ಶ್ರೀ ವಿ. ರಘುರಾಮಶೆಟ್ಟಿಯವರು “ಸರ್ಕಾರಿ ಸೂತ್ರಕ್ಕೆ ಸ್ವಾಗತವೇಕೆ?” ಎಮಬ ಶೀರ್ಷಿಕೆಯಲ್ಲಿ ಬರೆದ ಲೇಖನ (ಪ್ರಜಾವಾಣಿ, ೨೪-೪-೮೨) ಕನ್ನಡ ಲೇಖಕರನ್ನು ತೀವ್ರ ಆತ್ಮಶೋಧನೆಗೆ ಹಚ್ಚಬಲ್ಲುದಾಗಿದೆ:
ಗೋಕಾಕ್ ವರದಿಯ ಪೂರ್ಣ ಅನುಷ್ಠಾನಕ್ಕಾಗಿ ನಡೆದ ಕನ್ನಡ ಚಳುವಳಿ ಆರಂಭವಾದ ರೀತಿ, ಕ್ಷಿಪ್ರಗತಿಯಲ್ಲಿ ಅದು ಪಡೆದ ವ್ಯಾಪಕರೂಪ ಹಾಗೂ ಅಷ್ಟೇ ದಿಢೀರಾಗಿ ಮಗುಚಿಬಿದ್ದ ವೈಖರಿಯಲ್ಲಿ ಬಹುಬಗೆಯ ವೈಶಿಷ್ಟ್ಯಗಳನ್ನು ಕಾಣಬಹುದಾಗಿದೆ…..
ಮೊದಲ ಬಾರಿಗೆ ವಿಭಿನ್ನ ಪಂಥದ ಸಾಹಿತಿಗಳು, ಕವಿಗಳು, ಕಲಾವಿದರೂ, ಪತ್ರಕರ್ತರು, ಅಧ್ಯಾಪಕರು, ವಕೀಲರು ಹಾಗೂ ಇತರ ಬುದ್ಧಿ ಜೀವಿಗಳು ಒಂದಾಗಿ ಹುರಿದುಂಬಿಸಿದ ಚಳುವಳಿ ಇದು.
ಮೇಲಿನ ಮಾತುಗಳಲ್ಲಿ ನಾನು ಒತ್ತುಕೊಟ್ಟಿರುವ ‘ಒಂದಾಗಿ’ ಎಂಬ ಶಬ್ದವನ್ನು ಒಪ್ಪಿಕೊಳ್ಳುವುದು ಕಷ್ಟ. ಸಾಹಿತ್ಯ ಪರಿಷತ್ತಿನ ಹಿಂದಿದ್ದವರಿಗೂ, ಬೆಂಗಳೂರು, ಧಾರವಾಡ ಮತ್ತು ಮೈಸೂರುಗಳಲ್ಲಿ ಕ್ರಿಯಾಶೀಲರಾದವರಲ್ಲಿ ಹಲವರಿಗೂ ನಡುವೆ ಪ್ರಾರಂಭದಲ್ಲಿ ಒಮ್ಮತವಿದ್ದಂತೆ ಕಂಡರೂ, ಅವರುಗಳ ನಡುವೆ ಅಷ್ಟು ಘ್ಹನವಲ್ಲದ ಕಾರಣಗಳಿಂದ ಉದ್ಭವವಾದ ಒಡಕುಗಳು ಇದ್ದವು ಎಂಬುದನ್ನೂ, ಕನ್ನಡ ಪ್ರೇಮದ ಘೋಷಣೆ ಕೂಹುವುದರಲ್ಲಿ ಯಾರಿಗಿಂತ ಯಾರು ಹೆಚ್ಚು ಎಂಬುದನ್ನು ತೋರಿಸಿಕೊಳ್ಳುವುದರಲ್ಲೇ ಕೆಲವರು ನಿರತರಾಇದ್ದರೆಂಬುದನ್ನೂ ನಾವು ಕಡೆಗಣಿಸುವಂತಿಲ್ಲ. ಹಿಂಬಾಲಕರಲ್ಲಿರುವ ಸಾಚಾತನ ಸಾಮಾನ್ಯವಾಗಿ ನಾಯಕರಲ್ಲಿರುವುದಿಲ್ಲವೆಂಬ ರಾಜಕೀಯ ಕಟುಸತ್ಯವನ್ನು ಈ ಚಳುವಳಿಯಲ್ಲೂ ನಾವೂ ಮರೆಯುವಂತಿರಲಿಲ್ಲ. “ಕನ್ನಡದ ಅನ್ನ ತಿಂದು ಕನ್ನಡ ಕಲಿಯದವರನ್ನು ಕರ್ನಾಟಕದಿಂದ ಓಡಿಸಿ”-ಎಂಬ ಆಕ್ರೋಶದ ಕೂಗಿನಲ್ಲಿ ಯಾರಿಗೂ ಹಿಂದುಳಿಯುವ ಇಚ್ಛೆಯಿರಲಿಲ್ಲ. ನಾವು ಗೌರವಿಸುವ ಇಬ್ಬರು ಹಿರಿಯ ಸಾಹಿತಿಗಳೂ ಈ ಧೋರಣೆಯ ಮಾತನ್ನಾಡಿದರು ಎಂಬುದು ವಿಷಾದದ ಸಂಗತಿ. ಇಂಥ ಆಕ್ರೋಶದ ಮಾತುಗಳ ಹಿನ್ನೆಲೆಯಲ್ಲಿ ಪರೀಕ್ಷಿಸಿದಾಗ ರಘುರಾಮ ಶೆಟ್ಟರು ಹೇಳುವ ಈ ಮಾತನ್ನು ನಾವು ಅನುಮಾನಿಸುವಂತಾಗುತ್ತದೆ : “ನಾಡಿನ ಜನಜೀವನ ಸಂಪದಗೊಳ್ಳಲು ಏನು ಮಾಡಬೇಕೆಂಬುದರ ಸರಿಯಾದ ಕಲ್ಪನೆ ಈ ಸಾಹಿತಿಗಳ ಸಮೂಹಕ್ಕೆ ಇತ್ತೆಂದೇ ತಿಳಿಯಬೇಕಾಗುತ್ತದೆ”
‘ಕನ್ನಡಪ್ರಭ’, ‘ಪ್ರಜಾವಾಣಿ’ಗಳಲ್ಲಿ ಅಚ್ಚಾಗಿದ್ದ ನನ್ನ ಲೇಖನದಲ್ಲಿ ಗೋಕಾಕ್ ವರದಿಯ ಪೂರ್ಣ ಅನುಷ್ಠಾನದ ಒತ್ತಾಯದಲ್ಲಿ ಅಡಗಿರುವ ಕೆಲವು ಅಪಾಯಗಳನ್ನು ಸೂಚಿಸಿದ್ದೇನೆ. ಈ ಒತ್ತಾಯದಿಂದ ಭಾಷಾ ಅಲ್ಪಸಂಖ್ಯಾತರಿಗೆ ಯಾಕೆ ಅನ್ಯಾಯವಾದೀತೆಂಬ ವಾದವನ್ನು ಹೋರಾಟ ಮಾಡುತ್ತಿದ್ದ ಯಾರೂ ಶಾಂತಭಾವದಿಂದ ಚರ್ಚಿಸಲು ತಯಾರಿರಲಿಲ್ಲವೆಂಬುದನ್ನು ಪತ್ರಿಕೆಗಳಲ್ಲಿ ನನ್ನ ಲೇಖನಕ್ಕೆ ವಿರೋಧವಾಗಿ ಪ್ರಕಟವಾದ ಪತ್ರಗಳಿಂದ ತಿಳಿಯಬಹುದು. ನಾನು ಏನು ಹೇಳಿದ್ದೇನೆ ಎಂಬುದನ್ನು ಗ್ರಹಿಸುವುದಕ್ಕೆ ಕೂಡ ಕೆಲವರು ತಯಾರಿರಲಿಲ್ಲ. ೧೦ನೇ ಇಯತ್ತೆ ಮುಗಿಯುವ ತನಕ ಇಂಗ್ಲಿಷನ್ನು ಯಾರಿಗೂ ಕಲಿಸಕೂಡದೆಂದೂ ನಾನು ಹೇಳಿದ್ದರೂ ಶ್ರೀ ತರಾಸುರವರು ತಮ್ಮ ಪತ್ರದಲ್ಲಿ (ಅವರೇ ಹೇಳುವಂತೆ ಅದನ್ನು ‘ಮೂರು ಬಾರಿ’ ಓದಿದ ಮೇಲೂ) ಅರ್ಥಮಾಡಿಕೊಂಡದ್ದು: ಇಂಗ್ಲಿಷನ್ನು ಮಕ್ಕಳಿಗೆ ಕಡ್ಡಾಯ ಮಾಡಬೇಕೆಂದು ನಾನು ವಾದಿಸುತ್ತಿದ್ದೇನೆ ಎಂದು. ಹೀಗೆ ಅಪಾರ್ಥ ಮಾಡುವುದು ಒಂದೋ ದಡ್ಡತನದಿಂದ ಅಥವಾ ದುಷ್ಟತನದಿಂದ. ಶ್ರೀ ಎಲ್.ಎಸ್. ಶೇಷಗಿರಿರಾಯರು ಕೆಲವು ಬೆಂಗಳೂರು ತಮಿಳರ ಭಾಷಾಂಧತೆಯನ್ನು ಉದಾಹರಣೆಯಾಗಿ ಕೊಟ್ಟು ಕನ್ನಡಿಗರಲ್ಲಿ ಭಾಷಾ ಅಲ್ಪಸಂಖ್ಯಾತರ ವಿರುದ್ಧ ಪ್ರತೀಕಾರದ ರೊಚ್ಚನ್ನು ಬೆಳೆಸುವಂತೆ ಬರೆದರು. ತಮ್ಮ ಪತ್ರದ ಕೊನೆಯ ವಾಕ್ಯದಲ್ಲಿ ನನ್ನ ಶೈಲಿಯನ್ನು ಹಂಗಿಸಬಲ್ಲ ಒಳ್ಳೆಯ ನಕಲಿಗಾರ ತಾವೆಂಬುದನ್ನೂ ಪ್ರದರ್ಶಿಸಿದರು. ನಾವೆಲ್ಲರೂ ಸಜ್ಜನರೆಂದು ತಿಳಿದವರಾದ (ನಿಜವಾಗಿ ಸಜ್ಜನರೂ ಆದ) ತರಾಸು ಮತ್ತು ಶೇಷಗಿರಿರಾಯರ ಪತ್ರಗಳಲ್ಲಿ ಅಡಗಿರುವ ಮುಸ್ಲಿಮರಿಗೆ ವಿಶೇಷ ಮಾನ್ಯತೆಯಿದೆ ಎಂಬ ಅಸಹನೆ, ತಮಿಳರ ಬಗೆಗಿನ ಕೋಪಗಳು, ಉದಾರಧೋರಣೆಯ ಜನತಂತ್ರ ವ್ಯವಸ್ಥೆಗೆ ಮಾರಕವಾಗಬಲ್ಲವು ಎಂಬುದು ಪ್ರತ್ಯಕಾಹವಾಗುವುದು ಈ ಬಗೆಯ ಆಪತ್ತಿನ ಸಮಯದಲ್ಲೇ. ‘ಶೂದ್ರ’ ಪತ್ರಿಕೆಯಲ್ಲಿ (ಡಿಸೆಂಬರ್, ೧೯೮೧) ಶ್ರೀ ಬಿ.ಸಿ. ದೇಸಾಯಿಯವರು ಬರೆದಿರುವ “ಅಮೂರ್ತತೆ. ಕೆಲವು ಅನಿಸಿಕೆಗಳು” ಎಂಬ ಲೇಖನದಲ್ಲಿ ನಾಝಿ ಜರ್ಮನಿಯ ಅಲ್ಬರ್ಟ್ ಸ್ಪಿಯರ್ ಬಗ್ಗೆ (ಆತನೂ ತರಾಸು, ಶೇಷಗಿರಿರಾಯರಂತಹ ಸಜ್ಜನನೇ) ಇರುವ ಕೆಲವು ಮಾತುಗಳು ಇಲ್ಲಿ ಉಲ್ಲೇಖಕ್ಕೆ ಅರ್ಹವಾಗಿವೆ. ವಿದ್ಯಾರ್ಥಿ ದೆಸೆಯಲ್ಲಿ ಸಾಕಷ್ಟು ಯಹೂದ್ಯ ಗೆಳೆಯರನ್ನು ಪಡೆದಿದ್ದ ಸ್ಪಿಯರನೇ ಯಹೂದ್ಯ ಜನಾಂಗದ ಅಮಾನುಷ ಕೊಲೆಗಳಲ್ಲಿ ಭಾಗಿಯಾದ. ಅವನು ಅದಕ್ಕೆ ಕೊಡುವ ಕಾರಣ ಭಯಾನಕವಾಗಿದೆ. ಸ್ಪಿಯರ್ ಜೈಲಿನಿಂದ ಬಿಡುಗಡೆಯಾದ ನಂತರ ಸಂದರ್ಶನವೊಂದರಲ್ಲಿ ಹೀಗೆ ಹೇಳುತ್ತಾನೆ. ಯಹೂದ್ಯರನ್ನು ವ್ಯಕ್ತಿಗಳೆಂದು ಕ್ರಮೇಣಾ ತಾನು ಯಾಕೆ ಕಾಣ್ಲಾರದೆ ಹೋದೆ ಎಂಬುದಕ್ಕೆ ಅವನು ಕೊಟ್ಟಿರುವ ಕಾರಣಗಳನ್ನು ನಾವು ಗಮನಿಸಬೇಕು:
ವೃತ್ತಿಯಿಂದ ಹೊಡೆದೋಡಿಸಲ್ಪಟ್ಟ, ಆಸ್ತಿಗೆ ಮುಟ್ಟುಗೋಲು ಹಾಕಿಸಿಕೊಂಡ ಇವರೆಲ್ಲ ಕೊನೆಗೆ ಕಾನ್‌ಸೆಂಟ್ರೇಶನ್ ಕ್ಯಾಂಪಿಗೆ ಎಳೆದೊಯ್ಯಲ್ಪಟ್ಟು ಬರುಬರುತ್ತ ನನಗೆ ಅಮೂರ್ತರಾದರು. ಅವರು ಬೇರೆಯವರಂತೆ ಕುಟುಂಬ, ಆಕಾಂಕ್ಷೆ, ನೋವು, ಬೇಡಿಕೆಗಳಿದ್ದ ಮನುಷ್ಯಜೀವಿಗಳಾಗಿ ನನಗೆ ತೋರಲಿಲ್ಲ. ಅಸ್ತಿತ್ವವೇ ಇಲ್ಲದವರಂತೆ ಈ ಜನ ನನ್ನ ಬದುಕು ಯೋಚನೆಯಿಂದ ಮಾಯವಾಗಿ ಬಿಟ್ಟರೆಂದು ಒಪ್ಪಿಕೊಳ್ಳಲು ನನಗೆ ನಾಚಿಕೆಯೆನ್ನಿಸುತ್ತದೆ. ಅವರನ್ನು ಮನುಷ್ಯ ಜೀವಿಗಳೆಂದೇ ಕಾಣುತ್ತ ಬಂದಿದ್ದರೆ ನಾನು ನಾಝಿಯಾಗಿ ಉಳಿಯುತ್ತಲೇ ಇರಲಿಲ್ಲ. ನಾನೇನೂ ಅವರನ್ನು ದ್ವೇಷಿಸಲಿಲ್ಲ; ಬದಲು ಉಪೇಕ್ಷಿಸತೊಡಗಿದೆ. ನಾನು ಯಹೂದ್ಯ ವಿರೋಧಿಯಾಗಿರಲಿಲ್ಲವಾದ್ದರಿಂದ ನನ್ನ ಅಪರಾಧ ತೀರಾ ಕೆಟ್ಟದು.
ನಮ್ಮಲ್ಲೂ ಈಗಾಗಲೇ ಸವರ್ಣೀಯರಿಗೆ ಅಸ್ಪೃಷ್ಯರು ವ್ಯಕ್ತಿಗಳೆಂದು ಅನ್ನಿಸುವುದಿಲ್ಲ. ಕೆಲವು ಮತಾಂಧ ಹಿಂದೂಗಳಿಗೆ ಮುಸ್ಲಿಮರು, ಅಂತೆಯೇ ಮುಸ್ಲಿಮರಿಗೆ ಹಿಂದೂಗಳು, ಸುಖದುಃಖಗಳಲ್ಲಿ ನಮ್ಮಂತೆಯೇ ಬದುಕುವ ವ್ಯಕ್ತಿಗಳು ಎಂದು ಅನ್ನಿಸುವುದಿಲ್ಲ. ಕನ್ನಡಿಗರನ್ನು ಶಿವಸೇನೆ ಮಹಾರಾಷ್ಟ್ರದಲ್ಲಿ ಹೀಗೆ ಹಿಂಸಿಸಿದೆ. ಮನೆ ಹತ್ತಿ ಉರಿಯುತ್ತದೆಂದು ಟೆಲಿಫೋನ್ ಮಾಡಿದಾಗ ಕನ್ನಡಾದಲ್ಲಿ ಮಾತನಾಡಲು ಒಲ್ಲದ ಫೈರ್ ಬ್ರಿಗೇಡಿನ ತಮಿಳ, ದೇವರಾಜಾರಸ್ ರಸ್ತೆ ಮಾಡುವಾಗ ದೇವಸ್ಥಾನ ಕೆಡವಲು ಸಾಧ್ಯವಾದರೂ ಮುಸ್ಲಿಮರ ಪವಿತ್ರ ಸ್ಥಳವನ್ನು ಹಾಗೇ ಉಳಿಸಿಕೊಳ್ಳಬೇಕಾಗಿ ಬಂದದ್ದು-ಇಂಥ ಕೆಲವು ಘಟನೆಗಳ ಆಧಾರದಿಂದಲೇ ಈ ಜನರ ಬಗ್ಗೆ ಕೆಲವು ಅಮೂರ್ತವಾದ ಸಾರ್ವತ್ರಿಕ ಸತ್ಯವೆಂಬಂಥ ಅಭಿಪ್ರಾಯಗಳನ್ನು ಹುಟ್ಟುಹಾಕಬಲ್ಲ ವಿಚಾರಕ್ರಮಕ್ಕೆ ಪುಷ್ಟಿಕೊಡುವಂತೆ ಗೋಕಾಕ್ ವರದಿ ಜಾರಿಗಾಗಿ ನಡೆದ ಚಳುವಳಿ ಬೆಳೆದದ್ದು ಅತ್ಯಂತ ವಿಷಾದದ ಸಂಗತಿ. ಶಿವಸೇನೆಯಲ್ಲಿ ಪುಂಡರು ಮಾತ್ರ ಇದ್ದಾರೆ; ದೊಡ್ಡ ಮರಾಠಿ ಲೇಖಕರು ಅದರಲ್ಲಿ ಇಲ್ಲವೆಂದು ನಾನು ತಿಳಿದಿದ್ದೇನೆ. ಉರ್ದು, ತಮಿಳು, ಮರಾಠಿ ಇತ್ಯಾದಿ ಭಾಶೆಗಳನ್ನಾಡುವ ಜನ ಭಯಪಡುವಂತೆ ಗೋಕಾಕ್ ವರದಿಗಾಗಿ ನಡೆದ ಚಳುವಳಿಯ ಅಗ್ರಪಂಕ್ತಿಯಲ್ಲಿದ್ದ ಕೆಲವು ಜನ ಮಾತಾಡಿದರೆಂಬುದು ಕನ್ನಡ ಸಾಹಿತ್ಯ ಪ್ರಪಂಚಕ್ಕೆ ನಾಚಿಕೆಯ ವಿಷಯವಾಗಬೇಕು.
ಕನ್ನಡ ಭಾಷೆ ಈ ರಾಜ್ಯದ ಎಲ್ಲರಿಗೂ ಕಡ್ಡಾಯವಾಗಲೇಬೇಕೆಂಬುದರಲ್ಲಿ ಯಾವ ಭಿನ್ನಾಭಿಪ್ರಾಯವೂ ಇಲ್ಲದ ನಾನು ಚಳುವಳಿಯ ಪ್ರಾರಂಭದಲ್ಲಿ ಗೋಕಾಕ್ ವರದಿ ಬಗ್ಗೆ ನನ್ನ ವಿರೋಧ ಮರೆತು ಸಹಕರಿಸಿದ್ದೆ; ಮೈಸೂರಿನಲ್ಲಿ ನಡೆದ ಧರಣಿಯಲ್ಲಿ (೧೯-೩-೮೨) ಭಾಗವಹಿಸಿದೆ. ಅದಕ್ಕೆ ಮುಂಚೆ ಫೆಬ್ರವರಿ ತಿಂಗಳಲ್ಲಿ ಶ್ರೀ. ಜಿ.ಎಚ್. ನಾಯಕರ ನಿರ್ವಹಣೆಯಲ್ಲಿ ಮೈಸೂರಿನಲ್ಲಿ ಕೆಲವು ಗೆಳೆಯರು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕರೆದಿದ್ದ ಒಂದು ಸಭೆಯಲ್ಲಿ ನನ್ನ ಲೇಖನದಲ್ಲಿರುವ ಎರಡನೇ ಸೂತ್ರವನ್ನು ಒಪ್ಪಿಕೊಳ್ಳುವಂತೆ ವಾದಿಸಿದ್ದೆ. ಕೆಲವು ಬದಲಾವಣೆ ಸಹಿತ ಅದನ್ನು ಒಪ್ಪಿದ ಅಲ್ಲಿದ್ದ ಎಲ್ಲ ಮಿತ್ರರು ಆ ನಿರ್ಣಯಕ್ಕೆ ಸಹಿ ಹಾಕಿದ ನಂತರವೂ ಅದನ್ನು ಪತ್ರಿಕೆಯಲ್ಲಿ ಪ್ರಕಟಿಸದಂತೆ ಆ ಸಭೆಯಲ್ಲೇ ಇದ್ದ ಕೆಲವರು ತಡೆದರು. ಭಾರತೀಯ ಭಾಷಾ ಸಂಸ್ಥಾನದಲ್ಲಿ ೨೦-೩-೮೨ರಂದು ನಡೆದ ವಿಚಾರ ಗೋಷ್ಠಿಯಲ್ಲೂ ಈ ವಾದವನ್ನು ಮಂಡಿಸಿದೆ. ಅನಂತರ ಮೈಸೂರಿನಲ್ಲಿ ನಡೆದ ಒಂದು ಬಹಿರಂಗ ಸಭೆಯಲ್ಲಿ (೨೩-೩-೮೨) ಗೋಕಾಕ್ ವರದಿಯಿಂದ ಮುಸ್ಲಿಮರಿಗೆ ಒಂದೋ ಉರ್ದುವನ್ನು, ಅಥವಾ ಇಂಗ್ಲಿಷನ್ನು, ಕಡಿಮೆ ಕಲಿಯಬೇಕಾದ ಪರಿಸ್ಥಿತಿ ಉದ್ಭವವಾಗುವುದು ಅನ್ಯಾಯವೆಂದು ಹೇಳುತ್ತಲೇ, ಕನ್ನಡ ಕಡ್ಡಾಯ ಮಾಡಲು ನಾನು ಸರಿಯೆಂದು ತಿಳಿದ ಮೇಲಿನ ಸೂತ್ರವನ್ನು ಮಂಡಿಸಿದೆ. ಆದರೆ, ಗೋಕಾಕ್ ವರದಿ ಅನುಷ್ಠಾನಕ್ಕೆ ತರಬೇಕೆಂಬ ಚಳವಳಿಯ ಚೌಕಟ್ಟಲ್ಲೆ ನನ್ನ ಮೇಲಿನ ಉದ್ದೇಶವನ್ನು ಸಾಧಿಸಬಹುದೆಂಬ ನನ್ನ ನಂಬಿಕೆ. ಕ್ರಮೇಣ ಬೆಳೆಯುತ್ತ ಹೋದ ಸಮೂಹಸನ್ನಿಯಲ್ಲಿ ಮಾಯವಾದ್ದರಿಂದ ನಾನು ಆ ಲೇಖನವನ್ನು ಬರೆಯಲೇ ಬೇಕಾಯಿತು. ಆದರೆ ಅದು ‘ಕನ್ನಡಪ್ರಭ’ ಸಂಪಾದಕರೂ, ನನಗೆ ಹಿರಿಯರಾಗಿ ಗೌರವಾನ್ವಿತರೂ ಆದ ಶ್ರೀ ಖಾದ್ರಿಶಾಮಣ್ಣನವರಿಗೆ ಇಂಗ್ಲಿಷ್ ಮೋಹದಿಂದ ಉತ್ಪನ್ನವಾದ, ಆದರೆ ಒಂದು ಕಾಲದಲ್ಲಿ ಇಂಗ್ಲಿಷ್ ವಿರೋಧಿಯಾಗಿದ್ದವನ, ‘ಅಧಃಪತನ’ದಂತೆ ಕಂಡಿತು. ಶ್ರೀ ಚದ್ರಶೇಖರ ಪಾಟೀಲರಿಗೆ ನನ್ನಲ್ಲಿ ಗುಪ್ತವಾಗಿರುವ ಸಂಸ್ಕೃತ ಪ್ರೇಮದಂತೆ ಕಂಡಿತು. ನನ್ನನ್ನು ಪ್ರೀತಿ ವಿಶ್ವಾಸಗಳಿಂದ ಕಾಣುವ ಇನ್ನು ಕೆಲವರಿಗೆ ಕನ್ನಡ ಕಡ್ಡಾಯವಾಗಬೇಕೆಂದು ಒಪ್ಪುವ ನಾನು ಅದಕ್ಕಾಗಿ ನಡೆಯುತ್ತಿದ್ದ ಚಳುವಳಿಯ ಚೌಕಟ್ಟಿನಿಂದ ಸಂಪೂರ್ಣ ಹೊರಗೆ ನಿಂತು ಮಾತನಾಡಿರುವುದು ಅನಗತ್ಯವದ ಅಧಿಕ ಪ್ರಸಂಗದಂತೆಯೋ ಅಥವಾ ಸೂಕ್ಷ್ಮ ಅಪ್ರಾಮಾಣಿಕ ವರ್ತನೆಯಂತೆಯೋ ಕಂಡಿತು. ಆದರೆ ನನ್ನ ಆ ಲೇಖನದಿಂದ ಕುಪಿತರಾದವರ ಹಿಂಸೆಯ ಬೆದರಿಕೆಗೆ ಒಳಗಾಗಬೇಕಾಗಿ ಬಂದ ನಾನು ಜನಪ್ರಿಯನಾಗುವ ಹವಣಿಕೆಯಿಂದ ಅದನ್ನು ಬರೆದದ್ದಲ್ಲವೆಂಬಷ್ಟು ಔದಾರ್ಯವನ್ನಾದರೂ ನನ್ನನ್ನು ಟೀಕಿಸಿದವರಿಂದ ನಾನು ಕೇಳುತ್ತೇನೆ. ಯಾಕೆಂದರೆ ೧೦೦ ಅಂಕಗಳ ಮೂರು ಭಾಷೆಗಳಲ್ಲಿ ಒಂದನ್ನು ಸಾಂಸ್ಕೃತಿಕವಾಗಿಯೂ, ಎರಡನ್ನು ವ್ಯಾವಹಾರಿಕವಾಗಿಯೂ ಎಲ್ಲ ವಿದ್ಯಾರ್ಥಿಗಳೂ ಕಲಿಯಬೇಕೆಂದೂ, ಈ ಮೂರು ಭಾಷೆಗಳಲ್ಲೊಂದು ಭಾಷೆ ಕನ್ನಡವಾಗಿರಲೇಬೇಕೆಂದೂ ನಾನು ಮಡಿಸಿದ ಸೂತ್ರವನ್ನು ಕನ್ನಡ ದ್ರೋಹವೆಂದು ಕಂಡ ಜನರಲ್ಲಿ ಅನೇಕರು ೩೦೦ ಅಂಕಗಳ ಬದಲು ೩೫೦ ಅಂಕಗಳ ಅನಾವಶ್ಯಕ ಹೊರೆಯ ಸರ್ಕಾರೀ ಸೂತ್ರವನ್ನು ದಿಢೀರನೆ ಒಪ್ಪಿಕೊಂಡರು. ಡ್. ಭೈರಪ್ಪ, ಶ್ರೀ ತರಾಸು, ಶ್ರೀ ಶೇಷಗಿರಿರಾಯರು ಯಾಕೆ ದಿಢೀರನೆ ಬದಲಾದರು? ಗೆಳೆಯರಾದ ತರಾಸು, ಮತ್ತು ಶೇಷಗಿರಿರಾಯರಿಗೆ ಒಬ್ಬ ಲೇಖಕ ಬಂಧುವಾದ ನಾನು ಹೇಳಿದ್ದು ಘೋರ ಅಪರಾಧವೆಂದು, ಕೆಲವು ದಿನಗಳ ನಂತರ ಮುಖ್ಯಮಂತ್ರಿ ಶ್ರೀ ಗುಂಡೂರಾಯರು ದಯಪಾಲಿಸಿದ್ದು ಕನ್ನಡದ ಹಿತಕ್ಕೆ ಯೋಗ್ಯವೆಂದೂ ಹೇಗಾದರೂ ಅನ್ನಿಸಲು ಸಾಧ್ಯ? ಬಂಡಾಯದ ನಾಯಕರಾದ ಶ್ರೀ ಬರಗೂರು ರಾಮಚಂದ್ರಪ್ಪನವರು ಅಗತ್ಯವಿದ್ದರೆ ಭಾರತದ ಸಂವಿಧಾನವನ್ನು ಸುಡುತ್ತೇನೆಂದು ಹೇಳಿ ಈಗೇಕೆ ತಣ್ಣಗಾದರು? ಶ್ರೀ ಬರಗೂರು ರಾಮಚಂದ್ರಪ್ಪನವರು ಮರ್ಕ್ಸ್‌ವಾದಿ ಲೇಖಕರು; ಆದರೆ ಇವರು ರಷ್ಯನ್ ಭಾಶೆಯನ್ನು ಒತ್ತಾಯದಿಂದ ಹೇರುವುದರ ಬಗ್ಗೆ ಲೆನಿನ್ ಹೇಳಿದ್ದನ್ನು ಯಾಕೆ ಉಪೇಕ್ಷಿಸುತ್ತಾರೆ ಎಂದು ನಾನು ಕೇಳಲು ಬಯಸುತ್ತೇನೆ. ಅಂತೆಯೇ ಲೋಹಿಯಾ ವಾದಿಗಳಾದ ಶ್ರೀ ಖಾದ್ರಿ ಶಾಮಣ್ಣ, ಶ್ರೀ ಪಿ. ಲಂಕೇಶ, ಶ್ರೀ ರಮದಾಸ್ ಮತ್ತು ಶ್ರೀ ಚಂದ್ರಶೇಖರ ಪಾಟೀಲರು ಭಾರತೀಯ ಭಾಷೆಗಳ ಬಗ್ಗೆ ಮಹಾತ್ಮಗಾಂಧಿ ಮತ್ತು ಲೋಹಿಯಾ ಬರೆದದ್ದರ ಹಿಂದಿರುವ ಉದಾರ ಧೋರಣೆಯನ್ನು ಯಾಕೆ ಗೌರವಿಸುವುದಿಲ್ಲ ಎಂದು ನಾನು ಕೇಳಬಯಸುತ್ತೇನೆ.
ಕನ್ನಡವನ್ನು ಕಡ್ಡಾಯ ಮಾಡಬೇಕೆಂದು ಹೇಳುವಷ್ಟಕ್ಕೆ ಗೋಕಾಕ್ ವರದಿ ಸ್ತುತ್ಯವದರೂ, ಅದರಲ್ಲಿ ಬರುವ ಈ ಕೆಳಗಿನ ಮಾತುಗಳು ಖಂಡಿತವಾಗಿ ಶಕ್ತಿ ರಾಜಕೀಯದವರು ಆಡಬಹುದಾದದೇ ಹೊರತು ವಸ್ತುನಿಷ್ಠವಾಗಿ ಯೋಚಿಸುವ ಶಿಕ್ಷಣ ತಜ್ಞರೊಬ್ಬರು, ಅಥವಾ ಸತ್ಯ ಪಕ್ಷಪಾತಿಯಾದ ಸಾಹಿತಿ ಆಡಬಹುದಾದ ಮಾತುಗಳಲ್ಲ:
ಔದಾರ್ಯವು ಒಳ್ಳೆಯ ಗುಣವೇ. ಅದೇ ಈ ಗುಣದಲ್ಲಿ ಅನೇಕಸಲ ಅಜ್ಞಾನವು ಬೆರೆತಿರುತ್ತದೆ. ಒಮ್ಮೊಮ್ಮೆ ನೆರೆಹೊರೆಯ ರಾಜ್ಯಗಳಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳಿಗೆ ಗ್ರಾಂಟ್ ಅಂತೂ ಹೋಗಲಿ, ಪ್ರತ್ಯಕ್ಷ ಪರಿಪಾಠದಲ್ಲಿ ಮನ್ನಣೆ ಸಹ ದೊರೆತಿಲ್ಲವೆಂದು ಅಲ್ಲಿನ ಅಲ್ಪಸಂಖ್ಯಾತರಾದ ಕನ್ನಡಿಗರು ಪತ್ರಿಕೆಗಳಲ್ಲಿ ಬರೆಯುತ್ತಿರುತ್ತಾರೆ. ಆದರೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರಿಗೆ ಮಾಧ್ಯಮಿಕ ಹಂತದಲ್ಲಿರುವ ಅವರ ಭಾಷಾ ಮಾಧ್ಯಮದ ಮಾಧ್ಯಮಿಕ ಶಾಲೆಗಳನ್ನು ತನ್ನ ವೆಚ್ಚದಿಂದ ಕೆಲವೆಡೆ ನಡೆಸುತ್ತಿರುವುದೂ ಉಂಟು. ಈ ತರಹದ ಔದಾರ್ಯ ಅನಿಷ್ಟವೆಂದು ಬೇರೆ ಹೇಳಬೇಕಾಗಿಲ್ಲ.
(‘ಭಾಷಾ ಸಮಿತಿಯ ವರದಿ’, ಕನ್ನಡ ಸಾಹಿತ್ಯ ಪರಿಷತ್ತು, ಪು.೨೮)
ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯುವುದು ಸರಿಯಾದ್ದು ಎಂಬುವವನು ಆಡಬಹುದಾದ ಮಾತುಗಳು ಇವಲ್ಲ. ನೆರೆರಾಜ್ಯ ಮಾಡುವ ತಪ್ಪನ್ನು ನಾವು ಮಾಡಬಹುದೆಂಬುದು ಶಕ್ತಿ ರಾಜಕೀಯದ್ದು. ಆದರೆ ಇಲ್ಲಿರುವ ವಿರೋಧಾಭಾಸವೆಂದರೆ, ಅಂತಹ ರಾಜಕೀಯದಲ್ಲಿ ನಿಷ್ಣಾತರಾದ ರಾಜಕಾರಣಿಗಳೇ ಇಲ್ಲಿ ಸೂಕ್ತ ರೀತಿಯಲ್ಲಿ ನಡೆದುಕೊಂಡಾಗಲೂ, ಅವರಿಗೇ ಪ್ರತೀಕಾರದ ಧೋರಣೆಯನ್ನು ಕಲಿಸಿಕೊಡಲು ಗೋಕಾಕ್ ವರದಿ ಮುಂದಾಗಿರುವುದು. ಶಿಕ್ಷಣದಂತಹ ವಿಷಯದಲ್ಲಿ ರಾಜಕೀಯಕ್ಕಾಗಲೀ ಪ್ರತೀಕಾರಕ್ಕಾಗಲೀ ಎಡೆಯಿಲ್ಲ. ಯಾವುದು ಸರಿಯೋ ಅದು ಎಲ್ಲ ಸಂದರ್ಭದಲ್ಲೂ ಸರಿಯೆಂದೇ ನಾವು ತಿಳಿಯಬೇಕು. ಇಲ್ಲಿ ತಂತ್ರಕ್ಕೆ ಜಾಗವಿಲ್ಲ. ಅವರವರ ಮಾತೃಭಾಷೆಯಲ್ಲಿ ಶಿಕ್ಷಣ ಕಲಿಸುವುದನ್ನು ಔದಾರ್ಯವೆಂದು ತಿಳಿಯುವುದು ಕೂಡ ಅಲ್ಪತನದ ಧೋರಣೆಯಾಗುತ್ತದೆ. ಪ್ರತಿ ಪ್ರಜೆಯೂ ವಿದ್ಯಾವಂತನಾಗಲು ನಾವು ಅನುಸರಿಸಬೇಕಾದ ನೀತಿ ನಮ್ಮ ಅನುಲ್ಲಂಘನೀಯ ಕರ್ತವ್ಯಕ್ಕೆ ಸೇರಿದ್ದು. ಈ ಮಾತು ನೋಡಿ, ಇಲ್ಲಿರುವ ಅಲ್ಪತನ ಶೈಕ್ಷಣಿಕ ವಿಷಯದಲ್ಲಿ ಅಕ್ಷಮ್ಯ:
೩೦ ವಿದ್ಯಾರ್ಥಿಗಳು ಒಂದು ಹೈಸ್ಕೂಲಿನಲ್ಲಿ ತಮ್ಮ ಮಾತೃಭಾಷೆಯನ್ನು ಒಂದು ವಿಷಯವಾಗಿ ಕಲಿಯುವ ಇಚ್ಛೆ ವ್ಯಕ್ತಪಡಿಸಿದರೆ ಅದು ಅವರಿಗೆ ಈಗಿನಂತೆ ಸಾಧ್ಯವಾಗಬೇಕು. ಈ ಸೌಲಭ್ಯವನ್ನು ಒದಗಿಸುವುದಕ್ಕೆ ಮುಂಚಿತವಾಗಿ ಆ ಭಾಷೆಯ ರಾಜ್ಯದಲ್ಲಿ ಕನ್ನಡ ವಿದ್ಯಾರ್ಥಿಗಳಿಗೂ ಅಂಥ ಸೌಲಭ್ಯ ದೊರೆತಿರುವುದೇ ಎಂದು ನಾವು ತಿಳಿದುಕೊಂಡಿರಬೇಕು.
(ಅದೇ)
ಇದಕ್ಕೆ ಬದಲಾಗಿ ನಾವು ಹೇಳಬೇಕಾದ್ದು ನೆರೆರಾಜ್ಯ ಹಾಗೆ ಮಾಡದಿದ್ದಲ್ಲಿ ಅದು ಅಕ್ಷಮ್ಯವೆಂದು. ಹಾಗೆ ಹೇಳುವ ಅಧಿಕಾರ ನಮಗೆ ಒದಗುವುದು ನಾವು ಪ್ರತೀಕಾರಕ್ಕಾಗಿಯೂ ಅವರಂತೆ ನಡೆದುಕೊಳ್ಳದಿದ್ದಾಗ ಶಿಕ್ಷಣಕ್ಕೆ ಸಂಬಂಧಪಟ್ಟ ವಿಷಯವನ್ನು ಟ್ರೇಡ್ ಯೂನಿಯನ್ನಿನವರು ಮಾಲೀಕರ ಜೊತೆ ನಡೆಸುವ ಸಂಧಾನದಲ್ಲಿ ಅನುಸರಿಸುವ ಚೌಕಾಸಿ ರೀತಿಯಲ್ಲಿ ಕಾಣಕೂಡದು. ಸಾಂಸ್ಕೃತಿಕ ವಿಷಯದಲ್ಲಿ ಇದು ‘ಇದು ಪ್ರಾಕ್ಟಿಕಲ್ಲೋ’ ಎಂದು ಕೇಳುವುದನ್ನೇ ಅಭ್ಯಾಸ ಮಾಡಿಕೊಂಡವನು ‘ಇದು ಸತ್ಯವೋ’, ‘ಇದು ಸರಿಯೋ’ ಎಂದು ಕೇಳಬಲ್ಲ ಶಕ್ತಿಯನ್ನೇ ಕಳೆದುಕೊಳ್ಳುತ್ತಾನೆ. ಅಂದರೆ ವಸ್ತುನಿಷ್ಠ ಶೋಧವೇ ಅಂಥವನಿಗೆ ಅಸಾಧ್ಯವಾಗಿ ಹೋಗುತ್ತದೆ.
ಕೆಲವು ವರ್ಷಗಳ ಹಿಂದೆ ಪುಣೆಯಲ್ಲಿ ಒಂದು ಘಟನೆ ನಡೆಯಿತು. ಅಲ್ಲಿನ ಕನ್ನಡ ಸ್ಕೂಲಿನ ಗಾಜನ್ನು ಶಿವಸೇನೆಯವರು ಒಡೆದರು. ಆಗ ಆ ಮೊಹಲ್ಲಾದ ಹಿರಿಯ ಮರಾಠಿ ಸಾಹಿತಿ ಶ್ರೀಪಾದಜೋಷಿಯವರು ಈ ದೌರ್ಜನ್ಯವನ್ನು ಇಡೀ ಮೊಹಲ್ಲಾದ ಎಲ್ಲ ಮರಾಠಿ ಜನರ ಜವಾಬ್ದಾರಿಯೆಂದು ತಿಳಿದು ತಲಾ ಎರಡು ರೂಪಾಯಿಗಳಂತೆ ಸಮಾನವಾಗಿ ಎಲ್ಲರಿಂದ ಸಂಗ್ರಹಿಸಿ ಒಡೆದ ಗಾಜುಗಳನ್ನು ದುರಸ್ತಿ ಮಾಡಿಸಿದರಂತೆ. ಭಾರತದ ಎಲ್ಲ ನಾಡಲ್ಲೂ ಇಂಥ ಜನರಿಲ್ಲವೆಂದರೆ ಯಾವ ಮೌಲ್ಯವನ್ನೂ ನಮ್ಮ ಸಂಸ್ಕೃತಿ ಕಾದಿಟ್ಟುಕೊಳ್ಳಲಾರದು; ‘ಇದು ಶಕ್ಯವೇ’ ಎಂದು ಕೇಳಲೇಬೇಕಾದ ಕಡೆ ‘ಇದು ಪ್ರಾಕ್ಟಿಕಲ್ಲೆ’, ಎಂದು ಕೇಳಲು ಅವಕಾಶವೇ ಇಲ್ಲ.
ಗೋಕಾಕ್ ವರದಿ ಅನುಷ್ಠಾನಕ್ಕಾಗಿ ಪ್ರಾರಂಭವಾದ ಚಳುವಳಿಯಲ್ಲಿ ರಘುರಾಮಶೆಟ್ಟಿಯವರು ಕಾಣುವ ಆದರ್ಶ ಮೊದಲಿನಿಂದಲೇ ಇರಲಿಲ್ಲವೆಂದು ನನಗೆ ಅನ್ನಿಸುತ್ತದೆ. ಅವರು ಹೇಳುವ ಈ ಮಾತುಗಳು ನಿಜವಲ್ಲ:
ಜನರ ಭಾವನೆಯನ್ನು ಕೆರಳಿಸಬಲ್ಲ ಭಾಷೆಯ ಪ್ರಶ್ನೆಯನ್ನೆತ್ತಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಉದ್ದೇಶ ಇವರ್‍ಯಾರಿಗೂ ಇರಲಿಲ್ಲ. ಕನ್ನದ ಭಾಷೆ ಮತ್ತು ಜನರ ಹಿತಾಸಕ್ತಿಯೇ ಸಾಹಿತಿಗಳನ್ನು ಚಳುವಳಿಯ ಕಣಕ್ಕೆ ಎಳೆತಂದಿತೆಂದು ಗ್ರಹಿಸಬೇಕಾಗುತ್ತದೆ……. ಗೋಕಾಕ್ ವರದಿ ಪೂರ್ಣ ಜಾರಿಗೆ ಬರಬೇಕೆಂಬ ವಿಚಾರದಲ್ಲಿ ಸಾಹಿತಿಗಳ್ಯಾರೂ ಬೇರೆ ಮಾತನಾಡಿಲ್ಲ. ಈ ಉದ್ದೇಶ ಸಾಧನೆಗೆ “ಸರ್ವತ್ಯಾಗಕ್ಕೂ” ಇವರು ಸಿದ್ಧರಾಗಿದ್ದರು.
(ಪ್ರಜಾವಾಣಿ, ೨೪ ಏಪ್ರಿಲ್)
ಬದಲಾಗಿ, ಶ್ರೀ ಕುವೆಂಪುರವರು ಕನ್ನಡವನ್ನು ರಾಜ್ಯಭಾಷೆಯೆಂದು ಕರೆದು, ಅದನ್ನು ಕಡ್ಡಾಯವಾಗಿ ಅಲ್ಪಸಂಖ್ಯಾತರಿಗೆ ವ್ಯಾವಹಾರಿಕವಾಗಿ ಕಲಿಸಿದರೂ ಸಾಕೆಂದು ಖಾಸಗಿಯಾಗಿ ಹೇಳಿದ್ದರೆಂದು ನಾನು ಕೇಳಿದ್ದೇನೆ. ಇದು ತಪ್ಪಿದ್ದರೆ ಅವರ ಕ್ಷಮೆ ಕೇಳುತ್ತೇನೆ. ಅವರ ಈ ನಿಲುವು ಸರಿಯಾದ್ದೇ ಆಗಿದೆ. ಆದರೆ ಅಷ್ಟನ್ನಾದರೂ ಪಡೆದುಕೊಳ್ಳುವ ಉದ್ದೇಶದಿಂದ ಗೋಕಾಕ್ ವರದಿಯ ಪೂರ್ಣ ಅನುಷ್ಠಾನಕಾಗಿ ಚಳವಳಿ ನಡೆಸಬೇಕಾದ್ದು ಒಂದು ಅಗತ್ಯವಾದ ‘ತಂತ್ರ’ ಎಂದು ಶ್ರೀ ಕುವೆಂಪುರಂತಹ ದೊಡ್ಡವರೇ ತಿಳಿದದ್ದು ಸರಿಯಲ್ಲ. ಯಾಕೆಂದರೆ ಶೈಕ್ಷಣಿಕ ವಿಷಯ ರಾಜಕೀಯ ಸಂಧಾನದ ವಿಷಯವಲ್ಲ. ಮೊದಲು ಉಗ್ರವಾಗಿ ಮಾತನಾಡಿ ಈಗ ಬದಲಾದ ಶ್ರೀರಂಗರಂಥ ಹಿರಿಯರ ಬಗ್ಗೆಯೂ ಮೇಲಿನ ಮಾತನ್ನು ಹೇಳಬೇಕಾಗುತ್ತದೆ. ಬಂಡಾಯದ ಸಭೆಯಲ್ಲೂ ಗೋಕಾಕ್ ವರದಿಯ ಪೂರ್ಣ ಅನುಷ್ಠಾನದ ಹೋರಾಟವನ್ನು ಒಂದು ತಂತ್ರವೆಂದು ಬಗೆಯಬೇಕೆಂದೂ, ಮೂರನೇ ಭಾಷೆಗೆ ೫೦ ಅಂಕಗಳ ಬದಲಾಗಿ ೧೦೦ ಅಂಕಗಳನ್ನು ಕೊನೆಯಲ್ಲಿ ಒಪ್ಪಿಕೊಳ್ಳಬಹುದೆಂದೂ ಸದಸ್ಯರಲ್ಲಿ ಒಪ್ಪಿಗೆಯಾಗಿತ್ತೆಂದು ನಾನು ಕೇಳಿದ್ದೇನೆ. ಇದು ನಿಜವಿದ್ದರೆ ಈಗಿನ ಸರ್ಕಾರದ ನೀತಿಯಲ್ಲಿ ಶ್ರೀ ಚಂದ್ರಶೇಖರ ಪಾಟೀಲರು ಕಾಣುವ ದೊಡ್ಡ ದೋಷವಾದರೂ ಏನು ನನಗೆ ತಿಳಿಯುತ್ತಿಲ್ಲ.
ಮಕ್ಕಳನ್ನು ಮರೆತು ವಯಸ್ಕರಾದ ನಾವು ಮನಸ್ಸಿಗೆ ಬಂದಂತೆ ವರ್ತಿಸುತ್ತಿದ್ದೇವೆ. ಈಗಿನ ೩೫೦ ಅಂಕಗಳ ಹೊರೆಯನ್ನು ಮಕ್ಕಳು ಹೊರುವುದು ಸಾಧ್ಯವೇ? ಇದನ್ನು ನಾವು ಯೋಚಿಸದೇ ಸರ್ಕಾರಿ ಸೂತ್ರವನ್ನು ಸ್ವಾಗತಿಸಿದ್ದೇವೆ. ನನ್ನ ಲೇಖನದ ಎರಡನೇ ಸೂತ್ರ ಸರ್ಕಾರಿ ಸೂತ್ರಕ್ಕಿಂತ ಉತ್ತಮವೆಂದು ನಾನು ತಿಳಿದಿದ್ದೇನೆ. ಆದರೆ, ನನ್ನ ಯೋಚನಾಕ್ರಮದಲ್ಲಿ ಇರುವ ತಪ್ಪೊಂದನ್ನು ನಾನಿಲ್ಲಿ ಒಪ್ಪಿಕೊಳ್ಳಬೇಕು. ಹತ್ತನೇ ತರಗತಿ ಮುಗಿಯುವ ತನಕ ಮಕ್ಕಳಿಗೆ ಒಂದೇ ಸಮನಾದ ಇಂಗ್ಲಿಷನ್ನು ದೇಶದ ಎಲ್ಲೆಡೆಯಲ್ಲೂ ಕಲಿಸುವುದು ಸಾಧ್ಯವಿಲ್ಲವಾದ್ದರಿಂದ ನನ್ನ ಸೂಚನೆಯ ತ್ತಿಭಾಷಾ ಸೂತ್ರದಲ್ಲಿ ಇಂಗ್ಲಿಷನ್ನು (ಅದನ್ನು ಮಾತೃಭಾಷೆಯಾಗಿ ಪಡೆದವರಿಗೆ) ಸೇರಿಸುವುದೇ ಶೈಕ್ಷಣಿಕವಾಗಿ ಸಮರ್ಪಕವಲ್ಲ. ಪಟ್ಟಣಗಳಲ್ಲಿ ಒಳ್ಳೆಯ ಶಾಲೆಗಳಿಗೆ ಹೋಗಬಲ್ಲ ಮಕ್ಕಳಿಗೆ ಇಂಗ್ಲಿಷ್ ಕಲಿಯಲು ಎರಡು ಸಾಧ್ಯತೆಗಳಿವೆ : (೧) ಇಂಗ್ಲಿಷನ್ನು ತಮ್ಮ ಪರಿಸರದಲ್ಲೇ ಕೇಳಿಸಿಕೊಳ್ಳಬಲ್ಲ ಸೌಲಭ್ಯ, ಮತ್ತು (೨) ಇಂಗ್ಲಿಷನ್ನು ತಕ್ಕಮಟ್ಟಿಗಾದರೂ ಚೆನ್ನಾಗಿ ಕಲಿಸಬಲ್ಲ ಉಪಾಧ್ಯಾಯರನ್ನು ಪಡೆದ ಖಾಸಗಿ ಶಾಲೆಗಳ ಸೌಲಭ್ಯ. ಆದರೆ ಇವುಗಳಲ್ಲಿ ಮೊದಲನೆಯದು ಶೈಕ್ಷಣಿಕ ವ್ಯವಸ್ಥೆಯ ಹಿಡಿತಕ್ಕೆ ಸಿಗಲಾರದ್ದು; ಎರಡನೆಯದು ಸಿಗಬಹುದಾದ್ದು. ಆದರೆ ವಾಸ್ತವಿಕವಾಗಿ ಅಷ್ಟು ಇಂಗ್ಲಿಷ್ ಅಧ್ಯಾಪಕರು ಎಲ್ಲ ಶಾಲೆಗಳಲ್ಲೂ ದೊರಕಲಾರರು. ಆದ್ದರಿಂದ ಅಸಮಾನತೆಯನ್ನು ಸೃಷ್ಟಿಸಬಲ್ಲಂಥ ವಿಶೇಷ ಸೌಕರ್‍ಯದ ಖಾಸಗಿ ಶಾಲೆಗಳನ್ನು ಕೊನೆಗಾಣಿಸಿ, ಒಂದೇ ಯೋಗ್ಯತೆಯ ಶಾಲೆಗಳನ್ನು ದೇಶದ ಎಲ್ಲೆಡೆ ತೆರೆದು ನಾವು ಸರಿಯಾಗಿ ಇಂಗ್ಲಿಷನ್ನು ಹೇಳಿಕೊಡಬಹುದಾದ ಇಯತ್ತೆಯಿಂದ ಮಾತ್ರ ಅದನ್ನು ಬಯಸಿದವರಿಗೆಲ್ಲರಿಗೂ ಹೇಳಿಕೊಡುತ್ತೇವೆಂಬುದೇ ಸರಿಯಾದ ಮಾರ್ಗ. ಇಂಗ್ಲಿಷಿನ ಅಂತರರಾಷ್ಟ್ರೀಯ ಮಹತ್ವವನ್ನು ಬಲ್ಲವರೆಲ್ಲರೂ ಅದನ್ನು ಸಮರ್ಪಕವಾಗಿ, ಸಮಯದ ಅಪವ್ಯಯವಾಗದಂತೆ ಕಲಿಸಲು ಇರುವ ಮಾರ್ಗ ಇದೊಂದೇ ಎಂದು ಒಪ್ಪುತ್ತಾರೆಂದು ನಾನು ತಿಳಿದಿದ್ದೇನೆ. ಎಂದರೆ, ದೇಶದ ಮಕ್ಕಳೆಲ್ಲರೂ ತಾವು ಹುಟ್ಟಿದ ಸ್ಥಳ ಮತ್ತು ಜಾತಿಗಳಿಂದಾಗಿ ಇಂಗ್ಲಿಷನ್ನು ಪ್ರಾರಂಭದಲ್ಲೆ ತಪ್ಪಿಲ್ಲದಂತೆ ಕಲಿಯಲಾರದ ಕಾರಣದಿಂದ, ನಗರ ಪ್ರದೇಶದ ಹಣವಂತರ ಮಕ್ಕಳಿಗಿಂತ ಹಿಂದುಳಿಯುವಂತೆ ಮಾಡುವುದು ಅಕ್ಷಮ್ಯವೆಂದು ತಿಳಿಯುವವರೆಲ್ಲರೂ ಇದನ್ನು ಒಪ್ಪಬೇಕಾಗುತ್ತದೆ.
ಆದರೆ ಈ ಬಗೆಯ ಸಮಾನತೆಯನ್ನು ಬಯಸುವ ನನ್ನಂಥವರು ನಮ್ಮ ಮಕ್ಕಳಿಗೆ ವಿಶೇಷ ಸೌಲಭ್ಯ ಸಿಗುವುದು ಸಾಧ್ಯವಿದ್ದಾಗ ಸಾಮಾನ್ಯ ಶಾಲೆಗೆ ನಮ್ಮ ಮಕ್ಕಳನ್ನು ಕಳಿಸುವಷ್ಟು ಆದರ್ಶವಾದಿಗಳಾಗಿರುವುದಿಲ್ಲ. ಮಧ್ಯಮ ವರ್ಗದ ಮೇಲೇರುವ ಆಸೆಯನ್ನಿಟ್ಟುಕೊಂಡಿರುವ ನಾವೆಲ್ಲರೂ ಚಿಂತನಾಕ್ರಮದಲ್ಲಿ ಏನನ್ನು ಬಯಸಿದರೂ ನಮ್ಮ ವರ್ಗಕ್ಕಿರುವ ಎಲ್ಲ ಸವಲತ್ತುಗಳನ್ನು ಖಂಡಿತ ಬಳಸಿಕೊಳ್ಳುವವರಾಗಿರುತ್ತೇವೆ. ಈ ಬಗ್ಗೆ ನನ್ನಂಥವರು ಅನುಭವಿಸುವ ಪಾಪಪ್ರಜ್ಞೆ ಕೂಡ ನಿರುಪಯೋಗಿಯಾದ ಒಂದು ಲಕ್ಷುರಿ ಎಂಬುದನ್ನು ಮರೆಯಬಾರದು. ಆದರೂ ಚಿಂತನೆಯಲ್ಲಾದರೂ ಯಾವುದು ಸರಿಯೆನ್ನಿಸುತ್ತದೋ ಅದನ್ನು ಹೇಳುವುದು (ಇದು ಕೂಡ ಅಭ್ಯಾಸಗತವಾಗುವ ಜೀವನಕ್ರಮದಲ್ಲಿ ಕ್ರಮೇಣ ಮಂಜಾಗುತ್ತ ಹೋಗುವ ಕಾಣ್ಕೆಯಾಗಿ ಬಿಡಬಹುದು) ಕೇವಲ ಆಷಾಢಭೂತಿತನವೆಂದು ತಳ್ಳಿಹಾಕಕೂಡದು. ಯಾಕೆಂದರೆ ನಮ್ಮ ಇಡೀ ಸಮಾಜದಲ್ಲಿ ಆಗಬೇಕಾದ ಬದಲಾವಣೆಗಾಗಿ ಸ್ವಂತ ಹಿತದ ವಿರುದ್ಧವಾಗಿ ಚಿಂತನೆ ಮಾಡುವವರೆಲ್ಲರೂ ಅದು ಸಾಧ್ಯವಾಗುವ ದಿಕ್ಕಿನಲ್ಲಾದರೂ ಇದ್ದಾರೆಂಬುದು ಖಚಿತ.
ನಮ್ಮಂಥವರು ಈ ಎರಡರಲ್ಲಿ ಒಂದು ಮಾಡೆಲ್ಲನ್ನು ಆಯ್ದಿರುತ್ತೇವೆ: ಸ್ವಂತ ಜೀವನವನ್ನೇ ಮಾರ್ಪಡಿಸಿಕೊಳ್ಳುತ್ತ ಹೋಗುವ, ಹೃದಯ ಪರಿವರ್ತನೆಯಲ್ಲಿನಂಬುವ, ಗಾಂಧಿಯ ಮಾರ್ಗ ರಾಜಕೀಯ ಕ್ರಿಯೆಗೆ ಇರುವ ಒಂದು ಮಾಡೆಲ್ಲಾದರೆ; ಇನ್ನೊಂದು, ಇಡೀ ಸಮಾಜದ ಆರ್ಥಿಕ ಬುನಾದಿಯನ್ನೇ ಬದಲು ಮಾಡುವುದರ ಮುಖಾಂತರ ಪ್ರತಿ ವ್ಯಕ್ತಿಯೂ ಅನಿವಾರ್ಯವಾಗಿ ಬದಲಾಗಲೇಬೇಕಾದ ಮಾರ್ಕ್ಸ್‌ವಾದೀ ಸಮೂಹ ಬದಲಾವಣೆಯ ಮಾಡೆಲ್. ಈ ಎರಡೂ ಒಂದಕ್ಕೊಂದು ಹೆಣೆದುಕೊಳ್ಳದ ಹೊರತು ಯಾವ ಸಮಾಜವೂ ಸರ್ವಹಿತದ ಉದ್ದೇಶವನ್ನು ಈಡೇರಿಸಿಕೊಳ್ಳದೇನೋ. ಗಾಂಧಿ ಮಾಡೆಲನ್ನು ಆಯ್ದು ತನ್ನ ಉದ್ದೇಶಕ್ಕೆ ತಕ್ಕಂತೆ ಬದುಕಲಾರದವನು ದ್ವಂದ್ವಗಳಲ್ಲಿ ನರಳುತ್ತಾನೆ; ಆದರೆ ಮಾರ್ಕ್ಸ್‌ವಾದಿ ಮಾಡೆಲ್ಲನ್ನು ಮಾತ್ರ ನೆಚ್ಚಿದವನು ಕೇವಲ ಉಪಾಯಗಾರನಾಗುತ್ತ ಹೋಗುತ್ತಾನೆ. ಆದ್ದರಿಂದಲೇ ಈಗಿರುವ ಶಿಕ್ಷಣ ಕ್ರಮದಿಂದ ನಮ್ಮ ನಮ್ಮ ಮಕ್ಕಳ ಹಿತವನ್ನು ಸಾಧಿಸಿಕೊಳ್ಳುತ್ತಿರುವ ನಾವೆಲ್ಲರೂ, ನಮ್ಮನ್ನು ನಾವು ವಿಮರ್ಶೆಗೆ ಒಡ್ಡಿಕೊಳ್ಳುತ್ತಲೇ ಆದರ್ಶವಾದುದ್ದರ ಕಡೆಗೂ ಇಡೀ ಸಮಾಜ ಮುನ್ನಡೆಯುವಂತೆ ಶ್ರಮಿಸಬೇಕಾಗುತ್ತದೆ. ಯಾಕೆಂದರೆ ಸಮಾನತೆಯಿಲ್ಲದ ಸಮಾಜದಲ್ಲಿ ನಮ್ಮ ವರ್ಗ ತನ್ನ ಆಸೆಬುರುಕತನದಲ್ಲಿ ಪಡದದ್ದು ನರಳುವ ಅಗಾಧ ಜನರೆದುರು ಕ್ಷುಲ್ಲಕವಾಗಿ ನಮ್ಮ ವರ್ಗದ ಸೂಕ್ಷ್ಮಜ್ಞರಾದ ಅನೇಕರಿಗೆ ಕಾಣಿಸುತ್ತಲೇ ಇರುತ್ತದೆ. ಅಸಮಾನತೆ ಅಧಿಕವಾಗಿರುವ ಸಮಾಜದಲ್ಲಿ ಯಾರಿಗೂ ಮನಃಶಾಂತಿ ಇರುವುದಿಲ್ಲ. ಆದ್ದರಿಂದಲೇ ಎಲ್ಲ ವರ್ಗದ ಜನರಿಗೂ ತಮ್ಮ ಜೀವನ ಕ್ರಮದ ವಿರೋಧಗಳಲ್ಲೂ, ಸಮಾನತೆಯ ಸಮಾಜಕ್ಕಾಗಿ ಹೋರಾಡುವುದು ನೈತಿಕ ಅಗತ್ಯವೆನಿಸುವುದು.
ಮೇಲಿನ ಮಾತುಗಳ ತಾತ್ಪರ್‍ಯ ಇಷ್ಟೆ; ಇಂದಲ್ಲದಿದ್ದರೆ ನಾಳೆಯಾದರೂ ನಾವು ಸಮಾನ ಯೋಗ್ಯತೆಯ ಏಕರೀತಿಯ ಶಾಲೆಗಳಿಗಾಗಿ ಹೋರಾಡಬೇಕಾಗುತ್ತದೆ; ಎಲ್ಲ ಶಾಲೆಗಳಲ್ಲೂ ಇಂಗ್ಲಿಷ್ ಕಲಿಸುವುದು ಅಸಾಧ್ಯವಾದ್ದರಿಂದ ಮಾತೃಭಾಷೆ ಮತ್ತು ರಾಜ್ಯ ಭಾಷೆಗಳನ್ನು ಮಾತ್ರ ಮಕ್ಕಳಿಗೆ ಕಲಿಸಬೇಕಾಗುತ್ತದೆ. ಕರ್ನಾಟಕದಲ್ಲಿ ಇವೆರಡೂ ಒಂದೇ ಆಗಿರುವ ಮಕ್ಕಳು ಇನ್ನೊಂದು ಭಾಷೆ ಕಲಿಯುವುದಾದರೆ ಅದು ಯಾವುದಾದರೊಂದು ಭಾರತೀಯ ಒಂದು ಭಾಷೆಯನ್ನು ಚೆನ್ನಾಗಿ, ಆಳವಾಗಿ, ಸೃಜನಾತ್ಮಕವಾಗಿ ಕಲಿತ ವಿದ್ಯಾರ್ಥಿ, ಮೂರು ಪ್ರಯೋಗದ ವಿಷಯದಲ್ಲಿ ಹೆಚ್ಚು ಶಕ್ತನಾಗಿರುತ್ತಾನೆ. ಅಷ್ಟೇ ಅಲ್ಲ, ಇಂಥ ಒಬ್ಬ ವಿದ್ಯಾರ್ಥಿ ಕಾಲೇಜು ಸೇರುವ ಮುನ್ನ ಇಂಗ್ಲಿಷನ್ನೂ, ಹಿಂದಿಯನ್ನೂ ಆರು ತಿಂಗಳ ಒಳಗೆ ಈಗಿನ ನುರಿತು ಊರಿದ ಮನಸ್ಸು, ರಾಜ್ಯ ಭಾಷೆಯಲ್ಲಿ ನೈಪುಣ್ಯ ಪಡೆಯುವುದರ ಜೊತೆಗೇ, ಜ್ಞಾನ ಮಾಧ್ಯಮವಾದ ಹೊರ ದೇಶದ ಭಾಷೆಯೊಂದನ್ನು ಚೆನ್ನಾಗಿ ಕಲಿಯುವುದು ಶಿಕ್ಷಣದ ಸರ್ವತೋಮುಖ ಅಭ್ಯುದಯದ ದೃಷ್ಟಿಯಿಂದ ಅತ್ಯಂತ ಸೂಕ್ತವಾದ ಕ್ರಮವಾಗಿರುತ್ತದೆ. ಈ ಕ್ರಮದಲ್ಲಿ ಕರ್ನಾಟಕದೊಳಗೇ ಬಹಳ ಹಿಂದಿನಿಂದ ಚಾಲ್ತಿಯಲ್ಲಿರುವ, ಅಥವಾ ಈ ದೇಶದೊಳಗೇ ಹುಟ್ಟಿರುವ ತುಳು, ಕೊಡವ, ಕೊಂಕಣಿಯಂಥ ಭಾಷೆಗಳೂ ನಶಿಸಿ ಹೋಗುವುದರ ಬದಲಾಗಿ ಬೆಳೆಯುತ್ತಾ ಹೋಗುವುದೂ ಸಾಧ್ಯವಾಗುತ್ತದೆ.
ಕೆಲವರು ಅಲ್ಪಸಂಖ್ಯಾತರ ಭಾಷೆಗಳನ್ನು ರಕ್ಷಿಸುವ ನೆಪದಲ್ಲಿ ಕನ್ನಡವನ್ನು ಕಡ್ಡಾಯ ಮಾಡುವುದನ್ನು ವಿರೋಧಿಸುವುದುಂಟು. ಇಂಥವರಲ್ಲಿ ಹಲವರು ನಿಜಾವಾಗಿ ಬಯಸುವುದು ತಮ್ಮ ಮಾತೃಭಾಷೆಯ ಬೆಳವಣಿಗೆಯನ್ನಲ್ಲ; ಇಂಗ್ಲಿಷನ್ನು ಈಗಿರುವ ಪ್ರತಿಷ್ಠೆಯ ಸ್ಥಾನದಲ್ಲೇ ಉಳಿಸಿಕೊಳ್ಳುವುದನ್ನು. ಆದ್ದರಿಂದಲೇ (ಅದರ ಘೋಷಿತ ಉದ್ದೇಶವೇನೇ ಇರಲಿ) ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ಗಳಲ್ಲಿ ಪ್ರಕಟವಾದ ಗೆಳೆಯ ಹರಿಕುಮಾರರ ವಾದವನ್ನು, ಮೇಲಿನ ಗುಮಾನಿಯಿಂದಾಗಿ ಒಪ್ಪಿಕೊಳ್ಳುವುದು ನನಗೆ ಕಷ್ಟವಾದ್ದು. ಯಾಕೆಂದರೆ ಭಾರತೀಯ ಭಾಷೆಗಳು ಬೆಳೆಯುವುದಕ್ಕೋಸ್ಕರ ಅವು ಪಡೆಯಬೇಕಾದ ಪ್ರಭುತ್ವದ ಪೋಷಣೆಯಲ್ಲಿ ಅವರಿಗೆ ಆಸಕ್ತಿಯಿಲ್ಲ. ಒಂದು ಕಡೆ, ಕನ್ನಡವನ್ನು ಪ್ರಥಮ ಭಾಷೆಯನ್ನಾಗಿ ಒಲ್ಲದವರನ್ನು ದೇಶ ಬಿಟ್ಟು ತೊಲಗಿ ಎಂದು ಗರ್ಜಿಸುವವರು. ಇನ್ನೊಂದು ಕಡೆ, ಯಾವ ಭಾರತೀಯ ಭಾಷೆ, ಸಂಸ್ಕೃತಿಗಳಿಗೂ ಬದ್ಧರಾಗದೇ ಇಂಗ್ಲಿಷನ್ನು ಬೆಳೆಸುವ ನೆವದಲ್ಲಿ ಅಲ್ಪಸಂಖ್ಯಾತರ ಭಾಷೆಗೆ ವಕೀಲಿ ವಹಿಸುವವರು – ಈ ಇಬ್ಬರ ಜೊತೆಗೂ ನಿಲ್ಲದೆ ಕರ್ನಾಟಕದ ಎಲ್ಲ ಮಾತೃಭಾಷೆಗಳ ಬೆಳವಣಿಗೆಯ ಜೊತೆ ಜೊತೆಗೇ ರಾಜ್ಯಭಾಷೆಯನ್ನು ಕಡ್ಡಾಯವಾಗಿ ಹೇಗೆ ಮಾಡಬೇಕೆಂಬುದನ್ನು ಯೋಜಿಸ ಹೊರಟಿರುವ ನಮ್ಮಂಥವರ ನಿಲುವು ಸದ್ಯಕ್ಕೆ ಜನಪ್ರಿಯವಾಗಲಾರದು. ಆದರೂ ಚಿಂತೆಯಿಲ್ಲೆಂದು ನಾವು ನಮ್ಮ ವಿಚಾರವನ್ನು ನಿರ್ಭಯವಾಗಿ ಮಂಡಿಸ ಬೇಕಾಗಿದೆ.
ಹಲವು ಸಾಹಿತಿಗಳು ರೋಷಾವೇಶದಲ್ಲಿ ವಿಶ್ವಕನ್ನಡ ಸಮ್ಮೇಳನಗಳ ಸಮಿತಿಯಿಂದ, ಅಕಾಡಮಿಯಿಂದ ರಾಜೀನಾಮೆ ಕೊಟ್ಟು ಹೊರಬಂದಿದ್ದಾರೆ. ಅನಂತರ ವರದಿಯ ಪೂರ್ಣ ಅನುಷ್ಠಾನಕ್ಕಾಗಿ ಹೋರಾಡುವ ತಮ್ಮ ಹಿಂದಿನ ನಿಲುವನ್ನು ಬದಲಿಸಿಕೊಂಡಿದ್ದಾರೆ. ಅಂದರೆ, ಇವರೆಲ್ಲರೂ ಈಗ ತಮ್ಮ ರಾಜೀನಾಮೆಗಳನ್ನು ಹಿಂದಕ್ಕೆ ತಗೆದುಕೊಳ್ಳಬಹುದು. ಇವರನ್ನು ಅದಕ್ಕಾಗಿ ಅಣಕಿಸುವುದು ನನ್ನ ಉದ್ದೇಶವಲ್ಲ. ಆದರೆ ಈ ಕನ್ನಡ ಲೇಖಕರು ಸಾಕಷ್ಟು ವಿನಯದಲ್ಲಿ ತಮ್ಮ ಆತ್ಮಶೋಧ ಮಾಡಿಕೊಳ್ಳದಿದ್ದಲ್ಲಿ, ಅವರ ಅವಮಾನ ಇಡೀ ಕನ್ನಡ ಸಾಹಿತ್ಯ ಲೋಕದ ಅಪ್ರಬುದ್ಧತೆಯ ಒಂದು ಲಕ್ಷಣವಾಗಿ ಕಾಣುತ್ತದೆ. ಮೊದಲು ಮುನ್ನುಗ್ಗುವುದು, ನಂತರ ಹಿಂಜರಿಯುವುದು, ಹಿಂಜರಿದನೆಂದು ಅವಮಾನ ಪಡುತ್ತ ಮತ್ತೆ ಮುನ್ನುಗ್ಗುವ ನಾಟಕ ಮಾಡುವುದು; ಅಥವಾ ನನಗೆ ಸದ್ಯಕ್ಕಿಷ್ಟು ಸಾಕು, ಆದರೆ ನಿಮ್ಮಲ್ಲಿ ಕೆಚ್ಚಿದ್ದರೆ ವರದಿಯ ಪೂರ್ಣ ಅನುಷ್ಠಾನಕ್ಕಾಗಿ ಶಾಂತಿಯುತವಾಗಿ ಹೋರಾಡಿ ಎನ್ನುವುದು-ಇವೆಲ್ಲವೂ ಅಪ್ರಬುದ್ಧ ವರ್ತನೆಗಳೇ. ಮೇಲಾಗಿ, ಕನ್ನಡ ವಿಶ್ವಭಾಷೆಯಲ್ಲದಿದ್ದಾಗ ಈ ‘ವಿಶ್ವ ಕನ್ನಡ ಸಮ್ಮೇಳನ’ ಮಾಡಿ ಕನ್ನಡಿಗರ ಬಗ್ಗೆ ಬೀಗುವುದೂ ಅತ್ಯಂತ ಅಪಕ್ವ ವರ್ತನೆಯೇ.
ಯಾವ ಜಾತಿಯ ಸಸ್ಯವಾಗಲೀ ಪ್ರಾಣಿಯಾಗಲೀ ನಾಶವಾದರೆ ಇಡೀ ಪರಿಸರದ ಸಮತೋಲ ತಪ್ಪುತ್ತದೆ ಎಂದು ಇಕಾಲಜಿ ಬಲ್ಲವರು ಹೇಳುತ್ತಾರೆ. ಒಂದು ಪರಿಸರದಲ್ಲಿರುವ ಭಾಷೆಗಳೂ ಹಾಗೆಯೇ. ಮಕ್ಕಳು ತಮ್ಮ ಮಾತೃಭಾಷೆಯಲ್ಲಿ ಮಾತ್ರ ಆಳವಾಗಿ, ಆಪ್ತವಾಗಿ ಜ್ಞಾನ ಸಂಪಾದನೆ ಮಾಡಬಲ್ಲರು ಎಂದು ನಂಬುವವರು ಕರ್ನಾಟಕದಲ್ಲಿರುವ ಎಲ್ಲ ಭಾಷೆಗಳನ್ನೂ ಆಯಾ ಮಕ್ಕಳ ಮನಸ್ಸಿನ ಬೆಳವಣಿಗೆಗಾಗಿ ಬಳಸಬೇಕು. ಹ್ಯಾಲಿಡೇ ಎಂಬ ಪ್ರಸಿದ್ಧ ಆಂಗ್ಲ ಭಾಷಾತಜ್ಞನ ಪ್ರಕಾರ ಲಂಡನ್ನಿನ ಸ್ಲಮ್ಮಿನ ಮಕ್ಕಳು ಸ್ವೀಕೃತವಾದ ಇಂಗ್ಲಿಷ್‌ನಲ್ಲಿ ಪಾಠ ಕಲಿಯುವುದಕ್ಕಿಂತ ತಮ್ಮ ಪ್ರದೇಶದ ‘ಗ್ರಾಮ್ಯ’ ಇಂಗ್ಲಿಷ್‌ನಲ್ಲಿ ಹೇಳಿಕೊಟ್ಟರೆ ಇನ್ನಷ್ಟು ಬೇಗ ಕಲಿಯುತ್ತಾರಂತೆ. ಅಂದರೆ ಕರ್ನಾಟಕದಲ್ಲಿ ಮಕ್ಕಳ ಜ್ಞಾನವನ್ನು ಬೆಳೆಸಲು ಉರ್ದು, ಕೊಂಕಣಿ, ತುಳು, ಕೊಡವಗಳು ಮಾತ್ರವಲ್ಲದೆ ಕನ್ನಡದ ಹಲವು ಪ್ರಾದೇಶಿಕ ರೂಪಗಳೂ ಬಳಕೆಯಾಗಬೇಕು. ತಮ್ಮ ತಮ್ಮ ಮಾತೃಭಾಷೆಯಲ್ಲಿ ಆಳವಾಗಿ ಆಪ್ತವಾಗಿ ಸ್ವತಂತ್ರವಾಗಿ ಯೋಚಿಸಲು ಕಲಿಯುವ ಮಕ್ಕಳೆಲ್ಲರೂ ತಮ್ಮ ಹೊರ ಪರಿಸರದ ಭಾಷೆಯಾದ ಕನ್ನಡವನ್ನು ಕಲಿಯಬೇಕು. ಒಂದು ಹಂತದ ತನಕ ಇವರೆಲ್ಲರೂ ಯಾವುದಾದರೊಂದು ಭಾಷೆಯಲ್ಲಿ ದೃಢವಾದ ರೀತಿಯಲ್ಲಿ ಗ್ರಹಿಸುವ ಅಭಿವ್ಯಕ್ತಿಸುವ ಶಕ್ತಿ ಪಡೆದ ನಂತರ ಹೊರದೇಶದ ಭಾಷೆಗಳನ್ನು ಕಲಿಯಬೇಕು.
ಇದು ಕನಸಿರಬಹುದು; ಆದರೆ ಇಂದಲ್ಲ ನಾಳೆ ಕರ್ನಾಟಕವೂ ಈಗಿರುವುದಕ್ಕಿಂತ ಹೆಚ್ಚು ಸ್ವಾಯತ್ತ ರಾಜ್ಯವಾಗಬೇಕಾಗುತ್ತದೆ. ಕೇಂದ್ರ ಸರ್ಕಾರ ಇಡೀ ರಾಷ್ಟ್ರದ ರಕ್ಷಣೆಯ ಜವಾಬ್ದಾರಿಯನ್ನು ಮಾತ್ರ ಇಟ್ಟುಕೊಂಡು, ಈ ರಾಜ್ಯಗಳಿಗೆ ಉಳಿದ ಅಧಿಕಾರಗಳನ್ನು ಬಿಟ್ಟುಕೊಡಬೇಕಾಗುತ್ತದೆ. ಗಾಂಧೀಜಿ ಕನಸುಕಂಡ ಈ ವಿಕೇಂದ್ರೀಕರಣದಲ್ಲಿ ರಾಜ್ಯದ ಒಂದು ಗ್ರಾಮದ ಜನ ಕೂಡ ಪ್ರಭುತ್ವದಲ್ಲಿ ಪಾಲುದಾರರಾಗಿರುತ್ತಾರೆ. ಹೀಗಾಗುವ ಕರ್ನಾಟಕ ತನ್ನ ರಾಜ್ಯದೊಳಗೆ ಸಾಮ್ರಾಜ್ಯಶಾಹಿ ಧೋರಣೆ ಬೆಳೆಸಿಕೊಳ್ಳಕೂಡದು. (ಹಲವು ಭಾಷೆಗಳು ಹೀಗೆ ಸಾಮರಸ್ಯದಿಂದ ಬೆಳೆಯಬಹುದೆಂಬ ಬಗ್ಗೆ ಅತ್ಯಂತ ಸಮರ್ಪಕವಾಗಿ ಚಿಂತಿಸಿದ ಇಬ್ಬರೆಂದರೆ ಲೆನಿನ್ ಮತ್ತು ಗಾಂಧಿ) ಈಗ ನಡೆಯುತ್ತಿರುವ ಚಳವಳಿಯ ಗೊಂದಲದಲ್ಲಿ ನಾನು ಬರೆದಿರುವುದೆಲ್ಲ ಅಧಿಕಪ್ರಸಂಗದಂತೆ ಕಾಣಬಹುದು. ಆದರೆ ಕನ್ನಡಸಂಸ್ಕೃತಿಗೆ ನಿಷ್ಠವಾದ ‘ರುಜುವಾತು’ ಪತ್ರಿಕೆಯ ಸಂಪಾದಕರಾಗಿ ಹೀಗೆ ಬರೆಯುವುದು ನನ್ನ ಕರ್ತವ್ಯವೆಂದು ತಿಳಿದಿದ್ದೇನೆ. ಯಾವುದು ಜನಜೀವನಕ್ಕೆ ಅಗತ್ಯವೆಂಬ ಪ್ರಜ್ಞೆಯುಳ್ಳವರು. ಸದ್ಯದ ಯಶಸ್ಸಿಗಾಗಿ ಸಂಘಟಿತರಾದ ದೊಂಬಿಗಾರ ಜನರಿಗೆ ಅಪ್ರಿಯವಾಗುವಂತೆ ನಡೆದುಕೊಳ್ಳಲು ಹಿಂಜರಿಯಬಾರದು. ಹಾಗೆ ಹಿಂಜರಿಯುವವನು ಸಂಸ್ಕೃತಿಗೆ ಬೆಲೆಯುಳ್ಳ ಏನನ್ನೂ ಸೇರಿಸಲಾರ. ಇದನ್ನು ಅವಿನಯದ ಮಾತೆಂದು ಓದುಗರು ತಿಳಿಯಬಾರದು. ಯಾಕೆಂದರೆ ನನ್ನ ವಾದದಲ್ಲಿ ತಪ್ಪಿದ್ದರೆ ಅದರಿಂದ ನಷ್ಟವಾಗುವುದು ನನಗೆ ಮಾತ್ರ. ಆದರೆ ಜನರನ್ನು ರೊಚ್ಚಿಗೇಳಿಸುವ ಶಕ್ತಿಯುಳ್ಳ ಕನ್ನಡ ಚಳವಳಿಯ ‘ಪಾಪ್ಯುಲಿಸ್ಟ್’ ನಾಯಕರು ಮಾಡುವ ತಪ್ಪಿನಿಂದ ಇಡೀ ಸಮುದಾಯಕ್ಕೇ ನಷ್ಟವಾಗುತ್ತದೆ.
*****
ರುಜುವಾತು ೬, ೧೯೮೨