ಆರಿದ್ರಾ
ಆದ್ರೆ ಮಳೆ ಹೋದ್ರೆ ಬೆಳೆ ಎಂದು ಗಾದೆ ಹೇಳುತ್ತಲೇ ಬಂದ ಕೃಷ್ಣಯ್ಯ ಅರಲಗೋಡಿನಿಂದ. ಮಿರಗಿ ಮಳೆ ಬಿದ್ದುದು ಸಾಲದೆಂಬಂತೆ ಆರಿದ್ರಾ ಹೊಡೆಯಲಾರಂಭಿಸಿತ್ತು. ಹೊಲದಲ್ಲಿಯ ಕೆಲಸವನ್ನು ಮಾಡಲು ಅರಲಗೋಡಿನಿಂದ ಕೂಲಿಯಾಳುಗಳನ್ನು ಕರೆತರಬೇಕಾದರೆ ಸಾಕುಸಾಕಾಗಿ ಹೋಯಿತು. ಹೇರಂಬನ ಹೊಲದಲ್ಲಿ ಸಸಿ ನೆಡಬೇಕಿತ್ತು. ಗಣಪಯ್ಯ ನಾಟಿಯ ರಗಳೆ ಬೇಡವೆಂದು ಹೊಲಗಳಲ್ಲಿ ಬಿತ್ತಿದ್ದನಾದರೂ ಅಲ ಗುಡಿಸುವ ಕೆಲಸ ಉಳಿದಿತ್ತು. ಅಡಕೆ ತೋಟದಲ್ಲಿ ಖೊಟ್ಟೆ ಕಟ್ಟುವ ಕೆಲಸ ಬೇರೆ. ಕೃಷ್ಣಯ್ಯ ಎಲ್ಲ ಕೆಲಸ ತಾನೇ ಮಾಡುತ್ತೇನೆಂದು ಮುಂದೆ ಬಂದನಾದರೂ ಗಣಪಯ್ಯ ಆಳುಗಳನ್ನು ಕರೆತರುವ ವಿಚಾರ ಮಾಡಿದ.
ಸೀತಾಪರ್ವತದ ಸುತ್ತ ಶರಾವತಿ ಆಗಲೆ ತುಂಬಿಕೊಳ್ಳಲಾರಂಬಿಸಿದ್ದಳಾದರೂ ಅರಲಗೋಡಿಗೆ ಹೋಗುವ ಕಾಲುದಾರಿ ಅಷ್ಟಗಲ ನೀರಿನಿಂದ ಮುಕ್ತವಾಗಿತ್ತು. ಗುಡ್ಡದ ಹಿಂಬದಿಯ ಒಂದು ಪಾರ್ಶ್ವ ಮೇಲೆ ಉಬ್ಬಿಕೊಂಡು ಅರಳಗೋಡಿನ ಗುಡ್ಡಕ್ಕೆ ತಗುಲಿಕೊಂಡಿದ್ದರಿಂದ ನೀರು ಇನ್ನೂ ಐದು- ಆರಡಿ ಮೇಲೆ ಏರಬೇಕಾಗಿತ್ತು. ಇದೀಗ ಆ ಕಾಲುದಾರಿಯೊಂದೇ ಘಟ್ಟಿ ನೆಲವಾಗಿ ಅದರ ಎರಡೂ ಬದಿಗಳಲ್ಲಿ ನೀರು ಮಡುಗಟ್ಟಿ ನಿಂತಿತ್ತು. ಗಣಪಯ್ಯ ಇದೇ ಸಮಯವೆಂದು ಅರಲಗೋಡಿನಿಂದ ಕೂಲಿಯಾಳುಗಳನ್ನು ಕರೆತಂದು ಹೊಲ-ತೋಟಗಳ ಕೆಲಸ ಮಾಡಿಕೊಂಡ. ಏರುತ್ತಿರುವ ನೀರಿಗೆ ಹೆದರಿ ಹೊಸಮನೆಗೆ ಬರಲೊಪ್ಪದ ಆಳುಗಳನ್ನು ಒಪ್ಪಿಸಬೇಕಾದರೆ ಗಣಪಯ್ಯನಿಗೆ ಸಾಕುಬೇಕಾಯಿತು. ಕೂಲಿಯನ್ನು ಎಂಟಾಣೆಯಷ್ಟು ಹಿಚಿಸಿದಮೇಲೆಯೇ ಆಳುಗಳು ಕೆಲಸಕ್ಕೆ ಬಂದುದು.
ಹೊಲದಲ್ಲಿ ಅಲಗುಡಿಸಿ ಆಗುತ್ತಿದೆ ಎನ್ನುವಾಗ ಮುದುಕ ಹಾಸಿಗೆ ಹಿಡಿದವನು ಏಳಲಿಲ್ಲ. ದಮ್ಮು ದಿನದಿನಕ್ಕೆ ಹೆಚ್ಚುತ್ತ ಹೋಯಿತು. ಮುದುಕನಿಗೆ ಮೈ ಮೇಲೆ ಧಾತಿಲ್ಲ. ಆಗೊಮ್ಮೆ ಈಗೊಮ್ಮೆ ನರಳಿದ್ದಷ್ಟೇ ಕೇಳಿಸುತ್ತಿದೆ. ಪರಿಸ್ಠಿತಿ ವಿಷಮಿಸಿತು. ಕೃಷ್ಣಯ್ಯ ಅರಲಗೋಡಿಗೆ ಹೋಗಿ ಬಂದ. ಅಲ್ಲಿಯ ಪಂಡಿತರು ಕೊಟ್ಟ ಔಷಧಿ ಹಾಕಿ ನೋಡಿದರು. ಅದು ನಾಟಲಿಲ್ಲ. ಅರಿದ್ರಾ ಮಳೆಯ ಮೂರನೇ ಪಾದ ಸುರಿಯುತ್ತಾ ಇದ್ದಾಗ ಮುದುಕ ಕೊನೆಯುಸಿರೆಳೆದ.
ಸುದ್ದಿಯನ್ನು ಹೊರಗೆ ಹೇಳಿಕಳುಹಿಸಲೆಂದು ಜನ ಹುಡುಕಲು ಹೋದ ಕೃಷ್ಣಯ್ಯ ಅರ್ಧದಾರಿಗೆ ಹೋಗಿ ತಿರುಗಿ ಬಂದ. ಶರಾವತಿಯಲ್ಲಿ ನುಗ್ಗಿ ಬಂದ ಪ್ರವಾಹ ಸೀತಾಪರ್ವತದ ಸುತ್ತ ಘೇರಾಯಿಸಿಕೊಂಡು ನಿಂತಿತ್ತು.
ಮುದುಕನ ಅಂತ್ಯ ಕ್ರಿಯೆ ಸೀತಾಪರ್ವತದ ಗುಹೆಯ ಎದುರು ನಡೆಯಿತು. ಗಣಪಯ್ಯ ಹನಿ ಮಳೆಯಲ್ಲೇ ಚಿತೆಗೆ ಬೆಂಕಿ ಇಟ್ಟ. ಕೃಷ್ಣಯ್ಯ ಅಷ್ಟು ದೂರದಲ್ಲಿ ಕೈ ಕಟ್ಟಿಕೊಂಡು ನಿಂತಿದ್ದ. ಇವನ ಹಿಂದೆ ನಾಗವೇಣಿ. ಚಿತೆಗೆ ಬೆಂಕಿ ಹತ್ತಿಕೊಂಡಾಗ ಬಿಡುವುಕೊಟ್ಟ ಮಲೆ ಬೂದಿಯಾಗುವ ತನಕ ಬರಲಿಲ್ಲ. ಗುಹೆಯತ್ತ ಬೆನ್ನುಹಾಕಿ ಮೂವರೂ ಹೊರಟಾಗ ಮಳೆ ಮತ್ತೆ ಆರಂಭವಾಯಿತು.
ಮಲೆನಾಡಿಗೆ ಜಡತ್ವ ಕವಿದಂತಾಗಿತ್ತು. ಬೀಳುವ ಮಳೆ, ಬೀಸುವ ಗಾಳಿ, ಇವೆರಡೇ ಜೀವಂತವಾಗಿದ್ದು, ಉಳಿದುದೆಲ್ಲವೂ ಮೈ ಮುದುಡಿಕೊಂಡು, ಮಳೆಗಾಳಿಗೆಅಂಜಿ, ಸೀತಾಪರ್ವತದ ಮೇಲಿನ ಹೆಬ್ಬಂಡೆಗಳ ಹಾಗೆ ಬಿದ್ದಿತ್ತು. ಹೊಲಗಳಲ್ಲಿಯ ಸಸಿಗಳೆಲ್ಲ ನಿಂತ ನೀರಿನಲ್ಲಿ ಉಸಿರಾಡುತ್ತಿದ್ದವು. ನೀರು ಹೊಲದಿಂದ ಹೊಲಕ್ಕೆ ಹರಿದು ನದಿಗೆ ಸೇರುತ್ತಿತ್ತು. ಗೇಣುದ್ದ ಬೆಳೆದ ಸಸಿಗಳು ಗಾಳಿ-ನೀರಿನ ರಭಸಕ್ಕೆ ಥರಗುಟ್ಟಿ ನಡುಗುತ್ತಿದ್ದರೂ ಕೆಸರಿನಲ್ಲಿ ಹಸಿರು ಉಸಿರಾಡುತ್ತಿತ್ತು.
ಮಳೆಗಾಳಿಗೆ ಅಡಕೆತೋಟ ಪ್ರಥಮ ಬಲಿ. ಮಲೆಯ ಹನಿಗಳ ರಭಸವೆಲ್ಲ ಅಡಿಕೆ, ಬಾಳೇ ಗಿಡಗಳ ಮೇಲೆ. ಗಾಳಿ ಬೀಸಿದಾಗ ಮರಗಳು ತೊನೆದಾಡಿ ಹರಿದು ಬೀಳುವ ಗರಿಗಳು, ಮುರಿಯುವ ಮರಗಳು, ನೆಲವನ್ನಪ್ಪುವ ಎಲೆ, ಮೆಣಸಿನ ಬಳ್ಳಿಗಳು. ತೋಟದ ಹಳ್ಳಕ್ಕೆ ಹೊಸ ಹರೆಯ. ಬೇಸಿಗೆಯಲ್ಲಿ ನಿಟ್ಟುಸಿರಿಡುತ್ತಿದ್ದ ಹಳ್ಳ ಈಗ ಕೇಕೆ ಹಾಕುತ್ತಿದೆ. ರಾಶಿ ರಾಶಿ ನೀರನ್ನು ಒಯ್ದು ಶರಾವತಿಗೆ ಸುರಿಯುತ್ತಿದೆ ಹಳ್ಳ.
ಸೀತಾಪರ್ವತದ ಮೇಲಿನಿಂದಲೂ ನೀರು ಧಾರೆ ಧಾರೆಯಾಗಿ ಧುಮುಕುತ್ತಿದೆ, ಗಣಪಯ್ಯನ ಬಚ್ಚಲ ಮನೆಗೆ ಈಗ ಮನೆಯ ಹಂಚಿನ ನೀರೇ. ಗುಡ್ಡದ ಚಿಲುಮೆ ಈಗ ಸಣ್ಣ ಹಳ್ಳ. ಈ ಹಳ್ಳಕ್ಕೆ ಸೇರಿಕೊಂಡ ನೂರು ನೀರು ಧಾರೆಗಳು. ಈ ಎಲ್ಲ ನೀರು ನದಿಗೆ.
ಶರಾವತಿ ಕ್ಷಣ ಕ್ಷಣಕ್ಕೂ ಮೇಲೇರುತ್ತಿದೆ. ಹೊಳೆಯ ದಂಡೆಗೇನೆ ಅಂಟಿಕೊಂಡಿದ್ದ ಪರಮೇಶ್ವರಪ್ಪನ ಹೊಲ- ತೋಟಗಳಲ್ಲಿ ಈಗ ನೀರು ನಿಂತಿದೆ. ಹೇರಂಬನ ಹೊಲದಿಂದ ನೀರಿಗೆ ಹತ್ತು ಮಾರು ದೂರ. ನದಿ ಇನ್ನೂ ಏರಿದರೆ ಹೊಲದಲ್ಲಿಯ ನೀರು ಹೊಲದಲ್ಲೆ. ಇಲ್ಲಿಯ ನೀರೇ ಅತ್ತ ಹರಿಯುವುದರ ಬದಲು ಆ ನೀರೇ ಇಲ್ಲಿಗೆ ನುಗ್ಗಿದರೂ ನುಗ್ಗಿತೆ.
ಸೀತಾಪರ್ವತವನ್ನು ನೀರು ಆಕ್ರಮಿಸಿಕೊಂಡಿದೆ. ದೂರದಿಂದ ನೋಡಿದರೆ ಹೊಸಮನೆ ಒಂದು ನಡುಗಡ್ಡೆ. ಸಮುದ್ರದಲ್ಲಿಯ ಒಂದು ಚಿಕ್ಕ ಬಂಡೆ. ಹೊರಗಿನ ಯಾವ ಸಂಪರ್ಕವೂ ಇಲ್ಲದ ಜಲಾವೃತ ಪ್ರದೇಶ.
ಹೊಸ ಮನೆಯ ಪರಮೇಶ್ವರಯ್ಯನ ಹೊಲ ತೋಟಗಳು ಎಂದೋ ಪಾಳುಬಿದ್ದು ಈಗ ನೀರಪಾಲಾಗಿವೆ. ಪರಮೇಶ್ವರಯ್ಯ ಈತನ ಹುಟ್ಟಾಳು ಹಸಲರ ಹಾಲನ ಮನೆಗಳು ಮಳೆಯ ಆಘಾತಕ್ಕೆ ಕುಸಿದಿವೆ. ಹೇರಂಬನ ಮನೆಯೂ ಉಳಿದಿಲ್ಲ. ಹಸಲರ ಬೈರನ ಮನೆ ತೊಳೆದು ಹೋಗಿದೆ. ಅಲ್ಲಿ ಈಗ ಉಳಿದಿರುವುದೆಂದರೆ ಹೇರಂಬನ ಹೊಲ ತೋಟ. ಹಾಗು ಗಣಪಯ್ಯನ ಒಂದು ಮನೆ.
ಮನೆಯ ಹೊರಗಿನ ಒಂದು ಚಪ್ಪರ, ಒಂದು ಜಗುಲಿ, ಒಳಗೆ ಕಗ್ಗತ್ತಲ ಗವಿಯಂತಿರುವ ಎರಡು ಕೋಣೆಗಳು. ಒಂದು ಅಡಿಗೇಮನೆ. ಹಿಂಬದಿಯಲ್ಲಿರುವ ತೆರೆದ ಬಚ್ಚಲು ಕೊಟ್ಟಿಗೆ, ಸೌದೆಮನೆ. ಜಗುಲಿಯ ಮೇಲೆ ಗೋಡೆಗೆ ಒರಗಿ ಕುಳಿತ ಗಣಪಯ್ಯ. ಕಂಬಕ್ಕೆ ಮೈಯಾನಿಸಿ ಕುಳಿತಿರುವ ಕೃಷ್ಣಯ್ಯ. ಒಳ ಬರುತ್ತ ಹೊರ ಹೋಗುತ್ತ ಓಡಿಯಾಡುತ್ತಿರುವ ನಾಗವೇಣಿ. ಈ ಮೂವರೇ ಹೊಸಮನೆಯಲ್ಲಿ ಈಗ ಇರುವ ಜನ.
ಕೃಷ್ಣಯ್ಯ ಜಗುಲಿ ಬಿಟ್ಟು ಕೆಳಗಿಳಿದ. ಹಂಚಿನ ನೀರು ಮೈಮೇಲೆ ಬೀಳದಂತೆ ಜಗುಲಿಯ ಅಂಚಿನಲ್ಲೇ ನಡೆದು ಹೋಗಿ ಚಪ್ಪರದ ಆಚೆಗೆ ಬಾಯಲ್ಲಿಯ ತಾಂಬೂಲವನ್ನು ಪಿರ್ರನೆ ಉಗಿದ. ಅದು ನೀರಿನಲ್ಲಿ ಬೆರೆತು ಹರಿದು ಹೋಗುವುದನ್ನೇ ನೋಡಿ, ಕೆಳಗಿಳಿದ. ಮೌಂಚೆಯನ್ನು ಪಂಚೆಯ ಮೇಲೆಳೆದುಕೊಂಡು ಜಗುಲಿಯತ್ತ ಬಂದು ಮತ್ತೆ ಅದನ್ನೇರಿ, ಕಂಬಕ್ಕೆ ಬೆನ್ನುಹಚ್ಚಿ ಗಣಪಯ್ಯನತ್ತ ತಿರುಗಿದ.
“ಬಾವಯ್ಯ, ಹೊಸಮಳೆ ಯಾವಾಗ, ಈ ಭಾನುವಾರದಿಂದ ಅಲ್ವ”
“ಹೌದು ಆದ್ರೆ ಮಳೆ ಶುರುವಾಗಿ ಈವತ್ತಿಗೆ ಹನ್ನೊಂದು ದಿನ ಆಯ್ತಲ್ವ. ಈ ಭಾನುವಾರದಿಂದ ಪುನರ್ವಸು, ಅದೂ ಹೊಡೆಯುತ್ತೋ ಇಲ್ಲ ಬಿಡುತ್ತೋ ನೋಡಬೇಕು”
“ಅದು ಸ್ವಲ್ಪ ಬಿಡುವು ಕೊಡುತ್ತೋ ಏನೋಪ್ಪ, ಅಲ್ಲ ಹೀಗೆ ಮಳೆ ಹೊಡದ್ರೆ ಜನ ಬದುಕೋದು ಬೇಡ್ವ, ಹಗಲು, ರಾತ್ರಿ ಒಂದು ನಿಮಿಷ ಬಿಡುವು ಬೇಡ್ವ”
ಕೃಷ್ಣಯ್ಯ ಕಡ್ಡಿಯೊಂದನ್ನು ಬಾಯಿಗಿರಿಸಿ, ಹಲ್ಲುಗಳನ್ನು ಶುಚಿಮಾಡಿಕೊಳ್ತ ಅಂದ.
“ಮಳೆ ಇರಲಿ ಮಾರಾಯ, ಈಗ ನಿಂತಿರೊ ನೀರು ಇಳೀದಿದ್ರೆ ಏನು ಮಾಡೋದು ಹೇಳು. ನಾವೀಗ ಇಲ್ಲಿ ಸಿಕ್ಕಿ ಬಿದ್ದಿದ್ದೇವಲ್ಲ. ನಮಗೆ ಏನೋ ಆಯ್ತು, ಯಾರು ಗತಿ?”
“ನಮಗೆ ನಾವೇ ಗತಿ, ಒಂದು ದೋಣಿ ಮಾಡ್ಕೋಬೇಕು. ಇಲ್ಲ ಈಜಿಕೊಂಡು ಹೋಗಬೇಕು”
“ಏನು ಮಾಡೋದೋ”
ಗಣಪಯ್ಯ ತಲೆಯಮೇಲೆ ಕೈ ಹೊತ್ತು ಕುಳಿತ, ಆತ ತೀರ ಕಂಗಾಲಾಗಿದ್ದ. ಹೊರ ಜಗತ್ತಿನ ಸಂಪರ್ಕವೇ ಇಲ್ಲವಾಗಿದೆಯಲ್ಲ ಎಂಬ ವಿಚಾರ ಮನಸ್ಸಿನಲ್ಲಿ ಸುಳಿದು ಹೋದಾಗಲೆಲ್ಲ ಜೀವ ನಡಗುತ್ತಿತ್ತು. ನದಿಯಲ್ಲಿ ಏರಿದ ನೀರು ಇಂದಲ್ಲಾ ನಾಳೆ ಇಳಿಯಲೇ ಬೇಕು. ಇನ್ನು ನಾಲ್ಕೈದು ತಿಂಗಳುಗಳವರೆಗೆ ಬೇಕಾಗುವ ಸಾಮಗ್ರಿಯಂತೂ ಮನೆಯಲ್ಲಿದೆ. ಹೊಲ ತೋಟದ ಕೆಲಸಗಳೂ ಮುಗಿದಿವೆ. ಮುಂದಿನ ಸಣ್ಣ ಪುಟ್ಟ ಕೆಲಸಗಳನ್ನು ತಾವೇ ಮಾಡಬಹುದು. ಹೆದರಿಕೆ ಈ ಯಾವ ವಿಷಯದ ಬಗ್ಗೆಯೂ ಅಲ್ಲ. ನೀರು ಸುತ್ತ ನಿಂತು ಹೀಗೆ ಆವರಿಸಿಕೊಂಡಿದೆಯಲ್ಲ ಎಂಬ ಅಂಜಿಕೆ.
ಕಾಡು ಕಣಿವೆಯಲ್ಲಿ ನೀರು ನಿಂತ ಹಾಗೆಲ್ಲ ಪ್ರಾಣಿಗಳು ಸೀತಾಪರ್ವತದತ್ತ ಧಾವಿಸಿ ಬಂದಿವೆ. ಆತ್ಮರಕ್ಷಣೆಗಾಗಿ, ಮನೆಯ ಹಿಂಬದಿಯಲ್ಲಿ ನರಿ, ಜಿಂಕೆ ಕಾಡುಕುರಿಗಳು ನಿರ್ಭೀತಿಯಿಂದ ಓಡಾಡುತ್ತಿವೆ ಸೌದೇ ಮನೆಯಲ್ಲಿ ಹೆಬ್ಬಾವು ಬಂದು ಮಲಗಿತ್ತು. ಚಪ್ಪರದಲ್ಲೆಲ್ಲ ಮೊಲಗಳು ಕುಪ್ಪಳಿಸುತ್ತಿದ್ದವು. ಮೊನ್ನೆ ಹಿಂದಿನದಿನ ಕೊಟ್ಟಿಗೆಯಲ್ಲಿಯ ದನಕರುಗಳು ಇದ್ದಕ್ಕಿದ್ದ ಹಾಗೆಯೇ ಗಡಬಡಿಸಿ ಕೂಗಿಕೊಂಡವು. ಬೆಳಕು ಹರಿಯುತ್ತಿರುವಾಗ ಹುಲಿ ಕೂಗಿದುದನ್ನು ತಾನು ಕೇಳಿದೆ ಎಂದು ನಾಗವೇಣಿ ಹೇಳುತ್ತಿದ್ದಾಳೆ. ದನಗಳು ಬೆದರಿದ್ದು ನೋಡಿದರೆ ನಾಗವೇಣಿ ಹೇಳುವುದು ನಿಜವೇನೋ ಅನ್ನಿಸುತ್ತಿದೆ. ಹುಲಿ, ಚಿರತೆ, ಕಾಡುಕೋಣ, ಕಾಡುಹಂದಿಗಳು ಈ ಕಾಡಿನಲ್ಲಿ ಇಲ್ಲವೆಂದಲ್ಲ, ಇವೆ. ಆದರೆ ಇವು ಸ್ವೇಚ್ಚೆಯಾಗಿ ತಿರುಗಾಡಿಕೊಂಡಿದ್ದವು. ಈಗ ಹೆದರಿ ಬಂದು ಇಲ್ಲಿ ಸೇರಿಕೊಂಡಿರಲೂ ಸಾಕು. ತುಂಬಿಕೊಂಡ ನೀರಿಗೆ ಹೆದರಿ ಓಡಿಬಂದಿರುವ ಈ ದುಷ್ಟ ಪ್ರಾಣಿಗಳಿಂದ ತಾನೂ ಹೆದರಿಕೊಳ್ಳುವಂತಾಗಿದೆ.
“ಏನು ಮಾಡೋದು”
ಎಂದು ತಲೆಯ ಮೇಲೆ ಕೈ ಹೊತ್ತು ಕುಳಿತ ಗಣಪಯ್ಯನ ಮನಸ್ಸಿನಲ್ಲಿ ಹುಲಿ ಹೊಕ್ಕಿದ್ದರಿಂದ ಆತ ಕೃಷ್ಣಯ್ಯನತ್ತ ತಿರುಗಿದ-
“ಕೃಷ್ಣಯ್ಯ, ನಾಗು ಹುಲಿ ಕೂಗಿದ್ದನ್ನ ಕೇಳಿದ್ಲಂತೆ, ಗೊತ್ತಾ ನಿನಗೆ?”
“ಹೌದ? ಯಾವಾಗ”
“ಮುಂಜಾನೆ, ನಿನ್ನೆ ರಾತ್ರಿ ದನ ಕರು ಬೆದರಿ ಕೂಗಿಕೊಂಡಿದ್ದು ಹುಲೀನ ನೋಡಿಯೇ ಇರ ಬಹುದು”
“ಅದೇಕೋ ಹೊರಬಂದ ನಾಗವೇಣಿ ಹುಲಿ ಅಂದಾಕ್ಷಣ ನಿಂತಳು.” ಕೃಷ್ಣಯ್ಯನತ್ತ ತಿರುಗಿ ಅವಳೆಂದಳು,
“ಹೌದಾ ಕೃಷ್ಣಯ್ಯ, ಇಲ್ಲಿ ಒಂದು ಹುಲಿ ಇರುವುದಂತೂ ಖರೆ. ಬೆಳ್ಳಿಗೆ ನಾನು ಸ್ಪಷ್ಟವಾಗಿ ಕೇಳಿದೀನಿ”
“ಯಾವ ದಿಕ್ಕಿನಿಂದ ಬಂತು ಆ ಸದ್ದು”
“ಹಿಂಬದಿಯಿಂದ ಹಿಡಂಬಾವನದಲ್ಲಿ ಹುಲಿ ಇದೆಯಪ್ಪ. ಅರಲಗೋಡಿನ ಆಳುಗಳು ಅಲ್ಲೆಲ್ಲ ಒಂದು ಹುಲಿ ಓಡಾಡೋ ವಿಷಯ ಹೇಳಿದ್ರು, ಅದೇ ಹುಲಿ ಈಗ ನೀರು ತುಂಬಿಕೊಂಡ ಮೇಲೆ ಇಲ್ಲಿ ಬಂದು ಯಾಕೆ ಸೇರಿಕೊಂಡಿರಬಾರದು?”
“ಇರಬಹುದು ಬಾವಯ್ಯ, ನಾವು ಹುಷಾರಾಗಿರಬೇಕು. ನಮ್ ಕೊಟ್ಟಿಗೆಮೇಲೆ ಹುಲಿ ಕಣ್ಣು ಬಿದಿದೆ ಅಂದ್ರೆ, ಅಪಾಯ ಹತ್ತಿರದಲ್ಲೇ ಇದೆ ಅಂತ ಅರ್ಥ. ಈವತ್ತು ರಾತ್ರಿ ಕೊಟ್ಟಿಗೇ ಬಾಗಿಲನ್ನು ಭದ್ರವಾಗಿ ಹಾಕಬೇಕು”
“ಹೌದು”
“ಬಾವಯ್ಯ, ನಿಮ್ಮ ಹತ್ರ ಕೋವಿ ಇಲ್ವ?”
“ಇಲ್ಲ ಮಾರಾಯ, ಹೇರಂಬನತ್ರ ಇತ್ತು. ನಾನು ಇಟ್ಕೊಳ್ಳಲಿಲ್ಲ. ಈಗ ಅನ್ನಿಸ್ತಾಇದೆ, ಇದ್ರೆ ಆಗ್ತಿತ್ತು ಅಂತ”
“ಕೃಷ್ಣಯ್ಯ ನಿನಗೆ ಕೋವಿ ಹಾರಿಸಲಿಕ್ಕೆ ಬರುತ್ತ?”
ನಾಗವೇಣಿ ಪ್ರಶ್ನಿಸಿದಳು. ಹಿಂದೆಲ್ಲಾ ಕೃಷ್ಣಯ್ಯ ಕೋವಿ ಹಿಡುದುದನ್ನು ಅವಳು ಕಂಡಿರಲಿಲ್ಲ. ಇವನು ಈ ವಿದ್ಯೆಯನ್ನು ಯಾವಾಗ ಕಲಿತ?
“ನನಗಾ… ಮೊನ್ನೆ ಮೊನ್ನೆ ಕಲಿತೆ. ಪಡವಗೋಡ್ ಬಸಪ್ಪ ಕಲಿಸ್ದ. ಒಂದು ಹಂದೀನೂ ಹೊಡೆದುಕೊಟ್ಟೆ ಅವನಿಗೆ ಗುರುದಕ್ಷಿಣೆ ಅಂತ”
ನಾಗವೇಣಿ ನಕ್ಕಳು.
“ಕೋವಿ ಇದ್ದಿದ್ರೆ ನಾವು ಬಿಡ್ತಿರಲಿಲ್ಲ ಈ ಹುಲೀನ. ಆದ್ರು ನಾವು ಹುಷಾರಾಗಿ ಇರಬೇಕು.”
ಕೃಷ್ಣಯ್ಯ ಮತ್ತೂ ಒಂದು ಸಾರಿ ತನಗೇ ಎಂಬಂತೆ ಹೇಳಿಕೊಂಡ.
ರಾತ್ರಿ ಮಲಗುವಮುನ್ನ ಕೃಷ್ಣಯ್ಯನೇ ಹೋಗಿ ಕೊಟ್ಟಿಗೆಯ ಬಾಗಿಲು ಹಾಕಿ ಬಂದ. ಊಟ ಮುಗಿಸಿ ಗಣಪಯ್ಯ ಮಲಗಲು ಹೋಗಿ ಬಹಳ ಹೊತ್ತಾಗಿತ್ತು. ಚಿಮಣಿ ದೀಪ ಒಳಗೋಡೆಯ ಮೇಲೆ ಮಂಕಾಗಿ ಉರಿಯುತ್ತಿತ್ತು. ದೀಪದ ಕುಡಿಯ ಕಿರೀಟದಂತೆ ಕಪ್ಪು ಹೊಗೆ ಗಾಳಿಗೆ ಬಳುಕಾಡಿ ಕರಗಿ ಹೋಗುತ್ತಿತ್ತು. ದೀಪದ ಮೇಲಿನ ಗೋಡೆ ಅಷ್ಟುದ್ದಕ್ಕೂ ಕರ್ರಗಾಗಿ ನಿಂತಿತ್ತು. ಕೃಷ್ಣಯ್ಯ ಕಂಬಳಿ ಹಾಕಿಕೊಂಡು ಮಲಗುವ ಸಿದ್ದತೆ ಮಾಡುತ್ತಿದ್ದಾಗ ಒಳಗಿನ ಕೆಲಸ ಮುಗಿಸಿಕೊಂಡು ನಾಗವೇಣಿ ಹೊರಬಂದಳು.
“ಕೃಷ್ಣಯ್ಯ, ನಿದ್ದೆ ಬಂತೇನೋ?” ಎಂದು ಕೇಳಿದಳು.
“ಎಲ್ಲಿ ನಿದ್ದೆ ಬಿಡು…. ಕೆಲ್ಸೆಲ್ಲ ಆತ ನಿಂದು?”
“ಹೌದು…”
ಸೀರೆಯ ಸೆರಗಿಗೆ ಕೈಯೊರೆಸಿಕೊಂಡು ನಾಗವೇಣಿ ಒಳಗೆ ಬಂದಳು. ಗಂಡ ಗೊರಕೆ ಹೊಡೆಯುತ್ತಿದ್ದ. ಮತ್ತೆ ಹೊರಬಂದು ಹೊಸಲಮೇಲೆ ಕುಳಿತು ಎಲೆ ಅಡಕೆಯ ತಾಬಾಣ ಹತ್ತಿರ ಎಳೆದುಕೊಂಡಳು.
“ಕವಳ ಹಾಕಿಕೊಳ್ಳೋದಿಲ್ವ?”
“ಬೇಡ, ಕಣ್ಣು ಕೂರ್ತಿದೆ”
ಗೋಡೆಗೆ ಬೆನ್ನು ಹಚ್ಚಿಕುಳಿತ ಕೃಷ್ಣಯ್ಯ ಆಕಳಿಸಿದ.
ನಾಗವೇಣಿ ಅಡಕೆಯನ್ನು ಬಾಯೆಗೆಸೆದುಕೊಂಡು, ಎಲೆಯ ತೊಟ್ಟು ಮುರಿದು ಸುಣ್ಣ ಸವರುತ್ತ-
“ಈ ಮಳೆಗೇನು ರಾವು ಹಿಡಿದಿದೆ”
ಎಂದು ಉದ್ಗರಿಸಿದಳು. ಹೊರಗೆ ಮಳೆ ಜಿಯೋ ಎಂದು ಸುರಿಯುತ್ತಿತ್ತು. ಗಾಳಿಯೂ ಇತ್ತು ಜೊತೆಗೆ. ಆರಿದ್ರಾ ಮಳೆ ಬಿಡುವೇ ಕೊಟ್ಟಿರಲಿಲ್ಲ. ಮೃಗಶಿರಾ ಬಿದ್ದುದನ್ನು ನೋಡಿ ಆರಿದ್ರಾ ಬೀಳಲಾರದೆಂದು ಲೆಕ್ಕ ಹಾಕಿದ್ದಷ್ಟೇ ಆಯಿತು. ಆರಿದ್ರಾ ಮಾತ್ರ ಮೃಗಶಿರವನ್ನೂ ಮೀರಿಸುವಂತೆ ಬೀಳುತ್ತಿದೆ.
“ಮಳೆಗಾಲದಲ್ಲಿ ಮಳೆ ಬೀಳ್ದೆ ಇನ್ನೇನು ಬಿಸಿಲು ಬೀಳಬೇಕೆ….ಹೋಗ್ಲಿ ಬಿಡು ನೀರು ಇಲ್ಲಿವರೆಗೂ ಏರಿ ಹಳ್ಳಿ ಮುಳುಗದೇ ಇದ್ರೆ ಆಯ್ತು.
“ಏನಾಗುತ್ತೋ ಕೃಷ್ಣಯ್ಯ. ಸರಕಾರ ಜಮೀನು ಪರಿಹಾರ ಕೊಡದಿದ್ರೆ ಬೇಡ. ಮುಂದೆ ನೋಡಿಕೊಂಡರಾಯ್ತು. ಇಲ್ಲಿಂದ ಹೋಗಿಬಿಡೋಣ ಅಂದ್ರು ಇವರು ಕೇಳಲಿಲ್ಲ. ಮಾವ ಬೇರೆ ಹೊರಗೆಲ್ಲೂ ಹೋಗೋದು ಬೇಡ ಅಂದ್ರು. ನಾಲ್ಕು ತಿಂಗಳು ಹೋಗಿ ಊರಲ್ಲಿ ಇದ್ದಿದ್ರೆ ಅಪ್ಪ ಬೇಡ ಅಂತಿರಲಿಲ್ಲ. ಆಫಿಸಿಗೆ ಹೋಗಿ ಅವರಿವರನ್ನು ಕಂಡು ಜಮೀನು ಹಣ ಪಡೀಬಹುದಿತ್ತು. ಇವರದೇ ಹಠ ಇವರಿಗೆ. ಯಾರೋ ಈ ಹಳ್ಳಿ ಈ ವರ್ಷ ಮುಳುಗೋದಿಲ್ಲ ಅಂದರಂತೆ. ಇವರು ಇಲ್ಲೇ ಇರೋಣ ಅಂದ್ರು. ಮಾವ ಹಾಗೆ ಸತ್ರು. ಇನ್ನು ಏನೇನು ಕಾದಿದೆಯೋ? ಹುಲಿ, ನರಿ, ಹಾವು ಹಂದಿಗಳೆಲ್ಲ ಮನೆ ಹಿಂದೆ ಮುಂದೆ ಬಿಡಾರ ಹೂಡಿವೆ…”
ಕೃಷ್ಣಯ್ಯನಿಗೆ ಕೆಡುಕೆನಿಸಿತು. ನಾಗವೇಣಿ ಸಂತಾಪದಿಂದ ನುಡಿದಾಗ ಅವನು ಅಯ್ಯೋ ಎಂದು ಮಿಡುಕಾಡಿದ. ಗಣಪಯ್ಯ ಭಂಡ ಧೈರ್ಯದಿಂದ ಇಲ್ಲಿ ಉಳಿದುದು ನಿಜ. ನಾಲ್ಕು ತಿಂಗಳು ಮಾವನ ಮನೆಯ ಅನ್ನ ತಿಂದುಕೊಂಡಿರುವುದು ಅವನಿಗೆ ಸರಿ ಎನಿಸಲಿಲ್ಲ. ಹೀಗೆಂದು ತನ್ನಲ್ಲಿ ಹೇಳಿಕೊಂಡ. ಸರಕಾರದ ಹಣ ಜಮೀನು ಈ ನಾಲ್ಕು ತಿಂಗಳಲ್ಲಿ ಮಂಜೂರಾಗಿ ಬರುವುದರ ಬಗ್ಗೆಯೂ ಅವನಿಗೆ ನಂಬಿಕೆ ಇರಲಿಲ್ಲ. ಇಲ್ಲಿ ಬೆಳೆದುದನ್ನೆಲ್ಲ ಬಿಟ್ಟು ಅಲ್ಲಿ ಹೋಗಿ ಕುಳಿತರೆ ಮುಂದಿನ ಗತಿ ಏನು ಎಂದಾತ ಯೋಚಿಸಿದ. ಸರಕಾರ ಕೈಕೊಟ್ಟರೆ ವರುಷವೆಲ್ಲ ಮಾವನ ಮನೆ ಅನ್ನಕ್ಕೆ ಕೈಯೊಡ್ಡಿ ಕುಳಿತುಕೊಳ್ಳಬೇಕಾದೀತಲ್ಲ ಎಂದು ಅಂಜಿದ. ಆದರೆ ಇದೆಲ್ಲ ಈ ಹೆಂಗಸಿಗೆ ಅರ್ಥವಾಗುವುದಾದರೂ ಹೇಗೆ? ಕೃಷ್ಣಯ್ಯ ಕುಳಿತಲ್ಲಿಂದ ಎದ್ದು ಮುಂದೆ ಬಂದ. ನಾಗವೇಣಿ ಎಲೆ ಅಡಿಕೆಯ ತಾಂಬಾಣವನ್ನು ಮುಂದೆ ತಳ್ಳಿದಾಗ ಅದನ್ನು ಎಳೆದುಕೊಂಡು ಕುಳಿತ.
ಅಡಕೆಯನ್ನು ನುರಿಸುತ್ತ ಕೃಷ್ಣಯ್ಯನೆಂದ-
“ಈಗ ಗೋಳಾಡಿ ಏನು ಪ್ರಯೋಜನ ನಾಗು. ಬಾವಯ್ಯ ಕೈಗೆ ಬಂದಿರೋ ತುತ್ತನ್ನು ಎಸೆದು ಹೋಗೋದು ಬೇಡ ಅಂತ ಇಲ್ಲಿ ಉಳಕೊಂಡ. ಈಗೇನು ಮಾಡಲಿಕ್ಕೆ ತಾನೆ ಸಾಧ್ಯ. ಹಳ್ಳಿ ಸುತ್ತ ನೀರು ನಿಂತಿದೆ. ಈಗ ಇಲ್ಲಿಂದ ಹೋಗೋದಿಕ್ಕುಂಟೆ, ಇಲ್ಲೇ ಇರಬೇಕು ಬರೋದನ್ನ ಎದುರಿಸಬೇಕು. ನೀನು ಧೈರ್ಯ ಯಾಕೆ ಕಳ್ಕೋತೀಯಾ ಬಾವಯ್ಯ ಇದಾನೆ ನಾನಿದೀನಿ ನೀನು ಧೈರ್ಯವಾಗಿರು.”
“ನೀನೂ ಅವರಕಡೆ ಸೇರ್ಕೊಂಡು ಮಾತಾಡು ಹಗಲುರಾತ್ರೆ ನನ್ನೆದೆ ಥರಗುಟ್ಟಿ ನಡುಗ್ತಾ ಇರುತ್ತೆ. ಯಾವಾಗ ಏನಾಗುತ್ತೋ ಎಲ್ಲಿ ನೀರು ಮನೆಯೊಳಗೆ ನುಗ್ಗುತ್ತೋ ಹುಲಿಯೋ ಹಂದಿಯೋ ಬಂದು ಎಲ್ಲಿ ಯಾರನ್ನ ಹೊತ್ಕೊಂಡು ಹೋಗುತ್ತೋ ಅಂತ ಗಾಬ್ರಿಯಾಗುತ್ತೆ ನನಗೆ. ನೀನು ಬಂದೆ ಅಂತ ಸ್ವಲ್ಪ ಧೈರ್ಯ. ಇಲ್ಲ ಅಂದಿದ್ರೆ ನಾನಿಷ್ಟು ಹೊತ್ತಿಗೆ ಸತ್ತೇ ಹೋಗಿರುತ್ತಿದ್ದೆ.”
ಕೃಷ್ಣಯ್ಯ ಪೀಕದಾನಿಗೆ ಬಾಯಲ್ಲಿಯ ತುಂಬುಲ ಉಗಿದು ನಕ್ಕ.
“ಅಯ್ಯೋ ಹುಡುಗಿ, ಇಬ್ರು ಗಂಡಸರಿರುವಾಗ ಎಂದು ಹೆಣ್ಣನ್ನ ಹುಲಿ ಬಾಯಿಗೆ ಹಾಕ್ತೀವೇನೆ”
ಆತ ಮನದಣಿ ನಕ್ಕ.
ಕೆಂಪೇರಿದ ಅವನ ತುಟಿಗಳನ್ನೇ ನೋಡುತ್ತ, ಅವನು ನಕ್ಕಾಗ ಎದ್ದು ಬೀಳುತ್ತಿದ್ದ ಅವನ ಬಾಹು ಎದೆಯನ್ನೇ ನೋಡುತ್ತಾ ಕುಳಿತಳು ನಾಗವೇಣಿ. ಅವನ ಮಾತು ಕೇಳುತ್ತಿರುವಂತೆಯೇ ಮನಸ್ಸಿಗೆ ಸಮಾಧಾನವಾಯಿತು; ಹಿತವಾಯಿತು. ಸುಡು ಬಿಸಿಲಿನಲ್ಲಿ ಬರಿಗಾಲಲ್ಲಿ ನಡೆದುಬರುತ್ತಿರುವವರಿಗೆ ನೆರಳು ಸಿಕ್ಕಂತಾಯಿತು. ಕೃಷ್ಣಯ್ಯನ ಮಾತು, ಸಾಮಿಪ್ಯ ಎಷ್ಟೊಂದು ಹಿತಕರವಾಗಿ ಅಪ್ಯಾಯಮಾನವಾಗಿರುತ್ತದಲ್ಲ ಏಕೆ ಎಂದು ಯೋಚಿಸಿದಳು. ಕೃಷ್ಣಯ್ಯನನ್ನು ನೋಡಿದಷ್ಟೂ ನೋಡಬೇಕೆನಿಸುತ್ತದೆ. ಅವನ ಮಗ್ಗುಲಲ್ಲಿಯೇ ಕುಳಿತಿರಬೇಕೆನಿಸುತ್ತದೆ. ಏಕೆ ಎಂದು ಉತ್ತರ ಹುಡುಕುವ ಯತ್ನ ಮಾಡಿದಳು. ಕೃಷ್ಣಯ್ಯನನ್ನು ಕಂಡಾಕ್ಷಣ ಮೈಮನಸ್ಸು ಹುರುಪುಗೊಳ್ಳುತ್ತದಲ್ಲ ಕಾರಣವೇನಿರಬಹುದು ಎಂದು ಚಿಂತಿಸಿದಳು.
ಅಡಕೆ ಸೊಕ್ಕು ತಲೆಗೇರಿದ್ದರಿಂದಲೋ ಇಲ್ಲವೇ ಹೊಗೆಸೊಪ್ಪು ಹೆಚ್ಚಾಗಿದ್ದರಿಂದಲೋ ತಲೇ ಧಿಂ ಎಂದಿತು. ಕುಳಿತಲ್ಲಿಯೇ ಮೈಚೆಲ್ಲಬೇಕೆನಿಸಿತು. ಕೃಷ್ಣಯ್ಯ ತನ್ನ ಬಳಿ ಬಂದು ಕುಳಿತು ಅವನ ತೊಡೆಯಮೇಲೆ ತಲೆ ಇರಿಸಿಕೊಂಡು ನಿದ್ದೆ ಮಾಡುವ ಅವಕಾಶ ಸಿಕ್ಕರೆ ಹೇಗಿರುತ್ತದೆ ಎಂದು ಬಯಸಿದಳು. ಹಿಂದೆಲ್ಲ ಕೃಷ್ಣಯ್ಯನನ್ನು ತಾನು ಮುಟ್ಟುತ್ತಿದ್ದೆ ಹೊಡೆಯುತ್ತಿದ್ದೆ. ಹನ್ನೆರಡು-ಹದಿಮೂರನೇ ವಯಸ್ಸಿನವರೆಗೂ ಕೃಷ್ಣಯ್ಯನ ಮೈಗೆ ಮೈ ತಗುಲಿಸಿ ಓಡಿಯಾಡುತ್ತಿದ್ದೆ. ಆದರೆ ಮನೆಯಲ್ಲಿ ಅಮ್ಮ ಈ ಬಗ್ಗೆ ವಿರೋಧ ವ್ಯಕ್ತಪಡಿಸಿ ಹೇಳಿದರು. ಮದುವೆಯಾದ ನಂತರ ಕೃಷ್ಣಯ್ಯ ದೂರವಾಗಿಬಿಟ್ಟ; ಬಹಳ ದೂರ.
ಮೈಯಲ್ಲಿ ಒಂದು ಬಗೆಯ ಆವೇಶ, ಉದ್ವೇಗ. ಕೃಷ್ಣಯ್ಯನ ಸಾಂತ್ವನದ ನುಡಿ ಮನಸ್ಸಿನಲ್ಲಿ ಏನೇನೋ ಭಾವನೆಗಳನ್ನು ಕೆರಳಿಸಿತು. ತಾನಿಲ್ಲಿ ಸುಖವಾಗಿಲ್ಲ. ಸಂತೋಷದಿಂದಿಲ್ಲ ಎಂದು ಹೇಳಬೇಕೆನಿಸಿತು. ನಿನ್ನ ಭಾವಯ್ಯ ನನ್ನನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಅವರ ಸ್ವಭಾವವೇ ವಿಚಿತ್ರ. ನನ್ನ ಆಸೆ-ಆಕಾಂಕ್ಷೆಗಳೆಲ್ಲ ಅವರಿಂದ ನೆರವೇರುತ್ತಿಲ್ಲ ಎಂದು ಚೀರಿ ಹೇಳಬೇಕೆನಿಸಿತು. ಕೃಷ್ಣಯ್ಯನ ಎದೆಯಲ್ಲಿ ಮುಖವಿರಿಸಿ ಅತ್ತುಬಿಡಬೇಕು ಎನಿಸಿ ನಾಗವೇಣಿ ತಲೆ ಎತ್ತಿ ನೋಡಿದಳು…
“ನಡೀ ನಾಗು, ಮಲಗು.”
ಎಂದವನೇ ತನ್ನ ಹಾಸಿಗೆಯತ್ತ ನಡೆದು ಹಾಸಿಗೆಯ ಮೇಲುರುಳಿ ಕಂಬಳಿ ಎಳೆದುಕೊಂಡ.
ನಾಗವೇಣಿ ಮತ್ತೂ ಸ್ವಲ್ಪ ಹೊತ್ತು ಹೊಸಿಲಮೇಲೆಯೇ ಕುಳಿತಿದ್ದು ತನ್ನನ್ನು ತಾನೇ ಸಾವರಿಸಿಕೊಂಡು ಎದ್ದಳು. ಏನಾಗಿದೆ ತನಗೆ? ಏನೇನೋ ಹುಚ್ಚು ಆಸೆಗಳು ಮೈಯ್ಯಲ್ಲಿ ಹೊಕ್ಕು ಹರಿಯುತ್ತಿವೆ ಏಕೆ? ಕೃಷ್ಣಯ್ಯನನ್ನು ತಾನೇಕೆ ಇಷ್ಟೊಂದು ಹಚ್ಚಿಕೊಂಡಿದ್ದೇನೆ? ಗಂಡ ಒಳಗೆ ಮಲಗಿರುವುದನ್ನು ತಾನು ಮರೆತೆನೇಕೆ?
ದಡಬಡಿಸಿ ಎದ್ದು, ಗೋಡೆಯ ಮೇಲಿನ ಚಿಮಣಿಯನ್ನು ಕೈಗೆತ್ತಿಕೊಂಡು ನಾಗವೇಣಿ ಒಳಗೆ ಧಾವಿಸಿದಳು. ಕೋಣೆಯ ಬಾಗಿಲನ್ನು ಹಾಕಿ ಅಗುಳಿಯನ್ನು ಸರಿಸಿ ಗೋಡೆಯಮೇಲಿನ ಮೊಳೆಗೆ ಚಿಮಣಿಯನ್ನು ಸಿಗಿಸಿ, ಗಂಡನ ಹಾಸಿಗೆಯತ್ತ ತಿರುಗಿದಾಗ, ಅಗಲವಾಗಿ ತೆರೆದುಕೊಂಡ ಎರಡು ಕೆಂಪು ಕಣ್ಣುಗಳು ತನ್ನನ್ನು ದುರುಗುಟ್ಟಿ ನೋಡುತ್ತಿರುವುದರ ಅರಿವಾಗಿ, ಮೈಮೇಲೆ ಬೆಂಕಿ ಉಗ್ಗಿದಂತಾಯ್ತು.
“ಆಯ್ತೇನು ಮಾತು?”
ಕಟ್ಟಿ ಹಾಕಿದ ತುಂಟ ದನವನ್ನು ಬಾರಕೋಲಿನಿಂದ ಹೊಡೆದಂತೆ ತೀಕ್ಷ್ಣವಾಗಿ ತೂರಿಬಂತು ಪ್ರಶ್ನೆ.
“ಆಯ್ತು…ಯಾಕೆ?”
“ಅಲ್ಲ…ಕೇಳ್ದೆ, ಇನ್ನೂ ಮಾತಾಡಬಹುದಿತ್ತಲ್ಲ”
ಕೈ ಬಡಿದು ದೀಪ ಆರಿಸಿ ನಾಗವೇಣಿ ಹಾಸಿಗೆಯಮೇಲೆ ಉರುಳಿಕೊಂಡಳು. ಕಂಬಳಿಯನ್ನು ಎಳೆದುಕೊಂಡು ಮುಸುಕು ಬಿಗಿದುಕೊಂಡಾಗ ಗಣಪಯ್ಯ ಹೇಳಿದ್ದು ಕೇಳಿಸಿತು-
“ಈಗೀಗ ನೀನು ಮಿತಿಮೀನಿ ಹೋಗ್ತಿದಿಯಾ…”
ನಾಗವೇಣಿಗೆ ಮಾತು ಬೇಕೆನಿಸಲಿಲ್ಲ. ಅವಳು ತುಟಿಬಿಗಿದುಕೊಂಡು ಅತ್ತ ಹೊರಳಿಕೊಂಡಳು. ಮಂಚ ಕಿರುಗುಟ್ಟಿತು. ಪಣತದ ಮೇಲಿನ ಇಲಿಗಳು ಕೆಳಗಿಳಿದವು. ಗಣಪಯ್ಯ ಮುಷ್ಠಿ ಬಿಗಿದುಕೊಂಡು ಕತ್ತಲೆಯನ್ನು ಬಗಿದು ನೋಡಿದ.
ನಾಗವೇಣಿ ಒಳಬಂದು ಹೋದಾಗ ಅವನ ಒಂದು ನಿದ್ದೆ ಮುಗಿದಿತ್ತು. ಹೋದ ಹೆಂಡತಿ ದೀಪ ಹಿಡಿದು ಬರಬಹುದೆಂದು ಆತ ಕಾದ. ಅವಳು ಬರಲಿಲ್ಲ. ಹೊಸಿಲಲ್ಲಿ ಕುಳಿತು ಎಲೆ ಅಡಿಕೆ ಮೆಲ್ಲುತ್ತ ಕೃಷ್ಣಯ್ಯನೊಡನೆ ಮಾತಿಗಾರಂಭಿಸಿದ್ದು ತಿಳಿಯಿತು. ಹೊರಗೆ ಬೀಳುತ್ತಿದ್ದ ಮಳೆಯಿಂದಾಗಿ ಅವರ ಮಾತು ಕೇಳದಿದ್ದರೂ ಈಗ ಇವಳಿಗೆ ಅದೇನು ಅವನೊಡನೆ ಮಾತನಾಡುವ ಆಸೆ ಎಂದು ಗಣಪಯ್ಯ ರೊಚ್ಚಿಗೆದ್ದ.
ಈಗ ಮಾತ್ರವಲ್ಲ; ಹಿಂದಿನಿಂದಲೂ ಅಷ್ಟೆ. ಕೃಷ್ಣಯ್ಯನ ಹೆಸರು ತೆಗೆದರೆ ಸಾಕು ಇವಳು ಕುಣಿದಾಡುತ್ತಾಳೆ. ಕೃಷ್ಣಯ್ಯ ಇಲ್ಲಿಗೆ ಬಂದ ನಂತರ ಇವಳ ಸಂಭ್ರಮ ಸಡಗರ ಹೆಚ್ಚಾಗಿದೆ. ಅವನೊಡನೆ ಅದೇನು ಮಾತು. ಅದೇನು ನಗೆ, ಏಕೆ? ಅವನೇನು ಇವಳ ಅಣ್ಣನೇ ತಮ್ಮನೇ? ಮನೆಯಲ್ಲಿ ಇವಳ ತಂದೆ ತಂದಿರಿಸಿಕೊಂಡು ಸಾಕಿದ ಅನಾಥ ಆತ, ಅವನೊಡನೆ ಅಷ್ಟೊಂದು ಆತ್ಮೀಯತೆ ಏಕೆ?
ಮಾತು ಮುಗಿಸಿ ಆಕೆ ಒಳಬಂದಾಗ ಎದ್ದು ಅವಳ ಕೆನ್ನೆ ನಾಲ್ಕೇಟು ಬಿಗಿಯಬೇಕೆಂದು ಮಾಡಿದ್ದ. ಆದರೆ ಕಷ್ಟಪಟ್ಟು ತಡೆದುಕೊಂಡ. ನಾಗವೇಣಿ ತನ್ನ ಹೆಂಡತಿ; ಅಷ್ಟು ಸುಲಭವಾಗಿ ಅವಲ ಬಗ್ಗೆ ಅನುಮಾನ ಪಡುವುದು ಉಚಿತವಲ್ಲ. ಇನ್ನೂ ಕಾದು ನೋಡೋಣ. ಹಾಗೆಂದೇ ಉಕ್ಕಿಬರುತ್ತಿದ್ದ ಸಿಟ್ಟನ್ನು ನುಂಗಿಕೊಂಡು ಈಗೀಗ ನೀನೌ ಮಿತಿಮೀರಿ ಹೋಗುತ್ತಿದ್ದೀಯ-ಎಂದು ಮಾತಿನ ಏಟು ಬಿಗಿದ.
ಪಕ್ಕಕ್ಕೆ ಹೊರಳಿದ. ನಾಗವೇಣಿ ಹತ್ತಿರವಿರಲಿಲ್ಲ. ಬೇಕೆಂದೇ ದೂರ ಸರಿದು ಮಲಗಿದ್ದಳು. ಇವಳಿಗೇ ಇಷ್ಟೊಂದು ಸೊಕ್ಕಿರುವಾಗ ನನಗೆಷ್ಟು ಇರಬೇಡ ಎಂದು ಗಣಪಯ್ಯ ಇನ್ನೊಂದು ಪಕ್ಕಕ್ಕೆ ಹೊರಳಿದ. ಮಳೆ, ಗಾಳಿಯ ಸದ್ದಲ್ಲದೆ ಬೇರೇನೂ ಕೇಳಿಸುತ್ತಿರಲಿಲ್ಲ. ಆ ಸೀತಾಪರ್ವತದ ಮೇಲಿನಿಂದ ಬೀಸಿಬಂದ ತಣ್ಣನೆಯ ಗಾಳಿ ಮಳೆಯಲ್ಲೆಲ್ಲ ಸುಳಿದಾಡುತ್ತಿತ್ತು.
ಪುನರ್ವಸು
ಶನಿವಾರ ಕಳೆದು ಭಾನುವಾರ ಬೆಳಕು ಹರಿಯುತ್ತಿರುವಾಗ ಹೊರಗೆಲ್ಲಾ ಬಿಸಿಲು ಮೂಡಿತು. ಬೆಳಗಿನ ಜಾವ ನಿಂತು ಹೋದ ಮಳೆಯ ಹಾರಾಟ, ಅಬ್ಬರ, ಗದ್ದಲವೆಲ್ಲ ಮಾಯವಾಗಿ ಆಕಾಶ ಗುಡಿಸಿದ ಅಂಗಳದಂತೆ ನಿರ್ಮಲವಾಯಿತು. ಅಲ್ಲಲ್ಲಿ ನಿಂತ ನೀರಿಲ್ಲದೇ ನೆಲದಮೇಲೆ, ಅಂಗಳದಲ್ಲಿ, ಹಿತ್ತಿಲಲ್ಲಿ, ಚಪ್ಪರದಲ್ಲಿ ನೆಲ ಒಣಗತೊಡಗಿತು. ಚುಮುಚುಮು ಬಿಸಿಲು ಬಿತ್ತೆಂದು ಹಕ್ಕಿಗಳು ಹಾರಿದವು. ಪೊದೆ- ಪೊಟರೆಗಳಲ್ಲಿ ಕೋಳಿ-ಮೊಲಗಳು ಓಡಿಯಾಡಿದವು. ಸೀತಾಪರ್ವತದ ಕಾಡಿನಲ್ಲಿ ಕೋಳಿಗಳ ಕಿಚ್‌ಕಿಚ್ ಸದ್ದು ಕೇಳಿಸಿತು. ಹಲವಾರು ದಿನಗಳಲ್ಲಿ ಕೊಟ್ಟಿಗೆಯಲ್ಲೇ ಇದ್ದ ದನ ಕರುಗಳು ಕೊಟ್ಟಿಗೆಯ ಬಾಗಿಲತ್ತ ತಿರುಗಿ ನಿಂತು ಬಿಸಿಲನ್ನು ದಿಟ್ಟಿಸಿ ನೋಡಿದವು.
ಹೊಸ ಮಳೆ ಎಂಟು ದಿನ ಬಿಡುವು ಕೊಡುತ್ತದೆಂಬುದು ಖಚಿತವಾಯಿತು. ಕೃಷ್ಣಯ್ಯ ಸೊಂಟಕ್ಕೆ ಒಡ್ಯಾಣ ಕಟ್ಟಿಕೊಂಡು, ಕತ್ತಿಯನ್ನು ಅದಕ್ಕೆ ಸಿಕ್ಕಿಸಿಕೊಂಡು ಹೊರಟ. ಗಣಪಯ್ಯ ಗುದ್ದಲಿಯನ್ನು ಹೆಗಲಮೇಲೆ ಹಾಕಿಕೊಂಡು ಹೊಲದತ್ತ ನಡೆದ. ನಾಗವೇಣಿ ಮೈಚಳಿ ಬಿಟ್ಟಂತೆ ಲವಲವಿಕೆಯಿಂದ ಓಡಿಯಾಡಿದಳು.
ಅಡಿಕೆ ತೋಟದಲ್ಲಿ ಅಂತಹಾ ಹಾನಿಯೇನೂ ಆಗಿರಲಿಲ್ಲ. ಹಳ್ಳಿ ತುಂಬಿ ಹರಿದು ಅಲ್ಲಲ್ಲಿ ತೋಟದ ನೆಲ ಕೊರೆದುಹೋಗಿತ್ತು. ಹಿಂದೆಯೇ ವಾಲಿಕೊಂಡಿದ್ದ ಅಡಕೆ ಮರವೊಂದು ಪೂರ್ಣವಾಗಿ ಬಿದ್ದಿತ್ತು. ಒಂದೆರಡು ಅಡಕೆ ಸಸಿಗಳು ಹಾಳಾಗಿದ್ದವು. ಬಾಳೆಗಿಡಗಳು ಉರುಳಿಕೊಂಡಿದ್ದವು. ಕೃಷ್ಣಯ್ಯ ತೋಟವನ್ನೆಲ್ಲ ಸುತ್ತಿಕೊಂಡು ಹೊಲದ ಬಳಿ ಬಂದಾಗ ಗಣಪಯ್ಯ ಬದುವಿನ ಮೇಲೆ ನಿಂತು ಹೊಲದ ತುಂಬ ದೃಷ್ಟಿ ಹಾಯಿಸಿದ್ದ.
ಇಲ್ಲೂ ಅಂತಹ ಅನಾಹುತವೇನೂ ಆಗಿರಲಿಲ್ಲ. ಒಂದು ಗದ್ದೆಯಿಂದ ಇನ್ನೊಂದು ಗದ್ದೆಗೆ ನೀರು ಹರಿದುಹೋಗುತ್ತಲಿತ್ತು. ಸಸಿಗಳು ಅಚ್ಚ ಹಸಿರು ವರ್ಣಕ್ಕೆ ತಿರುಗಿ, ನಿಂತ ಕೆಸರ ನೀರಿನಲ್ಲಿ ಗಾಳಿಗೆ ಸೂ ಎಂದು ತೊನೆದಾಡುತ್ತಿದ್ದವು. ಗಾಳಿಗೆ ಅಲೆ ಸಸಿಗಳೊಡನೆ ಚಕ್ಕಂದವಾಡುವ ದೃಶ್ಯ ಸೊಗಸಾಗಿ ಕಾಣುತ್ತಿತ್ತು. ಎಳೆಬಿಸಿಲು ಹೊಲದುದ್ದಕ್ಕೂ ಪವಡಿಸಿತ್ತು.
“ತೋಟ ಹ್ಯಾಗಿದೆ?”
ಎಂದು ಕೇಳಿದ ಗಣಪಯ್ಯ.
“ಅಲ್ಲೇನೂ ಆಗಿಲ್ಲ ಭಾವ. ಸಂಕದ ಹತ್ತಿರ ಒಂದು ಅಡಿಕೆಮರ ಇತ್ತಲ್ಲ, ಅದು ಮಾತ್ರ ಬಿದ್ದಿದೆ.”
ಇಬ್ಬರೂ ಹೇರಂಬನ ತೋಟದತ್ತ ನಡೆದರು. ಹೇರಂಬನ ತೋಟದಲ್ಲಿ ಗಾಳಿ ಒಂದಿಷ್ಟು ದಾಂಧಲೆ ಮಾಡಿತ್ತು. ಕೆಲವಾರು ಮರಗಳು ಮುರಿದು ಬಿದ್ದಿದ್ದವು. ಹಳ್ಳದ ನೀರು ತೋಟದೊಳಗೆ ನುಗ್ಗಿ ಹಾಳೆಯನ್ನು ತೊಳೆದುಕೊಂಡುಹೋಗಿತ್ತು.
ಹೇರಂಬನ ತೋಟದಿಂದ ಹೊಲಗಳತ್ತ ಇಳಿದಾಗ ಗಣಪಯ್ಯ ಅಯ್ಯೋ ಎಂದು ಕೂಗಿಕೊಂಡ. ಶರಾವತಿ ಹೇರಂಬನ ಹೊಲದತ್ತ ನುಗ್ಗಿದಳು. ಶರಾವತಿ ನದಿಗೆ ಅಂಟಿಕೊಂಡಂತಿದ್ದ ನಾಲ್ಕು ಗೇಣಿನ ಒಂದು ಹೊಲ ಪೂರ್ಣವಾಗಿ ನೀರಿನಲ್ಲಿ ಮುಳುಗಿತ್ತು. ಉಳಿದುದೆಲ್ಲ ಸುರಕ್ಷಿತವಾಗಿತ್ತು.
ಶರಾವತಿಯ ನೀರು ಮಂದ ಮಂದವಾಗಿ ಹರಿಯುತ್ತಿರುವುದನ್ನು ಕಂಡ ಕೃಷ್ಣಯ್ಯ-
“ಬಾವಯ್ಯ…ನೀರು ಮತ್ತೆ ಏರೋದಿಲ್ಲ”
ಎಂದು ಗಣಪಯ್ಯನ ಮುಖ ನೋಡಿ
“ಅದು ಹೇಗೆ ಗೊತ್ತಾಯ್ತು ನಿನಗೆ?”
ಎಂದು ಕೇಳಿದಾಗ, ಕೃಷ್ಣಯ್ಯ ದೂರದಲ್ಲೆಲ್ಲೋ ಅಸ್ಪಷ್ಟವಾಗಿ ಕೇಳಿಸುತ್ತಿದ್ದ ಸದ್ದನ್ನು ಆಲಿಸುವಂತೆ ಹೇಳಿದ. ಅದು ಡ್ಯಾಮಿನ ಮೇಲಿಂದ ನೀರು ಕೆಳಗೆ ಬೀಳುತ್ತಿರುವ ಸದ್ದಲ್ಲವೇ ಎಂದು ಕೇಳಿದ. ಡ್ಯಾಮು ತೊಂಬುತ್ತೋ-ನೂರೋ ಅಡಿ ಕಟ್ಟಿ ಮುಗಿದಿದೆ. ಅಲ್ಲಿಯವರೆಗೂ ನೀರು ನಿಂತು, ಆನಂತರ ಬಂದ ನೀರೆಲ್ಲ ಈಗ ಹೊರಟು ಹೋಗಲಾರಂಭಿಸಿದೆ ಎಂದು ಸಾರಿದ ಕೃಷ್ಣಯ್ಯ.
“ಬಾವಯ್ಯ…ಇನ್ನು ನಾವು ಗೆದ್ದ ಹಾಗೆ”
ಎಂದ. ಗಣಪಯ್ಯನಿಗೂ ಈ ಮಾತು ಹೌದೆನಿಸಿತು. ಶರಾವತಿ ಮಂದಗಮನೆಯಾಗಿ ಮುಂದೆ ಹರಿದು ಹೋಗುತ್ತಿದ್ದಾಳೆ. ಅಂದರೆ ಹರಿದು ಬಂದ ನೀರು ಮಡುಗಟ್ಟಿ ನಿಲ್ಲುವುದಿಲ್ಲ ಎಂದಾಯಿತು. ಎಲ್ಲಿ ಹಳ್ಳಿ ಮುಳುಗುತ್ತದೊ ಎಂಬ ಅಂಜಿಕೆ ದೂರವಾಯಿತು.
“ಹೌದು…ನೀ ಹೇಳೋದು ಸರಿ”
ಎಂದು ತಲೆದೂಗಿದ ಗಣಪಯ್ಯ. ಈ ಸಂತಸದಿಂದಲೇ ಅವರಿಬ್ಬರೂ ಮನೆಗೆ ಹಿಂದಿರುಗಿದರು.
ಚಪ್ಪರದೊಳಗೆ ಕಾಲಿಡುತ್ತಿರುವಾಗ ಜಗಲಿಯ ಮೇಲೆ ಬೆದರಿ ನಿಂತ ನಾಗವೇಣಿ ಅಳುಮೋರೆ ಮಾಡಿಕೊಂಡು ತೊದಲಿದಳು.
“ಕೃಷ್ಣಯ್ಯ… ಅಡಿಗೆ ಮನೆಯಲ್ಲಿ ಹಾವು..”
“ಏನು? ಹಾವೇ? ”
ಗಣಪಯ್ಯ ಹಿಮ್ಮೆಟ್ಟಿ ನಿಂತ, ಕೃಷ್ಣಯ್ಯ ಎಲ್ಲಿ ಎಂದು ಕೇಳುತ್ತಾ ಒಳಗೆ ನಡೆದ.
ಅಡಿಗೆ ಮನೆಯ ಹೊಸಿಲ ಹೊರಗೆ ಬಾಲ ಇರಿಸಿಕೊಂಡು ಆರಾಮಾಗಿ ಮಲಗಿತ್ತು. ನೀರ ಹಾವು. ಅದರ ಮೈ ಅಡಿಗೆಯ ಮನೆಯೊಳಗೆಲ್ಲೋ ಇತ್ತು. ಹ್ಗಣಪಯ್ಯ ಉದ್ದವಾದ ಕೋಲೊಂದನ್ನು ತಂದು ಕೃಷ್ಣಯ್ಯನತ್ತ ನೀಡಿ—
“ಕೃಷ್ಣಯ್ಯ.. ನಾಗರ ಹಾವಲ್ಲ, ನೀರ ಹಾವು, ಹೊಡೆದು ಬಿಡು.”
ಎಂದ ಕೃಷ್ಣಯ್ಯ ಗಣಪಯ್ಯನನ್ನು ಹಿಂದೆ ಸರಿಸಿ, ನಾಗವೇಣಿಯನ್ನು ದೂರ ಹೋಗುವಂತೆ ಸನ್ನೆ ಮಾಡಿ, ಹಾವಿನತ್ತ ಬಾಗಿ ಅದರ ಬಾಲವನ್ನು ಹಿಡಿದುಕೊಂಡ. ಕೈಮುಷ್ಥಿಯಲ್ಲಿ ಹಾವಿನ ಬಾಲವನ್ನು ಹಿಡಿದು, ಒಂದು ಸುತ್ತು ಸುತ್ತಿಕೊಂಡು, ಹಾವನ್ನು ಜಗ್ಗಿದ. ಅದು ಐದು ಅಡಿಯ ಹಾವಿನ ಮೈ ಮೆಲುಕಾಡುತ್ತ ಕೃಷ್ಣಯ್ಯನ ಕೈಯಲ್ಲಿ ಜೋತಾಡಿತು. ಕೃಷ್ಣಯ್ಯ ಅದನ್ನು ಮೇಲೆತ್ತಿ ಹಿಡಿದು ತಿರುಗಿಸುತ್ತ ಹಿತ್ತಲಿಗೆ ಓಡಿದ. ಹಾವು ಆಕಾಶದಲ್ಲಿ ಗಿರ್ರನೆ ನಾಲ್ಕು ಸುತ್ತು ಹೊಡೆದು ಫಳಾರನೆ ನೆಲಕ್ಕೆ ಅಪ್ಪಳಿಸಿತು. ಎರಡು ಕ್ಷಣ ಒದ್ದಾಡಿ ಹಾವು ಮೈ ಹೊರಳಿಸಿತು. ಕೃಷ್ಣಯ್ಯ ಮತ್ತೊಮ್ಮೆ ಹಾವಿನ ಬಾಲ ಹಿಡಿದು ಬೀಸಿ ಒಗೆದ. ಹಾವು ಬೇಲಿಯ ಆಚೆಗಿನ ಕುನ್ನೇರಳೇ ಪೊದೆಗಳತ್ತ ಹೋಗಿ ಬಿತ್ತು. ನಾಗವೇಣಿ ಕೃಷ್ಣಯ್ಯನತ್ತ ಮೆಚ್ಹ್ಚುಗೆಯ ನೋಟ ಬೀರಿ ಒಳಗೆ ನಡೆದಳು.
ಊಟ ಮುಗಿಸಿ ಕೃಷ್ಣಯ್ಯ ಮನೆಯಿಂದ ಹೊರಟ. ಮಳೆಯಿಂದಾಗಿ ಕಟ್ಟಿಹಾಕಿದಂತಾಗಿತ್ತು. ಬಿಸಿಲಲ್ಲಿ ಒಂದಿಷ್ಟು ತಿರುಗಾಡಿ ಬರೋಣವೆಂದೇ ಹೊಸಮನೆಯಿಂದ ಅರಲಗೋಡಿಗೆ ಹೋಗುವ ಕಾಲುದಾರಿ ಹಿಡಿದ. ಸೀತಾಪರ್ವತದ ಒಂದು ಪಾರ್ಶ್ವವನ್ನು ಹತ್ತಿದ. ಕಾಲು ಹಾದಿ ಜನರ ಓಡಾಟವಿಲ್ಲದೆ, ಹುಲ್ಲು ಬೆಳೆದು ಕಾಣೆಯಾಗಿತ್ತು. ಈ ಬದಿಯಿಂದ ಹತ್ತಿದವ ಅತ್ತ ಹೀಗಿ ಇಳಿದ. ಹತ್ತು ಹೆಜ್ಜೆ ಹಾಕಿದಾಗ ನೀರು ಕಂಡಿತು, ನಿಂತ. ಹೊಲದ ಬಳಿ ನಿಂತು ನೋಡಿದರೆ ಕಣ್ಣೆದುರು ಹೇಗೆ ಒಂದು ಜಲರಾಶಿ ಕಾಣುತ್ತದೋ ಅಂತಹುದೇ ದೃಶ್ಯ. ಎಡಕ್ಕೆ ತಿರುಗಿದರೂ ನೀರು. ಬಲಕ್ಕೆ ತಿರುಗಿದರೂ ನೀರು. ಎದುರು ದೃಷ್ಟಿ ಬೀರಿದರೆ ಸುಮಾರು ಒಂದು ಫರ್ಲಾಂಗಿನಷ್ಟು ದೂರದವರೆಗೂ ನೀರು. ಅನಂತರ ಅರಲಗೋಡಿನ ಹಸಿರು ಗುಡ್ಡ. ದೂರದ ಮನೆಗಳು-ಹೊಲಗಳು. ನಿಂತ ನೀರಿನಲ್ಲಿ ಮುಳುಗಿರುವ ಮರಗಳ ಮೇಲ್‌ಭಾಗವಷ್ಟೇ ಕಾಣಿಸುತ್ತಿತ್ತು. ಕಡಿಮೆ ಎಂದರೆ ಹತ್ತು ಅಡಿ ನೀರಾದರೂ ಇಲ್ಲಿ ನಿಂತಿರಬಹುದು. ಈ ನೀರು ಇಳಿಯುತ್ತದೆಯೇ? ಯಾವಾಗ?
ಕೃಷ್ಣಯ್ಯ ನೀರ ಪಕ್ಕದಲ್ಲೇ ನಡೆದು ಅಷ್ಟು ದೂರ ಹೋದ. ದಡದ ಮೇಲೆ ಅಲ್ಲಲ್ಲಿ ಕೊಳೆತ ಪ್ರಾಣಿಗಳು. ಮೊಲವೋ, ಕಾಡುಕೋಳಿಯೋ, ಜಿಂಕೆಯೋ, ಯಾವುದೋ ಒಂದು ಪ್ರಾಣಿ. ನೀರಿನಲ್ಲಿ ಮುಳುಗಿಯೋ, ಮಳೆಗಾಳಿಗೆ ಸಿಕ್ಕಿಯೋ ಸತ್ತಿರಬೇಕು. ಪ್ರಾಣಿ ಈಗ ಕೊಳೆತು ನಾರುತ್ತಿದೆ. ಮುಂದೆ ಹೋಗುವುದೇಕೆ ಎಂದು ತಿರುಗಿದ. ಮತ್ತೆ ಕಾಲುದಾರಿ ನೀರಿನತ್ತ ಇಳಿದು ಮಾಯವಾದಲ್ಲಿಗೆ ಬಂದು, ನೀರಿಗೆ ಬೆನ್ನುಹಾಕಿ ಹಳ್ಳಿಯತ್ತ ಹೆಜ್ಜೆ ಹಾಕತೊಡಗಿದ.
ಗಣಪಯ್ಯ ಹಳ್ಳಿಗೆ ಬರುವವಂತೆ ಹೇಳಿಕಳುಹಿಸಿದಾಗ ತಾನು ಇಲ್ಲಿಗೆ ಬರಬಾರದೆಂದಿದ್ದೆ. ಯಜಮಾನರು ಈ ಬಗ್ಗೆ ಏನೂ ಹೇಳದೆ ತಾನಾಗಿಯೇ ಇಲ್ಲಿಗೆ ಹೊರಟುಬರುವುದು ಒಳ್ಳೆಯದಲ್ಲ ಎಂದು ತಾನು ಸುಮ್ಮನೆ ಉಳಿದೆ. ಆದರೆ ಗಣಪಯ್ಯ ಯಜಮಾನರಿಗೂ ಹೇಳಿಕಳುಹಿಸಿದ್ದ. ಯಜಮಾನರು ತನ್ನನ್ನು ಕರೆದು-
“ಕೃಷ್ಣಾ…ಹುಡುಗಿ ಗಂಡ ಹೇಳಿಕಳ್ಸಿದಾನೆ, ನೀನು ಹೋಗಿ ನಾಲ್ಕು ತಿಂಗಳು ಇದ್ದು ಬಾ”
ಎಂದಿದ್ದರು. ಸಾಧ್ಯವಾದರೆ ಈ ಕೆಲಸ ತಪ್ಪಿ ಹೋಗಲಿ ಎಂದು ಯಾವುದೋ ಕೆಲಸದ ನೆಪ ಮಾಡಿಕೊಂಡು ಸಾಗರಕ್ಕೂ ಹೋದೆ. ಅಲ್ಲಿ ಎಂಟು ದಿನ ಉಳಿದು ತಿರುಗಿ ಬಂದಾಗ ಯಜಮಾನರು-
“ನೀನಿನ್ನು ಹೊರಡು” ಎಂದರು.
ಹೊರಟೆ.
ನಾಗವೇಣಿ ಯಜಮಾನರ ಮಗಳು. ತನಗಿಂತ ಹತ್ತು ವರ್ಷಕ್ಕೆ ಸಣ್ಣವಳು, ತಾನು ಎತ್ತಿ ಆಡಿಸಿ ದೊಡ್ಡವಳನ್ನಾಗಿ ಮಾಡಿದೆ. ಹಿಂದೆಲ್ಲಾ ಜೊತೆಯಲ್ಲಿ ಆಡಿ, ಉಂಡು ಕಾಲಕಳೆದಿದ್ದೆವು. ನಾಗವೇಣಿ ಬೆಳೆದ ಹಾಗೆ ಅವಳ ಬಗ್ಗೆ ಅದೇನೋ ಆಸಕ್ತಿ ಕುತೂಹಲ . ಝಂಪರಿನೊಳಗೆ ಉರುಟು ಉರುಟಾಗಿ ಬೆಳೆದ ಎದೆ, ದುಂಡಗೆ ರೂಪಗೊಂಡ ಅವಳ ತೋಳು, ಕೆಂಪೇರಿದ ಅವಳ ಗಲ್ಲ, ಕಿರಿದಾಗಿ, ಅಗಲವಾಗಿ, ಬಳಿಕಿ ಬಾಗುವ ಅವಳ ಸೊಂಟ ಇದೆಲ್ಲದರ ಬಗ್ಗೆ ಒಂದುರೀತಿಯ ತುಡಿತ. ಅವಳನ್ನು ಮತ್ತೆ ಮತ್ತೆ ನೋಡಬೇಕು, ಮಾತನಾಡಿಸಬೇಕು, ಮುಟ್ಟಬೇಕು, ನಗಿಸಬೇಕು, ಅಳಿಸಬೇಕು, ಸತಾಯಿಸಬೇಕು ಎನ್ನುವ ಆಸೆ, ಹಂಬಲ, ಹುಚ್ಚು, ಆತುರ. ಆದರೆ ಈ ಕಾರ್ಯಗಳಿಗೆ ಅಡ್ಡಿಯೊದಗಿದಂತೆ ಅಮ್ಮನ ಎಚ್ಚರಿಕೆ. ಹದ್ದುಗಣ್ಣು ಕಾವಲು.
“ಕೃಷ್ಣಾ, ಈಗ ನಾಗು ಬೆಳ್ದಿದಾಳೆ. ಹಿಂದಿನ ಹಾಗೆ ಅವಳನ್ನ ಆಟಕ್ಕೆ ಕರೀಬೇಡ ನೀನು”
ಇದು ತನಗೆ ಹೇಳಿದ ಮಾತು. ನಾಗೂಗೆ ಇದೇ ರೀತಿಯ ಮತ್ತೊಂದು ಎಚ್ಚರಿಕೆ.
ನಾಗು ಲಂಗ ಬಿಟ್ಟು ಸೀರೆ ಉಟ್ಟಳು. ಉರುಟು ಉರುಟಾಗಿ ರೂಪಗೊಂಡ ಎದೆಯ ಮೇಲೆ ಸೆರಗು ಬಂತು. ಯಜಮಾನರು ಮಗಳ ಮದುವೆ ಮಾಡಲು ಓಡಿಯಾಡಿದರು. ಬಾವಯ್ಯನೊಡನೆ ನಾಗವೇಣಿಯನ್ನು ಬೀಳ್ಕೊಡಲು ತಾಳಗುಪ್ಪೆಯ ಬಸ್‌ಸ್ಟ್ಯಾಂಡಿನವರೆಗೂ ಬಂದಿದ್ದೆ. ನಾಗವೇಣಿ ಅಂದು ಹೋಗಿಬರುವುದಾಗಿ ಹೇಳಿ ತುಂಬಾ ಅತ್ತಳು. ತಾನೂ ಅತ್ತೆ. ಮೂರು ದಿನ ಊಟ ಸಹಾ ಸೇರಿರಲಿಲ್ಲ ತನಗೆ. ಅಮ್ಮ ಅನಂತರ ಒಂದು ಬಾರಿ ಮನೆಗೆ ಬಂದ ನಾಗವೇಣಿಗೆ ಈ ವಿಷಯ ಹೇಳಿ ನಕ್ಕರು.
ನಾಗವೇಣಿ ಇಲ್ಲಿಗೆ ಬಂದ ಮೇಲೂ ತಾನು ಇಲ್ಲಿಗೆ ಬಂದು ಹೋಗುತ್ತಿದ್ದೆ. ಮೊದಲ ಬಾರಿಗೆ ಬಂದಾಗ ಸೀತಾಪರ್ವತದ ಗುಹೆಯವರೆಗೂ ಹೋಗಿ ಬಂದಿದ್ದೆವು. ಆದರೆ ಕ್ರಮೇಣ ನಾಗವೇಣಿಯನ್ನು ಮರೆಯುವ ಯತ್ನ ಮಾಡಿದೆ. ಅವಳು ಎಷ್ಟೆಂದರೂ ಯಜಮಾನರ ಮಗಳು. ಮದುವೆಯಾಗಿರುವಾಕೆ. ತಾನು ಅವಳಿಗಾಗಿ ಹಂಬಲಿಸಬಾರದು ಎಂದು ನಿರ್ಧರಿಸಿದೆ.
ಆದರೆ ಈಗ ಮತ್ತೆ ಬಂದು ಇಲ್ಲಿ ಸಿಕ್ಕಿ ಬಿದ್ದಿದ್ದೇನೆ.
ನಾಗವೇಣಿ ತನ್ನೊಡನೆ ಮಾತನಾಡುವಾಗ ಮೈಮರೆಯುತ್ತಾಳೆ. ಗಂಡ ಹತ್ತಿರವಿರುವುದನ್ನು ಮರೆಯುತ್ತಾಳೆ. ತಾನು ಅಲ್ಲಿದ್ದರೆ ಬೇರೇನೂ ಆಕೆಗೆ ಬೇಕಾಗುವುದಿಲ್ಲ. ಅಂತಹಾ ಪರವಶತೆ. ಆದರೆ ಇದರ ಪರಿಣಾಮ ಮುಂದೆ ಏನಾಗುತ್ತದೋ ಯಾರು ಬಲ್ಲರು? ಗಣಪಯ್ಯ ಇದನ್ನೆಲ್ಲ ಯಾವ ರೀತಿಯಲ್ಲಿ ಅರ್ಥವಿಸಿಕೊಳ್ಳುತ್ತಾನೋ. ಹೀಗೆ ವರ್ತಿಸಬೇಡವೆಂದು ನಾಗವೇಣಿಗೆ ಹೇಳಲೆ? ಇಲ್ಲಿ ತನ್ನ ಸ್ವಾರ್ಥ ಅಡ್ಡ ಬರುತ್ತದೆ. ನಾಗವೇಣಿ ಹಾಗೆ ವರ್ತಿಸುವುದು ತನಗೆ ಬೇಕು. ಅವಳು ತನ್ನೆದುರು ಹಾಗೆಲ್ಲ ಮಾತನಾಡಬೇಕು.ನಗಬೇಕು. ಗಂಡನನ್ನು ನಿರ್ಲಕ್ಷ್ಯದಿಂದ ಕಾಣಬೇಕು. ಅಂದರೆ ತನಗೆ ಸಂತೋಷ-ತೃಪ್ತಿ. ಹೀಗೂ ತಾನು ಬಯಸುತ್ತೇನೆ; ನಾಗವೇಣಿಯ ಬಾಳು ಹಾಳಾಗಬಾರದೆಂದೂ ಆಶಿಸುತ್ತೇನೆ. ಆದರೆ ಈ ಎರಡೂ ಆಗುವುದು ಸಾಧ್ಯವೆ?
ಊರಿಗೆ ಹಿಂತಿರುಗೋಣವೆಂದರೆ ಇಲ್ಲಿಂದ ಹೋಗುವುದು ಹೇಗೆ? ಸುತ್ತಲೂ ನಿಂತ ನೀರು. ನೀರಿನಲ್ಲಿ ಮುಳುಗಿ ನಿಂತ ಮರ ಬಳ್ಳಿಗಳು. ಇಲ್ಲಿ ನಾಲ್ಕು ತಿಂಗಳು ಇದ್ದು ಬರುವಂತೆ ಯಜಮಾನರು ಬೇರೆ ಹೇಳಿದ್ದಾರೆ. ಏನು ಮಾಡುವುದು ಎಂಬುದೇ ಪ್ರಶ್ನೆ.
ಪ್ರಶ್ನೆ ಬಗೆಹರಿಯಲಿಲ್ಲ. ಕೃಷ್ಣಯ್ಯ ಗುಡ್ಡ ಇಳಿದು ಮನೆಗೆ ಬಂದ. ಜಗುಲಿಯ ಮೇಲೆ ಒಡ್ಯಾಣ ಬಿಚ್ಚಿ ಇರಿಸಿ ಒಳ ನಡೆದ. ಕಣ್ಣಿಗೆ ಸೆರಗು ಹಚ್ಚಿಕೊಂಡ ನಾಗವೇಣಿ ಬಿಕ್ಕುತ್ತಾ ಅಡಿಗೆ ಮನೆಯಲ್ಲಿ ಮರೆಯಾದಳು. ಮುಖ ಬಿಗಿದುಕೊಂಡು ಹೊರಬಂದ ಗಣಪಯ್ಯ ಗಡುಸು ದನಿಯಲ್ಲೇ-
“ಎಲ್ಲಿಗಯ್ಯ ಹೋಗಿದ್ದೆ?”
ಎಂದು ಕೃಷ್ಣಯ್ಯನನ್ನು ಕೇಳಿದ. ಕೃಷ್ಣಯ್ಯ ಸ್ಸಂಕಟದಿಂದಲೇ ನುಡಿದ-
“ನೀರು ಇಳಿದಿದ್ರೆ ಊರಿಗೆ ಹಿಂದಿರುಗೋಣ ಅಂತ ಗುಡ್ಡ ಹತ್ತಿ ಇಳಿದು ನೋಡಿ ಬಂದೆ, ಕಾಲು ದಾರಿ ನೀರಿನಲ್ಲಿ ಮುಳುಗಿದೆ…ಈಜು ಹೊಡೆದುಕೊಂಡೇ ಆ ದಂಡೆಗೆ ಹೋಗಬೇಕು”
“ಹುಂ…ಅದೆಲ್ಲ ಈಗಬೇಡ, ದನಕರು ಬಂದಿದ್ರೆ ಕಟ್ಟಿ ಹಾಕು, ನೀರು ಇಳಿದ ಮೇಲೇನೇ ಊರಿಗೆ ಹೋಗುವಿಯಂತೆ”
ಗಣಪಯ್ಯ ಗಡುಸು ದನಿಯನ್ನು ಮೃದುಗೊಳಿಸಿ ನುಡಿದು, ನಕ್ಕ. ಅಡಿಗೆಮನೆಯಿಂದ ಕೇಳಿಬರುತ್ತಿದ್ದ ಬಿಕ್ಕಳಿಕೆಯನ್ನೇ ಆಲಿಸುತ್ತಿದ್ದ ಕೃಷ್ಣಯ್ಯ ನಗಲಿಲ್ಲ. ಕಾಲೆಳೆದುಕೊಂಡು ಕೊಟ್ಟಿಗೆಯತ್ತ ಸಾಗಿದ.
ಕೃಷ್ಣಯ್ಯ ಊಟ ಮುಗಿಸಿ ಹೊರಹೊರಟ ಸ್ವಲ್ಪ ಹೊತ್ತಿನಲ್ಲಿ ನಾಗವೇಣಿ ಸೀರೆಗೆ ಕೈ ಒರೆಸಿಕೊಳ್ಳುತ್ತ ಹೊರಗೆ ಬಂದಳು. ಜಗುಲಿಯ ಮೇಲೆ ಕೃಷ್ಣಯ್ಯ ಇರಲಿಲ್ಲ.
“ಹೌದಾ…ಕೃಷ್ಣಯ್ಯ ಎಲ್ಲಿ?”
ಅವಳು ಎಂದಿನಂತೆ ಗಣಪಯ್ಯನನ್ನು ಕೇಳಿದಾಗ ಗಣಪಯ್ಯ ಹೊಟ್ಟಿನ ರಾಶಿಗೆ ಕಿಡಿ ತಗುಲಿದಂತೆ ಹೊತ್ತಿಕೊಂಡ.
“ಆ ಬೇವರ್ಸಿ ನಿನಗೆ ಯಾರೆ?”
ಎಂದು ಕೇಳಿದ. ಹೆಂಡತಿ ಉತ್ತರಿಸುವ ಮೊದಲೇ ಹಾರಿ ನಿಂತು, ಮತ್ತೊಮ್ಮೆ ಅವನ ಹೆಸರು ಎತ್ತಿದರೆ ಕಡಿದು ಹಾಕುವುದಾಗಿ ಬೊಬ್ಬೆ ಹಾಕಿದ. ಅವನ ಎದುರು ಓಡಿಯಾಡಿದರೆ ಕಾಲು ಕತ್ತರಿಸಿಹಾಕುವೆನೆಂದ. ಅವನ ಹತ್ತಿರ ಮಾತನಾಡಿದರೆ ನಾಲಿಗೆ ಸೀಳುವೆನೆಂದ್ದ. ಗಂಡ ಸಾಮಾನ್ಯ ವ್ಯಕ್ತಿಯಂತೆ ಹೊಲಸು ಮಾತನಾಡುತ್ತ, ಕುಣಿದಾಡುವುದನ್ನು ನೋಡಿ ಹೇಸಿಗೆಯೆನಿಸಿ, ತನ್ನ ಬಗ್ಗೆ ಅವನಾಡಿದ ಮಾತುಗಳಿಂದ ಕ್ರೋಧ ಉಕ್ಕಿ ನಾಗವೇಣಿ-
“ನೀವು ಅದೇನು ಮಾಡ್ತಿರೋ ಮಾಡಿ ಕೃಷ್ಣಯ್ಯ ನನ್ನ ಒಡಹುಟ್ಟಿದೋನು”
ಎಂದಾಗ ಗಣಪಯ್ಯ ಮತ್ತೂ ವ್ಯಗ್ರನಾದ. ಹೆಂದತಿಯನ್ನು ಒಳಗೆ ಎಳೆದುಕೊಂಡು ಹೋಗಿ ಕೈ ಸೋತು ಹೋಗುವವರೆಗೂ ಹೊಡೆದ.
ಆ ನಂತರ ಅವನಿಗೇ ಛೀ ಎನಿಸಿತು. ಸಾಯಿ ಎಂದು ಹೆಂಡತಿಯ ಕೈಬಿಟ್ಟು ಮಂಚದ ಮೇಲೊರಗಿದ.
ಕೃಷ್ಣಯ್ಯ ಹಿಂತಿರುಗಿ ಬಂದಾಗ ಗಣಪಯ್ಯನ ಒಂದು ನಿದ್ದೆ ಮುಗಿದಿತ್ತು. ನಾಗವೇಣಿ ಇನ್ನೂ ಬಿಕ್ಕಳಿಸುತ್ತಿದ್ದಳು. ಕೃಷ್ಣಯ್ಯನನ್ನು ನೋಡಿದಾಗ ಉಕ್ಕಿದ ಸಿಟ್ಟು ಅಲ್ಲೇ ಉಡುಗಿ ಗಣಪಯ್ಯ ಅದೇನೋ ಮಾತಾಡಿ ಹಗುರವಾಗಿ ನಕ್ಕ. ಇಷ್ಟೆಲ್ಲ ರಾದ್ದಾಂತ ಬೇಕಿರಲಿಲ್ಲವೆಂದು ಆತ ನಡೆದುಹೋದುದರ ಬಗ್ಗೆ ಪೇಚಾಡಿಕೊಂಡ. ಕೃಷ್ಣಯ್ಯ ಕೊಟ್ಟಿಗೆಗೆ ಹೋದಾಗ ಗಣಪಯ್ಯ ಕತ್ತಿ ತೆಗೆದುಕೊಂಡು ತೋಟದತ್ತ ಇಳಿದ.
ಕೊಟ್ಟಿಗೆಯ ಬಾಗಿಲು ತೆಗೆದಿರಿಸಿ, ಕೃಷ್ಣಯ್ಯ ಒಳಬಂದ. ಜಗುಲಿಯ ಮೇಲೆ ನಿಂತು ಗಣಪಯ್ಯ ಸಂಕದಾಟಿ ತೋಟದೊಳಗೆ ಮರೆಯಾದುದನ್ನು ಗಮನಿಸಿ ಒಳ ಬಾಗಿಲತ್ತ ತಿರುಗಿದ.
“ನಾಗೂ ಏನಾಯ್ತು?”
ನಾಗವೇಣಿ ಅಡಿಗೆ ಮನೆಯ ಬಾಗಿಲ ದಾರವಂದಕ್ಕೆ ಒರಗಿನಿಂತು ಕಣ್ಣೀರು ತೊಡೆದುಕೊಂಡಳು. ಬಿಚ್ಚಿ ಹೋದ ಮುಡಿ, ಒಡೆದ ಕೈಬಳೆ, ಊದಿಕೊಂಡ ಕಣ್ಣುಗಳು ಕೃಷ್ಣಯ್ಯನ ಪ್ರಶ್ನೆಗೆ ವತ್ತರಿಸಿ ಬಂದ ಅಳು.
“ಬಾವ ಹೊಡದ್ರೇನೆ?”
ಹಿಂದೆಲ್ಲ ಅಮ್ಮ ಹೊಡೆದಾಗ, ಅಪ್ಪ ಗದರಿಸಿದಾಗ ಹೀಗೆಯೇ ಕೇಳುತ್ತಿದ್ದ ಕೃಷ್ಣಯ್ಯ ಕೇಳಿ ಅಳುತ್ತಿದ್ದಾಕೆಯನ್ನು ಸಮಾಧಾನಪಡಿಸಿ, ಕಚಗುಳಿ ಇಟ್ಟು ನಗಿಸುತ್ತಿದ್ದ. ಈಗ?
“ಕಾರಣ ನನಗೆ ಗೊತ್ತು ನಾಗೂ…ಯಜಮಾನರ ಮಾತನ್ನು ಮೀರಲಾರದೆ ನಿಮಗೆ ಆಸರೆಯಾದೀತು ಅಂತ ನಾನು ಬಂದೆ. ಈಗ್ಲೂ ಹೋಗಲಿಕ್ಕೆ ನಾನು ಸಿದ್ದನಾಗಿದೀನಿ”
“ನಿಂದೇನೂ ತಪ್ಪಿಲ್ಲ ಕೃಷ್ಣಯ್ಯ…ನಿನಗೆ ದಮ್ಮಯ್ಯ ಅಂತೀನಿ. ಹಿಂತಿರುಗಿ ಹೋಗೋ ಮಾತಾಡಬೇಡ, ಅವರ ಸ್ವಭಾವವೇ ಹಾಗೆ. ಅವರು ಎಲ್ಲವನ್ನೂ ವಿಪರೀತವಾಗಿ ಅರ್ಥ ಮಾಡ್ಕೋತಾರೆ”
*****
ಮುಂದುವರೆಯುವುದು
ಕೀಲಿಕರಣ: ಸೀತಾಶೇಖರ್