ಸಂದರ್ಶಕರು ಎನ್. ಮನು ಚಕ್ರವರ್ತಿ (ಅನುವಾದ ಎಲ್.ಜಿ.ಮೀರಾ)
ಪು.ತಿ.ನ. ಅವರಿಗೆ ಕಾವ್ಯವೆಂಬುದು ಒಂದು ಜೀವನವಿಧಾನವೇ ಆಗಿತ್ತು. ದ.ರಾ.ಬೇಂದ್ರೆ ಮತ್ತು ಕುವೆಂಪು ಅವರ ಸಾಲಿಗೆ ಸೇರುವ ಪು.ತಿ.ನರಸಿಂಹಾಚಾರ್ ನವೋದಯ ಪಂಥದ ದಿಗ್ಗಜರಲ್ಲಿ ಒಬ್ಬರು.
ಅರ್ಧ ಶತಮಾನಕ್ಕೂ ಹೆಚ್ಚಿರುವ ತಮ್ಮ ಸಾಹಿತ್ಯ ಜೀವನದಲ್ಲಿ ಪು.ತಿ.ನ. ಹತ್ತು ಕವನ ಸಂಕಲನಗಳನ್ನು ಬರೆದರು. ’ಹರಿಚರಿತೆ’ ಎಂಬ ಮಹಾಕಾವ್ಯವನ್ನು ಬರೆದರು. ಜತೆಗೆ ೧೮ ಓಪೆರಾಗಳು (ಗೀತನಾಟಕಗಳು), ಪ್ರಬಂಧಗಳು ಮತ್ತು ಅನುವಾದಗಳು; ಗಯಟೆಯ ಫೌಸ್ಟ್ ಕೂಡ ಇದರಲ್ಲಿ ಸೇರಿದೆ.
ಪೌರೋಹಿತ್ಯದ ವೃತ್ತಿಗೆ ಬೆನ್ನು ತಿರುಗಿಸಿದ ಪು.ತಿ.ನ. ಅವರು ಸ್ವಾತಂತ್ರ್ಯ ಬರುವ ಮುನ್ನ ಗೋರಕ್ಷಕ ಸಮಿತಿ ಹಾಗೂ ಭೂಸೈನ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು. ನಂತರ ಸರ್ಕಾರಿ ಕೆಲಸಕ್ಕೆ ಸೇರಿದರು. ಮೈಸೂರು ವಿಶ್ವವಿದ್ಯಾಲಯವು ಹೊರತಂದ ನಿಘಂಟಿನ (ಇಂಗ್ಲಿಷ್-ಕನ್ನಡ) ಸಂಪಾದಕ ಮಂಡಳಿಯಲ್ಲಿ ಇವರೂ ಒಬ್ಬರಾಗಿದ್ದರು.
ಪು.ತಿ.ನ. ಮುಖ್ಯವಾಗಿ ಬರೆದದ್ದು ದೇವರು, ಪ್ರಕೃತಿ ಮತ್ತು ದೈವ ಸೃಷ್ಟಿಯ ಬಗೆಗೆ. ಇವರು ಉಪಯೋಗಿಸಿದ ಭಾಷೆಯಲ್ಲಿ ಸಂಸ್ಕೃತ, ಹಳಗನ್ನಡ ಮತ್ತು ಆಡು ಭಾಷೆಗಳು ವಿಲಕ್ಷಣ ರೀತಿಯಲ್ಲಿ ಸಮ್ಮಿಳಿತವಾಗಿದ್ದವು. ಅವರು ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದವರಾದರೂ ರೂಢಿಗೆ ಕಟ್ಟುಬಿದ್ದವರಲ್ಲ. ವಾಸ್ತವವಾಗಿ, ಸೌಂದರ್ಯವನ್ನು ಆಸ್ವಾದಿಸಲು ಸ್ವಲ್ಪ ಮಟ್ಟಿಗಿನ ಭಕ್ತಿರಾಹಿತ್ಯ ಅಗತ್ಯವೆಂದು ಅವರ ನಂಬಿಕೆಯಾಗಿತ್ತು.
ವರ್ಷಗಳ ಕಾಲ ನಡೆಸಿದ ಧ್ಯಾನಶೀಲಚಿಂತನೆಯು, ಮೇಲುಕೋಟೆಯ ಈ ವ್ಯಕ್ತಿಯನ್ನು ಜೀವನದ ಎಲ್ಲ ವಿಷಯಗಳ ಬಗ್ಗೆಯೂ ದೃಢವಾದ ನಿಲುವುಗಳನ್ನು ತೆಗೆದುಕೊಳ್ಳುವಂತೆ ಮಾಡಿತು. ಅವರು ವ್ಯಾಖ್ಯಾನಿಸುವ ಪ್ರಕಾರ ಕವಿಯೊಬ್ಬನಿಗೆ ತನ್ನದೆಂಬುದು ಏನೂ ಇರಬಾರದು. ಹಾಗೂ ಅವನಿಗೆ ಯಾವುದನ್ನೂ ನಿರಾಕರಿಸುವ ಹಕ್ಕಿಲ್ಲ. ಅವರ ಎಂಬತ್ತೇಳನೆಯ ಹುಟ್ಟುಹಬ್ಬದ ಸಂದರ್ಭದಲ್ಲಿ ಪು.ತಿ.ನ. ಸತ್ಯಂ ಶಿವಂ ಸುಂದರಂಗಳ ಕಡೆಗಿನ ತಮ್ಮ ಪ್ರಯಾಣವನ್ನು ಮುಂದುವರೆಸಿದ್ದಾರೆ.
ಪ್ರಶ್ನೆ: ಒಬ್ಬ ಕವಿಯಾಗಿ ನೀವು ನಿಮ್ಮ ಸಾಂಪ್ರದಾಯಿಕ ಮತ್ತು ಧಾರ್ಮಿಕ ಹಿನ್ನೆಲೆಯಿಂದ ಗಾಢವಾಗಿ ಪ್ರಭಾವಿತರಾಗಿದ್ದೀರಿ. ನಿಮ್ಮ ಕವಿತೆಗಳು ಪರಂಪರೆ ಮತ್ತು ಧರ್ಮದ ಪ್ರಭಾವವನ್ನು ವ್ಯಾಪಕವಾಗಿ ಪ್ರತಿಬಿಂಬಿಸುತ್ತವೆ. ಧಾರ್ಮಿಕ ಕಾವ್ಯದ ಬಗ್ಗೆ ಸಾಮಾನ್ಯವಾಗಿ ಇರುವ ಅಭಿಪ್ರಾಯವೆಂದರೆ ಅದು ದೇವರನ್ನು ಮತ್ತು ದೈವಸೃಷ್ಟಿಯನ್ನು ವೈಭವೀಕರಿಸುತ್ತದೆ ಮತ್ತು ಅವುಗಳ ಬಗ್ಗೆ ಸಂಭ್ರಮ ಪಡುತ್ತದೆ. ಆದಾಗ್ಯೂ ಹಾಪ್‌ಕಿನ್ಸ್‌ನಂಥ ಕವಿ ಇಂತಹ ಸುಲಭ ವಿಭಾಗೀಕರಣವನ್ನು ವಿರೋಧಿಸುತ್ತಾನೆ. ಏಕೆಂದರೆ ಅವನ ಕಾವ್ಯದಲ್ಲಿ ಒಂದು ಸಂಘರ್ಷವಿದೆ. ಧಾರ್ಮಿಕ ವ್ಯಕ್ತಿತ್ವಕ್ಕೂ ವೈಯಕ್ತಿಕ ಸೃಜನಶೀಲ ವ್ಯಕ್ತಿತ್ವಕ್ಕೂ ತಿಕ್ಕಾಟವುಂಟಾದಾಗ ಅವನ ಕಾವ್ಯದಲ್ಲಿ ಮೂಡುವ ಕರ್ಷಣವನ್ನು ಯಾರಾದರೂ ಗುರುತಿಸಬಹುದು. ಇದು ನಮ್ಮನ್ನು ’ಧಾರ್ಮಿಕ’ ಎಂಬ ಪದವನ್ನು ಸೃಜನಶೀಲ ಮನಸ್ಸೊಂದರ ಅನುಭವದಿಂದ ಅರ್ಥಮಾಡಿಕೊಳ್ಳುವಂತೆ ಒತ್ತಾಯಿಸುತ್ತದೆ. ಇದರ ಬೆಳಕಿನಲ್ಲಿ ನೀವು ನಿಮ್ಮ ಸೃಜನಶೀಲತೆಗೂ ಧಾರ್ಮಿಕ ಅನುಭವಕ್ಕೂ ಉಂಟಾಗುವ ಅನುಸಂಧಾನವನ್ನು ಹೇಗೆ ವಿವರಿಸುತ್ತೀರಿ?
ಪು.ತಿ.ನ. – ಬಹುಶಃ ಹೀಗೆ ಪ್ರಾರಂಭಿಸಬಹುದು ಅನ್ನಿಸುತ್ತದೆ. ಒಂದು ಸ್ಥಿತಿ ಇದೆ. ಅದರಲ್ಲಿದ್ದಾಗ ವ್ಯಕ್ತಿ ಒಳಗೂ ಇರುತ್ತಾನೆ ಹೊರಗೂ ಇರುತ್ತಾನೆ. ಒಬ್ಬ ಸೃಜನಶೀಲ ವ್ಯಕ್ತಿಗೆ ಒಂದು ಸ್ಥಿತಿಯ ’ಒಳಗೆ’ ಇದ್ದರೂ ಸಹ ಅವನ ವ್ಯಕ್ತಿತ್ವವನ್ನು ಆ ಸ್ಥಿತಿಯಿಂದ ಹೊರಗೆ ಎಳೆದುಕೊಳ್ಳಲು ಸಾಧ್ಯವಿದೆ. ಸೃಜನಶೀಲ ವ್ಯಕ್ತಿಯೊಬ್ಬ ಒಂದು ಧಾರ್ಮಿಕ ಅನುಭವದ ಜತೆ ಇಲ್ಲವೇ ಒಂದು ಚಿಂತನಾಪ್ರಕ್ರಿಯೆಯ ಜತೆ ತನ್ನ ವ್ಯಕ್ತಿತ್ವವನ್ನು ಮಿಳಿತಗೊಳಿಸಿಯೂ ಸ್ವಲ್ಪವೂ ವಿರೂಪಗೊಳ್ಳದಂತೆ ಅದನ್ನು ಹಿಂದೆ ಪಡೆಯಬಲ್ಲ. ಒಂದು ಅನುಭವಕ್ಕೆ ತನ್ನನ್ನು ತಾನು ಕೊಟ್ಟುಕೊಂಡಾಗಲೂ ತನ್ನ ವ್ಯಕ್ತಿತ್ವವನ್ನು ಅವನು ಕಳೆದುಕೊಳ್ಳುವುದಿಲ್ಲ.
ಈ ಅರ್ಥದಲ್ಲಿ ನಾನೊಬ್ಬ ಧಾರ್ಮಿಕ ವ್ಯಕ್ತಿ ಅಲ್ಲವೇ ಅಲ್ಲ ಅನ್ನಬೇಕು. ಬೇರ್ಯಾವುದೇ ಕವಿ ಹೊರಪ್ರಪಂಚದಲ್ಲಿ ತನಗುಂಟಾದ ಅನುಭವದಿಂದ ಕಾವ್ಯದ್ರವ್ಯವನ್ನು ಪಡೆದುಕೊಳ್ಳುವಂತೆ ನಾನು ಧರ್ಮದಿಂದ ಪಡೆದುಕೊಳ್ಳುತ್ತೇನೆ. ಒಬ್ಬ ಭಕ್ತ ಭಕ್ತಿಯಲ್ಲಿ ಕಳೆದುಹೋಗುತ್ತಾನೆ. ಆದರೆ ಕವಿಯೊಬ್ಬ ಸೃಜನಶೀಲನಾಗಿದ್ದಾಗ ತನ್ನ ಭಕ್ತಿಯನ್ನೂ ಕೂಡ ವಸ್ತುನಿಷ್ಠವಾಗಿ ನೋಡುತ್ತಾನೆ. ಇಂತಹ ಕವಿಗೆ ದೇವಾಲಯ ಮತ್ತು ಮೂರ್ತಿಗಳು ಪ್ರಪಂಚದಲ್ಲಿರುವ ಇತರ ಯವುದೇ ವಸ್ತುಗಳಂತೆ, ಕೇವಲ ವಸ್ತುಗಳು ಅಷ್ಟೆ. ಅವುಗಳನ್ನೇ ಅವನು ಒಂದು ಸೌಂದರ್ಯಾತ್ಮಕ ಅನುಭವವಾಗಿ ಪರಿವರ್ತಿಸಿಕೊಳ್ಳುತ್ತಾನೆ. ಅವು ಇಲ್ಲಿ ಕೇವಲ ಒಂದು ಪಂಥಕ್ಕೆ ಮಾತ್ರ ಲಭ್ಯವಾಗುವ ನಿರ್ದಿಷ್ಟ ಅನುಭವವಲ್ಲ ಅಥವಾ ಯಾವುದೋ ಒಂದು ನಿರ್ದಿಷ್ಟ ದೇವರ ಗುಣಗಾನವಲ್ಲ.
ಸೃಜನಶೀಲ ಪ್ರಕ್ರಿಯೆಯೊಂದು ಪ್ರಾರಂಭವಾಗುವುದು ಅನುಭವದಿಂದ ವ್ಯಕ್ತುಯು ಹೊರಬಂದು ಮರುಜನ್ಮಿಸಿದಾಗ ಮಾತ್ರ. ನನಗೆ ಯಾವತ್ತೂ ಧರ್ಮದಲ್ಲಿ ಮುಳುಗಿ ನನ್ನನ್ನು ಸಂಪೂರ್ಣವಾಗಿ ಕಳೆದುಕೊಳ್ಳುವುದು ಸಾಧ್ಯವಾಗಿಲ್ಲ. ಇದಕ್ಕಾಗಿಯೇ ಯಾವ ಸಂಪ್ರದಾಯಿಕ ವ್ಯಕ್ತಿಗೂ ನನ್ನನ್ನು ಒಬ್ಬ ಸಾಂಪ್ರದಾಯಿಕ ವ್ಯಕ್ತಿ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ದೇವಾಲಯದಲ್ಲಿ ವಾಸ್ತುಶಿಲ್ಪ, ಶಿಲ್ಪ ಕಲೆ, ಸಂಗೀತ ಮತ್ತು ಅಲ್ಲಿರುವ ಸಹಸ್ಪಂದನ ನನ್ನ ಮಟ್ಟಿಗೆ ಅನೇಕ ಕಲೆಗಳ ಸಂಗಮವನ್ನು ಸೂಚಿಸುತ್ತದೆ. ನಾನು ಇವೆಲ್ಲವುಗಳ ಜತೆ ಒಂದಾಗುತ್ತೇನೆ, ಮಿಳಿತಗೊಳ್ಳುತ್ತೇನೆ, ನಂತರ, ಅಂತಿಮವಾಗಿ ನನ್ನ ತುಣುಕುಗಳನ್ನು ಒಟ್ಟಾಗಿಸಿಕೊಂಡು, ನನ್ನೆಲ್ಲ ಭಾವನೆಗಳಿಗೆ ಒಬ್ಬ ಸೃಜನಶೀಲ ವ್ಯಕ್ತಿಯಾಗಿ ಅಭಿವ್ಯಕ್ತಿ ನೀಡುತ್ತೇನೆ.
ನಿಜವಾದ ಕವಿಯೊಬ್ಬ ಏನನ್ನೂ ನಿರಾಕರಿಸುವುದಿಲ್ಲ, ಜತೆಗೆ ಯಾವುದರಲ್ಲೂ ತನ್ನದೇನೂ ಉಳಿಯದಂತೆ ’ಸೇರಿ’ ಹೋಗುವುದಿಲ್ಲ. ನಿಜವಾದ ಕವಿಯೊಬ್ಬನಿಗೆ ನಿರಾಕರಣೆಯೂ ಇಲ್ಲ, ನಂಟುಗಳೂ ಇಲ್ಲ. ಒಂದು ನಿಲುವಿಗೆ ವ್ಯಕ್ತಿಯೊಬ್ಬ ’ಬದ್ಧ’ನಾದ ತಕ್ಷಣ ಅವನು ಮೂಲಭೂತವಾದಿಯಾಗಿ ಬಿಡುತ್ತಾನೆ. ನಾನೆಂದೂ ಮೂಲಭೂತವಾದಿಯಾಗಲಾರೆ. ಮಹಾನ್ ಕವಿಯೊಬ್ಬನಲ್ಲಿ ನಾವು ನಿರಾಕರಣೆ ಮತ್ತು ನಂಟುಗಳು ಸಾಧ್ಯವಾಗುವಂತಹ ನಾಜೂಕಿನ ಸಮತೋಲನವನ್ನು ಕಾಣುತ್ತೇನೆ. ಈ ನಾಜೂಕು ಸಮತೋಲನವೇ ಒಬ್ಬ ಕವಿಯನ್ನು ಒಬ್ಬ ಮೂಲಭೂತವಾದಿಯಿಂದ ಬೇರೆ ನಿಲ್ಲಿಸುತ್ತದೆ.
ಒಬ್ಬ ಕವಿ ಯಾವಾಗಲೂ ಯಾವುದಕ್ಕೂ ’ಅಂಟಿ’ಕೊಳ್ಳದೆ ’ಶುದ್ಧವಾದ ಮನಸ್ಸಿ’ನಿಂದ ಕೆಲಸ ಮಾಡಬೇಕು. ಯಾವುದೋ ಒಂದು ನಿಲುವಿಗೆ ಮನಸ್ಸು ’ಅಂಟಿ’ ಕೊಂಡ ತಕ್ಷಣ ಅದು ಆ ನಿಲುವನ್ನು ಎತ್ತಿ ಹಿಡಿಯಲು ಶುರು ಮಾಡಿಬಿಡುತ್ತದೆ. ಕವಿಯೊಬ್ಬನು ಈ ವಿಶ್ವದಲ್ಲಿ ಯಾವುದರ ಬಗೆಗೂ ಖಚಿತ ನಿಲುವನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಅವನೇನಿದ್ದರೂ ನಿರೀಶ್ವರವಾದಿಯಾಗಿರಬಹುದು ಅಷ್ಟೆ. ಕವಿಯೊಬ್ಬನ ಮಟ್ಟಿಗೆ ’ಒಳ್ಳೆಯದು ಮತ್ತು ಕೆಟ್ಟದ್ದು’ ಎಂಬ ವ್ಯತ್ಯಾಸವೂ ಮರೆಯಾಗಿಬಿಡುತ್ತದೆ.
ಪ್ರಶ್ನೆ: ಬ್ಲೇಕ್‌ನಂಥ ಋಷಿಯೊಬ್ಬ ಪ್ರಕೃತಿಯಲ್ಲಿನ ಪೂರ್ಣತೆಯನ್ನು ಅದರಲ್ಲಿರುವ ಒಂದು ಅವಿಭಾಜ್ಯ ದ್ವಂದ್ವದ ಮೂಲಕ ಗ್ರಹಿಸುತ್ತಾನೆ. ಅವನದನ್ನು ವೈರುಧ್ಯ ಅನ್ನುತ್ತಾನೆ. ಅವನ ಕವಿತೆಗಳು ಮುಗ್ಧ ಮತ್ತು ಎಳೆಯ ಸಂಗತಿಗಳನ್ನು ಬರ್ಬರ ಮತ್ತು ಕ್ರೂರವಾಗಿರುವುದರ ಜತೆ ಮುಖಾಮುಖಿಯಾಗಿಸುತ್ತವೆ. ಇಂತಹ ಅಂತರಂಗೀಯ ದ್ವಂದ್ವವು ವಿಶ್ವದ ವ್ಯವಸ್ಥೆಯಲ್ಲೇ ಇರುವುದನ್ನು ನೀವು ಪರಿಭಾವಿಸಿದ್ದೀರಾ? ಅದು ಎಂದಾದರೂ ಒಂದು ಕಾವ್ಯದರ್ಶನವನ್ನು ರೂಪಿಸುವಷ್ಟರ ಮಟ್ಟಿಗೆ ನಿಮ್ಮನ್ನು ಕಾಡಿದ್ದಿದೆಯೇ?
ಪು.ತಿ.ನ. – ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಎಂಬುದರ ಬಗ್ಗೆ ನಾವು ಏನನ್ನೂ ಖಾತ್ರಿಯಾಗಿ ಹೇಳಲು ಸಾಧ್ಯವಿಲ್ಲ. ವೈಯಕ್ತಿಕ ದೃಷ್ಟಿಕೋನದಿಂದ ನೋಡಿದಾಗ ಒಳ್ಳೆಯ ಮತ್ತು ಕೆಟ್ಟ ಸಂಗತಿಗಳಿರಬಹುದು. ಆದರೆ ಪೂರ್ಣತೆಯ (ಇಡಿತನ) ನೆಲೆಯಿಂದ ಅರ್ಥೈಸಿದಾಗ ನಾವು ಒಳ್ಳೆಯದು ಮತ್ತು ಕೆಟ್ಟದರ ಬಗ್ಗೆ ಅಷ್ಟು ಸುಲಭವಾಗಿ ವ್ಯತ್ಯಾಸ ಮಾಡಲಾಗುವುದಿಲ್ಲ. ನನ್ನ ವೈಯಕ್ತಿಕ ನೀತಿ ಏನೆಂದರೆ, ನಾವು ಯಾವುದನ್ನು ದ್ವಂದ್ವ (ಇಬ್ಬಗೆಯದು) ಎಂದು ಗುರುತಿಸುತ್ತೇವೋ ಅದರಿಂದ ಪ್ರಕೃತಿಯು ಒಂದು ನಾಜೂಕಾದ ಸಮತೋಲವನ್ನು ಕಾಯ್ದುಕೊಳ್ಳುತ್ತದೆ. ಈ ಪ್ರಕ್ರಿಯೆಯನ್ನು ನಾನು ಪ್ರಕೃತಿಯಲ್ಲಿ ಗಮನಿಸಿದಾಗ, ಬೇಟೆಗೆ ಬಲಿಯಾಗುವ ಪ್ರಾಣಿಗಳ ಸಂಖ್ಯೆಯು ಬೇಟೆಯಾಡುವ ಪ್ರಾಣಿಗಳ ಸಂಖ್ಯೆಗಿಂತ ಹೆಚ್ಚಿರುವುದನ್ನು ಗುರುತಿಸಿದ್ದೇನೆ.
ಉದಾಹರಣೆಗೆ ಕಾಡನ್ನು ತೆಗೆದುಕೊಳ್ಳಿ. ಕಾಡು ವೈವಿಧ್ಯಮಯ ಜೀವರಾಶಿಗಳಿಗೆ ಬದುಕುವ ಅವಕಾಶ ನೀಡಿಯೂ ಅವುಗಳ ನಡುವೆ ಒಂದು ಸಮತೋಲನವನ್ನು ಕಾಪಾಡುವುದರಲ್ಲಿ ಯಶಸ್ವಿಯಾಗಿದೆ. ನಾವು ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ಸುಲಭ ವ್ಯತ್ಯಾಸಗಳನ್ನು ಮಾಡುವುದು ಕೇವಲ ಭಾವಾತಿರೇಕದ ದೃಷ್ಟಿಕೋನದಿಂದ ಅಂತ ಅನ್ನಿಸುತ್ತದೆ. ಹುಲಿಯು ಮತ್ತು ಕುರಿಮರಿಯು ಮುಗ್ಧತೆಗೆ ಸಂಕೇತ ಎಂದು ನೋಡುವುದಾದರೆ ಇವೆರಡರ ನಡುವಿನ ವಿರೋಧವನ್ನು ಪ್ರಕೃತಿಸಹಜ ಎಂದು ತಿಳಿಯಬೇಕಾಗುತ್ತದೆ. ಈ ಅಸ್ತಿತ್ವದ ಅಸಂಖ್ಯರೂಪಗಳಲ್ಲೇ ಪ್ರಪಂಚದ ವಿಸ್ಮಯ ಅಡಗಿದೆ.
ನನ್ನ ಕಾಳಜಿಯ ಕೇಂದ್ರದಲ್ಲಿ ಯಾವಾಗಲೂ ಜೀವನದ ವೈರುಧ್ಯಗಳನ್ನು ದಾಟಲು ಹೋರಾಡುತ್ತಿರುವ ಮನುಷ್ಯನಿದ್ದಾನೆ. ನನ್ನ ಮಟ್ಟಿಗೆ ಹೇಳುವುದಾದರೆ ಶಿವನೂ ಸಹ ಒಳ್ಳೆಯ ಮತ್ತು ಕೆಟ್ಟದರ ಆಚೆಗೆ ಇದ್ದಾನೆ. ಶಿವ, ಒಂದು ಸಂಕೇತವಾಗಿ ದ್ವಂದ್ವದ ನಡುವೆ ಮತ್ತು ದ್ವಂದ್ವದ ಆಚೆ ಗಮಿಸುವ ಚೈತನ್ಯವನ್ನು ಪ್ರಕಟಿಸುತ್ತದೆ. ಬ್ಲೇಕ್ ಕೂಡ ಇದನ್ನು ಒಂದು ವಿಸ್ಮಯದಿಂದಷ್ಟೇ ನೋಡುತ್ತಾನೆ. ಭಾಸವಾಗುವ ಈ ದ್ವಂದ್ವದ ಬಗ್ಗೆ ಬ್ಲೇಕ್‌ನಲ್ಲಿ ನಾವು ಯಾವುದೇ ನೈತಿಕ ತೀರ್ಮಾನಗಳನ್ನು ಕಾಣಲು ಸಾಧ್ಯವಿಲ್ಲ.
ಪ್ರಶ್ನೆ: ನಿಮ್ಮ ಕಾವ್ಯ ಮತ್ತು ಸೌಂದರ್ಯ ಪ್ರಬಂಧದಲ್ಲಿ ನೀವು ಹೇಳಿದ್ದೀರಿ – ಸೌಂದರ್ಯ ಅನ್ನುವುದು ಮೂಲತಃ ಒಂದು ಮೌಲ್ಯ ಮತ್ತು ಬುದ್ಧಿಯು ನಿರ್ದೇಶಿಸುವ ಒಂದು ಅನುಭವ ಎಂದು. ಇದು ರಮ್ಯ ದೃಷ್ಟಿಕೋನವನ್ನು ವಿರೋಧಿಸುವ ತಾತ್ವಿಕ ನಿಲುವೋ (ಸಾಮಾನ್ಯ ಅರ್ಥದಲ್ಲಿ) ಅಥವಾ ಅದು, ನಿರ್ದಿಷ್ಟವಾಗಿ, ನಿಮ್ಮ ಕಾವ್ಯ ಪರಿಕಲ್ಪನೆ ರಮ್ಯವಾದುದು ಎಂಬ ದೃಷ್ಟಿಕೋನಕ್ಕೆ ಸವಾಲು ಹಾಕುತ್ತಿದೆಯೋ?
ಪು.ತಿ.ನ. – ಹೌದು ಸವಾಲು ಸಹ ಹಾಕುತ್ತಿದೆ. ಸೌಂದರ್ಯ ಎಂಬುದು ಮನುಷ್ಯನ ಮನಸ್ಸಿಗೆ ಮಾತ್ರ ಒದಗಿಬರುವ ಮೌಲ್ಯ. ಉದಾಹರಣೆಗೆ, ಒಂದು ಹಕ್ಕಿಯ ಬಣ್ಣ ಮತ್ತು ರೆಕ್ಕೆಗಳು ಅವುಗಳ ಮಟ್ಟಿಗೆ ಒಂದು ಕ್ರಿಯಾರೂಪಿಯಾದ ಪಾತ್ರವನ್ನು ಮಾತ್ರ ವಹಿಸಿರುತ್ತವೆ. ಅವುಗಳನ್ನು ಕುರಿತು ಮನುಷ್ಯನ ಮನಸ್ಸು ಪ್ರತಿಕ್ರಿಯೆ ತೋರಿಸಿದಾಗ ಮಾತ್ರ ಅವು ಒಂದು ಸೌಂದರ್ಯಾತ್ಮಕ ಆಯಾಮವನ್ನು ಪಡೆದುಕೊಳ್ಳುತ್ತವೆ.
ನಾನು ಇಲ್ಲಿ ಇನ್ನೂ ಒಂದು ಮಾತನ್ನು ಸೇರಿಸಬೇಕು. ದುರಾಸೆ ಮತ್ತು ಭಕ್ತಿಯಲ್ಲಿ ಸಹ ಈ ಅದ್ಭುತ ವೈಯಕ್ತಿಕ ಸೌಂದರ್ಯಾನುಭವವು ಕಳೆದುಹೋಗುತ್ತದೆ. ಒಂದು ಸೌಂದರ್ಯಾತ್ಮಕ ಗ್ರಹಿಕೆಗೆ – ಸ್ವಾಮಿತ್ವ ಮತ್ತು ಸ್ವಲ್ಪ ಮಟ್ಟಿಗಿನ ಭಕ್ತಿರಾಹಿತ್ಯ ಅನಿವಾರ್ಯವಾಗಿರುತ್ತದೆ. ಭಕ್ತಿ ಏನಾದರೂ ಮೂಡುವುದಿದ್ದರೆ ಆ ಸುಂದರ ವಸ್ತುವಿನಿಂದಲೇ ಮೂಡಬೇಕು. ದೇವರ ಒಂದು ಸುಂದರವಾದ ಬಿಂಬ ಕೂಡ, ನೋಡುಗನ ಅನುಸಂಧಾನ ಬರೀ ಭಕ್ತಿಯ ನೆಲೆಯಲ್ಲಿದ್ದರೆ ತನ್ನ ಸೌಂದರ್ಯ ಗುಣವನ್ನು ಕಳೆದುಕೊಂಡು ಬಿಡುತ್ತದೆ.
ಈ ರಮ್ಯ ಮನೋನೆಲೆಯ ತುಂಬ ಉತ್ಪ್ರೇಕ್ಷೆಯೇ ತುಂಬಿದೆ. ಆದಾಗ್ಯೂ, ’ಶುದ್ಧ’ವಾದ ಮನಸ್ಸೊಂದು – ಅದು ಉಪಯೋಗವಾದಿಯೂ ಆಗಿರಬಾರದು, ರಮ್ಯವೂ ಆಗಿರಬಾರದು – ಯಾವುದೇ ಸಂಗತಿಯಲ್ಲಾದರೂ ಸೌಂದರ್ಯವನ್ನು ಕಾಣಬಲ್ಲದು. ಸೂಕ್ಷ್ಮವಾದ ಮನಸ್ಸೊಂದರ ಮಟ್ಟಿಗೆ ದೈನಿಕ ಸಂಗತಿಗಳೂ ಅಪರೂಪದ ಸೌಂದರ್ಯದಿಂದ ಅನುರಣಿಸುತ್ತವೆ. ’ಶುದ್ಧ’ವಾದ ಮನಸ್ಸೊಂದು ಇಂತಹ ಸೌಂದರ್ಯಕ್ಕೆ ಯಾವುದೇ ಉತ್ಪ್ರೇಕ್ಷಾಭಾವವಿಲ್ಲದೆ ಪ್ರತಿಕ್ರಿಯಿಸುತ್ತದೆ. ನಾನು ಯಾವಾಗಲೂ ಸೈದ್ಧಾಂತಿಕವಾಗಿ ಮತ್ತು ನನ್ನ ಕಾವ್ಯಾಭ್ಯಾಸದಲ್ಲಿ ಈ ತತ್ವದಿಂದಲೇ ಮುಂದೆ ಸಾಗಿದ್ದೇನೆ.
ಪ್ರಶ್ನೆ: ನಿಮ್ಮ ನಾನು ಮತ್ತು ನನ್ನ ಸಾಹಿತ್ಯ ಪ್ರಬಂಧದಲ್ಲಿ ನೀವು ಕಾವ್ಯದ ಆಕೃತಿ ಮತ್ತು ತಂತ್ರದ ಬಗ್ಗೆ ಮಾತಾಡಿದ್ದೀರಿ. ಇಲ್ಲಿ ನಿಮ್ಮ ನಿಲುವುಗಳು (ವೀಕ್ಷಣೆಗಳು) ಸಾಂಪ್ರದಾಯಿಕವೂ ಆಗಿಲ್ಲ, ರಮ್ಯವೂ ಆಗಿಲ್ಲ. ವಸ್ತವವಾಗಿ, ಶಬ್ದ ಮತ್ತು ಅರ್ಥಗಳ ಬಗೆಗಿನ ನಿಮ್ಮ ಕಾಳಜಿ ಹಾಗೂ ಶಬ್ದದ ಬಗೆಗಿನ ಅತೃಪ್ತಿ, ಅದು ಅನುರಣಿಸುವ ಅರ್ಥ – ಇವೆಲ್ಲ ನವ್ಯರಿಗಿಂತ ಭಿನ್ನವಲ್ಲ ಎಂದೂ ಸಹ ಹೇಳಿದ್ದೀರಿ. ಆದರೂ ನಿಮ್ಮ ಕಾವ್ಯ ನವ್ಯಕಾವ್ಯವಲ್ಲ. ಆಕೃತಿ ಮತ್ತು ವಸ್ತುವಿಗೆ ಸಂಬಂಧಿಸಿದಂತೆ ನಿಮ್ಮ ಕಾವ್ಯಕ್ಕೂ ನವ್ಯ ಕಾವ್ಯಕ್ಕೂ ಇರುವ ದಿಕ್‌ಪಲ್ಲಟ ಮತ್ತು ವ್ಯತ್ಯಾಸಗಳ ಬಗ್ಗೆ ಏನು ಹೇಳಬಯಸುತ್ತೀರಿ?
ಪು.ತಿ.ನ. – ನಾನು ಬೆಳೆದಿದ್ದು ಸಾಂಪ್ರದಾಯಿಕವಾದ ಸಂಸ್ಕೃತದ ವಿಧಾನದಲ್ಲಿ. ಮೂರು ಪರಿಕಲ್ಪನೆಗಳು ನನ್ನ ಆಲೋಚನೆಯ ಕೇಂದ್ರದಲ್ಲಿದ್ದವು. ಸ್ಪಷ್ಟತೆ, ಸಂಕ್ಷಿಪ್ತತೆ ಮತ್ತು ಅಭಿವ್ಯಕ್ತಿ. ಈ ಮೂರನ್ನು ಸಾಂಪ್ರದಾಯಿಕ ಪಂಥವು ಅತ್ಯುತ್ತಮ ಗುಣಗಳೆಂದು ಎತ್ತಿ ಹಿಡಿಯುತ್ತಿತ್ತು. ನನ್ನ ಕಾವ್ಯದ ಆಕೃತಿಯ ಬಗ್ಗೆ ನಾನೂ ಯಾವಾಗಲೂ ಎಚ್ಚರವಾಗಿದ್ದೆ. ನಾನು ಯಾವುದನ್ನೂ ಲಾಕ್ಷಣಿಕ ಸ್ಫೂರ್ತಿಯಿಂದ ಬರೆದಿಲ್ಲ. ಅನುಭವಕ್ಕೆ ಮೂಲದ್ರವ್ಯವಾದ ಇಂದ್ರಿಯ ಗ್ರಹಿಕೆಗಳು ಅ-ಸಾಮಾನ್ಯ ಮತ್ತು ಲಾಕ್ಷಣಿಕವಾದರೂ, ನನ್ನ ಕಾವ್ಯಗಳಲ್ಲಿನ ಅಭಿವ್ಯಕ್ತಿ ಯಾವಾಗಲೂ ಪ್ರಜ್ಞಾಪೂರ್ವಕವಾದದ್ದು.
ನಿಜವಾಗಿಯೂ ನವ್ಯ ಕಾವ್ಯವೆಂದರೆ ಏನೆಂದು ನನಗೆ ಗೊತ್ತಿಲ್ಲ. ಅಡಿಗ ಮತ್ತು ಶಿವಪ್ರಕಾಶ್‌ರ ಕಾವ್ಯವನ್ನು ನಾನು ತುಂಬ ಖುಶಿಯಿಂದ ಓದುತ್ತೇನೆ. ನನ್ನ ರೀತಿಯ ಕಾವ್ಯಕ್ಕಿಂತ ಅವರ ಕಾವ್ಯ ಭಿನ್ನವಾಗಿದೆ. ಆದರೆ ಅಂತಿಮವಾಗಿ, ಎಲ್ಲ ಕಾವ್ಯವೂ ಒಂದು ’ಇರುವಿಕೆ’ಯನ್ನು ಸೃಷ್ಟಿಸುತ್ತದೆ ಮತ್ತು ಈ ನಿಟ್ಟಿನಲ್ಲಿ ನಾವು ಬೇರೆ ಬೇರೆ ಕಾವ್ಯಗಳ ನಡುವೆ ಏಕೆ ವ್ಯತ್ಯಾಸ ಮಾಡುತ್ತೇವೋ ನನಗೆ ತಿಳಿಯುವುದಿಲ್ಲ. ಎಲ್ಲ ಕಾಲದ ಎಲ್ಲ ನಿಜವಾದ ಕವಿಗಳೂ ಸಮಕಾಲೀನರು ಎಂದು ನನಗೆ ಒಪ್ಪಿಗೆಯಾಗಿಬಿಟ್ಟಿದೆ.
ಪ್ರಶ್ನೆ: ನಿಮ್ಮ ಕಾವ್ಯಕ್ಕೂ, ನವ್ಯ ಕಾವ್ಯಕ್ಕೂ ವ್ಯತ್ಯಾಸವನ್ನು ಗುರುತಿಸಲಾಗಿದ್ದರೂ, ನಿಮ್ಮ ಕಾವ್ಯದಲ್ಲಿನ ಆಧುನಿಕ ಅಂಶಗಳನ್ನು ಈಗ ಗುರುತಿಸಲಾಗುತ್ತಿದೆ. ತಮ್ಮ ಅತ್ಯುತ್ತಮ ಪ್ರಬಂಧವೊಂದರಲ್ಲಿ ಡಾ. ಡಿ.ಆರ್.ನಾಗರಾಜ್ ನಿಮ್ಮ ಕಾವ್ಯದ ಸಂಕೀರ್ಣತೆಯನ್ನು ಎತ್ತಿ ತೋರಿದ್ದಾರೆ; ಹಾಗೂ ನವ್ಯ ಪಂಥದಿಂದ ಬೆಳೆಯಲ್ಪಟ್ಟ ಗದ್ಯಲಯವೂ ನಿಮ್ಮ ಪ್ರಯೋಗಗಳನ್ನು ಹಾಗೂ ನಿಮ್ಮ ಕಾವ್ಯದ ವ್ಯಾಪ್ತಿ ಮತ್ತು ಆಳಗಳನ್ನು ಮಸುಕುಗೊಳಿಸಿದ್ದು ದುರದೃಷ್ಟಕರ ಎಂದಿದ್ದಾರೆ. ಆದರೆ ಪರಿಕಲ್ಪನೆಯಲ್ಲಿನ ನಿಮ್ಮ ಈ ಆಧುನಿಕತೆಗೆ ಸಾಟಿಯೆನಿಸುವ ಆಧುನಿಕ ಪದಪ್ರಯೋಗ ಮತ್ತು ಸಮಕಾಲೀನ ನುಡಿಗಟ್ಟುಗಳು ನಿಮ್ಮ ಕಾವ್ಯದಲ್ಲಿ ಏಕಿಲ್ಲ?
ಪು.ತಿ.ನ. – ನವ್ಯರಲ್ಲಿನ ಆಕೃತಿಯಲ್ಲಿನ ಆಧುನಿಕತೆ ಅನ್ನುವುದು ಪಾಶ್ಚಾತ್ಯ ಅನುಭವದಿಂದ ಬಂದದ್ದು. ನಾನು ಈ ವಿಷಯದಲ್ಲಿ ಅನನುಭವಿ. ನಾನೂ ಅನೇಕ ಪಾಶ್ಚಾತ್ಯ ಲೇಖಕರನ್ನು ಓದಿಕೊಂಡಿದ್ದೇನೆ. ಆದರೆ ಅವರ ನಕಲು ಮಾಡಿಲ್ಲ. ನಾನು ನನ್ನ ಶಕ್ತಿಯನ್ನು ಸಂಸ್ಕೃತ ಪರಂಪರೆಯಿಂದ ಪಡೆದುಕೊಳ್ಳುತ್ತೇನೆ. ದುರದೃಷ್ಟವಶಾತ್ ನಮ್ಮ ಜನರು ಸಂಸ್ಕೃತವೃತ್ತಗಳ ಸೌಂದರ್ಯವನ್ನು ಕಾಣುವುದರಲ್ಲಿ ವಿಫಲರಾಗಿದ್ದಾರೆ.
ನನ್ನ ಅಭಿವ್ಯಕ್ತಿಯು ಆದಷ್ಟೂ ಸುಂದರವಾಗಿರಬೇಕೆಂಬುದು ನನ್ನ ಇಚ್ಛೆಯಾಗಿದೆ. ಈ ಸೌಂದರ್ಯ ನನಗೆ ನನ್ನದೇ ಪರಂಪರೆಯಿಂದ ಪ್ರಾಪ್ತವಾಗುತ್ತದೆ. ಸಂಸ್ಕೃತ ವೃತ್ತಗಳ ಸೌಂದರ್ಯವು ಬತ್ತದ ನದಿಯಂತೆ.
ಇದೇ ಸಮಯದಲ್ಲಿ ನಾವು ರಾಘವಾಂಕ ಮತ್ತು ಕುಮಾರವ್ಯಾಸರ ಕಾವ್ಯಭಾಷಾ ಸೌಂದರ್ಯವನ್ನು ನಿರ್ಲಕ್ಷಿಸಬಾರದು ಎಂದು ನನಗನ್ನಿಸುತ್ತದೆ. ಕನ್ನಡ ಭಾಷೆಗೆ ಒಂದು ಅದ್ಭುತವಾದ ಜೀವಚೈತನ್ಯವಿದೆ ಹಾಗೂ ಅದು ಸಂರಕ್ಷಣೆಗೆ ಯೋಗ್ಯವಾಗಿದೆ. ಅದು ಕಾಲಕ್ಕೆ ತಕ್ಕಂತೆ ಬದಲಾಗಬಲ್ಲ ಸ್ಥಿತಿಸ್ಥಾಪಕ ಗುಣವನ್ನೂ ಹೊಂದಿದೆ. ಇದನ್ನೆಲ್ಲಾ ನಿರ್ಲಕ್ಷಿಸುವುದು ತೀರಾ ಶೋಚನೀಯ – ನನ್ನ ಕಾವ್ಯದಲ್ಲಿ ನಾನು ಇದನ್ನೆಲ್ಲ ಒಟ್ಟುಗೂಡಿಸಲು ಪ್ರಯತ್ನಿಸಿದ್ದೇನೆ.
’ನವ್ಯ’ರ ಭಾಷೆ ಈಗಾಗಲೇ ಮಸುಕಾಗಲು ಶುರುವಾಗಿದೆ. ಅವರ ಶೈಲಿಗೆ ಈಗ ಮೊದಲ ಕಸುವಿಲ್ಲ. ಆದರೆ ಅಡಿಗರ ವಿಷಯದಲ್ಲಿ ಇದು ಭಿನ್ನವಾಗುತ್ತದೆ. ಏಕೆಂದರೆ ಅವರೂ ತಮ್ಮ ಶಕ್ತಿಗಳನ್ನು ಪರಂಪರೆಯ ಚೌಕಟ್ಟಿನಿಂದಲೇ ಪಡೆದುಕೊಳ್ಳುತ್ತಾರೆ. ನಾನು ನನ್ನ ಪರಂಪರೆಯಲ್ಲಿ ಲಭ್ಯವಾಗುವ ಶ್ರೀಮಂತ ಮತ್ತು ವೈವಿಧ್ಯಮಯ ವಿನ್ಯಾಸಗಳಿಂದ ಶಕ್ತಿ ಸಂಚಯ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಇಲ್ಲಿನ ಮಹತ್ವದ ಪ್ರಶ್ನೆಯೇನೆಂದರೆ, ಈ ಎಲ್ಲದರಿಂದ ತಿಳಿದು ಬರುವ ಸಂಗತಿ ಏನು? ನನ್ನ ಪ್ರಕಾರ ಕವಿಯೊಬ್ಬ ಓದುಗನಿಗೆ ಹೊಸತೊಂದು ಆಯಾಮಾವನ್ನು ತೋರಿಸಬೇಕು, ಒಂದು ಹೊಸ ಜೀವನ ದರ್ಶನವನ್ನು ನೀಡಬೇಕು. ಆಕೃತಿಯನ್ನು ಕುರಿತಾಗಿ, ಭಾಷೆಯ ಆಯ್ಕೆಯನ್ನು ಕುರಿತು ಮಾಡಲಾಗುವಂಥ ವ್ಯತ್ಯಾಸಗಳು ನನಗೇನೂ ತೀರಾ ಮುಖ್ಯ ಅನ್ನಿಸುವುದಿಲ್ಲ.
ಪ್ರಶ್ನೆ: ನಿಮ್ಮ ಕಾವ್ಯವು ಭಾರತೀಯ ಸಂಪ್ರದಾಯದಿಂದ ಅದರಲ್ಲೂ ವೈಷ್ಣವ ಪರಂಪರೆಯಿಂದ ಸಾಕಷ್ಟನ್ನು ಪಡೆದುಕೊಂಡಿದೆ. ರಾಮನುಜ, ಯದುಗಿರಿ ಮತ್ತು ಆಳ್ವಾರರು ನಿಮ್ಮ ಕೇಂದ್ರ ಆಶಯಗಳಾಗಿದ್ದಾರೆ. ನಿಮ್ಮ ಕವನಗಳಲ್ಲಿ ಪ್ರಾದೇಶಿಕ ವಿವರಗಳೂ ವ್ಯಾಪಕವಾಗಿ ಬಳಕೆಯಾಗಿವೆ. ಆದರೆ ನೀವು ಮೇಲುಕೋಟೆ ದೇವಸ್ಥಾನದ ಬೀಬಿ ನಾಚಿಯಾರ್‌ಳನ್ನು ಒಂದು ಮಹತ್ವದ ಇರುವಿಕೆಯಾಗಿ, ಒಂದು ಕೇಂದ್ರ ಕಾವ್ಯಸಂಕೇತವಾಗಿ ಏಕೆ ಪರಿವರ್ತಿಸಲಿಲ್ಲ? ಹೀಗೆ ಮಾಡಿದ್ದರೆ ಅದು ಧರ್ಮಗಳ ಸಂಗಮವಾಗುತ್ತಿತ್ತು. ಅಷ್ಟೇ ಅಲ್ಲ ರಾಮಾನುಜರ ವ್ಯಕ್ತಿತ್ವದ ಕ್ರಾಂತಿಕಾರಕ ಆಯಾಮದೆಡೆಗೂ ಗಮನ ಸೆಳೆಯುತ್ತಿತ್ತಲ್ಲವೇ?
ಪು.ತಿ.ನ. – ನಾನು ಯಾವತ್ತೂ ವೈಷ್ಣವ ಪಂಥಕ್ಕೆ ಸಂಪೂರ್ಣವಾಗಿ ಸೇರಿರಲಿಲ್ಲ. ನಾನು ನನ್ನನ್ನು ಒಬ್ಬ ಶೈವಪಂಥೀಯನೆಂದೂ ದೃಢವಾಗಿ ಪರಿಗಣಿಸುತ್ತೇನೆ. ನಾನು ಯಾವತ್ತೂ ಒಂದು ನಿರ್ದಿಷ್ಟ ಪರಂಪರೆಯಿಂದೇನೂ ವಸ್ತು, ಸತ್ವಗಳನ್ನು ಪಡೆದುಕೊಂಡಿಲ್ಲ. ವಾಸ್ತವವಗಿ ವಿಷ್ಣುವಿಗಿಂತ ಹೆಚ್ಚಾಗಿ ಶಿವನೇ ನನ್ನಲ್ಲಿ ರೋಮಾಂಚನವನ್ನುಂಟು ಮಾಡುತ್ತಾನೆ. ಶಿವನು ಹೆಗೆಲ್ ಹೇಳುವ ದ್ವಿಮುಖ ವಿರೋಧಿ ಸತ್ಯಗಳನ್ನೇ ಸಂಕೇತಿಸುತ್ತಾನೆ ಎಂದು ನನಗನ್ನಿಸುತ್ತದೆ. ದೇವರ ಪರಿಕಲ್ಪನೆ ಕೂಡಾ ನನ್ನ ಮಟ್ಟಿಗೆ ಸತತವಾಗಿ ವಿಕಸಗೊಳ್ಳುವ ಪರಿಕಲ್ಪನೆಯಾಗಿದೆ. ಜೀನ್ ಪಾಲ್ ಸಾರ್ತ್ರೆಯ ನಿರಂತರವಾಗಿ ವಿಕಾಸಗೊಳ್ಳುತ್ತಲೇ ಇರುವ ದೇವರ ಕಲ್ಪನೆಯನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ.
ನಾನು ತಾತ್ವಿಕವಾಗಿಯಾಗಲೀ ಅಥವಾ ಭಾವನಾತ್ಮಕವಾಗಿಯಾಗಲೀ ಯಾವುದೋ ಒಂದು ವೈಯಕ್ತಿಕ ದೇವರೊಡನೆ ಅಥವಾ ಒಂದು ನಿರ್ದಿಷ್ಟ ಪರಂಪರೆಯೊಡನೆ ನನ್ನನ್ನು ಗುರುತಿಸಿಕೊಂಡಿಲ್ಲ. ಹಾಗೆ ನೋಡಿದರೆ, ನಾನು ’ಹಿಂದುತ್ವ’ದ ಪರಿಕಲ್ಪನೆಯೊಡನೆಯೂ ಸಹ ನನ್ನನ್ನು ಸಂಪೂರ್ಣವಾಗಿ ಗುರುತಿಸಿಕೊಳ್ಳಲಾರೆ. ನನಗೆ ಯಾವಾಗಲೂ ಒಬ್ಬ ಮುಕ್ತ ಮನುಷ್ಯನ ಪೂಜೆಯೇ ಮುಖ್ಯವೆನಿಸಿದೆ (ನೋಡಿ : ಮಲೆ ದೇಗುಲ). ಒಬ್ಬ ವ್ಯಕ್ತಿ ಸಂಪೂರ್ಣ ಸ್ವಾತಂತ್ರ್ಯದ ಸ್ಥಿತಿಯಲ್ಲಿ ಪೂಜೆ ಗೈಯಬೇಕು ಎಂದು ನನಗನ್ನಿಸುತ್ತದೆ. ನಾನು ಯಾವುದೇ ಮೂಲಭೂತವಾದೀ ನಿಲುವುಗಳೊಂದಿಗೆ ಸಹಭಾಗಿಯಾಗಲಾರೆ. ನಾನು ಶ್ರೀವೈಷ್ಣವ ಪಂಥದೊಡನೆಯೂ ಸಂಪೂರ್ಣವಾಗಿ ಗುರುತಿಸಿಕೊಳ್ಳಲಾರೆ.
ನಾನು ಪೂಜೆಯನ್ನೇನಾದರೂ ಮಾಡುವುದಾದರೆ ಅದು ನನ್ನದೇ ರೀತಿಯಲ್ಲಿ ಸ್ವಯಂಶುದ್ಧೀಕರಣಗೊಳ್ಳುವುದಕ್ಕೆ ಅಷ್ಟೆ. ನನ್ನ ಮನಸ್ಸಿನಲ್ಲಿರುವ ದೇವರು ರಾಮ ಅಥವಾ ಕೃಷ್ಣ ಅಥವಾ ಅಲ್ಲಾ ಕೂಡ ಆಗಬಹುದು. ನನ್ನನ್ನು ನಾನು ಶುದ್ಧಗೊಳಿಸಬೇಕೆಂಬ ತೀವ್ರವಾದ ಹಂಬಲ ನನಗೆ ಚಾಲನೆ ನೀಡುತ್ತದೆ. ನಾನು ಮಾಡುವ ಆಚರಣೆಗಳು ಆಳವಾದ ಸಾಂಕೇತಿಕತೆಯನ್ನು ಪಡೆದುಕೊಳ್ಳುತ್ತವೆ. ಆ ಆಚರಣೆಗಳು ಯಾವುದೇ ಸಾಂಪ್ರದಾಯಿಕ ಚೌಕಟ್ಟಿನಿಂದ ಬಂದಿರುವುದಿಲ್ಲ. ನಾನವುಗಳಲ್ಲಿ ಅರ್ಥವನ್ನು ಹುಡುಕಿಕೊಳ್ಳುತ್ತೇನೆ. ನನ್ನ ಪ್ರಜ್ಞೆಯ ವ್ಯಾಪ್ತಿಯೊಳಗೆ ಬರದೇ ಇರುವ ಏನನ್ನೂ ನಾನು ಸ್ವೀಕರಿಸುವುದಿಲ್ಲ. ನನ್ನ ಕಾವ್ಯದ ಮೂಲಕ ಮತ್ತು ನನ್ನ ಧಾರ್ಮಿಕ ಅನುಭವದ ಮೂಲಕ ನಾನು ಇಡೀ ಮಾನವ ಕುಲವನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದೇನೆ, ಅಷ್ಟೆ. ಸೌಂದರ್ಯಾತ್ಮಕತೆಯ ಮೂಲಕ ನಾನು ಮನವತಾವಾದವನ್ನು ಕಂಡುಕೊಳ್ಳಲು ಶ್ರಮಿಸಿದ್ದೇನೆ. ಆ ಕೇಂದ್ರದಲ್ಲಿ ನನ್ನ ಸೃಜನಶೀಲ ಪ್ರಕ್ರಿಯೆ ಮತ್ತು ಧಾರ್ಮಿಕ ಕಾಳಜಿಗಳು ಒಂದಾಗುತ್ತವೆ. ಅಲ್ಲಿಂದ ಸತ್ಯ, ಶಿವ ಮತ್ತು ಸುಂದರಗಳ ಕಡೆಗಿನ ನನ್ನ ಪ್ರಯಾಣ ಪ್ರಾರಂಭವಾಗುತ್ತದೆ.
ಪ್ರಶ್ನೆ: ನಿಮ್ಮ ಪ್ರಬಂಧವೊಂದರಲ್ಲಿ ಭಾರತದ ವಸಾಹತುಶಾಹಿ ಅನುಭವದ ಬಗ್ಗೆ ವಿಚಾರ ಮಾಡುತ್ತಾ ನೀವು, ಅದು (ವಸಾಹತುಶಾಹಿ ಅನುಭವ) ಭಾರತೀಯ ಬೌದ್ಧಿಕತೆ ಮತ್ತು ಸಂಕಲ್ಪ ಶಕ್ತಿಗಳನ್ನು ನಾಶ ಮಾಡಿತು ಎಂದು ಬರೆದಿದ್ದೀರಿ. ಆದಾಗ್ಯೂ, ನೀವು ಪಾಶ್ಚಾತ್ಯ ಸಂಸ್ಕೃತಿಗೆ ಅದರಲ್ಲೂ ಇಂಗ್ಲಿಷ್‌ಗೆ ತೆರೆದುಕೊಂಡಿದ್ದರಿಂದ ನಿಮ್ಮಲ್ಲಿ ವಿಮರ್ಶಾತ್ಮಕ ಪ್ರಜ್ಞೆ ಮೂಡಿತು; ಅದು ನಿಮ್ಮ ಸಂಪ್ರದಾಯವನ್ನು ಒಬ್ಬ ಒಳಗಿನ ವಿಮರ್ಶಕನಾಗಿ ಪರೀಕ್ಷಿಸುವ ಅವಕಾಶವನ್ನು ನೀಡಿತು ಎಂದು ಒಪ್ಪಿಕೊಳ್ಳುತ್ತೀರಿ. ವಿಶಾಲವಾದ ಸಂಸ್ಕೃತಿ ಪರಿಭಾಷೆಯಲ್ಲಿ ಪಾಶ್ಚಾತ್ಯ ಪ್ರಪಂಚದೊಂದಿಗೆ ಭಾರತದ ಅನುಸಂಧಾನದ ಬಗ್ಗೆ ಏನು ವಿವರಣೆ ನೀಡಬಯಸುತ್ತೀರಿ?
ಪು.ತಿ.ನ. – ಪಾಶ್ಚಾತ್ಯ ಪ್ರಪಂಚ ಅದರಲ್ಲೂ ಇಂಗ್ಲಿಷ್ ನನಗೆ ಸ್ವಾತಂತ್ರ್ಯವನ್ನು ನೀಡಿತು ಎಂದು ನಾನು ಒಪ್ಪಿಕೊಳ್ಳಲೇಬೇಕು. ನನ್ನ ಸಂಪ್ರದಾಯವನ್ನು ವಿಮರ್ಶಾತ್ಮಕವಾಗಿ ನೋಡಲು ನಾನು ಕಲಿತಿದ್ದೇನೆ. ನಾನು ಅದಕ್ಕೆ ಸೇರಿದ್ದೇನೆ, ಆದರೆ ಶರಣಾಗಿಲ್ಲ. ಇದನ್ನು ಸ್ವಲ್ಪ ವಿವರಿಸುತ್ತೇನೆ. ಉದಾಹರಣೆಗೆ, ರಾಮಾಯಣವನ್ನು ನೋಡುವ ಸಾಂಪ್ರದಾಯಿಕ ದೃಷ್ಟಿಕೋನವು ಭಕ್ತಿಭಾವಕ್ಕೆ ಕಿಂಕರನಾಗಿದೆ. ಸಾಂಪ್ರದಯಿಕ ಜನರು ರಾಮಯಣವನ್ನು ಒಂದು ಪವಿತ್ರ ಗ್ರಂಥವಾಗಿ ಪರಿವರ್ತಿಸಿಬಿಡುತ್ತಾರೆ. ನಮ್ಮ ಅಲಂಕಾರಿಕರೂ ಸಹ ರಾಮಾಯಣದಿಂದ (ಲಕ್ಷಣ) ಪದ್ಯಗಳನ್ನು ಉಲ್ಲೇಖಿಸುವುದಿಲ್ಲ. ಸೌಂದರ್ಯಶಾಸ್ತ್ರದ ಬಗೆಗಿನ ತಮ್ಮ ಸಿದ್ಧಾಂತಗಳನ್ನು ಸಮರ್ಥಿಸಲು ಅವರು ಕಾಳಿದಾಸನಿಂದ ಉದಾಹರಣೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ರಾಮಾಯಣವನ್ನು ಮಾತ್ರ ಉಪಯೋಗಿಸುವುದಿಲ್ಲ. ಹಾಗೆ ಹೇಳುವುದಾದರೆ ಅವರು ಭಗವದ್ಗೀತೆಯಿಂದ (ಅದರ ಅತ್ಯುತ್ತಮ ಕಾವ್ಯಭಾಗಗಳಿಂದಲೂ), ಭಾಗವತದಿಂದಲೂ ಉದಾಹರಣೆಗಳನ್ನು ತೆಗೆದುಕೊಳ್ಳುವುದಿಲ್ಲ.
ರಾಮಾಯಣ ಮತ್ತು ಭಗವದ್ಗೀತೆಗಳು ಪವಿತ್ರ ಗ್ರಂಥಗಳಾಗಿಯಲ್ಲ, ಬದಲಾಗಿ ಅದ್ಭುತ ಕಲಾಕೃತಿಗಳು ಎಂಬಂತೆ ನೋಡುವುದನ್ನು ಪಶ್ಚಿಮವು ನನಗೆ ಕಲಿಸಿದೆ. ಈ ಅದ್ಭುತ ಕೃತಿಗಳನ್ನು ಅವುಗಳ ಅಪ್ರತಿಮ ಸೌಂದರ್ಯಕ್ಕಾಗಿ ನಾನು ಮೆಚ್ಚುತ್ತೇನೆ. ಅವುಗಳೆಡೆಗಿನ ನನ್ನ ಪ್ರತಿಕ್ರಿಯೆ ಸೌಂದರ್ಯಾತ್ಮಕವಾದುದು. ನಾನು ರಾಮಾಯಣವನ್ನು ಶೇಕ್ಸ್‌ಪಿಯರ್ ಅಥವಾ ಗಯಟೆಯನ್ನು ಓದಿದ ಹಾಗೆಯೇ ಓದುತ್ತೇನೆ. ಅದು ಒಬ್ಬ ಕವಿಯ ಮಹಾನ್ ಕಾವ್ಯ; ಒಂದು ಸಾಂಪ್ರದಾಯಿಕ ಮನಸ್ಸಿಗೆ ರಾಮಾಯಣವನ್ನು ಈ ರೀತಿಯಲ್ಲಿ ನೋಡಲು ಸಾಧ್ಯವಾಗುವುದಿಲ್ಲ.
ಒಬ್ಬ ಕವಿಯಾಗಿ ನಾನು ಒಂದು ’ದೂರ’ದ ಪ್ರಜ್ಞೆಯನ್ನು, ಸಂಪೂರ್ಣವಾಗಿ ಸೇರಿಹೋಗದ ಸೌಂದರ್ಯಾತ್ಮಕ ದೂರವನ್ನು ಬೆಳೆಸಿಕೊಂಡಿದ್ದೇನೆ. ಸಾಂಪ್ರದಾಯಿಕ ದೃಷ್ಟಿಕೋನವು ರಾಮಾಯಣವನ್ನು ದೈವತ್ವಕ್ಕೇರಿಸಿದೆ. ಎಲ್ಲಕ್ಕಿಂತ ದುಃಖದ ಸಂಗತಿ ಅಂದರೆ ರಾಮಾಯಣವನ್ನು ನೈತಿಕ ತತ್ವಗಳನ್ನು ಸಮರ್ಥಿಸಲು ಬಳಸಿಕೊಳ್ಳಲಾಗುತ್ತದೆ. ನ್ಶೆತಿಕತೆಯ ಬಗೆಗಿನ ಅನೇಕ ಸಿದ್ಧಾಂತಗಳನ್ನು ರಾಮಾಯಣದ ಮೂಲಕ ಹೇಳಲಾಗುತ್ತದೆ. ಇದು ಒಂದು ಅದ್ಭುತ ಕಲಾಕೃತಿಯಾಗಿ ಅದಕ್ಕಿರುವ ಸೌಂದರ್ಯವನ್ನು ನಾಶ ಮಾಡಿತು. ಅದನ್ನು ಒಂದು ಧರ್ಮಗ್ರಂಥವೆಂಬಂತೆ ಓದುತ್ತಾ ಬರಲಾಯಿತು; ಅದು ಒಂದು ಸಿದ್ಧಾಂತವನ್ನು ಮುಂದಿಡುತ್ತದೇನೋ ಎಂಬಂತೆ.
ಸ್ವಯಂ ವಾಲ್ಮೀಕಿಯೂ ಕೂಡ ರಾಮಾಯಣವನ್ನು ಈ (ಮೇಲೆ ಹೇಳಿದ) ರೀತಿಯಲ್ಲಿ ಪರಿಕಲ್ಪಿಸಿರಲಿಲ್ಲ. ವಾಲ್ಮೀಕಿ ಒಬ್ಬ ಮಹಾನ್ ವ್ಯಕ್ತಿಯ, ಲೌಕಿಕವನ್ನು ದಾಟಲಿಚ್ಛಿಸುವ ಹುಡುಕಾಟದಲ್ಲಿದ್ದ. ಅದಕ್ಕೇ ತನ್ನ ಕೃತಿಯಲ್ಲಿ ಲೌಕಿಕ ಜಂಜಡಗಳನ್ನು ದಾಟಲಿಚ್ಛಿಸುವ ವ್ಯಕ್ತಿಯೊಬ್ಬನ ಹೋರಾಟಗಳಿಗೆ ಮತ್ತು ಬಿಕ್ಕಟ್ಟುಗಳಿಗೆ ಅಭಿವ್ಯಕ್ತಿ ನೀಡಿದ. ಈ ಅರ್ಥದಲ್ಲಿ ರಾಮ ನನಗೆ ಒಬ್ಬ ಸಮಕಾಲೀನ ವ್ಯಕ್ತಿಯಾಗಿ ಕಾಣುತ್ತಾನೆ. ಏಕೆಂದರೆ ಅವನ ಹೋರಾಟವು ಇವತ್ತು ಯಾವುದೇ ಒಬ್ಬ ಸೂಕ್ಷ್ಮ ಮನಸ್ಸಿನ ವ್ಯಕ್ತಿಯು ಅಸ್ತಿತ್ವದ ದಾಟುವಿಕೆಗಾಗಿ ಮಾಡುವ ಹೋರಾಟವನ್ನೇ ನೆನಪಿಸುತ್ತದೆ. ರಾಮನನ್ನು ಒಬ್ಬ ದೇವನೆಂಬಂತೆ ನೋಡಲು ನನಗೆ ಸಾಧ್ಯವಾಗುವುದಿಲ್ಲ. ನನ್ನ ಮಟ್ಟಿಗೆ ಅವನೊಬ್ಬ ಸಮಕಾಲೀನ ವ್ಯಕ್ತಿ.
ಇರಲಿ, ಭಾರತೀಯ ಅನುಭವದ ಬಗ್ಗೆ ಹೋಳುವುದಾದರೆ ಅದು ತುಂಬ ದುಃಖದಾಯಕವಾಗಿದೆ. ಪಶ್ಚಿಮದ ಜತೆಗಿನ ಭಾರತದ ಅನುಸಂಧಾನವು ಭಾರತದ ಪರಂಪರಾನುಗತ ಮನಸ್ಸನ್ನು ನಾಶಮಾಡಿದೆ. ನಮ್ಮ ಪರಂಪರೆಯ ಅತ್ಯುತ್ತಮ ಭಾಗವೆಂದರೆ ಪ್ರಶ್ನಾಮನೋಭಾವದ ಪಾರಭೌತಿಕ (ಆಧ್ಯಾತ್ಮಿಕ) ಪರಂಪರೆ. ಇದು ಹೆಚ್ಚು ಕಡಿಮೆ ಸಂಪೂರ್ಣವಾಗಿ ನಾಶವಾಗಿದೆ.
ನಾನು ಪಶ್ಚಿಮದಿಂದ ಸಾಕಷ್ಟನ್ನು ತೆಗೆದುಕೊಂಡಿದ್ದರೂ ವಿಮರ್ಶೆಯ ಪರಂಪರಾನುಗತ ಜೀವಧಾರೆಯ ಕಡೆಗೆ ಕುರುಡಾಗಿಲ್ಲ. ವಾಸ್ತವವಾಗಿ ಈ ಪಾರಂಪರಿಕ ಶಕ್ತಿ ಮತ್ತು ಪ್ರಾದೇಶಿಕ ವಿವೇಕಗಳೇ ನನ್ನನ್ನು ಪಶ್ಚಿಮದ ಆಕ್ರಮಣಶೀಲತೆಯಿಂದ ಪಾರು ಮಾಡಿವೆ. ನಾನು ಪಶ್ಚಿಮದಿಂದ ಪ್ರಭಾವಿತನಾಗಿದ್ದೇನೆ ಎಂಬುದರ ಅರ್ಥ ಎಂದಿಗೂ ನಾನು ಯಾವುದೇ ತಕರಾರಿಲ್ಲದೆ ಪಶ್ಚಿಮವನ್ನು ಸ್ವೀಕರಿಸುತ್ತೇನೆ ಎಂದಲ್ಲವೇ ಅಲ್ಲ. ನಿಜ. ನಾನು ಪಶ್ಚಿಮಕ್ಕೆ ಋಣಿಯಾಗಿದ್ದೇನೆ. ಆದರೆ ಪಶ್ಚಿಮವನ್ನು ಸಾರಾಸಗಟಾಗಿ ಒಪ್ಪಿಕೊಂಡದ್ದರಿಂದ ಭಾರತೀಯ ಪರಂಪರಾನುಗತ ಸೃಜನಶೀಲತೆಯು ನಾಶವಾಗಿದೆ ಎಂಬುದನ್ನು ಯಾವುದೇ ಅನುಮಾನವಿಲ್ಲದಂತೆ ಹೇಳಲಿಚ್ಛಿಸುತ್ತೇನೆ.
ಪ್ರಶ್ನೆ: ನೀವು ವಿಮರ್ಶಾ ಪ್ರಜ್ಞೆಯನ್ನು ಭಾರತೀಯ ಹಾಗೂ ಪಾಶ್ಚಾತ್ಯ ಎರಡೂ ಪರಂಪರೆಗಳಿಂದ ಕಲಿತಿದ್ದೀರಿ. ಹೀಗಿರುವಾಗ ಒಬ್ಬ ಪ್ರಜ್ಞಾವಂತ ಚಿಂತಕರಾಗಿ ನಿಮಗೆಂದೂ ಪರಂಪರಾನುಗತ ಚೌಕಟ್ಟಿನೊಳಗಡೆ ಇರುವ ಕ್ರೌರ್ಯ ಮತ್ತು ಅಮಾನವೀಯ ಅಂಶಗಳನ್ನು ಕುರಿತು ಚಿಂತಿಸಬೇಕು ಎಂದು ಅನ್ನಿಸಲಿಲ್ಲವೆ? ಒಬ್ಬ ವ್ಯಕ್ತಿಯಾಗಿ ಮತ್ತು ಸತ್ಯ, ಶಿವ ಮತ್ತು ಸುಂದರಗಳನ್ನು ಶೋಧಿಸುತ್ತಿರುವ ಒಬ್ಬ ಕವಿಯಾಗಿ ನಿಮ್ಮನ್ನು ನಿಮ್ಮದೇ ಪರಂಪರೆಯ ವಿನ್ಯಾಸಗಳಲ್ಲಿರುವ ಅಮಾನವೀಯ ಅಂಶಗಳು ತೀವ್ರವಾಗಿ ಕಾಡಲಿಲ್ಲವೇ? ಅವುಗಳನ್ನು ಪ್ರಶ್ನೆ ಮಾಡಬೇಕು ಎಂಬ ಒತ್ತಡ ಮೂಡಿಸಲಿಲ್ಲವೇ? ನಿಮ್ಮ ಸಂಸ್ಕೃತಿಯೊಳಗಡೆಯೇ ಅಂತರ್ಗತವಾಗಿರುವ ಕ್ರೌರ್ಯದ ಜತೆಗಿನ ತೀವ್ರ ಮುಖಾಮುಖಿಯು ನಿಮ್ಮ ವೈಯಕ್ತಿಕ ಹುಡುಕಾಟದ ಕೇಂದ್ರದಲ್ಲಿದೆ ಅಲ್ಲವೇ?
ಪು.ತಿ.ನ. – ಒಬ್ಬ ಕವಿಯಾಗಿ ನಾನು ಭಾರತೀಯ ಪರಂಪರೆಯಿಂದ ಪಡೆದಿರುವುದು ಬೌದ್ಧಿಕ ಅಂಶಗಳನ್ನು ಮಾತ್ರ. ಈ ದೃಷ್ಟಿಯಿಂದ ನಾನು ಭಾರತೀಯ ಪ್ರಂಪರೆಯ ಜತೆಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳುವುದಿಲ್ಲ. ಆದರೆ, ನಮ್ಮ ಸಾಂಸ್ಕೃತಿಕ ಚೌಕಟ್ಟಿನೊಳಗಿರುವ ಅನೇಕ ಅಂಶಗಳು ನನ್ನನ್ನು ವಿಚಲಿತಗೊಳಿಸುತ್ತವೆ ಮತ್ತು ತುಂಬ ಹಿಂಸೆ ಮಾಡುತ್ತವೆ ಎಂಬುದನ್ನು ನಾನು ಒಪ್ಪಿಕೊಳ್ಳಬೇಕು. ಅದರೆ ಈ ಅಂಶಗಳು ಜನ್ಮ ತಾಳುವುದು ಪರಂಪರೆಯೊಳಗಿನ ಮೂಲಭೂತವಾದಿ ನಿಲುವುಗಳಿಂದ. ಈ ನಿಲುವುಗಳನ್ನು ಮೂಲಭೂತವಾದಿಗಳು ಮುನ್ನೆಲೆಗೆ ತರುತ್ತಾರೆ. ಯಾವುದೇ ರೀತಿಯ ಮೂಲಭೂತವಾದವಾಗಲೀ ಅದು ಮೂಲತಃ ಅ-ಸೂಕ್ಷ್ಮವಾಗಿರುತ್ತದೆ. ಅಸಹನೆ ಹೊಂದಿರುತ್ತದೆ, ಅಮಾನವೀಯವಾಗಿರುತ್ತದೆ ಮತ್ತು ಕ್ರೂರವಾಗಿರುತ್ತದೆ.
ಉದಾಹರಣೆಗೆ ಮದುವೆಯ ಸಂದರ್ಭದಲ್ಲಿ ಸ್ತ್ರೀಯೊಬ್ಬಳು ನೀಡುವ ಭಾಷೆಯನ್ನು ತೆಗೆದುಕೊಳ್ಳಿ. ಅಲ್ಲಿ ಅವಳು ತಾನು ಎಂದಿಗೂ ಈ ಗಂಡಸನ್ನು ಬಿಟ್ಟು ಇನ್ನೊಬ್ಬ ಗಂಡನ್ನು ಸ್ವೀಕರಿಸುವುದಿಲ್ಲ ಎಂದು ಪ್ರಮಾಣ ಮಾಡುತ್ತಾಳೆ. ಜೀವನವೆಲ್ಲಾ ಈ ಭಾಷೆಯನ್ನು ಪಾಲಿಸಬೇಕು ಎಂಬ ನಿರ್ದೇಶನವನ್ನು ಪರಂಪರೆ ಅವಳಿಗೆ ನೀಡುತ್ತದೆ. ಆದರೆ, ಆ ಮಹಿಳೆಯ ಜೀವನಾನುಭವದಲ್ಲಿ ಮದುವೆಯಿಂದಾಗಿ ಕೇವಲ ಶೋಷಣೆ ಮತ್ತು ನೋವನ್ನನುಭವಿಸುವುದೇ ಲಭ್ಯವಾದರೆ, ’ಗಂಡ ಹೇಗಿದ್ದರೂ ಅವನನ್ನು ತೊರೆಯಬೇಡ’ ಎಂದು ಹೇಳುವ ಸಂಪ್ರದಾಯವನ್ನು ಅವಳು ತಿರಸ್ಕರಿಸಲೇಬೇಕಾಗುತ್ತದೆ.
ಸ್ತ್ರೀ ವಿಮೋಚನೆಯ ದೃಷ್ಟಿಕೋನದಿಂದ ನೋಡಿದಾಗ ನಾವು ಈ ಸಾಂಪ್ರದಾಯಿಕ ಚೌಕಟ್ಟನ್ನು ಅನುಮೋದಿಸಲು ಸಾಧ್ಯವಾಗುವುದಿಲ್ಲ. ನಾವು ಹಾಗೇನಾದರೂ ಅನುಮೋದಿಸಿದರೆ ಪರಂಪರೆಯನ್ನು ಕುರಿತಾದ ಮೂಲಭೂತವಾದೀ ನಿಲುವನ್ನು ತೆಗೆದುಕೊಂಡ ಹಾಗಾಗುತ್ತದೆ. ತುಂಬ ಒರಟಾದ ಮತ್ತು ಕ್ರೂರವಾದ ನಿಲುವು ಅದು. ನಾನು ನನ್ನ ಮೊದಮೊದಲ ಪದ್ಯಗಳಲ್ಲಿ ಇದೆಲ್ಲದರ ಬಗ್ಗೆಯೂ ಚಿಂತಿಸಿದ್ದೇನೆ.
ನಾನು ಒಬ್ಬ ಕವಿಯಾಗಿ, ನನ್ನ ಲೌಕಿಕ ಮನಸ್ಸಿಗೆ ಅವ್ಶೆಜ್ಞಾನಿಕ ಮತ್ತು ಅಮಾನವೀಯ ಅನ್ನಿಸಿದ ಸಾಂಪ್ರದಾಯಿಕ ಮತ್ತು ಧಾರ್ಮಿಕ ಅನುಭವಗಳನ್ನು ತಿರಸ್ಕರಿಸಿದ್ದೇನೆ. ನಾನು ನಿಜವಾಗಿಯೂ ಕೆಲಸ ಮಾಡಿರುವುದು ತರ್ಕದ ಮೂಲಕವೇ. ಪರಂಪರೆಯಲ್ಲಿನ ಕ್ರೌರ್ಯವನ್ನು ನಾನು ವೈಚಾರಿಕ ಪ್ರಕ್ರಿಯೆಯಿಂದಲೇ ನಿರ್ವಹಿಸಿದ್ದೇನೆ. ನನ್ನ ಕವನದ ಚೌಕಟ್ಟಿನೊಳಗಡೆ ಬಂದಾಗ ತರ್ಕವೇ ಪರಿವರ್ತನೆಗೊಳಗಾಗುತ್ತದೆ ಅನ್ನುವುದು ಬೇರೆ ಮಾತು.
ಉದಾಹರಣೆಗೆ ಶಿವನ ಮೂರನೇ ಕಣ್ಣಿನ ಕಲ್ಪನೆಯು ನನ್ನ ಕವನದ ಸಂದರ್ಭವೊಂದರಲ್ಲಿ ಐನ್‌ಸ್ಟೈನ್‌ನ ಏಕೀಕೃತ ಕ್ಷೇತ್ರ ಸಿದ್ಧಾಂತದೊಂದಿಗೆ ಸಮೀಕರಿಸಲ್ಪಟ್ಟಿದೆ. ಸಂಕುಚಿತವಾದ ಸಾಂಪ್ರದಾಯಿಕ ಮನಸ್ಸೊಂದಕ್ಕೆ ಇಂತಹ ಸಂಯೋಜನೆ ಸಾಧ್ಯವಾಗುವುದಿಲ್ಲ. ಉದ್ದಕ್ಕೂ ನಾನು ನನ್ನ ಪರಂಪರೆಯಿಂದ ಯಾವ ರೀತಿಯಲ್ಲಿ ಸ್ವೀಕಾರ ಮಾಡಿದ್ದೇನೆ ಅಂದರೆ ಅದರ ಒರಟಾದ ಮತ್ತು ಕ್ರೂರವಾದ ಅಂಶಗಳನ್ನು ನಿರ್ಲಕ್ಷಿಸಲು ಮತ್ತು ತಿರಸ್ಕರಿಸಲು ಸಾಧ್ಯವಾಗುವ ಹಾಗೆ. ನನ್ನ ಕವನವೊಂದರಲ್ಲಿ ಜರಾಸಂಧನ ಕಥೆಯನ್ನು ಹೇಳುವಾಗ, ಅನುವಂಶಿಕತೆಯ ಶಾಸ್ತ್ರದ ಗ್ರಹಿಕೆಯಿಂದ ನನಗೆ ಸಿಕ್ಕಿದ ರೂಪಕಗಳು ಮತ್ತು ಪ್ರತಿಮೆಗಳನ್ನು (ಚಿತ್ರಗಳನ್ನು) ಉಪಯೋಗಿಸಿದ್ದೇನೆ. ನಾನು – ಹಾಗೆ ನೋಡಿದರೆ ಯಾವುದೇ ಕವಿ – ಪರಂಪರೆಯ ಅವೈಜ್ಞಾನಿಕ ವ್ಯಾಖ್ಯಾನವನ್ನು ನೀಡುವುದಿಲ್ಲ.
ಪರಂಪರೆಯ ಬಗೆಗಿನ ನಮ್ಮ ರೂಢಿಗತ ನಿಲುವು ತುಂಬ ದುರ್ಬಲವಾಗಿದೆ ಮತ್ತು ಕ್ಷುದ್ರವಾಗಿದೆ. ಒಬ್ಬ ಕವಿಯಾಗಿ ಇದು ನನ್ನನ್ನು ಮುಟ್ಟುವುದಿಲ್ಲ. ನಾನು ವೇದಗಳಿಂದ, ಉಪನಿಷತ್‌ಗಳಿಂದ ಮತ್ತು ಕಾಳಿದಾಸನಿಂದ ಪಡೆದಿದ್ದೇನೆ. ನಾನು ನನ್ನ ಪರಂಪರೆಯಿಂದ ಏನನ್ನು ಪಡೆದಿದ್ದೇನೆ ಎಂಬುದನ್ನು ತೋರಿಸಲು ಕಾಳಿದಾಸನ ಉಕ್ತಿಯೊಂದನ್ನು ಉಲ್ಲೇಖಿಸಬಯಸುತ್ತೇನೆ. ಕಾಳಿದಾಸನ ಕೃತಿಯೊಂದರಲ್ಲಿ ಉತ್ಸರ್ಪಿಣೀ ಖಲು ಮಹತಾಂ ಪ್ರಾರ್ಥನಾ ಎಂಬ ಸಾಲೊಂದು ಬರುತ್ತದೆ. ಇದರ ಅರ್ಥವೇನೆಂದರೆ ಮಹಾನ್ ವ್ಯಕ್ತಿಗಳ ಆಕಾಂಕ್ಷೆಗಳು (ಹಂಬಲಗಳು) ಅನಂತ ಮತ್ತು ಮಿತಿರಹಿತ. ಅವರ ಶೋಧಕ್ಕೆ ಕೊನೆಯೇ ಇಲ್ಲ. ಇದು ನಮ್ಮ ಪರಂಪರೆಯ ಅತ್ಯುತ್ತಮ ಸಂಗತಿಗಳನ್ನು ಸಾರಾಂಶೀಕರಿಸಿದೆ. ನಾನು ಪಡೆದುಕೊಂಡಿರುವುದು ಇದರಿಂದ ಮಾತ್ರ. ಇದನ್ನು ಬಿಟ್ಟು ಇನ್ನುಳಿದ ವ್ಯಾಖ್ಯಾನಗಳೆಲ್ಲಾ ಕ್ಷುದ್ರ ಹಾಗೂ ನಗಣ್ಯ.
ನಾನು ದೊಡ್ಡದೆಂದು ಭಾವಿಸುವ ಮತ್ತು ಇಷ್ಟಪಡುವ ಪರಂಪರೆಗೆ ನಚಿಕೇತ ಮತ್ತು ಅವನ ಹುಡುಕಾಟಗಳು ಸೇರುತ್ತವೆ. ನಮ್ಮದೇ ಸಮಯದಲ್ಲಿ ಮಹಾತ್ಮ ಗಾಂಧಿ ನಮ್ಮ ಆಧ್ಯಾತ್ಮಿಕ ಪರಂಪರೆಯ ಮಹೋನ್ನತ ಅಂಶಗಳನ್ನು ಪ್ರತಿನಿಧಿಸುತ್ತಾರೆ. ನನ್ನ ಅಭಿಪ್ರಾಯದಲ್ಲಿ ನಮ್ಮ ಕಾಲದ ಏಕೈಕ ಆಧ್ಯಾತ್ಮಿಕ ವ್ಯಕ್ತಿ ಅಂದರೆ ಅವರು – ನಾನು ಒಬ್ಬ ವೈಚಾರಿಕ ವ್ಯಕ್ತಿಯಾಗಿ ಮತ್ತು ಕವಿಯಾಗಿ ಎಲ್ಲ ಸಂಕುಚಿತ ಮೂಲಭೂತವಾದಿ ಸಂಪ್ರದಾಯಿಕ ನಿಲುವುಗಳನ್ನು ತಿರಸ್ಕರಿಸಿದ್ದೇನೆ.
*****