ಇನ್ನೂ ಒಂದು

ಗಡಿ

ಸುತ್ತಿಟ್ಟ ಚಾಪೆಯನ್ನು ಮುಂಗಾಲಿನಿಂದ ತಳ್ಳಿ ತಳ್ಳಿ ಬಿಡಿಸಿದ ಹಾಗೆ, ತುಸು ಒದ್ದಂತೆ ಅದು ಬಿಚ್ಚಿಕೊಂಡು ಅಂಚಿನ ನಕ್ಷೆಗಳನ್ನು ಕಾಣಿಸಿ, ಮತ್ತೆ ನೂಕಿದಂತೆ ಮತ್ತಷ್ಟು ಬಿಚ್ಚಿಕೊಂಡು ನಡುವಿನ ಚಿತ್ರವನ್ನು ಕಾಣಿಸುವಂತೆ ಭಾನುವಾರದ ದಿನ ಜರುಗಬೇಕು ಎಂದು ಸ್ವಾತಿ ತನ್ನ ಆದರ್ಶ ಭಾನುವಾರದ ಬಗ್ಗೆ ಸ್ನೇಹಿತರಲ್ಲಿ ಹೇಳುತ್ತಾಳೆ. ಜೊತೆಗೇ ಈ ಕಲ್ಪನೆಯ ಹುಟ್ಟಿನ ಹಿಂದಿನ ಕತೆಯನ್ನೂ ವಿವರಿಸುತ್ತಾಳೆ. ಬಾಲ್ಯದಲ್ಲಿ ನೆಲ್ಲೂರಿನ ಅಜ್ಜನ ಮನೆಯ ಅಟ್ಟದ ಮೇಲೆ ಅತಿಥಿಗಳಿಗೆಂದು ಸಾಲಾಗಿ ಜೋಡಿಸಿಟ್ಟ ಚಾಪೆಗಳನ್ನು ಕಾಲಿನಿಂದ ತಳ್ಳಿ ತೆರೆಯುವ ಆಟ ರಜೆಗೆಂದು ಅಲ್ಲಿಗೆ ಬಂದ ಮಕ್ಕಳಿಗೆಲ್ಲ ಪ್ರಿಯವಾದದ್ದು. ಒಳಗೆ ನಾನಾ ವಿನ್ಯಾಸಗಳಿದ್ದ ಆ ಚಾಪೆಗಳನ್ನು ಬಿಚ್ಚುವ ಮೊದಲು ಒಳಗಿನ ಚಿತ್ರ ಯಾವುದೆಂದು ಊಹಿಸಬೇಕು. ನಂತರ ನಿಧಾನ ಬಿಚ್ಚುತ್ತ ಹೋದಹಾಗೆ, ಹುಲಿ ಆನೆ ರಂಗೋಲಿ ದಟ್ಟ ಕಾಡು ಹೀಗೆ ಬಗೆಬಗೆಯ ಚಿತ್ರಗಳು ತುಸುವೇ ತೋರಿಸಿಕೊಳ್ಳುತ್ತ ಹೋದಹಾಗೆ, ಉದ್ವೇಗದಿಂದ ಮಕ್ಕಳ ಗಲಾಟೆ ತಾರಕಕ್ಕೇರುವುದು. ಈ ಆಟದ ದೆಸೆಯಿಂದಾಗಿ ಒಬ್ಬರಿಗೆ ಗೊತ್ತಾಗದಂತೆ ಒಬ್ಬರು ಸುತ್ತಿಟ್ಟ ಚಾಪೆಗಳ ಸ್ಥಾನವನ್ನು ಬದಲಿಸುತ್ತಲೇ ಇರುತ್ತಿದ್ದರು. ಸುಮಾರು ಮೂವತ್ತು ಚಾಪೆಗಳು ಸದಾ ಸ್ಥಾನ ಬದಲಿಸುತ್ತಿದ್ದು ಒಳಗಿನ ಚಿತ್ರಗಳನ್ನು ಊಹಿಸುವುದು ಸುಲಭವಾಗಿರಲಿಲ್ಲ.
‘ಈ ಭಾನುವಾರ ಏನು ಮಾಡಿದೆ?’ ಎಂಬ ಪ್ರಶ್ನೆಗೆ ‘ಚಾಪೆ’ ಎಂಬ ಉತ್ತರ ಸಿಕ್ಕಿದರೆ ಅದು ಏನೆಂಬುದು ಅವಳ ಗುಂಪಿನ ಎಲ್ಲರಿಗೂ ಅರ್ಥವಾಗುತ್ತಿತ್ತು. ಸ್ವಾತಿಯ ‘ಚಾಪೆ ಭಾನುವಾರ’ ಅಂದರೆ ನಿದ್ದೆ ಮುಗಿದು ತಾನಾಗಿ ಎಚ್ಚರಾಗಬೇಕು – ನಿತ್ಯದಂತೆ ಏಳು ಗಂಟೆಯ ಅಲಾರಂ ಸದ್ದಿಗಲ್ಲ. ನಂತರದ ಒಂದು ಗಂಟೆಯ ಅವಧಿಯಲ್ಲಿ ಸಿದ್ಧಳಾಗಿ ಕೆಲಸಕ್ಕೆ ಹೊರಡುವ ಧಾವಂತವಿಲ್ಲದೇ ಬೇಕಾದಷ್ಟು ಸಲ ಟೀ ಕುಡಿಯಬೇಕು. ಬರೀ ತಲೆಬರಹಗಳ ಮೂಲಕ ನುಗ್ಗಿ ಹೋಗುವ ಬದಲು ಪೇಪರಿನ ಸುದ್ದಿಗಳನ್ನು ಓದಬೇಕು. ಏಳೂವರೆಗೆ ಬರುವ ಕೆಲಸದವಳಿಗೆ ಬಾಗಿಲು ತೆರೆಯುವ ಅಗತ್ಯವೇ ಬಾರದ ಹಾಗೆ ಆವತ್ತು ಅವಳಿಗೆ ರಜೆ. ಒಟ್ಟಿನಲ್ಲಿ ನಿಶ್ಚಿತ ಆಕಾರವಿಲ್ಲದೆ, ಕಟ್ಟುಪಾಡುಗಳಿಲ್ಲದೆ ದಿನ ತೆರೆದುಕೊಳ್ಳುತ್ತ ಹೋದರೆ, ಅದರ ಸ್ವಚ್ಛಂದತೆ ಅನುಭವಕ್ಕೆ ಬರುತ್ತದೆಂಬುದು ಅವಳ ನಂಬಿಕೆ.
ಭಾನುವಾರದ ಚಟುವಟಿಕೆಗಳೆಲ್ಲ ಹೆಚ್ಚಾಗಿ ಅವಳ ಬೆಡ್‌ರೂಮಿನಲ್ಲೇ ಜರುಗುತ್ತವೆ. ಬೆಳಿಗ್ಗೆ ಎದ್ದು ಟೀ ಕುಡಿಯುತ್ತ ಪೇಪರು ಓದುವುದು ಹಾಸಿಗೆಯ ಮೇಲೆ ಕುಳಿತೇ. ಅವಳ ಮಂಚದ ಎದುರಿಗಿರುವ ಕಿಟಕಿಯಿಂದ ಹಲಸಿನ ಮರ ಕಾಣಿಸುತ್ತದೆ. ಕಿಟಕಿಯ ಪಕ್ಕ ಬಾಲ್ಕನಿಗೆ ಹೋಗುವ ಬಾಗಿಲಿದೆ. ಮಂಚದ ಇನ್ನೊಂದು ಪಕ್ಕ ಕುರ್ಚಿಯಿದೆ. ಈ ಕುರ್ಚಿಯಲ್ಲೇ ಅವಳು ಕೂತು ಓದುವುದು. ಹಾಗೆ ದಿನದ ಬಹುಭಾಗವನ್ನು ಒಂದೋ ಈ ರೂಮಿನಲ್ಲಿ, ಇಲ್ಲವಾದರೆ ಅದಕ್ಕೆ ಹೊಂದಿಕೊಂಡ ಬಾಲ್ಕನಿಯಲ್ಲಿ ಕಳೆಯುವುದೆಂದರೆ ಅವಳಿಗೆ ಖುಷಿ.


ಚಳಿಗಾಲದ ಈ ಭಾನುವಾರ ಅನಿರೀಕ್ಷಿತವಾಗಿ ಬಂದ ಮಳೆ ಅದೇ ಆಗ ನಿಂತು ಬಿಸಿಲು ಹರಡತೊಡಗಿತ್ತು. ಮರದ ಎಲೆಗಳ ಮೇಲೆ ಕೂತ ಹನಿಗಳು ಬಿಸಿಲಿಗೆ ಹೊಳೆಯುವುದನ್ನು ನೋಡುತ್ತ, ಬಿಂದುಗಳು ಕೂಡಿ ದೊಡ್ಡ ಹನಿಯಾಗಿ, ಎಲೆಯಿಂದ ಜಾರುವಾಗ ಪಳಕ್ಕನೆ ಮಿಂಚಿ ಕೆಳಗೆ ಮಣ್ಣಲ್ಲಿ ಮಾಯವಾಗುವುದನ್ನು ನೋಡುತ್ತ ಮೂರನೆಯ ಮಹಡಿಯ ತನ್ನ ಮನೆಯ ಬಾಲ್ಕನಿಯಲ್ಲಿ ಕೂತ ಸ್ವಾತಿ ಹಿಂದಿನ ಸಂಜೆ ಮನೋಹರನ ಜೊತೆ ಆಡಿದ ಮಾತುಗಳನ್ನು ನೆನೆಸಿಕೊಳ್ಳುತ್ತಿದ್ದಳು. ಇನ್ನೂ ಏನನ್ನು ಹೇಳಿದ್ದರೆ ಸ್ಪಷ್ಟವಾಗಬಹುದಿತ್ತು ಎಂದು ಯೋಚಿಸುತ್ತಿದ್ದಳು. ಅವರ ನಡುವಿನ ಮಾತಿನ ಕಾವಿನಲ್ಲಿ, ಯಾರಿಗೂ ಹೇಳಲು ಸಾಧ್ಯವಿಲ್ಲ ಎಂದು ಭಾವಿಸಿಕೊಂಡ ಕೆಲವು ಸಂಗತಿಗಳನ್ನು ಸ್ವಾತಿ ಮನೋಹರನಿಗೆ ಹೇಳಲು ಪ್ರಯತ್ನಿಸಿದ್ದಳು. ಸ್ವಾತಂತ್ರ್ಯದ ಹಂಬಲ, ಅದರ ಸರಹದ್ದುಗಳು, ಕಾಲಿಗೆ ತೊಡರಿಕೊಳ್ಳುವ ಭೋಳೆ ಪ್ರೀತಿಯ ಜಂಜಡಗಳು, ಅತಿಪ್ರೀತಿಯ ಭಾರಗಳು ಎಂದೆಲ್ಲ ತೀವ್ರವಾಗಿ ಮಾತಾಡುತ್ತ ತನ್ನ ವಾದಕ್ಕೆ ಒತ್ತು ಕೊಡಲು ಸ್ವಂತ ಅನುಭವಕ್ಕೇ ಕೈ ಹಾಕಿದಳು. ಅವಳ ಮತ್ತು ಶಂಕರನ ಸಂಬಂಧದ ಕುರಿತು ಹೇಳಲು ಶುರುಮಾಡಿದವಳು ಎಲ್ಲಿ ನಿಲ್ಲಿಸಬೇಕೋ ತಿಳಿಯದೇ ಒದ್ದಾಡಿದಳು. ಮಾತಿನಲ್ಲಿ ಇಡಲು ಹೋಗಿದ್ದರಿಂದ, ವಾದಸರಣಿಗೆ ಒಪ್ಪುವಂತೆ ಘಟನೆಗಳನ್ನು ಹೆಕ್ಕಿದ್ದರಿಂದ ಎಲ್ಲವೂ ಆಯಾ ಅರ್ಥಗಳನ್ನು ಪಡೆದವೋ, ನಿಜಕ್ಕೂ ಅದರ ಹಿಂದೆ ತಾನು ಹೇಳಬೇಕಾದ್ದೇ ಇತ್ತೋ ಅನ್ನುವುದು ಅವಳಿಗೂ ಅಷ್ಟು ಸ್ಪಷ್ಟವಾಗಿರಲಿಲ್ಲ.
‘ಭೋಳೆ ಪ್ರೀತಿಯ ಜಂಜಡಗಳು’ ಈ ಮೂರು ಶಬ್ದಗಳನ್ನು ನಿಧಾನವಾಗಿ ಉಚ್ಚರಿಸಿ ಮನೋಹರ ಹೇಳಿದ್ದ: ‘ಎಷ್ಟು ಚೆನ್ನಾಗಿ ಹೇಳಿದಿರಿ. ಈವರೆಗೆ ವಿವರಿಸಿದ್ದಕ್ಕೆಲ್ಲ ಈ ಮಾತುಗಳಿಂದ ಹೊಸ ಅರ್ಥ ಬಂದ ಹಾಗಿದೆ.’
ಕೆಳಗೆ ಗೇಟಿನ ಹತ್ತಿರ ಶಂಕರ ಬಂದು, ಬೈಕು ನಿಲ್ಲಿಸುತ್ತಿರುವುದು ಕಾಣಿಸಿತು. ಇಷ್ಟು ಬೇಗ ಭಾನುವಾರ ಆರಂಭಿಸುವ ಮನಸ್ಸಿರಲಿಲ್ಲ. ಇನ್ನೂ ಸ್ವಲ್ಪ ಹೊತ್ತು ಮಳೆ ನಿಂತ ನಂತರದ ಬಿಸಿಲನ್ನು ನೋಡಬೇಕೆಂದಿದ್ದಳು. ತನ್ನನ್ನು ನೋಡಲು ಈವತ್ತು ಬರಬೇಡ ಎಂದು ನಿನ್ನೆಯೇ ಅವನಿಗೆ ಹೇಳಿದ್ದರೂ ಶಂಕರ ಬರುತ್ತಾನೆಂದು ಗೊತ್ತಿತ್ತು. ಇಷ್ಟು ಬೇಗ ಬರುತ್ತಾನೆಂದುಕೊಂಡಿರಲಿಲ್ಲ ಅಷ್ಟೇ.
ತಾನು ಸ್ನಾನ ಮಾಡದೇ ಕೂತಿದ್ದನ್ನು ಕಂಡು ಅವನು ಸೂಕ್ಷ್ಮವಾಗಿ ಸಿಡುಕುತ್ತಾನೆ ಎಂದು ಅಪೇಕ್ಷಿಸಿದ ಸ್ವಾತಿಗೆ ಆಶ್ಚರ್ಯವಾಗುವ ಹಾಗೆ ಅವನು ಏನೂ ಹೇಳದೆ, ಒಂದು ಕುರ್ಚಿ ಎಳಕೊಂಡು ಅವಳ ಜೊತೆ ಬಾಲ್ಕನಿಯಲ್ಲಿ ಕೂತ. ಕೈಗಳನ್ನು ನಿಡಿದಾಗಿ ಚಾಚಿ ತುಸು ಮೈಮುರಿದ ಸ್ವಾತಿಯ ಆಲಸ್ಯವನ್ನು ಗಮನಿಸಿದವನಂತೆ ‘ಟೀ ಮಾಡಲೇನು?’ ಎಂದು ಕೇಳಿದ.
‘ನೀನೀಗ ಸಿಡಿಸಿಡಿ ಸಿಡಿಯುತ್ತ ಅವಸರ ಮಾಡುತ್ತೀಯೆಂದುಕೊಂಡಿದ್ದೆ’ ಅಂದಳು.
‘ನಿನ್ನ ಉಪದೇಶವನ್ನು ಗಂಭೀರವಾಗಿ ತಗೊಂಡಿದ್ದೇನೆ. ಏನೂ ಮಾಡದೇ, ಏನು ಮಾಡಬೇಕೆಂದು ಯೋಚನೆ ಕೂಡ ಮಾಡದೇ ಪ್ರತಿ ದಿನದಲ್ಲಿ ಸ್ವಲ್ಪ ಕಾಲವನ್ನಾದರೂ ಕಳೆಯಲು ಪ್ರಯತ್ನಪಡುತ್ತಿದ್ದೇನೆ.’ ಅಂದ.
‘ನಿನ್ನ ಈ ಪ್ರಯತ್ನಕ್ಕೆ ಬಹುಮಾನವಾಗಿ ನಾನೇ ಟೀ ಮಾಡುತ್ತೇನೆ’ ಎಂದವಳು ಎದ್ದು ಹೊರಟಳು. ಶಂಕರ ಅವಳ ಹಿಂದೆಯೇ ಅಡಿಗೆ ಮನೆಗೆ ಬಂದ. ಅವಳು ಟೀ ಮಾಡುವಾಗ ಮಾತಾಡುತ್ತ ನಿಂತವನು ಅಲ್ಲಿದ್ದ ಬಿಸ್ಕಿಟ್ ಪೊಟ್ಟಣವನ್ನು ಎತ್ತಿಕೊಂಡ. ಮಾತಾಡುತ್ತ ಅದನ್ನು ತಿರುಗಿಸಿ ತಿರುಗಿಸಿ ನೋಡಿದ. ಅದರ ಮೇಲೆ ಮುದ್ರಿಸಿದ ಏನನ್ನೋ ಓದಲು ಪ್ರಯತ್ನಿಸಿದ. ಅವಳಿಗೆ ಇರಿಸುಮುರಿಸಾಯಿತು. ಕಸಿವಿಸಿಯಾಯಿತು. ಹೇಗಾದರೂ ಮಾಡಿ ಅವನ ಕೈಯಿಂದ ಅದನ್ನು ಇಸಕೊಳ್ಳಬೇಕೆಂದು ‘ಈಗ ತಿನ್ನುತ್ತೀಯಾ?’ ಎಂದು ಕೇಳುತ್ತ ಅವನತ್ತ ಕೈಚಾಚಿದಳು.
‘ನನಗೆ ಬೇಡ. ನೀನು ತಗೋ’ ಎಂದವನು ಪೊಟ್ಟಣವನ್ನು ಅವಳ ಕೈಗಿತ್ತ. ಅದನ್ನೆತ್ತಿ ಒಳಗಿಟ್ಟಳು.
ಅವಳು ಹಾಲು ಕಾಯಿಸುತ್ತಿದ್ದಾಗ ಶಂಕರ ‘ಈವತ್ತು ನನ್ನ ಕ್ಲಾಸ್‌ಮೇಟ್ ಒಬ್ಬ ಎಷ್ಟೋ ವರ್ಷಗಳ ನಂತರ ನನ್ನನ್ನು ಹುಡುಕಿಕೊಂಡು ಬಂದ. ಬಾಬು ಅಂತ. ಅವನಿಗೆ ನಮ್ಮ ಬಗ್ಗೆ ಹೇಳಿದ್ದಕ್ಕೆ, ನಿನ್ನನ್ನು ನೋಡಲು ಹೊರಟೇಬಿಟ್ಟಿದ್ದ. ಇನ್ನೊಮ್ಮೆ ಬಂದಾಗ ಭೆಟ್ಟಿ ಮಾಡಿಸುತ್ತೇನೆಂದು ಹೇಳಿದೆ.’ ಅಂದ.
ಸ್ವಾತಿಗೆ ಇದು ಇಷ್ಟವಾಗಲಿಲ್ಲ. ಆದರೆ ಯಾಕೆ ಇಷ್ಟವಾಗಲಿಲ್ಲ ಎಂದು ಸರಿಯಾದ ಮಾತುಗಳಲ್ಲಿ ಅವನಿಗೆ ತಲುಪುವ ಹಾಗೆ, ಅದರಿಂದ ಅವನ ಅಭಿಮಾನ ಭಂಗವಾಗದ ಹಾಗೆ ಹೇಗೆ ಹೇಳುವುದೋ ಗೊತ್ತಾಗಲಿಲ್ಲ. ಕೆಲಕಾಲದಿಂದ ಇದನ್ನು ಯೋಚಿಸಿ ಸುಸ್ತಾಗಿದ್ದಳು. ಅವನ ವರ್ತನೆಯಲ್ಲಿ ಇದೇ ಅಂತ ಯಾವ ತಪ್ಪನ್ನೂ ಹುಡುಕುವುದು ಸಾಧ್ಯವಿರಲಿಲ್ಲ. ಅವನು ಬಿಸ್ಕಿಟ್ ಪೊಟ್ಟಣ ಕೈಯಲ್ಲಿ ಹಿಡಿದಾಗಲೂ ಹೀಗೆಯೇ ಅನಿಸಿತ್ತು. ಅವನು ಅದರ ಮೇಲಿನ ಬೆಲೆಯನ್ನು ನೋಡುತ್ತಾನೋ, ಅಲ್ಲಿ ಬರೆದಿರುವ ನಾನಾ ವಿಟಮಿನ್‌ಗಳ ಹೆಸರುಗಳನ್ನು ಓದುತ್ತಾನೋ ಅವಳಿಗೆ ಗೊತ್ತಾಗಿರಲಿಲ್ಲ. ಆ ವಿವರಗಳನ್ನು ಗಮನಿಸಿದಾಗ ಅವನ ಮನಸ್ಸಲ್ಲಿ ಏನೇನು ಆಗುತ್ತಿರಬಹುದು ಎಂದು ಯೋಚಿಸಿದಳು. ಆದರೂ ಇದು ಸರಿಯಲ್ಲ ಎಂದು ಯಾವುದನ್ನೂ ಸ್ಪಷ್ಟವಾಗಿ ಬೆರಳು ಮಾಡಿ ತೋರಿಸುವುದು ಅವಳಿಗೆ ಸಾಧ್ಯವಾಗುತ್ತಿರಲಿಲ್ಲ. ಬಿಸ್ಕಿಟ್ ಪೊಟ್ಟಣವನ್ನು ತೆಗೆದು ನೋಡುವುದೇನು ತಪ್ಪು? ಆದರೆ ಅವನು ತನ್ನ ಅನುಮತಿಯಿಲ್ಲದೇ ಸೂಕ್ಷ್ಮವಾಗಿ ತನ್ನ ಸರಹದ್ದಿನೊಳಗೆ ಅತಿಕ್ರಮಣ ಮಾಡುತ್ತಿದ್ದಾನೆಂದು ಅವಳಿಗೆ ಅನಿಸುತ್ತಿತ್ತು. ನಮ್ಮ ಬಗ್ಗೆ ಹೇಳಿದೆ ಅಂದರೆ ಏನು? ತನ್ನ ಬಗ್ಗೆ ತಾನು ಎದುರಿಗೆ ಇಲ್ಲದಿರುವಾಗ ಏನೇನು ಹೇಳಿರಬಹುದೆಂದು ಊಹಿಸತೊಡಗಿದಳು.
ಹಿಂದೊಮ್ಮೆ ಚಂದ್ರಕಾಂತನೆಂಬ ಸ್ನೇಹಿತನಿಗೆ ಸ್ವಾತಿಯ ಬಗ್ಗೆ ಹೇಳಿದಾಗ ‘ಅವಳಿಗೆ ಮಾಡಿದ್ದೀಯಾ?’ ಎಂದು ಕೇಳಿದನಂತೆ. ಇದನ್ನು ಹೇಳುವಾಗ, ಕೇಳಿ ತನಗೆ ಏನು ಅನಿಸೀತೆಂಬುದರ ಪರಿವೆ ಶಂಕರನಿಗೆ ಇರಲಿಲ್ಲವೇ ಎಂಬುದು ಸ್ವಾತಿಯನ್ನು ಬಾಧಿಸಿತ್ತು. ಅದಕ್ಕೂ ಮಿಗಿಲಾಗಿ, ಅದನ್ನು ಹೇಳುವಾಗ ಅವನ ಮುಷ್ಟಿ ಕಟ್ಟಿದ ಮುಂಗೈ ಅವನಿಗರಿವಿಲ್ಲದೇ ವಿಚಿತ್ರ ಫಾಜೀಲ ರೀತಿಯಲ್ಲಿ ತುಸು ಅಲುಗಾಡಿದ್ದು ಗಮನಕ್ಕೆ ಬಂದಿತ್ತು. ಸ್ನೇಹಿತರ ನಡುವಿನ ಆ ಮಾತುಗಳು ಅಷ್ಟಕ್ಕೇ ನಿಲ್ಲುವುದಿಲ್ಲ ಅನ್ನುವುದು ಅವಳಿಗೆ ಗೊತ್ತು. ಇದರಲ್ಲಿ ತನ್ನ ತಪ್ಪೇನೂ ಇಲ್ಲ, ಅವನು ಹಾಗೆಲ್ಲ ಮಾತಾಡಿದರೆ ನಾನೇನು ಮಾಡಲಿ ಎಂದು ಶಂಕರನ ವಾದ. ಆದರೆ ಅದು ಇಷ್ಟೇ ಅಲ್ಲ ಎಂದು ಅನಿಸಿದ್ದನ್ನು, ಕ್ಲೀಷೆಯಾದ ಸ್ತ್ರೀವಾದದ ಭಾಷಣದ ಮಾತುಗಳಂತಲ್ಲದೇ ಹೇಗೆ ಹೇಳುವುದೋ ಗೊತ್ತಾಗದೇ ಒದ್ದಾಡಿದ್ದಳು.
ಶಂಕರ ಭಾನುವಾರ ಬೆಳಿಗ್ಗೆ ಸ್ವಾತಿಯನ್ನು ನೋಡಲು ಬಂದನೆಂದರೆ ಏನೋ ಒಂದು ಕಾರ್ಯಕ್ರಮ ಹಾಕಿಕೊಂಡೇ ಬಂದಿರುತ್ತಾನೆ. ಅವನು ತನಗೆ ಬೇರೆ ಏನಾದರೂ ಕೆಲಸ ಇದೆಯೋ ಎಂದು ಕೇಳುವುದು ಕೂಡ ಇಲ್ಲ ಎಂದು ಅವಳಿಗೆ ಕಸಿಕಸಿ. ಹೇಳಹೋದರೆ ಅವನಿಗೆ ಅರ್ಥವಾಗುವುದೇ ಇಲ್ಲ. ಪರಸ್ಪರ ಜೊತೆ ಇರುವುದಕ್ಕಿಂತ ಮಿಗಿಲಾದ ಸುಖ ಯಾವುದಿದೆ ಎಂಬ ಧಾಟಿಯಲ್ಲಿ ಮಾತಾಡುತ್ತ, ಅವಳ ಜೊತೆ ಕಾಲ ಕಳೆಯುವ ಯಾವುದೇ ಅವಕಾಶಕ್ಕಾಗಿ ತಾನು ಏನನ್ನಾದರೂ ಮಾಡಬಲ್ಲೆ ಅಥವಾ ಮಾಡದೇ ಇರಬಲ್ಲೆನೆಂದು ಹೇಳುತ್ತಿದ್ದ. ಹೀಗೆ ಮುಂದೆ ಮುಂದೆ ಹಾಕುತ್ತ ಹೋಗಿ ಅವನ ಬೈಕಿನ ಸರ್ವಿಸಿಂಗ್ ಮಾಡಿಸಲು ಕೊನೆಗೆ ರಜೆ ಹಾಕಬೇಕಾಯಿತು. ಇದು ತಪ್ಪು, ಹಾಗೆ ಮಾಡಕೂಡದು, ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಹಲವು ಮಗ್ಗಲುಗಳು, ತೋರುವುದಕ್ಕಿಂತ ತೋರದಿರುವ, ಕೇವಲ ಭಾವಿಸುವುದಕ್ಕೆ ಮಾತ್ರ ಸಾಧ್ಯವಿರುವ ಮಗ್ಗಲುಗಳು ಹಲವು ಎಂದು ಹೇಳಿದರೆ ತಬ್ಬಿಬ್ಬಾಗಿಬಿಡುತ್ತಿದ್ದ.
‘ನಿನ್ನ ಪಾಡಿಗೆ ನಿನ್ನ ಕೆಲಸಗಳನ್ನು ಮಾಡಿಕೊಂಡಿರು. ನನ್ನನ್ನು ನನ್ನಷ್ಟಕ್ಕೆ ಬಿಡು. ನಾವು ಹೀಗೆ ಬೇರೆಬೇರೆಯಾಗಿ ಇದ್ದೂ ನಮ್ಮ ಆಸಕ್ತಿಗಳೋ ದೈನಿಕವೋ ಪರಸ್ಪರ ಸಂಧಿಸುವ ಗಳಿಗೆಗಳಲ್ಲಿ ಮಾತ್ರ ಸೇರಬೇಕು. ಅಂಥ ಕ್ಷಣಗಳನ್ನು ಸೃಷ್ಟಿಸಲು ವಿಶೇಷವಾಗಿ ಪ್ರಯತ್ನಿಸತೊಡಗಿದೊಡನೆ ಸಂಬಂಧದ ಸಹಜತೆ ಹೋಗಿಬಿಡುತ್ತದೆ. ದಿನ ಕಳೆದ ಹಾಗೆ ಇದೊಂದು ಭಾರ ಅನಿಸತೊಡಗುತ್ತದೆ. ನೀನು ಹೀಗೆಲ್ಲ ವಿಶೇಷ ಶ್ರಮ ವಹಿಸತೊಡಗಿದೊಡನೆ ನನ್ನ ಮನಸ್ಸಿಗೂ ರಗಳೆಯಾಗತೊಡಗುತ್ತದೆ. ಎಷ್ಟೇ ಸಣ್ಣ ಸಂಗತಿಯಿರಲಿ ತ್ಯಾಗ ಮಾಡಬೇಡ. ನೀನಿರುವ ಹಾಗೆ ಇರು, ನಾನಿಲ್ಲದಿರುತ್ತಿದ್ದರೆ ಹೇಗೆ ಇರುತ್ತಿದ್ದೆಯೋ ಹಾಗೆ ಇರು’ ಎಂದು ಸ್ವಾತಿ ಹೇಳಿದ್ದಳು. ಆದರೆ ಅವಳನ್ನು ಖುಷಿಪಡಿಸಲು, ತಾನು ಸಹಜವಾಗಿದ್ದೇನೆಂದು ಅವಳಿಗೆ ತೋರಿಸಿಕೊಳ್ಳಲು ಅವನು ಬಹಳ ಒದ್ದಾಡುತ್ತಿದ್ದ. ತನ್ನ ಪಾಡಿಗೆ ತಾನಿದ್ದೇನೆಂದು ಸೂಚಿಸಲು ತಡವಾಗಿ ಬಂದ. ಮಾತಾಡದೇ ಕೂತ. ಕರೆದಲ್ಲಿ ಬರಲಿಲ್ಲ. ಬೇರೆ ಯಾರ ಜೊತೆಗೋ ಊಟಕ್ಕೆ ಹೋದ. ಅವನ ಗ್ರಹಿಕೆಯಲ್ಲಿ, ಅವಳ ತಳಮಳ ತನಗೆ ಅರ್ಥವಾಗಿದೆಯೆಂದು ತೋರಿಸಿಕೊಳ್ಳಲು ಅವನು ಆಡುವ ಮಾತುಗಳಲ್ಲಿ ಅತಿ ಸರಳವಾಗಿ ತೋರುವ ತನ್ನ ವಿಚಾರಗಳು ಮತ್ತು ಕ್ರಿಯೆಗಳು ಅವಳಿಗೆ ಇನ್ನಷ್ಟು ಕಿರಿಕಿರಿ ಉಂಟುಮಾಡುತ್ತಿದ್ದವು.
ಟೀ ಸಿದ್ದವಾದೊಡನೆ ಒಂದು ಕಪ್ಪನ್ನೆತ್ತಿಕೊಂಡು ‘ಬಾಲ್ಕನಿಯಲ್ಲಿ ಕೂರೋಣವೇ?’ ಅಂದ.
‘ಬೇಡ. ತುಂಬಾ ಗಾಳಿ. ಇಷ್ಟು ಹೊತ್ತೂ ಅಲ್ಲೇ ಕೂತಿದ್ದೆ. ಇಲ್ಲೇ ಒಳಗೆ ಕೂರೋಣ’ ಎಂದು ಬೆಡ್‌ರೂಮಿಗೆ ಹೋದಳು. ಶಂಕರ ಹಿಂಬಾಲಿಸಿದ.


ಶಂಕರನ ಸೂಕ್ಷ್ಮ ಅತಿಕ್ರಮಣ ಅನುಭವಕ್ಕೆ ಬಂದಿದ್ದು ಅವನ ಪರಿಚಯವಾದ ಹೊಸದರಲ್ಲೇ. ಅವರಿಬ್ಬರೂ ಆ ದಿನ ಸಂಜೆ ಒಂದು ಸಂಗೀತ ಸಭೆಗೆ ಹೋಗುವುದಿತ್ತು. ಅಲ್ಲಿಗೆ ಕರೆದೊಯ್ಯಲು ಶಂಕರ ಮನೆಗೆ ಬಂದಾಗ, ಅವಳು ತಾನು ಬರೆದ ಎರಡು ಪತ್ರಗಳಿಗೆ ಅಂಟು ಹಚ್ಚುತ್ತಿದ್ದಳು. ಅವಳು ತಯಾರಾಗಿ ಬರುವವರೆಗೂ ಅವನು ಮುಳ್ಳಿನ ಮೇಲೆ ಕೂತಂತಿದ್ದ. ಇಬ್ಬರೂ ಸಂಗೀತ ಸಭೆಗೆ ಹೋಗಿ, ನಂತರ ಅವನ ಒತ್ತಾಯದಿಂದ ಜೊತೆಗೆ ಊಟಕ್ಕೆ ಹೋಗಿ, ಮತ್ತೆ ಅವನ ಒತ್ತಾಯದಿಂದ ಐಸ್‌ಕ್ರೀಮ್ ತಿಂದು ಮನೆಗೆ ಬರುವ ವೇಳೆಗೆ ರಾತ್ರಿ ಹನ್ನೊಂದಾಗಿತ್ತು.
ಮಲಗುವ ಮುನ್ನ ಅವಳ ಗಮನ ಅಲ್ಲಿಟ್ಟ ಕವರುಗಳತ್ತ ಹೋಯಿತು. ಅವು ಅವಳಿಟ್ಟ ಕ್ರಮದಲ್ಲಿ ಇರಲಿಲ್ಲ. ತಾನು ಮೇಲ್ಗಡೆ ಇಟ್ಟ ಪತ್ರ ಯಾವುದು ಎಂದು ಸ್ಪಷ್ಟವಾಗಿ ನೆನಪಿದ್ದರಿಂದ ಯಾರೋ ಅದನ್ನು ಎತ್ತಿ ನೋಡಿದ್ದಾರೆ ಅನ್ನುವುದು ಸ್ಪಷ್ಟವಾಯಿತು. ಅಷ್ಟೇ ಅಲ್ಲ, ಎರಡೂ ಪತ್ರಗಳನ್ನು ಎತ್ತಿ ನೋಡಿದ ನಂತರ, ಮತ್ತೆ ಇಟ್ಟ ಬಗೆಯಲ್ಲಿ ಒಂದು ರೀತಿಯ ಉದಾಸೀನ ಕಂಡಿತು. ಅವಳು ಒಂದರ ಅಂಚು ಇನ್ನೊಂದರ ಮೇಲೆ ಬರುವಂತೆ ನೇರವಾಗಿ ಇಟ್ಟಿದ್ದಳು. ಈಗ ಅವು ನಿರ್ಲಕ್ಷ್ಯದಿಂದ ಟೇಬಲ್ಲಿನ ಮೇಲೆ ವಾಪಸು ಎಸೆದಂತೆ ಕಂಡವು. ತಾನು ಬಟ್ಟೆ ಹಾಕಿಕೊಳ್ಳಲು ಹೋದಾಗ ಇದನ್ನು ಶಂಕರನೇ ತೆಗೆದು ನೋಡಿದ್ದಾನೆನ್ನುವುದರಲ್ಲಿ ಅವಳಿಗೆ ಯಾವ ಅನುಮಾನವೂ ಇರಲಿಲ್ಲ.
ಆ ಸಂಜೆಯಿಡೀ ಅವಳಿಗೆ ಯಾಕೋ ರಗಳೆಯಾಗುತ್ತಲೇ ಇತ್ತು. ಒಂದು ಹುಡುಗಿಯ ಜೊತೆ ಓಡಾಡುವುದೆಂದರೆ ಅವಳನ್ನು ಹೊಟೇಲಿಗೆ ಕರೆದೊಯ್ಯುವುದು, ಅವಳಿಗೆ ಐಸ್‌ಕ್ರೀಂ ತಿನ್ನಿಸುವುದು ಮುಂತಾದ ಟೀವಿಗಳಿಂದ ಪ್ರೇರಿತವಾದ ಮಧ್ಯಮವರ್ಗದ ಹಾದಿಯನ್ನೇ ಅವನು ಹಿಡಿದಿದ್ದರಿಂದ ಅವಳಿಗೆ ತನ್ನ ಬಗ್ಗೇ ತುಸು ನಾಚಿಕೆಯೂ ಆಗಿತ್ತು. ಮಧ್ಯಮವರ್ಗದ ಡೇಟಿಂಗ್ ಅಂದರೆ ಸ್ಟ್ಯಾಂಡರ್ಡ್ ಥಾಲಿ ಊಟದ ಹಾಗೆ ಎಂದು ಅವಳು ತಮಾಷೆ ಮಾಡುತ್ತಿದ್ದಳು. ಈ ಎಲ್ಲ ಕಿರಿಕಿರಿಯ ಜೊತೆ ಅವನು ತನ್ನ ಪತ್ರಗಳನ್ನು ಎತ್ತಿ ನೋಡಿದ್ದು ಸಿಟ್ಟು ಬರಿಸಿತು. ಆ ಕ್ಷಣದಲ್ಲಿ ಇದನ್ನು ರುಜುಪಡಿಸಿ ಇದೆಲ್ಲದರಿಂದ ಬಿಡುಗಡೆಯಾಗಬೇಕೆಂದು ಬಯಸಿದಳು. ಇಡೀ ರಾತ್ರಿ ಅದೇ ಯೋಚನೆ. ಅವನಿಗೆ ಇದನ್ನೆಲ್ಲ ಹೇಗೆ ಬಲವಾಗಿ ಹೇಳುವುದು ಎಂದು ಮನಸ್ಸಿನಲ್ಲೇ ಮಾತುಗಳನ್ನು ರೂಪಿಸಿಕೊಳ್ಳತೊಡಗಿದ ಹಾಗೆ, ತನ್ನ ಆಪಾದನೆಗೆ ಶಕ್ತಿಯಿಲ್ಲ ಅನ್ನುವುದು ಗೊತ್ತಾಗತೊಡಗಿತು: ಅವನು ಬರೀ ಅವುಗಳನ್ನು ಎತ್ತಿ ಇಟ್ಟಿರಬಹುದು; ಬಿಚ್ಚಿ ನೋಡಿಲ್ಲವಲ್ಲ. ರುಜುಪಡಿಸುವುದು ಏನನ್ನು ಅನ್ನುವುದೂ ಅವಳಿಗೆ ಹೊಳೆಯಲಿಲ್ಲ.
ಅಂದಿನಿಂದ ಅವನನ್ನು ಪರೀಕ್ಷಿಸಲು ನಾನಾ ಉಪಾಯಗಳನ್ನು ಹೂಡತೊಡಗಿದಳು. ಶಂಕರ ಬಂದಾಗಲೆಲ್ಲ ಅವನೊಬ್ಬನೇ ಕೋಣೆಯಲ್ಲಿರುವ ಪ್ರಸಂಗ ಸೃಷ್ಟಿಸಿ ಏನೇನನ್ನು ತೆಗೆದು ನೋಡುತ್ತಾನೆ ಎಂದು ಗಮನಿಸತೊಡಗಿದಳು. ಅಲ್ಲಿ ಟೇಬಲ್ಲಿನ ಮೇಲೆ ಒಂದು ಪತ್ರ ಇಡುವುದು, ಇಟ್ಟು ಅದರ ಮೇಲೆ ಒಂದು ಕಾಗದದ ಚೂರನ್ನು ಇಡುವುದು, ಅವನಿಗೆ ಏಕಾಂತವನ್ನು ಒದಗಿಸುವುದು ಮತ್ತು ಹಿಂದಿರುಗಿ ಬಂದ ಮೇಲೆ ಆ ಕಾಗದದ ಚೂರು ಇದ್ದಲ್ಲೇ ಇದೆಯೋ ಎಂದು ಪರೀಕ್ಷಿಸುವುದು. ಅದು ಇಲ್ಲದಿದ್ದರೆ ಅವನು ಅದನ್ನು ತೆಗೆದು ನೋಡಿದ್ದು ಖಂಡಿತ. ಅವನು ಆ ಬಗ್ಗೆ ಹೇಳದೇ ಇದ್ದರೆ ಆ ಪತ್ರದಲ್ಲಿರುವ ಸಂಗತಿಗಳ ಬಗ್ಗೆ ಸುತ್ತಿ ಬಳಸಿ ಮಾತಾಡುವುದು. ಅವನು ಮಾತಲ್ಲಿ ಮೈಮರೆತು ತನ್ನ ಗುಟ್ಟನ್ನು ಬಿಟ್ಟುಕೊಡುತ್ತಾನೋ ನೋಡುವುದು. ಬರುಬರುತ್ತ ಇದೆಲ್ಲ ಒಂದು ರೀತಿಯ ಆಟವಾಯಿತು. ದಿನವೂ ಒಂದೊಂದು ವ್ಯೂಹ ತಯಾರಾಗತೊಡಗಿತು. ಅವನು ಯಾವ ಗಡಿಯನ್ನು ದಾಟಿದಾಗ ಇದನ್ನೆಲ್ಲ ನಿಲ್ಲಿಸಬೇಕೆಂಬುದು ಅವಳಿಗೂ ಸ್ಪಷ್ಟವಾಗಿಲ್ಲದ್ದರಿಂದ ಮತ್ತು ದಿನೇ ದಿನೇ ಇಷ್ಟವಿರಲಿ ಇಲ್ಲದಿರಲಿ ಸಂಬಂಧ ಮುಂದುವರಿಸುವ ಸೂಚನೆ ಅವನು ಕೊಡುತ್ತಿದ್ದುದರಿಂದ ಇವಲ್ಲ ತನ್ನ ಕೈಮೀರುತ್ತಿದೆಯೆಂದು ಅವಳಿಗೆ ಅನಿಸತೊಡಗಿತು.
ಒಂದು ಸಂಗತಿ ಮಾತ್ರ ಸ್ಪಷ್ಟವಾಯಿತು. ಅವನು ತಾನಾಗಿಯೇ ಅವಳ ಕಪಾಟನ್ನೋ ಡ್ರಾಯರನ್ನೋ ತೆಗೆದು ನೋಡುತ್ತಿರಲಿಲ್ಲ. ಅವಳ ಮೇಲೆ ಗೂಢಚರ್ಯೆ ಮಾಡುತ್ತಿರಲಿಲ್ಲ. ಕಪಾಟಿನಲ್ಲಿ ಅವಳಿಟ್ಟ ಕಾಗದದ ಚೂರುಗಳು, ಕೂದಲ ಎಳೆಗಳು ದಿನಗಟ್ಟಳೆ ಇದ್ದ ಹಾಗೆಯೇ ಇರುತ್ತಿದ್ದವು. ಆದರೆ ಅಲ್ಲೇ ಎದುರಿಗೆ ಕೈಯಳತೆಯಲ್ಲಿರುವ ಎಲ್ಲವನ್ನೂ ತೆಗೆದು ನೋಡುತ್ತಿದ್ದ. ಆ ಬಗ್ಗೆ ಅವನಿಗೆ ಯಾವುದೇ ಸಂಕೋಚ ಇದ್ದ ಹಾಗಿರಲಿಲ್ಲ. ಟೀ ಕುಡಿಯುತ್ತ ಕೂತಾಗ ಅಲ್ಲಿ ಎದುರಿಗೆ ಅವಳ ಪರ್ಸು ಇದ್ದಲ್ಲಿ, ಅದರ ಜೊತೆ ಆಟ ಆಡುತ್ತ, ಅವಳು ಉಸಿರು ಬಿಗಿಹಿಡಿದು ನೋಡುತ್ತಿದ್ದ ಹಾಗೆ ಅದನ್ನು ತೆಗೆದು ಒಳಗೊಮ್ಮೆ ನೋಡಿಯೇಬಿಡುವನು. ಟೇಬಲ್ಲಿನ ಮೇಲಿಟ್ಟ ಚಿಕ್ಕಪುಟ್ಟ ಚೀಟಿಗಳನ್ನು ಎತ್ತಿ ನೋಡುವನು. ಚೀಟಿಯಲ್ಲಿರುವ ಫೋನ್ ನಂಬರು ಕುತೂಹಲ ಕೆರಳಿಸುವುದು. ಅದನ್ನು ನೋಡಿ ಏನೂ ಹೇಳದೇ ಹಾಗೇ ಮಡಚಿಡುವನು. ಅಲ್ಲಿ ಸಿಕ್ಕಿಸಿಟ್ಟ ಎಲೆಕ್ಟ್ರಿಸಿಟಿ ಬಿಲ್ಲನ್ನು ತಿರುಗಿಸಿ ನೋಡುವನು. ಅವನು ಮೊತ್ತ ಎಷ್ಟೆಂದು ನೋಡಿದನೆಂದು ಅವಳಿಗೆ ಭಾಸವಾಗುತ್ತಿತ್ತು. ಚಪ್ಪಲಿ ಹಾಕಿಕೊಳ್ಳುವಾಗ ಎದುರಿನ ಟೇಬಲ್ಲಿನ ಮೇಲೊಂದು ಮದುವೆಯ ಆಮಂತ್ರಣ ಪತ್ರಿಕೆ ಇದ್ದಲ್ಲಿ ಅದನ್ನು ತೆರೆದು ನೋಡುವನು. ಯಾರಿಗೆ ಮದುವೆ ಎಂದು ತನಗೆ ಸಂಬಂಧವಿಲ್ಲದಿದ್ದರೂ ಕೇಳುವನು. ಯಾವ ದುರುದ್ದೇಶವೂ ಇಲ್ಲದ ಅವನ ಸರಳ ಪ್ರಶ್ನೆಗೆ ಉತ್ತರಿಸದೇ ಇರುವುದು ಅವಳಿಗೆ ಕಷ್ಟವಾಗುತ್ತಿತ್ತು.


ಯಾಕೆ ಈ ಸಂಬಂಧವನ್ನು ಮೊಳಕೆಯಲ್ಲೇ ತುಂಡರಿಸಲಿಲ್ಲ ಎಂಬ ಯೋಚನೆ ಬಂದಾಗಲೆಲ್ಲ ಸ್ವಾತಿಗೆ ಬೇರೆ ಬೇರೆ ಉತ್ತರಗಳು ಸಿಕ್ಕಿವೆ. ಸ್ವಾತಿಯ ಅಮ್ಮ ನಿರುಪಮಾ ಹೋಗುವ ನೃತ್ಯ ಶಾಲೆಗೆ ಶಂಕರನ ಅಮ್ಮನೂ ಹೋಗುತ್ತಾಳೆ. ದೂರದ ಪರಿಚಯ ಅಷ್ಟಕ್ಕೇ ಉಳಿಯಬಹುದಿತ್ತು. ಬೆಂಗಳೂರಿಗೆ ಬರದೇ ಇಬ್ಬರೂ ಹೈದರಾಬಾದಿನಲ್ಲೇ ಇದ್ದಿದ್ದರೆ ಅದು ದೂರದ ಪರಿಚಯವಾಗೇ ಇರುತ್ತಿತ್ತು. ಮೊದಮೊದಲು ಅವನ ಮುಗ್ಧತೆ ಖುಷಿಕೊಡುತ್ತಿತ್ತು. ಕೈ ಹಿಡಿದಾಗ ಕಂಪಿಸಿದ್ದನಲ್ಲ.
ಇಬ್ಬರೂ ನಾಟಕಕ್ಕೆ ಹೋಗಿದ್ದರು. ನಡುವೆ ಅವಳೇ ಮುಂದಾಗಿ ಅವನ ಕೈ ಹಿಡಿದಳು. ಬೆರಳುಗಳನ್ನು ಹೆಣೆದು ಮೃದುವಾಗಿ ಅಮುಕಿದಳು. ಅವನು ಕಂಪಿಸಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಮೊದಲ ಮುತ್ತಿಗೆ ಅವನು ಇಡೀ ದಿನ ಅಮಲೇರಿ ಕುಳಿತಿದ್ದ.
ಮುಂದೆ ಮುಗ್ಧತೆ ಭೋಳೆತನವೆಂದು ಅನಿಸಲಿಕ್ಕೆ ಶುರುವಾಯಿತು. ಅವನಿಗೆ ತನ್ನ ಬಗ್ಗೆ ಏನು ಭಾವನೆಗಳು ಹುಟ್ಟತೊಡಗಿವೆ ಎಂದು ಅವಳಿಗೆ ಗೊತ್ತಿಲ್ಲದಿರಲಿಲ್ಲ. ತನ್ನ ಮಾತುಗಳಲ್ಲಿ ಅವನು ಅದನ್ನು ಇಡುತ್ತ ಹೋದ ಹಾಗೆ ಅವಳಿಗೆ ಒಳಗೊಳಗೇ ಭಯವಾಗತೊಡಗಿತು. ತನ್ನ ಭೋಳೆತನದಲ್ಲಿ ಅವಳನ್ನು ಕಟ್ಟಿಹಾಕುತ್ತ ಹೋದ. ತಾನು ಅವನಿಂದ ಕಿತ್ತುಕೊಂಡು ಹೋದರೆ ಅವನಿಗೆ ಆಗುವ ಆಘಾತವನ್ನು ನೆನೆದು ನಿಷ್ಪಾಪಿಯನ್ನು ನೋಯಿಸಿದೆನೆನ್ನುವ ಪಾಪಪ್ರಜ್ಞೆಯಿಂದ ಬಿಡಿಸಿಕೊಳ್ಳಲಾರದೇ ಒದ್ದಾಡಿದಳು. ಮಾತೆತ್ತಿದರೆ ಪ್ರೀತಿ ಪ್ರೇಮ, ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದೆಲ್ಲ ಅನ್ನುತ್ತಿದ್ದ ಅವನಿಂದ ದೂರವಾಗಲು ಆಫೀಸಿನ ಸಹೋದ್ಯೋಗಿ ಸಲೀಮನ ಜೊತೆ ಸಲಿಗೆ ತೋರಿಸಿದಳು. ನಿನ್ನ ಬಗ್ಗೆ ಪೂರ್ತಿ ವಿಸ್ವಾಸವಿದೆ ಎಂದು ಹೇಳಿ ಶಂಕರ ಅವಳನ್ನು ಇನ್ನಷ್ಟು ಕಂಗೆಡಿಸಿದ್ದ. ತಾನು ಏನು ಮಾಡಿದರೂ ಸಹಿಸಿಕೊಳ್ಳುವ ಅವನ ಸಹನೆಯೇ ಅಸಹನೀಯವಾಗತೊಡಗಿತು. ಪ್ರೀತಿ ಪ್ರೀತಿ ಅನ್ನುತ್ತ ಅವನು ಏನನ್ನಾದರೂ ಸಹಿಸಲು ತಯಾರಾಗಿದ್ದ. ಪಾಪಪ್ರಜ್ಞೆಯ ಹುಟ್ಟೇ ತನ್ನ ಸ್ವಾತಂತ್ರ್ಯಕ್ಕೆ ಮಾರಕ ಎಂದು ಅವಳಿಗೆ ತಿಳಿಯತೊಡಗಿತ್ತು. ಯಾವುದನ್ನು ಉಲ್ಲಂಘಿಸುತ್ತ ಇರುವುದರಿಂದ ತನ್ನ ಸ್ವಾತಂತ್ರ್ಯದ ಬಗ್ಗೆ ತನಗೆ ವಿಶ್ವಾಸ ಇರುತ್ತದೆ ಎಂದು ಅವಳಿಗೂ ಸ್ಪಷ್ಟವಾಗಿ ಗೊತ್ತಿರಲಿಲ್ಲ.
ಹೇಳಬಹುದಾಗಿದ್ದ ಮಾತುಗಳಲ್ಲಿ ಮತ್ತೆ ಮತ್ತೆ ಎಲ್ಲವನ್ನೂ ಎಷ್ಟೊಂದು ಬಾರಿ ಮನಸ್ಸಲ್ಲೇ ಮರುಕಳಿಸಿಕೊಂಡಿದ್ದಳು. ಒಮ್ಮೆ ಮಾತಿನ ನಡುವೆ ಅವನು ‘ಮದುವೆಯಾಗುವವರ ನಡುವೆ ಯಾವುದೇ ಗುಟ್ಟುಗಳಿರಬಾರದು’ ಎಂದು ಹೇಳಿದ್ದಕ್ಕೆ ಕೆಂಡವಾಗಿದ್ದಳು. ದೇಹವನ್ನು ಹಂಚಿಕೊಂಡ ಮೇಲೆ ಎಲ್ಲ ಮುಗಿಯಿತು ಎಂಬ ಅವನ ನಿಲುವು, ಬಾಯಿಬಿಟ್ಟು ಹೇಳದಿದ್ದರೂ ಅವಳಿಗೆ ಗೊತ್ತಾಗಿತ್ತು. ‘ನಿನ್ನ ಜೊತೆ ಮಲಗಿದ್ದರಿಂದ ನನ್ನ ಎಲ್ಲ ಗುಟ್ಟುಗಳೂ ತಿಳಿಯಿತೆಂದು ಭಾವಿಸಬೇಡ’ ಎಂಬ ಮಾತಿನಿಂದ ಅವನು ತುಸು ವಿಚಲಿತನಾಗಿದ್ದ. ದೈಹಿಕ ಮಿಲನ ಗಂಡು ಹೆಣ್ಣಿನ ಸಂಬಂಧದ ತುರಿಯಾವಸ್ಥೆಯನ್ನು ಸೂಚಿಸುತ್ತದೆಂಬ ಅವನ ನಂಬಿಕೆಯನ್ನು ಸಡಿಲಿಸುವುದು ಹೇಗೆಂದು ಗೊತ್ತಾಗಲಿಲ್ಲ.
‘ಸಣ್ಣ ಸಣ್ಣ ಸಂಗತಿಗಳಲ್ಲೇ, ಆ ರಹಸ್ಯಗಳಲ್ಲೇ ವ್ಯಕ್ತಿತ್ವದ ಆಕರ್ಷಣೆಯಿರುವುದು. ಅವುಗಳನ್ನು ವಿನಾಕಾರಣ ಬಿಚ್ಚಲು ಹೋಗಬಾರದು. ಇವೇ ಪರಸ್ಪರರ ನಡುವಿನ ಸ್ಪೂರ್ತಿಯ ಚಿಲುಮೆಗಳು. ಅವುಗಳನ್ನು ಬತ್ತಿಸಬಾರದು. ದಂಡಯಾತ್ರೆ ಹೋಗಿ ಗೆದ್ದೊಡನೆ ಹುಟ್ಟುವ ಶೂನ್ಯವೇ ಇಲ್ಲೂ ಹುಟ್ಟುತ್ತದೆ. ಇದೆಲ್ಲವೂ ಘನತೆಯನ್ನು ಕಾಪಾಡಿಕೊಳ್ಳಲು ಅಗತ್ಯವಾದ ಅವಕಾಶಗಳು. ರೋಗಿಗೆ ಹಾಸಿಗೆಯಲ್ಲೇ ಎಲ್ಲ ಆಗಬೇಕಾದಾಗಲೂ ಸುತ್ತಲಿನ ಜನ ಅದನ್ನೇ ಮಾತಾಡಿಕೊಂಡಿರಬಾರದು. ರೋಗಿಯ ಘನತೆಗೆ ಅಗತ್ಯವಾದ ಅವಕಾಶವನ್ನು ಮೌನದಲ್ಲಿ ಒದಗಿಸಿಕೊಡಬೇಕು.’ ಇದೆಲ್ಲವೂ ಅವಳ ಮನಸ್ಸಲ್ಲಿ ಹುಟ್ಟುತ್ತಿತು. ಅವಳ ಅಮ್ಮ ಅವಳ ಅಜ್ಜಿಯನ್ನು ಕೊನೆಗಾಲದಲ್ಲಿ ನೋಡಿಕೊಂಡ ಬಗೆಯನ್ನು ಹೇಳಬೇಕೆಂದುಕೊಂಡಿದ್ದಳು. ಆದರೆ ಹೇಳಿರಲಿಲ್ಲ.


ಟೀ ಕಪ್ಪು ಕೈಯಲ್ಲಿ ಹಿಡಿದು ಸ್ವಾತಿ ಬೆಡ್‌ರೂಮಿಗೆ ಹೋಗಿ ಹಾಸಿಗೆಯ ಮೇಲೆ ಕಾಲು ಚಾಚಿ ಕೂತಳು. ಶಂಕರ ಹಾಸಿಗೆಯ ಪಕ್ಕದ ಕುರ್ಚಿಯ ಮೇಲೆ ಕೂತ.
‘ಬೇಕಾದರೆ ಯಾವುದಾದರೂ ಒಂದು ಸಿನೇಮಾ ನೋಡಬಹುದು’ ಅಂದ.
‘ಈ ವಾತಾವರಣದಲ್ಲಿ ಹೊರಗೆ ಹೋಗುವುದೇ ಬೇಡ ಅನಿಸುತ್ತಿದೆ. ಮತ್ತೆ ಮಳೆ ಬಂದರೂ ಬರಬಹುದು’ ಅಂದಳು.
ಅಲ್ಲೇ ಪಕ್ಕದ ಟೇಬಲ್ಲಿನ ಮೇಲೆ ಅವಳ ಪುಟ್ಟ ಟೇಪ್‌ರೆಕಾರ್ಡರ್ ಇತ್ತು. ಮಾತಾಡುತ್ತ ಕೂತ ಅವನ ಚಾಚಿದ ಕೈ ಟೇಪ್‌ರೆಕಾರ್ಡರನ್ನು ನಿರುದ್ದಿಶ್ಯವಾಗಿ ಸವರುತ್ತಿತ್ತು. ಅವನ ಬೆರಳುಗಳು ಅದರ ಗುಂಡಿಗಳ ಮೇಲೆ ತುಸು ಕಾಲ ನಿಂತವು. ಅವನು ಮುಂದೆ ಬಗ್ಗಿದ ಮತ್ತು ಒಳಗೆ ಕ್ಯಾಸೆಟ್ ಇರುವುದನ್ನು ಗಮನಿಸಿ ಅದರ ಪ್ಲೇ ಬಟನ್ನನ್ನು ಒತ್ತಿಬಿಟ್ಟ. ಒಮ್ಮೆಲೇ ದೊಡ್ಡ ದನಿಯೊಡನೆ ಒಂದು ಭಜನೆ ಶುರುವಾಯಿತು. ಅದೊಂದು ಭಾವುಕ ಪ್ರಾರ್ಥನೆ. ಅವಳ ಬಾಲ್ಯದಲ್ಲಿ ಅಜ್ಜಿ ಹೇಳುತ್ತಿದ್ದ ಒಂದು ಮರಾಠಿ ಭಜನೆ. ಒಂದು ವರ್ಷದ ಹಿಂದೆ ಅದೊಂದು ಕ್ಯಾಸೆಟ್‌ನಲ್ಲಿ ಸಿಗುವುದು ಗೊತ್ತಾಗಿ ತರಿಸಿಕೊಂಡಿದ್ದಳು. ಕೆಲವೊಮ್ಮೆ ಮಲಗುವಾಗ ಅದನ್ನು ಕೇಳಿಸಿಕೊಳ್ಳುವುದು ಅವಳಿಗೆ ವಿಚಿತ್ರವಾದ ಸಮಾಧಾನ ಕೊಡುತ್ತಿತ್ತು. ಇದು ಅವಳೊಬ್ಬಳಿಗೇ ಗೊತ್ತಿರುವ, ಅವಳು ಮತು ಅಜ್ಜಿಯ ಮಧ್ಯೆ ಇದ್ದ ಸಂಬಂಧದ ಒಂದು ಭಾಗವಾಗಿತ್ತು. ಹಿಂದಿನ ರಾತ್ರಿ ಅದನ್ನು ಕೇಳಿಸಿಕೊಳ್ಳುವಾಗ, ನಡುವೆ ನಿದ್ದೆ ಒತ್ತಿ ಬಂದಿದ್ದರಿಂದ ಅರ್ಧದಲ್ಲೇ ನಿಲ್ಲಿಸಿದ್ದಳು. ಈಗ ಅನಿರೀಕ್ಷಿತವಾಗಿ ಆ ಹಾಡು ಬರತೊಡಗಿದೊಡನೆ ಅವಳಿಗೆ ಕಸಿವಿಸಿಯಾಯಿತು. ಅದಕ್ಕೆ ಸರಿಯಾಗಿ ಶಂಕರನೂ ‘ಇದನ್ನೆಲ್ಲ ಕೇಳಿಸಿಕೊಳ್ಳುತ್ತೀಯೇನು?’ ಎಂದು ಒಂದು ರೀತಿಯ ದನಿಯಲ್ಲಿ ಕೇಳಿದಾಗ ರೇಗಿಹೋಯಿತು. ಧಡಕ್ಕನೆದ್ದು ಆರಿಸಿಬಿಟ್ಟಳು. ಮರಾಠಿಯ ಗಂಧಗಾಳಿಯಿಲ್ಲದ ಅವನಿಗೆ ಆ ಹಾಡು ಹೇಗೆ ಕೇಳಿಸಿರಬಹುದೆಂದು ಊಹಿಸಿದಳು. ಇದನ್ನು ತಾನು ಕೇಳಿಸಿಕೊಳ್ಳುವುದಕ್ಕೂ, ಸಂಗೀತದ ಬಗ್ಗೆ ತನಗೆ ಇರುವ ರುಚಿ ಮತ್ತು ಅಭಿಪ್ರಾಯಕ್ಕೂ ಇರುವ ಸಂಬಂಧ ಅವನಿಗೆ ಅರ್ಥವಾಗುವಂಥದ್ದಲ್ಲ ಎಂದು ಹೇಳಬೇಕೆಂದು ಬಯಸಿದಳು. ಈ ಹಾಡನ್ನು ತಾನು ಕೇಳುತ್ತ ಮಲಗುವುದು ಒಂದು ಅತ್ಯಂತ ವೈಯಕ್ತಿಕ ಕ್ರಿಯೆ ಅನ್ನಿಸಿ, ತನ್ನ ರಹಸ್ಯವೊಂದನ್ನು ಅವನು ಒಡೆದುಬಿಟ್ಟ ಅನಿಸಿ, ತನ್ನ ಮತ್ತು ಅಜ್ಜಿಯ ಸಂಬಂಧದ ನಡುವೆ ತಲೆತೂರಿಸುತ್ತಾನೆ ಅನಿಸಿ ಒಮ್ಮೆಲೇ ರೇಗಿಬಿಟ್ಟಳು.
‘ಅದನ್ನು ಹಾಕಬೇಡ ಶಂಕರ್…. ನೀನು ಹೀಗೆಲ್ಲ ಮಾಡಬಾರದು…. ನನ್ನ ಸ್ವಂತ ವಿಷಯದಲ್ಲಿ ಕೈ ಹಾಕಬಾರದು….’ ಎಂದುಬಿಟ್ಟಳು. ಅವಳು ಆಡಿದ ಮಾತುಗಳಿಗಿಂತ ಅವಳ ದನಿಯಲ್ಲಿದ್ದ ಕಠೋರತೆಗೆ, ಸಟ್ಟನೆ ಎದ್ದು, ತನ್ನ ಟೀ ಕಪ್ಪನ್ನು ಅಲ್ಲೇ ಹಾಸಿಗೆಯ ಮೇಲೆ ಇಟ್ಟು, ಅವನನ್ನು ದಾಟಿ ಟೇಪ್‌ರೆಕಾರ್ಡರಿನ ಗುಂಡಿಯೊತ್ತಿ ನಿಲ್ಲಿಸಿದ ರಭಸಕ್ಕೆ ಶಂಕರ ತಬ್ಬಿಬ್ಬಾದ. ಅವಳು ಹತ್ತಿರದಿಂದ ಹಾದು ಹೋದಾಗ ಅವಳಿಂದ ಹೊಮ್ಮಿದ ಅವಳಿಗೇ ವಿಶಿಷ್ಟವಾದ ಮೈಗಂಧ ಅವನನ್ನು ಮೃದುಗೊಳಿಸಿತು. ಆದರೆ ಅದಕ್ಕೂ, ಅವಳು ತೋರಿಸಿದ ಕಾಠಿಣ್ಯಕ್ಕೂ ಸಂಬಂಧ ಇಲ್ಲದ ಹಾಗೆ ಅನಿಸಿತು.
ತಾನು ತೋರಿಸಿಕೊಳ್ಳಬೇಕಾಗಿ ಬಂದ ಭಾವವಿಕಾರದಿಂದ ಪೆಚ್ಚಾದಳು. ಅವಳು ಟೀ ಕಪ್ಪನ್ನು ಹಾಸಿಗೆಯ ಮೇಲಿನಿಂದ ಎತ್ತುತ್ತಿದ್ದ ಹಾಗೆ, ಬೆಡ್‌ಶೀಟ್ ಮೇಲೆ ಕಂಡ ವೃತ್ತಾಕಾರದ ಟೀ ಗುರುತು ಅವಳನ್ನು ಇನ್ನಷ್ಟು ರೇಗಿಸಿತು.
‘ಹೋಗಲಿ ಬಿಡು….ನಿನಗೆ ಇಷ್ಟವಿಲ್ಲದಿದ್ದರೆ ನಾನೇ ಆರಿಸುತ್ತಿದ್ದೆನಲ್ಲ’ ಎಂದು ಅವನು ಹೇಳಿದ್ದೇ ಅವಳ ತಾಳ್ಮೆ ತಪ್ಪಿತು.
‘ನಿನಗೆ ಅರ್ಥವಾಗುವುದಿಲ್ಲ…. ಇದು ಬರೀ ಇದೊಂದೇ ಅಲ್ಲ….ಟೇಪ್‌ರೆಕಾರ್ಡರ್ ಆರಿಸುವ ಸಂಗತಿ ಮಾತ್ರ ಅಲ್ಲ….ನನ್ನ ವೈಯಕ್ತಿಕತೆಯ ಬಗ್ಗೆ, ಆ ಸ್ವಾತಂತ್ರ್ಯದ ಬಗ್ಗೆ ನಿನಗೆ ಗೌರವವೇ ಇಲ್ಲ….’ ಎಂದು ಹೇಳಹೊರಟವಳು ಬರೀ ಮಾತಿನ ಮೂಲಕ ಅವನನ್ನು ಮುಟ್ಟಲು ಸಾಧ್ಯವಿಲ್ಲ ಅನಿಸಿ ಸುಮ್ಮನಾದಳು.
‘ನಿನಗೆ ಏನು ಬೇಕೋ ಅದನ್ನು ಮಾಡುವಾ….ಜೊತೆಗಿರುವಾಗ ನಿನಗೆ ಹಾಡು ಹಾಕಬಾರದು ಅಂತಿದ್ದರೆ ನನ್ನ ಅಭ್ಯಂತರವೇನೂ ಇಲ್ಲ…. ಏನೂ ಬೇಡ ಅಂದರೆ ಸುಮ್ಮನೇ ಕೂತಿರುತ್ತೇನೆ….’ ಎಂದು ಅವನು ಶಾಂತವಾಗಿ ಹೇಳಿದ್ದು ಇನ್ನಷ್ಟು ಕೆಣಕಿತು.
ಇದಾವುದೂ ಅವನನ್ನು ತಲುಪುತ್ತಿಲ್ಲ ಅನ್ನುವುದು ಸ್ಪಷ್ಟವಾಯಿತು. ಅವನಿಗೆ ಸಿಟ್ಟೂ ಬಂದಿಲ್ಲವೇ ಎಂದು ಸ್ವಾತಿಗೆ ಅನುಮಾನವಾಯಿತು. ಅವನಿಗೆ ಸಿಟ್ಟು ತರಿಸುವ ಸಂಗತಿಗಳೇ ಬೇರೆಯಾಗಿದ್ದವು: ಅವಳು ಹೊತ್ತಿಗೆ ಸರಿಯಾಗಿ ತಯಾರಾಗಿ ಹೊರಡದೇ ಇದ್ದರೆ, ಏನನ್ನೋ ಮರೆತು ಮತ್ತೆ ಹಿಂದಿರುಗಿದರೆ ಸಿಟ್ಟು ಮಾಡಿಕೊಳ್ಳುತ್ತಿದ್ದ. ಅದೂ ನಿಜವಾದ ಸಿಟ್ಟೋ ಕರಕರೆಯೋ ಅವಳಿಗೆ ಗೊತ್ತಾಗುತ್ತಿರಲಿಲ್ಲ. ಅವನಿಗೆ ನಿಜವಾಗಿ ಸಿಟ್ಟು ಬರಬೇಕು, ಅವನು ಸ್ಫೋಟಿಸಬೇಕು ಎಂದು ಬಯಸಿದಳು.
‘ನಿಜವಾಗಿಯೂ ನಾನು ಹೇಳಿದ ಹಾಗೆ ಮಾಡುತ್ತೀಯೇನು?’
‘ನಿನ್ನಾಣೆ’
‘ಹಾಗಾದರೆ ಇನ್ನು ನನ್ನನ್ನು ನೋಡಲು ಬರಬೇಡ. ನಾನಿದನ್ನು ಗಂಭೀರವಾಗಿ ಹೇಳುತ್ತಿದ್ದೇನೆ. ಈ ಕ್ಷಣದ ಸಿಟ್ಟಿನಿಂದ ಅಲ್ಲ. ನನಗೆ ಯಾವ ಪ್ರಶ್ನೆಗಳನ್ನೊಪೊ ಕೇಳಬೇಡ. ಈಗಲೇ ಹೋಗು. ಎಷ್ಟೋ ದಿವಸಗಳಿಂದ ಹೇಳಬೇಕೆಂದುದನು ಈಗ ಹೇಳುತ್ತಿದ್ದೇನೆ.’
ತನ್ನ ಮಾತಿನ ಶಕ್ತಿಯಿಂದ ಅವಳೇ ಕಂಗೆಟ್ಟಳು. ಅವನನ್ನು ನೋಡಲಾಗದೇ ಕಿಟಕಿಯಾಚೆ ನೋಡಿದಳು. ಕೈಯಲ್ಲಿದ್ದ ಟೀ ಕಪ್ಪನ್ನು ಟೇಬಲ್ಲಿನ ಮೇಲಿಟ್ಟು ಅವನು ಮಾತಾಡದೇ ಎದ್ದು ಹೋದ. ಬಾಗಿಲು ತೆರೆದ ಸದ್ದು, ಮತ್ತೆ ಮುಚ್ಚಿದ ಸದ್ದು ಕೇಳಿಸಿತು.

ಪರಕಾಯ

ಎದ್ದು ನಿಂತು ಕಶ್ಯಪ್ ನಾಟಕೀಯವಾಗಿ ತನ್ನನ್ನು ಪರಿಚಯಿಸಿಕೊಂಡ.
‘ನಾನು ಎಂ.ಆರ್.ಕಶ್ಯಪ್…. ಕೀಟಶಾಸ್ತ್ರಜ್ಞ….. ಪಶ್ಚಿಮ ಘಟ್ಟಗಳ ಅಧ್ಯಯನಕ್ಕೆಂದು ಇಲ್ಲಿಗೆ ಎರಡು ವರ್ಷಗಳ ಸಲುವಾಗಿ ಬಂದಿದ್ದೇನೆ. ನಾನು ಮಾಡುತ್ತಿರುವ ಕೆಲಸ ವಿಶೇಷವಾಗಿ ಚಿಟ್ಟೆಗಳಿಗೆ ಸಂಬಂಧಿಸಿದ್ದು. ಚಿಟ್ಟೆಗಳನ್ನು ಅಧ್ಯಯನ ಮಾಡುವ ಮೂಲಕ ಇಡೀ ಪಶ್ಚಿಮ ಘಟ್ಟಗಳ ಪರಿಸರದ ಬಗ್ಗೆ ಒಳನೋಟಗಳನ್ನು ಪಡೆಯಬಹುದು. ಈಗಿನ ನನ್ನ ಪ್ರಯತ್ನವೂ ಅದೇ.’ ಅವನು ಮಾತಾಡಿದಾಗ ತನ್ನ ಮಾತಿಗೆ ವಿದೇಶಿ ಧಾಟಿ ಬರದ ಹಾಗೆ ಮಾಡಲು ಪ್ರಯತ್ನ ಪಡುತ್ತಿದ್ದಂತೆ ಅನಿಸುತ್ತಿತ್ತು.
ಸಂಜೆಯ ಕತ್ತಲು ನಿಧಾನವಾಗಿ ಗಾಢವಾಗುತ್ತಿತ್ತು. ಆಗಾಗ ಬೀಸುವ ಗಾಳಿಯಿಂದಾಗಿ ತುಸು ಚಳಿಯಾಗುತ್ತಿತ್ತು. ಭಾರತೀಯ ವಾಸ್ತುಶಿಲ್ಪಗಳಲ್ಲಿ ಹೊಸಾಹತುಶಾಹಿಯ ಪ್ರಭಾವದ ಬಗ್ಗೆ ವಾಸವನ್ ವ್ಯವಸ್ಥೆ ಮಾಡಿದ್ದ ಮಾತುಕತೆ ಮತ್ತು ಚರ್ಚೆಯಲ್ಲಿ ಭಾಗವಹಿಸಿ ಅದರ ನಂತರ ಎಂದಿನಂತೆ ಕ್ಲಬ್ಬೊಂದರಲ್ಲಿ ಎಲ್ಲರೂ ಸೇರಿದ್ದರು. ವಾಸ್ತುಶಿಲ್ಪಿಗಳೇ ಸೇರಿ ಮಾಡಿಕೊಂಡ ಈ ಸಂಘಟನೆಯ ಚರ್ಚೆಯ ವಸ್ತುಗಳು ಹೇಗಿರುತ್ತಿದ್ದವೆಂದರೆ, ಬರೀ ಅವರೇ ಸೇರಿದರೆ ಸಭೆ ಹತ್ತು ನಿಮಿಷಗಳಲ್ಲಿ ಮುಗಿದು ಹೋಗುತ್ತಿತ್ತು. ಹಾಗಾಗಿ ಬೇರೆ ಕ್ಷೇತ್ರಗಳಲ್ಲಿದ್ದು ಭಿನ್ನವಾಗಿ ಯೋಚಿಸುವ ಜನರನ್ನು ಅವರು ಸದಾ ಸ್ವಾಗತಿಸುತ್ತಿದ್ದರು. ಮನೋಹರ ಅಲ್ಲಿ ಹೋಗಲು ಅವನ ಸ್ನೇಹಿತ ಮತ್ತು ಅದರ ಸಂಚಾಲಕರಲ್ಲೊಬ್ಬನಾದ ವಾಸವನ್ ಕಾರಣನಾಗಿದ್ದ. ಮನೋಹರ ಈ ವೇದಿಕೆಯನ್ನು ಪಾಪಪ್ರಜ್ಞಾಹರಣ ಮೇಳ ಎಂದು ತಮಾಷೆ ಮಾಡುತ್ತಿದ್ದ. ಸಂಸ್ಕೃತಿ ಮತ್ತು ಪರಂಪರೆಯ ಅರಿವಿಲ್ಲದೇ, ಬರೀ ತಾಂತ್ರಿಕ ಜ್ಞಾನ ಮಾತ್ರ ಇರುವ ವಾಸ್ತುಶಿಲ್ಪಿಗಳು ಈ ದೇಶದ ಸೌಂದರ್ಯವನ್ನು ಹೊಲಸೆಬ್ಬಿಸಿ, ಆ ಪಾಪವನ್ನು ಬೌದ್ಧಿಕ ಕಸರತ್ತಿನಿಂದಾದರೂ ತೊಳಕೊಳ್ಳಲು ಹವಣಿಸುತ್ತೀರೆಂದು ತಮಾಷೆ ಮಾಡುತ್ತಿದ್ದ. ಅಷ್ಟೇ ಅಲ್ಲ, ಉಳಿದ ಕ್ಷೇತ್ರಗಳಲ್ಲಿರುವ ಇಂಥ ಜನರೇ ನಿಮ್ಮ ಸಂಘಟನೆಗೂ ಬರುವರೆಂದು ಅವನು ಅಗಾಗ ಗಂಭೀರವಾಗಿ ರೇಗಿಸಿ ವಾಸವನ್‌ಗೂ ಇದು ನಿಜವೇನೋ ಎಂಬ ಅನುಮಾನ ಬರುವ ಹಾಗೆ ಆಗಿತ್ತು.
ಕ್ಲಬ್ಬಿನ ಹೊರಗೆ ಗಾರ್ಡನ್ನಿನಲ್ಲಿ ಕೂರಲು ವ್ಯವಸ್ಥೆ ಮಾಡಲಾಗಿತ್ತು. ಆವತ್ತಿನ ಸಭೆಗೆ ಬಂದ ಸುಮಾರು ಐವತ್ತು ಜನರಲ್ಲಿ ಸಭೆ ಮುಗಿದ ನಂತರ, ಹೋಗುವವರು ಹೋದ ಮೇಲೆ ಉಳಿದ ಇಪ್ಪತ್ತೆರಡು ಜನ ಇಲ್ಲಿ ಸೇರಿದ್ದರು. ಕ್ಲಬ್ಬಿನ ಹಿಂಭಾಗದಲ್ಲಿದ್ದ ಹುಲ್ಲು ಹಾಸಿನ ಮೇಲೆ ಮೇಜುಗಳನ್ನು ಸಾಲಾಗಿ ಜೋಡಿಸಿದ್ದರು. ಸುತ್ತಲೂ ಎತ್ತರದ ಮರಗಳಿದ್ದವು. ಇನ್ನೊಂದು ಭಾಗದಲ್ಲಿರುವ ಈಜುಕೊಳದ ಅರ್ಧ ಭಾಗ ಇಲ್ಲಿಂದ ಕಾಣುತ್ತಿತ್ತು. ಎಲೆಗಳ ಎಡೆಯಿಂದ ಬೀಸುವ ಗಾಳಿ ಸುಂಯ್ಯಸುಂಯ್ಯನೆ ಸದ್ದು ಮಾಡುತ್ತಿತ್ತು. ಚಳಿಗೆ ಒಣಗಿ ಉದುರಿದ ಎಲೆಗಳು ಸುತ್ತಲೂ ಹರಡಿದ್ದವು. ತಿಳಿ ಹಸಿರು ಬಣ್ಣದ ಕುರ್ಚಿಗಳನ್ನು ಟೇಬಲ್ಲುಗಳ ಸುತ್ತ ಜೋಡಿಸಿದ್ದರು.
ಆವತ್ತಿನ ಸಭೆಗೆ ಟೈ ಮತ್ತು ಕೋಟು ಹಾಕಿಕೊಂಡು ಬಂದ ಕಶ್ಯಪ್ ತನ್ನ ಭಿನ್ನವಾದ ವೇಷಭೂಷಣಗಳಿಂದಲೇ ಎಲ್ಲರ ಗಮನ ಸೆಳೆದಿದ್ದ. ಆ ಗುಂಪಿಗೆ ಅವನು ಅಪರಿಚಿತ. ಅವನು ಯಾರ ಅತಿಥಿ ಅಥವಾ ಗೆಳೆಯನಾಗಿ ಈ ಸಭೆಗೆ ಬಂದ ಎಂದು ಅನೇಕರಿಗೆ ಸರಿಯಾಗಿ ಗೊತ್ತಿರಲಿಲ್ಲ. ಆದರೆ ಅವನ ಮಾತಿನಿಂದ ಎಲ್ಲರೂ ಪ್ರಭಾವಿತರಾಗಿದ್ದರು. ಗ್ರೀಕ್ ಕಲಾಪ್ರಜ್ಞೆಯಿಂದ ಹಿಡಿದು ಈವತ್ತಿನ ಭಾರತೀಯ ವಾಸ್ಥುಶಿಲ್ಪದವರೆಗೆ ಅವನು ಮಾತಾಡುವ ರೀತಿಗೆ ಬೆರಗಾಗಿದ್ದರು. ತಾನು ಮಾತಾಡುವ ವಿಷಯ ಅಲ್ಲಿ ಸೇರಿದವರಿಗೆ ಹೊಸದಲ್ಲವೆಂಬ ರೀತಿಯಲ್ಲಿ ಅವನು ವ್ಯವಹರಿಸುತ್ತಿದ್ದುದು ಎಲ್ಲರಿಗೆ ಇಷ್ಟವಾಯಿತು.
ಕಶ್ಯಪ್ ತನ್ನ ಪಕ್ಕದ ವ್ಯಕ್ತಿಯ ಜೊತೆ ಕೆರೆಗಳನ್ನು ಹೇಗೆ ಉಳಿಸಬೇಕೆಂಬ ಬಗ್ಗೆ ಗಂಭೀರವಾಗಿ ವಿವರಣೆ ಕೊಡುತ್ತಲಿದ್ದ. ಪ್ರತಿಯಬ್ಬರ ಬಳಿ ಬಂದ ವೇಟರ್‌ಗೆ ತಮಗೆ ಬೇಕಾದ ಡ್ರಿಂಕ್ ಹೇಳಿದ ನಂತರ ಎಲ್ಲರೂ ತುಸು ಹಗುರಾದರು. ಕುರ್ಚಿಯಲ್ಲಿ ಒರಗಿ ಮೈ ಸಡಿಲಿಸಿದರು.
ಅವನ ಪರಿಚಯದ ಅಗತ್ಯ ಇರದ ಹಾಗೆ ಅವನ ಬಗ್ಗೆ ಆಗಲೇ ಸಾಕಷ್ಟು ವಿವರಗಳು ಟೇಬಲ್ಲಿನ ಸುತ್ತ ಹರಡತೊಡಗಿದ್ದವು. ಅವನು ಸಭೆಗೆ ಬರಲು ತಾನೇ ಕಾರಣನೆಂಬ ರೀತಿಯಲ್ಲಿ ವಾಸವನ್ ಹೇಳತೊಡಗಿದ್ದ.
‘ಈ ಸಭೆಗೆ ಇವರು ಬರಬೇಕಾಗಿದ್ದು ಪಾಂಡೆಯವರ ಅತಿಥಿಯಾಗಿ. ಪಾಂಡೆ ಈವತ್ತು ಬೆಳಿಗ್ಗೆ ಫೋನ್ ಮಾಡಿ ಮೈಸೂರಿಗೆ ಹೋಗಬೇಕಾಗಿದೆ, ಹಾಗಾಗಿ ನಾನು ಬರುವುದಿಲ್ಲ; ನನ್ನ ಜೊತೆ ಕಶ್ಯಪ್ ಅಂತ ಇಂಟರೆಸ್ಟಿಂಗ್ ವ್ಯಕ್ತಿಯೊಬ್ಬರು ಬರುವವರಿದ್ದರು… ನಾನು ಬರದಿದ್ದರೂ ಅವರು ಬರಬಹುದು ಎಂದು ಹೇಳಿದರು. ಹತ್ತೇ ನಿಮಿಷದಲ್ಲಿ ಕಶ್ಯಪ್ ಫೋನ್ ಮಾಡಿ ನಾನು ಸಭೆಗೆ ಬರಲೇ ಎಂದು ಕೇಳಿದರು. ಅದು ಆದದ್ದು ಹೀಗೆ….’
ಕಶ್ಯಪ್ ಹಾಕಿಕೊಂಡ ತಿಳಿನೀಲಿ ಬಣ್ಣದ ಕೋಟು ಮತ್ತು ಕೆಂಪು ಬಣ್ಣದ ಗೆರೆಗೆರೆಯ ಟೈ ಅಲ್ಲಿದ್ದವರಿಗೆ ತುಸು ಓರೆಯಾಗಿ ಕಂಡರೂ ಅವನಿಗದು ಸರಿಯಾಗಿ ಒಪ್ಪುತ್ತಿತ್ತು. ಎತ್ತರ ಮತ್ತು ದೇಹ ಸೌಷ್ಠವದಿಂದಾಗಿ ಒಳ್ಳೆಯ ಆಟಗಾರನಂತೆ ಕಾಣುತ್ತಿದ್ದ ಅವನ ವ್ಯಕ್ತಿತ್ವಕ್ಕೆ ಗೋಲಾಕಾರದ ಕನ್ನಡಕ ಒಂದು ರೀತಿಯ ಗಾಂಭೀರ್ಯವನ್ನು ಕೊಟ್ಟಿತ್ತು. ಅವನು ತನ್ನನ್ನು ಪರಿಚಯಿಸಿಕೊಂಡಾಗ, ತನ್ನ ಪಕ್ಕ ಕೂತ ವ್ಯಕ್ತಿಯೊಡನೆ ಮಾತಾಡುವಾಗ, ಬಾಯಿ ಓರೆ ಮಾಡಿದಾಗ, ಮುಂದಕ್ಕೆ ತುದಿಯಲ್ಲಿ ತುಸು ಬಾಗಿದ ಅವನ ಮೂಗು ನೋಡಿದಾಗ ಅವನನ್ನು ಎಲ್ಲೋ ನೋಡಿದ್ದೇನೆಂದು ಮನೋಹರನಿಗೆ ಅನಿಸಿತು. ಚುಚ್ಚಿದ ಮುಳ್ಳು ತೆಗೆಯಲು, ಸೂಜಿಯ ಮೊನೆಯಿಂದ ಮುಳ್ಳಿನ ತುದಿಯನ್ನು ಸ್ಪರ್ಶಿಸಲು ಪಡುವ ಪ್ರಯತ್ನದಂತೆ ಈ ಗುರುತಿನ ಸಾಮ್ಯತೆ ಅವನ ಮನಸ್ಸನ್ನು ಕೆದಕುತ್ತ ಕಿರಿಕಿರಿ ಹುಟ್ಟಿಸತೊಡಗಿತು.
ವಾಸವನ್ ಕಶ್ಯಪನ ಪಕ್ಕ ಕೂತು ನಗರದ ಅತ್ಯಂತ ಹಳೆಯ ಕ್ಲಬ್ಬುಗಳಲ್ಲಿ ಒಂದಾದ ಇದರ ಇತಿಹಾಸವನ್ನು ಹೇಳತೊಡಗಿದ.
‘ಇದು ಒಬ್ಬ ನಿವೃತ್ತ ದೀವಾನರ ಚಪಲತೆಯಿಂದ ಹುಟ್ಟಿಕೊಂಡದ್ದು. ಮನೆಯವರ ರಗಳೆ ಇಲ್ಲದೇ ನಾಲ್ಕು ಜನ ಸ್ನೇಹಿತರು ಸೇರಿ ಇಸ್ಪೀಟು ಆಡಲು ಮಾಡಿಕೊಂಡ ಜಾಗ. ತಮ್ಮ ಪ್ರಭಾವ ಉಪಯೋಗಿಸಿ ಈ ಹಳೆಯ ಕಟ್ಟಡವನ್ನು ಮಂಜೂರು ಮಾಡಿಸಿಕೊಂಡರು. ಆಮೇಲೆ ಅದಕ್ಕೊಂದು ಆಡಳಿತ ಮಂಡಳಿಯೂ ಆಗಿ ಸನ್ಯಾಸಿಯ ಸಂಸಾರದ ಹಾಗೆ ಬೆಳೆಯಿತು. ಸದಸ್ಯರಿಗೇನೂ ಕೊರತೆ ಇರಲಿಲ್ಲ. ಎಲ್ಲರೂ ದೊಡ್ದದೊಡ್ಡವರೇ. ಆಮೇಲೆ ಕಾಫಿಯ ವ್ಯವಸ್ಥೆ, ತಿಂಡಿಗಾಗಿ ಕಿಚನ್ ತಯಾರಾಯಿತು. ಹಳೆಯ ಫೈಲುಗಳಲ್ಲಿ ಆಡಳಿತ ಮಂಡಳಿಯ ಮೀಟಿಂಗ್ ವಿವರಗಳಿವೆ. ಅವುಗಳನ್ನು ಸುಮ್ಮನೇ ಇದ್ದಂತೆ ದಾಖಲಿಸಿದರೂ ಸಾಕು ಈ ಕ್ಲಬ್ಬು ಎಲಿಂದ ಇಲ್ಲಿಯವರೆಗೆ ಬಂತು ಅನ್ನುವುದೂ, ಅದರ ಜೊತೆಗೇ ಒಂದು ವರ್ಗದ ಸಾಮಾಜಿಕ ಜೀವನದ ಪಲ್ಲಟಗಳೂ ಸ್ಪಷ್ಟವಾಗಿ ಕಾಣಿಸುತ್ತವೆ.’
ಅದರ ಆಡಳಿತ ಮಂದಳಿಯಲ್ಲಾದ ಬದಲಾವಣೆ ಹೇಗೆ ಅದರ ಕಟ್ಟಡದ ವಿಸ್ತರಣೆಯಲ್ಲಿ ವ್ಯಕ್ತವಾಗಿದೆಯೆಂಬುದು ಅವನ ವೈಚಾರಿಕ ಅರ್ಥವಂತಿಕೆಯ ಮಾತುಗಾರಿಕೆಯಲ್ಲಿ ರಸವತ್ತಾಗಿತ್ತು. ಮೊದಲು ಇಲ್ಲಿ ಬಾರ್ ಇರಲಿಲ್ಲ. ನಂತರ ಅದನ್ನು ಸೇರಿಸಲು ಏನು ಮಾಡಿದರು, ಹೇಗೆ ಅದನ್ನೊಂದು ಬೇರೆ ಕಟ್ಟಡದ ಭಾಗವಾಗುವಂತೆ ಮಾಡಿ ಪ್ರತ್ಯೇಕ ಮಡಿವಂತಿಕೆಯನ್ನು ಕಾಪಾಡಿಕೊಂಡರು; ಸದಸ್ಯರು ಆಚೆ ಗಾರ್ಡನ್ನಿನಲ್ಲಿ ಕೂತು ಕುಡಿಯುವ ವ್ಯವಸ್ಥೆಯನ್ನು ಹೇಗೆ ನಾಜೂಕಾಗಿ ನಿರ್ವಹಿಸಿ ಎಲ್ಲ ನಿಯಮಗಳ ನಡುವೇ ಅದನ್ನು ಸೇರಿಸಿಕೊಂಡರು ಎಂದು ವಿವರಿಸಿದ. ಇಲ್ಲಿಗೆ ಭೇಟಿ ಕೊಡುತ್ತಿದ್ದ ನಗರದ ಖ್ಯಾತನಾಮರನ್ನೆಲ್ಲ ವಾಸವನ್ ಹೆಸರಿಸಿದ. ತನ್ನ ಮಾತುಗಳು ಮತ್ತು ಹೊಸ ಹೆಸರುಗಳು ಅವನಿಗೆ ಅರ್ಥವಾಗುತ್ತಿಲ್ಲ ಎಂಬ ಅನುಮಾನ ಬಂದು ಮಾತನ್ನು ತುಸು ನಿಧಾನಗೊಳಿಸಿದ.
ಅವನ ಮಾತು ನಿಲ್ಲತೊಡಗಿದ ಹಾಗೆ ಕಶ್ಯಪ್ ‘ಇಲ್ಲಿ ಬರುತ್ತಿದ್ದ ಖ್ಯಾತ ಸಾಹಿತಿ ಯಾರು ಗೊತ್ತೇನು?’ ಎಂದು ಕೇಳಿದ. ವಾಸವನ್‌ಗೆ ತುಸು ಗಲಿಬಿಲಿಯಾಯಿತು. ಅವನು ತನ್ನ ನೆನಪಿಗೆ ಹೊರೆಯಾಗದ ದಿವಾನರನ್ನೂ ಮೇಯರರನ್ನೂ ಸಿನಿಮಾ ತಾರೆಯರನ್ನು ಸೇರಿಸಿದ್ದನೇ ವಿನಹ ಈ ಸಾಹಿತಿಯ ವಿಷಯ ಅವನಿಗೆ ಗೊತ್ತಿರಲಿಲ್ಲ. ಈ ಕ್ಲಬ್ಬಿಗೆ ಅಕಸ್ಮಾತ್ತಾಗಿ ಬಂದೂ, ಇಲ್ಲಿ ಬರುತ್ತಿದ್ದ ಖ್ಯಾತ ಸಾಹಿತಿಯ ಬಗ್ಗೆಯೂ ತಿಳಿದುಕೊಂಡ ಕಶ್ಯಪನ ಬಗ್ಗೆ ವಾಸವನ್‌ಗೆ ತುಸು ಬೆರಗಾಯಿತು. ಕಶ್ಯಪ್ ತನ್ನ ಎತ್ತರದ ದನಿಯಲ್ಲಿ ಈ ಪ್ರಶ್ನೆ ಕೇಳಿದ್ದರಿಂದ ಅದು ಟೇಬಲ್ಲಿನ ಸುತ್ತ ಕೂತ ಇಡೀ ಗುಂಪಿಗೆ ಕೇಳಿದ ಪ್ರಶ್ನೆಯಂತೆ ಇತ್ತು. ಅಲ್ಲಿದ್ದ ರಾಘವೇಂದ್ರರಾವ್ ಎಂಬ ಹಳಬರೊಬ್ಬರು ಆ ಸಾಹಿತಿಯ ಹೆಸರು ಹೇಳಿದರು. ಇಷ್ಟು ವರ್ಷ ಯಾವುಯಾವುದೋ ದೇಶದಲ್ಲಿದ್ದು ಬಂದ ಅವನು, ಇಲ್ಲಿಯವರಿಗಿಂತ ಹೆಚ್ಚು ಇಲ್ಲಿಯ ಬಗ್ಗೆ ಮಾತಾಡುವುದು ಕೆಲವರಿಗೆ ಇರಿಸುಮುರಿಸನ್ನೂ, ಕೆಲವರಿಗೆ ಅವನ ಬಗ್ಗೆ ಮೆಚ್ಚುಗೆಯನ್ನೂ, ಕೆಲವರಿಗೆ ತಮ್ಮ ಬಗ್ಗೇ ಅಭಿಮಾನವನ್ನು ಹುಕ್ಕಿಸಿತು.
ಅದೊಂದು ಮಧ್ಯಂತರದಂತೆ ಇತ್ತು. ಕೆಲವರು ಎದ್ದು ಒಂದು ಸುತ್ತು ಹೋಗಿ ಬಂದರು. ಮನೋಹರನ ಪಕ್ಕ ಕೂತವರೊಬ್ಬರು ಕಶ್ಯಪನಿಗೆ ಈ ನಗರದ ಕೆರೆಗಳ ಬಗ್ಗೆ ವಿವರಿಸ ತೊಡಗಿದ್ದರು. ಯಾವ ದೀವಾನರ ಕಾಲದಲ್ಲಿ ಲಾಲ್‌ಬಾಗ್ ಸಂರಕ್ಷಣೆ ಸರಿಯಾಗಿ ಶುರುವಾಯಿತು ಎಂದು ಅವನು ಹೇಳತೊಡಗಿದೊಡನೆ ಅವರಿಗೆ ಅಪರಿಮಿತ ಆಸಕ್ತಿ ಬಂದು ಕಶ್ಯಪನನ್ನು ತನ್ನ ಪಕ್ಕ ಕರೆದರು. ಇಬ್ಬರ ಮಾತುಕತೆಯ ನಡುವೆ ಅವರ ಹೆಸರು ಜಗನ್ನಾಥ ಎಂದು ಗೊತ್ತಾಯಿತು. ತಾನು ದೆಹಲಿಯ ಯಾವುದೋ ಒಂದು ಸಂಸ್ಥೆಯ ನಿಯತಕಾಲಿಕವೊಂದರ ಸಂಪಾದಕನಾಗಿದ್ದೆನೆಂದು ವಿವರಿಸುತ್ತಿದ್ದರು. ಹೇಗೆ ತನ್ನ ಕೆಲಸ ಯಾವ ಪತ್ರಿಕೋದ್ಯಮಿಯ ಕೆಲಸಕ್ಕೂ ಕಡಿಮೆಯಾಗಿರಲಿಲ್ಲ, ಆದರೂ ಇಷ್ಟು ಹಿರಿಯನಾದ ತನ್ನನ್ನು ಪತ್ರಿಕೋದ್ಯಮದ ಯಾರೂ ತಮ್ಮಲ್ಲೊಬ್ಬನೆಂದು ಗುರುತಿಸುವುದಿಲ್ಲ ಎಂದು ಹೇಳುತ್ತಿದ್ದರು. ಅವರ ಮಾತುಗಳಿಂದ ಬೇಜಾರಾಗಿಯೋ, ಪಕ್ಕ ಕೂತವನ ಜೊತೆ ಅಗತ್ಯವಾದ ಸೌಜನ್ಯವೆಂದೋ ಅಂತೂ ಕಶ್ಯಪ್ ಮನೋಹರನತ್ತ ತಿರುಗಿ ಕೈಕುಲುಕಲು ಕೈ ಚಾಚಿದ. ಮನೋಹರ ತನ್ನ ಹೆಸರು ಹೇಳಿದ.
ಕೈಕುಲುಕುತ್ತ ಕಶ್ಯಪ್ ಅಭ್ಯಾಸಬಲದಿಂದೆಂಬಂತೆ ತನ್ನ ಹೆಸರನ್ನು ಮತ್ತೆ ಹೇಳಿದ. ಅವನು ಹಾಗೆ ಹೇಳುವಾಗ, ಹತ್ತಿರದಿಂದ ಅವನನ್ನು ನೋಡಿದಾಗ ಅವನು ಕಾಶೀಶನ ಹಾಗೆ ಕಾಣುತ್ತಾನೆ ಎಂದು ಮನೋಹರನಿಗೆ ಫಕ್ಕನೆ ಅನಿಸಿತು. ಇದ್ದರೂ ಇರಬಹುದು ಎಂಬ ಅನುಮಾನ ಹುಟ್ಟಿತು. ಅವನು ತನ್ನ ಗ್ಲಾಸನ್ನೆತ್ತಿ ಕುಡಿಯುವಾಗ ಪಕ್ಕದಿಂದ ಮತ್ತೊಮ್ಮೆ ನೋಡಿದ. ಅವನ ಕನ್ನಡಕದಲ್ಲಿ ಕ್ಲಬ್ಬಿನ ದೀಪ ಪ್ರತಿಬಿಂಬಿಸುತ್ತಿತ್ತು.
‘ಯಾವ ಊರು ನಿಮ್ಮದು?’ ಎಂದು ಮನೋಹರ ಕೇಳಿದ.
‘ಗೋವಾದ ಹತ್ತಿರ ಒಂದು ಸಣ್ಣ ಊರು…. ಊರಿಗೆ ಹತ್ತಿರವಾಗಿ ಇರಬಹುದು ಅನ್ನುವ ಆಕರ್ಷಣೇ ನನ್ನನ್ನು ಈ ಪ್ರಾಜೆಕ್ಟ್‌ಗೆ ಕೈ ಹಾಕುವಂತೆ ಮಾಡಿತು…. ಇಲ್ಲವಾದರೆ ನಾನಂತೂ ಎಲ್ಲ ಬಿಟ್ಟು ಬರುವವನೇ ಅಲ್ಲ….’ ಅಂದ.
‘ನಾನು ಉತ್ತರ ಕನ್ನಡದವನು… ನಿಮ್ಮ ಊರಿಗೆ ಬಹಳ ಹತ್ತಿರ’ ಎಂದು ಮನೋಹರ ಹೇಳಿದಾಗ ಕಶ್ಯಪನ ಉತ್ಸಾಹ ಕಣ್ಣಿಗೆ ಕಾಣುವಂತೆ ಪ್ರಕಟಗೊಂಡಿತು.
‘ಅರರೇ…. ಹಾಗಾದರೆ ನನ್ನ ಮಾತು ನಿಮಗೆ ಅರ್ಥವಾಗುತ್ತದೆ… ನಾನು ಮಾಡುವ ಕೆಲಸ ಪಶ್ಚಿಮ ಘಟ್ಟಗಳ ಬಗ್ಗೆಯಾದರೂ ಇದರ ಮಧ್ಯದಲ್ಲಿ ಇರುವ ಉತ್ತರ ಕನ್ನಡ ಜಿಲ್ಲೆ ಅಂದರೆ ಆ ಪರ್ವತಶ್ರೇಣಿಯ ಒಂದು ಸ್ಯಾಂಪಲ್ ಇದ್ದ ಹಾಗೆ. ಅಲ್ಲಿಯ ಕೀಟ ಸಂಪತ್ತಿನ ಅಧ್ಯಯನ ಮಾಡಿದರೆ ಸಾಕು, ಇಡೀ ಘಟ್ಟದ ಬಗ್ಗೆ ಒಂದು ಕಲ್ಪನೆ ಬರುತ್ತದೆ…. ಉತ್ತರ ಕನ್ನಡ ಜಿಲ್ಲಿಯಲ್ಲಿ ಯಾವ ಊರು ನಿಮ್ಮದು?’
‘ಕುಮಟೆ…. ಅಲ್ಲಿ ಕಾಲೇಜಿನವ್ರೆಗೂ ಓದಿದೆ. ಆಮೇಲೆ ಎಲ್ಲೆಲ್ಲೋ ಹೋಗಬೇಕಾಯಿತು’
‘ನಾನು ಅತ್ಯಂತ ಇಷ್ಟಪಡುವ ಜಿಲ್ಲೆ ಅದು…. ಅಲ್ಲಿಯಂಥ ಸಸ್ಯಸಂಪತ್ತು ಎಲ್ಲಿಯೂ ಇಲ್ಲ…. ಆಮೇಲೆ ಅಲ್ಲಿಯ ಜನ ಕೂಡ… ಅತ್ಯಂತ ಸ್ನೇಹಪರರು…. ಜನ ಬೇಕು ಅನ್ನುತ್ತಾರಲ್ಲ ಆ ಥರದವರು…. ನಾನು ನನ್ನ ಬಾಲ್ಯದ ಬಹು ಭಾಗವನ್ನು ಅಲ್ಲಿಯ ಆಸುಪಾಸಿನ ಕಾಡಿನಲ್ಲಿ ಕಳೆದಿದ್ದೇನೆ…. ಆಮೇಲೆ ಅಧ್ಯಯನದ ಸಲುವಾಗಿ ಒಂದು ವರ್ಷ ದಾಂಡೇಲಿಯ ಕಾಡಿನಲ್ಲಿ ಕಳೆದಿದ್ದೇನೆ…. ಅವು ನನ್ನ ಅತ್ಯಂತ ಸಾಹಸದ ದಿನಗಳು….’ ಅವನ ಮಾತು ಮುಂದುವರಿದಂತೆಲ್ಲ ಅಲ್ಲಿಯ ಕಾಡು, ಎತ್ತರದ ಮರಗಳು, ಕಾಡುಗಳ್ಳರು ಮತ್ತು ಕಳೆದುಹೋಗುತ್ತಿರುವ ಸೌಂದರ್ಯ ಚ್ತ್ರವತ್ತಾಗಿ ಮೂಡತೊಡಗಿತು. ಕಶ್ಯಪನ ಉತ್ಸಾಹಕ್ಕೆ ಎಣೆ ಇರಲಿಲ್ಲ.
‘ನೀವೂ ಆರ್ಕಿಟೆಕ್ಟರೋ?’ ಕನ್ನಡಕ ಕೈಯಲ್ಲಿ ಹಿಡಿದು, ಅದರ ಗಾಜನ್ನು ಕರವಸ್ತ್ರದ ತುದಿಯಿಂದ ಒರೆಸುತ್ತ ಕಶ್ಯಪ್ ಕೇಳಿದ. ಹ್ಹಾ ಹ್ಹಾ ಎಂದು ಬಾಯಿಯಿಂದ ಗಾಜಿನ ಮೇಲೆ ಉಸಿರು ಬಿಟ್ಟು ತೇವ ಮಾಡಿಕೊಂಡು ಒರೆಸತೊಡಗಿದ.
‘ಇಲ್ಲ. ವಾಸವನ್ ನನ್ನ ಸ್ನೇಹಿತ. ನಾನು ಇಲ್ಲಿ ಬಂದದ್ದು ಸಹವಾಸ ದೋಷದಿಂದ. ನಾನು ಓದಿದ್ದು ಸಮಾಜಶಾಸ್ತ್ರ. ಆಮೇಲೆ ಒಂದು ಮಾಸ್ ಕಮ್ಯುನಿಕೇಶನ್ಸ್ ಕೋರ್ಸ್. ಆನಂತರ ಒಂದು ಜಾಹೀರಾತು ಕಂಪನಿ ಸೇರಿದೆ. ಆ ಕೆಲಸದ ನಿಮಿತ್ತ ಎಲ್ಲೆಲ್ಲೋ ಓಡಾಡಿದೆ. ನಂತರ ಒಂದು ಇಂಗ್ಲಿಷ್ ವಾರಪತ್ರಿಕೆಯ ಮಾರ್ಕೆಟಿಂಗ್ ವಿಭಾಗ ಸೇರಿಕೊಂಡೆ. ಅದರ ಸಲುವಾಗಿ ಡೆಲ್ಲಿಗೆ ಹೋದೆ. ಈಗ ಒಂದು ವರ್ಷದಿಂದ ಇಲ್ಲಿಯ ಒಂದು ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ.’
‘ಕರ್ನಾಟಕದ ಜನ ರಾಜ್ಯ ಬಿಟ್ಟು ಹೋಗುವುದಿಲ್ಲ ಎಂಬ ಮಾತಿಗೆ ಅಪವಾದದ ಹಾಗಿದ್ದೀರಲ್ಲ.’
‘ಎಲ್ಲಿ ಅಪವಾದ? ವಾಪಸ್ಸು ಬಂದಿದ್ದೇನಲ್ಲ. ಉತ್ತರ ಕನ್ನಡದ ಜನ ಮೊದಲಿನಿಂದಲೂ ಮುಂಬೈಗೆ ವಲಸೆ ಹೋದವರೇ. ಶಾಲೆ ಕಾಲೇಜು, ಆಮೇಲೆ ಅಷ್ಟೇ ಸಹಜವಾಗಿ ಮುಂದಿನ ಮೆಟ್ಟಿಲೋ ಎಂಬಂತೆ ಮುಂಬೈ…. ಈಗ ಅದೂ ನಿಧಾನ ಬದಲಾಗಿದೆ. ನನ್ನ ಹಾಗೆ ಬೇರೆ ಕಡೆ ಹೋಗುವವರೂ ಇದ್ದಾರೆ. ಆದರೆ ಬೆಳೆಯುತ್ತಿದ್ದ ಹಾಗೆ ಊರು ಬಿಟ್ಟು ಹೋಗುವುದು ಮಾತ್ರ ಬದಲಾಗಿಲ್ಲ. ಬಹುಶಃ ಮೊದಲಿನಿಂದಲೂ ಅದಕ್ಕೆ ತಯಾರಿ ಒಳಗೊಳಗೇ ನಡೆಯುತ್ತಲೇ ಇರುತ್ತದೆಯೇನೋ….’
‘ನನ್ನ ದೃಷ್ಟಿಯಲ್ಲಿ ಒಂದೇ ಕಡೆ ಇರುವುದೆಂದರೆ ಸ್ವರ್ಗ. ನೆಮ್ಮದಿ ಅಂದರೆ ಏನೆಂದು ಗೊತ್ತಿರುವವರು ಮಾತ್ರ ಹಾಗಿರುತ್ತಾರೆ. ನಮ್ಮ ಹಾಗೆ ಅತಂತ್ರರು ಅದನ್ನು ಅರಸಿಕೊಂಡು ಅಲೆಯುವುದು. ನಿಮ್ಮನ್ನೂ ಇದರಲ್ಲಿ ಸೇರಿಸಿಕೊಂಡ ನನ್ನ ಸಲಿಗೆಯನ್ನು ತಪ್ಪು ತಿಳಿಯಬೇಡಿ.’
‘ನೀವು ಇತ್ತೀಚೆಗೆ ಉತ್ತರ ಕನ್ನಡಕ್ಕೆ ಹೋಗಿದ್ದೀರಾ?’
‘ಏಳು ವರ್ಷಗಳ ಹಿಂದೆ ಹೋಗಿದ್ದೆ. ತದಡಿಯಲ್ಲಿರುವ ಡೇನಿಶ್ ಯೋಜನೆಯಲ್ಲಿ ನನ್ನ ಹೆಂಡತಿಯ ಸ್ನೇಹಿತನೊಬ್ಬನ ಅತಿಥಿಯಾಗಿ. ಗಂಗಾವಳಿಯ ಗುಂಟ ಹೋಗಬೇಕೆನ್ನುವುದು ನನ್ನ ಯೋಜನೆ…. ಇದು ನನ್ನ ಜೀವನದ ದೊಡ್ದ ಆಸೆಗಳಲ್ಲಿ ಒಂದು. ಈಗ ಅದಕ್ಕಾಗಿಯೇ ರೂಪರೇಷೆಗಳನ್ನು ತಯಾರು ಮಾಡುತ್ತಿದ್ದೇನೆ. ಈ ನದಿ ಸಮುದ್ರ ಸೇರುವಲ್ಲಿಂದ ಶುರು ಮಾಡಿ , ಅದರ ಗುಂಟ ಹೋದರೆ ಇಡೀ ದಾರಿಯಲ್ಲಿ ಪಶ್ಚಿಮ ಘಟ್ಟಗಳ ಚಿಟ್ಟೆಗಳ ಒಂದು ಬಹುಮುಖ್ಯ ಸ್ಯಾಂಪಲ್ ಸಿಗುತ್ತದೆ ಎಂದು ನನ್ನ ನಂಬಿಕೆ. ಅದಕ್ಕೆ ಬೇಕಾದ ತಯಾರಿ ಈಗ ನಡೆಸುತ್ತಿದ್ದೇನೆ…. ಒಂದಲ್ಲ ಒಂದು ದಿನ ಇದನ್ನು ಮಾಡಲೇಬೇಕು ಎಂದು ಆಸೆ ನನಗೆ…. ಹತ್ತು ದಿನಗಳಲ್ಲಿ ಇಡೀ ಪ್ರಯಾಣ ಮತ್ತು ಸ್ಯಾಂಪಲ್ ಸಂಗ್ರಹಣೆ ಮುಗಿಸಬಹುದು… ಈ ಬಾರಿ ಇಲ್ಲಿ ಎರಡು ವರ್ಷ ಇರುತ್ತೇನಲ್ಲ…. ವಾಪಸು ಹೋಗುವ ಮುಂಚೆ ಈ ಗಂಗಾವಳಿ ಯಾತ್ರೆ ಮಾಡಲೇಬೇಕು ಎಂದು ನನ್ನೊಳಗೇ ನಿರ್ಧರಿಸಿದ್ದೇನೆ…. ಇದಕ್ಕೆ ಅಗತ್ಯವಾದ ದುಡ್ಡು ಕೂಡ ದೊರಕಿದೆ….’
‘ನಿಮಗೆ ಸಹಾಯ ಬೇಕಾದರೆ ಕೇಳಿ…. ನನ್ನ ಪರಿಚಯದವರು ಈಗ ಅಲ್ಲಿ ಫಾರೆಸ್ಟ್ ಆಫೀಸರ್ ಆಗಿದ್ದಾರೆ’ ಎಂದು ಮನೋಹರ ಅವನ ಉತ್ಸಾಹ ಕಂಡು ಹೇಳಿದ.
‘ನನಗೆ ಬೇಕಾದವರು ನಿಮ್ಮಂಥವರೇ… ಇಂಡಿಯಾದಲ್ಲಿ ಹೇಗೆ ಗೊತ್ತಲ್ಲ… ಫಾರೆಸ್ಟ್ ಆಫೀಸರನ ಕೃಪೆ ಇಲ್ಲದೇ ಯಾವ ವಿಜ್ಞಾನಿಗೂ ಕಾಡಿನಲ್ಲಿ ಕಾಲು ಹಾಕಲು ಸಾಧ್ಯವಿಲ್ಲ…. ನಾನು ಮುಂದಿನ ವಾರವೇ ನಿಮ್ಮನ್ನು ನೋಡಿತ್ತೇನೆ….’ ಅಂದ.
ಟೆಲಿಫೋನ್ ನಂಬರುಗಳು ಮತ್ತು ವಿಳಾಸಗಳು ಪರಸ್ಪರ ವಿನಿಮಯವಾದವು. ಅಲ್ಲಿಗೆ ಎರಡನೇ ಸುತ್ತಿನ ಆರ್ಡರ್ ತಗೊಳ್ಳಲು ಬಂದ ವೇಟರ್‌ಗೆ ತಮ್ಮ ತಮ್ಮ ಆಯ್ಕೆಯನ್ನು ಹೇಳಿದರು. ‘ಉಸಳಿ ಉಸಳಿ’ ಎಂದು ಜನಾಗ್ರಹದ ಮೂಲಕ ಉಸಳಿ ಬಂತು. ನಡುನಡುವೆ ಜನ ಎದ್ದು ಕುರ್ಚಿ ಖಾಲಿಯಾದಾಗಲೆಲ್ಲ ಕಶ್ಯಪ್ ಅಲ್ಲಿಗೆ ಹೋಗಿ ಅಕ್ಕಪಕ್ಕ ಕೂತವರ ಜೊತೆ ಮಾತು ಶುರುಮಾಡಿ ಅವರನ್ನು ಪರಿಚಯಿಸಿಕೊಳ್ಳಿತ್ತಿದ್ದ. ಅವನ ಈ ಉತ್ಸಾಹದಿಂದ ಇಡೀ ಸಂಜೆಗೆ ಹೊಸತನದ ಕಳೆ ಬಂದಿತ್ತು. ಇಲ್ಲವಾದರೆ ಕೂತಲ್ಲೇ ಕೂತು ಕುಡಿದು, ಪಕ್ಕ ಯಾರು ಇರುತ್ತಾರೋ ಅವರ ಜೊತೆ ಒಂದಷ್ಟು ಮಾತಾಡಿ, ಮಾತಾಡಿದ್ದನ್ನು ಅಲ್ಲೇ ಮರೆತು ಹೊರಡುತ್ತಿದ್ದರು. ಈವತ್ತು ಈತ ಬಂದು ಕುರ್ಚಿಗಳನ್ನು ಬದಲಾಯಿಸುತ್ತ, ಎಲ್ಲರ ಜೊತೆ ಮಾತಾಡಿ ಇಡೀ ಸಂಜೆಗೆ ಹೊಸ ಹುರುಪು ತಂದುಕೊಟ್ಟಿದ್ದ. ಒಬ್ಬೊಬ್ಬರಲ್ಲಿ ಒಂದೊಂದು ಬಗೆಯಾಗಿ ತನ್ನ ವ್ಯಕ್ತಿತ್ವದ ಛಾಪು ಬಿಟ್ಟಿದ್ದ.

ಲಲೀಕ್ ಗ್ಲಾಸ್, ಗ್ಲೆನ್ ವಿಸ್ಕಿ

ಕಶ್ಯಪನ ಮನೆ ಹುಡುಕಲು ತಡವಾಗಲಿಲ್ಲ. ನೀಲಿ ಜೀನ್ಸ್ ಮತ್ತು ಟೀ ಶರ್ಟು ತೊಟ್ಟ, ಕಾಲಿಗೆ ಕೊಲ್ಹಾಪುರಿ ಚಪ್ಪಲಿ ಹಾಕಿದ್ದ ಕಶ್ಯಪ್ ಬಾಗಿಲು ತೆರೆದು ಸ್ವಾಗತಿಸಿಸಿದ.
ಮನೆಯೊಳಗೆ ಅಡಿಗೆಯ ಪರಿಮಳ ಹಬ್ಬಿತ್ತು. ದೀವಾನಖಾನೆಯ ಒಂದು ಅಂಚಿನಲ್ಲಿ ಕರಿಮರದ ಕನ್ನಡಿಯ ಕಪಾಟಿತ್ತು. ಅದರ ಮೇಲಿದ್ದ ಹಿತ್ತಾಳೆಯ ಸ್ಟ್ಯಾಂಡ್‌ನಲ್ಲಿ ಬೆಳಗಿಸಿಟ್ಟ ಎರಡು ಮೋಂಬತ್ತಿಗಳು. ಮನೋಹರನನ್ನು ಬಿಟ್ಟರೆ ಬೇರೆ ಯಾರದೇ ಸುಳಿವಿರಲಿಲ್ಲ. ಆ ದೊಡ್ಡ ಕೋಣೆಯ ಒಂದು ಬದಿಗೆ, ಅಡಿಗೆಮನೆಯ ಬಾಗಿಲಿಗೆ ಹೊಂದಿಕೊಂಡಂತೆ ಊಟದ ಟೇಬಲ್ಲಿತ್ತು. ಅದಕ್ಕೆ ದಪ್ಪ ಗಾಜಿನ ಟಾಪ್. ಅದರ ಮೇಲಿದ್ದ ಹೂದಾನಿಯ ತುಂಬ ಹೂಗಳು. ಕಿಟಕಿಗಳಿಗೆ ಕೆನೆ ಬಣ್ಣದ ಪರದೆಗಳು. ಕೋಣೆಯ ಇನ್ನೊಂದು ಪಕ್ಕ ಕೂರುವ ವ್ಯವಸ್ಥೆ- ಅಲ್ಲಿ ಬೆತ್ತದ ಕುರ್ಚಿಗಳು, ಬೆತ್ತದ ಸೋಫಾ, ಬೆತ್ತದ ಟೇಬಲ್ಲಿತ್ತು. ಅದಕ್ಕೆ ಹೊಂದಿಕೊಂಡಂತೆ ಗೋಡೆಗೆ ತಾಗಿ ಇಟ್ಟ ದೊಡ್ಡದೊಂದು ಪುಸ್ತಕದ ಕಪಾಟು ಇಡೀ ಗೋಡೆಯನ್ನೇ ವ್ಯಾಪಿಸಿದಂತಿತ್ತು. ಮನೆಯ ಒಳ ಬರುತ್ತಿದ್ದಂತೆ ಒಂದು ಪಕ್ಕ ಬಿಚ್ಚಿಟ್ಟ ಚಪ್ಪಲಿ ಶೂಗಳನ್ನು ನೋಡಿ ಮನೋಹರನೂ ತನ್ನ ಶೂಗಳನ್ನು ಅಲ್ಲಿಯೇ ಬಿಚ್ಚಿಟ್ಟ.
‘ನಿಮಗಾಗಿ ಸ್ಪೆಶಲ್ ಊಟ ತಯಾರಾಗ್ತಾ ಇದೆ…. ಗೋವಾದ ಚಿಕನ್ ಕರಿ’ ಎಂದು ಹೇಳಿ ಕಶ್ಯಪ್ ‘ಆವತ್ತು ಕ್ಲಬ್ಬಿನಲ್ಲಿ ನೀವು ಚಿಕನ್ ತಿಂದದ್ದು ಗಮನಿಸಿದೆ. ಹಾಗಾಗಿ ನಿಮ್ಮನ್ನು ಕೇಳದೇ ಈ ಅಡಿಗೆಯನ್ನು ನಾನೇ ನಿರ್ಧರಿಸಿಬಿಟ್ಟೆ’ ಅಂದ.
‘ಇಲ್ಲದಿದ್ದರೂ ಈ ಮಸಾಲೆಯ ಪರಿಮಳ ಮಾಂಸಾಹಾರಿಯಾಗಿ ಪರಿವರ್ತನೆಯಾಗಲು ಸಾಕು’ ಎಂದು ಮನೋಹರ ನಕ್ಕ.
‘ನನ್ನ ಹೆಂಡತಿ ಇಡೀ ದಿನ ಹೊರಗೆ ಎಲ್ಲೋ ಹೋಗಿದ್ದಳು…. ಈಗ ತಾನೇ ಬಂದಳು… ಸ್ನಾನ ಮಾಡಿ ತಯಾರಾಗ್ತಾ ಇದಾಳೆ.. ಇನ್ನೇನು ಬಂದುಬಿಡುತ್ತಾಳೆ…. ನಾವು ಅಷ್ಟರವರೆಗೂ ಕಾಯಬೇಕಾಗಿಲ್ಲ…. ಬಿಯರಿನಿಂದ ಶುರುಮಾಡುತ್ತೀರೇನು? ವಿಸ್ಕಿ ಇದೆ… ವೈನ್ ಇದೆ ಗೋವಾದ್ದು…’
‘ನನಗೆ ಬಿಯರ್ ಇರಲಿ’
‘ನನಗೂ ಬಿಯರಿನಿಂದ ಆರಂಭಿಸಲು ಇಷ್ಟ. ಆದರೆ ನಂತರ ಮಾತ್ರ ನನ್ನ ಆಯ್ಕೆ ವಿಸ್ಕಿ… ವಿಸ್ಕಿ ಆಫ್ಟರ ಬಿಯರ್ ಈಸ್ ನಾಟ್ ರಿಸ್ಕಿ ಅನ್ನುವ ಮಾತನ್ನು ವಿಸ್ಕಿ ಆಫ್ಟರ ಎನಿಥಿಂಗ್ ಈಸ್ ನಾಟ್ ರಿಸ್ಕಿ ಎಂದು ನನ್ನ ಮಟ್ಟಿಗೆ ಬದಲಾಯಿಸಿಕೊಂಡಿದ್ದೇನೆ… ಒಳ್ಳೆಯ ಗ್ಲೆನ್ ವಿಸ್ಕಿ ಸಿಕ್ಕರೆ ನನಗೆ ಪರಮ ಸಂತೋಷ… ಈ ಊರಿನಲ್ಲಿ ಅದನ್ನು ದೊರಕಿಸುವುದು ಸಾಧ್ಯವೇ ಇಲ್ಲದ ಮಾತು. ಯಾರಾದರೂ ಹೊರದೇಶದಿಂದ ಬರುವಾಗ ತರಿಸುತ್ತೇನೆ. ಕಾದಿರಿಸಿದ ಬಾಟಲಿಗಳಲ್ಲಿ ಒಂದನ್ನು ನಿಮಗೆಂದು ಈವತ್ತು ತೆರೆಯುತ್ತೇನೆ…’
ಉದ್ದನೆಯ ಗಾಜಿನ ಗ್ಲಾಸುಗಳಲ್ಲಿ ಬಿಯರ್ ಸುರಿಯುತ್ತ ಅವನು ಮತ್ತೆ ಮಾತು ಮುಂದುವರಿಸಿದ.
‘ನಿಮಗೆ ಪರ್‍ವಾಗಿಲ್ಲ ಅಂತಾದರೆ ಇಲ್ಲೇ ಅಡಿಗೆ ಮನೆಯ ಬಾಗಿಲಲ್ಲೈ ಒಂದು ಕುರ್ಚಿ ಹಾಕಿಕೊಡುತ್ತೇನೆ…. ಈವತ್ತಿನ ಅಡಿಗೆ ಭಟ್ಟ ನನೇ…. ಅಡಿಗೆ ಮಾಡುವುದೆಂದರೆ ನನಗೆ ಬಹಳ ಇಷ್ಟ…. ಈಗ ತಾನೇ ಶುರುಮಾಡಿದ್ದೇನೆ…. ಅರ್ಧ ಗಂಟೆಯಲ್ಲಿ ಎಲ್ಲ ಮುಗಿಸಿಬಿಡುತ್ತೇನೆ…. ಸ್ವಾತಿ ಕೂಡ ಅಷ್ಟರೊಳಗೆ ಬಂದುಬಿಡುತ್ತಾಳೆ…. ನಿಮ್ಮನ್ನು ಭೆಟ್ಟಿಯಾಗಲಿ ಎಂದೇ ಅವಳನ್ನೂ ಕರೆದೆ…. ತುಂಬಾ ಚುರುಕಾದ ಹುಡುಗಿ….’
ನೀಳವಾದ ಗ್ಲಾಸಿನಲ್ಲಿದ್ದ ಬಂಗಾರದ ಬಣ್ಣದ ಬಿಯರು ಸಂಬಾರ ಜಿನಸುಗಳ ವಾಸನೆಯ ಜೊತೆ ಹಿತವಾಗಿತ್ತು. ಅಡಿಗೆ ಮನೆಯ ಬಾಗಿಲು ದಾಟಿ ಒಳಹೋಗುತ್ತಿದ್ದ ಹಾಗೆ, ಬಲಪಕ್ಕ ಇದ್ದ ಜಾಗದಲ್ಲಿ ಹಾಕಿದ ಕುರ್ಚಿಯ ಮೇಲೆ ಮನೋಹರ ಕೂತ. ಊಟದ ಟೇಬಲ್ಲಿನಿಂದ ಎಳೆತಂದ ಕುರ್ಚಿಯಾದ್ದರಿಂದ ಮೈಚೆಲ್ಲಿ ಕೂರುವಂತಿರಲಿಲ್ಲ. ತನ್ನ ಗ್ಲಾಸನ್ನು ಕಶ್ಯಪ್ ಅದಿಗೆ ಮನೆಯ ಕಲ್ಲುಕಟ್ಟೆಯ ಮೇಲಿಟ್ಟ. ಗ್ಯಾಸಿನ ಜ್ವಾಲೆಗೆ ಅದರೊಳಗಿನ ಬಿಯರು ವಿಚಿತ್ರ ಬಣ್ಣದಲ್ಲಿ ಹೊಳೆಯುತ್ತಿತ್ತು. ಒಂದು ಪಕ್ಕ ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಇಟ್ಟಿದ್ದ. ಮೂರು ದೊಡ್ಡ ದೊಡ್ಡ ಬೆಳ್ಳುಳ್ಳಿಗಳನ್ನು ಸುಲಿಯಲು ಆರಂಭಿಸಿದ. ಅದೆಲ್ಲ ಟಿವಿ ಪ್ರಸಾರದ ಅಡಿಗೆ ಕಾರ್ಯಕ್ರಮದಂತೆ ಆಕರ್ಷಕವಾಗಿತ್ತು. ಸತತವಾಗಿ ಮಾತಾಡುತ್ತ, ಕೈಗೆ ಒಂದು ನಿಮಿಷವೂ ಪುರುಸತ್ತು ಕೊಡದೇ, ಪಳಗಿದ ಕಲಾಕಾರನ ಹಾಗೆ ಅವನು ಸರಸರನೆ ಕೆಲಸ ಮಾಡುತ್ತಿದ್ದ.
ಸುಲಿದ ಬೆಳ್ಳುಳ್ಳಿಯ ತೊಳೆಗಳನ್ನು ಕಚಕಚ ಕತ್ತರಿಸಿದ. ನೀರಲ್ಲಿ ನೆನೆಸಿಟ್ಟ ಕೊತ್ತಂಬರಿ ಸೊಪ್ಪಿನ ಕಟ್ಟು ಎತ್ತಿಕೊಂಡ.
‘ಇಂಡಿಯನ್ ಬಿಯರಿನಲ್ಲಿ ಕೊಬ್ಬಿನ ಅಂಶ ಜಾಸ್ತಿ. ಅದರ ಜೊತೆ ನಮ್ಮ ಮಧ್ಯಮ ವರ್ಗದ ಗಂಡಸರಿಗೆ ವ್ಯಾಯಾಮವೂ ಕಡಿಮೆ…. ಬಿಯರು ಕುಡಿದು ಜೊತೆಗೆ ಕರಿದ ಪಕೋಡಗಳನ್ನು ತಿಂದರೆ ಬೊಜ್ಜು ಬರಲು ಅದಕ್ಕಿಂತ ಒಳ್ಳೆಯ ಫಾರ್ಮುಲಾ ಬೇಕೇ?….’
ಅವನ ಕೈಯಲ್ಲಿ ಕೊತ್ತಂಬರಿ ಚೂರಾಗತೊಡಗಿತು.
‘ಇದೋ ನೋಡಿ ಈ ಕಡಾಯಿ…. ಕಬ್ಬಿಣದ್ದು… ಈ ರೀತಿಯ ಅಡಿಗೆಗಳಿಗೆ ಇಂಥದ್ದಿಲ್ಲದಿದ್ದರೆ ಸಾಧ್ಯವೇ ಇಲ್ಲ…. ಹೋದಲ್ಲೆಲ್ಲ ಇದನ್ನು ಹೊತ್ತುಕೊಂಡು ಓಡಾಡಿದ್ದೇನೆ…. ಹಾಗೆ ನೋಡಿದರೆ ನನಗೆ ಬೇಕಾದ್ದು ಎಲ್ಲವೂ ಇಲ್ಲಿಲ್ಲ…. ನನ್ನ ಐಡಿಯಲ್ ಕಿಚನ್ ಗೋವಾದಲ್ಲಿ ಮಾತ್ರ ಇರಲು ಸಾಧ್ಯವಿದೆ…. ಒಂದು ಕಟ್ಟಿಗೆ ಒಲೆ ಇರಬೇಕು…. ಪಕ್ಕದಲ್ಲಿ ಕೆಂಡಗಳು ನಿಗಿನಿಗಿ ಅನ್ನುತ್ತಿರಬೇಕು…. ಹಿಂದೆ ಹಿತ್ತಿಲಲ್ಲಿ ತಾಜಾ ಕೊತ್ತಂಬರಿ, ಒಗ್ಗರಣೆ ಎಲೆ, ಶುಂಠಿ ಬೆಳೆದಿರಬೇಕು…. ಆಗ ತಾನೇ ಹಿಡಿದ ಮೀನು ಇರಬೇಕು. ಅಮೇರಿಕಾದಲ್ಲಿದ್ದಾಗ ಒಲೆ ಗಿಲೆ ಅಂತ ಕೆಂಡ ತಂದು ಸ್ವಲ್ಪ ಮಟ್ಟಿಗೆ ಏನೋ ಮಾಡಿಕೊಂಡೆ…. ಆದರೆ ಅದು ವಿಫಲ ಕನಸಿನ ಹಾಗಾಯಿತು…. ಅದಲ್ಲದೇ ನಮ್ಮ ಕಡೆಯ ಸೊಪ್ಪುಗಳು ಆ ಹವಾಮಾನದಲ್ಲಿ ಹೇಗೆ ಬೆಳೆಯಬೇಕು?.’
ಅರಿಶಿನದ ನೀರಿನಲ್ಲಿ ಅದ್ದಿಟ್ಟ ಚಿಕನ್ ತುಂಡುಗಳನ್ನು ತೆಗೆದು, ನೀರು ಬಸಿದು ಹೋಗುವವರೆಗೆ ಎತ್ತಿ ಹಿಡಿದು, ನಂತರ ತಳಕ್ಕೆ ತೂತುಗಳಿರುವ ಪಾತ್ರೆಯೊಂದರಲ್ಲಿ ಹಾಕತೊಡಗಿದ.
‘ಅರಿಶಿನದ ನೀರಲ್ಲಿ ನೆನೆಸುವುದರಿಂದ, ಬೇಯಿಸಿದ ನಂತರವೂ ಸಂಬಾರ ಜಿನಸಿನ ಪರಿಮಳ ಉಳಿಯುತ್ತದೆ….. ಇದು ನಮ್ಮ ಮನೆತನದ ಅಡಿಗೆಯ ಪದ್ಧತಿಯೇನಲ್ಲ… ಆದರೆ ನನ್ನ ಬಾಲ್ಯದಲ್ಲಿ ನೋಡಿದ್ದು….. ನಮ್ಮ ಮನೆಯಲ್ಲಿ ಮೀನು ಬಿಟ್ಟರೆ ಬೇರೆ ಯಾವ ಮಾಂಸವನ್ನೂ ತಿನ್ನುತ್ತಿರಲಿಲ್ಲ…. ಚಿಕನ್ ಅಭ್ಯಾಸವಾದದ್ದು ನನ್ನ ಅಜ್ಜನಿಂದಾಗಿ….. ಅವನ ಕಾಡು ತಿರುಗುವ ಹುಚ್ಚಿನಿಂದಾಗಿ ಗಂಟು ಬಿದ್ದ ಹವ್ಯಾಸಗಳು ಇವೆಲ್ಲ….’
ಕಬ್ಬಿಣದ ಕಪ್ಪು ಕಡಾಯಿಯನ್ನು ಗ್ಯಾಸಿನ ಮೇಲೆ ಇಟ್ಟು ಬೆಂಕಿಯನ್ನು ಪೂರ್ತಿ ದೊಡ್ಡದು ಮಾಡಿದ. ಅವನ ಕಂದು ಮುಖ ಮಿರಿಮಿರಿ ಮಿಂಚುತ್ತಿತ್ತು. ಹಣೆಯ ಮೇಲೆ ಬೆವರಿನ ಸಾಲುಗಳು ಕೂಡತೊಡಗಿದ್ದವು. ಕಪೋಲದ ಮೇಲೆ ಕೂದಲುಗಳು ಅಲ್ಲಲ್ಲಿ ಬೆಳ್ಳಗಾಗಿದ್ದವು. ಕಡಾಯಿಯ ಒಳಭಾಗವನ್ನು ಬಟ್ಟೆಯಿಂದ ಒರೆಸಿದ. ಒಂದು ಹನಿ ನೀರು ಸಿಡಿಸಿ ಅದು ಸಾಕಷ್ಟು ಕಾದಿದೆಯೋ ಎಂದು ಪರೀಕ್ಷಿಸಿದ. ನಂತರ ಎಣ್ಣೆ ಹಾಕಿದ. ಕತ್ತರಿಸಿಟ್ಟ ಪದಾರ್ಥವಳನ್ನೆಲ್ಲ ಒಂದೊಂದಾಗಿ ಹಾಕುತ್ತ ಹುರಿಯತೊಡಗಿದ.
‘ಈ ಪೋರ್ಚುಗೀಸರಿದ್ದಾರಲ್ಲ, ಅವರ ನಾಲಿಗೆಯ ರುಚಿಗ್ರಹಣವೇ ಬೇರೆ ರೀತಿಯದು…. ಸಂಬಾರ ಜಿನಸು ಅವರಿಗೆ ಪ್ರಿಯವಾಗಿದ್ದರೂ ಅವರು ಕಟು ರುಚಿಯ ಕಡೆಗೆ ವಾಲಿದವರಲ್ಲ… ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂನಲ್ಲಿ ಒಬ್ಬ ಬರೆದ ದಾಖಲೆಗಳಿವೆ…. ಅವನ ಡೈರಿಯನ್ನೇ ಮುಂದೆ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ…. ಅವನು ಇಂಡಿಯಾಕ್ಕೆ ಬಂದು ಗೋವಾ ಮತ್ತು ಅದರ ದಕ್ಷಿಣ ಭಾಗಗಳಲ್ಲಿ ವಾಸಮಾಡಿ ಸಂಗ್ರಹಿಸಿದ ವಿವರಗಳು….. ಆ ಭಾಗದ ಸಾಮಾನ್ಯ ಜನ ಸುಮಾರು ಇನ್ನೂರು ಬಗೆಯ ಸಸ್ಯಗಳನ್ನು ತಿನ್ನುತ್ತಿದ್ದರು ಎಂದು ಬರೆದಿದ್ದಾರೆ…. ಅದರ ಜೊತೆಗೇ ಅಲ್ಲಿಯ ಕೊಂಕಣಿಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಕೂಡ ಹಲವು ವಿಷಯ ಸಂಗ್ರಹಿಸಿದ್ದಾನೆ….’
ಅವನು ತನ್ನೊಳಗೆ ಹಾಕಿದ ಜೀನಸುಗಳನ್ನೆಲ್ಲ ಆ ಕಪ್ಪು ಕಡಾಯಿ ಹುರಿದು ಕೆಂಪಗೆ ಮಾಡತೊಡಗಿತು.
‘ಈಗ ನನ್ನ ಗೋವನ್ ಕರಿಯ ಮೊದಲ ರಹಸ್ಯವನ್ನು ತೋರಿಸುತ್ತೇನೆ’ ಎಂದು ಕಶ್ಯಪ್ ವೈಟ್ ವೈನಿನ ಬಾಟಲೊಂದನ್ನು ತೆರೆದ. ಅದರಿಂದ ಒಂದು ಗ್ಲಾಸ್ ವೈನ್ ತೆಗೆದು ಆ ಕಡಾಯಿಗೆ ಸುರಿದ. ಅದು ಬುಸ್ಸಬುಸ್ಸನೇ ಆವಿಯಾಗುತ್ತ ಅಡಿಗೆ ಮನೆಯ ತುಂಬ ವಿಚಿತ್ರವಾದ ಘಾಟನ್ನೂ, ತೆಳ್ಳನೆಯ ಆವಿಯಂಥ ಹೊಗೆಯನ್ನೂ ತುಂಬಿಸಿತು.
‘ವೈನ್ ಬಿಸಿಯಾದದ್ದೇ ಅದರಲ್ಲಿಯ ಆಲ್ಕೋಹಾಲ್ ಹೋಗಿಬಿಡುತ್ತದೆ…. ಅದರ ಬದಲು ವಿನೆಗರ್ ಕೂಡ ಹಾಕಬಹುದು…. ಆದರೆ ನಾನು ಅಡಿಗೆಯಲ್ಲಿ ನಾಟಕೀಯತೆಯನ್ನು ಬಯಸುವವನು….’
ಕಟ್ಟಿಗೆಯ ಸೌಟಿನಿಂದ ಕಡಾಯಿಯನ್ನು ಮರುಕಳಿಸತೊಡಗಿದ. ಅರೆದಿಟ್ಟ ಮಸಾಲೆ ಬಿದ್ದೊಡನೆ, ನೀರು ಬೆಂಕಿಗೆ ಬಿದ್ದಂತೆ ಸದ್ದು ಮಾಡುತ್ತ ಕಡಾಯಿ ಶಾಂತವಾಯಿತು. ನಂತರ ಹಾಗೇ ನಿಧಾನ ಕಾವು ಏರುತ್ತ ಮಸಾಲೆ ಕುದಿಯತೊಡಗಿತು. ಅದರಲ್ಲಿ ಕೋಳಿಯ ತುಂಡುಗಳು ಸೇರಿದವು.
‘ನನ್ನ ಅಡಿಗೆಯಿಂದ ಅನೇಕ ರೇಂಜರುಗಳನ್ನೂ, ಫಾರೆಸ್ಟ್ ಆಫೀಸರರನ್ನೂ, ಸ್ನೇಹಿತರನ್ನೂ, ಪಿ‌ಎಚ್‌ಡಿ ಗೈಡನ್ನೂ, ಅಷ್ಟೇ ಯಾಕೆ ನನ್ನ ಹೆಂಡತಿಯನ್ನೂ ಗೆದ್ದಿದ್ದೇನೆ ನಾನು…. ಅನೇಕ ಹುಡುಗಿಯರನ್ನೂ ಸಹ….’ ಎಂದು ಕಶ್ಯಪ್ ಕಣ್ಣು ಮಿಟುಕಿಸಿದ.
ಇಬ್ಬರ ಬಿಯರ್ ಗ್ಲಾಸ್‌ಗಳನ್ನು ಮತ್ತೆ ತುಂಬಿಸಿದ.
‘ನನ್ನ ಎರಡನೆಯ ರಹಸ್ಯ ಈಗ ಹೇಳುತ್ತೇನೆ’ ಅನ್ನುತ್ತ ಎಣ್ಣೆಯ ಒಂದು ಬಾಟಲು ತೋರಿಸಿದ.
‘ಈ ತೆಂಗಿನ ಎಣ್ಣೆಯ ಪರಿಮಳ ಚೂರು ಸವರಿ ಹೋದ ಹಾಗಿರಬೇಕು…. ಆಗ ಈ ಕೋಳಿ ಕರಿಗೆ ಒಂದು ರೀತಿಯ ಘನತೆ ಬರುತ್ತದೆ…. ರುಚಿ ಅಂದರೆ ಬರೀ ನಾಲಿಗೆಯ ರುಚಿಯಷ್ಟೇ ಅಲ್ಲ…. ಪಂಚೇಂದ್ರಿಯಕ್ಕೂ ಅನುಭವಕ್ಕೆ ಬರಬೇಕು…. ಆಗಲೇ ಅದು ಸಾರ್ಥಕ….’
ಅಡಿಗೆ ಅಂದರೆ ಅದೊಂದು ಮಹತ್ವವಾದ ಯಜ್ಞವೆಂಬಂತೆ ಅವನು ಮಾತನಾಡುತ್ತಿದ್ದ. ಸೌಟು ಹಿಡಿದಾಗ, ಹವಿಸ್ಸನ್ನು ಕೊಡುತ್ತಿರುವ ಯಜ್ಞದ ಅಧ್ವರ್ಯುವಿನಂತೆ ಕಂಡ. ಕಟ್ಟಿಗೆ ಸೌಟಿನಿಂದ ಚೂರು ಸಾರನ್ನು ಅಂಗೈಗೆ ಬೀಳಿಸಿಕೊಂಡು ನೆಕ್ಕಿದ. ಕಡಾಯಿಗೆ ಮುಚ್ಚಳ ಹಾಕಿ, ಒಂದು ತುದಿಯಲ್ಲಿ ಅರೆತೆರೆದಿಟ್ಟು, ಸಣ್ಣ ಉರಿಯಲ್ಲಿ ಕುದಿಯಲು ಬಿಟ್ಟ.
‘ಇದರ ಜೊತೆ ತಿನ್ನಲಿಕ್ಕೆ ಗೋವಾದ ಬನ್ ರಂದಿದ್ದೇನೆ…. ಅದು ಸಿಗುವ ಜಾಗಗಳೂ ಈ ಊರಲ್ಲಿವೆ. ಒಂದು ದಿನ ಗೋವದ ಸ್ನೇಹಿತರೊಬ್ಬರನ್ನು ನೋಡಲು ಹೋಗಿದ್ದೆ. ಅವರ ಮಗುವೊಂದು ಕೈಯಲ್ಲಿ ಬನ್ ಹಿಡಿದು ಆಚೆ ಬಂತು…. ಅದನ್ನು ನೋಡಿದ್ದೇ ಗೋವಾದ ಬನ್ ಎಂದು ಗೊತ್ತಾಯಿತು….’
ಅವನ ಮಾತು ಮುಗಿಯುತ್ತಿದ್ದಂತೆ ನಡುಮನೆಯ ಮೆಟ್ಟಲಿಳಿದು ಬರುತ್ತಿದ್ದ ಹೆಂಗಸು ಮನೋಹರನ ಕಣ್ಣಿಗೆ ಬಿದ್ದಳು. ಆ ಕಬ್ಬಿಣದ ಮೆಟ್ಟಿಲುಗಳು ಚಕ್ರಾಕಾರವಾಗಿ ಸುರುಳಿ ಸುತ್ತಿ ಸುತ್ತಿ ಮೊದಲ ಮಹಡಿಯಿಂದ ಇಳಿದಿದ್ದವು. ಅದಕ್ಕೆ ಸೋನೇರಿ ಬಣ್ಣ ಹಚ್ಚಲಾಗಿತ್ತು. ಕಡುನೀಲಿ ಬಟ್ಟೆ ತೊಟ್ಟ ಅವನ ಹೆಂಡತಿ ಚಪ್ಪಲಿಗಳ ಹಿಮ್ಮಡಿಯಿಂದ ಟಕ್ಕಟಕ್ಕನೆ ಸದ್ದು ಮಾಡುತ್ತ ಇಳಿದು ಬಂದಳು. ಅವಳು ಬರುತ್ತಿದ್ದ ಹಾಗೇ ಮನೋಹರ ಎದ್ದು ನಿಂತ.
ಅವಳು ‘ನಾನು ನಿಧಿ’ ಎಂದು ಕೈಚಾಚಿದಳು. ಅವಳ ಕೈಕುಲುಕುತ್ತ ಮನೋಹರ ಹೆಸರು ಹೇಳಿದ.
‘ಪರಿಚಯ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲದಷ್ಟು ಇವನು ನಿಮ್ಮ ಬಗ್ಗೆ ಹೇಳಿದ್ದಾನೆ….’ ಅನ್ನುತ್ತ ಅಡಿಗೆಯ ತಯಾರಿಯತ್ತ ಗಮನಿಸಿದಳು. ‘ಏನು ನಡೆಸಿದ್ದಾನೆ ನನ್ನ ಗಂಡ?…. ಮಾತಿನಲ್ಲೇ ಅಡಿಗೆ ಮುಗಿಸಿ ಮಾತಿನಲ್ಲೇ ಊಟವನ್ನು ಹಾಕುತ್ತಾನೆ ಬೇಕಾದರೆ….. ಕಶ್ಯಪ್ ಏನಾದರೂ ಮಾಡಬೇಕೇನು?’
‘ಏನೂ ಬೇಡ…. ಕೆಲವೇ ನಿಮಿಷಗಳಲ್ಲಿ ಎಲ್ಲ ರೆಡಿ…. ಗ್ಲಾಸುಗಳನ್ನು ಟೇಬಲ್ಲಿನ ಮೇಲಿಡಬಹುದು…. ಅವನಿಗೆ ಬಿಯರ್ ಬೇಕೋ ನೋಡುತ್ತೀಯಾ?’
ಮನೋಹರ ತನಗೆ ಮತ್ತೆ ಬಿಯರ್ ಬೇಡವೆಂದ. ನಿಧಿ ಕಶ್ಯಪನ ಹತ್ತಿರ ನಿಂತಾಗ ಅವಳ ಎತ್ತರ ನೋಡಿ ಅವನಿಗೆ ಸರಿಯಾದ ಜೋಡಿಯೆಂದು ಮನೋಹರ ಅಂದುಕೊಂಡ.
ಹಗಲು ತಲುಪುವಲ್ಲಿ ಕತ್ತರಿಸಿಕೊಂಡ ಅವಳ ಕೂದಲು ತುಸು ಗುಂಗುರಾಗಿತ್ತು. ಅಚ್ಚ ಕಪ್ಪಾಗಿತ್ತು. ಕಟ್ಟದೇ ಹಾಗೇ ಜೊಂಪೆಜೊಂಪೆಯಾಗಿ ಇಳಿಬಿಟ್ಟಿದ್ದಳು. ಸಪೂರ ಸದೃಢ ದೇಹ. ತುಸು ತಿಳಿ ನೀಲಿ ಬಣ್ಣದ ದೊಡ್ಡ ಕಣ್ಣುಗಳು. ಅಷ್ಟೇನೂ ತುಂಬಿಕೊಂಡಿಲ್ಲದ ಎದೆ. ಬೆಳ್ಳಗಿನ ಮೈಬಣ್ಣ.
‘ಮನೋಹರ ಉತ್ತರ ಕನ್ನಡವನು ಗೊತ್ತೇನು?’ ಎಂದು ಅದೊಂದು ಪದವಿಯೋ, ಬಿರುದೋ ಎಂಬಂತೆ ಕಶ್ಯಪ್ ಅವಳಿಗೆ ಹೇಳಿದ.
‘ಹಾಗಾದರೆ ನಿನ್ನ ಮಾತಿನ ಸತ್ಯಾಸತ್ಯತೆಯನ್ನು ಇವನಿಂದ ಪರೀಕ್ಷಿಸಿಕೊಳ್ಳಬಹುದು ಅನ್ನು’ ಎಂದು ಅವಳು ಸ್ವಲ್ಪ ತುಂಟತನದಿಂದ, ಅವನನ್ನು ಒಂದಿಷ್ಟು ನಿಯಂತ್ರಿಸುವವಳಂತೆ ಹೇಳಿದಳು.
‘ಇವರು ನನ್ನ ಮಾತುಗಳನ್ನು ಒಪ್ಪಿಕೊಂಡ ನಂತರವಾದರೂ ನಿಮಗೆಲ್ಲ ನಂಬಿಕೆ ಬಂದೀತು’ ಎಂದು ಕಶ್ಯಪ್ ಬಿಯರು ಹೀರಿದ.
‘ಸ್ವಾತಿ ಎಷ್ಟು ಗಂಟೆಗೆ ಬರುತ್ತೇನೆಂದಿದ್ದಳು?’ ಎಂದು ನಿಧಿ ಕೇಳಲಿಕ್ಕೇ ಬಾಗಿಲು ಬಡಿದ ಸದ್ದಾಯಿತು.
‘ಅವಳೇ ಅವಳೇ’ ಎಂದ ಕಶ್ಯಪ್. ‘ಅವಳು ಯಾವಾಗಲೂ ಮೊದಲು ಬಾಗಿಲು ಬಡಿಯುವುದು. ತೆರೆಯದಿದ್ದರೆ ಮಾತ್ರ ಬೆಲ್ ಬಾರಿಸುವುದು’.
ನಿಧಿ ಬಾಗಿಲು ತೆರೆದಳು. ಜೀನ್ಸ್ ಮತ್ತು ಶರ್ಟು ತೊಟ್ಟು, ಹೆಗಲಿಗೊಂದು ಬ್ಯಾಗ್ ಏರಿಸಿಕೊಂಡ ಚೂಪು ಮೂಗಿನ ಹುಡುಗಿಯೊಬ್ಬಳು ಒಳಬಂದಳು. ಕಶ್ಯಪ್ ಮಾತಿನ ಮುಂದಾಳತ್ವ ವಹಿಸಿದ.
‘ಅಂತೂ ಬಂತಲ್ಲ ಸವಾರಿ…. ಇವರೇ ಮನೋಹರ್….. ನಿಮ್ಮ ಹಾಗೇ ಇವರೂ ಜಾಹೀರಾತಿಗೆ ಸಂಬಂಧಿಸಿದ ಕ್ಷೇತ್ರದಲ್ಲೇ ಕೆಲಸ ಮಾಡುತ್ತಿರುವುದು…. ಮುಖ್ಯವಾಗಿ ಇವರು ಉತ್ತರ ಕನ್ನಡ ಜಿಲ್ಲೆಯವರು…. ನನ್ನ ಗಂಗಾವಳಿ ಯಾತ್ರೆಗೆ ಸಹಾಯ ಮಾಡುವ ಭರವಸೆ ಕೊಟ್ಟಿದ್ದಾರೆ….’
ಸ್ವಾತಿ ಮತ್ತು ಮನೋಹರ ಪರಸ್ಪರ ಹಲೋ ಅಂದರು. ಮತ್ತೆ ಕಶ್ಯಪನೇ ಮುಂದುವರಿಸಿದ.
‘ಸ್ವಾತಿ ಜಾಹೀರಾತು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಅವಳದು ಸಾಹಿತ್ಯ ಮತ್ತು ಜರ್ನಲಿಸಂ ಹಿನ್ನೆಲೆ….. ಅವಳೊಂದು ಪೇಪರಿಗೂ ಕೆಲಸ ಮಾಡಿದ್ದಳು…. ಈಗಲೂ ಆಗಾಗ ಬರೆಯುತ್ತಾಳೆ…. ಹಾಗೆ ನನ್ನನ್ನು ಒಮ್ಮೆ ಇಂಟರ್‌ವ್ಯೂ ಮಾಡಲಿಕ್ಕೆ ಅಂತ ಬಂದಾಗ ಮೊದಲ ಬಾರಿ ಭೆಟ್ಟಿಯಾದೆವು…. ಈಗ ಪಶ್ಚಿಮಘಟ್ಟಗಳ ಉಳಿವಿನ ಅಗತ್ಯದ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡಲು ಧನಸಹಾಯ ಸಿಕ್ಕಿದೆ… ಈ ಗಂಗಾವಳಿ ಯಾತ್ರೆಯಿಂದಲೇ ಅದು ಶುರುವಾಗಲಿ ಎಂದು ನಾನು ಹೇಳುವುದು…. ಅವಳಿಗೂ ಅದು ಈಗ ನಿಜ ಅನ್ನಿಸಿದೆ. ಅವಳ ಸಂಸ್ಥೆಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿದ್ದಾಳೆ. ಅಷ್ಟಾದರೆ ಕೆಲಸ ಶುರು ಮಾಡಲು ತಡಮಾಡಬೇಕಾಗಿಲ್ಲ. ಆದರೆ ಸಿನೇಮಾ ಅಂದರೆ ಗೊತ್ತಲ್ಲ. ಪ್ರತಿಯೊಂದೂ ಗೊತ್ತಿರಬೇಕು. ಅಲ್ಲಿ ಅನಿಶ್ಚಯಕ್ಕೆ ಜಾಗವಿಲ್ಲ….’

ಆ ಅದು

ಏಳನೇ ಇಯತ್ತೆಯ ವಾರ್ಷಿಕ ಪರೀಕ್ಷೆಯ ನಂತರದ ಬೇಸಿಗೆಯ ರಜೆಯಲ್ಲಿ ಮನೋಹರ ಅಂಕೋಲೆಯ ಚಿಕ್ಕಪ್ಪ ಯಶವಂತನ ಮನೆಗೆ ಬಂದಿದ್ದ. ಬೇಸಿಗೆಯ ಧಗೆಯಲ್ಲಿ ಹೊರಗೆ ಆಡಲು ಸಾಧ್ಯವಾಗುತ್ತಿದ್ದುದು ಸಂಜೆಯ ಹೊತ್ತು ಮಾತ್ರ. ಪ್ರತಿ ಸಂಜೆ ಗಾಂಧಿ ಮೈದಾನದಲ್ಲಿ ವಾಲಿಬಾಲ್ ಆಡುವ ಹುಡುಗರ ಟೋಳಿಯಲ್ಲಿ ಮನೋಹರ ಸೇರಿಕೊಂಡ. ಅಲ್ಲಿಯೇ ಕಾಶೀಶನ ಪರಿಚಯವಾಗಿದ್ದು. ಚೆನ್ನಾಗಿ ಸ್ಮ್ಯಾಶ್ ಹೊಡೆಯುತ್ತಾನೆಂದು ಅವನನ್ನು ಎಲ್ಲರೂ ತಮ್ಮ ಪಂಗಡಕ್ಕೆ ಸೇರಿಸಿಕೊಳ್ಳಲು ಹವಣಿಸುತ್ತಿದ್ದರು. ಎರಡೂ ಪಂಗಡಗಳ ನಾಯಕರನ್ನು ಆರಿಸಿದ ನಂತರ ಅವರು ಒಬ್ಬರಾದ ಮೇಲೊಬ್ಬರಂತೆ ಉಳಿದ ಹುಡುಗರನ್ನು ಆಯ್ದುಕೊಳ್ಳುತ್ತಿದ್ದರು. ಈ ಎಲ್ಲ ನಡೆಯುವಾಗ ಕಾಶೀಶ ಒಂದು ಕೈಯಿಂದ ವಾಲಿಬಾಲನ್ನು ನೆಲಕ್ಕೆ ಬಡಿದು ಪುಟಿಸುತ್ತ ತನ್ನಷ್ಟಕ್ಕೆ ನಿಂತಿರುತ್ತಿದ್ದ. ಅವನ ಪರಿಚಯವಾದ ಮೊದಲ ದಿನ ಅವನ ಹೆಸರನ್ನು ಕೇಳಿದಾಗ ಮನೋಹರ ತಾನು ತಪ್ಪಾಗಿ ಕೇಳಿಸಿಕೊಂಡಿದ್ದೇನೆಂದು ಭಾವಿಸಿದ್ದ. ಅಂಥ ಹೆಸರನ್ನು ಈ ಮೊದಲು ಅವನು ಕೇಳಿರಲಿಲ್ಲ. ಆಮೇಲೆ ಒಮ್ಮೆ ಅದರ ಬಗ್ಗೆ ಮಾತನಾಡುವಾಗ, ಅದು ತಮ್ಮ ಮನೆತನದ ದೇವರ ಹೆಸರೆಂದು ಹೇಳಿದ.
ಮನೋಹರನಿಗಿಂತ ನಾಲ್ಕೈದು ವರ್ಷ ದೊಡ್ಡವನಾದ ಅವನಿಗೆ ತೆಳುವಾಗಿ ಗಡ್ಡ ಮೀಸೆಗಳು ಹುಟ್ಟಿದ್ದವು. ತಲೆಯ ಕೂದಲನ್ನು ಅವನು ಪದೇ ಪದೇ ಒತ್ತಿ ಕೂರಿಸಿಕೊಳ್ಳೂತ್ತಿದ್ದ ರೀತಿ. ರೇಸಿಂಗ್ ಸೈಕಲ್ ಎಂದು ಹುಡುಗರು ಹೇಳುತ್ತಿದ್ದ ವಿಶಿಷ್ಟ ಹ್ಯಾಂಡಲಿನ ಕೆಂಪು ಬಣ್ಣದ ಅವನ ಸೈಕಲ್ಲು, ಅದರ ಮುಂದಿನ ಬ್ರೇಕ್ ಹಾಕಿದಾಗಲೆಲ್ಲ ಕಿಣಿಕಿಣಿ ಸದ್ದು ಮಾಡುತ್ತಿದ್ದ ಚಕ್ರಕ್ಕೇ ಜೋಡಿಸಿದ ಬೆಲ್ಲು. ಅವನು ಹಾಕುತ್ತಿದ್ದ ಬಾಬ್ಬಿ ಕಾಲರಿನ ಶರ್ಟುಗಳು, ಅವನ ಹತ್ತಿರ ಹೋದರೆ ಬರುತ್ತಿದ್ದ ಪೌಡರಿನ ಸುವಾಸನೆ, ಅವನ ಬಳೀಯಿದ್ದ ಹಿಂದಿ ಸಿನೇಮಾದ ಹಾಡಿನ ಚಿಕ್ಕ ಚಿಕ್ಕ ನಾಲ್ಕಾಣೆಯ ಪುಸ್ತಕಗಳು – ಇವೆಲ್ಲವೂ, ಆದರೆ ಇದೇ ಅಂತ ಗೊತ್ತಾಗದ ಯಾವುದೋ ಒಂದು ಮನೋಹರನಿಗೆ ಕಾಶೀಶನ ಬಗ್ಗೆ ಗಢವಾದ ಆಕರ್ಷಣೆಯನ್ನು ಹುಟ್ಟಿಸಿತು. ಸಂಜೆ ವಾಲಿಬಾಲ್ ಆಡಿದ ನಂತರ ಎಲ್ಲರೂ ಗಜೂನ ಅಂಗಡಿಯಲ್ಲಿ ಲಿಂಬೂ ಸೋಡಾ ಕುಡಿದರೆ ಕಾಶೀಶ ಲಿಂಬೂ ಶರಬತ್ ಕುಡಿಯುತ್ತಿದ್ದ. ದುಡ್ಡಿಟ್ಟುಕೊಳ್ಳಲು ಅವನ ಹತ್ತಿರ ಒಂದು ಪರ್ಸ್ ಕೂಡ ಇತ್ತು. ಎರಡೂ ಬದಿಗೆ ಕಾಲು ಬಿಟ್ಟುಕೊಂಡು ಅವನು ಸೈಕಲ್ ಕ್ಯಾರಿಯರ್ ಮೇಲೆ ಕೂರುತ್ತಿದ್ದ ರೀತಿ ಮನೋಹರನಿಗೆ ಬಹಳ ಹಿಡಿಸುತ್ತಿತ್ತು. ಹುಡುಗರೆಲ್ಲ ಹೇಳುವ ಹಾಗೆ ಅವನಿಗೊಂದು ‘ಅದಿತ್ತು’. ಆ ಅದು ಎಂದರೇನೆಂಬುದು ಯಾರಿಗೂ ಸ್ಪಷ್ಟವಾಗಿ ಮಾತಿನಲ್ಲಿ ಹೇಳಲು ಗೊತ್ತಿಲ್ಲದಿದ್ದರೂ ಹಾಗಂದರೇನೆಂದು ಎಲ್ಲರಿಗೂ ಅರ್ಥವಾಗುತ್ತಿತ್ತು.
ಹೊಸದಾಗಿ ಸೈಕಲ್ ಕಲಿತ ಹುಡುಗರೆಲ್ಲ ಗಂಟೆಗೆ ಹತ್ತು ಪೈಸೆ ಕೊಟ್ಟು ಬಾಡಿಗೆ ಸೈಕಲ್ಲು ಓಡಿಸುತ್ತಿದ್ದರು. ಡಬ್ಬಲ್ ರೈಡ್ ಮಾಡಬಾರದೆಂದು ಸೈಕಲ್ ಕೊಡುವ ಮುಂಚೆ ನೂರು ಸಲ ಹೇಳುತ್ತಿದ್ದ ಬಾಡಿಗೆ ಅಂಗಡಿಯ ಪುಡಿಸ್ಯಾಬನ ಕಣ್ಣಳವಿನ ಆಚೆ ಹೋಗಿದ್ದೇ ಇನ್ನೊಬ್ಬರನ್ನು ಹತ್ತಿಸಿಕೊಳ್ಳುತ್ತಿದ್ದರು. ಇದನ್ನು ತಪ್ಪಿಸಲು ಅವನು ಸೈಕಲ್ಲಿನ ಕ್ಯಾರಿಯರ್ ಕಿತ್ತು, ಮುಂದುಗಡೆಯ ಅಡ್ದಸಲಾಕೆಗೆ ಎರಡೆರಡು ಬೋಲ್ಟುಗಳನ್ನು ಕೂರಿಸಿದರೂ ಹುಡುಗೆರು ಅದರ ಮೇಲೆ ಬಟ್ಟೆ ಸುತ್ತಿಟ್ಟು ಕೂರುತ್ತಿದ್ದರು. ಅವನು ಬೇಡವೆನ್ನುವುದು ಯಾಕೆಂದು ಅರ್ಥವಾಗದಿದ್ದ ಹಾಗೇ ಡಬ್ಬಲ್ ಮಾಡುವ ಹುಡುಗರ ಹುಚ್ಚೂ ಅರ್ಥವಾಗುತ್ತಿರಲಿಲ್ಲ. ನಿಯಮ ಮೀರುವವರನ್ನು ಹಿಡಿಯಲು ತನ್ನ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗರನ್ನು ಆಗಾಗ ಗಾಂಧಿ ಮೈದಾನಕ್ಕೆ ಕಳಿಸುತ್ತಿದ್ದ. ಅಲ್ಲಿ ಸಿಕ್ಕಿಬಿದ್ದವರಿಗೆ ಡಬ್ಬಲ್ ಬಾಡಿಗೆ ಹಾಕುತ್ತಿದ್ದ. ಈ ಸ್ಯಾಬನ ಪ್ರಭಾವದಿಂದ ಡಬ್ಬಲ್ ಮಾಡಿದರೆ ಸೈಕಲ್ ಹಾಳಾಗುತ್ತದೆಂದು ಊರಿನ ಬಹುತೇಕ ಜನ ನಂಬಿದಂತಿತ್ತು. ಯಾಕೆ ಡಬ್ಬಲ್ ಮಾಡಬಾರದೆಂದು ಸ್ಯಾಬನನ್ನು ಕೇಳಿದರೆ ಅವನು ಅದನ್ನು ತನ್ನ ವಿರುದ್ಧ ಹೂಡಿದ ಬಂಡಾಯವೆಂದು ಭಾವಿಸಿ ಜಗಳಕ್ಕೇ ಇಳಿಯುತ್ತಿದ್ದುದರಿಂದ ಎಲ್ಲರೂ ಅವರವರ ತಿಳಿವಳಿಕೆಗೆ ತಕ್ಕಂತೆ ಅದನ್ನು ಅರ್ಥೈಸಿಕೊಂಡಿದ್ದರು. ಕಾಶೀಶನೂ ತನ್ನ ಸೈಕಲ್ ಮೇಲೆ ಯಾರನ್ನೂ ಕೂರಿಸಿಕೊಳ್ಳುತ್ತಿರಲಿಲ್ಲ. ಸಂಜೆ ಆಟ ಮುಗಿಸಿ ಮನೆಗೆ ಹೋಗುವಾಗ ಮನೋಹರನ ಮನೆಯವರೆಗೂ ತನ್ನ ಸೈಕಲ್ ತಳ್ಳಿಕೊಂಡು ಬರುವನು. ತನ್ನ ಸೈಕಲ್ ಮೇಲೆ ಡಬ್ಬಲ್ ರೈಡ್ ಮಾಡಬಾರದೆಂಬ, ತಾನೇ ಹಾಕಿಕೊಂಡ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ. ಅದಕ್ಕೆ ಕಾರಣವೇನು ಎಂಬುದನ್ನು ಮನೋಹರನಿಗೆ ವಿವರಿಸಿದವನು ಅವನೇ.
‘ನೋಡು..ಸೈಕಲ್ ಮೇಲೆ ಕೂತವನ ಭಾರ ಅದರ ಚಕ್ರಗಳ ಮೇಲೆ ಹೀಗೆ ಬೀಳಬೇಕೆಂದು ಇದರ ಡಿಸೈನ್ ಈ ರೀತಿಯಾಗಿದೆ… ಅದಕ್ಕಿಂತ ಹೆಚ್ಚಿನ ಭಾರ ಹಾಕಿದರೆ ಚೈನಿಗೆ ಅದನ್ನು ಎಳೆಯುವ ಶಕ್ತಿ ಇರುವುದಿಲ್ಲ. ಹಾಗೂ ಡಬ್ಬಲ್ ಮಾಡಿದೆ ಅನ್ನು, ಅದೇನೂ ನಿಂತು ಹೋಗುವುದಿಲ್ಲ…ಆದರೆ ಚೈನಿನಲ್ಲಿ ಎಳೆತ ಉಂಟಾಗಿ, ಅದು ತುಸು ಸಡಿಲಾಗಿ ಜೋತುಬೀಳುತ್ತದೆ…’
ಹೀಗೆ ಅವನು ಹೇಳಿದ ನಂತರ ಸೈಕಲ್ ಚೈನುಗಳನ್ನು ನೋಡಿದಾಗಲೆಲ್ಲ ಅವು ಸಡಿಲಾಗಿವೆಯೇ ಎಂದು ಮನೋಹರ ಗಮನಿಸತೊಡಗಿದ.
ಆಟದ ಬಯಲಿನಿಂದ ಮನೆಯವರೆಗೂ ಒಟ್ಟಿಗೆ ನಡೆಯುವಾಗ ಅವರಿಬ್ಬರೂ ಏನೇನೋ ಮಾತಾಡಿಕೊಳ್ಳುತ್ತಿದ್ದರು. ಸಾಮಾನ್ಯವಾಗಿ ಅಂಕೋಲೆಯ ಹುಡುಗರಾರೂ ಕಾಶೀಶನ ಜೊತೆ ಹೆಚ್ಚು ಸೇರುತ್ತಿರಲಿಲ್ಲ. ಕಾಶೀಶನ ಮಾತಿನಲ್ಲಿ ಅವನಿಗೆ ದೊಡ್ಡವರ ಪ್ರಪಂಚದ ಜೊತೆ ಒಂದು ರೀತಿಯ ಸಂಬಂಧ ಇದ್ದುದು ಗೊತ್ತಾಗುತ್ತಿತ್ತು. ಮನೋಹರನಿಗೆ ಆವರೆಗೂ ಗೊತ್ತಿರದ ಸಂಗತಿಗಳನ್ನು ಕುರಿತು ಕಾಶೀಶ ಹೇಳುತ್ತಿದ್ದ.
‘ಲಾರಿ ಡ್ರೈವರ್ ಗಜುನ ಅಣ್ಣ ಒಬ್ಬ ಇದ್ದಾನೆ….ಅವನು ಇನ್ನೂ ಎಕ್ಸ್‌ಪರ್ಟ್ ಡ್ರೈವರ್… ಇಡೀ ಬಾಂಬೆ ರೂಟಲ್ಲಿ ಅವನ ಹಾಗೆ ಯಾರೂ ಇಲ್ಲ. ಅವನು ಬ್ರೇಕ್ ಉಪಯೋಗಿಸದೇ ಬರೀ ಗೇರ್ ಮೇಲೆಯೇ ಗಾಡಿಯನ್ನು ಕಂಟ್ರೋಲ್ ಮಾಡುತ್ತಾನೆ…’
ಮನೋಹರನಿಗೆ ಬ್ರೇಕ್ ಅನ್ನುವುದು ಗೊತ್ತಾಗುತ್ತಿತ್ತು. ಆದರೆ ಗೇರ್ ಹೇಗೆ ಕೆಲಸ ಮಾಡುತ್ತದೆ, ಅದು ಇರುವುದಾದರೂ ಯಾಕೆ ಗೊತ್ತಿರಲಿಲ್ಲ. ಆದರೆ ತನ್ನ ಅಜ್ಞಾನವನ್ನು ಕಾಶೀಶನೆದುರು ಪ್ರದರ್ಶಿಸುವ ಮನಸ್ಸಾಗದೇ ಸುಮ್ಮನಾಗುತ್ತಿದ್ದ. ಅವರ ಮಾತುಗಳ ಮಧ್ಯೆ ನಾನಾ ವಿಷಯಗಳು ಬಂದು ಹೋಗುತ್ತಿದ್ದವು.
‘ಮುಂಬೈಯಲ್ಲಿ ಹ್ಯಾಗೆ ಗೊತ್ತೇನು? ಸ್ಮಗ್ಲಿಂಗ್ ಎಕ್ಸಪರ್ಟ್ ಇರ್‍ತಾರೆ. ಪೋಲೀಸರ ಕಣ್ಣೆದುರಿಗೇ ಮಾಲು ಎತ್ತಿಕೊಂಡು ಹೋದರೂ ಅವರಿಗೆ ಗೊತ್ತಾಗುವುದಿಲ್ಲ.’
ಸ್ಮಗ್ಲಿಂಗ್ ಅಂದರೆ ಏನೆಂಬುದರ ಬಗ್ಗೆ ಹಿಂದಿ ಸಿನೇಮಾದಿಂದ ಪಡೆದ ಜ್ಞಾನದಿಂದಲೇ ಮನೋಹರ ಚರ್ಚಿಸುತ್ತಿದ್ದ. ರಾತ್ರಿ ಹೊತ್ತು ಸಮುದ್ರ ದಂಡೆಯ ಮೇಲೆ ದೋಣಿಯಿಂದ ಇಳಿಸುವ ಪೆಟ್ಟಿಗೆಗಳ ಹೊರತು ಅವನಿಗೆ ಬೇರೇನೂ ಗೊತ್ತಿರಲಿಲ್ಲ. ಭಟ್ಕಳದಿಂದ ಬಂದ ಕೆಲವರು ಸ್ಮಗ್ಲಿಂಗ್ ಮಾಲು ಎಂದು ನೇಲ್‌ಕಟರ್‌ಗಳನ್ನೂ ಟೇಪ್‌ಗಳನ್ನೂ ಮಾರುವುದನ್ನು ನೋಡಿದ್ದ. ಅವರೆಲ್ಲ ರಾತ್ರಿಯ ಹೊತ್ತು ಭಟ್ಕಳದ ಬಂದರಿನಲ್ಲಿ ಪೆಟ್ಟಿಗೆಗಳನ್ನು ಇಳಿಸುತ್ತಾರೆಯೇ ಎಂದೂ ಯೋಚಿಸಿದ್ದ.
ಅವನು ಹೇಳಿದ ಒಂದು ಜೋಕ್ ಮಾತ್ರ ಅರ್ಥವೇ ಆಗಿರಲಿಲ್ಲ. ‘ಜೀಯಾ ಬೇಕರಾರಹೈ, ನರ್ಗಿಸ್ ಭೀಮಾರ ಹೈ’ ಎಂದು ಹಾಡಿನ ಸಾಲನ್ನು ಕೊಂಚ ಬದಲಾಯಿಸಿ ಮುಂದೆ ರಾಜಕಪೂರ್ ಎಂದೇನೋ ಹೇಳಿದ್ದ. ಅದು ಅರ್ಥವಾದವನ ಹಾಗೆ ಮನೋಹರ ನಕ್ಕಿದ್ದ. ಮಾತು ಅಲ್ಲಿಗೇ ಮುಗಿದು ಹೋಗಿತ್ತು. ಅವನು ಏನು ಹೇಳಿದ್ದ ಅನ್ನುವುದು ಗೊತ್ತಾಗದೇ, ಅದು ಮತ್ತೆ ನೆನಪಾಗದೇ, ಅದರ ಬಗ್ಗೆ ನಾನಾ ಊಹಾಪೋಹಗಳು ಎದ್ದಿದ್ದವು. ಮುಂದೆ ಈ ಹಾಡು ಕಿವಿಗೆ ಬಿದ್ದಾಗಲೆಲ್ಲ, ಅರ್ಥವಾಗದೇ ಹೋದ ಕಾಶೀಶನ ಜೋಕ್ ನೆನಪಾಗುತ್ತಿತ್ತು.
ಮುಂಬೈಗೆ ಹೋಗುವ ದಾರಿಯಲ್ಲಿರುವ ಖಂಡಾಲಾ ಘಟ್ಟ ದಾಟಿ ಹೋಗುವ ವಿವರಣೆ ಅವನ ಮಾತುಗಳಲ್ಲಿ ಒಂದು ದುರ್ಗಮ ಯಾತ್ರೆಯಂತೆ ತೋರುತ್ತಿತ್ತು. ಅವನು ಒಮ್ಮೆಯೂ ಮುಂಬೈಗೆ ಹೋಗಿರಲಿಲ್ಲವದರೂ, ಅದರಿಂದ ಅವನ ಮಾತಿನ ನಾಟಕೀಯತೆಯೇನೂ ಕಡಿಮೆಯಾಗುತ್ತಿರಲಿಲ್ಲ.
‘ಘಟ್ಟ ಅಂದರೆ ಘಟ್ಟ ಅದು. ಹೀಗೆ ನೆಟ್ಟಗೆ…. ನನ್ನ ಕೈ ನೋಡು…. ಹೀಗೆ…. ಗಾಡಿ ಹೆವಿ ಇದ್ದರೆ ಇನ್ನೂ ಕಷ್ಟ…. ಎಲ್ಲಾ ಗಾಡೀನೂ ಫಸ್ಟ್ ಗೇರಲ್ಲೇ ಹೋಗಬೇಕು. ಸ್ವಲ್ಪ ಮಿಸ್ ಆದರೂ ಫಡ್ಚ…. ಅಲ್ಲಿ ಓವರ್‌ಟೇಲ್ ಇಲ್ಲ. ಒಂದರ ಹಿಂದೆ ಒಂದು ಹೋಗಬೇಕು…. ಅಲ್ಲಿ ಭೊಗದೆಗಳು ಇದ್ದಾವೆ…. ಹಾಗಂದರೆ ಸುರಂಗಗಳು…. ಅವುಗಳಲ್ಲಿ ಹೋಗುವಾಗ ಕತ್ತಲಾದ ಹಾಗೆ ಅನಿಸಿಬಿಡುತ್ತದೆ. ಹಗಲಿನಲ್ಲೂ ಹೆಡ್‌ಲೈಟ್ ಹಾಕಿಕೊಂಡೇ ಹೋಗಬೇಕು…. ಅಷ್ಟು ಎಕ್ಸ್‌ಪರ್ಟ್ ಅಲ್ಲದವರು ರಾತ್ರಿ ಘಟ್ಟದ ಮೇಲೆ ಹೋಗುವುದೇ ಇಲ್ಲ. ಬೆಳಕಾಗುವವರೆಗೂ ಕಾದು ಆಮೇಲೆ ಹೋಗುತ್ತಾರೆ….’
ಖಂಡಾಲಾ ಘಟ್ಟದ ವಿವರಗಳನ್ನು ಮತ್ತೆ ಮತ್ತೆ ಕೇಳಬೇಕೆನ್ನುವಷ್ಟು ರೋಚಕವಾಗಿ ಅವನು ಹೇಳುತ್ತಿದ್ದ. ‘ಖಂಡಾಲಾಚಾ ಘಾಟಿ ವರಿ ಜಾವೂಯಾ’ ಎಂದು ಒಂದು ಮರಾಠಿ ಹಾಡು ಹೇಳಿ ಅದನ್ನು ಇನ್ನಷ್ಟು ರಮ್ಯವಾಗಿಸಿದ್ದ.
‘ಮುಂಬೈಯಲ್ಲಿ ಯಾರೂ ಯಾರನ್ನೂ ಕೇರ್ ಮಾಡುವುದಿಲ್ಲ. ಅಲ್ಲಿ ಊರೊಳಗೆ ಓಡಾಡಲಿಕ್ಕೆ ಲೋಕಲ್ ರೈಲುಂಟು. ರೈಲು ಬಂದದ್ದೇ ನುಗ್ಗಿ ಹೋಗಬೇಕು. ಅದು ಬರುತ್ತದೆ, ಒಂದೇ ನಿಮಿಷ ನಿಲ್ಲುತ್ತದೆ. ಹತ್ತಿದ್ದಾರೋ ಇಳಿದಿದ್ದಾರೋ ಅಂತ ಕಾಯದೇ ಹೊರಟು ಬಿಡುತ್ತದೆ…. ಒಂದೇ ನಿಮಿಷ ಅಷ್ಟೇ…. ಟೈಮ್ ಅಂದರೆ ಟೈಮ್…. ಅಲ್ಲಿಯ ರೈಲು ಉಪಯೋಗಿಸುವುದನ್ನು ಕಲಿತರೆ ಅಲ್ಲಿ ಬದುಕಲು ಕಲಿತ ಹಾಗೇ ಎಂದು ನನ್ನ ಅಂಕಲ್ ಹೇಳುತ್ತಿದ್ದರು. ನನ್ನ ರಿಸಲ್ಟ್ ಆಗಿದ್ದೇ ಅವರ ಹತ್ತಿರ ಹೋಗುತ್ತೇನೆ…. ಅಲ್ಲಿ ಎಲಿಫಿನ್‌ಸ್ಟನ್ ಕಾಲೇಜು ಸೇರುತ್ತೇನೆ….’ ಅವನ ಬಾಯಲ್ಲಿ ಅದು ಜಗದ್ವಿಖ್ಯಾತ ಕಾಲೇಜಿನಂತೆ ಕೇಳಿಸಿತು.
ಕಾಶೀಶನಿಗೂ ಉಳಿದ ಹುಡುಗರಿಗೂ ನಡುವೆ ಮಾತಿಗೆ ನಿಲುಕದ ಒಂದು ಅಂತರವಿದೆಯೆಂದು ಮನೋಹರನಿಗೆ ಅನಿಸುತ್ತಿತ್ತು. ಒಮ್ಮೆ ಯಾವುದೋ ಮಾತಿಗೆ ನಿನ್ನ ಮನೆಗೆ ಬರುತ್ತೇನೆಂದು ಮನೋಹರ ಹೇಳಿದ್ದಕ್ಕೆ ಅವನಿಗೆ ಖುಷಿಯಾಗಿಬಿಟ್ಟಿತು.
‘ನಿನ್ನ ಮನೆಯಲ್ಲಿ ನನ್ನ ಬಗ್ಗೆ ಹೇಳಿದ್ದೀಯಾ?’ ಎಂದು ಕಾಶೀಶ ಕೇಳಿದ.
‘ಹೌದು…. ಇದು ನನ್ನ ಚಿಕ್ಕಪ್ಪನ ಮನೆ…. ಅವರಿಗೆ ನಿನ್ನ ಬಗ್ಗೆ ಹೇಳಿದ್ದೇನೆ….’ ಎಂದು ಮನೋಹರ ಸುಳ್ಳು ಹೇಳುವಾಗಲೇ ಆ ದಿನವೇ ಮನೆಯಲ್ಲಿ ಅವನ ಬಗ್ಗೆ ಹೇಳಬೇಕೆಂದು ನಿರ್ಧರಿಸಿಕೊಂಡ. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರ ಹೇಳಬೇಕೆನ್ನುವುದು ನೆನಪಾಗಿ ‘ನಿನ್ನ ತಂದೆ ಏನು ಮಾಡುತ್ತಾರೆ?’ ಅಂದ.
‘ಅವರಿಲ್ಲ’ ಎಂದು ಕಾಶೀಶ ಹೇಳಿದ ನಂತರ ಮತ್ತೆ ಬೇರೇನೂ ಕೇಳಲು ಅವನಿಂದಾಗಲಿಲ್ಲ.
ಆ ದಿನ ರಾತ್ರಿ ಊಟಕ್ಕೆ ಕೂತಾಗ ಮನೋಹರ ಕಾಶೀಶನ ವಿಷಯ ಹೇಳಿದ. ಅವನ ಜೊತೆ ಚಿಕ್ಕಪ್ಪನೂ ಊಟಕ್ಕೆ ಕೂತಿದ್ದರು. ಅವರಿದ್ದರೆ ಯಾವುದಕ್ಕಾದರೂ ತನಗೆ ಅನುಮತಿ ಸಿಗುವುದೆಂದು ಅವನಿಗೆ ಗೊತ್ತಿತ್ತು.
‘ಏನೋ ಸಾವಕಾರ…. ಏನು ಮಾಡ್ತಾ ಇದ್ದಿ?’ ಎಂದು ಚಿಕ್ಕಪ್ಪ ಕೇಳಿದಾಗ ಇದೇ ಸಂದರ್ಭವೆಂದು ಕಾಶೀಶನ ಬಗ್ಗೆ ಹೇಳಿದ.
‘ಕಾಶೀಶ ಅಂತ ಹೊಸ ದೋಸ್ತ ಸಿಕ್ಕಿದ್ದಾನೆ…. ಚಲೋ ಹುಡುಗ’
‘ಚಲೋ ಹೌದೇ ಅಲ್ಲವೋ ಅಂತ ನಾವು ಹೇಳಬೇಕೋ ನೀನೋ?…. ನಿನಗೆಲ್ಲಾ ಚಲೋನೇ’ ಎಂದು ಚಿಕ್ಕಮ್ಮ ತಲೆ ಹಾಕಿದರು.
‘ಯಾರ ಮನೆ ಹುಡುಗ?’ ಅವರು ಕೇಳದೇ ಇರಲಿ ಎಂದು ಮನೋಹರ ಬಯಸುತ್ತಿದ್ದ ಪ್ರಶ್ನೆಯನ್ನು ಚಿಕ್ಕಪ್ಪ ಕೇಳಿಯೇ ಬಿಟ್ಟರು.
‘ಗೊತ್ತಿಲ್ಲ…. ದಿನಾ ಸಂಜೆ ಆಡಲಿಕ್ಕೆ ಬರುತ್ತಾನೆ…. ತುಂಬಾ ಚೆನ್ನಾಗಿ ಸ್ಮ್ಯಾಶ್ ಹೊಡೆಯುತ್ತಾನೆ…. ನೆಟ್‌ಗೆ ಹತ್ತಿರ ನಿಂತುಕೊಂಡು ಅವನು ಹೊಡೆದರೆ ತಗೊಳ್ಳಲಿಕ್ಕೇ ಆಗುವುದಿಲ್ಲ….’
‘ಆವನ ಮನೆ ಎಲ್ಲಿ?’
‘ದೇವಿಕೆರೆಯಲ್ಲಿ’
‘ಅಲ್ಲಿ ಎಲ್ಲಿ ಎಂದು ಗೊತ್ತಿದೆಯೋ?’
ತಾನು ಅವನ ಮನೆಗೆ ಬರುತ್ತೇನೆಂದು ಹೇಳಿದಾಗ ಕಾಶೀಶ ಕೊಟ್ಟ ವಿವರಗಳನ್ನು ನೆನಪಿಸಿಕೊಂಡು ಮನೋಹರ ಹೇಳತೊಡಗಿದ.
‘ಅಲ್ಲಿ ವೆಂಕಟರಮಣ ದೇವಸ್ಥಾನ ಇದೆಯಲ್ಲ…. ಅದರ ಎದುರಿಗೇ ಒಂದು ರಸ್ತೆ ಇದೆಯಲ್ಲ…. ಅದು ಸುತ್ತು ಹಾಕಿ ದೇವಸ್ಥಾನದ ಹಿಂದೆ ಹೋಗುತ್ತದೆ…. ಹಾಗೇ ಹೋದರೆ ಅಲ್ಲಿ ಎಡಗಡೆಗೆ ಒಂದು ದೊಡ್ಡ ಮನೆ ಇದೆಯಲ್ಲ…. ಎದುರಿಗೆ ತೆಂಗಿನ ಮರಗಿರ ಇದೆಯಲ್ಲ…. ಅದೇ ಮನೆ….’
‘ಅಲ್ಲಿಗೆ ಹೋದವನ ಹಾಗೆ ಮಾತಾಡುತ್ತೀಯಾಲ್ಲೋ…. ಹೋಗಿದ್ದೀಯೋ ಹೇಗೆ?’ ಎಂದು ಚಿಕ್ಕಮ್ಮ ಕೇಳುತ್ತ ಮನೋಹರನ ಎದುರಿಗೇ ಬಂದು ನಿಂತುಬಿಟ್ಟಿದ್ದಳು. ಅಷ್ಟು ಹೊತ್ತಿಗಾಗಲೇ ಅವನು ಕೊಟ್ಟ ವಿವರಣೆಯಿಂದ ಆದ ಅಸಮಾಧಾನ ಅವಳ ದನಿಯಲ್ಲಿ ಒಡೆದು ತೋರುತ್ತಿತ್ತು. ಅವಳ ಚಹರೆ ಬದಲಾಗಿ ಹೋಯಿತು. ಮಾತಿಗೆ ಉಪದೇಶದ ಜೊತೆ ಸ್ಪಷ್ಟ ಸೂಚನೆಯ ಧಾಟಿ ಬಂದಿತ್ತು.
‘ದೋಸ್ತ ದೋಸ್ತ ಎಂದು ಯಾರ ಯಾರ ಜೊತೆಯೋ ಸೇರಬೇಡ…. ರಜೆಗೆಂದು ಬಂದವನು ರಜೆ ಮುಗಿಸಿ ಹೋಗು…. ಹೆಸರು ಹಚ್ಚಿಕೊಂಡು ಹೋಗುವ ಹಾಗೆ ಮಾಡಬೇಡ…. ಅವರ ಮನೆಯವರು ಸರಿಯಿಲ್ಲ…. ನಿನಗೆ ಅದೆಲ್ಲ ಗೊತ್ತಾಗುವುದಿಲ್ಲ…. ಸಂಗತಿ ಸಂಗದೋಷ…. ಇನ್ನು ಅವನಿಂದ ದೂರ ಇರು….’
‘ಅವನು ಒಳ್ಳೇ ಹುಡುಗ….’ ಎಂದು ಮನೋಹರ ಕಾಶೀಶನನ್ನು ಬಿಟ್ಟುಕೊಡುವ ಮನಸ್ಸಿಲ್ಲದೇ, ತನ್ನ ಸ್ನೇಹಿತನ ಬಗ್ಗೆ ಅವರಾಡಿದ ಮಾತುಗಳನ್ನು ವಿರೋಧಿಸುವುದು ಕರ್ತವ್ಯವೆಂಬಂತೆ ಹೇಳಿದ.
‘ಅವರೆಲ್ಲ ಹಾಗೇ…. ಸಕ್ಕರೆ ಹಚ್ಚಿಯೇ ಮಾತಾಡುವುದು…. ರಕ್ತದಲ್ಲೇ ಇರುತ್ತದದು….’
ಚಿಕ್ಕಮ್ಮನ ಕಠೋರವಾದ ಪ್ರತಿಕ್ರಿಯೆಗೆ ಕಾರಣ ಸ್ಪಷ್ಟವಾಗಿ ಗೊತ್ತಾಗದೇ ಎಲ್ಲವೂ ನಿಗೂಢವಾಗಿ, ಇನ್ನಷ್ಟು ಆಕರ್ಷಕವಾಗಿ ಕಾಣತೊಡಗಿತು. ಇಷ್ಟಾದರೂ ಚಿಕ್ಕಪ್ಪ ಮಾತ್ರ ಏನೂ ಮಾತಾಡದೇ ಊಟ ಮಾಡುತ್ತಿದ್ದರು. ಚಿಕ್ಕಮ್ಮನ ಅಭಿಪ್ರಾಯವನ್ನು ಇನ್ನಷ್ಟು ಒತ್ತಿ ಹೇಳಲೂ ಇಲ್ಲ. ವಿರೋಧಿಸಲೂ ಇಲ್ಲ.
ಮರುದಿನವೇ ಮನೋಹರ ಜೊತೆಯ ಹುಡುಗರಲ್ಲಿ ಕಾಶೀಶನ ಬಗ್ಗೆ ವಿಚಾರಿಸಿದ. ಅವನು ಯಾರ ಮನೆಯವನು, ಅವರು ಏನು ಮಾಡುತ್ತಾರೆ ಇತ್ಯಾದಿ ಪ್ರಶ್ನೆಗಳನ್ನು ತಲುಪುವ ಮೊದಲೇ ಪ್ರಕಾಶ ‘ಅವನು ಸೂಳೆ ಚಂಪಾಳ ಮನೆಯವನು’ ಎಂದು ಹೇಳಿದ. ಅವನ ಮಾತಿನ ರೀತಿಯಿಂದ ಮನೋಹರನಿಗೆ ಯಾಕೋ ಬಹಳ ಬೇಜಾರಾಯಿತು.
‘ಅವಳಿಗೆ ತಮ್ಮನಾಗಬೇಕು ಅನಿಸುತ್ತದೆ…. ನನಗೆ ಸರಿಯಾಗಿ ಗೊತ್ತಿಲ್ಲ’ ಎಂದೂ ಪ್ರಕಾಶ ಸೇರಿಸಿದ.
ಗಂಡು ಹೆಣ್ಣಿನ ನಡುವಿನ ಲೈಂಗಿಕ ಕ್ರಿಯೆಗಳೇನೆಂಬುದು ಮನೋಹರನಿಗೆ ಗೊತ್ತಿದ್ದರೂ ಆ ಭಾವಪ್ರಪಂಚದ ವ್ಯಾಪಾರಗಳಿನ್ನೂ ಅಮೂರ್ತವಾಗಿಯೇ ಇದ್ದವು. ಆದರೂ ಅವನು ಸೂಳೆ ಎಂದು ಹೇಳದೇ ಇರಬಹುದಿತ್ತು ಎಂದು ಮುಂದೆ ಈ ಪ್ರಸಂಗ ನೆನಪಾದಾಗಲೆಲ್ಲ ಮನೋಹರನಿಗೆ ಅನಿಸುತ್ತಿತ್ತು.


ಯಾರಿಗೂ ಹೇಳದೆ ಮನೋಹರ ಕಾಶೀಶನ ಮನೆಗೆ ಹೋದ. ಆಗ ಬೆಳಗಿನ ಹತ್ತು ಗಂಟೆಯಾಗಿತ್ತು. ಕಾಶೀಶ ಅವನಿಗಾಗಿ ದಣಪೆಯಲ್ಲೇ ಕಾಯುತ್ತಿದ್ದ. ಮಾವು ಮತ್ತು ತೆಂಗಿನ ಮರಗಳು, ಬಾಳೆಯ ಗಿದಗಳು ಇದ್ದ ಆ ದೊಡ್ದ ಮಹಡಿ ಮನೆಯ ಅಂಗಳದಲ್ಲೇ ಬಾವಿಯಿತ್ತು. ಗಡಗಡೆಯಿಂದ ಇಳಿದ ಹಗ್ಗವನ್ನು ಬಾವಿಯ ಕಟ್ಟೆಯ ಮೇಲೆ ಸುರುಳಿ ಸುರುಳಿಯಾಗಿ ಇಟ್ಟಿದ್ದರು. ಬಾವಿಯ ಮೇಲೆ ಒಂದು ಚಪ್ಪರವಿದ್ದು ಅದಕ್ಕೆ ಬಳ್ಳಿ ಹಬ್ಬಿಸಿದ್ದರು. ಮನೆಯ ಮಾಡುಗಳ ಮೇಲೆ ಕೂತವನೊಬ್ಬ ಹಂಚುಗಳನ್ನು ಸ್ವಚ್ಛ ಮಾಡುತ್ತಿದ್ದ.
ಮನೆಯೊಳಗೆ ಹೋಗುತ್ತಿದ್ದ ಹಾಗೇ ವಿಶಾಲವಾದ ಕೋಣೆಯಿತ್ತು. ಅಲ್ಲಿ ಕುರ್ಚಿ ಮತ್ತು ಕಪ್ಪು ಕಟ್ಟಿಗೆಯ ಸೋಫಾ ಜೋಡಿಸಿಟ್ಟಿದ್ದರು. ಅವುಗಳ ಮೇಲೆ ತೆಳ್ಳನೆಯ ಮೆತ್ತೆ ಹಾಸಿತ್ತು. ಎರಡರ ಬೆನ್ನಿಗೂ, ಒರಗುವಲ್ಲಿ, ಕಸೂತಿ ಹಾಕಿದ ಬಟ್ಟೆಗಳನ್ನು ಹಾಕಿದ್ದರು. ನಡುವೆ ಇಟ್ಟ ಟೇಬಲ್ಲಿನ ಮೇಲ್ಭಾಗಕ್ಕೆ ಗಾಜು ಕೂರಿಸಿದ್ದರು. ಕಾಶೀಶ ಮನೋಹರನನ್ನು ಒಳಗೆ ಬರಮಾಡಿಕೊಂಡು ಕುರ್ಚಿಯಲ್ಲಿ ಕೂರಿಸಿ ಎಲ್ಲೋ ಮಾಯವಾದ. ಅವನಿಗೆ ಖುಷಿಯಾಗಿದ್ದು ಅವನ ನಡಿಗೆಯಲ್ಲೇ ಗೊತ್ತಾಗುತ್ತಿತ್ತು. ಟೇಬಲ್ಲಿನ ಮೇಲಿನ ಗಾಜಿನಲ್ಲಿ ಎದುರಿಗಿದ್ದ ಕಿಟಕಿಯೂ, ಅದರಾಚೆಯ ಮರಗಿಡಗಳೂ ಪ್ರತಿಫಲಿಸುತ್ತಿದ್ದವು. ಅಲ್ಲಿದ್ದ ಮರದ ಶೋಕೇಸಿನಲ್ಲಿ ಬಣ್ಣಬಣ್ಣದ ಸಣ್ಣ ಬೊಂಬೆಗಳನ್ನೂ, ನಾಟ ಎಳೆಯುತ್ತಿರುವ ಆನೆಯ ಗಂಧದ ಪ್ರತಿಮೆಯೊಂದನ್ನು ಜೋಡಿಸಿಟ್ಟಿದ್ದರು. ಗೋಡೆಗಳ ಮೇಲೆ ಅನೇಕ ಚಿತ್ರಗಳನ್ನು ತೂಗುಹಾಕಿದ್ದರು. ಸೊನೇರಿ ಬಣ್ಣ ಹಚ್ಚಿದ ಕಟ್ಟಿಗೆಯ ಚೌಕಟ್ಟಿನಲ್ಲಿದ್ದ ಆ ಚಿತ್ರಗಳನ್ನೇ ಸೋಡುತ್ತ ಮನೋಹರ ಕೂತ. ತಿಳಿನೀರ ಕೊಳದಲ್ಲಿ ವಿಹರಿಸುವ ಹಂಸಗಳ ಚಿತ್ರವಿತ್ತು. ಅವರ ಮನೆಯಲ್ಲಿ ಏನೋ ಸುವಾಸನೆ ತುಂಬಿದಂತಿತ್ತು. ಟೇಬಲ್ಲಿನ ಮೇಲೆ ಮರಾಠಿ ಪತ್ರಿಕೆಗಳಿದ್ದವು. ಎಲ್ಲವನ್ನೂ ಅಷ್ಟೊಂದು ಶುಭ್ರವಾಗಿ ಆಯಾ ಜಾಗದಲ್ಲಿ ಜೋಡಿಸಿಟ್ಟಿದ್ದನ್ನು ಅಂಕೋಲೆಯ ಯಾರ ಮನೆಯಲ್ಲೂ ಮನೋಹರ ನೋಡಿರಲಿಲ್ಲ.
ಕಾಶೀಶ ಒಳಗಡೆಯಿಂದ ಒಂದು ಟ್ರೇಯಲ್ಲಿಟ್ಟ ಗ್ಲಾಸುಗಳಲ್ಲಿ ಶರಬತ್ತು ತಗೊಂಡು ಬಂದ. ಗ್ಲಾಸುಗಳ ಮೇಲೆ ಸಸುಗೆಂಪು ಬಣ್ಣದ ವಿನ್ಯಾಸಗಳಿದ್ದವು. ಆ ಶರಬತ್ತಿಗೂ ಒಂದು ರೀತಿಯ ತೆಳುವಾದ ಸುವಾಸನೆಯಿದ್ದಂತೆ, ಆ ಸುವಾಸನೆಗೊ ಒಂದು ವಿಚಿತ್ರ ಅಮಲಿದ್ದಂತೆ ಮನೋಹರನಿಗೆ ಅನಿಸಿತು. ಆ ಕೋಣೆಯ ಕಿಟಕಿಗಳಿಗೆಲ್ಲ ತೆಳ್ಳನೆಯ ಪರದೆಗಳಿದ್ದವು. ಗಾಳಿಗೆ ಅವು ಮೆಲ್ಲನೆ, ಇಷ್ಟಿಷ್ಟೇ ತೂಗುತ್ತಿದ್ದವು. ಮನೆಯ ವಾತಾವರಣ, ಸುವಾಸನೆ, ಬಣ್ಣಗಳು, ಆಸನಗಳು, ಅವನು ಕೊಟ್ಟ ಶರಬತ್ತು – ಎಲ್ಲವೂ ಯಾವುದೇ ಒಜ್ಜೆಯಿಲ್ಲದ, ಹಗುರವಾದ, ಸ್ವೇಚ್ಛೆಯ ಭಾವನೆ ಕೊಡುವಂತಿದ್ದವು.
ಶರಬತ್ತು ಕುಡಿದಾದ ಮೇಲೆ ‘ನನ್ನ ಕೋಣೆಗೆ ಬಾ’ ಎಂದು ಕಾಶೀಶ ಮನೊಹರನನ್ನು ಅಟ್ಟದ ಮೇಲೆ ಕರಕೊಂಡು ಹೋದ. ಅವನಿಗೇ ಒಂದು ಪ್ರತ್ಯೇಕವಾದ ಕೋಣೆಯಿದ್ದದ್ದು ಮನೋಹರನಿಗೆ ವಿಶೇಷವೆನಿಸಿತು. ಅವನ ಕೋಣೆಯೂ ಈಗ ತಾನೇ ಯಾರೋ ಜೋಡಿಸಿಟ್ಟಹಾಗಿತ್ತು. ನೆಲದ ಫರಸಿ ಕಲ್ಲುಗಳು ಇದೀಗ ಒರೆಸಿಟ್ಟ ಹಾಗಿದ್ದವು. ಆ ಮನೆಯ ಅನೇಕ ಕೋಣೆಗಳಲ್ಲಿ ವಾಸಿಸುತ್ತಿರಬಹುದಾದ ಬೇರೆ ಯಾರ ಸದ್ದಾಗಲೀ, ಸುಳಿವಾಗಲೀ ಇರಲಿಲ್ಲ. ಮನೆ ನಿಶ್ಯಬ್ಧವಾಗಿತ್ತು. ಆಚೆ ಗಡಗಡೆಯ ಸದ್ದಾಗಿ, ಕೊಡ ನೀರಿಗೆ ಅಪ್ಪಳಿಸಿದ್ದು ಕೇಳಿಸಿತು. ಹೆಂಚು ಸರಿಮಾಡಲು ಹತ್ತಿದವನು ಆಗಾಗ ಯಾರನ್ನೋ ಉದ್ದೇಶಿಸಿ ಗಟ್ಟಿಯಾಗಿ ಮಾತಾಡುತ್ತಿದ್ದ. ಕಾಗೆಯೊಂದು ಕೂಗುತ್ತಿತ್ತು.
ಕಾಶೀಶನ ಪುಸ್ತಕಗಳನ್ನೆಲ್ಲ ಕಪಾಟಿನಲ್ಲಿ ಜೋಡಿಸಿಡಲಾಗಿತ್ತು. ಟೇಬಲ್ಲಿನ ಮೇಲೆ ಪೆನ್ನು ಇಡುವ ಸ್ಟ್ಯಾಂಡ್ ಇತ್ತು. ಕಶೀಶ ತನ್ನ ಬಳಿಯಿದ್ದ ಅನೇಕ ಇಂಗ್ಲಿಷ್ ಪುಸ್ತಕಗಳನ್ನು ತೋರಿಸಿದ. ಅವುಗಳಲ್ಲಿ ಬಣ್ಣಬಣ್ಣದ ಸುಂದರ ಚಿತ್ರಗಳಿದ್ದವು. ಮುಂಬೈಯಲ್ಲಿದ್ದ ತನ್ನ ಚಿಕ್ಕಪ್ಪನೇ ಇದನ್ನೆಲ್ಲ ಕಳಿಸುವುದೆಂದು ಹೇಳಿದ. ಮೆಟ್ರಿಕ್ ಮುಗಿಸಿದ ನಂತರ ಮುಂಬೈಗೆ ಹೋಗುವುದನ್ನೂ, ಅಲ್ಲೇ ಕಾಲೇಜು ಸೇರುವುದನ್ನೂ ಮತ್ತೆ ಹೇಳಿದ. ರಾಜೇಶಖನ್ನಾನ ಮದುವೆಗೆ ತನ್ನ ಚಿಕ್ಕಪ್ಪನಿಗೆ ಆಮಂತ್ರಣ ಬಂದಿತ್ತೆಂದು ಹೇಳಿದ.
ಅಲ್ಲಿಂದ ಅವನು ಮನೋಹರನನ್ನು ಬಿಸಿಲು ಮಚ್ಚಿಗೆ ಕರಕೊಂಡು ಹೋದ. ಅಲ್ಲಿ ಒಬ್ಬಳು ಆಗ ತಾನೇ ತಲೆಗೆ ಎಣ್ಣೆ ಹಾಕಿಕೊಂಡು, ಅಂಗೈಗೆ ಹತ್ತಿದ ಪಸೆಯನ್ನು ತೋಳುಗಳಿಗೆ ಒರೆಸಿಕೊಳ್ಳುತ್ತಿದ್ದಳು. ಹೂಗಳ ಚಿತ್ರವಿದ್ದ ಗುಲಾಬಿ ಬಣ್ಣದ ಸೀರೆಯುಟ್ಟಿದ್ದಳು. ಕಾಶೀಶ ಅವಳು ಯಾರೆಂದು ಹೇಳಲಿಲ್ಲ. ಅವಳೇ ಚಂಪಾ ಇರಬಹುದೆಂದು ಮನೋಹರ ಊಹಿಸಿದ. ಇವರಿಬ್ಬರೂ ಬಂದೊಡನೆ ಅವಳು, ಹರಡಿದ್ದ ತನ್ನ ಕೂದಲನ್ನು ಎರಡೂ ಕೈಗಳಿಂದ ಎತ್ತಿ ಹಿಂದಕ್ಕೆ ಕಟ್ಟಿಕೊಂಡಳು. ಆ ಗಂಟಿನ ಬಿಗುವಿನಿಂದ ತಪ್ಪಿಸಿಕೊಂಡ ಕೂದಲೆಳೆಗಳು ಅವಳ ಕೆನ್ನೆಯ ಮೇಲೆ, ಕಿವಿಯ ಹಿಂದೆ, ಹಣೆಯ ಮೇಲೆ ಹರಡಿದವು. ಎಣ್ಣೆ ಪೆಸೆಯಿಂದಾಗಿ, ಅವಳ ತೋಳುಗಳ ಮೇಲಿನ ತೆಳುವಾದ ರೋಮಗಳು ಬಿಸಿಲಿಗೆ ಎದ್ದು ಕಾಣುತ್ತಿದ್ದವು. ತುಂಬಿಕೊಂಡ ಬೆಳ್ಳಗಿನ ಕೆನ್ನೆಯ ಮೇಲೆ ಅಲ್ಲಲ್ಲಿದ್ದ ಮೊಡವೆ ಕಲೆಗಳು ಕೆಂಪಾಗಿದ್ದವು. ಅವಳ ಮುಂಗೈ ಮೇಲೆ ಒಂದು ಗಾಯದ ಕಲೆಯಿತ್ತು. ಅವಳು ಮನೋಹರನನ್ನು ಪ್ರೀತಿಯಿಂದ ಮಾತನಾಡಿಸಿ ತನ್ನ ಕೋಣೆಗೆ ಕರಕೊಂಡು ಹೋದಳು. ಹಾಗೆ ಹೋಗುವಾಗ ತನ್ನ ಕೈಯನ್ನು ಅವನ ಭುಜದ ಮೇಲೆ ಇರಿಸಿದ್ದಳು. ಆ ಕೋಣೆಯಲ್ಲಿಯೂ ಎಲ್ಲವೂ ಓರಣವಾಗಿ ಶುಭ್ರವಾಗಿತ್ತು. ಕೋಣೆಯಲ್ಲಿ ಎಲ್ಲೋ ಅಗರಬತ್ತಿ ಹಚ್ಚಿ ಇಟ್ಟಿದ್ದರು. ಅದರ ಹಗುರಾದ ಸುವಾಸನೆ ಮತ್ತು ತೆಳ್ಳಗಿನ ಹೊಗೆ ಅಲ್ಲಿ ಹರಡಿತ್ತು.
ಆ ದೊಡ್ಡ ಕೋಣೆಯ ಒಂದು ಭಾಗದಲ್ಲಿ ವಿಶಾಲವಾದ ಮಂಚವಿತ್ತು. ಅದರ ಎರಡೂ ಕಡೆ ತಿಳಿನೀಲಿ ಬಣ್ಣದ ಚಿಕ್ಕ ಚಿಕ್ಕ ಸಂಗಮರವರಿ ಕಲ್ಲುಗಳನ್ನು ಜೋದಿಸಿದ್ದರು. ಆ ಕಲ್ಲುಗಳ ಮೇಲೆ ಬಳ್ಳಿಯ ಬಿಳಿಯ ಚಿತ್ತಾರಗಳಿದ್ದವು. ಸೊಳ್ಲೆ ಪರದೆ ಕಟ್ಟಲೆಂದು ಇದ್ದ ಚೌಕಟ್ಟು ಮಂಚದ ನಾಲ್ಕೂ ಕಡೆಗಿದ್ದ ಸಪೂರವಾದ ಉರುಟು ಕಂಬಗಳ ಮೇಲೆ ನಿಂತಿತ್ತು. ಮಂಚದ ಎದುರು ಚಿಕ್ಕ ರತ್ನಗಂಬಳಿ ಹಾಸಿತ್ತು. ಅವಳು ಮನೋಹರನನ್ನು ಮಂಚದ ಮೆತ್ತನೆಯ ಹಾಸಿಗೆಯ ಮೇಲೆ ಕೂರಿಸಿ ಮುಂಬೈಯ ಸುಪ್ರಸಿದ್ಧ ಸುತರಫೇಣಿ ತಿನ್ನಲು ಕೊಟ್ಟಳು. ಅನೇಕ ದಿನಗಳ ನಂತರ ತಿಂದ ಆ ಅಪರೂಪದ ತಿಂಡಿ ಮನೋಹರನಿಗೆ ಅಸಾಮಾನ್ಯ ರುಚಿಯೆನಿಸಿತು.


ಮನೋಹರ ಎಂ. ಎ. ಮೊದಲ ವರ್ಷದಲ್ಲಿದ್ದಾಗ, ನಡುವೆ ರಜೆಯಲ್ಲಿ ಊರಿಗೆ ಬಂದವನು ದೂರದ ಸಂಬಂಧೀಕರೊಬ್ಬರ ಮಗನ ಮದುವೆಗೆಂದು ಅವನ ಅಮ್ಮನನ್ನು ಕರೆದುಕೊಂಡು ಅಂಕೋಲೆಗೆ ಬಂದ. ಮದುವೆಯ ಊಟ ಮುಗಿಸಿ ಬಂದು, ಒಂದು ಪುಸ್ತಕ ಹಿಡಿದು ಹಾಸಿಗೆಯಲ್ಲಿ ಅಡ್ಡಾದವನಿಗೆ ಹಾಗೇ ಕಣ್ಣು ಹತ್ತಿತ್ತು. ನಡುವೆ ಎಚ್ಚರವಾದದ್ದು ಕೇಳಿಬರುತ್ತಿದ್ದ ಬಿಕ್ಕುವ ದನಿ ಮತ್ತು ಗದ್ಗದ ಮಾತುಗಳಿಂದ. ಚಿಕ್ಕಮ್ಮ ಯಶೋದೆ ಮತ್ತು ಅವನ ಅಮ್ಮ ಪಕ್ಕದ ಕೋಣೆಯಲ್ಲಿ ಮಾತಾಡುತ್ತಿದ್ದದ್ದು ಪೂರ್ತಿ ಮುಚ್ಚಿರದ ಬಾಗಿಲ ಸಂದಿಯಿಂದ ಆಚೆ ಕೇಳಿಬರುತ್ತಿತ್ತು.
ಯಶವಂತ ಚಿಕ್ಕಪ್ಪ ಮತ್ತು ಚಂಪಾಳ ನಡುವೆ ಬೆಳೆದ ಸಂಬಂಧದ ಬಗ್ಗೆ ಮಾತುಗಳು ನಡೆದಿದ್ದವು. ಅವಳನ್ನು ಇಟ್ಟುಕೊಂಡಿದ್ದ ಮುಂಬೈಯ ರಾವ್‌ವಕೀಲರು ಅಕಸ್ಮಾತ್ ಅಪಘಾತದಲ್ಲಿ ಅಕಾಲ ಮರಣಕ್ಕೀಡಾದ ಬಳಿಕ ಇದೆಲ್ಲ ನಡೆದಿತ್ತು. ಯಶೋದೆ ಮೊದಲ ಬಾರಿಗೆ ಅದನ್ನು ಮನೋಹರನ ಅಮ್ಮನಲ್ಲಿ ಹೇಳಿಕೊಳ್ಳುತ್ತಿದ್ದಳು. ಬೇರೆಯವರಿಂದ ಸುದ್ದಿ ಈಗಾಗಲೇ ಮಟ್ಟಿದೆಯೆಂಬ ಅನುಮಾನವೂ ಅವಳಿಗಿದ್ದುದು ಅವಳ ಮಾತಿನಲ್ಲೇ ಗೊತ್ತಾಗುತ್ತಿತ್ತು.
‘ಯಾರದೋ ಮಾತು ಕೇಳಿಕೊಂಡು ಕಣ್ಣೀರು ಹಾಕಬೇಡ ಯಶೋದೆ….ಜನ ನೂರು ಹೇಳುತ್ತಾರೆ…ಪುಕ್ಕ ಬಿದ್ದರೆ ಹಕ್ಕಿ ಹಾರಿತು ಅನ್ನುತ್ತಾರೆ….ಅಷ್ಟು ಖಂಡಿತವಾಗಿ ಹೇಳಬೇಡ….ಇಲ್ಲದಿರುವ ವಿಷಯ ಕೆಲವು ಸಲ ಬಾಯಿಬಿಟ್ಟು ಹೇಳುವುದರಿಂದಲೇ ಘಟಿಸಿಬಿಡುತ್ತದೆ…ಹಾಗೆ ಹೇಳಲಿಕ್ಕೆ ನೀನೇನು ನೋಡಿದ್ದೀಯೇನು?….’
‘ಅಯ್ಯೋ ಇಷ್ಟು ಸಾಲದೆಂದು ಅದೊಂದು ಬೇರೆ ಸ್ವತಃ ನೋಡಬೇಕೇನು? ಇದು ಈವತ್ತು ನಿನ್ನೆಯದಲ್ಲ ಕಾವೇರಿ; ಎರಡು ವರ್ಷಗಳಿಂದ ನಡೆಯುತ್ತಿದೆಯಂತೆ….ಒಂದು ದಿವಸ ನಮ್ಮ ಬೊಮ್ಮಯ್ಯನೇ ಬಂದು ನನಗೆ ಹೇಳಿದ….’
‘ನೀನು ಯಶವಂತನನ್ನೇ ನೇರವಾಗಿ ಕೇಳಿಬಿಡಬೇಕಿತ್ತು’
‘ಯಾವಾಗಲೋ ಕೇಳಿಯಾಯಿತು…ಹಾಂ ಅನ್ನಲಿಲ್ಲ ಹೂಂ ಅನ್ನಲಿಲ್ಲ…ಇಲ್ಲ ಅನ್ನುವ ಶಬ್ದ ಅವರ ಬಾಯಿಂದ ಬರಲಿಲ್ಲ…ಯಾರಿಗೋ ಹೇಳುತ್ತಿದ್ದೇನೆ ಅನ್ನುವ ರೀತಿಯಲ್ಲಿ ನಡೆದುಬಿಟ್ಟರು… ಮನೆಯಲ್ಲಿ ಬೆಳೆಯುತ್ತಿರುವ ಮಗಳು ಇದ್ದಾಳೆ; ಅವಳೆದುರು ದಿನಾ ಈ ವಿಷಯ ಎತ್ತಿ ಜಗಳ ಮಾಡಲಿಕ್ಕಾಗುತ್ತದೆಯೆ? ಇಬ್ಬರೇ ಇರುವ ಸಂದರ್ಭ ಹುಡುಕಿ ಮಾತಾಡಬೇಕು..ಇವರೋ ಕೈಗೆ ಸಿಗಬೇಕಲ್ಲ…ನಾನು ಎಲ್ಲಾ ರೀತಿಯಿಂದ ಹೇಳಿದ್ದಾಯಿತು, ಹಂಗಿಸಿದ್ದಾಯಿತು… ರಾವ್ ವಕೀಲರ ಎಂಜಲು ತಿನ್ನಲು ಹೋಗಬೇಡಿ ಅಂದೆ. ಅವರು ಮಲಗಿದ ಹಳೆಯ ಹಾಸಿಗೆಯದು ಅಂತಂದೆ….ಇವರು ಏನನ್ನಾದರೂ ಕಿವಿಯ ಮೇಲೆ ಹಾಕಿಕೊಂಡರೆ ತಾನೇ?….’
‘ಅಣ್ಣನಿಂದ ಒಂದು ಮಾತು ಹೇಳಿಸಿ ನೋಡಬಹುದೇನೋ…. ಇವರಿಗೆ ಹೇಳುತ್ತೇನೆ….’
‘ಅದೂ ಆಗಿಹೋದರೆ ಆಮೇಲೆ ಯಾರ ಹೆದರಿಕೆಯೂ ಇಲ್ಲದೇ ರಾಜಾರೋಷವಾಗಿ ಓಡಾಡಬಹುದಲ್ಲ…. ಬೊಮ್ಮಯ್ಯ ಏನು ಹೇಳಿದ ಗೊತ್ತೇನು? ಇತ್ತೀಚೆಗೆ ಮಿಲ್ಲಿನ ಕಡೆ ಲಕ್ಷ್ಯವೇ ಇಲ್ಲವಂತೆ…. ಕೆಲವೊಮ್ಮೆ ಬೆಳಿಗ್ಗೆ ಅವಳ ಮನೆಗೆ ಹೋದವರು ಸಂಜೆಯವರೆಗೂ ಅಲ್ಲೇ ಇರುತ್ತಾರಂತೆ…. ಕತ್ತಲಾದ ಮೇಲೆ ಯಾರಿಗೂ ಗೊತ್ತಾಗದ ಹಾಗೆ ಅಲ್ಲಿ ಹೊಗಿ ಬರುತ್ತಾರೆ ಅಂದರೆ ನಾನು ಯಾರಿಗೂ ಹೇಳದೆ ಹೇಗೋ ಸಹಿಸಿಕೊಂಡಿರುತ್ತಿದ್ದೆ…. ಇದು ಹಾಗಲ್ಲ…. ತಡೆಯೋಣ ಅಂದರೆ ಯಾವ ದಿವಸ ಅಲ್ಲಿ ಹೋಗುತ್ತಾರೆಂದು ನನಗೆ ಗೊತ್ತಾಗುವುದಾದರೂ ಹೇಗೆ? ಕೆಲಸದ ಮೇಲೆ ಕುಮಟೆಗೋ ಕಾರವಾರಕ್ಕೋ ಆಗಾಗ ಹೋಗಿಬರುವುದು ಮೊದಲಿನಿಂದಲೂ ಇದ್ದದ್ದೇ. ಈಗ ಅಲ್ಲಿ ಹೋಗುತ್ತೇನೆಂದು ನನ್ನ ಹತ್ತಿರ ಸುಳ್ಳು ಹೇಳಿ ಇವಳ ಮನೆಗೆ ಹೋಗುತ್ತಾರೋ ಏನೋ….’
‘ನೀನಾಗಿಯೇ ಇದನ್ನು ಯಾರ ಹತ್ತಿರವೂ ಹೇಳಲಿಕ್ಕೆ ಹೋಗಬೇಡ ಯಶೋದಾ…. ನೀನೇ ಹೇಳಿಬಿಟ್ಟರೆ ಆಮೇಲೆ ಜನ ಯಾವ ಮುಲಾಜಿಲ್ಲದೇ ನಿನ್ನ ಎದುರೇ ಮಾತಾಡತೊಡಗುತ್ತಾರೆ…. ಏನೂ ಆಗಿಲ್ಲ ಎಂಬ ಹಾಗೆ ಇರು…. ಯಶವಂತನಿಗೂ ಅದರ ಬಗ್ಗೆ ಅಳುಕಿರಲಿ…. ಇಲ್ಲವಾದರೆ ಯಾವ ಅಂಕೆಯೂ ಇಲ್ಲದೇ ಹೋಗಿಬಿಡುತ್ತದೆ….’
ಇದೆಲ್ಲವೂ ಕಷ್ಟವಾಗುತ್ತ ಹೋದ ಹಾಗೆ ಅದರಲ್ಲಿರುವ ರೋಚಕತೆಯೂ, ಸ್ವಾರಸ್ಯವೂ ಯಶವಂತನಿಗೆ ಹೆಚ್ಚಾಗುತ್ತ ಹೋಗುತ್ತದೆ ಎಂಬುದನ್ನು ಯಾರೂ ಯೋಚಿಸಿದಂತಿರಲಿಲ್ಲ. ಮನೋಹರನ ಮನಸ್ಸಿನಲ್ಲಿ, ಅವನ ಓರಗೆಯವರ ಜೊತೆ ಪೋಲಿತನದ ಅತಿಮಾತುಗಳಲ್ಲಿ ಹುಟ್ಟಿಕೊಂಡ ಸೂಳೆಯ ಚಿತ್ರಕ್ಕೂ ಈಗ ಅವನು ಕೇಳುತ್ತಿದ್ದ ಯಶವಂತ ಚಂಪಾಳ ಪ್ರಕರಣದಿಂದ ಹುಟ್ಟಿದ ಚಿತ್ರಕ್ಕೂ ಅಜಗಜಾಂತರವಿತ್ತು. ಚಿಕ್ಕಪ್ಪ ಅಲಿ‌ಇ ಹೋಗಿ ಹಗಲಿಡೀ ಇರುವ ಸಂಗತಿಯೇ ಅವನ ಕಣ್ಣ ಮುಂದೆ ಬರುತ್ತಿತ್ತು. ಅವರ ಸಂಬಂಧ ಬರೀ ಕೆಲವು ನಿಮಿಷಗಳ ಏದುಸಿರ ಕೆಲಸಕ್ಕೆ ಸಂಬಂಧಿಸಿದ್ದಲ್ಲ ಎಂದು ಅನಿಸುತ್ತಿತ್ತು. ಸಾಕಷ್ಟು ಜಮೀನು, ರೈಸ್ ಮಿಲ್ಲು, ವ್ಯಾಪಾರ ಎಂದು ಸ್ವಂತ ಪರಿಶ್ರಮದಿಂದ ಮೇಲೆ ಬಂದ ಚಿಕ್ಕಪ್ಪ, ಸಮಾಜದಲ್ಲಿ ಸಲ್ಲಲು ತಕ್ಕ ರೀತಿಯಲ್ಲಿ ಬದುಕುತ್ತಿದ್ದ ಚಿಕ್ಕಪ್ಪ, ಯಾವುದೋ ಅವ್ಯಕ್ತದ ಬೆನ್ನು ಹತ್ತಿ ಹೋಗುತ್ತಿದ್ದಾನೆಂದು ಸ್ಪಷ್ಟವಿತ್ತು.
ತಾನು ಚಂಪಾಳ ಮನೆ ನೋಡಿರದಿದ್ದರೆ ತನಗೆ ಈ ಬಗ್ಗೆ ಬೇರೆಯೇ ಗ್ರಹಿಕೆಗಳಿರುತ್ತಿದ್ಚವೆಂದು ಮನೋಹರನಿಗೆ ಅನಿಸಿತು. ಈ ಸಲ ಅವನು ಚಿಕ್ಕಪ್ಪನ ಮನೆಯನ್ನು ಎಂದಿಗಿಂತ ಸೂಕ್ಷ್ಮವಾಗಿ ಗಮನಿಸಿದ. ಒಂದು ಸಂಸಾರ, ಒಂದು ಮದುವೆ ಇಲ್ಲಿ ಹಳತಾಗುತ್ತಿದೆ; ಸಂಬಂಧ ಪುನಃ ಪುನಃ ಚಿಗುರಲು ಅಗತ್ಯವಾದ ಯಾವುದನ್ನೂ ಈ ಮನೆ ಒದಗಿಸುತ್ತಿಲ್ಲ ಅನಿಸತೊಡಗಿತು. ಅದೇ ಜಾಗದಲ್ಲಿ ವರ್ಷಗಟ್ಟಲೆ ಇದ್ದ ಮಂಚ, ಕನ್ನಡಿಯ ಕಪಾಟುಗಳು, ಕೂರುವ ಆಸನಗಳು, ಅದೇ ಅಡಿಗೆ ಅದೇ ದೈನಿಕ – ಯಾವುದೋ ಒಂದು ಸ್ಥಾಯೀತನ ಈ ಮನೆಯನ್ನು ಹೊಕ್ಕು, ಇಲ್ಲಿರುವವರ ಮನಸ್ಸನ್ನು ಹಿಡಿದು ಕೊಳೆ ಹಾಕಿದಂತಿತ್ತು. ಆದರೆ ಯಾವ ಮನೆಯೂ ಹಾಗಿರಲಿಲ್ಲ. ಇಲ್ಲೆಲ್ಲ ಒಂದು ರೀತಿಯ ಉಪೇಕ್ಷೆಯ, ಅನಾಸಕ್ತಿಯ ಛಾಯೆಯಿತ್ತು. ದನಿಕಗಳೂ ಪ್ರೇಮಕಾಮಗಳೂ ಕರ್ತವ್ಯದ ಹಳಿಹಿಡಿದು ರೋಮಾಂಚವನ್ನು ಕಳಕೊಂಡಿದ್ದವು.
ಚಂಪಾಳ ಮನೆಗೆ ಹೋಗಿದ್ದನ್ನು ನೆನೆಸಿಕೊಂಡಾಗಲೆಲ್ಲ ತಾನು ನೋಡಿದ್ದೆಷ್ಟು, ಅದಕ್ಕೆ ತನ್ನ ಮನಸ್ಸು ಸೇರಿಸಿದ್ದೆಷ್ಟು ಎಂಬುದರ ಬಗ್ಗೆ ಮನೋಹರನಿಗೆ ಯಾವಾಗಲೂ ಗೊಂದಲವಾಗುತ್ತಿತ್ತು. ಅಲ್ಲಿ ತಾನು ನೋಡಿದ್ದು ಚಂಪಾಳನ್ನೋ ಅಥವಾ ಆ ಮನೆಯಲ್ಲಿದ್ದ ಬೇರೆ ಯಾವುದೋ ಹೆಂಗಸನ್ನೋ ಎಂಬುದು ಕೂಡಾ ಖಚಿತವಾಗಿ ಗೊತ್ತಿರಲಿಲ್ಲ. ತಾನು ನೋಡಿದವಳು ಅವಳ ಅಕ್ಕನೋ ತಂಗಿಯೋ ಇದ್ದಿರಬಹುದಲ್ಲ. ಕಲ್ಪಿಸಿಕೊಂಡಾಗ ಮನಸ್ಸಿಗೆ ಬರುವ ಹಾಗೇ ಅವಳು ಇದ್ದಾಳೋ ಅಥವಾ ಒಮ್ಮೆ ನೋಡಿದ ರೂಪ ಮನಸ್ಸಲ್ಲಿ ಬೆಳೆಬೆಳೆದು ಈಗ ಬೇರೆಯದೇನೋ ಕಣ್ಣ ಮುಂದೆ ನಿಲ್ಲುತ್ತಿದೆಯೋ ಗೊತ್ತಾಗುತ್ತಿರಲಿಲ್ಲ.
ಅವಳ ಮನೆಯಲ್ಲಿ ಗೋಡೆಗೆ ತೂಗುಹಾಕಿದ್ದ ಚಿತ್ರಗಳು – ಶಕುಂತಲೆಯನ್ನು ದುಂಬಿಯಿಂದ ರಕ್ಷಿಸಲು ಬಂದ ದುಷ್ಯಂತ, ತಿಳಿನೀಲಿ ಸಮುದ್ರದ ನೊರೆನೊರೆಯ ತೀರ, ತುಂಬಿದ ಕೊಡ ಹಿಡಿದ ಕನ್ಯೆ, ಮೊಸರು ಬಾಯಿಗೆ ಮೆತ್ತಿಕೊಂಡ ಬಾಲಕೃಷ್ಣ – ಎಲ್ಲವೂ ಕಣ್ಣಮುಂದೆ ಮೂಡುತ್ತಿತ್ತು. ಕಪ್ಪಾಗಿ ಮಿರಿಮಿರಿ ಮಿಂಚುವ ಮಂಚದ ಕಾಲುಗಳಿಗೆ ಕುಸುರಿಯಿತ್ತು. ಮಂಚದ ಮೇಲೆ ಹಾಸಿದ, ಹೂಗಳ ವಿನ್ಯಾಸದ ವಸ್ತ್ರ, ದಿಂಬುಗಳನ್ನೂ ಮುಚ್ಚಿಕೊಂಡಿತ್ತು. ಮಂಚದ ಎದುರು ನೆಲಕ್ಕೆ ಹಾಸಿದ ರತ್ನಗಂಬಳಿ ತಿಳಿನೀಲಿ ಬಣ್ಣದ್ದಿತ್ತು. ಚಂದಮಾಮದ ಚಿತ್ರಗಳಲ್ಲಿ ತೋರಿಸುವಂತೆ ಯಾವುದೋ ಮಾಯಾಲೋಕದ ಪಲ್ಲಂಗದಂತಿದ್ದ ಅದರ ಮೇಲಿನ ಮೃದುವಾದ ಹಾಸಿಗೆಯ ಮೇಲೆ ಚಂಪಾ ಕೂತಿದ್ದಳು. ಜರತಾರಿ ಸೀರೆಯುಟ್ಟಿದ್ದಳು. ಒಂದು ಕಾಲನ್ನು ಮಡಚಿ ಮಂಚದ ಮೇಲಿಟ್ಟು, ಇನ್ನೊಂದನ್ನು ಕೆಳಗೆ ಇಳಿಬಿಟ್ಟಿದ್ದಳು. ಕೂದಲನ್ನು ಹಿಂದಕ್ಕೆ ಬಾಚಿ ತುರುಬು ಕಟ್ಟಿಕೊಂಡಿದ್ದಳು. ತುರುಬು ತುಂಬ ಹೂವಿತ್ತು. ಮಂಚದ ಮೇಲೆ ಲಕಲಕ ಹೊಳೆಯುವ ತಾಂಬೂಲದ ಬೆಳ್ಳಿಯ ಹರಿವಾಣವಿತ್ತು. ಅದರೊಳಗಿದ್ದ ನಾನಾ ರೀತಿಯ ಚಿಕ್ಕಚಿಕ್ಕ ಬಟ್ಟಲುಗಳಲ್ಲಿ ತಾಂಬೂಲದ ವಿವಿಧ ಸಾಮಗ್ರಿಗಳಿದ್ದವು. ತೆರೆದ ಕಿಟಕಿಯಿಂದ ಬೀಸುತ್ತಿದ್ದ ಗಾಳಿಗೆ ಪರದೆಗಳು ತೂಗುತ್ತಿದ್ದವು. ಯಶವಂತ ಬಂದದ್ದೇ, ಎಂದಿನಿಂದಲೋ ಅವನ ಹಾದಿ ಕಾಯುತ್ತಿದ್ದ ಹಾಗೆ ಬಳಿಸಾರಿ ಕೈ ಹಿಡಿಯುವಳು. ಕೈಹಿಡಿದು ಕೂರಿಸುವಳು. ಆಳುಕಾಳುಗಳ ಮೇಲೆ ಸದಾ ರೇಗುತ್ತ, ರೈಸ್ ಮಿಲ್ ರಿಪೇರಿಯ ಬಗ್ಗೆ ಗೊಣಗುತ್ತ, ಒಂದು ಶಬ್ದ ಮಾತಾಡದೇ ತಲೆಬಗ್ಗಿಸಿ ಊಟಮಾಡುತ್ತ, ರಾತ್ರಿ ಕೂತು ದುಡ್ಡೆಣಿಸಿ ಉದ್ದುದ್ದ ಪುಸ್ತಕಗಳಲ್ಲಿ ಲೆಕ್ಕ ಬರೆಯುತ್ತ ಇರುವ ಯಶವಂತ ಚಿಕ್ಕಪ್ಪನ ಮೋರೆ ಪ್ರಸನ್ನತೆಯಲ್ಲಿ ಅರಳುವುದು. ಚಂಪಾವತಿ ತಾಂಬೂಲ ಕಟ್ಟಿ ಅವನ ಬಾಯಲ್ಲಿ ಅದನ್ನು ಇಟ್ಟು ಮುಗುಳುನಗುವಳು…..
ಅಷ್ಟೇ. ಮನೋಹರನ ಅತಿ ರಮ್ಯ ಕಲ್ಪನೆ ಅಲ್ಲೇ ಥಟ್ಟಂತ ಕೊನೆಯಾಗುವುದು. ಯಶವಂತ ಮತ್ತು ಚಂಪಾಳ ನಡುವಿನ ದೈಹಿಕ ಸಮಾಗವನ್ನು ಕಲ್ಪಿಸಿಕೊಳ್ಳಲು ಮನಸ್ಸು ಹಿಂಜರಿಯುವುದು. ಯಾವ ಗಳಿಗೆಯಲ್ಲಿ, ಯಾವ ಸನ್ನೆಯ ಮೂಲಕ ಚಿಕ್ಕಪ್ಪನಿಗೆ ಸಂಸಾರದ ಸ್ಥಾಯೀತನ, ಆ ಸ್ತಬ್ದತೆ ಅರಿವಿಗೆ ಬಂತು ಎಂಬ ಪ್ರಶ್ನೆ ಮತ್ತೆ ಮತ್ತೆ ಬೆನ್ನಟ್ಟಿ ಬರುವುದು.
ಋಣಾನುಬಂಧ

ಮದುವೆ ಸಡಗರದ ಮನೆಗೆ ಮನೋಹರ ಬಂದು ತಲುಪಿದಾಗ ಬೆಳಗಿನ ಹನ್ನೊಂದರ ಸಮಯ. ಮದುವೆಗಿನ್ನೂ ಮೂರು ದಿನಗಳಿದ್ದರೂ ಅಲ್ಲಿ ಆಗಲೇ ಮದುವೆ ಮನೆಯ ಕಳೆಯೇರಿತ್ತು. ಹೊರಗೆ ಅಂಗಳ ಸಾರಿಸಿ ದೊಡ್ದ ಚಪ್ಪರ ಹಾಕಿದ್ದರು. ಅವತ್ತೇ ಕಟ್ಟಿದ್ದೆಂದು ಗೊತ್ತಾಗುವಷ್ಟು ಮಾವಿನ ತೋರಣ ನಳನಳಿಸುತ್ತಿತ್ತು. ತುಳಸಿಲಗ್ನದ ಅಲಂಕಾರದ ಕುರುಹುಗಳಿನ್ನೂ ತುಳಸಿಕಟ್ಟೆಯ ಮೇಲಿದ್ದವು. ಎಷ್ಟೋವರ್ಷಗಳ ನಂತರ ಮನೆಯ ಗೋದೆಗಳು, ಕಿಟಕಿ ಬಾಗಿಲುಗಳಿಗೆಲ್ಲ ಹೊಸ ಬಣ್ಣ ಹಚ್ಚಿದ್ದರು. ಮನೆ ತುಂಬ ಜನ. ಮಕ್ಕಳ ಗಲಾಟೆ. ಎಲ್ಲಾ ಕೋಣೆಗಳಲ್ಲೂ ಬಂದವರ ನಾನಾ ಸಾಮಾನುಗಳು ಹರಡಿದ್ದವು. ಬಾಯಿ ಅರೆತೆರೆದ ಬ್ಯಾಗುಗಳಿಂದ ಹೊರಚಾಚಿದ ಬಟ್ಟೆಗಳು. ಕೆಂಪು ಕಾಗದದಲ್ಲಿ ಸುತ್ತಿ ಮದುವೆಗೆಂದು ತಂದ ಉಡುಗೊರೆಗಳು. ಅರ್ಧ ಮಡಚಿಟ್ಟ ಭಾರವಾದ ಜಮಖಾನೆಗಳು. ಹೂವಿನ ಘಮಘಮ. ವಿನಾಕಾರಣ ನಾಚುತ್ತ ಓಡಾಡುವ ಹುಡುಗಿಯರು. ಸ್ನಾನ ಮುಗಿಸಿಕೊಳ್ಳಿರೋ ಎಂದು ಬೆಳಗಿನಿಂದ ಕೂತಲ್ಲೇ ಕಿರಿಕಿರಿ ಮಾಡುವ ಶಾಲತ್ತೆ. ಈ ಎಲ್ಲ ಅವ್ಯವಸ್ಥೆಯಲ್ಲೊಂದು ಸಂಭ್ರಮವಿತ್ತು. ಇಂಥ ಗದ್ದಲದ ನಡುವೆಯೂ ಹೆಂಗಸರು ತಮ್ಮ ಗಂಡಂದಿರ ತಿಂಡಿಯಾಯಿತೋ, ಸ್ನಾನಕ್ಕೆ ಬಿಸಿ ನೀರು ಇತ್ತೋ, ಮಗನಿಗೆ ಹಾಲು ಆಯಿತೋ ಎಂದೆಲ್ಲ ಸೂಕ್ಷ್ಮವಾಗಿ ಸ್ವಕುಟುಂಬ ಚಿಂತನೆ ಮಾಡುತ್ತಿದ್ದರು. ಕೈಗೆ ಮದರಂಗಿ ಹಚ್ಚಿಕೊಂಡ ಹುಡುಗಿಯರ ಗುಂಪೊಂದು ಸೆರೆಸಿಕ್ಕ ಸೈನಿಕರ ಹಾಗೆ ಎರಡೂ ಕೈಗಳನ್ನು ಮೇಲಕ್ಕೆತ್ತಿ ಓಡಾಡುತ್ತಿತ್ತು. ಹೊರಗೆ ಚಪ್ಪರದ ಮೂಲೆಯಲ್ಲಿ ಇಸ್ಪೀಟಾಟದ ಟೋಳಿ ನಾನಾ ರೀತಿಯ ಅಟ್ಟಹಾಸ ಮಾಡುತ್ತಿತ್ತು. ‘ತುರುಫಿನ ಎಕ್ಕಾ ನನ್ನದು…. ತುರುಫಿನ ಎಕ್ಕಾ’ ಎಂದು ಯಾರೋ ಕೂಗಾಡುತ್ತಿದ್ದರು. ಎಲ್ಲವನ್ನೂ ಪಣಕ್ಕೆ ಇಟ್ಟವರಂತೆ ಆತಂಕದ ಮುಖದಲ್ಲಿ ಮುಂದಿನ ಎಲೆಯನ್ನು ನಿರೀಕ್ಷಿಸುತ್ತ ಗುಂಪು ಅದರಲ್ಲೇ ಮಗ್ನವಾಗಿತ್ತು.
‘ಈ ಸಲ ಜೋರಾಗಿದೆಯಲ್ಲ ಇಸ್ಪೀಟಿನ ಟೋಳಿ’ ಎಂದ ಮನೋಹರ.
‘ನಮ್ಮ ಪಾಂಡು ಭಾವಯ್ಯ ಇದ್ದ ಮೇಲೆ ಜಬರದಸ್ತಾಗಲೇಬೇಕಲ್ಲ…. ಆಡಿದ್ದಾರೆ ನಿನ್ನೆ ರಾತ್ರಿ ಎರಡರವರೆಗೂ…’ ಎಂದು ಅಭಿಮಾನದಿಂದ ಯಶವಂತ ಹೇಳಿದ. ಅದು ಕಿವಿಗೆ ಬಿದ್ದಿತೋ ಎಂಬಂತೆ ಪಾಂಡುಭಾವ ಮನೋಹರನನ್ನು ನೋಡಿ ಆಟಕ್ಕೆ ಕೂತಲ್ಲಿಂದಲೇ ಕೈಯೆತ್ತಿ ಸ್ವಾಗತಿಸಿದರು. ಮನೋಹರ ಬಂದಿದ್ದು ಯಶವಂತನಿಗೆ ಬಹಳ ಖುಷಿಯಾಗಿತ್ತು. ಯಶವಂತ ಅವನನ್ನು ಒಳಗೆ ಕರೆದುಕೊಂಡು ಹೋಗುತ್ತಿದ್ದ ಹಾಗೆ ಶಾಲತ್ತೆ ಅಡ್ಡಗಟ್ಟಿದಳು. ಅವಳೊಂದು ಕಡೆ ಕೂತು ತನ್ನ ಎದುರು ಯಾವುದೇ ಅಪರಿಚಿತ ಮುಖ ಹಾದರೂ ನಿಲ್ಲಿಸಿ ‘ನೀನು ಯಾರ ಮಗ? ಯಾರ ಮಗಳು?’ ಎಂದು ವಿಚಾರಿಸಿ ಮುಂದಿನ ಪೀಳಿಗೆಯ ಮುಖಪರಿಚಯ ಮಾಡಿಕೊಳ್ಳುವಳು. ಮನೋಹರನನ್ನೂ ನಿಲ್ಲಿಸಿ ‘ಯಾರೋ ನೋಡ್ತೆ’ ಅಂದಳು.
‘ನಮ್ಮ ಮನೋಹರ…. ನಮ್ಮ ದೇವಣ್ಣನ ಮಗ…’ ಎಂದು ಯಶವಂತ ಹೇಳಿದ.
‘ಚಲೋದಾಯ್ತು… ಸರೀ ತಯಾರಿಗೆ ಬಂದು ತಲುಪಿದ. ಮನೆತನದ ಹುಡುಗ ಅಂದ ಮೇಲೆ ಜವಾಬ್ದಾರಿ ಅವನ್ದೇ ಅಲ್ವೇ…. ತಂಗಿ ಮದುವೆಗೆ ಅಂವ ಅಲ್ದೇ ಯಾರು ಮಾಡಬೇಕು ತಯಾರಿ…’ ಎಂದವಳು ಮುಂದೆ ಹೋಗಲು ಬಿಟ್ಟಳು.
ಮನೋಹರನ ಬ್ಯಾಗನ್ನು ಅಟ್ಟದ ಮೇಲಿನ ಯಶವಂತನ ಕೋಣೆಯಲ್ಲಿ ಇರಿಸಲಾಯಿತು. ಬಚ್ಚಲು ಖಾಲಿ ಇದೆ ಎಂದು ಯಾರೋ ಅಂದದ್ದು ಕೇಳಿಸಿ ಸೀದಾ ಅವನನ್ನು ಸ್ನಾನಕ್ಕೆ ಕಳಿಸಿದರು. ಮದುವೆ ಮನೆಯಲ್ಲಿ ಅಪರೂಪವಾದ ಒಣಗಿದ ಟವಲ್ಲನ್ನು ಯಾರೋ ಹುಡುಗ ತಂದು ಕೊಟ್ಟ. ಸ್ನಾನ ಮುಗಿಸಿ ಬಂದವನನ್ನು ಗಂಜಿ ಊಟಕ್ಕೆ ಕೂರಿಸಿದರು. ಎಲ್ಲೋ ಹಿತ್ತಿಲಲ್ಲಿದ್ದ ಯಶೋದೆ ಒಳಬರುವ ಮುಂಚೆ ಕೆಲಸದ ಆಯುವಿಗೆ ಹೇಳುತ್ತಿದ್ದ ಮಾತುಗಳು ಕೇಳಿಸಿದವು.
‘ಅಂವ ಬಂದೇ ಬರ್‍ತಾನೆ ಅಂತ ನಾ ಹೇಳಿದ್ದೆ. ಇವರು ಆಗೂದಿಲ್ಲವೇ, ಅವನಿಗೆ ರಜೆ ಸಿಗಬೇಕಲ್ಲ… ಮದ್ವೆಗೂ ಬರ್‍ತಾನೋ ಇಲ್ಲವೋ…. ಇಷ್ಟು ಅವಸರದಲ್ಲಿ ಮುಹೂರ್ತ ಇಟ್ಟರೆ ಎಲ್ಲರಿಗೂ ಬರ್‍ಲಿಕ್ಕೆ ಆಗಬೇಕಲ್ಲ ಅಂದರು… ನಾನು ಹೇಳಿದ ಹಾಗೇ ಆಯ್ತು…. ಎಲ್ಲಿ ಅಂವ?’
ವರ್ಷಗಟ್ಟಲೇ ಪ್ರಯತ್ನಿಸಿದರೂ ಎಲ್ಲೆಲ್ಲೂ ಕೂಡಿ ಬರದ ಮಗಳ ಮದುವೆಯ ಗಳಿಗೆ ಈಗ ಸನ್ನಹಿತವಾಗಿದೆಯೆನ್ನುವ ಉತ್ಸಾಹ ಅವಳ ಪ್ರತಿ ಮಾತಿನಲ್ಲಿ, ವಿನಾಕಾರಣ ಚಲನೆಗಳಲ್ಲಿ ವ್ಯಕ್ತವಾಗುತ್ತಿತ್ತು.
‘ನಾನು ಬರದೇ ಇರುತ್ತೇನೆಯೇ ಚಿಕ್ಕಮ್ಮ… ಎಲ್ಲಿ ಸುನಂದೆ?’ ಎಂದು ಮನೋಹರ ಕೇಳಿದ.
‘ಇದ್ದಾಳೆ ಇದ್ದಾಳೆ… ಇಲ್ಲೇ ಶಂಭು ಮನೆಗೆ ಹೂ ಕಟ್ಟುವ ನಾರು ತರಲಿಕ್ಕೆ ಹೋಗಿದ್ದಾಳೆ… ಒಂದು ರಾಶಿ ಆಬೋಲಿ ಬಿದ್ದಿದೆ ಮನೆಯಲ್ಲಿ… ಕೂತಲ್ಲೇ ಒಂದೊಂದು ಮಾಲೆ ಕಟ್ಟಿ ಹಾಕಿದರೆ ನಾಳೆ ಬರುವವರಿಗೆ ಒಂದೊಂದು ತುಂಡಾದರೂ ಮುಡಿಗೆ ಅಂತ ಕೊಡಬಹುದಲ್ಲ…. ನಾಳೆ ದೇವಕಾರ್ಯ; ಸತ್ಯನಾರಾಯಣ ಪೂಜೆ… ಬೀಗರ ಕಡೆಯಿಂದ ಸುಮಾರು ಜನ ಬಂದರೂ ಬರಬಹುದು….’
‘ಅಡಿಗೆಯವರು ಯಾರು?’
‘ಹಳದೀಪುರದ ಬಾಬಟಿಯನ್ನು ಕರೆಸಿದ್ದೇವೆ. ಸದ್ಯ ಇಂಥಾ ಅವಸದಲ್ಲೂ ಅವನು ಸಿಕ್ಕ…. ಈವತ್ತಿನವರೆಗೆ ಮಾತ್ರ ಈ ಗಂಜಿ ಊಟ…. ಆಮೇಲೆ ಜನ ಜಾಸ್ತಿಯಾದ ನಂತರ ಇದೆಲ್ಲ ಎಲ್ಲಿ ಆಗುತ್ತದೆ? ಗಂಜಿ ನಾವೇ ಮಾಡಬೇಕು ಒಳಗಡೆ…. ಗಂಜಿಗಿಡುವುದು ಅಂದರೆ ಬಾಬುಟಿ ತನ್ನ ಅಂತಸ್ತಿಗೆ ಕಡಿಮೆ ಎಂದು ತಿಳಿಯುತ್ತಾನೆ….’
ಮನೋಹರನಿಗೆ ಬಸಳೇ ಪಲ್ಯ ಬಡಿಸುತ್ತ, ಉಪ್ಪಿನಕಾಯಿ ಹಾಕುತ್ತ, ಗಂಜಿ ಹಾಕಲೇ ಎಂದು ಎರಡೆರದು ಬಾರಿ ಕೇಳುತ್ತ ಯಶೋದೆ, ಸುನಂದೆಯ ಮದುವೆ ಕೂಡಿ ಬಂದ ಬಗ್ಗೆ’ ಅವಳನ್ನು ಮದುವೆಯಾಗುವ ಹುಡುಗನ ಬಗ್ಗೆ ಹೇಳತೊಡಗಿದಳು. ಅವನಿಗೆ ಸಿರ್ಸಿಯ ಅರ್ಬನ್ ಬ್ಯಾಂಕಿನಲ್ಲಿ ಕೆಲಸವಂತೆ. ಬಿಕಾಂ ಮಾಡಿದ್ದಾನಂತೆ. ಹುಡುಗನ ಅಮ್ಮ ಯಶೋದೆಯ ತವರಿನ ಕಡೆಯಿಂದ ದೂರದ ಸಂಬಂಧವೇ ಆಗಬೇಕಂತೆ… ‘ಸಂಬಂಧ ಅಂದರೆ ಇಟ್ಟುಕೊಂಡರೆ ಮಾತ್ರ ಇರುವುದಿಲ್ಲವೇ?’ ಎಂದೂ ಅಂದಳು. ಒಬ್ಬನೇ ಮಗನಂತೆ. ತಂದೆಯಿಲ್ಲದ ಹುಡೂಗನನ್ನು ತಾಯಿಯೇ ಬೆಳೆಸಿದಳಂತೆ.
‘ಅಲ್ಲ ಈ ಋಣಾನುಬಂಧ ನೋಡು…. ಇಲ್ಲವಾದರೆ ಎಲ್ಲೆಲ್ಲೂ ಅವಳಿಗೆ ಜಾತಕ ಕೂಡಿ ಬರದೇ ಇದ್ದುದು, ಕೂದಿ ಬಂದವರಿಗೆ ಹುಡುಗಿ ಪಾಸಾಗದೇ ಇರುವುದು, ಎಲ್ಲಾ ಆದ ಕಡೆ ಅವರು ಮೊಸರಲ್ಲಿ ಕಲ್ಲು ಹುಡುಕುವುದು ಇದೆಲ್ಲ ಇಷ್ಟು ವರ್ಷ ನಡೆದರೂ ಈ ಹುಡುಗ ಕಣ್ಣೆದುರೇ ಇದ್ದಾನೆ, ಅವನಿಗೆ ಎಲ್ಲೂ ಕೂಡಿ ಬರುತ್ತಿಲ್ಲ ಎಂದು ಆ ಶಾಮಣ್ಣ ಹೇಳುವವರೆಗೂ ನಮಗೆ ಹೊಳೆದೇ ಇರಲಿಲ್ಲ…. ಇದು ಇಲ್ಲೇ ಆಗಲಿ ಎಂದು ಇಷ್ಟು ವರ್ಷ ಇವಳಿಗೆ ಎಲ್ಲೂ ಆಗಲಿಲ್ಲವೋ ಯಾರಿಗೆ ಗೊತ್ತು?…. ಹೇಳಿದರೆ ಯಾರೂ ನಂಬುವುದಿಲ್ಲ. ಅಷ್ಟು ಸರಸರ ಅಂತ ಎಲ್ಲ ಎಂಟೇ ದಿವಸಗಳಲ್ಲಿ ನಡೆದುಹೋಯಿತು ನೋಡು…. ಅವನು ಬಂದದ್ದು, ಹುಡುಗಿ ನೋಡಿ ಅಂತ ಕಾಲಲ್ಲೇ ಪಾಸು ಮಾಡಿದ್ದು, ಇವರು ಜಯವಂತ ದೇಸಾಯಿಯವರನ್ನು ಕರೆದುಕೊಂಡು ಮಾತಾಡಲು ಹೋದವರು ಸಕ್ಕರೆ ತಿಂದೇ ಬಂದಿದ್ದು…. ಎಲ್ಲ ಎಂಟೇ ದಿವಸಗಳಲ್ಲಿ ಆಗಿಹೋಯಿತು….’
‘ಅವನ ಹೆಸರನ್ನೇ ಹೇಳಲಿಲ್ಲವಲ್ಲ ಚಿಕ್ಕಮ್ಮ’ ಎಂದು ಮನೋಹರ ತುಸು ರೇಗಿಸುವ ದನಿಯಲ್ಲಿ ಹೇಳಿದ.
‘ಗಣಪತಿ’ ಎಂದು ಅಳಿಯನ ಹೆಸರು ಹೇಳುವಾಗ ಅವಳೇ ತುಸು ನಾಚಿದಳು.
ಸುನಂದ ಬಂದೊಡನೆ ‘ಗಣಪ ಬಂದ, ಕಾಯಿಕಡುಬು ತಿಂದ’ ಎಂದು ಶುರುಮಾಡಿ, ಪ್ರಾಸಬದ್ದವಾಗಿ ಒಂದಕ್ಕೊಂದು ಸೇರಿಸಿ ಮುಂದುವರಿಸಿಕೊಂಡು ಹೋಗುತ್ತ ಹುಡುಗಿಯರು ಸುನಂದೆಯನ್ನು‌ಉ ಕಿಚಾಯಿಸಿದರು. ಎಲ್ಲವೂ ತನ್ನ ಮದುವೆಯ ನಿಮಿತ್ತವೆಂಬ ಅರಿವಿನಿಂದ ಹುಟ್ಟಿದ ಪ್ರಾಮುಖ್ಯತೆಯನ್ನು ಅವಳು ಆನಂದಿಸುತ್ತಿದ್ದಂತಿತ್ತು. ಕಣ್ಣಲ್ಲಿ ವಿಶೇಷ ಕಾಂತಿಯಿತ್ತು. ಮನೋಹರನಿಂದ ಕೆನ್ನೆ ಹಿಂಡಿಸಿಕೊಂಡು ಸುನಂದೆ ನಾಚಿದಳು.
ಮನೆಯ ಹಿಂಭಾಗದಲ್ಲಿ ಹಾಕಿದ್ದ ಅಡಿಗೆ ಚಪ್ಪರದಿಂದ ನಾನಾ ರೀತಿಯ ಸುವಾಸನೆಗಳು ಹೊಮ್ಮುತ್ತಿದ್ದವು. ಹೊಗೆ ಗಾಳಿಯ ದಿಕ್ಕಿಗೆ ಓಡುತ್ತಿತ್ತು. ಕೈತೊಳೆಯಲು ಹೋದಾಗ ಬಾಬುಟಿ ತನ್ನ ಬಗ್ಗೆ ಸಹಾಯಕರಿಗೆ ಹೇಳುವುದನ್ನು ಮನೋಹರ ಕೇಳಿಸಿಕೊಂಡ. ತರಕಾರಿ ಹೆಚ್ಚುತ್ತ, ಸಾರು ಕುದಿಸುತ್ತ ಎಲ್ಲಿಂದ ಎಲ್ಲಿಗೋ ಅವರ ಮಾತುಗಳು ಅಲೆಯುತ್ತಿದ್ದವು. ಮದುವೆ ಮನೆಗೆ ಆಹ್ವಾನಿಸದೇ ಬಂದು ಇಷ್ಟಿಷ್ಟು ತಿಂದು, ಕೆಲವೊಮ್ಮೆ ತಿಂದಿದ್ದು ಅತಿಯಾಗಿ ಕಾರಿಕೊಳ್ಳುವ ಗುಂಡಬಾಳೆ ವೆಂಕಟೇಶ ಬಂದರೂ ಬರಬಹುದೆಂದು ಮಾತಾಡಿಕೊಳ್ಳುತ್ತಿದ್ದರು. ಮಾರನೇ ದಿನ ದೇವಕಾರ್ಯಕ್ಕೆ ಬೀಗರ ಕಡೆಯಿಂದ ಯಾರು ಯಾರು ಬರಬಹುದೆನ್ನುವ ಬಗ್ಗೆ ಅಡಿಗೆ ಮೇಳದಲ್ಲಿ ಚರ್ಚೆ ಶುರುವಾಗುತ್ತಲಿತ್ತು. ಯಾರಾದರೂ ತುಂಬಿದ ಬಸುರಿಯರು ಇದ್ದಾರೋ ಹೇಗೆ ಎಂದು ಕೂಡ ಮಾತು ಹರಿಯಿತು. ಬಾಣಂತಿ ಸೂತಕ ತಗುಲದ ಹಾಗೆ ಒಂದು ಪೂಜೆ ಮಾಡಿ, ಮಂಗಲದೀಪ ಹಚ್ಚಿ ಇಟ್ಟರೆ ಅದರ ಬಾಧೆಯಿಲ್ಲವೆಂದು ಬಾಬುಟಿ ಅಧಿಕಾರ ವಾಣಿಯಿಂದ ಹೇಳುತ್ತಲಿದ್ದ.
ಮನೋಹರನ ಗಂಜಿ ಊಟ ಮುಗಿಯುವುದನ್ನೇ ಕಾಯುತ್ತಿದ್ದವನ ಹಾಗೆ ಯಶವಂತ ಬಂದು ‘ಬಾ…ಬಾ’ ಎಂದು ಅವನನ್ನು ಮಹಡಿಯ ಮೇಲಿನ ತನ್ನ ಕೋಣೆಗೆ ಕರೆದುಕೊಂಡು ಹೋದ. ಅಲ್ಲಿ ಹೊಸ ಬಣ್ಣದ ವಾಸನೆಯಿತ್ತು. ಕಿಟಕಿಯಿಂದ ಕೆಳಗೆ ನೋಡಿದರೆ ಚಪ್ಪರದ ಮೇಲೆ ಒಣಗಲು ಹಾಕಿದ ಸಂಡಿಗೆಗಳು ಕಾಣಿಸುತ್ತಿದ್ದವು.
‘ಈ ಮದುವೆಯ ತಯಾರಿ ಸಾಕಾಗಿಹೋಯಿತು. ಊರ ಜನ ಆಯ್ತ ಸಮಯಕ್ಕೆ ಹೆಗಲು ಕೊಟ್ಟರು. ಇಲ್ಲವಾದರೆ ನನ್ನೊಬ್ಬನಿಂದ ಇದು ಆಗುವ ಮಾತಲ್ಲ ನೋಡು…. ಬೆಂಗಳೂರಿನಲ್ಲದರೆ ದುಡ್ಡು ಕೊಟ್ಟರೆ ಆಯಿತು, ಮದುವೆಯ ದಿನ ದಿಬ್ಬಣ ತಗೊಂಡು ಹೋಗಬಹುದು… ಇಲ್ಲಿ ಎಲ್ಲ ನಾವೇ ಮಾಡಬೇಕಲ್ಲ…’
ಮಾತಾಡುತ್ತ ಯಶವಂತ ಚಾಪೆ ಹಾಕಿದ. ಹಾಸಿದ ಚಾಪೆಯ ಮೇಲೆ ಕೂತು ಉದ್ದನೆಯ ಖಾತಾಪುಸ್ತಕದಂಥ ಹಾಳೆಗಳನ್ನು ಬಿಚ್ಚತೊಡಗಿದ. ‘ಜವಳಿ ಪಟ್ಟಿ… ನೀನೊಂದು ಸಲ ನೋಡಿಬಿಡು…. ನಮ್ಮ ದೇವಣ್ಣನ ಬದಲಿಗೆ’ ಅಂದ.
ಈ ಜವಳಿ ಪಟ್ಟಿಯನ್ನು ನೋಡುವುದೆಂದರೆ ಅದರ ಜವಾಬ್ದಾರಿಯನ್ನು ಭಾಗಶಃ ಹೊತ್ತುಕೊಂಡ ಹಾಗೆ. ಮದುವೆಯ ತಯಾರಿಯ ಮುಖ್ಯ ಭಾಗಗಳಲ್ಲೊಂದಾದ ಇದನ್ನು ಯಾರು ಕೂತು ತಯಾರಿಸಬೇಕು ಅನ್ನುವದರಿಂದ ಮೊದಲಾಗಿ, ಯಾರಿಗೆ ಸೀರೆ, ಯಾರಿಗೆ ಪಂಚೆ, ಕುಟುಂಬಕ್ಕೆ ಯಾರು ಯಾರು ಸೇರಿದವರೆಂಬುದನ್ನು ವ್ಯಾಖ್ಯೈಸುವುದು ಹೇಗೆ – ಮದುವೆಯಾಗಿ ಹೋದ ಹುಡುಗಿಯರಲ್ಲಿ ಯಾರನ್ನು ಈ ವ್ಯಾಖ್ಯೈಯಲ್ಲಿ ಸೇರಿಸಬಹುದು, ಯಾರಿಗೆ ಕುಬಸದ ಖಣ, ಯಾರು ಅವರವರ ಮನೆಯ ಶುಭಕಾರ್ಯಗಳಿಗೆ ತಮಗೆ ಏನೇನು ಕೊಟ್ಟಿದ್ದರೆಂಬ ಋಣಭಾರ – ಎಲ್ಲವನ್ನೂ ಪರಿಗಣಿಸಿ ಮಾಡಬೇಕಾದ ಪಟ್ಟಿ. ಕುಟುಂಬಕ್ಕೆ ಯಾರು ಹತ್ತಿರ, ಎಷ್ಟು ಹತ್ತಿರ ಅನ್ನುವ ತರತಮ ಪ್ರಾಮುಖ್ಯವನ್ನು ಇದು ಬಿಂಬಿಸುತ್ತಿತ್ತು.
‘ಮುಂಬೈಯಿಂದ ರಾಯಕರನ ಮಾಲು ಬರಲೇ ಇಲ್ಲ. ಅದ್ಯಾವುದೋ ಮಿಲ್ಲಿನಲ್ಲಿ ಹರತಾಳ ನಡೆಯುತ್ತಿದೆಯಂತೆ. ಮಗನನ್ನು ಅಹಮದಾಬಾದಿಗೆ ಕಳಿಸಿ ಅಂತೂ ತರಿಸಿದ್ದಾನೆ. ಇಲ್ಲದಿದ್ದರೆ ಈವತ್ತು ಜವಳಿ ಖರೀದಿಗೆ ಹುಬ್ಬಳ್ಳಿಗೆ ಹೊರಡುವುದೆಂದೇ ಅಂದುಕೊಂಡಿದ್ದೆವು’. ಎಂದು ಹೇಳುತ್ತ ಯಶವಂತ ಮೂರು ಉದ್ದುದ್ದ ಹಾಳೆಗಳನ್ನು ಮನೋಹರನಿಗೆ ಕೊಟ್ಟ. ಅವುಗಳಲ್ಲಿ ಹೆಸರುಗಳಿದ್ದವು. ಅವುಗಳ ಮುಂದೆ ಏನೇನೋ ಶರಾಗಳಿದ್ದವು. ಯಶವಂತ ಅವುಗಳನ್ನು ವಿವರಿಸತೊಡಗಿದ.
‘ನಮ್ಮ ಗಂಗತ್ತೆಗೊಂದು ಸೀರೆ ಅಂತ ಆಯ್ತು… ಗಂಡ ಇಲ್ಲದಿದ್ದರೇನಾಯಿತು? ಜಾನಕಿ ನಮ್ಮ ಮನೆತನದೊಳಗೆ ಬಂದ ಹೆಣ್ಣಲ್ಲವೇ? ಅವಳ ತವರಿನ ಕಡೆಯವರಿಗೊಂದು ಮರ್ಯಾದೆ ಅಂತ ಏನಾದರೂ ಕೊಡಬೇಕಲ್ಲವೇ? ಆಮೇಲೆ ಹೆರವಟ್ಟೆಯ ಕಮಲಳಿಗೂ ಒಂದು ಸೀರೆ. ಅವಳ ಮಗನ ಮದುವೆಗೆ ಯಾರಿಗೆ ಕೊಡದಿದ್ದರೂ ಯಶೋದೆಗೊಂದು ಸೀರೆ ಕೊಟ್ಟಿದ್ದಳು… ಗೋಪಾಲನ ಹೆಂಡತಿಗೂ ಒಂದು. ಸಂಬಂಧದ ಪ್ರಕಾರ ಕೊಡಬೇಕಾಗಿಲ್ಲ; ಆದರೆ ಇಬ್ಬರ ಮಕ್ಕಳ ಮುಂಜಿಗೂ ಒಂದೊಂದು ಸೀರೆ ಕೊಟ್ಟಿದ್ದಾನೆ. ಒಬ್ಬಳೇ ಮಗಳಾದ್ದರಿಂದ ಕೊಡುವವರಿಗೆಲ್ಲ ಈ ಸಂದರ್ಭದಲ್ಲೇ ಕೊಟ್ಟುಬಿಡುವುದು. ಮುಂದೆ ಹೇಗೋ ಏನೋ… ಋಣಭಾರ ಯಾಕೆ ಹೇಳು? ಈ ಕಡೆ ಇನ್ನೊಂದು ಹಾಳೆಯ ಮೇಲೆ ಬರೆದಿದೆಯಲ್ಲ, ಅದೆಲ್ಲ ಪ್ಯಾಂಟು ಪೀಸುಗಳನ್ನು ಕೊಡುವುದಕ್ಕೆ. ಅದು ಆ ಕಡೆ ಇರುವುದು ಶರ್ಟು ಪೀಸು… ನಮ್ಮ ಮಿಲ್ಲಿನ ಕೆಲಸಗಾರರನ್ನು ಇದರಲ್ಲಿ ಸೇರಿಸಿಲ್ಲ. ಅವರದ್ದು ದೊಡ್ಡ ಪಟ್ಟಿಯೇ ಇದೆ. ನಮ್ಮ ಬೊಮ್ಮಯ್ಯ ಹೆಂಡತಿಗೊಂದು ಸೀರೆ ಅಂತ ಮಾತಾಡಿಕೊಂಡಿದ್ದೇವೆ… ಅದೆಲ್ಲ ಬೇರೆ ಇಟ್ಟಿದ್ದೇನೆ… ಅದು ಮದುವೆಯ ಗೌಜಿ ಮುಗಿದ ನಂತರ ಕೊಡುವ ಸಂಗತಿಗಳು….’
ಯಾವ ರೀತಿಯ ಸೀರೆ, ಅದರ ಅಂದಾಜು ಬೆಲೆ, ಅದನ್ನು ಕೊಡಲು ಇರುವ ಕಾರಣಗಳನ್ನೆಲ್ಲ ಯಶವಂತ ವಿವರಿಸುತ್ತ ಹೋದ ಹಾಗೆ ಮನೋಹರ ಕೈಯಲ್ಲಿದ್ದ ಹಾಳೆಗಳನ್ನು ಸುಮ್ಮನೇ ನೋಡುತ್ತ ಕೂತ. ಹೆಸರುಗಳು, ಅವುಗಳ ಮುಂದೆ ಸೀರೆ ನಮೂನೆ, ಅಂದಾಜು ಬೆಲೆ ಬರೆದಿತ್ತು. ಇಡೀ ಕುಟುಂಬದ ಸಂಬಂಧಗಳನ್ನು ಈ ಸಂಕೀರ್ಣ ಜಾಲದಲ್ಲಿ ಕೂರಿಸಿದ ಬಗೆಯನ್ನು, ಅದರ ಹಿಂದಿನ, ತನಗೆ ಅರ್ಥವಾಗದ ತತ್ವವನ್ನು ಮನೋಹರ ಬೆರಗಿನಿಂದ ನೋಡಿದ. ಪ್ರತಿ ಹೆಸರನ್ನು ಸೇರಿಸಲು ಒಂದು ವಿಶಿಷ್ಟ ತರ್ಕವಿತ್ತು. ಹಿಂದಿನ ಹೆಸರು ಸೇರಿಸಿದ್ದಕ್ಕೂ, ಮುಂದಿನದಕ್ಕೂ ನೇರವಾದ ಸಂಬಂಧವೇ ಇರದಂತೆ ತೋರುತ್ತಿತ್ತು. ಯಾವ ಕಾರಣಗಳಿಗಾಗಿ ಹಿಂದಿನ ಹೆಸರು ಸೀರೆಯ ಗುಂಪಿಗೆ ಸೇರಿಸಿತ್ತೋ ಅದೇ ಕಾರಣಕ್ಕಾಗಿ ಮುಂದಿನ ಹೆಸರು ಪಂಚೆಯ ಗುಂಪಿಗೆ ಸೇರಿತ್ತು. ಬಿಟ್ಟ ಹೆಸರುಗಳ ಬಗ್ಗೆ ವಿವರವನ್ನು ಯಶವಂತ ಕೊಡುತ್ತಲಿದ್ದ. ಸಂಬಂಧಗಳು, ಋಣಭಾರಗಳು, ಸೌಜನ್ಯಗಳು, ಇಷ್ಟಾನಿಷ್ಟಗಳು, ಎಂದೋ ಆದ ಅವಮಾನಗಳು, ಮುಯ್ಯಿಗಳು ಈ ದೀರ್ಘ ಪಟ್ಟಿಯ ಸಂಯೋಜನೆಯಲ್ಲಿ ಅದರ ಭಾಗ ಆಗುವುದರ ಮೂಲಕ ಎಷ್ಟೋ ಅಷ್ಟೇ ಆಗಿರುವುದರ ಮೂಲಕ ಕೂಡ ಅಭಿವ್ಯಕ್ತಿಯನ್ನು ಪಡೆದಂತಾಗಿತ್ತು.


ಮಧ್ಯಾಹ್ನ ಮೂರು ಗಂಟೆಗೆ ಜವಳಿ ಖರೀದಿಗೆ ಹೊರಟಾಗ ಯಶವಂತನ ಒತ್ತಾಯದಿಂದಾಗಿ ಮನೋಹರನೂ ಅವರ ಜೊತೆ ಹೋಗಬೇಕಾಯಿತು.
‘ಹೋಗುವವರು ನಾನು, ಯಶೋದೆ ಮತ್ತು ಸುನಂದಾ ಮಾತ್ರ…. ಮೂರು ಜನವಾಗುತ್ತದಲ್ಲ – ಅದಕ್ಕೇ ನೀನು ಬಂದರೆ ಸರಿಹೋಗುತ್ತದೆ. ಬೇರೆ ಯಾರನ್ನೂ ಕರಕೊಂಡು ಹೋಗುವ ಮನಸ್ಸಿಲ್ಲ ನನಗೆ.’ ಎಂದು ಯಶವಂತ ಹೇಳಿದ್ದರಿಂದ ಬೇರೆ ದಾರಿಯಿರಲಿಲ್ಲ.
‘ನಾನೊಂದು ನಾಲ್ಕನೆಯ ನಗ ಅಷ್ಟೇ…. ಜವಳಿಯ ಬಗ್ಗೆ ನನಗೇನೂ ಗೊತ್ತಿಲ್ಲ’
‘ಆಯ್ತಪ್ಪ, ಒಂದು ನಗವಾಗಿಯೇ ಬಾ ನೀನು. ನಾವು ಮಾಡುವುದನ್ನು ಕೂತು ನೋಡು ಅಷ್ಟೇ’ ಎಂದು ಯಶವಂತ ಒತ್ತಾಯಿಸಿದ.
ಖರೀದಿಗೆ ಬರುವುದು ಗೊತ್ತಿದ್ದರಿಂದ ರಾಯಕರ ಇಂಥ ಸಂದರ್ಭಗಳಿಗೆಂದೇ ಮೀಸಲಾದ ಅಂಗಡಿಯ ಒಳಭಾಗದ ಕೋಣೆಯಲ್ಲಿ ಚಾಪೆಗಳನ್ನು ಹಾಸಿ, ಒರಗು ದಿಂಬುಗಳನ್ನು ಜೋಡಿಸಿ ವ್ಯವಸ್ಥೆ ಮಾಡಿದ್ದ. ಹೊಸ ಸ್ಟಾಕಿನಿಂದ ಇವರು ನೋಡಬಹುದಾದ ರೀತಿಯ ಸೀರೆಗಳನ್ನು ಆಗಲೇ ತೆಗೆದಿಟ್ಟಿದ್ದ. ಹೋದದ್ದೇ ಶರಬತ್ತು ಕೊಟ್ಟು ಉಪಚರಿಸಿದ.
‘ಕುಯ್ಯಬೇಡ ಮಾರಾಯ – ಸರಿಯಾದ ಬೆಲೆ ಹಾಕು’ ಎಂದು ಯಶವಂತ ವ್ಯಾಪಾರ ಆರಂಭಿಸುವ ಸೂಚನೆ ಇತ್ತ.
‘ನೀವು ಬೇಕಾದ್ದು ಆರಿಸಿ ರಾಯರೇ… ಬೆಲೆ ನೋಡಬೇಡಿ…. ಕೊನೆಯಲ್ಲಿ ಒಟ್ಟೂ ಸೇರಿಸಿ ರಿಬೇಟು ಕೊಡೂತ್ತೇನೆ, ಎಂದು ರಾಯಕರ ತನ್ನ ವ್ಯಾಪಾರಿ ಭಾಷೆ ಶುರುಮಾಡಿದ.
ಯಶವಂತ ತನ್ನ ಹಿಡಿರ ಸಡಲಿಸದೇ ‘ನಿನ್ನ ಅಂಗಡಿಯಲ್ಲಿ ಬೆಲೆ ನೋಡದೇ ವ್ಯಾಪಾರ ಮಾಡಿದರೆ ದಿವಾಳಿ ಎದ್ದ ಹಾಗೇ’ ಅಂದ.
ಗಾಜಿನ ಬಾಗಿಲುಗಳಿದ್ದ ಕಟ್ಟಿಗೆಯ ಕಪಾಟುಗಳಲ್ಲಿ ಸಾಲಾಗಿ ಜೋಡಿಸಿಟ್ಟ ಬಟ್ಟೆಗಳು. ಹೊಸ ಬಟ್ಟೇ ಸುತ್ತಿ ಬಂದ ಉರುಟಾದ ಕಟ್ಟಿಗೆಯ ಕೋಲುಗಳನ್ನು, ಎರಡು ಕಪಾಟುಗಳ ನಡುವಿನ ಸಂದಿಯಲ್ಲಿ ಒಟ್ಟಿ ಇಡಲಾಗಿತ್ತು. ಆಯತಾಕಾರದ ರಟ್ಟುಗಳನ್ನು ಒಂದು ಮೂಲೆಯಲ್ಲಿ ಪೇರಿಸಿಟ್ಟಿದ್ದರು. ಹೊಸಬಟ್ಟೆಯ ವಾಸನೆ, ಸೀರೆಯ ಮಡಿಕೆ ಬಿಚ್ಚುವಾಗ ಅದರೊಳಗಿನ ತೆಳ್ಳನೆಯ ಪೇಪರು ಬಟ್ಟೆಗೆ ಸವರುವ ಸದ್ದು, ನೂರಾರು ವಿನ್ಯಾಸಗಳು, ಬಣ್ಣಗಳು – ಈ ಎಲ್ಲದರ ನಡುವೆ ಜವಳಿ ಪಟ್ಟಿಯನ್ನು ಎದುರಿಗಿಟ್ಟುಕೊಂಡು ಆಯ್ಕೆಯ ಚರ್ಚೆ ಶುರುವಾಯಿತು. ಮದುವಣಗಿತ್ತಿಯದು ಮುಗಿಯಲಿ ಎಂದು ಸುನಂದೆಯ ಸೀರೆಗಳನ್ನು ಮೊದಲು ಆರಿಸಲಾಯಿತು. ‘ಯಾವುದಾದರೂ ತಗೋ’ ಎಂದು ಯಶವಂತ ಪದೇ ಪದೇ ಹೇಳಿದರೂ ಅಪ್ಪನಿಗೆ ಭಾರವಾಗಬಹುದೆನ್ನುವ ಆತಂಕ ಮತ್ತು ತನ್ನ ಜೀವನದಲ್ಲಿ ಈ ಸಂಭ್ರಮ ಒಂದು ಬಾರಿ ಮಾತ್ರ ಎನ್ನುವ ಅರಿವಿನಿಂದ ಹುಟ್ಟಿದ ದ್ವಂದ್ವವನ್ನು ಮೀರಲು ಅವಳಿಗೆ ತುಸು ಹೊತ್ತು ಹಿಡಿಯಿತು. ತನ್ನೆಲ್ಲ ಸೀರೆಗಳನ್ನು ಅವಳೇ ಆರಿಸಿದಳು. ಮನೋಹರನ ಅಭಿಪ್ರಾಯ ಕೇಳಿದಾಗ ಅವನು ಕೊಟ್ಟ ಸಲಹೆಗಳಿಂದ ಖುಷಿಪಟ್ಟಳು. ಉಳಿದ ಸೀರೆ ಪಂಚೆ ಶರ್ಟಿನ ಬಟ್ಟೆಗಳು ಅಂತ ಮುಂದಿನ ಖರೀದಿ ಶುರುವಾಯಿತು. ಈ ನಡುವೆ ಚಹಾ ಚೂಡಾ ಬಂತು.
ಎಲ್ಲವೂ ಮುಗಿಯುವ ವೇಳೆಗೆ ಸಂಜೆಯಾಯಿತು. ಇನ್ನೇನು ರಾಯಕರನಿಗೆ ಹೇಳಿ ಲೆಕ್ಕ ಮಾಡಿಸಬೇಕು ಅನ್ನುವ ಹೊತ್ತಿಗೆ ಯಶವಂತ ಎರಡು ಸಾವಿರದ ಸೀರೆಯ ಗುಂಪಿನಿಂದ ಒಂದನ್ನು ಎತ್ತಿ ಪಕ್ಕದಲ್ಲಿ ತಾವು ಕೊಂಡ ಸೀರೆಗಳ ಜೊತೆ ಇಟ್ಟ. ಪಟ್ಟಿಯಲ್ಲಿದ್ದ ಎಲ್ಲರಿಗೂ ಕೊಂಡುಕೊಂಡಾಗಿತ್ತು. ಆ ಬೆಲೆಯ ಸೀರೆ ಯಶೋದೆಗೆ ಮತ್ತು ಸುನಂದಗಲ್ಲದೇ ಬೇರೆ ಯಾರಿಗೂ ತೆಗೆದಿರಲಿಲ್ಲ. ಅರೆ ಯಾರನ್ನಾದರೂ ಮರೆತೆವೋ, ಮಗಳಿಗೆ ಇನ್ನೊಂದು ಇರಲಿ ಎಂದು ತೆಗೆದಿಟ್ಟನೋ ಎಂದೆಲ್ಲ ಸುನಂದೆಯೂ ಯಶೋದೆಯೂ ಯೋಚಿಸಿದರು. ಯಶವಂತ ಯಾರಿಗೆ ಅಂತ ಹೇಳಲೂ ಇಲ್ಲ.
ಯಶೋದೆ ‘ಇದ್ಯಾಕೆ ಇನ್ನೊಂದು?’ ಅಂದಳು.
‘ಚಂಪಾಗೆ’ ಎಂದು ಯಶವಂತ ಹೇಳಿದ್ದೇ ಥಟ್ಟನೆ ಒಂದು ಕ್ಷಣ ಮೌನ ಆವರಿಸಿತು. ಮರುಕ್ಷಣವೇ ಯಶೋದೆ ಸ್ಫೋಟಿಸಿದಳು. ಆರಿಸಿ ತನ್ನೆದುರಿಗೆ ಪೇರಿಸಿಟ್ಟ ಸೀರೆಗಳ ರಾಶಿಯನ್ನು ಧಡಾರನೆ ನೂಕಿದಳು.
‘ನಾನು ಯಾಕೆ? ಆ ಭೋಸುಡಿಯೇ ನಿಮ್ಮ ಜೊತೆ ಧಾರೆಗೆ ಕೂಡಲಿ…. ಎಲ್ಲರ ಎದುರಿಗೆ ನಮ್ಮ ಮಾನ ಮೂರು ಕಾಸಾಗಲಿ’ ಎಂದು ಹೇಳುತ್ತ ಹೇಳುತ್ತ ಯಾವುದನ್ನು ಎಷ್ಟು ಹೇಳಬೇಕು ಎಂಬ ಪರಿಜ್ಞಾನ ತಪ್ಪಿ ಹೋದವಳ ಹಾಗೆ, ಗಂಡನಿಂದಾದ ಈ ವಂಚನೆಯನ್ನು, ಅಪಮಾನವನ್ನು ತಡೆದುಕೊಳ್ಳಲು ಸಾಧ್ಯವಾಗದವಳ ಹಾಗೆ ತನ್ನಿಂದ ಶಕ್ಯವಿರುವ ಅತ್ಯಂತ ಕಟುವಾದ ಮಾತುಗಳಿಂದ ಚಂಪಾಳನ್ನು ಬಯ್ಯತೊಡಗಿದಳು. ಭೋಸುಡಿ ರಂಡೆ ಮುಂಡೆ ಸೂಳೆ ಎಂದು ಏನು ಹೇಳಿದರೂ ಯಶವಂತನನ್ನು ಕೆರಳಿಸಲಾಗದೇ ಹತಾಶಳಾಗಿ ದೊಡ್ಡ ದನಿ ತೆಗೆದು ಅಳಲಾರಂಭಿಸಿದಳು. ಇವರ ಮಾತುಗಳನ್ನು ಕೇಳಿಸಿಕೊಂಡಿರದ ಅಂಗಡಿಯ ಆಳು, ಕ್ಷಣಾರ್ಧದಲ್ಲಿ ಬದಲಾದ ಈ ಸನ್ನಿವೇಶದಿಂದ ಗಾಬರಿಯಾಗಿ, ಸೀರೆಗಳನ್ನು ಮತ್ತೆ ಜೋಡಿಸಬೇಕೋ ಇಲ್ಲವೋ ತಿಳಿಯದೇ ಯಜಮಾನರನ್ನು ಕರೆಯಲು ಹೊರಗೋಡಿದ. ಹೊರಗೆ ಅಂಗಡಿಯಲ್ಲಿದ್ದ ನಾಲ್ಕೈದು ಗಿರಾಕಿಗಳು ಏನು ಅನಾಹುತವಾಯಿತೆಂದು ತಿಳಿಯದೇ, ಸಹಾಯಕ್ಕೆ ಧಾವಿಸಬೇಕೇ ಬೇಡವೋ ಗೊತ್ತಾಗದೇ, ಸಂದಿಗ್ಧದಲ್ಲಿ ಕೋಣೆಯ ಬಾಗಿಲಿನಿಂದ ಇಣುಕತೊಡಗಿದರು. ‘ಏನಿಲ್ಲ… ನಮ್ಮ ನಮ್ಮೊಳಗಿನ ಮಾತು…’ ಎಂದು ಯಶವಂತ ಅವರನ್ನು ಹೊರಗೆ ಕಳಿಸಿ ಬಾಗಿಲು ಅಡ್ಡ ಮಾಡಿದ. ಅಷ್ಟರಲ್ಲಿ ಯಶೋದೆ ಆಣೆ ಪ್ರಮಾಣ ಮಾಡತೊಡಗಿದ್ದಳು. ಮದುವೆಗೇನಾದರೂ ಚಂಪಾ ಬಂದರೆ ನೇಣು ಹಾಕಿಕೊಂಡು ಬಿಡುತ್ತೇನೆಂದಳು. ಸುತ್ತಲೂ ಇದ್ದ ಕಪಾಟುಗಳ ಗಾಜಿನ ಬಾಗಿಲುಗಳಲ್ಲಿ ಕೂತವರೆಲ್ಲಾ ತುಂಡುತುಂಡಾಗಿ ಪ್ರತಿಫಲಿಸುತ್ತಿದ್ದರು. ಎದುರು ಗೋಡೆಗೆ ಒರಗಿಸಿಟ್ಟ ದೊಡ್ಡ ಕನ್ನಡಿಯಲ್ಲಿ ಕೊಂಚ ಸೊಟ್ಟಾಗಿ ಕಾಣುವ ಎಲ್ಲರ ಮುಖಗಳನ್ನು, ಯಶೋದೆಯ ಇದ್ವೇಗಭರಿತ ಹಾವಭಾವಗಳನ್ನು ಕಂಡಾಗ ತನಗೆ ಸಂಬಂಧಪಡದ ಯಾವುದೋ ಚಲನಚಿತ್ರವನ್ನು ನೋಡುತ್ತಿರುವಂತೆ ಮನೋಹರನಿಗೆ ಭಾಸವಾಯಿತು.
ಯಶವಂತ ಈ ರಂಪದಿಂದ ವಿಚಲಿತನಾಗಲಿಲ್ಲ. ಈ ನಿರ್ಧಾರವನ್ನು ಅವನು ಯಾವಾಗಲೋ ಮಾಡಿದಂತಿತ್ತು. ಯಶೋದೆ ಅತ್ತು ಸಮಾಧಾನ ಮಾಡಿಕೊಳ್ಳಲಿ ಎಂದು ಕಾಯುವಂತೆ ದಿಂಬಿಗೊರಗಿ ಕೂತುಬಿಟ್ಟ. ಯಶವಂತ ಮತ್ತು ಚಂಪಾಳ ಸಂಬಂಧ ಇಡೀ ಊರಿಗೆ ಗೊತ್ತಿರುವ ಗುಟ್ಟಾದರೂ, ಈಗ ಅದನ್ನು ಈ ರೀತಿ ಪ್ರಕಟಿಸುವ ಅಗತ್ಯವೇನೆಂದು ಯಾರಿಗೂ ಅರ್ಥವಾಗಲಿಲ್ಲ. ಯಶೋದೆ ಮತ್ತು ಸುನಂದೆಗೆ ಎದೆಲ್ಲ ಹೊಸ ಸಂಗತಿಯಲ್ಲದಿದ್ದರೂ, ಹೀಗೆ ಅದನ್ನು ಸ್ವೀಕರಿಸಲು ಅವರು ಸಿದ್ದರಾಗಿರಲಿಲ್ಲ.
ಸುನಂದೆ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅವಳನ್ನು ನೋಡಿ ಮನೋಹರನಿಗೆ ಪಿಚ್ಚೆನಿಸಿತು. ಅವಳ ಮದುವೆ ಯಾವಾಗಲೋ ಆಗಬೇಕಿತ್ತು. ಯಶವಂತ – ಚಂಪಾಳ ಪ್ರಕರಣದಿಂದಲೇ ಅವಳಿಗೆ ಬಂದ ಸಂಬಂಧಗಳೆಲ್ಲ ಮೊದಲ ಹಂತವನ್ನೇ ದಾಟುತ್ತಿರಲಿಲ್ಲ. ಅದಕ್ಕೆ ಕಾರಣ ಯಾರೂ ಬಾಯಿ ಬಿಟ್ಟು ಹೇಳದಿದ್ದರೂ ಅದು ಏನೆಂಬುದು ಎಲ್ಲರಿಗೂ ಗೊತ್ತಿತ್ತು. ಹೇಗೆ ಈ ಸಂಬಂಧ ಒಂದು ಮಾಯೆಯಂತೆ ಕೂಡಿಬಂತು ಎಂದು ಯಶೋದೆ ಪದೇಪದೇ ವಿವರಿಸುವಾಗ ಈ ಎಲ್ಲವನ್ನೂ ನಿರಾಕರಿಸಲು, ಮುಚ್ಚಿಡಲು ಬಯಸುತ್ತಿದ್ದಾಳೆಂಬುದು ಮನೋಹರನಿಗೆ ಗೊತ್ತಾಗಿತ್ತು. ಈಗ ಈ ಸೀರೆಯ ಸಂಗತಿ ಹೊರಗೆ ಗೊತ್ತಾದರೆ ಮತ್ತೆ ಕೊನೆಯ ಗಳಿಗೆಯಲ್ಲಿ ಏನಾದರೂ ಸಮಸ್ಯೆಯಾದರೂ ಆದೀತು ಎಂದು ಆತಂಕ ಅವಳಲ್ಲಿದ್ದಂತಿತ್ತು.
‘ಏನೂ ಅಗುವುದಿಲ್ಲ…. ಅವಳು ಊರಿನ ಎಲ್ಲರ ಹಾಗೆ ಮದುವೆಗೆ ಬಂದು ಹೋಗುತ್ತಾಳೆ’ ಎಂದು ಮನೋಹರ ಯಶೋದೆಗೆ ಸಮಾಧಾನ ಹೇಳಿದ.
‘ಅಯ್ಯೋ.. ಯಾರ ಮನೆಯ ಮದುವೆಗಾದರೂ ಅವಳನ್ನು ಕರೆಯುತ್ತಾರೇನೇ… ಇದುವರೆಗೂ ಯಾವ ಮದುವೆಗೂ ಅವಳನ್ನು ಕರೆದದ್ದಿಲ್ಲ… ಅವಳು ಹೋದದ್ದಿಲ್ಲ… ಅವಲಕ್ಷಣವನ್ನು, ಅಪಶಕುನವನ್ನು ಬಾ ಎಂದು ಯಾವ ಬಾಯಲ್ಲಿ ಹೇಳಲಿ?’ ಅವಳ ಪ್ರಲಾಪ ಒಂದೇ ಸಮನೆ ಮುಂದುವರೆಯಿತು. ಈ ಸೀರೆಯನ್ನು ಆಯ್ಕೆ ಮಾಡುವ ಮೂಲಕ ಚಂಪಾಗೆ ಯಶವಂತ ಕೊಡಮಾಡಿದ ಸ್ಥಾನಮಾನವೇ ಅವಳಿಗೆ ಭರಿಸಲಾಗದ ದುಃಖ ಕೊಟ್ಟಿತ್ತು. ಅವಳಿಗೆ ಸೀರೆಯನ್ನೇ ಕೊಡಬೇಕೆಂದಿದ್ದರೆ ಅವನಿಗೆ ಬೇಕಾದಾಗ ಕೊಡಬಹುದಿತ್ತು. ಅದನ್ನು ಪ್ರತ್ಯೇಕವಾಗಿ ಅವನೇ ಬಂದು ಕೊಳ್ಳಬಹುದಿತ್ತು. ಇದು ಬರಿ ಸೀರೆಯ ಪ್ರಶ್ನೆ ಅಲ್ಲವೆಂದು ಅವಳಿಗೂ ಗೊತ್ತಿತ್ತು.
ಯಶವಂತ ಮಾತ್ರ ಗಟ್ಟಿಯಾಗಿ ನಿಂತಿದ್ದರಿಂದ ಯಶೋದೆಯ ಯಾವ ಅಸ್ತ್ರಗಳೂ ನಾಟಲಿಲ್ಲ. ತನ್ನ ನಿರ್ಧಾರ ಹೇಳಿ ಆಗಿದೆ ಎಂಬಂತೆ ಅವನು ದಿಂಬಿಗೊರಗಿ ಕೂತುಬಿಟ್ಟಿದ್ದ. ಅವನು ಯಶೋದೆಯನ್ನು ಸಮಾಧಾನಪಡಿಸಲು ಹೋಗಲೂ ಇಲ್ಲ. ಅವಳು ಮದುವೆಗೆ ಬರುವಳೋ ಇಲ್ಲವೋ ಎಂಬುದನ್ನು ಆಮೇಲೆ ಬಗೆಹರಿಸೋಣವೆಂದು ಯಶವಂತನಿಗೆ ಕೇಳುವ ಹಾಗೆಯೇ ಹೇಳಿ, ಅವಳನ್ನು ಸಮಾಧಾನಪಡಿಸಿ, ಜವಳಿಯ ಅಂಕ ಮುಗಿಸಬೇಕಾದರೆ ಮನೋಹರನಿಗೆ ಸಾಕುಸಾಕಾಗಿತ್ತು. ಅತ್ತು ಮುಖ ಬಾಡಿದ್ದು ಗೊತ್ತಾಗದಿರಲಿ ಎಂದು ತಾಯಿ ಮಗಳು ಪ್ರಯತ್ನಿಸಿದಷ್ಟೂ ಅದು ಢಾಳಾಗಿ ಎದ್ದು ಕಾಣುತ್ತಿತ್ತು.

ಋಣಾನುಬಂಧ

ಮದುವೆ ಸಡಗರದ ಮನೆಗೆ ಮನೋಹರ ಬಂದು ತಲುಪಿದಾಗ ಬೆಳಗಿನ ಹನ್ನೊಂದರ ಸಮಯ. ಮದುವೆಗಿನ್ನೂ ಮೂರು ದಿನಗಳಿದ್ದರೂ ಅಲ್ಲಿ ಆಗಲೇ ಮದುವೆ ಮನೆಯ ಕಳೆಯೇರಿತ್ತು. ಹೊರಗೆ ಅಂಗಳ ಸಾರಿಸಿ ದೊಡ್ದ ಚಪ್ಪರ ಹಾಕಿದ್ದರು. ಅವತ್ತೇ ಕಟ್ಟಿದ್ದೆಂದು ಗೊತ್ತಾಗುವಷ್ಟು ಮಾವಿನ ತೋರಣ ನಳನಳಿಸುತ್ತಿತ್ತು. ತುಳಸಿಲಗ್ನದ ಅಲಂಕಾರದ ಕುರುಹುಗಳಿನ್ನೂ ತುಳಸಿಕಟ್ಟೆಯ ಮೇಲಿದ್ದವು. ಎಷ್ಟೋವರ್ಷಗಳ ನಂತರ ಮನೆಯ ಗೋದೆಗಳು, ಕಿಟಕಿ ಬಾಗಿಲುಗಳಿಗೆಲ್ಲ ಹೊಸ ಬಣ್ಣ ಹಚ್ಚಿದ್ದರು. ಮನೆ ತುಂಬ ಜನ. ಮಕ್ಕಳ ಗಲಾಟೆ. ಎಲ್ಲಾ ಕೋಣೆಗಳಲ್ಲೂ ಬಂದವರ ನಾನಾ ಸಾಮಾನುಗಳು ಹರಡಿದ್ದವು. ಬಾಯಿ ಅರೆತೆರೆದ ಬ್ಯಾಗುಗಳಿಂದ ಹೊರಚಾಚಿದ ಬಟ್ಟೆಗಳು. ಕೆಂಪು ಕಾಗದದಲ್ಲಿ ಸುತ್ತಿ ಮದುವೆಗೆಂದು ತಂದ ಉಡುಗೊರೆಗಳು. ಅರ್ಧ ಮಡಚಿಟ್ಟ ಭಾರವಾದ ಜಮಖಾನೆಗಳು. ಹೂವಿನ ಘಮಘಮ. ವಿನಾಕಾರಣ ನಾಚುತ್ತ ಓಡಾಡುವ ಹುಡುಗಿಯರು. ಸ್ನಾನ ಮುಗಿಸಿಕೊಳ್ಳಿರೋ ಎಂದು ಬೆಳಗಿನಿಂದ ಕೂತಲ್ಲೇ ಕಿರಿಕಿರಿ ಮಾಡುವ ಶಾಲತ್ತೆ. ಈ ಎಲ್ಲ ಅವ್ಯವಸ್ಥೆಯಲ್ಲೊಂದು ಸಂಭ್ರಮವಿತ್ತು. ಇಂಥ ಗದ್ದಲದ ನಡುವೆಯೂ ಹೆಂಗಸರು ತಮ್ಮ ಗಂಡಂದಿರ ತಿಂಡಿಯಾಯಿತೋ, ಸ್ನಾನಕ್ಕೆ ಬಿಸಿ ನೀರು ಇತ್ತೋ, ಮಗನಿಗೆ ಹಾಲು ಆಯಿತೋ ಎಂದೆಲ್ಲ ಸೂಕ್ಷ್ಮವಾಗಿ ಸ್ವಕುಟುಂಬ ಚಿಂತನೆ ಮಾಡುತ್ತಿದ್ದರು. ಕೈಗೆ ಮದರಂಗಿ ಹಚ್ಚಿಕೊಂಡ ಹುಡುಗಿಯರ ಗುಂಪೊಂದು ಸೆರೆಸಿಕ್ಕ ಸೈನಿಕರ ಹಾಗೆ ಎರಡೂ ಕೈಗಳನ್ನು ಮೇಲಕ್ಕೆತ್ತಿ ಓಡಾಡುತ್ತಿತ್ತು. ಹೊರಗೆ ಚಪ್ಪರದ ಮೂಲೆಯಲ್ಲಿ ಇಸ್ಪೀಟಾಟದ ಟೋಳಿ ನಾನಾ ರೀತಿಯ ಅಟ್ಟಹಾಸ ಮಾಡುತ್ತಿತ್ತು. ‘ತುರುಫಿನ ಎಕ್ಕಾ ನನ್ನದು…. ತುರುಫಿನ ಎಕ್ಕಾ’ ಎಂದು ಯಾರೋ ಕೂಗಾಡುತ್ತಿದ್ದರು. ಎಲ್ಲವನ್ನೂ ಪಣಕ್ಕೆ ಇಟ್ಟವರಂತೆ ಆತಂಕದ ಮುಖದಲ್ಲಿ ಮುಂದಿನ ಎಲೆಯನ್ನು ನಿರೀಕ್ಷಿಸುತ್ತ ಗುಂಪು ಅದರಲ್ಲೇ ಮಗ್ನವಾಗಿತ್ತು.
‘ಈ ಸಲ ಜೋರಾಗಿದೆಯಲ್ಲ ಇಸ್ಪೀಟಿನ ಟೋಳಿ’ ಎಂದ ಮನೋಹರ.
‘ನಮ್ಮ ಪಾಂಡು ಭಾವಯ್ಯ ಇದ್ದ ಮೇಲೆ ಜಬರದಸ್ತಾಗಲೇಬೇಕಲ್ಲ…. ಆಡಿದ್ದಾರೆ ನಿನ್ನೆ ರಾತ್ರಿ ಎರಡರವರೆಗೂ…’ ಎಂದು ಅಭಿಮಾನದಿಂದ ಯಶವಂತ ಹೇಳಿದ. ಅದು ಕಿವಿಗೆ ಬಿದ್ದಿತೋ ಎಂಬಂತೆ ಪಾಂಡುಭಾವ ಮನೋಹರನನ್ನು ನೋಡಿ ಆಟಕ್ಕೆ ಕೂತಲ್ಲಿಂದಲೇ ಕೈಯೆತ್ತಿ ಸ್ವಾಗತಿಸಿದರು. ಮನೋಹರ ಬಂದಿದ್ದು ಯಶವಂತನಿಗೆ ಬಹಳ ಖುಷಿಯಾಗಿತ್ತು. ಯಶವಂತ ಅವನನ್ನು ಒಳಗೆ ಕರೆದುಕೊಂಡು ಹೋಗುತ್ತಿದ್ದ ಹಾಗೆ ಶಾಲತ್ತೆ ಅಡ್ಡಗಟ್ಟಿದಳು. ಅವಳೊಂದು ಕಡೆ ಕೂತು ತನ್ನ ಎದುರು ಯಾವುದೇ ಅಪರಿಚಿತ ಮುಖ ಹಾದರೂ ನಿಲ್ಲಿಸಿ ‘ನೀನು ಯಾರ ಮಗ? ಯಾರ ಮಗಳು?’ ಎಂದು ವಿಚಾರಿಸಿ ಮುಂದಿನ ಪೀಳಿಗೆಯ ಮುಖಪರಿಚಯ ಮಾಡಿಕೊಳ್ಳುವಳು. ಮನೋಹರನನ್ನೂ ನಿಲ್ಲಿಸಿ ‘ಯಾರೋ ನೋಡ್ತೆ’ ಅಂದಳು.
‘ನಮ್ಮ ಮನೋಹರ…. ನಮ್ಮ ದೇವಣ್ಣನ ಮಗ…’ ಎಂದು ಯಶವಂತ ಹೇಳಿದ.
‘ಚಲೋದಾಯ್ತು… ಸರೀ ತಯಾರಿಗೆ ಬಂದು ತಲುಪಿದ. ಮನೆತನದ ಹುಡುಗ ಅಂದ ಮೇಲೆ ಜವಾಬ್ದಾರಿ ಅವನ್ದೇ ಅಲ್ವೇ…. ತಂಗಿ ಮದುವೆಗೆ ಅಂವ ಅಲ್ದೇ ಯಾರು ಮಾಡಬೇಕು ತಯಾರಿ…’ ಎಂದವಳು ಮುಂದೆ ಹೋಗಲು ಬಿಟ್ಟಳು.
ಮನೋಹರನ ಬ್ಯಾಗನ್ನು ಅಟ್ಟದ ಮೇಲಿನ ಯಶವಂತನ ಕೋಣೆಯಲ್ಲಿ ಇರಿಸಲಾಯಿತು. ಬಚ್ಚಲು ಖಾಲಿ ಇದೆ ಎಂದು ಯಾರೋ ಅಂದದ್ದು ಕೇಳಿಸಿ ಸೀದಾ ಅವನನ್ನು ಸ್ನಾನಕ್ಕೆ ಕಳಿಸಿದರು. ಮದುವೆ ಮನೆಯಲ್ಲಿ ಅಪರೂಪವಾದ ಒಣಗಿದ ಟವಲ್ಲನ್ನು ಯಾರೋ ಹುಡುಗ ತಂದು ಕೊಟ್ಟ. ಸ್ನಾನ ಮುಗಿಸಿ ಬಂದವನನ್ನು ಗಂಜಿ ಊಟಕ್ಕೆ ಕೂರಿಸಿದರು. ಎಲ್ಲೋ ಹಿತ್ತಿಲಲ್ಲಿದ್ದ ಯಶೋದೆ ಒಳಬರುವ ಮುಂಚೆ ಕೆಲಸದ ಆಯುವಿಗೆ ಹೇಳುತ್ತಿದ್ದ ಮಾತುಗಳು ಕೇಳಿಸಿದವು.
‘ಅಂವ ಬಂದೇ ಬರ್‍ತಾನೆ ಅಂತ ನಾ ಹೇಳಿದ್ದೆ. ಇವರು ಆಗೂದಿಲ್ಲವೇ, ಅವನಿಗೆ ರಜೆ ಸಿಗಬೇಕಲ್ಲ… ಮದ್ವೆಗೂ ಬರ್‍ತಾನೋ ಇಲ್ಲವೋ…. ಇಷ್ಟು ಅವಸರದಲ್ಲಿ ಮುಹೂರ್ತ ಇಟ್ಟರೆ ಎಲ್ಲರಿಗೂ ಬರ್‍ಲಿಕ್ಕೆ ಆಗಬೇಕಲ್ಲ ಅಂದರು… ನಾನು ಹೇಳಿದ ಹಾಗೇ ಆಯ್ತು…. ಎಲ್ಲಿ ಅಂವ?’
ವರ್ಷಗಟ್ಟಲೇ ಪ್ರಯತ್ನಿಸಿದರೂ ಎಲ್ಲೆಲ್ಲೂ ಕೂಡಿ ಬರದ ಮಗಳ ಮದುವೆಯ ಗಳಿಗೆ ಈಗ ಸನ್ನಹಿತವಾಗಿದೆಯೆನ್ನುವ ಉತ್ಸಾಹ ಅವಳ ಪ್ರತಿ ಮಾತಿನಲ್ಲಿ, ವಿನಾಕಾರಣ ಚಲನೆಗಳಲ್ಲಿ ವ್ಯಕ್ತವಾಗುತ್ತಿತ್ತು.
‘ನಾನು ಬರದೇ ಇರುತ್ತೇನೆಯೇ ಚಿಕ್ಕಮ್ಮ… ಎಲ್ಲಿ ಸುನಂದೆ?’ ಎಂದು ಮನೋಹರ ಕೇಳಿದ.
‘ಇದ್ದಾಳೆ ಇದ್ದಾಳೆ… ಇಲ್ಲೇ ಶಂಭು ಮನೆಗೆ ಹೂ ಕಟ್ಟುವ ನಾರು ತರಲಿಕ್ಕೆ ಹೋಗಿದ್ದಾಳೆ… ಒಂದು ರಾಶಿ ಆಬೋಲಿ ಬಿದ್ದಿದೆ ಮನೆಯಲ್ಲಿ… ಕೂತಲ್ಲೇ ಒಂದೊಂದು ಮಾಲೆ ಕಟ್ಟಿ ಹಾಕಿದರೆ ನಾಳೆ ಬರುವವರಿಗೆ ಒಂದೊಂದು ತುಂಡಾದರೂ ಮುಡಿಗೆ ಅಂತ ಕೊಡಬಹುದಲ್ಲ…. ನಾಳೆ ದೇವಕಾರ್ಯ; ಸತ್ಯನಾರಾಯಣ ಪೂಜೆ… ಬೀಗರ ಕಡೆಯಿಂದ ಸುಮಾರು ಜನ ಬಂದರೂ ಬರಬಹುದು….’
‘ಅಡಿಗೆಯವರು ಯಾರು?’
‘ಹಳದೀಪುರದ ಬಾಬಟಿಯನ್ನು ಕರೆಸಿದ್ದೇವೆ. ಸದ್ಯ ಇಂಥಾ ಅವಸದಲ್ಲೂ ಅವನು ಸಿಕ್ಕ…. ಈವತ್ತಿನವರೆಗೆ ಮಾತ್ರ ಈ ಗಂಜಿ ಊಟ…. ಆಮೇಲೆ ಜನ ಜಾಸ್ತಿಯಾದ ನಂತರ ಇದೆಲ್ಲ ಎಲ್ಲಿ ಆಗುತ್ತದೆ? ಗಂಜಿ ನಾವೇ ಮಾಡಬೇಕು ಒಳಗಡೆ…. ಗಂಜಿಗಿಡುವುದು ಅಂದರೆ ಬಾಬುಟಿ ತನ್ನ ಅಂತಸ್ತಿಗೆ ಕಡಿಮೆ ಎಂದು ತಿಳಿಯುತ್ತಾನೆ….’
ಮನೋಹರನಿಗೆ ಬಸಳೇ ಪಲ್ಯ ಬಡಿಸುತ್ತ, ಉಪ್ಪಿನಕಾಯಿ ಹಾಕುತ್ತ, ಗಂಜಿ ಹಾಕಲೇ ಎಂದು ಎರಡೆರದು ಬಾರಿ ಕೇಳುತ್ತ ಯಶೋದೆ, ಸುನಂದೆಯ ಮದುವೆ ಕೂಡಿ ಬಂದ ಬಗ್ಗೆ’ ಅವಳನ್ನು ಮದುವೆಯಾಗುವ ಹುಡುಗನ ಬಗ್ಗೆ ಹೇಳತೊಡಗಿದಳು. ಅವನಿಗೆ ಸಿರ್ಸಿಯ ಅರ್ಬನ್ ಬ್ಯಾಂಕಿನಲ್ಲಿ ಕೆಲಸವಂತೆ. ಬಿಕಾಂ ಮಾಡಿದ್ದಾನಂತೆ. ಹುಡುಗನ ಅಮ್ಮ ಯಶೋದೆಯ ತವರಿನ ಕಡೆಯಿಂದ ದೂರದ ಸಂಬಂಧವೇ ಆಗಬೇಕಂತೆ… ‘ಸಂಬಂಧ ಅಂದರೆ ಇಟ್ಟುಕೊಂಡರೆ ಮಾತ್ರ ಇರುವುದಿಲ್ಲವೇ?’ ಎಂದೂ ಅಂದಳು. ಒಬ್ಬನೇ ಮಗನಂತೆ. ತಂದೆಯಿಲ್ಲದ ಹುಡೂಗನನ್ನು ತಾಯಿಯೇ ಬೆಳೆಸಿದಳಂತೆ.
‘ಅಲ್ಲ ಈ ಋಣಾನುಬಂಧ ನೋಡು…. ಇಲ್ಲವಾದರೆ ಎಲ್ಲೆಲ್ಲೂ ಅವಳಿಗೆ ಜಾತಕ ಕೂಡಿ ಬರದೇ ಇದ್ದುದು, ಕೂದಿ ಬಂದವರಿಗೆ ಹುಡುಗಿ ಪಾಸಾಗದೇ ಇರುವುದು, ಎಲ್ಲಾ ಆದ ಕಡೆ ಅವರು ಮೊಸರಲ್ಲಿ ಕಲ್ಲು ಹುಡುಕುವುದು ಇದೆಲ್ಲ ಇಷ್ಟು ವರ್ಷ ನಡೆದರೂ ಈ ಹುಡುಗ ಕಣ್ಣೆದುರೇ ಇದ್ದಾನೆ, ಅವನಿಗೆ ಎಲ್ಲೂ ಕೂಡಿ ಬರುತ್ತಿಲ್ಲ ಎಂದು ಆ ಶಾಮಣ್ಣ ಹೇಳುವವರೆಗೂ ನಮಗೆ ಹೊಳೆದೇ ಇರಲಿಲ್ಲ…. ಇದು ಇಲ್ಲೇ ಆಗಲಿ ಎಂದು ಇಷ್ಟು ವರ್ಷ ಇವಳಿಗೆ ಎಲ್ಲೂ ಆಗಲಿಲ್ಲವೋ ಯಾರಿಗೆ ಗೊತ್ತು?…. ಹೇಳಿದರೆ ಯಾರೂ ನಂಬುವುದಿಲ್ಲ. ಅಷ್ಟು ಸರಸರ ಅಂತ ಎಲ್ಲ ಎಂಟೇ ದಿವಸಗಳಲ್ಲಿ ನಡೆದುಹೋಯಿತು ನೋಡು…. ಅವನು ಬಂದದ್ದು, ಹುಡುಗಿ ನೋಡಿ ಅಂತ ಕಾಲಲ್ಲೇ ಪಾಸು ಮಾಡಿದ್ದು, ಇವರು ಜಯವಂತ ದೇಸಾಯಿಯವರನ್ನು ಕರೆದುಕೊಂಡು ಮಾತಾಡಲು ಹೋದವರು ಸಕ್ಕರೆ ತಿಂದೇ ಬಂದಿದ್ದು…. ಎಲ್ಲ ಎಂಟೇ ದಿವಸಗಳಲ್ಲಿ ಆಗಿಹೋಯಿತು….’
‘ಅವನ ಹೆಸರನ್ನೇ ಹೇಳಲಿಲ್ಲವಲ್ಲ ಚಿಕ್ಕಮ್ಮ’ ಎಂದು ಮನೋಹರ ತುಸು ರೇಗಿಸುವ ದನಿಯಲ್ಲಿ ಹೇಳಿದ.
‘ಗಣಪತಿ’ ಎಂದು ಅಳಿಯನ ಹೆಸರು ಹೇಳುವಾಗ ಅವಳೇ ತುಸು ನಾಚಿದಳು.
ಸುನಂದ ಬಂದೊಡನೆ ‘ಗಣಪ ಬಂದ, ಕಾಯಿಕಡುಬು ತಿಂದ’ ಎಂದು ಶುರುಮಾಡಿ, ಪ್ರಾಸಬದ್ದವಾಗಿ ಒಂದಕ್ಕೊಂದು ಸೇರಿಸಿ ಮುಂದುವರಿಸಿಕೊಂಡು ಹೋಗುತ್ತ ಹುಡುಗಿಯರು ಸುನಂದೆಯನ್ನು‌ಉ ಕಿಚಾಯಿಸಿದರು. ಎಲ್ಲವೂ ತನ್ನ ಮದುವೆಯ ನಿಮಿತ್ತವೆಂಬ ಅರಿವಿನಿಂದ ಹುಟ್ಟಿದ ಪ್ರಾಮುಖ್ಯತೆಯನ್ನು ಅವಳು ಆನಂದಿಸುತ್ತಿದ್ದಂತಿತ್ತು. ಕಣ್ಣಲ್ಲಿ ವಿಶೇಷ ಕಾಂತಿಯಿತ್ತು. ಮನೋಹರನಿಂದ ಕೆನ್ನೆ ಹಿಂಡಿಸಿಕೊಂಡು ಸುನಂದೆ ನಾಚಿದಳು.
ಮನೆಯ ಹಿಂಭಾಗದಲ್ಲಿ ಹಾಕಿದ್ದ ಅಡಿಗೆ ಚಪ್ಪರದಿಂದ ನಾನಾ ರೀತಿಯ ಸುವಾಸನೆಗಳು ಹೊಮ್ಮುತ್ತಿದ್ದವು. ಹೊಗೆ ಗಾಳಿಯ ದಿಕ್ಕಿಗೆ ಓಡುತ್ತಿತ್ತು. ಕೈತೊಳೆಯಲು ಹೋದಾಗ ಬಾಬುಟಿ ತನ್ನ ಬಗ್ಗೆ ಸಹಾಯಕರಿಗೆ ಹೇಳುವುದನ್ನು ಮನೋಹರ ಕೇಳಿಸಿಕೊಂಡ. ತರಕಾರಿ ಹೆಚ್ಚುತ್ತ, ಸಾರು ಕುದಿಸುತ್ತ ಎಲ್ಲಿಂದ ಎಲ್ಲಿಗೋ ಅವರ ಮಾತುಗಳು ಅಲೆಯುತ್ತಿದ್ದವು. ಮದುವೆ ಮನೆಗೆ ಆಹ್ವಾನಿಸದೇ ಬಂದು ಇಷ್ಟಿಷ್ಟು ತಿಂದು, ಕೆಲವೊಮ್ಮೆ ತಿಂದಿದ್ದು ಅತಿಯಾಗಿ ಕಾರಿಕೊಳ್ಳುವ ಗುಂಡಬಾಳೆ ವೆಂಕಟೇಶ ಬಂದರೂ ಬರಬಹುದೆಂದು ಮಾತಾಡಿಕೊಳ್ಳುತ್ತಿದ್ದರು. ಮಾರನೇ ದಿನ ದೇವಕಾರ್ಯಕ್ಕೆ ಬೀಗರ ಕಡೆಯಿಂದ ಯಾರು ಯಾರು ಬರಬಹುದೆನ್ನುವ ಬಗ್ಗೆ ಅಡಿಗೆ ಮೇಳದಲ್ಲಿ ಚರ್ಚೆ ಶುರುವಾಗುತ್ತಲಿತ್ತು. ಯಾರಾದರೂ ತುಂಬಿದ ಬಸುರಿಯರು ಇದ್ದಾರೋ ಹೇಗೆ ಎಂದು ಕೂಡ ಮಾತು ಹರಿಯಿತು. ಬಾಣಂತಿ ಸೂತಕ ತಗುಲದ ಹಾಗೆ ಒಂದು ಪೂಜೆ ಮಾಡಿ, ಮಂಗಲದೀಪ ಹಚ್ಚಿ ಇಟ್ಟರೆ ಅದರ ಬಾಧೆಯಿಲ್ಲವೆಂದು ಬಾಬುಟಿ ಅಧಿಕಾರ ವಾಣಿಯಿಂದ ಹೇಳುತ್ತಲಿದ್ದ.
ಮನೋಹರನ ಗಂಜಿ ಊಟ ಮುಗಿಯುವುದನ್ನೇ ಕಾಯುತ್ತಿದ್ದವನ ಹಾಗೆ ಯಶವಂತ ಬಂದು ‘ಬಾ…ಬಾ’ ಎಂದು ಅವನನ್ನು ಮಹಡಿಯ ಮೇಲಿನ ತನ್ನ ಕೋಣೆಗೆ ಕರೆದುಕೊಂಡು ಹೋದ. ಅಲ್ಲಿ ಹೊಸ ಬಣ್ಣದ ವಾಸನೆಯಿತ್ತು. ಕಿಟಕಿಯಿಂದ ಕೆಳಗೆ ನೋಡಿದರೆ ಚಪ್ಪರದ ಮೇಲೆ ಒಣಗಲು ಹಾಕಿದ ಸಂಡಿಗೆಗಳು ಕಾಣಿಸುತ್ತಿದ್ದವು.
‘ಈ ಮದುವೆಯ ತಯಾರಿ ಸಾಕಾಗಿಹೋಯಿತು. ಊರ ಜನ ಆಯ್ತ ಸಮಯಕ್ಕೆ ಹೆಗಲು ಕೊಟ್ಟರು. ಇಲ್ಲವಾದರೆ ನನ್ನೊಬ್ಬನಿಂದ ಇದು ಆಗುವ ಮಾತಲ್ಲ ನೋಡು…. ಬೆಂಗಳೂರಿನಲ್ಲದರೆ ದುಡ್ಡು ಕೊಟ್ಟರೆ ಆಯಿತು, ಮದುವೆಯ ದಿನ ದಿಬ್ಬಣ ತಗೊಂಡು ಹೋಗಬಹುದು… ಇಲ್ಲಿ ಎಲ್ಲ ನಾವೇ ಮಾಡಬೇಕಲ್ಲ…’
ಮಾತಾಡುತ್ತ ಯಶವಂತ ಚಾಪೆ ಹಾಕಿದ. ಹಾಸಿದ ಚಾಪೆಯ ಮೇಲೆ ಕೂತು ಉದ್ದನೆಯ ಖಾತಾಪುಸ್ತಕದಂಥ ಹಾಳೆಗಳನ್ನು ಬಿಚ್ಚತೊಡಗಿದ. ‘ಜವಳಿ ಪಟ್ಟಿ… ನೀನೊಂದು ಸಲ ನೋಡಿಬಿಡು…. ನಮ್ಮ ದೇವಣ್ಣನ ಬದಲಿಗೆ’ ಅಂದ.
ಈ ಜವಳಿ ಪಟ್ಟಿಯನ್ನು ನೋಡುವುದೆಂದರೆ ಅದರ ಜವಾಬ್ದಾರಿಯನ್ನು ಭಾಗಶಃ ಹೊತ್ತುಕೊಂಡ ಹಾಗೆ. ಮದುವೆಯ ತಯಾರಿಯ ಮುಖ್ಯ ಭಾಗಗಳಲ್ಲೊಂದಾದ ಇದನ್ನು ಯಾರು ಕೂತು ತಯಾರಿಸಬೇಕು ಅನ್ನುವದರಿಂದ ಮೊದಲಾಗಿ, ಯಾರಿಗೆ ಸೀರೆ, ಯಾರಿಗೆ ಪಂಚೆ, ಕುಟುಂಬಕ್ಕೆ ಯಾರು ಯಾರು ಸೇರಿದವರೆಂಬುದನ್ನು ವ್ಯಾಖ್ಯೈಸುವುದು ಹೇಗೆ – ಮದುವೆಯಾಗಿ ಹೋದ ಹುಡುಗಿಯರಲ್ಲಿ ಯಾರನ್ನು ಈ ವ್ಯಾಖ್ಯೈಯಲ್ಲಿ ಸೇರಿಸಬಹುದು, ಯಾರಿಗೆ ಕುಬಸದ ಖಣ, ಯಾರು ಅವರವರ ಮನೆಯ ಶುಭಕಾರ್ಯಗಳಿಗೆ ತಮಗೆ ಏನೇನು ಕೊಟ್ಟಿದ್ದರೆಂಬ ಋಣಭಾರ – ಎಲ್ಲವನ್ನೂ ಪರಿಗಣಿಸಿ ಮಾಡಬೇಕಾದ ಪಟ್ಟಿ. ಕುಟುಂಬಕ್ಕೆ ಯಾರು ಹತ್ತಿರ, ಎಷ್ಟು ಹತ್ತಿರ ಅನ್ನುವ ತರತಮ ಪ್ರಾಮುಖ್ಯವನ್ನು ಇದು ಬಿಂಬಿಸುತ್ತಿತ್ತು.
‘ಮುಂಬೈಯಿಂದ ರಾಯಕರನ ಮಾಲು ಬರಲೇ ಇಲ್ಲ. ಅದ್ಯಾವುದೋ ಮಿಲ್ಲಿನಲ್ಲಿ ಹರತಾಳ ನಡೆಯುತ್ತಿದೆಯಂತೆ. ಮಗನನ್ನು ಅಹಮದಾಬಾದಿಗೆ ಕಳಿಸಿ ಅಂತೂ ತರಿಸಿದ್ದಾನೆ. ಇಲ್ಲದಿದ್ದರೆ ಈವತ್ತು ಜವಳಿ ಖರೀದಿಗೆ ಹುಬ್ಬಳ್ಳಿಗೆ ಹೊರಡುವುದೆಂದೇ ಅಂದುಕೊಂಡಿದ್ದೆವು’. ಎಂದು ಹೇಳುತ್ತ ಯಶವಂತ ಮೂರು ಉದ್ದುದ್ದ ಹಾಳೆಗಳನ್ನು ಮನೋಹರನಿಗೆ ಕೊಟ್ಟ. ಅವುಗಳಲ್ಲಿ ಹೆಸರುಗಳಿದ್ದವು. ಅವುಗಳ ಮುಂದೆ ಏನೇನೋ ಶರಾಗಳಿದ್ದವು. ಯಶವಂತ ಅವುಗಳನ್ನು ವಿವರಿಸತೊಡಗಿದ.
‘ನಮ್ಮ ಗಂಗತ್ತೆಗೊಂದು ಸೀರೆ ಅಂತ ಆಯ್ತು… ಗಂಡ ಇಲ್ಲದಿದ್ದರೇನಾಯಿತು? ಜಾನಕಿ ನಮ್ಮ ಮನೆತನದೊಳಗೆ ಬಂದ ಹೆಣ್ಣಲ್ಲವೇ? ಅವಳ ತವರಿನ ಕಡೆಯವರಿಗೊಂದು ಮರ್ಯಾದೆ ಅಂತ ಏನಾದರೂ ಕೊಡಬೇಕಲ್ಲವೇ? ಆಮೇಲೆ ಹೆರವಟ್ಟೆಯ ಕಮಲಳಿಗೂ ಒಂದು ಸೀರೆ. ಅವಳ ಮಗನ ಮದುವೆಗೆ ಯಾರಿಗೆ ಕೊಡದಿದ್ದರೂ ಯಶೋದೆಗೊಂದು ಸೀರೆ ಕೊಟ್ಟಿದ್ದಳು… ಗೋಪಾಲನ ಹೆಂಡತಿಗೂ ಒಂದು. ಸಂಬಂಧದ ಪ್ರಕಾರ ಕೊಡಬೇಕಾಗಿಲ್ಲ; ಆದರೆ ಇಬ್ಬರ ಮಕ್ಕಳ ಮುಂಜಿಗೂ ಒಂದೊಂದು ಸೀರೆ ಕೊಟ್ಟಿದ್ದಾನೆ. ಒಬ್ಬಳೇ ಮಗಳಾದ್ದರಿಂದ ಕೊಡುವವರಿಗೆಲ್ಲ ಈ ಸಂದರ್ಭದಲ್ಲೇ ಕೊಟ್ಟುಬಿಡುವುದು. ಮುಂದೆ ಹೇಗೋ ಏನೋ… ಋಣಭಾರ ಯಾಕೆ ಹೇಳು? ಈ ಕಡೆ ಇನ್ನೊಂದು ಹಾಳೆಯ ಮೇಲೆ ಬರೆದಿದೆಯಲ್ಲ, ಅದೆಲ್ಲ ಪ್ಯಾಂಟು ಪೀಸುಗಳನ್ನು ಕೊಡುವುದಕ್ಕೆ. ಅದು ಆ ಕಡೆ ಇರುವುದು ಶರ್ಟು ಪೀಸು… ನಮ್ಮ ಮಿಲ್ಲಿನ ಕೆಲಸಗಾರರನ್ನು ಇದರಲ್ಲಿ ಸೇರಿಸಿಲ್ಲ. ಅವರದ್ದು ದೊಡ್ಡ ಪಟ್ಟಿಯೇ ಇದೆ. ನಮ್ಮ ಬೊಮ್ಮಯ್ಯ ಹೆಂಡತಿಗೊಂದು ಸೀರೆ ಅಂತ ಮಾತಾಡಿಕೊಂಡಿದ್ದೇವೆ… ಅದೆಲ್ಲ ಬೇರೆ ಇಟ್ಟಿದ್ದೇನೆ… ಅದು ಮದುವೆಯ ಗೌಜಿ ಮುಗಿದ ನಂತರ ಕೊಡುವ ಸಂಗತಿಗಳು….’
ಯಾವ ರೀತಿಯ ಸೀರೆ, ಅದರ ಅಂದಾಜು ಬೆಲೆ, ಅದನ್ನು ಕೊಡಲು ಇರುವ ಕಾರಣಗಳನ್ನೆಲ್ಲ ಯಶವಂತ ವಿವರಿಸುತ್ತ ಹೋದ ಹಾಗೆ ಮನೋಹರ ಕೈಯಲ್ಲಿದ್ದ ಹಾಳೆಗಳನ್ನು ಸುಮ್ಮನೇ ನೋಡುತ್ತ ಕೂತ. ಹೆಸರುಗಳು, ಅವುಗಳ ಮುಂದೆ ಸೀರೆ ನಮೂನೆ, ಅಂದಾಜು ಬೆಲೆ ಬರೆದಿತ್ತು. ಇಡೀ ಕುಟುಂಬದ ಸಂಬಂಧಗಳನ್ನು ಈ ಸಂಕೀರ್ಣ ಜಾಲದಲ್ಲಿ ಕೂರಿಸಿದ ಬಗೆಯನ್ನು, ಅದರ ಹಿಂದಿನ, ತನಗೆ ಅರ್ಥವಾಗದ ತತ್ವವನ್ನು ಮನೋಹರ ಬೆರಗಿನಿಂದ ನೋಡಿದ. ಪ್ರತಿ ಹೆಸರನ್ನು ಸೇರಿಸಲು ಒಂದು ವಿಶಿಷ್ಟ ತರ್ಕವಿತ್ತು. ಹಿಂದಿನ ಹೆಸರು ಸೇರಿಸಿದ್ದಕ್ಕೂ, ಮುಂದಿನದಕ್ಕೂ ನೇರವಾದ ಸಂಬಂಧವೇ ಇರದಂತೆ ತೋರುತ್ತಿತ್ತು. ಯಾವ ಕಾರಣಗಳಿಗಾಗಿ ಹಿಂದಿನ ಹೆಸರು ಸೀರೆಯ ಗುಂಪಿಗೆ ಸೇರಿಸಿತ್ತೋ ಅದೇ ಕಾರಣಕ್ಕಾಗಿ ಮುಂದಿನ ಹೆಸರು ಪಂಚೆಯ ಗುಂಪಿಗೆ ಸೇರಿತ್ತು. ಬಿಟ್ಟ ಹೆಸರುಗಳ ಬಗ್ಗೆ ವಿವರವನ್ನು ಯಶವಂತ ಕೊಡುತ್ತಲಿದ್ದ. ಸಂಬಂಧಗಳು, ಋಣಭಾರಗಳು, ಸೌಜನ್ಯಗಳು, ಇಷ್ಟಾನಿಷ್ಟಗಳು, ಎಂದೋ ಆದ ಅವಮಾನಗಳು, ಮುಯ್ಯಿಗಳು ಈ ದೀರ್ಘ ಪಟ್ಟಿಯ ಸಂಯೋಜನೆಯಲ್ಲಿ ಅದರ ಭಾಗ ಆಗುವುದರ ಮೂಲಕ ಎಷ್ಟೋ ಅಷ್ಟೇ ಆಗಿರುವುದರ ಮೂಲಕ ಕೂಡ ಅಭಿವ್ಯಕ್ತಿಯನ್ನು ಪಡೆದಂತಾಗಿತ್ತು.


ಮಧ್ಯಾಹ್ನ ಮೂರು ಗಂಟೆಗೆ ಜವಳಿ ಖರೀದಿಗೆ ಹೊರಟಾಗ ಯಶವಂತನ ಒತ್ತಾಯದಿಂದಾಗಿ ಮನೋಹರನೂ ಅವರ ಜೊತೆ ಹೋಗಬೇಕಾಯಿತು.
‘ಹೋಗುವವರು ನಾನು, ಯಶೋದೆ ಮತ್ತು ಸುನಂದಾ ಮಾತ್ರ…. ಮೂರು ಜನವಾಗುತ್ತದಲ್ಲ – ಅದಕ್ಕೇ ನೀನು ಬಂದರೆ ಸರಿಹೋಗುತ್ತದೆ. ಬೇರೆ ಯಾರನ್ನೂ ಕರಕೊಂಡು ಹೋಗುವ ಮನಸ್ಸಿಲ್ಲ ನನಗೆ.’ ಎಂದು ಯಶವಂತ ಹೇಳಿದ್ದರಿಂದ ಬೇರೆ ದಾರಿಯಿರಲಿಲ್ಲ.
‘ನಾನೊಂದು ನಾಲ್ಕನೆಯ ನಗ ಅಷ್ಟೇ…. ಜವಳಿಯ ಬಗ್ಗೆ ನನಗೇನೂ ಗೊತ್ತಿಲ್ಲ’
‘ಆಯ್ತಪ್ಪ, ಒಂದು ನಗವಾಗಿಯೇ ಬಾ ನೀನು. ನಾವು ಮಾಡುವುದನ್ನು ಕೂತು ನೋಡು ಅಷ್ಟೇ’ ಎಂದು ಯಶವಂತ ಒತ್ತಾಯಿಸಿದ.
ಖರೀದಿಗೆ ಬರುವುದು ಗೊತ್ತಿದ್ದರಿಂದ ರಾಯಕರ ಇಂಥ ಸಂದರ್ಭಗಳಿಗೆಂದೇ ಮೀಸಲಾದ ಅಂಗಡಿಯ ಒಳಭಾಗದ ಕೋಣೆಯಲ್ಲಿ ಚಾಪೆಗಳನ್ನು ಹಾಸಿ, ಒರಗು ದಿಂಬುಗಳನ್ನು ಜೋಡಿಸಿ ವ್ಯವಸ್ಥೆ ಮಾಡಿದ್ದ. ಹೊಸ ಸ್ಟಾಕಿನಿಂದ ಇವರು ನೋಡಬಹುದಾದ ರೀತಿಯ ಸೀರೆಗಳನ್ನು ಆಗಲೇ ತೆಗೆದಿಟ್ಟಿದ್ದ. ಹೋದದ್ದೇ ಶರಬತ್ತು ಕೊಟ್ಟು ಉಪಚರಿಸಿದ.
‘ಕುಯ್ಯಬೇಡ ಮಾರಾಯ – ಸರಿಯಾದ ಬೆಲೆ ಹಾಕು’ ಎಂದು ಯಶವಂತ ವ್ಯಾಪಾರ ಆರಂಭಿಸುವ ಸೂಚನೆ ಇತ್ತ.
‘ನೀವು ಬೇಕಾದ್ದು ಆರಿಸಿ ರಾಯರೇ… ಬೆಲೆ ನೋಡಬೇಡಿ…. ಕೊನೆಯಲ್ಲಿ ಒಟ್ಟೂ ಸೇರಿಸಿ ರಿಬೇಟು ಕೊಡೂತ್ತೇನೆ, ಎಂದು ರಾಯಕರ ತನ್ನ ವ್ಯಾಪಾರಿ ಭಾಷೆ ಶುರುಮಾಡಿದ.
ಯಶವಂತ ತನ್ನ ಹಿಡಿರ ಸಡಲಿಸದೇ ‘ನಿನ್ನ ಅಂಗಡಿಯಲ್ಲಿ ಬೆಲೆ ನೋಡದೇ ವ್ಯಾಪಾರ ಮಾಡಿದರೆ ದಿವಾಳಿ ಎದ್ದ ಹಾಗೇ’ ಅಂದ.
ಗಾಜಿನ ಬಾಗಿಲುಗಳಿದ್ದ ಕಟ್ಟಿಗೆಯ ಕಪಾಟುಗಳಲ್ಲಿ ಸಾಲಾಗಿ ಜೋಡಿಸಿಟ್ಟ ಬಟ್ಟೆಗಳು. ಹೊಸ ಬಟ್ಟೇ ಸುತ್ತಿ ಬಂದ ಉರುಟಾದ ಕಟ್ಟಿಗೆಯ ಕೋಲುಗಳನ್ನು, ಎರಡು ಕಪಾಟುಗಳ ನಡುವಿನ ಸಂದಿಯಲ್ಲಿ ಒಟ್ಟಿ ಇಡಲಾಗಿತ್ತು. ಆಯತಾಕಾರದ ರಟ್ಟುಗಳನ್ನು ಒಂದು ಮೂಲೆಯಲ್ಲಿ ಪೇರಿಸಿಟ್ಟಿದ್ದರು. ಹೊಸಬಟ್ಟೆಯ ವಾಸನೆ, ಸೀರೆಯ ಮಡಿಕೆ ಬಿಚ್ಚುವಾಗ ಅದರೊಳಗಿನ ತೆಳ್ಳನೆಯ ಪೇಪರು ಬಟ್ಟೆಗೆ ಸವರುವ ಸದ್ದು, ನೂರಾರು ವಿನ್ಯಾಸಗಳು, ಬಣ್ಣಗಳು – ಈ ಎಲ್ಲದರ ನಡುವೆ ಜವಳಿ ಪಟ್ಟಿಯನ್ನು ಎದುರಿಗಿಟ್ಟುಕೊಂಡು ಆಯ್ಕೆಯ ಚರ್ಚೆ ಶುರುವಾಯಿತು. ಮದುವಣಗಿತ್ತಿಯದು ಮುಗಿಯಲಿ ಎಂದು ಸುನಂದೆಯ ಸೀರೆಗಳನ್ನು ಮೊದಲು ಆರಿಸಲಾಯಿತು. ‘ಯಾವುದಾದರೂ ತಗೋ’ ಎಂದು ಯಶವಂತ ಪದೇ ಪದೇ ಹೇಳಿದರೂ ಅಪ್ಪನಿಗೆ ಭಾರವಾಗಬಹುದೆನ್ನುವ ಆತಂಕ ಮತ್ತು ತನ್ನ ಜೀವನದಲ್ಲಿ ಈ ಸಂಭ್ರಮ ಒಂದು ಬಾರಿ ಮಾತ್ರ ಎನ್ನುವ ಅರಿವಿನಿಂದ ಹುಟ್ಟಿದ ದ್ವಂದ್ವವನ್ನು ಮೀರಲು ಅವಳಿಗೆ ತುಸು ಹೊತ್ತು ಹಿಡಿಯಿತು. ತನ್ನೆಲ್ಲ ಸೀರೆಗಳನ್ನು ಅವಳೇ ಆರಿಸಿದಳು. ಮನೋಹರನ ಅಭಿಪ್ರಾಯ ಕೇಳಿದಾಗ ಅವನು ಕೊಟ್ಟ ಸಲಹೆಗಳಿಂದ ಖುಷಿಪಟ್ಟಳು. ಉಳಿದ ಸೀರೆ ಪಂಚೆ ಶರ್ಟಿನ ಬಟ್ಟೆಗಳು ಅಂತ ಮುಂದಿನ ಖರೀದಿ ಶುರುವಾಯಿತು. ಈ ನಡುವೆ ಚಹಾ ಚೂಡಾ ಬಂತು.
ಎಲ್ಲವೂ ಮುಗಿಯುವ ವೇಳೆಗೆ ಸಂಜೆಯಾಯಿತು. ಇನ್ನೇನು ರಾಯಕರನಿಗೆ ಹೇಳಿ ಲೆಕ್ಕ ಮಾಡಿಸಬೇಕು ಅನ್ನುವ ಹೊತ್ತಿಗೆ ಯಶವಂತ ಎರಡು ಸಾವಿರದ ಸೀರೆಯ ಗುಂಪಿನಿಂದ ಒಂದನ್ನು ಎತ್ತಿ ಪಕ್ಕದಲ್ಲಿ ತಾವು ಕೊಂಡ ಸೀರೆಗಳ ಜೊತೆ ಇಟ್ಟ. ಪಟ್ಟಿಯಲ್ಲಿದ್ದ ಎಲ್ಲರಿಗೂ ಕೊಂಡುಕೊಂಡಾಗಿತ್ತು. ಆ ಬೆಲೆಯ ಸೀರೆ ಯಶೋದೆಗೆ ಮತ್ತು ಸುನಂದಗಲ್ಲದೇ ಬೇರೆ ಯಾರಿಗೂ ತೆಗೆದಿರಲಿಲ್ಲ. ಅರೆ ಯಾರನ್ನಾದರೂ ಮರೆತೆವೋ, ಮಗಳಿಗೆ ಇನ್ನೊಂದು ಇರಲಿ ಎಂದು ತೆಗೆದಿಟ್ಟನೋ ಎಂದೆಲ್ಲ ಸುನಂದೆಯೂ ಯಶೋದೆಯೂ ಯೋಚಿಸಿದರು. ಯಶವಂತ ಯಾರಿಗೆ ಅಂತ ಹೇಳಲೂ ಇಲ್ಲ.
ಯಶೋದೆ ‘ಇದ್ಯಾಕೆ ಇನ್ನೊಂದು?’ ಅಂದಳು.
‘ಚಂಪಾಗೆ’ ಎಂದು ಯಶವಂತ ಹೇಳಿದ್ದೇ ಥಟ್ಟನೆ ಒಂದು ಕ್ಷಣ ಮೌನ ಆವರಿಸಿತು. ಮರುಕ್ಷಣವೇ ಯಶೋದೆ ಸ್ಫೋಟಿಸಿದಳು. ಆರಿಸಿ ತನ್ನೆದುರಿಗೆ ಪೇರಿಸಿಟ್ಟ ಸೀರೆಗಳ ರಾಶಿಯನ್ನು ಧಡಾರನೆ ನೂಕಿದಳು.
‘ನಾನು ಯಾಕೆ? ಆ ಭೋಸುಡಿಯೇ ನಿಮ್ಮ ಜೊತೆ ಧಾರೆಗೆ ಕೂಡಲಿ…. ಎಲ್ಲರ ಎದುರಿಗೆ ನಮ್ಮ ಮಾನ ಮೂರು ಕಾಸಾಗಲಿ’ ಎಂದು ಹೇಳುತ್ತ ಹೇಳುತ್ತ ಯಾವುದನ್ನು ಎಷ್ಟು ಹೇಳಬೇಕು ಎಂಬ ಪರಿಜ್ಞಾನ ತಪ್ಪಿ ಹೋದವಳ ಹಾಗೆ, ಗಂಡನಿಂದಾದ ಈ ವಂಚನೆಯನ್ನು, ಅಪಮಾನವನ್ನು ತಡೆದುಕೊಳ್ಳಲು ಸಾಧ್ಯವಾಗದವಳ ಹಾಗೆ ತನ್ನಿಂದ ಶಕ್ಯವಿರುವ ಅತ್ಯಂತ ಕಟುವಾದ ಮಾತುಗಳಿಂದ ಚಂಪಾಳನ್ನು ಬಯ್ಯತೊಡಗಿದಳು. ಭೋಸುಡಿ ರಂಡೆ ಮುಂಡೆ ಸೂಳೆ ಎಂದು ಏನು ಹೇಳಿದರೂ ಯಶವಂತನನ್ನು ಕೆರಳಿಸಲಾಗದೇ ಹತಾಶಳಾಗಿ ದೊಡ್ಡ ದನಿ ತೆಗೆದು ಅಳಲಾರಂಭಿಸಿದಳು. ಇವರ ಮಾತುಗಳನ್ನು ಕೇಳಿಸಿಕೊಂಡಿರದ ಅಂಗಡಿಯ ಆಳು, ಕ್ಷಣಾರ್ಧದಲ್ಲಿ ಬದಲಾದ ಈ ಸನ್ನಿವೇಶದಿಂದ ಗಾಬರಿಯಾಗಿ, ಸೀರೆಗಳನ್ನು ಮತ್ತೆ ಜೋಡಿಸಬೇಕೋ ಇಲ್ಲವೋ ತಿಳಿಯದೇ ಯಜಮಾನರನ್ನು ಕರೆಯಲು ಹೊರಗೋಡಿದ. ಹೊರಗೆ ಅಂಗಡಿಯಲ್ಲಿದ್ದ ನಾಲ್ಕೈದು ಗಿರಾಕಿಗಳು ಏನು ಅನಾಹುತವಾಯಿತೆಂದು ತಿಳಿಯದೇ, ಸಹಾಯಕ್ಕೆ ಧಾವಿಸಬೇಕೇ ಬೇಡವೋ ಗೊತ್ತಾಗದೇ, ಸಂದಿಗ್ಧದಲ್ಲಿ ಕೋಣೆಯ ಬಾಗಿಲಿನಿಂದ ಇಣುಕತೊಡಗಿದರು. ‘ಏನಿಲ್ಲ… ನಮ್ಮ ನಮ್ಮೊಳಗಿನ ಮಾತು…’ ಎಂದು ಯಶವಂತ ಅವರನ್ನು ಹೊರಗೆ ಕಳಿಸಿ ಬಾಗಿಲು ಅಡ್ಡ ಮಾಡಿದ. ಅಷ್ಟರಲ್ಲಿ ಯಶೋದೆ ಆಣೆ ಪ್ರಮಾಣ ಮಾಡತೊಡಗಿದ್ದಳು. ಮದುವೆಗೇನಾದರೂ ಚಂಪಾ ಬಂದರೆ ನೇಣು ಹಾಕಿಕೊಂಡು ಬಿಡುತ್ತೇನೆಂದಳು. ಸುತ್ತಲೂ ಇದ್ದ ಕಪಾಟುಗಳ ಗಾಜಿನ ಬಾಗಿಲುಗಳಲ್ಲಿ ಕೂತವರೆಲ್ಲಾ ತುಂಡುತುಂಡಾಗಿ ಪ್ರತಿಫಲಿಸುತ್ತಿದ್ದರು. ಎದುರು ಗೋಡೆಗೆ ಒರಗಿಸಿಟ್ಟ ದೊಡ್ಡ ಕನ್ನಡಿಯಲ್ಲಿ ಕೊಂಚ ಸೊಟ್ಟಾಗಿ ಕಾಣುವ ಎಲ್ಲರ ಮುಖಗಳನ್ನು, ಯಶೋದೆಯ ಇದ್ವೇಗಭರಿತ ಹಾವಭಾವಗಳನ್ನು ಕಂಡಾಗ ತನಗೆ ಸಂಬಂಧಪಡದ ಯಾವುದೋ ಚಲನಚಿತ್ರವನ್ನು ನೋಡುತ್ತಿರುವಂತೆ ಮನೋಹರನಿಗೆ ಭಾಸವಾಯಿತು.
ಯಶವಂತ ಈ ರಂಪದಿಂದ ವಿಚಲಿತನಾಗಲಿಲ್ಲ. ಈ ನಿರ್ಧಾರವನ್ನು ಅವನು ಯಾವಾಗಲೋ ಮಾಡಿದಂತಿತ್ತು. ಯಶೋದೆ ಅತ್ತು ಸಮಾಧಾನ ಮಾಡಿಕೊಳ್ಳಲಿ ಎಂದು ಕಾಯುವಂತೆ ದಿಂಬಿಗೊರಗಿ ಕೂತುಬಿಟ್ಟ. ಯಶವಂತ ಮತ್ತು ಚಂಪಾಳ ಸಂಬಂಧ ಇಡೀ ಊರಿಗೆ ಗೊತ್ತಿರುವ ಗುಟ್ಟಾದರೂ, ಈಗ ಅದನ್ನು ಈ ರೀತಿ ಪ್ರಕಟಿಸುವ ಅಗತ್ಯವೇನೆಂದು ಯಾರಿಗೂ ಅರ್ಥವಾಗಲಿಲ್ಲ. ಯಶೋದೆ ಮತ್ತು ಸುನಂದೆಗೆ ಎದೆಲ್ಲ ಹೊಸ ಸಂಗತಿಯಲ್ಲದಿದ್ದರೂ, ಹೀಗೆ ಅದನ್ನು ಸ್ವೀಕರಿಸಲು ಅವರು ಸಿದ್ದರಾಗಿರಲಿಲ್ಲ.
ಸುನಂದೆ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅವಳನ್ನು ನೋಡಿ ಮನೋಹರನಿಗೆ ಪಿಚ್ಚೆನಿಸಿತು. ಅವಳ ಮದುವೆ ಯಾವಾಗಲೋ ಆಗಬೇಕಿತ್ತು. ಯಶವಂತ – ಚಂಪಾಳ ಪ್ರಕರಣದಿಂದಲೇ ಅವಳಿಗೆ ಬಂದ ಸಂಬಂಧಗಳೆಲ್ಲ ಮೊದಲ ಹಂತವನ್ನೇ ದಾಟುತ್ತಿರಲಿಲ್ಲ. ಅದಕ್ಕೆ ಕಾರಣ ಯಾರೂ ಬಾಯಿ ಬಿಟ್ಟು ಹೇಳದಿದ್ದರೂ ಅದು ಏನೆಂಬುದು ಎಲ್ಲರಿಗೂ ಗೊತ್ತಿತ್ತು. ಹೇಗೆ ಈ ಸಂಬಂಧ ಒಂದು ಮಾಯೆಯಂತೆ ಕೂಡಿಬಂತು ಎಂದು ಯಶೋದೆ ಪದೇಪದೇ ವಿವರಿಸುವಾಗ ಈ ಎಲ್ಲವನ್ನೂ ನಿರಾಕರಿಸಲು, ಮುಚ್ಚಿಡಲು ಬಯಸುತ್ತಿದ್ದಾಳೆಂಬುದು ಮನೋಹರನಿಗೆ ಗೊತ್ತಾಗಿತ್ತು. ಈಗ ಈ ಸೀರೆಯ ಸಂಗತಿ ಹೊರಗೆ ಗೊತ್ತಾದರೆ ಮತ್ತೆ ಕೊನೆಯ ಗಳಿಗೆಯಲ್ಲಿ ಏನಾದರೂ ಸಮಸ್ಯೆಯಾದರೂ ಆದೀತು ಎಂದು ಆತಂಕ ಅವಳಲ್ಲಿದ್ದಂತಿತ್ತು.
‘ಏನೂ ಅಗುವುದಿಲ್ಲ…. ಅವಳು ಊರಿನ ಎಲ್ಲರ ಹಾಗೆ ಮದುವೆಗೆ ಬಂದು ಹೋಗುತ್ತಾಳೆ’ ಎಂದು ಮನೋಹರ ಯಶೋದೆಗೆ ಸಮಾಧಾನ ಹೇಳಿದ.
‘ಅಯ್ಯೋ.. ಯಾರ ಮನೆಯ ಮದುವೆಗಾದರೂ ಅವಳನ್ನು ಕರೆಯುತ್ತಾರೇನೇ… ಇದುವರೆಗೂ ಯಾವ ಮದುವೆಗೂ ಅವಳನ್ನು ಕರೆದದ್ದಿಲ್ಲ… ಅವಳು ಹೋದದ್ದಿಲ್ಲ… ಅವಲಕ್ಷಣವನ್ನು, ಅಪಶಕುನವನ್ನು ಬಾ ಎಂದು ಯಾವ ಬಾಯಲ್ಲಿ ಹೇಳಲಿ?’ ಅವಳ ಪ್ರಲಾಪ ಒಂದೇ ಸಮನೆ ಮುಂದುವರೆಯಿತು. ಈ ಸೀರೆಯನ್ನು ಆಯ್ಕೆ ಮಾಡುವ ಮೂಲಕ ಚಂಪಾಗೆ ಯಶವಂತ ಕೊಡಮಾಡಿದ ಸ್ಥಾನಮಾನವೇ ಅವಳಿಗೆ ಭರಿಸಲಾಗದ ದುಃಖ ಕೊಟ್ಟಿತ್ತು. ಅವಳಿಗೆ ಸೀರೆಯನ್ನೇ ಕೊಡಬೇಕೆಂದಿದ್ದರೆ ಅವನಿಗೆ ಬೇಕಾದಾಗ ಕೊಡಬಹುದಿತ್ತು. ಅದನ್ನು ಪ್ರತ್ಯೇಕವಾಗಿ ಅವನೇ ಬಂದು ಕೊಳ್ಳಬಹುದಿತ್ತು. ಇದು ಬರಿ ಸೀರೆಯ ಪ್ರಶ್ನೆ ಅಲ್ಲವೆಂದು ಅವಳಿಗೂ ಗೊತ್ತಿತ್ತು.
ಯಶವಂತ ಮಾತ್ರ ಗಟ್ಟಿಯಾಗಿ ನಿಂತಿದ್ದರಿಂದ ಯಶೋದೆಯ ಯಾವ ಅಸ್ತ್ರಗಳೂ ನಾಟಲಿಲ್ಲ. ತನ್ನ ನಿರ್ಧಾರ ಹೇಳಿ ಆಗಿದೆ ಎಂಬಂತೆ ಅವನು ದಿಂಬಿಗೊರಗಿ ಕೂತುಬಿಟ್ಟಿದ್ದ. ಅವನು ಯಶೋದೆಯನ್ನು ಸಮಾಧಾನಪಡಿಸಲು ಹೋಗಲೂ ಇಲ್ಲ. ಅವಳು ಮದುವೆಗೆ ಬರುವಳೋ ಇಲ್ಲವೋ ಎಂಬುದನ್ನು ಆಮೇಲೆ ಬಗೆಹರಿಸೋಣವೆಂದು ಯಶವಂತನಿಗೆ ಕೇಳುವ ಹಾಗೆಯೇ ಹೇಳಿ, ಅವಳನ್ನು ಸಮಾಧಾನಪಡಿಸಿ, ಜವಳಿಯ ಅಂಕ ಮುಗಿಸಬೇಕಾದರೆ ಮನೋಹರನಿಗೆ ಸಾಕುಸಾಕಾಗಿತ್ತು. ಅತ್ತು ಮುಖ ಬಾಡಿದ್ದು ಗೊತ್ತಾಗದಿರಲಿ ಎಂದು ತಾಯಿ ಮಗಳು ಪ್ರಯತ್ನಿಸಿದಷ್ಟೂ ಅದು ಢಾಳಾಗಿ ಎದ್ದು ಕಾಣುತ್ತಿತ್ತು.

ಚಂದ್ರಹಾಸ

ಎರಡು ದಿನಗಳಲ್ಲಿ ಮದುವೆ ಮನೆ ಖಾಲಿಯಾಗಿತ್ತು. ಮನೋಹರ ಹನ್ನೊಂದರ ಬಸ್ಸು ಹಿಡಿಯಬೇಕೆಂದು ಸ್ನಾನ ಮುಗಿಸಿ ಹೊರಡಲು ತಯಾರಾಗುತ್ತಿದ್ದ. ಆಗ ಯಶೋಧೆ ‘ಯಾರೋ ನಿನ್ನನ್ನು ನೋದಲು ಬಂದಿದ್ದಾರೆ’ ಎಂದು ಕರೆದಳು. ಯಾರಿರಬಹುದು ಎಂದು ಆಶ್ಚರ್ಯ ಪಡುತ್ತ ಮನೋಹರ ಮಹಡಿಯಿಂದ ಕೆಳಗಿಳಿದು ಬಂದು ನೋಡಿದರೆ, ಚೌಕಳಿ ಶರ್ಟು ಮತ್ತು ಜೀನ್ಸ್ ತೊಟ್ಟ ಸುಮಾರು ಮೂವತ್ತರ ಒಬ್ಬ ವ್ಯಕ್ತಿ ಅಂಗಳದಲ್ಲಿ ನಿಂತಿದ್ದ. ದಣಪೆಯಲ್ಲಿ ಅಡ್ಡ ನಿಲ್ಲಿಸಿದ ಮೋಟರ್‌ಬೈಕ್ ಅವನದೇ ಎಂಬುದು ಗೊತ್ತಾಯಿತು. ಅವನ ಮೋರೆಯ ಮೇಲೆ ತುಸು ಉಡಾಫೆಯ ಕಳೆಯಿದ್ದಂತಿತ್ತು.
‘ನಿಮ್ಮ ಜೊತೆ ಸ್ವಲ್ಪ ಮಾತಾಡಬೇಕಿತ್ತು. ನಾನು ಕಶೀಶ ತಮ್ಮ ಚಂದ್ರಹಾಸ. ಒಂದು ನಿಮಿಷದ ಮಾತಿಗೆ ನೀವು ಹೊರಗೆ ಎಲ್ಲಾದರೂ ಸಿಗುತ್ತೀರಾ?’ ಅಂದ.
ಅವನಿಗೆ ಈ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚಿಗೆ ಒಂದು ಕ್ಷಣವೂ ಇರುವ ಮನಸ್ಸಿಲ್ಲ ಎಂಬುದು ಸ್ಪಷ್ಟವಾಗಿತ್ತು. ಕಾಶೀಶನ ತಮ್ಮ ಅಂದರೆ ಚಂಪಾಳ ತಮ್ಮನೂ ಅನ್ನುವುದು ತುಸು ತಡವಾಗಿ ಮನೋಹರನಿಗೆ ಹೊಳೆಯಿತು.
‘ನಾನೀಗ ಹನ್ನೊಂದರ ಬಸ್ಸಿಗೆ ಹೊರಟಿದ್ದೇನೆ. ಬಸ್‌ಸ್ಟಾಂಡಿನ ಕ್ಯಾಂಟೀನಿನಲ್ಲಿ ಸಿಗಬಹುದು’ ಎಂದ ಮನೋಹರ.
‘ಅಲ್ಲಿ ಯಾವಗಲೂ ಬಹಳ ಗದ್ದಲ. ಈ ಹೊತ್ತಿನಲ್ಲಿ ಕೂರಲಿಕ್ಕೆ ಕೂಡ ಜಾಗ ಸಿಗದೇ ಹೋಗಬಹುದು. ಜಹಿಂದ್ ಹೊಟೇಲಿಗೆ ಹೋಗೋಣವೇ? ದಾರಿಯಲ್ಲೇ ಇದೆ.’
‘ಆಯಿತು ಬರಿತ್ತೇನೆ. ಇನ್ನೊಂದು ಹತ್ತು ನಿಮಿಷಗಳಲ್ಲಿ ಹೊರಡುತ್ತೇನೆ’
ಮನೋಹರ ಜೈಹಿಂದ್ ಹೊಟೇಲಿಗೆ ಹೋದಾಗ, ಚಂದ್ರಹಾಸ ಬದಿಯ ಓಣಿಯಲ್ಲಿ ಬೈಕ್ ನಿಲ್ಲಿಸಿ, ಒಂದು ಕೈಯಲ್ಲಿ ಹೆಲ್ಮೆಟ್, ಇನ್ನೊಂದರಲ್ಲಿ ಚಿಕ್ಕ ಬ್ಯಾಗ್ ಹಿಡಿದು ಕಾಯುತ್ತ ನಿಂತಿದ್ದ. ಮನೋಹರನನ್ನು ಅಟ್ಟದ ಮೇಲೆ ಸ್ಪೆಶಲ್ ರೂಮುಗಳಿದ್ದಲ್ಲಿಗೆ ಕರಕೊಂಡು ಹೋದ. ಯಾರೂ ಇಲ್ಲದ ಒಂದರಲ್ಲಿ ಇಬ್ಬರೂ ಕೂತು ತಕ್ಷಣ ಪ್ರತ್ಯಕ್ಷನಾದ ಮಾಣಿಗೆ ಒಂದೊಂದು ಚಹ ಹೇಳಿದರು. ಮನೋಹರ ಅವಸರ ತುಂಬಿದ ಮುಖದಿಂದ ಅವನತ್ತ ನೋಡಿದಾಗ ಆತ ನೇರವಾಗಿ ವಿಷಯಕ್ಕೇ ಬಂದ.
‘ನಾನು ಕಾಶೀಶನ ತಮ್ಮ. ಚಂದ್ರಹಾಸ. ನಿಮಗೆ ಕಾಶೀಶ ಗೊತ್ತಿದ್ದಾನೆಂದು ತಿಳಿಯಿತು. ಅವನಿಗೆ ಒಂದು ಮಾತು ಕೇಳಿ, ಉತ್ತರ ಪಡೆಯಬೇಕಿತ್ತು. ಅದಕ್ಕೆ ನಿಮ್ಮ ಸಹಾಯ ಬೇಕಿತ್ತು.’
‘ನನಗೆ ಅವನು ಗೊತ್ತಿದ್ದಾನೆಂದು ನಿಮಗೆ ಹೇಳಿದವರು ಯಾರು?’
‘ನನಗೆ ಗೊತ್ತಾಯಿತು.’
‘ಗೊತ್ತಾಯಿತು ಅಂತ ಯಾವುದೋ ಅಶರೀರವಾಣಿ ಕೇಳಿದೆ ಅನ್ನುವ ರೀತಿಯಲ್ಲಿ ಹಮ್ಮಿನ ಮಾತಾಡಿದರೆ ಎದ್ದು ಹೋಗುತ್ತೇನೆ. ನನಗೆ ಪುರಸತ್ತಿಲ್ಲ. ಬಸ್ಸು ತಪ್ಪಿ ಹೋಗುತ್ತದೆ.’
‘ಸಿಟ್ಟಾಗಬೇಡಿ. ನಿನ್ನೆ ನೀವು ಬಂದಾಗ ನಾನು ದಿನೂ ಅಂಕಲ್ ಮನೆಯ ಹಿತ್ತಲಲ್ಲಿದ್ದೆ. ನಂತರ ಹಿಂದಿನ ಬಾಗಿಲಿನಿಂದ ಒಳಗೆ ಬಂದೆ. ನೀವು ಆಡುವ ಮಾತುಗಳನ್ನು ಅಕಸ್ಮಾತ್ ಕೇಳಿಸಿಕೊಂಡೆ. ನಾನು ಎದುರು ಬಂದರೆ ದಿನೂ ಅಂಕಲ್ ಹೇಳಬೇಕೆನಿಸಿದ್ದನ್ನು ಹೇಳಲಾರರು ಅನಿಸಿ ಒಳಗೇ ಉಳಿದೆ. ಅವರ ಎದುರಿಗೆ ಇದೆಲ್ಲ ಬೇಡ ಅಂತಲೇ ನಾನು ನಿನ್ನೆ ನಿಮ್ಮನ್ನು ಮಾತಾಡಿಸಲಿಲ್ಲ.’
‘ಕಾಶೀಶನನ್ನು ನಾನು ನೋಡಿದ್ದು ಇಪ್ಪತ್ತೈದು ವರ್ಷಗಳಿಗೂ ಹಿಂದೆ. ಅವನ ಹಾಗೇ ಇರುವ ಯಾರೋ ಒಬ್ಬರನ್ನು ನೋಡಿದಾಗ ನನಗೆ ಅವನ ನೆನಪಾಯಿತೆಂದು ಈ ಸಲ ಇಲ್ಲಿ ಬಂದಾಗ ವಿಚಾರಿಸಿದೆ. ಅಷ್ಟರ ಹೊರತು ನನಗೆ ಬೇರೆ ಯಾವ ಉದ್ದೇಶವೂ ಇರಲಿಲ್ಲ.’
‘ನಿಮಗೆ ಸಿಕ್ಕ ಆ ವ್ಯಕ್ತಿ ಅಣ್ಣನೇ ಎಂದು ನನಗೆ ಖಾತರಿಯಾಗಿದೆ. ಅವನು ನೋಡಲು ಹೇಗಿದ್ದ ಎಂದು ನೀವು ನಿನ್ನೆ ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ. ಅವನ ಬಗ್ಗೆ ಜನ ಮಾತಾಡುವುದನ್ನು ಕೇಳಿದ ನನಗೆ, ಅವನು ನೀವು ಹೇಳಿದ ಹಾಗೆ ಅಸಾಮಾನ್ಯ ಬುದ್ಧಿವಂತನಾಗಿರುವುದರಲ್ಲಿ ಕೂಡ ಸಂಶಯವೇ ಇಲ್ಲ ಅನಿಸುತ್ತದೆ.’
ಮನೋಹರನಿಗೆ ಈ ವ್ಯವಹಾರದಿಂದ ದಿಗಿಲಾಯಿತು. ತನ್ನ ಸರಳ ಕುತೂಹಲವನ್ನು ಸಂಕೀರ್ಣಗೊಳಿಸಲು ಇಷ್ಟವಿರಲಿಲ್ಲ. ಇದು ಬಿಡಿಸಿಕೊಳ್ಳಲು ಕಷ್ಟವಾಗುತ್ತ ಹೋಗುವ ಹುದಲಿನಂತೆ ಕಂಡಿತು. ಕಾಶೀಶನಿಗೆ ತಾನೊಂದು ಖಚಿತ ಕೊಂಡಿಯೆಂಬಂತೆ ಇವನು ವರ್ತಿಸುತ್ತಿರುವುದರಿಂದ ತುಸು ಅಧೀರನಾದ.
‘ನಾನು ಹೇಳುವುದನ್ನು ಪೂರ್ತಿ ಕೇಳಿ. ನಾವು ಯಾರೂ ಅವನ ಪಾಲಿಗೆ ಇಲ್ಲ ಎಂದು ಭಾವಿಸಿಕೊಂಡೇ ಅವನು ಮನೆ ಬಿಟ್ಟು ಹೋಗಿರಬಹುದು. ಆದರೆ ನಾವು ಯಾರೂ ಅವನ ಬಗ್ಗೆ ಹಾಗೆ ತಿಳಿದುಕೊಳ್ಳದಿರುವುದೇ, ಹಾಗೆ ಭಾವಿಸಲು ಸಾಧ್ಯವಾಗದಿರುವುದೇ ನಮ್ಮ ದುರಂತ. ಅವನು ಇಲ್ಲದಿದ್ದರೂ ಇದ್ದಾನೆ ಎಂದು ಭಾವಿಸಿ ಜೀವಿಸುವ ಕಷ್ಟಗಳು ಎಂತೆಂಥವೆಂದು ನಿಮಗೆ ಗೊತ್ತಿಲ್ಲ. ಅವನು ನಾಪತ್ತೆಯಾಗಿ ಅಮ್ಮನನ್ನು ಬಹಳ ಸತಾಯಿಸಿಬಿಟ್ಟ. ಹಾಗೆಯೇ ದಿನೂ ಅಂಕಲ್‌ನನ್ನು ಕೂಡ. ಅವನು ಓಡಿಹೋಗಲು ಕಾರಣ ತಾವೇ ಎಂದು ನಮ್ಮ ಮನೆಯವರೆಲ್ಲ ಅವರವರ ಪಾಪಪ್ರಜ್ಞೆ ಕುಟುಕಿದ ಗಳಿಗೆಗಳಲ್ಲಿ ಅಂದುಕೊಂಡರು. ನಾನು ಮಾತ್ರ ಹಾಗೆ ಬಳಲುವುದರಿಂದ ಬಚಾವಾದೆ. ಯಾಕೆಂದರೆ ಅವನನ್ನು ನಾನು ಕಡೇ ಸಲ ನೋಡಿದಾಗ ನನಗೆ ಬರೀ ಐದು ವರ್ಷ. ಅವನು ಅಮ್ಮ ಸಾಯುವ ಹೊತ್ತಿಗೂ ಬರಲಿಲ್ಲ. ಈಗ ನನಗೆ ಇರುವುದು ಒಂದು ಬೇರೆಯೇ ಸಮಸ್ಯೆ….’
ಚಂದ್ರಹಾಸನಿಗೆ ಅಲ್ಲಲ್ಲಿ ಕೆಲವು ಕೂದಲು ಬಿಳಿಯಾಗಿದ್ದವು. ಅವನು ದಣಿದಂತೆ ಕಾಣಿಸುತ್ತಿದ್ದ. ಕೈಹಿಡಿದದ್ದೆಲ್ಲ ಹಾಳಾಗುವ ಕಾಲದಲ್ಲಿ ಹುಟ್ಟುವ ಆಯಾಸ ಅವನ ಮೋರೆಯ ಮೇಲೆ ಇದ್ದಂತೆ ಮನೋಹರನಿಗೆ ಅನಿಸಿತು.
‘ಅಮ್ಮ ತನ್ನ ಆಸ್ತಿಯನ್ನು ನಾವು ಮೂರು ಜನ ಮಕ್ಕಳ ಹೆಸರಿಗೆ ಮಾಡಿದ್ದಾಳೆ. ತಾನು ಸಾಯುವವರೆಗೂ ಅವಳು ಕಾಶೀಶ ಬದುಕಿದ್ದಾನೆ, ಈಗಲೋ ಈವತ್ತೋ ಬರುತ್ತಾನೆ ಎಂಬಂಥ ನಂಬಿಕೆಯಲ್ಲೇ ಇದ್ದಳು. ಅವಳು ಆ ಕಾಗದ ಪತ್ರಗಳನ್ನು ಮಾಡಿಸುವಾಗಲೇ ಅವನ ಹೆಸರು ನಡುವೆ ತರಬೇಡ ಎಂದು ಹೇಳಬೇಕೆಂದು ನನಗೆ ಅನಿಸಿತ್ತು. ಆದರೆ ಅವಳ ಹತ್ತಿರ ಈ ಸಂಗತಿಯನ್ನು ಎತ್ತುವ ಪ್ರಶ್ನೆಯೇ ಇರಲಿಲ್ಲ. ಹಾಗೇನಾದರೂ ಹೇಳಿದರೆ, ಅದು ಅವನು ಬದುಕಿಲ್ಲ ಎಂದು ಹೇಳೆದಂತಾಗುತ್ತದೆ ಎಂದವಳು ಭಾವಿಸುತ್ತಿದ್ದರಿಂದ ಆ ಗೋಜಿಗೆ ಹೋಗಲಿಲ್ಲ. ಅವಳನ್ನು ಯಾವುದಕ್ಕೂ ಒತ್ತಾಯಿಸಲಿಲ್ಲ. ಕೊನೆಗಾಲದಲ್ಲಿ ಸ್ವಲ್ಪ ಬುದ್ಧಿ ಕೆಟ್ಟವಳಂತೆ ಆಡುತ್ತಿದ್ದಳು. ಅಂಕೋಲೆಯ ಮನೆ ಮತ್ತು ಬೇಲೆಕೇರಿಯ ಹತ್ತಿರ ಇರುವ ಸ್ವಲ್ಪ ಹೊಲ ಎಲ್ಲವೂ ಅಮ್ಮನ ಹೆಸರಿನಲ್ಲಿತ್ತು. ಈಗ ಅದು ನಾವು ಮೂವರಿಗೆ ಸೇರಿದ್ದು. ಅಮ್ಮ ಸತ್ತು ಎರಡು ವರ್ಷವಾಯಿತು. ಈಗ ನಾನು ನನ್ನ ಪಾಲು ತಗೊಂಡು, ಅದನ್ನು ಮಾರಿ ಬಿಸನೆಸ್ ಮಾಡಬೇಕೆಂದಿದ್ದೇನೆ. ಹುಬ್ಬಳ್ಳಿಗೆ ಹೋಗುತ್ತೇನೆ. ಅಲ್ಲಿ ನನ್ನ ಗೆಳೆಯನೊಬ್ಬನಿದ್ದಾನೆ. ಅವನ ಜೊತೆ ಸೇರಿ ವ್ಯಾಪಾರ ಶುರುಮಾಡುತ್ತೇನೆ. ಆಸ್ತಿ ಪಾಲು ಮಾಡಲಿಕ್ಕೆ ಚಂಪಕ್ಕ ಒಪ್ಪಿದ್ದಾಳೆ. ಈಗ ಸಮಸ್ಯೆ ಎಂದರೆ ಕಾಶೀಶನ ಸಹಿ ಇಲ್ಲದೇ, ಇದು ಆಗುವುದಿಲ್ಲ. ಅವನು ಪಾಲು ಮಾಡಲು ಒಪ್ಪಿಗೆ ಕೊಟ್ಟಿದ್ದಲ್ಲದೇ ಇದು ಆಗುವುದಿಲ್ಲ. ಅವನ ಪಾಲನ್ನು ಅವನು ಏನು ಬೇಕಾದರೂ ಮಾಡಲಿ, ಈ ವ್ಯವಸ್ಥೆಗೆ ಸಹಿ ಮಾಡಬೇಕು ಅಷ್ಟೇ.’
ಚಂಪಾಳ ಮನೆ ಪಾಲಾಗಿ, ಇವನು ತನ್ನ ಪಾಲು ಮಾರುವುದು ಅಂದರೆ ಆ ಇಡೀ ಮನೆಯನ್ನು ಮಾರಿ ಚಂಪಾ ಬೇರೆ ಕಡೆ ಹೋಗಬೇಕಾಗಬಹುದೆನ್ನುವ ಸಾಧ್ಯತೆಯನ್ನು ಯೋಚಿಸಿ ಮನೋಹರನಿಗೆ ತುಸು ದಿಗಿಲಾಯಿತು.
‘ಮನೆ ಪಾಲು ಮಾಡಿ ನೀವು ಆ ಮನೆ ಮಾರುವುದು ಅಂದರೆ ಚಂಪಾ ಮನೆ ಬಿಡಬೇಕಲ್ಲವೇ?.’
‘ಇಲ್ಲ, ಅವಳು ಅಲ್ಲಿಂದ ಹೋಗುವುದಿಲ್ಲ. ಮನೆಯ ಹಿತ್ತಲ ಭಾಗ ನನಗೆ ಕೊಟ್ಟರೆ ಸಾಕು ಅಂತ ಹೇಳಿದ್ದೇನೆ. ಮುಂದಿನ ಭಾಗದ ಹಿತ್ತಿಲು ಅಣ್ಣನಿಗೆ. ಹಿಂದಿನ ಹಿತ್ತಿಲಿಗೆ ಪ್ರತ್ಯೇಕವಾದ ದಾರಿಯೂ ಇದೆ. ಹಾಗಾಗಿ ಅದನ್ನು ಮಾತ್ರ ಮಾರಬಹುದು. ಇದರ ಬಗ್ಗೆ ಕಾಗದ ಪತ್ರ ಎಲ್ಲ ಮಾಡಿಸಿಕೊಂಡು ಬಂದಿದ್ದೇನೆ. ಅವನ ಸಹಿಯೊಂದು ಬೇಕು ಅಷ್ಟೇ.’
ಚಂದ್ರಹಾಸ ಬ್ಯಾಗಿನಿಂದ ಕಾಗದಪತ್ರಗಳ ಕಟ್ಟನ್ನು ತೆಗೆದ. ಎರಡು ದಪ್ಪ ರಟ್ಟುಗಳ ನಡುವೆ ಹಸಿರು ಬಣ್ಣದ ಮುದ್ರೆಗಳ ಸ್ಟ್ಯಾಂಪ್ ಪೇಪರುಗಳಿದ್ದವು. ಮನೋಹರ ಇವುಗಳನ್ನು ಒಯ್ದು ಕಾಶೀಶನಿಂದ ಸಹಿ ಮಾಡಿಸಿ ತರುತ್ತಾನೆ ಎಂಬುದು ಖಾತ್ರಿಯೆಂಬಂತೆ ಅವನು ಅದರಲ್ಲಿ ಸಹಿ ಮಾಡಬೇಕಾದ ಜಾಗಗಳನ್ನು ತೋರಿಸಲು ಹಾಳೆಗಳನ್ನು ತಿರುವತೊಡಗಿದ.
‘ನೋಡು ಚಂದ್ರಹಾಸ, ನನಗೆ ನಿನ್ನ ಸಮಸ್ಯೆ ಅರ್ಥವಾಗುತ್ತದೆ. ಆದರೆ ಇದಕ್ಕೆ ನಾನೇನೂ ಮಾಡುವಂತಿಲ್ಲ. ನನಗೆ ಗೊತ್ತಿರುವ ವ್ಯಕ್ತಿಗೆ ಕಾಶೀಶನ ಹೋಲಿಕೆ ಇದೆ ಎಂದು ನನಗೆ ಒಮ್ಮೆ ಅನಿಸಿದ ಮಾತ್ರಕ್ಕೆ ಅವನೇ ಕಾಶೀಶನಾಗುವುದಿಲ್ಲ.’
ತನ್ನ ಮಾತುಗಳನ್ನು ಕೇಳಿಸಿಕೊಂಡರೆ ಮನೋಹರನಿಗೆ ಮನವರಿಕೆಯಾಗುತ್ತದೆ ಎಂದು ಖಂಡಿತ ನಂಬಿದವನಂತೆ ಚಂದ್ರಹಾಸ ವಿವರವಾಗಿ ಹೇಳತೊಡಗಿದ:
‘ನೀವೊಂದು ಸಲ ಪ್ರಯತ್ನಿಸಿ ನೋಡಿ. ಅವನಿಗೆ ಇಲ್ಲಿಯ ಪರಿಸ್ಥಿತಿ ಹೇಳಿದರೆ ಹೀಗೆಲ್ಲ ಆಯಿತು ಅಂತ ಹೇಳಿದರೆ ಮನಸ್ಸು ಬದಲಾಯಿಸಬಹುದು. ಅಮ್ಮ ಅವನನ್ನೇ ನೆನೆದು ಸತ್ತಳು ಅಂತ ಹೇಳಿ. ಅವನು ಮನೆಗೆ ಮಾಡಬೇಕಾದ ಕರ್ತವ್ಯಗಳನ್ನೆಲ್ಲ ನನ್ನ ಕೈಲಾದಷ್ಟು ಮಾಡಿದ್ದೇನೆ ಎಂದು ಹೇಳಿ. ಈಗ ನನ್ನ ಭವಿಷ್ಯ ಅವನ ಸಹಿಯ ಮೇಲೆ ನಿಂತಿದೆ ಎಂದು ಹೇಳಿ. ಈ ಆಸ್ಥಿಯನ್ನು ಅವನ ಒಪ್ಪಿಗೆಯಿಲ್ಲದೇ ಮಾರಲು ಸಾಧ್ಯವೇ ಇಲ್ಲ. ಅವನು ಬದುಕಿಲ್ಲವೆಂದು ಹೇಳಿ, ಅವನಿಗೆ ವಾರಸುದಾರರು ಯಾರೂ ಇಲ್ಲವೆಂದು ಹೇಳಿ ಇದನ್ನೆಲ್ಲ ಮುಗಿಸಬಹುದು. ಆದರೆ ಅದು ಅಷ್ಟು ಸುಲಭವಲ್ಲ. ಹಾಗೆ ಮಾಡಿದರೆ ಅಮ್ಮನಿಗೆ ಅನ್ಯಾಯ ಮಾಡಿದಂತೆ. ಅದಕ್ಕಿಂತ ಹೆಚ್ಚಾಗಿ ಚಂಪಕ್ಕ ಇದಕ್ಕೆ ಒಪ್ಪುವುದಿಲ್ಲ. ಮತ್ತು ಇದೆಲ್ಲ ಕೋರ್ಟಿನಲ್ಲಿ ವರ್ಷಗಟ್ಟಳೆ ನಡೆಯುವ ವ್ಯವಹಾರಗಳು. ನನಗೆ ಇಂಥ ಅವಕಾಶ ಪದೇ ಪದೇ ಸಿಗುವುದೂ ಇಲ್ಲ. ನನಗೆ ತುರ್ತಾಗಿ ಹಣ ಬೇಕು. ಈಗ ಇದೆಲ್ಲ ಆದರೆ, ನಾನು ಹಿತ್ತಿಲು ಮಾರಿ ವ್ಯಾಪಾರ ಶುರುಮಾಡಿದರೆ, ಮಾಡಿದ ಹಾಗೆ; ಇಲ್ಲವಾದರೆ ಮತ್ತೆ ಯಾವತ್ತಿಗೂ ಇದು ಆಗುವ ಮಾತಲ್ಲ. ನಾನು ಈ ಊರಲ್ಲೇ ಇದ್ದರೆ ಗೆರೆಟೆ ಹಿಡಿಯುವ ಪರಿಸ್ಥಿತಿ ಬರುತ್ತದೆ. ನೀವು ಇನ್ನೊಂದು ಸಲ ಕೇಳಿ ನೋಡಿ. ಅವನು ಬರುವುದು ಬೇಡ. ನಮ್ಮನ್ನು ನೋಡುವುದು ಬೇಡ. ಅವನ ಪಾಲಿಗೆ ನಾವೆಲ್ಲ ಸತ್ತು ಹೋಗಿದ್ದೇವೆಂದು ಅಂದುಕೊಂಡಿದ್ದಾನಲ್ಲವೆ? ಹಾಗೆ ಅಂದುಕೊಂಡೇ ಇರಲಿ. ಇದಕ್ಕೆ ಸಹಿ ಹಾಕಿ ಇದೆಲ್ಲದರಿಂದ ಕಳಚಿಕೊಂಡು ಬಿಡಲಿ. ನಾವು ಅವನ ಪಾಲಿಗೆ ಇಲ್ಲ ಎಂದು ಅವನೇ ಒಮ್ಮೆ ಹೇಳಿ, ಕಾಡುತ್ತಿರುವ ಅವನ ಭೂತದಿಂದ ನಮ್ಮನ್ನು ಬಿಡುಗಡೆಗೊಳಿಸಲಿ.’
ಮನೋಹರ ಟೇಬಲ್ಲಿನ ಕೆಳಗೆ ಕೈ ಒಯ್ದು ಗಡಿಯಾರ ನೋಡಿಕೊಂಡ. ಹನ್ನೊಂದರ ಬಸ್ಸು ಸಿಗುವ ಸಾಧ್ಯತೆಗಳಿಲ್ಲ ಅನಿಸಿತು. ಅವನ ಹಿಂಜರಿಕೆ ಇನ್ನೂ ಕಡಿಮೆಯಾಗಿಲ್ಲದ್ದನ್ನು ಗಮನಿಸಿ ಚಂದ್ರಹಾಸ ಮುಂದುವರಿಸಿದ.
‘ನಾನು ಬಿ.ಎ. ಮಾಡಿದೆ. ವರ್ಷಗಟ್ಟಲೆ ಬರೀ ಅರ್ಜಿ ಹಾಕುವುದರಲ್ಲೇ ಕಳೆದೆ. ಒಂದು ಚಾ ಕುಡಿಯಲಿಕ್ಕೂ ಅಮ್ಮನೋ ಅಕ್ಕನೋ ದುಡ್ಡು ಕೊಡಬೇಕಿತ್ತು. ಹೀಗೆ ಎಷ್ಟು ದಿನ ನಡೆಯುತ್ತದೆ? ಟ್ರಕ್ಕಿನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅದು ನನಗೆ ಆಗಲಿಲ್ಲ. ಈಗ ಪೆಟ್ರೋಲು ಪಂಪಿನಲ್ಲಿ ಕೆಲಸ ಮಾಡುತ್ತೇನೆ. ಕಾಲೇಜು ಓದಿ ಏನು ಬಂದ ಹಾಗಾಯಿತು? ಐನೂರು ರೂಪಾಯಿ ಪಗಾರ ನನಗೆ. ಈಗ ಇದು ಆಗದಿದ್ದರೆ ಮತ್ತೆ ಯಾವಾಗಲೂ ಅಗುವುದಿಲ್ಲ ಎಂದು ನನ್ನ ಮನಸ್ಸಿಗೆ ಗೊತ್ತಿದೆ….’ ಮಾತಾಡಿ ಮುಗಿಸುತ್ತಿದ್ದ ಹಾಗೆ ಚಾ ಕಪ್ಪನ್ನೆತ್ತಿ ಒಂದೇ ಗುಟುಕಿಗೆ ಉಳಿದದ್ದನ್ನು ಕುಡಿದುಬಿಟ್ಟ.
ಮನೋಹರನ ಮೌನವನ್ನು ಹೇಗೆ ಅರ್ಥೈಸುವುದೆಂದು ಚಂದ್ರಹಾಸನಿಗೆ ಗೊತ್ತಾಗಲಿಲ್ಲ.
‘ಅವನ ಫೋನ್ ನಂಬರು ಅಥವಾ ವಿಳಾಸ ಕೊಟ್ಟರೆ ನಾನೇ ಹೋಗಿ ಮಾತಾಡುತ್ತೇನೆ. ಅವನ ಪಿತ್ತ ಇಳಿಸುತ್ತೇನೆ. ಅವನೇನೋ ತಪ್ಪಿಸಿಕೊಂಡು ಹೋದ. ನಾನು ಇಲ್ಲಿ ಸಿಕ್ಕಿ ಬಿದ್ದಿದ್ದೇನೆ. ಅವನು ಕೊಡಬೇಕಾದ ಕರ್ತವ್ಯಗಳನ್ನು ನಾನು ಮಾಡಿದ್ದೇನೆ….’ ಚಂದ್ರಹಾಸನ ದನಿಯಲ್ಲಿ ಈಗ ಸಿಟ್ಟು ಸೇರಿಕೊಂಡಿತ್ತು.
ಯಾವುದರ ಬಗ್ಗೆಯೂ ಖಚಿತತೆ ಇಲ್ಲದೇ ಕಶ್ಯಪನ ವಿಳಾಸ ತಾನು ಕೊಡುವುದು ಉಚಿತವಲ್ಲ ಎಂದು ಮನೋಹರನಿಗೆ ಅನಿಸಿತು. ಚಂದ್ರಹಾಸನ ಬಗ್ಗೆ ಮರುಕವಾಯಿತು. ಅವನ ಆರ್ತವಾದ ಮುಖದಲ್ಲಿ ಸುಳ್ಳಿನ ಛಾಯೆಯಿರಲಿಲ್ಲ. ಅವನಿಗೆ ಸಹಾಯ ಮಾಡುವುದು ಹೇಗೆಂದು ಮಾತ್ರ ಗೊತ್ತಾಗಲಿಲ್ಲ.
‘ನೀವು ಈ ಪೇಪರುಗಳನ್ನು ತಗೊಂಡು ಹೋಗಿ. ಎಂಟು ದಿವಸ ಇಟ್ಟುಕೊಳ್ಳಿ. ನಿಮಗೆ ಮಾತಾಡಬೇಕು ಅನಿಸಿದರೆ ಮಾತಾಡಿ. ಇಲ್ಲವಾದರೆ ಇವುಗಳನ್ನು ಹಿಂದಕ್ಕೆ ಕಳಿಸಿ. ನಿಮಗೆ ಅವನೇ ನನ್ನ ಅಣ್ಣ ಅಂತ ಖಾತರಿಯಾದರೆ ನನಗೆ ಒಂದು ಮಾತು ತಿಳಿಸಿಬಿಡಿ. ನಾನೇ ತಕ್ಷಣ ಬಂದುಬಿಡುತ್ತೇನೆ. ಈ ನಂಬರಿಗೆ ಫೋನ್ ಮಾಡಿ ಮೆಸೇಜ್ ಇಟ್ಟರೆ ನನಗೆ ಸಿಗುತ್ತದೆ. ನನ್ನ ವಿಳಾಸ ಈ ಚೀಟಿಯಲ್ಲಿದೆ.’
ಸುಮ್ಮನೇ ಈ ಪೇಪರುಗಳನ್ನು ತಗೊಂಡು ಇದನ್ನು ಸದ್ಯಕ್ಕೆ ಮುಗಿಸಬೇಕು ಎಂದು ಮನೋಹರ ನಿರ್ಧರಿಸಿದ. ಬೆಂಗಳೂರಿಗೆ ಹೋದ ನಂತರ ಎಲ್ಲವನ್ನೂ ಹಿಂದಕ್ಕೆ ಕಳಿಸಬಹುದು ಎಂದು ತನ್ನಲ್ಲೇ ತರ್ಕ ವಿತರ್ಕ ಹೂಡಿ ಕೈಚಾಚಿದ. ಚಂದ್ರಹಾಸನಿಗೆ ಖುಷಿಯಾಯಿತು. ಎಲ್ಲಿ ಸಹಿ ಮಾಡಬೇಕೆಂದು ಪೆನ್ಸಿಲ್ಲಿನಲ್ಲಿ ಗುರುತು ಮಾಡಿದ್ದನ್ನು ಹೇಳಿದ. ಎಲ್ಲವನ್ನೂ ಮರಳಿ ಕಟ್ಟಿ, ಒಂದು ಕಂದು ಕಾಗದದ ಕವರಿನಲ್ಲಿ ಹಾಕಿ, ಅದನ್ನು ಮತ್ತೊಂದು ಪ್ಲ್ಯಾಸ್ಟಿಕ್ ಕವರಿನಲ್ಲಿಟ್ಟು, ಅದಕ್ಕೆ ರಬ್ಬರ್ ಬ್ಯಾಂಡ್ ಹಾಕಿ ಮನೋಹರನ ಕೈಯಲ್ಲಿಡುತ್ತ ‘ಬಹಳ ಬಹಳ ಉಪಕಾರವಾಯಿತು’ ಅಂದ.
ಚಹಾ ಕುಡಿದ ಬಿಲ್ಲನ್ನು ಮನೋಹರನೇ ಕೊಟ್ಟ.


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.