ತಾಯಿ ನೆಬೀಸಾ ಮತ್ತು ಮಗಳು ಕೈರು ಬೇರೇನೂ ಕೆಲಸವಿಲ್ಲದೆ ಎರಡು ದಿನಗಳಿಂದ ಉಟ್ಟಿದ್ದ ಅದೇ ಬಟ್ಟೆಯಲ್ಲಿ ನದಿಯಕಲ್ಲಲ್ಲಿ ಕೂತುಕೊಂಡು ನೀರಲ್ಲಿ ಕಾಲಾಡಿಸುತ್ತ ಸುಮ್ಮನೆ ನಗುತ್ತ ನೋಡುತ್ತಿದರು.ಈ ತಾಯಿಯೂ ಮಗಳೂ ಇಂತಹ ಅನಾಹುತದ ನಡುವೆಯೂ ಹೀಗೆ ಹಸನ್ಮುಖರಾಗಿ ಎಂದಿನಂತೆ ಒಬ್ಬರೊಬ್ಬರ ಮುಖನೋಡಿಕೊಂಡು ನೀರ ಸದ್ದು ಮಾಡಿಕೊಂಡು ಮೌನವಾಗಿ ಕುಳಿತಿರುವುದನ್ನು ಕಂಡು ಕರಳು ಕಿವಿಚುತ್ತಿತ್ತು.
ನೆಬೀಸಾಳ ಅಣ್ಣ ಇಸುಬು ತನ್ನ ಸುಟ್ಟ ತಟ್ಟಿ ಹೋಟೆಲ್ಲಿನ ಮುಂದೆ ಕರಕಲಾದ ಬೆಂಚು ಮೇಜು ಅಲುಮಿನಿಯಂ ಪಾತ್ರೆಗಳನ್ನು ಹರಡಿಕೊಂಡು ಅವುಗಳ ನಡುವೆ ತನ್ನ ಎಂದಿನ ಭಂಗಿಯಲ್ಲಿ ಕಾಲಿನ ಉಗುರುಗಳನ್ನು ಕೀಳುತ್ತಾ ನೆಲಕ್ಕೆ ಉಗಿಯುತ್ತಾ ಕುಳಿತಿದ್ದ. ಸಿಕ್ಕಿದಕ್ಕೆಲ್ಲ ಸುಮ್ಮನೆ ‘ಮಣ್ಣಾಂಗಟ್ಟಿ ಎಂದು ಬೈದು ನೆಲಕ್ಕೆ ಕ್ಯಾಕರಿಸಿಉಗಿಯುವ ಇಸುಬುವಿನ ಹೋಟೆಲ್ಲು ಮೈಯೆಲ್ಲ ಸುಟ್ಟುಕೊಂಡು ಸರ್ವನಾಶವಾಗಿ ಹೋಗಿ ನೋಡುವವರಿಗೆ ತಮಾಶೆಯಾಗಿ ಕಾಣಿಸುತ್ತಿತ್ತು.
ಅತ್ತಕಡೆ ಕೂಜಿಮಲೆ, ಇತ್ತಕಡೆ ಏಲಕ್ಕಿಮಲೆ,ಮುಂದುಗಡೆ ಎತ್ತರಕ್ಕೆ ಈರುಳ್ಳಿಮಲೆ, ಎಡಕ್ಕೆ ರಸ್ತೆಯನ್ನೇ ಸವರಿಕೊಂಡು ಸದಾಕಾಲವೂ ಮೈಕುಲುಕಿಕೊಂಡು ಹರಿಯುವ ಬೆಣ್ಣೆ ಹಳ್ಳದ ನೀರು…. ಈ ಎಲ್ಲ ದೈವಲೀಲೆಯ ನಡುವೆ ಕಪ್ಪು ಕುರುವಿನಂತೆ ಕರಕಲಾಗಿ ಎದ್ದು ನಿಂತಿರುವ ಇಸುಬುವಿನ ತಟ್ಟಿಹೋಟೆಲ್ಲು….. ವಿಕಾರವೂ, ಅನಗತ್ಯ ತಮಾಶೆಯೂ, ಕೊಂಚ ಹೆಚ್ಚೇ ಸೌಂಧರ್ಯವೂ ತುಂಬಿಕೊಂಡಿರುವ ಈ ಜಗತ್ತು…..
ದೇವರ ಕೊಲ್ಲಿ ಎಂಬ ಈ ಸುಂದರವೂ ನಿಗೂಢವೂ ನಿತ್ಯ ದುಃಖ್ಖಿಸುತ್ತಿರುವ ಸುಂದರಿಯಂತೆಯೂ ಇರುವ ತಿರುವಿನಲ್ಲಿ ಬೈಕು ನಿಲ್ಲಿಸಿಕೊಂಡು ಈ ಇಸುಬುವಿಗೆ ಇಂತಹ ಆಪತ್ತಿನ ಕಾಲದಲ್ಲಿ ಏನು ದೈರ್ಯ ತುಂಬುವುದು ಹೇಗೆ ದೈರ್ಯ ತುಂಬುವುದು ಎಂದು ಎಂದಿನಂತೆ ಹಣೆ ನಿರಿಗೆ ಮಾಡಿಕೊಂಡು ಯೋಚಿಸುತ್ತಿದ್ದೆ.
ಹಾಗೆ ನೋಡಿದರೆ ಈ ಇಸುಬು ಇಲ್ಲದ ವೇಳೆಯಲ್ಲಿ ಶುಕ್ರವಾರದ ನಡು ಮದ್ಯಾಹ್ನ ದ ಹೊತ್ತಿನಲ್ಲಿ ಅಂದರೆ ಇಸುಬು ಮಡಿಕೇರಿ ಯ ಸಂತೆಯನ್ನೂ ವಾರದ ಜುಮ್ಮಾ ನಮಾಝನ್ನೂ ಮುಗಿಸಿ ಬರುವುದರೊಳಗೆ ತಮ್ಮನ್ನು ಬಂದು ನೋಡಬೇಕೆಂದೂ ತಾವು ಏನಾದರೊಂದು ಯೋಚಿಸಿ ಇಟ್ಟಿರುವುದಾಗಿಯೂ ಇಸುಬು ಇರುವ ವೇಳೆಯಲ್ಲಿ ಏನೂ ಹೇಳಲಾಗುವುದಿಲ್ಲ ವೆಂದೂ ಅವನೇನಾದರೂ ಇದ್ದಲ್ಲಿ ಎಲ್ಲಾ ಹಾಳಾಗಿ ಹೋಗುವುದೆಂದೂ ಇಸುಬುವಿನ ತಂಗಿ ನೆಬೀಸಾ ತನ್ನ ಮಗಳಾದ ಕೈರುವಿನ ಕೈಯಲ್ಲಿನನಗೆ ಕಾಗದ ಬರೆದು ತಿಳಿಸಿದ್ದಳು .
ನಾನೂ ನೆಬೀಸಾಳ ಕಾಗದದ ಆದೇಶವನ್ನೂ ಅರ್ಥವನ್ನೂ ಮನಗಂಡು ಶುಕ್ರವಾರವೇ ಹೊರಟವನು ದಾರಿಯಲ್ಲಿ ಹಿಂದೂ-ಮುಸ್ಲಿಂ ಗಲಾಟೆಯಲ್ಲಿ ಸಿಲುಕಿಕೊಂಡು ಅದು ಹೇಗೋ ಏನೂ ಆಗದೆ ಶನಿವಾರದ ನಡು ಮದ್ಯಾಹ್ನದ ಹೊತ್ತು ಇಸುಬುವಿನ ಸುಟ್ಟ ಹೋಟೆಲ್ಲಿನ ಮುಂದೆ ಬಂದು ನಿಂತು ನಿಂತಿದ್ದೆ . ಯಾಕೋ ಎಂದೂ ಬಾರದ ವೈರಾಗ್ಯವೊಂದು ನನ್ನನ್ನು ಆ ಹಸಿರು ಸಾಲಿನ ನಡುವೆ ಸುತ್ತಿಕೊಂಡು ಏನೂ ಬೇಡವೆನಿಸುತ್ತಿತ್ತು . ಸಂಬಂಧಗಳನ್ನು ಜೋಡಿಸುವುದು, ಕಾಣೆಯಾದವರನ್ನು ಹುಡುಕಿಕೊಡುವುದು, ಮರೆತುಹೋದವರನ್ನು ಮತ್ತೆ ನೋಡುವುದು ನನ್ನ ಈ ಎಲ್ಲ ಹುಚ್ಚಾಟಗಳೂ ಈ ಸುಟ್ಟುಹೋದ ಹೋಟೆಲ್ಲಿನ ಮುಂದೆ ಎಷ್ಟು ನಗೆಪಾಟಲಿನ ವಿಷಯ ಅನಿಸುತ್ತಿತ್ತು. ಹಾಗೇ ಸುಮ್ಮನೆ ಆವಿಯ ಹಾಗೆ ಈ ಬೆಟ್ಟಸಾಲಿನ ನಡುವಿಂದ ಯಾವುದಾದರು ಮಂತ್ರ ಬಲದಿಂದ ಮಾಯವಾಗುವುದು ಸಾಧ್ಯವಿದ್ದರೆ ಎಂದು ಯೋಚಿಸಿಬಿಟ್ಟೆ.
ಸಣ್ಣದಿರುವಾಗ ನಾನೂ ಈ ಇಸುಬುವೂ ನದಿಯ ನೀರಿನಲ್ಲಿ ಒಂದು ಕಾಲಿನಲ್ಲಿ ಗಂಟೆಗಟ್ಟಳೆ ಕಂಠಮಟ್ಟ ನಿಂತುಕೊಂಡು ಕುಟ್ಟಿಚಾತ ಎಂಬ ದೈವವನ್ನು ಆವಾಹಿಸುತ್ತಿದ್ದೆವು. ಬೇಕೆಂದಾಗ ಬೇಕೆಂಬ ಪ್ರಾಣಿಯ ರೂಪವನ್ನು ತಾಳಿಕೊಂಡು ನಮಗೆ ಬೇಕೆಂದದ್ದನ್ನು ತಂದು ಕೊಡಬಲ್ಲ ಕುಟ್ಟಿಚಾತದ ಆವಾಹನೆಯಾಗಬೇಕಾದರೆ ಬೆಳಗೆ ಬರಿಹೊಟ್ಟೆಗೇ ಒಂದು ಬೆಂಕಿತುದಿಯಷ್ಟು ಗಾತ್ರದ ಮಲವನ್ನು ಸೇವಿಸಬೇಕೆಂದೂ ಆಮೇಲೆ ಕಂಠಮಟ್ಟ ಒಂಟಿಕಾಲಲ್ಲಿ ನದಿಯಲ್ಲಿ ನಿಲ್ಲಬೇಕೆಂದೂ ಇಸುಬು ಯಾರಿಂದಲೋ ಕೇಳಿಕೊಂಡು ಬಂದಿದ್ದ .ನಾವಿಬ್ಬರೂ ಬೆಳಗೆ ಹಾಗೇ ಮಾಡಿಕೊಂಡು ನದಿಯನೀರಲ್ಲಿ ಸೂರ್ಯ ಮೂಡುವವರೆಗೆ ನಿಂತುಕೊಳ್ಳುತ್ತಿದ್ದೆವು
ಕುಟ್ಟಿಚಾತ ಒಂದು ಕಾಡುಬೆಕ್ಕಿನ ರೂಪವನ್ನು ಆವಾಹಿಸಿಕೊಂಡು ನಡುರಾತ್ರಿಯಲ್ಲಿ ಅರಸನೊಬ್ಬನ ಮನೆಗೆ ನುಗ್ಗಿ ಆಹಾರವನ್ನೂ ವಸ್ತ್ರ ಒಡವೆಗಳನ್ನೂ ತಂದು ಒಪ್ಪಿಸುವನೆಂದೂ ನಾವು ಅವುಗಳನ್ನು ಆನಂದಿಸಿ ಬೆಳಗಾಗುವುದರೊಳಗೆ ತಿರುಗಿಸಿ ಕುಟ್ಟಿಚಾತನಿಗೇ ಒಪ್ಪಿಸಬೇಕೆಂದು ಕುಟ್ಟಿಚಾತ ಅವುಗಳನ್ನು ತಿರುಗಿಸಿ ಅರಸನ ಮನೆಯಲ್ಲೇ ಮರಳಿ ಇಡುವನೆಂದೂ ಒಂದುವೇಳೆ ನಾವು ಹಿಂತಿರುಗಿಸದಿದ್ಡರೆ ನಮ್ಮನ್ನು ಜೀವನ ಪೂರ್ತಿ ನಾಯಿಗಳನ್ನಾಗಿ ಮಾಡಿಬಿಡುವನೆಂದೂ ಹಿಂತಿರುಗಿಸಿದರೆ ನಮಗೆ ಆಶೆಯಾಗುವುದನ್ನೆಲ್ಲಾ ಹೀಗೇ ನಡುರಾತ್ರಿಯ ಹೊತ್ತು ತಂದುಕೊಡುತ್ತಿರುತ್ತಾನೆಂದು ಇಸುಬು ನನ್ನಲ್ಲಿ ಆಶೆ ಹುಟ್ಟಿಸಿ ಹಲವು ದಿನಗಳಷ್ಟು ಕಾಲ ನನ್ನನ್ನು ಮಲತಿನ್ನುವಂತೆ ಮಾಡಿಬಿಟ್ಟಿದ್ದ. ಮತ್ತು ನೀರಲ್ಲಿ ನಿಲ್ಲಿಸಿದ್ದ.
ಈಗ ನೋಡಿದರೆ ಇಸುಬು ಯಾವ ಕುಟ್ಟಿಚಾತನ ಬಲವೂ ಇಲ್ಲದೆ ಆದರೂ ಏನೂ ಆಗದವನಂತೆ ಧಿಕ್ಕಾರದ ಮುಖ ಮಾಡಿಕೊಂಡು ಕುಳಿತಿದ್ದ. ಅವನ ಯಾವತ್ತಿನ ಧಿಕ್ಕಾರದ ಮುಖ. ಪರಮ ಪಾಷಾಂಡಿಯೂ ಹಠಮಾರಿಯೂ ಆದ ತನ್ನ ಅಣ್ಣ ಇಸುಬುವಿನಿಂದ ತನ್ನ ಬಾಳೆಲ್ಲವೂ ಹಾಳಾಯಿತೆಂದೂ ತನ್ನ ಮಗಳು ಕೈರು ಅಪ್ಪನ ಮುಖವನ್ನೇ ನೋಡದೆ ಈ ಹದಿನಾರು ವರ್ಷಗಳನ್ನು ಅನಾಥೆಯಂತೆ ಕಳೆಯಬೇಕಾಯಿತೆಂದೂ ಇಸುಬುವಿನ ತಟ್ಟಿ ಹೋಟೆಲ್ಲಿನ ಅಲುಮಿನಿಯಂ ಪಾತ್ರೆಗಳನ್ನು ನದಿಯಲ್ಲಿ ತೊಳೆದು ತೊಳೆದು ತನ್ನ ಆಯುಷ್ಯವೆಲ್ಲವೂ ಮೂರಾಬಟ್ಟೆಯಾಯಿತೆಂದೂ ಹೇಗಾದರೂ ತನ್ನನ್ನೂ ತನ್ನ ಮಗಳನ್ನೂ ಈ ನರಕದಿಂದ ಬಿಡಿಸಬೇಕೆಂದೂ ತನ್ನ ಗಂಡ ಅಬ್ಬಾಸ್ ಬ್ಯಾರಿಯ ಎರಡನೆಯ ಹೆಂಡತಿಯ ಎಂಜಲು ತಿಂದಾದರೂ ಬದುಕುವೆನೆಂದೂ ನೆಬೀಸಾ ತನ್ನ ಇತ್ತೀಚಿನ ಪತ್ರದಲ್ಲಿ ತಿಳಿಸಿದ್ದಳು .ಅವಳಿಗೆ ನಾನು ಮಂಜೇಶ್ವರದ ಬಳಿಯಲ್ಲಿ ಅವಳ ಗಂಡ ಅಬ್ಬಾಸ್ ಮುಕ್ರಿಯವರನ್ನು ಸಂಸಾರ ಸಮೇತ ಕಂಡು ಹುಡುಕಿದ್ದು ವಿಪರೀತ ಖುಷಿಯನ್ನು ಉಂಟುಮಾಡಿತ್ತು.
ಹದಿನಾರು ವರ್ಷಗಳ ಹಿಂದೆ ಓಡಿಹೋದ ಆಕೆಯ ಗಂಡ ಅಬ್ಬಾಸ್ ಮುಕ್ರಿ ಇನ್ನೊಂದು ಸಂಸಾರ ಮಾಡಿಕೊಂಡಿದ್ದರೂ ಸುಖವಾಗಿರುವುದೂ ಆ ಸಂಸಾರ ಸುಖದೊಳಗೂ ಆತ ತನ್ನನ್ನೂ ಮಗಳು ಕೈರುವನ್ನೂ ನೆನೆದು ಅತ್ತಿದ್ದೂ ಹೇಗದರೂ ಮಾಡಿ ತನ್ನನ್ನೂ ಮತ್ತು ತನ್ನ ಮೊದಲನೆಯ ಸಂಸಾರವನ್ನೂ ಒಂದುಗೂಡಿಸಬೇಕೆಂದು ನನ್ನ ಕೈ ಹಿಡಿದು ಬೇಡಿಕೊಂಡದ್ದು ಎಲ್ಲವನ್ನೂ ಹದಿನೈದು ದಿನಗಳ ಹಿಂದೆ ಒಂದು ಶುಕ್ರವಾರ ಬಂದಿದ್ದಾಗ ನಾನು ಅವರಿಬ್ಬರಿಗೆ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದೆ. ಅದು ಹೇಗೆ ಅಬ್ಬಾಸ್ ಮುಕ್ರಿಯವರ ಎರಡನೆಯ ಹೆಂಡತಿ ತನ್ನ ಏಳೆಂಟು ಮಕ್ಕಳನ್ನು ಸುತ್ತ ನಿಲ್ಲಿಸಿಕೊಂಡು ಅವರೆಲ್ಲರ ತಲೆಯ ಮೇಲೆ ಆಣೆಯಿಟ್ಟು ತನಗೂ ತನ್ನ ಪತಿಯ ಮೊದಲನೆಯ ಸಂಸಾರವನ್ನು ನೋಡಲು ಅಮಿತವಾದ ಆಶೆಯಾಗುತ್ತಿರುವುದಾಗಿಯೂ ಹೇಗಾದರೂ ಮಾಡಿ ಎರಡೂ ಸಂಸಾರಗಳನ್ನೂ ಒಂದು ಮಾಡಿ ಅಲ್ಲಾಹುವಿನ ಕಡೆಯಿಂದ ಪುಣ್ಯ ಕಟ್ಟಿಕೊಳ್ಳಬೇಕೆಂದೂ ತನ್ನದೇ ಗಂಡನ ರಕ್ತ ಮಾಂಸಗಳನ್ನು ಪಡೆದು ಹುಟ್ಟಿದ ಕೈರು ಎಂಬ ಹುಡುಗಿ ಹೀಗೆ ಅನಾಥಳಂತೆ ಕಂಡವರು ಹೋಟಲಲ್ಲಿ ಉಂಡ ಎಂಜಲು ಪಾತ್ರೆಗಳನ್ನು ತೊಳೆಯುತ್ತಿರುವುದನ್ನು ಕೇಳಿ ಸಹಿಸಲಾಗುತ್ತಿಲ್ಲವೆಂದೂ ನನ್ನಗೆ ಬಾರಿ ಬಾರಿ ಸತ್ಯ ಮಾಡಿಹೇಳಿದ್ದನ್ನು ನಾನು ಅವರ ತಟ್ಟಿ ಹೋಟಲ್ಲಿನೊಳಗೆ ಇಸುಬು ಇಲ್ಲದಿರುವಾಗ ಹೇಳಿ ತಾಯಿಮಗಳಿಬ್ಬರೂ ಕಣ್ಣೀರು ಹರಿಸುವಂತೆ ಮಾಡಿದ್ದೆ. ಅಮೇಲೆ ನನಗೇ ನಾನು ಹೇಳಿದ್ದು ಅತಿಯಾಯಿತೆಂದು ಅನಿಸಿ ಹಳಹಳಿಕೆ ಶುರುವಾಗಿತ್ತು.
ಯಾಕೆಂದರೆ ನಾನು ಹೇಳಿ ಮುಗಿಸಿ ಕೊಂಚ ಹೊತ್ತಲ್ಲೇ ನೆಬೀಸ ನನ್ನ ಮುಂದಿಂದಲೇ ಕರುಳು ಕಿವಿಚುವಂತೆ ಮಗಳ ಕೈಯಲ್ಲಿ ಗಂಡನಿಗೆ ಕನ್ನಡದಲ್ಲಿ ಒಂದು ಪತ್ರವೊದನ್ನು ಹೇಳಿಬರೆಯಿಸಿ ನನ್ನ ಕೈಯಲ್ಲಿ ಕೊಟ್ಟು ಕಳುಹಿಸಿದ್ದಳು.
ಗಂಡನಿಲ್ಲದ ತನ್ನ ಹದಿನಾರು ವರ್ಷಗಳು ಅದು ಹೇಗೆ ನರಕದಂತೆ ಕಳೆಯಿತೆಂದೂ, ತನ್ನ ಮಗಳು ಕೈರುನ್ನೀಸಾ ಅದು ಹೇಗೆ ಒಂದುವರ್ಷವಾಗುವ ಮೊದಲೇ ಬಾಪಾ ಬಾಪಾ ಎಂದು ಕಾಣೆಯಾದ ಅಪ್ಪನನ್ನು ಹುಡುಕುತ್ತಾ ನೆಲದಲ್ಲೆಲ್ಲಾ ತೆವಳುತ್ತಿದ್ದಳೆಂದೂ ಅದು ಹೇಗೆ ಇಸುಬು ಎಂಬ ತನ್ನ ಅಣ್ಣ ಆ ಮಾತು ಬಾರದ ಮಗುವನ್ನು ಅದರ ಈ ಆರ್ತನಾದಕ್ಕಾಗಿ ಶಿಕ್ಷಿಸುತ್ತಿದ್ದನೆಂದೂ
ಕುರಾನಿನ ಪ್ರಕಾರವಾಗಿಯೇ ಮದುವೆಯಾಗಿ ಅದರಿಂದ ಮಗುವನ್ನೂ ಪಡೆದ ತಾವಿಬ್ಬರೂ ಬೇರೆಬೇರೆಯಾಗಲು ದುಷ್ಟನಾದ ತನ್ನ ಅಣ್ಣನೇ ಕಾರಣವೆಂದೂ ಎಲ್ಲವನ್ನೂ ಕಾಣುವವನೂ ಅರಿತವನೂ ಆದ ಆ ಪಡೆದವನು ಇದೊಂದು ಅನ್ಯಾಯವನ್ನು ಅದು ಹೇಗೆ ಕಾಣದೆ ಇರುವನೆಂದೂ
ಇದುವರೆಗೆ ತಾನು ಮತ್ತು ತನ್ನ ಮಗಳು ಕೈರು ಈ ಇಹಲೋಕದಲ್ಲಿ ಅಲ್ಲದಿದ್ದರೆ ಆ ಮುಹ್‌ಶರಾ ಎಂಬ ಪರ ಲೋಕದಲ್ಲಾದರೂ ನಿಮ್ಮನ್ನು ಕಾಣುವೆನೆಂದು ತಿಳಿದಿದ್ದವೆಂದೂ ಆದರೆ ಈಗ ತಾವು ಮಂಜೇಶ್ವರದಲ್ಲಿ ಇರುವುದು ತಿಳಿದಿರುವುದರಿಂದ ಅಲ್ಲೇ ಬಂದು ಬದುಕುವುದಾಗಿಯೂ ಮಗಳಿಂದ ಬರೆಸಿದ್ದಳು.
ಮಗಳು ಕೈರುವೂ ಕಾಗದದಕೊನೆಯಲ್ಲಿ ತನ್ನದೂ ಕೆಲವು ಸಾಲುಗಳನ್ನು ಸೇರಿಸಿ ತಾವರೆಗೆ ಹೇಗೆ ಚಂದ್ರನನ್ನು ಕಾಣಲು ಆಶೆಯಾಗುವುದೋ ಹಾಗೆ ತನಗೆ ಇದುವರೆಗೆ ಕಂಡೇ ಇರದ ತನ್ನ ಬಾಪಾನೆ ಮುದ್ದುಮುಖವನ್ನು ನೋಡುನ ಆಶೆಯಾಗುತ್ತಿರುವುದಾಗಿಯೂ ಆದಷ್ಠು ಬೇಗ ತಮ್ಮಿಬ್ಬರನ್ನು ಈ ನರಕದ ಬೆಂಕಿಯಿಂದ ರಕ್ಷಿಸಬೇಕೆಂದೂ ಬೇಡಿಕೊಂಡಿದ್ದಳು.
ನೆಬೀಸಾ ಈ ಕಾಗದ ಕೊಂಚ ಅತಿಯಾಯಿತಲ್ಲವಾ ಎಂದು ನಾನು ಅವಳನ್ನು ಸಹಜವಾಗಿಯೇ ಕೇಳಿದ್ದೆ.
ನೀನು ಸುಮ್ಮನೆ ಇರು ಇವನೇ ನಾನು ನನ್ನ ಮಗಳು ಈ ಬಂಡಗೆಟ್ಟವನ ಆಡಳಿತದಲ್ಲಿ ಪಟ್ಟಿರುವ ಬಂಗ ಆ ಪಡೆದವನಿಗೇ ಗೊತ್ತು. ನಿನಗೆ ಪೇಟೆಯಲ್ಲಿ ಆರಾಮವಾಗಿ ಕಾಲಮೇಲೆ ಕಾಲು ಹಾಕಿ ಸಂಬಳದ ನೋಟು ಎಣಿಸುವವನಿಗೆ ನಮ್ಮ ಬೆನೆ ಏನು ಗೊತ್ತು
ಅವಳು ನನಗೇ ರೋಪು ಹಾಕಿದ್ದಳು .
ನಾನು ಅವರ ಕಾಗದವನ್ನು ಸುಮ್ಮನೆ ಮಡಚಿ ಜೇಬಿಗೆ ಹಾಕಿ ಮಂಗಳೂರಿನ ಕಡೆಗೆ ಬೈಕು ಹತ್ತಿದ್ದೆ.ದಾರಿಯುದ್ದಕ್ಕೂ ನನಗೆ ಕೆಡುಕೆನಿಸುತ್ತಿತ್ತು . ನನ್ನ ವೃಥಾ ಎಲ್ಲದರಲ್ಲೂ ತಲೆ ಹಾಕುವ ಗುಣದಿಂದಾಗಿ ಬಾಲ್ಯದ ಗೆಳೆಯ ಇಸುಬುವನ್ನೂ ಅವನ ಕರುಳಿನ ಬಳ್ಳಿಯಂತಹ ತಂಗಿ ನೆಬೀಸಾಳನ್ನು ದೂರಮಾಡುತ್ತಿರುವುದೂ , ನೆಬೀಸಾಳ ಈ ಪ್ರೀತಿ ತುಂಬಿದ ಪತ್ರವನ್ನು ಕೊಟ್ಟು ಅಬ್ಬಾಸ್ ಮುಕ್ರಿಯ ಎರಡನೆ ಹೆಂಡತಿಯ ಮನಸಿನೊಳಗೆ ಅಲ್ಲೋಲಕಲ್ಲೋಲ ಉಂಟುಮಾಡುವುದು ಇದೆಲ್ಲಾ ಬೇಡವಾಗಿದ್ದ ಕೆಲಸ ಅಂತಲೂ ಅನಿಸುತ್ತಿತ್ತು. ಎರಡು ಮೂರುದಿನ ಆ ಪತ್ರವನ್ನು ನನ್ನ ಬಳಿಯೇ ಇಟ್ಟುಕೊಂಡಿದ್ದೆ.
ನಾಲ್ಕನೆಯ ದಿನ ಅಬ್ಬಾಸ್ ಮುಕ್ರಿಯವರು ಮಂಜೇಶ್ವರದಿಂದ ರೈಲು ಹತ್ತಿ ನನ್ನನ್ನು ಹುಡುಕಿಕೊಂಡು ಆಫೀಸಿಗೇ ಬಂದು ಬಿಟ್ಟಿದ್ದರು . ನನ್ನ ಮುಂದೆ ಆಶೆಯಿಂದ ಕುಳಿತಿದ್ದ ಅವರ ವಿರಹವೋ ಕಳವಳವೋ ಗೊತ್ತಾಗದ ಮುಖನೋಡಿ ತಡೆಯಲಾರದೆ ಆ ಪತ್ರವನ್ನು ಅವರ ಕೈಗೆ ಕೊಟ್ಟುಬಿಟ್ಟಿದ್ದೆ.
ನನ್ನ ಕಣ್ಣ ಮುಂದೆಯೇ ಅವರು ಆ ಪತ್ರವನ್ನು ಕಣ್ಣಿಗೆ ಕಣ್ಣಡಕ ಏರಿಸಿಕೊಂಡು ಓದಿ ಗಳಗಳ ಅಳಲು ಶುರು ಮಾಡಿದ್ದರು.
ಸುಮಾರು ನಲವತ್ತು ನಲವತ್ತೈದರ ಪ್ರಾಯದ ಅಬ್ಬಾಸ್ ಮುಕ್ರಿಯವರ ಅಳುವ ಮುಖ ಅರವತ್ತರ ಮುದುಕನಂತೆ ಕಾಣಿಸುತ್ತಿತ್ತು . ಅವರ ದಪ್ಪ ಕನ್ನಡಕ , ಅವರ ಬೆಳ್ಳಗಾಗಿದ್ದ ಕುರುಚಲು ಗಡ್ಡ, ಅವರ ಮಾಸಿ ಹೋಗಿದ್ದ ಬಿಳಿಯ ಮುಂಡಾಸು, ಅವರ ಸುಕ್ಕುಗಟ್ಟಲು ತೊಡಗಿದ್ದ ಮುಖ, ಅವರ ಸಣ್ಣಗೆ ನಡುಗುತ್ತಿದ್ದ ದೇಹ, ಈ ಎಲ್ಲ ಪ್ರಾಯ ದೋಷಗಳನ್ನು ಮರೆಸುವಂತೆ ಅವರು ಆ ಪ್ರೇಮದ ಪತ್ರವನ್ನು ಓದುತ್ತಿದ್ದಂತೆ ಹೊಳೆಯ ತೊಡಗಿದ್ದ ಅವರ ಕಣ್ಣುಗಳು.ಅಬ್ಬಾಸ್ ಮುಕ್ರಿಯವರು ಕಾಲದ ಸುಕ್ಕುಗಳನ್ನು ಮೀರಿ ಹದಿನಾರು ವರ್ಷಗಳಷ್ಟು ಹಿಂದಕ್ಕೆ ಹೋಗಿ ಮದು ಮಗನಂತೆ ಕಂಪಿಸುತ್ತಿದ್ದರು. ಏಕಕಾಲದಲ್ಲಿ ಅವರ ಅಳುವಿನಲ್ಲಿ ಧ್ವನಿಯ ಏರಿಳಿತಗಳಲ್ಲಿ ಪ್ರೇಮಿಯೂ ಮದು ಮಗನೂ ವಿರಹಿಯೂ ಅಪ್ಪನೂ ಏಕಕಾಲದಲ್ಲಿ ನುಗ್ಗಿಬರಲು ನೋಡುತ್ತಿದ್ದವು .ಅಬ್ಬಾಸ್ ಮುಕ್ರಿಯವರು ತಮ್ಮ ಕೈಯಲ್ಲಿನ ತಾಯಿ ಮಗಳ ಪತ್ರವನ್ನು ಕಣ್ಣಿಗೊತ್ತಿಕೊಂಡು ಚುಂಬಿಸಿ ಮಡಚಿ ಜೇಬಿಗಿಟ್ಟು ಕೊಂಡಿದ್ದರು.
ನಾನು ಒಂದು ಮಾತು ಹೇಳಲು ಅನುಮತಿಸುತ್ತೀರಾ ಎಂದು ನನ್ನ ಅನುಮತಿಗಾಗಿ ಬೇಡಿದರು.
ನಾನು ಮಾತಾಡದೇ ಅವರನ್ನು ನೋಡಿದೆ.
ನಾನು ಪಡೆದ ಅಲ್ಲಾಹುವಿನ ಪರಮವಿಶ್ವಾಸಿ . ಯಾರಿಗೂ ಯಾವ ತರಹದಲ್ಲೂ ಕನಸಿನಲ್ಲೂ ಕೇಡು ಬಗೆದವನಲ್ಲ .ಆದರೆ.. ಎಂದು ನಿಲ್ಲಿಸಿದರು.
ಆದರೆ ನಿಮಗೆ ಗೊತ್ತಾ. ಕಳೆದ ಹದಿನಾರು ವರ್ಷಗಳಿಂದ ಒಂದು ರಾತ್ರಿಯೂ ಬಿಡದೆ ಅಲ್ಲಾಹುವಿನಲ್ಲಿ ಒಂದು ವಿಷಯವನ್ನು ಮಾತ್ರ ಬೇಡುತ್ತಿದ್ದೇನೆ ಎಂದು ನನ್ನನ್ನು ನೋಡಿದರು.
‘ಕಳೆದ ಹದಿನಾರು ವರ್ಷಗಳಿಂದ ನನ್ನನ್ನೂ ನನ್ನ ಹೆಂಡತಿ ನೆಬೀಸಾಳಾನ್ನೂ ನನ್ನ ಮಗಳನ್ನೂ ಬೇರೆಯಾಗುವಂತೆ ಮಾಡಿದ ಆ ಮಣ್ಣಾಂಗಟ್ಟಿ ಇಸುಬುವಿನ ಸರ್ವನಾಶವಾಗಿ ಹೋಗಿ ಅವನು ಮಡಿಕೇರಿಯ ಸಂತೆಯಲ್ಲಿ ಕುಷ್ಟರೋಗಹಿಡಿದು ಹುಣ್ಣಾಗಿ ಬಿಕ್ಷೆ ಬೇಡುವುದನ್ನು ನನ್ನ ಕಣ್ಣಿಂದ ನೋಡುವಂತೆ ಅನುವು ಮಾಡಿಕೊಡು ಪಡೆದವನೇ, ಆ ನಂತರ ನನ್ನ ರೂಹು ಹೋದರೂ ಪರವಾಗಿಲ್ಲ ತಂಬುರಾನೇ ಎಂದು ನಾನು ಬೇಡಿಕೊಳ್ಳುತ್ತಿರುವೆ ಗೊತ್ತಾ ಎಂದು ಕನ್ನಡಕ ತೆಗೆದು ಕಣ್ಣು ಒರೆಸಿಕೊಂಡು ಎದ್ದಿದ್ದರು.
*
*
*
ಈಗ ನೋಡಿದರೆ ಕುಷ್ಟಹಿಡಿದು ಹುಣ್ಣಾಗಿರದಿದ್ದರೂ ಹಿಂಧೂ ಮುಸ್ಲಿಂ ಗಲಾಟೆಗೆ ಸಿಲುಕಿ ಇಸುಬುವಿನ ತಟ್ಟಿಹೋಟೆಲ್ಲು ಸರ್ವನಾಶವಾಗಿ ಹೋಗಿ ಇಸುಬು ಕಾಲಬೆರಳಿನ ಉಗುರು ಕೀಳುತ್ತಾ ತನ್ನ ಎಂದಿನ ವರಸೆಯಲ್ಲಿ ಮನಸ್ಸಿನಲ್ಲಿಯೇ ಬೈಯುತ್ತಾ ನೆಲಕ್ಕೆ ಸಣ್ಣಗೆ ಉಗಿಯುತ್ತಾ ಕುಳಿತಿದ್ದ. ಆತ ಶಾಫ ಹಾಕುತ್ತಿರುವುದು ಹೋಟೆಲ್ಲಿಗೆ ಬೆಂಕಿ ಹಾಕಿದವರಿಗೋ ಹೊಳೆಯಲ್ಲಿ ಕಾಲಾಡಿಸುತ್ತಿರುವ ತಂಗಿ ಮತ್ತು ಅವಳ ಮಗಳಿಗೋ ಅಥವಾ ನನಗೋ ಅಥವಾ ಇದನ್ನೆಲ್ಲ ಸುಮ್ಮನೆ ನೋಡುತ್ತಿರುವ ಭಗವಂತನಿಗೋ ಗೊತ್ತಾಗದಂತೆ ದೇವರಕೊಲ್ಲಿಯ ತಿರುವಿನ ಆ ಸ್ವರ್ಗಸದೃಶ ಪರಿಸರದಲ್ಲಿ ಮಂಜು ಮುಸುಕಿಕೊಳ್ಳಲು ತೊಡಗಿತ್ತು. ಕಾಡೂ ನದಿಯೂ ರಸ್ತೆಯೂ ಹೋಟೆಲ್ಲೂ ಮಲೆಗಳೂ ಮನುಷ್ಯರೂ ಎಲ್ಲವೂ ಮಂಜಿನೊಳಗೆ ಸಿಲುಕಿಕೊಂಡು ಇಲ್ಲಿ ಸಾವಿರಾರು ವರ್ಷಗಳಿಂದ ಒಂದು ಹುಲ್ಲು ಕಡ್ಡಿಯೂ ಬದಲಾಗಿಲ್ಲ ಎನ್ನುವ ಸುಳ್ಳು ನಂಬಿಕೆ ಹುಟ್ಟಿಸುತ್ತಿತ್ತು.
‘ ಆ ಮಂಜಿನಲ್ಲಿ ಏನು ಮಣ್ಣಾಂಗಟ್ಟಿ ಅಂತ ನಿಂತಿದ್ದೀಯಾ ಒಳಕ್ಕೆ ಬಾ
ಇಸುಬು ಎಂದಿನ ಸಲುಗೆಯಲ್ಲಿ ನನ್ನನ್ನು ಕರೆಯುತ್ತಿದ್ದ.
ನನಗೆ ನಗುಬಂತು
ಒಳಗೆ ಹೋಗಲು ಅವನ ಹೋಟೆಲ್ಲೇ ಇರಲಿಲ್ಲ . ಸುಟ್ಟು ಕರಕಲಾಗಿದ್ದ ಮರದ ತುಂಡುಗಳ ನಡುವೆ ಉಳಿದಿದ್ದ ಒಂದು ಹಳೆಯ ಸೀರೆಯನ್ನು ಕಟ್ಟಿ ಅವನು ಅದರೊಳಕ್ಕೆ ನನ್ನನ್ನು ಕರೆಯುತ್ತಿದ್ದ.
ಅಷ್ಟರೊಳಗೆ ನದಿಯಿಂದ ಮಂಜಿನೊಳಗಿಂದ ನಡೆದು ಬಂದ ನೆಬೀಸಾ ಮತ್ತು ಕೈರು ಸಹ ಒಳಗೆ ಕರೆಯಲು ಶುರು ಮಾಡಿದ್ದರು.
‘ಒಳಗೆ ಬಾ ಹಾಲಿನ ಚಾ ಮಾಡಲಾ ಕಪ್ಪು ಚಾ ಕುಡಿಯುತ್ತೀಯಾ? ಏನು ತಿನ್ನುತ್ತೀಯಾ?
ಅವರು ಮೂವರು ಎಂದಿನಂತೆ ಲಗುಬಗೆಯಿಂದ ನನ್ನನ್ನು ಸತ್ಕರಿಸಲು ನೋಡುತ್ತಿದ್ದರು
ಯಾಕೋ ಸಂಕಟವಾಗಲು ತೊಡಗಿತ್ತು .ಇಂತಹ ಹೊತ್ತಲ್ಲಿ ಈ ಇಸುಬುವನ್ನೂ ಮತ್ತು ನೆಬೀಸಾ ಮತ್ತು ಅವಳ ಮಗಳನ್ನೂ ಹೇಗೆ ಬೇರೆ ಬೇರೆ ಮಾಡುವುದು? ಇಲ್ಲದೇ ಹೋದರೆ ಅಬ್ಬಾಸ್ ಬ್ಯಾರಿಗಳಿಗೆ ಏನು ಹೇಳುವುದು? ಏನೂ ಗೊತ್ತಾಗದೆ ಮಂಜು ನಮ್ಮನ್ನೆಲ್ಲ ಮುತ್ತಿಕೊಂಡು ಚಳಿಯಲ್ಲಿ ನಡುಗುತ್ತಿದ್ದೆ.
*
*
*
ಹಾಗೆ ನೋಡಿದರೆ ಈ ಇಸುಬುವೂ ನಾನೂ ನೆಬೀಸಾಳೂ ಒಂದು ಕಾಲದಲ್ಲಿ ಒಂದೇ ಮದರಸದಲ್ಲಿ ಒಟ್ಟಿಗೇ ಅರಬಿ ಕಲಿಯುವ ಮಕ್ಕಳಾಗಿದ್ದೆವು. ಇಸುಬುವೂ ನಾನೂ ಕುರಾನಿನ ಹತ್ತನೇ ಅದ್ಯಾಯದಲ್ಲಿದ್ದರೆ ನೆಬೀಸಾಳು ಅದಾಗತಾನೇ ಅಲೀಫ್ ಬಾ ಎಂದು ಅರಬಿಯ ಮೊದಲ ಅಕ್ಷರಗಳನ್ನು ಕಲಿಯುವ ಸಣ್ಣ ಹುಡುಗಿಯಾಗಿದ್ದಳು. ನಾನೂ ಇಸುಬುವೂ ಅರಬಿ ಮದರಸವನ್ನು ತಪ್ಪಿಸಿಕೊಂಡು ಬೆಳಗೆಯೇ ಬೆಂಕಿ ಕಡ್ಡಿಯ ತುದಿಯಷ್ಟು ಮಲವನ್ನು ಸೇವಿಸಿ ಕುಟ್ಟಿಚಾತನನ್ನು ಆವಾಹಿಸಿಕೊಂಡು ಒಂಟಿಗಾಲಲ್ಲಿ ನದಿಯಲ್ಲಿ ಕಂಠಮಟ್ಟ ನಿಂತುಕೊಂಡು ಕಾಲಕಳೆಯುತ್ತಿದ್ದರೆ ಜಾಣಳಾದ ನೆಬೀಸಾ ಅರಬಿ ಅಕ್ಷರಗಳನ್ನು ಕಲಿತು ಕುರಾನನ್ನು ಕಂಠಪಾಠ ಮಾಡಿಕೊಂಡು ಅಮಲಿಯಾತ್ ದೀನಿಯಾತ್ ಎಂಬ ಪುಸ್ತಕಗಳನ್ನೂ ಓದಿ ಮುಗಿಸಿ ಆಗಲೇ ದೊಡ್ಡ ಮತ ಪಂಡಿತಳಂತೆ ಅರಬಿ ಕಲಿಸುವ ಮೊಲ್ಲಾಕನಿಗೆ ಚಾಡಿ ಹೇಳಿ ನಮಗೆ ನಾಗರಬೆತ್ತದಲ್ಲಿ ಏಟು ಕೊಡಿಸುವಷ್ಟು ಬೆಳೆದು ದಾರಿಯಲ್ಲಿ ನಮ್ಮಿಂದ ಸರಿಯಾಗಿ ಒದೆ ತಿನ್ನುತ್ತಿದ್ದಳು . ನಾನು ಅವಳ ತಲೆಯನ್ನು ನೆಲಕ್ಕೆ ಬಗ್ಗಿಸಿ ಹಿಡಿದರೆ ಇಸುಬು ಮೊಣಕಾಲಿನಿಂದ ಅವಳ ಕುಂಡೆಗೆ ಒದೆಯುತ್ತಿದ್ದನು
ಕುಟ್ಟಿಚಾತನಿಗೆ ಹೇಳಿ ನಿನ್ನ ಇಲ್ಲದಂತೆ ಮಾಯಮಾಡಿಸುತ್ತೇನೆ ಇಬಿಲೀಸೇ
ಎಂದು ಅವಳನ್ನು ಇನ್ನಿಲ್ಲದಂತೆ ಹೆದರಿಸುತ್ತಿದ್ದೆವು. ಅವಳನ್ನು ಮಟಮಟ ಬಿಸಿಲಲ್ಲಿ ನಿಲ್ಲಿಸಿ ನೆಲದಲ್ಲಿ ಬಿದ್ದಿರುವ ಅವಳ ನೆರಳನ್ನೇ ದಿಟ್ಟಿಸಿ ನೋಡಲು ಹೇಳಿ ಆಮೇಲೆ ಹಾಗೆಯೇ ತಲೆಯೆತ್ತಿಆಕಾಶವನ್ನು ನೋಡಲು ಹೇಳೀ ಅವಳು ಆಕಾಶವನ್ನು ನೋಡಿದರೆ ಆಕಾಶದಲ್ಲಿ ಅವಳ ನೆರಳು ಬಲೆಬಲೆಯಾಗಿ ಮೂಡಿ ನಾವು ಅವಳಿಗೆ ಅದೇ ಕುಟ್ಟಿಚಾತನೆಂದು ಹೇಳಿಕೊಟ್ಟು ಅವಳು
ಚಾಡಿ ಹೇಳುವುದನ್ನು ನಿಲ್ಲಿಸಿಯೇ ಬಿಟ್ಟಿದ್ದಳು.
ಒಂದು ದಿನ ಬೆಳಗೆ ನಾವು ಮನಸ್ಸಿಲ್ಲದ ಮನಸ್ಸಿನಿಂದ ಅರಬಿ ಕಲಿಯುತ್ತಿರುವಾಗ ಮದರಸದಲ್ಲೇ ನೆಬೀಸಾ ದೊಡ್ಡವಳಾಗಿ ಬಿಟ್ಟಿದ್ದಳು . ಅಂದು ಮದರಸದ ನೆಲದಲ್ಲಿ ಹರಿದ ತೊಟ್ಟು ತೊಟ್ಟು ನೆತ್ತರು ಕಂಡು ನಮಗೆಲ್ಲ ಹೆದರಿಕೆಯಾಗಿ ಬಿಟ್ಟಿತ್ತು.
ಅಬ್ಬಾಸ್ ಮುಕ್ಕ್ರಿ ಮಾತ್ರ ಅರ್ಥಗರ್ಬಿತವಾಗಿ ನಕ್ಕಿದ್ದರು .
ಅಬ್ಬಾಸ್ ಮುಕ್ರಿ ಆ ಅರಬಿ ಮದರಸದಲ್ಲಿ ಓದು ಕಲಿಸುವ ದೊಡ್ಡ ಮುಸಿಲಿಯಾರರ ಸಹಾಯಕ ಮುಕ್ರಿಯಾಗಿದ್ದರು.ದೊಡ್ಡ ಮುಸಲಿಯಾರರು ಚಾ ಕುಡಿಯಲು ಹೊರಗೆ ಹೋದಾಗ ಬೆತ್ತ ಹಿಡಿದು ಕೊಂಡು ಮಕ್ಕಳನ್ನು ಸುಮ್ಮನೆ ಕೂರಿಸುವುದು, ವಾರಕ್ಕೊಮ್ಮೆ ಮಸೀದಿಯ ಸಿಮೆಂಟು ಕೊಳದ ನೀರನ್ನು ಶುದ್ಧಿ ಮಾಡುವುದು, ಮುಸಲಿಯಾರರು ಇಲ್ಲದಾಗ ಪ್ರಾರ್ಥನೆಯ ಬಾಂಗ್ ಕೂಗುವುದು, ಅದೆಲ್ಲಕ್ಕಿಂತ ಮುಖ್ಯವಾಗಿ ಯಾರಾದರೂ ಸಾರುಮಾಡಲು ಕೋಳಿ ಹಿಡಿದುಕೊಂಡು ಬಂದರೆ ಪಡೆದವನ ಹೆಸರನ್ನು ಸ್ಮರಿಸಿ ಅದರ ಕೊರಳನ್ನು ಚಾಕುವಿನಿಂದ ಕೊಯಿದು ಕೊಡುವುದು ಅಬ್ಬಾಸ್ ಮುಕ್ರಿಯವರ ಮುಖ್ಯ ಕರ್ತವ್ಯವಾಗಿತ್ತು . ಮುಕ್ರಿಯವರು ಕೋಳಿಯ ಕೊರಳನ್ನು ಕೊಯ್ಯುವಾಗ ನಾವು ಯಾರಾದರೂ ಹುಡುಗರು ಅದರ ಎರಡೂಕಾಲುಗಳನ್ನು ರೆಕ್ಕೆಯೊಂದಿಗೆ ಜೋಡಿಸಿ ಪವಿತ್ರ ಕಹಬಾದ ದಿಕ್ಕಿಗೆ ಮುಖ ಮಾಡಿ ನಿಲ್ಲಬೇಕಿತ್ತು. ನಾವು ಯಾರಾದರೂ ನಿಲ್ಲುತ್ತಿದ್ದೆವು.
*
*
*
ನೆಬೀಸಾ ಅರ್ದ ಸುಟ್ಟು ಕರಕಲಾದ ಚಾದ ಪಾತ್ರವನ್ನು ಅದೆಲ್ಲಿಂದಲೋ ಎತ್ತಿ ತಂದು ಕಡ್ಡಿಪುರಲೆಗಳಿಂದ ಒಲೆ ಹತ್ತಿಸಿ ಇಟ್ಟು ಚಾ ಪುಡಿಗಾಗಿ ಹುಡುಕಾಟ ನಡೆಸಿದ್ದಳು.
ಅದೇನು ಹುಡುಕುತ್ತೀಯಾ ಮಣ್ಣಾಂಗಟ್ಟಿ .. ಎಲ್ಲ ಸುಟ್ಟುಹಾಕಿದ್ದಾರಲ್ಲ..
ಇಸುಬು ನೆಲಕ್ಕೆ ಉಗಿದು ಗೊಣಗಿದ .
ಕೈರು ಕಿಸಕ್ಕನೆ ನಕ್ಕಳು.
ನನಗೂ ಆ ವಿಷಾದದಲ್ಲೂ ನಗು ಬಂತು.
ಮದುವೆಯಾಗುವಾಗ ನೆಬೀಸಾ ಕೈರು ಈಗ ಇರುವ ಹಾಗೆಯೇ ಇದ್ದಳು. ಆದರೆ ಇನ್ನೂ ಗುಂಡಗೆ ಇದ್ದಳು.ಅದೇ ಚೂಪು ಮೂಗು. ಅದೇ ಉರುಟು ಮುಖ.ಅದೇ ಉರಿಯುತ್ತಿರುವಂತಹ ಹಣೆ.
ಕೈರು ಎಲ್ಲದರಲ್ಲೂ ತಾಯಿಯಹಾಗೇ ಇದ್ದಳು. ಒಂದು ಕಿವಿಯನ್ನು ಮಾತ್ರ ಹೊರತು ಪಡಿಸಿ. ಅವಳ ಒಂದು ಕಿವಿಮಾತ್ರ ತುಂಬಾ ಅಸಹಜ ಅನ್ನುವಷ್ಟರ ಮಟ್ಟಿಗೆ ದೊಡ್ಡದಿತ್ತು. ತಂದೆ ಅಬ್ಬಾಸ್ ಮುಕ್ರಿಯ ಹಾಗೇ.
‘ ಮಣ್ಣಾಂಗಟ್ಟಿ, ಹೆಂಡತಿಯನ್ನು ಬಿಟ್ಟು ಓಡಿ ಹೋಗುವಾಗ ಮುಕ್ರಿ ತನ್ನ ನೆನಪಿಗಾಗಿ ತನ್ನ ಆನೆ ಕಿವಿಯೊಂದನ್ನು ಮಾತ್ರ ಗರ್ಭದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಕೈರು ಹುಟ್ಟಿದಾಗ ಇಸುಬು ಕ್ಯಾಕರಿಸಿ ನೆಲಕ್ಕೆ ಉಗಿದಿದ್ದ.
‘ನಾನು ಬಿಟ್ಟು ಓಡಿದ್ದಲ್ಲ ಪಡೆದವನೇ . ನನ್ನನ್ನು ಕೊಡಗು ಬಿಟ್ಟು ಓಡಿಸಿದ್ದು ಆ ಪರಮದುಷ್ಟನಾದ
ಇಸುಬು ಎಂಬ ಇಬಿಲೀಸು ಎಂದು ಅಬ್ಬಾಸ್ ಮುಕ್ರಿ ಅಲ್ಲಾಹುವಿನೆದುರು ಆಣೆ ಮಾಡಿ ನನ್ನನ್ನು ನಂಬಿಸಿದ್ದರು.
‘ನೀನು ನಂಬುವುದಾದರೆ ನಂಬು. ಆದರೆ ಆ ಎಲ್ಲವನ್ನೂ ಅರಿತವನಾದ ಅಲ್ಲಾಹುವಿಗೆ ಎಲ್ಲವೂ ಗೊತ್ತು.ಅವನ ಅಂತಿಮ ದಿನದ ಆಣೆ ಮಾಡಿ ಹೇಳುತ್ತೇನೆ. ತಾವರೆ ಹೂವಿನಂತಹ ನೆಬೀಸಾಳನ್ನು ಬಿಟ್ಟು ಓಡಲು ನನಗೇನು ಹುಚ್ಚಾ? ನನ್ನನ್ನು ಅವಳಿಂದ ಅಗಲಿಸಿ ಓಡಿಸಿಬಿಟ್ಟದ್ದು ಅವನಲ್ಲದೇ
ಬೇರೆ ಯಾರೂ ಅಲ್ಲ ಎಂದು ತಮ್ಮ ಎರಡನೆಯ ಹೆಂಡತಿ ಮಕ್ಕಳ ಎದುರೇ ಗಳಗಳ ಅತ್ತಿದ್ದರು
ಅವರು ಅಳುವುದನ್ನು ಕಂಡು ಅವರ ಎರಡನೆಯ ಹೆಂಡತಿಗೂ ಅಳು ಬಂದು ಅವರ ಪುಡಿಪುಡಿ ಮಕ್ಕಳೂ ಅಳಲು ತೊಡಗಿ ಮಂಜೇಶ್ವರದ ದರ್ಗಾದ ಬಳಿಯಿರುವ ಅವರ ಮನೆ ಅಳುವಿನ ಕಡಲೇ ಆಗಿ ಬಿಟ್ಟಿತ್ತು.
ಅಳುವುದನ್ನು ನಿಲ್ಲಿಸಿ ಅಬ್ಬಾಸ್ ಮುಕ್ರಿಯವರ ಎರಡನೆಯ ಹೆಂಡತಿ ಮೂಗು ಒರೆಸಿಕೊಂಡು . ‘ಹೋಗಲಿ ಬಿಡಿ ಆಗಿದ್ದೆಲ್ಲಾ ಒಳ್ಳೆಯದಕ್ಕೇ . ಈಗ ಹೇಳಿ . ನನ್ನ ಗಂಡನ ಮೊದಲನೆಯ ಹೆಂಡತಿಯೂ ಅವರಿಗುಂಟಾದ ಮಗಳೂ ನೋಡಲು ಹೇಗಿದ್ದಾರೆ ಬೆಳ್ಳಗಿದ್ದಾರಾ ಕಪ್ಪಗಿದ್ದಾರಾ
ಮಗಳಿಗೆ ಮದುವೆಯ ಪ್ರಾಯವಾಯಿತಲ್ಲವಾ. ಮದುವೆ ಮಾಡಿಸಬೇಕಲ್ಲವಾ ಎಂದೆಲ್ಲ ಸಂಭ್ರಮ ಕುತೂಹಲಗಳೊಂದಿಗೆ ಕೇಳಲು ತೊಡಗಿದ್ದರು.
ನಾನು ನನ್ನಿಂದಾದಷ್ಟು ಅವರಿಬ್ಬರನ್ನು ವರ್ಣಿಸಿದ್ದೆ. ಎಲ್ಲವನ್ನು ವರ್ಣಿಸಿ ಕೊನೆಗೆ ಕೈರುವಿನ ಒಂದು ಕಿವಿ ಅಬ್ಬಾಸ್ ಮುಕ್ರಿಯವರ ಹಾಗೆಯೇ ಇರುವುದನ್ನು ಒತ್ತಿ ಹೇಳಿದ್ದೆ
ಅದು ಕೇಳಿ ಅಬ್ಬಾಸ್ ಮುಕ್ರಿಯವರ ಧ್ವನಿ ಇನ್ನಷ್ಟು ಗದ್ಗದವಾಗಿತ್ತು. ಒಂದು ನಿಮಿಷ ಅವರ ಉಸಿರು ನಿಂತು ಹೋದಂತಾಗಿತ್ತು.ಅವರು ಎರಡನೆಯ ಹೆಂಡತಿಯ ಮುಖವನ್ನೊಮ್ಮೆ ದೀನವಾಗಿ ನೋಡಿ ಸಾಲು ಸಾಲಾಗಿ ನಿಂತು ಕೊಂಡಿದ್ದ ಮಕ್ಕಳನ್ನೊಮ್ಮೆ ನೋಡಿ ಬುಳಕ್ಕನೆ ಅಳಲು ನೋಡುತ್ತಾ ಹಲ್ಲು ಕಡಿದುಕೊಂಡಿದ್ದರು.
*
*
*
ಹಾಗೆ ನೋಡಿದರೆ ಮಸೀದಿಯ ಮುಕ್ರಿಯ ಕೆಲಸ ಅಬ್ಬಾಸ್ ಬ್ಯಾರಿಯವರಿಗೆ ವಂಶ ಪಾರಂಪರ್ಯವಾಗಿ ಬಂದದ್ದೇನಲ್ಲ. ಅವರದ್ದು ವಂಶ ಪಾರಂಪರ್ಯವಾಗಿ ಗುಡ್ಡಕ್ಕೆ ಸುರಂಗ ತೋಡುವ ಕೆಲಸ. ಇದೂ ಎಷ್ಟು ತಲೆಮಾರುಗಳಿಂದ ತಮ್ಮ ಕುಟುಂಬಕ್ಕೆ ಅಂಟಿಕೊಂಡದ್ದು ಅಂತಲೂ ಅವರಿಗೆ ಗೊತ್ತಿಲ್ಲ. ಅಬ್ಬಾಸ್ ಬ್ಯಾರಿಯವರಿಗೆ ನೆನಪಿರುವಂತೆ ಅವರು ಹುಟ್ಟಿದ್ದೂ ತಾಯಿಯ ಮೊಲೆಹಾಲು ಕುಡಿದದ್ದೂ ಬೆಳೆದದ್ದೂ ಎಲ್ಲವೂ ಯಾವುದೋ ಒಂದು ಗುಡ್ಡದ ಅಡಿಯಲ್ಲಿರುವ ಸುರಂಗದ ಕೆಳಗೇ. ಪೇಶ್ವೆಗಳ ಕಾಲದಲ್ಲಿ ಮುಸಲ್ಮಾನ ಅರಸರ ಅಬ್ಬರಕ್ಕೆ ಹೆದರಿ
ತಮ್ಮ ಇಷ್ಟದೇವರುಗಳನ್ನು ಎತ್ತಿಕೊಂಡು ಪಶ್ಚಿಮಘಟ್ಟದ ಸೆರಗುಹಿಡಿದು ಬಂದ ಮರಾಠಾ ಬ್ರಾಹ್ಮಣರು ಕರಾವಳಿಯ ಗುಡ್ಡದ ತಪ್ಪಲುಗಳಲ್ಲಿ ತೋಟಗಳನ್ನು ಮಾಡಿಕೊಂಡು ನೀರಿಗಾಗಿ ಆ ಗುಡ್ಡಕ್ಕೇ ಅಡ್ಡಸುರಂಗಗಳನ್ನು ತೋಡಿಸಿ ತೋಟಕ್ಕೆ ಸದಾ ನೀರು ಹರಿದು ಬರುವಂತೆ ಮಾಡುವ
ವಿದ್ಯೆಯನ್ನು ಅದೆಲ್ಲಿಂದಲೋ ಕಲಿತುಕೊಂಡಿದ್ದರು. ಎತ್ತರಕ್ಕೆ ನಿಂತ ಗುಡ್ಡವೊಂದಕ್ಕೆ ಉದ್ದಕ್ಕೆ ಕನ್ನ ಕೊರೆಯುವುದು ನೀರಿನ ಸೆಲೆ ಕಂಡೊಡನೆ ನಿಲ್ಲಿಸುವುದು ಮತ್ತು ಆ ನೀರನ್ನು ತೋಟಕ್ಕೆಲ್ಲ ಹರಿಯಬಿಡುವುದು. ಅಬ್ಬಾಸ್ ಬ್ಯಾರಿಗಳಿಗೆ ತಮ್ಮ ಅಜ್ಜ ಅಜ್ಜಿ ತಂದೆ ತಾಯಿ ಅಕ್ಕ ತಮ್ಮ ಎಲ್ಲರ ನೆನಪು ಶುರುವಾಗುವುದೂ ಕೊನೆಗೊಳ್ಳುವುದೂ ಇಂತಹ ಸುರಂಗದ ಒಳಗೆಯೇ . ಗಂಡಸರು ಗುದ್ದಲಿ ಪಿಕ್ಕಾಸು ಹಿಡಕೊಂಡು ಬೆಟ್ಟಕ್ಕೆ ಆಳೆತ್ತರದ ಬಿಲವನ್ನು ಕೊರೆಯುತ್ತಾ ಹೋಗುವುದು, ಹೆಂಗಸರು ಮಕ್ಕಳು ಅವರ ಕಾಲಡಿಯಿಂದಲೇ ಅವರು ಅಗೆದ ಮಣ್ಣನ್ನು ಬುಟ್ಟಿಯಲ್ಲಿ ತುಂಬಿಸಿ ಹೊರಗೆ ತಂದು ಸುರಿಯುವುದು. ನೀರು ಕಂಡಾಗ ನಿಲ್ಲುವುದು. ಅವರೆಲ್ಲ ಉಣ್ಣುವುದು ಮಲಗುವುದು ಕನಸು ಕಾಣುವುದು ಎಲ್ಲವೂ ಇಂತಹ ಯಾವುದಾದರೂ ಬಿಲದ ಬಳಿಯಲ್ಲಿಯೇ.
ಅಬ್ಬಾಸ್ ಬ್ಯಾರಿಗಳಿಗೆ ಸಣ್ಣದಿರುವಾಗಲೇ ಜನನವೂ ಮರಣವೂ ಇಹವೂ ಪರವೂ ಸ್ವರ್ಗವೂ ನರಕವೂ ಎಲ್ಲವೂ ಈ ಮಣ್ಣು ಅಗೆಯುವುದರಿದ ತೊಡಗಿ ಈ ಮಣ್ಣು ಸುರಿಯುವುದರಿಂದ ಕೊನೆಗೊಳ್ಳುತ್ತದೆ ಅನ್ನಿಸುತ್ತಿತ್ತು. ಬಾಪಾ ಎಂಬ ಆಸರೆ ಉಮ್ಮಾ ಎಂಬ ಮಮತೆ ಎಲ್ಲವೂ ಈ ಮಣ್ಣಿನ ಕೆಲಸದಲ್ಲಿ ಕಲಸಿಹೋಗಿ ಅವರು ಗೊತ್ತಿಲ್ಲದಂತೆ ಸಣ್ಣದಿರುವಾಗಲೇ ಪಡೆದವನನ್ನು
ಈ ಮಣ್ಣಿನ ಕೆಲಸದಿಂದ ಬಿಡುಗಡೆ ಮಾಡುವಂತೆ ಬೇಡಿಕೊಂಡಿದ್ದರು.
ರಣ್ ಸಣ್ಣ ಹುಡುಗನಿರುವಾಗಲೇ ಎಲ್ಲರನ್ನು ಬಿಟ್ಟು ಉಳ್ಳಾಲದ ಅರಬಿ ಕಲಿಯುವ ಶಾಲೆಗೆ ಸೇರಿಕೊಂಡು ಮಣ್ಣಿನ ಕೆಲಸದಿಂದ ಬಚಾವಾಗಿಬಿಟ್ಟೆ ಅಂದು ಕೊಂಡಿದ್ದರು . ಅಷ್ಟಿಷ್ಟು ಅರಬಿ ಕಲಿತು ಮಂಗಳೂರಿಂದ ಸಿ ಪಿ ಸಿ ಬಸ್ಸು ಹತ್ತಿ ಘಟ್ಟ ಹತ್ತಿ ಮಡಿಕೇರಿಯ ಹತ್ತಿರದ ಮದರಸವೊಂದರಲ್ಲಿ ಮುಕ್ರಿಯಾಗಿ ಸೇರಿಕೊಂಡಿದ್ದರು. ನೋಡಿದವರಿಗೆ ಸಣ್ಣವನಾಗಿ ಕಾಣಿಸಿಕೊಳ್ಳುವೆನು ಎಂದು ಹೆದರಿ ಬಿಳಿಯ ಮುಂಡಾಸನ್ನು ಎರಡು ಸುತ್ತು ಜಾಸ್ತಿಯೇ ಸುತ್ತಿ ಮೀಸೆ ಬರುವಲ್ಲಿ ಕೊಂಚ ಸುರುಮ ಬಳಿದು ಕೊಂಡು ದೊಡ್ಡವನಂತೆ ತೋರಿಸಿಕೊಳ್ಳುತ್ತಿದ್ದರು .ಮಕ್ಕಳು ಹೆದರಲಿ ಎಂದು ಕೈಯಲ್ಲಿನ ಕೋಲನ್ನು ಸುಮ್ಮನೆ ನೆಲಕ್ಕೆ ಒಮ್ಮೊಮ್ಮೆ ಜೋರಾಗಿಯೇ ಬಡಿಯುತ್ತಿದ್ದರು.
ಆದರೆ ಅರಬಿ ಕಲಿಯಲು ತಲೆಗೆ ಬಿಳಿಯ ತಟ್ಟವನ್ನು ಸುತ್ತಿಕೊಂಡು ಬರುತ್ತಿದ್ದ ನೆಬೀಸಾಳನ್ನು ಕಂಡೊಡನೆ ಅವರ ಹೃದಯ ಅಲ್ಲಾಡಲು ತೊಡಗುತ್ತಿತ್ತು. ಅವಳ ಕಾಲ ಸಪ್ಪಳವಾಗುತ್ತಿದ್ದಂತೆ
ಇದೆಂತಹ ಸೌಂದರ್ಯ ಪಡೆದವನೇ ಎಂದು ಅವರ ಹೃದಯ ಅಳಲು ತೊಡಗುತ್ತಿತ್ತು. ಮನುಷ್ಯ ಸೃಷ್ಟಿಯನ್ನು ಕೇವಲ ಮಣ್ಣಿನಬಣ್ಣದಲ್ಲಿ ಕಂಡಿದ್ದ ಅವರಿಗೆ ನೆಬೀಸಾಳನ್ನು ಮನುಷ್ಯ ಸೃಷ್ಟಿ ಎಂದು ನೋಡಲು ತಡೆಯುಂಟಾಗುತ್ತಿತ್ತು. ಕೇವಲ ಹದಿಮೂರು ವರ್ಷಗಳ ನೆಬೀಸಾ ಎಂಬ ಹುಡುಗಿ ಅವರಿಗೆ ಪಡೆದವನ ಇನ್ನೊಂದು ಸೃಷ್ಟಿಯಾದ ಜಿನ್ನಿನಂತೆ ಕಾಣಿಸುತ್ತಿತ್ತು.
ಒಬ್ಬಳು ತರುಣಿಯನ್ನು ಸಲ್ಲದ ದೃಷ್ಟಿಯಲ್ಲಿ ನೋಡುವುದು ಅಲ್ಲಾಹುವಿನ ಆಜ್ಞೆಗೆ ಅತೀತವೆಂದು ಗೊತ್ತಿದ್ದ ಅವರು ಜಮಾತಿನ ಅನುಮತಿಪಡೆದು ನೆಬೀಸಾಳನ್ನು ನಿಖಾಹ್ ಮಾಡಿಕೊಂಡಿದ್ದರು.
*
*
*
ತಾವರೆಯ ಹೂವಂತಹ ತಮ್ಮ ಎಳೆಯ ಪತ್ನಿ ನೆಬೀಸಾ ಳನ್ನು ಅಬ್ಬಾಸ್ ಮುಕ್ರಿಯವರು ನಿಖಾ ಮಾಡಿಕೊಂಡ ಒಂದು ದಿನದಲ್ಲೇ ಯಾಕೆ ತ್ಯಜಿಸಿ ಓಡಿ ಹೋದರೆಂಬುದು ನಮಗೆಲ್ಲ ಬಹು ಕಾಲದವವರೆಗೆ ಒಂದು ಚೋದ್ಯವಾಗಿಯೇ ಉಳಿದಿತ್ತು.ಒಬ್ಬೊಬ್ಬರು ಒಂದೊಂದು ಕತೆ ಹೇಳಿ ನಮಗೆ ಹುಡುಗರಿಗೆ ಎಲ್ಲವೂ ಒಂದುದೊಡ್ಡ ಒಗಟಿನಂತೆ ಆಗಿ ಬಿಟ್ಟಿತ್ತು.
ಇನ್ನೂ ಸಣ್ಣ ಹುಡುಗಿಯಾಗಿದ್ದ ನೆಬೀಸಾಳಿಗೆ ಸೀರೆ ಲಂಗ ಉಡಿಸಿ ದೊಡ್ಡವಳಾಗಿ ಕಾಣುವಂತೆ ಮಾಡಿ ಅವಳ ಕೈಗಳಿಗೆ ಮದರಂಗಿ ಹಚ್ಚಿ ಮುಡಿಗೆ ಮಲ್ಲಿಗೆ ಮುಡಿಸಿ ಹೆಂಗಸರೂ ಗಂಡಸರೂ ಕೈ ಚಪ್ಪಾಳೆ ತಟ್ಟಿ ಹಾಡು ಹೇಳಿ ಅಬ್ಬಾಸ್ ಮುಕ್ರಿಯವರ ಕೋಣೆಗೆ ಕಳುಹಿಸಿದಮೇಲೆ ಏನು ನಡೆಯಿತೆಂಬುದರ ಬಗ್ಗೆ ಬಹಳಷ್ಟು ಕತೆಗಳಿದ್ದವು. ನೆಬೀಸಾಳ ಮೈಯಲ್ಲಿ ಅಡಗಿದ್ದ ಜಿನ್ ಒಂದು ಅಬ್ಬಾಸ್ ಮುಕ್ರಿಯವರು ಅವಳ ಮೈಯನ್ನೇರುತ್ತಿದ್ದಾಗ ಖಡ್ಗದಿಂದ ಘಾಸಿಗೊಳಿಸಿತೆಂದು ಒಂದು ಕತೆ ಹೇಳಿದರೆ ಅಬ್ಬಾಸ್ ಮುಕ್ರಿಯವರ ಮೈವಾಸನೆ ಸಹಿಸಲಾಗದೆ ನೆಬೀಸಾಳೇ ಅವರನ್ನು ಕಚ್ಚಿ ಗಾಯಗೊಳಿಸಿದಳೆಂದು ಇನ್ನೊದು ಕತೆಯಿತ್ತು. ಇಸುಬುವನ್ನು ಕೇಳಿದರೆ ತಾನು ಆವಾಹಿಸಿದ ಕುಟ್ಟಿಚಾತ ದೈವವು ಬೆಕ್ಕಿನ ರೂಪದಲ್ಲಿ ಅವರ ಮೊದಲ ರಾತ್ರಿಯ ಮಂಚವನ್ನೇರಿ ತನ್ನ ಖಡ್ಗದಂತಹ ಬಾಲವನ್ನು ಬೀಸಿ ಮುಕ್ರಿಯವರನ್ನು ಕೊಂದೇಬಿಡಲು ಹೋಯಿತೆಂದು ಅವನು ಕತೆ ಕಟ್ಟಿ ಹೇಳುತ್ತಿದ್ದ.
‘ ಜಿನ್ನೂ ಅಲ್ಲ, ಕುಟ್ಟಿಚಾತನೂ ಅಲ್ಲ. ಆವತ್ತು ನಮ್ಮ ಮೊದಲರಾತ್ರಿಯ ಕೋಣೆಯಲ್ಲಿ ಏನಾಯಿತು ಗೊತ್ತಾ
ಅಬ್ಬಾಸ್ ಮುಕ್ರಿಯವರು ಮಂಜೇಶ್ವರದಿಂದ ಮಂಗಳೂರಿಗೆ ಹೋಗುವ ರೈಲು ಹತ್ತಿಸಲು ಬಂದಾಗ ಕತ್ತಲ ರಾತ್ರಿಯಲ್ಲಿ ಟಾರ್ಚು ಬಿಡುತ್ತಾ ಬಹಳ ದೊಡ್ಡ ಗುಟ್ಟೊಂದನ್ನು ನನಗೆ ಹೇಳಿಬಿಟ್ಟಿದ್ದರು.
ಅದನ್ನು ಕೇಳಿ ನನಗೆ ನಗಬೇಕೋ ಅಚ್ಚರಿ ಪಡಬೇಕೋ ಅಥವಾ ಇಸುಬು ಎಂಬ ಮಹಾಮಂಡನಾದ ಮುಷಂಡಿಯ ತಲೆ ಕತ್ತರಿಸಬೇಕೋ ಅಥವಾ ಅಬ್ಬಾಸ್ ಮುಕ್ರಿಯವರ ಹಾಸ್ಯಾಸ್ಪದವಾದ ಅಸಹಾಯಕತೆಗೆ ಕಣ್ಣೀರುಗರೆಯಬೇಕೋ ಗೊತ್ತಾಗದೆ ಆ ಕತ್ತಲೆಯ ದಾರಿಯಲ್ಲಿ ನೀಳವಾದ ನಿಟ್ಟುಸಿರೊಂದನ್ನು ಬಿಟ್ಟಿದ್ದೆ.
ಅಬ್ಬಾಸ್ ಬ್ಯಾರಿಗಳು ನನಗೆ ಆವತ್ತು ರಾತ್ರಿ ಹೇಳಿದ್ದು ಇಷ್ಟೆ- ತಮ್ಮ ಮದುವೆಯ ಮೊದಲ ರಾತ್ರಿಯಲ್ಲಿ ಮಂಚವನ್ನೇರಿ ಅವರು ತಮ್ಮ ಮದುಮಗಳು ನೆಬೀಸಾಳನ್ನು ಹತ್ತಿರದಿಂದ ನೋಡುತ್ತಾ ಲಲ್ಲೆಮಾತುಗಳನ್ನು ಆಡುತ್ತಾ ಅವಳ ಕೆನ್ನೆಯನ್ನು ಸವರುತ್ತಾ ಮೆಲ್ಲಗೆ ಅವಳ ಉಡುಪನ್ನು ಸರಿಸಿ ಮೇಲೆರಗಲು ಹೋದಾಗ ಇದ್ದಕ್ಕಿದ್ದಂತೆ ಈ ಆಕ್ರಮಣ ಯಾಕೆ ಎಂದು ಗೊತ್ತಾಗದ ಸಣ್ಣಹುಡುಗಿ
ನೆಬೀಸಾ ಮಾಡುಹಾರಿಹೋಗುವಂತೆ ಕಿರುಚಲು ತೊಡಗಿದಳಂತೆ. ಅವಳ ಕಿರುಚಾಟಕ್ಕೆ ಹೆದರಿದರೂ ಇದು ಆಗಲೇ ಬೇಕಾದ ಕ್ರಿಯೆ ಎಂದು ತೀರ್ಮಾನಿಸಿದ್ದ ಮುಕ್ರಿಗಳು ಅದು ಹೇಗೋ ಅವಳ ತೆರೆದ ಬಾಯಿಯನ್ನು ಅಮುಕಿ ಹಿಡಿದು ತಮ್ಮ ಕೆಲಸವನ್ನು ಮುಗಿಸುತ್ತಿದ್ದಂತೆ ನೋವು ತಡೆಯಲಾಗದೆ ನೆಬೀಸಾ ಅವರ ಮೊಣಗಂಟನ್ನು ಕಚ್ಚಿ ಕೂಗಾಡತೊಡಗಿದಳಂತೆ.
ಈ ಕೂಗಾಟವನ್ನು ಕೇಳುತ್ತಿದ್ದ ನಮ್ಮ ಮಣ್ಣಾಂಗಟ್ಟಿ ಇಸುಬು ಅದೆಲ್ಲಿಂದಲೋ ಮೀನು ಇರಿಯುವ ಕಠಾರಿಯೊಂದಿಗೆ ಕೋಣೆಯೊಳಕ್ಕೆ ದಾವಿಸಿಬಂದು ಮುಕ್ರಿಯವರ ಮೈಯನ್ನು ಎಲ್ಲ ಕಡೆ ಇರಿದು ಬಿಟ್ಟನಂತೆ.
ಇದು ಮುಕ್ರಿಯವರು ಹೇಳಿಬಿಟ್ಟ ನಿಜದ ಕತೆ. ಇದನ್ನು ಹೇಳಿ ಮುಗಿಸಿದ ಅವರು‘ ಪಡೆದವನೇ ನಿನ್ನ ಸೃಷ್ಟಿ ನಿಜವಾಗಿದ್ದರೆ, ನಿನ್ನ ಸ್ವರ್ಗನರಕಗಳು ನಿಜವಾಗಿದ್ದರೆ, ನಿನ್ನ ಅಂತಿಮದಿನ ನಿಜವಾಗಿದ್ದರೆ
ನನ್ನ ಮದುವೆಯ ಮೊದಲ ರಾತ್ರಿಯನ್ನು ನೆತ್ತರಿನ ಹೊಳೆಯಲ್ಲಿ ಮುಳುಗಿಸಿದ ಆ ಮಣ್ಣಾಂಗಟ್ಟಿ
ಇಸುಬುವನ್ನು ಅಂತಿಮದಿನದ ನ್ಯಾಯ ತೀರ್ಮಾನಕ್ಕಾಗಿ ಕಾಯದೆ ಅವನು ಬದುಕಿರುವಾಗಲೇ ಹುಣ್ಣು ಹಿಡಿದು ಸಾಯುವಂತೆ ಮಾಡು ಪಡೆದವನೇ ಎಂದು ನನ್ನ ಕಣ್ಣ ಮುಂದೆಯೇ ಇನ್ನೊಮ್ಮೆ ಬೇಡಿಕೊಂಡಿದ್ದರು.
*
*
*
ದೇವರ ಕೊಲ್ಲಿಯ ಆ ತಿರುವಿನಲ್ಲಿ ಸುಟ್ಟುಹೋದ ಇಸುಬುವಿನ ತಟ್ಟಿಹೋಟಲ್ಲಿನಿಂದ ಮತ್ತೆ ಹೊಗೆ ಏಳುತ್ತಿತ್ತು.
ನೆಬೀಸಾಳೂ ಕೈರುವೂ ಅದೆಲ್ಲಿಂದಲೋ ಸುಟ್ಟುಹೋದ ಡಬ್ಬಿಯೊಳಗಿಂದ ಚಾ ಪುಡಿಯನ್ನೂ ಸಕ್ಕರೆಯನ್ನೂ ಹುಡುಕಿ ಚಾ ಕಾಸುತ್ತಿದ್ದರು. ಹೋಟೆಲ್ಲಿನೊಳಗಿಂದ ಹೊಗೆ ಏಳುತ್ತಿರುವುದನ್ನು ಕಂಡು ರಸ್ತೆಯಲ್ಲಿ ಕೆಳಮುಖವಾಗಿ ಚಲಿಸುತ್ತಿದ್ದ ಲಾರಿಯೊಂದು ಕಿರ್ರನೆ ಬ್ರೇಕು ಹಾಕಿ ಹೋಟೆಲ್ಲಿನ ಮುಂದೆ ನಿಂತುಕೊಂಡಿತು. ಅದರ ಡ್ರೈವರ್ ಆ ಕತ್ತಲಲ್ಲೇ ಸುಟ್ಟುಹೋದ ಹೋಟೆಲ್ಲಿನ ಹೊಸ್ತಿಲನ್ನು ತಡವರಿಸುತ್ತಾ ಏರಿಬಂದು ಇದೆಲ್ಲಾ ಏನಾಯಿತೆಂದು ತಮಿಳಿನಲ್ಲಿ ವಿಚಾರಿಸತೊಡಗಿದ. ಅವನಿಗೆ ಇಸುಬುವಿನಜೊತೆ ಬಹಳ ಕಾಲದ ಗೆಳೆತನವಿದ್ದಂತೆ ತೋರುತ್ತಿತ್ತು.
ಅವನೂ ಇಸುಬುವನ್ನು ಮಣ್ಣಾಂಗಟ್ಟಿ ಅಂತಲೇ ಸಂಬೋದಿಸುತ್ತಿದ್ದ.
ಅಷ್ಟರಲ್ಲಿ ಅತ್ತ ಕಡೆಯಿಂದ ಕೂಜಿಮಲೆಯನ್ನು ಇಳಿದು ಬಂದ ಕೂಲಿಯಾಳುಗಳಂತೆ ಕಾಣಿಸುತ್ತಿದ್ದವರು ಸಣ್ಣ ಚೀಲವನ್ನು ಅತ್ಯಂತ ಬಾರದ ವಸ್ತುವನ್ನು ಇಳಿಸುವಂತೆ ಹೆಗಲಿಂದ ಇಳಿಸಿ
ಹೋಟೆಲ್ಲಿನೊಳಕ್ಕೆ ಎಳೆದು ತಂದು ಇರಿಸಿ ಇಸುಬುವಿನ ಜೊತೆ ಹರಟಲು ತೊಡಗಿದರು.
ಅವರು ಕೂಜಿಮಲೆಯಲ್ಲಿ ಅಮಿತವಾಗಿ ದೊರಕುತ್ತಿರುವ ಕಲ್ಲೋ ರತ್ನವೋ ಏನೋ ಅಮೂಲ್ಯವಾದದನ್ನು ಕದ್ದುಸಾಗಿಸುವವರು ಅಂತ ಗೊತ್ತಾಗುತ್ತಿತ್ತು.
‘ ಯಾರು ಏನು ಮಾಡಿದರೂ ಏನಾಗುತ್ತದೆ ಮಣ್ಣಾಂಗಟ್ಟಿ. ನಿಮ್ಮ ಗ್ರಾಚಾರ ಸರಿಯಾಗಿದ್ದರೆ ಈ ಕಲ್ಲಿನಿಂದ ನಿಮಗೆ ಒಂದು ಐವತ್ತು ಸಾವಿರವಾದರೂ ಗೀಟಲಿಕ್ಕಿಲ್ಲವಾ
ಇಸುಬು ತನ್ನ ಗ್ರಾಚಾರವನ್ನು ಮರೆತು ನನ್ನನ್ನೂ ನಿರ್ಲಕ್ಷಿಸುತ್ತಿರುವವನಂತೆ ಆಡುತ್ತಾ ಅವರ ಹೆಗಲಲ್ಲಿ ಕೈಯಿಟ್ಟು ಸರಸವಾಡುತ್ತಿದ್ದ.
ನಾನು ಹೊಗೆಯೋ ಮಂಜೋ ಗೊತ್ತಾಗದ ಹೋಟೆಲ್ಲಿನೊಳಗಿನ ಬೆಳ್ಳನೆಯ ತೆರೆ ಯೊಳಗೆ ಚಾ ಕಾಸಲು ಪರದಾಡುತ್ತಿರುವ ನೆಬೀಸಾಳನ್ನೂ ಅವಳ ಮಗಳು ಕೈರುವನ್ನೂ ಗಮನಿಸುತ್ತಿದ್ದೆ.
ಅವರು ನಾನು ಅಬ್ಬಾಸ್ ಮುಕ್ರಿಯವರಿಂದ ಏನು ಸಂದೇಶ ತಂದಿರುವೆನೆಂಬ ಕುತೂಹಲದಲ್ಲಿ ನಡುನಡುವೆ ನನ್ನ ಕಡೆ ಕಳ್ಳ ನೋಟ ಬೀರುತ್ತಿದ್ದರು.
*****