ಅಧ್ಯಕ್ಷರಾದ ಬಸಂತ್‌ಕುಮಾರ್ ಪಾಟೀಲ್ ಅವರೆ,
ತಮ್ಮ ಮರ್ಜಿ ಆಶಿಸಿ ಈ ಅರ್ಜಿ ಬರೆಯುತ್ತಿರುವೆ. ಇದೀಗ ಹೊಸದಾಗಿ ಸುಸಂಘಟಿತರಾಗಿರುವ ತಮ್ಮ ನಿರ್ಮಾಪಕರ ಸುದ್ದಿ-ಸಮಾಚಾರ ಈಗ ಎಲ್ಲೆಡೆ ಬಿಸಿಬಿಸಿ ಚರ್ಚೆಗೆ ಆಹಾರವಾಗಿದೆ. ಏಕೆಂದರೆ ಮುಂಚೆ ಚಿತ್ರ ನಿರ್ಮಿಸುವುದನ್ನೇ ಮರೆತ ಮಂದಿ ನಿರ್ಮಾಪಕರ ಸಂಘದಲ್ಲಿ ತುಂಬಿ ತುಳುಕಿದ್ದರು.
ಈಗ ಹಣವನ್ನು ಹುಣಿಸೇಬೀಜದಂತೆ ಖರ್ಚು ಮಾಡಬಲ್ಲ ಘಟಾನುಘಟಿಗಳು ನಿಮ್ಮ ಸಂಘದಲ್ಲಿದ್ದಾರೆ. ಪೈಪೋಟಿಯ ಮೇಲೆ ಚಿತ್ರ ತೆಗೆಯುತ್ತಿದ್ದಾರೆ ಒಬ್ಬರಿಗಿಂತ ಒಬ್ಬರು ಜೋರಾಗಿ. ಇಂಗ್ಲೆಂಡ್, ಅಮೆರಿಕಾ, ಹಾಂಗ್‌ಕಾಂಗ್ ಮುಂತಾದ ಕಡೆಯಲ್ಲೆಲ್ಲಾ ಕನ್ನಡ ಚಿತ್ರಗಳ ಚಿತ್ರೀಕರಣ ನಡೆದು ಎಲ್ಲೆಡೆ ಕನ್ನಡದ ಬಾವುಟ ಹಾರಾಡುತ್ತಿದೆ. ನಿಜಕ್ಕೂ ಇದು ಫೆಂಟಾಸ್ಟಿಕ್ ಎನ್ನಬಹುದಾದ ಬೆಳವಣಿಗೆ.
‘ಶಿಸ್ತಿಲ್ಲದ ಎಲ್ಲ ಯೋಜನೆಗಳೂ ‘ಸುಸ್ತಾಗಿ’ ಮಲಗುತ್ತವೆ ಎಂಬುದರಿತ ತಾವು ಪ್ರತಿ ಹೆಜ್ಜೆಯಲ್ಲೂ ಶಿಸ್ತನ್ನು ‘ಮಸ್ತಾಗಿ’ ತರಲು ಯತ್ನಿಸುತ್ತಿದೀರಿ.
ಅದಕ್ಕಾಗಿ ಮೊದಲು ನಿಮಗೆ ಸಾವಿರ ಪ್ರಮಾಣಗಳು ಕ್ಷಮಿಸಿ ಪ್ರಣಾಮಗಳು. ಈ ಸಾಹಿತ್ಯ ನೋಡಿ ನೀವು ನಮ್ಮ ತಾತ, ಮುತ್ತಾತ, ಕೋಲು ತಾತಂದಿರು ಮಹಾರಾಜರ ಆಸ್ಥಾನದಲ್ಲಿ ‘ಆಸ್ಥಾನ ಪಂಡಿತ’ರಾಗಿದ್ದರು ಎಂದು ತಪ್ಪು ತಿಳಿಬೇಡಿ. ಸತ್ಯವಾಗಿ ಹೇಳುತ್ತೇನೆ. ನನ್ನಾಣೆಗೂ – ನನ್ನ ಕಣ್ಣಾಣೆಗೂ – ನಮ್ಮ ವಂಶದಲ್ಲಿ ಯಾರೂ ಪರಾಕು-ಪಂಪನ್ನೊತ್ತುವ ಕೆಲಸಕ್ಕೆ ಕೈಹಾಕಿಲ್ಲ ಈವರೆಗೆ. ಆದರೆ, ಈಗ ನಾನು ನಿಮಗೆ ಅರ್ಜಿ ಬರೆದುಕೊಳ್ಳಲು ಮುಖ್ಯ ಕಾರಣ ಏನೆಂಬುದನ್ನು ಮುಂದೆ ಹೇಳುವಂಥವನಾಗುತ್ತೇನೆ. ಅದೇನು ಎಂಬುದು ಕೊಂಚ ಸಸ್ಪೆನ್ಸಿರಲಿ. ಈಚೆಗೆ ಈ ‘ಸಸ್ಪೆನ್ಸ್’ ಎಂಬ ಪದ ಮುಹೂರ್ತದಂದು ಪ್ರತಿ ನಿರ್ಮಾಪಕ ನಿರ್ದೇಶಕರಿಂದಲೂ ಹೇಳಲ್ಪಟ್ಟು ಜನಪ್ರಿಯವಾಗಿದೆ. ಇರಲಿ.
ನನ್ನ ಹೆಸರು ತಿಪ್ಪೇಶಿ. ಈಗ ಎಲ್ಲ ನನ್ನನ್ನು ಡಾಕ್ಟರ್ ತಿಪ್ಪೇಶಿ ಎಂದೇ ಕರೆಯುತ್ತಾರೆ. ಆದರೆ, ನಾನು ಎಂ.ಎ. ಓದಿ ಡಾಕ್ಟರೇಟ್ ಪಡೆದವನಲ್ಲ. ನಮ್ಮ ವಂಶಜರು ಅಳಲೆಕಾಯಿ ಪಂಡಿತರು. ನನಗಂತೂ ಮುಂಚಿನಿಂದ ಸೊಪ್ಪು, ಸದೆ, ಅಳಲೆಕಾಯಿ, ಮೆಣಸಿನಕಾಯಿ, ಸೀಬೆಕಾಯಿ, ಚಕ್ಕೋತ್ನಕಾಯಿ ತುಂಬ ಇಷ್ಟ. ಆದ್ದರಿಂದ ಹಾಗು ಹೀಗೂ ಆರ್ಯುರ್ವೇದ ಓದಿ ಡಾಕ್ಟರ್ ಎನಿಸಿಕೊಂಡಿರುವೆ. ನನಗೆ ಕಥೆ-ಕವನ ನಾಟಕ-ವಿಮರ್ಶೆ ಬರೆಯುವ ಹುಚ್ಚು ಮುಂಚಿನಿಂದ.
ಕಥೆ-ಕವನ ಬರೆದರೂ ಡಾ. ತಿಪ್ಪೇಶಿ ಎಂದೇ ಹಾಕುತ್ತಿದ್ದೆ. ಡಾಕ್ಟರ್ ಎಂಬುದನ್ನು ನೋಡಿಯೇ ನನ್ನ ಕಥೆ ಕವನಗಳು ಹಲವು ದೊಡ್ಡ ದೊಡ್ಡ ಪತ್ರಿಕೆಗಳಲ್ಲಿಯೂ ಅಚ್ಚಾಯಿತು. ಕೊನೆಗೊಮ್ಮೆ ಯಾರೋ ಹಾಳಾದವನು ಸಾಹಿತ್ಯ ವಲಯದವರಿಗೆ ನನ್ನ ಡಾಕ್ಟರೇಟ್ ಗುಟ್ಟು ರಟ್ಟುಮಾಡಿದ ನಂತರ ಡಾ. ಯು.ಆರ್. ಅನಂತಮೂರ್ತಿ, ಡಾ. ಕಂಬಾರ, ಡಾ. ಎಸ್.ಎಲ್. ಭೈರಪ್ಪ, ಡಾ. ಗಿರೀಶ್ ಕಾರ್ನಾಡ್, ಡಾ. ದಿವಸ್ಪತಿ ಹೆಗಡೆ, ಡಾ.ಸಿದ್ದಲಿಂಗಯ್ಯ ಮುಂತಾದವರೆಲ್ಲ ನನ್ನನ್ನು ದೂರವೇ ಇಟ್ಟರು.
ಆದರೆ, ಚಲನಚಿತ್ರರಂಗದವರು ನನ್ನ ಈ ಡಾಕ್ಟರ್ ಪದಕ್ಕೆ ತುಂಬ ಗೌರವ, ಮಹತ್ವ, ಮನ್ನಣೆ ನೀಡಿ ಚಿತ್ರಕ್ಕೆ ಸಾಹಿತ್ಯ, ಗೀತೆಗಳನ್ನು ರಚಿಸಲು ಆಹ್ವಾನಿಸಿದ್ದಾರೆ ಎಂಬುದು ತಮಗೂ ಗೊತ್ತಿರಬೇಕು. ಕೆಲವು ಹೊಸ ನಿರ್ಮಾಪಕ ನಿರ್ದೇಶಕರು ಸಂಗೀತ ನಿರ್ದೇಶನದ ಅವಕಾಶವೂ ನನಗೆ ನೀಡಿದ್ದಾರೆ. ನಾನು ಹಾಡುಗಳು ಬರೆದ ಚಿತ್ರಗಳಿಗೆ ಸಾಹಿತ್ಯ-ಸಂಗೀತ ಎಂದೇ ಟೈಟಲ್‌ಕಾರ್ಡ್‌ಗಳಲ್ಲಿ ಹಾಕಿಸಿಕೊಂಡು ಜಗತ್ ಪ್ರಸಿದ್ಧನಾಗಿರುವೆ.
ನಾನು ಸಾಹಿತ್ಯ ಎಂದು ಹಾಕಿಕೊಳ್ಳುವುದನ್ನು ಬರಗೂರು ರಾಮಚಂದ್ರಪ್ಪನವರು ಬಹಳಷ್ಟು ವೇದೆಕೆಗಳಲ್ಲಿ ನನ್ನ ಹೆಸರು ಹೇಳದೆ ಖಂಡಿಸಿದ್ದಾರೆ. ಎಷ್ಟೋ ಬಾರಿ ಆ ಸುದ್ದಿ ಓದಿ ಗೊಳೋ ಎಂದು ಅತ್ತಿದ್ದೇನೆ. ಆ ಸುದ್ದಿ ಅಚ್ಚು ಮಾಡಿದವರನ್ನು ಧಾರಾಳವಾಗಿ ಶಪಿಸಿದ್ದೇನೆ –
ಮಾನ್ಯರೆ,
ಈಗ ಬರುತ್ತಿರುವ ಚಿತ್ರ ಸಾಹಿತ್ಯ, ಎಲ್ಲಾ ಪದಗಳ ಮಿಶ್ರಣವಾಗಿ ಗೊಜ್ಜಾಗಿದೆ ಎಂದು ನಿಮಗನಿಸಿಲ್ಲವೇ? ಆದರೆ, ನನ್ನ ಸಾಹಿತ್ಯದ ಸಾಲುಗಳಲ್ಲಿ ಅಲ್ಲಿ ಇಲ್ಲಿ ಒಂದೊಂದು ಸಂಸ್ಕೃತ ಪದ ಗೂಳಿಯಂತೆ ನುಗ್ಗಬಹುದೆ ಹೊರತು ಕನ್ನಡಕ್ಕೆ ಮಾರಕವಾಗಿಲ್ಲ. ಬೇಕಾದರೆ ನಮ್ಮ ಮನೆಗೆ ಬಂದು ನೋಡಿ ಕುವೆಂಪು, ಬೇಂದ್ರೆ, ಪು.ತಿನ., ಕೆ.ಎಸ್.ನ., ಜಿ.ಎಸ್ಸೆಸ್, ನಿಸಾರ್ ಅಹಮ್ಮದ್ ಮುಂತಾದವರ ಎಲ್ಲ ಕವನ ಸಂಕಲನಗಳೂ ನನ್ನಲ್ಲಿವೆ. ಅದೆಲ್ಲವನ್ನೂ ಅಜೀರ್ಣವಾಗುವಷ್ಟು ಬಾರಿ ಓದಿ ಜೀರ್ಣಿಸಿಕೊಂಡಿರುವವನು ನಾನು. ಚಿತ್ರಕ್ಕೆ ಹಾಡು ಬರೆಯಲು ಕುಳಿತಾಗ ನನಗೆ ನೆನಪಿನ ಶಕ್ತಿ ಅಗಾಧವಾಗಿರುವುದರಿಂದ ಕೆಲವು ಹಾಡುಗಳಲ್ಲಿ ಅವರಿವರ ಸಾಲುಗಳು ನನಗೇ ತಿಳಿಯದಂತೆ ತೇಲಿ ಬಂದರೆ ಅದೊಂದು ತಪ್ಪೇ?
ಚಿ. ಉದಯಶಂಕರ್, ಕುರಾಸೀ, ಕಣಗಾಲ್ ಪ್ರಭಾಕರಶಾಸ್ತ್ರಿ, ವಿಜಯನಾರಸಿಂಹ ಮುಂತಾದವರ ಚಿತ್ರಗೀತೆಗಳ ಎಲ್ಲಾ ಕ್ಯಾಸೆಟ್ ನನ್ನ ಬಳಿ ಇದೆ. ಅವನ್ನೂ ನಾನು ಮೇಲಿಂದ ಮೇಲೆ ಕೇಳುವುದರಿಂದ ಕೆಲವು ಬಾರಿ ಆ ಟ್ಯೂನ್‌ಗಳು, ಸಾಲುಗಳು ನನ್ನನ್ನು ನಕ್ಷತ್ರಿಕನಂತೆ ಕಾಡಿ-ನನ್ನ ಲೇಖನಿಗೂ-ಸಂಗೀತ ನಿರ್ದೇಶನಕ್ಕೂ ಆಹಾರವಾದರೆ ಅದು ನನ್ನ ತಪ್ಪೇ?
ಹಾಗೆ ನೋಡಿದರೆ ನಾನಿನ್ನೂ ಬೂದಿ ಮುಚ್ಚಿದ ಕೆಂಡವೇ, ಥ್ರಿಲ್ಲರ್ ಮಂಜು ಸಹಾ ಕವಿಯಾಗಲು ಹೊರಟಿದ್ದಾರೆ ಎಂದಾಗ ನನ್ನಂತಹವರು ಎಲ್ಲಿಗೆ ಹೋಗಬೇಕು. ತಾವು ಈಗ ನಿರ್ಮಾಪಕರು ನಿರ್ಮಾಪಕರ ಸಂಘದ ಅಧ್ಯಕ್ಷರು ಅಷ್ಟೇ ಅಲ್ಲ ಹೀರೊ ಆಗಿ ಸೆಕೆಂಡ್ ಇನ್ನಿಂಗ್ಸ್‌ಗೆ ಸಿನಿ ಪೆವಿಲಿಯನ್ಗೆ ಇಳಿದಿರುವವರು. ಭಿನ್ನಮತೀಯ ನಿರ್ಮಾಪಕರನ್ನು ಒಂದೇ ಸೂರಿನಡಿ ಕಲೆ ಹಾಕಿರುವ ಧೀಮಂತರು. ಅಷ್ಟೇ ಅಲ್ಲ, ಭರ್ಜರಿ ಸ್ಟಾರ್ ಹೋಟೆಲನ್ನೂ ಪ್ರಾರಂಭಿಸಿರುವವರು.
ಅಂದ ಮೇಲೆ ನೀವೇ ಈಗ ಒಂದು ಪತ್ರಿಕೆ ಪ್ರಾರಂಭಿಸುವುದು ಕಷ್ಟವೇ? ದಯಮಾಡಿ ಪತ್ರಿಕೆ ಆರಂಭಿಸಿ. ಈ ತಿಪ್ಪೇಶಿಗೆ ನಿಮ್ಮ ಹೋಟೆಲ್‌ನಲ್ಲೇ ಒಂದು ಆಫೀಸ್ ಮಾಡಿಕೊಡಿ. ತಾವು ಕೃಪೆ ಮಾಡಿದಲ್ಲಿ ನಿಮ್ಮ ಸಂಘದ ಎಲ್ಲ ನಿರ್ಮಾಪಕರಿಗೂ ತುಂಬ ಕನ್ಸಷೆನ್ ರೇಟ್‌ನಲ್ಲಿ ಹಾಡುಗಳು ಬರೆದುಕೊಡುವೆ. ಟ್ಯೂನ್ ಕೊಟ್ಟರೂ ಸಾಕು, ಐದೇ ನಿಮಿಷದಲ್ಲಿ ಹಾಡು ಗೀಚಿ ಬಿಸುಡುವೆ. ನಿಮ್ಮ ನಿರ್ಮಾಪಕರ ಸಂಘದ ಪತ್ರಿಕೆಯಲ್ಲಿ ಬಿಸಿಬಿಸಿ ಹುರಿಗಾಳಿನಷ್ಟೇ ರೋಚಕವಾಗಿ ಬರೆಯುವೆ. ನನಗೆ ಎಲ್ಲ ಪ್ರೆಸ್‌ನಲ್ಲಿ ಕೆಲಸಮಾಡಿ ಅಭ್ಯಾಸವಿರುವುದರಿಂದ ಮ್ಯಾನೇಜ್‌ಮೆಂಟ್‌ನವರ ಮನೋಭಿರುಚಿಯನ್ನರಿತು ಅವರಿಗೆ ಪ್ರಿಯವಾಗುಂತೆ ಬರೆಯುವುದೂ ಗೊತ್ತು.
ನೀವು ಪತ್ರಿಕೆ ಆರಂಭಿಸಿದಲ್ಲಿ ನಿಮ್ಮ ಮೂಗಿನ ನೇರಕ್ಕೆ ಅನುಗುಣವಾಗಿ ಬರೆಯುವುದಲ್ಲದೆ ಅವನ್ನು ನಿರ್ಮಾಪಕರಿಗೆ ಓದಿ ಸೆನ್ಸಾರ್ ಮಾಡಿಸಿಕೊಂಡು ಅಚ್ಚಿಗೆ ಕಳಿಸುವೆ. ನೀವು ಯಾರೂ ಬೇಕಾದರೂ ಸಂಪಾದಕರಾಗಿ ನನ್ನ ಅಭ್ಯಂತರವಿಲ್ಲ. ನನಗೆ ಕೈ ತುಂಬ ಸಂಬಳ ಕೊಟ್ಟರಾಯಿತು. ಬರವಣಿಗೆ ವಿಮರ್ಶೆ ಒಮ್ಮೆ ಓದಿ ನೋಡಿ. ಅನಂತರ ಎಲ್ಲ ಹೀಗೆ ಬರೆಯಿರಿ ಎಂದು ನೀವೇ ಹೇಳುತ್ತೀರಿ.
ಡಾಕ್ಟರ್ ತಿಪ್ಪೇಶಿಯ ಈ ಕನಸು ನನಸು ಮಾಡಬಲ್ಲ ಏಕೈಕ ಧರ್ಮಪುರುಷ ತಾವೆ ಅದಕ್ಕೆ ತಮ್ಮ ‘ಮರ್ಜಿ’ ಆಶಿಸಿ ಈ ‘ಅರ್ಜಿ’ ಹಾಕಿರುವೆ ತಮ್ಮ ಅತ್ಯಂತ ವಿಧೇಯ
– ಡಾ. ತಿಪ್ಪೇಶಿ
ನಾನು ಮೊನ್ನೆ ಮನೆಯಿಂದ ಹೊರಟಾಗ ಎದುರಿಗೆ ಸಿಕ್ಕ ಡಾ. ತಿಪ್ಪೇಶಿ “ನಿಮಗೆ ಬಸಂತ್‌ಕುಮಾರ್ ಪಾಟೀಲರು ಚೆನ್ನಾಗಿ ಗೊತ್ತಲ್ಲವೇ?” ಎಂದ.
“ನಾನು ಇರುವುದು ಹನುಮಂತನಗರದಲ್ಲಿ. ಬಹು ಮುಂಚಿನಿಂದ ನನಗವರು ಪರಿಚಯ” ಎಂದೆ.
“ಹಾಗಿದ್ದರೆ ಈ ಅರ್ಜಿ ದಯಮಾಡಿ ಅವರಿಗೆ ತಲುಪಿಸಿ ನನ್ ಬಗ್ಗೆ ರೆಕಮೆಂಡ್ ಮಾಡಿ” ಎಂದು ಹೇಳಿ ಹೊರಟ.
ಓದಿದಾಗ ‘ನಗೆಯು ಬರುತಿದೆ ಹಾಡು’ ನೆನಪಾಯಿತು.
*****
(೧೪-೯-೨೦೦೧)