ಆವತ್ತು ಬೆಳಿಗ್ಗೆ ಏಳುವಾಗಲೇ ಮಳೆ ಬಿಟ್ಟು ಹೊಳವಾಗುವ ಲಕ್ಷಣಗಳು ಅವಳಿಗೆ ಕಾಣುತ್ತಿದ್ದವು. ಕಾಫಿ ಕುಡಿದವಳೇ ವೇದವತಿ ತೋಟಕ್ಕೆ ಹೊರಟಳು. ಸ್ನಾನ ಮಾಡುವ ಮೊದಲು ತೋಟಕ್ಕೊಂದು ಸುತ್ತು ಬಂದು, ಗದ್ದೆಯ ಅಂಚಿನಲ್ಲಿ ನಿಂತು ದೂರದಲ್ಲಿ ಕಾಣುವ ಬೊಳ್ಳದ ಸಂಕವನ್ನೊಮ್ಮೆ ನೋಡಿ ಬರುವುದು ಅವಳ ವಾಡಿಕೆ.
ಹೂ ಹೂವಿನ ವಾಯಿಲ್ ಸೀರೆಯ ಸೆರಗಿನ ಕುಚ್ಚನ್ನು ಬಲಬದಿಯಿಂದ ಎದುರು ತಂದು ಸೊಂಟಕ್ಕೆ ಸಿಕ್ಕಿಸಿಕೊಂಡ ವೇದ, ಗಾಳಿಗೆ ಹಾರುವ ಮುಂಗುರುಳುಗಳನ್ನು ಮೇಲೆ ಸರಿಸುತ್ತ, ಹೂವಿನ ತೋಟವನ್ನು ದಾಟಿದಳು. ಪಂಪಿನ ಕೋಣೆಯನ್ನು ಹಾದಳು. ತೆಂಗಿನ ಮರಗಳ ನಡುವಿನಲ್ಲಿ ನಡೆಯತೊಡಗಿದಳು. ನೆಲದ ಮೇಲೆ ಹಸಿರು ಹಾಸಿದಂತೆ ಒಂದಿಂಚೂ ಬಿಡದೆ, ಬಿದ್ದು ಹುಟ್ಟಿದ ಕಾಟು ಗಿಡಗಳನ್ನು ತುಳಿಯುತ್ತ ಹೆಜ್ಜೆ ಹಾಕಿದಳು. ದಾರಿಗಡ್ಡವಾಗಿ ಬಿದ್ದ ಮಡಲನ್ನು ಬದಿಗೆ ಸರಿಸಿದಳು. ಬಾವಿಕಟ್ಟೆಯ ಹತ್ತಿರ ಕುಳಿತಿದ್ದ ಕುಪ್ಪನ ಹತ್ತಿರ, ಏ ಕುಪ್ಪ, ನಿನ್ನ ಮಗಳು ಸಾಕುವನ್ನು ಇವತ್ತು ನೆನಪಿನಲ್ಲಿ ಕಳಿಸು ಮಾರಾಯ. ಅಕ್ಕಿ ಬೀಸಲಿಕ್ಕುಂಟು. ಎಂದು ಹೇಳಿದಳು. ನಕ್ರುಳಗಳು ಕೊರೆದು ಹಾಕಿದ ಅಂಟು ಮಣ್ಣಿನ ಉಂಡೆಗಳು ಅಲ್ಲಲ್ಲಿ ಮುದ್ದೆ ಮುದ್ದೆಯಾಗಿ ಬಿದ್ದಿದ್ದವು. ತೆಂಗಿನ ಮರದ ಕಟ್ಟೆಗಳೆಲ್ಲ ನೀರಿನ ಹೊಡೆತಕ್ಕೆ ಒಡೆದು ವಿಕಾರವಾಗಿದ್ದವು. ಮಳೆಗಾಲ ಮುಗಿದ ಮೇಲೆ ಮಣ್ಣಿನ ಕಟ್ಟೆ ಸರಿಮಾಡಲು ಬರುವ ಗೋವಿಂದನ ಹತ್ತಿರ ಈ ಸಲ ಸ್ವಲ್ಪ ಸಿಮೆಂಟು ಬಡಿಯುವಂತೆ ಹೇಳಬೇಕು ಎಂದುಕೊಂಡಳು. ಅಳಿವೆಯ ಬಾಗಿಲಿನ ಕಡೆಗೆ ಸ್ಪರ್ಧೆಯ ಓಟದಲ್ಲಿ ಹರಿಯುವ ತೋಡಿನ ನೀರಿಗೆ ಕೈಯ್ಯಲ್ಲಿದ್ದ ದಾಸವಾಳದ ಹೂವನ್ನು ಎಸೆದಳು. ಮಣ್ಣು, ಹುಲ್ಲು, ಕ್ರಿಮಿಕೀಟಗಳಿಂದ ಕೂಡಿದ ಸಾರಿನ ಬಣ್ಣದ ನೀರಿನಲ್ಲಿ ಕೆಂಪು ಬಣ್ಣದ ಹೂ ರೊಂಯ್ಯೆಂದು ತೋಡಿನ ತುದಿಯ ವರೆಗೆ ಹೋಗುವುದನ್ನು ನೋಡುತ್ತ, ಈ ನೀರಿಗೆ ಸಮುದ್ರ ಸೇರುವ ಅವಸರವೇ ಎಂದುಕೊಂಡಳು.
ನಿನ್ನೆಗೂ ಇವತ್ತಿಗೂ ಏನು ವ್ಯತ್ಯಾಸವಿರಬಹುದು ಎಂದು ಅವಳು ತನ್ನಲ್ಲೇ ಎಷ್ಟೋ ಸಲ ಅಂದುಕೊಳ್ಳುವುದಿತ್ತು. ಇವತ್ತೆಂದರೆ ನಿಜವಾಗಿಯೂ ನಿನ್ನೆಯೇ? ಅಥವಾ ನಿನ್ನೆಯೆಂದರೆ ಇವತ್ತಾಗಲೂ ಬಹುದೇ? ಎಂದು ಸಂದೇಹ ಪಡುತ್ತಿದ್ದಳು. ನಿನ್ನೆಯಂತೆ ಇವತ್ತು ಮತ್ತು ಇವತ್ತಿನಂತೆ ನಾಳೆ; ನಾಳೆಯಂತೆ ನಾಡಿದು…. ಕಳೆದ ಸಹಸ್ರಾರು ದಿವಸಗಳಿಂದ ಹೀಗೇ ನಡೆದು ಬಂದಿದೆಯಲ್ಲವೆ ತನ್ನ ಜೀವನ ಎಂದುಕೊಂಡಳು. ದಿನಗಳ ಎಣಿಕೆಯನ್ನು ಬೇಕಾದರೆ ಅವಳು ಕರಾರುವಾಕ್ಕಾಗಿ ಹೇಳಬಲ್ಲಳು ಕೂಡಾ. ಆರು ಸಾವಿರದ ನೂರ ಎಪ್ಪತ್ಮೂರು ದಿನಗಳು. ಅವಳು ಮದುವೆಯಾಗಿ ಐನೂರಿಗೆ ಬಂದು ಅಷ್ಟು ದಿನಗಳಾಗಿದ್ದವು.
ಮದುವೆಯಾಗುವಾಗ ವೇದವತಿಗೆ ಇಪ್ಪತ್ತು ವರ್ಷವಾದರೆ, ಅವಳ ಗಂಡ ರಾಮಕೃಷ್ಣ ನಾವಡರಿಗೆ ಅರವತ್ತು ದಾಟಿತ್ತು. ಆ ಮದುವೆಯೆಂಬುದು ಅವರ ಕುಟುಂಬದಲ್ಲಿ ಮಾತ್ರವಲ್ಲ ಕರಾವಳಿಯ ಜಾತಿಪೈಕಿಯವರಲ್ಲೆಲ್ಲ ದೊಡ್ಡ ಸುದ್ದಿಯಾಗಿತ್ತು. ಇಪ್ಪತ್ತನೇ ಶತಮಾನದ ಎಪ್ಪತ್ತರ ದಶಕದಲ್ಲಿ ತಮ್ಮ ಸುಧಾರಿತ ಬಂಧುವರ್ಗದಲ್ಲಿ ಯಾರೂ ಇಂಥದ್ದೊಂದನ್ನು ನಿರೀಕ್ಷಿಸಿರಲಿಲ್ಲ. ಅಲ್ಲದೆ, ರಾಮಕೃಷ್ಣ ನಾವಡರ ವ್ಯಕ್ತಿತ್ವವೂ ಅಂತಹದ್ದಿತ್ತು. ಅವರು ತಿಳುವಳಿಕಸ್ಥರು. ಓದಿಕೊಂಡವರು. ಸ್ವಾತಂತ್ರ್ಯಪೂರ್ವದಲ್ಲಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ. ಎ. ಕಲಿತು ಬಂದವರು. ಐನೂರಿನಲ್ಲಿ ಬೇಸಾಯ ನೋಡಿಕೊಂಡು, ನಾಲ್ಕು ಜನರಿಗೆ ಬೇಕಾದವರಾಗಿ ಗೌರವದಿಂದ ಬಾಳಿಕೊಂಡಿದ್ದವರು.
ಆಗಲಿಕ್ಕೆ ಮೊದಲ ಹೆಂಡತಿಯಲ್ಲಿ ರಾಮಕೃಷ್ಣಯ್ಯನವರಿಗೆ ಆರು ಮಕ್ಕಳಿದ್ದಿದ್ದರು – ಮೂರು ಗಂಡು, ಮೂರು ಹೆಣ್ಣು. ಗಂಡು ಮಕ್ಕಳು ಮೂರೂ ಜನ, ಉದ್ದ ತೋರ ಭರ್ತಿಯಿದ್ದವರು ಪ್ರಾಯಕ್ಕೆ ಬಂದ ಮೇಲೆ ಸಿಡುಬು ತಗಲಿ ಪಟ ಪಟ ಅಂತ ಸತ್ತು ಹೋಗಿದ್ದರು. ಅತಿರಥ ಮಹಾರಥರಂತವರು, ’ಕಂಡವರು ಕಣ್ಣು ತೆಗೆಯ’ ಅಂಥ ರೂಪದವರು ಸಾಲು ಸಾಲು ಹಾಸಿಗೆ ಹಾಕಿ ಮಲಗಿದ್ದೆಂದರೆ, ಆ ಮನೆಯ ಗೋಳು ಮನೆದೇವರು ಮಾಲಿಂಗೇಶ್ವರನಿಗೇ ಗೊತ್ತಂತೆ. ಒಬ್ಬನ ಕ್ರಿಯೆಯೆಲ್ಲ ಮುಗಿಸಿ ಸ್ಮಶಾನದಿಂದ ಹಿಂದಿರುಗುವಾಗ ಮತ್ತೊಬ್ಬ ಕಣ್ಣು ಮುಚ್ಚಿದ್ದಂತೆ. ಚಿನ್ನದಂತಹ ಮೂರು ಗಂಡು ಮಕ್ಕಳನ್ನು ಕಳಕೊಂಡ ಬೆನ್ನಿಗೆ ರಾಮಕೃಷ್ಣಯ್ಯನ ಹೆಂಡತಿಯೂ ಕಾಹಿಲೆ ಬಿದ್ದಿದ್ದಳು. ದುಃಖದ ಕೊರೆತದಲ್ಲಿ ನರಳುತ್ತಿದ್ದ ಆಕೆಯನ್ನು ಕ್ಷಯರೋಗ ಬಲಿ ತೆಗೆದುಕೊಂಡಿತು. ನೋವಿನ ಕೊರಗನ್ನು ಹೃದಯದಲ್ಲಿ ಒತ್ತಿಕೊಂಡೇ ನಾವಡರು ಮೂರು ಹೆಣ್ಣು ಮಕ್ಕಳನ್ನು ಅಚ್ಚಟೆಯಿಂದ ಬೆಳೆಸಿದ್ದರು. ಒಂದರ ಹಿಂದೊಂದರಂತೆ ಸಾವಿನ ಹೊಡೆತದಿಂದ ತತ್ತರಿಸಿದ ಅವರು ಮರುಮದುವೆಯ ಒಂದೆಳೆ ಆಲೋಚನೆಯನ್ನೂ ಆಗ ಮಾಡಿರಲಿಲ್ಲ. ನೋಡನೋಡುತ್ತ ವೃದ್ಧಾಪ್ಯ ಊರಿಗಿಂತ ಮುಂಚೆ ಬಂದು ಅವರನ್ನು ಆವರಿಸಿಬಿಟ್ಟಿತ್ತು.
ಎರಡು ದಶಕಗಳಿಗೂ ಹೆಚ್ಚು ಕಾಲ ವೈರಾಗ್ಯದ ಬಾಳು ನಡೆಸಿದ ನಾವಡರು, ಮಕ್ಕಳ ಮದುವೆಯಾಗಿ, ಮೊಮ್ಮಕ್ಕಳೂ ಹುಟ್ಟಿಯಾದ ಮೇಲೆ, ಮದುವೆಗೆ ಮನಸ್ಸು ಮಾಡಿದ್ದರು. ಜಾನಕಿ, ಗೌರಿ, – ಈ ಇಬ್ಬರು ಹೆಣ್ಣು ಹುಡುಗಿಯರ ಮದುವೆಯಾಗಿ, ಮೂರನೆಯ ಶಾಂಭವಿಗೆ ನೆಂಟಸ್ತಿಕೆ ಹುಡುಕುವಾಗಲೇ ಹಠಾತ್ತನೆ ಈ ಹೊಸ ಪ್ರಸ್ತಾಪ ಬಂದಿತ್ತು. ಯಾರೋ ಕೈ ನೋಡಿಯೋ, ಜಾತಕ ಓದಿಯೋ, ನಾವಡರ ಹತ್ತಿರ, ’ನಿಮಗೆ ಗಂಡು ಮಗುವಿನ ಯೋಗವುಂಟು’ ಎಂದಿದ್ದರಂತೆ. ಹೌದ, ನೋಡುವ ಹಾಗಾದರೆ, ಮನೆಗೊಂದು ಗಂಡು ದೀಪ ಇಲ್ಲ ಅಂತ ಯಾಕಾಗಬೇಕು? ಅಂತ ಅವರು ಮನಸ್ಸು ಮಾಡಿದ್ದೇ. ಹಣೆಯಿಂದ ಹಿಂದೆ ಸರಿಯುತ್ತಿದ್ದ ಕೂದಲು ಪೂರ್ಣ ಬಿಳಿ ಬಣ್ಣಕ್ಕೆ ತಿರುಗಿದ ನಾವಡರು ಒಪ್ಪಿದ್ದು ದೊಡ್ಡ ಸಂಗತಿಯೋ, ಸುದ್ದಿ ಕೇಳಿದ್ದೇ, ಬೀಡಿನ ಮನೆಯ ದಾಸಪ್ಪಯ್ಯ ತನ್ನ ಐದನೇ ಮಗಳ ನೆಂಟಸ್ತಿಕೆ ಹಿಡಿದುಕೊಂಡು ಓಡಿ ಬಂದದ್ದು ವಿಶೇಷವೋ ಗೊತ್ತಿಲ್ಲ.
ದಾಸಪ್ಪಯ್ಯನವರೇನೂ ಆಸ್ತಿಮನೆ ಇದ್ದವರಲ್ಲ. ಗುರುಪುರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಇದ್ದುಕೊಂಡು, ಏನೋ ಒಂದಷ್ಟು ಚೂರ್ಣ, ಲೇಹ ತಯಾರಿಸಿಕೊಂಡು ಊರವರಿಗೆ ಮನೆಮದ್ದು ಕೊಟ್ಟುಕೊಂಡಿದ್ದರು. ಅದಾಗಲೇ ತಮ್ಮ ನಾಲ್ಕು ಹೆಣ್ಮಕ್ಕಳ ಮದುವೆ ಮಾಡಿ ಸೋತು ಸುಣ್ಣವಾಗಿದ್ದರು. ಕೊನೆಯವಳೇ ಮೆಟ್ರಿಕ್ ಮುಗಿಸಿ ಮನೆಯಲ್ಲಿ ಕುಳಿತಿದ್ದ ವೇದವತಿ. ದಾಸಪ್ಪಯ್ಯನವರು ವೇದವತಿಗೆ ಬೇರೆ ನೆಂಟಸ್ತಿಕೆ ನೋಡಿಯೇ ಇರಲಿಲ್ಲವೆಂತಲ್ಲ. ನೋಡಿದ್ದು ಯಾವುದೂ ಸಸೂತ್ರ ಕೂಡಿ ಬಂದಿರಲಿಲ್ಲ. ತೀರ ಕಳಪೆಯ ನೆಂಟಸ್ತಿಕೆಗೆ ಅಂದರೆ ಮೂರು ಹೊತ್ತಿನ ಊಟಕ್ಕೂ ಗತಿಯಿಲ್ಲದಲ್ಲಿ ಅಥವಾ ನಡತೆ ಸರಿಯಿಲ್ಲದಲ್ಲಿ ಮಗಳನ್ನು ಕೊಡಲು ಅವರ ಮನಸ್ಸು ಹಿಂದೇಟು ಹಾಕುತ್ತಿತ್ತು. ಮನಸ್ಸಿಗೆ ಒಗ್ಗಿದ ಸಂಬಂಧಗಳು, ಆಗಷ್ಟೆ ಬ್ರಾಹ್ಮಣರಲ್ಲೂ ನುಸುಳುತ್ತಿದ್ದ ವರದಕ್ಷಿಣೆಯೆಂಬ ರೋಗದಿಂದಾಗಿ ಮುರಿದು ಬೀಳುತ್ತಿದ್ದವು. ಕರಾವಳಿಯಿಂದ ಬೆಂಗಳೂರು, ಕರ್ನೂಲುಗಳಿಗೆ ಹೋಗಿ ಹೋಟೇಲಿಟ್ಟು ದುಡ್ಡು ಮಾಡಿದವರು, ಹುಡುಗನಿಗೆ ಹಣ ಕೊಟ್ಟು ಕೊಳ್ಳುವ ರಿವಾಜನ್ನು ಚಾಲ್ತಿಗಿಳಿಸಿದರೆಂದೂ, ಸಾಮಾನ್ಯದವರ ಮಂಡೆ ಬೋಳಾಗುವ ವ್ಯಾಪಾರವೆಂದೂ ಊರಲ್ಲಿ ಎಲ್ಲರೂ ಮಾತಾಡುತ್ತಿದ್ದ ಕಾಲವದು. ಉಡುಪಿಯ ಕಾಲೇಜಿನ ಪ್ರಾಧ್ಯಾಪಕನೊಬ್ಬ ವೇದಳನ್ನು ಒಪ್ಪಿದವ, ’ವರದಕ್ಷಿಣೆ’ ಅಂತಲ್ಲದಿದ್ದರೂ, ಮದುವೆಯ ಖರ್ಚಿಗೆಂದು ಬರೇ ಮೂರು ಸಾವಿರ ಕೇಳಿದ್ದ. ಆದರೆ, ಅಷ್ಟು ಮೊತ್ತವನ್ನು ಒಂದೇ ಸಲ ಕಣ್ಣಿಂದ ನೋಡಿಯೂ ಇರದ ದಾಸಪ್ಪಯ್ಯ ಆ ಸಂಬಂಧವನ್ನು ಬಿಡಬೇಕಾಗಿ ಬಂದಿತ್ತು.
uಟಿಜeಜಿiಟಿeಜದಾಸಪ್ಪಯ್ಯನೂ ಜಾತಕ ನೋಡಲು ಗೊತ್ತಿದ್ದವರೇ. ರಾಮಕೃಷ್ಣ ನಾವಡರ ಜಾತಕವನ್ನು ಸ್ವತಃ ನೋಡಿದರು. ಜಾತಕ ನೂರಕ್ಕೆ ನೂರು ಕೂಡಿ ಬಂತಂತೆ. ಮತ್ತೆ ತಡಮಾಡಲಿಲ್ಲ. ನಾವಡರಿಗೆ ಸಾಕಷ್ಟು ಆಸ್ತಿಯೂ ಇತ್ತು. ಕಾಲಾನುಕಾಲಕ್ಕೆ ಹುಡುಗಿ ಏನೂ ಕಷ್ಟಪಡಬೇಕಾಗಿರಲಿಲ್ಲ ಎಂದೂ ಅವರು ಮುಂದಾಲೋಚಿಸಿದರು. ಅಲ್ಲದೆ ಮಗಳ ಹಣೆಯಲ್ಲಿ ಅದೇ ಬರೆದಿದ್ದರೆ ತಾವೇನು ಮಾಡಬಲ್ಲೆವು ಎಂಬ ಹಣೆಬರಹದ ಸಿದ್ಧಾಂತವೂ ಸೇರಿತು. ಅಂತೂ ಮದುವೆಯಾಯಿತು.
ಇದೆಲ್ಲ ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಾತು. ಈಗ ವೇದವತಿ ಐನೂರಿನ ಆ ಮನೆಗೆ ಹಳಬಳಾಗಿದ್ದಾಳೆ. ಮದುವೆಯಾದ ಮರುವರ್ಷವೇ ಮಲಮಗಳು ಶಾಂಭವಿಗೆ ಮದುವೆ ಮಾಡಿ ಕನ್ಯಾದಾನದ ಪುಣ್ಯವನ್ನು ಕಟ್ಟಿಕೊಂಡಿದ್ದಳು. ಆ ಮೇಲೆ ತನ್ನ ಮಲಮಗಳಂದಿರ ಒಂದಲ್ಲ ಎರಡಲ್ಲ, ನಾಲ್ಕು ಬಾಣಂತನಗಳನ್ನು ಮಾಡಿದಳು. ಸೀಮಂತ, ನಾಮಕರಣ, ಮತ್ತೊಂದು ಎಂದು ಕರೆದು, ಕೊಟ್ಟು ಕಳಿಸುವ ಎಲ್ಲ ವಿಧಿ ವಿಧಾನಗಳನ್ನೂ ಮಾಡುತ್ತ ಬಂದಿದ್ದಾಳೆ. ಏಳೇಳು ಜನ್ಮದ ಪುಣ್ಯವಿದ್ದಲ್ಲಿ ಮಾತ್ರ ಹಾಗೆ ಅನಾಯಾಸ ಕನ್ಯಾದಾನದ ಅವಕಾಶ ಸಿಗುವುದೆಂದು ಅವರ ನೆರೆಯ ಗೋರಜ್ಜಿ ಹೇಳುತ್ತಿದ್ದಳು. ತನ್ನ ಪಾಡು ನೋಡಿ, ಎಂದು ಮರುಗುತ್ತಿದ್ದಳು. ಎಳವೆಯಲ್ಲೇ ವಿಧವೆಯಾದ ಗೋರಜ್ಜಿ ಒಂದು ಕನ್ಯಾದಾನವನ್ನೂ ಮಾಡದೆ ಜನ್ಮ ಸವೆಸಿದ್ದಳು.
ಗಟ್ಟಿಯಾಗಿ ಕೇಳಿದರೆ ಮದುವೆಯ ಸಂದರ್ಭದಲ್ಲಿ ವೇದವತಿಯ ಅಭಿಪ್ರಾಯವನ್ನು ಯಾರೂ ಕೂಲಂಕಶವಾಗಿ ಕೇಳಿರಲಿಲ್ಲ. ಮೇಲಿಂದ ಮೇಲೆ ಕೇಳಿ ಒಪ್ಪಿಗೆಯನ್ನೇನೋ ಪಡೆದಿದ್ದರೆನ್ನುವ. ಒಪ್ಪಿಗೆ ಕೊಡದೆ ಅವಳಿಗೆ ಬೇರೆ ದಾರಿಯಿರಲಿಲ್ಲ. ತಂದೆ ಪಡುವ ಪಾಡನ್ನು ಅವಳು ನೋಡಿದ್ದಳು. ಮೂವರು ಅಕ್ಕಂದಿರ ಜೀವನ ಸಂಘರ್ಷವನ್ನು ಕಣ್ಣಾರೆ ಕಂಡಿದ್ದಳು. ಪಿತ್ಥದ ಕಾಯಿಲೆಯಿಂದ ಕಡ್ಡಿಯಂತಾಗಿದ್ದ ಅವಳ ಅಮ್ಮ, ಏನೋಪ್ಪ, ನಿನ್ನ ತಲೆ ಮೇಲೆ ಅಕ್ಷತೆ ಕಾಳು ಹಾಕಿ ಕಣ್ಣು ಮುಚ್ಚಬೇಕಂತ ಆಸೆ, ಹೆಣ್ಣೆ. ಎಂದಳು. ಮೂರೆ ಬೈಲಿಗೆ ಕೊಟ್ಟ ದೊಡ್ಡಕ್ಕ, ವೇದು, ನೀನೇ ಆಲೋಚನೆ ಮಾಡು. ಒಲೆಯಾ, ಕೋಡಲೆಯಾ? ಯಾವುದು ಅಡ್ಡಿಲ್ಲ? ಎಂದಿದ್ದಳು. ಮೂರನೆಯ ಅಕ್ಕ ಸಾಲಿಗ್ರಾಮದಿಂದ ಬರೆದಿದ್ದಳು, ಒಪ್ಪಿದರೂ ಒಪ್ಪದಿದ್ದರೂ ನಿನ್ನೆದುರಿಗೆ ಇರುವುದು ಒಂದೇ ಬಾಳು ಎಂದು.
ಹಾಗಾಗಿ, ವಿಧಿಯೊಡನೆ ಅವಳೊಂದು ಗಟ್ಟಿ ಒಪ್ಪಂದಕ್ಕೆ ಬರಬೇಕಾಯ್ತು. ಮತ್ತು ಅಂದಿನಿಂದ ಇಂದಿನ ವರೆಗೂ, ಆ ಒಪ್ಪಂದವನ್ನು ಜೀವಂತವಿಡಲು ಅವಳು ಹೆಣಗುತ್ತಿದ್ದಳು. ದಿನಂಪ್ರತಿ ಎಂಬಂತೆ ಅದನ್ನು ಸಮರ್ಥಿಸಿಕೊಳ್ಳುವುದು ಅವಳ ಮಟ್ಟಿಗೆ ಅನಿವಾರ್ಯವಾಗಿತ್ತು. ಮಳೆಯ ಹೊಡೆತಕ್ಕೆ ಒಡೆಯುವ ತೆಂಗಿನ ಕಟ್ಟೆಯಂತೆ, ಹುಚ್ಚುಕಟ್ಟಿ ಹರಿಯುವ ನೀರಿನ ರಭಸಕ್ಕೆ ಸೆರೆಬಿಡುವ ತೊರೆಯ ದಂಡೆಯಂತೆ ಆಗಿಂದಾಗ ಶಿಥಿಲಗೊಳ್ಳುವ ಆ ಒಪ್ಪಂದವನ್ನು ಪುನಃ ಪುನಃ ಗಟ್ಟಿಗೊಳಿಸಬೇಕಾಗುತ್ತಿತ್ತು.
ತೋಟದುದ್ದಕ್ಕೆ ನಡೆಯುತ್ತ ಅವಳಿಗನಿಸಿತು, ನಿನ್ನೆಯೂ ಹೀಗೇ ತೆಂಗಿನ ತೋಟದ ಕೊನೆಯ ವರೆಗೆ ನಡೆದು ಬಂದು, ಹೀಗೇ ಮಡಲನ್ನು ತೆಗೆದು ಬದಿಗೆ ಸರಿಸಿ, ಹೀಗೇ ಕುಪ್ಪನ ಹತ್ತಿರ ಮಗಳನ್ನು ಕಳಿಸಲು ಹೇಳಿ, – ಅಯ್ಯಬ್ಬ, ಎಣಿಸಿದರೆ ವಾಕರಿಕೆ ಬರುತ್ತದೆ. ಇವತ್ತೇನಾದರೂ ಬೇರೆ ಮಾಡಲೇಬೇಕು ಎಂದುಕೊಂಡಳು. ಪೂರ್ವದಲ್ಲಿ ಆಗಷ್ಟೇ ಉದಯಿಸುತ್ತಿದ್ದ ಸೂರ್ಯನ ಬೆಳಕು ತೆಂಗಿನ ಸಾಲುಗಳೆಡೆಯಿಂದ ಕಾಲುದಾರಿಯುದ್ದಕ್ಕೂ ಬೆಳಕಿನ ದಪ್ಪ ಗೆರೆಗಳನ್ನೆಳೆದಿತ್ತು. ಕೆಲವು ದೂರ, ಕೆಲವು ಹತ್ತಿರ. ಕೆಲವು ಸಪೂರ, ಕೆಲವು ದಪ್ಪ. ನಡುನಡುವೆ ಮರದ ನೆರಳಿನ ಗೆರೆಗಳು. ವೇದವತಿ ಬೆಳಕಿನ ಗೆರೆಗಳನ್ನು ಮಾತ್ರ ಮೆಟ್ಟಿಕೊಂಡು ನಡೆದಳು. ಬೆಳಕಿನ ಗೆರೆಗಳಿಗೆ ಸರಿಯಾಗಿ ಕೆಲವೊಮ್ಮೆ ದಾಪುಗಾಲು, ಕೆಲವೊಮ್ಮೆ ಹತ್ತಿರ ಹತ್ತಿರ ಕಾಲೆತ್ತಿಡುತ್ತ ನಡೆದಳು. ನಿನ್ನೆಯಿಂದ ಅಷ್ಟರಮಟ್ಟಿಗೆ ಇವತ್ತನ್ನು ಬೇರೆ ಮಾಡಿದೆ ಎಂದು ಸ್ವಲ್ಪ ಸಮಾಧಾನಪಟ್ಟಳು. ನಿನ್ನೆ ಅವಳು ಬೆಳಕಿನ ಗೆರೆಗಳ ಗೊಡವೆಗೆ ಹೋಗಿರಲಿಲ್ಲ. ಇವತ್ತು ಒಂದನ್ನೂ ಬಿಡದೆ ಮೆಟ್ಟುತ್ತ ಬಂದಿದ್ದಳು.
ಮೈನಾ ಹಕ್ಕಿ ಹೆಜ್ಜೆ ಹಾಕುತ್ತ ನೆಲವನ್ನು ಕುಕ್ಕುತ್ತಿತ್ತು. ಅದರ ಜೊತೆಹಕ್ಕಿಗಾಗಿ ಅವಳ ಕಣ್ಣುಗಳು ಹುಡುಕಿದವು. ಓ ಅಲ್ಲಿ, ಎಮ್ಮೆಯ ಮೈಮೇಲೆ ಕುಳಿತು ಅದರ ಕಿವಿ ಕುಕ್ಕುತ್ತಿರುವುದು ಅದರ ಜೊತೆಗಾರನಲ್ಲವೇ? ಕಾಗೆಯೊಂದು ಕಾಂವ್ ಕಾಂವ್ ಎನ್ನುತ್ತ ಅವಳ ತಲೆಯ ಮೇಲಿಂದ ಅಡ್ಡಕ್ಕೆ ಹಾರಿ ಹೋಯಿತು. ಚಣಿಲು ಬಾಲ ಉರುಟು ಮಾಡಿಕೊಂಡು, ಅತಿ ಕೆಲಸ ಇದ್ದವರಂತೆ, ಬಾಳೆಯ ಗಿಡದಿಂದ ಮಾವಿನ ಗೆಲ್ಲಿಗೆ, ಅಲ್ಲಿಂದ ತೆಂಗಿನ ಮರಕ್ಕೆ ಜಿಗಿಯುತ್ತ, ಎಡೆಬಿಡದೆ ಏರುಸ್ವರದಲ್ಲಿ ಅರಚುತ್ತಿತ್ತು. ಬಾಳೆಯ ಒಂದು ಹೂವನ್ನು ತೆಗೆದು ಅದರ ತುದಿಯನ್ನು ಫಕ್ಕನೆ ಚೀಪಿ ಜೇನು ಹೀರಿ ಏನೂ ಆಗದವರಂತೆ ಮುಂದೆ ನಡೆದಳು. ಹತ್ತು ಹಲವು ನಮೂನೆಯ ಹಸುರು ಅವಳನ್ನು ಆವರಿಸಿತ್ತು. ಚಿಗುರೆಲೆಯ ಎಳೆ ಹಸುರು ಗಾಳಿಗೆ ಕುಲುಕುಲು ಅಲುಗಾಡುತ್ತಿದ್ದರೆ, ದಪ್ಪದ ಹಳೆಯೆಲೆಗಳ ಕಡುಪಚ್ಚೆ ಬಣ್ಣ ನೀರಲ್ಲಿ ತೊಯ್ದ ಭಾರಕ್ಕೆ ಜಗ್ಗಿಹೋಗಿದ್ದವು.
ಮಾವಿನ ಮರದ ಎಡೆಯಿಂದ ಕೋಗಿಲೆಯ ಕೂ..ಊ.. ದನಿ ಕೇಳಿ, ಹುಬ್ಬೆರಡು ಒಟ್ಟು ಮಾಡಿ ಅಲ್ಲೆಲ್ಲ ಹುಡುಕಿದಳು. ಕೋಗಿಲೆಯ ನೆರಳೂ ಕಾಣದು. ಅಬ್ಬ, ಈ ಕೋಗಿಲೆಯ ನಾಚಿಕೆಯೇ, ಎಂದುಕೊಳ್ಳುತ್ತ, ಹುಡುಕುವುದನ್ನು ಬಿಟ್ಟು ಮುಂದೆ ನಡೆದಳು. ಹೃಸ್ವದಿಂದ ಆರಂಭವಾಗಿ ತಾರಕಕ್ಕೇರುತ್ತ ಸಾಗುವ ಕೋಗಿಲೆಯ ಕೂಗಿನ ಆರ್ತತೆಗೆ ಅವಳ ಎದೆಯಲ್ಲಿ ಕ್ಷೀಣವಾದೊಂದು ನೋವು ಎಳೆದಂತಾಯಿತು. ಅನವಶ್ಯಕವಾಗಿ ಕಾಲಡಿಯಲ್ಲಿದ್ದ ತರಗೆಲೆಗಳನ್ನು ಅಲ್ಲಾಡಿಸಿ ಮೆಟ್ಟಿ ಶಬ್ದ ಮಾಡುತ್ತ, ’ಶೂ, ಶೂ,’ ಎಂದು ಹೇಳುತ್ತ ಕೋಗಿಲೆ ಓಡಿದರೆ ಓಡಲಿ ಎಂಬಂತೆ ಪ್ರಯತ್ನ ಪಡುತ್ತ ನಡೆದಳು.
ತೆಂಗಿನ ತೋಟದ ಬದಿಯಲ್ಲಿ ನಿಂತು ಗದ್ದೆಯಾಚೆ ಕಾಣುತ್ತಿದ್ದ ಬೊಳ್ಳದ ಸಂಕವನ್ನೇ ನೋಡಿದಳು. ಬೆಳಿಗ್ಗೆ ಕುಪ್ಪ ನೆರೆ ಇಳಿದಿದೆಯೆಂದು ಹೇಳಿದ್ದ. ನೋಡಿದರೆ ಹೌದು. ಜಾನಕಿಗೆ ಫೋನು ಮಾಡಿ ಹೇಳಬೇಕು ಎಂದುಕೊಂಡಳು. ಅವಳಾದರೂ ಬಂದರೆ ಇವತ್ತಿನ ದಿನಕ್ಕೊಂದು ಬೇಽಽಽರೆ ಹೊಳಪು ಬರಬಹುದು ಎಂದುಕೊಂಡಳು. ಜಾನಕಿ ವೇದಳ ದೊಡ್ಡ ಮಲಮಗಳು. ಪ್ರಾಯದಲ್ಲಿ ವೇದಳಿಗಿಂತ ಒಂದಾರು ತಿಂಗಳಿಗೆ ದೊಡ್ಡವಳು. ಇಬ್ಬರಲ್ಲಿ ಕಾಯಿಬೆಲ್ಲದ ಅಚ್ಚುಮೆಚ್ಚು, ಗೆಳತಿಯರಂತೆ.
ಎದುರಿನ ಗದ್ದೆಗಳು ನೀರಲ್ಲಿ ಮುಳುಗಿದ್ದವು. ದಡದಲ್ಲಿ ಸಾಲುಗಟ್ಟಿ ಕುಳಿತಿದ್ದ ಬೆಳ್ಳಕ್ಕಿಗಳು ತಮ್ಮೊಳಗೆ ಏನೋ ಹೇಳಿಕೊಂಡು ಒಟ್ಟಿಗೆ ರೆಕ್ಕೆ ಬಿಡಿಸಿ, ಒಂದೇ ಸಲಕ್ಕೆ ಭುರ್ರನೆ ಹಾರಿದವು. ಅವಳೆದುರಿನ ಇಡೀ ’ರಾಷ್ಟ್ರ’ದಲ್ಲಿ ಕೂಗಳತೆಯಷ್ಟು ದೂರದಲ್ಲಿ ಮಾತ್ರವಲ್ಲ, ಕಣ್ಣಳತೆಯಷ್ಟು ದೂರದವರೆಗೂ ಒಂದು ನರಹುಳ ಕಾಣುತ್ತಿರಲಿಲ್ಲ. ಅವಳ ಮದುವೆಯ ನೆಂಟಸ್ತಿಕೆ ಬಂದಾಗ, ಓ ಐನೂರು ಅಂಥಾ ದೂರದ ಊರೇನಲ್ಲ, ಈಗ ಅಮೇರಿಕಕ್ಕೆಲ್ಲ ಹೆಣ್ಣು ಕೊಡುತ್ತಾರೆ, ಐನೂರೊಂದು ಮಹಾ ದೂರವ ಅಂತ ಅವಳ ತಂದೆಗೆ ಎಲ್ಲರೂ ಸಮಾಧಾನ ಹೇಳಿದ್ದರು. ಮಂಗಳೂರಿನಿಂದ ಹತ್ತೇ ಮೈಲು ದೂರ ಹೌದು. ಆದರೆ ಇಲ್ಲಿಗೆ ಬರಬೇಕಾದರೆ ದ್ರಾವಿಡ ಪ್ರಾಣಾಯಾಮ ಮಾಡಬೇಕು. ಹಂಪನಕಟ್ಟೆಯಲ್ಲಿ ಬಸ್ಸು ಹತ್ತಿ ಊರು ತುಂಬ ಸುತ್ತಿಕೊಂಡು ಕೈಕಂಬಕ್ಕೆ; ಅಲ್ಲಿಂದ ಗಂಟೆ-ಸಮಯ ಎಂಬ ಯಾವ ನಿರ್ಬಂಧನೆಯೂ ಇಲ್ಲದೆ ಹೊರಡುವ ಮಿನಿ ಬಸ್ಸಿನಲ್ಲಿ ಕುಳಿತು ಬಂದು ಗುಜ್ಜೆ ಶೆಟ್ಟರ ಮಿಲ್ಲಿನೆದುರು ಇಳಿದರೆ, ಇಲ್ಲೇ ಇಲ್ಲೇ ಎಂದರೂ ಕಾಲು ಗಂಟೆ ನಡೆಯಬೇಕು. ಅನಂತರ ಬೊಳ್ಳದ ಸಂಕವೊಂದು ದಾಟಿದರೆ ಮತ್ತೆ ಅವರದೇ ಗದ್ದೆ. ಗದ್ದೆಯ ಹುಣಿಯಲ್ಲಿ ಮೂಗಿನ ನೇರ ಬಂದರೆ, ತೆಂಗಿನ ತೋಟ; ಅದರೊಳಗೆ ಮನೆ.
ಆದರೆ ಬೊಳ್ಳದ ಸಂಕದ್ದೇ ಸಮಸ್ಯೆ. ಮಳೆಗಾಲದಲ್ಲಿ ಆ ಸಂಕ ತನ್ನ ಹೆಸರಿಗೆ ತಕ್ಕಂತೆ ಪೂರ್ತಿ ಬೊಳ್ಳದಲ್ಲಿ ಮುಳುಗಿಬಿಡುತ್ತಿತ್ತು. ನೆರೆಯಿಳಿಯುವ ತನಕ ಐನೂರಿಗೂ, ಮಿಕ್ಕ ಪ್ರಪಂಚಕ್ಕೂ ಇರುವ ಸಂಬಂಧ ಕಡಿದುಹೋಗುತ್ತಿತ್ತು. ಇಡೀ ಭೂಮಂಡಲದಿಂದ ಐನೂರೆಂಬೊಂದು ಬಿಂದು ಬೇರೆಯಾಗಿ ತೇಲುತ್ತಿದ್ದಂತೆ ಅನಿಸುತ್ತಿತ್ತು ವೇದಳಿಗೆ. ನಿನ್ನೆ ಇದೇ ಹೊತ್ತಿಗೆ ಅವಳು ಸಂಕ ಮೇಲಿಂದ ಕಂದು ಬಣ್ಣದ ನೀರಿನ ರಾಶಿ ಉರುಳುರುಳಿ ಬೀಳುತ್ತ ಹರಿಯುವುದನ್ನು ನೋಡುತ್ತ ನಿಂತಿದ್ದಳು. ಕೊಡೆ ಹಿಡಿದು ನಿಂತಿದ್ದರೂ, ಓರೆ ಓರೆಯಾಗಿ ರಾಚುತ್ತಿದ್ದ ಮಳೆಯ ನೀರಿಗೆ ಅವಳು ಅರ್ಧಮ್ಮರ್ಧ ಚೆಂಡಿಯಾಗಿದ್ದಳು. ಇವತ್ತು ಅವಳು ಕೊಡೆಯನ್ನೇ ತಂದಿರಲಿಲ್ಲ. ತೆಂಗಿನ ಸೋಗೆಯಿಂದ ಇಳಿದ ನೀರ ಹನಿಗಳು ಅವಳ ಕೂದಲಿನ ಮೇಲೆ, ಮುಖದ ಮೇಲೆ ಬಿದ್ದು ಜಾರುತ್ತಿದ್ದವು. ಮಳೆಯಿಂದ ’ಪಿಚಿಪಿಚಿ’ಯಾದ ನೆಲದ ಮೇಲೆ ಜಾಗ್ರತೆಯಿಂದ ಕಾಲಿಡುತ್ತ ಅವಳು ಮನೆಯತ್ತ ಹೊರಟಳು.
ಇವತ್ತಿನ ದಿನ ನಿಜವಾಗಿಯೂ ಬೇರೆ ಎಂದುಕೊಂಡಳು ವೇದವತಿ. ನೆರೆಯೂ ಇಳಿದಿದೆ, ಜಾನಕಿಯೂ ಬರಬಹುದು. ಒಟ್ಟಿಗೆ ಜಾನಕಿಯ ಮಗಳು ರಶ್ಮಿ ಬಂದರೂ ಬಂದಳೇ. ತಿಂಗಳಿಂದ ಮುಖ ತೋರಿಸದ ಸೂರ್ಯನೂ ಇಣುಕುತ್ತಿದ್ದಾನೆ. ಇನ್ನು ಸೂರ್ಯನ ಗೆರೆಗಳದಂತೂ ಆಯಿತಲ್ಲ ಎಂದು ಅವಳ ಮುಖದಲ್ಲಿ ನಗು ಹರಡಿತು.
ಬೆಳಿಗ್ಗೆ ವೇದವತಿ ಫೋನು ಮಾಡಿದ ಕೂಡಲೇ ಜಾನಕಿ ಮಗಳನ್ನು ಕರೆದುಕೊಂಡು ಹೊರಟು ಬಂದಿದ್ದಳು. ಆದರೂ ಅವರು ಐನೂರು ಮನೆಗೆ ಬಂದು ತಲುಪುವಾಗ ಮಧ್ಯಾಹ್ನ ಊಟದ ಸಮಯವಾಗಿತ್ತು. ಈಗ ಊಟ ಆಗಿ, ಒಂದು ನಿದ್ದೆಯೂ ಮಾಡಿ ಮುಗಿದಿತ್ತು.
ರಶ್ಮಿ ಮಾತ್ರ ಇನ್ನೂ ಉದಾಸೀನದಲ್ಲಿ ಉಯ್ಯಾಲೆಯ ಮೇಲೆ ಮುರುಟಿ ಮಲಗಿದ್ದಳು. ಅಲ್ಲೇ ಒಳಕೋಣೆಯ ಅಗಾಧ ಕಲಂಬಿಯ ಮೇಲಿದ್ದ ವಾಲುವ ಕನ್ನಡಿಯೆದುರು ನಿಂತು ಮುಖ ಬಗ್ಗಿಸಿ ಕಣ್ಣ ದೃಷ್ಟಿಯನ್ನು ಮಾತ್ರ ಮೇಲೆ ಮಾಡಿ ವಾರೆ ಬೊಕ್ತಲೆ ತೆಗೆಯುತ್ತಿದ್ದ ವೇದವತಿ, ’ಏ ಬುಗುಡಿ,’ ಅಂದಳು. ರಶ್ಮಿಯನ್ನು ಎಲ್ಲರೂ ಕೊಂಗಾಟದಲ್ಲಿ ಬುಗುಡಿ ಎಂದೇ ಕರೆಯುವುದು. ’ಏ ಬುಗುಡಿ, ನಿನ್ನ ಅವತಾರ ಸ್ವಲ್ಪ ನೋಡು. ತಲೆ ಅಂದ್ರೆ ಕಾಯಿಕತ್ತದ ಹಾಗೆ ಆಗಿದೆ. ಎದ್ದು ಕೂತುಕೊ. ಒಂಚೂರು ಎಣ್ಣೆ ಹಾಕಿ ಜಡೆ ಹಾಕ್ತೆ.’ ಎಂದು ಬಾಚಣಿಗೆಯನ್ನು ತನ್ನ ಕೂದಲುದ್ದಕ್ಕೂ ಕೀಸಿ ಬಾಚುತ್ತಿದ್ದ ವೇದ ಹೇಳಿದುದರ ಕಡೆಗೆ ರಶ್ಮಿ ಗಮನ ಹರಿಸಿದಂತಿರಲಿಲ್ಲ.
’ದೊಡ್ಡ, ನಿನ್ನ ಕೂದಲು ಇನ್ನೂ ಎಷ್ಟು ಕಪ್ಪು ಉಂಟಲ್ಲ.’ ಎಂದಳು ಅವಳು, ವೇದವತಿಯ ಕೂದಲಲ್ಲಿ ಫಳಫಳ ಹೊಳೆಯುತ್ತಿದ್ದ ಎಣ್ಣೆಯ ಮಿರುಗನ್ನು ನೋಡುತ್ತ. ರಶ್ಮಿ ವೇದವತಿಯನ್ನು ದೊಡ್ಡ ಎಂದೇ ಕರೆಯುತ್ತಿದ್ದಳು. ದೊಡ್ಡಳಲ್ಲಿ ಅವಳಿಗೆ ತನ್ನ ಅಮ್ಮನಷ್ಟೇ ಸಲಿಗೆ. ದೊಡ್ಡ ಮದುವೆಯಾಗಿ ಈ ಮನೆಗೆ ಬಂದ ದಿನವೂ ತನಗೆ ಕನಸಿನಂತೆ ಮಸುಕು ಮಸುಕಾಗಿ ನೆನಪುಂಟೆಂಬ ರಶ್ಮಿಯ ಹಠವಂತೂ ಎಲ್ಲರಿಗೂ ಒಂದು ಕುಶಾಲಿನ ವಿಷಯವಾಗಿತ್ತು. ಅವಳು ಬೇರೆ ಯಾರದೋ ಮದುವೆಯನ್ನು, ನೆನಪಿನ ವೈಚಿತ್ರ್ಯದಿಂದ ತಪ್ಪು ಭಾವಿಸಿರಬೇಕೆಂದೇ ಅವಳ ಅಮ್ಮ ಜಾನಕಿಯ ಅನಿಸಿಕೆ. ಗುಂಡ್ಮಿ ಚಿಕ್ಕಪ್ಪಯ್ಯ(ಜಾನಕಿಯ ತಂಗಿ ಗೌರಿಯ ಗಂಡ)ನಂತೂ, ’ಬುಗುಡಿಗೆ ಹಾಂಗಾರೆ ನಮ್ಮ ಮದುವೆಯೂ ನೆನಪು ಇರ್‍ಕಲ್ಲ. ನೀ ಆಗ ನಿನ್ನ ಅಮ್ಮನ ಹೊಟ್ಟೆಯಲ್ಲಿದ್ದಿದ್ದಿ.’ ಎಂದು ಅವಳನ್ನು ಕೆಣಕುತ್ತಿದ್ದರು.
uಟಿಜeಜಿiಟಿeಜನಿಜ ಹೇಳಬೇಕೆಂದರೆ, ವೇದವತಿಯ ಮದುವೆಯ ಸಂದರ್ಭದಲ್ಲಿ ರಶ್ಮಿಗೆ ಆಗಿನ್ನೂ ಎರಡು ವರ್ಷ ತುಂಬಿ ಮೂರು ಹಿಡಿಯುತ್ತಿತ್ತಷ್ಟೆ. ಮೊಲೆ ಹಾಲು ಬಿಡಿಸಿದ್ದಷ್ಟೆ ಆಗಿತ್ತಾಗಿ ಕೈಕೊಂಬು ಊಜಿಕೊಂಡು ಅಲ್ಲಲ್ಲಿ, ಕಂಬದ ಅಡ್ಡದಲ್ಲಿ, ಬಾಗಿಲ ಎಡೆಯಲ್ಲಿ, ಕತ್ತಲೆ ಮುಲ್ಲೆಯಲ್ಲಿ ನಿಂತಿರುತ್ತಿದ್ದಳು. ಇನ್ನೂ ಸರಿಯಾಗಿ ಎರಡಕ್ಷರ ಮಾತು ಬರುತ್ತಿರಲಿಲ್ಲ ಹುಡುಗಿಗೆ. ಪಚ್ಚೆ ಜರಿ ಸೀರೆಯುಟ್ಟು ವೇದವತಿ ರಪರಪ ನಡೆದು ಬರುವುದು (ರಪರಪ ನಡೆದು ಬರಲಿಕ್ಕೆ ನಾನೇನು ಯುದ್ಧಕ್ಕೆ ಹೊರಟದ್ದಾ ಎಂದು ನಗುತ್ತಿದ್ದಳು ವೇದವತಿ), ಮದುಮಕ್ಕಳಿಗೆ ಆರತಿ ಎತ್ತುವಾಗ ಅಜ್ಜಯ್ಯನ ಕನ್ನಡಕದಲ್ಲಿ ಆರತಿ ದೀಪ ಹೊಳೆಯುತ್ತಿದ್ದದ್ದು, ಮತ್ತೆ ರಾತ್ರಿ ಹಿಂದಿನ ಜಗಲಿಯಲ್ಲಿ ಒಬ್ಬಳೆ ನಿಂತ ಮದುಮಗಳು, ಅದೇ ಪಚ್ಚೆ ಸೀರೆಯಲ್ಲಿ, ಕಣ್ಣೀರು ಒರೆಸುತ್ತ ಕಂಬಕ್ಕೊರಗಿದ್ದು (ನಿನ್ನ ತಲೆ ಎಂದು ಬೈಯ್ಯುತ್ತಿದ್ದಳು ವೇದವತಿ ಆಗ) – ಇವೆಲ್ಲ ದೃಶ್ಯಗಳು ತನ್ನ ನೆನಪಿನ ಪಟದಲ್ಲಿ ಬರುತ್ತವೆ ಎಂದು ಅವಳು ಎಷ್ಟು ವಾದಿಸಿದರೂ, ಅದಕ್ಕೆ ಸೊಪ್ಪು ಹಾಕುವವರು ಯಾರೂ ಇರಲಿಲ್ಲ.
ಬೊಕ್ತಲೆಯ ಬಲಬದಿಯ ಮುಂಭಾಗವನ್ನು ಕೈಯಿಂದ ಒತ್ತಿ ಗುಬ್ಬು ಬರಿಸಿ, ಜಡೆ ಹೆಣೆಯತೊಡಗಿದ ವೇದ, ’ಅದೇ ನೋಡು, ನಿಮ್ಮ ಊರಲ್ಲಿ ಕೂದಲು ಬಿಳಿ ಮಾಡಲು ಏನಾದರೂ ಸಿಗುತ್ತದಾ ಹೇಳು. ಎಲ್ಲರಿಗೆ ಕೂದಲು ಬಿಳಿಯಾಗುವ ಚಿಂತೆಯಾದರೆ, ನನ್ನ ಸುರ್ಪಕ್ಕೆ ಕೂದಲು ಬಿಳಿಯಾಗಲಿಲ್ಲವಲ್ಲ ಎಂಬ ಚಿಂತೆ.’ ಅಂದಳು.
ಹೊರಗಿನಿಂದ ವೇದಳ ಗಂಡ ರಾಮಕೃಷ್ಣಯ್ಯನ ಸ್ವರ ಬಾಣದಂತೆ ಬಂತು, ’ಏನಂತೆ ಅವಳಿಗೆ? ಅಷ್ಟು ಹಾಂಪರಿದ್ದರೆ, ಬೂದಿ ಹಚ್ಚಿಕೊಳ್ಳಬಹುದು, ಸೇಡಿ, ಸೇಡಿ ಬಳಕೊಂಡರೂ ಅಡ್ಡಿಲ್ಲ.’
ಸೂಡಿಗೆ ಮುಳ್ಳು ಕುತ್ತುತ್ತ, ’ನೋಡಿದಿಯ? ಕಿವಿ ಎಷ್ಟೂ ಸೂಕ್ಷ್ಮ?’ ಎಂದು ಪಿಸುಗುಟ್ಟಿದವಳು, ’ಹೌದು, ನೀವು ಹೇಳಿದ ಹಾಗೇ ಮಾಡ್ತೆ. ಒಳ್ಳೆಯ ಉಪಾಯ ಹೇಳಿದ್ರಿ.’ ಎಂದು ಗಟ್ಟಿಯಾಗಿ ಹೇಳುತ್ತ, ದೇವರ ಕೋಣೆಯ ಬಾಗಿಲಿನ ಮಂದಲಿಗೆಯಲ್ಲಿದ್ದ ಹೊಸ್ತಿಲು ಬರೆಯುವ ಸೇಡಿಯನ್ನು ಅಂಗೈಗೆ ಹಚ್ಚಿ ತಲೆಯ ಮೇಲೆ ಸವರಿಕೊಂಡು ಹೊರನಡೆದಳು ವೇದವತಿ.
’ಏ ದೊಡ್ಡ, ಅದೆಂತ ಮಾಡಿಕೊಂಡಿ?’ ಎಂದ ರಶ್ಮಿಯ ಮಾತನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಸರಸರ ನಡೆದು, ’ಈಗ ಖುಶಿಯಾಯ್ತಲ್ಲ ನಿಮಗೆ?’ ಎಂದು ಗಂಡನೆದುರು ನಿಂತು ಕೇಳಿದಳು.
’ನಿನಗೆ ಹುಚ್ಚು.’ ಎಂದರು ಅವರು.
’ಹೌದು, ಹುಚ್ಚು ಹಿಡಿಯುವುದೊಂದು ಬಾಕಿ. ಮತ್ತೆಲ್ಲ ಸಂಭ್ರಮ ಆಯಿತಲ್ಲ.’ ಎನ್ನುತ್ತ ಎಣ್ಣೆ ಕೌಳಿಗೆಯನ್ನು ತಂದು ರಶ್ಮಿಯ ಕೈ ಹಿಡಿದು ಕುಳ್ಳಿರಿಸಿದಳು. ’ಬೇಡ ದೊಡ್ಡ, ನನ್ನಷ್ಟಕ್ಕೆ ನನ್ನನ್ನ ಬಿಡು.’ ಎಂದು ಕೊಸರಾಡುತ್ತಿದ್ದ ಅವಳ ಕೈಯ್ಯನ್ನು ಸರಿಸಿ, ತಲೆಗೆ ಎಣ್ಣೇ ನಪ್ಪಳಿಸಿ, ಬಾಚಿ ಜಡೆ ಹಾಕಿ ತುದಿಗೆ ರಿಬ್ಬನ್ನು ಕಟ್ಟಿ ಮಡಚಿದವಳು, ಇನ್ನೇನು ಅವಳ ಮುಖ ತಿರುಗಿಸಿ, ಎದುರು ಬಾಚಲು ಹೊರಡುವಷ್ಟರಲ್ಲಿ, ರಶ್ಮಿ ಅವಳ ಕೈಯನ್ನು ದೂಡಿ ಎದ್ದು ಬಚ್ಚಲು ಮನೆಯತ್ತ ಓಡಿಯಾಯ್ತು. ’ಏ…. ಏ……’ ಎನ್ನುತ್ತ ಹಣಿಗೆಯನ್ನು ಮುಂದಕ್ಕೆ ತರುತ್ತಿದ್ದಂತೆ ವೇದಳ ಬಾಯಿ ಕಟ್ಟಿತು. ತಲೆ ಕಟ್ಟಿದ ಮೇಲೆ ಎದುರು ಬಾಚದಿದ್ದರೆ ಮುದುಕ ಗಂಡ ಬರುತ್ತಾನಂತೆ. ಆದರೆ ಒಂದು ದಿನವೂ ಬಿಡದೆ ಎದುರು ಬಾಚಿಯೂ……? ಹೋಗಲಿ, ಎಂದುಕೊಂಡು, ಬಾಚಣಿಗೆಯಲ್ಲಿದ್ದ ಒಂದೆರಡು ಕೂದಲನ್ನು ಸೀಟಿ ತೆಗೆದು ಹಣಿಗೆಯನ್ನು ಕಲಂಬಿಯ ಮೇಲಿಟ್ಟು ವೇದ ಒಳ ನಡೆದಳು.
ಮುಖ ತೊಳೆದು ಬಂದ ರಶ್ಮಿ ಕನ್ನಡಿಯೆದುರು ನಿಂತು ಪೌಡರ್ ಹಚ್ಚಿಕೊಳ್ಳುತ್ತ, ’ದೊಡ್ಡ, ಹೊಳೆಬಾಗಿಲಿಗೆ ಹೋಗಿ ಬರುವ, ನಂಗೆ ನೆರೆ ನೋಡ್ಬೇಕು.’ ಎಂದಳು.
’ಹೌದ, ವೇದ, ನಂಗೆ ಆ ಪಾಂಚಕ್ಕನ ಹಲಸಿನ ಹಪ್ಪಳ ಬೇಕು ಮಾರಾಯ್ತಿ. ಹೋಗಿ ತರುವನ?’ ಎಂದು ಜಾನಕಿಯೂ ಹೇಳಿದಳು.
ಸರಿ, ಹೋಗುವುದಾದರೆ ಬೇಗ ಹೋಗಿ ಬರುವ. ಕಡೆಗೆ ಮಳೆ ಬಂದರೆ ಫಜೀತಿ ಎಂದು ಮೂವರೂ ಹೊರಟರು. ಮುಖಾರಿಯಲ್ಲಿದ್ದ ಆರಾಮ ಕುರ್ಚಿಯಲ್ಲಿ ಕುಳಿತಿದ್ದ ರಾಮಕೃಷ್ಣರಾಯರು,
’ಎಲ್ಲಿಗೆ ಮೇಳ ಕಟ್ಟಿಕೊಂಡು ಹೊರಟಿದ್ದು? ದಿನಾ ಹೊರಗೆ ಹೋದ್ರೂ ನಿಂಗೆ ಬೊಡಿ ಬರುವುದಂತಿಲ್ಲ. ಬುಗುಡಿಯ ಹೆಳೆ, ನಿನ್ನ ಬೆಳೆ. ಲಾಯಕ್ಕ್‌ಯ.’ ಅಂದರು ಹೆಂಡತಿಯನ್ನು ನೋಡಿ.
’ಮೇಳ ಕಟ್ಟಿಕೊಂಡು ಹೊರಟಿದ್ದು ಬಪ್ಪನಾಡಿಗೆ.’ ಎಂದು ಅವರತ್ತ ಒಂದು ಮಾತು ಕೊಡಕಿ, ’ನಡಿ, ಬುಗ್ಡಿ, ಇನ್ನು ತಡಮಾಡಿದರೆ ಆಗ, ಬೊಡಿ ಬರುವುದಂತೆ, ಬೊಡಿ ಬರುವುದೇ ಸೈ. ಬೊಡಿ ಅಂದ್ರೆ ಏನಂತ ಗೊತ್ತಿಲ್ಲದವಳು ಕಟ್ಟಿಕೊಂಡದ್ದು ಕಾಣು ಇಂಥವ್ರನ್ನ.’ ಎಂದು ರಶ್ಮಿಯ ಹತ್ತಿರ ಪಿಸುಗುಟ್ಟಿದಳು.
’ಎಂತ ಅಂದಿ? ಯಾರನ್ನ ಕಟ್ಟಿಕೊಂಡದ್ದು?’ ಎಂದು ಕೇಳುವಾಗ ಮೂವರು ಗೇಟುಬಾಗಿಲಿಗೆ ಬಂದಾಗಿತ್ತು.
ಅಲ್ಲಿಂದಲೂ ವೇದ ಬಿಡಲಿಲ್ಲ. ಬಾಣ ಎಸೆದೇ ಗೇಟು ದಾಟಿದಳು. ’ಕಟ್ಟಿಕೊಂಡದ್ದು ಗುಂಡುಕಲ್ಲು ಕುತ್ತಿಗೆಗೆ.’ ರಶ್ಮಿ ಈ ಎಡೆಯಲ್ಲಿ, ’ಅಜ್ಜಯ್ಯ, ನೀವೂ ಬನ್ನಿಯಲ್ಲ.’ ಎಂದು ಹಠ ಹಿಡಿಯುವ ಸ್ವರದಲ್ಲಿ, ಅವರಿಬ್ಬರು ಎಸೆದ ಮಾತುಗಳು ಒಬ್ಬರಿಗೊಬ್ಬರಿಗೆ ಕೇಳದಿರಲಿ ಎನ್ನುವಂತೆ, ರಾಗವಾಗಿ ಕೂಗಿ ಹೇಳಿದಳು.
ಅಜ್ಜಯ್ಯ ಕೈಯೆತ್ತಿ ಬೇಡವೆನ್ನುವಂತೆ ಆಲ್ಲಾಡಿಸಿ, ಹೋಗಿ, ಹೋಗಿ ಎನ್ನುವಂತೆ ಸನ್ನೆ ಮಾಡುತ್ತ ಒಳ ನಡೆದರು.
’ಅಲ್ಲಯ, ಕೋಪ ಬರುತ್ತದೆ ಒಂದೊಂದು ಸಲ. ನಾ ಹೊರಟ ಕೂಡ್ಲೇ ಹಂಗೆ ಮಾಡುದು ಕಾಣು. ತನಗೆ ಕೂಡುವುದಿಲ್ಲ. ನಾನು ಸ ಹಂಗೆ ಮಾಡಬೇಕಂದ್ರೆ? ಆ ಗಾಂಧಾರಿ ಯಾಕೆ ಕಣ್ಣಿಗೆ ಕಟ್ಟಿಕೊಂಡಿದ್ದಳಂತ ನಂಗೆ ಈಗ ಸರೀ ಅರ್ಥ ಆಗ್ತದೆ ಜಾನ್ಕಿ. ಯಾರಿಗ್ಗೊತ್ತು, ದೃತರಾಷ್ಟ್ರ ಇಡೀ ದಿನ ’ಇವರ ಹಾಂಗೆ ಹಂಗಿಸಿಂಡಿಪ್ಪ, ತನಗೆ ಕಣ್ಣಿಲ್ಲ, ಕಣ್ಣಿಲ್ಲ ಅಂತ. ಹೋಗಲಿ ಆ ರಗಳೆ ಬೇಡ ಅಂತ ತಾನೂ ಕುರುಡರ ಹಾಂಗೆ ಜೀವನ ತೆಗೆದಳಲ್ಲ, ಪುಣ್ಯಾತ್ಮಳು.’ ಎಂದು ನಕ್ಕಳು ವೇದವತಿ.
ಮಾರು ದೂರ ನಡೆದು ಬಕ್ಕೆ ಹಲಸಿನ ಮರದ ಕೆಳಗೆ ಬಂದದ್ದೇ, ರಶ್ಮಿ ನಿಂತು ತನ್ನ ಕೈವಸ್ತ್ರದಿಂದ ವೇದವತಿಯ ಕೂದಲಿಗಂಟಿದ ಸೇಡಿಯನ್ನು ಒರೆಸಿ ತೆಗೆದಳು. ಇರಲಿ ಬಿಡ, ಇರಲಿ ಬಿಡ, ಎನ್ನುತ್ತ, ಹೋಯ್ತ ಎಲ್ಲ ಎಂದೂ ಕೇಳಿದಳು ವೇದವತಿ. ’ದೊಡ್ಡ, ನಿಂಗೆ ಏನಾಗುವುದು ಒಂದೊಂದು ಸಲ?’ ಗದರಿಕೊಂಡು ವಸ್ತ್ರಕ್ಕಂಟಿದ ಸೇಡಿಯನ್ನು ಕೊಡಕಿದಳು ರಶ್ಮಿ.
’ನಿನ್ನ ಅಜ್ಜಯ್ಯ ಹೇಳಿದ ಹಂಗೆ ನಂಗೆ ಒಂದೊಂದ್ಸಲ ಹಿಡಿಯುವುದು, – ಹುಚ್ಚು.’ ಎಂದಳು ವೇದ.
ವೇದ ಮತ್ತು ಅವಳ ಗಂಡ ಯಾವ ವಿಷಯವೇ ಮಾತನಾಡಲಿ, ಕ್ಷಣ ಮಾತ್ರದಲ್ಲಿ ಅದು ವಾಗ್ವಾದದ ರೂಪ ತಾಳದಿರುತ್ತಿರಲಿಲ್ಲ. ಒಂದು ಮಾತಿನಲ್ಲಿ ಸುರುವಾದದ್ದು ಹತ್ತು ಮಾತುಗಳಲ್ಲಿ ಪರ್ಯವಸಾನವಾಗುತ್ತಿತ್ತು. ಹಾಗಂತ ಅದನ್ನು ಜಗಳ ಅಂತ ಕೂಡ ಕರೆಯುವುದು ಕೆಲವೊಮ್ಮೆ ಕಷ್ಟವೇ. ’ಒಂದು ನಾಕು ಸೀಯಾಳ ಕೊಯ್ಸಲಕ್ಕ ಏನ?’ ಎಂದು ವೇದ ಹೇಳಿದರೆ, ’ಹೌದೀಗ, ಮತ್ತೇನಲ್ಲ. ಇವಳಿಗೆ ಸೀಯಾಳದ ಬಯಕೆಯಾಗಿದೆ ಈಗ.’ ಎಂದು ಪೊಡಪಿದರೂ, ಸ್ವಲ್ಪ ಹೊತ್ತಿನಲ್ಲಿ ಅವರು ಕುಪ್ಪನ ಹತ್ತಿರ ಹೇಳುವುದು ಕೇಳುತ್ತಿತ್ತು, ’ಹೌದ ಕುಪ್ಪ, ನಾಕು ಸೀಯಾಳ ತೆಗಿ ಕಾಂಬ.’ ಎಂದು.
ವೇದವತಿಗಾದರೂ ಅಷ್ಟೆ. ಗಂಟಲು ಕೆರೆಸಿದರೆ ಗಂಟೆ ಗಂಟೆಗೆ ಉಪ್ಪು ನೀರು, ಕೆಮ್ಮು ಬಂದರೆ ಕಾಳುಮೆಣಸು-ಜೀರಿಗೆ ಕಷಾಯ, ಕಾಲುಗಂಟು ನೋವಿಗೆ ಎಣ್ಣೆ ಮಾಲೀಸು, – ಎಂದು ಮಗುವಿನಂತೆ ಗಂಡನನ್ನು ಸಾಕುತ್ತಿದ್ದಳು. ರಾಮಕೃಷ್ಣಯ್ಯ, ’ಅಲ್ಲನ ವೇದ, ಈ ಸಲ ಗುಜ್ಜೆ ಗುಳಿ ಮಾಡಲೇ ಇಲ್ಲಲ್ಲ?’ ಎಂದು ತನ್ನ ಇಷ್ಟದ ಹಲಸಿನಕಾಯಿಯ ಹುಳಿ ಮಾಡಲು ನೆನಪಿಸಿದರೆ, ’ನಂಗೇನು ಸಾಧ್ಯ ಇಲ್ಲ, ನಾನೇನು ಮಾಡುವವಳಲ್ಲ, ಮತ್ತೆ ವಾಯು ಆಯ್ತು, ಬೆನ್ನು ಹಿಡ್ಕೊಂಡಿದೆ ಅಂತ ಹೇಳಲಿಕ್ಕಾ?’ ಎಂದು ಹಂಗಿಸಿದರೂ, ನಾಲ್ಕು ದಿನ ಬಿಟ್ಟಾದರೂ ಎಳತು ಹಲಸಿನಕಾಯಿ ಕತ್ತರಿಸಿ, ಸೊನೆ ತೆಗೆದು, ಹಸಿ ಮಸಾಲೆ ಹಾಕಿದ ಹುಳಿ ಮಾಡದೆ ಅವಳ ಮನಸ್ಸು ಕೇಳುತ್ತಿರಲಿಲ್ಲ. ಮತ್ತೆ ಬೇಕಾದರೆ, ’ಜಾಗ್ರತೆ, ವಾಯು,’ ಎಂದು ಹೇಳುತ್ತ ಬಡಿಸಿಯಾಳು.
ಅಷ್ಟು ಮಾತ್ರವಲ್ಲ, ತಾನು ಅದೆಷ್ಟೇ ಮಾತಿಗೆ ಮಾತು ಕೊಡಬಹುದು. ಆದರೆ, ಮೂರನೆಯವರು ಏನಾದರೂ ಹೇಳಲಿಯಂತೆ, ಕೂಡಲೇ ವಹಿಸಿಕೊಂಡು ಮಾತನಾಡಲು ಧಾವಿಸುತ್ತಿದ್ದಳು. ಎಲ್ಲ ಬಿಟ್ಟು ಆವತ್ತು ಜಾನಕಿ ಯಾವುದೋ ಮಾತಿಗೆ, ’ಅನಂತ್ರಾಯ ಈಗ ದೊಡ್ಡ ಜನ ಆಗಿದ್ದ ಅಂತಲ್ಲ,’ ಎಂದು ಅವರ ಸಂಬಂಧಿಯೊಬ್ಬನ ಬಗ್ಗೆ ಹೇಳಿದಾಗ, ತೆಗೆದ ಬಾಯಿಗೆ, ’ಯಾರು ಹೇಳಿದ್ದು? ’ಇವರ’ ಕಾಲ ಉಗುರಿನ ಯೋಗ್ಯತೆ ಉಂಟ ಅವನಿಗೆ?’ ಎಂದು ಮಾರ್ನುಡಿದಿದ್ದಳು. ಸತ್ಯ ಹೇಳಬೇಕೆಂದರೆ, ಒಳಗಿಂದೊಳಗೆ ಅವಳಿಗೆ ತನ್ನ ಗಂಡನ ಮೇಲೆ, ಅವರ ತಿಳುವಳಿಕೆ, ವಿದ್ಯೆ, ಜ್ಞಾನ, ಸ್ಥಾನಮಾನಗಳ ಬಗ್ಗೆ, – ಅಭಿಮಾನವಿತ್ತು. ಅದನ್ನು ತೋರಿಸಲೂ ಆರಳು, ತೋರಿಸದೆ ಇರಲೂ ಆರಳು.
ಅವಳಿಗೊಮ್ಮೆ ಜ್ವರ ಬಂದಾಗ, ರಾಮಕೃಷ್ಣಯ್ಯ ಕಾಫಿ ಮಾಡಿ ಕೊಟ್ಟ ಸಂಗತಿ ಹೇಳಲು ಹೊರಟಳೆಂದರೆ ಸಾಕು. ಅವರು, ನೀ ಎದ್ದರೆ ನೋಡಿಕೋ ಎಂದದ್ದು, ಮಲಗಿದ್ದಲ್ಲಿಗೇ ಕಾಫಿ ತಂದು ಕೊಟ್ಟದ್ದು, ಅಡುಗೆ ಮನೆಯೆಲ್ಲ ಚಾಂದ್ರಾಣ ಮಾಡಿಟ್ಟದ್ದು, ಎಲ್ಲ ಹೇಳುತ್ತ ಹೇಳುತ್ತ ಅವಳು ನಗುತ್ತಾಳೋ, ಮರಕುತ್ತಾಳೋ, ಸಿಟ್ಟು ಮಾಡುತ್ತಿದ್ದಾಳೋ ಎಂದು ಗೊತ್ತಾಗಲಿಕ್ಕಿಲ್ಲ; ಅಷ್ಟು ಸಹ ನಗೆ, ಕಣ್ಣೀರು, ದಪ್ಪ ಮುಖ ಎಲ್ಲವೂ ಒಟ್ಟೊಟ್ಟಿಗೆ.
ಹಿಂದಿನ ಓಣಿಯ ಪಾಂಚಕ್ಕನ ಮನೆಯೆದುರು ಬಂದವರು ತಟಸ್ಥರಾಗಿ ನಿಂತುಬಿಟ್ಟರು. ಓಣಿ ತುಂಬಾ ಮೊಣಕಾಲಿನ ವರೆಗೆ ನೀರು ನಿಂತಿತ್ತು. ಜಾನಕಿ ರಶ್ಮಿಗೆ, ’ಹೊಳೆಯ ದರ್ಶನ ಇಲ್ಲೇ ಆಯ್ತು ನಿಂಗೆ.’ ಎಂದಳು. ವೇದವತಿ ನಿಂತಲ್ಲಿಂದಲೇ ಬೊಬ್ಬೆ ಹಾಕಿ ಪಾಂಚಕ್ಕನಿಗೆ ಕೇಳುವಂತೆ ಹೇಳಿದಳು, ’ಹಲಸಿನ ಹಪ್ಪಳ……. ಜಾನಕಿಗೆ….. ಇವತ್ತೇ….. ಈಗಲೇ…’
ನೀರಿನ ರಾಶಿಯ ಆಚೆ ತನ್ನ ಮನೆಯ ಬಾಗಿಲಲ್ಲಿ ನಿಂತ ಪಾಂಚಕ್ಕ, ’ಎಷ್ಟು ಕಟ್ಟು?’ ಎಂದು ಕಿರಿಚುತ್ತ ಕೈ ಸನ್ನೆ ಮಾಡಿದಳು. ವೇದ ಜಾನಕಿಯತ್ತ ನೋಡಿದಳು. ’ನಾಕಿರಲಿ, ಮೂರು ನಂಗೆ. ಒಂದು ನೀನಿಟ್ಟುಕೊ.’ ಎಂದಳು ಜಾನಕಿ. ವೇದ ಅದನ್ನೇ ಕೈ ಸನ್ನೆಯಲ್ಲಿ ಪಾಂಚಕ್ಕನಿಗೆ ತಿಳಿಸಿದಳು. ಪಾಂಚಕ್ಕನ ಮಗ ಉಟ್ಟ ಮುಂಡನ್ನು ಕಂಕುಳ ವರೆಗೆ ಎತ್ತಿ ಕಟ್ಟಿ, ಹಪ್ಪಳದ ಕಟ್ಟುಗಳನ್ನು ನೀರು ತಾಗದಂತೆ ಎತ್ತಿ ಹಿಡಿದುಕೊಂಡು, ನೀರೊಳಗೆ ಬೊಸಬೊಸ ಶಬ್ದ ಮಾಡುತ್ತ ನಡೆದು ಬಂದು ಅವರಿಗೆ ಕೊಟ್ಟು, ಹಣ ತೆಗೆದುಕೊಂಡು ಹೋದ.
ಸಂಜೆಯ ಹಳದಿ ಬಿಸಿಲಿನ ಎಡೆಯಲ್ಲಿ ಪಾರದರ್ಶಕ ಪರದೆಯಂತೆ ಶಬ್ದವಿಲ್ಲದ ಹೂಮಳೆ ಹನಿಯುವುದನ್ನು ನೋಡಿ, ’ಮಂಗ ಮತ್ತು ನರಿಯ ಮದುವೆ.’ ಎಂದು ರಶ್ಮಿ ಕೂಗಿ ಹೇಳಿದಳು. ತೆಳ್ಳಗಿನ ಈ ಹೂಮಳೆಯು ಗಿಡಗಳನ್ನು, ಹೂಗಳನ್ನು, ನೆಲವನ್ನು, ಅಲ್ಲಿ ನಡೆಯುವವರ ಕೈ, ಕಾಲು, ಮುಖಗಳನ್ನು ಮುಟ್ಟಿಯೂ ಮುಟ್ಟದಂತೆ ಮೃದುವಾಗಿ ಸ್ಪರ್ಶಿಸಿ, ಕೋಮಲವಾಗಿ ಸವರಿ, ಆಮೇಲೆ ಅಷ್ಟೇ ನಿಶ್ಶಬ್ದವಾಗಿ ಬಂದ ಗಾಳಿಯ ತೆಕ್ಕೆಯಲ್ಲಿ ಹುದುಗಿ ಮಾಯವಾಯಿತು.
ಹೊಳೆಬಾಗಿಲಿಗೆ ಬಂದರೆ ಅಲ್ಲಿ ಕುಳಿತುಕೊಳ್ಳಲು ಸಮಕಟ್ಟು ಜಾಗ ಎಲ್ಲೂ ಇರಲಿಲ್ಲ. ಆಕಾಶದ ನೀಲಿ ಒಡಲು ಬಣ್ಣದ ನೀರು ಚೇಪಿದಂತಿದ್ದರೆ, ಹೊಳೆಯ ನೀಲಿ ನೀರು ತಾನೇನೂ ಬಿಟ್ಟು ಕೊಡಲಾರೆ ಎನ್ನುವಂತಿತ್ತು. ಅಲ್ಲಿನ ಬಣ್ಣ ಇಲ್ಲಿ, ಇಲ್ಲಿನ ಗೆರೆಯೇ ಅಲ್ಲಿ. ಕೆಲವು ಗುಲಾಬಿ, ಕೆಲವು ಬಿಳಿ ಬಣ್ಣದ ನೊರೆನೊರೆಯಾದ ನೀರ್ಗುಳ್ಳೆಗಳಂತಹ ಮೋಡಗಳು ನಿಧಾನವಾಗಿ ತಮ್ಮ ವೇಷವನ್ನೂ, ಬಣ್ಣವನ್ನೂ ಬದಲಾಯಿಸುತ್ತಿದ್ದುವು. ರಶ್ಮಿ ಅತ್ತಿತ್ತ ತಿರುಗಿ, ಕುಳಿತುಕೊಳ್ಳಲು ಒಣ ನೆಲಕ್ಕಾಗಿ ಹುಡುಕತೊಡಗಿದಳು. ಕರ್ರಗಿನ ದಟ್ಟ ಮೋಡಗಳ ದೊಡ್ಡ ರಾಶಿಯೊಂದು ದಕ್ಷಿಣ ಬದಿಯಿಂದ ಮುನ್ನುಗ್ಗುತ್ತಿರುವುದು ಕಾಣುತ್ತಿತ್ತು.
’ನಡಿ. ನಡಿಯುತ್ತ ಮಾತಾಡುವ.’ ಎಂದಳು ವೇದ ಅಸ್ವಸ್ಥತೆಯಿಂದ. ಮನೆ ಬಿಡುವಾಗಿನ ಉಮೇದು ಅವಳಿಗೆ ಮನೆ ಬಿಟ್ಟ ಮೇಲೆ ಇರುತ್ತಿರಲಿಲ್ಲ. ’ಮೋಡ ನೋಡು ಹೇಗೆ ಭೂತದ ಹಾಗೆ ಬರ್‍ತಾ ಉಂಟು. ಕರೆಂಟಿದೂ ಸುಸೂತ್ರ ಇಲ್ಲ. ನಿನ್ನಜ್ಜಯ್ಯ ಕತ್ತಲಲ್ಲಿ ಕೂತಿರಬಹುದು.’ ಎಂದಳು.
’ನಿಂಗೆ ಮನೆ ಬಿಟ್ಟ ಕೂಡ್ಲೆ ಅಜ್ಜಯ್ಯಂದೆ ಧ್ಯಾನ.’ ರಶ್ಮಿ ಆಕ್ಷ್ರೇಪಣೆಯ ಸ್ವರದಲ್ಲಿ ಹೇಳಿದಲು.
ರಶ್ಮಿ ಹೇಳಿದ್ದು ಸಮವೇ. ವೇದವತಿ ಮಾಡುವುದು ಹಾಗೆಯೇ. ಒಂದು ಗಳಿಗೆ ಗಂಡ ಕಣ್ಣಿಂದ ಮರೆಯಾದರೆ, ಗಂಡನ ಬಗ್ಗೆ ಕಳವಳಪಡುವ ಜಾತಿಯವಳು. ’ಅವರು ಹೇಗಿದ್ದಾರ ಏನ, ಅವರಿಗೆ ತೊಂದರೆಯಾಗುತ್ತದೆ,’ ಎಂದು ಕೂತಲ್ಲಿ ಕೂರುತ್ತಿರಲಿಲ್ಲ. ಮದುವೆಯಾಗಿ ಇಷ್ಟು ವರ್ಷ ಆಯಿತಲ್ಲ. ತವರು ಮನೆಗೂ ಒಬ್ಬಳೆ ಹೋಗಿ ಎರಡು ದಿನ ಇದ್ದು ಬಂದವಳಲ್ಲ. ’ಅವರಿ’ಗೆ ತಾನಿಲ್ಲದಿದ್ದರೆ ಆಗುವುದಿಲ್ಲ ಎನ್ನುವಾಗ, ಅದು ಅಪ್ಪಟ ದೂರಿನಂತೆ ಕಂಡರೂ, ಅದರೊಳಗೆ ಒಂದು ತರದ ಹಮ್ಮಿನ ದನಿ ಕೂಡ ಕಂಡೂ ಕಾಣದಂತೆ ಅಡಗಿರುತ್ತಿತ್ತು. ಅಂದರೆ ನೋವಿನ ಏರಿಯ ಮೇಲೆ ನಿಂತ ಹಮ್ಮಿನ ದನಿಯದು.
ದಟ್ಟಯಿಸಿ ಬರುತ್ತಿದ್ದ ಕಪ್ಪು ಮೋಡಗಳು ಆಗಸದ ಬೇರೆಲ್ಲ ಬಣ್ಣಗಳನ್ನು ನುಂಗುತ್ತ ಸಾಗುವುದನ್ನು ನೋಡುತ್ತಿದ್ದಂತೆ, ವೇದ ಹೇಳಿದಳು, ’ಅಲ್ಲನ ಜಾನ್ಕಿ, ಮೋಡ ಕಂಡ್ರೆ ಪುನಃ ಮಳೆ ಧಾರೆ ಕಟ್ಟುವ ಹಾಂಗೆ ಉಂಟಲ್ಲ.’
ಜಾನಕಿಗೂ ಆತಂಕವಾಯಿತು. ’ನಾವು ನಾಳೆ ಬೆಳಿಗ್ಗೆಯೇ ಹೊರಡುವುದು ಒಳ್ಳೆಯದಂತ ಕಾಣ್ತದೆ, ವೇದ. ಸಂಕದ ಸಂಗ್ತಿ ಹೇಳಲಿಕ್ಕಾಗುವುದಿಲ್ಲ. ಆಚೀಚೆ ನೋಡುವುದರೊಳಗೆ ನೆರೆ ಏರಿದರೆ ನಾವು ಇಲ್ಲೇ ಸಿಕ್ಕಿ ಬೀಳುವುದೇ ಸೈ.’ ಎಂದಳು.
ತಟಪಟ ಮಳೆಹನಿಗಳು ಉದುರುವುದನ್ನು ನೋಡಿ ಅವರು ಮನೆಗೆ ಹೊರಟರು. ಶಬ್ದ ಮಾಡುತ್ತ ಬಿದ್ದ ಆ ದೊಡ್ಡ ದೊಡ್ಡ ನೀರಹುಂಡುಗಳನ್ನು, ಸುಂಯ್ಯನೆ ಬೀಸಿದ ಹೊಳೆಯ ಗಾಳಿ ಹಾರಿಸಿಕೊಂಡು ಹೋಯಿತು. ಮನೆ ಮುಟ್ಟುವಾಗ, ವೇದವತಿ ನುಡಿದಿದ್ದಂತೆ ಕರೆಂಟು ಇರಲಿಲ್ಲ. ಹೊರಗೆ ಇನ್ನೂ ಮುಸ್ಸಂಜೆಯ ಮಬ್ಬು ಬೆಳಕು ಬಾಕಿಯಿದ್ದರೂ, ಮನೆಯೊಳಗೆ ಕತ್ತಲು ಪಸರಿಸಿಯಾಗಿತ್ತು. ರಾಮಕೃಷ್ಣಯ್ಯ ಮುಖಾರಿಯಲ್ಲಿಯೇ ಶಥಪಥ ತಿರುಗಿಕೊಂಡು ಇವರ ಬರವನ್ನು ಕಾದುಕೊಂಡಿದ್ದವರು, ’ಏನು ತಡ?’ ಎಂದರು. ವೇದವತಿ ಒಳಗೆ ಹೋಗಿ ಬೇಗ ಬೇಗ ಲಾಟಾನು ಹಚ್ಚಿ ತಂದು ಉರುಟು ಮೇಜಿನ ಮೇಲಿಟ್ಟಳು.
ಮರುದಿನ ಜಾನಕಿ ಮತ್ತು ರಶ್ಮಿಯರನ್ನು ಕಳಿಸಿಕೊಡಲಿಕ್ಕೆಂದು ವೇದವತಿಯು ಬೊಳ್ಳದ ಸಂಕದ ವರೆಗೂ ಹೋದಳು. ಪುಣ್ಯಕ್ಕೆ ಸಂಕದ ಮೇಲೆ ಇನ್ನೂ ನೀರು ಬರಲು ಸುರುವಾಗಿರಲಿಲ್ಲ. ಅವರಿಬ್ಬರು ಸಂಕ ದಾಟುವ ವರೆಗೆ ನೋಡುತ್ತಿದ್ದು, ಬಸ್ಸು ಹತ್ತಿಸುವಂತೆ ಕುಪ್ಪನ ಹತ್ತಿರ ಹೇಳಿ, ವೇದ ಹಿಂತಿರುಗಿದಳು.
ಜಾನಕಿ ಬಂದೂ ಆಯಿತು, ಇವತ್ತೀಗ ಹೋಗಿಯೂ ಆಯಿತು. ನಿನ್ನೆಯಷ್ಟೇ ತಾನು ಜಾನಕಿ ಬಂದರೂ ಬರಬಹುದೆಂಬ ಖುಶಿಯಲ್ಲಿದ್ದಿದ್ದೆನಲ್ಲ ಎಂದುಕೊಂಡಳು ವೇದ. ಚೌತಿ ಹಬ್ಬಕ್ಕೆ ಬರಲೇಬೇಕೆಂದು ಪುನಃ ಪುನಃ ಜಾನಕಿಯೊಡನೆ ಹೇಳಿದ್ದಳು. ಬಂದೇ ಬಂದಾರು. ಇನ್ನೆಷ್ಟು ದಿನ ಚೌತಿಗೆ ಎಂದು ಲೆಕ್ಕ ಹಾಕತೊಡಗಿದಳು. ಆ ಸಮಯಕ್ಕೆ ಮಳೆಯೂ ಸುಮಾರು ಹಿಂದಾಗಬಹುದು. ನಿನ್ನೆಯ ಖುಶಿಯ ಗಸಿ ಅವಳೊಳಗೆ ಇನ್ನೂ ಉಳಿದಿತ್ತು. ತೆಂಗಿನ ಮರಗಳು ತಮ್ಮ ಸೋಗೆಗಳನ್ನು ಬೀಸಣಿಗೆಗಳಂತೆ ಅತ್ತಿಂದಿತ್ತ ಬೀಸುತ್ತಿದ್ದವು. ಹುಣಿಯ ಮೇಲೆ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ನಡೆಯುತ್ತಿದ್ದ ಅವಳ ತಲೆಯೂ ಆಚೀಚೆ ವಾಲತೊಡಗಿತು. ತನಗೂ ತೆಂಗಿನ ’ಗಾಳಿ’ ಬಡಿಯಿತೆಂದು ಉಲ್ಲಸಿತಳಾದಳು. ತೋಟದ ದಂಡೆಯಲ್ಲಿದ್ದ ಒಂದೆರಡು ಮರಗಳಂತೂ ನೀರು ತುಂಬಿದ ಗದ್ದೆಗೆ ಸಮಾನಾಂತರವಾಗಿ ಬಗ್ಗಿ, ಭತ್ತದ ಸಸಿಗಳೊಡನೆ ಮಾತುಕತೆ ನಡೆಸಿದ್ದವು.
ಗಾಳಿಯ ಕುಣಿತಕ್ಕೆ ಕಣ್ಣ ಮೇಲೆ ಹಾರುತ್ತಿದ್ದ, ಹಿಡಿತ ತಪ್ಪಿದ ಉದ್ದನೆಯ ಕೂದಲುಗಳನ್ನು ಒತ್ತಿ ಹಿಡಿದು, ಸೂಡಿಯ ಸುತ್ತ ಸುತ್ತಿಕೊಳ್ಳುವಾಗ, ಇವತ್ತು ತನ್ನ ಸೂಡಿ ಹಾಕಿದ್ದು ರಶ್ಮಿಯೆಂಬುದು ನೆನಪಾಗಿ, ’ಪಿರ್‍ಕಿ ಎಲ್ಲಿಯಾದರೂ,’ ಎಂದು ಬೈದುಕೊಂಡಳು. ಬೆಳಿಗ್ಗೆ ಹೊರಡುವ ಗಡಿಬಿಡಿಯಲ್ಲೂ, ’ದೊಡ್ಡ, ಬಾ ಇಲ್ಲಿ. ನಿನ್ನೆ ನಂಗೆ ತಲೆ ಕಟ್ಟಿದಿಯಲ್ಲ. ಇವತ್ತು ನಾ ನಿಂಗೆ ಕಟ್ಟುದು. ಎಲ್ಲಿ ಬಾಚಣಿಗೆ ತಾ. ಕೂತ್ಕೊ ನೋಡ್ವ.’ ಎಂದು ಅಧಿಕಾರವಾಣಿಯಲ್ಲಿ ಕುಳ್ಳಿರಿಸಿದ್ದಳು. ಸಡಿಲು ಸಡಿಲಾಗಿ ಜಡೆ ಹೆಣೆದು ಗಂಟು ಕಟ್ಟಿ, ಗುಲಾಬಿ ಹೂವೊಂದನ್ನು ತಲೆಯ ಮೇಲೆ ಒಂದು ಬದಿಯಲ್ಲಿ ಎದುರಿನಿಂದ ಕಾಣುವಂತೆ ಕ್ಲಿಪ್ ಹಾಕಿ ಸಿಕ್ಕಿಸಿದ್ದಲ್ಲದೆ, ’ತೆಗೆದರೆ ನೋಡಿಕೊ,’ ಎಂದು ಹೆದರಿಸಿದ್ದಳು ಬೇರೆ. ಬಲಕಿವಿಗೆ ತಾಗುತ್ತಿದ್ದ ಹೂವನ್ನು ಈಗ ಮುಟ್ಟಿ ನೋಡುತ್ತಿದ್ದಂತೆ, ’ಈ ಹೆಣ್ಣಿಗೆ ನೀ ಸಲಿಗೆ ಕೊಟ್ಟದ್ದು ಜಾಸ್ತಿಯಾಯ್ತು ವೇದ.’ ಎಂದ ಜಾನಕಿಯ ಮಾತು ನೆನಪಾಗಿ ವೇದಳ ಕಣ್ಣಲ್ಲಿ ಚಿಮ್ಮಿದ ನಗೆಯ ಚಿಲುಮೆ ಕೆನ್ನೆಗಿಳಿದು, ತುಟಿಯ ವರೆಗೆ ಹರಿಯಿತು. ಕೈಯ್ಯಲ್ಲಿ ಮಡಚಿ ಹಿಡಿದಿದ್ದ ಕೊಡೆಯನ್ನೊಮ್ಮೆ ಗಲಗಲನೆ ಅಲ್ಲಾಡಿಸಿ ಅರಳಿಸಿದಳು.
ಹನಿಹನಿಯಾಗಿ ಬೀಳುವ ಮಳೆಯ ನೀರು, ಗದ್ದೆಯ ನಿಂತ ನೀರಿನಲ್ಲಿ ಕ್ರಮವಾಗಿ ಅಲ್ಲಲ್ಲಿ ಪುಟ್ಟ ಉರುಟುರುಟು ತರಂಗಗಳನ್ನು ಮೂಡಿಸುತ್ತಿದ್ದವು. ಹುಣಿಯ ಮೇಲೆ ಕಾಲಿಟ್ಟು ನಡೆಯುತ್ತಿದ್ದ ವೇದವತಿ ನೋಡು ನೋಡುತ್ತಿದ್ದಂತೆ, ತರಂಗಗಳ ಸಂಖ್ಯೆ ಹೆಚ್ಚುತ್ತ ಹೆಚ್ಚುತ್ತ ಹೋಗಿ ಅವಳ ಸುತ್ತುಮುತ್ತು ನೀರು ಸುರಿಯತೊಡಗಿತು. ಅವಳು ತೆಂಗಿನ ತೋಟ ಸೇರುವುದರೊಳಗೆ ಝರ್ರನೆ ಇಳಿದ ಮಳೆ ಬಡಬಡನೆ ಹೊಡೆದುಕೊಳ್ಳತೊಡಗಿತು.
ಬೀಸಿದ ಗಾಳಿಗೆ ಕೊಡೆ ಅಡಿಮೇಲಾಗಿ ಬಗ್ಗಿ ಅವಳನ್ನು ಎಳೆಯತೊಡಗಿತು. ಮರದಡಿ ನಿಂತು ಕೊಡೆಯನ್ನು ಗಾಳಿಯ ದಿಕ್ಕಿಗೆ ತಿರುಗಿಸಿ ತಿರುಗಾಮುರುಗವಾಗಿಸುವುದರೊಳಗೆ ಅವಳ ಕೂದಲು ಒದ್ದೆಯಾಗಿ ತಲೆಗೆ ಅಂಟಿಕೊಳ್ಳತೊಡಗಿತು. ಕಾಲಿಗೆ ತಾಂಟುತ್ತಿದ್ದ ದಪ್ಪದ, ಉಡುಪಿ ಮಗ್ಗದ ಸೀರೆಯ ನೆರಿಗೆಯನ್ನು ಎತ್ತಿ ಸೊಂಟಕ್ಕೆ ಸಿಕ್ಕಿಸಿಕೊಂಡು, ಮೈಯ್ಯನ್ನು ಹೂವಿನ ಮಿಟ್ಟೆಯಂತೆ ಮುದುಡಿಸಿ, ಕೊಡೆಯನ್ನು ಎರಡೂ ಕೈಯ್ಯಲ್ಲಿ ಎದೆಗವಚಿಕೊಂಡು, ನೀರಿನ ಕೋಟೆಯನ್ನು ಸೀಳುತ್ತ, ನಡೆಯತೊಡಗಿದಳು. ನಾಲ್ಕೂ ಬದಿಯಿಂದ ಮಳೆಯ ಶಬ್ದಗಳು. ಅಬ್ಬ, ಈ ಮಳೆಗೆ ಅವೆಷ್ಟು ದನಿಗಳು, ಇದೊಂದು ಸಂಗೀತ ಕಛೇರಿಯೆಂದರೆ ಸರಿಯಾಗಬಹುದು ಎಂದುಕೊಂಡಳು ತೆಂಗಿನ ಒಣ ಮಡಲುಗಳು ಭರಭರ ಶಬ್ದ ಮಾಡುತ್ತ ನೆನೆಯುತ್ತಿದ್ದವು. ರತ್ನಗಂಧಿ, ಕಣಗಿ, ದಾಸವಾಳದ ಗಿಡಗಳು ಮಳೆನೀರಿಗೆ ಒಡ್ಡಿಕೊಳ್ಳುತ್ತ ನರ್ತಿಸುತ್ತಿದ್ದವು. ಬೊಗೇನ್ವಿಲ ಗಿಡ ತನ್ನ ಸೊಂಡಿಲುಗಳನ್ನು ಆಡಿಸುತ್ತಿತ್ತು. ಬೊಳ್ಳದ ಸಂಕ ಈಗ ಖಂಡಿತ ತುಂಬಿರಬಹುದು ಎಂದುಕೊಂಡಳು ಆದರೆ ಕೊಡೆಯ ಎಡೆಯಿಂದ ಅವಳು ಹಿಂದೆ ತಿರುಗಿ ನೋಡಲು ಮನಸ್ಸು ಮಾಡಲಿಲ್ಲ.
ಮುಂಚಿನ ದಿನ ಮಳೆಯೇ ಇರಲಿಲ್ಲವೆಂದು ಕಿಟಿಕಿಗಳನ್ನು ತೆರೆದಿಟ್ಟದ್ದು ಅವಳಿಗೆ ಫಕ್ಕನೆ ನೆನಪಾಯಿತು. ಈಗ ಮಳೆನೀರೆಲ್ಲ ಒಳಗೆ ಸೇರಿ ಮನೆ ತುಂಬ ನೀರಾಗಿರಬಹುದು ಎಂದುಕೊಂಡು ಕಾಲು ಚುರುಕುಗೊಳಿಸಿದಳು. ತಾನು ಬರುವುದು ತಡವಾಯಿತೆಂದು ತನ್ನ ಗಂಡನೀಗ ಅದೆಷ್ಟು ಹೈರಾಣಾಗಿದ್ದಾರೋ ಎಂದುಕೊಳ್ಳುತ್ತಿರುವಾಗ, ಮನೆಯ ಮುಖಾರಿಯ ಮೆಟ್ಟಿಲ ಮೇಲೆ ನಿಂತು ಕೈಬೀಸುತ್ತಿದ್ದ ಅವಳ ಗಂಡನ ಆಕೃತಿ ಅವಳಿಗೆ ಸ್ಪಷ್ಟವಾಗತೊಡಗಿತು. ಎತ್ತಿ ಕಟ್ಟಿದ ಬಿಳಿ ಮುಂಡು, ಅರ್ಧ ಕೈಯ ಅಂಗಿಯ ಮೇಲೆ ಹಾಕಿದ ಕಂದು ಸ್ವೆಟರು, ಕೈಬೀಸಿ ಬಾಯಾಡಿಸುತ್ತಿದ್ದುದು ಕಾಣುತ್ತಿತ್ತು. ಮಳೆಯ ಜೋರಾಟದಿಂದಾಗಿ ಒಂದಕ್ಷರವೂ ವೇದಳಿಗೆ ಕೇಳುತ್ತಿರಲಿಲ್ಲ. ಸೀದಾ ಮಳೆ ಸುರಿಯುವ ಅಂಗಳಕ್ಕೆ ಇಳಿಯುವವರಂತೆ ಕೈಯ್ಯಲ್ಲಿದ್ದ ಊರುಗೋನ್ನು ಊರಿಕೊಂಡು, ಒಂದು ಮೆಟ್ಟಿಲಿನಿಂದ ಇನ್ನೊಂದು ಮೆಟ್ಟಿಲಿಗೆ ಕಾಲು ಇಳಿಸುವ ಸನ್ನಾಹದಲ್ಲಿದ್ದಂತೆ ಕಂಡು ವೇದಳಿಗೆ ಗಾಬರಿಯಾಯಿತು.
’ಮೆಲ್ಲ….. ಅಲ್ಲೇ ಇರಿ…. ಎಲ್ಲಿಗೆ ಮುಂದೆ ಮುಂದೆ ಬರ್‍ತಾ ಇದ್ದೀರಿ….? ಜಾಗ್ರತೆ….. ಮೆಟ್ಟಿಲು….’ ಎಂದು ವೇದವತಿಯೂ ಕೊಡೆಯೊಳಗಿಂದ ಕೂಗಿ ಕೂಗಿ ಹೇಳತೊಡಗಿದಳು. ಮಳೆಯ ಆರ್ಭಟೆಯಲ್ಲಿ ಅವಳು ಹೇಳಿದ ಮಾತುಗಳು ಅಂಗಳದ ವರೆಗೂ ಮುಟ್ಟುತ್ತಿರಲಿಲ್ಲ.
’ಬೇಗ ಬಾ. ಈ ಮಳೆಯಲ್ಲಿ…… ಬೇಡ ಇತ್ತು ಅಲ್ಲಿ ವರೆಗೆ ಹೋಗುದು. ಪಾಚಿ ಉಂಟು…. ಜಾಗ್ರತೆ…. ಪಾಚಿ ನೋಡಿಕೋ……. ಕಾಲು ಜಾರ್‍ತದೆ…. ಮೆಲ್ಲ……’ ಎನ್ನುತ್ತ ರಾಮಕೃಷ್ಣ ನಾವಡರು, ಎಡಗೈಯ್ಯಲ್ಲಿದ್ದ ಕೋಲನ್ನು ಮೆಟ್ಟಿಲಿಗೆ ಊರಿಕೊಂಡು, ಬಲಗೈಯ್ಯನ್ನು ಮುಂದೆ ಚಾಚಿದರು.
ಅಂಗಳದಲ್ಲಿ ಹಚ್ಚಗೆ ಹರಡಿ ಹೊಳೆಯುತ್ತಿದ್ದ ಪಾಚಿಯ ಮೇಲೆ ಜಾರದಂತೆ ಗಟ್ಟಿಯಾಗಿ ಕಾಲೆತ್ತಿಡುತ್ತ, ಕಾಲಿಗಂಟಿದ ಸೀರೆಯ ನೆರಿಯನ್ನು ಬಿಡಿಸಿಕೊಳ್ಳುತ್ತ ಬಂದ ವೇದವತಿ, ತನ್ನ ಬಲಗೈಯನ್ನು ಮುಂದುಮಾಡಿ ಗಂಡ ನೀಡಿದ ಕೈಯನ್ನು ಆಧರಿಸಿ ಹಿಡಿದು ಮೆಟ್ಟಿಲು ಹತ್ತಿ ಮೇಲೆ ಬಂದಳು.
*****
೧೯೭೭
ಪ್ರಾದೇಶಿಕ ಶಬ್ದಗಳ ಅರ್ಥ: ಬೊಳ್ಳ=ನೆರೆ; ಸಂಕ=ಸೇತುವೆ; ನಕ್ರುಳ=ಎರೆಹುಳ; ಬೊಕ್ತಲೆ=ಬೈತಲೆ; ಸುರ್ಪ=ಸ್ವರೂಪ; ಹಾಂಪರು=ಆಸೆ; ಚಂಡಿ=ಒದ್ದೆ; ಬೊಡಿ=ಬೇಜಾರು; ಮರಕು=ಅಳು; ಚಾಂದ್ರಾಣ=ಅಸ್ತವ್ಯಸ್ತ; ಹುಂಡು=ಹನಿ; ಹೆಳೆ=ನೆಪ; ಪೊಡಪು=ಗೊಣಗಿಕೊಂಡು ಬೈಯ್ಯು; ಪಿರ್‍ಕಿ=ಹುಚ್ಚು.