ಬಳ್ಳಾರಿ ಅನ್ನೋ ಊರಿನಲ್ಲಿ ಅಂತೂ ಇಂತೂ ಐದು ವರ್ಷ ಮುಗಿಸಿದ್ದ ಡಾ.ವಿನಾಯಕ ಜೋಷಿ, ಎಂ. ಬಿ.ಬಿ.ಎಸ್. ಹೆಸರಿನ ಹಿಂದೆ ಒಂದು,ಮತ್ತು ಮುಂದೆ ನಾಲ್ಕಕ್ಷರ ಹಾಕಿಕೊಳ್ಳಲು ತಲಾ ಒಂಭತ್ತು ತಿಂಗಳು ಬೇಕಾಗಿತ್ತು. ತನ್ನ ಹೆಸರನ್ನು ಒಂದು ಖಾಲಿ ಕಾಗದದ ಮೇಲೆ ಬರೆದು ಕೆಳಗೆ ಒಂದು ಗೀಟೆಳೆದು ಅದರ ಕೆಳಗೆ ಎರಡು ಚುಕ್ಕಿ ಇಟ್ಟು ಪುಳಕಿತನಾಗಿದ್ದ. ಯಾರಿಗಾದರೂ ತನ್ನ ಹೊಸ ಹೆಸರಲ್ಲಿ ಒಂದು ಪತ್ರವನ್ನು ಬರೆಯಬೇಕೆಂದುಕೊಂಡ. ಯಾರಿಗೆಂದು ತಿಳಿಯದೆ ಅಪ್ಪನಿಗೇ ಕ್ಷೇಮವಾಗಿ ತಲುಪಿದ್ದೇನೆಂದು ಹೇಳಿ ಒಂದು ಪತ್ರ ಬರೆದು ಕೆಳಗೆ ಪೂರಾ ಹೆಸರನ್ನು ಪ್ರಿಫಿಕ್ಸ್ ಸಫಿಕ್ಸ್ ಗಳ ಜೊತೆ ಬರೆದ. ಪತ್ರ ನೋಡಿ ಹಿರಿಹಿರಿ ಹಿಗ್ಗಿದರು ಅಪ್ಪ, ಅಮ್ಮ.
ಈಗ ಸುಮಾರು ವರ್ಷಗಳ ಹಿಂದೆ ಅಂದರೆ ಕ್ರಿಸ್ತಶಕ ಹತ್ತೊಂಬತ್ತುನೂರ ಎಂಭತ್ತಾರು ಎಂಭತ್ತೇಳರ ಸುತ್ತ ನಮ್ಮ ವಿನಾಯಕನಿಗೆ ಬಳ್ಳಾರಿಯೆಂಬ ಊರೊಂದಿದೆ ಅಂತ ಮಾತ್ರ ಗೊತ್ತಿತ್ತು. ಆಗ ರಾಜಧಾನಿಯ ಸ್ಟಾರ್ ರಾಜಕಾರಣಿಗಳ ಕಣ್ಣು ಬಳ್ಳಾರಿಯ ಮೇಲೆ ಇನ್ನೂ ಬಿದ್ದಿಲ್ಲದಿದ್ದುದರಿಂದ ಅದಿನ್ನೂ ತನ್ನ ವರ್ಚಸ್ಸನ್ನು ಪಡೆದುಕೊಂಡಿರಲಿಲ್ಲ. ಪ್ರೈಮರಿ ಸ್ಕೂಲಿನಲ್ಲಿ ಭೂಗೋಳದ ಮಾಸ್ತರರು ಬಣ್ಣಬಣ್ಣದ ನಕ್ಷೆಯನ್ನು ತೋರಿಸುತ್ತಾ ಕರ್ನಾಟಕದ ಹತ್ತೊಂಬತ್ತು ಜಿಲ್ಲೆಗಳಲ್ಲಿ ಬಳ್ಳಾರಿಯೂ ಒಂದು ಎಂದು ಹೇಳಿದ್ದೇ ನೆನಪು. ಆಗ ತಾನು ಬಳ್ಳಾರಿಗೆ ಹೋಗುತ್ತೇನೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ ಆತ. ಪೀಯೂಸಿಯಲ್ಲೂ, ಸೀಈಟಿಯಲ್ಲೂ ಸುಮಾರಾಗಿ ಒಳ್ಳೆ ಮಾರ್ಕುಗಳು ಬಂದಾಗ, ಮುಂದೇನಾಗಬೇಕೆಂದು ಗೊತ್ತುಗುರಿ ಇಲ್ಲದೆ ಓದಿದ್ದರಿಂದ ರಿಸಲ್ಟ್ ಬಂದ ದಿನ ಏಕ್ ದಂ ಕನ್ಫ್ಯೂಸ್ ಆದ ವಿನಾಯಕ. ಅವನಿದ್ದ ಊರಿನಲ್ಲಿ ಅಲ್ಲಿಯತನಕ ಪೀಯೂಸಿಯಲ್ಲಿ ಪಾಸಾದವರು ಅಲ್ಲೇ ಊರಿನ ಆಫೀಸುಗಳಲ್ಲಿ, ಬ್ಯಾಂಕುಗಳಲ್ಲಿ ಕೆಲಸ ಮಾಡಲು ಶುರುಮಾಡಿದ್ದರಿಂದ ತನಗೆ ಈ ಊರಲ್ಲೇ ಯಾರೂ ರೋಲ್ ಮಾಡೆಲ್ಲುಗಳಿಲ್ಲವೆಂದು ಪರಿತಪಿಸಿದ್ದ. ವಿನಾಯಕನಿಗೆ ಒಳ್ಳೆ ಮಾರ್ಕ್ಸ್ ಬಂದಿದ್ದು ತಮ್ಮಿಂದಲೇ ಅಂದು ಸರಕಾರೀ ಜ್ಯೂನಿಯರ್ ಕಾಲೇಜಿನ ಲೆಕ್ಚರರುಗಳು ತಂತಮ್ಮಲ್ಲೇ ಜಗಳ ಕಾದುಕೊಂಡರು. ತಾನು ಡಾಕ್ಟರಾದರೆ ಹೇಗಿರುತ್ತದೆ ಎಂದು ಪರಿಣಿತ ಸಲಹೆ ಕೇಳಲು ಊರ ಡಾಕ್ಟರುಗಳ ಹತ್ತಿರ ಹೋಗಿದ್ದ. ಕೆದರಿದ ಕಣ್ಣುಗಳ, ಕುರುಚಲು ಗಡ್ಡದ, ಲೊಳಲೆ ಪ್ಯಾಂಟಿನ ಟ್ರಾಟ್ ಚಪ್ಪಲಿಯ ಈ ಹೈದನೆಲ್ಲಿ ಡಾಕ್ಟರಾಗುತ್ತಾನೆ ಎಂದು ಮನಸ್ಸಿನೊಳಗೇ ಒಮ್ಮೆ ಜೋರಾಗಿ ನಕ್ಕು ಡಾಕ್ಟರುಗಳು ಪುಗಸಟ್ಟೆ ಸಲಹೆಯನ್ನಂತೂ ಕೊಟ್ಟಿದ್ದರು. ಊಟ, ತಿಂಡಿ ಬಟ್ಟೆ ಪುಸ್ತಕಗಳಿಗೆ ಹೊಂಚಿಕೊಂಡರೆ ಸರಕಾರಿ ಕಾಲೇಜಿನಲ್ಲಿ ಮೆಡಿಕಲ್ ಮುಗಿಸುವುದು ಏನೂ ಕಷ್ಟವಲ್ಲವೆಂದು ಎಲ್ಲಾ ಡಾಕ್ಟರುಗಳೂ ಹೇಳಿದಾಗ, ಅಪ್ಪ ಹೇಗೋ ನೋಡಿಕೊಳ್ಳುತ್ತಾನೆಂದು ಧೈರ್ಯ ಮಾಡಿದ್ದ, ವಿನಾಯಕ ಜೋಷಿ. ರಿಸಲ್ಟು ಬಂದಾಗ ಪಟ್ಟಿಯಲ್ಲಿ ತನ್ನ ಹೆಸರಿದ್ದುದರಿಂದ ಖುಷಿಯೂ ಅದೇ ಹೆಸರಿನ ಮುಂದೆ ಬಳ್ಳಾರಿಯ ಹೆಸರೂ ಇದ್ದುದರಿಂದ ದುಃಖವೂ ಒಟ್ಟಿಗೇ ಆಗಿದ್ದವು. ಇರಲಿ, ಐದು ವರ್ಷ ತಾನೇ ಎಂದು ತನ್ನಂತಾನೇ ಸಮಾಧಾನ ಪಟ್ಟುಕೊಂಡಿದ್ದ.
ಕಳೆದ ಐದು ವರ್ಷಗಳಲ್ಲಿ ತಾನು ಕಂಪ್ಲೀಟ್ ಮನುಷ್ಯನಾಗಿದ್ದೇನೆ ಎಂದು ತತ್ವಜ್ಞಾನಿಯಂತೆ ಹೇಳಿಕೊಳ್ಳುತ್ತಾನೆ ಆಗಾಗ ವಿನಾಯಕ. ಈ ಡಾಕ್ಟರಿಕೆಯ ಜೊತೆಗೆ ಬಳ್ಳಾರಿಯ ಬಿಸಿಲೂ ಪಾಳುಬಂಡೆಗಳೂ ಹತ್ತಿರವಾಗಿವೆಯಂತೆ ಅವನಿಗೆ. ಅವನ ಆಪ್ತ ಮಿತ್ರರ ಬಳಿ ಹೀಗೆ ಹೇಳಿಕೊಳ್ಳುತ್ತಾನೆ. ” ಅಯ್ಯೋ ಪೆದ್ದೇ, ಇಲ್ಲಿಗೆ ಬಂದು ಐದು ವರ್ಷಗಳಾಗಿವೆ. ಎಲ್ಲೇ ಇದ್ದರೂ ನೀನು ಕಂಪ್ಲೀಟಾಗುತ್ತಿದ್ದೆ” ಎಂದು ಗಹಗಹಿಸಿ ನಗುತ್ತಾರೆ. ಆದರೂ ತಾನು ಬೆಳೆದಿರುವುದು ಈ ಬಳ್ಳಾರಿಯಿಂದಲೇ ಎಂದು ತೀರಾ ನಂಬಿದ್ದಾನೆ ಆತ. ಸ್ನೇಹಿತರ ಮಾತಿನಿಂದ ಡಿಪ್ರೆಸ್ ಆಗಬಾರದೆಂದು ಒಂದು ಐಟಿಸಿ ಎಳೆಯುತ್ತಾನೆ ಆಗಾಗ್ಗೆ.
ಹೌಸ್ ಸರ್ಜನ್ಸಿಯ ಮೊದಲ ದಿನದಂದು ತುಂಬಾ ಉತ್ಸಾಹದಿಂದಿದ್ದ. ಬೆಳಿಗ್ಗೆ ಎದ್ದು ಎರಡೆರಡು ಬಾರಿ ಶೇವ್ ಮಾಡಿ, ಮೀಸೆಯನ್ನು ಟ್ರಿಂ ಮಾಡಿ, ಮೊನ್ನೆ ಅಪ್ಪ ಹೊಲಿಸಿಕೊಟ್ಟಿದ್ದ ಹೊಸ ಬಟ್ಟೆ ಹಾಕಿ ಕನ್ನಡಿಯಲ್ಲಿ ಇಪ್ಪತ್ತು ಸಾರಿ ನೋಡಿಕೊಳ್ಳುತ್ತಾನೆ. ಇದೇ ಕೊನೆಯ ಬಾರಿ ಅಪ್ಪನ ದುಡ್ಡಿನಲ್ಲಿ ಶೋಕಿ ಮಾಡುವುದು , ಮುಂದಿನ ತಿಂಗಳಿನಿಂದ ನನ್ನದೇ ದುಡ್ಡಿರುತ್ತದೆ ಎಂದು ಖುಷಿಯಾಯಿತು. ಶರಟನ್ನು ಟಕ್ ಮಾಡಿ, ಪ್ಯಾಂಟಿನ ಜಿಪ್ ಏರಿಸಿ, ಸ್ಟೆತೋಸ್ಕೋಪನ್ನು ಹೆಗಲಿಗೆ ಏರಿಸಿ, ಬಿಳಿಯಕೋಟಿಲ್ಲದೇ ಹಾಸ್ಟೆಲ್ಲಿನ ರೂಮಿನಿಂದ ಹೊರಗೆ ಹೊರಟಾಗ ಪಕ್ಕದ ರೂಮಿನವ ” ನಮಸ್ಕಾರಾ ಡಾಕ್ಟರಿಗೆ” ಎಂದಾಗ ” ಸುಮ್ನಿರಪ್ಪ” ಎಂದು ತೋರಿಕೆಗೆ ಅಂದರೂ ಒಳಗೊಳಗೇ ಖುಷಿಯಾಗುತ್ತದೆ. ತಿಂಡಿಗೆ ಮೆಸ್ಸಿಗೆ ಹೋಗುತ್ತಿದ್ದಾಗ ಬಲಗಡೆಯಿರುವ ಹುಡುಗಿಯರ ಹಾಸ್ಟೆಲ್ಲಿನ ಮುಂದೆ ನಿಂತಿರುವವರೆಲ್ಲಾ ತನ್ನನ್ನೇ ನೋಡುತ್ತಿದ್ದಾರೆ ಅನ್ನಿಸಿದಾಗ ನಡಿಗೆಯ ಸ್ಟೈಲು ಬದಲಾಗುತ್ತದೆ. ಯಾರೋ ಕಿಸಕ್ಕನೆ ನಕ್ಕಾಗ ತನ್ನನ್ನು ನೋಡಿ ಅಲ್ಲವೆಂದು ಸಮಾಧಾನ ಪಟ್ಟುಕೊಂಡ.
ಈ ಕಾಲೇಜಿನ ಹುಡುಗಿಯರ ವಿಚಾರ ತನಗೆ ಪೂರಾ ಸರಿಯಾಗಿ ಗೊತ್ತಿಲ್ಲವೆಂದು ಬಹಳ ಸಾರಿ ಅಂದುಕೊಂಡಿದ್ದಾನೆ ವಿನಾಯಕ. ಎರಡನೇ ಎಂಬಿಬಿಎಸ್ ನ ಮೂರನೇ ಫೇಸಿನಲ್ಲಿದ್ದಾಗ ತಾನೂ ಯಾವುದಾದರೂ ಹುಡುಗಿಯನ್ನು ಪಟಾಯಿಸಬೇಕೆಂಬ ಬಯಕೆ ತೀರ ಬಲವತ್ತರವಾಗಿತ್ತು. ಎಲ್ಲ ಮಂಗವಿದ್ಯೆಗಳನ್ನೂ ಪ್ರಯತ್ನಿಸಿ ನೋಡಿದ್ದ. ಕೂಲಾಗಿ ಕಾಣುತ್ತದೆಂದು ಐಟಿಸಿ ಎಳೆದ, ಹೋತದ ಗಡ್ಡ ಬಿಟ್ಟ. ಅಪ್ಪನ ತಿಂಗಳ ಕೋಟಾದಲ್ಲಿ ಸ್ವಲ್ಪ ದುಡ್ಡು ಉಳಿಸಿ ಆ ಉರಿಬಿಸಿಲಿನಲ್ಲಿಯೂ ಜೀನ್ಸ್ ಜಾಕೆಟ್ ಹಾಕಿ ರೂಂ ಮೇಟಿನ ಬೈಕಿನಲ್ಲಿ ಲೈಸೆನ್ಸಿಲ್ಲದೆ ಹುಡುಗಿಯರ ಹಾಸ್ಟೆಲ್ಲಿನ ಹಿಂದೆ ಮುಂದೆ ತಿರುಗಾಡಿದ. ಒಂದು ಬಾಟಲ್ ಬೀರ್ ಕುಡಿದು ಗಣಪತಿ ಉತ್ಸವದಲ್ಲಿ ಹುಡುಗಿಯರ ಹಾಸ್ಟೆಲ್ಲಿನ ಮುಂದೆ ಥಕಥಕ ಕುಣಿದು ಬಿದ್ದು ಮಂಡಿ ತರಚಿಸಿಕೊಂಡ. ಕಾಲೇಜಿನಲ್ಲಿ ಸ್ಟ್ರೈಕಾದಾಗ ತಾನೂ ಆಮರಣಾಂತ ಉಪವಾಸ ಕೂತರೆ “ಸಿಂಪತಿ”ಯಿಂದಾದರೂ ಯಾರಾದರು ಒಲಿಯಬಹುದೆಂದು ಹಿಂದೆ ಮುಂದೆ ನೋಡದೇ ಉಪವಾಸ ಕೂತ. ಮೊದಲನೆಯ ದಿನ ಕಾಲೇಜಿನ ಐದು ಹುಡುಗಿಯರು ಇವನನ್ನು ಸೇರಿ ಉಳಿದ ಐದು ಜನ ಉಪವಾಸ ಕುಳಿತವರಿಗೂ ರಾಖಿ ಕಟ್ಟಿ” ಹಂ ಹೋಂಗೆ ಕಾಮ್ ಯಾಬ್” ಎಂದು ಹಾಡಿ ಹರಸಿದಾಗ, ಗೊಳೋ ಎಂದು ಅತ್ತಿದ್ದ. ಮೂರನೇ ದಿನ ಯೂರಿನ್ ಟೆಸ್ಟ್ ಮಾಡಿ ಪೋಲೀಸರು ಬಲವಂತದಿಂದ ಆಸ್ಪತ್ರೆಗೆ ಸೇರಿಸಿ ಡ್ರಿಪ್ ಹಾಕಿದಾಗಲಾದರೂ ಯಾರಾದರೂ ಬಂದು ತಲೆ ನೇವರಿಸಬಹುದೆಂದುಕೊಂಡ. ಅದೂ ಫಲಿಸಿರಲಿಲ್ಲ.
ತಾನು ಬೇಡ ಬೇಡ ಅಂದರೂ ತನ್ನ ಹಿಂದೆ ತಿರುಗುತ್ತಿದ್ದ ಸುಗುಣಳ ನೆನಪು ಆಗಾಗ್ಗೆ ಬರುತ್ತಿತ್ತು. ಅದೃಷ್ಟ ಅಂದರೆ ಹೀಗೇ ಅನ್ನಿಸುತ್ತೆ, ತಾನು ಯಾರಿಗೆ ಬೇಡವೋ ಅವರು ನನಗೆ ಬೇಕು. ಸುಗುಣಳನ್ನು ನೋಡಿದಾಗ ಒಮ್ಮೊಮ್ಮೆ ತಪ್ಪು ಮಾಡಿದೆನೆನಿಸುತ್ತಿತ್ತು. ತಾನು ತಪ್ಪು ಮಾಡಿದ್ದಕ್ಕಿಂತ ಆ ತಪ್ಪಿನಲ್ಲಿ ಅವಳ ಪಾಲು ಇಲ್ಲವೆಂದು ಅವಳು ತಿಳಿದಿದ್ದಳೋ ಅನ್ನುವ ಅನಿಸಿಕೆಯೇ ಅವನನ್ನು ಮತ್ತೂ ತಪ್ಪಿತಸ್ಥನನ್ನಾಗಿ ಮಾಡಿತ್ತು. ಇವತ್ತು ಅವಳನ್ನು ನೆನಪುಮಾಡಿಕೊಳ್ಳಬಾರದು ಎಂದುಕೊಂಡ.
ತನಗ್ಯಾಕೆ ಹೀಗೆ ಎಂದು ಎಲ್ಲ ಬಲ್ಲ ಒಬ್ಬ ಸ್ನೇಹಿತನನ್ನು ಕೇಳಿದಾಗ, ಎಲ್ಲೋ ಮಚ್ಚೆ ಇದ್ದರೆ ಸ್ತ್ರೀಸಂಗ ಸುಲಭವೆಂದು ಗಿಳಿಶಾಸ್ತ್ರ ಹೇಳಿದ ಸ್ನೇಹಿತ. ಒಬ್ಬನೇ ಇದ್ದಾಗ ನೋಡಿ ತನಗಲ್ಲಿ ಮಚ್ಚೆಯಿಲ್ಲವೆಂದು ತಿಳಿದಾಗ ಮೂರುದಿನ ಹತಾಶನಾಗಿದ್ದ. ಆಮೇಲೆ ಇವೆಲ್ಲ ಮೂಢನಂಬಿಕೆಯೆಂದು ಝಾಡಿಸಿ ಎದ್ದು ತನ್ನ ಪ್ರಯತ್ನವನ್ನು ದುಪ್ಪಟ್ಟುಮಾಡಿದ್ದ. ಕಕ್ಕಸಲ್ಲಿ ಕೂತು ಸೀನಿದಾಗಲೂ ” ಎಕ್ಸ್ ಕ್ಯೂಸ್ ಮಿ” ಅನ್ನುವ ಮಂಡ್ಯದ ಗುರುವೇಗೌಡ ಹುಡುಗಿಯನ್ನು ಹಿಡಿದಾಗಲಂತೂ ಮುಂದಿನ ಸರದಿ ತನ್ನದೇ ಅನ್ನಿಸಿತ್ತು. ಹೋದಲ್ಲಿ ಬಂದಲ್ಲಿ ಹುಡುಗಿಯರಿದ್ದಾರ ನೋಡಿ ಕೆಮ್ಮಿ, ಸೀನಿ ನೂರಾರು ಬಾರಿ ಎಕ್ಸ್ ಕ್ಯೂಸ್ ಆದ. ಕೆಮ್ಮಿ ಕೆಮ್ಮಿ ಗಂಟಲು ನೋವಾಯಿತೇ ಹೊರತು ಯಾವ ಕನ್ಯಾಮಣಿಯೂ ಇವನಿಗೆ ಒಲಿಯಲಿಲ್ಲ.
ಆದರೆ ಈಗಿನ ಕಥೆಯೇ ಬೇರೆ ಅಂದುಕೊಂಡಿದ್ದ. ಈಗ ತಾನು ಡಾಕ್ಟರು. ಒಂಥರಾ ಥ್ರಿಲ್ ಇರುತ್ತೆ ಹೀಗೆ ಡಾಕ್ಟರು ಅನ್ನಿಸಿಕೊಳ್ಳುವುದಕ್ಕೆ. ಈ ವರ್ಷವಾದರೂ ಒಂದು ಹುಡುಗಿಯನ್ನು ಒಲಿಸಿಕೊಳ್ಳಲೇಬೇಕೆಂದು ಮೆಸ್ಸಿನಲ್ಲಿ ಉಪ್ಪಿಟ್ಟು ತಿನ್ನುತ್ತಿರುವಾಗ ಪ್ರತಿಜ್ಞೆ ಮಾಡಿದ್ದ.ಉಪ್ಪಿಟ್ಟು ಮುಗಿಸಿ ಸೊರ್ರೆಂದು ಟೀ ಹೀರಿ ವಾರ್ಡಿಗೆ ಬಂದಾಗ ರೌಂಡ್ಸ್ ಶುರುವಾಗಿಹೋಗಿತ್ತು. ಮೊದಲದಿನವೇ ಲೇಟೆಂದು ಎಲ್ಲರೂ ಒಂಥರಾ ನೋಡಿದರು. ಅವನೂ ಎಲ್ಲರನ್ನೂ ನೋಡುತ್ತಾ ಬಂದಾಗ ನರ್ಸ್ ರುದ್ರಮ್ಮಳ ಹೊಟ್ಟೆ ಕಾಣಿಸಿತು. ಅವನಿಗರಿವಿಲ್ಲದೇ ದೃಷ್ಟಿ ಅಲ್ಲಿ ನೆಟ್ಟಿತು. ಮರುಕ್ಷಣವೇ ಸಾವರಿಸಿಕೊಂಡ. ಥತ್ತೇರಿ, ನಲವತ್ತರ ತರಿತರಿ ಹೊಟ್ಟೆ ಹೊಕ್ಕುಳುಗಳಿಗೆ ಜುಂ ಎನ್ನುವಷ್ಟು ಹಡಬೆ ಎದ್ದು ಹೋಗಿದೆ ತನ್ನ ಜೀವನ ಎಂದು ತನ್ನನ್ನೇ ತಾನು ಬೈದುಕೊಂಡ. ರೌಂಡ್ಸ್ ನಡೆಯುತ್ತಲೇ ಇತ್ತು. ಬೆಡ್ಡಿನಿಂದ ಬೆಡ್ಡಿಗೆ ಹೋಗುತ್ತಿದ್ದಾಗ ರುದ್ರಮ್ಮನ ಸುಪುಷ್ಟ ಅಂಗಾಂಗಗಳನ್ನು ನೋಡುತ್ತಾ ನೋಡುತ್ತಾ ಆನಂದಸಂಕಟಾದಿಗಳು ಒಟ್ಟಿಗೆ ಆಗಹತ್ತಿದವು. ತಲೆನೋವಿನ ನೆಪಹೇಳಿ ಕ್ಯಾಂಟೀನಿಗೆ ಹೋಗಿ ಒಂದು ಸಿಂಗಲ್ ಟೀಯನ್ನೂ ಐಟಿಸಿಯನ್ನೂ ಒಟ್ಟಿಗೇ ಮುಗಿಸಿದ.
ಈ ಬಳ್ಳಾರಿಯ ಬಂಡೆಗಳಂತೆಯೇ ಆಗಿಬಿಟ್ಟಿತು ನನ್ನ ಜೀವನ ಎಂದು ಮರುಗಿಕೊಂಡ. ಈ ಬಿಸಿಲಿಗೆ, ಈ ಬಂಡೆಗಳಿಗೆ ಜೀವವಿದ್ದಿದ್ದರೆ ಅವೂ ನನ್ನನ್ನು ನೋಡಿ ಅಟ್ಟಹಾಸ ಮಾಡಿ ನಗುತ್ತಿದ್ದವೇನೋ ಅನ್ನಿಸಿತು. ತಾನೇಕೆ ಎಲ್ಲ ಹುಡುಗಿಯರಿಗೂ ಅಸಂಗತನಾಗುತ್ತೇನೆ. ಯಾವುದೇ ತೀವ್ರಗತಿಯ ಸಂಬಂಧಗಳಿಲ್ಲದೆ ಕ್ಯಾಷುಯಲ್ ಸ್ನೇಹಕ್ಕೆ ಸಿಗುವ ಮೆಟೀರಿಯಲ್ ಅಲ್ಲವೇ ನನ್ನ ಜೀವನ. ಪ್ರೇಮಿಸಲೂ ಬೇಡ, ಕಾಮಿಸಲೂ ಬೇಡ, ಮಾತಾಡಿಸಿ ಜೊತೆಗೆ ಓಡಾಡುವಂತಹ ಜತೆಗಾತಿಯೂ ಸಿಗದ ಬರಡು ಬಾಳಾಯಿತಲ್ಲ ನನ್ನದು ಎಂದು ಕೊರಗುತ್ತಾನೆ. ಕೊರಗು ಜಾಸ್ತಿಯಾದಂತೆಲ್ಲ ಐಟಿಸಿ ಬೇಗ ಖರ್ಚಾಗುತ್ತದೆ. ಎಂತಹ ಶಾಸನಗಳು ಎಚ್ಚರ ವಿಧಿಸಿದರೂ ಉದ್ಧಟಿಸಬೇಕೆನ್ನುವ ಹುಂಬತನ ಜಾಸ್ತಿಯಾಗುತ್ತದೆ.
ಕ್ಯಾಂಟೀನಿನಿಂದ ಹೊರಗೆ ಬಂದಾಗ ಸುಗುಣ ಸಿಗುತ್ತಾಳೆ. ನಕ್ಕು ” ಕಂಗ್ರಾಟ್ಸ್” ಅನ್ನುತ್ತಾಳೆ. ಮುಖದಲ್ಲಿ ಏನೋ ಗೆದ್ದ ಕಳೆಯಿತ್ತು. ವರ್ಷದಲ್ಲಿ ಮೊದಲ ಬಾರಿಗೆ ಮಾತಾಡಬೇಕೆನಿಸುತ್ತದೆ. ಕಳೆದ ಎರಡು ವರ್ಷದಿಂದ ಕಾಣದೇಇದ್ದುದು ಇಂದೇನು ಕಾಣುತ್ತಿದ್ದೇನೆ ಎಂದು ತನ್ನಂತಾನೇ ಆಶ್ಚರ್ಯಪಡುತ್ತಾನೆ. ” ಏನು, ಕೂದಲು ಬಾಬ್ ಮಾಡಿಸಿದ್ಯಾ” ಪ್ರಶ್ನೆ ಕೇಳಬೇಕೆಂದು ಕೇಳುತ್ತಾನೆ. ಹೌದೆಂದು ನಗಲೋ ಬೇಡವೋ ಅನ್ನುವಂತೆ ನಗುತ್ತಾಳೆ. ” ಸ್ವಲ್ಪ ಸಣ್ಣಗಾಗಿದಿ” ಎಂದು ಹೇಳಿ ತಪ್ಪುಮಾಡಿದವನಂತೆ ನೋಡುತ್ತಾನೆ . ಮರುಮಾತಿಲ್ಲದ್ದೇ ಕ್ಯಾಂಟೀನಿನೊಳಗೆ ಹೋಗಿ ತನ್ನ ಗುಂಪು ಸೇರುತ್ತಾಳೆ.”ಸಾರೀ” ಎಂದು ಅವಳಿಗೆ ಕೇಳುವ ಹಾಗೆ ಕೂಗಿ ಹೊರಕ್ಕೆ ಬರುತ್ತಾನೆ.
ಬೇಕೆಂದು ಮನಸ್ಸು ಒಂದೂವರೆ ವರ್ಷ ಹಿಂದೆ ಓಡುತ್ತದೆ. ಘೋಶ ಆಸ್ಪತ್ರೆಯ ಹೆರಿಗೆ ಕೋಣೆಯಲ್ಲಿ ರಾತ್ರಿ ಡ್ಯೂಟಿ. ಜೋಷಿ ಕೊನೆಯವರ್ಷ. ಸುಗುಣ ಮೂರನೇ ವರ್ಷ. ಮೆಡಿಕಲ್ ಕಾಲೇಜಿನಲ್ಲಿ ಇರುವ ಎರಡು ವರ್ಷದ ವ್ಯತ್ಯಾಸ ಜಗತ್ತಿನ ಬೇರೆಲ್ಲೂ ಇರುವುದಿಲ್ಲ. ಇದ್ದಕ್ಕಿದ್ದ ಹಾಗೆ ಸೀನಿಯಾರಿಟಿ ಬಂದುಬಿಟ್ಟಿತ್ತು ಜೋಷಿಗೆ. ಅವನ ಹಿಂದೆ ಯಾವುದಾದರೂ ಮಕ್ಕಳ ಡೆಲಿವೆರಿ ಮಾಡಿಸಬಹುದೆಂದು ತಿರುಗುವ ಕೆಲಸ ಸುಗುಣಳದು. ಐದೈದು ಜನ ಇರುವ ಈ ಗುಂಪಿನಲ್ಲಿ ಜೋಷಿಯ ಹಿಂದೆ ಈ ಹುಡುಗಿಯಾದರೂ ಬಿತ್ತಲ್ಲ ಅನ್ನುವ ಸಮಾಧಾನ ಜೋಷಿಯ ಗೆಳೆಯರೆಲ್ಲರಿಗೂ ಆಗಿತ್ತು. ದಪ್ಪ ತುಟಿಯ, ಪಿರಿಚು ಕಣ್ಣಿನ, ಬಾಚಿಹಲ್ಲಿನ ಪೀಚು ಹುಡುಗಿ ಸುಗುಣ. ಕಾಲೇಜಿನ “ಸಾಟ್ ಆಫ್ಟರ್” ಹುಡುಗಿಯರ ಗುಂಪಿನಲ್ಲಿ ಖಂಡಿತಾ ಸೇರಿರಲಿಲ್ಲ. ಹೆಣ್ಣು ಅನ್ನುವ ಯಾವುದೇ ವಸ್ತುವನ್ನು ನಿರಾಕರಿಸಲೊಲ್ಲದವರೂ ಅವಳಿಂದ ಮಾರುದೂರ ಇರುತ್ತಿದ್ದರು. ಅವಳು ತನ್ನ ಯುನಿಟ್ಟಿಗೆ “ಜ್ಯೂನಿಯರ್” ಆಗಿ ಬರುತ್ತಾಳೆಂದು ತಿಳಿದಾಗ ತನ್ನ ಹಣೆಬರಹವನ್ನು ಮನಸಾರೆ ಶಪಿಸಿದ್ದ ವಿನಾಯಕ. ಆಡಲಾಗದೆ ಅನುಭವಿಸಿದ್ದ.
ದಿನಾ ನೋಡುತ್ತಿದ್ದರೆ ಶೂರ್ಪನಖಿಯೂ ಶಕುಂತಲೆಯ ರೀತಿ ಕಾಣುತ್ತಾಳಂತೆ. ಕಲ್ಲೂ ಶಿಲಾಬಾಲಿಕೆಯ ರೀತಿ ಕಾಣಿಸತೊಡಗಿತ್ತು ಜೋಷಿಗೆ. ಮನಸ್ಸು ಕಣ್ಣೂ ನಿರಾಕರಿಸಿದ್ದನ್ನು ದೇಹ ಬೇಕೆಂದಿತ್ತು. ತನಗೇ ತಿಳಿಯದೆ ಸುಗುಣಳ ಹಿಂದೆ ತಿರುಗಲಾರಂಭಿಸಿದ್ದ. ಅದೊಂದು ರೀತಿಯ ವಿಚಿತ್ರ ಸಂಬಂಧ. ದೇಹದ ಎಲ್ಲಾ ಭಾಗಗಳಿಗೂ ಬೇಕಾದ ಹುಡುಗಿಯಾಗಿರಲಿಲ್ಲ ಆಕೆ. ಆದರೂ ಕದ್ದು ಕದ್ದು ತಿರುಗಿದ ಜೋಷಿ. ತಾನು ತೀರ ಗತಿಗೆಟ್ಟು ಈ ರೀತಿಯಾದನೇ ಎಂದು ಬಹಳ ಸಾರಿ ಕೇಳಿಕೊಂಡಿದ್ದ. ಇರಬಹುದು ಅನ್ನಿಸಿದ ತಕ್ಷಣ ಪರವಾಗಿಲ್ಲ ಅಂತಲೂ ಅನ್ನಿಸಿತ್ತು. ಸರಿ, ಹದಿನೈದು ದಿನಗಳಲ್ಲಿ ಬಳ್ಳಾರಿಯ ಬೀದಿಬೀದಿಗಳಲ್ಲಿ ತಿರುಗತೊಡಗಿದ್ದರು. ರಾಧಿಕಾ ಟಾಕೀಸಿನ ಮೂಲೆಮೂಲೆಯ ಸೀಟುಗಳು ಸವೆದವು. ಮಯೂರ ಹೋಟೆಲಿನ ಐಸ್ ಕ್ರೀಮು ಸಾಲುಸಾಲಾಗಿ ಖರ್ಚಾಗತೊಡಗಿದವು. ಬಳ್ಳಾರಿಯಲ್ಲಿ ತಿರುಗಲೆಲ್ಲೂ ಜಾಗ ಸಿಗದೆ ವಡ್ಡರ ಬಂಡದ ಬ್ರಿಡ್ಜ್ ಮೋರಿಯ ಮೇಲೆ ಕೂತು ಮಂಡಕ್ಕಿ ಮೆಣಸಿನಕಾಯಿ ತಿಂದರು. ಸತ್ಯನಾರಾಯಣಪೇಟೆಯ ಮಠಕ್ಕೂ ಹೋಗಿಬಂದರು. ತಿಂಗಳೊಳಗೆ ಜೋಷಿ, ಸುಗುಣ ವಿನೂ ಸುಗ್ಗುವಷ್ಟು ಹತ್ತಿರವಾಗಿದ್ದರು.
“ಪ್ರೇಮ ಕುರುಡು ಅನ್ನೋ ಮಾತನ್ನು ನಮ್ಮ ಜೋಷಿಯನ್ನು ನೋಡಿದ ಮೇಲೆಯೇ ಹೇಳಿದರೆಂದರು ಅವನ ಸ್ನೇಹಿತರುಗಳು. ” ಏನ್ಗುರು ಕವರ್ ದ ಫೇಸ” ಎಂದು ತಮಾಷೆ ಮಾಡಿದರು ” ಕೈ ತೊಳ್ಕೊಂಡು ಮುಟ್ಟೋದಲ್ಲಮ್ಮ, ಮುಟ್ಟಿ ಕೈ ತೊಳ್ಕೊಬೇಕು” ಹಾಗೆ ಹೀಗಂತ ಹಾಸ್ಯ ಮಾಡಿದ್ದರು. ” ಮುಚ್ರೋಲೋ, ಮೈಸೂರು ಪಾಕ್ ತಿಂದೋನಿಗೇ ಗೊತ್ತು ಅದರ ರುಚಿ ಎಂದು ಅವರಿವರ ಬಾಯಿ ಮುಚ್ಚಿಸಿದ್ದ. ರುಚಿ ಅಂದರೆ ಏನು ಎಂದು ಪೂರಾ ತಿಳಿದಿರಲಿಲ್ಲ ಜೋಷಿಗೆ. ತಿಳಿದಿದೆ ಎಂದು ಸಂತೈಸಿಕೊಂಡಿದ್ದ.
” ಈ ಲೈಫ್ ಅನ್ನೋದು ಎಷ್ಟು ಗೋರಿಯಾಗಿರುತ್ತೆ ಅನ್ನೋದೇ ಗೊತ್ತಾಗದೇ ಹುಟ್ತಾವೆ ನೋಡು, ಈ ಮಕ್ಳು” ಹೆರಿಗೆ ಕೋಣೆಯಿಂದ ಹೊರಗೆ ಬರುತ್ತಾ ಹೇಳಿದ್ದ, ಜೋಷಿ ಒಂದು ದಿನ. ಮಿಕಿಮಿಕಿ ನೋಡಿದಳು ಸಂದರ್ಭ ಅರ್ಥವಾಗದೆ. ” ಯಾಕೆ ಗೋರಿ ಅನ್ನೋ ಪದಕ್ಕೆ ಅರ್ಥ ಹುಡುಕುತ್ತಿದ್ದೀಯ ಅಲ್ಲವಾ” ಗೆದ್ದಂತೆ ಕೇಳಿದ. ಮತ್ತೂ ಬೆಪ್ಪಾದಳು ಸುಗುಣ. ತನ್ನನ್ನು ಹಂಗಿಸಲೆಂದೇ ಒಂದು ಸನ್ನಿವೇಶವನ್ನು ಸೃಷ್ಟಿಸುತ್ತಿದ್ದಾನೆ ಎಂದು ಅರಿವಾಗುವ ಮೊದಲು” ಹೋಗಲೀ ಬಾ, ಟೀ ಕುಡಿಯೋಣ” ಎಂದು ಕ್ಯಾಂಟೀನಿಗೆ ಕರೆದೊಯ್ದ. ” ಇವೊತ್ತು ನೀನೊಂತರಾ ಚೆನ್ನಾಗಿ ಕಾಣಿಸ್ತಾ ಇದ್ದೀಯಾ” ರಮಿಸಲು ಹೇಳಿದ. ಆ ಕಂದು ಮುಖದಲ್ಲಿ ತುಟಿಗಳಲ್ಲಿ ಸಂಜೆಯ ರಂಗು ಕಾಣುತ್ತದೇನೋ ಎಂದು ಹುಡುಕಿದ ಜೋಷಿ.
” ವಿನೂ” ಮೆಲ್ಲಗೆ ಉಸಿರಿದ್ದಳು ಮಬ್ಬುಬೆಳಕಿನಲ್ಲಿ” ನನ್ನ ಹಿಂದೆ ಯಾಕೆ ಬಿದ್ದಿದ್ದೀಯ. ನಾವ್ಯಾಕೆ ಈ ತರ ಜೊತೆಜೊತೆಯಾಗಿ ಓಡಾಡ್ತಾ ಇದೀವಿ. ಎಲ್ಲಿಯತನಕ ಜೊತೆಯಾಗಿರ್ತೀವಿ ಅನ್ನೋದನ್ನು ಯೋಚನೆ ಮಾಡಿದ್ದೀಯಾ” ಕೇಳಿದಳು. ಬನ್ನಂಜೆ ಗೋವಿಂದಾಚಾರ್ಯರ ಕ್ಯಾಸೆಟ್ ಕೇಳಿದಂತಾಗಿತ್ತು ಜೋಷಿಗೆ. ಬಹಳ ಕಷ್ಟವಾದ ಪ್ರಶ್ನೆ ಎನ್ನಿಸಿತು. ಉತ್ತರ ಕೊಡದೆ ಮಂಕಾದ. ” ನಮ್ಮ ಸಂಬಂಧ ಮೇಲ್ನೋಟಕ್ಕೆ ಎಲ್ಲರಂತೆ ಕಾಣಬಹುದು. ಆದರೆ ನಾನು ನಿರೀಕ್ಷಿಸಿದ್ದ ಯಾವುದೋ ಒಂದು ಆತ್ಮೀಯತೆ ಇಲ್ಲಿಲ್ಲ ಅನ್ನಿಸುತ್ತೆ. ಇಲ್ಲಿ ನಮ್ಮಿಬ್ಬರ ಅವಶ್ಯಕತೆಗಳೇ ಮುಖ್ಯವಾಗಿದೆಯಲ್ಲವೇ. ದೇಹದ ಸೌಂದರ್ಯವನ್ನು ಮೀರಿದ ಪ್ರೀತಿ ನಿನ್ನದು ಅನ್ನೋದು ತೋರಿಕೆ ಅಲ್ವಾ ವಿನೂ? ಮನಸ್ಸಿನದೋ, ದೇಹದ್ದೋ ಈ ಆಸೆ ಅನ್ನೋದು ಕೆಲವೊಮ್ಮೆ ಹೊರಗಿನ ಅಪಿಯರೆನ್ಸನ್ನು ಮುಚ್ಚಿಬಿಡುತ್ತೆ ಅಲ್ವಾ” ಎಂದಳು.
ಈ ರೀತಿಯ ಪ್ರಹಾರಕ್ಕೆ ಸಿದ್ಧನಿರಲಿಲ್ಲ ಜೋಷಿ. ಎಲಾ ಇವಳ, ಇವಳಿಗೆ ಮಾತಾಡಲು ಬರುತ್ತದೆ. ಬರೀ ಮಾತಲ್ಲ, ಸೊಗಸಾಗಿಯೇ ಮಾತಾಡುತ್ತಾಳೆ. ನಾನು ಇವಳನ್ನು ತಿರುಗಿಸಿದ್ದು, ದುಡ್ಡು ಖರ್ಚು ಮಾಡಿದ್ದು ಅವಳ ಖುಷಿಗೋ, ನನ್ನ ಖುಷಿಗೋ. ಜೀವನದಲ್ಲಿ ಇದೊಂದೇ ಅಲ್ಲವೇ ಕಾಂಪ್ಲಿಮೆಂಟರಿ ಸಂತೋಷ. ಒಬ್ಬರಿಗೆ ಖುಷಿಯಾಗಿದೆ ಎಂದರೆ ಇನ್ನೊಬ್ಬರಿಗೆ ಖುಷಿಯಾಗಿದೆ ಎಂದೇ ಅರ್ಥ. ಅದೂ ಅಲ್ಲದೆ, ಇವಳ ಮುಖಕ್ಕೆ ನಾನು ಸಿಕ್ಕಿರುವುದೇ ಜಾಸ್ತಿ. ಸಿಕ್ಕಿದೆ ಎಂದು ಅನುಭವಿಸುವುದನ್ನು ಬಿಟ್ಟು ಇದ್ದಕ್ಕಿದ್ದ ಹಾಗೆ ಏನೋ ಮಾತನಾಡುತ್ತಿದ್ದಾಳಲ್ಲ ಅನ್ನಿಸಿತು.
” ಈಗ್ಯಾಕೆ ಆ ವಿಷಯ, ಆರಂಟ್ ಯು ಹ್ಯಾವಿಂಗ್ ಅ ಗುಡ್ ಟೈಂ” ಇಂಥ ಸಮಯದಲ್ಲಿ ಇಂಗ್ಲೀಷೇ ಸರಿ ಎಂದು ಕೊಂಚ ಅಸಹನೆಯಿಂದ ಕೇಳಿದ್ದ ಜೋಷಿ. ಇದ್ದಕ್ಕಿದ್ದ ಹಾಗೆ ಜೋರಾಗಿ ಅಳಲು ಶುರುಮಾಡಿದಳು ” ವಿನೂ ನನಗೆ ಸಿಂಪತಿ ಬೇಡ, ಪ್ರೀತಿ ಬೇಕು. ನನ್ನನ್ನು ತಿರುಗಿಸಿ, ಐಸ್ ಕ್ರೀಂ ಕೊಡಿಸಿ ಉಪಕಾರ ಮಾಡಿದ್ದೀಯ. ಅದಕ್ಕೆ ಪ್ರತಿಯಾಗಿ ನಿನಗೆ ಏನು ಸಿಕ್ಕಿದೆ ಅನ್ನುವುದೂ ನಿನಗೆ ಗೊತ್ತು. ಬರೀ ಐಸ್ ಕ್ರೀಮಿಗೆ ಪಿಕ್ಚರಿಗೆ ಸಿಗೋ ಸಂಬಂಧವಾಗಬಾರದು ನಮ್ಮದು ” ಬಿಕ್ಕುತ್ತಿದ್ದಳು.
ಜೋಷಿಗೆ ಈಗ ತೀರ ಕಸಿವಿಸಿಯಾಯಿತು. ” ಸುಗುಣ, ನಾನು ತುಂಬಾ ಮುಂದೆ ಯೋಚನೆ ಮಾಡಿಲ್ಲ. ಮಾಡುವಷ್ಟು ದೊಡ್ಡ ವಯಸ್ಸೂ ಅಲ್ಲ ನಮ್ಮದು. ಏನೋ ಸ್ವಲ್ಪ ಖುಷಿಯಾಗಿರಬೇಕನ್ನಿಸಿತ್ತು. ನಿನಗೂ ಹಾಗೇ ಅನ್ನಿಸಿರಬೇಕೆಂದಂದುಕೊಂಡೆ. ಈಗ ನನ್ನಿಂದ ನೀನು ಏನನ್ನು ನಿರೀಕ್ಷಿಸುತ್ತಿದ್ದೀಯ ಅನ್ನೋದನ್ನು ಸ್ವಲ್ಪ ಸ್ಪಷ್ಟವಾಗಿ ಹೇಳುತ್ತೀಯ” ಸ್ವಲ್ಪ ಕಟುವಾಗೇ ಕೇಳಿದ.
” ಸ್ವಲ್ಪ ಕಮಿಟ್ ಮೆಂಟ್” ತಡವರಿಸದೆ ಬಂದಿತ್ತು ಉತ್ತರ. ಕಣ್ಣುಗಳನ್ನು ಒರೆಸಿದ ಮೇಲೆ.
” ಅಂದರೆ ಏನು ಮದುವೆಯೇ” ಹುಬ್ಬುಗಂಟಿಕ್ಕಿ ಕೇಳಿದ ಜೋಷಿ.
” ಅಲ್ಲ, ಸ್ವಲ್ಪ ಗ್ಯಾರಂಟಿ. ನಿನ್ನಿಂದ ಉಪಕಾರ ಮಾಡಲ್ಪಟ್ಟವಳು ಅನ್ನೋ ಭಾವನೆ ನನ್ನಿಂದ ಹೋಗಬೇಕು. ಬರೀ ಐಸ್ ಕ್ರೀಮಿಗೆ ಮೈ ಸೋತವಳು ಅನ್ನೋ ಕೀಳರಿಮೆ ನನಗೆ ಬರೋ ಮುಂಚೆ ಅದನ್ನು ತಡೆದು ಹಾಕೋ ಅಂತ ಸ್ವೀಟ್ ಫೀಲಿಂಗ್. ಬಾಯಿಂದ ಹೇಳೊಕ್ಕೆ ಗೊತ್ತಾಗ್ತಾ ಇಲ್ಲ. ಇದನ್ನೇ ಪ್ರೀತಿ ಅಂತಲೂ ಕರೀತಾರೆ ಅನ್ನಿಸುತ್ತೆ. ಸಂಥಿಂಗ್ ಲೈಕ್ ದಟ್. ನನ್ನ ಮೈಕೈ ಸವರಿ ಮುದ್ದು ಮಾಡುವುದರ ಜೊತೆಗೇ ಬಾಯಿಂದ “ಐ ಲವ್ ಯು” ಎನ್ನುತ್ತಾ ಇದ್ದರೆ ಆ ಮುದ್ದಿಗೂ ಒಂದು ಅರ್ಥ ಬರುತ್ತದೆ, ವಿನೂ. ಇಲ್ಲದಿದ್ದರೆ ನನ್ನ ಮೈ ಮನಸ್ಸುಗಳೆರಡನ್ನೂ ಬಾಡಿಗೆಗೆ ಕೊಟ್ಟ ಭಾವನೆ ಬರುತ್ತದೆ” ಮತ್ತೆ ಬಿಕ್ಕಿದಳು.
” ನೀನು ಹೇಳುತ್ತಿರುವ ಅರ್ಥ ನಾನು ನಿನ್ನನ್ನು ಪ್ರೀತಿಸುತ್ತಿಲ್ಲ ಎಂದೇ” ಮತ್ತೆ ಕೇಳಿದ.
” ಅದು ನನಗೆ ಗೊತ್ತಿಲ್ಲ. ಗೊತ್ತುಮಾಡಿಕೊಳ್ಳುವುದಕ್ಕೆ ಈಗ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ತಿಳಿಯುತ್ತಿಲ್ಲ. ಯಾಕೆ ಗೊತ್ತಾ. ಈ ಸಂಬಂಧದಲ್ಲಿ ಕನ್ಫ್ಯೂಸ್ ಆಗಿರುವವಳು ನಾನೊಬ್ಬಳೆ ಅನಿಸುತ್ತದೆ. ನಿನಗೆ ಸ್ಪಷ್ಟವಾದ ಎಕ್ಸ್ ಪೆಕ್ಟೇಷನ್ ಇದೆ ಅಂತ ಅನ್ನಿಸುತ್ತೆ. ನಮ್ಮ ವೇವ್ ಲೆಂತ್ ಒಂದೇ ಅನ್ನೋದು ಗೊತ್ತಾಗೋವರೆಗೆ ನನಗೆ ಸಮಾಧಾನ ಇರೋಲ್ಲ. ಮದುವೆ ಮಾಡ್ಕೋ ಅಂತ ನಾನು ಕೇಳುತ್ತಾ ಇಲ್ಲ. ಮದುವೆ ಅನ್ನೋ ಸಂಬಂಧಕ್ಕೆ ಕನ್ಸಿಡರ್ ಮಾಡಬಹುದಾದಂತಹವಳು ಅನ್ನೋದನ್ನು ಕನಿಷ್ಟ ತೋರಿಕೆಗಾದರೂ ತೋರಿಸುವಷ್ಟು ಗಟ್ಟಿಯಾಗಬೇಕು ನಮ್ಮ ರಿಲೇಷನ್, ವಿನೂ, ನಾನು ನಿನ್ನ ಕೇಳ್ಕೋತೀನಿ. ಪ್ಲೀಸ್, ಅಟ್ ಲೀಸ್ಟ್ ಪ್ರಿಟೆಂಡ್ ದಟ್ ಯು ಆರ್ ಲವಿಂಗ್ ಮಿ” ಗೋಗರೆದಳು.
ಇದೆಲ್ಲಿಯ ಗ್ರಹಚಾರ ಅನ್ನಿಸಿತು ಜೋಷಿಗೆ. ಈ ಅತಿ ಭಾವುಕತೆ, ಏರಿಳಿತಗಳು ಬೇಡವೆಂದೇ ಅಲ್ಲವೇ ತಾನು ಇವಳ ಸಹವಾಸ ಮಾಡಿದ್ದು. ಹುಡುಗಿಯೊಬ್ಬಳ ಜತೆಗಿದ್ದಾಗ ಮಾತ್ರ ಹುಡುಗಿಯ ಜತೆಗಿದ್ದೆ ಅನ್ನಿಸುವ ಸಂಬಂಧ ಬೇಕಿತ್ತು ಅವನಿಗೆ. ನಂತರದ ಯಾವುದೇ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುವುದು ಬೇಕಿರಲಿಲ್ಲ. ಆದರೆ ಈಗ ಯಾಕೋ ತಾನು ದಾರಿ ತಪ್ಪುತ್ತಿದ್ದೇನೆ ಅನ್ನಿಸಿತು. ಇದನ್ನು ಇಲ್ಲಿಯೇ ಮುಗಿಸುವುದೋ ಅಥವಾ ಮುಂದೆ ನೋಡಬೇಕೋ ಗೊತ್ತಾಗಲಿಲ್ಲ. ” ಸುಗುಣ, ನೀನು ಕೇಳುತ್ತಿರುವುದಕ್ಕೆ ಈಗ ಕಮಿಟ್ ಆಗಲು ಇಬ್ಬರಿಂದಲೂ ಸಾಧ್ಯಾನಾ ಅನ್ನೋದನ್ನು ಸ್ವಲ್ಪ ಯೋಚಿಸು. ಅಷ್ಟಕ್ಕೂ ನಾವೇನು ಬೇರೆಯವರಿಗಿಂತ ಹೊರತಲ್ಲ. ಇಲ್ಲಿನ ಪ್ರತಿ ಡಿಪಾರ್ಟ್ಮೆಂಟಿನ ಗೋಡೆಗೋಡೆಗಳ ಮೇಲೆ ಬರೆದಿದೆ ಇಲ್ಲಿನ ಪ್ರೇಮಿಗಳ ಕಥೆ. ಈ ಘಟ್ಟದಲ್ಲಿ ನನ್ನಿಂದ ಯಾವ ರೀತಿಯೂ ಕಮಿಟ್ ಮಾಡಲಿಕ್ಕೆ ಆಗುವುದಿಲ್ಲ. ಹಾಗೆ ಅಂತ ಮುಂದೆ ನಾವು ಮದುವೆಯಾಗಬಾರದು ಅಂತಲೂ ಇಲ್ಲ. ಆದರೆ ಒಂದು ಮಾತ್ರ ನಿಜ. ಈ ಹೊತ್ತು, ಇವತ್ತು ನಾನು ನಿನಗೆ ಯಾವುದನ್ನೂ ಪ್ರಾಮಿಸ್ ಮಾಡಲಾರೆ” ಗೋಡೆ ನೋಡುತ್ತಾ ಹೇಳಿದ್ದ.
ಅಂದು ತಿರುಗಿಸಿದ ಮುಖ ಇನ್ನೂ ಹಾಗೇ ಇದೆ. ಈ ದರಿದ್ರ ಕ್ಯಾಂಪಸ್ಸಿನಲ್ಲಿ ಒಬ್ಬರ ಕಣ್ಣು ತಪ್ಪಿಸಿ ಓಡಾಡುವುದು ಸಾಧ್ಯವೇ. ಬೆಳಗಾಗೆದ್ದು ಹಲ್ಲುಜ್ಜುವಾಗ ನೋಡುವ ಮುಖವೇ ರಾತ್ರಿ ಸೆಕಂಡ್ ಶೋನಲ್ಲೂ ಕಾಣುತ್ತದೆ. ಮುಂದೆ ಸಿಕ್ಕಾಗ ತಲೆತಗ್ಗಿಸಿಯೋ ಹಲ್ಲುಕಿರಿದೋ ತಪ್ಪಿಸಿಕೊಂಡಂತೂ ಹೋಗುತ್ತಿದ್ದ. ಇಂದು ಸಿಕ್ಕು ಅವಳೇ “ಕಂಗ್ರಾಟ್ಸ್” ಎಂದು ಹೇಳಿದ್ದಾಗ ಸ್ವಲ್ಪ ಆಶ್ಚರ್ಯವಾಗಿತ್ತು. ಆ ಅಭಿನಂದನೆ ಅಭಿನಂದನಾಪೂರ್ವಕವಾಗೇನೂ ಬಂದಿರಲಿಲ್ಲ. ಅವಳ ಮುಖದಲ್ಲಿ ಏನನ್ನೋ ಸಾಧಿಸಿದ ಕಳೆಯಿತ್ತು. ಸೇಡು ತೀರಿಸಿಕೊಂಡ ಕೆಚ್ಚಿತ್ತು ಅನ್ನಿಸಿತು ಜೋಷಿಗೆ. ತಾನು ದಿಟ್ಟಿಸಿ ಅವಳ ಮುಖ ನೋಡಿಲ್ಲ ಬಹಳ ದಿನದಿಂದ. ಬಹಳ ದಿನಗಳಾದ ಮೇಲೆ ನೋಡುತ್ತಿರುವುದರಿಂದ ಈ ರೀತಿ ಅನ್ನಿಸುತ್ತಿದೆ ಎಂದುಕೊಂಡ.
ತಾನು ಸುಗುಣಳನ್ನು ಬಿಟ್ಟಿದ್ದು ಏಕೆ? ಹುಡುಗಿ ಬೇಕು ಬೇಕು ಎಂದು ಹಾತೊರೆಯುತ್ತಿದ್ದಾಗ ಬಯಸದೇ ಹಿಂದೆ ಬಿದ್ದ ಆ ಹುಡುಗಿ ತನಗೇನು ಕಡಿಮೆ ಮಾಡಿದ್ದಳು. ಎರಡು ವರ್ಷದ ಹಿಂದೆ ಅವಳನ್ನು ಮೊದಲು ನೋಡಿದಾಗ ತನ್ನ ಮೈಯ ಬೆದೆಯನ್ನು ಶಮನಮಾಡುವ ಸೌಂದರ್ಯವಿದೆ ಎಂದೇನೂ ಅನಿಸಿರಲಿಲ್ಲ. ಬೌದ್ಧಿಕವಾಗಿ ಇವನ ತುಡಿತಗಳಿಗೆ ಮಿಡಿಯಬಲ್ಲ” ಇಂಟೆಲೆಕ್ಚುಯಲ್ ಕಂಪ್ಯಾನಿಯನ್ ಶಿಪ್” ಅನ್ನೇನೂ ಸುಗುಣಳಲ್ಲಿ ಆತ ಬಯಸಿರಲಿಲ್ಲ. ಮೈಮನಸ್ಸುಗಳ ಅವಶ್ಯಕತೆಗಳ ಚೌಕಟ್ಟನ್ನು ದಾಟಿದ ಆಕರ್ಷಣೆ ಏನಿದ್ದಿರಬಹುದು. ಅವಳನ್ನು ಬೇಡ ಎಂದು ಝಾಡಿಸಿಬಂದಮೇಲೂ, ಅವಳನ್ನು ನೆನೆಸಿ, ಕನವರಿಸಿರಲಿಲ್ಲವೇ? ಸುಗುಣ ತನ್ನ ಕನಸಿನಲ್ಲಿ ಬಂದಳು ಅನ್ನುವ ಯೋಚನೆಯೇ ಅವನಿಗೆ ನಾಚಿಕೆ ತರುವ ವಿಷಯವಾಗಿತ್ತು. ಆದರೂ ನಿಜವಾಗಿತ್ತು.
ಜೀವನದಲ್ಲಿ ಕೆಲವೊಂದು ಸರಳ ಸತ್ಯಗಳು ಅರ್ಥವಾಗುವುದು ಅಷ್ಟೊಂದು ಸುಲಭವಲ್ಲ ಅನ್ನಿಸಿತು. ಹೌದು, ಈ ಜಗತ್ತಿನಲ್ಲಿ ಏನಾದರೂ ಇಷ್ಟವಾದರೆ ಅದು ಏಕೆ ಇಷ್ಟವಾಗುತ್ತಾ ಇದೆ ಎಂದು ಅರ್ಥೈಸಿ ವಿಶ್ಲೇಷಿಸಬೇಕೇ? ಸುಮ್ಮನೆ ಕಣ್ಣು ಮುಚ್ಚಿ ಅನುಭವಿಸುವುದಕ್ಕೂ ತೊಂದರೆಯೇ. ಎಷ್ಟು ಕ್ರೂರ ಈ ಪ್ರಪಂಚ. ಅನ್ನಿಸಿದ್ದನ್ನು ನೇರವಾಗಿ ಹೇಳುವುದಕ್ಕೆ/ ಮಾಡುವುದಕ್ಕೆ ಎಷ್ಟೊಂದು ತಿಣಕಾಡಬೇಕು. ಸತ್ಯ ಏನೆಂದರೆ, ತನಗೆ ಸುಗುಣ ಬೇಕು. ಇಡೀ ಕಾಲೇಜೇ ತಮ್ಮನ್ನು ನೋಡಿ ನಗಲಿ, ಸುಗುಣ ಮನಸ್ಸಿಗೆ ಬಂದಹಾಗೆ ಬಯ್ಯಲಿ, ಬೇಕಾದರೆ ಎರಡೇಟು ಹೊಡೆದುಬಿಡಲಿ. ತನ್ನನ್ನು ಒಪ್ಪಿಸಿಕೋ ಎಂದು ಕೇಳಬೇಕು. ತಪ್ಪಾಯಿತು ಎಂದು ಕಾಲಿಗೆ ಬೀಳಬೇಕು. ಇಡೀ ಜೀವನ ನಿನ್ನ ಜೊತೆಯಲ್ಲಿಯೇ ಇರುತ್ತೀನಿ ಎಂದು ಅವಳಿಗಿಷ್ಟವಾಗುವ ಹಾಗೆ ಹೇಳಿಬಿಡಬೇಕು. ಅವಳಿಗಿಷ್ಟವಾದ ಪದ ” ಕಮಿಟ್ ಮೆಂಟ್”. ಹೌದು ಇಡೀ ಜೀವನ ನಿನಗೊಬ್ಬಳಿಗೆ ” ಕಮಿಟ್” ಆಗಿರ್ತೀನಿ ಎಂದುಬಿಡಬೇಕು. ಬಾಹ್ಯ ಸೌಂದರ್ಯ ಎಷ್ಟು ದಿನ. ಮದುವೆಯಾಗಿ ಒಂದೆರಡು ಮಕ್ಕಳಾದರೆ ಎಂಥವರೂ ನೋಡದ ಹಾಗೆ ಆಗುವುದಿಲ್ಲವೇ?
ತಾನು ನಿಜವಾಗಿ ಡಾಕ್ಟರಾದ ಮೊದಲ ದಿನ ಮಾಡಬೇಕಾದ ನಿರ್ಧಾರ ಇದೇನೇ, ಎಂದು ತನ್ನನ್ನು ತಾನೆಯೇ ಕೇಳಿಕೊಂಡ. ಶುಭಸ್ಯ ಶೀಘ್ರಂ! ಆಗೇ ಹೋಗಲಿ, ಒಳ್ಳೆಯ ಕೆಲಸಕ್ಕೆ ಮೀನ ಮೇಷ ಎಣಿಸಬಾರದಂತೆ.
ಹೊರಗೆ ಸುಗುಣ ಕಾಣಿಸುತ್ತಾಳೇನೋ ನೋಡಿದ. ಹಾಸ್ಟೆಲ್ಲಿನ ಕಡೆ ಹೋಗುತ್ತಿದ್ದುದು ಕಾಣಿಸಿತು. ಸರಸರನೆ ಹಿಂಬಾಲಿಸಿದ. ತಾನು ಈಗ ಹೀಗೆ ಹೇಳಿದಾಗ ಅವಳ ಪ್ರತಿಕ್ರಿಯೆ ಏನಿರಬಹುದು. ಮೊದಲು ಸ್ವಲ್ಪ ಸಿಟ್ಟು ಮಾಡಬಹುದು. ನಂಬದೇ ಇರಬಹುದು. ಆಮೇಲೆ ಜೋರಾಗಿ ಅತ್ತುಬಿಡಬಹುದು. ಆದರೆ ಕೊನೆಗೇನು? ನನ್ನನ್ನು ಬೇಡ ಅನ್ನುವುದು ಅವಳಿಗೆ ಸಾಧ್ಯವಿಲ್ಲವೇ ಇಲ್ಲ ಅಲ್ಲವೇ? ಈ ಗ್ಯಾರಂಟಿಯೇ ಅವಳನ್ನು ಬಿಟ್ಟುಬರಲು ಕಾರಣವಾಯಿತು ಅಲ್ಲವೇ. ಅದು ಯಾಕೆ ಬೇಡ ಅನ್ನುತ್ತಾಳೆ. ನನಗೇನು ಕಡಿಮೆಯಾಗಿದೆ.
ತಪ್ಪು, ತಪ್ಪು. ಇಲ್ಲಿ ಈಗಾದರೂ ಸ್ವಲ್ಪ ತನ್ನ ಇಗೋವನ್ನು ಬದಿಗಿಡಬೇಕು. ಈ ಸೊಕ್ಕೇ ಎಲ್ಲ ದುರಂತಗಳಿಗೂ ಕಾರಣವಾದದ್ದು. ನನಗಿಂತ ಅವಳೇನೂ ಕಮ್ಮಿಯಿಲ್ಲ ಎಂದು ಮನಸ್ಸಿನಲ್ಲಿ ಹತ್ತಾರು ಬಾರಿ ಹೇಳಿಕೊಂಡ. ಈ ಬಾರಿ ಅತಿ ದೈನ್ಯದಿಂದ ಬೇಡಿಕೊಂಡುಬಿಡಬೇಕು. ” ಓ ಸುಗುಣ, ಪ್ಲೀಸ್, ನನ್ನ ಕೈ ಬಿಡಬೇಡ” ಕೇಳಿದಾಕ್ಷಣ ಹತ್ತಿರ ಬಂದು ಪ್ರೀತಿಯಿಂದ ಎದೆಗೊಂದು ಗುದ್ದಿ ಆಮೇಲೆ ಒರಗುತ್ತಾಳಲ್ಲ, ಅಲ್ಲಿಗೆ ಎಲ್ಲವೂ ಸುಖಾಂತ.
ಹೆಜ್ಜೆಯ ವೇಗದಷ್ಟೇ ಎದೆಯ ಬಡಿತವೂ ಜಾಸ್ತಿಯಾಗಿತ್ತು. ಮುಂದಿನ ತಿರುವಿನಲ್ಲಿ ಕೂಗಳತೆಗೆ ಸಿಗುತ್ತಾಳೆ. ” ಸುಗುಣ” ಎಂದು ಕೂಗಲೋ “ಸುಗೂ” ಎನ್ನಲೋ. ಬೇಡ, ತೋರಿಕೆಗೆ ಆತ್ಮೀಯತೆ ಬೇಡ. ಈ ಸಂಬಂಧ ಅನ್ನುವುದು ಯಾವುದಾದರೂ ಒಂದು ಕೂದಲೆಳೆಯಿಂದ ಅಪಾಯಕಾರಿಯಾಗಿಯಾದರೂ ನೇತಾಡುತ್ತಿದ್ದರೆ ಅದು ಜೀವಂತವಾಗಬಲ್ಲದ್ದು ಪ್ರಾಮಾಣಿಕತೆಯಿಂದ ಮಾತ್ರ. ಈಗಿರುವ ವಸ್ತುಸ್ಥಿತಿಯಲ್ಲಿ ಸುಗುಣ ಸುಗೂ ಗಿಂತ ಹೆಚ್ಚು ಹತ್ತಿರ ಅನ್ನಿಸಿತು. ಹತ್ತಿರವಾಗುತ್ತಿದ್ದ ಹಾಗೆ ಹಿಂದಿನಿಂದ ಒಮ್ಮೆ ದಿಟ್ಟಿಸಿ ನೋಡಿದ. ಹಿಂದಿನಿಂದ ಚೆನ್ನಾಗಿಯೇ ಕಾಣಿಸುತ್ತಾಳೆ, ಕೂದಲು ಬೇರೆ ಬಾಬ್ ಮಾಡಿದ್ದಾಳೆ. ಛೆ! ಚೆನ್ನಾಗಿ ಕಾಣಿಸುವುದಿಲ್ಲ. ಉದ್ದಕ್ಕೇ ಬಿಡು ಎಂದು ಹೇಳಬೇಕು. ಈಗಲೇ ಬೇಡ, ಇನ್ನೊಂದೆರಡು ತಿಂಗಳಾಗಲಿ.
ಇವನ ಕನಸುಗಳನ್ನು ಝಾಡಿಸಿ ಒದ್ದಂತೆ ಪಕ್ಕದಲ್ಲಿ ಧೂಳನ್ನು ರಾಚುತ್ತಾ ಇವನನ್ನು ಸವರಿಕೊಂಡೇ ಹೋಯಿತು ಒಂದು ಆಟೋ. ಪಕ್ಕಕ್ಕೆ ಬಂದು ಜೋರಾಗೇ ಶಪಿಸಿದ. ” ಥೂ ಹಲ್ಕಾಗಳು, ಈ ಬಳ್ಳಾರಿ ಆಟೋ ಡ್ರೈವರುಗಳು. ಈ ರೋಡಿಗೆ ಬರೀ ಸೈಕಲ್ ರಿಕ್ಷಾಗಳನ್ನು ಮಾತ್ರ ಓಡಿಸಿಕೊಂಡಿರಬೇಕು. ಯಾರದಾದ್ರೂ ಪ್ರಾಣ ತೆಗೆಯುವ ತನಕ ಇವರಿಗೆ ಸಮಾಧಾನವಿರುವುದಿಲ್ಲ”
ಆಟೋ ಮುಂದೆ ಹೋಗಿ ಸುಗುಣಳ ಮುಂದೆ ನಿಂತಿತು. ಆಟೋದಲ್ಲಿದ್ದಾತ ಹೊರಗೆ ಇಳಿದು ಬರುತ್ತಿದ್ದಾಗ ಜೋಷಿಯೂ ಸುಗುಣಳನ್ನು ಮಾತನಾಡಿಸಬಲ್ಲಷ್ಟು ಸಮೀಪಕ್ಕೆ ಬಂದಿದ್ದ.
” ಹಾಯ್” ಎಂದಳು.
” ಹಾಯ್: ಜೋಷಿ ಮತ್ತು ಆಟೋದಿಂದ ಇಳಿದವ ಒಟ್ಟಿಗೇ ಹೇಳಿದರು.
” ಓ, ಹಾಯ್, ಡಾ. ಜೋಷಿ” ಒತ್ತು ಡಾಕ್ಟರ್ ಮೇಲೆ ಇತ್ತೋ ಜೋಷಿಯ ಮೇಲೆ ಇತ್ತೋ ಅರ್ಥವಾಗಲಿಲ್ಲ. ಮೊದಲ ಹಾಯ್ ತನಗಲ್ಲವೆಂದು ಅರ್ಥವಾಗಿತ್ತು. ಹಾಗೆಯೇ, ಇನ್ನೂ ಏನೋ ಅರ್ಥವಾಗಲು ಪ್ರಾರಂಭವಾಗಿತ್ತು.
” ಸುದೀ, ಏನು ಲೇಟಾಯ್ತಾ, ಬೈ ದಿ ವೇ, ಇದು ಜೋಷಿ, ನಮ್ಮ ಸೀನಿಯರ್. ಈಗ ರೀಸೆಂಟಾಗಿ ಡಾಕ್ಟರಾಗಿದಾರೆ. ಜೋಷಿ, ಇದು ಸುದೇಶ್, ಯಾರು ಅಂತ ಹೇಳ್ಬೇಕಿಲ್ಲ ಅಲ್ಲವೇ. ಇರಲಿ ನನಗೆ ಹೇಳೋಕೇ ಒಂದು ಥರ ಖುಷಿ. ಇವರು ನನ್ನ ಫಿಯಾನ್ಸೆ. ಮೊನ್ನೆ ಎಂಗೇಜ್ಮೆಂಟ್ ಆಯಿತು. ಇವರೂನು ಮಾಮೂಲಿ ಎಲ್ಲ ಬೆಂಗಳೂರು ಹುಡುಗರ ತರ ಸಾಫ್ಟ್‌ವೇರ್ ಮಾಡ್ತಾರೆ. ಆದರೆ ಇವರದೇನಪ್ಪ ವಿಶೇಷ ಅಂದರೆ ಬೆಂಗಳೂರಲ್ಲೆ ಇರ್ತಾರೆ. ಆಗಾಗ ಹೊರಗೆ ಹಾರಿ ಹೋಗಿ ಬರಬಹುದಂತೆ. ನನಗೂ ಅದೇ ಇಷ್ಟ. ಮುಂದಿನ ತಿಂಗಳು ಮದುವೆ. ಕಾರ್ಡ್ ಕೊಡ್ತೀನಿ. ಖಂಡಿತಾ ಬರಬೇಕು. ನೀವೇನಪ್ಪ, ಈಗ ದೊಡ್ಡ ಡಾಕ್ಟರು. ನಾನಂತು ಎಂಡೀ ಗಿಂಡೀ ಮಾಡೋದಿಲ್ಲಪ್ಪ. ಮನೆ ಮುಂದೆ ಒಂದು ಅಂಗಡಿ ಹಾಕ್ತೀನಿ, ಈ ಎಂಬಿಬಿಎಸ್ಸ್ ಒಂದು ಪಾಸಾದ್ರೆ. ವ್ಯಾಪಾರಾ ಆದ್ರೆ ಆಗ್ಲಿ, ಇಲ್ಲದಿದ್ದರೆ ಇಲ್ಲ” ಎಂದು ಬಡಬಡನೆ ಹೇಳಿ ಈ ಹೊಸ ಸುದೇಶ ಜೀವಿಯ ಕಡೆ ನೋಡಿ ಕಿಲಕಿಲ ನಕ್ಕಳು.
ಆ ಕಂದು ಮುಖದಲ್ಲಿ ನಿಜವಾದ ಕೆಂಪು ಇಂದು ಕಂಡಿತು, ಜೋಷಿಗೆ.” ಕಂಗ್ರಾಟ್ಸ್……. ಇಲ್ಲೇ ಬಂದಿದ್ದೆ….. ಕಂಗ್ರಾಟ್ಸ್ ಸುದೇಶ್…. ಖಂಡಿತಾ ಬರ್ತೀನಿ ಮದುವೆಗೆ…. ಈಗ ಬರಲಾ…. ಯು ಹ್ಯಾವ್ ಅ ಗುಡ್ ಟೈಂ….. ಇರಲಾಗದೆ ತೊದಲಿ ತಿರುಗಿ ಬಂದಿದ್ದ.
*
*
*
ಮೊದಲನೆಯ ದಿನ ನೈಟ್ ಡ್ಯೂಟಿ ಜೋಷಿಗೆ. ಮುಬಾರಕ್ ಟಾಕೀಸಿನ ಮುಂದೆ ಯಾರಿಗೋ ಚೂರಿ ಹಾಕಿದ್ದಾರಂತೆ. ಆಸ್ಪತ್ರೆ ತುಂಬಾ ಜನ. ಮೈ ಕೈ ಕುಲುಕಿಸುತ್ತಾ ರುದ್ರಮ್ಮ ಜೋಷಿಗೆ ” ಬರ್ರೀ ಡಾಕ್ಟರ, ಇನ್ನ ಮತ್ತ ಇಂತ ಛಾನ್ಸ ಸಿಗ್ತದಾ ಇಲ್ಲ. ಬೇಕಾದಷ್ಟು ಸೂಚರ್ ಕೇಸ್ ಐತಿ. ನಿಮ್ಮ ಪೀಜಿ ಓಟಿಗೆ ಹೋಗ್ಯಾರೆ. ನಿಮಗೆ ಸೂಚರ ಸುರು ಮಾಡ್ಕೋ ಅಂತ ಹೇಳ್ಯಾರ. ಲಗೂಲಗೂನ ಮಾಡ್ರಲ. ಮತ್ತಿನ್ನೆಷ್ಟು ಬರ್ತಾವೋ ಏನೋ. ಈ ಜನಾಕ, ಉಂಬಾಕಿಲ್ಲ, ತಿಂಬಾಕಿಲ್ಲ. ಚಚ್ಕೊಂಡು ಸಾಯ್ತಾವ. ಅಸ್ಸಲು ಬುದ್ಧಿ ಇಲ್ಲ” ಆಕೆಯ ಹೊಟ್ಟೆಹೊಕ್ಕುಳುಗಳು ಈಗ ಸಹ್ಯವಾದಂತೆನಿಸುತ್ತದೆ. ” ಎಲ್ಲಾ ರೆಡಿ ಮಾಡ್ರಿ ಸಿಸ್ಟರ್, ಒಂದು ಟೀ ಕುಡಿದು ಬರ್ತೀನಿ” ಎಂದು ಕ್ಯಾಂಟೀನಿಗೆ ಬಂದು ಒಂದು ಸಿಂಗಲ್ ಟೀ ಹೇಳಿ ಜೊತೆಗೆ ಐಟಿಸಿ ಹಚ್ಚುತ್ತಾನೆ.
‘ಕನ್ನಡಪ್ರಭ’ – ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ಕತೆ ಜೂನ್ ೨೯, ೨೦೦೧
*****
೦೮-೧೨-೨೦೦೫
ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ