ನನ್ನ ಕಾರ್ಖಾನೆ ಬಸ್ಸು ಮಲ್ಲೇಶ್ವರಂ ಸ್ಟಾಪ್ ಬಳಿಗೆ ಬರುತ್ತಿದ್ದಂತೆ ನನ್ನ ಕಣ್ಣುಗಳು ಕಿಟಕಿಯತ್ತ ಹರಿಯುತ್ತವೆ. ಅಲ್ಲಿ ಕಾರ್ಮಿಕರ ಬಸ್ಸಿಗಾಗಿ ಕಾಯುತ್ತಾ ನಿಂತ ರವಿ ಕಾಣುತ್ತಾನೆ. ನನ್ನ ಮುಖ ಕಂಡೊಡನೆ ಮುಗುಳ್ನಗುತ್ತಾನೆ. “ಸಂಜೆ ಸಿಗ್ತೀಯಾ? ಎಲ್ಲಿ? ಯಾವಾಗ?” ಕೇಳುತ್ತಾನೆ. ಇತ್ತೀಚೆಗೆ ನನ್ನಲ್ಲಿ ಸಂಜೆಗೆಂದು ಕಲೆಹಾಕಿದ ಸಬೂಬುಗಳು ಮುಗಿದು “ಹಾಂ ಬರ್ತೀನಿ…..” ಎಂದೇನೋ ಅರೆಬರೆ ನನಗೇ ಕೇಳಿಸಿದಂತೆ ತಡವರಿಸಿ “ಬೈ….” ಎನ್ನುತ್ತೇನೆ.
ಬೆಳಿಗ್ಗೆ ಆದದ್ದೂ ಇಷ್ಟೆ….
ರವಿ ತನ್ನ ಬಸ್ ‘ಮಿಸ್’ ಮಾಡಿಕೊಂಡಿದ್ದ. ನಮ್ಮ ಬಸ್ಸಿಗೆ ಓಡೋಡಿ ಬಂದು ಹತ್ತಿದ. ಮೊದಲೇ ಒಡ್ಡು ಡ್ರೈವರ್.
“ಬಸ್ ಪಾಸ್ ಇದೆಯೇನ್ರಿ ?” ಒರಟಾಗಿ ಕೇಳಿದ.
“ಇದೆ, ಪಾಸ್ ಇದೆ….” ಜೇಬಿನಲ್ಲಿ ತಡಕಾಡಿ, ಇವ ಪಾಸ್ ತೆಗೆದು ತೋರಿಸಿದ.
“ಕಾರ್ಮಿಕರ ಬಸ್ಸಿಗೆ ಪಾಸು, ಇದು ಆಫೀಸರ್‍ಸ್ ಬಸ್, ಇಳೀರಿ ಕೆಳಗೆ….” ಮುಲಾಜೇ ಇಲ್ಲದೆ ಕೆಳಗಿಳಿಸಿ ‘ಬುರ್’ ಎಂದು ಬಸ್ಸು ಬಿಟ್ಟುಕೊಂಡು ಹೊರಟೇ ಬಿಟ್ಟ.
ಇದೇನೂ ದೊಡ್ಡ ವಿಷಯವಲ್ಲ. ಎಲ್ಲರಿಗೂ ಡ್ರೈವರ್‍ನಿಂದ ಇಂಥ ಪೂಜೆ ಆಗಿಂದಾಗ ಆಗುತ್ತಿರುತ್ತದೆ. ಆದರೇಕೋ ಈ ಘಟನೆ ಮುಳ್ಳಿನಂತೆ ಎದೆಯಲ್ಲಿ ಹುಗಿದುಕೊಂಡು ನೋಯತೊಡಗಿತು. ಎಷ್ಟೋ ದಿನದಿಂದ ರವಿಯ ಬಗೆಗಿದ್ದ ನನ್ನ ಏರುಪೇರಿನ ಭಾವನೆಗಳನ್ನು ಘನೀಕರಿಸತೊಡಗಿತು.
ರವಿಯೇನೋ ಮಾಮೂಲಿನಂತೆ ಇಳಿದುಹೋಗಿದ್ದ. ಸಂಜೆ ಸಿಕ್ಕಾಗಲೂ ಅಪಮಾನ ಆದವನಂತೇನೂ ಅಳುಕಿರಲಿಲ್ಲ.
“ಬಿ. ಟಿ. ಎಸ್, ಹಿಡಕೊಂಡು ಬಂದೆ. ಶಿವಾಜಿನಗರ ತಲುಪಿ ಇನ್ನೊಂದು ಬಸ್ ಬದಲಾಯಿಸಿ, ಕಾರ್ಖಾನೆಗೆ ಬಂದು ‘ಪಂಚ್’ ಮಾಡೊವಷ್ಟರಲ್ಲಿ ಒಂದು ಗಂಟೆ ತಡವಾಗಿತ್ತು….” ಎಂದೇನೋ ಆರಾಮವಾಗಿ ಸ್ವಲ್ಪವೂ ಸಂಕೋಚವಿಲ್ಲದೆ ಹೇಳಿದ್ದ.
“ಮೊದಲೇ ಬಿ. ಟಿ. ಎಸ್, ಹಿಡಿಯೋಕೆ ಏನಾಗಿತ್ತು? ಸುಮ್ಮನೆ ಆ ಡ್ರೈವರ್ ಹತ್ತಿರ ಅನ್ನಿಸಿಕೊಳ್ಳೋದೇಕೆ?” ನನ್ನೊಳಗಿನ ಅಸಮಾಧಾನ ಹೊರಬಿತ್ತು. ಅದು ರವಿಯನ್ನು ತಟ್ಟಿದಂತೇನೂ ಕಾಣಲಿಲ್ಲ.
“ಅಯ್ಯೋ ಎಲ್ಲ ಡ್ರೈವರ್ರೂ ಹಾಗಿರೋಲ್ಲ, ಅವನೊಳ್ಳೆ ತಿಕ್ಕಲು. ಎರಡು ರೂಪಾಯಿ ಜೇಬಿಗೆ ಹಾಕಿದ್ರೆ ಹತ್ತಿಸಿಕೊಳ್ತಾ ಇದ್ದ. ಎಷ್ಟು ಬಾರಿ ಆಫೀಸರ್‍ಸ್ ಬಸ್‌ನಲ್ಲೇ ಬಂದಿದ್ದೀನಿ….” ಕೊಚ್ಚಿಕೊಂಡ.
ಅದೆಲ್ಲ ಅವನಿಗೆ ಅವಮಾನ, ಅಪಮಾನ ಅನಿಸಿಯೇ ಇರಲಿಲ್ಲ. ಮತ್ಯಾರೂ ಅದನ್ನು ಗಮನಿಸಿರಲಿಕ್ಕೂ ಇಲ್ಲ. ಆದರದೇಕೋ ಇದೊಂದು ಘಟನೆ ನನ್ನ ತಲೆ ಹೊಕ್ಕಿತು_ಕೊರೆವ ಕೀಟವಾಗಿ.
ರವಿ, ನನ್ನ ದೂರದ ಸಂಬಂಧಿ. ನಾಳೆ ನನ್ನ ಗಂಡನಾಗುವವನು. ಅವನು ನನ್ನ ಕಾರ್ಖಾನೆಯ ಸಮಾನ್ಯ ಕಾರ್ಮಿಕ.
ಹದಿನಾರಕ್ಕೆ ಎಲ್ಲವನ್ನೂ ಬಲ್ಲ ಬ್ರಹ್ಮನಾಗಿದ್ದ ರವಿ, ನನ್ನಿಂದ ಮೇಲೆ ಅಷ್ಟೆತ್ತರವಾಗಿ ಕಂಡ ರವಿ, ನನ್ನೆಲ್ಲ ಕನಸುಗಳಿಗೆ ಕೇಂದ್ರವಾಗಿದ್ದು ಅಂತರಿಕ್ಷದಿಂದ ಕಳಚಿ ಬಿದ್ದ ಅಯಸ್ಕಾಂತದ ತುಂಡಾಗಿದ್ದ ರವಿ_ಈಗ ನನ್ನ ಇಪ್ಪತ್ತನಾಲ್ಕರ ಪ್ರಾರಂಭದಲ್ಲಿ ಏಕಿಷ್ಟು ಸಾಧಾರಣವಾಗಿ ಕಾಣುತ್ತಾನೆ!
ನನಗೆ ಗೊತ್ತು. ಬದಲಾದದ್ದು ಅವನಲ್ಲ-ನಾನು ಮತ್ತು ನನ್ನ ಪರಿಸರ. ಈ ಬದಲಿಗೊಂಡ ವಾತಾವರಣದ ನಡುವೆ ಅವನೊಬ್ಬ ಸ್ಥಿತಪ್ರಜ್ಞ ಸ್ಥಿರಬಿಂದು. ಹಿಗ್ಗದ-ಕುಗ್ಗದ ಸ್ಥಗಿತ ಬಿಂದು!
ನನ್ನ ಹದಿನಾರನೇ ವಯಸ್ಸಿನಲ್ಲಿ ಅಪ್ಪ ವರ್ಗವಾಗಿ ಬೆಂಗಳೂರಿಗೆ ಬಂದಾಗ ಪ್ರತಿ ಭಾನುವಾರ ನಾನು ಓಡುತ್ತಿದ್ದುದು ರವಿ ಮನೆಗೆ. ಅವನ ಬಳಿಯಲ್ಲಿ ಒಂದು ಪಿ. ಸಿ. (ಪರ್ಸನಲ್ ಕಂಪ್ಯೂಟರ್) ಇತ್ತು. ಎಂಟು ವರ್ಷಗಳ ಹಿಂದೆ ಇಂದಿನಷ್ಟು ಪಿ. ಸಿ. ಬೀದಿಗೊಂದು, ಗಲ್ಲಿಗೊಂದು ಸಿಗುವ ಸಾಮಾನ್ಯ ವಸ್ತುವಾಗಿರಲಿಲ್ಲ. ರವಿಯ ಸ್ನೇಹಿತನಾರೋ ಸಿಂಗಪುರದಿಂದ ತಂದುಕೊಟ್ಟಿದ್ದ. ಅವನ ಬೆರಳುಗಳು ಪಿ. ಸಿ. ಯ ‘ಕೀಬೋರ್ಡ್’ ಮೇಲೆ ಪಟ ಪಟ ಓಡಾಡುತ್ತಿದ್ದಂತೆ, ಪಟಲದ ತುಂಬಾ ಏನೇನೋ ಚಿತ್ರಗಳು ಜಾದೂ ಮಾಡಿದಂತೆ ಮೂಡುತ್ತಿದ್ದವು. ನನ್ನ ಜನ್ಮದಿನಕ್ಕೆ, ಹಬ್ಬ ಹರಿದಿನಕ್ಕೆ ಮುದ್ದಾದ ಗ್ರೀಟಿಂಗ್ ಕಾರ್ಡ್‌ಗಳಿಗೆ ಕಂಪ್ಯೂಟರ್‍ನಿಂದ ಹೊರಬಿದ್ದ ವಿವಿಧ ಶೈಲಿಯ ಅಕ್ಷರಗಳಲ್ಲಿ ನನ್ನ ಹೆಸರನ್ನು ಜೋಡಿಸಿ ಕೊಡುತ್ತಿದ್ದ. ನಾನೋ ಪೇಪರಿನಲ್ಲಿ ಪ್ರಿಂಟಾದ ತಲೆಬರಹಗಳಂತೆ ಅವನ್ನೆಲ್ಲ ಜೋಪಾನವಾಗಿ ಕಾದಿರಿಸುತ್ತಿದ್ದೆ, ಸ್ನೇಹಿತರ ಗುಂಪಿನಲ್ಲಿ ಹೆಮ್ಮೆಯಿಂದ ತೋರಿಸುತ್ತಿದ್ದೆ. ನನ್ನ ಹದಿನಾರರ ಬೆರಗು ಕಣ್ಣುಗಳಿಗೆ ರವಿ ಕಂಪ್ಯೂಟರ್ ಬ್ರಹ್ಮನಾಗಿದ್ದ. ಅವ ಎಷ್ಟು ಬುದ್ಧಿವಂತನಾಗಿ ಕಂಡ! ಅವನ ಬೆರಳುಗಳ ಚಮತ್ಕಾರಕ್ಕೆ, ನುಣುಪು ಸ್ಪರ್ಶಕ್ಕೆ ಪಿ. ಸಿ. ಹೇಗೆ ಮಣಿದು ಮಿಡಿಯುತ್ತಿತ್ತು!
ಈ ರವಿ_
ಹದಿನೆಂಟಕ್ಕೆ ‘ಜಮೀನು ನೋಡಿಕೊ’ ಎಂದು ಪೀಡಿಸಿದ ಅಪ್ಪನ ಮನೆ ಬಿಟ್ಟು ಬೆಂಗಳೂರಿಗೆ ಓಡಿ ಬಂದ ಸಾಹಸಿ! ಒಂದು ಡಿಪ್ಲೊಮಾ ಮಾಡಿ ಮೂರೇ ವರ್ಷದಲ್ಲಿ ಕಾರ್ಖಾನೆಯೊಂದರಲ್ಲಿ ೬೦೦ ರೂ. ಗಳ ಸಂಬಳದ ಕೆಲಸ ಹಿಡಿದಾಗ, ನಮ್ಮ ನೆಂಟರಲ್ಲೆಲ್ಲಾ ಅವನದೇ ಮಾತು. ಅದರ ಮೇಲೆ ‘ಓವರ್ ಟೈಮ್,’ ‘ರಾತ್ರಿ ಪಾಳೆ’ ಎಂದು ಮತ್ತು ನೂರು ಹೆಚ್ಚೇ ಸಂಪಾದಿಸುತ್ತಿದ್ದ.
ರವಿ_ಅವನ ಸಾಹಸಗಾಥೆ, ಕೈತುಂಬಾ ಸಂಬಳ, ಬುದ್ಧಿವಂತ-ಪ್ರಬುದ್ಧ, ಕಂಪ್ಯೂಟರ್ ಜಾಣ. ನನ್ನೆಲ್ಲ ಪ್ರಶ್ನೆಗಳಿಗೆ ಅವನಲ್ಲಿ ಉತ್ತರವಿತ್ತು. ಏನೆಲ್ಲ ಆಗಿದ್ದ ರವಿ ಆಗ! ರವಿ ನನ್ನ ಕಿಶೋರ ಕಾಲದ ‘ಹೀರೋ’ ಆಗಿದ್ದ. ಬಿಳಿ ಕುದುರೆಯ ಮೇಲೆ ಕತ್ತಿ ಹಿಡಿದ ಸರದಾರ!
ಆ ಬೆರಗು, ಕುತೂಹಲ, ರವಿಯ ಬಗ್ಗೆಯ ಹೆಮ್ಮೆ, ಕೌತುಕ, ಉಳಿದದ್ದು ನಿಖರವಾಗಿ ಎರಡು ವರ್ಷಗಳು.
ಅಮ್ಮ ‘ಎಂಥದ್ದೋ ಒಂದು ಬಿ. ಎ., ಬಿ. ಎಸ್ಸಿ., ಅಂತ ಡಿಗ್ರಿ ಮುಗಿಸಿ ಮದುವೆ ಆಗು’ ಅಂತ ಗೊಣಗಿದರೂ, ರವಿ ಪರಿಚಯಿಸಿದ ಕಂಪ್ಯೂಟರ್ ಜಗತ್ತು ಕೈ ಬೀಸಿತ್ತು. ಇಂಜಿನಿಯರಿಂಗ್ ಸೇರಿದ್ದೆ. ಎರಡನೇ ವರ್ಷಕ್ಕೆ ಬರುತ್ತಿದ್ದಂತೆ_ಕಂಪ್ಯೂಟರಿನ ಒಳ ಹೊರಗುಗಳು ತೆರೆದುಕೊಳ್ಳುತ್ತಿದ್ದಂತೆ_ರವಿ ಓರ್ವ ಟೈಪಿಸ್ಟ್‌ಗಿಂತ ಹೆಚ್ಚೇನೂ ಕೆಲಸ ಮಾಡಿರಲಿಲ್ಲ ಎಂದು ಅರಿವಾಗಿತ್ತು. ಸಿದ್ಧ ಕಂಪ್ಯೂಟರ್ ‘ಕಾರ್ಯ ಸರಣಿ’ಗಳ ಉಪಯೋಗಿಸುವುದಷ್ಟೇ ಅವನಿಗೆ ಗೊತ್ತಿತ್ತು. ಈಗ ನನ್ನ ಯಾವುದೇ ಪ್ರಶ್ನೆಗಳಿಗೆ ಅವನಲ್ಲಿ ಉತ್ತರವಿರಲಿಲ್ಲ. ನಾನು ಇಂಜಿನಿಯರಿಂಗ್‌ನ ಒಂದೊಂದೇ ವರ್ಷ ಫಸ್ಟ್ ಕ್ಲಾಸ್, ರ್‍ಯಾಂಕ್ ಎಂದು ಪಾಸಾದಂತೆ, ರವಿ ನನ್ನ ಬದುಕಿನ ಒಂದೊಂದೇ ಮೆಟ್ಟಿಲಲ್ಲಿ ನಪಾಸಾಗುತ್ತ ಇಳಿದ. ನಾನು ಬೆಳೆದಷ್ಟೂ ಅವ ಕುಬ್ಜನಾದ.
ನಾನು ಬಿ. ಇ. ಎರಡನೇ ವರ್ಷದಲ್ಲಿದ್ದಾಗಲೇ ನನಗೆ ಸ್ವಲ್ಪ ಸ್ವಲ್ಪವಾಗಿ ನಮ್ಮ ನಡುವೆ ಆಕಳಿಸುತ್ತಿರುವ ಬಿರುಕುಕಣ್ಣಿಗೆ ಬಿದ್ದಿತ್ತು. ನಾನು ತೀವ್ರವಾಗಿ ಬಯಸತೊಡಗಿದೆ. ರವಿ ಏನಾದರೂ ಆಗಬೇಕೆಂದು….. ಏನಾದರೂ!
“ನೀನೇಕೆ ಸಂಜೆ ಕಾಲೇಜಿನಲ್ಲಿ ಬಿ. ಇ. ಗೆ ಸೇರಬಾರದು? ನಿನ್ನ ಗೆಳೆಯ ರಾಜು ಆಗಲೇ ಸೇರಿ ಎರಡು ವರ್ಷ ಮುಗಿಸಿದ್ದಾನೆ” ನಾನು ಕೇಳಿದ್ದೆ.
“ಅಯ್ಯೋ ಅದೆಲ್ಲ ಮಾಡಿ ಏನಾಗಬೇಕಿದೆ? ಆರಾಮಾದ ಕೆಲಸವಿದೆ” ಅಂದಿದ್ದ. ‘ಅಲ್ಪತೃಪ್ತ’…. ಎಂದು ನನ್ನಲ್ಲೇ ಬೈದುಕೊಂಡೆ.
“ಹೋಗಲಿ ಡಿಪಾರ್ಟ್‌ಮೆಂಟ್ ಪರೀಕ್ಷೆಗಳಿಗಾದರೂ ಸರಿಯಾಗಿ ತಯಾರಾಗಬಾರದ? ಈ ಬಾರಿಯೂ ಫೇಲ್ ಆಗಿ ಕುಳಿತೆಯಲ್ಲ….?” ನಾನು ಅಸಮಾಧಾನ ವ್ಯಕ್ತಪಡಿಸಿದಾಗ ಅವನಲ್ಲಿ ಸಿದ್ಧ ಉತ್ತರಗಳಿರುತ್ತಿತ್ತು-
“ತಯಾರಾಗೋದೇನಿದೆ ಶಶಿ? ಹೇಗಿದ್ರೂ ಅವರಿಗೆ ಬೇಕಾದವರಿಗೆ ಮಾತ್ರ ಬಡ್ತಿ ಕೊಡೋದು. ಆ ಬೆಣ್ಣೆ ಕೃಷ್ಣ ನೋಡು. ಬಂದು ಐದು ವರ್ಷ ಆಗಿಲ್ಲ. ಎರಡು ಬಡ್ತಿ ಗಿಟ್ಟಿಸಿದ್ದಾನೆ. ಬಾಸ್‌ಗೆ ಎಷ್ಟು ಬೆಣ್ಣೆ ಒತ್ತುತ್ತಾನೆ ಗೊತ್ತಾ….?” ಎಂದೇನೋ ಅವರಿವರ ಏಳಿಗೆಯಲ್ಲೆಲ್ಲ ಡೊಂಕು ಹುಡುಕುತ್ತಿದ್ದ. ನಾನು ಬೇಜಾರು ಮಾಡಿಕೊಂಡು ಕುಗ್ಗಿದಾಗ_ “ಹೇಗೂ ‘ಟೈಮ್ ಸ್ಕೇಲ್’ ಬಡ್ತಿ ಬರುತ್ತಲ್ಲ ಬಿಡು ಶಶಿ….” ಎಂದು ಸಮಾಧಾನ ಪಡಿಸಲು ನೋಡಿದ.
“ಹುಂ, ಅದು ಬಂದಾಗ ನೀನು ಮುದುಕನಾಗಿರ್ತೀಯ” ರೇಗಿದ್ದೆ. ಅವ ಸುಮ್ಮನೆ ಹಾಯಾಗಿ ನಕ್ಕುಬಿಟ್ಟ.
ಏನನ್ನೂ ಹಚ್ಚಿಕೊಳ್ಳದ ಆ ತಿಳಿನಗುವನ್ನು ನಾನು ಹೇಗೆ ಪ್ರೀತಿಸಲಿ? ಪ್ರೀತಿಸದಿರಲಿ? ಛೆ, ಅವನಲ್ಲಿ ಮಹತ್ವಾಕಾಂಕ್ಷೆಗಳೇ ಇಲ್ಲವೆ? ಇದ್ದದ್ದರಲ್ಲಿ ತೃಪ್ತನಾಗಿ, ಇಲ್ಲದ್ದರ ಬಗ್ಗೆ ತಲೆಯೇ ಕೆಡಿಸಿಕೊಳ್ಳದ, ನಿನ್ನೆಯಂತೆ ಇವತ್ತನ್ನು , ಇವತ್ತಿನಂತೆ ನಾಳೆಯನ್ನು ಕಳೆದು ಬಿಡುವ ರವಿಯೊಡನೆ ನನ್ನ ಬದುಕಿನ ಹಾದಿ ಹೋಗಿ ಕೂಡಿದೆಯೆ? ನನ್ನ ಪ್ರಶ್ನೆಗಳಿಗೆ ನನ್ನಲ್ಲೂ ಉತ್ತರವಿಲ್ಲ
ಮತ್ತೆ ಎಂಟು ವರ್ಷಗಳಲ್ಲಿ ನಾನು ಬಹಳ ಬದಲಾದೆ. ನನ್ನ ಪರಿಸರವೂ ವಿಸ್ತರಿಸಿತ್ತು. ಕಾಲೇಜು, ಪ್ರಾಜೆಕ್ಟ್, ಪೇಪರ್‍ಸ್, ಕಾನ್‌ಫರೆನ್ಸ್, ಎಂದೇನೇನೋ ಹರಡಿಕೊಂಡಿತ್ತು. ನನ್ನ ಹದಿನಾರರ ಹರೆಯದಲ್ಲಿ ಪ್ರಬುದ್ಧನಾಗಿ, ಪ್ರತಿಭಾವಂತನಾಗಿ ಕಂಡು, ಅಗಾಧವಾಗಿ ಆಕರ್ಷಿಸಿದ್ದ ರವಿ ಈಗ ಬೋರು ಹೊಡೆಸುತ್ತಿದ್ದ.
ನಾನು ಬೆಳೆದೆ_ಕಿಶೋರ ಕಾಲದಾಚೆಗೆ ಕೈ ಕಾಲು ಕೊಂಬೆಗಳ ಚಾಚಿ, ನಾನು ಬೆಳೆದಂತೆಲ್ಲ ಈತ ಗಿಡ್ಡವಾದ, ಲಿಲ್ಲಿಪುಟ್ಟನಾದ. ಕಡೆಗೊಮ್ಮೆ ಕಣ್ಣಿಗೆ ಕಾಣದಷ್ಟು ಸಣ್ಣ ಬಿಂದುವಾದ.
ಹೀಗಿದ್ದೂ ರವಿಯ ಮೇಲಿನ ನನ್ನ ಪ್ರಯತ್ನಗಳಾಗಲೀ, ಪ್ರಯೋಜನಗಳಾಗಲಿ ನಿಂತಿರಲಿಲ್ಲ. ರವಿ ೧೮ಕ್ಕೆ ಮನೆಯಿಂದ ಓಡಿಬಂದದ್ದು, ಬೆಂಗಳೂರು ಸೇರಿದ್ದು, ಕೆಲಸ ಹಿಡಿದದ್ದು, ಈ ಸಾಹಸಗಾಥೆ ಈಗ ಹಳತಾಗಿತ್ತು. ಎಷ್ಟು ದಿನ ಗತವೈಭವದಲ್ಲಿ ವರ್ತಮಾನ ಮರೆತಿರಲು ಸಾಧ್ಯ? ಬದುಕಿಗೆ ಹೊಸತು ಬೇಕು. ಹೊಚ್ಚ ಹೊಸ ಸಾಹಸಗಳು, ಸಾಧನೆಗಳು.
“ರವಿ, ಆ ಸುಂದರ್ ಏನೋ ‘ಸಾಫ್ಟ್‌ವೇರ್ ಫರ್ಮ್’ ತೆಗೀತಾ ಇದ್ದಾನಂತೆ, ನೀನೂ ಅವನ ಜೊತೆ ಸೇರಿಕೊಂಡು ಏನಾದರೂ ಪ್ರಾರಂಭಿಸಬಾರದೆ? ನಾಲ್ಕು ಸಾಲಿನ ಒಂದು ‘ಡಿಬೇಸೋ’, ‘ಬೇಸಿಕ್ಕೋ; ಪ್ರೋಗ್ರಾಮಿಂಗ್ ಕಲಿತರೆ ಆಯಿತು. ಬರೀ ‘ಪೇ ರೋಲ್ಸ್’, ‘ಇನ್‌ವೆಂಟ್ರಿ’ ಮಾಡಿಕೊಟ್ಟರೂ ಸಾವಿರಗಟ್ಟಲೆ ಹಣ ಬರುತ್ತೆ” ನಾನು ಅವನಲ್ಲೊಂದಿಷ್ಟು ಉತ್ಸಾಹ ತುಂಬಲು ಕೊರೆದೆ.
“ಅರೆ ಶಶಿ, ಆಫೀಸಿನಿಂದ ಬರೋದೇ ಆರು ಗಂಟೆ ಆಗಿರುತ್ತೆ. ಅದು ಬೇರೆ ಶುರು ಮಾಡಿ ಹೆಣಗೋದು ಯಾರು? ಅದು ಅಲ್ಲದೆ ಅಷ್ಟು ಹಣ ತಗೊಂಡು ಏನು ಮಾಡಬೇಕು? ನಮಗೆ ಬರೋ ಸಂಬಳದಲ್ಲಿ ನೆಮ್ಮದಿಯಾಗಿರಲು ಸಾಧ್ಯವಿಲ್ಲವೆ?”
ನನ್ನೊಳಗೆ ಪುಟಿದಿದ್ದ ಆಸೆಯ ಚಿಲುಮೆ ಅವನ ತಣ್ಣನೆಯ ಮಾತುಗಳಲ್ಲಿ ಹಿಮಗಟ್ಟಿತು. “ಅವನದೆಲ್ಲ ಅಪ್ಪಟ ಅಭಾವ ವೈರಾಗ್ಯ”, ನನ್ನಲ್ಲೇ ಗೊಣಗೊಕೊಂಡೆ. ಹಣ ಯಾರಿಗೆ ಬೇಕು ಅಂತಾನೆ. ಅದೂ ಸರಿದಾರಿಯಲ್ಲಿ ದುಡಿವ ಹಣ ಒಲ್ಲೆ ಅನ್ನುವವರುಂಟೆ? “ಒಂದು ಬೈಕ್ ಕೊಳ್ಳಬೇಕು” ಅಂತ ಇವನೇ ಸಾವಿರದೊಂದು ಬಾರಿ ಹೇಳಿದ್ದಾನೆ. “ಮನೆಗೆ ಡಿಸ್‌ಟೆಂಪರ್ ಹಾಕಿಸಬೇಕು, ಮುಂದುಗಡೆ ಬೇಲಿ ತೆಗಿಸಿ ಕಾಂಪೌಂಡು ನಿಲ್ಲಿಸಬೇಕು….” ಎಂಬೆಲ್ಲ ಚಿಂತೆಗಳಿವೆ. ಇವನ ಬದುಕಿನ ಖಾಲಿತನಕ್ಕಿಂತ, ಸೋಲಿಗಿಂತ ನನ್ನಲ್ಲಿ ಅಸಹ್ಯ ಹುಟ್ಟಿಸುವುದು ಇವನ ಅಪ್ರಾಮಾಣಿಕತೆ, ಪ್ರಯತ್ನಹೀನತೆ. ಇಲ್ಲದ್ದನ್ನು ಬೇಕಿಲ್ಲ ಎನ್ನುವ ಸೋಗು, ತಾವೇರಲಾರದ ಎತ್ತರಗಳನ್ನು ಹಗುರವಾಗಿ ತೇಲಿಸಿಬಿಡುವ ವಕ್ರ ಕಲೆ. ನಿಂತ ಕಡೆ ನಿಂತಲ್ಲೇ ಬಿಡಾರ ಹೂಡಿ, ಒಂದು ಹೆಜ್ಜೆಯೂ ಮುಂದಿಡದ ಜಡತ್ವ_ನನ್ನಲ್ಲೇ ಮನಸ್ವೀ ಬೈದುಕೊಂಡೆ. ನನ್ನೆಲ್ಲ ನಿರಾಶೆ, ಆಕ್ರೋಶ ಹೊರಬಂದಂತೆ ತಡೆದದ್ದು ಅವನ ಪ್ರೀತಿಯೋ, ಇಲ್ಲ ನಮ್ಮ ನಡುವೆ ನಿಂತ ಎಂಟು ವರ್ಷಗಳ ಸಂಬಂಧದ ನಿರ್ಬಂಧನೆಯೋ ತಿಳಿಯದು.
ಈ ಎಂಟು ವರ್ಷಗಳಲ್ಲಿ ಏನೆಲ್ಲ ಬದಲಾಗಿತ್ತು! ನಾನು ಬಿ. ಇ. ಮುಗಿಸಿ ರವಿಯ ಕಾರ್ಖಾನೆಗೇ ಆಫೀಸರ್ ಹುದ್ದೆ ಹಿಡಿದು ಬಂದಿದ್ದೆ. ಅವನ ಜೊತೆಯ ರಾಜು ಸಂಜೆ ಕಾಲೇಜಿನಲ್ಲಿ ಡಿಗ್ರಿ ಮುಗಿಸಿ ಅದಾಗಲೇ ಖಾಸಗಿ ಕಂಪನಿಯೊಂದರಲ್ಲಿ ಮೂರೂವರೆ ಸಾವಿರ ಎಣಿಸುತ್ತಿದ್ದ. ಸುಂದರ ‘ಸಾಫ್ಟ್‌ವೇರ್ ಫರ್ಮ್’ ಅಂತೇನೋ ತೆಗೆದು ತರಾತುರಿಯಲ್ಲಿ ಒಡಾಡುತ್ತಿದ್ದ. ಕಡೆಗೆ ಏನೋ ಕವನ ಬರೆದುಕೊಂಡು ಬೀದಿ ಅಲೆಯುತ್ತಿದ್ದ ಇವನ ಕುರುಚಲು ಗಡ್ಡದ ಗೆಳೆಯ ಕೂಡ ಇತ್ತೀಚೆಗೆ ಕವಿಗೋಷ್ಠಿ ಅದೂ ಇದೂ ಅಂತ ಹೆಸರು ಮಾಡಿ ಯಾವುದೋ ಪತ್ರಿಕೆಗೆ ಸಂಪಾದಕನಾಗಿ ತುತ್ತೂರಿ ಊದುತ್ತಿದ್ದ. ಇವನ ಜೊತೆಯ ಎಷ್ಟೋ ಜನರಾಗಲೇ ಡಿಪಾರ್ಟ್‌ಮೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಕೆಲವರಾಗಲೇ ಆಫೀಸರ್‍ಸ್ ಗ್ರೇಡ್‌ಗೂ ನೆಗೆದಿದ್ದರು. ರವಿ ಮಾತ್ರ ಸ್ಥಿತಪ್ರಜ್ಞ. ಎಂಟು ವರ್ಷಗಳ ಹಿಂದೆ ಇದ್ದಂತೆಯೇ ಇಂದೂ ಇದ್ದಾನೆ. ಮಧ್ಯೆ ಒಂದು ಟೈಮ್‌ಸ್ಕೇಲ್ ಬಡ್ತಿ ಬಂದಿದೆ. ವರ್ಷಕ್ಕೊಮ್ಮೆ ಬರೋ ಅರವತ್ತು ರೂಪಾಯಿಗಳ ಸಂಬಳದ ಏರಿಕೆಯಲ್ಲಿ ಪರಮತೃಪ್ತ. ಆಚಿನ ಆಸೆಗಳಿಲ್ಲ. ಮಹತ್ವಾಕಾಂಕ್ಷೆಗಳಿಲ್ಲ. ಕನಸುಗಳಿಲ್ಲ. ಅವುಗಳನ್ನು ನನಸಾಗಿಸುವ ಒದ್ದಾಟಗಳಿಲ್ಲ, ಸ್ಪರ್ಧೆಯ ವೇಗವಿಲ್ಲ. ಗೆಲುವಿನ ಉಧ್ವೇಗವಿಲ್ಲ_ನಿಧಾನದ ಮಂದಗತಿಯ ಬದುಕು. ಎಂಥ ನಿಶ್ಚಿತ ಜೀವನ ಇವನದು! ಏಳುವುದು, ತಿನ್ನುವುದು, ಕೆಲಸಕ್ಕೆ ಹೋಗುವುದು, ಸಂಜೆ ನನ್ನ ಜೊತೆ, ಇಲ್ಲ ಒಂದಷ್ಟು ಸೋಮಾರಿಕಟ್ಟೆಯ ಗೆಳೆಯರೊಡನೆ ಹರುಟುವುದು, ರಾತ್ರಿ ಮನೆಯಲ್ಲಿ ಊಟ, ಮತ್ತೆ ನಿದ್ರೆ-ಬದುಕಿನ ಒಂದು ದಿನ ಕಳೆದೇ ಹೋಯಿತು. ಇನ್ನುಳಿದವೂ ಯಾವೊಂದು ವ್ಯತ್ಯಾಸವಿಲ್ಲದೆ ಕಾರ್ಖಾನೆಯಿಂದ ಹೊರ ಬಂದ ಒಂದೇ ಮಾದರಿಯ ಪುನರಾವರ್ತನೆಯಾಗಿ ಕಳೆದು ಹೋಗುತ್ತದೆ. ಅಪ್ಪ ಬಿಟ್ಟಿದ್ದ ಹಣದಲ್ಲಿ ಒಂದು ಮನೆ ಕೊಂಡಿದ್ದಾನೆ. ದೊಡ್ಡದೇನಲ್ಲ. ೨೫ಇಂಟು೩೦ ಸೈಟಿನಲ್ಲಿ ತುರುಕಿ ಕಟ್ಟಿದ ಒಂದು ಕೋಣೆಯ ಮನೆ, ಸಾಕು ನಡೆದೀತು. ನನ್ನ ಮದುವೆ ಇವನ ಬದುಕಿಗೊಂದಿಷ್ಟು ವ್ಯತ್ಯಾಸ ತರಬಹುದು. ಮೆಸ್ಸಿಗೆ ಬದಲು ಅಡಿಗೆ ಮನೆಯಲ್ಲಿ ಗ್ಯಾಸ್ ಹಚ್ಚಬಹುದು. ರಾತ್ರಿ ಒಂಟಿ ಹಾಸಿಗೆ ಹಿಗ್ಗಬಹುದು. ಒಂದೆರಡು ಮಕ್ಕಳಾಗಬಹುದು_ಇಷ್ಟೇ_ಇಷ್ಟೇನೆ? ದಿನ ಬೆಳಗೂ ನನ್ನ-ಅವನ ಸಂಬಂಧ ವಿರುದ್ಧ ದಿಕ್ಕುಗಳಲ್ಲಿ ತಿರುಗಿ ತಿರುಗಿ ಸವೆಯುತ್ತದೆ.
ಏಕೋ ಎಂದೂ ಇಲ್ಲದಷ್ಟು ರವಿಯ ಬಗೆಗೆ ಜಿಗುಪ್ಸೆ ಮೂಡುತ್ತಿದೆ.
ನನ್ನೆದುರು ನನ್ನ ಸಹೋದ್ಯೋಗಿಗಳು, ಸ್ನೇಹಿತರು ಸಾಲುಸಾಲಾಗಿ ನಿಲ್ಲುತ್ತಾರೆ. ಏನಾದರೂ ನೆಪ ಹುಡುಕಿ ಮಾತನಾಡಿಸಲು ಬರುವ ರಮೇಶ್, ನನ್ನ ಸಂಗಾತಿಯಾಗಲು ಹಾತೊರೆದಿದ್ದ ಸಹಪಾಠಿ ವಿಜಯ್, ಪಿ. ಎಚ್. ಡಿ. ಮಾಡಿ ಅಮೆರಿಕೆಗೆ ಹೋಗಲಿರುವ ಅಣ್ಣನ ಗೆಳೆಯ….. ಇನ್ನೂ ಯಾರ್‍ಯಾರೋ!
ನನಗೇ ಮತ್ತೊಮ್ಮೆ ಅಳುಕಾಗುತ್ತದೆ. ನನ್ನ ಬತ್ತುತ್ತಿರುವ ಪ್ರೇಮದ ಬಗ್ಗೆ ಅಪರಾಧಿ ಪ್ರಜ್ಞೆ ತುಂಬಿ ನಿಲ್ಲುತ್ತದೆ. ಅವನ ಬಾಯಿ ತುಂಬಿದ್ದ ನನ್ನ ಪ್ರೀತಿಯ ಕೊಡ ಬದುಕಿನೆಲ್ಲ ಏರು ತಗ್ಗುಗಳಲ್ಲಿ ಕುಲುಕಿ ಕುಲುಕಿ, ತುಳುಕಿ ತುಳುಕಿ, ಖಾಲಿಯಾಗಿದೆಯಲ್ಲ ಎಂದು ಪರಿತಪಿಸುತ್ತೇನೆ. ರವಿಗೆ ನಿಷ್ಠಳಾಗಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಚೆಂದದ ಹುಡುಗರ ಕೈ ಹಿಡಿದ ಗೆಳತಿಯರನ್ನು ಮರೆಯಲು ಯತ್ನಿಸುತ್ತೇನೆ. ರವಿಯ ಒಳ್ಳೆಯತನಗಳನ್ನು ಪಟ್ಟಿ ಇಳಿಸುತ್ತೇನೆ. ಅದಕ್ಕೆ ನಾನು ಕುರುಡಾಗುವುದು ಬೇಡ ಅಂದುಕೊಳ್ಳುತ್ತೇನೆ. ಅಮ್ಮ “ಹುಡುಗಿಯರಿಗೇಕೆ ಇಂಜಿನಿಯರಿಂಗ್?” ಎಂದು ಹಾರಾಡಿದಾಗ “ಹೋಗಲಿ ಬಿಡಿ ಅತ್ತೆ. ಅವಳ ಇಷ್ಟಕ್ಕೆ ಏಕೆ ಅಡ್ಡಿ ಬರ್ತೀರಾ” ಎಂದು ಹುರಿದುಂಬಿಸಿದ ರವಿಯನ್ನು ಕೃತಜ್ಞತೆಯಿಂದ ಜ್ಞಾಪಿಸಿಕೊಳ್ಳುತ್ತೇನೆ. ನನ್ನ ಪಾಸು, ಪ್ರಥಮ ದರ್ಜೆ, ರ್‍ಯಾಂಕುಗಳನ್ನು ನನಗಿಂತ ಹೆಚ್ಚು ಖುಷಿಯಲ್ಲಿ ಸಿಹಿ ಹಂಚಿ ಹಂಚಿಕೊಂಡದ್ದು, ನಾನು ಅವನದೇ ಕಾರ್ಖಾನೆಗೆ ಅವನ ಮೇಲಿನೆ ಹುದ್ದೆಗೆ ಸೇರಿದರೂ ಅಸೂಯೆ ಪಡದಿದ್ದದ್ದು, ಕೆಲವೊಮ್ಮೆ ಕೆಲಸದ ರಭಸದಲ್ಲಿ ನಾನು ಅವನನ್ನು ಉಪೇಕ್ಷಿಸಿದರೂ ಅರ್ಥ ಮಾಡಿಕೊಂಡದ್ದು ಎಲ್ಲಾ ನೆನೆಯುತ್ತೇನೆ. ನನಗೆಂದು ಹೆಸರಿಟ್ಟದ್ದಾಯಿತು. ಅದರಾಚೆ ಅವನು ಯಾವ ಹೆಣ್ಣನ್ನೂ ಮತ್ತೆ ನೋಡಿದ್ದಿಲ್ಲ_ನಿಶ್ಚಿತಾರ್ಥ ಆದಾಗಲಿಂದ“ಶಶಿ ಎಂದಿದ್ದರೂ ನನ್ನವಳು” ಎಂದು ನಿಶ್ಚಿಂತ. ಅವನ ಸರಳತೆಯನ್ನು ಮೆಚ್ಚಲು ಬಯಸುತ್ತೇನೆ. ನನ್ನ ಬದುಕನ್ನೇ ಬಗೆ ಬಗೆದು ಏನನ್ನೋ ಹುಡುಕುತ್ತೇನೆ.
ಒಮ್ಮೊಮ್ಮೆ ಅನ್ನಿಸುವುದುಂಟು. ಈ ಎಲ್ಲ ನನ್ನ ಹುದ್ದೆ, ಬಡ್ತಿಗಳ ಹೋರಾಟ, ಸ್ಪರ್ಧೆಯ ವೇಗ, ಒದ್ದಾಟ, ಮಹತ್ವಾಕಾಂಕ್ಷೆಗಳು, ಹಗಲಿರುಳು ಪರಿಶ್ರಮಗಳು_ಇವೆಲ್ಲಾ ನಿಜಕ್ಕೂ ಏತಕ್ಕಾಗಿ? ಬಹುಶಃ ರವಿಯ ಶಾಂತ ಸ್ವಭಾವದಲ್ಲಿ ಇರುವುದರಲ್ಲೇ ಸದಾ ತೃಪ್ತನಾಗುವ, ಹೆಚ್ಚಿನದಕ್ಕೆ ಕೈ ಚಾಚದೆ, ಹೆಚ್ಚು ಕೆಲಸ ಕನಸುಗಳ ಅಂಟಿಕೊಳ್ಳದೆ, ದಿನ ಬೆಳಗು ಸಂಜೆ ರಾತ್ರಿಗಳನ್ನು ಆರಾಮವಾಗಿ ಕಳೆದುಬಿಡುವ ಅವನ ಜೀವನ ಶೈಲಿಯಲ್ಲಿ ಹೊಸ ತತ್ವವೊಂದಿರಬಹುದು. ತನ್ನದೇ ಪ್ರತ್ಯೇಕ ಪ್ರಪಂಚದಲ್ಲಿ, ಊಟ ತಿಂಡಿ ಹರಟೆ ನಿದ್ದೆಗಳ ಪುಟ್ಟ ಜಗತ್ತಿನಲ್ಲಿ ಅವ ಸುಖಿ. ನಾನು ಅವನ ಈ ಬದಲಿಲ್ಲದ ಬದುಕಿಗೆ ಶಾಮೀಲಾಗಲು ಏಕೆ ಸಿದ್ಧವಿಲ್ಲ? ನನಗೆ ಹೊಸತನದ ಅನ್ವೇಶಣೆ ಇದೆ. ಸಾಧನೆಯ ಕುದುರೆಯೇರುವ ನಾಗಾಲೋಟದ ರೊಮಾಂಚನದ ಹುಚ್ಚಿದೆ. ರವಿ ನಾನು ಹೇಗೆ ಹೇಳಲಿ ನಿನ್ನ ಸಂಯಮ, ಸಮಾಧಾನ ನನ್ನನ್ನಿಂದು ನಾಟುತ್ತಿಲ್ಲ. ಏನೊಂದೂ ಆಗದ ನಿನ್ನ ಬದುಕಿನ ವಿವಿಕ್ತತೆಗೆ, ಏಕತಾನಕ್ಕೆ ನಾನು ಸ್ಪಂದಿಸುತ್ತಿಲ್ಲ.
ನಿನ್ನ ಬದುಕಿನ ಸರಳತೆಗೆ ಮಾರು ಹೋಗಲಾರದ ನನ್ನ ಬದುಕಿನ ಸಂಕೀರ್ಣತೆಯದೂಷಿಸಲೆ? ಸಂಜೆಗಳನ್ನು ಸೋಮಾರಿ ಕಟ್ಟೆಯಲ್ಲಿ ಸೂರ್ಯಾಸ್ತ ನೋಡುತ್ತಾ ಕಳೆದು ಬಿಡುವ ನಿನ್ನ ಬದುಕಿನ ಬಿಡುವಿನ ಬಗ್ಗೆ ನನಗೆ ಮತ್ಸರವೆ, ತಾತ್ಸಾರವೇ, ಉದಾಸೀನವೆ, ತಿರಸ್ಕಾರವೆ?
ಆಫೀಸಿನಲ್ಲಿ ನಾನು ರವಿಯೊಡನೆ ನೇರ ಮಾತನಾಡುವುದೂ ಅಪರೂಪವಿತ್ತು. ದಿನವೆಲ್ಲ ಬಿಡುವಿಲ್ಲದ ಕೆಲಸ. ಕೆಲಸಕ್ಕೆ ಬಾರದ ಮೀಟಿಂಗ್‌ಗಳು, ಕಾನ್‌ಫರೆನ್ಸ್‌ಗಳು. ಕೆಲವೊಮ್ಮೆ ದಿಢೀರನೆ ಬಾಂಬೆ, ಮದ್ರಾಸ್ ಎಂದು ಬಿಜಿಯಾಗಿ ಸುತ್ತುವುದೂ ಇತ್ತು. ಅದರಾಚೆ ಸಂಜೆ ಕೂಡಾ ಏನಾದರೂ ಸಂಘ ಸಂಸ್ಥೆಯ ಕೆಲಸ ಅಂಟಿಸಿಕೊಂಡವಳು ನಾನು. ರವಿ ಮಾತ್ರ ತನಗೆ ಕೊಟ್ಟ ಕೆಲಸವನ್ನಷ್ಟು ಅಚ್ಚುಕಟ್ಟಾಗಿ ಮುಗಿಸಿ ನಂತರ ಹಾಯಾಗಿ ಜೊತೆಯವರೊಡನೆ ಹರಟುತ್ತಲೋ, ಕ್ಯಾಂಟೀನಿನ ಕಾಫಿ ಹೀರುತ್ತಲೋ ಕಳೆದು ಬಿಡುತ್ತಿದ್ದ. ನನಗೊಂದು ಬಗೆಯ ಅಸೂಯೆ, ಕೋಪ ಒಟ್ಟಿಗೇ ಬರುತ್ತಿತ್ತು. ಎಷ್ಟೊಂದು ಸಮಯ ಇದೆ. ಏನಾದರೂ ಓದಿಕೊಳ್ಳಬಾರದಾ? ತನ್ನ ಕೆಲಸವನ್ನೇ ಮತ್ತಷ್ಟು ಕಲಿಯಬಾರದಾ? ಮನೆಯಲ್ಲೆ ಪಿ. ಸಿ. ಇಟ್ಟುಕೊಂಡಿದ್ದಾನೆ. ವಿಡಿಯೋ ಆಟಗಳನ್ನು ಆಡುವುದು ಬಿಟ್ಟು ಅವ ಅದರ ಮೇಲೆ ಮಾಡೋದೇನು. ಒಂದಿಷ್ಟು ‘ಪ್ರೋಗ್ರಾಮಿಂಗ್’ ಕಲಿಯಬಾರದಾ? ನನ್ನೊಳಗೇ ಎಂಥದ್ದೋ ಆಕ್ರೋಶ ಕುದಿದೆದ್ದರೂ, ಅದಕ್ಕೆಲ್ಲ ಮಾತು ಕೊಡಲಾರದೆ ಒದ್ದಾಡುತ್ತಿದ್ದೆ.
ಎಷ್ಟೋ ಬಾರಿ ಯೋಚಿಸಿದ್ದುಂಟು_
ನಾನು ರವಿಯಲ್ಲಿ ಬಯಸುತ್ತಿರುವುದಾದರೂ ಏನು? ಆಸ್ತಿ, ಅಂತಸ್ತು, ಐಶ್ವರ್ಯ, ಯಶಸ್ಸು, ಏಳಿಗೆ!
ದೇವರೇ, ಪ್ರೀತಿಗಳ ಬಗ್ಗೆ ನಾ ಏನು ಹೇಳಲಿ? ಪ್ರೀತಿಗಳೇಕೆ ಪುಸ್ತಕದಲ್ಲಿಯಂತೆ, ಪುರಾಣ ಕತೆಗಳಂತೆ, ಅಖಂಡವಾಗಿ ಅಲ್ಲಾಡದಂತೆ ನಿಲ್ಲುವುದಿಲ್ಲ? ಬದುಕಿನ ಸಣ್ಣ ಸೋಲು-ಗೆಲುವುಗಳಲ್ಲಿ ಮುಗ್ಗರಿಸಿ ಬೀಳುತ್ತವಲ್ಲ. ಅವನನ್ನು ಅವನಿರುವಂತೆ ಗೌರವಿಸಲಾರದ್ದು, ಪ್ರೀತಿಸಲಾರದ್ದು, ಸಹಜವೆ, ಸ್ವಾಭಾವಿಕವೆ? ಇಲ್ಲ ನನ್ನ ದೌರ್ಬಲ್ಯವೆ? ನಾನೇಕೆ ಅವನನ್ನು ಅವನಿರುವಂತೆ ತಟ್ಟದೆ, ಕುಟ್ಟದೆ, ಕರಗಿಸದೆ, ಅಚ್ಚೊತ್ತದೆ, ಬದಲಿಸದೆ, ಸ್ವೀಕರಿಸಲು ಸಿದ್ಧವಿಲ್ಲ?
ಬೆಳಿಗ್ಗೆ ಕೂಡ ನೋಟೀಸ್ ಬೋರ್ಡ್ ನೋಡಿದಾಗ ಮತ್ತೆ ಕೊರೆದಿದ್ದೆ_
“ರವಿ ಅದ್ಯಾವುದೋ ‘ತರಪೇತಿ’ ಅಂತ ಹಾಕಿದ್ದಾರೆ ನೋಡಿದೆಯಾ? ಮೂರು ತಿಂಗಳ ಕೋರ್ಸ್ ಅಷ್ಟೆ. ಸರ್ಟಿಫಿಕೇಟ್ ಬೇರೆ ಕೊಡ್ತಾರೆ….” ಎಂದಿದ್ದೆ.
“ಆಗಲೇ ನೋಡಿದ್ದೆ ಶಶಿ, ವಾರಕ್ಕೆ ಆರು ದಿನ, ಅದೂ ಕಾರ್ಖಾನೆ ಮುಗಿದ ಮೇಲೆ ೬ರಿಂದ ೮ರವರೆಗೆ! ಸಾಲದ್ದಕ್ಕೆ ಭಾನುವಾರ ಬೇರೆ ಇದೆ. ನನ್ನ ಕೆಲಸಕ್ಕೇನು ಅದರ ಅವಶ್ಯಕತೆ ಇಲ್ಲ ಬಿಡು.”
“ನಿನ್ನ ಕೆಲಸಕ್ಕೆ ಯಾವುದರ ಅವಶ್ಯಕತೆಯೂ ಇಲ್ಲ ಅಂತ ಗೊತ್ತು. ಮತ್ಯಾವುದಾದರೂ ಕೆಲಸಕ್ಕೆ ಉಪಯೋಗವಾಗೊಲ್ಲವಾ? ಆಮೇಲೆ ಬೇಕಾದರೆ ಖಾಸಗಿಯಾಗಿ ಏನಾದರೂ ಶುರು ಮಾಡಬಹುದು…..” ನಾನು ಅಸಹನೆಯಿಂದ ಹೇಳಿದೆ.
“ಶಶಿ, ಸ್ವಂತ ಏನೇನೋ ಮಾಡೋದು, ಕೈ ಸುಟ್ಟುಕೊಳ್ಳೋದು ಏಕೆ?”
“ನಿನಗೆ ಏತರಲ್ಲೂ ಉತ್ಸಾಹವೇ ಇಲ್ಲ. ಹೊಸತೇನಕ್ಕೂ ಕೈ ಹಾಕೋ ಸಾಹಸವೇ ಇಲ್ಲ” ನಾನು ರೇಗಿದೆ.
“ಶಶಿ, ನನ್ನ ಕೆಲಸದಲ್ಲಿ ಆರಾಮಿದ್ದೇನೆ. ಸ್ವಂತ ಉದ್ಯೋಗ, ಲಾಭವೇ ಆದರೂ ದಿನದ ೨೪ ಗಂಟೆ ತಲೆನೋವು ಶ್ರಮ ಯಾತಕ್ಕೆ ಬೇಕು? ಬಿಡುವಾಗಲೀ ದುಡಿದಿದ್ದನ್ನು ಅನುಭವಿಸುವ ಸಮಯವಾಗಲೀ ಎಲ್ಲಿರುತ್ತೆ? ಎಂಟು ಗಂಟೆಯ ಈ ಕೆಲಸಕ್ಕೆ ಬಂದರೆ ಆಯಿತು. ಕೈ ತುಂಬಾ ಸಂಬಳ, ಅದೂ ಎಂಟು ಗಂಟೆಯೂ ಮೇಜಿಗಂಯ್ಟಿ ದುಡಿಯಬೇಕೆ? ಕಾಲು ಚಾಚಿ ಲೈಬ್ರರಿಯಲ್ಲಿ ನಿದ್ದೆ ಹೊಡೆದರೂ ಸಮಯ ಕಳೆಯುತ್ತೆ. ಜೀವನದಲ್ಲಿ ಸಂತೃಪ್ತಿ ಇದ್ದರೆ ಸಾಲದೆ? ಸುಂದರ್‍ನೇ ನೋಡು. ಏನೋ ಸಂಜೆ ಎರಡು ಮೂರು ಗಂಟೆ ಮಾಡ್ತೀನಿ ಅಂತ ಪ್ರಾರಂಭಿಸಿದವನು ಇವತ್ತು ಬೆಳಿಗ್ಗೆ ಏಳರಿಂದ ರಾತ್ರಿ ಹತ್ತರವರೆಗೂ ಒದ್ದಾಡ್ತಾನೆ….”
“ಅದಕ್ಕೆ ತಕ್ಕ ಹಾಗೆ ಲಕ್ಷ ಸಂಪಾದಿಸುತ್ತಾನೆ….” ನಾನು ಒರಟಾಗಿ ರೇಗಿದೆ. ಅವನ ದೃಷ್ಟಿಯಲ್ಲಿ ಬದುಕನ್ನು ನೋಡಲು ನನಗೆ ಸಾಧ್ಯವೇ ಇರಲಿಲ್ಲ.
“ಶಶಿ, ಅಷ್ಟೆಲ್ಲ ಹಣ ನಿಜಕ್ಕೂ ನಮಗೇ ಬೇಕಾ….? ಸಂತೈಸುವಂತೆ ಕೇಳಿದ. “ಮನೆ ಇದೆ, ನಮ್ಮಿಬ್ಬರ ಸಂಬಳದಲ್ಲಿ ನೆಮ್ಮದಿಯ ಬದುಕಿದೆ. ಇಲ್ಲದ ಗೊಡವೆ ಏಕೆ…..?”
ನಿಜ, ಆದರೆ ಸುಂದರ್ ಸಂಪಾದಿಸುವುದು ಹಣ ಒಂದನ್ನೇ ಏನು? ನಮ್ಮ ಬುದುಕು ಇಷ್ಟೇನೇ? ತಿಂದುಂಡು ಮಲಗುವ, ಹೇಗಾದರೂ ಆಫೀಸಿನಲ್ಲಿ ಎಂಟು ಗಂಟೆ ಕಳೆವ ಪುನರಾವರ್ತನೆಯ ಪ್ರತಿಕ್ರಿಯೆ?
“ಶಶಿ, ನಿನಗೆ ನನ್ನ ಮೇಲೆ ಅಸಮಾಧಾನನಾ? ನಿನ್ನಂತೆ ಓದಿಲ್ಲ. ನಿನಗಿಂತ ಕಡಿಮೆ ಸಂಬಳ ಅಂತಾನೆ? ಶಶಿ, ಆಸ್ತಿ, ಅಂತಸ್ತು, ಡಿಗ್ರಿ ಹಣಗಳನ್ನು ನೋಡಿ ಅಳೆಯುವಂಥದ್ದು ಪ್ರೀತಿ ಹೇಗಾಗುತ್ತೆ? ನನ್ನ ನಿನ್ನ ಪ್ರೀತಿ ಇವೆಲ್ಲಕ್ಕೂ ಮೀರಿ ನಿಲ್ಲಬೇಕು….”
“ನಿಜ ರವಿ, ಮಾದರಿ ಪ್ರೀತಿಗಳೆಲ್ಲ ಇವೆಲ್ಲಕ್ಕೂ ಮೀರಿ, ನೆಲ ಬಿಟ್ಟು ಮುಗಿಲಲ್ಲಿ ನಿಲ್ಲಬೇಕು. ಆದರೆ ನಮ್ಮ ಬದುಕಿನ ಮುಂದೆ ಚಾಚಿ ನಿಂತಿರುವ ಈ ಮೌನವನ್ನು, ಖಾಲೀತನವನ್ನು ಬರೀ ಪ್ರೀತಿಯ ಮಾತುಗಳಿಂದ, ಬರೀ ಪ್ರೀತಿಯ ಪದಗಳಿಂದ, ತುಂಬಲು ಸಾಧ್ಯವಿದೆಯೇ? ನನ್ನ ಪ್ರೀತಿಗಾಗಿ ನೀ ಏನಾದರೂ ಮಾಡಲು ಸಿದ್ಧವಿರುವೆಯಾ?” ನೇರವಾಗಿ ಕೇಳಿದೆ. ಉತ್ತರವಿಲ್ಲದೆ ತಬ್ಬಿಬಾದ.
ನನ್ನಲ್ಲೇ ಕಡಗೊಲಿನ ಕಡೆತ_
ಈ ಪ್ರೀತಿಯಾದರೂ ಯಾವುದು? ಎಲ್ಲವನ್ನೂ ಮೀರಿದ ಪ್ರೀತಿ ಯಾವುದು? ಒಬ್ಬನನ್ನು ಅವನೆಲ್ಲ ಓದು, ವಿದ್ಯೆ, ಕೆಲಸ, ಸಾಧನೆ ಎಲ್ಲವನ್ನೂ ಕಳಚಿ ಅವನನ್ನಷ್ಟೇ ಬೆತ್ತಲಾಗಿ ಪ್ರೀತಿಸುವುದೇಗೆ? ಅವನೆಲ್ಲ ವಿಶೇಷಣಗಳನ್ನು, ಕಿರೀಟಗಳನ್ನು ಅವನೇರಿದ ಸಿಂಹಾಸನಗಳನ್ನು ಬದಿಗಿಟ್ಟು ಅವನನ್ನಷ್ಟೇ ಪ್ರೀತಿಸುವುದು ಹೇಗೆ? ಸಹೋದ್ಯೋಗಿ ರಮೇಶನ ಬಡ್ತಿಯಲ್ಲಿ, ಅಧಿಕಾರದಲ್ಲಿ. ಅವನ ಯಶಸ್ಸಿಲ್ಲವೆ, ಹಗಲಿರುಳಿನ ದುಡಿತವೆಲ್ಲವೆ? ಅಣ್ಣನ ಗೆಳೆಯ ಹೆಸರಿನ ಮುಂದೆ ಜೋಡಿಸಿಕೊಂಡಿರುವ ಮೂರು ಮೂರು ಡಿಗ್ರಿಗಳಲ್ಲಿ ಅವನ ಪರಿಶ್ರಮವಿಲ್ಲವೆ? ಅವನ ವ್ಯಕ್ತಿತ್ವದ ಕನ್ನಡಿಯಲ್ಲವೆ ಅವೆಲ್ಲ? ಮನೆಯ ಪರಿಸ್ಥಿತಿಯಿಂದಾಗಿ ಎಸ್. ಎಸ್. ಎಲ್. ಸಿ. ಗೇ ಓದು ನಿಲ್ಲಸಿ ಕೆಲಸ ಹಿಡಿದಿದ್ದ ರಾಜು, ಸಂಜೆ ಕಾಲೇಜಿನಲ್ಲೇ ಪಾಸಾಗಿ ನಾಲ್ಕು ಜನ ತಮ್ಮ ತಂಗಿಯರನ್ನು ದಡ ಸೇರಿಸಿದ್ದು ಸಾಹಸವಲ್ಲವೆ? ವ್ಯಕ್ತಿಯ ವ್ಯಕ್ತಿತ್ವದ ಅಭಿವ್ಯಕ್ತಿ ಅವನ ಕಾರ್ಯಗಳಲ್ಲಿದೆ. ಬದುಕಿನ ನಿಚ್ಚಳ ನಿಲುವಿನಲ್ಲಿದೆ. ಅವುಗಳೆಲ್ಲದರ ಹೊರತಾಗಿ ಮನುಷ್ಯಮನುಷ್ಯನ ನಡುವಿನ ಅಂತರವಾದರೂ ಏನಿದೆ? ಏರು ತಗ್ಗಿಲ್ಲದ ಸಮತಟ್ಟು ನೆಲದಲ್ಲಿ ರವಿ ಜೋಡೆತ್ತಿನ ಗಾಡಿ ಹೂಡಬಯಸಿದ್ದಾನೆ.
ಅಮ್ಮ ಅಪ್ಪನ ಕಣ್ಣಿನಲ್ಲಂತು ರವಿ ಅಚ್ಚುಮೆಚ್ಚಿನ ಭಾವೀ ಅಳಿಯ. “ರವಿ ತುಂಬಾ ಒಳ್ಳೆಯವನು. ಒಂದು ಬೀಡಿ ಸಿಗರೇಟಿನ ಚಟವೂ ಇಲ್ಲ…..” ಅಮ್ಮನ ‘ಒಳ್ಳೆಯ ಗಂಡ’ ನ ಕಲ್ಪನೆ ಅಲ್ಲಿಗೇ ನಿಂತಿದೆ. ತಂದು ಹಾಕುವ, ಪ್ರೀತಿಸುವ ಕೆಡುಕನೋ, ಕುಡುಕನೋ ಅಲ್ಲದ, ಕೆಟ್ಟ ಚಾಳಿಗಿಳಿಯದ ಗಂಡ ‘ದೇವರೇ’ ಸರಿ, ನನ್ನ ‘ಗಂಡ’ನ ಅವಶ್ಯಕತೆಗಳು ಅಮ್ಮನಿಗಿಂತಾ ಭಿನ್ನವಾಗಿವೆ. ಅಮ್ಮನಿಗೆ ಕೈಗೆ ಕಾಸು ಹಾಕಿ, ಹೊಟ್ಟೆ ಬಟ್ಟೆ ನೋಡಿಕೊಂಡು ಪರ ಹೆಂಗಸರ ಸಹವಾಸಕ್ಕೆ ಹೋಗದೆ, ಕುಡಿಯದೆ, ಬಡಿಯದೆ ಇರುವ ಗಂಡ_ಅಷ್ಟೆ ಅಮ್ಮನ ‘ಗಂಡ’ನ ಉತ್ಕೃಷ್ಟ ಕಲ್ಪನೆ. ಅಪ್ಪ, ಹೆಚ್ಚು ಕಮ್ಮಿ ಈ ಕಲ್ಪನೆಗೆ ಹೊಂದಿ ಬಂದಿದ್ದರು. ಆಗೊಮ್ಮೆ ಈಗೊಮ್ಮೆ ಸಂಯಮ ಕಳಕೊಂಡದ್ದು ತಿಳಿದಿತ್ತು. ಆದರೂ, “ಸವತೀನೇ ಮನೆಗೆ ತರಲಿಲ್ಲವಲ್ಲ” ಎಂಬ ಸಮಾಧಾನದಲ್ಲಿ ಉದಾರವಾಗಿ ಅಮ್ಮ ಕ್ಷಮಿಸಿಬಿಟ್ಟಿದ್ದಳು. ಕ್ಷಮಿಸದೆ ಇರುವ ಆಯ್ಕೆಯಾದರೂ ಎಲ್ಲಿತ್ತು ಅವಳಿಗೆ? ಹಳ್ಳಿಯಲ್ಲಿದ್ದ ಅವಳ ಅಪ್ಪ-ಅಮ್ಮ ಎಂದೋ ಪರಲೋಕ ಸೇರಿದ್ದರು. ಸ್ಕೂಲಿನ ಮೆಟ್ಟಲೂ ಕಾಣದೆ, ಅಪ್ಪನ ಮೇಲೆ ಅವಲಂಬಿತ ಅಮ್ಮನ ಬದುಕಿನಲ್ಲಿ ಆಯ್ಕೆಗಳಿರಲಿಲ್ಲ.
ಆದರೆ ನನ್ನ ‘ಒಳ್ಳೆಯ ಗಂಡನ’ ಕಲ್ಪನೆಯಲ್ಲಿ ಅಮ್ಮನ ಹೇಳಿಕೆಗಳೆಲ್ಲ ಇರಬೇಕಾದರೂ ಅವು ಕೇವಲ ನನ್ನ ಬೇಡಿಕೆ ಪಟ್ಟಿಯ ಒಂದಂಶ ಮಾತ್ರ. ಅಮ್ಮನನ್ನು ಕಟ್ಟಿ ಹಾಕಿದ್ದ ಆರ್ಥಿಕ ಅವಲಂಬನೆ ನನಗಿಲ್ಲ. ನನ್ನ ಸಾಂಗತ್ಯದ ಅವಶ್ಯಕತೆಗಳೇ ಬೇರೆ ಇವೆ. ಎಷ್ಟು ಬಾರಿ ನನ್ನ, ರವಿಯ ನಡುವೆ ಮಾತನಾಡಲೂ ಏನೂ ಇರದೆ ಮೌನ ಆವರಿಸಿಬಿಡುತ್ತದೆ. ನಾನು ಹೇಳುವ ಎಷ್ಟೋ ವಿಷಯಗಳು ಅವನಿಗರ್ಥವಾಗುವುದಿಲ್ಲ. ಆಸಕ್ತಿಯೂ ಇಲ್ಲ. ಅವನ ಸೋಮಾರಿ ಕಟ್ಟೆಯ ಸಮಾಚಾರಗಳ ನಾನು ಎಷ್ಟೆಂದು ಕೇಳಲಿ? ಇವನ ‘ಒಳ್ಳೆಯ’ತನವೂ ಬೋರು ಹೊಡೆಸುವಷ್ಟು ಬೇಜಾರಾಗಿದೆ. ಇವನ ಪ್ರೀತಿಯಲ್ಲೂ ಸೋನೆಮಳೆಯ ಏಕತಾನತೆ! ಎಂಟು ವರ್ಷಗಳ ನಮ್ಮ ಸಂಬಂಧದಲ್ಲಿ ಅವ ಎಂದೂ ‘ನಿನ್ನ ಪ್ರೀತಿಸುತ್ತೇನೆ, ನೀನಿಲ್ಲದೆ ಬದುಕಿರಲಾರೆ….” ಎಂದು ಒಮ್ಮೆಯೂ ಹೇಳಿದ್ದಿಲ್ಲ. ಎಷ್ಟಾದರೂ ನಾವು ನಾಳೆ ಗಂಡ-ಹೆಂಡಿರಾಗುವವರು ಎಂದು ನಿಶ್ಚಿತಾರ್ಥದ ನಿಶ್ಚಿಂತೆಯಲ್ಲಿದ್ದಾನೆ. ಪ್ರೀತಿಯತ್ತಲೂ ಎಂದೂ ದುಡಿದಿದ್ದಿಲ್ಲ. ಉತ್ಕಟತೆಯ ಶಿಖರವೇರಿದ್ದಿಲ್ಲ. ನನಗಾಗಿ ‘ಕುತುಬ್’ ನಿಂದ ಹಾರುವುದಾಗಲೀ, ಆಕಾಶ ಪುಷ್ಪವನ್ನು ತರಿದು ತರುವುದಾಗಲೀ, ಬರೀ ಮಾತಿಗಾದರೂ ಹೇಳಿದ್ದಿಲ್ಲ. ಕಡೆಗೆ ನಮ್ಮ ಎಂಟು ವರ್ಷಗಳ ಸಂಬಂಧದಲ್ಲಿ ಒಮ್ಮೆ ಕೂಡ ಕೈ ಹಿಡಿದು ಅಮುಕಿದ್ದಿಲ್ಲ. ಬರಸೆಳೆದು ಚುಂಬಿಸಿದ್ದಿಲ್ಲ. ಅವೆಲ್ಲವೂ ಮದುವೆಯ ಮರ್ಯಾದೆಯ ಹೊಸ್ತಿಲಿನಲ್ಲಿ ಮಾತ್ರ! ರವಿ ಪ್ರೀತಿಯಲ್ಲೂ ಸಾಹಸಿಯಲ್ಲ. ಪ್ರಿತಿಯಲ್ಲೂ ಗೆದ್ದವನಲ್ಲ. ಅವನ ಮೌನವನ್ನು ಸಂಯಮವೆಂದು ನನ್ನ ಹೃದಯ ಒಪ್ಪಲು ಏಕೋ ಸಿದ್ಧವಿಲ್ಲ. ನಾಳೆ ಮದುವೆ ಆದ ಮೊದಲ ರಾತ್ರಿಯೇ ಯಾವುದೇ ಪೀಠಿಕೆ ಇಲ್ಲದೆ ಹಾಸಿಗೆಗೇರುತ್ತಾನೆ. ಅನ್ನುವುದೂ ಸುಳ್ಳಲ್ಲ. ಕೆಲವೊಮ್ಮೆ ಕೆಲವರ ವ್ಯಕ್ತಿತ್ವಗಳು ಅವರು ಹೇಳದೆಯೇ ಅವರ ವರ್ತನೆಗಳಲ್ಲಿ ವ್ಯಕ್ತವಾಗಿರುತ್ತವೆ. ಅವನ ಚೀಲದಲ್ಲಿ ಆಗಾಗ್ಗೆ ‘ರತಿ ವಿಜ್ಞಾನ’ ಇತ್ಯಾದಿ ಸೆಕ್ಸ್ ಪುಸ್ತಕಗಳನ್ನು ನೋಡಿದ್ದೇನೆ. ಅವುಗಳಿಗೆ ಬೈಂಡ್ ಬೇರೆ ಹಾಕಿ ಕದ್ದು ಓದುತ್ತಾನೆ. ರವಿಯದು ಪ್ರೀತಿಯಲ್ಲೂ ಸಾಹಸವಿಲ್ಲ. ಮದುವೆಯ ಸುರಕ್ಷಿತ ಅಖಾಡದಲ್ಲಿ ಸೋಲಿಲ್ಲ ಎಂದು ಗ್ಯಾರಂಟಿಯಲ್ಲಿ ಕುಸ್ತಿಗಿಳಿಯಬಲ್ಲ.
ಆದರೆ ಈ ಪ್ರೀತಿಯನ್ನು, ವರ್ಷಗಳ ಸಂಬಂಧವನ್ನು ನಾನು ಹೇಗೆ ಕತ್ತರಿಸಲಿ? ಎಂದೋ ಎದೆ-ಮಿದುಳುಗಳಿನ್ನೂ ಅರಳಿರದ ದಿನಗಳಲ್ಲಿ ಕೊಟ್ಟ ಮಾತಿಗೆ ಇಂದು ಉರುಳು ಹಾಕಿಕೊಳ್ಳುವುದೆ? ನಾನು ನಾಳೆಗಳಲ್ಲಿ ಬದುಕುವವಳು. ನಿನ್ನೆಗಳ ನೆರಳನ್ನು ಕತ್ತರಿಸಿ ಹೋಗಬಲ್ಲೆನೆ? ನನಗವನು ಓದಿಲ್ಲ ಅನ್ನುವುದಕ್ಕಿಂತ, ಅವ ಪ್ರಯತ್ನಿಸಲೇ ಇಲ್ಲ ಎಂಬ ವ್ಯಥೆ. ಅವ ಪ್ರಯತ್ನದಲ್ಲಿ ಸೋತಿದ್ದರು ಇಷ್ಟು ಅಸಮಾಧಾನವಾಗುತ್ತಿರಲಿಲ್ಲ. ಇಲ್ಲದ್ದನ್ನು ಒಲ್ಲೆನೆನ್ನುವ, ಆಗದ್ದನ್ನು ಅಸಾಧ್ಯವೆನ್ನುವ, ಒಮ್ಮೆ ಇಟ್ಟ ಆಣೆಗಳ ಬಲದಲ್ಲಿ, ನನ್ನ ಇಡೀ ಬದುಕಿನ ಪ್ರೀತಿಯನ್ನು ಕೊಂಡುಕೊಂಡಂತೆ ನಿಶ್ಚಿಂತನಾದ ಇವನ ನಿಲುವಿನ ಬಗೆಯೇ ಕೊಪ ಕುದಿಯುತ್ತದೆ. ಜ್ವಾಲಾಮುಖಿಯಾಗಿ.
ನಿಜ, ಪ್ರೀತಿಯಲ್ಲಿ ತಪ್ಪಿದವಳು ನಾನೇ. ಆದರೇಕೋ ನನ್ನ ನಿಷ್ಠೆಯನ್ನು ಉಳಿಸಿಕೊಳ್ಳದುದು ಕಾಯ್ದುಕೊಳ್ಳದ್ದು, ರವಿಯ ಸೋಲು ಎನಿಸುತ್ತದೆ. ಅವನು ನನ್ನ ಕಾಡಿಸಬೇಕಿತ್ತು. ಪೀಡಿಸಬೇಕಿತ್ತು. ಎದೆ-ಮಿದುಳುಗಳ ತಟ್ಟಬೇಕಿತ್ತು. ಗೆಲ್ಲಬೇಕಿತ್ತು…. ಹೇಗಾದರೂ ಸರಿ. ನನಗಾಗಿ, ನನ್ನ ಪ್ರೀತಿಗಾಗಿ ಅವನು ಒಂದಿಷ್ಟು ಪರಿಶ್ರಮ ಪಡಬೇಕಿತ್ತು. ನನ್ನೆಲ್ಲ ಭಾವನೆಗಳಲ್ಲಿ ಅಜಗಜಾಂತರ ವ್ಯತ್ಯಾಸವಾಗಿದ್ದರೂ ರವಿ ಮಾತ್ರ ಇನ್ನೂ ಅಂದಿನ ಕನಸು ನನಸಾಗುವ ಭರವಸೆಯಲ್ಲಿ ಕುಳಿತಿದ್ದಾನೆ. ಪ್ರೀತಿ ಮುಷ್ಠಿಯಲ್ಲಿ ನಿಶ್ಚಿತಾರ್ಥದ ಉಂಗುರವಿಟ್ಟುಕೊಂಡು ಬೊಗಸೆಯಲ್ಲಿ ಹಿಡಿದಿಡುವುದಲ್ಲ ಹುಡುಗ, ಬೆರಳ ಸಂದಿಯಲ್ಲಿ ಅದು ಸೋರಿ ಹೋಗುವುದು. ನಿಲ್ಲದ ನನ್ನ ಪ್ರೀತಿ ಹರಿದು ಹೋಗುವುದು. ವೇಗಕ್ಕಂಟಿದ ನನ್ನ ಬದುಕಿನೊಡನೆ ಜೊತೆ ನಿಲ್ಲಲು ನೀನೂ ಹರಿಯಬೇಕು. ಏನೊಂದೂ ಆಗದ ನಿನ್ನ ಖಾಲಿ ಒಳ್ಳೆಯತನವನ್ನು ಎಷ್ಟೆಂದು ಶ್ಲಾಘಿಸಲಿ? ಬೇರೆಲ್ಲವೂ ಇದ್ದಾಗ ಈ ಒಳ್ಳೆಯತನ, ಹಿನ್ನೆಲೆಯಾಗಿ ಹೊಳಪು ನೀಡಬಲ್ಲದು. ಆದರೆ ಅದೊಂದೇ ಏಕಾಂಗಿಯಾಗಿ ನಿರುಪಯೋಗದ್ದು.
ನನಗೆ ಗೊತ್ತು, ನಾನು ತುಂಬಾ ಕ್ರೂರಿಯಾಗುತ್ತಿದ್ದೇನೆ. ಕಠಿಣಳಾಗುತ್ತಿದ್ದೇನೆ…. ‘ಬೇವಫಾ’ ‘ಬೇದರ್ದ್’ ಇನ್ನೂ ಏನೇನೋ ಪದಗಳಿವೆ ನಿಘಂಟಿನಲ್ಲಿ ಆದರೆ ಕೆಲವೊಮ್ಮೆ ಸ್ವಾರ್ಥಿಯಾಗುವುದು ಅಗತ್ಯವಾಗುತ್ತದೆ_ನಾಳಿನ ಸ್ವಯಂಮರುಕದ, ಸ್ವತಃ ಸ್ವಾಗತಿಸಿದ ನೋವಿನ ಬದುಕಿಗಿಂತ, ಸಂಬಂಧಗಳು ಬೆಳೆಯಬೇಕು, ಬೆಳೆಸಬೇಕು, ಹಿಗ್ಗಬೇಕು, ಹಬ್ಬಬೇಕು. ಏನೊಂದೂ ಶ್ರಮಿಸದೆ, ಕಾಲದ ಧೂಳು ಕೂತರೂ ಜಾಡಿಸದೆ ಆರಾಮಾಗಿ ಅಮ್ಮನಿತ್ತ ಆಶ್ವಾಸನೆಯ ಭರವಸೆಯಲ್ಲಿ ನೆಮ್ಮದಿಯಿಂದಿರುವ ಇವನ ಸ್ವಭಾವವನ್ನು ‘ಒಳ್ಳೆಯತನ’ವೆನ್ನಲೆ, ವಾಸ್ತವವರಿಯದ ಮೂರ್ಖತನವೆನ್ನಲೆ?
ರವಿಯತ್ತ ನನ್ನ ಬದಲಾದ ಭಾವನೆಗಳು ಎದೆಭಾರ ತಂದಿದ್ದವು. ಇತ್ತೀಚೆಗೆ ಹಲವು ಬಗೆಯಲ್ಲಿ ಅಪರೋಕ್ಷವಾಗಿ ರವಿಗೆ ಸೂಚನೆಗಳನ್ನು ನಿದುತ್ತಲೇ ಇದ್ದೆ. ಸಂಜೆಗಳಲ್ಲಿ ಏನಾದರೂ ಕೆಲಸ ಅಂಟಿಸಿಕೊಂಡು ‘ಬಿಜಿ’ಯಾಗತೊಡಗಿದೆ. ಮನೆಗೆ ಬಂದಾಗಲೂ ಅವನೆದುರೇ ಕುಳಿತಿರುವುದನ್ನು ನಿಲ್ಲಸಿ ನನ್ನ ಪಾಡಿಗೆ ರೂಮು ಸೇರಿ ಪುಸ್ತಕ ಹಿಡಿಯುತ್ತಿದ್ದೆ. ಆದರದೇಕೋ ರವಿಗೆ ನನ್ನ ವರ್ತನೆಗಳು ಕೂಗಿಹೇಳುವುದು, ಕೇಳಿಸಲೇ ಇಲ್ಲ. ಅಷ್ಟೆಲ್ಲ ನನ್ನ ಬದಲಾದ ವರ್ತನೆಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಅವ ಸೂಕ್ಷ್ಮವಿರಲಿಲ್ಲವೋ, ಇಲ್ಲಿ ಅವನ ಅತ್ಯಂತ ಸರಳ ಚಿಂತನ ವಿಧಾನಕ್ಕೆ ಇವೆಲ್ಲವೂ ಹೊರತಾಗಿತ್ತೋ ತಿಳಿಯದು.
ಕೊನೆಗೆ ಏನೋ ತಟ್ಟನೆ ಹೊಳೆಯಿತು. ನಾನೇಕೆ ರವಿಯ ಹೊರತು ಬೇರೆ ಹುಡುಗರೊಡನೆ ಸ್ನೇಹದ ಮಟ್ಟದಲ್ಲೂ ಬೆರೆಯಲು ಹಿಂಜರಿಯುತ್ತೇನೆ? ಕಾಲೇಜು ದಿನಗಳಲ್ಲಾದರೆ ಅಪ್ಪನ ಹದ್ದುಬಸ್ತಿನ ಹೆದರಿಕೆಯಿತ್ತು. ಗಂಡುಹುಡುಗರೊಡನೆ ಮಾತನಾಡಿದರೂ ಮೈಲಿಗೆಯಾಗುತ್ತದೆಂಬ ಅಮ್ಮನಿಗೆ, ರವಿಯೊಬ್ಬನೇ ‘ರಿಯಾಯಿತಿ’ ಕಾರಣ, ಅವ ನನ್ನ ಸಂಬಂಧಿ_ನಾಳೆ ನನ್ನ ಗಂಡನಾಗುವವನು_ಎಲ್ಲಕ್ಕಿಂತ ಮುಖ್ಯವಾಗಿ ಅಮ್ಮನ ದೃಷ್ಟಿಯಲ್ಲಿ ಅವನು ಬಹಳ ಒಳ್ಳೆಯ ಹುಡುಗ. ಬಹುಶಃ ಅಮ್ಮ ಅಪ್ಪ ನನ್ನ ಸುತ್ತ ಕಟ್ಟಿದ ಬೇಲಿಯಲ್ಲಿ ಪ್ರವೇಶಿಸಿದ್ದು ರವಿಯೊಬ್ಬನೆ. ಹಾಗೆಂದೇ ನಾನು ಅವನನ್ನು ಪ್ರೀತಿಸಿರಲಿಕ್ಕೂ ಸಾಧ್ಯ. ನಾನು ಇನ್ನೂ ಅದೇ ಮೌಲ್ಯಗಳನ್ನು ಬಿಗಿ ಹಿಡಿದು, ಹಾದಿಯಲ್ಲಿ ಸಹಪಾಠಿಗಳು ಸಿಕ್ಕರೂ ‘ಹಲೋ’ ಹೇಳಲೂ ಹಿಂದೆ ಮುಂದೆ ನೋಡುವುದೇಕೆ?
ಮನಸ್ಸಲ್ಲೇ ಏನೋ ನಿರ್ಧರಿಸಿದೆ_
ಮತ್ತೆ ಮೆಲ್ಲನೆ ನನ್ನ ‘ಕಕೂನಿ’ನ ಒಂದೊಂದೇ ನೂಲ ಎಳೆ ಕಡಿದು ಹೊರಬರಲು ಪ್ರಯತ್ನಿಸಿದೆ. ಆಗಾಗ ಬರುವ ರಮೇಶನೊಡನೆ ಒಂದಿಷ್ಟು ಕೆಲಸದಾಚೆಗೂ ಹಗುರಾಗಿ ಮಾತನಾಡತೊಡಗಿದೆ. ಅಣ್ಣನ ಸ್ನೇಹಿತ ಬಂದಾಗಲೂ, ಅಮ್ಮ ಅಡಿಗೆ ಮನೆಯಿಂದಲೇ ದುರುದುರು ಕಣ್ಣು ಬಿಟ್ಟು ನೋಡಿದರು, ಅವನ ಥೀಸೀಸ್, ವಿದೇಶ ಯಾತ್ರೆ, ಎಂದೆಲ್ಲ ಹರಟಿದೆ. ಸಹೋದ್ಯೋಗಿಗಳ ಜೊತೆ ಮುಜುಗರ ಬಿಟ್ಟು ಮಾತನಾಡಲು ಕಲಿತೆ.
ಇದೀಗ, ನನ್ನ ಸ್ನೇಹಿತರ ವೃಂದ ಹೆಚ್ಚಿತು. ಹೊರ ಜಗತ್ತಿನ ಪದರ ಪದರಗಳು ತೆರೆದುಕೊಂಡವು. ರವಿಯ ಕಣ್ಣಿಗೂ ಇದು ಬಿತ್ತು. ತಟ್ಟನೆ ಅವನ ಹಣೆಯಲ್ಲಿ ದಟ್ಟ ಗೆರೆಗಳು ಒತ್ತೊತ್ತಾದವು. ಮತ್ತೆ ಅದೇ ತಿಂಗಳಲ್ಲಿ ವಾತಾವರಣ ಪೂರ್ಣ ಬದಲಾಯಿತು.
ಇತ್ತೀಚೆಗೆ ರವಿ ನಾನಿಲ್ಲದಾಗ ಅಗಾಗ್ಗೆ ಬಂದು ಅಪ್ಪ-ಅಮ್ಮನೊಡನೆ ಮಾತನಾಡಿ ಹೋದದ್ದು ತಿಳಿಯಿತು. “ಓದಾಯ್ತು ಕೆಲಸ ಆಯ್ತು ಇನ್ನು ಮುಂದೆ ಮದುವೆ ಮುಗಿಸೋವರೆಗೂ ನಮ್ಮ ಎದೆ ಭಾರ ಇಳಿಯೋಲ್ಲ….” ಅಮ್ಮನ ರಾಗ ಗಟ್ಟಿಯಾಯಿತು. ಈ ಬಿಡದ ಸಂಬಂಧದ ಕುಣಿಕೆ ನನ್ನ ಕುತ್ತಿಗೆ ಬಿಗಿಯುವ ಮೊದಲು ಪಾರಾಗಲು ತಹತಹಿಸಿದೆ.
ಹೇಗೆಂದು ಗೊತ್ತಾಗದೆ ಒದ್ದಾಡುವಾಗ, ಅಂಥ ಅವಕಾಶವೊಂದು ಬಾಗಿಲು ಬಡಿಯಿತು!
ಬೆಳಿಗ್ಗೆ ಇನ್ನೂ ಆಫೀಸಿಗೆ ಕಾಲಿಡುತ್ತಿದ್ದಂತೆ, ಲೀಲಾ ಓಡಿ ಬಂದು ಕೈ ಒತ್ತಿ “ಕಂಗ್ರಾಟ್ಸ್” ಎಂದು ಅತ್ಯುತ್ಸಾಹದಿಂದ ಕೂಗಿದಳು.
“ಏನಕ್ಕೆ?” ಅರ್ಥವಾಗದೆ ಕೇಳಿದೆ/
“ಜರ್ಮನಿಗೆ ಕಳಿಸೋರಲ್ಲಿ ನಿನ್ನ ಹೆಸರೂ ಇದೆ. ಉನ್ನತ ವ್ಯಾಸಂಗಕ್ಕಂತೆ….” ಅಂದಳು.
“ಹಾಂ….” ಎಂದು ಕಣ್ಣರಳಿಸಿದೆ. ಎಷ್ಟು ಅನಿರೀಕ್ಷಿತವಿತ್ತು!
“ಒಂದೂವರೆ ವರ್ಷ ಮಜ ಮಾಡು. ಇಡೀ ಯೂರೋಪ್ ಸುತ್ತಿಬರಬಹುದು….” ನಾನು ಏನೂ ಹೇಳಲಿಲ್ಲ.
“ಏನು ಮದುವೆ ಮಾಡಿಕೊಂಡೇ ಹೋಗೋದಾ?” ಅವಳೇ ಕೇಳಿದಳು. ನಾನು ಸುಮ್ಮನೆ ಅವಳ ಮುಖವನ್ನೇ ನೋಡಿದೆ. ನನಗೆ ಗೊತ್ತಿತ್ತು ಅಮ್ಮ ಮದುವೆ ಇಲ್ಲದೆ ನನ್ನನ್ನು ಜರ್ಮನಿಗೆ ಖಂಡಿತಾ ಕಳಿಸೋಲ್ಲ. ಇಲ್ಲಿಯವೆರೆಗೂ ಹೇಗೋ ಮುಂದೂಡುತ್ತ ಬಂದ ನಿರ್ಧಾರವನ್ನು ಈಗ ಕೈಗೊಳ್ಳುವ ಸಮಯ ಬಂದೇಬಿತ್ತಿತ್ತು. ಬಹಳ ಹೊತ್ತು ಏನು ಉತ್ತರಿಸಲೂ ತಿಳಿಯಲಿಲ್ಲ. ನಂತರ ಮೆಲ್ಲನೆ ಹೇಳಹೊರೆಟೆ. ಸಂಬಂಧವೇ ಇಲ್ಲದಂತೆ_
“ಲೀಲಾ, ನನ್ನ ಗಂಡ ಮಹತ್ವಾಕಾಂಕ್ಷೆಯ ಮನುಷ್ಯನಾಗಿರಬೇಕು. ಈ ಬಗೆಯ ಪೌರುಷ, ಏನಾದರೂ ಆಗಬೇಕೆಂಬ ಛಲ….. ನಾನು ಬರೀ ಗಂಡಸರಲ್ಲಿ ಮಾತ್ರ ಬಯಸುತ್ತಾ ಇಲ್ಲ. ಏನೊಂದೂ ಆಗದೆ ಗಂಡಂದಿರ ‘ಹೆಂಡತಿ’ ಮಾತ್ರ ಆಗಿ ತಮ್ಮ ಸತಿತ್ವವನ್ನೆ ಪ್ರಶಸ್ತಿಯಂತೆ ಧರಿಸಿ ಬೀಗುವ ಹೆಂಗಸರನ್ನು ಕಂಡರು ನನಗೆ ಆಗದು….” ಇನ್ನು ಏನೇನೋ ಹೇಳಿದೆ. ಲೀಲಾ ಪೂರಾ ಗೊಡಲಗೊಂಡು…..
“ಏನೇ ಹಾಗೆಂದರೆ….? ನಿನ್ನ-ರವಿ ಮದುವೆ?” ಅವಳ ಪ್ರಶ್ನೆಗೆ ನಾನು ಉತ್ತರಿಸದೆ ನನ್ನ ಮೇಜಿಗೆ ಹೋಗಿ ಕುಳಿತೆ. ಎದುರಿಗಿದ್ದ ರಾಶಿ ಫೈಲ್‌ಗಳನ್ನು ಪಕ್ಕಕ್ಕೆ ಸರಿಸಿ, ಕನ್ನು ಮುಚ್ಚಿ ಚಿಂತಿಸಿಯೇ ಚಿಂತಿಸಿದೆ_ ‘ಅಬ್ಬ, ಈ ಹದಿನಾರಕ್ಕೆ ಮೊಳೆತು ಬಿಡುತ್ತಲ್ಲ ಪ್ರೀತಿ, ಅದು ಇಪ್ಪತ್ತು ದಾಟಿದ ಮೇಲು ಉಳಿಯೊದು ಏಕಿಷ್ಟು ಅಪರೂಪ? ನನ್ನ ಪ್ರೀತಿ ಸತ್ತ ಕೆಟ್ಟ ವಾರ್ತೇನ ಅವನಿಗೆ ಹೇಗೆ ಹೇಳಲಿ? ಹೇಗೊ ಆ ವಯಸ್ಸಿನಲ್ಲಿ ಹೇಳಿದ್ದು, ಪ್ರಮಾಣಿಸಿದ್ದು, ಕೈ ಹಿಡಿದು ನಡೆದದ್ದು, ಎಲ್ಲವನ್ನೂ ಎದುರಿಗಿಟ್ಟು ಕಟ್ಟಿ ಹಾಕುತ್ತಾನೆ ಅನ್ನಿಸುತ್ತೆ. ಎಷ್ಟು ಬಾರಿ ಹೇಳಿಬಿಡಲೇ ಅನ್ನಿಸಿದೆ, ಆದರೆ ಅವನ ಕಣ್ಣು ಕನಸುಗಳು ಕುಸಿಯದಂತೆ ಹೇಗೆ ಹೇಳುವುದು? ‘ನೀ ಬದಲಾದೆ’ ಅಂತಾನೆ. ‘ಮೀಸ್ ಮಾಡಿದೆ, ಕೈಕೊಟ್ಟೆ, ಪ್ರೀತಿಗೆ ಅಂತಸ್ತು ಸ್ಥಾನಮಾನ ಅಡ್ಡ ಬರುತ್ತಾ….”’ ಅಂತ ಭಾಷಣ ಬಿಗಿಯುತ್ತಾನೆ.’
ನನ್ನಲ್ಲೇ ಬಹಳ ಯೋಚಿಸಿದೆ. ಬದುಕಿನ ನಿರ್ಧಾರಗಳನ್ನು, ನಿರ್ಣಯಗಳನ್ನು ನಿರಂತರವಾಗಿ ಮುಂದೂಡಲಾಗದು. ಸಂಜೆ ರವಿಗೆ ಬರಲು ಹೇಳಿಬಿಡಬೇಕು. ಕಡೆಗೂ ನಿಶ್ಚಯಿಸಿ ನಿರಾಳವಾಗಿ ಕೆಲಸದಲ್ಲಿ ತೊಡಗಿದೆ.
ಸಂಜೆ ಮನೆಗೇ ಬಂದ. ಹೊರಗೆ ಅಡ್ಡಾಡಿ ಬರೋಣವೆಂದು ಹೊರಟೆ. ಅವನು ಹಿಂಬಾಲಿಸಿದ. ನಾನು ಹೇಳುವ ಮೊದಲು, ಅವನೇ ಕೇಳಿದ_
“ಶಶಿ, ಜರ್ಮನಿಗೆ ಹೋಗೊದಕ್ಕೆ ನೀ ಆಯ್ಕೆ ಆಗಿದ್ದೀಯಂತೆ….”
“ಹೂಂ….”
“ಈಗ ಮತ್ತೊಂದು ಡಿಗ್ರಿ ತೆಗೆದುಕೊಂಡು ಏನಾಗಬೇಕು ಶಶಿ….? ತನ್ನ ಸಾಹಸಹೀನ ಬಾಳಿನ ತತ್ವವನ್ನೇ ನನಗೂ ಬೋಧಿಸುತ್ತಿದ್ದಾನೆ ಎನಿಸಿ ಹೇಳಿದೆ_
“ಹೆಚ್ಚಿನ ಪದವಿಗಳಿಂದ ತೊಂದರೆ ಏನೂ ಇಲ್ಲವಲ್ಲ….”
“ಅಲ್ಲ ನಮ್ಮ ಮದುವೆ, ಅದರಾಚೆ ನಾನು ಬರೋದು ಅಂದರೆ, ನನಗೆ ಆರು ತಿಂಗಳಿಗಿಂತ ಹೆಚ್ಚು ರಜೆ ಸಿಗೋಲ್ಲ…..”
“ನೀನು ಬರೋ ಅವಶ್ಯಕತೆ ಇಲ್ಲ. ನಾನು ಓದೋಕ್ಕೆ ಹೋಗ್ತಾ ಇರೋದು…..” ನಾನು ಅವನ್ನೆಲ ಯೋಜನೆಗಳನ್ನು ಮೊಟಕುಗೊಳಿಸಿ ಹೇಳಿದೆ. ಅವನು ಒಂದು ಕ್ಷಣ ಏನು ಹೇಳಲು ತೋರದೆ ನನ್ನ ಮುಖವನ್ನೇ ಗಲಿಬಿಲಿಗೊಂಡು ನೋಡಿದ, ತಡವರಿಸಿದ. ಇವನಿಗೆ ನನ್ನನ್ನು ತಡೆದು ನಿಲ್ಲಿಸುವ ಧೈರ್ಯವೂ ಇಲ್ಲವೇ?
“ಶಶಿ, ನಿನಗೆ ಹೋಗಲೇಬೇಕೆಂದಿದ್ದರೆ ಮದುವೆ ಮುಗಿಸಿಕೊಂಡು ಹೋಗು….” ಮೆಲ್ಲನೆ ಹೇಳಿದ, ಸ್ವರದಲ್ಲಿ ಆತ್ಮವಿಶ್ವಾಸವು ಇರಲಿಲ್ಲ.
“ರವಿ, ನಾನು ನಮ್ಮ ಮದುವೆಯ ಬಗ್ಗೆ ಯೋಚಿಸಿಯೇ ಇಲ್ಲ…..”ಎತ್ತಲೋ ನೋಡುತ್ತ ಉತ್ತರಿಸಿದೆ. ರವಿ ಈಗ ನನ್ನನ್ನು ನೇರವಾಗಿ ನೋಡಿದ. ಮೊದಲ ಬಾರಿಗೆ ಅವನು ನನ್ನ ಕಣ್ಣಲ್ಲಿಯ ಭಾವಗಳನ್ನು ಓದುವ ಪ್ರಯಾಸ ಮಾಡಿದ.
“ಹಾಗಂದರೆ ಶಶಿ….? ಅಷ್ಟಕ್ಕೇ ನಿಲ್ಲಿಸಿದ.
“ನನ್ನ ಮದುವೆಯ ಬಗ್ಗೆ ನಾನು ನಿರ್ಧಾರವನ್ನು ಕೈಗೊಂಡಿಲ್ಲ. ಕಿಶೋರದ ಆಸೆ ಭಾಷೆಗಳಿಗೆ ಬದುಕನ್ನು ತಗುಲಿಹಾಕುವ ಬಗ್ಗೆಯೇ ನನ್ನಲ್ಲಿ ಮೂಲಭೂತ ಪ್ರಶ್ನೆಗಳೆದ್ದಿವೆ.”
ಈಗ ರವಿ ಪೂರ್ಣ ಬಿಳುಚಿಕೊಂಡ.
“ಏನು ಹೇಳ್ತಾ ಇದ್ದೀಯ ಶಶಿ?” ಬೆಚ್ಚಿ ಕೇಳಿದ.
ನಾನು ಹೇಳಿದೆ ಬಹಳಷ್ಟು.
ಸಂಜೆ ಕೆಂಪು ಕರಗಿ ಕಪ್ಪಾದ ಮೇಲು, ಹೇಳುತ್ತಲೇ ಇದ್ದೆ_
“ರವೀ ನೀ ನಿಂತಲ್ಲೇ ನಿಂತೆ, ಮಡುವಾದೆ, ಕೆಸರಾದೆ.
ನಾ ಹರಿದು ಹೋದೆ ರಭಸವಾಗಿ ಭೋರ್ಗರೆದು,
ತೆರೆಯಾಗಿ, ತೊರೆಯಾಗಿ, ಝರಿಯಾಗಿ….
ಕ್ಷಣ ನಿಲ್ಲದ ಬದುಕಿನ ಗತಿಯಾಗಿ,
ನಾನು ಹೇಗೆ ಬಿಡಿಸಿ ಹೇಳಲಿ, ಇದಕ್ಕೂ ಸ್ಪಷ್ಟವಾಗಿ?”
ರವಿ ಮೌನವಾದ. ನಿಧಾನವಾಗಿ ಹೊರಡಲು ಮೇಲೆದ್ದೆ. ಆವರಿಸಿದ ಕತ್ತಲಲ್ಲಿ ಸದ್ದಿಲ್ಲದೆ ಹೆಜ್ಜೆ ಹಾಕಿದೆವು. ಮುಂದೆಂದೂ ಒಂದಾಗದ ಹೆಜ್ಜೆಗಳು ಕ್ಷಣ ಹೊತ್ತು ಜೊತೆಯಾಗಿ ನಡೆದವು….. ವರ್ತಮಾನದ ತುದಿಯವರೆಗೂ.
ನಾಳಿನ ನಮ್ಮ ಭವಿಷ್ಯ ಬೇರೆಯಾಗಿ ಕಾದಿತ್ತು.
*****