ಸಂಸ್ಕಾರ – ೩

ಮಹಾ ರೂಪವತಿಯೆಂದರೆ ಚಂದ್ರಿ. ಈ ನೂರು ಮೆಲಿ ವಿಸ್ತೀರ್ಣದಲ್ಲಿ ಅಂಥದೊಂದು ಪುತ್ತಳಿಯನ್ನು ತೋರಿಸಿ. ಸೆ ಎಂದುಬಿಡುತ್ತೇನೆ. ದುರ್ಗಾಭಟ್ಟನಿಗೂ ಅಲ್ಪಸ್ವಲ್ಪ ರಸಿಕತೆ ಇಲ್ಲವೆಂದಲ್ಲ. ಆದರೆ ಅಲ್ಲೊಂದು ಇಲ್ಲೊಂದು ಶೆಟ್ಟರ ಹೆಂಗಸಿನ ಮೊಲೆಯ ಮೇಲೆ ಕೆಯಾಡಿಸೋದಕ್ಕಿಂತ ಹೆಚ್ಚಿನ ತಾಕತ್ತಿಲ್ಲ ಅವನಿಗೆ. ಹಾಗೆ ನೋಡಿದರೆ ನಿಜವಾದ ರಸಿಕರೆಂದರೆ ಪ್ರಾಣೇಶಾಚಾರ್ಯರು. ಸಾವಿರಕ್ಕೊಂದು ಜನ ಅಂಥವರು. ಅವರು ನಿತ್ಯ ಸಂಜೆ ಪುರಾಣವನ್ನೋದುತ್ತ ಆ ಶ್ಲೋಕಗಳಿಗೆ ರಮ್ಯವಾಗಿ ಅರ್ಥ ಹೇಳುವ ಗತ್ತು ಕೇಳಿದರೆ ಎಂತಹ ಮಹಾಮಹಾ ಭಾಗವತನಿಗೂ ನಾಚಿಕೆಯಾಗಬೇಕು. ಎಂತಹ ನಯವಾದ ಮಾತು, ಮೃದುವಾದ ನಗು, ಕಣ್ಣಿಗೆ ಕಟ್ಟುವ ರೂಪು. ಜುಟ್ಟು, ಅಂಗಾರ, ಅಕ್ಷತೆ, ಜರೀ ಶಾಲು ಒಪ್ಪುವುದೆಂದರೆ ಅವರಿಗೊಬ್ಬರಿಗೇನೇ. ಅಷ್ಟಮಠಗಳಲ್ಲಿ ದಕ್ಷಿಣದ ಮಹಾಪಂಡಿತರ ಜೊತೆ ವಾದಿಸಿ ಗೆದ್ದುಬಂದ ಅವರಲ್ಲಿ ಹದಿನೆದು ಜರೀ ಶಾಲುಗಳಿವೆಯಂತೆ. ಆದರೆ ಅವರು ಕೊಚ್ಚಿಕೊಳ್ಳುವವರಲ್ಲ. ಪಾಪ ಅವರ ಹೆಂಡತಿ ನಿತ್ಯರೋಗಿ-ಮಕ್ಕಳಿಲ್ಲ ಮರಿಯಿಲ್ಲ. ಅಷ್ಟೊಂದು ರಮ್ಯವಾಗಿ ಕಾಳಿದಾಸನ ಸ್ತೀವರ್ಣನೆಗಳನ್ನು ವಿವರಿಸುತ್ತಾರಲ್ಲ ಅವರಿಗೆ ಸ್ವತಃ ಆಸೆಯಾಗುವುದಿಲ್ಲವೆ? ತಾನು ಪ್ರಥಮ ಬಾರಿಗೆ ಹೊಳೆಗೆ ನೀರಿಗೆಂದು ಬಂದಿದ್ದ ಬೆಳ್ಳಿಯನ್ನು ಸಂಭೋಗಿಸಿದ್ದು ಆಚಾರ್ಯರು ಓದಿದ ಶಾಕುಂತಲ ಕೇಳಿ. ತಡೆಯಲಾರದೇ ಎದ್ದು ಹೋದೆ. ಮಡಕೆಯಲ್ಲಿ ನೀರು ತುಂಬಿ ತಲೆಯ ಮೇಲೆ ಹೊತ್ತು, ಉಟ್ಟ ತುಂಡಿನ ಸೆರಗು ಜಾರಿ ಬೆಳದಿಂಗಳಿನಲ್ಲಿ ಮಣ್ಣಿನ ಬಣ್ಣದ ಮೊಲೆಗಳನ್ನು ಕುಣಿಸುತ್ತ ಹೆಜ್ಜೆ ಹಾಕಿದವಳು ಶಕುಂತಲೆಯಂತೆ ಕಂಡಳು. ಆಚಾರ್ಯರ ವರ್ಣನೆಯನ್ನು ಖುದ್ದು ಆಸ್ವಾದಿಸಿದ್ದಾಯಿತು. ಶ್ರೀಪತಿ ಒಳದಾರಿಯಿಂದ ಸೀದ ಗುಡ್ಡದ ಮೇಲಿದ್ದ ಹೊಲೆಯರ ಗುಡ್ಡಗಳ ಕಡೆ ನಡೆದ. ಅಮಾಸೆ ಎದುರಿನ ಕಡುಕಪ್ಪು ರಾತ್ರೆಯಲ್ಲಿ ಒಂದು ಗುಡಿಗೆ ಬೆಂಕಿ ಹತ್ತಿ ಉರಿಯೋದು ಕಂಡಿತು. ಅದರ ಬೆಳಕಿನ ಆವೃತ್ತದಲ್ಲಿ ಮಸಿ ಮಸಿ ರೂಪಗಳು. ದೂರದಲ್ಲಿ ನಿಂತು ನೋಡಿದ, ಆಲಿಸಿದ. ಯಾರೂ ಗುಡಿಗೆ ಹತ್ತಿದ ಬೆಂಕಿಯನ್ನು ಆರಿಸುವ ಯತ್ನದಲ್ಲಿದ್ದಂತೆ ಕಾಣಿಸಲಿಲ್ಲ. ಆಶ್ಚರ್ಯಪಟ್ಟು ಒಂದು ಮೊಟ್ಟಿನ ಸಂದಿ ನಿಂತು ಕಾದ. ಬಿದಿರಿನ ಗಳದಿಂದ ಕಟ್ಟಿ ಚಾಪೆ ಹೊದಿಸಿ, ಸೋಗೆ ಹಚ್ಚಿದ ಗುಡಿ ಬೇಸಗೆಯಾದ್ದರಿಂದ ಕ್ಷಣದಲ್ಲಿ ಧಗಧಗ ಉರಿದು ನೆಲಸಮವಾಯಿತು. ಮಸಿರೂಪಗಳು ತಮ್ಮ ಗುಡಿಗಳಿಗೆ ಮರಳಿದವು. ಎದ್ದ ಬೆಂಕಿಯ ಝಳಕ್ಕೆ ಗೂಡುಗಳನ್ನು ಬಿಟ್ಟು ಕಾತರದಿಂದ ಕೂಗಿದ ಹಕ್ಕಿಗಳು ಮರಳಿ ಗೂಡು ಸೇರಿದವು. ಶ್ರೀಪತಿ ಮೆಲ್ಲಗೆ ಹೆಜ್ಜೆಯಿಟ್ಟು ಹೋಗಿ, ಬೆಳ್ಳಿಯ ಗುಡಿಯಿಂದ ಸ್ವಲ್ಪ ದೂರ ನಿಂತು ಚಪ್ಪಾಳೆ ತಟ್ಟಿದ. ತಲೆಗೆ ಬಿಸಿನೀರು ಸ್ನಾನ ಮಾಡಿ, ಸೆರಗಿನಲ್ಲಿ ಬರಿಯ ತುಂಡುಟ್ಟು, ಸೊಂಟದ ಮೇಲೆ ಬತ್ತಲೆಯಾಗಿ, ಕಪ್ಪು ಕೂದಲಿನ ರಾಶಿಯನ್ನು ಬೆನ್ನಿನ ಮೇಲೆ ಮುಖದ ಮೇಲೆ ಚೆಲ್ಲಿಕೊಂಡಿದ್ದ ಬೆಳ್ಳಿ ಮೆತ್ತಗೆ ಗುಡಿಯಿಂದ ಹೊರಬಂದು, ಸದ್ದು ಮಾಡದೆ ದೂರದಿಂದ ಪೊದರಿನ ಸಂದಿ ಮರೆಯಾದಳು. ಅವಳು ಮರೆಯಾಗುವವರೆಗೆ ಮರವೊಂದರ ಹಿಂದೆ ನಿಂತು ಕಾದ ಶ್ರೀಪತಿ ಅತ್ತ ಇತ್ತ ಕಣ್ಣುಹರಿಸಿ ನೋಡಿ, ಯಾರೂ ಸುಳಿದಾಡುತ್ತಿಲ್ಲವೆಂದು ಖಚಿತ ಮಾಡಿಕೊಂಡು, ಬೆಳ್ಳಿ ಅಡಗಿದ ಮೊಟ್ಟಿಗೆ ಹೋಗಿ ಬ್ಯಾಟರಿ ಹಾಕಿ-ಆರಿಸಿ-ಅವಳನ್ನು ತಬ್ಬಿ ಆತುರದಿಂದ ಉಸಿರಾಡಿದ. “ಅಯ್ಯ, ಇವತ್ಟು ಬ್ಯಾಡವಯ್ಯ” ಬೆಳ್ಳಿ ಹೀಗೆ ನುಡಿದದ್ದೇ ಇಲ್ಲ. ಶ್ರೀಪತಿಗೆ ಆಶ್ಚರ್ಯವಾಯಿತು. ಆದರೆ ಅವಳ ಮಾತನ್ನು ಲೆಕ್ಕಕ್ಕೆ ತರದೆ ಸೊಂಟಕ್ಕೆ ಸುತ್ತಿದ್ದ ಅವಳ ತುಂಡನ್ನು ಬಿಚ್ಚಿದ. “ಪಿಳ್ಳ ಮತ್ತು ಆತನ ಹೊಲತಿ ದೆಯ್ಯ ಮೆಟ್ಟಿಯೋ ಏನು ಕತೆಯೋ ಸತ್ತವು ಅಯ್ಯ ಇವತ್ತು” ಶ್ರೀಪತಿಗೆ ಈಗ ಮಾತು ಬೇಡ. ದುಂಡಗೆ ನಿಂತಿದ್ದವಳನ್ನು ನೆಲಕ್ಕೆಳೆದ. “ಎಲ್ಡೂ ಸತ್ತುಬಿಟ್ಟವೆಂದು ಶವಾನ್ನ ಅಲ್ಲೇ ಬಿಟ್ಟು ಗುಡಿಗೇ ಬೆಂಕಿ ಕೊಟ್ಟು ಬಿಟ್ಟವು. ಜರಾ ಬಂದು ಸತ್ತವು. ಮುಚ್ಚಿದ್ದ ಕಣ್ಣು ಬಿಚ್ಚಲಿಲ್ಲ” ಶ್ರೀಪತಿಗೆ ಅಸಹನೆ. ಏನೋ ಆಡುತ್ತಿದ್ದಾಳೆ. ಏಲ್ಲಿಯೋ ಇದ್ದಾಳೆ. ಅಷ್ಟೊಂದು ಕಾತರಿಸಿ ಬಂದರೆ ಯಾರೋ ಸತ್ತವೆಂದು ಹರಟುತ್ತಿದ್ದಾಳೆ. ಈ ಸಮಯ ಹೀಗೆ ಮಾತನಾಡುವವಳೇ ಅಲ್ಲ ಅವಳು. ಬೀಳುವ ಮಳೆಗೆ ಬಾಗುವ ಪೆರಿನಂತೆ ಇವಳು… ಬೆಳ್ಳಿ ತುಂಡುಟ್ಟುಕೊಳ್ಳುತ್ತ- “ಅಯ್ಯ, ಒಂದು ವಿಶ್ಯ. ಅಂಥದೊಂದು ಆಶ್ಚರ್ಯ ನಾ ಕಂಡೇ ಇಲ್ಲ. ನಮ್ಮ ಗುಡೀಗೆ ಏನುಣ್ಣಕ್ಕಿರುತ್ತೇಂತ ಇಲಿ ಹೆಗ್ಗಣ ಬರಬೇಕು? ಬ್ರಾಂಬ್ರ ಮನೇಲಿ ಇದ್ದ ಹಾಗೇನು ನಮ್ಮ ಗುಡಿ? ಈಗ ನೆಂಟರ ಹಾಗೆ ಬಂದು ನೆಲಸಲಿಕ್ಕೆ ಹತ್ತಾವೆ. ಸೂರಿನಿಂದ ತಪತಪ ಉದುರಿ ಗಿರಗಿರ ಸುತ್ತಿ ಸಾಯಕ್ಕೆ ಹತ್ತಾವೆ. ಬೆಂಕಿಬಿದ್ದ ಗುಡೀಂದ ಪ್ರಾಣ ಹಿಡಿದು ಓಡೋರಂಗೆ ಕಾಡು ಬಿದ್ದು ಓಡಲಿಕ್ಕೆ ಹತ್ತಾವೆ. ಇಂಥಾ ಪಾಡು ನಾ ಕಂಡಿಲ್ಲ. ದೆಯ್ಯದವನನ್ನ ಗಣಾ ಬರಿಸಿ ಕ್ಯಾಳಬಾಕು. ಹೊಲೇರ ಗುಡಿಗೆ ಇಲಿ ಬರೋದೇನು, ಹೊಲೆಯ ಕಟ್ಟಿಗೆ ಮುರಿದಂತೆ ಲಕ್ಕ ಸಾಯೋದುಂದ್ರೇನು-ಕ್ಯಾಳಬಾಕು. ” ಶ್ರೀಪತಿ ಪಂಚೆಯುಟ್ಟು, ಅಂಗಿ ತೊಟ್ಟು, ಕಿಸೆಯಿಂದ ಬಾಚಣಿಗೆ ತೆಗೆದು ಕ್ರಾಪು ಬಾಚಿ, ಬ್ಯಾಟರಿ ಹತ್ತಿಸಿ ನೋಡುತ್ತ ಅವಸರದಲ್ಲಿ ಓಡಿ ಬಿಟ್ಟ. ಬೆಳ್ಳಿ ಮಲಗಲಿಕ್ಕೆ ಸರಿಯೇ ಹೊರ್ತು ಮಾತಾಡಲಿಕ್ಕಲ್ಲ. ಬಾಯಿ ಬಿಟ್ಟರೆ ಅವಳದ್ದು ಗಣ, ದೆಯ್ಯ. ನಾರಣಪ್ಪನನ್ನು ನೋಡುವ ಅವಸರದಿಂದ ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿ ಗುಡ್ಡವನ್ನಿಳಿದ. ಸರಾಯಿ ಕುಡಿದು ಇವತ್ತು ರಾತ್ರೆ ಅಲ್ಲೇ ಮಲಗೆ ಬೆಳಗ್ಗೆ ಎದ್ದು ಪಾರಿಜಾತಪುರದ ನಾಗರಾಜನ ಮನೆಗೆ ಹೋದರೆ ಸರಿ. ಮೆತ್ತಗೆ ನಾರಣಪ್ಪನ ಮನೆಯ ಬಾಗಿಲಿನ ಎದುರು ನಿಂತು ಬಾಗಿಲನ್ನು ತಳ್ಳಿದ. ಅಗಳಿ ಹಾಕಿರಲಿಲ್ಲ. ಇನ್ನೂ ಎದ್ದಿರಬೇಕು ಅವ ಎಂದು ಖುಷಿಯಾಗಿ ಒಳಗೆ ಹೋದ. ಬ್ಯಾಟರಿ ಹಾಕಿ, ’ನಾರಣಪ್ಪ, ನಾರಣಪ್ಪ’ ಎಂದು ಕರೆದ. ಉತ್ತರವಿರಲಿಲ್ಲ. ಕೆಟ್ಟನಾತ ಬಂದ ಹಾಗಾಯಿತು; ಹೊಟ್ಟೆ ತೊಳೆಸಿ ಬರುವಂತಹ ಕೊಳೆಯುವ ನಾತ. ಉಪ್ಪರಿಗೆ ಹತ್ತಿ ಬಾಗಿಲು ತಟ್ಟಿ ನೋಡುವುದೆಂದು ಕತ್ತಲಿನಲ್ಲೇ ತನಗೆ ಪರಿಚಿತವಾದ ಮೆಟ್ಟಲುಗಳ ಕಡೆ ನಡೆದ. ಮೂಲೆ ತಿರುಗುವಲ್ಲಿ ಬರಿಗಾಲಿನಲ್ಲಿ ಮೆತ್ತಗೆ ತಣ್ಣಗೆ ಇದ್ದುದೊಂದನ್ನ ಪಿಚಕ್ಕನೆ ತುಳಿದಂತಾಗಿ ಹೌಹಾರಿ ಬ್ಯಾಟರಿ ಹಾಕಿ ನೋಡಿದ. ಇಶ್ಶಿ! ಇಲಿ. ಕಾಲು ಮೇಲೆ ಮಾಡಿ ಅಂಗಾತನೆ ಸತ್ತು ಬಿದ್ದ ಇಲಿ. ಅದರ ಮೇಲೆ ಕೂತ ನೊಣ ಬ್ಯಾಟರಿ ಬೆಳಕಿಗೆ ಗುಯ್ಯೆಂದು ಎದ್ದವು. ದಿಡಿದಿಡಿ ಮೆಟ್ಟಲು ಹತ್ತಿ ಉಪ್ಪರಿಗೆಗೆ ಹೋಗಿ ಬ್ಯಾಟರಿ ಹಾಕಿದ. ನೆಲದ ಮ್ಯಾಲೆ ಯಾಕೆ ಹೀಗೆ ಮುಸುಕೆಳೆದು ನಾರಣಪ್ಪ ಮಲಗಿದ್ದಾನೆ-ಮೂಗಿನ ಮಟ್ಟ ಹಾಕ್ಕೊಂಡಿರ ಬೇಕೆಂದು ನಸುನಗುತ್ತ ಮುಸುಕೆಳೆದು ’ನಾರಣಪ್ಪ, ನಾರಣಪ್ಪ’ ಎಂದು ಅಲುಗಿಸಿದ. ಮತ್ತೆ ಇಲಿಯನ್ನು ತುಳಿದಾಗಿನಂತೆ ತಣ್ಣಗಿನ ಸ್ಪರ್ಶವಾಗಿ ಸಟ್ಟನೆ ಕೆಯೆಳೆದುಕೊಂಡು ಬ್ಯಾಟರಿ ಹತ್ತಿಸಿದ. ಮೇಲಕ್ಕೆ ಸಿಕ್ಕಿದ ದೃಷ್ಟಿಯಿಲ್ಲದ ರೆಪ್ಪೆ ತೆರೆದ ಕಣ್ಣುಗಳು. ಬ್ಯಾಟರಿಯ ಬೆಳಕಿನ ವೃತ್ತದಲ್ಲಿ ನೊಣ, ನುಸಿ, ನಾತ.

ಅಧ್ಯಾಯ : ಆರು

ಅಗ್ರಹಾರದಲ್ಲೆ ಹಿರಿಯವಳಾದ ಅರವತ್ತು ದಾಟಿ ದಶಕ ಕಳೆದ ಅಜ್ಜಿ ಲಕ್ಷ್ಮೀದೇವಮ್ಮ, ಹೆಬ್ಬಾಗಿಲನ್ನು “ಢರ್ರೋ” ಎಂದು ತೆಗೆದು “ಹೇಂii” ಎಂದು ತೇಗಿದಳು. ಅಗ್ರಹಾರದ ಬೀದಿಗಿಳಿದು, ಕೋಲೂರಿ ನಿಂತು, ಇನ್ನೊಮ್ಮೆ “ಹೋಂii” ಎಂದು ತೇಗಿದಳು. ನಿದ್ದೆ ಬರದಿದ್ದ ಪಕ್ಷದಲ್ಲಿ, ಅಥವಾ ಮನಸ್ಸು ವ್ಯಾಗ್ರಗೊಂಡಾಗ ಹೀಗೆ ಅವಳು ರಾತ್ರಾನುರಾತ್ರೆ ಅಗ್ರಹಾರದ ಬೀದಿಗೆ ಬಂದು, ಮೂರು ಸರ್ತಿ ಮೇಲಿಂದ ಕೆಳಕ್ಕೆ ಕೆಳಗಿನಿಂದ ಮೇಲಕ್ಕೆ ಅಲೆದು, ಗರುಡಾಚಾರ್ಯನ ಮನೆಯ ಎದುರು ನಿಂತು, ಅವನ ಪುತ್ರ-ಪೌತ್ರ-ಪಿತೃಗಳನ್ನೆಲ್ಲ ಕರೆದು, ದೆವ-ದೇವತೆಗಳನ್ನೆಲ್ಲ ಸಾಕ್ಷಿಗೆಳೆದು, ಹಿಡಿಹಿಡಿ ಶಾಪ ಹಾಕಿ, ತಿರುಗಿ ತನ್ನ ಮನೆಗೆ ಬಂದು “ಢರ್ರೋ” ಎಂದು ಮರದ ಹೆಬ್ಬಾಗಿಲನ್ನು ಎಳೆದುಕೊಂಡು ಮಲಗುವುದು ಪದ್ಧತಿ. ಅದರಲ್ಲೂ ಅಮಾಸೆ ಹುಣ್ಣಿಮೆಗಳು ಹತ್ತಿರವಾದಂತೆ ಅವಳ ಶಪಿಸುವ ಚಟ ಉಬ್ಬರಕ್ಕೇರುತ್ತದೆ. ಅಗ್ರಹಾರದಲ್ಲಿ ಪ್ರಸಿದ್ಧವಾದ ವಿಷಯ : ಅವಳ ಬಾಗಿಲು, ಅವಳ ತೇಗು. ಏರಡೂ ಈ ತುದಿಯಿಂದ ಆ ತುದಿಗೆ ಕೇಳುತ್ತವೆ. ಅವಳ ಕೀರ್ತಿ ನಾಲ್ಕು ದಿಕ್ಕಿನಲ್ಲಿರುವ ಎಲ್ಲ ಬ್ರಾಹ್ಮಣ ಅಗ್ರಹಾರಗಳಲ್ಲೂ ಹಬ್ಬಿತ್ತು. ಬಾಲವಿಧವೆಯಾದ ಅವಳನ್ನು ಕೆಲವರು ಅವಲಕ್ಷಣದ ಲಕ್ಷ್ಮೀದೇವಮ್ಮನೆಂದು ಕರೆಯುತ್ತಾರೆ. ಅವಳು ಎದುರಾದರೆ ನಾಲ್ಕು ಹೆಜ್ಜೆ ಹಿಂದಕ್ಕೆ ನಡೆದು ಮತ್ತೆ ಪ್ರಯಾಣದಲ್ಲಿ ತೊಡಗುವ ತುಂಟ ಹುಡುಗರನ್ನು ಮತ್ತು ಬ್ರಾಹ್ಮಣರನ್ನು ಅವಳು ಕೋಲು ಬೀಸಿ ಅಟ್ಟುತ್ತಾಳೆ. ಶಾಪ ಹಾಕುತ್ತಾಳೆ. ಆದರೆ ಅವಳ ಮಾತನ್ನು ಯಾರೂ ಎಗ್ಗಿಗೆ ತೆಗೆದುಕೊಳ್ಳುವುದಿಲ್ಲ. ಹುಡುಗರು ಇವಳನ್ನು ಹುಳಿತೇಗಿನ ಲಕ್ಷ್ಮೀದೇವಮ್ಮನೆಂದು ಕರೆಯುತ್ತಾರೆ. ಆದರೆ ಪ್ರಸಿದ್ಧವಾದ ಅವಳ ಹೆಸರು ಅರೆಮರುಳು ಲಕ್ಷ್ಮೀದೇವಮ್ಮನೆಂದು. ಅವಳದ್ದೊಂದು ಪುರಾಣವೆ : ಎಂಟರ ಹುಡುಗಿಗೆ ಮದುವೆ. ಹತ್ತರಲ್ಲಿ ಪತಿ ವಿಯೋಗ. ಹದಿನೆದರಲ್ಲಿ ಅತ್ತೆ-ಮಾವ ಸತ್ತರು. ಅನಿಷ್ಟದ ನಕ್ಷತ್ರದವಳೆಂದು ಅಗ್ರಹಾರ ಜರಿಯಿತು. ಅವಳಿಗಿಪ್ಪತ್ತು ತುಂಬುವುದರೊಳಗೆ ಅವಳಪ್ಪ ಅಮ್ಮನೂ ’ಗುಟುP’ ಎಂದು ಬಿಟ್ಟರು. ಆಯಿತ? ಆಮೇಲೆ ಅವಳಿಗಿದ್ದ ಒಂದಿಷ್ಟು ಆಸ್ತಿ, ನಗ, ಗರುಡಾಚಾರ್ಯನ ತಂದೆ ವಹಿಸಿಕೊಂಡ. ತನ್ನ ಮನೆಗೇ ಅಜ್ಜಿಯನ್ನು ಕರೆಸಿಕೊಂಡು ಸಾಕಿದ. ಅವನದ್ದೆಲ್ಲ ಇಂಥದೇ ಕಾರುಭಾರು. ನಾರಣಪ್ಪನ ತಂದೆಗೆ ವಿವೇಕ ಅಷ್ಟಷ್ಟರಲ್ಲೇ ಎಂದು ಅವನ ಆಸ್ತಿಯ ವಹಿವಾಟನ್ನೂ ಹೀಗೆಯೇ ನಡೆಸಿದ್ದ. ಹೀಗೆ ಇಪ್ಪತ್ತೆದು ವರ್ಷ ಲಕ್ಷ್ಮೀದೇವಮ್ಮ ಕಾಲಯಾಪನ ಮಾಡಿದಳು. ಆಮೇಲೆ ತಂದೆ ಸತ್ತ ಮೇಲೆ ಗರುಡನ ಕಾರುಭಾರು ಪ್ರಾರಂಭವಾಯಿತು. ಅವನ ಹೆಂಡತಿಯೋ : ಅರೆಹೊಟ್ಟೆ ಊಟ ಹಾಕುವ ಜಿಪುಣಿ. ಲಕ್ಷ್ಮೀದೇವಮ್ಮನಿಗೂ ಅವಳಿಗೂ ಕಟಿಪಿಟಿ ಹತ್ತಿ ಕೆ ಕೆಯೂ ಆಯಿತು. ಗಂಡ ಹೆಂಡತಿ ಸೇರಿ ಲಕ್ಷ್ಮೀದೇವಮ್ಮನನ್ನು ಹೊರಗೆ ಹಾಕಿದರು. ಹಾಳುಬಿದ್ದ ಅವಳ ಗಂಡನ ಮನೆಗೆ ತಳ್ಳಿದರು. ಅಂದಿನಿಂದ ಒಂಟಿಯಾಗಿ ಅಲ್ಲಿ ಲಕ್ಶ್ಮೀದೇವಮ್ಮನ ವಾಸ, ವಸತಿ. ಪ್ರಾಣೇಶಾಚಾರ್ಯರ ಹತ್ತಿರ ಲಕ್ಷ್ಮೀದೇವಮ್ಮ ದೂರು ಒಯ್ದಳು. ಅವರು ಗರುಡನನ್ನು ಕರೆಸಿ ಬೋಧಿಸಿದರು. ಆಮೇಲಿನಿಂದ ಅವ ಅವಳಿಗೆ ತಿಂಗಳಿಗೊಂದು ರೂಪಾಯಂತೆ ಕೊಡುತ್ತ ಬಂದ. ಆ ದುಡ್ಡು ಅವಳಿಗೆ ಯಾವ ಮೂಲೆಗೂ ಸಾಲದು. ಹೀಗಾಗಿ ತನ್ನ ನಗ ನಾಣ್ಯವನ್ನು ನುಂಗಿದವನ ಮೇಲೆ ವಿಷವಾದಳು. ಪ್ರಾಣೇಶಾಚಾರ್ಯರು ಆಗಾಗ್ಗೆ ಅಗ್ರಹಾರದ ಬ್ರಾಹ್ಮಣರಿಗೆಲ್ಲ ಬುದ್ಧಿ ಹೇಳಿ ಅವಳಿಗಿಷ್ಟು ಅಕ್ಕಿ ಕೊಡಿಸುತ್ತಾರೆ. ಆದರೂ ಲಕ್ಷ್ಮೀದೇವಮ್ಮನಿಗೆ ವಯಸ್ಸಾಗುತ್ತ ಬಂದಂತೆ ಮಾನವ ದ್ವೇಷ ನಂಜಿನಂತೆ ಏರುತ್ತ ಹೋಯಿತು. ಲಕ್ಷ್ಮೀದೇವಮ್ಮ ತೇಗುತ್ತ ಗರುಡಾಚಾರ್ಯನ ಮನೆಯ ಮುಂದೆ ನಿಂತು ನಿಯತಿಯಂತೆ ತನ್ನ ಬೆಗಳನ್ನು ಪ್ರಾರಂಭಿಸಿದಳು: “ನಿನ್ನ ಮನೆ ಹಾಳಾಗ; ನಿನ್ನ ಕಣ್ಣು ಹೊಟ್ಟಿ ಹೋಗ; ಊರು ಹಾಳು ಮಾಡಿದವನೇ, ನಾರಣಪ್ಪನ ತಂದೆಯ ಮೇಲೆ ಮಾಟಮಾಡಿಸಿದ ಮುಂಡೇಗಂಡಾ. ಮರ್ಯಾದೆ ಇದ್ದರೆ ಎದ್ದು ಬಾರೊ. ಬಡಮುಂಡೆಯ ನಗನಾಣ್ಯವನ್ನು ನುಂಗಿದೆಯಲ್ಲ? ದಕ್ಕುತ್ತೆಂದು ತಿಳಿದ್ಯಾ? ಸತ್ತಮೇಲೆ ಭೂತವಾಗಿ ನಿನ್ನ ಮನೆ ಮಕ್ಕಳನ್ನ ಕಾಡುವವಳು ನಾನು-ತಿಳೀತ?” ಉಸಿರೆಳೆದು ತೇಗಿ ಮತ್ತೆ ಪ್ರಾರಂಭಿಸಿದಳು : “ನಿನ್ನ ಕೃತ್ರಿಮದಿಂದ ಬಂಗಾರದಂಥ ನಾರಣಪ್ಪ ಚಾಂಡಾಲನಾದ. ಸೂಳೇನ ಕಟ್ಟಿಕೊಂಡ. ನಾವು ಬ್ರಾಹ್ಮಣರು ನಾವು ಬ್ರಾಹ್ಮಣರು ಅಂತ ಹೇಳತಿರೋರೆಲ್ಲ ಈಗ ಅವನ ಹೆಣಾನ್ನ ತೆಗೀದೇ ಕೂತಿದೀರಲ್ಲೋ. ಎಲ್ಲಿಗೆ ಹೋಯಿತೋ ನಿಮ್ಮ ಬ್ರಾಹ್ಮಣ್ಯ? ಚಾಂಡಾಲರ-ರೌರವ ನರಕಕ್ಕೆ ನೀವು ಬಿದ್ದು ಸಾಯ್ತೀರಿ, ತಿಳೀತ? ಈ ಅಗ್ರಹಾರದಲ್ಲೆ ನಾನು ಕಂಡ ಹಾಗೆ ಒಂದು ಹೆಣವನ್ನು ರಾತ್ರೆಯೆಲ್ಲ ಸಂಸ್ಕಾರಮಾಡದೆ ಇಟ್ಟು ಕೊಂಡದ್ದು ಉಂಟ? ರಾಮ ರಾಮಾ! ಕಾಲ ಕೆಟ್ಟಿತಪ್ಪ ಕೆಟ್ಟಿತು. ಬ್ರಾಹ್ಮಣ್ಯ ನಾಶವಾಯಿತು. ತಲೆ ಬೋಳಿಸಿಕೊಂಡು ಮುಸಲ್ಮಾನರಾಗಿರಿ. ನಿಮಗ್ಯಾಕೆ ಬ್ರಾಹ್ಮಣ್ಯ?” ಎಂದು ಕೋಲನ್ನು ನೆಲಕ್ಕೆ ಕುಟ್ಟಿ ಮತ್ತೆ ಉಸಿರೆಳೆದು ’ಹೇಂii’ ಎಂದು ತೇಗಿದಳು.ಅಯ್ಯಯ್ಯೋ ಎಂದು ಶ್ರೀಪತಿ ನಾರಣಪ್ಪನ ಮನೆ ಜಗುಲಿಯಿಂದ ಬಾಗಿಲನ್ನು ಹಾಕಿಕೊಳ್ಳಲೂ ಮರೆತು, ಜಿಗಿದು ಬೀದಿಯಲ್ಲಿ ಓಡಿದ. ಙ್ನ ನೋಡಿರೋ ನೋಡಿರೋ ನೋಡಿರೋ ನಾರಣಪ್ಪನ ಪ್ರೇತ, ಪ್ರೇತ ಎಂದು ಅರೆಮರುಳು ಲಕ್ಷ್ಮೀದೇವಮ್ಮ ಪ್ರತಿಮನೆಯ ಕದ ತಟ್ಟಿ ಸಾರುತ್ತ ಕೋಲೂರಿಕೊಂಡು ಓಡಿದಳು. ಜೀವವನ್ನು ಕೆಯಲ್ಲಿ ಹಿಡಿದು ಹೊಳೆ ಹಾಯ್ದು ಶ್ರೀಪತಿ ಪಾರಿಜಾತಪುರದ ನಾಗರಾಜನ ಮನೆಗೆ ಓಡಿದ. ಓಡಿಹೋದವ ಶ್ರೀಪತಿಯೆಂದು ತಿಳಿದವಳೆಂದರೆ ಪ್ರಾಣೇಶಾಚಾರ್ಯರ ಜಗುಲಿಯ ಮೇಲೆ ಮಲಗಿದ್ದ ಚಂದ್ರಿ. ಹಸಿವಿನಿಂದ ಅವಳಿಗೆ ನಿದ್ದೆ ಹತ್ತಿರಲಿಲ್ಲ. ಅವಳು ಜನ್ಮೇಪಿ ಉಪವಾಸ ಮಾಡಿದವಳಲ್ಲ; ಒಂಟಿಯಾಗಿ ಜಗಲಿ ಮೇಲೆ ಮಲಗಿದವಳಲ್ಲ; ಕೊಂದಾಪುರದ ಮನೆ ಬಿಟ್ಟು ನಾರಣಪ್ಪನನ್ನು ಕೂಡಿದಮೇಲೆ , ಸದಾ ಊದುಬತ್ತಿಯಿಂದ ಗಮಗಮಿಸುವ ಕೋಣೆಯಲ್ಲಿ ಸುಪ್ಪತ್ತಿಗೆ ಮೇಲೆ ಸುಖಿಸಿದವಳು. ಈಗ ಹಸಿವು ತಾಳಲಾರದೆ ಎದ್ದು ಹಿತ್ತಲಿನ ದಾರಿಯಿಂದ ತಮ್ಮ ತೋಟಕ್ಕೆ ಹೋದಳು. ಹಣ್ಣಾಗಲೆಂದು ಅವಿತಿಟ್ಟಿದ್ದ ರಸಬಾಳೆಗೊನೆಯನ್ನು ತೆಗೆದು ಹೊಟ್ಟೆ ತುಂಬುವಷ್ಟು ತಿಂದಳು. ನದಿಗೆ ಹೋಗಿ ನೀರು ಕುಡಿದಳು. ತನ್ನ ಮನೆಗೆ ಹೋಗಲು ಭಯವಾಯಿತು-ಅವಳು ಹುಟ್ಟಿದಮೇಲೆ ಶವದ ಮುಖ ನೋಡಿದವಳಲ್ಲ. ಒಂದು ವೇಳೆ ನಾರಣಪ್ಪನ ಶವದ ಸಂಸ್ಕಾರವಾಗಿಬಿಟ್ಟಿದ್ದರೆ ಅವನ ಮೇಲಿದ್ದ ಎಲ್ಲ ಪ್ರೀತಿಯೂ ಉಕ್ಕೇರಿಬಂದು ಮನಸಾರೆ ಅತ್ತುಬಿಡುತ್ತಿದ್ದಳು. ಈಗ ಭೀತಿಯೊಂದೇ ಅವಳ ಹೃದಯದಲ್ಲಿ. ಭೀತಿ ಮತ್ತು ಕಳವಳ. ನಾರಣಪ್ಪನಿಗೆ ಉಚಿತ ರೀತಿಯಲ್ಲಿ ಶವಸಂಸ್ಕಾರವಾಗದಿದ್ದರೆ ಅವನು ಪ್ರೇತವಾಗಿಬಿಡಬಹುದು. ಅಲ್ಲದೆ ಅವನ ಕೂಡ ಹತ್ತು ವರ್ಷದ ಸುಖವುಂಡು ಈಗ ಅವನ ಶವಕ್ಕೆ ತಕ್ಕ ಸಂಸ್ಕಾರ ಮಾಡಿಸದಿದ್ದರೆ…ಮನಸ್ಸು ಒಪ್ಪುವುದಿಲ್ಲ. ನಾರಣಪ್ಪ ಬ್ರಾಹ್ಮಣ್ಯ ಬಿಟ್ಟ-ನಿಜ. ಮುಸಲ್ಮಾನರ ಜೊತೆ ಊಟಮಾಡಿದ. ತಾನೂ ಮಾಡಿದೆ. ಆದರೆ ತನಗೆ ಅಡ್ಡಿಯಿಲ್ಲ, ದೋಷತಟ್ಟುವುದಿಲ್ಲ. ಸೂಳೆಯಾಗಿ ಹುಟ್ಟಿದ ತಾನು ಈ ನಿಯಮಕ್ಕೆಲ್ಲ ವಿನಾಯಿತಿ; ವೆಧವ್ಯವಿಲ್ಲದ ನಿತ್ಯಮುತ್ತೆದೆ. ಹರಿಯುವ ಹೊಳೆಗೆ ದೋಷವುಂಟೆ? ಬಾಯಾರಿಕೆಗೂ ಸೆ, ಮೆಯ ಮಲ ತೊಳೆಯಲಿಕ್ಕೂ ಸೆ, ದೇವರ ತಲೆಯ ಅಭಿಷೇಕಕ್ಕೂ ಸೆ, ಎಲ್ಲದಕ್ಕೂ ’ಹೂ’; ’ಊಹೂ’ ಎಂಬೋದೇ ಇಲ್ಲ, ನನ್ನ ಹಾಗೆ. ಬತ್ತುವುದಿಲ್ಲ; ಬಾಡುವುದಿಲ್ಲ. ಎರಡು ಹೆತ್ತರೆ ಸಾಕು; ಬಚ್ಚುಗಲ್ಲದ ಗುಳಿಕಣ್ಣಿನ ಬ್ರಾಹ್ಮಣ ಹೆಂಗಸರಂತೆ ತನ್ನ ಮೊಲೆ ಜೋತುಬಿದ್ದಿಲ್ಲ. ತಾನು ಬತ್ತದ, ಬಾಡದ, ಬಳಲದ, ಜಳಜಳ ತುಂಗೆ. ಹತ್ತು ವರ್ಷ ಮಗುವಿನಂತೆ ಉಂಡ. ಜೇನಿನ ಗೂಡಿಗೆಂದು ಬರುವ ಆಸೆಬುರುಕ ಕರಡಿಯಂತೆ ಹರಿದು ಉಂಡ. ಕೆಲವೊಮ್ಮೆ ರೋಷದ ಪಟ್ಟೆಹುಲಿಯ ಹಾಗೆ ಕುಣಿದ. ಈಗ ಅವನಿಗೊಂದು ಸಂಸ್ಕಾರವಾಗಿಬಿಡಲಿ ಸಾಕು, ಕುಂದಾಪುರಕ್ಕೆ ಹೊರಟು ಹೋಗುತ್ತೇನೆ. ಅಲ್ಲಿ ಕೂತು ಮನಸಾರೆ ಅತ್ತುಬಿಡುತ್ತೇನೆ. ಈ ಬ್ರಾಹ್ಮಣರ ಕೆಯಿಂದಲೇ ಮಾಡಿಸಬೇಕು. ನಾರಣಪ್ಪ ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ಅವನನ್ನು ಬಿಟ್ಟಿತೆ? ಕಡುಕೋಪಿ, ಹತವಾದಿ, ಹುಚ್ಚ-ಬಹಿಷ್ಕಾರ ಹಾಕಿಸಿದರೆ ಮುಸಲ್ಮಾನನಾಗಿ ಬಿಡುತ್ತೇನೆಂದು ಲಾಗಹಾಕಿ ಕುಣಿದವ. ಆಂತರ್‍ಯದಲ್ಲಿ ಏನಿತ್ತೋ-ನಾನು ತಿಳಿಯೆ. ಎಷ್ಟೇ ಕುಣಿಯಲಿ, ತನ್ನ ಜೊತೆ ಪ್ರಾಣೇಶಾಚಾರ್ಯರೊಬ್ಬರನ್ನು ಅವನು ನೀಚ ಮಾತಲ್ಲಿ ಹಳಿದಿದ್ದಿಲ್ಲ. ದುಡುಕಿ ಅವತ್ತು ಮಾತಾಡಿದ್ದು ನಿಜ. ಆದರೆ ಒಳಗೊಳಗೇ ನಡುಗಿದ್ದ. ಈಗ ಜಗಳವಾಡಿ ಆಮೇಲೆ ಮರೆತುಬಿಡುವ, ಅಸೂಯೆಯೊಂದೇ ಗಟ್ಟಿಯಾದ ಭಾವವಾದ ತನ್ನಂತಹ ಹೆಂಗಸಿಗೆ ಈ ದ್ವೇಷದ ಆಳ ಯಾವ ಗರುಡಪಾತಾಳಿಗೂ ಸಿಗುವಂಥದಲ್ಲ. ಅವನನ್ನು ಬಂದು ಕೂಡಿದ ಮೊದಮೊದಲು ಬೇಡಿಕೊಂಡೆ: ನನ್ನ ಕೆಯಡಿಗೆ ಊಟ ಮಾಡಬೇಡಿ, ಮಾಂಸ ತಿನ್ನಬೇಡಿ-ನಾ ಬೇಕಾದರೂ ಬಿಟ್ಟುಬಿಡುವೆ; ಹಾಗೆ ಮನಸ್ಸಾದರೆ ಶೆಟ್ಟರ ಮನೆಗೆ ಹೋಗಿ ಮೀನು ತಿಂದು ಬರುವೆ; ಅಗ್ರಹಾರದಲ್ಲಿ ಬೇಡ. ಕೇಳುವ ಮನುಷ್ಯನೋ ಅವ? ಹಟಾಂದರೆ ಹಟ. ಭ್ರಾಂತಿ ಹಿಡಿದ ಅವನ ಹೆಂಡತಿ ಎಂದೂ ಅವನ ಹಟವನ್ನು ತಾಳಿ ತನ್ನ ಹಾಗೆ ಬಾಳುವ ಸಾಹಸವಿದ್ದವಳಲ್ಲ. ತೌರಿಗೆ ಹೋಗಿ, ತನಗೆ ಶಾಪ ಹಾಕಿ ಸತ್ತಳು. ಇನ್ನು ಯಾರಿಗೆ ಬೇಕು ಈ ಗೊಂದಲ? ಸಂಸ್ಕಾರವಾದರೆ ಸಾಕು, ನಮಸ್ಕಾರ ಹಾಕಿ ಹೋಗಿಬಿಡುವೆ. ವಿಚಿತ್ರವೆಂದರೆ, ತನ್ನನ್ನೀಗ ಕೊರೆಯುತ್ತಿರೋ ವಿಷಯವೆಂದರೆ, ಒಂದು ದಿನ ಸಹಿತ ಒಂದು ದೇವರಿಗೂ ಕೆಮುಗಿಯದ ನಾರಣಪ್ಪ ಜ್ವರ ನೆತ್ತಿಗೆ ಏರಿದ್ದೇ ಹೇಗೆ ಹಲುಬಲು ಪ್ರಾರಂಭಿಸಿದ! ಜ್ಞಾನ ತಪ್ಪುವತನಕ ’ಅಮ್ಮ ಭಗವಂತ ರಾಮಚಂದ್ರ ನಾರಾಯಣ’ ಎನ್ನುತ್ತಿದ್ದ. ’ರಾಮಾ ರಾಮಾ’ ಎಂದು ಕಿರುಚಿದ. ಪಾಪಿಯ ಬಾಯಲ್ಲಿ, ಚಾಂಡಾಲನ ಬಾಯಲ್ಲಿ ಬರುವ ಮಾತಲ್ಲ ಅದು. ಅವನ ಒಳಗೆ ಗುಪ್ತವಾಗಿ ಏನು ಇತ್ತೋ ಏನು ಕತೆಯೋ ನನ್ನ ಆಳಕ್ಕೆ ತಿಳಿಯಲಿಲ್ಲ. ಈಗ ಶಾಸ್ತೋಕ್ತ ವಿಧಿಯಾಗದಿದ್ದಲ್ಲಿ ಖಂಡಿತ ಪ್ರೇತವಾಗುತ್ತಾನೆ. ಅವನ ಉಪ್ಪುಂಡ ನಾನು… ಎಲ್ಲ ಪ್ರಾಣೇಶಾಚಾರ್ಯರ ಮೇಲೆ ನಿಂತಿದೆ. ಎಂತಹ ಸೌಮ್ಯ, ಕರುಣೆ. ಮೇಳದವರ ಆಟದಲ್ಲಿ ದ್ರೌಪದಿ ಕರೆದಾಗ ನಗುನಗುತ್ತ ಬರುವ ಶ್ರೀಕೃಷ್ಣನಂತೆ ಏನು ರೂಪ, ಏನು ನಿಲುವು, ಏನು ತೇಜ. ಪಾಪ ಅವರಿಗೆ ಮೆಸುಖವೇನೆಂದು ಗೊತ್ತೇ ಇರಲಿಕ್ಕಿಲ್ಲ. ಒಣಗಿದ ಕಟ್ಟಿಗೆ ಹಾಗೆ ಬಿದ್ದಿರುತ್ತಾರೆ ಅವರ ಹೆಂಡತಿ-ಪುಣ್ಯಾತಗಿತ್ತಿ. ಆದರೂ ಏನು ತಾಳ್ಮೆ, ಏನು ವರ್ಚಸ್ಸು, -ಒಂದು ದಿನ ತನ್ನನ್ನ ಕಣ್ಣೆತ್ತಿ ನೋಡಿದವರಲ್ಲ. ಅಮ್ಮ ಹೇಳುತ್ತಿದ್ದಳಲ್ಲ-ಗರ್ಭದಾನಾನ ಸೂಳೆಯರು ಎಂಥವರಿಂದ ಮಾಡಿಸಿಕೋಬೇಕು ಅಂತ-ಅಂತಹ ರೂಪ ಗುಣ ವರ್ಚಸ್ಸು ಆಚಾರ್ಯರದ್ದು. ಪಡೆದು ಬಂದಿರಬೇಕು ಅಷ್ಟೆ, ಅಂಥಾದ್ದು ಒದಗಿಬರೋಕ್ಕೆ…. ರಸಬಾಳೆಯ ಹಣ್ಣನ್ನು ಹೊಟ್ಟೆತುಂಬ ತಿಂದಿದ್ದರಿಂದ ಚಂದ್ರಿಗೆ ಕಣ್ಣು ಬಾಡಿ, ನಿದ್ದೆ ಹತ್ತಿರ ಹತ್ತಿರ ಸುಳಿದು, ಹಾರಿ, ಸುಳಿದು, ಹಾರಿ, ಆಟವಾಡತೊಡಗಿತು. ಪ್ರಾಣೇಶಾಚಾರ್ಯರು ಇನ್ನೂ ಎಚ್ಚರವಾಗಿದ್ದು ನಡುಮನೆಯಲ್ಲಿ ಓಡಾಡುವುದು, ಮಂತ್ರಗಳನ್ನು ಗಟ್ಟಿಯಾಗಿ ಓದುವುದು ನಡುನಡುವೆ ಕಿವಿಗೆ ಬಿದ್ದು-ಅವರು ಎಚ್ಚರವಾಗಿದ್ದಾಗ ತಾನೇನು ನಿದ್ದೆಮಾಡುವುದೆಂದು – ಸೆಳೆಯುವ ನಿದ್ದೆಯನ್ನು ದೂಡುತ್ತ, ಚಿಂತಿಸುತ್ತ, ಚಾವಡಿಯ ಮೇಲೆ ತಲೆಗೆ ಕೆದಿಂಬುಮಾಡಿ, ನಾಚಿಕೆಯಲ್ಲಿ ತೊಡೆಗಳನ್ನು ಹೊಟ್ಟೆಗೆ ಮಡಿಸಿ ಮುದುರಿ ಸೆರಗೆಳೆದು ಮಲಗಿದಳು.ಎಲ್ಲ ತಾಳೆಗರಿ-ಗ್ರಂಥಗಳನ್ನೂ ಆಮೂಲಾಗ್ರ ಶೋಧಿಸಿದ್ದಾಯಿತು: ತನ್ನ ಅಂತರಂಗಕ್ಕೆ ಒಪ್ಪಿಗೆಯಾಗುವಂತಹ ಉತ್ತರ ಮಾತ್ರ ಇಲ್ಲ. ಧರ್ಮಶಾಸ್ತದಲ್ಲಿ ಈ ಸಂದಿಗ್ಧಕ್ಕೆ ತನಗೆ ಸಂಪೂರ್ಣ ಸಮರ್ಪಕವೆನ್ನಿಸುವಂತಹ ಉತ್ತರವಿಲ್ಲವೆಂದು ಒಪ್ಪಿಕೊಳ್ಳಲು ಪ್ರಾಣೇಶಾಚಾರ್ಯರಿಗೆ ಭಯ. ಮಠದ ಉಳಿದ ಪಂಡಿತರು ನಿಮಗೆ ತಿಳಿದಿರೋದು ಇಷ್ಟೇಯೊ ಎಂದು ಮೂದಲಿಸಿದರೆ ಎನ್ನುವ ಅಂಜಿಕೆಯೂ ಅವರನ್ನು ಸುಳಿಯದೇ ಇರಲಿಲ್ಲ. ಸುಧಾ ಪಾಠವಾದ ನಿನ್ನ ಜ್ಞಾನ ಇಷ್ಟೆಯೋ ಎಂದರೆ ಏನು ಹೇಳಬೇಕು. ಏನು ಹೋದರೂ ಮಾನ ಹೋಗಬಾರದು, ಹೋದ ಮಾನ ಹಿಂದಕ್ಕೆ ಬರದು-ಎಂದು ಯೋಚಿಸುತ್ತ ಕೂತು ಮತ್ತೆ ತನ್ನ ಯೋಚನೆಗೆ ನಾಚಿದರು. ಇಂತಹ ಪರಿಸ್ಥಿತಿಯಲ್ಲೂ ನನ್ನ ಖ್ಯಾತಿಯ ಬಗ್ಗೆಯೇ ನಾನು ಯೋಚಿಸುತ್ತಿದ್ದೇನಲ್ಲ, ನನ್ನ ಅಹಂಕಾರಕ್ಕಷ್ಟು ಬೆಂಕಿಯಿಟ್ಟಿತು ಎಂದು ಭಕ್ತಿಯಲ್ಲಿ ಮತ್ತೆ ತಾಳೆಗರಿ-ಗ್ರಂಥಗಳನ್ನು ಬಿಚ್ಚಿ, ಕಣ್ಣು ಮುಚ್ಚಿ ಧ್ಯಾನಿಸಿ ಒಂದು ಓಲೆಯನ್ನು ಭಕ್ತಿಯಿಂದ ಎತ್ತಿ ಓದಿದರು. ಇಲ್ಲ. ಇನ್ನೊಮ್ಮೆ ಕಣ್ಣು ಮುಚ್ಚಿ ಇನ್ನೊಂದು ಓಲೆಯನ್ನು ಹಾಗೆ ಎತ್ತಿದರು. ಇಲ್ಲ. ಅಡಿಗೆಮನೆಯಲ್ಲಿ ಮಲಗಿದ್ದ ಹೆಂಡತಿ ನರಳಿದಳು. ಎದ್ದು ಹೋಗಿ ಆಕೆಯನ್ನು ಎಬ್ಬಿಸಿ ಮೆಗಾನಿಸಿಕೊಂಡು ನಿಂಬೆಹೆಣ್ಣಿನ ರಸದ ಎರಡು ಗುಟುಕನ್ನು ಕುಡಿಸಿದರು. “ನಾರಣಪ್ಪನ ಬದಲು ನಾನೇ ಯಾಕೆ ಕಣ್ಣು ಮುಚ್ಚಬಾರದಿತ್ತೊ! ನನಗೇ ಯಾಕೆ ಸಾವು ಬರಬಾರದೊ! ಮುತ್ತೆದೆಯಾಗಿ…” ಎಂದು ಕೊರಗಿದ ಹೆಂಡತಿಗೆ ’ಒಳಿತು’ ಎನ್ನು ಎಂದು ಸಮಾಧಾನಿಸಿ ಮತ್ತೆ ನಡುಮನೆಗೆ ಬಂದು ಲಾಟೀನಿನ ಬೆಳಕಿನಲ್ಲಿ ಆರ್ತರಾಗೆ ಕುಳಿತರು. ಸನಾತನ ಧರ್ಮದಲ್ಲಿ ಉತ್ತರವಿಲ್ಲವೆಂದರೆ ನಾರಣಪ್ಪನೇ ಗೆದ್ದಂತೆ, ತಾವು ಸೋತಹಾಗೆ. ಮೂಲದಲ್ಲಿರುವ ಪ್ರಶ್ನೆ ನಾರಣಪ್ಪ ಬದುಕಿದ್ದಾಗ ಅವನಿಗೆ ತಾವು ಬಹಿಷ್ಕಾರ ಹಾಕಿಸಲಿಲ್ಲ ಎಂಬುವುದು. ಅದಕ್ಕೆ ಕಾರಣ ಅವನು ಹಾಕಿದ ಬೆದರಿಕೆ. ಆ ಬೆದರಿಕೆಗೆ ಜಗ್ಗಿದಾಗಲೆ ಧರ್ಮಶಾಸ್ತವನ್ನು ಧಿಕ್ಕರಿಸಿದಂತಾಗಿಬಿಟ್ಟಿತು. ಬ್ರಾಹ್ಮಣರ ತಪಃಶಕ್ತಿ ಜಗತ್ತನ್ನು ಆಳುತ್ತಿದ್ದ ಕಾಲದಲ್ಲಿ ಅಂತಹ ಬೆದರಿಕೆಗೆ ಜಗ್ಗಬೇಕಾಗಿರಲಿಲ್ಲ. ಕಾಲ ಕೆಡುತ್ತ ಬಂದಿದ್ದರಿಂದ ತಾನೇ ಇಂತಹ ಸಂದಿಗ್ಧಗಳು ಪ್ರಾಪ್ತವಾಗಿರೋದು…… ಹಾಗೆ ನೋಡಿದರೆ ತಾನು ಮುಸಲ್ಮಾನನಾಗುತ್ತೇನೆಂದು, ಮುಸಲ್ಮಾನನಾಗಿ ಅಗ್ರಹಾರದಲ್ಲಿ ಉಳಿಯುತ್ತೇನೆಂದು ಅವನು ಹಾಕಿದ ಬೆದರಿಕೆಯೊಂದೇ ಕಾರಣವೇ ಬಹಿಷ್ಕಾರ ಹಾಕಿಸದೇ ಇದ್ದುದಕ್ಕೆ? ಇಲ್ಲ. ಮರುಕವೂ ಅದರಲ್ಲಿತ್ತು. ತನ್ನ ಹೃದಯದಲ್ಲಿರುವ ಅಪಾರವಾದ ಕರುಣ… ಎಂಬ ಯೋಚನೆ ಹೊಳೆಯುತ್ತಿದ್ದಂತೆ ಪ್ರಾಣೇಶಾಚಾರ್ಯರು ’ಛೆ, ಛೆ’ ಇದು ಆತ್ಮವಂಚನೆಯೆಂದು ತನ್ನನ್ನು ಜರಿದುಕೊಂಡರು. ಅದು ನಿಷ್ಕಲ್ಮಷ ಮರುಕವಲ್ಲ. ಅದರ ಹಿಂದೆ ಭಯಂಕರವಾದ ಹಟವೂ ಇತ್ತು. ನಾರಣಪ್ಪನ ಹಟಕ್ಕೇನೂ ಬಿಟ್ಟುಕೊಡುವಂತಹ ಹಟವಲ್ಲ ತನ್ನದು : ಅವನನ್ನು ದಾರಿಗೆ ತಂದೇ ತರುತ್ತೇನೆ – ನನ್ನ ಪುಣ್ಯಶಕ್ತಿಯಿಂದ, ತಪಃಶಕ್ತಿಯಿಂದ, ವಾರದಲ್ಲಿ ಮಾಡುವ ಎರಡು ದಿನಗಳ ಒಪ್ಪತ್ತುಗಳಿಂದ, ಅವನನ್ನು ವಿವೇಕಕ್ಕೆಳೆದೇ ಎಳೆಯುತ್ತೇನೆ ಎನ್ನುವ ನನ್ನ ಅದಮ್ಯ ಹಟ. ಈ ಹಟ ತಾಳಿದ ರೂಪ : ನನ್ನ ಪ್ರೇಮದಿಂದ, ಮರುಕದಿಂದ, ತಪಃಶಕ್ತಿಯಿಂದ ನಿನ್ನನ್ನು ದಾರಿಗೆ ಹಚ್ಚುತ್ತೇನೆ ಎನ್ನುವ ಸಂಕಲ್ಪ. ಹಟವೆಷ್ಟು ಪಾಲು, ಕರುಳಿನ ಮರುಕವೆಷ್ಟು ಪಾಲು ಈ ಸಂಕಲ್ಪದಲ್ಲಿ? ತನ್ನ ಸ್ವಭಾವದ ಮೂಲಧರ್ಮ ಮರುಕವೆಂದು ಅನಿಸುತ್ತದೆ. ಈ ದೇಹ ಜರಾಜೀರ್ಣವಾದ ಬಳಿಕ ಕಾಮ ಇದನ್ನು ಬಿಟ್ಟುಹೋಗುತ್ತದೆ. ಆದರೆ ಮರುಕ ಬಿಡುವುದಿಲ್ಲ. ಆದುದರಿಂದ ಮರುಕ ಮಾನವನಿಗೆ ಕಾಮಕ್ಕಿಂತಲೂ ಪ್ರಜ್ವಲವಾದ ಬೇರು ಬಿಟ್ಟ ಪ್ರವೃತ್ತಿ. ಮರುಕ ಹೀಗೆ ಆಳವಾಗಿ ನನ್ನಲ್ಲಿಲ್ಲದಿದ್ದರೆ ಮದುವೆಯಾದಾಗ್ಗಿನಿಂದ ಹಾಸಿಗೆಹಿಡಿದ ಹೆಂಡತಿಯ ಬಗ್ಗೆ ಪಿರಿಪಿರಿ ಎನ್ನಿಸಿ ಪರನಾರೀ ಮೋಹಕ್ಕೆ ಬಲಿಯಾಗದೇ ಇರುತ್ತಿದ್ದೆನೆ? ಇಲ್ಲ. ಮರುಕವೇ ನನ್ನ ಮಾನವ್ಯದ ಬ್ರಾಹ್ಮಣ್ಯದ ರಕ್ಷಣೆ ಮಾಡಿದೆ. ಮರುಕ-ಧರ್ಮ-ಮಾನವ್ಯ-ಬ್ರಾಹ್ಮಣ್ಯ ಎಲ್ಲ ಕಗ್ಗಂಟಾಗಿ ಕಾಡುತ್ತದೆ. ಮೂಲದಲ್ಲಿರುವ ಪ್ರಶ್ನೆ ನಾರಣಪ್ಪ ಯಾಕೆ ಹುಳಿಯಾದ, ವಿಷವಾದ? ಪೂರ್ವಜನ್ಮದ ಪುಣ್ಯವಿಲ್ಲದೆ ಬ್ರಾಹ್ಮಣ್ಯ ಪ್ರಾಪ್ತವಾಗುವುದಿಲ್ಲವೆನ್ನುತ್ತದೆ ಶಾಸ್ತ. ಹಾಗಿದ್ದರೆ ಯಾಕೆ ನಾರಣಪ್ಪ ಕೆಯಾರೆ ತನ್ನ ಬ್ರಾಹ್ಮಣ್ಯವನ್ನ ಚರಂಡಿಗೆ ಎಸೆದ? ಇದು ಆಶ್ಚರ್ಯ. ಕೊನೆಗೂ ನಮ್ಮ ಸ್ವಭಾವಕ್ಕೆ ನಾವು ಶರಣು. ಋಗ್ವೇದದ ಕತೆಯೊಂದು ಪ್ರಾಣೇಶಾಚಾರ್ಯರಿಗೆ ನೆನಪಾಗುತ್ತದೆ: ಆ ಬ್ರಾಹ್ಮಣನಿಗೆ ಜೂಜಿನ ಮೋಹ. ತನ್ನ ಸ್ವಭಾವವನ್ನವನು ಏನಕೇನ ಮೀರಲಾರ. ಒಮ್ಮೆ ಒಂದು ಯಜ್ಞಶಾಲೆಯೊಳಕ್ಕೆ ಕುಲೀನ ಬ್ರಾಹ್ಮಣರು ಯಾರೂ ಅವನನ್ನು ಬಿಡಲಿಲ್ಲ. ಛೀ ಛೀ ಎಂದು ಅಟ್ಟಿಬಿಟ್ಟರು-ನಾಯಿಯನ್ನು ಹೊರಕ್ಕೆ ಅಟ್ಟುವ ಹಾಗೆ. ಅವನು ದೇವದೇವತೆಗಳನ್ನು ಕರೆದು ಅತ್ತ : ದೇವರೇ, ಯಾಕೆ ನನ್ನನ್ನು ನೀನು ಜೂಜುಗಾರನನ್ನಾಗಿ ಮಾಡಿದಿ? ಯಾಕೆ ಇಂತಹ ಮೋಹವನ್ನು ನನಗೆ ಕೊಟ್ಟೆ? ಅಷ್ಟದಿಕ್ಪಾಲಕರೇ ಉತ್ತರ ಹೇಳಿ. ಇಂದ್ರ ಯಮ ವರುಣಾದಿಗಳೇ ಬನ್ನಿ, ಉತ್ತರ ಹೇಳಿ. ಇತ್ತ ಯಜ್ಞಶಾಲೆಯಲ್ಲಿ ಹವಿಸ್ಸನ್ನು ಹಿಡಿದು ದ್ವಿಜರು ಅಗ್ನಿ, ಇಂದ್ರ, ಯಮ, ವರುಣಾದಿಗಳನ್ನು ಕರೆದರು: ಬನ್ನಿ, ನಮ್ಮ ಹವಿಸ್ಸನ್ನು ಸ್ವೀಕರಿಸಿ. ಆದರೆ ದೇವತೆಗಳು ಹೋದದ್ದು ಆ ಜೂಜುಗಾರ ಕರೆದಲ್ಲಿಗೆ. ಆಗ ತಮ್ಮ ಬ್ರಾಹ್ಮಣ್ಯದ ಹಮ್ಮು ತೊರೆದು ದ್ವಿಜರೆಲ್ಲರೂ ಅಲ್ಲಿಗೇ ಧಾವಿಸಬೇಕಾಯಿತು-ಅಧಮನ ಬಳಿಗೆ. ಧರ್ಮದ ಆಂತರ್ಯ ತಿಳಿಯೋದು ಕಠಿಣ. ಮತ್ತೆ ಆ ಮಹಾಪಾಪಿ ಚಾಂಡಾಲ, ಸಾಯುವಾಗ ’ನಾರಾಯಣಾ’ ಎಂದು ಪರಮಪದ ಮುಕ್ತಿಯನ್ನು ಗಿಟ್ಟಿಸಿಕೊಂಡ. ಏಳು ಜನ್ಮಭಕ್ತರಾಗಿ ಹುಟ್ಟುತ್ತೀರೋ, ಮೂರು ಜನ್ಮ ವೆರಿಗಳಾಗಿ ನನ್ನನ್ನು ಬಂದು ಸೇರುತ್ತೀರೋ ಎಂದರೆ ಜಯ-ವಿಜಯರು ವೆರಿಗಳಾಗಿ ಬೇಗ ಪರಮಪದ ಸೇರಲು ಆಶಿಸಿದರಂತೆ. ಪೂಜೆ ಪುನಸ್ಕಾರಾದಿ ಕರ್ಮಗಳಲ್ಲಿ ಗಂಧದ ಹಾಗೆ ತೇಯುವ ನಮ್ಮಂತಹವರ ಬಾಳಿಗೆ ಮುಕ್ತಿ ದೊರೆಯಲು ಜನ್ಮದ ಮೇಲೆ ಜನ್ಮ. ಧರ್ಮದ ಅಂತರಾರ್ಥ ತಿಳಿಯುವುದಿಲ್ಲ. ನಾರಣಪ್ಪನ ಅಂತಃಪ್ರಾಣ ಯಾವ ಸಾಧನೆಯಲ್ಲಿ ತೊಡಗಿತ್ತೋ! ಕುಣಿದು ಕುಪ್ಪಳಿಸಿ ’ಲP’ ಎಂದು ಪ್ರಾಣಬಿಟ್ಟ. ಈ ಸಂದಿಗ್ಧದಲ್ಲಿ ಆಪದ್ಧರ್ಮವೇನೆಂದು ತಿಳಿಯುವ ಶಕ್ತಿಯನ್ನು ದೇವರು ನನಗೆ ಕೊಟ್ಟರೆ… ಪ್ರಾಣೇಶಾಚಾರ್ಯರಿಗೆ ಥಟ್ಟನೆ ಅವ್ಯಕ್ತದಿಂದ ಒಂದು ಸನ್ನೆ ಕಾಣಿಸಿಕೊಂಡ ಹಾಗೆ ಒಂದು ಯೋಚನೆ ಹೊಳೆದು ರೋಮಾಂಚಿತರಾದರು. ಬೆಳಿಗ್ಗೆ ಎದ್ದು ಸ್ನಾನಾದಿಗಳನ್ನು ಮಾಡಿ ಹೋಗಿ ಮಾರುತಿಯನ್ನು ಕೇಳುವುದು : ವಾಯುಪುತ್ರ, ಏನು ಸರಿ ಇಂತಹ ಸಂದಿಗ್ಧದಲ್ಲಿ? ಗೆಲುವಾಗಿ ಒಳಮನೆಯಲ್ಲಿ ಅತ್ತಿಂದಿತ್ತ ತಿರುಗಿದರು. ಛೆ, ಪ್ರಾಯದ ಹೆಣ್ಣುಮಗಳೊಬ್ಬಳು ಚಾಪೆ ಇಲ್ಲದೆ ಚಾವಡಿಯಲ್ಲಿ ಮಲಗಿದ್ದಾಳಲ್ಲ ಎಂದು ಮರುಕವಾಗಿ ಒಂದು ಹೊದಿಕೆ, ಚಾಪೆ, ದಿಂಬನ್ನು ತಂದು ಹೊರಗೆ ಬಂದು ’ಚಂದ್ರೀ’ ಎಂದರು. ತನ್ನ ತಾಯಿ ಹೇಳಿದ್ದ ಮಾತನ್ನು ನೆನೆಯುತ್ತಿದ್ದ ಚಂದ್ರಿ ಧಿಗ್ಗನೆ ಎದ್ದು ಕೂತು, ನಾಚಿಕೆಯಿಂದ ತಲೆಯ ಮೇಲೆ ಸೆರಗೆಳೆದುಕೊಂಡಳು. ಕತ್ತಲೆಯಲ್ಲಿ ಹೀಗೆ ಹೆಣ್ಣೊಬ್ಬಳ ಎದುರು ನಿಂತಿರುವುದು ಅಸಮಂಜಸವೆನ್ನಿಸಿ ಪ್ರಾಣೇಶಾಚಾರ್ಯರು ’ಈ ಚಾಪೆ ದಿಂಬುಗಳನ್ನು ತಗೊ’ ಎಂದು ತಿರುಗಿದರು. ಚಂದ್ರಿಗೆ ಮಾತೇ ಬರಲಿಲ್ಲ. ಹೊಸ್ತಿಲು ದಾಟುತ್ತಿದ್ದ ಪ್ರಾಣೇಶಾಚಾರ್ಯರು ನಿಂತು, ಕೆಯಲ್ಲಿ ಹಿಡಿದಿದ್ದ ಲಾಟೀನಿನ ಬೆಳಕಿನಲ್ಲಿ ಮೊಗ್ಗಿನ ಹಾಗೆ ಸಂಕೋಚದಿಂದ ಕೂತ ಹೆಣ್ಣನ್ನು ಕಂಡು, ಮಾರುತಿಯ ಅಪ್ಪಣೆ ಪಡೆಯುವ ತಮ್ಮ ನಿರ್ಧಾರವನ್ನು ಗೆಲುವಿನಿಂದ ತಿಳಿಸಿ ನಡುಮನೆಗೆ ಹೋದರು. ಒಳಗೆ ಬಂದಾಕ್ಷಣ ಥಟ್ಟನೆ ಇನ್ನೊಂದು ಯೋಚನೆ ಅವರಿಗೆ ಹೊಳೆಯಿತು. ಚಂದ್ರಿ ಬಿಚ್ಚಿಕೊಟ್ಟಿದ್ದ ಆಭರಣಗಳ ಗಂಟನ್ನು ಮತ್ತೆ ಹೊರಗೆ ತಂದು ’ಚಂದ್ರೀ’ ಎಂದರು. ಚಂದ್ರಿ ಮತ್ತೆ ಚಂಗನೆ ತವಕದಿಂದ ಎದ್ದು ಕೂತಳು. “ಇಕೊ ಚಂದ್ರಿ, ನಿನ್ನ ಔದಾರ್ಯದಿಂದ ಶವಸಂಸ್ಕಾರದ ಪ್ರಶ್ನೆ ಇನ್ನಷ್ಟು ಕಠಿಣವಾಗಿಬಿಟ್ಟಿತು. ಆಪದ್ಧರ್ಮದ ಪ್ರಕಾರ ನಡೆದುಕೊಳ್ಳೋದು ಬ್ರಾಹ್ಮಣರ ಕರ್ತವ್ಯ. ಈ ಬಂಗಾರ ನಿನ್ನಲ್ಲೆ ಇರಲಿ. ಅವನು ತೀರಿಹೋದ ಮೇಲೆ ಪಾಪ ನಿನ್ನ ಜೀವನವೂ ಸಾಗಬೇಕಲ್ಲ” ಎಂದು ಅವಳ ಸನಿಯ ಲಾಟೀನು ಹಿಡಿದು ನಿಂತು, ಬೆಳಕಿನಲ್ಲಿ ಬಾಗಿ, ತಮ್ಮ ಮುಖದ ಕಡೆ ಆರ್ತತೆಯಿಂದ ಎತ್ತಿದ ವಿಶಾಲವಾದ ಕಪ್ಪಾದ ಅವಳ ಕಣ್ಣುಗಳನ್ನು ಕರುಣೆಯಿಂದ ನೋಡಿ, ಬಂಗಾರವನ್ನು ಅವಳ ಕೆಮೇಲೆ ಇಟ್ಟು ಒಳಗೆ ಹೋದರು.

ಅಧ್ಯಾಯ : ಏಳು

ದಾಸಾಚಾರ್ಯ ಹಸಿವೆ ತಾಳಲಾರದೆ ಸಂಕಟದಿಂದ ನಾರಾಯಣ ನಾರಾಯಣ ಎನ್ನುತ್ತ, ಉ ಉ ಎಂದು ಹೊಟ್ಟೆಯುಜ್ಜಿಕೊಳ್ಳುತ್ತ, ಹಾಸಿಗೆಯಲ್ಲಿ ಹೊರಳಿದ. ಅವನ ಮಗ ನಿದ್ದೆ ಬರದೆ ತಾಯನ್ನ ಎಬ್ಬಿಸಿದ. ’ಅಮ್ಮ ದುರ್‍ನಾತ, ದುರ್‍ನಾತ’ ಎಂದ. ಹಸಿವಿನ ಸಂಕಟದಲ್ಲಿದ್ದ ದಾಸಾಚಾರ್ಯನಿಗೆ ಯಾವ ನಾತವೂ ಬರಲಿಲ್ಲ. ಆದರೆ ಅವನ ಹೆಂಡತಿ ’ಹೌದಲ್ಲ’ ಎಂದಳು. ’ಇವರೇ, ದುರ್ನಾತ’ ಎಂದು ಗಂಡನನ್ನು ತಟ್ಟಿ ತಟ್ಟಿ ಹೇಳಿದಳು. ’ಬೇಸಗೆ- ಹೆಣ ಕೊಳೆತು, ನಾತ ಇಡೀ ಅಗ್ರಾಹಾರಕ್ಕಡರುತ್ತಿದೆ’ ಎಂದಳು. ಅರೆಮರಳು ಲಕ್ಷ್ಮೀದೇವಮ್ಮ ’ನಾರಣಪ್ಪನ ಪ್ರೇತ ಪ್ರೇತ’ವೆಂದು ಕೂಗಿದ್ದು ಕೇಳಿ ಕಿಟಾರನೆ ಕಿರುಚಿಕೊಂಡಳು. ಶವದ ಪ್ರೇತವೇನಾದರೂ ಅಡ್ಡಾಡುತ್ತ ದುರ್ನಾತ ಹರಡುತ್ತಿದೆಯೋ ಎಂದು ಕಂಪಿಸಿದಳು.ಗುಡಿಯಲ್ಲಿ ದುರ್ನಾತವಾಗಿ ಬೆಳ್ಳಿಗೆ ನಿದ್ದೆ ಬರದೆ ಎದ್ದು ಕೂತಳು. ಕಪ್ಪು ಕತ್ತಲಲ್ಲಿ ಏನೂ ಕಾಣದು. ಹೊರಗೆ ಬಂದಳು. ಹೊಲೆಯ ಹೊಲತಿಯರನ್ನು ಬೆಂಕಿ ಕೊಟ್ಟು ಗುಡಿ ಸುಟ್ಟು ಬೂದಿಯಾಗಿ ಬೂದಿಯಲ್ಲಿ ಬೆಂಕಿಯ ಕಿಡಿ ಗಾಳಿಗೆ ಮಿನುಗುತ್ತಿತ್ತು. ದೂರದ ಪೊದೆಯಲ್ಲೊಂದು ರಾಶಿ ಮಿಣುಕು ಹುಳುಗಳು ಮಿನುಗುತ್ತಿದ್ದುದನ್ನು ಕಂಡು ಮೆತ್ತಗೆ ಅವುಗಳ ಬಳಿ ಹೋಗಿ, ಉಟ್ಟ ತುಂಡನ್ನು ಬಿಚ್ಚಿ, ತಣ್ಣಗಿನ ಗಾಳಿಯಲ್ಲಿ ಹಿತವಾಗಿ ಬೆತ್ತಲೆ ನಿಂತು, ತುಂಡನ್ನು ಜೋಕೆಯಾಗಿ ಬೀಸಿ, ಮಿಣP ಮಿಣಕ್ಕೆಂದು ಬೆಳಕನ್ನು ಚಿಮ್ಮುವ ಮಿಂಚುಹುಳುಗಳನ್ನು ತುಂಡಿನಲ್ಲಿ ಹಿಡಿದು, ದಿಡ ದಿಡ ಓಡಿ ತನ್ನ ಗುಡಿಗೆ ಬಂದು, ಗುಡಿಯಲ್ಲಿ ಅವನ್ನು ಕೊಡವಿದಳು. ಮಿಣP ಮಿಣP ಎಂದು ಅವು ಗುಡಿಯಲ್ಲಿ ಅಸ್ಪಷ್ಟವಾದ ಬೆಳಕನ್ನು ಮಾಡುತ್ತ ಹಾರಾಡಿದುವು. ಬೆಳ್ಳಿ ಕೆಯಲ್ಲಿ ನೆಲವನ್ನು ಪರದಾಡುತ್ತ ಹುಡುಕಿದಳು. ನರಳುತ್ತಿದ್ದ ಅವಳ ಅಪ್ಪ ಅಮ್ಮ ಬೆಳ್ಳಿಯ ಬಳಚುವ ಕೆ ತಗಲಿ ’ಇಶ್ಶಿ! ಈ ಹೊತ್ತಲ್ಲಿ ಈ ಕುರ್ದೆಯೇನು ಮಾಡ್ತಿದೆ’ ಎಂದು ಗೊಣಗಿದರು. ’ಇಲಿ ಸತ್ತು ದುರ್ನಾತ-ಇಶ್ಶಿ’ ಎಂದು ಬೆಳ್ಳಿ ತಡಕಾಡಿ, ಮೂಲೆಯಲ್ಲಿ ತಣ್ಣನೆ ಕೊರೆಯುತ್ತಿದ್ದ ಇಲಿಯನ್ನು ಮಿಣುಕುಹುಳುಗಳ ಬೆಳಕಲ್ಲಿ ಕಂಡು-’ಅಯಯ್ಯಪಾ’ ಎಂದು ಒದರಿ, ಬಾಲದಿಂದ ಅದನ್ನೆತ್ತಿ ಹೊರಗೆಸೆದು ಬಂದು : “ಈ ಪಾಡು ಓಡಲಿಕ್ಕೆ ಸಾಯಲಿಕ್ಕೆ ಏನಾಗಿವೆಯೋ ಈ ಇಲಿಗಳಿಗೆ ರಂಡೆ ಕುರ್ದೆಗಳು”-ಎಂದು ಶಪಿಸಿ, ತುಂಡುಟ್ಟು, ನೆಲಕ್ಕೊರಗಿ ಮಲಗಿ, ನಿದ್ದೆಹೋದಳು.ಹೊಟ್ಟೆಯಲ್ಲಿ ತಪತಪವೆನ್ನುವ ಹಸಿವಿನಿಂದ ನಿದ್ದೆ ಬರದೆ ಕೆಂಗಣ್ಣಾದ ದಾಸಾಚಾರ್ಯ, ವೆಂಕಟರಮಣಾಚಾರ್ಯ, ಶ್ರೀನಿವಾಸಾಚಾರ್ಯ, ಗುಂಡಾಚಾರ್ಯ, ಹನುಮಂತಾಚಾರ್ಯ, ಲಕ್ಷ್ಮಣಾಚಾರ್ಯ, ಗರುಡಾಚಾರ್ಯ, ದುರ್ಗಾಭಟ್ಟ ಬೆಳಿಗ್ಗೆ ಎದ್ದು ಮುಖ ತೊಳೆದು ಅಗ್ರಹಾರಕ್ಕೆಂತಹ ಅನಿಷ್ಟ ಬಂತಪ್ಪ ಎಂದು ನಾರಣಪ್ಪನನ್ನು ಶಪಿಸುತ್ತ ಚಾವಡಿಗೆ ಬಂದರು. ಮನೆಯೊಳಗೆ ದುರ್ನಾತವೆಂದು ಮಕ್ಕಳು ಅಂಗಳದಲ್ಲಿ, ಹಿತ್ತಲಿನಲ್ಲಿ, ಕುಣಿಯುತ್ತಿದ್ದರು. ಹೆಂಗಸರಿಗೆ ಭೀತಿ : ಬೀದಿಯಲ್ಲಿ ಅಲೆಯುವ ನಾರಣಪ್ಪನ ಪ್ರೇತ ಮಕ್ಕಳನ್ನೆಲ್ಲಾದರೂ ಮೆಟ್ಟಿದರೆ ಏನು ಗತಿ? ಒಳಗೆ ಬರಲೊಪ್ಪದ ಮಕ್ಕಳಿಗೆ ಎರಡೆರಡು ಬಾರಿಸಿ ಒಳಕ್ಕೆ ನೂಕಿ ಬಾಗಿಲು ಹಾಕಿದ್ದಾಯಿತು. ಹೀಗೆ ಹಾಡುಹಗಲಿನಲ್ಲಿ ಮನೆಯ ಬಾಗಿಲನ್ನು ಎಂದೂ ಮುಚ್ಚಿದ್ದಿಲ್ಲ. ಹೊಸಲಿಗೆ ರಂಗವಲ್ಲಿಯಿಲ್ಲದೆ, ಅಂಗಳಕ್ಕೆ ಸಗಣಿನೀರಿಲ್ಲದೆ, ಬೆಳಗಾದರೂ ಅಗ್ರಹಾರ ಬೆಳಗಾದಂತೆ ಕಾಣುತ್ತಿರಲಿಲ್ಲ. ಬಿಕೋ ಎನ್ನುತ್ತಿತ್ತು. ಪ್ರತಿ ಮನೆಯ ಕತ್ತಲೆ ಕೋಣೆಯಲ್ಲೆಲ್ಲೊ ಒಂದು ಶವವಿದ್ದಂತೆ ಭಾವ. ಚಾವಡಿಯ ಮೇಲೆ ತಲೆಮೇಲೆ ಕೆ ಹೊತ್ತು ಕೂತ ಬ್ರಾಹ್ಮಣರಿಗೆ ಏನು ಮಾಡಲೂ ಕಾಲೇ ಬಾರದು.
ವೆಂಕಟರಮಣಾಚಾರ್ಯನ ತುಂಟ ಮಕ್ಕಳು ಮಾತ್ರ ತಾಯಿಯ ಆಜ್ಞೆಯನ್ನು ಧಿಕ್ಕರಿಸಿ ಹಿತ್ತಲಿನಲ್ಲಿ ನಿಂತು, ಗುಡುಗುಡು ಎಂದು ಉಗ್ರಾಣದಿಂದ ಹಿತ್ತಲಿಗೆ ಜಿಗಿಯುತ್ತಿದ್ದ ಇಲಿಗಳನ್ನು ಎಣಿಸುತ್ತ ಚಪ್ಪಾಳೆಯಿಡುತ್ತ ಕುಣಿದರು. ಕೊಳಗದಲ್ಲಿ ಅಪ್ಪಯ್ಯ ಭತ್ತವನ್ನು ಅಳೆಯುವಾಗ ಎಣಿಸುವ ಮರ್ಜಿಯಲ್ಲಿ ಅವರ ಲೆಕ್ಕ ನಡೆದಿತ್ತು!
ಲಾಭ ಲಾಭ
ಎರಡೋ ಎರಡು…
ಮೂರೋ ಮೂರು…
ನಾಲ್ಕೋ ನಾಲ್ಕು…
ಐದೋ ಐದು…
ಆರೋ ಆರು…
ಮತ್ತೊಂದೋ ಮತ್ತೊಂದು…
ಬರಲು ತೆಗೆದುಕೊಂಡು ಬಾರಿಸಲು ಬಂದ ತಾಯಿಗೆ “ನೋಡಮ್ಮ ನೋಡು, ಎಂಟೋ ಎಂಟು, ಒಂಬತ್ತೋ ಒಂಬತ್ತು, ಹತ್ತೋ ಹತ್ತು, ಹತ್ತು” ಎಂದು ಚಪ್ಪಾಳೆ ತಟ್ಟಿ ಕುಣಿಯುತ್ತ, “ನೋಡಮ್ಮ ನೋಡು, ಹತ್ತು ಇಲಿ” ಎಂದು ಕೇಕೆಹಾಕಿದರು.
ತಾಯಿ ಅದಕ್ಕೆ ಕುಪಿತಳಾಗಿ :
“ತಿಂದ ಅನ್ನ ನಿಮಗೆ ನೆತ್ತಿಗೇರಿದೆ ಅಲ್ಲವ? ಪ್ರಾರಬ್ಧ ಇಲಿಗಳನ್ನೇನು ಎಣಿಸೋದು?
ಒಳಗೆ ನಡೀರಿ-ಇಲ್ಲವೆ ಬಾಸುಂಡೆ ಬರುವಂತೆ ಥಳಿಸಿ ಬಿಡುತ್ತೇನೆ. ಉಗ್ರಾಣದ ತುಂಬ ಇವೆ ಅನಿಷ್ಟದವು. ಅಕ್ಕಿ ಬೇಳೆಯಲ್ಲೆಲ್ಲ ಅವುಗಳ ಹಿಕ್ಕೆ ತುಂಬಿರುತ್ತದೆ”
ಎಂದು ಗೊಣಗುತ್ತ ಮಕ್ಕಳನ್ನು ಅಟ್ಟಿ ಒಳಗೆ ತಳ್ಳಿ ಕೂಡಿದಳು. ಒಳಗೊಂದು ಇಲಿ ತಟ್ಟನೆ ಪ್ರತ್ಯಕ್ಷವಾಗಿ, ಮಕ್ಕಳು ಆಟದಲ್ಲಿ ಮಾಡುವ ಹಾಗೆ ಸುತ್ತಸುತ್ತ ಸುತ್ತಿ, ಅಂಗಾತ್ತನೆ ಒರಗಿದ್ದನ್ನು ಕಂಡು ಹುಡುಗರು ಹಿರಿಹಿರಿ ಹಿಗ್ಗಿದರು.ಮೆಲ್ಲನೆ ಬ್ರಾಹ್ಮಣರು ತಮ್ಮ ತಮ್ಮ ಚಿಟ್ಟೆಯಿಂದಿಳಿದು, ಮೂಗು ಮುಚ್ಚಿಕೊಂಡು ಪ್ರಾಣೇಶಾಚಾರ್ಯರ ಮನೆಯತ್ತ ನಡೆದರು. ದುರ್ಗಾಭಟ್ಟ ಎಲ್ಲರನ್ನೂ ನಿಲ್ಲಿಸಿ, “ಅರೆಮರುಳು ಅಜ್ಜಿ ಕೂಗಿದ್ದು ನಿಜವಿರಲಿಕ್ಕೂ ಸಾಕಲ್ಲವೇ, ಆಚಾರ್ಯರೇ” ಎಂದ. ಬ್ರಾಹ್ಮಣರೆಲ್ಲ ಅದಕ್ಕೆ ಪುಕ್ಕಾಗಿ ’ಏನೋ ನೋಡುವ’ ಎಂದು ಮೆಲ್ಲಗೆ ನಾರಣಪ್ಪನ ಮನೆಯೆದುರು ಬಂದು ನಿಂತು ತೆರೆದ ಹೆಬ್ಬಾಗಿಲನ್ನು ನೋಡಿ ಭಯಗ್ರಸ್ತರಾದರು. ಅವನ ಹೆಣ ಪ್ರೇತದಂತೆ ಅಲೆಯುತ್ತಿರೋದು ಖಡಾಖಂಡಿತ. ಅವನಿಗೆ ಸಂಸ್ಕಾರವಾಗದಿದ್ದಲ್ಲಿ ಅವ ಬ್ರಹ್ಮರಾಕ್ಷಸನಾಗಿ ಅಗ್ರಹಾರವನ್ನು ಕಾಡೋದು ನಿಶ್ಚಯ. ದಾಸಾಚಾರ್ಯ ನೀರ್ದುಂಬಿದ ಕಣ್ಣುಗಳಿಂದ ಬ್ರಾಹ್ಮಣರನ್ನು ದೂರುತ್ತ ಅಂದ :
“ಬಂಗಾರದ ಆಸೇಲಿ ನಾವು ಕೆಟ್ಟೆವಪ್ಪ. ಹೇಳಲಿಲ್ಲವ ನಾನು? ಅದು ಬ್ರಾಹ್ಮಣ ಶವ, ವಿಧಿಯುಕ್ತ ಶ್ರಾದ್ಧವಾಗದ ಹೊರತು ಪ್ರೇತವಾಗುತ್ತೆ ಅಂತ. ಬಡವನ ಮಾತು ಯಾರ ಎಗ್ಗಿಗೆ ಬರಬೇಕು ಹೇಳಿ. ಈ ಬೇಸಗೇಲಿ ಅದು ಕೊಳೆತು ನಾರದೇ ಇರುತ್ತದ?
ಎಷ್ಟು ದಿನಾಂತ ಉಪವಾಸ ಮಾಡಿ ನಮಗೆ ಸಾಯಲಿಕ್ಕೆ ಸಾಧ್ಯ-ಹೆಣವನ್ನಿಟ್ಟುಕೊಂಡು…”
ಹಸಿವಿನಿಂದ ಕುಪಿತರಾದ ದುರ್ಗಾಭಟ್ಟರು ಅಂದರು :
“ಏನು ಮಾಧ್ವರೋ ನೀವು? ಏನು ಆಚಾರವೋ ನಿಮ್ಮದು? ಇಂತಹ ಸಂದರ್ಭದಲ್ಲೊಂದು ನಿಮ್ಮ ತಲೆಗೆ ಉಪಾಯ ಹೊಳೆಯದೇ ಹೋಯಿತಲ್ಲ.”
ಮೆತ್ತಗಾದ ಗರುಡ :
“ನನ್ನದೇನೂ ಅಡ್ಡಿಯಿಲ್ಲಪ್ಪ, ಪ್ರಾಣೇಶಾಚಾರ್ಯರು ಸೆ ಎಂದರಾಯಿತು, ಏನು. ಬಂಗಾರದ ಪ್ರಶ್ನೆ ಒತ್ತಟ್ಟಿಗಿಟ್ಟುಬಿಡುವ. ಏನು. ಮೊದಲು ಹೆಣವನ್ನ ಸ್ಮಶಾನಕ್ಕೆ ಸಾಗಿಸಿಬಿಡುವ…ಏನು…ನಮ್ಮ ಬ್ರಾಹ್ಮಣ್ಯಾನ ಪ್ರಾಣೇಶಾಚಾರ್ಯರು ರಕ್ಷಿಸಿ ಬಿಟ್ಟರೆ ಸರಿ…” ಎಂದ.
ಎಲ್ಲರೂ ಕೂಡಿ ಪ್ರಾಣೇಶಾಚಾರ್ಯರಲ್ಲಿಗೆ ಹೋಗಿ ನಡುಮನೆಯಲ್ಲಿ ದೆನ್ಯದಿಂದ ನಿಂತರು. ಆಚಾರ್ಯರು ಹೆಂಡತಿಯನ್ನು ಎತ್ತಿ ಹಿತ್ತಲಿಗೆ ಒಯ್ದು ಮೂತ್ರ ಹೊಯ್ಯಿಸಿ, ಮುಖ ತೊಳೆಸಿ, ಔಷಧಿ ಕುಡಿಸಿ ಹೊರಬಂದರು. ನೆರೆದಿದ್ದ ಬ್ರಾಹ್ಮಣರನ್ನು ಕಂಡು ತಾವು ರಾತ್ರೆ ಮಾಡಿದ ನಿರ್ಧಾರವನ್ನು ವಿವರಿಸಿದರು. ಗರುಡ ಆರ್ತಸ್ವರದಿಂದ-“ನಮ್ಮ ಬ್ರಾಹ್ಮಣ್ಯ ತಮ್ಮ ಕೆಯಲ್ಲಿದೆಯಪ್ಪ. ಹೆಣವನ್ನು ತೆಗೆಯಲಿಲ್ಲ ಎಂದೋ, ಏನು, ಅಥವಾ ತೆಗೆದುಬಿಟ್ಟರು ಎಂದೋ, ಏನು, ಒಟ್ಟಿನಲ್ಲಿ ನಮ್ಮ ಮೇಲೆ ಅಪವಾದ ಬರದಂತೆ ರಕ್ಷಿಸಬೇಕು. ಮಾರುತಿಯ ಅಪ್ಪಣೆ ತಾವು ತರೋವರೆಗೆ ನಾವಿಲ್ಲಿ ಕಾದಿರುತ್ತೇವೆ” ಎಂದು ಬ್ರಾಹ್ಮಣರೆಲ್ಲರ ಅಭಿಪ್ರಾಯವನ್ನು ನಿವೇದಿಸಿದ. ಆಚಾರ್ಯರು ಹೊರಟು-“ಮಕ್ಕಳಿಗೆ ಅಡ್ಡಿಯಿಲ್ಲ, ಊಟ ಮಾಡಬಹುದು. ಗೊತ್ತು ತಾನೆ?” ಎಂದರು.
ಕೆಯಲ್ಲಿ ಬುಟ್ಟಿ ಹಿಡಿದು ಅಗ್ರಹಾರದ ವೃಕ್ಷಗಳಿಂದ ಪಾರಿಜಾತ, ಮಲ್ಲಿಗೆ, ಸಂಪಿಗೆ ಹೂಗಳನ್ನು ಕೊಯ್ದು ತುಂಬಿಸಿದರು. ಬುಟ್ಟಿ ತುಂಬ ತುಳಸಿಯನ್ನು ತುಂಬಿಕೊಂಡರು. ಹೊಳೆಯಲ್ಲಿ ಸ್ನಾನಮಾಡಿ, ಒದ್ದೆವಸ್ತ ಉಟ್ಟು, ಯಜ್ಞೋಪವೀತವನ್ನು ಬದಲಾಯಿಸಿ ಕೊಂಡರು. ಹೊಳೆ ದಾಟಿ, ಕಾಡು ಹೊಕ್ಕು ನಡೆದು, ಎರಡು ಮೆಲಿಯಾಚೆ ಅರಣ್ಯದ ಮೌನದಲ್ಲಿ ಪ್ರಶಾಂತವಾಗಿದ್ದ ಮಾರುತಿಯ ಗುಡಿಗೆ ಬಂದರು. ಗುಡಿಯ ಬಾವಿಯಿಂದ ನೀರು ಸೇದಿ, ದಾರಿಯಲ್ಲೆಲ್ಲಾದರೂ ಮೆಲೆಗೆ ತಟ್ಟಿರಬಹುದೆಂದು ಎರಡು ಕೊಡ ನೀರನ್ನು ಸುರಿದುಕೊಂಡರು. ಇನ್ನೊಂದು ಕೊಡ ನೀರೆತ್ತಿಕೊಂಡು ಹೋಗಿ, ಆಳೆತ್ತರದ ಮಾರುತಿಯ ವಿಗ್ರಹದ ಮೇಲಿದ್ದ ಒಣಗಿದ ತುಳಸಿ ಪುಷ್ಪಗಳನ್ನು ತೆಗೆದು, ನೀರಿನಿಂದ ಶುಭ್ರವಾಗಿ ತೊಳೆದರು. ನಂತರ ಕೂತು ಒಂದು ಗಂಟೆಕಾಲ ಮಂತ್ರೋಚ್ಚಾರಣೆ ಮಾಡುತ್ತ ಗಂಧವನ್ನು ತೇದರು. ತೇದ ಗಂಧವನ್ನು ಮಾರುತಿಯ ಮೆಗೆ ಹಚ್ಚಿ, ಹೂವು ತುಳಸಿಗಳಿಂದ ಇಡಿಯ ವಿಗ್ರಹವನ್ನು ಶೃಂಗರಿಸಿದರು. ಕಣ್ಣು ಮುಚ್ಚಿ ಧ್ಯಾನಿಸಿ, ತಮ್ಮ ಮನಸ್ಸಿನ ಸಂಕಟಗಳನ್ನೆಲ್ಲ ನಿವೇದಿಸಿ-“ಆಗಲಿ ಎಂದು ನಿನ್ನ ಆಜ್ಞೆಯಾದರೆ ಬಲಗಡೆಯ ಪ್ರಸಾದವನ್ನು ನೀಡಪ್ಪ; ಶವಸಂಸ್ಕಾರ ನಿಷೇಧವಾದರೆ ಎಡಗಡೆಯ ಪ್ರಸಾದವನ್ನು ದಯಪಾಲಿಸಪ್ಪ. ಅಲ್ಪಮತಿಯಾದ್ದರಿಂದ ಆಪದ್ಧರ್ಮವೇನೆಂದು ಅರಿಯದೆ ನಿನ್ನ ಬಳಿ ಬಂದೆ” ಎಂದು ಕಣ್ಣುಮುಚ್ಚಿದವರು ಭಕ್ತಿಯಿಂದ ಸಂಕಲ್ಪಿಸಿಕೊಂಡು, ನೀಲಾಂಜನದ ಬೆಳಕಿನಲ್ಲಿ ಮಾರುತಿಯನ್ನು ನೋಡುತ್ತ ಕುಳಿತರು.
ಬೆಳಿಗ್ಗೆ ಹತ್ತು ಗಂಟೆಯ ಒಳಗೇ ಭಯಂಕರ ಬಿಸಿಲಾದ್ದರಿಂದ ಗುಡಿಯ ಕತ್ತಲಿನಲ್ಲೂ ಸೆಖೆಯಾಗಿ, ಬೆವರಿ, ಆಚರ್ಯರು ಮತ್ತೊಂದು ಕೊಡ ನೀರು ಸುರಿದುಕೊಂಡು ಒದ್ದೆಮೆಯಲ್ಲಿ ಕೂತರು. “ನಿನ್ನ ಅಪ್ಪಣೆಯಾಗುವವರೆಗೆ ನಾನು ಏಳುವುದಿಲ್ಲ” ಎಂದರು.
ಪ್ರಾಣೇಶಾಚಾರ್ಯರು ಮನೆ ಬಿಟ್ಟ ಕ್ಷಣ, ಉಳಿದ ಬ್ರಾಹ್ಮಣರ ಸಿಡುಕು ಮುಖಗಳನ್ನು ನೋಡಲು ಅಂಜಿದ ಚಂದ್ರಿ, ತಿರುಗಿ ತೋಟಕ್ಕೆ ಹೋಗಿ ಮಡಿಲಿನ ತುಂಬ ರಸಬಾಳೆ ಹಣ್ಣುಗಳನ್ನು ಕಟ್ಟಿಕೊಂಡು, ಹೊಳೆಯಲ್ಲಿ ಶುಭ್ರವಾಗಿ ಸ್ನಾನಮಾಡಿ, ತನ್ನ ಕಪ್ಪು ನುಣುಪು ಕೂದಲಿನ ರಾಶಿಯನ್ನು ಒದ್ದೆಯಾದ ಮೆಮೇಲೆ ಇಳಿಬಿಟ್ಟು, ಮೆಗೆ ಹತ್ತಿದ ಒದ್ದೆ ಸೀರೆಯಲ್ಲಿ ನಡೆದು ಮಾರುತಿಯ ಗುಡಿಯಿಂದ ಸ್ವಲ್ಪ ದೂರದಲ್ಲೊಂದು ಮರಕ್ಕೊರಗಿ ಕೂತಳು. ದೂರದ ಗುಡಿಯಿಂದ ಆಚಾರ್ಯರು ಬಾರಿಸಿದ ಗಂಟೆ ಕಿವಿಗೆ ಬಿದ್ದಿತು. ಗುಡಿಯ ಗಂಟೆಯ ಪವಿತ್ರ ಧ್ವನಿಯಿಂದಾಗಿ ಹಿಂದಿನ ರಾತ್ರೆ ತನ್ನನ್ನು ಅವಾಕ್ಕಾಗಿ ಮಾಡಿದ ಅನುಭವ ಮರುಕೊಳಿಸಿತು. ತನ್ನ ಅಮ್ಮ ಹೇಳಿದ ಮಾತನ್ನು ತಾನು ನೆನೆಯುತ್ತಿರುವಾಗಲೆ ಕತ್ತಲೆಯಲ್ಲಿ ಲಾಟೀನು ಹಿಡಿದು, ಚಾಪೆ ದಿಂಬುಗಳನ್ನು ತಂದು, ಆಚಾರ್ಯರು ಮೃದುವಾಗಿ ’ಚಂದ್ರೀ’ ಎಂದು ಕರೆಯಬೇಕೆ? ಮತ್ತೆ ಥಟ್ಟನೆ ತನಗೀಗ ಮೂವ್ವತ್ತು ತುಂಬಿದೆ, ನಾರಣಪ್ಪನ ಜೊತೆ ಹತ್ತು ವರ್ಷ ಬಾಳಿಯೂ ಸಂತಾನ ಪ್ರಾಪ್ತವಾಗಲಿಲ್ಲ ಎಂದು ಕೊರಗಿದಳು. ಮಗನಿದ್ದಿದ್ದರೆ ಅವನನ್ನೊಬ್ಬ ದೊಡ್ಡ ಸಂಗೀತಗಾರನನ್ನಾಗಿ ಮಾಡಬಹುದಿತ್ತು. ಮಗಳಿದ್ದಿದ್ದರೆ ಭರತನಾಟ್ಯ ಕಲಿಸಬಹುದಿತ್ತು-ಎಲ್ಲ ಇದ್ದೂ ತನಗೆ ಏನೂ ಇಲ್ಲವಾಯಿತು ಎಂದು ಮರಗಳ ಮೇಲೆ ಪುg ಎಂದು ಹಾರಿ ಬಂದು ಕೂತ ಪುಟ್ಟಪುಟ್ಟ ಹಕ್ಕಿಗಳನ್ನು ನೋಡುತ್ತ ಕೂತಳು.

ಅಧ್ಯಾಯ : ಎಂಟು

ದಾಸಾಚಾರ್ಯನಿಗೆ ತಾನಿನ್ನು ಊಟ ಮಡದಿದ್ದರೆ ಸತ್ತುಬಿಡಬಹುದೆಂದು ಭಯವಾಯಿತು. ಉರಿಯುವ ಬೆಂಕಿಗೆ ಹೊಯ್ದ ತುಪ್ಪದ ಹಾಗೆ ಮಕ್ಕಳಿಗೆಂದು ಬೇಯಿಸುತ್ತಿದ್ದ ಗಂಜಿಯ ವಾಸನೆ ಬೇರೆ. ಬಾಯಲ್ಲಿನ ಉಗುಳನ್ನು ತುಪ್ಪಿದ, ನುಂಗಿದ-ಕೊನೆಗೆ ಸಹಿಸಲಾರದೆ ಎದ್ದು ಹೊರಟ. ಯಾರ ಕಣ್ಣಿಗೂ ಬೀಳದಂತೆ ಬಿಸಿಲಿನ ಉರಿಯಲ್ಲಿ ತುಂಗಾನದಿಗೆ ಇಳಿದು ಸ್ನಾನ ಮಾಡಿ, ಪಾರಿಜಾತಪುರಾಭಿಮುಖನಾಗಿ ನಡೆದ. ಸಾಹುಕಾರ ಮಂಜಯ್ಯನ ಚಪ್ಪರದ ನೆರಳಿನಲ್ಲಿ ನಿಂತ. ಹೇಗೆ ಬಾಯಾರ ಹೇಳಿಕೊಳ್ಳೋದು? ಜನ್ಮಾಪಿ ಅವನು ಈ ಅಡ್ಡಪಂಕ್ತಿಯವರ ಮನೆಗಳಲ್ಲಿ ನೀರು ಮುಟ್ಟಿದವನಲ್ಲ. ತತ್ರಾಪಿ ತಾನು ಬ್ರಾಹ್ಮಣಾರ್ಥದಿಂದ ಹೊಟ್ಟೆ ಹೊರೆಯಬೇಕಾದ ಬ್ರಾಹ್ಮಣ. ಉಳಿದವರಿಗೆ ತಿಳಿದರೆ ಏನು ಗತಿ? ಆದರೆ ಯೋಚನೆಗಿಂತ ಶೀಘ್ರವಾಗಿ ಅವನ ಕಾಲುಗಳು ಅವನನ್ನು ಅವಲಕ್ಕಿ ಉಪ್ಪಿಟ್ಟು ತಿನ್ನುತ್ತಿದ್ದ ಮಂಜಯ್ಯನ ಎದುರು ತಂದು ನಿಲ್ಲಿಸಿತು.
“ಓಹೋಹೋ ಬರೋಣಾಗಲಿ, ಆಚಾರ್ಯರೆ. ಏನು ಇತ್ತ ಕಾಲು ಬೆಳಸಿದಿರಲ್ಲ? ಪ್ರಾಣೇಶಾಚಾರ್ಯರೇನಾದರೂ ಒಂದು ನಿರ್ಧಾರಕ್ಕೆ ಬಂದರ-ಏನು ಕತೆ? ಪಾಪ, ಅವನ ಶವ ತೆಗೆಯದ ಹೊರ್ತು ನಿಮಗೆ ಯಾರಿಗೂ ಊಟವಿಲ್ಲ, ಅಲ್ಲವೆ? ಕೂರೋಣಾಗಲಿ, ಆಯಾಸ ಪರಿಹಾರ ಮಾಡಿಕೊಳ್ಳೋಣವಾಗಲಿ. ಇವಳೇ, ಆಚಾರ್ಯರಿಗೆ ಮಣೆ ಹಾಕೇ”
ಎಂದು ಮಂಜಯ್ಯ ಉಪಚರಿಸಿದರು.
ಉಪ್ಪಿಟ್ಟನ್ನೇ ನೋಡುತ್ತ ಧ್ಯಾಸವಿಲ್ಲದವನಂತೆ ದಾಸಾಚಾರ್ಯ ನಿಂತುಬಿಟ್ಟ. ಮಂಜಯ್ಯ ಅವನನ್ನು ಕರುಣೆಯಿಂದ ನೋಡಿದರು:
“ತಲೆ ಸುತ್ತುತ್ತಿದೆಯೆ, ಆಚಾರ್ಯರೇ. ಸ್ವಲ್ಪ ಪಾನಕ ಮಾಡಿಸಲೆ?”
ದಾಸಾಚಾರ್ಯ ಹೂ ಎನ್ನದೆ ಊಹೂ ಎನ್ನದೆ, ಹಾಕಿದ ಮಣೆಯ ಮೇಲೆ ಕುಕ್ಕುರುಗಾಲಿನಲ್ಲಿ ಕೂತು ಯೋಚಿಸಿದ. ಹೇಗೆ, ಹೇಗೆ, ಬಾಯಾರೆ ಕೇಳುವುದು? ಧೆರ್ಯ ತಂದು ಸುತ್ತಿಸುತ್ತಿ ಮಾತಾಡಲು ಪ್ರಾಂಭಿಸಿದ. ಮಂಜಯ್ಯನವರು ಉಪ್ಪಿಟ್ಟನ್ನು ತಿನ್ನುತ್ತ ಕೇಳಿಸಿಕೊಂಡರು.
“ನಿನ್ನೆ ನಮ್ಮವರು ಇಲ್ಲಿ ಆಡಿದ ರೀತಿ ನನಗಂತೂ ಸರಿಬರಲಿಲ್ಲ ಮಂಜಯ್ಯ.”
“ಛೆ ಛೆ ಛೆ, ಹಾಗೆನ್ನಬಾರದು ನೀವು” ಎಂದರು ಮಂಜಯ್ಯ, ವಿನಯಕ್ಕಾಗಿ.
“ಹಾಗೆ ನೋಡಿದರೆ ಈ ಕಲಿಯುಗದಲ್ಲಿ ನಿಜವಾದ ಬ್ರಾಹ್ಮಣರು ಎಷ್ಟು ಜನರಿದ್ದಾರೆ ಹೇಳಿ ಮಂಜಯ್ಯ?”
“ಒಪ್ಪಿದೆ, ಒಪ್ಪಿದೆ ಆಚಾರ್ಯರೇ, ಕಾಲ ಕೆಟ್ಟುಹೋಯಿತು-ನಿಜ.”
“ಯಾಕೆಂದೆನೆಂದರೆ-ನೇಮ-ನಿಷ್ಠೆಯಲ್ಲಿ ಯಾವ ಬ್ರಾಹ್ಮಣರಿಗೆ ನೀವು ಕಡಿಮೇಂತ ನಾನು ಕೇಳೋದು, ಮಂಜಯ್ಯನವರೆ. ಕಾಸು ಕೊಳ್ಳದೆ ಸಂಸ್ಕಾರ ಮಾಡ್ತೀನಿ ಅಂತ ತಾವು ಅಂದರೆ, ನಮ್ಮ ಅಗ್ರಹಾರದ ಗರುಡ, ಲಕ್ಷ್ಮಣ ಕಾಗೆಗಳ ಹಾಗೆ ಬಂಗಾರಕ್ಕೆಂದು ಜಗಳವಾಡುತ್ತಾರೆ…”
“ಅಯ್ಯೊ ಅಯ್ಯೊ, ಅಲ್ಲವೆ?” ಎಂದು ಯಾರ ನಿಷ್ಠುರವನ್ನೂ ಕಟ್ಟಿಕೊಳ್ಳಲು ಆಶಿಸದ ಮಂಜಯ್ಯ ತೇಲಿಸಿ ಆಡಿದರು.
“ಗುಟ್ಟಾಗಿ ನಿಮ್ಮ ಹತ್ತಿರ ಮಾತ್ರ ಒಂದು ಮಾತು, ಮಂಜಯ್ಯ : ಎಲ್ಲಾ ಅಂಬೋದು ಏನು ಅಂದರೆ ಗರುಡ ಮಾಟ ಮಾಡಿಸಿ ಹಾಗೆ ನಾರಣಪ್ಪ ದಾರಿಗೆಟ್ಟ ಅಂತ. ಅದರ ಫಲವಾಗಿ ಈಗ ಅವನ ಸ್ವಂತ ಮಗನೇ ಮಿಲಿಟರಿ ಸೇರಿಬಿಟ್ಟ ಅಂತ. ಆ ಪಾಪದ ಲಕ್ಷ್ಮೀದೇವಮ್ಮನ ನಗನಾಣ್ಯವನ್ನೂ ಮುಟ್ಟುಗೋಲು ಹಾಕಿಬಿಟ್ಟನಲ್ಲ…”
ಮಂಜಯ್ಯನವರಿಗೆ ಸಂತೋಷವಾದರೂ ಮಾತಾಡಲಿಲ್ಲ.
“ಈಗ ಯಾರು ನಿಜವಾದ ಬ್ರಾಹ್ಮಣರಿದ್ದಾರೆ ಎಂಬೋದಕ್ಕೆ ಈ ಮಾತನ್ನಾಡಿದನೆ ಹೊರತು ಗರುಡನ ಮೇಲೇನೂ ನನಗೆ ದ್ವೇಷವಿಲ್ಲ. ವರ್ಷಕ್ಕೊಮ್ಮೆ ಗುರುಗಳ ಹತ್ತಿರ ಪಂಚಮುದ್ರಾಧಾರಣೆ ಮಾಡಿಸಿಕೊಂಡ ಕ್ಷಣ ಎಲ್ಲ ಪಾಪವೂ ಸುಟ್ಟುಬಿಡುತ್ತದ? ತಾವು ಮಾಡದ ಕೆಲಸವನ್ನ ನಿಮ್ಮ ಹತ್ತಿರ ಮಾಡಿಸಬೇಕೆಂದು ಅವರು ಬಗೆದದ್ದು ನನಗೆ ಸರ್ವಥಾ ಒಪ್ಪಿಗೆಯಾಗಲಿಲ್ಲ. ನೀವು ಏನೇ ಹೇಳಿ ಮಂಜಯ್ಯ, ನಿಜವಾದ ಬ್ರಾಹ್ಮಣರೆಂದರೆ ನಮ್ಮ ಪ್ರಾಣೇಶಾಚಾರ್ಯರು. ಅದೇನು ತೇಜಸ್ಸು! ಅದೇನು ತಪಸ್ಸು! ತು, ತು, ತು, ತು…”
*****
ಮುಂದುವರೆಯುವುದು

ಕಾದಂಬರಿಯನ್ನು ಕೀಲಿಕರಿಸಿದವರು ಎಮ್ ಆರ್ ರಕ್ಷಿತ್, ಸೀತಾಶೇಖರ್, ಸಿ ಶ್ರೀನಿವಾಸ್, ಸಹಾಯ: ನಂದಿನಿಶೇಖರ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.