ತೇರು – ೪

ಸತ್ತೆವ್ವ ಚಹಾ ತಂದ ಕೊಟ್ಟು -‘ಪಾಡದೀ ಯಜ್ಜಾಣಿ…’ ಅಂತ ಕೇಳಿದ್ದಕ್ಕೆ ಸ್ವಾಂವಜ್ಜ ‘ಹೂಂ ಪಾಡದಣಿನ ಯವ್ವಾ…ನೀ ಪಾಡದೀ…’ ಅಂತಂದು ‘ಹೂಂ… ಮತ್ತಣಿ ನಿಂದೇನ ಸುದ್ದಿ…ನಿನ್ನ ಈ ಅಜ್ಜಗ ಮರಿಮಗನ ಮಕಾ ಯಾವಾಗ ತೋರಸಾಕಿ?’ ಅಂತ ಕೇಳಿದ…ಸತ್ತೆವ್ವ ನಾಚಿಗೊಂಡು ಒಳಗ ಹೋದಳು…ಹಂಗ ನಾಚಿಗೊಂಡು ಒಳಗ ಹೋಗತಿದ್ದ ತನ್ನ ಸೊಸಿನ್ನ ನೋಡಿಕೋತ ಬಸವ್ವ ಉಸ್…ಂತ ಉಸರು ಬಿಟ್ಟು ‘…ಇಕಿ ನಡ್ಯಾಕ ಬಂದು ಒಂದ ವರಸ ಆಗಾಕ ಬಂತ ಮಾವಾಣಿ…ಬಸರಾ ಬಯಕೀದು ಇನೂ ಯಾವ ಸುದ್ದೆನೂ ಇಲ್ಲ …ನನಗ ಇದಣಿ ಚಿಂತ್ಯಾಗಿ ಕುಂತೈತಿ ನೋಡು… ಖರೇವಂದರೂ ಹೇಳತನ ಮಾವಾಣಿ…ನಂಗ ಕೂಳ ಕಂಹೀ ಆಕ್ಕೊಂಡ ಕುಂತೈತಿ…’ ಅಂತ ಸ್ವಾಂವಜ್ಜನ ಮುಂದ ತನ್ನ ದುಃಖಾ ತೋಡಿಕೊಂಡಳು…ಸ್ವಾಂವಜ್ಜ ಕಪ್ಪಿನಿಂದ ಬಸಿಗೆ ಚಹಾ ಸುರಿವಿಕೊಂಡು -ಉಫ್ ಉಫ್ ಅಂತ ಊದಿ ಆರಿಸಿ – ಚಪ್ಪರಿಸಿಕೋತ ಕುಡೀತಿದ್ದಾಂವ ಬಸವ್ವನ ಮಾತು ಕೇಳಿ ‘ಛೀ ಹುಚ್ಚೀ…! ಅಲ್ಲ ತಗೀ ನಿಂದ ಇದಾ… ನಡ್ಯಾಕ ಬಂದು ಇನೂ ಒಂದ ವರಸ ಸೈತೇ ಆಗಿಲ್ಲ…ಚಿಂತೀ ಹಚಿಗೊಂಡ ಕುಂಡರೂ ಹಂತಾದ್ದು ಏನಾಗೇತಿ ?…ಮುಂದಿನ ತೇರಿನಷ್ಟೊತ್ತಿಗೆ ಮಮ್ಮಗಾ ಬಂದಿರತಾನ ತಗೋ…’ ಅಂತ ಸಮಾಧಾನ ಮಾಡಿ ಚಹಾದ ಕಡಿಯ ಗುಟಕನ್ನ ಕುಡದು ಕಪ್ಪೂ -ಬಸೀ ಕೆಳಗ ಇಟ್ಟ…ಬಸವ್ವ ಅಗದೀ ಸಂತೋಷದಿಂದ ‘ನಿನ್ನ ಬಾಯಿ ಹರಕೀಲೆ ಅಷ್ಟ ಆಗಲ್ಯೋ ಮಾವಾಣಿ…ಇಠ್ಠಲ ಸ್ವಾಮಿಗೆ ಕಣಬಟ್ಟ ಮಾಡಿಸಿ ಕೊಡತನು’ ಅಂತಂದಳು. ಸ್ವಾಂವಜ್ಜ ‘ಯಾ… ಇದ ಬಲೇ ಬೇಶಾತು ನೋಡವಾ!…ಹಾಂ!ಬಾಯಿ ಹರಕಿ ನಂದಾ…ಲಾಭ ನೋಡಿದರ ದೇವರಿಗಿ… ಅಂವಗ ದಾಗೀನಾ…!’ ಅಂತಂದು ಹಾಹ್ಹಾ… ಅಂತ ನಕ್ಕ. ಬಸವ್ವನೂ ನಕ್ಕೋತ ‘ನಿನ್ನ ಬಾಯಿಗೆ ಇದ್ದಣಿ ಐತೆಲಾ…ಸಕ್ಕರೀ!’ ಅಂತ ಹೇಳಿಕೋತ ಹೊಸ್ತಲಿಗೆ ರಂಗೋಲೀ ಬರೆಯುವುದನ್ನ ಮುಂದುವರಿಸಿದಳು…
ಅಷ್ಟೊತ್ತಿಗೆ ಸರಿಯಾಗಿ ವಿಠ್ಠಲ ದೇವರ ಪೂಜಾರಿ-ಛತ್ರೇರ ಮಾರೋತಿ ‘ಯಜ್ಜಾಣಿ…ನೀ ಇಲ್ಲಿ ಅದೀ…! ನಿಮ್ಮ ಮನಿಗೆ ಹೋಗಿನ್ನಿ…. ನೀ ಇಕಾಡೆನಣಿ ಹೋಗೀ ಅಂತ ಹೇಳಿದರು…ಅದಕ್ಕಣಿ ಇಕಾಡಿ ಬಂದನಿ…’ ಅಂತ ವಸ್ ವಸ್ ಅಂತ ತೇಕಿಕೋತ ಓಡಿ ಬಂದು ಹೇಳಿದ…ಅವನ ಮೋತೀಮ್ಯಾಲ ಗಾಬರಿ ಸುರೀತಿತ್ತು…ಸ್ವಾಂವಜ್ಜ – ಯಾಕಲೇ ಹಂಗ್ಯಾಕ ಓಡಿ ಬಂದಿ…ನಾನು ಗುಡೀ ಕಡೇನಣಿ ಹೊಂಟಿನ್ನಿ…ಯಾಕಣಿ ಏನಾತು…ಅಂತಿರಬೇಕಾದರ ಮಾರೋತಿ ‘ಯಜ್ಜಾ ಘಾತ ಆಗೇತಿ… ! ’ ಅಂತ ಅಲ್ಲೇ ಕಟ್ಟೀ ಮುಂದ -ರಸ್ತೇದಾಗಣಿ ಕುಂತು ಎದಿ ಎದೀ ಬಡಕೊಂಡ…
…ಸ್ವಾಂವಜ್ಜಗ ಸಂಶೇನ ಉಳೀಲಿಲ್ಲ…! ಅಂವ ಪೂರಾ ಗಾಬರ್‍ಯಾಗಿ- ‘ಯಾಕಲೇ…ದ್ಯಾವ್ಯಾನ ಖೂನೀ ಆಗೇತೀ…?’ ಅಂತ ಕೇಳಿದ.ಮಾರೋತಿ …ಅಲ್ಲ ಅಂತ ಅನ್ನುವಹಂಗ ಗೋಣು ಹಾಕಿ ಮತ್ತೆ -‘ಘಾತ ಆತೋ ಯಜ್ಜಾಣಿ…’ ಅಂತ ತನ್ನ ಹಳೇ ಮಂತ್ರಾನಣಿ ಹೇಳಿದ…ತಿರಗಾ ಮುರಗೀ ಘಾತ ಆತು -ಘಾತ ಆತು… ಅಂತನ್ನುವ ಮಾರೋತಿಯ ಮಾತು ಕೇಳಿ ಸ್ವಾಂವಜ್ಜನ ತೆಲೀ ಗಿಂವ್ ಅನ್ನಾಕತ್ತಿತು…ಸಿಟ್ಟೂ ಬಂತು… ಅಂವ ಬಗ್ಗಿ ಅವನ ರಟ್ಟೀ ಹಿಡದು ಮ್ಯಾಲಕ ಎಬ್ಬಿಸಿ ನಿಂದರಿಸಿಗೋತಣಿ – ‘ಏನಾತಲೇ ಸೂಳೀಮಗನಣಿ…ಬರೇ ಘಾತಾತು…ಘಾತಾತು ಅಂದರ ಏನ ತಿಳಕೋಬೇಕು? ಏನಾತ ಹೇಳು ’ ಅಂತ ದಬಾಯಿಸಿದ.
‘…ಸ್ವಾಮೀ ಗುಡೀ ಕಳವ ಆಗೇತೋ ಯಜ್ಜಾಣಿ…ಘಾತ ಆಗೇತಿ…’ ಅಂತನ್ನುವ ಮಾರುತಿಯ ಮಾತು ಕೇಳತಿದ್ದಂಗೇ ‘ಹ್ಹಾಂಣಿ…!’ ಅಂತನ್ನುವ ಉದ್ಗಾರ ಹೊಂಡಿಸಿದ ಸ್ವಾಂವಜ್ಜ ಹಂಗಣಿ ನಿಂತ ನಿಂತಲ್ಲೇ-ಅಲ್ಲಿ ರಸ್ತಾದೊಳಗೇ ಕುಸದು ಕುಂತ… ಬಸವ್ವ ಗಾಬರ್‍ಯಾಗಿ ‘ಏ ಮಾವಾಣಿ…’ ಅಂತ ಅಡರಾಯಿಸಿ ಅವನ ಕಡೇ ಓಡಿ ಬರುವಷ್ಟರೊಳಗೆ ಅಂವ ಸುಧಾರಿಸಿಕೊಂಡು -ಧಡಕ್ಕಂತ ಎದ್ದು ನಿಂತ…ಹಂಗ ಧಡಕ್ಕಂತ ಎದ್ದ ವನೇ -‘ಬಸವ್ವಾಣಿ…ನಿನ್ನ ಮಗ್ಗ ಸದ್ದೇಕ್ಕ ಗೋಕಾಂವಿಗೆ ಹೋಗೂದು ಬ್ಯಾಡಂತ ಹೇಳವಾ…ಹಿರ್‍ಯಾರಿಗೆ ಎಲ್ಲಾ ಸುದ್ದೀ ಮುಟ್ಟಿಸಿ ಅವರನೆಲ್ಲಾ ತಾಬಡ ತೋಬಡ ಗುಡೀ ಕಡೆ ಹೊಂಡಿಸಿಕೊಂಡು ಬರಾಕ ಹೇಳು…’ ಅಂತ ನುಡದವನೇ ‘ಮಾರ್‍ಯಾ…ನಡೀ…’ ಅಂತ ಗುಡಿಯ ಕಡೆ ಧಡಧಡಾ ಅಂತ ನಡದ…ಮಾರೋತಿ ದುಡು ದುಡೂ ಅಂತ ಅವನ ಹಿಂದಿಂದಣಿ ಹಿಂದಿಂದಣಿ ಓಡಿದ…
…ಇವರು ಹಿಂಗ ಭಡಾ ಭಡಾ ಹೋಗತಿರಬೇಕಾದರ ಬಸವ್ವನ ಮಗಾ –
ಬಾಳ್ಯಾ ಇವರ ಹಿಂದಿಂದ ವಸ್ ವಸ್ ಅಂತ ತೇಕಿಕೋತ ಓಡಿಬಂದು… ‘ಯಜ್ಜಾ…ಗರ್ಭದ ಗುಡಿಯೊಳಗ ಯಾರೂ ಹೋಗಬ್ಯಾಡ್ರಿ…ಪೋಲೀಸರು ತುಡಗರನ ಹಿಡಿಯೂ ನಾಯಿಗೋಳನ ತಗೊಂಡ ಬರತಾರು… ಅವು ತುಡಗರ ವಾಸನೀ ಹಿಡೀತಾವು…ಹೆಜ್ಜೀ ಗುರತಾ ಕೈಯ ಬೆಳ್ಳಿನ ಗುರತಾ ನೋಡತಾರು…ನೀವು ಬಾಗಲಾ-ಚಿಲಕಾ ಅದೂ ಏನೂ ಮುಟ್ಟಾಕ ಹೋಗಬ್ಯಾಡರಿ…ಹೊರಗಣಿ ಕುಂಡರ್ರಿ…ಒಳಗ ಯಾರನೂ ಬಿಡಬ್ಯಾಡ್ರಿ…’ ಅಂತ ತಾಕೀತು ಮಾಡಿದವನೇ ‘ ನಾನು ಲಗೂಟಣಿ ಹಿರ್‍ಯಾರನ ಎಲ್ಲಾ ಕರಕೊಂಡ ಬರತನು…’ ಅಂತ ಹೊಳ್ಳಿ ಓಡಿಹೋದ… ಇವರು ದುಡು ದುಡು ಅಂತ ಗುಡಿಗೆ ಬಂದರು…
ಗುಡಿಯ ಹೆಬ್ಬಾಗಲನ್ನ ದಾಟಬೇಕಾದರ ಸ್ವಾಂವಜ್ಜ ಮಾರೋತಿನ್ನ ಕೇಳಿದ – ‘ಮಾರ್‍ಯಾ…ನೀ ಗರ್ಭದ ಗುಡ್ಯಾಗ ಹೋಗಿದ್ದಿ ಏನ…?’
‘ಇಲ್ಲೊ ಯಜ್ಜಾಣಿ…ಹರ್‍ಯಾಗ ಐದ ಗಂಟೇಕ್ಕಣಿ ಎದ್ದು ಹೊಳೀಗೆ ಹೋಗಿ ಜಳಕಾ ಮುಗಿಸಿಗೊಂಡಕ್ಯಾರ ದಣಿರ ದಿನದಂಗ ಒಂದ ಕೊಡಾ ನೀರ ತುಂಬಿಕೊಂಡು ಗುಡಿಗೆ ಬಂದಿನಿ…ಗುಡೀಗೆ ಬಂದು ಅಲ್ಲಿ ನೋಡಿದರ ಗರ್ಭ ಗುಡೀ ಬಾಗಲ ಹಾರ ಹೊಡದಿತ್ತು … ಕೀಲೀ ಮುರದ್ದಾರು !…ನನಗ ಗಾಬರಿ ಆಗಿ…ಹಂಗಿಂದ ಹಂಗಣಿ ಅಲ್ಲೇ ಹೊರಗಣಿ ಕೊಡಾ ಇಟ್ಟು ನಿಮ್ಮ ಮನಿಗೆ ಓಡಿ ಬಂದನಿ…’ ಅಂತ ಮಾರುತಿ ವಿವರ ಒಪ್ಪಿಸಿದ…
‘ಮಾರ್‍ಯಾಣಿ…ನೆಪ್ಪ ಮಾಡಿಕೋ…ನಿನ್ನೆ ರಾತ್ರೀ ಕೀಲೀ ಹಾಕಿದ್ಯೋ ಇಲ್ಲೋ ನೋಡು…’
‘ಅಗದೀ ಪಕ್ಕಾ ನೆನಪ ಐತ್ಯೋ ಯಜ್ಜಾ…ನಿನ್ನೆ ರಾತ್ರೀ ದ್ಯಾವಪ್ಪ ಬರಾಂವ ಇದ್ದನಲಾಣಿ…ಅದಕ್ಕಣಿ ಬಾಳೊತ್ತನಕಾ ಗುಡ್ಯಾಗ ಕಾಕೊಂತ ಕುಂತಿದ್ದಿನಿ. ಬಾಳೊತ್ತಾದರೂ ಅಂವ ಬರದದ್ದಕ್ಕ ಸಿಂಪಿಗ್ಯಾರ ನಾರಾಯಣನ್ನ ನನ್ನ ಜೋಡೀ ಕುಂಡರಿಸಿಗೊಂಡಿನ್ನಿ …ಸರಹೊತ್ತು ಆದರೂ ದ್ಯಾವಪ್ಪ ಬರಲಿಲ್ಲ…ಆಗ-ಇನ್ನೇನ ಇಂದ ಅಂವ ಬರಾಣಿಲ್ಲ ತಗೋ…ನಡೀ ಮನಿಗೆ ಹೋಗೂಣೂ…ಅಂತ ನಾರಾಯಣ ಒಂದಣಿ ಸವನಣಿ ಗಂಟಣಿ ಬಿದ್ದ …ನನಗೂ ಅಂವ ಇನ್ನೇನ ಇವತ್ತ ಬರಾಕಿಲ್ಲ ಅಂತ ಅನಿಸಿತು…ಮತ್ತ ಹರ್‍ಯಾಗ ಲಗೂಟಣಿ ಬ್ಯಾರೇ ಏಳಬೇಕು ಅಂತ ಹೊಂಟು ಗರ್ಭದ ಗುಡೀ ಬಾಗಲಾ ಎಳದು ಕೀಲೀ ಹಾಕಿದಿನಿ…ಗುಡ್ಯಾನ ಲೈಟ ಆರಸೂಕಿಂತಾ ಮದಲ ದಣಿರ ದಿನದಗತೆ ಕೀಲೀ ಎಳದು ನೋಡಿದಿನಿ…ಎಷ್ಟ ಸರತೇ ಎಳದ ನೋಡತೀ ಬಿಡೋಪಾ ಅಂತ ನಾರಾಯಣ ನಗಿಚಾಟಿಕೀ ಸೈತ ಮಾಡಿದಾ !…ಬೇಕಾರ ನಾರಾಯಣನ್ನ ಕೇಳು…’ ಅಂತ ಮಾರುತಿ ನಿನ್ನಿನ ರಾತ್ರಿಯ ಪೂರಾ ಹಕೀಕತ್ತನ್ನ ಹೇಳಿದ.
ಸ್ವಾಂವಜ್ಜ ಮತ್ತೇನೂ ಮಾತಾಡಲಿಲ್ಲ…ಅಷ್ಟರಾಗಣಿ ಅವರು ಗುಡಿಯ ಮೆಟ್ಟಲಗಳ ಹತ್ತರ ಬಂದಿದ್ದರು…ರೂಢಿಯಂತೆ ಸ್ವಾಂವಜ್ಜ ಬಗ್ಗಿ ನೆಲಾ ಮುಟ್ಟಿ

ನಮಸ್ಕಾರ ಮಾಡಿ ಮೆಟ್ಟಲಗಳನ್ನ ಹತ್ತಿ ಗುಡಿಯೊಳಗೆ ಹೊಕ್ಕು…ಗರ್ಭಗುಡಿಯ ಬಾಗಲದಿಂದ ಒಂದು ಮಾರಿನಷ್ಟು ದೂರದಾಗೇ ನಿಂತು ಒಳಗಿನದನ್ನು ದಿಟ್ಟಿಸಿದ… ಗರ್ಭಗುಡಿಯಲ್ಲಿಯ ನೂರು ಕ್ಯಾಂಡಲ್ಲಿನ ಬಲ್ಬು ಝಗ ಝಗ ಅಂತ ಬೆಳಕು ಚಲ್ಲಿ – ಅಲ್ಲಿನ ಎಲ್ಲ ವಿವರಗಳನ್ನ ಢಾಳಾಗಿ ಕಾಣುವಹಂಗ ತೋರಿಸತಿತ್ತು…ಕೀಲೀ ಮುರದು ಬಾಗಲಾ ಹಾರು ಹೊಡದದ್ದನ್ನ ನೋಡಿ ಗಾಬರಿ ಆಗಿ ಓಡಿಬಂದಿದ್ದ ಮಾರೋತಿ ಈಗಲೇ ಗರ್ಭಗುಡಿಯೊಳಗಿನ ಪೂರಾ ಹಕೀಕತ್ತು ಕಂಡದ್ದು…ಅಂವ ಅಲ್ಲಿನ ದೃಶ್ಯವನ್ನ ನೋಡಿ ಪ್ರಲಾಪಿಸತೊಡಗಿದ :
…ಅಯ್ಯೋ ದೇವರಣಿ…ಸ್ವಾಮಿಯ ಕಿರೀಟ ಒಯ್ದಾರು… ರುಕುಮಾಯೀದೂ ಕಿರೀಟ ಇಲ್ಲ…ವಿಠ್ಠಲನ ಕಣಬಟ್ಟ ಕಿತಿಗೊಂಡಾರ ನೋಡೋ ಯಜ್ಜಾಣಿ…ಭುಜಕೀರ್ತೀ ಹೋಗ್ಯಾವು…ಸ್ವಾಮಿಯ ಎದಿಯ ಕವಚಾ ಉಡದಾರಾ ಹೋಗ್ಯಾವು…ಬಂಗಾರದ್ದೂ ! ತಾಯೀದೂ ಬಂಗಾರದ ಕಣಬಟ್ಟ ಕಿತಿಗೊಂಡಾರು… ಕಂಠೀ ಸರಾ ಇಲ್ಲ ಗುಳದಾಳಿ ಇಲ್ಲಾ !…ಬಂಗಾರದ ನಡಪಟ್ಟೆನೂ ಹೋಗೇತಿ… ಸ್ವಾಮೀದೂ ಮತ್ತ ತಾಯೀದೂ ಇಬ್ಬರದೂ ಬಂಗಾರದ ಪಾದಾ ಕಿತಿಗೊಂಡ ಹೋಗ್ಯಾರು…ಘಾತ ಆತೋ ಯಜ್ಜಾ…ದೇಸಾಯರು ಮಾಡಿಸಿದ ಕಿರೀಟ ಅದಾ!… ಅದರಾಗ ವಜ್ರ ಇದ್ದೂ ಅಂತ…! ಏನಿಲ್ಲಂದರೂ ನಾಕೈದ ಲಕ್ಷದ ದಾಗೀನಗೋಳು… ಎಲ್ಲಾ ಹೋದೂವಲ್ಲೋ ಯಜ್ಜಾಣಿ…
…ಮಾರೋತಿ ಹಿಂಗ ಪ್ರಲಾಪಿಸತಿದ್ದರೆ – ಸ್ವಾಂವಜ್ಜ ಒಳಗಿನ ದೃಶ್ಯವನ್ನ ನೋಡಿ ದಳ ದಳ ಅಂತ ಕಣ್ಣೀರು ಸುರಿಸಿಕೋತ ಪಿಟ್ಟಂತ ಒಂದಂದರೆ ಒಂದೂ ಮಾತಾಡದೇ…ಕಂಬ ನಿಂತಂಗೆ ನಿಂತಿದ್ದ …ವಿಠ್ಠಲ ಸ್ವಾಮಿ ಮತ್ತ ರುಕುಮಾಯಿ ಇಬ್ಬರೂ ಕಣ್ಣು ಕಳಕೊಂಡು ಕುರುಡರಾಗಿ ನಿಂತಾರೆ !…ಸ್ವಾಮಿಯ ಉಡದಾರ ಕಿತಿಗೊಂಡದ್ದರಿಂದ ಅಂವ ಉಟಗೊಂಡಿದ್ದ ರೇಶಿಮಿಯ ಮಡಿ ಉದುರಿ ಪೀಠದ ಕೆಳಗ ಬಿದ್ದಿತ್ತು…ರುಕುಮಾಯೀದೂ ನಡಪಟ್ಟಿ ಇಲ್ಲದ್ದಕ್ಕ ಆಕಿ ಉಟಗೊಂಡ ರೇಶಿಮಿಯ ಸೀರಿ ಸೈತ ಜಾರಿ ತೆಳಗ ಬಿದ್ದಿತ್ತು…ದೇವರಿಗೆ ಇಬ್ಬರಿಗೂ ಪಾದನಣಿ ಇಲ್ಲ…ವಿಠ್ಠಲ ಮತ್ತ ರುಕುಮಾಯಿ ಇಬ್ಬರೂ ಕಣ್ಣೂ -ಕಾಲೂ…ಕಿರೀಟಾ -ಭುಜಕೀರ್ತೀ… ಎದಿಯ ಕವಚಾ-ಹಾರ-ಸರಗೋಳನ ಎಲ್ಲಾ ಕಳಕೊಂಡು…ಈಗ ಅವರು ಬರೇ ಬತ್ತಲೇ ಆಗಿ…ಕರಿ ಕರೀ ಕಲ್ಲಿನ ಮೂರ್ತಿಗಳಾಗಿ ನಿಂತಾರೆ…!ಸ್ವಾಂವಜ್ಜ ‘ಅಯ್ಯೋ…ದೇವರಣಿ!’ ಅಂತ ಉಸರಿ -ಹಂಗೇ ನಿಂತ ನಿಂತಲ್ಲೇ ಕುಸದು ಕುಂತ…
ಮಾರೋತಿಗೆ ಗಾಬರಿ ಆತು…ವಯಸ್ಸಾದ ಮನಶಾ…ಎದೀ ಗಿದೀ ಒಡಕೊಂಡ ಗಿಡಕೊಂಡಾನು ಅಂತ ಅಂಜಿಕಿ ಬಂತು…ಅಂವ ದೇವರ ಅಭಿಷೇಕಕ್ಕಂತ ತಂದು ಅಲ್ಲೇ ಗರ್ಭಗುಡಿಯ ಬಾಗಲದಾಗ ಇಟ್ಟಿದ್ದ ಕೊಡದಾಗಿನ ನೀರನ್ನ ಚರಿಗ್ಯಾಗ ಬಾಗಿಸಿಕೊಂಡು,ಸ್ವಾಂವಜ್ಜನ ಮಗ್ಗಲಿಗೆ ಕುಂತು-‘…ಸಮಾಧಾನ ಮಾಡಿಕೋ ಯಜ್ಜಾಣಿ…ಸಮಾಧಾನ ಮಾಡಿಕೋ…ಪೋಲೀಸರು ನಾಯೀ ತಗೊಂಡ ಬರತಾರು… ತುಡುಗರು ಸಿಕ್ಕಣಿ ಸಿಗತಾರು…ಸ್ವಾಮಿಯ ದಾಗೀನು ಎಲ್ಲಾ ಸಿಕ್ಕಣಿ ಸಿಗತಾವು…’ ಅಂತ ಧೈರ್ಯೇ ಹೇಳಿ ‘…ಒಂದೀಟಣಿ ನೀರ ಕುಡೀ…’ ಅಂತ ಅವನ ಮುಂದ ಚರಿಗಿಯನ್ನ ಹಿಡಿದರೆ ಕಂಗೆಟ್ಟು ಕಣ್ಣೀರು ಸುರಿಸಿಕೋತ ಕೂತಿದ್ದ ಅಂವ ಏನೊಂದು ಮಾತಾಡದೇ ಗೋಣು ಹಾಕಿ …ಬ್ಯಾಡ ಎಂದು ಸೂಚಿಸಿದ…

*
*
*

ಮುಂದ ಹತ್ತ ಹದಿನೈದು ಮಿನಿಟಿನ್ಯಾಗ ಹಿರ್‍ಯಾರೂ -ಹುಡುಗೋರೂ ಗುಂಪು ಗುಂಪಾಗಿ ಬಂದು ಮುಕರಿದರು…ಒಂದೆರಡ ಹುಡಗೋರು ಬಂದವರನ್ನೆಲ್ಲಾ ಗರ್ಭಗುಡಿಯ ಬಾಗಲದಿಂದ ದೀಡ ಮಾರಿನಷ್ಟು ದೂರದಾಗೇ ನಿಂದರಿಸಿಕೊಂಡು – ಮುಂಬಯೀ ಪಟ್ಟಣಾ ನೋಡು –
ರಾಜಾನ ದರಬಾರ ನೋಡು …
ಅಂತ ಜಾತ್ರ್ಯಾಗ ಬರುವ ಡಬ್ಬೀ ಸಿನೇಮಾದ ಹಂಗ-
ಕಿರೀಟ ಹೋಗ್ಯಾವ ನೋಡು –
ಕಣಬಟ್ಟ ಕಿತ್ತಾರ ನೋಡು –
ಕವಚ ಹೋಗೇತಿ ನೋಡು…
ಉಡದಾರ ಹರದಾರ ನೋಡು –
ಪಾದಾ ಒಯ್ದಾರ ನೋಡೂ…
ಅಂತ ಒಂದೊಂದಾಗಿ ಹೇಳಿ ತೋರಸತಿದ್ದರೆ, ನೋಡತಿದ್ದ ಮಂದಿ -ಕಣ್ಣು – ಪಾದಗಳೂ ಮತ್ತು ದಾಗೀನುಗಳನ್ನ ಧರಿಸಿದ ದೇವರ ಚಿತ್ರಗಳನ್ನ ನೆನಪು ಮಾಡಿಕೊಂಡು -ದೇವರ ಈಗಿನ ಚಿತ್ರಗಳ ಜೋಡೀ ಹೋಲಿಸಿ –
‘ಯಾಣಿ…!’
‘ಅಲಾ…ಸೂಳೀಮಕ್ಕಳು !’
‘ಶಿವ ಶಿವಾ…!’
….
ಅಂತ ನಾನಾ ನಮೂನಿಯ ಉದ್ಗಾರಗಳನ್ನ ತೇಲಿಬಿಡತಿದ್ದರು…
….ಧರಮನಟ್ಟಿಯ ವಿಠ್ಠಲ ದೇವರ ಗುಡಿಯನ್ನುವದು ಕೊಲ್ಲಾಪುರದ ಮಹಾಲಕ್ಷ್ಮೀ ದೇವಿಯ ಗುಡಿಯಷ್ಟೇ ದೊಡ್ಡದಾದರೂ ಈಗ ಅಲ್ಲಿ ಜಾಗಾ ಸಾಲದಷ್ಟು ಮಂದಿ ಕೂಡಿತು… ಗರ್ಭಗುಡಿಯ ಬಾಗಲದಿಂದ ಎರಡು ಮಾರಿನಷ್ಟು ದೂರದಲ್ಲೇ ಕೂಡಬೇಕೆನ್ನುವ ಒತ್ತಾಯ ಬ್ಯಾರೇ ಇತ್ತು… ಹಿಂಗಾಗಿ ಎಲ್ಲಾ ಮಂದಿ ಗುಡಿಯ

ಹೊರಗಣಿ ಬಂದು ಕೂತಿತು…
ಗರ್ಭಗುಡಿಯ ಕಾಮೆಂಟರಿ ಹೇಳತಿದ್ದ ಹುಡುಗೋರು ಮಾತ್ರ ಮಂದಿನ್ನ ಕಾಕೊಂತ ಅಲ್ಲೇ ನಿಂತವು…ಗುಡ್ಯಾಗಿನ ಗಂಡಸರ ಹಿಂಡೆಲ್ಲಾ ಹೊರಗೆ ಬಂದು ಕೂತಿತೆನ್ನುವ ಸೂಚು ಹೆಂಗಸರಿಗೆ ಅಧೆಂಗ ಮುಟ್ಟಿತೋ ಯಾರಿಗೆ ಗೊತ್ತು…ಊರಾಗಿನ ಹೆಂಗಸರೂ-ಹುಡಿಗಿಯರೂ ತಂಡೋಪತಂಡವಾಗಿ ಗುಡಿಯಕಡೆ ಹೊಂಟರು… ಹೆಣಮಕ್ಕಳು ಬರತಿದ್ದಂಗೇ ಗುಡಿಯ ಮೆಟ್ಟಲುಗಳ ಹತ್ತರ ಬಂದು ನಿಂತ ಉಡಾಳ ಚಂದ್ರ್ಯಾ ಮತ್ತ ಪೆದಣ್ಣಾರ ಈರ – ಆ ಹೆಂಗಸರನ್ನ ಮೆಟ್ಟಲುಗಳ ಕೆಳಗೇ ನಿಂದರಿಸಿ –
‘ನೋಡ್ರೆವಾಣಿ…ಯಾರ ಪಾವಡರ್ ಹಚಿಗೊಂಡದೀರ್‍ಯೋ ಅವರ ಯಾರೂ ಒಳಗ ಹೋಗಂಗಿಲ್ಲ…ಪೋಲೀಸ ನಾಯಿಗೋಳು ಬರೂವ ಅದಾವು… ಗುಡ್ಯಾಗ ಪಾವಡರ್ ವಾಸನಿ ಇಡಗಿತಂದರ…ಅವಕ್ಕ ತುಡಗರನ ಹಿಡಿಯೂದು ಕಠಿಣ ಆಕ್ಕೊಂಡ ಕುಂಡರತೈತಿ…ಆಮ್ಯಾಲ ಪಂಚೇತಿ ಆಕ್ಕತಿ ನೋಡ್ರಿ…ಆ ನಾಯಿಗೋಳು ತುಡಗರನ ಹಿಡಿಯೂದ ಬಿಟ್ಟು ನಿಮ್ಮನ್ನ ಹಿಡೀತಾವು…! ಆಮ್ಯಾಗ ಜೇಲಿನ ರೊಟ್ಟೀ ತಿನಬೇಕಾಗತೈತಿ…ಪಾವಡರ್ ಹಚಿಗೊಂಡವರು ಒಟ್ಟಣಿ ಯಾರೂ ಗುಡ್ಯಾಗ ಬರತಕ್ಕದ್ದಲ್ಲ…’ ಅಂತ ತಾಕೀತು ಮಾಡಿ ಅಂಜಿಸಿದ್ದಕ್ಕ…ಅಲ್ಲಿಗೆ ಬಂದ ಹರೇದ ಹುಡಿಗ್ಯಾರು ಯಾರೂ ಗುಡಿಯೊಳಗ ಹೋಗದಂಗಾಗಿ ಅವರು ಅಲ್ಲೇ ಹೊರಗಣಿ ನಿಂದರಬೇಕಾಯಿತು…ವಯಸ್ಸಾದ ಹೆಂಗಸರು ಮಾತ್ರ ಒಳಗ ಹೋಗಿ-ಅಲ್ಲಿ ಗರ್ಭಗುಡಿಯ ಬಾಗಲ ಮುಂದೆ ನಿಂತ -ಡಬ್ಬಿ ಸಿನೆಮಾದ -ಹುಡುಗೋರು ತೋರಿಸಿದ ದೃಶ್ಯವನ್ನು ನೋಡಿ –
‘ಅಯ್ಯಣಿ…!’
‘ಅಯ್ ನನ ಶಿವನಣಿ…!’
‘ಅಯ್ಯೋ ಭಗವಂತಾ!’
….
ಅಂತ ನಾನಾ ನಮೂನಿಯಾಗಿ ಉದ್ಗಾರ ತಗದು-ಹೊರಗೆ ಬಂದು-ಅಲ್ಲಿ ಕುತೂಹಲದಿಂದ ಕುದಿಯತ್ತಿದ್ದ ಹರೆಯದ ಹುಡಿಗಿಯರಿಗೆ ತಾವು ಕಂಡದ್ದನ್ನು ವಿವರಿಸಿದರು …
‘ಗರ್ಭದ ಗುಡೀ ನೋಡೀರೆಲ್ಲಾ ತಂಗಿಗೋಳರ್‍ಯಾ…ಆ ಗರ್ಭದ ಗುಡೀ ನೋಡಿದರ ಏನು ಐಭೋಗ ಇರೂದು…! ಈಗ ನೋಡಿದರಣಿ ಮಶಾನಾ ನೋಡಿಧಂಗ ಆಗತೈತಿ…! ಅಯ್ಯಣಿ ನನ ತಾಯಂದರ್‍ಯಾ…ಆ ದೇವರಗೋಳನ ನೋಡಿದರಣಿ ಎದೀ ಝಲ್ ಅಂತೈತಿ !…ಬೋಳ ಬತ್ತಲೇ ಆಗಿ ಬರೇ ಕರೇ ಕಲ್ಲ ಕಂಡಂಗ ಆಗತೈತಿ !…ಯವ್ವಗೋಳರ್‍ಯಾ ನೀವು ಒಳಗ ಬಂದು ನೋಡದದ್ದಣಿ ಪಾಡ ಆತು…ಬಾಳೇದೊಳಗಿನ ಕಷ್ಟಾ -ನಷ್ಟಾ ಎಲ್ಲಾ ನೋಡಿ ನೋಡಿ…ನಮ್ಮ ಎದೀ ಎಲ್ಲಾ
ಕಲ್ಲ ಆಗಿ ಕುಂತದಾವು…ಅದಕ್ಕಣಿ ಅಲ್ಲಿ ಗುಡ್ಯಾಗಿಂದು ನೋಡದ್ದಕ್ಕ ನಮಗ ಏನ ಆಗಲಿಲ್ಲ…! ನೀವೇನರ ಅಲ್ಲೀದು ನೋಡಿದ್ದರಣಿ ನಿಮ್ಮ ಎದ್ಯಾನ ಕಾಜ ಅನ್ನೂದು ಹಂಗಣಿ ಒಡದಣಿ ಹೋಗತಿತ್ತು…! ನೀವು ನೋಡದದ್ದಣಿ ಪಾಡಾತು ನಡೀರಿ…’ ಅಂತ ಸಮಾಧಾನ ಹೇಳಿ ತಿರಿಗಿ ಕರಕೊಂಡ ಹೋದರು…ಆ ಹುಡಿಗಿಯರು ಸಮಾಧಾನ – ಅಸಮಾಧಾನಗಳ ಗೊಂದಲದ ಭಾವವನ್ನ ಮುಖದ ಮ್ಯಾಲೆ ಮುಡಕೊಂಡು – ತಿರಿತಿರಿಗಿ ಗುಡಿಯ ಕಡೆ ಹೊಳ್ಳಿ ಹೊಳ್ಳಿ ನೋಡಿಕೋತ ತಮತಮ್ಮ ಮನಿಗಳಿಗೆ ಹೋದರು…
…ಎಲ್ಲಾರಹಂಗ ಲಗಮವ್ವನೂ ಗುಡೀ ತುಡಗ ಆಗೇತಿ ಅಂತ ತಿಳದ ಕೂಡಲೇ ‘ಅಯ್ ನನ ಶಿವನಣಿ…’ ಅಂತ ಅಡರಾಯಿಸಿ ಗುಡಿಯಕಡೆ ಓಡಿ ಬಂದಳು…ಓಡಿ ಬರತಿದ್ದ ಆಕಿಯನ್ನ ಗುಡಿಯಿಂದ ಹತ್ತು ಮಾರು ದೂರದಲ್ಲಿಯೇ ತರುಬಿದ ಚಂದ್ರ್ಯಾ –
‘ಏ…ನಾರೂ ಯಣ್ಣೀ -ಪಾವಡರ್ರಾಣಿ ಅದು ಹಚಿಗೊಂಡವರು ಯಾರೂ ಒಳಗ ಹೋಗಂಗಿಲ್ಲವಾಣಿ…ಒಳಗ ಹೋಗಬ್ಯಾಡಾ’ ಅಂತಂದ…
ಲಗಮವ್ವ ‘ನಾನು ಪಾವಡರ್ರೂ ಹಚಿಗೊಂಡಿಲ್ಲ -ನಾರೂ ಯಣ್ಣೀನೂ ಹಚಿಗೊಂಡಿಲ್ಲ …ನನ್ನೇನ ಒಳಗ ಹೋಗಧಂಗ ತರಬೂ ಕಾರಣ ಇಲ್ಲೇಳಪಾ…’ ಅಂತ ಹೇಳಿ ಆತನ್ನ ವಾರಿ ಮಾಡಿಕೊಂಡು…ದಾಟಿ ಮುಂದಕ ನಡದಳು…ಅಷ್ಟರೊಳಗೇ ಸರ ಸರ ಅಂತ ಮುಂದೆ ಬಂದ ಈರ ಆಕಿನ್ನ ತಡವಿ ನಿಂದರಿಸಿ –
‘ಏ ಲಗಮವ್ವಾಣಿ…ರಗತ ತಿಲಕದ ಸೇವಾದ ದ್ಯಾವಪ್ಪ ನಣಿ ಸ್ವಾಮೀ ಗುಡೀ ತುಡಗ ಮಾಡ್ಯಾನ ಅನ್ನೂ ಸಂಶೇ ಅದಾವು…ಅದಕ್ಕಣಿ ನೀ ಒಳಗ ಹೋಗಬ್ಯಾಡಾ…’ ಅಂದ.ಲಗಮವ್ವನಿಗೆ ದ್ಯಾವಪ್ಪನ ಹೆಸರು ಹೇಳಿ ಹೇಳಿ -ಯಾಂಸೀ ದೀಡೀ ಮಾತಾಡುವುದನ್ನ ಕೇಳಿ ಕೇಳಿ ಸಾಕಾಗಿತ್ತು…ಆಕಿ ರೌಸಿಗೆದ್ದು –
‘ ಯಾಕೋ ನನ ಹಾಟ್ಯಾನ ಮಗನಣಿ…ಯಾಂವನೋ ಬಾಡ್ಯಾ ತುಡಗ ಮಾಡಿದ್ದರ ನಾ ಯಾಕ ಗುಡೀ ಒಳಗ ಹೋಗಬಾರದು…? ಗುಡೀ ಒಳಗ ಹೋಗಬ್ಯಾಡ ಅಂತ ಹೇಳಾಂವ ನೀ ಯಾವ ಬಾಡ್ಯಾನ ಮಗಾಣಿ…ನಿನ್ನಣಿ…ನಿನ್ನ ಹೇಲಹಚ್ಚಿ ತಟ್ಟಲೀಲೇ ಹೊಡೀತನು…’ ಅಂತ ಗದ್ದಲಾ ಎಬ್ಬಿಸಿ ಈರನ ಮೈಮ್ಯಾಲಣಿ ಹೋದಳು…. ಗುಡೀ ಮುಂದ ಕುಂತ ಗಂಡಮ್ಯಾಳದೊಳಗ ಲಗಮವ್ವನ ಕಾಕಾನೂ ಇದ್ದ…ಅಂವ ಎದ್ದು ಓಡಿಬಂದು ಲಗಮವ್ವನ್ನ ‘ಏನು…ಏನಾತು?’ ಅಂತ ಕೇಳದ್ದಕ್ಕ ಆಕಿ –
‘ನೋಡ ಕಾಕಾಣಿ…ಈ ಪಿಸರ ಬಾಡ್ಯಾನ ಮಗಾ ತೇರಿನ ಗಾಲಿಗೆ ತೆಲೀ ಒಡಕೋ ಆ ದ್ಯಾವ್ಯಾನ ಕೂಟೇ ನನ ಸಮ್ಮಂದ ಹಚ್ಚಿ ಯಾಂಸೀ ದೀಡೀ ಮಾತಾಡತಾನೂ…’ ಅಂತ ಹೇಳಿ ಅಲ್ಲೇ ಕುಂತು ಮುಖಕ್ಕ ಸೆರಗ ಹಾಕೊಂಡು ಅಳಾಕತ್ತಳು…ಲಗಮವ್ವನ ಕಾಕಾ -ಭರಮಪ್ಪ – ರೌಸಿಗೆದ್ದು

‘ಏನೋ ನಿನ್ನೌನ…ಯಾರ ಮನಿತನಾ ತಗೀಬೇಕಂತ ಮಾಡೀದೀ…ನಿನ್ನ ಕೈಯ್ಯಣಿ ಕಡೀತನು ಬೋಸಡೀ ಮಗನಣಿ…’ ಅಂತ ಈರನ ಎದೀ ಹಿಡದು ನುಗಿಸಿದರೆ ಆ ಈರ ಅಂಬುವವ ಮೂರು ಮಾರು ದೂರ ಹೋಗಿ ಬಿದ್ದ… ಕೂಡಿದ ಮಂದ್ಯಾಗಿನ ಹತ್ತಾರು ಮಂದಿ ಬುದು ಬುದೂ ಅಂತ ಎದ್ದು ಓಡಿ ಬಂದು ಜಗಳಾ ಬಿಡಸತಿದ್ದರೆ, ಡೊಗಳೆ ಪೈಜಾಮಾ ಮತ್ತ ಬಿಳೀ ನೆಹರೂ ಶರ್ಟು ಹಾಕೊಂಡಿದ್ದ ಕಪ್ಪನೆಯ ಕುಳ್ಳಗಿನ ಆಸಾಮಿ -ಕುಂಬಾರ ರಾಯಾ – ಭರಮನ ಹತ್ತರ ಬಂದು -‘ಏಣಿ… ಈರ ಲಗಮವ್ವಗ ಹಂಗ ಅಂದದ್ದು ಹೆಂತಾ ಮಾತು !…ಇನ್ನ ಆ ಹುಡಿಗೀ ಮದಿವಿ ಆಗಿ ಬಾಳೇ ಮಾಡಾಕ ಆದೀತೂ…?’ ಅಂತ ಹೇಳಿದ್ದಕ್ಕ ಜಗಳಾ ಬಿಡಸಲಿಕ್ಕೆಂತ ಭರಮನ್ನ ಎಳಕೊಂಡು ನಿಂತಿದ್ದ ಮಂದ್ಯಾಗಿನ ಛತ್ರೇರ ಸಾತವೀರ ರಾಯಾನ್ನ ಫೈಲ ಮ್ಯಾಲ ತಗೊಂಡ…
‘ಏ ರಾಯಾಣಿ…ಹಿಂತಾ ಬುದ್ದೀ ಇನ್ನಾರ ಬಿಡು.ಮದಿವೀ ಆಗಿ ಬಾಳೇ ಮಾಡದಂಗ ಲಗಮವ್ವಗ ಏನ ಆಗೇತಿ…ಯಾಂವನೋ ಮಂಗ್ಯಾನಂತಾ ಹುಡಗ ಏನೋ ಅಂತ್ಯು ಅಂದರ ಅದನ್ನ ಎಲ್ಲಿಗೆ ಒಯ್ದ ಹಚ್ಚೂದು?…ನಿಮ್ಮಂತಾ ಮನಿಮುರಕ ಸೂಳೀಮಕ್ಕಳು ಅದಾರಂತಣಿ ದೇವರಗೋಳು ಊರ ಬಿಟ್ಟ ಹೊಂಟದಾವ ನೋಡು…’.
‘ಎಲಾ ಇವನೆಪ್ಪನ…ಅಲ್ಲದ ಮಾತಿಗೆ ಅಲ್ಲದ್ದು ಅಂತ ಹೇಳಿದರ ಇಂವ ನೋಡದಣಿ…ನನ್ನ ಮ್ಯಾಲಣಿ ತಪ್ಪ ಹಾಕತಾನು…ನಿಮ್ಮಂಥವರು ಕೂಡಿದರ ಬಗೀಹರೀತು…’ ಅಂತ ರಾಯಪ್ಪ ವಟಾ ವಟಾ ಅಂತ ಅನಕೋತ-ನುಗಿಸಿದ್ದಕ್ಕ ಮೂರು ಮಾರು ದೂರ ಹೋಗಿ ಬಿದ್ದು -ಎದ್ದು -ಮೈಮ್ಯಾಲಿನ ಅರಿವೀ ಎಲ್ಲಾ ಜಾಡಿಸಿಕೊಂಡು…ಗುಡಿಯ ಮೆಟ್ಟಲಿನ ಮ್ಯಾಲೆ ಹೋಗಿ ಕೂತಿದ್ದ ಈರನ ಹತ್ತರ ಹೋದ…ಅಲ್ಲಿ ಹೋಗಿ ಈರನಿಗೆ –
‘…ಅಲ್ಲೋಪಾಣಿ ನೀ ಏನ ಅನಬಾರದ ಅಂದಿ…? ವಾರಿಗೆವರು ನಗಿಚಾಟಿಕೀ ಮಾಡೂದಣಿ ಒಂದ ದೊಡ್ಡ ತಪ್ಪ ಆದಂಗ ಆತಲಾ…! ವಾರಿಗೀ ಹುಡಿಗಿ ಅಂತ ಒಂದ ಮಾತ ಅಂದದೀ…ಅದನ್ನಣಿ ಹಿಂಗ ದೀರ್ಗಕ್ಕ ಎಳದು ಎದೀ ಹಿಡದು ನುಗಸೂದಂದರ…? ಇಲ್ಲೇನ ಮೊಗಲಾಯಿ ಬಂದೈತೇನು…?ನೀ ಇದನ್ನ ಸುಮ್ಮನಣಿ ಬಿಡಬ್ಯಾಡಾ…’ ಅಂತ ಹೇಳಿದ. ರಾಯಾನ ಮಾತಿಗೆ ಈರ ಏನೂ ಹೇಳದ … ಸುಮ್ಮನಣಿ ಕೂತ…ಇಲ್ಲಿಯೂ ತನ್ನ ಮಾತಿಗೆ ಬೆಲೀ ಸಿಗದೇ ಅಂವ -ಮಂದಿಗೆ ಒಟ್ಟಣಿ ಅಭಿಮಾನನ್ನೂದಣಿ ಇಲ್ಲ ನೋಡು…ಅಂತ ವಟವಟ ಅನಕೋತ ಹೊಳ್ಳಿ ಬಂದು ತನ್ನ ಜಾಗಾದಾಗ ತಾನು ಕೂತ….
ಸ್ವಾಂವಜ್ಜ ‘ಯಾಕಪಾ ರಾಯಾಣಿ… ಯಾಕೋ ಉರೀ ಹತ್ತಲಿಲ್ಲಲಾಣಿ?… ಹಸೀ ಹುಲ್ಲಿನ್ಯಾಗ ಉಚ್ಚೀ ಹೊಯ್ದಕ್ಯಾರ ಕಡ್ಡೀ ಗೀರಿ ಉರೀ ಹಚ್ಚೂ ಗಂಡಮಗಾ ನೀನು…ಇಂದ ಯಾಕೋ ಠುಸ್ ಅಂತಲಾ…’ ಅಂತ ಅಂದದ್ದಕ್ಕೆ ಹಣಿಮಿಕ್ಯಾರ ಮಲ್ಲ
‘ಯಜ್ಜಾ ಉರೀ ಹತ್ತಿಲ್ಲ ಅಂತ ಹಂಗ ಖಾತ್ರೀಲೇ ಹೇಳಬ್ಯಾಡಾ…ಸದ್ದೇಕ್ಕ ಶಾಂತ ಇದ್ದು ಆಮ್ಯಾಲ ಭುಗಲ್ಲಂತ ಹತಿಗೋಳೂ ಹಂತಾ ಇದ್ಯಾ ಐತಿ ಈ ರಾಯಾನ ಹಂತೇಕ…’ ಅಂತ ಹೇಳಿದ.ರಾಯಪ್ಪ ‘ಯಾಣಿ…ಏನ ಮಾತಂತ ಆಡತೀಯೋ ದೊಡಪ್ಪಾಣಿ…ನಾಯೇನ ಅಲ್ಲಿ ಜಗಳಾ ಹಚ್ಚಾಕ ಹೋಗಿನ್ನಿ ಏನು?…ಜಗಳಾ ಬಿಡಸಾಕ ಹೋಗಿನ್ನಿ . ಊರಿನ ಮರ್ಯಾದಿ ಹೋಗೂ ಯಾಳೇ ಬಂದ ಕುಂತೈತಿ.ಹಿಂತಾ ಯಾಳೇದಾಗ ಬಡದಾಟಕ ಬಿದ್ದದೀರಿ…ನಿಮಗೇನ ಬುದ್ಧಿಗಿದ್ದಿ ಐತಿಲ್ಲೋ ಅಂತ ಬೈದ ಬಂದಿನಿ…ಹಂತಾದ್ದ ತಗೊಂಡ ನೀವು ಏನೇನೋ ಅನ್ನಾಕತ್ತದೀರೆಪಾ…’ ಅಂತ ಹೇಳಿದಾಗ ಮಂದಿ- ಏ …ಹೌದ ಹೌದು…ನೀ ಖರೇನ ಮಾತಾಡತೀ ಬಿಡಪಾ… ಅಂತಂದಾಗ ನಗಲಿಕ್ಕೆ ಹೊಂಟ ಮಂದಿಗೆಲ್ಲಾ-ಹಿಂತಾ ಯಾಳೇದಾಗ ನಗೂದು ಯೋಗ್ಯವಲ್ಲ ಅಂತ ಅನಿಸಿ ಅವರೆಲ್ಲಾ ಒಮ್ಮಿಗೆಲೇ ಮೌನದಿಂದ ಗಂಭೀರರಾಗಿ ಕುಂತರು…

*
*
*

…‘ಸ್ವಾಂವಪ್ಪಾ ನೀ ಹಿಂಗ ಸುಮ್ಮನಣಿ ಕುಂತರ ಹೆಂಗ…? ನಾವೆಲ್ಲಾ ಊರಾಗ ಹಗಲೆಲ್ಲಾ ಮಾತಾಡಿಕೊಂತಿದ್ದಿವಿ…ನಮ್ಮ ಊರಾಗ ಎಲ್ಲಾದರಾಗ ತೆಲೀ ಇರಾಂವಾ ಮತ್ತ ಧೈರ್ಯೇವಂತ ಅಂದರ ನಮ್ಮ ಸ್ವಾಂವಪ್ಪ ಒಬ್ಬಣಿ ಅಂತ ! ಹಂತಾದ್ದರಾಗ ನೀನಣಿ ಇಂದ ಕಾಲ ಕಳಕೊಂಡವರಂಗ ಕುಂತರ ಹೆಂಗ…?ಈಗ ಮುಂದ ಹೆಂಗ ಮಾಡೂದಂತ ನೀನಣಿ ಹೇಳಬೇಕು…’ ಅಂತಿದ್ದಂಗಣಿ ಭೂತಗೋಳ ಲಸಮ್ಯಾ –
‘ಯಾಣಿ…ಇದೊಳ್ಳೇ ಪಾಡಾತು ನೋಡು.ಸ್ವಾಂವಜ್ಜ ಜಯ್ಯಾರಾಂವ… ಅಂವಗ ನಮ್ಮ ದೇವರ ಸ್ವಾಮಾನ ತುಡಗ ಆಗ್ಯಾವಂದರ ಒಳಗೊಳಗಣಿ ಸಂತೋಸನಣಿ ಆಗಿರಬೇಕು’ ಅಂತ ಅಂದುಬಿಟ್ಟ …ಸೊಲಿಗೀ ರಾಮ ಲಸಮ್ಯಾನ ಮಾತು ಕೇಳಿ ರೌಸಿಗೆದ್ದು ‘ಏನಂತ ಮಾತಾಡತೀಲೇ ತೆಲೀಮಾಸದ ಸೂಳೀಮಗನಣಿ…ಸ್ವಾಂವಜ್ಜಗ ಹಂತಾ ಮಾತ ಆಡಿದರ ನಾಲಿಗ್ಗೆ ಹುಳಾ ಬಿದ್ದಾವು…’ ಅಂತ ಹೇಳತಿದ್ದಂಗಣಿ ಕುಂಬಾರ ರಾಯಾ ‘ಯಾ…ಬಿಡೋಪಾ…ಈ ಊರಿನ ವಹಿವಾಟ ಎಲ್ಲಾನೂ ಸ್ವಾಂವಜ್ಜಗಣಿ ಬರದ ಕೊಟ್ಟದೀರೇನು…? ಯಂಗಸ್ಟರಗ ಲೀಡರಶಿಪ್ಪು ಕೊಡಬೇಕು…’ ಅಂದ…ಈ ರಾಯಾ ಒಂಭತ್ತನೇ ಕ್ಲಾಸಿನ ತನಕಾ ಸಾಲೀ ಬರದು ಅದನ್ನ ಬಿಟ್ಟು ಊರು ಸೇರಿದಂವ… ಅವನಿಗೆ ತಾನು ಸುಶಿಕ್ಷತ ನಾಗರೀಕ ಅನ್ನುವ ಹಮ್ಮು …ಇದರ ಜೋಡೀ ತನಗೆ ಎಮ್ಮೆಲ್ಲೇನ ಗುರ್ತು ಇದೆ ಅಂತನ್ನುವ ಜರ್ಬಿನಲ್ಲಿ ಹುಂಬ ಪುಢಾರಗಿರೀ ಮಾಡಿಕೋತ ಊರಿನ್ಯಾಗ ಆಗಾಗ ಜಗಳಗಳಲ್ಲಿ ಸಿಕ್ಕಿಹಾಕಿಕೊಂಡು – ವಾರ ಹದಿನೈದು ದಿನಗಳಿಗೊಮ್ಮೆ ಯಾರಿಂದಲಾದರೂ ಏಟು ತಿಂದು …ಪೋಲೀಸರಿಗೆ ನಿಯಮಿತವಾದ ಆದಾಯದ

ಮೂಲವಾದವನು…ಹಿಂಗಾಗಿ ಗೋಕಾಂವಿಯ ಪೋಲೀಸರಿಗೆ ಧರಮನಟ್ಟಿಯ ಈ ಕುಂಬಾರ ರಾಯಾ ಅಂದರೆ ಭಾಳ ಅಂದರ ಭಾಳ ಪ್ರೀತಿ….ರಾಯಾನ ಮಾತಿಗೆ ಈಗ ಲಗಮವ್ವನ ಕಾಕಾಣಿ-ಭರಮಪ್ಪ ರೌಸಿಗೆದ್ದ… ‘ಏ ಕೆಸರ ತುಳ್ಯಾಂವನಣಿ…ಸುಮ್ಮನ ಬಜಾ ನಾಯೀ ಹಂಗ ಕುಂಡರ್ರು…ನಿನಗ ತಿಳೀದ ಹ್ವಾರೇಕ್ಕ ಹೋಗಬ್ಯಾಡಾಣಿ…ನಿನ್ನ ಕೆಸರನ ಇಲ್ಲಿಗೆ ತರಬ್ಯಾಡಾ’ ಅಂತ ಗುಟುರು ಹಾಕಿದ… ‘ಏ ಭರಮಪ್ಪಾ …ಹುಶಾರೀಲೇ ಮಾತಾಡು…ಕೆಸರ ತುಳ್ಯಾಂವಾ ಗಿಳ್ಯಾಂವಾ ಅಂದರ ಪಾಡ ಆಗಾಕ್ಕಿಲ್ಲ…ನಿನಗ ರಾಜಕೀಯ ಗೊತ್ತ ಇಲ್ಲದಿರಕ ಸುಮ್ಮನಣಿ ಕುಂಡರಬೇಕು…ಈಗ ಪ್ರಜಾಪ್ರಭುತ್ವ ಐತಿ…ಹುಂಬಗುತಗೀ ಮಾತ ಆಡಬ್ಯಾಡ…’ ಅಂತ ರಾಯಾ ಮರುನುಡಿ ಆಡಿದ್ದಕ್ಕ ಭರಮಪ್ಪಗ ಮನಗಂಡಣಿ ಸಿಟ್ಟು ಬಂತು.ಅಂವ-‘ಏನೋ ನಿನ್ನೌನ ಕೆಸರ ನಾದಾವನಣಿ… ಪ್ರಜಾ -ಗಿಜಾ ಅಂತ ಆರೇಮಾತಿನ್ಯಾಗ ಬೇದು ದಕ್ಕಿಸಿಗೋತನಂತ ತಿಳಕೊಂಡದೀ ಏನು?…ಬೋಸಡೀಮಗನಣಿ…ನಿನ್ನ ನಾಲಿಗೀನಣಿ ಕಿತ್ತಿ ಇಡತನು…’ ಅಂತ ಅನಕೋತ ಎದ್ದು ರಾಯಾನ್ನ ಹೊಡೀಲಿಕ್ಕೆ ನುಗ್ಗಿದ…ಕೂಡಿದ ಮಂದಿ ಅಂವನ್ನ ಸಮಾಧಾನ ಮಾಡಿ ಕೂಡಸೂತನಕಾ ರಣಾ ರಂಪ ಆತು…ಮಂದಿ ಹಿಂಗ ಭರಮಪ್ಪನನ್ನ ಸಮಾಧಾನ ಮಾಡತಿದ್ದರೆ ರಾಯಾ ಪೆಚ್ಚಾಗಿ ಕೂತುಬಿಟ್ಟ…ಆಗ ಕೊಂಯ್ಕಗೋಳ ಈರಭದ್ರ -ಇಂವ ಮೂಡಲಗಿಯ ಜೂನಿಯರ್ ಕಾಲೇಜಿಗೆ ಹೋಗಿ ಒಂದನೇ ಪೀಯೂಸೀ ಕಲತು ಫೇಲಾಗಿ ಬಂದವ – ಇಂವ ಗಸಲ್ಲನೇ ಎದ್ದು ನಿಂತು , ಭಾಷಣ ಮಾಡವರ ಗತ್ತಿನೊಳಗ ಮಾತಾಡಲಿಕ್ಕತ್ತಿದ- ‘…ಈ ರಾಯಪ್ಪ ಕೆಸರ ತುಳ್ಯಾಂವಣಿ ಆಗಲೀ ಇಲ್ಲಾ ಮತ್ತೇನರ ನಾದಾಂವ ಆಗವಲ್ಲನ್ಯಾಕ…ಅದ ಮುಕ್ಯ ಅಲ್ಲ…ಮುಕ್ಯ ಏನಪಾ ಅಂದರ- ಡೆಮಾಕ್ರಸೀ!…ಅಂವ ಏನ ಪ್ರಜಾಪ್ರಬುತ್ವ ಅಂದನಲಾ ಅದು ಬ್ಯಾರೇ ಏನ ಅಲ್ಲ…ಅದ ಡೆಮಾಕ್ರಸೀ ಐತಿ…ಈ ಡೆಮಾಕ್ರಸಿ ಏನೈತಿ ಅದು ನಮಗ ಬಾಳ ಮುಕ್ಯ…ಡೆಮಾಕ್ರಸೀ ಏನ ಹೇಳತೈತೀ…? ಯಂಗಸ್ಟಾರಿಗಿ ಪವರ್ರು ಕೊಡಬೇಕೂ ಅನತೈತಿ…ಅದು ಮುಕ್ಯ…ರಾಯಪ್ಪಗ ಜಗತ್ತಿನ eನ ಐತಿ…ಹಿಂಗಾಗೀ ಅಂವ ಡೆಮಾಕ್ರಸೀದು ಬರಾಬ್ಬರೀ ಹೇಳಿದ…’ ಅಂತ ಈರಭದ್ರ ಇಲೆಕ್ಶನ್ನಿನ ಭಾಷಣದಂಗ…ಹಿಂಗಣಿ ಮಾತಾಡತಿದ್ದರ ಈರಭದ್ರನಣಿ ಹಿಂದಣಿ ಕೂತಿದ್ದ ಅವನ ಸ್ವಾದರಮಾವ – ಸೊಲಿಗೀ ರಾಮ -ಧಡಕ್ಕನಣಿ ಎದ್ದು ನಿಂತು –
‘ಭಾಡ್ಯಾನ ಮಗನಣಿ…’ ಅಂತನ್ನುವ ಒಂದು ಬೈಗುಳವನ್ನಲ್ಲದೆ ಮತ್ತೊಂದು ಮಾತಾಡದೆ, ಈರಭದ್ರನ ಕುತಿಗೀ ಹಿಡದು ಬಗ್ಗಿಸಿ -ಬೆನ್ನ ಮೇಲೆ ದಬಾ ದಬಾ ಅಂತ ಹೇರಲಿಕ್ಕೆ ಸುರು ಮಾಡಿದ…ಯಾರ ಒಬ್ಬರೂ ಅಂವನ್ನ ಬಿಡಸಲಿಕ್ಕೆ ಹೋಗಲಿಲ್ಲ… ಈರಭದ್ರನಿಗೆ ವಿಚಿತ್ರ ಅನಿಸಿತು…ಈರಭದ್ರನ ಪಾಲಿಟಿಕಲ್ಲಿನ ಲೆಕ್ಚರರ್ರು ಹಗಲೆಲ್ಲಾ ಡೆಮಾಕ್ರಸಿ -ಡೆಮಾಕ್ರಸಿ ಅಂತ ಅಂತಿದ್ದರಾದ್ದರಿಂದ ಅದು ಇವನ ಮನಸ್ಸಿನಲ್ಲಿ ಕೂತಿತ್ತು… ಇಲ್ಲಿ ರಾಯಪ್ಪ ಪ್ರಜಾಪ್ರಭುತ್ವ ಅಂತ ಹೇಳಿದ್ದನ್ನ ಬೈಗಳು ಅಂತ ತಪ್ಪು ತಿಳಕೊಂಡು ರೌಸಿಗೆದ್ದ ಭರಮಪ್ಪನನ್ನು ಕಂಡು-ಅeನಿಗಳಾದ ತನ್ನ ಜನರಿಗೆ ಈ ಪ್ರಜಾಪ್ರಭುತ್ವ ಅನ್ನುವದು ಮತ್ತೇನೂ ಅಲ್ಲ-ಅದು ಡೆಮಾಕ್ರಸಿ ಅಂತ ತಿಳಿಸಿ ಹೇಳಬೇಕೆಂದರೆ ತನ್ನ ಸ್ವಾದರ ಮಾವ ಡೊಗ್ಗಿಸಿ ಗದಮಿದ್ದು ಅವನಿಗೆ ವಿಚಿತ್ರ ಅನಿಸಿತು…ಹಂಗೆ ನೋಡಿದರೆ ಈರಭದ್ರನೇನೂ ಪೀಚು ಹುಡುಗನಲ್ಲ…ಓಕಳೀಮುಂದ ಕಲ್ಲು ಗುಂಡು ಎತ್ತಿ ಬೆಳ್ಳೀ ಖಡೇ ಗೆದ್ದ ಹುಡುಗ…!ಸ್ವಾದರ ಮಾವ ತನ್ನನ್ನ ಡೊಗ್ಗಿಸಿ ಗದಮತಿರಬೇಕಾದರೆ ಕೊಸರಿಕೊಂಡು ಅವನ ಎದೀ ಹಿಡಿದು ನುಗಸಬೇಕೆನ್ನುವ ಸಿಟ್ಟೂ – ಹ್ಯಾಂವಾ ಅವನೊಳಗ ತುಂಬಿ ಬಂದಿತ್ತು…ಆದರೆ ಸೊಲಗೀ ರಾಮ ಈರಭದ್ರನಿಗೆ ಬರೇ ಸ್ವಾದರಮಾವ ಮಾತ್ರ ಆಗಿರದೇ ಹೆಣ್ಣು ಕೊಡಲಿರುವ ಖಾಸಾ ಮಾವನೂ ಆಗಿದ್ದರಿಂದ- ಈರಭದ್ರ ಅವನಿಂದ ಗುದ್ದು ತಿಂದು ತೆಲೀ ತೆಳಗ ಹಾಕ್ಕೊಂಡು…ಸುಮ್ಮನೇ ಕೂತುಬಿಟ್ಟ.
ಈರಭದ್ರನ ಜೋಡೀ ಸಾಲಿಗೆ ಮಣ್ಣು ಹೊತ್ತ ಅವನ ವಾರಿಗಿಯ ಹುಡುಗರಿಗೆ ಅವನ ಲೀಡರಶಿಪ್ಪಿನಲ್ಲಿ ಭಾಳ ನಂಬಿಕಿ…ಯಾಕಂದರೆ ಅವನು ಜಾತಿವಂತ ಮತ್ತು ಬಳಗವಂತ… ಮುಂದೆ ಪಂಚಾಯತಿಯ ಇಲೆಕ್ಶನ್ನಿನೊಳಗೆ ಅವನನ್ನ ಚೇರಮನ್ನ ಕ್ಯಾಂಡಿಡೇಟು ಮಾಡಿಕೊಂಡು-ಚೇನು ಮಾಡಿಕೊಂಡು ಇಲೆಕ್ಶನ್ನಿನೊಳಗ ಗೆದ್ದು ಪವರ್ರು ಹಿಡಿಯಬೇಕೆನ್ನುವ ಹುನ್ನಾರವನ್ನ ಇವರೆಲ್ಲಾ ಇಟಗೊಂಡಿದ್ದರು…ಹಂತಾ ತಮ್ಮ ನಾಯಕ ಈರಭದ್ರನಿಗೆ ಅವಮಾನ ಮಾಡಿದ್ದನ್ನ ಈ ಹುಡುಗೋರ್‍ಯಾರೂ ಸಹಿಸಲಿಕ್ಕೆ ತಯಾರ ಇದ್ದಿದ್ದಿಲ್ಲ…ಆದರೆ ತಮ್ಮ ಲೀಡರನೇ ಗುದ್ದಿಸಿಕೊಂಡು ಸುಮ್ಮನೇ ಕೂತಾಗ ಅವರೆಲ್ಲಾ ಫ್ಯೂಜು ಕಳಕೊಂಡವರಂಗ ಆದರು…ಆದರೂ ತಮ್ಮ ಲೀಡರನನ್ನ ಅಪಮಾನ ಮಾಡಿದ್ದಕ್ಕೆ -ಅವರೆಲ್ಲಾ ಎದ್ದು ವಟ ವಟ ಅಂತ ಅನಕೋತ ಸಭಾತ್ಯಾಗ ಮಾಡಿದರು…ಆಮ್ಯಾಲೆ ಈರಭದ್ರನೂ ಎದ್ದು ಹೋದ…
…ತನಗೆ ಸಪೋರ್ಟು ಮಾಡಿದ ಈರಭದ್ರನಿಗೆ ಅಪಮಾನ ಆದದ್ದು ರಾಯಪ್ಪನಿಗೆ ಸಹಿಸಲಿಕ್ಕೆ ಆಗಲಿಲ್ಲ…ಈರಭದ್ರ ಎದ್ದು ಹೊಂಡತಿದ್ದಂಗೇ ಅಂವ ಘಸಲ್ಲನೇ ಎದ್ದು ನಿಂತು-ಪ್ರಜಾಪ್ರಭುತ್ವ ಅಂತ ಹೇಳಲಿಕ್ಕೆ -‘ಪ್ರ…’ ಅಂತ ಮಾತು ಸುರುಮಾಡಿದವನೇ -ಗೋಣು ಹಾಕಿ ತನ್ನ ಮಾತು ನುಂಗಿ – ಮತ್ತ ಬ್ಯಾರೇ ಮಾತು ಹೊಂದಿಸಿಕೊಂಡು ಮಾತಾಡಲಿಕ್ಕತ್ತಿದ ‘….ಈ ಕೂಡಿದ ಸಭಾ ಯಂಗ ಬ್ಲಡ್ಡಿಗೆ ಅಪಮಾನ ಮಾಡೇತಿ…ಅದಕ್ಕಣಿ ನಾ ಇದನ್ನ ಪ್ರೊಟೆಸ್ಟ ಮಾಡತನು…ನಾ ಧರಣೀ ಸತ್ಯಾಗ್ರಹ ಮಾಡತನು…’ ಅಂತ ನುಡಿದವನೇ ಗುಂಪಿನ್ಯಾಗಿಂದ ಎದ್ದು ಹೋಗಿ – ಅಲ್ಲೇ ಗುಂಪಿನಿಂದ ಒಂದು ಮಾರು ದೂರದಾಗ ಚಕ್ಕಾಮುಕಳಿ ಹಾಕೊಂಡು ಕುಂತ… ಅದೇನೋ ಪ್ರೊಟೆಸ್ಟ ಮಾಡತನೂ…ಅಂತ ಕೂಡಿದ ಮಂದ್ಯಾಗಿಂದ ಎದ್ದು ಹೊಂಟಿದ್ದ ರಾಯಾನನ್ನ -ಅಂವ ಏನೋ ಒಂದು ಘನಿಷ್ಟವಾದದ್ದನ್ನ ಮಾಡತಾನೆ ಅಂತ ಮಂದಿ ಎಲ್ಲಾ ಅಂಜಿ ಕುತೂಹಲದಿಂದ ನೋಡತಿದ್ದರಣಿ…ಅಂವ ಹೋಗಿ ಅಲ್ಲೇ ಗುಂಪಿನ ಮಗ್ಗಲದಾಗ ಕೂತದ್ದು ಕಂಡು ಅವರಿಗೆ ಭಯಂಕರ ನಿರಾಸೆ ಆತು…ಭರಮ ‘ಕೆಸರು ತುಳಿಯೂ ಸೂಳೀ ಮಗಾಣಿ…ಪೊಟೆಸ್ಟೊ ಏನೋ ಮಣ್ಣ ಮಾಡತನಂತ ಅಂದು…. ಇಲ್ಲಿ ನಮ್ಮ ನಡಕಿಂದ ಎದ್ದು ಹೋಗಿ ಅತ್ತಲಾಗ ಗುಂಪಿಂದ ಹೊರಗ ಹೋಗಿ ಕುಂತ…’ ಅಂತಂದು ಗಹಗಹಿಸಿ ನಕ್ಕ…ತಾವೆಲ್ಲಾ ನಗದೇ ಗಂಭೀರವಾಗಿ ಇರಬೇಕು ಎಂದು ಒಂದು ಅಘೋಷಿತ ನಿರ್ಧಾರ ತಗೊಂಡಿದ್ದ ಅಲ್ಲಿ ಕೂಡಿದ ಮಂದಿ ಎಲ್ಲಾ ಭರಮನತ್ತ ಬೆಕ್ಕಸಬೆರಗಾಗಿ ನೋಡತೊಡಗಿದರು…
…ಇಷ್ಟ ಎಲ್ಲಾ ನಾಟಕ ಆಗೂತನಕಾ ಸುಮ್ಮನಣಿ ಕುಂತಿದ್ದ ಸ್ವಾಂವಜ್ಜ ಈಗ ಸಾವಕಾಶವಾಗಿ ಎದ್ದು ನಿಂತು ‘ಹಾಂ…ನಾ ಬರತನ ಗೂಳಪ್ಪಣ್ಣಾ…’ ಅಂತ ನುಡದು ಹೊಂಡಲಿಕ್ಕೆ ತಯಾರಾದಾಗ ಗೂಳಪ್ಪಜ್ಜ -‘ಏಣಿ…ಯಾಕೋಪಾಣಿ…?’ ಅಂತ ಗಾಬರಿಯಿಂದ ಕೇಳಿದ. ಸ್ವಾಂವಜ್ಜ ಉಸ್..ಂತ ಉಸರು ಬಿಟ್ಟು –
‘…ಮತ್ತೇನಪಾಣಿ ನಾಯೇನ ಜಾತ್ಯಾಂವ ಅಲ್ಲಾ ಏನಲ್ಲಾ !…ಮತ್ತ ಈ ವಿಠ್ಠಲಸ್ವಾಮಿ ನನ್ನ ದೇವರೂ ಅಲ್ಲಲಾ!…ಇನ್ನ ಮ್ಯಾಗ ನಂದೇನ ದಗದ ಐತಿ ಇಲ್ಲೀ?’ ಅಂತಂದಾಗ ಗೂಳಪ್ಪಜ್ಜ ಒಮ್ಮಿಗೆಲೇ ಅವನ ಮ್ಯಾಲೆ ಕವಕ್ಕೆಂದ…
‘…ಕಡಿಕೂ ನಿನ್ನ ಜಾತೀ ಯಾಪಾರೀ ಬುದ್ಧೀ ತೋರಿಸೇ ಬಿಟ್ಟಿ ನೋಡು… ದೇವರ ದಾಗೀನದೂ ಎಲ್ಲಾ ಕಳವ ಆಗಿ ಕುಂತಾಗ ಆ ದೇವರು ನಿನಗ ಬ್ಯಾಡಾತೇನು!… ನಾ ಹೋಗತನೂ -ನಾ ಹೋಗತನೂ… ಅಂತ ಅನ್ನಾಕತ್ತದೀ…!’ ಅಂತ ಅನತಿದ್ದಂಗಣಿ ಜಂಗೀ ರಾಮಣ್ಣ -‘…ಯಜ್ಜಾ ಇಂದ ಬೀಜ ಮಾತ ಆಡಿದಿ ನೋಡ.ಈ ಸ್ವಾಂವಜ್ಜ ಅಂದರ ದೇವರಣಿ ಆಗಿ ಕುಂತಿದ್ದ ನಿಮಗ…ನಾ ಆವತ್ತಣಿ ಹೇಳಿನ್ನಿ…ರಗತ ಸೇವಾಕ್ಕ ಆ ದ್ಯಾವಗ ರೊಕ್ಕಾ ಕೊಡೂದ ಬ್ಯಾಡಂತ ಇಂವ ಏನ ಹೇಳಿದನಲಾ…ಆವತ್ತಣಿ ಹೇಳಿನ್ನಿ . ಈ ಸ್ವಾಂವಜ್ಜಗ ನಮ್ಮ ದೇವರಮ್ಯಾಗ ಬಗತೀ ಇಲ್ಲಾ ಅಂತ…ಆದರ ನೀವೆಲ್ಲಿ ಕೇಳಿದಿರಿ…?ಎಲ್ಲಾದಕ್ಕೂ ನಿಮಗ ಸ್ವಾಂವಜ್ಜನಣಿ ಬೇಕು! ನಮ್ಮ ಜಾತೀ ಹುಡುಗೋರಂದರ ನೀವು ಹಿರ್‍ಯಾರೆಲ್ಲಾ ಒಂದ ನಮೂನೀ ಟಿಸಿ ಟಿಸೀ ಮಾಡತೀರಿ… ಇವತ್ತ ಸುದ್ದೇ ಆ ಈರಭದ್ರ ಏನೋ ನಾಕ ತಿಳುವಳಿಕೀ ಮಾತು ಹೇಳಾಕ ಹೋದರಣಿ ಅದನ್ನ ಬೇದೂ ಬಡದೂ ಕಳಿಸಿದಿರಿ…ಊರಿನ ಅಧಿಕಾರನ್ನೂದನ್ನ ಈ ಸ್ವಾಂವಜ್ಜಗ ಬರದ ಕೊಟ್ಟಣಿತೇನು…?’ ಅಂತ ಅನತಿದ್ದಂಗಣಿ ಗುಂಪಿನ ಹೊರಗ ಧರಣೀ ಸತ್ಯಾಗ್ರಹಕ್ಕ ಕುಂತಿದ್ದ ರಾಯಪ್ಪ ಟಣ್ಣಂತ ಜಿಗದ ಎದ್ದು ನಿಂತು –
‘ನಾನೂ ಅದನ್ನಣಿ ಹೇಳಿದಿನಿ…’ ಅಂತ ಅನತಿದ್ದಂಗಣಿ ಭರಮಪ್ಪ –
‘ಏಣಿ ಮಂಗ್ಯಾ ಸೂಳೀಮಗನಣಿ…ರಾಜಕೀಯ ಮಾಡಿ ಊರ ಹೊಲಸ ಎಬ್ಬಸಾಕ ಹೋಗಬ್ಯಾಡಾ…’ ಅಂತ ಹೇಳಿಕೋತ ರಾಯಾನ ಕಡೆ ನುಗ್ಗಿ ಅವನ ಎದೀಹಿಡದು ನುಗಿಸಿದ…ಗುಂಪಿನ್ಯಾಗಿನ ನಾಕೈದು ಮಂದಿ ಎದ್ದು ಓಡಿಹೋಗಿ ಭರಮನ್ನ ಎಳದ ಹಿಡದು ಬಿಡಿಸಿದರು…ಇಲ್ಲಿ ಹಿಂಗ ಜಗಳ ಹತ್ತಿದ್ದು ಕಂಡು …ಅಲ್ಲೇ ಗುಡಿಯ ಮಹಾದ್ವಾರದ ಹತ್ತರ ನಿಂತಿದ್ದ ಈರಭದ್ರನ ಇಲೆಕ್ಶನ್ನಿನ ಚೇನಿನ
ಹುಡಗೋರು ಬುದು ಬುದೂ ಅಂತ ಓಡಿ ಬಂದವು…ಬುದು ಬುದೂ ಅಂತ ಓಡಿ ಬಂದು-ಅವರೊಳಗಿನ ಕಂಬ್ಯಾರ ಬಸೂ ಅನ್ನುವವನು-‘ಯಾಕೋ ಪಿಸಾಳ್ಯಾಣಿ…’ ಅಂತ ಭರಮನ ಎದೀಮ್ಯಾಲಿನ ಅಂಗೀ ಹಿಡದು ಕೇಳತಿದ್ದಂಗಣಿ-ಅದ್ಯಾವ ಮಾಯದೊಳಗೆ ಅಲ್ಲಿಗೆ ಬಂದಿದ್ದನೋ ಏನೋ…! ಯಾರೂ ಕಾಣದಹಂಗೆ ಅಲ್ಲಿಗೆ ಬಂದಿದ್ದ ಈರ -ಮರಮಾತಿಗೆ ಬಿದ್ದು ನಿಂತಿದ್ದ ಭರಮನ ಮೂಗಿಗೆ…ಮುಟಿಗೀ ಮಾಡಿ ರುಮ್ಮಂತ ಹೇರಿಯೇ ಬಿಟ್ಟ !…ಭರಮನ ಮೂಗಿನಿಂದ ಭರಂಡಿ ರಕ್ತ ಸೋರಲಿಕ್ಕತ್ತಿತು! ಕಂಬ್ಯಾರ ಬಸೂ ಗಾಬರ್‍ಯಾಗಿ…ಭರಮನ ಅಂಗೀ ಹಿಡದಂವ ಹಂಗಣಿ ಕೈಬಿಟ್ಟು ಹಿಂದಕ ಸರದ…ಭರಮನ್ನ ಹಿಡಕೊಂಡವರೂ ಅವನ್ನ ಬಿಟ್ಟು ಗಾಬರ್‍ಯಾಗಿ ನಿಂತರು…ಭರಮನ ಮೂಗಿನಿಂದ ಚಿಮ್ಮಿದ ರಕ್ತ ಅವನ ಮೋತೀ – ಮೈಮ್ಯಾಲಿನ ಅಂಗಿಯಮ್ಯಾಲೆ ವ್ಯಾಪಸತಿದ್ದಂಗೇ…ಅಂವ ಹಂಗೇ ಸಾವಕಾಶ ಸಾವಕಾಶಣಿ ಕವಚಿಕೊಂಡು…ಕುಸದು ನೆಲಕ್ಕೆ ಬಿದ್ದ….ಆಗ ಅಲ್ಲಿದ್ದ ಮಂದಿ -‘ಆಣಿ…’ ಅಂತ ಬಾಯಿ ತಗದು-ದನಿ ಹೋದವರಂಗ ಸ್ತಬ್ದವಾಗಿ…ನಿಂತೂ ಕುಂತೂ ಇರಬೇಕಾದರೆ…ಸ್ವಾಂವಜ್ಜ ಆ ಗುಂಪಿನಿಂದ ನಿಧಾನಕ್ಕೇ ನಡದು ಹೊರಟು ಹೊಂಟ…ಅಂವ ಹೋಗುವುದನ್ನ ಗೂಳಪ್ಪಜ್ಜ ಬಿಟ್ಟ ಕಣ್ಣಿನಿಂದ ದಿಟ್ಟಿಸಿ ನೋಡಿಕೋತಣಿ…ಯಾವ ಒಂದು ಮಾತನ್ನೂ ಆಡದೇ… ಮೂಕನಾಗಿ ಕುಂತುಬಿಟ್ಟ !…
…ಸ್ವಾಂವಜ್ಜ ಇನ್ನೂ ಗುಡಿಯ ಮಹಾದ್ವಾರವನ್ನ ದಾಟೂಕಿಂತಾ ಮೊದಲಣಿ ಒಂದು ಹುಡುಗ ‘ಪಿ..ಪೀಂ…’ ಅಂತ ತನ್ನ ಕಾರಗಾಡೇ ಬಿಟಗೊಂಡು ಓಡಿ ಬಂದು…‘ಪೋಲೀಸರ ಬಂದರೂ…ಪಿ..ಪೀಂ…ಪೋಲೀಸರ ಜೀಪ ಗಾಡೇ ಬಂತೂ…ಪಿ..ಪೀಂ…!’ ಅಂತ ಹೇಳಿದ್ದಣಿ ಮತ್ತ ಹೊಳ್ಳಿ ತನ್ನ ಕಾರಗಾಡೇ ಬಿಟಗೊಂಡು ಓಡಿಹೋತು…ಅಲ್ಲಿಂದ ಎದ್ದು ಹೊಂಟಿದ್ದ ಸ್ವಾಂವಜ್ಜ ಅಲ್ಲೇ ತಡೆದು ನಿಂತು ಗುಡಿಯಕಡೆ ತಿರಿಗಿದ…ಅಲ್ಲಿ ಕೂತಂಥಾ ಮಂದಿ ಎಲ್ಲಾ ‘ಆಣಿ…’ ಅಂತ ಬಾಯಿ ತಗದು… ಎದ್ದು ನಿಂತು ಗುಡಿಯ ಮುಂದಿನ ನೆಲದ ಮ್ಯಾಲೆ ಕುಸದು ಬಿದ್ದ ಭರಮನ ಕಡೆ ಗಾಬರಿಯಿಂದ ನೋಡತಿರಬೇಕಾದರೇ…ಆ ವಿಠ್ಠಲ ಸ್ವಾಮಿಯ ಗುಡಿಯ ಮಹಾದ್ವಾರದ ಹೊರಗೆ ಭರ್ರಂತ ಸದ್ದು ಮಾಡಿಕೋತ…ಪೋಲೀಸರಂಬುವವರ ಜೀಪಗಾಡೀ ಬಂದು ನಿಂತು ಅದರೊಳಗಿಂದ ಖಾಕೀ ಹಾಕೊಂಡ ಪೋಲೀಸರಂಬುವವರು ಧಡ ಧಡಾ ಅಂತ ಕೆಳಗ ಜಿಗದು ಬಂದರು…!

ಭಾಗ : ಆರು
…ನೂರಾ ಐವತ್ತನೇ ವರ್ಷದ ಧರಮನಟ್ಟಿಯ ರಥೋತ್ಸವ ಹಿಂಗ ಅಂತರಾಳಿಯಾಗಿ ನಿಂತಾಗ, ಸ್ವಾಂವಜ್ಜನಿಗೆ ಎರಡು ಸಮಾಧಾನದ ಮಾತುಗಳನ್ನ ಹೇಳಿ ಬೆಂಗಳೂರಿಗೆ ಹೊರಟುಬಿಡಬೇಕೆಂದು ನಿರ್ಧರಿಸಿ…ಅವನ ಮನಿಗೆ ಹೋದರೆ ಅಲ್ಲಿ ಇಡೀ ಮನಿಗೆ ಲಕವಾ ಹೊಡದಂಗೆ…ಇಡೀ ಮನೀ ಸುಂದಾಗಿ ನಿಂತಿತ್ತು… ಹುಡುಗಾಟದ ಮೊಮ್ಮಕ್ಕಳಾದಿಯಾಗಿ ಮನಿ ಮಂದಿಯೆಲ್ಲ ಮಾತು ಕಳಕೊಂಡವರಂಗೆ ಮೂಕರಾಗಿ ಮುಖಾ ಇಳಿಬಿಟಕೊಂಡು ಕೂತಿದ್ದರು…ನನ್ನೊಂದಿಗೂ ಯಾರೂ ಮಾತಾಡಲಿಲ್ಲ …ಸ್ವಾಂವಜ್ಜನ ಹಿರಿಯ ಮಗ ನನ್ನ ಕಡೆ ನೋಡಿ -ಆಮೇಲೆ ಪಡಸಾಲಿಗೆ ಹೊಂದಿ ಇದ್ದ ಕೋಣಿಯಕಡೆ ನೋಡಿ -ನನಗೆ ಹೇಳಬೇಕಾದುದನ್ನು ಹೇಳಿದವನಂತೆ ಮತ್ತೆ ಮುಖಾ ಕೆಳಗೆ ಮಾಡಿಕೊಂಡು ಕೂತ…ಅಂವ ತೋರಿಸಿದ ಕೋಣಿಯೊಳಗೆ ಹೋಗಿ ನೋಡಿದರೆ…ಅಲ್ಲಿ …ಜಂತಿಯೊಳಗೆ ಕುಂತ ಯಾರೊಂದಿಗೋ ಮೌನ ಸಂಭಾಷಣೆ ನಡೆಸಿದವನಂತೆ…ಬಿಟ್ಟ ಕಣ್ಣಿನಿಂದ ದಿಟ್ಟಿಸಿಗೋತಣಿ… ಸ್ವಾಂವಜ್ಜ ಪಲ್ಲಂಗದ ಮ್ಯಾಲ ಅಂಗಾತಾಗಿ ಬಿದ್ದಿದ್ದ. ನನ್ನ ಕೆಮ್ಮಿನ ದನಿ ಕೇಳತಿದ್ದಂಗೇ ಬುದುಂಗನೆ ಎದ್ದು ಕುಂತು…ನನ್ನನ್ನ ದಿಟ್ಟಿಸಿ ನೋಡಿದ…ಪಲ್ಲಂಗದ ತುದಿಗೆ,ಅವನ ಎದುರಿಗೆ ಕೂತೆ.
ಗ್ವಾಡಿಗೆ ಆತು ಕೂತ ಸ್ವಾಂವಜ್ಜನ ಕಣ್ಣಿನಿಂದ ದಳ ದಳ ಅಂತ ಕಣ್ಣೀರು ಇಳಿದವು…ನನ್ನ ಮಾತುಗಳಂಬುವವು ತಮ್ಮ ಕಾಲು ಕಳಕೊಂಡು…ನಾಲಿಗೆ ಹೆಳವನಂತೆ ತೆವಳಿ…ದನಿಯೆಂಬುವುದು ಆರು ಆಳಗಳ ಕೆಳಗಿನ ಅಂಧಃಕಾರದ ಗವಿಯೊಳಗೆ ಹೂತು ಹೋತು…ನಾನು ಸರಕ್ಕಂತ ಮುಂದಕೆ ಸರದು ಆ ಅಜ್ಜನ ಹಸ್ತವನ್ನ ನನ್ನ ಹಸ್ತದೊಳಗೆ ತೆಗೆದುಕೊಂಡು…ಬಲ ಹಸ್ತದಿಂದ ನಿಧಾನ ನಿಧಾನವಾಗಿ ತಟ್ಟಿ ತಟ್ಟಿ…ಅವನನ್ನು ಸಮಾಧಾನ ಮಾಡಲಿಕ್ಕೆ ನೋಡಿದೆ…ನನ್ನೊಳಗೂ ಭಾವಾವೇಶದ ಸೆಲಿ ಒಡೆದು ಅದು ಹೊರಗೆ ಹರಿದೀತು ಅನ್ನುವ ಭಯ ಹುಟ್ಟಿ …ಅಸಹನೀಯ ಅನ್ನಿಸತೊಡಗಿತು!…ತನ್ನ ಹಸ್ತದ ಮೂಲಕ ನನ್ನ ಮನದೊಳಗೆ ಹುಟ್ಟಿದ ಅಸಹನೀಯತೆಯ ಭಾವವನ್ನು ತಿಳಿದವನಂತೆ ಸ್ವಾಂವಜ್ಜ ಸರಕ್ಕನೇ ನನ್ನ ಕೈಯಿಂದ ತನ್ನ ಹಸ್ತವನ್ನು ಎಳಕೊಂಡು… ಕಣ್ಣೀರು ಒರೆಸಿಕೊಂಡ…ಆಮೇಲೆ ಮುಖದ ಮ್ಯಾಲೆ ಒಂದು ನಮೂನಿಯ ನಿರ್ಜೀವ ಭಾವವನ್ನ ತಂದುಕೊಂಡು…ತನ್ನ ಕಣ್ಣುಗಳನ್ನ ನನ್ನ ಕಣ್ಣುಗಳಿಂದ ಬೇರ್ಪಡಿಸಿಕೊಂಡು-
‘…ಸಾಹೇಬರಣಿ ನಮ್ಮ ಕುಗ್ರಾಮದ ರೊಜ್ಜಿನ್ಯಾಗ ನಿಮ್ಮನ್ನ ಸುಮಸುಮ್ಮನಣಿ ಮೂರ ದಿನಾ ಇರೂಹಂಗ ಮಾಡಿದಿನಿ…ನಿಮ್ಮೂ ಏನೇನ ದಗದ ಇದ್ದೂವೋ ಯಾಂವ ಬಲ್ಲ…ನನ್ನ ಕ್ಷಮಾ ಮಾಡರಿ. ನೀವು ಬೆಂಗಳೂರಿಗೆ ಹೊಂಡಾವರಾದರ ಹೊಂಡರಿ…’ ಅಂತ ಹೇಳಿದವನೇ ಗ್ವಾಡಿಯ ಕಡೆ ಮುಖಾ ಮಾಡಿ ಹೋಳ ಮಗ್ಗಲು ಮಲಗಿ ಬಿಟ್ಟ…ಸ್ವಾಂವಜ್ಜನಿಗೆ ಆಗ ಮಾತುಗಳಂಬುವವು ಬ್ಯಾಡಾದಂಗ ಆಗಿತ್ತು.ನನಗೂ ಹಂಗಣಿ ಅನಸಲಿಕ್ಕತ್ತಿತ್ತು…ಅವನಿಗೆ ಸಮಾಧಾನ ಹೇಳುವ ಅವಶ್ಯಕತೆ ಮತ್ತು ಪ್ರಯೋಜನಗಳ ಬಗ್ಗೆ ನನಗೆ ಅನುಮಾನ ಹುಟ್ಟಿತು…ಏನೂ ಮಾತಾಡದೇ ಎದ್ದು ಬಂದೆ. ನಿರುತ್ಸಾಹದಲ್ಲಿಂi ಅ
ಧರಮನಟ್ಟಿಯಿಂದ ಗಂಟು ಗದಡಿ ಕಟಿಗೊಂಡು ಹೊಂಟದ್ದಾಯಿತು…
*
*
*
ಇದಾದ ಆರು ವರ್ಷಗಳ ತನಕಾ ನನಗೆ ಕುತೂಹಲವಿದ್ದರೂ ಧರಮನಟ್ಟಿಯ ಮಂದಿಯ ಯಾವ ಸುದ್ದಿಯೂ ತಿಳಿಯಲಿಲ್ಲ…ಹಾಂ…ದೇವಸ್ಥಾನದ ಕಳವಿನ ಬಗ್ಗೆ ಪೋಲೀಸು ಇಲಾಖೆಯವರ ಸುದ್ದಿಗಳು ಒಂದಿಷ್ಟು ದಿನಗಳ ಕಾಲ ಬಂದು ಆಮೇಲೆ ಅವೂ ನಿಂತು ಹೋದವು. ಅವರು ಮೊದಲು ದ್ಯಾವಪ್ಪನ ಮ್ಯಾಲೆಯೇ ಸಂಶಯವಿಟ್ಟು ತನಿಖೆ ಸುರು ಮಾಡಿದ್ದರು.ಆದರೆ ಅವರಿಗೆ ಸಿಕ್ಕ ಸಾಕ್ಷಿ ಪುರಾವೆಗಳೆಲ್ಲ ಅವರ ಥಿಯರಿಗೆ ವಿರುದ್ಧವಾಗಿದ್ದವು…ದ್ಯಾವಪ್ಪ ಆ ದಿನ ಉದಗಟ್ಟಿಯಿಂದ ಹೊಂಟಾಂವ…ಸಂಜಿಯ ನಾಕು ಘಂಟೇಕ್ಕ ಅಲ್ಲಿಂದ ಬಿಟ್ಟಾಂವ…ಐದು ಐದೂವರಿಯಷ್ಟೊತ್ತಿಗೆ ಘಟಪ್ರಭಾ ರೇಲ್ವೆ ಸ್ಟೇಶನ್ನಿಗೆ ಬಂದು ಅಲ್ಲಿ ಸ್ಟೇಶನ್ನಿನ ಹೊರಗಿನ ಒಂದು ಛಾದಂಗಡಿಯ ಮುಂದ ತನ್ನ ಫಟಫಟಿಯನ್ನ ನಿಲ್ಲಿಸಿ , ಆ ಚಹಾದಂಗಡಿಯ ಮಾಲಕನಿಗೆ –
‘ನಾನು ಅರ್ಜಂಟಾಗಿ ಮುಂಬಯಿಗೆ ಹೋಗಬೇಕಾಗೇತಿ.ಈ ಗಾಡೇದ ಕೀಲೀ ಕೈ ಇಟಗೋರಿ…ನಾಳೆ ಹರ್‍ಯಾಗ ಧರಮನಟ್ಟಿಂದ ಎರಡ ಹುಡಗೋರು ಬಂದು ನನ್ನ ಹೆಸರ ಹೇಳತಾರು…ಅವರ ಕಡೆ ಈ ಗಾಡೇದ ಕೀಲೀ ಕೈ ಕೊಡರಿ… ದಯಮಾಡಿ ಇಷ್ಟ ಅನುಕೂಲ ಮಾಡಿಕೊಡರಿ…’ ಅಂತ ಹೇಳಿ ದೈನಾಸ ಪಟ್ಟನಂತ.ಚಾದಂಗಡಿಯ ಮಾಲಕ ಅನುಮಾನಿಸಿ ಅನುಮಾನಿಸಿ…ಕಡಿಕ ಆಗಲಿ ಅಂತ ಒಪ್ಪಿ ಇವನ ಹೆಸರು ಕೇಳಿದ್ದಕ್ಕ-ಗೊಂಬೀರಾಮರ ದ್ಯಾವಪ್ಪ …ಸಾಕೀನ ಕಳ್ಳೀಗುದ್ದಿ ಅಂತ ಹೇಳಿದನಂತ…

ಮುಂದ ಒಂದ ವಾರ ಆದರೂ ಯಾರೂ ಬಂದು ಗಾಡಿಯ ಕೀಲೀ ಕೈ ಕೇಳಲಿಲ್ಲ… ಆದರ ಎಂಟನೇ ದಿನಾ ಗೋಕಾಂವಿಯ ಪೋಲೀಸರು ಬಂದು – ಈ ಫಟಫಟೀ ಇಲ್ಲಿ ಹೆಂಗ ಬಂತು? ಇದರ ಮಾಲಕ ನಿನಗ ಗೊತ್ತ ಏನೂ…? ಅವನಕೂಟೇ ನಿನಗ ಎಷ್ಟ ದಿನದಿಂದ ಸಂಪರ್ಕ ಐತೀ…? ಅಂತ ನೂರಾ ಎಂಟು ಪ್ರಶ್ನಾ ಕೇಳಿ ವಿಚಾರಣೀ ಮಾಡಿ… ಆಮ್ಯಾಲ ಅವನ್ನ ಮತ್ತ ದ್ಯಾವಪ್ಪನ ಫಟಫಟಿನ್ನ ಪೋಲೀಸ ಠಾಣೇಕ್ಕ ಒಯ್ದರಂತ… ನೀನೂ ಧರಮನಟ್ಟಿಯ ದೇವಸ್ಥಾನದ ತುಡಗಿನೊಳಗ ಶಾಮೀಲ ಅದೀ…ತುಡಗಿನ ಮಾಲು ಎಲ್ಲಿ ಮುಚ್ಚಿಟ್ಟದೀರಿ ಹೇಳು…ಅಂತ ಪೋಲೀಸರು ಆ ಚಾದಂಗಡಿಯ ಮಾಲಕನನ್ನ ತಮ್ಮ ಭಾಷಾದಾಗ ಮಾತಾಡಿಸಿ – ಅದೂ ಇದೂ ಸೇವಾ ಮಾಡಿ ಲಾಕಪ್ಪಿಗೆ ಹಾಕಿದರಂತ…ಅವನ ಮಕ್ಕಳು ಏನೆಲ್ಲಾ ಹಣಗಲಾ ಹಾಕಿ…ಲೋಕಲ್ ಎಮ್ಮೆಲ್ಲೇನ್ನ ಹಿಡಕೊಂಡು…ಅಂತೂ ಅವನ್ನ ಲಾಕಪ್ಪಿನಿಂದ ಬಿಡಿಸಿಕೊಂಡ ಬರಾಕ ಎಂಟ ದಿನಾ ಹಿಡದವು…ಮುಂದ ಆ ಚಾದಂಗಡಿಯ ಮಾಲಕ ಹೇಳಿದ ಮಜಕೂರದ ಪ್ರಕಾರ ತನಿಖಾ ಮಾಡಿದಾಗ ಅಂವ ಹೇಳಿದ್ದು ಖರೇ ಹಕೀಕತ್ತು ಅನ್ನುವುದು – ಮತ್ತ ದ್ಯಾವಪ್ಪ ಅಂದು ಸಂಜೀ ಯೋಳರ ಟ್ರೇನಿಗೇ ಮುಂಬಯಿಗೆ ಹೋದದ್ದು ಖರೇ ಅನ್ನುವುದು ಖಾತ್ರೀ ಆಗಿ…ಪೋಲೀಸರಿಗೆ ದ್ಯಾವಪ್ಪನ ಮ್ಯಾಲಿನ ಸಂಶಯ ಕ್ರಮೇಣ ಕಡಿಮಿ ಆತು.ಆದರೂ ಅವರು ದ್ಯಾವಪ್ಪನ್ನ ಹುಡುಕುವ ನೆವದಿಂದ ಹಗಲೆಲ್ಲಾ ಮುಂಬಯಿಗೆ ಹೋಗಿ ಬಂದು…ಮುಂಬಯಿಯ ಪ್ರವಾಸದ ಸುಖಾ ಮತ್ತು ಭತ್ತೇಗಳನ್ನ ಪಡಕೊಂಡರು…ಆಮ್ಯಾಲ ಮುಂದ ಪೋಲೀಸರು ಗುಡಿಯ ಪೂಜಾರಿನ್ನ ಎಳಕೊಂಡ ಹೋಗಿ ಹೊಡದೂ ಬೆದರಿಸೀ ಮಾಡಿ ಅವನ್ನೂ ಬಿಟ್ಟರಂತ….ಹಿಂಗಣಿ ಯಾರ್‍ಯಾರ ಮ್ಯಾಲೋ ಅನುಮಾನ ಮಾಡಿ ಹಿಡಕೊಂಡ ಹೋಗೂದೂ ಮತ್ತ ಆಮ್ಯಾಲ ಬಿಡೂದೂ…ಹಿಂಗ ನಡದ ಪೋಲೀಸರ ಪತ್ತೇದಾರೀ ಕೆಲಸ ಆಮ್ಯಾಲ ಆಮ್ಯಾಲ… ಕ್ರಮೇಣ ಸಾವಕಾಶೇ ಸಾವಕಾಶೇ ಆಕ್ಕೋತ…ಕಡೀಕ ಪೋಲೀಸ ಠಾಣೇದಾಗಿನ ಫೈಲಿನೊಳಗ ಮಾತ್ರ ಉಳಕೊಂಡಿತು… ಇಷ್ಟರ ನಡವ ಗೋಕಾಂವಿಯ ‘ಸಮದರ್ಶಿ’ ಅನ್ನುವ ಪತ್ರಿಕಾದೊಳಗ ಜಿಲ್ಲಾದ ದೊಡ್ಡ ದೊಡ್ಡ ರಾಜಕಾರಣಿಗಳು ಈ ಕಳವಿನ ಹಿಂದೆ ಇದ್ದಾರೆ…ನಾಕೈದು ಲಕ್ಷದ ದೇವರ ಆಭರಣಗಳು ಯಾರು ಯಾರೋ ದೊಡ್ಡ ದೊಡ್ಡ ಕುಳಗಳ ಹೆಂಡಂದಿರ ಕೊರಳುಗಳನ್ನ ಅಲಂಕರಿಸಲಿದ್ದಾವೆ…ಹಂಗೆ ಹಿಂಗೆ…ಅಂತ ಯಾರ್‍ಯಾರ ಮ್ಯಾಲೋ ಸಂಶಯ ಬರುವಹಂಗ ಸುದ್ದಿಯನ್ನ ಪ್ರಕಟಿಸಿ…ಅದು ಜಿಲ್ಲೆಯ ತುಂಬ ಗುಲ್ಲು ಗುಲ್ಲು ಆಯಿತು…ಆಮ್ಯಾಲ ಮುಂದ ಸಮದರ್ಶಿಯ ಸಂಪಾದಕನನ್ನ ಗೋಕಾಂವಿಯ ಹಳೇ ಬಸ್‌ಸ್ಟ್ಯಾಂಡಿನೊಳಗ ಯಾರೋ ಹಿಗ್ಗಾ ಮುಗ್ಗಾ ಹೊಡದು ಒಗದು ಹೋದರು…ಈ ಘಟನಾ ನಡದ ಮ್ಯಾಲಂತೂ ಧರಮನಟ್ಟಿಯ ದೇವಸ್ಥಾನದ ತುಡಗಿನ ಕೇಸಿನ ಪತ್ತೇದ ಕೆಲಸ ಇನಷ್ಟು ಸಾವಕಾಶೇ ಆಗಿ ಹೋತು…
ಧರಮನಟ್ಟಿಯ ವಿಠ್ಠಲ ದೇವರ ಗುಡಿಯ ತುಡುಗು ಆದ ಆರು ವರ್ಷಕ್ಕ
ನಾನು ರಿಟೈರ್ ಆದೆ…ಬೆಂಗಳೂರು ಬ್ಯಾಸರ ಬಂದಂಗಾಗಿತ್ತು…ನಮ್ಮ ಊರಾಗಣಿ ಇದ್ದುಬಿಡೂದು ಅಂತ ಮನಸ ಮಾಡಿ , ಬೆಂಗಳೂರಿನ ಫ್ಲಾಟನ್ನ ಬಂದಷ್ಟಕ್ಕೆ ಮಾರಿ ಊರಿಗೆ ಬಂದುಬಿಟ್ಟೆ .
*
*
*
ಊರಿಗೆ ಬಂದು ನಾಕೈದು ತಿಂಗಳು,ಅಲ್ಲಿ ನೆಲಿ ಊರಲಿಕ್ಕೆ ಕಳದವು… ಬೆಂಗಳೂರಿನ್ಯಾಗ ಇದ್ದವರು ವಾಪಸ್ಸು ಹಳ್ಳಿಗೆ ಬಂದು ನಿಲ್ಲುವುದರಲ್ಲಿ ಅದರದೇ ಆದ ಸಮಸ್ಯೆಗಳಿವೆ… ಬೆಂಗಳೂರಿನಿಂದ ನಮ್ಮೊಂದಿಗೆ ಇರಲು ಬಂದವರು ಅಂತ ಊರವರಿಗೆ ಏನೋ ಒಂದು ತರದ ಅಸಹನೆ ಮತ್ತು ಕುತೂಹಲ…ಅಲ್ಲಿಂದ ಬರುವಾಗ ಬುಟ್ಟಿಗಟ್ಟಲೆ ರೊಕ್ಕಾ ಕಟಿಗೊಂಡು ಬಂದಿರುತ್ತಾರೆನ್ನುವ ಭ್ರಮೆಯೊಳಗೆ ನಮ್ಮಿಂದ ಏನೇನೋ ಅಪೇಕ್ಷೆಗಳು…ಆಸೆಗಳು…ಸಣ್ಣಪುಟ್ಟ ಕೆಲಸಕ್ಕೆ ಕೂಲಿಗೆ ಕರೆದರೂ ಒಂದಕ್ಕೆ ಎರಡು ಮೂರು ಪಟ್ಟು ಕೇಳಿ ಗೋಳಾಡಿಸುವರು…ಯಾಕಾದರೂ ಹಳ್ಳಿಗೆ ಬಂದು ನೆಲೆಸುವ ವಿಚಾರ ಮಾಡಿದೆವೋ ಅನ್ನುವಂತೆ ಮಾಡಿದರು…ನಾವು ಕ್ರಮೇಣ ಅವರಿಗೆ ಹೊಂದಿಕೊಂಡು…ಅವರನ್ನು ಸಾಧು ಮಾಡಿಕೊಳ್ಳಲಿಕ್ಕೆ ನಾಕೈದು ತಿಂಗಳು ಬೇಕಾಯಿತು…ಅದಾದಮೇಲೆಯೇ ನನಗೆ ಧರಮನಟ್ಟಿ -ಕಳ್ಳೀಗುದ್ದಿ -ಉದಗಟ್ಟಿಗಳು ನೆನಪಿಗೆ ಬಂದವು…ಈ ಮೂರೂ ಊರುಗಳು ನಮ್ಮ ಊರಿನಿಂದ ದೂರವೇನೂ ಅಲ್ಲ…ಕಳ್ಳೀಗುದ್ದಿ ನಾಕು ಹರದಾರಿಯ ಹಾದಿಯಾದರೆ ಧರಮನಟ್ಟಿ ಆರೇಳು ಹರದಾರಿಯ ಹಾದಿ…ಇನ್ನು ಉದಗಟ್ಟಿಯಂತೂ ಬರೇ ದೀಡು-ಎರಡು ಹರದಾರಿಯ ಹಾದಿ…
ಮೊದಲಿಗೆ ಸ್ವಾಂವಜ್ಜನನ್ನು ನೋಡಬೇಕೆಂದು ಮನಸು ಹರಿಯಿತು. ನಸುಕಿನಲ್ಲಿಯೇ ಹೊರಟು ಹತ್ತರಷ್ಟೊತ್ತಿಗೆ ಸ್ವಾಂವಜ್ಜನ ಮನಿ ತಲುಪಿದೆ.ಹೊರಗಿನ ಕಟ್ಟಿಯ ಮ್ಯಾಲೆ ಸ್ವಾಂವಜ್ಜನ ಹೆಂಡತಿ ಪದ್ದವ್ವ ಸಾವಕಾರ್ತಿ ತನ್ನ ಮಗ್ಗಲಿಗೆ ಕೈಕೋಲನ್ನ ಇಟಗೊಂಡು ಗೂರಿಕೋತ ಕೂತಿದ್ದಳು…ಹತ್ತಿರಕ್ಕೆ ಹೋಗಿ –
‘ನಮಸ್ಕಾರ ಪದ್ದವ್ವ ಸಾವಕಾರ್ತಿಗೆ…’ ಅಂತ ಅಂದಾಗ ಆಕಿ ಘಸಲ್ಲನೇ ನನ್ನ ಕಡೆ ತಿರಿಗಿ…ಮುಖಾ ಮುಂದಕ ಚಾಚಿ,ಕಣ್ಣ ಮ್ಯಾಲ ಕೈ ಹಿಡದು…ಕಣ್ಣ ಕಿಸದು ದಿಟ್ಟಿಸಿ ನೋಡಿ…ಗುರತು ಹತ್ತದೇ ಗೊಂದಲಗೊಂಡು-
‘ಯಾರಾಣಿ…?’ ಅಂತ ನುಡದು… ದಾಪು ಹತ್ತಿ ತೇಕತೊಡಗಿದಳು.
‘ನಾನು…ಗುರತ ಹತ್ತಲಿಲ್ಲ ಏನ್ರಿ…ಬೆಂಗಳೂರಿನ ವರ್ತಮಾನ ಪತ್ರಿಕಾದಾಂವ…ಸ್ವಾಂವಜ್ಜ ಸಾವಕಾರು ನೂರಾ ಐವತ್ತನೇ ವರ್ಷದ ತೇರಿಗಂತ ನನ್ನನ್ನ ಕರಿಸಿಕೊಂಡಿದ್ದರ ನೋಡ್ರಿ…’ ಅಂತ ಹೇಳತಿದ್ದಂಗಣಿ ಆಕಿಗೆ ನನ್ನ ಗುರ್ತು ಹತ್ತಿತು.

‘ಅಯ್ಯಣಿ ನನ ಶಿವನಣಿ…ಏನ ಮಾಡೂದರೀ ಸಾಹೇಬರಣಿ…ಕಣ್ಣಿಗೆ ಪರೀ ಬರಾಕತ್ತಾವು.ಎಲ್ಲಾ ಮಸಕ ಮಸಕ ಕಂಡಂಗಾಗಿ ಗುರತು ಹತ್ತಲಿಲ್ಲ …ನೀವು ಬಂದನೂ ರಗಡ ದಿನಾ ಆಗಿ ಹ್ವಾದೂ ಅಲ್ಲರಿ…ನೀವ ಬಂದ ಹೋಗಿ ಈಗ ಆರು ವರ್ಷದ ಮ್ಯಾಗಣಿ ಆಗಿರಬೇಕಲ್ಲರೀ…?’ ಅಂತ ಹೇಳಿಕೋತ ಅಲ್ಲೇ ತನ್ನ ಮಗ್ಗಲದಾಗ ಕೂಡಲಿಕ್ಕೆ ಸನ್ನೀ ಮಾಡಿ…ಕೈಯಿಂದಲೇ ಅಲ್ಲಿಯ ಧೂಳು ಒರಿಸಿದಳು.ನಾನು ಆಕಿಯ ಮಗ್ಗಲಿಗೆ ಕೂತಾಗ ಆಕಿ ಇನ್ನೊಮ್ಮೆ ನನ್ನನ್ನು ದಿಟ್ಟಿಸಿ ನೋಡಿ ಸ್ಪಷ್ಟ ಮಾಡಿಕೊಂಡಳು…
‘…ನಂದೂ ಪೆನ್ಶನ್ ಆತು.ಈಗ ಇಲ್ಲೇ ಬೆಟಗೇರಿಗೇ ಬಂದದನು… ಭಾಳ ದಿವಸದಿಂದ ಸ್ವಾಂವಜ್ಜನ್ನ ನೋಡಬೇಕೂ ನೋಡಬೇಕೂ ಅಂತ ಮನಸ ಹರೀತಿತ್ತು… ಅದಕ್ಕಣಿ ಇಂದ ಹರ್‍ಯಾಗ ಎದ್ದ ಕೂಡಲೇ ಹೊಂಟ ಬಿಟ್ಟನಿ…’ ಅಂದೆ.ಮುದಿಕಿ ಯಾವ ಮಾತೂ ಆಡದೇ ಸುಮ್ಮನೇ ಕುಂತಳು…ಆಕಿಗೆ ಕೇಳಸಲಿಲ್ಲ ಏನೋ ಅಂತ ತಿಳಕೊಂಡು ‘…ಸ್ವಾಂವಜ್ಜ ಊರಾಗ ಇಲ್ಲ ಏನರಿ…?’ ಅಂತ ಮತ್ತೊಮ್ಮೆ ಕೇಳಿದೆ.
‘ಇನ್ನೆಲ್ಲಿ ನಿಮ್ಮ ಸ್ವಾಂವಜ್ಜ ಸಾವಕಾರರೀ…ಅಂವ ಘಾತಾ ಮಾಡಿ ಹೋಗಿಬಿಟ್ಟ ರೀ…’ ಅಂತ ನುಡದ ಪದ್ದವ್ವ ಸಾವಕಾರ್ತಿ ಮೌನವಾಗಿ ರೋದಿಸತೊಡಗಿದಳು… ನನಗೆ ಆಘಾತವಾದಂಗಾಗಿ ‘ಹಾಂ…’ ಅಂತ ಉದ್ಗಾರ ತಗದು ಮೂಕನಾಗಿ ಕೂತು ಬಿಟ್ಟೆ…
ಪದ್ದವ್ವ ತನ್ನ ಅಳುವನ್ನ ತಹಬಂದಿಗೆ ತಂದುಕೊಂಡು…ಸೆರಗಿನಿಂದ ಕಣ್ಣು ಮೂಗುಗಳನ್ನ ಒರೆಸಿಕೊಂಡು ಹೇಳಲಿಕ್ಕೆ ಸುರುಮಾಡಿದಳು-
‘…ವಿಠ್ಠಲ ದೇವರೂ ವಿಠ್ಠಲ ದೇವರೂ ಅಂತ ಬಾಳ ಮೋಹಾ ಇಟಗೊಂಡಿದ್ದ ನಮ್ಮ ಸಾವಕಾರಾಣಿ…ನಾನು ಹಗಲೆಲ್ಲಾ – ಇದೆಲ್ಲೀ ವಿಠ್ಠಲ ವಿಠ್ಠಲ ಅಂತ ಮಿಥ್ಯಾ ದೇವರನ ಕಟಿಗೊಂಡೀ…ಅಂತ ನಗಿಚಾಟಿಕೀ ಮಾಡಿದರ ನನ್ನ ಮ್ಯಾಗಣಿ ಸಿಟ್ಟಿಗೇಳಾಂವ…ಕಡೀಕ ಅದಣಿ ವಿಠ್ಠಲ ದೇವರ ದಸಿಂದನಣಿ ಎದೀ ಒಡಕೊಂಡು ಜೀವಾ ಕಳಕೊಂಡಾ !…ದೇವರ ದಾಗೀನಗೋಳು ಕಳವ ಆದರ ತುಡಗ ಮಾಡಿದವರನ್ನ ಹಿಡಕೊಂಡ ಹೋಗಬೇಕರ್‍ಯೋ ಇಲ್ಲಾ ತುಡಗ ಮಾಡದವರನ್ನ ಹಿಡಕೊಂಡ ಹೋಗಬೇಕರ್‍ಯೋ!…ತುಡಗ ಮಾಡಿದವರನ್ನ ಬಿಟ್ಟು ಇಂವನ್ನಣಿ ಹಿಡಕೊಂಡ ಹೋಗಬೇಕೇನರೀ ಆ ಪೋಲೀಸರೂ…!ನಮ್ಮ ಹಿರ್‍ಯಾನ್ನ ಎರಡ ದಿನಾ ಪೋಲೀಸ ಠಾಣೇದಾಗ ಇಟಗೊಂಡು ಮೂರನೇ ದಿನಾ ಮನಿಗೆ ಕಳಿಸಿದರರೀ… ಅಂವ ಹೊಳ್ಳಿ ಮನಿಗೆ ಬಂದಾಗ ಅವನ ಮಖಾ ನೋಡಿದಿನರೀ…ಸಾಹೇಬರಣಿ ಖರೇ ಹೇಳತನೂ…ಆಗಣಿ…ಪೋಲೀಸ ಠಾಣೇದಿಂದ ಹೊಳ್ಳಿ ಬಂದಾಗನಣಿ ನಮ್ಮ ಸಾವಕಾರ ತೀರಿಕೊಂಡಿದ್ದನರಿ…!ಅಂವ ಉಸರಾಡಸೂ ಹೆಣಾ ಆಗಿದ್ದ !…ದೇವರು ಒಳ್ಳೇವರನ್ನ ಸತ್ವ ಪರೀಕ್ಷಾ ಮಾಡತಾನೂ…ಅದೂ ಇದೂ…ಅಂತ ನಾ ಅಂವಗ ನೂರಾ ಎಂಟು ಹೇಳಿ ಅಂವನ್ನ ಸಮಾಧಾನಾ ಮಾಡಾಕ ನೋಡಿನಿ… ಊಹೂಂ!…ಏನೂ ಉಪೇಗ
ಆಗಲಿಲ್ಲರಿ…ಠಾಣೇದಿಂದ ಬಂದ ಮರದಿವಸನಣಿ ಅರ್ಧಾಂಗವಾಯು ಹಾಯಿತು… ಬಲಭಾಗ ಪೂರಾ ಬಿದ್ದಹೋತು…ನಾಲಿಗಿ ಏನ ಹೋಗಿರಾಕಿಲ್ಲ…ಆದರ ಒಟ್ಟಣಿ ಮಾತಾಡೂದನ್ನಣಿ ನಿಂದರಿಸಿ ಬಿಟ್ಟ ! ಅರ್ಧಾಂಗವಾಯಿ ಹಾದ ಮೂರನೇ ದಿನಾರೀ ಅಂದ ಒಂದಣಿ ಒಂದು ಮಾತಾಡಿದ…ತನ್ನ ಕರಕೊಂಡು ಹೋಗಿ ವಿಠ್ಠಲ ಸ್ವಾಮಿಯ ದರಶನಾ ಮಾಡಿಸಿಕೊಂಡ ಬರ್ರೀ ಅಂತ !…ಜಳಕಾ ಮಾಡಿಸಿ ಮಡೀ ದೋತರಾ ಉಡಿಸಿ ಮಡಿಮಾಡಿದ ಅಂಗೀ ತೊಡಿಸಿ…ಚಕಡೀ ಹೂಡಿಕೊಂಡು ಗುಡಿಗೆ ಕರಕೊಂಡು ಒಯ್ದು ದೇವರ ದರಶನಾ ಮಾಡಿಸಿಕೊಂಡ ಬಂದರು…ನನಗೂ ಬಾ ಅಂತ ಕರದರ ಖರೇ ನಾಯೇನ ಹೋಗಲಿಲ್ಲ…ಗುಡಿಗೆ ಹೋಗಿ ಬಂದವನಣಿ ಅಂವ ಸಲ್ಲೇಖನ ಹಿಡದ ಬಿಟ್ಟಿದ್ದ !…ಒಂದ ತುತ್ತು ಉಣಲಿಲ್ಲ…ಎರಡ ದಿನಾ,ನೀರ ಹಾಕಾಕ ಹೋದರ ಯಾವಾಗರೇ ಒಮ್ಮೊಮ್ಮಿ ನೀರ ತಗೋಳಾಂವ…ಮುಂದ ಮೂರದಿನದ ಮ್ಯಾಗ ನೀರ ತಗೋದನ್ನೂ ಬಿಟ್ಟ …ನಾನು ಅತ್ತು ಗೋಳ್ಯಾಡಿ ಪರಿ ಪರಿಯಿಂದ ಬೇಡಿಕೊಂಡರೂ ಅಂವೇನ ಕರಗಲಿಲ್ಲರೀ…ಗುಡ್ಯಾನ ವಿಠ್ಠಲನಗತೇ ಇಂವನೂ ಕಲ್ಲ ಆಗಿ ಕುಂತಿದ್ದ ! ವಿಠ್ಠಲ ಸ್ವಾಮೀ ವಿಠ್ಠಲ ದೇವರೂ ಅಂತ ಆ ದೇವರ ಮ್ಯಾಗ ಭಕ್ತೀ ಮಾಡಿ ಈಗ ಈ ಸಲ್ಲೇಖನಾ ಅಧೆಂಗ ಹಿಡೀತೀ…? ಮಿಥ್ಯಾತ್ವಕ್ಕಣಿ ಮತ್ತ ಸಲ್ಲೇಖನಕ್ಕಣಿ ಅಧೆಂಗ ಹೊಂದಾಣಿಕಿ ಆಗತೈತಿ…? ನಿಂದು ಎಡಬಿಡಂಗೀ ರೀತಿ ಐತಿ ಇದಾ…ಇದನ್ನ ಬಿಡ ನೀನಾ…ಅಂತ ಬೈದು ಜಗಳಾಟಕ್ಕ ಎಳಿಯೂಣೂ ಅಂತಂದರ ಅಂವ ನನ್ನ ಮಾತಿಗೆ ಬರೇ ಒಂದ ಮುಗಳ ನಗೀ ನಕ್ಕು ಸುಮ್ಮಗಾದ !…ಅರ್ಧಾಂಗಿ ಹಾದು ಅದ್ರಗೊಂಡ ಸರೀರ ನೋಡ್ರೀ…ಬಾಳ ದಿನಾ ತಾಳಲಿಲ್ಲ…ನೀರ ಬಿಟ್ಟ ಎರಡನೇ ದಿನಕ್ಕಣಿ ಪ್ರಾಣಾ ಬಿಟ್ಟ….’. ಇಷ್ಟು ಹೇಳಿದ ಪದಮವ್ವಸಾವಕಾರ್ತಿ ಶೂನ್ಯವನ್ನ ದಿಟ್ಟಿಸಿಗೋತ ಕೂತುಬಿಟ್ಟಳು…
ಪದಮವ್ವ ಮಾತಾಡುವ ದನಿಯನ್ನ ಕೇಳಿದ ಆಕಿಯ ಇಬ್ಬರು ಸೊಸ್ತ್ಯಾರು ಒಮ್ಮೊಮ್ಮೆ ಬಾಗಿಲಿನೊಳಗಿಂದ ಹೊರಗೆ ಹಣಿಕಿ ನನ್ನನ್ನ ನೋಡಿ ನೋಡಿ ಒಳಗ ಹೋಗಿದ್ದರು…ಅವರಿಗೆ ನನ್ನ ಗುರುತು ಛಲೋತಂಗೆ ಇತ್ತು…ಸ್ವಾಂವಜ್ಜ ಇದ್ದಾಗ ನಾನು ಬಂದಾಗ ಅವರು ನನಗೆ ಕಾಲು ತೊಳಕೋಲಿಕ್ಕೆ ನೀರು ತಂದು ಕೊಟ್ಟು ನನ್ನೊಂದಿಗೆ ನಕ್ಕು ಕೆಲೆದು ಮಾತಾಡಿದ್ದರು…ಹಾಲು ಕಾಯಿಸಿ ತಂದು ಕೊಟ್ಟು ಉಪಚರಿಸಿದ್ದರು…ಈಗ ನನ್ನನ್ನು ನೋಡಿ ಒಳಗೆ ಹೋದವರು ಮತ್ತೆ ಹೊರಗೆ ಇಣುಕಲಿಲ್ಲ…
ಇತ್ತ ಪದಮವ್ವ ಶೂನ್ಯ ಲೋಕವನ್ನು ದಿಟ್ಟಿಸುತ್ತ ಮೂಕ ಸಂಭಾಷಣೆ ನಡೆಸುತ್ತ ಕೂತುಬಿಟ್ಟಾಗ ನನ್ನ ಅಂತಃಕರಣವೂ ಮಾತು ಕಳಕೊಂಡು ಮೂಕವಾಯಿತು…ಪದಮವ್ವ ಮುದುಕಿಯನ್ನ ಆಕಿಯ ಲೋಕದಲ್ಲಿಯೇ ಬಿಟ್ಟು ಯಾವುದೊಂದೂ ಮಾತಾಡದೆಯೇ ಅಲ್ಲಿಂದ ಎದ್ದು ಬಂದೆ…
ಧರಮನಟ್ಟಿಯಿಂದ ಬಂದಮ್ಯಾಲೆ ಎರಡು ದಿನಗಳ ಕಾಲ ಸ್ವಾಂವಜ್ಜನ ನೆನಪು ನನ್ನನ್ನು ಕಾಡಿಸಿತು…ಅಂವ ಧರಮನಟ್ಟಿಯ ಜನರ ವಿವೇಕ ಪ್ರಜ್ಞೆಯಂತಿದ್ದ…ಆದರೆ

ಧರಮನಟ್ಟಿಯ ಜನ ಯಾವತ್ತಿಗೂ ಅವನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲೇ ಇಲ್ಲ!…ನಿತ್ಯ ಸಂಶಯಕ್ಕೆ ಈಡಾದರೂ ಅಂವ ಮಾತ್ರ ಕಡಿತನಕ ಊರಿನ ಸಮುದಾಯದ ನಡೆಗೆ ತನ್ನ ವಿವೇಕದ ನೋಟವನ್ನು ನೀಡುತ್ತಲೇ ಬಂದ…ಈ ಸ್ವಾಂವಜ್ಜ ಜೈನನೋ… ವೈದಿಕನೋ…ಅವೈದಿಕನೋ…ಇಂಥದ್ದು ಒಂದು ಎಂದು ಪ್ರತ್ಯೇಕಿಸಿ ಹೇಳಲಿಕ್ಕೆ ಸಾಧ್ಯವಾಗುವುದೇ ಇಲ್ಲ…ಸಾಯುವ ನಿರ್ಧಾರ ಮಾಡಿದಕೂಡಲೇ ವಿಠ್ಠಲನ ದರ್ಶನಾ ಮಾಡಿಕೊಂಡು ಬಂದ ಮೇಲೆ ಸಲ್ಲೇಖನ ಹಿಡಿದ ! …ಪದಮವ್ವ ಮುದಿಕಿ ಸ್ವಾಂವಜ್ಜನ್ನ ಸರಿಯಾಗಿಯೇ ಕೇಳಿದ್ದಳು…ಮಿಥ್ಯಾತ್ವ ಮತ್ತು ಸಲ್ಲೇಖನ ಅಧೆಂಗ ಹೊಂದಾಣಿಕಿ ಆಗತಾವ ಅಂತ…ಆಕಿಯ ಈ ಮಾತಿಗೆ ಸ್ವಾಂವಜ್ಜ ಬರೇ ಒಂದ ಮುಗುಳ ನಗೀ ನಕ್ಕು ಸುಮ್ಮನಾದನಂತ…!?
*
*
*
ಧರಮನಟ್ಟಿಂದ ಬಂದು ಹದಿನೈದು ದಿನದ ಮ್ಯಾಲೆ ಕಳ್ಳೀಗುದ್ದಿಗೆ ಹೋದೆ…ಹಿಂದ…ಭಾಳ ದಿನಗಳ ಹಿಂದ ಕಳ್ಳೀಗುದ್ದಿಗೆ ಹೋಗಿದ್ದೆ…ಆಗ ಇನ್ನೂ ಈ ದ್ಯಾವಪ್ಪನ ಅಪ್ಪ ಕುಬೇರಪ್ಪ ಇದ್ದ…ಆಗ ನಾನು ಬರೇ ಒಂದೆರಡ ತಾಸು ಇದ್ದು ಈ ಗೊಂಬೀರಾಮರ ಮನಿತನಕ್ಕೆ ಧರಮನಟ್ಟೀ ದೇಸಾಯರು ಕೊಟ್ಟ ಸನದನ್ನ ನೋಡಿ ಹಂಗಿಂದ ಹಂಗಣಿ ಬೆಂಗಳೂರಿಗೆ ಹೋಗಿದ್ದೆ…ಊರಾಗಿನ ಯಾರದೂ ಪರಿಚಯ ಆಗಿರಲಿಲ್ಲ…ಬಸ್ಸು ಇಳಿದಮ್ಯಾಲೆ ಈಗ ಇಲ್ಲಿ ಯಾರನ್ನ ಮಾತಾಡಸೂದೂ ಅಂತ ಯೋಚನಾ ಮಾಡಿಕೋತ ಅತ್ತಿತ್ತ ನೋಡಿಕೋತ ಅಲ್ಲೇ ಇದ್ದ ಚಹಾದಂಗಡೀ ಹೊಕ್ಕೆ…ಗಲ್ಲೇದ ಮ್ಯಾಲ ಕೂತ ಮಾಲಕನ್ನ ಬಿಟ್ಟರೆ ಬೆಂಚಿನ ಮ್ಯಾಲೆ ಒಬ್ಬನೇ ಒಬ್ಬ ವಯಸ್ಸಾದ ಮನಶಾ ಕೂತಿದ್ದ…ನಾನು ಹೋಗಿ ಅವನ ಮಗ್ಗಲಿಗೆ ಕೂತು-
‘…ಈ ಊರಾಗ ಗೊಂಬೀರಾಮರ ದ್ಯಾವಪ್ಪ ಅಂತ ಇದ್ದ…ಅಂವ ಈಗ ಊರಾಗ ಇದ್ದಾನ ಏನು…?’ ಅಂತ ಕೇಳಿದೆ.
ಗಲ್ಲೇದ ಮ್ಯಾಲ ಕೂತಿದ್ದ ಚಾದಂಗಡಿಯ ಮಾಲಕ ಸಟಕ್ಕನೇ ನನ್ನನ್ನ ದಿಟ್ಟಿಸಿ ನೋಡಿ, ನನಗ ಛಾ-ಗೀ ಏನರೇ ಬೇಕ ಏನು ಅನ್ನುವುದನ್ನ ವಿಚಾರಿಸದೇ,ಸರಕ್ಕನೇ ಎದ್ದು ಹೊರಗೆ ನಡೆದು ಬಿಟ್ಟ….ನನ್ನ ಮಗ್ಗಲಿಗೆ ಕೂತ ವಯಸ್ಸಾದ ಮನಶಾ,ಆಕಡೆ ಈಕಡೆ ನೋಡಿ, ಅಗದೀ ಸಣ್ಣ ದನಿಯಿಂದ –
‘ಯಾಣಿ…ಅಂವ ಊರು ಬಿಟ್ಟು ಆರ ವರಸದ ಮ್ಯಾಗಣಿ ಆತಲ್ಲರೀ… ಅದೆಲ್ಯೋ ಆರೇ ನಾಡಿನ್ಯಾಗ ಅದಾನಂತರೆಪಾ…ಏ…ದ್ಯಾವಪ್ಪ ಅಗದೀ ಸಾತ್ವೀಕ ಹುಡಗಾ…ಅಂತಣಿ ಗೌಡನ ಜೋಡೀ ಅಂವಂದು ಹೊಂದಾಣಿಕಿ ಆಗಲಿಲ್ಲ… ಇಷ್ಟರಮ್ಯಾಗ ಈ ಗೌಡ ಅಂವಗ ಬಾಳ ತರಾಸಾ ನೋವಾ ಕೊಟ್ಟ ಬಿಡ್ರಿ… ಈಗ
ಆರೇನಾಡಿನೊಳಗ…ಅದೆಲ್ಯೋ ಗಾಂದಿ ಮಾತ್ಮಂದೋ ಇಲ್ಲಾ ಯಾವದೋ ಒಬ್ಬ ರುಸೀದೋ ಒಂದ ಮಠಾ ಐತೆಂತರೆಪಾ…ಆ ಮಠದಾಗ ಸಾಧೂ ಆಗ್ಯಾನಂತ…! ನನಗೂ ಹಿಂಗಣಿ ಗಾಳೀ ಸುದ್ದಿರೀ…ಈ ಊರಾಗ ಆ ದ್ಯಾವಪ್ಪಂದ ಹೆಚ್ಚಿಗೆ ಮಾತಾಡಂಗಿಲ್ಲರೀ…ನೀವು ನನ್ನ ಮಾತಾಡಿಸಿದಗಳೇ ಎದ್ದ ಹೊರಗ ಹ್ವಾದನಲಾ… ಈ ಚಾದಂಗಡಿಯ ಮಾಲಕಾ…ಅಂವ ಸೂಚನಾ ಕೊಡಾಕಣಿ ಹೋಗ್ಯಾನು…’ ಅಂತ ಹೇಳಿ ಹೊರಗ ನೋಡಿದ.
ನಾನು ಅವಸರದಿಂದ ‘ದ್ಯಾವಪ್ಪನ ಅವ್ವ ಇದ್ದಳಲಾಣಿ…ಆಕಿ ಈಗ ಎಲ್ಲಿ ಇರತಾಳು?’ ಅಂತ ಕೇಳಿದೆ. ಆ ಮನಶಾ ಇನಷ್ಟು ನನ್ನ ಹತ್ತಿರಕ್ಕೆ ಸರದು…ದನಿಯನ್ನ ಇನಷ್ಟು ಸಣ್ಣದು ಮಾಡಿ ನನ್ನ ಕಿಂವ್ಯಾಗಣಿ ಹೇಳವನಗತೆ ಬಗ್ಗಿ ಹೇಳಲಿಕ್ಕತ್ತಿದ-
‘ಸುಶಿಲವ್ವರೀ…?ಯಾಣಿ…ಆಕಿ ಸತ್ತಕ್ಯಾರ ಎಡ್ಡ ವರಸ ಆತಲ್ಲರೀ…ಗೌಡನ ತ್ವಾಟದ ಮನ್ಯಾಗಣಿ ಹರಾ ಅಂದಳ ಆಕಿ…ಏಣಿ ಬಾಳ ಅನ್ಯಾವಿನ್ನಿ ಆಗಿ ಸತ್ತಳರೆಪಾ… ಒಂದಣಿ ಸವನಣಿ ಬಿಳೀಸೆರಗ ಹೋಗೂದಂತ…ಹೀಣಿಂಗ ಒಂದ ಒಣಾ ಪತ್ತಲಾ ಉಟಗೊಂಡಳನ್ನೂದಕ್ಕ ಅದು ತೋದು ಒದ್ದಿ ಆಗೂದಂತ…ಗಾಂವಠೀ ಅಗಸುದ್ದೇ ಆತು ಸರ್ಕಾರೀ ಅಗಸುದ್ದೇ ಆತು…ಯಾವದೇನೂ ಪಟಾಯಿಸಲಿಲ್ಲರೀ…! ತೊಡಿಯಂಬೂವು ಸೆಲತು ಹುಣ್ಣ ಆಗಿ ಹುಳಾ ಬಿದ್ದಿದ್ದೂ ಅಂತರೀ…! ಮುಖಾ ಅಂಬೂದು ಬಿಳಿಚಿಕೊಂಡು ಈಬತ್ತೀ ಉಂಡಿ ಆದಂಗ ಆಗಿತ್ತು… ಆಕಿ…’ ಅಂತ ಅಂವ ಇನೂ ಏನೋ ಹೇಳತಿದ್ದಾಂವ ಹೊರಗ ನೋಡಿದ…ಹೊರಗ ನೋಡಿ ಗಾಬರ್‍ಯಾಗಿ ‘ಏಣಿ…ನಾ ಬರತನರೀ ’ ಅಂತ ನುಡದವನೇ…ಎದ್ದು ಸರಾ ಸರಾ ಅಂತ ಓಡಿಹೋಗುವವನಂಗ ನಡದು ಮರಿ ಆದ…
ನಾನೂ ಚಹಾದಂಗಡಿಯ ಹೊರಗ ನೋಡಿದೆ…ನಾಕು ಮಂದಿ ನನ್ನನ್ನಣಿ ನೋಡಿಕೋತ ನನ್ನ ಕಡೆ ಬರಲಿಕ್ಕತ್ತಿದ್ದರು…ಇಪ್ಪತ್ತೈದು ಮೂವತ್ತರ ನಡುವಿನ ಕಟ್ಟುಮಸ್ತು ಆಳುಗಳು…ಅವರ ಮೀಸಿಗಳು ಕಿಲಾರೀ ಹೋರಿಗಳ ಕೊಂಬಿನಂಗ ಇದ್ದವು…ದುರು ದುರು ಅಂತ ನೋಡಿಕೋತ ಬಂದ ಅವರು ನಾ ಕೂತ ಬೆಂಚಿನ ಮುಂದಿನ ಟೇಬಲ್ಲಿನ ಮ್ಯಾಲ ಕೈ ಊರಿ ನಿಂತರು…ಅವರೊಳಗಿನ ಒಬ್ಬ ಕೇಳಿದ-
‘…ಯಾರ ನೀ…?’
ನನಗ ಒಳಗೊಳಗಣಿ ಅಧೈರ್ಯಾ ಮೂಡಿತಾದರೂ ಅಂವ ಕೇಳಿದ್ದು ಆಧ್ಯಾತ್ಮಿಕ ಪ್ರಶ್ನಾದಗತೆ ಅನಿಸಿ ನಗೀ ಬಂತು…ಆ ಮುಗುಳು ನಗಿ ಮುಂದುವರಿಸಿಕೊಂಡೇ ಹೇಳಿದೆ-
‘ನಾನೂ…?ನಾ ಬೆಂಗಳೂರಿಂದ ಬಂದೀನು…ಪ್ರೆಸ್ಸಿನವ ’.
ಆ ಆಳುಗಳ ಮುಖದ ಮ್ಯಾಲ ಒಮ್ಮಿಗೆಲೇ ಗೊಂದಲ ಮೂಡಿಧಂಗಾತು… ತಾನು ನನ್ನನ್ನು ಮಾತಾಡಿಸಿದ ಧಾಟೀ ಸರಿಯಾಗಲಿಲ್ಲವೇನೋ ಅಂತ ಅನಿಸಿದವನಂಗೆ

ಆ ಕಿಲಾರೀ ಮೀಸಿಯ ಹುಡುಗ
‘ಹಂಗಲ್ಲರೀ…ಕಳ್ಳೀಗುದ್ದಿಗೆ ಯಾವ ದಗದಕ್ಕ ಬಂದದೀರಂತ…?’ ಅಂತ ತೊದಲಿಸಿದ.
‘ನಾನೂ…?ಇಲ್ಲಿ ದ್ಯಾವಪ್ಪಂತ ಇದ್ದಲಾ…ಅಂವಂದು ಒಂದು ಫೀಚರ್ ಮಾಡಬೇಕಂತ ಮಾಡೀನಿ…ಅದಕ್ಕಣಿ ಅವನ ಬಗ್ಗೆ ಮಾಹಿತೀ ಸಂಗ್ರಹಿಸಲಿಕ್ಕೆ ಬಂದೀನು’.ಈಗ ಆ ಹುಡಗೋರು ಇನಷ್ಟು ಬಸವಳಿಧಂಗಾದವು…
‘ಹಂಗಲ್ಲರೀ…ನೀವು ನಮ್ಮ ಗೌಡರನ ಭೆಟ್ಟಿ ಆಗಿದ್ದರ ಪಾಡ ಆಗತಿತ್ತರೀ…’ ಅಂತ ಇನೊಬ್ಬ ಹುಡುಗ ಹೇಳಿದ.
‘ನಿಮ್ಮ ಗೌಡರಿಗೆ ದ್ಯಾವಪ್ಪನ ವಿಚಾರ ಛಲೋತಂಗೆ ಗೊತ್ತ ಅದಣಿ ಏನು…? ಹಂಗಿದ್ದರ ಅವರನ್ನ ಭೆಟ್ಟಯಾಗತೀನಿ…’ ಅಂದೆ.
‘ಹೂಂ…ಹೌದರೀ…ಆ ದ್ಯಾವಂದು ನಮ್ಮ ಗೌಡರಿಗೆ ಅಗದೀ ನಿವಳ ಗೊಂತ ಐತಿರೀ…’ ಅಂತ ಆ ಹುಡಗೋರು ನುಡದಾಗ
‘ಹೌದೂ…ಹಂಗರಣಿ ನಡೀರಿ…’ ಅಂತ ಎದ್ದು ಅವರ ಜೋಡೀ ನಡದೆ…
…ನನ್ನನ್ನ ಆ ನಾಕ ಆಳುಗಳು ಗೌಡನ ಮನಿಗೆ ಕರಕೊಂಡು ನಡದದ್ದನ್ನ ಊರಾಗಿನ ಮಂದಿ ಅಗದೀ ಕುತೂಹಲದಿಂದ ನೋಡಿ…ತಮ್ಮ ತಮ್ಮೊಳಗಣಿ ಪಿಸಿ ಪಿಸಿ ಅಂತ ಮಾತಾಡಿಕೊಂಡರು…ಈ ಊರಾಗ ಗೌಡನ ಜರ್ಬು ಜೋರ ಇದ್ದಂಗ ಅದ ಅಂತ ಅನಕೊಂಡೆ…ಅಷ್ಟರಾಗಣಿ ದೊಡ್ಡ ತಲಬಾಗಲಿನ ಮನಿ ಬಂತು…‘ಇದಣಿ ಗೌಡರ ಮನೀ…ಬರ್ರಿ’ ಅಂತ ನನ್ನ ಮಾರ್ಗದರ್ಶಕರು ಒಳಗ ನಡದರು. ನಾನು ಅವರ ಹಿಂದಿಂದಣಿ ಒಳಗ ಹೊಕ್ಕೆ…
ವಿಶಾಲವಾದ ಪಡಸಾಲಿ.ಅಲ್ಲಿ ಅದರ ಅಗ್ರಭಾಗದೊಳಗಿದ್ದ ಅಗಲವಾದ ಆರಾಮ ಕುರ್ಚಿಯೊಳಗ ಗೌಡ ಕುಂತಿದ್ದ…ಅಕಬಂದ ದೇಹ…ಚಚ್ಚೌಕಾದ ಮುಖದ ಮ್ಯಾಲ ಕಲ್ಲೀ ಮೀಸಿ…ಕರೀ ಬಿಳೀ ಬೆರತಿದ್ದವು…ಅಂವಗ ಆಗಿರುವ ವಯಸ್ಸಿನಕಿಂತಾ ಸಣ್ಣಾವ ಕಂಡಂಗ ಕಾಣತಿದ್ದ…ಗೌಡನ ಮುಂದ ನಿಂತ ನಾಕಾರು ಮಂದಿ ಅಂವ ಹೇಳತಿದ್ದದ್ದನ್ನ ತದೇಕ ಚಿತ್ತದಿಂದ ಕೇಳಿಕೋತ ಗೋಣು ಹಾಕಿಕೋತ ನಿಂತಿದ್ದರು…ಅಲ್ಲಿಗೆ ನನ್ನನ್ನ ಕರಕೊಂಡು ಈ ಆಳಗೋಳು ಹೋಗತಿದ್ದಂಗಣಿ ಆ ಮಂದಿ ಹಿಂದ ಸರದರು…ಗೌಡ ನನ್ನನ್ನ ತಲಿಯಿಂದ ಕಾಲಿನ ತನಕಾ ಎರಡ ಸರತೇ ನೋಡಿ , ನನ್ನನ್ನ ಅಲ್ಲಿಗೆ ಕರಕೊಂಡ ಹೋದ ಹುಡಗೋರನ ವಿಚಾರಿಸಲಿಕ್ಕೆಂತ ‘ಹ್ಹೂಂ…’ ಅಂತ ಹುಂಕರಿಸಿದ.ಚಾದಂಗಡ್ಯಾಗ ಮದಲು ನನ್ನನ್ನ ಮಾತಾಡಿಸಿದವನೇ ಈಗ ಹೇಳಿದ –
‘ಇವರು ಬೆಂಗಳೂರಿಂದ ಬಂದಾರಂತರೀ…ದ್ಯಾವ್ಯಾನ ಪಿಚ್ಚರ್ ಮಾಡತಾರಂತ!…ಇವರು ಕಾಶಪ್ಪಗೋಳ ಮುದಕನ ಹಂತೇಕ ದ್ಯಾವ್ಯಾನ ಹಕೀಕತ್ತು ಕೇಳಾಕತ್ತಿದ್ದರರಿ…ಚಾದಂಗಡೀ ಬಸಪ್ಪ ನಮಗ ಸೂಚನಾ ಕೊಟ್ಟನರೀ…ನಿಮ್ಮ ಹಂತೇಕ
ಕರಕೊಂಡ ಬಂದಿವು…’.
ಆ ಹುಡಗನ ಮಾತು ಕೇಳತಿದ್ದಂಗೇ ಗೌಡ ಒಮ್ಮಿಗೆಲೇ ಮೆತ್ತಗಾದವನಂಗ-
‘ಬರ್ರಿ ಬರ್ರಿ…ಏ ಅಲ್ಲಿ ಒಳಗ ಕೋಣ್ಯಾಗ ಕುರ್ಚೀ ಅದಾವು…ಇಲ್ಲಿ ಒಂದ ಕುರ್ಚೀ ತಗೊಂಬರ್ರಿ…’ ಅಂತ ಕೂಗಿದ…ಒಳಗಿಂದ ಒಂದ ಹೆಣ್ಣಾಳು ಒಂದ ಕುರ್ಚೀ ತಂದು ಇಡತಿರಬೇಕಾದರೆ ಆ ಗೌಡ –
‘…ಇಲ್ಲಿ ಹಾಕು ಇಲ್ಲಿ…’ ಅಂತ ತನ್ನ ಸನೇಕ ಇಡಿಸಿ ‘…ಹಾಂ ಬರ್ರಿ…ಕುಂಡರ ಬರ್ರಿ…’ ಅಂತ ಕರದ…ಹೋಗಿ ಕೂತೆ.
‘ಆ ದ್ಯಾವ್ಯಾಂದು ಪಿಕ್ಚರ್ ಮಾಡಾವರದೀರೀ…?’
‘ಪಿಕ್ಚರ್ ಅಲ್ಲ…ಫೀಚರ್ ಮಾಡಬೇಕಂತ ಅನಕೊಂಡೀನು…ಅಂದರಣಿ ಅವನ ಫೋಟೋ ಹಾಕಿ ಅವನ ಜೀವನವನ್ನ ಪರಿಚಯ ಮಾಡುವಂಥಾ ಒಂದ ಲೇಖನಾ ಬರೀಬೇಕಂತ ಮಾಡೀನು…ಪೇಪರಿನ್ಯಾಗ ಛಾಪಸೂದು…’
ಗೌಡ ಗಹ ಗಹಿಸಿ ನಕ್ಕ …ಹಂಗಣಿ ಆ ನಗಿಯೊಳಗಣಿ ಮಾತಾಡಿದ –
‘ಅಲ್ಲರೀ ಸಾಹೇಬರಣಿ…ಆ ಸೂಳೀ ಮಗಾ ಏನ ಗಾಂದೀನೋ ಗೋಡಸೇನೋ…! ಅವನ ಜೀವನದ ಕಥೀ ಬರೀತಿನಂತೀರಲ್ಲರೀ…?ಅವನ ಕಥೀ ಓದಿ ಯಾರು ಉದ್ಧಾರ ಆಗೂದೈತಿರೀ…’.
‘ಯಾಕಣಿ…ಹಿಂಗಂತೀರೆಲಾ…?ದ್ಯಾವಪ್ಪನ ಬದಿಕಿನ್ಯಾಗಿಂದು ತಿಳಕೋ ಹಂತಾದ್ದು ಏನೂ ಇಲ್ಲ ಅಂತೀರೇನು?’ ಅನ್ನುವ ನನ್ನ ಪ್ರಶ್ನಾಕ್ಕ ಗೌಡ ರೌಸಿಗೆದ್ದು ಮಾತಾಡಿದ –
‘ಅಲ್ಲರೀ ಸಾಹೇಬರಣಿ…ದೇವಸ್ಥಾನದ ದರೂಡೀ ಮಾಡಿ ಓಡಿ ಹೋದ ಮಗಾ ಅಂವ…’
‘ಛೇ ಛೇ…ಇಲ್ಲ ಬಿಡ್ರಿ.ನಾನು ಪೋಲೀಸರ ಫೈಲ ಎಲ್ಲಾ ತಗಿಸಿ ಆ ಕೇಸಿನ ವಿಚಾರ ಸ್ಟಡೀ ಮಾಡೀನು…ದ್ಯಾವಪ್ಪ ಅದರಾಗ ಇನ್‌ವಾಲ್ವ್ ಆಗಿಲ್ಲ ಅನ್ನೂದು ಸ್ಪಷ್ಟ ಅದ’ ಅಂದೆ.
‘ಇದಣಿ ನೋಡರಿ…ಪೋಲೀಸರೇನರೀ…ನಾಕ ದುಡ್ಡ ಒಗದರ ಹಿಡದವರನ ಬಿಡತಾರು… ಮತ್ತ ನಾಕ ದುಡ್ಡು ಸಿಗತಾವ ಅನ್ನೂವಲ್ಲಿ ಹಿಡೀತಾರು…ನೀವು ಧರಮನಟ್ಯಾಗ ಅಡ್ಯಾಡರಿ… ಅಲ್ಲಿ ಮಂದಿ ಖರೇ ಹಕೀಕತ್ತ ಏನೈತಿ ಅಂತ ಹೇಳತಾರು…’.
…ನಾನು ಧರಮನಟ್ಟಿಗೆ ಹೋದಾಗ ದೇವಸ್ಥಾನದ ತುಡಿಗಿನ ವಿಚಾರದ ಬಗ್ಗೆ ಅಲ್ಲಿಯ ಮಂದಿಯ ಮಾತುಗಳನ್ನ ಕೇಳಿದ್ದೆ…ಅವರೂ ದ್ಯಾವಪ್ಪನಿಗೂ ಆ ತುಡುಗಿಗೂ ಸಂಬಂಧ ಇಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರು…ಆ ಮಾತನ್ನ ಈ ಗೌಡನಿಗೆ ಹೇಳಿದರೆ ಈ ವಾದ ಹಿಂಗಣಿ ನಿರರ್ಥಕವಾಗಿ ಮುಂದುವರಿಯುತ್ತದೆ ಅನ್ನುವ ಕಾರಣಕ್ಕೆ ನಾನು

ಅದನ್ನು ಹೇಳಲಿಕ್ಕೆ ಹೋಗಲಿಲ್ಲ. ಬ್ಯಾರೇ ಮಾತು ತಗದೆ –
‘ಅದ ಹೋಗಲಿ ಬಿಡ್ರಿ…ಈ ತುಡಗಿನ ವಿಚಾರ ಬಿಟ್ಟು ಅವನ ಬಗ್ಗೆ ಬ್ಯಾರೇ ಏನರೇ ಗೊತ್ತಿದ್ದರ ಹೇಳ್ರಿ…’
‘ಬ್ಯಾರೇ ಏನ ಬೇಕ ಹೇಳ್ರಿ…ಅಂವಂದ ಪೂರಾ ಎಳೀ ಎಳೀ ನನಗ ಗೊಂತ ಐತಿ…ದರೂಡಿ ಮಾಡಿದಮ್ಯಾಗ ಅಂವ ಇಲ್ಲಿಂದ ಆರೇನಾಡಿಗೆ ಓಡಿಹೋಗಿ ಅಲ್ಲಿ ಒಂದ ದರೂಡೀಕೋರರ ಗುಂಪು ಸೇರಿಕೊಂಡಾ…ಮುಂದ ಆ ಗುಂಪ ಬಿಟ್ಟು ಅತ್ತ ತೆಲಗ ನಾಡಿಗೆ ಹೋಗಿ ಅಲ್ಲಿ ನಕ್ಸಲಬಾರೀ ಗುಂಪು ಸೇರಿಕೊಂಡ…ಪೋಲೀಸರ ಗೋಲೀಬಾರಿನಾಗ ಸಿಕ್ಕು…ಕಾಲಿಗೆ ಗುಂಡ ಬಡದು…ಅಂವಂದ ಈಗ ಕಾಲು ಕತ್ತರಿಸ್ಯಾರಂತ…ಕಾಲ ಹೋದಮ್ಯಾಗ ಇಂವಗ ಬುದ್ಧಿ ಬಂದಂಗಾಗಿ ಪೋಲೀಸರ ಕಾಲ ಹಿಡಕೊಂಡನಂತ…ಕುಂಟ ಬಿದ್ದ ಈ ಮಗಾ ಇನ್ನೇನು ಕಿಸಿಯೂದೈತಿ ಅಂತ ಪೋಲೀಸರು ಕ್ಷಮಾ ಮಾಡಿ ಅಂವನ್ನ ಬಿಟ್ಟರಂತ…ಈಗ ಮತ್ತ ಹೊಳ್ಳಿ ಆರೇ ನಾಡಿಗೆ ಬಂದು ಅಲ್ಲಿ ತಿರಕೊಂಡು ಅದಾನಂತ…ಇಷ್ಟ ಸಾಕರ್‍ಯೋ ಇನೂ ಬೇಕರ್‍ಯೋ!… ಇಲ್ಲಿಂದ ಓಡಿಹೋಗೂಕಿಂತಾ ಮದಲಿಗೆ ಬೆಳಗಾಂವ್ಯಾಗ ಎಸ್‌ಟಿ ಸ್ಟ್ಯಾಂಡಿನ್ಯಾಗ ಕಿಸೇ ಕತ್ತರಸುವಾಗ ಪೋಲೀಸರ ಕೈಯಾಗ ಸಿಕ್ಕು ಒಂದ ವರ್ಷ ಜೇಲಿನ ರೊಟ್ಟೀ ತಿಂದ ಬಂದದಾನು…ಪರಶು ರಾಮನಗತೆ ತನ್ನ ಅವ್ವನ್ನಣಿ ಖೂನೀ ಮಾಡಾಕ ಹೋದಂಥಾ ಮಗಾ ಇಂವಾ…’.
‘ಹಾಂ…ಅಂದಂಗ ಅವರ ಅವ್ವ ಅದಾಳ ಏನ್ರಿ…?’
‘ಆಕಿ ಎರಡ ವರ್ಷದ ಹಿಂದ ತೀರಿಕೊಂಡಳು…ಬಾಳ ಸಾತ್ವಿಕ ಜೀವ ಅದಾ…! ಮಗನ ಉರವಣಗೀ ಫಾಜೀಲತನದ ಸುದ್ದೀ ಕೇಳಿ ಕೇಳಿ …ನನ್ನ ಹೊಟ್ಯಾಗ ಹೆಂತಾ ಪಾಪದ ಪಿಂಡ ಹುಟ್ಟಿತೂ…ಅಂತ ಎದೀ ಒಡಕೊಂಡಳರೀ…ಅದಣಿ ಸಂಕಟದಾಗಣಿ ಹಾಸಿಗೀ ಹಿಡದು …ನವದ ನವದ ತೀರಿಕೊಂಡಳು…’ ಅಂತ ಹೇಳಿದಾಗ,ಕಳ್ಳೀಗುದ್ದಿಯ ಈ ಗೌಡ ,ದ್ಯಾವಪ್ಪಂದು ಒಂದು ಬ್ಯಾರೇನಣಿ ಪುರಾಣ ಕಟಿಗೊಂಡು ಕೂತಾನ ಅಂತ ಅನಿಸಿತು…ಹೆಚ್ಚು ಮಾತಾಡಿ ಉಪಯೋಗ ಇಲ್ಲ ಅನಿಸಿ-
‘ಆತರೀ…ನೀವು ದ್ಯಾವಪ್ಪನ ಬಗ್ಗೆ ಹೇಳಿದ್ದು ಛಲೋ ಆತು…ಇಲ್ಲಿಂದ ಓಡಿಹೋದ ಮ್ಯಾಲೆ ಅವನ ಬದುಕಿನ ಸಾಧ್ಯತಾಗೋಳು ಏನೇನ ಇದ್ದೂ ಅಂತ ತಿಳಧಂಗಾತು ! …ಬರತನರೀ ’ ಅಂತ ಹೇಳಿ ಎದ್ದು ಬಂದೆ….
ನನ್ನ ಹಿಂದಿಂದಣಿ ಬಂದ ಗೌಡನ ಬಂಟರು ನಾನು ಬಸ್ಸು ಹತ್ತುವತನಕಾ ನನ್ನ ಮ್ಯಾಲ ಕಣ್ಣ ಇಟಗೊಂಡು ಕೂತಿದ್ದರು…
*
*
*
ಕಳ್ಳೀಗುದ್ದಿಗೆ ಹೋಗಿ ಬಂದ ಒಂದು ವಾರದ ನಂತರ, ಒಂದು ಮಂಗಳವಾರದ ದಿವಸ ಉದಗಟ್ಟಿಗೆ ಹೋದೆ…ಮಂಗಳವಾರ ಉದ್ದವ್ವನ ವಾರ. ಉದಗಟ್ಟಿಗೆ ಹೋದಂವ ನೆಟ್ಟಗೇ ಮೊದಲು ಉದ್ದವ್ವನ ಗುಡಿಗೇ ಹೋದೆ…ನಾ ಹೋಗುವಷ್ಟೊತ್ತಿಗಂದರ ಬೆಳಗಿನ ಪೂಜಿ ಮುಗದಿತ್ತು…ಉದ್ದವ್ವನಿಗೆ ವಿಶೇಷ ಅಲಂಕಾರ ಮಾಡಿದ್ದರು…ಪೂಜಾರಿ ಅಲ್ಲಿಯೇ ಪೌಳಿಯಲ್ಲಿ ಇದ್ದ …ನನ್ನನ್ನ ನೋಡಿದವ ಎದ್ದು ಬಂದು ಗರ್ಭಗುಡಿಯ ಒಳಗಿನ ಲೈಟ್ ಹಾಕಿದ.ನಾನು ಊರಿನಿಂದಲೇ ತಂದಿದ್ದ ತೆಂಗಿನಕಾಯಿಯನ್ನು ಕೊಟ್ಟೆ …ಮಂಗಳಾರತೀ ಮಾಡಿ ಕಾಯಿ ಒಡದು ಕೊಟ್ಟ…ಐದು ರುಪಾಯಿ ದಕ್ಷಿಣಾ ಇಟ್ಟೆ …ಅವನ ಮೋತಿ ಊರಗಲ ಆತು…ಅಂವ ಹೊರಗ ಬಂದು ನನ್ನ ಎದುರಿಗಿನ ಕಂಭಕ್ಕ ಆನಿಕೊಂಡು ಕೂತಗೋತ-
‘ಸಾಹೇಬರದ ಯಾವೂರರೀ…?’ ಅಂತ ಕೇಳಿದ.
‘ಬೆಟಗೇರಿ…’.
‘ಇಲ್ಲಿ ಯಾರರೇ ಹತಗಡೇದವರು ಅದಾರೇನರೀ…’.
‘ಹಾಂ…ಹತಗಡೇದವರಂದರ ಸಂಬಂಧಿಕರಂತಲ್ಲ…ಹಂಗಣಿ ಒಬ್ಬರನ ಭೆಟ್ಟಿ ಆಗೂದಿತ್ತು… ಕಳ್ಳೀಗುದ್ದಿಯ ಗೊಂಬೀರಾಮರ ದ್ಯಾವಪ್ಪಂತ ಅದಾನಲಾಣಿ… ಅದಣಿ ಧರಮನಟ್ಟಿಯ ತೇರಿನ ರಕ್ತ ತಿಲಕದ ಸೇವಾ ಮಾಡತಿದ್ದ ನೋಡು…ಅಂವ ಇಲ್ಲಿ ಒಬ್ಬಾಕಿನ್ನ ಲಗ್ನಾ ಮಾಡಿಕೊಂಡಾನಲಾ… ಆಕಿನ್ನ ಭೆಟ್ಟಿ ಆಗಬೇಕಾಗಿತ್ತು…’.
ಪೂಜಾರಿ ಮಿಕಿ ಮಿಕಿ ಅಂತ ನನ್ನ ಮುಖಾ ನೋಡಿದ…ಹಂಗ ನೋಡಿ ನನ್ನ ಬಗ್ಗೆ ಏನೋ ಒಂದು ನಿರ್ಧಾರಕ್ಕೆ ಬಂದವನಂಗೆ-
‘ಹಾಂ …! ಹಂಗರಣಿ ನೀವೂ ಆ ಡೊಂಬರ ಬಾಳವ್ವನ್ನ ಭೆಟ್ಟಿ ಆಗಾಕ ಬಂದದೀರೀ…! ಆ ದ್ಯಾವ್ಯಾ ಏನ ಇನ್ನೂ ಆಕಿನ್ನ ಲಗ್ನ ಆಗಿದ್ದಿಲ್ಲೇಳರಿ…ಉದ್ದವ್ವ ಅವರ ಮದಿವಿಗೆ ಅಪ್ಪಣೀನಣಿ ಕೊಡಲಿಲ್ಲ !…ಅದ ಏನಾರ ಆಗವಲ್ಲದ್ಯಾಕ ಬಿಡ್ರಿ…ಆಕಿನ್ಯಾಕ ಭೆಟ್ಟಿ ಆಗಾಕ ಬಂದದೀರೀ…? ಆ ಹೆಂಗಸಂದರ ಪಕ್ಕಾ ಮುಟ್ಟಿದರ ಮುನೀ ಜಾತೀದರೀ ಸಾಹೇಬರಣಿ!…ಈ ಪರಪಂಚದಾಗ ತಾನಣಿ ರಂಬಿ ಅಂತ ತಿಳಕೊಂಡದಾಳು…!ಆಕಿನ್ನ ಮಾತಾಡಸಾಕಂತ ಹೋದ ರಗಡ ಮಂದಿ ದೊಡ್ಡ ದೊಡ್ಡ ಗೌಡರನ ಮತ್ತ ಶ್ರೀಮಂತರನ್ನ ಆಕಿ ಮರುವಾದೀ ಕಳದು ಕಳಿಸ್ಯಾಳರಿ ! …ಅವರನ ಅಲ್ಲೇ ಹೊಸ್ತಲ ಹೊರಗಣಿ ನಿಂದರಿಸಿ ಥಡಾ ಥಡಾ ಅಂತ ಮಾತಾಡಿ …ಅವರ ಮಖಕ್ಕಣಿ ರಪ್ಪಂತ ಬಾಗಲಾ ಹಾಕೊಂಡು ಅಗದೀ ಅಸಂಹ್ಯ ಮಾಡಿ ಕಳಿಸ್ಯಾಳರೀ…!ಆಕಿಗೆ ತಿಂಗಳಾ ತಿಂಗಳಾ ಪೋಷ್ಟಿನ್ಯಾಗ ಆ ದ್ಯಾವ್ಯಾ ರೊಕ್ಕಾ ಕಳಸತಾನ ನೋಡ್ರಿ…ಹಿಂಗಾಗಿ ಆಕಿ ಸೊಕ್ಕಿಗೆ ಬಂದಾಳು…ಹಂತಾ ಆ ಕುಲಗೇಡಿ ಹೆಂಗಸನ್ನ ಭೆಟ್ಟಿ ಆಗಾಕ ಹೋಗಿ ನೀವ್ಯಾಕ

ಮರುವಾದೀ ಕಳಕೊಳ್ಳಾಕ ಹೋಗತಿದ್ದೀರೀ ಅಂತ…?’.
‘ಇಲ್ಲೇಳ…ನಾ ಏನ ಹಂತಾ ದಗದಕ್ಕ ಬಂದಾಂವ ಅಲ್ಲ…ನನ್ನ ಕೆಲಸನಣಿ ಬ್ಯಾರೆ…ಆಕಿ ನನಗೇನ ಹಂಗ ಮಾಡೂ ಕಾರಣಿಲ್ಲ…ಆಕೀ ಮನೀ ತೊರಸೂ ವ್ಯವಸ್ಥಾ ಅಷ್ಟ ಮಾಡು…’ ಅಂದೆ. ಪೂಜಾರಿ ಅಲ್ಲೇ ಗುಡಿಯ ಪಟಾಂಗಣದೊಳಗೆ ಆಡತಿದ್ದ ಹುಡಗೋರೊಳಗ ಒಂದ ಹುಡುಗನ್ನ ಒದರಿ ಕರದು ಅಂವಗ ಸೂಚನಾ ಕೊಟ್ಟು ನನ್ನ ಜೋಡೀ ಕಳಿಸಿದ….ಆ ಹುಡುಗ ನನ್ನನ್ನ ಒಂದ ಓಣ್ಯಾಗ ಕರಕೊಂಡ ಹೋಗಿ ಅಲ್ಲಿ ಒಂದು ತೆರದ ಬಾಗಲ ಮುಂದ ನಿಂದರಿಸಿ …
‘ಯಾರದೀರೀ…?’ ಅಂತ ಒದರಿತು
…ಎರಡು ಸಣ್ಣ ಖೋಲಿಯ ಆ ಮನಿಯೊಳಗಿಂದ ಮೂವತ್ತು ಮೂವತ್ತೈದರ ಒಬ್ಬಾಕಿ ಹೆಂಗಸು ಬರತಿದ್ದಂಗಣಿ ಆ ಹುಡುಗ ಅಲ್ಲಿಂದ ಓಟಾ ಹೊಡೀತು…ಆಕೆನಣಿ ಬಾಳವ್ವ ಅಂತ ಅನಿಸಿತು…ಮೊದಲ ಯಾವಾಗೂ ನೋಡಿದ್ದಿಲ್ಲ…ಅಲ್ಲಿ ಬಾಗಲದಾಗ ನಿಂತಿದ್ದ ನನ್ನನ್ನ ಆಕಿ ದುರು ದುರು ಅಂತ ನೋಡತಿರಬೇಕಾದರೆ –
‘…ನಾನು ಬೆಂಗಳೂರಿನ ವರ್ತಮಾನ ಪತ್ರದಾಗ ಕೆಲಸಾ ಮಾಡಾಂವ… ಇಲ್ಲೇ ಬೆಟಗೇರ್‍ಯಾಂವ…ದ್ಯಾವಪ್ಪ ನನಗ ಅಗದೀ ಗುರ್ತಿನಾಂವ…’ ಅಂತ ನಾನು ಹೇಳತಿದ್ದಂಗೇ ಆಕಿಯ ಮುಖದ ಮ್ಯಾಲಿನ ಭಾವವೇ ಬದಲ ಆತು…ಆಕಿ – ‘ಅಯ್ಯಣಿ…ಒಳಗ ಬರ್ರಿ…ನಿಮ್ಮ ಸುದ್ದೀ ಹಗಲೆಲ್ಲಾ ಅಂವ ಹೇಳತಿದ್ದ…ಬರ್ರಿ’ ಅಂತ ಕರದು ಧಡಾ ಬಡಾ ಓಡ್ಯಾಡಿ ಒಳಗಿನ ಕಟ್ಟೀ ಮ್ಯಾಲ ಕಂಬಳೀ ಹಾಸಿದಳು…ನಾನು ಕೂತಗೋತ
‘ಮಕ್ಕಳೂ…ಯಾವ್ಯಾವ ಕ್ಲಾಸಿನ್ಯಾಗ ಕಲೀತಾವ…?’
‘ಹಿರ್‍ಯಾಂವ ಈ ವರ್ಷ ಗೋಕಾಂವೀ ಹಾಯಸ್ಕೂಲಿಗೆ ಹೋಗ್ಯಾನರೀ… ಅಲ್ಲೇ ಸರ್ಕಾರೀ ಬೋರ್ಡಿಂಗಿನ್ಯಾಗ ಇರತಾನು…ಸಣ್ಣಾಂವ ಇಲ್ಲೇ ಕನ್ನಡ ಸಾಲಿಗೆ ಹೋಗತಾನರೀ…’
‘ನಿಮ್ಮ ಅತ್ತಿ…? ಎಲ್ಲಿ ಹೊರಗ ಹೋಗ್ಯಾಳೇನು?’
‘…ಆಕಿ ಘಾತಾ ಮಾಡಿದಳಲ್ಲರೀ ಸಾಹೇಬರಣಿ…ಆಚೀ ವರ್ಷ ನನ್ನ ಒಬ್ಬಾಕಿನ್ನಣಿ ಇಲ್ಲಿ ಬಿಟಗೊಟ್ಟು ಹೋಗಿ ಬಿಟ್ಟಳರೀ…ಬರೇ ಎರಡ ದಿನಾ ಥಂಡೀ ಉರಿ ಬಂದದ್ದ ಒಂದ ನೆವಾ ಆತು…ಸಾಯೂಮಟಾ ಆಕಿ ಉದ್ದವ್ವನ್ನ ನಾನಾ ನಮೂನೀಲೇ ಬೈಯತಿದ್ದಳು…! ಆಕೀ ಆತಮ ಎಲ್ಲಿ ಹೋಗಿ ಬಿದ್ದೈತ್ಯೋ ಯಾಂವ ಬಲ್ಲರೀ…!’ ಅಂತ ಹೇಳಿದ ಆಕಿ ಕಣ್ಣು ಒರಿಸಿಕೊಂಡು ಉಸ್…ಅಂತ ಉಸರು ಬಿಟ್ಟಳು.ನಾನು ಆಕಿಗೆ ಸಂತಾಪ ಹೇಳಿ ಒಂದೆರಡು ಕ್ಷಣ ಮೌನವಾಗಿ ಕೂತೆ. ಆಮೇಲೆ –
‘ದ್ಯಾವಪ್ಪ…?…ಅಂವ ಎಲ್ಲಿ ಅದಾನವಾ?’ ಅಂದೆ.
‘ಅಂವರೀ…ಅಂವ ಇಲ್ಲೇ ಅದಾನಲ್ಲರೀ…’ ಅಂತ ಹೇಳಿದಾಗ ನಾನು ಅಡರಾಯಿಸಿ ಕೇಳಿದೆ –
‘ಹಾಂ…! ದ್ಯಾವಪ್ಪ ಇಲ್ಲೇ ಅದಾನಣಿ?…ಭಾಳ ನಿವಳ ಆತು…ಅವನ್ನ ಭೆಟ್ಟಿ ಆಗಬೇಕೂ ಅಂತ ಭಾಳ ದಿನದಿಂದ ಮನಸ ಹರೀಲಿಕ್ಕತ್ತಿತ್ತು …ಎಲ್ಲೆದಾನು?ಊರಾಗ ಇದ್ದಾನೋ ಏನ ಗೋಕಾಂವಿಗೆ ಹೋಗ್ಯಾನೋ…?’
ಬಾಳವ್ವ ಮುಗುಳು ನಗಿ ನಕ್ಕು –
‘ಇಲ್ಲಿ…’ ಅಂತ ತನ್ನ ಎದಿ ಮುಟಿಗೊಂಡು ‘ಇಲ್ಲೆದಾನ ನೋಡ್ರಿ…’ ಅಂತ ಹೇಳಿ ನಿಟ್ಟುಸಿರು ಬಿಟ್ಟಳು…ನಾನು ಆವಾಕ್ಕಾಗಿ ಕೂತೆ…ಆಕೆನೂ ಮೌನವಾಗಿ ಕೂತು ಬಿಟ್ಟಳು…ಹಂಗಣಿ ಎಷ್ಟೊತ್ತು ಕೂತೆವೋ ಯಾರಿಗೆ ಗೊತ್ತು…! ಕಡಿಕ ನಾನಣಿ ಮೌನ ಮುರಿದೆ:
‘ಒಟ್ಟಣಿ ಅಂವಂದ ಏನೂ ಸುದ್ದೆನಣಿ ಇಲ್ಲೇನು…?ಎಲ್ಲಿದ್ದಾನಣಿ… ಹೆಂಗಿದ್ದಾನಣಿ…?’
ನನ್ನ ಮಾತಿಗೆ ಬಾಳವ್ವ ಎದ್ದು ಹೋಗಿ ಅಲ್ಲೇ ದೇವರ ಮಾಡದಾಗ ಇಟ್ಟಿದ್ದ ಒಂದ ತಗಡಿನ ಡಬ್ಬಿಯನ್ನ ತಗೊಂಡಬಂದು,ಅದರೊಳಗಿಂದ ಪೆಂಡಿ ಪೆಂಡಿ ಮನಿಯಾರ್ಡರಿನ ಪಟ್ಟಿಗಳನ್ನ ತಗದು ನನ್ನ ಮುಂದ ಇಟ್ಟಳು…ಹಣ ಪಡೆಯುವವರಿಗೆ ಹಣ ಕಳಿಸುವವರು ಸುದ್ದಿ ಸೂಚನಾಗಳನ್ನು ಬರೆದು ತಿಳಿಸುವ ಭಾಗದ ಪಟ್ಟಿಗಳು…ಎಲ್ಲಾ ಖಾಲೀ ಖಾಲಿ…ಬಿಳಿ ಬಿಳಿಪಟ್ಟಿಗಳು! ಹೊಳ್ಳಿಸ್ಯಾಡಿ ನೋಡಿ ಆಕಿಯ ಮುಖ ನೋಡಿದೆ…ಆಕಿ ಹೇಳಿದಳು –
‘ಹಿಂಗಣಿ ತಿಂಗಳಾ ತಿಂಗಳಾ…ಒಮ್ಮೆನೂ ತಪ್ಪಸಧಂಗ ರೊಕ್ಕಾ ಕಳಿಸಿ ಈ ಮನಿಯ ಆರಾ ಭಾರಾ ಹಿಡದ್ದಾನ ನೋಡ್ರಿ…ಆದರ ತಾನು ಎಲ್ಲೆದನೂ ಹೆಂಗದನೂ ಅನ್ನೂ ಒಂದ ಮಾತನೂ ಬರೀಲಿಲ್ಲರೀ…ಮನಿಯಾರ್ಡರ ಬಂದಾಗೊಮ್ಮೆ ನಾನು ನನ್ನ ಹೊಟ್ಯಾನ ಸಂಕಟಾ ಕಳಕೋಳಿಕ್ಕೆ …ತರಾಸ ಮಾಡಿಕೊಂಡು ಎರಡ ದಿನಾ ಅತ್ತರ ನಮ್ಮ ಅತ್ತಿ ಅಂದ ಇಡೀ ದಿನಾ ಉದ್ದವ್ವನ್ನ ತಾರಾಮಾರಾ ಬೈಯ್ಯಾಕಿ…ಕಡಿಕ ಈಗೊಂದ ಎಂಟ್ಹತ್ತ ತಿಂಗಳ ಹಿಂದ ಪೋಷ್ಟ ಮಾಸ್ಟರಗ ಗಂಟ ಬಿದ್ದಿನರೀ… ಅವರೂ ನಿಮ್ಮಂಗ ಚಲೂ ಮನಸ್ಯಾರು…ಹೆಂಗರೇ ಮಾಡಿ ಅಂವ ಕಳಸೂ ಮನಿಯಾರ್ಡರಿನ ಮ್ಯಾಗ ಅಂವ ಎಲ್ಲೆದಾನ ಅನ್ನೂದನ್ನ ಪತ್ತೇ ಹಚ್ಚಿ ಕೊಡರೀ ಅಂತ ಅವರ ಕಾಲ ಕಟಿಗೊಂಡಿನರೀ… ಅವರು ತಪಾಸ ಮಾಡಿ – ಅದೆಲ್ಯೋ ಮರಾಸ್ಟ್ …ಅಂತ ಆರೇನಾಡ ಐತೆಂತ ನೋಡ್ರಿ… ಅಲ್ಲಿ ವರದಾ ಅಂತ ಊರೈತೆಂತರಿ…ಬಾಳ ದೊಡ್ಡ ಊರಂತರಿ!…ಇಲ್ಲೀ ಹಂಗ ಆ ಊರಿಗೆ ಒಂದಣಿ ಪೋಷ್ಟ ಕಚೇರಿ ಇಲ್ಲಂತ ! ಬಾಳಷ್ಟ ಪೋಷ್ಟ ಕಚೇರಿ ಅದಾವಂತ…! ಒಂದೊಂದ ತಿಂಗಳು ಒಂದೊಂದ ಪೋಷ್ಟ ಕಚೇರಿಂದ ಮನಿಯಾರ್ಡರ ಕಳಿಸ್ಯಾನೂ ಅಂತ ಹೇಳಿದರು…ಇನ್ನ ಹೆಂಗರೀ ಅಂತ ಗೋಳ ತೋಡಿಕೊಂಡಗಳಸೇ ಅವರು ವಿಚಾರ ಮಾಡಿ -ಆ ವರದಾ ಅಂಬೂ ಊರಾಗ ಒಂದ ಆಶ್ರೇಮ ಐತೆಂತರೀ… ಯಾವದೋ

ರುಸಿಗಳ ಆಶ್ರೇಮರಿ… ಬಾಳಮಾಡಿ ಆ ಆಶ್ರೇಮದಾಗ ಇದ್ದರೂ ಇದ್ದಿದ್ದಾನು ಅಂತ ಹೇಳಿದರು… ಹೆಂಗರಣಿ ಆಗವಲ್ಲದ್ಯಾಕ…ಅಂವ ಅಲ್ಲೇ ಇದ್ದರ ಅಂವಗ ಮುಟ್ಟತೈತಿ..ನಿಮ್ಮ ಕಾಲ ಬೀಳತನು…ಅಂವಗ ಒಂದ ಪತ್ತರಾ ಬರೀರಿ ಅಂತ ಗಂಟ ಬಿದ್ದು ಪತ್ತರಾ ಬರಿಸಿದಿನರಿ…ಹಿಂಗಿಂಗಣಿ…ಅತ್ತಿ ತೀರಿಕೊಂಡ ಒಂದ ವರಸ ಆಗಾಕ ಬಂತು…ಈಗೇನ ಉದ್ದವ್ವನ್ನ ಅಪ್ಪಣೀ ಕೇಳೂದು ಬ್ಯಾಡಾ…ನೀ ತಾಬಡ ತೋಬಡ ಹೊಂಟ ಬಾ…ನೀ ಬಂದಗಳಸೇ ತುರಂತ ಮದಿವೀ ಆಗೂಣೂ…ಮಕ್ಕಳು ಅಪ್ಪ ಎಲ್ಲಿ ಹೋದಾ ಅಪ್ಪ ಎಲ್ಲಿ ಹೋದಾ ಅಂತ ಹಗಲೆಲ್ಲಾ ನಿನ್ನ ನೆನಸತಾವು… ಲಗೂಟಣಿ ಹೊಳ್ಳಿ ಬಾ…ಅಂತ ಬರಿಸಿದಿನರೀ…’.
‘ಮುಂದಣಿ…? ದ್ಯಾವಪ್ಪಗ ಅದ ಮುಟ್ಟಿತೋ ಇಲ್ಲೋ…?ಏನರೇ ತಿಳೀತೇನು…?’ ಇಷ್ಟ ಕೇಳಬೇಕಾದರ ಯಾಕೋ ಏನೋ ನನಗ ತೇಕ ಹತ್ತಿದಂಗ ಆತು!
ಬಾಳವ್ವನ ಮೋತಿಯ ಮ್ಯಾಲ ಒಂದು ನಮೂನಿ ವಿಚಿತ್ರವಾದ ಶಾಂತ ಭಾವನಾ ಆವರಿಸಿಕೊಂಡಿತು…ಆಕಿ ಯಾವ ಉದ್ವೇಗವೂ ಇಲ್ಲದೇ –
‘ಹಾಂ…ಆ ಪತ್ತರಕ್ಕ ಉತ್ತರ ಬಂತರಿ…ಈಗ ಆರ ತಿಂಗಳ ಹಿಂದ ಈ ಪತ್ತರ ಬಂತ ನೋಡರಿ…’ ಅಂತ ಡಬ್ಬಿಯ ತಳದಾಗ ದ್ಯಾವಪ್ಪನ ಫೋಟೋದ ಕೆಳಗ ಇಟ್ಟಿದ್ದ ಒಂದು ಪೋಷ್ಟ್ ಪಾಕೀಟು ಹೊರಗ ತಗದು ನನ್ನ ಕೈಗೆ ಕೊಟ್ಟಳು.ಅದು ದ್ಯಾವಪ್ಪ ಬಾಳವ್ವನಿಗೆ ಬರೆದ ಪತ್ರ – ಅದನ್ನ ನಾನು ಓದಬೇಕೋ ಓದಬಾರದೋ ಅಂತನ್ನುವ ಯಾವ ಶಿಷ್ಟಾಚಾರವೂ ನನ್ನ ಮನಸಿಗೆ ಹೊಳೆಯಲೇ ಇಲ್ಲ…ಅವಸರ ಅವಸರವಾಗಿ ಪಾಕೀಟಿನೊಳಗಿನ ಪತ್ರವನ್ನು ತಗದು ಓದತೊಡಗಿದೆ…
……………….
ನನ್ನವಳಿಗೆ…
ನಾನು ಇಲ್ಲಿನ ಒಂದು ಆಶ್ರಮದಲ್ಲಿದ್ದೇನೆ.ನನ್ನ ಬದುಕು ಸಮಾಜಕ್ಕೆ ಉಪಯೋಗವಾಗುವ ನಾಲ್ಕು ಕೆಲಸಗಳಿಗೆ ಬಳಕೆಯಾಗಲಿ ಎಂದು ನಿರ್ಧರಿಸಿಯೇ ಇಲ್ಲಿಗೆ ಬಂದಿದ್ದೇನೆ.ಇಲ್ಲಿ ಬಾಬಾ ಆಮ್ಟೆ ಅಂತನ್ನುವ ಒಬ್ಬ ಸೇವಾಕರ್ತರಿದ್ದಾರೆ.ಅವರ ಮಾರ್ಗದರ್ಶನದಲ್ಲಿ ನನ್ನಿಂದ ಆಗುವ ಕೆಲಸಗಳನ್ನು ಮಾಡುತ್ತಿದ್ದೇನೆ.ನಿನ್ನ ಬಗ್ಗೆ ಅವರಿಗೆ ಹೇಳಿದ್ದೇನೆ. ನಿನಗೆ ಪ್ರತಿ ತಿಂಗಳೂ ಮನಿಯಾರ್ಡರು ಕಳಿಸಲು ಅನುಕೂಲ ಆಗುವ ಏರ್ಪಾಟು ಮಾಡಿಕೊಟ್ಟಿದ್ದಾರೆ.
ಅಲ್ಲಿಗೆ ಬರಲು – ಬಂದು ಮದುವಿಯಾಗಲು ಹೇಳಿದ್ದೀ.ನನ್ನ ನಿನ್ನ ಮದುವಿ ಇನ್ನೂ ಆಗಿಲ್ಲ ಎಂದು ನಿನಗೆ ಅನಿಸಿದೆಯೇ.ನನ್ನ ಪ್ರಕಾರ ನಮ್ಮಿಬ್ಬರ ಮದುವೆ
ಆಗಿ ಹೋಗಿದೆ.ಇನ್ನು ಮತ್ತೊಮ್ಮೆ ಮದಿವಿಯಾಗುವ ಅವಶ್ಯಕತೆ ಇಲ್ಲ.
ಮದುವಿಗೆ ಎರಡು ಮುಖಗಳಿವೆ.ಒಂದು ಗಂಡ-ಹೆಂಡತಿಯರ ಸಂಬಂಧದ-ಪ್ರೀತಿಯ, ಮನಸಿಗೆ ಸಂಬಂಧಪಟ್ಟ ಮುಖ ಮತ್ತು ಇನೊಂದು ಗಂಡು ಹೆಣ್ಣಿನ ಸಂಪರ್ಕದ , ದೇಹಕ್ಕೆ ಸಂಬಂಧಪಟ್ಟ ಮುಖ.
ನನ್ನ ನಿನ್ನ ಮದುವಿಗೆ, ಸಂಬಂಧದ ಮತ್ತು ಪ್ರೀತಿಯ-ಮನಸಿಗೆ ಸಂಬಂಧಪಟ್ಟ ಮುಖ ಮಾತ್ರ ಈ ಜನ್ಮದಲ್ಲಿ ಸಾಧ್ಯ.
ಐದಾರು ತಲಿಮಾರುಗಳಿಂದ ದೇವರ ತೇರಿಗೆ ರಕ್ತತಿಲಕದ ಸೇವಾ ಮಾಡಿಕೊಂಡು ಬಂದ ಮನಿತನದಲ್ಲಿ ಹುಟ್ಟು ಬೆಳೆದವನು ನಾನು. ಪುನರ್ಜನ್ಮ ಮತ್ತು ದೇವರು ಅನ್ನುವವು ಇದ್ದಾವೋ ಇಲ್ಲವೋ ಅನ್ನುವುದು ನನಗೆ ಅಖೈರಾಗಿ ಗೊತ್ತು ಆಗುತ್ತಿಲ್ಲ. ಯಾವತ್ತೂ ಸಂಶಯದೊಳಗೆ ಬೇಯುತ್ತಿದ್ದೇನೆ. ಪುನರ್ಜನ್ಮ ಇದೆ ಅನ್ನುವುದಾದರೆ ಅಲ್ಲಿ ನಮ್ಮ ಮದುವಿಯ ದೇಹ ಸಂಪರ್ಕದ ಮುಖವೂ ಸಾಧ್ಯ ಆಗುತ್ತದೆ.
ಇನ್ನು ದೇವರು ಅನ್ನುವದು ಇದ್ದರೆ ಅದರ ವಿರುದ್ಧ ನನ್ನ ಬಂಡಾಯವಿದೆ. ಅದರ ವಿರುದ್ಧ ನನ್ನ ಧಿಃಕಾರವಿದೆ ಮತ್ತು ಅದರ ವಿರುದ್ಧ ನನ್ನ ಸತ್ಯಾಗ್ರಹವಿದೆ.
ಆ ದೇವರ ವಿರುದ್ಧದ ಸತ್ಯಾಗ್ರಹದ ಸಲುವಾಗಿಯೇ ನನ್ನ -ನಿನ್ನ ಮದುವಿಯ ದೈಹಿಕ ಮುಖ ಈ ಜನ್ಮದಲ್ಲಿ ಸಾಧ್ಯ ಆಗುವುದಿಲ್ಲ . ದೇವರ ವಿರುದ್ಧದ ನನ್ನ ಬಂಡಾಯ ಇದು.ದೇವರು ಅನ್ನುವದು ಇದೆ ಅನ್ನುವದಾದರೆ ನನ್ನ ನಿನ್ನಂಥವರ ಬದುಕಿನಲ್ಲಿ ನಡೆಯುವ ಘಟನೆಗಳಿಗೆ ಯಾವ ಅರ್ಥವಿದೆ? ಇದು ಅವನಿಗೆ ತಿಳಿಯಬೇಕಲ್ಲವೆ? ಇದನ್ನು ಬಿಟ್ಟು ಬೇರೆ ಯಾವ ಹಾದಿಯಿಂದ ಆ ದೇವರಿಗೆ ತಿಳಿಸಲಿಕ್ಕೆ ಸಾಧ್ಯ?
ನಾನು ತೆಗೆದುಕೊಂಡಿರುವ ದೇವರ ವಿರುದ್ಧದ ಈ ಬಂಡಾಯದಲ್ಲಿ ನೀನೂ ಭಾಗಿಯಾಗುತ್ತೀ ಅಂತ ನಂಬಿದ್ದೇನೆ.ನಿನಗೆ ಕಷ್ಟ ಅನಿಸುವದಾದರೆ,ನಿನ್ನ ಶರೀರ ಒಪ್ಪದಿದ್ದರೆ, ಯೋಗ್ಯರು ಯಾರಾದರೂ ಸಿಕ್ಕು ನೀನು ಮದುವಿಯಾಗುತ್ತೀ ಅನ್ನುವದಾದರೆ ನನ್ನದೇನೂ ಅಭ್ಯಂತರ ಇಲ್ಲ. ಮದುವಿಯಾಗಿಬಿಡು.
ಕಾಯಾ ವಾಚಾ ಮನಸಾ ಸಾಧ್ಯವಾಗದ ಬಂಡಾಯ ನಿರರ್ಥಕವಾದದ್ದು. ಹಾಗೆ ನಿನ್ನ ಬದುಕು ನಿರರ್ಥಕವಾಗುವದು ಬೇಡ.
ಮಕ್ಕಳಿಗೆ ಯೋಗ್ಯ ಶಿಕ್ಷಣ ಕೊಡಿಸು. ಹಣದ ಬಗ್ಗೆ ಚಿಂತೆ ಮಾಡುವದು ಬೇಡ.
ನನ್ನ ಮನಸ್ಸಿನಲ್ಲಿ ನೀನು ಇರುವಿ ಮತ್ತು ನಿನ್ನ ಮನಸ್ಸಿನಲ್ಲಿ ನಾನು ಇದ್ದೇನೆ. ಇದಕ್ಕಿಂತ ಬೇರೆ – ಪತ್ರ ಗಿತ್ರಗಳು ಬೇಕಾಗಿಲ್ಲ.ನಮ್ಮ ಬಂಡಾಯದ ವ್ರತದಲ್ಲಿ ಮನಸ್ಸು ಇಡೋಣ.ಮನಸ್ಸು ಚಂಚಲವಾಗಿಸುವದನ್ನ ದೂರ ಇಡೋಣ. ವಿಶೇಷವಾದದ್ದು ಏನಾದರೂ ಇದ್ದರೆ,ಅನಿವಾರ್ಯಗಳು ಇದ್ದರೆ ಜರೂರು ಪತ್ರ ಬರೆಸು.ಮಗನ ಮದುವಿಗೆ ಬರುತ್ತೇನೆ.
ಮಕ್ಕಳನ್ನು ಚನ್ನಾಗಿ ಜೋಪಾನ ಮಾಡು.ಸದ್ಗುಣಿಗಳನ್ನಾಗಿ ಮಾಡು.
ಅವರಿಗೆ ನನ್ನ ಆಶೀರ್ವಾದಗಳನ್ನು ತಿಳಿಸು.
ದೊಡವ್ವ ತೀರಿಕೊಂಡದ್ದು ತಿಳಿದು ಬಹಳ ಸಂತಾಪವಾಯಿತು.ಆದರೆ ಅನಿವಾರ್ಯ. ಸಾವು ಯಾರನ್ನು ಬಿಟ್ಟಿದೆ ? ಕಾಲ ತೀರಿದ ಮೇಲೆ ನಾನೂ ನೀನೂ ತೀರುವವರೇ ಅಲ್ಲವೆ?
ಬದುಕನ್ನ ನಿಷ್ಠೆಯಿಂದ ಸ್ವೀಕರಿಸು , ಎದುರಿಸು.
ಇಂತೀ
ನಿನ್ನವ

….ಉದ್ದವಾದ ಉಸಿರು ಬಿಟ್ಟು ತಲೆ ಎತ್ತಿ ಬಾಳವ್ವನ ಮುಖ ನೋಡಿದೆ….ನನ್ನ ಕಣ್ಣುಗಳನ್ನ ನೋಡುತ್ತಿದ್ದಂತೆಯೇ ಆಕಿಯ ಕಣ್ಣುಗಳಿಂದ ಚಿಲ್ಲಂತ ಕಣ್ಣೀರು ಚಿಮ್ಮಿದವು… ಆಕಿ ದನಿ ತಗಿಯದೇ ಮೌನವಾಗಿ ಬಿಕ್ಕಳಿಸಿದಳು…
‘ಸಮಾಧಾನ ಮಾಡಿಕೋವಾ…ಸಮಾಧಾನ ಮಾಡಕೋವಾ…’ಅಂತ ಬಡಬಡಿಸಿದೆ…
ಅತ್ತು ಅತ್ತು ತಹಬಂದಿಗೆ ಬಂದಮ್ಯಾಲೆ ಆಕಿ ಮಾತಾಡಿದಳು :
‘…ಪತ್ತರದಾಗ ಮದಲ ನಮ್ಮದ ಮದಿವಿ ಆಗೇ ಹೋಗೇತಿ ಅಂತ ಬರದಾಂವ ಆಮ್ಯಾಗ ಕಡೀಕ ಹೆಂಗ ಬರದ್ದಾನ ನೋಡಿದಿರೀ…?’
‘…………….?’
‘….ಅಂವನ್ನ ಬಿಟ್ಟು ನಾಣಿ ಬ್ಯಾರೇ ಯಾರನಾರಣಿ ಮದಿವೀ ಆಗಾಕಿದ್ದರ ಆಗಬೇಕಂತ…!’
ಅಂತ ಅಂದಾಕೆನಣಿ ಬಾಳವ್ವ ಅಳುವಿನ ರಭಸದೊಳಗ ಸಿಕ್ಕು ಕೊಚ್ಚಿಕೊಂಡು ಹೋದಳು…
ನನ್ನ ಕಣ್ಣಲ್ಲಿಯೂ ನೀರು ಕಾಣಿಸಿಕೊಂಡಿತು…
ತೇರಿನ ಬೆನ್ನಿಗೆ …
ಗೆಳೆಯ ರಾಘವೇಂದ್ರ ಪಾಟೀಲರು ನಿಡುಗಾಲದಿಂದಲೂ ಸಾಹಿತ್ಯದ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.ಕತೆ, ವಿಮರ್ಶೆಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಅವರು ತನ್ನದೇ ಸ್ಥಾನವನ್ನ ಕಂಡುಕೊಂಡಿದ್ದಾರೆ. ಸದಭಿರುಚಿಯ ಪತ್ರಿಕೆಯನ್ನು ನಡೆಸಿಕೊಂಡು ಬರುವುದರ ಮೂಲಕ ಸೃಜನಶೀಲ ಸಾಹಿತ್ಯಕ್ಕೆ ಪೂರಕವಾದ ಒಂದು ವಾತಾವರಣವನ್ನೂ ಅವರು ಪ್ರತೀತಗೊಳಿಸುತ್ತಿದ್ದಾರೆ. ಅನಗತ್ಯವಾದ ವಾದ -ವಿವಾದಗಳಿಂದ ಸದಾ ದೂರ ಉಳಿದಿರುವ ಅವರು ಸಾಹಿತ್ಯದ ದೂರಗಾಮೀ ಪ್ರಭಾವಗಳ ಬಗೆಗೆ ಗಂಭೀರವಾಗಿ ಚಿಂತಿಸುತ್ತಲೇ ಬಂದಿದ್ದಾರೆ. ತಮ್ಮ ಪ್ರಕಾಶನದ ಮೂಲಕ ಅವರು ಪ್ರಕಟಿಸಿದ ವಿವಿಧ ಕೃತಿಗಳೂ ಕೂಡಾ ಪಾಟೀಲರ ಸೃಜನಶಿಳತೆಯ ಇನ್ನೊಂದು ಆಯಾಮವನ್ನು ಸಂಕೇತಿಸುತ್ತದೆ.ಸಾಹಿತ್ಯದ ವಾತಾವರಣ ಕಲುಷಿತಗೊಂಡಿರುವ ಇಂದಿನ ಸಂದರ್ಭದಲ್ಲಿ ಪಾಟೀಲರ ಹಾಗೆ ಅಕಲಂಕಿತರಾಗಿ ಉಳಿಯುವುದು ಒಂದು ದೊಡ್ಡ ಸಂಗತಿಯೇ ಆಗಿದೆ.ಸಮಕಾಲೀನ ಒತ್ತಡಗಳಿಂದ ಸಿಡಿದು ದೂರ ಉಳಿದಿರುವ ಪಾಟೀಲರು ಆ ಕಾರಣಕ್ಕೇನೇ ನನ್ನಂಥ ಅನೇಕರಿಗೆ ತುಂಬ ಇಷ್ಟವಾಗಿದ್ದಾರೆ.
*
*
*
ಪ್ರಸ್ತುತ ‘ತೇರು’ ಕಾದಂಬರಿಯು ಪಾಟೀಲರು ಸಾಹಿತ್ಯ ಕ್ಷೇತ್ರದಲ್ಲಿ ನಡೆಸುತ್ತಿರುವ ಸೃಜನಶೀಲ ಪ್ರಯೋಗಕ್ಕೆ ಇನ್ನೊಂದು ಉದಾಹರಣೆ. ತುಂಬ ಮನೋಹರವಾಗಿ ಆರಂಭಗೊಂಡು, ಲಲಿತವಾಗಿ ಬೆಳೆಯುತ್ತಾ ಹೋಗುವ ಈ ಕಾದಂಬರಿಯು ಮುಕ್ತಾಯವಾಗುವ ಹೊತ್ತಿಗೆ ಆರಂಭದ ರಮ್ಯ ಗುಣಗಳನ್ನು ಕಳಕೊಂಡು ಸಂಕೀರ್ಣವಾಗುತ್ತಾ ವಿಷಾದದ ಎಳೆಗಳನ್ನು ನೇಯುತ್ತಾ ಮನರಂಜನೆಯಾಚೆ ಸಾಗುತ್ತದೆ. ಈ ಅರ್ಥದಲ್ಲಿ ಇದು ಜಾನಪದದ ಅಂಶಗಳನ್ನು ಒಡಲಲ್ಲಿ ಇರಿಸಿಕೊಂಡೂ, ಕೇವಲ ಜಾನಪದವಾಗಿ ಉಳಿಯುವುದಿಲ್ಲ. ನಮ್ಮ ಕಾಲದ ಪತನ ಮುಖೀ ಮೌಲ್ಯಗಳಿಗೆ ಸಂಕೇತವಗಿ ಉಳಿಯುತ್ತದೆ.
ಕಾದಂಬರಿಯಲ್ಲಿ ನಾಲ್ಕಾರು ತಲೆಮಾರುಗಳ ಉಲ್ಲೇಖ ಬರುತ್ತದೆ.ಮೊದಲನೇ ತಲೆಮಾರಿನ ನಾಯಕ ದ್ಯಾವಪ್ಪ – ಧರಮನಟ್ಟಿಯ ವೈಭವದ ಕಾಲದಲ್ಲಿ ವಿಠ್ಠಲ ದೇವರ ತೇರಿಗೆ ನಡುವಿನ ಮಗನನ್ನು ಬಲಿಕೊಟ್ಟ ಬಡವ ಆತ.ಈ ಬಲಿ ಪ್ರಸಂಗವನ್ನು ಅತ್ಯಂತ ಸುಂದರವಾಗಿ ‘ಗೊಂದಲಿಗರ ಕಥನ ಶೈಲಿ’ಯ ಮೂಲಕ ಹೇಳಲಾಗಿದೆ.ಎಂಟೆಕರೆ ಭೂಮಿಗೆ ಮಗನನ್ನು ಬಲಿ ಕೊಟ್ಟ ಗೊಂಬೀ ರಾಮರ ದ್ಯಾವಪ
ಕಾಲಾಂತರದಲ್ಲಿ ಒಂದು ಪುರಾಣವಾಗಿ ಬಿಡುತ್ತಾನೆ. ಕಾದಂಬರಿಯಲ್ಲಿ ಮುಂದೆ ಬರುವ ಒಂದು ವಿವರಣೆಯು ಆತ ಪುರಾಣವಾದ ಬಗೆಗೆ ಅತ್ಯಂತ ಹೃದ್ಯವಾದ ಒಂದು ವಿವರಣೆಯನ್ನು ನೀಡುತ್ತದೆ –
“….ಮಗನನ್ನು ಸ್ವಾಮಿಯ ರಥಕ್ಕೆ ಬಲಿಕೊಟ್ಟ ಆ ದ್ಯಾವಪ್ಪ ಅಗದೀ ಥೇಟ್ ವಿಠ್ಠಲ ಸ್ವಾಮಿ ಇದ್ದಂಗಣಿ ಇದ್ದನಂತ ! …ನಮ್ಮ ಹಿರ್‍ಯಾರು ಹೇಳತಿದ್ದರು…ತೇರಿಗೆ ಬಲಿ ಕೊಡಾಕಂತ ಅಂವ ತನ್ನ ಮಗನ್ನ ತೆಕ್ಯಾಗ ಅವಚಿ ಹಿಡಕೊಂಡು – ತೇರಿನ ಗಾಲಿಯ ತೆಳಕ ಇಡಾಕ ಹೀಂಗ ತೆಳಗ ಬಗ್ಗತಿದ್ದಂಗಣಿ ತೇರಿನ್ಯಾಗಿನ ವಿಠ್ಠಲ ಸ್ವಾಮಿ ತೆಳಗ ಇಳದ ಬಂದು ದ್ಯಾವಪ್ಪನ ತೆಕ್ಯಾಗಿನ ಚಂದ್ರಾಮ ಅನ್ನುವ ಆ ಹುಡುಗನ್ನ ತನ್ನ ತೆಕ್ಕಿಗೆ ತಗೊಂಡನಂತ…ತನ್ನ ರಥಕ್ಕೆ ಬಲೀ ಆಗಲಿಕ್ಕೆ ಬಂದ ಆ ಕಂದನನ್ನ ತನ್ನ ತೆಕ್ಯಾಗ ಇಟಗೊಂಡು ವಿಠ್ಠಲ ಸ್ವಾಮಿ ಗರುಡ ಪಕ್ಸೀ ಮ್ಯಾಲ ಕುಂತಗೊಂಡು ಅಂತರಿಕ್ಸಾಕ್ಕ ಹಾರಿ…ಹಂಗಣಿ ಹಿರಿಹೊಳಿ ದಾಟಿ …ಆಕಾಸದಾಗೇ ಪಂಢರಾಪುರದ ಹಾದಿ ಹಿಡಿದನಂತ…”.
ಚಾರಿತ್ರಿಕ ಘಟನೆಯೊಂದು ಕಾಲಾಂತರದಲ್ಲಿ ಐತಿಹ್ಯವಾಗಿ ಕೊನೆಗೆ ಪುರಾಣವಾದ ಸಂದರ್ಭವಿದು. ದ್ಯಾವಪ್ಪನ ತೀರ್ಥ ಯಾತ್ರೆ ಮತ್ತಿತರ ವಿವರಗಳು ಇದಕ್ಕೆ ಪೂರಕವಾದ ವಿಚಾರಗಳಾಗಿವೆ.ಪಾಟೀಲರು ಉದ್ದೇಶಪೂರಕವಾಗಿ ತಂದ ‘ಗೊಂದಲಿಗರ ಕಥನಶೈಲಿ’ಯು ಇದಕ್ಕೊಂದು ತಾಂತ್ರಿಕ ಅಗತ್ಯವಾಗಿದ್ದು ಪುರಾಣ ಭೂಮಿಕೆಯನ್ನು ಅತ್ಯಂತ ಸಶಕ್ತವಾಗಿ ಮೂರ್ತಗೊಳಿಸುತ್ತದೆ. ದ್ಯಾವಪ್ಪನಿಗೆ ಪುರಾಣವಾಗುವ ಶಕ್ತಿಯಿದೆ, ಹಾಗೆಯೇ ಪಾಟೀಲರಿಗೆ ಪುರಾಣವನ್ನು ಪ್ರತೀತಗೊಳಿಸುವ ಪ್ರತಿಭೆಯಿದೆ.
ಮೂರು ತಲೆಮಾರುಗಳ ನಂತರದ ದ್ಯಾವಪ್ಪನ ಮರಿ ಮೊಮ್ಮಗ ಕುಬೇರಪ್ಪನ ಕಾಲಕ್ಕಾಗುವಾಗ ಪರಿಸ್ಥಿತಿ ಬದಲಾಗಿದೆ.ಪಾಟೀಲರಿಗೆ ಈ ತಲೆಮಾರನ್ನು ವಿವರಿಸುವ ಉತ್ಸಾಹವಿಲ್ಲ. ಧರಮನಟ್ಟಿಯಲ್ಲಿನ ಧರ್ಮ ಪತನಮುಖಿಯಾಗುವುದರಲ್ಲಿದೆ ಎಂಬ ಸೂಚನೆಯನ್ನು ಮಾತ್ರ ಅವರು ಕೊಡುತ್ತಾರೆ. ಆದರೆ ಕುಬೇರಪ್ಪನ ಮಗ ದ್ಯಾವಪ್ಪನ ಬಗೆಗೆ ಮಾತ್ರ ಅವರಿಗೆ ಇನ್ನಿಲ್ಲದ ಉತ್ಸಾಹ. ಪರಂಪರೆಯೊಡನೆ ತೀವ್ರ ಸಂಘರ್ಷಕ್ಕಿಳಿದಿರುವ ಈ ದ್ಯಾವಪ್ಪನು ತನ್ನ ಹಿರಿ ಮುತ್ತಜ್ಜನ ಹೆಸರನ್ನೇ ಹೊತ್ತಿದ್ದರೂ ಹಿಡಿದಿರುವ ಹಾದಿ ಮಾತ್ರ ಹೊಸತು. ‘ನವ ನಿರ್ಮಾಣ ಚಳುವಳಿ’, ‘ಜೈಲು’, ‘ಬದಲಾವಣೆ’ ಮತ್ತಿತರ ಪದಗಳ ನಡುವೆ ಬದುಕುವ ಆತನಿಗೆ ಗೊಂದಲಿಗರ ಪದ್ಯದ ಅಗತ್ಯವಿಲ್ಲವಾದ್ದರಿಂದ ಪಾಟೀಲರು ಆ ತಂತ್ರವನ್ನು ಕೈಬಿಟ್ಟಿದ್ದಾರೆ. ಪುರಾಣದ ಆಶಯಗಳೂ ಇಲ್ಲಿಲ್ಲ. ವ್ಯತಿರಿಕ್ತವಾಗಿ ಇಲ್ಲಿ ‘ವಿಠ್ಠಲನ ಕಣಬಟ್ಟು ಕಿತ್ತುಕೊಂಡ ’ , ‘ರುಕುಮಾಯಿಯ ಕಿರೀಟ ಕದ್ದು ಹೋದ ’, ಪುರಾಣ ಭಂಜನದ ವಿವರಗಳು

ಬರುತ್ತವೆ. ಮುಖ್ಯವಾದ ವಿಚಾರವೆಂದರೆ ಪಾಟೀಲರು ಈ ಬಗೆಯ ಪುರಾಣ ಭಂಜನವನ್ನು ವಿಷಾದದಲ್ಲಿ ವಿವರಿಸುತ್ತಿಲ್ಲ. ಏಕೆಂದರೆ ಅವರಿಗೆ ಹೊಸ ತಲೆಮಾರಿಗೆ ಸೇರಿದ ದ್ಯಾವಪ್ಪನ ಬಗೆಗೂ ಅನುಕಂಪೆಯಿದೆ.ಸ್ವಲ್ಪ ಹೆಚ್ಚು ಕಡಿಮೆಯಾದರೂ ನಮ್ಮ ಕಾಲದ ಧಾರ್ಮಿಕ ಮತಾಂಧರಿಗೆ ಖುಷಿ ಕೊಡಬಹುದಾದಂಥ ಕತೆಯನ್ನು ಪಾಟೀಲರು ಅತ್ಯಂತ ಸೂಕ್ಷ್ಮವಾಗಿ ಪತನಮುಖೀ ಧಾರ್ಮಿಕತೆಯಾಗಿ ಮಾರ್ಪಡಿಸಿ ತಮ್ಮ ಮಾನವೀಯತೆಯನ್ನೂ, ಪ್ರಗತಿಪರತೆಯನ್ನೂ ಜೊತೆ ಜೊತೆಯಾಗಿಯೇ ಮೆರೆದಿದ್ದಾರೆ.
*
*
*
ಈ ಕಾದಂಬರಿಯನ್ನು ಓದುತ್ತಿದ್ದಂತೆ ನಮಗೆ ಗೊಂದಲಿಗರ ಕಥನ ಶೈಲಿ ನೆನಪಿಗೆ ಬರುತ್ತದೆ. ಮಾಸ್ತಿಯವರ ಕತೆ ಹೇಳುವ ತಂತ್ರ ಕಣ್ಣ ಮುಂದೆ ಬರುತ್ತದೆ. ಪುರಾಣ ಕಾಲದ ಹರಿಶ್ಚಂದ್ರನೂ ಹಾದು ಹೋಗುತ್ತಾನೆ.ರಮ್ಯತೆಯೊಳಗಡೆ ವಿಷಾದವನ್ನು ದಾಖಲಿಸುವ ಬೇಂದ್ರೆ ಕಾವ್ಯ ಮನಸ್ಸಿನಲ್ಲಿ ಹಾದು ಹೋಗುತ್ತದೆ.ಮೂರು ತಲೆಮಾರಿನ ಕತೆ ಹೇಳಿದ ‘ಮರಳಿ ಮಣ್ಣಿಗೆ’ ಕಾದಂಬರಿಯ ಶಿವರಾಮ ಕಾರಂತರೂ ಪ್ರತ್ಯಕ್ಷರಾಗುತ್ತಾರೆ. ತೇರನೆಳೆಯಲಾರದ ಜನರನ್ನು ಕಂಡರಿಸಿದ ಖಾಸನೀಸರೂ ನೆನಪಾಗದಿರುವುದಿಲ್ಲ…ಇಷ್ಟೆಲ್ಲಾ ನೆನಪುಗಳ ನಡುವೆಯೇ ರಾಘವೇಂದ್ರ ಪಾಟೀಲರು ‘ಧರಮನಟ್ಟಿ’ಯ ಅನನ್ಯತೆಯನ್ನು ತೇರಿನ ಮೂಲಕ ಕಾಪಾಡಿಕೊಂಡು ಬಂದಿದ್ದಾರೆ.ಮೇಲಿನ ನೆನಪುಗಳ ಮೂಲಕ ಹೊಸ ನೆನಪೊಂದನ್ನು ಸೃಜಿಸಿದ್ದಾರೆ.ಕನ್ನಡದ ಮಹತ್ವದ ಬರಹಗಾರರೆಲ್ಲರ ರೀತಿಯಿದು. ಅವರು ಪರಂಪರೆಯಿಂದ ಸಿಡಿದು ದೂರ ಸಾಗಿ ಏಕಾಂಗಿಗಳಾಗಿ ಉಳಿಯುವವರಲ್ಲ. ತಮ್ಮ ವಿಶಿಷ್ಟ ಪ್ರತಿಭೆಯಿಂದ ಪರಂಪರೆಯ ಒಳಹೊಕ್ಕು, ಅಲ್ಲೇ ಸ್ಥಗಿತವಾಗದೇ, ಹೊರಬಂದು ಪರಂಪರೆಯ ನೆನಪಲ್ಲಿ ಹೊಸತನ್ನು ಕಟ್ಟುವವರು.ರಾಘವೇಂದ್ರ ಪಾಟೀಲರು ಅಂಥ ಬರಹಗಾರರು. ತೇರು ಅದಕ್ಕೆ ಅತ್ಯುತ್ತಮ ಉದಾಹರಣೆ.

ನವ ದೆಹಲಿ – ಪುರುಷೋತ್ತಮ ಬಿಳಿಮಲೆ
೦೧-೦೧-೦೩

ಆನಂದಕಂದ ಗ್ರಂಥಮಾಲೆ
ಮಲ್ಲಾಡಿಹಳ್ಳಿ
*****
ಮುಗಿಯಿತು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.