ಚಕೋರಿ – ೨

ಸಂಗೀತ ಕಲಿಸಿದವನು.
ಆವಾಗ ಥೂ ಎಂದು ಕುಲಗುರುವಿನ ಮುಖದ ಕಡೆಗೆ ಉಗಿದು ಹೀಂಕಾರವಾಗಿ ಜರಿದು ನುಡಿದಳು ನೋಡು, ಯಾರು? ಹೊತ್ತಿಕೊಂಡುರಿವ ಕಣ್ಣಿನ ಆಕೊಳಕು ಮುದುಕಿ-
ಮುದಿಜೋಗ್ತಿ : ಥೂ ನಿನ್ನ ಮುದಿ ಯೋಗ್ಯತೆಗೆ ಬೆಂಕಿ ಹಾಕ
ಇಂಥ ಕಚಡ ಸಂಗೀತಕ್ಕೆ ಗುರುವಾ ನೀನು?
ನಾಳೆ ಪಶ್ಚಿಮದಿಂದ ಬರುವ ಕಲಿಯುಗಕ್ಕೆ
ತಕ್ಕಡಿಯಲ್ಲಿ ತೂಗಿ ಈ ಸಂಗೀತ
ಮಾರಿಕೊ!
ಅಗೋ ಅಗೋ ಅಲ್ಲೊಂದು ಕೋತಿ ಕುಂತಿದೆ
ನೋಡಿರಯ್ಯಾ.
ಆಹಾಹಾ ಗೊಲ್ಲ ಕುಲದ ಜ್ಯಾತಿಯ
ನೋಡಿರಯ್ಯಾ.
ಅರೆರೇ ನಿಮ್ಮ ಹಟ್ಟಿಯ ಕೀರ್ತಿ ಶಿಖರವ
ನೋಡಿರಯ್ಯಾ.
-ಎಂದು ಚಂದಮುತ್ತನ್ನ ತೋರಿಸಿ ಅವನಿದ್ದಲ್ಲಿಗೆ ಗುಡುಗುಡುನೆ ಓಡಿಬಂದಳು. ಚಂದಮುತ್ತ ಎದ್ದು ನಿಂತು ಗಡಗಡ ನಡುಗುತ್ತಿದ್ದ. ಆ ಮುದಿ ಸೇಡುಮಾರಿ ನೊರೆನೊರೆನೆ ಹಲ್ಲು ಕಡಿದು ಕೈತಿರುವಿ ಕೇಳಿದಳು:
ಹೆಚ್ಚಳ ಪಡಬೇಡವೊ ಏ ಕಡಿಮೆಯವನೇ
ನಿನ್ನ ಸತ್ಯ ನನಗೆ ಚೆನ್ನಂಗೊತ್ತು.
ಸತ್ಯ ಇದ್ದರೆ ಹೀಗೆ ನುಡಿಸಬಲ್ಲೆಯಾ?
-ಎಂದು ಚಿಂದಿ ಸೀರೆ ತೆಗೆದು ಹಚ್ಚೆ ಹಾಕಿಕೊಂಡು ಬಗಲಲ್ಲಿದ್ದ ಚೌಡಿಕೆ ಮುರಿದು ಅದರ ಕೋಲು ಹಿರಿದು ಅದನ್ನೇ ಕೊಳಲಿನಂತೆ ತುಟಿಗಿಟ್ಟು ನುಡಿಸಿದರೆ- ಶಿವ ಶಿವಾ! ಸರ್ವಲೋಕ ಸಮಸ್ತ ಜನ ಇರಿವೆಂಬತ್ತು ಕೋಟಿ ಜೀವರಾಶಿಗಲೆಲ್ಲ ಭಾವಪರವಶರಾಗಿ, ಮೂಕವಿಸ್ಮಿತರಾಗಿ ಕೊಳಲ ಸಂಗೀತದ ಬೆಳ್ದಿಂಗಳಲ್ಲಿ ಅದ್ದಿ ಹೋದರು! ಏಸೋ ಜನ್ಮದ ಸುಖದ ನೋವು ನೆನಪಾದವು. ಗಾಳಿ ದೇಹದ ದೈವಂಗಳನು ನಾದದಲ್ಲಿ ಸುಳಿವುದೋರಿಸಿ ಹಾಡಿನ ರೂಪ ಕೊಟ್ಟು ಸಾಕ್ಷಾತ್ಕಾರ ಮಾಡಿ ತೋರಿಸಿದಳು. ಜನ ಧನ್ಯರಾಗಿ, ತನ್ಮಯರಾಗಿ ಮೈಮರೆತು ಮಾತು ಮರೆತಿರುವಾಗಲೇ ಗಕ್ಕನೆ ಕೊಳಲುಲಿ ನಿಲ್ಲಿಸಿ ದುಡುದುಡುನೆ ಓಡಿಬಂದು ಚಂದಮುತ್ತನ ಕೈಕೊಳಲನ್ನು ಕಸಿದು ಲಟ್ಟನೆ ಮುರಿದು ಅವನ ಮುಖದ ಮ್ಯಾಲೆಸೆದು ಏನೆಂದು ಯಾಕೆಂದು ಹ್ಯಾಗೆಂದು ಜನ ತಿಳಿಯುವ ಮುನ್ನವೇ ಕಾಡಿನಲ್ಲಿ ಕಣ್ಮರೆಯಾದಳು, ಯಾರು? ಆ ಮುದಿಜೋಗ್ತಿ!

೧೩. ಚಂದ್ರ ಅಲ್ಲಿಂದೆರಡು ಮಾರು

ನೊರೆ ನೊರೆ ಹಾಲಲ್ಲಿ ಹುಳಿಯ ಹಿಂಡಿದರ್‍ಯಾರು?
ಬೆಳ್ದಿಂಗಳ ಹೆಪ್ಪುಗಟ್ಟಿ
ಶಿವಾಪುರದ ಬಯಲಿನ ತುಂಬ ಭರಿತವಾಯ್ತು.
ಮುಕ್ತಾಯವಾಯಿತು ಅಸ್ತವ್ಯಸ್ತ ಪರಿಸೆ.
ಜೋಗ್ತಿಯ ಹಾಡಿನ ಅಮಲಿನಲ್ಲಿ
ಅದ್ದಿಹೋಯಿತು ನಾಡು ನರಲೋಕ.
ತೇಲುಗಣ್ಣಲ್ಲಿ ತೇಲಿ ಮಾಯದ ನಿದ್ದೆಯಲ್ಲಿ
ಮಲಗಿಬಿಟ್ಟಿತು, ಹಟ್ಟಿ.
ತನ್ನ ಹಾಡುಗಳ ತನಗಿಂತ ಚಂದ ನುಡಿಸಿ ತನ್ನ ತಪ್ಪುಗಳ ಕಿವಿಗಪ್ಪಳಿಸುವಂತೆ ಮಾಡಿದ ಚಂದಮುತ್ತನ ಮ್ಯಾಲೆ ಚಿನ್ನಮುತ್ತನಿಗೆ ರವರವ ರುದ್ರಗೋಪ ಬಂದಿತ್ತು. ತನ್ನ ಪರ ವಹಿಸಿ ಜೋಗ್ತಿಯೇ ಆ ಸೇಡು ಚುಕ್ತ ಮಾಡಿದ್ದಳಾಗಿ ಚಿನ್ನಮುತ್ತ ಆನಂದದ ಅಮಲೇರಿ ನಿದ್ರಿಸಲಿಲ್ಲ.
ಜೋಗ್ತಿಯ ಸಂಗೀತದ ಅನುಭವವನ್ನು ಮೆಲುಕು ಹಾಕುತ್ತ ಶಿವಸುಖದ ಅಮಲೇರಿ ಕುಲಗುರು ನಿದ್ರಿಸಲಿಲ್ಲ.
ಜೋಗ್ತಿಯ ಪಾದ ಹಿಡಕೊಂಡು ಸಂಗೀತ ವಿದ್ಯವ ಕಲಿಯಬೇಕೆಂಬ ದಿವ್ಯೋತ್ಸಾಹದಲ್ಲಿ ಚಂದಮುತ್ತ ನಿದ್ರಿಸಲಿಲ್ಲ. ಜೋಗ್ತಿಯ ದರ್ಶನಕ್ಕೆ ಈಗಲೇ ಹೋಗಬೇಕೆಂದು ನಿಶ್ಚಯವ ಮಾಡಿ ಹೆತ್ತಯ್ಯ ಮುತ್ತಯ್ಯರ ನೆನೆದು ಶಿವಧೋ ಎಂದು ಶಿವದೇವರ ಸ್ಮರಣೆ ಮಾಡಿ ಹೆಗಲಿಗೆ ಕಂಬಳಿ ಕೈಗೆ ಬೆತ್ತ ತಗೊಂಡು ಅಬ್ಬೆಯ ಪಾದ ಪಡಕೊಳ್ಳಲು ಹೊರಟ.
ಅಂಗಳದಲ್ಲಿ ಅಬ್ಬೆ ಕಲ್ಲುಬಂಡೆಗೊರಗಿ ಕುಂತಿದ್ದಳು.
ಮುಂದೊಂದು ಹರಿವಾಣವಿತ್ತು.
ನೀರಿನಲ್ಲಿ ಮೂಡಿ ಚೆಲ್ಲಾಟವಾಡುತ್ತಿದ್ದ ಚಂದ್ರ.
ಚಂದಮುತ್ತ ಸದ್ದಿಲ್ಲದೆ ಹೋಗಿ
ಅಬ್ಬೆಯ ಬಳಿ ಕುಂತ.
ಮೂಡಿದ್ದ ಚಂದ್ರ
ಅಬ್ಬೆಯ ಜೊತೆ ಮಾತಾಡಿದಂತಿತ್ತು.
ಅಬ್ಬೆ ಕದ್ದು ನುಡಿದಾಡಿ
ಚಂದ್ರನಿಗೆ ಚಾಡಿ ಹೇಳಿದಂತಿತ್ತು.
ಆ ಭಾಷೆ ತನಗೆ ತಿಳಿಯದಾಗಿತ್ತು.
ಅಬ್ಬೆ ಇಂತೆಂದಳು:
ನೆನಪಿದೆಯ ಕಂದ?
ಚಿಕ್ಕಂದು
ಮಡುವಿನಲ್ಲಿ ಮೂಡಿ ಮುರಿದಾಡುವ ಚಂದ್ರನ ನೋಡಿ
ಅದು ಬೇಕೆಂದು ಕಾಡಿ ಬೇಡಿ ನೀನಿತ್ತೆ.
ಹಟಮಾಡಿ
ಆಭರಣ ಕಿತ್ತೆಸೆದೆ, ಹಸ್ತ ಕಡಗವ ಎಸೆದೆ
ಅನ್ನೋದಕ ಬಿಟ್ಟು ಹಾಸಿಗೆಗೆ ಬೆನ್ನು ಹಚ್ಚದೆ
ಹಾಗೇ ಕೂತೆ.
ಭೀತ ಬೆರಗಿನ ಅಬ್ಬೆ ನಾನು-
ಚಂದ್ರ ತನ್ನ ಕಥೆಯ ಮರಿಮೀನುಗಳಿಗೆ
ಅಭಿನಯಿಸಿ ತೋರುತ್ತಾನೆ.
ನೋಡು ಕಂದಾ- ಎಂದೆ.
ನೀನು ಮಾಡಿದ್ದೇನು?
ಹರಿವಾಣದಲ್ಲಿ ನೀರಿಟ್ಟು, ಮೂಡಿದ ಚಂದ್ರನಿಗೆ
ನನಗೂ ಕಥೆ ಹೇಳೆಂದು ಅಳುತ್ತ ಕೂತೆ.
ಅತ್ತು ಅತ್ತು ನನ್ನ ಮಡಿಲಲ್ಲಿ ಮಲಗಿ ನಿದ್ದೆ ಹೋದೆ.
ನಿನ್ನ ಮುಂಗುರುಳಲ್ಲಿ ಆಟವಾಡುತ್ತ
ಚಂದ್ರ ನಿದ್ದೆ ಹೋದ.
ಬೆಳಿಗ್ಗೆ
ಹಿತ್ತಲಲ್ಲಿ ಅರಳಿದ್ದ ಮಲ್ಲಿಗೆಯ ತೋರಿಸಿ
ನೋಡು ನೋಡಬ್ಬೇ
ಹಗಲ ಚಂದ್ರನಿಗೆ ಅಣಕಿಸುತ್ತಾವೆ
ನಮ್ಮ ಹಿತ್ತಲ ಮಲ್ಲಿಗೆ

  • ಅಂತ ನೀನಂದೆ. ನೆನಪಿದೆಯ ಕಂದಾ?
    ಚಂದಮುತ್ತ ಮಾತಿಲ್ಲದೆ ಪ್ರೀತಿಯಿಂದ ಅಬ್ಬೆಯ ಬೆನ್ನಿಗೆ
    ಮುಖ ಉಜ್ಜುತ್ತ ಒರಗಿದ.
    “ಇಂದು ದೊಡ್ಡ ಹುಣ್ಣಿವೆಯಲ್ಲವೆ? ಚಂದ್ರನ ಕುಡಿ”
    -ಎಂದು ಬಲಬರಲೆಂದು ಹರಿವಾಣದಲ್ಲಿ ಚಂದ್ರನ ಮೂಡಿಸಿ ಮಕ್ಕಳಿಗೆ ಕುಡಿಸುವ
    ಕುಲಾಚಾರದಂತೆ ಹರಿವಾಣವನ್ನ ಎತ್ತಿ ಮಗನ ಮುಂದೆ ಹಿಡಿದಳು.
    “ನಾನು ಮೊಲೆ ಕುಡಿಯೋ ಕೂಸೇನಬೇ?”
    “ಎಷ್ಟು ದೊಡ್ಡವನಾದರೂ ಅಬ್ಬೆಗೆ ಮಗನೇ”
    -ಎಂದು ಹರಿವಾಣವ ಮಗನ ತುಟಿಗಿಟ್ಟಳು. ಅದರಲ್ಲಿ ಮೂಡಿದ ಚಂದ್ರನ ಸಮೇತ
    ಚಂದಮುತ್ತ ಗಟಗಟ ಕುಡಿದ. ಚಂದ್ರನ ಕುಡಿದೆಯೊ ಚಂದ್ರನ ಬೆಳಕು ಕುಡಿದೆಯೊ! ಮೈ
    ಮನಸಿನ ಕುದಿ ಕಮ್ಮಿಯಾಗಿ ತಂಪಾದವು. ಚಿನ್ನಮುತ್ತನೊಂದಿಗಿನ ಪಂತ, ಕೊಳಕು ಜೋಗ್ತಿಯ ಅವತಾರ, ಅವಳ ಹಾಡು, ತನಗಾದ ಹಾಡಿನ ಹಸಿವು, ಕೊಳಲು ಕಳೆದುಕೊಂಡಿದ್ದು, ಕುಡಿದ ಬೆಳ್ದಿಂಗಳು ಇವೆಲ್ಲವುಗಳಿಗೆ ಅಬ್ಬೆಯ ಪ್ರೀತಿಯ ಮಾಯೆ ಆವರಿಸಿ ಹಾಯೆನ್ನಿಸಿ ಹಾ ಎಂದು ಅಬ್ಬೆಯ ತೊಡೆಯ ಮ್ಯಾಲೊರಗಿದ.
    “ಎವ್ವಾಬೇ ಚಿಕ್ಕಂದು ನೀ ಹೇಳುತ್ತಿದ್ದ ಜೋಗುಳ ಹಾಡಬ್ಬೆ”-ಎಂದ.

ಮಗನ ನುಡಿ ಕೇಳಿ ಸಕ್ಕರೆ ಮುಕ್ಕಿಧಂಗಾಗಿ ಅಬ್ಬೆಯ ಹೃದಯ ಅಕ್ಕರೆಯಿಂದ ಅರಳಿ ವಿಸ್ತಾರವಾಯಿತು, ಹಾಡಿದಳು;
ಬೆಳ್ಳಿ ಬೆಟ್ಟದ ಮ್ಯಾಲೆ ಕಾಡು ಹೂಗಳ ತೇರು
ಹಾಲು ಹೊಳೆ ತುಂಬಿ ಹರಿದಾವು | ನೋಡಿದರ
ಚಂದ್ರ ಅಲ್ಲಿಂದೆರಡು ಮಾರು ||
ಕದ ಮುಚ್ಚಿರೆ ಬ್ಯಾಗ ಕನ್ನ ಹಾಕುತ್ತಾಳೆ
ಚಂದ್ರಲೋಕದ ಯಕ್ಷಿ ಬಂದು| ಕಂದನ್ನ
ಕಿನ್ನರ ಲೋಕಕೊಯ್ದಾಳು ||
ತನ್ನ ಬಿಟ್ಟನ್ಯರನು ನೀನು ನೋಡದ ಹಾಂಗ
ಮಾಡುವಳು ಮಾಯಕಾರ್ತಿ ಯಕ್ಷಿ ಬಂದು| ನನ ಕಂದ
ಕಣ್ಣ ತೆರಿಬ್ಯಾಡ ಮೈಮರತು.
ಅಬ್ಬೆಯ ಅಕ್ಕರೆಯ ಅಮಲಿನಲ್ಲಿ ಚಂದಮುತ್ತನಿಗೆ ಯಾವಾಗ ನಿದ್ದೆ ಹತ್ತಿತೊ, ಎಚ್ಚರವಾದಾಗ ಅಂಗಳದಲ್ಲಿ ಅಬ್ಬೆಯ ತೊಡೆಯ ಮ್ಯಾಲೆಯೇ ಮಲಗಿದ್ದ. ಚಂದ್ರ ಬೆಳ್ಳಿಯ ಬೆಳಕನ್ನ ಸುರಿಯುತ್ತಲೇ ಇದ್ದ. ಈ ದಿನ ಅಬ್ಬೆ ಕುಡಿಸಿದ ಚಂದ್ರ ಕಾರಣವಾಗಿಯೋ ಏನೋ- ಬೆಳಕಿನ ಹಸಿವಾಗಿ ಥಟ್ಟನೆ ಎದ್ದು ಕೂತ. ಅಬ್ಬೆ ಬಂಡೆಗೊರಗಿ ನಿದ್ರಿಸುತ್ತಿದ್ದಳು. ಪಾದಮುಟ್ಟಿ ಧೂಳನ್ನು ತಲೆಗೊರೆಸಿಕೊಂಡು ಸಪ್ಪಳಾಗದ ಹಾಗೆ ಹೆಗಲ ಕಂಬಳಿ ಕೈಬೆತ್ತದ ಕೋಲು ತಗೊಂಡು ಜೋಗ್ತಿಯ ಹುಡುಕಿಕೊಂಡು ಹೊರಟ. ಅಬ್ಬೆ ಕನವರಿಸುತ್ತಿದ್ದಳು:
ಚಂದ್ರಲೋಕದ ಯಕ್ಷಿ ಬಂದು
ಬೊಗಸೆಯಲ್ಲಿ ಬೆಳ್ದಿಂಗಳ ತುಂಬಿಕೊಂಡು
ಚೆಲ್ಲಾಡಿದಳು
ಕೇರಿದಳು ಎಸೆದಳು
ಮುಖಕ್ಕೆ ಮೆತ್ತಿಕೊಂಡು
ತಿಂದಳು ಕುಡಿದಳು ತೇಗಿದಳು
ಈಜಿದಳು ಮ್ಯಾಲೆ ಹಾರಾಡಿದಳು
ಕಣ್ಣಲ್ಲಿ ಎದೆಯಲ್ಲಿ ತುಂಬಿಕೊಂಡಳು
ಒದ್ದೆಹಸಿರಿನ ಮ್ಯಾಲೆ ಹಾಡನ್ನ ಮಲಗಿಸಿ
ತಾನೂ ಮಲಗಿದಳು.

೧೪. ಪರಿಶೋಧನೆ ಮಾಡಿದ

ತುಂಬಿದ ಸೋಮವಾರ, ಸಪ್ಪಟ ಸರಿರಾತ್ರಿ ಶಿವನೇ ಎಂದು ಚಂದಮುತ್ತ ಹೊರಟ. ಜೋಗ್ತಿ ಕಣ್ಮರೆಗೊಂಡ ದಿಕ್ಕನ್ನ ಅಂದಾಜು ಮಾಡಿ ಅದೇ ದಿಕ್ಕಿಗೆ ಅಕ್ಕಪಕ್ಕ ನೋಡುತ್ತಾ ಗುಡ್ಡಗ್ವಾರಣ್ಯ ಬೆಟ್ಟ ಕಾಡು ಅಲೆದಾಡಿ ಹುಡುಕುತ್ತ ನಡೆದ. ದಾರಿಯಲ್ಲಿ ಸಿಕ್ಕ ಖಗಮೃಗಾದಿಗಳ ನೋಡುತ್ತ ಬೆಳ್ದಿಂಗಳಲ್ಲಿ ದಟ್ಟ ನೆರಳು ಚೆಲ್ಲಿದ್ದ ಬಂಡೆಗಳ ಬುಡದಲ್ಲಿ ಮರಗಳಲ್ಲಿ ತುದಿಯಲ್ಲಿ ಅವಿತಿರುವಳೋ ಎಂದು ಕಣ್ಣಿಂದ ಕೆದಕಿ ಬೆದಕಿ ನೋಡುತ್ತ ನಡೆದ. ಬೆಳ್ಳಂಬೆಳಕಾಗಿ ಚಿಲಿಪಿಲಿ ಜಗತ್ತು ಎಚ್ಚರವಾಗಿ ಮೂಡುಮಲೆಯಲ್ಲಿ ಸೂರ್ಯನಾರಾಯಣ ದೇವರು ಉದಯವಾಗಿ “ಅಯ್ಯೋ ಯಕ್ಷಿಯ ನಿತ್ಯದ ಪೂಜೆ ತಪ್ಪಿತಲ್ಲೋ ಶಿವನೆ!’ ಎಂದು ಅರಿವಾಗಿ ತಲೆಯಮ್ಯಾಲೆ ಕೈಹೊತ್ತು ಕುಂತ. ನಂಬಿಗೆಯಿಟ್ಟು ದೈವವ ತನಗೊಪ್ಪಿಸಿದ ಕುಲಗುರುವಿಂಗೆ, ಹಟ್ಟಿಯ ಸಮಸ್ತ ದೈವಕ್ಕೆ, ಬೂತಾಯ ಸಮ ಅಬ್ಬೆಗೆ, ಮ್ಯಾಲೆ ಯಕ್ಷಿಗೆ ದ್ರೋಹ ಮಾಡಿದೆನೆಂದು ಕೋಲಿನಿಂದ ತಲೆ ತಲೆ ಹೊಡೆದುಕೊಂಡು ಕುಂತ. ಈ ಹಿಂಗೆ ಪರಿಪರಿ ರೀತಿಯಲಿ ಪಶ್ಚಾತ್ತಾಪ ಪಡುವಲ್ಲಿ ಗಿಣಿಮರಿಯೊಂದು ತಲೆತಟ್ಟಿ ಹಾರಿಹೋಯಿತು. ತಕ್ಷಣವೆ ಜೋಗ್ತಿಯ ಹಾಡಿನ ನೆನಪು ಕೆರಳಿ ಹಾಡು ಕಲಿಯದಿದ್ದಲ್ಲಿ ಈ ಬಡ್ಡೀ ಜಲ್ಮ ಯಾಕಿರಬೇಕೆಂದು ದೃಡ ನಿಶ್ಚಯವ ಮಾಡಿ ಹೊರಟ.
‘ಹಾಡಿನ ಮುದುಕೀ’ ಎಂದು ಕೂಗು ಹೊಡೆದು ಹುಡುಕಿದ. ‘ಹಾಡಿನ ಜೋಗ್ತೀ’ ಎಂದು ಕಾಕು ಹೊಡೆದು ಹುಡುಕಿದ. ಬೆಟ್ಟ ಏರಿ ಬೆಟ್ಟ ಇಳಿದು ದಟ್ಟ ಕಾಡು ಬೆಟ್ಟ ಬಯಲುಗಳಲ್ಲಿ ಜೋಗ್ತಿಯ ಪರಿಶೋಧನೆ ಮಾಡಿದ. ಆಸರು ಬ್ಯಾಸರೆನ್ನದೆ, ಹಸಿವೆ ನಿದ್ದೆ ನೀರಡಿಕೆ ಎನ್ನದೆ ಮೂಡುಮಲೆ, ಪಡುಮಲೆ, ತೆಂಕುಬಡಗುಮಲೆ, ಹಿಲಿಮಲೆ, ಆನೆಮಲೆಗಳಲ್ಲಿ ಅಲೆದಾಡಿ ಹುಡುಕಿದ. ಸುತ್ತೂ ಸೀಮೆಯ ಹಟ್ಟಿ ಹಾಡಿ ಗೂಡುಗಳಲ್ಲಿದ್ದವರ ನಿಲ್ಲಿಸಿ ಮುದಿ ಜೋಗ್ತಿಯ ಗುರುತು ಹೇಳಿ, ಕಂಡಿರಾ? ಅಂದ. ಬೇಟೆಗಾರ ಗುಡ್ಡ ಗೊರವ ದಾಸಯ್ಯ ಜೋಗಯ್ಯಗಳ ಕೇಳಿದ. ನರಮಾನವರ ಮತ್ತೂ ಅವರಂಥವರ ಅಂಗಲಾಚಿ ಕಂಡಿರಾ? ಅಂದ. ಎಲ್ಲರೂ-
ಕಾಡು ಹುಟ್ಟಿದಾಗಳಿಂದ
ಗೂಡು ಕಟ್ಟಿದಾಗಳಿಂದ
ಇಂತೆಂಬ ಜೋಗ್ತಿಯ ಕಂಡಿಲ್ಲವಲ್ಲೋ ಶಿವನೆ! ಎಂದರು.
ನಡೆದು ನಡೆದು ಎಡಗಾಲಿಗೆ ಎಗ್ಗಾಲಮುಳ್ಳು, ಬಲಗಾಲಿಗೆ ಬಗ್ಗಾಲಮುಳ್ಳು ಚುಚ್ಚಿ ಬಾಲಕನ ಎಳೆಪಾದ ನಲುಗಿದವು. ಕಾಲೆಲ್ಲ ಕಲ್ಲಪ್ಪಳಿಸಿ ಉಪ್ಪಳಿಕೆ ಆದವು. ಧರಣಿಯ ಮ್ಯಾಲೆ ಬಿದ್ದೂ ಕೆಡೆದೂ ಒದ್ದಾಡಿಕೊಂಡು ಮುಂದೆ ಸಾಗಲಾರದೆ ಶಿವಧೋ ಎಂದು ತೆವಳುತ್ತ ಬೆಟ್ಟದಡಿಯ ಬಂಡೆಯ ಕೆಳಗೆ ಸುಸ್ತಾಗಿ ಉಸ್ಸೆಂದು ಮೈ ಚೆಲ್ಲಿದ. ಹೊತ್ತು ಬಹಳ ಹೀಗೇ ಮಲಗಿ ಎಚ್ಚರಾದಾಗ ಹಾಯೆನಿಸಿ ಜೋಗ್ತಿಯ ಹಾಡು ಗುನುಗಿದ. ಹಾಡು ಬರಲಿಲ್ಲ. ದನಿ ಏಳಲಿಲ್ಲ. ಒಳಗಿನ ಶೃತಿಪೆಟ್ಟಿಗೆ ಒಡೆದ ಹಾಗಿತ್ತು. ಶಿವನೇ ತನ್ನ ಹಾಡೆಲ್ಲಿ ಹೋಯಿತೆಂದ. ಸೊಂಟದಲ್ಲಿ ಗಣೆಯಿರಲಿಲ್ಲವಾಗಿ ಇಟ್ಟು ಮರೆತವರಂತೆ ಕೈ ಮೈ ತಟ್ಟಿ ನೋಡಿಕೊಂಡ. ಹಿಂದೆ ಮುಂದೆ ಆಸು ಪಾಸು ನೋಡಿಕೊಂಡ. ಆಮ್ಯಾಕೆ ನೆನಪಾಗಿ ಗಣೆ ಮುರಿದಳೋ ಗೋನು ಮುರಿದಳೋ! ತನ್ನ ಹಾಡು ಕಳವಾಗಿ ಹೋಯಿತೆಂದು ಉಮ್ಮಳಿಸಿ ತಳ್ಳಂಕಗೊಂಡ.
ಮಣ್ಣಲಾಡುವ ಸಣ್ಣ ಬಾಲಕನ ಹಿಗ್ಗಿ ಹಿಗ್ಗಲಿಸಿದ ಹಾಡೇ,
ಬಿಸಿಲ ಬರಗಾಲದಲಿ, ಬೆಳ್ಳಿ ಬೆಳ್ದಿಂಗಳಲಿ
ಕರುಕುರಿಗಳೊಂದಿಗೆ ಬಾಲಕನ ಮೀಯಿಸಿ ನಲಿದ ಹಾಡೇ,
ಕ್ಷಿತಿಜದಾಚೆಯ ಮಾಯದ ಜಹಜುಗಳ ತೇಲಿಸಿ ತರುತ್ತಿದ್ದ
ಮಾದಕದ ಹಾಡೇ
ಎಲ್ಲಿ ಹೋದೆ?
ಕಾಲರಾಯನ ಗಾಳಿ ಹಾರಿಸಿಕೊಂಡು ಹೋದ ಹಾಡು
ಮತ್ತೆ ಸಿಕ್ಕೋದಿಲ್ಲವೋ ಬಾಲಕಾ.
ಒಮ್ಮೆ ಹೋದರೆ ಇನ್ನೊಮ್ಮೆ-ಹಾಗೆಂದು
ಮತ್ತೆ ಅದೇ ಹಾಡು ಕಲಿಯಲಾದೀತೇ?
ಕಲಿತುಕೋಬೇಕಪ್ಪ ಖಾಲಿಯಾಗುವುದನ್ನ.
ಹಾಗೆಯೇ ಬೇರೊಂದು ಬೆಳಕು ನುಗ್ಗಿದಾಗ
ತುಂಬಿಕೊಳ್ಳೋದನ್ನ.
ಆದರೂ
ಎಳೆಯ ಕತ್ತಿನ ಮ್ಯಾಲೆ ಎಂಥ ಭಾರದ
ಅರಿವನಿಟ್ಟೆ ಶಿವನೆ!
ಇದೇ ಚಿಂತೆಯಲ್ಲಿ ಚಂದಮುತ್ತ ಮತ್ತೆ ಕಣ್ಣು ಮುಚ್ಚಿದ. ಎಚ್ಚರಾಗಿ ಕಣ್ಣು ತೆರೆದಾಗ ಎದುರಿಗೆ ಎಂಥಾ ಹೊಯ್ಕಿದೆ ಶಿವನೆ! ಎಳೆಯ ಮಿಡಿ ನಾಗರ ಜಡೆಗಳ ಸುತ್ತಿಕೊಂಡು ಹೆಣ್ಣು ಶಿವನ ಹಾಗೆ ಕಣ್ಣು ಮುಚ್ಚಿಕೊಂಡು ಎದುರಿಗೇ ಕುಂತಿದ್ದಾಳೆ; ಯಾರು? ಆ ಮುದಿ ಜೋಗ್ತಿ! ‘ಜೋಗ್ತೀ’ ಎಂದು ಕಿರಿಚಿ ಚಂದಮುತ್ತ ಹಾರಿ ಅವಳಿದ್ದಲ್ಲಿಗೆ ಹೋಗುವಷ್ಟರಲ್ಲಿ ಇವನ ಗುರುತು ಹಿಡಿದು ಅಪಾಯವನರಿದು ಪಾರಾಗುವ ಉಪಾಯವ ನಿಶ್ಚಯಿಸಿಕೊಂಡೇ
ಗವಿಯ ಬಾಗಿಲ ಬಳಿ ನಿಂತು ಬಾಯಿಭಾಷೆ ತಾಳಮೇಳದಲ್ಲಿ |
ಕೈಸನ್ನೆ ಕಣ್ಣು ಸನ್ನೆಯ ಮಾಡಿ ಕರೆದಳು |
ಕರೆದದ್ದೇ ಚಂದಮುತ್ತ ಓಡೋಡಿ ಬಂದು-
“ನನಗೆ ನಿನ್ನ ಹಾಡು ಕಲಿಸಿಕೊಡು ಜೋಗ್ತೀ”- ಎಂದು ಕೈಮುಗಿದು ಮುಂದೆ ನಿಂತರೆ ತನ್ನ ಕೋಲಾಡಿಸಿ ಅವನ ದೂರ ನಿಲ್ಲಿಸಿ-
“ಎಲವೆಲವೋ ಗೊಲ್ಲ ಗೋಕುಲರ ಪಿಳ್ಳೆ, ಯಾವ ಹಾಡು?
ಯಾರು ನೀನು? ನಡೆ ನಡೆ” ಎಂದು ಗದರಿದಳು.
ಕುಲದೂಷಣೆ ಮಾಡಿದಳಲ್ಲಾ ಹಾಳು ಮುದುಕಿ ಎಂದು ಉಕ್ಕುವ ಕೋಪವ ನಿಯಂತ್ರಿಸಿ
“ನನ್ನ ಗಣೆ ಮುರಿಯಲಿಲ್ಲವೆ ನೀನು?” ಎಂದ.
“ಗಣೆ ಬೇಕಾಗಿ ಬಂದೆಯಾ? ಹಾಗಿದ್ದರಿಗೊ ಬಾ”- ಎಂದು ಹಾಡಾಡುತ್ತ ನಿರಾಶೆಗೊಂಡ ಚಂದಮುತ್ತನ ಆಳವಾದ ಕಂದಕದ ಬಳಿಗೊಯ್ದು ಕೆಳಗೆ ನೋಡೆಂದಳು.
ನೋಡಿದ.
“ಏನು ಕಂಡೆ?”
“ಆಳವಾದ ಕೊಳ್ಳ ಕಂಡೆ.”
ಅದು ನಿನ್ನ ಪೂರ್ವಜರ ಲೋಕ. ಅಲ್ಲಿದೆ ನಿನ್ನ ಗಣಿ ಹೋಗೆಂದು ಕೊಳ್ಳಕೆ ಅವನ ತಳ್ಳಿ ನಿರುಮ್ಮಳದಿಂದ ಮಾಯವಾದಳು ನೋಡು, ಯಾರು? ಆ ಮಾಯಕಾರ್ತಿ ಮುದಿಜೋಗ್ತಿ!
ಪುಣ್ಯ ಚೆನ್ನಾಗಿತ್ತು ಬಿದ್ದ ಮ್ಯಾಲೆ ಬೋಧೆತಪ್ಪಿ ಜೀವಂತವಿದ್ದ. ಎಚ್ಚರಾದ ಮ್ಯಾಲೆ ತಾನು ಕೆಸರ ನೀರಲ್ಲಿದ್ದುದು ಅರಿವಿಗೆ ಬಂತು. ಸುತ್ತ ಮಾಯದ ಕಗ್ಗತ್ತಲು. ಮೈತುಂಬ ನೋವು, ಸಂದು ಕೀಲುಗಳಲ್ಲಿ ನೋವು ಗಾಯಗಳಾಗಿ ‘ಎವ್ವಾಬೇ’ ಎಂದು ನರಳಿದ. ಆಸುಪಾಸು ಮಾನವರಿರಲಿ, ಒಂದು ಮೃಗ ಜಾತಿ ಒಂದು ಕೀಟ ಜಾತಿಯ ಸುಳಿವೂ ಕೇಳಿಸಲಿಲ್ಲ. ಎಲ್ಲ ಸಹಿಸ್ಕೊಂಡೇ ಕಷ್ಟಪಟ್ಟು ತೆವಳಿಕೊಂಡು ದಂಡೆಗೆ ಬಂದುಬಿದ್ದ. ಯಾರಾದರೂ ಬಂದು ಎತ್ತಿ ಉದ್ಧಾರ ಮಾಡ್ಯಾರೆಂದು ಜೋರಾಗಿ ನರಳಿದ. ಯಾರೂ ಬಾರದ್ದಕ್ಕೆ ಮಾಯದಲ್ಲಿ ಬೆಳೆಸಿದ ಅಬ್ಬೆಯ ನೆನೆದು ಗಳಗಳನೆ ಅತ್ತ.
ಕಣ್ಣಮುಂದೆ ನೆನಪಿನಲ್ಲಿ ಮುದಿಜೋಗ್ತಿ ಸುಳಿದಳಾಗಿ ಕಣ್ಣಿಗೆ ಕಾರ ಎರಚಿದಂತಾಯ್ತು, ಅದೇ ಘನವಾದ ಕಗ್ಗತ್ತಲು ಕರಗದೆ ಹಾಗೇ ಇದೆ. ಎಲಾ ಕೃತಕಿ ಮುದಿರಂಡೆ ನೆನಪಿಗೆ ಸುಳಿದಳಲ್ಲಾ ಎಂದು ರವರುದ್ರಕೋಪಗೊಂಡ.
ಜೋಗ್ತಿ ಘಾತಿಸಿದ ಕತಿ
ಹ್ಯಾಂಗೆ ಹೇಳಲೋ ಶಿವನೇ,
ಆ ಕಪಟಿಯ ಉಪಟಳದಲ್ಲಿ
ನನ್ನ ದುನಿಯಾ ಧೂಳಿಪಟವಾಯ್ತು.
ಗಣೆ ಮುರಿದು ಹಾಡು ಕಸಿದುಕೊಂಡಳಲ್ಲೋ ಬೋಳೇಶಂಕರಾ.
ಎಂದು ಹುಚ್ಚು ಕೋಪದಲ್ಲಿ ಕೊತಕೊತ ಕುದ್ದು
ನೊರನೊರನೆ ಹಲ್ಲು ಕಡಕೊಂಡ.
ಆದರೆ ಮಾರನೆ ಕ್ಷಣವೆ
ಮನವಿಡೀ ಮುತ್ತಿತು ಅವಳ ಹಾಡಿನ ನೆನಪು.
ಹಾವಿನ ವಿಷದಂತೆ ನಿನ್ನ ಹಾಡು ಮುದಿಜೋಗ್ತಿ.
ಕಚ್ಚಿದಲ್ಲಿಂದ ಮ್ಯಾಲೇರುತ್ತದೆ.
ತನುವಿನ ಮನದ ಉದ್ದಗಲಕ್ಕು ವ್ಯಾಪಿಸಿ
ನಿದ್ದೆಯ ಬರಿಸಿ ನನ್ನ ಕೊಲ್ಲುತ್ತದೆ.
ಕಳೆದುಕೊಂಡಿದೆ ನನ್ನ ಕನಸು.
ಈಗ ಉಳಿದಿರೋದು:
ಅದು ತಪ್ಪಿಸಿಕೊಂಡ ದಾರಿ
ಹತಾಶೆಯ ಕಗ್ಗತ್ತಲು
ಹಾದಿ ನೋಡುವ ಎರಡು ಕಣ್ಣು.
-ಎಂದು ಆರುಮೂರೆಂಬತ್ತು ಚಿಂತಿಸಿ ಧಾರಾವತಿ ಕಣ್ಣೀರು ಸುರಿಸಿದ.
ಕಾಲವೆಷ್ಟೋ ಸಂದಾಯವಾದರೂ ಕಗ್ಗತ್ತಲು ಸರಿಯಲಿಲ್ಲ. ಇದ್ಯಾವುದೋ ನಾಯಿ ನರಕವಿರಬೇಕು. ತಮಂಧಘನ ಘನಾಂದಾರಿಕಗ್ಗತ್ತಲು. ಕೈಗೆ ತಾಗುವ ಕತ್ತಲು. ಮೈಗೆ ಮೆತ್ತುವ ಕತ್ತಲು, ಕತ್ತಲೆಗೆ ನಕ್ಷತ್ರಗಳೂ ನಂದಿಹೋಗಿವೆ. ಜಗತ್ತು ಸುಟ್ಟು ಕರಕಾಗಿ ಬಿದ್ದಿದೆ. ಮನೆಸ್ವಾಮಿ ಚಂದಪ್ಪನ ನೆನೆದ. ನೆನೆದೊಡನೆ ಮನಸ್ಸಿನಲ್ಲಿ ಬೆಳ್ಲಗೆ ಮೂಡಿದನಲ್ಲ, ಕ್ಷಣಮಾತ್ರದಲ್ಲಿ ಮನಸ್ಸಿಗೂ ಕತ್ತಲಾವರಿಸಿ ಚಂದಪ್ಪನೂ ಇದ್ದಿಲಾದ. ಹತಾಶನಾಗಿ ಚಂದಮುತ್ತ ಕಣ್ಣೆಂಬ ನಿರಿಂದ್ರಿಯ ಮುಚ್ಚಿಕೊಂಡು ಬಿದ್ದ. ಮುಚ್ಚಿಕೊಂಡರೆ ಒಳಗೂ ಕತ್ತಲು. ತಾನೆಂಬ ಸಣ್ಣ ಹಂಕಾರವಿನಾ ಬೇರೇನೂ ಉಳಿಯದೆ, ಇಷ್ಟಾದ ಮ್ಯಾಕೆ ಅದಿನ್ಯಾಕೆಂದು ಅದನ್ನೂ ಶಿವನಡಿಗೆ ಅರ್ಪಿತ ಮಾಡಬೇಕೆಂದು ಸುತ್ತ ಕೈಯಾಡಿಸಿದ. ಮಾರುದ್ದ ಕೋಲು ಸಿಕ್ಕಿತು. ಮಸೆದ ಹಾಗೆ ತುದಿ ಚೂಪಾಗಿತ್ತು. ಸಾಕೆಂದು ಚುಚ್ಚಿಕೊಳ್ಲಲು ಉದರಕ್ಕೆ ಗುರಿ ಹಿಡಿದು ತಂದೆ ತಾಯಿಯ ನೆನೆದ, ಬಂಧು ಬಳಗವ ನೆನೆದ, ಜಾತಿ ಕುಲದವರ ನೆನೆದ, ವಾರಿಗೆಯವರ ನೆನೆದ, ಸತ್ತ ಮುದು ಹಸು ಪುಣ್ಯಕೋಟಿಯ ನೆನೆದ, ಕಾಳ್ನಾಯಿ ಬಿಳಿನಾಯಿಗಳ ನೆನೆದು ನಮ್ಮ ಋಣ ಇಂದಿಗೆ ಸಂದಾಯವಾಯಿತೆಂದು ಮನೆಸ್ವಾಮಿ ಚಂದಪ್ಪನ ನೆನೆದು ರಭಸದಿಂದ ಇರಿದುಕೊಳ್ಳುವಷ್ಟರಲ್ಲಿ, “ತಡಿ ತಡಿ ಯಾಕವಸರ?” ಎಂದು ಘನವಾದ ಮೌನವ ಸೀಳಿದ ದನಿ ಕೇಳಿಸಿತು. ಜೊತೆಗೇ ಗಲಿರು ಗಲಿರು ಅಂತ ಜಂಗಿನ ಸದ್ದು ಕೇಳಿ ಬಂತು. ನೋಡಿದರೆ ಕತ್ತಲೆಗೆ ಕಣ್ಣು ಮೂಡುವಂತೆ ಎದುರಿಗೆರಡು ಹಸಿರು ಜ್ಯೋತಿ ನಡೆದು ಬರುವಂತೆ ಕಂಡವು. ಅವು ಸಮೀಪ ಬಂದ ಬಂದ ಹಾಗೆ ತನಗೇ ಕಣ್ಣು ಬಂದಂತೆ ಬೆಳಗಾಯಿತು. ನೋಡಿದರೆ ಎದುರಿಗೆಮೂಜಗದ ಸೋಜಿಗ ಮೂರು ಕಾಲಿನ ಪ್ರಾಣಿಯಿದೆ! ಮುಖದಲ್ಲೆರಡು ಕಣ್ಣು ಬಿಟ್ಟರೆ ಉಳಿದೆಲ್ಲ ಮೂಳೆಮೂಳೆಯಾದ, ಮೂಳೆಯಿಂದ ರೇಖೆಗಳಿಂದ ಅಸ್ಥಿಪಂಜರ ರೂಪಿಯಾದ ಈ ಪ್ರಾಣಿ ಅಥವಾ ಗೋರಿಯಿಂದೀಗಷ್ಟೇ ಎದ್ದುಬಂದಂಥ ಅಲೌಕಿಕ ಜೀವ ಎದುರು ನಿಂತಿದೆ! ಚಂದಮುತ್ತನ ಹೃದಯ ಎದೆಗೆ ಡಬ ಡಬ ಹೊಡೆಯಿತು. ತುಟಿಗಳಿಲ್ಲವಾಗಿ ಸದಾ ನಗುವಂತಿದ್ದ ಅದರ ಮಾತು ಕೇಳಿಯೇ ಜೀವ ಬಂತು.
“ನಿನ್ನ ಕೈಲಿರೋದು ಏನಂದುಕೊಂಡೆ?”
-ಎಂದಿತು ಪ್ರಾಣಿ. ತಕ್ಷಣ ನೋಡಿಕೊಂಡ. ಕೈಯಲ್ಲಿ ದೀರ್ಘವಾದ ನೀಳವಾದ ಕೊಂಬಿದೆ.
“ಅದು ಯಾರ ಕೊಂಬೆಂದು ಬಲ್ಲೆ?”
“ಗೊತ್ತಿಲ್ಲ ಶಿವಪಾದವೆ”
“ಅದು ನಿನ್ನ ಸತ್ತ ಪುಣ್ಯಕೋಟಿಯ ಕೊಂಬು.
ತಿಂಗಳ ರಾಗ ನುಡಿಸಲು ಅದಕ್ಕಿಂತ ಉತ್ತಮ ಗಣೆ ಬೇಕೇನೋ ಬಾಲಕ?”

  • ಎಂದು ಹೇಳಿ ಗಾಳಿಯಲ್ಲಿ ಆ ಪ್ರಾಣಿ ಕರಗಿ ಹೋಯಿತೆ!
    ನೀಲಿ ವಜ್ರದಂಥ ಕಣ್ಣು, ರೇಖುಗಂಧಗಳ ಭಸಿತವ ಧರಿಸಿದ್ದ ರೇಖಾಕೃತಿಯಂಥ ಅದರ ಆಕಾರ ಮತ್ತು ಮಾತಿನಿಂದ ನಿಬ್ಬೆರಗಾದ ಹುಡುಗ ಮೆಲ್ಲಗೆ ನಮ್ಮ ಲೋಕಕ್ಕೆ ಬಂದ.
    ಮಾರುದ್ದದ ಕೊಂಬು ಓರೆಕೋರೆ ಗಂಟುಗದಡಿಲ್ಲದೆ ತೆಳ್ಳಗೆ ನೀಳವಾಗಿ ಮಾಟವಾಗಿ ಬೆಳೆದಿತ್ತು. ಅದು ತನ್ನ ಗೊಲ್ಲ ಗೋಕುಲ ಕುಲದ ಪುಣ್ಯಕೋಟಿಯ ಕೊಂಬೆಂದು ತಿಳಿದು ಅಭಿಮಾನವಾಯಿತು.
    ಕೊಂಬು ನುಣ್ಣಿಸಿ ಉಸಿರಾಡುವ ರಂಧ್ರವ ಕೊರೆದು
    ಗಣೆ ಮಾಡಿದ ಚಂದಮುತ್ತ.
    ಗಣೆಯಲ್ಲಿ ಇನ್ನೆಂಟು ರಂದ್ರಗಳ ಕೊರೆದು
    ಒಟ್ಟು ನವನಾಳಗಳಿಂದ ಪ್ರಾಣ ಹರಿವಂತೆ ಮಾಡಿ
    ಹೆಣ್ಣು ಕೊಳಲು ಮಾಡಿದ ಚಂದಮುತ್ತ.
    ಹಚ್ಚೆಯ ಬರೆದು, ಹೂಮುಡಿಸಿ
    ಕಳೆದ ಹಾಡನ್ನ ಅನುಗ್ರಹಿಸು ತಾಯೇ ಎಂದು
    ಭಕ್ತಿಯ ಮಾಡಿ
    ಕೊಳಲನ್ನ ತುಟಿಗಿಟ್ಟುಕೊಂಡ ಚಂದಮುತ್ತ.
    ಹದಮೀರದ ಹಾಗೆ ಉಸಿರನ್ನ ನಾಭಿಯಲ್ಲಿ ನಿಯಂತ್ರಿಸಿ
    ಕಟ್ಟಿ ಮೆಲ್ಲಗೆ ಉಸಿರು ತುಂಬಿ
    ಓಂಕಾರವನೂದಿದ ಚಂದಮುತ್ತ.
    ದುಃಖತಪ್ತ ತಾಯಿ ತಪ್ಪಿಸಿಕೊಂಡ ಮರಿಯ ಕರೆವಂತೆ
    ಮೆಲ್ಲಗೆ ಕೊಳಲೂದಿದ ಚಂದಮುತ್ತ.
    ಅನತಿದೂರ ಕಾಡಿನಲ್ಲಿ ತಪ್ಪಿಸಿಕೊಂಡ ಜಿಂಕೆಮರಿಯಂತೆ ನಿಂತುಕೊಂಡಿದ್ದ ಹಾಡು ಕಂಡಿತು. ಹೃದಯ ಭಗ್ಗನೆ ಹೊತ್ತಿಕೊಂಡಿತು. ಮತ್ತೆ ನುಡಿಸಿದ. ಕೊಳಲುಲಿ ಮೈಗೆ ತಾಗಿ ಜಿಂಕೆಮರಿ ಥರಥರ ನಡುಗಿತು. ಇನ್ನಷ್ಟು ಸಮೀಪಕ್ಕೆ ಸರಿದ. ಜಿಂಕೆಮರಿ ಅಪಾಯದ ಗಾಬರಿಯಲ್ಲಿ ಓಡಲಾರದೆ ಭಯ ಬೆರೆತ ಬೆರಗಿನಲ್ಲಿ ನಿಂತುಕೊಂಡಿತ್ತು. ಹಾಲುಂಡ ನೆನಪು ಮರುಕಳಿಸುವಂತೆ ಕೊಳಲು ನುಡಿಸಿ, ಕಳ್ಳಹೆಜ್ಜೆಯನಿಡುತ್ತ ಮೆಲ್ಲಗೆ ಹಿಂದಿನಿಂದ ಹೋಗಿ ಗಪ್ಪನೆ ಹಿಡಿದುಕೊಂಡ. ಬೆಚ್ಚಗಿತ್ತು ಜಿಂಕೆ, ಮೃದುವಾಗಿತ್ತು ಮರಿ; ಅಕ್ಕರೆಯಿಂದ ಆಕ್ರಮಿಸಿ ಎದೆಗಪ್ಪಿಕೊಂಡು ಮೂಸಿ ಮುದ್ದಿಸಿ ಸ್ಪರ್ಶ ಸುಖವುಂಡ. ಸಂತೋಷ ಮೀರಿ ವಿಸ್ತಾರವಾದವು ಹೃದಯ. ಬಿಗಿದಪ್ಪುಗೆಯಲ್ಲಿ ಉಸಿರಿನ ಲಯ ತಪ್ಪಿ ಗಕ್ಕನೆ ಹಾಡು ತಪ್ಪಿಸಿಕೊಂಡು ಕಾಡಿನಲ್ಲಿ ಮತ್ತೆ ಕಣ್ಮರೆಯಾಯಿತು.
    ಇಂತೀಪರಿ ಅಡಗುವ ಹಾಡು, ಹುಡುಕುವ ಚಂದಮುತ್ತ – ಇಬ್ಬರ ಆಟ ದಿನಾ ನಡೆದು ಒಂದು ದಿನ ಅಡಗಿದ ಹಾಡನ್ನು ಕಾಡಲ್ಲಿ ಹುಡುಕುತ್ತಿರಬೇಕಾದರೆ ಬಳ್ಳಿಯ ಆಳ ತಿಳಿಯದೆ ಕಾಲಿಟ್ಟು ಪಾತಾಳದ ಕಮರಿಗೆ ಪತನವಾದ.
    ಈiಡಿsಣ ಠಿಚಿಡಿಣ eಟಿಜs heಡಿe

೧೫. ಎಂಥಾ ಲೋಕವಯ್ಯಾ!

ಪತನಗೊಂಡ ಚಂದಮುತ್ತನಿಗೆ
ಬೋಧೆ ಬಂದು ಸ್ಮೃತಿಯಾಗಿ ಕಣ್ಣು ತೆರೆದರೆ
ಶಿವ ಶಿವಾ ಎದುರಿಗೆ ಎಂಥಾ ಲೋಕವಯ್ಯಾ!
ಮ್ಯಾಲೆ ಸೂರ್ಯನಾರಾಯಣಸ್ವಾಮಿಯಿಲ್ಲ
ಮನೆದೇವರು ಚಂದಪ್ಪನಿಲ್ಲ
ಹೇಳ ಕೇಳುವುದಕ್ಕೆ ಯಾರೂ ಇಲ್ಲ.
ಬಯಲ ಬಸಿರಲ್ಲಿ ನೆಲೆಗೊಂಡ ಸಾವಿನಂಥ
ಘನಾಂದಾರಿ ಮೌನದ ಲೋಕವಯ್ಯಾ!
ಹಗಲೆಂದರೆ ಹಗಲಲ್ಲ ರಾತ್ರಿಯೆಂದರೆ ರಾತ್ರಿಯಲ್ಲ
ಹಸಿರು ಹಸಿರಂತಿಲ್ಲ, ಮರವು ಮರದಂತಿಲ್ಲ,
ಬೀಸದ ಗಾಳಿಯಿದೆ, ಹರಿಯದ ನೀರಿದೆ.
ಕದಡಿದ ಕನಸಿನ ಹಾಗೆ ಮ್ಯಾಲೆ ಆಕಾಶವಿದೆ
ಲೋಕದ ಶಾಪಂಗಳು ಆಕಾರಗೊಂಡು
ವಿಕಾರಗೊಂಡು ಕೆಳಗೆ ಬಂದೈದಾವೆ.
ಹರ್ಷಂಗಳು ಇದ್ದಿಲಾಗಿವೆ.
ಆನಂದಗಳು ಭಸ್ಮವಾಗಿವೆ.
ಮೂಲೆ ಮೂಲೆಗೆ ಕಾಮನ ಬಿಲ್ಲು ಮುರಿದು
ಒಟ್ಟಿದ ಗೊಬ್ಬರ ಹಾಂಗೇ ಇದೆ.
ಕಣ್ಣು ತೆರೆದರೆ ಕಣ್ಣಿಗೊತ್ತುವ ಲೋಕ
ಮುಚ್ಚಿದರೆ ಎದೆಗಡರಿ ನೋಯಿಸುವ ಲೋಕ
ಬಂದ ದಾರಿ ಯಾವುದು ಶಿವನೇ
ಹೋಗುವ ದಾರಿ ಯಾವುದೆಂದು
ಎಲ್ಲಿಂದೆಲ್ಲಿಗೆ ಬಂದೆನೆಂದು
ಇದ್ಯಾವ ದೇಶ ಯಾವ ಲೋಕ ಯಾವ ನರಕವೆಂದು
ಹಿಂಡನಗಲಿದ ಕರುವಿನಂತೆ ಚಂದಮುತ್ತ
ಗಾಬರಿಯಲ್ಲಿ ಅತ್ತಿತ್ತ ಓಡಾಡಿದ.
ಅಡರಿದ ಭಯದಲ್ಲಿ ನಿಂತಲ್ಲಿ ನಿಲ್ಲಲಾರದೆ ಕೂತಲ್ಲಿ
ಕೂರಲಾರದೆ ಗೊತ್ತು ಗುರಿ ಗೊತ್ತಾಗದೆ ನಡೆಯಲಾರದೆ
ಬದುಕಿರುವೆನೋ ಸತ್ತಿರುವೆನೋ ಎಂದು
ತನ್ನ ತಾನು ಗುದ್ದಿ ನೋಡಿಕೊಂಡ.
ತನ್ನ ತಾನು ಚಿವುಟಿ ನೋಡಿಕೊಂಡ.
ಸತ್ಯುಳ್ಳ ಸದಾ ಶಿವಲಿಂಗದೇವಾ ಎಂದು
ಕರುಳು ಕಿತ್ತು ಬಾಯಿಗೆ ಬರುವಂತೆ ಕಿರಿಚಿದ.
ಕಿರಿಚಿದ್ದು ತನಗೇ ಕೇಳಿಸದೆ, ತಾನು ಸತ್ತಿರುವೆನೆಂದು ಖಾತ್ರಿಯಾಗಿ
ಭೂಮಿ ಆಕಾಶ ಅದಲು ಬದಲಾದ
ಯಮಧರ್ಮರಾಯನ ಲೋಕವಿದೆಂದು
ಹತಾಶನಾಗಿ ಬಿದ್ದ.
ಶಿವನ ದಯೆ, ತಂಗಾಳಿ ಬೀಸಿ ನಿರ್ಜೀವ ಲೋಕದಲ್ಲಿ ಜೀವ ಸಂಚಾರವಾದಂತೆ ದೂರದಿಂದ ಯಾರೋ ಹಾಡುತ್ತಿದ್ದುದು ಕೇಳಿಸಿತು. ಎಳೆ‌ಎಳೆಯಾಗಿ ಬರುತ್ತಿದ್ದ ದನಿಯ ಸುಳಿ ಹಿಡಿದು ಚಂದಮುತ್ತ ಹೊರಟ.
ಕ್ಷಿತಿಜದೀಚೆ ಎತ್ತರದ ಬೆಟ್ಟಕ್ಕಂಟಿ ಸಾವಿರದೆಂಟು ಕಂಬಗಳ ಶಿವದೇವಾಲಯ. ಕಂಬಗಳ ಮ್ಯಾಲೆ ಛಾವಣಿಗೆಯಾಗಿ ನೀಲಿಮ ಆಕಾಶವನ್ನೇ ಹೇರಿದ್ದಾರೆ. ಒಮ್ಮೆ ಒಳಹೊಕ್ಕರಾಯ್ತು ಎತ್ತ ನೋದಿದತ್ತ ಎತ್ತರವಾದ, ಆಕಾಶವ ಹೊತ್ತ ಕಂಬಗಳೇ ಕಾಣಿಸುತ್ತಿದ್ದಾವೆ. ಗರ್ಭಗುಡಿಯ ಗುಂಭದಲ್ಲಿ ಕತ್ತಲೆ ವಿನಾ ಮತ್ತೇನು ಕಾಣುತ್ತಿಲ್ಲ. ಅದರ ಮುಂದೆ ಶಾಂತಚಿತ್ತ ನಂದಿ ಮಾತ್ರ ಮೆಲುಕಾಡಿಸುತ್ತ ಮಲಗಿದೆ. ಅದರೀಚೆ ಡೊಳ್ಳುಹೊಟ್ಟೆಯ ದಡಿಯನೊಬ್ಬ ಹಾಡಿನೆಳೆಯ ಹಿಡಿದೆಳೆಯುತ್ತ ಶಾವಿಗೆಯೆಳೆಯಂತೆ ಸಣ್ಣದಾಗಿ ಹೊಸೆಯುತ್ತ ಬಹಳ ಎಚ್ಚಳದಿಂದ ಕುಂತಿದ್ದಾನೆ. ಈಚಲ ಮರದಂತೆ ತಲೆಕೆದರಿ ಕಾದ ಕಬ್ಬಿಣದ ಉಂಡೆಗಾತ್ರದ ಕಣ್ಣು, ಮುಖವು ತುಸು ಅಲುಗಿದರೂ ಕಳಚಿ ಬೀಳುವಂತಿದ್ದಾವೆ. ಎಲಡಿಕೆ ಸೀರ್ಪನಿಯಲ್ಲಿ ದನಿ ಒದ್ದೆಯಾಗಿ ಒಡೆದು ಬರುತ್ತ ಇದೆ. ಮೈಮ್ಯಾಲೆ ಸೊಂಟ ವಿನಾ ಚಿಂದಿ ಬಟ್ಟೆಯಿಲ್ಲ. ಹಾಡಿನೆಳೆ ಅವನ ನಾಭಿಕುಹರದ ಆಳದಲ್ಲಿ ಅಡಗಿದ್ದುದು ಸಿಕ್ಕದೆ ಚಿತ್ತವ ಏಕೀಭವಿಸಿ ಒಳಗೆ ಹೆಕ್ಕಿ ಹೆಕ್ಕಿ ಹುಡುಕುತ್ತಿದ್ದಾನೆ. ಇಡೀ ಶಿವಾಲಯದ ಗುಂಭ ತಂಬೂರಿಯ ಮಿಡಿದಂತೆ ಆಧಾರಶೃತಿಯ ಮಿಡಿಯುತ್ತಾ ಇದೆ.
ಇಂತೀಪರಿ ಸಂಗೀತದ ತಯಾರಿ ನಡೆದಿರುವಲ್ಲಿ ಕಂಬ ಕಂಬಗಳ ಸಂದಿಯಲ್ಲಿ ಬಚ್ಚಿಡಲಾಗದ ತಪ್ಪುಗಳಂಥ ಬಗೆ ಬಗೆ ಜೀವಂಗಳು, ಅವಯವಗಳು ಅದಲು ಬದಲಾಗಿ ವಿಕಾರಗೊಂಡ ಜೀವಂಗಳು, ನೀರುಗುಳ್ಳೆಯಂಥ ಕಣ್ಣು ಪಿಳಿ ಪಿಳಿ ಬಿಡುತ್ತಿದ್ದ ಅಸಹಾಯ ಜೀವಂಗಳು ಮಹಾನುಭಾವನ ಸಂಗೀತಕ್ಕಾಗಿ ಕಾಯುತ್ತಾ ಇವೆ. ಯಾವುದೋ ದೇವತೆಗೆ ಶರಣಾಗಿ ಮಂತ್ರಭಾವಿತದಿಂದ ಕರೆದು, ಬಾರದ ಹಾಡಿಗೆ ಬಂದೊದಗೆಂದು ಅಂಗಲಾಚುವಂತೆ, ಒಲಿದು ಬಂದು ಅನುಗ್ರಹಿಸಬೇಕೆಂದು ವಿನಂತಿಸುವಂತೆ ಆಲಾಪವ ಸುರುಮಾಡಿದ. ಚಂದಮುತ್ತ ಮೆಲ್ಲಗೆ ಶಿವಾಲಯವ ಪ್ರವೇಶಿಸುತ್ತಲೂ ಅಲ್ಲಿದ್ದ ವಿಕಾರ ಜೀವರಾಶಿ ಹುಬ್ಬೇರಿಸಿ ಏರಿದ ಹುಬ್ಬು ಏರಿದ ಹಾಗೇ ಕಿರುಗಣ್ಣಲ್ಲಿ ಅರೆಗಣ್ ಬಿಟ್ಟು ಇವನನ್ನೇ ಕಣ್ಣಿಂದಿರಿಯತೊಡಗಿದವು. ಕದ್ದವನಲ್ಲ, ಕನ್ನ ಹಾಕಿದವನಲ್ಲ ಶಿವ ಶಿವಾ ಇವ್ಯಾಕೆ ತನ್ನ ಹಿಂಗೆ ನೋಡುತ್ತಾವೆಂದು ಚಂದಮುತ್ತನ ಜೀವ ಜಲ್ಲೆಂದವು. ಕಂಪಿತನಾಗಿ ಮುದುಡಿ ಕಂಬವೊಂದರ ಮರೆಯಲ್ಲಿ ಹುದುಗಿದ.
ಮಹಾನುಭಾವನ ಧ್ವನಿ ಆಗಲೇ ಹದಕ್ಕೆ ಬಂದು ಪರಿಚಿತ ಸೀಮೆಗಳಲ್ಲಿ ಸಹಜವಾಗಿ ಸಂಚರಿಸುತ್ತ ಆನಂದಲೋಕಂಗಳ ಸೃಷ್ಟಿ ಮಾಡತೊಡಗಿತು. ಈ ಹೊಸ ಸೃಷ್ಟಿಗೆ ಕ್ಷಿತಿಜದಾಚೆಗಿನ ಯಾವುದೋ ಶಕ್ತಿಕೇಂದ್ರವಿದೆಯೆಂದು ಹಾಡು ಕೇಳಿದವರಿಗೆ ತಿಳಿಯುವಂತಿತ್ತು. ಹಾಡುಗಾರಿಕೆಗೆ ತೀವ್ರವಾದಂತೆ ಶಿವ ಶಿವಾ, ಶಿವಾಲಯದ ಕಂಬಗಳು ಬಗೆ ಬಗೆ ವಾದ್ಯಗಳ ದನಿಮಾಡಿ ಹಾಡಿಗೆ ಸ್ವರ ಮೇಳ ಒದಗಿಸಿದವು.
ಇಂತೀಪರಿ ಹಾಳುಲೋಕ ಕೈಲಾಸವಾಗುತ್ತಿರುವಲ್ಲಿ ಚಂದಮುತ್ತ ಮೈಯೆಲ್ಲ ಕಿವಿಕಣ್ಣಾಗಿರಲು ಮಹಾನುಭಾವ ಥಟ್ಟನೆ ಹಾಡು ನಿಲ್ಲಿಸಿ,
“ಆ ಕಂಬಕ್ಕೇನು ಧಾಡಿಯಾಗಿದೆ? ಅದ್ಯಾಕೆ ದನಿಗೂಡುತ್ತಿಲ್ಲ?” -ಎಂದು ರವರುದ್ರಗೋಪದಲ್ಲಿ ಕಿರಿಚಿ ಚಂದಮುತ್ತ ಮರೆನಿಂತ ಕಂಬವ ಗುರಿಮಾಡಿ ಕಣ್ಣಿಂದಿರಿದ. ಹಾಡು ಹರಿಗಡಿದು ಇಡೀ ಶಿವಲೋಕ ನಿಶ್ಯಬ್ದವಾಗಿ ಕಟ್ಟಿದ್ದ ಕೈಲಾಸ ಕುಸಿದು ಮತ್ತೆ ಹಾಳು ಲೋಕವಾಯಿತು.
“ನರಮಾನವನೊಬ್ಬ ಮುಟ್ಟಿ ಆ ಕಂಬ ಮೈಲಿಗೆಯಾಗಿದೆಯಾಗಿ ಅದು ಮಹಾ ಸಂಗೀತದಲ್ಲಿ ಭಾಗಿಯಾಗುತ್ತಿಲ್ಲ ಶಿವಪಾದವೇ”
-ಎಂದು ಯಾರೋ ದನಿಯೆತ್ತಿದರು.
“ಯಾರು ಆ ಪಾಪಿ?”
ಅಲ್ಲಿದ್ದ ಜೀವರಾಶಿಗಳ ನೀರುಗುಳ್ಳೆ ಕಣ್ಣುಗಳೆಲ್ಲ ಈಗ ಚಂದಮುತ್ತನ್ನ ಇರಿಯತೊಡಗಿದವು. ಹುಡುಗ ಗಾಬರಿಯಲ್ಲಿ ಕರುವಿನಂತೆ ಥರಥರಗುಡುತ್ತ ಸದರಿ ಕಂಬದ ಮರೆಯಿಂದ ಹೊರಬಂದು ಕರುವಿಗಿರುವಂಥ ದೊಡ್ಡ ಕಣ್ಣು ತೆರೆದು ಶಿರಬಾಗಿ ಕರಮುಗಿದು ಹ್ಯಾಗೋ ಕಾಲೂರಿ ನಿಂತ. ಮಹಾನುಭಾವ ಉರಿದುರಿದು ಇನ್ನೇನು ಸಿಡಿಯಲಿದ್ದ ಕಣ್ಣುಗಳಿಂದ ಇವನ ನೋಡಿದ. ಹೊತ್ತಿಕೊಂಡ ಹುಬ್ಬು ಹೊಗೆಯಾಡುತ್ತಿದ್ದವು. ಗುಡುಗಿದ;
“ಯಾರು ನೀನು?”
“ದಯವಾಗು ಶಿವಪಾದವೇ. ಕುಲದಲ್ಲಿ ಗೊಲ್ಲ, ಜಾತಿಯಲ್ಲಿ ಹಾಲುಮತ. ಶಿವಾಪುರ ಅನ್ನತಕ್ಕ ಘನವಾದ ಹಟ್ಟಿಯ ಚಂದಮುತ್ತ ನಾನು.”-ಎಂದು ನಿಂತಲ್ಲೇ ಧರಣಿಗೆ ಬಿದ್ದು ಸಾಷ್ಟಾಂಗ ಬಿನ್ನಪ ಎರಗಿದ.
“ಥೂ ಚಂಡಾಲ ನನ್ನ ಒಂದು ವರ್ಷದ ತಪವ ಹಾಳು ಮಾಡಿದೆ.” ಎಂದು ನಿಂದಕದ ನುಡಿಯಾಡುತ್ತ ತೊಪಕ್ಕೆಂದು ಚಂದಮುತ್ತನ ಮ್ಯಾಲೆ ಉಗಿದು ಅದೂ ಸಾಲದೆಂದು ತಿರಸ್ಕಾರದಿಂದ ನೋಡುತ್ತ ಗರ್ಭಗುಡಿಯ ಕರಿಘನಲಿಂಗದಂಥ ಕಗ್ಗತ್ತಲಲ್ಲಿ ಮಾಯವಾದ. ಶಿವಾಲಯ ವಿನಾ ಉಳಿದೆಲ್ಲ ವಿಕಾರ ಜೀವಲೋಕ ಅವನೊಂದಿಗೇ- ನಿಂತ ನಿಂತಲ್ಲೇ ಮಾಯವಾಯಿತು.

೧೬. ವಿಕಾರ ರಾಗಂಗಳು

ಚಂದಮುತ್ತ ಒಳಗೆ ಹೋಗಲು ಧೈರ್ಯಸಾಲದೆ ಮಹಾನುಭಾವ ಹೊರಗೆ ಬಂದಾನೆಂದು, ಬಾರದಿರನೆಂದು, ಬಂದೇ ಬರುವನೆಂದು, ಯಾವಾಗ ಬರುವನೋ ಮಹಾರಾಯನೆಂದು, ಬಂದಾಗ ಬರಲೆಂದು ಗರ್ಭಗುಡಿಯ ದ್ವಾರಬಾಗಿಲು ಕಣ್ಣಾಗಿ ಕಾಯುತ್ತಾ ಕೂತ. ಬರುವಂತೆ ಮಾಡಲೆಂದು ಶಿವನಾಮವ ನಾಲಿಗೆಯ ಮ್ಯಾಲೆ ತೇಯುತ್ತ ಸಮಯದ ಪರಿವೆ ಮರೆತು ಕೂತ. ಹೆಗಲ ಕಂಬಳಿ ಕೈಯ ಕೋಲು ಹಿಡಿದ ಹಾಗೇ ಕುಳಿತು ಕಣ್ಣು ಮುಚ್ಚಿದ. ಕಂಬಳಿ ವಾಸನೆಗೆ ಕಣ್ಣಲ್ಲಿ
ಸ್ವಪ್ನವಾಗಿ-
ಓಡೋಡಿ ಬಂದೆವು
ಕುರಿಮಂದೆ, ದನಕರು ಅಟ್ಟಿಸಿಕೊಂಡವರಂತೆ.
ಚಂದಮುತ್ತ ಗಕ್ಕನೆ ಎಳೆಹುಲ್ಲು ಬೆಳೆದ ಗೋಮಾಳವಾಗಿ
ಅಲುಗದೆ ಮಲಗಿದ.
ಓಡೋಡಿ ಬಂದೆವು ಏಳೇಳು ಹಿಂಡು ಕುರಿ
ಏಳೇಳು ಹಿಂಡು ದನ.
ಕೆಂದಾಕಳು ಕಪಿಲೆ
ಹಣಿಚಿಕ್ಕಿ ಹೋರಿ ನಂದಿ
ಕಾಳೆಮ್ಮೆ ಜಕ್ಕಿ
ಕಂದು ನಾಯಿ ಕರಿಬಿಳಿ ನಾಯಿ
ತನ್ನ ಮ್ಯಾಲೆ ಬೆಳೆದಿದ್ದ ಗರಿಗರಿ ಗರಿಕೆಯ ತುಳಿಯುತ್ತ
ಮಿರುಮಿರುಗುವ ಇಬ್ಬನಿಯ ನೆಕ್ಕುತ್ತ
ಬಂದೆವು.
ಹಿಂದಿನಿಂದ ತಾಯಿ ಜಗಳವಾಡುತ್ತಾ
ಶಿವನಿಗೆ ಶಾಪ ಹಾಕುತ್ತ ಕಳೆದ ಕರುವಿನ ಈದ ಹಸುವಿನಂತೆ ಬರುತ್ತಿದ್ದರೆ,
ಅವಳಿಗೂ ಹಿಂದೆ ಮುದಿಜೋಗ್ತಿ
ಬೆಂಕಿ ಹತ್ತಿದ ಕಾಡಿನಂತೆ
ಸುಡುತ್ತಾ, ಸುತ್ತ ಬೆಳಗುತ್ತಾ
ಬರುತ್ತಿರುವಲ್ಲಿ
ಅವಳ ಬೆಂಕಿಯಲ್ಲಿ ಮಹಾನುಭವ
ಕೀಡೆಯಂತೆ ಹುರುಪಳಿಸುತ್ತಾ ಕಿರುಚುತ್ತಾ
ಹೊರಳಾಡುತ್ತಿರುವುದ ಕಂಡು
ಸ್ಮೃತಿಗೆ ಬಂದ.
ಸ್ಮೃತಿಗೆ ಬಂದು ನೋಡಿದರೆ ಗರ್ಭಗುಡಿಯ ಒಳಗಡೆಯಿಂದ ಮಹಾನುಭಾವ ನಿಜವಾಗಿ ಕಿರಿಚುತ್ತಿದ್ದಾನೆ! “ಕಾಪಾಡಿರೋ” ಎಂದು, “ಶಿವಧೋ” ಎಂದು ಗೋಳು ಗೋಳೆಂದು ದುಃಖವ ಮಾಡುತ್ತಿದ್ದಾನೆ! ಅವನ ಆರ್ತಧ್ವನಿಗೆ ಪ್ರತಿಧ್ವನಿಸಿ ಇಡೀ ಸ್ವಾಲಯದ ಅಷ್ಟೂ ಕಂಬಗಳು ಸಾವಿರ ಪಟ್ಟು ಜೋರಾಗಿ ಕಿರಿಚಿ ಮ್ಯಾಲೆ ಕೆಳಗಿನ ಏಳೇಳು ಒಟ್ಟು ಹದಿನಾಕು ಲೋಕಂಗಳು ನಡುಗುತ್ತಾ ಇವೆ. ಒಳಗೆ ಈಗ ಕತ್ತಲೆ ಬದಲು ಬೆಂಕಿಹತ್ತಿ ಉರಿಯುತ್ತಾ ಇದೆ. ಅಯ್ಯೋ ಮಹಾನುಭಾವನಿಗೇನೋ ಬರಬಾರದ ಕಷ್ಟ ಒದಗಿ ಬಂದಿದೆಯೆಂದು ವೇದ್ಯವಾಗಿ ಹಿಂದೆಮುಂದೆ ನೋಡದೆ ಚಂದಮುತ್ತ
ಒಳಗೆ ಹೊಕ್ಕ. ನೋಡಿದರೆ ಶಿವ ಶಿವಾ,-
ಜಗ ಜಗ ಬೆಂಕಿಯ ಜ್ವಾಲೆಯ ಚಿಲುಮೆ
ಎತ್ತರೆತ್ತರ ಚಿಮ್ಮುತ್ತಾ ಇವೆ.
ಸ್ಥಾಪನೆಗೊಂಡ ಶಿವಲಿಂಗದ ಪಕ್ಕದಲ್ಲಿ ಮಹಾನುಭಾವ
ಅಂಗಾತಾಗಿ ಅಸಹಾಯನಾಗಿ ಆಕಾಶದ ಕಡೆ ನೋಡುತ್ತಾ
ಶಿವದುಃಖ ಶೋಕವ ಮಾಡುತ್ತಾ ಒದ್ದಾಡುತ್ತಿದ್ದಾನೆ.
ಅವನ ಬೊಜ್ಜಿನ ಮ್ಯಾಲೆ
ಹಿಂದೆ ಕಂಡ ವಿಕಾರ ಜೀವಂಗಳು, ಪಿಶಾಚಿ ಗಣಂಗಳು
ನಿರ್ದಯವಾಗಿ ತುಳಿಯುತ್ತಾ,
ಕಾಡುಪ್ರಾಣಿಗಳಂತೆ ಕೇಕೆ ಹಾಕುತ್ತಾ, ಕುಣಿಯುತ್ತಾ ಇವೆ!
ಅವನು ನೋವಿನಿಂದ ನೊಂದು
ಬೆಂಕಿಯಲ್ಲಿ ಬೆದ ಬೆದ ಬೆಂದು
ಎಷ್ಟೆಷ್ಟು ಕಿರಿಚಿದರೆ ಅಷ್ಟಷ್ಟೂ ಉತ್ತೇಜನಗೊಂಡು
ಕುಣಿಯುತ್ತಾ ಇವೆ!
ತಕ್ಷಣ ಚಂದಮುತ್ತ ಮಹಾನುಭಾವನ ಮುಖದ ಬಳಿ ಹೋಗಿ ಮೊಣಕಾಲೂರಿ ಕುಂತು,
“ಶಿವಪಾದವೇ ನಾನೇನು ಮಾಡಲಿ?”
ಅಂದ. ಇವನ ಕಡೆ ನೋಡಲೂ ಸಾಧ್ಯಾವಗದೆ ಮಹಾನುಭಾವ
“ಹಾಡು ಹಾಡು,ಬರುತ್ತಿದ್ದರೆ ಬೇಗ ಹಾಡು”
ಎಂದು ನೋವು ತಾಳದೆ ಒದ್ದಾಡಿದ. ಚಂದಮುತ್ತ ಇನ್ನೊಂದು ಚಿಂತಿಸದೆ ಸೊಂಟದ ಕೊಳಲು ತೆಗೆದುತಾನ್ ಬಲ್ಲ ರಾಗಂಗಾಳ ಬಲ್ಲಂತೆ ನುಡಿಸತೊಡಗಿದ. ತುಳಿಯುತ್ತಿದ್ದ ಪಿಶಾಚಿಯ ಕಣ್ಣುಗಳಲ್ಲಿಯ ಕ್ರೌರ್ಯದ ರಭಸ ನಿಧಾನವಾಗಿ ಕಮ್ಮಿಯಾಯಿತು. ಉನ್ಮಾದವಿಳಿದು ಬಂತು. ಪರಸ್ಪರ ನೋಡಿಕೊಂಡು ತಮ್ಮ ಮದೋನ್ಮತ್ತ ಅವಸ್ಥೆಯ ಬಗ್ಗೆ ತಮಗೇ ನಾಚಿಕೆಯಾಗಿ ಮೆಲ್ಲಗೆ ಮಹಾನುಭಾವನ ಬೊಜ್ಜು ಬಿಟ್ಟು ಕೆಳಕ್ಕಿಳಿದು ಬೆಂಕಿಯಾಚೆಯ ಕಗ್ಗತ್ತಲಲ್ಲಿ ಮಾಯವಾದವು.
ಮಹಾನುಭಾವ ಇನ್ನೂ ನರಳುತ್ತಿದ್ದ. ಚಂದಮುತ್ತನ ಕೊಳಲುಲಿಯ ಮಾಯೆಯನ್ನು ಕೃತಜ್ಞತೆಯಿಂದ ಸ್ಮರಿಸಿ ಎದ್ದಾಗ ಪಾದದ ಕಡೆ ಚಂದಮುತ್ತ ಕೈಮುಗಿದು ಕುಂತಿದ್ದ. ಪ್ರೀತಿಯಿಂದ ಬಾಲಕನ ತಲೆ ನೇವರಿಸಿದ. “ನಿನಗೆ ಅಕ್ಷಯವಾಗ್ಲಿ ನನ್ನಪ್ಪ” ಎಂದು ಹೇಳುತ್ತ ಗದ್ದ ಕೆನ್ನೆ ತೀಡಿ, ಬೆವರ ಜಲ ಒರೆಸಿ “ವಯಸ್ಸೆಷ್ಟಾಯ್ತು?” ಅಂದ.
“ಸಾಲದು ಸಾಲದು. ನೀನಿನ್ನೂ ಹಾಲು ಹೂವಿನಂಥ ಮಗ. ಇಷ್ಟು ಸಣ್ಣ ವಯಸ್ಸಿಗಾಗಲೇ ಮುದುಜೋಗ್ತಿಯ ಗಾಳಿಗೆ ಒಳಗಾದೆಯಾ ಕಂದ?” ಎಂದು ಕಾವಿ ಬಣ್ಣದಲ್ಲಿ ಮಿಂಚುವ ಹಲ್ಲು ತೋರಿಸುತ್ತ ಜೊಲ್ಲು ಸುರಿಸುತ್ತ ಕೇಳಿದ. ಮುದಿಜೋಗ್ತಿಯ ವಿಷಯ ಕೇಳಿದ್ದೇ ಚಂದಮುತ್ತ ರೋಮಾಂಚಿತನಾಗಿ
“ಶಿವಪಾದವೇ ಅವಳಿರುವ ಠಿಕಾಣಿ ಹೇಳಿ ಕಾಪಾಡು”- ಎಂದು ಮಹಾನುಭಾವನ ಪಾದ ಗಟ್ಟಿಯಾಗಿ ಹಿಡಿದುಕೊಂಡ. ಮಹಾನುಭಾವ ಬಾಲಕನನ್ನ ಒಂದು ಬಾರಿ ಇಡಿಯಾಗಿ ನೋಡಿ ಕರುಣೆಯಿಂದ ಹೇಳಿದ:
“ಎಳೆತನದಿಂದ ಈಗಷ್ಟೇ ಕದ್ದು ತಪ್ಪಿಸಿಕೊಂಡು ಬಂದಿದ್ದೀಯಾ, ತುಸು ನಿಧಾನವಾಗಿ ನಡಿಯೋ ಹುಡುಗಾ. ನೀನು ಕೇಳಿದ ಮಾತ್ರಕ್ಕೆ ಸಿಕ್ಕೋದಕ್ಕೆ ಅವಳು ಲೌಕ ಲೌಕಿಕದ ಪುಡುಗೋಶಿ ವಸ್ತು ಅಂದುಕೊಂಡೆಯಾ? ತಪಸ್ಸು ಮಾಡಿದವರಿಗೇ ಸಿಕ್ಕದವಳು ನಿನ್ನಂಥ ಬಾಲಕನಿಗೆ ಸಿಗುತ್ತಾಳೇನೋ? ಆಯಿತಾಯಿತು. ಅಷ್ಟೋ ಇಷ್ಟೋ ಕಲಿತಿದ್ದೀಯಾ, ಬೆಳೆಸಿಕೊ. ನೀನೂ ಬೆಳಿ. ಆವಾಗ ಪ್ರಯತ್ನಮಾಡು. ಸಿಕ್ಕರೆ ಶಿಕಾರಿ! ಸಿಗದಿದ್ದರೆ ಬಿಕಾರಿಯಾಗು- ನನ್ನ ಹಾಗೆ”
“ನನಗೆ ಮುದಿಜೋಗ್ತಿಯ ದರ್ಶನವಾಗಿದೆಯಂತ ನಿನಗೆ ಹ್ಯಾಗೆ ತಿಳಿಯಿತು ಶಿವನೆ?”
“ನೀನು ನುಡಿಸಿದ ರಾಗದಲ್ಲಿ ಮುದಿಜೋಗ್ತಿಯ ಹಾಡಿನ ಛಾಯೆಯಿತ್ತು. ಅದನ್ನು ಅನುಕರಿಸೋದು ಅವರಿವರಿಂದ ಶಕ್ಯವಿಲ್ಲ. ಆದರೆ ನಿನ್ನ ಶಕ್ತಿಯೂ ಸಾಲದು. ಆಕೆಯ ಹಾಡು ಹಿಂಗಿತ್ತೇ?”- ಎಂದು ಮುದಿಜೋಗ್ತಿಯ ಹಾಡನ್ನು ಹಾಡಿ ತೋರಿಸಿದ. ಚಂದಮುತ್ತನಿಗೆ ರೋಮಾಂಚನವಾಗಿ ಕರಮುಗಿದು ಶಿರಬಾಗಿ “ಹೌದು ಶಿವನೆ!” ಅಂದ. “ಹಾಂಗಲ್ಲ ಹಿಂಗಿತ್ತೆ ನೋಡು”- ಎಂದು ಅದೇ ರಾಗವನ್ನು ಬೇರೆ ರೀತಿ ಹಾಡಿ ತೋರಿಸಿದ. ಚಂದಮುತ್ತ “ಹೌದು ಶಿವನೇ”- ಅಂದ. “ಹಾಂಗಲ್ಲ ಹಿಂಗೆತ್ತೆ ನೋಡು”- ಎಂದು ಆ ರಾಗವನ್ನು ಇನ್ನೊಂದು ರೀತಿ ಹೇಳಿದ. ಚಂದಮುತ್ತ ಅದಕ್ಕೂ “ಹೌಂದು ಶಿವನೇ” ಅಂದ.
“ಮೂರೂ ಮುದಿಜೋಗ್ತಿಯ ಹಾಡುಗಳೇನೊ ಕಂದಾ?”
ಅಲ್ಲ. ಮೊದಲನೇದ್ದು ಅವಳ ಹಾಡು. ನಂತರದ ಎರಡು ನಿನ್ನ ಅನುಕರಣೆ” ಅಂದ.
ಬಾಲಕನ ಮಾತು ಕೇಳಿ ಮಹಾನುಭಾವನಿಗೆ ಮೆಚ್ಚುಗೆ, ಅಸೂಯೆ ಎರಡೂ ಆದವು. ಚಂದಮುತ್ತನ್ನ ತಬ್ಬಿ, ಎದೆಗವಚಿಕೊಂಡು ನೆತ್ತಿಯ ಮೂಸಿ ತಲೆ ಬೆನ್ನು ತೀಡಿ ಹೃತ್ಪೂರ್ವಕ ಹರಸಿ “ಬರೋಬ್ಬರಿ ಹೇಳಿದೆ ಕಂದ” ಎಂದ.
“ಪಿಶಾಚಿಗಳ್ಯಾಕೆ ನಿನ್ನ ಬೊಜ್ಜಿನ ಮ್ಯಾಲೆ ಕುಣಿದವು ಶಿವನೆ?”
“ಅದೊಂದು ದೊಡ್ಡ ಕಥೆ ಕಂದಾ. ಚಿಕ್ಕಂದು ನಾನು ಅಷ್ಟೋ ಇಷ್ಟೋ ಹಾಡುತ್ತಿದ್ದೆ. ನಾನು ಹಾಡುತ್ತಿದ್ದ ಸಭೆಗೆ ನುಗ್ಗಿ ಮುದಿಜೋಗ್ತಿ ಆಗಲೆ ನೀನು ನುಡಿಸಿದೆಯಲ್ಲ ಆ ಹಾಡನ್ನ ಹಾಡಿ ನನಗೆ ಅಣಗಿಸಿ ಮಾಯವಾದಳು. ಅಂದಿನಿಂದ ಅವಳ ಕಂಡು ಅವಳಿಂದ ಹೆಚ್ಚಿನ ವಿದ್ಯವ ಕಲಿವ ಹುಚ್ಚು ಹತ್ತಿತು. ಬೇಕಾದಷ್ಟು ಅಲೆದಾಡಿದೆ. ಈ ಮಧ್ಯೆ ಅಭ್ಯಾಸವಾಗಿ ತುಸು ಹಾಡುತ್ತಿದ್ದೆ. ಅಷ್ಟಕ್ಕೇ ರಾಜಮನ್ನಣೆ, ವಿದ್ವನ್ಮನ್ನಣೆ ದೊರೆತು ಅದರ ಅಮಲಿನಲ್ಲಿ ಮುದಿಜೋಗ್ತಿಯ ಹುಚ್ಚನ್ನೇ ಮರೆತುಬಿಟ್ಟೆ.
ಮನ್ನಣೆಗಳ ಅಹಂಕಾರ ತಲೆಗೇರಿ ಕೀರ್ತಿಯ ಕಾಮನೆಗಳಿಂದ ಖಾಯಿಲೆ ಬಿದ್ದೆ. ನಾನು ಹಾಡಿದ್ದೇ ರಾಗ ಹೇಳಿದ್ದೇ ವಿದ್ಯೆಯಾಗಿ ಅನೇಕ ರಾಗಂಗಳ ಕೆಡಿಸಿ ಹಾಡಿದೆ. ಅವೆಲ್ಲ ವಿಕಾರಗೊಂಡು ಪಿಶಾಚಿ ಗಣಂಗಳಾಗಿ ಈಹಿಂಗೆ ಅಲೆದಾಡುತ್ತವೆ. ಪ್ರತಿ ಅಮಾವಾಸ್ಯೆಯಂದು ನನ್ನ ಬೊಜ್ಜಿನ ಮ್ಯಾಲೆ ಕುಣಿದು ಹಿಂಸೆ ಕೊಡುತ್ತವೆ”.
“ಇವುಗಳಿಂದ ನಿನಗೆ ಮುಕ್ತಿ ಇಲ್ಲವೆ ಶಿವನೆ?”
“ಇದೆ. ಅವುಗಳನ್ನು ಶುದ್ಧ ರೂಪದಲ್ಲಿ ಹಾಡಿದರೆ ಅವುಗಳಿಗೆ ಮುನ್ನಿನ ರೂಪ ಬಂದು ನನ್ನನ್ನು ಬಿಡುಗಡೆಗೊಳಿಸುತ್ತವೆ”
“ಶುದ್ಧ ರೂಪ ಸಿದ್ಧಿಸಿದ್ದು ಹೆಂಗೆ ತಿಳಿಯುತ್ತದೆ?”
“ಭೃಂಗಿ ಬಂದು ಕುಣಿಯಬೇಕು”
“ಅವನ್ಯಾರು ಶಿವನೆ?”
“ಶಿವನ ಖಾಸಾ ಶಿಷ್ಯ, ಮೂಳೆರೂಪದ ಭಕ್ತ, ನೋಡಿದಾಗ ನಿನಗೇ ತಿಳಿಯುತ್ತದೆ. ಹಾಡು ಕೇಳಿ ಆನಂದವಾಗಿ ಅವನು ಬಂದು ಕುಣಿದ ಅಂದರೆ ವಿಕಾರ ರಾಗಂಗಳಿಗೆ ಅವುಗಳ ಮೂಲರೂಪ ಬರುತ್ತದೆ, ಆಗಲೇ ನಾನು ಮುಕ್ತ”.
“ಅಯ್ಯೋ ನಾನೇ ನಿನ್ನ ಮುಕ್ತಿಗೆ ಅಡ್ಡಿಯಾದೆನಲ್ಲ ಶಿವನೆ!”
“ಇಲ್ಲ. ತಪ್ಪುಗಳ ಸರಿಪಡಿಸಲು ನನ್ನೊಬ್ಬನಿಂದಲೇ ಆಗದೆಂದು ನನಗೆ ಗೊತ್ತಾಯಿತು. ನನ್ನ ಮುಕ್ತಿ ಮುಖ್ಯವಲ್ಲ. ರಾಗಂಗಳಿಗೆ ಶುದ್ಧರೂಪ ಬರಬೇಕು. ಈಗ ನನ್ನೊಂದಿಗೆ ನೀನೂ ಇದ್ದೀಯಲ್ಲ. ಇಬ್ಬರೂ ಪ್ರಯತ್ನಿಸುವ ಬಾ”.

೧ ೭. ಕಣ್ಣು ತೆರಿ ಶಿವನೇ

ಮೂರೂ ಕಣ್ಣು ಮುಕ್ಕಣ್ಣು ಮುಚ್ಚಿಕೊಂಡು
ಮುಖದ ಮ್ಯಾಲೆ ಜುಟ್ಟುಜಡೆ ಚೆಲ್ಲಿಕೊಂಡು
ಜಪತಪವ ಮಾಡುವ ಶಿವನೇ,
ಒಂದಾರು ಕಣ್ಣು ತೆರೆದು
ಕೆಳಗೆ ದಿಟ್ಟಿಸಿ ನೋಡು,
ಶಿವಾಪುರದ ಕಾಡಿನಲ್ಲಿ ಏನೇನು ನಡೆಯುತ್ತಿದೆ?
ಈದ ಹಸು ಪುಣ್ಯಕೋಟಿ
ಕರು ಕಳೆದುಕೊಂಡು
ಅನ್ನಾಹಾರ ಬಿಟ್ಟು ನಿದ್ರೆ ನೀರು ಬಿಟ್ಟು
ಅಂಬಾ ಎಂದು ಹಂಬಲಿಸುತ್ತ
ಧಾರಾವತಿ ಕಣ್ಣಿರು ಜಲವ ಸುರಿಸುತ್ತ
ಕರುಳು ಬಾಯಿಗೆ ಬರುವಂತೆ
ಬಾಯಿ ಬಾಯಿ ಬಿಡುತೈದಾಳೆ ತಾಯಿ:
ರೂಪುರೇಖೆ ಸದ್ದುಳ್ಳ ಸುಳಿಯ ನನ
ಹಾಲು ಹಸುಳೆ ಕರುವೇ
ನೇರ ಹಾರಿದೆಯ ಹುಲಿಯ ಬಾಯಿಗೇ
ಗಾಳಿ ತುಂಬಿ ಕಿವಿಗೆ |
ಬೇಲಿ ಹಾರಿ ಹೌಹಾರಿ ಧುಮುಕಿದೆಯೊ
ನೀರಿನ ತಿರುಗಣಿಗೆ ||
-ಎಂದು,
ಬರಿದಾದ ನನ್ನ ಭಾಗ್ಯವ ಹಿಂದಿರುಗಿ
ಕೊಡು ಶಿವನೇ ಎಂದು,
ಕೊಡದಿದ್ದ ಪಕ್ಷದಲ್ಲಿ
ನಾಲಗೆ ಹಿರಿದು ಪ್ರಾಣ ಬಿಡುವೆನೆಂದು,
ಪ್ರಾಣ ಬಿಟ್ಟ ಪಕ್ಷದಲ್ಲಿ
ನಿನಗ್ಯಾರೂ ಕಾಸಿನ ದೀಪ ಹಚ್ಚದಿರಲೆಂದು
ಕೈಯೆತ್ತಿ ಕರ ಮುಗಿಯದಿರಲೆಂದು
ಶಪಿಸುತ್ತ
ಗೋಳು ಗೋಳೆಂದು ಗೋಳಾಡುತಾಳೆ ತಾಯಿ
ಬಾನು ಕರಗುವಂತೆ
ಬನ ಮರಗುವಂತೆ.
ಕಣ್ಣು ತೆರೆದು ನೋಡು ಶಿವನೇ.

೧೮. ಕೈಲಾಸದ ಅವತಾರ

ಸತ್ಯದ ಶಿವಲಿಂಗಸ್ವಾಮಿಯ ಚಿತ್ತದಲ್ಲಿ ಸ್ಮರಿಸಿ
ಮುಂದೇನಾಯಿತೆಂದು ಹೇಳಬೇಕೆಂದರೆ-
ಮಹಾನುಭಾವನ ದರ್ಶನದಿಂದ
ಚಂದಮುತ್ತನ ಅಮಾವಾಸ್ಯೆಗೆ
ಚಂದ್ರನ ಕನಸಾಯಿತು.
ಕತ್ತಲ ಕಗ್ಗಂಟು ಸಡಿಲಿ,
ಬಿಡಿವಜ್ರ ಬೆಳ್ಳಿ ಮೂಡಿ
ಉದಯಗಿರಿ ಬಿರಿದು ಉದಯವಾದರು
ಸೂರ್ಯನಾರಾಯಣ ಸ್ವಾಮಿ.
ಹೊಸಬೆಳಕಿನ ಮಹಾಪೂರ ನುಗ್ಗಿ ಬಂತು ನೋಡು,
ಕೊಚ್ಚಿಹೋದವು ಇದ್ದಬಿದ್ದ ಅನುಮಾನಗಳು.
ಮೂಡುಬೆಟ್ಟ ಬಂಗಾರವಾಗಿ
ನಮ್ಮೀ ಧರೆಯ ಮ್ಯಾಗಿನ ಗಿಡಮರಗಳಲ್ಲಿ
ಚಿನ್ನದ ಚಿಗುರೆಲೆ ಹೊಳೆದವು.
ಮಹಾನುಭಾವ ಹಾಲು ಹಸುಳೆ ಚಂದಮುತ್ತನ್ನ ತನ್ನ ನಿರ್ಜನ ಆಶ್ರಮಕ್ಕೆ ಕರೆದೊಯ್ದು, ಇಬ್ಬರೂ ಗುರಿಶಿಷ್ಯರಾಗಿ, ಇಲೆ ಹೂಡಿ ಹೊಸಜೀವನ ಆರಂಭಿಸಿದರು. ಹೊಸಬೆಳಕಿನ ಮಳೆಯಾಗಿತ್ತಲ್ಲ. ಹೊಸನೀರು
ನುಗ್ಗಿತ್ತು ಮಡುಗಳಲ್ಲಿ. ಮಾಹಾನುಭಾವ ತಂದೆಗಿಂತ ನೂರು ಮಡಿ ಹೆಚ್ಚಿನ ಗುರುವಾಗಿ ತನ್ನಲ್ಲಿದ್ದ ವಿದ್ಯೆಗಳ ಚಂದಮುತ್ತನ ಸತ್ಪಾತ್ರಕ್ಕೆ ಧಾರೆಯೆರೆದನು. ಚಂದಮುತ್ತ ಶಿಷ್ಯನಾಗಿ ತನ್ನೆಲ್ಲವ ಗುರುವುಗರ್ಪಿತ ಮಾಡಿ ಗುರುಕರುಣೆ ಪಡೆದನು. ಗುರುವು ಶಿಷ್ಯನಿಗೆ ದಿನಕ್ಕೊಂದರಂತೆ ನೂರೊಂದು ರಾಗಂಗಳ ಕಲಿಸಿದನು. ಎದ್ದಾಗೊಂದು ರಾಗ, ನಿಂತುಕುಂತಾಗೊಂದು ರಾಗ, ಬಿಸಿಲು ಆಶ್ರಮದ ಹೊಸಿಲಿಗೆ ಬಂದಾಗೊಂದು ರಾಗ, ಕತ್ತಲೆಗೆ ಕಾವೇರಿ ತಡಮಾಡಿ ಬಂದ ತಿಂಗಳಲ್ಲಿ ಬೆಟ್ಟದ ತುದಿಗೆರೆ ಬೆಳಕಾಡಿದರೆ ಒಂದು ರಾಗ, ಬೆಳ್ಳಿ ಮೂಡಿದಾಗೊಂದು ರಾಗ, ಉದಯ ರಾಗ, ಬೆಳೆ ಬರಿಸುವ ರಾಗ, ಹಸಿರು ಚಿಗುರುವ ರಾಗ, ಹಾಳು ಸುರಿವ ರಾಗ, ಗೋಳು ಗೋಳಿನ ರಾಗ ಇಂತೆಂಬ ನೂರಾರು ರಾಗಂಗಳ ಕಲಿಸಿ, ತಿಂಗಳ ರಾಗವೊಂದನ್ನು ಕಲಿಸದೆ “ಅದು ನಾನರಿಯದ ರಾಗ” ವೆಂದು ಸೋತು ಮಾತಾಡಿದ.
“ತಿಂಗಳ ರಾಗ ನನಗೆಲ್ಲಿ ಸ್ಕ್ಕೀತು ಗುರುಪಾದವೇ?” ಎಂದು ಚಂದಮುತ್ತ ಕೇಳಿದಾಗ “ಅದನ್ನು ಹೇಳಬಲ್ಲವನು ಭೃಂಗೀಶ ಮಾತ್ರ”-ಎಂದು ಸುಮ್ಮನಾದ. ಮಾಸಗಳುರುಳಿ ಮತ್ತೊಂದು ಮಹಾಶಿವರಾತ್ರಿ ಬಂತು.ಜೊತೆಯಲ್ಲಿ ಚಂದಮುತ್ತನಿರುವುದರಿಂದ ತನ್ನ ಬಿಡುಗಡೆ ಖಚಿತವೆಂದು ಮಹಾನುಭಾವನಿಗೆ ವಿಶ್ವಾಸವಾಗಿತ್ತು.
ಗುರುಶಿಷ್ಯರು ಮಹಾಶಿವರಾತ್ರಿಯ ಮುನ್ನಾದಿನದ ಬೆಳ್ಳಿಯ ಬೆಳಕಿನಲ್ಲೆದ್ದರು. ಪಡುಬದಿಗೆ ಮೋರೆ ಮಾಡಿ ನೆತ್ತಿಯಲ್ಲಿ ಚಂದ್ರಾಸ್ವಾಮಿಯಿರುವ ಸತ್ಯದ ಸಾವಳಗಿ ಶಿವಲಿಂಗದೇವರೆ ನೆನೆದರು. ಸುತ್ತಲಿನ ದೇವ ದೈವಂಗಳ ನೆನೆದರು. ಹಿಡಿಸೂಡಿ ಹಿಡಿದು ಶಿವಾಲಯದ ಅಂಗಳ ಗುಡಿಸಿ ಹಸಿರು ಸೆಗಣಿ ಸಾರಿಸಿ ರಂಗೋಲಿ ಬರೆದರು. ಮಡುವಿನಲ್ಲಿ ಮಿಂದು ಮೈಲಿಗೆ ಕಳೆದು, ಮಡಿಯುಟ್ಟು ಓರೆಯಾಗಿ ಜುಟ್ಟುಕಟ್ಟಿಕೊಂಡರು. ಗಂಧದ ನೀರಿನಲ್ಲಿ ಗುಡುಯ ತೊಳೆದರು. ಹಿಡಿಗಂಧ ತೇದರು.ಪಂಚದರ್ಭೆಯ ಕಡ್ಡಿ ತಂದರು. ಬುಟ್ಟಿ ತುಂಬ ತುಂಬೆಯ ಹೂ, ಬಿಲ್ವ ಪತ್ರೆ ತಂದರು. ಪರಿಮಳದ ಹೂ ಹಿಂಗಾರುಗಳಲ್ಲಿ ಶಿವಲಿಂಗವ ಸಿಂಗರಿಸಿ ಪರಿಮಳ ಮ್ಯಾಲೇಳು ಲೋಕ, ಕೀಳೇಳು ಲೋಕಂಗಳಿಗೆ ಪಸರಿಸುವಂತೆ ಮಾಡಿದರು. ನಂದಾದೀಪ ಏರಿಸಿ ಶಿವಲಿಂಗದ ಬಳಿ ಕರಿ ಬಿಳಿ ಸುಣ್ಣ ಬಣ್ಣ ಕುಂಕುಮ ಅರಿಶಿಣಗಳಲ್ಲಿ ಮಂಡಳ ಬರೆದರು. ಅವರ ಮಧ್ಯೆ ಬಾಳೆಲೆ ಹಾಸಿ, ಅದರ ಮ್ಯಾಲೆ ವೀಳ್ಯೆದೆಲೆ ಯಿಟ್ಟು ಒಂದಡಿಕೆಯ ಐದು ಹೋಳು ಮಾಡಿ ಕರವೆತ್ತಿ ಶರಣೆಂದು ಕುಣಿವ ಭೃಂಗೀಶನ ಬಹಿರೂಪ ಬರೆದರು. ಹಸಿರುಗಣ್ಣಿನ ನೂರು ಕಾಲಿನ ಆ ಮೂಳೆರೂಪವ ನೋಡಿ ಚಂದಮುತ್ತ ಗಾಬರಿಯಾದ. ‘ಇದ್ಯಾರ ರೂಪ ಗುರುವೇ?’ ಎಂದ.
“ಭೃಂಗೀಶ”
ಹಿಂದೆ ತನ್ನ ಗಣೆಗೆ ಕೊಂಬು ದಯಪಾಲಿಸಿದ್ದು ಇದೇ ರೂಪವಲ್ಲವೆ? ಎಂದು ನೆನೆದು ಸಳ ಸಳ ಪುಳಕವೇರಿ, ಬೆವರಿ ಅಂಗಜಲದಲ್ಲಿ ಅದ್ದಿಹೋದ. ತನಗೆ ದರ್ಶನವಾದ ಭೃಂಗೀಶನ ಕಥೆಯ ಗುರುವಿಗೆ ಹೇಳಬೇಕು; ಇದಲ್ಲ ಕಾಲವೆಂದು ಸುಮ್ಮನಾದ. ಭೃಂಗೀಶನ ನೆತ್ತಿಯ ಮ್ಯಾಲೆ ಮುಗಿದ ಕೈ ಮುಟ್ಟುವಲ್ಲಿ ಧರ್ಮಪತ್ನಿ ಪಾರ್ವತೀದೇವಿ ಸಮೇತ ಸತ್ಯ ಶಿವದೇವರ ಶ್ರೀಪಾದಂಗಳ ಸ್ಥಾಪನೆ ಮಾಡಿದರು. ಯಂತ್ರ ಮಂತ್ರ ತಂತ್ರಗಳಿಂದ ಅಷ್ಟೂ ದೇವದೈವಂಗಳ ಆವಾಹಿಸಿ ಅವರವರ ಸ್ಥಳದಲ್ಲಿ ಬಂಧಿಸಿ ಬಂದೋಬಸ್ತ ಮಾಡಿ ಮೈಹಾಸಿ ಅಡ್ಡಬಿದ್ದಲ್ಲಿ ತಯಾರಿಗಳು ಮುಗಿದು ಭೂಮಿತಾಯಿ ತುರುಬು ಬಿಚ್ಚಿ ಬೆನ್ನಮ್ಯಾಲೆ ಕೂದಲು ಚೆಲ್ಲಿಕೊಂಡಂತೆ ರಾತ್ರೆ ಬಂತು.
ಕುಡಿ ಅಲ್ಲಾಡದ ನಂದಾದೀಪ ಉರಿವಷ್ಟು ಜಾಗಬಿಟ್ಟು ಸುತ್ತೂಕಡೆ ಕಗ್ಗತ್ತಲು ಹೆಪ್ಪುಗಟ್ಟಿತ್ತು. ಗುರುವು ಶೃತಿ ಎತ್ತಿದಂತೆ ವಿಕಾರ ರಾಗಂಗಳು ಒಂದೊಂದೇ ಬಂದು ಮೂಲೆ ಮೂಲೆಗಂಟಿ ಆತಂಕದ ಕಣ್ಣುಗಳ ಅಗಲವಾಗಿ ತೆರೆದು ತಮ್ಮ ದೈವದ ಸದ್ಗತಿಗಾಗಿ ಕಾಯುತ್ತ, ಕೃಪೆಗಾಗಿ ಅಂಗಲಾಚುವ ದೃಷ್ಟಿಗಳಿಂದ ಶಿವಲಿಂಗವ ತೀಡುತ್ತ, ತೊಳೆಯುತ್ತ ನಿಂತವು. ಮಂಡಳದ ಮುಂದೆ ಮಹಾನುಭಾವ ಹಾಡುವುದಕ್ಕೆ ಸಿದ್ಧನಾದಾಗ ಚಂದಮುತ್ತ ಕೊಳಲು ತಗೊಂಡು ಸಾಥಿಗೆ ನಿಂತ.
ಶೃತಿಗಳ ಕೂಡಿಸಿ ನಾಭಿಕುಹರದಿಂದ ಹದವಾದ ನಾದಂಗಳ ತೆಗೆದು ಆಲಾಪವ ಮಾಡಿದರು. ಇಡೀ ಶಿವಾಲಯ ಓಂಕಾರದ ಆಧಾರ ಶೃತಿ ಕೊಡುವಂತೆ ಮರುನುಡಿಯಿತು. ರಾಗಂಗಳ ಕರುಳು ಮಿಡಿದು ಬಳುಕಾಡಿದವು. ಈಗ ಗುರುಶಿಷ್ಯರು ಹೊಂದಾಣಿಕೆಯಿಂದ ಒಂದೊಂದೇ ರಾಗ ರಚನೆ ಹುಟ್ಟಿಸಿ, ಕ್ರಮದಲ್ಲಿ ಕಟ್ಟಿ ವಿಸ್ತರಿಸಿ, ಕೌಶಲದಿಂದ ವಿವರಗಳ ಬಿಡಿಸಿ, ಕಾಳಜಿಯಿಂದ ಜೀವ ತುಂಬಿ ಆತ್ಮಪ್ರತಿಷ್ಟಾಪನೆಗೈದು ವಿಜೃಂಭಿಸಿದರು. ಮೊದಮೊದಲಲ್ಲಿ ಭಾರವಾಗಿದ್ದ ಈ ಕ್ರಿಯೆ ಬರಬರುತ್ತ ಉಸಿರಾಟದಂತೆ ಸಹಜವಾಗಿ, ಸರಳವಾಗಿ, ನಿರರ್ಗಳವಾಗಿ ಸಾಗಿ ಇಬ್ಬರೂ ದಿವ್ಯೋನ್ಮಾದದಲ್ಲಿ ತೇಲುಗಣ್ಣಾದರು. ಹೆಪ್ಪುಗಟ್ಟಿದ್ದ ಕತ್ತಲೆಯ ಗೂಢಗಳು ತಂತಾವೆ ಡೀಕೋಡಿಸಿಕೊಂಡು ಬೆಳಕಿನ ಪುಂಜಗಳಾಗಿ, ಕಿರಣಂಗಳಾಗಿ ಮಾರ್ಪಾಟಾದವು. ವಿಕಾರ ರಾಗಂಗಳಲ್ಲಿ ವಿದ್ಯುತ್ ಸರಬರಾಜಾಗಿ ವಿರೂಪಂಗಳು ಕಳಚಿ ಒಳಗಡೆಯ ಚೇತನಂಗಳು ಸ್ವಸ್ವರೂಪ ಪಡೆಯಲು ಹವಣಿಸಿದವು. ಶಿವಾಲಯದ ಕಂಬಗಳಲ್ಲಿ ಜೀವಸಂಚಾರವಾಗಿ ನಾದವಾದ್ಯಗಳ ಧ್ವನಿಮಾಡಿ ನುಡಿಸುತ್ತ ಗುರುಶಿಷ್ಯರ ಸಂಗೀತಕ್ಕೆ ಸ್ವರಮೇಳವೊದಗಿಸಿದವು.
ಈಗ ಮಂಡಳದಲ್ಲಿದ್ದಬೃಂಗೀಶನ ಬಹಿರೂಪಕ್ಕೆ ಜೀವತುಂಬಿ ಚಿತ್ರದ ಕಂಗಳಲ್ಲಿ ಬೆಳಕಾಡಿತು. ಅಸ್ಥಿಪಂಜರ ರೂಪದ ಅವನ ಕೈಕಾಲುಗಳಲ್ಲಿ ಚೈತನ್ಯ ಹರಿದು ಥೈಥೈ ಕುಣಿಯತೊಡಗಿದವು! ಚಿತ್ರದ ಭೃಂಗೀಶನೇ ಜೀವಗೊಂಡು ಕುಣಿಯಬೇಕಾದರೆ ಶಿವಶಿವಾ- ಶಿವಾಲಯದ ಕಂಬಗಳು ಉನ್ಮಾದಗೊಂಡು ಸ್ವರಮೇಳವ ತಾರಕಕ್ಕೇರಿಸಿ, ಇಡೀ ಶಿವಾಲಯವ ಹೊತ್ತುಕೊಂಡೇ ಕುಣಿಯತೊಡಗಿದವು! ವಿಕಾರ ರಾಗಂಗಳಿಗೆ ಸ್ವಸ್ವರೂಪವೊದಗಿ ಸಡಗರದಲ್ಲಿ ಹುಚ್ಚೆದ್ದು ಕುಣಿದವು. ಎಲ್ಲರ ಕಣ್ಣುಗಳಲ್ಲಿ ಶಿವರಾತ್ರಿಯ ನಂದಾದೀಪಗಳು ಬೆಳಗಿ ಶಿವಾಲಯದಲ್ಲಿ ದೀಪಾವಳಿ ವಿಜೃಂಭಿಸಿತು. ಮಂಡಲದಲ್ಲಿದ್ದ ಲೋಕಂಗಳ ತಂದೆ, ತಾಯಿ ಶಿವಪಾರ್ವತಿಯರ ಕಾಲು ಚಡಪಡಿಸಿದವು. ಭೃಂಗೀಶನ ಭಕ್ತಿಯ ಕುಣಿತ , ಶಿವಾಲಯದ ಕಂಬಗಳ ಹುರುಪೇರಿದ ಕುಣಿತ, ವಿಕಾರರಾಗಂಗಳ ಸಡಗರದ ಕುಣಿತ, ಮೌನದ ಗುಂಭಕ್ಕೆ ಬಾಯಿ ಬಂದಂತಿದ್ದ ಸಂಗೀತ- ಇವೆಲ್ಲವುಗಳ ಸಮ್ಮೇಳನದಿಂದ ಲೌಕಿಕದಲ್ಲಿ ಅಲೌಕಿಕದ ಅವತಾರವಾಗಿ ಕೈಲಾಸ ಸಾಕ್ಷಾತ್ಕಾರವಾಗುತ್ತಿರುವಲ್ಲಿ-
ತಾರಕಕ್ಕೇರಿದ ಸಂಗೀತವ ಆಧಾರದ ಷಡ್ಜಕ್ಕಿಳಿಸುತ್ತ ಚಂದಮುತ್ತ ಕಣ್ಣುತೆರೆದನು. ನಿಜರೂಪವ ಮೆರೆದು ಮತ್ತೆ ಮಂತ್ರಭಾವಿತ ಬಣ್ಣದ ಚಿತ್ರವಾಗಲು ಭೃಂಗೀಶ ಮಂಡಳಕ್ಕೆ ಸದ್ದಿಲ್ಲದೆ ಸಂಚರಿಸುತ್ತಿರಲು ಅವನ ಎಲುಬಿನ ಕಾಲುಗಳನ್ನ ಥಟ್ಟನೆ ಗಟ್ಟಿಯಾಗಿ ತಬ್ಬಿಕೊಂಡು “ದಯವಾಗು ಶಿವಪಾದವೇ” ಅಂದ. ಒಂದು ಸಾರಿ ಬಾಲಕನ ಇಡಿಯಾಗಿ ನೋಡಿ ಭೃಂಗೀಶನ ಹರುಷ ಉತ್ತೇಜಿತವಾಯಿತು.
“ಹೌದಯ್ಯ ಕಂದಾ, ಚಿತ್ತ ಸಂಶಯ ಬ್ಯಾಡ, ನಿನ್ನ ಸಂಗೀತಕ್ಕೆ ಮೆಚ್ಚಿದೆ. ಸತ್ಯವ ಬೇಡು, ನಿತ್ಯವ ಬೇಡು, ಬೇಕಾದ್ದನ್ನು ಬೇಡು, ಬೇಡಿದ್ದನ್ನ ಕೊಡುವೆ”- ಎಂದು ಮೆಚ್ಚು ನುಡಿದ.
“ನನ್ನ ಗುರುವಿನ ಭಂಗವ ಹಿಂಗಿಸಿ ಮುಕ್ತಿ ಕೊಡು ಶಿವಪಾದವೇ” ಚಂದಮುತ್ತನ ಗುರುಭಕ್ತಿ ಭೃಂಗೀಶನಿಗೆ ಚನ್ನಂಗೊಪ್ಪಿಗೆಯಾಯಿತು. ಮಹಾನುಭಾವನ ಕಡೆ ನೋಡಿ.
“ಅಯ್ಯಾ ಮಹಾನುಭಾವ ಹಾಡುವಾಗ ಏನೇನು ಕಂಡೆ?”- ಎಂದ. ಮಹಾನುಭಾವ ತಕ್ಷಣ ಮೈಚೆಲ್ಲಿ ಸಾಷ್ಟಾಂಗವೆರಗಿ ಹೇಳಿದ:
ಕುಣಿವ ನಿನ್ನ ಶ್ರೀಪಾದಂಗಳ ಕಂಡೆ.
ಶಿವಾಲಯದ ಕಂಬಗಳು ಕುಣಿದುದ ಕಂಡೆ.
ರಾಗಂಗಳ ವಿಕಾರ ಕಳೆದು
ಮೂಲರೂಪದಲ್ಲಿ ಹೊಳೆದುದ ಕಂಡೆ.
“ನಿನಗೆ ಈಗಲೇ ಮುಕ್ತಿ ಸಿಕ್ಕಿತು ಹೋಗು”- ಎಂದು ಕರವೆತ್ತಿ ಆಶೀರ್ವದಿಸಿ ಚಂದಮುತ್ತನಕಡೆ ಕೃಪಾದೃಷ್ಟಿ ಬೀರಿ, “ಕಂದಾ ತಿಂಗಳುರಾಗವ ನೀನು ನುಡಿಸಲಿಲ್ಲ. ಅದನ್ನು ತಿಳಿದವಳು ಫಲಬೀರುವ ಹದವಂತಿ, ಮುದಿಜೋಗ್ತಿ. ಅವಳಲ್ಲಿಗೆ ಹೋಗು, ಚಂದ್ರಸಮೇತ ಮಂಗಳಮೂರ್ತಿ ಶಿವದೇವರ ದರ್ಶನವಾದಾಗಲೇ ನಿನಗೆ ಮುಕ್ತಿ.”- ಎಂದು ಚಂದಮುತ್ತನ ಸಂತವಿಸಿ ಭೃಂಗೀಶ ಮಂಡಳದಲ್ಲಿ ಐಕ್ಯವಾದ.
ಗುರುಶಿಷ್ಯರು ಶಿವರಾತ್ರಿಯ ಸತ್ಪಲದಿಂದ ಸಂತೃಪ್ತರಾಗಿ ಕಡ್ಡಿಕರ್ಪೂರ ಬೆಳಗಿ ಮಂಗಳಾರ್‍ತಿ ಮಾಡಿದರು. ಸ್ವಸ್ವರೂಪ ಪಡೆದು ಆನಂದನಗೆಯವರಾದ ಸರ್ವರಾಗಂಗಳಿಗೆ ನಮಸ್ಕಾರವ ಮಾಡಿ ಆಶೀರ್ವಾದ ಪಡೆದರು.

೧೯. ದೊಡ್ಡಾಲದ ಮರ

ಆಕಾಶದಂಗಳದಲ್ಲಿ ಬೆಳ್ಳಿಮೂಡುವ ಮುನ್ನವೇ ಗುರುಶಿಷ್ಯರಿಬ್ಬರೂ ಎದ್ದರು. ಕಗ್ಗತ್ತಲಲ್ಲಿ ಸುತ್ತ. ಶಬ್ದಸೂತಕ ಮಾಡದೆ ಶುಚಿಯಾಗಿ ದೇವಾಲಯಕ್ಕೆ ಹೋದರು. ಮಹಾನುಭಾವ ಮಂತ್ರ ತಂತ್ರಾದಿಗಳಿಂದ ಶಿವಲಿಂಗದ ಅಕ್ಕಪಕ್ಕದ ಭೂತಪಿಶಾಚಿಗಳ ಓಡಿಸಿದ. ಇಬ್ಬರೂ ಶಿವಭಕ್ತಿ ಶಿವಾಚಾರ ಮಾಡಿದ ಮ್ಯಾಲೆ ಮಹಾನುಭಾವ ಸುಮುಹೂರ್ತ ನೋಡಿ ಶಿಷ್ಯನ ನೆತ್ತಿಯ ಜುಟ್ಟು ಹಿಡಿದು ಶಿವಲಿಂಗಕ್ಕೆ ಹಣೆ ತಾಗಿಸಿ ಅವನ ಕಿವಿಯಲ್ಲಿ ಮಂತ್ರೋಪದೇಶವ ಮಾಡಿದ. ರಾಗಮಂಡಳ ಬರೆವ ವಿಧಾನಗಳ ಹೇಳಿಕೊಟ್ಟ. ಮಂಡಳಕ್ಕೆ ಮುದಿಜೋಗ್ತಿಯ ಆವಾಹಿಸುವ, ಆವಾಹಿಸಿ ಬಂಧಿಸುವ ಅವಳ ಹುಸಿಗಳ ಸುಲಿದು ನಿಜದಲ್ಲಿ ಸಾಕ್ಷಾತ್ಕಾರ ಮಾಡಿಕೊಂಬ ರಾಗ ರಚನೆ ಮಂತ್ರಗಳ ಹೇಳಿ ‘ಅವಳಿಂದ ತಿಂಗಳ ರಾಗ ಪಡೆವ ಗುಟ್ಟು ಮಾತ್ರ ನೀನೇ ಬಲ್ಲೆ’ ಎಂದು ಶಾಸ್ತ ಮುಗಿಸಿದ. ಈಗ ಕಾಡುಕೋಳಿ ಕೂಗಿ, ಗಂಡುಹಕ್ಕಿ ಚಿಲಿಪಿಲಿ ಸ್ವರಗೈದು, ಹೆಣ್ಣುಹಕ್ಕಿ ರೆಕ್ಕೆ ಬಡಿದು, ಮೂಡಲು ಹರಿದು ಮುಂಬೆಳಕಾಡುವಲ್ಲಿ,
“ಯೋಗ ಲಕ್ಷಣ ಒದಗಿ ಬಂತು ಇನ್ನು ಹೊರಡು”
-ಎಂದು ಶಿಷ್ಯನಿಗೆ ಹೇಳಿದ. ಚಂದಮುತ್ತ ಗುರುವಿನ ಪಾದಪಡಕೊಂಡು ಹಾಗೇ ಅವನ ಕಾಲು ತಬ್ಬಿಕೊಂಡು ಕುಂತ. ಪಾದಂಗಳ ಮ್ಯಾಲೆ ಕಣ್ಣಿರು ಬಿದ್ದುದನ್ನು ನೋಡಿ ಮಹಾನುಭಾವ ಅವನನ್ನ ಮ್ಯಾಲೆಬ್ಬಿಸಿದ. ಗುರುವಿನ ಕಣ್ಣಲ್ಲೂ ಸಳಸಳ ಜಲಬಿಂದು ಜಗುಳಿದವು; ನಿವಾರಿಸಿಕೊಂಡು,
“ಜಯವುಳ್ಳ ಮುದಿಜೋಗ್ತಿಯ ಕಂಡು ಬಾ. ಶಿವ ನಿನಗೆ ದಯವಾಗ್ಲಿ ಅಂತ ಶಿವಲಿಂಗಕ್ಕೆ ದಿನಾ ಒಂದು ಪ್ರತಿ ಎಲೆ ಹಾಕುತ್ತೇನೆ. ನಿನ್ನ ಕಾಮಿತ ಫಲಿಸಲಿ ನನ್ನಪ್ಪಾ. ಎಲ್ಲ ಹೇಳಿದ ಮ್ಯಾಲೆ ಇನ್ನೊಂದುಳಿಯಿತು.ಅಗಲುವ ಮುನ್ನ ಅದನ್ನೂ ಹೇಳಿಬಿಡುತ್ತೇನೆ. ಕೊಂಚದವಳಲ್ಲ ಮುದಿಜೋಗ್ತಿ. ಅಂತಿಂಥವರಿಗೆ ದಕ್ಕುವಂಥದ್ದಲ್ಲ ಅವಳ ನಿಜ. ಯಾರಿಗಾದರೂ ಒಳಗೊಳಗೇ ಪ್ರೇರಕಳು. ಹೊರಗೆ ತೋರುವುದಿಲ್ಲ ತನ್ನ ನಿಜವ. ಚೆನ್ನಾಗಿ ತಿಳಿದಿರಲಣ್ಣ, ಒತ್ತಾಯವಿಲ್ಲದೆ ಒಲಿಯುವವಳಲ್ಲ ಅವಳು.”
-ಎಂದು ಚಂದಮುತ್ತನ್ನ ತಬ್ಬಿ, ತಲೆ ಸವರಿ ನೆತ್ತಿಯ ಮೂಸಿ ಆಶೀರ್ವಾದ ಮಾಡಿದ. ಮತ್ತೆ ಮತ್ತೆ ಗುರುಪಾದ ಮಡಕೊಂಡು ಹೆತ್ತಯ್ಯ ಮುತ್ತಯ್ಯರ ನೆನೆದು ತಾಯಿಯ ನೆನೆದು ಬೆಟ್ಟದ ಮಾಯಿಯ ನೆನೆದು ಚಂದಮುತ್ತ ಏಕಾಂಗಿ ಹೊರಟ.
ಕಾಡು ಜಂಗಲ್ ತಿರುಗುತ್ತ ಕಷ್ಟವೃತ್ತಿಯನಾಚರಿಸುತ್ತ ಮನದಲ್ಲಿ ದಾಖಲಾಗಿ ಅರಿಯದ ಸೀಮೆಗೆ ಸರಿದವಳ, ಆತ್ಮದ ಮ್ಯಾಲೆ ಅತ್ಯಾಚಾರ ಮಾಡಿದವಳ ಹುಡುಕುತ್ತ ನಡೆದ. ಕಾಡು ನೆಲ ಅನ್ನದೆ, ನೀರು ನಿಡಿ ಅನ್ನದೆ, ಕಲ್ಲುಮುಳ್ಳೆನ್ನದೆ, ಗೊದ್ದು ಗೋಸುಂಬೆ ಅನ್ನದೆ, ಹಾವು ಹುಲಿ ಅಂಬೋದು ಕಾಣದೆ, ಎಲ್ಲಿ ಸಿಕ್ಕಾಳು ಮುದಿಜೋಗ್ತಿ ಎಂದು, ಯಾವಾಗ ಸಿಕ್ಕಾಳು ಮುದಿಜೋಗ್ತಿ ಎಂದು ಕಾತರಿಸಿ ನಡೆದ. ಗುಡ್ಡಬೆಟ್ಟ ಏರಿ ಇಳಿದು ಗಾವುದ ಗಾವುದ ಹದಿಮೂರು ಹಗಲು ಹದಿಮೂರು ರಾತ್ರಿ ನಡೆದ. ಕಾಲುಪ್ಪಳಿಕೆಯಿಂದ ಮುಂದೆ ನಡೆಯಲಾಗದೆ ತುಸುಹೊತ್ತು ಹಾಗೇ ಇದ್ದು ಎತ್ತರೆತ್ತರ ಬೆಟ್ಟದೆತ್ತರ ದೊಡ್ಡಾಲದ ಮರದಡಿ ಕೂತ.
ದಣಿವಾರಿಸಿಕೊಳ್ಳುತ್ತ ಕುಂತಿರಬೇಕಾದರೆ ಮ್ಯಾಲಿಂದ, ಮರದ ತುದಿಯಿಂದ ಮುದಿಜೋಗ್ತಿಯ ಹಾಡು ಕೇಳಿಸಿ ವಿಸ್ಮಯಂಬಟ್ಟ. ಆ ಮುದಿಜೋಗ್ತಿ ಅಲ್ಲಿ ವಾಸವಾಗಿರುವ ಹಾಂಗಿದೆಯಲ್ಲ ಶಿವನೇ! ಆಗಲಾಗಲಿ, ಅಲ್ಲಾದರೂ ಸಿಕ್ಕಾಳೆಂದು ಆಲದ ಮರವ ಹತ್ತಿದ. ಹತ್ತಿದಂತೆ ಮರ ಆಕಾಶಕ್ಕೆ ಬೆಳೆಯುತ್ತ ಹೋಗಿ ಮುಗಿಲಿಗೆ ಮೂರು ಗೇಣು ಕಮ್ಮಿ ಉಳಿಯುವಂತೆ ಬೆಳೆಯಿತು. ಆರುಮೂರು ತಾಸು ಮರ ಹತ್ತಿ ಸಂಜೆ ಸಾಯಂಕಾಲವಾದೇಟ್ಗೆ ತುದಿ ಸಿಕ್ಕಿತು.
ನೋಡಿದರೆ- ಅರಿಯದ ಸೀಮೆ ಆಕಾಶದಂಗಳದ ಮೋಡಗಳ ರಾಜ್ಯದಲ್ಲಿ ತಾನಿರುವುದು ಅರಿವಿಗೆ ಬಂತು. ಎದ್ದು ನಿಂತ ಬೆಳಕಿನ ಲೋಕ! ಕ್ಷಿತಿಜ ಮತ್ತು ಅದರಾಚೆ ಈಚೆಗಳು ಅಲ್ಲಿ ಇಲ್ಲಿಗಳಿಲ್ಲದ ಅಖಂಡಲೋಕ! ತಾನ್ಯಾರು ಎಂತೆಂಬುದು ಮರೆತು, ಯಾಕಾಗಿ, ಏನು ಗುರಿಯಾಗಿ ಬಂದೆನೆಂಬುದ ಮರೆತು ಗಾಳಿಯಂತೆ ಹಗುರವಾಗಿ ಸಂಚರಿಸಿದ. ನೀಲಿಮ ಆಕಾಶ ಹಿನ್ನೆಲೆಗಿದ್ದು ಮೋಡಗಳಲ್ಲಿ

ಎಷ್ಟೊಂದು ಬಣ್ಣಗಳು
ಅಷ್ಟೊಂದು ಹೂವುಗಳು |
ಎಷ್ಟೊಂದು ಹೂಬಣ್ಣ ಬೆಳಕುಗಳು
ಅಷ್ಟೊಂದು ಹೂಬಣ್ಣ ಬೆಳಕುಗಳ ಹಾಡುತ್ತ
ತೇಲುವವು ರಾಗದಲಿ ಮುಗಿಲುಗಳು ||
ಅಷ್ಟರಲ್ಲಿ ಮತ್ತೆ ಮಧುರವಾದ ರಾಗ ರಚನೆ ಕೇಳಿಸಿ ಮುದಿಜೋಗ್ತಿಯ ನೆನಪಾಗಿ “ಎಂಥಾ ಮರವೆ ಶಿವನೇ” ಎಂದು ತಿಳಿವಿಗೆ ಬಂದ. ನಿಂತರೆ ನಾದ, ಕುಂತರೆ ನಾದ, ತಿರುಗಿದರೆ ಮಧುರ ನಾದ, ನಡೆದರೆ ಮಾದಕದ ನಾದ- ಕಿವಿಯ ಬಳಿ ಸುಳಿವ ನಾದ, ಅಂಗಾಂಗಗಳಿಗೆ ಸ್ಪರ್ಶ ಸುಖ ಲೇಪಿಸುವ ನಾದ,- ಆಹಾ ಇದು ಎಲ್ಲ ನಾದಂಗಳು ಇಂಗುವ ಸ್ಥಳ, ಎಲ್ಲ ನಾದಂಗಳು ಹೊರಚೆಲ್ಲುವ, ಎಲ್ಲ ನಾದಂಗಳ ಒಳಗೊಳ್ಳುವ ಸ್ಥಳ- ನಾದಂಗಳ ಈ ನಾದಬ್ರಹ್ಮಲೋಕದಲ್ಲಿ ಮುದಿಜೋಗ್ತಿ ಇರಲೇಬೇಕೆಂದು-
ಮ್ಯಾಲೂ ನೋಡುತ ಕೆಳಗೂ ನೋಡುತ
ಹಿಂದೂ ನೋಡುತ ಮುಂದೂ ನೋಡುತ
ಆಸುಪಾಸು ಅಕ್ಕಪಕ್ಕ ನೋಡುತ್ತ ನಡೆದ.
ಅಲ್ಲೊಂದು ಮುತ್ತಿನರಮನೆ. ಹವಳದ ಚೌಕಟ್ಟಿನಲ್ಲಿ ವಜ್ರದ ಬಾಗಿಲು ಹಾಕಿತ್ತು. ತಳ್ಳಿ ನೋಡಿದ, ತೆರೆಯಲಿಲ್ಲ. ಒತ್ತಿ ಯತ್ನವ ಮಾಡಿದ, ತೆರೆಯಲಿಲ್ಲ. ಹೆತ್ತಯ್ಯ ಮುತ್ತಯ್ಯರ ನೆನೆದು ಇದು ತೆರೆದರೆ ಪಂಜಿನ ಸೇವೆ ನಿಮಗೆಂದು ನೂಕಿದ. ಯಾವ ಹರಕೆಗೂ ವಜ್ರದ ಬಾಗಿಲು ತೆರೆಯಲಿಲ್ಲ. ಆಸುಪಾಸು, ಯಾರದರೂ ಸಹಾಯ ಮಾಡುವಂಥವರು ಇದ್ದಾರೆಯೇ ಎಂದು ಕರೆದು ನೋಡಿದ. ಕೂಗು ಹೊಡೆದು ನೋಡಿದ. ಯಾರೂ ಬರಲಿಲ್ಲ. ಕೊನೆಗೆ ತಾಯಿ ಪಾರ್ವತೀ ಸಮೇತ ಸತ್ಯಶಿವನ ಶ್ರೀಪಾದಂಗಳ ನೆನೆದು- “ಶಿವನೇ ನಾನು ಗೊಲ್ಲಮತದ ಗೋಕುಲ ಕುಲದ ತಂದೆ ಮಾಚನಾಯ್ಕನ ವೀರ್ಯಕ್ಕೆ ಸಿರಿಲಕ್ಕವ್ವೆಯ ಗರ್ಭದಲ್ಲಿ ಹುಟ್ಟಿದ್ದೇ ಹೌಂದಾದರೆ ಹೂವು ತೆರೆದಂತೆ ಬಾಗಿಲು ತೆಗಿ, ಇಲ್ಲವಾದಲ್ಲಿ ಪ್ರಾಣ ತೆಗಿ”-ಎಂದು ಹಿಂದೆ ಸರಿದು ಗುಡುಗುಡುನೆ ಓಡೋಡಿ ಬಂದು ಮಸ್ತಕದಿಂದ ವಜ್ರದ ಬಾಗಿಲಿಗೆ ಹಾದ ನೋಡು; ಠಳಾರನೆ ದ್ವಾರಬಾಗಿಲು ತೆರೆಯಿತು ಶಿವನೆ!
ಎದುರಿಗೆ ಕರಿಘನ ಮೋಡದ ಪರದೆ ಕಂಡಿತು. ಒಳಗೆ ಇಣುಕಿ ನೋಡಿದರೆ ಶಿವ ಶಿವಾ- ಹೂವಿನ ವಿನ್ಯಾಸದ ಚಾಪೆ ಮ್ಯಾಲೆ ಪದ್ಮಾಸನದ ಸಿಂಬಿ ಸುತ್ತಿಕೊಂಡು, ಮ್ಯಾಗಡೆ ಶಿಖರದಲ್ಲಿ ಹೆಡೆಯಂತೆ ಮುಖ ಮಾಡಿಕೊಂಡು, ಕೈಯಲ್ಲಿಯ ಬಿದಿರು ಕೊಳಲನ್ನೇ ಕೊಳಲು ಮಾಡಿಕೊಂಡು ಕಣ್ಣು ಮುಚ್ಚಿಕೊಂಡು ನುಡಿಸುತ್ತ ಬಹಳ ಹೆಚ್ಚಳದಿಂದ ಕುಂತಿದ್ದಾಳೆ ನೋಡು, ಯಾರು? ಆ ಮುದಿಜೋಗ್ತಿ! ಕೈಕಾಲು ನೋಡಿದರೆ ಒಂದು ಕರಡಿಯ ಅವತಾರ, ಮೋತಿ ನೋಡಿದರೆ, ಕೆದರಿದ ಜಡೆ ನೋಡಿದರೆ- ಶಿವ ಶಿವಾ ಪುಟ್ಟ ಪುಟ್ಟ ಹೆಡೆ ತೆರೆದುಕೊಂಡು ಕುಡಿವರಿದು ಹೆಣೆದಾಡುವ ಮಿಡಿನಾಗರಗಳ ಅವತಾರ. ಇವಳೇನು ಮುದಿಜೋಗ್ತಿಯೋ? ಚಂದ್ರನಿಲ್ಲದ ಹೆಣ್ಣು ಶಿವನೋ? ಎಣಿಸಿ ಚಂದಮುತ್ತನ ಮೈಮನ ನಡುಗಿದವು.
ಮೈಮ್ಯಾಲಿನ ಚಿಂದಿಬಟ್ಟೆಗಳಲ್ಲಿ ಕಾಮನ ಬಿಲ್ಲು ಸೃಷ್ಟಿಯಾಗಿ ರಂಗುರಂಗಿನ ಬೆಳಕಿನ ತರಂಗಗಳು ಎಲೆ ಎಲೆ ವಲಯಂಗಳಾಗಿ ಸುಳಿಯುತೈದಾವೆ! ಮಾದಕದ ನಾದಂಗಳು ಇದಿರಿನಿಂದ ಹೊರಡುತ್ತಿವೆಯೊ ಕಾಮನಬಿಲ್ಲಿನ ಬೆಳಕಿನಿಂದ ಹೊರಡುತ್ತಿವೆಯೊ? ಬೆಳಕಿನ ತರಂಗಗಳು ನಾದ ತರಂಗಗಳಾಗಿ, ಬೆಳಕು ನಾದ ಎರಡೊಂದಾಗಿ ಕೇಳ ಕೇಳುತ್ತ ಕೇಳಿಸಿಕೊಂಬಾತ ತಾನಲ್ಲವೆಂದು ತನ್ನನ್ನು ಯಾರೋ ನುಡಿಸುತ್ತಿರುವರೆಂದು ಕೇಳುತ್ತಿದ್ದ ನಾದ ತನ್ನಿಂದಲೇ ಹೊರಟಿದೆಯೆನ್ನಿಸಿ ಭಾವಪರವಶ ತರುಣ ತೇಲುಗಣ್ಣಾಗಿ-
“ದಯವಾದಿಯ ಜೋಗ್ತಿ? ಇಂದಿಗೆ, ನನ್ನ ಕರ್ಮ ಹರಿಯಿತು
ನನಗೆ ನಿನ್ನ ಹಾಡಿನ ವಿದ್ಯೆ ಕೊಡು
-ಎನ್ನುತ್ತ ಕರವೆತ್ತಿ ಕೈಮುಗಿದು ಅವಳ ಪಾದದ ಮ್ಯಾಲೆ ದೊಪ್ಪನೆ ಮೈಚೆಲ್ಲಿದ. ಹೆಡೆಯೆತ್ತಿದ ಮುದಿಜೋಗ್ತಿ ಫಳಾರನೆ ಕಣ್ಣು ತೆರೆದು ಕಣ್ಣ ಬೆಳಕಿನ ಕಿರಣ ಶಲಾಕೆಗಳಿಂದ ಚಂದಮುತ್ತನ ಮೈ ಪರಚಿದಳು. ಕ್ಷಣ ಹೊತ್ತು ಚಂದಮುತ್ತನ ಹಾಂಗೆ ನೋಡಿ ಛಂಗನೆ ನೆಗೆದು ಕೋಪದಲ್ಲಿ ಕೊತ ಕೊತ ಕುದ್ದು,
“ಯಾರು ನೀನು? ಇಲ್ಲಿಗ್ಯಾಕೆ ಬಂದೆ?”
-ಎಂದು ಕೆರಳಿ ಕೆಂಡವಾಗಿ ಕೋಲಿನಿಂದ ಚಂದಮುತ್ತನ ಮಸಡಿಗೆ ತಿವಿದು
‘ತೊಲಗಿಲ್ಲಿಂದ’ ಎಂದು ಸದ್ದು ಗದ್ದಲ ಗೌಜು ಗಡಿಬಿಡಿಯ ಮಾಡುತ್ತ ದೂರ ಸರಿದು ನೆಗೆದಳು.
ನಿಂತ್ಕೊಂಡ ನೆಲೆ ಕುಸಿದಂಗಾಯ್ತು ಚಂದಮುತ್ತನಿಗೆ. ಚೇಷ್ಟೆಯಾಡುವಳೋ ಎಂದು, ಸುಳ್ಳು ಹೇಳಿ ಕಪಟವೊಡ್ಡುವಳೋ ಎಂದು ಹಿಂದೆ ಮುಂದೆ ತಿಳಿಯದೆ-
” ರಾತ್ರಿಗೆ ಚಂದ್ರನ ಪರಿಚಯವಿರುವಂತೆ ನೀನು ನನಗೆ ಪರಿಚಿತಳು. ಗುರುತಿಲ್ಲದ ಹಗಣ ಮಾಡಬೇಡ ಮುದುಕೀ.”
-ಎಂದು ಅವಳ ಮುಂದೆ ಹೋಗಿ ದಾರಿಗಡ್ಡ ನಿಂತ.
” ಎಲ ಎಲಾ ಅಮಾಸ್ಯೆಯಲ್ಲಿ ಹುಟ್ಟಿದವನೆ, ಕಣ್ಣು ಕಾಣಿಸುವುದಿಲ್ಲವೇ? ಮೈಗೆ ಅಡರ್‍ತಿಯಲ್ಲೋ ಬಡ್ಡೀ ಮಗನೆ”
-ಎಂದು ನಂಜಿನ ಮಾತು ಸುರಿದು ತಾರಾಮಾರು ಹಾರಾಡಿ ಮೀರಿ ಹಾರಿ ಹೊಂಟಳು.
ತಕ್ಷಣ ಚಂದಮುತ್ತ ಕೈಮಾರು ಅಡ್ಡ ಹಾಕಿ ದಾರಿಕಟ್ಟಿ,
“ಎಲಗೆಲಗೆ
ಏನೇನು ಒಳಗೊಂಡು ಹೊರಗೇನೋ ತೋರುವ ಜೋಗ್ತೀ,
ನಿನ್ನ ನುಡಿ ಚೋದ್ಯ, ನಡೆ ಚೋದ್ಯ.
ನನ್ನ ತಿಳಿ ಬದುಕನ್ನ ಕದಡಿ ಓಡಿ ಬಂದಿರುವಿ.
ಕೈ ಮುಗಿತೀನಿ ಕೃತಕ ಮಾಡಬ್ಯಾಡ,
ಮುಳ್ಳಿರುವ ಮಾತಾಡಿ ಆನಂದಗೆಡಿಸಬ್ಯಾಡ.”
-ಎಂದು ಕೈಮುಗಿದು ಪರಿಪರಿ ಬೇಡಿದ. ಮುದಿಜೋಗ್ತಿಗೆ ಏಳೇಳು ಲೋಕದ ಕೋಪ ನೆತ್ತಿಗಡರಿತು.
” ಎಲವೆಲವೋ ಭ್ರಾಮಕನೇ,
ನೀನ್ಯಾರು? ನಾನ್ಯಾರು?
ಇಬ್ಬರ ಮಧ್ಯದ ಹಾಡಿನ ವಿದ್ಯೆ ಧಾವುದು?
ಆಡಬಾರದ ನುಡಿಯ ಅವಗಡಿಸಿ ನುಡಿವವನೇ,
ಈಗೇನು ಹೋಗುತ್ತೀಯೊ? ಇಲ್ಲಾ
ಹಿಡಿ ಹಿಡಿ ಅಂತ ಹಿಡಿ ಶಾಪ ಹಾಕಲೊ?”
-ಎಂದು ಕೈ ಮೈ ಬಾಯಿ ತಿರುವುತ್ತ ಕೈಸನ್ನೆ, ಬಾಯಿಸನ್ನೆ, ಕಣ್ಸನ್ನೆ ಮಾಡುತ್ತ ಬೀದಿರಂಪ ಮಾಡತೊಡಗಿದಳು, ಯಾರು? ಆ ಮುದೀ ಮುದಿ ಜೋಗ್ತಿ!
ಇವಳನ್ನ ಹ್ಯಾಂಗೆ ಹಾದಿಗೆ ತರಬೇಕೆಂಬುದೇ ಹೊಳೆಯದಾಯಿತು. ಒತ್ತಾಯವಿಲ್ಲದೆ ಒಲಿಯಲಾರಳೆಂಬ ಗುರುವಿನ ನುಡಿ ನೆನಪಾಗಿ ಹಟಹಿಡಿದು ಗಟ್ಟಿಯಾಗಿ ನಿಂತು ಸೊಂಟದ ಕೊಳಲು ಹಿರಿದು ಮುದಿಜೋಗ್ತಿ ಹಿಂದೆ ನುಡಿಸಿದ್ದ ಹಾಡನ್ನ ನುಡಿಸಿದ. ಪರವಶ ಜೋಗ್ತಿ ಬೆದೆಯ ಹಸು ಸಾಧುವಾದಂತೆ ಹೊಯ್ಕಿನಿಂದ ತೆಪ್ಪಗೆ ನಿಂತಳು. ಚಂದಮುತ್ತ ತಕ್ಷಣ ಹವಣರಿತು ಹದವಾದ ನಾದ ಹೊರಡಿಸಿ ರಾಗಮಂಡಳ ಬರೆದು ಮಂಡಳಕ್ಕೆ ಅವಳ ಆವಾಹಿಸುವ ರಾಗರಚನೆ ಮಾಡಿದ. ಜೋಗ್ತಿ ಕಿಟಾರನೆ ಕಿರಿಚಿ ಓಡಬೇಕೆಂಬಲ್ಲಿ ಕೈಮಾರು ಹಾಕಿ ದಾರಿಗಡ್ಡ ಕಟ್ಟಿದ. ಕೈಮೀರಿ ಹಾರಬೇಕೆಂದವಳ ಹಿಡಿಯಲು ಕೈ ಹಾಕಿದರೆ ಉಟ್ಟ ಚಿಂದಿ ಸೀರೆ ಕೈಗೆ ಬಂತು! ಬತ್ತಲಾದರೂ ಇನ್ನೂ ಉನ್ಮಾದದಲ್ಲಿ ಗುದಮುರಿಗೆ ಹಾಕುತ್ತಾಳಲ್ಲಾ ಎಂದು ಜುಟ್ಟು ಹಿಡಿದೆಳೆದರೆ ಜುಟ್ಟು ಕೈಗೇ ಬಂದು ಮುದಿಚರ್ಮ ಮುದುಡಿ ಮುದ್ದೆಯಾದಂತಾಗಿ ಒಳಗಡೆಯಿಂದ ಚಿಲ್ಲನೆ ಮೋಡದ ಒಡಲಲ್ಲಿ ಮಿಂಚು ಮಿಡುಕಿದ ಹಾಗೆ ಬೆಳಕಿನ ಚಿಲುಮೆ ಚಿಮ್ಮಿದವು! ಇದೇನೆಂದು
ಹಿಡಿದೆಳೆದರೆ ಶಿವ ಶಿವಾ- ಅವಳುಟ್ಟ ಮುದಿಚರ್ಮ ಕೈಗೇ ಬಂದು ಮುದಿಚರ್ಮದ ಒಳಗೆಬ್ಬ ಜಗಜಗ ಬೆಳಗುವ ದಿವ್ಯ ಸುಂದರಿ, ಮೈತುಂಬ ಪರಿಮಳ ನಾರುವ ದಿಗಂಬರಿ, ಹಸಿರುಗಣ್ಣಿನ ಚಕೋರಿ ಎಂಬ ಯಕ್ಷಿ ನಾಂಚಿ ನಾಣುದಾಣಗಳ ಮುಚ್ಚಿಕೊಂಡು ನಿಂತಿದ್ದಾಳೆ!
ನೋಟ ನೋಟವ ಮೆಚ್ಚಿ ಮೈ ಬೆಚ್ಚಗಾದವು.
ಯಾರ್‍ಯಾರಿಲ್ಲದ ಸಮಯ ಸಾಧಿಸಿ
ಮಣ್ಣಿನ ಮಾನವ ಹೀಗೆ
ಏಕಾ‌ಏಕಿ ಏಕಾಂತಕ್ಕೆ ನುಗ್ಗಿ,
ತೋರಿಕೆಗಳ ಸೆಳೆದು
ಬತ್ತಲೆಗೊಳಿಸಿದರೆ ಏನಾಗಬೇಡ ದೈವದ ಬೆಳಕಿಗೆ?
ಬಿರುಗಾಳಿಗೆ ಹೊಯ್ದಾಡಿತೆ?
ಇಲ್ಲವೆ ಸೋಲಾಯಿತೆ ಅಲೌಕಿಕದ ಬಲಕ್ಕೆ?
ಮಣ್ಣಿನ ಕಣ್ಣಾಡಿದಂತೆ
ಬೆಳಕಿನ ಕುಡಿಗೆ
ತನುಮೂಡಿ ತನುವೆಂಜಲಾಗಿ
ಮನ ಮೂಡಿ ಮನವೆಂಜಲಾಗಿ
ಕಾತರಿಸಿ ಮನದಗಲ ತನುವಿನ ಉದ್ದಗಲ
ಥರಥರನೆ ನಡುಗಿದಳು ನೋಡು!
ಅವಳ ಕಂಡನೇ,
ಮೈಯಲಿ ಮಿಂಚಿನ ಹೊಳೆ ಹರಿದವು
ಚಂದಮುತ್ತನಿಗೆ.
ಬೆಳಕು ಉರಿದಾಡಿತ್ತು ಕಣ್ಣಿನೊಳಗೆ.
ಧಾರಾವತಿ ಸುರಿದವು ಅಂಗಜಲ ಕೆಳಗೆ.
ನೇತ್ರಸುಖದಲ್ಲಿ ತಬ್ಬಿಬ್ಬಾದ.
ಚಂದ್ರಮುತ್ತ ಅವಳನ್ನ ರಾಗಮಂಡಳದೊಳಕ್ಕೆ ಆವಾಹಿಸಿ ಬಂಧಿಸಿ ಒಲಿಸೊಕೊಳ್ಳುವ ರಾಗ ನುಡಿಸುವ ಮೊದಲೇ ತಾನೇ ಮಂಡಳದೊಳಕ್ಕೆ ಒಲಿದು ಬಂದು ಕತ್ತಿನಲ್ಲಿಯ ಅಮೃತವಲ್ಲಿಯ ಸರವ ತೋರಿಸಿದಳು. ಆಘಾತವಾಯ್ತು ಚಂದಮುತ್ತನಿಗೆ. ಶಿವ ಶಿವಾ! ಇದು ತಾನು ಯಕ್ಷಿಯ ಶಿಲಾಪ್ರತಿಮೆಗೆ ಮದುವೆ ಆಟದಲ್ಲಿ ಕಟ್ಟಿದ ತಾಳಿಯಲ್ಲವೆ? ಬಾಡದೆ ಇನ್ನೂ ಹಾಂಗೇ ಇದೆ!
ಎಲ್ಲಿದ್ದನೋ ಮಾರಾಯ ಮಾರ, ಸಕ್ಕರೆ ಬಿಲ್ಲಿನ ಹದೆಯ ಶಕ್ತಿಂದ ಕರ್ಣಕ್ಕೆ ತಂದು ಹೂ ಬಾಣ ಬಿಟ್ಟ ನೋಡು:
ಸ್ಮರ ಗಾಳಿ ಬೀಸ್ಯಾವು ಕರಣ ಕಳವಳಿಸ್ಯಾವು
ಪರಿಮಳದ ಪವನ ಸುಳಿದಾವು
ಸ್ತನ ವದನ ಯೌವನಕೆ ಬಾಯ್ಬಿಡುವ ಹುಡುಗನಿಗೆ
ಅತಿಕಾಮವಂತೆ ಒಲಿದಾಳು.
ಮೊದಲಿವಗೆ ಕಲಿಸುವೆನು ಮದನ ವಿದ್ಯೆಯನೆಂದು
ಹಾಕಿದಳು ಲೆಕ್ಕ ಒಳಗೊಳಗೆ
ಹುಲ್ಲೆಗಂಗಳ ನೋಟ ಹೃದಯದಲಿ ನೆಟ್ಟಾಳು
ಕನ್ನ ಹಾಕಿದಳವನ ಎದೆಗೆ.
ಬಿಗಿದ ಹೆದೆ ಅವಳ ಎದೆ ಹುರಿಗೊಂಡ ಚೆಲುವಿಕಿ
ಕುಚದಲ್ಲಿ ಎದ್ದಾವು ನವಿರು.
ಬೆದೆಯಿಂದ ಕುದಿವ ಮೈ ರುಚಿಯ ತೋರುವೆನೆಂದು
ಮಾಯಕಾರ್ತಿ ಯಕ್ಷಿ ಅಂದಾಳು.
ಆತುರ ತೀವ್ರ ಕಾಮಾತುರ ತಾಳದೆ
ಚಂದಮುತ್ತನ್ನ ಆಕ್ರಮಿಸಿ
ಬಾಹುಮಂಡಳದಲ್ಲಿ ಕಟ್ಟಿ ಮುದ್ದಾಡಿದಳು
ಕುಂಭ ಕುಚದಿಂದವನ ಗುಮ್ಮಿ.
ಹೆಪ್ಪು ಹಾಕಿದ ಹಾಗೆ ಜನಿಗಿ$ಯ ಹಾಲಿಗೆ
ಒಪ್ಪುಗೊಂಡರು ಅಪ್ಪುಗೆಯಲಿ
ಜೀವರಸ ಚಿಮ್ಮಿಸುವ ಸೊಗಸುಗಳ ಸುಖಿಸಿದರು
ಗಳರವ ಸಂಗೀತದಲ್ಲಿ.
ಎಳೆತಗಳ ಸೆಳೆತಗಳ ಬಲಗೊಳಿಸಿ ಸುಖಿಸಿದಳು
ಜಘನ ಗದ್ಗದಿಸ್ಯಾವು ಬೆವರಿ
ಮಾನ$ವ ಶಕ್ತಿಗಳ ಚಪ್ಪರಿಸಿ ಸವಿದಳು
ತೃಪ್ತಿಯ ನಗಿಗಳ ಸೂಸಿ.
ಇಂತೀಪರಿ ನಿರನುಭವಿ ಗೊಲ್ಲಗೋಕುಲರ ಹೈದನ ಪಳಗಿಸಿ ಸುಖಿಸಿ ಸುರತದ ಸಿದ್ಧಗಿರಿಶಿಖರದಿಂದ ಜಗುಳಿ ಚಕೋರಿ ಎಂಬ ಯಕ್ಷಿ ಚಂಚಮುತ್ತನ ಚಂದಮುಖದ ಮುತ್ತು ಬೆವರೊರೆಸಿ ಚಿಗುರು ಬೆರಳಿಂದವನ ಮುಂಗುರುಳು ನ್ಯಾವರಿಸಿ ಮುದ್ದಾಡಿದಳು. ಆಮೇಲಾಮೇಲೆ ಸದರಿ ಯಕ್ಷಿ ಪರಿ ಪರಿ ರೀತಿಯಲಿ ಹೇಳಿದ ಸಂಗೀತ ವಿದ್ಯವನು ಸರಿ ಸರಿ ಎನ್ನುತ್ತ ಚಂದಮುತ್ತನ ಪಡಕೊಂಡನೆಂಬಲ್ಲಿಗೆ ಗಿರಿಜಾರಮಣ ಶಿವಶಿವಾ ಸದರಿ ಸಂಧಿ ಮುಗಿದವು.

೨೦. ಕಲಿತ ವಿದ್ಯನ ಮಾಡಿದಳು

ಮಾತೆಲ್ಲ ಸಂಗೀತ, ನಡೆಯೆಲ್ಲ ನರ್ತನವಾದ ಚಕೋರಿ ಎಂಬ ಯಕ್ಷಿ ಕೊಟ್ಟರೆ ಕೊಡಬೇಕು ಇವಗೆ ವಿದ್ಯೆಯನೆಂದು ಚಂದಮುತ್ತನ ದಡ್ಡತನಗಳ ಪಳಗಿಸಿ ಮಹಾನುಭಾವನಿಗಿಂತ ನೂರು ಮಡಿ ನಿಷ್ಠುರವಾಗಿ ಕಠಿಣ ವ್ರತಗಳ ಮಾಡಿಸಿ ರಾಗ ರಾಗಿಣಿಯರ ನಿಯಮಂಗಳ ಬೋಧೆ ಮಾಡಿದಳು. ಬೋಧೆ ಮಾಡುವಾಗ ಅವಳೆಂದೂ ತುಟಿ ತೆರೆದಾಡಲಿಲ್ಲ. ಮುಗುಳು ನಗೆಗೂಡಿ ಮೌನದಲ್ಲಿ ಕುಂತರೆ ಸಾಕು, ಆಕಾಶಗುಂಭದ ಒಳಗಿಂದ ಗುಂಗು ಗುಂಗಿನ ನಾದ, ದುಂಬಿಯ ನಾದ, ತಂಬೂರಿ ತಂತಿಯ ಆಧಾರಶೃತಿ ನಾದ ಸುನಾದಂಗಳು ಅಲೆಯಲೆಯಾಗಿ ಒದಗಿಬರುತ್ತಿರುವಲ್ಲಿ- ಚಕೋರಿ ಎಂಬ ಯಕ್ಷಿ ಮೂರು ಚಂದ್ರರ ಕಾಲ ರಾಗ ರಾಗಿಣಿಯರ ಗುಟ್ಟುಗಳ ಒಳಗಿವಿಗೆ ತಾಗುವಂತೆ ಬೋಧೆ ಮಾಡಿದಳು. ಒಳಗಿವಿಗೆ ತಾಗಿದ್ದು ಹಾಡಾಗಿ, ಹಾಡಿನಲಿ ಹುರಿಗೊಂಡ ನಿಜವಾಗಿ ಹೊರಬರುವಂತೆ ಮಾಡುವ ಹವಣು ಹೇಳಿಕೊಟ್ಟಳು. ಆಮ್ಯಾಲೆ ಮಾರನೇ ಚಂದ್ರನಲ್ಲಿ ಆಕಾಶ ಸೂಕ್ಷ್ಮದಲಿ ಕರಗಿದ್ದ ರಾಗಂಗಳ ಸ್ಥೂಲದಲ್ಲಿ ಕರೆದು ತೋರಿಸಿ, ಅವರ ನಡೆವಳಿಕೆ, ಅಭಿಮಾನಿದೇವತೆಗಳ ಕೊಡುಕೊಳುವ ರೀತಿರಿವಾಜುಗಳ ಬೋಧಿಸಿದಳು. ಕೆಲವು ದೈವಂಗಳು ತಾವಾಗಿ ಮೆಚ್ಚಿಬಂದು ಸ್ವಪ್ನದಲ್ಲಿ ಕಾಣಿಸಿಕೊಂಡು ತಮ್ಮನ್ನು ನುಡಿಸುವ ಗುಟ್ಟುಗಳ ಬಿಟ್ಟುಕೊಟ್ಟವು. ಕೆಲವು ಮೈಮ್ಯಾಲೆ ಆವೇಶವಾಗಿ ರಾಗರಚನೆ ಕಟ್ಟಿ ತಮ್ಮ ತಾವು ನುಡಿಸಿಕೊಂಡವು. ಮಹಾಶಿವರಾತ್ರಿಯಂದು ಮಹಾನುಭಾವನೊಂದಿಗೆ ಕಂಡ ರಾಗಂಗಳು ಇವನು ಕೊಳಲು ತುಟಿಗಿಟ್ಟುದೇ ತಡ ಪ್ರಸನ್ನವಾಗಿ ಆಶೀರ್ವದಿಸಿ ಸರಿದವು. ಇಂತೀಪರಿ ಚಂದಮುತ್ತ ಒಂದರ ಮ್ಯಾಲೊಂದು ಮತ್ತೊಂದು ಮಗದೊಂದು ರಾಗವ ಕಲಿತು ಕಲಿತವಿದ್ಯನಾದನು.
ಆಮೇಲಾಮೇಲೆ ಒಂದು ದಿನ ತುಂಬಿದ ಸೋಮವಾರ ಹುಣ್ಣಿವೆ ದಿನ ಸಪ್ಪಟು ಸರಿರಾತ್ರಿ ಒಳ್ಳೆಯ ಗಳಿಗೆ ಮಂಗಳ ಮಹೂರ್ತವ ನೋಡಿ ತಿಂಗಳ ರಾಗ ರಚನೆಯ ಪೂರ್ವಾಪರ ಹೇಳಿ ಈಗ ನುಡಿಸು ಎಂದಳು. ಚಂದಮುತ್ತ ಕೊಳಲು ನುಡಿಸಿದ. ಸಾಲದೆಂದಳು. ಮತ್ತೆ ನುಡಿಸಿದ. ಮತ್ತೂ ಸಾಲದೆಂದಳು. ಈ ಹಿಂಗೆ ಎಷ್ಟು ಬಾರಿ ನುಡಿಸಿದರೆ ಅಷ್ಟೂ ಬಾರಿ ಸಾಲದು ಸಾಲದೆಂದಾಗ ಚಂದಮುತ್ತ ಚಿತ್ತ ಸಂಶಯದಿಂದ ಕೇಳಿದ:
“ಒಂದು ರಾಗ ನೀ ತೋರಿದ ಸೀಮೆಗಳ ತುಂಬಿ ಸಂಪೂರ್ಣವಾದುದಕ್ಕೆ ಕುರುಹೇನು ದೇವಿ?”
ರಾಗದ ಅಭಿಮಾನಿದೇವತೆ ಬಹಿರೂಪ ಕಳಚಿ ಶುದ್ಧ ಆನಂದ ರೂಪುವಡೆದು ಆಕಾಶದಂಗಳದಲ್ಲಿ ತೇಲುವುದೆ ಕುರುಹೆಂದಳು. ದೇವತೆ ಒಲಿದರೆ ನನಗೇನು ಲಾಭವೆಂದರೆ ಆ ದೇವತೆ ಬೇರೆ ಯಾರೂ ಅಲ್ಲ, ನಿನ್ನದೆ ಬಿಂಬ, ನಿನ್ನ ನಿಜವ ನೀನೇ ಕಾಂಬ ಆನಂದಿಸುವ ಲಾಭವೆಂದಳು.
ಚಂದಮುತ್ತ : ನೀನ್ಯಾಕೆ ನುಡಿಸಿ ತೋರಿಸುವುದಿಲ್ಲ ದೇವೀ?
ಚಕೋರಿ : ಗುರುವಲ್ಲ, ನಿನ್ನ ಇಚ್ಛಾಧೀನ
ನಾವು ಹಂಗಿಗರಯ್ಯ ನಿನ್ನ ಕೊಳಲುಲಿಗೆ.
ಬೆಂಕಿ ಪ್ರಕಟವಾಗುವುದಕ್ಕೆ
ಬೇಕು ಮರದ ಆಸರೆ
ಅಂತೆಯೇ ಬೇಕಯ್ಯ ನೀನು ನಮಗೆ.
ಚಂದಮುತ್ತ : ಬಹಿರೂಪದಲ್ಲಿ ನನ್ನೆದುರು ಕುಂತಿರುವೆಯಲ್ಲ ದೇವೀ?
ಚಕೋರಿ : ನಿನ್ನ ಕಾಮನೆಯಿಂದಾಗಿ
ಸ್ಥೂಲದಲ್ಲಿ ಚಕೋರಿ ಎಂಬ ಯಕ್ಷಿ
ಸೂಕ್ಷ್ಮದಲ್ಲಿ ತಿಂಗಳ ಬೆಳಕಂಡು
ಬದುಕುವ ಚಕೋರ ಪಕ್ಷಿ;
ತಿಂಗಳು ರಾಗದ ಅಭಿಮಾನಿ ದೇವತೆ.
ತಿಂಗಳು ರಾಗ ಕಾರಣವಾಗಿ
ಯಕ್ಷಿಯ ಬಹುರೂಪ ಕರಗಿ
ಪಕ್ಷಿಯಾಗುವುದು ನಮ್ಮ ಧರ್ಮ.
ಕಲಾವಿದನಂತೆ ಕಲೆಯೂ ಹುಡುಕುತ್ತದೆ
ತಕ್ಕವನನ್ನ.
ಹಾಗೆ ಪರಸ್ಪರ ಹುಡುಕಿ ಪಡಕೊಂಡವರು
ನಾವು ನಿನ್ನನ್ನ.
ನೀನು ನಮ್ಮನ್ನ.
ಇಷ್ಟು ಕೇಳಿದ್ದೇ ಚಂದಮುತ್ತ ಥರಾಥರ್‍ನೆ ನಡುಗಿ ಹತ್ತೂ ಬೆರಳು ಕೂಡಿಸಿ ಮುಗಿದು:
ಭಯವಾಗುತ್ತದೆ ದೇವೀ,
ಶಕ್ಯವೆ ಒಗೆತನ ನಿಮ್ಮೊಂದಿಗೆ?
ಲೋಕ ಲೌಕಿಕದವನು ನಾನು
ಮುಗಿಲ ತುದಿಗಿರುವವರು ನೀವು.
ನಿಮ್ಮ ಕಟ್ಟಳೆ ರೀತಿರಿವಾಜು ನನಗರಿದು.
ನರಲೋಕದ ನಡಾವಳಿ ನಿಮಗರಿದು.
ನಿಮ್ಮೊಂದಿಗೆ ವ್ಯವಹರಿಸಲು
ನನ್ನ ಜಾಣ್ಮೆ ಸಾಲದೇ ಬರಬಹುದು.
ನನ್ನ ದಡ್ಡತನ ಸಮೇತ ಎಲ್ಲ ನಿನ್ನದು ದೇವೀ.
-ಎಂದು ಮೈಹಾಸಿ ಅವಳ ಪಾದದ ಮ್ಯಾಲೆ ಅಡ್ಡಬಿದ್ದ. ಅವನ ಮುಗ್ದ ನಡೆ ನೋಡಿ ನುಡಿ ಕೇಳಿ ಹವಳದುಟಿ ಯಕ್ಷಿ ಚಂದಮುತ್ತನ್ನ ಹಿರಿದು ಮೆಚ್ಚಿದಳು.

೨೧. ಕನ್ನಡಿಯಾದರು ಒಬ್ಬರಿಗೊಬ್ಬರು

ಆಮೇಲಾಮೇಲೆ ಚಕೋರಿ ಎಂಬ ಯಕ್ಷಿ ಚಂದಮುತ್ತನ ದೃಡವ ಪರೀಕ್ಷಿಸಿ, ಇನ್ನಷ್ಟು ಕಠಿಣ ವ್ರತ ನಿಷ್ಠೆಗಳ ಮಾಡಿಸಿ ತಿಂಗಳು ರಾಗ ಬೋಧಿಸುವ ದೊಡ್ಡ ಮನಸ್ಸು ಮಾಡಿದಳು. ಒಂದು ದಿನ ತುಂಬಿದ ಸೋಮವಾರ ಅಮಾವಾಸ್ಯೆಯಂದು ಸೋಮವಾರದ ಒಡೆಯ ನಾದಪ್ರಿಯ ಶಿವಲಿಂಗಸ್ವಾಮಿಗೆ ಚಂದಮುತ್ತನಿಂದ ಮುಂಜಾನೆಯ ಹನಿ ಪೂಜೆ, ಮಧ್ಯಾಹ್ನದ ಮಹಾಪೂಜೆ ಮಾಡಿಸಿದಳು. ಸಂಜೆಯ ಶಾಂತಿ ಪೂಜೆಯಾದೇಟ್ಗೆ ಸಾಲು ಸಾಲು ಸೊಡರುರಿದಂತೆ ತಾರಾನಕ್ಷತ್ರ ಬೆಳಗಿ ರಾತ್ರಿಯಾಯಿತು. ಪಡುವಲ ಮುಖವಾಗಿ ತಿಂಗಳು ರಾಗದ ಮಂಡಳ ಬರೆದು, ಮಂಡಳದಲ್ಲಿ ಸತ್ಯಸಿವಲಿಂಗದೇವರ ಸ್ಥಾಪನೆ ಮಾಡಿ ನೆತ್ತಿಯ ಮ್ಯಾಲೆ ಮಿಡಿನಾಗರ ಜಡೆ ಬರೆದಳು. ಜಡೆಯಲ್ಲಿ ಸುಣ್ಣದ ಗೆರೆಯೆಳೆದು ಎಳೆಯ ಚಂದ್ರನ ಬರೆದು ಮಂಡಳದ ಸುತ್ತೂ ಕಡೆ ಮಂತ್ರಭಾವಿತ ರಕ್ಷೆಗಳ ರಚಿಸಿ ರಕ್ಷಿಸೆಂದು ಭೃಂಗೀಶನ ಪ್ರಾರ್ಥಿಸಿಕೊಂಡಳು. ಇಷ್ಟೊತ್ತಿಗೆ ಸಪ್ಪಟು ಸರಿರಾತ್ರಿ ಕಲ್ಲೂ ನೀರೂ ಕರಗುವ ಸಮಯವಾಗಿರಲು ಸಾವಿರ ಶಿವಗಣಂಗಳ ಕರೆದು ಜೀವಬೋಧೆಯ ಮಾಡಿ ಕಾವಲಿರಿಸಿದಳು. ಆಮ್ಯಾಲೆ ಒಳ್ಳೆಯ ನಾದ ಸುನಾದವ ಅನುಗ್ರಹಿಸಿ ಸಾರಾಂಶನುಡಿ ಹೇಳಿದಳು :
ಅಯ್ಯಾ ಹೆಚ್ಚಿನವನೇ
ಮೆಚ್ಚಿ ಅರ್ಪಿಸಿಕೊಂಡಿದ್ದೇನೆ
ಹೆಚ್ಚು ಕಡಿಮೆ ನುಡಿಸಬ್ಯಾಡ
ಎಚ್ಚವಿರಲಿ ರಾಗದ ಮ್ಯಾಲೆ
ನನ್ನ ಜೀವದ ಮ್ಯಾಲೆ
ಕಣ್ಣಿರಲಿ ಮಂಡಳದ ಚಂದ್ರನ ಮ್ಯಾಲೆ
ಇನ್ನು ನುಡಿಸೆಂದಳು

ಚಂದಮುತ್ತ ಕೊಳಲ ನುಡಿಸಿದ. ಈಗ ಹಬ್ಬಿತು ನೋಡು ರಾಗದ ಮಾಯೆ ಸುತ್ತ ಕ್ಷಿತಿಜದ ತನಕ ಮ್ಯಾಲುರಿವ ಸೊಡರು ನಕ್ಷತ್ರಗಳ ತನಕ! “ಮಂಡಳದಲ್ಲಿ ಏನು ಕಂಡೆ?” ಎಂದಳು.
“ಸಾವಳಗಿ ಶಿವಲಿಂಗವ ಕಂಡೆ
ಬದಿಯಲ್ಲಿ ಮಡುವ ಕಂಡೆ”
ಸಾಲದು ಸಾಲದೆಂದು ಚಂದಮುತ್ತನ ಎಡಗಾಲ ಹೆಬ್ಬೆರಳ ಮ್ಯಾಲೆ ತನ್ನ ಬಲಗಾಲ ಹೆಬ್ಬೆರಳೂರಿ, ಬಾಹುಸರ್ಪಂಗಳಿಂದವನ ಗಟ್ಟಿಯಾಗಿ ಕಟ್ಟಿ ಮುಖಕ್ಕೆ ಮುಖ ಕೊಟ್ಟು ಕಣ್ಣಲ್ಲಿ ಕಣ್ಣಿಟ್ಟು ಈಗ ನೋಡು ನೋಡೆಂದಳು. ಏಕಾ‌ಏಕೀ ನಡೆದ ಈ ಆಕ್ರಮಣವ ಎದುರಿಸಲಾರದೆ ಚಂದಮುತ್ತ ಚಡಪಡಿಸುತ್ತ ಯಕ್ಷಿಯ ಕುರಂಗಾಕ್ಷಿಗಳಲ್ಲಿ ನೋಡಿದ.
ಚಕೋರಿ: ಹೇಳು ನನ್ನ ಕಣ್ಣಲ್ಲಿ ಏನೇನು ಕಂಡೆ?
ನನ್ನ ಮುಖದ ಕಾಂತಿಯ ಕಂಡೆಯಾ?
ನಿನ್ನ ಹಾಡಿನ ಬೆಳಕನ್ನ ಕಂಡೆಯಾ?
ಚಂದಮುತ್ತ : ಮಂಡಳದ ಶಿವನ ಜಡೆ
ಪಡುವಲ ಗಿರಿಯಾದುದ ಕಂಡೆ,
ಪಡುವಲ ಗಿರಿ ಬಿರಿದು ಗೆರೆಗಾತ್ರದ ಚಂದ್ರ
ಉದಯವಾದುದ ಕಂಡೆ.
ಗೆರೆಗಾತ್ರದ ಚಂದ್ರ ಚೊಗಚಿಯ ಹೂಗಾತ್ರದ
ಚಂದ್ರನಾದ.
ಎಳೆಯ ಚಂದ್ರ ಬೆಳೆದ ಚಂದ್ರನಾದ.
ಚಂದ್ರಾಮಸ್ವಾಮಿಯ ಬೆಳಕು
ಮೋಡಮೋಡದ ಮ್ಯಾಲೆ
ಕಾಲೂರಿ ಇಳಿವುದ ಕಂಡೆ.
ಇಳಿದ ಬೆಳಕಿನಲ್ಲಿ
ನೋಡಿದರೆ ಶಿವಶಿವಾ,
ಶಿವಾಪುರದ ಮಾಯದ ಕೆರೆ ಕೆಳಗಿದೆ.
ಬೆಳಕಿನ ಕೆನೆಗಟ್ಟಿದ ಚಂದ್ರ ಮ್ಯಾಲಿದ್ದಾನೆ.
ಚಂದ್ರಾಮನ ಹೃದಯದಲ್ಲಿ ಮೇಯುವ ಜಿಂಕೆ ಮರಿಯಿದೆ.
ಕೆರೆನೀರಿನ ಹೃದಯದಲ್ಲಿ
ಚಂದ್ರಾಮನ ಕನಸು ತೇಲಾಡಿದೆ….
ಆವಾಗ ನೋಡು ಶಿವಾ, ನೋಡನೋಡುತ್ತಿರುವಂತೆ ಏನಾಯಿತೆಂದರೆ,
ಆಕಾಶ ನೀಲಿಮದ ಚಂದ್ರನೊಳಗಿಂದ
ಚಂಗನೆ ಹೊರಕ್ಕೆ ನೆಗೆಯಿತು ಜಿಂಕೆಮರಿ.
ಎಳೆಯ ಜಿಂಕೆಮರಿ ಹೊಳೆವ ಜಿಂಕೆಮರಿಯಾಗಿ
ಕೆಳಕ್ಕಿಳಿದು ನೇರ ಕೆರೆಗೇ ಬಂತು ಬಾಯಾರಿಕೆಗೆ.
ಬಾಯಿ ಹಾಕಿದ್ದೇ
ನೀರಲ್ಲಿ ಕಂಡಿತು ಇನ್ನೊಂದು ಜಿಂಕೆಮರಿ.
ಗುರುತಿಲ್ಲದ ಮರಿಯೆಂದು ಸ್ನೇಹದಲಿ ಮೂಸಿ
ಮುದ್ದಾಡಿ ಕೊಂಬಿನಲಿ ತಿವಿದಾಡಿದಾಗ
ಕದಡಿದ ಕೆರೆನೀರು
ತೆರೆತೆರೆ ಬೆಳಕಿನ ಹೆಡೆಯಾಡಿಸಿತು.
ನೀರು ತಿಳಿಯಾಗಿ ಮತ್ತೆ ಕನ್ನಡಿಯಾಗಿ ನೋಡಿದರೆ
ಎದುರುಬದುರಾಗಿವೆ ರವರುದ್ರಗೋಪದಲಿ
ಎರಡೂ ಮರಿ!
ಹಗೆಹಗೆ ಹೊಗೆಯಾಡುವ ಉಸಿರು ಬಿಡುತ್ತ
ಉರಿವ ನೋಟಗಳಿಂದ ಪರಸ್ಪರ ಇರಿಯುತ್ತ
ಕೊಂಬಿನ ಹರಿತ ಶಕ್ತಿಗಳ
ಪ್ರಯೋಗಿಸಲು ಹೊಂಚಿ ನಿಂತಿವೆ
ಕಾದುವ ಹಮ್ಮಿನಲ್ಲಿ!
ಒಂದರ ಕಣ್ಣಲ್ಲಿ ಇನ್ನೊಂದು ಬೆಳೆಯುತ್ತಿದೆ
ರಾಕ್ಷಸಾಕಾರ.
ಅನಬಹುದೆ ಶಕ್ತಿಯುಕ್ತಿಗಳಲ್ಲಿ
ಅದು ಹೆಚ್ಚು ಇದು ಕಮ್ಮಿ ಅಂತ? ಮುಖ್ಯ
ಎರಡರ ಪ್ರಳಯವೂ ಸನ್ನಿಹಿತ.
ಎರಡರ ಕಾಮಿತ ಒಂದಾದರೆ
ನಿಭಾಯಿಸಬಹುದು, ಆ ಮಾತು ಬೇರೆ.
ಅದರಲ್ಲಿ
ಒಂದಕ್ಕೆ ನೀರಿನ ಬಾಯಾರಿಕೆ.
ಇನ್ನೊಂದಕ್ಕೆ ಬೆಳಕಿನ ಬಯಕೆ.
ಎರಡರ ಉಸಿರಿನ ಜ್ವಾಲೆ
ಸುಡು ಸುಡು ಸುಡುತ್ತದೆ ಕಾಡನ್ನ, ಕೆರೆಯನ್ನ.
ತಕ್ಷಣ ಚಂದಮುತ್ತ ಮಧ್ಯೆ ಬಂದು,
“ಕೆರೆನೀರಲ್ಲಿ ಕುದಿಯುತ್ತಿರುವ ಚಂದ್ರಾಮಸ್ವಾಮಿ
ನೀವಿಬ್ಬರೂ ಬಿಂಬ ಪ್ರತಿಬಿಂಬಗಳೆಂದು
ನೀತಿ ನುಡಿ ಹೇಳಿ
ಬಗೆಹರಿಸಬಾರದೆ ಮರಿಗಳ ಜಗಳ?”
-ಎಂದು ಹೇಳಿದ. ತೀಕ್ಷ್ಣ ಕಣ್ಣಿಂದ ಚಂದಮುತ್ತನ್ನ ನೋಡಿ ಜಗಳ ಮರೆತು ಇವನ ಕಡೆಗೇ ಬಂತು ಜಿಂಕೆಮರಿ.
“ಬೆಳಕಿನ ಸುಗ್ಗಿ ಒಕ್ಕೋಣ ಹತ್ತುಬಾರೋ ಹುಡುಗ” ಎಂದಿತು. ಹತ್ತು ಎಂದು ಜಯವುಳ್ಳ ಯಕ್ಷಿಯ ದನಿ ಕೇಳಿಸಿತು. ಚಂದಮುತ್ತ ಹೋಗಿ ಬೆಳ್ಳಿಯಂತೆ ಮಿರು ಮಿರುಗುವ ಜಿಂಕೆಮರಿಯ ಬೆನ್ನೇರಿ ಗಟ್ಟಿಯಾಗಿ ಕತ್ತು ತಬ್ಬಿಕೊಂಡ. ಹುಯ್ಯಲಿಟ್ಟಂತೆ ಸುಂಟರಗಾಳಿ ಬೀಸಿ ಭೂಮಿ ಗಿರ್ರನೆ ತಿರುಗಿ ನಾಕು ಲೋಕ ಏಕಾವಾಗುವಂತೆನಿಸಿ ಚಂಗನೆ ನೆಗೆಯಿತು ಜಿಂಕೆ ಮೇಲುಮೇಲಕ್ಕೆ ಮ್ಯಾಲಿನ ಮಿರಿಲೋಕಕ್ಕೆ. ಈಗ ನೋಡಿದರೆ ಸಾವಳಗಿ ಶಿವ ಶಿವಾ, ಯಕ್ಷಿ ಬೇರೆಯಲ್ಲ, ಜಿಂಕೆ ಬೇರೆಯಲ್ಲ ಯಕ್ಷಿ ಜಿಂಕೆ ಎರಡೊಂದಾಗಿ ತನ್ನಯ ಪ್ರತಿಬಿಂಬವಾಗಿ ಕ್ಷಿತಿಜದಾಚೆಗೆ ಸೇರಿಕೊಂಬ ರಸ್ತೆಯ ರಚಿಸಿ ತೇಲಾಡಿ ದಾಟಿದರು ಸುಲಭದಲ್ಲಿ.
ಒಬ್ಬರಿಗೊಬ್ಬರು ಕನ್ನಡಿಯಾದರು
ಬೇಲಿಯಿಲ್ಲದ ಬಯಲಿನಲ್ಲಿ
ಒಬ್ಬರನ್ನೊಬ್ಬರು ಒಳಗೊಂಡರಿಬ್ಬರು
ಸುರಿವ ಎಳೆಬೆಳದಿಂಗುಳಲ್ಲಿ.
ಇಂತೀಪರಿ ಬೆಳ್ಳಿಲೋಕದ ಅಂಚಿನತನಕ ಚಂದಮುತ್ತನ್ನ ಕರೆದೊಯ್ದು ಇನ್ನು ಹಿಂತಿರುಗೆಂದಳು. ಚಂದಮುತ್ತ ತಿರುಗಿ ಬಂದು ಯಕ್ಷಿಯ ನಕ್ಷತ್ರ ಕಣ್ಣಿಂದ ದೃಷ್ಟಿಯ ಕಿತ್ತ.
ನೆಪ್ಪಿರಲಿ ಗೆಳೆಯಾ, ಬೆಳ್ಳಿಲೋಕದಲ್ಲಿ ತೇಲುವಾಗ
ಅಪಸ್ವರವುಂಟಾದರೆ ಇಬ್ಬರಿಗೂ ತಪ್ಪದ ಹಾನಿ.
ಎಂದಳು ಹಸಿರುಗಣ್ಣಿನ ಯಕ್ಷಿ.
ತಿಂಗಳ ಸುಖವಿತ್ತು
ಮುದವಿತ್ತು ಮುಖದಲ್ಲಿ
ಬೆಳ್ದಿಂಗಳು ಸುರಿದಿತ್ತು ಅವಳ ಮೈಯಿಂದ |
ಬೆವರಜಲ ಸುರಿದಿತ್ತು ಇವನ ಮೈಯಿಂದ ||

೨೨. ಮಗನೇ ನೀ ಬೇಗನೆ ಬಾ

ಮ್ಯಾಲಿನ ಲೋಕದಲ್ಲಿ ಈ ಹಿಂಗೆ ನಡೆಯುತ್ತಿರಬೇಕಾದರೆ ಕೆಳಗಿನ ಲೋಕ ಗೋಳುಬೀಸುವ ಗಿರಣಿ ನಮ್ಮೀ ಧರಣಿಯ ಮ್ಯಾಲೆ ಏನು ನಡೆಯುತ್ತಿತ್ತೆಂದರೆ :
ಹೇಳಿ ಹೋದ ಸೋನೆ ಮಳೆ ಬರಲಿಲ್ಲವಾಗಿ
ಶಿವಾಪುರದ ಜೀವಜಿಂದಗಾನಿ ಅಸ್ತವ್ಯಸ್ತವಾಗಿವೆ.
ಮ್ಯಾಲಿನ ಲೋಕದ ಮಳೆ ತಪ್ಪಿ
ಕೆಳಗಿನ ಲೋಕದಲ್ಲಿ ಬೆಳೆಯಿಲ್ಲದೆ
ನಾಡು ನರಲೋಕ ನರಕವಾಗಿದೆ.
ಹುಲ್ಲು ಹಸಿರಿಲ್ಲದೆ ಹಟ್ಟಿಯೊಕ್ಕಲು ಮಂದಿ
ಕಟ್ಟಿ ಮೇಯಿಸುವ ದನ, ಬಿಟ್ಟು ಮೇಯಿಸುವ ಕುರಿಗಳ
ಹೊಡೆದುಕೊಂಡು ಮೇವಿರುವ ನಾಡಿಗೆ ಗಿಳೆ ಹೋಗಿದ್ದಾರೆ.
ಅಡವಿಯಲ್ಲಿ ಜೇನು ಸಿಗದೆ,
ಕಾಡುಬಾಳೆ ಗೆಡ್ಡೆಗೆಣಸು ಸಿಗದೆ
ತಿಂದೇನೆಂದರೆ ಸೊಪ್ಪು ಸದೆ ಸಿಕ್ಕದೆ, ಪ್ರಾಯದವರು ಗುಳೆ ಹೋಗಿ
ಉಳಿದವರು ಬಿದಿರಕ್ಕೆ ಬಿದಿರ ಕಳಲೆಯ ತಿಂದು
ಬದುಕಿದ್ದಾರೆ,
ಹದ್ದುಗೈಯಿಟಗೊಂಡು ಮಳೆ ಹಾದಿಯ ನೋಡುತ್ತ,
ಮಳೆ ಕಳಿಸು ಶಿವನೇ ಎಂದು
ಕರುಳು ಬಾಯಿಗೆ ಬರುವಂತೆ ಮೊರೆಯಿಡುತ್ತ.
ನೀಲಿಮ ಆಕಾಶದಲ್ಲಿ
ಉರಿಯುವ ಮೋಡ ಹಾರ್‍ಯಾಡುತಾವೆ.
ಚಂದ್ರ ಹೊತ್ತಿ ಬೆಳ್ದಿಂಗಳ ಬೂದಿ ಬಿದ್ದು
ನೀರು ನೆರೆಳಿಲ್ಲದ ಕಾಡು ಉರಿವುಸಿರ ಹಾಕುತ್ತಿದೆ.
ಹಕ್ಕಿಪಕ್ಕಿ ಬೆವೆತು ಬೆಂಡಾಗಿ ಸೀಮೆದಷ್ಟಿವೆ.
ಮಳೆ ಕಳಿಸು ಶಿವನೇ
ನಮ್ಮ ಕಾಡಿಗೆ ಮತ್ತೆ ಯೌವ್ವನ ಬರಲಿ.
ಹಸಿರು ಹಬ್ಬಿ ಹಂದರವಾಗಲಿ.
ಹೂಮುಡಿದು ಶೃಂಗಾರವಾಗಲಿ
ಹಾಡುವ ಹಕ್ಕಿಗಳಿಂದ, ತುಂಟ ಪ್ರಾಣಿಗಳಿಂದ
ಮೆಲುಕಾಡಿಸುವ ನಮ್ಮ ದನಕರುಗಳು ಕುರಿಗಳಿಂದ
ಕಾಡು ತುಂಬಲಿ.
ಪುಣ್ಯಕೋಟಿ ಹಸು ಲಕ್ಕಬ್ಬೆ ಕಣ್ಣು ಹೊತ್ತಿಸಿಕೊಂಡು ಮಗ ಇಂದು ಬಂದಾನು ಈಗ ಬಂದಾನೆಂದು ಹಾದಿಗುಂಟ ನೆದರು ಹಾಸಿ ಕಾದಳು. ಸುತ್ತಿನ ದೇವದೈವಂಗಳ ಮಗನ ಕಳಿಸಲೆಂದು ಬಿದಿರುಬತ್ತ ಕುಟ್ಟುತ್ತಾ, ರಾಗ ಎಳೆಯುತ್ತಾ, ಪದ ಹಾಡುತ್ತಾ ಬೇಡಿಕೊಂಡಳು. ಬಿಕ್ಕಳಿಕೆ ಜಾಸ್ತಿಯಾದರೆ ಮಗ ನೆನೆದನೆಂದು ಚಿಂತೆ ಮಾಡಿದಳು. ಚಂದಮುತ್ತನ ಚಿಕ್ಕಂದಿನ ಆಟಿಗೆಗಳ: ನಾರಿನ ಹಗ್ಗ, ಹೂವಿನ ಮುಖವಾಡದ ಮಣ್ಣಿನ ಬಸವ, ದುಂಡುಮಲ್ಲಿಗೆ ಹಸು, ಇರಿದಾಡಲು ನಿಂತ ಮರದ ಟಗರು, ಪಿಳ್ಳಂಗೋವಿ, ಕುಣಿಯೋ ನವಿಲು, ಬಂಡಿ ಎಳೆಯುವ ಗಿಣಿ, ಮೇಯುವ ಕುರಿಗಳ ಜೋಪಾನವಾಗಿ ಕೂಡಿಟ್ಟು ಅವುಗಳೊಂದಿಗೆ ಮಗನ ಆಟ ಕಲ್ಪಿಸಿ ಆನಂದಪಡುತ್ತ ಮುದುಕಿ ತಂತಾನೆ ಆಡಿಕೊಂಡಳು:
ಚಿಕ್ಕಂದು ನೀ ಆಡಿದ ಆಟಿಗೆಗಳನ್ನ
ಇಂದಿಗೂ ಕಾದಿಟ್ಟಿದ್ದೇನೆ ಕಂದಾ.
ಹಿತ್ತಲಲ್ಲಿ ನೀ ಮಾಡಿದ ಪುಟ್ಟ ಮಲ್ಲಿಗೆ ತೋಟ,
ಯಾತದ ಬಾವಿ, ಮ್ಯಾಲೊಂದು ಮರ,
ಮರದಲ್ಲೊಂದು ಗಿಣಿಮರಿ
ಬಿದಿರಿನ ಪುಟ್ಟ ಕೊಳಲು, ಕೊಳಲುಲಿಗೆ ಮೈಮರೆತ
ಮಣ್ಣಿನ ಕುರಿ ಮಂದೆ, ದನಕರು,
ಕರುವಿಗಾಗಿ ಕಾಡಿನಲ್ಲಿ ಕಾದು ನಿಂತ
ಮರದ ಹುಲಿ, ಬೊಗಳುವ ನಾಯಿ…
ನಿನ್ನೆ
ಕಾಲನ ಧೂಳು ಸರಿಸಿ ನೋಡಿದಾಗ
ನಿನ್ನ ತೋಟ ಹಾಗೇ ಇದ್ದುದ ಕಂಡೆ.
ತಪ್ಪಿಸಿಕೊಂಡ ಕರುವೊಂದ ತಂದು
ಹಿಂಡಿನಲ್ಲಿ ಬಿಡಬೇಕೆಂದಾಗ
ಸಾಲುಹಲ್ಲಿನ ಮರದ ನಾಯಿ ಮೈಮ್ಯಾಲೇರಿ ಬಂದು
ಎದೆ ಕಚ್ಚಿ ಬೊಗಳಿತು ಮಗನೇ.
ನೀ ನೆಟ್ಟ ಮಲ್ಲಿಗೆ ಬಳ್ಳಿ ಮೊಗ್ಗು ಬಿಟ್ಟಿವೆ.
ಹೂವಾಗುವ ಸಮಯ, ಮಳೆಯಿಲ್ಲ; ನೀರುಣಿಸಬೇಕು
ಯಾರಾದರೊಬ್ಬರು.
ಮುಖಕ್ಕೆ ಸೀಮೆ ಸುಣ್ಣವ ಬಳಿದು
ಹುಣ್ಣಿಮೆ ಚಂದ್ರಾಮನಾಗಿದ್ದ ಬಾಲಕನೊಬ್ಬ
ಬಳ್ಳಿಯ ಬಳಿ ನಿಂತಿದ್ದ.
ನನ್ನ ಕಂಡೊಡನೆ ಒಡೋಡಿ ಬಂದು
ತೆಕ್ಕೆ ಹಾದು ಕತ್ತಿಗೆ ನೇತು ಬಿದ್ದ.
ಯಾರೋ ನೀನು? ಅಂದರೆ,
ನಿನ್ನ ಮಗ ಚಂದ್ರಾಮನೆಂದ.
ಅಲ್ಲೇ ಕಂದಿ ಮುಳುಗಲಾರದೆ ನಿಂತಿದ್ದ
ನೀ ಬರೆದ ಸೀಮೆಸುಣ್ಣದ ಚಂದ್ರ.
ದೂರದಲ್ಲಿ ಹೊಂಚಿದ್ದ ಧೂಮಕೇತು.
ಆತನ ಬೆಂಕಿ ಹೂಗಳ ಮ್ಯಾಲೆ ಸುರಿದು
ಗುಡಿ ಗೂಡು ಕೊಳಲು ಬೂದಿಯಾದರೆ
ಜನ ದನ ಶಿವನೇ ಎಂದರೆ
ಸುಟ್ಟುಳಿದು ನಿನ್ನ ಹಾಡಿನ ಇದ್ದಿಲು ಚೆಲ್ಲಾಪಿಲ್ಲಿ ಬಿದ್ದರೆ….
ಇದನ್ನೆಲ್ಲ ಮಕ್ಕಳಾಟ ಎನ್ನಲಾದೀತೆ?
ಹಾಗಾದಲ್ಲಿ ನಾ ನೀನು ತಾಯಿ ಮಗ ಆದದ್ದೂ
ಆಟವಾಗದೆ ಕಂದ?


ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.