ಸ್ಥಳ ನಾರ್‌ಫೋಕ್. ಅಲ್ಲಿ ನಾನು ಸುದರ್ಶನ್ ಪಾಟೀಲ್ ಕುಲಕರ್ಣಿಯವರ ಕೋಣೆಯಲ್ಲಿ ಉಳಿದುಕೊಂಡಿದ್ದೆ. ಸಾಕಷ್ಟು ‘ಈ ಸಂವಾದದಲ್ಲಿ” (ಚಾಟಿಂಗ್)- ನನ್ನ ಅಭಿರುಚಿಗಳನ್ನು ಅರಿತಿದ್ದ ಅವರು, ಬಿಡುವಾದ ದಿನ “ಬನ್ನಿ, ವಿಡಿಯೊ ಕ್ಯಾಸೆಟ್ ತಂದು ನೋಡುವ” ಎಂದು ಪ್ರಸ್ತಾವನೆಯಿಟ್ಟರು. ಅವರ ಕಾರಿನಲ್ಲಿ ಹತ್ತು ನಿಮಿಷದ ಹಾದಿ ಕಳೆದು, ಅಂಗಡಿಯ ಮುಂದೆ ನಿಂತಾಗ ಅಲ್ಲಿನ ವ್ಯವಸ್ಥಿತ ಅಚ್ಚುಕಟ್ಟುತನಕ್ಕಿಂತಲೂ ನನ್ನನ್ನು ಗೊಂದಲಕ್ಕೆ ಕೆಡವಿದ್ದು: ಯಾವ ಸಿನಿಮಾ ಆಯ್ದುಕೊಳ್ಳಲಿ ಎನ್ನುವುದೇ. ಸಾಕಷ್ಟು, ಆಲೋಚಿಸಿದನಂತರ ಎರಡು ಚಿತ್ರಗಳನ್ನ ಆಯ್ಕೆ ಮಾಡಿದೆ. ಒಂದು: ಕೋಸ್ಟಾಗಾವ್ರಾನ “ಜ಼ಿ” (೧೯೬೯). ಎರಡನೆಯದು: ಜೋಸೆಫ್ ಎಲ್ ಮಾಂಕಾವಿಜ್ ನಿರ್ದೇಶನದ (ಅಂತೋಣಿ ಶಾಫರ್‌ನ ನಾಟಕವನ್ನು ಆಧರಿಸಿದ) “ಸ್ಲೂತ್” (೧೯೭೨).
ಈಗ ನಾನು ಸಿನಿಮಾವನ್ನು ಗ್ರಹಿಸುವ ರೀತಿಯೇ ಬೇರೆ. ಆಗ, ಅಂದರೆ ಮೂವತ್ತು ವರ್ಷಗಳ ಹಿಂದೆ, ಇಂದಿರಾಗಾಂಧಿಯ ತುರ್ತುಸ್ಥಿತಿಯನಂತರದ ಹೊಸ ದಿನಗಳಲ್ಲಿ ಗಾವ್ರಾನ “ಜಿ” ಚಿತ್ರ ಮೂಡಿಸಿದ್ದ ರೋಚಕತೆಯೇ ಬೇರೆ. ಆ ರೋಚಕತೆಯ ನೆನಪುಗಳು ಇನ್ನೂ ಹಸಿರಾಗಿದ್ದರಿಂದಲೇ, ಆ ನೆನಪುಗಳನ್ನು ಯಾರಿಗಾದರೂ ತಟಾಯಿಸುವ ಹಾಗು ಗಾವ್ರಾನ ಚಿತ್ರದ ಪುನರಾವಲೋಕನದ ತುರ್ತು ಇತ್ತಾದ್ದರಿಂದ ಆ ಚಿತ್ರದ ಆಯ್ಕೆ ನನ್ನದಾಗಿತ್ತು. ಮೂವತ್ತು ವರ್ಷಗಳ ಹಿಂದೆ ನೋಡಿದ್ದು ಎನ್ನುವುದನ್ನು ಇಲ್ಲಿ ಒತ್ತಿ ಹೇಳಲು ಇಚ್ಛಿಸುತ್ತೇನೆ. ಜೊತೆಗೆ, ಸುದರ್ಶನ್‌ರಂತಹ ಸೂಕ್ಷ್ಮ ಚಿಂತಕರೂ ಸಹ ಈ ಚಿತ್ರವನ್ನು ನೋಡಿರಲಿ ಎನ್ನುವ ಆಸೆಯೂ ಇತ್ತು. ಕ್ಯಾಸೆಟ್ ತೆಗೆದುಕೊಂಡು ಹೋಗಿ-ಹಾಕಿದನಂತರದ ಹತ್ತು ನಿಮಿಷಗಳಲ್ಲಿ ಸುದರ್ಶನ್ ಅಸ್ವಸ್ಥರಾದಂತೆ ಚಡಪಡಿಸಲಾರಂಭಿಸಿದರು. ಹಾಗೆಯೇ ನಾನೂ ಸಹ. ನನ್ನ ಮಟ್ಟಿಗೆ ಕಾರಣ ಸ್ಪಷ್ಟವಿತ್ತು. ರೋಚಕತೆಯಿಲ್ಲದ ಸನ್ನಿವೇಶದಲ್ಲಿ ಚಿತ್ರವನ್ನು ಗ್ರಹಿಸುವ ರೀತಿಯೇ ಬೇರೆಯದು. ಜೊತೆಗೆ, ಪಾಲಿನ್ ಕೆಯ್ಲ್‌ಳ ವಿಮರ್ಶೆಯೂ ಸೇರಿದಂತೆ ಸಾಕಷ್ಟು ಇತರ ವಿಮರ್ಶೆಗಳು ಚಿತ್ರದ ಬಗೆಗೆ ನನ್ನ ಗ್ರಹಿಕೆಯನ್ನು-ಒಳ ನೋಟಗಳನ್ನು ಬದಲಿಸಿದ್ದವು. ಗಾವ್ರಾನಿಗೆ “ಜಿ”ಗಾಗಿ ಆಸ್ಕರ್ ಬಂದ ಗಳಿಗೆಗಳು ಚಿತ್ರದ ಆಂತರ್ಯಗಳನ್ನು ಬೇರೆ ನಿಟ್ಟಿನಲ್ಲೇ ನೋಡುವಂತೆ ಮಾಡಿದ್ದವು. ಈ ತೆರನಾದ, ವಿಭಿನ್ನ ಗ್ರಹಿಕೆ- ನನಗೆ ಆಶ್ಚರ್ಯ ತರಲಿಲ್ಲ. ಏಕೆಂದರೆ, ಬಹುಶ: ಅಮೇರಿಕ ಸೇರಿಕೊಳ್ಳುವ ಪ್ರಲೋಭನೆ, ನನ್ನ ಕಾಲದಲ್ಲಂತೂ ಈ ಕೋಸ್ಟಾಗಾವ್ರಾನಿಂದಲೇ ಪ್ರಾರಂಭಿಸಿದ್ದು…ಪ್ರಲೋಭನೆಯನ್ನು ಮೀರಲಾಗದೆ ಹೋಗುವ ಸನ್ನಿವೇಶದ ಅಸಾಹಯಕತೆಯ ಬಗೆಗೆ ನನಗೆ ವಿಷಾದವಿದೆ. “ಎಲ್ಲಿಂದಲಾದರೂ ಅಮೆರಿಕದ ಕೊಳ್ಳುಬಾಕತನದ ದುರಹಂಕಾರಕ್ಕೆ” -ಪ್ರತಿರೋಧವಿದ್ದರೆ ಅದು ಆರಂಭವಾಗಿ, ಬೆಳೆದು ಬರಬೇಕಾದ ರಾಷ್ಟ್ರಗಳಿಂದ ಆಗಲೇ ಇಲ್ಲ. ಇನ್ನಂತೂ ಆಗುವುದಿಲ್ಲ ಎನ್ನುವ ದುರಂತದ ಕಲ್ಪನೆ ನನಗಿದ್ದುದರಿಂದ ಕೊಂಚ “ಆಂಟಿ” ಗಾವ್ರಾ (ಚಿಟಿಣi) ಆಗಬೇಕಾದ ಅಗತ್ಯವನ್ನಂತೂ ಮನಗಂಡು ಬಹಳ ಕಾಲವೇ ಆಗಿತ್ತಾದ್ದರಿಂದ, ಗಾವ್ರಾ ತನ್ನ ಚಾರಿಶ್ನ (ಕರಿಶ್ಮ?) ಕಳೆದುಕೊಂಡಿದ್ದ. ನಾನು , ಹೇಳಬೇಕೆಂದಿರುವುದು ನನ್ನ ಪ್ರತಿಕ್ರಿಯೆಯ ಬಗೆಗೆ ಅಲ್ಲ. ನಾನು, ಗಾವ್ರಾನನ್ನು ಬೆಂಬಲಿಸುವುದೋ, ಬಿಡುವುದೋ ಮುಖ್ಯವಲ್ಲ. ಅವನ “ಜಿ” ಚಿತ್ರದ ಸತ್ಯಾಸತ್ಯತೆಯನ್ನು ಮರೆಯಲಾರೆ. ಹೀಗಾಗಿ, ಆ ಚಿತ್ರವನ್ನ ಮತ್ತೂ ಒಮ್ಮೆ ನೋಡಬಲ್ಲೆ.
ಆದರೆ, ನನ್ನ ಕಾಲದ, ರೋಚಕತೆಗಳ ಬಗೆಗೆ -“ಯಾರಿಗೂ ಗೌರವವಿಲ್ಲವಲ್ಲ..”ಎಂದನ್ನಿಸಿದಾಗ ಮನಸ್ಸು ಪಿಚ್ಚೆಂದಾಗುತ್ತದೆ. ಈ ಸಂದರ್ಭದಲ್ಲಿ, ಕನ್ನಡಸಾಹಿತ್ಯ.ಕಾಂನನ್ನು ಯಾವ ವರ್ಗಕ್ಕೆ ಸೇರಿಸಬಹುದು? ಕಳೆದು ಹೋಗುತ್ತಿರುವುದರ ಅತ್ಯುತ್ತಮ ಸಾಹಿತ್ಯವನ್ನ-ಇತ್ತೀಚಿನ ಅತಿಶಿಕ್ಷಿತ “ಅನಕ್ಷರಸ್ಥರ” ಬಳಿಗೆ ಅವರದೇ ಮಾಧ್ಯಮದಲ್ಲಿ ಅವರ ಬಳಿಗೆ ಕೊಂಡೊಯ್ದು, ಇಗೋ ನೋಡಿ, ಎಂದು ತೋರಿಸಬಹುದು. ಸಾಧ್ಯವಿದ್ದಷ್ಟು, ಪ್ರೋತ್ಸಾಹಿಸಬಹುದು…ಹೇಗೆ, ನಾನು ಹಳೆಯದನ್ನು ಮರೆತಿಲ್ಲವೋ, ಹಾಗೆ ಎಲ್ಲರೂ ಹಳೆಯದರ ಬಗೆಗೆ ಗೌರವವಿಟ್ಟುಕೊಳ್ಳಲಿ ಎಂದು ಆಶಿಸಬಹುದು. ಅಲ್ಲೊಂದು ಚೂರು ಇಲ್ಲೊಂದು ಚೂರು ಈ ಬರವಣಿಗೆಯ ತುಣುಕಿನಂತೆ ಮಾತನಾಡುತ್ತಾ ಹೋಗಬಹುದು. ಹಳೆಯಕಾಲದವನ ಪಿಟಿಪಿಟಿ-ಅಸಹಾಯಕನ ಆಕ್ರೋಶ-ಎಂದೆಲ್ಲ ತಟಕ್ಕನೆ ತೀರ್ಮಾನಕ್ಕೆ ಬಂದು ಬಿಡಬೇಡಿ…
ಹೀಗೆ ಇದನ್ನು ಹೇಳುತ್ತ-೧೯೩೬ರ ಸಂತ ತುಕಾರಾಂ ಮರಾಠಿ ಚಿತ್ರದ ಬಗೆಗೆ ಇಲ್ಲಿ ಪ್ರಸ್ತಾಪಿಸ ಬಯಸುತ್ತೇನೆ. ಈ ಚಿತ್ರವನ್ನು ನಾನು ನೋಡಿದ್ದು, ೧೯೭೬ ರ ಸುಮಾರಿಗೆ. ಅಂದರೆ, ಸುಮಾರು, ಇಪ್ಪತ್ತೊಂಬತ್ತು ವರ್ಷಗಳ ಹಿಂದೆ. ಸುಚಿತ್ರಾ ಫಿಲ್ಮ್ ಸೊಸೈಟಿ ಆಯೋಜಿಸಿದ್ದ “ನಾಸ್ಟಾಲಜಿಯ” ಚಿತ್ರೋತ್ಸವದಲ್ಲಿರಬೇಕು. ಅದು ಬಹಳ ಕಾಲ, “ಜೀ” ಚಿತ್ರದಂತೆಯೇ ಮನಸ್ಸಿನಲ್ಲಿ ಉಳಿದುಕೊಂಡಿದೆ. ನಮ್ಮ, ಆರ್ ರೋಹಿತ್, ಪೂನಾದಿಂದ ಬೆಂಗಳೂರಿಗೆ ಬಂದಿದ್ದಾಗ, ಆ ಚಿತ್ರದ ಬಗೆಗೆ ಪ್ರಸ್ತಾಪಿಸಿದ್ದೆ. ಸಾಧ್ಯವಿದ್ದರೆ, ವಿಸಿಡಿ ಕಳುಹಿಸಿಕೊಡಲು ಕೇಳಿದ್ದೆ. ಅವರೂ, ಕಳುಹಿಸಿಕೊಟ್ಟಿದ್ದಾರೆ. ಆದರೆ, ಮೊದಲನೆ ಸಿಡಿ ರವಾನೆಯಲ್ಲೇ ಪೂರ್ತಿ ನಾಶವಾಗಿದೆ. ಮತ್ತೊಮ್ಮೆ ಖರೀದಿಸಿ, ಕಳುಹಿಸಿಕೊಡುತ್ತೇನೆ ಎಂದು ಹೇಳಿದ್ದಾರೆ. ಅದು, ಸಿಕ್ಕಾಗ, ಬಿಡುವಿದ್ದಲ್ಲಿ, ಆ ಚಿತ್ರ ನನ್ನಲ್ಲಿ ಬಹಳ ಕಾಲ ಏಕೆ ಉಳಿದಿದೆ ಎನ್ನುವುದರ ಕುರಿತು ಬರೆಯುತ್ತೇನೆ. ನಿಮಗೆ, ಯಾರಿಗಾದರೂ ಆ ಚಿತ್ರ ಸಿಕ್ಕರೆ ಮರೆಯದೆ ನೋಡಿ. ಬಹುಶ, ಆ ಚಿತ್ರ, ಭಕ್ತಿ ಪಂಥದವರು ಬಿಡಿಸಿಡುವ ಪೌರಾಣಿಕ ನೆಲೆಗಟ್ಟಿನ ಪುರುಷನನ್ನು “ವಾಸ್ತವ ಗತಿಯನ್ನ ಅತ್ಯದ್ಭುತವಾಗಿ” ರೂಪಿಸಿರುವುದಕ್ಕಿರಬಹುದೆ? ಸತ್ಯಜಿತ್ ರಾಯ್‌ರವರ, “ನಿಯೋ ರಿಯಲಿಸಂ” ಗಿಂತಲೂ ಮುಂಚೆಯೆ, ಈ ಚಿತ್ರ “ನಿಯೋ ರಿಯಲಿಸಂ ಅನ್ನು ಯಾವುದೇ ಪೂರ್ವನಿರ್ಧಾರಿತ ಸಿದ್ಧಾಂತಗಳಿಲ್ಲದೆ ಮುಂದಿಟ್ಟಿದ್ದರಿಂದಲೇ? (ಭೈರಪ್ಪನವರ ಪರ್ವ ಕಾದಂಬರಿಯನ್ನ ಈ ನಿಟ್ಟಿನಲ್ಲಿ ನೋಡುವ ಅಭಿಮಾನಿಗಳಿದ್ದಾರೆ..) ಯಾರಾದರೂ, ನೋಡಿದರೆ, ಈ ಅಂಕಣಕ್ಕೆ ಒಂದೆರಡು ಸಾಲು ಬರೆದು ತಿಳಿಸಿ.
*
*
*
-ಸುಮಾರು ಮೂರು-ನಾಲ್ಕು ತಿಂಗಳುಗಳನಂತರ, ಕನ್ನಡಸಾಹಿತ್ಯ.ಕಾಂ ಮತ್ತೆ “ಅಪ್‌ಡೇಟ್” ಆಗಿದೆ. ಹೊಸ ಸ್ವರೂಪವನ್ನು ನೋಡುತ್ತಿದ್ದೀರಿ. ಅಪಾರವಾದ ಶ್ರಮ ಇದಕ್ಕಾಗಿ ವ್ಯಯವಾಗಿದೆ. ಆದರೂ, ಪರವಾಗಿಲ್ಲ-ಈಗ ಎಲ್ಲವನ್ನೂ ಚೊಕ್ಕವಾಗಿ ಸಂಗ್ರಹಿಸಿಡಲಾಗಿದೆ. ಹೀಗಾಗಿ, ಈ ಲೋಪವನ್ನು ಎಲ್ಲರೂ ನುಂಗಿಕೊಳ್ಳುತ್ತೀರ ಎಂದೇ ನನ್ನ ವಿಶ್ವಾಸ. ನಮ್ಮ ಸಾಹಿತ್ಯ.ಕಾಂ ಬಳಗಕ್ಕೆ ಹೊಸ ಲೇಖಕಿಯೊಬ್ಬರು ಸೇರ್ಪಡೆಯಾಗಿದ್ದಾರೆ. ಸುಮಂಗಲಾ ಮೂಲತಃ ಸಾಗರದವರು; ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮಾಡಿದ ನಂತರ ಕೆಲವು ವರ್ಷ ಬಿಜಾಪುರದ ಸಿಂದಗಿಯ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ. ಈಗ ಮುದ್ದು ಮಗನೊಂದಿಗೆ ಬೆಂಗಳೂರಿನಲ್ಲಿ ವಾಸ ಮತ್ತು ‘ಮಾಯಾ’ ಸಂಸ್ಥೆಯಲ್ಲಿ ಕೆಲಸ. ಮೊದಲ ಕಥಾ ಸಂಕಲನ – “ಸೀತಾಳೆ ಹೂ ಮತ್ತು ಇತರ ಕಥೆಗಳು’ ಬಾಗಲಕೋಟೆ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯಿಂದ ಹೊರತರಲಾಗಿದೆ. ವಿಜಯ ಕರ್ನಾಟಕ -ಅಂಕಿತ ಪುಸ್ತಕ ಯುಗಾದಿ ಕಥಾ ಸ್ಪರ್ಧೆಯಲ್ಲಿ ಮೂರು ವರ್ಷ ಬಹುಮಾನ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಕಳೆದ ಜನವರಿಯಲ್ಲಿ “ಛಂದ ಪುಸ್ತಕ” ಪ್ರಕಾಶನದಿಂದ ಹನ್ನೆರಡು ಕಥೆಗಳಿರುವ “ಜುಮುರು ಮಳೆ” ಕಥಾಸಂಕಲನವನ್ನು ಹೊರತರಲಾಗಿದೆ.
*
*
*
ದೇಶ ಕಾಲ ಎಲ್ಲರಿಗೂ ಲಭ್ಯವಾಗಲಿ…
ಪರಿಚಿತರಾದ ವಿವೇಕ ಶಾನಭಾಗರು “ದೇಶ ಕಾಲ” ವನ್ನು ಬಿಡುಗಡೆ ಮಾಡುವ ಆಹ್ವಾನ ಪತ್ರಿಕೆ ತಲುಪಿದಾಗ ನಾನು ಹೋಗುವುದರ ಬಗೆಗೆ ಅನುಮಾನಗಳಿದ್ದವು. “ಒಳ್ಳೆಯದಾಗಲಿ” ಎಂದು ತಿಳಿಸಿ ಬರೆದೆ. “ಬರದೆ ಹೇಗಿರುತ್ತೀರ?” ಎಂದು ಅವರು ಬರೆದಾಗ ಹಾಗು ಹೀಗೂ ಕಷ್ಟ ಪಟ್ಟು ಹೋದೆ. ಯಥಾಪ್ರಕಾರ, ತೀರಾ ತಡವಾಗಿ. ಸದಸ್ಯತ್ವದ ಶುಲ್ಕ ಕಟ್ಟಿಸಿ ಪತ್ರಿಕೆ ತರಿಸಿ ತಿರುವಿ ಹಾಕಿದೊಡನೆ ಅನ್ನಿಸಿದ್ದನ್ನು ಇಲ್ಲಿ ಬರೆಯುತ್ತಿದ್ದೇನೆ:
ಪತ್ರಿಕೆ ಶ್ರೀಮಂತವಾಗಿದೆ. ನಮ್ಮ ಜಯಂತ್‌ರ ಕೈಚಳಕ ಒಡೆದು ಕಾಣಿಸುತ್ತದೆ. “ಭಾವನ”ದ ನೆನಪು ತಟಕ್ಕನೆ ಮನಸ್ಸಿನಲ್ಲಿ ಹಾದು ಹೋಯಿತು. ಚಿತ್ರಗಳು ಹೇರಳವಾಗಿವೆ. ಆದುದರಿಂದ ಅದರ ಪ್ರೊಡಕ್ಷನ್ ಕಾಸ್ಟ್ ಸ್ಚಲ್ಪ ಹೆಚ್ಚೇ ಆಗಿರಬಹುದು. ನನ್ನಂತಹವರಿಗೆ ಸದಸ್ಯತ್ವ ಶುಲ್ಕ ಸಮಸ್ಯೆಯೇ ಅಲ್ಲ. ಆದರೆ, ಕರ್ನಾಟಕದಲ್ಲಿ ಇನ್ನೂ ಕನ್ನಡ ಸಾಹಿತ್ಯವನ್ನು ಪದವಿಯಲ್ಲಿ, ಸ್ನಾತಕೋತ್ತರ ಪದವಿಯಲ್ಲಿ ಅಭ್ಯಸಿಸುತ್ತಿರುವ ಸಹಸ್ರಾರು (?) ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಸದಸ್ಯತ್ವ ಶುಲ್ಕ ಕಡಿಮೆ ಮಾಡಿ ಅವರನ್ನು ಹೆಚ್ಚಿಗೆ ತಲುಪುವಂತಾದರೆ ದೇಶ ಕಾಲ ಮತ್ತಷ್ಟು ಸಾರ್ಥಕವಾಗುತ್ತದೆ. ಇದರ ಬಗೆಗೆ ವಿವೇಕ್ ಹೆಚ್ಚು ತಲೆ ಕೆಡಿಸಿಕೊಳ್ಳಲಿ ಎಂದು ಆಶಿಸುತ್ತಾ ನಮ್ಮ ’
ಕನ್ನಡಸಾಹಿತ್ಯ.ಕಾಂ ಬೆಂಬಲಿಗರಲ್ಲಿ ಒಬ್ಬರಾದ ಶಿವಕುಮಾರ್ ಜಿ ವಿ – ಸಮಾರಂಭಕ್ಕೆ ಹೋಗಿದ್ದರು. ಅವರಿಗನ್ನಿಸಿದ್ದು, ಅವರ ಮಾತುಗಳಲ್ಲೇ :
ಬೆಳಗ್ಗೆ ಎದ್ದು ತಡಬಡಾಯಿಸಿ, ಬಲವಂತವಾಗಿ ಯುಗಾದಿ ಪೂಜೆ ಮತ್ತಿತರ ಕೆಲಸಗಳನ್ನು ಬೇಗ ಮುಗಿಸಿ, ತಿಂಡಿ ತಿಂದು ಸಾಹಿತ್ಯ ಪರಿಷದ್ ತಲುಪಿದಾಗ ಸರಿಯಾಗಿ ೧೦-೦೦ ಗಂಟೆ. ಸಾಹಿತ್ಯ ಸಮಾರಂಭವೊಂದಕ್ಕೆ ’ಮೆಚ್ಚಿದೆ’ ಎನ್ನಬಹುದಾದಷ್ಟು ಜನ ಸೇರಿದ್ದರು. ಹಿರಿಯರಾದ ಗಿರೀಶ್ ಕಾರ್ನಾಡ್, ಅನಂತಮೂರ್ತಿ, ಜಯಂತ ಕಾಯ್ಕಿಣಿ, ವೈದೇಹಿ, ಅಕ್ಷರ, ರಾಮಚಂದ್ರ ಗುಹಾ, ಅಬ್ದುಲ್ ರಷೀದ್, ಎಸ್. ದಿವಾಕರ್ ಎಲ್ಲರೂ ಕಾಣುತ್ತಿದ್ದರು. ಸುಮಾರು ಸಂಭ್ರಮದ ವಾತಾವರಣವೇ ಎನ್ನಬಹುದು. ಎಲ್ಲರೂ ಮೆಚ್ಚುವಂತೆ ಕಾರ್ಯಕ್ರಮ ಹೆಚ್ಚೂ ಕಡಿಮೆ ಸರಿಯಾದ ಸಮಯಕ್ಕೇ ಶುರುವಾಯಿತು.
ನಿರೂಪಣೆ ಜಯಂತರದ್ದು. ಬೇಂದ್ರೆಯವರ “ಕುಣಿಯೋಣು ಬಾರಾ” ಗೀತೆಯ ಹಾಡಿನಿಂದ ಕಾರ್ಯಕ್ರಮ ಶುರುವಾಯಿತು. ಜಯಂತರು “ಜೀವನ, ಸಾಕ್ಷಿ” ಮುಂತಾದ ಪತ್ರಿಕೆಗಳನ್ನು ಸ್ಮರಿಸುತ್ತಾ ಪತ್ರಿಕೆಗಿರುವ ಮಹತ್ವಾಕಾಂಕ್ಷೆಯನ್ನು ಸೂಚಿಸಿದರು. ಆ ಪತ್ರಿಕೆಗಳ ಸಂದರ್ಭದಲ್ಲಿ ನಡೆದ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ತಿಳಿಸಿದರು. ಪತ್ರಿಕೆಯ ತಂಡವನ್ನು ಪರಿಚಯಿಸಿದರು.
ಜಿ.ಎಸ್.ಅಮೂರ್ ಪತ್ರಿಕೆ ಸಾಗಬೇಕಿರುವ ಹಾದಿಯನ್ನು ಧ್ಯಾನಿಸಿ, ಈ ಸಂದರ್ಭದಲ್ಲಿ ನ್ಯೂಯಾರ್ಕ್ ಬುಕ್ ರಿವ್ಯೂ-ದ ಬಗ್ಗೆ ಮಾತನಾಡುತ್ತಾ ಅಂತಹ ಆಳ ದೇಶ-ಕಾಲಕ್ಕೆ ಸಾಧ್ಯವಾದರೆ ಒಳ್ಳೆಯದು ಎಂದು ಆಶಿಸಿದರು. ಬಹುಕಾಲ ಬಾಳಲಿ ಎಂದರು.
ಪತ್ರಿಕೆ ಬಿಡುಗಡೆ ಮಾಡಿದ ಕಾರ್ನಾಡ್ ಇಂತಹ ಕಾಲದಲ್ಲಿ ಪತ್ರಿಕೆಯೊಂದನ್ನು ನಡೆಸುವ ಸಾಹಸ ಮಾಡಿರುವ ವಿವೇಕ್-ಗೆ ಅಭಿನಂದನೆ ಸಲ್ಲಿಸುತ್ತಾ ಪತ್ರಿಕೆ ನಡೆಸುವವರಿಗೆ ಹಣಕಾಸು, ವ್ಯವಸ್ಥೆ ಮುಂತಾದ ಕಷ್ಟಗಳಿಗಿಂತ ಹೆಚ್ಚು ತೊಡಕಾಗುವುದು ಬರಹಗಾರರ ಅಭಾವದ ಸಮಸ್ಯೆ. ಸರಿಯಾದ ಸಮಯಕ್ಕೆ, ನಿಯಮಿತವಾಗಿ ಬರೆಯುವ ಒಳ್ಳೆಯ ಸಂಪ್ರದಾಯವೇ ನಮ್ಮ ಸಾಂಸ್ಕೃತಿಕ ಪರಿಸರದಲ್ಲಿ, ಯೂನಿವರ್ಸಿಟಿಗಳಲ್ಲಿ ಹೊರಟುಹೋಗಿದೆ, ಹಿಂದೊಮ್ಮೆ ಇತ್ತೇನೋ ಎಂದರು. ಹಿಂದೆ ಕುರ್ತಕೋಟಿಯವರೊಡನೆ ಕೆಲಸ ಮಾಡುತ್ತಿದ್ದಾಗ ಈ ಅನುಭವವಾಗಿದೆ ಎಂದರು. ಅವರೂ ಸಹ ನ್ಯೂಯಾರ್ಕ್ ಬುಕ್ ರಿವ್ಯೂ-ದ ಬಗ್ಗೆ ಪ್ರಸ್ತಾಪಿಸುತ್ತಾ ಅದರಲ್ಲಿ ಬರೆಯುವವರ ಒಂದು ಪಟ್ಟಿ ತಯಾರು ಮಾಡಿದರೆ ಹೆಚ್ಚೆಂದರೆ ೨೦ ಜನ ಸಿಕ್ಕಾರು, ಆದರೆ ಅವರೆಲ್ಲರೂ ಶಿಸ್ತಿನಿಂದ ಬರೆಯುವುದರಿಂದ ಪತ್ರಿಕೆಯ ಸಂಚಿಕೆಗಳು ಸಕಾಲದಲ್ಲಿ ಹೊರಬರುತ್ತಾ ಜೀವಂತವಾಗಿರುತ್ತದೆ ಎಂದರು. ಕಡೆಯಲ್ಲಿ, ಇಂತಹ ಸಮಾರಂಭಕ್ಕೆ ತಮ್ಮನ್ನು ಕರೆಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿ ತಮ್ಮ ಮಾತು ಮುಗಿಸಿದರು.
ಎಸ್. ದಿವಾಕರ್ ತಮ್ಮ ಒಂದು ಕಥೆಯನ್ನೋದಿದರು. ಇಡಿಯ ಭಾರತದ ಇತಿಹಾಸವನ್ನು ಕಾಲ್ಪನಿಕ ಕಾದಂಬರಿಕಾರರ ಕಾದಂಬರಿಗಳ ಜೊತೆಗೆ ಸಮೀಕರಿಸುತ್ತಾ ಹೆಣೆದ ಕಥೆ. [ಎಷ್ಟು ಕಾದಂಬರಿಕಾರರು ಎಷ್ಟು ಕಾದಂಬರಿಗಳನ್ನು ಬರೆದರು, ಯಾವುದು ಯಾವುದರಿಂದ ಪ್ರಭಾವಿತವಾಯಿತು, ಯಾವುದು ಎಲ್ಲಿಗೆ ಮುಟ್ಟಿತು ಮುಂತಾದ ಒಳನೋಟಗಳೊಡನೆ, ರೂಪಕಗಳ ಮೂಲಕ]. ಆ ಅಂಕಿ ಸಂಖ್ಯೆಗಳ ಮಹತ್ವ ತಿಳಿದಿದ್ದವರಿಗೆ ಕಥೆ ಪೂರ್ತಿ ಅರ್ಥವಾಗುತ್ತಿತ್ತು. ವೇದಿಕೆಯ ಮೇಲೆ ಮತ್ತು ಕೆಳಗಿದ್ದವರಾದಿಯಾಗಿ ಎಲ್ಲರೂ ತಲೆದೂಗಿದರು.
ಅಬ್ದುಲ್ ರಷೀದ್ ಮತ್ತವರ ಪತ್ನಿ ಮೋಳಿ ರಷೀದ್ ದೇಶಕಾಲಕ್ಕೆ ಮಲೆಯಾಳದ ಯುವಕವಿ ಪಿ.ರಾಮನ್-ರವರ ಕೆಲ ಕವಿತೆಗಳನ್ನು ಅನುವಾದಿಸಿದ್ದಾರೆ. ಅವುಗಳಲ್ಲಿ ಕೆಲವನ್ನು ವಾಚಿಸಿದರು. ಮೋಳಿಯವರು ಒಂದು ಕವಿತೆಯನ್ನು ಮಲೆಯಾಳದಲ್ಲಿ ಓದಿದ ರೀತಿ ಆ ಭಾಷೆ ಗೊತ್ತಿಲ್ಲದ ನನಗೂ ತುಂಬಾ ಮೆಚ್ಚಿಗೆಯಾಯಿತು. ಅವರು ಮನದುಂಬಿ ಓದುತ್ತಿದ್ದುದು ಮನಸ್ಸನ್ನು ತಟ್ಟಿತು. ಕವಿತೆಗಳ ಬಗ್ಗೆ ಅಷ್ಟಾಗಿ ಮಾತಾಡಲು ಹೆದರುವ ನಾನೂ ಸಹ ಧೈರ್ಯವಾಗಿ ರಾಮನ್-ರ ಮೌನಕ್ಕೊಂದು ಚರಮಗೀತೆ ಪದ್ಯ ನನಗೆ ಹಿಡಿಸಿತು ಎಂದು ಹೇಳಲಿಚ್ಛಿಸುತ್ತೇನೆ. ದೇಶ-ಕಾಲ ಪತ್ರಿಕೆಯಲ್ಲಿ ರಾಮನ್-ರೇ ತಮ್ಮ ಕವನಸಂಕಲನವೊಂದಕ್ಕೆ ಬರೆದಿರುವ ಮುನ್ನುಡಿ, ರಷೀದ್ ರಾಮನ್-ರನ್ನು ಪರಿಚಯಿಸಿರುವ ರೀತಿಗಳೆಲ್ಲಾ ಗಮನಾರ್ಹ.
ಸಮಾರಂಭಕ್ಕೆ ಆಗಮಿಸಿದ್ದ ಗಣ್ಯರಲ್ಲೊಬ್ಬರಾದ ಅಕ್ಷರ ಕೆಳಗೇ ಕುಳಿತುಬಿಟ್ಟಿದ್ದರು. ಜಯಂತ್ ಸ್ನೇಹ-ಬಲವಂತಗಳಿಂದ ಅವರನ್ನು ವೇದಿಕೆಯ ಮೇಲಕ್ಕೆ ಬರಮಾಡಿಕೊಂಡರು. ಅಕ್ಷರ ದೇಶಕಾಲಕ್ಕೆ ಒಂದು ವಿಶೇಷ ಕಾರ್ಯಕ್ರಮ ನಡೆಸುತ್ತಿದ್ದಾರೆ. ಅದರಲ್ಲಿ ಒಂದು ಅಂಕಣಸಮೂಹವನ್ನು ನಡೆಸುತ್ತಿದ್ದಾರೆ. ಆದರ ಉದ್ದೇಶವನ್ನು “ಎಲ್ಲ ದೇಶ-ಕಾಲಗಳಿಗೆ ದೃಷ್ಟಿಯ ಮೊನಚು, ನೇರಗಳು ಪ್ರಾಪ್ತವಾಗಿ ಅದರ ಬೆನ್ನು ಕಾಣಿಸದೇ ಹೋಗುತ್ತದೆ. ಅದನ್ನು ಮೊಗಚುವ ಒಂದು ಪ್ರಯತ್ನ ಮಾಡುತ್ತಿದ್ದೇವೆ. ನಿಮಗೀಗ ಎಷ್ಟು ಅರ್ಥವಾಗುತ್ತೋ ಇಲ್ಲವೋ ಗೊತ್ತಿಲ್ಲ. ಓದತೊಡಗುತ್ತಿದ್ದ ಹಾಗೇ ತಿಳಿಯ ತೊಡಗುತ್ತದೆ” ಎಂದು ತುಂಬಾ ನಿಗೂಢವಾಗಿ ಮಾತನಾಡಿದರು.
ವೈದೇಹಿಯವರು ಅವರ ವಿಶಿಷ್ಟ ಆಪ್ತ ಶೈಲಿಯಲ್ಲಿ ತಮ್ಮ ಒಂದು ಕವಿತೆಯನ್ನೋದಿದರು. ಇದನ್ನವರು ನೀನಾಸಂ-ನಲ್ಲಿ ಓದಿದ್ದರು ಎನ್ನುವ ನೆನಪು.
ಕಡೆಯಲ್ಲಿ ಅನಂತಮೂರ್ತಿಯವರು ರುಜುವಾತು ಸಮಯದಲ್ಲಿನ ತಮ್ಮದೇ ಅನುಭವಗಳನ್ನು ಹಂಚಿಕೊಳ್ಳುತ್ತಾ ಮಾತನ್ನಾರಂಭಿಸಿದರು. ಭಿನ್ನಾಭಿಪ್ರಾಯ, ಸ್ನೇಹ, ವ್ಯಾವಹಾರಿಕತೆ, ಮಹತ್ವಾಕಾಂಕ್ಷೆ, ಕ್ರಿಯಾಶೀಲತೆ ಇವೆಲ್ಲಾ ಸೇರಿರುವ ಒಂದು ತಂಡದಿಂದ ಜೀವಂತ-ಯಶಸ್ವೀ ಪತ್ರಿಕೆಯೊಂದು ಸಾಧ್ಯವಾಗುತ್ತದೆ ಎಂದು ಸಮಗ್ರವಾದ ರೀತಿಯಲ್ಲಿ ಪ್ರತಿಕ್ರ್ರಿಯಿಸಿದರು. ರುಜುವಾತಿನಲ್ಲೊಮ್ಮೆ ಕಾರ್ನಾಡರ ಒಂದು ಲೇಖನವನ್ನು ಪ್ರಕಟಿಸಲಾಗದೇ ಹೋದದ್ದು ಮತ್ತು ಆ ಕಾರಣವಾಗಿ ಕಾರ್ನಾಡರು ಬೇಸರಿಸದೇ ಇದ್ದುದನ್ನು ಮೆಚ್ಚುಗೆಯಿಂದ ಸ್ಮರಿಸಿದರು. ಹಾಗೆಯೇ ಹಿಟ್ಟಿನ ಹುಂಜ ನಾಟಕದ ಹಿಂದಿನ ಸೃಜನಶೀಲ ಪ್ರಕ್ರಿಯೆಯ ಕುರಿತು ಕಾರ್ನಾಡರ ಒಂದು ಪ್ರಬಂಧ-ಲೇಖನವನ್ನು ನೆನಪಿಸಿಕೊಂಡು ಕನ್ನಡದ ಅತ್ಯುತ್ತಮ ಪ್ರಬಂಧ-ಲೇಖನಗಳ ಸಾಲಿನಲ್ಲಿ ಅದು ನಿಲ್ಲುತ್ತದೆ ಎಂದರು. [ಅದು ರುಜುವಾತಿನಲ್ಲಿ ಪ್ರಕಟವಾಗಿತ್ತೆಂದು ಕಾಣುತ್ತದೆ. ಯಾಕೋ, ಕಾರ್ನಾಡ್-ಅನಂತಮೂರ್ತಿ-ಪ್ರಸನ್ನರ ಒಂದು ಸಂವಾದದಲ್ಲಿ ಕಾರ್ನಾಡರ ಕಾಕನಕೋಟೆಯ ಮೇಲಿನ ಲೇಖನದ ಕುರಿತು ಅನಂತಮೂರ್ತಿಯವರು ಮೆಚ್ಚುಗೆಯ ಮಾತುಗಳನ್ನಾಡಿದ್ದು ನೆನಪಿಗೆ ಬರುತ್ತಿದೆ.] ವಿವೇಕ್ ಮತ್ತವರ ತಂಡದಲ್ಲಿ ಒಟ್ಟುಗೂಡಿ ಕೆಲಸ ಮಾಡುವ ಗುಣವಿದೆ. ಮಹತ್ವಾಕಾಂಕ್ಷೆ ಇದೆ ಎಂದರು. ಸಾಹಿತ್ಯಕ ಪತ್ರಿಕೆಗಳು ಜಾಹಿರಾತು ತೆಗೆದುಕೊಳ್ಳುವುದೇನೂ ತಪ್ಪಲ್ಲ, ಆದರೆ ವ್ಯಾಪಾರೀಕರಣವಾಗಬಾರದು ಎಂದರು. ಕನ್ನಡದಲ್ಲಿ ಮಹತ್ವದ್ದು ಬರುತ್ತಿರುವುದೇ ಸಣ್ಣ-ಕಥೆಗಳಲ್ಲಿ. ನಮ್ಮ ಪ್ರತಿಭಾವಂತ ಸಣ್ಣ ಕಥೆಗಾರರು ದಿನಪತ್ರಿಕೆಗಳ-ವಾರಪತ್ರಿಕೆಗಳ ಕಾಲಂ ಹಿಡಿತಕ್ಕೆ ಸಿಕ್ಕು ಅದಕ್ಕೆ ಬೇಕಾದ ಜಾಣ್ಮೆ ರೂಢಿಸಿಕೊಂಡು, ಕೆರಿಯರಿಸ್ಟ್-ಗಳಾಗುತ್ತಿದ್ದಾರೆ. ಅಮೂರರಂಥವರನ್ನು ಬಿಟ್ಟರೆ ಆಳವಾದ ವಿಮರ್ಶೆ ಬರೆಯುವವರು ಕಡಿಮೆಯಾಗುತ್ತಿದ್ದಾರೆ. “ದೇಶಕಾಲ” ಈ ಎಲ್ಲ ಮಿತಿಗಳನ್ನು ಮೀರುವುದಕ್ಕೆ, ನಿರ್ಬಂಧಗಳನ್ನು ಮುರಿಯುವುದಕ್ಕೆ ಸಾಧ್ಯವಾಗುವುದಾದರೆ ಅದು ನಿಜಕ್ಕೂ ಒಳ್ಳೆಯದು. ಇದೆಲ್ಲದರ ಜೊತೆಗೆ ಹೊಸ ಬರಹಗಾರರನ್ನು ಮುಂದಕ್ಕೆ ತರಬೇಕು ಕೂಡ ಎಂದರು.
ವಿವೇಕ್ ಎಲ್ಲರನ್ನೂ ವಂದಿಸಿ, ಕೃತಜ್ಞತೆ ಸಲ್ಲಿಸಿದರು. ಜಯಂತ್ ಕೊನೆಯ ಮಾತುಗಳನ್ನಾಡಿ ಕಾರ್ಯಕ್ರಮ ಮುಗಿಸಿದರು.
ಜಯಂತರು ಕಾರ್ಯಕ್ರಮವನ್ನು ನಿರ್ವಹಿಸಿದ ರೀತಿಯನ್ನು ನಿಜಕ್ಕೂ ಮೆಚ್ಚಬೇಕು. ಸ್ವತಃ ತಮ್ಮ ಮಾತಿಗಿರುವ ಮೋಡಿ, ಸ್ನೇಹ ಇವುಗಳನ್ನು ಅಚ್ಚುಕಟ್ಟಾಗಿ, ಮಿತಿಮೀರದಂತೆ ಬಳಸಿದರು. ಸಂದರ್ಭಕ್ಕೆ ತಕ್ಕ ಚಾರಿತ್ರಿಕ-ಸಾಂಸ್ಕೃತಿಕ ಉದಾಹರಣೆಗಳು ಸೂಕ್ತವಾಗಿ ನೆನಪಿಗೆ ತಂದುಕೊಂಡು ಉದ್ಧರಿಸುತ್ತಿದ್ದರು. ತಮ್ಮ ನಿರೂಪಣೆಯಲ್ಲಿ ಸಭಾಸದರನ್ನು ಒಳಗೊಳ್ಳುತ್ತಾ, ಸಮಾರಂಭಕ್ಕೂ ಅವರಿಗೂ ಸಂಬಂಧವೊಂದನ್ನು ಸ್ಥಾಪಿಸುವಲ್ಲಿ ಯಶಸ್ವಿಯಾದರು. ವಿವೇಕರ ಬಗ್ಗೆ ಮಾತನಾಡುತ್ತಾ ಅದೆಷ್ಟೋ ವರ್ಷಗಳಿಂದ ವಿವೇಕ್ ಪತ್ರಿಕೆ ನಡೆಸುವ ಆಸೆ ಹೊಂದಿದ್ದರು. “ಮಾಯಾದರ್ಪಣ” ಎನ್ನುವ ಪತ್ರಿಕೆಯನ್ನು ೫ ವರ್ಷದ ಹಿಂದೆ ಶುರು ಮಾಡುವ ಪ್ರಯತ್ನ ಕೈಗೂಡದೇಹೋದದ್ದನ್ನು ನೆನೆದರು. ವಿವೇಕರ ಮೌನ ವ್ಯಕ್ತಿತ್ವದ ಕುರಿತು ಮಾತನಾಡುತ್ತಾ ಈ ಮೌನದಿಂದ ಇವರ ಕ್ರಿಯಾಶೀಲತೆಯೋ ಅಥವಾ ಇವರ ಕ್ರಿಯಾಶೀಲತೆಯಿಂದ ಈ ಮೌನ ಸಾಧ್ಯವಾಯಿಗಿದೆಯೋ ಎನ್ನುವುದನ್ನು ಅವರ ಸ್ನೇಹ-ಸಮೂಹ ಆಗಾಗ್ಗೆ ಚರ್ಚಿಸುತ್ತಿರುತ್ತದೆ ಎಂದರು. “ಗಂಭೀರವಾಗಿ ಹೇಳಿದರೆ ಅತಿ ಎನ್ನಿಸುತ್ತದೆ” ಎನ್ನುವ ಎಚ್ಚರಿಕೆಯಲ್ಲಿ ಲಘುವಾಗಿ ಈ ವಿಷಯ ಪ್ರಸ್ತಾಪಿಸಿದರೂ ವಿವೇಕ್-ರ ಸರಿಯಾದ ಪರಿಚಯವನ್ನು ಎಲ್ಲರಿಗೂ ಒಂದೇ ವಾಕ್ಯದಲ್ಲಿ ನೀಡಿದರು. ಅವರು ವಿವೇಕ್ ಮತ್ತು ಪತ್ರಿಕೆಯನ್ನು ಮನದುಂಬಿ ಹಾರೈಸಿದರು ಎನ್ನುವುದು ಸಭಾಸದರ ಅನುಭವಕ್ಕೇ ಬರುತ್ತಿತ್ತು.
“ದೇಶಕಾಲ” ಸಾಂಸ್ಕೃತಿಕ ಪ್ರಪಂಚದಲ್ಲಿ ತುಂಬಾ ಕುತೂಹಲ, ಭರವಸೆಗಳನ್ನು ಹುಟ್ಟಿಸಿರುವ ಪತ್ರಿಕೆ. ಕೆಲವರಾದರೂ ಮುಂದಿನ ಸಂಚಿಕೆ ಯಾವತ್ತು ಬರುತ್ತದೆ ಎಂದು ಖಂಡಿತಾ ಕಾಯುತ್ತಿರುತ್ತಾರೆ. ಜೀವನ, ಸಾಕ್ಷಿ, ರುಜುವಾತು ಪತ್ರಿಕೆಗಳನ್ನು ನೋಡಿಲ್ಲದ, ಆದರೆ ಅವುಗಳ ಕುರಿತು ತುಂಬಾ ಕೇಳಿರುವ ನಮ್ಮ ತಲೆಮಾರಿನ ಸಾಹಿತ್ಯ-ಪ್ರೇಮಿಗಳು ’ದೇಶಕಾಲ’-ದಿಂದ ಅಂತಹ ನಿರೀಕ್ಷೆ ಇಟ್ಟುಕೊಳ್ಳಬಹುದಾಗಿದೆ. ಪತ್ರಿಕೆಯ ಮೊದಲ ಪುಟದಲ್ಲೇ “ಜೀವನ” ಪತ್ರಿಕೆಯನ್ನು ಸ್ಮರಿಸಿರುವುದು ಅದಕ್ಕೆ ತಕ್ಕಂತೆಯೇ ಇದೆ. ವಿವೇಕ್-ರ ಜೊತೆ ಜಯಂತ್, ರಘುನಂದನ್, ಅಕ್ಷರ, ಅಬ್ದುಲ್ ರಷೀದ್, ಎಸ್. ದಿವಾಕರ್ ಚೆನ್ನಕೇಶವ ಮುಂತಾದ ಸಮವಯಸ್ಕರು ಹೆಗಲುಜೋಡಿಸಿದ್ದಾರೆ. ಹಿರಿಯರಾದ ಅನಂತಮೂರ್ತಿ, ಸುಬ್ಬಣ್ಣ, ಕಾರ್ನಾಡ್, ಜಿ.ಆರ್., ವೈದೇಹಿ, ಸುಬ್ಬಣ್ಣ, ಅಮೂರ್ ಮುಂತಾದವರ ನೈತಿಕ ಬೆಂಬಲವಿದೆ. ರಘುನಂದನ್, ಚೆನ್ನಕೇಶವ, ಪ್ರತಿಭಾ ನಂದಕುಮಾರ್ ಮುಂತಾದವರೆಲ್ಲಾ ಬಿಡುಗಡೆ ಸಮಾರಂಭ ಸುಸೂತ್ರವಾಗಿ ನಡೆಯುವಂತೆ ಶ್ರಮವಹಿಸುತ್ತಿದ್ದರು. ಅಲ್ಲೇ ಕುಳಿತಿದ್ದ ರಘುನಂದನ್-ರನ್ನು ಕಾರ್ಯಕ್ರಮ ಮುಗಿದ ನಂತರ ಮಾತನಾಡಿಸೋಣ ಎಂದುಕೊಂಡೆ, ಸ್ವಲ್ಪ ಹೊತ್ತಿನಲ್ಲೇ ಅದ್ಯಾವುದೋ ಕ್ಷಣದಲ್ಲಿ ಮಾಯವಾಗಿದ್ದರು. ಪತ್ರಿಕೆಗೆ ಚೆನ್ನಕೇಶವರದ್ದೇ ವಿನ್ಯಾಸ. ತುಂಬಾ ವಿಭಿನ್ನವಾಗಿ, ಗಮನಾರ್ಹವಾಗಿದೆ.
ಕನ್ನಡಸಾಹಿತ್ಯ.ಕಾಂ ’ದೇಶಕಾಲ’-ಕ್ಕೆ ತುಂಬು ಹೃದಯದಿಂದ ಶುಭ ಹಾರೈಸುತ್ತದೆ.
’ದೇಶಕಾಲ’ ದ ಸಾಗರೋತ್ತರ ಚಂದಾ ಬಗೆಗೆ ವಿವೇಕ್ ಮಾಹಿತಿಯನ್ನು ನೀಡಿ, ಎಲ್ಲರಿಗೂ ಕಳುಹಿಸಿಕೊಡಿ ಎಂದು ಕೇಳಿದ್ದಾರೆ. ವಿವರ: ವರ್ಷವೊಂದಕ್ಕೆ ರೂ ೭೦೦.೦೦. ಇದರಲ್ಲಿ ನಾಲ್ಕು ಸಂಚಿಕೆಗಳ ಅಂಚೆ ವೆಚ್ಚವೂ ಸೇರಿದೆ. ಆಇSಊಂಏಂಐಂ ಹೆಸರಿನಲ್ಲಿ ಭಾರತೀಯ ರೂಪಾಯಿಗಳ ಚೆಕ್ ಅಥವ ಡಿಡಿಯನ್ನು ಕಳುಹಿಸಬಹುದು. ಚೆಕ್ ಅಥವ ಡಿಡಿಯನ್ನು ಈ ವಿಳಾಸಕ್ಕೆ ಕಳುಹಿಸಬಹುದು:
Desha Kaala
D-1, Victorian Villa,
Alexandra Street
Richmond Town
BANGALORE 560025
INDIA
Email: deshakaala@gmail.com
–ಕಳುಹಿಸುವವರ ಸ್ಪಷ್ಟ ವಿಳಾಸವಿರಲಿ.
ಸಂಚಿಕೆ ತಲುಪಲು ೧೫-೨೦ ದಿನಗಳಾಗುತ್ತವೆ.
-ಶಿವಕುಮಾರ್, ನಮ್ಮ ಜಯಂತ್‌ರ “ತೂಫಾನ್ ಮೈಲ್” ಕೃತಿ ಬಿಡುಗಡೆಯಲ್ಲೂ ಹಾಜರಿದ್ದರು. ಅದರ ಬಗೆಗೆ ಅವರು ಬರೆದು ಕಳಿಸಿದ್ದಾರೆ.
-ಶೇಖರ್‌ಪೂರ್ಣ