ಡಾ. ರೇವಣಸಿದ್ಧಪ್ಪ

ಈ ಕಾಂಡಕ್ಟ್ ಸರ್ಟಿಫಿಕೇಟಿಗೆ ಡಾಕ್ಟರು ರೇವಣಸಿದ್ಧಪ್ಪನವ್ರ ಸಹಿ ಮಾಡಿಸ್ಕೊಂಡು ಬಂದ್ರೆ ನಿಂಗೆ ಅಡ್ಮಿಷನ್ ಇಲ್ಲಾಂದ್ರೆ ಔಟ್ ಎಂದು ಪ್ರಿನ್ಸಿಪಾಲರು ತಮ್ಮ ವಕ್ರ ವಕ್ರ ದಂತಗಳನ್ನು ಪ್ರದರ್ಶಿಸಿದಾಗಲೇ ನನ್ನ ಮನದ ಪುಟ್ಟ ತೆರೆಯ ಮೇಲೆ ಮಾಂಸಪರ್ವತವನ್ನು ಹೋಲುವ ವ್ಯಕ್ತಿಯೋರ್ವನ ಚಿತ್ರ ಮೂಡಿ ಹಿಂದಕ್ಕೂ ಮುಂದಕ್ಕೂ ಅಳ್ಳಾಡಿದ್ದು. ಕೂದಲನ್ನಿಡಿ ಕಣ್ಣಹುಬ್ಬಿಗೆ ವರ್ಗಾಯಿಸಿ ಮಿರಿಮಿರಿ ಮಿಂಚುವ ತಲೆಯ ಆತನ ಸಚ್ಚಾರಿತ್ರ್ಯಕ್ಕೆ ಸಾಕ್ಷಿಯಾಗಿ ನೊಸಲಮೇಲೆ ಸದಾ ರಾರಾಜಿಸುತ್ತಿದ್ದ ತ್ರಿಪುಂಡ್ರದ ಗೆರೆಗಳು ಮುಖದ ತುಂಬ ಹರಡಿದ್ದ ದೊಣ್ಣೇ ಮೂಗಿಗೆ ವಿಶೇಷ ಕಳೆ ನೀಡಿದ್ದವು. ಆನೆಸೊಂಡಿಲಂಥ ತೋಳುಗಳ ಆತನೋ, ಭೂಮಿಯನ್ನೇ ಆಪೋಶನ ತಗೊಂಡಂತಿದ್ದ ಆತನ ಹೊಟ್ಟೆಯೋ; ಆರು ಮೊಳಕ್ಕೆ ತುಸು ಕಡಿಮೆ ಇದ್ದ ಆತ ನಮ್ಮೂರಿನ ಇರುವೆ ಎಂಬತ್ನಾಲ್ಕು ಕೋಟಿ ಜೀವರಾಶಿಗೆಲ್ಲ ಚಿರಪರಿಚಿತನೇ; ಆತನನ್ನು ಕಂಡರೆ ಬೆಕ್ಕು ಮಿಯಾವ್ ಅನ್ನುತ್ತಿತ್ತು. ನಾಯಿ ಕುಯ್ ಕುಯ್ ಎಂದು ಬಾಲ ಅಲ್ಲಾಡಿಸುತ್ತ ಅದನ್ನು ಹಿಂದಿನ ಕಾಲುಗಳ ಸಂದಿಗೆ ಮೆತ್ತಿ ಪರಮ ವಿನಯ ಪ್ರಕಟಿಸುತ್ತಿತ್ತು. ಆತನ ದನಿಗೆ ಸರುಪ ವಿನಯದಿಂದಲೇ ಅಡಗುತ್ತಿತ್ತು. ಅಷ್ಟೇ ಏಕೆ ಪುರಸಭಾ ವ್ಯಾಪ್ತಿಯ ಸರ್ವಹನ್ನೊಂದು ಅಕ್ಷೋಹಿಣಿ ದೊಡ್ಡ ದೊಡ್ಡ ಮನುಷ್ಯರು ಕುಂತರೂ ನಿಂತರೂ; ಹಾಸಿಗೆಗೆ ಹೋಗುವ ಮೊದಲು ಡಾಕ್ಟರ್ ರೇವಣಸಿದ್ದಪ್ಪರ ನಾಮಸ್ಮರಣೆ ಮಾಡುತ್ತಿದ್ದರಲ್ಲದೆ; ತಮ್ಮ ಮರ್ಜಿ ಮುಲಾಜು ಹಿಡಿದು ಬದುಕುವ ಪುಡಪೋಸಿ ಜನಕ್ಕೆಲ್ಲ ಅವರು ಡಾ. ರೇವಣಸಿದ್ದಪ್ಪರ ನಾಮ ಜಪಿಸಿ ಪುನೀತರಾಗುವಂತೆ ಪುಸಲಾಯಿಸುತ್ತಿದ್ದರು.
uಟಿಜeಜಿiಟಿeಜ
ಪಯೋರಿಯಕ್ಕೆ ಹೆಸರಾಗಿದ್ದ ಬಾಯಿಯ ಒಡೆಯ ನಮ್ಮ ಕಾಲೇಜಿನ ಪ್ರಿನ್ಸಿಪಾಲರಂತೂ ತಮ್ಮ ಡ್ರಾಯರ್ ಜೋಬಿನಲ್ಲಿ ಡಾ. ರೇವಣಸಿದ್ದಪ್ಪರ ಪಾಸ್‌ಪೋರ್ಟ್ ಸೈಜಿನ ತ್ರಿವರ್ಣದ ಫೋಟೋ ಇಟ್ಟುಕೊಂಡೇ ತಂಬಿಗೆಯೊಂದಿಗೆ ಹೊರಡುತ್ತಿದ್ದರು. ಮೊಳೆರೋಗದಿಂದ ಭಾರತ್ ಬಂದ್ ಆಚರಿಸುತ್ತಿದ್ದ ದೊಡ್ಡ ಕರುಳನ್ನು ಹಿಂಜಿ ಹಿಂಜಿ ತಾಸುಗಟ್ಟಲೆ ಕೂತು ಆ ಫೋಟೋ ನೋಡುತ್ತ ನೋಡುತ್ತ ಸಲೀಸಾಗಿ ಮಲವಿಸರ್ಜಿಸುತ್ತಿದ್ದರೆಂದಮೇಲೆ ಕೇಳುವುದೇನಿದೆ? ಅವರು ತಮ್ಮ ಜೀಷ್ಠಪುತ್ರಿ ಚೊಚ್ಚಲು ಹೆರಿಗೆ ಸಂದರ್ಭದಲ್ಲೂ ಪ್ರಸೂತಿಕಾ ಕೋಣೆಗೆ ಡಾಕ್ಟರರ ಫೋಟೋ ಅಂಟಿಸಿ ಧೈರ್ಯ ತುಂಬಿ ಹೆರಿಗೆ ಸೂಸೂತ್ರವಾಗುವಂತೆ ನೋಡಿಕೊಂಡರಂತೆ. ಕಳೆದ ವರ್ಷ ತಮ್ಮ ತಾಯಿ ಸೀದ ಸ್ವರ್ಗಕ್ಕೆ ಹೋಗಿ ಪಾರ್ವತಿ ಪರಮೇಶ್ವರರ ಸೇವೆ ಮಾಡಿಕೊಂಡಿರುವುದಕ್ಕೆ ಕಾರಣ ಆಕೆ ಡಾಕ್ಟರರ ಫೋಟೋ ನೋಡು ನೋಡುತ್ತಲೇ ಕೊನೆಯುಸಿರೆಳೆದಿದ್ದರಿಂದಲೇ; ಅಷ್ಟೇ ಅಲ್ಲದೆ ಮದುವೆ ಮುಂಜಿ ಎಲ್ಲಿಯೇ ನಡೆಯಲಿ! ಹೇಗೇ ನಡೆಯಲಿ ಪ್ರಿನ್ಸಿಪಾಲರು ಅಲ್ಲಿಗಲ್ಲಿಗೆ ಏಕ್‌ದಂ ಹಾಜರಾಗಿ ಡಾಕ್ಟರರ ಫೋಟೋವನ್ನು ಅಲ್ಲೆಲ್ಲ ಲಗತ್ತಿಸಿ ಕಂಟಕಗಳಿಗೆ ಮಾರ್ಗೋಪಾಯಗಳನ್ನು ಕಲ್ಪಿಸಿಬಿಡುತ್ತಾರಂತೆ.

ಇಂಗ್ಲಿಷ್ ಭಾಷೆಯನ್ನು ಕರತಲಾಮಲಕ ಮಾಡಿಕೊಂಡಿದ್ದ ನಮ್ಮ ಪ್ರಿನ್ಸಿಪಾಲರು ತರಗತಿ ಪ್ರವೇಶಿಸುತ್ತಲೇ ವೇರ್ ದಿ ಮೈಂಡ್ ಈಸ್ ವಿತ್ ಔಟ್ ಫಿಯರ್ ಅಂತ ವಿಕ್ಟೋರಿಯನ್ ಶೈಲಿಯಲ್ಲಿ ಹೆಸರಿಗಷ್ಟೇ ಹೇಳಿ ನೀವೆಲ್ಲ ಡಾ. ರೇವಣಸಿದ್ದಪ್ಪನವರ ಥರಾ ಆಗಬೇಕ್ರಯಾ; ‘ಕೃಷಿಯುಂಟೇ ಮನಿಷಿ ಋಷಿ ಆವುತಾಡು’ ಅಂತ ತೆಲುಗು ಕವಿ ಗುರುಜಾಡ ಅಪ್ಪಾರಾವು ಡಾಕ್ಟರಂಥವರನ್ನು ಕುರಿತೇ ಬರೆದಿರಬೇಕು ಕಣ್ರಯ್ಯಾ; ನೀವೆಲ್ಲ ಅವ್ರಥರಾ ದೊಡ್ಡಸ್ತಿಕೆ ಬೆಳೆಸ್ಕೋಬೇಕು; ದೊಡ್‌ಮನುಶ್ಶೋರಾಗಬೇಕು. ನಿಮ್ಮ ಶರೀರವನ್ನು ಅವರ ಥರಾ ಗಂಧದ ಕೊರಡಿನಂತೆ ತೇಯಬೇಕ್ರಯ್ಯಾ ತೇಯಬೇಕು ಎಂದು ತರಗತಿ ತುಂಬ ತಮ್ಮ ಬಾಯ ಪವಿತ್ರ ಪರಿಮಳ ಮಿಶ್ರಿತ ಲಾಲಾರಸ ಸಿಂಪಡಿಸುತ್ತ ಹೊಸ ಚೈತನ್ಯ ತುಂಬುತ್ತಿದ್ದರು. ಅವರ ವಾಗ್ ವೈಖರಿ ಅದೆಷ್ಟು ಪರಿಣಾಮಕಾರಿಯಾಗಿತ್ತೆಂದರೆ ನಮ್ಮ ಕನಸುಗಳಲ್ಲಿ ನಾವು ಗುಟ್ಟಾಗಿ ಪ್ರೀತಿಸುತ್ತಿದ್ದ ಲಲನಾಮಣಿಗಳು ಬರುವ ಬದಲಿಗೆ ಕ್ವಿಂಟಲ್ ವಜನದ ಡಾ. ರೇವಣಸಿದ್ದಪ್ಪ ಕಾಣಿಸಿಕೊಂಡುಬಿಡುತ್ತಿದ್ದರು.

ಹಿಟ್ಲರ್ ಮತ್ತು ಗಂಧೀಜಿಯರ ವಿಚಿತ್ರ ಕಾಂಬಿನೇಷನ್ನಿಂದ ಮಾಡಲ್ಪಟ್ಟಂತಿದ್ದ ಅಪ್ಪನ ಭಯದಿಂದ ಹೇಗೋ ಬಾಲ್ಯ ಕಳೆದು ಯೌವನಾವಸ್ಥಗೆ ಕಾಲಿರಿಸಿದ್ದ ನನ್ನೊಳಗೆ ಪ್ರಿನ್ಸಿಪಾಲರು ಡಾ. ರೇವಣಸಿದ್ದಪ್ಪನವರ ಅಗಾಧ ವ್ಯಕ್ತಿತ್ವ ತುಂಬಿ ನಮ್ಮ ನಡಿಗೆಗೆ ವಿಶಿಷ್ಟವಾದ ಶೈಲಿ ತಂದಿದ್ದರು. ನಾನು ಒಂದು ಕಡೆ ನಡೆಯುತ್ತಿದ್ದರೆ ನನ್ನ ದೇಹವೆಂಬುದು ಮತ್ತಾವ ಕಡೆಗೋ, ಹಾಗಾಗಿ ತಲುಪಬೇಕಾದ ಗುರಿ ತಲುಪಲಾಗುತ್ತಿರಲಿಲ್ಲ ನನಗೆ. ಕುಂತರೂ ನಿಂತರೂ ನನ್ನನ್ನು ಕಾಡತೊಡಗಿದ್ದು ಅದೇ ಗಾತ್ರದ ವ್ಯಕ್ತಿತ್ವ.

ಕಾಂಡಕ್ಟ್ ಸರ್ಟಿಫಿಕೇಟಿಗೆ ಸಹಿ ಪಡೆಯಲು ಆತನ ಬಳಿಗೆ ಹೋಗದಿದ್ದಲ್ಲಿ ಆತನ ವ್ಯಕ್ತಿತ್ವದಿಂದ ನಾನು ಬಚಾವಾಗಬಹುದಿತ್ತು. ಹಾಲಿ ಸಬ್ ಇನ್ಸ್‌ಪೆಕ್ಟರ್ ಕೂಡ ನೌಕರಿಗೆ ಸೇರುವ ಮೊದಲು ಡಾಕ್ಟರಿಂದ ತನ್ನ ಕಾಂಡಕ್ಟ್ ಸರ್ಟಿಫಿಕೇಟ್‌ಗೆ ಸಹಿ ಮಾಡಿಸಿಕೊಂಡಿದ್ದರಂತೆ. ಸಜ್ಜನಿಕೆ ಸೌಜನ್ಯಗಳಿಂದಲೇ ಮಾಡಲ್ಪಟ್ಟಂತಿರುವ ಡಾಕ್ಟರ್ ಮುಂದೊಂದು ದಿನ ಸದರೀ ಪುರಸಭೆಯ ಅಧ್ಯಕ್ಷರಾಗಲೂ ಬಹುದೆಂದು ಹಾಲಿ ಅಧ್ಯಕ್ಷರೇ ಸ್ವಾತಂತ್ರೋತ್ಸವದ ದಿನದಂದು ನಮಗೆಲ್ಲ ಭಾಷಣ ಮಾಡಿದ್ದರು. ಎಮ್ಮೆಲ್ಲೆ; ಎಂಪಿ; ಅಷ್ಟೇ ಏಕೆ ಸಚಿವರಾಗಲೂಬಹುದೆಂದು ಪ್ರಿನ್ಸಿಪಾಲರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಅಭಿಮಾನದಿಂದ ಹೇಳಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾಕ್ಟರ್‌ರವರು ಗದ್ಗದಿತರಾದರು. ನಡುಗುವ ದನಿಯಲ್ಲಿ ನಾನೇನು ದೊಡ್ಡ ಮನುಷ್ಯನಲ್ಲ. ಮಾಮೂಲಿ ಆರೆಂಪಿ ಡಾಕ್ಟರ್; ವಾರಕ್ಕೇಳು ಮನೆಗಳಲ್ಲಿ ಊಟ ಮಾಡಿ ಮೆಟ್ರಿಕ್ ಪಾಸು ಮಾಡಿದ್ದೇ ಹೆಚ್ಚು. ದೇವರು ಕೊಟ್ಟಿದ್ದಾನೆ. ಅದನ್ನು ಬಡಬಗ್ಗರಿಗೆ ಕೈಲಾದಷ್ಟು ಸಹಾಯ ಮಾಡ್ತೀನಿ. ಈ ಮಾನವ ಜನ್ಮ ಯಾವತ್ತು ಹೋಗ್ತದೋ ಏನೋ…..! ಯಾರು ಬಲ್ಲರು! ಎಲ್ಲ ಸಿವನಾಟ. ನಾವು ಸತ್ತಮೇಲೆ ನಮ್ಮ ಹಿಂದೆ ಬರೋದು ಒಳ್ಳೇದು ಕೆಟ್ಟದ್ದು ತಾನೆ….! ಒಳ್ಳೆಯವನು ಅಂತ ಅನ್ನಿಸ್ಕೊಂಡು ಸಾಯಬೇಕೆನ್ನುವುದೇ ನನ್ನ ಆಸೆ. ನಾಳಿನ ಭವ್ಯ ಭಾರತದ ನಿರ್ಮಾಪಕರಾದ ನಿಮಗೆಲ್ಲ ಒಳ್ಳೇದಾಗಲೆಂದು ಈ ಸಾರಿ ಲಡ್ಡು ಮಾಡಿಸಿದ್ದೀನಿ. ಮುಂದಿನ ಸ್ವಾತಂತ್ರ್ಯ ದಿನೋತ್ಸವದವರೆಗೆ ಬದುಕಿದ್ರೆ ನಿಮ್ಗೆಲ್ಲ ಸೋನ್‌ಪಾಪಡಿ ಮಾಡಿಸ್ತೀನಿ…. ಇದು ಖಂಡಿತ…. ಎಂದಾಗ ನಮ್ಮ ಕಣ್ಣಲ್ಲಿ ನೀರಾಡಿತ್ತು. “ಬೋಲೋ ಭಾರತ್ ಮಾತಾಕೀ ಜೈ” ಅಂತ ಮೂರು ಸಾರಿ ಹೇಳಿಸಿ ನಮ್ಮ ಕೈಗೆ ತೆಂಗಿನಕಾಯಿ ಗಾತ್ರದ ಲಾಡು ಹಂಚಿದ್ದರು
uಟಿಜeಜಿiಟಿeಜ”ಆ ಡಾಕ್ಟರ್ ನೋಡೋಕೆ ಹಂಗಿದಾರೆ. ಅಡುಪುಕ್ಕಲು, ಇಲಿ ಕಂಡ್ರೆ ಹುಲಿ ಕಂಡವರಂತೆ ಹೆದರ್‍ತಾರೆ”. ಲಡ್ಡು ತಿನ್ನುತ್ತ ಶಂಭು ನನ್ನ ಕಿವಿಯಲ್ಲಿ “ಅವರು ಈಗ್ಲೂ ಹಾಸ್ಗೇಲಿ ಉಚ್ಚೆ ಹೊಯ್ಕೆಳ್ತಾರಂತೆ” ಎಂದು ಉಸುರಿದ.

ಅಷ್ಟು ದೊಡ್ಡ ಮನುಷ್ಯರಾಗಿ ಹಾಸಿಗೇಲಿ ಉಚ್ಚೆ ಹೊಯ್ಯುತ್ತಾರೆನ್ನುವುದು ನನಗೆ ಮುಖ್ಯ ವಿಷಯವೆನಿಸಿತು. ಅದರಿಂದ ಅವರ ಬಗ್ಗೆ ಗೌರವ ದುಪ್ಪಟ್ಟಾಯಿತು. ಮುಂದೊಂದು ದಿನ ಕತೆಗಾರನಾದಾಗ ಯಾವುದಾದರೊಂದು ಕತೆಯಲ್ಲಿ ಈ ಸಂಗತಿಯನ್ನು ಪ್ರಸ್ತಾಪಿಸಬೇಕೆಂದುಕೊಂಡೆ.

ಅಂಜುತ್ತ ಅಳುಕುತ್ತ ಅವರ ಮನೆ ಬಳಿಗೆ ಹೋಗಿದ್ದು ನೆನಪು. ಅಷ್ಟೇನೂ ದೊಡ್ಡದಲ್ಲದ ಮನೆ ಅಂಗಳದಲ್ಲಿ ದೊಡ್ಡ ರಂಗೋಲಿ, ಅಲ್ಲಿ ಬೆಕ್ಕು ಇರದಿದ್ದುದರಿಂದ ಹತ್ತಾರು ಪಾರಿವಾಳಗಳು ಅಂಗಳದಲ್ಲಿ ಚೆಲ್ಲಿದ ಕಾಳು ಮೇಯುತ್ತಿದ್ದವು. ತಲಬಾಗಿಲ ಮೇಲೆ ದೇವಾನುದೇವತೆಗಳ ಫೋಟೋಗಳು ರಾರಾಜಿಸುತ್ತಿದ್ದವು. ತಲೆತುಂಬ ಸೆರಗು ಹೊದ್ದಿದ್ದ ಹೆಂಗಸು! ಆಕೆ ಅವರ ಪತ್ನಿ ಇದ್ದಿರಬಹುದು. ಹಾಲಿನಿಂದ ಮಾಡಲ್ಪಟ್ಟಂತೆ ಆಕರ್ಷಕವಾಗಿದ್ದಳು. ಹಣೆಮೇಲೆ ಎಂಟಾಣೆ ಅಗಲದ ಕುಂಕುಮ, ಗಂಟೆ ಸದ್ದು; ಊದುಬತ್ತಿಯ ಪರಿಮಳ, ಒಳಗಡೆ ಡಾಕ್ಟರರು ಶಿವಪೂಜೆಗೆ ತೊಡಗಿರಬಹುದು….! ಸಾವಿರದೆಂಟು ಪಂಚಾಕ್ಷರಿ ಮಂತ್ರ ಪಠಿಸದೆ ಮೇಲೇಳುವುದಿಲ್ಲವಂತೆ…. ಪೂಜೆಗೆ ಸುರುವಾಗಿ ಎರಡು ತಾಸು ಮೇಲಾಗಿದೆಯಂತೆ. ರೋಗಿಗಳ ಸಾಲಿನಲ್ಲಿ ಒಂದುಕಡೆ ನಿಂತೆ. ತುಸುಹೊತ್ತಿಗೆ ಡಾಕ್ಟರರು ಬಂದರು. ಮೈತುಂಬ ವಿಭೂತಿ, ಮುಖದ ತುಂಬ ಸಾತ್ವಿಕ ಕಳೆ ತುಳುಕಾಡುತ್ತಿತ್ತು.

ನನ್ನನ್ನು ಪ್ರೀತಿಯಿಂದ ಮಾತಾಡಿಸಿದರು. ಮೈದಡವಿದರು. ಇತಿಗತಿ ವಿಚಾರಿಸಿದರು. ವಿದ್ಯಾವಂತನಾಗಿ ಈ ದೇಶಕ್ಕೆ ಕೀರ್ತಿ ತರಬೇಕೆಂದರು. ಅವರ ಪ್ರತಿಯೊಂದು ಮಾತು ಹಿತವಾಗಿತ್ತು. ಕಾಂಡಕ್ಟ್ ಸರ್ಟಿಫಿಕೇಟಿಗೆ ಅವರು ಸಹಿ ಹಾಕುತ್ತಿದ್ದಾಗ ನನ್ನ ಕಣ್ಣುಗಳು ಅವರ ಭಯದಿಂದ ವಿಸರ್ಜಿಸಿಬಹುದಾದ ಹಾಸಿಗೆ ಎಲ್ಲಿರಬಹುದೆಂದು ಹುಡುಕುತ್ತಿದ್ದವು. ಬಲವಂತ ಮಾಡಿದರು ಊಟ ಮಾಡೆಂದು, ಆಗಲೆ ಅವರ ಸಜ್ಜನಿಕೆಗೆ ಮಾರುಹೋಗಿದ್ದ ನಾನು ಉಂಡೇನೆಯೇ!

ಆ ಕ್ಷಣದಿಂದ ಅವರಿಗೆ ಮತ್ತಷ್ಟು ಗೌರವ ಕೊಡತೊಡಗಿದೆ. ಅವರಿಗೆ ಎದುರು ಹಾಯುವುದೇ ಮುಜುಗರವಾಗಿ ಸೈಡುಬೀಳುತ್ತಿದ್ದೆ. ‘ತೀರಾ ಎದುರಾದಾಗ ನಮಸ್ಕಾರ ಸಾರ್ ಎನ್ನುತ್ತಿದ್ದೆ. ಎಲ್ಲರಿಗಿಂತ ಅವರು ನನ್ನ ಕಣ್ಣಿಗೆ ಹೆಚ್ಚು ಬೀಳುತ್ತಿದ್ದ ಕಾರಣವೆಂದರೆ ಅವರು ದಿನಂಪ್ರತಿ ದರುಶನ ಪಡೆಯುತ್ತಿದ್ದ ಐದು ದೇವರ ಗುಡಿಗಳು ನಮ್ಮ ಓಣಿಯಲ್ಲಿದ್ದವು. ಪುಣ್ಯಾತ್ಮ ಭಕ್ತಿಯೇ ಮೈವೆತ್ತಂತೆ ಬರುತ್ತಿದ್ದುದೋ….! ಮಂಗಳಾರತಿ ತಟ್ಟೆಗೆ ಐದು ರೂಪಾಯಿ ದಕ್ಷಿಣೆ ಹಾಕುತ್ತಿದ್ದುದೋ….! ಪೂಜಾರಿಗಳು ದಕ್ಷಿಣೆ ಆಸೆಗೆ ದೇವರುಗಳನ್ನು ಕಿತ್ತುಕೊಂಡು ಅವರ ಬಳಿಗೆ ಓಡಿಬರುತ್ತಿದ್ದುದೋ….! ಅವರು ಅಷ್ಟಾಂಗ ಪ್ರಣಾಮ ಸಲ್ಲಿಸುತ್ತಿದ್ದುದೋ….!

ಅವರ ಪುಟ್ಟ ಭಾವಚಿತ್ರವನ್ನು ಹೇಗೋ ಸಂಪಾದಿಸಿ ನೋಟುಪುಸ್ತಕದಲ್ಲಿಟ್ಟು ಪುಣ್ಯಾತ್ಮ ನಿನ್ನಂತೆ ನಾನು ಎಂದಾಗುವೆನೋ….! ಒಂದೊಂದು ದೇವರು ಮಂಗಳಾರತಿ ತಟ್ಟೆಗೆ ಐದು ರೂಪಾಯಿ ದಕ್ಷಿಣೆ ಹಾಕುವಷ್ಟು ಶ್ರೀಮಂತನೆಂದಾಗುವೆನೋ! ಎಂದು ಕನವರಿಸುತ್ತ; ಕನವರಿಕೆಯನ್ನೇ ಆತ್ಮವಿಶ್ವಾಸವನ್ನಾಗಿ ಮಾಡಿಕೊಂಡು ಕಾಲೇಜಿನಲ್ಲಿ ಡುಮುಕಿ ಹೊಡೆದೆ.

‘ಮಗನೇ ನಿನ್ಗೆ ಕಾಲೇಜು ಸಹವಾಸ ಸಾಕು. ಕುಂಬಾರರಿಗೆ ವಿದ್ಯೆ ಹತ್ತುವುದುಂಟೆ!…” ಹಡದಪ್ಪ ಕೆಂಪು ನಿಶಾನೆ ತೋರಿಸಿದ, ಹಾಗೂ ಹೀಗೂ ಶಿಕ್ಷಕ ತರಬೇತಿ ಮುಗಿಸಿದೆ. ಡಾಕ್ಟರು ರೇವಣಸಿದ್ದಪ್ಪನವರ ನೆನಪು ಅಳಿಸಿದ್ದರಿಂದಲೋ ಏನೋ! ಮಠದ ಜೀವಿತಾವಧಿಯಲ್ಲಿ ಪುಟ್ಟ ಕವಿಯಾಗಿ ರೂಪಗೊಂಡಿದ್ದೆ. ಕವಿತೆಯ ಮಾಧ್ಯಮದಿಂದ ಸಮಾಜ ಬದಲಾಯಿಸಬೇಕೆಂಬ ಹಠವನ್ನು ಹೆಜ್ಜೆ ಹೆಜ್ಜೆಗೆ ಪ್ರಕಟಿಸುತ್ತಿದ್ದೆ. ಅದಕ್ಕೆ ಸಹಾಯಕವಾಗಿ ಮಿತ್ರ ‘ಬಹಿರಂಗ’ ಎಂಬ ವಾರಪತ್ರಿಕೆ ಶುರುಮಾಡಿದ್ದ. ತುರ್ತು ಪರಿಸ್ಥಿತಿ ಅದೇ ಆಗ ಜಾರಿಗೊಂಡಿತ್ತು. ಜನಕ್ಕೆ ಕುಂತರೂ ಭಯ ನಿಂತರೂ ಭಯ ಕಾಡುತ್ತಿತ್ತು. ಅವರ ಭಯವನ್ನೇ ಬಂಡವಾಳ ಮಾಡಿಕೊಂಡು ಪತ್ರಿಕೆ ಬದುಕಬೇಕಾಗಿತ್ತು. ಅದರ ಮೂಲಕ ನನ್ನ ಕವನಗಳು ಬದುಕಬೇಕಾಗಿತ್ತು. ಆಗ ತುರ್ತು ಪರಿಸ್ಥಿತಿ ವಿರೋಧಿ ಕವಿ ಸಮ್ಮೇಳನ ನಡೆಸುವುದೆಂದು ತೀರ್ಮಾನಿಸಿದೆವು. ಅದಕ್ಕೆ ಒಬ್ಬ ಅಧ್ಯಕ್ಷರು ಬೇಕಲ್ಲ!… ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತೆ. “ಏನಯ್ಯ ಚೆನ್ನಾಗಿದ್ದೀಯಾ” ಎಂದು ಡಾಕ್ಟರ್ ರೇವಣಸಿದ್ದಪ್ಪ ಎದುರಾದರು. ನಾನು ಕವಿಯಾಗಿರುವುದನ್ನು ಹೇಳಿಕೊಂಡೆ. ಭೇಷ್ ಎಂದರು. ಕವಿ ಸಮ್ಮೇಳನ ಮಾಡ್ತಿದೀವಿ ಎಂದೆ. ‘ಭೇಷ್’ ಎಂದರು. ಕವಿಸಮ್ಮೇಳನದ ಅಧ್ಯಕ್ಷತೆ ವಹಿಸಬೇಕೆಂದೆ, ಆಗಲಿ ಎಂದು ಒಪ್ಪಿಕೊಂಡರು. ಪ್ರತಿ ಕವಿತೆಗೂ ಭಲಾ ಎಂದು ಉದ್ಗರಿಸಿದರು. ಸಮ್ಮೇಳನದ ಖರ್ಚು ನೋಡಿಕೊಂಡಿದ್ದ ಅವರು ಅಧ್ಯಕ್ಷ ಭಾಷಣ ಮಾಡಿದರು. ನಂತರ ಕವಿಗಳಿಗೆಲ್ಲ ದೋಸೆ ತಿನ್ನಿಸಿ ಕಾಫಿ ಕುಡಿಸಿದರು.

ನಂತರ ನನ್ನ ಕವಿತೆ ಪ್ರಕಟವಾಗಿದ್ದ ಪತ್ರಿಕೆ- ಸಂಚಿಕೆ ತೋರಿಸಿದೆ. ‘ಭೇಷ್’ ಎಂದರು. ಸಾರ್ ಚಂದಾದಾರರಾಗಿ, ಅಂದೆ. ಆಗ್ಲಿ ಅಂದರು. ನೂರು ರೂಪಾಯಿ ನೋಟು ಕೊಟ್ಟರು. ಹತ್ತು ವರ್ಷದ ಚಂದಾ ಬರಕೋ ಅಂದರು. ನನ್ನ ಮೈಜುಂ ಅಂತು. ಅವರು ಕಲಿಯುಗದ ಕರ್ಣ ಅನ್ನಿಸ್ತು. ಪ್ರತಿಯಾಗಿ ಒಂದು ದೀರ್ಘ ನಮಸ್ಕಾರ ಸಲ್ಲಿಸಿ ವಾಪಸಾದೆ.
ಮೊದಲಿಗಿಂತ ಅವರ ವರ್ಚಸ್ಸು ಊರಲ್ಲಿ ದ್ವಿಗುಣಗೊಂಡಿತ್ತು. ದೇಹದ ಗಾತ್ರದಲ್ಲೂ ಸಹ! ಸಾಹಿತ್ಯದ ಬಗೆಗೂ ತಿಳಿದುಕೊಂಡಿದ್ದ ಆತನ ಮನೆಗೆ ದಿನಕ್ಕೊಮ್ಮೆಯಾದರೂ ಎಡತಾಕಿ ಸಾರ್ ಅದು ಬರೆದೆ ಸಾರ್ ಇದು ಬರೆದೆ ಎಂದು ತೋರಿಸುತ್ತಿದ್ದೆ. ಭೇಷ್ ಭೇಷ್ ಅನ್ತಿದ್ದರು. ಕಾವ್ಯ ಪ್ರೇಮಿಗೆ ಮುಜುರೆ ಸಲ್ಲಿಸಿ ವಾಪಸಾಗುತ್ತಿದ್ದೆ. ಆಗ್ಲೆ ರಿಟೈರಾಗಿದ್ದ ಪ್ರಿನ್ಸಿಪಾಲರು ಡಾಕ್ಟರ್ ಬಗ್ಗೆ ಒಂದು ಆರ್ಟಿಕಲ್ ಬರೆದು ಪ್ರಕಟಿಸೋ…. ಮುಂದಿನ ಛೇರ್ಮನ್ನು ಅವ್ರೇ ಅಂದರು. ಸರಿ ಅನ್ನಿಸಿತು. ನೂರು ರೂಪಾಯಿ ಚಂದಾ ಕೊಟ್ಟೋರು ಛೇರ್ಮನ್ನಾದರೆ ಪತ್ರಿಕೆ ಕೇಳೋದೇನಿದೆ? ಜೊತೆಗೆ ಹಾಸಿಗೇಲಿ ಮೂತ್ರ ವಿಸರ್ಜಿಸೋವಷ್ಟು ಸಜ್ಜನರಿಂದಲೇ ಈ ಸಮಾಜ ಬದಲಾಗಲು ಸಾಧ್ಯ ಎಂದು ಸಂಪಾದಕರೊಂದಿಗೆ ಮಾತಾಡಿದೆ. ಅವರ ಕಲ್ಯಾಣ ಗುಣಗಳೊಂದಿಗೆ ಅವರು ಹಾಸಿಗೇಲಿ ಮೂತ್ರ ವಿಸರ್ಜಿಸುವುದನ್ನು ಸೇರಿಸಿ ಬರೆದಾಗಲೇ ಲೇಖನ ಅರ್ಥಪೂರ್ಣವಾಗುತ್ತದೆ ಎಂದೂ, ಮೂತ್ರ ವಿಸರ್ಜಿಸುವುದನ್ನು ಖಚಿತಪಡಿಸಿಕೊಳ್ಳಬೇಕೆಂದೂ, ಸಂಪಾದಕ ಮಿತ್ರರು ಸಲಹೆ ನೀಡಿದರು.

ಸಾರ್ ನಿಮ್ಮ ಬಗ್ಗೆ ಒಂದು ಲೇಖನ ಬರೀಬೇಕೆಂದ್ಕೊಂಡಿದೀನಿ ಅಂದೆ ಒಮ್ಮೆ. ಡಾಕ್ಟರಿಗೆ ಅವರ ದೊಡ್ಡಗಾತ್ರದ ಮುಖ ಅರಳಿ ದೇಶಾವರಿ ನಗೆ ತುಳುಕಿತು. ಪ್ರತಿಸಾರಿ ಕಂಡಾಗಲೆಲ್ಲ ಹಾಗೆ ನಗುತ್ತಿದ್ದರು. ಸಾಂದರ್ಭಿಕವಾಗಿ ಅದು ಇದೂ ಹೇಳುತ್ತಿದ್ದರು. ತಾವು ಹಾಸೀಗೇಲಿ ಮೂತ್ರ ವಿಸರ್ಜಿಸುವುದನ್ನು ಅದ್ಹೇಗೆ ಹೇಳಿಯಾರು? ಆದರೂ ಅವರು ನಿಸ್ಸಂದೇಹವಾಗಿ ದೊಡ್ಡ ಮನುಷ್ಯರಾಗಿದ್ದರು.
uಟಿಜeಜಿiಟಿeಜಗಂಡನ ಮುಖವನ್ನು ಸರಿಯಾಗಿ ನೋಡಿರದವರಂತಿದ್ದ, ತಮ್ಮ ಕಾಲ ಹೆಬ್ಬೆರಳ ಉಗುರ ಪಾರದರ್ಶಕದಲ್ಲಿ ಗಂಡನ ಮುಖವನ್ನು ತಲಕೆಳಗಾಗಿ ನೋಡಿದವರಂತಿದ್ದ, ಮಾತಾಡಲು ಗೊತ್ತೇ ಇರದಂತಿದ್ದ ಅವರ ಧರ್ಮಪತ್ನಿಯವರನ್ನು ಮಾತಾಡಿಸಲು ಹಲವು ಸಾರಿ ಪ್ರಯತ್ನಿಸಿ ವಿಫಲನಾಗಿದ್ದೆ. ಆಕೆ ತಾನು ನಿಸ್ಸಂದೇಹವಾಗಿ ಅಪ್ಪಟ ಧರ್ಮಪತ್ನಿ ಎಂಬಂತೆ ವರ್ತಿಸುತ್ತಿದ್ದರು. ಅವರಿಗಿಂತ ಹತ್ತು ವರ್ಷ ಚಿಕ್ಕವನಿದ್ದ ನನ್ನ ಕಡೆ ಆಗೊಮ್ಮೆ ಈಗೊಮ್ಮೆ ತಮ್ಮ ಬೊಗಸೆ ಗಂಗಳಿಂದ ನೋಡುತ್ತಿದ್ದರು. ಗುಡುಗು ರಹಿತ ಕೋಲ್ಮಿಂಚು ನೋಡಿದ ಅನುಭವವಾಗಿತ್ತು ನನಗೆ. ಇಂಥ ಅಪೂರ್ವ ದಂಪತಿಗಳಿಗೆ ಒಂದೆರಡು ಮಕ್ಕಳಿದ್ದರೆ ಚೆನ್ನಾಗಿರ್‍ತಿತ್ತಲ್ಲಾ. ದೇವರು ಎಲ್ಲಾ ಕೊಟ್ಟಿದ್ದಾನೆ. ಸಂತಾನ ಮಾತ್ರ ಕೊಟ್ಟಿಲ್ವಲ್ಲಾ…. ಎಲ್ಲಿಯವರೆಗೆ ದೇಶದ ಮಕ್ಕಳೇ ತಮ್ಮ ಮಕ್ಕಳು ಎಂದು ಭಾವಿಸಿಕೊಂಡಿರಲು ಸಾಧ್ಯ!…. ಗ್ರಾಮದ ಹಲವರಂತೆ ನಾನೂ ಪೇಚಾಡಿಕೊಳ್ಳುತ್ತಿದ್ದೆ ಹಲವು ಬಾರಿ.

ಒಂದು ದಿನ ಸಂಪಾದಕರೊಂದಿಗೆ ಜಿಲ್ಲಾಸ್ಥಳಕ್ಕೆ ಹೋದೆ. ನಾವು ಹೋಗಿದ್ದು ವರಿಷ್ಠ ಪೋಲೀಸ್ ಅಧಿಕಾರಿ ಕಛೇರಿಗೆ. ದಕ್ಷ ಪೋಲೀಸ್ ಅಧಿಕಾರಿ ಎಂದು ಹೆಸರಾಗಿ ಅವರು ಮಕ್ಕಳ ಸಾಹಿತಿಗಳಾಗಿದ್ದರು. ಪುಟ್ಟಿ ಪುಟ್ಟಿ ಎಂಥ ಪುಟ್ಟಿ ಎಂಬ ಕವನವನ್ನು ಓದಿ ಹೇಗಿತ್ತು ಅಂದರು. ತುಂಬಾ ಚೆನ್ನಾಗಿದೆ ಸಾರ್ ಎಂದೆವು. ಕಾಫಿ ಕೊಡಿಸಿದರು.

ಸಂಪಾದಕರು ಅವರೊಂದಿಗೆ ಇಂಗ್ಲಿಷಿನಲ್ಲಿ ಠಸ್ಸಾ ಪುಸ್ಸಾ ಎಂದು ಗಹನ ವಿಷಯದ ಕುರಿತು ಚರ್ಚಿಸತೊಡಗಿದರು! ಆಗ ಪಾಮರನಾದ ನನಗೇನು ಕೆಲಸ! ಚಿಕ್ಕ ಪೋಲೀಸ್ ಠಾಣೆಯನ್ನು ಎಂದೂ ಪ್ರವೇಶಿಸಿರದಿದ್ದ ನಾನು ಸಹಜವಾಗಿ ರೋಮಾಂಚನಗೊಂಡಿದ್ದೆ. ಅದು ಇದು ನೋಡುತ್ತ ಗೋಡೆಗೆ ತೂಗಬಿಟ್ಟಿದ್ದ ಬಗೆಬಗೆಯ ಚಿತ್ರಪಟಗಳನ್ನು ನೋಡತೊಡಗಿದೆ. ಪುಟ್ಟಪುಟ್ಟ ಭಾವಚಿತ್ರಗಳಿಂದಲೇ ತುಂಬಿದ್ದ ದೊಡ್ಡದೊಂದು ಫಲಕ ನನ್ನ ಗಮನ ಸೆಳೆಯಿತು. ಅಲ್ಲಿದ್ದ ಪ್ರತಿಯೊಂದು ಮುಖವನ್ನು ಬಗ್ಗಿ ಬಗ್ಗಿ ನೋಡಲಾರಂಭಿಸಿದೆ. ದುಗುಡ ತುಂಬಿದ ವಿಷಣ್ಣ ಮುಖಗಳವು. ಅವುಗಳೆಲ್ಲಾ ತಲಾ ಒಂದೊಂದು ಸ್ಲೇಟ್ ಹಿಡಿದುಕೊಂಡಿದ್ದವು. ಸ್ಲೇಟಿನಲ್ಲಿ ಒಂದೊಂದು ನಂಬರ್ ಕೊಡಲಾಗಿತ್ತು. ಅವರು ದೇಶಭಕ್ತರೆಂದು ಊಹಿಸಲಾರದಷ್ಟು ಕೇಡಿ ಕಳ್ಳರವೆಂದು ಊಹಿಸಬಹುದಾದಷ್ಟು ಜಾಣನಿದ್ದೆ ನಾನು.

ಅವುಗಳ ಪೈಕಿ ಒಂದು ಮುಖ ಮಾತ್ರ ನನ್ನ ಚಿತ್ತವನ್ನು ಅಪಹರಿಸಿಬಿಟ್ಟಿತು. ನೋಡೇ ನೋಡಿದೆ. ಅದೇ ಮುಖ ಅದೇ ಮೂಗು; ಈ ಮುಖವನ್ನು ಎಲ್ಲೋ ನೋಡಿದಂತಿದೆಯಲ್ಲಾ! ಯಾರ ಮುಖವಾಗಿರಬಹುದು! ಎಷ್ಟೋ ಹೊತ್ತು ನೋಡಿದೆ. ಹೊಳೆಯಲಿಲ್ಲ. ಸಂಪಾದಕರೊಂದಿಗೆ ಬಸ್‌ಸ್ಟಾಂಡಿಗೆ ಬಂದೆ. ಆ ಮುಖ ನನ್ನನ್ನು ಬಸ್ಸು ಹತ್ತಲು ಬಿಡಲೇ ಇಲ್ಲ. ಇನ್ನೊಂದು ಬಸ್ಸಿಗೆ ಬರುವುದಾಗಿ ಹೇಳಿ ಸಂಪಾದಕರನ್ನು ಕಳಿಸಿದೆ. ನಾನು ಮತ್ತೆ ಪೋಲೀಸ್ ಕಛೇರಿಗೆ ಹೊರಟೆ, ಅಧಿಕಾರಿ ಪ್ರೀತಿಯಿಂದಲೇ ಬರಮಾಡಿಕೊಂಡು ‘ಗುಲಾಬಿ ಗುಲಾಬಿ ನೆಹರು ಗುಲಾಬಿ’ ಎಂಬ ಕವಿತೆ ಓದಿದವರಾದರು. ಕಾಫಿ ಕೊಡಿಸಲಿಲ್ಲ. ಅವರ ಪರವಾನಿಗೆ ಪಡೆದು ನನ್ನ ಚಿತ್ತ ಕದ್ದಿದ್ದ ಮುಖದಲ್ಲಿ ದೃಷ್ಟಿ ನೆಟ್ಟೆ. ಸುಮಾರು ಹೊತ್ತು ನೋಡಿದ ಮೇಲೆ ಅಯ್ಯೋ ಈ ಮುಖ ಡಾ. ರೇವಣಸಿದ್ದಪ್ಪನವರನ್ನು ಹೋಲುತ್ತಿರುವುದೆನ್ನಿಸಿತು. ಹೌದು ಇದು ನಿಸ್ಸಂದೇಹವಾಗಿ ಡಾಕ್ಟರ್ ಮುಖವೇ ಎಂದು ನಿರ್ಧರಿಸಿದೆ.

“ಅದೇನು ಅಷ್ಟು ಹೊತ್ತಿಂದ ನೋಡ್ತಿದೀರಿ?” ಅಂದರು ಅಧಿಕಾರಿ.

“ಸಾರ್ ಈ ಫೋಟೋದಲ್ಲಿರೋರು ಯಾರು?” ಅಂದೆ.

“ಅವನೊಬ್ಬ ದೊಡ್ಡ ಕೇಡಿ. ಸೆಂಟ್ರಲ್ ಜೈಲಿನಿಂದ ತಪ್ಪಿಸಿಕೊಂಡು ತುಂಬಾ ವರ್ಷಗಳಾದ್ವು….” ಎಂದರು.

“ಸಾರ್ ಮತ್ತೆ ನೀವು ಹುಡುಕಲಿಲ್ವೇ?” ಅಂದೆ.

“ರೈಲಿಗೆ ಬಿದ್ದು ಸೂಸೆಡ್ ಮಾಡಿಕೊಂಡ. ಬಾಡಿ ಜಜ್ಜಿಹೋಗಿತ್ತು” ಅಂದರು.

“ಸರ್” ಏನೋ ಹೇಳಲು ಪ್ರಯತ್ನಿಸಿದೆ, ಹೇಳಲಿಲ್ಲ.

ವಾಪಸ್ಸು ಬಂದೆ.

ಒಂದೆರಡು ದಿನ ಮನೆ ಬಿಟ್ಟು ಹೊರಗೆ ಹೋಗಲೇ ಇಲ್ಲ. ಪತ್ರಿಕೆ ಕೆಲಸಗಳಿಗಾಗಿ ಹೊರಗೆ ಹೋಗಬೇಕಾಗಿ ಬಂತು, ಪತ್ರಿಕೆಯ ಕೆಲಸ ಕಾರ್ಯಗಳಲ್ಲಿ ತೊಡಗಿದ ಮೇಲೆ ಮನಸ್ಸು ನಿರುಮ್ಮಳವಾಯಿತು. ಕೇಡಿ ಲಿಸ್ಟ್ನಲ್ಲಿರುವ ಮುಖ ಕುರಿತ ಯಾರಿಗೂ ಹೇಳಲಿಲ್ಲ. ಯಾರಿಗೆ ಯಾಕೆ ಹೇಳಬೇಕು? ಈ ಭೂಮಿಯ ಮೇಲೆ ಯಾರು ತಾನೆ ಸಾಚಾ!
ಪುರಸಭಾ ಚುನಾವಣೆ ಬಿಸಿ ಅದೇ ಆಗ ಏರಿತ್ತು. ಆಡಳಿತ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಡಾ. ರೇವಣಸಿದ್ದಪ್ಪ ಸ್ಪರ್ಧಿಸಿದ್ದರು. ಉದ್ದೇಶಪೂರ್ವಕವಾಗಿ ಅವರನ್ನು ಕಂಡಿರಲಿಲ್ಲ. ತಪ್ಪಿಸಿಕೊಂಡು ಅಡ್ಡಾಡುತ್ತಿದ್ದೆ. ಒಮ್ಮೆ ಭರ್ ಅಂತ ಮೋಟಾರು ಬೈಕ್ ಹಾಕಿಕೊಂಡು ಎದುರಿಗೆ ಬಂದು ಬಿಡಬೇಕೆ? ನಮಸ್ಕಾರ ಸಾರ್ ಅಂದೆ. ಇತ್ತೀಚಿಗೆ ಕಾಣಿಸ್ಲಿಲ್ವಲ್ಲಯ್ಯಾ ಅಂದರು. ದೇವರ ದಯೆಯಿಂದ ತಾವು ಚುನಾಯಿತರಾಗುವುದರಿಂದ ಹಿಡಿದು ಪುರಸಭಾ ಅಧ್ಯಕ್ಷರಾಗಿ ಆಯ್ಕೆಯಾಗುವವರೆಗೆ ಹೇಳಿದರು. ಈ ಸಂದರ್ಭದಲ್ಲಿ ಲೇಖನ ಬರೆಯಲಿ ಅಂತ.

ಜೀವ ತಡೆಯಲಾಗಲಿಲ್ಲ. ಸಾರ್ ಒಂದುಕಡೆ ನಿಮ್ಮ ಫೋಟೋ ನೋಡಿದೆ ಅಂದೆ. ಅವರಿಗೆ ಅಷ್ಟು ಆಶ್ಚರ್ಯವಾಗಲಿಲ್ಲ. ಯಾವುದಾದ್ರು ಸಮಾರಂಭದಲ್ಲಿ ಭಾಗವಹಿಸಿದ್ದ ಫೋಟೋ ಇರಬೇಕೆಂದರು. ಅಲ್ಲ ಅಂದೆ. ಮತ್ತೆಲ್ಲಿಯದು ಅಂತ ಕೇಳಿದರು. ಹೋಗ್ಲಿ ಬಿಡ್ರಿ ಸಾರ್ ಈ ಒಳ್ಳೆ ಟೈಮ್ನಲ್ಲಿ ಆ ವಿಷ್ಯ ಯಾಕೆ! ಅಂದುಬಿಟ್ಟೆ.

ಮುಂದೆ ಮೂರ್‍ನಾಲ್ಕು ಸಾರಿ ಕಂಡಾಗ ಎಲ್ಲಿ ನೋಡಿದಿಯಪ್ಪಾ ಅಂದರು. ಹೋಗ್ಲಿ ಬಿಡ್ರಿ ಸಾರ್ ಆ ವಿಷ್ಯ ಯಾಕೆ ಅಂದೆ. ನಂತರ ಅವರು ಚುನಾವಣೀಲಿ ಗೆದ್ದು ಪುರಸಭಾ ಅಧ್ಯಕ್ಷರಾಗಿಬಿಟ್ಟರು. ಪೌರಸನ್ಮಾನ ಸಮಾರಂಭದಲ್ಲಿ ವೇದಿಕೆ ಮೇಲೆ ಸುಖಾಸೀನರಾಗಿದ್ದ ಅವರ ಕಣ್ಣಿಗೆ ದೂರದಲ್ಲಿ ನಿಂತಿದ್ದ ನಾನು ಬಿದ್ದೆ. ಎರಡು ಮೂರು ಸಾರಿ ಸಂಜ್ಞೆ ಮಾಡಿ ಕರೆದರು, ಹೋದೆ. ಕಿವಿಯಲ್ಲಿ ಬಾಯಿ ಇಟ್ಟು ಎಲ್ಲಿ ನೋಡ್ದಿ ಹೇಳಬಾರ್‍ದೆ ಅಂತ ಪಿಸುಗುಟ್ಟಿದರು. ಹೋಗ್ಲಿ ಬಿಡ್ರಿ ಸಾರ್ ಈ ಸಮಯದಲ್ಲಿ ಆ ವಿಷ್ಯ ಯಾಕೆ ಅಂದೆ. ಸನ್ಮಾನಕ್ಕೆ ಉತ್ತರವಾಗಿ ಭಾಷಣದಲ್ಲಿ ಉತ್ಸಾಹವಿರಲಿಲ್ಲ. ರೋಗಿಯಂತೆ ಮಾತಾಡಿದರು!

ಮಾಗಿಯ ಕಾಲದ ಸುಖದ ನಿದ್ದೆಯಲ್ಲಿ ಮಲಗಿದ್ದ ನನಗೆ ಚುಮುಚುಮು ಬೆಳಗಾಗಿರುವುದು ಗೊತ್ತಾಗಲಿಲ್ಲ. ಮಲಗೇ ಇದ್ದೆ. ಡಾಕ್ಟರ್ ಬಂದಂತೆ; ಅದನೇನಜ್ಜೀ ನಿನ್ ಮೊಮ್ಮಗ ವೀರಭದ್ರ ಎಂದು ಕೇಳಿದಂತೆ; ಮಕ್ಕಂಡಾನೆ ಎಬಿಸ್ತೀನಿ ಬರ್ರೀ ಸಾರೂ ಎಂದು ಅಜ್ಜಿ ಕರಿಯ ಕಂಬಳಿ ಗದ್ದುಗೆ ಹಾಕಿದಂತೆ; ಅದರ ಮೇಲೆ ಡಾಕ್ಟರ್ ಶಿವಶಿವಾ ಎಂದು ಕೂತಂತೆ. ಓಣಿ ಜನ ಓ ಛೇರ್ಮಾನ್ರು ಬಂದಾರೆ ಎಂದು ಮುಕ್ಕರಿದಂತೆ ಕನಸು ಕಂಡೆ. ಅಜ್ಜಿ ಎಬ್ಬಿಸಿದ ಮೇಲೆ ಅದು ಕನಸಲ್ಲ ನನಸು ಎಂದು ತಿಳಿಯಿತು. ಜಿಬರೆಗಣ್ಣುಜ್ಜುತ್ತ ನಮಸ್ಕಾರ ಸಾರ್ ಅಂದೆ. ಏನಯ್ಯಾ ಈ ವಯಸ್ನಲ್ಲಿ ಇಷ್ಟೊತ್ತು ಮಲಗಿದರೆಂಗೆ, ದೇವಸ್ಥಾನಕ್ಕೆ ಬಂದಿದ್ದೆ. ನಿನ್ ನೆನಪಾಯಿತು. ನೋಡೋಣಾಂತ ಬಂದೆ. ಬಾ…. ಬಾ…. ಅಂಗಿ ಹಾಕ್ಕೊ ಒಂದು ರೌಂಡ್ ಹಂಗೆ ಅಡ್ಡಾಡಿಕೊಂಡ್ ಬರೋಣ ಅಂದರು. ಅಂಗಿ ತೊಟ್ಟು ಹೊರಟೆ.

ದಾರಿಯುದ್ದಕ್ಕೂ ಮುನ್ಸಿಪಾಲಿಟಿ ತಾಪತ್ರಯದ ಬಗ್ಗೆ ಮಾತಾಡುತ್ತ ಹೊರಟರು. ಕಾಫಿ ಕುಡಿಸಿದರು. ಸುತ್ತಮುತ್ತ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಎಲ್ಲಿ ನೋಡಿದೆಯ್ಯಾ ಹೇಳಬಾರದೆ ಅಂದರು. ಹೇಗೆ ಹೇಳುವುದು ನಾನು! ಬಿಸಿ ತುಪ್ಪವನ್ನು ಗಂಟಲ್ಲಿಟ್ಟುಕೊಂಡ ಅನುಭವ. ಏನು ಮಾಡುವುದು! ಕೊನೆಗೆ ಹೇಳೇಬಿಟ್ಟೆ. ಎಸ್ಪಿ ಆಫೀಸ್ನಲ್ಲಿ ಅಂತ. ಅದನ್ನು ಕೇಳಿ ಪಾತಾಳಕ್ಕಿಳಿದುಬಿಟ್ಟರು. ನನ್ನೆರಡು ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಇವು ಕೈಯಲ್ಲ ಕಾಲು ಅಂದರು. ಇನ್ನು ಮುಂದೆ ನನ್ನ ಒಡಹುಟ್ಟಿದ ಅಣ್ಣನಿಗಿಂತ ಹೆಚ್ಚಂತ ತಿಳ್ಕೊಳ್ರಿ ಅಂದರು.

ಆ ದಿನದಿಂದ ಅವರು ನನ್ನನ್ನು ಪರಾಂಬರಿಸುವುದು ಹೆಚ್ಚಯಿತು. ತಮ್ಮಿಂದ ನಿರುದ್ಯೋಗಿಯಾಗಿದ್ದ ನಾನು ಏನಾದರೂ ಸಹಾಯ ಪಡೆಯಬಹುದೆಂದು ಊಹಿಸಿದ್ದರು. ಆ ಪೈಕಿ ನಾನಾಗಿರಲಿಲ್ಲ.

ಒಂದು ದಿನ ಮನೆಗೆ ಬಂದಕೂಡಲೆ ಅಜ್ಜಿ ಒಂದು ಕವರು ಕೊಟ್ಟಿತು. ಛೇರ್ಮಾನ್ರು ಕೊಟ್‌ಕಳಿಸಿದ್ರಪ್ಪ ಅಂತ. ತೆಗೆದು ನೋಡಿದೆ. ಎರಡು ಸಾವಿರದಷ್ಟು ಹಣ ಇತ್ತು. ನನಗೆ ಏನೂ ಅನ್ನಿಸಲಿಲ್ಲ. ಆ ಹಣದೊಂದಿಗೆ ಸೀದಾ ಅವರ ಮನೆ ಹತ್ತಿರ ಹೋದೆ. ನನ್ನ ಪುಣ್ಯಕ್ಕೆ ಅವರು ಒಬ್ರೆ ಇದ್ದರು. ನಮಸ್ಕಾರ ಸಾರ್ ಅಂದೆ…. ಕೂತಲ್ಲಿಂದ ಓಡಿ ಬಂದು ನನ್ನನ್ನು ಕೋಣೆಯೊಳಗೆ ಕರೆದೊಯ್ದರು. ಹಣ ಮರಳಿಸುತ್ತ ‘ಸಾರ್ ಇನ್ನೊಮ್ಮೆ ಈ ರೀತಿ ಹಣ ಕಳಿಸಬೇಡಿ’ ಅಂದೆ. ಅವರು ಕಣ್ಣು ಒದ್ದೆಮಾಡಿಕೊಂಡರು. ಏನು ಕೇಳಿದ್ರೂ ಕೊಡ್ತೀನಿ ಅಂದರು. ನೌಕರಿ ಕೊಡಿಸ್ತೀನಿ ಅಂದರು. ನಾನು ಯಾವುದೂ ಬೇಡಿ ಸಾರ್ ಅಂದೆ. ಎಲ್ಲ ವಿಧಿ ಆಟ…. ನಾನು ಅಂತೋನಲ್ಲ ಅಂದರು. ನಾನು ‘ಯಾರ್‍ಗೂ ಹೇಳೊಲ್ಲ…. ಹೆದರಬೇಡಿ ಸಾರ್’ ಅಂದು ವಾಪಸು ಬಂದೆ.

ನಾನು ಅವರನ್ನು ಎಂದೂ ಕಾಣಲು ಹೋಗದಿದ್ದರೂ ಅವರೇ ಹುಡುಕಿಕೊಂಡು ನನ್ನ ಬಳಿ ಬರುತ್ತಿದ್ದರು. ‘ಹಾಗೆ ಸಾರ್ ಹೀಗೆ ಸಾರ್’ ಅಂತ ಬಹುವಚನದಲ್ಲಿ ಮಾತಾಡುತ್ತಿದ್ದರು. ನನಗೆ ಇರುಸುಮುರುಸಾಗುತ್ತಿತ್ತು.

ಜನರಿಗೂ ಇದು ವಿಚಿತ್ರ ಎನ್ನಿಸಿತು. ಜನಾನುರಾಗಿಗಳೂ; ಛೇರ್ಮನೂ; ಶ್ರೀಮಂತರೂ ಆದ ಡಾಕ್ಟರ್ ರೇವಣಸಿದ್ದಪ್ಪರೆಲ್ಲಿ; ಈ ಪಡಪೋಸಿ ಕುಂಬಾರ ಹುಡುಗ ವೀರಭದ್ರ ಎಲ್ಲಿ! ಅಂಥ ಮಹಾನ್ ವ್ಯಕ್ತಿ ಪಡಪೋಸಿಗೆ ಎಲ್ಲಿಲ್ಲದ ಗೌರವ ಕೊಡುವುದೆಂದರೇನು! ಜನ ನನ್ನ ಕಡೆ ಒಂದು ನಮೂನೆ ನೋಡತೊಡಗಿದರು.

ಜನಮರುಳೋ ಜಾತ್ರೆ ಮರುಳೋ…. ಎನ್ನುವಂತೆ ಹವಾ ಬದಲಾವಣೆಯಾದರೆ ಎಲ್ಲಾ ಸರಿ ಹೋಗುತ್ತದೆಂದು ನಾನು ಹೇಳದೆ ಕೇಳದೆ ಆಂಧ್ರಪ್ರದೇಶದಲ್ಲಿರುವ ಅಕ್ಕ ರುದ್ರಮ್ಮನವರ ಮನೆ ಸೇರಿಕೊಂಡೆ. ಐದು ಪೈಸೆ ಲಂಚ ಇಲ್ಲದೆ ಸಾಲಿಮೇಷ್ಟ್ರು ನೌಕರಿ ದೊರಕಿತು. ಸ್ನೇಹಿತರೆಲ್ಲ ‘ನಿಂದೆ ಛಾನ್ಸು’ ‘ನಿಂದೆ ಛಾನ್ಸು’ ಅಂದರು.

ನಾನು ನನ್ನೂರಿಗೆ ಬಂದು ನಾಲ್ಕು ದಿನ ಇದ್ದದ್ದೆ ಕಡಿಮೆ. ಯಾವಾಗಾದ್ರು ಹೋದ್ರೆ ರಾತ್ರಿ ಇದ್ದು ಬೆಳಿಗ್ಗೆ ವಾಪಾಸಾಗಿ ಬಿಡುತ್ತಿದ್ದೆ. ಹೀಗೆ ಸುಮಾರು ಮೂರ್‍ನಾಲ್ಕು ವರ್ಷ ಕಳೆದಿರಬಹುದು. ನಮ್ಮ ಅಪ್ಪ ಸತ್ತನಂತರದ ಉಪಟಳಕ್ಕೆ ಕೆಲವು ದಿನ ಊರಲ್ಲಿ ನಿಲ್ಲಬೇಕಾಗಿ ಬಂತು. ಆಗ ಇದ್ದಕ್ಕಿದ್ದಂತೆ ಡಾ. ರೇವಣಸಿದ್ದಪ್ಪನವರ ನೆನಪಾಯಿತು. ಎಲ್ಲಿ ಅವರೀಗ ಅಂತ ಒಬ್ಬರನ್ನು ಕೇಳಿದೆ ‘ಅಯ್ಯೋ ಅವ್ನಾ’ ಅಂತ ಉಸಿರುಬಿಟ್ಟರು. ಇನ್ನೂರು ಕಿಲೋಮೀಟರು ದೂರದ ಗುಂಟೂರ್ ಕ್ಯಾಂಪ್ ಬಳಿ ನಡೆದ ಪೋಲೀಸ್ ಎನ್‌ಕೌಂಟರ್‌ನಲ್ಲಿ ಸತ್ತು ಹೋದ ಎಂದು ಹೇಳಿದ ನಂತರ ಎಲ್ಲ ತಿಳಿದು ದಿಗ್ಮೂಢನಾದೆ.

ಡಾಕ್ಟರ್ ಹೆಸರಿಗಷ್ಟೆ ಡಾಕ್ಟರ್. ಆತ ರಾತ್ರಿ ಕಲಾಪಗಳಿಗೆ ಮನೆಯ ಹಿಂದಿನ ಬಾಗಿಲು ಬಳಸುತ್ತಿದ್ದ! ಸಿನಿಮಾದಲ್ಲಿ ಡಕಾಯಿತರು ವೇಷ ಹಾಕ್ಕೊಂತಾರಲ್ಲ ಹಾಗೆ ವೇಷ ಹಾಕ್ಕೊಂಡು ಸ್ಟೆನ್‌ಗನ್‌ನಂಥ ಮಾರಕಾಯುಧಗಳನ್ನು ಧರಿಸಿಕೊಂಡು ಮೋಟಾರ್ ಬೈಕ್ ಏರುತ್ತಿದ್ದರು. ಅದು ಮೊದಲೆ ಡಬ್ಬಲ್ ಇಂಜೀನ್ ಮೋಟಾರ್ ಬೈಕು. ಸೈಲೆನ್ಸರ್ ಅಳವಡಿಸಿದ್ದರಿಂದ ಅದು ಹೆಚ್ಚಿಗೆ ಸದ್ದು ಮಾಡುತ್ತಿರಲಿಲ್ಲ. ಸುಮಾರು ಇನ್ನೂರು ಮುನ್ನೂರು ಕಿಲೋಮೀಟರ್ ದೂರ ಹೋಗಿ ದರೋಡೆಮಾಡಿಕೊಂಡು ಬೆಳಗಾಮುಂಜಾನೆ ಊರಿಗೆ ಗಪ್‌ಚಿಪ್ ಅಂತ ವಾಪಸಾಗಿಬಿಡ್ತಿದ್ದರು. ಅದಾವುದೋ ರೋಗದ ನೆಪದಿಂದ ನಿದ್ದೆಯ ಇಂಜೆಕ್ಷನ್ ಮಾಡುತ್ತಿದ್ದುದರಿಂದ ಅವರ ಧರ್ಮಪತ್ನಿಗೆ ಇಡೀರಾತ್ರಿ ಎಚ್ಚರಾಗುತ್ತಿರಲಿಲ್ಲ. ಆ ಮನೆಗೊಂದು ನೆಲಮಾಳಿಗೆ. ಅಲ್ಲಿ ಲಕ್ಷಾಂತರ ರೂಪಾಯಿ ಹಣ ಒಡವೆ, ಅಲ್ಲಿಗೆ ಪ್ರವೇಶ ಇದ್ದದ್ದು ದೇವರ ಕೋಣೆಯ ಮೂಲಕ.

ಡಾ. ರೇವಣಸಿದ್ದಪ್ಪ ಬಾಗಿಲು ಬಂದ್ ಮಾಡಿಕೊಂಡು ಗಂಟೆಗಟ್ಟಲೆ ಪೂಜೆ ಯಾಕೆ ಮಾಡ್ತಿದ್ದರು ಅಂತ ಆಮೇಲೆ ಅರ್ಥ ಆಯ್ತು ನನಗೆ. ಈಗಲೂ ನಮ್ಮೂರ ಬಸ್‌ಸ್ಟಾಂಡಿನಲ್ಲಿ ಅರೆಬರೆ ಹುಚ್ಚಿನಿಂದ ಭಿಕ್ಷೆಬೇಡುತ್ತ ತಿರುಗುವ ಅವರ ಧರ್ಮಪತ್ನಿಯನ್ನು ನೋಡಿದಾಗಲೆಲ್ಲ ಆ (ಈ) ಕಥೆ ನೆನಪು ಮಾಡಿಕೊಳ್ತಿರ್‍ತೀನಿ.
*****

ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.