ಸಂದರ್ಶನ: ಕಿರಣ್ ಎಂ, ಅವಿನಾಶ್ ಜಿ ಹೆಗ್ಗೋಡು
೧. ಮಲೆನಾಡಿನವರಾದ ನಿಮಗೆ ’ಇಗರ್ಜಿ..’ ಯಲ್ಲಿ ಉತ್ತರಕನ್ನಡ ದ ಭಾಷೆಯನ್ನು ಬಳಸಲು ಹೇಗೆ ಸಾಧ್ಯವಾಯಿತು?
ಉತ್ತರ: ನಮ್ಮ ತಂದೆ ಮುರ್ಡೇಶ್ವರದವರು..ನಮ್ಮ ನೆಂಟರೆಲ್ಲ ಹೊನ್ನಾವರ ಭಟ್ಕಳದವರು..ಆವಾಗಾವಾಗ ನಾನು ಹೋಗಿ ಬರ್ತಾ ಇರ್ತೀನಿ..ಹೀಗೆ ಒಂದು ತರಹ ನಾನು ಉತ್ತರ ಕನ್ನಡದವನೇ ಆಗಿ ಬಿಟ್ಟಿದೀನಿ.
೨. ಕಾದಂಬರಿಯಲ್ಲಿ ತುಂಬಾ ಚೆನ್ನಾಗಿ ಮೂಡಿಬಂದಿರುವುದು ಪಾದರಿ ಮತ್ತು ಗಂಗಮ್ಮನ ಮುಖಾಮುಖಿ..ಆದರೇ ಕಾದಂಬರಿ ಓದಿದ ಮೇಲೆ ಇದರ ಮೇಲೆ ಇನ್ನೂ ಹೆಚ್ಚಿನ ಗಮನ ಕೊಡಬಹುದಿತ್ತೇನೋ ಅನ್ನಿಸುತ್ತದೆ
ಉತ್ತರ: ನಾನು ಏನು ಹೇಳಬೇಕು ಆಂತ ಇದೀನಿ ಅಂದ್ರೆ ಅಲ್ಲಿ ಇಗರ್ಜಿಯ ಭೂತದ ಕಟ್ಟೆಗೆ ಕಾಯಿ ಒಡೆಯುವುದು ಅಲ್ಲಿನ ಜನರ ಪದ್ಧತಿ ಆಗಿತ್ತು. ಆದರೆ ಪಾದರಿಗೆ ಅದು ಬೇಕಿರಲಿಲ್ಲ. ಆ ತರ ಪಾದರಿಗಳು ಬಹಳ ಕಡೇ ಮಾಡಿದ್ದಾರೆ. ಗಂಗಮ್ಮ ಭಾರತೀಯತೆಯನ್ನು ಪ್ರತಿನಿಧಿಸುವವಳು. ಅವಳು ತೆಂಗಿನಕಾಯಿಯನ್ನು ತೊಗೊಂಡು ಹೋಗಿ ಇಗರ್ಜಿ ಮುಂದೇ ಇಟ್ಟು ಬಿಡ್ತಾಳೆ. ಇಲ್ಲಿ ಸೋತವರು ಯಾರಪ್ಪ ಅಂದ್ರೆ ಪಾದರಿ. ಕಾದಂಬರಿಯ ಕೊನೆಯಲ್ಲಿ ಆರ್ಕಿಲಾಜಿಕಲ್ ಡಿಪಾರ್ಟಮೆಂಟ್ ನವರು ಆ ದೇವಸ್ಥಾನವನ್ನ್ ಊರ್ಜಿತ ಮಾಡಲಿಕ್ಕೆ ಬರ್ತಾರೆ. ಅದು ಇವತ್ತಿನ ಸಮಸ್ಯೆಯಾಗಿ ಬಿಡುತ್ತದೆ. ಅದನ್ನ ಆ ಕತೇನ ಇನ್ನೂ ಬೆಳೆಸಬಹುದಿತ್ತು. ಅದೊಂದು ದೊಡ್ಡ ಸಮಸ್ಯೆಯಾಗಿ ಬಿಡುತ್ತೆ..ಅಷ್ಟನ್ನೆಲ್ಲ ಬೆಳಸಿದರೆ ಹೊಸ ಘರ್ಷಣೆ ಪ್ರಾರಂಭವಾಗಿ ಬಿಡುತ್ತೆ. ಅಷ್ಟಕ್ಕೆಲ್ಲ ಅವಕಾಶ ಕೊಡೋದು ಬೇಡ ಅಂತ ಅದನ್ನ ಅಲ್ಲಿಗೇ ನಿಲ್ಲಿಸಿಬಿಟ್ಟೆ. ಹೇಳಬೇಕಾದನ್ನೆಲ್ಲಾ ಸೂಚ್ಯವಾಗಿಯೇ ಹೇಳಿದ್ದೇನೆ.
೩. “ಇಗರ್ಜಿ..”ನಿಮ್ಮ ಬಾಲ್ಯದಿಂದ ಪ್ರೇರಿತವಾಗಿದ್ದ? ಅಥವಾ ಇಂದಿನ ಧರ್ಮ ಸಾಂಸ್ಥೀಕರಣವನ್ನ ಗಟ್ಟಿಗೊಳಿಸಲು ಬರೆದಿದ್ದ?
ಉತ್ತರ: ಹ..ಅದರಲ್ಲಿ ಎರಡೂ ಇದೆ..ಇವತ್ತಿನ ಈ ಧರ್ಮ ಸಾಂಸ್ಥೀಕರಣವನ್ನ ಬಲಗೊಳಿಸಲೇ ನಾನಿದನ್ನು ಬರೆದದ್ದು ಜೊತೆಗೆ ಅದರಲ್ಲಿ ನನ್ನ ಬಾಲ್ಯದ ನೆನಪುಗಳೂ ಇವೆ.
೪. ಇಗರ್ಜಿಯ ಸಹಿತ ನಿಮ್ಮ ಹಲವು ಬರಹಗಳಲ್ಲಿ ಕಾರಂತರ ಛಾಯೆ ಕಾಣುತ್ತದಲ್ಲ..
ಉತ್ತರ: ಹೌದೌದು ನನ್ನ ಬರಹಗಳ ಮೇಲೆ ಕಾರಂತರ ಪ್ರಭಾವ ಇದೆ. ಅವರ ಪುಸ್ತಕಗಳು ಸಾಕಷ್ಟು ನನ್ನಲ್ಲಿ ಪ್ರಭಾವ ಬೀರಿದೆ.
೫. ’..ಹತ್ತು ಮನೆಗಳು ಎಲ್ಲೋ ಒಂದು ಕಡೆ ಬ್ಲ್ಯಾಕ್ ಅಂಡ್ ವೈಟ್ ಚಿತ್ರಣವನ್ನ ಕೊಡುತ್ತೆ ಅನ್ಸುತ್ತೆ….ಗೊನಸ್ವಾಲಿಸ್ ಮತ್ತು ಮಸ್ಕರಿನಾಸರ ನಡುವಿನ ವಿಭಿನ್ನತೆಯನ್ನು ಗುರುತಿಸುವಲ್ಲಿ..
ಉತ್ತರ: ನಾನು ನೋಡಿದ್ದು ಅದು..ಅಲ್ಲಿ ಬರುವ ಶಿವಸಾಗರ ನಮ್ಮ ಸಾಗರವೇ..ಪ್ರಾರಂಭದಲ್ಲಿ ಬಂದ ಪಾದರಿಗಳ ಧರ್ಮನಿಷ್ಠೆ ಅಷ್ಟಿರುತ್ತಿತ್ತು, ಸಾಗರದಲ್ಲಿ ಕಟ್ಟಿದ ಈ ಇಗರ್ಜಿ ಇದೆ ಅಲ್ವಾ? ಅದನ್ನ ಇಟಲಿಯ ಒಬ್ಬ ಪಾದರಿ ಕಟ್ಟಿದ್ದು. ಅವನೆ ಹೆಗಲ ಮೇಲೆ ದೊಡ್ಡ ಕಲ್ಲು ಹೊತ್ಕೊಂಡು ಏಣಿ ಹತ್ತುತ್ತಿದ್ದ. ನಂತರ ಬಂದ ಪಾದರಿಗಳಿದ್ದಾರಲ್ಲ ಅವರದ್ದು ಐಶಾರಾಮಿ ಜೀವನ. ಅಪ್ಪ ಕೊಡಿಸೋ ಕಾರಲ್ಲಿ ಕುತ್ಕೊಳ್ಳೋದು,ದಿನ ಮೀನು ತಿನ್ನೋದು, ಒಂಚೂರೂ ಕಷ್ಟ ಅನುಭವಿಸಿದವರಲ್ಲ ಅವರು. ಅದೇನಾಯ್ತು ಅಂದ್ರೆ ಅಪ್ಪ ಕಷ್ಟ ಪಟ್ಟು ಮನೆ ಕಟ್ತಾನೆ ಮಗ ಆರಾಮಾಗಿ ಸುಖ ಪಡ್ತಾನೆ. ಮಗನಿಗೆ ಕಷ್ಟ ಗೊತ್ತಿಲ್ಲ. ಅದು ಅಪ್ಪನಿಗೆ ಗೊತ್ತು. ಇಂತಲ್ಲಿ ಬ್ಲ್ಯಾಕ್ ಅಂಡ್ ವೈಟ್ ಅನಿವಾರ್ಯವಾಗಿಬಿಡುತ್ತೆ. ಆ ಮೊದಲನೆ ಪಾದರಿ ಎಷ್ಟು ಕಷ್ಟಪಟ್ಟು ಅಲ್ಲಿ ಧರ್ಮವನ್ನ ಬೆಳೆಸಿದ. ನಂತರದವರು ಹೇಗೆ ಅದನ್ನ ಹಾಳು ಮಾಡಿಬಿಟ್ರು ಅನ್ನೋದು ಹೇಳ್ಬೇಕಿತ್ತು, ಅದನ್ನ ನೋಡಲಿಕ್ಕೆ ಆ ಪಾದರಿ ಮತ್ತೆ ಕೊನೆಯಲ್ಲಿ ಬರ್ತಾನೆ ಅದು ನಂತರದ ಕತೆ..
೬. ಕಾದಂಬರಿಯಲ್ಲಿ ಭಕ್ತಿಯ ಸ್ವರೂಪ ಬದಲಾಗುವುದು ಕೂಡ ತುಂಬಾ ಚೆನ್ನಾಗಿ ಬಂದಿದೆ..ಗೋನಸ್ವಾಲಿಸರಲ್ಲಿನ ಆ ತಾದಾತ್ಮ್ಯ.. ಪಾದರಿ ಸಿಕ್ವೇರಾ ಬರುವ ವೇಳೆಗೆ ಅವನಲ್ಲಿ ಅದು ಆಡಂಬರವಾಗಿರುತ್ತದೆ..
ಉತ್ತರ: ಹೌದು..ಹೌದು ಅದು ಆಡಂಬರವಾಗಿ ಬಿಡುತ್ತದೆ..
೭. ಕಾದಂಬರಿಯಲ್ಲಿ ಈ ಮತಾಂತರದ ಪ್ರಕ್ರಿಯೆ ತುಂಬಾ ವಿಶಿಷ್ಠವಾಗಿ ಮೂಡಿಬಂದಿದೆ..ಕಾದಂಬರಿಯ ಮೊದಲಲ್ಲಿ ಕ್ರಿಶ್ಚಿಯನ್ನರು ಯಾವುದೇ ಬಲವಂತವಿಲ್ಲದೇ, ಹೊರಗಿನ ಒತ್ತಡಗಳಿಲ್ಲದೇ ಕಲ್ಲು ಕುಟಿಗನನ್ನು ಆರಾಧಿಸಲು ತೊಡಗುತ್ತಾರೆ..ಇದು ಅಲ್ಲಿಯ ಪರಿಸರದಿಂದ ಅಥವಾ ಆಂತರಿಕ ಒತ್ತಡಗಳಿಂದ ಹುಟ್ಟಿಕೊಂಡದ್ದು..
ಉತ್ತರ: ಅಲ್ಲಿ ನೇರವಾಗಿ ಮತಾಂತರ ಪ್ರಸ್ತಾಪ ಮಾಡಿಲ್ಲ..ಅಲ್ಲಿ ಒಬ್ಬಳು ಕೆಲಸದವಳು ಕ್ರಿಶ್ಚಿಯನ್ ಆಗಿ ಮತಾಂತರವಾಗುತ್ತಾಳೆ ಆದರೆ ಅವಳು ಕ್ರಿಶ್ಚಿಯನ್ ಆಗುವುದು ಆ ಧರ್ಮದ ಮೇಲಿನ ಪ್ರೀತಿಯಿಂದ ಅಲ್ಲ..ಬದಲಿಗೆ ತಾನು ಪ್ರೀತಿಸಿದವನ ಮತ ಅದು ಎಂಬ ಕಾರಣಕ್ಕೆ. ಈ ತರಹದ ಕೆಲವು ಸನ್ನಿವೇಶಗಳು ನಾನಲ್ಲಿ ತಂದಿದ್ದೀನಿ.
೮. ಕಾದಂಬರಿಯ ತಂತ್ರವೂ ಕೂಡ ಹೊಸ ರೀತಿಯಲ್ಲಿದೆ..ಅದರಲ್ಲಿ ಉಪಯೋಗಿಸಿರುವ ಫ಼್ಲ್ಯಾಷ್ ಬ್ಯಾಕ್ ತಂತ್ರದಿಂದಾಗಿ ಬೇರೆ ಬೇರೆ ಘಟ್ಟದಲ್ಲಿ ಅದು ಬೇರೆ ಬೇರೆ ನೆಲೆಯಲ್ಲಿ ತೆರೆದುಕೊಳ್ಳುತ್ತದೆ
ಉತ್ತರ: ಬರೆಯುವವರಿಗೆ ಒಂದು ಕಷ್ಟ ಇದೆ..ನಾನು ಕೊಳಗ ಅನ್ನೋ ಕಾದಂಬರಿ ಬರೆದೆ..ಅದು ಐವತ್ತು ವರ್ಷದ ಹಿಂದಿನ ಕತೆ..ಅದನ್ನಿವತ್ತು ಹೆಳ್ಬೇಕು ಅಂದ್ರೆ ನಾನೊಂದು ತಂತ್ರ ಹುಡುಕಿಕೊಳ್ಳಬೇಕಲ್ವೇ? ಇವತ್ತಿನ ದಿನಕ್ಕೆ ಅದು ಪ್ರಸ್ತುತ ವಾಗಬೇಕು. ಹಳೆ ಕತೆನಾ ಹೇಳ್ಬೇಕು. ಅಲ್ಲಿ ನಾನು ಏನು ಮಾಡ್ತಿನಿ ಅಂದ್ರೆ ಯಾವುದೋ ವಿಶ್ವವಿದ್ಯಾನಿಲಯದವರು ಒಂದು ಮ್ಯೂಸಿಯಂ ಮಾಡ್ಲಿಕ್ಕೆ ಹೋಗ್ತಾರೆ ಅಲ್ಲಿ ಇಡಲಿಕ್ಕೆ ಆ ಊರಿನ ಹುಡುಗರು ಅಲ್ಲಿಯ ಹಳೆಯ ವಸ್ತುಗಳನ್ನ ಒಯ್ಯಲಿಕ್ಕೆ ಬರ್ತಾರೆ ಆಗ ಅಲ್ಲೊಂದು ಮನೆಯಲ್ಲಿ ಕೊಳಗ ಇರ್ತದೆ. ಅದನ್ನ ಒಯ್ಯಲಿಕ್ಕೆ ಅವರು ಬರ್ತಾರೆ..ಆವಾಗ ಇವನು ಕೊಳಗದ ಕತೆ ಹೇಳ್ತಾನೆ. ಕಾಗೋಡೂ ಸತ್ಯಾಗ್ರಹದ ಹಿಂದೆ ಒಂದು ಕೊಳಗದ ಕತೆ ಇದೆ. ಇಲ್ಲೂ ಹಾಗೆ ಮಾಡಿರೋದು..ಇವತ್ತಿನ ಕತೆ ಅಲ್ಲಾ ಅದು ..ಅಷ್ಟು ಹಿಂದಿನ ಕತೇನಾ ಇವತ್ತಿನವರಿಗೆ ಹೇಳಬೇಕು.
೯. ಈಗಿನ ತಲೆಮಾರಿನಲ್ಲಿ ಇನ್ನೂ ಆ ಮತಾಂತರದ ತಲ್ಲಣಗಳು ಉಳಿದುಕೊಂಡಿದ್ದಾವೆ ಅನ್ನಿಸುತ್ತದೆಯೇ?
ಉತ್ತರ: ಹೌದು..ಕ್ರಿಶ್ಚಿಯನ್ನರ ಮಟ್ಟಿಗೆ ಅದಿನ್ನೂ ಉಳಿದುಕೊಂಡಿದೆ. ಹೊರಗಡೆ ನೋಡಲಿಕ್ಕೆ ಕ್ರಿಶ್ಚಿಯನ್ನರೆಲ್ಲಾ ಒಂದೆ. ಆದರೆ ಅಂತರಂಗದಲ್ಲಿ ಸಾಕಷ್ಟು ಒಳ ಪಂಗಡಗಳಿವೆ. ಇವತ್ತು ಮಂಗಳೂರಿನಲ್ಲಿ ೨೫% ಕ್ರಿಶ್ಚಿಯನ್ನರು ಕೊಡವರು..ಅವರೆಲ್ಲ ಕೊಡವ ಜನಾಂಗದಿಂದ ಮತಾಂತರಗೊಂಡವರು…ಮತಾಂತರಗೊಂಡ ಸಾರಸ್ವತ ಬ್ರಾಹ್ಮಣರು ಇನ್ನೂ ತಮ್ಮ ಸುಪಿರಿಯಾಟಿಯನ್ನ ಅವರ ಮೇಲೆ ಉಳಿಸಿಕೊಂಡಿದೆ. ಮಂಗಳೂರಿನ ಸಿಮಿತ್ರಿನಾ ಮೂರು ಭಾಗ ಮಾಡಿದ್ದಾರೆ..ಬ್ರಾಹ್ಮಣರಿಗೊಂದು..ಅದಕ್ಕಿಂತ ಕೆಳಗಿನವರಿಗೊಂದು…ಇದನ್ನೆಲ್ಲಾ ನೋಡಿದಾಗ ಕೊಡಗರ ಜನಾಂಗದವರಿಗೆ ನೋವಾಗುತ್ತೆ. ಏಸು ಜಾತಿಯತೆಯನ್ನ ಹೊಡೆದಾಕಲು ಹೊರಟವನು, ಅವನ ಧರ್ಮದಲ್ಲೇ ಅದು ಉಳ್ಕೊಂಬಿಡ್ತಲ್ಲ ಅದು ನನ್ನ ಪ್ರಶ್ನೆ.
೧೦. ವೆಲ್ಲಾಂಗನಿ ಬಗ್ಗೆ..
ಉತ್ತರ: ವೆಲ್ಲಾಂಗನಿಗೆ ನಾನೂ ಹೋಗಿದ್ದೆ..ತಮಿಳನಾಡು ನಾಗಪಟ್ಟಣಂ ಹತ್ರ ಒಂದು ದೊಡ್ಡ ದೇವಸ್ಥಾನ. ಮೊನ್ನೆ ಸುನಾಮಿ ಬಂದಾಗ ದೇವಸ್ಥಾನದೊಳಗೆಲ್ಲಾ ನೀರು ನುಗ್ಗಿ ನುರಾರೂ ಜನ ಪ್ರಾರ್ಥನೆ ಮಾಡುವವರೆಲ್ಲಾ ಸತ್ತು ಹೋದರು. ನನಗೆ ದೇವರ ಬಗ್ಗೆ ಆಸಕ್ತಿಯಿಲ್ಲ. ನಾನ್ಯಾವತ್ತು ದೇವರನ್ನ ಕೈ ಮುಗಿದವನೂ ಅಲ್ಲ ನಂಬಿದವನೂ ಅಲ್ಲ..ಅದು ಒಂದು ನಂಬಿಕೆ..ನನಗೆ ವೆಲ್ಲಾಂಗನಿ ಬಗ್ಗೆಯೆಲ್ಲ ನಂಬಿಕೆಯಿಲ್ಲ..ಮೇರಿ ಕಾಣಿಸಿಕೊಂಡಳು ಅಂತೆಲ್ಲ ಹೇಳ್ತಾರೆ..ಪೋರ್ಚುಗಿಸರು ಪ್ರವಾಸಿಗಳಿಗೆ ದೋಣಿಯಲ್ಲಿ ಹೋಗ್ತಿರಬೇಕಾದರೆ ಮೇರಿ ಕಾಣಿಸಿಕೊಂಡಳಂತೆ..ಮುಳುಗುತಿದ್ದ ದೋಣಿಯಲ್ಲಿದ್ದವರನ್ನು ಕಾಪಾಡಿದಳಂತೆ..ಆ ಊರಿನ ಹೆಸರು ವೆಲ್ಲಾಂಗನಿ ಅಂತ..ಅಲ್ಲಿ ದೇವರನ್ನ ಅದೇ ಹೆಸರನ್ನಿಟ್ಟು ಕರಿತಾರೆ.
(’ಇಗರ್ಜಿಯ..’ ಕೊಂಕಣಿಗೆ ಅನುವಾದವಾಗಿದೆ.)
*****