ಅಖಿಲ ಭಾರತ ೭೦ನೆಯ, ಬೆಳಗಾವಿ ೭,೮,೯ ಮಾರ್ಚ್ ೨೦೦೩ ಕನ್ನಡ ಸಾಹಿತ್ಯ ಸಮ್ಮೇಳನ ಸಮ್ಮೇಳನ – ಭಾಗ ೧

ಅಧ್ಯಕ್ಷ ಭಾಷಣ

ಅಖಿಲ ಭಾರತ ೭೦ನೆಯ, ಬೆಳಗಾವಿ ೭,೮,೯ ಮಾರ್ಚ್ ೨೦೦೩ ಕನ್ನಡ ಸಾಹಿತ್ಯ ಸಮ್ಮೇಳನ ಸಮ್ಮೇಳನ – ಭಾಗ ೧

ಕನ್ನಡ ಸಹೋದರ, ಸಹೋದರಿಯರೆ,

ಕನ್ನಡದ ರಥ ಎಂದೂ ತಡೆದು ನಿಲ್ಲಬಾರದು. ಆ ತಾಯಿಯ ತೇರು ಮಿಣಿಗೆ ಅನೇಕರು ಕೈ ಹಚ್ಚಿದ್ದಾರೆ. ಈಗ ಅವಳು ಆ ಕೆಲಸಕ್ಕೋಸುಗ ನನ್ನನ್ನು ಆರಿಸಿಕೊಂಡಿದ್ದಾಳೆ. ಇದು ಬಯದೇ ಬಂದ ಭಾಗ್ಯ,

ಕನ್ನಡ ಸಾಹಿತ್ಯ ಪರಿಷತ್ತಿನ ಸಹೃದಯರು ನನ್ನನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ಈ ಅಧ್ಯಕ್ಷ ಪದವಿಯನ್ನು ನನಗೆ ನೀಡಿ ನನ್ನನ್ನು ಉಪಕೃತಗೊಳಿಸಿದ್ದಾರೆ. ಅವರಿಗೆಲ್ಲ ನಾನು ಋಣಿ.

ಈ ಕೆಲಸ ಮಾಡಲು ನನಗಿಂತ ಹೆಚ್ಚು ಅರ್ಹರಾದವರು ಇದ್ದರು. ಆದರೆ ಕನ್ನಡ ತಾಯಿ ಕೆಲವರ ಮನಸ್ಸಿನಲ್ಲಿ ಹೊಕ್ಕು ನನ್ನನ್ನು ಆರಿಸಿಕೊಂಡಳು. ಕನ್ನಡದ ಕೆಲಸ ನನ್ನಿಂದ ಅಷ್ಟಿಷ್ಟು ನಡೆಯುವುದಕ್ಕೆ ಆ ತಾಯಿ ನನ್ನನ್ನು ಆಗಾಗ ಆರಿಸಿಕೊಂಡಿದ್ದಾಳೆ. ಅವಳು ನನಗೆ ವಹಿಸಿಕೊಟ್ಟ ಕೆಲಸವನ್ನು ನಾನು ಧೈರ್ಯ, ನಿಷ್ಠೆ, ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಮಾಡಿಕೊಂಡು ಬಂದಿದ್ದೇನೆ.

ಕನ್ನಡಕ್ಕೆ ಅನುಪಮ ಸೇವೆ ಸಲ್ಲಿಸಿದ ಅನೇಕ ಜನ ಅಪ್ರತಿಮರ ಸಾಲಿನಲ್ಲಿ ಆಕೆ ನನ್ನನ್ನೂ ತಂದು ಕುಳ್ಳಿರಿಸಿದ್ದಾಳೆ. ನಾನು ಅವರಷ್ಟು ದೊಡ್ಡವನಲ್ಲ . ತಾಯಿಯ ಕಂಕುಳಲ್ಲಿರುವ ಮಗನು ಸಹಜವಾಗಿಯೇ ತಾನು ದೊಡ್ಡವನೆಂದು ಭಾವನೆ ಮಾಡಿಕೊಳ್ಳುತ್ತಾನೆ. ಹೂವಿನ ಜೊತೆಯಲ್ಲಿ ನಾರೂ ಸ್ವರ್ಗಕ್ಕೆ ಹೋಯಿತೆನ್ನುವ ಮಾತನ್ನು ನನ್ನ ಆಯ್ಕೆ ಸತ್ಯ ಮಾಡಿ ತೋರಿಸಿದೆ.

ಕನ್ನಡ ಮತ್ತು ಕರ್ನಾಟಕಕ್ಕೆ ಭವ್ಯ ಪರಂಪರೆ ಇದೆ. ಇವುಗಳ ಪ್ರಾಚೀನತೆ ದೊಡ್ಡದು. ಈ ಭೂಮಿಯ ಮೇಲೆ ಬದುಕುವುದನ್ನು, ಬೆಳೆಯುವುದನ್ನು ಅವು ತೋರಿಸಿಕೊಟ್ಟಿವೆ. ಕನ್ನಡ ಭಾಷೆಯ ಜತೆಗೆ ಅದರ ಇತಿಹಾಸ ಹಾಗೂ ಸಂಸ್ಕೃತಿ ಬೆಳೆದುಕೊಂಡು ಬಂದಿದೆ. ಮನುಜ ಕುಲ ಒಂದೇ ಎನ್ನುವ ಆದರ್ಶವನ್ನು ಆದಿ ಕವಿ ಪಂಪನು ಕನ್ನಡ ಜನರ ಮನಸ್ಸಿನಲ್ಲಿ ಮೂಡಿಸಿದನು.

ಜನರು ಎಲ್ಲಿಯೇ ಇದ್ದರೂ ಅವರು ಬೆಳೆಯಬೇಕೆಂಬ ಭಾವನೆ ಇರಿಸಿಕೊಂಡು ಕನ್ನಡಿಗರು ಬೆಳೆದಿದ್ದಾರೆ. ಜಿನರು, ಶರಣರು ಹಾಗೂ ದಾಸರು ಇಲ್ಲಿಯ ಜನರ ಜೀವನವನ್ನು ಶ್ರೀಮಂತಗೊಳಿಸಿದ್ದಾರೆ. ಬಸವೇಶ್ವರರು ಸರಿ ಸಮಾನತೆ ಇರುವ ಸಮಾಜವನ್ನು ನಿರ್ಮಿಸುವ ಬೆಳಕನ್ನು ತೋರಿಸಿದರು.

ಕನ್ನಡವು ಎಲ್ಲ ಬಗೆ ಧ್ವನಿಗಳಿಗೂ ಅಭಿವ್ಯಕ್ತಿಯನ್ನು ಒದಗಿಸಿಕೊಡುವ ಶ್ರೇಷ್ಠತೆಯನ್ನು ಪಡೆದುಕೊಂಡಿದೆ. ಕನ್ನಡ ಲಿಪಿಯು ತುಂಬಾ ಸುಂದರವಾಗಿದೆ. ಕವಿ ಕರ್ಕಿ ಅವರಂತೂ ಅದನ್ನು ಎಂತಹ ಚಂದದ ಬಳ್ಳಿ ಎಂದು ಹೃದಯ ತುಂಬಿ ಹಾಡಿದ್ದಾರೆ.

ಇಲ್ಲಿಯವರೆಗೂ ಕನ್ನಡದಲ್ಲಿ ಆಗಿರುವ ಕೆಲಸ ಸಾಮಾನ್ಯವಾದುದೇನಲ್ಲ . ಆದರೆ ಅದಕ್ಕೆ ಇನ್ನೂ ಹೆಚ್ಚಿನ ಸಮೃದ್ಧಿ ಬರಬೇಕಾಗಿದೆ. ಆ ಸಮೃದ್ಧಿಯನ್ನು ಅದಕ್ಕೆ ತಂದು ಅದನ್ನು ಇನ್ನೂ ಹೆಚ್ಚು ಶ್ರೀಮಂತಗೊಳಿಸುವ ಕೆಲಸ ಈಗ ಆಗಬೇಕಿದೆ. ಜಗತ್ತಿನ ಎಲ್ಲ ಜ್ಞಾನವನ್ನು ಅಭಿವ್ಯಕ್ತಗೊಳಿಸುವ ಶಕ್ತಿಯನ್ನು ಅದಕ್ಕೆ ತಂದುಕೊಡಬೇಕಾಗಿದೆ.

ಆಧುನಿಕತೆಯ ಆವಿಷ್ಕಾರವನ್ನು ಅದು ಪಡೆದುಕೊಳ್ಳಬೇಕು. ಮಾಹಿತಿ ತಂತ್ರಜ್ಞಾನಕ್ಕೂ ಅದು ಅಪರಿಚಿತವೆನಿಸಬಾರದು. ಅದು ಸಾರ್ವಕಾಲಿಕ ಚೈತನ್ಯಶಕ್ತಿಯಾಗಿ ರೂಪುಗೊಳ್ಳಬೇಕು.

ಒಂದು ಭಾಷೆ ಬೆಳೆದರೆ ಅದನ್ನು ಆಡುವ ಜನರೂ ಬೆಳೆಯುತ್ತಾರೆ. ಭಾಷೆಯೊಂದಿಗೆ ಜನರು ಬೆಳೆಯುವಂತೆ, ಜನರೊಂದಿಗೆ ಭಾಷೆಯೂ ಬೆಳೆಯುತ್ತದೆ. ಜನರ ಕ್ರಿಯಾಶೀಲತೆಯೇ ಭಾಷೆಗೆ ಹೆಚ್ಚಿನ ಕ್ರಿಯಾಶೀಲತೆಯನ್ನು ತಂದುಕೊಡುತ್ತದೆ.

ಕನ್ನಡವು ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಒಂದು. ಇಂಗ್ಲಿಷಿಗೆ ಈಗ ನಿರ್ವಿವಾದವಾಗಿಯೂ ಹೆಚ್ಚಿನ ಪ್ರಾಮುಖ್ಯತೆ ಬಂದಿದೆ. ಆದರೆ ಕನ್ನಡವು ಇಂಗ್ಲಿಷಿಗಿಂತಲೂ ಹೆಚ್ಚು ಹಳೆಯ ಭಾಷೆ. ಕನ್ನಡದ ಜನರು ದೊಡ್ಡವರಾದರೆ ಅವರ ಭಾಷೆಯು ದೊಡ್ಡದಾಗುತ್ತದೆ. ಕನ್ನಡ ಜನರು ತಮ್ಮ ಬದುಕಿನೊಂದಿಗೆ ತಮ್ಮ ಭಾಷೆಯನ್ನು ಬೆಳೆಸಿಕೊಂಡು ಬರಬೇಕು. ಒಂದು ಭಾಷೆ ಬೆಳೆಯುವುದಕ್ಕೆ ಇಂಬು ಬೇಕು. ಆ ಇಂಬನ್ನು ಕರ್ನಾಟಕವು ಕನ್ನಡ ಭಾಷೆಗೆ ಒದಗಿಸಿಕೊಟ್ಟಿದೆ. ಭಾಷೆಯನ್ನು ಇರಿಸಿಕೊಂಡರೆ ನಾವು ಕರ್ನಾಟಕವನ್ನು ಇರಿಸಿಕೊಳ್ಳುತ್ತೇವೆ. ಕರ್ನಾಟಕವನ್ನು ಇರಿಸಿಕೊಂಡರೇನೇ ನಾವು ಕನ್ನಡವನ್ನು ಇರಿಸಿಕೊಳ್ಳಬಲ್ಲೆವು.

‘ಕನ್ನಡವೆನಿಪ್ಪಾ ನಾಡು ಚೆಲ್ವಾದುದು’ ಎಂದು ಕವಿ ಆಂಡಯ್ಯ ಹಾಡಿದ್ದಾನೆ. ಈ ಕನ್ನಡನಾಡನ್ನು ಚೆಲುವಾಗಿ ಇರಿಸಿಕೊಂಡರೆ ಅದು ಚೆಲುವಾಗಿ ಉಳಿಯುತ್ತದೆ. ಅದು ಸುಂದರವಾಗಿ ಇರುವಂತೆ, ಸುಂದರವಾಗಿ ಉಳಿಯುವಂತೆ ನಾವು ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಕೈಗೊಳ್ಳುತ್ತಲೇ ಹೋಗಬೇಕು. ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಕೂಡಾ ಒಂದು ಕಲೆ ಆಗಿದೆ. ಕರ್ನಾಟಕದ ಸೌಂದರ್ಯವು ಅದರ ಸಮಗ್ರ ಅಭಿವೃದ್ಧಿಯಲ್ಲಿಯೇ ಇದೆ. ಮನುಷ್ಯ ದೇಹದ ಎಲ್ಲ ಅಂಗಾಂಗಗಳು ಸಮರ್ಪಕವಾಗಿ ಬೆಳೆದುಕೊಂಡರೇನೇ ಮನುಷ್ಯನ ವ್ಯಕ್ತಿತ್ವಕ್ಕೆ ಸರಿಯಾದ ರೂಪ ಬರುತ್ತದೆ. ಈ ಕರ್ನಾಟಕ ಕೂಡ ಮನುಷ್ಯ ದೇಹದಂತೆಯೇ ಇದೆ. ಕರ್ನಾಟಕದ ಎಲ್ಲ ಅಂಗಾಂಗಗಳು ಸರಿಯಾಗಿ ಬೆಳೆದರೇನೇ ಅದಕ್ಕೆ ಸಮಗ್ರತೆ ಬರುತ್ತದೆ.

ಪ್ರಾದೇಶಿಕ ಅಸಮಾನತೆ ಅಳಿಯಲಿ

ಪ್ರಾದೇಶಿಕ ಅಸಮಾನತೆ ಕರ್ನಾಟಕದ ಯಾವ ಪ್ರದೇಶದಲ್ಲಿಯೂ ಇರಬಾರದು. ಈ ಅಸಮಾನತೆಯೇ ಅತೃಪ್ತಿ , ಅಸಮಾಧಾನಗಳಿಗೆ ಕಾರಣವಾಗುತ್ತವೆ. ನಿನ್ನೆ ಏನಾಯಿತು ಎನ್ನುವ ಪ್ರಶ್ನೆಗೆ ಈಗ ಯಾವ ಅರ್ಥವೂ ಇಲ್ಲ . ಇಂದು ಏನು ಮಾಡಿದರೆ ಕರ್ನಾಟಕ ಸರಿಯಾಗಿ ಬೆಳೆಯುತ್ತದೆ ಎನ್ನುವುದೊಂದೇ ನಮ್ಮ ಗಮನದಲ್ಲಿರಬೇಕು.

ಸರಕಾರದಲ್ಲಿ ಯಾರೇ ಇದ್ದರೂ, ಅವರು ಎಲ್ಲಿಂದಲೇ ಆಯ್ಕೆಯಾಗಿ ಬಂದು ಮಂತ್ರಿ ಪದವಿಯನ್ನು ಅಲಂಕರಿಸಿದರೂ, ಅವರು ತಾವು ಆರಿಸಿ ಬಂದ ಪ್ರದೇಶಕ್ಕೆ ಮಾತ್ರ ಮಂತ್ರಿ ಆಗಿರದೆ, ಸಮಗ್ರ ಕರ್ನಾಟಕಕ್ಕೇ ಮಂತ್ರಿ ಎನ್ನುವ ಭಾವನೆ ಇರಿಸಿಕೊಂಡು ಕೆಲಸ ಮಾಡಬೇಕು. ಇಲ್ಲಿ ಅವರು ಇಂಗ್ಲೆಂಡಿನ ಮುತ್ಸದ್ದಿ ಎಡ್ಮಂಡ್ ಬರ್ಕ್‌ನ ನಿದರ್ಶನವನ್ನು ತಮ್ಮ ನೆನಪಿನಲ್ಲಿ ಸದಾ ಇರಿಸಿಕೊಳ್ಳಬೇಕು.

ಎಡ್ಮಂಡ್ ಬರ್ಕನು ಕೆಂಟ ನಗರದಿಂದ ಬ್ರಿಟಿಷ್ ಪಾರ್ಲಿಮೆಂಟಿಗೆ ಸ್ಪರ್ಧಿಸಿದ್ದನು. ಅವನು ಆಯ್ಕೆಯಾಗಿ ಬಂದ ಮೇಲೆ ಅಲ್ಲಿಯ ಜನರು ಅವನನ್ನು ಅಭಿನಂದಿಸಲು ಒಂದು ಸಮಾರಂಭವನ್ನು ಏರ್ಪಡಿಸಿದರು. ಆ ಸಮಾರಂಭದಲ್ಲಿ ಅವನು ಅವರಿಗೆ ಹೇಳಿದ. ‘ಸಭ್ಯ ಗೃಹಸ್ಥರೆ, ನಾನು ಎಲ್ಲಿಯವರೆಗೆ ಅಭ್ಯರ್ಥಿ ಆಗಿದ್ದೆನೋ ಅಲ್ಲಿಯವರೆಗೆ ಕೆಂಟ ನಗರಕ್ಕೆ ಸೇರಿದವನಾಗಿದ್ದೆ. ಆದರೆ ಪಾರ್ಲಿಮೆಂಟಿಗೆ ಆಯ್ಕೆಯಾದ ಮೇಲೆ ನಾನು ಕೆಂಟ ನಗರಕ್ಕೆ ಸೇರಿದವನಲ್ಲ , ಸಮಗ್ರ ಇಂಗ್ಲೆಂಡಿಗೇ ಸೇರಿದವನು.’

ಸರಕಾರದಲ್ಲಿರುವ ಪ್ರತಿಯೊಬ್ಬನೂ, ತಾನು ಸಮಗ್ರ ಕರ್ನಾಟಕಕ್ಕೆ ಸೇರಿದವನೆಂದು ಬಗೆದು ಅಸಮಾನತೆಯನ್ನು ನಿವಾರಿಸಲು ಮುಂದಾಗಬೇಕು. ಈ ರಾಜ್ಯದ ವಿಭಿನ್ನ ಪ್ರದೇಶಗಳಲ್ಲಿ ಕಾಣಿಸಿಕೊಂಡಿರುವ ಅಸಮಾನತೆಯನ್ನು ನಿವಾರಿಸಲು ಡಾ.ನಂಜುಂಡಪ್ಪ ಅವರ ಉಚ್ಛಾಧಿಕಾರ ಸಮಿತಿಯು ವಿದ್ವತ್‌ಪೂರ್ಣವಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಸರಕಾರದ ಕೆಲಸ ಈಗ ಸುಲಭವಿದೆ. ಅದು ಡಾ.ನಂಜುಂಡಪ್ಪ ಅವರು ಭಾರೀ ಪರಿಶ್ರಮಪಟ್ಟು ಸಿದ್ಧಪಡಿಸಿದ ವರದಿಯ ಶಿಫಾರಸುಗಳನ್ನು ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಕೈಕೊಳ್ಳಬೇಕು. ಈಗ ಈ ರಾಜ್ಯದಲ್ಲಿರುವ ಅಸಮಾನತೆಯೇ ಆಗಾಗ ಅನವಶ್ಯಕ ಕ್ಷೋಭೆಗೆ ಕಾರಣವಾಗುವ ಬಿಸಿ ವಾತಾವರಣವನ್ನು ನಿರ್ಮಿಸುತ್ತಿದೆ.

ಕರ್ನಾಟಕದ ಸಮರ್ಪಕ ಬೆಳವಣಿಗೆಯಲ್ಲಿಯೇ ಕನ್ನಡಿಗರಿಗೆಲ್ಲ ಸಂಪೂರ್ಣ ಸುರಕ್ಷತತೆ ಇದೆ. ತಾವು ಈ ಕೆಲಸಕ್ಕೆ ನಾಂದಿ ಹಾಡಿದವರೆನ್ನುವ ನ್ಯಾಯ ಸಹಜ ಹೆಮ್ಮೆ ಹಾಗೂ ಸಂತೋಷಗಳನ್ನು ಮುಖ್ಯಮಂತ್ರಿ ಕೃಷ್ಣ ಅವರು ಪಡೆದುಕೊಳ್ಳಬೇಕು.

ಈಗ ಸರಕಾರದಲ್ಲಿ ಕನ್ನಡ ಉಳಿಯುವುದಕ್ಕೆ ಬೆಳಯುವುದಕ್ಕೆ ಕೆಲವು ಕುತ್ತುಗಳಿವೆ. ಅವುಗಳಲ್ಲಿ ಕೆಲವು ಈ ಮೊದಲೇ ಇಲ್ಲಿದ್ದವು. ಇನ್ನು ಕೆಲವನ್ನು ಇಲ್ಲಿಯ ಪ್ರಭುತ್ವ ನಿರ್ಮಿಸಿಕೊಳ್ಳುತ್ತ ನಡೆದಿದೆ. ಅವರ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ ಅದು ಒಟ್ಟಿನಲ್ಲಿ ಕನ್ನಡಕ್ಕೆ ಹಾಗೂ ಕರ್ನಾಟಕಕ್ಕೆ ಬರಲಿರುವ ದಿನಗಳಲ್ಲಿ ಮಾರಕವಾಗಿ ಪರಿಣಮಿಸುತ್ತದೆ.

ಕನ್ನಡ ಭಾಷೆಗೆ ಈ ರಾಜ್ಯದಲ್ಲಿ ಶಿಕ್ಷಣ ಹಾಗೂ ಆಡಳಿತ ಎರಡರಲ್ಲಿ ಸಿಂಹಾಸನ ಸ್ಥಾನ ಇರಬೇಕು. ಸರಕಾರದ ಬಾಗಿಲಲ್ಲಿ ತನ್ನ ಅಸ್ತಿತ್ವಕ್ಕೋಸುಗ ಅರ್ಜಿ ಬರೆದುಕೊಂಡು ನಿಲ್ಲುವ ಸ್ಥಿತಿ ಅದಕ್ಕೆ ಬರಬಾರದು. ಈಗ ಉದಾಹರಣೆಗೆ ಇಲ್ಲಿ ರಾಜ್ಯಮಟ್ಟದ ಬಿ.ಎಡ್. ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಈ ಬಿ.ಎಡ್. ಆದವರು ರಾಜ್ಯದ ಮಾಧ್ಯಮಿಕ ಶಾಲೆಗಳಲ್ಲಿ ಶಿಕ್ಷಕರಾಗುತ್ತಾರೆ. ಅವರಿಗೆ ಕನ್ನಡವು ಕಡ್ಡಾಯವಾಗದೇ ಹೋದರೆ ನಾಳೆ ಪದವಿ ಕಾಲೇಜಿನಲ್ಲಿಯೂ ಕೂಡ ಕನ್ನಡವು ಓದುವವರಿಲ್ಲದೇ ಅನಾಥ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ.

ಕಾಲೇಜು ಹಾಗೂ ವಿಶ್ವವಿದ್ಯಾಲಗಳಲ್ಲಿ ಅದಕ್ಕೆ ಬದುಕುವ ಸ್ಥಿತಿ ಕಳೆದು ಹೋದರೆ ಅದು ಬದುಕುವಂತೆ ಅದಕ್ಕೆ ಪ್ರಾಣವಾಯುವನ್ನು ಒದಗಿಸುವವರು ಯಾರಿದ್ದಾರೆ ?

ವೈದ್ಯಕೀಯ ಶಿಕ್ಷಣ ಪಡೆಯುವವರು, ಇಂಜಿನಿಯರಿಂಗ್ ಮೊದಲಾದ ತಾಂತ್ರಿಕ ಶಿಕ್ಷಣ ಪಡೆಯುವವರು ಜನರೊಂದಿಗೆ ವ್ಯವಹರಿಸಲು ಕನ್ನಡ ಬೋಧೆಯಲ್ಲಿ ಪರಿಣತಿಯನ್ನು ಪಡೆದಿರಬೇಕಾಗುತ್ತದೆ. ಕನ್ನಡ ಬಾರದೇ ಹೋದರೆ ವೈದ್ಯನಾದವನು ರೋಗಿಗಳೊಂದಿಗೆ ಯಾವ ರೀತಿಯಿಂದ ವ್ಯವಹರಿಸುತ್ತಾನೆ ? ಈ ಬೋಧೆಗಳಲ್ಲಿ ಕನ್ನಡವನ್ನು ಅಳವಡಿಸುವ ಕುರಿತು ಗಂಭೀರ ಚಿಂತನೆ ನಡೆಯಬೇಕಾದ ಅವಶ್ಯಕತೆ ಇದೆ.

ಮಹಾಜನ ವರದಿ ಜಾರಿಗೆ ಬರಲಿ

ಬೆಳಗಾವಿಯು ಮಹಾರಾಷ್ಟ್ರದ ಕೈಗೆ ಸಿಕ್ಕದಿರುವ ದೂರದ ಚಂದ್ರನಂತಿದೆ. ಬಾಲಕ ಶ್ರೀ ರಾಮಚಂದ್ರನು ತನಗೆ ಅದೇ ಚಂದ್ರ ಬೇಕೆಂದು ಹಟ ಮಾಡುತ್ತಿದ್ದಂತೆ ಮಹಾರಾಷ್ಟ್ರದವರು ಬೆಳಗಾವಿ ತಮಗೆ ಬೇಕೆಂದು ಹಟ ಮಾಡುತ್ತಿದ್ದಾರೆ,

ಕನ್ನಡಿಯೊಳಗಿನ ಚಂದ್ರನನ್ನು ತೋರಿಸಿ ಅವನನ್ನು ಸಮಾಧಾನಪಡಿಸಿದಂತೆ ಈಗ ಮಹಾರಾಷ್ಟ್ರದವರಿಗೆ ಕನ್ನಡಿಯೊಳಗಿನ ಬೆಳಗಾವಿಯನ್ನು ತೋರಿಸಿ ಸಮಾಧಾನಪಡಿಸಬೇಕಾಗಿದೆ.

ಬೆಳಗಾವಿಯ ವಿಚಾರವನ್ನು ತಿಳಿದುಕೊಂಡರೆ ಮರಾಠಿ ಬಂಧುಗಳು ವಾಸ್ತವದಿಂದ ಎಷ್ಟು ದೂರ ಇದ್ದಾರೆನ್ನುವುದು ಯಾರಿಗಾದರೂ ತಿಳಿಯುತ್ತದೆ. ಬೆಳಗಾವಿಯ ಮೇಲೆ ಅವರ ಹಕ್ಕುದಾರಿಕೆ ಯಾವುದೂ ಇಲ್ಲ . ಸ್ಥೂಲವಾಗಿ ಐದು ಸಂಗತಿಗಳಿಂದ ಬೆಳಗಾವಿ ನಗರದ ಮೇಲಿನ ಅವರ ಹಕ್ಕುದಾರಿಕೆಯನ್ನು ತಳ್ಳಿಹಾಕಬಹುದು.

ಡಾ.ಬಾಬಾಸಾಹೇಬ ಅಂಬೇಡ್ಕರರು ಯಾವುದಾದರೂ ಒಂದು ಪ್ರದೇಶ ಯಾವ ಭಾಷಾ ಪ್ರದೇಶಕ್ಕೆ ಸೇರಿದ್ದೆನ್ನುವುದನ್ನು ಕಂಡು ಹಿಡಿಯಲು ಒಂದು ಸುಲಭ ಸೂತ್ರವನ್ನು ಗೊತ್ತುಪಡಿಸಿದ್ದರು. ಆ ಸ್ಥಳದ ಪರಿಶಿಷ್ಟ ಜಾತಿಯ ಜನರು ಯಾವ ಭಾಷೆಯನ್ನು ಆಡುವರೋ ಅದು ಆ ಪ್ರದೇಶದ್ದೇ ಎನ್ನುವುದನ್ನು ತಿಳಿಯಬೇಕು. ಬೆಳಗಾವಿಯ ಮೂಲ ನಿವಾಸಿಗಳಾದ ಪರಿಶಿಷ್ಟರೆಲ್ಲರೂ ಕನ್ನಡ ಭಾಷೆಯವರೇ ಆಗಿದ್ದಾರೆ.

೧೯೨೦ ರಲ್ಲಿ ಕಾಂಗ್ರೆಸ್ ಪಕ್ಷದ ಸಂವಿಧಾನವನ್ನು ಭಾಷಾ ತಳಹದಿಯ ಮೇಲೆ ರಚಿಸುವ ಕೆಲಸವನ್ನು ಮಹಾರಾಷ್ಟ್ರದ ಏಕಮೇವಾದ್ವಿತೀಯ ಧುರೀಣ ಲೋಕಮಾನ್ಯ ಬಾಲ ಗಂಗಾಧರ ಟಿಳಕರ ಬಲಗೈ ಬಂಟರಾದ ನರಸಿಂಹ ಚಿಂತಾಮಣಿ ಕೇಳಕರರಿಗೆ ವಹಿಸಿಕೊಡಲಾಗಿದ್ದಿತು. ಅವರು ಭಾರತ ಭೂಪಟವನ್ನು ಭಾಷಾನ್ವಯ ತಳಹದಿಯ ಮೇಲೆ ರಚಿಸಿ ಬೆಳಗಾವಿ ನಗರವನ್ನು ಹಾಗೂ ಬೆಳಗಾವಿ ಜಿಲ್ಲೆಯನ್ನು ಕರ್ನಾಟಕ ಪ್ರಾಂತ್ಯದಲ್ಲಿ ಸೇರಿಸಿದರು. ಈ ಕೆಲಸ ಮಾಡಿದವರು ಮಹಾರಾಷ್ಟ್ರದವರಲ್ಲದೆ ಕರ್ನಾಟಕದವರಲ್ಲ .

ಮಹಾತ್ಮ ಗಾಂಧಿ ಅವರು ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಅಧಿವೇಶನ ೧೯೨೪ ರಲ್ಲಿ ಸಮಾವೇಶಗೊಂಡಿದ್ದಿತು. ಆ ಬೆಳಗಾವಿ ಅಧಿವೇಶನವನ್ನು ಕರ್ನಾಟಕದ ಅಧಿವೇಶನವೆಂದೇ ಕರೆದರು. ಅದರ ಬಗ್ಗೆ ಯಾರಿಂದಲೂ ಪ್ರತಿರೋಧ ವ್ಯಕ್ತವಾಗಲಿಲ್ಲ .

೧೯೨೯ ರಲ್ಲಿ ಮಹಾರಾಷ್ಟ್ರದವರು ಮರಾಠಿ ಸಾಹಿತ್ಯ ಸಮ್ಮೇಳನವನ್ನು ಬೆಳಗಾವಿಯಲ್ಲಿ ಸೇರಿಸಬೇಕೆಂದರು. ಕನ್ನಡಿಗರು ಮಹಾರಾಷ್ಟ್ರದ ಆ ವಿಚಾರವನ್ನು ವಿರೋಧಿಸಿದರು. ಮರಾಠಿ ಸಾಹಿತ್ಯ ಸಮ್ಮೇಳನವನ್ನು ಬೆಳಗಾವಿಯಲ್ಲಿ ಸೇರಿಸಿ ಅದರ ಮೇಲೆ ತಮ್ಮ ಹಕ್ಕುದಾರಿಕೆ ಸ್ಥಾಪಿಸಬೇಕೆನ್ನುವ ಉದ್ದೇಶವನ್ನು ಮಹಾರಾಷ್ಟ್ರದವರು ಹೊಂದಿದ್ದಾರೆಂಬ ಭಯ ಸಂದೇಹಗಳು ಕನ್ನಡಿಗರ ಮನಸ್ಸಿನಲ್ಲಿದ್ದವು. ಕನ್ನಡಿಗರ ಭಯ ಸಂದೇಹಗಳನ್ನು ನಿವಾರಿಸುವ ಭರವಸೆಯನ್ನು ನರಸಿಂಹ ಚಿಂತಾಮಣಿ ಕೇಳಕರ್ ನೀಡಿದರು. ‘ಬೆಳಗಾವಿಯ ಮೇಲೆ ಮಹಾರಾಷ್ಟ್ರದ ಹಕ್ಕುದಾರಿಕೆ ಯಾವುದೂ ಇಲ್ಲ . ಅದು ಕರ್ನಾಟಕದ್ದೇ. ನಮಗೆ ನಮ್ಮ ಸಮ್ಮೇಳನವನ್ನು ನಡೆಸಿಕೊಂಡು ಹೋಗಲು ಅವಕಾಶವನ್ನು ಕೊಡಿ’ ಎಂದು ಅವರು ಕೇಳಿಕೊಂಡ ಮೇಲೆ ಮರಾಠಿ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಕನ್ನಡಿಗರು ತಮ್ಮ ಒಪ್ಪಿಗೆ ಕೊಟ್ಟರು.

೧೯೪೪ ರಲ್ಲಿ ಶ್ರೀ ರಾಜಾಜಿ ಅವರು ಮುಸ್ಲಿಂರಿಗೆ ಸ್ವಯಂ ನಿರ್ಣಯಾಧಿಕಾರ ಕೊಡಿಸಬೇಕೆನ್ನುವ ತಮ್ಮ ವಾದವನ್ನು ಹಿಡಿದುಕೊಂಡು ಬೆಳಗಾವಿಗೆ ಬಂದಿದ್ದರು. ಆಗ ಅವರ ಸಭೆ ಆ ನಗರದ ದರ್ಗಾ ಮೈದಾನದಲ್ಲಿ ನಡೆದಿದ್ದಿತು. ಅವರು ಆ ಸಭೆಯಲ್ಲಿ ಮಾಡುತ್ತಿದ್ದ ಇಂಗ್ಲಿಷ್ ಭಾಷಣ, ಮರಾಠಿಗೆ ಭಾಷಾಂತರಗೊಳ್ಳುವುದನ್ನು ಕನ್ನಡಿಗರು ವಿರೋಧಿಸಿದರು.

ಸಭೆಯಲ್ಲಿ ಗದ್ದಲ ನಡೆಯುತ್ತಿದ್ದುದನ್ನು ಗಮನಿಸಿದ ರಾಜಾಜಿ ಅವರು ಸಭಿಕರ ಮನೋಭಾವನೆ ಏನಿದೆ ಎಂಬುದನ್ನು ತಿಳಿಯಲು ಅಪೇಕ್ಷಿಸಿದರು. ಸಭೆಯಲ್ಲಿ ಎಷ್ಟು ಜನರಿಗೆ ಮರಾಧಿಠಿ ತಿಳಿಯುತ್ತದೆ, ಎಷ್ಟು ಜನರಿಗೆ ಕನ್ನಡ ತಿಳಿಯುತ್ತದೆ ಎಂಬುದನ್ನು ಅರಿತುಕೊಳ್ಳಬೇಕೆನ್ನುವ ಆಸಕ್ತಿಯನ್ನು ಅವರು ವ್ಯಕ್ತಪಡಿಸಿದರು. ಸಭೆಯಲ್ಲಿ ಕನ್ನಡ ಮರಾಠಿ ಬಲ್ಲವರು ಸಮ ಸಂಖ್ಯೆಯಲ್ಲಿರುವುದು ಅವರಿಗೆ ತಿಳಿಯಿತು. ಆಗ ಅವರು ಋಷಿ ಸದೃಶ್ಯ ಮಾತೊಂದನ್ನು ಸಭೆಗೆ ತಿಳಿಸಿದರು.- ‘ನೀವು ಕೈಯೆತ್ತಿದ ರೀತಿಯನ್ನು ನೋಡಿದರೆ ನಿಮ್ಮಲ್ಲಿ ಯಾರಿಗೆ ಕನ್ನಡ ಬರುತ್ತದೆಯೋ ಅವರಿಗೆ ಮರಾಠಿ ತಿಳಿಯುತ್ತದೆ. ಇದು ಕರ್ನಾಟಕ ಪ್ರದೇಶವಾದುದರಿಂದ ನನ್ನ ಭಾಷಣ ಕನ್ನಡಕ್ಕೆ ಭಾಷಾಂತರಗೊಳ್ಳಬೇಕು.’

ಇದಾದ ಮೇಲೆ, ಅವರ ಇಂಗ್ಲಿಷ್ ಭಾಷಣ ಕನ್ನಡಕ್ಕೆ ಭಾಷಾಂತರಗೊಂಡಿತು. ಸಭೆಯಲ್ಲಿದ್ದ ಯಾರೊಬ್ಬರಿಂದಲೂ ಯಾವುದೇ ಬಗೆಯ ತಂಟೆ ತಕರಾರೂ ಬರಲಿಲ್ಲ . ಅಲ್ಲಿಯ ಸಭಿಕರಿಗೆ ರಾಜಾಜಿ ಅವರು ಒಂದು ಕಿವಿಮಾತನ್ನು ಹೇಳಿದರು. ‘ಮರಾಠಿ ಜನರು ಇಲ್ಲಿಯವರೆಗೆ ಕನ್ನಡವನ್ನು ಕಲಿಯದೇ ಇದ್ದರೆ ಅದು ಅವರ ತಪ್ಪು . ಅವರು ಇನ್ನು ಮೇಲಾದರೂ ಕನ್ನಡ ಕಲಿತು ಕನ್ನಡ ಜನರೊಂದಿಗೆ ಬೆರೆತು ಹೋಗಬೇಕು. ಗಡಿ ಪ್ರದೇಶಗಳಲ್ಲಿ ಇಂಥ ಪ್ರಶ್ನೆಗಳು ಇದ್ದೇ ಇರುತ್ತವೆ. ಅವುಗಳಿಗಾಗಿ ಯಾರೊಬ್ಬರೂ ಯಾವುದೇ ಬಗೆಯಿಂದ ವಿರಸ ಮಾಡಿಕೊಳ್ಳಬಾರದು.’
ಇವೆಲ್ಲಾ ಸಂಗತಿಗಳು ಬೆಳಗಾವಿಯು ನಿರ್ವಿವಾದವಾಗಿಯೂ ಕರ್ನಾಟಕದ್ದೆನ್ನುವ ವಾದವನ್ನು ದೃಢಪಡಿಸುತ್ತವೆ.

ಇವು ಮಾತ್ರವಲ್ಲದೇ ಬೆಳಗಾವಿ ಪ್ರಶ್ನೆಯನ್ನು ಪರಿಶೀಲಿಸಿದ ಎಲ್ಲ ಸಮಿತಿಗಳೂ ಬೆಳಗಾವಿಯು ಕರ್ನಾಟಕದ್ದೇ ಎನ್ನುವ ಮಾತನ್ನು ರುಜುವಾತು ಪಡಿಸಿವೆ. ಇವೆಲ್ಲವುಗಳ ಮೇಲೆ ಕಳಸಪ್ರಾಯವೆನ್ನುವಂತೆ ೧೯೫೫ ರಲ್ಲಿ ರಾಜ್ಯ ಪುನರ್ ಘಟನಾ ಆಯೋಗವು ನ್ಯಾಯಮೂರ್ತಿ ಫಜಲ್ ಅಲಿ ಅವರ ಅಧ್ಯಕ್ಷತೆಯಲ್ಲಿ ರಚನೆಗೊಂಡಿತು. ಅದಕ್ಕೆ ಪಂಡಿತ ಹೃದಯನಾಥ ಕುಂಝ್ರ ಹಾಗೂ ಸರ್ದಾರ ಕೆ.ಎಂ.ಪಣಿಕ್ಕರ್ ಅವರು ಸದಸ್ಯರಾಗಿದ್ದರು.

ಅವರು ಎಲ್ಲ ಪ್ರದೇಶಗಳಲ್ಲಿ ಸಂಚರಿಸಿ, ಎಲ್ಲ ವಾದಗಳನ್ನು ಆಲಿಸಿ, ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, ತಮ್ಮ ವರದಿಯನ್ನು ಸಿದ್ಧಪಡಿಸಿದರು. ಆ ವರದಿಯಲ್ಲಿ ಮಹಾರಾಷ್ಟ್ರದವರು ಬೆಳಗಾವಿ ಸಂಬಂಧವಾಗಿ ಮಂಡಿಸಿದ್ದ ಎಲ್ಲ ವಾದಗಳನ್ನೂ ಅವರು ತಳ್ಳಿಹಾಕಿದ್ದರು.

ಇದಾದ ಮೇಲೆ ಕೇಂದ್ರ ಸರಕಾರವು ರಾಜ್ಯ ಪುನರ್ ಘಟನಾ ಆಯೋಗದ ಶಿಫಾರಸುಗಳನ್ನು ಆಧರಿಸಿ ಸಂಸತ್ತಿನ ಎದುರು ಒಂದು ಮಸೂದೆಯನ್ನು ಮಂಡಿಸಿತು.

ಸಂಸತ್ತಿನ ಉಭಯ ಸದನಗಳಲ್ಲಿ ೭೮೫ ಜನ ಸದಸ್ಯರಿದ್ದಾರೆ. ಅವರಲ್ಲಿ ಕರ್ನಾಟಕದವರು ೪೦ ಜನ ಮಾತ್ರ. ಈಗ ಮಹಾರಾಷ್ಟ್ರದವರು ಬೆಳಗಾವಿ ನಗರಕ್ಕೆ ಸಂಬಂಧವಾಗಿ ಗಡಿ ಪ್ರದೇಶಗಳಿಗೆ ಸಂಬಂಧವಾಗಿ ಒಂದೇ ಉಸಿರಿನಲ್ಲಿ ಹೇಳುವ ಕಾರವಾರ, ಸೂಪಾ, ಹಳಿಯಾಳ, ಖಾನಾಪೂರ, ಬೆಳಗಾವಿ, ನಿಪ್ಪಾಣಿ, ಭಾಲ್ಕಿ, ಬೀದರ್, ಔರಾದ ಸಮೇತ ‘ಝಾಲಾಚ ಪಾಹಿಜಿ’ ಎಂಬ ವಾದಗಳನ್ನೆಲ್ಲ ಮಹಾರಾಷ್ಟ್ರದವರು ಪಾರ್ಲಿಮೆಂಟಿನ ಮುಂದೆ ತಂದದ್ದು ಆ ಎಲ್ಲ ತಿದ್ದುಪಡಿಗಳ್ನನೂ ಪಾರ್ಲಿಮೆಂಟು ಸಾರಾಸಗಟಾಗಿ ತಿರಸ್ಕರಿಸಿತು. ಪಾರ್ಲಿಮೆಂಟಿನ ಒಪ್ಪಿಗೆ ಪಡೆದ ನಂತರ ಕರ್ನಾಟಕ ರಾಜ್ಯವು ೧೯೫೬ ನೆಯ ನವಂಬರ್ ೧ ನೇಯ ತಾರೀಖು ಅಸ್ತಿತ್ವಕ್ಕೆ ಬಂದಿತು.

ಇಷ್ಟೆಲ್ಲ ನಡೆದ ನಂತರವೂ ಮಹಾರಾಷ್ಟ್ರದವರು ಬೆಳಗಾವಿ ಪ್ರಶ್ನೆಯು ಪರಿಹಾರಗೊಳ್ಳದೇ ಹಾಗೆಯೇ ಉಳಿದಿದೆ ಎಂದು ಜಗಳ ಕಾಯುತ್ತಲೇ ಇದ್ದಾರೆ.

ಅವರು ಎಬ್ಬಿಸುವ ಕೋಲಾಹಲಕ್ಕೆ ಕೇಂದ್ರ ಸರಕಾರದವರ ಕುಮ್ಮಕ್ಕು ಇದ್ದಿತು. ಆ ಕಾಲಕ್ಕೆ ಅಂದರೆ ೧೯೬೬ ರಲ್ಲಿ ಮುಂಬೈ ನಗರದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆ ನಡೆಯಿತು. ಆ ಸಂಧಿಯನ್ನು ಉಪಯೋಗಿಸಿಕೊಂಡು ಮಹಾರಾಷ್ಟ್ರದವರು ಉಪಾಯಗಾರಿಕೆ ಮಾಡಿ, ಸ್ವಾತಂತ್ರ್ಯಯೋಧ ಸೇನಾಪತಿ ಬಾಪಟರನ್ನು ಉಪವಾಸ ಕೂಡ್ರಿಸಿದರು. ಸೇನಾಪತಿ ಬಾಪಟ್ ಸತ್ತು ಹೋಗುತ್ತಾರೆಂದು ಅವರು ಕಳವಳ ವ್ಯಕ್ತಪಡಿಸಿದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯವರು ಕರ್ನಾಟಕ ಮಹಾರಾಷ್ಟ್ರಗಳ ಗಡಿ ವಿವಾದವನ್ನು ಆಖೈರಾಗಿ ಒಮ್ಮೆ ಮುಗಿಸಿಬಿಡಬೇಕೆಂದು ಒಂದು ಆಯೋಗವನ್ನು ರಚಿಸಬೇಕೆಂದು ಕರ್ನಾಟಕದ ಮುಖ್ಯಮಂತ್ರಿ ನಿಜಲಿಂಗಪ್ಪನವರನ್ನು ಒಪ್ಪಿಸಲು ಅವರ ಮೇಲೆ ಒತ್ತಾಯ ತಂದರು. ಮೊದ ಮೊದಲು ಮೂವರು ಸದಸ್ಯರ ಆಯೋಗವನ್ನು ರಚಿಸಬೇಕೆನ್ನುವ ವಿಚಾರ ಪ್ರಸ್ತಾಪಗೊಂಡಿತು. ಆದರೆ ಆ ಮೂವರಲ್ಲಿ ಯಾರಾದರೂ ಒಬ್ಬರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೆ ಆ ಪ್ರಶ್ನೆ ಹಾಗೆಯೇ ಉಳಿದುಬಿಡಬಹುದೆಂದು ಅನುಮಾನ ವ್ಯಕ್ತಪಟ್ಟಿದ್ದರಿಂದ ಸಭೆಯು ಏಕ ಸದಸ್ಯ ಆಯೋಗವನ್ನು ರಚಿಸಲು ಒಪ್ಪಿಕೊಂಡಿತು. ಆ ಆಯೋಗದ ತೀರ್ಪು ಸಂಬಂಧಿಸಿದ ಮೂರೂ ಪಕ್ಷಗಳಿಗೆ, ಅಂದರೆ ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇಂದ್ರ ಸರಕಾರಕ್ಕೆ ಬಂಧನಕಾರಿ ಎನಿಸಬೇಕೆಂದು ತೀರ್ಮಾನಿಸಲಾಯಿತು.

ಈ ಏಕ ಸದಸ್ಯ ಆಯೋಗದ ರಚನೆಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಒಪ್ಪಿತ್ತೆನ್ನುವ ವಿಚಾರ ಹೊರಬಿದ್ದೊಡನೆಯೇ ಮಹಾರಾಷ್ಟ್ರದ ತುಂಬೆಲ್ಲ ಹರ್ಷೋದ್ರೇಕ ವ್ಯಕ್ತಪಟ್ಟಿತು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಈ ಆಯೋಗದ ರಚನೆಗೆ ಒಪ್ಪಿದ್ದ ಸದಸ್ಯರಲ್ಲಿ ಈಗ ಯಾರೊಬ್ಬರೂ ಜೀವಿಸಿ ಉಳಿದಿಲ್ಲ . ಆದರೆ ಆ ಕಾಲದ ವೃತ್ತಪತ್ರಿಕೆಗಳು ಜೀವಂತ ಸಾಕ್ಷಿಯಾಗಿ ನಮ್ಮ ಕಣ್ಣೆದುರಿಗೆ ಇವೆ.

ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದ ಮಹಾಜನ ವರದಿ ಬಂದು ೩೫ ವರ್ಷಗಳಾಗಿದ್ದರೂ ಅದನ್ನು ಜಾರಿಗೊಳಿಸದೇ ಕೇಂದ್ರ ಸರಕಾರವು ಅದರ ಬಗ್ಗೆ ತನ್ನ ಜವಾಬ್ದಾರಿ ಏನೂ ಇಲ್ಲವೆಂಬಂತೆ ಭಾರೀ ಹಗುರಾಗಿ ನಡೆದುಕೊಂಡಿದೆ.

ಭಾರತದ ಭವಿಷ್ಯತ್ತನ್ನು ನಿರ್ದೇಶಿಸುವ ಸ್ಥಾನದಲ್ಲಿ ಇರುವ ಜನರಲ್ಲಿ ಮುತ್ಸದ್ದಿತನ ಲವಲೇಶವೂ ಇಲ್ಲವೆಂಬುದನ್ನು ಇದು ತೋರಿಸುತ್ತದೆ. ಈ ವಿಚಾರದ ಬಗ್ಗೆ ಮಾಜಿ ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿ ಅವರು ಮಾತ್ರ ಖಚಿತವಾದ ಅಭಿಪ್ರಾಯವನ್ನು ಹೊಂದಿದ್ದರು. ಅವರ ಕಾಲದಲ್ಲಿ ಗಡಿ ವಿವಾದ ಎತ್ತುವ ಜನ ಯಾರೂ ಕಮಕ್ ಕಿಮಕ್ ಎನ್ನಲಿಲ್ಲ .

ಅವರು ೧೯೭೪ ರಲ್ಲಿ ಪ್ರಧಾನ ಮಂತ್ರಿ ಆಗಿ ಕೊಲ್ಹಾಪುರಕ್ಕೆ ಬಂದಾಗ ಅವರನ್ನು ಸಂಬೋಧಿಸಿ ಸಾರ್ವಜನಿಕ ಸಭೆಯಲ್ಲಿ ಯಾರೋ ಒಬ್ಬರು ಗಡಿ ಪ್ರಶ್ನೆಯನ್ನು ಎತ್ತಿದರು. ಅದಕ್ಕೆ ಉತ್ತರ ಕೊಡುತ್ತ ಮೊರಾರ್ಜಿ ದೇಸಾಯಿ ಅವರು, ‘ಗಡಿ ಪ್ರಶ್ನೆಯೇ? ಅದೆಲ್ಲಿದೆ ? ಸತ್ತ ಕುದುರೆಯನ್ನು ಅದೇಕೆ ಸುಮ್ಮನೆ ಹೊಡೆಯುತ್ತಿದ್ದೀರಿ’ ಎಂದು ಹೇಳಿ ಸಭೆಯನ್ನು ಸ್ತಬ್ಧಗೊಳಿಸಿಬಿಟ್ಟರು.

ಮಹಾರಾಷ್ಟ್ರದವರು ತಮಗೆ ಸಿಗಲಿಲ್ಲದ ಬೆಳಗಾವಿಯ ಬಗ್ಗೆ ತಳಬುಡವಿಲ್ಲದೆ ವಾದಗಳನ್ನು ಮಂಡಿಸುತ್ತಲೇ ಬಂದಿದ್ದಾರೆ. ಒಮ್ಮೆ ಅವರು ಬೆಳಗಾವಿ ಮತ್ತು ಗಡಿ ಪ್ರದೇಶಗಳಲ್ಲಿ ಜನಮತಗಣನೆ ಆಗಬೇಕೆಂದು ಕೇಳಿದರು. ಅಂತಹ ಜನಮತಗಣನೆ ಗಡಿ ವಿಚಾರ ಕುರಿತು ಭಾರತದಲ್ಲಿ ಎಲ್ಲಿಯೂ ಆಗಿಲ್ಲ .

ಆ ಮೇಲೆ ಅವರು ಬೆಳಗಾವಿ ಮತ್ತು ವಾದಗ್ರಸ್ತ ಪ್ರದೇಶಗಳನ್ನು ಗೋವಾದೊಡನೆ ಸೇರಿಸಿ ವಿಶಾಲ ಗೋಮಾಂತಕ ರಾಜ್ಯವನ್ನು ನಿರ್ಮಿಸಬೇಕೆಂದು ಕೇಳಿದರು. ಆದರೆ ಅವರ ಈ ಸೂಚನೆಯನ್ನು ಗೋವೆಯ ಜನರೇ ತಳ್ಳಿಹಾಕಿದರು.

ಇದಾದ ನಂತರ, ಬೆಳಗಾವಿಯನ್ನು ಕೇಂದ್ರದ ಆಡಳಿತಕ್ಕೆ ಒಪ್ಪಿಸಬೇಕೆಂದು ಕೇಳಿದರು. ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದ ಶಂಕರರಾವ್ ಚವ್ಹಾಣ್‌ರಂತೂ ತಾವು ಬೆಳಗಾವಿಯನ್ನು ಒಂದು ನೂರು ಕೋಟಿ ರೂಗಳಿಗೆ ಕೊಳ್ಳುವ ಹಾಸ್ಯಾಸ್ಪದ ಸೂಚನೆಯನ್ನು ಮಂಡಿಸಿದ್ದರು.

ಬೆಳಗಾವಿಯನ್ನು ಕೊಳ್ಳಬೇಕೆನ್ನುವ ಪ್ರಸ್ತಾಪವನ್ನು ಮಹಾರಾಷ್ಟ್ರದವರು ಮುಂದೆ ಮಾಡುತ್ತಾರೆಂದರೆ, ಅವರಿಗೆ ಬೆಳಗಾವಿಯ ಮೇಲೆ ಯಾವ ಹಕ್ಕುದಾರಿಕೆಯೂ ಇಲ್ಲವೆನ್ನುವುದು ಸ್ಪಷ್ಟವಾಗುತ್ತದೆ. ಬೆಳಗಾವಿ ತಮ್ಮದೇ ಆಗಿದ್ದರೆ ಅದನ್ನು ಅವರೇಕೆ ಕೊಳ್ಳಬೇಕೆನ್ನುತ್ತಿದ್ದರು ? ಮಹಾರಾಷ್ಟ್ರದವರು ಕರ್ನಾಟಕದೊಂದಿಗೆ ಒಳ್ಳೆಯ ನೆರೆಹೊರೆ ಸಂಬಂಧ ಇರಿಸಿಕೊಂಡು ಹೋಗುವುದಕ್ಕೆ ಬದಲಾಗಿ ಈ ಕಲಹ ಕಾಂಡದಲ್ಲಿ ತಮ್ಮನ್ನು ವೃಥಾ ತೊಡಗಿಸಿಕೊಳ್ಳುವುದು ಸರಿಯಲ್ಲ .

ಭಾರತದ ಯಾವ ಎರಡು ರಾಜ್ಯಗಳ ಜನರೂ ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ಜನರಷ್ಟು ಹತ್ತಿರವಾಗಿಲ್ಲ . ಭಾಷೆಯ ದೃಷ್ಟಿಯಿಂದ, ಚರಿತ್ರೆಯ ದೃಷ್ಟಿಯಿಂದ ಅವರು ಕರ್ನಾಟಕದೊಂದಿಗೇ ಇದ್ದಾರೆ. ಇದನ್ನು ಅವರು ತಿಳಿದುಕೊಳ್ಳಬೇಕು.

ಲೋಕಮಾನ್ಯ ಬಾಲ ಗಂಗಾಧರ ಟಿಳಕರು ೧೯೧೪ ರಲ್ಲಿ ಬೆಳಗಾವಿ ಜಿಲ್ಲೆಯ ಗುರ್ಲಹೊಸೂರಿಗೆ ಬಂದಾಗ ಹೇಳಿದ ಮಾತನ್ನು ಅವರು ಗಮನಿಸಬೇಕು. ‘ಒಂದಾನೊಂದು ಕಾಲಕ್ಕೆ ಕರ್ನಾಟಕ ಮಹಾರಾಷ್ಟ್ರ ಎರಡೂ ಪ್ರದೇಶಗಳ ಜನರು ಆಡುತ್ತಿದ್ದ ಭಾಷೆ ಒಂದೇ ಆಗಿದ್ದಿತು. ಅದು ಕನ್ನಡವಾಗಿದ್ದಿತು.’

ಕರ್ನಾಟಕವು ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿಕೊಂಡಿದ್ದಿತ್ತೆಂಬುದು ಕೇವಲ ಕವಿ ಕಲ್ಪನೆ ಆಗಿರದೆ, ವಾಸ್ತವ ಸಂಗತಿ ಆಗಿದೆ. ಮಹಾರಾಷ್ಟ್ರದಲ್ಲಿರುವ ಜನರೆಲ್ಲರೂ ಕಳೆದುಹೋದ ಕನ್ನಡಿಗರೇ ಆಗಿದ್ದಾರೆ.

ಮಹಾರಾಷ್ಟ್ರದವರು, ಕರ್ನಾಟಕದ ಇಬ್ಬರು ರಾಣಿಯರು ಮಾಡಿದ ಎರಡು ಉಪಕಾರದ ಕೆಲಸಗಳನ್ನು ಕೃತಜ್ಞತೆಯಿಂದ ಸ್ಮರಿಬೇಕು. ಶಿವಾಜಿ ಮಹಾರಾಜರ ಮಗ ರಾಜಾರಾಮನಿಗೆ ಕೆಳದಿ ಚೆನ್ನಮ್ಮ ರಾಣಿ ಮೊಗಲ್‌ರ ಪ್ರತಿರೋಧವನ್ನು ಲೆಕ್ಕಿಸದೇ ಆಶ್ರಯ ಕೊಟ್ಟಳು. ಅವಳೇನಾದರೂ ಆಗ ರಾಜಾರಾಮನನ್ನು ಔರಂಗಜೇಬನಿಗೆ ಒಪ್ಪಿಸಿಕೊಟ್ಟಿದ್ದರೆ, ಮಹಾರಾಷ್ಟ್ರದ ಇತಿಹಾಸವೇ ಪಲ್ಲಟಗೊಂಡು ಹೋಗುತ್ತಿತ್ತು ಎಂದು ಮಹಾರಾಷ್ಟ್ರದ ಸಂಶೋಧಕ ರಾಜವಾಡೆ ಹೇಳಿದ್ದಾರೆ.

ಶಿವಾಜಿ ಮಹಾರಾಜರು ಬೆಳವಡಿ ಮಲ್ಲಮ್ಮನೊಡನೆ ಕದನ ಮಾಡುತ್ತಿದ್ದಾಗ ತಮ್ಮ ಕುದುರೆಯಿಂದ ಕೆಳಗೆ ಬಿದ್ದರು. ಆಗ ಶಿವಾಜಿ ಸತ್ತೇ ಹೋಗುತ್ತಿದ್ದರು. ಅವರು ‘ನನ್ನ ತಾಯಿ ಜೀಜಾಬಾಯಿ ಸತ್ತು ಹೋಗಿದ್ದಾಳೆ. ಈಗ ನೀನೇ ನನ್ನ ತಾಯಿ’ ಎಂದು ಹೇಳಿದಾಗ ಯಾವ ತಾಯಿಗೆ ತಾನೆ ಕೊಲ್ಲುವ ಮನಸ್ಸು ಬರುತ್ತದೆ? ಬೆಳವಡಿ ಮಲ್ಲಮ್ಮ ಶಿವಾಜಿ ಮಹಾರಾಜರಿಗೆ ಪ್ರಾಣದಾನ ಮಾಡಿದಳು. ಈ ಸಂಗತಿಯ ಉಲ್ಲೇಖ ಪುಣೆಯ ಪತ್ರಾಗಾರದಲ್ಲಿ ಇರುವ ರುಮ್ಮಾಲಿನಲ್ಲಿ ಇದೆ.

ಮಹಾರಾಷ್ಟ್ರದವರು ಕನ್ನಡದ ಅಪ್ಪ , ಅಣ್ಣ , ಅಕ್ಕ, ತಾಯಿ ಮೊದಲಾದ ಹೃದಯಕ್ಕೆ ಹತ್ತಿರದ ಶಬ್ದಗಳನ್ನೆಲ್ಲ ತೆಗೆದುಕೊಂಡಿದ್ದಾರೆ. ಆದರೂ ಅವರು ಕನ್ನಡಿಗರೊಂದಿಗೆ ಜಗಳ ಮಾಡಬೇಕೆನ್ನುತ್ತಾರೆ. ಇದೆಲ್ಲಿಯ ನ್ಯಾಯ ?

ದೇವರೇ ಬಂದು ಕರ್ನಾಟಕ, ಮಹಾರಾಷ್ಟ್ರಗಳ ವಿಭಜನೆ ಮಾಡಿದರೂ ಕೆಲವರು ಕನ್ನಡಿಗರು ಮಹಾರಾಷ್ಟ್ರದಲ್ಲಿ , ಅದೇ ರೀತಿ ಕೆಲವರು ಮರಾಠಿಗರು ಕರ್ನಾಟಕದಲ್ಲಿ ಉಳಿದೇ ಉಳಿಯುತ್ತಾರೆ. ಅವರು ಸುಖವಾಗಿರುವಂತೆ ನೋಡಿಕೊಳ್ಳುವುದೇ ಎರಡು ರಾಜ್ಯಗಳ ಕರ್ತವ್ಯವಾಗಿದೆ.

ಮಹಾರಾಷ್ಟ್ರದವರು ಏನು ಮಾಡಿದರೂ, ಹತ್ತು ಜನ್ಮ ಕಳೆದು ಬಂದರೂ ಬೆಳಗಾವಿ ಅವರದಾಗುವುದಿಲ್ಲ . ಈ ಸಂಗತಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರರಿಗೆ ಮನವರಿಕೆ ಆಗಿದೆ. ಕರ್ನಾಟಕದವರು ಏನು ಕೊಡುತ್ತಾರೆ ಅದನ್ನು ತೆಗೆದುಕೊಂಡು ತಾವು ಮಹಾರಾಷ್ಟ್ರದವರು ಏನು ಕೊಡಬೇಕಾಗಿದೆಯೋ ಅದನ್ನು ಅವರಿಗೆ ಕೊಟ್ಟು ಈ ವಿವಾದದ ಪ್ರಶ್ನೆಯನ್ನು ಕೊನೆಗೊಳಿಸಬೇಕೆಂದು ಅವರು ಎಂ.ಇ.ಎಸ್. ಜನರಿಗೆ ಹೇಳಿದ್ದಾರೆ. ಬೆಳಗಾವಿ ಮಹಾರಾಷ್ಟ್ರಕ್ಕೆ ಸಿಕ್ಕಲಾರದು ಎನ್ನುವ ಮಾತನ್ನು ಹೇಳಿದ್ದ ಅವರು ‘ಬೆಳಗಾವಿ ಹಾಗೂ ಗಡಿ ಪ್ರಶ್ನೆಯನ್ನು ಒಂದು ದಂಧೆ ಮಾಡಿಕೊಂಡಿದ್ದಿರೇನು?’ ಎಂದು ಅದನ್ನು ಬಹು ಮೊನಚಾಗಿ ಹೇಳಿದ್ದರು.

ಈಗ ಕೇಂದ್ರ ಸರಕಾರವು ಮಹಾಜನ ವರದಿಯ ವಿಚಾರದಲ್ಲಿ ಯಾವ ಮೀನಾಮೇಷವನ್ನೂ ಎಣಿಸದೇ ಅದನ್ನು ಯಥಾವತ್ತಾಗಿ ಕಾರ್ಯರೂಪಕ್ಕೆ ತರಲು ಮುಂದಾಗಬೇಕು.

ಕೇರಳದಲ್ಲಿರುವ ಕಾಸರಗೋಡು ಕರ್ನಾಟಕದ್ದೇ ಆಗಿದೆ. ಅದನ್ನು ದುರುದ್ದೇಶದಿಂದ ಕೇರಳದಲ್ಲಿ ಇರಿಸಲಾಗಿದೆ.

ಬೆಳಗಾವಿಯು ಕರ್ನಾಟಕ ಬಿಟ್ಟು ಎಂದೂ ಹೋಗಲಾರದು. ಮಹಾರಾಷ್ಟ್ರಕ್ಕೆ ಅದು ಎಂದೂ ಸಿಕ್ಕಲಾರದು. ಇದಂತೂ ಸರಿಯೇ, ಬೆಳಗಾವಿಗೆ ಏನಾದೀತೋ ಎನ್ನುವ ಹೆದರಿಕೆಯನ್ನು ಮನಸ್ಸಿನಲ್ಲಿ ತಂದುಕೊಂಡು ಕರ್ನಾಟಕವು ಕಾಸರಗೋಡನ್ನು ಕೈಬಿಡಬಾರದು. ಕರ್ನಾಟಕದ ಅಪ್ಪಟ ಕನ್ನಡ ಸಂಸ್ಕೃತಿ ಕಾಸರಗೋಡಿನಲ್ಲಿಯೂ ಇದೆ. ಅದು ತಮ್ಮದೆಂದು ಸಾಧಿಸುವ ಯಾವ ಸಾಕ್ಷಿ ಪುರಾವೆಗಳೂ ಕೇರಳದ ಬಳಿ ಇಲ್ಲ .

ಈಗ ಮಹಾರಾಷ್ಟ್ರದವರು ಗಡಿ ವಿವಾದದ ಪ್ರಶ್ನೆಯನ್ನು ಎತ್ತಿಕೊಂಡು ತಾವು ಸಂವಿಧಾನದ ೧೩೧ ನೆಯ ವಿಧಿಯಂತೆ ಸರ್ವೋನ್ನತ ನ್ಯಾಯಾಲಯಕ್ಕೆ ಹೋಗುವ ಹೆದರಿಕೆಯನ್ನು ತೋರಿಸಿದ್ದಾರೆ.

ಆದರೆ ಈ ಪ್ರಶ್ನೆ ಸರ್ವೋನ್ನತ ನ್ಯಾಯಾಲಯದ ಪರಿಶೀಲನೆಗೆ ಒಳಪಡುವುದಿಲ್ಲ . ಆದರೂ ಅವರು ಅಲ್ಲಿಗೆ ಹೋಗಬೇಕೆನ್ನುತ್ತಾರೆ. ಗುಡ್ಡಕ್ಕೆ ಕಲ್ಲು ಹೊರುತ್ತೇವೆಂದು ಹೊರಟವರನ್ನು ಯಾರೂ ತಡೆಗಟ್ಟಬಾರದು. ಗಾಳಿಯನ್ನು ಗುದ್ದಿ ಮೈನೋವು ಮಾಡಿಕೊಳ್ಳಬೇಕೆನ್ನುವ ಇಚ್ಛೆ ಅವರಿಗಿದ್ದರೆ ಅವರು ಅದಕ್ಕೆ ಮುಂದಾಗಲಿ.

ಆಗದ ಹೋಗದ ಇಂತಹ ದೊಂಬರಾಟವನ್ನು ಮಾಡುವುದಕ್ಕೆ ಬದಲಾಗಿ ಕರ್ನಾಟಕದೊಂದಿಗೆ ಒಳ್ಳೆಯ ನೆರೆಹೊರೆಯ ಸಂಬಂಧವನ್ನು ಬೆಳೆಸಿಕೊಂಡು ಇರಬೇಕೆನ್ನುವ ಬುದ್ಧಿವಂತಿಕೆಯ ದಾರಿಯನ್ನು ಹಿಡಿದರೆ ಅದರಿಂದ ಅವರಿಗೇ ಒಳ್ಳೆಯದಾಗುತ್ತದೆ. ಈಗ ಕರ್ನಾಟಕ ಮಹಾರಾಷ್ಟ್ರದವರಿಬ್ಬರೂ ಕೈ ಜೋಡಿಸಿ ನಿಂತು ತಮ್ಮ ಜನರಿಗೆ ಸುಖಶಾಂತಿ ಹಾಗೂ ನೆಮ್ಮದಿ ಬರುವಂತೆ ಮಾಡಿ ಭಾರತದ ಬಂಧುರತೆಯನ್ನು ಬಲಪಡಿಸಬೇಕು. ಈಗ ಉಭಯ ರಾಜ್ಯಗಳ ನಡುವೆ ಸ್ನೇಹದ ಸೇತುವೆಗಳನ್ನು ನಿರ್ಮಿಸುವ ಕೆಲಸ ನಡೆಯಬೇಕಲ್ಲದೆ, ಇರುವ ಸಾಂಸ್ಕೃತಿಕ ಸಂಬಂಧಗಳನ್ನು ಕಡಿದುಹಾಕುವ ಕೆಲಸ ನಡೆಯಬಾರದು. ಈಗ ವಿವೇಕದ ಕೆಲಸ ಇದೆಯಲ್ಲದೇ ಅವಿವೇಕದ ಕೆಲಸವಲ್ಲ

ಕರ್ನಾಟಕದ ರಾಜಕೀಯ ಮುಂದಾಳುತನವು ಗಡಿಯ ಈಚೆಗೆ ಹಾಗೂ ಗಡಿಯ ಆಚೆಗೆ ಇರುವ ಜನರ ವಿಚಾರದಲ್ಲಿ ತನ್ನ ಮೇಲೆ ಇರುವ ಹೊಣೆಗಾರಿಕೆಯನ್ನು ಅರಿತುಕೊಂಡು ತನ್ನ ಮುತ್ಸದ್ದಿತನವನ್ನು ತೋರಿಸಲು ಮುಂದಾಗಬೇಕು.

ಕಯ್ಯಾರ ಕಿಞ್ಞಣ್ಣ ರೈ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನ ಮುಕ್ತಾಯಗೊಂಡ ಹೊಸತದರಲ್ಲಿ , ಕೇರಳದ ಆಗಿನ ಮುಖ್ಯಮಂತ್ರಿ ಇ.ಕೆ.ನಯನಾರ್ ಒಂದು ಹೇಳಿಕೆ ನೀಡಿ, ಕರ್ನಾಟಕದೊಂದಿಗೆ ತಾವು ಅಲ್ಪಸ್ವಲ್ಪ ಗಡಿ ಹೊಂದಾಣಿಕೆಗೆ ಸಿದ್ಧರಿರುವುದಾಗಿ ಹೇಳಿದ್ದರು.

ಆ ಹೇಳಿಕೆಯನ್ನು ಅನುಲಕ್ಷಿಸಿ ಕರ್ನಾಟಕದ ಪ್ರಭುತ್ವವು ಕೇರಳದ ಮುಖ್ಯಮಂತ್ರಿಯನ್ನು ಸಂಧಿಸಿ ಮಾತನಾಡಲು ಮುಂದಾಗಲೇ ಇಲ್ಲ .

ಅದೇ ರೀತಿ ಕರ್ನಾಟಕದ ಗಡಿಯಾಚೆ ಇರುವ ಕನ್ನಡಿಗರ ಬಗ್ಗೆ ಅವರು ಮಹಾರಾಷ್ಟ್ರದಲ್ಲಿಯೇ ಇರಲಿ, ಆಂಧ್ರಪ್ರದೇಶದಲ್ಲಿಯೇ ಇರಲಿ, ತಮಿಳುನಾಡಿನಲ್ಲಿಯೇ ಇರಲಿ, ಅವರು ತಮಗೆ ಸಂಬಂಧಿದವರೆನ್ನುವ ಕಾಳಜಿ ಹಾಗೂ ಕಕ್ಕುಲಾತಿ ಇರಬೇಕು. ಆದರೆ ಅದರ ಅಭಾವ ಕರ್ನಾಟಕದಲ್ಲಿ ಕಾಣಿಸಿಕೊಂಡಿದೆ.

ಕರ್ನಾಟಕದ ಗಡಿಗೆ ಹೊಂದಿದಂತೆ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಮತ್ತು ಗೋವೆಯಲ್ಲಿ ಇರುವ ಕನ್ನಡಿಗರ ಬಗ್ಗೆ ನಾವು ಮಾಡಲೇಬೇಕಾದ ಕರ್ತವ್ಯವೊಂದು ಇದೆ.

ಈಗ ಕರ್ನಾಟಕದಲ್ಲಿರುವ ಜನರಲ್ಲಿ ಒಬ್ಬರೊಬ್ಬರ ಮನಸ್ಸನ್ನು ಜೋಡಿಸುವ ಸೇತುವೆಗಳನ್ನು ನಿರ್ಮಿಸುವ ಕೆಲಸ ನಡೆಯಬೇಕು. ಕರ್ನಾಟಕದೊಳಗಿನ ವಿಭಿನ್ನ ಪ್ರದೇಶಗಳ ಜನರು ಒಬ್ಬರೊಬ್ಬರನ್ನು ಅರಿಯುವುದು ಅಗತ್ಯವಿರುವಂತೆ ಕರ್ನಾಟಕದ ಈ ಕನ್ನಡಿಗರು ಕರ್ನಾಟಕದ ಹೊರಗಿರುವ ಕನ್ನಡಿಗರನ್ನೂ ಅರಿಯುವುದು ಅಗತ್ಯವಿದೆ.

ಕರ್ನಾಟಕದ ಒಳಗಿನ ಹಾಗೂ ಕರ್ನಾಟಕದ ಹೊರಗಿನ ಜನರು ಒಬ್ಬರನ್ನೊಬ್ಬರು ಅರಿಯುವಂತೆ, ಸ್ಪಂದಿಸುವಂತೆ, ಅವರಲ್ಲಿ ಹೆಚ್ಚಿನ ಬಂಧುರತೆ ತರುವ ಅಗತ್ಯವಿದೆ. ಈ ಕೆಲಸ ಬೆಳಗಾವಿಯಲ್ಲಿ , ಬೆಂಗಳೂರಿನಲ್ಲಿ , ಚಾಮರಾಜನಗರದಲ್ಲಿ ಹಾಗೂ ಕೊಡಗು ಜಿಲ್ಲೆಯಲ್ಲಿ ಬಹುದೊಡ್ಡ ರೀತಿಯಿಂದ ನಡೆಯಬೇಕಾದ ಅವಶ್ಯಕತೆ ಇದೆ.

ಈ ಜಿಲ್ಲೆಗಳ ಗಡಿ ಪ್ರದೇಶಗಳು ಬಹಳೇ ದುರ್ಬಲವಾಗಿವೆ. ದುರ್ಬಲರಾದ ಮಕ್ಕಳಿಗೆ ಮನೆಯಲ್ಲಿ ಹೆಚ್ಚಿನ ಪರಿಪೋಷಣೆಯನ್ನು ಒದಗಿಸುವಂತೆ ಈ ಪ್ರದೇಶಗಳಿಗೆ ಕರ್ನಾಟಕ ಸರಕಾರವು ಹೆಚ್ಚಿನ ಪರಿಪೋಷಣೆಯನ್ನು ಒದಗಿಸಿಕೊಡಬೇಕಾದ ಅವಶ್ಯಕತೆ ಇದೆ.

ಈ ಪ್ರದೇಶಗಳ ಕಡೆಗೆ ಹೆಚ್ಚಿನ ಗಮನವನ್ನು ಕೊಟ್ಟು ಅವುಗಳಲ್ಲಿ ಕನ್ನಡದ ಅಭಿಮಾನ ಉಕ್ಕಿ ಬರುವಂತೆ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು. ಈ ರಾಜ್ಯ ಉದಯವಾದ ಕಾಲದಿಂದಲೂ ಅವು ನಿರ್ಲಕ್ಷ್ಯಕ್ಕೆ ಹಾಗೂ ನಿಷ್ಕಾಳಜಿಗೆ ಗುರಿಯಾಗಿವೆ.

ಈ ಜಿಲ್ಲೆಗಳಿಗೆ ಅಧಿಕಾರಿಗಳನ್ನು ಅವರು ಸಣ್ಣವರೇ ಇರಲಿ, ದೊಡ್ಡವರೇ ಇರಲಿ ವರ್ಗಾವಣೆ ಮಾಡಿ ಕಳುಹಿಸುವಾಗ ಅವರು ನೂರಕ್ಕೆ ನೂರಾಹತ್ತರಷ್ಟು ಕನ್ನಡದ ಬಗ್ಗೆ ಅಭಿಮಾನ ಉಳ್ಳವರಾಗಿದ್ದಾರೆಂಬುದನ್ನು ಖಚಿತ ಮಾಡಿಕೊಳ್ಳಬೇಕು. ಆ ಪ್ರದೇಶಗಳಲ್ಲಿ ವಾಸಿಸುವ ಜನರೆಲ್ಲರಿಗೆ ಕನ್ನಡ ಬಂದೇ ಬರುತ್ತದೆ. ಕನ್ನಡ ಬಲ್ಲ ಅಧಿಕಾರಿಯನ್ನು ಅಲ್ಲಿ ಹಾಕಿದರೆ ಅವರು ಆ ಗಡಿ ಪ್ರದೇಶದ ಜನರೆಲ್ಲರೂ ಅವರೊಂದಿಗೆ ಕನ್ನಡದಲ್ಲಿಯೇ ಮಾತನಾಡುತ್ತಾರೆ.

ಈ ನೀತಿಯನ್ನು ಸರಕಾರವು ಈ ರಾಜ್ಯ ರಚನೆಗೊಂಡ ಆರಂಭದಿಂದಲೂ ಅನುಸರಿಸಿಕೊಂಡು ಬರಬೇಕಾಗಿದ್ದಿತು. ಈಗ ತಡವಾಗಿದೆ. ತಡವಾದರೂ ಚಿಂತೆಯಿಲ್ಲ . ಈಗಲಾದರೂ ಈ ಪರಿಪಾಠವನ್ನು ಆರಂಭಿಸಬೇಕು. ಎಂದೂ ಆರಂಭವಾಗದೇ ಇರುವುದಕ್ಕಿಂತಲೂ ತಡವಾಗಿಯಾದರೂ ಅದು ಆರಂಭವಾಗಬೇಕು.

ಕರ್ನಾಟಕದ ಇಂದಿನ ಗಡಿಗಳಿಗೆ ಹೊಂದಿಕೊಂಡು ಆಚೆಗೆ ಗೋವೆಯಲ್ಲಿ , ಮಹಾರಾಷ್ಟ್ರದಲ್ಲಿ , ಆಂಧ್ರಪ್ರದೇಶದಲ್ಲಿ , ತಮಿಳುನಾಡಿನಲ್ಲಿ ಹಾಗೂ ಕೇರಳದಲ್ಲಿ ಇರುವ ಗಡಿಯಾಚೆ ಜನರಲ್ಲಿ ಕನ್ನಡ ಭಾಷೆ ಹಾಗೂ ಸಂಸ್ಕೃತಿಗಳನ್ನು ಕಾಯ್ದಿರಿಸುವಂತಹ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ.

ಆ ಜನರ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅವಶ್ಯಕತೆಗಳು ಪೂರೈಕೆ ಆಗಲೇಬೇಕು. ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿ ಇರುವ ಗ್ರಾಮ ಮತ್ತು ಪಟ್ಟಣಗಳಲ್ಲಿ ಕನ್ನಡ ಶಾಲೆಗಳು ಇಲ್ಲ . ಅಲ್ಪ ಸಂಖ್ಯಾತರ ಹಕ್ಕುಗಳು ಆ ಜನರಿಗೆ ಲಭಿಸಲೇಬೇಕು. ಆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ದೃಷ್ಟಿಯಿಂದ ಒಂದು ಸರಕಾರೇತರ ಸಂಘಟನೆ ರಚನೆಗೊಳ್ಳುವುದನ್ನು ಸರಕಾರವು ಪುರಸ್ಕರಿಸಬೇಕು. ಈ ಸರಕಾರೇತರ ಸಂಘಟನೆ, ಕರ್ನಾಟಕದ ನೆರೆಯ ರಾಜ್ಯಗಳಲ್ಲಿ ಭಾಷಾ ಅಲ್ಪ ಸಂಖ್ಯಾತರಿಗೆ ಸಿಕ್ಕಬೇಕಾದ ಸವಲತ್ತುಗಳು, ಅಲ್ಲಿಯ ಕನ್ನಡ ಜನರಿಗೆ ಸಿಕ್ಕುವಂತೆ ಕ್ರಮಗಳನ್ನು ಕೈಕೊಳ್ಳುತ್ತದೆ. ಸಂಘಟನೆಗೆ ಕರ್ನಾಟಕವು ಬಹುದೊಡ್ಡ ರೀತಿಯಿಂದ ನೆರವು ಒದಗಿಸಿಕೊಡಬೇಕು. ಇಂತಹ ಸಂಘಟನೆಯೊಂದು ಅಸ್ತಿತ್ವದಲ್ಲಿ ಬಂದರೆ ನೆರೆಯ ರಾಜ್ಯದಲ್ಲಿರುವ ಕನ್ನಡ ಜನರಿಗೆ ಧೈರ್ಯ ಬಂದು ಅವರಲ್ಲಿ ಆತ್ಮ ವಿಶ್ವಾಸ ಜಾಗೃತಗೊಳ್ಳುತ್ತದೆ.

ಕರ್ನಾಟಕದಿಂದ ದೂರದಲ್ಲಿರುವ ಮುಂಬೈ, ಅಹಮದಾಬಾದ್, ದಿಲ್ಲಿ , ಹೈದ್ರಾಬಾದ್, ಚೆನ್ನೈ ಮುಂತಾದ ಕಡೆಗಳಲ್ಲಿ ಇರುವ ಕನ್ನಡಿಗರು ಕರ್ನಾಟಕದ ಅಭಿಮಾನ ಇರಿಸಿಕೊಂಡು ಕರ್ನಾಟಕದ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕದ ಜನ ಹಾಗೂ ಸರಕಾರ ಅವರ ಬಗ್ಗೆ ತಮ್ಮ ಕಾಳಜಿ ಇದೆ ಎನ್ನುವುದನ್ನು ಪ್ರತ್ಯಕ್ಷ ಪ್ರಮಾಣ ಮಾಡಿ ತೋರಿಸಿ ಕೊಡಬೇಕಾಗಿದೆ.

ಮುಂಬೈ ನಗರದಲ್ಲಿ ಬೆಂಗಳೂರಿನಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರಿದ್ದಾರೆ. ಹೈದ್ರಾಬಾದ್ ಹಾಗೂ ಚೆನ್ನೈ ನಗರಗಳಲ್ಲಿ ಕೂಡ ಅವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಭಾರತದೊಳಗಿನ ಈ ನಗರಗಳಲ್ಲಿ ವಾಸಿಸುವ ಕನ್ನಡಿಗರ ತಮ್ಮ ವೃತ್ತಿಗೋಸುಗ ಆ ನಗರಗಳಲ್ಲಿ ಇದ್ದಾರೆ. ಅವರು ಕಳೆದುಹೋಗುವ ಭೀತಿ ಇದೆ. ಅವರನ್ನು ಕನ್ನಡಕ್ಕೋಸುಗ ಉಳಿಸಿಕೊಳ್ಳಬೇಕಾದ ಕೆಲಸ ಇಂದು ನಡೆಯಬೇಕು.

ಮುಂಬೈ ನಗರದಲ್ಲಿ ಹಾಗೂ ಮಹಾರಾಷ್ಟ್ರದ ಬೇರೆ ನಗರಗಳಲ್ಲಿ ಕನ್ನಡಿಗರು ಎಲ್ಲೆಲ್ಲಿ ಗಣನೀಯ ಸಂಖ್ಯೆಯಲ್ಲಿ ಇರುವರೋ ಅಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಕಲಿಸಬಹುದು. ಇನ್ನುಳಿದ ಕಡೆಗಳಲ್ಲಿ ಕನ್ನಡಿಗರು ತಮ್ಮ ಶಾಲೆಗಳನ್ನು ಸ್ಥಾಪಿಸಿಕೊಂಡು ಅಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುತ್ತಿದ್ದರೆ ಅಂತಹ ಶಾಲೆಗಳಿಗೂ ಕೂಡ ನೆರವನ್ನು ನೀಡಬೇಕಾಗಿರುವ ಅವಶ್ಯಕತೆ ಇದೆ ಎನ್ನುವುದನ್ನು ನಮ್ಮ ಸರಕಾರ ಗಮನಿಸಬೇಕು.

ಈ ಕನ್ನಡಿಗರು ಇರುವ ನಗರದಲ್ಲೇ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು ಹೆಚ್ಚಾಗಿ ನಡೆಯುವಂತೆ ಪ್ರೋತ್ಸಾಹ ಹಾಗೂ ಪುರಸ್ಕಾರಗಳನ್ನು ನೀಡಬೇಕು. ಅವರಿರುವ ಸ್ಥಳದಲ್ಲಿ ಅವರು ಗ್ರಂಥಾಲಯಗಳನ್ನು ಸ್ಥಾಪಿಸಿಕೊಂಡಿದ್ದರೆ, ಆ ಗ್ರಂಥಾಲಯಗಳಿಗೆ ಪತ್ರಿಕೆ ಹಾಗೂ ಪುಸ್ತಕಗಳನ್ನು ಒದಗಿಸಿಕೊಡುವ ಕ್ರಮವನ್ನು ಕೈಕೊಳ್ಳಬೇಕು.

ಹೊರನಾಡಿನ ಕನ್ನಡಿಗರು ಶಾಲೆಗಳನ್ನು ಕಟ್ಟಿಕೊಳ್ಳುವ ಸಾಹಸದ ಪ್ರಯತ್ನಗಳನ್ನು ಕೈಕೊಂಡಿದ್ದರೆ, ಅವರ ಕಟ್ಟೋಣ ಕಾರ್ಯಗಳಿಗೆ ಸರಕಾರವು ಬಹುದೊಡ್ಡ ರೀತಿಯಿಂದ ನೆರವನ್ನು ಒದಗಿಸಿಕೊಡಬೇಕು.

ಮುಂಬೈ, ದಿಲ್ಲಿ , ಹೈದ್ರಾಬಾದ್, ಚೆನ್ನೈಗಳಲ್ಲಿ ಬಹಳಷ್ಟು ಕನ್ನಡ ಪರಿಣತಿ ಇದೆ. ನೃತ್ಯ, ಸಂಗೀತ, ನಾಟಕಗಳಲ್ಲಿ ಬಹಳಷ್ಟು ನೈಪುಣ್ಯ ಸಂಪಾದಿಸಿದ ಕಲಾವಿದರಿದ್ದಾರೆ. ಅವರನ್ನು ಆಗಾಗ ಕರ್ನಾಟಕಕ್ಕೆ ಕರೆಸಿಕೊಂಡು ಅವರನ್ನು ಹೆಚ್ಚಿನ ರೀತಿಯಿಂದ ಪ್ರೋತ್ಸಾಹಿಸಬೇಕು.

ದಿಲ್ಲಿ , ಮುಂಬೈ ಹಾಗೂ ಗೋವೆಯ ಪಣಜಿಯಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಪ್ರದರ್ಶನಾಲಯಗಳು ಬರಬೇಕು. ಭಾರತಕ್ಕೆ ಬರುವ ಪ್ರವಾಸಿಗರಿಗೆಲ್ಲ ಅವು ಆಕರ್ಷಣೀಯ ಸ್ಥಳಗಳೆನಿಸಬೇಕು. ಕರ್ನಾಟಕದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳ ಬಗ್ಗೆ ಆ ಪ್ರದರ್ಶನಾಲಯಗಳಲ್ಲಿ ತಿಳಿವಳಕೆ ಒದಗಿಸುವ ಏರ್ಪಾಟನ್ನು ಕಲ್ಪಿಸಬೇಕು.

೬೦ ವರ್ಷಗಳಷ್ಟು ಹಿಂದೆ ಸುಪ್ರಸಿದ್ಧ ಸಾಂಪತ್ತಿಕ ಶಾಸ್ತ್ರಜ್ಞ ಡಾ. ವಿ. ಕೆ. ಆರ್. ವಿ. ರಾವ್ ಅವರು ಕರ್ನಾಟಕದಲ್ಲಿ ಕನ್ನಡಿಗರ ಜನಸಂಖ್ಯೆ ಇಳಿಯುತ್ತ ನಡೆದಿದೆ ಎನ್ನುವ ಸಂಗತಿಯನ್ನು ಕನ್ನಡಿಗರಿಗೆ ತಿಳಿಸಿದ್ದರು. ಕನ್ನಡಿಗರ ಸಂಖ್ಯೆ ವರ್ಷ ವರ್ಷವೂ ಈ ರಾಜ್ಯದಲ್ಲಿ ಇಳಿಮುಖವಾಗುತ್ತಲೇ ನಡೆದಿದೆ. ಆ ಸಂಖ್ಯೆ ಹೆಚ್ಚುವಂತೆ ಇಲ್ಲವೆ ಸ್ಥಿರಗೊಳ್ಳುವಂತೆ ವ್ಯಾವಹಾರಿಕ ಕ್ರಮಗಳನ್ನು ಕೈಕೊಳ್ಳಬೇಕಾದ ಅವಶ್ಯಕತೆ ಇದೆ. ಕನ್ನಡ ಹಾಗೂ ಕರ್ನಾಟಕಗಳು ದುರ್ಬಲವಾಗಿರುವ ಪ್ರದೇಶಗಳಲ್ಲಿ ನಗರಾಭಿವೃದ್ಧಿ ಮಂಡಳಿಗಳನ್ನು ಬಹು ವಿವೇಚನೆಯಿಂದ ರಚಿಸಬೇಕು. ರಾಜಕೀಯ ಕಾರಣಕ್ಕೋಸುಗ ಸರಕಾರದಲ್ಲಿದ್ದವರು ಯಾರು ಯಾರನ್ನೊ ನೇಮಕ ಮಾಡಿಕೊಳ್ಳುವುದಕ್ಕೆ ಬದಲಾಗಿ ಆ ಸ್ಥಳಗಳಿಗೆ ಕನ್ನಡದ ಅಭಿಮಾನವುಳ್ಳ ಜನರನ್ನು ನೇಮಕ ಮಾಡಿಕೊಳ್ಳಬೇಕು. ನೀಡುವ ಜನರು ಕನ್ನಡಿಗರಾಗಿದ್ದರೆ ಕನ್ನಡಿಗರ ಪಾಲು ಅವರಿಗೆ ಲಭಿಸುತ್ತದೆ.

ಬೆಳಗಾವಿ, ಬೀದರ, ಗುಲಬರ್ಗಾ, ರಾಯಚೂರು, ಚಾಮರಾಜನಗರ ಹಾಗೂ ಕೊಡಗಿನಲ್ಲಿ ನಗರಾಭಿವೃದ್ಧಿ ಮಂಡಳಿಗಳಿಗೆ ನೇಮಕ ಮಾಡುವಾಗ ಸರಕಾರದಲ್ಲಿರುವವರು ರಾಜ್ಯದ ಹಿತ ನೆರವೇರುವಂತೆ ಸಂಪೂರ್ಣ ಜಾಗೃತಿ ಇರಿಸಿಕೊಳ್ಳಬೇಕು.

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ , ಸಾಹಿತ್ಯ ಅಕಾಡೆಮಿಗಳಲ್ಲಿ , ಪುಸ್ತಕ ಪ್ರಾಧಿಕಾರದಲ್ಲಿ , ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದಲ್ಲಿ ಕನ್ನಡ ಪುಸ್ತಕಗಳ ಪ್ರಕಟಣಾ ಕೆಲಸ ಬೇರೆ ಬೇರೆ ಪ್ರಮಾಣದಲ್ಲಿ ನಡೆಯುತ್ತಲೇ ಇದೆ. ಅವೆಲ್ಲವುಗಳನ್ನು ಸಂಯೋಜಿಸುವ ಕೆಲಸ ಈಗ ನಡೆಯಬೇಕು. ಯಾರು ಯಾವ ಕೆಲಸ ಮಾಡಬೇಕೆನ್ನುವುದು ನಿಗದಿಯಾಗಬೇಕು.

ಒಬ್ಬರು ಮಾಡುವ ಕೆಲಸವನ್ನು ಇನ್ನೊಬ್ಬರು ಮಾಡುತ್ತ ಅದು ಚರ್ವಿತ ಚರ್ವಣ ಎನಿಸಬಾರದು. ಅವು ಮಾಡುವ ಕೆಲಸದಲ್ಲಿ ಒಂದು ಸೂತ್ರ ಬದ್ಧತೆ ಇರಬೇಕು. ಆ ಸಂಯೋಜನೆ ನಡೆಯದೇ ಹೋದರೆ ನಮಗೆ ಅವುಗಳಿಂದ ಇಚ್ಛಿತ ಪರಿಣಾಮವೇನೂ ಲಭಿಸುವುದಿಲ್ಲ.

ಕನ್ನಡ ಪುಸ್ತಕ ಪ್ರಕಟಣೆ ಹಾಗೂ ಗ್ರಂಥಾಲಯಗಳ ಬೆಳವಣಿಗೆ

ಕನ್ನಡದ ಕೆಲಸಕ್ಕೆ ಹಾಗೂ ಗ್ರಂಥಗಾರಿಕೆಗೆ ಹುಲುಸು ಬರಬೇಕಾದರೆ ಗ್ರಂಥಾಲಯ ಇಲಾಖೆಯನ್ನು ಬಲಪಡಿಸಬೇಕಾದ ಅವಶ್ಯಕತೆ ಇದೆ. ಕರ್ನಾಟಕ ರಾಜ್ಯವು ಗ್ರಂಥಾಲಯ ಸೇವೆಗೆ ಬಹು ಅಮೂಲ್ಯ ಕೊಡುಗೆಗಳನ್ನು ನೀಡಿದೆ. ಗ್ರಂಥಾಲಯ ಶಾಸ್ತ್ರದ ಪಿತಾಮಹರೆನಿಸಿದ ರಂಗನಾಥರು ಇಲ್ಲಿಯವರೇ, ರಾಷ್ಟ್ರೀಯ ಗ್ರಂಥಾಲಯದ ಮುಖ್ಯಸ್ಥರಾಗಿದ್ದ ಬಿ. ಎಸ್.ಕೇಶವನ್‌ರು ಕರ್ನಾಟಕದವರೇ. ಗ್ರಂಥಾಲಯ ಶಾಸ್ತ್ರದಲ್ಲಿ ನಿಪುಣರಾದ ರಾಷ್ಟ್ರಖ್ಯಾತಿಯ ಗ್ರಂಥಪಾಲಕರಾದ ಕೆ. ಎಸ್.ದೇಶಪಾಂಡೆ ಅವರು ಇಲ್ಲಿಯವರೇ ಎಂಬುದು ಗಮನಾರ್ಹ.

ಜನರಿಗೆ ಗ್ರಂಥಾಲಯ ಸೇವೆಯನ್ನು ಒದಗಿಸಿಕೊಡುವಲ್ಲಿ ಕರ್ನಾಟಕವು ಭಾರತಕ್ಕೆ ಮಾದರಿ ಎನಿಸುವ ಮೇಲ್ಪಂಕ್ತಿಯನ್ನು ಹಾಕಿಕೊಡಬೇಕು.

ಕರ್ನಾಟಕ ಸರಕಾರವು ಗ್ರಂಥಾಲಯಗಳನ್ನು ಹೆಚ್ಚಿಸುವ ಶಕ್ತಿಯನ್ನು ಆಸಕ್ತಿಯನ್ನು ಹೊಂದಿದೆ. ಆದರೆ ಆ ಗ್ರಂಥಾಲಯಗಳಿಗೆ ಗ್ರಂಥಪಾಲಕರನ್ನು ನೇಮಿಸುವ ಆಸಕ್ತಿಯನ್ನು ಹೊಂದಿಲ್ಲ. ಎಷ್ಟೋ ಗ್ರಾಮಗಳಲ್ಲಿ ಇರುವ ಗ್ರಂಥಾಲಯಗಳ ಮೇಲ್ವಿಚಾರಕರಿಗೆ ತಿಂಗಳಿಗೆ ಅತ್ಯಂತ ಕಡಿಮೆ ಪ್ರಮಾಣದ ಸಂಬಳ ನೀಡುತ್ತಿದ್ದು ಈಗ ಅದನ್ನು ಹೆಚ್ಚಿಸುವ ಅಗತ್ಯವಿದೆ.

ರಾಜ್ಯದಲ್ಲಿ ಗ್ರಂಥಾಲಯ ಸೇವೆ ವ್ಯಾಪಕವಾಗಿ ಹಬ್ಬಿಕೊಳ್ಳಬೇಕು. ಅದರಲ್ಲಿ ತರಬೇತಿ ಪಡೆದ ಗ್ರಂಥಪಾಲಕರು ನೇಮಕಗೊಳ್ಳಬೇಕು. ಈ ರಾಜ್ಯದಲ್ಲಿ ಆರಂಭಗೊಂಡ ಪ್ರತಿಯೊಂದು ಗ್ರಂಥಾಲಯಕ್ಕೆ ರಾಜ್ಯದಲ್ಲಿ ಪ್ರಕಟವಾದ ಎಲ್ಲ ಪುಸ್ತಕಗಳೂ ಲಭಿಸಬೇಕು. ಈ ಗ್ರಂಥಾಲಯಗಳು ಪುಸ್ತಕಗಳನ್ನು ಕೊಳ್ಳುವುದಾದರೆ ಯಾವ ಲೇಖಕನೂ ತನ್ನ ಪುಸ್ತಕ ಮಾರಾಟವಾಗಿಲ್ಲವೆಂದು ಹಳಹಳಿ ಪಡಬೇಕಾದುದಿಲ್ಲ . ಒಬ್ಬ ಲೇಖಕ ಬರೆದ ಪುಸ್ತಕಗಳು ಯಾವ ಭಿಡೆ ಮುರವತ್ತುಗಳಿಗೂ ಒಳಗಾಗದೇ ರಾಜ್ಯದ ಗ್ರಂಥಾಲಯಗಳಿಗೆ ಹೋಗಬೇಕು.

‘ಹ್ಯಾಮ್ಲೆಟ್’ ನಾಟಕದಲ್ಲಿ ಏನೋ ಕೊಳೆತಿದೆ ಎನ್ನುವ ಮಾತೊಂದಿದೆ. ಸರಕಾರವು ಗ್ರಂಥಾಲಯ ಸೇವೆಯಲ್ಲಿ ಏನಾದರೂ ಕೊರತೆಯಿದ್ದರೆ ಅದನ್ನು ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳಬೇಕು. ಜನರನ್ನು ಈಗ ಸಾಕ್ಷರರನ್ನಾಗಿ ಮಾಡುವುದು ಇದೆ ಮತ್ತು ಸಾಕ್ಷರರಾದವರನ್ನು ಸಾಕ್ಷರರನ್ನಾಗಿ ಉಳಿಸಿಕೊಳ್ಳುವುದು ಇದೆ. ಗ್ರಂಥಗಾರಿಕೆಗೆ ಹುಲುಸು ಬಂದರೇನೇ ಸಾಕ್ಷರರು ಸಾಕ್ಷರರಾಗಿ ಉಳಿಯುತ್ತಾರೆ. ಗ್ರಂಥಾಲಯ ಸೇವೆಗೆ ಸರಕಾರದ ಆಯವ್ಯಯದಲ್ಲಿ ರಾಜ್ಯದ ವರಮಾನ ಶೇ.೨ರಷ್ಟು ಹಣ ಮೀಸಲಿರಿಸಬೇಕು. ಸಾಕ್ಷರರಾದವರು ಮತ್ತೆ ನಿರಕ್ಷರತೆಗೆ ಇಳಿಯದಂತೆ ನೋಡಿಕೊಳ್ಳಬೇಕಾದ ಅವಶ್ಯಕತೆ ಇದೆ.

ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿ ಎಲ್ಲ ಬಗೆಯ ಕ್ರೀಡೆಗಳಿಗೆ ಹೆಚ್ಚಿನ ಪುರಸ್ಕಾರ, ಪ್ರೋತ್ಸಾಹ ಸಿಗಬೇಕು. ಈ ಕ್ರೀಡೆಗಳು ಕೇವಲ ಬೆಂಗಳೂರು ನಗರಕ್ಕೆ ಸೀಮಿತವಾಗದೇ ರಾಜ್ಯದ ವಿಭಾಗ ಮಟ್ಟಗಳಿಗೆ ಹಾಗೂ ಜಿಲ್ಲಾ ಕೇಂದ್ರಗಳಿಗೆ ಕೂಡ ಬರಬೇಕು. ತಾಲೂಕು ಸ್ಥಳಗಳನ್ನು ಕೂಡ ನಿರ್ಲಕ್ಷಿಸಬಾರದು. ಕ್ರೀಡಾಪಟುಗಳು ಈ ರಾಜ್ಯದಲ್ಲಿಯೇ ಉಳಿಯುವಂತೆ ಅವರಿಗೆ ನೌಕರಿಗಳಲ್ಲಿ ಪ್ರಾಶಸ್ತ್ಯ ನೀಡಬೇಕು. ಇಲ್ಲದೇ ಹೋದರೆ ಅವರು ಬೇರೆ ರಾಜ್ಯಗಳಿಗೆ ಹೋಗಿ ನಮ್ಮ ಕ್ರೀಡಾ ವ್ಯವಸ್ಥೆಗೆ ಪೆಟ್ಟು ಬೀಳಬಹುದು.

ಕರ್ನಾಟಕದ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಗಳ ಕ್ಷೇತ್ರವು ಪುನರುಜ್ಜೀವನಗೊಳ್ಳಬೇಕಾದ ಅವಶ್ಯಕತೆ ಇದೆ. ಅದಕ್ಕೋಸುಗ ಸರಕಾರವು ಇವುಗಳಿಗೆ ಪೂರಕವೆನಿಸಿದ ಎಲ್ಲ ಇಲಾಖೆಗಳನ್ನು ಒಂದು ಮಂತ್ರಿ ಶಾಖೆಯ ಅಡಿಯಲ್ಲಿ ತರಬೇಕು. ಆ ರೀತಿ ತಮಿಳುನಾಡಿನಲ್ಲಿ ಈಗಾಗಲೇ ಮಾಡಿದ್ದಾರೆ.

ಇದರ ಜೊತೆಗೆ ಕರ್ನಾಟಕದ ಗಡಿಯ ಈಚೆಯ, ಗಡಿ ಆಚೆಯ ಹಾಗೂ ಹೊರನಾಡಿನ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಒದಗಿಸುವದಕ್ಕೋಸ್ಕರ ಸರಕಾರವು ಒಂದು ಪ್ರತ್ಯೇಕ ಮಂತ್ರಿ ಶಾಖೆಯನ್ನು ನಿರ್ಮಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು.

ಸರಕಾರವು ಮಾಡಬೇಕಾದ ಇನ್ನೊಂದು ಕೆಲಸವೇನೆಂದರೆ ಕರ್ನಾಟಕಕ್ಕೆ ಹತ್ತಿರದ ನೆರೆಯ ರಾಜ್ಯಗಳೊಂದಿಗೆ ಸಾಂಸ್ಕೃತಿಕ ಸಂಬಂಧಗಳನ್ನು ಬಲಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಸಾಹಿತಿಗಳು, ಪತ್ರಕರ್ತರು, ಕೃಷಿಕರು ಹಾಗೂ ಕಲಾವಿದರು ಇಲ್ಲಿಯವರು ಅಲ್ಲಿಗೆ ಹೋಗಬೇಕು, ಅಲ್ಲಿಯವರು ಇಲ್ಲಿಗೆ ಬರಬೇಕು. ಕರ್ನಾಟಕದ ಜನರು ಕರ್ನಾಟಕದಲ್ಲಿರುವ ಜನರನ್ನು ಅರಿಯಬೇಕಾಗಿರುವಂತೆ ತಮಗೆ ಹತ್ತಿರದ ರಾಜ್ಯಗಳ ಜನರನ್ನು ಕೂಡ ಸರಿಯಾಗಿ ಅರಿತುಕೊಳ್ಳಬೇಕಾದ ಅವಶ್ಯಕತೆ ಇದೆ.

ಅರಿವನ್ನು ಮೂಡಿಸಿಕೊಂಡರೆ ಅಜ್ಞಾನವು ನಮ್ಮ ಜನರನ್ನು ಎಂದಿಗೂ ಪೀಡಿಸುವುದಿಲ್ಲ. ಒಳ್ಳೆಯ ನೆರೆಹೊರೆಯ ಸಂಬಂಧಗಳು ನಮ್ಮಲ್ಲಿ ಇದ್ದರೆ, ಅವು ಸರಿಯಾದ ತಿಳಿವಳಿಕೆಯನ್ನು ನಮ್ಮಲ್ಲಿ ಮೂಡಿಸಿ ದೇಶದಲ್ಲಿ ಶಾಂತಿ ನೆಮ್ಮದಿಗಳು ನೆಲೆಸುವಂತೆ ಮಾಡುತ್ತವೆ.

ಬೆಳಗಾವಿಯಲ್ಲಿ ಕನ್ನಡ ಕಟ್ಟುವ ಕೆಲಸ

ಬೆಳಗಾವಿಯು ಕನ್ನಡವನ್ನು ನುಡಿಸಿಕೊಂಡು ಬಂದ ವೇಣುಗ್ರಾಮ. ಇದು ಕನ್ನಡದ್ದೆನ್ನುವ ಸತ್ಯವನ್ನು ೧೬೦ ವರ್ಷಗಳ ಹಿಂದೆಯೇ ಕ್ರಿಸ್ತೀಯರು ಮನವರಿಕೆ ಮಾಡಿಕೊಂಡಿದ್ದರು. ಬೆಳಗಾವಿ ನಗರ ಕನ್ನಡದ್ದೆನ್ನುವ ಕಾರಣದಿಂದಲೇ ಅವರು ೧೮೩೮ರಲ್ಲಿ , ಕನ್ನಡ ಮಾಧ್ಯಮದ ಶಾಲೆಯನ್ನು ಅಲ್ಲಿ ಆರಂಭಿಸಿದರು. ಬೆನನ್‌ಸ್ಮಿತ್ ಶಾಲೆ ಆ ಇತಿಹಾಸವನ್ನು ಹೇಳುತ್ತ ಪ್ರವರ್ಧಮಾನವಾಗಿ ಬೆಳೆದು ನಿಂತಿದೆ.

೧೫೦ ವರ್ಷಗಳ ಹಿಂದೆ, ಬೆಳಗಾವಿ ಹಾಗೂ ಅದರ ಸುತ್ತಣ ಜಿಲ್ಲೆಗಳನ್ನು ದಕ್ಷಿಣ ಮರಾಠಾ ದೇಶವೆಂದು ಕರೆಯುತ್ತಿದ್ದರು. ಆ ಜಿಲ್ಲೆಗಳು ದಕ್ಷಿಣ ಮಹಾರಾಷ್ಟ್ರ ಆಗಿರದೆ ಕರ್ನಾಟಕ ಎನ್ನುವ ವಾಸ್ತವವನ್ನು ಒಬ್ಬ ಇಂಗ್ಲಿಷ್ ಅಧಿಕಾರಿ ಚಾಪಮನ್ ಎಂಬಾತನು ಗುರುತಿಸಿಕೊಂಡನು. ಅವನು ಬೆಳಗಾವಿ ಕಂದಾಯ ವಿಭಾಗದ ಆಯುಕ್ತನಾಗಿ, ಆಗ ಶಿಕ್ಷಣ ಇಲಾಖೆಯಲ್ಲಿ ಡೆಪ್ಯೂಟಿ ಆಗಿದ್ದ ‘ಡೆಪ್ಯೂಟಿ ಚೆನ್ನಬಸಪ್ಪ’ ಅವರಿಗೆ, ಕನ್ನಡ ಶಾಲೆಗಳನ್ನು ಆರಂಭಿಸಲು ಬಹುದೊಡ್ಡ ಬೆಂಬಲವನ್ನು ನೀಡಿದನು.

ಇತ್ತೀಚಿನ ವರ್ಷಗಳಿಗೆ ಬಂದರೆ, ರಾವಬಹಾದ್ದೂರ ಅರಟಾಳ ರುದ್ರಗೌಡರಿಂದ ಪ್ರೇರಣೆ ಪಡೆದ ಏಳು ಜನ ತರುಣ ಪದವೀಧರರು ೧೯೧೬ರಲ್ಲಿ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯನ್ನು ಬೆಳಗಾವಿಯಲ್ಲಿ ಸ್ಥಾಪಿಸಿದರು. ಅದು ಆ ನಗರದಲ್ಲಿ ಕನ್ನಡ ಹಾಗೂ ಕರ್ನಾಟಕಗಳು ಬಹು ದೊಡ್ಡ ಶಕ್ತಿಯಾಗಿ ಬೆಳೆದು ನಿಂತಿದೆ.

ಕನ್ನಡದ ಬಗೆಗೆ ವಿಸ್ಮೃತಿ ಆವರಿಸಿದ್ದ ಕಾಲದಲ್ಲಿ ಕರ್ನಾಟಕವೆನ್ನುವ ಪ್ರದೇಶಗಳಲ್ಲಿ ಸಂಚರಿಸಿ ಕನ್ನಡದ ಜಾಗೃತಿಯನ್ನು ಮೂಡಿಸಿದ ವ್ಯಕ್ತಿ ಸಂಸ್ಥೆ ಸಂಘಟನೆಗಳನ್ನು ನಾವು ಕೃತಜ್ಞತೆಯಿಂದ ಸ್ಮರಿಸಬೇಕಾಗಿದೆ. ಶಾಂತ ಕವಿಗಳು, ಡೆಪ್ಯೂಟಿ ಚೆನ್ನಬಸಪ್ಪ, ಶಾಮರಾವ್ ವಿಠ್ಠಲ ಕೈಕಿಣಿ, ಗದಿಗೆಯ್ಯ ಹೊನ್ನಾಪೂರಮಠ, ರಾ.ಹ.ದೇಶಪಾಂಡೆ, ಝೀಗ್ಲರ್, ರೊದ್ದ ಶ್ರೀನಿವಾಸರಾವ್, ಆಲೂರ ವೆಂಕಟರಾವ್, ಕಡಪಾ ರಾಘವೇಂದ್ರರಾವ್, ಸರ್ ಸಿದ್ಧಪ್ಪ ಕಂಬಳಿ, ಹೊಸಮನಿ ಸಿದ್ಧಪ್ಪ ಅವರನ್ನು ನಾವು ಈ ಸಂದರ್ಭದಲ್ಲಿ ನೆನೆಯಲೇಬೇಕು.

ಕಳೆದ ಶತಮಾನದ ಮೂವತ್ತು ನಲವತ್ತರ ದಶಕಗಳಲ್ಲಿ ಕನ್ನಡ ಪ್ರದೇಶಗಳಲ್ಲೆಲ್ಲ ಸಂಚರಿಸಿ ಕೀರ್ತನ ಕೇಸರಿ ಬಿ.ಶಿವಮೂರ್ತಿ ಶಾಸ್ತ್ರಿ ಹಾಗೂ ಅ.ನ.ಕೃಷ್ಣರಾಯರು ಕರ್ನಾಟಕದ ಬಗೆಗೆ ಕನ್ನಡ ಜನರಲ್ಲಿ ಅಭೂತಪೂರ್ವ ಜಾಗೃತಿಯನ್ನು ಮೂಡಿಸಿದರು. ೧೮೯೦ರಲ್ಲಿ ಸ್ಥಾಪನೆಗೊಂಡ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಕನ್ನಡ ಪ್ರದೇಶಗಳ ಏಕೀಕರಣವನ್ನು ಸ್ಥಾಪಿಸಲು ಸ್ಥಾಪನೆಗೊಂಡ ಏಕೀಕರಣ ಸಂಘಗಳು ಮಾಡಿದ ಶ್ರದ್ಧೆಯ ಕನ್ನಡ ಹಾಗೂ ಕರ್ನಾಟಕಗಳ ಸೇವೆಯನ್ನು ನಾವು ನಿತ್ಯವೂ ನೆನೆಯಬೇಕು.

ಕವಿ ಕುವೆಂಪು, ಬೇಂದ್ರೆ, ಕರ್ಕಿ, ಕಯ್ಯಾರ್ ಕಿಞ್ಞಣ್ಣ ರೈ, ನಿಜಲಿಂಗಪ್ಪ, ಹನುಮಂತಯ್ಯ, ಹಳ್ಳಿಕೇರಿ, ದೊಡ್ಡಮೇಟಿ, ದಿವಾಕರ, ಜಿನರಾಜ ಹೆಗಡೆ, ಶಿವರಾಮ ಕಾರಂತ, ಜಯದೇವಿತಾಯಿ ಲಿಗಾಡೆ ಇವರನ್ನು ನಾವು ಹೇಗೆ ಮರೆಯಬಲ್ಲೆವು ? ಶತಮಾನಗಳ ಕನ್ನಡಿಗರ ಕನಸು ಮಾಗಿ ಹಣ್ಣಾದಂತೆ ನೂತನ ಕನ್ನಡ ರಾಜ್ಯ ನವೆಂಬರ ೧, ೧೯೫೬ರಂದು ನಿರ್ಮಾಣಗೊಂಡಿತ್ತು.

ರಾಜ್ಯ ನಿರ್ಮಾಣಗೊಂಡು ೪೬ ವರ್ಷಗಳೇ ಕಳೆದು ಹೋಗಿದ್ದರೂ ಕರ್ನಾಟಕದ ವಿಭಿನ್ನ ಪ್ರದೇಶಗಳ ಜನರನ್ನು ಕಂಡು, ಮಾತನಾಡುವವರೂ ಇಲ್ಲ. ಅವರಲ್ಲಿ ಸಾಮರಸ್ಯ ಮೂಡಿಸುವವರೂ ಇಲ್ಲ. ಕರ್ನಾಟಕದ ಪ್ರದೇಶಗಳಲ್ಲಿ ಪಾದರಸದಂತೆ ಹರಿದಾಡುತ್ತ ಕನ್ನಡ ಜನರನ್ನು, ಮನಸ್ಸನ್ನು ಜೋಡಿಸುವ ಸೇತುವೆಯ ಕೆಲಸವನ್ನು ಮಾಡುತ್ತಿದ್ದ ಹಾ.ಮಾ.ನಾಯಕರು ಹೋದರು. ಅವರ ಕೆಲಸವನ್ನು ಮಾಡುವ ಇನ್ನೊಬ್ಬರು ಈಗ ಯಾರಿದ್ದಾರೆ?

ಕರ್ನಾಟಕದ ಬಹು ಭಾಗಗಳನ್ನು ಬಲ್ಲ ನನಗೆ ನಾಯಕರಿಲ್ಲದ ಕೊರತೆ ಹೆಜ್ಜೆ ಹೆಜ್ಜೆಗೂ ಅನಿಸತೊಡಗಿದೆ. ಒಬ್ಬ ಮನುಷ್ಯ ಕಳೆದು ಹೋದಾಗಲೇ ಅವನು ಎಷ್ಟೊಂದು ಅನಿವಾರ್ಯವಾಗಿದ್ದನೆನ್ನುವ ಮಹತ್ವ ನಮಗೆ ಮನವರಿಕೆ ಆಗುತ್ತದೆ.

ಸಮಕಾಲೀನ ಸಾಹಿತ್ಯ ಕ್ಷೇತ್ರ
ಇಂದು ದೇಶದಲ್ಲಿ ನೀವು ಯಾರನ್ನು ಕೇಳಿದರೂ ಅವರು ರಾಜಕೀಯ ಹೊಲಸಾಗಿದೆಯೆಂದು ಹೇಳುತ್ತಾರೆ. ರಾಜಕೀಯ ಹೊಲಸಾಗಿದೆಯೆಂದು ಹೇಳಿದರೆ, ರಾಜಕೀಯದಲ್ಲಿರುವ ರಾಜಕಾರಣಿಗಳು ಹೊಲಸಾಗಿದ್ದಾರೆ ಎಂದು ಅರ್ಥ.

ರಾಜಕೀಯ ಕ್ಷೇತ್ರ ಹೊಲಸಾಗಿದೆಯೆಂದರೆ ಸಾಹಿತ್ಯ ಕ್ಷೇತ್ರವು ಅದಕ್ಕಿಂತಲೂ ಹೆಚ್ಚು ಹೊಲಸಾಗಿದೆಯೆಂದು ಹೇಳುವವರೂ ಇದ್ದಾರೆ.

ಸಾಹಿತಿಗಳು, ನೋಡುವ ಹಾಗೂ ಅನಿಸುವ ದೃಷ್ಟಿ ಇರುವ ಅನ್ವೇಷಕರು. ಅವರು ಎಲ್ಲವನ್ನೂ ನೋಡುವ ಸಾಮಾನ್ಯರಂತೆ ಇಲ್ಲ. ಬೇರೆ ಯಾರಿಗೂ ಕಾಣದೇ ಇರುವುದು ಅವರಿಗೆ ಕಂಡಿರುತ್ತದೆ. ಇನ್ನೊಬ್ಬರು ಹೇಳದೇ ಇರುವ ರೀತಿಯಲ್ಲಿ ಅವರು ಅದನ್ನು ಹೇಳಿರುತ್ತಾರೆ. ಅವರು ಹೊಸದೇನನ್ನೂ ಹೇಳಿರುವುದಿಲ್ಲ. ಹೊಸದನ್ನು ಹೇಳುವವರು ಯಾರೂ ಇಲ್ಲವೆಂದು ಸರ್ವದರ್ಶನ ತೀರ್ಥ ವೈ.ನಾಗೇಶ ಶಾಸ್ತ್ರಿಗಳು ಹೇಳುತ್ತಿದ್ದರು. ಆದರೆ ಹೇಳುವವರು ಅದನ್ನೇ ಹೊಸದಾಗಿ ಹೇಳುತ್ತಾರೆ. ತಾವು ಹೇಳುವ ಮಾತಿಗೆ ಅವರು ಅನ್ಯಾದೃಶ ಅಭಿವ್ಯಕ್ತಿಯನ್ನೇ ಒದಗಿಸಿಕೊಟ್ಟಿರುತ್ತಾರೆ.

ನಾವು ಸಾಹಿತಿಗಳನ್ನು ಜಗತ್ತಿನ ಅಂತರಾತ್ಮ ರಕ್ಷಕರೆಂದು ಕರೆದರೇನೇ ಹೆಚ್ಚು ಯಥಾರ್ಥವೆನಿಸಬಹುದು. ಇನ್ನುಳಿದವರು ಅಂತರಾತ್ಮಕ್ಕೆ ನಿರ್ದೇಶನ ನೀಡಬೇಕಾದ ಅವರು ತಮ್ಮ ಅಂತರಾತ್ಮವನ್ನು ಸರಿಯಾದ ಸ್ಥಾನದಲ್ಲಿ ಇರಿಸಿಕೊಂಡಿರಬೇಕು. ಸಾಹಿತಿಗಳು ಅತಿಮಾನವರೇನೂ ಅಲ್ಲ. ಆದರೆ, ಇನ್ನುಳಿದವರಿಗಿಂತಲೂ ಅವರ ಅಂತರಾತ್ಮ ಹೆಚ್ಚು ಜಾಗೃತವಾಗಿರುತ್ತದೆ. ಲೋಕದ ಅನುಭವಗಳನ್ನು ಅವರು ತಮ್ಮ ಅನುಭವ ಮಾಡಿಕೊಂಡು, ಅವುಗಳನ್ನು ಯಾರೂ ತಿಳಿಸಿಕೊಡದ ರೀತಿಯಲ್ಲಿ ತಿಳಿಸಿಕೊಟ್ಟಿರುತ್ತಾರೆ.

ಈ ಸಾಹಿತಿಗಳ ಬರಹವೇ ಬದುಕಿಗೆ ರುಚಿಯನ್ನು ಒದಗಿಸಿಕೊಟ್ಟಿರುತ್ತದೆ. ಅವರು ತಮ್ಮ ಬದುಕಿನಲ್ಲಿ ರುಚಿಯನ್ನು ಕಳೆದುಕೊಳ್ಳಬಾರದು. ಉಪ್ಪು ತನ್ನ ರುಚಿಯನ್ನು ಕಳೆದುಕೊಂಡರೆ ಅದಕ್ಕೆ ಆರುಚಿಯನ್ನು ತಂದುಕೊಡುವವರು ಯಾರಿದ್ದಾರೆ? ಅದನ್ನು ಅವರು ಎಲ್ಲಿಂದ ತಂದುಕೊಡುತ್ತಾರೆ?

ತಾವು ಏನಾದರೂ ಆಗಬೇಕು, ಏನನ್ನಾದರೂ ಪಡೆದುಕೊಳ್ಳಬೇಕೆನ್ನುವ ಅವರು ತಮ್ಮ ಹಪಾಹಪಿಯಿಂದ, ಅವರ ಬಗೆಗೆ ಬಹು ದೊಡ್ಡ ಭಾವನೆ ಮಾಡಿಕೊಂಡಿರುವ ಜನರಿಗೆ ಭಾರೀ ಆಘಾತವನ್ನು ಉಂಟು ಮಾಡುತ್ತಾರೆ.

ಕೆಲ ವರ್ಷಗಳ ಹಿಂದೆ ನಾನು ಉಡುಪಿಗೆ ಹೋಗಿದ್ದೆ. ಅಲ್ಲಿ ನಾನು ಖುಷಿಪಡತಕ್ಕ ಒಬ್ಬ ಮನುಷ್ಯ ಇದ್ದರು. ಅವರೇ ಕು.ಶಿ.ಹರಿದಾಸಭಟ್ಟರು. ಅವರೊಂದಿಗೆ ಮಾತನಾಡುವುದೇ ಒಂದು ಸಂತೋಷ. ನಾನು ಆ ಅವಕಾಶವನ್ನು ಎಂದೂ ಕಳೆದುಕೊಳ್ಳುತ್ತಿರಲಿಲ್ಲ. ಅವರೊಂದಿಗೆ ಮಾತನಾಡಿದ ಪ್ರತಿಯೊಂದು ಸಲವೂ ನಾನು ಅಪರಿಮಿತ ಆನಂದವನ್ನು ಪಡೆದಿದ್ದೇನೆ. ಸಾಹಿತ್ಯ ಕ್ಷೇತ್ರದಲ್ಲಿ ಹಿಂದೆ ಇದ್ದವರಲ್ಲಿದ್ದ ಪ್ರೀತಿ, ಸೌಹಾರ್ದಗಳು ಈಗಿನವರಲ್ಲಿ ಉಳಿದಿಲ್ಲ ಎಂದು ಅವರು ವ್ಯಸನ ವ್ಯಕ್ತಪಡಿಸಿದ್ದರು. ಅವರ ಮಾತನ್ನು ಕೇಳಿ ನಾವಿಬ್ಬರೂ ಒಂದೇ ಧ್ವನಿ ತರಂಗದ ಮೇಲೆ ಕೆಲಸಮಾಡುತ್ತಿದ್ದೇವೆ ಎನ್ನುವ ಹರ್ಷ ನನಗೆ ಉಂಟಾಯಿತು.

ರಾಜಕೀಯ ಕಾರಣದಿಂದ ನಮ್ಮ ದೇಶದ ಸಾರ್ವಜನಿಕ ಜೀವನ ಬಹಳಷ್ಟು ಕಲುಷಿತಗೊಂಡಿದೆ. ಸಾಹಿತಿಗಳ ವಿಚಾರ ಚಿಂತನೆಗಳಿಂದ ರಾಜಕೀಯ ಕ್ಷೇತ್ರದಲ್ಲಿರುವ ಜನರು ಪ್ರಭಾವಿತರಾಗಬೇಕಿದ್ದಿತು. ಆದರೆ ನಮ್ಮ ಕಾಲಮಾನದ ದುರಂತವೆಂದರೆ, ಸಾಹಿತಿಗಳಿಂದ ರಾಜಕಾರಣಿಗಳು ಪ್ರಭಾವಿತರಾಗುವುದಕ್ಕೆ ಬದಲಾಗಿ ರಾಜಕಾರಣಿಗಳಿಂದ ನಮ್ಮ ಸಾಹಿತಿಗಳು ಪ್ರಭಾವಿತರಾಗಿದ್ದಾರೆ.

ನಮ್ಮ ರಾಜಕಾರಣಿಗಲಲ್ಲಿ ಕಾಣಿಸಿಕೊಂಡಿರುವ ಹರಿದು ತಿನ್ನುವ ಪ್ರವೃತ್ತಿ ನಮ್ಮ ಸಾಹಿತಿಗಳಲ್ಲಿಯೂ ಕಾಣಿಸಿಕೊಂಡಿದೆ. ಈ ಮಾತಿಗೆ ವ್ಯತಿರಿಕ್ತವೆನಿಸುವ ವೈಭವಯುತ ಉದಾಹರಣೆಗಳು ಇರಬಹುದು. ಅಂಥವರು ಅಲ್ಲೊಬ್ಬರು ಇಲ್ಲೊಬ್ಬರು, ಬೆರಳೆಣಿಕೆಗೂ ಸಿಕ್ಕಲಾರದಷ್ಟು ಸಣ್ಣ ಸಂಖ್ಯೆಯಲ್ಲಿದ್ದಾರೆ. ಹೆಚ್ಚು ಜನರಲ್ಲಿ ಅಪೇಕ್ಷಣೀಯವೆನಿಸುವ ಗುಣಧರ್ಮಗಳ ಕೊರತೆ ಕಂಡು ಬಂದಿದೆ. ಪ್ರೀತಿಯ ಸೆಲೆ ಬತ್ತಿ ಹೋಗಿ ದ್ವೇಷಾಸೂಯೆಗಳು ಕಾಣಿಸಿಕೊಂಡಿವೆ.

ಹೆಚ್ಚು ಜನ ಸಾಹಿತಿಗಳು ಇರುವುದನ್ನು ಆಡುವುದನ್ನು, ನೋಡಿದರೆ ಅವರ ಬಗೆಗೆ ಆಸೆಪಡುವುದು ಏನಿದೆ? ಅವರು ಬರೆದಿರುವುದನ್ನು ನೋಡಿ ಅವರ ಬಗೆಗೆ ದೊಡ್ಡಭಾವನೆ ಮಾಡಿಕೊಂಡವರು ಅವರ ಸಮೀಪಕ್ಕೆ ಹೋದಾಗ ಅವರ ಬದುಕಿನ ಸಣ್ಣತನವನ್ನು ಕಂಡು ಅವರ ಬಗೆಗೆ ನಿರಾಸೆಗೊಳ್ಳುತ್ತಾರೆ.

ಶಬ್ದಕ್ಕೆ ಪಾವಿತ್ರ ಯ ಇರುವಂತೆ ಜೀವನಕ್ಕೂ ಪಾವಿತ್ರ ಯ ಇದೆ. ಶಬ್ದವಾಗಲಿ ಜೀವನವಾಗಲಿ ದುರ್ಬಳಕೆಗೊಳ್ಳುವುದು ಸರಿಯಲ್ಲ. ಎಷ್ಟೋ ಸಾಹಿತಿಗಳು ವರ್ಷ ಕಳೆದಿದ್ದರೂ ಹಣ್ಣಾಗದೇ ಇನ್ನೂ ಕಸುಕಾಗಿಯೇ ಉಳಿದಿದ್ದಾರೆ. ‘ನಾನು ಬರೆದಿರುವುದನ್ನು ಮಾತ್ರ ಓದಿರಿ. ನಾನು ಇರುವುದನ್ನು ನೋಡಬೇಡಿರಿ’ ಎನ್ನುವುದು ಅವರ ಜೀವನದ ನೀತಿ ಆಗಿರುವಂತೆ ತೋರುತ್ತದೆ. ಹಾಗಿದ್ದರೆ ಒಬ್ಬ ಮಾಮೂಲೀ ರಾಜಕಾರಣಿಗೂ ಅವರಿಗೂ ಏನು ವ್ಯತ್ಯಾಸ? ‘ನೀವು ಸತ್ಯವಂತರಾಗಿರಿ, ಪ್ರಾಮಾಣಿಕರಾಗಿರಿ, ನಾನು ಹೇಗೇ ಇರಲಿ, ಅದನ್ನು ನೋಡಬೇಡಿ’ ಎನ್ನುವ ರಾಜಕಾರಣಿಯಂತೆ ಅವರ ವರ್ತನೆ ಇರುತ್ತದೆ.

ಅವರು ತಮ್ಮನ್ನು ಮಾತ್ರವಲ್ಲದೆ, ತಮ್ಮನ್ನು ನಂಬಿದ ಜನರನ್ನೂ ವಂಚಿಸುತ್ತಿದ್ದಾರೆ. ಗಾಂಧೀಜಿಯವರ ಬೋಧೆ ಹಾಗೂ ಜೀವನ, ಜನರಿಗೆ ಮೆಚ್ಚುಗೆ ಎನಿಸಿದವು. ಯಾಕೆಂದರೆ ಅವರ ನಡೆ, ನುಡಿಗಳಲ್ಲಿ ದ್ವಂದ್ವ ಇರಲಿಲ್ಲ. ಅವರು ನುಡಿದಂತೆ ನಡೆದರು. ನಡೆದಂತೆ ನುಡಿದರು. ಅವರು ಪುರಾತರಂತೆ ನುಡಿದು, ಕಿರಾತರಂತೆ ವರ್ತಿಸಲಿಲ್ಲ.

ಬರೆಯುವ ಮನುಷ್ಯ ತನ್ನ ಬರಹದೊಂದಿಗೆ ಬದುಕಬೇಕು, ಒಳ್ಳೆಯದು ಆಗಬೇಕೆಂದು ಹೇಳುವ ಮನುಷ್ಯನು, ಒಳ್ಳೆಯದನ್ನು ಮಾಡಲು ಮುಂದಾಗಬೇಕು, ಒಳ್ಳೆಯದನ್ನು ಮಾಡದೇ ಇರುವ ಮನುಷ್ಯ ಒಳ್ಳೆಯವನಾಗಿದ್ದರೆ ಏನು ಪ್ರಯೋಜನ? ಕೆಲವರು ಒಳ್ಳೆಯವರಾಗಿ ಇರುವುದೂ ಇಲ್ಲ , ಒಳ್ಳೆಯದನ್ನು ಮಾಡುವುದೂ ಇಲ್ಲ.

ಸಾಹಿತಿಗಳಲ್ಲಿ ಕೆಲವರು ಯಾರನ್ನೂ ಪ್ರೀತಿ ಸೌಹಾರ್ದಗಳಿಂದ ಕಾಣುವುದಿಲ್ಲ. ಅಗಲಿದ ಜನರನ್ನು ಕೂಡಿಸಬೇಕೆನ್ನುವ ಗೊಡವೆಗೆ ಹೋಗದೆ, ಅವರು ಕೂಡಿ ಇರುವ ಜನರನ್ನು ಅಗಲಿಸಿ ಅದರಲ್ಲಿಯೇ ಸಂತೋಷವನ್ನು ಕಾಣಬೇಕೆನ್ನುತ್ತಾರೆ. ಅವರಲ್ಲಿ ಔದಾರ್ಯದ ಕೊರತೆ ಇದೆ. ಇಲ್ಲವೆ ಆ ಔದಾರ್ಯದ ಒರತೆ ಬತ್ತಿ ಹೋಗಿದೆ.

ಜನರನ್ನು ಸುಧಾರಿಸುವದನ್ನು ಬಿಟ್ಟು ಅವರು ತಮ್ಮನ್ನು ತಾವು ಸುಧಾರಿಸಿಕೊಂಡರೆ ಜಗತ್ತಿಗೆ ಮಹದುಪಕಾರ ಮಾಡಿದಂತೆ ಆಗುತ್ತದೆ.

ಅವರು ಕದಿಯುತ್ತಾರೆ, ಗುಂಪು ಕಟ್ಟಿಕೊಂಡು ತಮ್ಮನ್ನು ಹೊಗಳಿಸಿಕೊಳ್ಳುತ್ತಾರೆ, ಅರ್ಹತೆಯಿಲ್ಲದೆ ತಮಗೆ ಅರ್ಹತೆಯನ್ನು ತಂದುಕೊಳ್ಳಬೇಕೆನ್ನುತ್ತಾರೆ.

ತಮ್ಮಲ್ಲಿ ಇಲ್ಲದ ಶ್ರೇಷ್ಠತೆ ತಮ್ಮಲ್ಲಿದೆಯೆಂದು ಅವರು ಹೇಳಿಕೊಳ್ಳುತ್ತಾರೆ. ಇನ್ನೊಬ್ಬರಲ್ಲಿರುವ ಶ್ರೇಷ್ಠತೆಯನ್ನು ಕೆಳಗೆ ಹಾಕಿ ಅವರು ತುಳಿಯಬೇಕೆನ್ನುತ್ತಾರೆ. ಪರೀಕ್ಷೆಗೆ ಕಟ್ಟಿದ ತಮ್ಮ ಮಗನಿಗೆ ಹೆಚ್ಚು ಅಂಕಗಳನ್ನು ಕೊಡಬೇಕೆಂದು ಪರೀಕ್ಷಕರನ್ನು ಕೇಳುವ ತಂದೆಯ ವರ್ತನೆ ಅವರಲ್ಲಿ ಇರುತ್ತದೆ.

ಅವರು ಪದವಿ, ಪ್ರಶಸ್ತಿ, ಪ್ರತಿಷ್ಠೆಗಳನ್ನು ಪಡೆದುಕೊಳ್ಳಲು ಎಂಥ ಮಟ್ಟಕ್ಕೆ ಇಳಿಯುತ್ತಾರೆನ್ನುವುದು ಈಗ ಯಾರೂ ಅರಿಯದ ರಹಸ್ಯವಾಗಿಯೇನೂ ಉಳಿದಿಲ್ಲ. ನೋಬೆಲ್, ಜ್ಞಾನಪೀಠ ಹಾಗೂ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳಿಗೋಸುಗ ‘ಲಾಬಿ’ ನಡೆಯುತ್ತಿದೆ.

ಪ್ರಶಸ್ತಿ ಪಡೆದವರಲ್ಲಿ ವೈಭವಯುತವಾದ ಅಪವಾದಗಳು ಇಲ್ಲವೆಂದಲ್ಲ , ಅಪವಾದಗಳು ಸೂತ್ರದ ಸತ್ಯವನ್ನು ಸಿದ್ಧಪಡಿಸುತ್ತವೆ.

ಈಗ ಪ್ರಶಸ್ತಿ ನೀಡಲು ಸರಕಾರವಲ್ಲದೆ ಅನೇಕ ಖಾಸಗಿ ಪ್ರತಿಷ್ಠಾನಗಳೂ ಬಂದಿವೆ. ಅವರು ನೀಡುವ ಪ್ರಶಸ್ತಿಗಳ ಹಣದ ಮೊತ್ತ ದೊಡ್ಡದಿರುವುದರಿಂದ ಅವುಗಳನ್ನು ಪಡೆಯಬೇಕೆಂದು ಜಿದ್ದಾಜಿದ್ದಿ ಪೈಪೋಟಿ ನಡೆದಿರುತ್ತದೆ. ಈ ಪ್ರಶಸ್ತಿಗಳಿಗೋಸುಗ ಇರುವ ಹಣದ ಮೊತ್ತ ಕಡಿಮೆ ಇದ್ದರೆ, ಆ ಪ್ರಶಸ್ತಿಗಳನ್ನು ಪಡೆಯುವುದಕ್ಕೋಸುಗ ಇಂದಿನ ಅನುಚಿತ ಪೈಪೋಟಿ ಇರುವುದಿಲ್ಲ.

ಕದ್ದು ಬರೆಯುವ ಚಟವನ್ನು ಕೆಲವರು ಬಹು ವ್ಯವಸ್ಥಿತ ರೀತಿಯಿಂದ ಬೆಳೆಸಿಕೊಂಡು ಬಂದಿದ್ದಾರೆ. ಅವರಲ್ಲಿ ಕೆಲವರು ದೊಡ್ಡವರೂ ಇದ್ದಾರೆ. ದೊಡ್ಡವರಾದ ಅವರ ಕಳವಿನ ಬಗೆಗೆ ಯಾರೂ ಆಡುವುದಿಲ್ಲ.

ಕದಿಯುವವರು ತಮ್ಮ ಪ್ರಾಮಾಣಿಕತೆಯನ್ನು ಸಿದ್ಧಪಡಿಸುವಂತೆ ‘ಒಂದು ಇಂಗ್ಲಿಷ್ ಕವಿತೆಯಿಂದ ಪ್ರೇರಿತ’ ಎಂದು ಹೇಳಿರುತ್ತಾರೆ. ಅದೇನು ಪ್ರೇರಿತವೋ, ಇಲ್ಲವೆ ಪೂರ್ಣ ಕದ್ದದ್ದೋ ಎನ್ನುವುದು ಮಾತ್ರ ತಿಳಿಯುವುದಿಲ್ಲ.

ಈ ಹಿಂದೆ ಡಾ.ಬೆಟಗೇರಿ ಕೃಷ್ಣಶರ್ಮರು ತಮ್ಮ ದೇಶೀಯ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಯಾಕೆಂದರೆ ಅವರು ಇಂಗ್ಲಿಷನ್ನು ಕಲಿತಿರಲಿಲ್ಲ. ಇಂಗ್ಲಿಷ್‌ನಿಂದ ಕದಿಯುವ ಅವಕಾಶ ಅವರಿಗೆ ಇರಲಿಲ್ಲ.

ಉತ್ತರಾಂಚಲದ ಕುಮಾಂವ್ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ. ಎಸ್. ರಾಜಪೂತರು ತಮ್ಮ ವಿದ್ಯಾರ್ಥಿಯೊಂದಿಗೆ ಸೇರಿಕೊಂಡು ಬರೆದ ಒಂದು ಪುಸ್ತಕದಲ್ಲಿ ಅಮೇರಿಕೆಯ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಪ್ರೊಫೆಸರರು ೧೯೯೬ರಲ್ಲಿ ಬಾಹ್ಯಾಕಾಶದಲ್ಲಿ ಕಪ್ಪು ರಂಧ್ರಗಳನ್ನು ಕುರಿತು ಬರೆದುದನ್ನು ಸಂಪೂರ್ಣವಾಗಿ ತೆಗೆದುಕೊಂಡು ತಮ್ಮದೆನ್ನುವಂತೆ ಪ್ರಕಟಿಸಿದ್ದರು.

ಈ ವಿಷಯದ ಬಗೆಗೆ ಬಹು ಗಂಭೀರ ಸ್ವರೂಪದ ಅಂತರ್‌ರಾಷ್ಟ್ರೀಯ ಪ್ರತಿಕ್ರಿಯೆ ವ್ಯಕ್ತಪಟ್ಟಿತು. ಕೆಲವರು ನೋಬೆಲ್ ಪ್ರಶಸ್ತಿ ವಿಜೇತರು ನಮ್ಮ ರಾಷ್ಟ್ರಪತಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಮರಿಗೆ ಬರೆದರು. ಅವರು ಈ ಸಂಗತಿಯನ್ನು ಉತ್ತರಾಂಚಲದ ಗವರ್ನರ ಗಮನಕ್ಕೆ ತಂದರು. ಅವರು, ಅಲಹಾಬಾದ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ವಿಚಾರಣಾ ಆಯೋಗವನ್ನು ನೇಮಿಸಿದರು. ಆ ಆಯೋಗವು ದೋಷಾರೋಪಣೆಯನ್ನು ದೃಢಪಡಿಸುವ ೧೫೦ ಪುಟಗಳ ತನಿಖಾ ವರದಿಯನ್ನು ನೀಡಿತು. ಅದರ ಪರಿಣಾಮವಾಗಿ ಕುಲಪತಿ ರಾಜಪೂತರು ಅವಮಾನಿತರಾಗಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟರು.
*****
ಮುಂದುವರೆಯುವುದು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.