ಪೀಠಿಕೆ:
ಕನ್ನಡವು ವಿಶ್ವದ ಇಪ್ಪತ್ತು ಪ್ರಮುಖ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಈ ಭಾಷೆ ಇಂಗ್ಲೀಷಿಗಿಂತಲೂ ಪುರಾತನವಾಗಿದ್ದು, ಕನಿಷ್ಠ ೨೦೦೦ ವರ್ಷಗಳಷ್ಟು ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯ ವಿಶ್ವದ ಇತರ ಯಾವುದೇ ಶ್ರೇಷ್ಠ ಸಾಹಿತ್ಯಕ್ಕೆ ಸರಿಸಾಟಿಯಾಗಿ ನಿಲ್ಲಬಲ್ಲಷ್ಟು ಯೋಗ್ಯತೆಯನ್ನು ಸಂಪಾದಿಸಿ, ಸಮೃದ್ಧವಾಗಿದೆ, ಶ್ರೀಮಂತವಾಗಿದೆ. ಉತ್ತಮ ಗುಣಮಟ್ಟ ಹಾಗೂ ಸಂಖ್ಯಾ ಬಾಹುಳ್ಯದ ದೃಷ್ಟಿಯಿಂದಲೂ, ಕನ್ನಡ ಸಾಹಿತ್ಯವು ಕಾವ್ಯ, ನಾಟಕ, ಕಾದಂಬರಿ, ಸಣ್ಣ ಕಥೆ, ವಿಮರ್ಶೆ ಇತ್ಯಾದಿ ಎಲ್ಲ ಪ್ರಕಾರಗಳಲ್ಲೂ ವಿಪುಲವಾಗಿ ಕೃತಿಗಳ ರಚನೆಯಾಗಿದೆ. ಕನ್ನಡದ ಪ್ರಪ್ರಥಮ ಗ್ರಂಥವೆಂದು ಭಾವಿಸಲಾದ ನೃಪತುಂಗನ ‘ಕವಿರಾಜ ಮಾರ್ಗ’ವು ಸುಮಾರು ೧೧೫೦ ವರ್ಷಗಳಷ್ಟು ಹಿಂದೆಯೇ ರಚಿಸಲ್ಪಟ್ಟರೂ, ಸಣ್ಣ ಕಥಾ ಪ್ರಕಾರದ ಚರಿತ್ರೆ ಕೇವಲ ೧೦೦ ವರ್ಷಗಳಷ್ಟು.
ನವೋದಯ ಮಾರ್ಗ:
ಅಧ್ಯಯನ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಕನ್ನಡ ಸಣ್ಣ ಕಥೆಯ ಪ್ರಕಾರವನ್ನು ಅವಲೋಕಿಸಿದಾಗ, ಅದನ್ನು ಐದು ಹಂತಗಳಲ್ಲಿ ಗುರುತಿಸಬಹುದು. ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಮತ್ತು ದಲಿತ – ಇವೇ ಈ ಐದು ಯುಗಗಳು. ‘ಸಣ್ಣ ಕಥೆಗಳ ಜನಕ’ ಎಂದೇ ಪರಿಗಣಿಸಲ್ಪಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರನ್ನು ನವೋದಯ ಮಾರ್ಗದ ಆದ್ಯ ಪ್ರವರ್ತಕರೆಂದು ಗುರುತಿಸುವುದು ವಾಡಿಕೆ. ೧೯೦೦ರಿಂದ ೧೯೫೦ರವರೆಗೆ ನವೋದಯ ಮಾರ್ಗದಲ್ಲಿ ಕಥೆಗಳನ್ನು ರಚಿಸಿ, ಆ ಮಾರ್ಗವನ್ನು ರೂಢಿಸಿದ ಇತರ ಕೆಲವು ಶ್ರೇಷ್ಠ ಸಾಹಿತಿಗಳೆಂದರೆ ಆನಂದ, ಅಶ್ವತ್ಥ, ಆನಂದಕಂದ, ಪು. ತಿ. ನ., ಗೊರೂರ್ ರಾಮಸ್ವಾಮಿ ಆಯ್ಯಂಗಾರ್, ಎಂ. ವೀ. ಸೀತಾರಾಮಯ್ಯ, ಬಾಗಲೋಡಿ ದೇವರಾಯ, ಭಾರತೀಪ್ರಿಯ, ಎ. ಆರ್. ಕೃಷ್ಣಶಾಸ್ತ್ರಿ ಮತ್ತು ಕುವೆಂಪು. ನವೋದಯ ಮಾರ್ಗದ ಸಣ್ಣ ಕಥೆಗಳ ಬಗ್ಗೆ ಕೆಲವು ಲಕ್ಷಣಗಳನ್ನು ಹೇಳುವುದಾದರೆ, ಈ ಕಥೆಗಳಿಗೆ ಒಂದು ತಾರ್ಕಿಕ ಆರಂಭ, ಮಧ್ಯ ಹಾಗೂ ಮಕ್ತಾಯಗಳಿರುತ್ತವೆ. ಸರಳ ಮತ್ತು ನೇರವಾದ ಕಾಲಾನುಕ್ರಮದ ನಿರೂಪಣೆ ಈ ಕಥೆಗಳ ಪ್ರಮುಖ ತಂತ್ರವಾದರೂ, ಕೆಲವೊಮ್ಮೆ ’ಫ಼್ಲಾಶ್‌ಬ್ಯಾಕ್’ ಅಂತಹ ತಂತ್ರಗಳು ಉಪಯೋಗಿಸಲ್ಪಟ್ಟಿರುವುದೂ ಉಂಟು. ಪರಂಪರಾಗತ ಮೌಲ್ಯಗಳನ್ನು ಬಿಂಬಿಸುವ, ಪೋಷಿಸುವ ಮತ್ತು ವೃದ್ಧಿಸುವಂತಹ ವಾತಾವರಣದಲ್ಲಿ ಈ ಕಥೆಗಳನ್ನು ಹೆಣೆದಿರುತ್ತಾರೆ. ಆದರೆ, ಬದುಕಿನಲ್ಲಿ ನೋವು, ಅನ್ಯಾಯ, ದುಷ್ಟತನ – ಇವೆಲ್ಲಾ ಅನಿವಾರ್ಯ. ಸಮಾಜದ ಇಂತಹ ನಿಷ್ಠುರ ಮುಖಗಳನ್ನು ಪರಂಪರಾಗತ ಮೌಲ್ಯದ ತಾಳಿಕೆಯ ಗುಣಗಳನ್ನು ಉದ್ದೀಪಿಸಲು ಎಷ್ಟು ಬೇಕೋ, ಅಷ್ಟರಮಟ್ಟಿಗೆ ಉಪಯೋಗಿಸಿಕೊಳ್ಳುತ್ತಾರೆ. ಹೀಗಾಗಿ ತಲತಲಾಂತರಗಳಿಂದ ಬಂದ ಶ್ರದ್ಧೆ, ನಂಬಿಕೆಗಳನ್ನು ಪ್ರಶ್ನಿಸುವಂತಹ ಸನ್ನಿವೇಶ, ಸಂದರ್ಭಗಳು ಎದುರಾದಾಗಲೂ, ಮೌಲ್ಯಗಳ ಚೌಕಟ್ಟಿನಲ್ಲಿಯೇ ಅದಕ್ಕೆ ಪರಿಹಾರವನ್ನು ಸೂಚಿಸುವ ಧೋರಣೆ ಮತ್ತು ಆತ್ಮವಿಶ್ವಾಸ ನವೋದಯ ಕಥೆಗಾರರಲ್ಲಿ ಕಾಣುತ್ತದೆ. ಅಲ್ಲದೆ, ಈ ವರ್ಗದ ಸಾಹಿತಿಗಳು ಜೀವನದಲ್ಲಿ ನೋವುಂಡ ಜೀವಿಗಳ ಬಗ್ಗೆ, ಶೋಷಣೆಗೊಳಗಾದ ಜನಾಂಗದ ಬಗ್ಗೆ ಅನುಕಂಪೆಯನ್ನು ತೋರಿಸುತ್ತಾರೆಯೇ ವಿನಃ, ಈ ಶೋಷಣೆಗೆ ಕಾರಣವಾದ ವ್ಯವಸ್ಥೆಯ ಬಗ್ಗೆ ಆಕ್ರೋಶವನ್ನಾಗಲೀ, ಆರ್ಭಟವನ್ನಾಗಲೀ ಅಥವಾ ಪ್ರತಿಭಟನೆಯನ್ನಾಗಲೀ ವ್ಯಕ್ತಪಡಿಸುವುದಿಲ್ಲ. ಒಂದು ಸಂಕೀರ್ಣವಾದ ಸಾಮಾಜಿಕ ವ್ಯವಸ್ಥೆಯಲ್ಲಿ ಇವೆಲ್ಲಾ ಅನಿವಾರ್ಯ. ಆದರೆ ಇಂತಹ ಅನ್ಯಾಯದ ವಿರುದ್ಧ ಉದ್ವೇಗದಿಂದ ಆಕ್ರೋಶಿಸುವುದರಿಂದಾಗಲೀ, ಬಂಡಾಯವೇಳುವುದರಿಂದಾಗಲೀ, ಬದುಕು ಹಸನಾದೀತೆಂದು ಅವರಿಗೆ ಅನಿಸುವುದಿಲ್ಲ. ಆಕ್ರೋಶ, ಬಂಡಾಯಗಳು ಅಂತಹ ದೊಡ್ಡ ಗುಣಗಳೆಂದೂ ಅವರು ತಿಳಿಯುವುದಿಲ್ಲ. ಬದಲಾಗಿ ಸಂಯಮದಿಂದ, ಅಂತಃಶಕ್ತಿಯಿಂದ ವೈಯಕ್ತಿಕ ನೋವನ್ನು ಗೆಲ್ಲಬಲ್ಲ ಧೀರೋದಾತ್ತತೆ ಅವರಿಗೆ ಹೆಚ್ಚು ದೊಡ್ಡದಾಗಿ ಕಾಣುತ್ತದೆ. ಈ ಧೀರೋದಾತ್ತತೆ ನವೋದಯ ಮಾರ್ಗದ ಆದ್ಯ ಪ್ರವರ್ತಕರಾದ ಮಾಸ್ತಿಯವರಲ್ಲಿ ನಿಷ್ಕ್ರಿಯೆಯಿಂದ ಬಂದುದಲ್ಲ, ಬದಲಾಗಿ ಬದುಕಿನ ಆಳವಾದ ತಿಳುವಳಿಕೆಯಿಂದ ಬಂದದ್ದು [೩].
ಪು.ತಿ.ನ. ಅವರ ಕಥೆಗಳು:
ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಆಧುನಿಕ ಕನ್ನಡ ಸಾಹಿತ್ಯದ ಅಪರೂಪದ ಕವಿಗಳು, ವಿದ್ವಾಂಸರು ಮತ್ತು ಚಿಂತಕರು. ಶ್ರೀಯುತರು ಕಾವ್ಯ, ನಾಟಕ, ವಿಮರ್ಶೆ, ಪ್ರಬಂಧ ಪ್ರಕಾರಗಳಲ್ಲಿ ಹೇರಳವಾಗಿ ಅತ್ಯುತ್ತಮ ಗುಣಮಟ್ಟದ ಕೃತಿಗಳನ್ನು ರಚನೆ ಮಾಡಿದ್ದರೂ, ಇವರು ಬರೆದಿರುವ ಕಥಾ ಸಂಕಲನಗಳು ಬೆರಳೆಣಿಕೆಯಷ್ಟು. ಶ್ರೀಯುತರು ರಚಿಸಿರುವ ‘ರಾಮಾಚಾರಿಯ ನೆನಪು’ ಮತ್ತು ‘ಧ್ವಜ ರಕ್ಷಣೆ’ ಕಥಾ ಸಂಕಲನಗಳಲ್ಲಿ ಒಟ್ಟು ೧೬ ಕಥೆಗಳಿವೆ. ಈ ಕಥೆಗಳ ಬಗ್ಗೆ ವಿಮರ್ಶಾತ್ಮಕ ಪರಿಚಯ ನೀಡುವುದೇ ಈ ಲೇಖನದ ಆಶಯ. (ಪುಟಗಳ ಪರಿಮಿತಿಯಿಂದಾಗಿ, ಇತರ ಕಥಾ ಸಂಕಲನಗಳ ಕಥೆಗಳನ್ನು ಈ ಲೇಖನದಲ್ಲಿ ಸೇರಿಸಿಲ್ಲ.)
೧. ರಾಮಾಚಾರಿಯ ನೆನಪು:
ರಾಮಾಚಾರಿಗೆ ೭ ವರ್ಷವಾದಾಗ ಅವನ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ನಿಂತು ಬಿಡುತ್ತದೆ. ರಾಮುವೋ ಕರ್ಣನಂತೆ – ತನ್ನ ನಾಶವನ್ನು ತಾನೇ ಕಾಣದಷ್ಟರ ಮಟ್ಟಿಗೆ – ಉದಾರಿಯು. ತಿಂಡಿಗಳಿಂದ ತುಂಬಿರುವ ತನ್ನ ಜೇಬನ್ನು ಗೆಳೆಯರಿಗೆ ತೋರಿಸಿ, ಅವರಲ್ಲಿ ಆಸೆ ಹುಟ್ಟಿಸಿ, ತನ್ನನ್ನು ಅವರ ಆಟದ ನಾಯಕನನ್ನಾಗಿ ಚುನಾಯಿಸಬೇಕೆಂದು ಆಗ್ರಹಪಡಿಸುತ್ತಿದ್ದ. ಗೆಳೆಯರು ತಿಂಡಿಗಾಗಿ ಆಯ್ಕೆಮಾಡಿ, ಅದು ಮುಗಿದ ಕೂಡಲೇ ಅವನನ್ನು ಪದಚ್ಯುತನ್ನನ್ನಾಗಿ ಮಾಡಿಬಿಡುತ್ತಿದ್ದರು! ಅವನಿಗೆ ಹದಿನಾರು ವರ್ಷ ವಯಸ್ಸಾದಾಗ, ಅಪ್ಪನ ವಾರ್ಷಿಕ ತಿಥಿ ಮಾಡಲು ಸಹಾಯ ಕೇಳಲು ರಾಮಾಚಾರಿ ಅವನ ದೊಡ್ಡಮ್ಮನ ಹಳ್ಳಿಗೆ ಹೋಗುತ್ತಾನೆ. ಅಲ್ಲಿ ಅವನನ್ನು ಎಲ್ಲರು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಔತಣದ ಅಡಿಗೆ ಮಾಡುತ್ತಾರೆ, ಮನೆಗೆ ತೆಗೆದುಕೊಡು ಹೋಗಲು ದವಸ ಧಾನ್ಯಗಳ ಮೂಟೆಯನ್ನೇ ಹೊರಿಸುತ್ತಾರೆ. ರಾತ್ರಿ ಹೊರಗಡೆಗೆ ನೀರಿನ ಚೆಂಬು ತೆಗೆದೆಕೊಂಡು ಹೋದಾಗ, ಹಾವಿನ ಮೇಲೆ ಕಾಲಿಟ್ಟು ದುರದೃಷ್ಟವಶಾತ್ ಸಾವಿನ ವಶವಾಗುತ್ತಾನೆ.
ಈ ಕಥೆಯಲ್ಲಿ ಬಡತನದ ಬೇಗೆಯಲ್ಲಿ ಬೆಳೆಯುತ್ತಿರುವ ಮಗುವಿನ ಹೃದಯ ವಿದ್ರಾವಿಕ ಚಿತ್ರಣವಿದೆ. ಇದು ಕುವೆಂಪು ಅವರು ಬರೆದ ಕಥೆ ‘ಸಾಲದ ಮಗು’ (ದೇವರು ಮತ್ತು ಇತರ ಕಥೆಗಳು) ವನ್ನು ನೆನಪಿಸುತ್ತದೆ. ಅಂದಿನ ಕಾಲದ ಸಾಮಾಜಿಕ ವಾತಾವರಣವನ್ನು, ಹಾಗೂ ಬಾಲ್ಯದ ಹುಡುಗಾಟವನ್ನು ಸಮರ್ಥವಾಗಿ ಚಿತ್ರಿಸುತ್ತದೆ. ಇದು ಅನುಕಂಪೆ, ಕರುಣೆಗಳನ್ನು ಬಿಂಬಿಸುವ ನವೋದಯ ಮಾರ್ಗದ ಉತ್ತಮ ಕಥೆಗಳಲ್ಲಿ ಒಂದು. ಮತ್ತೊಂದು ವಿಷಯ: ಪು.ತಿ.ನ. ಅವರು ಕಥೆಯಲ್ಲಿ ಒಂದು ಕಡೆ ಗರುಕೆ ಹುಲ್ಲು ಎಂದು ಕರೆದಿದ್ದಾರೆ; ಬರೀ ಹುಲ್ಲು ಎನ್ನಲಿಲ್ಲ. ಗರುಕೆ ಹುಲ್ಲಿಗೆ ದೇವರನ್ನು ಪೂಜಿಸುವ ಯೋಗ್ಯತೆ ಇದೆ. ಈ ಪದ-ಪ್ರಯೋಗದಿಂದ, ಶ್ರೀಯುತರ ಧಾರ್ಮಿಕ ಬುದ್ಧಿ ಮತ್ತು ದೇವರಲ್ಲಿಟ್ಟಿರುವ ಅಚಲ ಭಕ್ತಿ ವ್ಯಕ್ತವಾಗುತ್ತದೆ.
೨. ನನಸಿಗಿಂತಲೂ ನಿಜವಾದ ಒಂದು ಕನಸು:
ಕಥಾನಾಯಕ ತನ್ನ ಪಕ್ಕದ ಮನೆಯ ಹುಡುಗಿ ರತ್ನಾಳನ್ನು ಗಾಢವಾಗಿ ಮತ್ತು ಗೂಢವಾಗಿ ಪ್ರೀತಿಸುತ್ತಿರುತ್ತಾನೆ. ಹೀಗೊಂದು ದಿನ ಮಧ್ಯಾಹ್ನ ಮಲಗಿದ್ದಾಗ ಅವನಿಗೊಂದು ಸುಂದರ ಕನಸು ಬೀಳುತ್ತದೆ. ಆ ಕನಸಿನಲ್ಲಿ ರತ್ನ ಯಾವುದೋ ಒಂದು ಭಾವಿಯಲ್ಲಿ ಬಿದ್ದುಬಿಟ್ಟಿರುತ್ತಾಳೆ. ಅವನು ಹಿಂದೊಂದು ದಿನ ಕಲ್ಪಿಸಿಕೊಂಡಂತೆ, ಅವಳ ಮಂದೆ ತನ್ನ ಶೌರ್ಯ ಪ್ರದರ್ಶನ ಮಾಡುವ ಸು-ಅವಕಾಶ ತಾನೇತಾನಾಗಿ ದೊರೆಯುತ್ತದೆ: ಭಾವಿಯೊಳಗೆ ಜಿಗಿಯುತ್ತಾನೆ. ಅವಳ ತೊಡೆಯ ಮೇಲೆ ತನ್ನ ತಲೆಯನ್ನು ಇಟ್ಟು ಅವಳ ಸಾಮೀಪ್ಯದ ಸುಖವನ್ನು ಅಹ್ಲಾದಿಸುತ್ತಿರುವಾಗಲೇ, ಹೆಣ್ಣು ಧ್ವನಿಯೊಂದು ಇವನನ್ನು ಎಚ್ಚರಿಸುತ್ತದೆ. ವಾಸ್ತವ ಸ್ಥಿತಿಗೆ ಮರಳಿದ ಮೇಲೆ ಅವನಿಗೆ ಕಾದಿರುವುದೇನು? ರತ್ನ ಇನ್ನೊಬ್ಬನ ಜೊತೆ ನಡೆಯಲಿರುವ ತನ್ನ ಮದುವೆಗೆ ಇವನನ್ನು ಮದುವೆಗೆ ಕರೆಯಲು ಬಂದಿರುವುದು!
ಈ ಕಥೆಯನ್ನು ಓದಿದಾಗ, ವರ್ಣನೆಗಳಲ್ಲಿ ಸಿದ್ಧಿಸಿದ ಪು.ತಿ.ನ. ಅವರ ಸಹಜ ಸಾಮರ್ಥ್ಯ ವ್ಯಕ್ತವಾಗುತ್ತದೆ: ಅವಸರವಿಲ್ಲದ ಗತಿ, ಲಲಿತವಾದ, ಓದಿಸುಕೊಂಡು ಹೋಗುವ ಸುಂದರ ಶೈಲಿ. ನವೋದಯ ಕಥೆಗಳ ಲಕ್ಷಣಗಳಲ್ಲೊಂದಾದ ಕಥೆಯ ಆದಿ, ಮಧ್ಯ ಮತ್ತು ಅಂತ್ಯ ಈ ಕಥೆಯಲ್ಲೂ ಪ್ರಕಟಗೊಂಡಿದೆ. ಸುಂದರವಾದ ಪರಾಕಾಷ್ಠತೆ, ಕಥೆಗೆ ಸ್ವಾರಸ್ಯಕರವಾದ ಮುಕ್ತಾಯವನ್ನು ಒದಗಿಸಿದೆ. ಈ ಕಥೆಯಲ್ಲಿ ಅಬ್ಬರವಿಲ್ಲ, ಆರ್ಭಟವಿಲ್ಲ. ಬದಲಾಗಿ, ಶಾಸ್ತ್ರೀಯವಾದ ಪ್ರೇಮದ ವರ್ಣನೆ – ಕೊಂಚವೂ ಅಶ್ಲೀಲತೆಯ ಸೋಂಕಿಲ್ಲದೆ – ತಂತಾನೆ ಮೈದಾಳಿದೆ.
೩. ಕೃಷ್ಣ ಶಾಸ್ತ್ರಿಯ ತ್ಯಾಗ:
ಕೃಷ್ಣಾಶಾಸ್ತ್ರಿಗೆ ವೇಣಿಯಲ್ಲಿ ಅನುಪಮ ಪ್ರೇಮ. ಆದರೆ, ಅವನು ಅವಳಲ್ಲಿ ಪ್ರೇಮ ನಿವೇದನೆ ಮಾಡುವುದರೊಳಗೇ, ಆಕೆ ಅನಂತನನ್ನು ವರಿಸಿಬಿಡುತ್ತಾಳೆ. ಕೃಷ್ಣಾಶಾಸ್ತ್ರಿ ವಾಸ್ತವಿಕತೆಯನ್ನು ಒಪ್ಪಿಕೊಂಡಿರುವುದಿಲ್ಲ, ಬದಲಾಗಿ ಇನ್ನೂ ಅವಳ ಗುಂಗಿನಲ್ಲೇ ತೇಲಾಡುತ್ತಿರುತ್ತಾನೆ. ಅನಂತನು ಸತ್ತು, ವೇಣಿ ವಿಧವೆಯಾಗಿ, ತನ್ನನ್ನು ವರಿಸಿದಂತೆ ಕನಸನ್ನು ಕಟ್ಟುತ್ತಾನೆ. ಆಷ್ಟರಲ್ಲಿ ಅವನ ಮಿತ್ರ ರಾಮರಾಯನು ಬಂದು, ಇವನನ್ನು ಅನಂತನ ಮನೆಗೆ ಕರೆದೊಯ್ಯುತ್ತಾನೆ. ಅಲ್ಲಿ ಹೋಗಿ ನೋಡಿದರೆ, ಅನಂತನಿಗೆ ಕೆಂಡಾಮಂಡಲ ಜ್ವರ. ಕೃಷ್ಣಾಶಾಸ್ತ್ರಿಯ ಪರೋಪಕಾರ ಬುದ್ಧಿ ಧುತ್ತೆಂದು ಜಾಗೃತವಾಗಿ, ಅವನನ್ನೂ ಕೂಡಲೇ ಆಸ್ಪತ್ರೆಗೆ ಸೇರಿಸುತ್ತಾನೆ; ತನ್ನ ದುಡ್ಡನ್ನು ಖರ್ಚುಮಾಡಿ ಸ್ಪೆಷಲ್ ವಾರ್ಡಿನಲ್ಲಿ ಸೇರಿಸಿ ವಿಶೇಷ ಆರೈಕೆಯ ವ್ಯವಸ್ಥೆ ಮಾಡುತ್ತಾನೆ. ಇದರಿಂದ ಅನಂತನು ಸಂಪೂರ್ಣ ಗುಣವಾಗಿ, ಮನೆಗೆ ಮರಳುತ್ತಾನೆ, ವೇಣಿಯ ಮುತ್ತೈದೆತನ ಉಳಿಯುತ್ತದೆ.
ಕೆಟ್ಟ ಆಲೋಚನೆ ಬಂದರೂ, ಒಳ್ಳೆಯ ಉದ್ದೇಶದಿಂದ ಕಾರ್ಯ ಸಫಲವಾಗುವುದರ ಮೂಲಕ ಕಥೆ ಒಳ್ಳೆಯ ಮಾನವೀಯ ಮೌಲ್ಯಗಳನ್ನೇ ಪ್ರತಿಷ್ಠಾಪನೆ ಮಾಡುತ್ತದೆ. ಸಮಾಜ ನಂಬಿಕೊಂಡು ಬಂದ ಪರಂಪರಾನುಗತ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ಕೆಟ್ಟ ಆಲೋಚನೆಗಳು ಬರುವುದು ಮಾನವನಿಗೆ ಸಹಜ. ಆದರೆ ಅವು ಕ್ಷಣಿಕವಾಗಿ ಬಂದು, ಒಳ್ಳೆಯ ಕೆಲಸಗಳನ್ನು ಮಾಡಿಸುವಂತ ಮೌಲ್ಯಗಳು ಶಾಶ್ವತ ಎಂದು ಕಥೆ ಪ್ರತಿಪಾದಿಸುತ್ತದೆ. ಇದು ಕುವೆಂಪು ಅವರ ‘ಮೀನಾಕ್ಷಿ ಮನೆ ಮೇಷ್ಟ್ರು’ (ದೇವರು ಮತ್ತು ಇತರ ಕಥೆಗಳು) ಕಥೆಯನ್ನು ಜ್ಞಾಪಿಸುತ್ತದೆ.
೪. ರಂಗರಾಯನು ಸಂಗೀತವನ್ನು ಕೇಳಿದುದು:
ರಂಗರಾಯನೂ ಶ್ರೀನಿವಾಸರಾಯರೂ ಆಪ್ತ ಸ್ನೇಹಿತರು. ರಂಗರಾಯನು ಲಲಿತೆಯನ್ನು ತುಂಬಾ ಪ್ರೀಸುತ್ತಿದ್ದನು. ಆದರೆ ಅದನ್ನು ಅವಳಲ್ಲಿ ವ್ಯಕ್ತಪಡಿಸಿರಲಿಲ್ಲ. ಆದರೆ ತದನಂತರ ತಿಳಿಯುತ್ತದೆ, ಶ್ರೀನಿವಾಸರಾಯರು ಲಲಿತಾ ಅವರ ಅನುರಾಗವು ಪರಸ್ಪರವಾದುದು. ಇದು ರಂಗರಾಯನಿಗೆ ಎಂತಹ ಆಘಾತವಾದರೂ ಅವರಿಬ್ಬರ ಅನನ್ಯ ಪ್ರೇಮ, ಅದರಿಂದ ಅವರಿಬ್ಬರಿಗೆ ದೊರಕುವ ಸುಖ, ಶಾಂತಿಯ ದೆಸೆಯಿಂದ ತನ್ನ ಪ್ರೀತಿಯನ್ನು ತ್ಯಾಗಮಾಡಿ ಉದಾತ್ತತೆಯನ್ನು ಮೆರೆಯುತ್ತಾನೆ. ಪರಂಪರಾಗತ ಮೌಲ್ಯವಾದ ತ್ಯಾಗದ ವಿಜೃಂಭಣೆ; ಆದ್ದರಿಂದ ಇದೊಂದು ಅಪ್ಪಟ ನವೋದಯ ಕಥೆ. ಕಥೆ ಸಂಗೀತ ಕಛೇರಿಯಲ್ಲಿ ಶುರುವಾಗಿ, ಅಲ್ಲಿಯೇ ಮುಗಿದು, ಪದರ ಪದರಾಗಿ ಸ್ಪುರಿಸುವ ತಂತ್ರದ ಮೂಲಕ ಅನಾವರಣಗೊಳಿಸುವ ಪು.ತಿ.ನ. ಅವರ ಕಲೆ ಅನನ್ಯವಾದುದು. ಅವರಿಗೆ ಸಂಗೀತದಲ್ಲಿ ಉತ್ಕಟವಾದ ಆಸಕ್ತಿ ಇದ್ದುದು ಈ ಕಥೆಯಲ್ಲಿ ಬರುವ ವಿವರಣೆಯಿಂದ ವ್ಯಕ್ತವಾಗುತ್ತದೆ.
೫. ಮೂರ್ತಿಯ ಹುಡುಗಾಟ:
ಮೂರ್ತಿ ಸ್ಮಾರ್ತ ಬ್ರಾಹ್ಮಣ ಹುಡುಗ. ಕಥಾನಾಯಕ ಶ್ರೀ ವೈಷ್ಣರವನು. ಆ ಕಾಲದಲ್ಲಿ ತ್ರಿ ಮತಸ್ಥ ಬ್ರಾಹ್ಮಣರಲ್ಲಿ ತಮ್ಮ ಮತ ಬಿಟ್ಟು ಬೇರೆಯವರೊಡನೆ ಮದುವೆಯಾಗುತ್ತಿರಲಿಲ್ಲ. ಬೌದ್ಧಿಕ ಚರ್ಚೆಯಲ್ಲಿ ಉತ್ಸಾಹಪೂರ್ಣವಾಗಿ ಒಮ್ಮೆ ನಾಯಕ ಅಂತರ ಮತದ ವಿವಾಹದ ಪರವಾಗಿ ಮಾತನಾಡಿದ್ದ. ಆಗ ಮೂರ್ತಿ ತನ್ನ ತಂಗಿಯನ್ನು ಮದುವೆಯಾಗುತ್ತೀಯಾ? ಎಂದಾಗ ಏನೋ ಒಂದು ಹುಮ್ಮಸ್ಸಿನಲ್ಲಿ ಒಪ್ಪಿಕೊಂಡಿದ್ದ. ಅದನ್ನೇ ನಂಬಿ ಮೂರ್ತಿ ಕಥಾನಾಯಕನ ತನ್ನ ತಂಗಿಯ ಮದುವೆಯ ಆಹ್ವಾನ ಪತ್ರವನ್ನು ತನ್ನ ಊರಿಗೆ ಕಳಿಸಿದಾಗ ನಾಯಕ ಕಕ್ಕಾಬಿಕ್ಕಿಯಾಗುತ್ತಾನೆ. ತಾನು ಮದುವೆಗೆ ಒಪ್ಪಿದರೂ ಕಟ್ಟಾ ಸಂಪ್ರದಾಯ ವಾದಿಗಳಾದ ತನ್ನ ಅಮ್ಮ ಅಪ್ಪರನ್ನು ಮದುವೆಗೆ ಒಪ್ಪಿಸುವುದು ಅಸಂಭವ ಎನಿಸಿದಾಗ, ಕಥಾ ನಾಯಕನಿಗೆ ಧರ್ಮಸಂಕಟ: ಇತ್ತ ಪ್ರಾಣಮಿತ್ರನ ಸ್ನೇಹವನ್ನೂ ತ್ಯಾಗ ಮಾಡಲಾರ, ಅತ್ತ ಪಾಲಕರ ವಾತ್ಸಲ್ಯವನ್ನೂ ಬಿಡಲಾರ ಕೊನೆಗೆ ಏನೂ ತೋಚದೆ, ಆತ್ಮಹತ್ಯೆ ಮಾಡಲು ನಿರ್ಧಾರ ಮಾಡುತ್ತಾನೆ, ಕೊಳದಲ್ಲಿ ಹಾರಿ ಪ್ರಾಣ ಕಳೆದುಕೊಳ್ಳಲು ಹೋಗುತ್ತಾನೆ ಅದಕ್ಕೂ ಧೈರ್ಯ ಬರದೆ ವಾಪಸ್ಸು ಬರುತ್ತಾನೆ ಆಗ ಬಂದ ಪತ್ರದಲ್ಲಿ, ಮದುವೆಯ ಆಹ್ವಾನ ಪತ್ರಿಕೆ ಕೇವಲ ಹುಡುಗಾಟ ಎಂದು ತಿಳಿದಾಗ ನಿಟ್ಟಿಸಿರು ಬಿಡುತ್ತಾನೆ.
ಆತ್ಮಹತ್ಯೆ ಮಹಾಪಾಪ ಎಂದು ಯೋಚನೆ ಬಂದರೂ, ಅದನ್ನು ಕಥೆಯಲ್ಲಿ ಆಗುಗೊಡದೆ ನವೋದಯ ಕಥೆ ಸಾಂಪ್ರದಾಯಕ ಮೌಲ್ಯಗಳನ್ನೇ ಒತ್ತಿ ಹೇಳುತ್ತದೆ. ಕಥೆಯ ಶೈಲಿ ಬಹು ಸುಂದರವಾಗಿದೆ. ನಾಯಕನ ಮಾನಸಿಕ ತಳಮಳವು ಬಹು ಸಹಜವಾಗಿ, ಮನ ಮುಟ್ಟುವಂತೆ ಚಿತ್ರಿತವಾಗಿದೆ. ಇಲ್ಲಿ ರಾಮಾನುಜಾಚಾರ್ಯರ ಮತ್ತು ಶಂಕರಾಚಾರ್ಯರು ಪ್ರತಿಪಾದಿಸಿದ ವಿಶಿಷ್ಠಾದೈತ ಮತ್ತು ಅದೈತ ಮತದ ತತ್ವಗಳ ಸೀಳು ನೋಟ ಕೂಡಾ ದೊರಕುತ್ತದೆ.
೬. ವೆಂಕೋಬರಾಯರು ಒಂದು ಪದ್ಯವನ್ನು ಓದಿ ವಿಮರ್ಶಿಸಿದ್ದು:
ವೆಂಕೋಬರಾಯರು ಹಳೆಯ ಕಾಲದವರು, ವೃದ್ಧರು. ಸನಾತನ ಕಾಲದ ವಿಷಯಗಳಲ್ಲೆಲ್ಲಾ ಅವರಿಗೆ ತುಂಬಾ ಗೌರವ. ಹಳೆಯದೆಲ್ಲವೂ ಶ್ರೇಷ್ಠ, ಹೊಸದೆಲ್ಲವೂ ಕಳಪೆ ಎಂಬ ಸಿದ್ಧಾಂತಕ್ಕೆ ಅಂಟಿಕೊಂಡವರು. ಇಂತಹವರಿಗೆ ನವೀನ ಕವಿತೆಗಳೆಂದರೆ ಆಗದು. ಅದರೆ, ಅವರ ಮಗ ಅಂತಹ ಕವಿತೆಗಳನ್ನು ವನಮಾಲಿ ಎಂಬ ಹೆಸರಿನಿಂದ ಬರೆದು, ರಸಿಕರಿಗೆ ಪ್ರಿಯವಾಗಿದ್ದ ವಿಷಯ ಅವರಿಗೆ ತಿಳಿಯದು. ತಂದೆ ತನ್ನ ಕವಿತೆಗಳನ್ನೋದಲಿ ಎಂಬುದು ಅವನ ಸಹಜ ಆಸೆ. ಆದರೆ, ಅವರು ಅದನ್ನು ಓದರು! ಕೊನೆಗೆ ಹೇಗೋ ಗೋಗರೆದುಕೊಂಡು ಅವುಗಳು ತನ್ನ ಮಿತ್ರನದೆಂದು ಹೇಳಿಕೊಂಡು, ಅವುಗಳನ್ನು ತನ್ನ ತಂದೆಯವರು ಓದುವ ಒಪ್ಪಿಗೆ ಪಡೆದುಕೊಳ್ಳುತ್ತಾನೆ. ವೆಂಕೋಬರಾಯರು ಇದಾದ ಒಂದು ವಾರವಾದರೂ ಓದುವುದಿಲ್ಲ. ಕ್ರಮೇಣ, ಕೊಂಚ ತಿರಸ್ಕಾರದಿಂದಲೇ ಓದಲಾರಂಭಿಸುತ್ತಾರೆ. ಅದರಲ್ಲಿ ಬಾಲ್ಯ, ಯೌವನ, ಮಧ್ಯಕಾಲ ಹಾಗೂ ವೃದ್ಧಾಪ್ಯದ ಸೊಗಸಾದ ಚಿತ್ರಣವಿರುತ್ತದೆ. ಅಷ್ಟೇ ಅಲ್ಲದೆ, ಅವರ ಜೀವನದಲ್ಲಿ ಜರುಗಿಹೋದ ಅನೇಕ ಘಟನೆಗಳ ಸುಂದರ ನಿರೂಪಣೆಯಿರುತ್ತದೆ. ಈ ವನಮಾಲಿ ಕವಿಗೆ ಇದೆಲ್ಲಾ ಹೇಗೆ ತಿಳಿಯಿತು ಎಂಬ ಸೋಜಿಗವೂ ಅವರಿಗಾಗುತ್ತದೆ. ಕೊನೆಗೆ ಅದರಲ್ಲಿ ಬರುವ ಸಾವಿನ ವಿವರಣೆ ಅವರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತದೆ. ಕೊನೆಗೆ, ಅವುಗಳನ್ನು ತಮ್ಮ ಮಗನೇ ಬರೆದಿದ್ದೆಂದು ಅವನಿಂದಲೇ ತಿಳಿದಾಗ, ಅವರ ಕಣ್ಣುಗಳು ಅಭಿಮಾನದಿಂದ ಆರ್ದ್ರವಾಗುತ್ತವೆ.
ಪದಗಳ ಉಪಯೋಗ ಅತ್ಯಂತ ಸಮಂಜಸ, ನಾವು ಕೇಳಿಯೇ ಇರದ ಅನೇಕ ಹಳೆಯ ಸುಂದರ ಪದಗಳ ಉಚಿತ ಪ್ರಯೋಗ ಆಗಿದೆ. ಉದಾ: ದುರ್ವಿದಗ್ಧ, ವಿಚ್ಛಿತ್ತಿ, ಇತ್ಯಾದಿ. ಬದುಕಿನ ಉದ್ದೇಶ ಹಾಗೂ ಸಾವಿನ ಅರ್ಥವನ್ನು ಪದರು ಪದರಾಗಿ ಕಥೆ ಬಿಡಿಸಿಕೊಂಡು ಹೋಗುತ್ತದೆ. ಇದೊಂದು ಪದ್ಯ ಮತ್ತು ಗದ್ಯದ ಅಮೋಘ ಸಮ್ಮಿಲನ. ಈ ರೀತಿಯಾಗಿ ಪದ್ಯದ ಮೂಲಕ ಸಣ್ಣ ಕಥೆಯನ್ನು ಹೇಳುವ ಅನನ್ಯ ಪರಿಯನ್ನು ನಾನು ಇದುವರೆಗೆ ಓದಿಲ್ಲ. ಈ ಕಥೆಯನ್ನು ಓದುವಾಗಲೇ, ಕವನವನ್ನು ಹೇಗೆ ಅರ್ಥೈಸಬೇಕು ಎಂಬುದನ್ನು ಕೂಡ ಸಮರ್ಥವಾಗಿ ಪ್ರತಿಪಾದಿಸುತ್ತದೆ. ನನ್ನ ಪ್ರಕಾರ ಪು.ತಿ.ನ. ಅವರು ಮಾತ್ರ ಈ ರೀತಿಯ ಆಧುನಿಕ ಚಂಪೂ ಕಾವ್ಯವನ್ನು ಬರೆಯಬಲ್ಲರು!
೭. ಹಹ್ಹಾ! ಒಂದು ನಕ್ಷತ್ರ:
ಕಲ್ಪನೆಗಳು ಗರಿಗೆದರಿ, ಒಂಡು ಸುಂದರ ಕಥೆಯಾಗಿ ಹೆಣೆದಿರುವುದನ್ನು ಈ ಕಥೆಯಲ್ಲಿ ಕಾಣಬಹುದು. ಒಬ್ಬ ಸಮರ್ಥ ಕಥೆಗಾರನಿಗೆ ಒಂದು ಚಿಕ್ಕ ಕಲ್ಪನೆಯೂ ಕೂಡ ಒಂದು ಕಥೆಯ ರಚನೆಯಲ್ಲಿ ಸಹಾಯವಾಗಬಹುದು ಎಂಬುದಕ್ಕೆ ಈ ಕಥೆ ನಿದರ್ಶನ. ಕಥಾನಾಯಕ ತನ್ನ ಮನೆಯ ಮಹಡಿಯ ಒಂದು ಕತ್ತಲೆ ಕೋಣೆಯಲ್ಲಿರುತ್ತಾನೆ. ಆಗ ಅವನ ಕಲ್ಪನೆಗಳು ಗರಿಗೆದರಿ, ಅವನು ಬಾನಿನಲ್ಲಿ ವಿಹಾರ ಮಾಡುತ್ತಿರುವ ಅನುಭವವನ್ನು ಹೊಂದುತ್ತಾನೆ. ಅವನ ಹೆಂಡತಿ ಬಂದು, “ಕಾಫ಼ಿ ತೆಗೆದುಕೊಂಡು ಬರಲೆ?” ಎಂದು ಕೇಳಿದಾಗಲೇ, ಅವನು ವಾಸ್ತವ ಲೋಕಕ್ಕೆ ಮರಳಿ ಬರುತ್ತಾನೆ. ಆಗ ತಿಳಿಯುತ್ತದೆ: ತನ್ನ ಮನೆಯ ಹೆಂಚಿನ ಸೂರಿನ ಓಂದು ಕಿಂಡಿಯಿಂದ ಬಂದ ಬೆಳಕು, ಅವನಿಗೆ ಓಂದು ನಕ್ಷತ್ರದಂತೆ ಕಂಡಿರುವುದು ಎಂದು!
೮. ಶಿವನ ಕಣಸು:
ಇದೊಂದು ಆಧ್ಯಾತ್ಮಿಕತೆ ಭೂಯಿಷ್ಠವಾದ ಕಥೆ. ಶಿವು ಎಂಬುವನಿಗೆ ಒಂದು ರೈಲಿನಲ್ಲಿ ಆಗುವ ಅನಿರ್ವಚನೀಯ ಜೀವನ ದರ್ಶನವನ್ನು ಲೇಖಕರು ತುಂಬ ಸುಂದರವಾಗಿ ಹೇಳಿದ್ದಾರೆ. ಆಧ್ಯಾತ್ಮಿಕದಂತಹ ಅಮೂರ್ತವಾದ, ಕ್ಲಿಷ್ಟಕರವಾದ ವಸ್ತುವನ್ನು ಆದಷ್ಟು ಸರಳವಾಗಿ ಹೇಳಿದ್ದಾರೆ. ಕುವೆಂಪುರವರು ಹೇಗೆ ವಿಶ್ವಮಾನವ ಸಂದೇಶ ಹೇಳಿದ್ದಾರೋ, ಅದೇ ರೀತಿ ಇಲ್ಲಿ ಜಗತ್ತಿನ ಎಲ್ಲರನ್ನು ಪ್ರೀತಿಸು, ಸಮಷ್ಠಿಯಲ್ಲಿ ಒಂದಾಗು ಎಂಬ ಸಂದೇಶ ಇಲ್ಲಿದೆ. ಇದರಲ್ಲಿನ ಒಂದು ವಾಕ್ಯ ವಿಶೇಷವಾಗಿ ನನಗೆ ಹಿಡಿಸಿತು: “ನಮ್ಮ ಆತ್ಮಕ್ಕೆ ದ್ರೋಹವನ್ನು ಉಂಟುಮಾಡಿಕೊಳ್ಳದೆ, ಇನ್ನೊಬ್ಬನನ್ನು ಸಂಕಟಪಡಿಸುವುದು ಅಸಾಧ್ಯ. ನಮ್ಮ ಆತ್ಮಕ್ಕೆ ದ್ರೋಹವೆಣಿಸದೆ ಅಂದರೆ, ನಮ್ಮನ್ನು ನಾವೇ ದ್ವೇಷಿಸಿಕೊಳ್ಳದೆ, ಹಿಂಸಿಸಕೊಳ್ಳದೆ, ಹೀಯಾಳಿಸಕೊಳ್ಳದೆ, ಇನ್ನೊಬ್ಬನನ್ನು ದ್ವೇಷಿಸುವುದು, ಹಿಂಸಿಸುವುದು, ಅವಹೇಳನ ಮಾಡುವುದು, ನಿಂದಿಸುವುದು, ಕ್ಲೇಶಗೊಳಿಸುವುದು, ಭೇದಭಾವಗಳನ್ನು ಕೋರುವುದು, ಉಚ್ಛನೀಚಗಳನ್ನು ಅಳೆಯುವುದು ಅಸಾಧ್ಯ. ನಾವು ಧರ್ಮಾಚರಣೆ ಮಾಡುವುದು ಇದಕ್ಕೆ – ನಮ್ಮ ಆತ್ಮೋದ್ಧಾರಕ್ಕೆ. ನಮ್ಮೆಲ್ಲರಲ್ಲಿ ಅಂತರ್ವಾಹಿನಿಯಾಗಿ ವಿಕಾಸಗೊಳ್ಳಲು ಹೋರಾಡುತ್ತಿರುವ ಜೀವಸತ್ವದ ಕ್ಷೇಮಕ್ಕೆ. ಇದೇ ಧರ್ಮದ ಮೂಲ.”
೯. ಧ್ವಜರಕ್ಷಣೆ:
ಇದೊಂದು ಸ್ವಾತಂತ್ರ್ಯ ಪೂರ್ವದ ಕಥೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರು ಹೇಗೆ ಪಾಲ್ಗೊಂಡಿದ್ದರು ಎಂಬುದನ್ನು ಈ ಕಥೆ ಅತ್ಯಂತ ವಾಸ್ತವವಾಗಿ, ಸಹಜವಾಗಿ, ಯಾವುದೇ ಬಗೆಯ ಅಬ್ಬರ, ಆರ್ಭಟಗಳಿಲ್ಲದೆ ಹಾಗೂ ಯಾವುದನ್ನೂ ವೈಭವೀಕರಿಸದೆ, ವಸ್ತುನಿಷ್ಠವಾಗಿ ಚಿತ್ರಿಸುವುದು ಈ ಕಥೆಯ ವಿಶೇಷ. ತರುಣ ಮುಕುಂದ ಯಾವುದೋ ಒಂದು ಕಛೇರಿಯಲ್ಲಿ ಮೇಲಧಿಕಾರಿಗೆ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದನು. ಆತನು ಸುಸಂಸ್ಕೃತ ಮತ್ತು ಪಾಪಭೀರು. ಜೀವನ ನಿರ್ವಹಣೆಗೆ ಆತ ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಆದಿನ ಮಹಾತ್ಮರನ್ನು ಬಂಧಿಸಿದ್ದಾರೆಂದು ಸುದ್ದಿ ಹಬ್ಬಿದ ಕೂಡಲೇ ಯುವಕ ವಿದ್ಯಾರ್ಥಿಗಳು ಚಳುವಳಿಯನ್ನು ಉಗ್ರಗೊಳಿಸಿದರು. ಮುಕುಂದ ಕಛೇರಿ ಮುಗಿಸಿ ಮನೆಗೆ ಹೊರಟಾಗ ದಾರಿಯಲ್ಲಿ ಪಾರ್ಕಿನಲ್ಲಿ ತ್ರಿರಂಗ ಧ್ವಜವನ್ನು ಹಿಡಿದುಕೊಡು ಹೋಗುತ್ತಿದ್ದ ಹುಡುಗನನ್ನು ಹೊಡೆದು ಬೀಳಿಸಿ, ಅವನ ಧ್ವಜವನ್ನು ತುಳಿದು ಅವಮಾನ ಮಾಡಿದಾಗ ಅವನಿಗೆ ಸಹಿಸಲಾಗಲಿಲ್ಲ. ಅವನ ದೇಶಪ್ರೇಮ ಜಾಗೃತವಾಗಿ ಆತ ಆ ಧ್ವಜವನ್ನು ಎತ್ತಿಕೊಂಡು, ಅದೇ ಕೋಲಿನಿಂದ ಅವಮಾನ ಮಾಡಿದ ಪೋಲಿಸಿಗೆ ಬಾರಿಸಿದ. ಕೊನೆಗೆ ಪೋಲಿಸರಿಂದ ಹೊಡೆಸಿಕೊಂಡ ಹುತಾತ್ಮನಾದ ಎಂಬ ಕಥೆ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಸ್ವಾತಂತ್ರದ ನಂತರ ಹುಟ್ಟಿದ ನಮ್ಮಂತಹವರಿಗೆ ಆ ದಿನದ ಹೋರಾಟವನ್ನು ಯಥಾವತ್ತಾಗಿ ಕೊಡುವುದರಲ್ಲಿ ಈ ಕಥೆ ಯಶಸ್ವಿಯಾಗಿದೆ.
೧೦. ವಿಷಾದ ಯೋಗ :
ಈ ಕಥೆ ಮಾತ್ರ ಅಪವಾದವೆಂಬಂತೆ ನವ್ಯ ಮಾರ್ಗದ ಕಥೆಯ ಲಕ್ಷಣಗಳನ್ನೊಳಗೊಂಡಿದೆ. ಕಥೆಯಲ್ಲಿ ಘಟನೆಗಳು, ಕಥೆಯ ಓಘ ಪ್ರಧಾನವಾಗದೆ, ನಾಯಕನ ಮನಸ್ಸಿನ ತಲ್ಲಣ, ವಿಷಾದ ಭಾವ, ಆತ್ಮ ವಿಮರ್ಶೆ ಆತ್ಮಾವಲೋಕನೆಗಳೇ ಪ್ರಧಾನವಾಗಿವೆ. ದಾರಿದ್ರ್ಯದಿಂದ ನರಳುತ್ತಿರುವ ಒಬ್ಬ ಗೃಹಸ್ಥ ತನ್ನ ಕೀಳರಿಮೆಯಿಂದಾಗಿ ಹೇಗೆ ಜಗತ್ತನ್ನೇ ಒಂದು ರೀತಿಯ ತೀವ್ರ ವಿಷಾದದ ದೃಷ್ಟಿಯಿಂದ ನೋಡುತ್ತಾನೆ ಎಂಬುದು ಅತ್ಯಂತ ಹೃದಯವಿದ್ರಾವಕವಾಗಿ ಚಿತ್ರಿತವಾಗಿದೆ. ಜೀವನದಲ್ಲಿ ಸಕಲ ಆಸೆಗಳನ್ನು ಕಳೆದುಕೊಂಡು ಜೀವನವೇ ಬರಡಾದಾಗ ತೋರುವಂತಹ ದೃಶ್ಯ. ಬಾಹ್ಯದ ವಸ್ತುಗಳೆಲ್ಲವೂ ಅವನ ಮನಸ್ಸಿನ ಮೇಲೆ ಹೇಗೆ ಪರಿಣಾಮ ಮಾಡುತ್ತವೆ ಎಂಬುದರ ಮೂಲಕವೇ ಜೀವನವನ್ನು ಅರ್ಥೈಸುವ, ಅದಕ್ಕೆ ಬೆಲೆ ಕಟ್ಟುವ ಪರಿ ಖಂಡಿತಾ ನವ್ಯ ಕಥೆಯ ಲಕ್ಷಣ. ಕೊನೆಗೆ ಸ್ನೇಹಿತನೊಬ್ಬನ ಮಿಲನದಿಂದ ಇಡೀ ಕಥೆಗೆ ತಿರುವು ಬಂದು, ನಾಯಕ ಬಿಂದುಮಾಧವನಿಗೆ ಜೀವನದಲ್ಲಿ ಪುನುರುತ್ಸಾಹ ಬಂದುದು ಸುಂದರವಾಗಿ ಚಿತ್ರಿತವಾಗಿದೆ. ಕೆಲವೊಂದು ವಾಕ್ಯಗಳು ಆಧ್ಯಾತ್ಮಿಕತೆಯ ಹೊಳಹನ್ನು ತೋರಿಸುತ್ತವೆ: “ಈ ಅನಾಸಕ್ತಿ ಅಂತಸ್ತಪ್ತರದವರೆಲ್ಲರಿಗೂ ಸುಲಭವಾಗಿ ದೊರಕುತ್ತದೆನೋ. ಹಾಗೆಯೇ ಆಲೋಚಿಸಿ ನೋಡಿದರೆ, ಆತ್ಮ ಜ್ಞಾನವನ್ನು ಪಡೆಯಬೇಕೆನ್ನುವವರು ನಿರಾಹಾರ, ಜಲಾಹಾರ, ಮಧ್ಯವಾಸ, ಮೌನ ಇತ್ಯಾದಿ ತಪಸ್ಸನ್ನು ಏಕೆ ಕೈಕೊಳ್ಳುತ್ತಾರೆ ಎನ್ನುವುದು ಈಗ ನಮಗೆ ಹೊಳೆಯುತ್ತದೆ. ನಮ್ಮ ನೋವು ನಮ್ಮ ಜ್ಞಾನ ನಮ್ಮ ಮೇಲೆಯೇ ಇರುವಂತೆ ಮಾಡುತ್ತದೆ. ನಮ್ಮ ಅರಿವಿನ ಬೆಳಕನ್ನೆಲ್ಲಾ ನಾವು ನಮ್ಮ ಬಾಳಿನ ಮೇಲೆ ಚೆಲ್ಲಿಕೊಂಡು ನಮ್ಮನ್ನು ನಾವು ಬಹು ಸ್ಪಷ್ಟವಾಗಿ ನೋಡಿಕೊಳ್ಳುವುದು ಈ ಬಗೆಯ ಉಪಾಯದಿಂದಲೇ”.
೧೧. ರಾಗಿಣಿ:
ಕಟ್ಟಡ ಕಟ್ಟುವ ದಿನಕೂಲಿಯವರ ಜೀವನದ ವಾಸ್ತವ ಚಿತ್ರಣ ಈ ಕಥೆಯಲ್ಲಿ ಮನೋಜ್ಞವಾಗಿ ಮೂಡಿಬಂದಿದೆ.ಶಂಭು ಈ ಕೂಲಿಗಳಿಗೆ ಕೂಲಿ ನೀಡುವ ಮಾಲಿಕ. ಅವನು ಅಗರ್ಭ ಶ್ರೀಮಂತ. ಸದಭಿರುಚಿಯಿಂದ ಮನೆಯಲ್ಲಿ ಐಶಾರಾಮದ ಗೃಹೋಪಕರಣಗಗಳನ್ನು ಇಟ್ಟುಕೊಂಡಿರುತ್ತಾನೆ. ಅವನ ಮಗಳು ರಾಗಿಣಿ. ಅವಳಿಗೂ ಈ ಕೂಲಿಗಳ ಗುಡಿಸಲಿನಲ್ಲಿ ವಾಸವಾಗಿರುವ ರಂಗನ ಮಗ ದೇವನಿಗೂ ಮೊದಲಿನಿಂದಲೂ ಗೆಳೆತನ. ಒಮ್ಮೆ ಇವರಿಬ್ಬರಿಗೂ ಏಕಕಾಲದಲ್ಲಿ ಹುಷಾರು ತಪ್ಪುತ್ತದೆ. ಅವರಿಬ್ಬರನ್ನೂ ನೋಡಿಕೊಳ್ಳುತ್ತಿದ್ದ, ವೈದ್ಯರು ರಾಗಿಣಿಗೆ ನಿರಾಹಾರನ್ನು ದೇವನಿಗೆ ಪೋಷಕಾಂಶಭರಿತ ಆಹಾರವನ್ನೂ ಕೊಡಬೇಕೆಂದು ನಿರ್ದೇಶಿಸುತ್ತಾನೆ. ಇದರಿಂದ ಇಬ್ಬರಿಗೂ ಗುಣವಾಗುತ್ತದೆ. ಕಥೆಯು ಹೀಗೇ ಮುಂದುವರೆಯುತ್ತದೆ. ಕೊನೆಗೆ ಅವರಿಬ್ಬರೂ, ಯಾರಿಗೂ ಹೇಳದೆ ಕೇಳದೆ ದೇಶದಿಂದ ಹೊರಗೆ ಓಡಿಹೋಗುತ್ತಾರೆ. ಇವರಿಬ್ಬರ ತಂದೆಯರೂ ಅವಮಾನದಿಂದ ಅಸುನೀಗುತ್ತಾರೆ. ರಾಗಿಣಿ – ದೇವನಾಥರು ಕಡುಬಡತನವನ್ನನುಭವಿಸಿ ಕೊನೆಗೆ ದಡಮುಟ್ಟುತ್ತಾರೆ. ಅವರ ಸಂತತಿ ಸಿರಿವಂತರಾಗಿ, ಪ್ರಸಿದ್ಧರಾಗಿ, ಕೂಲಿಗಳ ಬಗ್ಗೆ ತಿರಸ್ಕಾರ ಬೆಳೆಸಿಕೊಳ್ಳುತ್ತಾರೆ.
ಈ ಕಥೆಯಲ್ಲಿ ಸಮಾಜದ ವರ್ಗ ಭೇದ ವಾಸ್ತವಿಕವಾಗಿ ಚಿತ್ರಿತವಾಗಿದ್ದರೂ, ಕೂಲಿವರ್ಗಕ್ಕೆ ಶ್ರೀಮಂತವರ್ಗದವರ ಬಗ್ಗೆ ಆಕ್ರೋಶವಿಲ್ಲ. ಬದಲಾಗಿ, ತಮಗೆ ಜೀವನ ನೀಡುತ್ತಿರುವ ಧಣಿಗಳೆಂದು ಭಕ್ತಿಭಾವ ಇದೆ. ಇದು ನವೋದಯ ಕಥೆಗಳ ಲಕ್ಷಣ.
೧೨. ಕಾಲದೊಡನೆ ಅಶ್ವತ್ಥನ ಸ್ಪರ್ಧೆ:
ಇದೊಂದು ಮೋಹಕವಾದ ಕಥೆ. ಇದರಲ್ಲಿ ಕಥಾನಾಯಕ ರೈಲಿನಲ್ಲಿ ಪ್ರಯಾಣ ಮಾಡುತ್ತಿರುತ್ತಾನೆ. ಅವನ ಎದುರು ಒಬ್ಬಳು ಸುರ ಸುಂದರಿ ತನ್ನ ಗಂಡನೊಡನೆ ಕುಳಿತುಕೊಂಡಿರುತ್ತಾಳೆ. ಅವಳ ಮೋಹಕತೆಗೆ ಮಾರುಹೋದ ನಾಯಕನಿಗೆ, ತನ್ನ ಸ್ಟೇಷನ್ ಬಂದು ಹೋದುದೂ ಗೊತ್ತಾಗುವುದಿಲ್ಲ. ನಂತರ ತಿಳಿಯುತ್ತದೆ: ಆ ಮಾಯಾಂಗನೆ ಕಾಲ ಸ್ವರೂಪಿಣಿ ಎಂದು.
ಹೆಣ್ಣಿನ ಸೌಂದರ್ಯ ಮತ್ತು ಆಕೆಯ ಒನಪು, ಬಿನ್ನಾಣಗಳನ್ನು ಪು.ತಿ.ನ ಅವರು ಅಶ್ಲೀಲತೆಯ ಕೊಂಚವೂ ಸೋಕಿಲ್ಲದೆ ವರ್ಣಿಸಿರುವುದು ಈ ಕಥೆಯ ವಿಶೇಷ. ಹೆಣ್ಣನ್ನು ಕಾಲಕ್ಕೆ ಸಮೀಕರಿಸುವುದರ ಹಿಂದಿನ ಔಚಿತ್ಯವನ್ನು ವಿಶ್ಲೇಷಿಸುವುದು ಓದುಗರ ಊಹೆಗೇ ಬಿಡಲಾಗಿದೆ!
೧೩. ಪ್ರದಾನ:
ಭದ್ರದೇಶದ ಜನತೆ ಪರದೇಶದಲ್ಲಿರುವ ಪರದೇಶಿಗಳಿಗಾಗಿ ಉಣ್ಣೆಬಟ್ಟೆಗಳನ್ನು ದಾನ ಮಾಡುತ್ತಾರೆ. ಸಮಾಜದ ಎಲ್ಲ ವರ್ಗಗಳ ಜನರೂ ಈ ದಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಇವರಿಂದ ದಾನ ಪಡೆದ ಉಣ್ಣೆಬಟ್ಟೆಗಳನ್ನು ಹೇರಿಕೊಂಡು, ’ಪ್ರದಾನ’ ಎಂಬ ಹಡಗು ತನ್ನ ಪ್ರಯಾಣವನ್ನು ಆರಂಭಿಸುತ್ತದೆ. ದುರದೃಷ್ಟವಶಾತ್, ಹಡಗು ಹೊರಟ ಸ್ವಲ್ಪ ಸಮಯದಲ್ಲೇ, ಅದಕ್ಕೆ ಬೆಂಕಿ ಬೀಳುತ್ತದೆ. ಬೆಂಕಿಯ ನಿಯಂತ್ರಣ ಮಾಡಲಾಗದೆ, ಉಣ್ಣೆಬಟ್ಟೆಗಳೆಲ್ಲವೂ ಸುಟ್ಟು ನಾಶವಾಗುತ್ತವೆ. ಪೋಲೀಸಿನವರು ಇದರಲ್ಲಿ ಶತೃಗಳ ಕೈವಾಡವಿದೆಯೆಂದು ಹೇಳಿಕೆ ಕೊಟ್ಟು ಕೃತಾರ್ಥರಾಗುತ್ತಾರೆ. ಆದರೆ, ಜನಸಾಗರ ದುಃಖದಿಂದ ಮ್ಲಾನರಾಗಿದ್ದಾಗ, ಒಬ್ಬ ಸಂತೋಷದಿಂದ ಕೇಕೆ ಹಾಕುತ್ತಿರುತ್ತಾನೆ. ಪೋಲೀಸಿನವರು ಆತನನ್ನು ಬಂಧಿಸುತ್ತಾರೆ. ಎಷ್ಟೇ ಶಿಕ್ಷಿಸಿ ವಿಚಾರಣೆಗೊಳಪಡಿಸಿದರೂ, ಅವನಿಂದ ಯಾವುದೇ ಉಪಯುಕ್ತ ಮಾಹಿತಿ ಸಿಗದ ಕಾರಣ, ಅವನನನ್ನು ಬಂಧನಮುಕ್ತನನ್ನಾಗಿ ಮಾಡುತ್ತಾರೆ. ಕೊನೆಗೂ ಆ ಹಡಗಿನ ಬೆಂಕಿ ಅನಾಹುತದ ಹಿಂದಿನ ರಹಸ್ಯ ಯಾರಿಗೂ ಗೊತ್ತಾಗುವುದಿಲ್ಲ.
೧೪. ನಿಂಗಿಯೋ ಲವಂಗಿಯೋ:
ನಿಂಗಿ ಒಂದು ಸೇನಾಶಿಬಿರದಲ್ಲಿ ವಾಸಮಾಡುತ್ತಿರುವ ಒಬ್ಬ ನಾಗರೀಕ ಮಹಿಳೆ. ಆಕೆಯನ್ನು ಮದುವೆಯಾಗಬೇಕೆಂದಿರುವ ವಸಂತ ಒಂದು ರಾತ್ರಿ ಆಕೆಯನ್ನು ಮನೆಯಿಂದ ಹೊರಗೆ ಹಾಕುತ್ತಾನೆ. ಆಗ ಆಕೆ, ಅದೇ ಶಿಬಿರದ ರಕ್ಷಣಾ ಅಧಿಕಾರಿಯಾದ ಪೂರ್ಣಸಿಂಗ್ ಅವರಿಂದ ವಿಚಾರಣೆಗೊಳಪಡುತ್ತಾಳೆ. ಅಭಿಜಾತ ಸ್ತ್ರೀಯಂತೆ ಕಾಣುತ್ತಿರುವ ಆಕೆಯಿಂದ ವಿವರಗಳನ್ನು ಹೊರಡಿಸುವುದು ಕಷ್ಟವಾಗುತ್ತದೆ. ನಂತರ, ಆಕೆಯನ್ನು ಆಕೆಯ ಅಕ್ಕನ ಮನೆಗೆ ಕಳಿಸುತ್ತಾರೆ. ಇದಾದ ಒಂದೂವರೆ ತಿಂಗಳಿನ ನಂತರ, ಆಕೆ ತನ್ನ ಗಂಡ ವಸಂತನನ್ನು ಕರೆದುಕೊಂಡು ಬಂದು ಪೂರ್ಣಸಿಂಗರನ್ನು ಕಾಣುತ್ತಾಳೆ. ವಿಚಾರಣೆಯ ನಂತರ ತಿಳಿಯುವುದೇನೆಂದರೆ, ವಸಂತ ಆಕೆಯೆ ಶೀಲವನ್ನು ಶಂಕಿಸಿ, ಆಕೆಯನ್ನು ಮನೆಯಿಂದ ಹೊರಗೋಡಿಸಿರುವುದು ಹೊರಬೀಳುತ್ತದೆ. ನಂತರ ಎಲ್ಲವೂ ಸುಖಾಂತವಾಗುತ್ತದೆ.
ಪು.ತಿ.ನ ಅವರು ಈ ಕಥೆಯನ್ನು ತುಂಬ ಸ್ವಾರಸ್ಯಕರವಾಗಿ ನಿರೂಪಿಸಿದ್ದಾರೆ. ಎಲ್ಲ ಘಟ್ಟದಲ್ಲಿಯೂ ಕಥೆಯ ಕುತೂಹಲವನ್ನು ಉಳಿಸಿಕೊಂಡು ಬಂದಿದ್ದಾರೆ. ಕಥೆಯನ್ನು ಸ್ವಾರಸ್ಯಕರವಾಗಿ ಹೇಳುವ ಕಲೆ ಶ್ರೀಯುತರಿಗೆ ಸಿದ್ಧಿಸಿರುವುದು ಈ ಕಥೆಯಲ್ಲಿ ವ್ಯಕ್ತವಾಗುತ್ತದೆ. ಕಥೆಯ ಆರಂಭ ಮತ್ತು ಮಧ್ಯದಲ್ಲಿ ಕೆಟ್ಟ ಮೌಲ್ಯಗಳು ವಿಜೃಂಭಿಸಿದರೂ, ಕೊನೆಯಲ್ಲಿ ಎಲ್ಲವೂ ಸಮಾಜ ಒಪ್ಪಿಕೊಂಡಂತಹ ಮೌಲ್ಯಗಳ ಪ್ರಕಾರವೇ ಕಥೆಯು ಅಂತ್ಯವಾಗಿ, ಸಮಾಜದ ಪರಂಪರಾಗತ ಮೌಲ್ಯಗಳ ಧೃಡ ಸ್ಥಾಪನೆಯಾಗುತ್ತದೆ. ಈ ಮೊದಲೇ ತಿಳಿಸಿರುವಂತೆ, ನವೋದಯ ಮಾರ್ಗದ ಲೇಖಕರು ಸಮಾಜ ಓಪ್ಪಿಕೊಂಡ ಮೌಲ್ಯಗಳನ್ನು ಪ್ರಶ್ನಿಸದೆ, ಅವುಗಳನ್ನು ಪುನರ್‍ಸ್ಥಾಪಿಸುವಂತಹ ಕಥೆಗಳನ್ನೇ ಹೆಣೆಯುತ್ತಿದ್ದರು ಎಂಬುದಕ್ಕೆ ಈ ಕಥೆ ಉತ್ತಮ ನಿದರ್ಶನ.
೧೫. ಕೊಳಂದೆ:
ಕೊಳಂದೆ ಒಬ್ಬ ಮಧ್ಯವಯಸ್ಕ. ಆತನಿಗೆ ಮೇಲುಕೋಟೆಯ (?) ದೇವಸ್ಥಾನದ ಭಾವಿಯಲ್ಲಿ ನೀರು ಸೇದಿ, ಅಡಿಗೆ ಮನೆಯ ತೊಟ್ಟಿಯನ್ನು ತುಂಬಿಸುವ ಕೆಲಸ. ಒಮ್ಮೆ ಕೊಳಂದೆ ಆ ದೇವಸ್ಥಾನದ ಪಂಡಿತರಿಗೆ ಒಂದು ಮಾತು ಹೇಳಿ ಅವರನ್ನು ಅಪ್ರತಿಭರನ್ನಾಗಿ ಮಾಡುತ್ತಾನೆ: “ನೋಡಿ ಮಾಮ, ಅವತ್ತು ಕೋತಿ, ಇವತ್ತು ಗಿಳಿ, ಮೊನ್ನೆ ಎಮ್ಮೆ, ನಿನ್ನೆ ನಾಯಿ, ಆಗ ನಾನಾರು? ಯಾರೂ ಅಲ್ಲ! ಇದೇಸುಖ ಮಾಮ.”
ಕಥೆ ಮೇಲ್ನೋಟಕ್ಕೆ ತುಂಬಾ ಸರಳವಾಗಿದೆಯೆಂದು ಅನಿಸಿದರೂ, ಅದು ಗಹನವಾದ ಆಧ್ಯಾತ್ಮಿಕ ತತ್ವವನ್ನೊಳಗೊಂಡಿದೆಯೆಂದು ಆ ಪ್ರವೃತ್ತಿ ಇರುವವರಿಗೆ ತಿಳಿಯುತ್ತದೆ.
೧೬. ಬಸವನ ಹುಳು ಮತ್ತು ಗುಲಾಬಿಯ ಗಿಡ:
ಇದೊಂದು ಅನುವಾದಿತ ಕಥೆ. ಮೂಲ ಕಥೆಯನ್ನು ಜಾನ್ಸ್ ಅಂಡರ್‍ಸನ್ ಎಂಬುವರು ಬರೆದಿದ್ದಾರೆ. ಜಗತ್ತಿಗೆ ತಮ್ಮ ಕೊಡುಗೆ ಏನು ಎಂಬ ತಾತ್ವಿಕ ಚಿಂತನೆಯು, ಸರಳ, ಸುಂದರ, ಸಂಭಾಷಣೆಯ ಮೂಲಕ ನಡೆಯುತ್ತದೆ – ಶೀರ್ಷಿಕೆಯಲ್ಲಿನ ಜೀವಿಗಳ ಮಧ್ಯೆ. ಗುಲಾಬಿಯ ಗಿಡ ಜಾಸ್ತಿ ತಲೆ ಕೆಡಿಸಿಕೊಳ್ಳದೆ ತನ್ನ ಕೆಲಸ ತಾನು ಮಾಡುತ್ತಾ, ಪ್ರತಿ ವರ್ಷವೂ ಸುಂದರ ಹೂಗಳನ್ನು ಬಿಡುತ್ತ, ಜನಗಳ ಹೃನ್ಮನಗಳನ್ನು ಸಂತೋಷಿಸುತ್ತ ಮುಂದೆ ಸಾಗುತ್ತದೆ. ಆದರೆ, ತಾನು ತುಂಬಾ ಸಾಧಿಸಬೇಕೆಂಬ ಮಹತ್ವಾಕಾಂಕ್ಷೆಯೊಡನೆ ಹೊರಟ ಬಸವನ ಹುಳು, ಲೋಕಕ್ಕೆ ಉಗುಳು ಕೊಡುವುದನ್ನು ಬಿಟ್ಟು, ಮತ್ತೇನೂ ಹೆಚ್ಚಿನದನ್ನು ಕೊಡಲಾರದೆ, ಭ್ರಮ ನಿರಸನದಲ್ಲಿ ತನ್ನ ಜೀವನದ ಅಂತ್ಯ ಕಾಣುತ್ತದೆ. ಈ ಮಾರ್ಮಿಕವಾದ ಕಥೆ ಸುಂದರವಾಗಿ ಮೂಡಿಬಂದಿದೆ.
ಈ ಕಥೆಯನ್ನು ಓದಿದರೆ, ಇದೊಂದು ಸ್ವತಂತ್ರ ಕಥೆಯಾಗೇ ತೋರುವುದು. ಅಲ್ಲದೆ, ಕಥೆಯನ್ನು ಕನ್ನಡದ ಜಾಯಮಾನಕ್ಕೆ ಚೆನ್ನಾಗಿ ಹೊಂದಿಸಿದ್ದಾರೆ. ಉದಾಹರಣೆಗೆ, ‘ಕಣಯ್ಯ’ ಇತ್ಯಾದಿ ಪದ ಪ್ರಯೋಗ. ಚಿಂತನ ಭೂಯಿಷ್ಠವಾದ ಈ ಕಥೆ ನಮ್ಮೆಲ್ಲರನ್ನೂ ಜಗತ್ತಿಗೆ ನಿಮ್ಮ ಕೊಡುಗೆ ಏನು ಎಂದು ಕೇಳುವಂತಿದೆ.
ಪು.ತಿ.ನ. ಅವರ ಕಥೆಗಳ ಬಗ್ಗೆ ಸಮಗ್ರ ವಿಮರ್ಶೆ:
ಜೀವನದಲ್ಲಿ ಪ್ರತಿಯೊಂದನ್ನೂ ಒಳ್ಳೆಯ ದೃಷ್ಠಿಯಿಂದ ಪರಿಭಾವಿಸುವ ಪ್ರವೃತ್ತಿ ಪು.ತಿ.ನ. ಅವರಲ್ಲಿ ಕಾಣುತ್ತದೆ. ಗಾಢವಾದ ಧಾರ್ಮಿಕ ಶ್ರದ್ಧೆ, ಪ್ರಖರವಾದ ಆಧ್ಯಾತ್ಮಿಕ ಜ್ಞಾನದ ಆಳವಾದ ಅರಿವು, ದೈವಭಕ್ತಿ — ಶ್ರೀಯುತರನ್ನು ನಿಯಂತ್ರಿಸುತ್ತಿರುವ ಶಕ್ತಿಯೆಂದು ಭಾಸವಾಗಿ ಅವರ ಸಮಸ್ತ ಸೃಜನಶೀಲ ಚೈತನ್ಯದ ಸೆಲೆಯಾಗಿದೆಯೆಂದು ತೋರುತ್ತದೆ. ಸಮಾಜದ ಎಲ್ಲ ವರ್ಗದವರ ಬಗ್ಗೆ ಶ್ರೀಯುತರಿಗಿರುವ ಜೀವನ ಪ್ರೀತಿ ಇವರ ಕಥೆಗಳಲ್ಲಿ ವ್ಯಕ್ತವಾಗಿದೆ. ನವೋದಯ ಮಾರ್ಗದ ಇತರ ಸಾಹಿತಿಗಳಂತೆ ಇವರು, ಸಮಾಜದ ವ್ಯವಸ್ಥೆ ಮತ್ತು ಪರಂಪರಾನುಗತ ಮೌಲ್ಯಗಳನ್ನು ಪ್ರಶ್ನಿಸುವ ಗೋಜಿಗೆ ಹೋಗುವುದಿಲ್ಲ, ಏಕೆಂದರೆ ಈ ಮೌಲ್ಯಗಳು ನಿತ್ಯವಾದವುಗಳು, ಸಮಾಜದ ಸಮಷ್ಠಿಗೆ ಹಿತಕಾರಕಗಳು. ವ್ಯವಸ್ಥೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ಬಾಳುವುದರಲ್ಲೇ ಸಮಾಜದ ಒಳಿತಿರುವುದು ಎಂದು ಬಲವಾಗಿ ನಂಬಿದವರು ಇವರು. ಹೀಗಾಗಿ, ಇವರ ಕಥೆಗಳಲ್ಲಿ ಸಮನ್ವಯ, ಹೊಂದಾಣಿಕೆ, ಅದಮ್ಯವಾದ ಜೀವನ ಪ್ರೇಮ ವ್ಯಕ್ತವಾಗುತ್ತದೆ.
ಕಥೆಯನ್ನು ಸ್ವಾರಸ್ಯಕರವಾಗಿ ಹೇಳುವ ಕಲೆ ಪು.ತಿ.ನ. ಅವರಿಗೆ ಸಿದ್ಧಿಸಿದೆ. ಪು.ತಿ.ನ. ಅವರ ಭಾಷೆ ಪ್ರಬುದ್ಧವಾಗಿದೆ, ಗದ್ಯ ಸಹಜ ಲಯಗತಿಯಿಂದ ಕೂಡಿದೆ. ಪರಂಪಾರಗತ ಮಾನವೀಯ ಮೌಲ್ಯಗಳನ್ನು ಬಿಂಬಿಸಿ, ಪೋಷಿಸಿ, ವೃದ್ಧಿಸುವಂತಹ ಕಥೆಗಳನ್ನು ಬರೆದು, ನವೋದಯ ಮಾರ್ಗದ ಪ್ರಮುಖ ಲೇಖಕರಲ್ಲಿ ಪು.ತಿ.ನ. ಅವರು ಒಬ್ಬರಾಗಿದ್ದಾರೆ. ಅತಿ ಮಡಿವಂತಿಕೆಯಿಂದ ಕಥೆಗಳನ್ನು ಚಿತ್ರಿಸಿಲ್ಲ; ಹಾಗೆಯೇ, ಹೆಣ್ಣಿನ ಸೌಂದರ್ಯವನ್ನು ವರ್ಣಿಸುವಾಗಲೂ ಸಹ ಅಶ್ಲೀಲತೆಯ ಸೋಕಿಲ್ಲದೆ, ಶುದ್ಧವಾಗಿ ಕಥೆಗಳನ್ನು ನಿರೂಪಿಸಿದ್ದಾರೆ. ಸ್ವಾತಂತ್ರಪೂರ್ವ ಕರ್ನಾಟಕದ, ಸಾಮಾಜಿಕ ಜೀವನ ಚಿತ್ರಣ ಕೆಲವು ಕಥೆಗಳಲ್ಲಿ ಸೊಗಸಾಗಿ ಮೂಡಿಬಂದಿದೆ. ಯಾವುದೇ ಬಗೆಯ ಉದ್ವಿಗ್ನತೆಗೆ ಒಳಗಾಗದೆ, ನಿರ್ಲಿಪ್ತವಾಗಿ ಕಥೆಯನ್ನು ಹೇಳಿಕೊಂಡು ಹೋಗಿರುವ ರೀತಿ ಅನನ್ಯವಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ, ಅನವಶ್ಯಕ ವಿವರಣೆಗಳಿಲ್ಲದೆ ಕಥೆಯನ್ನು ಹೆಣೆದಿರುವುದು, ಪಾತ್ರ ಚಿತ್ರಣ, ಸಂಭಾಷಣೆ, ಘಟನೆಗಳನ್ನು ಕಥೆಯ ಸಾವಯವ ಅಂಗವಾಗಿ ಮಾಡಿಕೊಂಡಂತಹ ಕಲಾವಿನ್ಯಾಸ, ಅಲ್ಲಲ್ಲಿ ಮಿಂಚುವ ಜೀವನ ದರ್ಶನ ಮತ್ತು ಆಧ್ಯಾತ್ಮಿಕ ತತ್ವ – ಹೀಗೆ ಎಲ್ಲದರ ವಿವರಣೆಯಲ್ಲೂ ಅವರು ಅಸಾಧಾರಣ ಸಂಯಮವನ್ನು ಮೆರೆದು, ನವೋದಯ ಮಾರ್ಗದ ಕೆಲವು ಅತ್ಯುತ್ತಮ ಹಾಗೂ ಹಲವು ಪ್ರಾತಿನಿಧಿಕ ಕಥೆಗಳನ್ನು ನೀಡಿದ್ದಾರೆ.
ನವೋದಯ ಮಾರ್ಗದ ಕಥೆಗಳನ್ನು ವಿಮರ್ಶಿಸುತ್ತಾ, ಜಿ. ಎಚ್. ನಾಯಕರು ಹೀಗೆ ಅಭಿಪ್ರಾಯ ಪಡುತ್ತಾರೆ [೨]: ಕುವೆಂಪು ಅವರಂತೆಯೇ ಬೇರೆ ಬೇರೆ ಸಾಹಿತ್ಯ ಪ್ರಕಾರಗಳಲ್ಲಿ ಪ್ರಖ್ಯಾತರಾಗಿರುವ ನವೋದಯ ತಲೆಮಾರಿನ ದ. ರಾ. ಬೇಂದ್ರೆ, ಶಿವರಾಮ ಕಾರಂತ, ಪು. ತಿ. ನರಸಿಂಹಾಚಾರ್ ಮುಂತಾದ ಸಾಹಿತಿಗಳು ಸಣ್ಣಕಥೆಗಳನ್ನು ಬರೆದಿರುವರಾದರೂ, ಆ ಪ್ರಕಾರ ಅವರಿಗೆಲ್ಲ ಏಕೆ ಕೊನೆಯವರೆಗೆ ಒಗ್ಗಿರಲಿಲ್ಲ ಎನ್ನುವುದು ಕುತೂಹಲದ ಸಂಗತಿಯಾಗಿಯೇ ಉಳಿಯುವಂತಾಗಿದೆ.
ಗ್ರಂಥಋಣ:
[೧] “ಪು.ತಿ.ನ. ಅವರ ಸಮಗ್ರ ಗದ್ಯ ಸಂಪುಟ” – ಸಂಪಾದಕರು: ಡಾ|| ಜಿ.ಎಸ್.ಶಿವರುದ್ರಪ್ಪ ಮತ್ತು ಡಾ|| ಎಚ್.ಎಸ್.ವೆಂಕಟೇಶಮೂರ್ತಿ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, ೨೦೦೨.
[೨] “ಕನ್ನಡ ಸಣ್ಣ ಕಥೆಗಳು” – ಜಿ. ಎಚ್. ನಾಯಕ, ನ್ಯಾಷನಲ್ ಬುಕ್ ಟ್ರಸ್ಟ್, ಹೊಸ ದೆಹಲಿ, ೧೯೭೮.
[೩] “ಸಮಗ್ರ ವಿಮರ್ಶೆ” (ಸಂಪುಟ ೨) – ಡಾ|| ಗಿರಡ್ಡಿ ಗೋವಿಂದರಾಜ, ಸಪ್ನ ಬುಕ್ ಹೌಸ್, ಬೆಂಗಳೂರು, ೨೦೦೧.
ವಿಶೇಷ ಸೂಚನೆ:
ಈ ವಿಮರ್ಶಾತ್ಮಕ ಲೇಖನ ಕೆಳಕಂಡ ಪುಸ್ತಕದಲ್ಲಿ ಪ್ರಕಟವಾಗಿದೆ:
ಯದುಗಿರಿಯ ಬೆಳಕು, ಪ್ರಧಾನ ಸಂಪಾದಕ: ಅಹಿತಾನಲ, ಪ್ರಕಾಶನ: ಸಾಹಿತ್ಯಾಂಜಲಿ ಕ್ಯಾಲಿಫ಼ೋರ್ನಿಯಾ ಮತ್ತು ಅಭಿನವ, ಬೆಂಗಳೂರು, ೨೦೦೫.
*****