ಸಂಸ್ಕಾರ – ೫

ಹದ್ದುಗಳನ್ನು ಓಡಿಸಿದ ಬ್ರಾಹ್ಮಣರು ಪ್ರೇತಕಳೆಯ ತಮ್ಮ ಮುಖಗಳನ್ನು ಎತ್ತಿ, ಒಟ್ಟಾಗಿ ಬಂದು ಚಿಟ್ಟೆಯನ್ನು ಹತ್ತಿ ಪ್ರಶ್ನಾರ್ಥಕವಾಗಿ ಪ್ರಾಣೇಶಾಚಾರ್ಯರ ಮುಖ ನೋಡಿದರು. ಆಚಾರ್ಯರು ಉತ್ತರಿಸದೆ ವಿಲಂಬ ಮಾಡುತ್ತಿದ್ದುದು ಕಂಡು ಅವರಿಗೆ ದಿಗಿಲಾಯಿತು. ತನ್ನಿಂದ ಮಾರ್ಗದರ್ಶನವನ್ನು ಬಯಸಿ, ತಮ್ಮ ಬ್ರಾಹ್ಮಣ್ಯವನ್ನೆಲ್ಲ ಗಂಟುಕಟ್ಟಿ ತನ್ನ ತಲೆಯ ಮೇಲೆ ಹೊರೆಸಿ-ಅನಾಥರಂತೆ ತನ್ನನ್ನು ನೋಡುತ್ತಿದ್ದ ಕಣ್ಣುಗಳನ್ನು ಕಂಡು ಆಚಾರ್ಯರಿಗೆ ಪಶ್ಚಾತ್ತಾಪದ ಜೊತೆಗೆ ಮಾರ್ಗದರ್ಶನ ಮಾಡಬೇಕಾದ ತನ್ನ ಜವಾಬ್ದಾರಿ, ಅಧಿಕಾರ ನಾಶವಾಗಿ ತಾನು ಸ್ವತಂತ್ರನಾದೆ ಎಂದು ಹಗುರೆನ್ನಿಸಿತು. ನಾನು ಯಾತರವ? ನಿಮ್ಮ ಹಾಗೇ ಒಬ್ಬ ಕೇವಲ ಮನುಷ್ಯ-ರಾಗ ದ್ವೇಷಯುಕ್ತವಾದಫ್ ಪ್ರಾಣಿ-ಎನ್ನಿಸಿ ಹರ್ಷವಾಯಿತು. ಇದು ವಿನಯವೇ, ಅಹಂಕಾರಭಂಗವಾದ ಲಕ್ಷಣವೇ, ತನ್ನ ಮೊದಲನೆಯ ಪಾಠವೇ-ಆಶೋದಯವಾದಂತಾಯಿತು, ’ಚಂದ್ರೀ-ಇಲ್ಲಿ ಬಾ, ಹೇಳು. ನನ್ನನ್ನು ಸಂಕೋಲೆಗಳಿಂದ ಪಾರುಮಾಡು. ಗುರುತ್ವದ ಹೊರೆ ಇಳಿಸು’ ಎಂದು ಮನಸ್ಸಿನಲ್ಲೇ ಅಂದುಕೊಂಡು ಸುತ್ತ ಹುಡುಕಿದರು. ಇಲ್ಲ-ಅವಳು ಇಲ್ಲ. ಇಲ್ಲಿ ಎಲ್ಲೂ ಇಲ್ಲ. ಊರ್ವಶಿಯ ಹಾಗೆ ನಡೆದುಬಿಟ್ಟಳು. ತಾನಾಗಿ ಬಾಯಿಬಿಟ್ಟು ಹೇಳಲು, ನಾರಣಪ್ಪ ಪಟ್ಟ ಸುಖದಲ್ಲಿ ನಾನೂ ಪಾಲು ಪಡೆದೆ ಎಂದು ಬಾಯಾರೆ ಅಂದುಬಿಡಲು ದಿಗಿಲಾಯಿತು. ಕೆ ಬೆವತು ತಣ್ಣಗಾಯಿತು. ಮನುಷ್ಯಮಾತ್ರದವನಿಗೆ ಸಹಜವಾದ ಸುಳ್ಳು ಹೇಳಬೇಕು, ಮುಚ್ಚಿಟ್ಟುಕೊಳ್ಳಬೇಕು, ಸ್ವಕ್ಷೇಮಚಿಂತನೆ ಮಾಡಿಕೊಳ್ಳಬೇಕು ಎಂಬ ಆಸೆ ಪ್ರಥಮ ಬಾರಿಗೆ ಉತ್ಪನ್ನವಾಯಿತು. ಇವರು ನನ್ನಲ್ಲಿ ಇಟ್ಟ ನಂಬಿಕೆ, ಗೌರವಗಳನ್ನು ಆಘಾತಗೊಳಿಸುವ ಧೆರ್ಯ ಒಳಗೆ ಇಲ್ಲ. ಇದು ಪಶ್ಚಾತ್ತಾಪವೋ, ಸ್ವಕ್ಷೇಮಚಿಂತನೆಯೋ, ರೂಢಿಯೋ, ತಮಸ್ಸೋ, ದಗವೋ-ಹೃದ್ಗತವಾದ ಅಭ್ಯಾಸಬಿದ್ದ ಮಂತ್ರ ಮನಸ್ಸನ್ನು ಸುಳಿಯಿತು : ’ಪಾಪೋಹಂ, ಪಾಪಕರ್ಮೋಹಂ, ಪಾಪಾತ್ಮಾ, ಪಾಪಸಂಭವಃ.’ ಇಲ್ಲ ಇಲ್ಲ, ಅದು ಕೂಡ ಸುಳ್ಳು. ಮೊದಲು ಹೃದ್ಗತವಾದ ಮಂತ್ರಗಳನ್ನೆಲ್ಲ ಮರೆಯಬೇಕು; ಬಾಲಕನಂತೆ ಜಳಜಳ ಮನಸ್ಸಿನವನಾಗಬೇಕು. ಚಂದ್ರಿಯ ಮೊಲೆಗಳನ್ನು ಹಿಸುಕುವಾಗ ಪಾಪೋಹಂ ಎಂದು ಅನಿಸಲಿಲ್ಲ. ಈಗ ಚಂದ್ರಿ ಇಲ್ಲಿ ತನ್ನ ಮಾನ ತೆಗೆಯಲು ಇಲ್ಲವೆಂದು ಸಂತೋಷವೇ ಆಗುತ್ತಿದೆ. ಎಚ್ಚೆತ್ತಮೇಲೆ ಬರುವ ಭಾವನೆ ಬೇರೆ, ಎಚ್ಚರ ತಪ್ಪಿದಾಗ ಅನ್ನಿಸುವುದು ಬೇರೆ. ಇಬ್ಬಂದಿ ಈ ಬಾಳೆಂದು ಅರಿವಾಯಿತು. ಈಗ ನಾನು ನಿಜವಾಗಿ ಕರ್ಮಚಕ್ರದಲ್ಲಿ ತೊಡಗಿದ್ದೇನೆ ಎನ್ನಿಸಿತು. ಈ ಸಂಕಟ ನಿವಾರಣೆಗೆ ಮತ್ತೆ ಅರಿವುಗೆಟ್ಟು ಅವಳನ್ನು ಅವುಚಿಕೊಬೇಕು, ಸಂಕಟದಲ್ಲಿ ಎಚ್ಚರವಾಗಬೇಕು, ನಿವಾರಣೆಗೆ ಅವಳ ಬಳಿಯೇ ಹೋಗಬೇಕು. ಚಕ್ರ, ಕರ್ಮಚಕ್ರ. ಇದು ರಜಸ್ಸು. ಕಾಮವನ್ನು ನಾನು ಬಿಟ್ಟರೂ ಕಾಮ ನನ್ನನ್ನು ಬಿಡಲಿಲ್ಲ.

ಕಸಿವಿಸಿಯಾಗಿ ಬಾಯಲ್ಲಿ ಮಾತು ಹೊರಡದೆ, ಕೂತ ಬ್ರಾಹ್ಮಣರನ್ನೆಲ್ಲ ಬಿಟ್ಟು, ದೇವರ ಕೋಣೆಗೆ ಹೋದರು. ನಾಮಸ್ಮರಣೆ ಮಾಡಿದರು-ಅಭ್ಯಾಸದಂತೆ. ನಿಜ ಹೇಳದಿದ್ದರೆ-ಮಡಿಲಿನಲ್ಲಿ ಕಟ್ಟಿಕೊಂಡ ಕೆಂಡದಂತುರಿದರೆ…. ಇನ್ನು ಮುಂದೆ ನಾನೆಂದೂ ಮಾರುತಿಯ ಮುಖ ನೋಡಲಾರೆ, ನಿಷ್ಕಲ್ಮಷ ಮನಸ್ಸಿನಿಂದ ರೋಗಗ್ರಸ್ತಳನ್ನು ಉಪಚರಿಸಲಾರೆ, ದೇವರೇ, ಈ ತಳಮಳದಿಂದ ಪಾರುಮಾಡಪ್ಪ, ಚಂದ್ರಿ ಬಂದಿದ್ದಾಳೋ, ಹೇಳಿಬಿಡುತ್ತಾಳೋ-ಎಂದು ಕಾತರದಿಂದ, ಭಯದಿಂದ ಹೊರಗೆ ಬಂದರು. ಬ್ರಾಹ್ಮಣರು ಕಾದೇ ಇದ್ದರು. ಮತ್ತೆ ರಣಹದ್ದುಗಳು ಬಂದು ಮನೆಗಳ ಮೇಲೆ ಕೂತಿದ್ದವು. ಆಚಾರ್ಯರು ಕಣ್ಣು ಮುಚ್ಚಿ ಉಸಿರೆಳೆದು ಧೆರ್ಯ ತಂದುಕೊಂಡರು. ಆದರೆ ಹೊರಟ ಮಾತು ಮಾತ್ರ :
“ನಾನು ಸೋತೆ, ಮಾರುತಿಯ ಅಪ್ಪಣೆ ದೊರೆಯಲಿಲ್ಲ. ನನಗೆ ಏನೂ ತಿಳಿಯದು. ಈಗ ನೀವು ನಿಮ್ಮ ಮನಸ್ಸಿಗೆ ಅನ್ನಿಸಿದಂತೆ ಮಾಡಿ.”
ಬ್ರಾಹ್ಮಣರೆಲ್ಲರೂ ಅವಾಕ್ಕಾಗಿ ’ಹಾ’ ಎಂದರು. ’ಛೆ ಛೆ’ ಎಂದ ಗರುಡಾಚಾರ್ಯ. ಹಿಂದಿನ ದಿನ ಹೊಟ್ಟೆ ತುಂಬ ಉಂಡಿದ್ದರಿಂದ ಸ್ವಲ್ಪ ಜೀವವಿದ್ದ ದಾಸಾಚಾರ್ಯ ಹೇಳಿದ :
“ಏನು ಮಾಡೋಣ ಹಾಗಾದರೆ? ಕೆಮರದ ಅಗ್ರಹಾರಕ್ಕೆ ಹೋಗುವ. ಅಲ್ಲಿ ಪಂಡಿತ ಸುಬ್ಬಣ್ಣಾಚಾರ್ಯರನ್ನು ಕೇಳಿ ನೋಡುವ. ನಮ್ಮ ಆಚಾರ್ಯರಿಗೆ ತಿಳಿಯದಿದ್ದುದು ಅವರಿಗೆ ತಿಳಿಯುತ್ತೆ ಎಂದಲ್ಲ. ಅವರಿಗೂ ತಿಳಿಯದೇ ಹೋದ ಪಕ್ಷದಲ್ಲಿ ನಡೆದು ಸೀದ ಮಠಕ್ಕೆ ಹೋಗಿ ಸ್ವಾಮಿಗಳನ್ನೇ ಕೇಳಿಬಿಡುವ. ಈ ದುರ್ನಾತದಲ್ಲಿ ಶವಾನ್ನ ಇಟ್ಟುಕೊಂಡು ಊಟ ಉಪಾಹಾರವಿಲ್ಲದೆ ಅಗ್ರಹಾರದಲ್ಲಿ ಬಿದ್ದಿರಲಿಕ್ಕಾಗುತ್ತದ? ಗುರುದರ್ಶನವಾದ ಹಾಗೂ ಆಯಿತು. ಅಲ್ಲದೆ ತ್ರಯೋದಶಿ ದಿನ ಮಠದಲ್ಲಿ ಆರಾಧನೆ ಬೇರೆ ಇದೆ. ಏನೂಂತೀರ? ಕೆಮರಕ್ಕೆ ನಡೆದು ಯಜ್ಞೋಪವೀತ ಬದಲಾಯಿಸುವ. ಅಲ್ಲಿ ಬ್ರಾಹ್ಮಣರು ಊಟಕ್ಕೇಳಿ ಎನ್ನದೇ ಇರುತ್ತಾರ? ಹೆಣವಿರುವ ಅಗ್ರಹಾರದಲ್ಲಿ ಊಟಮಾಡಬಾರದೆಂದು ನಿಯಮವೇ ಹೊರತು ಕೆಮರದಲ್ಲಿ ಏನು ದೋಷ? ಏನೂಂತೀರ?”

ಎಲ್ಲ ಬ್ರಾಹ್ಮಣರೂ ಸರಿ ಸರಿ ಎಂದು ಒಪ್ಪಿದರು. ಲಕ್ಷ್ಮಣಾಚಾರ್ಯ ನೆನೆಸಿಕೊಂಡ : ಕೆಮರದಲ್ಲಿ ವೆಂಕಣ್ಣಾಚಾರ್ಯ ಒಂದು ನೂರು ದೊನ್ನೆ ಒಂದು ಸಾವಿರ ಒಣಗಿದೆಲೆ ಬೇಕು ಎಂದಿದ್ದ. ತೆಗೆದುಕೊಂಡು ಹೋಗಿ ಕೊಟ್ಟ ಹಾಗೂ ಆಯಿತು. ಗರುಡಾಚಾರ್ಯನಿಗೂ ಶ್ರೀಗುರುಗಳ ಹತ್ತಿರ ಸ್ವಲ್ಪ ವ್ಯವಹಾರದ ಮಾತೂ ಇತ್ತು. ಪ್ರಾಣೇಶಾಚಾರ್ಯರಿಗೆ ಈ ಸೂಚನೆಯಿಂದ ದೊಡ್ಡದೊಂದು ಭಾರ ಇಳಿದು ಆಯಾಸ ಪರಿಹಾರವಾದಂತಾಯಿತು.
ದಾಸಾಚಾರ್ಯ ತನ್ನ ಮಾತನ್ನು ಎಲ್ಲರೂ ಒಪ್ಪಿದ್ದು ಕಂಡು ಪರಮ ಹರ್ಷಿತನಾಗಿ ಎಂದ :
“ಮೂರು ದಿನವಾದರೂ ನಾವು ಅಗ್ರಹಾರ ಬಿಟ್ಟಿರಬೇಕಾಗುತ್ತೆ. ಹೆಂಗಸರು ಮಕ್ಕಳ ಗತಿ ಏನು. ಸದ್ಯಕ್ಕೆ ಅವರನ್ನು ತೌರಿಗೆ ಕಳಿಸುವ?”
ಇದಕ್ಕೆ ಎಲ್ಲರೂ ಒಪ್ಪಿದರು.

ಅಧ್ಯಾಯ : ನಾಲ್ಕು

ಮನೆಗೆ ಮರಳಿದ ದುರ್ಗಾಭಟ್ಟ ಈ ಮಾಧ್ವ ಮುಂಡೇಗಂಡರ ಸಹವಾಸದಲ್ಲಿ ಕೆಟ್ಟೆನೆಂದುಕೊಂಡು, ಗಾಡಿ ಕಟ್ಟಿಸಿ, ಹೆಂಡತಿಮಕ್ಕಳ ಜೊತೆ ಅವನ ಅತ್ತೆಯ ಊರಿಗೆ ಹೋಗಿಬಿಟ್ಟ. ಲಕ್ಷ್ಮಣಾಚಾರ್ಯ ಬಾಳೆಲೆ ದೊನ್ನೆಗಳನ್ನು ಕಟ್ಟಿಕೊಂಡು, ದಾಸಾಚಾರ್ಯ ದಾರಿಗೆಂದು ಅರಳು ಕಟ್ಟಿಕೊಂಡು, ಹೆಂಗಸರು ಮಕ್ಕಳನ್ನು ತೌರಿಗೆಂದು ಎಬ್ಬಿಸಿ, ಲಕ್ಷ್ಮೀದೇವಮ್ಮನನ್ನು ಲಕ್ಷ್ಮಣನ ಅತ್ತೆಯ ಮನೆಗೆ ಹೊರಡಿಸಿ, ಬ್ರಾಹ್ಮಣರೆಲ್ಲರೂ ಪ್ರಾಣೇಶಾಚಾರ್ಯರ ಜಗುಲಿ ಸೇರುವ ವೇಳೆಗೆ ಆಚಾರ್ಯರ ಹೆಂಡತಿ ಮುಟ್ಟಾಗಿ ಬಿಟ್ಟಿದ್ದಳು. “ಹಾಸಿಗೆ ಹಿಡಿದವಳನ್ನು ನಾನು ಬಿಟ್ಟು ಬರುವಂತಿಲ್ಲ, ನೀವು ಹೋಗಿ” ಎಂದರು ಆಚಾರ್ಯರು. ಸರಿ ಎಂದು ಬ್ರಾಹ್ಮಣರು ಹೊರಬಂದು, ಮನೆಗಳ ಮೇಲೆ ಕೂತ ಹದ್ದುಗಳನ್ನು ಲೆಕ್ಕಿಸದೆ ಆತುರವಾಗಿ ಕೆಮರದ ಮಾರ್ಗದಲ್ಲಿ ನಡೆದುಬಿಟ್ಟರು.
ಕೆಮರ ಸೇರುವಾಗ ಮಧ್ಯಾಹ್ನದ ಧಗೆ ಆರಿ ಸಂಜೆಯಾಗಿತ್ತು. ಸ್ನಾನಮಾಡಿ, ಯಜ್ಞೋಪವೀತ ಬದಲಾಯಿಸಿ, ಗೋಪಿಚಂದನಗಳನ್ನು ಧರಿಸಿ ಸುಬ್ಬಣ್ಣಾಚಾರ್ಯರ ಜಗುಲಿಯ ಮೇಲೆ ಕೂತರು. ಮೊದಲು ಊಟವಾಗಲಿ ಎಂದರು ಪಂಡಿತರು. ಅದೇ ಸೂಚನೆಗೆಂದು ಕಾದ ಬ್ರಾಹ್ಮಣರು ಬಿಸಿ ಬಿಸಿ ಅನ್ನಸಾರನ್ನು ಒಳಗಿನ ಪರಮಾತ್ಮನಿಗೆ ತಾಗುವಂತೆ ಸುರಿದು, ಹಿತವಾದ ಆಯಾಸದಲ್ಲಿ ಸುಬ್ಬಣ್ಣಾಚಾರ್ಯರ ಸುತ್ತ ನೆರೆದರು. ಸುಬ್ಬಣ್ಣಾಚಾರ್ಯರು ಜ್ಯೋತಿಷಿಗಳಾದ್ದರಿಂದ ನಾರಣಪ್ಪ ಸತ್ತ ವೇಳೆ ಅಮೃತವೋ ವಿಷವೋ ಎಂದು ತಿಳಿದರೆ ಸಂಸ್ಕಾರದ ಅರ್ಹತೆ ಅನರ್ಹತೆಯ ಬಗ್ಗೆ ಹೊಳೆಯಬಹುದೆಂದು, ಕನ್ನಡಕ ಧರಿಸಿ ಪಂಚಾಂಗ ನೋಡಿ, ಕವಡೆಗಳನ್ನು ಎಣಿಸಿ-“ವಿಷ” ಎಂದರು, ’ಪ್ರಾಣೇಶಾಚಾರ್ಯರಿಗೆ ತಿಳಿಯದಿದ್ದನ್ನು ನಾನು ಹೇಗೆ ಹೇಳಲಿ’ ಎಂದು ತಲೆಯಾಡಿಸಿದರು. ದಾಸಾಚಾರ್ಯನಿಗೆ ಇದರಿಂದ ಸಂತೋಷವೇ ಆಯಿತು; ಹೊರಟವರು ಹಾಗೆ, ಮಠಕ್ಕೂ ಹೋಗಿ ಆರಾಧನೆಯ ಪ್ರಸಾದ ಸ್ವೀಕರಿಸಿ ಬಂದುಬಿಡಬಹುದಲ್ಲ ಎಂದು.
“ಕತ್ತಲೆಯಾಯಿತಲ್ಲ. ಇವತ್ತು ರಾತ್ರೆ ಇಲ್ಲೇ ತಂಗಿ, ನಸುಕಿನಲ್ಲೆದ್ದು ಮುಂದೆ ಹೊರಡಿ-” ಎಂದು ಕೆಮರದವರು ಮಾಡಿದ ಉಪಚಾರಕ್ಕೆ ಬ್ರಾಹ್ಮಣರು ಬೇಡವೆನ್ನಲಿಲ್ಲ. ಆದರೆ ನಸುಕಿನಲ್ಲೆದ್ದಾಗ ದಾಸಾಚಾರ್ಯ ಜ್ವರ ಬಂದು ಹಾಸಿಗೆ ಹಿಡಿದಿದ್ದ. ಎಬ್ಬಿಸಹೋದರೆ ಅವನಿಗೆ ಧ್ಯಾಸವೇ ಇರಲಿಲ್ಲ. ತುಂಬ ಉಂಡು ಅಜೀರ್ಣವಾಗಿರಬೇಕೆಂದು ಗರುಡಾಚಾರ್ಯ ಸಮಾಧಾನ ಹೇಳಿದ. ಪಾಪ! ಅವನಿಗೆ ಆರಾಧನೆಯ ಊಟ ತಪ್ಪಿತಲ್ಲ ಎಂದು ಬಡ ಬ್ರಾಹ್ಮಣರು ಕೊರಗಿದರು. ಅವಸರವಾಗಿ ಎದ್ದು ಮುಖ ತೊಳೆದು ಅವಲಕ್ಕಿ-ಮೊಸರು ತಿಂದು, ನಿಧಾನವಾಗಿ ಇಪ್ಪತ್ತು ಮೆಲಿ ನಡೆದು ಕತ್ತಲಾಗುವ ಹೊತ್ತಿಗೆ ಇನ್ನೊಂದು ಅಗ್ರಹಾರವನ್ನು ತಲ್ಪಿದರು. ಅವತ್ತು ರಾತ್ರೆ ಅಲ್ಲೇ ಊಟಮಾಡಿ ನಸುಕಿನಲ್ಲೆದ್ದಾಗ ಪದ್ಮನಾಭಾಚಾರ್ಯ ಜ್ವರ ಏರಿ ಮಲಗಿದ್ದ. ನಡೆದ ಆಯಾಸವಿರಬೇಕೆಂದು ಅವನನ್ನು ಅಲ್ಲೇ ಬಿಟ್ಟು ಮತ್ತೆ ಹತ್ತು ಮೆಲಿ ನಡೆದು ಮಠವನ್ನು ತಲ್ಪುವಾಗ ಮಧ್ಯಾಹ್ನದ ಪೂಜೆಗೆ ನಗಾರಿ ಬಾರಿಸುತ್ತಿತ್ತು.

ಅಧ್ಯಾಯ : ಐದು

ಹಾಸಿಗೆ ಹಿಡಿದು ಜ್ವರ ಬಂದು ಬಹಿಷ್ಠೆಯಾದ ಹೆಂಡತಿಯನ್ನು ಬಿಟ್ಟರೆ, ಹದ್ದು, ಕಾಗೆಗಳನ್ನುಳಿದು ನರಪ್ರಾಣಿ ಕಣ್ಣಿಗೆ ಬೀಳದಿದ್ದ ಅಗ್ರಹಾರದಲ್ಲಿ ಪ್ರಾಣೇಶಾಚಾರ್ಯರು ಒಬ್ಬರೇ ಉಳಿದರು. ಪೂಜೆಪುನಸ್ಕಾರಾದಿ ಕರ್ಮಗಳು ನಿಂತು ಭಣಗುಟ್ಟುವ ಭಯಂಕರ ಶೂನ್ಯ ಕವಿದುಬಿಟ್ಟಿತ್ತು. ಮೂಗಿಗೆ ಅಡರಿ ಪ್ರಾಣಸ್ಥವಾಗಿ ನಿಂತ ದುರ್ವಾಸನೆ, ಮನೆಮನೆಗೂ ಕೂತ ಹದ್ದುಗಳು ನಾರಣಪ್ಪನ ಶವವನ್ನು ಮರೆಯಲು ಬಿಡದಂತೆ ಕಾಡಿದವು. ದೇವರ ಕೋಣೆಗೆ ಹೋದ ಪ್ರಾಣೇಶಾಚಾರ್ಯರು-ಇಲಿಯೊಂದು ಬಂದು ಅಪ್ರದಕ್ಷಿಣೆ ಸುತ್ತಿ ಅಂಗಾತ್ತನೆ ಬಿದ್ದು ನಿಶ್ಚೇಷ್ಟಿತವಾದ್ದನ್ನು ಕಂಡು, ಹೇಸಿ, ಬಾಲದಿಂದೆತ್ತಿ ಹದ್ದಿಗೆ ಹಾಕಿ ಬಂದರು. ಒಳಗೆ ಬಂದರೆ ಕಾಗೆಹದ್ದುಗಳ ಕರ್ಕಶ ಗದ್ದಲಕ್ಕೆ ಭೀತರಾಗಿ ಹೊರಬಂದರು. ಮಧ್ಯಾಹ್ನದ ಯಮಮೌನದ ಬಿಸಿಲಿಗೆ ಕಣ್ಣನ್ನು ಮೇಲೆತ್ತಲಾರದೆ ’ಹು, ಹು’ ಎಂದು ಬರಿದೇ ಕೂಗಿಕೊಂಡರು. ಹೊಟ್ಟೆಯ ಸಂಕಟ ತಡೆಯಲಾರದೆ ಪೇಚಾಡಿ, ಧೋತ್ರದಲ್ಲಷ್ಟು ರಸಬಾಳೆ ಹಣ್ಣುಗಳನ್ನು ಕಟ್ಟಿಕೊಂಡು, ಸ್ನಾನಮಾಡಿ, ಹೊಳೆ ದಾಟಿ, ಮರದ ನೆರಳಿನಲ್ಲಿ ಕೂತು ತಿಂದರು. ನೆಮ್ಮದಿಯಾಯಿತು. ಚಂದ್ರಿ ತನ್ನ ಮಡಿಲಿನ ಹಣ್ಣನ್ನು ತಿನ್ನಿಸಿದ ಕತ್ತಲಿನ ನೆನಪಾಯಿತು.
ಆಗ ತಾನು ಅವಳನ್ನು ಮುಟ್ಟಿದ್ದು ಪಶ್ಚಾತ್ತಾಪದಿಂದಲೋ? – ಅನುಮಾನವಾಯಿತು. ಪಶ್ಚಾತ್ತಾಪದ, ಮರುಕದ ರೂಪತಾಳಿ ನನ್ನನ್ನು ಇಷ್ಟು ದಿನ ನಡೆಸಿಕೊಂಡು ಬಂದಿದ್ದ ಧರ್ಮ, ಪಳಗಿಸಿಟ್ಟ ಹುಲಿಯಂತಹ ಕಾಮ ಇದ್ದಿರಬೇಕು-ಅಷ್ಟೆ. ಚಂದ್ರಿಯ ಮೊಲೆ ತಾಗಿದಾಕ್ಷಣ ಚಂಗನೆ ಸ್ವಧರ್ಮಕ್ಕೆ ನೆಗೆದು ಹಲ್ಲು ತೋರಿಸಿಬಿಟ್ಟಿತು. ನಾರಣಪ್ಪ ಹೇಳಿದ ಮಾತು ನೆನಪಾಯಿತು : ’ಗೆಲ್ಲುವುದು ನಾನೊ ನೀವೊ ನೋಡುವ… ಮತ್ಸ್ಯಗಂಧೀನ್ನ ತಬ್ಬಿಕೊಂಡು ಮಲಗಿ’…ನಮ್ಮ ಕರ್ಮಕ್ಕೆಲ್ಲ ತದ್ವಿರುದ್ಧ ಫಲ ದೊರೆಯುತ್ತದೆಂಬುದಕ್ಕೊಂದು ಕತೆ ಹೇಳಿದ್ದ. ನಾನು ಶಾಕುಂತಳ ಓದಿದಾಗ ಅವನು ಅಂದ ಹಾಗೇ ಆಗಿರಬೇಕು. ನಾರಣಪ್ಪನಿಂದಲ್ಲ-ನನ್ನ ಹಟದಿಂದ, ನನ್ನ ಕರ್ಮದಿಂದ ಈ ಅಗ್ರಹಾರದ ಬಾಳು ಬುಡಮೇಲಾಗಿಬಿಟ್ಟಿರಬಹುದು. ಯಾವ ಯುವಕ ಹಾಗೆ ನದಿಗೆ ಹೋಗಿ ಹೊಲತಿಯೊಬ್ಬಳನ್ನು ತಬ್ಬಿಕೊಂಡಿದ್ದಿರಬಹುದು? ನನ್ನ ವರ್ಣನೆ ಕೇಳಿ? ಶಕುಂತಳೆಯನ್ನು ಮನಸ್ಸಿಗೆ ತರುವಂತಹ ಹೊಲೆಯರ ಹುಡುಗಿ ಯಾರಿದ್ದಿರಬಹುದು? ಆಚಾರ್ಯರ ಕಲ್ಪನೆ-ಮೊದಲ ಬಾರಿಗೆ-ತಾನೆಂದೂ ಗಮನಿಸದಿದ್ದ ಅಸ್ಪೃಶ್ಯ ಹುಡುಗಿಯರನ್ನೆಲ್ಲ ಎಳೆದು ತಂದು ನಿರ್ವಸ್ತ್ರಗೊಳಿಸಿ ನೋಡಿತು. ಯಾರು? ಯಾರು? ಬೆಳ್ಳಿ? ಹೌದು ಬೆಳ್ಳಿ. ತಾನು ಹಿಂದೆಂದೂ ಲೆಖ್ಖಕ್ಕೆ ತಾರದ ಅವಳ ಮಣ್ಣಿನ ಬಣ್ಣದ ಮೊಲೆಗಳ ಕಲ್ಪನೆಯಾಗಿ ಮೆ ಜುಮ್ಮೆಂದಿತು. ತನ್ನ ಕಲ್ಪನೆಗೆ ತಾನೇ ಕಂಗಾಲಾದರು. ನಾರಣಪ್ಪ ಗೇಲಿಗೆ ಹೇಳಿದ್ದ : ಬ್ರಾಹ್ಮಣ್ಯ ಉಳಿಯಲು ವೇದ ಪುರಾಣಗಳನ್ನು ಅರ್ಥ ತಿಳಿಯದೆ ಓದಬೇಕು ಅಂತ. ತನ್ನಲ್ಲಿದ್ದ ಮರುಕದಲ್ಲಿ, ಜ್ಞಾನದಲ್ಲಿ ಉಳಿದ ಬ್ರಾಹ್ಮಣರ ಮೌಢ್ಯದಲ್ಲಿರದಂತಹ ಒಂದು ಸಿಡಿಯುವ ಕಿಡಿ ಹುದುಗಿದ್ದಿರಬೇಕು. ಈಗ ಚಂಗನೆ ಪಳಗಿಸಿಟ್ಟ ಹುಲಿ ನೆಗೆದು ಹಲ್ಲು ತೋರಿಸುತ್ತಿದೆ-
ಬೆಳ್ಳಿಯ ಮೊಲೆಗಳನ್ನೂ ಹೋಗಿ ಮೃದುವಾಗಿ ಅಮುಕಬೇಕೆನ್ನಿಸುತ್ತಿದೆ. ಅನುಭವಕ್ಕಾಗಿ ದಾಹವಾಗುತ್ತಿದೆ. ಇಷ್ಟು ದಿನ ತಾನು ಬದುಕಲೇ ಇಲ್ಲ : ಮಾಡಿದ್ದನ್ನೆ ಮಾಡಿಕೊಂಡಿದ್ದು, ಹೇಳಿದ ಗಾಯತ್ರಿಯನ್ನೇ ಹೇಳಿಕೊಂಡಿದ್ದು, ನಿರನುಭವಿಯಾಗಿ ಉಳಿದುಬಿಟ್ಟೆ. ಅನುಭವ ಎಂದರೆ ಆಘಾತ. ಇರದೇ ಇದ್ದುದೊಂದು ಕತ್ತಲಿನಲ್ಲಿ, ಕಾಡಿನಲ್ಲಿ ನಿರಪೇಕ್ಷಿತವಾಗಿ ಬಂದು ಸೇರಿಕೊಳ್ಳೋದು. ಬಯಸಿದ್ದು ಕೆಗೂಡೋದು ಪರಮ ಅನುಭವಾಂತ ತಿಳಿದಿದ್ದೆ : ನಾವು ಕಾಣದಿದ್ದುದು ನಮ್ಮ ಜೀವಕ್ಕೆ ಮೊಲೆಗಳಂತೆ ಒಡ್ಡಿ ಬಂದು ಹೊಕ್ಕುಬಿಡೋದು ಅನುಭವಾಂತ ಈಗ ಅನ್ನಿಸುತ್ತೆ. ನನಗೆ ಹೆಣ್ಣಿನ ಸ್ಪರ್ಶವಾದಂತೆ ನಾರಣಪ್ಪನಿಗೆ ಕತ್ತಲಿನಲ್ಲಿ ನಿರಪೇಕ್ಷಿತವಾಗಿ ಪರಮಾತ್ಮಸ್ಪರ್ಶವಾಗಿದ್ದರೆ-ಬಿದ್ದ ಮಳೆಗೆ ಮೃದುವಾಗಿ, ಒತ್ತಿದ ಮಣ್ಣಿಗೆ ಪುಳಕಿತವಾಗಿ ಓಟೆ ಒಡೆದು ಸಸಿಯಾಗುತ್ತದೆ : ಹಟ ಮಾಡಿದರೆ ಗೊರಟವಾಗಿ ಒಣಗುತ್ತದೆ. ನಾರಣಪ್ಪ ಹಟದ ಗೊರಟವಾಗಿದ್ದು ಈಗ ಸತ್ತು ನಾರುತ್ತಿದ್ದಾನೆ. ಚಂದ್ರಿಯನ್ನು ಮುಟ್ಟುವ ವರೆಗೆ ನಾನು ಅವನಿಗೆ ’ಪ್ರತಿಹಟ’ದ ಗೊರಟವಾಗಿ ಉಳಿದೆ…ನಾನು ಕಾಮಾನ್ನ ಬಿಟ್ಟರೂ ಕಾಮ ನನ್ನನ್ನು ಬಿಡದಷ್ಟೇ ಸಹಜವಾಗಿ ಯಾಕೆ ಪರಮಾತ್ಮ ನಮ್ಮನ್ನು ಬಂದು ಮುಟ್ಟಿಬಿಡಬಾರದು?
ಈಗ ಚಂದ್ರಿ ಎಲ್ಲಿ? ನನಗೆ ಕಷ್ಟವಾಗಬಾರದೆಂದು ಶವದ ಜೊತೆ ಹೋಗಿ ಕೂತುಬಿಟ್ಟಳೋ, ಆ ದುರ್ನಾತವನ್ನು ಹೇಗೆ ಸಹಿಸುವಳೋ-ಕಳವಳವಾಯಿತು. ಹೊಳೆಯ ನೀರಿಗೆ ಬಿದ್ದು ಈಜಿದರು. ಇಲ್ಲೆ, ಹೀಗೆ, ಈಜುತ್ತ ಇದ್ದುಬಿಡುವ ಎನ್ನಿಸಿತು. ತಾಯಿಯ ಕಣ್ಣು ತಪ್ಪಿಸಿ ಹೊಳೆಯಲ್ಲೀಜಲು ತಾನು ಬಾಲಕನಾಗಿದ್ದಾಗ ಓಡುತ್ತಿದ್ದ ದಿನಗಳು ನೆನಪಾದುವು. ಎಷ್ಟು ವರ್ಷಗಳ ನಂತರ ನನ್ನ ಬಾಲ್ಯದ ಆಸೆ ಹೀಗೆ ಮರುಕಳಿಸುಬಿಟ್ಟಿತಲ್ಲ ಎಂದು ಆಶ್ಚರ್ಯವಾಯಿತು. ತಾಯಿಗೆ ತಿಳಿಯದಿರಲೆಂದು ಈಜಿ, ಮರಳಿನಲ್ಲಿ ಮಲಗಿ ಮೆಯೊಣಗಿಸಿಕೊಂಡು ಹೋಗುತ್ತಿದ್ದೆ. ತಣ್ಣೀರಿನಲ್ಲಿ ಈಸಿದ ನಂತರ ಕಾದ ಮರಳಿನಲ್ಲಿ ಹೊರಳುವುದಕ್ಕೆ ಸಮನಾದ ಸುಖ ಇನ್ನೆಲ್ಲಿದೆ? ಅಗ್ರಹಾರಕ್ಕೆ ಮರಳಲು ಮನಸ್ಸಾಗಲಿಲ್ಲ. ದಡಕ್ಕೆದ್ದು ಬಂದು ಮರಳಿನಲ್ಲಿ ಮಲಗಿದರು. ಮಧ್ಯಾಹ್ನದ ಧಗೆಗೆ ಕ್ಷಣದಲ್ಲಿ ಮೆ ಆರಿ ಬೆನ್ನು ಸುಡಹತ್ತಿತು.
ಥಟ್ಟನೊಂದು ಹೊಳೆದು ಎದ್ದರು. ಮಣ್ಣಿಗೆ ಮೂಗಿಟ್ಟು ನಡೆಯುವ ಮೃಗದಂತೆ ತಾನು ಚಂದ್ರಿಯನ್ನು ಕೂಡಿದ ಕಾಡು ಹೊಕ್ಕರು. ಹಾಡು ಹಗಲಿನಲ್ಲೂ ಮಬ್ಬು ಮಬ್ಬು. ಜೀರ್ರೆನುವ ಕತ್ತಲು ಮೊಟ್ಟುಪೊದೆಗಳಲ್ಲಿ, ತನ್ನ ಬಾಳು ಹೊರಳಿಕೊಂಡ ಜಾಗದಲ್ಲಿ-ಅಂತಃಪ್ರೇರಣೆಯಿಂದೆಂಬಂತೆ-ಬಂದು ನಿಂತರು. ಹಸಿರಾದ ಹುಲ್ಲಿನ ಮೇಲೆ ಒತ್ತಿದ ಮೆಯ ಆಕಾರ ಇನ್ನೂ ಉಳಿದಿತ್ತು. ಕೂತರು. ಮಂಕಾದವರಂತೆ ಹುಲ್ಲಿನ ಗರಿಕೆಗಳನ್ನು ಕಿತ್ತು ಮೂಸಿನೋಡಿದರು. ಅಸಹ್ಯವಾಗಿ ನಾರುವ ಅಗ್ರಹಾರದಿಂದ ಬಂದವರಿಗೆ ಮೃದು ಹಸಿಮಣ್ಣು ಹತ್ತಿಕೊಂಡ ಹುಲ್ಲಿನ ಬೇರಿನ ವಾಸನೆ ಚಟದಂತೆ ಕಾಡಿತು. ನೆಲವನ್ನು ಹೆಕ್ಕುವ ಕೋಳಿಯಂತೆ ಕೆಗೆ ಸಿಕ್ಕಿದ್ದನ್ನು ಕಿತ್ತು ಕಿತ್ತು ಮೂಸಿದರು. ಹೀಗೆ ಮರದ ನೆರಳಿನಲ್ಲಿ ತಂಪಾಗಿ ಕೂತಿರುವುದೇ ಒಂದು ಪುರುಷಾರ್ಥವೆನ್ನಿಸಿತು. ಇದ್ದುಬಿಡುವುದು. ಹುಲ್ಲಿಗೆ, ಹಸಿರಿಗೆ, ಹೂವಿಗೆ, ನೋವಿಗೆ, ಬಿಸಿಲಿಗೆ, ತಂಪಿಗೆ ಚುರುಕಾಗಿ ಇದ್ದುಬಿಡುವುದು. ಕಾಮ ಪುರುಷಾರ್ಥಗಳೆರಡನ್ನೂ ಸರಿಸಿಬಿಟ್ಟು-ಉದ್ಬಾಹುವಿನಂತೆ ನೆಗೆಯುತ್ತಿರದೆ-ಬರಿದೇ ಇದ್ದುಬಿಡುವುದು. ’ಇಕೊ’ ಎಂದು ಅವ್ಯಕ್ತದಿಂದ ಬಂದದ್ದನ್ನ ಕೃತಜ್ಞತೆಯಿಂದ ಸ್ವೀಕರಿಸುವುದು. ಧರೆ ಹತ್ತುವ ಪರದಾಟ ಬೇಡ. ಕೆಗೊಂದು ಸುಗಂಧಿ ಸಸಿ ತಾಗಿತು. ಎಳೆದರು. ಭದ್ರವಾಗಿ ಬೇರು ನೆಟ್ಟು ನೀಳಬಳ್ಳಿಯಾದ ಸುಗಂಧಿ ಜಗ್ಗಲಿಲ್ಲ. ಹುಲ್ಲಿನಂತಲ್ಲದೆ, ಹುದುಲು ಹಸಿ ಮಣ್ಣಿನಾಚೆ ಗಟ್ಟಿನೆಲದಲ್ಲಿ ಅದರ ಚೂಪು ಚುರುಕು ಬೇರು ನೆಟ್ಟಿತ್ತು. ಎದ್ದುಕೂತು ಎರಡು ಕೆಯಲ್ಲೂ ಜಗ್ಗಿದರು. ತಾಯಿಬೇರು ಅರ್ಧ ಕಡಿದುಕೊಂಡು ಬಳ್ಳಿಯಾಗಿ ಬೆಳೆದ ಸುಗಂಧಿ ಕೆಗೆ ಬಂತು. ಮೂಸಿದರು. ದೀರ್ಘವಾಗಿ ಉಸಿರನ್ನೆಳೆದುಕೊಳ್ಳುತ್ತ ಬೇರನ್ನು ಮೂಸಿದರು. ಮಣ್ಣು ಮತ್ತು ಆಕಾಶದ, ತಂಪು ಮತ್ತು ಬಿಸಿಲಿನ ಎಣೆಯಾಗಿ, ಗಂಟಾಗಿ, ನೆಂಟಾಗಿ ಸುಗಂಧಿಯ ಬೇರು ಪಡೆದ ವಾಸನೆ ಪಂಚಪ್ರಾಣಕ್ಕಿಳಿಯಿತು. ಆಸೆಬುರುಕನಂತೆ ಮೂಸುತ್ತಲೇ ಕೂತರು. ಸುಗಂಧ ಮೂಗಿನಲ್ಲಿ ನಿಂತು, ಸುವಾಸನೆ ಪ್ರಾಣಗತವಾಗಿ, ಪರಿಮಳದ ಅನುಭವ ಮಾಯವಾಗಿ ಅತೃಪ್ತಿಯಾಯಿತು. ಬೇರನ್ನು ಮೂಗಿನಿಂದ ದೂರವಿಟ್ಟು, ಕಾಡಿನ ವಾಸನೆಯನ್ನು ಆಘ್ರಾಣಿಸುತ್ತಿದ್ದು, ಮತ್ತೆ ನವ್ಯವಾದ ಸುಗಂಧಿಯನ್ನು ಮೂಸಿದರು. ಎದ್ದು ಕಾಡು ಬಿಟ್ಟು ಹೊರಗೆ ಬಂದು, ನೆರಳಿನಲ್ಲಿ ನೀಲಮಣಿಗಳಾದ ವಿಷ್ಣುಕಾಂತಿಯ ತುಣುಕುಮಿಣುಕುಗಳನ್ನು-ನೋಡುವುದೇ ಪರಮೆಶ್ವರ್ಯವೆನ್ನುವಂತೆ-ನೋಡುತ್ತಾ ನಿಂತರು. ತಿರುಗಿ ಹೊಳೆಯಲ್ಲಿಳಿದು ಈಜಿದರು. ಕಂಠದವರೆಗೆ ನೀರಿರುವ ಮಡುವಿನಲ್ಲಿ ಬಂದು ನಿಂತರು. ಮೀನುಗಳು ಮುತ್ತಿ ಕಚಕುಳಿಯ ಅವರ ಕಾಲುಬೆರಳಿನ ಸಂದಿಗಳನ್ನು, ಕಂಕುಳನ್ನು ಪಕ್ಕೆಗಳನ್ನು ಚುಚ್ಚಿದುವು. ಪ್ರಾಣೇಶಾಚಾರ್ಯರು ಅಹಹಾ ಎನ್ನುತ್ತ ಕಚಕುಳಿಗೆ ಓಡುವ ಬಾಲಕನಂತೆ ನೀರಿಗೆ ಈಸುಬಿದ್ದು, ದಡ ಸೇರಿ, ಬಿಸಿಲಿನಲ್ಲಿ ನಿಂತು ಒಣಗಿಸಿಕೊಂಡರು. ಹೆಂಡತಿಗೆ ಗಂಜಿ ಕೊಡುವ ಹೊತ್ತಾಯಿತೆಂದು ಅರಿವಾಗಿ ಬೇಗ ಬೇಗ ನಡೆದು ಅಗ್ರಹಾರಕ್ಕೆ ಬಂದರು.
ಥಟ್ಟನೆ ಕಾಗೆ ರಣಹದ್ದುಗಳನ್ನು ಕಂಡು ಕಪಾಳಕ್ಕೆ ಫಟೀರನೆ ಏಟು ಬಿದ್ದಂತಾಯಿತು. ಮನೆಗೆ ಬಂದು ನೋಡಿದರೆ ಹೆಂಡತಿಯ ಮುಖ ಕೆಂಪಾಗಿ ಕುದಿಯುತ್ತಿತ್ತು. ’ಇವಳೇ ಇವಳೇ’ ಎಂದು ಕೂಗಿದರು. ಉತ್ತರವಿಲ್ಲ. ಜ್ವರ ಏರಿರಬಹುದೇ? ಬಹಿಷ್ಠೆಯಾದವಳನ್ನು ಮುಟ್ಟುವುದು ಹೇಗೆ? ’ಛೆ’ ಎಂದು ತಮ್ಮ ಜಾಡು ಹಿಡಿದ ಸಂಕೋಚಕ್ಕೆ ಹೇಸಿ, ಅವಳ ಹಣೆ ಮುಟ್ಟಿದವರು ಸರಕ್ಕನೆ ಕೆಯೆಳೆದುಕೊಂಡರು. ದಿಕ್ಕು ತೋಚದಂತಾಗಿ ಹಣೆಗೆ ಒದ್ದೆಬಟ್ಟೆ ಹಾಕಿ , ಅನುಮಾನದಿಂದ ಅವಳ ಹೊದ್ದಿಕೆ ಎಳೆದು ಮೆಯನ್ನು ಪರೀಕ್ಷಿಸಿದರು. ಪಕ್ಕದಲ್ಲಿ ಗಡ್ಡೆ. ನಾರಣಪ್ಪನನ್ನು ನುಂಗಿದ ಜ್ವರವೆ? ಗೊತ್ತಿದ್ದ ಮೂಲಿಕೆಗಳನ್ನೆಲ್ಲ ತೇದು , ಅವಳ ಬಾಯನ್ನು ಬಿಡಿಸಿ ಹೊಯ್ದರು. ಯಾವ ಔಷದವೂ ಗಂಟಲನ್ನಿಳಿಯಲಿಲ್ಲ. ಇದು ಯಾವ ರೀತಿಯ ಪರೀಕ್ಷೆಯೆಂದು ಹಂಬಲಿಸುತ್ತ ಅತ್ತಿಂದಿತ್ತ ಅಲೆದರು. ಕಾಗೆ ಹದ್ದುಗಳ ಕಿರುಚಾಟ ಅತಿಯಾಗಿ , ದುರ್ನಾತದಲ್ಲಿ ಬುದ್ಧಿಭ್ರಮಣೆಯಾದಂತಾಗಿ ಹಿತ್ತಿಲಿಗೆ ಓಡಿದರು. ಮಂಕಾಗಿ ನಿಂತರು. ಕಾಲ ಹೋದದು ಕಂಡು ಸಮಾಧಾನವಾಗಿ – ಜ್ವರದಲ್ಲಿರುವ ಹೆಂಡತಿಯನ್ನು ಹೀಗೆ ಬಿಟ್ಟುಬಂದೆನಲ್ಲ ಎಂದು ಕಸಿವಿಸಿಯಾಗಿ – ಮನೆಯ ಹಿಂದಕ್ಕೆ ಬಂದರು. ದಿಗಿಲಾಯಿತು. ದೀಪ ಹತ್ತಿಸಿ ‘ ಇವಳೇ ಇವಳೇ ’ ಎಂದರು. ಉತ್ತರವಿಲ್ಲ. ಬಿಕೋ ಎನ್ನತೊಡಗಿತು. ನಂತರ ಅವಾಕ್ಕಾಗುವಂತೆ ಹೆಂಡತಿ ಕಿಟಾರನೆ ಕಿರುಚಿಕೊಂಡಳು. ದೀರ್ಘ ದಾರುಣ ಕರ್ಕಶಸ್ವರ ಅವಳ ಗಂಟಲಿನಿಂದ ಬಂದದ್ದು ಕೇಳಿ ಹಸಿಹಸಿ ಪ್ರಾಣವನ್ನು ಮುಟ್ಟಿದಂತಾಗಿ ಆಚಾರ್ಯರು ಥತ್ತರ ನಡುಗಿದರು. ಊಳಿದಂತಹ ಧ್ವನಿ ನಿಂತೊಡನೆ ಮಿಂಚು ಥಳಿಸಿ ಕತ್ತಲಾದಂತಾಯಿತು. ಇಲ್ಲಿ ನಾನೊಬ್ಬನೆ ಇರಲಾರೆ ಎನ್ನಿಸಿತು. ತಾನೇನು ಮಾಡುತ್ತಿದ್ದೇನೆಂದು ತಿಳಿಯುವುದರೊಳಗೆ ’ಚಂದ್ರೀ’ ಎಂದು ಕರೆಯುತ್ತ ನಾರಣಪ್ಪನ ಮನೆಗೆ ಓಡಿದರು. ’ಚಂದ್ರೀ ಚಂದ್ರೀ’ ಎಂದು ಕರೆದರೆ ಉತ್ತರವಿಲ್ಲ. ಒಳಗೆ ಹೋದರು. ಕತ್ತಲು. ನಡುಮನೆ, ಅಡಿಗೆಮನೆ ಹುಡುಕಿದರು. ಇಲ್ಲ. ಮಹಡಿ ಮೆಟ್ಟಲನ್ನು ಇನ್ನೇನು ಹತ್ತಬೇಕು ಎನ್ನುವುದರೊಳಗೆ, ಅಲ್ಲಿ ಶವವಿದೆ ಎನ್ನಿಸಿ, ತಾನು ಹುಡುಗನಾಗಿದ್ದಾಗ ಕತ್ತಲಿನ ಕೋಣೆಯೊಳಕ್ಕೆ ಹೋಗುವ ಮುನ್ನ ಗುಮ್ಮನಿದ್ದಾನೆಂಬ ಭಯವಾಗುತ್ತಿದ್ದಂತಹ ದಿಗಿಲು ಮರುಕಳಿಸಿ ಓಡುತ್ತೋಡುತ್ತ ತಮ್ಮ ಮನೆಗೆ ಬಂದರು. ಹೆಂಡತಿಯ ಹಣೆ ಮುಟ್ಟಿ ನೋಡಿದರು : ತಣ್ಣಗೆ ಕೊರೆಯುತ್ತಿತ್ತು.
ರಾತ್ರಾನುರಾತ್ರೆ ಲಾಟೀನು ಹಿಡಿದು ನಡೆದು ಕೆಮರಕ್ಕೆ ಹೋಗಿ ಸುಬ್ಬಣ್ಣಾಚಾರ್ಯರ ಮನೆ ಹೊಗುತ್ತಿದ್ದಂತೆ, ಅವರ ಬೆನ್ನ ಹಿಂದೆಯೇ ದಾಸಾಚಾರ್ಯನನ್ನು ಸುಟ್ಟು ಹಿಂದಿರುಗಿದ ನಾಲ್ಕು ಬ್ರಾಹ್ಮಣರು ಒದ್ದೆ ಪಾಣಿಪಂಚೆಯನ್ನು ತಲೆಯ ಮೇಲೆ ಧರಿಸಿ ’ನಾರಾಯಣ ನಾರಾಯಣ’ ಎಂದರು. ಆ ಬ್ರಾಹ್ಮಣರನ್ನೆ ಜೊತೆಗೆ ಕರೆದುಕೊಂಡು ಬಂದು, ಹೆಂಡತಿಯ ಹೆಣ ಸಾಗಿಸಿ, ನಸುಕಾಗುವುದರೊಳಗೆ ಬೆಂಕಿ ಕೊಟ್ಟಿದ್ದಾಯ್ತು. ಬ್ರಾಹ್ಮಣರ ಹತ್ತಿರ ’ಅಗ್ರಹಾರದಲ್ಲಿ ಸಂಸ್ಕಾರವಾಗಬೇಕಾದ ಇನ್ನೊಂದು ಹೆಣವಿದೆ’ ಎಂದು ತನ್ನೊಳಗೆ ಆಡಿಕೊಂಡವರಂತೆ ಅಂದರು. ’ನಾಳೆ ಆ ಬಗ್ಗೆ ಗುರುಗಳ ಹತ್ತಿರ ಇತ್ಯರ್ಥವಾಗುತ್ತದಲ್ಲ’ ಎಂದು ನುಡಿದ ಬ್ರಾಹ್ಮಣರಿಗೆ ’ನೀವಿನ್ನು ಹೊರಡಿ’ ಎಂದರು. ತನ್ನ ತಪೋಭೂಮಿಯಾಗಿದ್ದ ಒಂದು ಹಿಡಿಜೀವದ ಹೆಂಡತಿ ಧಗಧಗನೆ ಉರಿಯುವುದನ್ನು ನೋಡುತ್ತ, ಬಂದ ಕಣ್ಣೀರನ್ನು ತಡೆದುಕೊಳ್ಳಲು ಪ್ರಯತ್ನಿಸದೆ, ಆಯಾಸವೆಲ್ಲ ಪರಿಹಾರವಾಗುವಷ್ಟು ಅತ್ತುಬಿಟ್ಟರು.
ಅಧ್ಯಾಯ : ಆರು
ಆರಾಧನೆಯ ಊಟವಾಗುವ ತನಕ ಅಮಂಗಳವನ್ನು ಆಡಕೂಡದೆಂದು ಬ್ರಾಹ್ಮಣರು ಮೌನವಾಗಿದ್ದು ಸ್ವಾಮಿಗಳಿಂದ ತೀರ್ಥ ಪಡೆದು, ಭಕ್ಷ್ಯ ಭೋಜ್ಯ ಪಾಯಸದ ಊಟವನ್ನು ಮಾಡಿ ಮುಗಿಸಿದರು. ಬರೇ ಒಂದೊಂದಾಣೆ ದಕ್ಷಿಣೆಯನ್ನು ಗುರುಗಳು ಕೊಟ್ಟಿದ್ದರಿಂದ ಲಕ್ಷ್ಮಣಾಚಾರ್ಯನಿಗೆ ನಿರಾಶೆಯಾಯಿತು-ಏನು ಜಿಪುಣರು ಈ ಯತಿ ಎಂದು ಗೊಣಗಿಕೊಳ್ಳುತ್ತ ಸೊಂಟಕ್ಕೆ ಸಿಕ್ಕಿಸಿಕೊಂಡ. ಮಕ್ಕಳಿಲ್ಲ, ಮರಿಯಿಲ್ಲ; ಆದರೂ ದುಡ್ಡೆಂದರೆ ಪ್ರಾಣಬಿಡುತ್ತಾರೆ. ಊಟ ಮುಗಿದ ಮೇಲೆ ಮಠದ ಪ್ರಾಂಗಣದಲ್ಲಿ ತಂಪಾದ ಸಿಮೆಂಟು ನೆಲೆದ ಮೇಲೆ ಕೂತ ಬ್ರಾಹ್ಮಣರ ನಡುವೆ ಕುರ್ಚಿಯ ಮೇಲೆ ಸ್ವಾಮಿಗಳು ಕಾವಿ ಶಾಟಿಯುಟ್ಟು, ತುಳಸಿಮಣಿಸರ ಧರಿಸಿ, ಅಂಗಾರ ಅಕ್ಷತೆಯಿಟ್ಟು ರಕ್ತದಲ್ಲಿ ಪುಟಿಯುವ ಗುಂಡಗಿನ ಗೊಂಬೆಯಂತೆ ಕೂತು, ತಮ್ಮ ಪುಟ್ಟ ಪುಟ್ಟ ಪಾದಗಳನ್ನು ಉಜ್ಜಿಕೊಳ್ಳುತ್ತ ಕುಶಲಪ್ರಶ್ನೆ ಮಾಡಿದರು : “ಪ್ರಾಣೇಶಾಚಾರ್ಯರು ಯಾಕೆ ಬರಲಿಲ್ಲ? ಹೇಗಿದ್ದಾರೆ? ಆರೋಗ್ಯವೇ? ಏನು, ಹೇಳಿಕೆ ತಲ್ಪಲಿಲ್ಲವೆ ಅವರಿಗೆ?”
ಗರುಡಾಚಾರ್ಯ ಗಂಟಲನ್ನು ಸರಿಮಾಡಿಕೊಂಡು ಆಮೂಲಾಗ್ರ ವಿಷಯವನ್ನು ನಿವೇದಿಸಿದ.
ಗುರುಗಳು ಸಮಾಧಾನದಿಂದ ಎಲ್ಲವನ್ನೂ ಕೇಳಿಸಿಕೊಂಡು ಅನುಮಾನವೇ ಇಲ್ಲವೆಂಬಂತೆ ಅಂದರು :
“ಅವನು ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಟ್ಟಂತಲ್ಲ. ಅರ್ಥಾv ಶವಸಂಸ್ಕಾರ ಮಾಡೋದು ಉಚಿತವಾದ ಯೋಗ್ಯವಾದ ಕರ್ತವ್ಯ. ಆದರೆ ದೋಷಪರಿಹಾರಾನೂ ಆಗಬೇಕು. ತತ್ಕಾರಣವಾಗಿ ಅವನ ಆಸ್ತಿಪಾಸ್ತಿ ಬೆಳ್ಳಿಬಂಗಾರಗಳೆಲ್ಲ ಶ್ರೀಮಠದ ಕೃಷ್ಣದೇವರಿಗೆ ಸೇರಬೇಕು.”
ಗರುಡ ಧೆರ್ಯ ಮಾಡಿ ಧೋತ್ರದಿಂದ ಮುಖವನ್ನೊರಸಿಕೊಂಡ :
“ಬುದ್ಧಿ, ನನಗೂ ಅವನ ತಂದೆಗೂ ಇದ್ದ ವ್ಯಾಜ್ಯದ ವಿಷಯ ತಮಗೆ ಗೊತ್ತುಂಟಲ್ಲ. ಅವನ ತೋಟದ ಮುನ್ನೂರು ಅಡಿಕೆಮರ ಹಾಗೆ ನ್ಯಾಯವಾಗಿ ನನಗೇ…”
ಲಕ್ಷ್ಮಣಾಚಾರ್ಯ ’ಹ್ಹ’ ಎಂದು ನಡುವೆ ಬಾಯಿ ಹಾಕಿದ :
“ಬುದ್ಧಿ, ಇದರಲ್ಲೊಂದು ನ್ಯಾಯಧರ್ಮ ಬೇಡವ? ತಮಗೆ ತಿಳಿದಂತೆ ನಾರಣಪ್ಪನ ಹೆಂಡತಿಯೂ ನನ್ನ ಮನೆಯವಳೂ ಅಕ್ಕತಂಗಿಯರು…”
ಕೆಂಪಗೆ ದುಂಡಗೆ ಇದ್ದ ಸ್ವಾಮಿಗಳ ಮುಖದಲ್ಲಿ ಸಟ್ಟನೆ ಕೋಪ ಕಾಣಿಸಿಕೊಂಡಿತು :
“ಎಂತಹ ನೀಚರಯ್ಯ ನೀವು. ದೇವರ ಸೇವೆಗೆ ಅನಾಥರ ಆಸ್ತಿಯೆಲ್ಲ ಸೇರಬೇಕಾದ್ದೆಂದು ಹಿಂದಿನಿಂದ ಬಂದ ನೇಮ. ಅವನ ಶವಸಂಸ್ಕಾರಕ್ಕೆ ನಾವು ನಿಮಗೆ ಅಪ್ಪಣೆಕೊಡದಿದ್ದರೆ ನೀವು ಅಗ್ರಹಾರಾನ್ನೇ ಬಿಡಬೇಕಾಗುತ್ತೆಂದು ನೆನಪಿಟ್ಟುಕೊಳ್ಳಿ” ಎಂದು ಗುಡುಗಿದರು.
ತಪ್ಪಾಯಿತೆಂದು ಕ್ಷಮಾ ಯಾಚಿಸಿ ಇಬ್ಬರು ಬ್ರಾಹ್ಮಣರೂ ಉಳಿದವರ ಜೊತೆ ಸ್ವಾಮಿಗಳಿಗೆ ಅಡ್ಡಬಿದ್ದು ನಿಂತು ತಮ್ಮೊಡನಿದ್ದ ಗುಂಡಾಚಾರ್ಯನ ಮುಖ ಕಾಣಿಸದೆ ಹುಡುಕಿದರು. ನೋಡುವಾಗ ಅವನು ಊಟ ಸಹ ಮಾಡದೆ ಜ್ವರ ಬಂದು ಮಠದ ಅಟ್ಟದ ಮೇಲೆ ಮಲಗಿಬಿಟ್ಟಿದ್ದಾನೆಂದು ತಿಳಿಯಿತು. ಶವಸಂಸ್ಕಾರದ ಅವಸರವಿದ್ದುದರಿಂದ ಊರಿನ ಮಾರ್ಗ ಹಿಡಿದು-ಗುಂಡಾಚಾರ್ಯನನ್ನು ಅಲ್ಲೇ ಬಿಟ್ಟು -ಬ್ರಾಹ್ಮಣರು ನಡೆದುಬಿಟ್ಟರು.

ಹೆಂಡತಿಯ ಶವಸಂಸ್ಕಾರವಾದ ಮೇಲೆ ಅಗ್ರಹಾರಕ್ಕೆ ಆಚಾರ್ಯರು ಮರಳಲಿಲ್ಲ. ತಮ್ಮ ಪೆಟ್ಟಗೆಯಲ್ಲಿದ್ದ ಹದಿನೆದು ಜರಿಯ ಶಾಲಾಗಲಿ, ಕೂಡಿಟ್ಟ ಇನ್ನೂರು ರೂಪಾಯಿಗಳಾಗಲಿ, ಮಠದಲ್ಲಿ ಕೊಟ್ಟ ಬಂಗಾರದಲ್ಲಿ ಕಟ್ಟಿಸಿದ ತುಳಸಿಮಣಿಸರವಾಗಲಿ ಅವರ ಧ್ಯಾನಕ್ಕೇ ಬರಲಿಲ್ಲ.
ಕಾಲುಕೊಂಡಲ್ಲಿಗೆ ನಡೆದುಬಿಡುವುದೆಂದು ಉಟ್ಟ ವಸ್ತ್ರದಲ್ಲೆ ಪೂರ್ವಾಭಿಮುಖವಾಗಿ ನಡೆದುಬಿಟ್ಟರು.
ಭಾಗ ಮೂರು
ಅಧ್ಯಾಯ : ಒಂದು
ಪ್ರಾತಃಕಾಲದ ಸೂರ್‍ಯನ ಬಿಸಿಲು ಕಾಡಿನಲ್ಲಿ ರಂಗವಲ್ಲಿಗಳಾಗಿ ನೆಲಕ್ಕಿಳಿದಿದ್ದುವು. ಆಯಾಸದಿಂದ ಕಾಲುಗಳನ್ನು ಎಳೆಯುತ್ತ ನಡೆಯುತ್ತಿದ್ದ ಪ್ರಾಣೇಶಾಚಾರ್ಯರಿಗೆ ಬಹಳ ಹೊತ್ತು ತನ್ನ ದಿಕ್ಕು-ದಿವಾಣಿ ಲೆಖ್ಖಕ್ಕೇ ಬರಲಿಲ್ಲ. ಸುಟ್ಟುಹೋಗದೆ ಉಳಿದ ಹೆಂಡತಿಯ ದೇಹದ ಅವಶೇಷಗಳನ್ನು, ಎಲುಬುಗಳ ಚೂರುಗಳನ್ನು ನಾಯಿ ನರಿಗಳೆಲ್ಲ ಬಂದು ಹೆಕ್ಕುತ್ತಾವೊ ಎಂದು ಆತಂಕವಾಗಿ, ಕಾದಿದ್ದು ಅವುಗಳನ್ನು ನೀರಿಗೆ ಚೆಲ್ಲುವಷ್ಟು ವ್ಯವಧಾನ ನನಗೆ ಇಲ್ಲದೇ ಹೋಯಿತಲ್ಲ ಎಂದು ಒಂದು ಕ್ಷಣ ವ್ಯಥೆಯಾಯಿತು. ಎಲ್ಲವನ್ನೂ ಹಿಂದಕ್ಕೆಬಿಟ್ಟು ಕೆಬೀಸಿ ಹೊರಟ ನನಗೆ ಯಾವ ಋಣದ ಬಾಧೆಯೂ ಇನ್ನಿಲ್ಲವೆಂದು ಸಮಾಧಾನ ತಂದುಕೊಂಡರು. ಕಾಲು ಕೊಂಡಲ್ಲಿಗೆ ನಡೆದುಬಿಡುವುದೆಂದುಕೊಂಡು; ಆ ನಿಶ್ಚಯಕ್ಕೆ ಸರಿಯಾಗಿ ನಡೆದುಬಿಡುವೆ ಎಂದು ಮನಸ್ಸನ್ನು ಸಮಸ್ಥಿತಿಗೆ ತರಲು ಯತ್ನಿಸುತ್ತ ನಡೆದರು.
ಹಿಂದೆ ಜಾಗೃತವಾಗಿದ್ದಾಗಲೆಲ್ಲ ಹರಿಯುವ ಚಿತ್ತವನ್ನು ಏಕಾಗ್ರಗೊಳಿಸಿಕೊಳ್ಳಲು ’ಅಚ್ಯುತಾನಂತಗೋವಿಂದ’ ಎಂದು ನಾಮೋಚ್ಚಾರ ಮಾಡುತ್ತಿದ್ದಂತೆ ಮಾಡುವ ಮನಸ್ಸಾಯಿತು. ’ಯೋಗೋ ಚಿತ್ತವೃತ್ತಿನಿರೋಧಃ” ಎಂದು ಸ್ಮರಿಸಿದರು. ಮತ್ತೆ ’ಛೀ’ ಎಂದುಕೊಂಡರು. ನಾಮಸ್ಮರಣೆಯ ನೆಮ್ಮದಿಯನ್ನೂ ವರ್ಜಿಸಿ ನಿಲ್ಲು ಎಂದು ಎಚ್ಚರ ಹೇಳಿಕೊಂಡರು. ಮರಗಳ ಕೊಂಬೆಗಳು ಕೊಟ್ಟ ರೂಪಕ್ಕೆ ಬಿಸಿಲು ಪಡೆಯುವ ರಂಗವಲ್ಲಿಯಂತೆಯೇ ಸದ್ಯಕ್ಕೆ ಇರಲಿ ಮನಸ್ಸು, ನಿರಂಬಳ ತೆರೆದುಬಿಡಲಿ. ಗಗನದಲ್ಲಿ ಬೆಳಕು, ಮರದ ಕೆಳಗೆ ನೆರಳು, ನೆಲದ ಮೇಲೆ ರಂಗವಲ್ಲಿ. ಭಾಗ್ಯವಿದ್ದು ತುಂತುರಿನ ಸ್ಪರ್ಶವಾದರೆ ಕಾಮನಬಿಲ್ಲು. ಜೀವ ಬಿಸಿಲಿನಂತಿದ್ದು ಬಿಡಬೇಕು. ಬರಿಯ ಒಂದು ಎಚ್ಚರವಾಗಿ, ಬರಿಯ ಒಂದು ಅಚ್ಚರಿಯಾಗಿ. ಆಕಾಶದಲ್ಲಿ ರೆಕ್ಕೆಗಳನ್ನು ಹರಡಿ ಸ್ತಬ್ಧ, ತೃಪ್ತ ತೇಲುವ ಗರುಡನಂತೆ. ಕಾಲು ನಡೆಯುತ್ತಿದೆ, ಕಣ್ಣು ನೋಡುತ್ತಿದೆ, ಕಿವಿ ಆಲಿಸುತ್ತಿದೆ-ಅಪೇಕ್ಷೆಯಿಲ್ಲದೆ ಇದ್ದುಬಿಡಬೇಕು. ಆಗ ಜೀವ ಸ್ವೀಕರಿಸುವ ಸ್ಥಿತಿಯನ್ನು ಮುಟ್ಟುತ್ತದೆ. ಇಲ್ಲದಿದ್ದರೆ ಅಪೇಕ್ಷೆಯಲ್ಲಿ ಗೊರಟವಾಗುತ್ತದೆ, ಮುರುಟುತ್ತದೆ, ಕಲಿತ ಮಗ್ಗಿಯಾಗಿ ಬಿಡುತ್ತದೆ. ಕನಕನ ಮನಸ್ಸು ಬರಿಯ ಒಂದು ಎಚ್ಚರ, ಅಚ್ಚರಿಯಾದ್ದರಿಂದ ಗುರುಗಳ ಎದುರು ಬಂದು ಹೇಳಿದ : ಗುಟ್ಟಾಗಿ ಎಲ್ಲೆಂದು ತಿನ್ನಲಿ ಈ ಬಾಳೆಹಣ್ಣನ್ನ? ದೇವರು ಎಲ್ಲ ಎಡೆಗೂ ಇದ್ದಾನಲ್ಲ! ದೇವರು ನನಗೆ ಬಾಯಿಗೆ ಕಲಿತ ಮಗ್ಗಿಯಾಗಿಬಿಟ್ಟ; ಕನಕನಿಗಿದ್ದಂತೆ ಅಚ್ಚರಿ, ಎಚ್ಚರವಾಗಲಿಲ್ಲ-ಆದ್ದರಿಂದ ಈ ಮುಂದೆ ದೇವರು ವರ್ಜ್ಯ ನನಗೆ.
ದೇವರನ್ನು ಬಿಟ್ಟಮೇಲೆ ಗುರು‌ಋಣ, ಪಿತೃ‌ಋಣ, ದೇವ‌ಋಣದ ಬಗ್ಗೆ ಇರುವ ಆತಂಕವನ್ನೂ ಬಿಡಬೇಕು. ಅಂದರೆ ಸಮಾಜವನ್ನು ಬಿಟ್ಟು ನಿಲ್ಲಬೇಕು. ಆ ಕಾರಣಕ್ಕಾಗಿಯೇ ಕಾಲು ಕೊಂಡಲ್ಲಿಗೆ ನಡೆದುಬಿಡುವುದೆಂದು ಮನಸ್ಸುಮಾಡಿ ಹೊರಟುಬಿಟ್ಟ ನಿಶ್ಚಯ ಸರಿ. ದಾರಿಯಿಲ್ಲದ ಈ ಅರಣ್ಯದಲ್ಲಿ ಹೀಗೇ ನಡೆಯುತ್ತಲೇ ಇರಬೇಕು. ಆಯಾಸವಾದರೆ, ಹಸಿವಾದರೆ, ತೃಷೆಯಾದರೆ-ಪ್ರಾಣೇಶಾಚಾರ್ಯರ ಯೋಚನೆಯ ಸರಣಿ ಥಟ್ಟನೆ ನಿಂತಿತು. ಇನ್ನೊಂದು ಆತ್ಮವಂಚನೆಯ ಗುಹೆಯನ್ನು ಹೊಗುತ್ತಿದ್ದೇನೆ ನಾನು. ಕಾಲು ಕೊಂಡಲ್ಲಿಗೆ ನಡೆದುಬಿಡುವುದೆಂದು ನಿಶ್ಚಯಿಸಿದ್ದರೂ ದೂರದಲ್ಲೆಲ್ಲೋ ದನಕಾಯುವ ಹುಡುಗನ ಕೊಳಲಿನಿಂದ, ಹಸುಗಳ ಕೊರಳಿನ ಬಿದಿರು-ಗಂಟೆಗಳ ನಾದದಿಂದ ಯಾಕೆ ನಾನು ಅತಿ ದೂರನಾಗದಂತೆ ನಡೆದೆ? ನನ್ನ ನಿಶ್ಚಯವೇನಿದ್ದರೂ ಕಾಲು ಮಾತ್ರ ಜನವಸಿತಿಗೆ ಹತ್ತಿರವಾಗಿಯೇ ನನ್ನನ್ನು ನಡೆಸಿತು. ನನ್ನ ಲೋಕದ ಪರಿಮಿತಿ ಇದು. ನನ್ನ ಸ್ವಾತಂತ್ರ್ಯದ ಪರಿಮಿತಿ ಇದು. ಮನುಷ್ಯಸಂಸರ್ಗ ಬಿಟ್ಟು ಇರಲಾರೆ. ಸಂನ್ಯಾಸಿಯ ಕೌಪೀನದ ಕಥೆಯ ಹಾಗೆ : ಲಂಗೋಟಿಯನ್ನು ಇಲಿಗಳು ಕಡಿಯುತ್ತವೆಂದು ಬೆಕ್ಕು ಸಾಕಿದ, ಬೆಕ್ಕಿಗೆ ಹಾಲು ಎಂದು ಹಸು ಸಾಕಿದ, ಹಸುವನ್ನು ನೋಡಿಕೊಳ್ಳಲೆಂದು ಮದುವೆಯಾದ.
ಪ್ರಾಣೇಶಾಚಾರ್ಯರು ಹಲಸಿನ ಮರ ಒಂದರ ಬುಡದಲ್ಲಿ ಕೂತರು. ಮೊದಲು ಈ ವಿಷಯವನ್ನು ನೆಟ್ಟಗೆ ನೋಡಬೇಕು. ಕಿಂಚಿತ್ತೂ ವಂಚಿಸಿಕೊಳ್ಳದೆ ನನ್ನ ಮುಂದಿನ ಜೀವನವನ್ನು ನಡೆಸಬೇಕು. ಸ್ಪಷ್ಟವಾಗಿ ಪರೀಕ್ಷಿಸುವ : ಯಾಕೆ ಹೆಂಡತಿಯನ್ನು ಸುಟ್ಟಮೇಲೆ ನಡೆದುಬಿಟ್ಟೆ? ಅಗ್ರಹಾರ ನಾರುತ್ತಿದೆಯೆಂದು ಅಲ್ಲಿಗೆ ಮರಳಲು ಅಸಹ್ಯವಾಯಿತು. ಇದು ನನ್ನ ಇಡೀ ಜೀವವೇ ಒಪ್ಪುವಂತಹ ಕಾರಣ : ಮೂಗಿಗೆ ಆದ ಅಸಹ್ಯ, ಅಶುಚಿಯ ಭಾವನೆ ಸರಿ. ಮುಂದೆ? ನನ್ನನ್ನು ಮಾರ್ಗದರ್ಶನಕ್ಕಾಗಿ ಆಶ್ರಯಿಸಿದ ಬ್ರಾಹ್ಮಣರನ್ನು ಪುನಃ ಸಂಧಿಸಲು ಇಷ್ಟವಾಗದೆ ಹೋಯಿತು. ಇದಕ್ಕೆ ಕಾರಣ? ಪ್ರಾಣೇಶಾಚಾರ್ಯರು ಕಾಲುಗಳನ್ನು ಚಾಚಿ ಆಯಾಸವನ್ನು ಕಳೆದುಕೊಳ್ಳಲು ಯತ್ನಿಸುತ್ತ ತನ್ನ ಮನಸ್ಸು ಸ್ಪಷ್ಟವಾಗಲು ಕಾದರು. ಅವರಿಗೆ ಕಾಣಿಸದಂತೆ ಅವರ ಪಕ್ಕದಲ್ಲಿ ಒಂದು ಕರು ಬಂದು ನಿಂತಿತು. ಅವರ ಕತ್ತನ್ನು ಮೂತಿಯೆತ್ತಿ ಮೂಸಿ, ಉಸಿರಾಡಿತು. ಪ್ರಾಣೇಶಾಚಾರ್ಯರಿಗೆ ಮೆ ಜುಮ್ಮೆಂದು-ತಿರುಗಿದರು. ಪ್ರಾಯಕ್ಕೆ ಬಂದ ಕರುವಿನ ಆರ್ತ ಸ್ನೇಹಪರ ಕಣ್ಣುಗಳನ್ನು ನೋಡಿ ಒಳಗಿನಿಂದ ಉಕ್ಕಿದಂತಾಯಿತು. ಕರುವಿನ ಕತ್ತನ್ನು ತುರಿಸಿದರು. ಕೊರಳನ್ನೆತ್ತಿ, ಹತ್ತಿರ ಹತ್ತಿರ ಸರಿದು, ತುರಿಸುವ ಕೆಗೆ ತನ್ನ ರೋಮಾಂಚಿತ ದೇಹವನ್ನೆಲ್ಲ ಒಡ್ಡುತ್ತ ಕರು ಪುಳಕಿತವಾಗಿ ಅವರ ಕಿವಿಗಳನ್ನು ಕೆನ್ನೆಗಳನ್ನು ತನ್ನ ಹಿತವಾದ ದರುಗು-ನಾಲಗೆಯಿಂದ ನೆಕ್ಕಲು ಪ್ರಾರಂಭಿಸಿತು. ಕಚಕುಳಿಯಾಗಿ ಪ್ರಾಣೇಶಾಚಾರ್ಯರು ಎದ್ದು ನಿಂತು ಕರುವಿನ ಜೊತೆ ಚೇಷ್ಟೆಯಾಡುವ ಆಸೆಯಿಂದ ಅದರ ಕೊರಳಿನ ಕೆಳಗೆ ಕೆಯಿಟ್ಟು ಉಪ್ಪುಪ್ಪುಪ್ಪು ಎಂದರು. ಕರು ಎರಡೂ ಕಾಲುಗಳನ್ನು ಎತ್ತಿ ಏರಿಬಂದು ಚಂಗನೆ ನೆಗೆದು, ಬಿಸಿಲಿನಲ್ಲಿ ಕುಣಿಯುತ್ತ ಕಣ್ಮರೆಯಾಯಿತು. ಪ್ರಾಣೇಶಾಚಾರ್ಯರು ಏನು ಯೋಚಿಸುತ್ತಿದ್ದೆ ಎಂದು ನೆನಪುಮಾಡಿಕೊಳ್ಳಲು ಯತ್ನಿಸಿದರು. ಅದೇ ಹಿಂದಕ್ಕೆ ನಾನು ಯಾಕೆ ಹೋಗಿ ಬ್ರಾಹ್ಮಣರನ್ನು ನೋಡಲಿಲ್ಲ ಎನ್ನುವ ಪ್ರಶ್ನೆಯಲ್ಲವೇ?-ಆದರೆ ಮನಸ್ಸು ಕೂರಲಿಲ್ಲ. ಹಸಿವಾಗುತ್ತಿದೆ, ಇಲ್ಲೇ ಹತ್ತಿರದಲ್ಲಿರುವ ಗ್ರಾಮದಲ್ಲಾದರೂ ಹೋಗಿ ಹಸಿವನ್ನು ಕಳೆದುಕೊಳ್ಳಬೇಕೆನ್ನಿಸಿ ನಡೆದರು. ದನಗಳ ಸೆಗಣಿ ಗೊರಸಿನ ಗುರುತುಗಳನ್ನೆ ಲಕ್ಷ್ಯದಲ್ಲಿಟ್ಟುಕೊಂಡು ಒಂದು ಗಂಟೆ ಕಾಡಿನಲ್ಲಿ ಸುತ್ತಿ ನಡೆಯುವುದರಲ್ಲಿ ಒಂದು ಮಾರಿಗುಡಿ ಕಾಣಿಸಿತು. ಬ್ರಾಹ್ಮಣರಿರುವ ಅಗ್ರಹಾರವಲ್ಲವಲ್ಲ ಎಂದುಕೊಂಡರು. ಒಂದಷ್ಟು ದೂರ ಹೋಗಿ ಗ್ರಾಮದ ಒಂದು ತುದಿಗಿದ್ದ ಮರದ ಬುಡದಲ್ಲಿ ಕೂತರು.
ಬಿಸಿಲೇರಲು ಹತ್ತಿದ್ದರಿಂದ ಮರದ ನೆರಳಿನಲ್ಲೂ ಸೆಖೆಯಾಗಿ ತೃಷೆಯಾಯಿತು. ಯಾರಾದರೂ ಗೌಡನೊಬ್ಬನ ಕಣ್ಣಿಗೆ ತಾನು ಬಿದ್ದರೆ ಹಾಲು ಹಣ್ಣನ್ನು ತಂದುಕೊಟ್ಟಾನೆಂದು ಆಶಿಸಿದರು. ಎಮ್ಮೆಗಳನ್ನು ಕೆರೆಗೆ ಅಟ್ಟುತ್ತ ಬರುತ್ತಿದ್ದ ಒಬ್ಬ ಗೌಡ ಹಣೆಗೆ ಕೆಮಾಡಿ ನೋಡಿ ಹತ್ತಿರ ಬಂದು ನಿಂತ. ಬಾಯಿ ತುಂಬ ಕವಳ ತುಂಬಿ, ಭರ್ಜರಿ ಮೀಸೆ ಬಿಟ್ಟು, ತಲೆಗೆ ಚೌಕುಳಿಬಟ್ಟೆಯ ಮುಂಡಾಸು ಸುತ್ತಿದ್ದವ ಗ್ರಾಮದ ಹಿರಿಯ ಗೌಡನಿರಬೇಕೆಂದು ಪ್ರಾಣೇಶಾಚಾರ್ಯರು ಊಹಿಸಿದರು. ತಾನು ಕಂಡು ಅರಿಯದ ಒಬ್ಬಾತ ಸಿಕ್ಕಿದ್ದರಿಂದ ಅವರಿಗೆ ಸಮಾಧಾನವೆನ್ನಿಸಿತು. ಕವಳ ತುಂಬಿದ್ದರಿಂದ ಬಾಯನ್ನು ಎತ್ತಿ ಗೌಡ ಕೆಸನ್ನೆ ಮಾಡಿ ಎಲ್ಲಿಂದ ಬಂದವರೆಂದು ಕೇಳಿದ. ತಾನು ಪ್ರಾಣೇಶಾಚಾರ್ಯನೆಂದು ಈ ಗೌಡ ತಿಳಿದಿದ್ದರೆ ಕವಳ ತುಂಬಿದ ಬಾಯಲ್ಲಿ ಹೀಗೆ ಎಗ್ಗಿಲ್ಲದೆ ಎದುರು ನಿಂತು ಪ್ರಶ್ನಿಸುತ್ತಿರಲಿಲ್ಲ. ಸಂಸ್ಕಾರವನ್ನೂ, ಭೂತವನ್ನು ತೊರೆದು ನಿಂತರೆ ಲೋಕ ತನ್ನನ್ನು ಇವನಿನ್ನೊಬ್ಬ ಹಾರುವ ಎಂದು ಬಗೆಯುತ್ತದೆ. ಇದರಿಂದಾಗಿ ಅವರಿಗೆ ಕೊಂಚ ಕಸಿವಿಸಿಯಾಯಿತು. ತನ್ನಿಂದ ಉತ್ತರ ಬರದೇ ಇದ್ದುದು ನೋಡಿ ಗೌಡ ಬಾಯಲ್ಲಿನ ಕವಳವನ್ನು ಉಗಿದು ಒಂದು ಸ್ವಲ್ಪ ವಿನೀತನಾಗಿ, ಮೀಸೆಗೆ ಹತ್ತಿದ ಕೆಂಪು ಕವಳವನ್ನು ವಸ್ತ್ರದಿಂದ ಒರೆಸಿಕೊಳ್ಳುತ್ತ :
“ಎತ್ತ ಮುಖ ಹೊಂಟವರೊ?” ಎಂದು ಪ್ರಶ್ನಾರ್ಥವಾಗಿ ನೋಡಿ ಕೇಳಿದ. ಬ್ರಾಹ್ಮಣನನ್ನು ’ಎಲ್ಲಿಗೆ?’ ಎಂದು ಕೇಳುವುದು ಅಶುಭವೆಂದು ಮರ್ಯಾದೆ ತೋರಿಸಿದನಲ್ಲ ಎಂದು ಪ್ರಾಣೇಶಾಚಾರ್ಯರಿಗೆ ಸಮಾಧಾನವಾಯಿತು. ಆದರೆ ಏನುತ್ತರ ಕೊಡಬೇಕೆಂಬುದು ತಿಳಿಯದೆ, “ಹೀಗೇ…” ಎಂದು ಕೆಬೀಸಿ ತೋರಿಸಿ ಬೆವರೊರಸಿಕೊಂಡರು. ದೇವರ ದಯೆಯಿಂದ ಗೌಡನಿಗೆ ತನ್ನ ಗುರುತು ಹತ್ತಲಿಲ್ಲವಲ್ಲ ಎಂದು ನೆಮ್ಮದಿ ಎನ್ನಿಸಿತು.
“ಘಟ್ಟದ ಕೆಳಗಿನವರೊ ಹೇಗೆ?” ಎಂದು ಗೌಡ ಕುತೂಹಲದಿಂದ ಇನ್ನೊಂದು ಪ್ರಶ್ನೆ ಹಾಕಿದ; ಸುಳ್ಳು ಸುಲಭವಾಗಿ ಬಾರದ ಪ್ರಾಣೇಶಾಚಾರ್ಯರ ಬಾಯಿ ’ಹಾ’ ಎಂದಿತು.
“ಸಂಭಾವನೆಗೆ ಹೊಂಟವರು ಇರಬೇಕು.”
ಪ್ರಾಣೇಶಾಚಾರ್ಯರಿಗೆ ಥಟ್ಟನೆ ತಲೆತಗ್ಗಿಸುವಂತಾಯಿತು. ತನ್ನನ್ನು ಒಬ್ಬ ಭಿಕ್ಷೆ ಎತ್ತುವ ಸಂಭಾವನೆಯ ಬ್ರಾಹ್ಮಣ ಎಂದು ಈ ಗೌಡ ಬಗೆದುಬಿಟ್ಟನಲ್ಲ. ಎಲ್ಲ ತೇಜಸ್ಸು, ವರ್ಚಸ್ಸು ಕಳೆದು ಈಗ ನಾನು ಸಂಭಾವನೆ ಎತ್ತುವ ಹಾರುವನಂತೆಯೇ ಕಾಣಿಸುತ್ತಿರಬೇಕು. ವಿನಯದ ಪಾಠ ಪ್ರಾರಂಭವಾಗಿದೆ, ಬಗ್ಗಿಬಿಡು, ತಗ್ಗಿಬಿಡು ಎಂದುಕೊಂಡು ’ಹಾ’ ಎಂದರು ಮತ್ತೆ. ಅಪರಿಚಿತನೊಬ್ಬನ ಕಣ್ಣುಗಳ ಎದುರಿಗೆ ತಾನು ಇಚ್ಛಿಸಿದ ರೂಪವನ್ನು, ವ್ಯಕ್ತಿತ್ವವನ್ನು ತಾಳಬಹುದೆಂಬುದು ತನ್ನ ಸ್ವಾತಂತ್ರ್ಯದ ಮಿತಿಯನ್ನು ಹಿಗ್ಗಿಸಿದಂತೆನ್ನಿಸಿತು.
“ಆಸುಪಾಸನಲ್ಲೆಲ್ಲೂ ಬ್ರಾಂಬ್ರ ಮನೆಯಿಲ್ಲ” ಎಂದ ಗೌಡ, ಎಮ್ಮೆಗೆ ಆತುಕೊಂಡು ನಿಂತು.
“ಹೌದ?” ಎಂದರು ಪ್ರಾಣೇಶಾಚಾರ್ಯರು ಉದಾಸೀನ ಧ್ವನಿಯಲ್ಲಿ.
“ಸುಮಾರು ಹತ್ತನ್ನೆರಡು ಮೆಲಾಚೆ ಒಂದು ಬ್ರಾಂಬ್ರ ಅಗ್ರಹಾರ ಐತೆ.”
“ಓಹೊ…”
“ಗಾಡಿ- ದಾರೀಂದ ಇನ್ನಷ್ಟು ದೂರ ಆತೆತೆ. ಒಳದಾರೀಂದ ಸಮೀಪ ಆತೆತೆ…”
“ಸರಿ.”
“ಇಲ್ಲೆ ಬಾವಿ ಐತೆ. ಕೊಡ ಕೊಡ್ತೀನಿ, ನೀರು ಸೇದಿ ಸ್ನಾನಮಾಡಿ. ಅಕ್ಕಿ ಬೇಳೆ ಕೊಡ್ತೀನಿ. ಒಲೆ ಹೂಡಿ ಬೇಯಿಸಿ ಉಣ್ಣಿ. ಆಯಾಸ ಆಗಿರಬೇಕು, ಪಾಪ. ಅಗ್ರಹಾರಕ್ಕೆ ಹೋಗಬೇಕೂಂತಿದ್ದರೆ ಹೇಳಿ, ಗಾಡಿ-ಶೇಷಪ್ಪ ಇಲ್ಲೊಬ್ಬ ನೆಂಟರ ಮನೆಗೆ ಬಂದವ್ನೆ. ಅವ್ನ ಗಾಡಿ ಖಾಲಿ ಹೋತೆತೆ. ಅಗ್ರಹಾರಕ್ಕೆ ಹತ್ತಿರ ಅವ ಇರೋದು… ಆದರೆ ಅವ ಅಂದದ್ದು ನೋಡಿದ್ರೆ ನೀವು ಆ ಅಗ್ರಹಾರಕ್ಕೆ ಹೋಗಕ್ಕೆ ಇಷ್ಟಪಡ್ತೀರೊ ಇಲ್ಲೊ ನಾ ಕಾಣೆ. ಒಂದು ಹೆಣಾ ಅಲ್ಲಿ ಮೂರು ರಾತ್ರೆ ಮೂರು ಹಗಲು ಕೊಳೀತಾ ಬಿದ್ದೆತಂತೆ. ಬ್ರಾಂಬ್ರ ಹೆಣ, ಉ… ಶೇಷಪ್ಪ ಅಂದ : ರಾತ್ರೋರಾತ್ರೆ ಆ ಹೆಣಾನ್ನ ಸುಡಕ್ಕೇಂತ ಕೇಳಲಿಕ್ಕೆ ಆ ಪುಣ್ಯಾತ್ಮನ ಸೂಳೆ ಶೇಷಪ್ಪನ ಮನೆಗೆ ಬಂತಂತೆ. ದಾತಾರರೇ ಇಲ್ಲವಂತೆ ಆ ಹೆಣಕ್ಕೆ. ಉ… ಬ್ರಾಂಬ್ರ ಹೆಣ ಹೀಗೆ ಕೋಳೆಯೋದೂಂದ್ರೇನು? ಶೇಷಪ್ಪ ಆ ಮಾರ್ಗ ಬೆಳಿಗ್ಗೆ ಗಾಡೀಲಿ ಬರೋವಾಗ ರಣಹದ್ದುಗಳು ಅಗ್ರಹಾರದ ಮನೆಗಳ ಮ್ಯಾಲೆ ಬಂದು ಕೂತಿದ್ವಂತೆ…”
ಗೌಡ ಹೊಗೆಸೊಪ್ಪನ್ನು ತಿಕ್ಕುತ್ತ ಮಾತಾಡುತ್ತ ಕೂತುಬಿಟ್ಟ.
ಪ್ರಾಣೇಶಾಚಾರ್ಯರಿಗೆ ಇಲ್ಲಿಗೆ ಶೇಷಪ್ಪ ಬಂದ ಸುದ್ದಿ ಕೇಳಿ ಎದೆ ಜಗ್ಗೆಂದಿತು. ಅವನು ತನ್ನನ್ನು ಈ ಸ್ಥಿತಿಯಲ್ಲಿ ನೋಡುವುದು ಅವರಿಗೆ ಇಷ್ಟವಾಗಲಿಲ್ಲ. ಇಲ್ಲಿ ಇನ್ನು ಹೆಚ್ಚು ಹೊತ್ತು ಕಳೆದರೆ ಕೇಡು.
“ಒಂದಿಷ್ಟು ಬಾಳೆಹಣ್ಣು ಹಾಲು ಕೊಟ್ಟರೆ ಮುಂದೆ ನಡೆದುಬಿಡುವೆ” ಎಂದರು ಗೌಡನ ಕಡೆ ನೋಡಿ.
“ಅದಕ್ಕೇನಾಗಬೇಕು ಸ್ವಾಮಿ. ಈ ಚಣವೇ ತರುವೆ. ಹಸಿದ ಬ್ರಾಂಬ್ರು ಒಬ್ಬರು ಗ್ರಾಮದಲ್ಲಿ ಕೂತಿದ್ದಾಗ ನಾವು ಊಟ ಮಾಡೋದು ಶಕ್ಯ ಅಲ್ಲಾಂತ ಅಕ್ಕಿ ಕೊಡುವೆ ಎಂದೆ”
ಎಂದು ಸೀದ ಹೊರಟು ಹೋದ. ಪ್ರಾಣೇಶಾಚಾರ್ಯರಿಗೆ ಅಲ್ಲಿ ಮುಳ್ಳಿನ ಮೇಲೆ ಕೂತಿದ್ದಂತೆನಿಸಿತು. ಶೇಷಪ್ಪನ ಕಣ್ಣಿಗೆಲ್ಲಾದರೂ ತಾನು ಬಿದ್ದುಬಿಟ್ಟರೆ? ಸುತ್ತುಮುತ್ತ ನೋಡುತ್ತ ಭಯದಲ್ಲಿ ಸಣ್ಣಗಾಗಿ ಮುದುರಿ ಕೂತರು. ಎಲ್ಲ ಬಿಟ್ಟು ನಡೆದುಬಿಟ್ಟ ನನ್ನಲ್ಲೇಕೆ ಈ ಭಯ ಉತ್ಪತ್ತಿಯಾಯಿತೆಂದು ಕಸಿವಿಸಿಪಡುತ್ತ ಏರಿಬಂದ ದಿಗಿಲನ್ನು ಹತ್ತಿಕ್ಕಲಾರದೆ ಚಡಪಡಿಸಿದರು. ಗೌಡ ಬಟ್ಟಲಿನ ತುಂಬ ತಂಬಾಲನ್ನು , ಒಂದು ಚಿಪ್ಪು ಬಾಳೆಯ ಹಣ್ಣನ್ನು ತಂದು ಆಚಾರ್ಯರ ಎದುರಿಟ್ಟು-
“ಒಳ್ಳೇ ಹೊತ್ತಿಗೆ ಗ್ರಾಮಕ್ಕೊಬ್ಬರು ಬ್ರಾಂಬ್ರು ಬಂದ್ಹಂಗಾಯ್ತು. ಒಂದು ನಿಮಿತ್ಯ ಹೇಳ್ತೀರಾಂತ? ನನ್ನ ಮಗಾಗೆ ನೂರು ರೂಪಾಯಿ ತೆರ ತೆತ್ತು ಒಂದು ಹೆಣ್ಣನ್ನು ತಂದೆ. ಅದು ಬಂದಾಗಿಂದ ಒಂದು ಥರಾ ಮಂಕಾಗಿ ಕೂತುಬಿಟ್ಟಿದೆ, ಜಕಣಿ ಹಿಡಿದು. ತಾವು ಮಂತ್ರಿಸಿಕೊಟ್ಟರೆ…”
ಅಭ್ಯಾಸಬಲದ ಮೇಲೆ ಥಟ್ಟನೆ ತನ್ನ ಬ್ರಾಹ್ಮಣಧರ್ಮದ ಉದ್ಯೋಗವನ್ನು ನೆರವೇರಿಸಲು ಉದ್ಯುಕ್ತರಾದ ಪ್ರಾಣೇಶಾಚಾರ್ಯರು ಮನಸ್ಸಿಗೆ ಲಗಾಮು ಹಾಕಿ ನಿಲ್ಲಿಸಿದರು. ತಾನು ಎಲ್ಲವನ್ನು ಬಿಟ್ಟರೂ ಸಮಾಜ ಮಾತ್ರ ಬ್ರಾಹ್ಮಣಸಹಜವಾದ ಕರ್ತವ್ಯಗಳನ್ನೆಲ್ಲ ನೆರವೇರಿಸೆಂದು ತನಗೆ ದುಂಬಾಲು ಬೀಳುತ್ತಿದೆ. ಇದರಿಂದ ಬಿಡುಗಡೆ ಸುಲಭವಲ್ಲ. ಹಾಲು ಹಣ್ಣನ್ನು ಇಷ್ಟು ಶ್ರದ್ಧೆಯಿಂದ ಅಪರಿಚಿತನೊಬ್ಬನಿಗೆ ತಂದುಕೊಟ್ಟ ಗೌಡನಿಗೆ ಈಗ ತಾನೇನು ಹೇಳಬೇಕು? ತಾನು ತಪೋಭ್ರಷ್ಟನಾದವನೆಂದೆ? ತಾನು ಬ್ರಾಹ್ಮಣನಲ್ಲವೆಂದೆ? ಅಥವಾ ಸತ್ಯವನ್ನೆ?
“”ನಾನಿವತ್ತು ಮಂತ್ರಿಸಿಕೊಡುವಂತಿಲ್ಲಪ್ಪ. ನನ್ನ ಜ್ಞಾತಿಗಳೊಬ್ಬರು ತೀರಿ ಹೋದದ್ದರ ಸೂತಕ ನನಗೆ” ಎಂದು ಥಟ್ಟನೆ ಹೊಳೆದ ಉತ್ತರಕ್ಕೆ ಹಿಗ್ಗಿ ಹೇಳಿದರು. ಹಾಲನ್ನು ಕುಡಿದು, ಬಟ್ಟಲನ್ನು ಹಿಂದಕ್ಕೆ ಕೊಟ್ಟು, ಬಾಳೆಹಣ್ಣನ್ನು ವಸ್ತ್ರದಲ್ಲಿ ಕಟ್ಟಿಕೊಂಡು ಎದ್ದುನಿಂತರು.
“ಈ ಮುಖ ಒಂದ್ಹತ್ತು ಮೆಲಿ ನಡೆದರೆ ಮೇಳಿಗೆ ಎಂಬೊ ಊರು ಸಿಗುತ್ತೆ. ಅಲ್ಲಿ ಇವತ್ತು, ನಾಳೆ, ನಾಡಿದ್ದು ರತೋಸ್ತವ. ನಿಮಗೆ ಅಲ್ಲಿ ಚೆನ್ನಾಗಿ ಸಂಭಾವ್ನೆ ಆತೆತೆ ಹ್ವಾದರೆ…” ಎಂದು ಗೌಡ ಎಲೆಯಡಿಕೆ ಜಗಿಯುತ್ತ ಎಮ್ಮೆಗಳನ್ನು ನಡೆಸಿಕೊಂಡು ಹೋದ.
ಗೌಡ ಕಣ್ಮರೆಯಾಗುತ್ತಿದ್ದಂತೆ ಪ್ರಾಣೇಶಾಚಾರ್ಯರು ಮತ್ತೆ ಕಾಡು ಹೊಕ್ಕು ಕಾಲುದಾರಿಯನ್ನು ಹಿಡಿದು ನಡೆದರು. ತನ್ನ ಸಮಸ್ಯೆ ಇನ್ನಷ್ಟು ಬಿಕ್ಕಟ್ಟಾಗಿಬಿಟ್ಟಿತೆಂದುಕೊಂಡು ಚಿಂತಿಸಿದರು. ಇಂತಹ ದಿಗಿಲನ್ನು ನಾನು ಹಿಂದೆ ಎಂದೂ ಅನುಭವಿಸಿರಲಿಲ್ಲ, ಏನೋ ಪತ್ತೆಯಾಗಿಬಿಡುತ್ತದೆಂಬ ದಿಗಿಲು. ಯಾರ ಕಣ್ಣಿಂದಲೂ ಏನನ್ನೂ ಗುಪ್ತವಾಗಿ ಇಟ್ಟುಕೊಳ್ಳಲಾರೆನೆಂಬ ದಿಗಿಲು. ನನ್ನ ಮೊದಲಿನ ನಿರ್ಭಯವನ್ನು ಕಳೆದುಕೊಂಡೆ. ಹೇಗೆ? ಯಾಕೆ? ನಾನು ಅಗ್ರಹಾರಕ್ಕೆ ಮರಳದೇ ಇರಲು ಮುಖ್ಯ ಕಾರಣ ಆ ಬ್ರಹ್ಮಣರ ಕಣ್ಣುಗಳ ಎದಿರು ಬದುಕಲಾರದ ದಿಗಿಲು. ಸುಳ್ಳನ್ನು ಮಡಿಲಿನಲ್ಲಿ ಕಟ್ಟಿಕೊಂಡು ಬದುಕಲಾರೆ ಎನ್ನುವ ಆತಂಕ.
ಕಾಡಿನ ಮೌನ ಗಾಢವಾಗಿ ಕವಿದಂತೆ ಅವರ ಮನಸ್ಸು ತಿಳಿಯಾಗತೊಡಗಿತು. ಬಾಳೆಹಣ್ಣುಗಳನ್ನು ಸುಲಿದು ತಿನ್ನುತ್ತ ನಿಧಾನವಾಗಿ ಕಾಲು ಹಾಕಿ ನಡೆದರು. ಗೌಡನನ್ನು ನೋಡಿದಾಗಿನಿಂದ ಸಮಸ್ಯೆ ಇನ್ನಷ್ಟು ಗಹನವಾಗಿದೆ. ಜುಟ್ಟು ಹಿಡಿದು ಎತ್ತಿ ಮುಖಕ್ಕೆ ಮುಖಕೊಟ್ಟು ನೋಡಬೇಕು. ಮೂಲದಲ್ಲಿದ್ದುದು ಸುಡಬೇಕಾದ ಒಂದು ವಸ್ತು. ಆ ವಸ್ತು ಬ್ರಾಹ್ಮಣ್ಯವನ್ನು ಕಾಲಿನಿಂದೊದ್ದು ಬದುಕಿದ ನಾರಣಪ್ಪ. ಸುಡಬೇಕಾದ ಒಂದು ವಸ್ತು ಕೊನೆಗೊಂದು ದಿನ ಸುಟ್ಟುಹೋಗುವ ವಸ್ತುಗಳ ಮಧ್ಯೆ ಸಮಸ್ಯೆಯಾಯಿತು. ಈ ಸಮಸ್ಯೆ ಧರ್ಮಕ್ಕೆ ಸೇರಿದ್ದು ಎಂದು ಶಾಸ್ತ್ರದ ಮೊರಹೊಕ್ಕೆ. ದೇವರ ಮೊರೆಹೊಕ್ಕೆ. ಕೊನೆಗೆ ಕಾಡಿನಲ್ಲಿ ಕತ್ತಲಿನಲ್ಲಿ…
ನಿಂತರು. ಖಚಿತವಾಗಿ ಅರಿಯಲೆಂದು ಮನಸ್ಸಿನಲ್ಲಿ ತೂಗುತ್ತ ಕಾದರು.
…ಆದದ್ದು ಖಚಿತವಾಗಿ ಏನು, ಹೇಗೆ ಎಂಬುದನ್ನು ಪುನಃ ಸೃಷ್ಟಿಸಿಕೊಳ್ಳಲು ಹೋದಾಗ ಸ್ವಪ್ನದ ಬೆನ್ನುಹತ್ತಿ ನಡೆದ ಭಾವವಾಗುತ್ತದೆ.
ಅವಳ ಮೊಲೆಗಳ ಅಕಸ್ಮಾv ಸ್ಪರ್ಶದಿಂದ ಪುಳಕಿತನಾದೆ, ಮತ್ತೆ ಅವಳು ಮಡಿಲಿನಿಂದ ತೆಗೆದು ತಿನ್ನಿಸಿದ ಬಾಳೆಹಣ್ಣುಗಳನ್ನು ತಿಂದೆ. ಹಸಿವು, ದಣಿವು, ಮಾರುತಿಯಿಂದ ಆದ ನಿರಾಶೆ-ಕಾರಣ. ನಿರಪೇಕ್ಷಿತವಾಗಿ, ದೆವಸಂಕಲ್ಪವೆಂಬಂತೆ ಒದಗಿ ಬಂದ ಆ ಮುಹೂರ್ತವೇ ಅದಕ್ಕೆ ಕಾರಣ. ಅದೊಂದು ಮುಹೂರ್ತ-ಅದರ ಆಚೆಗೆ ಏನೂ ಇರಲಿಲ್ಲ-ಈಚೆಗೆ ಏನೂ ಇಲ್ಲ. ಇಲ್ಲದಿದ್ದೊಂದು ಆಗಿ ಮತ್ತೆ ಇಲ್ಲವಾದ ಮುಹೂರ್ತ. ಆಚೆಗೆ ನಿರಾಕಾರ. ಈಚೆಗೆ ನಿರಾಕಾರ. ಮಧ್ಯೆ ಮೆ ಏರಿ ಬಂದ ಮುಹೂರ್ತ. ಅಂದು ನಾನು ಅವಳನ್ನು ಸಂಭೋಗಿಸಿದ್ದಕ್ಕೆ ಸರ್ವಥಾ ಜವಾಬ್ದಾರನಲ್ಲ. ಅಂದರೆ ಆ ಘಳಿಗೆಗೆ ಜವಾಬ್ದಾರನಲ್ಲ. ಆದರೆ ಆ ಘಳಿಗೆ ನನ್ನನ್ನು ಬದಲು ಮಾಡಿಬಿಟ್ಟಿತಲ್ಲ-ಯಾಕೆ? ಬದಲಾದ ವ್ಯಕ್ತಿಗೆ ನಾನು ಜವಬ್ದಾರ ಎಂದು ತಾನೇ ಈಗಿನ ಕಸಿವಿಸಿ? ಮುಹೂರ್ತ ಸ್ಮೃತಿಯಾಗಿಬಿಟ್ಟಿದ್ದರಿಂದ ತಾನೆ? ಅಪೇಕ್ಷೆಯಿಲ್ಲದೆ ಒದಗಿತು. ಈಗ ಸ್ಮೃತಿಯಾಯಿತು-ಆ ಸ್ಮೃತಿಯನ್ನು ಕೆದುಕುತ್ತಿದ್ದಂತೆ ಮತ್ತೆ ಅಪೇಕ್ಷೆಯಾಗತೊಡಗಿದೆ. ಮತ್ತೊಮ್ಮೆ ಚಂದ್ರಿಯನ್ನು ಅವಚಿಕೊಳ್ಳಬೇಕೆನ್ನಿಸುತ್ತಿದೆ.
ಅಪೇಕ್ಷೆಯ ಸಂಚಾರವಾಗಿ ಆಚಾರ್ಯರ ದೇಹ ಸ್ಪರ್ಶ ಕಾತರವಾಯಿತು. ಕಣ್ಣುಗಳು ಮಂಜಾದವು. ಚಂದ್ರಿಯನ್ನರಸಿಕೊಂಡು ಕುಂದಾಪುರಕ್ಕೆ ಹೋಗಿಬಿಡಬೇಕೆನ್ನಿಸಿತು. ತರ್ಕಶುದ್ಧವಾಗಿ ತನ್ನನ್ನು ಪರೀಕ್ಷಿಸಿಕೊಳ್ಳುವ ಚಿತ್ತವೃತ್ತಿಗೆ ಭಂಗ ಬಂದಂತಾಯಿತು. ಈಗ ನಾನು ಅವಳನ್ನು ಹುಡುಕಿಕೊಂಡು ಹೋಗಿ ಅವಳ ಸಂಗ ಮಾಡಿದರೆ ನನ್ನ ಕ್ರಿಯೆಗೆ ನಾನೇ ಸಂಪೂರ್ಣ
ಜವಾಬ್ದಾರನಾಗಿ ಬಿಟ್ಟಂತಲ್ಲವೆ ಎನ್ನಿಸಿತು. ಆಗಲಾದರೂ ಹೀಗೆ ಅಕಸ್ಮಾv ಹೊರಳಿಬಿಟ್ಟಿದ್ದರ ಸ್ಮೃತಿಯ ಸಂಕಟದಿಂದ ಪಾರಾಗಬಹುದು. ಇದು ನಾನು, ನನ್ನದು, ನನ್ನಿಂದ ಸೃಷ್ಟಿತವಾದ ನನ್ನ ಹೊಸ ಸತ್ಯ, ಹೊಸ ವ್ಯಕ್ತಿತ್ವ ಎಂದು ದೆವವನ್ನು ಗಟ್ಟಿಯಾಗಿ ನೋಡಬಹುದು. ಈಗ ನನ್ನ ವ್ಯಕ್ತಿತ್ವ ರೂಪಭ್ರಷ್ಟವಾಗಿ, ಹೊಸ ರೂಪ ಪಡೆಯದೆ, ಗರ್ಭಕೋಶದಿಂದ ಅವಸರದಲ್ಲಿ ಹೊರಗೆ ತೆಗೆದ ರಾಕ್ಷಸ-ಪಿಂಡದಂತಾಗಿದೆ. ಕಾಡಿನಲ್ಲಿ ಕತ್ತಲಿನಲ್ಲಿ ಆ ಮುಹೂರ್ತ ಅಕಸ್ಮಾತ್ತಾಗಿ ಒದಗಿ ಬಂತೆಂಬುದು ನಿಜ. ನಾನಾಗಿ ಬಯಸಿ ಅದನ್ನು ಪಡೆಯಲಿಲ್ಲೆಂಬುದು ನಿಜ. ಚಾಚಿದ ಕೆಗಳು ಮೊಲೆಗಳನ್ನು ಮುಟ್ಟಿದುವು-ಮತ್ತೆ, ಆಸೆ ಹುಟ್ಟಿತು, ಮತ್ತೆ-ಅಲ್ಲಿದೆ ಗುಟ್ಟು. ನನ್ನ ಬಾಳು ಅತ್ತಲಿಗೋ, ಇತ್ತಲಿಗೋ ಎಂದು ನಿರ್ಧರಿತವಾಗಬೇಕಾಗಿದ್ದ ಗಳಿಗೆಯದು. ಅಲ್ಲ-ನಾನು ನಿರ್ಧಾರಮಾಡಬಹುದಾಗಿದ್ದ ಗಳಿಗೆಯದು. ನನ್ನ ದೇಹ ಅದಕ್ಕೆ ಒಪ್ಪಿತು ಎಂಬೋದು ಸಮಾಧಾನವಲ್ಲ, ಕತ್ತಲಿನಲ್ಲಿ ಅವರಸದ ಕೆಗಳು ಹುಡುಕಿದುವು; ಚಂದ್ರಿಯ ಮೃದುವಾದ ತೊಡೆ ನಿತಂಬಗಳನ್ನೆಲ್ಲ-ಯಾವ ಧರ್ಮವನ್ನೂ ನಾನು ಹುಡುಕಾಡದ ಬಗೆಯಲ್ಲಿ-ಹುಡುಕಿದುವು. ನನ್ನ ಬಾಳು ಅತ್ತಲಿಗೋ ಇತ್ತಲಿಗೋ ಎಂದು ನಿರ್ಧರಿತವಾಗಬೇಕಾಗಿದ್ದ ಗಳಿಗೆಯಲ್ಲಿ ಚಂದ್ರಿಯ ಜೊತೆ ಸಂಭೋಗಿಸುವ ನಿಶ್ಚಯ ಆಗಿಬಿಟ್ಟಿತು. ಸ್ವಾಧೀನ ತಪ್ಪಿದರೂ ನಿಶ್ಚಯ ಮಾಡುವ ಜವಾಬ್ದಾರಿ ನನ್ನ ಮೇಲೇ ಇತ್ತು. ಮನುಷ್ಯನ ನಿಶ್ಚಯಕ್ಕೆ ಬೆಲೆಯಿರುವುದು ಹೀಗೆ ಸ್ವಾಧೀನ ತಪ್ಪುವುದು ಸಾಧ್ಯವಿರುವುದರಿಂದಲೇ ಹೊರತಾಗಿ ನಿಶ್ಚಯ ನೀರು ಕುಡಿದಷ್ಟು ಸರಾಗವಾದ್ದರಿಂದಲ್ಲ. ನಮ್ಮ ನಿಶ್ಚಯದ ಮೂಲಕ ನಮ್ಮನ್ನು ನಾವು ರೂಪಿಸಿಕೊಳ್ಳುತ್ತೇವೆ, ಈ ಘಟ್ಟಕ್ಕೊಂದು ವ್ಯಕ್ತಿತ್ವದ ರೂಪುರೇಷೆ ತರುತ್ತೇವೆ. ಹೇಗಾಗಬೇಕೆಂದು ನಾರಣಪ್ಪ ನಿಶ್ಚಯಿಸಿ ಬದುಕಿದನೋ ಅಂತಹ ವ್ಯಕ್ತಿ ಅವನಾದ. ನಾನೂ ಇನ್ನೊಂದಾಗಬೇಕೆಂದು ನಿಶ್ಚಯಿಸಿ ಬದುಕಿದೆ. ಥಟ್ಟನೊಂದು ತಿರುವಿನಲ್ಲಿ ತಿರುಗಿಬಿಟ್ಟೆ. ತಿರುಗಿಬಿಟ್ಟಿದ್ದರ ಜವಾಬ್ದಾರಿಯೂ ನನ್ನದು ಎಂಬುದು ನನಗೆ ಸ್ಪಷ್ಟವಾಗುವ ತನಕ ಸ್ವಾತಂತ್ರ್ಯವಿಲ್ಲ. ತಿರುಗಿಬಿಟ್ಟಿದ್ದರಿಂದ ಏನಾಯಿತು? ದ್ವಂದ್ವ ಜೀವನಕ್ಕೆ ನುಗ್ಗಿಬಂತು. ಎರಡು ಸತ್ಯಗಳ ನಡುವೆ ತ್ರಿಶಂಕುವಾದೆ. ಋಷಿಗಳು ಜೀವನದ ಇಂತಹ ಅನುಭವಗಳನ್ನು ಹೇಗೆ ಎದುರಿಸಿದರು, ದ್ವಂದ್ವವಿಲ್ಲದೆ ಎದುರಿಸಿದರೇ-ಎಂದು ಅನುಮಾನವಾಗುತ್ತದೆ. ಮತ್ಸ್ಯಗಂಧಿಯನ್ನು ದೋಣಿಯಲ್ಲಿ ಕೂಡಿ ವ್ಯಾಸನಿಗೆ ಜನ್ಮವಿತ್ತು ಹೊರಟುಬಿಟ್ಟ ಆ ಮಹಾನುಭಾವ ನನ್ನ ಹಾಗೆ ಸಂಕಟಪಟ್ಟನೆ! ತಪೋಭ್ರಷ್ಟನಾದ ವಿಶ್ವಾಮಿತ್ರ ಈ ಆತಂಕವನ್ನನುಭವಿಸಿದನೆ? ಇಡೀ ಜೀವನವನ್ನೇ ವಿಸರ್ಜನೆಯ ಅವಸರದ ಘಳಿಗೆಗಳಂತೆ ಕಂಡು ಸದಾ ಪರಮಾತ್ಮವಶರಾಗಿದ್ದು, ದ್ವಂದ್ವದಲ್ಲಿ ಬದುಕುವುದರ ಮೂಲಕವೇ ದ್ವಂದ್ವಾತೀತರಾಗಿ, ಭೂಮಿ ಕೊರದ ರೂಪಾಂತರಗಳನ್ನೆಲ್ಲ ತಳೆದು, ಹರಿದು ಕೊನೆಗೆ ಸಾಗರದಲ್ಲಿ ರೂಪಾತೀತವಾಗುವ ನದಿಯಂತೆ ಅವರು ಬಾಳಿದ್ದಿರಬಹುದೆ? ನನ್ನ ಮಟ್ಟಿಗೆ ಪರಮಾತ್ಮನೆಂದೂ ಅಂತಹ ಸದ್ಯದ ಅವಸರವಾಗಲೇ ಇಲ್ಲ. ಆಗಿದ್ದರೆ ಅದು ನನ್ನ ಪರಮಾಪ್ತ ಮಿತ್ರ ಮಹಾಬಲನಿಗೆ ಆಗಿದ್ದಿರಬೇಕು. ಬಾಲ್ಯದ ಗೆಳೆಯ ಅವನೊಬ್ಬನಲ್ಲಿ ಮಾತ್ರ ಪರಮಾತ್ಮ ಒಂದು ಹಂಬಲವಾಗಿ ಬಿಟ್ಟಿದ್ದ. ಇಬ್ಬರೂ ಕೂಡಿ ಕಾಶಿಗೆ ಹೋದೆವು. ಅವನು ಅಸಾಧ್ಯ ಜಾಣ. ತೆಳ್ಳಗೆ ಬೆಳ್ಳಗೆ ಉದ್ದಗೆ ಇದ್ದ. ಅವನ ಮನಸ್ಸಿಗೆ ಮೀರಿದ ವಿಷಯವೇ ಇರಲಿಲ್ಲ. ಗುರುಗಳು ಈ ಪಾಠ ಹೇಳುವಾಗಲೇ ಮುಂದಿನದನ್ನು ಅವ ಊಹಿಸಿ ಬಿಡುವ. ಅವನೊಬ್ಬನ ಬಗ್ಗೆ ಮಾತ್ರ ತನಗೆ ಅಸಾಧ್ಯವಾದ ಅಸೂಯೆ, ಪ್ರೇಮ ಹುಟ್ಟಿತ್ತು. ಅವನಿಗೆ ಹೋಲಿಸಿಕೊಂಡರೆ ರೂಪದಲ್ಲಾಗಲೀ ಬುದ್ಧಿಯಲ್ಲಾಗಲೀ ತಾನು ಸ್ವಲ್ಪ ಸ್ಥೂಲವೆ. ತಾನು ಮಾಧ್ವ, ಅವನು ಸ್ಮಾರ್ತ ಎಂಬೋದು ಇಬ್ಬರ ನಡುವಿನ ಗಾಢವಾದ ಪ್ರೇಮಕ್ಕೆ ಅಡ್ಡಿಯಾಗಿರಲಿಲ್ಲ. ತಾನು ಸದಾ ಮಾಧ್ವಮತ ಪ್ರತಿಪಾದನೆ ಮಾಡಬೇಕೆಂದು ಹಟತೊಟ್ಟುಕೊಂಡಿದ್ದರೆ ಅವನು ಮಾತ್ರ ಪರಮಾತ್ಮನ ಅನುಭವವೇ ನನಗೆ ಮುಖ್ಯವಾದದ್ದು, ಉಳಿದದ್ದೆಲ್ಲ ಅಮುಖ್ಯ ಎಂದು ಹೇಳುತ್ತಿದ್ದ. ಪರಮಾತ್ಮನ ಅನುಭವಕ್ಕೊಂದು ದಾರಿ ಬೇಡವೇ, ದ್ವೆತ ಅಂತಹ ದಾರಿ ಎಂದು ತಾನು ವಾದಿಸಿದರೆ ದಾರಿಯಲ್ಲಿ ನಡೆದು ಸಿಗಲು ವೆಕುಂಠವೇನೊಂದು ಊರೇ, ಗ್ರಾಮವೇ, ನಿಂತಲ್ಲೆ ಅದು ಸಿಕ್ಕಿಬಿಡಬೇಕೆಂದು ಅವನು ಅನ್ನುತ್ತಿದ್ದ. ತರ್ಕ ಮೀಮಾಂಸಕ್ಕಿಂತ ಅವನಿಗೆ ಪ್ರಿಯವಾದದ್ಡು ಸಂಗೀತ. ಜಯದೇವ ಕವಿಯ ಗೀತಗೋವಿಂದವನ್ನು ಅವನು ಹಾಡತೊಡಗಿದನೆಂದರೆ ನಂದನದಲ್ಲಿದ್ದಂತಾಗಿ ಬಿಡುತ್ತಿತ್ತು. ’ಲಲಿತ ಲವಂಗ ಲತಾಪರಿಶೀಲನ ಕೋಮಲ ಮಲಯ ಸಮೀರೇ’-ಸ್ಮೃತಿಯು ಉಕ್ಕಿಬಂದು ಗೆಳೆಯನ ನೆನಪಾಗಿ ಪ್ರಾಣೇಶಾಚಾರ್ಯರು ಗದ್ಗದಿತರಾದರು. ಪರಮಾತ್ಮ-ಇಂತಹ ಪ್ರೇಮವನ್ನು ಬಹಳ ದಿನ ನಾನು ಪಟ್ಟೇ ಇರಲಿಲ್ಲ. ಏನಾಗಿಹೋದನೋ ಮಹಾಬಲ. ಕಾಶಿಯಲ್ಲಿದ್ದಾಗ ತನ್ನಿಂದ ಅವ ದೂರದೂರವಾದ. ಯಾಕೆಂದು ಹೊಳೆಯಲೇ ಇಲ್ಲ. ಅತ್ಯಂತ ದುಃಖಕ್ಕೊಳಗಾಗಿಬಿಟ್ಟೆ ಆಗ. ಓದು ವಿದ್ಯಾ ಏನೂ ಹತ್ತದೇ ಹೋಯಿತು. ಸದಾ ಜೊತೆಗಿರುತ್ತಿದ್ದವ ತಪ್ಪಿಸಿಕೊಂಡು ಅಲೆಯಲು ಪ್ರಾರಂಭಿಸಿದ. ಕಾರಣ ತಿಳಿಯಲೇ ಇಲ್ಲ. ಹಗಲು ರಾತ್ರೆ ಆಗ ತಾನು ಮಹಾಬಲನಿಗಾಗಿ ಹಲುಬಿದಂತೆ ಯಾರ ಬಗ್ಗೆಯೂ ಹಲುಬಿದ್ದಿಲ್ಲ. ಮೋಹವಶನಾಗಿಬಿಟ್ಟಿದ್ದೆ. ತಿರುಗಿ ಇಡೀ ಜೀವನವನ್ನೇ ನೋಡಿಕೊಂಡರೆ ಮಹಾಬಲನ ಮೇಲೆ ಪಟ್ಟ ಪ್ರೇಮ ಯಾರ ಮೇಲೂ ನಾನು ಪಟ್ಟಿಲ್ಲ. ಎಡ ಕೆಂಗೆನ್ನೆಯ ಮೇಲೆ ಕಪ್ಪುಮಚ್ಚೆಯಿದ್ದ ಅವನ ವ್ಯಾಕುಲಮುಖ ಒಂದೊಂದು ದಿನ ಕಣ್ಣಿಗೆ ಕಟ್ಟಿದಂತಾಗಿ ಅವನ ಸ್ನೇಹಕ್ಕೆ ಹಲುಬುವಂತಾಗಿಬಿಡುತ್ತಿತ್ತು. ಆದರೆ ಹತ್ತಿರ ಸುಳಿದರೆ ಏನಾದರೂ ನೆವ ಹೇಳಿ ಅವ ತಪ್ಪಿಸಿಕೊಂಡುಬಿಡುವ. ಒಂದು ದಿನ ಅವ ಇದ್ದಿಕ್ಕಿದ್ದಂತೆ ಕಣ್ಮರೆಯಾಗಿಬಿಟ್ಟ; ಪಾಠಕ್ಕೆ ಬರೋದನ್ನ ನಿಲ್ಲಿಸಿಬಿಟ್ಟ. ಹುಡುಕುತ್ತ ಕಾಶಿಯ ಬೀದಿಗಳನ್ನೆಲ್ಲ ಅಲೆದೆ. ಎಲ್ಲಿ ಯಾರು ಅವನನ್ನು ಬಲಿಕೊಟ್ಟುಬಿಟ್ಟರೊ ಎಂದು ಕಂಗಾಲಾದೆ. ಒಂದು ದಿನ ಮನೆಯೊಂದರ ಚಾವಡಿಯ ಮೇಲೆ ಕೂತಿದ್ದ. ಆಶ್ಚರ್ಯಪಟ್ಟು ನೋಡಿದೆ-ಗುಡುಗುಡಿ ಸೇದುತ್ತ ಒಂಟಿಯಾಗಿ ಕೂತಿದ್ದ. ತಡೆಯಲಾರದೆ ಓಡಿದೆ, ಕೆ ಹಿಡಿದು ಎಳೆದೆ. ಭಾರವಾದ ಕಣ್ಣುಗಳನ್ನು ಎತ್ತಿ “ಪ್ರಾಣೇಶ, ನಿನ್ನ ಪಾಡಿಗೆ ನೀನು ಹೋಗು” ಎಂದುಬಿಟ್ಟ. ಹಿಡಿದು ಜಗ್ಗಿದೆ. ರೇಗಿ ಎದ್ದು ನಿಂತು ಅವ “ನಿನಗೆ ಸತ್ಯ ಬೇಕೇ? ಕೇಳು. ನಾನು ನನ್ನ ವ್ಯಾಸಂಗಾನ್ನ ಬಿಟ್ಟುಬಿಟ್ಟೆ. ಈಗ ಯಾವುದಕ್ಕಾಗಿ ಬದುಕುವೆ ಗೊತ್ತೆ? ಒಳಗೆ ಬಾ. ತೋರಿಸುತ್ತೇನೆ” ಎಂದು ಒಳಗೆ ಎಳೆದುಕೊಂಡು ಹೋಗಿ ಸುಪ್ಪತ್ತಿಗೆಯ ಮೇಲೆ ಮಲಗಿ ಹಗಲಿನಲ್ಲಿ ನಿದ್ದೆಹೋದ ಒಬ್ಬ ಹುಡುಗಿಯನ್ನು ತೋರಿಸಿದ. ಕೆಗಳನ್ನು ಚೆಲ್ಲಿ ಅವಳು ಮಲಗಿದ್ದಳು. ಅವಳ ವೇಷವಸ್ತ್ರದ ಬೆಡಗಿನಿಂದಲೇ ಅವಳು ವೇಶ್ಯೆ ಎಂದು ತಿಳಿಯುವಂತಿತ್ತು. ನಾನು ಭಯದಿಂದ, ಆಶ್ಚರ್ಯದಿಂದ ನಡುಗಿಬಿಟ್ಟೆ. ಮಹಾಬಲ “ತಿಳಿಯಿತಲ್ಲವೇ ಪ್ರಾಣೇಶ. ನನಗಾಗಿ ಇನ್ನು ಯೋಚಿಸಬೇಡ. ಹೋಗು” ಎಂದುಬಿಟ್ಟ. ಬುದ್ಧಿ ಭ್ರಮಣೆಯಾದಂತಾಗಿ ಏನೊಂದು ಅನ್ನುವುದೂ ತೋರದೆ ನಡೆದುಬಿಟ್ಟೆ. ಮತ್ತೆ ಮನಸ್ಸು ಕಲ್ಲಾಗಿಬಿಟ್ಟಿತು. ಭ್ರಷ್ಟನಾಗಿಹೋದ ಮಹಾಬಲನಿಗೆ ವಿರುದ್ಧ ದಿಕ್ಕಿನಲ್ಲಿ ಬಾಳನ್ನು ನಡೆಸಿಬಿಡುತ್ತೇನೆಂದು ಹಟತೊಟ್ಟು ಬಂದುಬಿಟ್ಟೆ. ಇಲ್ಲಿ ನಾರಣಪ್ಪನನ್ನು ಕಂಡಾಗಲೆಲ್ಲ ಮಹಾಬಲನ ಜ್ಞಾಪಕ. ಇಬ್ಬರ ನಡುವೆ ಅಜಗಜಾಂತರ ವ್ಯತ್ಯಾಸವಿದ್ದೂ ಕೂಡ.
ಈಗ ಅನ್ನಿಸುತ್ತಿದೆ; ಮಹಾಬಲನನ್ನು ನೋಡಬೇಕು. ಕೇಳಬೇಕು : ಯಾಕೆ ನೀನು ಸ್ವೇಚ್ಛೆಯಿಂದಲೇ ನಿನ್ನ ಜೇವನದ ಗತಿಯನ್ನೆ ಬದಲಾಯಿಸಿಬಿಟ್ಟೆ? ಯಾವ ಅನುಭವ, ಯಾವ ಆಕಾಂಕ್ಷೆ, ಯಾವ ಮೋಹ ನಿನ್ನನ್ನು ಹೀಗೆ ನಡೆಸಿತು? ಈಗ ನನಗೆ ನೀನು ಏನು ಮಾಡೆಂದು ಹೇಳುತ್ತಿ? ನಿನಗೆ ಸ್ತ್ರೀಸುಖದಿಂದಲೇ ಸರ್ವತೃಪ್ತಿಯೂ ಆಯಿತೆ? ಅಷ್ಟೊಂದು ಶ್ರೀಮಂತನಾಗಿದ್ದ ನಿನ್ನ ಬಾಳು ಹೆಣ್ಣೊಬ್ಬಳಿಂದಲೇ ತೃಪ್ತವಾಗುವುದು ಸಾಧ್ಯವೇ?
ಆಹಾ ಹೊಳೆದುಬಿಟ್ಟಿತು. ಪ್ರಾಣೇಶಾಚಾರ್ಯರು ಎದ್ದು ನಿಂತು ನಡೆಯತೊಡಗಿದರು. ಮೂಲ ಇರುವುದು ಅಲ್ಲಿ. ಮಹಾಬಲನಿಂದ ನನಗೆ ಆದ ನಿರಾಶೆ ಉಳಿದೇ ಬಿಟ್ಟಿದ್ದಿರಬೇಕು. ಅಪ್ರತ್ಯಕ್ಷವಾಗಿ ನಾರಣಪ್ಪನಲ್ಲಿ ನಾನು ಮಹಾಬಲನನ್ನ ಕಂಡಿರಬೇಕು. ಅಲ್ಲಿ ಆದ ಸೋಲಿಗೆ ಸಮಾಧಾನವಾಗಲೆಂದು ನಾರಣಪ್ಪನನ್ನು ಗೆಲ್ಲಲು ಪ್ರಯತ್ನಿಸಿರಬೇಕು. ಆದರೆ ಸೋತೆ, ಸೋತೆ-ಮೂಗಡಿಯಾಗಿ ಬಿದ್ದುಬಿಟ್ಟೆ. ಯಾವುದರ ವಿರುದ್ಧ ಹೋರಾಡುತ್ತ ಬಂದೆನೋ ಅದೇ ನಾನಾಗಿ ಬಿಟ್ಟೆ. ಯಾಕೆ? ಯಾಕೆ? ಎಲ್ಲಿ, ಹೇಗೆ, ಸೋತೆ? ಹುಡುಕಲು ಹೋದರೆ ಮತ್ತೆಲ್ಲ ಗಂಟುಕಟ್ಟಿಕೊಂಡುಬಿಡುತ್ತದೆ.
ನೋಡಹೋದರೆ ಒಂದಕ್ಕಿನ್ನೊಂದು ಗಂಟುಹಾಕಿಕೊಂಡಿದೆ. ಮಹಾಬಲನಿಂದ ನಾರಣಪ್ಪ, ನಾರಣಪ್ಪನಿಂದ ನನ್ನ ಹಠ, ನಾನು ಓದಿದ ಪುರಾಣ, ಅದರ ಪರಿಣಾಮ, ಕೊನೆಗೆ ನನಗೇ ಬೆಳ್ಳಿಯ ಮೊಲೆಗಳ ಮೇಲೆ ಬಂದ ಆಸೆ, ಈಗ ನಾನು ಪಡೆಯುತ್ತಿರುವ ರೂಪ, ಜೀವನದುದ್ದಕ್ಕೂ ತಯಾರಾಗುತ್ತಿತ್ತು-ಪರೋಕ್ಷವಾಗಿ. ಚಂದ್ರಿಯನ್ನು ಕೂಡಿದ ಮುಹೂರ್ತ ಹೀಗೆ ನೋಡಿದಲ್ಲಿ ನಿರಪೇಕ್ಷಿತವಾಗಿ ಬಂದದ್ದೆ ಎಂದೂ ಅನುಮಾನವಾಗುತ್ತದೆ. ಒಳಗಿದ್ದುದೆಲ್ಲ ಹೊರಗೆ ಬಂದುಬಿಟ್ಟ ಕ್ಷಣವಿರಬೇಕು ಅದು-ಉಗ್ರಾಣದಿಂದ ಧುಮುಕಿದ ಇಲಿಗಳ ಹಾಗೆ. ಮತ್ತೆ ಅಗ್ರಹಾರ ನೆನಪಾಗಿ ಅಸಹ್ಯದ ಅನುಭವ ಮರುಕಳಿಸುತ್ತದೆ. ತಾನು ಎದುರಿಸುತ್ತಿರುವ ಸಂದಿಗ್ಧದ ಸ್ಪಷ್ಟ ರೂಪವಾಗಿ ಅಗ್ರಹಾರ ನಿಂತಿದೆ-ನನ್ನ ಇಡೀ ಬಾಳಿಗೊಂದು ವ್ಯಾಖ್ಯಾನ ಬರೆದು, ಅಲ್ಲಿಂದ ಓಡಿಬಿಡಬೇಕೆಂಬುದೊಂದೇ ಈಗ ನನಗೆ ಸ್ಪಷ್ಟ. ಪ್ರಾಯಶಃ ಚಂದ್ರಿಯಿದ್ದಲ್ಲಿಗೆ ಹೋಗಿಬಿಡುವುದು. ಮಹಾಬಲನಂತಾಗಿಬಿಡುವುದು. ಹಾಗೆ-ಸ್ಪಷ್ಟವಾದೊಂದು ರೂಪ ಪಡೆದುಬಿಡುವುದು. ತ್ರಿಶಂಕು ಅವಸ್ಥೆಯಿಂದ ಪಾರಾಗಿಬಿಡುವುದು. ಯಾರ ಕಣ್ಣೆಗೂ ಬೀಳದಂತೆ, ಪತ್ತೆಯಾಗದಂತೆ, ನಾನೀಗ ನಡೆದುಬಿಡಬೇಕು.
ನಡೆಯುತ್ತಿದ್ದಂತೆ ಪ್ರಾಣೇಶಾಚಾರ್ಯರಿಗೆ ಕಾಡಿನಲ್ಲಿ ತನ್ನ ಬೆನ್ನಿನ ಹಿಂದೆ ಯಾರೋ ಬರುತ್ತಿದ್ದಾರೆ ಎಂದು ಅನ್ನಿಸತೊಡಗಿತು. ಯಾವನೋ ಒಬ್ಬನ ಎರಡು ಕಣ್ಣುಗಳು ನೆಟ್ಟಗೆ ನನ್ನನ್ನು ನೋಡುತ್ತಿವೆ ಎನ್ನಿಸಿತು. ಬೆನ್ನನ್ನು ನೇರ ಮಾಡಿ ನಡೆಯತೊಡಗಿದರು. ಹಿಂದಕ್ಕೆ ತಿರುಗಿ ನೋಡಬೇಕೆನ್ನಿಸಿತು. ದಿಗಿಲಾಯಿತು. ಸಪ್ಪಳವಾದಂತಾಯಿತು, ತಿರುಗಿದರು. ದೂರದಲ್ಲೊಬ್ಬ ಪ್ರಾಯಕ್ಕೆ ಬಂದ ತರುಣ ವೇಗವೇಗವಾಗಿ ಹೆಜ್ಜೆಹಾಕಿ ಬರುವುದು ಕಾಣಿಸಿತು. ಪ್ರಾಣೇಶಾಚಾರ್ಯರೂ ವೇಗವಾಗಿ ಹೆಜ್ಜೆಹಾಕಿದರು. ತಿರುತಿರುಗಿ ನೋಡಿದರೆ ಅವನೂ ವೇಗವಾಗಿ ಹೆಜ್ಜೆಹಾಕುತ್ತಿದ್ದಾನೆ. ಅದೇ ವೇಗದಲ್ಲಿ ನಡೆಯತೊಡಗಿದರು. ಆದರೆ ಆತ ಜಗ್ಗಿದಂತೆ ಕಾಣಲಿಲ್ಲ. ತರುಣನಾದ್ದರಿಂದ ಇನ್ನಷ್ಟು ವೇಗವಾಗಿ ನಡೆದು ಹತ್ತಿರವಾಗತೊಡಗಿದ. ಎಲ್ಲಾದರೂ ಅವ ತನ್ನ ಪರಿಚಯವಿದ್ದವನಾಗಿ ಬಿಟ್ಟಿದ್ದರೆ ಎಂದು ದಿಗಿಲಾಯಿತು. ಎಷ್ಟು ವೇಗವಾಗಿ ನಡೆದರೂ ಅವ ಇನ್ನಷ್ಟು ಹತ್ತಿರವಾದ. ಪ್ರಾಣೇಶಾಚಾರ್ಯರಿಗೆ ಕಾಲು ನೋವಾಗಿ ನಡಿಗೆಯ ವೇಗ ಕಡಿಮೆಯಾಯಿತು. ಆತ ಜೊತೆಯಾಗಿಬಿಟ್ಟ. ಏದುಸಿರು ಬಿಡುತ್ತ ಮೆಲ್ಲಗೆ ತನ್ನ ಜೊತೆಗೇ ನಡೆಯಲು ತೊಡಗಿದ. ಯಾರಿರಬಹುದೋ ಎಂದು ನೋಡಿದರು. ಪರಿಚಯ ಹತ್ತದು-
“ನಾನು ಮಾಲೇರರ ಪುಟ್ಟ. ಮೇಳಿಗೆಯ ರಥೋತ್ಸವಕ್ಕೆ ಹೊರಟವ. ನಿಮ್ಮ ಕಡೆ ಎತ್ತಲೊ?”
ಎಂದು ಅವನಾಗಿಯೇ ಪ್ರಾರಂಭಿಸಿದ. ಪ್ರಾಣೇಶಾಚಾರ್ಯರಿಗೆ ಮಾತಾಡಲು ಇಷ್ಟವಾಗಲಿಲ್ಲ. ಏನು ಹೇಳಬೇಕೆಂದು ಹೊಳೆಯದೆ ಅವನ ಮುಖವನ್ನೇ ನೋಡಿದರು. ಕಪ್ಪಗೆ ಬಾಡಿದ ಅವನ ಮುಖದಲ್ಲಿ ಬೆವರಿನ ಹನಿಗಳು ನಿಂತಿದ್ದುವು. ನೀಳವಾದ ದೀರ್ಘವಾದ ಮೂಗಿನಿಂದಾಗಿ ಅವನ ಮುಖಕ್ಕೊಂದು ಹಠವಾದಿಯ ಸ್ವರೂಪ ಬಂದಿತ್ತು. ಕಣ್ಣುಗಳು ಸಣ್ಣಗೆ ಹತ್ತಿರ ಹತ್ತಿರವಿದ್ದುದರಿಂದ ಅವನ ದೃಷ್ಟಿ ಚೂಪಾಗಿ ಅವನ ಕಣ್ಣಿಗೆ ಬಿದ್ದವರು ಕಸಿವಿಸಿಪಡುವಂತಿತ್ತು. ಕ್ರಾಪು ಬಿಟ್ಟು, ಅಂಗಿ ಪಂಚೆಯುಟ್ಟು ಪೇಟೆಯ ಯುವಕನಂತೆ ಕಾಣುತ್ತಿದ್ದ.
“ನಿಮ್ಮನ್ನು ಬೆನ್ನ ಹಿಂದಿಂದ ನೋಡಿ, ನಿಮ್ಮ ನಡಿಗೆಯ ಕ್ರಮದಿಂದ ಯಾರೋ ಪರಿಚಯದವರೆಂದುಕೊಂಡೆ. ಈಗ ನಿಮ್ಮ ಮುಖ ನೋಡಿದರೆ ಎಲ್ಲೋ ಕಂಡಂತೆ ಅನ್ನಿಸುತ್ತೆ…”
ಸಾಮಾನ್ಯವಾಗಿ ಹಳ್ಳಿಯವರೆಲ್ಲ ಮಾತಿನ ಪ್ರಾರಂಭದಲ್ಲಿ ಹೇಳುವ ಪ್ರಕಾರ ಪುಟ್ಟ ಅಂದಿದ್ದರೂ ಪ್ರಾಣೇಶಾಚಾರ್ಯರಿಗೆ ಕಸಿವಿಸಿಯಾಯಿತು.
“ಇಲ್ಲ, ನಾನು ಘಟ್ಟದ ಕೆಳಗಿನವ. ಸಂಭಾವನೆಗೆಂದು ಹೊರಟವ” ಎಂದು ಪ್ರಾಣೇಶಾಚಾರ್ಯರು ಮಾತನ್ನು ಮುಗಿಸಲು ಪ್ರಯತ್ನಿಸಿದರು.
“ಓಹೋ-ನನಗೂ ಘಟ್ಟದ ಕೆಳಗಿನ ಪರಿಚಯವಿದೆ. ಅಲ್ಲೇ ನನ್ನ ಮಾವನ ಮನೆ. ಆಗಾಗ್ಗೆ ಹೋಗಿಬರೋದು ಉಂಟು. ಘಟ್ಟದ ಕೆಳಗೆ ಎಲ್ಲಿಯಾಯಿತು ನಿಮ್ಮ ಊರು? ”
“ಕುಂದಾಪುರ”.
“ಓಹೋ ಕುಂದಾಪುರವೆ? ಅಲ್ಲಿ ನಿಮಗೆ ಶೀನಪ್ಪಯ್ಯನ ಪರಿಚಯವೆ?”
“ಇಲ್ಲ” ಎಂದು ಪ್ರಾಣೇಶಾಚಾರ್ಯರು ಸರಸರನೆ ನಡೆಯತೊಡಗಿದರು. ಆದರೆ ಮಾತನ್ನು ಬಯಸಿ ಬಂದ ಪುಟ್ಟ ಅಷ್ಟಿಷ್ಟಕ್ಕೆ ಸಮಾಧಾನವಾಗುವಂತೆ ಕಾಣಲಿಲ್ಲ.
“ಆ ಶೀನಪ್ಪಯ್ಯ ನಮಗೆ ತುಂಬ ಬೇಕಾದವರು. ನಮ್ಮ ಮಾವಂದಿರಿಗೂ ಅವರಿಗೂ ತುಂಬ ಕೇವಲ. ನಮ್ಮ ಇವಳ ತಂಗಿಯನ್ನೇ ಅವಳ ಎರಡನೆಯ ಮಗನಿಗೆ ತಂದುಕೊಂಡಿದ್ದಾರೆ…”
’ಹೂ ಹೂ’ ಎನ್ನುತ್ತ ಪ್ರಾಣೇಶಾಚಾರ್ಯರು ನಡೆದರು. ಬಿಟ್ಟುಕೊಟ್ಟು ನಡೆದರೂ ಬಿಡುವಂಥದಲ್ಲ ಇದು. ಅವನು ಅವಸರದಲ್ಲಿದ್ದರೆ ಮುಂದೆ ಹೋಗಿಬಿಡಲಿ ಎಂದು ಆಯಾಸವಾದವರಂತೆ ಮರ ಒಂದರ ಬುಡದಲ್ಲಿ ಕೂತರು. ಪುಟ್ಟನಿಗೆ ಅದರಿಂದ ಸಂತೋಷವಾದ ಹಾಗೆ ಕಂಡಿತು. ಅವನೂ ಉಶ್ಶಪ್ಪ ಎಂದು ಕೂತು ಅಂಗಿಯ ಜೇಬಿನಿಂದ ಬೀಡಿ ಬೆಂಕಿಪೊಟ್ಟಣ ತೆರೆದು ಬೀಡಿಯನ್ನು ಒಡ್ಡಿದ. ಪ್ರಾಣೇಶಾಚಾರ್ಯರು ಬೇಡವೆಂದರು. ಅವನು ಬೀಡಿ ಹತ್ತಿಸಿದ. ಪ್ರಾಣೇಶಾಚಾರ್ಯರು ಇಷ್ಟಕ್ಕೇ ತನ್ನ ಆಯಾಸ ಪರಿಹಾರವಾದಂತೆ ನಟಿಸುತ್ತ ಎದ್ದುನಿಂತು ಹೊರಟರು. ಪುಟ್ಟನೂ ಎದ್ದುನಿಂತು ಹೊರಟುಬಿಟ್ಟ. “ದಾರಿಯಲ್ಲೊಬ್ಬರು ಮಾತಿಗೆ ಸಿಕ್ಕರೆ ದಾರಿ ಕಳೆದದ್ದು ಗೊತ್ತಾಗುವುದಿಲ್ಲ ಅಲ್ಲವೇ? ನನಗಂತೂ ಮಾತಿಗೊಂದು ಜನ ಬೇಕಪ್ಪ” ಎಂದು ಪುಟ್ಟ ಹಸನ್ಮುಖಿಯಾಗಿ ಪ್ರಾಣೇಶಾಚಾರ್ಯರನ್ನು ಕುತೂಹಲದಿಂದ ನೋಡುತ್ತ ನಡೆದ.
* * *
ಇತ್ತಲಾಗಿ ಪ್ರಾಣೇಶಾಚಾರ್ಯರು ತಮ್ಮ ಹೆಂಡತಿಯ ಶವಸಂಸ್ಕಾರ ಮಾಡಿ ಕಾಲುಕೊಂಡಲ್ಲಿಗೆ ನಡೆದುಬಿಡುವುದೆಂದು ಹೊರಟುಬಿಟ್ಟ ಒಂದೆರಡು ಗಂಟೆಗಳೊಳಗೆ ಪಾರಿಜಾತಪುರದವರಿಗೆ ಎಲ್ಲ ವಿಷಯ ತಿಳಿದುಬಿಟ್ಟಿತು-ನಾರಣಪ್ಪನ ಶವವನ್ನು ಬ್ಯಾರಿಯೊಬ್ಬ ಸುಟ್ಟುಬಿಟ್ಟ ಎಂಬ ಸಂಗತಿಯೊಂದು ಹೊರತಾಗಿ. ಕುಡಿತದ ಅಮಲಿನಲ್ಲಿ ಮುಹೂರ್ತ ಮಾತ್ರವಾದರೂ ಧೀರರಾಗಿ ನಾರಣಪ್ಪನ ಶವಸಂಸ್ಕಾರದ ಮನಸ್ಸುಮಾಡಿ, ನಂತರ ಸತ್ತೆವೋ ಕೆಟ್ಟೆವೋ ಎಂದು ಓಡಿಬಿಟ್ಟಿದ್ದ ಪಾರಿಜಾತಪುರದ ತರುಣರು ಮಾತ್ರ ತಾವು ಕಂಡ ಸತ್ಯವನ್ನು ಯಾರಿಗೂ ಹೇಳಲಾರದೆ ಬಾಯಿ ಮುಚ್ಚಿಕೊಂಡುಬಿಟ್ಟಿದ್ದರು. ಮುಖ್ಯವಾಗಿ ಸಾಹುಕಾರ ಮಂಜಯ್ಯನವರಿಗೆ ಗಾಬರಿಯುಂಟು ಮಾಡಿದ ವಿಷಯವೆಂದರೆ ಒಂದರ ಹಿಂದೆ ಒಂದರಂತೆ ಬಂದ ಸಾವು. ನಾರಣಪ್ಪ, ಮತ್ತೆ ದಾಸಾಚಾರ್ಯ, ಮತ್ತೆ ಪ್ರಾಣೇಶಾಚಾರ್ಯರ ಹೆಂಡತಿ-ಅಂದರೆ ಒಂದೇ ಅರ್ಥ : ಇದು ಪಿಡುಗು. ಶಿವಮೊಗ್ಗೆಯ ಮಂಡಿಪೇಟೆ, ಕೋರ್ಟು, ಕಛೇರಿಗಳ ವ್ಯವಹಾರದಲ್ಲಿ ಪಳಗಿದ ಅವರು ತಮ್ಮ ಅಗ್ರಹಾರದ ಇತರ ಬ್ರಾಹ್ಮಣರ ವಿಚಾರಕ್ಕೆ ನಕ್ಕುಬಿಟ್ಟರು. ಎಲ್ಲರ ಮತ, ನಾರಣಪ್ಪನ ಅಪಮೃತ್ಯುವಿನಿಂದ ಮತ್ತು ಅವನ ಶವಸಂಸ್ಕಾರ ಮಾಡದೇ ಹೋದ ಕರ್ತವ್ಯಭಂಗದಿಂದಾಗಿ ಹೀಗಾಗುತ್ತಿದೆ ಅಂತ. ಮಂಜಯ್ಯನಿಗೆ, ’ಅಯ್ಯೊ ಮೊನ್ನೆ ತಾನೇ ನಮ್ಮಲ್ಲಿಂದ ಉಪ್ಪಿಟ್ಟು ತಿಂದು ಹೋದ ದಾಸಾಚಾರ್ಯ ಸತ್ತುಬಿಟ್ಟನಲ್ಲ’ ಎಂದು ವ್ಯಥೆಯಾದರೂ- ಹಾಗೆ ಗಟ್ಟಿಯಾಗಿ ಅಂದರೂ-ಒಳಗೊಳಗೆ ಆ ಬ್ರಾಹ್ಮಣನನ್ನು ಒಳಗಡೆಗೆ ಬಿಟ್ಟುಕೊಂಡುಬಿಟ್ಟೆನಲ್ಲ ಎಂಬ ಭಯ. ಅವತ್ತು ದೂರ್ವಾಸಪುರದ ಬ್ರಾಹ್ಮಣರೆಲ್ಲ ಬಂದು ಶಿವಮೊಗ್ಗೆಯಿಂದ ಬಂದ ನಾರಣಪ್ಪ ಗೆಡ್ಡೆಯೆದ್ದು ಜ್ವರ ಬಂದು ಸತ್ತ ಎಂದು ಹೇಳಿದಾಗಲೆ ಅವರಿಗೆ ಅನುಮಾನವಾಗಿತ್ತು. ಆದರೆ ಬಾಯಾರ ಆ ಭಯಂಕರ ರೋಗದ ಹೆಸರನ್ನು ಹೇಳಲೂ ಹೆದರಿಕೆಯಾಗಿತ್ತು. ನನಗೇಕೆ ಅಧಿಕಪ್ರಸಂಗ ಎನ್ನಿಸಿತ್ತು. ಮತ್ತೀಗ ಇಲಿಗಳು ಬಿದ್ದು ಸಾಯುತ್ತಿವೆ, ಅಗ್ರಹಾರ ಬಿಟ್ಟು ಓಡಲಿಕ್ಕೆ ಹತ್ತಿದ್ದಾವೆ, ರಣಹದ್ದುಗಳು, ಅವುಗಳಿಗಾಗಿ ಬಂದಿದ್ದಾವೆಂಬ ಸುದ್ದಿ ಕೇಳಿದಮೇಲಂತೂ ಅನುಮಾನ ಸಂಪೂರ್ಣ ಬಿಟ್ಟುಹೋಯಿತು. ರೂಪಾಯಿಗೆ ಹದಿನಾರಾಣೆಯಷ್ಟು ಖಚಿತ ತನ್ನ ಊಹೆ. ಅಲ್ಲದೆ ನೆನ್ನೆ ಬಂದ ’ತಾಯಿನಾಡು’ ಪತ್ರಿಕೆ-ವಾರದ ಹಿಂದಿನದ್ದಾದರೂ-ಏನಂತೆ-ಮೂಲೆಯೊಂದರಲ್ಲಿ ಸುದ್ದಿಯನ್ನು ಅಚ್ಚುಮಾಡಿತ್ತು. “ಶಿವಮೊಗ್ಗೆಯಲ್ಲಿ ಪ್ಲೇU” ಎಂದು ಸುದ್ದಿ. ನಾರಣಪ್ಪ ಪ್ಲೇಗನ್ನು ತಂದ. ಅದು ಕಾಳ್ಗಿಚ್ಚಿನಂತೆ ಹರಡುವ ಪಿಡುಗು. ಇಷ್ಟು ದಿನ ಸುಮ್ಮನಿದ್ದದ್ದು, ಯಾವುದೋ ಕುರುಡುಧರ್ಮಕ್ಕೆ ಗಂಟು ಬಿದ್ದು ಸತ್ತವನ ಶವಸಂಸ್ಕಾರ ಮಾಡದೇ ಹೋದದ್ದು-ಸ್ವತಃ ಕಲ್ಲುಚಪ್ಪಡಿಯನ್ನು ತಲೆಯ ಮೇಲೆ ಎಳೆದುಕೊಂಡು ಬಿಟ್ಟಂತಾಯಿತು. ಮುಟ್ಠಾಳರು ನಾವು. ನಾನೂ ಪೆದ್ದನಾಗಿಬಿಟ್ಟೆನಲ್ಲ! “ಕೂಡಲೇ ಗಾಡಿಕಟ್ಟಿರಿ” ಎಂದು ಚಾವಡಿಯಲ್ಲಿ ನಿಂತವರು ಕೂಗಿದರು. ಸ್ವಲ್ಪವೂ ಕಾಲಹರಣ ಮಾಡುವಂತಿಲ್ಲ. ಒಂದಿಲ್ಲೊಂದು ರೀತಿಯಲ್ಲಿ ಪ್ಲೇಗು ಹೊಳೆ ದಾಟಿ ತಮ್ಮ ಅಗ್ರಹಾರಕ್ಕೂ ಬಂದೀತು. ಪ್ಲೇಗಿನಿಂದ ಸತ್ತ ಒಂದು ಇಲಿಯನ್ನ ಹದ್ದೋ ಕಾಗೆಯೋ ಕಚ್ಚಿತಂದು ತಮ್ಮ ಅಗ್ರಹಾರದಲ್ಲಿ ಎಸೆದುಬಿಟ್ಟರೂ ಸಾಕು-ಎಲ್ಲ ಮುಗಿದಂತೆ. ಎಲ್ಲರಿಗೂ ಕೇಳುವಂತೆ ಗಟ್ಟಿಯಾಗಿ ಮನೆಯ ಹೊರಗೆ ನಿಂತು ಕೂಗಿ ಹೇಳಿದರು : ನಾನು ಪೇಟೆಯಿಂದ ಹಿಂದಕ್ಕೆ ಬರುವತನಕ ಯಾರೂ ದೂರ್ವಾಸಪುರದ ಹತ್ತಿರ ಸುಳಿಯಕೂಡದು ಎಂದು. ಆದರೆ ಅಗ್ರಹಾರದ ನಾಯಕ ತಾವಾದ್ದರಿಂದ ಯಾರಿಗೂ ಇದು ಪ್ಲೇಗಿರಬಹುದೆಂಬ ಭೀತಿಯನ್ನು ಮುಟ್ಟಿಸುವ ಮನಸ್ಸಾಗಲಿಲ್ಲ. ಗಾಡಿ ಕಟ್ಟಿಯಾದ್ದೇ ತಡ ಕಮಾನುಗಾಡಿಯೊಳಗೆ ದಿಂಬಿಗೊರಗಿ ಕೂತು, ಗಾಡಿ ಹೊಡೆಯುವವನಿಗೆ ತೀರ್ಥಹಳ್ಳಿಗೆ ಓಡಿಸು ಎಂದರು. ಅವರ ವ್ಯವಹಾರ ಚತುರ ಮನಸ್ಸಿನಲ್ಲಿ ಸ್ಪಷ್ಟವಾದ ಸಂಕಲ್ಪ ಮೂಡಿತ್ತು : ಒಂದು-ಮುನಿಸಿಪಾಲಿಟಿಗೆ ತಿಳಿಸಿ ಹೆಣ ಎತ್ತಿಸಬೇಕು. ಎರಡು-ಡಾಕ್ಟರನ್ನು ಕರೆಸಿ ಇನಾಕ್ಯುಲೇಶ ಮಾಡಿಸಬೇಕು. ಮೂರು-ಪಂಪು ತರಿಸಿ ವಿಷವಾಯುವನ್ನು ದೋರುಗಳಿಗೆಲ್ಲ ತುಂಬಿಸಿ ಇಲಿಯ ಬಿಲಗಳನ್ನು ಮುಚ್ಚಿಸಬೇಕು. ನಾಲ್ಕು-ಅವಶ್ಯವಾದರೆ ಅಗ್ರಹಾರವನ್ನೆ ಎಲ್ಲರೂ ಬಿಟ್ಟು ಹೋಗಬೇಕು-ಸ್ವಲ್ಪ ಕಾಲದವರೆಗಾದರೂ. ದಾರಿಯುದ್ದಕ್ಕೂ ’ಮುಟ್ಠಾಳರು ಮುಟ್ಠಾಳರು’ ಎಂದು ಜಪಿಸುತ್ತ ಎತ್ತುಗಳ ಬಾಲ ತಿರುವಿ ಓಡಿಸಲು ಗಾಡಿ ಹೊಡೆಯುವವನಿಗೆ ಹುರಿದುಂಬಿಸಿದರು. ಗಾಡಿ ತೀರ್ಥಹಳ್ಳಿಯ ಮಾರ್ಗ ಹಿಡಿದು ಓಡಿತು.
*****
ಮುಂದುವರೆಯುವುದು

ಕಾದಂಬರಿಯನ್ನು ಕೀಲಿಕರಿಸಿದವರು ಎಮ್ ಆರ್ ರಕ್ಷಿತ್, ಸೀತಾಶೇಖರ್, ಸಿ ಶ್ರೀನಿವಾಸ್, ಸಹಾಯ: ನಂದಿನಿಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.