ಮಾನ್ಯ ಎಂಕಣ್ಣನವರೆ,
‘ಈ ಬಾರಿ ಯುಗಾದಿ ವಿಶೇಷಕ್ಕೊಂದು ವಿಡಂಬನಾತ್ಮಕ ಬರಹ ನೀಡಬೇಕೆಂದು ವಿನಂತಿಸುತ್ತಿರುವೆ’ ಎಂದು ಸಂಪಾದಕರಿಂದ ಬಂದ ಪತ್ರ ಓದಿದ ‘ಎಂಕ’ ಯಥಾಪ್ರಕಾರದ ಮಾಮೂಲಿ ಪತ್ರ ಎಂದುಕೊಳ್ಳುತ್ತ ಏನು ಬರೆಯಲೆಂದು ಚಿತ್ರಿಸುತ್ತಿದ್ದಾಗ ಶುಕ್ರವಾರದ ಸಿನಿಮಾ ಪುಟದಲ್ಲಿ ‘ಬಾಸು’ ಬರೆದ ಒಂದು ವರದಿ ಅವನ ಗಮನ ಸೆಳೆಯಿತು.
‘ಸೂರಪ್ಪ’ ಕ್ಯಾಸೆಟ್ ಬಿಡುಗಡೆ ಸಂದರ್ಭದಲ್ಲಿ ಹಂಸಲೇಖಾ ಅವರಾಡಿದ ಮಾತದು.
‘ಯಥಾಪ್ರಕಾರ ಆಗಮಿಸಿದ ಪತ್ರಕರ್ತರೆ’ ಎಂದು ಅವರ ಭಾಷಣ ಶುರುವಾಯಿತಂತೆ. ಎಂಕನ ತಲೆ ಆಗ ಬಿಸಿಯಾಗತೊಡಗಿತು.
ಅರೆ! ಶುಕ್ರವಾರದ ವರ್ಣರಂಜಿತ ಸಿನಿಮಾ ಪುಟಗಳಲ್ಲಿ ರಂಗು ರಂಗಾಗಿ ರಾರಾಜಿಸಿ ಮುಫತ್ತು ಪ್ರಚಾರ ಗಿಟ್ಟಿಸಲೆಂದೇ – ವೀಳ್ಯ ಕೊಟ್ಟು ಆಹ್ವಾನಿಸಿ, ಮರೆತಾರೆಂದು ಮತ್ತೆ ಮತ್ತೆ ಫೋನಿಸಿ – ಪತ್ರಕರ್ತರಿಗೆಂದೇ ವಿಶೇಷ ಆಸನಗಳನ್ನು ರಿಸರ್ವ್ ಮಾಡಿಡುವ ಮಂದಿ ಮಾತಿಗೆ ನಿಂತಾಗ ಯಥಾಪ್ರಕಾರ ಆಗಮಿಸಿದ ಪತ್ರಕರ್ತರೆ’ ಎಂದು ಸಂಬೋಧಿಸಿದರೆ ಏನರ್ಥ?
-ಚಿತ್ರರಂಗದ ಎಲ್ಲ ಕಾರ್ಯಕ್ರಮಗಳಿಗೂ ಹಾಜರಾಗುವ ಪತ್ರಕರ್ತರ ಅದದೇ ಮುಖಗಳನ್ನು ನೋಡಿ ಹಂಸಲೇಖರಿಗೆ ಬೇಸರವಾಗಿರಬಹುದೆ?
ಯಾವುದು ಯಥಾಪ್ರಕಾರವಲ್ಲ. ಬೆಳಗಾದ ಕೂಡಲೇ ಹುಟ್ಟುವುದು ಮತ್ತೆ ಅದೇ ಸೂರ್ಯ. ಕೋ ಕೋ ಎಂದು ಯಥಾಪ್ರಕಾರ ಕೂಗುವುದು ಅದೇ ಕೋಳಿ. ಎಲ್ಲೆಡೆ ಅದೇ ಗಾಳಿ ಅದೇ ಬೆಳಕು-ಅದೇ ನೀರು.
ಸಿನಿಮಾರಂಗಕ್ಕೆ ಬಂದರೆ ಗಾಂಧೀನಗರದಲ್ಲಿ ಕಾಣುವುದು ಯಥಾಪ್ರಕಾರ ಅದೇ ಉದ್ಯಮಿಗಳು. ಹೊಸ ಚಿತ್ರ ಮುಹೂರ್ತದ ಸಂಗೀತ ನಿರ್ದೇಶನವೆಂದ ಕೂಡಲೇ ‘ಯಥಾಪ್ರಕಾರ’ ಅದೇ ಹಂಸಲೇಖಾ.
ತೆಲುಗು, ತಮಿಳು, ಹಿಂದೀ ಚಿತ್ರರಂಗದಲ್ಲಿ ಹೊಸ ಹೀರೋ, ಹೀರೋಹಿನ್, ವಿಲನ್, ಕಾಮಿಡಿಯನ್‌ಗಳನ್ನು ಕಾಣಬಹುದು. ಅದೇ ಕನ್ನಡದತ್ತ ತಿರುಗಿ ನೋಡಿ. ಯಥಾಪ್ರಕಾರ ಸೇಮ್ ಮುಖಗಳು. ಚಿತ್ರ ಬೇರೆ ಇರಬಹುದು. ಪಾತ್ರ ಬೇರೆ ಇರಬಹುದು. ಪಬ್ಲಿಸಿಟಿಯಲ್ಲಿ ನಾನಾ ಗಿಮಿಕ್ ಇರಬಹುದು. ಆದರೆ ‘ಮುಸುಡಿಗಳು’ ಮಾತ್ರ ಯಥಾಪ್ರಕಾರ ಅದೇ.
ಸಂಗೀತ ನಿರ್ದೇಶಕರು ತುಂಬಾ ಡಿಫರೆಂಟ್ ಟ್ಯೂನ್ ಎಂದು ಹೇಳಿದ ಹಾಡು ಕೇಳಿದಾಗ ‘ಯಥಾಪ್ರಕಾರ’ ಎಲ್ಲಿಂದಲೋ ಅಪೇಸ್ ಮಾಡಿರುವ ಕದ್ದ ರಾಗ ಎಂಬುದು ಸ್ಪಷ್ಟವಾಗಿಬಿಡುತ್ತದೆ.
ಸಂಗೀತ, ಸಾಹಿತ್ಯ, ನೃತ್ಯ, ನಾಟಕ ಎಲ್ಲೆಡೆ ಈ ‘ಯಥಾಪ್ರಕಾರ’ ಇದ್ದದ್ದೇ. ಈ ಯಥಾಪ್ರಕಾರದಿಂದ ತಪ್ಪಿಸಿಕೊಳ್ಳಲೆಂದೇ ಒರಿಜಿನಲ್ ಕಥೆ ಎಂದು ಹೇಳುವವರು ನಾಲ್ಕಾರು ಸಿನಿಮಾಗಳಿಂದ ‘ಯಥಾಪ್ರಕಾರ’ ಹಲವಾರು ದೃಶ್ಯಗಳನ್ನು ಜಾಣ್ಮೆಯಿಂದ ಲಪಟಾಯಿಸಿರುತ್ತಾರೆ.
‘ಯಥಾಪ್ರಕಾರ’ದ ಜಾಡು ತಪ್ಪಿಸಲೆಂದೇ ಅಲ್ಲವೆ ನವೋದಯ ನವ್ಯದತ್ತ ತಿರುಗಿದ್ದು – ಆಮೇಲೆ ಬಂಡಾಯವಾಗಿ ತಿರುಗಿ ಬಿದ್ದದ್ದು – ದಲಿತ ಸಾಹಿತ್ಯವೆಂದು ಸಿಡಿದದ್ದು. ಸಂಗೀತಕ್ಕೆ ಬಂದರೆ ಈ ಯಥಾಪ್ರಕಾರಕ್ಕೆ ಇತಿಶ್ರೀ ಹಾಡಲೆಂದೇ ‘ಸುಗಮ ಸಂಗೀತ’ ಬಂದದ್ದು ಆನಂತರ ಕರ್ನಾಟಕ ಸಂಗೀತವೆಂದಾಗ ಲಟಾಪಟಿ ನಡೆದದ್ದು.
ಒಂದು ಚಿತ್ರ ಹಿಟ್ ಆದರೆ ಸಾಕು – ಯಥಾಪ್ರಕಾರ ಅದೇ ಧಾಟಿಯ ಚಿತ್ರಗಳು, ಎನ್.ಎಸ್.ರಾವ್, ಉಮಾಶ್ರೀ ಕ್ಲಿಕ್ ಆದರು ಎಂದ ಮರು ಘಳಿಗೆ ಯಥಾಪ್ರಕಾರ ಅದೇ ಡಬ್ಬಲ್ ಮೀನಿಂಗ್ ಡೈಲಾಗ್ ಚಿತ್ರಗಳು.
ತಮ್ಮ ಚಿತ್ರಗಳು ‘ಯಥಾಪ್ರಕಾರ’ವೆನಿಸಿಕೊಳ್ಳಕೂಡದು ಎಂಬ ಕಾರಣಕ್ಕೇ ಬಾಲಚಂದರ್, ಕಣಗಾಲ್ ಪುಟ್ಟಣ್ಣ ವೈವಿಧ್ಯಮಯ ಕಥಾನಕಗಳಿಗೆ ಹುಡುಕಾಟ ನಡಸೇ ಇದ್ದರು ನಿರಂತರ.
ಹಂಸಲೇಖಾ ಅವರು ಅಂದಂತೆ ಅಂದು ‘ಯಥಾಪ್ರಕಾರ’ದ ಪತ್ರಕರ್ತರೇ ಆಗಮಿಸಿರಬಹುದು. ಆದರೆ ಅವರೆಲ್ಲರೂ ಯಥಾಪ್ರಕಾರದ ಧಾಟಿಯಲ್ಲಿಯೇ ಬರೆಯುತ್ತಾರೆ ಎಂದು ಹೇಗೆ ಹೇಳುವುದು ಸಾಧ್ಯ?
ಬಹಳಷ್ಟು ಪತ್ರಿಕೆಗಳಲ್ಲಿ ಪಿಆರ್‌ಓಗಳ ಸುದ್ದಿಯನ್ನು ಒಂದಕ್ಷರವೂ ಬದಲಿಸದೆ ಯಥಾಪ್ರಕಾರ ಅಚ್ಚಿಸುವುದೂ ಇದೆ. ಅಂಥ ವರದಿಗಳನ್ನು ಓದಿದುದರ ಸ್ಫೂರ್ತಿಯಿಂದ ಹಂಸಲೇಖಾ ಹಾಗಂದಿರಬಹುದೆ ಎಂಬ ಅನುಮಾನವೂ ಬಂತು ಎಂಕನಿಗೆ.
ನಂತರ ಹಂಸಲೇಖರ ಬಗ್ಗೆ ಚಿಂತಿಸತೊಡಗಿದ.
ಹಂಸಲೇಖಾ ಮುಂಚೆ ಬಿಳಿ ಬಟ್ಟೆಯಲ್ಲೇ ಮಿರಿಮಿರಿ ಮಿಂಚುತ್ತಿದ್ದರು. ಇದು ಯಥಾಪ್ರಕಾರವೆನಿಸಿದಾಗ ‘ಹೆಚ್ಚು ಗ್ಲಾಮರಸ್ ಆಗಿ ಕಾಣಲು ಕಲರ್‌ಫುಲ್ ಡ್ರೆಸ್ ಹಾಕುತ್ತಿರುವೆ’ ಎಂದರು.
ಕೆಲ ಕಾಲಾನಂತರ ಅದೂ ಯಥಾಪ್ರಕಾರವಾಯಿತು. ಅದರಿಂದಾಗಿಯೇ ಈಗ ಬಿಳಿಯನ್ನೂ ಧರಿಸುತ್ತಿದ್ದಾರೆ ಮತ್ತೆ.
ಹಾರ್ಮೋನಿಯಂ ಅವರಿಗೆ ಬಾರಿಸಲು ಬಾರದಿದ್ದ ದಿನಗಳಲ್ಲಿ ಗಿಟಾರ್ ಹಿಡಿದೇ ಸ್ವರ ಸಂಯೋಜಿಸುತ್ತಿದ್ದರು. ಅದು ಯಥಾಪ್ರಕಾರವೆನಿಸಿದಾಗ ಹಾರ್ಮೋನಿಯಂ ಕಲಿತು ಜನಪ್ರಿಯರಾದರು.
ರವಿಚಂದ್ರನ್-ಹಂಸಲೇಖಾ ಜೋಡಿ-ಜನಪ್ರಿಯವಾದಾಗ ಅದೂ ಯಥಾಪ್ರಕಾರದ ಜೋಡಿ ಎನಿಸಿತು.
ನಾನಾ ಕಾರಣಗಳಿಂದ ಬೇರೆಯಾದರು ಇಬ್ಬರೂ.
ಆದರೆ ‘ಯಥಾಪ್ರಕಾರ’ ನಮ್ಮ ಸ್ನೇಹವಿದ್ದೆ ಇದೆ ಎನ್ನುತ್ತಾರೆ ರವಿಚಂದ್ರನ್. ಅದು ಎಂಥ ಪ್ರೀತಿ, ಪ್ರೇಮ ಎಂಬುದು ಹಂಸಲೇಖರ ಜಾಣ ಮಾತಿನಿಂದ ವ್ಯಕ್ತವಾಗಿದೆ. ಈ ಜೋಡಿ ಗಂಟು ಹಾಕಿದರೆ ಚಿತ್ರ ‘ಯಥಾಪ್ರಕಾರ’ ಹಿಟ್ ಆಗುತ್ತದೆ ಎಂಬುದು ಸಾ.ರಾ.ಗೋವಿಂದು ನಂಬಿಕೆ.
ಈ ಜಗತ್ತು ‘ಯಥಾಪ್ರಕಾರ’ ಎಂದೆಂದೂ ಹೀಗೆ ಇರುತ್ತದೆ. ಅಲ್ಲಿ ಹೊಸತನ-ಜೀವಂತಿಕೆ ಕಂಡುಕೊಳ್ಳಲು ಶ್ರಮಿಸಿಬೇಕಾದವರು ನಾವು. ಆಗಲೇ ಅಂದದ ಮೊಗಕ್ಕೊಂದು ಯಥಾಪ್ರಕಾರದ ಚೆಂದದ ಚುಕ್ಕಿ ಬಂದೀತು. ಅಂಥ ಚುಕ್ಕಿ ಕಂಡಾಗಲೇ ಅಲ್ಲವೆ ಹಂಸಲೇಖಾ ‘ಯಾರಿಟ್ಟರೀ ಚುಕ್ಕಿ’ ಬರೆದದ್ದು. ಎಲ್ಲರ ಬದುಕಿನಲ್ಲಿ ಉತ್ಸಾಹ ನಂದದ ನಂದಾ ದೀಪವಾದಾಗ ‘ಯಥಾಪ್ರಕಾರ’ ದೂರವಾದೀತು.
ಲವಲವಿಕೆ – ಸಂಭ್ರಮವಿದ್ದಾಗ ಉತ್ಸಾಹ ನಂದೀತೆ? – ಖಂಡಿತಾ ಇಲ್ಲ ‘ಹಂಸಲೇಖಾ’
*****
(೩೧-೩-೨೦೦೦)