ಕಥೆ ಆಯಿತೇ ಅಣ್ಣ, ಬಹಳ ಸಣ್ಣ
ಕಥೆಯ ಮೈಗಿಂತ ಮಿಗಿಲದರ ಬಣ್ಣ
-ದ.ರಾ.ಬೇಂದ್ರೆ(‘ಕನಸಿನ ಕಥೆ’ ಕವನದಲ್ಲಿ)
ಬೇಂದ್ರೆ, ಮುಖ್ಯವಾಗಿ, ಪ್ರಜ್ಞೆಯ ವಿವಿಧ ಅವಸ್ಥೆಗಳನ್ನು ಕನ್ನಡದಲ್ಲಿ ಅನನ್ಯವೆಂಬಂತೆ ಸೃಷ್ಟಿಸಿರುವ ಕವಿ -ಡಾ|| ಯು.ಆರ್ ಅನಂತಮೂರ್ತಿ (‘ಪೂರ್ವಾಪರ’ ಸಂಕಲನದಲ್ಲಿ)
ದಿವಂಗತ ದತ್ತಾತ್ರೇಯ ರಾಮಚಂದ್ರ ಬೇಂದ್ರೆ (ಅಂಬಿಕಾತನಯದತ್ತ) ಅವರ ‘ನಾದಲೀಲೆ’ ಕವನ ಸಂಕಲನದ ಪ್ರಥಮ ಪ್ರಕಟಣೆ ಇಂದಿಗೆ ೬೪ ವರುಷಗಳ ಹಿಂದೆ, ೧೯೩೮ನೇ ಇಸವಿಯಲ್ಲಿ, ಮಾಸ್ತಿಯವರ ಮುನ್ನುಡಿಯೊಂದಿಗೆ. ಅವರ ‘ನಾದಲೀಲೆ’ ಎಂಬ ಕವನ ನಿಖರವಾಗಿ ಪ್ರಕಟವಾದ ವರುಷ ನನಗೆ ತಿಳಿದಿಲ್ಲ. ಆದರೆ ೨೦೦೨ನೇ ಇಸವಿಯಲ್ಲಿ ವೈಯಕ್ತಿಕವಾದೊಂದು ಸಂದರ್ಭದಲ್ಲಿ ನನ್ನ ವಿಚಾರದ, ಭಾವದ ಭಾಗವಾಗಿ ‘ನಾದಲೀಲೆ’ ಕವನ ನನ್ನೊಳಗೆ ಜೀವ ತಳೆಯಿತು. ಆಗ ಬೇಂದ್ರೆಯವರ ‘ನಾದಲೀಲೆ’ ಕವನವನ್ನು ಸಾವು-ಜೀವದ ಆಟದಂತೆ ಪರಿಭಾವಿಸಿದ ನನ್ನ ಖಾಸಗಿ ಕಾವ್ಯಾನುಭವವನ್ನು ಹಂಚಿಕೊಳ್ಳುವುದೇ ಈ ಬರಹದ ಉದ್ದೇಶ. ಬೇಂದ್ರೆಯವರ ‘ನಾದಲೀಲೆ’ ಕವನದ ಪಠ್ಯ ಹೀಗಿದೆ:
೧
ಕೋಲು ಸಖೀ, ಚಂದ್ರಮುಖೀ, ಕೋಲೆ ನಾದಲೀಲೆ ||ಪ||
ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ
ತರಳ ತರಳೆ, ಚಿಗುರ ಚಿಗುರೆ ಹೂವು ಹೂವು ಹುಲ್ಲೆ
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ
ಮುಂಜಾವದ ಎಲರ ಮೂಸಿ ನೋಡುತಿಹವೆ ನಲ್ಲೆ
ಕೋಲು ಸಖೀ…..
೨
ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ,
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ
ಬೀರುತಿರುವ ಪ್ರಾಣವಾಯು ಹೀರುತಿಹವೆ ನೀರೆ
ಕೋಲು ಸಖೀ…..
೩
ಬೆಳ್ಳಿ ಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ; ಬಾಲೆ
ಮುಕುಲ, ಅಲರು, ಮಲರು, ಪಸರ ಕಂಡು ಕಣ್ಣು ಸೋಲೆ
ಕಂಗೊಳಿಸುವ ಕೆಂಪು ಮುಂದೆ, ಕಂಗೆಡಿಸುವ ಮಂಜು ಹಿಂದೆ
ಕಾದಲನೆಡೆ ಬೇಡ, ಬಹಳು, ಕಾದಲೆ ಹೂಮಾಲೆ!
ಬೆಳ್ಳಿ ಚುಕ್ಕೆ ಚಿಕ್ಕೆಯಾಗಿ ಮುಳುಗಿತಲ್ಲೆ ಬಾಲೆ
ಕೋಲು ಸಖೀ…..
೪
ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ
ಮುಗಿಲಬಾಯ ಗಾಳಿಕೊಳಲ ಬೆಳಕ ಹಾಡ ಬೀರಿ
(ಕಂಗೊಳಿಸುವ ಕೆಂಪು ಇರಲಿ, ಕಂಗೆಡಿಸುವ ಮಂಜು ಬರಲಿ)
ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ, ನಾರಿ
ಕೋಲು ಸಖೀ…..
ಈ ಓದಿನ ಬಳಿಕ ನನ್ನ ಖಾಸಗಿ ಅನುಭವದ ಹಿನ್ನೆಲೆ ಹೇಳಬೇಕು. ಅದು ಜೀವನವನ್ನು ಅಪಾಯಕ್ಕೆ ಒಡ್ಡಿದ ಒಂದು ಆಕಸ್ಮಿಕ ಅನಾರೋಗ್ಯದ ವಿಚಾರ.
ಕಳೆದ ತಿಂಗಳು (ಜುಲಾಯಿ ೨೦೦೨) ದೇಹದ ಚೈತನ್ಯವನ್ನು ಹಿಂಡಿ ಹಿಪ್ಪೆ ಮಾಡಿದ ನಾಲ್ಕು ದಿನಗಳ ವಿಪರೀತ ಜ್ವರ ಬಂತು. ತಜ್ಞ ವೈದ್ಯರು ವೈರಲ್ ಜ್ವರ ಎಂದು ಔಷಧಿ ನೀಡಿದರು. ಐದನೇ ದಿನ ರಾತ್ರೆ ನನ್ನನ್ನು ಪರೀಕ್ಷಿಸಲು ನಿತ್ಯ ಮನೆಗೆ ಬರುತ್ತಿದ್ದ ಚರ್ಮರೋಗ ತಜ್ಞನಾದ ನನ್ನ ಹೆಂಡತಿಯ ತಮ್ಮ ನನ್ನ ಮೈಯಲ್ಲಿ ಪುಟ್ಟ ರಕ್ತನಾಳಗಳು ಅಲ್ಲಲ್ಲಿ ಒಡೆದು ಚರ್ಮದಲ್ಲಿ ರಕ್ತ ಮೆಲ್ಲಗೆ ಒಸರುವುದನ್ನು ಗಮನಿಸಿ, ಅದಕ್ಕೆ ತಕ್ಷಣ ಚಿಕಿತ್ಸೆಯ ಅಗತ್ಯವಿದೆಯೆಂದು ರಾತ್ರೆ ಹನ್ನೊಂದು ಗಂಟೆಗೆ, ತಕ್ಷಣ ಬಂದ ನನ್ನ ತಮ್ಮನ ಕಾರಲ್ಲಿ ಕೊಂಡೊಯ್ದು, ನನ್ನನ್ನು ಬೆಂಗಳೂರಿನ ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗಕ್ಕೆ ಸೇರಿಸಿದ. ಮುಂದಿನ ಎರಡು ವಾರಗಳ ಕಾಲ ನಾನು ಅಲ್ಲಿದ್ದೆ.
ರಕ್ತವನ್ನು ಹೆಪ್ಪುಗಟ್ಟಿಸಲು ನೆತ್ತರಿನೊಳಗೆ ಹದಿಮೂರು ಪರಿಕರಗಳಿವೆ. ಈ ಹದಿಮೂರು ಅಂಶಗಳಿಗೆ ನಾಯಕ ಪ್ಲೇಟ್‌ಲೆಟ್(ಠಿಟಚಿಣeಟeಣ)ಎಂಬ ರಕ್ತಕಣ. ಇದು ಬಿಳಿ, ಕೆಂಪು ರಕ್ತಕಣಗಳಂತೆ ರಕ್ತದಲ್ಲಿ ಇರಬೇಕಾದ ಅಂಶ. ಈ ಪ್ಲೇಟ್‌ಲೆಟ್ ಕಣಗಳ ಆಜ್ಞೆಯಂತೆ ಇತರ ಹನ್ನೆರಡು ಅಂಶಗಳೂ ಸೇರಿ ಗಾಯಗೊಂಡಾಗ ರಕ್ತ ಹೆಪ್ಪುಗತ್ಟುತ್ತದೆ. ಗಾಯದಿಂದ ರಕ್ತಸೋರುವುದು ನಿಲ್ಲುತ್ತದೆ. ದೇಹದ ಒಳಗೆ ಹೃದಯದ ಪ್ರತಿ ಬಡಿತಕ್ಕೂ ಚಲಿಸುವ ರಕ್ತದ ನಿರಂತರ ಚಲನೆ ಇದೆ. ದೇಹದೊಳಗೆ ರಕ್ತಹರಿಯುವಾಗ ಅಲ್ಲಲ್ಲಿ ಸಣ್ಣಪುಟ್ಟ ಸಹಜ ರಕ್ತಸ್ರಾವಗಳಾಗುತ್ತಾ ಇರುತ್ತವೆ. ಆ ಸ್ರಾವವನ್ನು ಈ ಪ್ಲೇಟ್‌ಲೆಟ್ ಕಣಗಳು ಸ್ವಾಭಾವಿಕವಾಗಿ ತಡೆಹಿಡಿದು ಸರಿಪಡಿಸುತ್ತವೆ. ಹೀಗೆ ನೆತ್ತರು ಕಟ್ಟಿಸಲು ರಕ್ತದ ಒಂದು ಅಳತೆಯಲ್ಲಿ ಪ್ಲೇಟ್‌ಲೆಟ್ ಕಣಗಳು ಕನಿಷ್ಠ ಒಂದೂವರೆ ಲಕ್ಷ ಇರಬೇಕು. ಆ ಸಂದರ್ಭದಲ್ಲಿ ಈ ಕಣಗಳು ನನ್ನ ರಕ್ತದಲ್ಲಿ ಕೇವಲ ಸಾವಿರದ ಇನ್ನೂರಕ್ಕೆ ಇಳಿದು ದೇಹದ ಒಳಗೆ ಎಲ್ಲಿ ಬೇಕಾದರೂ(ಮೆದುಳು, ಎದೆ, ಹೊಟ್ಟೆ, ಕರುಳು, ಮೂತ್ರಕೋಶ ಇತ್ಯಾದಿ)ರಕ್ತಸ್ರಾವ ಉಂಟಾಗಿ ಯಾವ ಕ್ಷಣದಲ್ಲೂ ಜೀವಕ್ಕೂ ಅಪಾಯವಾಗಬಲ್ಲ ಬೆದರಿಕೆ ಒಡ್ಡಿತ್ತು.
ಒಡನೆಯೇ, ಬೆಂಗಳೂರಿನಲ್ಲೇ ಇರುವ ನನ್ನ ಸಹೋದರನ ರಕ್ತದಿಂದ ಪ್ಲೇಟ್‌ಲೆಟ್ ಕಣಗಳನ್ನು ತೆಗೆದು ನನ್ನ ದೇಹಕ್ಕೆ ಸೇರಿಸಲಾಯಿತು. ದೂರದ ಊರಿನಲ್ಲಿದ್ದ ನನ್ನ ಇನ್ನೊಬ್ಬ ತಮ್ಮ ತಕ್ಷಣ ಹೊರಟು ರಕ್ತಕಣಗಳನ್ನು ನೀಡಬಲ್ಲ ನನ್ನ ಕುಟುಂಬದವರನ್ನು ಕಾರಲ್ಲಿ ತುಂಬಿಕೊಂಡು ಬೆಂಗಳೂರು ತಲುಪಿದ. ಸಹೋದರನ ರಕ್ತದಿಂದ ಮೊದಲು ನೀಡಿದ್ದ ಪ್ಲೇಟ್‌ಲೆಟ್ ಕಣಗಳು ನನ್ನ ದೇಹದೊಳಗೆ ಸಾಯತೊಡಗಿದವು. ರಕ್ತಕಣಗಳ ಸಂಖ್ಯೆ ಹೀಗೇಕೆ ಇಳಿಯುತ್ತಿವೆ ಎಂದು ಪರೀಕ್ಷಿಸಲು ಸೊಂಟದ ಒಂದು ಎಲುಬನ್ನು ಚುಚ್ಚಿ ಅದರ ಟೊಳ್ಳಿನ ಒಳಗಿನ ಮಜ್ಜೆಯನ್ನು(ಃoಟಿe ಒಚಿಡಿಡಿoತಿ)ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಬೇಕಾದ ರಕ್ತಕಣಗಳು ಉತ್ಪತ್ತಿಯಾಗುತ್ತಿವೆಯೇ? ಅಥವಾ ರಕ್ತದ ಕ್ಯಾನ್ಸರ್ ಏನಾದರೂ ಇದೆಯೇ ಎಂಬುದನ್ನು ತಿಳಿಯುವುದು ಉದ್ದೇಶ.
ಎರಡನೇ ಸಲ ನನ್ನ ಇನ್ನೊಬ್ಬ ತಮ್ಮನ ದೇಹದಿಂದ ರಕ್ತಕಣಗಳನ್ನು ತೆಗೆದು ನೀಡುವುದೆಂದು ನಿರ್ಧರಿಸಲಾಯಿತು. ಆ ಸಂದರ್ಭದಲ್ಲಿ ನನಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ಮುಖ್ಯ ವೈದ್ಯರು ನನ್ನ ಬಳಿ ಬಂದು, ಪುನಃ ನೀಡುವ ರಕ್ತಕಣಗಳನ್ನು ರಕ್ಷಿಸಲು ಕೆಲವು ಗಂಭೀರ ಔಷಧಿಗಳನ್ನು ನೀಡುವುದಾಗಿ ಹೇಳಿ, ಭಾರತದಲ್ಲಿ ಸಾಧ್ಯವಿರುವ ಅತ್ಯುತ್ತಮ ಚಿಕಿತ್ಸೆ ನೀಡಿ ಪ್ರಯತ್ನಿಸುತ್ತೇವೆ; ಸಹಾಯಕ್ಕಾಗಿ ದೇವರನ್ನೂ ಪ್ರಾರ್ಥಿಸೋಣ; ಶಾಂತಚಿತ್ತರಾಗಿ-ಎಂದು, ನಾನು ಉದ್ವೇಗಗೊಳ್ಳಬಾರದೆಂದು ಸೂಚಿಸಿದರು. (ಉದ್ವೇಗಗೊಂಡರೆ ರಕ್ತದ ಒತ್ತಡ ಏರುಪೇರಾಗಿ ರಕ್ತಸ್ರಾವವಾಗುವ ಅಪಾಯ.) ಪ್ರತಿ ಗಂಟೆಗೂ ನಿಖರವಾದ ರಕ್ತದ ಒತ್ತಡ ದಾಖಲು ಇಡುವಂತೆ ತಿಳಿಸಿದರು.
ಸದಾ ನನ್ನ ಬಳಿಯೇ ಇದ್ದ ಸ್ವತಃ ತಜ್ಞ ವೈದ್ಯರಾದ ನನ್ನ ತಮ್ಮ, ನನ್ನ ಹೆಂಡತಿಯ ತಮ್ಮ ಹಾಗೂ ಅಣ್ಣ ಎಲ್ಲರಲ್ಲೂ ಆತಂಕ, ಚಿಂತೆ. ಮನೆ ಮಂದಿಯೇ ಆದ ತಜ್ಞ ಡಾಕ್ಟರುಗಳ ಆತಂಕ ಕಂಡು ಕುಟುಂಬದ ಇತರರೂ ಮನಸ್ಸಿನೊಳಗೆ ಕಂಗಾಲಾಗಿಬಿಟ್ಟಿದ್ದರು. ಮಲಗಿದ್ದಾಗ ಮಂಚತಾಕಿಯೋ, ಬಚ್ಚಲಿಗೆ ಹೋಗುವಾಗ ಗೋಡೆ ಏನಾದರೂ ತಗುಲಿ ತಲೆಯೊಳಗೆ ಪುಟ್ಟ ನರ ಅದುರಿ ರಕ್ತಸ್ರಾವವಾದರೂ ಅಪಾಯ ಎಂದು ಹಗಲಿರುಳೂ ಜಾಗ್ರತೆ. ಬ್ಲೆಡು ತಾಗಬಹುದದ್ದರಿಂದ ಗಡ್ಡ ತೆಗೆಯಬೇಡಿ, ಬ್ರಶ್ ತಾಗಬಹುದಾದ್ದರಿಂದ ಹಲ್ಲು ಉಜ್ಜಬೇಡಿ-ಹೀಗೆ ರಕ್ತಸ್ರಾವ ಆಗದ ಹಾಗೆ ಸಕಲ ಮುಂಜಾಗರೂಕತೆಗಳು.
ಇದರ ನಡುವೆ ನಾನು ಕೆಲಸ ಮಾಡುವ ಕಂಪೆನಿಯ ಅಧಿಕಾರಿಗಳು ಬಂದು ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರು, ಮದ್ರಾಸು ಅಥವಾ ಬೊಂಬಾಯಿಗೆ ಏರ್‌ಲಿಫ್ಟ್ ಮಾಡಬೇಕೆ ಎಂದು ವಿಚಾರಿಸಹತ್ತಿದರು. ಆಸ್ಪತ್ರೆಗೆ ಎಷ್ಟೇ ಖರ್ಚಾದರೂ ಭರಿಸುವ ಪತ್ರ ಕಳುಹಿಸಿದರು. ಅಮೆರಿಕದಲ್ಲಿದ್ದ ನನ್ನ ಮೇಲಧಿಕಾರಿ ಫೋನುಮಾಡಿ ಯಾವುದಕ್ಕೂ ಚಿಂತೆ ಬೇಡ ಎಂದರು. ಅವರ ಪರವಾಗಿ ಇನ್ನೊಬ್ಬ ಅಧಿಕಾರಿ ಬಂದು ನಾನು ಕೆಲಸ ಮಾಡುವ ಕಂಪೆನಿ ಅವಶ್ಯಕತೆ ಇದ್ದರೆ ವಿಶೇಷ ಸಂದರ್ಭದಲ್ಲಿ ಹೆಚ್ಚಿನ ಹಣವನ್ನು ಚಿಕಿತ್ಸೆಗಾಗಿ ಖರ್ಚುಮಾಡಬಲ್ಲದೆಂದೂ, ಭಾರತದಲ್ಲಾಗಲೀ ಎಲ್ಲೇ ಆಗಲೀ ಸರಿಯಾದ ಚಿಕಿತ್ಸೆಯಾಗುವಲ್ಲಿಗೆ ಒಯ್ಯಬಹುದೆಂದು ಸೂಚಿಸಿದರು. ಇಂಗ್ಲೆಂಡಿನಲ್ಲಿ ರಕ್ತದ ಕ್ಯಾನ್ಸರಿಗೆ ಉತ್ತಮ ಚಿಕಿತ್ಸೆ ಇದೆಯಾದ್ದರಿಂದ ವೆಚ್ಚದ ಬಗ್ಗೆ ಚಿಂತೆ ಬೇಡ ಎಂಬುದನ್ನು ಪರೋಕ್ಷವಾಗಿ ಸೂಚಿಸುವುದು ಅವರ ಉದ್ದೇಶ. ಹದಗೆಟ್ಟ ನನ್ನ ರಕ್ತದ ಆರೋಗ್ಯ, ಆತಂಕಗೊಂಡ ವೈದ್ಯರು, ಆಕಸ್ಮಿಕ ಆಘಾತದಿಂದ ತತ್ತರಗೊಂಡ ಕುಟುಂಬ, ಅದರ ಜೊತೆ ಎಷ್ಟು ಖರ್ಚಾದರೂ ಪರವಾಗಿಲ್ಲ, ಎಲ್ಲಿ ಬೇಕಾದರೂ ಚಿಕಿತ್ಸೆ ಮಾಡಿಸೋಣ ಎಂಬ ಸದಾಶಯದ ಕಂಪೆನಿ ಅಧಿಕಾರಿಗಳು-ಇವೆಲ್ಲಾ ಒಟ್ಟು ಸೇರಿ ಜೀವಕ್ಕೆ ಅಪಾಯ ಬಂದರೂ ಬರಬಹುದು ಎಂಬುದನ್ನು ಅರಿವಿಗೆ ತರುವ ಒಂದು ವಾತಾವರಣ ಸೃಷ್ಟಿಸಿತ್ತು. ಇಂತಹ ಸಂದರ್ಭದಲ್ಲಿ ಸಹಜವಾಗಿ ಮೃತ್ಯುಪ್ರಜ್ಞೆ ತಿಳಿವಿಗೆ ಬರುತ್ತದೆ.
ಇದರ ನಡುವೆ ಸೊಂಟದ ಎಲುಬು ಚುಚ್ಚಿ ಮಜ್ಜೆ ತೆಗೆಯಲು ನೀಡಿದ ಅರೆ ಅರಿವಳಿಕೆ ಚುಚ್ಚುಮದ್ದಿನಿಂದಾಗಿ ಅರ್ಧ ನಿದ್ರೆ ಎಚ್ಚರದ ಜೋಂಪು. ಪ್ರಾಣಕ್ಕೂ ಅಪಾಯವಾಗಬಲ್ಲ ಸಾದ್ಯತೆ ಇದೆ. ಎಂಬ ಇಂತಹ ಒಂದು ವಾತಾವರಣದಲ್ಲಿ-ನಿದ್ರೆ-ಎಚ್ಚರಗಳ ನನ್ನ ಸ್ಥಿತಿಯಲ್ಲಿ ‘ಅತ್ತಣಿಂದ ಬೇಟೆಗಾರ ಬರುವ ನಾನು ಬಲ್ಲೆ’ ಎಂಬ ಕವಿ ಬೇಂದ್ರೆಯ ಬೇಟೆಗಾರನ ಅರಿವು ಹಾಗೂ ಅದನ್ನು ಕಾವ್ಯನಾಯಕ ಮೀರುವ ಕ್ರಮ ಹೇಗೋ ನನ್ನ ಪ್ರಜ್ಞೆಯೊಳಗೆ ಮೂಡಿಬಂತು.
ಸುತ್ತಲೂ ಕುಟುಂಬದವರು, ಬಂಧು ಬಳಗದವರು, ಸ್ನೇಹಿತರು, ಸಹೋದ್ಯೋಗಿಗಳು ಹೇಗೋ ಸುದ್ದಿ ತಿಳಿದು ಫೋನು ಮಾಡುತ್ತಿದ್ದ ಪರಿಚಿತರು! ಎಲ್ಲರ ನಿರಂತರ ಪ್ರೀತಿ ಹಾಗೂ ಬೇಗನೆ ಗುಣಮುಖವಾಗಲೆಂಬ ಹಾರೈಕೆ. ನನ್ನೊಳಗೆ ‘ಬೇಟೆಯಲ್ಲ; ಆಟವೆಲ್ಲ; ಬೇಟದ ಬಗೆ ನಾರಿ’ ಎಂಬ ಸಾವನ್ನು ಮೀರಿ ಜೀವನ ಸೌಂದರ್ಯದ ಉತ್ಕಟತೆಯನ್ನು ಹೇಳುವ ಬೇಂದ್ರೆ ಸಾಲುಗಳು.
ಆಸ್ವತ್ರೆಗೆ ಸೇರಿದ ಐದನೇ ದಿನ ನಾನು ಸಂಪೂರ್ಣ ಪ್ರಾಣಾಪಾಯದಿಂದ ಪಾರಾಗಿರುವುದಾಗಿಯೂ ಇನ್ನೇನೂ ಭಯವಿಲ್ಲವೆಂದೂ ಮತ್ತೊಂದಷ್ಟು ದಿನ ಆಸ್ಪತ್ರೆಯಲ್ಲಿರಬೇಕಾಗಬಹುದೆಂದು ಆಸ್ಪತ್ರೆಯ ವೈದ್ಯರುಗಳು ತಿಳಿಸಿದರು. ಸುತ್ತಲ್ಲಿದ್ದ ದುಗುಡ ಮಾಯವಾಗಿ ಮನೆಯವರೆಲ್ಲರ ಮುಖದಲ್ಲಿ ನಗೆ ಅರಳಿತು. ಹೀಗೆ ನಾನು ವೈದ್ಯರು ತಿಳಿದಂತೆ ಸಾವಿನ ಅಪಾಯದ ಮುಖಾಮುಖಿಯಲ್ಲಿದ್ದಾಗ ಬೇಂದ್ರೆಯವರ ‘ನಾದಲೀಲೆ’ ನನ್ನ ಅಂತರಂಗ ಪ್ರಜ್ಞೆಯಲ್ಲಿ ಹೇಗೆ ಒದಗಿಬಂತು ಎಂಬುದನ್ನು ನನಗೆ ನಾನೇ ಈಗ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾ ಆ ಅನುಭವ ರೂಪತಳೆದ ಕ್ರಮದಲ್ಲೇ ಆದಷ್ಟು ದಾಖಲಿಸುವ ಪ್ರಯತ್ನ ಮಾಡುತ್ತಿದ್ದೇನೆ.
*
*
*
ಬೇಂದ್ರೆಯವರ ಈ ಬೇಟೆಗಾರ ನನ್ನ ಗಮನ ಸೆಳೆದದ್ದು ಸುಮಾರು ೨೪ ವರುಷಗಳ ಹಿಂದೆ. ಆಗ ನಾನು ಮೈಸೂರಿನಲ್ಲಿ ವಿದ್ಯಾರ್ಥಿಯಾಗಿದ್ದೆ. ಒಂದು ಸಂಜೆ, ಕನ್ನಡ ವಿಮರ್ಶಕ ಜಿ.ಎಚ್.ನಾಯಕರ ಮನೆಯಲ್ಲಿ ಮೀರಕ್ಕ ಕೊಟ್ಟ ತಿಂಡಿ ತಿನ್ನುತ್ತ ಹರಟುತ್ತಿದ್ದಾಗ ‘ನಾದಲೀಲೆ’ ಕವನದ ಬಗ್ಗೆ ಯಾಕೋ ಮಾತು ಬಂತು. ನಾಯಕರು “ನೋಡ್ರಿ ಬೇಂದ್ರೆಯ ಪ್ರಜ್ಞಾವಲಯ; ಅತ್ತಣಿಂದ ಬೇಟೆಗಾರ ಯಾವಾಗ ಬೇಕಾದರೂ ಬರಲೂ ಬಹುದು. ಅದು ಡೆತ್
(ಆeಚಿಣh). ಆ ಸಾವಿನ ಜೊತೆ ಈ ಎಲ್ಲಾ ಜೀವಕ್ರಿಯೆಗಳು. ಇದು ಬಹಳ ಸಂಕೀರ್ಣವಾದ ಅರಿವು. ನನ್ನ ಲೆಕ್ಕದಲ್ಲಿ ಬೇಂದ್ರೆಯ ಅತ್ಯುತ್ತಮ ಕವನಗಳಲ್ಲಿ ಒಂದು’ ’ ಎಂಬ ಅರ್ಥದ ಮಾತುಗಳನ್ನು ಹೇಳಿದರು. ( ಆ ಬಳಿಕ ಜಿ.ಎಚ್. ನಾಯಕರು ಸಂಪಾದಿಸಿ, ಸಾಹಿತ್ಯ ಪರಿಷತ್ತು ಪ್ರಕಟಿಸಿದ ‘ಹೊಸಗನ್ನಡ ಕವಿತೆ’ ಎಂಬ ಅಂಥಾಲಜಿಯಲ್ಲಿ ‘ನಾದಲೀಲೆ’ ಕವನ ಸೇರಿದೆ.) ಅಂದಿನಿಂದ ‘ನಾದಲೀಲೆ’ ಜೀವನ ಸಮೃದ್ಧಿ, ಕೋಲಾಟದ ಉತ್ಸಾಹ, ಉಲ್ಲಾಸ, ಹೂವು, ಹುಲ್ಲು, ತಂಗಾಳಿಯ ಬೆಳಗಿನ ಬೆಳಕಿನಲ್ಲಿ ಸಮೃದ್ಧಿಯ ಪ್ರಾಣವಾಯು ಹೀರುವ ತರಳ ಎರಳೆಯ ಹಿಂದೆ ಅತ್ತಣಿಂದ ಬರಬಹುದಾದ ಬೇಟೆಗಾರ ನನ್ನ ನೆನಪಿನಲ್ಲಿ ಶಾಶ್ವತವಾಗಿ ಉಳಿದು ಹೋದ.
ಆಸ್ಪತ್ರೆಯಲ್ಲಿ ಎಲುಬು ಚುಚ್ಚಲು ನೀಡಿದ ಅರಿವಳಿಕೆಯ ಅರೆ ಎಚ್ಚರ ನಿದ್ರೆಯ ಜೊಂಪಿನಲ್ಲಿ, ಈ ಬೇಟೆಗಾರ ಹೇಗಿರುತ್ತಾನೆ ಎಂದು ಕಾಣಲು ನಾನು ಪ್ರಯತ್ನಿಸುತ್ತಿದ್ದೆ. ಅವನು ಕೇವಲ ಮೃತ್ಯು ಆಗಿರಬಹುದೆ ಎಂಬ ಯೋಚನೆ. ಮೃತ್ಯು ಎಂದರೆ ಒಂದು ಶಬ್ದ. ಭಾಷೆಯೊಂದರ ಪದಕ್ಕಿಂತ ಆಚೆ ಅದು ಏನು? ಹಾಗಾದರೆ ಸಾಯುವುದೆ? ಅಂದರೆ ಏನು? ಅದು ಹೇಗಿರುತ್ತದೆ? ಅದು ಜೀವ ನಿಲ್ಲುವಾಗ ಏನೂ ಇಲ್ಲದಂತಾಗುವ ಕತ್ತಲು ಇರಬಹುದೆ ಎಂಬ ಸಂಶಯ.
ಆ ಕತ್ತಲಿನ ಕಲ್ಪನೆಯಲ್ಲಿ ನನ್ನ ನೆನಪಿಗೆ ಬಂದುದು ದಶಕಗಳ ಹಿಂದೆ ನಾನು ನೋಡಿದ ಬರ್ಗ್‌ಮನ್‌ನ‘ಸೆವೆನ್ತ್ ಸೀಲ್’ ಸಿನಿಮಾದ ಒಂದು ದೃಶ್ಯ. ಅದರಲ್ಲಿ, ಸಮುದ್ರದ ಅಲೆಗಳ ನಿರಂತರ ಚಲನೆಯ ಹಿನ್ನೆಲೆಯಲ್ಲಿ ನಾಯಕನೊಡನೆ ಚೆಸ್ ಆಟದ ದೊಡ್ಡ ಮ್ಯಾಟ್‌ನಲ್ಲಿ ಡೆತ್ (ಆeಚಿಣh)ನಿರಂತರವಾಗಿ ಚದುರಂಗ ಆಡುತ್ತಾ ಇರುತ್ತದೆ. ಅವರು ಒಬ್ಬರನ್ನೊಬ್ಬರು ಸೋಲಿಸುವ ಪ್ರಯತ್ನದಲ್ಲಿದ್ದಾರೆ. ಆ ಚದುರಂಗ ಆಡುವ ಮೃತ್ಯುವಿಗೆ ಇಡೀ ದೇಹದ ಹಾಗೂ ತಲೆಯ ಹಿಂಭಾಗವನ್ನು ಮುಚ್ಚುವ ಕಪ್ಪಗಿನ ದೊಡ್ಡ ದೊಗಲೆ ಕೋಟಿನಂತಹ ಒಂದು ಡ್ರೆಸ್.
ಆದರೆ, ‘ನಾದಲೀಲೆ’ ಯ ಬೇಟೆಗಾರ ಕಪ್ಪಗಿನ ಕಾಸ್ಟ್ಯೂಮಿನವನಲ್ಲ ಅನಿಸುತ್ತಿತ್ತು. ಆ ಬೇಟೆಗಾರನ ಬಗ್ಗೆ ಯೋಚಿಸುವಾಗ ನಾನು ಪ್ರಾಥಮಿಕ ಶಾಲೆಯಲ್ಲಿ ನನ್ನ ಹಳ್ಳಿಯಲ್ಲಿ ಓದುತ್ತಿದ್ದಾಗ ಸ್ಕೂಲ್‌ಡೇಯಲ್ಲಿ ನೋಡಿದ ಬೇಟೆಗಾರನ ನೃತ್ಯದ ಒಂದು ನೆನಪು ಮೂಡಿತು. ಅದರಲ್ಲಿ ಸ್ಕೂಲಿನ ರಂಗಮಂದಿರದಲ್ಲಿ ಹಾಕಿದ ಕಾಡಿನ ಚಿತ್ರದ ಹಿನ್ನೆಲೆಯಲ್ಲಿ ಒಬ್ಬ ಬೇಟೆಗಾರ ನೃತ್ಯ ಮಾಡುತ್ತಾ ಬಂದಿದ್ದ. ಅವನ ಕೈಯಲ್ಲಿ ಬಿಲ್ಲು, ತಲೆಗೆ ಗರಿ, ಮೈಗೆ ಚಿರತೆ ಬಣ್ಣದ ಬಟ್ಟೆ. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿಯುವ ಬೇಟೆಗಾರ. ‘ನಾದಲೀಲೆ’ ಯಲ್ಲೂ ಕೋಲಾಟದ ಕುಣಿತ.
ಈ ನೃತ್ಯದ ಬೇಟೆಗಾರ ಮನಸ್ಸಿಗೆ ಬಂದೊಡನೆ ಬರ್ಗ್‌ಮನ್‌ನ‘ಡೆತ್’ ನನ್ನೊಳಗಿನಿಂದ ಮಾಯವಾದ. ನನಗನ್ನಿಸಿದ್ದು, ಬರ್ಗ್‌ಮನ್‌ನ ‘ಡೆತ್’ ನಾಯಕನನ್ನು ಸೋಲಿಸುವ ಚದುರಂಗದ ಆಟದಲ್ಲಿದ್ದಾನೆ. ತೆರೆಗಳು ಚಲಿಸುವ ಕಾಲ ಇರಬಹುದು. ಬೇಂದ್ರೆಯ ಬೇಟೆಗಾರ ಅತ್ತಣಿಂದಲೂ ಕುಣಿಯುತ್ತಲೇ ಬರಬೇಕಷ್ಟೇ. ಯಾಕೆಂದರೆ ‘ಕೋಲು ಸಖೀ ಚಂದ್ರಮುಖೀ’ ಎಂದು ಕೋಲಾಟದ ಕುಣಿತದಲ್ಲಿ ಕಾವ್ಯನಾಯಕ ಇದ್ದಾನೆ. ಈ ಕೋಲಾಟದ ಕುಣಿತ ಇರುವುದರಿಂದ ಅತ್ತಣಿಂದ ಆಕಸ್ಮಿಕವಾಗಿ ಬರಬಹುದಾದವನಾದರೂ ಅವನ ಪ್ರವೇಶ ಕುಣಿಯದೆ ಹೇಗೆ ಸಾಧ್ಯ? ಹಾಗಾಗಿ, ಬರ್ಗ್‌ಮನ್‌ನ ‘ಡೆತ್’ ನಂತೆ ಅವನು ನಿಶ್ಚಲವಾಗಿ ಕುಳಿತು ಹೊಂಚು ಹಾಕುವವನಲ್ಲ. ಅವನು ಕಪ್ಪಗೆ ಇರುವುದೂ ಸಾಧ್ಯವಿಲ್ಲ. ಯಾಕೆಂದರೆ ಅವನು ಬರುವುದು ಕತ್ತಲಂಥ ಕತ್ತಲವೇ ಜಾರಿದ ಬಳಿಕ. ಕಂಗೆಡಿಸುವ ಮಂಜು ಕಳೆದು ಬೆಳಗಾತದ ಕಂಗೊಳಿಸುವ ಕೆಂಪು ಮುಂದೆ ಬರುವಾಗ. ಆವ ಈ ಜಿಂಕೆ, ಕುಣಿವ ಮಣಕ, ಗಾಳಿ, ಹೂವು,ಹುಲ್ಲು ಇವುಗಳೊಡನೆ-ಪ್ರಕೃತಿಯ ಜೀವಧಾರಣೆಯ ನಡುವೆಯೇ ಕುಣಿಯುವವ ಅನಿಸಿಬಿಟ್ಟಿತು. ಯಾಕೋ ಏನೋ ಅಡಿಗರ ‘ಜೀವನ ನಿಧಾನ ಶೃತಿ ಶುದ್ಧಿ ಮೊರೆಯ ಕರಾವು’ ಸಾಲು ನೆನಪಾಯಿತು. ಆದರೆ ಕವಿ ಅಡಿಗರ ‘ವರ್ಧಮಾನ’ ಕವನದ ಆ ಸಾಲಿನ ಹಿಂದುಮುಂದುಗಳು ಕೂಡಿ ಬರಲಿಲ್ಲ.(೨)
ಬದಲಾಗಿ,ಈ ಬೇಟೆಗಾರನೆ ‘ವಿಧಿ’ ಇರಬಹುದು ಎಂಬ ಒಂದು ಅಸ್ಪಷ್ಟ ಕಲ್ಪನೆ. ಅರೆನಿದ್ರೆ ಅರೆ ಎಚ್ಚರ. ಹಾಗಿದ್ದರೆ ವಿಧಿ ಎಂದರೆ ಎಲ್ಲವೂ ಮೊದಲೇ ನಿರ್ಣಯಿಸಲ್ಪಟ್ಟ ಒಂದು ವ್ಯವಸ್ಥೆಯೇ? ಅಡಿಗರ ‘ಅಳುವ ಕಡಲೊಳೂ ತೇಲಿ ಬರುತಲಿದೆ/ನಗೆಯ ಹಾಯಿದೋಣಿ’ ಎಂಬ ಪದ್ಯದಲ್ಲಿ(‘ಇದು ಬಾಳು’ ಕವನ ‘ಭಾವತರಂಗ’ ಸಂಕಲನ) ‘ಯಾರ ಲೀಲೆಗೋ ಯಾರೊ ಏನೊ ಗುರಿಯಿರದೆ ಬಿಟ್ಟ ಬಾಣ’ ಎನ್ನುತ್ತಾರೆ.(೩) ಈ ಬೇಟೆಗಾರನೂ ಏನಾದರೂ ಗುರಿಯಿರದೆ ಬಾಣ ಬಿಡುವವನೆ? ಅದು ಸಾಧ್ಯವಿಲ್ಲ. ಬೇಟೆಗಾರನಂತೂ ಗುರಿ ಇಟ್ಟೇ ಬಾಣ ಹೂಡುವವ. ಆದರೆ ಇಟ್ಟ ಗುರಿ ತಪ್ಪಲೂಬಹುದು. ಯಾಕೆಂದರೆ ಇಲ್ಲಿ ಜೀವದ ಕುಣಿತ ಇದೆ. ಬಾಣ ಬರುವಾಗ ಜೀವದ ಕುಣಿತ ಆ ಕಡೆ ಹೆಜ್ಜೆ ಇಟ್ಟರೆ ಗುರಿ ತಪ್ಪಬಹುದು. ಅಕಸ್ಮಾತ್ ಗುರಿ ತಪ್ಪದೇ ಹೋದರೂ ಬೇಟೆಗಾರನ ಬಾಣಕ್ಕೆ ಸಿಕ್ಕಿ, ಬಿದ್ದು ಉರುಳುವುದೂ ಈ ನಿರಂತರವಾದ ಜೀವರಾಶಿಯ ಕೋಲಾಟದ ಕುಣಿತದ ಒಂದು ಭಾಗವೇ. ಜೀವದ ಕುಣಿತ ಕುಣಿಯಬೇಕು.(೪) ಬೇಟೆಗಾರನೂ ಕುಣಿಯುವ ಸಮಗ್ರ ಜೀವರಾಶಿಗಳ ಒಂದು ಭಾಗವೆ. ಅದಕ್ಕೆ ಭಯ ಯಾಕೆ ಎಂಬ ಭಾವ ಬಂದಿತು.
ದೇಹಕ್ಕೆ ಅದರ ಅಪಾಯಗಳನ್ನು ಸರಿಪಡಿಸಿಕೊಳ್ಳುವ ಶಕ್ತಿ ಇದೆ. ವೈದ್ಯರ ಕೆಲಸ ಈ ಸ್ವರಕ್ಷಣೆಯ ಶಕ್ತಿಯ ಜೊತೆ ಕೈ ಜೋಡಿಸುವುದು. ನನ್ನ ಸುತ್ತಲಿದ್ದ ಅನೇಕ ವೈದ್ಯರೂ ನನ್ನ ದೇಹವೂ ಈ ವಿಶ್ವ ಪ್ರಕೃತಿಯ ಜೀವಜಾಲದ ನಿರಂತರ ಕುಣಿತವೆಂಬ ಚಲನೆಯ ಒಂದು ಭಾಗವೆ. ದೇಹದೊಳಗಿನ ರಕ್ತಸಂಚಾರ, ಶ್ವಾಸೋಚ್ಛ್ವಾ ಸಗಳೂ ಚಲನೆಯೇ. ದೇಹದ ಒಳಗಿನ ಹಾಗೂ ಹೊರಗಿನ ಚಲನೆಗಳು ಈ ಸಮಸ್ತ ವಿಶ್ವದ ಒಟ್ಟೂ ಚನೆಯ ಭಾಗವೆ. ಅದರ ಜೊತೆ ಸಮಶೃತಿ ಇದ್ದಷ್ಟು ಕಾಲ ಉಳಿಯುತ್ತದೆ. ಇಲ್ಲವಾದರೆ ಇಲ್ಲ. ಇದ್ದಷ್ಟು ಹೊತ್ತು ಜೀವ ಜಗತ್ತಿನ ಈ ನಿರಂತರ ಕುಣಿತದ ತಾಳ-ಲಯಗಳಲ್ಲಿ ಮಗ್ನನಾಗಿರುವುದು ಮುಖ್ಯ. ಬೇಟೆಗಾರ ಮರಣ ಭಯವಾಗಿ ಕಾಡಬಾರದು ಎಂಬ ಭಾವ ಪ್ರೇರಣೆಯಾದಂತೆ ಭಾಸವಾಯಿತು.
ಅದು ಅರಿವು ತಪ್ಪಿಸಲು ನೀಡಿದ ಚುಚ್ಚುಮದ್ದಿನ ನಿದ್ರೆಯ ಕನಸೊ ಅಥವಾ ನನ್ನ ಆಗಿನ ತಿಳುವಳಿಕೆಯೋ ಎಂದು ಈಗ ಹೇಳುವುದು ಕಷ್ಟ. ಒಟ್ಟಿನಲ್ಲಿ ಅನಿಸಿದ್ದು: ಈ ಬೇಟೆಗಾರನ ಜೊತೆ ಸೋಲು ಗೆಲುವಿನ ಆಟ ಆಡುವುದಲ್ಲ; ಬಂದಾಗ ಅವನ ಜೊತೆ ಕುಣಿಯುವುದು. ಈ ತಾಳ-ಲಯಗಳ ನಾದ ಉಂಟುಮಾಡುವ ಜೀವಪ್ರಕೃತಿಯ ಲೀಲೆಯಲ್ಲಿ ಬೇಟೆಗಾರನಿಗೂ ಕುಣಿಯದೆ ಬೇರೆ ಗತಿ ಇಲ್ಲ ಎಂಬ, ಸಾವನ್ನೂ ಬದುಕಿನ ಪ್ರೇಮದಲ್ಲಿ ತಬ್ಬಿಕೊಳ್ಳಬಹುದಾದ, ಯಾವ ಭಾವೋದ್ರೇಕವೂ ಇಲ್ಲದ, ಇದು ಸಹಜವಾದ್ದು ಎಂಬ ಒಂದು ಮಾನಸಿಕ ಸ್ಥಿತಿ ಬಂದು ಬಿಟ್ಟಿತ್ತು ಎಂದು ನನಗೆ ಈಗ ತೋರುತ್ತದೆ.
ಆ ದಿನ ಸಂಜೆ ಎಲುಬಿನ ಮಜ್ಜೆಯ ವರದಿ ಬಂತು. ರಕ್ತದ ಕ್ಯಾನ್ಸರಿನ ಯಾವ ಅಪಾಯವೂ ಇಲ್ಲ. ಎಲುಬಿನ ಒಳಗೆ ನನ್ನ ದೇಹಕ್ಕೆ ಬೇಕಾದ ರಕ್ತಕಣಗಳ ನಿರಂತರ ಸೃಷ್ಟಿ ಆಗುತ್ತಲೇ ಇದೆ. ಆದರೆ ರಕ್ತಕ್ಕೆ ಸೇರಿದೊಡನೆ ಅದು ನಾಶವಾಗುತ್ತಿದೆ. ಆ ಸಮಸ್ಯೆ ಪರಿಹಾರವಾಗುವ ಮೊದಲು ದೇಹದೊಳಗೆ ರಕ್ತಸೋರಿ ಅಪಾಯವಾಗಬಹುದು. ನನ್ನ ಸಹೋದರನ ರಕ್ತದಿಂದ ಬೇಕಾದ ಕಣಗಳನ್ನು ತೆಗೆದು ನನ್ನ ರಕ್ತಕ್ಕೆ ಸೇರಿಸತೊಡಗಿದ್ದರಿಂದ ಕನಿಷ್ಠ ಮುಂದಿನ ಹನ್ನೆರಡು ಗಂಟೆಗಳ ಕಾಲ ಏನೂ ಅಪಾಯ ಆಗದು ಎಂಬ ತುಸು ನೆಮ್ಮದಿಯ ಭಾವ ಆಸ್ಪತ್ರೆಯ ನನ್ನ ಮಂಚದ ಸುತ್ತಲೂ ಪಸರಿಸಿತು.
*
*
*
ಗಂಟೆಗೊಮ್ಮೆ ಏನೋ ಒಂದು ರಕ್ತಪರೀಕ್ಷೆ. ಸೂಜಿ ಚುಚ್ಚು ನೆತ್ತರು ತೆಗೆದಲ್ಲೆಲ್ಲಾ ರಕ್ತ ಹೆಪ್ಪುಗಟ್ಟುವುದು ನಿಧಾನವಾಗಿ ರೂಪಾಯಿಯಗಲ ನೀಲಿ ಮಚ್ಚೆ. ಕೈಯ ನರಕ್ಕೊಂದು ಟ್ಯಾಗ್‌ನಂತೆ ಸೂಜಿ ಚುಚ್ಚಿ ನಿರಂತರವಾಗಿ ಅದರ ಮೂಲಕ ಒಂದಲ್ಲ ಒಂದು ಔಷಧಿ ತಳ್ಳುತ್ತಾ ಇದ್ದರು. ದೇಹದೊಳಗೆ ಸದಾ ಹರಿಯುತ್ತಿದ್ದ ಯಾವ ಯಾವುದೋ ಮದ್ದುಗಳ ನಡುವೆ ನನಗೆ ಬಹು ಪ್ರಿಯವಾದ ಬೇಂದ್ರೆಯವರ ಕೆಲವು ಸಾಲುಗಳು ಮನಸ್ಸಿನಲ್ಲಿ ಸುತ್ತುತ್ತಿದ್ದವು. ಅದರಲ್ಲಿ ಒಂದು ‘ಅಂಬಿಕಾತನಯದತ್ತ’ ಎಂಬ ಕವನದ್ದು:
ಯಾವ ಯೋಗ ನಿದ್ರೆಯಲ್ಲಿ ಏನು ಕನಸು ಕಂಡೆನೊ|
ಯಾರ ಹಾಲನುಂಡೆನೋ||
ಈ ವಿಶ್ವಜಾಲದಲ್ಲಿ ಬಂದೆ ಅದಕೆ ಮಿಡುಕುತ|
ಅದರ ಧಾರೆ ಹುಡುಕುತ||
ಇನ್ನೊಂದು ಸಾಲು ‘ಕಣ್ಣಕಾಣಿಕೆ’ ಕವನದ್ದು.(ಇವೆರಡೂ ‘ಗಂಗಾವತರಣ’ ಸಂಕಲನದಲ್ಲಿರುವ ಪದ್ಯಗಳು)
ಕಲ್ಪದಾದಿಯಲ್ಲೆ ನನ್ನ ನಿನ್ನ ವಿರಹವಾಗಿ|
ಎಲ್ಲೋ ಏನೊ ನಿನ್ನ ಹುಡುಕಿ ಕಾಂಬ ಕಣ್ಣೆ ಹೋಗಿ
ಮರವೆಗೊಂಡು ಬಿದ್ದೆ ನಾನು ನೆಲದ ಮಣ್ಣು ತಾಗಿ||
ಅಂತರಂಗದಾ ಮೃದಂಗ ಅಂತು ತೋಂ ತನಾನಾ
ಚಿತ್ತ ತಾಳ ಬಾರಿಸುತ್ತಲಿತ್ತು ಝಂ ಝಣಾಣಾ|
ನೆನವು ತಂತಿ ಮೀಟುತಿತ್ತು ತಂ ತನನನ ತಾನಾ||
ಈ ಸಾಲುಗಳು ನೆನಪಿಗೆ ಬಂದವೇ ಹೊರತು ಆ ಕವನಗಳ ಸಂದರ್ಭಗಳು ಕೂಡಿಬರಲಿಲ್ಲ. ಯಾಕೋ ಏನೋ ಅವು ನನ್ನ ಮನಸ್ಸೊಳಗೆ ಕೂತಿದ್ದ ‘ನಾದಲೀಲೆ’ ಯ ಬೇಟೆಗಾರನ ಸುತ್ತಲೇ ಹೊಂಚುಹಾಕುತ್ತಿದ್ದವು. ಯೋಗನಿದ್ರೆಯಲ್ಲಿ ಪವಡಿಸಿರುವ ಮಹಾವಿಷ್ಣು ಸರ್ವಾಂತ್ಯದ ಪ್ರಳಯದಲ್ಲಿ ಎಲೆಯಮೇಲೆ ಕಾಲಬೆಟ್ಟು ಚೀಪುತ್ತಾ ಮಲಗಿರುವ ಮುಗ್ಧ ಮಗು.(೫) ತಾಯಿಯ ಹಾಲನ್ನುಣ್ಣುವ ಮಗುವಿನ ಮನೋಸ್ಥಿತಿಯಲ್ಲಿ ಮಾತ್ರ ಯೋಗನಿದ್ರೆಯ ಕನಸು ಸಾಧ್ಯವೇ? ಅಥವಾ ಮಗುವಾಗಿ ಹಾಲುಣ್ಣುವ ಸ್ಥಿತಿ ಯೋಗನಿದ್ರೆಯ ಕನಸಿಗೆ ಸಮಾನವಾದ್ದೆ? ನಲವತ್ತು ದಾಟಿದ ಮಧ್ಯವಯಸ್ಸಿನ ನನ್ನಲ್ಲಿ ಈ ಮಗುವಿನ ಮನಸ್ಸು ಮಾಯವಾಗಿದೆ. ಅಗಾಧವಾದ ಈ ವಿಶ್ವಜಾಲದ ಎದುರು ಚುಕ್ಕೆಗಿಂತ ಚಿಕ್ಕದಾದ ಕಂಪ್ಯೂಟರ್ ಜಾಲದ ಅಮೆರಿಕಾದ ಕಂಪನಿಯೊಂದರ ಕೆಲಸದೊಳಗೆ ಮುಚ್ಚಿ ಮುಳುಗಿಹೋಗಿದ್ದೇನೆ. ನನ್ನೊಳಗೆ ಎಲ್ಲೋ ಹುದುಗಿರುವ ಮಗುವಿನ ಮನಸ್ಸನ್ನು ಪುನಃ ಪಡೆಯದೆ ಈ ನಾದಲೀಲೆಯ ಕೋಲಾಟದ ಕುಣಿತದಲ್ಲಿ ಭಾಗವಹಿಸಲು ಸಾಧ್ಯವೇ?(೬)
‘ಕಾಣೆ ಕೊಳಲಿನವನ ಎನುವೆ, ಎಲ್ಲು ಇಹನು ಬಾರೆ’ ಎಂದು ನಾದಲೀಲೆಯ ನಾಯಕ ಕವನದ ನಾಯಕಿಗೆ ಹೇಳುತ್ತಿದ್ದಾನೆ. ಕೊಳಲಿನ ಕೃಷ್ಣ ಪ್ರೇಮದ ದ್ಯೋತಕ. ಜೀವಪ್ರೀತಿಯ ಮುಗ್ಧತೆಗೂ ಪ್ರತೀಕ. ಗಂಡು ಹೆಣ್ಣಿನ ಪ್ರೇಮದಲ್ಲಿ ಜೀವ ಸಂಕುಲಗೊಳ್ಳಬೇಕು. ಈ ಪ್ರೇಮದ ಅವಿರ್ಭಾವದಲ್ಲೆ ಮಗು ಹುಟ್ಟಬೇಕು. ಹಾಗಾಗಲು ಮನಸ್ಸಿನಲ್ಲಿ ಮಗುಭಾವ ಜೀವಂತವಿರಬೇಕು. ಆಗ ಮಾತ್ರ ಕೊಳಲಿನವನನ್ನು ಕಾಣಲು ಸಾಧ್ಯ. ‘ಕೊಳಲಿನವ’ ಕೇವಲ ಗೋಕುಲದ, ಪುರಾಣದ ಕೃಷ್ಣ ಮಾತ್ರ ಅಲ್ಲ. ಅವ ಎಲ್ಲಾ ಕಡೆ ಜೀವದ ಉಸಿರನ್ನು ಪ್ರೇಮದ ಕೊಳಲಿನಲ್ಲಿ ತುಂಬುವವ.
ಹಾಗಾದರೆ ಕೋಲುಸಖೀ ಎಂದು ಹಾಡುತ್ತಿರುವುದು, ನಾಟ್ಯವಾಡುತ್ತಿರುವುದು ಇನ್ನೊಬ್ಬಳು ಹೆಣ್ಣೆ? ಇಬ್ಬರು ಅಥವಾ ಅನೇಕ ಹೆಣ್ಣುಗಳು ತಮ್ಮ ಕೋಲಾಟದ ತನ್ಮಯತೆಯಲ್ಲಿ ಜೀವಸೃಷ್ಟಿಯ ಕೊಳಲಿನವನನ್ನು ಎಲ್ಲೆಲ್ಲು ಕಾಣುತ್ತಿದ್ದಾರೆಯೆ? ಆದರೆ ಕೋಲಾಟ, ಕಂಡಹಾಗೆ ಗಂಡು ಹೆಣ್ಣುಗಳು ಜೊತೆಯಾಗಿ ಹಾಡಿ ಕುಣಿದು ಆಡುವ ನಾಟ್ಯ. ಆ ಕೋಲಾಟದಲ್ಲಿ ಒಬ್ಬನು ಕೊಳಲಿನವನೆ? ಅಲ್ಲ. ಎಲ್ಲೆಲ್ಲೂ ಇರುವ ಕೊಳಲಿನವನ ಜೀವಶಕ್ತಿ ಎಲ್ಲರಲ್ಲಿ ಸೇರಿಕೊಂಡಿದೆ. ಜೀವದ ಉಸಿರೇ ಕೊಳಲು. ಅವ ಕೇವಲ ಕೃಷ್ಣನಲ್ಲ. ಅವನು ಕೊಳಲಿನಿಂದ ಈ ಸಖಿಯರ ನಾಟ್ಯಕ್ಕೂ ನಾದಕ್ಕೂ ತಾಳಲಯದ ಶೃತಿಯಲ್ಲಿ ಸೇರಿಕೊಂಡು ಜೀವದ ಆಟ ಆಡಬಲ್ಲವನು. ಕೃಷ್ಣನೂ ಸತ್ತದು ಬೇಟೆಗಾರ ಜಿಂಕೆಯೆಂದು ಹೊಡೆದ ಬಾಣ ತಾಗಿ. ಬೇಟೆಗಾರ ಕೊಳಲಿನವನನ್ನೂ ಬಿಟ್ಟವನಲ್ಲ. ಔಷಧಿಯ ನಿದ್ರೆ ಎಚ್ಚರಗಳ ಸಂಗಮದಲ್ಲಿ ಕೊಂಡಿಕಳಚುವ ನೆನಪುಗಳು.
ಕಲ್ಪದಾದಿಯಲ್ಲಿ ಉಂಟಾದ ವಿರಹದ ಬಳಿಕ, ನೆಲದಮಣ್ಣು ತಾಗಿ, ಮರೆವೆಗೊಂಡು ಬಿದ್ದಿರುವಾಗ, ಅವನ ಹುಡುಕಿ ಕಾಂಬ ಹೊಸ ಕಣ್ಣು ಹಚ್ಚುವವನೋ ಕೊಲ್ಲಬಲ್ಲ ಈ ಬೇಟೆಗಾರ? ಅರ್ಥಾತ್ ಕೊಂದೂ ಬದುಕಿಸುವ ಕೆಲಸ. ಅದು ಸುಟ್ಟು ಹುಟ್ಟಿಸುವ ಭಾವ. ಮೂಲರತಿಯ ತೇವ ಸೋಕುವ ಬೇಟದ ಬಗೆ ಅದು.(೭)
ಹಣೆಯ ಕಣ್ಣು ಹುರಿದ ಮೇಲನಂಗವಾದ ಭಾವ
ತಾನೆ ರಸವೆ ಆಯ್ತು ಸೋಕೆ ಮೂಲ ರತಿಯ ತೇವ
ಕಣ್ಣಿನಾರತಿಯನು ಎತ್ತಿ ಒತ್ತಿ ಬಂತು ಜೀವ|| (ಕವನ:ಕಣ್ಣಕಾಣಿಕೆ)
*
*
*
ಮಾರನೆಯದಿನ ನನ್ನ ಒತ್ತಿನ ತಮ್ಮನ ದೇಹದಿಂದ ಹೀರಿ ಮೊದಲ ಬಾರಿ ನೀಡಿದ್ದ ರಕ್ತದ ಪ್ಲೇಟ್‌ಲೆಟ್ ಕಣಗಳನ್ನೆಲ್ಲಾ ನನ್ನ ದೇಹದ ಒಳಗಿನ ವ್ಯವಸ್ಥೆಯೇ ಕೊಂದು ಹಾಕಿದೆ. ಪುನಃ ಕಣಗಳ ಸಂಖ್ಯೆ ಒಂಭತ್ತು ಸಾವಿರದಿಂದ ಕೆಳಗೆ ಇಳಿಯತೊಡಗಿದೆ. ಕಮ್ಮಿಯಾಗಿದ್ದ ಬಿಳಿರಕ್ತಕಣಗಳು ದೇಹದಲ್ಲಿ ವ್ರಿದ್ಧಿಸಿವೆ. ಆದರೆ ಈ ಹೊಸ ಬಿಳಿ ರಕ್ತಕಣಗಳಿಗೆ ಯಾವುದು ವೈರಿಯಾವನು ಗೆಳೆಯ ಎಂಬುದು ತಿಳಿಯದೆ ದೇಹದೊಳಗಿನ ಪ್ಲೇಟ್‌ಲೆಟ್ ಕಣಗಳನ್ನೆಲ್ಲಾ ಯದ್ವಾತದ್ವಾ ಕೊಂದುಹಾಕುತ್ತಿವೆ. ದೇಹದೊಳಗೆ ಇಮ್ಯುನಿಟಿ ಸಿಸ್ಟಮ್ ಇದ್ದಕ್ಕಿದ್ದಂತೆ ವಿಪರೀತ ಏರುಪೇರಾಗಿದೆ. ಅದಕ್ಕೆ ಡೆಂಗು, ಪಾರ್‍ವೊ, ಅಥವಾ ಹೀಗೆ ಯಾವುದಾದರೂ ವೈರಸ್ ಕಾರಣವೋ, ಅಥವಾ ಏನಾದರೂ ಬ್ಯಾಕ್ಟೀರಿಯಾಗಳೆ(ಲೆಪ್ರೋಸ್ಪೆರೋಸಿಸ್ ಎಂಬ ಪಿತ್ತಕೋಶ, ಕರುಳುಗಳಿಗೆ ತಗಲುವ ರೋಗ) ಅಥವಾ ಯಾವುದಾದರೂ ಔಷಧಿಯ ಈ ತನಕ ತಿಳಿಯದಿದ್ದ ದುಷ್ಪರಿಣಾಮವೋ? ಯಾವುದೂ ಇದಮಿತ್ಥಂ ಎಂಬ ಪರೀಕ್ಷೆಗೆ ಸಿಗುತ್ತಿಲ್ಲ.
ಹೊರಗಿನಿಂದ ಹೊಸತಾದ ಪ್ಲೇಟ್‌ಲೆಟ್ ರಕ್ತಕಣಗಳನ್ನು ತುಂಬಿಸಬೇಕು. ದೇಹವೇ ಉತ್ಪಾದಿಸುತ್ತಿರುವ ರಕ್ತಕಣಗಳನ್ನು ರಕ್ಷಿಸಬೇಕು. ದೇಹದ ಒಳಗೆ ಎಲ್ಲೂ ರಕ್ತಸ್ರಾವವಾಗಬಾರದು. ನನಗೋ ಅಸಾಧ್ಯವಾದ, ತಡೆಯಲಾರದ ಹೊಟ್ಟೆನೋವು, ನಿಧಾನವಾಗಿ ಹೆಚ್ಚುತ್ತಿರುವ ತಲೆನೋವು. ಹೊಟ್ಟೆಯೊಳಗೆಲ್ಲಾದರೂ ಸಣ್ಣದಾಗಿ ರಕ್ತಸ್ರಾವ ಪ್ರಾರಂಭವಾಗಿದ್ದರೆ ಏನು ಗತಿ ಒಂದು ಎಂ.ಡಿ. ಓದಿರುವ ನನ್ನ ಕೊನೆಯ ತಮ್ಮನಿಗೆ ದಿಗಿಲು. ಗಂಟೆಗೊಮ್ಮೆ ರಕ್ತದ ಒತ್ತಡ ಪರಿಕ್ಷೆ, ಶಾಂತಚಿತ್ತರಾಗಿರಿ ಎಂದು ವೈದ್ಯರ ಸಲಹೆ. ನನ್ನ ತಮ್ಮ ಅವನ ದೇಹದಿಂದ ಬೇಕಾದ ರಕ್ತಕಣಗಳನ್ನು ಸಂಗ್ರಹಿಸಿ ತರಲು ಹೊರಟ. ನನಗೆ, ಆ ಬೇಟೆಗಾರನನ್ನು ಜೀವಶಕ್ತಿಯ ಆಟದಲ್ಲಿ ನಾದಲೀಲೆಯಲ್ಲಿ ಮೀರುವ ಬಗ್ಗೆ ಯಾರಲ್ಲಾದರೂ ಮಾತಾಡುವ ಆಸೆ. ಆಸ್ಪತ್ರೆಯ ಮಂಚದ ಬಳಿ ಮಡಿಕೇರಿಯಿಂದ ನನ್ನನ್ನು ನೋಡಲು ಬಂದಿದ್ದ ಬಾಲಸುಬ್ರಹ್ಮಣ್ಯ ಕಂಜರ್ಪಣೆ ತಲ್ಲಣಗೊಂಡು ಕೂತಿದ್ದ. ಅವನೊಡನೆ ಬೇಂದ್ರೆಯ ಬೇಟೆಗಾರನ ಬಗ್ಗೆ ಹೇಳಹೊರಟಾಗ, ಅವನು, ನೀನೀಗ ಆಯಾಸಗೊಳ್ಳಬಾರದು, ಸ್ವಲ್ಪ ಕಣ್ಣುಮುಚ್ಚಿ ನಿದ್ರಿಸಲು ಪ್ರಯತ್ನಿಸು ಎಂದ.
ನನಗೆ ಅದೇ ನಿದ್ರೆ ಎಚ್ಚರಗಳ ಗುಂಗು. ಸಾಮಾನ್ಯ ಸ್ಥಿತಿಯಲ್ಲಿ ಒಬ್ಬನ ದೇಹ ಒಂದು ತಿಂಗಳಲ್ಲಿ ಅದರ ಇಮ್ಯುನಿಟಿ ಸಿಸ್ಟಮ್‌ಗಾಗಿ ಉತ್ಪಾದಿಸುವಷ್ಟು ಸ್ಪಿರಾಯ್ಡ್‌ನ್ನು ಔಷಧಿರೂಪದಲ್ಲಿ ಒಂದು ಗಂಟೆಯ ಅವಧಿಯಲ್ಲಿ, ಪ್ಲೇಟ್‌ಲೆಟ್ ಕಣಗಳನ್ನು ರಕ್ಷಿಸುವುದಕ್ಕಾಗಿ, ನನ್ನ ದೇಹಕ್ಕೆ ನೀಡುತ್ತಿದ್ದರು. ಬಿಳಿರಕ್ತಕಣಗಳನ್ನು ನಿಯಂತ್ರಿಸುವುದಕ್ಕೆ ಅದು ಸಹಕಾರಿ. ಸ್ಪಿರಾಯ್ಡ್ ದೇಹದಲ್ಲಿ ಹಸಿಯಾದ ಚೈತನ್ಯವನ್ನೂ ಉಲ್ಲಾಸವನ್ನೂ ಸೃಷ್ಟಿಸುತ್ತದೆ. ಆ ಮಂಪರಿನಲ್ಲಿ ಬೇಟೆಗಾರನನ್ನು ಲಕ್ಷಿಸದೆ ಎಲ್ಲೂ ಇರುವ ಕೊಳಲಿನವನ ಚಿತ್ರ ಹೆಚ್ಚು ಗೋಚರಿಸತೊಡಗಿತು.
ಕೋಲು ಸಖೀ ಎಂದು ಕೋಲಾಟದ ನೃತ್ಯವನ್ನು ನಾದಲೀಲೆ ಮಾಡುವ ತಾಳ-ಲಯದ ಶುದ್ಧಿಯೇ ಬ್ರಹ್ಮಾಂಡದ ಚಲನೆಯ ರೂಪದಂತೆ ಭಾಸವಾಯಿತು. ಆ ಜೀವನೋತ್ಸಾಹದ ಕುಣಿತವೂ(೮) ನಾದದಲ್ಲಿ ಸೇರಿಕೊಂಡ‘ಲೀಲೆ’ ಯ ಅವಿಭಾಜ್ಯವಾದೊಂದು ಅಂಗದಂತಿದೆ. ಅಂತಹ ಜೀವದ ಲೀಲೆಗೆ ಶೃತಿ ಸೇರಿಸಬಲ್ಲವನು ಎಲ್ಲು ಇರುವ ಕೊಳಲಿನವನು. ಹೊರ ಕಣ್ಣಿಗೆ ಕಾಣದೆಯೂ, ಕುಣಿತದೊಳಗಿನ ನಾದದಿಂದ ಕಿವಿಯ ಮೂಲಕ ಗೋಚರಿಸಬಲ್ಲ ಸಮಶೃತಿಯವನು. ಅವನ ಕೊಳಲು ಕೇವಲ ಗಾಳಿಯೂದುವ ಕೊಳವೆ. ಆದರೆ ಅದು ಜೀವ ಪ್ರೇಮದ ಪ್ರಾಣತುಂಬುವ ಗಾಳಿ.
ಕೊಳಲಿನೊಳಗೆ ಪ್ರಾಣತುಂಬುವ ಗಾಳಿಯ ನೆನಪಿನಿಂದ ‘ನಾದಲೀಲೆ’ ಪ್ರಾಣವಾಯು ಕೇಂದ್ರಿತವಾಗಿ ಕಾಣತೊಡಗಿತು. ಬೇಟೆಗಾರನ ಬಾಣ ಉಸಿರನ್ನು ನಿಲ್ಲಿಸುವಂತಹದ್ದು. ನಾದಲೀಲೆಯ ಜೀವತನ್ಮಯತೆ ಪ್ರಾಣವಾಯುವನ್ನು ಪ್ರೇರೇಪಿಸುವಂತಹದ್ದು. ಎಲ್ಲಿತ್ತೋ ಏನೂ. ಅನಾಯಾಸವಾಗಿ ಎಚ್ಚರದ ಕನಸಿನಲ್ಲಿ ಎಂಬಂತೆ ಕವನದ ವಿವರಗಳು ಒಂದರ ಮೇಲೊಂದು ಕೂಡಿ ಬಂದು ಕಾಣತೊಡಗಿದವು.
ಆ ಜಿಂಕೆಗಳು ಕತ್ತಲೆ ಕಳೆದು, ಮುಂಜಾವದ ಗಾಳಿಯನ್ನು (ಎಲರು)ಮೂಸಿ ನೋಡುತಿರುವುವು. ಅಲ್ಲಿನ ನಸು ಬೆಳಕು, ಬೀರುತ್ತಿರುವ ಪ್ರಾಣವಾಯುವನ್ನು ಹೀರುತ್ತಾ ಇರುವ ‘ಕರೆವ ಕರುವು, ಕುಣಿವ ಮಣಕ, ತೊರೆವ ಗೋಗಭೀರೆ’ ಗಳು ಉತ್ತು ಬಿತ್ತುವ ಪ್ರಕೃತಿಗೆ ಪೋಷಕವಾಗಿರುವ ಸಾಕುಪ್ರಾಣಿಗಳು. ಉಲ್ಲಾಸದಲ್ಲಿ ಕುಣಿವ ದನದ ಕರು, ಸುಂದರವಾದ ಎಳೆ ಎಮ್ಮೆ ಕರು(ಮಣಕ) ಮನುಷ್ಯರಿಗೆ ನಿತ್ಯ ಕಾಣುವ ಇನ್ನೊಂದು ಬಗೆಯ ಜೀವಸಮೂಹ. ಜೀವ ಚೈತನ್ಯದ ಅಭಿರೂಪಗಳು. ಅಲ್ಲಿ ಬೇಟೆಗಾರ ಪ್ರತ್ಯಕ್ಷ ಬರಲಾರ. ಆದರೆ ಪರೋಕ್ಷವಾಗಿ ಕೊಳಲಿನವನಂತೆ ಎಲ್ಲಾ ಕಡೆ ಅವನಿದ್ದಾನೆ. ಆದರೂ ಪ್ರಾಣಿಸಂಕುಲ ಬೇಟೆಗಾರನ ಭಯವನ್ನು ಮೀರಿದೆ. ಪ್ರಾಣವಾಯುವನ್ನು ಹೀರುವ ಕ್ರಮದಲ್ಲೇ ಜೀವ ಚೈತನ್ಯ ಬೇಟೆಗಾರನನ್ನು ಮರೆತು ಬದುಕುವ ಕ್ರಮ ಅಡಗಿದೆ ಅನಿಸಿತು.
ಈ ಪ್ರಾಣವಾಯುವಾದರೋ ಬಹು ಸುಂದರವಾದ್ದು. ಸುವಾಸನೆ ಉಳ್ಳದ್ದು. ಬೆಳ್ಳಿ ಚುಕ್ಕೆ(ಬೆಳಗಾತ ಚಿಕ್ಕದಾಗುತ್ತಾ ಮಾಯವಾಗುವ ಶುಕ್ರಗ್ರಹ)ಸಣ್ಣದಾಗುತ್ತಾ(ಚಿಕ್ಕೆಯಾಗಿ) ಮುಳುಗುವ ಮುಂಜಾವಿನ ಎಲರಿನಲ್ಲಿ ಚಿಗುರು, ಹೂಗಳ ಆಹ್ಲಾದ ಇದೆ. ಅದು ಪ್ರಾಣವಾಯುವಾದ ಬಳಿಕ ಅರೆ ಬಿರಿದ ಮೊಗ್ಗೆಯ(ಮುಕುಲ)ವಿಕಾಸಗೊಂಡ ಹೂವಿನ (ಅಲರು) ಅರಳಿದ ಪುಷ್ಪದ (ಮಲರು) ಸುವಾಸನೆಯ ಹರಡುವಿಕೆ(ಪಸರು) ಸೇರಿದೆ. ಪ್ರಾಣವಾಯು ಗಂಧಗಾಳಿ ಪ್ರಕೃತಿಯ ಅಹ್ಲಾದವಾಗಿ ವ್ಯಾಪಿಸಿದೆ. ಜೊತೆಗೆ ಅರೆಬಿರಿದ ಮೊಗ್ಗೆ (ಮುಕುಲ) ಬೆಳೆದು ಅರಳಿ ಪ್ರಕೃತಿ ತುಂಬಾ ಪಸರಿಸಿ ನೋಡುವಲ್ಲೆಲ್ಲಾ ಕಣ್ಣು ಸೋಲುವಂತಾಗಿದೆ. ಹಾಗೆ ಹಬ್ಬಿದ ಪುಷ್ಪರಾಶಿಗಳೇ ದುಂಡಗಾದ ದೊಡ್ಡ ಮಾಲೆಯಾಗಿದೆ. ನಲ್ಲನೆಡೆಗೆ(ಕಾದಲ) ನಲ್ಲೆ(ಕಾದಲೆ) ಖಂಡಿತಾ ಬಹಳು. ಸಮಸ್ತ ವಿಶ್ವವೇ ಈ ಸಮಾಗಮದಲ್ಲಿ ತೊಡಗಿಕಂಡಂತೆ, ಅವಳ ಬಳಿ ಸಮಸ್ತ ಪ್ರಕೃತಿಯೇ ಒಂದು ಪುಷ್ಪಮಾಲೆಯಾಗಿದೆ.
ಅರರೆ, ಈ ತರಳ ಎರಳೆ, ಹರಿಣಿಗಳಿದ್ದಲ್ಲಿ ಕೈಯಲ್ಲಿ ಹೂಮಾಲೆ ಹಿಡಿದ ನಲ್ಲೆ, ನಲ್ಲರು. ಇನ್ನಿಲ್ಲಿ ಬೇಟೆಗಾರನಿಗೇನು ಕೆಲಸ? ಈ ನಲ್ಲನಲ್ಲೆಯರ ಸುತ್ತ ಕೋಲು ಸಖೀ ಚಂದ್ರಮುಖೀ ಎಂದು ಸುಗ್ಗಿಯ ಉತ್ಸಾಹದ ಕೋಲಾಟ ನಡೆಯುತ್ತಿದೆ. ಇನ್ನೀಗ ಹೂಮಾಲೆ ಹಿಡಿದವರೂ ಕುಣಿಯಬೇಕೆ? ಪ್ರಶ್ನೆಗಳು. ಉತ್ತರವಿಲ್ಲ. ಎಚ್ಚರಗೊಂಡಾಗ ತಲೆನೋವು, ವಿಪರೀತ ಹೊಟ್ಟೆನೋವು. ಕಣ್ಣುಮುಚ್ಚಿದರೆ ಏನೇನೋ ಅಸ್ಪಷ್ಟ ಚಿತ್ರಗಳು(ಅದು ಸ್ಟಿರಾಯ್ಡ್ ಔಷಧಿಯ ಸೈಡ್ ಎಫೆಕ್ಟ್‌ಗಳಲ್ಲಿ ಒಂದು ಎಂದು ಆಮೇಲೆ ತಿಳಿಯಿತು). ಹಾಗೆ ಕನ್ಣು ಬಾಡಿ ತುಸು ನಿದ್ರೆಗೆ ಜಾರುವಂತಾದರೆ ಕೋಲಾಟದಂತಹ ಯಾವುದೋ ನೃತ್ಯ, ಅಸ್ಪಷ್ಟ ಸಂಗೀತ. ಸುಂದರವಾದ ಹೂದೋಟದಂತಹ ಬನ.
ವೈದ್ಯನಾದ ನನ್ನ ತಮ್ಮ ಅವನ ರಕ್ತದಿಂದ ಬೇರ್ಪಡಿಸಿದ ಪ್ಲೇಟ್‌ಲೆಟ್ ಕಣಗಳ ಪ್ಯಾಕೆಟ್ ಹಿಡಿದುಕೊಂಡು ಬಂದ. ಆ ಕಣಗಳನ್ನು ನನ್ನ ದೇಹದೊಳಗೆ ತುಂಬಿಸಿ ಒಂದು ಗಂಟೆ ಬಳಿಕ ಪುನಃ ಸೂಜಿ ಚುಚ್ಚಿ ರಕ್ತತೆಗೆದು ಕಣಗಳ ಪರೀಕ್ಷೆ. ನಾನು ಬಹಳ ಆಯಾಸಗೊಂಡಿದ್ದೆ. ಮೈಕೈ ನೋವು. ಎಲುಬಿಗೆ ಚುಚ್ಚಿದ ಬೇನೆ. ನನಗೇ ಅರಿಯದಂತೆ ಗಾಢನಿದ್ರೆಗೆ ಸಂದು ಹೋಗಿದ್ದೆ.೯
ರಾತ್ರಿ ಯಾವಾಗಲೋ ಎಚ್ಚರ ಅಥವಾ ಅದು ಎಚ್ಚರವಾದಂತೆ ಕನಸೋ, ಈಗ ಹೇಳಲಾರೆ. ಪುರಾತನವಾದ ನಮ್ಮ ಊರುಮನೆಯಲ್ಲಿ(ಅದು ೧೮೫೯ರಲ್ಲಿ ನನ್ನ ಅಜ್ಜನ ಅಜ್ಜ ಕಟ್ಟಿಸಿದ ಮನೆ) ನನ್ನ ಚಿಕ್ಕಪ್ಪ ಪೂಜೆ ಮಾಡಿ ಮಂಗಳಾರತಿ ಊದುತ್ತಿದ್ದ ಶಂಖ ನನ್ನ ಬಳಿ ಹಾಸಿಗೆಯಲ್ಲಿದೆ. ಅರೆರೆ ಇದು ಶಂಖವಲ್ಲ, ನಾದಲೀಲೆ ಸಂಕಲನದ ಮುಖಪುಟದ ಚಿತ್ರ.೧೦ ಈ ಪುಸ್ತಕ ಇಲ್ಲಿಗೆ ಹೇಗೆ ಬಂತು? ನಾನು ಆಸ್ಪತ್ರೆಯಲ್ಲಿ ಓದಲು ಹೆಂಡತಿಯಲ್ಲಿ ತರಲು ಹೇಳಿದ್ದು ಅರ್ಧ ಓದಿ ಇಟ್ಟಿದ್ದ ಜಿ.ಎಚ್.ನಾಯಕರ ‘ಹರಿಶ್ಚಂದ್ರಕಾವ್ಯ’ ದ ಮೇಲಿನ ವಿಮರ್ಶೆ, ‘ಗುಣಗೌರವ’ ಹಾಗೂ ಇತ್ತೀಚಿಗೆ ಬಂದ ಆಲನಹಳ್ಳಿಯ ಸಮಗ್ರ ಕಥೆಗಳ ಸಂಕಲನ. ‘ನಾದಲೀಲೆ’ ಪುಸ್ತಕ ತರಲು ಹೇಳಿಲ್ಲ. ಬಹುಶಃ ಸ್ಟಿರಾಯ್ಡ್ ಔಷಧಿಯ ಭ್ರಮೆಯಾಗಿರಬಹುದು. ಬೆಳಿಗ್ಗೆ ಎಂಟುಗಂಟೆಗೆ ಮುಖ್ಯ ಡಾಕ್ಟರು ಬರುವಾಗ ರಕ್ತಕಣಗಳ ಪರೀಕ್ಷೆಯ ಹೊಸ ರಿಪೋರ್ಟು ಬೇಕು. ಹಾಗಾಗಿ ನಸುಕಿಗೆ ಮೊದಲೆ ರಕ್ತ ತೆಗೆಯಲು ದಾದಿ ಎಬ್ಬಿಸುತ್ತಾಳೆ. ಬೆಳಗಿನ ತನಕ ಚೆನ್ನಾಗಿ ನಿದ್ದೆ ಮಾಡಬೇಕು.
ಕನಸೋ,ಎಚ್ಚರವೋ, ಭ್ರಮೆಯೋ ಎಂದು ಈಗ ಹೇಳಲಾರದಂತ ಸುಂದರ ಬೆಳಗಾತ. ಅಹ್ಲಾದ ಚೈತನ್ಯದ ಸುಗ್ಗಿ. ತಿರುಚೆಂದೂರಿನ ಕಡಲ ಕಿನಾರೆಯಲ್ಲಿ೧೧ ದಶಕಗಳ ಹಿಂದೆ ನೋಡಿದ ದುಂಡಗಿನ ಕೆಂಪಗಿನ ಸೂರ್ಯೋದಯ. ಕತ್ತಲಿನ ಹಿಂಸೆಯೆಲ್ಲಾ ಕಳೆದೇ ಹೋಗಿದೆ. (ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ? ಕೇಳುವ ಪ್ರಶ್ನೆಯ ರೆಟರಿಕ್‌ನಲ್ಲೆ ಸಮಾಧಾನದ ಉತ್ತರ ಅಡಗಿದೆ.) ನೆನಪಿಗೆ ಬಂದ ಒಂದು ವಾಕ್ಯ ‘ಮುಗಿಲ ಬಾಯ ಗಾಳಿ ಕೊಳಲ ಬೆಳಕ ಹಾಡ ಬೀರಿ.’ ಇದೇನಿದು! ಭೂಮಿ ಆಕಾಶಗಳನ್ನು ಒಟ್ಟಿಗೆ ಬೆಸೆಯುವ ಗಾಳಿ ಕೊಳಲು. ಇದು ಕರೆವ ಕರುವನ್ನು ಸೆಳೆವ ಗೋಪಾಲನ ಬಿದಿರು ಕೊಲಲಲ್ಲ. ಕೊಳಲಿನವನು ಎಲ್ಲು ಇಹನು ಎಂದರೆ ಆಕಾಶ ಭೂಮಿಯನ್ನು ಒಂದು ಮಾಡುವವನೆ? ಇಲ್ಲೀಗ ಅದು ಮುಗಿಲು ಬಾಯ ಗಾಳಿಕೊಳಲು. ಇನ್ನೊಂದು ಕಡೆ ಅದು ‘ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ!’ ಎಂಬ ಬೇಂದ್ರೆಯ (‘ಹಕ್ಕಿ ಹಾರುತಿದೆ ನೋಡಿದಿರಾ?’ ಕವನ)ಸಾಲಲ್ಲವೆ?ನೆನಪು ಸ್ಪಷ್ಟವಾಗಲಿಲ್ಲ.
‘ಮುಗಿಲಬಾಯ ಗಾಳಿ ಕೊಳಲ ಬೆಳಕ ಹಾಡ ಬೀರಿ/ಕಳೆಯಲಿಲ್ಲೆ ಕತ್ತಲಂಥ ಕತ್ತಲವೇ ಜಾರಿ?’ ಇನ್ನು ಕೊಳಲಿನವನ ಕಾಣೆ ಎಂಬುದು ಸಾಧ್ಯವಿಲ್ಲ. ಕೃಷನ(ಕೊಳಲಿನವನ)ವಿಶ್ವರೂಪದರ್ಶನದಂತೆ ಮೂರ್ತೀಕರಣಗೊಂಡ(Peಡಿsoಟಿiಜಿiಛಿಚಿಣioಟಿ)ಮುಗಿಲು. ಅದರ ಬಾಯಲ್ಲಿ ಇರುವುದು ಗಾಳಿಯ ಕೊಳಲು. (ಹಾಗೆಯೇ ಮುಗಿಲಿನ ಬಾಯಿಯೂ ಗಾಳಿಗೆ ಕೊಳಲು.) ಪ್ರೇಮದ ಲಹರಿ, ಜೀವ ಪ್ರಾಣದ ಉಸಿರು, ವಿಶ್ವಶೃತಿಯ ನಾದ ಎಲ್ಲಾ ಒಂದು ನಿರಂತರ ನಾಟ್ಯದಲ್ಲಿ ತೊಡಗಿದ, ಜೀವ-ಸಾವು ಸೇರಿಕೊಂಡ ಚಲನೆಯ ಒಂದು ಆಟದಂತೆ (ಲೀಲೆ) ಕೊಳಲೇ ಗಾಳಿಯಾಗಿ ಗಾಳಿಯೇ ಕೊಳಲಾಗಿ ಸೇರಿಕೊಂಡಿದೆ. ಮುಗಿಲಿನಿಂದ ಮಳೆ, ಬೆಳೆ, ಬಿತ್ತನೆ, ಜೀವರಾಶಿಯ ಚಿಗುರು.
ಆ ಕೊಳಲಿನಿಂದ ಮುಂಜಾವದ ಎಲರು ಪ್ರಾಣವಾಯುವಾಗಿ ಭೂಮಿ ಆಕಾಶಗಳನ್ನು ವ್ಯಾಪಿಅಬಲ್ಲದು. ಈ ಗಾಳಿ ಕೊಳಲು ಬೀರುವುದು ಬೆಳಕಿನ ಹಾಡನ್ನು. ಪುನಃ ಕಣ್ಣು, ಕಿವಿಗಳ ಅನುಭವ.೧೨ ಮೈಯನ್ನು(ತ್ವಚೆ) ಸ್ಪರ್ಶಿಸುವ ಗಾಳಿ. ಆ ಗಾಳಿಯಲ್ಲಿ ಮೂಗಿಗೆ ತಾಕುವ ಅಲರು, ಮಲರುಗಳ ಕಂಪು. ನಾಲಗೆಯಿಂದ(ಗಾಳಿ ಮೂಲಕ) ಹಾಡುವ ಹಾಡು. ಹೀಗೆ ಪಂಚೇಂದ್ರಿಯಗಳ ಮೂಲಕ ಪ್ರವೇಶಿಸಿ ಬದುಕಿನ ಪ್ರೀತಿಯ ಜೀವಚೈತನ್ಯವನ್ನು ಅಂತರಾಳದ ಅನುಭವವಾಗಿ ಪಡಿಮೂಡಿಸುವ ಗಾಳಿ ಕೊಳಲು ಪ್ರಾಣವಾಯುವಾಗಿ ಆವರಿಸಿದೆ. ಹಿಂದೆ ಕೊಳಲಿನವನು ಎಲ್ಲು ಇಹನು ಎಂಬುದು ಈಗ ಮುಗಿಲ ಬಾಯ ಗಾಳಿಕೊಳಲ ಮೂಲಕ ವಿಸ್ತರಿಸಿ ಪೃಥ್ವಿ ಅಂತರಿಕ್ಷಗಳಲ್ಲಿ ವ್ಯಾಪಿಸಿದೆ. ಸಹೃದಯರಿಗೆ ಇದೊಂದು ಅತ್ಯದ್ಭುತವಾದ ‘ಕಾವ್ಯಾನುಭವ’ .
ಇಲ್ಲಿ ಮುಗಿಲ ಬಾಯ ಕೊಳಲು ಬೀರುವಮ್ತಹದ್ದು ಬೆಳಕಿನ ಹಾಡು. ‘ಬೀರು’ ಎಂದರೆ ‘ಹರಡು’ (Sಠಿಡಿeಚಿಜ)’ ‘ಪ್ರಸಾರ ಮಾಡು’ (bಡಿoಚಿಜಛಿಚಿsಣ) ಎಂಬ ಹಾಡು (ಧ್ವನಿ) ಹಾಗೂ ಬೆಳಕು ಎರಡಕ್ಕೂ ಹೊಂದುವ ಅರ್ಥ ಇವೆ. ರೈತನು ಹೊಲದಲ್ಲಿ ಭತ್ತದ ನೇಜಿ ಹಾಕಲು ಬಿತ್ತನೆ ಬೀಜಗಳನ್ನು ಬೀರುತ್ತಾನೆ. ಮುಂದೆ ಅವು ಬೆಳೆಯುತ್ತವೆ. ‘ನಾದ’ ಲೀಲೆಗೆ ಇಲ್ಲಿ‘ಹಾಡು’ ಇದೆ. ಆದರೆ ಅದು ಬೆಳಕಿನ ಹಾಡು. ಕತ್ತಲನ್ನು ಕಳೆದು ಅದು ಬೆಳಗಾಗಿ ದಿನವಾಗಿ ಬೆಳೆಯುತ್ತದೆ. ಬೆಳಕು ಕಿವಿಗಲ್ಲ. ಆದರೆ, ಇಲ್ಲಿ ಬೆಳಗಿಗೂ ನಾದಮಯವಾದ ಹಾಡಿನ ಒಂದು ಲಯವಿದೆ. ಹಾಡಿಗೂ ಬೆಳಗುವ ಹೊಳಪಿದೆ. ಅಂತಹ ಬೆಳಕ ಹಾಡನ್ನು ಮುಗಿಲು (ಆಕಾಶ) ಬೀರಿದಾಗ(ಅದು ಕತ್ತಲನ್ನು ಕಳೆದು ಬೆಳಕನ್ನು ತರುವ ಹಾಡು) ಗಾಳಿ ಕೊಳಲಿನ ಪ್ರೇಮ ಚೈತನ್ಯ ಆವಾಹನೆಗೊಂಡು ಕಂಗೊಳಿಸುವ ಕೆಂಪು ಇರಲಿ; ಬೇಕಾದರೆ ಕಂಗೆಡಿಸುವ ಮಂಜು ಬರಲಿ ಎಂಬ ಆತ್ಮವಿಶ್ವಾಸ ಮೂಡುತ್ತದೆ. ಈ ಆತ್ಮವಿಶ್ವಾಸ ಬೇಟೆಗಾರನನ್ನು ಮರೆಸಿಬಿಡುತ್ತದೆ. ಅಲ್ಲಿ ಬೇಟೆ ಇಲ್ಲ. ಅದೆಲ್ಲ ಒಂದು ಆಟವಾಗಿ ತೋರುತ್ತದೆ.
ಆಟವೆಂದರೆ ಮಗುವಿನ ಆಟ. ಸೃಷ್ಠಿ ಕ್ರಿಯೆಯಲ್ಲಿ ಕೂಡುವ ಬೇಟದ ಆಟ. ಅದೂ ಬೇಟದ ಒಂದು ಬಗೆ(ಬೇಟೆಯಲ್ಲ;ಆಟವೆಲ್ಲ;ಬೇಟದ ಬಗೆ, ನಾರಿ.)ಈ ಜಗವೆಂಬ ನಾಟಕ ರಂಗದ ಒಂದು ಆಟ. ‘ನಾದಲೀಲೆ’ ಯ ಕೋಲಾಟದ ಭಾಗವಾದ ಆಟ. ‘ಲೀಲೆ’ ಯೆಂಬ ಆಧ್ಯಾತ್ಮಿಕ ಕಲ್ಪನೆಯ ಅಂಗವಾದ ಆಟ. ನಾದವೇ ಲೀಲೆಯಾದ ಸೃಷ್ಠಿಯ ಆವರ್ತನಲಯದ ತಾಳಮೇಳಗಳು ಕೂಡುವ ಸಮಶೃತಿಯ ಆಟ. ಬ್ರಹ್ಮಾಂಡದ ಲೀಲೆಯನ್ನು ಹಿಡಿದಿಡುವ ಬೇಟದ ಬಗೆ ಇದು.
ಆಸ್ಪತ್ರೆಯ ಮಂಚದಲ್ಲಿ ಮಲಗಿದ್ದಾಗ ಇಷ್ಟು ಸ್ಪಷ್ಟವಾದ ಕಲ್ಪನೆ ಬಂದಿತ್ತೆಂದು ಹೇಳಲಾರೆ. ಕತ್ತಲು ಕಳೆದ ಸುಂದರ ಬೆಳಗಿನ ಒಮ್ದು ಕಲ್ಪನೆ ಸ್ಪಷ್ಟವಿತ್ತು. ಅದು ಬೇಂದ್ರೆಯ ‘ಬೆಳಗು’ ಕವನವನ್ನು ಮೂಡಲ ಮನೆಯಾ ಮುತ್ತಿನ ನೀರಿನ/ಎರಕವ ಹೊಯ್ದಾ) ‘ಬೆಳ್ಳಿಮೋಡ’ ಸಿನಿಮಾದಲ್ಲಿ ಹಾಡಿದ ದಾಟಿಯ ನೆನಪು ತಂದಿತ್ತು. ಅಲ್ಲಿ ಬೆಳಕಿನ ಸಂಭ್ರಮ ಸಂಮೃದ್ಧಿ. ಬೇಟೆಗಾರ ಮಾಯವಾದ ಅಥವಾ ಆ ಬೇಟೆಗಾರ ಈ ಬ್ರಹ್ಮಾಂಡವನ್ನು ಆವರಿಸಿರುವ ಮಧುರ ನಾದದ ಜೀವ ತಂತುಗಳ ಸೃಷ್ಟಿಲೀಲೆಯ ಭಾಗವಾಗಿ ಸೇರಿ ಹೋದಂತೆ ನನಗೆ ಭಾಸವಾಯಿತು. ಅದು ಅರೆಪ್ರಜ್ಞಾವಸ್ಥೆಯ ಅಥವಾ ಸುಷುಪ್ತ ಸ್ಥಿತಿ ಎನ್ನಬಹುದಾದ ಕನಸು ಎಚ್ಚರಗಳ ಸಂಗಮದ ಅನುಭವವೂ ಆಗಿದ್ದಿರಬಹುದು. ಭಾವಸ್ಮೃತಿಯಲ್ಲಿ ಅವೆಲ್ಲಾ ಬಹುಶಃ ಕಲಸಿಕೊಳ್ಳುತ್ತಿದ್ದವೇನೋ.
ಬೆಳಗಾತ ನಾಲ್ಕೂವರೆ ಗಂಟೆಗೆ ದಾದಿ ಬಂದು ಎಬ್ಬಿಸಿದಳು. ಆ ದಾದಿ ಕ್ರಿಚ್ಯನ್ ಸನ್ಯಾಸಿನಿ.-ವಿಜಯಶಂಕರ್, ಈ ತನಕ ನಿನಗೆ ಬೇಕಾದ ರಕ್ತಕಣಗಳು ಏರುತ್ತಾ ಇಲ್ಲ ಅಲ್ಲವೆ? ನಾನು ಪರೀಕ್ಷೆಗೆ ನಿನ್ನ ರಕ್ತ ತೆಗೆಯುವ ಮೊದಲು ಸರ್ವಶಕ್ತನಾದ ದೇವರನ್ನು ಪ್ರಾರ್ಥಿಸುತ್ತೇನೆ. ನಿನ್ನ ರಕ್ತದ ಪ್ಲೇಟ್‌ಲೆಟ್ ಕಣಗಳು ವೃದ್ಧಿಸಲಿ-ಎಂದು ಇಂಗ್ಲಿಷಿನಲ್ಲಿ ಹೇಳಿ ಸೂಜಿ ಚುಚ್ಚಿದಳು.
ಬೆಳಿಗ್ಗೆ ಎಂಟು ಗಂಟೆಗೆ ರಕ್ತ ಪರೀಕ್ಷೆಯ ವರದಿ ಬಂತು. ರಾತ್ರಿಯ ಎಂಟು ಗಂಟೆಗಳ ಅವಧಿಯಲ್ಲಿ ಹತ್ತು ಸಾವಿರಕ್ಕೆ ತುಸು ಅಧಿಕ ರಕ್ತಕಣಗಳು ಮಾತ್ರ ಸತ್ತಿದ್ದವು. ನನ್ನ ವೈದ್ಯ ಸಹೋದರನ ದೇಹದಿಂದ ನೀಡಿದ್ದರಲ್ಲಿ ನಲವತ್ತು ಸಾವಿರ ಕಣಗಳು ಬದುಕಿ ಉಳಿದಿದ್ದವು. ಬೆಳಿಗ್ಗೆ ಬಂದ ಮುಖ್ಯ ವೈದ್ಯರು, ಇನ್ನೊಂದು ದಿನಕ್ಕೆ ಏನೂ ಅಪಾಯವಾಗದು. ರಕ್ತಕಣಗಳು ಹದಿನೈದು ಸಾವಿರದಿಂದ ಕೆಳಗಿಳಿಯುವವರೆಗೆ ಹೊರಗಿನಿಂದ ಹೊಸ ಕಣಗಳನ್ನು ನೀಡುವುದು ಬೇಡ. ಔಷಧಿಯಲ್ಲೇ ನಿಯಂತ್ರಿಸೋಣ. ದೇಹ ವ್ಯವಸ್ಥೆ ಸಹಕಾರ ನೀಡುವ ಸೂಚನೆ ಪ್ರಾರಂಭಿಸಿದೆ ಎಂದರು. ಮತ್ತೆರಡು ದಿನಗಳಲ್ಲಿ ವೈದ್ಯರು, ನಾನು ಪ್ರಾಣಾಪಾಯದಿಂದ ಸಂಪೂರ್ಣ ಪಾರಾಗಿರುವುದಾಗಿಯೂ ಮತ್ತೊಂದು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಸಾಧ್ಯವಾಗಲೂಬಹುದು ಎಂದು ಘೋಷಿಸಿದರು. ನನ್ನ ಹೆಂಡತಿ, ಮಕ್ಕಳು, ತಂದೆ, ತಾಯಿ, ತಮ್ಮಂದಿರು, ಅತ್ತೆ, ಮಾವ, ಭಾವಂದಿರು, ನಾದಿನಿಯರು-ಎಲ್ಲರ ಮುಖದಲ್ಲೂ ನಗು, ಸಂತೋಷ, ನಿರುದ್ವಿಗ್ನತೆಯ ಭಾವ.
ಆಸ್ಪತ್ರೆಯಲ್ಲಿ ನನಗೊಂದು ಅಚ್ಚರಿಯ ವಿಚಾರ. ದೇಹಕ್ಕೆ ಅಪಾಯ ಇದ್ದಷ್ಟುಕಾಲ ಪ್ರತಿ ಗಂಟೆಗೊಮ್ಮೆ ದಾಖಲಿಸುತ್ತಿದ್ದ ರಕ್ತದ ಒತ್ತಡ ಪರೀಕ್ಷೆಯಲ್ಲಿ ಏನೂ ಏರೂ ಪೇರೂ ಇರಲಿಲ್ಲ. ಸಮಾಧಾನದ ಸಹಜ ಒತ್ತಡ. ನನ್ನದು ರಕ್ತ ಸಂಬಂಧಿ ರೋಗ. ಆದರೂ ಎಲ್ಲೂ ಉದ್ವಿಗ್ನತೆಯಿಂದ ರಕ್ತದ ಒತ್ತಡ ಹೆಚ್ಚುಕಮ್ಮಿಯಾಗಿ ಏನೇ ತೊಂದರೆ ಅಥವಾ ಆಂತರಿಕ ರಕ್ತಸ್ರಾವ ಆಗಲಿಲ್ಲ. ‘ಬೇಟೆಗಾರ’ ನನ್ನು ನಾನು ಸ್ವೀಕರಿಸಿದ ರೀತಿಕ್ರಮ)ಕಾರಣವೆ? ನಾನೇನೂ ಹೇಳಲಾರೆ. ಆದರೆ ವೈದ್ಯರುಗಳು ಹೇಳಿದರು-ನಿನ್ನ ಶಾಂತ ಸ್ವಭಾವ ಸಹಕರಿಸಿದೆ. ಗುಣವಾಗಲು ಶೇಕಡಾ ನಲವತ್ತು ಭಾಗ ನಿನ್ನ ವಿಲ್ ಪವರ್ ಕಾರಣ. ಮತ್ತೊಬ್ಬ ವೈದ್ಯರ ಪ್ರಕಾರ ಆಯುರ್ವೇದ ಶಾಸ್ತ್ರ ಹೇಳುವ ದೇಹದೊಳಗಿನ ಪ್ರಾಣಾಗ್ನಿ ನನ್ನೊಳಗೆ ಬಲಿಷ್ಠವಾಗಿದ್ದು ನನ್ನನ್ನು ಅಪಾಯದಿಂದ ಕಾಪಾಡಿದ್ದು. ಇನ್ನೊಬ್ಬ ವೈದ್ಯರ ಪ್ರಕಾರ ಸದೃಢವಾಗಿದ್ದ ನನ್ನ ಇತರ ದೇಹಾರೋಗ್ಯ ರಕ್ತದ ಈ ಆಕಸ್ಮಿಕ ಅಪಘಾತದಿಂದ ಪಾರು ಮಾಡಿದ್ದು.
ವರ್ತಮಾನ ತಿಳಿದ ನನ್ನ ಗುರುಗಳಾದ ಡಾ||ಯು.ಆರ್.ಅನಂತಮೂರ್ತಿಯವರು ಮಾರನೆಯ ದಿನ ಫೋನ್ ಮಾಡಿ, “ವಿಚಾರ ತಿಳಿಯಿತಪ್ಪಾ ವಿಜಯ. ಬದುಕಿನ ಪ್ರೀತಿ ನಮ್ಮನ್ನು ರಕ್ಷಿಸುವುದು. ಬದುಕುವ ಬಯಕೆ ಜೊತೆಗೆ ದೈವಕೃಪೆಯೂ ಇರಬೇಕು. ನೀನು ಉದ್ಯೋಗದಲ್ಲಿ ಸಾಕಷ್ಟು ಸಾಧನೆ ಮಾಡಿರುವಿ. ದೇಹವನ್ನಿನ್ನು ದಂಡಿಸಬೇಡ. ಸಂಗೀತವೆಂದರೆ ನಿನಗೆ ಮೋಹ. ಇಷ್ಟವಾದ್ದನ್ನು ಓದುತ್ತಾ ಬೇಕಾದ ಸಂಗೀತ ಕೇಳುತ್ತಾ ಸ್ವಲ್ಪ ಹಾಯಾಗಿರು’ ’ ಎಂದರು. ಸುದಿ ತಿಳಿದು ಊರಿನಿಂದ ಆಸ್ಪತ್ರೆಗೆ ಫೋನು ಮಾಡಿಸಿ ಮಾತನಾಡಿದ ಸುಬ್ರಾಯ ಚೊಕ್ಕಾಡಿಯವರಲ್ಲಿ ನಿಮಗೆ ಬೇಂದ್ರೆಯ ‘ನಾದಲೀಲೆ’ ಕವನ ಇಷ್ಟವೆ ಎಂದು ಕೇಳಿದೆ.
ಭಾಗ-೨
ಎರಡು ವಾರಗಳ ಆಸ್ಪತ್ರೆವಾಸ ಮುಗಿಸಿ ಮನೆಗೆ ಬಂದವ ‘ನಾದಲೀಲೆ’ ಸಂಕಲನ ಬಿಡಿಸಿದೆ. ಕವನದ ಭಾವ ಸಂದರ್ಭದಲ್ಲಿ ಬೇಂದ್ರೆಯವರು ಹೀಗೆ ಬರೆದಿದ್ದಾರೆ:
“ಜೀವನದ ತಾಲ-ಲಯಾನುಸಾರಿತ್ವದಲ್ಲಿ ಒಂದು ನಾದತನ್ಮಯತೆ ಇದೆ. ಮರಣದ ಭಯ ಬೇತಾಲಕ್ಕೆ ಎಳೆಯುವುದು. ಜೀವನದ ತನ್ಮಯತೆ ಬೆಳಕು, ಹೂವು, ಹರಿಣಿ, ಹಸುಗಳ ಜೀವನದಲ್ಲೂ ದಿನವೂ ಕಂಗೊಳಿಸುವುದು.’ ’
ನನ್ನ ಮನೆಯಲ್ಲಿದ್ದ ಪುಸ್ತಕಗಳಲ್ಲಿ ‘ನಾದಲೀಲೆ’ ಬಗ್ಗೆ ಯಾರು ಏನು ಬರೆದಿದ್ದಾರೆಂದು ಹುಡುಕಿದೆ. ಕೀರ್ತಿನಾಥಕುರ್ತುಕೋಟಿ, ಜಿ.ಎಸ್.ಅಮೂರ, ಯು.ಆರ್.ಅನಂತಮೂರ್ತಿ, ಶಂಕರ ಮೊಕಾಶಿ ಪುಣೇಕರ, ರಾಜೇಂದ್ರ ಚೆನ್ನಿ, ಮಲ್ಲೇಪುರಂ ಜಿ.ವೆಂಕಟೇಶ್, ಕೆ.ವಿ.ತಿರುಮಲೇಶ್, ಸಿ.ಕೆ.ನಾವಲಗಿ, ಬಿ.ಎಚ್.ಶ್ರೀಧರ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎಚ್.ಎಸ್.ರಾಘವೇಂದ್ರರಾವ್, ವಾಮನಬೇಂದ್ರೆ, ಕೆ.ಸಿ.ಶಿವಾರೆಡ್ಡಿ, ಜಿ.ಎಚ್.ನಾಯಕ, ಬೇಂದ್ರೆ ಬಗ್ಗೆ ಬರೆದಿದ್ದಾರೆ. ಆದರೆ ಅವರ ಪುಸ್ತಕಗಳಲ್ಲಿ ‘ನಾದಲೀಲೆ’ ಬಗ್ಗೆ ಮಾತಿಲ್ಲ. (ಈ ಲೇಖನ ಬರೆದ ಬಳಿಕ ‘ನಾದಲೀಲೆ’ ಬಗ್ಗೆ ಜಿ.ಎಚ್.ನಾಯಕರು ಮಾಡಿದ ಭಾಷಣದ ಅಚ್ಚಾದ ಪ್ರತಿ ಓದಲು ದೊರಕಿತು. ಪ್ರಕಟಣೆಗೆ ಮೊದಲು ಅವರ ಮಾತುಗಳನ್ನು ಈ ಲೇಖನದಲ್ಲಿ ಸೇರಿಸಿಕೊಂಡಿದ್ದೇನೆ.)
ಡಾ||ರುಕ್ಮಿಣಿ ಪರ್ವತಿ ಅವರು ‘ಅಂಬಿಕಾತನಯದತ್ತರ ಭಾವಗೀತೆಗಳು’ ಎಂಬ ಕರ್ನಾಟಕ ವಿಶ್ವವಿದ್ಯಾಲಯದ ಪಿ.ಎಚ್.ವಿ.ಪದವಿ ಪಡೆದ ಪ್ರೌಢ ಪ್ರಬಂಧದಲ್ಲಿ(ಪುಸ್ತಕ ಪ್ರಕಟಣೆ ಮೈಸೂರಿನ ಉಷಾ ಸಾಹಿತ್ಯ ಮಾಲೆ) ಈ ಪದ್ಯ ವಿಶೇಷವಾಗಿ ಚಿಕ್ಕ ಮಕ್ಕಳ ಮನಸ್ಸನ್ನು ಸೆಳೆದಿದೆ ಎಂದು ಹೇಳುತ್ತಾರೆ. ಮುಂದುವರಿದ ಅವರು ‘ಬೇಂದ್ರೆಯವರ ಪತ್ನಿ ತಾಪತ್ರಯಗಳಿಂದ ಕುಗ್ಗಿ ಹೋದಾಗ ಅವಳಿಗೆ ಧೈರ್ಯ ಕೊಡಲು ಅಂಬಿಕಾತನಯದತ್ತರು ಪ್ರಾಣಭಯವಿಲ್ಲದೆ ಮೇಯುವ ಪ್ರಾಣಿಗಳ, ಇನ್ನೊಬ್ಬರ ಸುಖಕ್ಕಾಗಿ ಅರಳುವ ಹೂವುಗಳ ಉಪಮೆಗಳಿಂದ ಕೂಡಿದ ‘ನಾದಲೀಲೆ’ “ಕವನವನ್ನು ಸೃಷ್ಠಿಸಿದ್ದಾರೆ’ ’ ಎಂದು ಬರೆಯುತ್ತಾರೆ. ಈ ರೀತಿಯಲ್ಲಿ ಬರೆಯುತ್ತಾ ಹೋದ ಅವರ ವಿಶ್ಲೇಷಣೆ ನನಗೆ ಒಪ್ಪಿಗೆಯಾಗಲಿಲ್ಲ, ಮಾತ್ರವಲ್ಲ ಇಂತಹ ಬರಹಗಳು ಕವನಕ್ಕೆ ನ್ಯಾಯ ನೀಡುವುದಿಲ್ಲ ಎಂದೂ ಅನಿಸಿತು.
ಡಾ||ಡಿ.ಆರ್.ನಾಗರಾಜ್ ಅವರು ಬೇಂದ್ರೆಯವರ ‘ನೃತ್ಯಯಜ್ಞ’ ಕವನದ ಬಗ್ಗೆ ಬರೆಯುತ್ತಾ (ಅಮೃತ ಮತ್ತು ಗರುಡ ವಿಮರ್ಶಾ ಸಂಕಲನ) ‘ನಾದಲೀಲೆ’ ಕುರಿತು ಹೀಗೆ ಹೇಳುತ್ತಾರೆ:
‘ನಾದಲೀಲೆ’ ಯಲ್ಲಿ ಕೊನೆಯ ತನಕ ಅಪಾಯದ, ಬೇಟೆಗಾರನ ಭೀತಿ ಮುಂದುವರಿದು ಪರಿವರ್ತನೆಯಾಗುತ್ತದೆ. ‘ಬೇಟೆಯಲ್ಲ, ಆಟವೆಲ್ಲ, ಬೇಟದ ಬಗೆ’ ಎಂಬ ಅರಿವು ಮೂಡಿ ಅದು ಮೂಲ ಪ್ರೇಮದಲ್ಲಿ ಒಂದಾಗುತ್ತದೆ. ಚಕ್ರ ತಿರುಗಿ ಸಾಮರಸ್ಯಕ್ಕೆ ನಿಲ್ಲುತ್ತದೆ. ಕುತೂಹಲದ ಸಂಗತಿ ಎಂದರೆ, ಈ ವಿನ್ಯಾಸಕ್ಕೆ ವಿರುದ್ಧವಾದ ಕವನಗಳೂ ಬೇಂದ್ರೆಯವರಲ್ಲಿ ಸಾಕಷ್ಟಿವೆ. ಅಂಥ ವಿಶೇಷ ಕೃತಿ ‘ನೃತ್ಯಯಜ್ಞ’ .
ಡಾ||ಜಿ.ಎಸ್.ಶಿವರುದ್ರಪ್ಪನವರು, ಬೇಂದ್ರೆ:ಮಂಥನ ಚರ್ಚೆಯಲ್ಲಿ(ಅಡಿಗ,ಕಣವಿಯವರೊಡನೆ ಶೂದ್ರ-ನವೆಂಬರ್ ೧೯೮೧ನೇ ಇಸವಿ ಸಂಚಿಕೆ)ನಾದಲೀಲೆ ಸಂಕಲನದ ಕವನಗಳನ್ನು ಬಹಳ ಜನ ಗಮನಿಸಲಿಲ್ಲ ಎನ್ನುತ್ತಾರೆ. ಮುಂದುವರಿದ ಜಿ.ಎಸ್.ಎಸ್. ನಾದಲೀಲೆ ತುಂಬಾ ‘ಮಿಸ್ಟಿಕ್’ ಕವನಗಳಿವೆ ಎಂದು ಹೇಳುತ್ತಾರೆ. ಜಿ.ಎಸ್.ಎಸ್ ಹೇಳುವ ಮಾತುಗಳು: “ತನ್ನ ಒಳಗಿನ ಅಂತರಂಗ, ಅದರ ತಾಕಲಾಟಗಳು ಅನ್ನೋದು ಕೇವಲ ಸಾಮಾಜಿಕವದದ್ದಾಗಲೀ, ಕೌಟುಂಬಿಕವಾದದ್ದಾಗಲೀ ಮಾತ್ರ ಆಗುವುದಿಲ್ಲ. ಒಂದು ಮನಸ್ಸು ಬೇರೊಂದು ಊigheಡಿ ಒiಟಿಜಅಂತ ಏನು ಕರಿತೀವಿ ಅದರೊಂದಿಗೆ ಸಂವಾದ ಸ್ಥಾಪಿಸಿಕೊಳ್ಳುವ ಸಂದರ್ಭದ ಅನೇಕ ತಾಕಲಾಟಗಳನ್ನು ನಾವು ಆ ಪದ್ಯಗಳಲ್ಲಿ, ಇಮೇಜ್‌ಗಳಲ್ಲಿ ಕಾಣ್ತೀವಿ. ಮೊದಲ ಪದ್ಯ ‘ನಾದಲೀಲೆ’ ಯಲ್ಲೂ ಅಷ್ಟೇ: ‘ಕಂಗೊಳಿಸುವ ಕೆಂಪು ಮುಂದೆ ಕಂಗೆಡಿಸುವ ಮಂಜು ಹಿಂದೆ’ ಸಾಲಿನಲ್ಲಿ ಮನುಷ್ಯನ ಅಸ್ತಿತ್ವದ ಬಗ್ಗೆ ಚರ್ಚೆ ಮಾಡ್ತಾರೆ. ಇxisಣeಟಿಛಿe ಕುರಿತು, ಹಿಂದನ್ನು ಕುರಿತು, ಮುಮ್ದನ್ನು ಕುರಿತು, ಇದರಲ್ಲಿ ನಮ್ಮ ದಾರಿ ಏನು ಅನ್ನೋದನ್ನ ಕುರಿತು, ಒಂದು ರೀತಿಯ ಅನುಭಾವಿಕ ಅನ್ವೇಷಣೆ ಕೂಡ ಅದರಲ್ಲಿ ಆಗುತ್ತದೆ.’ ’
ಪ್ರೊ|| ಜಿ.ಎಚ್.ನಾಯಕರು ‘ನಾದಲೀಲೆ’ ಯನ್ನು ಬೇಂದ್ರೆಯವರ ಪ್ರಾತಿನಿಧಿಕ ಕವನಗಳಲ್ಲಿ ಒಂದೆಂದು ಭಾವಿಸುತ್ತಾರೆ. ಬೇಂದ್ರೆಯವರ ಶಕ್ತಿ, ಮಿತಿ ಎರಡೂ ಬಿಂಬಗೊಳ್ಳುವಂತಹ ಕವನಗಳಲ್ಲಿ ಇದೂ ಒಂದೆಂದು ಜಿ.ಎಚ್.ನಾಯಕರು ತಮ್ಮ ಅನೇಕ ಭಾಷಣಗಳಲ್ಲಿ ಹೇಳುತ್ತಾ ಬಂದಿದ್ದಾರೆಂದು ನನ್ನ ಅನೇಕ ಮಿತ್ರರು ತಿಳಿಸಿದರು.( ಬೇಂದ್ರೆ ಕುರಿತಾದ ಅವರ ಭಾಷಣ ಕೇಳುವ ಅವಕಾಶ ನನಗೆ ಇನ್ನೂ ದೊರಕಿಲ್ಲ)ಜಿ.ಎಚ್.ನಾಯಕರು ಮಂಡ್ಯದ ಸರ್ಕಾರಿ ಮಹಿಳಾ ಮಹಾವಿದ್ಯಾಲಯದ ‘ಸಾಹಿತ್ಯಕೂಟ’ ದಲ್ಲಿ ‘ಬೇಂದ್ರೆಕಾವ್ಯ:ನಾದ,ಅರ್ಥ, ಅರಿವು’ ಎಂಬ ಉಪನ್ಯಾಸವನ್ನು ೨೩-೨-೨೦೦೧ರಂದು ನೀಡಿದ್ದರು. ಅಲ್ಲಿ ‘ನಾದಲೀಲೆ’ ಕವನ ಕುರಿತು ಮಾಡಿದ ಅರ್ಥವ್ಯಾಖ್ಯಾನ, ಅದೇ ಕಾಲೇಜಿನ ವಾರ್ಷಿಕ ಪತ್ರಿಕೆಯಲ್ಲಿ(ನೆಲದಸಿರಿ-೨೦೦೧)ಪ್ರಕಟವಾಗಿದೆ. ‘ನಾದಲೀಲೆ’ ಯ ನಾಲ್ಕು ಪುಟಗಳ ಈ ಪ್ರಾಯೋಗಿಕ ವಿಮರ್ಶೆಯಲ್ಲಿ ಜಿ.ಎಚ್.ನಾಯಕರ ವಿಮರ್ಶೆಯ ಮೂಲ್ಯಮಾಪನ ಗುಣವೂ ಗೋಚರಿಸುತ್ತದೆ. ಅದನ್ನು ಹೀಗೆ ಸಂಗ್ರಹಿಸಬಹುದು:
“ಈ ಕವನದಲ್ಲಿ ನಾದ ಗುಣದ ಸಮೃದ್ಧಿ ಇದೆ. ಕವನ ಪ್ರತಿಮಾ ವಿಧಾನದಲ್ಲಿ ಬೆಳೆದಿದೆ. ಚಿತ್ರವತ್ತಾದ ಸನ್ನಿವೇಶಗಳ ಸೃಷ್ಟಿ ಇದೆ. ಮೊದಲಿನಿಂದ ಕೊನೆಯವರೆಗೂ ಧ್ವನಿಶಕ್ತಿಯು ಪ್ರತಿಮೆಗಳ ಮೂಲಕ, ಮಾತ್ರವಲ್ಲ ಪದ ಪ್ರಯೋಗಗಳಲ್ಲಿಯೂ ಅನುರಣಿಸುತ್ತಿದೆ. ಕವನದಲ್ಲಿ ಅನುಭವವನ್ನು ಅರಿವಿನ ನೆಲೆಗೆ ವಿಸ್ತರಿಸಿ ತಾತ್ವಿಕ ನಿಲುವನ್ನು ಪ್ರತಿಪಾದಿಸುವ ಅಥವಾ ತಾತ್ವಿಕ ತಿಳಿವಳಿಕೆಯನ್ನು ಹಾಯಿಸುವ ಉತ್ಸಾಹ ಉದ್ದೇಶ ಇದೆ…..
“ಕವನದ ಮೊದಲ ಮೂರು ಪದ್ಯಭಾಗಗಳ ಕ್ರಿಯಾಕೇಂದ್ರವು ಅನುಕ್ರಮವಾಗಿ ಕಾಡಿನಲ್ಲಿ, ನಾಡಿನಲ್ಲಿ, ಬೀಡಿನಲ್ಲಿ ಇದೆ. ಕೊನೆಯ ಪದ್ಯಭಾಗದಲ್ಲಿ ಹಿಂದಿನ ಪದ್ಯಭಾಗಗಳಲ್ಲಿ ಧ್ವನಿತವಾಗುತ್ತ ಬಮ್ದದ್ದಕ್ಕೆ ತಾತ್ವಿಕ ವ್ಯಾಖ್ಯಾನವನ್ನು ನೀಡಲಾಗಿದೆ. ಈ ಅರಿವಿನ ಸ್ವರೂಪ ಯಾವ ಬಗೆಯದು?….
“ಈ ಕವನದ ಚಿತ್ರಕ ಶಕ್ತಿ, ಪ್ರತಿಮಾ ವಿಧಾನದಲ್ಲಿ ಕವನ ಕಟ್ಟುವ ಕಲೆಗಾರಿಕೆ, ಧ್ವನಿಶಕ್ತಿಯನ್ನು ಪರಿಣಾಮಕಾರಿಯಾಗಿ ದುಡಿಸಿಕೊಳ್ಳುವ ಪ್ರತಿಭಾಶಕ್ತಿ ಅನನ್ಯವಾಗಿದೆ; ಸ್ವೋಪಜ್ಞವಾಗಿದೆ. ಆದರೆ ಕವನ ಪರಿಣಾಮಗೊಳಿಸಿದ ಅರಿವು ಅನನ್ಯ, ಸ್ವೋಪಜ್ಞ ಎನ್ನಬಹುದೆ? ಇದು ಇಲ್ಲಿ ಎದುರಾಗುವ ಪ್ರಶ್ನೆ.’ ’
ಬೇಂದ್ರೆ ಬಗ್ಗೆ ಬಹಳಷ್ಟು ಬರೆದಿರುವ ಪ್ರೊ||ಕೀರ್ತಿನಾಥಕುರ್ತುಕೋಟಿಯವರು ‘ನಾದಲೀಲೆ’ ಬಗ್ಗೆ ಯಾಕೆ ಬರೆದಿಲ್ಲ ಎಂದು ನನಗೆ ಬಹಳ ಕುತೂಹಲವಾಯಿತು. ಧಾರವಾಡದ ಅವರ ಮನೆಗೆ ಫೋನು ಮಾಡಿದೆ. ಆ ಹೊತ್ತಿಗೆ ಅವರೂ ನನ್ನ ‘ನಾದಲೀಲೆ’ ಅನುಭವವನ್ನು ಸಹಾನುಭೂತಿಯಿಂದ ಅರ್ಥಮಾಡಿಕೊಳ್ಳುವ ಮನಃಸ್ಥಿತಿಯಲ್ಲಿದ್ದರು. ಜ್ವರದಿಂದ ಆಸ್ಪತ್ರೆ ಸೇರಿದ್ದ ಅವರ ಪತ್ನಿ ಒಂದು ದಿನ ಕೋಮಾದಲ್ಲಿದ್ದು ಆಗ ತಾನೆ ಕಣ್ಣುಬಿಟ್ಟಿದ್ದರು. ನಿರಂತರ ಡಯಾಲಿಸಿಸ್ ಚಿಕಿತ್ಸೆಯಲ್ಲಿರುವ ಅವರ ಒಬ್ಬ ಪುತ್ರ ರಕ್ತದ ಒತ್ತಡ ಏರುಪೇರಾಗಿ ಆತಂಕದಿಂದ ಅಸ್ಪತ್ರೆಯಲ್ಲಿದ್ದು ಆಗತಾನೆ ಹಿಂತಿರುಗಿದ್ದರು. “ಆ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಲ್ಲೆ. ಕಾವ್ಯವೂ ಲೈಫ್ ಸೇವರ್೧೩ ಐiಜಿe sಚಿveಡಿ) ಜೀವರಕ್ಷಕ ಆಗುವುದು ಹೀಗೆ’ ’ ಎಂದರು. ಈ ಕವನದ ಬಗ್ಗೆ ನೀವು ಯಾಕೆ ಏನೂ ಈ ತನಕ ಬರೆದಿಲ್ಲ ಎಂದು ಪುನಃ ಕೇಳಿದರೆ, ನನ್ನನ್ನೆ ಬರೆಯುವಂತೆ ಪ್ರೇರೇಪಿಸಿದರು.
ನನ್ನ ಪ್ರಜ್ಞೆಯಲ್ಲಿ ಹೇಗೋ ಇಳಿದ ಒಂದು ಕವನ ಹೀಗೆ ನನಗೆ ಒದಗಿ ಬಂದಿದೆ. ವಿಮರ್ಶಾಪಾಂಡಿತ್ಯದ ದೃಷ್ಟಿಯಿಂದ ಈ ರೀತಿ ಕಾವ್ಯಕ್ಕೆ ಪ್ರತಿಕ್ರಿಯಿಸುವುದು ಸರಿಯೋ ತಪ್ಪೋ ಎಂಬುದು ನನಗೆ ಇಲ್ಲಿ ಮುಖ್ಯವಲ್ಲ. ಒಂದು ವಿಶಿಷ್ಟ ಸಂದರ್ಭದಲ್ಲಿ ನಾನು ಅನುಭವಿಸಿದ ‘ನಾದಲೀಲೆ’ ಕವನದ ಸ್ಪರ್ಶಸುಖವನ್ನು ಹೀಗೆ ಹಂಚಿಕೊಳ್ಳುವುದು ಅದರ ಅಂತಃಸತ್ವವನ್ನು ಗುರುತಿಸಿದ ಒಂದು ರೀತಿ ಎಂದು ನಾನು ತಿಳಿಯುತ್ತೇನೆ. ಇದರಿಂದಾಗಿ, ಬದುಕಿನ ಜೀವಂತವಾದ ಇತರ ಸಹಜ ಸಂದರ್ಭಗಳಲ್ಲಿ ಉತ್ತಮ ಕಾವ್ಯಾನುಭವ ಸಿದ್ಧಿಸಲು ಏನೂ ತೊಂದರೆಯಾಗದು. ಡಾ||ಯು.ಆರ್. ಅನಂತಮೂರ್ತಿಯವರು ಹೇಳಿದಂತೆ ಪೂರ್ವಾಪರ) “ಬೇಂದ್ರೆ, ಮುಖ್ಯವಾಗಿ ಪ್ರಜ್ಞೆಯ ವಿವಿಧ ಅವಸ್ಥೆಗಳನ್ನು ಕನ್ನಡದಲ್ಲಿ ಅನನ್ಯವೆಂಬಂತೆ ಸೃಷ್ಟಿಸಿರುವ ಕವಿ.’ ’
ಬೇಂದ್ರೆ ಕಾವ್ಯಾನುಭವದ ಎದುರು ನನ್ನ ಅನುಭವದ ನಿರೂಪಣೆ ಸಪ್ಪೆ ಅನಿಸಿದರೆ ಅದಕ್ಕೆ ಕಾವ್ಯದ ಶ್ರೇಷ್ಠತೆಯೇ ಕಾರಣ. ಕವಿ ಅನುಭವವೊಂದನ್ನು ಭಾಷೆಯಲ್ಲಿ ಸೃಜಿಸಿದಾಗ ಕಾವ್ಯಾನುಭವದ ಸೃಷ್ಟಿಕರ್ತನನ್ನೇ ಮೀರಿ ಪಡೆಯುವ ಆಳ, ವೈಶಾಲ್ಯಗಳ ಬಗ್ಗೆ ಕಾವ್ಯ ಮೀಮಾಂಸೆಯಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಕಾವ್ಯಾನುಭವ ಹಾಗೂ ಅದರ ಅನುಭವದ ಪರಿಕಲ್ಪನೆಗಳಿಗೆ ಸಂಬಂಧಿಸಿದ ವಿಚಾರವದು. ಇಲ್ಲಿ ಬೇಂದ್ರೆ ಕಾವ್ಯ ಇಂದಿನ ಅನುಭವದ ನಿಕಷದಲ್ಲೂ ಪರೀಕ್ಷಿಸಿಕೊಂಡು ಶ್ರೇಷ್ಠ ಕಾವ್ಯದ ಸಾರ್ವಕಾಲಿಕ ಸತ್ಯವನ್ನೇ ಪ್ರತಿಪಾದಿಸಿದೆ.೧೪
ಟಿಪ್ಪಣಿಗಳು ಮತ್ತು ಉಲ್ಲೇಖ:
೧. ಕಳೆದ ದಶಕದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕೇಂದ್ರ ನೃತ್ಯ ಅಕಾಡೆಮಿಯವರು ವಿಭಿನ್ನ ಕೊರಿಯಾಗ್ರಫಿ ನಾಟ್ಯಪ್ರದರ್ಶನ ಉತ್ಸವವನ್ನು ಏರ್ಪಡಿಸಿದ್ದರು. ಅದರಲ್ಲಿ ಕೇರಳದ ಕೊರಿಯಾಗ್ರಫರ್ ಒಬ್ಬರು *ಹೆಸರು ಯಾವುದೂ ನೆನಪಾಗುತ್ತಿಲ್ಲ)ಸಾವನ್ನು ಕೇಂದ್ರವಾಗಿಟ್ಟುಕೊಂಡು ಬಹುಸುಂದರವಾದ ಕೊರಿಯಾಗ್ರಫಿ ನಾಟ್ಯಪ್ರದರ್ಶಿಸಿದ್ದರು. ನಾನು ಮತ್ತು ಎಂ.ಟಿ.ಯ ಗೆಳೆಯ ಕೆ.ರಾಮದಾಸ್ ಆ ಎಲ್ಲಾದಿನಗಳ ಪ್ರದರ್ಶನ ನೋಡಿದ್ದೆವು.
ಸಾವಿನ ಬಗೆಗಿನ ಆ ಪ್ರದರ್ಶನದಲ್ಲಿ-ಕೈಗಾರಿಕೆ,ಅಪಘಾತ, ರೋಗ ಹೀಗೆ ಬದುಕಿನ ವಿವಿಧ ಮಜಲುಗಳಲ್ಲಿ ಹೊಕ್ಕು ಹೊರಡುವ ಸಾವು, ಆದರೆ ಧೀರನಾದ ಪೂರ್ಣಾಯುಷಿ ಒಬ್ಬ, ಸಹಸ್ರ ಚಂದ್ರರನ್ನು ಕಾಣುವ ಚೈತನ್ಯ ಉಳ್ಳವನು, ಬಿಳಿ ವಸ್ತ್ರಧಾರಿಯಾಗಿ, ಕಪ್ಪುಬಟ್ಟೆ ತೊಟ್ಟ ಸಾವು ವಿವಿಧ ರೀತಿಯಲ್ಲಿ ಪಂಥಾಹ್ವಾನದ ಪಟ್ಟಿನಂತೆ ವಿಭಿನ್ನ ಹೆಜ್ಜೆ ಹಾಕಿ ಕುಣಿದಾಗ ತಾನೂ ಮೃತ್ಯುವಿನ ಕೈ ಅಮುಕಿ ಹಿಡಿದು ಸಮರಸದ ತಾಳಲಯದಲ್ಲಿ ನರ್ತಿಸುತ್ತಾನೆ. ಅವನು ಸಾವನ್ನೂ ಮಣಿಸುವ ಆಶಯಪಾತ್ರ. ಬಹು ಅದ್ಭುತವಾಗಿ ಮೂಡಿ ಬಂದಿದ್ದ ಆ ನೃತ್ಯ ಸಂಯೋಜನೆ ಅಪರೋಕ್ಷವಾಗಿ ‘ನಾದಲೀಲೆ’ ಆಸ್ಪತ್ರೆಯಲ್ಲಿ ನನ್ನೊಳಗೆ ಹರಡಿಕೊಂಡ ಕ್ರಮದಲ್ಲಿ ಎಲ್ಲೋ ಸೇರಿಕೊಂಡಿದ್ದಿರಬಹುದು ಎಂದು ಈಗ ಅನಿಸುತ್ತದೆ.
೨. ಗೋಪಾಲಕೃಷ್ಣ ಅಡಿಗರ ‘ವರ್ಧಮಾನ’ ಕವನದ ಕೊನೆಯ ನಾಲ್ಕು ಸಾಲುಗಳು:
“ಗಹ್ವರದ ಮುಖ ಅಲ್ಲಿ;ಆಚೆ ಬಯಲ ಬರಾವು;
ಹಣ್ಣು ಹಂಪಲು ಹಸುರ ಬಲ್ಲೆ, ಬಲ್ಲೆ;
ಜೀವನನಿಧಾನಶೃತಿ ಶುದ್ಧಿ ಮೊರೆವ ಕರಾವು;
ಹನುಮದ್ವಿಕಾಸಕ್ಕೆ ಇಲ್ಲ ಎಲ್ಲೆ.’ ’ ಎಂಬಲ್ಲಿಯೂ ಕತ್ತಲೆ ಕಳೆದ, ಸುಂದರ ಬೆಳಕು, ಹಸುರು ಹಾಗೂ ಜೀವಶಕ್ತಿಯ ವಿಕಾಸದ ಇತ್ಯಾತ್ಮಕ*ಠಿosiಣive) ಸ್ವೀಕಾರ ಇದೆ ಎಂಬುದನ್ನು ಗಮನಿಸಬೇಕು.
೩. ಗೋಪಾಲಕೃಷ್ಣ ಅಡಿಗರ ‘ಭಾವತರಂಗ’ ಸಂಕಲನದ ‘ಇದು ಬಾಳು’ ಕವನದ ಐದನೇ ಭಾಗ.
“ಆಶೆಯೆಂಬ ತಳವೊಡೆದ ದೋಣಿಯಲಿ
ದೂರತೀರಯಾನ;
ಯಾರಲೀಲೆಗೋ ಯಾರೊ ಏನೊ ಗುರಿ
ಯಿರದ ಬಿಟ್ಟಬಾಣ!’ ’
ಇಲ್ಲಿ ಅಡಿಗರು ಗುರಿ-ಇರದೆ ಇದನ್ನು ‘ಗುರಿಯಿರದೆ’ ಎಂಬ ಯಕಾರ ಆಗಮಸಂಧಿಯನ್ನು ಉಳಿಸಿಯೂ ಸಂಯೋಜನೆಯನ್ನು ಒಡೆದು ಎರಡು ವಾಕ್ಯಗಳಲ್ಲಿ ಇಟ್ಟು ‘ಯಾರಲೀಲೆಗೋ ಯಾರೊ ಏನೊ ಗುರಿ’ ಎಂದು ಒಂದು ಅರ್ಥವನ್ನು ಉಳಿಸಿಕೊಳ್ಳುತ್ತಾರೆ. ಇನ್ನೊಂದು ಅರ್ಥದಲ್ಲಿ ‘ಗುರಿಯಿರದೆ ಬಿಟ್ಟಬಾಣ’ ಎಂದಾಗ ವಿಧಿವಾದದ ಸಕಲ ನಿಯಂತ್ರಣ ಮೂಲತ್ವವನ್ನೇ ಪ್ರಶ್ನಿಸುತ್ತಾರೆ. ಈ ವಿವರಗಳೆಲ್ಲಾ ‘ನಾದಲೀಲೆ’ ಯ ‘ಬೇಟೆಗಾರ’ ನ ಪತ್ತೆಯಲ್ಲಿ ತೊಡಗಿದ್ದ ಮನಸ್ಸಿಗೆ ಹೊಳೆದಿರಲಿಲ್ಲ.
೪. ‘ಗರಿ’ ಕವನ ಸಂಕಲನದ ‘ಕುಣಿಯೋಣು ಬಾರ!’ ಎಂಬೊಂದು ನಲ್ವಾಡುವಿನಲ್ಲಿ ಬೇಂದ್ರೆಯ ಸಾಲುಗಳು:
“ನಾನಲ್ಲ
ನೀನಲ್ಲ
ನನ್ನಲ್ಲಿ ನೀನಿಲ್ಲ
ಸಾವಿನ ನೋವಿಲ್ಲ!ಕುಣಿಯೋಣು ಬಾರ
ಕುಣಿಯೋಣು ಬಾ||
ಇದ್ದದ್ದು ಮರೆಯೋಣ
ಇಲ್ಲದ್ದು ತೆರೆಯೋಣ
ಹಾಲ್ಜೇನು ಸುರಿಯೋಣ! ಕುಣಿಯೋಣು ಬಾರ
ಕುಣಿಯೋಣು ಬಾ||’ ’
ಕುಣಿಯತೊಡಗಿದಾಗ ಸಾವು ಮರೆಯಾಗುತ್ತದೆ*ಸಾವಿನ ನೋವಿಲ್ಲ).ನಾಟ್ಯ ಬೇಂದ್ರೆಗೆ ಒಂದು ಲಯಕಾರಿ ಸಾಮರಸ್ಯ. ‘ನೃತ್ಯಯಜ್ಞ’ ಕವನದ ಈ ಸಾಲುಗಳನ್ನು ಗಮನಿಸಬಹುದು.
“ಜಗವೆಲ್ಲವೂ ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ
ಸಖಿ ಸಂಮುಖ ತಲ್ಲೀನತೆಯಲಿ ಏಕಾಕಿ’ ’
“ಅಕ್ಷರದೀ ಬ್ರಹ್ಮಕೃತ್ಯ ನಿತ್ಯದಿ ಈ ನೃತ್ಯ
ಚಿತ್ರದಲಿ ಚಿತ್ರಿಸುತಿರೆ, ಮರ್ತ್ಯಮಹುದಮರ್ತ್ಯ’ ’
“ಪುರುಷನಿದಿರು ಪ್ರಕೃತಿ ಕುಣಿಯುವುದೆಂದು ಸಾಂಕ್ಯಸೂತ್ರ
ಪ್ರಕೃತಿ ಸಾಕ್ಷಿ ಪುರುಷ ನಾಟ್ಯ ನವೋನವ ವಿಚಿತ್ರ’ ’
‘ನೃತ್ಯಯಜ್ಞ’ ದ ಬಗ್ಗೆ ಡಿ.ಆರ್.ನಾಗರಾಜ, ಮೊಕಾಶಿ, ಕುರ್ತುಕೋಟಿ ಚರ್ಚಿಸಬಲ್ಲ ಮಾತುಗಳನ್ನು ಬರೆದಿದ್ದಾರೆ. ಅದರ ಚರ್ಚೆ ಈಗ ಬೇಡ. ಮುಖ್ಯವಾದ ಮಾತೆಂದರೆ ಬೇಂದ್ರೆಗೆ ‘ನೃತ್ಯ’ ಎಂದೂ ಒಬ್ಬನ ನಾಟ್ಯವಾಗಿರಲೇ ಇಲ್ಲ. ‘ನಾಟ್ಯ’ ಒಂದು ‘ಪ್ರವೃತ್ತಿ’ ಯಾಗಿ ಅದು ವಿಸ್ತರಿಸುತ್ತಾ ಪ್ರಕೃತಿ-ಪುರುಷರ ನೆಲೆಗೂ; ಅದನ್ನು ದಾಟಿದ ತಾತ್ವಿಕ ನೆಲೆಗಳಿಗೂ ವಿಸ್ತರಿಸಿದೆ.
‘ನಾಟ್ಯ’ ಒಂದು ದೈಹಿಕ ಚಲನೆ ಹಾಗೂ ಮಾನಸಿಕ ‘ತನ್ಮಯತೆ’ ಎರಡು ಕ್ರಿಯೆಗಳನ್ನೂ ಉದ್ದೀಪಿಸುತ್ತದೆ. ಈ ತಲ್ಲೀನತೆಯಲ್ಲಿ ಕುಣಿತದ ಜೀವ ಹೊರಗಿನ ಚರ ಜಗತ್ತಿನ ಜೊತೆ ಸಾಮರಸ್ಯ ಪಡೆಯುತ್ತದೆ. ಮನುಷ್ಯ ಭೂಮಿಯ ಮೇಲೆ ಚಲನೆಯಲ್ಲಿದ್ದಾನೆ. ಹಾಗೇ ಭೂಮಿ ಸೂರ್ಯನ ಸುತ್ತ, ಸೂರ್ಯ ಮತ್ಯಾವುದೋ ನಕ್ಷತ್ರದ ಕಡೆ ಚಲಿಸುತ್ತಿದ್ದಾನೆ. ಸಮಸ್ತ ಬ್ರಹ್ಮಾಂಡವೇ ಒಂದು ಚಲನೆಯ ಜಗತ್ತು. ಅದರಲ್ಲಿ ಚಲಿಸುತ್ತಿರುವ ಮನುಷನ ಒಳಗೂ, ಉಸಿರಾಟ, ರಕ್ತಪರಿಚಲನೆ, ಮನಸ್ಸಿನ ಯೋಚನೆಗಳ ಚಲನೆ. ಜೊತೆಗೆ ಹಗಲು ರಾತ್ರಿ, ಗಾಳಿ ನೀರುಗಳ ಚಲನೆ. ಇಂತಹ ವಿಶ್ವದ ನಿರಂತರ ಚಲನೆ ಜೊತೆ ಸಮಶೃತಿಯಲ್ಲಿದ್ದಾಗ ಮಾತ್ರ ಬದುಕು. ಆಗ ಅದು ನಾಟ್ಯ. ಅಂತಹ ಕುಣಿತದಲ್ಲಿ ಸಾವಿನ ನೋವಿಲ್ಲ, ಈ ವಿಶ್ವ ಚಲನೆ *ನಾಟ್ಯ)ಯ ಸಮಶೃತಿ ತಪ್ಪಿದಾಗ ಅದು ಮರಣಮುಖವಾಗಬೇಕಾಗುತ್ತದೆ.
೫. ಬೇಂದ್ರೆಯವರ ‘ಸಂಚಯ’ ಕವನ ಸಂಕಲನದ ‘ಚಾಂಗದೇವ ಪಾಸಷ್ಟಿ’ ಕವನದ ಈ ಕೆಳಗಿನ ಸಾಲಿಗಳನ್ನೂ ನೆನಪಿಸಿಕೊಳ್ಳಬಹುದು.
“ಕಡಲು ಕಡಲು ಒಂದೊಡಲು ಆಗಿ ಪ್ರಳ-
ಯದಲಿ ನೀರೆ ನೀರು
ಉಗಮ ಸಂಗಮಗಳೆರಡ ನುಂಗಿ ನಿ-
ನ್ನೊಳಗೆ ನೀನೇ ಸೇರು’ ’
೬. ಕಾವ್ಯಾನುಭವದ ಭಿನ್ನತೆಯನ್ನು ಗುರುತಿಸಲು ಬೇಂದ್ರೆಯವರ ‘ಜೀವಲಹರಿ’ ಸಂಕಲನದ ‘ನಾದಬೇಕು’ ಎಂಬ ಕವನದ ಜೊತೆ ಹೋಲಿಸಬಹುದು. ‘ನಾದಬೇಕು’ ಕವನದಲ್ಲಿ ‘ನಾದ’ ದ ಹೇಳಿಕೆಗಳಿವೆ. ‘ಜೀವಲಹರಿ’ ಸಂಕಲನ ೧೯೫೭ರಲ್ಲಿ ಅಂದರೆ ನಾದಲೀಲೆ ಬಂದು ೧೯ ವರುಷಗಳ ಬಳಿಕ ಪ್ರಕಟವಾಗಿದೆ. ‘ನಾದಬೇಕು’ ಕವನದಲ್ಲಿ ‘ನಾದ’ ದ ಮೂಲಕ ತಾತ್ವಿಕ ಆಳ ಅಗಲಗಳನ್ನು ವಿಸ್ತರಿಸಿ ಹೇಳುವ ಪ್ರಯತ್ನ ಇದೆ. ಆದರೆ ಇದು ‘ನಾದಲೀಲೆ’ ಯಂತಹ ಯಶಸ್ವಿ ಕವನ ಅಲ್ಲ. ಅಡಿಗರು ಬೇಂದ್ರೆ ಬಗ್ಗೆ ಹೇಳಿದ ತತ್ವಪದದ *ಶೂದ್ರ ನವೆಂಬರ್ ೧೯೮೧ನೇ ಸಂಚಿಕೆ)ನೆನಪು ಬರುವಂತಿದೆ.
೭. ‘ಕಣ್ಣಿನಾರತಿ’ ಹಾಗೂ ‘ಎತ್ತಿಒತ್ತಿಬಂತು ಜೀವ’ ತನ್ನ ವಿಶೇಷಾರ್ಥಗಳನ್ನು ಗುಪ್ತವಾಗಿ ಸೂಚಿಸುತ್ತದೆ. ಮೂಲರತಿಯ ‘ತೇವ’ ಎಂಬ ಪದಕ್ಕೆ ಲೈಂಗಿಕ ಸಂದರ್ಭದ ಒಂದು ಅರ್ಥವ್ಯಾಪ್ತಿಯೂ ಇದೆ. ಆ ಅರ್ಥದಲ್ಲಿ ‘ಒತ್ತಿ ಬಂತು ಜೀವ’ ಗರ್ಭಾಂಕುರವನ್ನೂ ಸೂಚಿಸಬಲ್ಲದು. ಆ ‘ತೇವ’ ಸೋಕಲು ಶಿವನ ಹಣೆಯ ಸುಡುವ ಕಣ್ಣಿನ ಬೆಂಕಿ ಮಾಯವಾಗಿ ಅದು ಆರತಿಯಾಗುತ್ತದೆ. ಆ ಕಣ್ಣಿನ ರತಿ ಎತ್ತಿ ಎತ್ತಿ ಜೀವವನ್ನು ಬರಿಸುತ್ತದೆ. ಆಗ ಅನಂಗನ ಹುಟ್ಟು. ಗಂಡು-ಹೆಣ್ಣು ಒಂದಾಗುವ ಮದುವೆಯಲ್ಲಿ ಮದುಮಕ್ಕಳಿಗೆ ಎತ್ತುವ ಆರತಿ ಎಲ್ಲರ ಸಮ್ಮುಖದ ವಿಧ್ಯುಕ್ತ ಆಚರಣೆ. ಆದರೆ ಮೂಲರತಿಯ ತೇವವೇ ಜೀವ ಸಂಸ್ಕಾರಗೊಂಡಾಗ ಕಣ್ಣಿನಾರತಿ ಸೌಂದರ್ಯವನ್ನು ಬೆಳಗುತ್ತದೆ. ಕಾಮ, ಪ್ರೇಮ, ಪ್ರಕೃತಿ ಸ್ವಭಾವಗಳು ಸೃಷ್ಟಿಯ ಸೌಂದರ್ಯದಲ್ಲಿ ಸತ್ತು ಹುಟ್ಟುವ ಬಗೆ ಇದು. ಸುಟ್ಟು ಹುಟ್ಟುವ ಈ ಪ್ರಕ್ರಿಯೆ ಸಾವನ್ನು ಮರೆಸಿ ಸೌಂದರ್ಯವನ್ನೂ ಸೃಷ್ಟಿಶೀಲತೆಯನ್ನೂ ಸ್ಥಾಪಿಸುತ್ತದೆ. ಸಾವನ್ನು ಮರೆತು ಸಾಗುವ ಸೃಷ್ಟಿಯೇ ನಿರಂತರವಾದ ಜೀವ ಪ್ರವಾಹ. ಸೃಷ್ಟಿಯೇ ಒಂದು ಆಟ *ಲೀಲೆ) ಹಾಗೂ ಪಾಟ *ಹಾಡು,ನೀತಿ). ಕವನದ ಮುಂದಿನ ಮೂರು ಸಾಲುಗಳು:
ಎದೆಯ ತೊರಿಸಿ ಕಣ್ಣ ತೆರಿಸಿ ಹೋದ ಮಾಟ ನೋಟ
ಮರಳಿ ಬಂದು ಕಣ್ಣ ಕೊಟ್ಟು ಹೃದಯ ಜೀವ ಕೂಟ
ಸೃಷ್ಟಿಯನ್ನೇ ನಡೆಸುತಿಹನು ಆಗಿ ಆಟ ಪಾಟ||
೮. ಸಂಗೀತ ಶಾಸ್ತ್ರದ ಪ್ರಕಾರ ‘ನಾ’ ಎಂದರೆ ಪ್ರಾಣವಾಯು ‘ದ’ ಎಂದರೆ ಪ್ರಾಣಾಗ್ನಿ. ಇವುಗಳ ಅವಿಚ್ಛಿನ್ನ ಘರ್ಷಣೆಯಿಂದ ನಾದ ಹುಟ್ಟುತ್ತದೆ. ಹೀಗೆ ಉತ್ಪನ್ನವಾದ ನಾದ ನಾಭಿ, ಹೃದಯ, ಕಂಠ, ನಾಲಗೆ ಮತ್ತು ಶಿರಸ್ಸು ಇವುಗಳ ಮುಖಾಂತರ ಪುಷ್ಟಿಗೊಂಡು ಪ್ರಕಟವಾಗುತ್ತದೆ.
೯. ಒಬ್ಬನ ರಕ್ತದಿಂದ ಒಂದು ಸಲ ನಾನು ಪಡೆದ ಪ್ಲೇಟ್‌ಲೆಟ್ ಕಣಗಳು ಬ್ಲಡ್‌ಬ್ಯಾಂಕಿನಲ್ಲಿ ಹನ್ನೆರಡು ಮಂದಿ ರಕ್ತದಾನಿಗಳ ರಕ್ತದಿಂದ ಪಡೆಯಬಹುದಾದ ಕಣಗಳಿಗೆ ಸಮಾನ. ದಾನಿಯ ದೇಹದ ಮೂರನೇ ಎರಡು ಭಾಗದಷ್ಟು ರಕ್ತವನ್ನು ಡಯಾಲಿಸಿಸ್ ಮಾಡಿದಂತೆ ಒಂದು ಯಂತ್ರದೊಳಗೆ ತುಂಬಿಸಿ, ಅದರಿಂದ ಪ್ಲೇಟ್‌ಲೆಟ್ ಕಣಗಳನ್ನು ಬೇರ್ಪಡಿಸಿ ರಕ್ತವನ್ನು ಪುನಃ ದಾನಿಯ ದೇಹಕ್ಕೆ ತುಂಬಿಸಲು ಕನಿಷ್ಠ ಮೂರು ಗಂಟೆಗಳ ಸಮಯ ಬೇಕು. ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಪ್ಲೇಟ್‌ಲೆಟ್ ಕಣ ತೆಗೆಯುವ ಯಂತ್ರ ಹಾಳಾದ್ದರಿಂದ, ಸ್ವಲ್ಪ ದೂರದ ತಿಪ್ಪಸಂದ್ರದಲ್ಲಿರುವ್ ಟಿ.ಟಿ.ಕೆ. ಬ್ಲಡ್ ಬ್ಯಾಂಕಿನ ಯಂತ್ರ ಉಪಯೋಗಿಸಿ ಈ ಕಣಗಳನ್ನು ಬೇರ್ಪಡಿಸಬೇಕಾಯಿತು. ಆದ್ದರಿಂದ ಆತ ಬಂದಾಗ ಸಂಜೆಯಾಗಿತ್ತು. ಹಾಗಾಗಿ ರಾತ್ರಿಯ ನಿದ್ರೆಗೆ ಜಾರಿಕೊಳ್ಳಲು ಬಹಳ ಸಮಯ ಹಿಡಿಯಲಿಲ್ಲ.
೧೦. ‘ನಾದಲೀಲೆ’ ಸಂಕಲನದ ಮೊದಲ ಮುದ್ರಣದ ಮುಖಪುಟದಲ್ಲಿ ಶಂಖದ ಸಂಕೇತದ ಒಂದು ಚಿತ್ರ. ಮೊಗಚಿ ಇಟ್ಟ ಶಂಖದಿಂದ ರೆಕ್ಕೆ ಉಳ್ಳ ಪುಟ್ಟ ಮುಗ್ಧ ದೇವರ ಮಕ್ಕಳು ಶಂಖ ಊದುತ್ತಾ ಹಾರಿ ಹೊರಬಂದು ಹಾರಾಡುವ ಶಂಖ ಊದುವ ಚಿತ್ರ. ಪ್ರಖ್ಯಾತ ಕತೆಗಾರರಾದ ದಿವಂಗತ ಎಂ ಸೀತಾರಾಮ *ಆನಂದ) ‘ನಾದಲೀಲೆ’ ಕವನ ಸಂಗ್ರಹದ ಮೊದಲ ಮುದ್ರಣಕ್ಕೆ ಶಂಖದ ಸಂಕೇತದ ಈ ಮುಖಚಿತ್ರವನ್ನು ಬರೆದುಕೊಟ್ಟಿದ್ದರು. ೧೯೮೯ರಲ್ಲಿ ಪ್ರಕಟವಾದ ಹನ್ನೊಂದನೇ ಮುದ್ರಣದಲ್ಲೂ ಇದೇ ಚಿತ್ರವನ್ನು ಪುನರ್ ಮುದ್ರಿಸಿದ್ದಾರೆ. ನನ್ನ ಸ್ವಂತದ ಕಾಪಿ ಈ ಮುಖಪುಟ ಚಿತ್ರವುಳ್ಳದ್ದು. ಆದ್ದರಿಂದ ಶಂಖ ಚಿತ್ರದ ಮೂಲಕ ನಾದಲೀಲೆ ಸಂಕಲನದ ಕವರ್‌ಪೇಜ್ ನೆನಪಿಗೆ ಬಂದುದು ಎಂದು ನನ್ನ ಊಹೆ.
೧೧. ‘ತಿರುಚೆಂದೂರು’ ಬಂಗಾಳಕೊಲ್ಲಿಯ ಕಡಲ ತಡಿಯ ಪಟ್ಟಣ. ಇಲ್ಲಿ ಪ್ರಖ್ಯಾತ ‘ವಡಿವೇಲು’ ದೇವಸ್ಥಾನವಿದೆ. ಇಲ್ಲಿನ ಕರಾವಳಿ ಕಣ್ಣಿಗೆ ಕಾಣುವಷ್ಟು ದೂರದಲ್ಲಿ ಆದಿತನಾರ್ ಕಾಲೇಜುಗಳ ಸಮೂಹ ಇದೆ. ಒಂದು ಸಂದರ್ಭದಲ್ಲಿ ಕರಾವಳಿಗೆ ತಾಗಿಕೊಂಡಿರುವ ಈ ಕಾಲೇಜು ಹಾಸ್ಟೆಲಿನಲ್ಲಿ ನಾನು ಮೂರುವಾರಗಳ ಕಾಲ ವಾಸವಾಗಿದ್ದೆ. ಅಲ್ಲಿದ್ದಷ್ಟು ದಿನ ಬೆಳಗಾತ ಸೂರ್ಯೋದಯದ ವೀಕ್ಷಣೆ ಮತ್ತು ಕಡಲ ಕಿನಾರೆಯ ನಡಿಗೆ. ಪೂರ್ವ ದಿಕ್ಕಾದ್ದರಿಂದ ಬಂಗಾಳಕೊಲ್ಲಿಯ ಸೂರ್ಯೋದಯ ಬಹು ಸುಂದರ. ದೊಡ್ಡ ಬೆಳಗು. ಪೂರ್ವಕರಾವಳಿಯ ಅರುಣೋದಯ ವೈಭವ, ನಾನು ಆ ಕಾಲದಲ್ಲಿ ಉದ್ಯೋಗದಲ್ಲಿದ್ದ ಉಡುಪಿಯ *ಪಶ್ಚಿಮ ಕರಾವಳಿ) ಸೂರ್ಯೋದಯಕ್ಕಿಂತ ಭಿನ್ನ. ಸೂರ್ಯೋದಯದಲ್ಲಿ ಇನ್ನೂ ಮಹತ್ತಾದ ಸಾಗರ ವೈಶಾಲ್ಯದ ಹರಹನ್ನು ಕನ್ಯಾಕುಮಾರಿಯಲ್ಲಿ ಕಾಣಬಹುದು.
೧೨. ‘ಹೃದಯ ಸಮುದ್ರ’ *ಪ್ರಥಮ ಮುದ್ರಣ ಜುಲಾಯಿ ೧೯೫೬) ಸಂಕಲನದಲ್ಲಿ “ನನ್ನ ಕಣ್ಣೇ ಕಿವಿಯು/ಕವಿಯು ನಾನು’ ’ ಎಂದಿದ್ದಾರೆ. *ಕವನ: ‘ಶ್ರೀ ಮಾತೃಶ್ರೀಗೆ’ )ಈ ಕವನದಲ್ಲಿ ಕಣ್ಣಿಂದಲೆ ಕುಡಿಯುವ/ನುಡಿಯುವ ಅನುಭವ.
೧೩. ಕುರ್ತಕೋಟಿಯವರು ಕಾವ್ಯ ಲೈಫ್‌ಸೇವರ್ ಆಗುತ್ತದೆ ಎಂದಾಗ ಬಹಳಹಿಂದೆ *ಸುಮಾರು ೨೫ ವರುಷಗಳ ಹಿಂದೆ, ಮೈಸೂರಿನ ಮಾನಸ ಗಂಗೋತ್ರಿ ಲೈಬ್ರರಿಯಲ್ಲಿ)ಓದಿದ ಜಾನ್ ಸ್ಟುವರ್‍ಟ್ ಮಿಲ್‌ನ ಒಂದು ಬರಹ ನೆನಪಾಯಿತು.
ಕಳೆದ ಶತಮಾನದ ಇಂಗ್ಲೆಂಡ್‌ನ ಅರ್ಥಶಾಸ್ತ್ರಜ್ಞ ಜಾನ್ ಸ್ಟುವರ್‍ಟ್ ಮಿಲ್ ದೊಡ್ಡ ವಿದ್ವಾಂಸರಾಗಿದ್ದ ಆತನ ತಂದೆ ಜೊತೆ ಎಳೆ ಬಾಲ್ಯದಿಂದಲೇ ಕಲಿತು ಬಹುದೊಡ್ಡ ಪಂಡಿತನಾದ. ಆದರೆ, ಬಾಲ್ಯದಲ್ಲಿ ತಂದೆಯೊಡನೆ ಈ ಓದಿನ ಓಘದಲ್ಲಿ ಬಿದ್ದು ತನ್ನ ಸಹಜ ಬಾಲ್ಯವನ್ನು ಕಳೆದುಕೊಂಡ ಅವನು ಯೌವನದಲ್ಲಿ ಒಂದು ರೀತಿಯ ಮಾನಸಿಕ ಖಿನ್ನತೆಗೆ *ಟಿeಡಿvous bಡಿeಚಿಞಜoತಿಟಿ)ಒಳಗಾದ. ಕೊನೆಗೆ ಇಂಗ್ಲಿಷ್ ಕವಿ ವರ್ಡ್ಸ್‌ವರ್ತ್‌ನ
ಖಿiಟಿಣeಡಿಟಿ ಂbbeಥಿ ಪದ್ಯವನ್ನು ಓದುತ್ತಾ ತನ್ನ ಬಾಲ್ಯವನ್ನು ಮರಳಿ ಪಡೆದು ಮಾನಸಿಕ ಖಿನ್ನತೆಯಿಂದ ಹೇಗೆ ಪಾರಾದ ಎಂಬುದನ್ನು ಬರೆದಿದ್ದಾನೆ.
೧೪. ಧಾರವಾಡದ ಸಮಾಜ ಪುಸ್ತಕಾಲಯ ಪ್ರಕಟಿಸಿದ ಬೇಂದ್ರೆಯವರ ‘ಸಾಹಿತ್ಯದ ವಿರಾಟ್ ಸ್ವರೂಪ’ ಗ್ರಂಥದ ಅನುಬಂಧ-೪ರಲ್ಲಿ, ಶ್ರೀಮತಿ ಶಾಂತಾ ಗಲಗಲಿ ಅವರು ೧೯೪೬ರ ವಾಹಿನಿ ವಿಶೇಷ ಸಂಚಿಕೆಯಲ್ಲಿ ‘ನಾದಲೀಲೆ’ ಬಗ್ಗೆ ಒಂದು ಲೇಖನ ಪ್ರಕಟಿಸಿದ್ದಾರೆ ಎಂದು ತಿಳಿಯುತ್ತಿದೆ ಎಂದಿದ್ದಾರೆ. ಆ ಲೇಖನ ಓದಲು ನನಗೆ ಇನ್ನೂ ಸಿಗಲಿಲ್ಲ.
*****
ಆಗಸ್ಟ್ ೨೦೦೨