುಬೆ ಅದೊಂದು ಜಾತಿಯ ಹಾಗೂ ಅಭೇದ್ಯದ, ಗುರುತು ಎನ್ನುವ ಪೂಜ್ಯ ಗೌರವವನ್ನು ತಂದುಕೊಟ್ಟಿತ್ತು. ಆ ಗೊಂದಲದ ಅನುಕೂಲವನ್ನು ಪಡೆದು ಅವರಲ್ಲೊಬ್ಬ ತನ್ನ ಹೊಟ್ಟೆಯನ್ನು ಅವುಚಿ ಹಿಡಿದು, ಜೋತು ಬಿದ್ದ ಪ್ರಾಣಿಯಂತೆ ಹಿಡಿದನೆಂದು ಸುಂದರಿ ರೆಮಿದಿಯೋಸ್ ಯಾರಿಗೂ ಹೇಳಲಿಲ್ಲ. ಅವಳು ಕ್ಷಣವೊಂದರಲ್ಲಿ ಆಕ್ರಮಣಕಾರನನ್ನು ಎದುರಿಸಲು ಮತ್ತು ಅವನ ಕಣ್ಣುಗಳಲ್ಲಿ ತೀವ್ರ ಅಸಮಾಧಾನವನ್ನು ಕಂಡಳು. ಅವು ಅವಳ ಹೃದಯದಲ್ಲಿ ಉರಿವ ಕಲ್ಲಿದ್ದಲಿನ ಮರುಕದಂತೆ ನೆಲೆಯೂರಿತು. ಆ ರಾತ್ರಿ ಟರ್ಕಿಗಳ ರಸ್ತೆಯಲ್ಲಿ ಕುದುರೆಯೊಂದು ಅವನ ಎದೆಯನ್ನು ತುಳಿಯುವ ಕೆಲವೇ ನಿಮಿಷಗಳ ಮುಂಚೆ ಆ ಮನುಷ್ಯ ತನ್ನ ಧೈರ್ಯ ಮತ್ತು ಅದೃಷ್ಟವನ್ನು ಕೊಚ್ಚಿಕೊಂಡಿದ್ದ. ಅವನು ರಸ್ತೆಯ ಮಧ್ಯದಲ್ಲಿ ರಕ್ತಕಾರಿ ಸತ್ತದ್ದನ್ನು ಸುತ್ತ ನೆರೆದ ಗುಂಪು ನೋಡಿತು.
ಸುಂದರಿ ರೆಮಿದಿಯೋಸ್ ಸಾಯಿಸುವ ಶಕ್ತಿ ಹೊಂದಿದ್ದಾಳೆ ಎನ್ನುವುದು ನಾಲ್ಕು ಸಂದೇಹವಿಲ್ಲದ ಘಟನೆಗಳಿಂದ ಹುಟ್ಟಿತು. ಉಡಾಫೆ ಹೊಡೆಯುವ ಕೆಲವರು ಅಂತಹ ರತಿಯಂಥ ಹೆಣ್ಣಿನ ಜೊತೆ ಒಂದು ರಾತ್ರಿ ಕಳೆದರೂ ಜೀವವನ್ನು ಬಲಿ ಕೊಡುವುದು ಸಾರ್ಥಕ ಎಂದು ಹೇಳಿದರು. ಸತ್ಯ ಸಂಗತಿಯೆಂದರೆ ಯಾರೂ ಹಾಗೆ ಮಾಡಲು ಪ್ರಯತ್ನಿಸಲಿಲ್ಲ. ಬಹುಶಃ ಅವಳನ್ನು ಪಡೆಯುವುದಷ್ಟೇ ಅಲ್ಲದೆ ಅವಳ ಅಪಾಯವನ್ನೂ ದೂರ ಮಾಡುವುದಕ್ಕೆ ಬೇಕಾಗಿದ್ದ ಒಂದೇ ಅಗತ್ಯವೆಂದರೆ ಬಹು ಪುರಾತನವಾದ ಮತ್ತು ಅತಿ ಸರಳವಾದ ಪ್ರೇಮದ ಭಾವನೆ. ಆದರೆ ಇದೊಂದು ಸಂಗತಿ ಮಾತ್ರ ಯಾರಿಗೂ ಹೊಳೆಯಲಿಲ್ಲ. ಉರ್ಸುಲಾ ಅವಳ ಹಾಗೆ ಯೋಚಿಸುವುದನ್ನು ಬಿಟ್ಟು ಬಿಟ್ಟಿದ್ದಳು. ಬೇರೆ ಸಂದರ್ಭದಲ್ಲಿ, ಅವಳನ್ನು ಈ ಭೂಮಿಗಾಗಿ ಉಳಿಸುವ ಆಲೋಚನೆಯನ್ನು ಮಾಡಿದ್ದಳು. ಅವಳು, “ಗಂಡಸರು ನೀನು ಅಂದ್ಕೊಂಡಿರೋದಕ್ಕಿಂತ ಹೆಚ್ಗೆ ಅಪೇಕ್ಷೆ ಪಡ್ತಾರೆ” ಎಂದು ನಿಗೂಢವಾಗಿ ಹೇಳಿ, “ಸಾಕಷ್ಟು ಅಡುಗೆ ಕೆಲ್ಸ ಇರತ್ತೆ, ಕಸ ಗುಡಿಸೋದು ಅಲ್ದೆ, ಸಣ್ಣ ಸಣ್ಣ ವಿಷಯಕ್ಕೆ ನೀನು ಯೋಚಿಸೋದಕ್ಕಿಂತ ಕಷ್ಟಪಡೋದು ಇರತ್ತೆ” ಎಂದು ತಿಳಿಸಿದಳು. ಅವಳನ್ನು ಸಂಸಾರದ ಸಂತೋಷಕ್ಕೆ ತರಬೇತಿ ಕೊಡುವ ಪ್ರಯತ್ನ ಮಾಡುತ್ತ ತನಗೇ ಮೋಸ ಮಾಡಿಕೊಳ್ಳುತ್ತಿದ್ದಳು. ಏಕೆಂದರೆ ಈ ಪ್ರಪಂಚದಲ್ಲಿ ತನ್ನ ಮೋಹ ನೀಗಿದ ಮೇಲೆ ಒಂದೇ ಒಂದು ದಿನದ ನಿರ್ಲಕ್ಷವನ್ನು ಸಹಿಸಿಕೊಳ್ಳುವ ಗಂಡಸು ಇರುವುದಿಲ್ಲ ಎನ್ನುವುದು ಅವಳಿಗೆ ಮನದಟ್ಟಾಗಿತ್ತು ಮತ್ತು ಅದು ಹೀಗೆ ಎಂದು ಅವಳಿಗೆ ಅರ್ಥವಾಗಿರಲಿಲ್ಲ. ಹೊಸೆ ಅರ್ಕಾದಿಯೋ ಹುಟ್ಟಿದ ಮೇಲೆ ಮತ್ತು ಅವನನ್ನು ಪೋಪ್ ಆಗುವಂತೆ ಬೆಳೆಸಬೇಕೆಂಬ ಅವಳ ಅಚಲ ನಿರ್ಧಾರ ತನ್ನ ಮರಿ ಮೊಮ್ಮಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸುವಂತೆ ಮಾಡಿತು. ಈಗಲ್ಲದಿದ್ದರೆ ಮುಂದೆ ಯಾವುದೋ ಪವಾಡ ಉಂಟಾಗುತ್ತದೆ ಎಂದು ನಂಬಿ ಅವರನ್ನು ಅವರ ಹಣೆಬರಹಕ್ಕೆ ಬಿಟ್ಟು ಬಿಟ್ಟಳು. ಅಲ್ಲದೆ ಎಲ್ಲವೂ ಇರುವ ಈ ಪ್ರಪಂಚದಲ್ಲಿ ಅವಳನ್ನು ಸಹಿಸಿಕೊಳ್ಳುವ ಗಂಡನೊಬ್ಬ ಇರುತ್ತಾನೆ ಎಂದು ನಂಬಿದಳು. ಅವಳು ಸಾಮಾನ್ಯ ಹೆಂಗಸಾಗಲೆಂದು ಪ್ರಯತ್ನಪಡುತ್ತಿದ್ದ ಅಮರಾಂತ, ಅದನ್ನು ಕೈಬಿಟ್ಟು ಸಾಕಷ್ಟು ಕಾಲವಾಗಿತ್ತು. ಹಿಂದೆ ಅವಳಿಗೆ ಆ ಮಧ್ಯಾಹ್ನಗಳಲ್ಲಿ ಹೊಲಿಗೆ ಯಂತ್ರದ ಹಿಡಿಕೆಯನ್ನು ತಿರುಗಿಸಲು ಯಾವ ಆಸಕ್ತಿ ಇರದಿದ್ದದ್ದು ಮರೆತು ಹೋದ ಮೇಲೆ ಅವಳು ಸರಳ ಮನಸ್ಸಿನವಳು ಎಂಬ ತಿರ್ಮಾನಕ್ಕೆ ಬಂದಿದ್ದಳು. ಗಂಡಸರ ಮಾತುಗಳು ಅವಳಿಗೆ ನಾಟದೇ ಹೋಗುತ್ತಿದ್ದರಿಂದ ತಬ್ಬಿಬ್ಬಾಗಿ ಅವಳು, “ನಾವು ನಿನ್ನ ಹರಾಜು ಹಾಕಿ ಬಿಡ್ತೀವಿ ಅಷ್ಟೆ” ಎನ್ನುತ್ತಿದ್ದಳು. ಅನಂತರ ಸುಂದರಿ ರೆಮಿದಿಯೋಸ್ ಮುಸುಕು ಹಾಕಿಕೊಂಡು ಸಾಮೂಹಿಕ ಪ್ರಾರ್ಥನೆಗೆ ಹೋಗಬೇಕೆಂದು ಉರ್ಸುಲಾ ಒತ್ತಾಯ ಮಾಡಿದಾಗ ಅಂತಹ ಒಂದು ನಿಗೂಢ ವಿಧಾನ ಎಷ್ಟು ಪ್ರಚೋದಕವಾಗಿತ್ತೆಂದರೆ ಅವಳ ಹೃದಯದಲ್ಲಿನ ದೌರ್ಬಲ್ಯವನ್ನು ಅರಿತುಕೊಳ;ವ ಗಂಡಸೊಬ್ಬ ಬೇಗನೆ ಬರುತ್ತಾನೆ ಎಂದು ಅಮರಾಂತ ಯೋಚಿಸಿದಳು. ಆದರೆ ಅವಳು ಅನೇಕ ಕಾರಣಗಳಿಗಾಗಿ ರಾಜಕುಮಾರನ ಹಾಗಿರುವವನನ್ನು ಮೂರ್ಖತನದಿಂದ ತಿರಸ್ಕರಿಸಿದಾಗ ಎಲ್ಲ ಆಸೆಗಳನ್ನು ಕೈ ಬಿಟ್ಟಳು. ಫೆರ್ನಾಂಡ ಅವಳನ್ನು ಅರ್ಥಮಾಡಿಕೊಳ್ಳುವ ಗೋಜಿಗೇ ಹೋಗಲಿಲ್ಲ. ಅವಳು ಸುಂದರಿ ರೆಮಿದಿಯೋಸ್, ರಕ್ತ ಹರಿದ ಜಾತ್ರೆಯಲ್ಲಿ ರಾಣಿಯ ಹಾಗೆ ಉಡುಪು ತೊಟ್ಟಾಗ ಅವಳು ಒಂದು ವಿಶೇಷ ಪ್ರಾಣಿಯ ಹಾಗೆ ಕಂಡಳು. ಆದರೆ ತನ್ನ ಕೈಯಿಂದ ಊಟ ಮಾಡುತ್ತಿದ್ದ ಅವಳು, ಸರಳತನದ, ಪವಾಡವಲ್ಲದ ಒಂದು ಉತ್ತರವನ್ನು ಕೊಡಲು ಸಾಧ್ಯವಿಲ್ಲದೇ ಹೋದದ್ದನ್ನು ಕಂಡಾಗ, ಅವಳಲ್ಲಿ ಸುಳಿದ ಒಂದೇ ಯೋಚನೆಯೆಂದರೆ, ಆ ಸಂಸಾರದಲ್ಲಿ ಮೂರ್ಖರು ಬಹಳ ಕಾಲ ಬದುಕುತ್ತಾರೆ ಎಂಬ ಸಂಗತಿ. ನಿಜವಾಗಲೂ ಸುಂದರಿ ರೆಮಿದಿಯೋಸ್ ತನಗೆ ಗೊತ್ತಿರುವ ಅತ್ಯಂತ ಸರಳವಾದ ವ್ಯಕ್ತಿಯೆಂದೂ ಮತ್ತು ಅವಳು ಅದನ್ನು ಪ್ರತಿ ಕ್ಷಣವೂ ಪ್ರತಿಯೊಬ್ಬರ ಮೇಲೆ ಬೀರುವ ಪ್ರಭಾವದಿಂದ ತೋರ್ಪಡಿಸುವ ಸಾಮರ್ಥ್ಯ ಹೊಂದಿದ್ದಾಳೆಂದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮನಸಾರೆ ನಂಬಿದ್ದ ಮತ್ತು ಹಾಗೆಂದು ಮತ್ತೆ ಮತ್ತೆ ಹೇಳುತ್ತಿದ್ದರೂ ಅವರು ಅವಳನ್ನು ಅವಳ ದಾರಿಗೆ ಬಿಟ್ಟು ಬಿಟ್ಟಿದ್ದರು. ಸುಂದರಿ ರೆಮಿದಿಯೋಸ್ ಏಕಾಂತದ ಮರಳುಗಾಡಲ್ಲಿ ಓಡಾಡುತ್ತ, ಬೆನ್ನ ಮೇಲೆ ಯಾವ ಗುರುತಿರದೆ, ದುಃಸ್ವಪ್ನಗಳಿಲ್ಲದ ಕನಸುಗಳಲ್ಲಿ ಪ್ರಬುದ್ಧಳಾಗುತ್ತ, ಅವಳ ಮುಗಿಯದ ಸ್ನಾನಗಳಲ್ಲಿ, ಕಾಲ ನಿಯಮವಿಲ್ಲದ ಊಟದಲ್ಲಿ, ಅದೊಂದು ದಿನ ಮಾರ್ಚ್ ತಿಂಗಳ ಮಧ್ಯಾಹ್ನ ಫೆರ್ನಾಂಡ ಕೈತೋಟದಲ್ಲಿ ಅವಳ ತಾಳೆಮರದ ಶೀಟುಗಳನ್ನು ಮಡಿಸಲು ಇಷ್ಟ ಪಟ್ಟು ಮನೆಯ ಹೆಂಗಸರನ್ನು ಸಹಾಯಕ್ಕಾಗಿ ಕೇಳುವ ತನಕ ಅವಳು ಆಳವಾದ ಹಾಗೂ ದೀರ್ಘವಾದ ಮೌನದಲ್ಲಿದ್ದಳು. ಅವಳು ಆಗಷ್ಟೇ ಶುರುಮಾಡುತ್ತಿದ್ದಂತೆ ಸುಂದರಿ ರೆಮಿದಿಯೋಸ್ ತೀರ ಸಪ್ಪೆಯಾಗಿರುವುದನ್ನು ಅಮರಾಂತ ಗಮನಿಸಿದಳು.
ಅವಳು, “ಹುಷಾರಿಲ್ವ?” ಎಂದು ಕೇಳಿದಳು.
ಇನ್ನೊಂದು ತುದಿಯಲ್ಲಿ ಶೀಟನ್ನು ಹಿಡಿದುಕೊಂಡಿದ್ದ ಸುಂದರಿ ರೆಮಿದಿಯೋಸ್, “ಅದರ ವಿರುದ್ಧ … ನಾನು ಎಂದೂ ಇಷ್ಟು ಆರಾಮಾಗಿ ಇದ್ದದ್ದಿಲ್ಲ್ಲ” ಎಂದಳು.
ಅವಳು ಅದನ್ನು ಹೇಳಿ ಮುಗಿಸುತ್ತಿದ್ದಂತೆ ಫೆರ್ನಾಂಡಳಿಗೆ ಸೂಕ್ಷ್ಮವಾದ ಬೆಳಕಿನ ಕಿರಣಗಳ ಗುಂಪೊಂದು ಒಂದು ಕೈಯಲ್ಲಿದ್ದ ಶೀಟನ್ನು ಎಳೆದು ಹರಡಿದ ಹಾಗೆ ಭಾಸವಾಯಿತು. ಅಮರಾಂತಳಿಗೆ ಅವಳ ಒಳಲಂಗದ ಲೇಸುಗಳು ನಿಗೂಢವಾಗಿ ನಲುಗಿದಂತಾಯಿತು ಮತ್ತು ಸುಂದರಿ ರೆಮಿದಿಯೋಸ್ ಎದ್ದೇಳುತ್ತಿದ್ದ ಕ್ಷಣದಲ್ಲಿ ಶೀಟು ಕೆಳಗೆ ಬೀಳದ ಹಾಗೆ ಹಿಡಿದುಕೊಳ್ಳಲು ಪ್ರಯತ್ನಿಸಿದಳು. ಆ ವೇಳೆಗೆ ಹೆಚ್ಚು ಕಡಿಮೆ ಕುರುಡಿಯಾಗಿದ್ದ ಉರ್ಸುಲಾ ಮಾತ್ರ ತಾಳ್ಮೆಯಿಂದಿದ್ದು, ಆ ನಿರ್ಧಾರಿತ ಬೆಳಕಿನ ಕಿರಣಗಳ ಗುಣವನ್ನು ಗುರುತಿಸಿದಳು ಮತ್ತು ಶೀಟುಗಳು ಕಿರಣಗಳ ಇಷ್ಟದಂತೆ ಆಡುತ್ತಿದ್ದದ್ದನ್ನು ಹಾಗೂ ಸುಂದರಿ ರೆಮಿದಿಯೋಸ್ ವಿದಾಯ ಹೇಳುತ್ತಿದ್ದಂತೆ ಅವಳ ಜೊತೆ ಶೀಟಿನ ಮಡಿಕೆಗಳು ಎದ್ದೇಳುತ್ತಿದ್ದನ್ನು ನೋಡಿದಳು. ಅವು ಸುತ್ತಲಿದ್ದ ಜೀರುಂಡೆ ಮತ್ತು ಡೇಲಿ ಗಿಡಗಳನ್ನು ಬಿಟ್ಟು, ಅವಳ ಜೊತೆ ಮಧ್ಯಾಹ್ನದ ನಾಲ್ಕು ಗಂಟೆಯ ಗಾಳಿಯಲ್ಲಿ ತೂರಿ ಕೊನೆಯಾದವು ಮತ್ತು ಅವಳೊಂದಿಗೆ ಮೇಲಿನ ವಾತಾವರಣದಲ್ಲಿ, ಅತ್ಯಂತ ಎತ್ತರದಲ್ಲಿ ಹಾರುವ ನೆನಪಿನ ಪಕ್ಷಿಗಳು ಅವಳನ್ನು ತಲುಪದ ಹಾಗೆ ಎಂದೆಂದಿಗೂ ಕಾಣೆಯಾದವು.
ಹೊರಗಡೆಯವರು ಮಾತ್ರ ಸುಂದರಿ ರೆಮಿದಿಯೋಸ್ ಕೊನೆಗೆ ರಾಣಿ ಜೇನಿನ ರೀತಿಯ ಬದಲಿಸಲಾಗದ ವಿಧಿ ಲಿಖಿತಕ್ಕೆ ಒಪ್ಪಿಸಿಕೊಂಡಳೆಂದು ತಿಳಿದುಕೊಂಡರು ಮತ್ತು ಅವಳ ಗೌರವವನ್ನು ಕಾಪಾಡುವುದಕ್ಕಾಗಿ ಅವಳ ಸಂಸಾರ ಅಂಥ ಹುರುಳಿಲ್ಲದ ಕತೆ ಕಟ್ಟುತ್ತಿದ್ದಾರೆಂದು ಭಾವಿಸಿದರು. ಮತ್ಸರದಿಂದ ಕುದಿಯುತ್ತಿದ್ದ ಫೆರ್ನಾಂಡ ಕೊನೆಗೆ ಆ ಪವಾಡವನ್ನು ಒಪ್ಪಿಕೊಂಡಳು ಮತ್ತು ದೀರ್ಘ ಕಾಲದ ತನಕ ತನ್ನ ಶೀಟುಗಳನ್ನು ವಾಪಸು ಕಳಿಸುವಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದಳು. ಬಹಳಷ್ಟು ಜನರು ಪವಾಡವನ್ನು ನಂಬಿದರಲ್ಲದೆ ಕ್ಯಾಂಡಲ್‌ಗಳನ್ನು ಹಚ್ಚಿ ಆಚರಿಸಿದರು. ಆದರೆ ಅವ್ರೇಲಿಯಾನೋಗಳ ಅತ್ಯಂತ ಘೋರ ಸಾವು ಅಚ್ಚರಿಗೆ ಬದಲಾಗಿ ಭಯ ಉಂಟುಮಾಡಿರದಿದ್ದರೆ ಅದನ್ನು ಬಿಟ್ಟು ಬೇರೆ ಮಾತು ಇರುತ್ತಿರಲಿಲ್ಲ. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅದನ್ನು ಅಪಶಕುನವೆಂದು ಭಾವಿಸಿರದಿದ್ದರೂ ಒಂದು ರೀತಿಯಲ್ಲಿ ತನ್ನ ಮಕ್ಕಳ ದುರ್ಮರಣದ ಮುನ್ಸೂಚನೆ ಎಂದು ಅರಿತಿದ್ದ. ಅವ್ರೇಲಿಯಾನೋ ಸೆರೇಡರ್ ಮತ್ತು ಅವ್ರೇಲಿಯಾನೋ ಆರ್ಕಯಾ ಸಮಾರಂಭದ ಸಮಯದಲ್ಲಿ ಬಂದು ಮಕೋಂದೋದಲ್ಲೆ ನೆಲೆಸುವ ಇಚ್ಛೆ ತೋರಿದಾಗ ಅವರ ತಂದೆ ಅವರನ್ನು ತಡೆಯಲು ಪ್ರಯತ್ನಿಸಿದ. ರಾತ್ರೋರಾತ್ರಿ ಅಪಾಯಕರವಾಗಿ ಬದಲಾದ ಊರಿನಲ್ಲಿ ಅವರು ಏನು ಮಾಡುತ್ತಾರೆಂದು ಅವನಿಗೆ ತಿಳಿಯಲಿಲ್ಲ. ಆದರೆ ಅವ್ರೇಲಿಯಾನೋ ಶೆಂಬೆನೋ ಮತ್ತು ಅವ್ರೇಲಿಯಾನೋ ಟ್ರೀಸ್ತೆ ಹಾಗೂ ಅದನ್ನು ಬೆಂಬಲಿಸಿದ ಅವ್ರೇಲಿಯಾನೋ ಸೆಗುಂದೋ ಅವರಿಗೆ ತಮ್ಮ ಉದ್ದಿಮೆಯಲ್ಲಿ ಕೆಲಸ ಕೊಟ್ಟ. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಅವರಿನ್ನೂ ಗೊಂದಲದಲ್ಲಿದ್ದಾರೆ ಎಂದು ತಿಳಿಯಲು ಕಾರಣಗಳಿದ್ದವು. ಮಿಸ್ಟರ್ ಬ್ರೌನ್ ಮೊದಲನೆ ಮೋಟಾರಿನಲ್ಲಿ ಮಕೋಂದೋ ತಲುಪಿದಾಗ ಅದರ ಹಾರನ್ ಶಬ್ದ ನಾಯಿಗಳನ್ನು ಬೆದರಿಸುತ್ತಿತ್ತು. ಜನರ ಹುಚ್ಚೆದ್ದ ಉತ್ಸಾಹ ಕಂಡು ಹಳೆಯ ಯೋಧನಿಗೆ ಸಿಟ್ಟು ಬಂತು ಮತ್ತು ಹಳೆಯ ಕಾಲದಲ್ಲಿ ಹೆಗಲ ಮೇಲೆ ಬಂದೂಕು ಹೇರಿಕೊಂಡು ಹೆಂಡತಿ ಮಕ್ಕಳನ್ನು ಬಿಟ್ಟು ಯುದ್ಧಕ್ಕೆ ಹೊರಡುತ್ತಿದ್ದ ಗಂಡಸರ ರೀತಿಗಿಂತ ಈಗಿನವರ ರೂಪದಲ್ಲೇ ಏನೋ ಬದಲಾವಣೆಯಾಗಿದೆ ಎಂದು ಅವನಿಗೆ ಮನವರಿಕೆಯಾಗಿತ್ತು. ನಿರ್ಲಾಂದಿಯಾ ಕದನ ವಿರಾಮ ಘೋಷಣೆಯ ನಂತರ ಸ್ಥಳೀಯ ಆಧಿಕಾರಿ ವರ್ಗದವರು, ಯಾವುದಕ್ಕೂ ಮುಂದಾಗದವರು ಮೇಯರ್‌ಗಳಾದರು ಹಾಗೂ ಶಾಂತಿಯಿಂದಿದ್ದ ಮತ್ತು ಸುಸ್ತು ಹೊಡೆದಿದ್ದ ಸಂಪ್ರದಾಯವಾದಿಗಳಿಂದ ಅಲಂಕಾರ ನ್ಯಾಯಾಧೀಶರನ್ನು ಆರಿಸಲಾಯಿತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ದೊಣ್ಣೆ ಹಿಡಿದುಕೊಂಡು ಬರಿಗಾಲಲ್ಲಿರುವ ಪೋಲೀಸರನ್ನು ನೋಡಿ, “ಇದೊಂದು ದರಿದ್ರ ಸರ್ಕಾರ. ನಾವು ಅಷ್ಟೆಲ್ಲ ಯುದ್ಧಗಳನ್ನು ಮಾಡಿದ್ದು ಮತ್ತದೆಲ್ಲ, ಕೇವಲ ನಮ್ಮ ಮನೆಗಳಿಗೆ ನೀಲಿ ಬಣ್ಣ ಬಳೀಬಾರ್‍ದು ಅಂತ ಅಷ್ಟೆ” ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ. ಆದರೆ ಬಾಳೆತೋಟದ ಕಂಪನಿ ಬಂದಾಗ ಸ್ಥಳಿಯ ಕಾರ್ಯ ನಿರ್ವಾಹಕರು ಮಿಸ್ಟರ್ ಬ್ರೌನ್ ಕರೆದುಕೊಂಡು ಬಂದಿದ್ದ ಸರ್ವಾಧಿಕಾರಿ ವಿದೇಶಿಯರಿಂದ ಬದಲಾಯಿಸಲಾಯಿತು. ಅವನು ವಿವರಿಸದ ಹಾಗೆ ಅವರು ಘನತೆಗೆ ತಕ್ಕ ಹಾಗೆ ಊರೊಳಗಿನ ಇತರೆ ಕೊರತೆ, ಸೊಳ್ಳೆ ಮತ್ತು ಶೆಖೆಯಿಂದ ದೂರವಾಗಿ ವಿದ್ಯುತ್ ಬೇಲಿಯೊಳಗೆ ಆನಂದದಿಂದ ವಾಸಿಸುವಂತೆ ವ್ಯವಸ್ಥೆಮಾಡಿದ. ಹಳೆಯ ಪೋಲಿಸರನ್ನು ಮಾರಕಾಸ್ತ್ರಗಳನ್ನು ಹೊಂದಿದ ಕೊಲೆಗಡುಕರಿಂದ ಬದಲಾಯಿಸಲಾಯಿತು. ಬಾಗಿಲು ಹಾಕಿಕೊಂಡು ತನ್ನ ವರ್ಕ್‌ಶಾಪ್‌ನಲ್ಲಿ ಕುಳಿತ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಆ ಬದಲಾವಣೆಗಳ ಬಗ್ಗೆ ಯೋಚಿಸಿದ ಮತ್ತು ಅವನ ಏಕಾಂತದ ಶಾಂತ ವರ್ಷಗಳಲ್ಲಿ ಮೊದಲ ಬಾರಿಗೆ ಯುದ್ಧವನ್ನು, ಅದರ ಅಂತಿಮ ನಿರ್ಣಯದ ತನಕ ಮುಂದುವರಿಸದಿದ್ದದ್ದು ತಪ್ಪಾಯಿತೆಂಬ ತೀರ ಖಚಿತವಾದ ಭಾವನೆಯಿಂದ ತೀವ್ರ ಹಿಂಸೆಗೆ ಒಳಗಾದ. ಆ ಸಮಯದಲ್ಲಿ ಮರೆತು ಹೋಗಿದ್ದ ಕರ್ನಲ್ ಮ್ಯಾಗ್ನಿಫಿಕೋ ವೀಸ್‌ಬಾಲ್‌ನ ಸೋದರನೊಬ್ಬ, ತನ್ನ ಏಳು ವರ್ಷದ ಮೊಮ್ಮಗನಿಗೆ ತಳ್ಳುವ ಗಾಡಿಯಲ್ಲಿದ್ದ ಪಾನೀಯವನ್ನು ಕೊಡಿಸಲು ಕರೆದುಕೊಂಡು ಹೋಗುತ್ತಿದ್ದ. ಆ ಹುಡುಗ ಆಕಸ್ಮಿಕವಾಗಿ ಪೊಲೀಸ್ ಚೌಕಕ್ಕೆ ಡಿಕ್ಕಿ ಹೊಡೆದಾಗ ಪೋಲೀಸ್‌ನ ಸಮಸ್ತ್ರದ ಮೇಲೆ ಪಾನೀಯ ಚಲ್ಲಿತು. ಅದಕ್ಕೆ ರಾಕ್ಷಸನಂತೆ ಅವನು ಆ ಹುಡುಗನನ್ನು ಮಚ್ಚಿನಿಂದ ತುಂಡು ತುಂಡು ಮಾಡಿ ಅದನ್ನು ತಡೆಯಲು ಬಂದ ತಾತನ ತಲೆಯನ್ನು ಒಂದೇ ಹೊಡೆತದಿಂದ ಕತ್ತರಿಸಿ ಹಾಕಿದ. ಒಂದು ಗುಂಪು ಜನರು ತಲೆ ಕತ್ತರಿಸಿ ಹೋದ ಮನುಷ್ಯನನ್ನು ಅವನ ಮನೆಗೆ ಎತ್ತಿಕೊಂಡು ಹೋದದ್ದನ್ನು ಮತ್ತು ಕತ್ತರಿಸಿದ ತಲೆಯ ಕೂದಲನ್ನು ಹಿಡಿದು, ಜೊತೆಗೆ ಹುಡುಗನ ತುಂಡುಗಳನ್ನು ಹಾಕಿದ ಚೀಲವನ್ನು ಹೆಂಗಸೊಬ್ಬಳು ಎಳೆದುಕೊಂಡು ಹೋದದ್ದನ್ನು ಇಡೀ ಊರು ನೋಡಿತು.
ಅದು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನ ತಾಳ್ಮೆಯ ಮಿತಿಯಾಗಿತ್ತು. ಹದಿಹರೆಯದಲ್ಲಿ ಅವನಿಗೆ ಹುಚ್ಚು ನಾಯಿ ಕಡಿದಿದೆ ಎಂಬ ಕಾರಣಕ್ಕಾಗಿ ಹೆಂಗಸೊಬ್ಬಳನ್ನು ಹೊಡೆದು ಸಾಯಿಸಿದಾಗ ಉಂಟಾದ ಅಷ್ಟೇ ಸಿಟ್ಟು ಮರುಕಳಿಸಿತು. ಅವನು ಮನೆಯ ಮುಂದೆ ನಿಂತಿದ್ದ ಜನರನ್ನು ನೋಡಿ, ತನ್ನ ಬಗ್ಗೆಯೇ ಅತೀವ ಜಿಗುಪ್ಸೆಯಿಂದ ಹೊರಟ. ಹಳೆಯ ಸಿಂಹ ಕಂಠದ ಧ್ವನಿಯಲ್ಲಿ ಹೃದಯದಲ್ಲಿ ಇರಿಸಿಕೊಳ್ಳಲಾಗದ ದ್ವೇಷವನ್ನು ಹೊರಗೆ ಹಾಕಿದ.
ಅವನು, “ಈ ರಾಕ್ಷಸರಿಂದ ತಪ್ಪಿಸಿಕೊಳ್ಳಕ್ಕೆ ಇಷ್ಟರಲ್ಲೆ ನಾನು ನನ್ನ ಹುಡುಗರನ್ನ ತಯಾರು ಮಾಡ್ತೀನಿ” ಎಂದು ಕೂಗಿದ.
ಆ ವಾರದ ಅವದಿ;ಯಲ್ಲಿ, ತೀರದ ಬೇರೆ ಬೇರೆ ಸ್ಥಳಗಳಲ್ಲಿ ಅವನ ಹದಿನೇಳು ಮಕ್ಕಳನ್ನು ಮೊಲಗಳ ಹಾಗೆ ಬೆನ್ನು ಹತ್ತಿ ಕಾಣದ ಪಾತಕಿಗಳು ಅವರ ಹಣೆಯ ಮೇಲಿನ ಬೂದಿಯ ಶಿಲುಬೆಯ ಮಧ್ಯಕ್ಕೆ ಗುರಿ ಇಟ್ಟು ಹೊಡೆದರು. ಅವ್ರೇಲಿಯಾನೋ ಟ್ರೀಸ್ತೆ ಸಾಯಂಕಾಲ ಏಳು ಗಂಟೆಗೆ ತನ್ನ ತಾಯಿಯ ಜೊತೆ ಮನೆಯಿಂದ ಹೊರಗೆ ಬರುತ್ತಿದ್ದಾಗ ಕತ್ತಲಿಂದ ಬಂದೂಕಿನ ಗುಂಡು ಅವನ ಹಣೆಯನ್ನು ಸೀಳಿತು. ರೂಢಿಯಂತೆ ಫ್ಯಾಕ್ಟರಿಯಲ್ಲಿ ಮಲಗುತ್ತಿದ್ದ ಅವ್ರೇಲಿಯಾನೋ ಶೆಂಟೆಂಟೋ ಕಂಡದ್ದು, ಹಾಸಿಗೆಯಲ್ಲಿಯೇ ಹುಬ್ಬುಗಳ ಮಧ್ಯೆ ಚೂಪು ಗುದ್ದಲಿಯಿಂದ ಹಿಂಬದಿಯ ತನಕ ತೂತು ಕೊರೆದ ಸ್ಥಿತಿಯಲ್ಲಿ. ಅವ್ರೇಲಿಯಾನೋ ಸೆರೇಸರ್ ಸಿನಿಮಾಕ್ಕೆ ಕರೆದುಕೊಂಡು ಹೋದ ಗೆಳತಿಯನ್ನು ಅವಳ ತಂದೆತಾಯಿಯ ಮನೆಗೆ ಬಿಟ್ಟು ಟರ್ಕಿಗಳ ರಸ್ತೆಯಲ್ಲಿ ವಾಪಸಾಗುತ್ತಿದ್ದಾಗ, ಗುಂಪಿನೊಳಗಿದ್ದ ಯಾರೆಂದು ತಿಳಿಯದವನು ಹೊಡೆದ ಗುಂಡಿಗೆ ಹಂದಿಯ ಮಾಂಸ ಕುದಿಯುತ್ತಿದ್ದ ಕಡಾಯಿಯಲ್ಲಿ ಬಿದ್ದ. ಕೆಲವು ನಿಮಿಷಗಳ ನಂತರ ಯಾರೋ ಒಬ್ಬ ಹೆಂಗಸಿನ ಜೊತೆಗಿದ್ದ ಅವ್ರೇಲಿಯಾನೋ ಆಕೆಯಾಗೆ ಬಾಗಿಲು ಬಡಿದು, “ಬೇಗ ಬನ್ನಿ, ಅವ್ರು ನಿಮ್ಮ ಅಣ್ಣತಮ್ಮಂದಿರನ್ನ ಕೊಲ್ತಿದಾರೆ” ಎಂದು ಕೂಗಿ ಹೇಳಿದ. ಅವನ ಜೊತೆಗಿದ್ದ ಹೆಂಗಸು ಅನಂತರ ಹೇಳಿದ್ದೇನೆಂದರೆ ಅವ್ರೇಲಿಯಾನೋ ಆರ್ಕೆಯಾ ಹಾಸಿಗೆಯಿಂದ ದಿಢೀರನೆದ್ದು ಬಾಗಿಲು ತೆಗೆಯುತ್ತಿದ್ದ ಹಾಗೆ ಬಂದೂಕಿನ ಗುಂಡು ಅವನ ತಲೆಯನ್ನು ಸೀಳಿತು. ಆ ದಿನ ರಾತ್ರಿ ನಾಲ್ಕು ಹೆಣಗಳನ್ನು ಇಟ್ಟುಕೊಂಡು ಎಚ್ಚರವಾಗಿರುವುದಕ್ಕೆ ಸಿದ್ಧವಾಗುತ್ತಿದ್ದಾಗ, ಫೆರ್ನಾಂಡ ಅವ್ರೇಲಿಯಾನೋ ಸೆಗುಂದೋನನ್ನು ಹುಡುಕುತ್ತ ಹುಚ್ಚಿಯ ಹಾಗೆ ಊರೆಲ್ಲ ಹುಡುಕುತ್ತಿದ್ದ ಪೆತ್ರಾ ಕೊತೆಸ್, ಕರ್ನಲ್‌ನ ಹೆಸರನ್ನು ಇಟ್ಟುಕೊಂಡಿರುವವರನ್ನೆಲ್ಲ ಮುಗಿಸಬೇಕೆಂಬ ಆರ್ಡರ್‌ನಲ್ಲಿ ಅವ್ರೇಲಿಯಾನೋ ಸೆಗುಂದೋ ಕೂಡ ಸೇರಿದ್ದಾನೆ ಎಂದುಕೊಂಡು, ಅವನನ್ನು ರೂಮಿನಲ್ಲಿ ಬೀಗ ಹಾಕಿ ಇರಿಸಿಕೊಂಡಿದ್ದಳು. ನಾಲ್ಕು ದಿನಗಳ ತನಕ ಅವನನ್ನು ಹೊರಗೆ ಬಿಡಲಿಲ್ಲ. ಆಗ ತೀರದ ಬೇರೆ ಬೇರೆ ಸ್ಥಳಗಳಿಂದ ಬಂದ ಟೆಲಿಗ್ರಾಂಗಳಿಂದ ಬೂದಿಯ ಶಿಲುಬೆ ಇರುವ ಸೋದರರ ವಿರುದ್ಧ ಮಾತ್ರ ಕಾಣದ ಶತ್ರುಗಳ ಆಕ್ರೋಶವಿದ್ದದ್ದು ಸ್ವಷ್ಟವಾಗಿತ್ತು. ಅಮರಾಂತ ಅವರೆಲ್ಲರ ಹೆಸರುಗಳನ್ನು ಬರೆದಿದ್ದ ಪುಸ್ತಕದಲ್ಲಿ ಟೆಲಿಗ್ರಾಂಗಳು ಬರುತ್ತಿದ್ದ ಹಾಗೆ ಹೆಸರುಗಳನ್ನು ಕಾಟು ಹೊಡೆಯುತ್ತಿದ್ದಾಗ ಉಳಿದದ್ದು ಎಲ್ಲರಿಗಿಂತ ಹಿರಿಯ ಮಾತ. ಅವನಿಗೆ ಕಪ್ಪು ಬಣ್ಣ ಮತ್ತು ಹಸಿರು ಕಣ್ಣುಗಳಿದ್ದದ್ದರಿಂದ ಚೆನ್ನಾಗಿ ನೆನಪಿಟ್ಟುಕೊಂಡಿದ್ದರು. ಪರ್ವತದ ತಪ್ಪಲಿನ ಹಳ್ಳಿಯೊಂದರಲ್ಲಿ ಅಡಗಿ ಬಡಗಿ ಕೆಲಸ ಮಾಡಿಕೊಂಡು ವಾಸಿಸುತ್ತಿದ್ದ ಅವನ ಹೆಸರು ಅವ್ರೇಲಿಯಾನೋ ಅಮೆದೋರ್. ಅವನ ಸಾವಿನ ಟೆಲಿಗ್ರಾಂ ಬರುತ್ತೆಂದು ಎರಡು ವಾರ ಕಾದ ನಂತರ, ಅವನಿಗೆ ತನಗಿರುವ ಅಪಾಯದ ಬಗ್ಗೆ ತಿಳಿಯದು ಎಂದು ಭಾವಿಸಿದ ಅವ್ರೇಲಿಯಾನೋ ಸೆಗುಂದೋ ಎಚ್ಚರಿಕೆ ಕೊಡುವುದಕ್ಕೆ ದೂತನನ್ನು ಕಳಿಸಿದ. ಅವನು ಅವ್ರೇಲಿಯಾನೋ ಅಮೆದೋರ್ ಕ್ಷೇಮದಿಂದ ಇದ್ದಾನೆಂಬ ಸುದ್ದಿಯೊಡನೆ ಹಿಂತಿರುಗಿದ. ಕೊಲೆ ಮಾಡುತ್ತಿದ್ದ ಆ ರಾತ್ರಿ ಅವನನ್ನು ಮುಗಿಸಲು ಇಬ್ಬರು ಅವನ ಮನೆಗೆ ಹೋಗಿದ್ದರು ಮತ್ತು ಅವರು ಹೊಡೆದ ಗುಂಡುಗಳು ಬೂದಿಯ ಶಿಲುಬೆಗೆ ಬೀಳದೆ ತಪ್ಪಿ ಹೋದವು. ಅವ್ರೇಲಿಯಾನೋ ಅಮೆದೋರ್ ಅಂಗಳದ ಗೋಡೆ ಹಾರಿ ಪರ್ವತಗಳ ತಿರುವುಗಳಲ್ಲಿ ಮರೆಯಾದ. ಆ ಪ್ರದೇಶ ಅವನಿಗೆ ಅಂಗೈಯೊಳಗಿನ ವಸ್ತುವಿನಷ್ಟು ಚಿರಪರಿಚಿತವಾಗಿತ್ತು. ಅನಂತರ ಅವನ ಬಗ್ಗೆ ಯಾವ ಸುದ್ದಿ ಕೇಳಿ ಬರಲಿಲ್ಲ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಅವು ಕರಾಳ ದಿನಗಳಾಗಿದ್ದವು. ಗಣ ತಂತ್ರದ ಅಧ್ಯಕ್ಷ ಅವನಿಗೆ ಸಂತಾಪ ಸೂಚಕ ಟೆಲಿಗ್ರಾಂನ್ನು ಕಳಿಸಿ ಆಮೂಲಾಗ್ರ ವಿಚಾರಣೆ ನಡೆಸುವುದಾಗಿ ತಿಳಿಸಿದ್ದ ಮತ್ತು ಸತ್ತವರಿಗೆ ಗೌರವಾರ್ಪಣೆ ಮಾಡಿದ್ದ. ಅವನ ಆಜ್ಞೆಯ ಪ್ರಕಾರ ಶವಪೆಟ್ಟಿಗೆಗಳ ಮೇಲೆ ಇಡುವುದಕ್ಕಾಗಿ ನಾಲ್ಕು ಶವ ಸಂಸ್ಕಾರದ ಹೊಗೊಂಚಲುಗಳ ಸಮೇತ ಮೇಯರ್ ಬಂದಿದ್ದ. ಆದರೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಅವುಗಳನ್ನು ಬೀದಿಗೆಸೆಯಲು ಹೇಳಿದ. ಶವಸಂಸ್ಕಾರವಾದ ನಂತರ ಗಣತಂತ್ರದ ಅಧ್ಯಕ್ಷನಿಗೆ ಉಗ್ರವಾದ ಟೆಲಿಗ್ರಾಂವೊಂದನ್ನು ತಾನೆ ಬರೆದನಾದರೂ ಅದನ್ನು ಕಳಿಸಲು ಟೆಲಿಗ್ರಾಂ ಮಾಡುವವನು ನಿರಾಕರಿಸಿದ. ಅನಂತರ ಅದನ್ನು ಅವನ ಮೇಲೆ ಆಕ್ರಮಣಕಾರಿ ರೀತಿಯಲ್ಲಿ ಉದ್ದವಾಗಿ ಬರೆದು, ಕವರೊಂದರಲ್ಲಿ ಹಾಕಿ ಟಪಾಲಿಗೆ ಹಾಕಿದ. ಅವನ ಹೆಂಡತಿ ಸತ್ತಾಗ ಆದಂತೆ, ಯುದ್ಧದ ಕಾಲದಲ್ಲಿ ಅವನ ಅನೇಕ ಆಪ್ತ ಸ್ನೇಹಿತರು ಸತ್ತಾಗ ಆದಂತೆ ಅವನಿಗೆ ಯಾವುದೇ ರೀತಿಯ ದುಃಖವಿರಲಿಲ್ಲ. ಆದರೆ ಕುರುಡಾದ, ದಿಕ್ಕು ಕಾಣದ ರೋಷ ಹಾಗೂ ಷಂಡತನದ ಭಾವನೆ ಇತ್ತು. ಅವನು ತನ್ನ ಮಕ್ಕಳಿಗೆ ಅಳಿಸಲಾಗದ ಬೂದಿಯಿಂದ ಗುರುತು ಹಾಕಿ ಶತ್ರುಗಳಿಗೆ ಪತ್ತೆಯಾಗುವಂತೆ ಮಾಡಿದ್ದಕ್ಕೆ ಫಾದರ್ ಆಂಟೋನಿಯೋ ಇಸಬಲ್‌ನನ್ನೂ ಇದರಲ್ಲಿ ಭಾಗಿಯಾಗಿರುವುದಾಗಿ ದೂಷಿಸಿದ. ವಯಸ್ಸಾಗಿದ್ದ ಪಾದ್ರಿಗೆ ಆ ವಿಷಯಗಳನ್ನು ಪರಸ್ಪರ ಹೊಂದಿಸಲಾಗಲಿಲ್ಲ. ಉಪದೇಶ ವೇದಿಕೆಯಿಂದ ತನ್ನ ಆಡಳಿತ ವಲಯಕ್ಕೆ ಬರುವವರಿಗೆ ಅತಿರೇಕದ ವ್ಯಾಖ್ಯಾನ ಮಾಡುತ್ತಿದ್ದವನು ಒಂದು ಮಧ್ಯಾಹ್ನ ಆ ಬುಧವಾರ ಬೂದಿಯನ್ನು ತಯಾರಿಸಿದ ಬೋಗುಣಿಯನ್ನು ಹಿಡಿದುಕೊಂಡು ಅವರ ಮನೆಗೆ ಬಂದ ಮತ್ತು ಅದನ್ನು ನೀರಿನಿಂದ ತೊಳೆಯಬಹುದು ಎಂದು ಮನೆಯವರಿಗೆಲ್ಲ ಮನವರಿಗೆ ಮಾಡಿಕೊಡುವ ಹಾಗೆ ಪ್ರಯತ್ನಿಸಿ ಒಳ್ಳೆಯ ಮಾತುಗಳನ್ನಾಡಿದ. ಆದರೆ ಇಡೀ ದುರಂತದ ಭಯ ಅವರಲ್ಲಿ ಎಷ್ಟು ಆಳವಾಗಿ ಬೇರೂರಿತ್ತೆಂದರೆ ಫೆರ್ನಾಂಡ ಕೂಡ ತನ್ನ ಮೇಲೆ ಆ ಪ್ರಯೋಗ ನಡೆಸಲು ಬಿಡಲಿಲ್ಲ. ಅನಂತರ ಬೂದಿ ಬುಧವಾರದ ದಿನ ಎಂದಿಗೂ ಬ್ಯುಂದಿಯಾನೊಬ್ಬ ಪವಿತ್ರ ಸ್ಥಾನದ ಮುಂದೆ ಮಂಡಿಯೂರಲಿಲ್ಲ.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬಹಳ ಕಾಲದ ತನಕ ತನ್ನ ಶಾಂತ ಸ್ಥಿತಿಯನ್ನು ಮರಳಿ ಪಡೆಯಲಿಲ್ಲ. ಅವನು ಚಿಕ್ಕ ಮೀನುಗಳ ತಯಾರಿಕೆಯನ್ನು ನಿಲ್ಲಿಸಿದ. ಕಷ್ಟದಿಂದ ಊಟ ಮಾಡುತ್ತಿದ್ದ. ನಿದ್ದೆಯಲ್ಲಿ ಓಡಾಡುವನಂತೆ ಹೊದಿಕೆಯನ್ನು ಎಳೆದುಕೊಂಡು ರೋಷದಿಂದ ಅವುಡುಗಚ್ಚಿ ಮನೆಯಲ್ಲೆಲ್ಲ ಓಡಾಡುತ್ತಿದ್ದ. ಮೂರು ತಿಂಗಳಾಗುತ್ತಿದ್ದಂತೆ ಅವನ ಕೂದಲೆಲ್ಲ ಬೂದಿ ಬಣ್ಣವಾಗಿತ್ತು, ಅವನ ಮೇಣ ಳಿದಿದ್ದ ಮೀಸೆ ಬಣ್ಣರಹಿತ ತುಟಿಗಳ ಪಕ್ಕಕ್ಕೆ ಇಳಿದಿತ್ತು. ಆದರೆ ಕಣ್ಣುಗಳು ಮಾತ್ರ, ಅವನು ಹುಟ್ಟಿದಾಗ ನೋಡಿದವರು ಬೆದರಿದಂತಿದ್ದ, ಉರಿಯುವ ಕಲ್ಲಿದ್ದಲಿನ ಹಾಗಿತ್ತು. ಬೇರೆ ದಿನಗಳಾಗಿದ್ದರೆ ಅವನು ಸರಳ ನೋಟದಿಂದಲೇ ಕುರ್ಚಿಗಳು ನಲುಗುವಂತೆ ಮಾಡುತ್ತಿದ್ದ. ಅವನ ಚಿತ್ರ ಹಿಂಸೆಯ ರೋಷದಲ್ಲಿ ಹರೆಯದಲ್ಲಿ ನಿರ್ಜನವಾದ ಪಾಳುಭೂಮಿಯಲ್ಲಿ ಮಾರ್ಗದರ್ಶನ ನೀಡಿದ ಮುಂಗಾಣಿಕೆಗಳನ್ನು ಮತ್ತೆ ಉದ್ದೀಪನಗೊಳಿಸಲು ವ್ಯರ್ಥ ಪ್ರಯತ್ನ ಮಾಡಿದ. ಅವನಲ್ಲಿ ಯಾವುದೂ ಮತ್ತು ಯಾರೊಬ್ಬರೂ ಕೊಂಚವೂ ವಿಶ್ವಾಸ ಹುಟ್ಟಿಸದೆ ಆ ವಿಚಿತ್ರ ಮನೆಯಲ್ಲಿ ಅವನು ಎಲ್ಲೋ ಕಳೆದು ಹೋದ. ಒಂದು ಸಲ ಮೆಲ್‌ಕಿಯಾದೆಸ್‌ನ ರೂಮಿನಲ್ಲಿ, ಯುದ್ಧದ ಹಿಂದಿನ ದಿನಗಳ ಕುರುಹುಗಳನ್ನು ಹುಡುಕುತ್ತಿರುವಾಗ, ಅವನಿಗೆ ಇಷ್ಟು ವರ್ಷಗಳ ನಿರ್ಲಕ್ಷದಿಂದಾಗಿ ಅಲ್ಲಿ ಕೇವಲ ರದ್ದಿ, ಹರಡಿ ಬಿದ್ದಿದ್ದ ಕಸ ಕಡ್ಡಿ ಕಂಡು ಬಂತು. ಮತ್ತೊಂದು ಸಲ ಯಾರೂ ಓದದಿದ್ದ ಪುಸ್ತಕಗಳ ಹೊದಿಕೆಗಳ ನಡುವೆ ತೇವಗೊಂಡ ಹಳೆ ಹಾಳೆಯಲ್ಲಿ ನೀಲಿ ಛಾಯೆಯ ಹೂವೊಂದು ಬೆಳೆದಿತ್ತು. ಆ ಮನೆಯಲ್ಲಿನ ಪರಿಶುದ್ಧ ಗಾಳಿ ಮತ್ತು ಅತ್ಯಂತ ಹೆಚ್ಚಿನ ಪ್ರಕಾಶದಲ್ಲಿ ಸಹಿಸಲಾಗದ ಕೊಳೆತ ನೆನಪುಗಳು ತೇಲುತ್ತಿದ್ದವು. ಒಂದು ದಿನ ಬೆಳಿಗ್ಗೆ ಉರ್ಸುಲಾ ಬಾದಾಮಿ ಮರದ ಬುಡದಲ್ಲಿ ತನ್ನ ಗಂಡನ ಮಂಡಿಗೊರಗಿ ಅಳುತ್ತಿದ್ದದ್ದು ಅವನಿಗೆ ಕಾಣಿಸಿತು. ಮನೆಯಲ್ಲಿದ್ದವರಲ್ಲಿ ಐವತ್ತು ವರ್ಷಗಳಿಂದ ಗಾಳಿ ಮಳೆಗೆ ಹುಡಿಯಾಗದ ಶಕ್ತಿವಂತ ಮುದುಕನನ್ನು ಇನ್ನೂ ಕಾಣದಿರುತ್ತಿದ್ದ ಒಬ್ಬನೇ ವ್ಯಕ್ತಿಯೆಂದರೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ. ಉರ್ಸುಲಾ ಅವನಿಗೆ, “ನಿನ್ನಪ್ಪನನ್ನು ಮಾತಾಡಿಸು” ಎಂದಳು. ಅವನು ಒಂದು ಕ್ಷಣ ಬಾದಾಮಿ ಮರದ ಎದುರು ನಿಂತ ಮತ್ತು ಎದುರಿಗಿದ್ದ ಖಾಲಿ ವಿಸ್ತಾರ ಅವನಲ್ಲಿ ಯಾವ ಭಾವನೆಯನ್ನೂ ಉಂಟುಮಾಡಲಿಲ್ಲ.
ಅವನು, “ಅವನೇನು ಹೇಳ್ತಾನೆ” ಎಂದು ಕೇಳಿದ.
ಉರ್ಸುಲಾ, “ಅವನ್ಗೆ ನೀವು ಸಾಯ್ತೀರಾ ಅಂತ ಬೇಜಾರಾಗಿದೆ” ಎಂದಳು.
ಕರ್ನಲ್ ನಗುತ್ತ, “ಅವನ್ಗೆ ಹೇಳು, ಯಾರೇ ಆಗ್ಲಿ ಸಾಯ್ಬೇಕಾದಾಗ ಸಾಯಲ್ಲ, ಸಾಧ್ಯವಾದಾಗ ಸಾಯ್ತಾರೆ, ಅಂತ” ಎಂದ.
ಅವನ ಹೃದಯದಲ್ಲಿ ಸತ್ತ ಅಪ್ಪನ ಶಕುನ ಅಳಿದುಳಿದ ಅಭಿಮಾನವನ್ನು ಹೊಡೆದೆಬ್ಬಿಸಿತು. ಆದರೆ ಅವನು ಅದನ್ನು ಒಗ್ಗೂಡಿದ ಶಕ್ತಿಯೆಂದು ತಪ್ಪು ತಿಳಿದ. ಅದೇ ಕಾರಣಕ್ಕಾಗಿ ಅವನು ಉರ್ಸುಲಾಗೆ ಸಂತ ಜೋಸೆಫ್‌ನ ಪ್ಲಾಸ್ಟಿಕ್ ವಿಗ್ರಹದಲ್ಲಿ ದೊರೆತ ಬಂಗಾರದ ನಾಣ್ಯಗಳನ್ನು ಅಂಗಳದಲ್ಲಿ ಹೂತಿಟ್ಟಿರುವ ಸ್ಥಳ ಯಾವುದು ಎಂದು ಕೇಳಿ ಪೀಡಿಸುತ್ತಿದ್ದ. ಹಳೆಯದರಿಂದ ಪಾಠ ಕಲಿತ ಅವಳು, “ಅದು ನಿಂಗೆಂದೂ ಗೊತ್ತಾಗಲ್ಲ” ಎಂದು ಅಚಲವಾದ ಧ್ವನಿಯಲ್ಲಿ ಹೇಳಿ ಮುಂದುವರೆದು, “ಒಂದಿನ ಆ ಸಂಪತ್ತಿನ ಯಜಮಾನ ಬರ್‍ತಾನೆ, ಅವ್ನು ಮಾತ್ರ ಅದನ್ನ ಅಗೆದು ತೆಗೀತಾನೆ..” ಯಾವಾಗಲೂ ತೀರ; ಉದಾರವಾಗಿರುತ್ತಿದ್ದ ಮನುಷ್ಯ ಹಣದ ವಿಷಯದಲ್ಲಿ ಅಷ್ಟೊಂದು ಆತಂಕಗೊಳ್ಳಲು ಶುರುವಾದದ್ದು ಏಕೆಂದು ಯಾರಿಗೂ ತಿಳಿಯಲಿಲ್ಲ. ತುರ್ತು ಸುಧಾರಣೆಗೆ ಸಾಧಾರಣ ಮೊತ್ತ ಸಾಕಾಗದೆ ಅಗಾಧ ಪ್ರಮಾಣದ ಸಂಪತ್ತು ಬೇಕಾಗಿತ್ತು. ಅದನ್ನು ತಿಳಿದ ಅವ್ರೇಲಿಯಾನೋ ಸೆಗುಂದೋ ಆಶ್ಚರ್ಯ ಚಕಿತನಾದ. ಅವನ ಪಾರ್ಟಿಯ ಹಳೆಯ ಸ್ನೇಹಿತರನ್ನು ಸಹಾಯ ಕೇಳುವುದಕ್ಕೆ ಹೋದಾಗ ಅವನನ್ನು ನೋಡಬಾರದೆಂದು ತಪ್ಪಿಸಿಕೊಂಡರು. ಹೆಚ್ಚು ಕಡಿಮೆ ಇದೇ ಸಮಯದಲ್ಲಿ ಅವನು, “ಉದಾರವಾದಿಗಳು ಮತ್ತು ಸಂಪ್ರದಾಯವಾದಿಗಳಿಗಿರುವ ಒಂದೇ ವ್ಯತ್ಯಾಸವೆಂದರೆ ಉದಾರವಾದಿಗಳು ಐದು ಗಂಟೆಗೆ ಸಾಮೂಹಕ ಪ್ರಾರ್ಥನೆಗೆ ಹೋಗುತ್ತಾರೆ, ಸಂಪ್ರದಾಯವಾದಿಗಳು ಎಂಟಕ್ಕೆ” ಎಂದು ಹೇಳಿದ್ದು. ಆದರೂ ಅವನೆಷ್ಟು ಹಠದಿಂದ ಒತ್ತಾಯಿಸಿದನೆಂದರೆ, ಹೇಗೆ ಕೇಳಿಕೊಂಡನೆಂದರೆ, ತನ್ನ ಘನತೆಯನ್ನು ಯಾವ ಮಟ್ಟಕ್ಕೆ ತಂದುಕೊಂಡನೆಂದರೆ, ಎಲ್ಲ ಕಡೆಯಿಂದಲೂ ಸಹಾಯ ಒಗ್ಗೂಡಿ, ಎಂಟು ತಿಂಗಳಲ್ಲಿ ಉರ್ಸುಲಾ ಹೂತಿಟ್ಟಿದ್ದಕ್ಕಿಂತ ಹೆಚ್ಚು ಹಣ ಪಡೆದ. ಆಗ ಅವನು ಕಾಯಿಲೆ ಬಿದ್ದಿದ್ದ ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ನನ್ನು ಸಂಪೂರ್ಣ ಯುದ್ಧಕ್ಕೆ ಅವನು ಸಹಾಯ ಮಾಡುತ್ತಾನೆಂದು ಭೇಟಿಯಾದ.
ಒಂದು ಕಾಲದಲ್ಲಿ ಪಾರ್ಶ್ವವಾಯು ಬಡಿದ ಅವಧಿಯಲ್ಲಿ ಕುರ್ಚಿಯಲ್ಲಿದ್ದರೂ ಬಂಡಾಯದ ಎಳೆಗಳನ್ನು ಕಲೆಹಾಕಲು ಸಾಧ್ಯವಿದ್ದವನು ಅವನೊಬ್ಬನೇ. ನೀರ್ಲಾಂದಿಯಾ ಕದನ ವಿರಾಮ ಘೋಷಣೆಯ ನಂತರ, ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬಂಗಾರದ ಸಣ್ಣ ಮೀನುಗಳನ್ನು ಮಾಡುವುದರಲ್ಲಿ ತೊಡಗಿ ಸೋಲುವ ತನಕ ವಿಧೇಯರಾಗಿದ್ದ ಕ್ರಾಂತಿಯ ಅಧಿಕಾರಿಗಳೊಂದಿಗೆ ಸಂಪರ್ಕ ಇಟ್ಟಿಕೊಂಡಿದ್ದ. ಅವನು ಅವರೊಂದಿಗೆ ದಿನನಿತ್ಯದ ಅವಮಾನದ, ಕೋರಿಕೆಗಳ ಮತ್ತು ಅಹವಾಲುಗಳ, ಮತ್ತು ನಾಳೆ ಬನ್ನಿ, ಯಾವುದೇ ಸಮಯವಾದರೂ ಸರಿ, ಈಗ, ನಾವು ಗಮನವಿಟ್ಟು ನಿಮ್ಮ ವಿಷಯವನ್ನು ಅಭ್ಯಸಿಸುತ್ತಿದ್ದೇವೆ ಎಂದು ಹೇಳುತ್ತಿದ್ದವರ ವಿರುದ್ಧ ಬೇಸರದಿಂದ ಹೋರಾಟ ನಡೆಸಿದ್ದ. ಆದರೆ ಜೀವನ ಪರ್ಯಂತದ ಪೆನ್ಷನ್‌ಗಾಗಿ ‘ನಿಮ್ಮ ಅತ್ಯಂತ ವಿಧೇಯ\’ ಎಂದು ಸಹಿ ಮಾಡಬೇಕಿದ್ದ ಮತ್ತು ಎಂದಿಗೂ ಸಹಿ ಮಾಡುವವರ ನಡುವೆ ಹೋರಾಟ ಹೀನಾಯವಾಗಿ ಸೋಲು ಕಂಡಿತ್ತು. ಮತ್ತೆ ಮತ್ತೆ ಕೊನೆಯಿಲ್ಲದೆ ಮುಂದೆ ಹಾಕುವ ಈ ಹೋರಾಟ ಉಂಟುಮಾಡಿದ ಅನಾಹುತವನ್ನು, ಇಪ್ಪತ್ತೊಂದು ವರ್ಷ ನಡೆದ ಆ ಇನ್ನೊಂದು ರಕ್ತ ಹರಿದ ಯುದ್ಧ ಉಂಟುಮಾಡಲಿಲ್ಲ. ತನ್ನ ಜೀವದ ಮೇಲೆ ಮೂರು ಪ್ರಯತ್ನದಿಂದ ಪಾರಾದ, ಐದು ಗಾಯಗಳಿಂದ ಉಳಿದುಕೊಂಡು, ಅನೇಕ ಯುದ್ಧಗಳಿಂದ ಅತೀವ ಅಪಾಯವಿಲ್ಲದೆ ಹೊರಬಂದ ಕರ್ನಲ್ ಗೆರಿನೆಲ್ಟೋ ಮಾರ್ಕೆಜ್ ಕೂಡ, ಕಾಯುವ ದೌರ್ಜನ್ಯಕ್ಕೆ ಒಪ್ಪಿಸಿಕೊಂಡ ಮತ್ತು ಬಾಡಿಗೆ ಮನೆಯಲ್ಲಿ ಬೆಳಕಿನ ಕೋಲು ಮೂಡಿಸಿದ ಹೊಳಪಲ್ಲ್ಲಿ ಅಮರಾಂತಳನ್ನು ಕುರಿತು ಯೋಚಿಸುತ್ತ ಕರುಣಾಜನಿಕವಾದ ವೃದ್ಧಾಪ್ಯದ ಸೋಲಿನಲ್ಲಿ ಮುಳುಗಿ ಹೋದ. ತಾನು ಸಂಪರ್ಕ ಇಟ್ಟುಕೊಂಡಿದ್ದವರು ವೀರರಲ್ಲಿ ಹಲವರು ಗಣತಂತ್ರದ ಅನಾಮಧೇಯ ಅಧ್ಯಕ್ಷ ಕೊಟ್ಟಿದ್ದ, ಅವನಿಗೆ ಇಷ್ಟವಾದ ಅಲಂಕಾರ ಗುಂಡುಗಳನ್ನು ತಮ್ಮ ಎದೆಯ ಮೇಲೆ ಸಿಕ್ಕಿಸಿಕೊಂಡು, ವೃತ್ತ ಪತ್ರಿಕೆಯೊಂದರಲ್ಲಿ ಅವನ ಪಕ್ಕದಲ್ಲಿ ನಾಚಿಕೆ ಇಲ್ಲದೆ ತಲೆ ಎತ್ತಿಕೊಂಡು ನಿಂತಿದ್ದ ಭಾವಚಿತ್ರ ಪ್ರಕಟವಾಗಿತ್ತು. ಅವನು ಅವರಿಗೆ ಸಿಡಿಮದ್ದಿನಿಂದ ಕಲೆಯಾಗಿ, ಧೂಳು ಹಿಡಿದು ರಕ್ತ ಸಿಕ್ತವಾಗಿದ್ದ ಧ್ವಜವನ್ನು ಅವರ ಶವಪೆಟ್ಟಿಗೆಯಲ್ಲಿ ಇಟ್ಟುಕೊಳ್ಳಲು ಹಿಂತಿರುಗಿಸಿದ್ದ. ಕೆಲವರು, ಹೆಚ್ಚು ಗೌರವಾನ್ವಿತರು, ಸಾರ್ವಜನಿಕ ಅನುಕಂಪದ ಫಲದಿಂದ ಅಂಥ ಕಾಗದ ಬರಬಹುದೆಂದು ಹಸಿವಿನಿಂದ ಸಾಯುತ್ತ, ರೋಷದಿಂದ ಬದುಕುತ್ತ, ವೈಭವದ ಹೇಸಿಗೆಯಲ್ಲಿ ವೃದ್ಧಾಪ್ಯದಲ್ಲಿ ಕೊಳೆಯುತ್ತ ಇನ್ನೂ ಕಾಯುತ್ತಿದ್ದರು. ಇದರಿಂದ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಜೀವನದ ಹಂಗು ತೊರೆದು, ಭ್ರಷ್ಟಾಚಾgದ ಆಳ್ವಿಕೆಯ ಎಲ್ಲ ಗುರುತುಗಳನ್ನು ನಿರ್ನಾಮಮಾಡಿ ಮತ್ತು ವಿದೇಶಿಯರು ಬೆಂಬಲಿಸಿದ ಹಗರಣಗಳನ್ನು ಅಳಿಸಿ ಹಾಕುವ ಹೋರಾಟವನ್ನು ಪ್ರಾರಂಭಿಸಲು ಕರೆದಾಗ, ಕರ್ನಲ್ ಗೆರಿನೆಲ್ಟೋ ಮಾರ್ಕೆಜ್‌ಗೆ ಮರುಕದ ನಡುಕವನ್ನು ತಡೆಹಿಡಿಯುವುದಕ್ಕೆ ಸಾಧ್ಯವಾಗಲಿಲ್ಲ.
ಅವನು, “ಅಯ್ಯೋ, ಅವ್ರೇಲಿಯಾನೋ, ನಿಂಗೆ ವಯಸ್ಸಾಗಿದೆ ಅಂತ ಗೊತ್ತಿತ್ತು. ಆದ್ರೆ ನಂಗೆ ಈಗ ತಿಳೀತಿದೆ. ನೀನು ಕಾಣೋದಿಕ್ಕಿಂತ ಹೆಚ್ಚು ಮುದುಕನಾಗಿದ್ದಿ ಅಂತ” ಎಂದು ನಿಟ್ಟುಸಿರು ಬಿಟ್ಟ.
೧೩
ತನ್ನ ಅಂತಿಮ ವರ್ಷಗಳ ಗೊಂದಲದಲ್ಲಿ ಉರ್ಸುಲಾಗೆ ಹೊಸೆ ಅರ್ಕಾದಿಯೋ ಪೋಪ್ ಪದವಿಯ ವಿದ್ಯಾಭ್ಯಾಸದ ಬಗ್ಗೆ ಗಮನ ಕೊಡುವುದಕ್ಕೆ ಅಗತ್ಯವಾದ ಬಿಡುವಿನ ಸಮಯವಿರಲಿಲ್ಲ. ಅವನು ಸ್ಕೂಲಿಗೆ ಹೋಗಬೇಕಾದ ಸಮಯ ಬಂದೇ ಬಿಟ್ಟಿತು. ಫೆರ್ನಾಂಡಳ ಜಿಗುಟುತನ ಮತ್ತು ಅಮರಾಂತಳ ದ್ವೇಷದ ನಡುವೆ ಅವನು ತನ್ನ ಸಮಯ ಕಳೆಯುತ್ತಿದ್ದ. ಅವನ ಸೋದರಿ ಮೆಮೆ ಅದೇ ಸಮಯಕ್ಕೆ ಕ್ರ್ಯೆಸ್ತ ಸನ್ಯಾಸಿಗಳ ಸ್ಕೂಲಿಗೆ ಕಳಿಸಬೇಕಾದ ವಯಸ್ಸಿನವಳಾದಳು. ಅಲ್ಲಿ ಅವರು ಅವಳನ್ನು ಪಿಯಾನೋ ರೀತಿಯ ವಾದನದಲ್ಲಿ ನಿಪುಣೆಯನ್ನಾಗಿ ಮಾಡುವರಿದ್ದರು. ಮುಖ್ಯ ಬಿಷಪ್ ಆಗಲಿರುವವನ ಅಂತರಾತ್ಮಕ್ಕೆ ಪರಿಣಾಮಕಾರಿಯಾಗಿ ರೂಪುಕೊಡುತ್ತಿರುವುದರ ಬಗ್ಗೆ ಉಂಟಾದ ತೀವ್ರ ಅನುಮಾನದಿಂದ ಹಿಂಸೆಗೊಳಗಾದರೂ, ಉರ್ಸುಲಾ ಅದಕ್ಕೆ ತನ್ನ ಮುದಿತನವನ್ನು ಹಳಿದುಕೊಳ್ಳಲಿಲ್ಲ. ಆದರೆ ತಾನೇ ನಿಜಕ್ಕೂ ಹೇಳಲಾಗದ ಮತ್ತು ಕಾಲಾನುಕ್ರಮದಲ್ಲಿ ಉಂಟಾದ ವಿಘಟನೆಗಳನ್ನು ನಿಂದಿಸಿದಳು. ಅವಳು, “ಹಳೆಯ ಕಾಲದ ಹಾಗೆ ಈಗ ವರ್ಷಗಳು ಉರುಳೋದಿಲ್ಲ” ಎಂದು ಎಲ್ಲವೂ ಕೈಯಿಂದ ಜಾರಿಹೋಗುತ್ತಿರುವ ಭಾವದಿಂದ ಹೇಳುತ್ತಿದ್ದಳು. ಹಿಂದಿನ ಕಾಲದಲ್ಲಿ ಮಕ್ಕಳು ಬೆಳೆಯಲು ಬಹಳ ಕಾಲ ಹಿಡಿಯುತ್ತಿತ್ತು ಎಂದು ಅವಳಿಗೆ ಅನ್ನಿಸುತ್ತಿತ್ತು. ಹಿರಿಯ ಹೊಸೆ ಅರ್ಕಾದಿಯೋ ಜಿಪ್ಸಿಗಳ ಜೊತೆ ಹೊರಟು ಹೋದ ಮೇಲೆ ಮತ್ತು ಹಾವಿನ ಹಾಗೆ ಮೈಗೆಲ್ಲ ಬಣ್ಣ ಹಚ್ಚಿಕೊಂಡು, ಖಗೋಳ ಶಾಸ್ತ್ರಜ್ಞನಂತೆ ಮಾತಾಡುತ್ತ ಹಿಂತಿರುಗುವ ತನಕ, ಅಮರಾಂತ ಹಾಗೂ ಅರ್ಕಾದಿಯೋ ಇಂಡಿಯನ್‌ರ ಭಾಷೆಯನ್ನು ಮರೆತು ಬಿಟ್ಟು ಸ್ಪ್ಯಾನಿಷ್ ಭಾಷೆಯನ್ನು ಕಲಿತುಕೊಳ್ಳುವುದಕ್ಕೆ ಮುಂಚೆ, ಮನೆಯಲ್ಲಿ ನಡೆದ ಸಂಗತಿಗಳನ್ನು ನಡೆದದ್ದನ್ನು ಯಾರೇ ಆಗಲೀ ನೆನಪಿಟ್ಟುಕೊಳ್ಳಬೇಕಾಗಿತ್ತಷ್ಟೆ. ಬಿಸಿಲು ಮತ್ತು ಮಳೆಯಲ್ಲಿ ದಿನಗಳನ್ನು ಬಾದಾಮಿ ಮರದ ಕೆಳಗೆ ನೂಕುತ್ತಿದ್ದ ಪಾಪದ ಹೊಸೆ ಅರ್ಕಾದಿಯೋ ಬ್ಯುಂದಿಯಾನನ್ನು ಅವನು ಸತ್ತ ಮೇಲೆ ಶೋಕಾಚರಣೆಗೆ ಬೇಕಾದ ಸಮಯವನ್ನು ಮತ್ತು ಸಾಯುವ ಸ್ಥಿತಿಯಲ್ಲಿದ್ದ ಹೊಸೆ ಅವ್ರೇಲಿಯಾನೋ ಬ್ಯುಂದಿಯಾನನ್ನು ಕರೆತರುವ ತನಕ ಬೇಕಾದ ಸಮಯವನ್ನು ಮಾತ್ರ ನೆನಪಿಸಿಕೊಳ್ಳಬೇಕಾಗಿತ್ತು. ಅಷ್ಟೊಂದು ಯುದ್ಧಗಳನ್ನು ಮಾಡಿದ ಮತ್ತು ಅಷ್ಟೊಂದು ಯಾತನೆಗೆ ಗುರಿಯಾದ ಅವನಿಗೆ ಇನ್ನೂ ಐವತ್ತು ವರ್ಷವಾಗಿರಲಿಲ್ಲ. ಬೇರೆ ಕಾಲದಲ್ಲಿ ಇಡೀ ದಿನ ಮಾಂಸದ ತಿನಿಸನ್ನು ಮಾಡುತ್ತಿದ್ದ ಅವಳಿಗೆ ಮಕ್ಕಳನ್ನು ನೋಡಿಕೊಳ್ಳಲು ಅಲ್ಲದೆ ಅವರ ಕಣ್ಣುಗಳಲ್ಲಿ ಬಿಳಿ ಪಿಸಿರಿದ್ದರೆ ಕ್ಯಾಸ್ಟರ್ ಎಣ್ಣೆ ಕುಡಿಸಬೇಕೆಂದು ತಿಳಿಯುವಷ್ಟು ವ್ಯವಧಾನವಿರುತ್ತಿತ್ತು. ಈಗ ಮಾಡುವುದಕ್ಕೆ ಏನೂ ಇಲ್ಲದೆ ಬೆಳಿಗ್ಗೆಯಿಂದ ಸಂಜೆಯ ತನಕ ಹೊಸೆ ಅರ್ಕಾದಿಯೋನನ್ನು ಸೊಂಟದ ಮೇಲೆ ಏರಿಸಿಕೊಂಡು ತಿರುಗಾಡುತ್ತಿದ್ದರಿಂದ ಆ ಕೆಲಸವನ್ನೇ ಅರ್ಧಂಬರ್ಧ ಮಾಡುವಂತೆ ಕಾಣುತ್ತಿತ್ತು. ನಿಜವಾದ ಸಂಗತಿಯೆಂದರೆ ತನಗೆ ವಯಸ್ಸೆಷ್ಟು ಎಂದು ಲೆಕ್ಕ ತಪ್ಪಿದ ಮೇಲೆ ಅವಳು ವಯಸ್ಸಾಗುವುದನ್ನು ನಿಗ್ರಹಿಸಿದ್ದಳು ಮತ್ತು ಎಲ್ಲದರಲ್ಲೂ ಮೂಗು ತೂರಿಸುತ್ತ ಎಲ್ಲರಿಗೂ ಕಿರಿಕಿರಿ ಉಂಟುಮಾಡುತ್ತಿದ್ದಳು. ಅವಳು ಅಪರಿಚಿತರಿಗೆ, “ನೀವೇನಾದರೂ ಯುದ್ಧದ ಕಾಲದಲ್ಲಿ ಸಂತ ಜೋಸಫ್‌ನ ವಿಗ್ರಹವನ್ನು ಮಳೆಗಾಲ ಕಳೆಯುವ ತನಕ ಇಟ್ಟುಕೊಳ್ಳಲು ಕೊಟ್ಟಿದ್ದೀರಾ” ಎಂದು ಕೇಳಿ ಗಲಿಬಿಲಿ ಉಂಟುಮಾಡುತ್ತಿದ್ದಳು. ಅವಳ ಕಣ್ಣಿನ ದೃಷ್ಟಿ ಕ್ಷೀಣಿಸತೊಡಗಿದ್ದು ಯಾವಾಗಿನಿಂದ ಎಂದು ಯಾರಿಗೂ ತಿಳಿದಿರಲಿಲ್ಲ. ಅವಳ ಕೊನೆಯ ದಿನಗಳಲ್ಲಿ ಹಾಸಿಗೆಯಿಂದ ಏಳಲಾಗದ ಸ್ಥಿತಿಯಲ್ಲೂ ಅವಳು ಮುಪ್ಪಡರಿ ಕುಗ್ಗಿದಳೇ ಹೊರತು ಕುರುಡಿಯೆಂದು ಯಾರೂ ಕಂಡು ಹಿಡಿಯಲಿಲ್ಲ. ಅವಳು ಹೊಸೆ ಅರ್ಕಾದಿಯೋ ಹುಟ್ಟುವ ಮೊದಲೇ ಅದನ್ನು ಗಮನಿಸಿದ್ದಳು. ಪ್ರಾರಂಭದಲ್ಲಿ ಅವಳು ಅದನ್ನು ಹೀಗೆ ಬಂದು ಹಾಗೆ ಹೋಗುವ ಕೊರತೆ ಎಂದುಕೊಂಡಿದ್ದಳು ಮತ್ತು ಗುಟ್ಟಾಗಿ ಎಲುಬಿನ ನೆಣದ ಕಷಾಯ ತೆಗೆದುಕೊಂಡು ಕಣ್ಣಿಗೆ ಜೇನು ತುಪ್ಪ ಹಾಕಿಕೊಳ್ಳುತ್ತಿದ್ದಳು. ಆದರೆ ಬಹಳ ಬೇಗನೆ ಅವಳಿಗೆ ತಾನು ಹಿಂತಿರುಗಿಬಾರದಂಥ ಕತ್ತಲ ಕೂಪದಲ್ಲಿ ಕುಸಿಯುತ್ತಿದ್ದೇನೆ ಎಂದು ಮನವರಿಕೆಯಾಯಿತು. ಅದು ಯಾವ ಮಟ್ಟವೆಂದರೆ ಅವಳಿಗೆ ಬೆಳಗುವ ಎಲೆಕ್ಟ್ರಿಕ್ ಬಲ್ಬ್ ಬಗ್ಗೆ ಸ್ಪಷ್ಟ ಅರಿವಿರಲಿಲ್ಲ. ಬಲ್ಬುಗಳನ್ನು ಬೆಳಗಿಸಿದಾಗ ಅದನ್ನು ಹೊತ್ತಿಸಿದ್ದು ಮಾತ್ರ ಅವಳ ಅರಿವಿಗೆ ಬರುತ್ತಿತ್ತು. ಅವಳು ಅದರ ಬಗ್ಗೆ ಯಾರಿಗೂ ಹೇಳಲಿಲ್ಲ. ಏಕೆಂದರೆ ಅವಳು ಉಪಯೋಗಕ್ಕೆ ಬಾರದವಳೆಂದು ಸಾರ್ವಜನಿಕವಾಗಿ ಗುರುತಿಸಲ್ಪಡುತ್ತಿದ್ದಳು. ಅವಳು ವಸ್ತುಗಳ ಅಂತರ ಮತ್ತು ಜನರ ಧ್ವನಿಗಳ ಬಗ್ಗೆ ಮೌನವಾಗಿ ಗ್ರಹಿಸತೊಡಗಿದಳು. ಇದರಿಂದ ನೆರಳುಗಳಾಗಿಸುವ ಕ್ಯಾಟರಾಕ್ಸ್‌ನಿಂದ ನೋಡಲು ಸಾಧ್ಯವಿಲ್ಲದ್ದನ್ನು ತನ್ನ ನೆನಪಿನಿಂದ ಅವಳು ನೋಡುತ್ತಿದ್ದಳು. ಅನಂತರ ತಾನು ನಿರೀಕ್ಷಿಸಿರದ ವಾಸನೆಗಳ ಸಹಾಯದಿಂದ ನೆರಳುಗಳಲ್ಲಿ ಗಾತ್ರ ಮತ್ತು ಬಣ್ಣಕ್ಕೂ ಮಿಗಿಲಾಗಿ ನಿರ್ಧರಿಸುವ ಸಾಮರ್ಥ್ಯವಿರುವುದನ್ನು ಕಂಡುಕೊಂಡಳು. ಇದು ಅವಳಿಗೆ ಕೊನೆಗೆ ಸೋಲನ್ನು ಒಪ್ಪಿಕೊಳ್ಳುವುದನ್ನು ತಪ್ಪಿಸಿತು. ಕತ್ತಲಲ್ಲೂ ಸಹ ಅವಳಿಗೆ ಸೂಜಿಗೆ ದಾರ ಪೋಣಿಸಲು, ಗುಂಡಿ ಹೊಲಿಯಲು ಸಾಧ್ಯವಾಗಿತ್ತು ಮತ್ತು ಹಾಲು ಯಾವಾಗ ಉಕ್ಕುತ್ತೆಂದು ತಿಳಿಯುತ್ತಿತ್ತು ಅವಳಿಗೆ ಪ್ರತಿಯೊಂದು ವಸ್ತು ಇರುವ ಸ್ಥಳ ಎಷ್ಟೊಂದು ಖಚಿತವಾಗಿತ್ತೆಂದರೆ ಕೆಲವು ಸಲ ತಾನು ಕುರುಡಿ ಎನ್ನುವುದೂ ಕೂಡ ಮರೆತು ಹೋಗುತ್ತಿತ್ತು. ಒಂದು ಸಲ ಫೆರ್ನಾಂಡ ತನ್ನ ಮದುವೆಯ ಉಂಗುರ ಕಳೆದು ಹೋಯಿತೆಂದು ಮನೆಯವರನ್ನೆಲ್ಲ ಬೇಸರಪಡಿಸಿದ್ದಳು. ಅದನ್ನು ಉರ್ಸುಲಾ ಮಕ್ಕಳ ಬೆಡ್‌ರೂಮಿನ ಶೆಲ್ಫ್‌ನಲ್ಲಿ ಹುಡುಕಿದಳು. ಉಳಿದವರೆಲ್ಲ ಸುಮ್ಮನೆ ಅತ್ತಿತ್ತ ಓಡಾಡುತ್ತಿರುವಾಗ ಅವಳು ಅವರನ್ನು ತನ್ನ ನಾಲ್ಕು ಇಂದ್ರಿಯಗಳಿಂದ ಗಮನಿಸುತ್ತಿರುವುದನ್ನು ಅವರು ವಿಶೇಷವಾಗಿ ತೆಗೆದುಕೊಂಡಿರಲಿಲ್ಲ. ಸ್ವಲ್ಪ ಸಮಯದ ನಂತರ ಮನೆಯಲ್ಲಿನ ಪ್ರತಿಯೊಬ್ಬರೂ ಅವರಿಗೇ ತಿಳಿಯದೆ ಹಾಗೆ ಒಬ್ಬರು ಅನುಸರಿಸಿದ್ದನ್ನೇ, ಮಾಡಿದ್ದನ್ನೇ ಪ್ರತಿ ದಿನ ಇತರರೂ ಅದೇ ರೀತಿ ಅನುಸರಿಸುತ್ತಿದ್ದರು, ಮಾಡುತ್ತಿದ್ದರು. ಅಲ್ಲದೆ ಹೆಚ್ಚು ಕಡಿಮೆ ಅದೇ ಮಾತುಗಳನ್ನು ಅದೇ ವೇಳೆಯಲ್ಲಿ ಆಡುತ್ತಿದ್ದರು. ಅವರು ದಿನನಿತ್ಯದ ಕ್ರಮವನ್ನು ಬದಲಾಯಿಸಿದಾಗ ಮಾತ್ರ ಏನಾದರೊಂದನ್ನು ಕಳೆದುಕೊಳ್ಳುತ್ತಿದ್ದರು. ಆದ್ದರಿಂದ ಅವಳಿಗೆ ಉಂಗುರ ಕಳೆದುಕೊಂಡಿದ್ದರಿಂದ ಫೆರ್ನಾಂಡ ಅತಿಯಾಗಿ ತಲೆಕೆಡಿಸಿಕೊಂಡಿದ್ದಾಳೆಂದು ತಿಳಿದಾಗ, ಆ ದಿನ ಅವಳು ಮಾಡಿದ ಒಂದೇ ವ್ಯತ್ಯಾಸದ ಕೆಲಸವೆಂದರೆ ಮೆಮೆ ತನ್ನ ಹಾಸಿಗೆಯಲ್ಲಿ ಹಿಂದಿನ ದಿನ ರಾತ್ರಿ ತಿಗಣೆ ಕಂಡಿದ್ದಕ್ಕಾಗಿ ಅದನ್ನು ಬಿಸಿಲಲ್ಲಿ ಇರಿಸಿದ್ದು ಎಂದು ಉರ್ಸುಲಾ ನೆನಪಿಸಿಕೊಂಡಳು. ಹೊಗೆ ಹಾಕುವ ಸಮಯದಲ್ಲಿ ಮಕ್ಕಳು ಇದ್ದದ್ದರಿಂದ ಫೆರ್ನಾಂಡ ಅವಕ್ಕೆ ಸಿಗಲಾರದ ಒಂದೇ ಜಾಗದಲ್ಲಿ ಅದನ್ನಿಟ್ಟಿದ್ದಳು. ಅದು ಶೆಲ್ಫ್ ಆಗಿತ್ತು. ಅದಕ್ಕೆ ಪ್ರತಿಯಾಗಿ ಫೆರ್ನಾಂಡ ದಿನಚರಿಯ ಮಾರ್ಗವನ್ನು ಅನುಸರಿಸುತ್ತ ವೃಥಾ ಹುಡುಕಿದ್ದಳು. ಅವಳಿಗೆ ಕಳೆದು ಹೋದ ವಸ್ತುಗಳು ದಿನನಿತ್ಯದ ಅಭ್ಯಾಸಕ್ಕಿಂತ ಬೇರೆಯಾಗಿರುತ್ತದೆ ಮತ್ತು ಅದರಿಂದಾಗಿ ಅವುಗಳನ್ನು ಹುಡುಕುವುದು ಕಷ್ಟ ಎನ್ನುವುದು ತಿಳಿದಿರಲಿಲ್ಲ.
ಹೊಸೆ ಅರ್ಕಾದಿಯೋವನ್ನು ನೋಡಿಕೊಳ್ಳುವ ಕೆಲಸದಿಂದ ಮನೆಯಲ್ಲಿನ ಸಣ್ಣ ಬದಲಾವಣೆಯೂ ಉರ್ಸುಲಾಗೆ ತಿಳಿಯುತ್ತಿತ್ತು. ಅಮರಾಂತ ಬೆಡ್‌ರೂಮಿನಲ್ಲಿ ಸಂತರ ಪ್ರತಿಮೆಗಳಿಗೆ ಉಡುಪು ಬದಲಾಯಿಸುತ್ತಿದ್ದಾಳೆಂದು ಗೊತ್ತಾದಾಗ ಆ ಹುಡುಗನಿಗೆ ಬಣ್ಣಗಳಲ್ಲಿನ ವ್ಯತ್ಯಾಸ ತೋರಿಸುವ ನೆಪ ಹೂಡಿದಳು.
ಅವಳು, “ಈಗ್ನೋಡೋಣ, ಆರ್ಚೆಂಜಲ್ ರ್‍ಯಾಫಲ್ ಯಾವ ಬಣ್ಣದ ಬಟ್ಟೆ ಹಾಕ್ಕೊಂಡಿದಾನೆ ಹೇಳು ಮತ್ತೆ?” ಎಂದು ಅವನನ್ನು ಕೇಳುತ್ತಿದ್ದಳು.
ಈ ರೀತಿಯಲ್ಲಿ ಅವಳ ಕಣ್ಣುಗಳಿಂದ ತಿಳಿಯಲಾಗದ ವಿಷಯವನ್ನು ಆ ಹುಡುಗ ತಿಳಿಸುತ್ತಿದ್ದ. ಅವನು ಸ್ಕೂಲಿಗೆ ಹೊರಟು ಹೋಗುವುದಕ್ಕೆ ಬಹಳ ಕಾಲ ಮುಂಚೆಯೇ ಉರ್ಸುಲಾಗೆ ಸಂತರ ಬಟ್ಟೆಗಳ ಬಣ್ಣವನ್ನು ಅವುಗಳ ನುಣುಪಿನಿಂದಲೇ ಪತ್ತೆ ಹಚ್ಚುವುದಕ್ಕೆ ಸಾಧ್ಯವಾಗಿತ್ತು. ಕೆಲವು ಸಲ ಅನಿರೀಕ್ಷಿತ ಅಪಘಾತಗಳಾಗುತ್ತಿದ್ದವು. ಒಂದು ಸಲ ಬೆಗೋನಿಯಾ ಗಿಡಗಳಿದ್ದ ಅಂಗಳದಲ್ಲಿ ಅಮರಾಂತ ಕಸೂತಿ ಹಾಕುತ್ತ ಕುಳಿತಿದ್ದಾಗ ಉರ್ಸುಲಾ ಅವಳಿಗೆ ಡಿಕ್ಕಿ ಹೊಡೆದಳು.
ಅಮರಾಂತ, “ಅಯ್ಯೋ ದೇವರೆ, ನೀನೇನು ಮಾಡ್ದೆ ನೋಡು” ಎಂದು ರೇಗಿದಳು. ಉರ್ಸುಲಾ, “ಅದು ನಿನ್ನ ತಪ್ಪು. ನೀನು ಎಲ್ಲಿ ಕೂತಿರ್‍ಬೇಕೋ ಅಲ್ಲಿ ಕೂತಿಲ್ಲ” ಎಂದಳು.
ಅವಳಿಗೆ ಖಾತ್ರಿಯಿತ್ತು. ಆದರೆ ವರ್ಷ ಉರುಳುತ್ತಿದ್ದಂತೆ ಗೊತ್ತಾಗದ ರೀತಿಯಲ್ಲಿ ಸೂರ್ಯ ಸ್ಥಳ ಬದಲಾವಣೆ ಮಾಡುತ್ತಾನೆಂದು ಯಾರೂ ಗಮನಿಸದಿದ್ದ ಅಂ, ಆ ದಿನ ಅವಳಿಗೆ ಅರಿವಾಯಿತು. ಅಲ್ಲದೆ ಅಂಗಳದಲ್ಲಿ ಕುಳಿತುಕೊಳ್ಳುವವರು ತಮಗೇ ತಿಳಿಯದ ಹಾಗೆ ಕೊಂಚ ಕೊಂಚವಾಗಿ ಜಾಗ ಬದಲಾಯಿಸಬೇಕಾಗಿತ್ತು. ಅದಾದ ನಂತರ ಉರ್ಸುಲಾ, ಅಮರಾಂತ ಎಲ್ಲಿ ಕುಳಿತುಕೊಳ್ಳುತ್ತಾಳೆಂದು ತಿಳಿದುಕೊಳ್ಳಲು ದಿನಾಂಕಗಳನ್ನು ನೆನಪಿಟ್ಟುಕೊಳ್ಳಬೇಕಾಗಿತ್ತು. ಅವಳ ನಡುಗುವ ಕೈಗಳು ಹೆಚ್ಚು ಹೆಚ್ಚು ಕಾಣಿಸುವಂತಿದ್ದರೂ ಮತ್ತು ಕಾಲಿನ ಭಾರ ಅತಿಯಾಗಿದ್ದರೂ ಅವಳ ಸಣ್ಣ ಆಕೃತಿ ಅನೇಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಅವಳು ಹೆಚ್ಚು ಕಡಿಮೆ ಇಡೀ ಮನೆಯ ಭಾರವನ್ನು ತನ್ನ ಭುಜದ ಮೇಲೆ ಹೊತ್ತುಕೊಂಡ ರೀತಿಯಲ್ಲಿಯೇ ಇದ್ದಳು. ಆದರೂ ಸಹ ಅವಳ ಭೇದಿಸಲಾಗದ ಮುದಿತನದ ಏಕಾಂತತೆಯಲ್ಲಿ ಸಂಸಾರದ ತೀರ ನಿಕೃಷ್ಟ ಘಟನೆಗಳನ್ನು ವಿಶ್ಲೇಷಿಸುತ್ತ, ತನ್ನ ಹಿಂದಿನ ತರಾತುರಿಯ ಜೀವನ ಕಾಣದಂತೆ ಮಾಡಿದ್ದ ಸತ್ಯಗಳನ್ನು, ಮೊದಲ ಬಾರಿಗೆ ಸ್ವಷ್ಟವಾಗಿ ಕಾಣುವಷ್ಟು ಪರಿeನ ಅವಳಿಗಿತ್ತು. ಸುಮಾರು ಅದೇ ಸಮಯಕ್ಕೆ ಅವರು ಹೊಸೆ ಅರ್ಕಾದಿಯೋನನ್ನು ಸ್ಕೂಲಿಗೆ ಕಳಿಸಲು ಸಿದ್ಧರಾಗುತ್ತಿದ್ದಂತೆ, ಅವಳು ಆಗಲೇ ಮಕೋಂದೋ ಸ್ಥಾಪನೆಯಾದ ನಂತರ ಮನೆಯಲ್ಲಿ ಜರುಗಿದ ಘಟನೆಗಳ ವಿವರಗಳ ಸಾರಾಂಶವನ್ನು ನೆನಪುಮಾಡಿಕೊಳ್ಳುತ್ತಿದ್ದಳು ಮತ್ತು ತಲೆಮಾರಿನವರ ಬಗ್ಗೆ ಇದ್ದ ಅಭಿಪ್ರಾಯವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಳು. ಅವಳು ಮೊದಲು ತಿಳಿದಂತೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಯುದ್ಧದ ಕಾರಣ ನಿರಾಶನಾಗಿ ಮನೆಯ ಬಗ್ಗೆ ಪ್ರೀತಿ ಕಳೆದುಕೊಳ್ಳಲಿಲ್ಲ. ಅವನು ಯಾವಾಗಲೂ ಯಾರನ್ನೂ, ತನ್ನ ಹೆಂಡತಿ ರೆಮಿದಿಯೋಸ್‌ಳನ್ನು ಅಥವಾ ಅವನ ಜೀವನದಲ್ಲಿ ಬಂದು ಹೋದ ಲೆಕ್ಕವಿಲ್ಲದಷ್ಟು ಒಂದು ರಾತ್ರಿಯ ಹೆಂಗಸರನ್ನೂ, ಅಷ್ಟೇಕೆ ತನ್ನ ಮಕ್ಕಳನ್ನೂ ಸಹ ಪ್ರೀತಿಸಲಿಲ್ಲ ಎನ್ನುವುದು ಅವಳಿಗೆ ಅರಿವಾಯಿತು. ಅವನು ಎಲ್ಲರೂ ತಿಳಿದುಕೊಂಡಿರುವಂತೆ ಅಷ್ಟೊಂದು ಯುದ್ಧಗಳನ್ನು ಆದರ್ಶಕ್ಕಾಗಿ ಮಾಡಲಿಲ್ಲ ಅಥವಾ ಕೆಲವೊಂದು ಗೆಲವುಗಳನ್ನು ದಣಿವಿನಿಂದ ಬಿಟ್ಟುಕೊಡಲಿಲ್ಲ. ಆದರೆ ಅವನು ಗೆದ್ದದ್ದು ಮತ್ತು ಸೋತದ್ದು ಒಂದೇ ಕಾರಣಕ್ಕಾಗಿ: ಅಪ್ಪಟವಾದ ಮತ್ತು ಪಾಪದ ಪ್ರತಿಷ್ಠೆಗಾಗಿ ಎಂದು ತೋರಿತು. ಯಾರಿಗಾಗಿ ತನ್ನ ಜೀವವನ್ನೇ ಕೊಡಲು ತಯಾರಾಗಿದ್ದಳೋ, ಆ ಮಗ ಪ್ರೀತಿ ಮಾಡದಂಥ ಮನುಷ್ಯ ಎಂಬ ನಿರ್ಧಾರಕ್ಕೆ ಬಂದಳು. ಅದೊಂದು ರಾತ್ರಿ ಅವನಿನ್ನೂ ಹೊಟ್ಟೆಯಲ್ಲಿ ಇರುವಾಗಲೇ ಅಳುತ್ತಿರುವುದು ಕೇಳಿಸಿತ್ತು. ಅದು ಎಷ್ಟು ಖಚಿತವಾದ ರೋದನವಾಗಿತ್ತೆಂದರೆ ಪಕ್ಕದಲ್ಲಿದ್ದ ಹೊಸೆ ಅರ್ಕಾದಿಯೋ ಬ್ಯುಂದಿಯಾ ಎಚ್ಚರಗೊಂಡ ಮತ್ತು ತನ್ನ ಮಗ ಧ್ವನಿಗಾರುಡಿಗನಾಗುತ್ತಾನೆಂದು ಸಂತೋಷಗೊಂಡ. ಬೇರೆಯವರು ಅವನೊಬ್ಬ ಭವಿಷ್ಯ ಹೇಳುವವನಾಗುತ್ತಾನೆ ಎಂದು ಹೇಳಿದರು. ಅದಕ್ಕೆ ವ್ಯತಿರಿಕ್ತವಾಗಿ ಅವಳು ದೀರ್ಘವಾದ ಮುಲುಗುವಿಕೆ ಖಚಿತವಾಗಿ ಹಂದಿಯ ಬಾಲ ಇರುವುದರ ಪ್ರಾಥಮಿಕ ಸೂಚನೆ ಎನ್ನುವುದರಿಂದ ನಡುಗಿದಳು. ಅಲ್ಲದೆ ಹೊಟ್ಟೆಯಲ್ಲಿಯೇ ಮಗು ಸತ್ತು ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದಳು. ಆದರೆ ಈಗ ಇಳಿವಯಸ್ಸಿನ ಸರಳತೆಯಲ್ಲಿ ಅವಳು ತಾಯಂದಿರ ಗರ್ಭದಲ್ಲಿರುವ ಮಕ್ಕಳ ಅಳು ಧ್ವನಿಗಾರುಡಿಗತನವನ್ನು ಅಥವಾ ಭವಿಷ್ಯಕಾರನಾಗುವುದನ್ನು ಸೂಚಿಸುವುದಿಲ್ಲ: ಅಂಥವು ಪ್ರೀತಿ ಮಾಡಲು ಅಸಮರ್ಥವಾಗಿರುತ್ತವೆ ಎಂದು ಎಷ್ಟೋ ಸಲ ಹೇಳಿದ್ದಳು. ತನ್ನ ಮಗನ ಬಗ್ಗೆ ಇದ್ದ ಗೌರವ ಕಡಿಮೆಯಾದ್ದರಿಂದ ಅವಳಿಗೆ ಒಂದೇ ಸಲಕ್ಕೆ ಅವನ ಮೇಲೆ ಮೀಸಲಾಗಿದ್ದ ಅಂತ:ಕರಣವೆಲ್ಲ ತುಂಬಿ ಬಂತು. ತನ್ನ ಹೃದಯದ ಕಠೋರತೆಯಿಂದ ಭಯ ಮೂಡಿಸಿ, ಒಂದೇ ನಿಟ್ಟಿನ ನಿಷ್ಠುರದಿಂದ ಅಹಿತವೆನಿಸಿದ್ದ ಅಮರಾಂತ ಅಂತಿಮ ವಿಶ್ಲೇಷಣೆಯಲ್ಲಿ ಎಂದೂ ಇರದಂಥ ಸೂಕ್ಷ್ಮವಾದ ಹೆಂಗಸೆಂದು ಸ್ಪಷ್ಟವಾಯಿತು ಮತ್ತು ಎಲ್ಲರೂ ತಿಳಿದಂತೆ ನ್ಯಾಯವಲ್ಲದ ಚಿತ್ರಹಿಂಸೆಗೆ ಪಿಯತ್ರೋ ಕ್ರೆಸ್ಪಿಯನ್ನು ಅವನ ಮೇಲಿನ ಸೇಡಿಗೆ ಗುರಿಪಡಿಸಿದ್ದಲ್ಲ ಹಾಗೂ ಎಲ್ಲರೂ ತಿಳಿದಂತೆ ಕರ್ನಲ್ ಗೆರಿನೆಲ್ಡೋ ಮಾರ್ಕೆಜ್‌ನ ಜೀವನವನ್ನು ವಿಕ್ಷಿಪ್ತಗೊಳಿಸಿ, ಹುತಾತ್ಮನಾಗುವಂತೆ ಅವನ ಮೇಲಿನ ನಿಷ್ಠುರತೆ ನಿರ್ಧರಿಸಿದ್ದಲ್ಲ ಎನ್ನುವ ಸಂಗತಿ. ಆದರೆ ಇವೆರಡೂ ಕ್ರಿಯೆಗಳಲ್ಲಿ ಅಳತೆ ಮೀರಿದ ಪ್ರೀತಿ ಮತ್ತು ಗೆಲ್ಲಲಾಗದ ಹೇಡಿತನಗಳ ನಡುವಿನ ಸಂಘರ್ಷವೇ ಕಾರಣವಾದದ್ದಲ್ಲದೆ ಅಮರಾಂತ ಯಾವಾಗಲೂ ತನ್ನ ಹೃದಯದಲ್ಲಿ ಮೂಡಿಸಿಕೊಂಡಿದ್ದ ಅಸಂಬದ್ಧ ಭಯವೇ ಕೊನೆಗೆ ಗೆದ್ದದ್ದು ಎಂದು ಅವಳಿಗೆ ಅರ್ಥವಾಯಿತು. ಅದೇ ಸಮಯದಲ್ಲಿ ಉರ್ಸುಲಾ ರೆಬೇಕಳ ಬಗ್ಗೆ ಮಾತನಾಡುತ್ತ ಅದರ ಜೊತೆಗೆ ಕಾಲಮೀರಿದ ಪಶ್ಚಾತ್ತಾಪದಿಂದ ಮತ್ತು ದಿಢೀರ್ ಮೆಚ್ಚುಗೆಯಿಂದ ಉಕ್ಕಿ ಬಂದ ಪ್ರೀತಿಯನ್ನು ನೆನಪಿಸಿಕೊಳ್ಳುತ್ತ, ತನ್ನ ಹಾಲು ಕುಡಿಯದೆ ಕೇವಲ ಆ ನೆಲದ ಮಣ್ಣು ಮತ್ತು ಗೋಡೆಯ ಹೆಕ್ಕಳ ತಿನ್ನುತ್ತ, ರಕ್ತನಾಳಗಳಲ್ಲಿ ತನ್ನದೇ ರಕ್ತ ಹರಿಯದೆ, ಗೋರಿಯಲ್ಲಿ ಟೆ;ಳಗುಟ್ಟುವ ಮೂಳೆಗಳ ಅಪರಿಚಿತರ ರಕ್ತ ಹರಿಯಲು ಬಿಟ್ಟಿರುವುದನ್ನು ಅರ್ಥಮಾಡಿಕೊಳ್ಳುತ್ತಿದ್ದಳು. ಅಶಾಂತವಾದ ಹೃದಯ ಮತ್ತು ರೋಷ ಭರಿತ ತೀಕ್ಷ್ಣತೆ ಹೊಂದಿದ, ಕಿಂಚಿತ್ ಕದಲದ ಧೈರ್ಯದ ರೆಬೇಕ ಒಬ್ಬಳೇ ತನ್ನೊಂದಿಗಿರಲಿ ಎಂದು ಉರ್ಸುಲಾ ಬಯಸಿದಳು.
ಗೋಡೆಗಳ ಮೇಲೆ ಕೈ ಆಡಿಸುತ್ತ, “ರೆಬೇಕ ನಿಂಗೆ ನಾವೆಷ್ಟು ಅನ್ಯಾಯ ಮಾಡಿದ್ದೀವಿ” ಎಂದು ಅವಳು ಹೇಳುತ್ತಿದ್ದಳು.
ಅವಳು ವಿಶೇಷವಾಗಿ ಆರ್ಚೆಂಜಲ್ ಗಾಬ್ರಿಯಲ್‌ನಂತೆ ಬಲಗೈ ಮೇಲೆತ್ತಿಕೊಂಡು ಓಡಾಡಲು ಶುರು ಮಾಡಿದಾಗ ಮನೆಯವರು ಅವಳ ಮನಸ್ಸು ಎಲ್ಲೆಲ್ಲೋ ತಿರುಗಾಡುತ್ತಿದೆ ಎಂದು ತಿಳಿದುಕೊಂಡರು. ಆದರೆ ಫೆರ್ನಾಂಡಳಿಗೆ ಆ ತಿರುಗಾಟದ ನೆರಳುಗಳಲ್ಲಿ, ಉರ್ಸುಲಾ ಮನೆಯಲ್ಲಿ ಕಳೆದ ವರ್ಷ ಮಾಡಿದ ಖರ್ಚನ್ನು ಯಾವ ಅನುಮಾನವೂ ಇಲ್ಲದೆ ಹೇಳುತ್ತಿದ್ದರಿಂದ, ಬುದ್ಧಿ ತೀಕ್ಷ್ಣವಾಗಿದೆ ಎಂದು ತಿಳಿದುಕೊಂಡಳು. ಒಂದು ದಿನ ತನ್ನ ತಾಯಿ ಪಾತ್ರೆಯಲ್ಲಿದ್ದ ರಸವನ್ನು ಕಲಕುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ತಾನು ಕೇಳಿಸಿಕೊಳ್ಳುತ್ತಿದ್ದೇನೆಂದು ತಿಳಿಯದೆ ಹೊಸೆ ಅರ್ಕಾದಿಯೋ ಪ್ರಪಂಚದ ಸುತ್ತ ಅರವತ್ತು ನಾಲ್ಕು ಬಾರಿ ಸುತ್ತುವ ಮುಂಚೆ, ಮೊದಲ ಬಾರಿಗೆ ಬಂದ ಜಿಪ್ಸಿಗಳಿಂದ ಕೊಂಡುಕೊಂಡಿದ್ದ ಕಾಳು ಪುಡಿ ಮಾಡುವ ಗ್ರೈಂಡರ್ ಇನ್ನೂ ಪಿಲರ್ ಟೆರ್‍ನೆರಾಳ ಮನೆಯಲ್ಲಿ ಇದೆ ಎಂದು ಹೇಳಿದ್ದನ್ನು ಅಮರಾಂತ ಕೇಳಿದಾಗ, ಅವಳಿಗೂ ಇದೇ ರೀತಿಯ ಆಲೋಚನೆ ಬಂತು. ಸುಮಾರು ನೂರು ವರ್ಷವಾಗಿದ್ದು, ಹಿಂದೊಮ್ಮೆ ಬಾತುಕೋಳಿಗಳಿಗೆ ತನ್ನ ನಗುವಿನಿಂದ ಹೆದರಿಕೆ ಹುಟ್ಟುವಂತೆ, ಈಗ ಮಕ್ಕಳಿಗೆ ಹೆದರಿಕೆ ಉಂಟುಮಾಡುವಷ್ಟು ದಪ್ಪಗಿದ್ದರೂ, ಆರೋಗ್ಯ ಮತ್ತು ಲವಲವಿಕೆಯಿಂದ ಇದ್ದ ಪಿಲರ್ ಟೆರ್‍ನೆರಾಳಿಗೂ ಉರ್ಸುಲಾ ಹೇಳಿದ್ದು ಸರಿ ಎಂದು ತೋರಿತು. ಏಕೆಂದರೆ ಜಾಗೃತವಾಗಿರುವ ಮುದಿತನ, ಕಾರ್ಡುಗಳಿಗಿಂತ ಪರಿಣಾಮಕಾರಿ ಆಗಿರಬಹುದೆಂದು ಅವಳಿಗೆ ಅನುಭವ ತಿಳಿಸಲು ಪ್ರಾರಂಭಿಸಿತ್ತು.
ಉರ್ಸುಲಾಗೆ ಹೊಸೆ ಅರ್ಕಾದಿಯೋನನ್ನು ನೋಡಿಕೊಳ್ಳುವುದಕ್ಕೆ ತನಗೆ ಬೇಕಾಗುವಷ್ಟು ಸಮಯ ಸಿಗುವುದಿಲ್ಲವೆಂದು ಅರಿವಾದಾಗ ತಳಮಳಗೊಂಡಳು. ಅವಳು ತನ್ನ ಅಂತ:ದೃಷ್ಟಿಯಿಂದ ಸ್ಪಷ್ಟವಾಗಿ ತಿಳಿಯುತ್ತಿದ್ದ ವಿಷಯಗಳ ಬಗ್ಗೆ ತಪ್ಪು ಮಾಡಲು ಪ್ರಾರಂಭಿಸಿದಳು. ಒಂದು ದಿನ ಅವಳು ಪನ್ನೀರು ಎಂದುಕೊಂಡು ಬಾಟಲಿಯಲ್ಲಿದ್ದ ಇಂಕನ್ನು ಹುಡುಗನ ತಲೆಯ ಮೇಲೆ ಸುರಿದಳು. ಪ್ರತಿಯೊಂದರಲ್ಲೂ ಭಾಗಿಯಾಗಬೇಕೆನ್ನುವ ಅವಳ ಒತ್ತಾಯದಿಂದ ಅವಳು ಎಷ್ಟು ಎಡತಾಕುತ್ತಿದ್ದಳೆಂದರೆ ಅದರಿಂದ ಉಂಟಾಗುತ್ತಿದ್ದ ನಗೆಪಾಟಲಿಗೆ ಬೇಸರಗೊಳ್ಳುತ್ತಿದ್ದಳು ಮತ್ತು ಅವಳು ನೆರಳುಗಳು ಉಂಟುಮಾಡುತ್ತಿದ್ದ ಗೋಜಲನ್ನು ತೊಡೆದು ಹಾಕಲು ಪ್ರಯತ್ನಿಸಿದಳು. ಆಗ ಅವಳಿಗೆ, ತನ್ನ ವಿಕಾರ ತಾನು ಜೀರ್ಣಗೊಂಡಿದ್ದರ ಹಾಗೂ ಮುತ್ತಿದ ಕತ್ತಲೆಯ ಮೊದಲ ಗೆಲುವಲ್ಲವೆಂದೂ ಅದು ಕಾಲ ನೀಡಿದ ತೀರ್ಪು ಎಂದು ಅರಿವಾಯಿತು. ಹಿಂದೆ ಟರ್ಕಿಗಳು ತಿಂಗಳು ಮತ್ತು ವರ್ಷಗಳನ್ನು ಗ್ರಹಿಸಲು ಬಳಸುತ್ತಿದ್ದದ್ದು, ದೇವರು ಬಳಸುತ್ತಿದ್ದದ್ದಕ್ಕಿಂತ ಬೇರೆಯಾಗಿತ್ತೆಂದು ಅವಳಿಗನ್ನಿಸಿತು. ಈಗ ಮಕ್ಕಳು ಬಹಳ ಬೇಗ ಬೆಳೆಯುವುದಷ್ಟೇ ಅಲ್ಲ ಭಾವನೆಗಳು ರೂಪುಗೊಳ್ಳುವುದೂ ಬೇರೆ ರೀತಿಯಲ್ಲಿ ಎಂದುಕೊಂಡಳು. ದೇಹ ಮತ್ತು ಆತ್ಮಗಳ ಸಮೇತ ಸುಂದರಿ ರೆಮಿದಿಯೋಸ್ ಸ್ವರ್ಗಕ್ಕೆ ಹೋದ ನಂತರ ಫೆರ್ನಾಂಡ ತನ್ನ ಹಚ್ಚಡ ಹೋಗಿದ್ದಕ್ಕಾಗಿ ಗೊಣಗಿಕೊಂಡು ಓಡಾಡುತ್ತಿದ್ದಳು. ಅವ್ರೇಲಿಯಾನೋಗಳ ದೇಹಗಳು ಗೋರಿಯೊಳಗೆ ತಣ್ಣಗಾಗುತ್ತಿದ್ದಂತೆಯೇ, ಅವ್ರೇಲಿಯಾನೋ ಸೆಗುಂದೋ ಮತ್ತೆ ಮನೆಯಲ್ಲಿ ದೀಪ ಬೆಳಗಿಸಿ, ಅಕಾರ್ಡಿಯನ್ ನುಡಿಸುವ ಕುಡುಕರಿಂದ ತುಂಬಿ, ಸತ್ತವರು ಕ್ರೈಸ್ತರಲ್ಲ, ನಾಯಿಗಳು ಎನ್ನುವಂತೆ ಅವಳಿಗೆ ಸಾಕಷ್ಟು ತಲೆನೋವು ತಂದ ಹುಚ್ಚರ ಸಂತೆಯಾದ ಮತ್ತು ಸಿಹಿ ಮಾಂಸದ ತಿನಿಸುಗಳಿಗೆ ವೆಚ್ಚ ಮಾಡಿಸಿದ ಆ ಮನೆ, ಅಧೋಗತಿಯ ಗುಪ್ಪೆಯಾಯಿತು. ಹೊಸೆ ಅರ್ಕಾದಿಯೋನ ಟ್ರಂಕನ್ನು ಸಿದ್ಧಪಡಿಸುತ್ತಿದ್ದ ಉರ್ಸುಲಾ ಅದೆಲ್ಲವನ್ನು ನೆನಪಿಸಿಕೊಳ್ಳುತ್ತ, ಸತ್ತು ಗೋರಿಯಲ್ಲಿ ಮಣ್ಣು ಮುಚ್ಚಿಸಿಕೊಳ್ಳುವುದು ಒಳ್ಳೆಯದಲ್ಲವೇ ಎಂದುಕೊಂಡಳು. ನಿಜವಾಗಲೂ ಜನರು ಅಷ್ಟೊಂದು ತೊಂದರೆ, ಸಂಕಷ್ಟಗಳನ್ನು ಸಹಿಸಿಕೊಳ್ಳಲು ತಮ್ಮನ್ನು ಕಬ್ಬಿಣದಿಂದ ಮಾಡಿದ್ದಾನೆ ಎಂದು ನಂಬಿದ್ದಾರೆಯೇ ಎಂದು ಯಾವ ಅಂಜಿಕೆಯಿಲ್ಲದೆ ದೇವರಲ್ಲಿ ಕೇಳಿದಳು. ಮತ್ತೆ ಮತ್ತೆ ಅದನ್ನೇ ಕೇಳುತ್ತ ಗೊಂದಲಗೊಂಡ ಅವಳಿಗೆ ಪರದೇಶಿಯ ಹಾಗೆ ದೂರ ಓಡಿ ಹೋಗಬೇಕೆಂಬ ತಡೆಯಲಾರದಷ್ಟು ಅಪೇಕ್ಷೆಯುಂಟಾಯಿತು. ಅದೆಷ್ಟೋ ಬಾರಿ ಮತ್ತೆ ಮತ್ತೆ ಮುಂದಕ್ಕೆ ಹಾಕಿದ, ತನ್ನೆಲ್ಲ ಸಮಾಧಾನಗಳನ್ನು ಪಕ್ಕಕ್ಕೆ ತಳ್ಳಿ ಒಂದೇ ಒಂದು ಕ್ಷಣ ಬಂಡಾಯವೇಳುವ ಅವಕಾಶಕ್ಕೆ ಹಾತೊರೆದಳು. ಒಂದೇ ಸಲಕ್ಕೆ ಎಲ್ಲದಕ್ಕೂ ಭೂತ ಬಿಡಿಸಿ, ಶತಮಾನದ ಕಾಲದಿಂದ ಎದೆಯೊಳಗೆ ಬಲವಂತವಾಗಿ ನುಂಗಬೇಕಾಗಿದ್ದ ಎಲ್ಲ ಕೆಟ್ಟ ಮಾತುಗಳನ್ನು ಹೊರಗೆ ಹಾಕಬೇಕೆಂದು ಮನಸ್ಸಾಯಿತು.
“ದರಿದ್ರವೇ ” ಎಂದು ಕೂಗಿದಳು.
ಬಟ್ಟೆಗಳನ್ನು ಟ್ರಂಕಿನೊಳಗೆ ಹಾಕುತ್ತಿದ್ದ ಅಮರಾಂತ ಅವಳಿಗೆ ಚೇಳು ಕಡಿಯಿತು ಎಂದುಕೊಂಡಳು.
“ಎಲ್ಲಿದೆ ಅದು” ಎಂದು ಬೆಚ್ಚಿ ಕೇಳಿದಳು.
“ಏನು?”
“ತಿಗಣೆ!” ಎಂದಳು ಅಮರಾಂತ.
ಉರ್ಸುಲಾ ತನ್ನ ಎದೆಯ ಮೇಲೆ ಕೈ ಇಟ್ಟುಕೊಂಡು, “ಇಲ್ಲಿದೆ” ಎಂದಳು.
ಗುರುವಾರ ಮಧ್ಯಾಹ್ನ ಎರಡು ಗಂಟೆಗೆ ಹೊಸೆ ಅರ್ಕಾದಿಯೋ ಸ್ಕೂಲಿಗೆ ಹೊರಟ. ಉರ್ಸುಲಾ ತಾಮ್ರದ ಗುಂಡಿಗಳಿದ್ದ ಸೂಟ್ ಮತ್ತು ಕತ್ತಿನ ಸುತ್ತ ಗಂಜಿಹಾಕಿದ ಬೋ ಟೈ ಕಟ್ಟಿಕೊಂಡು ರಾಚುವ ಶೆಖೆಯಲ್ಲಿ ಬೆವರುತ್ತ ಗಂಭೀರವಾಗಿ ನಿಂತ ಅವನಿಗೆ, ಒಂದು ಹನಿ ಕಣ್ಣೀರು ಹಾಕದೆ, ಅವನಿಗೂ ಹೇಳಿ ಕೊಡವ ಹಾಗೆ ವಿದಾಯ ಹೇಳುತ್ತಿದ್ದದ್ದನ್ನು ಯಾವಾಗಲೂ ನೆನಪಿಸಿಕೊಳ್ಳುತ್ತಿದ್ದಳು. ಅವನು ಹೋದ ದಾರಿ ತಿಳಿಯಲೆಂದು ಅವಳು ಅವನ ತಲೆಯ ಮೇಲೆ ಪನ್ನೀರನ್ನು ಸಿಂಪಡಿಸುತ್ತಿದ್ದಳು. ಬೀಳ್ಕೊಡುವ ಮುಂಚೆ ಊಟ ಮಾಡುತ್ತಿದ್ದಾಗ ಮನೆಯವರು ತಮಗೆ ಉಂಟಾಗುತ್ತಿದ್ದ ಗಲಿಬಿಲಿಯನ್ನು ಹಬ್ಬದ ಗೆಲುವು ವ್ಯಕ್ತಪಡಿಸುವುದರ ಮೂಲಕ ಅಡಗಿಸಿಕೊಂಡರು ಮತ್ತು ಅವರು ಫಾದರ್ ಆಂಟೋನಿಯೋ ಇಸಬಲ್ ಹೇಳಿದ್ದನ್ನು ಕೇಳಿ ಅತಿಯಾಗಿ ಉತ್ಸಾಹಗೊಂಡು ಸಂಭ್ರಮಿಸಿದರು. ಆದರೆ ಮೂಲೆಯಲ್ಲಿ ಬೆಳ್ಳಿಯ ಎಳೆಯಿದ್ದ ವೆಲ್‌ವೆಟ್ ಬಟ್ಟೆಯಿಂದ ಸುತ್ತಿದ ಟ್ರಂಕನ್ನು ಹೊರಗೆ ತೆಗೆದುಕೊಂಡು ಹೋಗುವಾಗ ಶವಪೆಟ್ಟಿಗೆಯನ್ನು ಮನೆಯಿಂದ ಹೊರಗೆ ತೆಗೆದಂತೆ ಅವರಿಗೆ ಭಾಸವಾಯಿತು. ಆ ಸಮಾರಂಭದಲ್ಲಿ ಭಾಗವಹಿಸಲು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಮಾತ್ರ ನಿರಾಕರಿಸಿದ.
ಅವನು “ನಮ್ಗೆ ಬೇಕಾಗಿರೋದಷ್ಟೆ. ಒಬ್ಬ ಪೋಪ್!” ಎಂದು ಗೊಣಗುಟ್ಟಿದ.
ಮೂರು ತಿಂಗಳಾದ ಮೇಲೆ ಅವ್ರೇಲಿಯಾನೋ ಸೆಗುಂದೋ ಮತ್ತು ಫೆರ್ನಾಂಡ ಮೆಮೆಳನ್ನು ಸ್ಕೂಲಿಗೆ ಕರೆದುಕೊಂಡು ಹೋದರು ಮತ್ತು ಪಿಯಾನೋದಂತಿರುವುದನ್ನು ತಂದರು. ಅದೇ ಸಮಯದಲ್ಲಿ ಅಮರಾಂತ ತಾನು ಉಪಯೋಗಿಸುವ ಮುಸುಕನ್ನು ತಾನೇ ಹೊಲಿದುಕೊಳ್ಳುವುದಕ್ಕೆ ಪ್ರಾರಂಭಿಸಿದ್ದಳು. ಕ್ರಮೇಣ ಬಾಳೆತೋಟದ ಉಮೇದು ಕಡಿಮೆಯಾಗಿತ್ತು. ಊರಿನ ಹಳಬರಿಗೆ ಸುತ್ತಮುತ್ತಲೂ ಹೊಸಬರು ಇರುವುದು ಕಂಡು ಬಂದು ತಮ್ಮ ತಮ್ಮ ಹಳೆಯ ದಿನಗಳ ಶ್ರಮಪೂರಿತ ವರಮಾನಕ್ಕಷ್ಟೆ ಅಂಟಿಕೊಂಡಿದ್ದರು. ಆದರೆ ಅವರಿಗೆ ಹಾಳಾಗುವುದರಿಂದ ಬಚಾವಾಗಿದ್ದೇವೆಂಬ ಸಮಾಧಾನವಿತ್ತು. ಮನೆಯಲ್ಲಿ ಇನ್ನೂ ಊಟಕ್ಕೆ ಅತಿಥಿಗಳು ಬರುತ್ತಿದ್ದರು ಮತ್ತು ಒಂದು ವರ್ಷದ ನಂತರ ಬಾಳೆ ತೋಟದವರು ಹೊರಟು ಹೋಗುವ ತನಕ, ಹಳೆಯ ದಿನಚರಿ ನಿಜಕ್ಕೂ ಮತ್ತೆ ಸ್ಥಾಪನೆಯಾಗಲಿಲ್ಲ. ಆದರೂ ಸತ್ಕರಿಸುವುದರಲ್ಲಿ ಪರಂಪಾರಗತವಾಗಿ ಬಂದದ್ದಕ್ಕಿಂತ ಸಾಕಷ್ಟು ಬದಲಾವಣೆಗಳಾಗಿದ್ದವು. ಏಕೆಂದರೆ ಈ ನಿಯಮಗಳನ್ನು ವಿಧಿಸುತ್ತಿದ್ದವಳು ಫೆರ್ನಾಂಡ. ಉರ್ಸುಲಾ ಹಿಂದೆ ಸರಿದ ಮೇಲೆ ಮತ್ತು ಅಮರಾಂತ ಬಟ್ಟೆ ಹೊಲಿಯುವುದರಲ್ಲಿ ನಿರತಳಾದಾಗ, ಮಾಜಿ ರಾಣಿ, ಅತಿಥಿಗಳನ್ನು ಆರಿಸಿಕೊಳ್ಳುವ ಮತ್ತು ತನ್ನ ತಂದೆ ಕಲಿಸಿಕೊಟ್ಟ ಹಾಗೆ ಅಚ್ಚುಕಟ್ಟು ಕ್ರಮಗಳನ್ನು ವಿಧಿಸುವ ಸ್ವಾತಂತ್ರ್ಯ ಪಡೆದಿದ್ದಳು. ಸುಲಭವಾಗಿ ಲಭಿಸಿದ ಸಂಪತ್ತನ್ನು ತೋಚಿದಂತೆ ಅಸಹ್ಯ ರೀತಿಯಲ್ಲಿ ವ್ಯಯಮಾಡಿದ ಹೊರಗಿನವರಿಗೆ ಆ ಮನೆ, ಅವಳ ಕಠೋರತೆಯಿಂದ ಪುರಾತನ ಸಂಪ್ರದಾಯದ್ದಾಗಿ ಕಂಡಿತು. ಅವಳಿಗೆ ಹೆಚ್ಚಿಗೆ ಪ್ರಶ್ನೆಗಳನ್ನು ಕೇಳದ ಬಾಳೆತೋಟದ ಕಂಪನಿಗೆ ಸಂಬಂಧವಿರದವರು ಹೆಚ್ಚು ಹಿತ ಎನಿಸಿದ್ದರು. ಅವಳ ಭಾವ ಹೊಸೆ ಅರ್ಕಾದಿಯೋ ಬ್ಯುಂದಿಯಾ ಕೂಡ ಅವಳ ಮತ್ಸರಕ್ಕೆ ಕಾರಣವಾಗಿದ್ದ. ಏಕೆಂದರೆ ಅವನು ಪ್ರಾರಂಭದ ದಿನಗಳಲ್ಲಿ ಹುಂಜದ ಕಾಳಗದ ಬಗ್ಗೆ ಅತ್ಯಂತ ಉತ್ಸಾಹಗೊಂಡಿದ್ದವನು ಅದನ್ನು ಬಿಟ್ಟು ಬಾಳೆತೋಟದ ಕಂಪನಿಯಲ್ಲಿ ಫೋರ್‌ಮನ್ ಆಗಿ ಕೆಲಸಕ್ಕೆ ಸೇರಿಕೊಂಡ.
ಫೆರ್ನಾಂಡ, “ಅವನು ಎಲ್ಲಿ ತನಕ ಆ ಪರದೇಶಿಗಳ ಉಪ್ಪು ತಿಂತಿರ್‍ತಾನೋ ಅಲ್ಲಿ ತನಕ ಈ ಮನೆಗೆ ಬರೋ ಹಾಗಿಲ್ಲ” ಎಂದಳು.
ಮನೆಯಲ್ಲಿ ಅಷ್ಟೊಂದು ಬಿಗಿಯಾದ ವಾತಾವರಣವಿದ್ದರಿಂದ ಅವ್ರೇಲಿಯಾನೋ ಸೆಗುಂದೋಗೆ ಪೆತ್ರ್ರಾ ಕೊತೆಸ್ ಮನೆಯೇ ಹೆಚ್ಚು ಹಿತವಾಗಿ ಕಂಡಿತು. ಮೊದಲು ತನ್ನ ಹೆಂಡತಿಗೆ ಕೆಲಸದ ಹೊರೆ ತಪ್ಪಿಸುವ ನೆಪದಿಂದ ಅವನು ಪಾರ್ಟಿಗಳನ್ನು ಅಲ್ಲಿಗೆ ರವಾನಿಸಿದ. ಅನಂತರ ಪ್ರಾಣಿಗಳು ಫಲವಂತಿಕೆಯನ್ನು ಕಳೆದುಕೊಳ್ಳುತ್ತಿವೆ ಎನ್ನುವುದಕ್ಕಾಗಿ ತನ್ನ ಕಣಜ ಮತ್ತು ಕುದುರೆ ಲಾಯವನ್ನು ಅಲ್ಲಿಗೆ ಸ್ಥಳಾಂತರಿಸಿದ. ಕೊನೆಗೆ ಅವಳ ಮನೆ ಹೆಚ್ಚು ತಂಪಾಗಿರುತ್ತದೆ ಎನ್ನುವ ಕಾರಣದಿಂದ ತನ್ನ ಉದ್ಯೋಗದ ಸಣ್ಣ ಕಛೇರಿಯನ್ನು ಕೂಡ. ಗಂಡನಿದ್ದೂ ತಾನು ವಿಧವೆ ಎಂದು ಫೆರ್ನಾಂಡಳಿಗೆ ಅರಿವಾಗುವ ಹೊತ್ತಿಗೆ ಹಿಂದಿನ ಸ್ಥಿತಿಗೆ ಬರಲಾರದಷ್ಟು ತಡವಾಗಿತ್ತು. ಅವ್ರೇಲಿಯಾನೋ ಸೆಗುಂದೋ ಮನೆಯಲ್ಲಿ ಊಟಮಾಡುತ್ತಿದ್ದದ್ದು ಕಡಿಮೆ ಮತ್ತು ಹೆಂಡತಿಯ ಜೊತೆ ಮಲಗುವುದಕ್ಕಾಗಿ ಬರುತ್ತಿದ್ದದ್ದು ಯಾರಿಗೂ ಸಮಾಧಾನ ತಂದಿರಲಿಲ್ಲ. ಒಂದು ರಾತ್ರಿ ಅವನು ಅಜಾಗರೂಕತೆಯಿಂದ ಪೆತ್ರಾ ಕೊತೆಸ್ ಬಳಿ ಕಳೆದ. ಫೆರ್ನಾಂಡ ನಿರೀಕ್ಷೆಗೆ ವಿರುದ್ಧವಾಗಿ ಸ್ವಲ್ಪವೂ ಸಿಟ್ಟು ಮಾಡಿಕೊಳ್ಳಲಿಲ್ಲ. ಆದರೆ ಅವಳು ಅದೇ ದಿನ ಅವನು ಇಟ್ಟುಕೊಂಡವಳ ಮನೆಗೆ ಎರಡು ಟ್ರಂಕ್‌ನಲ್ಲಿ ಅವನ ಬಟ್ಟೆಗಳನ್ನು ತುಂಬಿ ಕಳಿಸಿ ಕೊಟ್ಟಳು. ಅವಳು ಅವುಗಳನ್ನು ಹಾಡೆಹಗಲಿನಲ್ಲಿಯೇ ಕಳಿಸಿಕೊಟ್ಟಿದ್ದಲ್ಲದೆ ದಾರಿತಪ್ಪಿದ ತನ್ನ ಗಂಡ, ಅವಮಾನವನ್ನು ತಡೆಯಲಾಗದೆ ಅವನು ಮತ್ತೆ ತಲೆ ತಗ್ಗಿಸಿ ಹಿಂತಿರುಗುತ್ತಾನೆಂದು ಭಾವಿಸಿ ರಸ್ತೆಯ ಮಧ್ಯದಲ್ಲಿ ಎಲ್ಲರಿಗೂ ಕಾಣುವಂತೆ ಹೋಗಬೇಕೆಂದು ಸೂಚನೆ ಕೊಟ್ಟಿದ್ದಳು. ಆದರೆ ಆ ಎದೆಗಾರಿಕೆಯ ಕ್ರಿಯೆಯಿಂದ ಪಾಪದ ಫೆರ್ನಾಂಡಳಿಗೆ ಅವಳ ಗಂಡನ ಸ್ವಭಾವ ಎಂಥಾದ್ದು ಎಂದು ತಿಳಿದಿಲ್ಲ ಎನ್ನುವುದು ಅವಳ ತವರು ಮನೆಯ ರೀತಿಗೂ ಈ ಮನೆತನದವರ ಸ್ವಭಾವದಕ್ಕೂ ಏನೂ ತಾಳಮೇಳವಿಲ್ಲ ಎನ್ನುವುದಕ್ಕೆ, ಇನ್ನೊಂದು ಪುರಾವೆ ಒದಗಿಸಿತ್ತು. ಏಕೆಂದರೆ ಆ ಟ್ರಂಕುಗಳನ್ನು ನೋಡಿದ ಪ್ರತಿಯೊಬ್ಬರಿಗೂ ಅವರ ಸಂಬಂಧ ಗೊತ್ತಿದ್ದರಿಂದ ಅದು ಸಹಜವಾದ ರೀತಿ ಎಂದು ಹೇಳಿದರು. ಜೊತೆಗೆ ಅವ್ರೇಲಿಯಾನೋ ಸೆಗುಂದೋ ತನಗೆ ದೊರೆತ ಸ್ವಾತಂತ್ರ್ಯವನ್ನು ಮೂರು ದಿನಗಳ ಪಾರ್ಟಿ ಮಾಡಿ ಸಂಭ್ರಮಿಸಿದ. ಅವನ ಹೆಂಡತಿ ತನಗೆ ಅನಾನುಕೂಲವಾಗುವಂತೆ ಉದ್ದನೆಯ ಮಂಕಾದ ಉಡುಪು ಧರಿಸಿ ಪ್ರಬುದ್ಧಳಾಗಿ ಕಾಣುತ್ತ, ಹಳೆಯ ಮಾದರಿಯ ಒಡವೆಗಳೊಂದಿಗೆ ಪ್ರತಿಷ್ಠೆ ಕುಂದಿದವಳಂತೆ ಕಂಡು ಬಂದರೆ ಅವನು ಇಟ್ಟುಕೊಂಡವಳು ಎರಡನೆ ಹರೆಯ ಹೊಕ್ಕವಳಂತೆ ಬೀಗುತ್ತ ಬಣ್ಣ ಬಣ್ಣದ ಸಿಲ್ಕ್ ಡ್ರೆಸ್ ಹಾಕಿಕೊಂಡು ಹುಲಿಗಣ್ಣನ್ನು ಹೊಳೆಸುತ್ತಿದ್ದಳು. ಅವ್ರೇಲಿಯಾನೋ ಸೆಗುಂದೋ ಮೊದಲಿನಂತೆ ಎಳೆಯನ ಹುರುಪಿನಿಂದ ಅವಳಿಗೆ ತನ್ನನ್ನು ತಾನೇ ಅರ್ಪಿಸಿಕೊಂಡ. ಹಿಂದೆ ಪೆತ್ರಾ ಕೊತೆಸ್ ಅವನನ್ನು ಅವಳಿ ಸೋದರನೊಂದಿಗೆ ಗೊಂದಲಿಸಿಕೊಂಡು ಅವನನ್ನಾಗಿಯೇ ಪ್ರೀತಿಸಿರಲಿಲ್ಲ. ಏಕೆಂದರೆ ಅವಳು ಇಬ್ಬರ ಜೊತೆಗೂ ಒಂದೇ ಅವಧಿಯಲ್ಲಿ ಮಲಗುತ್ತ, ದೇವರು ಇಬ್ಬರಂತೆ ಪ್ರೀತಿಸುವ ಒಬ್ಬನನ್ನೇ ದೊರಕಿಸಿಕೊಟ್ಟಿದ್ದಾನೆಂದು ತಿಳಿದಿದ್ದಳು. ಅವರಿಗೆ ಮರುಕಳಿಸಿದ ಕಾಮೋದ್ರೇಕದ ಒತ್ತಡ ಎಷ್ಟಿತ್ತೆಂದರೆ ಅನೇಕ ಬಾರಿ ಅವರು ಊಟ ಮಾಡಲು ಕುಳಿತು ಒಬ್ಬರ ಕಣ್ಣಲ್ಲಿ ಇನ್ನೊಬ್ಬರು ಕಣ್ಣಿಟ್ಟು ಹಾಗೆಯೇ ಏನೂ ಮಾತಾಡದೆ ಪ್ಲೇಟುಗಳನ್ನು ಮುಚ್ಚಿಟ್ಟು, ಉತ್ಕಟತೆಯಿಂದ ಮತ್ತು ಪ್ರೀತಿಯಿಂದ ಹಂಬಲಿಸುತ್ತ ಬೆಡ್‌ರೂಮಿಗೆ ಹೋಗುತ್ತಿದ್ದರು. ಅವನು ಹೋಗುತ್ತಿದ್ದ ಫ್ರೆಂಚ್ ಹೆಂಗಸರಿಂದ ಸ್ಫೂರ್ತಿಗೊಂಡು ಪೆತ್ರಾ ಕೊತೆಸ್‌ಗೆ ಆರ್ಚ್ ಬಿಷಪ್ ಉಪಯೋಗಿಸುವ ರೀತಿಯ ಹಾಸಿಗೆಯನ್ನು ತಂದು ಕೊಟ್ಟ. ಕಿಟಕಿಗಳಿಗೆ ವೆಲ್‌ವೆಟ್ ಕರ್ಟನ್‌ಗಳನ್ನು ಹಾಕಿದ ಮತ್ತು ಬೆಡ್‌ರೂಮಿನ ಚಾವಣಿಗೆ ಹಾಗೂ ಗೋಡೆಗೆ ಭಾರಿ ಗಾತ್ರದ ಕನ್ನಡಿಗಳನ್ನು ಹಾಕಿಸಿದ. ಅದೇ ಸಮಯದಲ್ಲಿ ಅವನು ಮೊದಲಿಗಿಂತ ಹೆಚ್ಚು ದುಂದುವೆಚ್ಚ ಮಾಡುತ್ತಿದ್ದ. ಪ್ರತಿ ದಿನ ಹನ್ನೊಂದು ಗಂಟೆಗೆ ಬರುವ ರೈಲಿನಲ್ಲಿ ಹೆಚ್ಚು ಹೆಚ್ಚು ಶಾಂಪೇನ್ ಮತ್ತು ಬ್ರಾಂದಿ ಕೇಸುಗಳನ್ನು ತರಿಸುತ್ತಿದ್ದ. ಸ್ಟೇಷನ್‌ನಿಂದ ವಾಪಸು ಹೋಗುವಾಗ ಅವನು ಹೊಟ್ಟೆಗಿಲ್ಲದವರನ್ನು, ಊರಿನವರು, ಹೊರಗಿನವರು, ಪರಿಚಿತರು, ಅಪರಿಚಿತರು ಎನ್ನುವ ಯಾವ ಭೇದವಿಲ್ಲದೆ ಜನರಿಗೆಲ್ಲ ಕಾಣುವಂತೆ ಜೊತೆಗೆ ಎಳೆದುಕೊಂಡು ಹೋಗುತ್ತಿದ್ದ. ಯಾರಿಗೂ ಅರ್ಥವಾಗದ ರೀತಿಯಲ್ಲಿ ಮಾತನಾಡುತ್ತಿದ್ದ ಮಿಸ್ಟರ್ ಬ್ರೌನ್ ಕೂಡ ಅವ್ರೇಲಿಯಾನೋ ಸೆಗುಂದೋ ಬೀರುತ್ತಿದ್ದ ಆಮಿಷಕ್ಕೆ ಒಳಗಾದ. ಅನೇಕ ಸಲ ಅವನು ಪೆತ್ರ್ರಾ ಕೊತೆಸ್‌ಳ ಮನೆಯಲ್ಲಿ ಯದ್ವಾ ತದ್ವಾ ಕುಡಿದದ್ದಲ್ಲದೆ, ಅವನ ಜೊತೆ ಎಲ್ಲ ಕಡೆಗೂ ಹೋಗುತ್ತಿದ್ದ ಜರ್ಮನ್ ನಾಯಿಗಳನ್ನು ಕೂಡ ತಾನು ಗುಣಗುಣಿಸುವ ಟೆಕ್ಸಾಸ್ ಹಾಡುಗಳಿಗೆ ಅಕಾರ್ಡಿಯನ್ ವಾದ್ಯಕ್ಕೆ ಅನುಸಾರವಾಗಿ ಡ್ಯಾನ್ಸ್ ಮಾಡುವಂತೆ ಮಾಡುತ್ತಿದ್ದ.
ಪಾರ್ಟಿ ಉತ್ತುಂಗ ಸ್ಥಿತಿಯಲ್ಲಿದ್ದಾಗ ಅವ್ರೇಲಿಯಾನೋ ಸೆಗುಂದೋ, “ಖಾಲಿ ಮಾಡಿ, ಖಾಲಿ, ಯಾಕೆ ಅಂದ್ರೆ ಜೀವನ ಕ್ಷಣಿಕ” ಎಂದು ಕೂಗುತ್ತಿದ್ದ.
ಅವನು ಹಿಂದೆಂದೂ ಅಷ್ಟು ಚೆನ್ನಾಗಿ ಕಾಣುತ್ತಿರಲಿಲ್ಲ. ಅಷ್ಟೊಂದು ಪ್ರೀತಿ ಲಭಿಸಿರಲಿಲ್ಲ ಅಲ್ಲದೆ ಪ್ರಾಣಿಗಳು ಅಷ್ಟೊಂದು ಮರಿಗಳನ್ನು ಹಾಕಿರಲಿಲ್ಲ. ಕೊನೆಯಿರದ ಪಾರ್ಟಿಗಳಿಗಾಗಿ ಲೆಕ್ಕವಿಲ್ಲದಷ್ಟು ಹಸು, ಹಂದಿ, ಕೋಳಿಗಳನ್ನು ಕೊಚ್ಚಿ ಹಾಕಿದ್ದರಿಂದ ಅಂಗಳದ ನೆಲವೆಲ್ಲ ವಿಪರೀತ ರಕ್ತದಿಂದ ಕಪ್ಪುಗಟ್ಟಿ ಮಣ್ಣುಮಣ್ಣಾಗಿತ್ತು. ಅದು ಮೂಳೆಗಳನ್ನು ಮತ್ತು ಒಳಗಿನ ಭಾಗಗಳನ್ನು ಕೊನೆಯಿರದೆ ಕತ್ತರಿಸುವ ಸ್ಥಳವಾಗಿ, ಅಳಿದುಳಿದದ್ದನ್ನು ಹಾಕುವ ಮಣ್ಣಿನ ಗುಂಡಿಯಾಗಿತ್ತು. ಪಕ್ಷಿಗಳು ಅತಿಥಿಗಳ ಕಣ್ಣುಗಳನ್ನು ಕುಕ್ಕದಿರುವಂತೆ ಪದೇ ಪದೇ ಡೈನಮೈಟ್ ಬಾಂಬುಗಳನ್ನು ಸಿಡಿಸುತ್ತಿದ್ದರು. ಅವ್ರೇಲಿಯಾನೋ ಸೆಗುಂದೋ ದಡೂತಿಯಾಗಿ, ನೇರಳೆ ಬಣ್ಣಕ್ಕೆ ತಿರುಗಿ ಆಮೆಯಾಕಾರದವನಾದ. ಏಕೆಂದರೆ ಇಡೀ ಪ್ರಪಂಚವನ್ನು ಸುತ್ತಿ ವಾಪಸು ಬಂದ ಹೊಸೆ ಅರ್ಕಾದಿಯೋಗೆ ಇದ್ದ ಹಸಿವಿಗೆ ಅವನದನ್ನು ಹೋಲಿಸಬಹುದಾಗಿತ್ತು. ಅವನ ಮಾತುಗಾರಿಕೆ, ದುಂದುಗಾರಿಕೆ ಸತ್ಕಾರಗಳು ಜೌಗು ಪ್ರದೇಶದ ಎಲ್ಲೆಯನ್ನು ಮೀರಿ ಹಬ್ಬಿತ್ತು ಮತ್ತು ಕಡಲ ತೀರದ ಉದ್ದಕ್ಕೂ ಇರುವ ಹೊಟ್ಟೆಬಾಕರನ್ನು ಆಕರ್ಷಿಸಿತ್ತು. ಎಲ್ಲ ಕಡೆಯಿಂದ ಆಗಾಧ ಹೊಟ್ಟೆಬಾಕರು ಬಂದು ಪೆತ್ರಾ ಕೋತಸ್‌ಳ ಮನೆಯಲ್ಲಿ ಆಯೋಜಿಸಲಾಗುತ್ತಿದ್ದ ತಿನ್ನುವ ಶಕ್ತಿಯ ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದರು. ದುರದೃಷ್ಟದ ಆ ಶನಿವಾರ ‘ಆನೆ\’ ಎಂದು ಇಡೀ ಪ್ರದೇಶದಲ್ಲಿ ಕರೆಯುತ್ತಿದ್ದ ಕಮೀಲಿಯ ಸಗಸ್ತುಮೆ ಎಂಬ ಹೆಂಗಸು ಬರುವ ತನಕ ಅವ್ರೇಲಿಯಾನೋ ಸೆಗುಂದೋನನ್ನು ತಿನ್ನುವುದರಲ್ಲಿ ಯಾರೂ ಸೋಲಿಸದೆ ಅಜೇಯನಾಗಿದ. ಅವರಿಬ್ಬರ ಪರಸ್ಪರ ದ್ವಂದ್ವ ಮಂಗಳವಾರ ಬೆಳಗಿನ ತನಕ ಮುಂದುವರೆಯಿತು. ಮೊದಲ ಇಪ್ಪತ್ನಾಲ್ಕು ಗಂಟೆಗಳಲ್ಲಿ ಮರಗೆಣಸು, ಕರುವಿನ ಮಾಂಸದ ಊಟ ಮತ್ತು ಹುರಿದ ಬಾಳೆ ಹಾಗೂ ಎರಡೂವರೆ ಕೇಸ್ ಶಾಂಪೇನನ್ನು ಮುಗಿಸಿದ ಅವ್ರೇಲಿಯಾನೋ ಸೆಗುಂದೋ ಗೆಲುವಿನ ಬಗ್ಗೆ ಖಚಿತವಾಗಿದ್ದ. ಅವನು ವಿಚಲಿತಗೊಳ್ಳದೆ ಇದ್ದ ತನ್ನ ಪ್ರತಿಸ್ಪರ್ಧಿಗಿಂತ ಹೆಚ್ಚು ಉತ್ಸಾಹದಿಂದಿದ್ದ. ಆದರೆ ಅವಳಿಗೆ ಎದ್ದು ಕಾಣುವ ವೃತ್ತಿಪರತೆಯಿತ್ತು. ಆದರೆ ಮನೆಯಲ್ಲಿ ತುಂಬಿದ್ದ ಜನರ ಗುಂಪಿಗೆ ಭಾವ ತೀವ್ರತೆಗೆ ಅವಕಾಶ ಕಡಿಮೆಯಿತ್ತು. ಅವ್ರೇಲಿಯಾನೋ ಸೆಗುಂದೋ ಗೆಲ್ಲುವೆನೆಂಬ ನಿರೀಕ್ಷೆಯಿಂದ ಹೆಚ್ಚು ಹೆಚ್ಚಿಗೆ ಅಗಿಯುತ್ತಿದ್ದರೆ ‘ಆನೆ\’ ಸರ್ಜನ್ನಿನ ಕಲಾವಂತಿಕೆಯಂತೆ, ಇಷ್ಟಿಷ್ಟೆ ಸೀಳಿ ಸಂತೋಷದಿಂದ ಅವಸರವಿಲ್ಲದೆ ತಿನ್ನುತ್ತಿದ್ದಳು. ಅವಳು ಭಾರಿ ಗಾತ್ರದವಳಾಗಿ ಶಕ್ತಿಯುತವಾಗಿದ್ದರೂ ಅವಳ ಆಕಾರವನ್ನು ಮೀರಿ ಹೆಣ್ಣಿನ ಮಾಧುರ್ಯ ಮೆರೆದಿತ್ತು. ಅಲ್ಲದೆ ಅವಳ ಮುಖ ಎಷ್ಟು ಸುಂದರವಾಗಿ ಕೈಗಳು ಎಷ್ಟು ಕೋಮಲವಾಗಿದ್ದವೆಂದರೆ, ಅವಳ ವೈಯಕ್ತಿಕ ಸೊಬಗಿನ ಪರಿ ತಡೆಯಲಾರದೆ, ಅವಳು ಮನೆಯೊಳಗೆ ಬಂದಾಗ ಅವ್ರೇಲಿಯಾನೋ ಸೆಗುಂದೋ, ಪಂದ್ಯ ಟೇಬಲ್ಲಿನ ಮೇಲಲ್ಲದೆ ಹಾಸಿಗೆಯಲ್ಲಿ ಇದ್ದಿದ್ದರೆ ಒಳ್ಳೆಯದಿತ್ತು ಎಂದು ಮೆಲುದನಿಯಲ್ಲಿ ಹೇಳಿದ್ದ. ಆ ಮೇಲೆ ಅವಳು ನಿಯಮಗಳಿಗೆ ಯಾವುದೊಂದೂ ಕುಂದು ಬಾರದ ಹಾಗೆ ಎಳೆಗರುವಿನ ಮಾಂಸದ ಒಂದು ಭಾಗದ ಕೆಲಸವನ್ನು ಮುಗಿಸಿದ ನಂತರ, ಅಂಥ ಸೂಕ್ಷ್ಮವಾದ ಸ್ವಭಾವ ಮತ್ತು ನೀಳ ಮೂಗು ಇರುವುದು ಆದರ್ಶ ಹೆಣ್ಣಿನ ರೀತಿ ಎಂದು ಅವನು ಗಂಭೀರವಾಗಿ ಹೇಳಿದ. ಹೌದು ಅವನು ತಪ್ಪಾಗಿ ಭಾವಿಸಿರಲಿಲ್ಲ. ಆ ‘ಆನೆ\’ಗೆ ಈ ಮೊದಲು ಎಲುಬುಗಳನ್ನು ನುಚ್ಚುನೂರು ಮಾಡುವಾಕೆ ಎಂದು ಬಂದ ಹೆಗ್ಗಳಿಕೆಗೆ ಯಾವ ಆಧಾರವಿರಲಿಲ್ಲ. ಅವನಿಗೆ ಹೇಳಿದ್ದಂತೆ ಅವಳು ದನದ ಮಾಂಸ ತಿನ್ನುವಳಾಗಿರಲಿಲ್ಲ ಅಥವಾ ಗ್ರೀಕ್ ಸರ್ಕಸ್ಸಿನವಳಂತೆ ಗಡ್ಡ ಬೆಳೆಸಿದವಳಾಗಿರಲಿಲ್ಲ. ಅವಳು ಹಾಡಿನ ಸ್ಕೂಲಿನ ನಿರ್ದೇಶಕಿಯಾಗಿದ್ದಳು. ಅವಳು ತಿನ್ನುವುದಕ್ಕೆ ಕಲಿತಿದ್ದು ಗೌರವಯುತ ಸಂಸಾರವೊಂದರಲ್ಲಿ ತಾಯಿಯಾದ ಮೇಲೆ. ತನ್ನ ಮಕ್ಕಳಿಗೆ ಚೆನ್ನಾಗಿ ತಿನ್ನಲು, ಹಸಿವು ಹೆಚ್ಚಾಗಲು, ಕೃತಕ ವಿಧಾನಗಳ ಬದಲು ಅವರ ಅಂತರಂಗದ ಅಪೇಕ್ಷೆಯ ಸಂಪೂರ್ಣ ಶಾಂತಸ್ಥಿತಿಯಿಂದ ಉಂಟಾಗಬೇಕು ಎನ್ನುವುದಕ್ಕೆ ದಾರಿಯನ್ನು ಹುಡುಕುತ್ತಿದ್ದಳು. ಅವಳ ಸಿದ್ಧಾಂತದ ಪ್ರಕಾರ, ಅದನ್ನು ಜಾರಿ ಮಾಡಿ ತೋರಿಸಿದಂತೆ, ಎಲ್ಲ ವಿಷಯಗಳನ್ನು ಪ್ರeಪೂರ್ವಕವಾಗಿ ಚೊಕ್ಕ?ಜಜಿ;ಗಿ ನಿಭಾಯಿಸುವ ವ್ಯಕ್ತಿ ದಣಿವು ಮೆಲುಗೈ ಪಡೆಯುವ ತನಕ ತಿನ್ನಬಲ್ಲವನಾಗಿರುತ್ತಾನೆ, ಎಂದು. ಅವಳು ನೈತಿಕ ಕಾರಣಗಳಿಗಾಗಿ ಮತ್ತು ಕ್ರೀಡೆಯಲ್ಲಿನ ಆಸಕ್ತಿಯಿಂದ ಇಡೀ ದೇಶದಲ್ಲಿ ಯಾವುದನ್ನೂ ಲೆಕ್ಕಿಸದೆ ತಿನ್ನುವುದರಲ್ಲಿ ಪ್ರಸಿದ್ಧನಾದವನ ಜೊತೆ ಸ್ಪರ್ಧಿಸಬೇಕೆಂದು ಸ್ಕೂಲನ್ನು ಮತ್ತು ಮನೆಯನ್ನು ಬಿಟ್ಟು ಬಂದಿದ್ದಳು. ಅವಳು ಅವ್ರೇಲಿಯಾನೋ ಸೆಗುಂದೋನನ್ನು ನೋಡಿದ ತಕ್ಷಣ ಅವನು ತಿನ್ನುವ ಬದಲು, ಸ್ವಭಾವದಿಂದ ಸೋಲುತ್ತಾನೆ ಎಂದುಕೊಂಡಳು. ಮೊದಲನೆ ದಿನ ರಾತ್ರಿ ಮುಗಿದಾಗ “ಆನೆ” ಇನ್ನೂ ಧೈರ್ಯದಿಂದ ತಿನ್ನುತ್ತಿದ್ದರೆ ಅವ್ರೇಲಿಯಾನೋ ಸೆಗುಂದೋ ಅತಿಯಾದ ಮಾತು ಮತ್ತು ನಗುವಿನಿಂದ ಸುಸ್ತಾಗಿದ್ದ. ಅವರು ನಾಲ್ಕು ಗಂಟೆ ನಿದ್ದೆ ಮಾಡಿದರು. ಎದ್ದ ಮೇಲೆ ಇಬ್ಬರೂ ನಲವತ್ತು ಕಿತ್ತಲೆ ಹಣ್ಣಿನ ರಸ, ಎಂಟು ಬಟ್ಟಲು ಕಾಫಿ, ಮತ್ತು ಮೂವತ್ತು ಕೋಳಿ ಮೊಟ್ಟೆಗಳನ್ನು ಮುಗಿಸಿದರು. ಎರಡನೆ ದಿನ ಬೆಳಿಗ್ಗೆ ಸಾಕಷ್ಟು ಗಂಟೆಗಳನ್ನು ನಿದ್ದೆ ಇಲ್ಲದೇ ಕಳೆದದ್ದಲ್ಲದೆ ಎರಡು ಹಂದಿಗಳನ್ನು, ಬಾಳೆ ಗೊಂಚಲನ್ನು ಹಾಗೂ ನಾಲ್ಕು ಶಾಂಪೇನ್ ಕೇಸುಗಳನ್ನು ಮುಗಿಸಿದ್ದರು. ಅವ್ರೇಲಿಯಾನೋ ಸೆಗುಂದೋ ಅವನಿಗೇ ಗೊತ್ತಿಲ್ಲದಂತೆ ತನ್ನ ರೀತಿಯನ್ನು ಸಾಂಗತ್ಯವಿಲ್ಲದ ಬೇಜವಾಬ್ದಾರಿಯ ಮಾರ್ಗದಲ್ಲಿ ಕಂಡುಕೊಂಡಿದ್ದಾನೆ ಎಂದು “ಆನೆ”ಗೆ ಅನುಮಾನ ಬಂತು. ಅದಕ್ಕಾಗಿ ತಾನು ಭಾವಿಸಿದ್ದಕ್ಕಿಂತಲೂ ಅವನು ಹೆಚ್ಚು ಅಪಾಯಕಾರಿ ಎಂದು ಅವಳಿಗೆ ಭಾಸವಾಯಿತು. ಆದರೂ ಪೆತ್ರಾ ಕೊತೆಸ್ ಎರಡು ಸುಟ್ಟ ಟರ್ಕಿ ಕೋಳಿಗಳನ್ನು ಟೇಬಲ್ಲಿಗೆ ತಂದಾಗ ಅವ್ರೇಲಿಯಾನೋ ಸೆಗುಂದೋ ಉಸಿರುಗಟ್ಟುವ ಸ್ಥಿತಿಗಿಂತ ಸ್ವಲ್ಪ ಹಿಂದಿದ್ದ.
“ಆನೆ” ಅವನಿಗೆ, “ನಿಮ್ಮ ಕೈಲಿ ತಿನ್ನಲಿಕ್ಕೆ ಆಗದಿದ್ರೆ, ಇಬ್ರೂ ಸಮಸಮ ಅಂತ ಹೇಳ್ಬಿಡೋಣ” ಎಂದಿತು.
ತನಗೂ ಕೂಡ ಇನ್ನೊಂದು ಚೂರು ಏನನ್ನೂ ತಿನ್ನಲು ಸಾಧ್ಯವಿಲ್ಲ ಎಂದು ಅರಿತ ಅವಳು ತನ್ನ ಪ್ರತಿಸ್ವರ್ಧಿಯ ಸಾವಿಗೆ ಕಾರಣಳಾಗಬಾರದೆಂದು ಹಾಗೆ ಮನಸಾರೆ ಹೇಳಿದ್ದಳು. ಆದರೆ ಅವ್ರೇಲಿಯಾನೋ ಸೆಗುಂದೋ ಅದನ್ನು ಸವಾಲೆಂದು ಪರಿಗಣಿಸಿ ಅವನ ಶಕ್ತಿಗೆ ಮೀರಿ ಅದನ್ನು ಒಳಗಿಳಿಸಿದ. ಕೂಡಲೆ ಅವನಿಗೆ ಪ್ರಜ್ಞೆ ತಪ್ಪಿತು. ಮೂಳೆ ಚೂರುಗಳಿದ್ದ ಪ್ಲೇಟ್‌ನಲ್ಲಿ ಮುಖ ಹಾಕಿ ನಾಯಿಯ ಹಾಗೆ ಶಬ್ದ ಮಾಡುತ್ತ ನೋವಿನಿಂದ ನರಳುತ್ತಿದ್ದ, ಅವನಿಗೆ ಕತ್ತಲಲ್ಲಿ ಗೋಪುರದೆತ್ತರದಿಂದ ತಳವಿರದ ಗುಂಡಿಯೊಳಗೆ ಎಸೆಯುತ್ತಿದ್ದಂತೆ ಭಾಸವಾಯಿತು ಮತ್ತು ಪ್ರಜ್ಞೆ ಇದ್ದ ಕೊನೆಯ ಕ್ಷಣದಲ್ಲಿ ಸಾವು ಕಾದಿದೆ ಎನ್ನುವುದು ಅರಿವಾಯಿತು.
ಅವನಿಗೆ, “ನನ್ನನ್ನ ಫೆರ್ನಾಂಡ ಹತ್ತಿರ ಕರೆದುಕೊಂಡು ಹೋಗಿ” ಎಂದು ಹೇಳುವುದಕ್ಕಷ್ಟೇ ಸಾಧ್ಯವಾಯಿತು.
ಅವನ ಸ್ನೇಹಿತರು ತಾನು ಇಟ್ಟುಕೊಂಡವಳ ಮನೆಯಲ್ಲಿ ಸಾಯುವುದಿಲ್ಲ ಎಂದು ಅವನು ಹೆಂಡತಿಗೆ ಮಾತುಕೊಟ್ಟಿದ್ದನ್ನು ಉಳಿಸಿಕೊಳ್ಳಲು ಸಹಾಯ ಮಾಡಿದ್ದೇವೆ ಎನ್ನುವ ಭಾವನೆಯಿಂದ ಅವನನ್ನು ಮನೆಗೆ ತಲುಪಿಸಿದರು. ಪೆತ್ರಾ ಕೊತೆಸ್ ಆಗಲೇ ಅವನು ಶವಪೆಟ್ಟಿಗೆಯಲ್ಲಿ ಹಾಕಿಕೊಳ್ಳಲು ಬಯಸಿದ್ದ ಚರ್ಮದ ಶೂಗಳನ್ನು ಪಾಲೀಶ್ ಮಾಡಿ ಅದನ್ನು ತೆಗೆದುಕೊಂಡು ಹೋಗಲು ಯಾರಾದರೂ ಬರುತ್ತಾರೆ ಎಂದು ಕಾದಿದ್ದಾಗ ಯಾರೋ ಬಂದು ಅವ್ರೇಲಿಯಾನೋ ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿಸಿದರು. ಅದೇ ರೀತಿ ಅವನು ಒಂದು ವಾರದಲ್ಲಿ ಚೇತರಿಸಿಕೊಂಡ ಮತ್ತು ಎರಡು ವಾರಗಳ ನಂತರ ತಾನು ಬದುಕಿ ಉಳಿದದ್ದನ್ನು ಹಿಂದೆಂದೂ ಇಲ್ಲದಷ್ಟು ರೀತಿಯಲ್ಲಿ ಸಂಭ್ರಮದಿಂದ ಆಚರಿಸಿದ. ಅವನು ಪೆತ್ರಾ ಕೊತೆಸ್ ಜೊತೆಯಲ್ಲಿಯೇ ಇರಲು ಮುಂದುವರಿಸಿದ. ಆದರೆ ಪ್ರತಿ ನಿತ್ಯ ಫೆರ್ನಾಂಡಳನ್ನು ಭೇಟಿ ಮಾಡುತ್ತಿದ್ದ ಹಾಗೂ, ಹಲವು ಸಂದರ್ಭಗಳಲ್ಲಿ ವಿಧಿ ಪರಿಸ್ಥಿತಿಯನ್ನು ಅದಲು ಬದಲು ಮಾಡಿ, ಅವನು ಇಟ್ಟುಕೊಂಡವಳನ್ನು ಹೆಂಡತಿಯನ್ನಾಗಿಸಿ ಹೆಂಡತಿಯನ್ನು ಪ್ರೇಯಸಿಯಾಗಿಸಿದೆ ಎನ್ನುವಂತೆ, ಕೆಲವು ಸಂದರ್ಭಗಳಲ್ಲಿ ಅವನು ಮನೆಯವರ ಜೊತೆ ಊಟ ಮಾಡುವ ತನಕ ಅಲ್ಲೆ ಇರುತ್ತಿದ್ದ.
ಫೆರ್ನಾಂಡಳಿಗೆ ಇದರಿಂದ ಬಿಡುವು ದೊರಕಿತು. ಮನಸ್ಸಿಗೆ ಬೇಸರವಾದಾಗ ಮಧ್ಯಾಹ್ನದ ಮಲಗುವ ಸಮಯದಲ್ಲಿ ಪಿಯಾನೋದಂಥ ವಾದ್ಯವನ್ನು ನುಡಿಸುವುದು ಮತ್ತು ಮಕ್ಕಳಿಂದ ಬರುತ್ತಿದ್ದ ಕಾಗದಗಳಷ್ಟೇ ಅವಳಿಗೆ ಆಸರೆಯಾಗಿದ್ದವು. ಅವಳು ಎರಡು ವಾರಕ್ಕೊಮ್ಮೆ ಕಳಿಸುತ್ತಿದ್ದ ಸುದೀರ್ಘ ಉತ್ತರದಲ್ಲಿ ಒಂದು ವಾಕ್ಯವೂ ಸತ್ಯವಾದದ್ದು ಇರುತ್ತಿರಲಿಲ್ಲ. ಅವಳು ತನ್ನ ಕಷ್ಟಗಳನ್ನು ಅವರಿಂದ ಮುಚ್ಚಿಟ್ಟಳು. ಬೆಗೋನಿಯಾ ಗಿಡಗಳ ಮೇಲೆ ಬೆಳಕು ಬಿದ್ದಿದ್ದರೂ, ಮಧ್ಯಾಹ್ನ ಎರಡು ಗಂಟೆ ತಲೆ ಭಾರ ಎನಿಸಿದರೂ, ಮನೆಯಿಂದಾಚೆ ಮತ್ತೆ ಮತ್ತೆ ಹಬ್ಬದುತ್ಸವಗಳ ಸದ್ದು ತೇಲಿ ಬರುತ್ತಿದ್ದರೂ, ಬಂಗಲೆಯಂತಿದ್ದ ತನ್ನ ತಂದೆಯ ಮನೆಯ ವಿಷಾದಪೂರ್ಣ ಸಂಗತಿಯನ್ನು ಮುಚ್ಚಿಟ್ಟಳು. ಫೆರ್ನಾಂಡ ಒಬ್ಬಳೇ ಮೂವರು ಜೀವಂತ ಭೂತಗಳ ಮಧ್ಯೆ ಓಡಾಡಿಕೊಂಡಿದ್ದಳು. ಅಲ್ಲದೆ ಹೊಸೆ ಅರ್ಕಾದಿಯೋ ಬ್ಯುಂದಿಯಾನ ಭೂತ ಹಲವೊಮ್ಮೆ ಅವಳು ಪಿಯಾನೋದಂಥದನ್ನು ನುಡಿಸುತ್ತಿರುವಾಗ ಪ್ರಶ್ನಾರ್ಥಕ ಗಮನದಿಂದ ನಡುಮನೆಯ ಅರೆಬೆಳಕಿನಲ್ಲಿ ಬಂದು ಕುಳಿತುಕೊಳ್ಳುತ್ತಿತ್ತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಕೇವಲ ಒಂದು ನೆರಳಾಗಿದ್ದ. ಅವನು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್‌ಗೆ ಯಾವ ಭವಿಷ್ಯವೂ ಇರದ ಯುದ್ಧದ ಪ್ರಸ್ತಾಪ ಮಾಡುವುದಕ್ಕೆಂದು ಕಳೆದ ಬಾರಿ ರಸ್ತೆಗಿಳಿದು ಹೋದ ಮೇಲೆ ಅವನು ವರ್ಕ್‌ಶಾಪನ್ನು ಬಿಟ್ಟು ಹೋದದ್ದು ಬಾದಾಮಿ ಮರದ ಕೆಳಗೆ ಉಚ್ಚೆ ಹೊಯ್ಯುವುದಕ್ಕೆ ಮಾತ್ರ. ಅವನು ಮೂರು ವಾರಕೊಮ್ಮೆ ಹಜಾಮನನ್ನಲ್ಲದೆ ಬೇರೆ ಯಾರನ್ನೂ ಭೇಟಿಯಾಗಲು ಬಿಡುತ್ತಿರಲಿಲ್ಲ. ಅವನು ಉರ್ಸುಲಾ ತಂದು ಕೊಡುವ ಏನನ್ನಾದರೂ ತಿನ್ನುತ್ತಿದ್ದ ಮತ್ತು ಹಿಂದಿನಷ್ಟೇ ಉತ್ಸಾಹದಿಂದ ಚಿನ್ನದ ಸಣ್ಣ ಮೀನುಗಳನ್ನು ಮಾಡುತ್ತಿದ್ದ. ಆದರೆ ಅದನ್ನು ಜನರು ಆಭರಣಗಳೆಂದು ಪರಿಗಣಿಸದೆ ಪುರಾತನ ವಸ್ತುವಿನಂತೆ ಕೊಂಡುಕೊಳ್ಳುತ್ತಾರೆಂದು ಗೊತ್ತಾದ ಮೇಲೆ ಅವುಗಳನ್ನು ಮಾರುವುದನ್ನು ನಿಲ್ಲಿಸಿದ. ಮದುವೆಯಾದ ಕಾಲದಿಂದಲೂ ಬೆಡ್ ರೂಮನ್ನು ಸಿಂಗರಿಸಿದ್ದ ರೆಮಿದಿಯೋಸ್‌ಳ ಬೊಂಬೆಗಳನ್ನು ಒಟ್ಟುಮಾಡಿ ಅಂಗಳದಲ್ಲಿಟ್ಟು ಬೆಂಕಿ ಹಚ್ಚಿದ. ಎಲ್ಲವನ್ನು ಗಮನಿಸುತ್ತಿದ್ದ ಉರ್ಸುಲಾಗೆ ಅವನು ಏನು ಮಾಡುತ್ತಿದ್ದಾನೆ ಎಂದು ತಿಳಿದರೂ ಅವನನ್ನು ತಡೆಯಲು ಸಾಧ್ಯವಾಗಲಿಲ್ಲ.
ಅವಳು ಅವನಿಗೆ, “ನೀನು ಕಲ್ಲು ಹೃದಯದೋನು” ಎಂದಳು.
ಅವನು, “ಅದು ಹೃದಯದ ಪ್ರಶ್ನೆಯಲ್ಲ. ರೂಮ್ ತುಂಬ ನುಸಿಹುಳು ಇದೆ” ಎಂದ.
ಅಮರಾಂತ ಮುಸುಕನ್ನು ಹೆಣೆಯುತ್ತಿದ್ದಳು. ಮೆಮೆಗೆ ಆಗಾಗ ಕಾಗದ ಬರೆಯುವುದಲ್ಲದೆ ಉಡುಗೊರೆಗಳನ್ನು ಕೂಡ ಕಳಿಸುವ ಅವಳು ಏಕೆ ಹೊಸೆ ಅರ್ಕಾದಿಯೋ ಬಗ್ಗೆ ಕೇಳಿಸಿಕೊಳ್ಳಲು ಇಷ್ಟಪಡುವುದಿಲ್ಲ ಎನ್ನುವುದು ಅವಳಿಗೆ ಆರ್ಥವಾಗಲಿಲ್ಲ. ಉರ್ಸುಲಾ ಮೂಲಕ ಅವಳಿಗೆ ಅದನ್ನು ಕೇಳಿಸಿದಾಗ ಅವಳು, “ಸತ್ತರೂ ಅವಳಿಗೆ ಅದು ತಿಳಿಯಲ್ಲ” ಎಂದು ಅಮರಾಂತ ಹೇಳಿದಳು ಮತ್ತು ಆ ಉತ್ತರ ಫೆರ್ನಾಂಡಾಳಲ್ಲಿ ಬಗೆಹರಿಸಲಾಗದ ನಿಗೂಢತೆಯನ್ನು ಉಂಟುಮಾಡಿತು. ಯಾವಾಗಲೂ ಲೇಸ್‌ಗಳಿರುವ ಒಳಲಂಗಗಳನ್ನು ಹಾಕಿಕೊಂಡು, ಅಗಲ ಭುಜಗಳ ಧಿಮಾಕಿನ ಅಮರಾಂತ, ಹಣೆಯ ಮೇಲೆ ಕನ್ಯತ್ವದ ಬೂದಿಯ ಕ್ರಾಸನ್ನು ಇಟ್ಟುಕೊಂಡವಳಂತಿದ್ದಳು. ಆದರೆ ವಾಸ್ತವದಲ್ಲಿ ಅವಳು ಅದನ್ನು ಕೈಗೆ ಸುತ್ತಿದ ಕಪ್ಪು ಬ್ಯಾಂಡೇಜ್‌ನಲ್ಲಿ ಇಟ್ಟುಕೊಂಡಿದ್ದಳು ಹಾಗೂ ಅವಳು ಅದನ್ನು ತೆಗೆದಿಡದೆ ತಾನೇ ಒಗೆದು ಇಸ್ತ್ರಿ ಮಾಡುತ್ತಿದ್ದಳು. ಅವಳ ಜೀವನವೆಲ್ಲ ತನಗಾಗಿ ಮುಸುಕು ಹೆಣೆದುಕೊಳ್ಳುವುದರಲ್ಲಿ ಕಳೆದುಹೋಗುತ್ತಿತ್ತು. ಅವಳು ಹಗಲಿನಲ್ಲಿ ಹೆಣೆದದ್ದನ್ನು ರಾತ್ರಿ ಬಿಚ್ಚುತ್ತಾಳೆ ಎಂದು ಹೇಳಬಹುದಾಗಿತ್ತು ಮತ್ತು ಅವಳು ಹಾಗೆ ಮಾಡುತ್ತಿದ್ದದ್ದು ಏಕಾಂತವನ್ನು ನೀಗಬೇಕೆಂದಲ್ಲ. ಅದಕ್ಕೆ ವ್ಯತಿರಿಕ್ತವಾಗಿ, ಅದನ್ನು ಘೋಷಿಸುವುದಕ್ಕಾಗಿ.
ಫೆರ್ನಾಂಡಳಿಗೆ ತಿರಸ್ಕಾರಕ್ಕೆ ಒಳಗಾದ ವರ್ಷಗಳಲ್ಲಿದ್ದ ದೊಡ್ಡ ಆಲೋಚನೆಯೆಂದರೆ ಮೆಮೆ ತನ್ನ ಮೊದಲ ರಜೆಯನ್ನು ಕಳೆಯಲೆಂದು ಬಂದಾಗ, ಮನೆಯಲ್ಲಿ ಅವ್ರೇಲಿಯಾನೋ ಸೆಗುಂದೋ ಇಲ್ಲದ ಸಂಗತಿ ಅವಳಿಗೆ ಗೊತ್ತಾಗುವುದಲ್ಲ, ಎಂದು. ಅವಳ ಭಯಕ್ಕೆ ಅವನ ಅತಿಯಾದ ಚಟುವಟಿಕೆ ಪರಿಹಾರ ಒದಗಿಸಿತು. ಮೆಮೆ ವಾಪಸು ಬಂದಾಗ ಅವ್ರೇಲಿಯಾನೋ ಸೆಗುಂದೋ ಆಗಲೂ ಮನೆಗಂಟಿಕೊಂಡ ಗಂಡನೆಂದು ಮತ್ತು ಅವಳಿಗೆ ಮನೆಯ ವಿಷಾದ ಪರಿಸ್ಥಿತಿಯನ್ನು ಗಮನಿಸದಿರದಂತೆ, ಅವಳ ತಂದೆ ತಾಯಿ ಒಂದು ವ್ಯವಸ್ಥೆಯನ್ನು ರೂಪಿಸಿದರು. ಪ್ರತಿ ವರ್ಷ ಎರಡು ತಿಂಗಳು ಅವ್ರೇಲಿಯಾನೋ ಸೆಗುಂದೋ ಇನ್ನಿಲ್ಲದ ಗಂಡನ ಹಾಗೆ ವರ್ತಿಸಿದ ಮತ್ತು ಐಸ್‌ಕ್ರೀಮ್ ಹಾಗೂ ಕುಕೀಸ್‌ಗಳ ಪಾರ್ಟಿಗಳನ್ನು ಏರ್ಪಡಿಸುತ್ತಿದ್ದನ್ನು, ಆ ಹುರುಪಿನ ಗೆಲುವಿನ ಹುಡುಗಿ ಪಿಯಾನೋದಂಥದನ್ನು ನುಡಿಸಿ ಆನಂದಿಸುತ್ತಿದ್ದಳು. ಅದಾದ ಮೇಲೆ ಅವಳಲ್ಲಿ ತಾಯಿಯ ಸ್ವಭಾವವನ್ನು ಕೊಂಚವೂ ಬಳುವಳಿ ಪಡೆದಿರಲಿಲ್ಲವೆನ್ನುವುದು ತಾನೇ ತಾನಾಗಿ ಕಾಣುತ್ತಿತ್ತು. ಅವಳು ದ್ವೇಷವನ್ನು ಕಾಣದ ಮುಂಚಿನ, ಹಾಗೂ ಪಿಯತ್ರೋ ಕ್ರೆಸ್ಪಿಯ ಮೇಲಿನ ಮೋಹ ಅವಳ ಹೃದಯದ ದಿಕ್ಕನ್ನು ಬದಲಿಸಿದ ಮುಂಚಿನ, ತನ್ನ ಹನ್ನೆರಡು ಅಥವಾ ಹದಿನಾಲ್ಕನೇ ವಯಸ್ಸಿಗೇ ನೃತ್ಯದ ಹೆಜ್ಜೆಗಳಿಂದ ಇಡೀ ಮನೆಗೆ ಪುಳಕ ತರುತ್ತಿದ್ದ ಅವಳು, ಎರಡನೆ ಅಮರಾಂತಳ ಹಾಗೆ ಕಾಣುತ್ತಿದ್ದಳು. ಆದರೆ ಅಮರಾಂತಳ ಹಾಗಿರದೆ, ಉಳಿದವರ ಹಾಗೆಯೂ ಇರದೆ, ಮೆಮೆ ಇಡೀ ಸಂಸಾರದ ವಿಧಿ ನಿಯಮವನ್ನು ತೋರ್ಪಡಿಸುತ್ತಿರಲಿಲ್ಲ ಮತ್ತು ಅವಳು ಮಧ್ಯಾಹ್ನ ಎರಡು ಗಂಟೆಗೆ ನಡುಮನೆಯಲ್ಲಿ ಬಾಗಿಲು ಹಾಕಿಕೊಂಡು, ಮಿಸುಕದ ಶಿಸ್ತಿನಿಂದ ಪಿಯಾನೋದಂಥ ವಾದ್ಯವನ್ನು ಅಭ್ಯಾಸ ಮಾಡುವಾಗ ಕೂಡ, ಪ್ರಪಂಚದೊಂದಿಗೆ ಸಂಪೂರ್ಣ ಸಾಂಗತ್ಯ ಹೊಂದಿದಂತಿದ್ದಳು. ಅವಳಿಗೆ ಮನೆ ಇಷ್ಟವಾಗಿದ್ದು ತನ್ನಷ್ಟಕ್ಕೆ ಗೊತ್ತಾಗುತ್ತಿತ್ತು. ಆದ್ದರಿಂದ ಅವಳು ತಾನು ಊರಿಗೆ ಬರುವುದರಿಂದ ಹರೆಯದವರಲ್ಲಿ ಉಂಟಾಗುವ ಉತ್ಸಾಹವನ್ನು ಕನಸುತ್ತ ಇಡೀ ವರ್ಷವನ್ನು ಕಳೆಯುತ್ತಿದ್ದಳು ಮತ್ತು ಅವಳು ಹಬ್ಬದಾಚರಣೆ ಹಾಗೂ ಅತಿಯಾದ ಸತ್ಕಾರದ ವಿಷಯದಲ್ಲಿ ಅವಳ ಅಪ್ಪನಿಗಿಂತ ಹೆಚ್ಚು ಬೇರೆಯಾಗಿರಲಿಲ್ಲ. ಇದರ ಮೊದಲ ಹಾನಿಕಾರಕ ಬಳುವಳಿಯ ಸೂಚನೆ ಅವಳು ಮೂರನೆ ರಜೆಯಲ್ಲಿ ನಾಲ್ಕು ನನ್‌ಗಳು ಮತ್ತು ಅರವತ್ತು ಜನ ಸಹಪಾಠಿಗಳನ್ನು ಮನೆಯಲ್ಲಿ ಒಂದು ವಾರ ಕಳೆಯಲು, ಯಾರಿಗೂ ತಿಳಿಸದೆ ತಾನೇ ಮುಂದುವರೆದು ಆಹ್ವಾನಿಸಿದ್ದಳು.
ಫೆರ್ನಾಂಡ, “ಇದೇನು ಅತಿರೇಕ!” ಈ ಹುಡುಗಿ ಥೇಟ್ ಅವರಪ್ಪನ ಥರಾನೇ ಇದಾಳೆ” ಎಂದಳು.
ಅಕ್ಕಪಕ್ಕದವರಿಂದ ಹಾಸಿಗೆ ಮಂಚಗಳನ್ನು, ಟೇಬಲ್‌ನಲ್ಲಿ ಒಂಬತ್ತು ಪಾಳಿ, ಸ್ನಾನ ಮಾಡುವುದಕ್ಕೆ ಸಮಯ ಗೊತ್ತು ಮಾಡುವ ಅಗತ್ಯ ಉಂಟಾಯಿತು. ಅಲ್ಲದೆ ನೀಲಿ ಬಣ್ಣದ ಒರಟು ಬಟ್ಟೆಗಳನ್ನು ತೊಟ್ಟ ಹುಡುಗಿಯರು ಒಂದು ಸ್ಥಳದಿಂದ ಮತ್ತೊಂದಕ್ಕೆ ಇಡೀ ದಿನ ಪರದಾಡದಂತೆ ಮಾಡಲು ನಲವತ್ತು ಸ್ಟೂಲ್‌ಗಳನ್ನು ಬಾಡಿಗೆಗೆ ತರಬೇಕಾಯಿತು. ಆದರೂ ಅವರ ಭೇಟಿ ಯಶಸ್ವಿಯಾಗಲಿಲ್ಲ. ಏಕೆಂದರೆ ಗಲಾಟೆ ಮಾಡುತ್ತಿದ್ದ ಆ ಹುಡುಗಿಯರು ಬೆಳಗಿನ ತಿಂಡಿ ಮುಗಿಸುತ್ತಿದ್ದ ಹಾಗೆ ಊಟದ ಮತ್ತು ಅನಂತರ ರಾತ್ರಿಯೂಟದ ಸರದಿಗೆ ಸಿದ್ಧರಾಗಬೇಕಿತ್ತು. ಅವರಿಗೆ ಇಡೀ ವಾರದ ಅವಧಿಯಲ್ಲಿ ಬಾಳೆ ತೋಟದಲ್ಲಿ ಒಂದು ಸಲ ಮಾತ್ರ ಓಡಾಡಿಕೊಂಡು ಬರಲು ಮಾತ್ರ ಸಾಧ್ಯವಾಯಿತು. ರಾತ್ರಿಯ ಹೊತ್ತಿಗೆ ನನ್‌ಗಳು ಸುಸ್ತಾಗಿ ನಡೆಯಲಾಗುತ್ತಿರಲಿಲ್ಲ ಮತ್ತೊಂದಕ್ಕೆ ಆರ್ಡರ್ ಮಾಡುತ್ತಿದ್ದರು. ಆದರೆ ಸುಸ್ತಾಗದ ಹುಡುಗಿಯರು ಅಂಗಳದಲ್ಲಿ ಸ್ಕೂಲಿನ ಹಾಡುಗಳನ್ನು ಇಷ್ಟ ಬಂದಂತೆ ಹಾಡುತ್ತಿದ್ದರು. ತಾನಿದ್ದ ಜಾಗದಿಂದಲೇ ಎಲ್ಲವನ್ನೂ ತಿಳಿಯಬೇಕೆಂದು ಪ್ರಯತ್ನಿಸುತ್ತಿದ್ದ ಉರ್ಸುಲಾಳನ್ನು ಒಂದು ದಿನ ತುಳಿದು ಬಿಡುತ್ತಿದ್ದರು. ಇನ್ನೊಂದು ದಿನ ಅಂಗಳದಲ್ಲಿ ಸ್ಕೂಲ್ ಹುಡುಗಿಯರು ಇದ್ದಾರೆಂದು ಗಮನಿಸದೆ ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬಾದಾಮಿ ಮರದ ಕೆಳಗೆ ಉಚ್ಚೆ ಹೊಯ್ದದ್ದಕ್ಕೆ ನನ್‌ಗಳು ಕೆಂಪಾಗಿದ್ದರು. ಅಮರಾಂತ ಅವರಿಗೆ ಜೀವ ಭಯ ಉಂಟುಮಾಡುವುದರಲ್ಲಿದ್ದಳು. ಏಕೆಂದರೆ ನನ್ ಒಬ್ಬಳು ಅವಳು ಸೂಪ್‌ಗೆ ಉಪ್ಪು ಹಾಕುತ್ತಿರುವಾಗ ಅಡುಗೆ ಮನೆಗೆ ಹೋದಾಗ ಕೈಯಲ್ಲಿ ಇರುವ ಬಿಳಿ ವಸ್ತುವೇನು ಎಂದು ಕೇಳಿದಳು.
ಅಮರಾಂತ, “ಆರ್‍ಸೆನಿಕ್ ವಿಷ” ಎಂದು ಉತ್ತರಿಸಿದಳು.
ವಿದ್ಯಾರ್ಥಿನಿಯರು ಅಲ್ಲಿಗೆ ಬಂದ ರಾತ್ರಿ ಹೇಗೆ ಕಳೆದರೆಂದರೆ, ರಾತ್ರಿ ಒಂದು ಗಂಟೆಯಾದರೂ ಕೊನೆಯವಳು ಆಗ ಬಾತ್ ರೂಮಿಗೆ ಹೋಗುತ್ತಿದ್ದಳು. ಆಮೇಲೆ ಫೆರ್ನಾಂಡ ಉಚ್ಚೆ ವಿಸರ್ಜನೆಗಾಗಿ ಎಪ್ಪತ್ತೆರಡು ಪಾತ್ರೆಗಳನ್ನು ಕೊಂಡಳು. ಇದರಿಂದ ಅವಳು ರಾತ್ರಿಯ ಓಡಾಟದ ಸಮಸ್ಯೆಯನ್ನು ಬೆಳಿಗ್ಗೆಗೆ ಬದಲಾಯಿಸಿದಳು. ಏಕೆಂದರೆ ಬೆಳಿಗ್ಗೆಯಿಂದಲೇ ಆ ಪಾತ್ರೆಗಳನ್ನು ಹಿಡಿದುಕೊಂಡು ತೊಳೆಯುವುದಕ್ಕಾಗಿ ಹುಡುಗಿಯರ ಉದ್ದನೆ ಕ್ಯೂ ಉಂಟಾಗಿತ್ತು. ಕೆಲವರಿಗೆ ಜ್ವರ ಬಂದು, ಮತ್ತೆ ಅನೇಕರಿಗೆ ಸೊಳ್ಳೆ ಕಡಿತದಿಂದ ಆರೋಗ್ಯ ಕೆಟ್ಟಿದ್ದರೂ ಬಹಳಷ್ಟು ಹುಡುಗಿಯರು ಅನೇಕ ತೊಂದರೆಗಳಿಗೆ ಹೆಚ್ಚಿನ ಪ್ರತಿರೋಧ ತೋರಿಸಿದರು ಮತ್ತು ಅತ್ಯಂತ ಉರಿ ಬಿಸಿಲಿನಲ್ಲಿಯೂ ಕೈತೋಟದಲ್ಲಿ ನಡೆದಾಡುತ್ತಿದ್ದರು. ಕೊನೆಗೆ ಅವರು ಹೊರಟ ಮೇಲೆ ಹೂಗಳು ನಾಶವಾಗಿದ್ದವು, ಪೀಠೋಪಕರಣಗಳು ಮುರಿದಿದ್ದವು, ಗೋಡೆಗಳ ಮೇಲೆಲ್ಲ ಚಿತ್ರಗಳು ಹಾಗೂ ಇತರ ಬರಹಗಳಿದ್ದವು. ಆದರೆ ಫೆರ್ನಾಂಡ ಅವರು ವಾಪಸು ಹೋಗುವರೆಂಬ ಸಮಾಧಾನಕ್ಕಾಗಿಯೇ ಎಲ್ಲವನ್ನು ಕ್ಷಮಿಸಿದ್ದಳು. ಅವಳು ಎರವಲು ತಂದಿದ್ದ ಹಾಸಿಗೆಗಳನ್ನು ಮತ್ತು ಸ್ಕೂಲ್‌ಗಳನ್ನು ಹಿಂತಿರುಗಿಸಿದಳು ಹಾಗೂ ಇಪ್ಪತ್ತೆರಡು ಉಚ್ಚೆ ಪಾತ್ರೆಗಳನ್ನು ಮೆಲ್‌ಕಿಯಾದೆಸ್‌ನ ರೂಮಿನಲ್ಲಿಟ್ಟಳು. ಮನೆಯ ಆಧ್ಯಾತ್ಮಿಕ ಶಕ್ತಿಯೊಂದು ಸುತ್ತ ತಿರುಗುತ್ತಿದ್ದ ಆ ರೂಮಿಗೆ ಅನಂತರ ಉಚ್ಚೆ ಪಾತ್ರೆ ರೂಮು ಎಂದು ಹೆಸರಾಯಿತು. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗೆ ಅದು ಸರಿಯಾಗಿ ಕಂಡಿತ್ತು. ಏಕೆಂದರೆ ಮನೆಯಲ್ಲಿ ಉಳಿದವರಿಗೆ ಮೆಲ್‌ಕಿಯಾದೆಸ್‌ನ ರೂಮು ಏತಕ್ಕಾಗಿ ಧೂಳು ಮುತ್ತಲು ಮತ್ತು ಅದು ಹಾಳಾಗಲು ಅವಕಾಶವನ್ನೇ ಕೊಡುತ್ತಿಲ್ಲ ಎಂದು ಬೆರಗಾಗಿದ್ದರೆ, ಅವನು ಅದನ್ನು ಸೆಗಣಿ ತೊಟ್ಟಿಯ ಹಾಗೆ ಮಾಡಿದ್ದ. ಯಾರು ಸರಿ ಎನ್ನುವುದರ ಬಗ್ಗೆ ಅವನು ತಲೆಕೆಡಿಸಿಕೊಳ್ಳಲಿಲ್ಲ. ಅವನಿಗೆ ರೂಮಿನ ಸ್ಥಿತಿ ತಿಳಿದಿದ್ದರೆ ಅದು ಫೆರ್ನಾಂಡ ಇಡೀ ಮಧ್ಯಾಹ್ನ ಉಚ್ಚೆ ಪಾತ್ರೆಗಳನ್ನು ಎಸೆಯಲು ಮತ್ತೆ ಮತ್ತೆ ರೂಮಿಗೆ ಬಂದು ಮಾಡುತ್ತಿದ್ದ ಕೆಲಸಕ್ಕೆ ತೊಂದರೆ ಉಂಟು ಮಾಡಿದಾಗ.
ಆ ದಿನಗಳಲ್ಲಿ ಹೊಸೆ ಅರ್ಕಾದಿಯೋ ಸೆಗುಂದೋ ಮತ್ತೆ ಮನೆಯಲ್ಲಿ ಕಾಣಿಸಿಕೊಂಡ. ಅವನು ಯಾರನ್ನೂ ಮಾತಾಡಿಸದೆ ಹೊರಾಂಗಳದಲ್ಲಿ ನಡೆದು ಕರ್ನಲ್ ಜೊತೆ ಮಾತನಾಡಲು ಬಾಗಿಲು ಹಾಕಿಕೊಂಡ. ಅವನನ್ನು ನೋಡಲಾಗದಿದ್ದರೂ ಸಹ ಉರ್ಸುಲಾ ಫೋರ್‌ಮನ್ ಬೂಟುಗಳ ಶಬ್ದವನ್ನು ಪತ್ತೆ ಹಚ್ಚಿದಳು ಮತ್ತು ಅವನು ಹಾಗೂ ಮನೆಯವರ ಮಧ್ಯೆ ಇರುವ ಬೆಸೆಯಲಾಗದ ಅಂತರವಾಗಿತ್ತು. ಚಿಕ್ಕವನಾಗಿದ್ದಾಗ ಅವಳಿ ಸೋದರನ ಜೊತೆ ಎಂಥಂಥದೋ ಹೊಸದಾಗಿ ಕಟ್ಟಿದ ಆಟಗಳನ್ನು ಆಡಿದ್ದನ್ನು ಬಿಟ್ಟರೆ, ಯಾವ ಸಮಾನ ಗುಣವೂ ಇರದ ಬಗ್ಗೆ ಮತ್ತು ಇರುವ ಅಂತರವನ್ನು ಯೋಚಿಸಿ ಆಶ್ಚರ್ಯಗೊಂಡಳು. ಅವನೊಬ್ಬ ನೇರ ನಡೆಯ ಗಂಭೀರ ಹಾಗೂ ಆಲೋಚನಾಪರ ಸ್ವಭಾವದ ಕಾಂತಿಯಿರದ ಮನುಷ್ಯನಾಗಿದ್ದು ಮುಖದಲ್ಲಿ ಶರತ್ಕಾಲದ ಬಣ್ಣವಿತ್ತು. ಅವನು ತಾಯಿ ಸಾಂತ ಸೋಫೀಯಾ ದೆಲಾ ಪಿಯದಾದ್‌ಳನ್ನು ಹೆಚ್ಚಿಗೆ ಹೋಲುತ್ತಿದ್ದ. ಮನೆಯವರ ಬಗ್ಗೆ ಮಾತನಾಡುವಾಗ ಅವನನ್ನು ಮರೆಯುವ ಅಭ್ಯಾಸವಿದ್ದದ್ದಕ್ಕೆ ಉರ್ಸುಲಾ ತನ್ನನ್ನು ತಾನೇ ಹಳಿದುಕೊಂಡಳು. ಆದರೆ ಅವನು ಮನೆಗೆ ಮತ್ತೆ ಬಂದಾಗ ಮತ್ತು ಕೆಲಸಮಾಡುವ ವೇಳೆಯಲ್ಲಿ ಕರ್ನಲ್ ಅವನನ್ನು ರೂಮಿನೊಳಗೆ ಬಿಟ್ಟುಕೊಂಡದ್ದನ್ನು ಗಮನಿಸಿದ. ಅವಳು ಹಳೆಯ ನೆನಪುಗಳನ್ನು ಪರೀಕ್ಷಿಸಿ ನೋಡಿದಾಗ, ಅವನು ಎಳೆಯವನಾಗಿದ್ದಾಗ ಯಾವಾಗಲೋ ತನ್ನ ಅವಳಿ ಸೋದರ ಸ್ಥಾನವನ್ನು ಅದಲು ಬದಲು ಮಾಡಿಕೊಂಡಿದ್ದಾನೆ ಎಂದುಕೊಂಡಳು. ಮತ್ತೊಬ್ಬನನ್ನಲ್ಲ, ಇವನನ್ನು ಅವ್ರೇಲಿಯಾನೋ ಎಂದು ಕರೆಯಬೇಕಾಗಿತ್ತು ಎನ್ನುವ ನಂಬಿಕೆಯನ್ನು ಖಚಿತ ಪಡಿಸಿಕೊಂಡಳು. ಯಾರಿಗೂ ಅವನ ಜೀವನದ ವಿವರಗಳು ಗೊತ್ತಿರಲಿಲ್ಲ. ಅವನಿಗೊಂದು ನಿಶ್ಚಿತವಾದ ನೆಲೆ ಇಲ್ಲವೆಂದು ತಿಳಿಯಿತು. ಅವನು ಪಿಲರ್ ಟೆರ್‍ನೆರಾಳ ಮನೆಯಲ್ಲಿ ಕಾಳಗದ ಹುಂಜಗಳನ್ನು ಬೆಳೆಸುತ್ತಾನೆ ಮತ್ತು ಕೆಲವು ಸಲ ಮಲಗಲು ಅಲ್ಲೆ ಉಳಿಯುತ್ತಾನೆಂದೂ ಆದರೆ ಹೆಚ್ಚು ಕಡಿಮೆ ಯಾವಾಗಲೂ ರಾತ್ರಿಯನ್ನು ಫ್ರೆಂಚ್ ಹೆಂಗಸರ ರೂಮಿನಲ್ಲಿ ಕಳೆಯುತ್ತಾನೆ ಎಂದು ಗೊತ್ತಾಯಿತು. ಅವನು ಅಲೆಮಾರಿಯಾಗಿ ಯಾರ ಜೊತೆಗೂ ಸಂಬಂಧ ಬೆಳೆಸದೆ, ಯಾವ ಮಹಾತ್ವಾಕಾಂಕ್ಷೆ ಇಲ್ಲದೆ, ಉರ್ಸುಲಾಳ ಖಗೋಳ ವ್ಯವಸ್ಥೆಯಲ್ಲಿ ತಿರುಗಾಡುವವನಂತಿದ್ದ.
ವಾಸ್ತವವಾಗಿ ಹೊಸೆ ಅರ್ಕಾದಿಯೋ ಸೆಗುಂದೋ ಆ ಮನೆಯವನಾಗಿರಲಿಲ್ಲ. ಅದೊಂದು ದಿನ ಬೆಳಿಗ್ಗೆ ಕರ್ನಲ್ ಗೆರಿನೆಲ್ಡೋ ಮಾರ್ಕೆಜ್ ಅವನನ್ನು ಸೈನಿಕ ಶಿಬಿರದ ಹತ್ತಿರಕ್ಕೆ ಗುಂಡಿಕ್ಕಿ ಸಾಯಿಸುವುದನ್ನು ನೋಡುವುದಕ್ಕೆ ಮತ್ತು ಗುಂಡಿಕ್ಕಿಸಿಕೊಳ್ಳುವವನ ಕಳೆಯಿರದ ಮುಖ ಹಾಗೂ ಅಣಕು ಮೆಲುನಗುವನ್ನು ಇಡೀ ಜೀವನ ಮರೆಯದಿರಲಿ ಎಂದು ಕರೆದುಕೊಂಡು ಹೋದಾಗಿನಿಂದ ಅವನು ಯಾರ ಮನೆಯವನೂ ಆಗಿರಲು ಸಾಧ್ಯವಿರಲಿಲ್ಲ. ಅದು ಅವನ ಅತ್ಯಂತ ಹಳೆಯ ನೆನಪಾಗಿರಲಿಲ್ಲ. ಆದರೆ ಅವನಿಗೆ ಚಿಕ್ಕಂದಿನ ನೆನಪುಗಳಲ್ಲಿ ಅದೊಂದು. ಇನ್ನೊಂದು – ಹಳೆ ಕಾಲದ ನಡುವಂಗಿ ಮತ್ತು ಕಾಗೆಯ ರೆಕ್ಕೆಗಳಂತಿದ್ದ ಹ್ಯಾಟ್ ಹಾಕಿಕೊಂಡಿದ್ದ ವಯಸ್ಸಾದವನೊಬ್ಬ ಹೇಳಿದ ಅಲೌಕಿಕ ಸಂಗತಿಗಳು. ಅವನಿಗೆ ಅವುಗಳನ್ನು ನಿರ್ದಿಷ್ಟವಾಗಿ ಯಾವ ಕಾಲಕ್ಕೂ ಸೇರಿಸಲು ಸಾಧ್ಯವಿರಲಿಲ್ಲ. ಅದೊಂದು ಅನಿಶ್ಚಿತವಾದ ನೆನಪು. ಯಾವುದೇ ಉಪದೇಶಗಳಿಲ್ಲದ್ದು, ಹಳೆಯ ನೋವುಗಳಿಲ್ಲದ್ದು, ಗುಂಡಿಕ್ಕಿಸಿಕೊಂಡ ಮನುಷ್ಯನಿಗೆ ವಿರುದ್ಧವಾದದ್ದು ಮತ್ತು ನಿಜಕ್ಕೂ ಅವನ ಜೀವನಕ್ಕೊಂದು ದಿಕ್ಕು ತೋರಿಸಿದ್ದು. ಅಲ್ಲದೆ ಅವನು ವಯಸ್ಸಾದಂತೆಲ್ಲ ಗತಿಸುವ ಕಾಲ ಹೆಚ್ಚು ಹತ್ತಿರಕ್ಕೆ ಬರುತ್ತಿದೆ ಎನ್ನುವ ಹಾಗೆ, ಆ ನೆನಪಿಗೆ ಮತ್ತಷ್ಟು ಹೆಚ್ಚು ಸ್ಪಷ್ಟವಾಗಿ ಹೋಗುತ್ತಿದ್ದ. ಉರ್ಸುಲಾ ಹೊಸೆ ಅರ್ಕಾದಿಯೋ ಸೆಗುಂದೋನನ್ನು ಬಳಸಿಕೊಂಡು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನನ್ನು ಅವನ ನಿರ್ಬಂಧದಿಂದ ಹೊರಗೆ ತರಲು ಪ್ರಯತ್ನಿಸಿದಳು. ಅವಳು, “ಅವನನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗು. ಅವನಿಗೆ ಸಿನಿಮಾ ಇಷ್ಟವಾಗದಿದ್ದರೂ ಕೂಡ ಒಂದಿಷ್ಟು ಒಳ್ಳೆಯ ಗಾಳಿ ಉಸಿರಾಡಲಿ” ಎಂದು ಅವನಿಗೆ ಹೇಳಿದಳು. ಆದರೆ ಅವಳು ಕೇಳಿಕೊಂಡಿದ್ದು ಕರ್ನಲ್‌ನಂತೆ ಅವನ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ ಎಂದು ತಿಳಿದುಕೊಳ್ಳುವುದಕ್ಕೆ ಅವಳಿಗೆ ಬಹಳ ಕಾಲ ಬೇಕಾಗಲಿಲ್ಲ. ಅಲ್ಲದೆ ಅವರಿಬ್ಬರೂ ಭೇದಿಸಲಾರದಂಥ ವಿಶ್ವಾಸದ ಕವಚ ಧರಿಸಿದ್ದರು. ಆದರೆ ಅವರಿಬ್ಬರು ವರ್ಕ್‌ಶಾಪಿನಲ್ಲಿ ಬಾಗಿಲು ಹಾಕಿಕೊಂಡು ಏನು ಮಾತಾಡುತ್ತಾರೆ ಎಂದು ಯಾರಿಗೂ ತಿಳಿಯದಿದ್ದರೂ ಒಂದೇ ತೆರನಾದ ಆಸಕ್ತಿಯಿಂದ ಒಬ್ಬರಿಗೊಬ್ಬರು ಬಹಳ ಹತ್ತಿರವಾದವರೆಂದರೆ ಇಡೀ ಸಂಸಾರದಲ್ಲಿ ಅವರಿಬ್ಬರೇ ಎಂದು ಉರ್ಸುಲಾಗೆ ಅರ್ಥವಾಗಿತ್ತು.
ನಿಜ ಸಂಗತಿಯೆಂದರೆ ಹೊಸೆ ಅರ್ಕಾದಿಯೋ ಸೆಗುಂದೋ ಕೂಡ ಕರ್ನಲ್‌ನನ್ನು ಅವನ ಕೋಶದಿಂದ ಹೊರಗೆ ತರಲು ಸಾಧ್ಯವಾಗುತ್ತಿರಲಿಲ್ಲ. ಸ್ಕೂಲ್ ಹುಡುಗಿಯರ ಆಕ್ರಮಣ ಅವನ ತಾಳ್ಮೆಯ ಮಟ್ಟವನ್ನು ಕಡಿಮೆ ಮಾಡಿತ್ತು. ತನ್ನ ಮದುವೆಯ ಬೆಡ್‌ರೂಮ್‌ನಲ್ಲಿ ರೆಮಿದಿಯೋಸ್‌ಳ ತೀರದಾಸೆಯ ಬೊಂಬೆಗಳು ಹಾಳಾಗಿದ್ದರೂ ನುಸಿಹುಳುಗಳ ಹಾವಳಿ ತಾನೇ ತಾನಾಗಿದೆ ಎನ್ನುವ ನೆಪದಿಂದ ಅವನು ವರ್ಕ್ ಶಾಪ್‌ನಲ್ಲಿ ಮಂಚ ಹಾಕಿಕೊಂಡು ತನ್ನ ಅಗತ್ಯಗಳಿಗೆ ಮಾತ್ರ ಅವನು ಅಂಗಳಕ್ಕೆ ಹೋಗುತ್ತಿದ್ದ. ಉರ್ಸುಲಾ ಅವನ ಜೊತೆ ತೀರ ಸಣ್ಣ ಸಂಭಾಷಣೆಯಲ್ಲಿ ತೊಡಗುವುದಕ್ಕೂ ಆಗುತ್ತಿರಲಿಲ್ಲ. ಅವನು ಸಣ್ಣ ಮೀನು ಮಾಡಿ ಮುಗಿಸುವ ತನಕ ಕೊಟ್ಟ ಊಟದ ಕಡೆ ಕಣ್ಣೆತ್ತಿ ನೋಡದೆ ಕೆಲಸ ಮಾಡುವ ಬೆಂಚಿನ ಮೇಲೆ ಒಂದು ಕಡೆ ಇಟ್ಟಿರುತ್ತಾನೆಂದು ಅವಳಿಗೆ ಗೊತ್ತಿತ್ತು. ಅಲ್ಲದೆ ಸೂಪ್ ಚೆನ್ನಾಗಿಲ್ಲದಿದ್ದರೂ ಅಥವಾ ಮಾಂಸ ತಣ್ಣಗಾಗಿದ್ದರೂ ಸರಿಯೆ, ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಅವನ ಮುಪ್ಪಿನ ಹುಚ್ಚಾಟದ ಯುದ್ಧಕ್ಕೆ ಬೆಂಬಲ ಸೂಚಿಸಲು ನಿರಾಕರಿಸಿದ ಮೇಲೆ ಅವನು ಹೆಚ್ಚು ಹೆಚ್ಚು ಕಠೋರನಾದ. ಅವನು ತನ್ನೊಳಗೆ ತಾನೆ ಮುಳುಗಿಹೋದ ಮತ್ತು ಕೊನೆಗೆ ಮನೆಯವರು ಅವನು ಸತ್ತು ಹೋಗಿದ್ದಾನೆ ಎನ್ನುವ ಹಾಗೆ ಭಾವಿಸಿದರು. ಅವನು ಅದೊಂದು ಅಕ್ಟೋಬರ್ ಹನ್ನೊಂದನೇ ತಾರೀಖು ಸರ್ಕಸ್ ಪೆರೇಡೊಂದನ್ನು ನೋಡುವುದಕ್ಕೆ ಮುಂಬಾಗಿಲಿಗೆ ಹೋಗುವ ತನಕ ಅವನಲ್ಲಿ ಮಾನವ ಸಹಜವಾದ ಯಾವುದೇ ಪ್ರತಿಕ್ರಿಯೆ ಕಂಡಿರಲಿಲ್ಲ. ಹಿಂದಿನ ವರ್ಷಗಳಲ್ಲಿ ಇದ್ದ ದಿನಗಳಂತೆಯೇ ಆ ದಿನವೂ ಇತ್ತು. ಬೆಳಗಿನ ಜಾವ ಐದು ಗಂಟೆಗೆ ಹೊರಗಡೆಯಿಂದ ಕೇಳಿ ಬರುತ್ತಿದ್ದ ಮಿಡತೆ ಮತ್ತು ಕಾಡುಗಪ್ಪೆಗಳ ಶಬ್ದ ಅವನನ್ನು ಎಚ್ಚರಗೊಳಿಸಿತು. ಶನಿವಾರದಿಂದ ಬೀಳುತ್ತಿದ್ದ ತುಂತುರು ಮಳೆ ಇನ್ನೂ ನಿಂತಿರಲಿಲ್ಲ ಮತ್ತು ಕೈತೋಟದಲ್ಲಿ ಎಲೆಗಳ ಮೇಲೆ ಬಿದ್ದ ಶಬ್ದವನ್ನು ಕೇಳಿಸಿಕೊಳ್ಳುವ ಅಗತ್ಯವಿರಲಿಲ್ಲ. ಏಕೆಂದರೆ ಹೇಗೂ ಅವನಿಗೆ ಚಳಿ ಒಳಹೊಕ್ಕಿತ್ತು. ಅವನು ಎಂದಿನಂತೆ ವುಲನ್ ಹೊದಿಕೆ ಹೊದ್ದುಕೊಂಡು ಹತ್ತಿಯ ಉದ್ದನೆ ಚಡ್ಡಿ ಹಾಕಿಕೊಂಡಿದ್ದ. ಹಳೆಯದಾಗಿ ಮಂಕು ಬಡಿದಿದ್ದ ಅದನ್ನು ಅವನು “ಶಿಲಾಯುಗದ ಚಡ್ಡಿ”ಗಳೆಂದು ಕರೆಯುತ್ತಿದ್ದ. ಅವನು ಬಿಗಿಯಾದ ಪ್ಯಾಂಟ್‌ಗಳನ್ನು ಹಾಕಿಕೊಂಡ. ಆದರೆ ಗುಂಡಿ ಹಾಕಿಕೊಳ್ಳಲಿಲ್ಲ. ಹಾಗೂ ಯಾವಾಗಲೂ ಮಾಡುವಂತೆ ಶರಟಿನ ಕಾಲರಿಗೆ ಬಂಗಾರದ ಗುಂಡಿ ಹಾಕಿಕೊಳ್ಳಲಿಲ್ಲ. ಏಕೆಂದರೆ ಅವನು ಸ್ನಾನ ಮಾಡಬೇಕೆಂದಿದ್ದ. ಅನಂತರ ಅವನು ಹೊದಿಕೆಯನ್ನು ತಲೆಯ ಮೇಲೆ ಎಳೆದುಕೊಂಡು ಬೆರಳುಗಳಿಂದ ಜೋಲುತ್ತಿದ್ದ ಮೀಸೆಯನ್ನು ನೀವಿಕೊಂಡ ಮತ್ತು ಅಂಗಳದಲ್ಲಿ ಉಚ್ಚೆ ಹೊಯ್ಯಲು ಹೋದ. ಸೂರ್ಯ ಹುಟ್ಟುವುದಕ್ಕೆ ಇನ್ನೂ ಬಹಳ ಸಮಯವಿದ್ದುದರಿಂದ, ಹೊಸೆ ಅರ್ಕಾದಿಯೋ ಬ್ಯುಂದಿಯಾ ಮಳೆಗೆ ಸಿಕ್ಕ ಕೊಳೆತು ಹೋಗಿದ್ದ ತೆಂಗಿನ ಗರಿಗಳ ಚಪ್ಪರದ ಕೆಳಗೆ ನಿದ್ದೆ ಮಾಡುತ್ತಿದ್ದ. ಅವನು ಹಿಂದೆಯೂ ನೋಡದೆ ಇರುತ್ತಿದ್ದಂತೆ ಈಗಲೂ ಅವನನ್ನು ನೋಡಲಿಲ್ಲ ತನ್ನ ಶೂಗಳ ಮೇಲೆ ಹರಡಿ ಬಿದ್ದ ಬೆಚ್ಚನೆ ಉಚ್ಚೆಯಿಂದ ತನ್ನ ತಂದೆಯ ಭೂತ ಎಚ್ಚರಗೊಂಡು ಹೇಳಿದ ಅರ್ಥವಾಗದಂಥ ಮಾತುಗಳು ಅವನಿಗೆ ಕೇಳಿಸಲಿಲ್ಲ. ಅವನು ಚಳಿ ಮತ್ತು ಮುತ್ತಿದ ಅಕ್ಟೋಬರ್‌ನ ಮಂಜಿನಿಂದಾಗಿ ಸ್ನಾನ ಮಾಡುವುದನ್ನು ಮುಂದಕ್ಕೆ ಹಾಕಿದ. ಅವನು ವರ್ಕ್ ಶಾಪಿಗೆ ವಾಪಸ್ಸಾಗುವಾಗ ಸಾಂತ ಸೋಫಿಯಾ ದೆಲಾ ಪಿಯದಾದ್ ಸ್ಟೋವ್ ಹಚ್ಚಿ, ಬರುತ್ತಿದ್ದ ಬತ್ತಿಯ ವಾಸನೆ ಬಡಿದು, ಸಕ್ಕರೆ ಹಾಕಿಕೊಂಡು ಬಟ್ಟಲಿನಲ್ಲಿ ತೆಗದುಕೊಂಡು ಹೋಗಲು ಅಡುಗೆ ಮನೆಯಲ್ಲಿ ಕಾಫಿ ಕುದಿಯಲಿ ಎಂದು ಕಾಯುತ್ತ ನಿಂತ ಸಾಂತ ಸೋಫಿಯಾ ದೆಲಾ ಪಿಯದಾದ್ ಪ್ರತಿದಿನ ಬೆಳಿಗ್ಗೆ ಕೇಳುವಂತೆ ಅಂದು ಯಾವ ವಾರ ಎಂದು ಕೇಳಿದಳು. ಅವನು ಆ ದಿನ ಮಂಗಳವಾರ, ಅಕ್ಟೋಬರ್ ಹನ್ನೊಂದು ಎಂದ. ಆ ಸ್ಟೋವ್‌ನ ಜ್ವಾಲೆ ಎಂದಿಗೂ ಸಂಪೂರ್ಣ ಅಸ್ತಿತ್ವದಲ್ಲಿ ಇರದಂತಿದ್ದ ಅವಳ ಮೇಲೆ ಬೆಳಕು ಬೀರುತ್ತಿರುವುದನ್ನು ನೋಡುತ್ತಿದ್ದ ಹಾಗೆ, ಹಿಂದೊಂದು ಅಕ್ಟೋಬರ್ ಹನ್ನೊಂದರಂದು ಯುದ್ಧದ ಮಧ್ಯದಲ್ಲಿ ತಾನು ಜೊತೆಯಲ್ಲಿ ಮಲಗಿದ ಹೆಂಗಸು ಸತ್ತು ಹೋದಳು ಎನ್ನುವ ಕ್ರೂರ ಅನ್ನಿಸಿಕೆಯಿಂದ ಹಠಾತ್ ಎಚ್ಚರಗೊಂಡದ್ದು ನೆನಪಾಯಿತು. ಅವಳು ಸತ್ತಿದ್ದಳು ಮತ್ತು ಅವನು ಆ ದಿನವನ್ನು ಮರೆಯಲು ಸಾಧ್ಯವಾಗಿರಲಿಲ್ಲ. ಏಕೆಂದರೆ ಒಂದು ಗಂಟೆ ಮುಂಚೆ ಅವಳು ಅದು ಯಾವ ದಿನವೆಂದು ಕೇಳಿದ್ದಳು. ಅದು ಈಗಲೂ ನೆನಪಿದ್ದರೂ ಕೂಡ ಯಾವ ಮಟ್ಟದ ತನಕ ಅವನಲ್ಲಿನ ಮುಂಗಾಣುವ ಶಕ್ತಿ ತನ್ನನ್ನು ಬಿಟ್ಟು ಹೋಗಿದೆ ಎನ್ನುವುದರ ಅರಿವು ಅವನಿಗಿರಲಿಲ್ಲ. ಕಾಫಿ ಕುದಿಯುತ್ತಿದ್ದರೂ ಕೇವಲ ಕುತೂಹಲದಿಂದ, ಕೊಂಚವೂ ಮನೋವ್ಯಥೆ ಇಲ್ಲದೆ ತಿಳಿಯದ ಆ ಹೆಂಗಸಿನ ಹೆಸರನ್ನು ಹಾಗೂ ಕತ್ತಲಲ್ಲಿ ತನ್ನ ಹಾಸಿಗೆಗೆ ಬಂದದ್ದರಿಂದ ಕಾಣದ ಅವಳ ಮುಖವನ್ನು ಕುರಿತು ಯೋಚಿಸುತ್ತಿದ್ದ. ಆದರೂ ಸಹ ಅದೇ ರೀತಿಯಲ್ಲಿ ಅವನ ಬಳಿ ಬಂದ ಅನೇಕ ಟೊಳ್ಳು ಹೆಂಗಸರಲ್ಲಿ ಮೊದಲನೆ ಭೇಟಿಯ ದಣಿವಿನಲ್ಲಿ, ಇನ್ನೇನು ಕಣ್ಣೀರು ಕಳಚಿ ಬೀಳುವಂತಿದ್ದ ಮತ್ತು ಸಾಯಲು ಒಂದು ಗಂಟೆಯಷ್ಟೆ ಇದ್ದ ಅವಳು, ಸಾಯುವ ತನಕ ತನ್ನನ್ನು ಪ್ರೀತಿಸುತ್ತೇನೆ ಎಂದವಳು ಅವಳೇ ಎನ್ನುವುದು ಅವನಿಗೆ ನೆನಪಿರಲಿಲ್ಲ. ಅವನು ಅವಳ ಹಾಗೂ ಇತರರ ಬಗ್ಗೆ ಮತ್ತೆ ಯೋಚಿಸಲಿಲ್ಲ. ಆವಿ ಏಳುತ್ತಿದ್ದ ಕಪ್ಪನ್ನು ಹಿಡಿದುಕೊಂಡು ವರ್ಕ್‌ಶಾಪಿಗೆ ಹೋಗಿ ತಗಡಿನ ಪಾತ್ರೆಯಲ್ಲಿದ್ದ ಸಣ್ಣ ಬಂಗಾರದ ಮೀನುಗಳು ಎಷ್ಟಿವೆ ಎಂದು ಎಣಿಸಲು ಲೈಟ್ ಹಾಕಿದ. ಅದರಲ್ಲಿ ಹದಿನೇಳಿದ್ದವು. ಅವನು ಅವುಗಳನ್ನು ಮಾರಬಾರದೆಂದು ತೀರ್ಮಾನಿಸಿದ್ದರಿಂದ ಪ್ರತಿ ದಿನ ಎರಡು ಮೀನುಗಳನ್ನು ಮಾಡುತ್ತಿದ್ದ ಮತ್ತು ಇಪ್ಪತ್ತೈದು ಮಾಡಿದ ಮೇಲೆ ಅವುಗಳನ್ನು ಕರಗಿಸಿ ಪುನ: ಮಾಡಲು ಪ್ರಾರಂಭಿಸುತ್ತಿದ್ದ. ಇಡೀ ಬೆಳಿಗ್ಗೆ ತನ್ಮಯತೆಯಿಂದ ಏನನ್ನೂ ಯೋಚಿಸದೆ ಕೆಲಸ ಮಾಡುತ್ತಿದ್ದ. ಹತ್ತು ಗಂಟೆಯ ಹೊತ್ತಿಗೆ ಮಳೆ ಜೋರಾಯಿತು ಮತ್ತು ವರ್ಕ್‌ಶಾಪಿನ ಪಕ್ಕದಲ್ಲಿ ಯಾರೋ ಮನೆಯೊಳಗೆ ನೀರು ನುಗ್ಗುವ ಮುಂಚೆ ಬಾಗಿಲು ಹಾಕಿಕೊಳ್ಳಿ ಎಂದು ಕೂಗುತ್ತ ಓಡಿದರು. ಉರ್ಸುಲಾ ಊಟ ತೆಗೆದುಕೊಂಡು ಬಂದು ಲೈಟ್ ಆರಿಸುವ ತನಕ ಅವನು ತನ್ನ ಬಗ್ಗೆ ಕೂಡ ಯೋಚಿಸದೆ ಕೆಲಸ ಮಾಡುತ್ತಿದ್ದ.
ಅವಳು, “ಎಂಥ ಮಳೆ” ಎಂದಳು.
ಅವನು, “ಅಕ್ಟೋಬರ್” ಎಂದ.
ಅವನು ಅದನ್ನು ಹೇಳಿದಾಗ ಮಾಡುತ್ತಿದ್ದ ದಿನದ ಮೊದಲನೆ ಸಣ್ಣ ಮೀನಿನಿಂದ ಕಣ್ಣು ಕೀಳಲಿಲ್ಲ. ಏಕೆಂದರೆ ಅವನು ಅದರ ಕಣ್ಣಿಗೆ ರೂಬಿಗಳನ್ನು ಇಡುತ್ತಿದ್ದ. ಅದನ್ನು ಮುಗಿಸಿ ಉಳಿದವುಗಳ ಜೊತೆ ಪಾತ್ರೆಯಲ್ಲಿ ಇಟ್ಟ ಮೇಲೆ ಅವನು ಸೂಪ್ ಕುಡಿಯಲು ಪ್ರಾರಂಭಿಸಿದ. ಅನಂತರ ತುಂಬ ನಿಧಾನವಾಗಿ ಈರುಳ್ಳಿಯ ಜೊತೆ ರೋಸ್ಟ್ ಮಾಡಿದ ಮಾಂಸದ ತುಣುಕು, ಅನ್ನ, ಕರಿದ ಬಾಳೆ ಎಸಳುಗಳನ್ನು ಒಟ್ಟಿಗೆ ಒಂದೇ ಪ್ಲೇಟ್‌ನಲ್ಲಿ ಹಾಕಿಕೊಂಡು ತಿಂz. ಎಂಥ ಒಳ್ಳೆಯ ಅಥವಾ ಕೆಟ್ಟ ಪರಿಸ್ಥಿತಿಯಲ್ಲೂ ಅವನ ಹಸಿವು ಬದಲಾಗುತ್ತಿರಲಿಲ್ಲ. ಊಟವಾದ ಮೇಲೆ ಜೊಂಪು ಹತ್ತುತ್ತಿತ್ತು. ಅವನು ವೈeನಿಕವಾದ ಮೂಢ ನಂಬಿಕೆಯಿಂದ ತಿಂದದ್ದು ಅರಗಲು ಎರಡು ಗಂಟೆ ಬಿಡುವ ತನಕ ಕೆಲಸ ಮಾಡುತ್ತಿರಲಿಲ್ಲ, ಸ್ನಾನ ಮಾಡುತ್ತಿರಲಿಲ್ಲ ಅಥವಾ ರತಿ ವಿಲಾಸದಲ್ಲಿರುತ್ತಿರಲಿಲ್ಲ. ಆ ನಂಬಿಕೆ ಅವನಲ್ಲಿ ಅದೆಷ್ಟು ಆಳವಾಗಿ ಬೇರೂರಿತ್ತೆಂದರೆ ಅನೇಕ ಸಲ ಅವನು ಸೈನಿಕರು ಅಜೀರ್ಣದ ತೊಂದರೆಗೆ ಒಳಗಾಗಬಾರದೆಂದು ಮಿಲಿಟರಿ ಕಾರ್ಯಾಚರಣೆಯನ್ನು ತಡೆಹಿಡಿಯುತ್ತಿದ್ದ. ಅವನು ಹಗ್ಗದ ಮಂಚದ ಮೇಲೆ ಮಲಗಿ ಸಣ್ಣ ಚಾಕುವಿನಿಂದ ಕಿವಿಯೊಳಗಿನ ಕೊಳೆ ತೆಗೆದ ನಂತರ ಕೆಲವು ನಿಮಿಷಗಳಲ್ಲಿ ನಿದ್ದೆ ಹೋದ. ಅವನು ಬಿಳಿ ಬಣ್ಣದ ಗೋಡೆಗಳಿರುವ ಮನೆಯೊಂದರಲ್ಲಿ ಹೋಗುತ್ತಿರುವಂತೆ ಕನಸು ಕಂಡ ಮತ್ತು ಅದನ್ನು ಪ್ರವೇಶ ಮಾಡಿದ ಮನುಷ್ಯರಲ್ಲಿ ಮೊದಲನೆಯವನು ಎನ್ನುವುದರಿಂದ ಗಲಿಬಿಲಿಗೊಂಡ. ಕನಸಿನಲ್ಲಿ ಅವನು ಇದೇ ರೀತಿಯ ಕನಸನ್ನು, ಹಿಂದಿನ ದಿನ ರಾತ್ರಿ ಮತ್ತು ಕಳೆದ ವರ್ಷಗಳಲ್ಲಿ ಅನೇಕ ರಾತ್ರಿ ಕಂಡದ್ದಾಗಿ ನೆನಪಿಸಿಕೊಂಡ ಮತ್ತು ಎಚ್ಚರವಾದಾಗ ಆ ಕನಸು ಅಳಿಸಿ ಹೋಗುತ್ತದೆ ಏಕೆಂದರೆ ಮತ್ತೆ ಮತೆ; ಬೀಳುತ್ತಿದ್ದ ಆ ಕನಸಿನ ಗುಣ ಕನಸಿನಲ್ಲಿ ಮಾತ್ರ ನೆನಪಿಗೆ ಬರುವಂಥಾದ್ದು ಎಂದು ಅವನಿಗೆ ಗೊತ್ತಿತ್ತು. ಸ್ವಲ್ಪ ಸಮಯವಾದ ನಂತರ ಕ್ಷೌರಿಕ ವರ್ಕ್‌ಶಾಪಿನ ಬಾಗಿಲನ್ನು ಬಡಿದಾಗ ತನಗೇ ತಿಳಿಯದ ಹಾಗೆ ಕೆಲವು ನಿಮಿಷ ನಿದ್ದೆ ಹೋದದ್ದಲ್ಲದೆ ಯಾವುದೇ ಕನಸು ಕಾಣಲು ಸಮಯವಿಲ್ಲವೆಂಬ ಭಾವನೆಯಿಂದ ಎಚ್ಚರಗೊಂಡ.
ಅವನು ಕ್ಷೌರಿಕನಿಗೆ, “ಇವತ್ತು ಬೇಡ, ಶುಕ್ರವಾರ ಆಗ್ಲಿ” ಎಂದು ಹೇಳಿದ.
ಅವನಿಗೆ ಮೂರು ದಿನಗಳಷ್ಟು ಬೆಳೆದ ಬಿಳಿ ಗಡ್ಡವಿತ್ತು. ಶೇವ್ ಮಾಡಿಕೊಳ್ಳಬೇಕೆಂದು ಅನ್ನಿಸಲಿಲ್ಲ. ಏಕೆಂದರೆ ಶುಕ್ರವಾರ ಹೇರ್‌ಕಟ್ ಮಾಡಿಸಿಕೊಳ್ಳುವುದರಿಂದ ಎರಡನ್ನೂ ಒಟ್ಟಿಗೇ ಮಾಡಿದರಾಯಿತು ಎಂದುಕೊಂಡ. ಬೇಡದ ನಿದ್ದೆಯಿಂದ ಬೆವರಿನ ಒದ್ದೆ ಕಂಕುಳಲ್ಲಿನ ಗಾಯದ ಕಲೆಗಳನ್ನು ಉಬ್ಬಿಸಿತ್ತು. ಆಕಾಶ ನಿರ್ಮಲವಾಗಿತ್ತು ಆದರೆ ಸೂರ್ಯ ಹೊರಬಂದಿರಲಿಲ್ಲ. ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಹುಳಿ ತೇಗು ತೇಗಿದಕ್ಕೆ ಬಾಯಿಗೆ ಬಂತು ಮತ್ತು ಅದು ಹೆಗಲ ಮೇಲೆ ಹೊದಿಕೆ ಹೊದ್ದು ಕೊಂಡು ಕಕ್ಕಸ್ಸಿಗೆ ಹೋಗು ಎನ್ನುವ ಒಳಗಿನ ಅಪ್ಪಣೆಯಂತೆ ತೋರಿತು. ಅವನ ಎಂದಿನ ಅಭ್ಯಾಸ, ಇದು ಕೆಲಸ ಮಾಡುವ ಸಮಯ ಎಂದು ಹೇಳುವ ತನಕ ಅವನು ಮರದ ಪೆಟ್ಟಿಗೆ ಹೊಮ್ಮಿಸುತ್ತಿದ್ದ ದಟ್ಟವಾದ ಹುದುಗಿಗೆ ಅಗತ್ಯವಾದದ್ದಕಿಂತ ಹೆಚ್ಚಿನ ಸಮಯ ಆತುಕೊಂಡು ನಿಂತಿದ್ದ. ಅವನು ಯೋಚಿಸುತ್ತಿದ್ದ ಸಮಯದಲ್ಲಿ ಅಂದು ಮಂಗಳವಾರ ಹಾಗೂ ಆ ದಿನ ಬಾಳೆ ತೋಟದ ಕಂಪನಿಯಲ್ಲಿ ಸಂಬಳದ ದಿನವಾದ್ದರಿಂದ ಹೊಸೆ ಅರ್ಕಾದಿಯೋ ಸೆಗುಂದೋ ವರ್ಕ್‌ಶಾಪಿಗೆ ಬಂದಿಲ್ಲ ಎನ್ನುವುದನ್ನು ಮತ್ತೆ ನೆನಪಿಸಿಕೊಂಡ. ಆ ನೆನಪುಗಳು ಹಿಂದಿನ ಕೆಲವು ವರ್ಷಗಳ ಯುದ್ಧದ ಬಗ್ಗೆ ಅವನಿಗೇ ಅರಿವಾಗದಂತೆ ಯೋಚಿಸುವಂತೆ ಮಾಡಿತು. ಅವನು ಕರ್ನಲ್ ಗೆರಿನೆಲ್ಡೊ ಮಾರ್ಕೆಜ್ ಮುಖದ ಮೇಲೆ ಬಿಳಿಯ ನಕ್ಷತ್ರವಿರುವ ಕುದುರೆಯನ್ನು ಕೊಡುತ್ತೇನೆಂದು ಮಾತುಕೊಟ್ಟಿದ್ದು ಮತ್ತು ಅವನು ಅದರ ಬಗ್ಗೆ ಮತ್ತೆ ಮಾತಾಡದಿದ್ದನ್ನು ನೆನಪಿಸಿಕೊಂಡ. ಅನಂತರ ಅವನು ಚದುರಿ ಹೋದ ಘಟನೆಗಳನ್ನು ನೆನಪಿಸಿಕೊಂಡು ಅವುಗಳ ಬಗ್ಗೆ ಯಾವುದೇ ತೀರ್ಮಾನಗೊಳ್ಳದೆ ಏನೂ ಯೋಚಿಸಲು ಸಾಧ್ಯವಿಲ್ಲದ್ದರಿಂದ, ಕಳಚಿಕೊಳ್ಳಲಾಗದ ನೆನಪುಗಳು ಯಾವುದೇ ಭಾವನೆಯನ್ನು ಸ್ಫುರಿಸದ ಹಾಗೆ ನಿರ್ಭಾವದಿಂದ ಯೋಚಿಸುವುದನ್ನು ಕಲಿತಿದ್ದ. ವರ್ಕ್‌ಶಾಪಿಗೆ ವಾಪಸಾಗುವ ದಾರಿಯಲ್ಲಿ ಆಗಲೇ ಒಣ ಹವೆ ಇರುವುದನ್ನು ಗಮನಿಸಿ ಅದು ಸ್ನಾನ ಮಾಡಲು ಸರಿಯಾದ ಸಮಯ ಎಂದುಕೊಂಡ. ಆದರೆ ಅವನಿಗಿಂತ ಮುಂಚೆ ಅಮರಾಂತ ಅಲ್ಲಿಗೆ ಹೋಗಿದ್ದಳು. ಆದ್ದರಿಂದ ಅವನು ದಿನದ ಎರಡನೆ ಸಣ್ಣ ಮೀನು ಮಾಡುವ ಕೆಲಸ ಪ್ರಾರಂಭಿಸಿದ. ಅವನು ಬಾಲಕ್ಕೆ ಕೊಂಡಿ ಸಿಕ್ಕಿಸುತ್ತಿರುವಾಗ ಸೂರ್ಯನಿಂದ ಬಂದ ಅಗಾಧ ಬೆಳಕು ಮೀನು ಹಿಡಿಯುವ ದೋಣಿಯ ಹಾಗೆ ಓಲಾಡಿತು. ಮೂರು ದಿನ ಬಿದ್ದ ತುಂತುರು ಮಳೆಯಿಂದ ತೊಳೆದ ಗಾಳಿಯಲ್ಲಿ ಹಾರುವ ಇರುವೆಗಳಿದ್ದವು. ಅವನು ನಾಲ್ಕು ಗಂಟೆಯಾಗಿ ಹತ್ತು ನಿಮಿಷಕ್ಕೆ ಹೊರಗೆ ಅಂಗಳಕ್ಕೆ ಹೋದಾಗ, ದೂರದಿಂದ ತಾಮ್ರದ ಉಪಕರಣಗಳ ಶಬ್ದ, ತಾಮ್ರದ ಡ್ರಮ್ಮಿನ ಹೊಡೆತ ಮತ್ತು ಮಕ್ಕಳ ಕೂಗಾಟ ಕೇಳಿಸಿತು. ಅವನು ಹರೆಯದ ನಂತರ ಮೊದಲ ಬಾರಿಗೆ ಹಂಬಲಗಳ ಬಲೆಗೆ ಬಿದ್ದದ್ದು ಮತ್ತು ಆ ಅದ್ಭುತ ಮಧ್ಯಾಹ್ನ, ಜಿಪ್ಸಿಗಳ ಬಳಿಗೆ ಐಸ್ ನೋಡಲು ತನ್ನ ತಂದೆ ಕರೆದುಕೊಂಡು ಹೋದದ್ದನ್ನು ಮರು ಜೀವಿಸಿದ. ಸಾಂತ ಸೋಫಿಯಾ ದೆಲಾ ಪಿಯದಾದ್ ಅಡುಗೆ ಮನೆಯಲ್ಲಿ ಮಾಡುತ್ತಿದ್ದನ್ನು ಕೆಳಗೆ ಹಾಕಿ ಬಾಗಿಲಿಗೆ ಓಡಿದಳು.
ಅವಳು, “ಅದು ಸರ್ಕಸ್” ಎಂದು ಕೂಗಿದಳು.
ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾ ಬಾದಾಮಿ ಮರದ ಹತ್ತಿರಕ್ಕೆ ಹೋಗುವ ಬದಲು ಮುಂಬಾಗಿಲಿಗೆ ಹೋದ ಮತ್ತು ಪೆರೇಡನ್ನು ನೋಡುತ್ತಿದ್ದವರ ಮಧ್ಯೆ ಸೇರಿಕೊಂಡ. ಅವನು ಬಂಗಾರದ ಉಡುಪಿನ ಹೆಂಗಸೊಬ್ಬಳು ಆನೆಯ ಮೇಲೆ ಕುಳಿತಿರುವುದನ್ನು ಕಂಡ. ಡಚ್ ಹುಡುಗಿಯ ಹಾಗೆ ಬಟ್ಟೆ ತೊಡಿಸಿದ ಸುಸ್ತಾಗಿ ಹೆಜ್ಜೆ ಹಾಕುತ್ತಿದ್ದ ಕರಡಿಯೊಂದು ಸಂಗೀತಕ್ಕೆ ತಕ್ಕಂತೆ ತಟ್ಟೆ ಹಾಗೂ ಸ್ಪೂನಿನಿಂದ ಬಡಿಯುತ್ತಿದ್ದನ್ನು ಅವನು ನೋಡಿದ. ಪೆರೇಡಿನ ಕೊನೆಯಲ್ಲಿ ಎತ್ತಿನ ಗಾಡಿಯ ಚಕ್ರದ ಹಾಗೆ ಮಾಡುತ್ತಿದ್ದ ವಿದೂಷಕರನ್ನು ಮತ್ತು ಎಲ್ಲರೂ ಹೊರಟು ಹೋದ ಮೇಲೆ ಏಕಾಂತದ ದಯನೀಯ ಮುಖವನ್ನು ಕಂಡ. ಅಲ್ಲಿ ರಸ್ತೆಯಲ್ಲಿ ಬೆಳಕು ಹರಡಿದ್ದು ಬಿಟ್ಟರೆ ಬೇರೆ ಏನೂ ಇರಲಿಲ್ಲ. ಗಾಳಿಯಲ್ಲಿ ಹಾರುವ ಇರುವೆಗಳು ತುಂಬಿಕೊಂಡಿದ್ದವು ಹಾಗೂ ಅನಿಶ್ಚಯದ ಮುಖಮಾಡಿದ್ದ್ದ ಕೆಲವರಿದ್ದರು. ಅನಂತರ ಅವನು ಬಾದಾಮಿ ಮರದ ಹತ್ತಿರ ಸರ್ಕಸ್ಸಿನ ಬಗ್ಗೆ ಯೋಚಿಸುತ್ತ ಹೋದ. ಅಲ್ಲಿ ಉಚ್ಚೆ ಹೊಯ್ಯತ್ತಿರುವಾಗಲೂ ಸರ್ಕಸ್ಸನ್ನು ಕುರಿತು ಯೋಚಿಸಲು ಪ್ರಯತ್ನಿಸಿದ. ಆದರೆ ಅವನಿಗೆ ಅದರ ನೆನಪು ಎಟುಕಲಿಲ್ಲ. ಅವನು ಮಗುವಿನಂತೆ ತಲೆ ಕೆಳಗೆ ಹಾಕಿ, ಹಣೆಯನ್ನು ಬಾದಾಮಿ ಮರದ ಕಾಂಡಕ್ಕೆ ಆನಿಸಿ ಅಲ್ಲಾಡದೆ ನಿಂತ. ಮರುದಿನ ಬೆಳಿಗ್ಗೆ ಹನ್ನೊಂದು ಗಂಟೆಯ ತನಕ ಮನೆಯವರಿಗೆ ಅವನು ಕಾಣಲಿಲ್ಲ. ಸಾಂತ ಸೋಫಿಯಾ ದೆಲಾ ಪಿಯದಾದ್ ಕಸ ಹಾಕಲು ಹಿತ್ತಲಿಗೆ ಹೋದಾಗ ಇಳಿಯುತ್ತಿದ್ದ ರಣಹದ್ದುಗಳು ಅವಳ ಗಮನ ಸೆಳೆದವು.
೧೪
ಮೆಮೆಳ ಕೊನೆಯ ರಜಾ ದಿನಗಳು ಕರ್ನಲ್ ಅವ್ರೇಲಿಯಾನೋ ಬ್ಯುಂದಿಯಾನಿಗಾಗಿ ದು:ಖಸೂಚಕ ಅವಧಿಯ ಜೊತೆ ಸೇರಿಕೊಂಡು ಬಿಟ್ಟಿತು. ಬಾಗಿಲು ಹಾಕಿದ ಮನೆ, ಪಾರ್ಟಿಗಳಿಗೆ ಸರಿಯಾಗಿರಲಿಲ್ಲ. ಅವರು ಪಿಸುಗುಟ್ಟುತ್ತ ಮಾತಾಡುತ್ತಿದ್ದರು, ಸದ್ದಿಲ್ಲದೆ ಊಟ ಮಾಡುತ್ತಿದ್ದರು, ದಿನಕ್ಕೆ ಮೂರು ಸಲ ಪ್ರಾರ್ಥನೆ ಮಾಡುತ್ತಿದ್ದರು. ಅಲ್ಲದೆ ಮಧ್ಯಾಹ್ನದ ನಿದ್ದೆ ಸಮಯದ ಶೆಖೆಯಲ್ಲಿಯೂ ಪಿಯಾನೋದಂಥ ವಾದ್ಯದ ಅಭ್ಯಾಸದಲ್ಲಿ ದು:ಖಸೂಚನೆಯ ಪ್ರತಿಧ್ವನಿಯಿತ್ತು. ಕರ್ನಲ್ ಬಗ್ಗೆ ಅವಳಿಗೆ ದ್ವೇಷವಿದ್ದರೂ, ಸರ್ಕಾರ ಸತ್ತು ಹೋದ ತನ್ನ ಶತ್ರುವಿನ ನೆನಪನ್ನು ಗೌರವಿಸಿ ಗಂಭೀರವಾಗಿ ಆಚರಿಸಿದ್ದನ್ನು ಮನಗಂಡು ಫೆರ್ನಾಂಡ, ಅವಳಿಗೆ ದು:ಖಸೂಚಕ ಕಠಿಣ ನಡವಳಿಕೆಗೆ ಒತ್ತಾಯಮಾಡಿದಳು. ಎಂದಿನ ಅಭ್ಯಾಸದಂತೆ ಅವ್ರೇಲಿಯಾನೋ ಸೆಗುಂದೋ ಮಗಳು ರಜೆಯಲ್ಲಿ ಬಂದಾಗ ಮನೆಯಲ್ಲಿ ಮಲಗಲು ಬರುತ್ತಿದ್ದ. ಮುಂದಿನ ವರ್ಷದಲ್ಲಿ ಫೆನಾಂಡಳಿಗೆ ಹೆಣ್ಣು ಮಗು ಹುಟ್ಟಿದ್ದರಿಂದ ತಾನು ನ್ಯಾಯವಾಗಿ ಹೆಂಡತಿ ಎನ್ನುವುದರ ಸೌಲಭ್ಯಗಳನ್ನು ಮರಳಿ ಪಡೆಯುವುದಕ್ಕೆ ಅವಳು ಕೆಲವಷ್ಟನ್ನು ಮಾಡಬೇಕಾಗಿತ್ತು. ಹುಟ್ಟಿದ ಮೆಮೆಳ ಸೋದರಿಗೆ ಅವಳ ಅಮ್ಮನ ಇಷ್ಟಕ್ಕೆ ಪ್ರತಿಯಾಗಿ ಅಮರಾಂತ ಉರ್ಸುಲಾ ಎಂದು ಹೆಸರಿಟ್ಟಳು.
ಮೆಮೆ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ್ದಳು. ಪಿಯಾನೋದಂಥ ವಾದ್ಯ ನುಡಿಸುವುದಕ್ಕಾಗಿ ಕೊಡಲಾದ ಸರ್ಟಿಫಿಕೇಟನ್ನು ಅವಳು ವಿದ್ಯಾಭ್ಯಾಸವನ್ನು ಪೂರೈಸಿದ ಆಚರಣೆಗೆಂದು ನೆರೆದ ಸಂದರ್ಭದಲ್ಲಿ ಜಾಣ್ಮೆಯಿಂದ ಹದಿನೇಳನೆ ಶತಮಾನದ ಜನಪ್ರಿಯ ಹಾಡುಗಳನ್ನು ನುಡಿಸಿದಾಗ ಊರ್ಜಿತಗೊಳಿಸಲಾಯಿತು ಮತ್ತು ಅದರ ಜೊತೆಗೆ ದು:ಖಸೂಚನೆಯ ಅವಧಿಯೂ ಮುಗಿಯಿತು. ಅವಳ ಕಲೆಗಿಂತ ಅವಳಲ್ಲಿದ್ದ ಎರಡು ಬಗೆಯ ನಡವಳಿಕೆಯನ್ನು ಅತಿಥಿಗಳು ಮೆಚ್ಚಿಕೊಂಡರು. ಅವಳ ಹುಡುಗಾಟದ ಸ್ವಭಾವ ಯಾವುದೇ ಗಂಭೀರವಾದ ನಡವಳಿಕೆಗೆ ದಾರಿ ಮಾಡಿಕೊಟ್ಟಿದೆ ಎನ್ನುವಂತಿರಲಿಲ್ಲ. ಆದರೆ ಅವಳು ಪಿಯಾನೋದಂಥ ವಾದ್ಯವನ್ನು ನುಡಿಸಿದಾಗ ಬೇರೆ ಬಗೆಯ ಹುಡುಗಿಯಂತೆ ಕಾಣುತ್ತಿದ್ದಳು. ಅವಳ ಇನ್ನಿಲ್ಲದ ಪ್ರಬುದ್ಧತೆಯಿಂದ ಬೆಳೆದವಳಂತೆ ಕಾಣಿಸುವ ಹಾಗೆ ಮಾಡಿತ್ತು. ಅವಳು ಯಾವಾಗಲೂ ಹಾಗೆಯೇ ಇದ್ದದ್ದು. ಅವಳಿಗೆ ಯಾವುದೇ ನಿರ್ದಿಷ್ಟವಾದ ಉದ್ದೇಶವಿರಲಿಲ್ಲ. ಆದರೆ ಅವಳು ತನ್ನ ತಾಯಿಗೆ ಕೋಪ ಬಾರದಿರಲಿ ಎಂದು ಅತ್ಯಂತ ಶಿಸ್ತಿನಿಂದ ನಡೆದುಕೊಂಡದ್ದು ಎಲ್ಲರಿಂದ ಹೆಚ್ಚಿನ ಮೆಚ್ಚುಗೆಯನ್ನು ಗಳಿಸಿತು. ಅವರು ಅವಳನ್ನು ಯಾವುದನ್ನೇ ಆಗಲಿ ಕಲಿಯುವುದಕ್ಕೆ ಸೇರಿಸಬಹುದಿತ್ತು. ಆದರೆ ಪರಿಣಾಮ ಒಂದೇ ಆಗಿರುತ್ತಿತ್ತು. ಅವಳು ಮಗುವಾದಾಗಿನಿಂದಲೂ ಫೆರ್ನಾಂಡಳ ಕಟ್ಟುನಿಟ್ಟಿನ ಅಭ್ಯಾಸಕ್ಕೆ ಮತ್ತು ಅತಿರೇಕಗಳನ್ನು ಆರಿಸುವ ಅವಳ ಕ್ರಮಕ್ಕೆ ಗುರಿಯಾಗಿದ್ದಳು. ಅವಳ ಹಠಕ್ಕೆ ಗುರಿಯಾಗುವುದರ ಬದಲು ಪಿಯಾನೋದಂಥದನ್ನು ಕಲಿಯುವುದಕ್ಕಿತ ಹೆಚ್ಚು ಗಂಭೀರವಾದ ತ್ಯಾಗಕ್ಕೆ ಅವಳು ಸಿದ್ಧಳಿದ್ದಳು. ಪದವಿ ನೀಡಿಕೆ ಸಮಾರಂಭದಲ್ಲಿ ಚರ್ಮದ ಹಾಳೆಯ ಮೇಲಿನ ದಪ್ಪ ಅಕ್ಷರದ ಬರಹವನ್ನು ವಿಧೇಯಳಾಗಲ್ಲದೆ ಅನುಕೂಲದಿಂದ ಒಪ್ಪಿಕೊಂಡಿದ್ದರಿಂದ ತನಗೆ ಬಿಡುಗಡೆ ಸಿಗುತ್ತದೆ ಎಂಬ ಭಾವನೆ ಅವಳಲ್ಲಿತ್ತು. ಅದಾದ ಮೇಲೆ ಯಾವಾಗಲೂ ಒತ್ತಾಯಿಸುತ್ತಿದ್ದ ಫೆರ್ನಾಂಡ ಕೂಡ ನನ್‌ಗಳು ಅದನ್ನು ಮ್ಯೂಸಿಯಮ್‌ನಲ್ಲಿ ಇರುವಂಥಾದ್ದು ಎಂದು ಪರಿಗಣಿಸಿದ ಆ ವಾದ್ಯವನ್ನು ಕುರಿತು ತಲೆಕೆಡಿಕೊಳ್ಳುವುದಿಲ್ಲ ಎಂದುಕೊಂಡಳು. ಅನಂತರ ಕೆಲವು ವರ್ಷಗಳಲ್ಲಿ ಆ ತನ್ನ ಗ್ರಹಿಕೆ ತಪ್ಪು ಎಂದು ಗೊತ್ತಾಯಿತು. ಏಕೆಂದರೆ ಅಧ ಊರು ನಿದ್ದೆ ಹೋದ ಮೇಲೆ, ಮಕೋಂದೋದ ನಡೆಯುವ ಸ್ಕೂಲು ಮತ್ತು ಬೇರೆ ಕಡೆ ನಡೆಯುವ ಸಮಾರಂಭಗಳಿಗೆ ದಾಕ್ಷಿಣ್ಯಕ್ಕಾಗಿ ಹೋದವರು ಬಂದು ಮಲಗಿದ ಮೇಲೆ, ಅವಳ ತಾಯಿ ತನ್ನ ಮಗಳ ನೈಪುಣ್ಯವನ್ನು ಮೆಚ್ಚುತ್ತಾರೆ ಎಂದು ಭಾವಿಸುವ ಎಲ್ಲ ಅತಿಥಿಗಳನ್ನು ಆಹ್ವಾನಿಸುತ್ತಿದ್ದಳು. ಅಮರಾಂತ ಸತ್ತ ಮೇಲೆ ಮಾತ್ರ ಮತ್ತೆ ಇಡೀ ಸಂಸಾರ ದು:ಖಸೂಚನೆಯ ಆಚರಣೆಗೆ ಒಳಗಾದಾಗ ಮೆಮೆ ಪಿಯಾನೋದಂಥ ವಾದ್ಯಕ್ಕೆ ಬೀಗ ಹಾಕಿ ಅದರ ಬೀಗದ ಕೈಯನ್ನು ಯಾವುದೋ ಶೃಂಗಾರದ ವಸ್ತುಗಳಿದ್ದ ಟ್ರೇನಲ್ಲಿ ಹಾಕಿದಳು ಮತ್ತು ಅದನ್ನು ಹುಡುಕದೆ ಇರುವುದಕ್ಕೆ ಎಲ್ಲಿ ಮತ್ತು ಯಾರ ತಪ್ಪಿನಿಂದ ಎಂದು ಫೆರ್ನಾಂಡಗೆ ಗೊತ್ತಾಗದ ಹಾಗೆ ಅದನ್ನು ಮರೆತು ಬಿಟ್ಟಳು. ಮೆಮೆ ಕಲಿಕೆಯ ಬಗ್ಗೆ ಸಂಯಮ ತೋರಿಸಿದಂತೆ ಇಂಥ ಪ್ರದರ್ಶನಗಳನ್ನು ತಾಳಿಕೊಂಡಳು. ಅದು ಅವಳ ಸ್ವಾತಂತ್ರ್ಯಕ್ಕೆ ಸಿಕ್ಕ ಬೆಲೆ. ಫೆರ್ನಾಂಡ ಅವಳ ನಮ್ರತೆಯಿಂದ ಮತ್ತು ಅವಳ ಕಲೆಯ ಬಗ್ಗೆ ದೊರೆತ ಮೆಚ್ಚುಗೆಯಿಂದ ಎಷ್ಟು ಪ್ರಭಾವಿತಳಾಗಿದ್ದಳೆಂದರೆ ಮನೆಯ ತುಂಬ ಹುಡುಗಿಯರು ಇರುವುದಕ್ಕೆ, ಅವಳು ಮಧ್ಯಾಹ್ನವನ್ನು ತೋಪಿನಲ್ಲಿ ಕಳೆಯುವುದಕ್ಕೆ ಮತ್ತು ಯಾರಾದರೂ ನಂಬಿಕಸ್ಥ ಹೆಂಗಸಿನ ಜೊತೆ ಅಥವಾ ಅವ್ರೇಲಿಯಾನೋ ಸೆಗುಂದೋ ಜೊತೆ ಫಾದರ್ ಆಂಟೋನಿಯೋ ಇಸೆಬಲ್ ಒಪ್ಪಿಗೆ ಕೊಟ್ಟ ಯಾವುದೇ ಸಿನಿಮಾಕ್ಕೆ ಹೋಗಲು ಅವಳ ವಿರೋಧವಿರಲಿಲ್ಲ. ಆ ವಿನೋದಭರಿತ ಸಮಯದಲ್ಲಿ ಅವಳ ನಿಜವಾದ ಆಸಕ್ತಿಗಳು ಹೊರಗೆ ಕಾಣಿಸಿಕೊಳ್ಳುತ್ತಿದ್ದವು. ಶಿಸ್ತಿನ ಅತಿರೇಕದ ಮತ್ತೊಂದು ತುದಿಯಲ್ಲಿ ಅವಳಿಗೆ ಸಂತೋಷ ಸಿಕ್ಕುತ್ತಿತ್ತು: ಗಲಾಟೆ ತುಂಬಿದ ಪಾರ್ಟಿಗಳಲ್ಲಿ, ಪ್ರೇಮಿಗಳ ಬಗ್ಗೆ ಹರಟೆ ಹೊಡೆಯುವುದರಲ್ಲಿ, ಹುಡುಗಿಯರ ಜೊತೆ ದೀರ್ಘವಾದ ಒಡನಾಟದಲ್ಲಿ. ಅಲ್ಲಿ ಅವರು ಸಿಗರೇಟು ಸೇದುವುದನ್ನು ಕಲಿತರು ಹಾಗೂ ಗಂಡಸರ ಮೂಲ ವರ್ತನೆಗಳ ಬಗ್ಗೆ ಮಾತಾಡಿದರು. ಒಂದು ಬಾರಿ ಅವರ ಕೈಗೆ ಮದ್ಯದ ಕ್ರೇಟ್ ಸಿಕ್ಕಿತು. ಅನಂತರ ಅವರು ಬೆತ್ತಲೆಯಾಗಿ ಒಬ್ಬೆಬ್ಬರ ಅಂಗಾಂಗಗಳನ್ನು ಹೋಲಿಕೆ ಮಾಡುತ್ತ, ಅಳೆಯುತ್ತ ಕಳೆದರು. ಮೆಮೆ ಆ ರಾತ್ರಿ ಸಿಹಿಗೆಣಸನ್ನು ಜಗಿಯುತ್ತ ಮನೆಗೆ ಬಂದಾಗ ಫೆರ್ನಾಂಡ ಮತ್ತು ಅಮರಾಂತ ಒಬ್ಬರಿಗೊಬ್ಬರು ಯಾವ ಮಾತನ್ನೂ ಆಡದೆ ಊಟ ಮಾಡುತ್ತಿದ್ದರು. ಗಾಬರಿಯಿಂದ ಅವರನ್ನು ಹೆಚ್ಚು ಗಮನಿಸದೆ, ಅದೇ ಟೇಬಲ್ ಬಳಿ ತಾನು ಕುಳಿತಿದ್ದನ್ನು ಅವಳು ಎಂದೂ ಮರೆಯಲಿಲ್ಲ. ಅವಳು ಎರಡು ಗಂಟೆಯ ಹೊತ್ತು ಗೆಳತಿಯ ಬೆಡ್‌ರೂಮಿನಲ್ಲಿ ಕಳೆದು, ಹೆದರಿಕೆಯಿಂದ, ನಗುವಿನಿಂದ ಕಣ್ಣಲ್ಲಿ ನೀರು ತುಂಬಿತ್ತು ಮತ್ತು ಎಲ್ಲ ಕೂಗಾಟದ ನಡುವೆ ಅವಳಿಗೆ ಸ್ಕೂಲಿನಿಂದ ಓಡಿ ಹೋಗಿ ತನ್ನ ತಾಯಿಗೆ ಪಿಯಾನೋದಂಥ ವಾದ್ಯವನ್ನು ಗುದದ್ವಾರದಲ್ಲಿ ಪಿಚಕಾರಿಯ ಹಾಗೆ ತುರುಕುವಂಥಾದು, ಎಂದು ಹೇಳುವುದಕ್ಕೆ ಬೇಕಾದ ಧೈರ್ಯ ಹೇಗೋ ಬಂದಿದೆ ಎಂಬ ಭಾವನೆ ಉಂಟಾಗಿತ್ತು. ಟೇಬಲ್‌ನ ಆಯಕಟ್ಟು ಸ್ಥಳದಲ್ಲಿ ಕುಳಿತು, ಕೋಳಿ ಸಾರು ಕುಡಿಯುತ್ತ, ಫೆರ್ನಾಂಡ ಮತ್ತು ಅಮರಾಂತ ವಾಸ್ತವ ಸ್ಥಿತಿಗೆ ಅಪವಾದವೆನ್ನುವ ಹಾಗೆ ಕುಳಿತಿದ್ದರು. ಅವಳು ಅವರಿಬ್ಬರಲ್ಲಿದ್ದ ಕೊರತೆಯನ್ನು, ಗೆಲುವಿಲ್ಲದ ಒಳಗನ್ನು, ವೈಭವದ ಬಗ್ಗೆ ಇರುವ ಭ್ರಾಂತಿಯನ್ನು ಅವರ ಎದುರು ಬಿಚ್ಚಿ ಹೇಳದಿರುವುದಕ್ಕೆ ಭಾರಿ ಸಾಹಸ ಪಡಬೇಕಾಯಿತು. ಅವಳು ಎರಡನೇ ಬಾರಿ ರಜಾ ದಿನಗಳಲ್ಲಿ ಬಂದಾಗಲೇ ತನ್ನ ತಂದೆ ಕೇವಲ ತೋರಿಕೆಗಾಗಿ ಮನೆಯಲ್ಲಿ ಇರುತ್ತಾನೆಂದು ಅವಳಿಗೆ ಗೊತ್ತಾಯಿತು. ಅಲ್ಲದೆ ಫೆರ್ನಾಂಡ ಏನು ಮಾಡಿದಳೆಂದು ತಿಳಿದ ಅವಳು ಪೆತ್ರಾ ಕೊತೆಸ್‌ಳನ್ನು ಭೇಟಿಯಾದ ಮೇಲೆ ತನ್ನ ತಂದೆ ಮಾಡಿದ್ದು ಸರಿ ಎಂದು ಅವಳಿಗೆ ತೋರಿತು. ಅವಳು ಕೂಡ ಇಟ್ಟುಕೊಂಡವಳ ಮಗಳಾಗಿರುವುದಕ್ಕೆ ಇಷ್ಟಪಡುತ್ತಿದ್ದಳು. ಕುಡಿದ ಮತ್ತಿನಲ್ಲಿ ತನ್ನ ಆಲೋಚನೆಗಳನ್ನು ವ್ಯಕ್ತಪಡಿಸಿದರೆ ಅದು ಉಂಟುಮಾಡುವ ಹಗರಣ ಕುರಿತು ಮೆಮೆ ಯೋಚಿಸಿ ನಕ್ಕಳು. ಅವಳ ಫಟಿಂಗತನಕ್ಕೆ ದೊರಕಿದ ಸಮಾಧಾನ ಎಷ್ಟಿತ್ತೆಂದರೆ ಫೆರ್ನಾಂಡ ಅದನ್ನು ಗಮನಿಸಿದಳು.
ಅವಳು, “ಏನು ಸಮಾಚಾರ” ಎಂದು ಕೇಳಿದಳು.
ಮೆಮೆ, “ಏನಿಲ್ಲ ನಿಮ್ಮಿಬ್ಬರನ್ನ ನಾನೆಷ್ಟು ಪ್ರೀತಿಸ್ತಿದೀನಿ ಅಂತ ಗೊತ್ತಾಗ್ತಿದೆ” ಎಂದು ಉತ್ತರಿಸಿದಳು.
ಅಮರಾಂತಳಿಗೆ ಆ ಮಾತಿನಲ್ಲಿ ಹುದುಗಿರುವ ದ್ವೇಷ ಎಷ್ಟಿದೆ ಎಂದು ತಿಳಿದು ಬೆಚ್ಚಿದಳು. ಆದರೆ ಫೆರ್ನಾಂಡಳಿಗೆ ಸರಿರಾತ್ರಿಯಲ್ಲಿ ಮೆಮೆ ಎದ್ದು ತಲೆ ಸಿಡಿಯುವಷ್ಟು ನೋವಾಗುತ್ತಿದೆ ಎಂದು ಹೇಳಿ ವಾಂತಿ ಮಾಡಿಕೊಂಡದ್ದಕ್ಕೆ, ಅವಳ ಅಂತ:ಕರಣ ಎಲ್ಲೆ ಮೀರಿ ಮಿಡಿಯಿತು. ಅವಳಿಗೆ ಒಂದಷ್ಟು ಕ್ಯಾಸ್ಟರ್ ಆಯಿಲ್ ಕೊಟ್ಟು, ಹಣೆಯ ಮೇಲೆ ಐಸ್ ಕ್ಯೂಬ್‌ಗಳನ್ನಿಟ್ಟಳು ಮತ್ತು ಐದು ದಿನ ಹಾಸಿಗೆಯಲ್ಲೆ ಇರುವಂತೆ ಮಾಡಿ, ಹೊಸಬನಾದ, ತೋರಿಕೆಯ ಫ್ರೆಂಚ್ ಡಾಕ್ಟರ್ ತಿಳಿಸಿದಂತೆ ಆಹಾರವನ್ನು ತೆಗೆದುಕೊಳ್ಳುವಂತೆ ಹೇಳಿದಳು. ಅವನು ಅವಳನ್ನು ಎರಡು ಗಂಟೆಯ ಕಾಲ ಪರೀಕ್ಷಿಸಿ ಹೆಂಗಸರಿಗೆ ಬರುವ ವಿಚಿತ್ರ ಕಾಯಿಲೆಯಿಂದ ನರಳುತ್ತಿದ್ದಳೆಂದು ಹೇಳಿದ. ಧೈರ್ಯ ಕಳೆದುಕೊಂಡು, ಆತ್ಮವಿಶ್ವಾಸ ಕುಂದಿದ ಪರಿಸ್ಥಿತಿಯಲ್ಲಿದ್ದ ಮೆಮೆಳಿಗೆ ಅದನ್ನು ಸಹಿಸುವುದಲ್ಲದೆ ಬೇರೆ ಮಾರ್ಗವಿರಲಿಲ್ಲ. ಆ ವೇಳೆಗೆ ಸಂಪೂರ್ಣ ಕುರುಡಿಯಾಗಿದ್ದರೂ ಸಾಕಷ್ಟು ಚಟುವಟಿಕೆಯಿಂದಿದ್ದ ಉರ್ಸುಲಾ ಮಾತ್ರ ಸರಿಯಾಗಿ ಊಹಿಸಿ ವಿಶ್ಲೇಷಿಸಿದ್ದಳು. ಅವಳು, “ನಂಗೆ ತಿಳಿದ ಹಾಗೆ ಕುಡಿದೋರಿಗೆ ಹೀಗೇ ಆಗೋದು” ಎಂದು ಯೋಚಿಸಿದಳು. ಆದರೆ ಅವಳು ಆ ಆಲೋಚನೆಯನ್ನು ತಿರಸ್ಕರಿಸಿದಳು. ಅಂಥ ಆಲೋಚನೆ ಬಂದದ್ದಕ್ಕೆ ತನ್ನನ್ನೇ ಹಳಿದುಕೊಂಡಳು. ಅವ್ರೇಲಿಯಾನೋ ಸೆಗುಂದೋಗೆ ಮೆಮೆಳ ಅವಸ್ಥೆ ಕಂಡು ಚುರ್ ಎನ್ನಿಸಿ ಇನ್ನು ಮುಂದೆ ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ತನಗೆ ತಾನೇ ಹೇಳಿಕೊಂಡ. ಹೀಗಾಗಿ ತಂದೆ ಮತ್ತು ಮಗಳಲ್ಲಿ ಸ್ನೇಹಪೂರ್ಣ ಸಂಬಂಧ ಹುಟ್ಟಿ, ಕೆಲ ಸಮಯದ ತನಕ ಅವನನ್ನು ಏಕಾಂತದ ವಿಲಾಸದಿಂದ ಮುಕ್ತಗೊಳಿಸಿತು ಮತ್ತು ಅವಳನ್ನು ಮನೆಯೊಳಗೆ ಇನ್ನೇನು ಪ್ರಾರಂಭವಾಗಲಿದ್ದ ಫೆರ್ನಾಂಡಳ ಪತ್ತೇದಾರಿ ನೋಟದಿಂದ ಮುಕ್ತಳಾಗಿಸಿತು. ಆ ಸಮಯದಲ್ಲಿ ಅವ್ರೇಲಿಯಾನೋ ಸೆಗುಂದೋ ಮೆಮೆಳ ಜೊತೆಗಿರುವ ಸಲುವಾಗಿ, ಅವಳನ್ನು ಸಿನಿಮಾ ಅಥವಾ ಸರ್ಕಸ್ಸಿಗೆ ಕರೆದುಕೊಂಡು ಹೋಗಬೇಕೆಂದು ಎಲ್ಲ ಬಗೆಯ ಕಾರ್ಯಕ್ರಮಗಳನ್ನು ಮುಂದಕ್ಕೆ ಹಾಕಿದ ಹಾಗೂ ಬಿಡುವಾಗಿದ್ದಾಗ ಅವಳ ಜೊತೆ ಅತಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದ. ಇತ್ತಿಚೆಗೆ ಶೂ ಹಾಕಿಕೊಳ್ಳಲು ತೊಂದರೆ ಕೊಡುವ ತನ್ನ ದಡೂತಿ ಮೈಯನ್ನು ಕಂಡರೆ ಅವನಿಗೆ ರೇಗುತ್ತಿತ್ತು ಮತ್ತು ಅವನ ಹೊಟ್ಟೆಬಾಕತನ ಅವನ ಸ್ವಭಾವಕ್ಕೆ ಕೆಡಕನ್ನು ಉಂಟುಮಾಡಿತ್ತು. ಅವನಿಗೆ ಮಗಳನ್ನು ಕಂಡುಕೊಂಡ ರೀತಿಯಿಂದ ಮೊದಲಿನ ಗೆಲುವು ಮತ್ತೆ ಲಭಿಸಿತು ಮತ್ತು ಅವಳ ಸಹವಾಸ ಅವನನ್ನು ಹಾಳಾಗುವುದರಿಂದ ದೂರಮಾಡಿತು. ಮೆಮೆ ಪ್ರಾಯಕ್ಕೆ ಬರುತ್ತಿದ್ದಳು. ಯಾವಾಗಲೂ ಸುಂದರಳಾಗಿದ್ದ ಅಮರಾಂತಳಂತೆ ಅವಳು ಸುಂದರಿಯಾಗಿರಲಿಲ್ಲ. ಆದರೆ ಅವಳು ಹಸನ್ಮುಖಿಯಾಗಿ, ಗೋಜಲಿಲ್ಲದೆ ಇದ್ದಳು. ಅವಳಿಗೆ ಮೊದಲ ಕ್ಷಣದಲ್ಲೆ ಜನರ ಮೇಲೆ ಪ್ರಭಾವ ಬೀರುವ ಗುಣವಿತ್ತು. ಅವಳಲ್ಲಿ ಆಧುನಿಕ ಸತ್ವವಿದ್ದು, ಅದು ಫೆರ್ನಾಂಡಳ ತಾತನ ಕಾಲದ ತಡೆಯಲಾಗದ ಕೃಪಣತನದ ನಿಲುವಿನ ಭಾವನೆಗೆ ಧಕ್ಕೆ ಉಂಟುಮಾಡಿತು. ಆದರೆ ಅವ್ರೇಲಿಯಾನೋ ಸೆಗುಂದೋ ಅದನ್ನು ಬೆಳೆಸುವುದರಲ್ಲಿ ಸಂತೋಷಗೊಂಡಿದ್ದ. ಭಯಗೊಳಿಸುವ ಸಂತರ ಕಣ್ಣುಗಳಿಗೆ ಅವಳು ಚಿಕ್ಕವಳಾಗಿದ್ದೇ ಮೆಚ್ಚುಗೆಯಾಗಿದ್ದು, ಬೆಡ್‌ರೂಮಿನಲ್ಲಿಯೇ ಇದ್ದ ಅವಳನ್ನು ಹೊರಗೆ ತರಲು ಅವನು ತಿರ್ಮಾನಿಸಿದ. ಅವನು ರೂಮೊಂದರಲ್ಲಿ ಭವ್ಯವಾದ ಹಾಸಿಗೆ, ದೊಡ್ಡ ಡ್ರಸಿಂಗ್ ಟೇಬಲ್, ವೆಲ್‌ವೆಟ್ ಕರ್ಟನ್‌ಗಳನ್ನು ಅಣಿಗೊಳಿಸುತ್ತ ತಾನು ಪೆತ್ರಾ ಕೊತೆಸ್‌ಳ ರೂಮಿನಂತೆ ಇನ್ನೊಂದನ್ನು ಮಾಡುತ್ತಿದ್ದೇನೆ ಎನ್ನುವುದನ್ನು ಅರಿಯಲಿಲ್ಲ. ಮೆಮೆಳ ಬಗ್ಗೆ ಅವನೆಷ್ಟು ದುಂದುವೆಚ್ಚ ಮಾಡುತ್ತಿದ್ದನೆಂದರೆ ಅವಳಿಗೆ ಕೊಟ್ಟ ಹಣವೆಷ್ಟು ಎಂದು ಗೊತ್ತಿರಲಿಲ. ಏಕೆಂದರೆ ಅವಳೇ ಅವನ ಜೇಬಿನಿಂದ ತೆಗೆದುಕೊಳ್ಳುತ್ತಿದ್ದಳು. ಅವನಿಗೆ ಬಾಳೆ ತೋಟದ ಕಂಪನಿಯ ಆಡಳಿತದವರಿಗೆ ಬರುವ ಇತ್ತೀಚಿನ ಸೌಂದರ್ಯವರ್ಧಕಗಳ ಬಗ್ಗೆ ಮಾಹಿತಿಯಿತ್ತು. ಮೆಮಳ ರೂಮಿನಲ್ಲಿ ಉಗುರುಗಳಿಗೆ ಪಾಲಿಶ್ ಮಾಡುವ ಸಣ್ಣ ಕಲ್ಲುಗಳಿಂದ ಹಿಡಿದು, ಕೂದಲನ್ನು ಗುಂಗುರು ಮಾಡುವುದು, ಟೂತ್ ಬ್ರಶ್, ಕಣ್ಣಿಗೆ ಹೊಳಪು ತರುವ ಹನಿಗಳ ಬಾಟಲ್ ಮತ್ತು ಇತರ ಅನೇಕ ಸೌಂದರ್ಯವರ್ಧಕ ವಸ್ತುಗಳು ಹಾಗೂ ಸಲಕರಣೆಗಳಿದ್ದು, ಪ್ರತಿ ಬಾರಿ ಫೆರ್ನಾಂಡ ಅವಳ ರೂಮಿಗೆ ಹೋದಾಗ ತನ್ನ ಮಗಳ ರೂಮು ಫ್ರೆಂಚ್ ಹೆಂಗಸರ ರೂಮಿನಂತೆಯೇ ಇದೆ ಎಂದು ಗಾಬರಿಗೊಳ್ಳುತ್ತಿದ್ದಳು. ಆದರೂ ಫೆರ್ನಾಂಡ ಅವಳ ಸಮಯವನ್ನು ತುಂಟಿಯಾಗಿದ್ದ ಪುಟಾಣಿ ಅಮರಾಂತ ಉರ್ಸುಲಾ ಮತ್ತು ಕಾಣದ ಡಾಕ್ಟರ್‌ಗಳಿಗೆ ವಿನಿಯೋಗಿಸುತ್ತಿದ್ದಳು. ತಂದೆ ಮತ್ತು ಮಗಳು ಹೊಂದಿಕೊಂಡಿರುವುದನ್ನು ನೋಡಿ ಅವ್ರೇಲಿಯಾನೋ ಸೆಗುಂದೋನಿಂದ ಅವಳು ಪಡೆದ ಒಂದೇ ವಾಗ್ದಾನವೇನೆಂದರೆ ಅವಳನ್ನು ಪೆತ್ರಾ ಕೊತೆಸ್‌ಳ ಮನೆಗೆ ಕರೆದುಕೊಂಡು ಎಂದೂ ಕರೆದುಕೊಂಡು ಹೋಗುವುದಿಲ್ಲ, ಎಂದು. ಅದು ಅರ್ಥವಿಲ್ಲದ ಆಗ್ರಹವಾಗಿತ್ತು. ಏಕೆಂದರೆ ತನ್ನ ಪ್ರಿಯಕರ ಮತ್ತು ಅವಳ ಹೊಂದಾಣಿಕೆಯ ಬಗ್ಗೆ ತೀರ ಸಿಟ್ಟಿತ್ತು ಮತ್ತು ಅವಳ ಸಮಾಚಾರವೇ ಅವಳಿಗೆ ಬೇಕಿರಲಿಲ್ಲ. ಪೆತ್ರಾ ಕೊತೆಸ್‌ಗೆ ಕಾಣದ ಭಯವೊಂದಿತ್ತು. ಮೆಮೆ ಇಷ್ಟಪಟ್ಟರೆ ಸಾಕು ಫೆರ್ನಾಂಡಗೆ ಅಸಾಧ್ಯವಾದದ್ದನ್ನು ಸಾಧಿಸಿಸುತ್ತೇನೆ, ಎಂದು. ಅದು, ತಾನು ಸಾಯುವ ತನಕ ಬಾಧಕವಿಲ್ಲ ಎನ್ನುವ ಖಾತರಿಯಿದ್ದ ಪ್ರೀತಿಯನ್ನು ಅವಳಿಗೆ ನಿರಾಕರಿಸುವುದು. ಮೊಟ್ಟ ಮೊದಲಿಗೆ ಅವ್ರೇಲಿಯಾನೋ ಸೆಗುಂದೋ ಇಟ್ಟುಕೊಂಡವಳ ಇರಿಯುವ ನೋಟಗಳನ್ನು ಮತ್ತು ಹುಚ್ಚಾಟಗಳನ್ನು ಸಹಿಸಿಕೊಳ್ಳಬೇಕಾಗಿ ಬಂತು. ಅಷ್ಟೇ ಅಲ್ಲದೆ ಅಲ್ಲಿಂದಿಲ್ಲಿಗೆ ಸಾಗುತ್ತಿದ್ದ ಅವನ ಟ್ರಂಕುಗಳು ಮತ್ತೆ ಹೆಂಡತಿಯ ಮನೆ ಕಡೆ ಹಾದಿ ಹಿಡಿಯುತ್ತವೆ ಎಂಬ ಭಯ ಅವನಿಗೆ ಉಂಟಾಯಿತು. ಆಗ ಹಾಗಾಗಲಿಲ್ಲ. ಪೆತ್ರಾ ಕೊತೆಸ್‌ಗೆ ತನ್ನ ಪ್ರಿಯಕರ ತಿಳಿದಷ್ಟು ಬೇರೆ ಯಾರಿಗೂ ತಿಳಿದಿರಲಿಲ್ಲ ಮತ್ತು ಅವಳಿಗೆ ಟ್ರಂಕುಗಳು ಎಲ್ಲಿಗೆ ಕಳಿಸಲ್ಪಟ್ಟಿವೆಯೋ ಅಲ್ಲಿಯೇ ಇರುತ್ತವೆಂದೂ ಮತ್ತು ಅವ್ರೇಲಿಯಾನೋ ಸೆಗುಂದೋ ಯಾವುದನ್ನಾದರೂ ದ್ವೇಷಿಸುತ್ತಿದ್ದರೆ, ಅದು ತನ್ನ ಜೀವನವನ್ನು ಬದಲಾವಣೆಗಳಿಂದ ಗೋಜಲು ಮಾಡಿಕೊಳ್ಳುವುದನ್ನು ಎಂದು ತಿಳಿದಿತ್ತು. ಹಾಗಾಗಿ ಟ್ರಂಕುಗಳು ಎಲ್ಲಿದ್ದವೋ ಅಲ್ಲೇ ಇದ್ದವು ಮತ್ತು ಪೆತ್ರಾ ಕೊತೆಸ್‌ಗೆ ಅವನ ಮಗಳಿಗೆ ಸಾಧ್ಯವಿಲ್ಲದ್ದನ್ನು ಉಪಯೋಗಿಸಿ ಮತ್ತೆ ತನ್ನ ಪ್ರಿಯಕರನನ್ನು ಗೆಲ್ಲುವುದಕ್ಕೆ ಯೋಚಿಸಿದಳು. ಅದೂ ಕೂಡ ಅನಗತ್ಯವಾದ ಶ್ರಮವಾಗಿತ್ತು. ಏಕೆಂದರೆ ಮೆಮೆಳಿಗೆ ತನ್ನ ತಂದೆಯ ವ್ಯವಹಾರಗಳಲ್ಲಿ ಮೂಗು ತೂರಿಸುವ ಅಪೇಕ್ಷೆ ಇರಲಿಲ್ಲ. ಮತ್ತು ಒಂದು ವೇಳೆ ಹಾಗಿದ್ದ ಪಕ್ಷದಲ್ಲಿ ಅವಳು ಇಟ್ಟುಕೊಂಡವಳ ಕಡೆ ಇರುತ್ತಿದ್ದಳು. ಅವಳಿಗೆ ಯಾರ ಬಗ್ಗೆ ಯೋಚಿಸಲೂ ಸಮಯವಿರಲಿಲ್ಲ. ಅವಳು ನನ್‌ಗಳು ಹೇಳಿಕೊಟ್ಟಂತೆ ತನ್ನ ರೂಮನ್ನು ತಾನೇ ಗುಡಿಸಿಕೊಳ್ಳುತ್ತಿದ್ದಳು, ಹಾಸಿಗೆಯನ್ನು ಸರಿಪಡಿಸಿಕೊಳ್ಳುತ್ತಿದ್ದಳು. ಬೆಳಿಗ್ಗೆ ಹೊತ್ತಿನಲ್ಲಿ ಅಂಗಳದಲ್ಲಿ ಕುಳಿತು ಹೊಲಿದು ಅಥವಾ ಅಮರಾಂತಳ ಹಳೆಯ ಕಾಲಿನಿಂದ ಒತ್ತುವ ಮೆಷಿನ್ ಉಪಯೋಗಿಸಿ ಬಟ್ಟೆಯನ್ನು ಹೊಲಿಯುತ್ತಿದ್ದ್ದಳು. ಉಳಿದವರು ಮಧ್ಯಾಹ್ನದ ನಿದ್ದೆ ಮಾಡುವಾಗ ಪಿಯಾನೋಥರದ್ದನ್ನು ಫೆರ್ನಾಂಡಳನ್ನು ಶಾಂತವಾಗಿರಿಸುತ್ತದೆ ಎಂದು ತಿಳಿದು ಎರಡು ಗಂಟೆಯ ಸಮಯ ಅಭ್ಯಾಸ ಮಾಡುತ್ತಿದ್ದಳು. ಅದೇ ಕಾರಣಕ್ಕಾಗಿ ಅವಳು ಚರ್ಚ್‌ನ ಸಮಾರಂಭಗಳಲ್ಲಿ, ಸ್ಕೂಲಿನ ಪಾರ್ಟಿಗಳಲ್ಲಿ ಅವರಿಂದ ಬೇಡಿಕೆಗಳು ಕಡಿಮೆ ಇದ್ದರೂ ಕೂಡ ವಾದ್ಯವನ್ನು ನುಡಿಸುತ್ತಿದ್ದಳು. ಕತ್ತಲಾಗುತ್ತಿದ್ದಂತೆ ಅವಳು ಸರಳವಾದ ಉಡುಗೆ ತೊಟ್ಟು, ಎತ್ತರ ಹಿಮ್ಮಡಿಯ ಶೂ ಹಾಕಿಕೊಳ್ಳುತ್ತಿದ್ದಳು ಮತ್ತು ತನ್ನ ತಂದೆಯ ಜೊತೆ ಯಾವುದೇ ಕಾರ್ಯಕ್ರಮವಿರದಿದ್ದರೆ ಗೆಳತಿಯರ ಮನೆಗೆ ಹೋಗಿ ಊಟದ ಸಮಯದವರೆಗೂ ಇರುತ್ತಿದ್ದಳು. ಆಗಾಗ್ಗೆ ಅವ್ರೇಲಿಯಾನೋ ಸೆಗುಂದೋ ಅವಳನ್ನು ಸಿನಿಮಾಕ್ಕೆ ಕರೆದುಕೊಂಡು ಹೋಗಲು ಬರುತ್ತಿದ್ದ.
ಮೆಮೆಳ ಸ್ನೇಹಿತೆಯರಲ್ಲಿ ಮೂರು ಜನ ಅಮೆರಿಕದ ಹುಡುಗಿಯರಿದ್ದರು. ಅವರು ವಿದ್ಯುತ್ ಬೇಲಿಯನ್ನು ತುಂಡರಿಸಿ ಬಂದು ಮಕೋಂದೋದ ಹುಡುಗಿಯರ ಸ್ನೇಹ ಬೆಳೆಸಿದ್ದರು. ಅವರಲ್ಲೊಬ್ಬಳು ಪ್ಯಾಟ್ರೀಷಿಯ ಬ್ರೌನ್. ಅವ್ರೇಲಿಯಾನೋ ಸೆಗುಂದೋನ ಸತ್ಕಾರಕ್ಕೆ ಕೃತಜ್ಞರಾಗಿ ಮೆಮೆಳನ್ನು ತನ್ನ ಮನೆಗೆ ಕರೆದದ್ದಲ್ಲದೆ, ಅವಳನ್ನು ಹೊರಗಿನವರು ಮತ್ತು ಸ್ಥಳೀಯರು ಬೆರೆಯುತ್ತಿದ್ದ ಒಂದೇ ಸ್ಥಳವಾದ ಶನಿವಾರದ ನೃತ್ಯಕೂಟಕ್ಕೆ ಆಹ್ವಾನಿಸಿದರು. ಫೆರ್ನಾಂಡಳಿಗೆ ಇದು ತಿಳಿದಾಗ ಅವಳು ಅಮರಾಂತ ಉರ್ಸುಲಾಳನ್ನು ಮತ್ತು ಕಾಣದ ಡಾಕ್ಟರುಗಳನ್ನು ಒಂದು ಕ್ಷಣ ಮರೆತು ಭಾವತೀವ್ರತೆಗೆ ಒಳಗಾದಳು. ಅವಳು ಮೆಮೆಗೆ, “ಸ್ವಲ್ಪ ಯೋಚ್ನೆ ಮಾಡು, ಗೋರೀಲಿ ಕರ್ನಲ್ ಏನು ಯೋಚ್ನೆ ಮಾಡ್ತಿರ್‍ತಾನೆ ಅಂತ” ಎಂದಳು. ಅವಳು ಸಹಜವಾಗಿ ಉರ್ಸುಲಾಳ ಬೆಂಬಲವನ್ನು ಅಪೇಕ್ಷಿಸಿದಳು. ಆದರೆ ಎಲ್ಲರ ನಿರೀಕ್ಷೆಗೆ ಪ್ರತಿಯಾಗಿ ಆ ಕುರುಡಿ ಹೆಂಗಸಿಗೆ ಎಲ್ಲಿಯ ತನಕ ಮೆಮೆ ಅವಳ ಅಭ್ಯಾಸಗಳನ್ನು ಶಿಸ್ತಿನಿಂದ ಉಳಿಸಿಕೊಂಡು, ಪ್ರಾಟಸ್ಟೆಂಟಾಗಿ ಪರಿವರ್ತನೆ ಹೊಂದುವುದಿಲ್ಲವೋ ಅಲ್ಲಿಯ ತನಕ ಅವಳು ತನ್ನ ಓರಗೆಯವರ ಜೊತೆ ಹೋಗಿ ಡ್ಯಾನ್ಸ್ ಮಾಡುವುದಾಗಲಿ ಅಥವಾ ಸ್ನೇಹ ಬೆಳೆಸುವುದಾಗಲಿ ತಪ್ಪೆನಿಸಲಿಲ್ಲ. ಮೆಮೆ ತನ್ನ ಮುತ್ತಜ್ಜಿಯ ಆಲೋಚನೆಗಳನ್ನು ಸರಿಯಾಗಿ ಊಹಿಸಿದಳು ಮತ್ತು ನೃತ್ಯಕೂಟಕ್ಕೆ ಹೋಗಿ ಬಂದ ಮಾರನೆ ದಿನ ಸಾಮೂಹಿಕ ಪ್ರಾರ್ಥನೆಗೆ ಹೋಗಲು ಎಂದಿಗಿಂತ ಬೇಗ ಏಳುತ್ತಿದ್ದಳು. ಅಮೆರಿಕನ್ನರು ತಾನು ಪಿಯಾನೋದಂಥದನ್ನು ನುಡಿಸುವುದನ್ನು ಕೇಳಲು ಅಪೇಕ್ಷೆ ಪಟ್ಟಿದ್ದಾರೆ ಎಂದು ಮೆಮೆ ಹೇಳುವ ತನಕ ಇದ್ದ ಫೆರ್ನಾಂಡಳ ಪ್ರತಿರೋಧ ಕಡಿದು ಬಿತ್ತು. ವಾದ್ಯವನ್ನು ಮನೆಯಿಂದ ಹೊರಗಡೆ ಮಿಸ್ಟರ್ ಬ್ರೌನ್‌ನ ಮನೆಗೆ ತೆಗೆದುಕೊಂಡು ಹೋಗಲಾಯಿತು ಮತ್ತು ಅಲ್ಲಿ ಅವಳು ನುಡಿಸಿದ್ದಕ್ಕೆ ಪ್ರಾಮಾಣಿಕವಾದ ಚಪ್ಪಾಳೆ ಮತ್ತು ಉತ್ಸಾಹಪೂರ್ಣ ಅಭಿನಂದನೆಗಳನ್ನು ದೊರಕಿಸಿಕೊಂಡಳು. ಅಂದಿನಿಂದ ಕೇವಲ ನೃತ್ಯಕ್ಕಲ್ಲದೆ ವಾರಕ್ಕೆ ಒಂದು ಸಲ ಭಾನುವಾರ ಈಜುಕೊಳದಲ್ಲಿ ಈಜುವುದಕ್ಕೆ, ಊಟಕ್ಕೆ ಅವಳನ್ನು ಕರೆದರು. ಮೆಮೆ ವೃತ್ತಿಪರರಂತೆ ಈಜುವುದನ್ನು, ಟೆನ್ನಿಸ್ ಆಡುವುದನ್ನು ಮತ್ತು ಪೈನಾಪೆಲ್‌ನ ಹೋಳುಗಳ ಜೊತೆ ಹೊಗೆಸೊಪ್ಪು ತಿನ್ನುವುದನ್ನು ಕಲಿತಳು. ನೃತ್ಯ, ಈಜುವುದು ಮತ್ತು ಟೆನ್ನಿಸ್ ಆಡುವಾಗ ಬಹಳ ಬೇಗನೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಲು ತೊಡಗಿದಳು. ಅವ್ರೇಲಿಯಾನೋ ಸೆಗುಂದೋ ಮಗಳ ಪ್ರಗತಿಯಿಂದ ಎಷ್ಟು ಉತ್ಸಾಹಗೊಂಡಿದ್ದನೆಂದರೆ ತಿರುಗಾಡುವ ಸೇಲ್ಸ್‌ಮನ್ ಒಬ್ಬನಿಂದ ಬಣ್ಣದ ಚಿತ್ರಗಳಿರುವ ಇಂಗ್ಲಿಷ್ ವಿಶ್ವಕೋಶದ ಆರು ಸಂಪುಟಗಳನ್ನು ತರಿಸಿಕೊಟ್ಟ. ಅವಳು ಅದನ್ನು ಬಿಡುವಿನ ಸಮಯದಲ್ಲಿ ಓದುತ್ತಿದ್ದಳು. ಹಿಂದೆ ಪ್ರೇಮಿಗಳ ವಿಷಯವನ್ನು ಕುರಿತು ಮತ್ತು ಗೆಳತಿಯರ ಸ್ನೇಹದ ಬಗ್ಗೆ ಇದ್ದ ಮನಸ್ಸನ್ನು ಮರುಹೊಂದಾಣಿಕೆಯಿಂದ ಓದುವುದು ತುಂಬಿಕೊಂಡಿತು. ಇದು ಅವಳ ಮೇಲೆ ಹೇರಿದ ಶಿಸ್ತಿನಿಂದ ಉಂಟಾದದ್ದಲ್ಲ. ಆದರೆ ಅವಳಿಗೆ ಸಾರ್ವಜನಿಕ ಸಂಗತಿಗಳಲ್ಲಿನ ನಿಗೂಢತೆಯಲ್ಲಿ ಆಸಕ್ತಿ ಕಳೆದು ಹೋಯಿತು. ತಾನು ಕುಡಿತದ ಅಮಲಿನಲ್ಲಿ ಮಾಡಿದ ಸಾಹಸವನ್ನು ಹುಡುಗಾಟದಲ್ಲಿ ಮಾಡಿದ್ದೆಂದು ಕಂಡು ಅವ್ರೇಲಿಯಾನೋ ಸೆಗುಂದೋಗೆ ಅದರ ಬಗ್ಗೆ ಹೇಳಿದಳು. ಅವನಿಗೆ ಅದು ಅವಳು ಮಾಡಿದ್ದಕ್ಕೆ ಪ್ರತಿಯಾಗಿ ತಮಾಷೆಯಾಗಿ ಕಂಡಿತು. ಅವನು ಅವಳಿಗೆ ವಿಶ್ವಾಸದಿಂದ ಹೊಟ್ಟೆ ಹುಣ್ಣಾಗುವಂತೆ ನಗುತ್ತ, “ನಿಮ್ಮಮ್ಮಂಗೆ ಇದು ಗೊತ್ತಾಗಿದ್ರೆ . . ” ಎಂದ. ಅವಳು ತನ್ನ ಮೊದಲ ಪ್ರೇಮದ ಬಗ್ಗೆ ತನಗೆ ತಿಳಿಸಬೇಕೆಂದು ಅದೇ ವಿಶ್ವಾಸದಿಂದ ಮಾತು ತೆಗೆದುಕೊಂಡ. ಮೆಮೆ ತನ್ನ ತಂದೆ ತಾಯಿಯ ಜೊತೆ ರಜಾ ದಿನಗಳನ್ನು ಕಳೆಯಲು ಬಂದಿದ್ದ ಕೆಂಚು ಕೂದಲ ಅಮೆರಿಕದ ಹುಡುಗನನ್ನು ಇಷ್ಟಪಟ್ಟಿರುವುದಾಗಿ ಹೇಳಿದಳು. ಅವ್ರೇಲಿಯಾನೋ ಸೆಗುಂದೋ ನಗುತ್ತ, “ನಿಂಗೇನು ಗೊತ್ತು. ನಿಮ್ಮಮ್ಮಂಗೆ ಗೊತ್ತಾದ್ರೇ . .” ಎಂದ. ಆದರೆ ಅವನು ತನ್ನ ದೇಶಕ್ಕೆ ವಾಪಸು ಹೋಗಿದ್ದಾನೆಂದು ಮೆಮೆ ಹೇಳಿದಳು. ಅವಳ ಪ್ರಬುದ್ಧ ವರ್ತನೆಯಿಂದ ಮನೆಯಲ್ಲಿ ಶಾಂತಿ ನೆಲೆಸಿತು. ಅನಂತರ ಅವ್ರೇಲಿಯಾನೋ ಸೆಗುಂದೋ ಪೆತ್ರಾ ಕೊತೆಸ್ ಕಡೆ ಹೆಚ್ಚಿನ ಸಮಯ ವಿನಿಯೋಗಿಸಿದ ಮತ್ತು ಅವನ ದೇಹ ಹಾಗೂ ಆತ್ಮ ಕಳೆದ ದಿನಗಳಂತೆ ಹಾದರದಲ್ಲಿ ತೊಡಗಲು ಅನುವುಮಾಡಿಕೊಡದಿದ್ದರೂ ಅವುಗಳನ್ನು ವ್ಯವಸ್ಥೆ ಮಾಡುವ ಅವಕಾಶಗಳನ್ನು ಕಳೆದುಕೊಳ್ಳಲಿಲ್ಲ. ಆ ವೇಳೆಗಾಗಲೇ ಕೆಲವು ಕೀಗಳನ್ನು ಶೂ ಲೇಸಿನಿಂದ ಕಟ್ಟಿದ್ದ ಅಕಾರ್ಡಿಯನ್‌ನನ್ನು ಹೊರಗೆ ತೆಗೆದಿದ್ದ. ಮನೆಯಲ್ಲಿ ಅಮರಾಂತ, ಎಂದೂ ಮುಗಿಯದ ಮುಸುಕು ಹಾಕಿಕೊಳ್ಳುವ ಬಟ್ಟೆಯನ್ನು ನೇಯುತ್ತಿದ್ದಳು ಮತ್ತು ನೆರಳುಗಳ ಸಂಚಯದಲ್ಲಿ, ಹೊಸೆ ಅರ್ಕಾದಿಯೋನ ಭೂತ ಮಾತ್ರ ಕಾಣಿಸುತ್ತಿದ್ದ ಬಾದಾಮಿ ಮರದ ಕೆಳಗೆ ಉರ್ಸುಲಾ ಜರ್ಜರಿತಗೊಂಡು ಕಾಲೆಳೆಯುತ್ತಿದ್ದಳು. ಫೆರ್ನಾಂಡ ತನ್ನ ಅಧಿಕಾರವನ್ನು ಬಲಪಡಿಸಿಕೊಂಡಳು. ಅವಳು ತಿಂಗಳಿಗೊಮ್ಮೆ ಹೊಸೆ ಅರ್ಕಾದಿಯೋಗೆ ಬರೆಯುವ ಕಾಗದದಲ್ಲಿ ಸುಳ್ಳಿನ ಗೊಂಚಲುಗಳು ಇರುತ್ತಿರಲಿಲ್ಲ. ಅವಳು ಕಾಣದ ಡಾಕ್ಟರ್ ಜೊತೆ ನಡೆಸುವ ಪತ್ರ ವ್ಯವಹಾರವನ್ನು ಮಾತ್ರ ಮುಚ್ಚಿಟ್ಟಿದ್ದಳು. ಅವರು ಅವಳ ದೊಡ್ಡ ಕರುಳಿನಲ್ಲಿ ಗೆಡ್ಡೆ ಇದೆ ಎಂದು ವಿಶ್ಲೇಷಿಸಿದ್ದರು ಮತ್ತು ಮನೋಸ್ಪರ್ಶ ಶುಶ್ರೂಷೆಗೆ ತಯಾರಾಗಿದ್ದರು.
*****
ಮುಂದುವರೆಯುವುದು