ನ್ಯಾಯಮೂರ್ತಿಗಳಾದ ಶ್ರೀ ರಾಮಾ ಜೋಯಿಸ್ ಮತ್ತು ಶ್ರೀ ರಾಜೇಂದ್ರ ಬಾಬು – ೧೯೮೯ ಕತೀವ : ೭೦೨
ಪ್ರಧಾನ ಕಾರ್ಯದರ್ಶಿ, ಭಾಷಾ ಅಲ್ಪಸಂಖ್ಯಾತರ ರಕ್ಷಣಾ ಸಮಿತಿ – ವಿರುದ್ಧ –
ಕರ್ನಾಟಕ ರಾಜ್ಯ *
(ಎ) ಪ್ರಾಥಮಿಕ ಶಾಲೆಗಳ ಸಹಾಯಾನುಧಾನ ಸಂಹಿತೆ, ೧೯೬೯ -ನಿಯಮ ೧೨ (|) ಹಾಗೂ (||) – ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕೊಡುವುದು ಹಿತಕರ, ಅದು ಶಿಕ್ಷಣದಲ್ಲಿ ಉನ್ನತ ಮಟ್ಟ ಹಾಗೂ ಅಲ್ಪಸಂಖ್ಯಾತರ ಹಿತದೃಷ್ಟಿಯಿಂದ ಸಮಂಜಸ ಆಧಾರವನ್ನು ಹೊಂದಿರುತ್ತದೆ, ಸೂಕ್ತ ನಿಯಂತ್ರಣವೂ ಆಗಿದೆ – ಶಾಲೆಗಳಲ್ಲಿ ೪ನೇ ತರಗತಿಯವರೆಗೆ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡುವುದಕ್ಕೆ ಅನುಮತಿ ನೀಡುವ ಕಾರ್ಯನೀತಿಯನ್ನು ಏಕರೂಪವಾಗಿ ಹಾಗೂ ತಾರತಮ್ಯ ತೋರದೆ ಕಾರ್ಯಗತಗೊಳಿಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ.
ತೀರ್ಪು :
ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕೊಡಲು ಕಲ್ಪಿಸಿರುವ ಸಹಾಯಾನುದಾನ ಸಂಹಿತೆಯ ೧೨ (||) ಮತ್ತು (||)ನೇ ನಿಯಮವು ಹಿತಕರವಾದುದಾಗಿದೆ ಮತ್ತು ಅದಕ್ಕೆ ತತ್ವಾಧಾರವಿದೆ…..ಪ್ರಾಥಮಿಕ ಶಿಕ್ಷಣವು ಮಾತೃ ಭಾಷೆಯಲ್ಲೇ ಆಗಬೇಕೆಂದು ಅವಕಾಶ ಕಲ್ಪಿಸಿ ಭಾಷಾ ಅಲ್ಪ ಸಂಖ್ಯಾತರ ಭಾಷೆಯ ಬೆಳವಣಿಗೆಯನ್ನು ನಿಯಮ ೧೨ (|) ಮತ್ತು (||) ಸುನಿಶ್ಚಿತಗೊಳಿಸುತ್ತದೆ…..ಪೂರ್ವ-ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣವನ್ನು ೪ನೇ ತರಗತಿಯವರೆಗೆ ಮಾತೃ ಭಾಷೆಯಲ್ಲೇ ಕೊಡುವಂತೆ ಅಗತ್ಯಪಡಿಸುವ ಒಂದು ನಿಬಂಧನೆಯು, ಶಿಕ್ಷಣದಲ್ಲಿ ಉನ್ನತ ಮಟ್ಟ ಇರಬೇಕೆನ್ನುವ ಹಿತದೃಷ್ಟಿಯಿರದ ಮತ್ತು ಅಲ್ಪಸಂಖ್ಯಾತರ ಹಿತದೃಷ್ಟಿಯನ್ನು ಕಾಪಾಡಬೇಕೆನ್ನುವ ದೃಷ್ಟಿಯಿಂದ ಒಂದು ಸಮಂಜಸವಾದ ನಿಬಂಧನೆಯಾಗುತ್ತದೆ…..ಏಕರೂಪವಾಗಿ ಮತ್ತು ಯಾವುದೇ ತಾರತಮ್ಯ ತೋರದೆಯೆ ಪ್ರಾಥಮಿಕ ಶಾಲೆಗಳಲ್ಲಿ ನಾಲ್ಕನೆಯ ತರಗತಿಯವರೆಗೆ ಮಾತೃಭಾಷೆಯಲ್ಲಿಯೆ ಶಿಕ್ಷಣ ಕೊಡುವ ಸಲುವಾಗಿ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಅನುಮತಿ ಕೊಡುವ ತನ್ನ ನೀತಿಯನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ.
(ಪ್ಯಾರಾಗಳು – ೮ ಮತ್ತು ೧೧)
ದಿನಾಂಕ ೨೦-೭-೧೯೮೨ರ ಸರ್ಕಾರಿ ಆದೇಶ ಮತ್ತು ದಿನಾಂಕ ೧೧-೮-೧೯೮೨ರ ಸುತ್ತೋಲೆ ಭಾರತ ಸಂವಿಧಾನದ ೧೪, ೨೯(೧) ಹಾಗೂ ೩೦ನೇ ಅನುಚ್ಛೇದಗಳನ್ನು ಉಲ್ಲಂಘಿಸುವುದರಿಂದ ಅನೂರ್ಜಿತವೆಂದು ಘೋಷಿಸಲಾಗಿದೆ.
ತೀರ್ಪು :
ಮಾತೃ ಭಾಷೆಯಲ್ಲೇ ಈವ್ ನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ಇರಬೇಕೆಂಬುದು ಎಲ್ಲಾ ಶೈಕ್ಷಣಿಕ ತಜ್ಞರ ಒಮ್ಮತದ ಅಭಿಪ್ರಾಯವಾಗಿರುವುದರಿಂದ ಹಾಗೂ ಅದು ರಾಜ್ಯ ಸರ್ಕಾರವು ಅಂಗೀಕರಿಸಿರುವ ಹಿತಕರವಾದ ಸಮಂಜಸ ಕಾರ್ಯನೀತಿಯಾಗಿರುವುದರಿಂದ ಭಾಷಾ ಅಲ್ಪಸಂಖ್ಯಾತರು ಮಂಡಿಸಿದ ಮನವಿಯನ್ನು ಒಪ್ಪಿಕೊಳ್ಳುತ್ತಾ, ಪ್ರಾಥಮಿಕ ಶಾಲೆಯ ಮೊದಲ ವರ್ಷದಿಂದಲೇ ಕನ್ನಡದ ವ್ಯಾಸಂಗವನ್ನು ಅಗತ್ಯಪಡಿಸುವ ಆಕ್ಷೇಪಿತ ಸರ್ಕಾರಿ ಆದೇಶವು ಸಂವಿಧಾನದ ೧೪, ೨೯ ಹಾಗೂ ೩೦ನೆಯ ಅನುಚ್ಛೇದಗಳನ್ನು ಉಲ್ಲಂಘಿಸುತ್ತದೆಂದು ಪೂರ್ಣ ನ್ಯಾಯಪೀಠವು ತೀರ್ಪಿತ್ತಿದೆ (ನೋಡಿ : ಐಎಲ್‌ಆರ್ ೧೯೮೯ ಕರ್ನಾ ೪೫೭, ಪುಟ ೫೮೪ ರಲ್ಲಿ = ೧೯೮೯ ಕತೀವ ೩೧೨), ಆದ್ದರಿಂದ, ಪ್ರಾಥಮಿಕ ಶಿಕ್ಷಣವು ಇಂಗ್ಲಿಷ್‌ನಲ್ಲಿರಬೇಕೆಂದು ಯಾವುದೇ ವಾದವು, ಯಾವ ಆಧಾರದ ಮೇಲೆ ಪೂರ್ಣ ನ್ಯಾಯಪೀಠವು ಆಕ್ಷೇಪಿತ ಆದೇಶವು ಅಸಂವಿಧಾನಾತ್ಮಕವೆಂದು ತೀರ್ಪಿತ್ತಿದೆಯೋ ಆ ಆಧಾರಕ್ಕೆ ಅಸಂಗತವಾದುದಾಗುತ್ತದೆ. ಏಕೆಂದರೆ, ಇದರಿಂದ, ಪ್ರಾಥಮಿಕ ಶಾಲೆಯ ಮೊದಲ ನಾಲ್ಕು ವರ್ಷಗಳಲ್ಲಿ ಮಾತೃ ಭಾಷೆಯ ಜಾಗದಲ್ಲಿ ಇಂಗ್ಲೀಷನ್ನು ತರಬೇಕೆಂದು ಕೇಳಿದಂತಾಗುತ್ತದೆ ಮತ್ತು ಮಾತೃ ಭಾಷೆಯಲ್ಲೇ ಈವ್ ನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣವನ್ನು ಕೊಡಬೇಕೆನ್ನುವ ಸಮಂಜಸ ಕಾರ್ಯನೀತಿಗೆ ಹಾಗೂ ಈ ಅರ್ಜಿಗಳಲ್ಲಿರುವ ಭಾಷಾ ಅಲ್ಪಸಂಖ್ಯಾತರ ವಾದಕ್ಕೂ ಸಂಪೂರ್ಣವಾಗಿ ಅಸಂಗತವಾದುದಾಗುತ್ತದೆ……….ಒಂದೇ ಮಾತೃ ಭಾಷೆಯ ಮಕ್ಕಳು ನಿರ್ಧಿಷ್ಟ ಸಂಖ್ಯೆಯಲ್ಲಿ ಯಾವುದೇ ಶಾಲೆಗಳಲ್ಲಿ ಪ್ರವೇಶ ಪಡೆದುಕೊಂಡಾಗ ಅಂಥ ಪ್ರಾಥಮಿಕ ಶಾಲೆಗಳಲ್ಲಿ ನಾಲ್ಕನೆಯ ತರಗತಿಯವರೆಗೆ ಅವರವರ ಮಾತೃ ಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕೆಂಬ ಷರತ್ತಿಗೆ ಒಳಪಟ್ಟು ಪ್ರಾಥಮಿಕ ಶಾಲೆಗಳನ್ನು ತೆರೆಯುವುದಕ್ಕೆ ಅನುಮತಿ ಕೊಡುವ ಕಾರ್ಯನೀತಿಯನ್ನು ರಾಜ್ಯ ಸರ್ಕಾರವು ಏಕರೂಪವಾಗಿ ಜಾರಿಗೊಳಿಸುವುದಕ್ಕೆ ಐಎಲ್‌ಆರ್ ೧೯೮೮ ಕರ್ನಾ ೨೧೮೮ರಲ್ಲಿ ವರದಿಯಾಗಿರುವ ತೀರ್ಪು ಅಡ್ಡಿಯಾಗುವುದಿಲ್ಲ.
(ಪ್ಯಾರಾಗಳು -೭ ಮತ್ತು ೯)
ದಿನಾಂಕ ೨೦-೭-೧೯೮೨ರ ಸರ್ಕಾರಿ ಆದೇಶ ಮತ್ತು ದಿನಾಂಕ ೧೧-೮-೧೯೮೨ರ ಸುತ್ತೋಲೆ ಭಾರತ ಸಂವಿಧಾನದ ೧೪, ೨೯ (೧) ಹಾಗೂ ೩೦ನೇ ಅನುಚ್ಛೇದಗಳನ್ನು ಉಲ್ಲಂಘಿಸುವುದರಿಂದ ಅನೂರ್ಜಿತವೆಂದು ಘೋಷಿಸಲಾಗಿದೆ.
ಉಲ್ಲೇಖಿಸಿರುವ ಮೊಕದ್ದಮೆಗಳು :
೧. ಐಎಲ್‌ಆರ್ ೧೯೮೯ ಕರ್ನಾ. ೪೫೭ – ಪ್ರಧಾನ ಕಾರ್ಯದರ್ಶಿ,
ಭಾಅರಸ್ – ವಿರುದ್ಧ – ಕರ್ನಾಟಕ ರಾಜ್ಯ (ಅನುಸರಿಸಲಾಗಿದೆ)
೨. ಐಎಲ್‌ಆರ್ ೧೯೮೮ ಕರ್ನಾ. ೨೧೮೮ – ಸಹ್ಯಾದ್ರಿ ಎಜ್ಯುಕೇಶನ್ ಟ್ರಸ್ಟ್
– ವಿರುದ್ಧ – ಕರ್ನಾಟಕ ರಾಜ್ಯ (ವಿವರಿಸಲಾಗಿದೆ ಹಾಗೂ ಭಿನ್ನವಾಗಿ ವಿಶೇಷಿಸಲಾಗಿದೆ)
೩. ಎಐಆರ್ ೧೯೫೫ ಸರ್ವೋನ್ಯಾ ೫೪೬ – ರಾಯ್ ಸಾಹೇಬ್ ರಾಮ್ ಜವಯ
– ವಿರುದ್ಧ – ಪಂಜಾಬ್ ರಾಜ್ಯ (ಅನುಸರಿಸಲಾಗಿದೆ)
೪. ಎಐಆರ್ ೧೯೮೧ ಸರ್ವೋನ್ಯಾ ೨೧೪೫ – ಮ. ಪ್ರ. ರಾಜ್ಯ
– ವಿರುದ್ಧ – ಕುಮಾರಿ ನಿವೇದಿತಾ ಜೈನ್ (ಅನುಸರಿಸಲಾಗಿದೆ)
೫. ಐಎಲ್‌ಆರ್ ೧೯೮೯ ಕರ್ನಾ ೬೧೫ – ಮುನಿಯಪ್ಪ – ವಿರುದ್ಧ –
ಕರ್ನಾಟಕ ರಾಜ್ಯ (ಉಲ್ಲೇಖಿಸಲಾಗಿದೆ)
ಶ್ರೀ ಎ.ಕೆ. ಸುಬ್ಬಯ್ಯ, ಶ್ರೀ ಮಹಮ್ಮದ್ ಫರೂಕ್, ಶ್ರೀ ವಿ. ಕೆ. ವರದಾಚಾರಿ,
ಶ್ರೀ ಪಿ. ವಿಶ್ವನಾಥ ಶೆಟ್ಟಿ, ಶ್ರೀ ಸಿ.ಹೆಚ್. ಜಾದವ್ ಪರ ಶ್ರೀ ಶಿವಯೋಗಿ ಮಠ,
ಶ್ರೀ ಬಷೀರ್ ಹುಸೇನ್, ಶ್ರೀ ಎ.ಆರ್. ಕೌಜಲಗಿ-ಅರ್ಜಿದಾರರುಗಳ ಪರ ವಕೀಲರು
ಶ್ರೀ ಎನ್. ಸಂತೋಷ್ ಹೆಗ್ಡೆ, ಅಡ್ವೋಕೇಟ್ ಜನರಲ್ ಹಾಗೂ ಶ್ರೀ ಎಂ.ಆರ್.ಆಚಾರ್,
ಶ್ರೀ ಎನ್.ದೇವದಾಸ್, ಸರ್ಕಾರಿ ವಕೀಲರು – ರಾಜ್ಯದ ಪರ ನ್ಯಾಯವಾದಿಗಳು.
ಟಿಪ್ಪಣಿ : ಐಎಲ್‌ಆರ್ ೧೯೮೮ ಕರ್ನಾ ೨೧೮೮ ರಲ್ಲಿ ವರದಿಯಾಗಿರುವ ಆಜ್ಞೆಯನ್ನು
ವಿವರಿಸಲಾಗಿದೆ ಮತ್ತು ಭಿನ್ನವಾಗಿ ವಿಶೇಷಿಸಲಾಗಿದೆ
ಆಜ್ಞೆ
ನ್ಯಾಯಮೂರ್ತಿ ರಾಮಾ ಜೋಯಿಸ್
೧. ಮೊದಲ ಏಳು ಅರ್ಜಿಗಳಲ್ಲಿ, ಪ್ರಾಥಮಿಕ ಶಾಲೆಯ ಮೊದಲ ವರ್ಷದಿಂದ ಮಾತೃ ಭಾಷೆಗಳಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿರುವ, ರಾಜ್ಯದಲ್ಲಿರುವ ಉರ್ದು, ಮರಾಠಿ ತೆಲುಗು ಮತ್ತು ತಮಿಳು ಭಾಷಾ ಅಲ್ಪಸಂಖ್ಯಾತರನ್ನು ಪ್ರತಿನಿಧಿಸಿರುವ ಅರ್ಜಿದಾರರುಗಳು ಆಯಾಯ ಭಾಷಾ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಮಕ್ಕಳು ಕನ್ನಡವನ್ನು ಒಂದು ಕಡ್ಡಾಯದ ಹೆಚ್ಚಿನ ವಿಷಯವನ್ನಾಗಿ ಹಾಗೂ ಪ್ರೌಢ ಶಾಲೆಗಳಲ್ಲಿ ಓದಬೇಕಾದ ಮೂರು ಭಾಷೆಗಳ ಪೈಕಿ ಏಕೈಕ ಪ್ರಥಮ ಭಾಷೆಯನ್ನಾಗಿ ವ್ಯಾಸಂಗ ಮಾಡಬೇಕೆಂದು ದಿನಾಂಕ ೨೦ನೇ ಜುಲೈ ೧೯೮೨ ರಂದು ಹೊರಟಿರುವ ರಾಜ್ಯ ಸರ್ಕಾರದ ಆದೇಶದ ಸಂವಿಧಾನಾತ್ಮಕ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ ಮತ್ತು ಅದನ್ನು ರದ್ದುಗೊಳಿಸಬೇಕೆಂದು ಹಾಗೂ ಸೂಕ್ತ ಅನುಷಂಗಿಕ ನಿರ್ದೇಶನಗಳನ್ನು ನೀಡಬೇಕೆಂದು ಸಹ ಪ್ರಾರ್ಥಿಸಿದ್ದಾರೆ.
೨. ಈ ಅರ್ಜಿಗಳಲ್ಲಿ ಪರಿಶೀಲನೆಗಾಗಿ ಉದ್ಭವಿಸಿದ ಪ್ರಶ್ನೆಯು ರಾಷ್ಟ್ರೀಯ ಹಾಗೂ ಸಂವಿಧಾನಾತ್ಮಕ ಮಹತ್ವದ ವಿಷಯವೆಂಬುದನ್ನು ಮನಗಂಡು ವಿಷಯಗಳನ್ನು ಕರ್ನಾಟಕ ಉಚ್ಛನ್ಯಾಯಾಲಯ ಅಧಿನಿಯಮದ ೪ನೇ ಪ್ರಕರಣದಡಿ ವಿಭಾಗ ನ್ಯಾಯಪೀಠಕ್ಕೆ ಉಲ್ಲೇಖಿಸಲಾಗಿತ್ತು. ವಿಭಾಗ ನ್ಯಾಯಪೀಠವೂ ಸಹ ಆ ಸರ್ಕಾರಿ ಆದೇಶದ ಸಂವಿಧಾನಾತ್ಮಕ ಸಿಂಧುತ್ವಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಅಧಿನಿಯಮದ ೭ನೇ ಪ್ರಕರಣದಡಿ ಪೂರ್ಣ ನ್ಯಾಯಪೀಠಕ್ಕೆ ಉಲ್ಲೇಖಿಸಿತ್ತು. ಪೂರ್ಣ ನ್ಯಾಯಪೀಠದ ಮುಂದೆ ಈ ಅರ್ಜಿಗಳಲ್ಲಿನ ಅರ್ಜಿದಾರರುಗಳ ವಾದ ಏನಿತ್ತೆಂದರೆ, ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡಲು ಸಾಕಷ್ಟು ಸೌಲಭ್ಯಗಲನ್ನು ಒದಗಿಸುವುದು ರಾಜ್ಯದ ಹಾಗೂ ಸ್ಥಳೀಯ ಪ್ರಾಧಿಕಾರಗಳ ಹೊಣೆಗಾರಿಕೆಯೆಂದು ಹೇಳಿರುವ ಭಾರತ ಸಂವಿಧಾನದ ೩೫೦ಎ ಅನುಚ್ಛೇದದೊಂದಿಗೆ ಓದಿಕೊಂಡ, ತಮ್ಮ ಭಾಷೆಯನ್ನು ಸಂರಕ್ಷಿಸಲು ಮೇಲೆ ಹೇಳಿರುವ ಭಾಷಾ ಅಲ್ಪಸಂಖ್ಯಾತರಿಗೆ ಭಾರತ ಸಂವಿಧಾನದ ೨೯ನೆಯ ಅನುಚ್ಛೇದದಡಿ ಭರವಸೆ ಕೊಟ್ಟಿರುವ ಮೂಲಭೂತ ಹಕ್ಕನ್ನು ಗಮನಿಸಲಾಗಿ, ಮಾತೃ ಭಾಷೆಯಲ್ಲಿ ತಮ್ಮ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನು ಕೊಡುವ ಸಲುವಾಗಿ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿಕೊಳ್ಳುವ ಹಾಗೂ ಅವುಗಳನ್ನು ನಡೆಸಿಕೊಂಡು ಬರುವ ಹಕ್ಕು ತಮಗಿದೆಯಾದ್ದರಿಂದ, ಪ್ರಾಥಮಿಕ ಶಾಲೆಯ ಮೊದಲ ವರ್ಷದಿಂದ ತಮ್ಮ ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿರುವ ತಮ್ಮ ಮಕ್ಕಳಿಗೆ ಕನ್ನಡದ ವ್ಯಾಸಂಗವನ್ನು ಕಡ್ಡಾಯ ಮಾಡಿರುವ ಹಾಗೂ ಪೌಢಶಾಲೆಗಳಲ್ಲಿ ಕನ್ನಡವನ್ನು ಏಕೈಕ ಪ್ರಥಮ ಭಾಷೆಯಾಗಿ ನಿಗದಿಪಡಿಸಿರುವ ಸರ್ಕಾರಿ ಆದೇಶದ ಆ ಭಾಗವು ಸಂವಿಧಾನದ ೨೯ ಮತ್ತು ೩೦ನೆಯ ಅನುಚ್ಛೇದಗಳನ್ನು ಹಾಗೂ ೧೪ನೆಯ ಅನುಚ್ಛೇದವನ್ನೂ ಸಹ ಉಲ್ಲಂಘಿಸುತ್ತದೆ ಎನ್ನುವುದಾಗಿತ್ತು. ಪೂರ್ಣ ನ್ಯಾಯಪೀಠವು ತನ್ನ ಅಭಿಪ್ರಾಯಕ್ಕಾಗಿ ಉಲ್ಲೇಖಿಸಿದ್ದ ಪ್ರಶ್ನೆಗಳಿಗೆ ಅರ್ಜಿದಾರರುಗಳ ಪರ ಉತ್ತರಿಸಿತು.
೩. ಅದರಲ್ಲೂ ಮುಖ್ಯವಾಗಿ, ಪ್ರಾಥಮಿಕ ಶಾಲೆಗಳ ಮೊದಲ ನಾಲ್ಕು ವರ್ಷಗಳಲ್ಲಿ ಪ್ರಾಥಮಿಕ ಶಿಕ್ಷಣದ ಭೋಧನೆಯು ಮಾತೃ ಭಾಷೆಯಲ್ಲೇ ಇರಬೇಕೆಂಬ ವಾದಕ್ಕೆ ಸಮರ್ಥನೆಯಾಗಿ ಅರ್ಜಿದಾರರುಗಳು ಹಲವಾರು ತಜ್ಞ ಸಮಿತಿಗಳ ಅಭಿಪ್ರಾಯವನ್ನು, ವರದಿಗಳನ್ನು ಮತ್ತು ಮಂತ್ರಿಗಳ ಸಮ್ಮೇಳನಗಳಲ್ಲಿ ಕೈಗೊಂಡ ತೀರ್ಮಾನಗಳನ್ನು ಒದಗಿಸಿದ್ದರು ಹಾಗೂ ಆ ಹಂತದಲ್ಲಿ ಮಾತೃ ಭಾಷೆಯೇ ಅಲ್ಲದೆ ಕನ್ನಡವನ್ನೂ ತಂದುದಕ್ಕೆ ಯಾವ ಸಮರ್ಥನೆಯೂ ಇಲ್ಲವೆಂದು ವಾದಿಸಿದ್ದರು. ಪೂರ್ಣ ನ್ಯಾಯಪೀಠದ ಆಜ್ಞೆಯಲ್ಲಿ ಆ ಅಭಿಪ್ರಾಯಗಳ, ವರದಿಗಳ ಹಾಗೂ ತೀರ್ಮಾನಗಳ ಸುಸಂಗತ ಭಾಗಗಳನ್ನು ಕೊಡಲಾಗಿದೆ. ಈ ಎಲ್ಲಾ ವಿಷಯ ಸಾಮಾಗ್ರಿಗಳನ್ನು ಪರಾಮರ್ಶಿಸಿದ ಮೇಲೆ ಪೂರ್ಣ ನ್ಯಾಯಪೀಠವು, ಪ್ರಾಥಮಿಕ ಶಿಕ್ಷಣವನ್ನು, ಎಂದರೆ, ಮೊದಲ ನಾಲ್ಕು ವರ್ಷಗಳವರೆಗೆ ಮಾತೃ ಭಾಷೆಯಲ್ಲೇ ಶಿಕ್ಷಣ ಪಡೆಯಲು ತಮಗೆ ಮೂಲಭೂತ ಹಕ್ಕು ಇದೆಯೆಂಬ ಅರ್ಜಿದಾರರುಗಳ ವಾದವನ್ನು ಒಪ್ಪಿಕೊಂಡಿತು. ತೀರ್ಪಿನ ಸುಸಂಗತ ಭಾಗಗಳೆಂದರೆ ೨೬, ೨೭, ೨೮ ಹಾಗೂ ೪೭ನೇ ಪ್ಯಾರಾಗಳು. ಅವು ಹೀಗಿವೆ :
“ಆದ್ದರಿಂದ, ಪ್ರಾಥಮಿಕ ಶಿಕ್ಷಣದ ವಿಷಯದಲ್ಲಿ ಸಂಪೂರ್ಣ ಒಮ್ಮತಾಭಿಪ್ರಾಯ ಇರುವುದನ್ನು ನಾವು ನೋಡಬಹುದಾಗಿದೆ. ಮಕ್ಕಳಿಗೆ ಅವರ ಮಾತೃ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ಸೌಲಭ್ಯವನ್ನು ಕೊಡಲೇಬೇಕಾಗುತ್ತದೆ ಎನ್ನುವುದೇ ಆ ಅಭಿಪ್ರಾಯ. ಈ ಮೊದಲೇ ಹೇಳಿರುವಂತೆ, ರಾಜ್ಯಗಳ ಪುನರ್ ಸಂಘಟನಾ ಆಯೋಗವು ಭಾಷಾವಾರು ರಾಜ್ಯಗಳ ರಚನೆಯ ಸಂದರ್ಭದಲ್ಲಿ ವಿಷಯದ ಈ ಅಂಶಕ್ಕೆ ಅತ್ಯಂತ ಪ್ರಾಮುಖ್ಯತೆಯನ್ನು ಕೊಟ್ಟಿತ್ತು ಮತ್ತು ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವುದಕ್ಕಾಗಿ ಕ್ರಮ ತೆಗೆದುಕೊಳ್ಳಲು ಪ್ರತಿಯೊಂದು ಭಾಷಾವಾರು ರಾಜ್ಯದ ಮೇಲೂ ಒಂದು ಸಂವಿಧಾನಾತ್ಮಕ ಹೊಣೆಗಾರಿಕೆಯನ್ನು ವಿಧಿಸಲೇಬೇಕಾಗುತ್ತದೆಯೆಂಬ ಖಚಿತ ಅಭಿಪ್ರಾಯಕ್ಕೆ ಬಂದಿತ್ತು. ಈ ಶಿಫಾರಸಿನ ಬೆಳಕಿನಲ್ಲಿ, ೩೫೦ಎ ಅನುಚ್ಛೇದನವನ್ನು (ಈ ಮೊದಲೇ ಉದ್ಧೃತ ಭಾಗವಾಗಿ ಕೊಡಲಾಗಿದೆ) ಸಂವಿಧಾನಕ್ಕೆ ಸೇರಿಸಲಾಯಿತು. ಅದು ಅಲ್ಪಸಂಖ್ಯಾತ ಭಾಷಾ ಗುಂಪುಗಳ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣವನ್ನು ಕೊಡಲು ಸಾಕಷ್ಟು ಸೌಲಭ್ಯಗಳನ್ನು ಒದಗಿಸಬೇಕೆಂಬ ಹೊಣೆಗಾರಿಕೆಯನ್ನು ರಾಜ್ಯ ಸರ್ಕಾರಗಳ ಮೇಲಷ್ಟೇ ಅಲ್ಲ, ರಾಜ್ಯ ಸರ್ಕಾರಗಳಲ್ಲಿರುವ ಪ್ರತಿಯೊಂದು ಸ್ಥಳಿಯ ಪ್ರಾಧಿಕಾರಗಳ ಮೇಲೂ ವಿಧಿಸಿದೆ. ಈ ಅನುಚ್ಛೇದದ ದೃಷ್ಟಿಯಿಂದ ರಾಜ್ಯವು ರಾಜ್ಯವು ಅಥವಾ ಸ್ಥಳೀಯ ಪ್ರಾಧಿಕಾರವು ಸ್ಥಾಪಿಸಿರುವ ಅಥವಾ ಅವುಗಳಿಂದ ಹಣಕಾಸು ನೆರವು ಪಡೆಯುತ್ತಿರುವ ಯಾವುದೇ ಶಾಲೆಗೆ ಯಾವುದೇ ವಿಶಿಷ್ಟ ಅಲ್ಪಸಂಖ್ಯಾತ ಭಾಷಾ ಗುಂಪಿಗೆ ಸೇರಿದ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಂಖ್ಯೆಯನ್ನು ಗಮನಿಸಿ ಕಾರ್ಯಸಾಧ್ಯವಾದಾಗ ಹಾಗೂ ಹಣಕಾಸು ದೃಷ್ಟಿಯಿಂದಲೂ ಕಾರ್ಯರೂಪಕ್ಕೆ ತರಬಹುದಾದುದೆಂದು ಮನದಟ್ಟಾದಾಗ, ಈ ಹೊಣೆಗಾರಿಕೆಯನ್ನು ಸರ್ಕಾರವು ಅಥವಾ ಸ್ಥಾಳಿಯ ಪ್ರಾಧಿಕಾರವು ನಿರ್ವಹಿಸಬೇಕಾಗುತ್ತದೆಯಾದರೂ, ಅವುಗಳು ಸ್ಥಾಪಿಸಿರುವ ಅಥವಾ ಅವುಗಳಿಂದ ನೆರವು ಪಡೆಯುತ್ತಿರುವ ಶಾಲೆಗಳಲ್ಲಿ ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಸೌಲಭ್ಯ ಒದಗಿಸುವುದು ಪ್ರತಿಯೊಂದು ರಾಜ್ಯದ, ಹಾಗೆಯೇ ಪ್ರತಿಯೊಂದು ಸ್ಥಳಿಯ ಪ್ರಾಧಿಕಾರದ ಮೇಲಿರುವ ಸಂವಿಧಾನತ್ಮಕ ಹೊಣೆಗಾರಿಕೆಯೆಂದು ವಾದಿಸಲಾಯಿತು. ಈ ಸಂಬಂಧದಲ್ಲಿ, ಮೊದಲು ಹೇಳಿರುವಂತೆ, ಯಾವುದೇ ಭಾಷೆಯಲ್ಲಿ ಶಿಕ್ಷಣ ಒದಗಿಸುವುದಕ್ಕೆ ಅವಕಾಶ ಕಲ್ಪಿಸಲು ಅವಶ್ಯಕವಾದ ವಿದ್ಯಾರ್ಥಿಗಳ ಕನಿಷ್ಟ ಸಂಖ್ಯೆಯನ್ನೂ ಸಹಾ ನಿರ್ಧಿಷ್ಟಪಡಿಸಲಾಗಿದೆ. ವಸ್ತುಸ್ಥಿತಿ ಹೀಗಿರುವಾಗ, ಭಾಷಾ ಅಲ್ಪಸಂಖ್ಯಾತ ಪಂಗಡವೊಂದು ಒಂದು ಶಾಲೆಯನ್ನು ತಾನೇ ಸ್ಥಾಪಿಸಿದಾಗ, ಮಾನ್ಯತೆ ಹಾಗೂ ನೆರವು ನೀಡಿಕೆಯನ್ನು ನಿಯಂತ್ರಿಸುವ ನಿಬಂಧನೆಗಳಿಗನುಸಾರವಾಗಿ ಅದು ಕೋರಿಕೊಂಡರೆ ಮಾನ್ಯತೆ ಹಾಗೂ ಹಣಕಾಸು ನೆರವಿನಂತಹ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು ರಾಜ್ಯ ಒಂದು ಕರ್ತವ್ಯವಾಗಿರುತ್ತದೆ. ಇದು, ನೆರವನ್ನು ಒದಗಿಸುವ ವಿಷಯದಲ್ಲಿ ರಾಜ್ಯವು ಮತೀಯ ಭಾಷಾ ಅಲ್ಪಸಂಖ್ಯಾತರು ಸ್ಥಾಪಿಸಿರುವ ಶೈಕ್ಷಣಿಕ ಸಂಸ್ಥೆಗಳಿಗೆ ತಾರತಮ್ಯ ಮಾಡತಕ್ಕದ್ದಲ್ಲವೆಂದು ಹೇಳಿರುವ ೩೦ನೆಯ ಅನುಚ್ಛೇದದ (೨)ನೆಯ ಕಲಂನಿಂದ ಅತ್ಯಂತ ಸ್ಪಷ್ಟವಾಗುತ್ತದೆ.
೨೭. ಪ್ರಾಥಮಿಕ ಶಿಕ್ಷಣವನ್ನು ಯಾವ ಶಾಲೆಯಲ್ಲಿ ಕೊಡಿಸಬೇಕು ಮತ್ತು ಭಾಷೆಯು ಯಾವುದಿರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವುದು ತಂದೆ ತಾಯಿಯರಿಗಿರುವ ಹಕ್ಕು ಎನ್ನುವುದು ಸಾರ್ವತ್ರಿಕವಾಗಿ ಸ್ಥಿರಪಟ್ಟಿರುವ ವಿಷಯವಾಗಿದೆ. ಈ ಅಂಶವನ್ನು ಸಂತ ಕ್ಸೇವಿಯರ್ ಕಾಲೇಜ್-ವಿರುದ್ಧ-ಗುಜರಾತ್ ರಾಜ್ಯ (ಎಐಆರ್ ಸರ್ವೋನ್ಯಾ ೧೩೮೯) ಮೊಕದ್ದಮೆಯಲ್ಲಿ ನ್ಯಾಯಮೂರ್ತಿ ಮ್ಯಾಥ್ಯೂ ಅವರು ನಿರೂಪಿಸಿದ್ದಾರೆ. ೧೪೧ ಮತ್ತು ೧೪೨ ಪ್ಯಾರಾಗಳಲ್ಲಿರುವ ತೀರ್ಪಿನ ಸುಸಂಗತ ಭಾಗ ಹೀಗಿದೆ:
೧೪೧. ಸಾರ್ವಜನಿಕ ಶಾಲೆಗಳಿಗೆ ಮಾತ್ರವೇ ಮಕ್ಕಳು ಹೋಗಬೇಕೆಂದು ಒತ್ತಾಯಿಸುವ ಮೂಲಕ ಅವರನ್ನು ಒಂದೇ ಮಟ್ಟಕ್ಕೆ ತರುವ ಸಮಾಜಾಧೀನ ಮಾಡುವ ರಾಜ್ಯದ ಯಾವುದೇ ಅಧಿಕಾರಕ್ಕೆ ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಪರಿಕಲ್ಪನೆಯಲ್ಲಿ ಸ್ಥಾನ ಇಲ್ಲ. ಮಗು ಕೇವಲ ರಾಜ್ಯದ ಸೃಷ್ಟಿಯಲ್ಲ. ಯಾರು ಅದನ್ನು ಪೋಷಿಸುತ್ತಿರುತ್ತಾರೋ ಮತ್ತು ಅದರ ಭವಿಷ್ಯವನ್ನು ರೂಪಿಸಲು ದಾರಿ ತೋರಿಸುತ್ತಿರುತ್ತಾರೋ ಅವರಿಗೆ, ಹೆಚ್ಚಿನ ಕರ್ತವ್ಯವನ್ನು ಗುರುತಿಸುವುದರೊಂದಿಗೆ ಹೆಚ್ಚಿನ ಹೊಣೆಗಾರಿಕೆಯನ್ನು ನಿಭಾಯಿಸಲು ಅದನ್ನು ಸಿದ್ಧವಾಗಿರುವಂತೆ ಮಾಡುವ ಹಕ್ಕಿನೊಂದಿಗೆ ಮಹತ್ವದ ಹೊಣೆಗಾರಿಕೆಯೂ ಇರುತ್ತದೆ. ನೋಡಿ : ಪಿಯರ್ಸೆ-ವಿರುದ್ಧ-ಸಿಸೈಟಿ ಆಫ್ ಸಿಸ್ಟರ್‍ಸ್ ಆಫ್ ಹೋಲಿ ನೇಮ್ಸ್, (೧೯೨೪) ಯುಎಸ್ ೫೧೦, ೫೩೫).
೧೪೨. ಶಿಕ್ಷಣದ ವಿಷಯದಲ್ಲಿ ತಂದೆತಾಯಿಯರಿಗಿರುವ ಹಕ್ಕು ಪ್ರಜಾಪ್ರಭುತ್ವವಾದಿ ಶಿಕ್ಷಣದ ಹಾಗೂ ಸಾಂಸ್ಕೃತಿಕ ಸಂಪೂರ್ಣತ್ವದ ಅಖಂಡ ವ್ಯವಸ್ಥೆಯ ನಡುವಿನ ವ್ಯತ್ಯಾಸದ ಒರೆಗಲ್ಲಾಗಿದೆ.
ಆದ್ದರಿಂದ ರಾಜ್ಯವು, ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಳ್ಳುವ ಆಯ್ಕೆಯನ್ನು ತಂದೆತಾಯಂದಿರಿಗೆ ಮತ್ತು ಅವರ ಮಕ್ಕಳಿಗೆ ಬಿಡಬೇಕಾಗುತ್ತದೆ. ರಾಜ್ಯವು ಆ ಹಕ್ಕನ್ನು ಹಾಗೂ ಸ್ವಾತಂತ್ರ್ಯವನ್ನು ಮೊಟುಕುಗೊಳಿಸುವಂತಿಲ್ಲ.
೨೫. ಆಯಾ ರಾಜ್ಯದ ಪ್ರಾದೇಶಿಕ / ಆಡಳಿತ ಭಾಷೆಯು ಮಾತೃ ಭಾಷೆಯಾಗಿರುವ ಮಕ್ಕಳು ಹಾಗೂ ಆ ಭಾಷೆಗಿಂತಲೂ ಬೇರೆಯದೇ ಆದ ಭಾಷೆಯು ಮಾತೃ ಭಾಷೆಯಾಗಿರುವ ಮಕ್ಕಳು ಪ್ರಾಥಮಿಕ ಶಿಕ್ಷಣದ ವಿಷಯದಲ್ಲಿ ಬೇರೆ ಬೇರೆ ಪರಿಸ್ಥಿತಿಗಳಲ್ಲಿರುತ್ತಾರೆ. ಇದು ಎಲ್ಲಾ ತಜ್ಞರು, ಆಯೋಗಗಳು ಹಾಗೂ ಸರ್ಕಾರಗಳು ವ್ಯಕ್ತಪಡಿಸಿರುವ ಒಮ್ಮತದ ಅಭಿಪ್ರಾಯವಾಗಿದೆ. ಸಂವಿಧಾನವೇ ೩೫೦-ಎ ಅನುಚ್ಛೇದದ ಮೂಲಕ ಈ ವರ್ಗೀಕರಣಕ್ಕೆ ಮಾನ್ಯತೆ ನೀಡಿದೆ. ಆದ್ದರಿಂದ, ಭಾಷಾ ಅಲ್ಪಸಂಖ್ಯಾತರು ಸ್ಥಾಪಿಸಿರುವ ಪ್ರಾಥಮಿಕ ಶಾಲೆಗಳೂ ಸೇರಿದಂತೆ ಈ ರಾಜ್ಯದಲ್ಲಿರುವ ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಿಗೂ ಕನ್ನಡವನ್ನು ವ್ಯಾಸಂಗ ಮಾಡಬೇಕೆಂದು ಒತ್ತಾಯ ಮಾಡುವ ಸರ್ಕಾರದ ಯಾವುದೇ ಕೃತ್ಯವು ಅಸಮಂಜಸವಾದುದು ಹಾಗೂ ಸ್ವೇಚ್ಛಾನುಸಾರದ್ದಾಗುವುದಷ್ಟೇ ಅಲ್ಲ, ತಾರತಮ್ಯಪೂರಿತವಾದದ್ದು ಸಹ ಆಗುತ್ತದೆ. ಆದ್ದರಿಂದ, ಭಾರತ ಸಂವಿಧಾನದ ೧೪ನೆಯ ಅನುಚ್ಛೇದವನ್ನು ಉಲ್ಲಂಘಿಸುತ್ತದೆ.
*
*
*
೪೭. ಪ್ರತಿಪಕ್ಷದ ವಾದಗಳನ್ನು ಕಾಳಜಿಪೂರ್ವಕವಾಗಿ ಪರಿಶೀಲಿಸಿದ ಮೇಲೆ ಮತ್ತು ಸರ್ವೋಚ್ಛ ನ್ಯಾಯಾಲಯದ ಮೇಲ್ಕಂಡ ತೀರ್ಪುಗಳಲ್ಲಿ ನಿರೂಪಿಸಿರುವ ತತ್ವಗಳ ಬೆಳಕಿನಲ್ಲಿ ಅವುಗಳನ್ನು ಪರಿಶೀಲಿಸಿದ ಮೇಲೆ, ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಲಿಗೆ ಒಂದು ಹೆಚ್ಚುವರಿ ಭಾಷೆಯನ್ನು ಹೇರಕೂಡದೆಂದು ಹೇಳಿರುವ ಆಯೋಗಗಳ ಮತ್ತು ಸಮಿತಿಗಳ ಒಮ್ಮತದ ಅಭಿಪ್ರಾಯಕ್ಕೆ ವಿರುದ್ಧವಾಗಿ, ಪ್ರಾಥಮಿಕ ಶಾಲೆಗಳ ಮೊದಲನೆಯ ವರ್ಷದಿಂದಲೇ ಭಾಷಾವಾರು ಅಲ್ಪಸಂಖ್ಯಾತರ ಮಕ್ಕಳಿಗೆ ಕನ್ನಡವನ್ನು ಕಡ್ಡಾಯ ಮಾಡಿರುವಷ್ಟರ್ ಅಮಟ್ಟಿಗೆ, ಸರ್ಕಾರಿ ಆದೇಶವು ಮೂರು ಕಾರಣಗಳಿಗಾಗಿ ಸಂವಿಧಾನದ ೨೯ ಮತ್ತು ೩೦ನೇ ಅನುಚ್ಛೇದಗಳಡಿ ಖಾತ್ರಿ ಕೊಟ್ಟಿರುವ ಮೂಲಭೂತ ಹಕ್ಕುಗಳಿಗೆ ಅಸಂಗತವಾದುದಾಗುತ್ತದೆ ಮತ್ತು ಆ ಹಕ್ಕುಗಳನ್ನು ಉಲ್ಲಂಘಿಸುತ್ತದೆಂಬುದು ನಮಗೆ ಮನವರಿಕೆಯಾಗಿದೆ :
ಮೊದಲನೆಯದಾಗಿ, ಅವು ನಿಯಂತ್ರಣಾತ್ಮಕ ಸ್ವರೂಪದವುಗಳಲ್ಲ. ಆದರೆ, ಅತಿಕ್ರಮಿಸುವಂಥವುಗಳಾಗಿವೆ. ಎರಡನೆಯದಾಗಿ ಅವು, ಅಲ್ಪಸಂಖ್ಯಾತರ ಹಿತದೃಷ್ಟಿಗನುಗುಣವಾಗಿಲ್ಲ, ಏಕೆಂದರೆ, ಮಕ್ಕಳ ಹಿತದೃಷ್ಟಿಯನ್ನೇ ತೆಗೆದುಕೊಂಡರೆ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ತಮ್ಮ ಮಾತೃಭಾಷೆಯಲ್ಲೇ ಪಡೆಯಬೇಕೆಂಬುದು ಒಪ್ಪಿಕೊಂಡಿರುವ ತತ್ವವಾಗಿದೆ. ಮೂರನೆಯದಾಗಿ, ಈ ವಿಷಯದಲ್ಲಿ ೩೦ನೇ ಅನುಚ್ಛೇದದಡಿ ಆಯ್ಕೆಯು ಅಲ್ಪಸಂಖ್ಯಾತರ ಗುಂಪಿನವರೇ ಮಾಡಿಕೊಳ್ಳುವ ಆಯ್ಕೆಯಾಗಿದೆ. ಅದು, ಸರ್ವೋಚ್ಛ ನ್ಯಾಯಾಲಯವು ತೀರ್ಮಾನಿಸಿರುವಂತೆ ಆಖೈರಾದುದಾಗಿದೆ”.
೪. ಪೂರ್ಣ ನ್ಯಾಯಪೀಠದ ತೀರ್ಪಿನಿಂದ ಮೊದಲ ನಾಲ್ಕು ವರ್ಷಗಳವರೆಗೆ ಮಾತೃ ಭಾಷೆಯಲ್ಲೇ ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವ ಕರ್ತವ್ಯ ರಾಜ್ಯದ ಮೇಲಿರುತ್ತದೆ ಆದ್ದರಿಂದ, ಸರ್ಕಾರಿ ಶಾಲೆಗಳಾಗಿರಲಿ ಅಥವಾ ಸರ್ಕಾರದ ಮಾನ್ಯತೆ ಪಡೆದಿರುವ ಖಾಸಗಿ ಶಾಲೆಗಳಾಗಿರಲಿ, ಸಹಾಯಧನ ಪಡೆಯುತ್ತಿರಲಿ ಅಥವಾ ಇಲ್ಲದಿರಲಿ, ಭಾಷಾ ಅಲ್ಪ ಸಂಖ್ಯಾತರು ಸ್ಥಾಪಿಸಿರಲಿ ಅಥವಾ ಬೇರೆಯವರು ಸ್ಥಾಪಿಸಿರಲಿ, ನಾಲ್ಕನೇ ತರಗತಿಯವರೆಗೆ ಈ ಯಾವುದೇ ಪ್ರಾಥಮಿಕ ಶಾಲೆಗಳಲ್ಲಿ ನಿರ್ಧಿಷ್ಟವಾದ ಮಾತೃ ಭಾಷೆಯನ್ನು ಹೊಂದಿರುವ ಮಕ್ಕಳು, ಗೊತ್ತುಪಡಿಸಿರುವ ಸಂಖ್ಯೆಯಲ್ಲಿ ಪ್ರವೇಶ ಪಡೆದರೆ ಮಾತೃ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣವನ್ನು ಕೊಡಬೇಕು ಎಂಬುದನ್ನು ರಾಜ್ಯವು ಸುನಿಶ್ಚಿತಪಡಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ, ಆಯಾಯ ಮಗುವಿನ ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಈ ಪ್ರತಿಯೊಂದು ಸಂಸ್ಥೆಗಳು ಕೊಡುವಂತೆ ರಾಜ್ಯವು ಕಡ್ಡಾಯಪಡಿಸಬೇಕು.
೫. ಈ ಅರ್ಜಿಗಳು ಈಗ ವಿಚಾರಣೆಗಾಗಿ ಬಂದಿವೆ ಹಾಗೂ ಪೂರ್ಣ ನ್ಯಾಯಪೀಠದ ಅಭಿಪ್ರಾಯಕ್ಕನುಸಾರವಾಗಿ ವಿಲೆ ಮಾಡಬೇಕಾಗಿದೆಯಾದ್ದರಿಂದ ಅವುಗಳನ್ನು ಅಂಗೀಕರಿಸಬೇಕಾಗುತ್ತದೆ.
೬. ಆ ರೀತಿ ಮಾಡುವ ಮೊದಲು, ಮೊದಲ ವರ್ಷದಿಂದ ಇಂಗ್ಲಿಷ್‌ನಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕೊಡುವ ಪ್ರಾಥಮಿಕ ಶಾಲೆಗಳನ್ನು, ಅದೇ ರೀತಿ, ನರ್ಸರಿ ಶಾಲೆಗಳನ್ನೂ ಸ್ಥಾಪಿಸಲು ಅರ್ಜಿದಾರರುಗಳಿಗೆಅನುಮತಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಪರಮಾದೇಶ ನೀಡಿ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್-ವಿರುದ್ಧ-ಕರ್ನಾಟಕ ರಾಜ್ಯ ಮೊಕದ್ದಮೆಯಲ್ಲಿ ನ್ಯಾಯಮೂರ್ತಿ ಬೋಪಣ್ಣ ಅವರು ನೀಡಿರುವ ತೀರ್ಪಿನ ಬಗ್ಗೆ ಸ್ಪಷ್ಟೀಕರಣ ಕೊಡುವುದು ಅವಶ್ಯಕವಾಗಿದೆ. ಸಲ್ಲಿಸಿದ್ದ ನಾಲ್ಕು ಅರ್ಜಿಗಳಲ್ಲಿ ಆ ತೀರ್ಪನ್ನು ನೀಡಲಾಗಿತ್ತು. ಅವುಗಳನ್ನು ನಾಲ್ಕು ಸಂಘಗಳು ಸಲ್ಲಿಸಿದ್ದವು. ಇಂಗ್ಲಿಷ್ ಭಾಷೆಯಲ್ಲಿ ಶಿಕ್ಷಣ ನೀಡುವ ಪ್ರಾಥಮಿಕ ಮತ್ತು/ಅಥವಾ ನರ್ಸರಿ ಶಾಲೆಗಳನ್ನು ಸ್ಥಾಪಿಸಲು ಕೋರಿಕೊಂಡಿದ್ದ ಅವುಗಳ ಮನವಿಯನ್ನು, ೧೯೮೭-೧೯೮೮ನೆಯ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಲು ಯಾವ ಅನುಮತಿಯನ್ನೂ ಕೊಡಬಾರದೆಂದು ಸರ್ಕಾರವು ಕೈಕೊಂಡ ಕಾರ್ಯನೀತಿಯ ತೀರ್ಮಾನದ ದೃಷ್ಟಿಯಿಂದ ತಿರಸ್ಕರಿಸಲಾಗಿತ್ತು. ಅಲ್ಲಿನ ಅರ್ಜಿದಾರರುಗಳ ಮುಖ್ಯವಾದ ವಾದವೇನೆಂದರೆ, ನಿರಾಕರಣೆಯು ತಾರತಮ್ಯದ್ದಾಗಿದೆ, ಏಕೆಂದರೆ, ಅಂಥ ಅನುಮತಿಯನ್ನು ಕೆಲವು ಇತರ ಸಂಸ್ಥೆಗಳಿಗೆ ನೀಡಲಾಗಿದೆ. ಹೀಗಾಗಿ ಸಂವಿಧಾನದ ೧೪ನೆಯ ಅನುಚ್ಛೇದವನ್ನು ಉಲ್ಲಂಘಿಸುತ್ತದೆ ಎನ್ನುವುದಾಗಿದೆ. ಇತರರಿಗೆ ಅಂಥ ಅನುಮತಿಯನ್ನು ಕೊಟ್ಟಿರುವ ಆದೇಶಗಳ ಪ್ರತಿಗಳನ್ನು ಆ ಅರ್ಜಿಗಳಲ್ಲಿ ಒದಗಿಸಲಾಗಿತ್ತು. ವರದಿಯ ೨೧೯೮-೨೧೯೯ನೆಯ ಪುಟಗಳಲ್ಲಿ ಅವುಗಳನ್ನು ಉಲ್ಲೇಖಿಸಲಾಗಿದೆ. ಮನವಿಯು ಸಾಧಾರವಾದುದಾಗಿದೆ, ವಿಷಯದ ಮೇಲೆ ಯಾವುದೇ ಏಕರೂಪದ ನೀತಿಯನ್ನು ರೂಪಿಸಲಾಗಿಲ್ಲ ಹಾಗೂ ಅನುಸರಿಸಲಾಗಿಲ್ಲ. ಆದ್ದರಿಂದ, ತಿರಸ್ಕರಿಸಿರುವುದು ಸಂವಿಧಾನದ ೧೪ನೆಯ ಅನುಚ್ಛೇದವನ್ನು ಉಲ್ಲಂಘಿಸುತ್ತದೆಯೆಂದು ಮಾನ್ಯ ನ್ಯಾಯಮೂರ್ತಿಗಳು ತೀರ್ಪಿತ್ತರು ಹಾಗೂ ಇಂಗ್ಲಿಷ್ ಮಾಧ್ಯಮದ ಹಾಗೂ ಪ್ರಾಥಮಿಕ ಶಾಲೆ/ನರ್ಸರಿ ಶಾಲೆಗಳನ್ನು ಸ್ಥಾಪಿಸಲು ಅರ್ಜಿದಾದರುಗಳಿಗೆ ಅನುಮತಿ ಕೊಡಬೇಕೆಂದು ರಾಜ್ಯ ಸರ್ಕಾರಕ್ಕೆ ಪರಮಾದೇಶ ನೀಡಿದರು.
೭. ಈ ಮೊದಲೇ ಹೇಳಿರುವಂತೆ, ಪೂರ್ಣ ನ್ಯಾಯಪೀಠವು, ಮಾತೃ ಭಾಷೆಯಲ್ಲೇ ಈವ್ ನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ಇರಬೇಕೆಂಬುದು ಎಲ್ಲಾ ಶಿಕ್ಷಣ ತಜ್ಞರ ಒಮ್ಮತದ ಅಭಿಪ್ರಾಯ ಹಾಗೂ ರಾಜ್ಯ ಸರ್ಕಾರವು ಅಂಗೀಕರಿಸಿರುವ ಹಿತಕರವಾದ ಸಮಂಜಸ ಕಾರ್ಯನೀತಿಯಾಗಿರುವುದರಿಂದ, ಭಾಷಾ ಅಲ್ಪಸಂಖ್ಯಾತರು ಮಂಡಿಸಿದ ಮನವಿಯನ್ನು ಒಪ್ಪಿಕೊಳ್ಳುತ್ತಾ ಪ್ರಾಥಮಿಕ ಶಾಲೆಯ ಮೊದಲ ವರ್ಷದಿಂದಲೇ ಕನ್ನಡದ ವ್ಯಾಸಂಗವನ್ನು ಅಗತ್ಯಪಡಿಸುವ ಆಕ್ಷೇಪಿತ ಸರ್ಕಾರಿ ಆದೇಶವು ಸಂವಿಧಾನದ ೧೪,೨೯ ಹಾಗೂ ೩೦ನೆಯ ಅನುಚ್ಛೇದಗಳನ್ನು ಉಲ್ಲಂಘಿಸುತ್ತದೆಂದು ತೀರ್ಪಿತ್ತಿದೆ. ಆದ್ದರಿಂದ, ಪ್ರಾಥಮಿಕ ಶಿಕ್ಷಣವು ಇಂಗ್ಲಿಷ್‌ನಲ್ಲಿರಬೇಕೆಂಬ ಯಾವುದೇ ವಾದವು, ಯಾವ ಆಧಾರದ ಮೇಲೆ ಪೂರ್ಣ ನ್ಯಾಯಪೀಠವು ಆಕ್ಷೇಪಿತ ಆದೇಶವು ಅಸಂವಿಧಾನಾತ್ಮಕವೆಂದು ತೀರ್ಪಿತ್ತಿದೆಯೋ ಆ ಆಧಾರಕ್ಕೆ ಅಸಂಗತವಾದುದಾಗುತ್ತದೆ ಮತ್ತು ಮಾತೃ ಭಾಷೆಯಲ್ಲೇ ಈವ್ನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣವನ್ನು ಕೊಡಬೇಕೆನ್ನುವ ಸಮಂಜಸ ಕಾರ್ಯನೀತಿಗೆ ಹಾಗೂ ಈ ಅರ್ಜಿಗಳಲ್ಲಿರುವ ಭಾಷಾ ಅಲ್ಪಸಂಖ್ಯಾತರ ವಾದಕ್ಕೂ ಸಂಪೂರ್ಣವಾಗಿ ಅಸಂಗತವಾದುದಾಗುತ್ತದೆ. ಅನುಮತಿಯನ್ನು ಕೆಲವು ಅರ್ಜಿದಾರರಿಗೆ ಕೊಡಲಾಗಿದೆ, ಆದರೆ ಇಲ್ಲಿನ ಅರ್ಜಿದಾರರುಗಳಿಗೆ ಕೊಡಲಾಗಿಲ್ಲವೆಂದು, ಹೀಗಾಗಿ ಅನುಮತಿಯ ನೀಡಿಕೆಯ ವಿಷಯದಲ್ಲಿ ತಾರತಮ್ಯವಾಗಿದೆಯೆಂಬ ವಾದದ ಮೇಲೆ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್೨ಮೊಕದ್ದಮೆಯಲ್ಲಿ ನೀಡಿರುವ ತೀರ್ಪು ಆಧಾರ ಗೊಂಡಿತ್ತಾದರೂ, ಅದರಲ್ಲಿ, ಪೂರ್ಣ ನ್ಯಾಯಪೀಠದ ತೀರ್ಮಾನಕ್ಕನುಸಾರವಾಗಿ ೪ನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲೇ ಕೊಡಬೇಕೆಂದು ರಾಜ್ಯ ಸರ್ಕಾರವು ಆದೇಶ ಹೊರಡಿಸುವ ವಿಷಯದಲ್ಲಿ ಅಡ್ಡ ಬರುವ ಕೆಲವು ಇತರೋಕ್ತಿಗಳಿರುವುದರಿಂದ, ಅವುಗಳಿಗೆ ಸ್ಪಷ್ಟೀಕರಣ ಕೊಡಬೇಕಾದ ಅಗತ್ಯವಿದೆ.
೮. ಆ ಉದ್ದೇಶಕ್ಕಾಗಿ, ಕೆಲವೊಂದು ಸುಸಂಗತ ಸನ್ನಿವೇಶಗಳನ್ನು ಹೇಳುವುದು ಅವಶ್ಯಕ. ಬಹುತೇಕ ಕನ್ನಡವನ್ನೇ ಮಾತನಾಡುವ ಜನರಿರುವ ಎಲ್ಲಾ ಪ್ರದೇಶಗಳನ್ನು ಒಂದುಗೂಡಿಸಿ ದಿನಾಂಕ ೧-೧೧-೧೯೫೬ ರಿಂದ ಕರ್ನಾಟಕ ರಾಜ್ಯವನ್ನು ರಚಿಸಲಾಯಿತು. ಆದ್ದರಿಂದ, ಕನ್ನಡವು ಈ ರಾಜ್ಯದ ಪ್ರಾದೇಶಿಕ ರಾಷ್ಟ್ರ ಭಾಷೆಯಾಗಿದೆ. ಯಾವುದೇ ಶಾಸನದಲ್ಲಿ ಆ ವಿಷಯವು ಒಳಗೊಂಡಿಲ್ಲವಾದ್ದರಿಂದ ರಾಜ್ಯ ಸರ್ಕಾರವು ತನ್ನ ಕಾರ್ಯಾಂಗ ಅಧಿಕಾರವನ್ನು ಚಲಾಯಿಸಿ, ೧೯-೧೦-೧೯೬೯ರ ಆದೇಶದ ಮೂಲಕ ಪ್ರಾಥಮಿಕ ಶಾಲೆಗಳ ಸಹಾಯಾನುದಾನ ಸಂಹಿತೆಯನ್ನು ಹೊರಡಿಸಿತ್ತು. ಸಂಹಿತೆಯ ೧೨ನೆಯ ನಿಯಮ ಹೀಗಿದೆ :
“೧೨. ಶಿಕ್ಷಣ ಮಾಧ್ಯಮ : (|) ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಮಾಧ್ಯಮವು ಸಾಮಾನ್ಯವಾಗಿ ಪ್ರಾದೇಶಿಕ ಭಾಷೆ ಅಥವಾ ಮಗುವಿನ ಮಾತೃ ಭಾಷೆ ಆಗಿರತಕ್ಕದ್ದು.
(||) ಭಾಷಾ ಅಲ್ಪಸಂಖ್ಯಾತರಿಗೆ ಸೌಲಬ್ಯಗಳನ್ನು ಒದಗಿಸುವ ದೃಷ್ಟಿಯಿಂದ, ನಿರ್ಧಿಷ್ಟ ಪಡಿಸಿರುವ ಷರತ್ತುಗಳಿಗೊಳಪಟ್ಟು ಅವರ ಮಾತೃ ಭಾಷೆಯಲ್ಲೇ ಭೋಧನೆಗೆ ವ್ಯವಸ್ಥೆ ಮಾಡತಕ್ಕದ್ದು.
ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಅಥವಾ ಈಗಿರುವ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ವಿಭಾಗಗಳನ್ನು, ಈ ಮುಂದೆ ಹೇಳಿರುವ ವಿದ್ಯಾರ್ಥಿ ವರ್ಗಗಳ ಪ್ರಯೋಜನಕ್ಕಾಗಿ ನಿರ್ದೇಶಕರ ಅನುಮತಿಯೊಂದಿಗೆ ಪ್ರಾರಂಭಿಸಬಹುದು :
(|) ಇಂಗ್ಲಿಷ್ ಮಾತೃ ಭಾಷೆಯಾಗಿರುವ ವಿದ್ಯಾರ್ಥಿಗಳು :
(||) ಅಖಿಲ ಭಾರತ ಸೇವೆಗಳು, ಕೇಂದ್ರ ಸೇವೆಗಳು ಇತ್ಯಾದಿಗಳಿಗೆ ಹಾಗೂ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವರ್ಗಾವಣೆಯಾಗುವುದಕ್ಕೆ ಬದ್ಧರಾಗಿರುವ ತಂದೆ ತಾಯಿಯರ ಮಕ್ಕಳು
(ಆಯಾ ಇಲಾಖೆಯಿಂದ ಪ್ರಮಾಣಪತ್ರಗಳನ್ನು ಹಾಜರುಪಡಿಸಬೇಕು) ;
(|||) ವಲಸೆ ಗುಂಪಿಗೆ ಸೇರಿದ ಮಕ್ಕಳು – ವಲಸೆ ಗುಂಪು ಎಂದರೆ ಯಾವ ಖಾಯಂ ವಾಸಸ್ಥಾನವೂ ಇರದವರು ಅಥವಾ ವ್ಯಾಪಾರ – ವ್ಯವಹಾರ ಅಥವಾ ಇತರ ಕಾರಣಗಳಿಂದಾಗಿ ಎಂದರೆ, ನಿರ್ಮಾಣ ಕಾಮಗಾರಿಗಳಲ್ಲಿ ಉದ್ಯೋಗದಲ್ಲಿರುವ ಕಾರ್ಮಿಕರಾಗಿರುವ ಕಾರಣದಿಂದಾಗಿ ಆಗಿಂದಾಗ್ಗೆ ರಾಜ್ಯದಿಂದ ರಾಜ್ಯಕ್ಕೆ ವಲಸೆ ಹೋಗುವವರು ;
(|ವ್) ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿರುವ ಬ್ಯಾಂಕುಗಳು, ಫರ್ಮುಗಳ ಹಾಗೂ ಇತರ ವ್ಯವಹಾರ ಸಂಸ್ಥೆಗಳ ಉದ್ಯೋಗಿಗಳ ಮತ್ತು ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಯಾಗಲು ಬದ್ಧರಾಗಿರುವ ಉದ್ಯೋಗಿಗಳ ಮಕ್ಕಳು (ಆಯಾ ಪ್ರಾಧಿಕಾರಗಳಿಂದ ಪ್ರಮಾಣ ಪತ್ರಗಳನ್ನು ಹಾಜರುಪಡಿಸಬೇಕು) ;
(ವ್) ಸ್ಥಳೀಯ ಶಾಲೆಗಳಲ್ಲಿ ಯಾವ ವ್ಯವಸ್ಥೆಯೂ ಇರದ, ಅಲ್ಪಸಂಖ್ಯಾತ ಭಾಷೆಯು ಮಾತೃ ಭಾಷೆಯಾಗಿರುವ ಮಕ್ಕಳು ;
(ವ್|) ಅಂಥ ಶಾಲೆಗಳನ್ನು ನಿರ್ದೇಶಕರ ಅನಿಮತಿ ಪಡೆದುಕೊಂಡಾದ ಮೇಲೆಯೇ ಪ್ರಾರಂಭಿಸಬೇಕು ; ಮತ್ತು
(ವ್||) ಇಂಗ್ಲಿಷ್ ಮಾಧ್ಯಮದ ಶಾಲೆಯನ್ನು ಅಥವಾ ತರಗತಿಯನ್ನು. ೧ರಿಂದ |ವ್ ರವರೆಗಿನ ತರಗತಿಗಳನ್ನು ಒಟ್ಟಾಗಿ ತೆಗೆದುಕೊಂಡರೆ ಪ್ರತಿ ತರಗತಿಯಲ್ಲಿಯೂ ಕನಿಷ್ಠ ಸಂಖ್ಯೆ ೧೦ ಅಥವಾ ೩೦ ಇರಬೇಕೆಂಬ ಷರತ್ತಿಗೊಳಪಟ್ತು ಪ್ರಾರಂಭಿಸಲು ಅನುಮತಿ ಕೊಡಬಹುದು. ವ್ ರಿಂದ ವ್||ನೇ ತರಗತಿಯವರೆಗಿನ ತರಗತಿಗಳಿಗೆ ಕನಿಷ್ಠ ಸಂಖ್ಯೆ ಪ್ರತಿ ತರಗತಿಗೆ ೧೦ ಇರತಕ್ಕದ್ದು.”
ನಿಯಮದ ಮೊದಲ ಭಾಗದಿಂದ ಎಂದರೆ, ನಿಯಮ ೧೨ (|) ಮತ್ತು (||) ರಿಂದ ಕಂಡುಬರುವಂತೆ, ಹೆಚ್ಚಿನ ಸಂದರ್ಭದಲ್ಲಿ ಪ್ರಾದೇಶಿಕ ಭಾಷೆಯೇ ಆಗಿರುವ, ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕೊಡುವ ನೀತಿಯನ್ನು ಸೇರಿಸಲಾಗಿದೆ. ಪೂರ್ಣ ನ್ಯಾಯಪೀಠದ ತೀರ್ಪಿನ೧೪ನೆಯ ಪ್ಯಾರಾದಲ್ಲಿ ನಿರೂಪಿಸಿರುವಂತೆ ಪ್ರಾಥಮಿಕ ಶಿಕ್ಷಣವು ಪ್ರಾದೇಶಿಕ ಭಾಷೆ ಅಥವಾ ಮಾತೃ ಭಾಷೆಯಲ್ಲಿ ಆಗಬೇಕೆಂದು, ಏಕೆ ಸ್ಪಷ್ಟವಾಗಿ ನಿಗದಿಪಡಿಸಲಾಗಿದೆಯೆಂದರೆ, ರಾಜ್ಯದ ಖಾಯಂ ನಿವಾಸಿಗಳ ಮಕ್ಕಳು, ತಮ್ಮ ಬಾಲ್ಯಾವಸ್ಥೆಯಿಂದಲೇ ಪ್ರಾದೇಶಿಕ ಭಾಷೆಯನ್ನು ಕಲಿತುಕೊಳ್ಳುತ್ತಾರೆ ಹಾಗೂ ಅದು ಅವರ ಹೆಚ್ಚುವರಿ ಮಾತೃ ಭಾಷೆಯಾಗುತ್ತದೆಯೆಂಬ ಕಾರಣದಿಂದ. ವಾಸ್ತವವಾಗಿ, ಮರಾಠಿ, ಉರ್ದು, ತಮಿಳು ಮತ್ತು ತೆಲುಗನ್ನು ಪ್ರತಿನಿಧಿಸುವ ಭಾಷಾ ಅಲ್ಪಸಂಖ್ಯಾತರಲ್ಲಿ ಬಹು ಮಂದಿ ಬಹಳ ಕಾಲದಿಂದಲೂ ಈ ರಾಜ್ಯದ ನಿವಾಸಿಗಳಾಗಿದ್ದಾರೆ ಮತ್ತು ಪ್ರಾದೇಶಿಕ ಭಾಷೆಯನ್ನು ಎಂದರೆ ಕನ್ನಡವನ್ನು ತಮ್ಮ ಎರಡನೆಯ ಮಾತೃ ಭಾಷೆಯಾಗಿ ವ್ಯಾವಹಾರಿಕವಾಗಿ ಅಳವಡಿಸಿಕೊಂಡಿರುತ್ತಾರೆ ಎನುವುದು ಸರ್ವವಿದಿತ ತಿಳಿವಳಿಕೆಯೇ. ತುಳು ಮತ್ತು ಕೊಂಕಣಿಯಂಥ ಅಲ್ಪಸಂಖ್ಯಾತ ಭಾಷೆಯು ಮಾತೃ ಭಾಷೆಯಾಗಿರುವ, ಈ ರಾಜ್ಯದ ಕೆಲವು ವರ್ಗಗಳ ಜನರ ವಿಷಯದಲ್ಲೂ ಪರಿಸ್ಥಿತಿ ಅದೇ ಇರುತ್ತದೆ. ಅಂಥ ವರ್ಗದ ಜನರ ಮಕ್ಕಳಿಗೆ ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಕೊಡುವುದು ಅವರ ಮಾತೃ ಭಾಷೆಯಲ್ಲಿ ಕೊಟ್ಟಂತೆಯೇ ಆಗುತ್ತದೆ. ಪೂರ್ಣ ನ್ಯಾಯ ಪೀಠವು ಅಭಿಪ್ರಾಯಪಟ್ಟಿರುವಂತೆ, ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕೆಂಬುದುಎಲ್ಲ ಶೈಕ್ಷಣಿಕ ತಜ್ಞರ ಒಮ್ಮತದ ಅಭಿಪ್ರಾಯವಾಗಿದೆ. ಇದರ ಉದ್ದೇಶವೆಂದರೆ, ತಮ್ಮ ತಾಯಿತಂದೆಯರೊಂದಿಗೆ, ಕುಟುಂಬದವರೊಂದಿಗೆ ಹಾಗೂ ಬಂಧು ಬಳಗದವರೊಂದಿಗೆ ಮತ್ತು ತಮ್ಮೊಂದಿಗೆ ಆಟವಾಡುತ್ತಿರುವವರೊಂದಿಗೆ ಯಾವ ಭಾಷೆಯ ಮೂಲಕ ಮಾತನಾಡುತ್ತಿರುತ್ತಾರೋ ಆ ತಮ್ಮ ಮಾತೃ ಭಾಷೆಯಲ್ಲಿಯೇ ಮಕ್ಕಳಿಗೆ ಪೂರ್ವ ಪ್ರಾಥಮಿಕ ಮಟ್ಟವೂ ಸೇರಿದಂತೆ ನಾಲ್ಕನೇ ತರಗತಿಯವರೆಗೆ ಶಿಕ್ಷಣ ಕೊಡುವುದರಿಂದ ಮಕ್ಕಳು ಯಾವುದೇ ತೊಂದರೆ ಇಲ್ಲದೆಯೆ ಸ್ಪಷ್ಟವಾಗಿ ಆಲೋಚಿಸಬಲ್ಲವರಾಗಿರುತ್ತಾರೆ ಮತ್ತು ವಿಷಯಗಳನ್ನು ಗ್ರಹಿಸಬಲ್ಲವರಾಗಿರುತ್ತಾರೆ ಹಾಗೂ ಆ ಮಟ್ಟದಲ್ಲಿ ಅವರ ಮಾತೃ ಭಾಷೆಯಲ್ಲೇ ಬೋಧಿಸಿದರೆ ಸಹಜ ಪರಿಸರದಲ್ಲಿ ಸೃಜನಾತ್ಮಕ ಪ್ರತಿಭೆಯನ್ನು ಹಾಗೂ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ. ಆದ್ದರಿಂದ, ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕೊಡಲು ಕಲ್ಪಿಸಿರುವ ಸಹಾಯಾನುದಾನ ಸಂಹಿತೆಯ ೧೨(|) ಮತ್ತು(||)ನೇ ನಿಯಮವು ಹಿತಕರವಾದುದಾಗಿದೆ ಮತ್ತು ಅದಕ್ಕೆ ಸಮಂಜಸ ಆಧಾರವಿದೆ. ಅದು ಶಿಕ್ಷಣದಲ್ಲಿ ಉನ್ನತ ಗುಣಮಟ್ಟವನ್ನು ಕಾಪಾಡಿಕೊಂಡು ಬರುವ ಹಾಗೂ ಈ ರಿಟ್ ಅರ್ಜಿಗಳಲ್ಲಿ ಅರ್ಜಿದಾರರುಗಳಾಗಿರುವ ಮತ್ತು ಆ ಮಟ್ಟದಲ್ಲಿ ಮಾತೃ ಭಾಷೆಯಲ್ಲಿ ಶಿಕ್ಷಣ ಕೊಡುವುದಕ್ಕಾಗಿ ಪ್ರಾಥಮಿಕ ಶಾಲೆಗಳನ್ನು ಸ್ಥಾಪಿಸಿರುವ ಭಾಷಾ ಅಲ್ಪಸಂಖ್ಯಾತರ ಹಿತದೃಷ್ಟಿಗನುಗುಣವಾಗಿದೆ. ವಾಸ್ತವವಾಗಿ, ಇದೇ, ಪ್ರಶ್ನೆಯಲ್ಲಿರುವ ಸರ್ಕಾರಿ ಆದೇಶವನ್ನು ಪ್ರಶ್ನಿಸುವುದಕ್ಕೆ ಅವರಿಗೆ ಆಧಾರವಾಗಿದೆ. ಪ್ರಾಥಮಿಕ ಶಿಕ್ಷಣದ ಮೊದಲ ನಾಲ್ಕು ವರ್ಷಗಳಲ್ಲಿ ತಮ್ಮ ಮಾತೃ ಭಾಷೆಯಲ್ಲೇ ಶಿಕ್ಷಣವನ್ನು ಪಡೆದುಕೊಳ್ಳುವ ಹಕ್ಕನ್ನು ಮತ್ತು ರಾಜ್ಯದ ಪ್ರಾದೇಶಿಕಮತ್ತು ಆಡಳಿತ ಭಾಷೆಯಾಗಿರುವ ಕನ್ನಡವನ್ನು ಆ ಹಂತದಲ್ಲಿ ತರಬಾರದೆನ್ನುವುದನ್ನು ಪೂರ್ಣ ನ್ಯಾಯ ಪೀಠವು ಎತ್ತಿ ಹಿಡಿದಿದೆ. ಶಿಕ್ಷಣದಲ್ಲಿ ಉನ್ನತ ಮಟ್ಟವನ್ನು ಕಾಪಾಡಿಕೊಂಡು ಬರುವ ಉದ್ದೇಶವನ್ನು ಹೊಂದಿರುವ ಯಾವುದೇ ಸಮಂಜಸ ನಿಯಂತ್ರಣಾತ್ಮಕ ನಿಬಂಧವು, ಹಾಗೆಯೇ ಭಾಷಾ ಅಲ್ಪಸಂಖ್ಯಾತರ ಹಿತದೃಷ್ಟಿಗನುಗುಣವಾಗಿರುವ ನಿಬಂಧನೆಯು ೨೯ ಮತ್ತು ೩೦ನೆಯ ಅನುಚ್ಛೇದಗಳನ್ನು ಉಲ್ಲಂಘಿಸುವುದಿಲ್ಲವೆಂಬುದು ಪೂರ್ಣ ನ್ಯಾಯಪೀಠದ ತೀರ್ಪಿನಲ್ಲಿ ಉಲ್ಲೇಖಿಸಿರುವ ಸರ್ವೋಚ್ಛ ನ್ಯಾಯಾಲಯದ ತೀರ್ಮಾನಗಳಿಂದ ಸ್ಥಿರಪಟ್ಟಿದೆ. ವಾಸ್ತವವಾಗಿ, ಪ್ರಾಥಮಿಕ ಶಿಕ್ಷಣವು ಮಾತೃ ಭಾಷೆಯಲ್ಲೇ ಆಗಬೇಕೆಂಬುದಕ್ಕೆ ಅವಕಾಶ ಕಲ್ಪಿಸಿ ಭಾಷಾ ಅಲ್ಪಸಂಖ್ಯಾತರ ಭಾಷೆಯ ಬೆಳವಣಿಗೆಯನ್ನು ನಿಯಮ ೧೨ (|) ಮತ್ತು (||) ಸುನಿಶ್ಚಿತಗೊಳಿಸುತ್ತದೆ. ಹಾಗೆಯೇ ಪ್ರಶ್ನೆಯಲ್ಲಿರುವ ಸರ್ಕಾರಿ ಆದೇಶವನ್ನು ಅರ್ಜಿದಾರರುಗಳು ಪ್ರಶ್ನಿಸಿರುವುದಕ್ಕೆ ಇರುವ ಆಧಾರವು ಸಹಾಯಾನುದಾನ ಸಂಹಿತೆಯ ೧೨ (|) ಮತ್ತು (||) ನೆಯ ನಿಯಮಕ್ಕೆ ಸುಸಂಗತವಾದುದಾಗಿದೆ ಮತ್ತು ಅದರಿಂದ ಬೆಂಬಲವನ್ನು ಪಡೆಯುತ್ತದೆ.
೯. ಸಹಾಯಾನುದಾನ ಸಂಹಿತೆಯ ೧೨ನೇ ನಿಯಮದ ಎರಡನೆಯ ಭಾಗವು, ಅದರಲ್ಲಿ ಹೇಳಿರುವ ಸನಿವೇಶಗಳಿಗನುಗುಣವಾಗಿ ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಶಾಲೆಯನ್ನು ತೆರೆಯಲು ಅನುಮತಿ ಕೊಡುವುದಕ್ಕೆ ಅವಕಾಶ ಕಲ್ಪಿಸುತ್ತದೆ. ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್೨ ಮೊಕದ್ದಮೆಯಲ್ಲಿ ಹೇಳಿರುವ ಸಂಗತಿಗಳಿಂದ, ೧೯೮೭-೧೯೮೮ನೇ ಶೈಕ್ಷಣಿಕ ವರ್ಷದಿಂದ ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಶಾಲೆಗಳಿಗೆ ಅನುಮತಿ ಕೊಡಬಾರದೆಂಬ ಕಾರ್ಯನೀತಿಯನ್ನು ರಾಜ್ಯ ಸಚಿವ ಸಂಪುಟವು ತೆಗೆದುಕೊಂಡಿರುವುದಾಗಿ ತೋರುತ್ತದೆ. ವರದಿಯು ೨೨೦೦ ಮತ್ತು ೨೨೦೧ ನೇ ಪುಟಗಳಲ್ಲಿ ಅದನ್ನು ಉದ್ಧೃತ ಭಾಗವಾಗಿ ಕೊಡಲಾಗಿದೆ. ಆ ತೀರ್ಮಾನದಲ್ಲೂ ಸಹ ವಿರಳ ಪ್ರಕರಣಗಳಲ್ಲಿ ಮಾತ್ರವೇ ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಅನುಮತಿ ನೀಡಬಹುದೆಂದು ಹೇಳಲಾಗಿದೆ. ಆ ತೀರ್ಮಾನದ ನಂತರ, ತೀರ್ಪಿನಲ್ಲಿ ಹೇಳಿರುವಂತೆ, ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಕೆಲವರಿಗೆ ಅನುಮತಿ ನೀಡಲಾಗಿದ್ದರೂ, ಅದರಲ್ಲಿನ ಅರ್ಜಿದಾರರುಗಳಿಗೆ ಅನುಮತಿಯನ್ನು ನಿರಾಕರಿಸಲಾಗಿತ್ತು ಮತ್ತು ನಿರಾಕರಣೆಗೆ ಕಾರಣಗಳನ್ನು ವಿವರಿಸಿ ಯಾವುದೇ ಆಕ್ಷೇಪಣಾ ವಿವರಣೆಯನ್ನು ದಾಖಲು ಮಾಡಿರಲಿಲ್ಲ ಮತ್ತು ಸರ್ಕಾರವು ಸಚಿವ ಸಂಪುಟದ ತೀರ್ಮಾನದ ಮೇಲೆ ಮಾತ್ರವೇ ಅವಲಂಬಿಸಿತ್ತು. ಆದ್ದರಿಂದ, ಹಾಗೆ ನಿರಾಕರಿಸಿರುವುದು ಸಂವಿಧಾನದ ೧೪ನೆಯ ಅನುಚ್ಛೇದವನ್ನು ಉಲ್ಲಂಘಿಸುತ್ತದೆಂದು ನಿರ್ಣಯಿಸಲಾಯಿತು. ತೀರ್ಪಿನ ಸುಸಂಗತ ಭಾಗವು ಹೀಗಿದೆ :
“ಆದರೆ ಈ ಪ್ರಕರಣದಲ್ಲಿ, ಶಾಸನದಡಿಯಾಗಲಿ ಅಥವಾ ತಜ್ಞ ಅಭಿಪ್ರಾಯದ ಅಧಾರದ ಮೇಲಾಗಲಿ ಕಾರ್ಯನೀತಿಯ ಬಗ್ಗೆ ಯಾವುದೇ ನಿರ್ದಿಷ್ಟ ಸೂತ್ರವನ್ನು ರೂಪಿಸಿಲ್ಲದೇ ಇರುವಾಗ, ಕಾರ್ಯ ನೀತಿಯ ಆಧಾರದ ಮೇಲೆ ಸಚಿವ ಸಂಪುಟವು ಕೈಕೊಂಡಿರುವ ತೀರ್ಮಾನವನ್ನು ಸಂವಿಧಾನದ ೧೪ ಮತ್ತು ೧೯ (೧) (ಜೆ) ಅನುಚ್ಛೇದದ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸಬಹುದಾಗಿದೆ. ಈ ಮೊದಲೇ ಗಮನಿಸಿರುವಂತೆ, ಕಾರ್ಯನೀತಿ ಇತ್ತು ಎಂದಾದರೆ, ಅದು ರಾಜ್ಯದಲ್ಲಿರುವ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಅನ್ವಯವಾಗಬೇಕಾಗುತ್ತದೆ. ಆ ಕಾರ್ಯನೀತಿಯ ಏಕರೂಪದ ಅನ್ವಯ ಇಲ್ಲದಿರುವಾಗ, ಅದು, ಈ ನ್ಯಾಯಾಲಯದ ಮುಂದೆ ಪ್ರಶ್ನಿಸಲು ಗುರಿಯಾಗುತ್ತದೆ ಹಾಗೂ ಈ ನ್ಯಾಯಾಲಯದ ಪರಿಷ್ಕರಣೆಗೆ ಅದನ್ನು ಇಡಬಹುದಾಗಿರುತ್ತದೆ. ಏಕರೂಪವಲ್ಲದ ಮತ್ತು ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ವಸ್ತುನಿಷ್ಠ ಪರಿಶೀಲನೆಯ ಮೇಲೆ ಆಧಾರಿತವಾಗಿರದ ಒಂದು ಕಾರ್ಯನೀತಿಯ ಮೇಲೆ ಆಧಾರಿತವಾಗಿರುವ ರಾಜ್ಯ ಸರ್ಕಾರದ ತೀರ್ಮಾನವು ಸಂವಿಧಾನದ ೧೪ನೆಯ ಅನುಚ್ಛೇದವನ್ನು ಉಲ್ಲಂಘಿಸುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಮತ್ತು ಆ ಆಧಾರದ ಮೇಲೆಯೇ ಅದನ್ನು ಹೊಡೆದುಹಾಕಬೇಕಾಗುತ್ತದೆ”.
(ಅಡಿಗೆರೆ [ಓರೆ ಅಕ್ಷರಗಳು] ನಮ್ಮದು)
ಆದ್ದರಿಂದ ರಾಜ್ಯದಲ್ಲಿರುವ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಅನ್ವಯವಾಗುವ ಯಾವುದೇ ಏಕರೂಪ ನೀತಿಯನ್ನು ಅಳವಡಿಸಿಕೊಂಡಿರಲಿಲ್ಲ, ಮತ್ತು ಈ ಮೂಲಕ ಸಂವಿಧಾನದ (ಉಲ್ಲೇಖ೧೪) ನೇ ಅನುಚ್ಛೇದವನ್ನು ಉಲ್ಲಂಘಿಸಿ ಅಲ್ಲಿನ ಅರ್ಜಿದಾದರುಗಳ ವಿರುದ್ಧ ತಾರತಮ್ಯ ತೋರಲಾಗಿದೆ ಎಂಬ ಆಧಾರದ ಮೇಲೆ ಮಾನ್ಯ ನ್ಯಾಯಮೂರ್ತಿಯವರು ಮೊಕದ್ದಮೆಯನ್ನು ತೀರ್ಮಾನಿಸಿದರು. ಹೀಗಾಗಿ, ಅದು, ಆ ಮೊಕದ್ದಮೆಯ ಸಂಗತಿಗಳಿಗೆ ಸೀಮಿತವಾಗಿದೆ ಮತ್ತು ಒಂದೇ ಮಾತೃ ಭಾಷೆಯ ಮಕ್ಕಳು ನಿರ್ದಿಷ್ಟ ಸಂಖ್ಯೆಯಲ್ಲಿ ಯಾವುದೇ ಶಾಲೆಗಳಲ್ಲಿ ಪ್ರವೇಶ ಪಡೆದುಕೊಂಡಾಗ ಮಾತ್ರವೇ ಅಂಥ ಪ್ರಾಥಮಿಕ ಶಾಲೆಗಳಲ್ಲಿ ನಾಲ್ಕನೆಯ ತರಗತಿಯವರೆಗೆ ಅವರವರ ಮಾತೃಭಾಷೆಯಲ್ಲಿ ಶಿಕ್ಷಣ ಕೊಡಬೇಕೆಂಬ ಷರತ್ತಿಗೊಳಪಟ್ಟು ಪ್ರಾಥಮಿಕ ಶಾಲೆಗಳನ್ನು ತೆರೆಯುವುದಕ್ಕೆ ಅನುಮತಿ ಕೊಡುವ ಏಕರೂಪ ಕಾರ್ಯನೀತಿಯನ್ನು ರಾಜ್ಯ ಸರ್ಕಾರವು ಜಾರಿಜೊಳಿಸುವುದಕ್ಕೆ ಅದು ಅಡ್ಡಿಯಾಗುವುದಿಲ್ಲ.
೧೦. ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ ಮೊಕದ್ದಮೆ (ಉಲ್ಲೇಖ ೨) ಯಲ್ಲಿ ಮಾನ್ಯ ನ್ಯಾಯಮೂರ್ತಿಯವರು, ಅಂಥದ್ದೊಂದು ಏಕರೂಪ ನಿಬಂಧವನ್ನು ಶಾಸನ ರಚನೆಯ ಮೂಲಕ ಮಾತ್ರವೇ ಮಾಡಬಹುದೆಂದು ಅಭಿಪ್ರಾಯಪಟ್ಟಿದ್ದಾರೆ. ತೀರ್ಪಿನ ಸುಸಂಗತ ಭಾಗವು ಹೀಗಿದೆ :
“ಹೀಗೆ , ಸಂವಿಧಾನದ ಮತ್ತು ಸಂಹಿತೆಯ ಈ ನಿಬಂಧಗಳಿಂದ, ರಾಜ್ಯ ಶಾಸನ ಸಭೆಗೆ (ಶಿಕ್ಷಣವು ಒಂದು ಸಮವರ್ತಿ ವಿಷಯವಾಗಿರುವುದರಿಂದ) ಕೊಟ್ಟಿರುವ ಅಧಿಕಾರಿಗಳ ಚಲವಾಣೆಯಲ್ಲಲ್ಲದೇ ಅನ್ಯಥಾ ಸಂವಿಧಾನವು ಆಲೋಚಿಸುವುದಿಲ್ಲ. ರಾಜ್ಯ ವಿಧಾನ ಮಂಡಲವು ಇಂಗ್ಲೀಷಿನಲ್ಲಲ್ಲದೇ ಕನ್ನಡದಲ್ಲಿ ಮಾತ್ರವೇ ಶಿಕ್ಷಣವನ್ನು ಕೊಡಲು ಅವಶ್ಯಕ ಶಾಸನಾತ್ಮಕ ನಿಬಂಧಗಳನ್ನು ಮಾಡುತ್ತದೆಯೆಂಬ ಆಧಾರದ ಮೇಲೆ ಈ ನ್ಯಾಯಾಲಯವು ಮುಂದುವರಿಯಬಹುದಾಗಿದೆ. ಅಂಥ ಶಾಸನವನ್ನು ೧೪ ಮತ್ತು ೧೯(೧) (ಜೆ) ಅನುಚ್ಛೇದಗಳನ್ನು ಉಲ್ಲಂಘಿಸದೆಯೇ ಮಾಡಬಹುದೇ ಎನ್ನುವುದು ಪರಿಶೀಲನೆಗೆ ಉದ್ಭವಿಸಬಹುದು. ಆದರೆ, ಪ್ರಾಥಮಿಕ / ನರ್ಸರಿ ಶಾಲೆಗಳಲ್ಲಿನ ಶಿಕ್ಷಣ ಮಾಧ್ಯಮ ಕುರಿತಂತೆ ಅಂತಹ ಶಾಸನವನ್ನು ರಾಜ್ಯ ಸರ್ಕಾರವು ಮಾಡಿಲ್ಲವೆಂಬುದು ಒಂದು ಸಾಮಾನ್ಯ ಆಧಾರವಾಗಿರುವುದರಿಂದ ಅದು ಈ ಅರ್ಜಿಗಳಲ್ಲಿನ ನಮಗೆ ತೊಂದರೆಯುಂಟುಮಾಡುವುದಿಲ್ಲ. ರಾಜ್ಯ ಸರ್ಕಾರವು, ಈ ಮೊದಲೇ ಗಮನಿಸಿರುವಂತೆ, ಸಂಹಿತೆಯ-ನಿಯಮ ೧೨ (i) ರಲ್ಲಿರುವ ಸಚಿವ ಸಂಪುಟದ ಕಾರ್ಯನೀತಿಯ ಮೇಲೆ ಮಾತ್ರವೇ ತನ್ನ ವಾದವನ್ನು ಆಧರಿಸಿದೆ. ನಿಯಮ ೧೨ (i) ಹೀಗಿದೆ:
“ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣದ ಮಾಧ್ಯಮವು ಸಾಮಾನ್ಯವಾಗಿ ಪ್ರಾದೇಶಿಕ ಭಾಷೆ ಅಥವಾ ಮಾತೃಭಾಷೆ ಆಗಿರತಕ್ಕದ್ದು.”
ಈ ಅಭಿಪ್ರಾಯವು, ಗೌರವಪೂರ್ವಕವಾಗಿ ಹೇಳುವುದಾದರೆ, ರಾಯ್ ಸಾಹೇಬ್ ರಾಮ್ ಜವಯ-ವಿರುದ್ಧ-ಪಂಜಾಬ್ ರಾಜ್ಯ (ಉಲ್ಲೇಖ ೩) ಹಾಗೂ ಮಧ್ಯಪ್ರದೇಶ ರಾಜ್ಯ-ವಿರುದ್ಧ-ಕುಮಾರಿ ನಿವೇದಿತಾ ಜೈನ್೪ ಮೊಕದ್ದಮೆಗಳಲ್ಲಿ ಸರ್ವೋಚ್ಛ ನ್ಯಾಯಾಲಯವು ಇತ್ತಿರುವ ತೀರ್ಪಿನ ನಿರ್ಣಯಾಂಶಕ್ಕೆ ವಿರುದ್ಧವಾಗುತ್ತದೆ. ಈ ಎರಡೂ ತೀರ್ಪುಗಳಲ್ಲಿ ಸರ್ವೋಚ್ಛನ್ಯಾಯಾಲಯವು, ಭಾರತ ಸಂವಿಧಾನದ ೧೬೨ನೇ ಅನುಚ್ಛೇದದಡಿ ರಾಜ್ಯದ ಕಾರ್ಯಾಂಗ ಅಧಿಕಾರವು ಶಾಸಕಾಂಗದ ಅಧಿಕಾರದೊಂದಿಗೆ ಸಮವ್ಯಾಪಕವಾಗಿರುತ್ತದೆ. ಶಾಸನ ಇಲ್ಲದಿರುವಾಗ, ಎಂದರೆ, ಒಂದು ನಿರ್ಧಿಷ್ಟ ಕ್ಷೇತ್ರವು ಶಾಸನದಲ್ಲಿ ಒಳಗೊಂಡಿಲ್ಲದಿದ್ದರೆ, ಆಗ ಕಾರ್ಯಾಂಗವು ಕಾರ್ಯಪ್ರವೃತ್ತವಾಗಬಹುದಾಗಿದೆ ಎಂದು ನಿರ್ಣಯ ನೀಡಿದೆ. ಈ ತೀರ್ಪುಗಳನ್ನು ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ ಮೊಕದ್ದಮೆ೨ರಲ್ಲಿ ಆ ಮಾನ್ಯ ನ್ಯಾಯಮೂರ್ತಿಯವರ ಗಮನಕ್ಕೆ ತಂದಿರಲಿಲ್ಲ. ಟಿ.ಸಿ.ಎಚ್. ವ್ಯಾಸಂಗಕ್ಕೆ ಪ್ರವೇಶಕ್ಕಾಗಿ ಇರುವ ವಿದ್ಯಾರ್ಹತೆಯನ್ನು ಬದಲಾಯಿಸಿ ಸಹಾಯಾನುದಾನ ಸಂಹಿತೆಗೆ ಕಾರ್ಯಾಂಗ ಆದೇಶವೊಂದರ ಮೂಲಕ ತಂದಿದ್ದ ತಿದ್ದುಪಡಿಯನ್ನು ಮುನಿಯಪ್ಪ-ವಿರುದ್ಧ-ಕರ್ನಾಟಕ ರಾಜ್ಯ೫ ಮೊಕದ್ದಮೆಯಲ್ಲಿ, ಅಂಥದೊಂದು ನಿಬಂಧನೆಯನ್ನು ಮಾಡಲು ಕಾರ್ಯಾಂಗವು ಅಧಿಕಾರಯುತವಾಗಿಲ್ಲ, ಅದನ್ನು ಶಾಸನದ ಮೂಲಕ ಮಾತ್ರವೇ ಮಾಡಬೇಕಾಗಿತ್ತು ಎಂಬ ಆಧಾರದ ಮೇಲೆ ಪ್ರಶ್ನಿಸಲಾಗಿತ್ತು. ಅದನ್ನು ಸರ್ವೋಚ್ಛ ನ್ಯಾಯಾಲಯದ ಆ ಎರಡು ತೀರ್ಪುಗಳನ್ನು ಅವಲಂಬಿಸಿ ತಳ್ಳಿಹಾಕಲಾಗಿತ್ತು. ಮುನಿಯಪ್ಪ ಮೊಕದ್ದಮೆಯಲ್ಲಿನ ಆ ವಾದವನ್ನು ತಳ್ಳಿ ಹಾಕಲು ಮಾನ್ಯ ನ್ಯಾಯ ಮೂರ್ತಿಯವರು ಅವಲಂಬಿಸಿದ್ದ ನಿವೇದಿತಾ ಜೈನ್ ಮೊಕದ್ದಮೆ೪ಯಲ್ಲಿ ಸರ್ವೋಚ್ಛ ನ್ಯಾಯಾಲಯವು ಇತ್ತಿರುವ ತೀರ್ಪಿನ ಸುಸಂಗತ ಭಾಗವು ಹೀಗಿದೆ :
ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು
“ಆದ್ದರಿಂದ, ಸಂವಿಧಾನದ ೧೬೨ನೇ ಅನುಚ್ಛೇದದಡಿ ರಾಜ್ಯದ ಕಾರ್ಯಾಂಗ ಅಧಿಕಾರವು, ಯಾವ ವಿಷಯದ ಬಗ್ಗೆ ಕಾನೂನು ಮಾಡಲು ರಾಜ್ಯದ ಶಾಸನ ಸಭೆಗೆ ಅಧಿಕಾರವಿಲ್ಲವೋ ಆ ವಿಷಯಕ್ಕೂ ವ್ಯಾಪಿಸುತ್ತದೆ. ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಕ್ಕಾಗಿ ಅಭ್ಯರ್ಥಿಗಳ ಆಯ್ಕೆ ವಿಷಯವನ್ನು ಒಳಗೊಂಡಿರುವ ಯಾವ ಶಾಸನವೂ ಇಲ್ಲದಿರುವುದರಿಂದ, ಈ ಸಂಬಂಧವಾಗಿ ರಾಜ್ಯ ಸರ್ಕಾರವು ನಿಸ್ಸಂಶಯವಾಗಿಯೂ ಕಾರ್ಯಾಂಗ ಆದೇಶಗಳನ್ನು ಮಾಡಲು ಅಧಿಕಾರಯುತವಾಗಿರುತ್ತದೆ.
೯. ನನ್ನ ಅಭಿಪ್ರಾಯದಲ್ಲಿ, ಆ ಮೊಕದ್ದಮೆಯ ನಿರ್ಣಯಾಂಶವು ಈ ಮೊಕದ್ದಮೆಗಳ ಸಂಗತಿಗಳಿಗೂ ಅಷ್ಟೇ ಬಲವಾಗಿ ಅನ್ವಯವಾಗುತ್ತದೆ. ರಾಜ್ಯ ಸರ್ಕಾರವು ಈ ಮೊದಲೇ ನಿರ್ಧಿಷ್ಟಪಡಿಸಿರುವ ಎಸ್.ಎಸ್.ಎಲ್.ಸಿ ಕನಿಷ್ಠ ವಿದ್ಯಾರ್ಹತೆಯು ಯಾವುದೇ ಶಾಸನಾತ್ಮಕ ನಿಬಂಧಕ್ಕನುಸಾರವಾಗಿರಲಿಲ್ಲ. ಒಂದು ಶಾಸನಾತ್ಮಕವಲ್ಲದ ನಿಬಂಧವಾಗಿರುವ ಸಹಾಯಾನುದಾನ ಸಂಹಿತೆಯಡಿ ಅದನ್ನು ಮಾಡಲಾಗಿತ್ತು. ಮಾನವ ಸಂಪನ್ಮೂಲಗಳ ಮಂತ್ರಾಲಯವು ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಗನುಸಾರವಾಗಿ ಶೈಕ್ಷಣಿಕ ಗುಣಮಟ್ಟಗಳನ್ನು ಹೆಚ್ಚಿಸುವ ದೃಷ್ಟಿಯಿಂದ, ಹೆಚ್ಚಿನ ವಿದ್ಯಾರ್ಹತೆಯನ್ನು ನಿಗದಿಪಡಿಸುವ ಒಂದು ಹೊಸ ನಿಬಂಧನೆಯನ್ನು ಆ ನಿಬಂಧನೆಯ ಬದಲಿಗೆ ತರಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ”.
ಆದ್ದರಿಂದ, ಗೌರವಪೂರ್ವಕವಾಗಿಯೇ ನಾವು, ಶಾಸನದ ಮೂಲಕ ಮಾತ್ರವೇ ರಾಜ್ಯವು ಪ್ರಾಥಮಿಕ ಶಿಕ್ಷಣವನ್ನು ನಿಯಂತ್ರಿಸಬಹುದೆಂದು ಸಹ್ಯಾದ್ರಿ ಎಜುಕೇಷನ್ (ಉಲ್ಲೇಖ ೨)ಮೊಕದ್ದಮೆಯಲ್ಲಿನ ಅಭಿಪ್ರಾಯವು, ಸರ್ವೋಚ್ಛ ನ್ಯಾಯಾಲಯ(ಉಲ್ಲೇಖ ೩)ವು ಘೋಷಿಸಿರುವ ಹಾಗೂ ಮುನಿಯಪ್ಪ ಮೊಕದ್ದಮೆ(ಉಲ್ಲೇಖ೫)ಯಲ್ಲಿ ಅನ್ವಯಿಸಿರುವ ಕಾನೂನಿಗೆ ವ್ಯತಿರಿಕ್ತವಾದುದಾಗುವುದರಿಂದ, ಅದು ಕಾನೂನನ್ನು ಸರಿಯಾಗಿ ನಿರೂಪಿಸುವುದಿಲ್ಲವೆಂದು ಸ್ಪಷ್ಟಪಡಿಸುತ್ತೇವೆ. ಆದ್ದರಿಂದ, ಪೂರ್ಣ ನ್ಯಾಯ ಪೀಠದ ತೀರ್ಮಾನವನ್ನು ಮತ್ತು ಈ ಅರ್ಜಿಗಳಲ್ಲಿ ಮಾಡಿರುವ ಆದೇಶಗಳನ್ನು, ಹಾಗೆಯೇ, ಸೂಕ್ತ ಆದೇಶಗಳನ್ನು ನೀಡುವ ಮೂಲಕ ಏಕರೂಪವಾಗಿ ನಾಲ್ಕನೆಯ ತರಗತಿಯವರೆಗೆ ಮಾತೃಭಾಷೆಯಲ್ಲಿಯೇ ಶಿಕ್ಷಣವನ್ನು ನೀಡುವ ಪ್ರಾಥಮಿಕ ಶಾಲೆಗಳಿಗೆ ಅನುಮತಿ ಕೊಡಬೇಕೆನ್ನುವ ಸಚಿವ ಸಂಪುಟದ ತೀರ್ಮಾನವನ್ನು ಜಾರಿಗೆ ತರಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಏಕೆಂದರೆ, ಒಂದು ಕಾರ್ಯಾಂಗದ ಆದೇಶವನ್ನು ಯಾವುದೇ ತರುವಾಯದ ಕಾರ್ಯಾಂಗದ ಆದೇಶದ ಮೂಲಕ ತಿದ್ದುಪಡಿ ಮಾಡಬಹುದೆನ್ನುವುದೂ ಸಹ ಸ್ಪಷ್ಟ. ನಿಯಮ ೧೨(|), ೧೯೬೯ರಲ್ಲಿ ಘೋಷಿಸಿದ ಸಹಾಯಾನುದಾನ ಸಂಹಿತೆಯ ಒಂದು ಭಾಗವಾಗಿದೆ ಮತ್ತು ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕೊಡಬೇಕೆನ್ನುವ ಒಂದು ಸಾರ್ವತ್ರಿಕ ನೀತಿಯನ್ನು ಅದರಲ್ಲಿ ಸೆರಿಸಲಾಗಿದೆ, ಅದು ಪೂರ್ಣ ನ್ಯಾಯಪೀಠದ ಆಜ್ಞೆಯಲ್ಲಿ ಉದ್ಧೃತ ಭಾಗವಾಗಿ ಕೊಟ್ಟಿರುವ ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ ಮೊಕದ್ದಮೆ(ಉಲ್ಲೇಖ ೩)ಯ ತೀರ್ಪಿನ ಸಂಬಂಧಿಸಿದ ೧೧ನೆಯ ಪ್ಯಾರಾದಲ್ಲಿ ಹೇಳಿರುವಂತೆ ಅದನ್ನು, ೧೯೮೭ ರಲ್ಲಿ ರೂಪಿಸಿದ ಸಚಿವ ಸಂಪುಟದ ನೀತಿಗನುಸಾರವಾಗಿ ತರಲಾಗಿತ್ತು ಎನ್ನುವುದನ್ನು ಸಹ ನಾವು ಸ್ಪಷ್ಟ ಪಡಿಸುತ್ತೇವೆ.
೧೧. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ತೆರೆಯಲು ಅನುಮತಿಯನ್ನು ನಿರಾಕರಿಸಿರುವ ಆದೇಶಗಳು ಸಂವಿಧಾನದ ೧೯(೧)(ಜೆ) ಮತ್ತು ೧೯(೧)(ಎ)ಅನುಚ್ಛೇದಗಳನ್ನು ಉಲ್ಲಂಘಿಸುತ್ತದೆಂದು ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್(ಉಲ್ಲೇಖ ೨)ಮೊಕದ್ದಮೆಯಲ್ಲಿನ ತೀರ್ಪಿನ ೧೬ನೆಯ ಪ್ಯಾರಾದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯವು, ಆ ಮೊಕದ್ದಮೆಯಲ್ಲಿನ ತೀರ್ಮಾನಕ್ಕೆ ಅನವಶ್ಯಕವಾದುದು. ಏಕೆಂದರೆ, ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಶಾಲೆಗಳನ್ನು ತೆರೆಯುವುದಕ್ಕಾಗಿ ಬಂದಿದ್ದ ಇತರರ ಅರ್ಜಿಗಳನ್ನು ಒಪ್ಪಿಕೊಳ್ಳಲಾಗಿದ್ದರೂ ಅದರಲ್ಲಿನ ಅರ್ಜಿದಾರರುಗಳ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂಬ ಆಧಾರದ ಮೇಲೆಯೇ, ೧೪ನೆಯ ಅನುಚ್ಛೇದದ ಉಲ್ಲಂಘನೆಯಾಗಿದೆಯೆಂಬ ಏಕಮಾತ್ರ ಆಧಾರದ ಮೆಲೆ ಮಾತ್ರವೇ ಆ ಮೊಕದ್ದಮೆಯನ್ನು ತೀರ್ಮಾನಿಸಲಾಗಿತ್ತೆಂದು ಅವಲೋಕಿಸುವುದು ಸಹ ಅವಶ್ಯಕವಾಗಿದೆ. ಸರ್ವೋಚ್ಛ ನ್ಯಾಯಾಲಯದ ಹಲವಾರು ತೀರ್ಪುಗಳ ಮೇಲೆ ಅವಲಂಬಿಸಿರುವ, ಪೂರ್ಣ ನ್ಯಾಯಪೀಠದ ತೀರ್ಪಿನಲ್ಲಿ ಎತ್ತಿ ತೋರಿಸಿರುವಂತೆ, ಸಮಂಜಸವಾಗಿರುವ, ಶಿಕ್ಷಣದಲ್ಲಿ ಉನ್ನತ ಮಟ್ಟವನ್ನು ಕಾಪಾಡಿಕೊಂಡು ಬರುವ ಹಿತದೃಷ್ಟಿ ಇರುವ ಅಲ್ಪಸಂಖ್ಯಾತರುಗಳ ಹಿತದೃಷ್ಟಿಗನುಗುಣವಾಗಿರುವ ಯಾವುದೇ ನಿಬಂಧನೆಯು, ಭಾಷಾ ಅಲ್ಪಸಂಖ್ಯಾತರಿಗೆ, ಹಾಗೆಯೇ ಧಾರ್ಮಿಕ ಅಲ್ಪಸಂಖ್ಯಾತರಿಗೆ ತಮ್ಮ ಇಷ್ಟಕ್ಕನುಗುಣವಾದ ಶೈಕ್ಷಣಿಕ ಸಂಸ್ಥೆಗಳನ್ನು ತೆರೆಯಲು ಹಕ್ಕನ್ನು ಕೊಟ್ಟಿರುವ ಸಂವಿಧಾನದ ೩೦ನೆಯ ಅನುಚ್ಛೇದದ ಯಾವ ಉಲ್ಲಂಘನೆಯನ್ನೂ ಮಾಡುವುದಿಲ್ಲ. ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣವನ್ನು ೪ನೆಯ ತರಗತಿಯವರೆಗೆ ಮಾತೃ ಭಾಷೆಯಲ್ಲೇ ಕೊಡುವಂತೆ ಅಗತ್ಯಪಡಿಸುವ ಒಂದು ನಿಬಂಧನೆಯು ಶಿಕ್ಷಣದಲ್ಲಿ ಒಂದು ಉನ್ನತ ಮಟ್ಟ ಇರಬೇಕೆನ್ನುವ ಹಿತದೃಷ್ಟಿಯಿಂದ ಮತ್ತು ಅಲ್ಪಸಂಖ್ಯಾತರ ಹಿತದೃಷ್ಟಿಯನ್ನು ಕಾಪಾಡಬೇಕೆನ್ನುವ ದ್ರೂಷ್ಟಿಯಿಂದ ಒಂದು ಸಮಂಜಸವಾದ ನಿಬಂಧನೆಯಾಗುತ್ತದೆ. ತಮ್ಮ ತಮ್ಮ ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಒದಗಿಸುವ ಹಕ್ಕು ತಮಗಿದೆಯೆಂಬ ಮತ್ತು ಸಂವಿಧಾನದ ೨೯ನೆಯ ಅನುಚ್ಛೇದದಡಿ ತಮ್ಮ ಭಾಷೆಯನ್ನು ಸಂರಕ್ಷಿಸಿಕೊಳ್ಳುವ ಮತ್ತು ಅಭಿವೃದ್ಧಿಪಡಿಸಿಕೊಳ್ಳುವ ತಮ್ಮ ಹಕ್ಕನ್ನು ರಕ್ಷಿಸಿಕೊಳ್ಳಲು ಅಂಥದೊಂದು ನಿಬಂಧನೆಯು ಅವಶ್ಯಕವೆಂಬ ಅರ್ಜಿದಾದರುಗಳ, ಅವರಲ್ಲಿ ಕೆಲವರು ಧಾರ್ಮಿಕ ಅಲ್ಪಸಂಖ್ಯಾತರೂ ಆಗಿರುವ ಭಾಷಾ ಅಲ್ಪಸಂಖ್ಯಾತರುಗಳ, ಹಕ್ಕು ಕೋರಿಕೆಗೆ ಅದು ಅನುಗುಣವಾಗಿದೆ. ೧೪ ಅಥವಾ ೧೯ನೆಯ ಅನುಚ್ಛೇದದಡಿ ಭಾಷಾ ಅಲ್ಪಸಂಖ್ಯಾತರು ಅಥವಾ ಭಾಷಾ ಅಲ್ಪಸಂಖ್ಯಾತರಲ್ಲದವರು ಕೇಳುವ ಪ್ರಾಥಮಿಕ ಶಾಲೆಗಳನ್ನುತೆರೆಯುವ ಹಕ್ಕು ಸಹ ಶಿಕ್ಷಣದಲ್ಲಿ ಉನ್ನತ ಮಟ್ಟವನ್ನು ಕಾಪಾಡಿಕೊಂಡು ಬರುವ ಹಿತದೃಷ್ಟಿಯಿಂದ ಮಾಡಿರುವ ಸಮಂಜಸ ನಿಬಂಧನೆಗೆ ಒಳಪಟ್ಟಿರುವುದರಿಂದ, ಪ್ರಾಥಮಿಕ ಶಾಲೆಯ ನಾಲ್ಕನೆಯ ತರಗತಿಯವರೆಗೆ ಮಕ್ಕಳ ಮಾತೃ ಭಾಷೆಯಲ್ಲಿಯೇ ಶಿಕ್ಷಣವನ್ನು ಕೊಡಲು ಅಗತ್ಯಪಡಿಸುವ ಒಂದು ನಿಬಂಧದಿಂದ ಉಲ್ಲಂಘನೆಯಾಗುವುದಿಲ್ಲ. ವಾಸ್ತವವಾಗಿ, ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ ಮೊಕದ್ದಮೆ(ಉಲ್ಲೇಖ ೨)ಯಲ್ಲಿ ಮಾನ್ಯ ನ್ಯಾಯಮೂರ್ತಿಯವರು, ಪ್ರಾಥಮಿಕ ಶಿಕ್ಷಣವನ್ನು ಮಾತೃ ಭಾಷೆಯಲ್ಲಿ ಕೊಡಲು ರಾಜ್ಯದ ಮೇಲಿರುವ ಹೊಣೆಗಾರಿಕೆಯನ್ನು ಒತ್ತಿ ಹೇಳಿದ್ದಾರೆ :
“೧೪ನೆಯ ಅನುಚ್ಛೇದವು, ಸಂವಿಧಾನವು ಪ್ರಾರಂಭವಾದಾಗಿನಿಂದ ೧೦ ವರ್ಷಗಳ ಕಾಲಾವಧಿಯೊಳಗಾಗಿ ಉಚಿತ ಮತ್ತು ಕಡ್ಡಾಯ ವಿದ್ಯಾಭ್ಯಾಸದ ಸಂವಿಧಾನಾತ್ಮಕ ಗುರಿಯ ಬಗ್ಗೆ ಕಲ್ಪಿಸಿದ್ದರೆ, ೩೫೦ಎ ಅನುಚ್ಛೇದವು ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಶಿಕ್ಷಣದ ಮಾಧ್ಯಮದ ಬಗ್ಗೆ ಭಾಷಾ ಅಲ್ಪಸಂಖ್ಯಾತರಿಗಿರುವ ಹಕ್ಕುಗಳ ಬಗ್ಗೆ ಕಲ್ಪಿಸಿದೆ. ಈ ಎರಡೂ ಸಂವಿಧಾನಗಳನ್ನು ಒಟ್ಟಾಗಿ ಓದಿದರೆ, ಅವು, ಪ್ರಾಥಮಿಕ ಹಂತದಲ್ಲಿ ಭಾಷಾ ಅಲ್ಪಸಂಖ್ಯಾತರ ಗುಂಪುಗಳ ಮಕ್ಕಳ ಮೇಲೆ ಬಹು ಜನಸಮುದಾಯದ ಭಾಷೆಯನ್ನು ಶಿಕ್ಷಣದ ಮಾಧ್ಯಮವಾಗಿ ರಾಜ್ಯ ಸರ್ಕಾರವು ಹೇರುವುದಕ್ಕೆ ಅಧಿಕಾರ ಕೊಡುವುದಿಲ್ಲವೆಂಬುದನ್ನು ಸೂಚಿಸುತ್ತವೆ. ಭಾಷಾ ಅಲ್ಪಸಂಖ್ಯಾತರ ಗುಂಪುಗಳ ಮಕ್ಕಳ ಮಾತೃ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಮಾತೃ ಭಾಷೆಯಲ್ಲೇ ಬೋಧಿಸಲು ವಿಶೇಷ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.”
(ಅಡಿಗೆರೆ [ಓರೆ ಅಕ್ಷರಗಳು] ನಮ್ಮದು)
ಆದ್ದರಿಂದ, ಏಕರೂಪವಾಗಿ ಮತ್ತು ಯಾವುದೇ ತಾರತಮ್ಯ ತೋರದೆಯೆ ಪ್ರಾಥಮಿಕ ಶಾಲೆಗಳಲ್ಲಿ ನಾಲ್ಕನೆಯ ತರಗತಿಯವರೆಗೆ ಮಾತೃ ಭಾಷೆಯಲ್ಲಿಯೇ ಶಿಕ್ಷಣ ಕೊಡಲು ಪ್ರಾಥಮಿಕ ಶಾಲೆಗಳನ್ನು ತೆರೆಯಲು ಅನುಮತಿ ಕೊಡುವ ತನ್ನ ನೀತಿಯನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ ಎನ್ನುವುದನ್ನು ನಾವು ಸ್ಪಷ್ಟಪಡಿಸುತ್ತೇವೆ.
೧೨. ಈಗ, ರಿಟ್ ಅರ್ಜಿ ಸಂಖ್ಯೆ ೧೦೦೬/೧೯೮೩ರ ಬಗ್ಗೆ ಹೇಳುವುದಾದರೆ, ಶ್ರೀ ಮಾಧವರಾವ್ ಅತ್ನೀಕರ್ ಎಂಬ ತನ್ನ ಅಧ್ಯಕ್ಷರಿಂದ ಪ್ರತಿನಿಧಿತವಾಗಿರುವ, ಬೆಳಗಾಂನಲ್ಲಿರುವ ಇಂಗ್ಲಿಷ್ ಮೀಡಿಯಂ ಸ್ಟೂಡೆಂಟ್ಸ್ ಪೇರೆಂಟ್ಸ್ ಅಸೋಸಿಯೇಷನ್ ಎಂಬ ಹೆಸರಿನ ಸಂಘವೊಂದು ಆ ಅರ್ಜಿಯನ್ನು ಸಲ್ಲಿಸಿದೆ. ಈ ಅರ್ಜಿಯಲ್ಲಿ, ಪ್ರಶ್ನೆಯಲ್ಲಿರುವ ಸರ್ಕಾರಿ ಆದೇಶವನ್ನು ರದ್ದು ಮಾಡಬೇಕೆಂಬ ಒಂದೇ ಒಂದು ಪ್ರಾರ್ಥನೆಯನ್ನು ಮಾಡಲಾಗಿದೆ. ಮೇಲೆ ವಿವರಿಸಿರುವ ಏಳು ರಿಟ್ ಅರ್ಜಿಗಳಲ್ಲಿ ನಿರೂಪಿಸಿರುವುದಕ್ಕಿಂತಲೂ ಈ ರಿಟ್ ಅರ್ಜಿಯಲ್ಲಿರುವ ಆಧಾರವು ತೀರಾ ಬೇರೆಯದೇ ಆಗಿದೆ. ರಿಟ್ ಅರ್ಜಿಯ-ಸುಸಂಗತ ಭಾಗವು ಹೀಗಿದೆ :
“೧. ರಿಟ್ ಅರ್ಜಿದಾರ-ಸಂಘವು ಬೆಳಗಾಂನಲ್ಲಿರುವ ಇಂಗ್ಲಿಷ್ ಮೀಡಿಯಂ ಸ್ಟೂಡೆಂಟ್ಸ್ ಪೇರೆಂಟ್ಸ್ ಅಸೋಸಿಯೇಷನ್ ಎಂಬ ಒಂದು ನೊಂದಾಯಿತ ಸಂಘವಾಗಿದೆ. ಈ ಕೆಳಗೆ ಅನುಸೂಚಿಯಲ್ಲಿ ಕೊಟ್ಟಿರುವ ಹಲವಾರು ಶಾಲೆಗಳಲ್ಲಿ ಮೊದಲನೆಯ ತರಗತಿಯಲ್ಲಿ ಓದುತ್ತಿರುವ ೨೦೦೦ ಸಾವಿರ ವಿದ್ಯಾರ್ಥಿಗಳಿದ್ದಾರೆ. ಅವರ ತಂದೆ ತಾಯಿಯರು ಅರ್ಜಿದಾರ-ಸಂಘದ ಸದಸ್ಯರಾಗಿದ್ದಾರೆ. ಅವುಗಳಲ್ಲಿ ೭ ಶಾಲೆಗಳನ್ನು ಕ್ರಿಶ್ಚಿಯನ್ನರು ನಡೆಸುತ್ತಿದ್ದಾರೆ. ಅವರು ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ. ಈ ಶಾಲೆಗಳು ಮೊದಲನೇ ತರಗತಿಯಿಂದ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ನಲ್ಲಿ ಶಿಕ್ಷಣ ಕೊಡುತ್ತಿವೆ.
*
*
*
ಆಧಾರಗಳು
ಎ) ಅನುಬಂಧ-ಎ ಯಲ್ಲಿ ಕೊಟ್ಟಿರುವ ಸರ್ಕಾರಿ ಆದೇಶ ಮತ್ತು ಅನುಬಂಧ-ಬಿ ಯಲ್ಲಿ ಕೊಟ್ಟಿರುವ ಸುತ್ತೋಲೆ ಇವು ಅನುಸೂಚಿಯಲ್ಲಿ ಕೊಟ್ಟಿರುವ ಪ್ರಾಥಮಿಕ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿರುವ ಇಂಗ್ಲಿಷನ್ನು ಬದಲಿಸಿರುವಷ್ಟರ ಮಟ್ಟಿಗೆ ಸಂವಿಧಾನದ ೨೯(೧)ನೆಯ ಅನುಚ್ಛೇದವನ್ನು ಉಲ್ಲಂಘಿಸುತ್ತದೆ. ಅರ್ಜಿದಾರ-ಸಂಘವು ಪ್ರತಿನಿಧಿಸುತ್ತಿರುವ ತಂದೆ ತಾಯಿಯರಲ್ಲಿ, ಸುಮಾರು ೭೦೦ ರಿಂದ ೮೦೦ ರವರೆಗಿನವರ ಮಕ್ಕಳ ಮಾತೃ ಭಾಷೆ ಇಂಗ್ಲಿಷ್ ಆಗಿದೆ. ತಮ್ಮ ತಮ್ಮ ಮನೆಯಲ್ಲಿ ಅವರುಗಳು ಇಂಗ್ಲಿಷನ್ನೇ ಮಾತನಾಡುತ್ತಾರೆ. ಅವರುಗಳು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದಾರೆ. ಈ ಸರ್ಕಾರಿ ಆದೇಶ ಮತ್ತು ಸುತ್ತೋಲೆಗಳು ಇಂಗ್ಲಿಷ್ ಮಾತೃಭಾಷೆಯಾಗಿರುವ ಈ ಮಕ್ಕಳನ್ನು ತೊಂದರೆಗೀಡುಮಾಡುತ್ತವೆ. ಸಂವಿಧಾನದ ೨೯ ಮತ್ತು ೩೦ನೆಯ ಅನುಚ್ಛೇದಗಳಡಿ ಅವರು ರಕ್ಷಣೆಗೆ ಹಕ್ಕುಳ್ಳವರಾಗಿದ್ದಾರೆ.”
೨೯. ಮತ್ತು ೩೦ನೆಯ ಅನುಚ್ಛೇದಗಳ ಮೇಲೆ ಆಧಾರಿತವಾಗಿರುವ ಅರ್ಜಿದಾರರುಗಳ ಹಕ್ಕು ಕೋರಿಕೆಯನ್ನು ಪೂರ್ಣ ನ್ಯಾಯಪೀಠ ತೀರ್ಪಿನ ೫೨ನೆಯ ಪ್ಯಾರಾದಲ್ಲಿ, ಎಂದರೆ ೫೫೦ ಮತ್ತು ೫೫೧ನೆಯ ಪುಟಗಳಲ್ಲಿ ಚರ್ಚಿಸಲಾಗಿದೆ. ಅದು ಹೀಗಿದೆ :
“೫೨ ಅರ್ಜಿಯಲ್ಲಿ, ಇಂಗ್ಲಿಷ್ ಮಾತೃ ಭಾಷೆಯಾಗುಳ್ಳ ೭೦೦ ರಿಂದ ೮೦೦ ಕ್ರಿಶ್ಚಿಯನ್ ತಂದೆ ತಾಯಿಯರನ್ನು ಅರ್ಜಿದಾರ-ಸಂಘವು ಪ್ರತಿನಿಧಿಸುತ್ತದೆ ಎಂದು ಹೇಳಲಾಗಿದೆ. ದೇಶದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತರಾಗಿರುವ ಆಂಗ್ಲೋ-ಇಂಡಿಯನ್‌ರ ಮಾತೃ ಭಾಷೆ ಮಾತ್ರ ಇಂಗ್ಲಿಷ್ ಆಗಿದ್ದು, ಎಲ್ಲಾ ಭಾರತೀಯ ಕ್ರೈಸ್ತರ ಮಾತೃ ಭಾಷೆಯು ಅವರವರ ಸ್ವಂತ ಭಾಷೆಯೇ ಹೊರತು ಇಂಗ್ಲಿಷ್ ಅಲ್ಲವೆಂಬುದು ಚೆನ್ನಾಗಿ ತಿಳಿದಿರುವ ಮತ್ತು ನಿರ್ವಿವಾದದ ವಿಷಯವಾಗಿದೆ. ಆದಾಗ್ಯೂ, ಮೇಲ್ಕಂಡ ವಾದವನ್ನು ಅರ್ಜಿಯಲ್ಲಿ ಮಂಡಿಸಲಾಗಿದೆ. ಅರ್ಜಿದಾರ-ಸಂಘದ ಸದಸ್ಯರಾಗಿರುವ ೭೦೦ ರಿಂದ ೮೦೦ ಜನ ಕ್ರೈಸ್ತ ತಂದೆತಾಯಿಯರ ಮಾತೃ ಭಾಷೆಯು ಇಂಗ್ಲಿಷ್ ಆಗಿದೆ ಎಂಬುದನ್ನು ಸಮರ್ಥಿಸಲು ವಕೀಲರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ, ಅವರು, ಇಂಗ್ಲಿಷ್ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆಯಲು ೨೯ ಅಥವಾ ೩೦ನೆಯ ಅನುಚ್ಛೇದಗಳಡಿಯ ಯಾವುದೇ ಹಕ್ಕನ್ನು ಕೋರುವಂತಿಲ್ಲ.”
ಆದ್ದರಿಂದ, ಈ ಅರ್ಜಿಯು ವಜಾ ಆಗಲು ಗುರಿಯಾಗುತ್ತದೆ.
೧೩. ಆದಾಗ್ಯೂ, ಕ್ರಿಶ್ಚಿಯನ್ನರೂ ಸೇರಿದಂತೆ ರಿಟ್ ಅರ್ಜಿ ಸಂಖ್ಯೆ ೧೦೦೬/೮೩ ರಲ್ಲಿರುವ ಅರ್ಜಿದಾರ-ಸಂಘದ ಎಲ್ಲಾ ಸದಸ್ಯರೂ ಮೊದಲ ಏಳು ಅರ್ಜಿಗಳಲ್ಲಿ ಮಾಡಿರುವ ಆಜ್ಞೆಯಿಂದ ದೊರಕುವ ಪ್ರಯೋಜನಗಳಿಗೆ ಹಕ್ಕುಳ್ಳವರಾಗತಕ್ಕದ್ದೆಂದು ಮತ್ತು ಪ್ರಾಥಮಿಕ ಶಿಕ್ಷಣದಲ್ಲಿ ತಮ್ಮ ತಮ್ಮ ಮಾತೃ ಭಾಷೆಗಳಿಗೆ ಸಂಬಂಧಿಸಿದಂತೆ ಹಾಗೂ ಪ್ರೌಢ ಶಾಲೆಗಳಲ್ಲಿ ಪ್ರಥಮ ಭಾಷೆಯ ಆಯ್ಕೆಗೆ ಸಂಬಂಧಿಸಿದಂತೆ ಅದೇ ರಕ್ಷಣೆಗೆ ಅವರು ಹಕ್ಕುಳ್ಳವರಾಗತಕ್ಕದ್ದೆಂದು ನಾವು ಸ್ಪಷ್ಟಪಡಿಸುತ್ತೇವೆ.
೧೪. ತತ್ಪರಿಣಾಮವಾಗಿ, ನಾವು ಈ ಮುಂದಿನ ಆಜ್ಞೆ ಮಾಡಿದ್ದೇವೆ :
| ರಿಟ್ ಅರ್ಜಿ ಸಂಖ್ಯೆಗಳು ೨೮೫೬೬ ಹಾಗೂ ೨೮೫೬೭/೧೬೮೨, ೩೨೬೫೪/೧೯೮೨, ೩೩೭೯೦/೧೯೮೨, ೩೬೬೩೦/೧೯೮೨, ೩೬೬೩೦ಎ/೧೯೮೨ ಮತ್ತು ೧೩೯೦೭/೧೯೮೩ ರಲ್ಲಿ :
(|) ರಿಟ್ ಅರ್ಜಿಗಳನ್ನು ಪುರಸ್ಕರಿಸಲಾಗಿದೆ ;
(||) ದಿನಾಂಕ ೨೦-೭೧೯೮೨ರ ಆಕ್ಷೇಪಿತ ಸರ್ಕಾರಿ ಆದೇಶ ಮತ್ತು ಮೇಲ್ಕಂಡ ಸರ್ಕಾರಿ ಅದೇಶಕ್ಕನುಸಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಹೊರಡಿಸಿರುವ ದಿನಾಂಕ ೧೧-೮-೧೯೮೨ರ ಸುತ್ತೋಲೆ ಭಾರತ ಸಂವಿಧಾನದ ೧೪, ೨೯ (೧) ಮತ್ತು ೩೦ (೧)ನೆಯ ಅನುಚ್ಛೇದಗಳನ್ನು ಉಲ್ಲಂಘಿಸುತ್ತವೆಯಾದ್ದರಿಂದ ಅವುಗಳು ಅನೂರ್ಜಿತವೆಂದು ಘೋಷಿಸಲಾಗಿದೆ ;
(|||) ರಾಜ್ಯ ಸರ್ಕಾರಕ್ಕೆ :
(ಎ) ಸರ್ಕಾರಿ ಶಾಲೆಗಳಲ್ಲಿ, ಹಾಗೆಯೇ ಭಾಷಾ ಅಲ್ಪಸಂಖ್ಯಾತರೂ ಸೇರಿದಂತೆ ಯಾವುದೇ ಖಾಸಗಿ ಏಜೆನ್ಸಿಯು ತೆರೆದಿರುವ ಮನ್ನಣೆ ಪಡೆದಿರುವ ಶಾಲೆಗಳಲ್ಲಿ ಸಹ, ಅವು ಧನಸಹಾಯವನ್ನು ಪಡೆಯುತ್ತಿರಲಿ ಅಥವಾ ಇಲ್ಲದಿರಲಿ, ಆಯಾ ಶಾಲೆಗಳಲ್ಲಿ ಪ್ರವೇಶ ಪಡೆದುಕೊಂಡಿರುವ ಒಂದೇ ಮಾತೃ ಭಾಷೆಯ ಮಕ್ಕಳು ನಿರ್ದಿಷ್ಟಪಡಿಸಿರುವ ಕನಿಷ್ಠ ಸಂಖ್ಯೆಯಲ್ಲಿರಬೇಕೆಂಬ ಷರತ್ತಿಗೆ ಒಳಪಟ್ಟು, ಪೂರ್ವ ಪ್ರಾಥಮಿಕ ಶಿಕ್ಷಣವೂ ಸೇರಿದಂತೆ ಮೊದಲ ನಾಲ್ಕು ವರ್ಷಗಳವರೆಗೆ ಪ್ರಾಥಮಿಕ ಶಿಕ್ಷಣವನ್ನು ಮಕ್ಕಳ ಆಯಾ ಮಾತೃ ಭಾಷೆಯಲ್ಲೇ ಕೊಡುವ ವ್ಯವಸ್ಥೆಯೊದಗಿಸಲು ಹಾಗೂ ಅದನ್ನು ಸುನಿಶ್ಚಿತಪಡಿಸಿಕೊಳ್ಳಲು ;ಮತ್ತು
(ಬಿ) ಪ್ರೌಢಶಾಲೆಗಳಲ್ಲಿ ವ್ಯಾಸಂಗಕ್ಕಾಗಿ ಪ್ರಥಮ ಭಾಷೆಯನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ವಿದ್ಯಾರ್ಥಿಗಳಿಗೇ ಬಿಟ್ಟು ಬಿಡಲು ;
ಅನುಷಂಗಿಕ ನಿರ್ದೇಶನವನ್ನು ಕೊಡತಕ್ಕದ್ದು.
(ಇವಿ)ಆದಾಗ್ಯೂ, ಸರ್ಕಾರಕ್ಕೆ, ಸೂಕ್ತ ಆದೇಶ ಅಥವಾ ನಿಯಮಗಳನ್ನು ಮಾಡುವ ಮೂಲಕ :
(ಎ) ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕ ಪದ್ಧತಿಯ ಒಂದು ಭಾಗವಾಗಿ ಮಾತೃ ಭಾಷೆಯ ಜೊತೆಗೆ ಇನ್ನೊಂದು ಭಾಷೆಯ ವ್ಯಾಸಂಗವನ್ನು ಯಾವ ತರಗತಿಯಿಂದ ಕಡ್ಡಾಯ ಮಾಡಲಾಗಿದೆಯೋ ಆ ಪ್ರಾಥಮಿಕ ಶಾಲಾ ತರಗತಿಯ ವರ್ಷದಿಂದ, ಕನ್ನಡವನ್ನು ಎರಡು ಭಾಷೆಗಳಲ್ಲಿ ಒಂದು ಭಾಷೆಯಾಗಿ ಪ್ರಾರಂಭಿಸಲು ; ಮತ್ತು ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು
(ಬಿ) ಸೆಕೆಂಡರಿ ಶಾಲೆಗಳಲ್ಲಿ ಮೂರು ಭಾಷೆಗಳಲ್ಲಿ ಒಂದು ಭಾಷೆಯಾಗಿ ಕನ್ನಡದ ವ್ಯಾಸಂಗವನ್ನು ಕಡ್ಡಾಯ ಮಾಡಲು, ಮತ್ತು ಯಾವುದೇ ಭಾಷಾ ಅಲ್ಪಸಂಖ್ಯಾತರು ಸ್ಥಾಪಿಸಿರುವ ಶಾಲೆಗಳೂ ಸೇರಿದಂತೆ, ಅವು, ಸರ್ಕಾರಿ ಶಾಲೆಗಳಾಗಿರಲಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಗಳಾಗಿರಲಿ, ಅನುಕ್ರಮವಾಗಿ ಪ್ರಾಥಮಿಕ ಮತ್ತು ಸೆಕೆಂಡರಿ ಶಾಲೆಗಳಲ್ಲಿರುವ, ಕನ್ನಡವು ಮಾತೃ ಭಾಷೆಯಾಗಿರುವ ಎಲ್ಲರಿಗೆ ಮತ್ತು ಈ ರಾಜ್ಯದಲ್ಲಿ ಖಾಯಂ ನಿವಾಸಿಗಳಾಗಿರುವ ಮತ್ತು ನಿವಾಸಿಗಳಾಗುವ ಭಾಷಾ ಅಲ್ಪಸಂಖ್ಯಾತರೆಲ್ಲರಿಗೂ ಅದನ್ನು ಅನ್ವಯವಾಗುವಂತೆ ಮಾಡಲು ಸ್ವಾತಂತ್ರ್ಯವಿರತಕ್ಕದ್ದು.
||. ರಿಟ್ ಅರ್ಜಿ ಸಂಖ್ಯೆ ೧೦೦೬/೧೯೮೩ ರಲ್ಲಿ :
ರಿಟ್ ಅರ್ಜಿಯನ್ನು, ಈ ಆಜ್ಞೆಯ ೧೩ನೇ ಪ್ಯಾರಾದಲ್ಲಿ ಹೇಳಿರುವುದಕ್ಕೆ ಒಳಪಟ್ಟು ವಜಾ ಮಾಡಲಾಗಿದೆ.
ಕರ್ನಾಟಕ ತೀರ್ಪುಗಳ ವರದಿ
ಸಂಪುಟ ೬ ಭಾಗ ೯ ೧ ಸೆಪ್ಟಂಬರ್ ೧೯೮೯ ಪು ೭೦೨-೨೩
ತನ್ನ ಹೃದಯಾಂತರಾಳದ ಭಾವನೆಗಳನ್ನು
ಪರಭಾಷೆಯಲ್ಲಿ ತಿಳಿಸಲು ಪ್ರಯತ್ನಿಸುವುದು,
ಪ್ರಿಯತಮೆಗೆ ತನ್ನ ಮುಗುಳ್ನಗೆಯನ್ನು
ವಕೀಲನ ಮೂಲಕ ತಿಳಿಸಲು ಪ್ರಯತ್ನಿಸಿದಂತೆ
-ವಿಶ್ವಕವಿ ರಬೀಂದ್ರನಾಥ ಠಾಕೂರ್
ಭಾರತೀಯ ಮಗು ತನ್ನ ತಂದೆ ತಾಯಿಗೆ
ಇಂಗ್ಲೀಷಿನಲ್ಲಿ ಪತ್ರ ಬರೆಯುವುದನ್ನು ನೋಡಿದರೆ
ನನ್ನ ಕಣ್ಣಲ್ಲಿ ರಕ್ತ ಬರುತ್ತದೆ.
-ಮಹಾತ್ಮ ಗಾಂಧಿ
ಮತೃಭಾಷೆಯಲ್ಲಿಯೆ ಪ್ರಾಥಮಿಕ ಶಿಕ್ಷಂಅ ನೀಡಬೇಕು- ಕರ್‍ನಟಕ ಉಚ್ಚನ್ಯಾಯಾಲಯದ ತೀರ್ಮನ “Instruction in primaryschools should be in mother tongue only” judgement of the karanataka higgh court reprinted with a preface by M.N.V Panditaradhya -Reader in Kannada, Institute of Kannada studies, Manasa Gangotri, Myosre 570 006. Published by Prabodha pustaka male Basaveshvara road, Mysore 570 004, printed at Pragathi offset mudrana 777- 7th cross Ramanuja road, Mysore 570 004. First impression October 2 1990 copies: 5000
ಮುದ್ರಕರು
ನಿರ್ಮಲಾ ರಾಜಶೇಖರ ಕೋಟಿ
ಪ್ರಗತಿ ಆಫ್‌ಸೆಟ್ ಮುದ್ರಣ
೭೭೭ ೭ನೇ ಅಡ್ಡರಸ್ತೆ ರಾಮಾನುಜ ರಸ್ತೆ ಮೈಸೂರು ೫೭೦ ೦೦೪ ದೂರವಾಣಿ ೨೭೩೨೮