ಎಲ್ಲವೂ ತುಂಬಿ ತುಂಬಿ

ಶಿವಾಜೋಯಿಸರಿಗೆ ಏನೊಂದೂ ತೋರದಿದ್ದಾಗ, ಸುಮ್ಮನೆ ಬೆಂಗಳೂರಿನ ಓಣಿ ಕೋಣಿಗಳಲ್ಲಿ ಬೀದಿ ಉದ್ಯಾನ ಸುತ್ತಬೇಕೆನಿಸುತ್ತದೆ. ಅದೇ ಅವರ ಹವ್ಯಾಸ. ಹಿಂದಿನ ದಿನಗಳಲ್ಲಿ ಪ್ರಜಾ ಸಂಕ್ಷೇಮ ವಿಚಾರಿಸಲು ಹೋಗುತ್ತಿದ್ದ ಛದ್ಮ ವೇಷಧಾರಿ ರಾಜಮಹಾರಾಜರ ಹಾಗೆ! ರಿಟೈರಾದಮೇಲೆ ಜೋಯಿಸರು ಮನೆಯಲ್ಲೆಂದೂ ಸ್ಥಿರವಾಗಿ ಕುಳಿತವರಲ್ಲ. ಹಾಗೆ ಕುಳಿತುಕೊಳ್ಳುವ ವ್ಯಕ್ತಿತ್ವ ಅವರದ್ದಲ್ಲವೇ ಅಲ್ಲ. ಸರ್ವೀಸಿನಲ್ಲಿದ್ದಾಗಲೆ ಎಂದೂ ಸ್ಥಿರವಾಗಿ ಮೇಜಿನ ಮುಂದೆ ಕುಳಿತವರಲ್ಲ. ಎಲ್ಲಾದರೂ ಸುತ್ತಾಡುತ್ತಲೇ ಓಡಾಡುತ್ತಲೇ ಇರಬೇಕು. ಸರ್ವೇ ವಿಭಾಗವಾಗಿದ್ದರೆ ಚೆನ್ನಿರುತ್ತಿತ್ತು ಎನ್ನುತ್ತಿದ್ದ ಜೋಯಿಸರಿಗೆ ಸಿಕ್ಕಿದ್ದು ಬೇರೊಂದೇ ಕೆಲಸ. ಈಗ ಕೆಲ ವರ್ಷಗಳ ಹಿಂದೆ, ಆ ಕೆಲಸದಿಂದಲೂ ನಿವೃತ್ತರಾಗಿದ್ದರು.

ಮೂರು ವರ್ಷಗಳ ಹಿಂದೆ, ಹೀಗೇ, ಏನೂ ತೋರದ ಒಂದು ದಿನ ಛದ್ಮವೇಷದ ಮಹಾರಾಜರಾಗಿ ಅಲೆಯುತ್ತಾ ಅವೆನ್ಯೂ ರಸ್ತೆಯ ಒಂದು ಗಲ್ಲಿಯ ಮೂಲಕ ಹಾದು ಬಳೇಪೇಟೆಯ ಚೌಕಕ್ಕೆ ಬಂದು ನಿಂತುಬಿಟ್ಟರು, ಜೋಯಿಸರು. ತಾವು ಸಣ್ಣವರಿದ್ದಾಗ ಈ ರಸ್ತೆಗಳೆಲ್ಲಾ ಎಷ್ಟು ವಿಶಾಲವಾಗಿದ್ದವು. ಈಗೇಕೆ ಹೀಗೆ ಇಕ್ಕಟ್ಟಾಗಿಬಿಟ್ಟಿವೆ ಎನ್ನಿಸಿತು. ಅಕ್ಕಿಪೇಟೆಯ ಶಾಲೆಗೆ ಹೋಗುತ್ತಿದ್ದ ಮಾರ್ಗ ನೆನಪು ಮಾಡಿಕೊಂಡರು. ವಿಜಯಲಕ್ಷ್ಮೀ ಚಿತ್ರಮಂದಿರದ ಎಕ್ಸೆಲ್ಷಿಯರ್ ಆಗಿದ್ದಾಗ ನೋಡಿದ “ಫ್ಲಾಷ್ ಗೋರ್ಡನ್” ನೆನಪಾಯಿತು. ಜೋಯಿಸರು ಈ ನೆನಪುಗಳಲ್ಲಿ ತಮ್ಮನ್ನು ಮರೆತು ರಸ್ತೆಯಂಚಿನಲ್ಲಿ ನಿಂತೇ ಇದ್ದರು. ಇದ್ದಕ್ಕಿದ್ದಂತೆ ಒಬ್ಬ ಯುವಕ ಬಂದು ಜೋಯಿಸರಿಗೆ ಸಲಾಂ ಮಾಡಿದ.

ಜನವೆಂದರೆ ಸಾಕು ಸಹಜ ಕುತೂಹಲದಿಂದ ಮಾತನಾಡುವ ಜೋಯಿಸರು ಆ ಯುವಕನೊಂದಿಗೆ ಮಾತಿಗಿಳಿದೇಬಿಟ್ಟರು.

“ಸರ್ ಒಳ್ಳೇ ಮಾಲಿದೆ…. ಸ್ಟೂಡೆಂಟು….ಯಂಗ್ ಸರ್…..ಬೇಕಾ ?”

ಬಳೆಪೇಟೆಯ ಖ್ಯಾತಿ ಅರಿಯದವರ್‍ಯಾರು? ಆದರೂ ಜೋಯಿಸರು ಅರಿತೂ ಅರಿಯದೆ ನಿಂತರು. “ಮಾಲ್” ಎಂದರೇನು ಎಂಬ ಪ್ರಶ್ನೆಯೊಂದಿಗೆ ಪ್ರಾರಂಭವಾಗಿ, ಅವನಲ್ಲಿ ಎಷ್ಟು ಹುಡುಗಿಯರು ಇದ್ದಾರೆ. ದಿನಕ್ಕೆ ಒಬ್ಬೊಬ್ಬ ಏಜೆಂಟ ಎಷ್ಟು ಗಿರಾಕಿಗಳನ್ನು ಹಿಡಿಯುತ್ತಾನೆ-ಬೆಂಗಳೂರಿನವರೆಷ್ಟು ಹೊರಗಿನವರೆಷ್ಟು. ಅತಿ ಕಡಿಮೆ ವಯಸ್ಸಿನವರೆಂದರೆ ಎಷ್ಟು ವರ್ಷ ವಯಸ್ಸಿನ ಗಿರಾಕಿ, ಅತಿ ಮುದುಕನಿಗೆಷ್ಟು ವಯಸ್ಸು, ಒಂದು ಹುಡುಗಿ ಒಂದು ದಿನಕ್ಕೆ ಎಷ್ಟು ಜನರ ಜೊತೆ ಮಲಗುತ್ತಾಳೆ. ಒಬ್ಬನೊಂದಿಗೆ ಮಲಗಲು ರೇಟೆಷ್ಟು ರೇಟಿನ ಅವಧಿಯೆಷ್ಟು-ಅದಕ್ಕೆ ಸಿಗುವ ಕಮಿಷನೆಷ್ಟು – ಅದರಲ್ಲಿ ಜೀವನ ಸಾಗುವುದೇ, ಎಷ್ಟರವರೆಗೆ ಚೌಕಾಸಿ ಮಾಡಬಹುದು…. ಹೀಗೆ ಪ್ರಶ್ನೆಯ ನಂತರ ಪ್ರಶ್ನೆ ಕೇಳುತ್ತಾ ಹೋಗಿ ಮುದುಕರಿಗೇನಾದರೂ ಡಿಸ್ಕೌಂಟ್ ಇದೆಯೇ ಎಂದೂ ಕೇಳಿದರು.“ ಮುದುಕರಿಗೆ ಡಬಲ್ ರೇಟು” ಎಂದು ಉತ್ತರಿಸಿದ ತಲೆಹಿಡುಕ ರಸ್ತೆಯಂಚಿನಲ್ಲಿ ಇಲ್ಲವಾದ. ಮುಂದೆಂದೇ ಜೋಯಿಸರು ಬಳೆಪೇಟೆಯತ್ತ ಸುಳಿದರೂ, ಯಾವೊಬ್ಬ ತಲೆಹಿಡುಕನೂ ಅವರತ್ತ ತಲೆಯೆತ್ತಿ ನೋಡುವುದಿಲ್ಲ ಎಂದು ಖಾತ್ರಿಪಡಿಸಿಕೊಂಡ ನಂತರವೇ ಜೋಯಿಸರು ಅಲ್ಲಿಂದ ಹೊರಗಾದರು.

ಅಂದಿನ ಕೋಟಾದ “ಏನೂ ತೋಚದಿರುವಿಕೆಯ ಮದ್ದು” ಸಿಕ್ಕಿತೆಂದೇ ಬಗೆದು ಹೇಗಾದರೂ ಮಾಡಿ ದೊಡ್ಡ ಬಸ್‌ಸ್ಟ್ಯಾಂಡಿನವರೆಗೆ ನಡೆದುಬಿಟ್ಟರೆ, ಅಲ್ಲಿಂದ ಮುಂದೆ ತಾವು ಕ್ಯೂ ನಿಂತು ಪಡೆದು, ಎಲ್ಲರಿಗೂ ಹೆಮ್ಮೆಯಿಂದ ತೋರಿಸಿಕೊಳ್ಳುತ್ತಿದ್ದ ವಯೋವೃದ್ಧರ ಪಾಸ್ ತೋರಿಸಿ ಎಂಟಾಣೆಯ ಟಿಕೆಟ್ ಪಡೆದು ಮನೆ ತಪುಪಬಹುದೆಂದು ನಡೆಯುತ್ತಿದ್ದಾಗ, ಇದ್ದಕ್ಕಿದ್ದಂತೆ ಸಂದಿಯೊಂದರಲ್ಲಿ ರಾಶಿಹಾಕಿದ್ದ ಪುಸ್ತಕಗಳು ಜೋಯಿಸರನ್ನು ಆಕರ್ಷಿಸಿದವು.

ಶಿವಾಜೋಯಿಸರು ನುಗ್ಗಿ ಒಂದೊಂದೇ ಪುಸ್ತಕ ಪರೀಕ್ಷಿಸಿ ನೋಡತೊಡಗಿದರು. ಹಸ್ತ ಸಾಮುದ್ರಿಕೆ, ಬಾನಸವಾಡಿಯ…. ಎಂಬ ಅಕ್ಷರಗಳಷ್ಟೇ ಕಂಡ ಹರಿದ ಮುಖಪುಟ ಹೊತ್ತ ಪುಸ್ತಕ. ರೈನರ್ ಮಾರಿಯಾ ರಿಲ್ಕೆ ಎಂಬುವನ ಕಾದಂಬರಿ-ಅದರಮೇಲೆ ಒosಣ boಡಿiಟಿg booಞ ಎಂಬ ಓದುಗನ ವಿಮರ್ಶಾ ಟಿಪ್ಪಣಿ. ದಿನಕ್ಕೆ ಕೇವಲ ಐದು ಡಾಲರ್‍ನಲ್ಲಿ ಯೂರೋಪ್ ಅಮೆರಿಕಾ ಸುತ್ತಿನೋಡುವ ರಹಸ್ಯವನ್ನೊಳಗೊಂಡ ಪ್ರವಾಸೀ ಗೈಡು. ಜೇಮ್ಸ್ ಹಿಲ್ಟನ್‌ನ “ಲಾಸ್ಟ್ ಹೊರೈಸನ್” ಬ್ರೆಕ್ಟ್‌ನ “ಗೆಲಿಲಿಯೋ ಗೆಲಿಲಿ” ಪುಸ್ತಕದ ಅನೇಕ ಪ್ರತಿಗಳು (ಬಹುಶಃ ಇವು ಪಾಠ್ಯ ಪುಸ್ತಕಗಳಾಗಿದ್ದಿರಬಹುದೆಂದು ಜೋಯಿಸರು ಊಹಿಸಿದರು)-ಒಂದು ರಾಶಿ ಡೆಬೋನೇರ್ ಎಂಬ ಪತ್ರಿಕೆಯ ಸಂಚಿಕೆಗಳು. ಶಿವಾಜೋಯಿಸರಿಗೆ ಬಗ್ಗಿ ಪುಸ್ತಕ ನೋಡುವುದು ತ್ರಾಸಾದಂತೆ, ಅವರು ಕುಕ್ಕರಗಾಲಲ್ಲಿ ಕುಳಿತೇಬಿಟ್ಟರು. ಕೂತು ಡೆಬೋನೇರ್ ತಿರುವಿದರು. ಅಂಗಡಿಯವನು ಬಂದು ಗೂಢವಾಗಿ “ಐದು ರೂಪಾಯಿ ಸರ್ ಬೇಕಿದ್ರೆ ಇನ್ನೂ ಇಂಟರೆಸ್ಟಿಂಗ್ ಪುಸ್ತಕಗಳಿವೆ” ಎಂದು ಕಿವಿಯಲ್ಲಿ ಉಸುರಿದ. ಪತ್ರಿಕೆಯ ಪುಟ ತಿರುವಿದಂತೆ, ಇಂಟರೆಸ್ಟಿಂಗ್ ಏನೆಂದು ಜೋಯಿಸರಿಗೆ ಅರ್ಥವಾಯಿತು. ಅವರ ದೃಷ್ಟಿ ಆ ರಾಶಿಯಿಂದ ಎದ್ದು ಮುಂದಿನ ರಾಶಿಯ ಮೇಲೆ ಸ್ಥಾಯಿಯಾಯಿತು. ಒಂದು ಪತ್ರಿಕೆಯಲ್ಲಿ ಆಸಕ್ತಿಗಳ, ವಿಕೃತವೆಂಬಂತೆ ಕಂಡ ವಿಳಾಸಗಳ ಸಂಕ್ಷಿಪ್ತ ಜಾಹಿರಾತುಗಳೇ ತುಂಬಿದ್ದವು. ಜನ ಹೊಟ್ಟೆ ಹೊರೆಯಲು ಏನೆಲ್ಲ ದಂಧೆ ನಡೆಸುವರು ಎಂದು ಜೋಯಿಸರು ಆಸಕ್ತಿಯಿಂದ ನೋಡಿದರು-ಈ ಪುಸ್ತಕಗಳ ಕರ್ತೃಗಳು ಬದುಕಿನ ಬಗ್ಗೆ ಯಾವ ಪರಿಕಲ್ಪನೆ ಇಟ್ಟು ಬರೆದಿರಬಹುದು-ಇಲ್ಲಿ ಫುಟ್‌ಪಾತಿನಮೇಲೆ ಅವೇ ಪುಸ್ತಕಗಳು ವಾಸವಗಳೊಂದಿಗೆ ಜಟಾಪಟಿ ನಡೆಸಿವೆ. ರಿಲ್ಕೆಯ ಕಾದಂಬರಿ ಪಕ್ಕದ ರಾಶಿಯಲ್ಲಿ ಕುವೆಂಪು ಅವರ ಜನಪ್ರಿಯ ವಾಲ್ಮೀಕಿ ರಾಮಾಯಣ, ಅದರ ಮೇಲೆ ಗೊಪಾಲಕೃಷ್ಣ ಅಡಿಗರ ಬತ್ತಲಾರದ ಗಂಗೆ, ಮಹಾಕವಿಗಳಿಗೂ ಕಡೆಗೆ ಫುಟ್‌ಪಾತ್ ತಪ್ಪಿದ್ದಲ್ಲ ಎಂದು ತಮ್ಮಲ್ಲೇ ನಕ್ಕು ಶಿವಾಜೋಯಿಸರು ಎದ್ದು ನಿಂತರು. ಮತ್ತೆ ಬೀದಿಗಿಳಿಯುವಷ್ಟರಲ್ಲಿ ಅಂಗಡಿಯ ಮೂಲೆಯಲ್ಲಿ ಐವತ್ತು ಪೈಸೆಗೊಂದರಂತೆ ಮಾರಟಕ್ಕಿದ್ದ ಪುಸ್ತಕ ರಾಶಿ ಕಣ್ಣಿಗೆ ಬಿತ್ತು.

ಇಷ್ಟು ಕಡಿಮೆ ಬೆಲೆಗೂ ಪುಸ್ತಕ ಮಾರಾಟ ಮಾಡುತ್ತಾರಾ ? ಎಂದುಕೊಳ್ಳುತ್ತಲೇ ಜೋಯಿಸರು ಮತ್ತೆ ಬಗ್ಗಿದರು. ವೃಶ್ಚಿಕ ರಾಶಿಯ ೧೯೭೭ರ ಭವಿಷ್ಯ-ಲಿಂಡಾ ಗುಡ್‌ಮನ್ ಬರೆದಿರೋದು. ಎಲ್ಲ ಮನೆಗಳೂ ತುಂಬಿದ್ದ ಕ್ರಾಸ್‌ವರ್ಡ್ ಪಜಲ್‌ನ ಪುಸ್ತಕ-ಇದಿಷ್ಟೇ ಎಂದು ಎದ್ದು ನಿಲ್ಲುವಷ್ಟರಲ್ಲಿ ಕಂಡ ನ್ಯೂಮರಾಲಜಿಗೆ ಸಂಬಂಧಿಸಿದ ಪುಸ್ತಕ. ಜೋಯಿಸರು ಎಂದಿನ ಕುತೂಹಲದಿಂದ ಅದನ್ನು ಕೈಗೆತ್ತಿಕೊಂಡು ಸುತ್ತಿ-ಬಳಸಿ ನೋಡಿ, ಅಂಗಡಿಯವನನ್ನು ಕೇಳಿದರು_

“ಇದರ ರೇಟು ಎಷ್ಟಪ್ಪಾ ?”

“ಎಂಟಾಣೆ ಸರ್”

“ಮುದುಕನಿಗೆ ಡಿಸ್ಕೌಂಟ್ ಇಲ್ಲವೆ ?”

“ಏನ್ಸರ್ ಅರ್ಧಕಪ್ ಕಾಫಿ ಕೂಡಾ ಸಿಗೋದಿಲ್ಲಾ ಎಂಟಾಣೆಗೆ. ಬೇಕಿದ್ರೆ ಆ ಭವಿಷ್ಯದ ಪುಸ್ತಕ ಫ್ರೀ ತೆಗೊಳ್ಳಿ….. ಆದರೆ ರೇಟ್ ಮಾತ್ರ ಎಂಟಾಣೆಗಿಂತ ಕಮ್ಮಿ ಇಲ್ಲ.”

ಜೋಯಿಸರು ತಮ್ಮ ಜುಬ್ಬಾದ ಎರಡು ಮೂರು ಜೇಬುಗಳನ್ನು ತಡಕಾಡಿ, ಕಡೆಗೆ ಹತ್ತು ರೂಪಾಯಿಯ ನೋಟನ್ನು ಹೊರಗೆಳೆದರು. ಅಂಗಡಿಯವ ಸಿಟ್ಟಾದ. ಆದರೆ ಪಾಪದ ಜೋಯಿಸರ ಜೇಬಿನಲ್ಲಿದ್ದ ಚಿಲ್ಲರೇ ನಾಣ್ಯಗಳೆರಡೇ ಎರಡು-ನಾಕಾಣೆ ಒಂದು-ಒಂದು ಇಪ್ಪತ್ತು ಪೈಸೆಯದು. ಕಡೆಗೂ ಸೋತವ ಅಂಗಡಿಯವನೇ.

“ಹೋಗಲಿ ಬಿಡಿ ಸರ್…. ಹತ್ತು ಪರ್ಸೆಂಟ್ ಓಲ್ಡೇಜ್ ಡಿಸ್ಕೌಂಟು” ಎಂದ, ನಲವತ್ತೈದು ಪೈಸೆ ಸ್ವೀಕರಿಸುತ್ತಾ.

“ಯಾರಿಗಪ್ಪಾ ಓಲ್ಡೇಜ್ ? ನಂಗಾ ? ಪುಸ್ತಕಕ್ಕಾ ?” ಎನ್ನುತ್ತಲೇ ಜೋಯಿಸರು ಅಲ್ಲಿಂದ ಹೆಜ್ಜೆ ಹೊರಗಿಟ್ಟರು. ಅಂದೇಕೋ ಮತ್ತೆ ಬಸ್ ಹತ್ತುವ ಮನಸ್ಸಾಗದೇ ನಡೆವ ಛದ್ಮವೇಷಿ ಮಹಾರಾಜರಾಗಿಯೇ ಮನೆ ಸೇರಿದರು ಶಿವಾಜೋಯಿಸರು-ಎಂಟಾಣೆ ಪಾಸಿನ, ಆ ಎಂಟಾಣೆಯನ್ನೂ ಉಳಿಸಿ !

ಮನೆಗೆ ಬಂದಕೂಡಲೇ ಊಟವನ್ನೂ ಮಾಡದೆ, ಹನಿನೀರನ್ನೂ ಸೇವಸದೆ ಸಣ್ಣ ಮಕ್ಕಳ ಉತ್ಸಾಹದಲ್ಲಿ ಜೋಯಿಸರು ನ್ಯೂಮರಾಲಜಿಯ ಪಂಚಾಂಗ ತೆರೆದು ಕೂತರು. ಶಂಕರನಾರಾಯಣನ ಕ್ಯಾಲ್ಕುಲೇಟರ್ ಹುಡುಕಿ ತೆಗೆದು ಒಂದೆರಡು ಸಣ್ಣ ಲೆಕ್ಕ ಮಾಡಿದರು. ಏಕೋ ಹೊಂದಲಿಲ್ಲ_ಹಳೆಯ ಮಗ್ಗಿಯ ನೆನಪುಗಳಿಗೆ ಶರಣಾಗಿ, ಜನ್ಮದಿನ, ತಿಂಗಳು, ವರ್ಷ, ಹೆಸರಿನಲ್ಲಿರುವ ಅಕ್ಷರಗಳ ಸಂಖ್ಯೆ ಎಲ್ಲವನ್ನೂ ಕೂಡಿಟ್ಟು ಗುಣಾಕಾರ ಭಾಗಾಕಾರ ಮಾಡಿದರು. ಪರವಾಗಿಲ್ಲ-ಈ ವಿದ್ಯೆ ಕರಗತವಾಗುವುದು ಕಷ್ಟವೇನಲ್ಲ ಎನ್ನಿಸಿತು. ಇದೇ ಸಂಖ್ಯಾಶಾಸ್ತ್ರವನ್ನು ಶಂಕರನಾರಾಯಣನ ವಿಷಯದಲ್ಲಿ ಪ್ರಯೋಗ ಮಾಡಿದರು_ಛೇ ಅವನ ಹೆಸರನ್ನು ಓಂಖಂIಓ ಎಂದು ಬರೆದಿದ್ದರೆ ಓಂಖಂಙಂಓ ಗಿಂತ ಹೆಚ್ಚು ಒಳ್ಳೆಯದಾಗುತ್ತಿತ್ತು ಎಂದು ಹೊಳೆಯಿತು. ಅವನ ಹೆಸರಿನ ಜತೆ, ಸ್ಕೂಟರಿನ ರಿಜಿಸ್ಟೇಶನ್ ನಂಬರ್ ಹೊಂದಾಣಿಕೆ ಆಗುತ್ತಿಲ್ಲ. ಕಳೆದ ತಿಂಗಳು ಆಕ್ಸಿಡೆಂಟಾದ್ದಕ್ಕೆ ಇದೇ ಕಾರಣವಿದ್ದೀತು. ಬಂದ ಕೂಡಲೇ ಸ್ಕೂಟರ್ ಬದಲಾಯಿಸಲು ಹೇಳಬೇಕು. ಮನೆಯ ಫೋನ್ ನಂಬರ್ ಮೇಲೆ ಈ ವಿದ್ಯೆ ಪ್ರಯೋಗವಾದೀತು. ಸದ್ಯ….ಅದು ಲಕ್ಕೀ ನಂಬರ್. ಅದಕ್ಕೇ ಈವರೆಗೆ ಒಂದೇ ಒಂದು ಬಾರಿಯೂ ಹುಚ್ಚಾಪಟ್ಟೆ ಬಿಲ್ ಬಂದಿಲ್ಲ. ಮೊನ್ನೆ ಆ ಭಾಸ್ಕರರಾಯರ ಮನೆಯಲ್ಲಿ ಆರು ಸಾವಿರ ರೂಪಾಯಿ ಟೆಲಿಫೋನ್ ಬಿಲ್ ಬಂದಂತೆ. ಅವನ ಜನ್ಮದಿನದ ಜೊತೆ ಟೆಲಿಫೋನ್ ನಂಬರ್ ಮಿಲಾಯಿಸಿ ನೋಡಿದರೆ ತಿಳಿಯುತ್ತದೆ.

ಸುಲಭದಲ್ಲಿ ಬಿಡದ ಈ ನ್ಯೂಮರಾಲಜಿಯ ಜಾಡ್ಯ ಶಿವಾಜೋಯಿಸರನ್ನು ಗಟ್ಟಿಯಾಗಿಯೇ ಅಂಟಿಕೊಂಡಿತು. ಅವರು ಎಲ್ಲದರಮೇಲೂ ಪ್ರಯೋಗ ನಡೆಸಿದರು. ಎಲ್ಲವೂ ಒಂದೊಂದು ಬಾರಿಯ ಪರೀಕ್ಷೆಗೊಳಗಾದ ನಂತರ, ಆ ವಸ್ತುವಿಗೆ ನ್ಯೂಮರಾಲಜಿಗೆ ಅಂಟಿದ ನಂಟು ಬಿಡುತ್ತಿತ್ತು. ಆದರೆ ಜೋಯಿಸರು ಮಾತ್ರ ಪ್ರಯೋಗ-ಪ್ರಯೋಗ, ಪ್ರಯೋಗವೆಂದು ಮುಂದುವರಿದೇವರಿದರು. ಕಡೆಗೂ ಅವರ ನಿರಂತರ ಪ್ರಯೋಗಕ್ಕೆ ಒಂದು ವಸ್ತು ಸಿಕ್ಕಿಯೇ ಸಿಕ್ಕಿತು. ಗಾಳಿ ಸವಾರಿ ಹೋಗಿ, ಚಾಮರಾಜಪೇಟೆಯ ಮಲಬಾರ್ ಲಾಜ್ ಪಕ್ಕದಂಗಡಿಯಲ್ಲಿ ಕೊಂಡ ಲಾಟರೀ ಟಿಕೇಟು. ಅವರಂದು ಕೊಂಡುಕೊಂಡದ್ದು ಒಂದೇ ಒಂದು ಕರ್ನಾಟಕ ರಾಜ್ಯ ಲಾಟರಿ. ಅದೃಷ್ಟ ಲಕ್ಷ್ಮೀ ಮುಂದಿನ ವಾರವೇ ಅವರನ್ನು ಒಲಿದಳು. ಶಿವಾಜೋಯಿಸರಿಗೆ ಹತ್ತು ರೂಪಾಯಿ ಬಹುಮಾನ ಬಂದಿತು.

ಅಲ್ಲಿಂದ ಮುಂದೆ ಶಿವಾಜೋಯಿಸರ ವೃತ್ತಿಯೂ, ನಿವೃತ್ತಿಯೂ ನ್ಯೂಮರಾಲಜಿಯೇ ಆಯಿತು. ಈ ನ್ಯೂಮರಾಲಜಿಯ ವಿದ್ಯೆಯನ್ನು ಲಾಟರಿ ದಂಧೆಗೆ ಅಳವಡಿಸುವುದನ್ನೇ ಅವರು ಜೀವನದ ಪರಮೋದ್ದೇಶ ಮಾಡಿಕೊಂಡಹಾಗಾಯಿತು. ಒಮ್ಮೆ ಅವರು ಜನ್ಮ ದಿನ ಅಳವಡಿಸಿ ಲಾಟರಿ ಪ್ರಯೋಗ ನಡೆಸುವರು, ಒಮ್ಮೆ ಹೆಸರಿನ ಸಂಖ್ಯೆ, ಒಮ್ಮೆ ಲಾಟರಿಯ ಹೆಸರು, ಅದಲ್ಲದೇ ತಂದ ಲಾಟರೀ ಟಿಕೇಟಿನ ಮನೆಯವರೆಲ್ಲರ ಜನ್ಮಕುಂಡಲಿಯನ್ನೂ ಮಿಲಾಯಿಸಿ ನೋಡುವುದು ಗುಪ್ತವಾಗಿ, ಟಿಕೀಟಿನ ಮೂಲೆಯಲ್ಲಿ, ಅವರ ಲೆಕ್ಕಾಚಾರದ ಪ್ರಕಾರ ಬರಬೇಕಾದ ಹಣದ ಮೊತ್ತ ಬರೆದಿಡುವುದು. ಮಗನ ಹೆಸರಿಗೆ ಹೊಂದುವ ಟಿಕೆಟ್ಟಾದರೆ, ಏಕೆ ಏನೆಂದು ಹೇಳದೇ, ಅವನಿಂದ ಎರಡೋ, ಐದೋ ರೂಪಾಯಿಗಳನ್ನು ಇಸಿದುಕೊಳ್ಳುವುದು_ಹೀಗೇ ನಿರಂತರವಾಗಿ ಏನಾದರೊಂದು ಚಟುವಟಿಕೆಯಲ್ಲಿ ತೊಡಗಿರುತ್ತಿದ್ದರು.

ಪ್ರತೀದಿನ ಸಂಜೆಯವೇಳೆಗೆ ಜೋಯಿಸರು, ಶಿಸ್ತಾಗಿ ಡ್ರೆಸ್ ಮಾಡಿಕೊಡು ಬೀದಿಗಿಳಿವ ಉತ್ಸಾಹಿಗಳಾಗುತ್ತಿದ್ದರು. ಗಾಳಿ ಸೇವಿಸಲೂ, ಲಾಟರಿ ಕೊಳ್ಳಲೂ, ಚಾಮರಾಜಪೇಟೆ ಅವರಿಗೆ ಒಗ್ಗಿದ ಏರಿಯಾ. ಆದರ ಪಿನ್ ಕೋಡ್ ೫೬೦೦೧೮ ಅವರಿಗೆ ಲಕ್ಕೀ ನಂಬರಾದ ಎರಡಕ್ಕೆ ಕೂಡುತ್ತದೆ. ಆದರೆ ಮಲಬಾರ್ ಲಾಜಿನ ಪಕ್ಕದಂಗಡಿ ಲಕ್ಕೀ ಅಲ್ಲ_ಅದು ಮೂರನೇ ಬೀದಿಯಲ್ಲಿದೆ. ಅವರಿಗೆ ಎರಡನೇ ಬೀದಿಯ ಲಾಟರಿಯಂಗಡಿಯೇ ಬೇಕು. ಅಲ್ಲಿಯೇ ಟಿಕೆಟ್ ಹುಡುಕಿ ಹೊರಡುವರು. ಮನೆಯಲ್ಲೇ, ತಾವು ಅಂಗಡಿಯವನಿಗೆ ಕೊಡಲಿರುವ ನೋಟಿನ ಸಂಖ್ಯೆ ಲೆಕ್ಕ ಹಾಕಿಟ್ಟು, ಇಲ್ಲಿ ಅದಕ್ಕೆ ತಕ್ಕ ಟಿಕೇಟಿಗಾಗಿ ಗುಣಾಕಾರ, ಭಾಗಾಕಾರ ಮಾಡುವರು. ಆಗಾಗ ಗಡಿಯಾರ ನೋಡಿ ಸಮಯವನ್ನೂ ಲೆಕ್ಕ ಹಾಕುವರು. ಎಷ್ಟೋ ಬಾರಿ ಅಲ್ಲಿರುವ ಟಿಕೆಟ್ಟಿಗೂ ಲೆಕ್ಕಾಚಾರಕ್ಕೂ ಹೊಂದಾಣಿಕೆ ಆಗದೇ ಖಾಲಿ ಕೈಯಲ್ಲಿ ವಾಪಸ್ಸಾದುದಿದೆ. ಸುಮಾರು ಅರ್ಧ ಗಂಟೆಯ ಕಾಲ ಟಿಕೆಟ್ಟುಗಳ ಕಟ್ಟಿನ ಮೇಲೆ ಎರಗಿ ನಿಂತು ಟಿಕೆಟ್ ಕೊಂಡರೆ, ಕೊಂಡ ಟಿಕೆಟ್ಟನ್ನು ಹತ್ತು ನಿಮಿಷ ಸವರಿ ಸವರಿ ನೋಡುವರು. ಎಷ್ಟೋ ಬಾರಿ, ಆ ಹಂತದಲ್ಲೂ ಸಮಾಧಾನವಾಗದೇ ಟಿಕೆಟ್ ವಾಪಸ್ ಮಾಡಿದ್ದಿದೆ. ಅಂಗಡಿಯವನಿಗೆ ಮೊದಮೊದಲು ಕಿರಿಕಿರಿ ಎನ್ನಿಸಿದರೂ, ಕ್ರಮೇಣ ಜೋಯಿಸರ ರೀತಿ ಅಭ್ಯಾಸವಾಗಿಬಿಟ್ಟಿತು. ಬರಬರುತ್ತಾ ಜೋಯಿಸರು, ಚಾಮರಾಜಪೇಟೆಯಿಡೀ, ಲಾಟರಿ ಜೋಯಿಸರೆಂದೇ ಪ್ರಖ್ಯಾತರಾದರು.

ಶಿವಾಜೋಯಿಸರು ಲಾಟರಿ ಫಲಿತಾಂಶ ನೋಡುವುದಕ್ಕು ಒಂದು ಪದ್ಧತಿ ಏರ್ಪಾಟು ಮಾಡಿಕೊಂಡರು. ಮನೆಯ ಪೇಪರಿನಲ್ಲಿ ಅವರೆಂದೂ ಫಲಿತಾಂಶ ನೋಡುವವರಲ್ಲ. ಅದಕ್ಕೆ ಬೇರೆ ಬೀದಿಯ ಬೇರೊಂದೇ ಅಂಗಡಿಯನ್ನು ಖಾಯಂ ಮಾಡಿಕೊ
ಡಿದ್ದರು. ಜೋಯಿಸರ ಪದ್ಧತಿ, ಲೆಕ್ಕಾಚಾರ ಈ ಮೂರು ವರ್ಷಗಳ ಕಾಲಾಂತರದಲ್ಲಿ ಅನೇಕೆ ಮಾರ್ಪಾಟುಗಳನ್ನೂ ಪಡೆದು, ಕಾಂಪ್ಲಿಕೇಟ್ ಆಗುತ್ತಾ ಹೋದರೂ, ಅವರಿಗೆ ಮತ್ತೆ ಬಹುಮಾನ ಬಂದೇ ಇರಲಿಲ್ಲ.

ಮೂರು ವರ್ಷಗಳ ಸತತ ಪ್ರಯತ್ನದ ನಂತರವು ಫಲಬರದಿದ್ದುದು ನೋಡಿ, ರೋಸಿ ಹೋಗಿ ಅದನ್ನು ಬಿಟ್ಟೇ ಬಿಡುವುದೆಂದು ನಿರ್ಧರಿಸಿ, ಮತ್ತೆ ಬೇರೇನೂ ಮಾಡಲು ತೋರದೆ ಜೋಯಿಸರು ಬೀದಿಗಾದರು. ಅಂದು ಸಂಜೆ ಕೆ. ಆರ್. ರಸ್ತೆ, ಎನ್. ಆರ್. ರಸ್ತೆ, ಜೆ. ಸಿ. ರಸ್ತೆ, ಕಾರ್ಪೋರೇಷನ್, ಕಸ್ತೂರ್ಬಾ ರಸ್ತೆಯ ಮೇಲಾಗಿ ಎಂ. ಜಿ. ರಸ್ತೆ ತಲುಪಿದರು. ಎಂ. ಜಿ. ರಸ್ತೆಯ ಗುಂಟ ನಡೆದು ಬ್ರಿಗೇಡ್ ರಸ್ತೆಗೆ ತಿರುಗಿದರು. ತಿರುಗಿದಾಕ್ಷಣವೇ ಒಂದು ಲಾಟರಿಯಂಗಡಿ ಕಂಡಿತು. ಜೋಯಿಸರಿಗೆ ಹಳೆಯ ಹವ್ಯಾಸ ಬಿಟ್ಟುಕೊಡಲಾಗಲಿಲ್ಲ. ಅವರು ಅಲ್ಲೇ ನಿಂತರು. ಬೇಗನೇ ಒಂದಿಷ್ಟು ಲೆಕ್ಕ ಹಾಕಿದರು. ಇಷ್ಟು ದಿನವೂ ಏಜೆನ್ಸಿಯ ಸಂಖ್ಯೆಯನ್ನು ಪರಿಗಣಿಸಿಯೇ ಇರಲಿಲ್ಲ ಎಂದವರಿಗೆ, ಇದ್ದಕ್ಕಿದ್ದಂತೆ ಜ್ಞಾನೋದಯವಾಯಿತು. ಮತ್ತೆ ಮನಸ್ಸಿನಲ್ಲೇ ಭಾಗಾಕಾರ ಗುಣಾಕಾರ ಮಾಡಿ, ಮೇಲಿನಿಂದ ಮೂರನೆಯ ಟಿಕೆಟ್ ಎಳೆದುಕೊಂಡು ಹಣಕೊಟ್ಟರು. ಟಿಕೆಟ್ಟನ್ನು ಮತ್ತೊಮ್ಮೆ ದಿಟ್ಟಿಸಿ ನೋಡಿ, ಮಡಿಸಿ ಜೇಬಿಗಿಳಿಸಿಯೂ ಬಿಟ್ಟರು.

ಈ ಬಾರಿ ಬಹುಮಾನ ಬರುವುದರಲ್ಲಿ ಜೋಯಿಸರಿಗೆ ಯಾವುದೇ ಅನುಮಾನ ಇರಲಿಲ್ಲ. ಇದ್ದಕ್ಕಿದ್ದ ಹಾಗೆ ಬೋಧಿವೃಕ್ಷದಡಿ ಜ್ಞಾನೋದಯವಾದಂತಹ, ಬದುಕಿನೆಲ್ಲ ರಹಸ್ಯಗಳನ್ನೂ ಭೇದಿಸಿದಂತಹ ಒಂದು ಪ್ರಬುದ್ಧ ಬುದ್ಧ ಭಾವನೆ ಜೋಯಿಸರನ್ನು ಆವರಿಸಿತು.

ಮಹಾ ಉಲ್ಲಾಸದಿಂದ ಸೀಟಿ ಬಜಾಯಿಸುತ್ತ ಇನ್ನಷ್ಟು ದೂರ ನಡೆದರು. ಬಾಸ್ಕೋದಿಂದ ಬರುತ್ತಿದ್ದ ವಿದೇಶೀ ಸಂಗೀತ ಲಯಬದ್ಧವಾಗಿ ಇವರ ಹೊಟ್ಟೆಯ ಮೇಲೆ ಬಡಿಯಿತು. ಜೋಯಿಸರು ಒಂದು ಕ್ಷಣ ಅಲ್ಲಿ ನಿಂತರು_ಹಿಂದೆ ಷೋಕೇಸಿನಲ್ಲಿ ಕುಣಿಯುವ ಹುಡುಗಿಯರ ಚಿತ್ರ ಹಾಕಿರುತ್ತಿದ್ದರು. ಈಗ ಅದು ಇಲ್ಲ ಎಂಬುದನ್ನು ಗಮನಿಸಿ, ಈ ಕ್ಯಾಬರೆ ಎಂಬುದು ಹೇಗಿರುತ್ತದೆಯೋ ಎಂದು ಒಂದು ಕ್ಷಣ ಯೋಚಿಸದಿರು.

“ಮುದುಕನಿಗೆ ಹೇಗೋ ಚಪಲ ಬಿಟ್ಟಿಲ್ಲ…..ಕೈಲಾಗಲ್ಲ, ಒಳಗೆ ಹೋಗಲು ಧೈರ್ಯಾನೂ ಇಲ್ಲ” ಹುಡುಗನೊಬ್ಬ ಹಿಂದಿನಿಂದ ಗೇಲಿ ಮಾಡಿದ.

ಶಿವಾಜೋಯಿಸರು ಮನಸ್ಸಿನಲ್ಲೇ ನಕ್ಕರು. ಹುಡುಗನನ್ನು ಕ್ಷಮಿಸಿದರು. ತಿರುಗಿ ಎಂ. ಜಿ. ರಸ್ತೆಯತ್ತ ಹೆಜ್ಜೆ ಹಾಕಿದರು. ಟ್ರಾಫಿಕ್ ಸಿಗ್ನಲ್ ಸಿಕ್ಕಾಗ ಎಂ. ಜಿ. ರಸ್ತೆಯನ್ನೂ ದಾಟಿ, ಆಚೆ ಬದಿಯ ಎತ್ತರದ ಫುಟ್‌ಪಾತಿನ ಮೇಲೆ ಮನೆಯತ್ತ ಹೆಜ್ಜೆ ಹಾಕಿದರು. ಸ್ವಲ್ಪ ಸುಸ್ತಾದಂತೆನಿಸಿತು. ಛಳಿಗೆ ನಡುಗಿದರು. ಈ ವಯಸ್ಸಿಗೆ ಈ ದಿನ ನಡೆದುದು ಸ್ವಲ್ಪ ಜಾಸ್ತಿಯೇ ಆಯಿತು. ಸುತ್ತಮುತ್ತ ನೋಡಿ ಕಲ್ಲುಬೆಂಚಿನ ಮೇಲೆ ಕುಸಿದು ಕುಳಿತರು. ಜುಬ್ಬಾದ ಜೇಬಿನಿಂದ ಲಾಟರಿ ಟಿಕೆಟ್ ತೆಗೆದು ಮತ್ತೊಮ್ಮೆ ಲೆಕ್ಕಾಚಾರ ಮಾಡಿದರು. ಹೊಸದಾಗಿ ಕಟ್ಟಿದ ಬಾರ್ಟ ಟವರನ್ನು ಎವೆಯಿಕ್ಕದೇ ಎರಡು ನಿಮಿಷ ನೋಡಿದರು. ಅಂದಿನ ಲಾಟರೀ ವ್ಯಾಪಾರದ ಬಗ್ಗೆ ಅವರಿಗೆ ಜೀವನದ ನಿಗೂಢ ರಹಸ್ಯವನ್ನು ಬಹಳ ಸರಳವಾಗಿ ಭೇದಿಸಿದಷ್ಟು ಸಂತೃಪ್ತಿಯಾಗಿ ಟಿಕೆಟ್ಟನ್ನು ಕೆಳಗಿಟ್ಟರು.

ವೇಗದಿಂದ ಸರಳ ರೇಖೆಯಂತೆ ಹೋಗುತ್ತಿದ್ದ ಸಾಲುವಾಹನಗಳನ್ನೇ ನೋಡುತ್ತಾ ಜೋಯಿಸರು ಕುಳಿತಿದ್ದರು.

ಕುಳಿತಲ್ಲೇ ನಿದ್ದೆ ಹೋದಂತಿದ್ದ ಅವರ ಕಣ್ಣಲ್ಲಿ, ಜೋರಾಗಿ ಓಡುತ್ತಿದ್ದ ವಾಹನಗಳು ಇದ್ದಕ್ಕಿದ್ದಂತೆ ಸ್ಥಗಿತಗೊಂಡವು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.