ಕನ್ನಡ ಚಿತ್ರರಂಗದ ಅನಭಿಷಿಕ್ತ ಸಾಮ್ರಾಟ್ ಡಾ. ರಾಜ್ ಕುಮಾರ್ ಅವರನ್ನು ಕಾಡುಗಳ್ಳ-ನರಹಂತಕ ವೀರಪ್ಪನ್ ಅಪಹರಿಸಿ ಹದಿನೈದು ದಿನಗಳೇ ಕಳೆದು ಹೋಗಿದೆ.
ಡಾ.ರಾಜ್ ಕಲ್ಲುಮುಳ್ಳು ತುಂಬಿದ ಕಾಡಿನಲ್ಲಿರುವಾಗ ರಾಜ್ಯದಲ್ಲಿ ಸ್ವಾತಂತ್ರೋತ್ಸವ ನಡೆದಿದೆ. “ಯಾರಿಗೆ ಬಂತು ಸ್ವಾತಂತ್ರ್‍ಯ-ಎಲ್ಲಿಗೆ ಬಂತು ಸ್ವಾತಂತ್ರ್‍ಯ” ಹಾಡೀಗ ನೆನಪಾಗುತ್ತಿದೆ. ಹಾಡಿಕುಣಿದು ಕನ್ನಡಿಗರನ್ನು ನಕ್ಕು ನಲಿಸುತ್ತಿದ್ದ ಡಾ. ರಾಜ್ ಅವರನ್ನು ಕಾಡೆಂಬ ಜೈಲು ಖಾನೆಯಲ್ಲಿ ಬಂದಿ ಮಾಡಿಟ್ಟು ಬಗೆಬಗೆಯ ಬ್ಲಾಕ್‌ಮೇಲ್ ತಂತ್ರ ಬಳಸಿ ಹಣದೋಚುವ ಕನಸು ಕಾಣುತ್ತಿದ್ದಾನೆ ವೀರಪ್ಪನ್.
ಡಾ. ರಾಜ್ ಅವರು ಇನ್ನು ನಾಲ್ಕಾರು ದಿನ ತಡವಾದರೂ ಸುಕ್ಷೇಮವಾಗಿ ಹಿಂತಿರುಗಲೆಂದು ಎಲ್ಲಾ ಹಾರೈಸುತ್ತಿದ್ದಾರೆ.
ಅವರು ಬಂದ ನಂತರ ಮತ್ತೆ ಚಿತ್ರರಂಗ ದಿಢೀರ್ ಎಚ್ಚೆತ್ತು-ಕಾರ್ಯೋನ್ಮೂಖವಾಗುತ್ತದೆ ನಿಜ.
“ಆಗ ಎಂತ ಚಿತ್ರಗಳು ಬರಬೇಕು” ಎಂದು ಚಿತ್ರ ರಸಿಕರನ್ನು ವಿಚಾರಿಸಿದೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿದರು.
“ನಮಗೆ ಆಕ್ಷನ್ ಫಿಲಂಗಳು ಸಾಕಾಗಿವೆ. ಹಿಂಸೆ, ಕ್ರೌರ್ಯ, ರೇಪ್‌ಗಳ ಸರಮಾಲೆ ಕಂಡು ಕಣ್ಣುಗಳು ರೋಸಿ ಹೋಗಿವೆ. ಇನ್ನು ಅಂಥ ಚಿತ್ರಗಳು ಬೇಡವೇ ಬೇಡ”.
“ಯಾರನ್ನೋ ಕಿಡ್ನಾಪ್ ಮಾಡಿಕೊಂದು ಹೋಗುವುದು. ಕೋಟಿ ಕೋಟಿ ಬೇಡುವುದು ಎನ್ನುವ ಚಿತ್ರ ತೆಗೆವಾಗ ಮಕ್ಕಳನ್ನು ಹೇಗೆ ಕಿಡ್ನಾಪ್ ಮಾಡುವುದು ಕಾಲೇಜ್‌ಗೆ ಹೋದ ಬೆಡಗಿನ ಬಾಲೆಯನ್ನು ಯಾವ ರೀತಿ ಹಾರಿಸಿಕೊಂಡು ಹೋಗಬಹುದು ಮುಂತಾದ ತಂತ್ರಗಳನ್ನು ಕಲಿಸುವ ಪಾಠ ಇನ್ನು ನಮಗೆ ಚಲನಚಿತ್ರದಿಂದ ಬೇಕಿಲ್ಲ”
“ಚಿತ್ರಮಾಧ್ಯಮದಲ್ಲಿ ಹೆಣ್ಣಿಗೆ ನೀಡಬೇಕಾದ ಸ್ಥಾನಮಾನ ನೀಡದೆ, ಅವಳನ್ನೊಬ್ಬ ಮೈಮಾರಿಕೊಳ್ಳುವ ಬೀದಿ ವೇಶ್ಯೆಯಾಗಿ ಚಿತ್ರಿಸಿ-ಪಡ್ಡೆ ಹುಡುಗರ ನಿದ್ದೆಗೆಡಿಸಲು ಬೆತ್ತಲೆ ಕುಣಿತ ತುಂಬಿ ತುಳುಕಿಸಿ, ಈವರೆಗೆ ಆಗಿರುವ ನಷ್ಟ ಸೆಕ್ಸೀ ಫಿಲಂಗಳಿಂದ ತುಂಬಿಕೊಳ್ಳುವ ಪ್ರಯತ್ನ ಇನ್ನಾದರೂ ಆಗದಿರಲಿ”
“ಡಬ್ಬಲ್ ಮೀನಿಂಗ್, ಟ್ರಿಬ್ಬಲ್ ಮೀನಿಂಗ್, ಮಾದಕ ವ್ಯಸನಿಗಳ ಮೋಜು, ಎಂ.ಟಿ.ವಿ. ಕಲ್ಚರ್ ಗೇಲಿ ಮಾಡುವ ನೆವದಲ್ಲಿ ಕನ್ನಡ ಸಂಸ್ಕೃತಿಯ ಬೇರಿಗೆ ಬೆಂಕಿ ಹಚ್ಚುವ ಪ್ರಯತ್ನಗಳು ಖಂಡಿತಾ ಬೇಡ”
“ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಅಗ್ರಮಾನ್ಯತೆ ಸಿಗಬೇಕೆಂದರೆ ಕನ್ನಡ ಚಿತ್ರ ನಿರ್ಮಾಪಕ – ನಿರ್ದೇಶಕರು ಪರಭಾಷಾ ನಟಿ ಮಣಿಯರಿಗೆ ರೆಡ್‌ಕಾರ್ಪೆಟ್ ಹಾಸುವುದು ತಕ್ಷಣ ನಿಲ್ಲಬೇಕು”
“ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಅಗ್ರಮಾನ್ಯತೆ ಸಿಗಬೇಕೆಂದರೆ ಕನ್ನಡ ಚಿತ್ರ ನಿರ್ಮಾಪಕ ನಿರ್ದೇಶಕರು ಪರಭಾಷಾ ನಟಿಯರನ್ನು ತುಂಬುವಾಗ ಕನ್ನಡದಲ್ಲಿ ಅಂಥ ಪ್ರತಿಭೆಗಳಿಲ್ಲ ಎಂಬುದಾಗಲಿ, ಕಾಜೋಲ್, ಸೋನಾಲಿ ಬೇಂದ್ರೆ-ಮಾಧುರಿ ದೀಕ್ಷಿತ್ ಅಂತಹವರಿಗೆ ಲಕ್ಷ ಲಕ್ಷ ಸುರಿದು ಜೋಕುಮಾರಸ್ವಾಮಿ, ಸಾಂಗ್ಯಾಬಾಳ್ಯದಂಥ ಜಾನಪದ ಚಿತ್ರ ಮಾಡ ಹೊರಡುವುದು ತಪ್ಪಾದೀತು ಎಂದು ಕನ್ನಡಿಗರೆಲ್ಲ ಒಕ್ಕೊರಲಿನಿಂದ ಹೇಳಬೇಕಾದ ಸಂಕ್ರಮಣಕಾಲವಿದು”
“ಡಾ. ರಾಜ್‌ಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ ನಂತರ ಎಲ್ಲಾ ಚಿತ್ರರಸಿಕರೂ ಈಗ ಕನ್ನಡದ ಬಗ್ಗೆ ಉದ್ದುದ್ದ ಮಾತನಾಡುತ್ತಿದ್ದಾರೆ. ಫಿಲಂ ಚೇಂಬರಿನವರು – ಕನ್ನಡದ ಹೋರಾಟಗಾರರು ಕನ್ನಡಾಭಿಮಾನಿಗಳ ಸಹನೆ-ಸೌಜನ್ಯ ಹಾಡಿ ಹೊಗಳುತ್ತಿದ್ದಾರೆ. ಆದರೆ ಚಿತ್ರರಂಗ ಮತ್ತೆ ಯಥಾಪ್ರಕಾರದ ಸ್ಥಿತಿಗೆ ಬಂದಾಗ ಮತ್ತೆ ಪರಭಾಷಾ ಗಿಣಿಗಳನ್ನು ಕರೆತಂದು – ಅವರನ್ನು ತುಂಬಾ ಮಿನಿಮಮ್ ಉಡುಪಿನಲ್ಲಿ ತೋರುವುದಂತೂ ಸತ್ಯ. ಈ ಬಾರಿ ಹಾಗೆ ಮಾಡಿದಲ್ಲಿ ಎಚ್ಚೆತ್ತ ಕನ್ನಡಿಗರು ಚಿತ್ರಮಂದಿರದತ್ತ ತಿರುಗಿಯೂ ನೋಡದೆ ಪಾಠ ಕಲಿಸುವ ಹೊಣೆ ಚಿತ್ರದ ಹಣೆಬರಹ ಬರೆವ ನೋಡುಗರದೇ ಆಗಿದೆ”
“ಡಾ. ರಾಜ್‌ಕುಮಾರ್ ಅವರು ಅಪಹರಣವಾಗಿ ನೊವು ಅನುಭವಿಸಿದಾಗ ಚಿತ್ರಗಳಲ್ಲಿ ಭಾಗವಹಿಸಿದರೆ ಅವರ ಬರುವಿಕೆಗಾಗಿ ಚಾತಕ ಪಕ್ಷಿಯಂತೆ ಕಾದವರು ಕನ್ನಡದ ಚಿತ್ರನಟ-ನಟಿಯರು. ಆದರೆ ಗಾಂಧೀನಗರ ಮತ್ತೆ ಚಾಲೂ ಆದ ಕೂಡಲೆ ಲಕ್ಷ ಲಕ್ಷ ಪೀಕಿ ಸ್ಟಾರ್ ಹೋಟೇಲ್‌ಗೆ ಬಂದಿಳಿವವರು ಈಗೇಕೆ ಒಮ್ಮೆಯೂ ಇತ್ತ ತಿರುಗಿ ನೋಡಿಲ್ಲ ಎಂಬುದನ್ನು ಚಿತ್ರರಸಿಕರಾದ ನಾವು ಕೇಳಿಯೇ ಕೇಳುತ್ತೇವೆ”
“ಚಿತ್ರನಟ-ನಟಿಯರನೇಕರು ಈಗ ಟಿ.ವಿ. ಧಾರಾವಾಹಿಗಳಿಂದ ಬದುಕುತ್ತಿದ್ದಾರೆ. ಫಿಲಂ ಷೂಟಿಂಗ್ ಶುರುವಾದ ಕೂಡಲೇ ಪರಭಾಷಾ ನಟಿಯರು ನಾಯಕಿಯರಾಗಿ ಮೆರೆಯುತ್ತಾರೆ. ಕನ್ನಡದ ನಟ-ನಟಿಯರು ಟೀವಿಯಲ್ಲಿ ಚಿಕ್ಕಪುಟ್ಟ ಪಾತ್ರಕ್ಕೆ ಹಿಂತಿರುಗಬೇಕಾಗುವುದು ದೌರ್ಭಾಗ್ಯ”
“ನನ್ನ ಕೇಳಿದರೆ ಕನ್ನಡದ ಕಥೆ ಕಾದಂಬರಿಗಳನ್ನು ಚಿತ್ರ ಮಾಡುವ ದಿನ ಮತ್ತೆ ಬರಲಿ”
“ತಂಗಾಳಿಯಂತೆ ತೇಲಿ ಬರುವ ಸಾಹಿತ್ಯಕ ಮೌಲ್ಯವಿರುವ ಗೀತೆಗಳು-ಸಂಭಾಷಣೆ ಚಲನಚಿತ್ರಗಳಲ್ಲಿ ಬರುವಂತಾಗಲಿ”
“ಕನ್ನಡ ಬಾರದ ಅನ್ಯಭಾಷಿಗರು ಕನ್ನಡದವರ ಕೈಲಿ ಬರೆಸಿ ತಮ್ಮ ಹೆಸರು ಹಾಕಿಕೊಳ್ಳುವ ಕೆಟ್ಟ ಚಾಳಿ ಇನ್ನಾದರೂ ತಪ್ಪಲಿ”
“ಅಂಬರೀಶ್ ಅಧ್ಯಕ್ಷರಾಗಿರುವ ಚಲನಚಿತ್ರ ಕಲಾವಿದರ ಸಂಘವೂ ಈ ಬಗ್ಗೆ ದನಿ ಎತ್ತಲಿ”
“ಕಣಗಾಲ್ ಪುಟ್ಟಣ್ಣ, ಹುಣಸೂರು, ಎಂ.ಆರ್. ವಿಠಲ್, ಎನ್. ಲಕ್ಷ್ಮೀನಾರಾಯಣ್ ಅಂಥವರನ್ನು ನೆನಪಿಸಿಕೊಂಡು ಒಳ್ಳೆ ಚಿತ್ರ ಮಾಡುವ ಮನಸ್ಸು ಮಾಡಲಿ” “ಯಾವುದೋ ತೆವಲಿಗೆ ಕನ್ನಡದ ಕೊಲೆ ಮಾಡುವಂತ ನಟ-ನಟಿಯರನ್ನು ಸೆಟ್ ಮೇಲೆ ಕರೆತರದಿರಲಿ”
– ಎಂದು ಬಗೆ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರೇ ಬಿಸಿಲು ಮಳೆಯಲ್ಲಿ ನಿಂತು ಟಿಕೇಟು ಕೊಳ್ಳುವವರಾದ್ದರಿಂದ ಮುಂದೆ ಚಿತ್ರ ತೆಗೆಯಲು ಹೊರಡುವವರು ಎಚ್ಚರದ ಹೆಜ್ಜೆಗಳನ್ನಿಟ್ಟು ಕನ್ನಡ ಉಳಿಸಿ-ಬೆಳೆಸಲಿ.
*****
(೧೮-೦೮-೨೦೦೦)