‘ಸಿನಿ ಪತ್ರಕರ್ತರೆ – ಫಾರಿನ್ ಷೂಟಿಂಗ್‌ಗೆ ಬರ್ತೀರಾ?’

ಮುಂಚೆ ವಾಮನನಂತೆ ಮೋಟು ಮೆಣಸಿನಕಾಯಿನಂತಿದ್ದ ಕನ್ನಡ ಚಿತ್ರರಂಗ ಈಗ ತ್ರಿವಿಕ್ರಮನಂತೆ ಬ್ರಹ್ಮಾಂಡವಾಗಿ ಬೆಳೆದು – ಫಾರಿನ್ ಷೂಟಿಂಗ್ ಕಾಮನ್ ಮಾಡಿಕೊಂಡಿದೆ. ಮುಂಚೆ ದ್ವಾರಕೀಶ್ ಸಿಂಗಾಪೂರ್‌ನಲ್ಲಿ ಆಫ್ರಿಕಾದಲ್ಲಿ ಷೂಟಿಂಗ್ ಮಾಡಿ ಬಂದಾಗ ಆತನನ್ನು ಮಹಾ ಕುಳ್ಳ – ಪ್ರಚಂಡ ಕುಳ್ಳ ಎಂದು ಯಾರೂ ಕರೆಯದಿದ್ದಾಗ ದ್ವಾರಕೀಶ್ ಚಿತ್ರಕ್ಕೆ ಅಂತ ಹೆಸರಿಟ್ಟು ಜನಪ್ರಿಯರಾದರು.

ಆನಂತರ ಲಾಲ್‌ಬಾಗ್-ಕಬ್ಬನ್ ಪಾರ್ಕ್‌ಗೆ ‘ಗೋಲಿ ಮಾರೋ’ ಅಂದು ಬೊಂಬಾಯಿ, ಮದರಾಸ್, ಡೆಲ್ಲಿ ಮುಂತಾದ ಕಡೆಗೂ ಹೊರಾಂಗಣಕ್ಕೆಂದು ತೀರ್ಥಯಾತ್ರೆ ಹೊರಡುವುದು ಅಭ್ಯಾಸವಾಯಿತು. ಇಂದು ಚಿಕ್ಕಮಗಳೂರು ಚಿತ್ರರಂಗದ ‘ಪಾರ್ಟ್ ಅಂಡ್ ಪಾರ್ಸಲ್ ಆಫ್ ದಿ ಫಿಲಮ್ ಇಂಡಸ್ಟ್ರಿ’ ಎನಿಸಿದ್ದರೆ ಅದಕ್ಕೆ ಕಾರಣ ಕಣಗಾಲ್ ಪುಟ್ಟಣ್ಣ.

ಆದರೆ ರೀಮೇಕ್ ಸುಂಟರ ಗಾಳಿ ‘ಸೊಂಯ್’ ಎಂದು ಬೀಸತೊಡಗಿದಾಗ-ಕನ್ನಡ ಚಿತ್ರಗಳಲ್ಲಿ ಮಣ್ಣಿನ ವಾಸನೆ ಮಾಯವಾಗಿ ರಿಚ್‌ನೆಸ್ ನೆಪ ಮಾಡಿ ಫಾರಿನ್‌ಗೆ ಷೂಟಿಂಗ್‌ಗೆ ಹೋಗ ತೊಡಗಿದವರು ಲೆಕ್ಕವಿಲ್ಲ. ಅಂಥ ಆಸೆ ಹುಟ್ಟಿಸಿದ ಮಹಾ ಪ್ರಚಂಡ ರವಿಚಂದ್ರನ್, ರಾಕ್‌ಲೈನ್ ವೆಂಕಟೇಶ್, ಜೈ ಜಗದೀಶ್, ಸಾ.ರಾ.ಗೋವಿಂದು ಮುಂತಾದವರೆಲ್ಲ ಹಾಡಿಗಾಗಿ ಫಾರಿನ್‌ಗೆ ಹಾರಿದರೆ ನಾಗತಿಹಳ್ಳಿ ಪಾತ್ರಗಳಿಗೂ ಪುಷ್ಟಿ ನೀಡಿ ‘ಅಮೆರಿಕಾ ಅಮೆರಿಕಾ’ ತೆಗೆದು ಹೆಸರಾದರು. ಆನಂತರ ‘ಅಸ್ಸಾಂ’ನಲ್ಲಿ ಹೂ ಮಳೆ ಸುರಿಯಿತು. ಯೋಗೀಶ್ ಮೊದಲ ಬಾರಿ ರಾಜಾಸ್ತಾನಕ್ಕೆ ಹೋಗಿ ಬಂದರು ಉತ್ತರ ಧ್ರುವದಿಂದಾಗಿ.

ಕೋಟಿ ಕೋಟಿ ಸುರಿದೂ ಕನ್ನಡ ಚಿತ್ರ ಮಾಡಬಹುದು ಎಂದು ಹೊರಟಾಗ ಹಲವರ ಪಾಲಿಗದು ಸಿಹಿಮಳೆ, ಕೆಲವರ ಪಾಲಿಗೆ ಕಹಿಮಳೆ, ಕೆಲವರ ಪಾಲಿಗೆ ಕೆಂಡದ ಮಳೆಯೂ ಆಯಿತು.

ಫಾರಿನ್‌ಗೆ ಹೋಗಲಾರದ ಮಂದಿ ಲೋ ಬಜೆಟ್‌ನಲ್ಲಿ ಸಿನಿಮಾ ಮಾಡಬೇಕೆಂದಾಗ ‘ಲೌ ಇನ್ ನೇಪಾಳ್’ ಸುತ್ತಿ ಬಂದದ್ದು ಆಯಿತು ಅತಿ ಉತ್ಸಾಹಿಗಳು.

ಈಗಂತೂ ದಿನ ಸಿಕ್ಕಾಪಟ್ಟೆ ಬದಲಾಗಿದೆ. ಫಾರಿನ್‌ನಲ್ಲಿ ಷೂಟಿಂಗ್ ಇಲ್ಲ ಎಂದರೆ ಅಂಥ ಚಿತ್ರ ನಿರ್ಮಾಪಕರನ್ನು ಗಾಂಧೀನಗರ ‘ಬಡಮುತ್ತೈದೆ’ ಎಂಬಂತೆ ತಾತ್ಸಾರದಿಂದ ಕಾಣುತ್ತದೆ. ಎ ಹಾಗೂ ಉಪೇಂದ್ರ ನಂತರ ಉಪೇಂದ್ರರಿಗೆ ಸಿನಿಮಾ ಹೆಸರು ‘ಹಾಲಿವುಡ್’ ಎಂದು ಉಪ್ಪಿ ಎಂದದ್ದೇ ತಡ ಎಕೆ೪೭ ರಾಮು “ನೀವು ಕೇಳಿದಷ್ಟು ಹಣ ನಾನು ಸುರಿಯುತ್ತೇನೆ” ಎಂದು ಒಂದು ಅದ್ಭುತ ಬ್ರೋಷರ್‍ ಮಾಡಿ ಪರಾಕು ಪಂಪನ್ನೊತ್ತಿದ್ದಾರೆ. ಈಗ ಹಣದ ಹೊಳೆ ಹರಿಸಲು ಆಂಧ್ರದಿಂದ ರಾಮಾನಾಯಿಡು ಬಂದಿದ್ದಾರೆ. ಅವರು ಕನ್ನಡಕ್ಕೆ ಕಾಣಿಕೆಯಾಗಿ ನೀಡುವ ಜೆರಾಕ್ಸ್ ಕಾಪಿಗೆ ಇನ್ನೂ ಹೆಸರಿಟ್ಟಿಲ್ಲ. ಆ ಚಿತ್ರದ ಚಿತ್ರೀಕರಣಕ್ಕೆ ಶಿವರಾಜ್‌ಕುಮಾರ್‍ ಯೂರೋಪಿಗೆ ತೆರಳಲಿದ್ದಾರೆ. ಕುಮಾರಸ್ವಾಮಿ ಅವರು ‘ನನ್ನಯ ಸಮಾನರಾರಿಹರು?’ ಎಂದು ತೋರಲು ೪೦ ಮಂದಿಯೊಂದಿಗೆ ‘ಮಾರಿಷಸ್’ಗೆ ತೆರಳಲಿದ್ದಾರೆ. ಶಿವರಾಜ್‌ಕುಮಾರ್‍ ಈ ಚಿತ್ರದ ನಾಯಕ ಎಂಬುದು ನಿರ್ದೇಶಕ ಎಸ್.ನಾರಾಣ್‌ಗೆ ಹೆಮ್ಮೆ.

‘ಅಪ್ಪನ ಚಿತ್ರದ ನಂತರ ಈಗ ಮಗನ ಚಿತ್ರದ ನಿರ್ದೇಶನ ಯಾರಿಗುಂಟು ಯಾರಿಗಿಲ್ಲ?’ ಹೀಗೆ ಫಾರಿನ್‌ಗೆ ಷೂಟಿಂಗ್‌ಗೆ ಹೋಗುತ್ತೇನೆ ಎಂದು ಹೇಳಿ ಆಡಿದ ಮಾತಿನಂತೆ ನಡೆದುಕೊಳ್ಳುವ ನಿಯತ್ತಿನ ಮಂದಿಯೂ ಇದ್ದಾರೆ. ಫಾರಿನ್‌ಗೆ ಷೂಟಿಂಗ್‌ಗೆ ಹೋಗ್ತೀನಿ-ಆಗ ಎಲ್ಲ ಪತ್ರಕರ್ತರನ್ನೂ ಷೂಟಿಂಗ್ ನೋಡಲು ಕರಕೊಂಡು ಹೋಗ್ತೀನಿ ಎನ್ನುವ ಕೋಡ್ಲು ರಾಮಕೃಷ್ಣರಂತಹ ನಿರ್ದೇಶಕರೂ ಈ ಚಿತ್ರರಂಗದಲ್ಲಿದ್ದಾರೆ’ ಎಂದು ಹೇಳುತ್ತಿದ್ದ ನಮ್ಮ ಎಂಕ ಬ್ಯುಸಿ ಮಾಸ್ಟರ್‍ ಲಂಬೋದರ್‍ ಬಳಿ ಮೊನ್ನೆ.

ಅದಾದ ಒಂದು ವಾರದಲ್ಲೇ ಲಂಬೋದರ ಒಂದು ಪ್ರೆಸ್‌ಮೀಟ್ ಕರೆದ. ಹೊಸ ನಾಯಕ ನಾಯಕಿಯರನ್ನು ಪರಿಚಯಿಸಿದ. ಮುಂದಿನ ತಿಂಗಳು ‘ಫಾರಿನ್ ಟೂರ್‍’ ಚಿತ್ರದ ಹಾಡಿನ ಚಿತ್ರೀಕರಣಕ್ಕೆ ಇಂಗ್ಲೆಂಡ್-ಅಮೆರಿಕಾಗೆ ಹೋಗುವ ಅಂಶ ಹೇಳಿ “ಈ ಬಾರಿ ವಿಶೇಷವೆಂದರೆ ಪತ್ರಕರ್ತರನ್ನು ಷೂಟಿಂಗ್ ನೋಡಲು ಅಲ್ಲಿಗೇ ಕರೆದೊಯ್ಯುವೆ” ಎಂದ. ಪ್ರೆಸ್‌ಮೀಟ್‌ನಲ್ಲಿ ಮಿಂಚಿನ ಸಂಚಾರವಾಯಿತು. ಎಂಕ ಈ ಅನೌನ್ಸ್‌ಮೆಂಟ್ ಕೇಳಿ ಮೂರ್ಛೆ ಹೋಗುವುದೊಂದೇ ಬಾಕಿ ಉಳಿದಿತ್ತು. ಸೂರ್ಯಕಾಂತಿಯಂತೆ ಅರಳಿದ ಮುಖಗಳನ್ನು ಕಂಡು ಲಂಬೋದರ್‍ ಹೇಳಿದ “ಯಾರ್‍ಯಾರನ್ನು ಕರಕೊಂಡು ಹೋಗಬೇಕು ಎಂಬ ಹತ್ತು ಜನರ ಪಟ್ಟಿ ನೀವೇ ದಯಮಾಡಿ ನೀಡಿ” ಎಂದು ಹಿರಿಯ ಪತ್ರಕರ್ತರಾದ ಮಿಸ್ಟರ್‌ ರಾವ್ ಅವರನ್ನು ವಿನಂತಿಸಿದ. ಆನಂತರದ ‘ಮಜಾ’ ಕಾಣಲು ಮಿಸ್ಟರ್‍ ಎಂಕ ಮುಂದಾದ. ಹತ್ತು ಮಂದಿ ಅರ್ಹ ಪತ್ರಕರ್ತರ ಆಯ್ಕೆಗಾಗಿ ಅಲ್ಲೇ ಮೀಟಿಂಗ್ ಆರಂಭವಾಯಿತು ಊಟಕ್ಕೆ ಮುನ್ನ. ಆಗ ಚಲನಚಿತ್ರ ಪತ್ರಕರ್ತರ ಪರಿಷತ್ತು-ವೇದಿಕೆ ಮಾತು ಬಂತು ‘ಗೊರಕೆ ಹೊಡೆಯುತ್ತಿರುವ ಸಂಸ್ಥೆಗಳನ್ನು ಈಗ ಎಬ್ಬಿಸುವುದು ಬೇಡ’ ಎಂದರು ಒಬ್ಬರು. ‘ಒಂದೊಂದು ಪತ್ರಿಕೆಯಿಂದ ಒಬ್ಬರು ಮಾತ್ರ ಬರಬೇಕೆಂದರು’ ಮಗದೊಬ್ಬರು.

ಆ ಒಬ್ಬರು ಯಾರು ಎಂಬ ಬಗ್ಗೆ ಕೊಂಚ ಹೊತ್ತು ಕಚ್ಚಾಟವಾಯಿತು.

ಆಗಲೇ ದೊಡ್ಡ ಪತ್ರಿಕೆಗಳು ಸಣ್ಣ ಪತ್ರಿಕೆಗಳು ಎಂಬ ಬಗೆಗೂ ವಾಗ್ವಾದಗಳಾದವು. ಇದೀಗ ಕಣ್‌ಬಿಡುತ್ತಿರುವ ಸಿನಿ ಪತ್ರಕರ್ತರನ್ನು ಬದಿಗಿಡೋಣ. ಫಾರಿನ್‌ನಲ್ಲಿ ಷೂಟಿಂಗ್ ಎಂದ ಮೇಲೆ ತುಂಬ ತುಂಬಾ ಸೀನಿಯರ್‍ ಅಂತೀರಲ್ಲ ಅವರಿಗೆ ಯಾವ ಪೇಪರಿದೆ ಹೇಳಿ ಎಂದು ಕೂಗಾಡಿದ ಒಬ್ಬ. ಮಾತು ಜಗಳದ ಮಟ್ಟ ತಲುಪಿ ‘ಅವನೇನ್ಮಹಾ-ಇವಳೇನ್ಮಹಾ’ ಎನ್ನುವ ಧಾಟಿಗೆ ತಿರುಗಿತು. ಹೆಸರುಗಳ ಪಟ್ಟಿ ಬೆಳೆಯುತ್ತ ಹೋಯಿತು. ಮಾಸ ಪತ್ರಿಕೆ, ವಾರಪತ್ರಿಕೆ, ಪಕ್ಷ ಪತ್ರಿಕೆಗಳವರು ನಾವು ಫಾರಿನ್ ನೋಡೋದು ಬೇಡವೆ-ಏರೋಪ್ಲೇನ್‌ನಲ್ಲಿ ಹಾರೋದು ಬೇಡವೆ ಎಂದು ಹಲುಬಿದರು. ಮಿ.ರಾವ್ ಹತ್ತು ಜನರ ಪಟ್ಟಿ ಫೈನಲೈಸ್ ಮಾಡಲಾಗದೆ-ನಾಳೆ ಮತ್ತೆ ಮೀಟ್ ಮಾಡೋಣ ಎಂದರು. ಹತ್ತೇ ಹತ್ತು ಜನರ ಆಯ್ಕೆ ಮಿ.ರಾವ್‌ಗೆ ಭಾರಿ ಹಿಂಸೆಯೇ ಆಯಿತು.

ಮುಂದಿನ ಶುಕ್ರವಾರ ಎಲ್ಲ ಪತ್ರಿಕೆಗಳಲ್ಲಿ ಮಿ. ಲಂಬೋದರ್‍ ಯೋಜನೆ ಬಗ್ಗೆ ಕಲರ್‍ ಫೋಟೋ ಸಮೇತ ‘ಫಾರಿನ್ ಟೂರ್‍’ ಭಾರಿ ಸುದ್ದಿಯಾಯಿತು. ಆ ಪಬ್ಲಿಸಿಟಿ ಪ್ರಭಾವದಿಂದಾಗಿ ಆತನಿಗೊಬ್ಬ ಎನ್.ಆರ್‍.ಐ. ಪಾರ್ಟ್‌ನರ್‍ ಸಹಾ ಸಿಕ್ಕ. ಅದಾದ ಎಂಟುದಿನದ ನಂತರ ಮಿ. ಲಂಬೋದರ್‍-ಎಂಕನಿಗೆ ಸಿಕ್ಕಿ “ನಾಡಿದ್ದು ೮ ಜನ ಫಾರಿನ್‌ಗೆ ಹೋಗುತ್ತಿದ್ದೇವೆ ಷೂಟಿಂಗ್‌ಗೆ” ಎಂದ.

‘ಪ್ರೆಸ್‌ನವರನ್ನು ಕರ್‍ಕೊಂಡು ಹೋಗುವುದು ಏನಾಯಿತು’ ಎಂದು ಎಂಕ ಅಂದಾಗ ಆತ ಗಹಗಹಿಸಿ ನಕ್ಕು “ನಾನು ಮಾಡಿದ ಸ್ಟಂಟು ಅದು. ನೋಡಿ ಈ ಪತ್ರ” ಎಂದು ನೀಡಿದ.

ಪ್ರಿಯ ಲಂಬೋದರ್‍ ಅವರೆ, ಫಾರಿನ್‌ಗೆ ರಿಪೋರ್ಟಿಂಗ್ ಬರುವವರ ಹತ್ತು ಮಂದಿ ಅರ್ಹ ಪತ್ರಕರ್ತರ ಪಟ್ಟಿ ನೀಡುವ ಹೊಣೆ ನನಗೆ ನೀಡಿದಿರಿ. ನಾನೂ ಆ ಬಗ್ಗೆ ಒಂದಲ್ಲ ಎರಡು ಮೀಟಿಂಗ್ ಮಾಡಿದೆ. ಫಾರಿನ್ ಎಂದ ಕೂಡಲೆ ನಾ ಮುಂದು-ತಾ ಮುಂದು ಎಂದು ಬರುವವರು ಅತಿಯಾದರು. ಹಾಗೆ ನೋಡಿದರೆ ಪತ್ರಕರ್ತರಿಗೆ ಒಂದು ಫ್ಲೈಟೇ ಬುಕ್ ಮಾಡಬೇಕಾದೀತು. ಅದರಿಂದ ಪಟ್ಟಿ ನೀಡುವ ಯೋಚನೆ ನಾನು ಬಿಟ್ಟಿರುವೆ. ಗುಡ್‌ಲಕ್. ನೀವು ಹೋಗಿ ಬನ್ನಿ.

ತಮ್ಮ ವಿಶ್ವಾಸಿ
ಮಿ. ರಾವ್

ಎಂಬ ಪತ್ರ ಓದಿ ಎಂಕ ಕಕ್ಕಾಬಿಕ್ಕಿಯಾದ.

ಆಗ ಲಂಬೋದರ್‍ ನಕ್ಕು ಹೇಳಿದ.

“ಈಗ ಯಾರೂ ಯಾಕೆ ಫಾರಿನ್‌ಗೆ ಕರ್‍ಕೊಂಡು ಹೋಗ್ತಿಲ್ಲ ಪ್ರೆಸ್‌ನವರನ್ನ ಅಂತ ಕೇಳೋ ಹಾಗಿಲ್ಲ ನನ್ನ. ಫಾರಿನ್ ಟೂರ್‌ಗೆ ಬರ್ತೀರಾ ಅಂತ ನಾ ಕೇಳಿದೆ. ನಿಮ್ಮಲ್ಲೇ ಒಮ್ಮತವಿಲ್ಲದಿದ್ರೆ ನಾನೇನೂ ಮಾಡ್ಲಿ ಅಂತ ಜಾರಿಕೋಬಹುದಲ್ವಾ?” ಎಂದ.

“ಲಂಬೋದರ್‍ ನೀನು ಮಹಾ ಛತ್ರಿ ಗುರೂ” ಎಂದ ಎಂಕ.

“ಈ ಕಾಲದಲ್ಲಿ ಬದುಕಬೇಕು ಅಂದ್ರೆ ಇಂತಹ ತಂತ್ರಗಳು ಮಾಡುತ್ಲೇ ಇರಬೇಕು. ಅದಕ್ಕೇ ಹತ್ತು ಜನ ಅರ್ಹ ಪತ್ರಕರ್ತರ ಪಟ್ಟಿ ನೀವೇ ಕೊಡಿ ಅಂದೆ ಮಿಸ್ಟರ್‍ ರಾವ್‌ನ. ಗೊತ್ತಿತ್ತು. ನಂಗೆ ಹೀಗೇ ಆಗುತ್ತೆ” ಎಂದು ಗಹಗಹಿಸಿ ನಕ್ಕಾಗ ಮಿಸ್ಟರ್‍ ಎಂಕ ಸುಸ್ತಾಗಿ ತಲೆಯ ಮೇಲೆ ಕೈಹೊತ್ತು ಕುಳಿತ.

ಅದಕ್ಕೆ ಈಗ ‘ಫಾರಿನ್‌ಗೆ ಷೂಟಿಂಗ್ ಕರ್‍ಕೊಂಡು ಹೋಗ್ತೀನಿ’ ಅಂತ ಯಾರಾದ್ರೂ ಅಂದ್ರೆ ಮುಂಚೆ ಮಿ. ಲಂಬೋದರ್‍ ಜ್ಞಾಪಕ ಬರ್‍ತಾರೆ.
*****
(೭-೪-೨೦೦೦)