ಅಕ್ಷರಗಳಿಂದ ದೃಶ್ಯಮಾಧ್ಯಮಕ್ಕೆ ಒಂದು ಒಳನೋಟದ ಅಗತ್ಯ: ಸಂವಾದ ಸೃಷ್ಟಿ

ಅನೇಕ ಬಗೆಯ ನೂರಾರು ಉಚಿತ ಸಾಧನಗಳು ಅಂತರ್ಜಾಲದಲ್ಲಿ ಸಿಗುತ್ತವೆ. ಅವುಗಳನ್ನು ಇಟ್ಟುಕೊಂಡೇ ಒಂದು ಅಂತರ್ಜಾಲ ತಾಣವನ್ನು ‘ಸುಮಾರಾಗಿ’ ನಿರ್ವಹಿಸಬಹುದು. ಆದರೆ, ಕೊಂಚ ಹೆಚ್ಚು ಏದುಸಿರು ಬಿಡಬೇಕಾಗುತ್ತದೆ, ಶ್ರಮಿಸಬೇಕಾಗುತ್ತದೆ. ಅವುಗಳನ್ನು, ಕೆ‌ಎಸ್‌ಸಿಯೂ ಬಳಸಿದ್ದಿದೆ. ಅದನ್ನು ಬಳಸುವಾಗಲೆಲ್ಲ, ಕೆ‌ಎಸ್‌ಸಿಯ ಮುಂಚೂಣಿಯಲ್ಲಿದ್ದಾಗ, ‘ನಮ್ಮ ಸುತ್ತಮುತ್ತಲಿನ ಹುಡುಗರು ನಮ್ಮ ಅಗತ್ಯಗಳನ್ನೇಕೆ ಮರೆಯುತ್ತಾರೆ?’, ಕೇವಲ ಸ್ವಕೇಂದ್ರಿತ ಚಟುವಟಿಗಳಿಗಷ್ಟೇ ಸೀಮಿತಗೊಂಡುಬಿಡುತ್ತಾರೇಕೆ? ಮುಂತಾದ ಈ ಪ್ರಶ್ನೆಗಳೇ ನನ್ನ ಮಾತುಕತೆ, ಚರ್ಚೆ, ಹರಟೆ, ಬಯ್ಗಳ ಎಲ್ಲವೂ ಆಗಿಹೋಯ್ತು. ತಾಂತ್ರಿಕವಾಗಿ ಏನಾದರೂ ಮಾಡಬೇಕು ಎಂದನ್ನಿಸಿದಾಗಲೇ ಸಿಕ್ಕವರು: ಕೆ‌ಎಸ್‌ಸಿಯ, ನಮ್ಮ ಹುಡುಗರು ಎಂದೆನ್ನಬಹುದಾದ ರುದ್ರಮೂರ್ತಿ ಹಾಗು ರಾಘವ ಕೋಟೇಕರ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಇವರುಗಳು ಕೆಲಸವನ್ನು ಮಾಡುತ್ತಾ, ಕೆಲವು ಆಭಾಸಗಳ ನಡುವೆ, ನಿಜವಾಗಿಯೂ ನಮ್ಮ ಅಗತ್ಯಗಳೇನೇನು, ಅವುಗಳಿಗಾಗಿ ನಾವು ಮಾಡಬಹುದಾದ್ದೇನೇನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ರಘು ಹೆಚ್ಚು ಕಡಿಮೆ ನಮ್ಮೆಲ್ಲ ಅಗತ್ಯಗಳನ್ನು ಪೂರೈಸಬಹುದಾದ ಸಿ‌ಎಂಎಸ್ ಮುಗಿಸುವ ಹಾದಿಯಲ್ಲಿದ್ದಾನೆ. ಜೊತೆಗೆ ಆತನೇ ಯಶಸ್ವಿಯಾಗಿ ಬರಹಕ್ಕೆ ಪೂರಕವಾಗಿರಬಹುದಾದಂತಹ ಜಾವಾ ಸ್ಕ್ರಿಪ್ಟ್ ಮಾಡಿ ಮುಗಿಸಿದ್ದಾನೆ. ಇದಕ್ಕೆ ಸ್ಫೂರ್ತಿ: ವಿಜಯಲಕ್ಶ್ಮಿ ನಾರಾಯಣ್‌ರವರ hಣಣಠಿ://ತಿತಿತಿ.iiಣ.eಜu/~ಟಚಿಞsviರಿ/ಟಚಿಟಿguಚಿge/ಞಚಿಟಿಟಿಚಿಜಚಿ.hಣmಟ ಸಹಕಾರಿ ಎಂದು ಸ್ಮರಿಸಿ ತನ್ನ ಪ್ರಾಮಾಣಿಕತೆಯನ್ನೂ ತೋರಿಸಿದ್ದಾನೆ. ಅಪರೂಪದ ಹುಡುಗ.

ಈ ನಮ್ಮ ರುದ್ರಮೂರ್ತಿ ಸುಮ್ಮನೆ ಕೂರುವವರೇನಲ್ಲ: ಹಳೆಯ ಸ್ಪೆಲ್‌ಚೆಕ್ಕರ್ ಕೈಗೆತ್ತಿಕೊಂಡರು: ಈಗ ಅದು ಪೂರ್ಣಪ್ರಮಾಣದ ಸ್ಪೆಲ್ ಚೆಕ್ಕರ್ ಆಗಿದೆ. ಕನ್ನಡದ ಎಲ್ಲ ಫಾಂಟ್‌ಗಳನ್ನು ಇನ್‌ಸ್ಟಾಲ್ ಮಾಡಲು-ಅದನ್ನು ಮುಂಚೆಯೇ ನೋಡಲು ಅಥವ ನಿರ್ವಹಿಸಬಹುದಾದ ಒಂದು ಚೊಕ್ಕವಾದ ಸಾಧನವನ್ನು ಮಾಡಿಮುಗಿಸಿದ್ದಾರೆ. ಅದರಲ್ಲಿ-ಕನ್ನಡದಲ್ಲಿ ಉಚಿತವಾಗಿ ಸಿಗಬಹುದಾದ ಎಲ್ಲ ಫಾಂಟ್‌ಗಳೂ ಒಂದೇ ಕಡೆ ಸಿಗಲಿದೆ. ಬೇಕಾದಾಗ, ಬೇಕಾದ್ದನ್ನು ನೀವು ಸ್ಥಾಪಿಸಿಕೊಳ್ಳಬಹುದು. ಇಷ್ಟರಲ್ಲೇ ಕನ್ನಡಸಾಹಿತ್ಯ.ಕಾಂ -ಅದನ್ನು ಬಿಡುಗಡೆ ಮಾಡುತ್ತದೆ ಎಂದು ಸದ್ಯಕ್ಕೆ ತಿಳಿಸಬಯಸುತ್ತೇನೆ.

ಕನ್ನಡಸಾಹಿತ್ಯ.ಕಾಂನ ತಾಂತ್ರಿಕ ವಿಭಾಗದ ಸದಸ್ಯರಾಗಿರುವ ಇವರಿಬ್ಬರೂ ಮುಂದೆ ಅನೇಕ ಜನೋಪಕಾರಿಯಾಗಬಹುದಾದ ಕೆಲಸಗಳನ್ನು ಮಾಡಲಿದ್ದಾರೆ ಎಂದೆನ್ನುವ ಭರವಸೆಯನ್ನಂತೂ ಮೂಡಿಸಿರುವುದು ಸುಳ್ಳಲ್ಲ. ಕನ್ನಡಸಾಹಿತ್ಯ.ಕಾಂನ ಎಂಟು ವರ್ಷಗಳ ಸಾಧನೆ? – ಎಂದು ಮೂಗುಮುರಿಯಬಹುದಾದವರಿಗೆ: ನಿಜ, ಅಪಾರವಾದ, ಅತ್ಯುತ್ತಮ ಸಾಹಿತ್ಯದ ಪ್ರಾತಿನಿಧಿಕ ಶಕ್ತಿಯಾಗಿರುವುದರೊಂದಿಗೆ, ಇನ್ನೂ ಹೆಚ್ಚಿನ ಕೆಲಸವಂತೂ ಆಗಬೇಕಿತ್ತು-ಹಾಗೆಂದು ಈಗ ಆಗಿರುವ ಕೆಲಸ-ಸಾಧನೆ ನಗಣ್ಯವೇನಲ್ಲ ಎಂದು ಕೊಂಚ ಹೆಮ್ಮೆ-ಕೊಂಚ ವಿನಯ ಎರಡರ ಮಿಶ್ರಣದಲ್ಲಿ ಪ್ರತಿಕ್ರಿಯಿಸಬಹುದೇನೋ…

*
*
*
ಎಷ್ಟು ದಿನ ನೀವೊಬ್ಬರೇ ಎಲ್ಲವನ್ನೂ ನಿರ್ವಹಿಸುತ್ತೀರಿ? -ಅಚ್ಚರಿಯಿಂದ, ಕೆಲವೊಮ್ಮೆ ‘ನಾವೆಲ್ಲ ಸಕ್ರಿಯರೂ ಆಗಿರುವಾಗ ನೀವೊಬ್ಬರೆ ಮಾಡುವುದು ಸರಿಯಲ್ಲ’ ಎಂದೆನ್ನುವ ಧ್ವನಿ ಆಕ್ಷೇಪಣೆಯಾಗಿಯೂ, ’ಕನ್ನಡಸಾಹಿತ್ಯ.ಕಾಂ’ನ ಅಂತರ್ಜಾಲ ಕಾರ್ಯಚಟುವಟಿಕೆಯ ಬಗೆಗೆ ಪ್ರಶ್ನೆಯಾಗಿಯೂ ಕೇಳಿಬರುತ್ತಲಿತ್ತು. ಜೊತೆಗೆ ಹತ್ತು ಹಲವಾರು ಪ್ರಶ್ನೆಗಳು. ಕೆ‌ಎಸ್‌ಸಿಯ ಚಟುವಟಿಕೆಗಳನ್ನು ಎರಡು ರೀತಿ ವಿಂಗಡಿಸಬಹುದು: ಒಂದು ಅಂತರ್ಜಾಲದಲ್ಲಿ ಹಾಗು ಅಂತರ್ಜಾಲೇತರ ಚಟುವಟಿಕೆಗಳು. ಎರಡೂ ಬಿರುಸು ಪಡೆದುಕೊಂದು ವ್ಯಾಪಕವಾಗಿ ಬೆಳೆಯುತ್ತಾ ಪ್ರಮುಖವೆಂದೆನ್ನಿಸತೊಡಗಿವೆ. ಹೀಗಾಗಿ ನನ್ನಲ್ಲೂ ಅನೇಕಾನೇಕ ಪ್ರಶ್ನೆಗಳು. ಸಭೆಗಳೂ ಆಗುತ್ತಿದ್ದವೂ-ಚರ್ಚೆಯೂ ನಡೆಯುತ್ತಿದ್ದವು. ಆದರೆ, ಎಲ್ಲವೂ ಅಪೂರ್ಣವಾಗಿಯೇ ಉಳಿದುಬಿಡುತ್ತಿದ್ದವು. ಈಗಬಂದೆ ಎಂದೋ, ಬೇರೆ ಮುಖ್ಯವಾದ ಕೆಲಸವಿದೆ ಎಂದೋ ಅಂತೂ ನೆಪಗಳನ್ನೊಡ್ಡಿ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದವರೆಲ್ಲ ಕರಗುತ್ತಾ, ಸಭೆಯು ಅದರ ಗಾಂಭೀರ್ಯವೂ ಕರಗಿಹೋಗುತ್ತಿತ್ತು. ಈ ಬಾರಿ ಎಲ್ಲರನ್ನೂ ಒಂದೆಡೆ ಸೇರಿಸಿದರೆ, ಏನಾದರೂ ಗಂಭೀರವಾದದ್ದು ನಡೆಯಲೇ ಬೇಕು ಎಂದನ್ನಿಸಿದಾಗ: ಬೆಂಗಳೂರಿನ ಆಚೆಗೆ ಎರಡು ದಿನ ಸಭೆ ಸೇರಬಾರದೇಕೆ ಎಂದೆನ್ನುವ ಯೋಚನೆ ಬಂದಿತು. ಅಂತೆಯೆ ಏರ್ಪಾಟೂ ಆಯಿತು. ಸಭೆಗೆ ಬಂದವರನ್ನೆಲ್ಲ ‘ಕೋರ್ ಮೆಂಬರ್ಸ್’ (ಕೇಂದ್ರ ಸದಸ್ಯರು) ಎಂದು ಕರೆಯಲಾಗುವುದು ಎಂದೂ ಹೇಳಲಾಗಿತ್ತು. ಸಭೆಗೆ ಹಾಜರಾದವರು:

ಕಿರಣ್, ಶೇಖರ್, ಅರೇಹಳ್ಳಿ ರವಿ, ರುದ್ರಮೂರ್ತಿ, ರಾಘವ ಕೋಟೆಕರ್, ಲಾವಣ್ಯ, ಸೌಮ್ಯ, ಕಿಶೋರ್‌ಚಂದ್ರ, ಶೇಖರ್‌ಪೂರ್ಣ, ವಿಕ್ರಮ ಹತ್ವಾರ, ರಮೇಶ್, ಜಯಕುಮಾರ್, ಮನೋಜ್, ಪ್ರಮೋದ್ ಪಿ ಟಿ, ರಾಜ್‌ಕುಮಾರ್, ಅಜಿತ್, ವಿವೇಕ್ ಶಂಕರ್, ಸೀತಾ ಶೇಖರ್, ನಂದಿನಿ, ಶ್ರೀನಿವಾಸ್, ಅನ್ನಪೂರ್ಣ ಸುಬ್ಬರಾವ್, ಅವಿನಾಶ್, ಪ್ರಭಾಕರ್ ಎಚ್ ಎಸ್,

ಭಾಗವಹಿಸಿದವರಲ್ಲಿ ಕೆ ಎಸ್ ಸಿ ಗುಂಪಿಗೆ ಹೆಚ್ಚು ಪರಿಚಿತರಾದ ಕಿರಣ್, ರುದ್ರಮೂರ್ತಿ, ರಾಘವ ಕೋಟೆಕಾರ್, ಕಿಶೊರ್ ಚಂದ್ರ. ಲಾವಣ್ಯ, ಸೌಮ್ಯ, ಅರೇಹಳ್ಳಿ ರವಿ, ಅನ್ನಪೂರ್ಣ ಸುಬ್ಬರಾವ್, ನನ್ನ ಕುಟುಂಬ, ಮಕ್ಕಳು ಇವರುಗಳ ಜೊತೆಗೆ ಸಕ್ರಿಯರಾಗಿದ್ದೂ ಅಪರಿಚಿತರಾಗಿದ್ದ ರಮೇಶ್, ಮನೋಜ್, ವಿವೇಕ್ ಶಂಕರ್, ಪ್ರಭಾಕರ್ ಎಚ್ ಎಸ್, ಜಯಕುಮಾರ್, ಮನೋಜ್, ಪ್ರಮೋದ್ ಪಿ ಟಿ, ರಾಜ್‌ಕುಮಾರ್, ಶೇಖರ್, ಅವಿನಾಶ್ ಮುಂತಾದವರೂ ಇದ್ದರು.

ಇವರೆಲ್ಲರ ಉಪಸ್ಥಿತಿಯಿರುವ ಹೊಸ ಟ್ರಸ್ಟ್ ಒಂದನ್ನು ಆಗಸ್ಟ್ ೨ ೨೦೦೮ರಂದು ರಚಿಸಲಾಗಿದೆ. ಆಗಸ್ಟ್ ೧ ಮತ್ತು ೨ ಶುಕ್ರವಾರ ರಾತ್ರಿಯಿಂದ ಭಾನುವಾರ ಮಧ್ಯಾಹ್ನದವರೆಗೆ ಓದೇಕಾರ್ ಫಾರಂನ ಅಂಗಳದಲ್ಲಿ ವಿವಿಧ ಚರ್ಚೆ-ಚಟುವಟಿಕೆಗಳು ನಡೆದವು.

ಸಭೆಯ ಕಲಾಪಗಳ ವರದಿ ವಿವಿಧ ಸಮಿತಿಗಳ ಪದಾಧಿಕಾರಿಗಳ ಪಟ್ಟಿಯೊಂದಿಗೆ ಈ ಪುಟದಲ್ಲಿದೆ .
*
*
*
’ಸಂವಾದ.ಕಾಂ” ’ಕನ್ನಡಸಾಹಿತ್ಯ.ಕಾಂ’ ಮುಂಚೂಣಿಯಲ್ಲಿದ್ದವರ ಮತ್ತೊಂದು ಅಂತರ್ಜಾಲ ತಾಣ. ಅದರ ಅಗತ್ಯದ ಬಗ್ಗೆ ಕೇಂದ್ರ ಸದಸ್ಯರ ಮಧ್ಯದಲ್ಲೂ ಅನೇಕ ಗೊಂದಲಗಳಿವೆ. ’ಕನ್ನಡಸಾಹಿತ್ಯ.ಕಾಂ’ನಿಂದ ದೂರ ಹೋಗುತ್ತಿದ್ದೇವೆಯೆ? ಎಂಬ ಆತಂಕವೂ ತೋರದೇ ಇಲ್ಲ. ’ಕನ್ನಡಸಾಹಿತ್ಯ.ಕಾಂ’ಗೆ ಯಾವುದೇ ರೀತಿಯ ಲೋಪ ಉಂಟಾಗುವುದಿಲ್ಲ ಎಂಬ ಭರವಸೆ ನೀಡುತ್ತಾ, ಎಲ್ಲ ಪ್ರಶ್ನೆ ಹಾಗು ಆತಂಕಗಳಿಗೆ ಇಲ್ಲಿ ಉತ್ತರಿಸುವುದಕ್ಕಿಂತಲೂ ’ಸಂವಾದ.ಕಾಂ” ಪುಟಗಳಲ್ಲೇ ವಿವರ ನೀಡುವುದು ಸೂಕ್ತ ಎಂದೆನ್ನಿಸುತ್ತದೆ.

’ಸಂವಾದ.ಕಾಂ” ಸದ್ಯಕ್ಕಂತೂ ಪ್ರಾಯೋಗಿಕ ಮತ್ತು ಉದ್ಘಾಟನಾಪೂರ್ವ ಚಟುವಟಿಕೆ ಮಾತ್ರ ಎಂಬ ಸಂಗತಿಯನ್ನು ಸ್ಪಷ್ಟಪಡಿಸಿ, ’ಕನ್ನಡಸಾಹಿತ್ಯ.ಕಾಂ’ ಅಂತರ್ಜಾಲದಲ್ಲಿ ಅತ್ಯುನ್ನತ ಸಾಹಿತ್ಯಕ್ಕೆ ಪೂರಕವಾಗುವಂತಹ ಚಟುವಟಿಕೆಯಾಗಿದ್ದರೆ, ’ಸಂವಾದ.ಕಾಂ”-ನಾಟಕ, ಸಿನಿಮಾ, ಟಿವಿ, ಚಿತ್ರಕಲೆ, ಛಾಯಾಚಿತ್ರಣ ಮುಂತಾದ ದೃಶ್ಯ ಮಾಧ್ಯಮಗಳಿಗೆ ಮೀಸಲಿಡಬಹುದಾದಂತಹ ತಾಣವಷ್ಟೇ ಆಗಿರಬಹುದು.
ದಂಗು ಬಡಿಸುವ ಈ ಕೆಲವು ವಿವರಗಳನ್ನು ಮಾಹಿತಿ ರೂಪದಲ್ಲಿ ಏಪ್ರಿಲ್ ಜೂನ್-೨೦೦೮ರ ದೇಶಕಾಲ ಸಂಚಿಕೆಯಿಂದ ನೀಡುತ್ತಿದ್ದೇವೆ.

೧೯೯೧ರಲ್ಲಿ ಭಾರತದಲ್ಲಿ ಕೇವಲ ೬ ಟಿವಿ ವಾಹಿನಿಗಳಿದ್ದು ದಿನಕೆ ಕೆಲವು ಗಂಟೆಗಳ ಪ್ರಸಾರ ಮಾತ್ರ ಇತ್ತು. ಇಂದು, ಅಂದರೆ ೧ ಜನವರಿ ೨೦೦೮ರಲ್ಲಿ, ನಮ್ಮಲ್ಲಿ ೩೨೬ ಟಿವಿ ವಾಹಿನಿಗಳು ದಿನದ ೨೪ ಗಂಟೆಯೂ ಪ್ರಸಾರ ಮಾಡುತ್ತಿವೆ. ಇಂದಿನ ಮಾಧ್ಯಮ ಮತ್ತು ಮನೋರಂಜನೋದ್ಯಮ ೪೪೦ ಬಿಲಿಯನ್ ರೂಪಾಯಿಗಳಷ್ಟು ಮೌಲ್ಯವುದ್ದು ಮತ್ತು ವರ್ಷಕ್ಕೆ ಪ್ರತಿಶತ ೧೮ರ ವೇಗದಲ್ಲಿ ಬೆಳೆಯುತ್ತಿರುವಂತದ್ದು. ಇದರಲ್ಲಿ ಸಿಂಹಪಾಲಿ ಟಿವಿಯದೇ(’ಆಯ್ಕೆಯ ಸ್ವಾತಂತ್ರ್ಯ?’-ಅತುಲ್ ತಿವಾರಿ ಲೇಖನದಿಂದ)

ಮಾತಿನಲ್ಲಿ ಟೆಲಿವಿಷನ್ ಜಗತ್ತು ಅಂದೆ. ಟೆಲಿವಿಷನ್ ವ್ಯವಹಾರ ಅಂದೆ. ಇದು ಎಷ್ಟು ದೊಡ್ಡ ವ್ಯವಹಾರ, ಅದೆಷ್ಟು ದೊಡ್ಡ ಜಗತ್ತು ಅಂತ ನೋಡೋಣ. ಇವತ್ತು ಭಾರತದಲ್ಲಿ ಸುಮಾರು ೧೦೮ ಮಿಲಿಯನ್ ಟೆಲಿವಿಷನ್ ಹೊಂದಿರುವ ಮನೆಗಳಿದ್ದಾವೆ. ಅದರಲ್ಲಿ ಸುಮಾರು ಎಪ್ಪತ್ತು ಮಿಲಿಯನ್(ಏಳುಕೋಟಿ) ಮನೆಗಳಿಗೆ ಕೇಬಲ್ ಟೆಲಿವಿಷನ್ ಸಂಪರ್ಕವಿದೆ(ಇವು ಎನ್ ಆರ್ ಎಸ್ ಸಮೀಕ್ಷೆಯ ಅಂಕಿ‌ಅಂಶ). ಒಂದು ಮನೆಯಲ್ಲಿ ಅಂದಾಜು ೫ ಜನ ವಾಸ ಮಾಡುತ್ತಾರೆ ಅಂದರೆ ಸುಮಾರು ಮೂವತ್ತೈದು ಕೋಟಿ ಜನ ಕೇಬಲ್ ಟೆಲಿವಿಷನ್ ನೋಡುತ್ತಾರೆ ಅಂತಾಯಿತು. ಪ್ರತಿ ಮನೆ ಅಂದಾಜು ತಿಂಗಳಿಗೆ ನೂರು ರೂಪಾಯಿಗಳನ್ನು ಕೇಬಲ್ ಸಂಪರ್ಕಕ್ಕೆ ಖರ್ಚು ಮಾಡುತ್ತದೆ ಅಂದರೆ ಕೇಬಲ್ ಚಂದಾ ಆದಾಯವೇ ತಿಂಗಳಿಗೆ ಏಳುನೂರು ಕೋಟಿ(’ಟಿವಿ ಎಂಬ ವ್ಯಾಪಾರ’-ಸುರೇಂದ್ರನಾಥ್ ಎಸ್ ಲೇಖನದಿಂದ)

ಇಂತಹ ಬೃಹತ್ ಆರ್ಥಿಕ ಚಟುವಟಿಕೆಯನ್ನು ಆಕ್ರಮಿಸಿ ಕುಳಿತಿರುವ ವ್ಯವಸ್ಥಿತ ದುರಾಕ್ರಮಣದ ಬಗೆಗೆ ಬೇಕಾಗಿರುವ ಆರೋಗ್ಯಕರವಾದ ಪ್ರಜ್ಞೆಯನ್ನು ಬೆಳೆಸುವ ಸಣ್ಣದೊಂದು ಚಟುವಟಿಕೆಯಾಗಿ ’ಸಂವಾದ.ಕಾಂ’ ರೂಪುಗೊಂಡರೆ ಅದು ನನ್ನ ಮತ್ತು ನಿಮ್ಮ ಯಶಸ್ಸು.

ದೇಶಕಾಲದ ೧೩ನೇ ಸಂಚಿಕೆಯಲ್ಲಿ ಸಮಯ ಪರೀಕ್ಷೆ ವಿಭಾಗವನ್ನು ಯೋಜಿಸಿ ನಿರ್ವಹಿಸಿದ ಅಕ್ಷರ ಕೆ ವಿಯವರಿಗೆ ಮತ್ತು ಸಂಪಾದಕ ವಿವೇಕ ಶಾನಭಾಗರಿಗೆ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ.
*
*
*
ಈ ಸಂಚಿಕೆಯೊಂದಿಗೆ ನಮ್ಮ ಲೇಖಕರ ಬಳಗಕ್ಕೆ ಸೇರ್ಪಡೆಯಾಗುತ್ತಿರುವ ಸೊಮಶೇಖರ್ ಜಿ ಮತ್ತು ಜೋಗಿಯವರಿಗೆ ಸ್ವಾಗತ.

ಮುಂದಿನ ಸಂಚಿಕೆ? ನಿರ್ದಿಷ್ಟವಾಗಿ ನಿಗದಿತವಾಗಿ ಇದೇ ದಿನ ಆಗುತ್ತದೆಂದು ಸದ್ಯಕ್ಕೆ ತಿಳಿಸುವ ಸ್ಥಿತಿಯಲ್ಲಿಲ್ಲ. ಒಂದಂತೂ ಖಚಿತ: ’ಕನ್ನಡಸಾಹಿತ್ಯ.ಕಾಂ’ ಹಿಂದೆ ಪ್ರಕಟಿಸಿರುವ ಎಲ್ಲವನ್ನೂ ಅಂತರ್ಜಾಲಕ್ಕೆ ತೆರೆದಿಟ್ಟ ನಂತರವೇ ಮುಂದಿನ ಸಂಚಿಕೆ ಪ್ರಕಟವಾಗುತ್ತದೆ.

ಶೇಖರ್‌ಪೂರ್ಣ
೨೪-೦೯-೨೦೦೮


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.