ಚಕೋರಿ – ೧

೧. ಪ್ರಾರ್ಥನೆ

ಓಂ ಪ್ರಥಮದಲ್ಲಿ
ಆದಿಗಾಧಾರವಾದ ಸಾವಳಗಿ ಶಿವಲಿಂಗನ ನೆನೆದು
ನಾದದಲಿ ಹುರಿಗೊಂಡ ತನ್ನ ನಿಜವ ತೋರಲಿ ಸ್ವಾಮಿ
ಎಂದು ಬೇಡಿಕೊಂಡು ಕಥಾರಂಭ ಮಾಡುತ್ತೇವೆ.

ನಾವು ಕನಸುಗಳು,
ಎಲ್ಲ ಕಾಲ ಎಲ್ಲ ಸೀಮೆಗೆ ಸಲ್ಲುವ
ಎಲ್ಲಾ ವಯಸ್ಸಿನ, ಎಲ್ಲಾ ಮನಸ್ಸಿನ,
ಆದಿಮ ಕಾಲದಿಂದ ಹಾಂಗೇ ಉಳಿದು ಬಂದಿರುವ ಕನಸುಗಳು-
ಮಹಾಶಿವರಾತ್ರಿಯಂದು, ಸಂಜೆ ಸಾಯಂಕಾಲವಾದೇಟ್ಗೆ
ಯಕ್ಷಿಗುಡಿಯಲ್ಲಿ ಸೇರಿ,
ಸಾವಳಗಿ ಶಿವನ ಜಡೆಯಂಥ ಅಮಾವಾಸ್ಯೆ ಅಂಧಂತಮಸ್ಸಿನಲ್ಲಿ
ಚಂದಮುತ್ತನೆಂಬ ಹೆಸರಾಂತ ಕಲಾವಿದನ ಕಥೆಯ
ನಾವು ಹೇಳಿ ಶಿವನು ಕೇಳಿ
ಜಾಗರಣೆ ಮಾಡುತ್ತೇವೆ; ಭಕ್ತಿಯಿದ್ದವರು ಬನ್ನಿರಯ್ಯಾ.

ಮೆಲುಕಾಡಿಸುವ ಎದುರು ಬಸವನ ಮ್ಯಾಲೆ
ಕುಂತಾಲಿಸುವ ಹಂಪಿಯ ವಿರೂಪಾಕ್ಷನ ಪಾದ
ಮತ್ತು ಪಂಪಮ್ಮನ ಶ್ರೀಪಾದಂಗಳ ಹೊತ್ತ
ಚಂದ ಮುತ್ತಾ ನಿನ್ನ ಪಾದಕ್ಕೂ ಶರಣು.
ಸಾವಳಗಿ ಮಠದ ಸಿದ್ಧರಾಮೇಶ್ವರ ಸ್ವಾಮಿಗಳ ಶ್ರೀಪಾದಂಗಳ ಹೋತ್ತು
ವಿಶ್ವಕರ್ಮ ಕುಲದ
ತಂದೆ ಕಂಬಾರ ಬಸವಣ್ಣೆಪ್ಪ ಮತ್ತು
ತಾಯಿ ಚನ್ನಮ್ಮ ಅವರ ಪಾದಂಗಳಿಗೆ ನಮಿಸಿ
ಕವನ ಮಾಡಿ ಹಾಡುತ್ತೇವೆ.

ಶಿವನ ಕಾಣದಿದ್ದವರೆಲ್ಲ
ಕಂಡವನ ಕತೆಯ ಕೇಳ ಬನ್ನಿರಯ್ಯಾ.
ಹೇಳುವವರು ಸಾವಿರ ಬಾರಿ
ಕೇಳುವವರು ಸಾವಿರ ಬಾರಿ
ಶಿವಶಿವಾ ಎಂದು ಹೇಳಿ ಕೇಳಿದರೆ
ಕರ್ಮ ಪರಿಹಾರ ಸಂಕಲ್ಪಸಿದ್ಧಿ ಎಂದು
ಸ್ವಯಂ ಶಿವಲಿಂಗನ ಭಾಷೆಯಿದೆ ಬನ್ನಿರಯ್ಯಾ.

ಸಾವಿರ ಬಾರಿ ಚಂದಮುತ್ತನ ಕಥೆಯ
ಹೇಳಿದ್ದೇವೆ ಕೇಳಿದ್ದೇವೆ ಶಿವಾ,
ಸಾವಿರ ಬಾರಿ ಚಂದಮುತ್ತನ ಹಾಡ
ಬಾಳಿದ್ದೇವೆ ಬದುಕಿದ್ದೇವೆ ಶಿವಾ,
ಬರುವ ಜನ ಬಾಳಲೆಂದು ಬದುಕಲೆಂದು
ಇನ್ನೊಮ್ಮೆ ರಾಗ ರಚನೆ ಕಟ್ಟಿ
ಕವಿಮಾಡಿ ಪದ ಹಾಡುತ್ತೇವೆ,-
ಸಾವಳಗಿ ಶಿವಲಿಂಗ ಮೆಚ್ಚಿ ಹೌಂದು ಹೌಂದೆನುವಂತೆ,
ಭಕ್ತಾದಿಗಳ ಹೃದಯಗಳಲ್ಲಿ ಆಳವಾಗಿಳಿವಂತೆ
ಇಳಿದಿದ್ದು ಹೊಳೆವಂತೆ.

ನಮ್ಮ ಹಾಡು ಹೂಪತ್ರಿಯಾಗಿ ಸುರಿಯಲಿ ಸ್ವಾಮಿ
ನಿನ್ನ ಶ್ರೀಪಾದಂಗಳ ಮ್ಯಾಲೆ,
ಭಕ್ತರ ಹೃದಯಂಗಳ ಮ್ಯಾಲೆ.

೨ . ಇಂತಿದು ಪ್ರಸ್ತಾವನೆ

ಶಿವಲೋಕವೆಂಬ ಬೆಳಕಿನ ಮಿರಿಲೋಕ, ಅಖಂಡವಾಗಿದ್ದ ಆದಿಮಕಾಲದಲ್ಲಿ ಜಪತಪ ಮಾಡಿಕೊಂಡು ಶಿವದೇವರು ಏಕಾಂಗಿ ಸುಖವಿದ್ದರು. ಆರೂ ಅನಂತಕಾಲ ಜಪತಪ ಮಾಡಿ ಮಾಡಿ ಬೇಸರವಾಗಿ ವಿನೋದಕ್ಕೆಂದು ತಮ್ಮ ನಡಿನಲಿ ಕಟ್ಟಿಕೊಂಡಿದ್ದ ಅಮೃತಗಿಂಡಿಯಲ್ಲಿ ಮುಖ ನೋಡಿಕೊಂಡಾಗ ಆಹಾ ತಾನೆಂಥ ಚೆಲುವನೆಂದು ಘನಾನಂದವಾಗಿ ಅದೇ ಮಾದರಿಯಲ್ಲಿ ತಮ್ಮ ವಾಮಾಂಗವ ಕಿತ್ತು ಇನ್ನೊಂದು ಮೂರ್ತಿಯ ಮಾಡಿ ಆದಿಮಾಯಿಯೆಂದು ನಾಮಕರಣವ ಕೂಗಿ ಅವಳೊಂದಿಗೆ ಕ್ರೀಡಿಸಿದರು. ಸೀಳಿಕೊಂಡ ಗಾಯದ ಮ್ಯಾಲೆ ಅಮೃತವ ಸುರಿದುಕೊಂಡು ಮಾಯಿಗೆ ನೀಡಿ ನೀನೂ ಸುರಿದುಕೊ ಎಂದರೆ ಅವಳ ಕೈಜಾರಿ ಕೆಳಗೆ ಚೆಲ್ಲಿಕೊಂಡುದರಿಂದ ಶಿವದೇವರು ಕೋಪಗೊಂಡು ಅಮೃತವ ವಿನಿಯೋಗಿಸುವ ವಿವೇಕ ಮತ್ತು ವಯಸ್ಸು ಬೆಳೆಯುವ ತನಕ ಸುಮ್ಮನಿರೆಂದು ಹೇಳಿ ಒಳಮನೆಯಲ್ಲಿ ಅಮೃತದ ಗಿಂಡಿಯ ಭದ್ರವಾಗಿಟ್ಟು,-“ಎಲೌ ಆದಿಮಾಯಿಯೇ, ನೀನು ಬೇಕೆನಿಸಿದಂತೆ ಆಡಿಕೊಂಡಿರು. ಆದರೆ ಅಂಧಂತಮಸ್ಸಿನ ಒಳಮನೆಯ ಬಾಗಿಲನ್ನು ಮಾತ್ರ ತೆರೆಯಬ್ಯಾಡೆಂ”ದು ತಾಕೀತು ಮಾಡಿ ಜಪಕ್ಕೆ ಕುಂತರು.
ಇಂತೀರೀತಿ ಶಿವದೇವರು ಕಣ್ಣುಮುಚ್ಚಿರುವಲ್ಲಿ ಆತುರ ತಾಳದ ಆದಿಮಾಯಿಯು ಒಳಮನೆಯ ಬಾಗಿಲು ತೆಗೆದಳು ನೋಡು-
ಒಳಗೆ ಹಿಡಿದಿಟ್ಟ ಅಂಧಂತಮಸ್ಸು ಭುಸ್ಸೆಂದು ಹೊರನುಗ್ಗಿಬೆಳಕಿನ ಲೋಕಲೋಕಾಂತರವ ವ್ಯಾಪಿಸತೊಡಗಿತು. ಶಿವದೇವರಿಗಿದು ಗೊತ್ತಾಗಿ ಉಳಿದಿರುವಷ್ಟು ಲೋಕವನ್ನಾದರೂ ಕಾಪಾಡಿಕೊಳ್ಳೋಣವೆಂದು ಕತ್ತಲಾವರಿಸಿದಷ್ಟು ಶಿವಲೋಕವ ಸೀಳಿ ಕೆಳಕ್ಕೆ ತಳ್ಳಿದರು. ಕಾಪಾಡು ಶಿವನೇ ಎಂದು ಕಿರಿಚುತ್ತ ಇನ್ನೂ ಒಳಮನೆಯಲ್ಲೇ ಇದ್ದ ಆದಿಮಾಯಿಯೂ ಅಂಧಂತಮಸ್ಸಿಗಂಟಿದ ಲೋಕದೊಡನೆ ಕೆಳಕ್ಕೆ ಬಿದ್ದಳು.
ಕತ್ತರಿಸಿ ಬಿದ್ದ ಕೀಳರ್ಧ ಲೋಕವೇನಾಯಿತೆಂಬುದು ಎಲ್ಲಿಯೂ ಕಾಣಬರಲಿಲ್ಲವಾಗಿ ಶಿವದೇವರು ತಮ್ಮ ಹಣೆಗಣ್ಣಿನ ಒಂದು ಕಿಡಿಗೆ ಸೂರ್ಯನೆಂದು ನಾಮಕರಣವ ಕೂಗಿ ಆದಿಮಾಯಿಯ ಶೋಧಿಸಿಕೊಂಡು ಬಾ ಎಂದು ಹೇಳಿ ಕಳಿಸಿದರು. ಅವನು ಶೋಧನೆ ಮಾಡಿ ಮಾಡಿ ದಣಿದು ವಿಶ್ರಾಂತಿ ತಗೊಂಡು ಮತ್ತೆ ಶೋಧನೆ ಮಾಡುತ್ತಿದ್ದ. ಇಂತಿರುವಲ್ಲಿ ಅವನು ಹುಡುಕಿದ್ದು ಹಗಲಾಗಿ ದಣಿವಾರಿಸಿಕೊಂಡದ್ದು ರಾತ್ರಿಯಾಯಿತು. ಇಂತೀರೀತಿ ದಿನವಾರ ಋತುಮಾನ ಮಾಸ ವರುಷಂಗಳಾಗಿ, ಯುಗಜುಗಂಗಳಾಗಿ ಕಾಲನ ವ್ಯವಹಾರ ನಿರಂತರ ನಡೆಯಿತು.
ಇತ್ತ ಅಂಧಂತಮಸ್ಸಿನ ಕೀಳರ್ಧ ಶಿವಲೋಕದಲ್ಲಿದ್ದ ಆದಿಮಾಯಿ ನೋಡಿಕೊಂಡರೇನಿದೆ? ಮ್ಯಾಲೆ ನೋಡಿದರೆ ಬಾನಾಯಿತು, ಕೆಳಗೆ ನೋಡಿದರೆ ತಾನಾಯಿತು. ಶಿವನಿಂದ ಸೀಳಿಕೊಂಡ ಗಾಯವಿನ್ನೂ ಹಾಂಗೇ ಉರಿಯುತ್ತಿದೆ. ಶಿವನೇ ಇನ್ನೆಂದಿಗೆ ನಿನ್ನೊಂದಿಗೆ ಒಂದಾದೇನೆಂದು ಮ್ಯಾಲೆ ನೋಡಿ ತನ್ನಲ್ಲಿ ತಾ ಮಿಡುಕಿ ಬಡವಿಯಾದಳು. ಬಗೆಬಗೆಯ ಶೋಕಂಗಳ ಶೋಕಿಸುತ್ತ ಯುಗಯುಗಾಂತರ ಕಳೆದು ಅಮೃತ ಕುಡಿಯದ ಅವಳ ದೇಹ

ಕುಸಿದು ಅಸುನೀಗಿ ಬಿದ್ದಲ್ಲಿ ನೋಡು ಶಿವಾ,
ಮಾಯಿಯ ಉಬ್ಬಿದವಯವಂಗಳ
ಗಿರಿಬೆಟ್ಟ ಪರ್ವತಂಗಳಾಗಿ,
ಬೆವರುಜಲ ಕಣ್ಣೀರು
ಹೊಳೆಹಳ್ಳ ಮಳೆಗಳಾಗಿ,
ಅವಳುಸಿರು ಗಾಳಿಯಾಗಿ,
ಮರ್ತ್ಯಲೋಕ ಮೊದಲಾಯಿತೆಂಬಲ್ಲಿ ಗತಿಸಿಹೋದವು
ಆರುಮೂರು ಒಂಬತ್ತು ಅನಂತಕಾಲಂಗಳು.
ಆಮೇಲೆ ಆದಿಮಾಯಿ ಧರಣಿಮಂಡಳ ಮಧ್ಯದಲ್ಲಿ ಪುಣ್ಯಕೋಟಿ ಎಂಬ ಹಸುವಿನ ಅವತಾರ ತಾಳಿ ಇರುವೆ ಮೊದಲು ಆನೆ ಕಡೆಯಾಗಿ ಒಟ್ಟು ಚೌರ್‍ಯಾಂಸಿ ಲಕ್ಷ ತಿರ್ಯಕ್ ಜಂತುಜಾಲಕ್ಕೆ ಜನನ ನೀಡಿದಳು. ಅದು ಹೆಂಗೆಂದರೆ:
ಆದಿಯಲ್ಲೊಂದು ಕಾಡು
ಕಾಡಿನಲ್ಲೊಂದು ಗವಿ
ಗವಿಯಲ್ಲೊಂದು ಪಡ್ಡೆ ಕರು ಪುಣ್ಯಕೋಟಿ
ಅಂದರೆ ನಮ್ಮ ಕಥಾನಾಯಕಿ,
ಸಂತಾನವಿಲ್ಲದ ಸಂತಾಪದಿಂದ
ಮೌನದಿಂದ ತುಂಬಿದ ಹಗಲುಗಳಿಂದ
ನಿದ್ರೆಯಿಂದ ತುಂಬಿದ ರಾತ್ರಿಗಳಿಂದ
ಬೋರಾಗಿ ಬೇಸರಗೊಂಡು ಮಲಗಿರಲಾಗಿ
ಸದರಿ ಕರುವಿಗೊಂದು ಕನಸಾಯ್ತು.
ಆಕಾಶ ನೀಲಿಮದಲ್ಲಿ
ಮಾಯದ ಬೆಳ್ಳಿಯ ಗಿಂಡಿ, ಫಳ್ಳನೆ ಹೊಳೆದು
ಬೆಳ್ದಿಂಗಳ ಹಾಲು ಸುರಿದು ಮರೆಯಾಯ್ತು.
ಆದಿಮದ ಬೆದೆ ಕೆರಳಿ
ಚಿತ್ತವೈಕಲ್ಯವುಂಟಾಗಿ ಚಡಪಡಿಸಿ
ಎಚ್ಚೆತ್ತಳು ಹೆಣ್ಣು ಪುಣ್ಯಕೋಟಿ.
ಆಮೇಲಾಮೇಲೆ ಕಾಡಿನ ಕಥೆಗೆ
ಮಬ್ಬು ಕವಿಯಿತು ನೋಡು:
ಕೆಂಗಣ್ಣಿಂದ ತುಂತುರು ಹನಿ ಉದುರಿಸುತ್ತ
ಮೈಮರೆತು ಮ್ಯಾಲೆ ನೋಡುತ್ತ
ಬೆಳ್ಳಿಗಿಂಡಿಯ ಪಡೆವ ಯೋಗ ಹ್ಯಾಗೆ ಒದಗೀತೆಂದು
ಅಂತರಂಗದ ಒಳಗೊಳಗೇ ಚಿಂತಿಸುತ್ತ
ಏಕಾಂತ ಕುಂತಳು ಕಾಂತೆ
ಕೊಂಬಿಂದ ಗವಿಯ ಗೋಡೆಯ ಮ್ಯಾಲೆ ಗೀರುತ್ತ.
ಏನೇನೊ ಗೀಚಿದಳು:
ಹೂಹಣ್ಣು ಹೆರುವ ತರುಮರ ಬರೆದಳು.
ಚಿಲಿಪಿಲಿ ಹಕ್ಕಿಯ ಬರೆದಳು.
ಮ್ಯಾಲಿನ ಮಿರಿಲೋಕದ ಆಕಾಶವೆಂಬ ಗೋಮಾಳದಲ್ಲಿ
ಬೆಟ್ಟದೆತ್ತರ ಹೋರಿಯ ಚಿತ್ರ ಚಿತ್ತಾರ ಬರೆದು
ಶಿವಭಕ್ತಿ ಶಿವಾಚಾರ ಮಾಡಿದಳು.
ಶಿವಾಚಾರ ಮಾಡಿದ್ದೇ ಆಯ್ತು ನೋಡು:
ಹೋರಿಯ ಚಿತ್ರ ಚಿತ್ತಾರದಲ್ಲಿ
ಆಕಾಶ ನಂದೀಶನ ಆವೇಶ ಅವತಾರವಾಗಿ
ಹಣೆಯಲ್ಲಿ ಕಿಡಿಗಣ್ಣಿನ ಜೋಗಿಜಂಗಮ ಹೋರಿ
ಗಲಿರು ಗಲಿರು ಅಂತ ಜಂಗವ ನುಡಿಸುತ
ಕಣ್ಣಿಂದ ಕೆಂಗಿಡಿಗಳ ಕಾರುತ, ಅರಳಿದಳ್ಳೆಗಳಿಂದ ಹೊಗೆಯ ಉಗುಳುತ
ಲಾಲು ಕೆದರಿ ಬೆಟ್ಟದೆತ್ತರ ಧೂಳೆಬ್ಬಿಸಿ
ಢುರುಕಿ ಹೊಡೆಯುತ ಹೊಂಚುತ ಹೊಂಚುತ ಏಕಾ‌ಏಕಿ
ಮಿಂಡೆದ್ದ ಮಣಕಿನ ಮೈಮ್ಯಾಲೇರಿ ಹೋ ಹಾರಿ
ಮೈಯಂತ ಮೈಮುರಿದು
ನಡಿನಲ್ಲಿದ್ದ ಬೆಳ್ಳಿಗಿಂಡಿಯ ಹಾಲು ಮೈತುಂಬ ಸುರಿದು
ಆಕಾಶವನಡರಿ ಮಟಾಮಾಯವಾಯಿತು!
ಮೈ ಅದುರಿ ಗಮ್ಮಂತ ಬೆವರಿ
ಸಳಸಳ ಮೈಜಲವಿಳಿದು ಸ್ಮೃತಿಗೆ ಬಂದಳು ಮಹಾತಾಯಿ.
ಚೆಲ್ಲಿದ ಹಾಲು ಮಡಕೆಯಲಿ ಕೂಡಿಟ್ಟು
ಹೆಪ್ಪು ಹಾಕಿ ನೆಲವಿನ ಮ್ಯಾಲಿಟ್ಟು
ಕಾದು ಕುಂತಳು.
ಈ ಮಧ್ಯೆ ತರುಮರ ಬೆಳೆಗಳಿಗೆ ತಾಯಾಗಿ
ಪುಣ್ಯಕೋಟಿ ಹಸುವಾಗಿ ಹಸಿರುಧರ್ಮ ಹಬ್ಬಿಸಿದಳು.
ಒಂದಕ್ಕಿನ್ನೊಂದು ಹೀಗೇ ನೂರೊಂದು ಜೀವರಾಶಿಯ ಪಡೆದು
ಚಿಲಿಪಿಲಿ ಪ್ರಪಂಚವ ಕಟ್ಟಿ ಹೆಸರಿಟ್ಟಳು.
ಆಮೇಲಾಮೇಲೆ ಚೌರಾಂಸಿ ಲಕ್ಷ ತಿರ್ಯಕ್ ಜಂತುಜಾಲ ಜನನವಾಗಿ ಎಲ್ಲಾ ಜೀವರಾಶಿಗೆ ಹಸಿವೆ ಹಾಹಾಕಾರವಾಗಿ ನಮ್ಮೀ ಧರಣಿ ಗೋಳು ಬೀಸುವ ಗಿರಣಿಯಾದ ಪ್ರಸ್ತಾವದಲ್ಲಿ ಆದಿಮಾಯಿ ತಾನೇನು ಮಾಡಿದಳೆಂದರೆ-
ಮಕ್ಕಳ ಕಾಪಾಡಲು ಹಾಲು ನೆತ್ತರು ಸುರಿದು ಸುಸ್ತಾಗಿ, ಮೈ ಬರಿದಾಗಿ ಹನ್ನೆರಡಾಳುದ್ದದ ಪಾತಾಳ ಜಲಬಾವಿಯಲ್ಲಿ ಜಲಸಮಾಧಿಗೊಂಡಳೆಂಬಲ್ಲಿ ಹತ್ತು ಅನಂತಕಾಲಗಳು ಸಂದವು.
ಇತ್ತಲಾ ಶಿವದೇವರು ಜಪತಪವೆಂದು ಮಿರಿಲೋಕದಲ್ಲಿ ಕುಂತಿರಲಾಗಿ ಹಣೆಯ ಬೆವರು ಹನಿ ಭೂಲೋಕದ ಮ್ಯಾಲೆ ಬಿದ್ದು ಅದರಿಂದೋರ್ವ ನರಮಾನವನ ಸೃಷ್ಟಿ ಮಾಡಿ ತಿಂದುಂಡು ಸುಖವಾಗಿರೆಂದು ಹೇಳಿ ಕಣ್ಣು ಮುಚ್ಚಿದರು. ಆದರೆ ನರಮಾನವನಿಗೆ ಒಂಟಿ ಜೀವನದಿಂದ ಬೋರಾಗಿ ದೊಡ್ಡದೇವರ ನೆನೆಯಲು ಶಿವದೇವರು ಪ್ರಸನ್ನ ಪ್ರತ್ಯಕ್ಷರಾದರು. ನರಮಾನವನು ಕೈಮುಗಿದು,-
“ಎಲಾ ತಂದೆಯೇ, ಹಟ್ಟಿಯಲ್ಲಿ ಹೆಣ್ಣಿಲ್ಲ,
ಕೊಟ್ಟಿಗೆಯಲ್ಲಿ ದನಕರುಗಳಿಲ್ಲ.
ಇರು ಎಂದರೆ ಒಬ್ಬನೇ ಹೆಂಗಿರಲಿ?
ಇದಕ್ಕೇನಾದರೂ ಆಧಾರ ಮಡಿಕೊಳ್ಳಬ್ಯಾಡವೆ?”
-ಎಂದ.ಇದಕ್ಕೆ ನಮ್ಮ ಶಿವಲಿಂಗದೇವರು ಏನಂದರೆಂದರೆ-
“ತನುಜನೇ, ಅತಳ ವಿತಳ ಪಾತಳವೆಂಬ
ಅಧೋಲೋಕದಲ್ಲಿ ಬೆಟ್ಟದ ಮಾಯಕಾರ್ತಿ ಅವತಾರಗೊಂಡು
ಕಟ್ಟಿರುವೆ ಹುತ್ತದಲ್ಲಿ ಸ್ಥಾಪನೆಗೊಂಡಿದ್ದಾಳೆ.
ಪುರುಷಾಮೃಗವೆಂಬ ಸೈತಾನ ಸರ್ಪ ಅವಳ ಕಾವಲಿಗಿದೆ.
ಅದನ್ನ ಜಯಿಸಿ, ಅವಳನ್ನು ವರುಸಿ,
ಸಂಸಾರ ದಂದುಗವ ಸುರುಮಾಡಯ್ಯಾ”
-ಎಂದು ಆಶೀರ್ವದಿಸಿ “ತೊಂದರೆ ಬಂದರೆ ತಗೊ” ತಮ್ಮ ಮೈಮ್ಯಾಲಿನ ಹಿಡಿ ರೋಮಂಗಳ ಕಿತ್ತು ಕೊಟ್ಟು ಮಾಯವಾದರು.
ಇಂತು ನರಮಾನವನು ಪಾತಾಳಕಿಳಿವ ಬಿಲಕ್ಕೆ ಬಂದು ಶಿವನೇ ಎಂದು ಕೆಳಗಿಳಿದು ಮಾಯಕಾರ್ತಿಯ ಪರಿಶೋಧನೆ ಮಾಡುತ್ತಿರುವಲ್ಲಿ ಎತ್ತರವಾದ ಬೆಟ್ಟದ ಹಾಗೆ ಎದುರಿಗೇ ಕುಂತಿದೆ ಪುರುಷಾಮೃಗವೆಂಬ ಸೈತಾನಸರ್ಪ! ನೆತ್ತಿಯಲ್ಲಿ ಜೋಡಿ ಸೂರ್ಯರಂತ ಕಣ್ಣಿವೆ! ಮುಳ್ಳಿನಂತ ಒರಟಾದ ಉದ್ದುದ್ದ ರೋಮಗಳಿವೆ! ನೂರುಗಾವುದ ಹುತ್ತದರಮನೆಗೆ ಶಿಂಬಿಸುತ್ತಿ ಶಿಖರದಲ್ಲಿ ಹೆಡೆಯೆತ್ತಿ ಹೊಸನಾತ ಹೊಸನಾತವೆಂದು ಹೊಂಚುತ ನರಮಾನವನಿಗೆ ಬಾಯಿ ಹಾಕೇಬಿಟ್ಟಿತು. “ಇದೇನು ಬಿಕ್ಕಟ್ಟು ಬಂತು ಶಿವನೇ” ಎಂದುಕೊಳ್ಳುವಷ್ಟರಲ್ಲಿ ನರಮಾನವನು ಪುರುಷಾಮೃಗದ ನಾಲಗೆಯಲ್ಲಿ ಲಾಗ ಹಾಕುತ್ತಿದ್ದ. ಅಂಗೈಯಲ್ಲಿ ಅಡಿಕೆಯಾಡುವಂತೆ ನಾಲಗೆಯ ಮ್ಯಾಲೆ ಇವನನಾಡಿಸುತ ಸೈತಾನ ಸರ್ಪ ಇನ್ನೇನು ಇವನನ್ನ ದವಡೆಗೆ ತಳ್ಳಬೇಕು ಅಷ್ಟರಲ್ಲಿ ದೊಡ್ಡ ದೇವರು ಕೊಟ್ಟ ರೋಮಂಗಳ ನೆನಪಾಗಿ ಅವನ್ನು ಎಸೆದುಬಿಟ್ಟ. ಶಿವ ಶಿವಾ,-ಅವು ಬಿದ್ದಲ್ಲೆಲ್ಲಾ ರೋಮಕ್ಕೊಂದರಂತೆ ಸಾವಿರ ಶಿವಲಿಂಗಗಳು ಉದ್ಭವವಾಗಿ ಕಾಣದ ಆಕಾಶಗಂಟೆ ಢಣಲೆಂದು ಹೊಡೆದಾಡಿದವು! ತಕ್ಷಣ ಪುರುಷಾಮೃಗವು ನರಮಾನವನ ಹೊರಕ್ಕೆ ಉಗುಳಿ ಒಂದೊಂದು ಶಿವಲಿಂಗಕ್ಕೂ ಆರುಮೂರೊಂಬತ್ತು ಪ್ರದಕ್ಷಿಣೆ ಸುತ್ತಿ ಶಿವಭಕ್ತಿ ಶಿವಾಚಾರ ಮಾಡತೊಡಗಿತು. ಇದೇ ಸಮಯವೆಂದು ನರನು ಅವಸರದಲ್ಲಿ ಓಡಿ ಹೋಗಿ ಹುತ್ತದರಮನೆಯ ಏಳೇಳು ಗೇಟುಗಳನೊದ್ದು ಮುರಿದು ಒಳಗೆ ಹೋಗಿ ನೋಡಿದರೆ ಬೆಟ್ಟದ ಮಾಯಕಾರ್ತಿ ಬಟ್ಟೆಯ ನೇಯುತ್ತ ಕುಂತಿದ್ದಾಳೆ! ಹುಟ್ಟು ನಿರ್ವಾಣದಲ್ಲಿದ್ದ ನರನು ಬಟ್ಟೆ ನೇಯುವ ಮಾಯಕಾರ್ತಿಯ ಕಂಡು ಮರುಳಾಗಿ ಶಿವನ ನಿಜರೂಪವ ತಿಳಿಸಿದ. ಮಾಯಕಾರ್ತಿ ನಾಂಚಿ ಕಾದ ಲೋಹದೋಪಾದಿಯಲ್ಲಿ ಕೆಂಪಾಗಿ ದಯ ಮಾಡಿ ಅವನಿಗೂ ಒಂದು ಬಟ್ಟೆಯ ಕೊಟ್ಟಳು. ಆಮ್ಯಾಲೆ ಅವಸರ ಮಾಡಿ ಅಲ್ಲೇ ಬಿದ್ದಿದ್ದ ತನ್ನ ಹಿಂದಿನವತಾರ ಪುಣ್ಯಕೋಟಿಯ ಕೊಂಬುಗಳ ತಗೊಂಡು ನರನೊಂದಿಗೆ ಓಡೋಡಿ ಪಾತಾಳದ ಬಿಲ ತಲುಪಿದಳು.
ಮೊದಲು ಮಾಯಕಾರ್ತಿಯ ಮ್ಯಾಲೆ ಹತ್ತಿಸಿ ತಾನೂ ಹತ್ತಬೇಕೆಂದು ಆಧಾರಕ್ಕೆ ಬಲಗೈ ನೀಡಿ ಬಲಗಾಲನ್ನು ಬಿಲದ ಮ್ಯಾಲೂರಿ ಹುಕಿಯಿಂದ ಹತ್ತಬೇಕೆಂಬಷ್ಟರಲ್ಲಿ ಶಿವ ಶಿವಾ, ಸೈತಾನ ಸರ್ಪ ಬಂದು ಇನ್ನೂ ಪಾತಾಳ ಸೀಮೆಯಲ್ಲಿದ್ದ ನರನ ಎಡಗೈ ಎಡಗಾಲು ಹಿಡಿದು ಕೆಳಕ್ಕೆಳೆಯತೊಡಗಿತು! ನರನ ಎಡಗೈ ಎಡಗಾಲು ಪುರುಷಾಮೃಗದ ಕೈಯಲ್ಲಿ, ಬಲಗೈ ಬಲಗಾಲು ಮಾಯಕಾರ್ತಿಯ ಕೈಯಲ್ಲಿ! ಕೊನೆಗೆ ಮಾಯಕಾರ್ತಿ ಶಿವನ ಹೆಸರುಗೊಂಡು ಡೊಗ್ಗಾಲು ಮಂಡಿಯೂರಿ ನರಮಾನವನ ಬಲಗೈ ಬಲಗಾಲನ್ನು ಮ್ಯಾಲೆಳೆದಳು. ಹಸೀ ಮರ ಸೀಳಿದಂತೆ ಕರಕರ ಭಯಂಕರ ಸದ್ದಾಯಿತು. ಹಲ್ಲು ಕಚ್ಚಿ ಮೀಸಲು ಶಕ್ತಿಯಿಂದ ಮ್ಯಾಲೆಳೆದಳು. ಜಗ್ಗುತ್ತಿದ್ದ ಹಗ್ಗ ಹರಿದು ಕೈಗೆ ಬಂದಂತಾಗಿ ಹಿಂದೆ ಬಿದ್ದಳು. ಹಿಂಗ್ಯಾಕೆಂದು ನೋಡಿದರೆ ಹಿರಿಯನ ಬಲ ಅರ್ಧ ದೇಹ ಅವಳ ಕೈಯಲ್ಲಿತ್ತು, ಬಲಗೈ ಬಲಗಾಲಿತ್ತು! ಬಲಗಡೆ ಅರ್ಧಾಮುಖವಿತ್ತು, ಸರಿಯಾಗಿ ಬೆನ್ನುಹುರಿಯಲ್ಲೇ ಸೀಳಿ ಸೊಂಟದಿಂದ ನೆತ್ತಿಯ ತನಕ ಹಸಿಯ ನೆತ್ತರು ಸೋರುತ್ತಿತ್ತು! ಇದನ್ನು ನೋಡಿ ಮಾಯಕಾರ್ತಿ ಕಿಟಾರನೆ ಕಿರಿಚಿದಳು.
ಇದನ್ನೆಲ್ಲ ಮ್ಯಾಲಿಂದ ನೋಡುತ್ತಿದ್ದ ಲೋಕನಾಯಕ ಸ್ವಾಮಿಗೆ ವ್ಯಾಕುಲವಾಗಿ ಒಂದು ಮಾಡಹೋದರೆ ಇನ್ನೊಂದಾಯಿತಲ್ಲ ಎಂದು ಖೇದವಾಗಿ, ನೀಲಿ ಆಕಾಶದಲ್ಲಿ ನಿಂತು ಲೋಕವ ಬೆಳಗುತ್ತಿದ್ದ ಸೂರ್ಯನಿಗೆ “ಹೋಗಿ ನರಮಾನವನ ಉದ್ಧರಿಸೆಂದು” ಅಪ್ಪಣೆಯಿತ್ತರು. ಸೂರ್ಯನಾರಾಯಣಸ್ವಾಮಿ ಕೆಳಗಡೆ ಬಂದು ತಮ್ಮ ಕೆಂಡಗಣ್ಣಿನ ಜಗಜಗ ಬೆಳಕನ್ನ ನರನ ಹರಿದ ಭಾಗದ ಮ್ಯಾಲೆ ಚೆಲ್ಲಿದಾಗ ಅರೆಕೊರೆಯಾಗಿದ್ದ ದೇಹ ಇಡಿಯಾಗಿ ಜೀವ ತುಂಬಿತು. ನಿದ್ದೆಯಿಂದೆಂಬಂತೆ ಎದ್ದು ಸಾಷ್ಟಾಂಗವೆರಗಿದ ನರನಿಗೆ ಮಾಯಕಾರ್ತಿಯೊಂದಿಗೆ ಸುಖಬಾಳೆಂದು ಆಶೀರ್ವದಿಸಿ ಸೂರ್ಯದೇವರು ಅಸ್ತಂಗತರಾದರು.
ರಾತ್ರಿಗೆಂದರೆ ಇನ್ನೊಂದು ಹೊಯ್ಕಾಯಿತು ಶಿವನೆ. ನರನ ಇನ್ನರ್ಧ ಎಡಭಾಗವನ್ನ ಸೈತಾನಸರ್ಪ ಕಸಿದಿತ್ತಲ್ಲ, ದೇಹ ಊನವಾದುದರಿಂದ ತಿನ್ನಲಾರದೆ, ಪಾತಾಳಬಿಲದೊಳಗಿಂದ ಅದನ್ನೂ ಭೂಮಿಗೆ ಉಗುಳಿಬಿಟ್ಟಿತು. ಶಿವದೇವರೀಗ ತಮ್ಮ ಜಡೆಮರೆಯ ಚಂದ್ರಸ್ವಾಮಿಗೆ “ನರನ ಉದ್ಧರಿಸಿ ಬಾ” ಎಂದು ಆಜ್ಞಾಪಿಸಿದರು. ಚಂದ್ರಾಮಸ್ವಾಮಿ ತಮ್ಮ ಬೆಳ್ದಿಂಗಳನು ನರನ ಎಡದೇಹದ ಮ್ಯಾಲೆ ಕರುಣೆಯಿಂದ ಸುರುವಿ ಪೂರ್ಣದೇಹನ ಮಾಡಿ ಜೀವಬರಿಸಿ ಸುಖಬಾಳೆಂದು ಹರಸಿ ಶಿವನ ಜಡೆಯಡರಿದರು.
ಇಂತೀರೀತಿ ಒಬ್ಬನಿದ್ದ ನರಮಾನವ ಈಗ ಇಬ್ಬರಾದರು. ಸೂರ್ಯನಿಂದ ಜೀವ ಪಡೆದವನು ಅಣ್ಣನೆಂದಾಯಿತು. ಚಂದ್ರನಿಂದ ಪಡೆದವನು ತಮ್ಮನೆಂದಾಯಿತು. ಆದರೆ ಮಾಯಕಾರ್ತಿ ಯಾರೊಂದಿಗಿರಬೇಕೆಂದು ಜಿಜ್ಞಾಸೆಯಾಗಿ ಇಬ್ಬರೂ ಎಳೆದಾಡತೊಡಗಿದರು. ಆವಾಗ ಶಿವದೇವರು ಮಧ್ಯೆ ಬಾಯಿ ಹಾಕಿ ಮಾಯಕಾರ್ತಿ ಇಬ್ಬರ ಸೊತ್ತೆಂದು ಪಂಚಾತಿಕೆ ಮಾಡಿ ಅಣ್ಣತಮ್ಮಂದಿರ ಸಮಾಧಾನ ಮಾಡಿದರು. ಪಾತಾಳದ ಬಿಲ ಮುಚ್ಚಿ ಅದರ ಮ್ಯಾಲೆ ಕರಿಕಂಬಳಿಯ ಗದ್ದಿಗೆ ಮಾಡಿ ತೆಂಕುಮುಖವಾಗಿ ಅಣ್ಣನನ್ನು, ಬಡಗುಮುಖವಾಗಿ ತಮ್ಮನನ್ನು ಬೆನ್ನಿಗೆ ಬೆನ್ನಾತು ಕೂರಿಸಿ, ಮಧ್ಯೆ ಮಾಯಕಾರ್ತಿಯ ಸ್ಥಾಪನೆ ಮಾಡಿ ಬೆಳ್ಳಿಬೆತ್ತದ ಅಧಿಕಾರ ಕೊಟ್ಟು ಒಡ್ಡೋಲಗ ಮಾಡಿಸಿ-

ಮಾನವರಿಗೆ ದೊಡ್ಡವರಾಗಿ
ದೇವರಿಗೆ ಸಣ್ಣವರಾಗಿ ಬಾಳಿರಯ್ಯಾ-
ಎಂದು ಹರಸಿ ಶಿವಲೋಕಕ್ಕೆ ಸಂಚರಣೆ ಮಾಡಿದರು. ಇಲ್ಲಿಂದ ಸಂಸಾರ ದಂದುಗ ಸುರುವಾಯ್ತು ನೋಡು: ಗಾಳ ಗುದ್ಲಿ ತಗಂಡು ದುಡುಯುವಷ್ಟು ಕೆಲಸ, ಉಣ್ಣುವಷ್ಟು ಅನ್ನವಿರುವ ಶಿವಾಪುರವೆಂಬ ಘನವಾದ ಹಟ್ಟಿಯ ಕಟ್ಟಿ, ಪುಣ್ಯಕೋಟಿಯ ಹೆಸರಿನಲ್ಲಿ ಕೊಟ್ಟಿಗೆಯಲ್ಲಿ ದನಕುರಿಗಳ ಸಾಕಿ ಹಾಲು ಹಿಂಡಿ ಹೈನು ಬೆಣ್ಣೆ ಮಾಡುವ ಗೊಲ್ಲ ಗೋಕುಲ ಕುಲವ ಮೊದಲು ಮಾಡಿದರು.
ಆದರೆ ಅಣ್ಣತಮ್ಮಂದಿರಲ್ಲಿ ವಿರಸ ಕಮ್ಮಿಯಾಗಲಿಲ್ಲ. ಶಿವನು ಮಾಡಿದ ಕಟ್ಟಳೆಗಳ ಕಡೆಗಾಣಿಸಿ ಮಾಯಕಾರ್ತಿ ತನಗೆ ಮಾತ್ರ ಸೇರಿದವಳೆಂದು ಇಬ್ಬರೂ ತಾರಾಮಾರು ಗೌಜು ಗದ್ದಲ ಮಾಡುತ್ತ ಜಗಳಾಡತೊಡಗಿದರು. ಅವನಿವನೆನ್ನದೆ ಮಾಯಕಾರ್ತಿ ಎಳೆದವನೊಂದಿಗೆ ಇರಬೇಕಾಗಿ ಬಂದು “ಎರಡು ದಾರಿಗಳಲ್ಲಿ ಹೆಂಗಂತ ವ್ಯವಹರಿಸಲೋ ಶಿವನೆ” ಎಂದು ಮೊರೆಯಿಟ್ಟಳು. ಶಿವದೇವರಿನ್ನೊಮ್ಮೆ ಭೂಲೋಕಕ್ಕೆ ಬಂದು ಪುಣ್ಯ ಕೋಟಿಯ ಕೊಂಬುಗಳ ಪಾಲುಮಾಡಿ ಬಲಗೊಂಬನ್ನು ಅಣ್ಣನಿಗೂ ಎಡಗೊಂಬನ್ನು ತಮ್ಮನಿಗೂ ಪಂಚಾತಿಕೆ ಮಾಡಿ ಕೊಟ್ಟು ಹಗಲು ಅಣ್ಣನದೆಂದೂ ರಾತ್ರಿ ತಮ್ಮನದೆಂದೂ, ಹಗಲಿನವರು ಸೂರ್ಯನ ಒಕ್ಕಲೆಂದೂ, ರಾತ್ರಿಯವರು ಚಂದ್ರನ ಒಕ್ಕಲೆಂದೂ ಹಗಲಿಗೆ ಒಂದು ಸತ್ಯವೆಂದೂ ರಾತ್ರಿಗೆ ಹಲವು ಸತ್ಯಗಳೆಂದೂ ಸಾರಿ ಪತ್ರಕರಾರು ಬರೆದುಕೊಟ್ಟರು. ಅವರವರ ಸಮಯದಲ್ಲಿ ಮಾಯಕಾರ್ತಿ ಅವರವರೊಂದಿಗೆ ಇರಬೇಕೆಂದು ಕಟ್ಟಳೆ ಮಾಡಿ ಸೂರ್ಯಚಂದ್ರರನ್ನ ಕಾವಲಿಗಿರಿಸಿದರು. ಆದರೂ ಇವರ ಜಗಳ ತೀರಲಿಲ್ಲ. ಒಬ್ಬರ ಸಮಯದಲ್ಲಿ ಇನ್ನೊಬ್ಬರ ಆಕ್ರಮಣ ಅತಿಕ್ರಮಣಗಳಾಗಿ ಮೂವರ ಕೂಗಾಟ ಕೇಳಲಾರದೆ ಶಿವದೇವರು ಭೂಲೋಕದ ಮ್ಯಾಲೆ ಆಕಾಶವ ಡಬ್ಬುಹಾಕಿ ಮುಚ್ಚಿ ಮ್ಯಾಲಿನ ತಮ್ಮ ನಿವಾಸಕ್ಕೆ ಹೋದರು.
ಈಗಿವರು ಎಷ್ಟು ಕಿರಿಚಿದರೂ ಒದರಿದರೂ ಹೇಳಕೇಳುವುದಕ್ಕೆ ಶಿವದೇವರೂ ಇರಲಿಲ್ಲ. ಮೊದಲಾದರೆ ಮಾಯಕಾರ್ತಿ ನೆಪವಾಗಿ ಕುಸ್ತಿ ಜಗಳಗಳಾದರೆ ಈಗ ತಂತಮ್ಮ ಬೆಡಗಿನ ದೇವತೆಗಳಾದ ಸೂರ್ಯ ಚಂದ್ರರ ಹೆಸರಿನಲ್ಲೂ ವಿದ್ದಗಳು ಸುರುವಾದವು.
ಅಣ್ಣನೊಮ್ಮೆ ತಮ್ಮನನ್ನು ಹೀಂಕಾರವಾಗಿ ಜರಿದು ಹೆದರಿಸಲು ತನ್ನ ಪಾಲಿನ ಕೊಂಬನ್ನೂದಿದ ನೋಡು: ಊದಿ ಕೆಳಗಿಡೋದರೊಳಗೆ ಅದರೊಳಗಿಂದ ಬೆಂಕಿ ಮಾಡಿ ಮಾಂಸ ಬೇಯಿಸಿ ತಿನ್ನುವ, ಬೇರಿನಿಂದ ವೈದ್ಯ ಮಾಡುವ, ಲೋಹದಿಂದ ಆಯುಧ ಮಾಡುವ, ಆಯುಧಗಳಿಂದ ವಿದ್ದ ಮಾಡಿ ಗೆಲ್ಲುವ….ಇತ್ಯಾದಿ ಚೌಸಷ್ಟಿ ವಿದ್ಯೆಗಳು ಸಳಸಳ ಹುಟ್ಟಿಕೊಂಡವು. ಅಣ್ಣ ಕೇಕೆ ಹಾಕಿ ಕುಣಿದಾಡಿದ.
ಇದನ್ನು ತಮ್ಮನೂ ತನ್ನ ಪಾಲಿನ ಕೊಂಬನ್ನೂದಿದಾಗ ಓಂಕಾರ ನಾದ ಮೊದಲು ಶಬ್ದ ಕಡೆಯಾಗಿ ಸಂಗೀತ ಸಾಹಿತ್ಯ ಮುಂತಾದ ಇಪ್ಪತ್ತೇಳು ತನ್ಮಯ ಕಲೆಗಳು, ನೂರೆಂಟು ಕನಸುಗಳಾದ ನಮ್ಮೊಂದಿಗೆ ಹುಟ್ಟಿದವು. ಆದರೆ ನಾವು ಮತ್ತು ಕಲೆಗಳು ಹುಟ್ಟಿದ್ದು ಸೂರ್ಯನಿಗೂ ಅವನೊಕ್ಕಲು ಅಣ್ಣನಿಗೂ ಸರಿಬರಲಿಲ್ಲ. ರಾತ್ರಿಯಲ್ಲಿ ಚಂದ್ರಾಮಸ್ವಾಮಿಯ ಬೆಳ್ದಿಂಗಳಲ್ಲಿ ನಾವು ಸುಖವಿದ್ದಾಗ ಸೂರ್ಯನಾರಾಯಣಸ್ವಾಮಿ ಗುಡುಗು ಮಿಂಚು ಸಿಡಿಲುಗಳಿಂದ ನಿರ್ದಯವಾಗಿ ಕಲೆಗಳ ಹೆದರಿಸಿ, ಕಲೆಗಳ ಮ್ಯಾಲೆ ವಿದ್ಯೆಗಳ ಬಿಟ್ಟು ಹಿಂಸಿಸಿದರು. ಕಲೆಗಳು ಗಾಬರಿಯಾಗಿ ಎಲ್ಲೆಂದರಲ್ಲಿ ಬಚ್ಚಿಟ್ಟುಕೊಂಡವು. ಮಾಯಕಾರ್ತಿಗೆ ಕಾಳಜಿಯಾಗಿ ಎಲ್ಲಿದ್ದರಲ್ಲಿಂದ ಕಲೆಗಳನ್ನು ಕರೆತರಲು ಗಾಳಿದೇವರ ಕಳಿಸಿದಳು. ಮೂಲೆ ಮೂಲೆಯಲ್ಲಿ ಅಡಗಿದ್ದ ಕಲೆಗಳನ್ನು ವಾಯುದೇವರು ಹುಡುಕಿ ಕರೆತಂದು ಚಂದ್ರಾಮಸ್ವಾಮಿಯ ರಕ್ಷಣೆಗೆ ಬಿಟ್ಟರು. ಸೂರ್ಯದೇವರ ಸೇಡಿನಿಂದ ಕಲೆಗಳು ನಾಶವಾಗಬಾರದೆಂದು ಚಂದ್ರಾಮಸ್ವಾಮಿ ತಾವೇನು ಮಾಡಿದರೆಂದರೆ ತಿಂಗಳ ಹದಿನಾಕು ದಿವಸ ಶಿವನಿಂದ ಅಂರ್‍ಸುತವ ತುಂಬಿಕೊಂಡು ಉಳಿದ ಹದಿನಾಲ್ಕು ದಿವಸ ಕಲೆಗಳಿಗೆ ನೀಡಿ ಅಮರತ್ವ ನೀಡುತ್ತಿರಲು-ಸಂಪೂರ್ಣ ಅಮೃತ ತುಂಬಿಕೊಂಡ ದಿನ ಹುಣ್ಣಿಮೆಯಾಗಿ, ಸಂಪೂರ್ಣ ಖಾಲಿಯಾದ ದಿವಸ ಅಮಾವಾಸ್ಯೆಯೆಂದು ಗೊತ್ತಾದುವೆಂಬಲ್ಲಿ ಆರು ಮೂರೊಂಬತ್ತು ಅನಂತಕಾಲಂಗಳು ಗತಿಸಿದವು. ಆದರೂ ಅಣ್ಣತಮ್ಮಂದಿರ ಸೇಡು ಮುಗಿಯಲಿಲ್ಲ. ಸೇಡಿನ ಜೊತೆ ಕೇಡುಗಳೂ ಸೇರಿ ಪರಸ್ಪರ ಹಿಂಸಿಸುತ್ತ ಶಪಿಸುತ್ತ ಬೆಳ್ಳಿ ಬೆತ್ತದ ಅಧಿಕಾರವನ್ನ ಒಬ್ಬರಿಂದೊಬ್ಬರು ಕಸಿಯುತ್ತ, ಅದಕ್ಕಾಗಿ ಕೊಲೆಗೈಯುತ್ತ ಪುಂಡಾಟಿಕೆಯಲ್ಲಿ ಬದುಕುತ್ತಿದ್ದಾರೆಂಬಲ್ಲಿ ಪ್ರಸ್ತಾವನೆಯ ಮುಗಿಸಿ, ಕಥಾಬೀಜ ಬಿತ್ತರಿಸುತ್ತೇವೆ.
ಬೆಟ್ಟದಡಿಯ ಶಿವಾಪುರವೆಂಬುದು ಘನವಾದ ಹಟ್ಟಿ. ಗೊಲ್ಲಗೋಕುಲರ ತಿಂಗಳ ಬೆಡಗಿನ ಮಾಚ ಮತ್ತು ಸಿರಿಲಕ್ಕಿ ಏಳು ಹಿಂಡು ದನಕರು ಏಳೇಳು ಹಿಂಡು ಕುರಿಮೇಕೆ ಇತ್ಯಾದಿ ಬದುಕಿನ ಭಾಗ್ಯವುಳ್ಳ ಪುಣ್ಯವಂತರು. ಆದರೆ ಮಕ್ಕಳ ಫಲಪುತ್ರ ಸೌಭಾಗ್ಯವಿಲ್ಲದಿರಲು ಸಂತಾನೋತ್ಪತ್ತಿಯಾದಲ್ಲಿ ಶಿವದೇವರಿಗೆ ಹಿಡಿ ಹಣ ಹಾಕಿಸುವುದಾಗಿ ಹರಕೆ ಹೊತ್ತರು. ದೇವರಿಗೆ ದೇವಾಲಯ ಭೂತಂಗಳಿಗೆ ಸ್ಥಾನಂಗಳ ಕಟ್ಟಿ ದಾನ ಧರ್ಮ ನೇಮವ ಮಾಡಿದರೂ ಮಕ್ಕಳಾಗದಿರಲು ಕುಲಗುರುವಿನ ಕವಡೆ ಶಾಸ್ತ ಕೇಳಿದಾಗ ಯಕ್ಷಿಯ ಕಾಟವೆಂದು ತೋರಿಬಂತು. ಒಂದು ಹುಣ್ಣಿವೆ ದಿನ ಅಂಗಳದಲ್ಲಿ ಮಂಡಳ ಬರೆದು ಮಂಡಳದ ಮಧ್ಯೆ ತಾಮ್ರದ ತಂಬಿಗೆಯಿಟ್ಟು ಅದರಲ್ಲಿ ಯಕ್ಷಿಯ ಅವಾಹಿಸಿ, ಒಂದು ಕಡೆ ಎಮ್ಮೆಕರು ಇನ್ನೊಂದು ಕಡೆ ಮೊಟ್ಟೆಯಿಡುವ ಕೋಳಿಯ ಬಲಿ ಕೊಟ್ಟು, ಕೊಪ್ಪರಿಗೆಯಲ್ಲಿ ಕೋಲುದೀಪ ಇಟ್ಟು ಗಂಡು ಮಗುವಾದರೆ ಐದು ಹಬ್ಬ ನಿನಗೆಂದರು. ಯಕ್ಷಿಗೆ ಹರಕೆ ಒಪ್ಪಿಗೆಯಾಗಿ ಸಿರಿಲಕ್ಕಿ ಬಸಿರಾದಳು.
ಬೆಟ್ಟದ ಮಾಯಿಯ ಧೂಪದೀಪಂಗಳಲ್ಲಿ ಪೂಜೆಯ ಮಾಡಿ ಸುಖ ಹೆರಿಗೆಯಾಗಲೆಂದು ಬೇಡಿಕೊಂಡರು. ತುಂಬಿದ ಸೋಮವಾರ ತುಂಬಿದ ಹುಣ್ಣಿವೆ ದಿನ ಉಚಿತವಾದ ಶಿವಯೋಗ ಲಕ್ಷಣದಲ್ಲಿ ಗಂಡು ಮಗುವಾಯಿತು. ಹುಟ್ಟಿದ ಗಳಿಗೆಗೆ ಉಳ್ಳಾಗಡ್ಡಿಯಿಂದ ಗಂಟೆಯ ಬಡಿದರು. ಮಗುವಿನ ಹೆದರಿಕೆ ತೆಗೆದು ಹೊಕ್ಕುಳ ಕುಯ್ದರು. ಮೂರು ದಿವಸಕೆ ಮನೆಯ ಮನೆಯ ಸೂತಕ, ಹತ್ತು ರಾತ್ರಿಗೆ ಹದಿನಾರೂ ಸೂತಕ ತೆಗೆದು ಚಂದಮುತ್ತನೆಂದು ನಾಮಕರಣವ ಕೂಗಿ ಶೆಟಿವಿ ತಾಯಿಗೆ ಹಣೆಬರೆಹ
ಬರೆಯಲೊಪ್ಪಿಸಿದರು. ಹರಿದು ಹಾಲುಂಡು ಕೂತು ಕೂಳುಂಡು ಎಳೆಯ ಮಗ ಹೋಗಿ ಬೆಳೆದ ಮಗನಾಗುವಷ್ಟರಲ್ಲಿ ಮಾಚ ಸೇಡಿನ ಚೂರಿಗೆ ತುತ್ತಾದ. ಅಂದಿಗೆ ಸಿರಿಲಕ್ಕಿಯ ಅಂಚಿನ ಸೀರೆ, ಅರಿಶಿನ ಕುಂಕುಮ, ಮುತೈದೆ ಬಳೆ ಮುಗಿಯಿತು. ಅವಿಲ್ಲದೆ ಬರಿ ಲಕ್ಕಬ್ಬೆಯಾಗಿ ಚಂದಮುತ್ತನಿಗೆ ತಂದೆ ತಾಯಿ ಎರಡೂ ಆಗಿ ಬೆಳೆಸಿ ಕುಲಕಸುಬು ಕಲಿಸಿ ಸೊಂಟಕ್ಕೆ ನೂಲು, ಕಾಲಿಗೆ ಕಡಗ, ಕಿವಿಗೆ ಕುಂಡಲ ಹಾಕಿಸಿದಳು, ಸಂಗೀತದಲ್ಲಿ ಚಂದಮುತ್ತನಿಗೆ ಗತಿಯಿರುವುದ ಗುರುತಿಸಿ ಕುಲಗುರುವಿನಲ್ಲಿ ಕೊಳಲು ವಿದ್ಯೆಯ ಬೋಧೆ ಮಾಡಿಸಿದಳು. ಈಗ ಮದುವೆಯ ಹರೆಯವಾದರೂ ಕೊಂಡಾಟದಿಂದ ಬೆಳದ ಚಂದಮುತ್ತ ವಾರಗೆಯವರೊಂದಿಗೆ ದನಕಾಯಲು ಹೋಗುತ್ತಿದ್ದ.
ಶಿವಾಪುರವೆಂಬ ಘನವಾದ ಹಟ್ಟಿಗೆ ಬಿಸಿಲ ಬೆಡಗಿನ ಸೂರ್ಯಮುತ್ತ ಹೆಗಡೆಯೆಂಬಾತನ ಒಡೆತನ. ಅವನ ಮಗ ಚಿನ್ನಮುತ್ತ, ಚಂದಮುತ್ತನ ಒರಗೆಯಾತ. ಎರಡೂ ಮನೆತನಗಳು ಚಕಮಕಿಯ ಕಲ್ಲಿನಂತೆ ತಾಗುವುದಿದೆ, ಕಿಡಿಯ ಹಾರಿಸೋದಿದೆಯೆಂಬಲ್ಲಿ ಪ್ರಸ್ತಾವನೆ ಮುಗಿದು, ಆಕಾಶ ತೂಕದ ಶಿವಲಿಂಗ, ಭೂಮಿ ತೂಕದ ಲಕ್ಕಬ್ಬೆ, ಚಂದಮುತ್ತನ ಕಾಪಾಡಲೆಂದು ಹಾರೈಸಿ ಕಥಾರಂಭ ಮಾಡುತ್ತೇವೆ, ಶಿವಶಿವ ಎನ್ನಿರಯ್ಯಾ, ಶಿವಲಿಂಗಾ ಎನ್ನಿರಿ.

ಯಕ್ಷಿಯ ಮದುವೆ

ಇಳಿಹೊತ್ತಿನಲ್ಲಿ ಅಬ್ಬೆ
ಸುವ್ವಾಲೆ ಸುಪ್ಪಾಲೆಯೆಂದು ರಾಗ ಎಳೆಯುತ್ತಾ ರಾಗಿ ಕುಟ್ಟುತ್ತಾ ಇರಬೇಕಾದರೆ
ಮೋಜಿನ ಗಾಳಿ ಬೀಸಿ ಸೋಜಿಗದ ಮಳೆ ಬಂತು.
ಎಳೆಬಿಸಿಲಲ್ಲಿ ಬಿದ್ದಮಳೆ ಯಕ್ಷಿಯ ಮದುವೆಯ ಮಾಡಿ
ಸಣ್ಣಗೆ ಉರಿಯುತ್ತಿದ್ದ ಪಡುಸೂರ್ಯನ ನಂದಿಸಿತು.
ಮಗರಾಮ ಇನ್ನೂ ಬರಲಿಲ್ಲೆಂದು ಅಬ್ಬೆ
ಬಾಗಿಲಲ್ಲಿ ನಿಂತು ಕಾಡದಾರಿ ಕಣ್ಣಾಗಿ ಕಾಯುತ್ತಿರಲು
ದನಕರು ಬಂದು ದೊಡ್ಡಿ ಸೇರಿದವು.
ಮಗರಾಮ ಬಂದು, ತಾಯ ನುಡುದಾಡಿಸದೆ
ದೊಡ್ಡಿಗೆ ದನಗಳ ಕೂಡಿ ಬಿಡದೆ
ಜೋಡು ಕಳಚಿ, ಹೆಗಲ ಕಂಬಳಿ, ಬಗಲ ಚೀಲ
ಸೊಂಟದ ಕೊಳಲು, ಕಕ್ಕೆ ದೊಣ್ಣೆಗಳ
ಮೂಲೆಗೆಸೆದು ನೇರ ಜಗಲಿಗೆ ಹೋಗಿ ಬಿದ್ದುಕೊಂಡ.
ಗರ್ಭಕ್ಕೆ ಬೆಂಕಿ ಸುರಿದಂತಾಗಿ
ಅಬ್ಬೆ ಉರಿವುಸಿರ ಸೂಸಿದಳು.
“ಚಂದಿರಾಮಾ ಚಂದಮುತ್ತಾ” ಎಂದಳು.
ಒದ್ದೆ ಕಳಚಿ ಮಡಿ ಉಡು ಮಗಾ” ಎಂದಳು.
ಒಮ್ಮೆ ಕರೆದರೆ ಮೂರು ಬಾರಿ ಓ ಎನ್ನುವ ಮಗ
ಇಂದು ಓಗೊಡಲಿಲ್ಲ.
ತಂದೆಯಿಲ್ಲ, ಒಂದಿಗೆ ಹುಟ್ಟಿದವರಿಲ್ಲ
ಹೇಳಕೇಳುವುದಕ್ಕೆ ಯಾರೂ ಇಲ್ಲವಾಯಿತೇ,
ಬೆನ್ನಿಗಿರು ಬೆಟ್ಟದ ಮಾಯೀ ಎಂಬಲ್ಲಿ
ದೊಡ್ಡಿಗೆ ದನಗಳ ಕೂಡಿಬಿಟ್ಟ ವಾರಗೆಯವರು
ಬಂದರು. ಅಬ್ಬೆ ಕೇಳಿದಳು:
“ಏ ದೇಚ, ಏಕೆಂಚ
ತಿಳಿದವರು ನೀವು ತಿಳಿಸಿ ಹೇಳಿರಯ್ಯಾ
ಅಬ್ಬೆಯ ನುಡಿಸದೆ, ಒದ್ದೆಕೊಡ ಕಳಚದೆ
ಮಾರಿ ಸಣ್ಣದು ಮಾಡಿ ಮಲಗಿಬಿಟ್ಟಿದ್ದಾನೆ ಚಂದ್ರಾಮ
ಯಾರೇನಂದರು ಕಂದನಿಗೆ?”
ಹುಡುಗರು,“ಅಬ್ಬೇ ನಮಗೂ ಅದೇ ಬೆರಗೆಂದರು.
ಕಾರ್ಯಕಾರಣ ಅರಿಯೆವೆಂದು
ನಡೆದದ್ದನ್ನು ನಡೆದಂತೆ ವಿವರಿಸಿದರು:
“ನಮ್ಮ ಚಂದಮುತ್ತ ಗೊತ್ತಲ್ಲ, ದಿನದಂತೆ
ಈ ದಿನವೂ ಇಳಿಹೊತ್ತಲ್ಲಿ ಕೊಳಲೂದಿ ಮೋಡಿಯ ಮಾಡಿ,
ದನಕರು ಕಿವಿ ನಿಗರಿ ಮೇಲುಗಣ್ಣು ತೇಲುಗಣ್ಣಿನಲಿ
ಪರವಶವಾಗಿ ನೆರಳಲ್ಲಿ ಮಲಗಿದ್ದವು.
ನಾವುಗಳಿರಲಿ, ಈ ದಿನ
ಗಿಡಮರ ಕೂಡ ಅವನ ಹಾಡಿಗೆ
ತೂಗಿ ತೊನೆದವು ತಾಯಿ.
ದನಕರು ಮಲಗಿದರೆ ನಾವು ಹುಡುಗರಿಗೇನು ಕೆಲಸ?
ಓಡಾಡುತ್ತ ಮೋಜಿನ ಮತ್ತೇರಿ
ಈ ದಿನ ಮದುವೆಯಾಟ ಆಡೋಣವೆಂದೆವು.
ಚಂದಮುತ್ತ ಒಪ್ಪದಿರಲು ಅವನಿಗೇ ಮದುವೆಯೆಂದೆವು.
ನಮ್ಮ ಒತ್ತಾಯದಿಂದ ತಪ್ಪಿಸಿಕೊಂಡು
ಓಡಿ ಹೋಗಿ ಕಾಡಲ್ಲಿ ಅಡಗಿದ.
ನಾವು ಹುಡುಕುತ್ತಾ ಹೋದೆವು.
ಮೂರು ದಾರಿಗಳು ಸೇರುವಲ್ಲಿ,
ಎಳೆ ಆಲದಮರದಡಿಯಲ್ಲಿ ಚಂದಮುತ್ತ ಅಡಗಿ ನಿಂತಿದ್ದ.
ಅಲ್ಲಿಯೇ ಬಿದ್ದಿದ್ದ, ಯಾವುದೋ ಕಾಲದ
ಶಿಲಾಮೂರ್ತಿಯ ಕದಲದೆ ನೋಡುತ್ತಿದ್ದ.
ಯಾವಳೋ ಆಗಸದ ರಂಭೆ
ಚಂದಮುತ್ತನ ಕೊಳಲುಲಿಯ ಮಾಯೆಗೆ ಒಳಗಾಗಿ
ಭೂಮಿಗಿಳಿದು ಪರವಶವಾಗಿ ಮೈಮರೆತಂತೆ,
ನರಮಾನವರು ನಮ್ಮ ದನಿ ಕೇಳಿ ಈಗಷ್ಟೆ ಕಲ್ಲಾದಂತೆ
ಅದರ ಭಂಗಿ.
ಕನ್ಯೆ ಸಣ್ಣವಳು, ಶುದ್ಧ ಸುಳಿ ಮುದ್ದುಮುಖದವಳು,
ಪಳಗಿದ ಬೇಟೆಗಾರನ ಹಾಗೆ ನೋಟ,-
ಹ್ಯಾಂಗೆ ನಿಂತಿದ್ದಳು ಅಬ್ಬೆ ಬಿಲ್ಲಿನಂತೆ!
ಶಿಲೆಯೆನ್ನುವುದೊಂದು ಬಿಟ್ಟರೆ ಉಳಿದೆಲ್ಲ ಜೀವಂತ.
ನಮಗಿಷ್ಟೆ ಸಾಕಾಗಿ ಕಲ್ಲಿನ ಮೂರ್ತಿಯೊಂದಿಗೇ
ಚಂದಮುತ್ತನ ಮದುವೆಯೆಂದೆವು. ಬೀಗರಾಗಿ ಬಂದು
ಅಮೃತವಲ್ಲಿಯ ತಾಳಿಸರ ಮಾಡಿ,
ಶಿಲಾಮೂರ್ತಿಯ ಕತ್ತಿಗೆ ಕಟ್ಟು ಎಂದೆವು.
ಕಟ್ಟಿದಾಗಿನ ಅಘಟಿತ ಘ್ಟಿತವ
ನಾವೇನು ಹೇಳೇವು ತಾಯಿ!
ಎಲ್ಲಿಂದಲೋ ಮಂಗಳ ವಾದ್ಯ ಕೇಳಿಸಿ
ಮಾಯದ ಗಾಳಿ ಜೋರಾಗಿ ಬೀಸಿದವು.
ಕ್ಷಿತಿಜದ ಕಣ್ಣಲ್ಲಿ ಫಳ್ಳನೆ ಬೆಳಕಾಡಿದ್ದ ಕಂಡೆವು.
ತರುಮರ ಬಳ್ಳಿಗಳ ಕಣ್ಣು ಬಿರಿದು
ಯಾರೋ ಕಾಡಿನಂಗಳದಲ್ಲಿ
ಥರಾವರಿ ಹೂವಿನ ರಂಗೋಲಿ ಬರೆದದ್ದನ್ನ ಕಂಡೆವು.
ನೆಲಕ್ಕೆ ಹುಲ್ಲಿನ ನವಿರೆದ್ದು
ನಮ್ಮಡಿಗಳಿಗೆ ಮುತ್ತಿಟ್ಟದ್ದ ಅನುಭವಿಸಿದೆವು.
ಹಿಡಿದಿಡಲಾರದ ಉತ್ಸಾಹವುಕ್ಕಿ
ಕೂಗಿ ಹಾಡಿದವು ಹಲವರ್ಣದ ಹಕ್ಕಿ.
ಕೇಕೆ ಹಾಕಿ ನವಿಲಾಡಿದವು ತಾಳಮೇಳದೊಳಗೆ.
ಎಳೆ ಆಲದ ಮರ,
ತಿಳಿಹಸಿರು ಬೆಳಕಿನ ವಲಯ ಸುತ್ತ ನಿರ್ಮಿಸಿಕೊಂಡು
ಬೆಳಗುವ ಪ್ರಾಯದ ಮರ
ಪರಿಪರಿ ಆವೇಶಗಳಿಂದ ನಲಗುತ್ತ
ಸುಖಮಯ ಲೋಲುಪ್ತಿಯಲ್ಲಿ ಹಕ್ಕಿಗಳ ಮುಳುಗಿಸುತ್ತ
ಕಣ್ಣು ಹಬ್ಬಾದ ಎಳೆಯ ಮರ ಇಂದ್ಯಾಕೆ ಹೀಗೆಂದವು.
ಯಾರೋ ಉನ್ನತ ದೇವತೆ ಉಲ್ಲಾಸದಲಿ ಬಂದು
ತಂಗಾಳಿಯಾಗಿ ಮರ ತುಂಬಿ
ಹುಡದಿ ಹಾಕುತ್ತಿರಬಹುದೇ? ಎಂದೆವು.
ಸುತ್ತ ಮುತ್ತ ಇಷ್ಟೆಲ್ಲ ನಡೆಯುತ್ತಿದ್ದರೆ
ನಮ್ಮ ಮಿತ್ರ ಚಂದಮುತ್ತ
ಲೋಕವ ಇತರೇತರ ಮಾಡಿ ಮೈಮರೆತಿದ್ದ ಅಬ್ಬೆ!”
“ಏನೆಂದಿರಿ ಮಕ್ಕಳೆ?”
“ಹೌದು ಅಬ್ಬೆ ಅವನು ಮೈ ಮರೆತಿದ್ದ.
ಕನಸುಗಳಿಂದ ಭರಿತವಾಗಿದ್ದವು ಕಣ್ಣು.
ಕೆನ್ನೆ ಕೆಂಪಾಗಿ ಎದ್ದ ಪುಳಕ ಹಾಗೇ ಇತ್ತು.
ಸುಖದಲ್ಲಿ ಮತ್ತೇರಿದ ಪ್ರಮತ್ತನ
ಭುಜತಟ್ಟಿ ಅಲುಗಿ ಚಂದಮುತ್ತಾ ಎಂದೆವು.
ಸೃತಿಯಾಗಿ ನಮ್ಮ ಕಡೆ ನೋಡಿದ.
ಕಣ್ಣುಗಳಲ್ಲಿ ಇನ್ಯಾವುದೋ ಸೀಮೆಯ ಬೆಳಕಿತ್ತು.
ಒಲ್ಲದ ಮನಸ್ಸಿನಿಂದ ಭೂಮಿಗಿಳಿದು ಬಂಧಂಗಿದ್ದ.
ನಮ್ಮ ಗುರುತಾಗಿ, ಕ್ಷಣ ಹೊತ್ತು ತಬ್ಬಿಬ್ಬಾಗಿ
ತಕ್ಷಣ ಕಣ್ಣಲ್ಲಿ ಧಾರಾವತಿ ಜಲವ ಸುರಿಸಿದ.
ಗಾಬರಿಯಾಗಿ ಯಾಕೋ ಏನಾಯಿತೆಂದೆವು.
ನಮ್ಮನ್ನೆಲ್ಲ ಇತರೇತರ ಮಾಡಿರುವಿಯಲ್ಲ,
ಹಿಂಗ್ಯಾಕೆಂದೆವು.”
ಚಂದಮುತ್ತ : ಯಾರೋ ಕರೆದರಲ್ಲ
ಎದೆಯಲಿ ದಾಖಲಾದರಲ್ಲ |
ಮುಖಾ ತೋರದೆ ಸುಖದಲಿ ಮರವೆಯಲಿ
ಸುಳಿದು ಹೋದರಲ್ಲ ||
ಗೆಳೆಯರು: ನೀ ಕೇಳಿದ ಸೊಲ್ಲಾ
ನಮಗೂ ಯಾಕ ಕೇಳಿಸಲಿಲ್ಲಾ? |
ಬಾರೋ ಹುಚ್ಚ ಪೋರ
ಸುರಿಸಲಿ ಬ್ಯಾಡ ಕಣ್ಣ ನೀರಾ ||
ಚಂದಮುತ್ತ :ಗೆಜ್ಜೆ ಕೇಳಿತಲ್ಲ
ಗೆಜ್ಜೆಯ ಹೆಜ್ಜೆ ಕಾಣದಲ್ಲ |
ಶ್ರೋತೃಸುಖದ ರಂಭೆ
ಕುಣಿಧಾಂಗ ಗುಂಭದಾಗ ಗೊಂಬಿ ||
ಗೆಳೆಯರು :ಸೂತ್ರವಿರದ ಮಾತಾ
ಛೀ ತಗಿ ಯವ ಎಳೆತ ಸೆಳೆತ |
ಸೊಲ್ಲು ಸೊಲ್ಲಿಗೊಮ್ಮಿ
ವ್ಯಾಕುಲವ್ಯಾಕ ಪಡುತ ನಿಂತಿ ||
“ಎಷ್ಟೊಂದು ಯತ್ನವ ಮಾಡಿದರು
ಅವನ ವೇದನೆಯನ್ನ ಭೇದಿಸಲಾಗಲಿಲ್ಲ ನಮಗೆ.
ಇನ್ನೊಮ್ಮೆ ಮಾಯದ ಗಾಳಿ ಬೀಸಿ
ಮಳೆ ಬಂದು
ಕಂಗಾಲಾಗಿ ಅಗಲಿದೆವು. ಅವನು ಕ್ಷೇಮದಿಂದ
ಗೂಡಿಗೆ ಬಂದುದ ಕೇಳಿ ಆನಂದವಾದೆವು ಅಬ್ಬೆ” ಎಂದರು.
ವಾರಿಗೆಯವರ ನುಡಿಕೇಳಿ
ಹಡೆದೊಡಲು ಉರಿದವು.
ಸತ್ಯವುಳ್ಳ ಶಿವಲಿಂಗದೇವರ ನೆನೆದು
ಮಗನ ನೋಡಲು ಒಳಕ್ಕೆ ಹೋದಳು.

೪. ಸರಿದು ಬಂದಳು ಕ್ಷಿತಿಜದಂತೆ

ಮಗ ಮಲಗಿದ್ದ ಜಗಲಿಗೆ ಹೋಗಿ ಅಬ್ಬೆ ಬೆಳಕಿನಲ್ಲಿ ಕಣ್ಣಡಿಸಿ ಹುಡುಕಿದಳು. ಕತ್ತಲಲ್ಲಿ ಕಾಲಾಡಿಸಿ ಹುಡುಕಿದಳು. ‘ಮಗಾ ಚಂದಮುತ್ತಾ, ಚಂದ್ರಾಮಾ’- ಎಂದು ದನಿಮಾಡಿ ಹುಡುಕಿದಳು. ಹುಡುಕುತ್ತಿದ್ದಾಗ ತಡಕುವ ಕಾಲಿಗೆ ಮಗನ ಮುಡಿ ತಾಗಿತು. ಅಲ್ಲೇ ಕುಳಿತು ಮಗನ ತಲೆ ನೇವರಿಸಿದಳು, ಜ್ವರದಿಂದ ತಲೆ ಸಿಡಿಯುತ್ತಿತ್ತು. ಅಯ್ಯೋ ಕಂದಾ’ ಎಂದು ಒಂದೇ ಉಸುರಿಗೆ ಬಂದು ಕಷಾಯ ಕುದಿಸಿ ಕೊಂಡ್ಯೊಯ್ದಳು. ಒತ್ತಾಯದಿಂದೆಬ್ಬಿಸಿ ಮಗನಿಗೆ ಕುಡಿಸಿ ಭದ್ರ ಮಂಚದ ಮ್ಯಾಲೆ ಮಲಗಿಸಿದಳು. ಮಗನಿಗೆ ಭೂತ ಪಿಶಾಚಿ ಬಾಧೆಯೋ ಎಂದು ಹೆದರಿ ಕುಲದೈವ ಚಂದಪ್ಪ ಬೆಳಗಾಗುವುದರೊಳಗೆ ಮಗನ ಪೀಡೆ ತೊಲಗಲಿ, ನಿನಗೆ ಮಲ್ಲಿಗೆ ಹೂ ದಂಡೆ, ಬಾಡಿನ ರುಚಿ ಕೊಡುವುದಾಗಿ ಹರಕೆ ಹೊತ್ತು ಹಾಲು ಹಿಂಡಲು ಹೋದಳು.
ಚಂದಮುತ್ತ ಅಂಗಾತ ಮಲಗಿದ್ದಾಗ ಎಲೆಮರೆಯಲ್ಲಿದ್ದ ನಾವು ಕನಸುಗಳು, ಹೂಹೂಗಳಲ್ಲಿ ಹುದುಗಿದ್ದ ಕನಸುಗಳು ಚಂದ್ರ, ತಾರೆಯರೊಂದಿಗೆ ಆಕಾಶದಂಗಳದಲ್ಲಿ ತೇಲಾಡುವ ಮಾಯದ ಕನಸುಗಳು- ಹೀಗೆ ಸುತ್ತೂ ಸೀಮೆಯ ಕನಸುಗಳು ಗುಂಪಾಗಿ ಬಂದು ಚಂದಮುತ್ತನ ಕಣ್ಣು ಮುತ್ತಿ ನಮ್ಮನಮ್ಮಲ್ಲಿ ಕೆಲಸ ಹಂಚಿಕೊಂಡೆವು.
ನೀನು ಆಕಾಶದಲ್ಲಿ
ನಕ್ಷತ್ರ ತಾರೆ ಚಿಕ್ಕೆಯ ಹರಹಿ
ದೀಪಾವಳಿ ಬೆಳಗುವಂತೆ ಮಾಡು.
ನೀನು ಶಿವನ ಜಡೆ ನೆತ್ತಿಯ ಕೆಡದ ಹಾಗೆ
ಚಂದ್ರನ ಕಿತ್ತು ತಂದು
ಆಕಾಶ ನೀಲಿಮದಲ್ಲಿಡು.
ನೀನು ಚಂದ್ರಲೋಕದ ಗಾಳಿಯ
ಚಂದಾಗಿ ಬೀಸು, ನೆಪ್ಪಿರಲಿ
ಅದರೊಳಗಿಂದ ಅಸಮಸುಖಗಳು ಬೀಸಿ ಬೀಸಿ ಬರುತ್ತಿರಲಿ.
ಬಳ್ಳಿಯ ಕಣ್ಣು ಬಿರಿದು
ಹುಲ್ಲುಗಾವಲಿನಲಿ ಹೂಗಾಳಿ ಪರಿಮಳಿಸಲಿ, ಆಯಿತೇ?
ಭದ್ರಮಂಚದ ಮ್ಯಾಲೆ ಮಲಗಿರುವ ಚಂದ್ರಾಮನ್ನ
ಮೆಲ್ಲಗೆ ಕರೆತನ್ನಿ ಕಾಡಿಗೆ.
ಹಿತಕರದ ದೃಶ್ಯಗಳಿಂದ
ಸೊಗಸಿನ ಚದುರನಿಗೆ ಸೋಜಿಗವಾಗುವ ಹಾಗೆ
ನೋಡಿಕೊಳ್ಳಿ.
ಎಲ್ಲಿದ್ದಾಳೆ ಯಕ್ಷಿ?
ಎರಡು ಲೋಕಂಗಳ ಮಧ್ಯೆ
ಕರುಳುಬಳ್ಳಿಯ ಬೆಳೆಸಿ
ಎರಡನ್ನು ಬೆಸೆಯುವಾಕೆ.
ಬೇರೆ ಸೀಮೆಯ ಆನಂದಗಳಿಂದ
ಯೌವನವ ಸಿಂಗರಿಸಿಕೊಂಡಿರಲಿ ಆಕೆ.
ಆಯಿತೆ? ಗಿಲಿಗಿಲಿ ಗೆಜ್ಜೆಯ ನುಡಿಸುತ
ಸೀದಾ ಬೇಳೆಸಲಿ ಪದುಮದ ಪಾದ ಕಾಡಿಗೆ.
ಚಂದಮುತ್ತನ ಕಡೆಗೆ ಬಂದಳೆ?
ಭೇಟಿಯಾದವೆ ಕಣ್ಣು? ಹೆಣೆದುಕೊಂಡವೆ ದೃಷ್ಟಿ?
ಸಂತೋಷ ಚಿಗಿತವೆ?
ಪುಳಕದಲಿ ಮೈತೊಳೆದರೆ?
ಹಾಗಿದ್ದರೆ ಚಂದಮುತ್ತನ ಹಾಡು ಕೇಳಿ:
ಹೇಳಕೇಳದೆ ಸುಳಿದರ್‍ಯಾರ? ನಮ ಸೀಮೆಯಲಿ
ತಿಳಿಸದೆ ಬಂದವರ್‍ಯಾರ||ಪ||
ಆಡಾಡುತ ಬಂದು
ಬಂದ ದಾರಿಯ ಮರೆತು
ಚಿತ್ತದಲಿ ಚಕಿತರಾದವರಾ||ಅ.ಪ||
ತೆಳ್ಳನೆ ಹೊಟ್ಟೆವಳು ತಾವರೆಯ ಮುಖದವಳು
ಬ್ಯಾರೆ ಸೀಮೆಯ ನಿಲುವು ಶೈಲಿ|
ಹ್ಯಾಗೆ ಸಂಪಿಗೆ ಮೊಗ್ಗು ಹಾಗೆ ಆಕೆಯ ಮೂಗು
ಕಂಗಳೆಂದರೆ ಕಮಲ ನೀಲಿ|
ಮೊಲೆಗಳ ಭಾರಕೆ ಬಾಗಿದಬಾಲೆಯ
ಮುಡಿಯಿಂದ ಜಗುಳ್ಯಾವು ಹೂವು||
ಮಾರಿ ಸಣ್ಣದು ಮಾಡಿ ದೂರದಲಿ ನಿಂತಳು
ತಿಳಿಯ ಬೆವರಿತ್ತು ಹಣೆಯೊಳಗೆ|
ಅತಿಶಯದ ಕುಸುಮದ ವಾಸನೆ ಎಸೆದಾವು
ಸರಿದು ಬಂದಳು ಕ್ಷಿತಿಜದಂತೆ|
ಬೆದರಿದ ಎರಳೆಯೊ ದೇವರ ತರಳೆಯೊ
ನಿಜವ ತಿಳಿದವರ್‍ಯಾರು ಮಾಯೇ|ನಿಮ್ಮ||
ಯಾವುದೊ ಹೊಸಚಂದ್ರ ಭೂಮಿಗಿಳಿದಾಂಗಿಹುದು
ಕಾಮಿತ ಫಲಿಸಿದ ಹಾಗೆ|
ಮೂರು ಲೋಕದ ಸುಖದ ಶಿಖರದ ಮ್ಯಾಗಿಂದ
ಕನಸು ಕೆಳಜಾರಿದ ಹಾಗೆ|
ಸಣ್ಣ ಮಿಂಚಿನ ಹಾಗೆ ಕಣ್ಣು ಹೊಡೆವಳು ಕನ್ಯೆ
ಚಿಮ್ಮುವ ಚಿಲುಮೆಯ ಹಾಗೆ||ಹ್ಯಾಗೆ||
ಅಷ್ಟರಲ್ಲಿ ಉಣ್ಣದೆ ಮಲಗಿದ್ದ ಮಗನ ನೋಡಲೆಂದು ಅಬ್ಬೆ ಬಂದಳು. ಹಣೆ ಮುಟ್ಟಿ ಮುಂಗುರುಳು ನ್ಯಾವರಿಸಿದಳು. ನಾವು ಕನಸುಗಳು ಗಡಬಗಿಸಿ ರಚಿಸಿದ ನಿರ್ಮಿತಂಗಳೆಲ್ಲವ ಕರಗಿಸಿ ಓಡುತ್ತ, ಚಂದಮುತ್ತನ ಕಣ್ಣಲ್ಲಿ ನೆಟ್ಟಿದ್ದ ಯಕ್ಷಿಯ ಬಲವಂತ ಕಿತ್ತೆಳೆದುಕೊಂಡು ಮಾಯವಾದೆವು. ಚಂದಮುತ್ತ ಗಾಬರಿಯಿಂದ ಗಕ್ಕನೆ ಎದ್ದು, ಸುತ್ತೂ ಕಡೆ ನೋಡಿ,
ಯಾಕೆನ್ನ ಎಬ್ಬಿಸಿದಿರಿ|
ಕಣ್ಣಗಿನ| ಚಂದ್ರನ್ನ ಅಗಲಿಸಿದಿರಿ||

-ಎಂದು ಅಳತೊಡಗಿದ. ಮಗನ ಇಂಪಿರದ ಮಾತಿಗೆ ಅಬ್ಬೆಯ ಹೃದಯ ಕಂಪಿಸಿತು. ‘ಅರಿವಿಗೆ ಬಾ ಮಗನೇ ಕನಸು ಕಂಡೆಯಾ?’ ಎಂದು ಭುಜ ಹಿಡಿದಲಿಗಿದಳು.
“ಹೌದು ಅಬ್ಬೆ”-ಅಂದ.
“ಏನು ಕನಸು ಕಂಡೆ ಕಂದ?”
“ಬೆಳ್ದಿಂಗಳಲ್ಲಿ ಈಜಾಡುತ್ತಿದ್ದ ಚಂದ್ರನ್ನ ಕಣ್ಣಲ್ಲಿ ಹಿಡಿದುಕೊಂಡಿದ್ದೆ. ನೀ ಬಂದೆ. ಕಣ್ಣಿಂದ ಜಗುಳಿ ಎದೆಗಿಳಿದ ಅಬ್ಬೆ”-ಎಂದು ಎದೆ ಹಿಡಿದುಕೊಂಡ.
ಅಬ್ಬೆಯ ಹರುಷಗಳು ಇದ್ದಿಲಾದವು. ನಾಳೆ ಕುಲಗುರುವ ಕಾಣಬೇಕೆಂದು, ಅಲ್ಲಿಯ ತನಕ ಇನ್ನಷ್ಟು ಹರಕೆಗಳ ಹೊರಬೇಕೆಂದು ಗೂಡಿನ ಮಾಡದಲ್ಲಿರುವ ಮನೆದೇವರು ಚಂದಪ್ಪನ ಕಡೆಗೆ ನಡೆದಳು.

೫ . ಬ್ಯಾರೆ ಸೀಮೆಯವಳು

ಬೆಳ್ಳಿ ಮೂಡಿ ಬೆಳಗಾಯಿತು. ಅಬ್ಬೆ ಕೋಳಿಯ ಕೂಗಿಗಿಂತ ಮುಂಚೆ ಎದ್ದು ಹಿಡಿಸೂಡಿ ಹಿಡಿದು ಅಂಗಳ ಗೂಡಿಸಿದಳು. ಎಮ್ಮೆ ಹಸುಗಳ ಗಂಜಳ ಬಳಿದು ತಿಪ್ಪೆಗೆಸೆದು ಬಂದಳು. ಹಲ್ಲು ಪುಡಿಯಿಂದ ಹಲ್ಲುಜ್ಜಿ ಮಡುವಿನಲ್ಲಿ ಮಿಂದು ಮಡಿಯುಟ್ಟಳು. ಕುಲದೈವಕ್ಕೆ ತುಪ್ಪದ ದೀವಟಿಗೆ ಹಚ್ಚಿದಳು. ಕರುಗಳ ಬಿಡದೆ, ಹಸು ಎಮ್ಮೆ ಹಿಂಡದೆ ಅವಸರದಲ್ಲಿ ಭದ್ರ ಮಂಚದ ಮ್ಯಾಲೆ ಮಲಗಿದ್ದ ಮಗನ ಕಡೆಗೊಮ್ಮೆ ನೋಡಿ ಕಂದನ ಕಾಪಾಡೆಂದು ಸತ್ಯದೇವರ ಚಿತ್ತದಲ್ಲಿ ಸ್ಮರಿಸಿ, ಧರೆಗೆ ದೊಡ್ಡವನಾದ ಕುಲಗುರುವಿನಲ್ಲಿ ದೌಡಾಯಿಸಿದಳು.ಸ್ವಲ್ಪ ಸಮಯವಾಗುತ್ತಲೂ ಬಾಗಿಲು ತಂತಾನೆ ತೆರೆದು ನಿನ್ನೆಯ ಮೈಲಿಗೆ ಬಟ್ಟೆ ಹೊರಕ್ಕೆ ಬೀಳುತ್ತಿತ್ತು.
ಇಂದು ಕೂಟ್ಟ ಮಡಿಬಟ್ಟೆ ವಿಗ್ರಹದ ಮೈಮಾಲಿರುತ್ತಿತು. ಚಂದಮುತ್ತ ದೈವಕ್ಕೆ ಕ
ಕುಲಗುರುವಾಗಲೇ ಬೆಳಗಿನ ಕುಲಾಚಾರಂಗಳ ತಪ್ಪದೆ ಪಾಲಿಸಿ ಮೂರು ಕಾಲಿನ ಅಸನದ ಮ್ಯಾಲೆ ಕರಿ ಕಂಬಳಿಯ ಗದ್ದಿಗೆ ಮಾಡಿ ದೊಡ್ಡ ಚಿಂತೆಯ ಮಾಡುತ್ತ ಕುಂತಿದ್ದ. ರಾತ್ರಿ ಕನಸಾಗಿತ್ತು. ಆತಂಕವಿತ್ತು ಕಣ್ಣಲ್ಲಿ. ಅಷ್ಟರಲ್ಲಿ ಅಬ್ಬೆ ಬಂದು ‘ಕಾಪಾಡು ಶಿವನೇ’ ಎಂದು ಅಡ್ಡಬಿದ್ದಳು.
ಅಬ್ಬೆ: ಕಾಡಿಂದ ಬಂದ ಮಗ ಮಲಗಿ ಬಿಟ್ಟಿದ್ದಾನೆ
ಬಂದವನು ನುಡಿದಾಡಿಸಲಿಲ್ಲ. ಉಣಲಿಲ್ಲ
ಒದ್ದೆ ಬಟ್ಟೆ ತೆಗೆದುಡಲಿಲ್ಲ.
ಕುಲಗುರು: ಸುಧಾರಿಸಿಕೊ ಮಗಳೆ, ಕುಂತು ಸಾದ್ಯಂತ ಹೇಳು-ಎಂದನು. ಅಬ್ಬೆ ಹತ್ತೂ ಬೆರಳು ಜೋಡಿಸಿ ನಮಸ್ಕರಿಸುವ ಭಂಗಿಯಲ್ಲೇ ನಿಂತು ಹೇಳಿದಳು:
ನಿನ್ನೆ ಹಟ್ಟಿಯ ಹೈಕಳು ಕಾಡಲ್ಲಿ ಸೇರಿ
ಆಡಾಡುತ್ತ ಕಂದನಿಗೆ ಕಲ್ಲುಗೊಂಬೆಯ ಜೊತೆ
ಮದುವೆಯ ಮಾಡಿದರೆ,
ಮಾಯದ ಗಾಳಿ ಬೀಸಿ ಬೀಸಿ ಬಂದೋ
ಯಕ್ಷಿಯ ಮಳೆ ಸುರಿದೋ
ಆಗಬಾರ್‍ದು ಆಯಿತಂತೆ ಮಗಂಗೆ.
ನನಗೆ ಮಗನಾದರೆ ನಿನಗೆ ಶಿಶುಮಗನಲ್ಲವೆ?
ನೀನೇ ಕೈಹಿಡಿದು ವಿದ್ಯಾ ಬುದ್ಧಿ ಕಲಿಸಿ, ಕಲಿತ ವಿದ್ಯನ ಮಾಡಲಿಲ್ಲವೆ?
ಈಗವನು ಹೆಂಗೆಂಗೋ ಆದರೆ ಹೆಂಗೆ?
ದೇವ ದೈವದ ಸಮ ನಿನ್ನ ಬಿಟ್ಟು ನಮಗಿನ್ಯಾರಿದ್ದಾರೆ?
ಕಾಪಾಡು ನನ್ನಪ್ಪಾ……
ಒಮ್ಮೆ ಕರೆದರೆ ಮೂರು ಬಾರಿ ಓ ಅನ್ನುತ್ತಿದ್ದ
ಚಂದಮುತ್ತ ನನ್ನೊಂದಿಗೆ ಮಾತಾಡಲೊಲ್ಲ. ಗುರುತು
ಹಿಡಿಯಲೊಲ್ಲ. ಬಂದವ ನೆಟ್ಟಗೆ ಹೋಗಿ ಮಲಗಿಬಿಟ್ಟ.
ಎಬ್ಬಿಸಿದರೆ ಹ್ಯಾಗೆ ಹ್ಯಾಗೋ ಕೈಕಾಲು ಆಡಿಸುತಾನೆ.
ಏನೇನೋ ಮುರಿದ ಮಾತುಗಳ ಕನವರಿಸುತಾನೆ.
ಮದ್ದು ಮಾಟವೋ ಅರಿಯೆ.
ಬೆಟ್ಟದ ಸಿರಿಮಾಯೀ
ಪ್ರತಿ ಮಂಗಳವಾರ ಹಾಲೋಗರ ನಿನಗೆ.
ಕುರಿ, ಕೋಳಿಯ ಬಾಡಿನ ರುಚಿ ನಿನಗೆ.
ನನ್ನ ಕಂದನ ನನಗೆ ಕೊಡು.
-ಎಂದು ಹರಕೆ ಹೊತ್ತಳು. ಇಷ್ಟಾದರೂ ಸುಮ್ಮನೆ ಕೂತ ಕುಲಗುರುವಿನ ನೋಡಿ,-
ಇನ್ನೂ ಸುಮ್ಮನೆ ಕುಂತಿದ್ದೀಯಲ್ಲಪ್ಪಾ.
-ಎಂದು ದನಿ ಮಾಡಿ ಬಿಕ್ಕಿ ಬಿಕ್ಕಿ ದುಃಖ ಮಾಡಿದಳು.
ಅಬ್ಬೆಯ ನುಡಿ ಸಾದ್ಯಂತ ಕೇಳಿ ಕಳವಳ ವೇದ್ಯವಾಗಿ ಕುಲಗುರು ಶಿಷ್ಯನ ಬಗ್ಗೆ ಚಿಂತಿಸಿದ. ಬೆಟ್ಟದ ಕಡೆ ಮುಖ ಮಾಡಿ ಸಿರಿಮಾಯಿಯ ಧ್ಯಾನಿಸುವಷ್ಟರಲ್ಲಿ ಕೋಲಕಾರ ಬಂದು ಚಾವಡಿ ಕಟ್ಟೆಯ ಹಿಂದೆ ಕಾಲು ಮೆಟ್ಟಿ ಕೋಲು ಕುಟ್ಟಿ ನಿಂತು“ಗುರುವೇ” ಎಂದ. “ಯಾರಪ್ಪಾ ನೀನು?”
“ಗುರುವೇ ಹೆಗಡೆ ಕರೀತಾನೆ. ಎಲ್ಲಿದ್ದರಲ್ಲಿಂದ, ಹೆಂಗಿದ್ದರೆ ಹಂಗೇ ಬರಬೇಕಪೋ”-ಅಂದ. ನಿಂತಿದ್ದ ಸಿರಿಲಕ್ಕಿಗೆ,-
“ಬೆಟ್ಟದ ಮಾಯಿ ಎಲ್ಲ ನೋಡಿಕೊಳ್ಳುತ್ತಾಳೆ, ನಿಶ್ಚಿಂತಳಾಗಿರು ಮಗಳೆ. ನೀನಾಗಿ ಮಗನಿಗೆ ಕಠಿಣೋಕ್ತಿ ಆಡಬೇಡ. ನಾನೇ ಚಂದಮುತ್ತನನ್ನು ಮಾತಾಡಿಸುತ್ತೇನೆ.”
-ಎಂದು ಹೇಳಿ ಮೂರುಕಾಲಿನ ಅಸನದಲ್ಲಿ ಕುಂತುಕೊಂಡೇ ಅಬ್ಬೆಗೆ ಪಾದ ಕೊಟ್ಟ. ಮಂಡೆಯ ಮ್ಯಾಲೆ ಕೈಯಿಟ್ಟು ಹರಸಿ ಚೀಲದ ಬಂಡಾರವ ಲಕ್ಕಿಯ ಹಣೆಗೆ ಹಚ್ಚಿ ಉಳಿದುದನ್ನು ಗಾಳಿಗೆ ತೂರಿ“ಬೆಟ್ಟದ ಮಾಯೀ” ಎಂದು ಎದ್ದು ಹೊರಟ.

೬ . ಶಿವದುಃಖ

ಕುಲಗುರುವಿನ ಪಾದ ಪಡೆದುಕೊಂಡು ಅಬ್ಬೆ ಬಂದದ್ದೇ-ಮಗನಲ್ಲಿಗೆ ಹೋದಳು.ಹಾಸಿಗೆಯಲ್ಲಿ ಮಗನಿರಲಿಲ್ಲ; ಹೊರಗೆ ಬಾವಿಯ ಬಳಿ, ಪಕ್ಕದ ಮೆಳೆಯಲ್ಲಿ ಹುಡುಕಿದಳು. ‘ಮಗಾ ಚಂದ್ರಾಮಾ, ಚಂದಮುತ್ತಾ’ ಎಂದು ಕರೆದಳು. ಮಗನ ದನಿ ಕೇಳಿಸಲಿಲ್ಲ. ಹೃದಯ ಪರಚಿಕೊಂಡಳು. ಹೆಸರಿಡದ ಭಯಗಳಾವರಿಸಿ ಗರ್ಭದಲ್ಲಿ ಚೂರಿ ಆಡಿಸಿದಂತಾಯ್ತು. ಗಡಬಡಿಸಿ ಹೋಗಿ ಗೋಡೆಯ ಬಿಲದಲ್ಲಿ ಸೀಮೆ ಸುಣ್ಣದಲ್ಲಿ ಬರೆದ ಕುಲದ ಸ್ವಾಮಿ ಚಂದ್ರಾಮನ ಮುಟ್ಟಿ ಹಣೆಗೊತ್ತಿಕೊಂಡಳು. ಅದಾಗಿ ಬೆಟ್ಟದ ಕಡೆ ಮುಖ ಮಾಡಿ ‘ಬೆನ್ನಿಗಿರು ಬೆಟ್ಟದ ಮಾಯೀ’ ಎಂದು ಹೇಳಿ ಕೆನ್ನೆ ಕೆನ್ನೆ ಬಡಿದುಕೊಂಡಳು. ‘ನೀ ಮುನಿದರಿನ್ಯಾರು ಸಲಿವ್ಯಾರು ತಾಯೀ’ ಎಂದು ಬೆಟ್ಟದ ಮಾಯಿಗೆ ಹೇಳುತ್ತಿರುವಂತೆ ಕಣ್ಣೀರ ಜಲ ಸುರಿಯಿತು. ‘ಇಲ್ಲಿಯ ತನಕ ಕಾಡುವ ದೈವಂಗಳಿಂದ ಮಗನ ಕಾಪಾಡಿ ಒಂದು ಭವ ಪಾರಾದೆನೆಂದರೆ ಈಗ ಇನ್ನೊಂದು ಸುರುವಾಯ್ತಲ್ಲೇ ತಾಯೀ’-ಎಂದು‌ಏಳೇಳು ಲೋಕಂಗಳ ಭಾರೀ ದುಃಖ ಮಾಡಿ ಕರುಳು ತಾಳದೆ ಕಾಡಿಗೆ ಹೊರಟಳು.
ದನಗಳ ಮೇಯಿಸುತ್ತಿದ್ದ ಬಾಲಕರಿದ್ದಲ್ಲಿಗೆ ಹೋದಳು. ಚಂದಮುತ್ತ ಇರಲಿಲ್ಲ. ಎಲ್ಲೆಂದು ಕೇಳಿದಳು. ಎಳೆ ಆಲದ ಮರ ತೋರಿಸಿದರು. ಅವನೊಬ್ಬನನ್ನೇ ಹೊರತುಪಡಿಸಿದ್ದೀರಲ್ಲಾ ಜಗಳಾಡಿದಿರಾ? ಎಂದಳು. ಹುಡುಗರು ಹೇಳಿದರು:
ಇಂದು ಚಂದಮುತ್ತ ನಿನ್ನಿನಂತಿಲ್ಲ ಅಬ್ಬೇ,
ಆಡಿದರೆ ಮಾತಾಡಿದ, ಇಲ್ಲದಿದ್ದರಿಲ್ಲ.
ಹತ್ತು ಮಾತಿಗೆ ಒಂದುತ್ತರ ಕೊಡುವ.
ಬೆಳಿಗ್ಗೆ ಬಂದಾಗಿನಿಂದ
ಕ್ಷಿತಿಜವನ್ನು ಅದು ಕನ್ನಡಿಯೆಂಬಂತೆ
ನೋಡುತ್ತ ಕುಂತಿದಾನೆ.
ಕನ್ನಡಿಯಲ್ಲಿ ಯಾರು ಮೂಡಿರುವರೋ-
ಮೂಡಿದವರೊಂದಿಗೆ ಕೈಸನ್ನೆ ಬಾಯಿಸನ್ನೆಯಲ್ಲಿ
ಮಾತಾಡುವ.
ಮೂಡಿದವರ್‍ಯಾರೆಂದು ನಮಗೆ ಕಾಣಿಸದಾಗಿ
ಅವನ ಮಾತು ನಮಗೆ ತಿಳಿಯುತ್ತಿಲ್ಲ.
ನಮಗವನ ಕಣ್ಣಷ್ಟೆ ಕಾಣುತ್ತಾವೆ.
ಕಣ್ಣಲ್ಲಿ ನಾವಂತೂ ಮೂಡಲಿಲ್ಲ. ಮೂಡಿದ್ದೂ
ಬರೀ ಕ್ಷಿತಿಜ.
ಕ್ಷಿತಿಜದಲ್ಲಿ ಒಮ್ಮೊಮ್ಮೆ ಕಾಮನ ಬಿಲ್ಲು ಕಂಡಂತೆ
ಅವನ ಕಣ್ಣು ಗಾಜು ಗಾಜಾಗಿ ಫಳಫಳ ಹೊಳೆಯುತ್ತಾವ.
ನಿಧಿಯ ಕಂಡವರಂತೆ, ಆದರೆ ಜಿಪುಣ
ಇನ್ನೊಬ್ಬರಿಗೆ ಗುಟ್ಟು ಬಿಡದಂತೆ
ಅಭಿನಯಿಸುವ.
ಒತ್ತಾಯ ಮಾಡಿದರೆ ಕಣ್ಣೀರು ಸುರಿಸುವೆನೆಂದ
ನಾವ್ಯಾರೂ ಕೇಳಲಿಲ್ಲ,
ಅವನು ಹೇಳಲಿಲ್ಲ.
ಅಕಾ, ಕೊಳಲುಲಿ ಕೇಳಿಬಂತು.
ನಿನ್ನ ದನಕರು ನಾವು ನೋಡಿಕೊಳ್ಳುತ್ತೇವೆ, ಚಿಂತೆ ಬೇಡವ್ವ”
ಎಂದರು. ಅವಸರ ಮಾಡಿ ಮಗನ ಕಡೆಗೆ ಧಾವಿಸಿದಳು.

೭ . ಶಿವದೇವರು ನನ್ನ ಮಗರಾಯ

ಚಂದಮುತ್ತ ಬಂಡೆ ಮ್ಯಾಲೆ ಕುಂತು ಕೊಳಲು ನುಡಿಸುತ್ತಿದ್ದ. ಹುಲ್ಲುಗಾವಲಿನಲ್ಲಿ ಹೂಗಾಳಿ ಬೀಸಿ ನುಡಿಸುತ್ತಿದ್ದ ಹಾಡು ಕಿವಿಗೆ ಹಿತಕರವಾಗಿತ್ತು. ಕಣ್ಣು ಮುಚ್ಚಿದ್ದ. ಹಾರ್‍ಯಾಡೋ ಕೂದಲಿನ ಹಣೆಯಂಚಿನ ಮ್ಯಾಲೆ ಕರಿ ಕಂಬಳಿಯಿತ್ತು. ಯಾವುದೋ ಕನಸನ್ನ ಕೊಳಲುಲಿಯ ಬಲೆ ಹಾಕಿ ಜಗ್ಗಿ ಜಗ್ಗಿ ತರುತ್ತಿದ್ದ ಹಾಗೆ ಕೊಳಲನ್ನ ಅಲುಗುತ್ತಿದ್ದ. ಅದು ಸಿಗದಾಗಿತ್ತು. ಬಲೆಯಿಂದ ಜಗುಳುತ್ತಿರಬೇಕು. ಕಣ್ಣುಗಳನ್ನು ಇನ್ನಷ್ಟು ಜೋರಾಗಿ ಮುಚ್ಚಿ ಇನ್ನೊಮ್ಮೆ ಬಲೆ ಎಸೆದು ಹೊಂಚುತ್ತಿದ್ದ. ಸಿಕ್ಕಿತೆಂಬಾಗ ನುಸುಳಿ ಕೈಜಾರಿದಂತೆ, ಕಣ್ಣೆದುರಲ್ಲೇ ಕರಗಿದಂತೆ ಆಟವಾಡಿಸುವ ಕನಸು.
ಅಬ್ಬೆ ಬಂದು ನಿಂತದ್ದು ಮಗಂಗೆ ಅರಿವಾಗಲಿಲ್ಲ. ಆಗಲೇ ಅಬ್ಬೆಗೆ ಗೊತ್ತಾದದ್ದು ‘ಎಲಾ ಶಿವನೆ! ಮಗ ಎಷ್ಟು ದೊಡ್ಡವನಾಗಿ ಬೆಳೆದಿದ್ದಾನಲ್ಲಾ!’ ಎಂದು.
ಭುಜಗಳ ವಿಸ್ತಾರ ಕಂಡು ಆನೆ ಮರಿ ನನ್ನ ಮಗ ಎಂದಳು.
ನೆತ್ತಿಯಲ್ಲಿ ಲೋಲಾಡುವ ನವಿಲುಗರಿ ನೋಡಿ
ಕೃಷ್ಣದೇವರಾಯ ನನ್ನ ಮಗ ಎಂದಳು.
ಜಗ್ಗಿ ಜಡೆ ಕಟ್ಟಿದ್ದರೂ ಬಿಡುಗಡೆಗೊಂಡು
ಕೆನ್ನೆ ಕತ್ತಿನ ಮ್ಯಾಲೆ ಆಟವಾಡುವ
ಮಿಡಿನಾಗರ ಜಡೆ ಕಂಡು
ಶಿವದೇವರು ನನ್ನ ಮಗರಾಯನೆಂದಳು.
ಹದಿನೆಂಟು ಗೊಂಡೆಗಳ ಲಂಗೀಟಿಯ
ಗಟ್ಟಿಮುಟಾದ ತೊಡೆ ಸೊಂಟಗಳ ನೋಡಿ
ಕಾಮದೇವರು ನನ್ನ ಮಗರಾಯನೆಂದಳು.
ದೃಷ್ಟಿ ತಾಗೀತೆಂದು ಮನಸ್ಸಿನಲ್ಲೇ ನಿವಾಳಿ ಚೆಲ್ಲಿದಳು.
ಕೊಳಲೂದುವ ಮಗ ಈಗ ಸೋತ ಹಾಗಿತ್ತು. ಬೆನ್ನು ತಟ್ಟಿದಳು. ಸಮಾಧಿಭಂಗವಾಗಿ ಕಣ್ತೆರೆದ. ಎದಿರಿಗೆ ಹಡೆದವ್ವ! ‘ಅಬ್ಬೇ’ ಎಂದ.
ಮಗನ ಚೆಲುವಿಕೆಯ ಚೋದ್ಯವ ನೋಡಿ ಆದ ಆನಂದ ಒಂದು ಕಡೆ, ಕುಲಗುರುವಿನ ನುಡಿಕೇಳಿ ಆದ ಆತಂಕ ಇನ್ನೊಂದು ಕಡೆ. ಆನಂದ ಆತಂಕಗಳಲ್ಲಿ ಅಬ್ಬೆಯ ಹೃದಯ ಹಸಿರೇರಿ ಹೆಚ್ಚು ನುಡಿದಾಡಿಸದೆ ಮಗನ ಗೂಡಿಗೆ ಕರೆತಂದಳು.
ಬಾವಿಯ ಕಿರುಯಾತದಿಂದ ನೀರು ಸೆಳೆಸೆಳೆದು ಹಂಡೆ, ಹರವಿ ತುಂಬಿ ಒಲೆಗೆ ಬೆಂಕಿಯಿಟ್ಟಳು. ಮಗನ ಮುಂದೆ ಕೂರಿಸಿಕೊಂಡು ಬೆಳ್ಳಿಯೆಣ್ಣೆ ಕುಡಿಕೆಯಿಂದ ಎಣ್ಣೆ ತಗೊಂಡು ಮಗನ ಕೈ ಮೈ ತಲೆ ತಂಪಾಗುವಂತೆ ಎಣ್ಣೆ ಹಚ್ಚಿದಳು. ತುಂಡು ಸಾಬಾನು ಸೀಗೆಪುಡಿ ತಗೊಂಡು ಬಾ ಜಳಕಕ್ಕೆಂದು ಕೈಹಿಡಿದು ಬಚ್ಚಲಿಗೆ ಕರೆದೊಯ್ದಳು.
ನೂರು ತಂಬಿಗೆ ಬಿಸಿನೀರೆರೆದು ಸಾಬೂನಿನಿಂದೊಮ್ಮೆ ಮೈ ಹಸನು ಮಾಡಿದಳು. ಸೀಗೆಯಿಂದೊಮ್ಮೆ ಶುದ್ಧ ಮಾಡಿದಳು. ನೂರು ತಂಬಿಗೆ ಬಿಸಿನೀರೆರೆದು ಬಿಸಿ ಮಾಡಿ, ತಣ್ಣೀರಲ್ಲಿ ತಂಪು ಮಾಡಿದಳು. ಮಡಿ ಪಾವಡದಿಂದ ತಾನೇ ಮುಂದಾಗಿ ತಲೆ ಒರೆಸಿ ಗೊಂಡೇದ ಲಂಗೋಟಿ ಕೊಟ್ಟಳು. ಮಗ ಮರೆಗೆ ಹೋಗುತ್ತಲೂ ಹೆಮ್ಮೆಯಿಂದ ಹಿಡಿದಿಟ್ಟ ನಗೆಯ ಮಲ್ಲಿಗೆ ಚೆಲ್ಲಾಡಿದಳು ಚಂದಮುತ್ತ ದೇವರ ಬಿಲಕ್ಕೆ ಹೋಗಿ ಸಾವಿರದೆಂಟು ನಾಮಗಳಿಂದ ಕುಲದೇವರ ಹೊಗಳಿ ಹೊರಬಂದ.
ಅಬ್ಬೆ ಬಾಳೆಯೆಲೆ ಹಾಕಿ ನೀರು ಚಿಮುಕಿಸಿದಳು. ಮುದ್ದೆ ಬಡಿಸಿದಳು. ಎರಡು ಬಗೆ ಅನ್ನ ಬಡಿಸಿದಳು. ಮೂರು ಬಗೆ ಬಾಡು ಬಡಿಸಿದಳು. ಆರು ಬಗೆ ಪಲ್ಯ ಪದಾರ್ಥ ಚಟ್ನಿಯ ಬಡಿಸಿ ತುತ್ತು ಮಾಡಿ ಮಾಡಿ ಮಗನ ಬಾಯಿಗಿಟ್ಟು ಉಣಿಸಿದಳು.
ಕಾವಲಿಗೆ ಹೋಗುತ್ತೇನೆಂದ ಮಗನ ತಡೆದು, ಮುಂದೆ ಕೂರಿಸಿಕೊಂಡು ಸೊಂಪಾಗಿ ಬೆಳೆದ ತಲೆಕೂದಲನ್ನು ಬಿಡಿಸಿ ಬೆನ್ನಿಗಿರಿಸಿ ಹಿತಕರದ ಬಿಸಿಲಲ್ಲಿ ಹಾಯಾಗಿ ಕುಂತಳು. ಬಣ್ಣದ ಬಾಚಣಿಗೆಯಿಂದ ಮಗನ ತಲೆ ಬಾಚಿ ಹೇನು ಹೆಕ್ಕುತ್ತ ಕೇಳಿದಳು.
“ನಿನ್ನೆ ಮನೆಗೆ ಬಂದವನು ನನ್ನ ನುಡಿದಾಡಿಸದೆ ಇಂದು ಬೆಳಿಗ್ಗೆ ಕಾಡಿಗೆ ಓಡಿದೆಯಲ್ಲ, ಏನು ಕಾರಣ ಮಗನೆ?”
“ಏನಿಲ್ಲಬ್ಬೆ”
ಮತ್ಯಾಕೆ ಹಾಗೆ ಹೇಳದೆ ಕೇಳದೆ ಕಾಡಿಗೆ ಓಡಿ ಹೋದೆ?”
ರಾತ್ರೆ ಒಂದು ಕನಸು ಕಂಡೆ ಅಬ್ಬೆ”
“ಕನಸಿನಲ್ಲೇನು ಕಣ್ಣು ತುಂಬುವನ ದನ ಕಂಡೆಯಾ? ಕಂಡಿದ್ದರೆ ಹೇಳು ಬೆಲೆ ಕೊಟ್ಟು ಕೊಳ್ಳುವಾ.”
“ಇಲ್ಲ ಅಬ್ಬೆ”
“ಇನ್ನೇನು ಪರಿಮಳದ ಹೂಬಳ್ಳಿ ಕಂಡೆಯಾ? ಕಂಡಿದ್ದರೆ ಹೇಳು, ಅಂಗಳದಲ್ಲೇ ಸಸಿ ನೆಟ್ಟು ಬೆಳೆಸುವಾ.”
“ಇಲ್ಲ ಅಬ್ಬೆ”
“ಸೊಬಗುಳ್ಳ ಬೆಡಗಿಯ ಕಂಡೆಯಾ?”
ಈಗ ಚಂದಮುತ್ತ ತಲೆ ತಿರುಗಿಸಿ ಅಬ್ಬೆಯ ಮುಖ ನೋಡಿದ.
ಕನಸಿನಲ್ಲಿ ಚಂದ್ರನ ಕಂಡೆ ಅಬ್ಬೆ”-ಅಂದ.
“ಚಂದ್ರನ ಕಂಡೆಯೋ ಚಂದ್ರನಂಥ ಹೆಣ್ಣ ಕಂಡೆಯೋ!
ಇಂದಿನ ನಿನ್ನ ಕೊಳಲ ಹಾಡು ಪಸಂದಾಗಿತ್ತಪ್ಪ. ಹಾಡು
ನಮಗಿರಲಿ, ಹಾಡಿನ ಹುಡುಗಿ ನಿನಗಿರಲೇಳು”
ಎನ್ನುತ್ತ ಅಕ್ಕರೆ ಮತ್ತು ಆತಂಕದಿಂದ ಲಟಿಕೆ ಮುರಿದಳು. ಮಗ ನಗುತ್ತ ನವಿಲುಗರಿ ತುರಾಯಿ ನೆತ್ತಿಯ ಮುಡಿಗಿಟ್ಟು, ಕರಿ ಕಂಬಳಿಯ ಹೆಗಲಿಗೆ ಹೊತ್ತು, ಬೆಳ್ಳಿಬಿಡಿಯ ಕಿರುಗತ್ತಿಯ ಎಡಸೊಂಟಕ್ಕೆ ಜೋತು, ಬಣ್ಣದ ಕೊಳಲು ಬಲಸೊಂಟಕ್ಕೆ ಜೋತು ಕಕ್ಕೆದೊಣ್ಣೆ ಕೈಲಿ ಹಿಡಿದುಕೊಂಡು, ಹಿಮ್ಮಣ್ಣಿ ಚೀಲದಲ್ಲಿ ಎಲಡಿಕೆ ಸುಣ್ಣ ಕಡ್ಡೀಪುಡಿ ಹಾಕ್ಕೊಂಡು ಹೊರಟ. ಅಬ್ಬೆಯ ಕಣ್ಣು ಹಾದಿಯಾದವು.

೮ . ಹೊಸ ದೈವದ ಅವತಾರ

ಕುಲಗುರು ಬರುತ್ತಿರುವುದ ಕಂಡು ಚಾವಡಿಯಲ್ಲಿ ಹೊಲಗೆಲಸದ ಕರಿಕಂಬಳಿ ಹಾಸಿ ಅಕ್ಷತೆಯಲ್ಲಿ ಚಿತ್ರ ಬರೆದು, ತಾಂಬೂಲ ತಟ್ಟೆ ಅಣಿಮಾಡಿಟ್ಟು ಹಟ್ಟಿಯಾಳ್ತನ ಮಾಡುವ ಹೆಗಡೆ ಕಾದು ನಿಂತ. ಅಷ್ಟರಲ್ಲಿ ಬಗಲ ಚೀಲ, ಬಿಳಿತಲೆಯ ಕುಲಗುರು ಕೋಲೂರಿಕೊಂಡು ಹಳಬನ ಹಿಂದಿನಿಂದ ಬಂದ. ‘ಬಾ ಶಿವನೇ’ ಎಂದು ಕರವೆತ್ತಿ ನಮಸ್ಕಾರ ಮಾಡಿದ ಹೆಗಡೆಗೆ ಬಲಗೈ‌ಎತ್ತಿ ಹರಸಿ ಬಗಲ ಚೀಲದ ಬಂಡಾರ ತೆಗೆದು ಹಣೆಗಂಟಿಸಿ “ಬೆಟ್ಟದ ಮಾಯೀ” ಎನ್ನುತ ಉಳಿದ ಬಂಡಾರವನ್ನು ಗಾಳಿಯಲ್ಲಿ ತೂರಿದ. ಕರಿಕಂಬಳಿ ಗದ್ದಿಗೆಯಲ್ಲಿ ಕುಂತು ಬಾಯಾರಿಕೆಗೆ ಬೆಲ್ಲ ನೀರು ಕುಡಿದ. ‘ಬೆಟ್ಟದ ಮಾಯೀ’ ಎನ್ನುತ್ತ ಕುಡಿದುದನ್ನ ತಾಯಿಗರ್ಪಿಸಿ ಹೆಗಡೆ ಕಡೆ ನೋಡಿ,
“ಏನು ಕರೆಸಿದ್ದು ನನ್ನಪ್ಪ?” ಎಂದ.
“ಈಗ ಮೂರು ದಿನದಿಂದ ಒಂದೇ ಸ್ವಪ್ನ ಕಾಣಿಸುತ್ತ ಇದೆ.
ಸ್ವಪ್ನದಿಂದ ಏನೋ ದರ್ಶನವಾಗಿ ಆತಂಕದಿಂದ ಹೇಳಿಕಳುಹಿಸಬೇಕಾಯ್ತು.”
“ಸ್ವಪ್ನದಲ್ಲಿ ಕಂಡದ್ದು ದೈವವೋ ಸೇಡು ಮಾರಿಯೋ?”
“ಹೊಸ ದೈವ ಕಾಣಿಸಿಕೊಂಡು ಮೂರು ದಾರಿ ಕೂಡುವಲ್ಲಿ ಅವತಾರವಾಗಿದ್ದೇನೆ. ಮನ್ನಣೆ ಮಾಡಿ ಗುಡಿ ಗುಂಡಾರ ಕಟ್ಟಿಸಿಕೊಟ್ಟರೆ ಹಿಡಿದ ಮಣ್ಣು ಚಿನ್ನ ಮಾಡೇನು. ತಪ್ಪಿದರೆ ಬೂದಿ ಮಾಡೇನೆಂದು ಹೇಳಿತಲ್ಲ! ಏನು ಮಾಡಬೇಕು.? ನೀನು ತೋರುವ ಬೆಳಕ ಅನುಸರಿಸಿ ನಡೆವವರು ನಾವು”
“ಇದ್ಯಾವ ಹೊಸ ದೈವವೋ ಕಾಣೆನಲ್ಲ!”
ಎನ್ನುತ್ತಿರವಂತೆ ತನ್ನ ಕನಸಿನ ನೆನಪಾಯ್ತು.
“ನಿನ್ನೆ ಭೂತ ಸಂಚಾರದ ವ್ಯಾಳದಲ್ಲಿ
ನನಗೂ ಒಂದು ಕನಸಾಯ್ತಲ್ಲ ನನ್ನಪ್ಪ!,
ಆಕಾಶದ ಗಂಟೆ ಢಣಲೆಂದು ಹೊಡೆದವು.
ಬೆಟ್ಟದ ಮೈತುಂಬಿ ಕಾಡು ಗಿಡಮರ ಒಡಮುರಿದು
ಹೂ ಹೂ ಚೆಲ್ಲಿ ಹುಡದಿಯಾಡಿದವು.
ಝಗ್ಗಂತ ಬೆಳಕಲ್ಲಿ ಫಳ್ಳಂತ ಹೊಳೆವಾಕಾಶದಿಂದ
ಯಾರೋ ಉನ್ನತ ದೇವತೆ
ಏಣಿಯಿಲ್ಲದೆ ಕೆಳಗಿಳಿದು ಬಂದುದ ಕಂಡೆ.
ಮೂರು ದಾರಿ ಸೇರುವಲ್ಲಿ ದೀವಿಗೆಯ
ಬೆಳಕಾಡಿದ್ದ ಕಂಡೆ!
ಫಕ್ಕನೆಚ್ಚರವಾಗಿ ಸಳಸಳ ಮೈಬೆವರಿಳಿದವು!
ನನ್ನ ಕನಸಿಗೂ ನಿನ್ನ ಕನಸಿಗೂ ಸಂಬಂಧವಿರಬಹುದ?-ಎಂದ.
ಹೆಗಡೆ : ನಿನ್ನ ಕನಸಿನಲ್ಲೂ
ಮೂರು ದಾರಿ ಸೇರುವಲ್ಲಿ ದೀವಟಿಗೆ ಬೆಳಕಾಡಿದ್ದು
ವಿಶೇಷವೆ. ಹೋಗಿ ನೋಡಿಕೊಂಡು ಬರಬಹುದಲ್ಲ?
ಹಂಗೇ ಆಗಲೆಂದಳು-
ಎಂದು ಕುಲಗುರು ಹೊರಡುವ ಉತ್ಸಾಹ ತೋರಿದ.

೯ . ಒಕ್ಕಲಾದವರು

ಕುಲಗುರು,ಹೆಗಡೆ ಮತ್ತು ಹಟ್ಟಿಯ ಹಿರೀಕರು ಕೂಡಿಕೊಂಡು ಕಾಡಿನ ಮಧ್ಯೆ ಮೂರು ದಾರಿ ಸೇರುವಲ್ಲಿಗೆ ಹೋಗಿ ಹುಡುಕತೊಡಗಿದರು. ದನಗಾಹಿ ಬಾಲಕರಾಗಲೇ ಅಲ್ಲಿದ್ದರು. ಮತ್ತು ಹಿರೀಕರು ಏನು ಹುಡುಕುತ್ತಿದ್ದಾರೆಂದು ತಿಳಿಯದೆ ಸೋಜಿಗಗೊಂಡು ಅವರೂ ಅವರೊಂದಿಗೆ ಹೆಜ್ಜೆ ಹಾಕಿದರು. ಕೊನೆಗೆ ಎಲ್ಲೂ ಸುಳಿವು ಸಿಕ್ಕದಿದ್ದಾಗ ಕುಲಗುರುವಿಗೆ ಸಿರಿಲಕ್ಕಿ ಹೇಳಿದ್ದು ನೆನಪಾಗಿ “ಎನ್ರೆಪ್ಪ, ಇಲ್ಲೆಲ್ಲಾದರೂ ಶಿಲಾಮೂರ್ತಿ ಕಂಡಿತ?” ಎಂದರು. ಹುಡುಗರು ಉತ್ಸಾಹದಿಂದ ಆಲದ ಮರದ ಬಳಿಯ ಶಿಲಾಮೂರ್ತಿಯ ತೋರಿಸಿದರು. ಆದರೆ ನಿನ್ನೆ ತಾವು ಅದರೊಂದಿಗೆ ಆಡಿದಾಟ ಹೇಳಲಿಲ್ಲ. ಹೇಳಲೆಂದು ಬಾಯಿತೆಗೆದ ಸಣ್ಣ ಹೆಗಡೆ ಚಿನ್ನಮುತ್ತನ ಬಾಯನ್ನ ಯಾರೋ ಮುಚ್ಚಿದಂತಾಗಿ ಅವನೂ ಬಾಯಿ ಬಿಡಲಿಲ್ಲ.
ಮೆಳೆಯಲ್ಲಿದ್ದ ಶಿಲಾಮೂರ್ತಿ ತುಂಬ ಸುಂದರವಾದ ಯಕ್ಷಿಯ ಮೂರ್ತಿ. ಲೋಕ ಲೌಕಿಕ ಕಂಡು ಬೆರಗಿನಲ್ಲಿ ಬಟ್ಟಲಗಣ್ಣು ತೆರೆದ ಹಾಗಿತ್ತು. ಬಲಗೈ ಆಶೀರ್ವದಿಸುವ ಭಂಗಿಯಲ್ಲಿತ್ತು, ಬಲಭುಜದ ಮ್ಯಾಲೆ ಗಿಣಿ ಕುಂತಿತ್ತು. ಎಡಗೈ ತೊಡೆ ಮಧ್ಯದ ಮರ್ಯಾದೆ ಮುಚ್ಚಿಕೊಂಡಿತ್ತು. ಮದುವೆಯಾಟದಲ್ಲಿ ಚಂದಮುತ್ತ ಕತ್ತಿಗೆ ಹಾಕಿದ್ದ ಅಮೃತವಲ್ಲಿ ಹಾಗೇ ಇತ್ತು. ಕುಲಗುರುವಿಗೆಲ್ಲ ಗೊತ್ತಾಗಿ ಹೋಯ್ತು. ಆ ವಿಷಯ ಅವನು ಚರ್ಚಿಸಲಿಲ್ಲ. ಯಕ್ಷಿಯ ಗುಡಿ ಕಟ್ಟುವುದಕ್ಕೆ ಮನೆಗೊಂದಾಳು ಬರಬೇಕೆಂದು ಕುಳವಾಡಿ ಡಂಗುರ ಸಾರಿದ. ಮಾರನೆಯ ದಿನ ಹೆಗಡೆಯ ಹಿರಿತನದಲ್ಲಿಕಲ್ಲೊಡ್ಡರು ಮಣ್ಣೊಡ್ಡರು ಸೇರಿ ಮನೆಗೊಂದಾಳಿನಂತೆ ಮೆಳೆಗೆ ಬಂದರು. ಸುತ್ತ ಹಸನು ಮಾಡಿ ಒಲಿದು ಬಂದ ಯಕ್ಷಿ ಕುಂತ್ಕೊಳ್ಳೋದಕ್ಕೊಂದು ತಳ ನಿಂತ್ಕೊಳ್ಳೋದಕ್ಕೊಂದು ನೆಲೆಯಾಗುವಂಥ ಗುಡಿಯ ಕಟ್ಟಿ ಗುಡಿಗೆ ಸುಣ್ಣ ಬಣ್ಣ ಬಳೆದರು. ಬಲ ಗೋಡೆಯ ಮ್ಯಾಲೆ ಸೂರ್ಯನಾರಾಯಣ ಸ್ವಾಮಿ, ಎಡಗೋಡೆಯ ಮ್ಯಾಲೆ ಚಂದ್ರಾಮಸ್ವಾಮಿಯ ಚಿತ್ರ ಬರೆದರು. ಶಿಖರದ ಮ್ಯಾಲೆ ಕಮಳದ ಕಸೂತಿಯಿರ್ವ ಜೆಂಡಾ ಹಾರಿಸಿದರು. ಹುಣ್ಣಿವೆ ದಿನ ಪೂಜೆಯೆಂದು ಸುತ್ತೂ ಸೀಮೆಯ ದೇವದೈವಂಗಳನ್ನು ಪಾಲ್ಕೀ ಸಮೇತ ಕರೆಸಿದರು. ಗರ್ನಾಲು ಸಿಡಿದು ಕೊಂಬು ಊದಿ ವಾದ್ಯ ಮೊಳಗಿ ಎತ್ತಿದ ಸತ್ತಿಗೆ ಮೆರೆದು ಸರ್ವ ಬಿರುದಿಂದ ಮೆರವಣಿಗೆ ಹೊರಟು ಚಾಂಗುಭಲೆಯೆಂಬ ನುಡಿಯೆ ನುಡಿಯಾಯಿತೆಲ್ಲೆಡೆಗೆ.
ಹುಣ್ಣಿಮೆಯಂದು ಕುಲಗುರು ಸುಮುಹೂರ್ತದಲ್ಲಿ ಪೂಜೆ ಸುರುಮಾಡಿ ಏಳು ಗಂಗೆಯ ಕುಂಕುಮನೀರಿನಿಂದ ಸ್ನಾನ ಮಾಡಿಸಿದ. ನೂರು ಕುರಿ, ನೂರು ಕೋಳಿ, ನೂರು ಮಡಕೆ ಈಚಲ ರಸವ ಅರ್ಪಿಸಿ ಇಪ್ಪತ್ತು ಮೊಳದ ಬಣ್ಣದ ದಟ್ಟಿ, ನೂರು ಮೊಳದ ಹೂವಿನ ದಂಡೆ, ಅಕ್ಷತೆ, ಅರಿಷಿಣ ಕುಂಕುಮವ ಬೆಳ್ಳಿಯ ತಟ್ಟೆಯಲ್ಲಿಟ್ಟು ಮೂರ್ತಿಯ ಮುಂದೆ ಸರಿಸಿ,
“ಬಾಗಿನ ಭಕ್ತಿ ನಮ್ಮದು, ಸತ್ಯದ ಶಕ್ತಿ ನಿನ್ನದು
ಕೈಯಾರೆ ತಗೊಂಡು ಭಕ್ತರ ಹರಸವ್ವಾ”
ಎಂದು ಬಾಗಿದ ನಮಸ್ಕಾರವ ಮಾಡಿದ್ದೇ ಬಾಗಿನ ತಟ್ಟೆಯನ್ನು ತಾನು ಮುಟ್ಟುವುದಿಲ್ಲವೆಂಬಂತೆ ತಟ್ಟೆ ದೂರ ಸರಿಯಿತು.
ಮನುಷ್ಯರೇ ಮುದ್ದಾಂ ಸರಿಸಿದಂತೆ ತಟ್ಟೆ ಸರಿದಾಗ ಕುಲಗುರುವಿಗೆ ಸಿರಿಲಕ್ಕಿಯ ಮಾತು ನೆನಪಾಗಿ ಚಂದಮುತ್ತನ್ನ ಮುಂದೆ ಕರೆದು ’ನೀನು ಬಾಗಿನವಿಡು ಕಂದಾ’ ಎನ್ನುವಷ್ಟರಲ್ಲಿ ಹೆಗಡೆ ಮುಂದೆ ಬಂದು ಚಿನ್ನಮುತ್ತನ್ನ ಕುಲಗುರುವಿನ ಪಾದದ ಮ್ಯಾಕೆ ಚೆಲ್ಲಿ “ಇವನಿಡಲಿ ಗುರುಪಾದವೇ” ಅಂದ. ಕುಲಗುರು ಅಪ್ಪಣೆ ಕೊಡುವ ಮೊದಲೇ ಚಿನ್ನಮುತ್ತ ಬಾಗಿನ ತಟ್ಟೆಯ ತಗೊಂಡು ಯಕ್ಷಿಯ ಮುಂದಿಟ್ಟು ಬಾಗಿದ ನಮಸ್ಕಾರವ ಮಾಡಿ ಕಣ್ಣು ಮುಚ್ಚಿ ನಿಂತುಕೊಂಡ. ಈ ಬಾರಿಯೂ ತಟ್ಟೆ ದೂರ ಸರಿದು ಬಂತು. ಚಿನ್ನಮುತ್ತ ಮತ್ತು ಹೆಗಡೆಯ ಮುಖ ಕಪ್ಪಿಟ್ಟವು. ಈ ತನಕ ಸುಮ್ಮನಿದ್ದ ಕುಲಗುರು ಈಗ ಚಂದಮುತ್ತನಿಗೆ ಸನ್ನೆ ಮಾಡಿದ.
ಚಂದಮುತ್ತ ನಿನ್ನೆಯ ಘಟಿತವ ನೆನೆದು ಗಡಗಡ ನಡುಗಿದ. ಯಕ್ಷಿಯ ಗ್ಯಾನದಲ್ಲಿ ನೂರೊಂದು ನೆನೆದ. ತಂದೆ ತಾಯಿಯ ನೆನೆದ, ಸುತ್ತೇಳು ಬಳಗವ ನೆನೆದ, ಬೆಟ್ಟದ ಮಾಯಿಯ ನೆನೆದು ಕುಲದೇವರ ಸ್ಮರಿಸಿ ಬಾಗಿನ ತಟ್ಟೆಯ ದೇವಿಯ ಮುಂದಿಟ್ಟು ನಿಂತ. ಕೂಡಿದವರೆಲ್ಲ ನೆತ್ತಿಯ ಮ್ಯಾಲೆ ಕೈಹೊತ್ತು ಭಕ್ತಿಯ ಭಾವದಲ್ಲಿ ನಿಂತಿರುವಾಗ ದೇವಿ ಬಾಗಿನವ ಒಪ್ಪಿಕೊಂಡಳು. ಶಿಲಾಮೂರ್ತಿಗೆ ದಟ್ಟಿ ಉಡಿಸಿ ತಲೆಮ್ಯಾಲೆ ಹೂದಂಡೆಯಿಟ್ಟ. ಎಲ್ಲರಿಗೂ ಭಕ್ತಿಯ ಆವೇಶವಾಗಿ ಬಲಿನೀಡಿ ಕುಣಿದಾಡಿದರು. ಚಂದಮುತ್ತನ್ನ ‘ದೈವದ ಪಾದಕೆ ಒಪ್ಪಿದ ಶಿಶುಮಗ ನೀನೊಬ್ಬನೇ’ ಎಂದು ಕೊಂಡಾಡಿದರು. ನಿತ್ಯದ ಬಾಗಿನಪೂಜೆ ಅವನದೆಂದು ಗೊತ್ತುಮಾಡಿ ಬಿಳಿಯ ಕಂಬಳಿ, ಇಪ್ಪತ್ತು ಮೊಳದ ದಟ್ಟಿ, ಏಳು ಸೇರಡಿಕೆ, ಏಳುಕಟ್ಟು ವೀಳ್ಯೆದೆಲೆ, ಹಬ್ಬಹರಿದಿನಗಳಲ್ಲಿ ಭಕ್ತಾದಿಗಳು ಕೊಟ್ಟ ನೈವೇದ್ಯ ಅವನದೇ ಎಂದು ಹಕ್ಕುಗಳು ನಿರ್ಧರಿಸಿದರು. ಹುಣ್ಣಿವೆ ಅಮಾವಾಸ್ಯೆಗೊಮ್ಮೆ ವ್ರತ, ವರ್ಷಕ್ಕೊಮ್ಮೆ ಮೂರುದಿನದ ಪರಿಸೆ ಮೆರೆಸುವುದೆಂದು ತೀರ್ಮಾನಿಸಿ ಎಲ್ಲರೂ ಹೊಸದೈವದ ಒಕ್ಕಲಾದರು.

೧೦. ಕಾಡುಹಕ್ಕಿಯ ಹಾಡು

ಚಂದಮುತ್ತನ ಬಗ್ಗೆ ಹಟ್ಟಿಯವರಲ್ಲಿ ಪ್ರೀತಿ ಮತ್ತು ಚಿನ್ನಮುತ್ತನಲ್ಲಿ ಅಸೂಯೆ ಹೆಚ್ಚಾದವು. ಇಬ್ಬರೂ ಕುಲಗುರುವಿನಲ್ಲಿ ವಿದ್ಯಾ, ಬುದ್ಧಿ, ಕೊಳಲು ಗೀತ ಸಂಗೀತ ಕಲಿತವರು, ಅಸೂಯೆಯಿಂದ ಚಿನ್ನಮುತ್ತನ ಏಕಾಗ್ರತೆ ಮುರಿದು ಮನಸ್ಸು ವಿಕಾರ ಯೋಚನೆಗಳಲ್ಲಿ ಮುಳುಗಿತು. ಗುರುವಿನ ಬಳಿ ಇಬ್ಬರೂ ಸೇರುತ್ತಿದ್ದರು. ಕುಲಗುರು ಒಂದು ತೋರಿಸಿದರೆ ಚಂದಮುತ್ತ ಹತ್ತಾಗಿ ಹುಟ್ಟಿಸಿ ವಿಸ್ತರಿಸಿ ಗುರುವಿಗೇ ಚೋದ್ಯ ಮಾಡುತ್ತಿದ್ದ. “ಇದನ್ನೆಲ್ಲಿ ಕಲಿತೆ?” ಎಂದು ಕುಲಗುರು ಕೇಳಿದರೆ “ನಿನ್ನಲ್ಲಿ” ಎನ್ನುತ್ತಿದ್ದ. “ನಾನು ನಿನಗಿದನ್ನು ಕಲಿಸಲೇ ಇಲ್ಲವಲ್ಲ” ಎಂದರೆ “ಹಾಂಗಿದ್ದರೆ ನೀನೇ ಬಲ್ಲೆ ಗುರುಪಾದವೇ” ಎಂದು ಪಾದ ಮುಟ್ಟುತ್ತಿದ್ದ, ಕುಲಗುರುವಿಗಿದರಿಂದ ಇನ್ನಷ್ಟು ಆನಂದ ಆಶ್ಚರ್‍ಯ ಆಗುತ್ತಿತ್ತು.
ಚಂದಮುತ್ತ ಕೊಳಲು ನುಡಿಸುತ್ತಿದ್ದರೆ ಕುಲಗುರು ಮೈಮರೆಯುತ್ತಿದ್ದ. ಅಕ್ಕಪಕ್ಕ ಇದ್ದವರು ನಿಂತವರು ನಿಂತುಕೊಂಡೇ ಕೂತವರು ಕೂತುಕೊಂಡೇ ಮೈಮರೆಯುತ್ತಿದ್ದರು. ಹಾಗೆ ಮೈಮರೆತಿದ್ದಾಗ ತಮಗೆ ಯಾವುದೋ ಸುಖದ ಸೀಮೆಯಲ್ಲಿ ಸಂಚರಿಸಿದಂತಾಗುತ್ತಿತ್ತು. ತಮಗೆ ಅಪರಿಚಿತವಾದ ಅನೇಕ ಆಸ್ತಿತ್ವಗಳ ಸುಖತನ ಸಿಕ್ಕಹಾಗೆ ಅನಿಸುತ್ತಿತ್ತು. ಆತನ ಸಂಗೀತ ಮುಗಿದ ಮ್ಯಾಲೆ ಈ ಲೋಕ ಬದುಕೊದಕ್ಕೆ ಮೊದಲಿಗಿಂತ ಚೆನ್ನಾಗಿದೆಯೆಂದು ಅನಿಸುತ್ತಿತ್ತು.
ಈಗ ಚಂದಮುತ್ತ ದನಕಾವಲಿಗೆ ಹೋದರೆ ಹೋದ; ಬಿಟ್ಟರೆ ಬಿಟ್ಟ. ಅಬ್ಬೆ ಒತ್ತಾಯ ಮಾಡುತ್ತಿರಲಿಲ್ಲ. ಯಾಕೆಂದರೆ ಬೇರೆ ಹಟ್ಟಿಯಲ್ಲಿದ್ದ ತನ್ನ ತಮ್ಮನನ್ನು ಕರೆದು ದನಕರುಗಳ ಉಸ್ತುವಾರಿಗಿಟ್ಟುಕೊಂಡಳು. ದೈವದ ಕೃಪೆ ತನ್ನ ಮಗನ ಮೇಲಾದದಕ್ಕೆ ಆನಂದವಾಗಿತ್ತು. ಆತಂಕವೂ ಆಗಿತ್ತು.
ಚಂದಮುತ್ತ ದಿನಾ ಬೆಳಿಗ್ಗೆ ಕೋಳೀಯ ಕೂಗಿಗೆದ್ದು, ತಣ್ಣೀರು ಮಿಂದು, ಮಡಿಯುತ್ತು ಬಾಗಿನ ತಗೊಂಡು ದೇವಾಲಯಕ್ಕೆ ಹೋಗುತ್ತಿದ್ದ. ಪಾತಾಳಗಂಗೆಯ ಕುಂಕುಮನೀರಿನಿಂದ ವಿಗ್ರಹಕ್ಕೆ ಸ್ನಾನ ಮಾಡಿಸಿ ದೈವದ ಎಡಬದಿಗೆ ಮೊಗ್ಗುಸಂಪಿಗೆ, ಬಲಬದಿಗೆ ಎಳೆ ಹಿಂಗಾರಿಟ್ಟು, ಮುಂದೆ ಮಡಿ ಬಾಗಿನವಿಟ್ಟು ಹೊರಬಂದು ಬಾಗಿಲು ಮುಂದೆ ಮಾಡಿ, ದೈವದ ಕಡೆ ಬೆನ್ನು ತಿರುಗಿಸಿ ನಿಂತುಕೊಳ್ಳುತ್ತಿದ್ದ. ಸಲ್ಪ ಸಮಯವಾಗುತ್ತಲೂ ಬಾಗಿಲು ತಂತಾನೆ ತೆರೆದು ನಿನ್ನೆಯ ಮೈಲಿಗೆ ಬಟ್ಟೆ ಹೊರಕ್ಕೆ ಬೀಳುತ್ತಿತ್ತು. ಇಂದು ಕೊಟ್ಟ ಮಡಿಬಟ್ಟೆ ವಿಗ್ರಹದ ಮೈಮ್ಯಾಲಿರುತ್ತಿತು. ಚಂದಮುತ್ತ ದೈವಕ್ಕೆ ಕಳ್ಳಿನ ನೊರೆ, ಈಚಲರುಚಿಯರ್ಪಿಸಿ, ಬಾಗಿದ ನಮಸಾರವ ಮಾಡುತ್ತಿದ.
ಚಂದಮುತ್ತನಿಗೆ ದಿನಾ ಆಗಬಾರದ ಅನುಭವಗಳಾಗುತ್ತಿದವು. ಶಿಲಾಮೂರ್ತಿಯ ಸಮೀಪ ಇದ್ದಾಗ ಇಡೀ ಡಿನ ಡಿವ್ಯ ಉದ್ರೇಕದ ಚಿಲುಮೆಯಲ್ಲಿ ಇರುತ್ತಿದ್ದ.
ಒಂದು ದಿನ ದೈವದ ಪೂಜೆ ಮುಗಿಸಿ ಹೊರಬಂದಾಗ ಅಂಗಳದಲ್ಲಿ ಶೃಂಗಾರ ಹೂದೋಟ ಬೆಳೆಯಬೇಕೆಂದು ಮಲ್ಲಿಗೆ ಬಳ್ಳಿಯ ನೆಟ್ಟ: ನೆಟ್ಟ ಮರುದಿನವೆ ಬಳ್ಳಿ ಚಿಗುರಿ ನಳ ನಳಿಸಿ ಬೆಳೆಯಿತು.
ಮಾರನೇ ದಿನ ಮೊಗ್ಗು ಮೂಡಿ ಸುತ್ತ ಸೀಮೆಯ ತುಂಬ ಪರಿಮಳದ ಗಾಳಿ ಘಮ ಘಮಿಸಿ ಚಂದಮುತ್ತ ಆನಂದದ ದಿಗಿಲಾಯಿತು. ತಕ್ಷಣ ಕಂಬಳಿಯ ಸೆರಗಿನಲ್ಲಿ ಕಣ್ಣು ಕೋರೈಸುವ ತಾರೆಯಂಥ ಮಲ್ಲಿಗೆ ಮೊಗ್ಗು ಹರಿದು ಅವಸರದಲ್ಲಿ ಪೋಣಿಸಿ ಸರ ಮಾಡಿದ. ಒಡನೆ ಗುಡಿಯೊಳಕ್ಕೋಡಿ ವಿಗ್ರಹದ ಎದುರಿಗೆ ನಿಂತು ತಗುಬಗಗೊಂಡ,-
ಮಾಟಗರ್ತಿ ಯಕ್ಷಿ, ಮಾಯಕಾರ್ತಿ ಯಕ್ಷಿ

ತಂತ್ರಗಾರ್ತಿ ಯಕ್ಷಿ, ಮಂತ್ರಗಾರ್ತಿ ಯಕ್ಷಿ
ಚಿಕ್ಕವಳು ಯಕ್ಷಿ, ಎಳೆಬೈತಲೆಯ
ಸುದ್ದ ಸುಳಿಯೋಳು ಯಕ್ಷಿ!
ಇರುಳಿನ ಹಾಗೆ ಸುರುಳಿಗೂದಲ
ಕರಚೆಲುವೆ ಯಕ್ಷಿ!
ಅವಳೊಂದು ಕಣ್ಣಿನ ಭಾವ ನೋಡಿದರೆ
ಸಂಪಿಗೆ ಎಸಳಂತೆ.
ಅವಳೊಂದು ಬಾಯ ಭಾವ ನೋಡಿದರೆ
ಬೆಳ್ದಿಂಗಳ ನಗೆ ಸುರಿಸುತ್ತ
ಒಲುಮೆಯ ಚಿಲುಮೆ ಚಿಮ್ಮುತ್ತ
ಇನ್ನೇನು ಕುಣಿಯಲಿರುವ ನವಿಲಂತೆ
ನಿಂತ ಮುರ್ತಿಯ ನೋಡಿ
ಚಂದಮುತ್ತನಿಗೆ ಮೆಚ್ಚಾಗಿ
ಕೈ ಮೈ ಮನಕ್ಕೆ ಮೋಹದ ಹುಚ್ಚಡರಿ
ಶಿಲಾಮುರ್ತಿಯ ತುರುಬಿನಲ್ಲಿ ಮಲ್ಲಿಗೆ ಮೊಗ್ಗಿನಸರ ತುರುಬಿದ.
ದಳದಳ ಅರಳಿ ಹೂವಾದವು ಮುಡಿಗೇರಿದ ಮೊಗ್ಗು!
ಅಂದಕ್ಕೊಂದು ಮೊಗ್ಗು ಚಂದಕ್ಕೊಂದು ಮೊಗ್ಗು ಏರಿಸಿದ.
ಕಂಡಹಾಗೆ ಕಾಣಿಸದ ಹಾಗೆ ಮೂರ್ತಿಯ ಕೆನ್ನಿಯ ಸ್ಪರ್ಶಿಸಿದ.
ಶಿವ ಶಿವಾ! ಕೆನ್ನೆ ಕತ್ತಿನ ಮ್ಯಾಲೆ
ಯಾರದೋ ಉದ್ರೇಕದ ಉಸಿರಾಟ ತಾಗಿತು!
ಮೈಯಲ್ಲಿ ಮಿಂಚಿನ ಹೊಳೆ ಹರಿದು
ಕೊಂಟದ ಕೊಳಲು ಕಿತ್ತು ತುಟಿಗಿಟ್ಟುದೇ ತಡ,
ಯಾರೋ ಕಾಡಹಕ್ಕಿಯ ಹಾಡುಗಳ ಹಕ್ಕಿ
ಹುಡುಗನ ಮ್ಯಾಲೆ ಚೆಲ್ಲಿ ಕಿಲಕಿಲ ನಕ್ಕರು.
ಗಾಳಿಯಲ್ಲಿ ತೇಲಾಡುವ ಹಾಡುಗಳ
ಗಕ್ಕನೆ ಕೊಳಲುಲಿಯಲ್ಲಿ ಹಿಡಿಡು ನುಡಿಸುತ್ತ
ಹಾಡು ತೋರಿದ ತಾಳ ಅನುಸರಿಸಿ
ಕುಣಿಯತೊಡಗಿದ.
ರಾಗಗಳಿಗೆ ಸರಾಗ ಒಲಿದ ಯಕ್ಷಿ
ಕಲ್ಲಿನ ಬಂಧನದಿಂದ ಛಟ್ಟನೆ ಬಿಡುಗಡೆ ಹೊಂದಿ
ಗಡಬಡಿಸಿ ಉಟ್ಟ ಮಡಿಬಟ್ಟೆಯ ತೀಡಿಕೊಂಡಳು.
ಅಂಗೈಯ ಕನ್ನಡಿ ಮಾಡಿ ನೋಡಿಕೊಂಡು
ಕುರುಳು ತಿದ್ದಿಕೊಂಡಳು.
ಸೋರ್‍ಮುಡಿಯ ಹೂವಿನ ಸರವ
ಮತ್ತೆ ಮುಟ್ಟಿ ನೋಡುತ
ಕಣ್ಣಿನಲ್ಲಿ ದೀಪವುರಿದು ಬೆಳಕಿನಲ್ಲಿ ತೇಲುತ
ಸಡಗರಿಸಿದಳು.
ಚಂದದ ಹುಡುಗ ಚಂದಮುತ್ತ ಕಲ್ಲುಮುಳ್ಳೆನ್ನದೆ ಕುಣಿಯುತ್ತಿದ್ದ.
ರೂಪುರೇಖೆ ಸದ್ದುಳ್ಳ ಚಂದಮುತ್ತ ಮರಡಿ ಮಾಳ ಅನ್ನದೆ ಹೆಜ್ಜೆ
ಹಾಕುತ್ತಿದ್ದ.
ಹಾಡು ಅಲೆ ಅಲೆಯಾಗಿ ನುಗ್ಗಿ ಯಕ್ಷಿಯ ತೇಲಿಸಿದಾಗ
ತೂಕ ತಪ್ಪಿದಂತಾಗಿ ಸಮತೂಕ ಸರಿಪಡಿಸಿಕೊಂಡಳು.
ಕ್ಷಣಕ್ಷಣಕೆ ಹುಟ್ಟುವ ಹೊಂದುವ ಬೆಳೆಯುವ
ಏನಿದೇನೇ ತಾಯಿ ಈ ಅನುಭವ!
-ಎನ್ನುತ ನವಿಲಿನ ಹೆಜ್ಜೆ ಹಾಕಿದಳು, ಚಿಗುರು ಪಾದದ ಯಕ್ಷಿ ಕಲ್ಲೊರಟು ಮಣ್ಣೊರಟು ಕುಂಕುಮ ಕಾಲಿಗೆ ತಾಕಿ ನೋವಾಗಿ ಹಾ ಎಂದು ನರಳಿ ಅಸಹಾಯಕಳಾಗಿ ಹೇಳಿದಳು ಎಳೆಯ ಪಾದದ ಯಕ್ಷಿ:
ಅಯ್ಯಾ ಆತುರದವನೆ, ಅಯ್ಯಾ ಕಾತರದವನೆ
ಹೂಬಿಟ್ಟ ಕಬ್ಬಿನ ಜಲ್ಲೆಯಂಥವನೆ
ಚೆಲುವನೆ, ಎಲ್ಲರೊಳಧಿಕನೆ
ನೆಲದಲ್ಲಿ ಕಾಲೂರಿ ಗೊತ್ತಿರದವಳು
ನಾ ಹ್ಯಾಗೆ ಕುಣಿಯಲಿ?
ಕುಣಿಯದೆ ಹ್ಯಾಗಿರಲಿ?
ನಿಲ್ಲಿಸೋ ನಿಲ್ಲಿಸಯ್ಯಾ.

ಇದ್ಯಾವುದನ್ನೂ ಕೇಳಿಸಿಕೊಳ್ಳದೆ ಹಾಡಿನಲ್ಲಿ ತನ್ಮಯನಾಗಿದ್ದ, ಕುಣಿದು ಕುಣಿದು ಅಂಗಜಲದಲ್ಲಿ ಅದ್ದಿಹೋಗಿದ್ದ ಚಂದಮುತ್ತನ ಚೆಲ್ವಿಕೆಯ ಚೋದ್ಯವ ನೋಡಿ ಸೋಜಿಗಗೊಂಡಳು:
ಅವ್ ನೋಡ ಕೊಳಲೂದಿ ಕುಣಿಯುವ ಹುಡುಗ
ಹುಚ್ಚು ಕೆರಳಿಸುತಾನ ಅಂಗಾಂಗದೊಳಗ
ಹೆಗಲಿನ ಗೊಂಗಡಿ ನೆತ್ತೀತುರಾಯಿ
ಗರಿಬಿಚ್ಚಿ ಕುಣಿಧಾಂಗ ಶ್ರಾವಣದ ಸೋಗಿ ||
ಕಲ್ಲೆಂದು ಮೆಲ್ಲಗೆ ಸೊಲ್ಲಿಲ್ಲದೆ ಬಂದಾ
ಎಡದ ಕೈಯಲ್ಲಿ ಎನ್ನ ಸೋರ್‍ಮುಡಿಯ ಹಿಡಿದಾ
ಬಲಗೈಲಿ ಮುಡಿಗೆ ಮಲ್ಲಿಗೆ ಸುತ್ತಿ ನಲಿದಾ
ಮುಂಗುರುಳು ನ್ಯಾವರಿಸಿ ಕಣ್ಣು ಹಬ್ಬಾದ ||
ತಡೆಯಲಾಗಲೆ ಇಲ್ಲ ನಮ್ಮ ಮೈ ನವಿರಾ
ಮೈತುಂಬ ಸಳಸಳ ತುಳುಕ್ಯಾವ ಬೆವರಾ
ಹಟ್ಟಿ ಸ್ವಾಮಿಯೆ ನಿನ್ನ ಕಟ್ಟಳೆಯ ಹೊರತಾ
ಅರಗಳಿಗೆ ಇರಲಾರೆ ನಾ ನಿನ್ನ ಮರೆತಾ ||
ನಿಲ್ಲೋ ಗೊಲ್ಲರ ಹುಡುಗ ಕೊಳಲೂದಬ್ಯಾಡ
ನಮ್ಮ ರಾಗದ ಹುಚ್ಚ ಕೆರಳಿಸಬ್ಯಾಡ
ಮಂದಿ ಏನೆಂದಾರು ನಾ ಹಿಂದೆ ಬರಲು
ವಾರೀಗಿ ದೇವರು ಕೋಪಗೊಂಡಾರು ||
ತಿಳಿಯಬಲ್ಲವರೆಲ್ಲ ತಿಳಿಹೇಳಿರವ್ವಾ
ಸುರರ ಜಾತಿಗೆ ನಾನು ಹೊರತಾದೆನವ್ವಾ
ನವು ಹಂಗಿಗರವ್ವ ಚೆಲುವನ ಕಲೆಗೆ
ಕಲೆಯೊಂದಿಗೇ ಇವನ ಮುಗ್ಧ ಒಲುಮೆಗೆ ||
ಅಷ್ಟರಲ್ಲಿ ಬೇರೆ ಯಾವುದೋ ದನಿ ಕೇಳಿಸಿ ಯಕ್ಷಿ ಹಿಂಜರಿದು ಮತ್ತೆ ಶಿಲಾಮೂರ್ತಿಯಾಗಿ ಶಿಲೆಯಲ್ಲಿ ಅಡಕಗೊಂಡಳು.

೧೧. ಹಂಸ ಹಂಸಿಯರ ಜೋಡಿ

ಇಂತೀ ರೀತಿ ಮಾಯಕಾರ್ತಿ ಯಕ್ಷಿ ಚಂದಮುತ್ತನಿಗೊಲಿದು ಅವನ ಭಯಭಕ್ತಿಯಲಿ ಮುಳುಗೆದ್ದು ವಾಲಾಡುತ್ತ ಇರುವಲ್ಲಿ,
ಇತ್ತ ಚಿನ್ನಮುತ್ತನ ಹೃದಯದಲ್ಲಿ ಹಗೆಯ ಹೊಗೆಯಾಡತೊಡಗಿದವು. ಯಾವಳೋ ಮಾಯದ ಯಕ್ಷಿ ಅವನಿಗೆ ಒಲಿದಿರುವಳೆಂದು, ದಿನಾ ಮೈಲಿಗೆ ಕಳಚಿ ಇವ ಕೊಟ್ಟ ಮಡಿಯನುಡುವಳೆಂದು, ದಿನಕೊಂದು ವಿದ್ಯ ಸಿದ್ಧಿಗಳ ಕೊಡುವಳೆಂದು ಕತೆಗಳ ಕೇಳಿ ಅಸೂಯೆಯಿಂದ ಕಂಗಾಲಾಗಿ ಹೋದ.
ಚಂದಮುತ್ತನ ಬಗ್ಗೆ ನಿಂದಕದ ಮಾತಾಡಿ
ಆನಂದಪಟ್ಟ.
ಹುಸಿಕಳಂಕಗಳ ಹುಟ್ಟಿಸಿ
ಹಾದಿಬೀದಿಗಳಲ್ಲಿ ಅತಿರಂಜಿಸಿ ಹೇಳಿದ.
ಚಂದನುತ್ತನ ದುರ್ಗುಣಗಳ ಸಾವಿರ ಸಾರಿ
ಜಪಿಸಿ ಸೇಡಿನ ಕಿಡಿಯಾದಲ್ಲಿ
ಯಕ್ಷಿಯ ಮೊದಲ ಪರಿಸೆ ಬಂತು…..
ನಮಗೆ ಚಿನ್ನಮುತ್ತನ್ನ ಕಂಡರಾಗುವುದಿಲ್ಲ. ಯಾಕೆಂದರೆ ಚಿನ್ನಮುತ್ತನಿಗೆ ಕನಸು ಕಂಡರಾಗುವುದಿಲ್ಲ. ಕತೆಯಲ್ಲಿ ಕಾಲಿಟ್ಟವನಾದ್ದರಿಂದ ಬಿಡುವಂತಿಲ್ಲ. ಇಂತಾಗಿ ನಾವು ಕಂಡ ಸೋಜಿಗದ ಸಂಗತಿಯೊಂದನ್ನು ಹೇಳಿ ಅವನನ್ನ ಕತೆಯಲ್ಲಿ ಕರೆದುಕೊಳ್ಳತ್ತೇವೆ:
ತಾಯಿಯಿಲ್ಲದ ಒಬ್ಬನೇ ಮಗನ್ನ ದೊಡ್ಡ ಹೆಗಡೆ ಕೊಂಡಾಟದಲ್ಲಿ ಬೆಳೆಸಿದನಾಗಿ ಸಿರಿಸಂಪತ್ತು ಅದ್ದೂರಿ ದೊರೆತನದ ಸುಖಸಾಗರದಲ್ಲಿ ಬಾಳಾಡ್ತ ಇದ್ದ ಚಿನ್ನಮುತ್ತ. ಎತ್ತರವಾದ ಆಳು. ವ್ಯಾಯಾಮ ಮಾಡಿ ಕುಸ್ತೀ ಹಿಡಿದು ಗಟ್ಟಿಮುಟಾಗಿದ್ದ ಅವನ ದೇಹ ಮನಸ್ಸುಗಳಲ್ಲಿ ಮೃದುವಾದ ಭಾಗಗಳೇ ಇರಲಿಲ್ಲ. ಬಹಳ ಕಾಲ ದೇಹವನ್ನ ಸೂರ್ಯನ ಸನ್ನಿಧಿಯಲ್ಲಿಟ್ಟಿದ್ದರಿಂದ ಅದು ಸುಟ್ಟ ಇಟ್ಟಿಗೆಯಂತಾಗಿತ್ತು. ಸರಿಕರೊಂದಿಗೆ ಕೂಡ ಸರಸವಾಡುವವನಲ್ಲ. ಚಿನ್ನಿಕೋಲು ಗೋಲಿಗುಂಡು ಲಗ್ಗೆ ಚೆಂಡಿನಲ್ಲಿ ಕೂಡ ತಾನೇ ಗೆಲ್ಲಬೇಕೆಂಬಾತ. ಬರಿ ಒಂದು ಹುಬ್ಬಿನ ಗಂಟಿನಿಂದ ಎದುರು ನಿಂತವನ ಬಾಯಿ ಮುಚ್ಚಬಲ್ಲವನಾಗಿದ್ದ. ಇನ್ನೇನು, ರಾತ್ರಿ ಅವನ ಕಣ್ಣು ಕಾಣುತ್ತಿರಲಿಲ್ಲ. ಇರುಳು ಸತ್ಯಗಳ ಕಾಣುವ ವಿವೇಕ ಮತ್ತು ತಾಳ್ಮೆ ಬಿಸಿಲಬೆಡಗಿನವರಲ್ಲಿ ಇರಲಿಲ್ಲವಾಗಿ ಇದೊಂದು ಸೋಜಿಗದ ಮಾತಲ್ಲ.
ಇಂತಿರಲು ಒಂದು ದಿನ ಮಡುವಿನಾಚೆ ದಡದಲ್ಲಿ ನಸುಕಿನಲ್ಲಿ ಯಕ್ಷಿಯ ಪೂಜೆ ಮುಗಿಸಿ ಚಂದಮುತ್ತ-ಅದೇನು ಮೂಡು ಬಂತೋ-ಕೊಳಲು ನುಡಿಸುತ್ತಿದ್ದ. ನಸುಕಿನ ಮಂಜು ಮಡುವಿನ ಮ್ಯಾಲೆ ಉಗಿಯ ಹಾಗಾಡುತ್ತಿತ್ತು. ಸವಿಗೊರಳ ಹಕ್ಕಿಗಳು ಬೆಳಗಿನ ಚಿಲಿಪಿಲಿ ನಿಲ್ಲಿಸಿ ಕೊಳಲು ಆಲಿಸುತ್ತಿದ್ದವು. ಎಳೆಯ ಹಂಸಹಂಸಿಯರ ಜೋಡಿಯೊಂದು ಮಡುವಿನ ಕನಸಿನ ಹಾಗೆ ಅರೆಗಣ್ಣಾಗಿ ತೇಲುತ್ತ ಕೊಳಲಾಲಿಸುತ್ತ ಮೈಮರೆಯುತ್ತಿದ್ದವು. ನಾವು ಇಬ್ಬನಿಯಿಂದ ಥಳಥಳ ಹೊಳೆವ ಹಸಿರಿನಲ್ಲಿ ಕಾಲೂರಿ ಸುತ್ತಲಿನ ಶೀತಲ ಶಿವಶಾಂತಿಯನ್ನು ತೀಡಿ ಬರುವ ಕೊಳಲಿಗೆ ಶಬ್ದಮುಗ್ಧರಾಗಿ ನಿಂತಿದ್ದೆವು. ಅಷ್ಟರಲ್ಲಿ ಯಾರೋ ನೀರಲ್ಲಿ ಜಿಗಿದ ಸದ್ದಾಗಿ ಆತಂಕವಾಯಿತು. ಯಾಕೆಂದರೆ ಹಂಸದ ಜೋಡಿಯ ಮನಸ್ಸು ಕದಡುವುದು ನಮಗೆ ಬೇಕಿರಲಿಲ್ಲ. ಆದರೆ ನಮ್ಮ ಊಹೆ ಮೀರಿ ಹಂಸಹಂಸಿಯರು ಕೊಳಲ ಹಾಡಿನಲ್ಲಿ ಸುಖರಂಜಿತರಾಗಿ ತನ್ಮಯರಾಗಿದ್ದರು. ನೀರಿನ ಸದ್ದಿನಿಂದ ಸಮಾಧಿ ಭಂಗವಾಗಲೇ ಇಲ್ಲ.
ನೀರಿಗಿಳಿದವನು ಚಿನ್ನಮುತ್ತ. ಕೊಳಲುಲಿ ಚಂದಮುತ್ತನದೆಂದು ಗೊತ್ತಾಗಿ ಅಸೂಯೆಯಿಂದ ಸುಖವಂಚಿತನಾದ. ನೀರಿನಲ್ಲಿದ್ದರೂ ಮಾರಾಯನ ಮುಖ ಕಪ್ಪಿಟ್ಟಿತು. ಜಳಕವ ಮಾಡಿ ಅವಸರದಲ್ಲೆದ್ದು ಮೈಲಿಗೆ ಕಳೆದು ಲಂಗೋಟಿ ಹಾಕಿದ. ಜಡೆಕಟ್ಟಿ ಅಂಚಿನ ಮಡಿಯುಟ್ಟ. ಕೊಳಲದನಿ ತಡೆಯಿಲ್ಲದೆ ಹರಿದು ಬರುತ್ತಿರುವಾಗ ಹಂಸ ಜೋಡಿಯ ತನ್ಮಯತೆ ನೋಡಿ ಕಣ್ಣಿಗೆ ಖಾರ ಉಗ್ಗಿದಂತಾಯ್ತು ಅವನಿಗೆ.
ಸುಡುಗಾಡ ಬೆಂಕಿಯ ಥರ ಕಣ್ಣುರಿದವು.
ರವರುದ್ರಗೋಪದಲ್ಲಿ ಕೊತಕೊತ ಕುದ್ದು
ಬುದ್ಧಿತಪ್ಪಿ ಅನುಚಿತವ ನೆನೆದು
ಬೆಣಚುಗಲ್ಲು ತಗೊಂಡು
ಸದ್ದಿಲ್ಲದೆ ಹೊಂಚಿಹೊಂಚಿ ಹೆಜ್ಜೆಯ ಹಾಕಿ ಸಂಚರಿಸಿ
ಆಯಕಟ್ಟಿನ ಜಾಗದಲ್ಲಿ ನಿಂತು, ಗುರಿಹಿಡಿದು
ತೇಲುವ ಜೋಡಿಗೆ ಎಸೆದುಬಿಟ್ಟ ಶಿವನೆ!
ಶಿವಶಿವಾ
ಗಂಡು ಹಂಡದ ಕತ್ತಿನ ಕಳಸ ಮುರಿದು
ಒದರಲೂ ಆಗದೆ ಒದ್ದಾಡಿ ಪಟಪಟ ರೆಕ್ಕೆಯ ಬಡಿದು
ನೀರಲ್ಲಿ ಮುಳುಗಿತು!
ಕಂಪಿತೆ ಹಂಸಿ ಏನೆಂದು ತಿಳಿಯದೆ
ಪ್ರೈಯಕರ ಮುಳುಗಿದುದ ನೋಡಿ
ಕಿಟಾರ್‍ನೆ ಕಿರಿಚಿದಳು.
ತರುಮರಗಳಲ್ಲಿದ್ದ ಹಕ್ಕಿಗಳು ಕಿತ್ತಾಡಿ
ಅಪರಿಚಿತ ವಿಕಾರ ಸದ್ದು ಮಾಡಿ
ಕಿರಿಚಿ ಚೀತ್ಕಾರ ಮಾಡಿದವು.
ಉಗುರಿನಿಂದ
ತಂತಾವೇ ಪರಚಿಕೊಂಡು
ರೆಕ್ಕೆಗಳಿಂದ ತಿವಿದಾಡಿದವು.
ಗಾಬರಿಯಲಿ ಹಂಸಿ
ಅಗಲವಾದ ಕೆಂಗಣ್ಣು ತೆರೆದು ಚಿನ್ನಮುತ್ತನ
ನೋಡಿ, ನೋಟಗಳಿಂದ ಇರಿದು
ಅವನಿದ್ದ ಕಡೆಗೆ
ಬಿಟ್ಟ ಬಾಣದ ಹಾಗೆ
ಹಾರಿದಳು.
ಭಯದಲ್ಲಿ ಚಿನ್ನಮುತ್ತ ಸರಸರ್‍ನೆ ಮರೆಯಾದ.
ನಮ್ಮ ಕರುಳಿಗೆ ಗಾಯವಾಗಿ
ಹಂಸಿಯ ಆಲಾಪ ನೋಡಲಾರದೆ
ಚಿನ್ನಮುತ್ತನ, ಅವನ ಹುಚ್ಚಿನ ಸಮೇತ
ಅಲ್ಲೇ ಬಿಟ್ಟು ಬಂದೆವು ಶಿವಾ.

ಆಮೇಲೆ ಹಂಸಿ ಹಾರಲಿಲ್ಲ, ಕೂಗಲಿಲ್ಲ, ಬೇರೆ ಹಕ್ಕಿಗಳೊಂದಿಗೆ ಬೆರೆಯಲಿಲ್ಲ. ತಿನ್ನಲಿಲ್ಲ, ನೀರು ಮುಟ್ಟಲಿಲ್ಲ. ಪ್ರಿಯಕರನ ಕಗ್ಗೊಲೆಯಾದ ದಡದ ಬಳಿ ಹುಣ್ಣಿವೆ ನಂತರದ ಚಂದ್ರನಂತೆ ದಿನಾ ಕ್ಷೀಣಿಸುತ ನಿಂತಳು. ದುಃಖ ತಡೆಯದೆ ಒಮ್ಮೆ ನಾವೇ ಸಮಾಧಾನ ಹೇಳಹೋದಾಗ ಅವಳು ಅಂಗಲಾಚಿದಳು:
“ದಯಮಾಡಿ ಒಮ್ಮೆ, ಒಂದೇ ಬಾರಿ ಅವನನ್ನ ಇಲ್ಲಿಗೆ ಕರೆದು ತರುತ್ತೀರಾ? ಅವನಿಗೆ ನಾನೇನೂ ಮಾಡುವುದಿಲ್ಲವೆಂದು ಭಾಷೆ ಕೊಡುತ್ತೇನೆ.”
-ಇಂತೆಂಬ ನುಡಿ ಕೇಳಿ ಒಪ್ಪಿಕೊಂಡು ಬಂದೆವು.
ರಾತ್ರಿ ಚಿನ್ನಮುತ್ತನ ಕನಸಿನಲ್ಲಿ ಹಂಸಿಯ ತೋರಿಸಿ “ಅವಳಿದ್ದಲ್ಲಿಗೆ ಒಮ್ಮೆ ಹೋಗಿ ಬಾ” ಎಂಬ ಸಂದೇಶ ಕೊಟ್ಟೆವು. ತಕ್ಷಣ ಎದ್ದು ಕೂತ. ಹೆದರಿದ್ದ. ಜಲಜಲ ಬೆವರೊರೆಸಿಕೊಂಡು ಮತ್ತೆ ಮಲಗಿದ. ಆದರೆ ಬೆಳಿಗ್ಗೆ ಬರಲಿಲ್ಲ.
ಮಾರನೇ ದಿನ ರಾತ್ರೆ ಅದೇ ಕನಸು ತೋರಿದೆವು. ಈಗಲೂ ಎದ್ದು ಹೆದರಿ ಕೂತ. ಆದರೆ ಬರಲಿಲ್ಲ. ಹೀಗೇ ನಾಕೈದು ದಿನ ತೋರಿದರೂ ಬರಲಿಲ್ಲ. ಈಗ ಅದೇ ಕನಸನ್ನ, ಒಂದೇ ರಾತ್ರಿ ಅನೇಕ ಬಾರಿ ತೋರಿಸಿದೆವು. ಬರಬರುತ್ತ ಕಣ್ಣು ಮುಚ್ಚಿದಾಗಲೆಲ್ಲ ತೋರಿಸಿದೆವು. ಇನ್ನು ಈ ಕನಸಿಂದ ಮುಕ್ತಿಯಿಲ್ಲವೆಂದು ಗೊತ್ತಾಗಿ ತುಂಬಿದ ಸೋಮವಾರ ಬೆಳಿಗ್ಗೆ ನಡಿನಲಿ ಚಿಕ್ಕ ಚೂರಿ ಸಿಕ್ಕಿಸಿಕೊಂಡು, ಕೈಯಲ್ಲಿ ಕಕ್ಕೆ ದೊಣ್ಣೆ ಹಿಡಕೊಂಡು ಬಂದ ನೋಡು,-
ಶಿವ ಶಿವಾ-
ಅಷ್ಟು ದೂರದಿಂದಲೇ ಹನ್ಸಿ ಗುರುತಿಸಿ ಅವಳ ಕಣ್ಣು ಫಳಫಳ ಹೊಳೆದವು. ಚಿನ್ನಮುತ್ತು ಕೋಲು ಗಟ್ಟಿಯಾಗಿ ಹಿಡಿದುಕೊಂಡು ನಿಂತ. ಹಂಸಿ ಕಾಲೂರಿ ಎದುರೆದುರೇ ನಡೆಯುತ್ತ ಬಂದು ಅವನೆದುರು ಸಮೀಪದಲ್ಲಿಯೇ ನಿಂತಳು.
“ನನ್ನ ಪ್ರಿಯಕರನ ಪ್ರಾಣ ತಗೊಂಡೆಯಲ್ಲವೆ?
ನನ್ನ ಪ್ರಾಣವನ್ನೂ ತಗೋ ನನ್ನಪ್ಪಾ”
-ಎಂದು ಮನುಷ್ಯರಂತೆ ಮಾತಾಡಿ, ದೇಹದ ಹಿಂಬಾಗದ ಮ್ಯಾಲೆ ಕುಂತು ಎರಡೂ ಕಾಲುಗುರುಗಳನ್ನು ಜೋರಿನಿಂದ ಎದೆಯಲ್ಲಿ ತುರುಕಿ ಎದೆಯನ್ನ ಹರಿದುಕೊಂಡು ಬಿಟ್ಟಳು ಶಿವನೆ! ಶಿವ ಶಿವಾ ಅವಳ ಶುಭ್ರ ಎದೆ ಹರಿದು ನೆತ್ತರು ಚಿಲ್ಲನೆ ಚಿನ್ನಮುತ್ತನ ಮುಖಕ್ಕೆ ಸಿಡಿಯಿತು. ಹಾ ಎಂದು ನೋಡಿದರೆ ಅಷ್ಟರಲ್ಲೇ ಹಂಸಿಯ ಕತ್ತಿನ ಕಳಸ ಮುರಿದು ಗೋಣು ಚೆಲ್ಲಿ ಸತ್ತಾಗಿತ್ತು. ನಮ್ಮಲ್ಲಿಯ ಕೆಲವರು ದೃಶ್ಯವ ನೋಡಲಾರದೆ ಕಿಟಾರ್‍ನೆ ಕಿರಿಚಿಕೊಂಡರು. ಎದೆ ಪರಚಿಕೊಂಡರು. ಮುಖಮುಚ್ಚಿಕೊಂಡರು!
ಚಿನ್ನಮುತ್ತನ ಬಗ್ಗೆ ನಮಗೆ ಗೊತ್ತಿದ್ದ ಸಂಗತಿ ಇದು ಮಾತ್ರ. ನಾವಿಂತು ಈ ಕಥೆಯ ಹೇಳಿ ಮುಗಿಸುವುದರೊಳಗಾಗಿ ಯಕ್ಷಿಯ ಪರಿಸೆ ಬಂತು……

೧೨. ಬಂತಣ್ಣ ಪರಿಸೆ ಬಂತೊ

ಶಿವಪುರದ ಸಮಸ್ತ ಹಿರಿಕಿರಿಯರು ಮಂದಿಮಾರ್ಬಲ ಸಹಿತ ಮಿಂದು ಮಡಿಯುಟ್ಟು, ಹಾಡಿಗೂಡುಗಳಲ್ಲಿ ಹಬ್ಬದ ಬೆಳಕಿಟ್ಟು ಕುಲದೇವರ ಪೂಜಿಸಿದರು; ತಂತಮ್ಮ ದನಕರು, ಕುರಿಮೇಕೆ ಮುಂತಾದ ಬದುಕಿನ ಭಾಗ್ಯಗಳನ್ನ ಹೂಹಿಂಗಾರುಗಳಿಂದ ಶೃಂಗರಿಸಿದರು. ಕುಲಗುರು ಮತ್ತು ಹೆಗಡೇನ ಹಿರಿತನದಲ್ಲಿ ಕೊಂಬು, ಕಹಳೆ, ನಗಾರಿ, ನೌಬತ್ತು ಮುಂತಾದ ಯಾವತ್ತು ವಾದ್ಯಂಗಳ ನುಡಿಸುತ್ತ ಯಕ್ಷಿಯ ಗುಡಿಗೆ ಹೋದರು. ಚಂದಮುತ್ತ ಈ ದಿನ ಅಬ್ಬೆಯ ಆದೇಶದಂತೆ ಮಿಂದು ಲಂಗೋಟಿಗಳಲ್ಲಿ ಮೇಲಾದ ಮುತ್ತಿನ ಗೊಂಡೆ ಜರತಾರಿ ಅಂಚಿನ ಲಂಗೋಟಿಯ ಧರಿಸಿ, ಮುಂಗೈಗೆ ಬೆಳ್ಳಿಯ ಕಡಗ ಇಟ್ಟು ಶೃಂಗಾರವಾಗಿ ಬೆಳ್ಳಿಕೊಳಲು ಸೊಂಟಕ್ಕೆ ಸಿಕ್ಕಿಸಿಕೊಂಡು ನಡೆದ. ಚಿನ್ನಮುತ್ತ ಅಂಚಿರುವ ಧೋತ್ರವುಟ್ಟು ಬಂಗಾರದಲ್ಲಿ ಶೃಂಗಾರವಾಗಿ ಮುತ್ತಿನ ಮುದ್ರೆಯಿರುವ ಉಂಗುರವಿಟ್ಟುಕೊಂಡ. ಕೈಗೆ ಚಿನ್ನದ ಕಡೆ ತೋಡೆಯಿಟ್ಟುಕೊಂಡು ಗೆಜ್ಜೆ ಕಟ್ಟಿದ ಪಿಳ್ಳಂಗೋವಿಯ ಹಿಡಿದುಕೊಂಡು ನಡೆದ.
ಯಕ್ಷಿಗುಡಿಯ ಅಂಗಳವ ಸೆಗಣಿ ಸಾರಿಸಿ ಕಬ್ಬಿನ ಕೋಲಿನ ಕಂಬ, ಪಂಚವಳ್ಳಿ ವಿಳ್ಯೆದೆಲೆಯ ಚಪ್ಪರ ಹಾಕಿ ನಂದಾದೀಪ ಹಚ್ಚಿದರು. ಹಟ್ಟಿಯ ದೇವರು ಬೆಟ್ಟದ ದೇವರು ಹಾಡಿ ಗೂಡಿನ ಸುತ್ತೂ ಸೀಮೆಯ ಸಮಸ್ತ ದೇವದೈವಂಗಳ ಕರೆಸಿ, ಧೂಪದೀಪ ಬೆಳಗಿ ಪಾದಕಾಣಿಕೆ ನೀಡಿ ಮರ್ಯಾದೆ ಮಾಡಿದರು.
ಚಂದಮುತ್ತ ಯಕ್ಷಿಯ ವಿಗ್ರಹವ ಮೀಯಿಸಿ, ಮಡಿದಟ್ಟಿ ಉಡಿಸಿ, ಬೆಳ್ಳಿ ಬಂಗಾರದಲ್ಲಿ ಶೃಂಗಾರ ಮಾಡಿ, ಕುಂಕುಮವಿಟ್ಟ. ಬಲಬದಿಗೆ ಸಿರಿಸಂಪಿಗೆ, ಎಡಬದಿಗೆ ಎಳೆಹಿಂಗಾರಿಟ್ಟು ಸಾಷ್ಟಾಂಗವೆರಗಿದ. ಗುಡಿಬಾಗಿಲಲ್ಲಿ ಕಟ್ಟಿದ್ದ ಹಿಂಡಿಕುರಿ ಬಲಿಕೊಟ್ಟು ಬಲಿ ಬಡಿಸಿ ಧೂಪ ದೀಪಾರತಿಯ ಹೊಗೆ ಎಬ್ಬಿಸಿದರು. ಆಮೇಲೆ ಸರ್ವರೂ ಮುಂದೆ ಬಂದು ಶಕ್ತಿನಾಮಕಳಾದ ಯಕ್ಷಿಯ ಮೈಚೆಲ್ಲಿ ನಮಸ್ಕಾರವ ಮಾಡಿ-
ಹಿಂಡುವ ಹಸುಕುರಿ ಕೊಡು
ಮೇಯಿಸೋವಷ್ಟು ಕಾಡು ಕೊಡು
ಎಂದು ಬೇಡಿಕೊಂಡರು. ಆಶೀರ್ವಾದ ಪ್ರಸಾದ ಪಡಕೊಂಬಾಗ ಗೋಧೂಳಿ ಲಗ್ನದ ಸಮಯವಾಯಿತು.
ಈಗ ಒಬ್ಬೊಬ್ಬರೇ ಮುಂದೆ ಬಂದು ತಂತಮ್ಮ ಕಲೆ ಕೈಚಳಕ ಚಮತ್ಕಾರಗಳ ತೋರತೊಡಗಿದರು. ಕೋಲಾಟದವರು ಹಾಡು ಹಾಡುತ್ತ ಕೋಲು ಕುಣಿಯುತ್ತ ತೆಂಗಿನ ಮರದಷ್ಟುದ್ದ ಧೂಳೆಬ್ಬಿಸಿದರು:
ಬಂತಣ್ಣ ಪರಿಸೆ ಬಂತೊ
ಮಾಯಕಾರ್ತಿ | ಯಕ್ಷಿಯ ಪರಿಸೆ ಬಂತೊ
ತಾವು ತಾವಿನ ಮಾವು ಚಿಗುರ್‍ಯಾವು | ಗಿಣಿರಾಮ
ಪದಹಾಡಿ ಪರಿಸೆ ಬಂತೋ ||
ಯಾರಿಗೂ ಶಿವಾಪುರಕ್ಕೆ ಹಿಂದಿರುಗುವ ನೆನಪೇ ಆಗಲೊಲ್ಲದು. ಹಿರಿಯನೊಬ್ಬ “ಈಗ ಕುಲಗುರುವಿನ ಶಿಶುಮಕ್ಕಳು ಕಲಿತವಿದ್ಯೆಯ ಒಂದೆರಡು ವರಸೆ ತೋರಿಸಲಿ”- ಎಂದ. ಇದಕ್ಕಾಗಿಯೇ ಕಾಯುತ್ತಿದ್ದನೆಂಬಂತೆ ಚಿನ್ನಮುತ್ತ ಸೊಂಟದಲ್ಲಿ ಸಿಕ್ಕಿಸಿದ್ದ ಚಿನ್ನದ ಗೆಜ್ಜೆ ಕೊಳಲು ತೆಗೆದು ನಿಧಾನವಾಗಿ ರಾಗ ಎತ್ತಿ ನುಡಿಸತೊಡಗಿದ. ಸಹಜ ಸಂಚಾರಗಳ ತಕ್ಕ ಸ್ಥಾಯಿಗಳನ್ನೆಬ್ಬಿಸಿ, ಕಾಳಜಿಯಿಂದ ನಿಯಂತ್ರಿಸಿ ಆಕಾರಗೊಂಬ ಹಾಗೆ ಮಾಡಿದ. ಜನ ಸಂತೋಷಗೊಂಡು ಹೊಳೆಯುವ ಮಾತುಗಳಿಂದ ಕುಲಗುರುವಿನ ಕೌಶಲ ಹೊಗಳಿ, ಈಗ ಚಂದಮುತ್ತನ ಸರದಿಯೆಂದರು.
ಚಂದಮುತ್ತ ಗುರುಪಾದದ ಕಡೆ ನೋಡಿದ. ಕುಲಗುರುವಿನ ಸನ್ನೆಯಿಂದ ಅಪ್ಪಣೆ ಸಿಕ್ಕುತ್ತಲೂ ನೆತ್ತಿ ಕೇಶಗಳ ಸುತ್ತಿಕಟ್ಟಿ, ಎದ್ದು ಬಂದು ಗುರುಪಾದಕ್ಕೆ ಬಾಗಿ ಸತ್ಯದ ಶಿವದೇವರು, ಹೆತ್ತಯ್ಯ, ಮುತ್ತಯ್ಯರ ನೆನೆದು ಸೊಂಟದ
ಬೆಳ್ಳಿಕೊಳಲು ತೆಗೆದು ತುಟಿಗಿಟ್ಟುಕೊಂಡ-
ಮಧುರವಾದ ನಾದಗಳ
ಹದವಾಗಿ ತೆಗೆದು ರಾಗಕ್ಕೆ ಮೊದಲಾದಾಗ
ಮೂಡುಮಲೆಯಲ್ಲಿ ಚಂದ್ರಮೂಡಿ
ಆವರಿಸಿಬಿಟ್ಟಿತು ಎಳೆಬೆಳ್ದಿಂಗಳ ಮಾಯೆ
ಅನಾಯಾಸ.
ಹರುಷದ ಬಳ್ಳಿ ಹಬ್ಬಿತು
ಕೆಳಗೆ ಕ್ಷಿತಿಜದ ತನಕ
ಮ್ಯಾಲೆ ಚಂದ್ರನ ತನಕ.
ಹಾಡು ಅಲೆ ಅಲೆಯಾಗಿ
ಬೆಳ್ದಿಂಗಳಗುಂಟ ತೇಲಿ ತೇಲಿ ಬಂದಾಗ
ಭಾವಪರವಶ ಮಂದಿ ಹಾ ಎಂದರು.
ಚಿನ್ನಮುತ್ತ ಹೊಟ್ಟೆಯುರಿಯಿಂದ ಸುಟ್ಟು ಭಸ್ಮವಾದ. ಇದು ಚಂದಮುತ್ತನ ಗಮನಕ್ಕೆ ಬಂದುದೇ, ಸೇಡು ಆವರಿಸಿಬಿಟ್ಟಿತು. ಪಂತಪೌರುಷಕ್ಕೆ ಬಿದ್ದು ಚಿನ್ನಮುತ್ತ ನುಡಿಸಿದ್ದನ್ನೆಲ್ಲ ತಾನೂ ನುಡಿಸಿ ಅವನ ದೌರ್ಬಲ್ಯಗಳ ಬೆಳಕಿಗೆ ತಂದ.
ಛಲವೇರಿ ಚಾಪಲ್ಯ ಬಲವೇರಿ
ಒಂದಾದ ಮ್ಯಾಲೊಂದು
ರಾಗಂಗಳ ನುಡಿಸಿ
ಜನ ತಲೆಗೊಂದು ಹೊಗಳುವಂತೆ ಮಾಡಿದ.
ಚಂದ್ರನ ಕಿರಣ ಹೆಚ್ಚು ಹೆಚ್ಚು
ಪ್ರಖರವಾಗಿ ಸುಡುತ್ತಿರುವಂತೆ
ಚಿನ್ನಮುತ್ತ ಖಿನ್ನನಾದ.
ಅದ ಕಂಡು ಉತ್ತೇಜಿತವಾಯಿತು
ಚಂದಮುತ್ತನ ಹರ್ಷ.
ಇನ್ನೊಂದು ಹೀಗೇ ಮತ್ತೊಂದು ರಾಗ ಎತ್ತುವಷ್ಟರಲ್ಲಿ ಹಾಡಿನೆಳೆ ಕಿತ್ತಂತೆ ಥಟ್ಟನೆ ಕಟ್ಟಾಯಿತು. ಗುಡ್ಡ ನಕ್ಕಂತೆ ಕೇಳಿಸಿ ಎಲ್ಲ ಮಂದಿ ಆಘಾತಗೊಂಡು ದಿಗ್ಭ್ರಾಂತರಾಗಿ ಹಿಂದಿರುಗಿ ನೋಡಿದರೆ,-
ಎಲ್ಲರ ಹಿಂದೊಂದು ಮುದುಕಿ,
ಹಾಳು ಮುದುಕಿ, ಕೊಳಕು ಮುದುಕಿ
ಚಂದಮುತ್ತನ ಕಡೆ ತಿರಸ್ಕಾರದಿಂದ ನೋಡುತ್ತ,
ಬಾಯಿತುಂಬ ಹಲ್ಲಿನ ನಗೆಯ ಗಹಗಹಿಸಿ ನಗುತ್ತ,
ನಿಂತಿದ್ದಾಳೆ! ಭೂಮಿ ಆಕಾಶಕ್ಕೆ ಏಕಾಗಿ ಕೀಲಿಸಿದಂತೆ!
ಮುಸುರೆ ಮೂಗು ಕೆಂಡಗಣ್ಣು ಕೆಂಪಗೆ ಬಿಟ್ಕೊಂಡು
ಕೆಂಜೆಡೆ ತುಂಬ ನಕ್ಷತ್ರದಂಥ ಮಣಿಗಳ ಮಡಿಕ್ಕೊಂಡು
ಕತ್ತಿನ ತುಂಬ ರುದ್ರಾಕ್ಷಿ ಧರಿಸ್ಕೊಂಡು
ಛಿದ್ರಕುಬಸ ತೊಟ್ಟು ಚಿಂದಿ ಸೀರೆ ಉಟ್ಟು,
ಲಂಬ ಕುಚ ಜೋತ ಕರ್ಣ, ಕೈಯಲ್ಲಿ ಬಿದಿರ ಕೋಲಿನ ಚೌಡಿಕೆ
ಹಿಡಿದುಕೊಂಡು
ರುದ್ರಗೋಪವ ತಾಳಿ
ಮನಸ್ಸಿಗೆ ಬಂದ ಹಾಗೆ ಧ್ವನಿ ಮಾಡಿ ಕೈಬೀಸಿ ಕಣ್ಣು ತಿರುವುತ್ತ,
ಗೊತ ಗೊತ ನಾರುತ್ತ ಕಂಡವರು ಕಾರಿಕೊಳ್ಳುವ ಹಾಗೆ, ನಿಂತವರು
ಹೇಸಿಕೊಳ್ಳುವ ಹಾಗೆ
ಅಕಾರಾಳ ವಿಕಾರಾಳವಾಗಿ ನಿಂತಿದ್ದಾಳೆ!
ನೋಡಿ ಹಿರಿಯರಿಂದ ಕಿರಿಯರ ತನಕ ಗಾಬರಿಯಾದರು. ಕಾಡು, ಬೆಟ್ಟ, ಗುಡಿ ಗುಂಡಾರ ಮಗುಚಿ ಬಿದ್ದಂಗಾಯ್ತು. ಸದ್ದು ಗದ್ದಲವಾಗಿ ಇದ್ಯಾವ ಲೋಕದ ರಾಕ್ಷಸಿಯೆಂದು, ಇನ್ನು ಜೀವಸಹಿತ ವಾಪಸಾಗುವುದು ಶಕ್ಯವಿಲ್ಲೆಂದು ಕೆಲವರು ಬೋಧೆ ತಪ್ಪಿ ಬಿದ್ದರು. ಕೆಲವರು ಜೀವ ಹೆಪ್ಪು ಗಟ್ಟಿಸಿಕೊಂಡು ನಿಶ್ಚಲ ಕುಂತರು.
ಚಂದಮುತ್ತನನ್ನ ಕೋಲಿನಿಂದ ತೋರಿಸುತ್ತ ಗುಡ್ಡ ಗುಡುಗುವ ಹಾಗೆ ಗುಡುಗಿದಳು- ಯಾರು? ಆ ಕೊಳಕು ಮುದುಕಿ!
“ಆ ಹಾಹಾ,
ಈ ಕ್ರಿಮಿ ನುಡಿಸಿದ್ದೇ ಸಂಗೀತವೆಂದಾದರೆ
ಸತ್ಯ ಸಂಗೀತ ಅಂಬೋದು ಸತ್ತುಹೋಗದ?
ನಿತ್ಯ ನ್ಯಾಯ ಅಂಬೋದು ನಿಂತುಹೋಗದ?
ಮ್ಯಾಲಿನ ಮಳೆ ಮ್ಯಾಲೇ ಇಂಗಿ
ಕೆಳಗಿನ ಬೆಳೆ ಸುಟ್ಟು ಹೋಗದ?
-ಎಂದು ಒರಟು ಮಾತುಗಳ ಅಲೆಯೆಬ್ಬಿಸಿ ಹೃದಯಗಳಿಗಪ್ಪಳಿಸಿ ಹರಿದಾಡಿದಳು.
ಈಗ ಧೈರ್‍ಯ ತಗೋಬೇಕಾದವನು ಕುಲಗುರುವೊಬ್ಬನೇ. ಉಳಿದವರೆಲ್ಲ ಗಾಬರಿಯಲ್ಲಿ ಉಸಿರಾಟವನ್ನೇ ನಿಲ್ಲಿಸಿದ್ದರು. ಕುಲಗುರು ಬೆವರಜಲವ ಒರೆಸಿಕೊಂಡು ಕರವೆತ್ತಿ ಕೈಮುಗಿದು ತೊದಲುತ್ತ ಬಾಯಿಬಿಟ್ಟ.
ಕುಲಗುರು : ತಾಯಿ, ನಮ್ಮ ಸಾವಿರ ತಪ್ಪು
ಒಪ್ಪಿಕೊಂಡು ನೀನು ಯಾರಂತ ಹೇಳಿದರೆ…
ಮುದಿಜೋಗ್ತಿ : ನಮಗೆ ನಾಮಕರಣ ಮಾಡಿದವರಿಲ್ಲ. ನಾನಿದ್ದೇನೆ, ನನ್ನ
ಸತ್ಯವೂ ಇದೆ. ಕಣ್ಣಿದ್ದರೆ ನೋಡಿಕೊ. ನೆತ್ತರಲ್ಲಿ ಹುಟ್ಟಿ
ದವಳಲ್ಲ, ನೀರಲ್ಲಿ ನೆನೆದವಳಲ್ಲ. ಆಕಾಶವೆಂಬ ಬಯಲ
ಕೆರೆಯಲ್ಲಿ ಬಿಳಿತಾವರೆಯೆಂಬ ಮೂರೆಸಳಿನ ಹೂವಿನಲ್ಲಿ
ಹುಟ್ಟಿದವಳು; ನಾನು ಕಾಲನ ಸೂಳೆ, ನೀ ಯಾರೋ

ಮುದಿಯ?
ಕುಲಗುರು : ನಾನು ನಿನ್ನ ಪಾದದ
ಧೂಳು; ಕುಲಗುರು. ಈ ಶಿಶು ಮಕ್ಕಳಿಗೆ


ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.