ಕನ್ನಡ ಸಾಹಿತ್ಯ ಸಮ್ಮೇಳನ ಭಾಷಣ – ಬೀದರ್

ಮೂಡುಬಿದರೆಯಲ್ಲಿ ನಡೆದ ೭೧ನೆಯ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಪ್ರೊ. ಕಮಲಾ ಹಂಪನಾ ಅವರು ೨೭-೦೧-೦೬ ರಂದು ಬಿದರೆಯಲ್ಲಿ ಮಾಡಿದ ಕಿರು ಭಾಷಣ

ಇಂದು ಈ ಬೀದರ್ ನಗರದಲ್ಲಿ ನಡೆಯುತ್ತಿರುವುದು ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನ. ಯೋಗಾಯೋಗ ಹೇಗೆ ಕೂಡಿ ಬಂದಿದೆಯೆಂದರೆ ಈ ಮೂರೂ ಸಮ್ಮೇಳನಗಳೊಂದಿಗೆ ನನಗೆ ಅವಿನಾಭಾವದ ಆತ್ಮೀಯ ಸಂಬಂಧ ಹಾಸುಹೊಕ್ಕಾಗಿದೆ. ೧೯೬೦ರಲ್ಲಿ ಇಲ್ಲಿ ನಡೆದ ಮೊದಲ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದವರು ನನ್ನ ವಿದ್ಯಾಗುರುಗಳಾಗಿದ್ದು ಸಾಹಿತ್ಯ ಹಾಗೂ ಸಂಶೋಧನೆಯಲ್ಲಿ ಆಸಕ್ತಿ ಮೂಡಿಸಿದ ಪ್ರಾಚಾರ್ಯ ದೊಡ್ಡಬೆಲೆ ಲಕ್ಷ್ಮೀನರಸಿಂಹಾಚಾರ್‍ಯರು. ವಿದ್ಯಾರ್ಥಿಗಳೂ ಅಭಿಮಾನಿಗಳೂ ಸೇರಿ ಮೈಸೂರಿನಲ್ಲಿ ಸಮಾರಂಭ ಏರ್ಪಡಿಸಿ ಡಿ.ಎಲ್.ಎನ್. ಅವರನ್ನು ಬೀಳ್ಕೊಟ್ಟ ಆ ಅವಿಸ್ಮರಣೀಯ ದೃಶ್ಯ ಇಂದಿಗೂ ನನ್ನ ನೆನಪಿನಂಗಳದಲ್ಲಿ ಅರಳಿ ನಿಲ್ಲುತ್ತದೆ.
ಅನಂತರ ೧೯೮೫ರಲ್ಲಿ ಇಲ್ಲಿ ಏರ್ಪಾಟಾದ ಎರಡನೆಯ ಸಾಹಿತ್ಯಸಮ್ಮೇಳನದ ರೂವಾರಿ ಡಾ. ಹಂಪನಾ ಆಗಿದ್ದರು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದ ಅವರ ಅವಧಿಯಲ್ಲಿ ಬೀದರ್ ಸಮ್ಮೇಳನಕ್ಕೆ ಕನ್ನಡ ನಾಡಿನ ಕಣ್ಮಣಿ ಡಾ. ಹಾ. ಮಾ. ನಾಯಕ್ ಅಧ್ಯಕ್ಷರಾಗಿದ್ದರು. ಆ ಸಮ್ಮೇಳನದ ಒಂದು ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಾಹಿತ್ಯದ ಸಂದರ್ಭದ ಸ್ಮೃತಿ ಹಚ್ಚಹಸುರಾಗಿದೆ. ಈ ಎರಡು ಸಾಹಿತ್ಯ ಸಮ್ಮೇಳನಗಳ ನಡುವಣ ಅವಧಿಯಲ್ಲಿ ಬೀದರ್ ಜಿಲ್ಲೆಯೊಂದಿಗೆ ನಿಕಟತೆ ಮುಂದುವರಿದಿತ್ತು. ೧೯೭೫ರಲ್ಲಿ ನಾನು ಮತ್ತು ಪ್ರೊ. ಹಂಪನಾ ಈ ಪುಟ್ಟ ಜಿಲ್ಲೆಯ ತಾಲೂಕು ಕೇಂದ್ರಗಳಾದ ಬೀದರ್, ಔರಾದ್, ಭಾಲ್ಕಿ, ಹುಮ್ನಾಬಾದು ಮತ್ತು ಬಸವಕಲ್ಯಾಣದಲ್ಲಿ ಉಪನ್ಯಾಸ ನೀಡಿದ್ದು ನನ್ನ ಭಾವಕೋಶದಲ್ಲಿ ಸಿಹಿನೆನಪಾಗಿ ಉಳಿದಿದೆ. ಅಂದಿನ ಜಿಲ್ಲಾಧಿಕಾರಿ ಪುಟ್ಟಸ್ವಾಮಿಗೌಡರು ಬೀದರಿನಲ್ಲಿ ನಮ್ಮಿಬ್ಬರಿಗೂ ಅದ್ದೂರಿ ಪೌರಸನ್ಮಾನ ಸಮಾರಂಭವನ್ನು ಏರ್ಪಡಿಸಿ ಗೌರವ ನೀಡಿದ್ದು ಮರೆಯಲಾಗದ ಹಿತಾನುಭವ. ಜಗಜ್ಯೋತಿ ಬಸವಣ್ಣನವರ ಎಂಟುನೂರನೆಯ ಉತ್ಸವ ಕಾರ್ಯಕ್ರಮಗಳು ಈ ಭಾಗದಲ್ಲಿ ನಡೆದಾಗ ಬಿ.ಡಿ.ಜತ್ತಿಯವರು ಬರಮಾಡಿಕೊಂಡಿದ್ದರು. ಶ್ರೇಷ್ಠ ಕವಯತ್ರಿಯೂ ದಾರ್ಶನಿಕರೂ ಆದ ತಾಯಿ ಜಯದೇವಿ ತಾಯಿ ಲಿಗಾಡೆಯವರು ಬಸವಕಲ್ಯಾಣಕ್ಕೆ ಕರೆಸಿ ತೋರಿದ ಅಂತಃಕರಣ ತುಂಬಿದ ಅಕ್ಕರೆ – ಹೀಗೆ ಒಸಗೆಯ ಮೇಲೆ ಒಸಗೆ ಒದಗಿ ಬಂದವು. ಕಬ್ಬಿಗೆ ಜೇನು ಕಟ್ಟಿದಂತೆ. ಬೀದರ್ ಜಿಲ್ಲೆ ನನ್ನ ಬದುಕಿಗೆ ಕೊಟ್ಟ ವಾತ್ಸಲ್ಯಧಾರೆಯನ್ನು ನೆನೆದು ಕೃತಜ್ಞತೆಯಿಂದ ಕೈಮುಗಿಯುತ್ತೇನೆ.
ಬೀದರ್ ಜಿಲ್ಲೆ ವಿಶಾಲ ಕರ್ನಾಟಕದ ತುತ್ತತುದಿಯಲ್ಲಿ ಮಿರಿಮಿರಿ ಮಿರುಗುವ ಮುಕುಟಮಣಿ. ಇಲ್ಲಿಯ ಇತಿಹಾಸ, ಸಾಂಸ್ಕೃತಿಕ ಸಮನ್ವಯ ಪರಂಪರೆ, ಸಿಲ್ಪ, ಸಾಹಿತ್ಯ, ಕಲೆ-ಇವು ವಿಶಿಷ್ಟ ಬಗೆಯಲ್ಲಿ ಆವಿಷ್ಕಾರಗೊಂಡಿವೆ. ಇಲ್ಲಿಯ ಸುಭದ್ರ-ಸುಂದರ ಬೃಹತ್ ಕೋಟೆ ಚರಿತ್ರೆಯ ಅಧ್ಯಾಯಗಳನ್ನು ಬಿಚ್ಚಳಿಸುತ್ತವೆ. ಈ ಸ್ಥಳದ ವಿಶಿಷ್ಟ ಬಿದಿರಿ ಕುಶಲಕಲೆ ಅನ್ಯಾದೃಶ್ಯವಾಗಿದ್ದು ಅದರ, ಸೂಕ್ಷ್ಮರೇಖೆಗಳ ಬಾಗು ಬಳಕುಗಳನ್ನು ನೋಡಲು ಕಣ್ಣು ಅರಳುತ್ತವೆ. ಅನುಭಾವಿಗಳು, ಆಜೀವಕರು, ದಾಸರು, ಮಹಾನ್ ಶರಣ ಶರಣೆಯರು ನಡೆದಾಡಿದ ಪುಣ್ಯಭೂಮಿ ಬೀದರಿನ ನೆಲ. ಇಸ್ಲಾಂಧರ್ಮ ಹಾಗೂ ಇತಿಹಾಸದ ಪ್ರತೀಕಗಳಾಗಿ ನಿಂತಿರುವ ಇಲ್ಲಿನ ಬೃಹತ್ ಸ್ಮಾರಕಗಳು ಜಗತ್ ಪ್ರಸಿದ್ಧವಾಗಿವೆ.
ಇಷ್ಟು ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ ಮಹತ್ವ ಬೆನ್ನ ಬತ್ತಳಿಕೆಯಾಗಿರುವ ಬೀದರಿನಲ್ಲಿ ನಾವೆಲ್ಲ ಸಮಾವೇಶವಾಗಿರುವುದು ಪುಳಕಾನುಭವವಾಗಿದೆ. ಸರಿಯಾಗಿ ಇಂದಿಗೆ ಎರಡು ವರ್ಷ ಒಂದು ತಿಂಗಳು ಹಗೂ ಒಂದು ವಾರವಾಯಿತು ನಾನು ಸಮ್ಮೇಳನಾಧ್ಯಕ್ಷೆಯಾಗಿ. ಅದಕ್ಕೂ ಮೊದಲು ದೀರ್ಘ ಕಾಲದಿಂದ ಕರ್ನಾಟಕದಾದ್ಯಂತ ಹಾಗೂ ದೇಶ ವಿದೇಶಗಳಲ್ಲಿ ಕನ್ನಡಿಗರು ನನ್ನನ್ನು ಆತ್ಮೀಯತೆಯಿಂದ ಆಹ್ವಾನಿಸಿ ಅಕ್ಕರೆ ಅಭಿಮಾನ ತೋರಿದ್ದಾರೆ. ನನಗೆ ಐವತ್ತು ವರ್ಷ ಮತ್ತು ಅರವತ್ತು ವರ್ಷ ತುಂಬಿದ ನೆಪ ಮಾಡಿಕೊಂಡು ನುಡಿಮಲ್ಲಿಗೆಯ ಮಳೆಗರೆದುದಲ್ಲದೆ ಆರು ಅಭಿನಂದನ ಗ್ರಂಥಗಳನ್ನು ಮುಡಿ ತುಂಬಿಸಿ ಹರಸಿದ್ದಾರೆ. ೨೦೦೩ರಲ್ಲಿ ಸಮ್ಮೇಳನಾಧ್ಯಕ್ಷೆ ಆದಮೇಲೆ ಪ್ರೀತಿಯ ಮಹಾಪೂರದಲ್ಲಿ ನಾನು ತಬ್ಬಿಬ್ಬಳಾದೆ. ನಾಡಿನ ಈ ಗೌರವಾದರಗಳ ಋಣಭಾರದಿಂದ ಮುಕ್ತಳಾಗಲು ನಾನು ಬಹಳ ಕ್ರಿಯಾಶೀಲಳಾಗಬೇಕೆಂಬ ಕರ್ತವ್ಯ ಪ್ರಜ್ಞೆಯಿಂದ ಉದ್ದೀಪನಗೊಂಡು ನಾಡಿನ ಉದ್ದಗಲಗಳಲ್ಲಿ ಸಂಚಾರ ಕೈಗೊಂಡೆ. ನಾಲ್ಕೈದು ಜಿಲ್ಲೆಗಳನ್ನು ಹೊರತುಪಡಿಸಿ, ಕರ್ನಾಟಕದ ಬಹುಮಟ್ಟಿನ ಜಿಲ್ಲೆಗಳಲ್ಲಿ ಏರ್ಪಾಟು ಮಾಡಿದ ಸಾಹಿತ್ಯ ಸಮಾರತೊಂಭಗಳಲ್ಲಿ ಭಾಗವಹಿಸಿ ಕನ್ನಡ ಪರ ಚಿಂತನೆಗಳ ಕಾಳು ಬಿತ್ತಿದ್ದೇನೆ. ಪಾಂಡಿಚೇರಿಯಲ್ಲಿ ನಡೆದ ರಾಷ್ಟ್ರೀಯ ಕನ್ನಡ ಸಾಹಿತ್ಯ-ಸಂಸ್ಕೃತಿ ಸಮ್ಮೇಳನದಲ್ಲಿ ಅಲ್ಲಿಯ ಮುಖ್ಯಮಂತ್ರಿ ಮತ್ತು ಜನತೆಯ ಸಮ್ಮುಖದಲ್ಲಿ ಕರ್ನಾಟಕದ ಭವ್ಯ ಪರಂಪರೆಯ ಶೃಂಗಗಳನ್ನು ಪರಿಚಯಿಸಿದೆ. ಮುಂಬೈ ವಿಶ್ವವಿದ್ಯಾನಿಲಯ, ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯ ಹಾಗೂ ವಿಜಯವಾಡ ವಿಶ್ವವಿದ್ಯಾಲಯಗಳಲ್ಲಿ ಸಮಾವೇಶಗೊಂಡ ರಾಷ್ಟ್ರೀಯಮಟ್ಟದ ಸಂಕಿರಣಗಳಲ್ಲಿ ಕನ್ನಡದ ಅನನ್ಯತೆಯನ್ನು ಕನ್ನಡೇತರರಿಗೂ ಮನವರಿಕೆ ಮಾಡಿದ್ದು ಹರ್ಷದ ಅನುಭವ. ಇದೇ ರೀತಿ ಕಲಕತ್ತಾದ ರಾಯಲ್ ಏಷಿಯಾಟಿಕ್ ಸೊಸೈಟಿ ಏರ್ಪಡಿಸಿದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಅನ್ಯ ಪ್ರಭಾವಗಳಲ್ಲಿ ಕೊಚ್ಚಿ ಹೋಗದೆ ಎಲ್ಲವನ್ನೂ ಜೀರ್ಣಿಸಿಕೊಳ್ಳುತ್ತ ತನ್ನ ಸೋಪಜ್ಞ ನೆಲೆಗಳನ್ನು ಗಟ್ಟಿಯಾಗಿ ಬೆಳೆಸಿರುವುದನ್ನು ಸ್ಥಾಪಿಸುವ ಸದವಕಾಶ ಪ್ರಾಪ್ತವಾಗಿತ್ತು. ಕುಪ್ಪಂನ ದ್ರಾವಿ‌ಒಡ ವಿಶ್ವಿದ್ಯಾಲಯದಲ್ಲಿ ಕನ್ನಡದ ಅರಿವಿನಿಂದ eತಿ ಭಾಷೆಗಳ ಅಧ್ಯಯನ ಪಡೆದುಕೊಳ್ಳುಬಹುದಾದ ತಿಳಿವಳಿಕೆಯ ಸ್ವರೂಪವನ್ನು ದೃಷ್ಟಾಂತಗಳೊಂದಿಗೆ ನಿರೂಪಿಸಿದ್ದು ತೌಲನಿಕ ಅಧ್ಯಯನಕಾರರಿಗೆ ಉಪಯುಕ್ತವೆನಿಸಿತು. ಈ ವಿವರಗಳನ್ನು ಇಲ್ಲಿ ಸಂಕ್ಷೇಪಿಸಿ ಪ್ರಸ್ತಾಪಿಸಿದ್ದಕ್ಕೆ ಮುಖ್ಯ ಕಾರಣವಿದೆ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷಳಾಗಿದ್ದ ಎರಡು ವರ್ಷಗಳ ಅವಧಿಯಲ್ಲಿ ನಾನು ಕನ್ನಡದ ಮಹತ್ವ ಮತ್ತು ಅನನ್ಯತೆಯ ಲಕ್ಷಣಗಳನ್ನು, ಕರ್ನಾಟಕದ ೨೨ ಜಿಲ್ಲೆಗಳಲ್ಲೇ ಅಲ್ಲದೆ ಕರ್ನಾಟಕದ ಹೊರಗೂ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು, ಬಿಂಬಿಸಿರುವ ಸಂತೋಷವನ್ನು ನಿವೇದಿಸಿಕೊಳ್ಳುವ ಸಲುವಾಗಿ. ಸಮ್ಮೇಳನದ ಅಧ್ಯಕ್ಷೆಯಾಗಿ ಈ ಕೆಲಸ ನನ್ನ ನೈತಿಕ ಸಾಂಸ್ಕೃತಿಕ ಜವಾಬುದಾರಿಯಾಗಿತ್ತು ಎಂಬ ಕರ್ತವ್ಯ ಪ್ರಜ್ಞೆಯಿಂದ ನಾನು ನಡೆದುಕೊಂಡಿದ್ದೇನೆ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಹಸ್ತಾಂತರಗೊಳಿಸುತ್ತಿರುವ ಈ ಸ್ಥತ್ಯಂತರದ ಹೊಸ್ತಿಲಲ್ಲಿ ನಿಂತು ಆಡುವ ಮಾತುಗಳು ಹೆಚ್ಚು ಇರಬಾರದೆಂಬ ಅರಿವು ಇರುವುದರಿಂದ ಕೇವಲ ಎರಡು ವಿಷಯಗಳನ್ನು ಪ್ರಸ್ತಾಪಿಸುತ್ತೇನೆ. ಒಂದನೆಯದು ಕನ್ನಡ ಭಾಷೆಗೇ ಸಂಬಂಧಿಸಿದ್ದು. ನಾಡು ನುಡಿಗೆ ಸಂಬಂಧಿಸಿದ ಸಮಸ್ಯೆಗಳು ಹಲವಾರಿವೆ, ದಿಟ. ಅವು ಇಂಥ ವೇದಿಕೆಗಳಲ್ಲಿ ಚರ್ಚೆಯಾಗಬೇಕಾದುದೂ ಅಗತ್ಯ. ಬಹುಮುಖ್ಯವಾಗಿ ಕಾಡುತ್ತಿರುವುದು ಮಕ್ಕಳ ಪ್ರಾಥಮಿಕ ಶಿಕ್ಷಣ ಯಾವ ಮಾಧ್ಯಮದಲ್ಲಿ ನಡೆಯಬೇಕು ಎಂಬುದು.
ಕನ್ನಡ ನಾಡಿನಲ್ಲಿ ಕನ್ನಡವೊಂದೇ ಸಾರ್ವಭೌಮ ಭಾಷೆ. ಕರ್ನಾಟಕದಲ್ಲಿ ಪ್ರಾಥಮಿಕ ಹಂತದಿಂದಲೂ ಮಾಧ್ಯಮ ಭಾಷೆ ಕನ್ನಡವೇ ಆಗಿರಬೇಕು. ಮಕ್ಕಳ ಮನಸ್ಸೆಂಬ ಹೊಲದಲ್ಲಿ ಕನ್ನಡದ ಕಾಳುಗಳನ್ನು ಬಿತ್ತಬೇಕು. ಇದಕ್ಕೆ ತಯಾತ್ವಿಕವಾಗಿ ಎಲ್ಲರೂ ಒಪ್ಪಿಗೆ ಕೊಡುತ್ತಾರೆ. ಆದರೆ ಇಂದು ವಾಸ್ತವವಾಗಿ ನಡೆಯುತ್ತಿರುವುದೇನು? ಬಾಲವಾಡಿಗಳ ಹಂತದಿಂದಲೇ ಕನ್ನಡದ ಕೂಸುಗಳನ್ನು ಕನ್ನಡ ಶಾಲೆಯಿಂದ ಕಿತ್ತು ಇಂಗ್ಲಿಷ್ ಶಾಲೆಗಳಲ್ಲಿ ನಾಟಿ ಮಾಡುತ್ತಿದ್ದಾರೆ. ಪರಿಣಾಮವಾಗಿ ಇತ್ತ ಕನ್ನಡ ಶಾಲೆಗಳು ಒಣಗುತ್ತಿವೆ, ಅತ್ತ ಇಂಗ್ಲಿಷ್ ಶಾಲೆಗಳು ಪಲ್ಲವಿಸಿ ಚಿಗುರುತ್ತಿವೆ. ಮುನ್ನೂರು ನಾನ್ನೂರು ಮಕ್ಕಳು ಕನ್ನಡ ಮಾಧ್ಯನದಲ್ಲಿ ಕಲಿಯುತ್ತಿದ್ದ ಶಾಲೆಗಳಲ್ಲೀಗ ೩೦-೪೦ ಮಕ್ಕಳು ಬಂದರೆ ಹೆಚ್ಚು ಎಂಬಂತಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ತುಂಬಿ ತುಳುಕುತ್ತಿವೆ. ಇದು ತುಂಬ ಗಂಭೀರವಾಗಿ ಚಿಂತಿಸಿ ಜರೂರಾಗಿ ಪರಿಹಾರ ಕಂಡುಕೊಳ್ಳಬೇಕಾದ ವಿಷಯ.
ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಪಾತ್ರ ಬಹು ಮುಖ್ಯ. ದೇಶದ ಪ್ರಾದೇಶಿಕ ಭಾಷೆಗಳಿಗೆ ಬಂದೆರಗಿರುವ ಇಂಗ್ಲಿಷ್ ಭಾಷೆಯ ಕುತ್ತನ್ನು ನಿವಾರಿಸಲು ನೆರವಾಗುವ ಹಾಗೆ ಸಮಾನ ಶಿಕ್ಷಣ ನೀತಿಯನ್ನು ಕೇಂದ್ರ ಸಕಾರ ಜಾರಿಗೊಳಿಸಬೇಕು. ಈಗ ‘ಮಾತೃಭಾಷೆ’ಗೆ ಇರುವ ಅರ್ಥ ಮತ್ತು ಪರಿಕಲ್ಪನೆಯನ್ನು ವಿಸ್ತಾರಗೊಳಿಸಬೇಕು. ಕನ್ನಡ ನಾಡಿನಲ್ಲಿ ವಾಸಿಸುವ ಎಲ್ಲರ ಭಾಷೆಯೂ ಕನ್ನಡವೇ. ಮನೆಯ ಒಳಗಡೆ ಯಾವ ಭಾಷೆಯಲ್ಲಿ ಬೇಕಾದರೂ ಮಾತನಾಡಿಕೊಳ್ಳಲಿ, ಆದರೆ ಹೊಸ್ತಿಲು ದಾಟಿ ಹೊರಬರುತ್ತಿದ್ದಂತೆ ಎಲ್ಲರ ಭಾಷೆಯೂ ಕನ್ನಡವಾಗಬೇಕು. ಸಂಭಾಷಣೆ, ವ್ಯಾಪಾರ, ವ್ವಹಾರ, ಆಡಳಿತ, ಶಿಕ್ಷಣ ಇವೆಲ್ಲ ಕನ್ನಡದಲ್ಲಿ ನಡೆಯಬೇಕು. ಇದನ್ನು ಕೇವಲ ಕರ್ನಾಟಕವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೇಳುತ್ತಿದ್ದರೂ ತಾತ್ವಿಕವಾಗಿ ಇದು ರಾಷ್ಟ್ರಕ್ಕೇ ಅನ್ವಯವಾಗಬೇಕಾದ ಭಾಷಿಕ ಸಿದ್ಧಾಂತ. ಆಯಾ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳೇ ಅಲ್ಲಿಯ ಮಾತೃಭಾಷೆ – ಎಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ಜಾರಿಗೊಳಿಸಬೇಕು. ಅದರಿಂದ ದೇಶದ ಎಲ್ಲ ರಾಜ್ಯಗಳ ಪ್ರಾದೇಶಿಕತೆಗೆ ಪಟ್ಟ ಕಟ್ಟಿದಂತೆ ಆಗುತ್ತದೆ. ಪ್ರಾದೇಶಿಕ ಭಾಷೆಗಳನ್ನು ಪುನರುಜ್ಜೀವಿಸಲು, ಸಪ್ರಾಣಿಸಲು ಇದು ಯೋಗ್ಯ ಉಪಕ್ರಮ. ಪ್ರಾದೇಶಿಕ ಭಾಷೆ ಮತ್ತು ಸಾಸ್ಕೃತಿಕ ಸೊಗಡನ್ನು ಉಳಿಸಿಕೊಂಡು ಶಿಕ್ಷಣ ಅರ್ಥಪೂರ್ಣವಾಗುತ್ತದೆ.
ನಾನು ಒತ್ತುಕೊಟ್ಟು ಅವಧಾರಣೆಯಿಂದ ಹೇಳುವುದಿಷ್ಟು: “ಪ್ರಾದೇಶಿಕ ಭಾಷೆಯಲ್ಲಿಯೇ ಸಿಕ್ಷಣ ನಡೆಯಬೇಕು” – ಎನ್ನುವ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಹೊರಡಿಸಬೇಕು. ಎಲ್ಲ ಅನುದಾನಿತ, ಅನುದಾನರಹಿತ ಖಾಸಗಿ ಶಿಕ್ಷಣಸಂಸ್ಥೆಗಳನ್ನು ಈ ಆಜ್ಞೆಯ ಪರಿಧಿಗೆ ಸೇರಿಸಬೇಕು. ಸಾಧ್ಯವಾದರೆ ರಾಷ್ಟ್ರೀಕರಣ ಮಾಡಿ ಏಕರೀತಿಯ ಶಿಕ್ಷಣ, ಏಕರೀತಿಯ ಶಿಕ್ಷಣ ಶುಲ್ಕಜಾರಿಗೆ ತರಬೇಕು. ಇಷ್ಟಾದರೆ ಆಯಾ ರಾಜ್ಯದ ಮಕ್ಕಳಿಗೆ ಆಯಾ ಪ್ರದೇಶದಲ್ಲಿ ಶಿಕ್ಷಣ, ಉದ್ಯೋಗ ಬಾಳ ಸುಲಭ ಸಾಧ್ಯವಾಗಿ ಈಡೇರುತ್ತದೆ.
ಎರಡನೆಯ ಮಹತ್ವದ ವಿಷಯವೆಂದರೆ ಸುವರ್ಣ ಕರ್ನಾಟಕದ ಈ ಸುಭ ಸಂಭ್ರಮಾಚರಣೆಯಲ್ಲಿ ಕರ್ನಾಟಕದಲ್ಲಿ ಒಂದು ಸೂಕ್ತ ಸ್ಮಾರಕ ನಿರ್‍ಮಾಣವಾಗಬೇಕು. ಇದಕ್ಕೆ ಮಹತ್ವದ ಕಾರಣವಿದೆ. ದಿನಾಕ ೦೧.೧೧.೧೯೫೬ರಂದು ಕರ್ನಾಟಕ ಏಕೀಕರಣಗೊಂಡ ಆ ಐತಿಹಾಸಿಕ ಘಟನೆಯನ್ನು ಅಂದಿನ ನಮ್ಮ ಭರತ ದೇಶದ ರಾಷ್ಟ್ರಾಧ್ಯಕ್ಷರಾಗಿದ್ದ ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದರು ಉದ್ಘಾಟಿಸಿದರು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ನಡೆದ ಆ ಸಂಭ್ರಮ ಸಮಾರಂಭದ ಮುಖ್ಯ ಅತಿಥಿಗಳಾಗಿ ಅಂದಿನ ಮೈಸೂರು ರಾಜ್ಯದ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ಆಗಮಿಸಿದ್ದರು. ಕಡಿದಾಳ್ ಮಂಜಪ್ಪನವರು ಹಾಗೂ ಎಸ್. ನಿಜಲಿಂಗಪ್ಪನವರು ಕಾರ್ಯಕ್ರಮದ ರೂವಾರಿಗಳಾಗಿದ್ದರು. ಸಹಸ್ರ ಸಹಸ್ರ ಸಂಖ್ಯೆಯ ಕನ್ನಡಿಗರು ಭಾಗವಹಿಸಿ ಸಡಗರದಿಂದ ಸಂಭ್ರಮಿಸಿದ ಮಹತ್ವದ ಸಮಾರಂಭ ಅದಾಗಿತ್ತು. ಆ ಐತಿಹಾಸಿಕ ಘಟನೆ ನಡೆದು ೫೦ ವರುಷಗಳಾಗುತ್ತಿವೆ. ಅದರ ನೆನಪಿಗಾಗಿ ಕರ್ನಾಟಕ ಸರ್ಕಾರ ಈ ಸುವರ್ಣ ಕರ್ನಾಟಕದ ಆಚರಣೆಯ ಸಂದರ್ಭದಲ್ಲಾದರೂ ಐತಿಹಾಸಿಕ ಮಹತ್ವದ ಸ್ಮಾರಕವನ್ನು ನಿರ್ಮಿಸಬೇಕು. ಬೆಂಗಳೂರಿನಲ್ಲಿ ಸೆಂಟ್ರಲ್ ಜೈಲ್ ಇದ್ದ ಜಾಗದಲ್ಲಿ ಈಗ ‘ಫ್ರೀಡಂ ಪಾರ್ಕ’ನ್ನು ನಿರ್ಮಾಣ ಮಾಡಲಾಗುತ್ತಿದೆ. ಆ ಪಾರ್ಕಿನಲ್ಲಿ ಈ ಸ್ಮಾರಕವನ್ನು ನಿರ್ಮಿಸಬಹುದು. ಬೆಂಗಳೂರಿನಲ್ಲಿ ಇದಕ್ಕಾಗಿ ಜಾಗದ ಸಮಸ್ಯೆಯೂ ಇಲ್ಲ. ಕರ್ನಾಟಕಕ್ಕೆ ಆಗಮಿಸಿದ ಪ್ರವಸಿಗರು ಕಡ್ಡಾಯವಾಗಿ ನೋಡಲೇಬೇಕಾದ ಒಂದು ಐತಿಹಾಸಿಕ ಪ್ರೇಕ್ಷಣೀಯ ಕುರುಹಾಗಿ ಈ ಸ್ಮಾರಕ ನಿಲ್ಲಬೇಕು.

ಹಸ್ತಂತರದ ಐತಿಹಾಸಿಕ ಕ್ಷಣಗಳನ್ನು ಇನ್ನು ವಿಳಂಬಿಸಲರೆ. ೭೧ನೆಯ ಸಮ್ಮೇಳನದ ಅಧ್ಯಕ್ಷ ಸ್ಥಾನದಲ್ಲಿ ಕೂಡಿಸಿ ಕನ್ನಡಿಗರು ವರ್ಷಿಸಿದ ಅಮೃತೋಪಮ ಪ್ರೀತಿಗೌರವಗಳಿಗೆ ನಾನು ಆಜನ್ಮವೂ ಋಣಿಯಾಗಿದ್ದೇನೆ. ಈ ನಾಡಿಗೆ, ನುಡಿಗೆ ಕೃತಜ್ಞತೆ ಹೇಳಿದರೂ ಅದು ಅಲ್ಲಿಗೆ ಮುಗಿಯುವುದಿಲ್ಲ. ಈ ಹಸ್ತಾಂತರವೆಂಬುದು ಕೂಡ ಸಾಂಕೇತಿಕ ಮಾತ್ರ. ಕನ್ನಡ ಕಟ್ಟುವ ಕೆಲಸಕ್ಕೆ ಆರಂಭವಿದೆಯೇ ಹೊರತು ಅಂತ್ಯ ಇಲ್ಲ. ಈ ಕೈಂಕರ್‍ಯಕ್ಕೆ ಕಂಕಣ ಕಟ್ಟಿದ ಮೇಲೆ ಅಲ್ಪವಿರಾಮ, ಅರ್ಧವಿರಾಮ ಬರಬಹುದೇ ಹೊರತು ಪೂರ್ಣ ವಿರಾಮ ಎಂಬುದಿಲ್ಲ. ನಾನು ಅಧ್ಯಕ್ಷೆ ಆಗುವ ಮೊದಲೂ ಕನ್ನಡವನ್ನು ನಂಬಿ ಬಾಳಿ ಬೆಳೆದವಳು. ಈ ಅಧ್ಯಕ್ಷ ಸ್ಥಾನವನ್ನು ಒಪ್ಪಿಸಿಕೊಟ್ಟ ಮೇಲೂ ಕನ್ನಡವೇ ಶರಣು. ಕರ್ನಾಟಕಕ್ಕೆ ನನ್ನಂಥವರು ಕೋಟಿಕೋಟಿ ಅಮೃತಪುತ್ರ ಪುತ್ರಿಯರಿದ್ದಾರೆ. ಆದರೆ ನನಗೆ ಕನ್ನಡ ಬಿಟ್ಟರೆ ಬೇರೆ ದಾರಿ ಇಲ್ಲ. ಇದೇ ಬೆಳಕಿನ ದಾರಿ. ಇದೇ ಅರಿವಿನ ಮನೆ.

ಕನ್ಡ ನುಡಿಯ ಪ್ರತೀಕವಾದ, ಕನ್ನಡಿಗರ ದ್ಯೋತಕವಾದ ಈ ಕನ್ನಡ ಬಾವುಟವನ್ನು ಹೊಸ ಅಧ್ಯಕ್ಷರಾದ ಶಾಂತರಸರಿಗೆ ಈ ಮಹಾಸಭೆಯ ಸಾಕ್ಷಿಯಾಗಿ ಒಪ್ಪಿಸುತ್ತಿದ್ದೇನೆ. ಈ ಶುಭಸಂದರ್ಭದಲ್ಲಿ ಹೇಳಬೇಕಾದ ಮಾತೆಂದರೆ – “ಶಾಂತರಸರೇ, ನಿಮ್ಮ ಕನ್ನಡಪರ ನಿಲುವುಗಳಿಗೆ ನಿಮ್ಮೊಂದಿಗೆ ಸಾಹಿತ್ಯ ಪರಿಷತ್ತು, ಸಮ್ಮೇಳನದ ಮತ್ತು ಪರಿಷತ್ತಿನ ಹಿಂದಿನ ಅಧ್ಯಕ್ಷರು ಮತ್ತು ಸಮಸ್ತ ಕನ್ನಡಿಗರು ಜತೆಗಿದ್ದಾರೆ, ನಿಮಗೆ ಎಲ್ಲ ಒಳಿತನ್ನೂ ಹಾರೈಸುತ್ತಿದ್ದಾರೆ”. ಇದಿಗೊ ಸ್ವೀಕರಿಸಿ ಈ ಬಾವುಟವನ್ನು. ಇದು ಬರಿಯ ಬವುಟವಲ್ಲ, ಕನ್ನಡದ ಬವುಟ, ಸಮರ್ಥರು ಹಿಡಿದಾಗ ಹಾರುವುದು ಪಟಪಟ : ಏರಿಸಿ ಹಾರಿಸಿ ಕನ್ನಡ ಬಾವುಟ !


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.