ಆ ದಿನ ಸಂಜೆ ಬಾಗಿಲು ತಟ್ಟುವ ಶಬ್ದ ಕೇಳಿಸುತ್ತಿದ್ದಾಗ ಹೊರಗಡೆ ಮಳೆ ಬರುವ ಲಕ್ಷಣ ಸ್ಪಷ್ಟವಾಗಿತ್ತು. ಗುಡುಗು ಆಕಾಶ ಭೂಮಿಗೂ ನಡುವೆ ಶಬ್ದ ಸೇತುವೆ ನಿರ್ಮಿಸುತ್ತಿದ್ದರೆ ಮಿಂಚು ಬೆಳಕಿನ ಸೇತುವೆ ಕಟ್ಟುವ ಸನ್ನಾಹವನ್ನು ಅಲ್ಲಗಳೆಯುವಂತಿರಲಿಲ್ಲ. ಬೀಳಬಹುದಾದ ಮಳೆಯ ಭಯಕ್ಕೆ ಇಡೀ ಓಣಿಗೇ ಓಣಿ ನಿರ್ಮಾನುಷವಾಗಿತ್ತು. ಬೀದಿಯ ಮೂಲೆಯಲ್ಲಿ ನಾಯಿ ಮುಗಿಲಿಗೆ ಮುಖ ಚಾಚಿ ಊಳಿಡಲಾರಂಭಿಸಿತ್ತು. ಅನೇಕ ಕೆಳಸಗಳಿದ್ದರೂ ನಾನು ಮನೆಯೊಳಗೇ ಉಳಿದಿದ್ದುದು ಅನ್ನಪೂರ್ಣಗೆ ಖುಷಿತಂದಿತ್ತು. ಮಳೆ ಬರುವಂಥ ಭ್ರಮೆ ದಿನನಿತ್ಯ ಇರಲಿ ಎಂದು ಆಶಿಸುತ್ತಲೇ ತಿನ್ನಲು ಒಂದಿಷ್ಟು ಕುರುಕುಲು ತಿಂಡಿ ಮಾಡಿ ಕೊಟ್ಟಿದ್ದಳು. ಶಾಲಾ ವಾರ್ಷಿಕೋತ್ಸವದ ಆಟ ಪಾಠಗಳಲ್ಲಿ ಭಾಗವಹಿಸಿ ದಣಿದಿದ್ದ ಮಕ್ಕಳು ಅದುವರೆಗೆ ನಿದ್ರಾಮಂಪರಿನಲ್ಲಿದ್ದು ಆ ಘಳಿಗೆಗೆ ಸ್ವಲ್ಪ ನಿದ್ರಾವಶವಾಗಿಬಿಟ್ಟಿದ್ದವು. ಅವುಗಳ ಪಕ್ಕದಲ್ಲಿ ತೆರೆದಂತೆ ಇರುವ ತೆರೆದ ಪುಸ್ತಕಗಳ ಪುಟಗಳು ಗಾಳಿಗೆ ಪಟಪಟ ಸದ್ದು ಮಾಡುತ್ತ ಕವುಚಿಕೊಳ್ಳ ತೊಡಗಿದ್ದವು. ಗುಡುಗು ಮಿಂಚುಗಳ ಆರ್ಭಟಕ್ಕೆ ವಿದ್ಯುದ್ದೀಪಗಳು ನಂದಿ ಹೋಗಿದ್ದರಿಂದ ಮೂಲೆ ಸೇರಿದ್ದ ಚಿಮಣಿ ದೀಪಗಳನ್ನು ಹುಡುಕಿ ತೆಗೆದು ಧೂಳು ಕೊಡುವುತ್ತಿದ್ದಾಗ ವಿದ್ಯುಚ್ಛಕ್ತಿ ಬಂದು ಮತ್ತೆ ಹೋಯಿತು. ಅವಳಿಗೆ ದೀಪ ಹಚ್ಚುವುದು ಅನಿವಾರ್ಯವಾಗಿಬಿಟ್ಟಿತ್ತು. ಚಿಮಣಿಗಳು ಬೆಳಗಲು ಹೆಚ್ಚು ಹಠ ಮಾಡುತ್ತಿರುವಂತೆ ಕಂಡಿತು. ಆದರೆ ಆ ಹಠ ಆಕೆಯ ಎದುರು ನಡೆಯಲಿಲ್ಲ. ಚಿಮಣಿ, ಹಠ ಮಣಿಸುವುದರಲ್ಲಿ ನಿಷ್ಣಾತಳಾಗಿದ್ದ ಆಕೆ ಆ ಕಾರ್ಯದಲ್ಲಿ ಅಂತೂ ಯಶಸ್ವಿಯಾದಳು. ಕಡ್ಡಿಪೊಟ್ಟಣದಲ್ಲಿ ಒಂದೇ ಒಂದು ಕಡ್ಡಿ ಇದ್ದುದರಿಂದ ವಿದ್ಯುಚ್ಛಕ್ತಿ ಬಂದರೂ ಚಿಮಣಿಗಳು ಹಾಗೇ ಉರಿಯುತ್ತಿರಬೇಕೆಂದು ನಿರ್ಧರಿಸಿದೆವು. ಮನುಷ್ಯರ ನಿಯಂತ್ರಣದಲ್ಲಿ ದೀಪಗಳೂ, ದೀಪಗಳ ನಿಯಂತ್ರಣದಲ್ಲಿ ಮನುಷ್ಯರೂ ಇಲ್ಲವೆಂಬುದು ತಿಳಿದೂ, ಬೆಳಕಿನ ಕೊರತೆ ಮತ್ತು ಅವಾಂತರಕ್ಕೆ ಪಕ್ಕಾಗಿ ಕುರುಕುಲು ತಿಂಡಿಯ ನಂತರ ಆಕೆ ಇದ್ದಕ್ಕಿದ್ದಂತೆ ಭಾರತದ ಆರ್ಥಿಕ ವ್ಯವಸ್ಥೆ ಬಗ್ಗೆ ಸಿಡಿಮಿಡಿಗುಟ್ಟತೊಡಗಿದಳು. ಕೇವಲ ಪದವಿಪೂರ್ವ ಶಿಕ್ಷಣ ಪಡೆದಿದ್ದರೂ ಪ್ರತಿಭಾನ್ವಿತ ಆರ್ಥಿಕ ತಜ್ಞೆಯಂತೆ ಮಾತಾಡತೊಡಗಿದ ಆಕೆಯನ್ನು ಪಡೆದ ನಾನೇ ಧನ್ಯ ಎಂದುಕೊಂಡೆ. ಸಾಮಾಜಿಕ ಅಸಮಾನತೆಗೆ ಆರ್ಥಿಕ ವ್ಯವಸ್ಥೆಯೇ ಕಾರಣವೆಂದು ಆಕೆಯೂ, ಜಾತಿ ವ್ಯವಸ್ಥೆ ಕಾರಣವೆಂದು ನಾನೂ-ವಾದಿಸುತ್ತ ಕ್ರಮೇಣ ಮೊಂಡು ಹಠಕ್ಕೆ ಬಿದ್ದ ನಾವು ರಾಷ್ಟ್ರೀಯ ಮಟ್ಟದಿಂದ ಕುಟುಂಬ ಮಟ್ಟಕ್ಕೆ ಇಳಿದುಬಿಟ್ಟೆವು. ಪರರ ಕಣ್ಣು ಕುಕ್ಕಿಸುವಂಥ ಸಂಬಳ ಪಡೆಯುತ್ತಿದ್ದರೂ ತಿಂಗಳ ಕೊನೆ ದಿನಗಳಲ್ಲಿ ಚಿಕ್ಕಾಸಿಗೆ ಪರದಾಡುತ್ತಿರುವುದಕ್ಕೆ ಕಾರಣಗಳನ್ನು ಹುಡುಕತೊಡಗಿದೆವು. ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದೆವು. ತಮಾಷೆಯಾಗಿಯೇ ಮಾತಿನ ಜರಡಿಯಲ್ಲಿ ಕುಟುಂಬದ ಆರ್ಥಿಕ ಸ್ಥಿತಿಗಳನ್ನು ಹಾಕಿ ಹಿಡಿಯ ತೊಡಗಿದ್ದು. ಆದರೆ ಕ್ರಮೇಣ ಜರಡಿಯ ರಂಧ್ರಗಳು ದೊಡ್ಡದಾಗಿ ಮಾತುಗಳಿಗೆ ಯಾವ ಅರ್ಥವೂ ದೊರೆಯದೆ ಹೋಯಿತು. ಸ್ಕೂಲು ಬಿಟ್ಟ ಮೇಲೆ ಕ್ಲಬ್ಬು ಗಿಬ್ಬು ಅಂತ ಹೋಗದೆ ಮನೇಲಿದ್ರೆ ಒಂದಿಷ್ಟು ಉಳಿಸಿ ನಾವೂನು ಆರ್ಥಿಕವಾಗಿ ತಲೆ ಎತ್ತಬಹುದು ಕಣ್ರಿ ಎಂದು ಆಕೆಯೂ, ಕಡಲೆಕಾಯಿ ಎಣ್ಣೆಯಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿರ್‍ತದೆ. ಅದ್ಕೆ ಕಡಿಮೆ ಬೆಲೆಯ ಸೂರ್ಯಕಾಂತಿ ಎಣ್ಣೆ ಬಳಸೂಂತ ಹೇಳೋದು-ರುಚಿಗೆ ತಕ್ಕಂತೆ ನಮ್ಮ ಆಹಾರದ ರೀತಿ ವಿಧಾನಗಳನ್ನು ಬದಲಾವಣೆ ಮಾಡ್ಕೋಬೇಕು…. ಎಂದು ನಾನೂ ಬಡಬಡಿಸತೊಡಗಿದೆನು. ಆಕೆ ಒಮ್ಮೆಗೆ ಕೆರಳಿ ನಿಂತು ಇಷ್ಟೆಲ್ಲ ಉಪದೇಶ ನೀಡೋ ನೀವು ಸಿಗರೇಟು ಸೇದೋದು ಬಿಟ್ಟಿದ್ದೀರಾ. ಬಿಯರ್ ಕುಡಿಯೋದು ಬಿಟ್ಟಿದ್ದೀರಾ ಮಕ್ಳೀಗೆ ಒಳ್ಳೆ ಎಜುಕೇಷನ್ ಕೊಡಿಸೋಕಾಗ್ತಿಲ್ಲ ನಿಮ್ಗೆ…. ಹೋದ ಯುಗಾದಿಯಲ್ಲಿ ನೀವು ನನ್ಗೆ ಸೀರೆ ಕೊಡಿಸಿದ್ದು…. ನಾನು ಸೀರೆ ಹೊಲ್ಕೊಳ್ಳೋದು ಎಂದಾದ್ರು ನಿಮ್ ಕಣ್ಗೆ ಬಿದ್ದಿದಿಯಾ…. ಎಂದು ಮುಸಿಮುಸಿ ಅಳುತ್ತ ಹಾಸಿಗೆಯಲ್ಲಿ ಬೋರಲು ಮಲಗಿದಳು. ಮೂರನೆ ಹೆರಿಗೆ ನಂತರ ಕುಟುಂಬದ ಆರ್ಥಿಕ ಸುಧಾರಣೆಗೆ ಕಠಿಣ ಕ್ರಮ ಕೈಗೊಂಡಿರುವ ಆಕೆ ಮಗುವಿನಂತೆ ನಿದ್ದೆ ಸವಿಯ ತೊಡಗಿದಳು. ನನ್ನನ್ನು ನಾನು ಬಯ್ದುಕೊಳ್ಳುತ್ತ ಆಕೆಯ ಹೊಂಬಣ್ಣದ ಹಣೆಗೆ ಮುತ್ತು ಕೊಟ್ಟು ಯಾವುದೋ ಕಾದಂಬರಿಯಲ್ಲಿ ಮುಳುಗಿದೆ.
ಸೊಳ್ಳೆಯ ಕಡಿತಕ್ಕೆ ಮಕ್ಕಳು ಮಗ್ಗುಲು ಬದಲಾಯಿಸಿದ್ದುದರಿಂದ ಏಕಾಗ್ರತೆಯಿಂದ ಓದಲಾಗಲಿಲ್ಲ. ಮಬ್ಬು ಬೆಳಕಿನಲ್ಲಿ ಸೊಳ್ಳೆ ಪರದೆ ಹುಡುಕಿದ್ದೂ; ಕಟ್ಟಿದ್ದೂ ದೊಡ್ಡ ಸಹವಾಸವೇ. ಸಿಡಿಮಿಡಿಗುಟ್ಟುತ್ತಲೇ ನಿದ್ದೆ ಹೋಗಿದ್ದ ಆಕೆಯನ್ನು ಪರದೆಯೊಳಕ್ಕೆ ಕಷ್ಟಪಟ್ಟು ಉರುಳಿಸಿದೆ. ಇನ್ನು ನಿರಾತಂಕವಾಗಿ ಒಂದು ಸೀಗರೇಟು ಸೇದಬಹುದೆನಿಸಿತು. ಆಗಲಿಲ್ಲ, ಖಾಲಿ ಸಿಗರೇಟು ಪ್ಯಾಕು ಅಣಕಿಸುತ್ತಿರುವಂತೆ ಗೋಚರಿಸಿತು. ಮನೆಯ ಮುಂದಿದ್ದ ಮರ ಮಳೆಗಿಂತ ಕತ್ತಲೆಯಲ್ಲಿಯೇ ಹೆಚ್ಚು ತೊಯ್ದು ತಪ್ಪಟೆಯಾಗಿತ್ತು! ಅದರಲ್ಲಿ ಕಾಯಂ ವಾಸಕ್ಕಿದ್ದ ಪಕ್ಷಿಗಳು ತಮ್ಮ ಗೂಡುಗಳನ್ನು ತಾವೆ ಗುರುತಿಸಲಾಗದೆ ಬೆದರಿ ಅರಚತೊಡಗಿ ಆ ವಾತಾವರಣಕ್ಕೆ ಭಯಾನಕತೆಯ ಲೇಪ ಹಚ್ಚತೊಡಗಿದ್ದವು. ಕಾದಂಬರಿ ಓದುವ ತಾಳ್ಮೆಯನ್ನು ವಾತಾವರಣ ಅಪಹರಿಸಿದ್ದರಿಂದ ವಿಚಿತ್ರ ನೆನೆಗುದಿಯಲ್ಲಿ ಬೇಯತೊಡಗಿರುವಾಗಲೇ ಬಾಗಿಲು ತಟ್ಟುವ ಸದ್ದು ಕೇಳಿ ಬಂತು. ಅದು ಕೇಳಿಸಿದ ಮೊದಲ ಕ್ಷಣ ಭಯವಾಯಿತು. ಬಾಗಿಲು ತಟ್ಟುವುದರಲ್ಲಿ ಹೆಸರು ವಾಸಿಯಾದವರ ಒಂದು ದೊಡ್ಡ ಪಟ್ಟಿಯೇ ಕಣ್ಣ ಮುಂದೆ ಸುಳಿಯಿತು. ಅವರಾರೂ ಇರಲಿಕ್ಕಿಲ್ಲ ಎನಿಸಿತು. ಯಾರದು? ಎಂದೆ. ಯಾವುದೋ ಅಸ್ಪಷ್ಟ ಧ್ವನಿ ಕೇಳಿಸಿತು. ಅಂತಃಕರಣಕ್ಕೆ ಹತ್ತಿರ ಸ್ಪಂದಿಸಿತು. ಮೆಲ್ಲಗೆ ಬಾಗಿಲು ಬಳಿಗೆ ಹೋಗಿ ಕಿವಿ ಅಂಟಿಸಿದೆ. ಮುಲುಕುತ್ತಿರುವಂಥ ನರಳುತ್ತಿರುವಂಥ ಸದ್ದು. ಹೆಂಡತಿ ಕಡೆ ತಿರುಗಿ ನೋಡಿದೆ. ಪರದೆಯೊಳಗೆ ಆಕೆ ತಾನು ಎಚ್ಚರ ಇರುವಂತೆ ಸೂಚನೆ ನೀಡಿದಳು. ಗಟ್ಟಿ ಧೈರ್ಯ ಕ್ರೋಢೀಕರಿಸಿ ಚಿಲಕ ಸರಿಸಿದೆ. ತೆಂಗಿನಕಾಯಿ ಹೊಡೆದಂತೆ ಬಾಗಿಲು ಹೋಳಾಯಿತು. ಕತ್ತಲ ಮೊಟ್ಟಯಂತೆ ಇದ್ದ ಯುವಕ ಒಳ ನುಸುಳಿದ. ಸುಮಾರು ಇಪ್ಪತ್ತೈದರ ಪ್ರಾಯದ ಆತನೆ ಬಾಗಿಲು ಹಾಕಿದ. ಕೆದರಿದ ತಲೆಯ ಕುರುಚಲು ಗಡ್ಡದ ಫಳ ಫಳ ಹೊಳೆವ ಕಣ್ಣುಗಳ ಆತನನ್ನು ನಖಶಿಖಾಂತ ನೋಡಿದೆ. ದಪ್ಪನೂಲಿನ ಜುಬ್ಬಾ, ಕೊಳೆಯಿಂದ ಮಾಡಲ್ಪಟ್ಟಂತಿದ್ದ ಜೀನ್ಸ್ ಪ್ಯಾಂಟು. ನನ್ನತ್ತ ಒಂದು ಕ್ಷಣ ದಿಟ್ಟಿಸಿ ನೋಡಿ “ನೇನೆವರೋ ಗುರ್ತುಪಟ್ಟಾರಾ! (ನಾನು ಯಾರೆಂದು ಗುರ್ತು ಹಿಡಿದಿರಾ!) ಎಂದ. ಅಪಾದ ಮಸ್ತಕ ನೋಡಿದೆ. “ಲೇದು” ಎಂದು (ಇಲ್ಲ) ಅಂದೆ. “ನೇನಂಡಿ ಸಾರ ಅಶೋಕ್” (ನಾನು ಸಾರ್ ಅಶೋಕ್) ಅಂದ. ಮನದಾಳದಿಂದ ಆಕೃತಿಯೊಂದು ಎದ್ದು ಮೂಡಿತು. ತರಗತಿಯ ಮೊದಲ ಸಾಲಿನಲ್ಲಿ ಮಾತು ಮೈ ತುಂಬ ಕಿವಿ ಮುಡಿದು ಶ್ರದ್ಧೆಯಿಂದ ಪಾಠ ಆಲಿಸುತ್ತಿದ್ದ ಹಾಗೂ ಪ್ರತಿಯೊಂದು ಪ್ರಶ್ನೆಗೂ ಚೂಟಿಯಾಗಿ ಉತ್ತರಿಸುತ್ತಿದ್ದ ಜಾಣ ಹುಡುಗ ಅಶೋಕ್. ಸದಾ ಸಂಕೋಚದಿಂದ ಮುದುಡಿಕೊಂಡಿರುತ್ತಿದ್ದ ಅಶೋಕ್; ನನ್ನಂಥ ಮೇಷ್ಟ್ರುಗಳಿಗೆ ಹೆದರಿ ಮೊಟ್ಟೆ ಉದುರಿಸುತ್ತಿದ್ದ ಅಶೋಕ್, ಆಗ ಪರಮ ಬ್ಯಾಚುಲರಾಗಿದ್ದ ನನ್ನ ಎಷ್ಟೋ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದ ಅಶೋಕ್, ಮಧ್ಯಮ ತರಗತಿ ಕುಟುಂಬದ ಕನಸುಗಳ ನಿರಾಳದಲ್ಲಿ ಸದಾ ಬಚ್ಚಿಟ್ಟುಕೊಂಡಿರುತ್ತಿದ್ದ ಅಶೋಕ್. “ದೊಡ್ಡ ಡಾಕ್ಟರಾಗಬೇಕೋ ಮುಂದೆ” ಎಂದಾಗ “ಹ್ಹೂ ಸಾರ್” ಎನ್ನುತ್ತಿದ್ದ ಅಶೋಕ್. “ದೊಡ್ಡ ಇಂಜಿನಿಯರಾಗಬೇಕೋ” ಎಂದಾಗ “ಹ್ಹೂ ಸಾರ್” ಎನ್ನುತ್ತಿದ್ದ ಅಶೋಕ್. ನನ್ನ ನಿರೀಕ್ಷೆ ಮೀರಿ ಅಂಕಗಳಿಸಿ ಹತ್ತನೆ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನನಗೆ ಅಪಾರ ಸಂತೋಷವುಂಟು ಮಾಡಿದವನು ಅವನು. ಸಹೋದ್ಯೋಗಿಗಳಿಗೂ ಮಿತ್ರರಿಗೂ ಸಿಹಿ ಹಂಚಿ ಸಂತೋಷ ಹಂಚಿಕೊಂಡವನು. ಅವನನ್ನು ಮನೆಗೆ ಕರೆದೊಯ್ದು “ಚೂಡರಾಬಾಬು” (ನೋಡು ಬಾಬು) ಎಂದು ಮಾತು ಆರಂಭಿಸಿ ಕಾಲೇಜು ಶಿಕ್ಷಣವನ್ನು ಹೇಗೆ ನಿಭಾಯಿಸಬೇಕೆಂದು ಸುದೀರ್ಘವಾಗಿ ವಿವರಿಸಿದೆನು. ನನ್ನ ಮಾತುಗಳನ್ನು ಕವಲೆತ್ತಿನಂತೆ ಶ್ರದ್ಧೆಯಿಂದ ಆಲಿಸುತ್ತಿರುವನೆಂದು ಖಚಿತಪಡಿಸಿಕೊಂಡು ಸ್ವಯಂ ಪಾಕವನ್ನು ನನ್ನ ಕೈಯಾರೆ ಬಡಿಸಿ ಅವನು ಊಟ ಮಾಡುತ್ತಿರುವುದನ್ನು ಕಣ್ತುಂಬ ನೋಡಿ ಸಂತೋಷಪಟ್ಟೆನು.
uಟಿಜeಜಿiಟಿeಜ
ಕೆಲವು ದಿನಗಳ ನಂತರ ಅವನು ಮುಖ ಇಳಿಬಿಟ್ಟುಕೊಂಡು ಬಂದು “ಕಾಲೇಜು ಚದುಕೋಡಾನಿಕಿ ಮಾ ನ್ನಾನ್ನಗಾರು ಒಪ್ಪುಕೋಲೇದು ಸಾರ್. ದಯಚೇಸಿ ಮೀರೊಚ್ಚಿ ನಚ್ಚ ಚಪ್ಪಂಡಿ” (ಕಾಲೇಜು ಓದುವುದಕ್ಕೆ ನನ್ನ ತಂದೆ ಒಪ್ಪಲಿಲ್ಲ ಸಾರ್. ನೀವು ಬಂದು ಒಪ್ಪುವಂತೆ ಹೇಳಿ) ಎಂದು ಅವನು ಕಣ್ಣೀರು ಕರೆದಾಗ ನಾನು ಆ ಕೂಡಲೆ ಅವರ ಮನೆಗೆ ಹೋದೆನು. ತುಸು ದೊಡ್ಡದಾದ ಹಳೇ ಕಾಲದ ಮನೆ ಅದಾಗಿದ್ದರೂ ಹೊಸ ಮನೆಗಳಿಗಿಂತ ಹೆಚ್ಚು ಬಂದೋಬಸ್ತಾಗಿತ್ತು. ಗೋಡೆಯ ತುಂಬ ಮಹಾತ್ಮ ಗಾಂಧೀಜಿಯಿಂದ ಹಿಡಿದು ಕಂದಕೂರಿ ವೀರೇಶಲಿಂಗಂ ಪಂತುಲುವರೆಗೆ ಹತ್ತಾರು ವರ್ಣ ಚಿತ್ರಗಳನ್ನು ನೇತುಹಾಕಿ ಅಲಂಕರಿಸಲಾಗಿತ್ತು. ಇನ್ನೊಂದು ಬದಿಗೆ ವಂಶಾವಳಿ ಹಿರಿಯರ ವರ್ಣಚಿತ್ರಗಳಿದ್ದರೆ ಇನ್ನೊಂದು ಕಡೆ ವಿಷ್ಣುವಿನ ದಶಾವತಾರಗಳನ್ನು ವರ್ಣಿಸುವ ಚಿತ್ರಗಳಿದ್ದವು. ಕೋಣೆಯೊಳಗಿಂದ ಕೆಲವು ಬಾಲಕಿಯರು ಕೂಚುಪುಡಿ ನೃತ್ಯ ಅಭ್ಯಾಸ ಮಾಡುವುದು ಕೇಳಿಬರುತ್ತಿತ್ತು. ಅಡುಗೆ ಮನೆಯಿಂದ ಪಾಕದ ಪರಿಮಳ ಸ್ವಾಗತಿಸುತ್ತಿರುವ ರೀತಿಯಲ್ಲಿ ತಾವು ಹಿಡಿದಿದ್ದ ಪುಸ್ತಕದಿಂದ ತಲೆ ಎತ್ತಿ “ಪಂತುಲುಗಾರು ರಂಡಿ ರಂಡೀ” (ಪಂತುಲುರವರೆ ಬನ್ನಿ ಬನ್ನಿ) ಎಂದು ಸ್ವಾಗತಿಸಿದರು. ಪ್ರಥಮ ನೋಟಕ್ಕೇ ತಿಳಿಯಿತು ಅವರು ಕಟ್ಟಾ ಸಂಪ್ರದಾಯವಾದಿಗಳೂಂತ. ಕುಚುಪುಡಿ ನೃತ್ಯದ ಸತತ ಅಭ್ಯಾಸದಿಂದ ಬಳುಕುತ್ತಿದ್ದ ಮೈಯ ಬೊಗಸೆಗಂಗಳ ತರುಣಿಯೋರ್ವಳು ನಿಂಬೆ ಪಾನಕವಿದ್ದ ಲೋಟ ತಂದುಕೊಟ್ಟಳು. ಕಣ್ಣಿಗೂ ನಾಲಿಗೆಗೂ ಹಾಯಿನಿಸಿತು. ಪರಸ್ಪರ ಉಭಯಕುಶಲೋಪರಿ ನಂತರ ಅಶೋಕನ ಕಾಲೇಜು ವಿದ್ಯಾಭ್ಯಾಸ ಕುರಿತು ಪ್ರಸ್ತಾಪಿಸಿದೆ. ತಮ್ಮ ಪೂರ್ವಜರು ಓರಂಗಲ್ಲು ಪ್ರತಾಪರುದ್ರ ಗಜಪತಿಯ ಆಸ್ಥಾನದಲ್ಲಿ ರಾಜಪುರೋಹಿತರಾಗಿದ್ದರು ಎಂಬಲ್ಲಿಂದ ಪ್ರಾರಂಭಿಸಿದ ಸ್ವಾತಂತ್ರ್ಯೋತ್ತರ ಪ್ರಜಾಪ್ರಭುತ್ವ ಸರಕಾರದ ಭೂಸುಧಾರಣಾ ಕಾಯದೆ ಭೂಮಿಯ ಬಹು ಭಾಗವನ್ನು ನುಂಗಿರುವವರೆಗೆ ಸುದೀಘವಾಗಿ ವಿವರಿಸಿದರು. ಉಳಿದಿರುವ ಭೂಮಿ ನೇಗಿಲು ಕಾಣದೆ ಬೀಳು ಬಿದ್ದಿರುವವರೆಗೆ ಹೇಳಿ ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸೂಚ್ಯಕವಾಗಿ ತಿಳಿಸಿದರು. ವೈದಿಕ ಕಲಿತು ಕುಟುಂಬಕ್ಕೆ ಮಗ ಆಸರೆಯಾಗಲಿ ಎಂಬುದೆ ಮನೋಭಿಲಾಷೆ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು. ಸ್ವಲ್ಪ ದೂರದ ಚಿತ್ತಾರದ ಕಂಬಕ್ಕಾತು ನಿಂತಿದ್ದ ಅಶೋಕನ ಆತಂಕಪೂರ್ಣ ಮುಖ ನನ್ನ ಮನಸ್ಸನ್ನು ಮತ್ತಷ್ಟು ಬಿಗಿ ಮಾಡಿತು. ನನ್ನ ಸಾಹಿತ್ಯ ಭಾಷೆಯ ನೂರುಪಟ್ಟುಗಳನ್ನು ಒಂದರ ಹಿಂದೆ ಒಂದರಂತೆ ಪ್ರಯೋಗಿಸಿ ರಾಯರನ್ನು ಒಂದು ಹದಕ್ಕೆ ತಂದೆ. ತುಳಸಿಕಟ್ಟೆಯ ಮುಂದೆ ಅಶೋಕ ಕಣ್ಣೀರು ತುಂಬಿ ಗದ್ಗದಿತನಾದನು. ಅವನ ಬೆನ್ನು ತಟ್ಟಿ ಧೈರ್ಯ ತುಂಬಿ ಸಾರ್ಥಕ ಭಾವದೊಡನೆ ಮನೆಗೆ ಮರಳಿದೆನು. ಅಶೋಕ್ ಗುಡಿವಾಡದ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದನ್ನು ಖಚಿತಪಡಿಸಿಕೊಂಡೆ. ಅಲ್ಲಿನ ಕವಿ ಮಿತ್ರ ಜೂಗಂಟೆ ಸತ್ಯಮೂರ್ತಿಗೆ ಪತ್ರ ಬರೆದು ಅಶೋಕ್ ಎಂಬ ವಿದ್ಯಾರ್ಥಿ ಬಗ್ಗೆ ಆಸ್ಥೆವಹಿಸಬೇಕೆಂದು ಕೋರಿದೆ. ಪ್ರಥಮ ಶ್ರೇಣಿಯಲ್ಲಿ ಪಾಸಾದ ಅವನು ತನ್ನ ಎರಡನೆ ವರ್ಷದ ವ್ಯಾಸಂಗಕ್ಕೆ ಎರಡು ಸಹಸ್ರ ರೂಪಾಯಿ ಬೇಕಾಗಿದೆ ಎಂದು ಬಂದು ಪ್ರಾರ್ಥಿಸಿದ. ಆಗ ನೂರೆಂಟು ಖರ್ಚಿನಲ್ಲಿ ಮುಳುಗಿಹೋಗಿದ್ದ ನನ್ನ ಕಿಸೆಯಲ್ಲಿ ಐವತ್ತು ರೂಪಾಯಿ ಸಹ ಇರಲಿಲ್ಲ. ಪ್ರತಿಭಾವಂತ ವಿದ್ಯಾರ್ಥಿಯೋರ್ವನ ಭವಿಷ್ಯ ಕಮರದಿರಲೀ ಎಂಬ ಉದ್ದೇಶದಿಂದ ಅವರಿವರನ್ನು ಸಾಲ ಕೇಳಿ ನೋಡಿದೆ. ಸಿಗಲಿಲ್ಲ. ಅದಕ್ಕೆ ಕೆಲಕಾಲ ಮುಂಚೆ ಗೃಹಸ್ಥಾಶ್ರಮ ಪ್ರವೇಶಿಸಿದ ನನ್ನ ಕೈಬೆರಳಿನಲ್ಲಿ ಹೊಕ್ಕ ಮನೆಗೆ ಹೊನ್ನ ಉಂಗುರವಿತ್ತು. ಅದನ್ನು ಒತ್ತೆ ಇಟ್ಟುಕೊಂಡು ಅಷ್ಟು ಹಣ ಕೊಡುವ ಮಹಾನುಭಾವ ಯಾರೂ ಸಿಕ್ಕಲಿಲ್ಲ. ಧರ್ಮಪತ್ನಿಗೆ ಹೇಳಿಕೊಂಡರಾಯಿತೆಂದು ನಿರ್ಧರಿಸಿ ಮಾರಿದೆ. ಎರಡು ಸಾವಿರದ ಆರು ಮುಕ್ಕಾಲು ರೂಪಾಯಿ ಬಂದಿತು. ಅವನಿಗೆ ನಾಲ್ಕು ಬುದ್ಧಿ ಮಾತು ಹೇಳಿ ಎರಡು ಸಹಸ್ರ ರೂಪಾಯಿ ಕೊಟ್ಟು ಉಳಿದ ಆರು ಮುಕ್ಕಾಲು ರೂಪಾಯಿಯಲ್ಲಿ ಒಂದು ಚಹ ಕುಡಿದು ಒಂದೂವರೆ ಪ್ಯಾಕು ಸಿಗರೇಟು ಕೊಂಡೆ.
ಗುಡಿವಾಡ ನನ್ನ ಕಾರ್ಯಕ್ಷೇತ್ರದಿಂದ ತುಂಬ ದೂರವಿದ್ದರೂ ನನ್ನ ಪ್ರಿಯ ವಿದ್ಯಾರ್ಥಿಯ ವ್ಯಾಸಂಗ ನಡವಳಿಕೆಯನ್ನು ಸ್ಥೂಲವಾಗಿ ಗಮನಿಸುತ್ತಿದ್ದೆವು. ರಾಜ್ಯ ಸಂಗೀತ ನಾಟಕ ಅಕಾಡೆಮಿಯ ವಿಶೇಷ ಪ್ರಶಸ್ತಿ ಸ್ವೀಕರಿಸುವಾಗ ಅಷ್ಟಾವಧಾನಿ ಶಿವರಾಮರಾಯರು ಅರ್ಧಾಂಗವಾಯು ಪೀಡಿತರಾದ ದುರದೃಷ್ಟಕರ ಸಂಗತಿ ಅಶೋಕನ ಶಿಕ್ಷಣಕ್ಕೆ ಪ್ರಮುಖ ಅಡಚಣೆಯಾದರೆ ಎಂದು ಮೊದಲಿಗೆ ನಾನು ಆತಂಕಪಟ್ಟಿದ್ದುಂಟು. ಆದರೆ ರಾಯರ ಹಿರಿಯ ಮಗಳು ಅಲುಮೇಲಮ್ಮ ತನ್ನ ಮಗಳು ಮೀನಾಕ್ಷಿಯನ್ನು ಕಟ್ಟಿ ಹಾಕುವ ನಿಮಿತ್ತ ತಮ್ಮನ ಶಿಕ್ಷಣದ ಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಳು. ಆಕೆಯ ಗಂಡನ ವಂಶಾವಳಿಯಲ್ಲಿ ಎಲ್ಲೋ ಒಂದು ಕಡೆ ಇರುವ ಇಚ್ಚಿತ್ತ ರೋಗ ಮಗಳಲ್ಲೂ ಮರುಕಳಿಸಬಹುದೆಂದು ರಾಯರು ನೊಂದು ಕೊಳ್ಳುತ್ತಲೇ ಹಾಸಿಗೆಗೆ ಬೆನ್ನು ಪಾಲು ಮಾಡಿದ್ದರು. ಆ ಒಳಗೆ ನನಗೆ ವಿವಾಹವಾಗಿತ್ತಲ್ಲ! ತೆಲುಗಿನ ಗಂಧಕ್ಕೆ ಹೆದರಿ ವರ್ಗಾವಣೆ ಮಾಡಿಸಿಕೊಳ್ರಿ ಉಸಿರುಗಟ್ಟಿದಂಗಾಗ್ತತೆ ಎಂದು ದಿನಂಪ್ರತಿ ಗೋಳಾಡುತ್ತಿದ್ದಳಲ್ಲ! ನನ್ನ ಮನವಿಯನ್ನು ಅನುಲಕ್ಷಿಸಿ ಘನ ಸರಕಾರವು ಕರ್ನೂಲು ಜಿಲ್ಲೆಯ ಸದರಿ ಊರಿಗೆ ವರ್ಗಾವಣೆ ಮಾಡಿತ್ತಲ್ಲ! ಬಹುದೂರದ ಹೊಸ ಊರಿನಲ್ಲಿ ಹಳೆ ಊರಿನ ನೂಲಿನ ಕವಚದಿಂದ ಬಿಡಿಸಿಕೊಳ್ಳಲಿಕ್ಕೆ ತುಸು ಹಿಂಸಾತ್ಮಕ ಸಮಯವೇ ಹಿಡಿದಿತ್ತು. ಒಡಲ ನೂಲಿನ ಗೂಡಿನ ಕಳಚುವಿಕೆಯ ಜೊತೆಗೆ ಅಶೋಕನ ನೆನಪು ಕ್ರಮೇಣ ಕುಬ್ಜಗೊಂಡು ಇದೆಯೋ ಇಲ್ಲವೋ ಎನ್ನುವಷ್ಟರ ಮಟ್ಟಿಗೆ ಉಳಿದಿತ್ತು; ಬೀಜದೊಳಗಿನ ವೃಕ್ಷದಂತೆ; ಹಾಲಿನೊಳಗಿನ ಬೆಣ್ಣೆಯಂತೆ. ಭಾಷಣ: ಖಾಸಗಿ ಮಾತುಗಳಲ್ಲಿ ಆಗಾಗ್ಗೆ ಅಶೋಕನ ಬಗ್ಗೆ ಪ್ರಸ್ತಾಪಿಸುತ್ತ ಉಪಾಧ್ಯಾಯ ಜೀವನದ ಸಾರ್ಥಕತೆಯ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುತ್ತಿದ್ದೆನು. ಪ್ರತಿಭೆಯ ಬೆಳಕಿನಲ್ಲಿ ಪೂರ್ವಾಶ್ರಮ ಗೌಣವಾಗಿದ್ದರೇನಂತೆ; ಅಶೋಕ್ ಮಹಾನ್ ವ್ಯಕ್ತಿಯಾಗಿಯೋ ಮಹಾನ್ ತಜ್ಞನಾಗಿಯೋ ನಿಷ್ಕಾಮಕರ್ಮಯೋಗಿಯಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದರಾಯಿತೆಂದುಕೊಂಡು ನಿಶ್ಚಿಂತೆಯಿಂದ ಇದ್ದೆನು. uಟಿಜeಜಿiಟಿeಜಮತ್ತೊಮ್ಮೆ ಆಗಂತುಕನನ್ನು ಅಪಾದಮಸ್ತಕ ನೋಡಿ ಅಶೋಕನೇ ಇವನೆಂದು ಖಚಿತಪಡಿಸಿಕೊಂಡೆನು. ಅವನು ಒಂದೆರಡು ದಿನಗಳಿಂದ ಮುಖ ತೊಳೆಯದಿರುವುದಷ್ಟೇ ಅಲ್ಲ ಊಟ ಸಹ ಮಾಡಿರಲಿಕ್ಕಿಲ್ಲ ಅನ್ನಿಸಿತು. ತಲೆಗೂದಲು ಎಣ್ಣೆ ನೀರು ಕಾಣದೆ ಗಂಟುಗಂಟಾಗಿ ಇಳಿಬಿದ್ದಿದ್ದವು. ಅವನ ಅವಸ್ಥೆ ಕುರಿತು ಕೇವಲ ದಿಗ್ಭ್ರಮೆಗೊಂಡರಾಯಿತೆ! ಕರುಣೆಯ ಸೆಳೆವಿನಲ್ಲಿ ಕೊಚ್ಚಿ ಹೋಗುತ್ತಲೆ ವಾಸ್ತವದ ದಡ ತಲುಪಿದೊಡನೆ “ಅಶೋಕಾ….ಅಶೋಕಾ” ಎಂದು ಕೈ ಕುಲಿಕಿ ಕುರ್ಚಿಯಲ್ಲಿ ಕುಳ್ಳಿಸಿರಿ “ಚೆಪ್ಪೆವಯ್ಯಾ ಚೆಪ್ಪು…. ನೀ ಕಥ ಏಮಿಟಿ ಚಪ್ಪವಯ್ಯಾ” (ಹೇಳಯ್ಯಾ ಹೇಳು…. ನಿನ್ನ ಕಥೆ ಏನು ಹೇಳಯ್ಯಾ) ಎಂದು ಪರಮವಿಧೇಯ ವಿದ್ಯಾರ್ಥಿಯಂತೆ ಅವನ ಎದುರಿಗೆ ಕುರ್ಚಿ ಎಳೆದುಕೊಂಡು ಕೂತೆನು. “ಸಾರ್ ಮನ ಸೊಸೈಟಿ ಪಾಡೈ ಪೋಯಿಂದಿ” (ಸಾರ್ ನಮ್ಮ ಸಮಾಜ ಹಾಳಾಗಿಹೋಗಿದೆ) ಎಂದು ಆರಂಭಿಸಿದ. ಮಾವೋ ಲೆನಿನ್ಲಾಂಟಿವಾಳ್ಳು ಮನ ದೇಶಂಲೋ ಅವತರಿಂಚಾಲಿ… (ಮಾವೋ, ಲೆನಿನ್ ಅಂಥಹವರು ನಮ್ಮ ದೇಶದಲ್ಲಿ ಅವತರಿಸಬೇಕಾಗಿದೆ. ಅದಕ್ಕಾಗಿ ಎದುರು ನೋಡುತ್ತಿದ್ದೇವೆ) ಅವತರಿಂಚೇ ಅವಕಾಶಲು ಚಾಲಾ ವುನ್ನಾಯಿ. ಮೇಮು ದಾನಿಕೋಸಂ ಎದುರು ಚೂಸ್ತುನ್ನಾಮು ಎಂದು ಆಕಾಶದಿಂದ ಮಳೆ ಸುರಿದಂತೆ ಹೇಳಿದ. ಮಾತಿನುದ್ದಕ್ಕೂ ಮಾವೋ, ಮಾರ್ಕ್ಸ್, ಏಂಗೆಲ್ಸ್ ಮುಂತಾದವರ ಸೂಕ್ತಿಗಳನ್ನು ಧಾರಾಳವಾಗಿ ಬಳಸಿದ. ಚೀನಾ, ರಷ್ಯಾ, ಕ್ಯೂಬಾ ಗೀಬಾ ಅಂತ ಅನೇಕ ದೃಷ್ಟಾಂತಗಳನ್ನು ಪೋಣಿಸಿದ. ಅವನು ತೆಲುಗು ಭಾಷೆ ಮಾತ್ರವಲ್ಲದೆ ಇಂಗ್ಲೀಷಿನಲ್ಲೂ ಪ್ರೌಢಿಮೆ ಸಾಧಿಸಿರುವುದು ಕಂಡು ಎಷ್ಟು ಹೆಮ್ಮೆಯಾಯಿತೋ ಅಷ್ಟೇ ಬೇಸರವಾಯಿತು – ದಿಢೀರ್ ಸಮಾಜ ಬದಲಾವಣೆಯ ಹುಚ್ಚು ಹಿಡಿದಿರುವುದು ಕಂಡು. ನೀರು ಕೇಳಿದ ತಂದುಕೊಟ್ಟೆ, ಗಟಗಟ ಕುಡಿದು ಒಂದು ಕ್ಷಣ ಧೀಘ್ರವಾಗಿ ಉಸಿರಾಡಿದ. ಮತ್ತೇರಿದಂತೆ ಕಂಡ. ಆತನ ಕಣ್ಣ ಕೆಂಪಿನಲ್ಲಿ ಸಿಟ್ಟು ಅವಸರ ನಿರಾಸೆ ಸಮಸಮನಾಗಿದ್ದವು. ಅವನಿಗೆ ರುಚಿಸುವಂಥ ಯಾವ ಮಾತನ್ನೂ ಆಡಲಾರೆನೆನ್ನಿಸಿತು. ಪ್ರತಿಯಾಗಿ ಒಂದು ನಿಟ್ಟುಸಿರುಬಿಡದೆ ಮತ್ತೇನು ಮಾಡಲಿ? ಅವನ ವಿಚಾರಗಳಿಗೆ ಮೆಚ್ಚುಗೆ ಸೂಚಿಸುವುದಾಗಲೀ; ವಿರೋಧ ಸೂಚಿಸುವುದಾಗಲೀ ಆಗದೆ ವಿಚಿತ್ರ ಸಂಕಟದಲ್ಲಿ ಬೇಯ ತೊಡಗಿದೆನು. ಯಾವ ಆಲೋಚನೆಯೂ ಸ್ಪಷ್ಟ ಮಾತಿನ ರೂಪ ಪಡೆಯದೆ ಗಂಟಲಲ್ಲಿ ಕಮರಿದಾಗಲೇ ನನ್ನ ಅಸಹಾಯಕತೆ ನನಗೆ ಅರ್ಥವಾದದ್ದು. ಇದು ದೌರ್ಬಲ್ಯವೆಂದರೂ ಸರಿಯೇನೋ!
ಶಿಕ್ಷಕನೊಳಗೆ ಮಾತೃ ಕರುಳು ಇರುತ್ತದೆನ್ನುವುದಕ್ಕೆ ನಾನೇ ಸಾಕ್ಷಿ ನೋಡಿ. ನನ್ನೊಳಗೆ ಮಾತೃ ಕರುಳನ್ನು ಜಾಗೃತಗೊಳಿಸಿದ್ದು ಅವನ ದೇಹ ಹೊರಸೂಸುತ್ತಿದ್ದ ಕೊಳೆ ವಾಸನೆಯೆ! ಅದೇ ಹೊತ್ತಿಗೆ ಅವನು “ಸಾರ್ ರೆಂಡು ರೋಜುಲನುಂಡಿ ಏಮೀ ತಿನಲೇದು, ಆಕಲಿ” (ಸಾರ್ ಎರಡು ದಿನಗಳಿಂದ ಏನೂ ತಿಂದಿಲ್ಲ ಹಸಿವು) ಎಂದು ಹೇಳಿದೊಡನೆ ಮತ್ತಷ್ಟು ಎಚ್ಚರ ಗೊಂಡೆನು. “ಒಕ್ಕ ನಿಮಿಷಮು ಉಂಡು” (ಒಂದು ನಿಮಿಷ ಇರು) ಅಂತ ಹೇಳಿ ಅಡುಗೆ ಮನೆಗೆ ಹೋದೆನು. ಅಡುಗೆಮನೆಯನ್ನೇ ಬಾರ್ಸಿಲೋನ ಒಲಂಪಿಕ್ಸ್ ಗ್ರವಂಡು ಮಾಡಿಕೊಂಡು ಅಂತರ್ರಾಷ್ಟ್ರೀಯ ಕ್ರೀಡಾಪಟುಗಳಂತೆ ಎಗರಾಡುತ್ತಿದ್ದ ಹತ್ತಾರು ಇಲಿಗಳು ನನ್ನ ಪ್ರವೇಶದಿಂದ ಬೇಸರ ಮತ್ತು ಆತಂಕ ವ್ಯಕ್ತಪಡಿಸುತ್ತ ಎಲ್ಲಿ ಬೇಕೆಂದರಲ್ಲಿ ಕಿಮಕ್ಕೆನ್ನದೆ ಅಡಗಿಕೊಂಡು ಬಿಟ್ಟವು. ನನಗೆ ವಿಚಿತ್ರ ಧೈರ್ಯ ಬಂದು ಅಲ್ಲಿದ್ದ ಎಲ್ಲ ಪಾತ್ರೆಗಳನ್ನು ಎತ್ತೆತ್ತಿ ನೋಡಿ ಅವು ಖಾಲಿ ಇರುವುದನ್ನು ಖಚಿತಪಡಿಸಿಕೊಂಡೆನು. ಪ್ರತಿ ಖಾಲಿ ಪಾತ್ರೆ ಮಾಡುತ್ತಿದ್ದ ಸದ್ದಿಗೂ ಅವನ ದೃಷ್ಟಿ ತೀಕ್ಷ್ಣವಾಗಿ ಸ್ಪಂದಿಸುತ್ತಿತ್ತು. ನನ್ನ ಪ್ರಿಯ ವಿದ್ಯಾರ್ಥಿಯ ಹಸಿವೆಯನ್ನು ಹಿಂಗಿಸದೆ ಇರಲಿಕ್ಕಾದೀತೆ! ಸೀದಾ ಧರ್ಮಪತ್ನಿ ಮಲಗಿದ್ದ ಸೊಳ್ಳೆ ಪರದೆ ಬಳಿಗೆ ಹೋದೆನು. ಪರದೆ ಎತ್ತಿ ನೋಡಿದೆ. ಆಕೆ ಕಳ್ಳನಿದ್ದೆ ಮಾಡುತ್ತಿದ್ದುದಂತೂ ಸ್ಪಷ್ಟವಾಗಿತ್ತು! ಅನ್ನಪೂರ್ಣಽ ಅನ್ನಪೂರ್ಣಽ ಎಂದು ಚಿನ್ನದ ಓಲೆಗಳಿದ್ದ (ಕಳೆದ ತಿಂಗಳು ಅರಿಯರ್‍ಸ್ ಬಂದಿದ್ದಾಗ ಮಾಡಿಸಿದ್ದು) ಕಿವಿಯಲ್ಲಿ ಪಿಸುಗುಟ್ಟಿದೆ ‘ಏನ್ರಿ’ ಎಂದಳು. “ಎದ್ದೇಳು ಕೆಲಸ ಇದೆ ಕಣೇ!” ಅಂದೆ. ಯಾಕೆ ಅಂದಳು “ನನ್ನ ಓಲ್ಡ್ ಸ್ಟೂಡೆಂಟೊಬ್ಬ ತುಂಬ ಹಸಿದು ಬಂದಿದ್ದಾನೆ ಅದ್ಕೆ” ಅಂದೆ. ‘ನನ್ನಿಂದ ಸಾಧ್ಯ ಇಲ್ಲ. ಬೇಕಿದ್ರೆ ನೀವೆ ಮಾಡ್ಕೊಡಿ ಹೋಗಿ…. ನನಗೆ ಸೊಂಟ ನೋವು’ ಎಂದು ಮಗ್ಗುಲು ಬದಲಾಯಿಸಿ ಮಲಗಿದಳು. ಒತ್ತಾಯಿಸಲಿಕ್ಕಾದೀತೆ? ಪಿಸಿಪಿಸಿ ಮಾತು ಅವನಿಗೆ ಕೇಳಿಸಿರಲಿಕ್ಕಿಲ್ಲೆಂದು ಖಚಿತಪಡಿಸಿಕೊಂಡೆ. ಅಶೋಕನಿಗೆ ಪುಸ್ತಕಗಳನ್ನು ನೋಡುತ್ತಿರಲು ಹೇಳಿ ಅಡುಗೆ ಮನೆ ಪ್ರವೇಶಿಸಿದೆ. ಸೆಲ್ಫ್‌ನಲ್ಲಿ ಒಂದೇ ರೀತಿಯ ಅಲ್ಯೂಮಿನಿಯಂ ಡಬ್ಬಿಗಳು. ಗಂಡಸಾದರೆ ನೀನು ನಮ್ಮೊಳಗೇನಿದೆ ಗುರುತಿಸಬಲ್ಲೆ ಏನು! ಎಂದು ಸವಾಲು ಹಾಕುವಂತಿದ್ದವು. ಒಂದೊಂದು ಡಬ್ಬಿಯೊಳಗೂ ಒಂದೊಂದು ವಿಧದ ಪದಾರ್ಥಗಳಿದ್ದವು ಎರಡು ದಿನ ಉಪವಾಸವಿರುವಂಥ ಪುಷ್ಕಳ ಭೋಜನ ಮಾಡಲೆಂದು ಅರ್ಧ ಸೇರು ಅಕ್ಕಿ ಪಾತ್ರೆಗೆ ಸುರುವಿ ತೊಳೆಯತೊಡಗಿದೆ. ಅಷ್ಟರೊಳಗೆ ಅನ್ನಪೂರ್ಣ ಬಂದು ಉಸ್ತುವಾರಿ ವಹಿಸಿಕೊಳ್ಳುತ್ತ ವರ್ತಮಾನದ ಸೂಕ್ಷ್ಮತೆಗಳ ಕುರಿತು ಗೊಣಗಲಾರಂಭಿಸಿದಳು. ನಾನೂ ಮಾತಾಡತೊಡಗಿದರೆ ಅವನು ಕೇಳಿಸಿಕೊಂಡಾನೆಂದೂಹಿಸಿ ಅಲ್ಲಿಂದ ಮೆಲ್ಲಗೆ ಕಾಲು ಕಿತ್ತೆನು.
ಸೆಲ್ಫ್‌ನಿಂದ ಹತ್ತಾರು ಪುಸ್ತಕಗಳನ್ನು ಕಿತ್ತು ಮುಂದೆ ಹರವಿಕೊಂಡು ಕೂತಿದ್ದ. ಹತ್ತಾರು ಪುಸ್ತಕಗಳನ್ನು ಒಂದೇ ಬಾರಿಗೆ ಓದಲು ಪ್ರಯತ್ನಿಸುತ್ತಿರುವಂತೆ ಕಂಡ. ಅವನ ಕಣ್ಣಾಲಿಗಳು ಸರಪರ ಹರಿದಾಡುತ್ತಿದ್ದವು. ಪ್ರತಿ ಕ್ಷಣಕ್ಕೊಮ್ಮೆ ಗಡ್ಡ ಅಥವಾ ತನ್ನ ದೇಹದ ಭಾಗವನ್ನು ತುರಿಸಿಕೊಳ್ಳುತ್ತಿದ್ದ. ಅಷ್ಟೇ ತೀಕ್ಷ್ಣವಾಗಿ ನನ್ನತ್ತ ದಿಟ್ಟಿಸುತ್ತಿದ್ದನೂ ಸಹ. ಇದರಿಂದ ನನಗೆ ಇರುಸು ಮುರುಸು. ತನ್ನ ಅನಿರೀಕ್ಷಿತ ಆಗಮನದಿಂದ ನನಗೆ ಬೇಸರವಾಗಿರಬಹುದೆಂಬ ಆತಂಕವೂ ಇತ್ತು. “ಸಾರ್ ನಾನು ಬಂದಿದ್ರಿಂದ ನಿಮ್ಗೆ ತೊಂದ್ರೆ ಆಯ್ತೋ ಏನೋ….” ಜೇಬಿನಿಂದ ಒಂದು ಚುಟ್ಟ ಕೀಳುತ್ತ “ಇಫ್ ಯು ಡೋಂಟ್ ಮೈಂಡ್….” ಅಂದ. ಅಲ್ಲೇ ಇದ್ದ ಕಡ್ಡಿ ಪೊಟ್ಟಣದಿಂದ ಹಚ್ಚಿಕೊಂಡ…. ಅವನ ಕೈಗಳು ವಿಚಿತ್ರವಾಗಿ ಕಂಪಿಸುತ್ತಿದ್ದವು….. ಆ ಚುಟ್ಟದಿಂದ ಎರಡು ಧಂ ಎಳೆದ. ಹೊಗೆ ದಟ್ಟವಾಗಿ ಕೋಣೆ ಆವರಿಸಿತು. “ನಿಮ್ಗೆ ಬೇಸರವಾಗಿದೆ. ದಯವಿಟ್ಟು ಕ್ಷಮಿಸಿ. ಇಲ್ಲಿಗೆ ಬಾರದೆ ನನಗೆ ಬೇರೆ ದಾರಿಯೇ ಇರಲಿಲ್ಲ….” ಅಂದ. “ದಯವಿಟ್ಟು ಕ್ಷಮಿಸಿ” ಎಂಬ ಶಬ್ದಗಳನ್ನು ಇನ್ನೂ ಉಚ್ಚರಿಸಬಲ್ಲನಾತ. ಆತನ ಭುಜ ಅದುಮಿ ನೀನು ನನಗೆ ತಮ್ಮನಿದ್ದ ಹಾಗೆ ಅಂದೆ. ನಾವಿಲ್ಲಿರೋದು ನಿನಗೆಂಗೆ ಗೊತ್ತಾಯ್ತು ಅಂದೆ… ನಮಗೆ ಎಲ್ಲ ಗೊತ್ತಾಗ್ತಿರ್‍ತದೆ ಅಂದ. ಇಲ್ಲೆಲ್ಲ ನಂ ಪಾರ್ಟಿ ವರ್ಕರ್‍ಸ್ ಇದ್ದಾರೆ ಅಂದ. ಅವರೆಲ್ಲ ಪೋಲೀಸ್ರ ಕಣ್ತಪ್ಪಿಸಿ ಅಂಡರ್ ಗ್ರೌಂಡ್ ಸೇರ್‍ಕೊಂಡಿದಾರೆ ಅಂದ. ಮತ್ತೆ ನನ್ನ ಕಡೆ ನೋಡಿದ. ನಾನು ನಿರ್ವಿಕಾರದಿಂದ ಇದ್ದೆ. ಯಾಕೆ ಹೀಗೆಲ್ಲ ಅಂದೆ. ಹೋರಾಟ ಅಂದ. ಬೂರ್ಜ್ವಾ ವ್ಯವಸ್ಥೆ ವಿರುದ್ಧ ಉಗ್ರ ಹೋರಾಟ ಅಂದ. ಅವನು ಮಾತಾಡುತ್ತಿರಲಿಲ್ಲ. ಸ್ಫೋಟಿಸುತ್ತಿರುವನೆನ್ನಿಸಿತು. ಗಾಬರಿಯಾಯಿತು. ಅವನನ್ನು ಕುರಿತು ಕೇಳಬೇಕೆಂದಿದ್ದ ಎಷ್ಟೋ ಪ್ರಶ್ನೆಗಳು ಹಾಗೇ ಉಳಿದವು. ಅವುಗಳನ್ನು ಚಿವುಟಿದೆ ನಿರ್ದಾಕ್ಷಿಣ್ಯದಿಂದ. ಅದೇ ಸಮಯಕ್ಕೆ ವಿದ್ಯುಚ್ಛಕ್ತಿ ಬಂತು. ದೀಪಗಳು ವಿಶೇಷ ಕಾಂತಿಯಿಂದ ಬೆಳಗತೊಡಗಿದವು. ಸಾರ್ ದಯವಿಟ್ಟು ಲೈಟಾಫ್ ಮಾಡಿ…. ಚಿಮಣಿ ದೀಪ ಸಾಕು…. ನಾನು ಪ್ರತಿಕ್ರಿಯಿಸುವ ಮೊದಲೇ ತಾನೇ ಆಫ್ ಮಾಡಿದ. ನಾನಿಲ್ಲಿರೋದು ಪೋಲೀಸ್ರಿಗೆ ತಿಳಿದ್ರೆ ನಿಮ್ಗೆ ಅಪಾಯ ಅಂದ. ಅಶೋಕ್ ನೀನು ಏನು ಹೇಳ್ತಿರೋದು ಅಂದೆ…. ಹೌದು ಸಾರ್ ಇದ್ರಲ್ಲಿ ಆಶ್ಚರ್ಯ ಪಡೋದೇನೂ ಇಲ್ಲ. ನನ್ ಮೇಲೆ ಪೋಲೀಸ್ರು ಒಂದು ಸುಳ್ಳು ಕೊಲೆ ಕೇಸ್ ಹೊರ್‍ಸಿ ಬಂಧಿಸಿದ್ರು…. ಪೊಲೀಸರೆಂದರೆ ಬಾಲ್ಯದೆಸೆಯಿಂದಲೇ ಹೆದರುವ ನಾನು ನಿಜಕ್ಕೂ ಹೆದರಿದೆ. ಕಿಟಕಿ, ಬಾಗಿಲು ಭದ್ರಪಡಿಸಿ ಬಂದೆ. ಚಿಮಣಿ ದೀಪದ ಬೆಳಕಿನಲ್ಲಿ ಅವನ ದೇಹದ ನೆರಳು ಗೋಡೆ ಮೇಲೆಲ್ಲ ವ್ಯಾಪಿಸಿದ್ದು ಭಯ ತರುವಂತಿತ್ತು. ಒಂದು ಕಾಲದಲ್ಲಿ ಪ್ಯಾಂಟು ಬದಲಾಯಿಸಲೂ ಅರಿಯದ ಶಿಷ್ಯೋತ್ತಮ ಈಗ ಸಮಾಜವನ್ನು ಅಮೂಲಾಗ್ರ ಬದಲಾಯಿಸಲು ಹೋರಾಡುತ್ತಿರುವುದನ್ನು ಹೇಗೆ ಸಂಬಾಳಿಸುವುದೋ ತಿಳಿಯದಾಯಿತು. ಎಲ್ಲರನ್ನೂ ಒಂದು ಕಡೆಯಿಂದ ಬೂರ್ಜ್ವಾ ಎಂದುಕೊಳ್ಳುತ್ತ ಬರುತ್ತಿರುವ ಈ ಮಹಾಶಯ ತನ್ನ ಹಣೆಗೆ ಈ ಪಟ್ಟಿ ಕಟ್ಟಲಾರ ಬಹುಶಃ!…. ಪೊಲೀಸರಿಗೆ ಬೇಕಾಗಿರುವ ಅವನು ಹಾಗೆ ಎಲ್ಲಿ ಪರಿಭಾವಿಸಿಯಾನೋ ಎಂದು ನಾನು ಒಂದು ಕ್ಷಣ ಒಳಗಿದ್ದೇ ಇನ್ನೊಂದು ಕ್ಷಣ ಪಡಸಾಲೆಗೆ ಬರುತ್ತ ಮತ್ತೊಂದು ಕ್ಷಣ ಮಲಗಿದ್ದ ಮಕ್ಕಳ ಹೂಗೆನ್ನೆಗೆ ಮುದ್ದಿಸುತ್ತ ಮಗದೊಂದು ಕ್ಷಣ ಆಧುನಿಕ ಸಾಹಿತ್ಯ ಸಮಾಜಾಭಿಮುಖವಾಗುತ್ತಿರುವುದರ ಕುರಿತು ಬಡಬಡಿಸುತ್ತ ಬಾಯಾರತೊಡಗಿದೆ. ಅಡುಗೆ ಮನೆಗೆ ಹೋಗುತ್ತಲೆ ಹೆಂಡತಿ ತನ್ನ ಬಾಯಿಯನ್ನು ತಪ್ಪದೆ ನನ್ನ ಕಿವಿಯಲ್ಲಿ ಇಟ್ಟು ಮಥಿಸುತ್ತಿದ್ದಳು. ಎಂಥೆಂಥ ಸ್ಟೂಡೆಂಟ್ಸ್ ಇದಾರಲ್ರೀ ನಮ್ಗೆ…. ಅಯ್ಯೋ ಶಿವ್ನೆ…. ಪೊಲೀಸ್ರ ಕಣ್ಣಿಗೆ ಬಿದ್ರೆ ನಮ್‌ಗತಿ ಏನು…. ಇತ್ಯಾದಿ…. ಇತ್ಯಾದಿ. ಅವಕ್ಕೆಲ್ಲ ಏನಂತ ಉತ್ತರಿಸಲಿ! ಪಲ್ಯ ಹೀಗಿರಲಿ : ಚಟ್ನಿ ಹಾಗಿರಲಿ. ತುಪ್ಪ ಇದೆಯೋ ಇಲ್ಲವೋ ಎಂದು ತಪಶೀಲು ನಡೆಸಿದೆ. ಕುಕ್ಕರ್ ಹೆಚ್ಚು ಸದ್ದು ಮಾಡದ ಹಾಗೆ ನೋಡಿಕೊಳ್ಳುವಷ್ಟರಲ್ಲಿ ಸಾಕು ಸಾಕಾಗಿಹೋಯಿತು. ಅಡುಗೆ ಆಗುವುದರೊಳಗೆ ಅವನು ಸ್ನಾನನಾದ್ರು ಮಾಡಬಹುದಲ್ಲ! ಸೀದ ಹೊರಗಡೆ ಬಂದವನೆ ಅಶೋಕ್ ಸ್ನಾನ ಮಾಡುಬಾರಪ್ಪ ಅಂದೆ. ಬೇಡ ಸಾರ್ ಹತ್ತಿರದಲ್ಲೆಲ್ಲೊ ಪೊಲೀಸ್ ವಿಝಲ್ ಕೇಳಿಸ್ತಾ ಇದೆ. ಅದೂ ಅಲ್ದೆ ಬೇರೆ ಬಟ್ಟೆ ಇಲ್ಲ…. ಅಂದ. ನಿನ್ನ ರಕ್ಷಿಸೋ ಜವಾಬ್ದಾರಿ ನನ್ನದು. ಹಾಗೆಲ್ಲ ಯೋಚಿಸಬೇಡ ಎದ್ದೇಳು ಎಂದು ಎಬ್ಬಿಸಿದೆ. ಬಾತ್ರೂಮಿಗೆ ಕರೆದೊಯ್ದು ಟವಲ್ಲು, ಸೋಪು, ನೀರು ಬ್ರಷ್ ಎಲ್ಲ ಪರಿಚಯಿಸಿದೆ. ಮೆಲ್ಲಗೆ ಅಡುಗೆ ಮನೆಗೆ ಬಂದು ಶಾಂಪೂ ಎಲ್ಲಿದೆಯೇ ಅಂದೆ. ಪಂಚಾಯ್ತಿ ನಡೆಸಿ ತಂದುಕೊಟ್ಟೆ. ಶಾಂಪೂ ಹಾಕಿ ತಲೆ ಸ್ನಾನ ಮಾಡು ಅಶೋಕ್, ಫ್ರೆಷ್ ಆಗ್ತೀಯಾ ಎಂದೆ…. ಸ್ನಾನದ ನಂತರ ಅವನಿಗೆ ತೊಡಲು ಒಂದು ಜೊತೆ ಬಟ್ಟೆ ಬೇಕಲ್ಲ! ಯಾವುದಾದ್ರೂ ಹಳೇ ಪ್ಯಾಂಟು ಹಳೇ ಷರ್ಟು ಕೊಡ್ರಿ ಎಂದು ಅವಳು ಚಿಟಿಪಿಟಿ ಆಡುತ್ತಿದ್ದರೂ ಲೆಕ್ಕಿಸದೆ ಕಳೆದ ತಿಂಗಳು ಹೊಲಿಸಿದ್ದ ಪ್ಯಾಂಟು ಷರ್ಟು, ಒಂದು ಬಳಸದೆ ಇದ್ದ ಹೊಸ ಅಂಡರ್‌ವೇರೂ ಬನಿಯನ್ನೂ ಎಲ್ಲ ತಂದು ಅದೇ ತಾನೆ ಸ್ನಾನ ಮುಗಿಸಿದ ಅಶೋಕನಿಗೆ ಕೊಟ್ಟೆ, ಬೇಡಬೇಡವೆಂದು ಅವನು ಮೊದಲು ನಿರಾಕರಿಸಿದರೂ ಕೊನೆಗೆ ಒಪ್ಪಿಕೊಂಡ. ನಾನು ಕೊಟ್ಟ ಬಾಚಣಿಗೆಯಿಂದ ಬಾಚಿಕೊಂಡ. ಅವನು ಸೌಮ್ಯತೆಯಿಂದ ಮಾಡಲ್ಪಟ್ಟಂತೆ ಕಂಡ. ಸಾರ್ ನನ್ನ ಬಿಟ್ಟ ಬಟ್ಟೆಗಳನ್ನು ಬೆಳಕು ಹರಿಯುವುದರೊಳಗಾಗಿ ಸುಟ್ಟುಬಿಟಿ…. ಇಲ್ಲಾಂದ್ರೆ ನಿಮ್ಗೆ ತೊಂದ್ರೆ! ಮೆಲುದನಿಯಲ್ಲಿ ಪಟಪಟ ನುಡಿದ. ನಾನು ಕೊಟ್ಟ ಕನ್ನಡಿಯನ್ನು ಟೇಬಲ್ ಮೇಲೆ ಬೋರಲು ಮಲಗಿಸಿದ : ಬದುಕಿನಿಂದಲೇ ಕನ್ನಡಿಯನ್ನು ದೂರ ಇಟ್ಟವನಂತೆ. ಶ್ರೀಮತಿಗೆ ಹೇಳಿದರೆ ಗುಟ್ಟಾಗಿ ಬಟ್ಟೆ ಸುಡೋದೆಂದರೆ ರಹಸ್ಯವಾಗಿ ಹೆಣ ಸುಟ್ಟಂತೆಯೇ ಎನ್ನದೆ ಇರಳು. ನಾನೇ ಹೋಗಿ ರಕ್ತದ ಕಲೆಗಳು ಇರಬಹುದಾದ ಅವನ ಬಟ್ಟೆಗಳನ್ನು ಗಂಟು ಕಟ್ಟಿಟ್ಟು ಬಂದೆ.
uಟಿಜeಜಿiಟಿeಜಅಡುಗೆ ರೆಡಿ ಎಂದು ಇಡೀ ಮನೆ ಹೇಳುತ್ತಿತ್ತು. ಅಡುಗೆ ಮನೆ ಪ್ರವೇಶಿದೆ. ಕ್ರಿಮಿನಲ್ಲಿಗೆ ಊಟ ಹಾಕಿ ಮತ್ತೊಂದು ಅಪರಾಧ ಮಡೋದಿಲ್ಲ ಕಣ್ರೀ ಎಂದಳು. ನನ್ನ ಸಂತೋಷದಲ್ಲಿ ಭಾಗಿಯಾಗೋದು ಕ್ರೈಂ ಹೇಗಾಗುತ್ತೆ ಅಂದೆ. ಹೀಗೆ ನನ್ನ ಕಿವಿಗಳನ್ನು ಅವಳೂ ಅವಳ ಕಿವಿಗಳನ್ನು ನಾನೂ ಗುತ್ತಿಗೆ ಹಿಡಿದವರಂತೆ ಚರ್ಚಿಸಿದೆವು. ಅಂತೂ ಆಕೆ ಊಟ ಬಡಿಸಲು ಒಪ್ಪಿದಳು. ನಾನು ಕರೆಯಲು ಅವನು ಬಂದು ಎಲೆ ಮುಂದೆ ಕೂತ. ಒಂದೊಂದು ಸೆಕೆಂಡು ಒಂದೊಂದು ಯುಗಗಳಾಗಿದ್ದವು ಅವನ ಪಾಲಿಗೆ. ಬಡಿಸುವ ಕೆಲಸದಲ್ಲಿ ಆಕೆಗೆ ನಾನು ಸಹಕರಿಸಿದೆನು. ಅನ್ನ ಕಂಡಿದ್ದನೋ ಇಲ್ಲವೋ ಎಂಬಂತೆ ಅವನು ಉಣ್ಣುತ್ತಿದ್ದುದು ನನ್ನ ಕಣ್ಣಾಲಿಗಳನ್ನು ತೇವಗೊಳಿಸಿತು. ನಮ್ಮ ಅಂತಃಕರಣವೇ ಅಶೋಕನ ರೂಪದಲ್ಲಿ ಹಸಿದಿದೆ ಎನ್ನಿಸಿತು. ಅದನ್ನು ತಣಿಸುವ ದಿಸೆಯಲ್ಲಿ ನಮ್ಮದೊಂದು ಸಣ್ಣ ಪ್ರಯತ್ನವಷ್ಟೆ! ಇಂಥ ಸಂತೋಷಕ್ಕೆ ಸಾಟಿಯಾದ ವಸ್ತು ಯಾವುದುಂಟು! ನಾವು ನೀಡಿ ನೀಡಿ ದಣಿಯಲಿಲ್ಲ. ಆದರೆ ಅವನು ಸ್ವಲ್ಪ ಹುಳಿ ಇದ್ದ ಮಜ್ಜಿಗೆ ಅನ್ನಕ್ಕೆ ಬೆರೆಸಿ ಉಂಡು ತೃಪ್ತಿಯ ಡೇಗುಡೇಗಿದ. ಆ ಸದ್ದು ಕೋಣೆ ತುಂಬಿ ಮಾರ್ಮಲೆಯಿತು. ಆ ಸದ್ದಿನೊಳಗೆ ನಮ್ಮಿಬ್ಬರನ್ನು ಕುರಿತ ಕೃತಜ್ಞತೆಯ ಛಾಯೆ ಇತ್ತು. ಜಗತ್ತನ್ನೇ ಗೆಲ್ಲುವೆನೆಂಬ ಆತ್ಮವಿಶ್ವಾಸ ಅವನ ಕಣ್ಣುಗಳಲ್ಲಿ ಮಿನುಗಲಾರಂಭಿಸಿತ್ತು. ನಾವು ಬಡಿಸಿದ ಆಹಾರದಿಂದಲಾದರೂ ಅವನು ಸತ್ಕಾರ್ಯ ಮಾಡುವಂತಾಗಲಿ ಎಂದು ಮನಸ್ಸಿನಲ್ಲಿ ಹಾರೈಸಿದೆನು.
ಬಗಲ ಚೀಲದಿಂದ ಒಂದು ಪುಸ್ತಕ ತೆಗೆದು ನನಗಿತ್ತ “ನಾನು ಬರೆದ ಕಥೆಗಳು ಸಾಧ್ಯವಾದರೆ ಓದಿ” ಎಂದು. ಗೌರಿ ಎಂಬ ಪೆನ್‌ನೇಮಿನಿಂದ ಬರಿತಿದೀನಿ ಅಂದ. ನಾನು ಗೌರಿ ಬರೆದ ಕಥೆಗಳನ್ನು ಬಹುಪಾಲು ಪತ್ರಿಕೆಗಳಲ್ಲಿ ಓದಿರುವೆನು. ಗೌರಿಯ ಸಮಾಜಾಭಿಮುಖ ನಿಲುವುಗಳು ನನಗೆ ಯಾವತ್ತು ಇಷ್ಟವೇ. ನಾನು ಓದಿರುವುದಷ್ಟೇ ಅಲ್ಲ ಹಲವರಿಂದ ಓದಿಸಿರುವೆನು ಕೂಡ. ನಾನು ಕತೆಗಳನ್ನು ಬರೆದರೆ ಗೌರಿ ಥರವೇ ಬರೆಯಬೇಕೆಂದು ನಿಶ್ಚಯಿಸಿದ್ದುಂಟು. ಕತೆಗಾರ್ತಿಯನ್ನು ಸಂಪರ್ಕಿಸಿ ಅನುವಾದಕ್ಕೆ ಪರವಾನಗಿ ಪಡೆಯಲು ಹಿಂದೊಮ್ಮೆ ಪ್ರಯತ್ನಿಸಿದ್ದುಂಟು. ಸಾಧ್ಯವಾಗಿರಲಿಲ್ಲ. ಮಹಿಳೆಯ ಹೆಸರಿನ ಕವಚದೊಳಗೆ ಗಂಡಸೊಂದಿದೆ ಎಂಬ ಸುಳಿವು ನನಗೆ ಸಿಕ್ಕಿತ್ತು. ಕಥೆಯ ಭಾಷೆಯ ಹಂದರದಲ್ಲಿ ಹೆಣ್ಣಿನ ಸಹಜ ಕೋಮಲ ಹೃದಯವಿರಲಿಲ್ಲವಾದರೂ ಹೊಸ ಅನುಭವವನ್ನು ಪ್ರತಿಯೊಂದು ಕಥೆ ಕೊಡುತ್ತಿದ್ದವು. ಅಂಥ ಕಥೆಗಳನ್ನು ಬರೆದ ಕತೆಗಾರ ಬೇರೆ ಯಾರೂ ಅಲ್ಲ ನನ್ನ ಮೆಚ್ಚಿನ ವಿದ್ಯಾರ್ಥಿ! ಆ ಕ್ಷಣ ನನಗಾದ ಸಂತೋಷವನ್ನು ಹೇಗೆ ವ್ಯಕ್ತಪಡಿಸುವುದೋ ತಿಳಿಯಲಿಲ್ಲ. ಪ್ರೀತಿಯಿಂದ ಬರಸೆಳೆದು ಅಪ್ಪಿಕೊಂಡೆ. ಬೆನ್ನು ತಟ್ಟಿದೆ. ನನ್ನ ಉತ್ಸಾಹದ ಬಗ್ಗೆ ಅವನಿಗೆ ಯಾವುದೇ ಕುತೂಹಲವಿರಲಿಲ್ಲ. ಯಂತ್ರಮಾನವನಂತೆ ನಿಂತಿದ್ದ. ಹುಲಿಬಾಯಿಯಿಂದ ತಪ್ಪಿಸಿಕೊಂಡು ಬಂದ ಜಿಂಕೆಯಂತೆ ಗಾಬರಿಯನ್ನು ದೇಹದಾದ್ಯಂತ ಪ್ರಕಟಿಸುತ್ತಿದ್ದ. ಇಂಥ ಶಿಷ್ಯನನ್ನು ಪಡೆದ ನಾನೇ ಧನ್ಯ ಎಂಬಂತೆ ಧರ್ಮಪತ್ನಿಯತ್ತ ನೋಡಿದೆ. ಹೊರಡಲು ಸಜ್ಜಾಗಿದ್ದ ಅಶೋಕ ನನ್ನ ಕಡೆಗೊಮ್ಮೆ ನನ್ನಾಕೆ ಕಡೆಗೊಮ್ಮೆ ದೃಷ್ಟಿ ಬೀರಿದ. ಬೆಕ್ಕು ಇಲಿಗಳ ಕಡೆ ನೋಡುತ್ತದಲ್ಲ ಹಾಗೆ! ನನ್ನಿಂದ ಮತ್ತೇನನ್ನೋ ಅಪೇಕ್ಷಿಸಲು ಸನ್ನದ್ಧನಾಗಿದ್ದಾನೆನ್ನಿಸಿತು. ನನ್ನ ಹತ್ತಿರ ಅದೆಂಥ ಸಂಕೋಚ! ಐವತ್ತು ಕೇಳಿದರೆ ನೂರು ಕೊಟ್ಟೇನು! ಅಷ್ಟರಲ್ಲಿ ಅವನೆ “ಮತ್ತಷ್ಟು ತೊಂದ್ರೆ ಕೊಡ್ತಿರೋದ್ಕೆ ಕ್ಷಮೆ ಇರಲಿ. ನನ್ಗೆ ವ್ಯಕ್ತಿಗಳಿಗಿಂಥ ಸಂಘಟನೆ ಮುಖ್ಯ, ಪಾರ್ಟಿ ಮುಖ್ಯ, ಹೋರಾಟ ಮುಖ್ಯ” ಅಂದ. ಅವನು ಮಾತಾಡೋ ರೀತಿಗೆ ನನಗೆ ಭಯ ಮತ್ತು ಬೇಸರ ಉಂಟಾದವು. ಅಷ್ಟೆ ಅಲ್ಲದೆ ಮನದ ಮೂಲೆಯಲ್ಲಿ ಸಂತೋಷದ ಎಳೆಯೂ…. ಸುಪ್ರಸಿದ್ಧ ಮೌನಿಯಾಗಬಹುದೆಂದಿದ್ದೆ. ಆದರೆ ಎ.ಕೆ.೪೭ ರೈಫಲ್ ಸ್ಫೋಟಿಸಿದಂತೆ ಮಾತಾಡುತ್ತಿರುವವನಲ್ಲ!
ಮತ್ತೆ ಅವನು ಬಾಯಿತೆರೆದ “ನನಗೀಗ ಐದು ಸಾವಿರ ರೂಪಾಯಿ ಬೇಕಾಗಿದೆ…. ಸಂಘಟನೆ ಕೆಲಸಗಳಿಗಾಗಿ…. ಐದು ಹತ್ತು ನಿಮಿಷದಲ್ಲಿ ಜೋಡಿಸಿ ಕೊಡಲೇಬೇಕು….” ಸವಿ ತೆಲುಗು ಭಾಷೆಯಲ್ಲಿ ಆತ ನುಡಿದದ್ದು ಕೇಳಿ ದಿಙ್ಞೂಢರಾದೆವು. “ಅಶೋಕ್ ಅಷ್ಟೊಂದು ನಮ್ ಹತ್ತಿರ ಎಲ್ಲಿದೆ!….” ಎಂದು ಮತ್ತೇನನ್ನೋ ನಿವೇದಿಸಿಕೊಳ್ಳುವುದರಲ್ಲಿದ್ದೆ. “ನಗದು ಹಣ ಇರದಿದ್ರೆ ಅಷ್ಟು ಮೊತ್ತದ ಒಡವೆ ಗಿಡವೆ ಏನಾದ್ರೂ ಸರಿ….” ಎಂದು ದೃಷ್ಟಿ ಬೀರಿ ನನ್ನಾಕೆಯ ಬಾಯಿ ಕಟ್ಟಿದ. ಆಕೆ ಆಗಲೆ ಬಾಯಿ ಕಳೆದುಕೊಂಡಿದ್ದಳು. ನಾವೀರ್ವರು ಪರಸ್ಪರ ಮುಖ ನೋಡಿಕೊಂಡೆವು. “ಅಶೋಕ್ ನಮ್ ಪರಿಸ್ಥಿತೀನ ಹೇಗೆ ವಿವರಿಸಲಿ?” ಎಂದೆ ಕಣೀರು ತುಂಬಿಕೊಂಡು. “ಅರ್ಥ ಆಗುತ್ತೆ ಸಾರ್. ನಿಮ್ಗೆ ಸರಕಾರಿ ನೌಕರೀ ಇದೆ. ಕಡಿಮೆ ಶ್ರಮದಿಂದ ಹೆಚ್ಚಿಗೆ ಸಂಪಾದಿಸುತ್ತಿರೋ ಹಗಲು ಲೂಟಿಗಾರರ ಪೈಕಿ ನೀವೂ ಒಬ್ರೂ…. ಎಂದು ಮತ್ತೇನನ್ನೋ ಹೇಳುವುದರಲ್ಲಿದ್ದ. ನಾನು “ಅರ್ಥ ಆಯ್ತು ಬಿಡು…. ಎಲ್ಲ ಅರ್ಥ ಆಯ್ತು….” ಎಂದೆ. ಪ್ರತಿಭಟಿಸಿದರೆ ಪ್ರಯೋಜನವಿಲ್ಲವೆನಿಸಿತು. ಮೊನ್ನೆ ಬಂದಿದ್ದ ಸಂಬಳದ ಹಣ ತರಲು ಹೆಂಡತಿಗೆ ಸೂಚಿಸಿದೆ. ಆಕೆ ಭಯದಿಂದಲೇ ತಂದುಕೊಟ್ಟಳು. ಎರಡು ಸಾವಿರದ ಆರುನೂರಾ ಮುವ್ವತ್ತಾರು ರೂಪಾಯಿ ಐವತ್ತೈದು ಪೈಸೆ ಇತ್ತು. ಮತ್ತೆ ದುರುಗುಟ್ಟಿದ. ನಿಮ್ಮ ಶ್ರೀಮತಿಯವರ ಕೈಯಲ್ಲಿರೋ ಆ ಎರಡು ಚಿನ್ನದ ಬಳೆ ಕೊಟ್ರೆ ಸರಿಹೋಗುತ್ತೆ ಅಂದ. ಬಿಚ್ಚಿಕೊಡೇ ಅಂದೆ. ಇಲ್ಲ ಅಂದಳು. ಕೊಡ್ತಿಯೋ ಇಲ್ಲೋ ಎಂದು ಗದರಿದೆ. ನಾನೂ ಪ್ರಯತ್ನಿಸಿದೆ. ಬಿಚ್ಚಿ ಕೊಟ್ಟೆವು. ಉದ್ವಿಗ್ನತೆ ಆ ಕ್ಷಣ ಶಮನವಾಯಿತು. ಗದ್ಗದಿತನಾದೆ. ಅಶೋಕ್ ಯಾವ ಮಾತನ್ನೂ ಅರ್ಥಮಾಡಿಕೊಳ್ಳದ ಸ್ಥಿತಿಯಲ್ಲಿರೋ ನನ್ನ ಪ್ರೀತಿಯ ಅಶೋಕ್ ಎಂದು ಗಟ್ಟಿಯಾಗಿ ಅಪ್ಪಿಕೊಂಡೆ. ಅವನೂ ಕಣೀರು ತಂದುಕೊಂಡನೆಂದು ಕಾಣುತ್ತೆ. “ಸ್ವಲ್ಪ ಹೊತ್ತಿನಲ್ಲಿ ಮುಂಗೋಳಿ ಕೂಗಬಹುದು…. ಹೊರಟುಹೋಗು” ಅಂದೆ. ಬೀದಿಯ ಕತ್ತಲಲ್ಲಿ ಕರಗಿ ಹೋದ. ಅವನು ಬಿಟ್ಟು ಹೋದ ಮನೆಯ ನೀರವತೆಯಲ್ಲಿ ನಾವು ನಿಟ್ಟುಸಿರನ್ನೂ ಇಡಲಿಲ್ಲ.
*****
ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ