ಅಹಮದಿಗೆ

ತಿಳಿ ಹಳದಿ ಆಕಾಶದ ಮೈಯೆಲ್ಲ ಗಾಯ.
ಅಲ್ಲಲ್ಲಿ ಹೆಪ್ಪುಗಟ್ಟಿದ ನೀಲಿ
ನಿಟ್ಟುಸಿರು ಬಿಟ್ಟಹಾಗೆ
ಮುಸುಮುಸು ಅಳುವ ಗಾಳಿ.

ಬಾಗಿಲಿಂದಾಚೆ ಅವನು ಹೋಗುತ್ತಾನೆ.

ಮತ್ತದೇರೀತಿ;
ಕತ್ತಲಾಗುತ್ತದೆ.

ಎಂದಿನಂತೆ ಅಂದೂ,
ಕೈತೋಟದ ಹೂಗಳರಳಿ,
ಏನೋ ಹೊಸದು ಆಗೇಬಿಡುವುದೋ
ಎಂಬಂತೆ ಕಾದು ಕೂರುತ್ತವೆ.

ಮತ್ತೆ ಮಧ್ಯಾಹ್ನಾ;
ಊಟ, ತಿಂಡಿ, ಚಹಾ……
ನೆನ್ನೆಯ ಹಾಗೇ ಕಂಡರೂ
’ಇಂದು’ ನೆನ್ನೆಯಲ್ಲವೆಂಬಷ್ಟೇ ವ್ಯತ್ಯಾಸ.

ಸಂಜೆಯಾಗುತ್ತಲೇ,
ಸುಟ್ಟಬೊಬ್ಬೆಯ ಹಾಗೆ ಸೂರ್ಯ
ನಿಟ್ಟುಸಿರಿಟ್ಟ ಹಾಗೆ ಗಾಳಿ
ಅವನು ಮಲಗಿದ್ದಾನೆ ಮಂಚದ ಮೇಲೆ
ಮರದ ಬೊಂಬೆಯ ಹಾಗೆ.

ಬಾಗಿಲಿಂದಾಚೆ ಅವಳು ಹೋಗುತ್ತಾಳೆ
ಕತ್ತಲಾಗುತ್ತದೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.