ಕಳೆದ ಎರಡು ದಶಕಗಳಲ್ಲಿ ಕನ್ನಡದ ಸಣ್ಣ ಕಥೆಗಳಲ್ಲಿ ನಡೆದಿರುವಷ್ಟು ಮೋಸ ಪ್ರಯೋಗಗಳು, ಉಳಿದ ಸಾಹಿತ್ಯ ಪ್ರಕಾರಗಳಲ್ಲಿ ನಡೆದಿಲ್ಲ. ನಾಡಿನ ವಿವಿಧ ಪ್ರದೇಶಗಳ ಆಡುನುಡಿ, ಬದುಕಿನ ವಿಧಾನ, ನಮ್ಮ ಕಾಲಕ್ಕೇ ವಿಶಿಷ್ಟವಾದ ಜಾಗತಿಕ ಸನ್ನಿವೇಶಗಳು ಜನರ ಬದುಕನ್ನು ತಿದ್ದುತ್ತಿರುವ ರೀತಿ ಇತ್ಯಾದಿಗಳೆಲ್ಲ ಕಥೆಗಳ ಲೋಕಕ್ಕೆ ಸೇರಿಕೊಂಡು ಕನ್ನಡದ ಸಣ್ಣ ಕಥೆಗಳು ಶ್ರೀಮಂತವಾಗಿವೆ. ಇಂದು ಕನ್ನಡದಲ್ಲಿ ಬರೆಯುತ್ತಿರುವ ಕಥೆಗಾರರು ಸಮಾನ್ಯವಾಗಿ ಉತ್ತರ ಕರ್ನಾಟಕದ ಪ್ರದೇಶದವರು. ಹಿಂದುಳಿದ ಪ್ರದೇಶಗಳು ಎಂದು ಗುರುತಿಸಲಾಗುವ ಜಿಲ್ಲೆಗಳಿಂದ ಬಂದವರು. ಇಂಗಿಲ್ಷ್ ಭಾಷೆಯ ನಿಕಟ ಪರಿಚಯವಿಲ್ಲದೆ, ತಮ್ಮ ಬದುಕಿನ ವಲಯದಿಂದಲೇ ಸ್ಪೂರ್ತಿ, ವಸ್ತು, ಕಥೆಗಾರಿಕೆಯ ಕಲೆಯನ್ನೂ ಕಂಡುಕೊಂಡವರು. ಹಿಂದುಳಿದ ಜಾತಿ ವರ್ಗ ಎಂದು ಗುರುತಿಸಲಾಗುವ ಸಮುದಾಯಕ್ಕೆ ಸೇರಿದವರು. ಹಾಗಾಗಿ ಇಂದಿನ ಕಥೆಗಾರರುಹೊಸ ಹೊಸ ಬಗೆಯ ನಿರೂಪಣೆಯ ಪ್ರಯೋಗಗಳಲ್ಲಿ ತೊಡಗಿದ್ದಾರೆ. ಸಣ್ಣಕಥೆಯ ಕಲಾತ್ಮಕತೆಯ ಹೊಸ ಆಯಾಮಗಳನ್ನು ಪರೀಕ್ಷಿಸುತ್ತಿದ್ದಾರೆ. ಅತ್ಯಂತ ಕುತೂಹಲಕರವಾದ ಕನ್ನಡ ಕಥೆಗಳ ಸನ್ನಿವೇಶವನ್ನು ಗಮನಿಸಿದರೆ ಯಾವ ಸಾಹಿತ್ಯಿಕ ಚಳುವಳಿಯೂ ಇಲ್ಲವಲ್ಲ ಎಂಬ ಹಳಹಳಿಕೆ ಎಷ್ಟು ವ್ಯರ್ಥ ಎನ್ನಿಸುತ್ತದೆ.
‘ಭಳಾರೆ ವಿಚಿತ್ರಂ’ ಇತ್ತೀಚಿಗೆ ಪ್ರಕಟವಾಗಿರುವ, ಓದುಗರು ಮತ್ತು ಇತರ ಕಸುಬುದಾರ ಕಥೆಗಾರರು ಈ ಇಬ್ಬರ ದೃಷ್ಟಿಗಳಿಂದಲೂ ಮುಖ್ಯವಾದ ಉತ್ತಮ ಕಥಾಸಂಕಲನ. ಓದುಗರಿಗಾಗಿ ಅಪೂರ್ವವಾದ ಅನುಭವದ ಲೋಕ ಇಲ್ಲಿನ ಕಥೆಗಳಲ್ಲಿ ಕಾದಿದೆ. ಈ ಸಂಕಲನದ ಮುಖ್ಯವಾದ ಕಥೆಗಳು “ಇವನ್ನು ಓದಿದ್ದು ಸಾರ್ಥಕ” ಎಂಬ ಭಾವವನ್ನು ಮೂಡಿಸುತ್ತವೆ. ಇತರ ಕಸುಬುದಾರ ಕಥೆಗಾರರು ನಿರೂಪಣೆಯ, ಕಥೆಕಟ್ಟುವ, ಕಥೆ ಹೇಳುವ ಇಲ್ಲಿನ ಪ್ರಯೋಗಗಳನ್ನು ಗಮನಿಸಿ ಇನ್ನಷ್ಟು ಬಗೆಯ ಕಥೆಗಾರಿಕೆಯ ಕಲೆಯನ್ನು ಬೆಳೆಸಬಹುದು. ನಮ್ಮಂತೆಯೇ ಕಥೆ ಓದಿ ಸಂತೋಷಪಡುವ ಗೆಳೆಯರಿಗೆ ಈ ಸಂಕಲನದ ಕಥೆಗಳನ್ನು ಓದಿ ಎಂದು ನಿಸ್ಸಂಕೋಚವಾಗಿ ಒತ್ತಾಯಿಸಿ ಹೇಳಬಹುದು.
ಕುಂ.ವಿ. ‘ಹೇಳುವುದು’ ಎಂಬ ಮಾತಿನ ಎಲ್ಲ ಅರ್ಥದಲ್ಲಿ ಕಥೆ ‘ಹೇಳುತ್ತಾರೆ’ ಇಲ್ಲಿನ ಕಥೆಗಳನ್ನು ಜೋರಾಗಿ ಬಾಯಿ ತುಂಬಾ ಹೇಳಿಕೊಳ್ಳಬಹುದು. ಗಟ್ಟಿಯಾಗಿ ಓದಿಸಿಕೊಳ್ಳುವ ಗುಣ ಇವೆ ಅವಕ್ಕೆ. ದನಿ ಎತ್ತರಿಸಿ, ಕುಗ್ಗಿಸಿ, ತಗ್ಗಿಸಿ, ಪಿಸುಗುಟ್ಟಿ, ಎಳೆದು, ದನಿಯ ಜೋರಿನೊಡನೆ ವೇಗವನ್ನು ಬೆರೆಸಿ, ಕಥೆಗಳನ್ನೆಲ್ಲಾ ವಾಚಿಕಾಭಿನಯ ಮಾಡಿಬಿಡಬಹುದು. ಈ ಕಥೆಗಳಲ್ಲಿ, ಪ್ರದರ್ಶಕ ಕಥೆಗಾರ ಎಲ್ಲೂ ಮರೆಯಾಗುವುದೇ ಇಲ್ಲ. ಹೇಳುವುದೇ ತೋತಿಸುವ ಕ್ರಮವೂ ಆಗಿದೆ ಇಲ್ಲಿನ ಕಥೆಗಳಲ್ಲಿ. ಇದು ಕನ್ನಡದ ಕಥೆಗಾರಿಕೆ ಪಡೆದುಕೊಂಡಿರುವ ಒಂದು ಹೊಸ ಶಕ್ತಿ.
ಇಲ್ಲಿನ ಕಥೆಗಳಲ್ಲಿ ವಾಸ್ತವ ಮತ್ತು ಅವಾಸ್ತವಗಳು ಸಂದು ಕಾಣದಂತೆ ಬೆರೆತುಬಿಡುತ್ತವೆ. ‘ಇವು ಕಥೆಗಳು ಮಾತ್ರ’ ಎಂಬ ಎಚ್ಚರ ಇಟ್ಟುಕೊಂಡೇ ಇರುವ ಈ ಕಥೆಗಳು ವಾಸ್ತವವನ್ನೇ ತೋರಬೇಕು ಎಂಬ ಹಠ ತೊಟ್ಟು ಹೇಳುವ ಕಥೆಗಳಿಗಿಂತ ಹೆಚ್ಚು ತೀಕ್ಷ್ಣವಾಗಿ ವಾಸ್ತವವನ್ನು ನಮಗೆ ಹೇಳುತ್ತವೆ. ದಿನ ನಿತ್ಯ ನೀವು ನಾನು ಮಾತಾಡಿದಂಥ ಅವಾಸ್ತವ ಭಾಷೆಯಲ್ಲಿಯೇ ದಿನನಿತ್ಯದ ವಾಸ್ತವದ ಕ್ರೌರ್ಯಗಳನ್ನು ಹೇಳಬಲ್ಲ ಬಗೆಯೊಂದನ್ನು ಈ ಕಥೆಗಳು ಸಾಧಿಸಿವೆ ಎನ್ನಿಸುತ್ತದೆ.
ಕಥೆಗಳಲ್ಲಿ ಬರುವ ವರ್ಣನೆಯ ಅಂಶವನ್ನೂ ಕಥೆಯ ಅಂಶವನ್ನೂ ಬೇರೆ ಬೇರೆ ಮಾಡಿ ನೋಡಲು ಸಾಧ್ಯವೇ ಇಲ್ಲ. ಹಾಗೆ ಮಾಡುವುದೆಂದರೆ ಬಣ್ಣವನ್ನೂ ಚಿತ್ರವನ್ನೂ ಬೇರೆ ಮಾಡುವ ವ್ಯರ್ಥ ಪ್ರಯತ್ನದಂತಾಗುತ್ತದೆ. ಕಥೆಯೇ ವರ್ಣನೆಯೋ ಅಥವಾ ವರ್ಣನೆಯೇ ಕಥೆಯೋ ಆಗಿಬಿಡುವ ಆಟ ಇಲ್ಲಿ ಕಾಣಸಿಗುತ್ತದೆ. ಪುಟ್ಟ ಮಗು ದೊಡ್ದವರ ಅಂಗಿಯನ್ನು ಹಾಕಿಕೊಂಡು ಅಡ್ಡಾಡುವಾಗ ಏಕಕಾಲದಲ್ಲಿ ಮಗುವೂ ಅಂಗಿಯನ್ನು ಹಾಕಿಕೊಳ್ಳುತ್ತಿದ್ದ ದೊಡ್ಡವನೂ ಬೇರೆಯದೇ ರೀತಿಯಲ್ಲಿ ಮನಸ್ಸಿಗೆ ಬರುವಂತೆ ಅಸಮಂಜಸವೆನ್ನಿಸುವ ಭಾಷೆ ಏಕಕಾಲದಲ್ಲಿ ನಮ್ಮ ಗಮನವನ್ನು ಬಳಕೆಯಾಗಿರುವ ಭಾಷೆಯ ಕಡೆಗೂ ಅದು ವರ್ಣಿಸುತ್ತಿರುವ ವಾಸ್ತವದೆಡೆಗೂ ಸೆಳೆದುಬಿಡುತ್ತದೆ.
ಕನ್ನಡದ ಕಥೆಗಳ ಕಾಮನಬಿಲ್ಲಿನಲ್ಲಿ ಈ ಬಗೆಯ ಕಥೆಗಳೇ ಒಂದು ಪ್ರತ್ಯೇಕ ಬಣ್ಣ. ಜಾನಪದ ಪಡಸಾಲೆಯಲ್ಲಿ ಚಿರಸ್ಥಾಯಿಯಾಗಿ ನಿಂತಿರುವ ಜನ ಇಲ್ಲಿದ್ದಾರೆ. ಸರಕಾರೀ ಮತ್ತು ನಾಗರಿಕ ಸವಲತ್ತುಗಳಿಂದ ದೂರವಿದ್ದು ದ್ವೀಪದಂತಿರುವ ಹಳ್ಳಿಗಳು ವರ್ತಮಾನಕ್ಕೆ ಭೀಕರ ಭಾಷ್ಯ ಬರೆಯುತ್ತ ಬದುಕಿರುವ ಕುಗ್ರಾಮಗಳಲ್ಲಿ ಕಥೆಯೊಳಗೊಂದು ಕಥೆ ಹುಡುಕುತ್ತಾ ತಮ್ಮ ಮೂಗಿನ ನೇರಕ್ಕೆ ಇತಿಹಾಸ ತಿರುಚುತ್ತ ತಮ್ಮ ಧೋತರದೊಳಗೆ ಸೊಂಡಿಲಿ ಹೊಕ್ಕಂತಾಗುತ್ತಿರುವ ಜನಗಳು ಇಲ್ಲಿದ್ದಾರೆ. ಈ ಬರವಣಿಗೆ ಚರಿತ್ರೆ-ವಾಸ್ತವದ ಹೊಸವ್ಯಾಖ್ಯಾನ ಮಾಡುವಂತಿದೆ. ಕಥೆಗಾಅರನಿಗೆ ವಾಸ್ತವವನ್ನು ಕಟ್ಟಿಕೊಡುವುದಕ್ಕಿಂತ ವಾಸ್ತವವನ್ನು ನೋಡುವ, ನೋಡಿದ್ದನ್ನು ಕಥೆ ಮಾಡುವ ಕುತೂಹಲ ಮುಖ್ಯವಾಗಿದೆ. ಹಾಗಾಗಿ ಕನ್ನಡ ಕಥೆಗಳ ಕಾಮನಬಿಲ್ಲಿನ ಒಂದು ತುದಿಯಲ್ಲಿ ತೇಜಸ್ವಿ, ದೇವನೂರು ಮಹಾದೇವರ ಕಥೆಗಳ ಬಣ್ಣವಿದ್ದರೆ ಇನ್ನೊಂದು ತುದಿಯಲ್ಲಿ ಕುಂವೀ ಬರವಣಿಗೆಯ ಬಣ್ಣ ಕಾಣುತ್ತದೆ.
*
*
*
ಈ ಬಗೆಯ ಬರೆವಣಿಗೆ ‘ಅಪಾಯಕಾರಿ’ ಬರೆವಣಿಗೆ. ನಮಗೆ ವಾಸ್ತವ ಗೊತ್ತಿಲ್ಲ. ವಾಸ್ತವದ ಬಗ್ಗೆ ಕೇವಲ ಅಭಿಪ್ರಾಯಗಳಿವೆ. ನಮಗೆ ವಾಸ್ತವವನ್ನು ನೋಡುವ ಆಸಕ್ತಿಯೂ ಇಲ್ಲ. ಯಾಕೆಂದರೆ ನಮಗೆಲ್ಲ ಸುರಕ್ಷಿತವಾಗಿ, ಸುಭದ್ರವಾಗಿರುವ ಆಸೆಯೇ ಮುಖ್ಯವಾಗಿದೆ. ವಾಸ್ತವವನ್ನು ನೋಡುವುದಕ್ಕಿಂತ ಅದರ ಬಗ್ಗೆ ಅಭಿಪ್ರಾಯಗಳನ್ನು ಇಟ್ಟುಕೊಂಡಿರುವುದು ಸುಲಭ ಮತ್ತು ಸುರಕ್ಷಿತ. ಸುರಕ್ಷಿತವಾಗಿ ಬದುಕು ಸಾಗಿಸುವುದೇ ಗುರಿಯಾಗಿರುವ ನನ್ನ, ನಿಮ್ಮಂಥ ಸುರಕ್ಷಿತ ಓದುಗರೂ ತಮ್ಮ ತಮ್ಮ ಸುಭದ್ರತೆಯ ಭಾವವನ್ನು ತಟ್ಟನೆ ಕಳಚಿಕೊಂಡು ಕೇವಲ ವ್ಯಕ್ತಿಗಳಾಗಿ ಅಪಾಯಕಾರಿ ವಾಸ್ತವವನ್ನು ಕಾಣುವಂತೆ ಮಾಡುವಂತೆ ಇಲ್ಲಿನ ಕಥೆಗಳು. ಇದು ಕಥೆಗಾರ ಬೆಳೆದ ರೀತಿಯೂ ಹೌದೆನ್ನಿಸುತ್ತದೆ. ಈ ಲೇಖಕರ ಮೊದಲ ಕಥೆಗಳಲ್ಲಿ ವಾಸ್ತವವನ್ನು ಕುರಿತ ಅಭಿಪ್ರಾಯಗಳು ಮುಖ್ಯವಾಗಿದ್ದವು. ಈಗ ನೋಡುವ ರೀತಿ, ಕಾಣಿಸುವ ರೀತಿ ಮುಖ್ಯವಾಗಿವೆ. ಇವರ ಆರಂಭದ ಬರವಣಿಗೆಯಲ್ಲಿ ಒಳ್ಳೆಯವರು, ಕೆಟ್ಟವರು ಇದ್ದರು. ಸರಿ ಮತ್ತು ತಪ್ಪುಗಳಿದ್ದವು. ವಾಸ್ತವವನ್ನು ಕುರಿತ ಖಚಿತ ಅಭಿಪ್ರಾಯವಿತ್ತು. ವಾಸ್ತವವನ್ನು ಬದಲಾಯಿಸುವ ಹಟವಿತ್ತು. ಈ ಸಂಕಲನ ಬರವಣಿಗೆಯಲ್ಲಿ ಕೆಟ್ಟವರು, ಕ್ರೂರಿಗಳು, ದುಷ್ಟರು ಇಲ್ಲ. ಕೆಟ್ಟತನ, ಕ್ರೌರ್ಯ, ದುಷ್ಟತನಗಳು ಇವೆ. ಅವೆಲ್ಲವನ್ನೂ ಅವು ಇರುವಂತೆಯೇ ನೋಡುವ ಪ್ರೀತಿ ಮತ್ತು ಧೈರ್ಯ ಇದೆ. ಮೌಲ್ಯವೆನ್ನುವುದು ನಿರ್ಧಾರಿತವಾದದ್ದಾಗದೆ ಕಥೆಯೊಳಗೇ ಮೂಡುವಂತಹದಾಗಿದೆ.
ಈ ಸಂಕಲನದ ಕಥೆಗಳಲ್ಲಿ ಅತ್ಯಂತ ಸಶಕ್ತವೆಂದು ನನಗೆ ಅನ್ನಿಸಿದ ರಚನೆಗಳೆಂದರೆ ‘ಹತ್ಯೆ’ ‘ಕುಬಸ’ ಮತ್ತು ‘ಕಥೆ ಹೇಳೋ ಕರಿಯಜ್ಜ’ ‘ಹತ್ಯೆ’ಯ ಕಥೆಯನ್ನು ಸಾರಾಂಶ ರೂಪದಲ್ಲಿ ಹೇಳಿದರೆ ಅದು ನವೋದಯ ಕಾಲದ ಅತಿ ಸಾಮಾನ್ಯವಾದ ದುಷ್ಟನೊಬ್ಬನ ಮನಃಪರಿವರ್ತನೆಯ ಕಥೆ ಅನ್ನಿಸಿಬಿಡಬಹುದು. ಆದರೆ ಅದೊಂದು ಅಸಾಮಾನ್ಯ ಕಥೆಯಾಗಿ ಇಲ್ಲಿ ರೂಪ ತಳೆದಿದೆ. ಬಹಳ ಸುಲಭವಾಗಿ ಭಾವುಕವಾಗಿಬಿಡಬಹುದಾದ ವಸ್ತುವನ್ನು ಭಾಷೆಯ ಸೂಕ್ಷ್ಮವೂ ಹರಿತವೂ ಆದ ಬಳಕೆಯಿಂದ ಕ್ರೌರ್ಯ ಮತ್ತು ಮಾನವೀಯತೆಯ ಇನ್ನೊಂದು ಹೆಸರಾದ ಪ್ರೀತಿ ಭಾವಗಳ ವಿವಿಧ ಮಗ್ಗುಲುಗಳ ಶೋಧವಾಗುವಂತೆ ಕಟ್ಟಿರುವುದು ಒಂದು ಅಂಶ. ಅತ್ಯುತ್ತಮ ಕಥೆಯಲ್ಲಿ ಕಾಣುವ ಭಾಷೆಯ ರೂಪಕ ಗುಣ ಮತ್ತು ಅದರಿಂದ ಅನಾವರಣಗೊಳ್ಳುವ ಪರಸ್ಪರ ವಿರುದ್ಧಾರ್ಥಗಳ ಮಂಡನೆ ಇನ್ನೊಂದು ಅಂಶ. ಕಥೆಯ ಹೆಸರಾದ ‘ಹತ್ಯೆ’ ಎಂಬುದು ಬಲರಾಮನ ಕಸುಬು, ಮತ್ತು ಬಲರಾಮನೊಳಗಿರುವ ಕ್ರೌರ್ಯದ ಹತ್ಯೆ ಎರಡನ್ನೂ ಸೂಚಿಸುತ್ತದೆ. ‘ಕೆಂಪು ರಟ್ಟಿನ ಪುಸ್ತಕ’ ಓದುತ್ತ ಕುಳಿತಿರಬಹುದಾದ ದುಡಿಯುವವರ ಶೋಷಿತರ ಆಶೋತ್ತರವಾಗಿರುವ’ ಭಾಷೆಗೆ ಆಯುಧದ ಸ್ವರೂಪ ಕೊಡುತ್ತಿರಬಹುದಾದ ಚಂದ್ರಣ್ಣನ ಮನೆಯ ಹೆಣ್ಣುಗಳು ಜಮೀನ್ದಾರ ನಾಯ್ಡು ತಾನು ಮಾಡಬೇಕಾದ ಹತ್ಯೆಗಳ ‘ಆಯುಧ’ವನ್ನಾಗಿ ರೂಪಿಸಿರುವ ಬಲರಾಮನ ವ್ಯಕ್ತಿತ್ವವೇ ಆಗಿಬಿಟ್ಟಿರುವ ಕ್ರೌರ್ಯವನ್ನು ಹತ್ಯೆ ಮಾಡಿ ಮಾನವೀಯತೆಯ ಹುಟ್ಟಿಗೆ ಕಾರಣವಾದದ್ದನ್ನೂ ಸೂಚಿಸುತ್ತದೆ. ಹತ್ಯೆಯ ಆಯುಧವೇ ಆಗಿರುವ ಬಲರಾಮನೂ ಕೂಸಿನ ಹೆರಿಗೆಗೆ ಸೂಲಗಿತ್ತಿಯನ್ನು ಕರೆತರುವ, ಅವನ ಹತ್ಯೆಯ ಉಪಕರಣವೂ ಜನಿಸಿದ ಕೂಸಿನ ಹೊಕ್ಕುಳ ಬಳ್ಳಿ ಕತ್ತರಿಸುವ ಮಾನವೀಯತೆಯ ಹುಟ್ಟಿನ ಕಾರಣಗಳಾಗುವ ಅಚ್ಚರಿಯನ್ನೂ ಸೂಚಿಸುತ್ತದೆ. ಕಥೆಯ ಮಧ್ಯೆ ಬರುವ ‘ಹಣತೆಯೊಂದು ಇಡೀ ಸೂರ್ಯನನ್ನು’ ನುಂಗುತ್ತಿರುವಂತೆ ಭಾಸವಾಯಿತು’ ಎಂಬ ವಾಕ್ಯ ಇಡೀ ಕಥೆಯಲ್ಲಿ ಕತ್ತಲೆ ಮತ್ತು ಬೆಳಕು ಕ್ರೌರ್ಯ ಮತ್ತು ಪ್ರೀತಿಗಳ ರೂಪಕ ಮಾಲೆಯತ್ತ ಗಮನ ಸೆಳೆಯುತ್ತದೆ. ಕಥೆಯ ಕೊನೆಗೆ ಕಾಣಿಸಿಕೊಳ್ಳುವ, ಹತ್ಯೆಯಾಗಬೇಕಾಗಿದ್ದ ಮನುಷ್ಯ ಚಂದ್ರಣ್ಣ, ಅವನ ಮನೆತನದ ಹೆಸರು ಕಂದೀಲು, ಅವನ ಮನೆ ಕಪ್ಪು, ಕಥೆಯ ಮುಖ್ಯ ಭಾಗ ನಡೆಯುವುದು ಕತ್ತಲಲ್ಲಿ. ಕಥೆಯಿಂದ ಬಲರಾಮನ ಮನಸ್ಸಿನಲ್ಲಿ ಮೂಡುವುದು ಬೆಳಕು. ಕ್ರೌರ್ಯ, ಹಿಂಸೆ, ಕೊಲೆ, ಹತ್ಯೆ ಇತ್ಯಾದಿಗಳದ್ದೆಲ್ಲ ಅಪರಿಮಿತ ಕತ್ತಲ ಲೋಕದ ವಾಸ್ತವ. ಈ ಗಂಡು ಲೀಕದ ಪರಿವೆಯೇ ಇಲ್ಲದಂತೆ ಹುಚ್ಚು ಹಿಡಿದಂತಿರುವ ತಮ್ಮನಿಗಾಗಿ ಹಂಬಲಿಸುವ, ತಾಯ್ತನದ ಬೆಳಕನ್ನು ಜೋಪಾನವಾಗಿಟ್ಟುಕೊಂಡಿರುವ ಗೌರಮ್ಮ ಪುರುಷ ವಾಸ್ತವದಲ್ಲಿ ನಗಣ್ಯವಾಗಿರುವ ಪ್ರೀತಿಯ ಬೆಳಕನ್ನು ಬಲರಾಮನ ಮನಸ್ಸಿನಲ್ಲಿ ಮೂಡಿಸುವವಳು. “ಕಸ ಎಲ್ಲಿರುತ್ತದೇ ಅಲ್ಲಿ ಪೊರಕೆಯೂ ಇರುತ್ತದೆ” ಇಡೀ ಕಥೆಯಲ್ಲಿ ಬರುವ ಎಲ್ಲ ಹೆಣ್ಣುಗಳು, ಹೆಳವಳಾದ ಸೂಲಗಿತ್ತಿಯೂ ಸೇರಿ, ಬಲರಾಮನ ಮನಸ್ಸಿನಲ್ಲಿ ಅವಿತಿರುವ ತಾಯಿಯ ಕಲ್ಪನೆಯೂ ಸೇರಿ, ಹತ್ಯೆಯನ್ನು ಗುಡಿಸಿಹಾಕುವ, ಬೆಳಕನ್ನು ತರುವ ಪ್ರಬಲರಾಗಿ ಕಾಣುತ್ತಾರೆ. ವಾಸ್ತವದಲ್ಲಿ ಜಮೀನ್ದಾರನೂ, ಬಲರಾಮನ ಮನಸ್ಸಿನ ಒಡೆಯನೂ ಅವನನ್ನು ಆಯುಧದಂತೆ ಬಳಸಿಕೊಳ್ಳುವ ನಾಯ್ಡುವೂ ಅವನ ಅಧಿಕಾರವೂ ತೊಳೆದುಹೋಗಬೇಕಾದ ಕಸಗಳು, ಕಳೆದುಹೋಗಬೇಕಾದ ಕತ್ತಲು. ಇದನ್ನು ಕಥೆಗಾರ ಬಾಯಿ ಬಿಟ್ಟು ಹೇಳುವುದಿಲ್ಲ. ಕಥೆ ಓದುತ್ತ ನಮಗೆ ಅನ್ನಿಸುವ ಹಾಗೆ ಮಾಡುತ್ತಾರೆ. ಹತ್ಯೆಯ ಆಯುಧಕ್ಕೂ ಬಲರಾಮನಿಗೂ ಇರುವ ತಾದಾತ್ಮ್ಯ ಸಂಬಂಧವನ್ನು ಶಿವನ ಮತ್ತು ಶಿವನ ಪಿನಾಕಕ್ಕೆ ಲಗತ್ತಿಸುತ್ತಾ ಬಲರಾಮನೂ ಶಿವಣ್ಣನಾಗುವುದರ ವಿಚಿತ್ರವನ್ನು ಗಮನಿಸಿ ಅವಧೂತನಂತೆ, ಕಲಾವಿದನಂತೆ, ವೇದಾಂತಿಯಂತೆ, ಇರುವ ಬಲರಾಮ ನಿಜವೂ ತಮ್ಮನಾಗುವ ಅಕ್ಕನ ಅಕ್ಕರೆಯ ಮೂಲಕ ತಾಯಿಯ ಪ್ರೀತಿಯನ್ನು ತನ್ನೊಳಗೆ ಮೊಳೆಯಿಸಿಕೊಂಡು ಹುಟ್ಟಲಿರುವ ಮಗುವಿಗೆ ಜನನ ಸಹಾಯಕನಾಗುವ ಶಿವಣ್ಣ ನಿಜವೋ? ಕಥೆಯ ಕೊನೆ ಏನು ಹೇಳುತ್ತದೆ? ಊರಿನ ಹೆಸರು ಗುಣಸಾಗರ. ಬೆಳಕು ಕೊಡುವ ಕಂದೀಲು ಚಂದ್ರಣ್ಣ. ಕೊಲೆಯ ಮತ್ತು ತಣ್ಣನೆಯ ಬಲದ ಬಲರಾಮ. ಶಿವ, ಪಿನಾಕ, ಶಿವಣ್ಣ. ಚೂರಿಯ ಮೇಲೆ ಇರುವ ಹಣ್ಣಿನ ಪೊಟ್ಟಣಗಳು ಇಂಥ ವಿವರಗಳಿಂದ ಈ ಕಥೆಯನ್ನು ಒಳಿತು ಕೆಡಕುಗಳ, ಕತ್ತಲೆ, ಬೆಳಕಿನ, ಕ್ರೌರ್ಯ ಮತ್ತು ಪ್ರೀತಿಯ ಅನ್ಯೋಕ್ತಿಯಾಗಿ ಅಲಿಗರಿಯಾಗಿಸಬೇಕೆಂಬ ಹಂಬಲ ಕಥೆಗಾರನಿಗೆ ಇರುವುದು ತಿಳಿಯುತ್ತದೆ. ಪೂರ್ವ ನಿರ್ಧಾರಿತ ಧೋರಣೆಗಳನ್ನೇ ಕಥೆಯಾಗಿಸುವ ಧಾವಂತ ಇಂದಿನ ಬರಹಗಾಗರಲ್ಲಿ ಕಾಣಿಸುತ್ತಿರುವಾಗ ಭಾವಲೋಕದ ಅಲಿಗರಿಯನ್ನು ಸಮರ್ಥವಾಗಿ ಮೂಡಿಸುವ ಈ ಕಥೆ ಅಪರೂಪದ್ದಾಗಿ ಕಾಣುತ್ತದೆ.
‘ಹತ್ಯೆ’ಗಿಂತ ಬಹಳ ಬೇರೆ ರೀತಿಯದು ‘ಕಥೆ ಹೇಳೋ ಕರಿಯಜ್ಜ’ ನಾವು ಯಾವುದನ್ನು ವಾಸ್ತವ ಅನ್ನುತ್ತೇವೋ ಅದನ್ನು ಕಥೆಗೊಳಿಸಿಕೊಳ್ಳದೆ ಅರ್ಥಮಾಡಿಕೊಳ್ಳುವುದೇ ಅಸಾಧ್ಯವೋ ಏನೋ. ಇದು ಕಥೆಯನ್ನು ಹೇಳು ಎಂದು ಕಥೆಗಾರರನ್ನು ಆರ್ತವಾಗಿ ಬೇಡಿಕೊಳ್ಳುವ ಕಥೆಯೂ ಹೌದು. ‘ಹೇಳಿವ’ ಕಥೆಗಾರನ ವರ್ಣನೆ ಮತ್ತು ಕಥೆಯೂ ಹೌದು. ಕಥೆಗೂ ಕಥೆಗಾರನಿಗೂ ಅವನು ಹುಟ್ಟಿ ಬೆಳೆದ ವಾಸ್ತವ ಸಮಾಜಕ್ಕೂ, ಕಥೆಗಾರನಿಗೂ ಅವನ ನಿಕಟವರ್ತಿಗಳಿಗೂ ಇರುವ, ಇರಬಾರದ, ಇರಬೇಕಾದ ಸಂಬಂಧಗಳನ್ನು ಈ ಕಥೆ ಕೆದಕಿ ನೋಡುತ್ತದೆ. ಕಥೆಯ ಮೇಲೆ ಕಥೆಗಾರನಿಗೆ “ಅಧಿಕಾರ” ಇದೆಯೇ? ಕಥೆ ಮತ್ತು ಕಥೆಗಾರನ ಮೇಲೆ ಸಂಪತ್ತಿನ ಒಡೆಯರಿಗೆ “ಅಧಿಕಾರ” ಇದೆಯೇ? ಅಥವ ಕಥೆ ಮತ್ತು ಕಥೆಗಾರ ಗಾಳಿ, ನೀರು, ಬೆಳಕಿನಂತೆ ಯಾರ ಸ್ವತ್ತೂ ಆಗದೆ ಎಲ್ಲರಿಗೂ ಲಭ್ಯವಿರುವ, ಲಭ್ಯವಿರಬೇಕಾದ ವಾಸ್ತವವೋ? ಕಥೆಗಾರ ಕರಿಯಜ್ಜ ವಿಕಲಾಂಗ ಆದರೆ ವಾಸ್ತವವನ್ನು ಕಥೆ ಮಾಡಿ ಹೇಳಿ ಜನಕ್ಕೆ ವಾಸ್ತವ ಅರ್ಥವಾಗುವಂತೆ ಮಾಡಬಲ್ಲ. ಕೆಳಗೇರಿಯ ಜನ ಅವನ ಮಹತ್ವ ಬಲ್ಲವರು. ತಮ್ಮಲ್ಲಿ ಬದುಕುವ ಉತ್ಸಾಹ ತುಂಬಬಲ್ಲ ಕರಿಯಜ್ಜನನ್ನು ಅವರಾರೂ ಬಿಟ್ಟುಕೊಟ್ಟಿರಲಿಲ್ಲ. ತಾವು ಉಂಡರೆ ಉಣ್ಣು, ಉಪವಾಸ ಇದ್ದರೆ ಇರು. ಇಡೀ ಊರಿಗೆ ಒಂದು ಹೊಟ್ಟೆ ಭಾರವಾದೀತೇನು ಎಂದು ಅವನನ್ನು ಸಲಹುವರು. ಕರಿಯ ಹೇಳುವ ಕಥೆಗಳು ಊರಿನ ಜನ ತಮ್ಮ ಎಲ್ಲ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಪರಿಹರಿಸಿಕೊಳ್ಳಲು ಸಹಾಯ ಮಾಡುವ ಬೆಳಕು. ಅಷ್ಟೇ ಅಲ್ಲ ತನ್ನ ಹೆಂಡತಿಗೆ ‘ಸಂಭೋಗಕ್ಕಧಿಕವಾದ’ ಸುಖವನ್ನು ಕಥೆಗಳ ಮೂಲಕವೇ ನೀಡುತ್ತಿದ್ದ. ಕಥೆಗಳೇ ಅವನ ಮಕ್ಕಲು. ‘ಕಥೆಗಳನ್ನು ಮನದ ಕೊಟ್ಟಿಗೆಯ ಗೂಟಕ್ಕೆ ಕಟ್ಟಿ ಮೇವು ಹಾಕಿ ಬೆಳೆಸದ ದೊಡ್ಡ ಮನಸ್ಸಿನವನು’ ಅವನು. ಬೀದಿಯಲ್ಲಿ ಬೆಳೆದು ದೊಡ್ಡವರಾಗುವ ಮಕ್ಕಳಂತೆಯೇ ಅವನು ಹೇಳುವ ಕಥೆಗಳು ಊರ ಜನರ ಮನಸ್ಸಿನಲ್ಲಿ, ಬಾಯಲ್ಲಿ ಪರಿಪರಿಯಾಗಿ ಬೆಳೆದು ದೊಡ್ಡವಾಗುವುದನ್ನು ನೋಡಿ ಸಂತೋಷಿಸುವವನು. ಜನರ ಮನಸ್ಸಿನಲ್ಲಿ ತಾನೇ ಲೋಕಾಂತರ ಸಂಚಾರ ಮಾದುವ ಪಕ್ಷಿ,ಚತುಷ್ಟಾದಿ, ರಾಕ್ಷಸ ಇತ್ಯಾದಿ ಕಥೆಯಾದವನು. ಅವನೇ ಒಂದು ದಂತಕಥೆ. ಅವನೇ ಒಂದು ಇತಿಹಾಸ. ಇಂಥವನನ್ನು ಶಿವಪೂಜೆ ರುದ್ರೇಗೌಡ ಮಗನೆಂಬ ಸಂಬಂಧದ ಸರಪಳಿಯಲ್ಲಿ ಬಂಧಿಸಿ ತನ್ನ ಅಧೀನದಲ್ಲಿ ಇಟ್ಟುಕೊಂಡರೇನಾಗುತ್ತದೆ? ಕೆಳಗೇರಿಯ ಕರಿಯ ತನ್ನ ಕಥೆಗಳಿಂದಲೇ ಮೇಲು ಜಾತಿಯ ಅವನ ಅಧೀನನಾಗಿ, ಕಥೆಗಳ ಒಡೆತನ ಪಡೆದು ರುದ್ರೇಗೌಡ ಪೊಗದಿ ವಸೂಲಿಗೆ ತೊದಗಿ, ಜನಕ್ಕೆ ಕಥೆ ಸಿಗದೆ ಕರಿಯ ಕಥೆ ಹೇಳಲಾಗದೆ, ಕಥೆಗಳಿಗೆ ಹೊರದಾರಿ ಇರದೆ ಅಸಹನೀಯ ಮೌನದ ಕತ್ತಲು ದಂಗೆ ಏಳುತ್ತವೆ. ಸ್ವಾತಂತ್ರ್ಯ ಯಾರಿಗೆ ಬೇಕು ಕಥೆಗೋ ಕಥೆಗಾರನಿಗೋ? ಕಥೆಗಾರರನ್ನು ಕೊಂದು ಕಥೆ ಉಳಿದೀತೆ? ಕಥೆಗಾರನಿಲ್ಲದೆ ಸಮುದಾಯ ಇದ್ದೀತೆ? ಇತಿಹಾಸವೇ ಆಗಿರುವ ಕರಿಯಜ್ಜ ಸತ್ತು ಇತಿಹಾಸವೇ ಇಲ್ಲವಾಗುತ್ತದೆಯೋ? ಕಥೆಗಾರ ಕರಿಯಜ್ಜನ ಚಿತ್ರಣದಲ್ಲಿ ಕಥೆಗಳ ಬಂಡಾಯದ ಚಿತ್ರಣದಲ್ಲಿ ಅಪೂರ್ವನೆನಿಸುವ ಕಲ್ಪನಾವಿಲಾಸ ಕಾಣುತ್ತದೆ. ವಾಸ್ತವ ಮತ್ತು ಅವಾಸ್ತವಗಳ ನಡುವಿನ ಗಡಿರೇಖೆ ಅಳಿಸಿ ಹೋಗುತ್ತದೆ. ನಮ್ಮ ವಿಮರ್ಶೆಯೂ ಬದುಕಿನ ಧೋರಣೆಗಳೂ ಕೃತುಗಿಂತ ವ್ಯಕ್ತಿ ಮುಖ್ಯ ಎಂಬುದೇ ಆಗಿರುವಾಗ ಈ ಕಥೆ ಕಥೆಗಾರನಿಗಿಂತ ಕಥೆ ದೊಡ್ಡದು. ಮುಖ್ಯ ಅನ್ನುವುದು ಗಟ್ಟಿಯಾಗಿ ಹೇಳುತ್ತದೆ ಇಂಗ್ಲಿಷ್ ಭಾಷೆಯ ಆಥರ್ (ಲೇಖಕ) ಎಂಬ ಪದಕ್ಕೂ ಅಥಾರಿಟಿ (ಸ್ವಾಮಿತ್ವ) ಎಂಬ ಪದಕ್ಕೂ ನಿಕಟ ಸಂಬಂಧವಿದೆ. ಅಧುನಿಕ ಪೂರ್ವ ಕಾಲದಲ್ಲಿ ಬಹುಶ ಕೃತಿ ಮುಖ್ಯವಾಗಿತ್ತೇ ಹೊರತು ಕೃತಿಕಾರ ಮತ್ತು ಅವನ ಮೂಲಕ ಮೂಡಿದ ಕೃತಿಯ ಮೇಲಿನ ಅವನ ಅಧಿಕಾರ ಅಲ್ಲ. ರುದ್ರೇಗೌಡನ ಬದಲು ಇಂದಿನ ಸಮಾಜ ವ್ಯವಸ್ಥೆ ಪ್ರಶಸ್ತಿ, ಗೌರವಗಳ ಮೂಲಕ ಆಥರ್‌ನನ್ನು ಮುಖ್ಯವೆಂದು ಭಾವಿಸಿ ಕೃತಿಗಳ ಕತ್ತು ಹಿಸುಕುತ್ತದಲ್ಲವೆ? ಉತ್ತಮ ಕಥೆಗಾರನೊಬ್ಬನ ಆತ್ಮಕಥೆಯಂತಿದೆ ಇದು. ಕಥೆಗಾರ ಕರಿಯಜ್ಜ ಬದುಕುತ್ತಾನೋ ಇಲ್ಲವೋ, ಕಥೆಗಳು ಸ್ವತಂತ್ರ್ಯವಾಗುತ್ತವೋ ಇಲ್ಲವೋ, ಸಂದಿಗ್ಧದಲ್ಲೇ ಕಥೆ ಮುಗಿಯುತ್ತದೆ.
ಬಹು ದೊಡ್ಡದಾದ ಸಾದ್ಯಂತ ಸಂದಿಗ್ಧವಿರುವ ಕಥೆ ‘ಕುಬಸ’ ಬೆಳವಣಿಗೆ, ಪ್ರಗತಿ ಮತ್ತು ನಾಗರಿಕತೆಗಳು ಬದುಕಿನ ಎರಡು ಪರಸ್ಪರ ಹೊಂದಲಾರದ ವಿಭಿನ್ನ ಲಯಗಳ ನಡುವೆ ಘರ್ಷಣೆಗೆ, ಮತ್ತು ತೀವ್ರ ವೇದನೆಗೆ ಕಾರಣವಾಗುತ್ತದೆಂಬುದನ್ನು ನಾಟಕೀಯವಾಗಿ, ತೀವ್ರವಾಗಿ ಹೇಳುವ ಕಥೆ. ಯಾವ ಕಥೆ ಹೆಚ್ಚು ಯಾವ ಕಥೆ ಕಡಿಮೆ ಎಂಬಂತೆ ಎರಡು ಕಥೆಗಳನ್ನು ಹೋಲಿಸುವುದು ಸರಿಯಲ್ಲ. ಆದರೆ ನಾಗರಿಕತೆ ಮತ್ತು ಬೆಳವಣಿಗೆಯ ಕಲ್ಪನೆಗಳು ತಮ್ಮ ತಮ್ಮ ಪ್ರದೇಶಗಳ ಬದುಕಿನಲ್ಲಿ ತರುವ ಪಲ್ಲಟಗಳನ್ನು ವ್ಯಕ್ತಿಗಳ ಮನೋಲೋಕದಲ್ಲಿ ಆಗುವ ನೋವಿನ ಪದರಗಳನ್ನು ಹಿಡಿದಿಡುವ ಅನೇಕ ಕಥೆಗಳು ಕನ್ನಡದಲ್ಲಿ ಬಂದಿವೆ. ತೇಜಸ್ವಿ, ಅನಂತಮೂರ್ತಿ, ಶ್ರೀಕೃಷ್ಣ ಆಲನಹಳ್ಳಿ, ಮೊದಲಾದವರೆಲ್ಲ ಈ ವಸ್ತುವನ್ನು ಕುರಿತು ಕಥೆಗಳನ್ನು ಬರೆದಿದ್ದಾರೆ. ಆಧುನಿಕತೆಯ ಆರಾಧನೆ ಸ್ವೀಕಾರ, ಅಥವಾ ಹಳೆಯ ಬದುಕಿನ ಕ್ರಮದ ಬಗ್ಗೆ ಮೆಚ್ಚುಗೆ ಮತ್ತು ಅದು ಮತ್ತೆ ಮುಂದುವರಿಯುತ್ತಲೇ ಇರಲಿ ಎಂಬ ಹಂಬಲ ಇವುಗಳಲ್ಲಿ ಯಾವುದಾದರೊಂದು ನಿಲುವನ್ನು ನೆಚ್ಚಿಕೊಂಡರೆ ಕಥೆ ತೀರ ತೆಳುವಾಗುತ್ತದೆ. ಕನ್ನಡದ ಮುಖ್ಯ ಕಥೆಗಳು ಆಧುನಿಕತೆಯನ್ನು ಪ್ರಶ್ನಿಸಿದ್ದರೂ ಅದು ಅನಿವಾರ್ಯವೆಂದು ಒಪ್ಪಿಕೊಳ್ಳುವಂತೆ ಹಳತಿನ ಬಗ್ಗೆ ಮೆಚ್ಚುಗೆ ಇದ್ದರೂ ಅದು ನಾಶವಾಗಲೇಬೇಕಾದದ್ದು ಎಂಬಂತೆ ಚಿತ್ರಿಸುವುದುಂಟು. ಕುಂ. ವೀ. ಕಥೆ ಬೇರೊಂದು ಪರ್ಯಾಯವನ್ನು ಸೂಚಿಸುವಂತಿದೆ. ನನಗೆ ನೆನಪಿರುವ ಮಟ್ಟಿಗೆ ಕನ್ನಡದ ಲೇಖಕರು ಮಹಿಳೆಯನ್ನು ಕೇಂದ್ರವಾಗಿಟ್ಟುಕೊಂಡು ಆಧುನಿಕತೆಯ ಪ್ರಶ್ನೆಯನ್ನು ಕಥೆಗಳಲ್ಲಿ ನಿರ್ವಹಿಸಿದಂತಿಲ್ಲ. ಕಥೆಯ ಕುಬಸ ಸೂರ್ಯನ ಕುದುರೆಯಂಥದೇ ಒಂದು ರೂಪಕವಾಗಿ ಬೆಳೆಯುತ್ತದೆ. ಅದಕ್ಕೆ ಪ್ರತಿಯಾದ ರೂಪಕವಾಗಿ ಟ್ರೌಜರು ಇದೆ. ಸ್ವಾತಂತ್ರ್ಯೋತ್ತರ ಭಾರತದಲ್ಲೂ ಶಿಲಾಯುಗದ ಕಾಲದ ಎಲ್ಲ ಲಕ್ಷಣ ಸ್ವಭಾವಗಳನ್ನು ಉಳಿಸಿಕೊಂಡೇ ಬಂದಿರುವ ವಡ್ಡಟ್ಟೆ, ದುಸರಾ ಪ್ರಪಂಚವನ್ನೇ ನೋಡಿರದ ಅಕ್ಷರ ಕಂಡರೆ ನಡುಗಿ ಮಾರು ದೂರ ನಿಲ್ಲುವವ. ಭೂತಕಾಲದ ಉಕ್ಕಿನ ಸೆರೆ ಸೀಳಿಕೊಂಡು ವರ್ತಮಾನದ ಜಗಜಗಿಸುವ ರಂಗಭೂಮಿಯತ್ತ ಇಣುಕಿಯೂ ನೋಡದ ಜನರಲ್ಲಿ ಒಬ್ಬಳಾದ ಬಂಡೆವ್ವಜ್ಜಿ ಮತ್ತು ಅಂಥವರಲ್ಲೇ ಒಬ್ಬನಾದ ನೆಟ್ಟಕಲ್ಲ ಅಕ್ಷರ ಕಲಿತು ಹಿಂಗಾಲ ಕಸುವು, ಮುಂಗಾಲ ಕಸುವು, ಕಡಿಮೆಯಾಗಿ ಗೋರುಮೆಂಟು ನೋಕರಿ ಸೇರಿ, ಹೆಸರು, ಜೀವನ ಶೈಲಿ ಆರಾಧಿಸುವ ದೇವರನ್ನು ಬದಲಾಯಿಸಿಕೊಂಡು, ಹೆಂಡತಿ ಕಮಲಳ ವಶವರ್ತಿಯಾಗಿ, ತನ್ನಜ್ಜಿಯನ್ನು ನಗರದಲ್ಲಿ ಉಳಿಸಿಕೊಂಡು ತನ್ನಂತೆ ಮಾಡಲಾರದೆ ಮತ್ತೆ ವಡ್ಡಟ್ಟಿಗೇ ಬಿಟ್ಟುಬರುವುದು ಕಥೆ. ಏಕಕಾಲದಲ್ಲಿ ನೆಟ್ಟಕಲ್ಲ ವಡವಟ್ ಮತ್ತು ಬಂಡೆವ್ವರ ಕಥೆಯಾಗಿಯೂ, ಪ್ರಚೀನ ಮತ್ತು ಆಧುನಿಕ ನಾಗರೀಕತೆಯ ಕಥೆಯಾಗಿಯೂ ಬೆಳೆದಿದೆ. ಕಥೆಗಾರರು ಆಧುನಿಕ ಮತ್ತು ಪ್ರಾಚೀನತೆಗಳೆರಡನ್ನೂ ಸಮಾನ ಲೇವಡಿ- ವಿಮರ್ಶೆಗೆ ಒಳಪಡಿಸುತ್ತಾರೆ. ಉತ್ಪ್ರೇಕ್ಷಿತ ವಿಡಂಬನೆಯ ಹಿಂದೆ ಸೂಕ್ಷ್ಮವಾದ ಮೆಲುದನಿಯ ಬದುಕಿನ ವಿಭಿನ್ನ ಲಯಗಳು ತಮ್ಮಷ್ಟಕ್ಕೆ ತಾವು ಇರಬಲ್ಲಂಥ ವ್ಯವಸ್ಥೆಯೊಂದರ ಹಂಬಲ ಕಾಣುತ್ತದೆ. ಆದರೆ ವರ್ತಮಾನದ ವಾಸ್ತವದಲ್ಲಿ ಅದು ಅಸಾಧ್ಯ. ಬಂಡೆವ್ವ ತನ್ನೂರಿಗೆ ಹಿಂದಿರುಗಿದರೂ ಆ ಊರು ಕೂಡ ನಗರದಂತೆಯೇ ಆಗುವ ಸನ್ನಾಹದಲ್ಲಿದೆ. ಇರುವ ಒಂದು ಸಾಧ್ಯತೆಯೆಂದರೆ ನೆಟ್ಟಕಲ್ಲನಂಥವರು ವಡವಟ್‌ರಂತೆ ಆದರೂ ಬಂಡೆವ್ವನಂಥವರನ್ನು ಅರ್ಥಮಾಡಿಕೊಂಡು ಗೌರವಿಸಿವ ಸಹಾನುಭೂತಿಯನ್ನು ಪಡೆದುಕೊಳ್ಳುವುದು. ಗತಕಾಲ ತನ್ನ ಪುರಾಣಕ್ಕೆ ಕಲ್ಪನೆಗಳ ಉಕ್ಕಿನ ತೆರೆಯ ಹಿಂದೆ ಉಳಿದಿದ್ದರೆ ಕಮಲ, ವಡವಟ್ ಮತ್ತು ನಗರದ ಕುಬಸ ತೊಡುವ ಮುದುಕಿಯರು ಆಧುನಿಕತೆ ಬೆಳೆಸಿರುವ ಪುರಾಣಗಳ ಕಲ್ಪನೆಗಳ ಉಕ್ಕಿನ ತೆರೆಯ ಹಿಂದೆ ನರಳುತ್ತಿರುವವರೇ ಅಲ್ಲವೇ? ಕಥೆ ಬಳಸಿಕೊಂಡಿರುವ ಉತ್ಪ್ರೇಕ್ಷೆಯ ಲಘುಧಾಟಿಯಿಂದ ಮೋಸ ಹೋಗದಿದ್ದರೆ ಅಕ್ಷರ, ಆಧುನಿಕತೆ, ಪರಿವರ್ತನೆ ತರುವ ವೈಯಕ್ತಿಕ ನೋವು ಇವುಗಳೆಲ್ಲ ಮನಸ್ಸನ್ನು ಗಾಢವಾಗಿ ತಟ್ಟುತ್ತವೆ.
ಇದುವರೆಗೆ ಚರ್ಚಿಸಿದ ಮೂರು ಕಥೆಗಳು ಸಮಕಾಲೀನ ಕನ್ನಡ ಕಥಾಲೋಕದ ಪ್ರಮುಖ ಕಥೆಗಳು ಎಂಬ ಬಗ್ಗೆ ನನಗೆ ಅನುಮಾನವಿಲ್ಲ. ಕಥೆಗಳ ಪಾತ್ರದ ಹೆಸರು, ಊರಿನ ಹೆಸರು, ಅವುಗಳ ವರ್ಣನೆಗೆ ಬಳಸುವ ಮಡಿಗಟ್ಟುಗಳನ್ನು ಗಮನಿಸಿದರೆ ಕಥೆಗಾರರು ಮನುಷ್ಯ ವ್ಯಕ್ತಿತ್ವದ ಕೆಲವು ಮಾದರಿಗಳನ್ನು ರೂಪಿಸುವಲ್ಲಿ ತೊಡಗಿರುವಂತೆ ಕಾಣುತ್ತದೆ. ಯುವಕರು ಇಲ್ಲಿನ ಕಥಾಲೋಕದ ಹಿನ್ನೆಲೆಗೆ ಸರಿದಿದ್ದಾರೆ. ಮಧ್ಯವಯಸ್ಕರು ಅಥವಾ ಮುದುಕ ಮುದುಕಿಯರ ಲೋಕ ಇದು. ಆದರೆ ಇವರನ್ನೆಲ್ಲ ಕಂಡು ಕಥೆ ಮಾಡಿ ಹೇಳುವ ಕಥೆಗಾರ ಹರೆಯದ ಹುಮ್ಮಸ್ಸನ್ನು, ವೀಕ್ಷಣೆಯ ಕುತೂಹಲವನ್ನು, ಕಂಡದ್ದನ್ನು ಕಥೆ ಮಾಡಿ ಹೇಳಬೇಕೆಂಬ ಉತ್ಸಾಹವನ್ನು ಉಳಿಸಿಕೊಂಡಿರುವ ನಿರೂಪಕ. ಕಲೆಗಾರ, ಕಥೆಗಾರರು ತಮ್ಮ ಭಾಷಾ ಶೈಲಿಯಲ್ಲಿ ಹೊಸತೇ ಒಂದು ಪಾಠವನ್ನು ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಅವರು ಬೆಳೆಸಿಕೊಳ್ಳುತ್ತಿರುವ ನಿರೂಪಣೆಯ ಭಾಷಾಶೈಲಿ ಸವಾರನ ಹತೋಟಿಗೆ ಸಿಗದ, ತನ್ನಿಚ್ಛೆ ಬಂದಂತೆ ವರ್ತಿಸುವ ಎಂದೂ ಪಳಗಲೊಲ್ಲದ ಅರಾಣ್ಯಾಶ್ವವಾಗದೆ ಕಥೆಗಾರರನ್ನೂ ಓದುಗರನ್ನೂ ಏಳುಸಮುದ್ರದಾಚೆಗೆ ದಿಗಂತದಾಚೆಗೆ ಒಯ್ಯಬಲ್ಲ ಕೀಲಿರುವ ಮಾಯಾ ಕುದುರೆಯಾಗಲಿ ಎಂದಷ್ಟೇ ಹಾರೈಸಬಹುದು.
*****