‘ಅಯ್ಯೋ, ನಿನ್ ಸೊಲ್ಲಡ್ಗ, ಸುಮ್ನಿರೋ, ಯಾಕಿ ಪಾಟಿ ವಟ್ಟುರ್ಸ್ಕಂದಿಯೇ, ನನ್ನಾ” : ವತಾರಿಂದ್ಲು. ಇದೇ ಗೋಳಾಗದಲ್ಲಾ’ ’ ಎಂದು ಮಗ ಹೂವನಿಗೆ ಶಾಪ ಹಾಕಿ ಕಣ್ಣು ವಂಡರಿಸಿ ಜೋರು ಸ್ವರದಲ್ಲಿ ಕೂಗಿ ಕೊಂಡಳು. ಹೂವ ಯಾವ ಕೇರೂ ಮಾಡದಂತೆ ಅಳುವುದೊಂದೇ ಈ ಜಗತ್ತಿನಲ್ಲಿ ತನಗೆ ಗೊತ್ತಿರುವುದು ಎಂಬಂತೆ ರಾಗಬದ್ಧವಾಗಿ ಪಾಡುತ್ತಿದ್ದ. ಹಾಳಾದ್ ಜಲ್ಮುವೇ ವೂಗು: ಅದ್ಯಾವ್ ಕರ್ಮ ಮಾಡಿ ನನ್ನ ಎತ್ತುಬುಟ್ಟು ಸತ್ತೋದ್ಲೋ ಆ ನಮ್ಮವ್ವಾ ಅನ್ನಿಸ್ಸೋಳು’ ’ ಎಂದು ಮತ್ತೆ ಗೊಣಗಿಕೊಂಡು ‘ಅಂಗೇ ಮಾಡ್ತಿರು ಬತ್ತೆನೆ : ಚನ್ನಗೆ ಬಿಟ್ಟಿ ಯಂಡ ನೆಕ್ಕಂಡು. ಆಗ್ಲೂ ಅವುನ್ ಮುಂದೆ ಬಾರ್ಸುವಂತೆ ನಿನ್ ಕಿನಿಡಿಯಾ’ ಎಂದು ಹೊರ ಬಂದಳು.
ಹೂವ ನಿಧಾನಗತಿಯಲ್ಲಿ ಅಳುವಿನ ಸಾವಿರಾರು ರೂಪವನ್ನು ಬಿಚ್ಚುಡುತ್ತೇನೆ ಎನ್ನುವ ಹಾಗೆ ಒಮ್ಮೆ ಜೋರಾಗಿ ಇನ್ನೊಮ್ಮೆ ಮೆಲ್ಲಗೆ ಮತ್ತೊಮ್ಮೆ ದುಕ್ಕು ದುಕ್ಕಳಿಸುತ್ತಾ ಮಗದೊಮ್ಮೆ ಸೊರಸೂರೆನ್ನುತ್ತ, ನಿರ್ಜೀವಿಯಂತ ತನ್ನ ಕಣ್ಣುಗಳನ್ನು ಕೀಲಿಸಿ ಅಳತೊಡಗಿದ್ದ. ಮನೆಯವರು ಇವನ ಬಗ್ಗೆ ಸಿಟ್ಟು ಮಾಡಿಕೊಳುತ್ತ‘ಇದೇನ್ ಮೂದೇವಿಯಾಗುಟ್‌ಬುಡ್ತು ಇದು. ವತಾರಿಂದ್ಲು ತಕಕುಂತವನಲ್ಲಾ ವಾಲುಗ್ವ’ ಎಂದು ಬಗೆಬಗೆಯಾಗಿ ಬೈಯ್ದುಕೊಂಡರು. ಆದರೂ ಆ ಅಳು ಯಾಕೋ ಅವನ ಬಾಯಿಂದ ನಿಲ್ಲದೇ ಹೋಯಿತು. ತಳತಳಾರಿಸಿಕೊಂಡು ಅಳುವಿನ ಎಳೆಗಳೆಲ್ಲವನ್ನು ಆ ಕಡು ಕುಟುಂಬದ ದೊಡ್ಡ ಮನೆಯೊಳಗಿದ್ದವರ ಎದುರೆಲ್ಲ ಗೊಳೋ ಎನ್ನುತ್ತಿದ್ದ. ಅಕ್ಕ ಪಕ್ಕದ ಮನೆಯ ಜನ ‘ಯಾಕೋ ಅಳ್ತಾವ್ನೆ, ಬಿಡು, ಎಷ್ಟಂತ ಅತ್ತನು : ಅಮೆಕವನೆ ಬಾಯ್ ಮುಚ್ಕಂಡ್ ಬಿದ್ಕತನೆ’ ಎಂದು ನಂಬಿದ್ದೆಲ್ಲ ಈಗ ಸುಳ್ಳಾಗಿ ಒಂದು ಸಮಸ್ಯೆಯಾಗಿ ಗುಯ್‌ಗುಡುವ ಗುಂಗೆಹುಳುವಂತೆ ಬಾದಿಸತೊಡಗಿದ.
ಇಷ್ಟೆಲ್ಲ ಆಗುತ್ತಿರುವಂತೆ ಅವನ ಅವ್ವ ಸಿದ್ದಿ ತಡೆಯಲಾರದೆ, ತನ್ನ ಜೀವನದ ಎಷ್ಟೋ ಹತಾಶೆ, ಸಂಕಟ, ಸಿಟ್ಟುಗಳಿಂದೆಲ್ಲ ಚಿಟ್ಟ ಹಿಡಿದಿದ್ದವಳು ಅವನ ಅಳು ಕೇಳಲಾರದೆ ಓಡಿಬಂದು ಬಿದ್ದಿದ್ದ ಹೂವನ ಬೆನ್ನ ಮೇಲೆ ಢಮಢಮ ಎಂದು ನಗಾರಿಗೆ ಬಡಿದಂತೆ ಬಡಿದಳು. ‘ನಿಲ್ಸು ನಿನ್ನ ಸದ್ದಾ, ನಿಲ್ಸು, ನಿಲ್ಸೂ. ನಿಲ್‌ಸ್ಲಾ” ಸಾಯ್‌ಸ್ ಬುಡ್ತೀನಿ ನೋಡು’ ಎಂದು ಹಲ್ಲುಕಡಿಯುತ್ತಾ ‘ಎಷ್ಟಿದ್ದದು ನಿನ್ ತಿರಾಣ. ಮುಚ್ಚು ಬಾಯ. ಹಾಂ ! ನನ್ನೇ ತಳ್ಳಿಯ. ನಿನ್ನಿಂದ ಇವತ್ತು ನಾ ಸತ್ರು ಸರಿಯೇ. ನಿನ್ನಳಾ ನಿಲ್ಲುಸ್ದೆ ಬಿಡೂದಿಲ್ಲ’ ಎಂದು ರೋಷದಿಂದ ಮೈಮೇಲಿನ ಪ್ರಜ್ಞೆ ತಪ್ಪಿದವಳಂತೆ ‘ಯಾವ್ ಸನೀ ವಕ್ಕಂದಿದ್ದದೋ ಗೊತ್ತಿಲ್ವಲ್ಲಪ್ಪಾ ?’ ಎಂದು ಆವೇಶಕ್ಕೀಡಾಗಿ ಹೂವನ ಬಾಯನ್ನು ಬಿಗಿ ಹಿಡಿದು ; ಹಾಗೂ ಸದ್ದು ಬರಲು ಆತನ ಕುತ್ತಿಗೆಯನ್ನು ಇಚುಗುತ್ತ ‘ಸಾಯಿ ಸಾಯಿ’, ಯಾವ ಸುಕುಕ್ಕೆ ನಿನ್ನೆತ್ತುದ್ನೋ’ ಎಂದು ಅವನ ಮೃದು ಕೊರಳ ಬಿಗಿಗೊಳಿಸಿದಳು.
ಹೂವ ರಾಕ್ಷಸನಂತೆ ದೊಡ್ಡ ಗಂಟಲನ್ನೇ ತೆಗೆದ. ಎಲ್ಲಿಂದಲೋ ಓಡಿಬಂದ ಹೂವನ ತಾತ ಸಿದ್ದಿಯ ಅವತಾರ ಕಂಡು ‘ರಾಮರಾಮಾ” ಸಾಯ್ಸುಬುಡಮ್ಮಿ. ಮೇಯ್ ಯಾಕ್ ಬಿಟ್‌ಬುಟ್ಟಿ ಸಾಯ್ಸಮ್ಮಿ, ಒಬ್ಬೊಬ್ಬ್ರೂ ಯಣಾ ವುಳ್ಸಕೆ ಬಂದಿದ್ದೀರಾ ? ದೇವ್ರೇ ಈ ಕರ್ಮವ ಯಾವತ್‌ಗೆ ತಪ್ಸೀಯಪ್ಪಾ, ಅರಿವೈದುನ್ಗೆ ಇಂಗೆ ಇಂಸೆ ಕೊಟ್ಟರೆ ಲೋಕ್ದೆಲ್ಯಾರಾರ ?’ ಎಂದು ಗದ್ಗದಿತ ಸ್ವರದಲ್ಲಿ ಮಾತನಾಡುತ್ತ ಹೂವನ ಬಳಿ ಹೋಗಿ ಆತನ ಮೈ ಸವರಿ ತಲೆ ನೀವಿ ‘ಸುಂನಿರು, ಅತ್ತೂ ಅತ್ತು ಸುಸ್ತ್ ಮಾಡ್ಕಬ್ಯಾಡ’ ಎಂದು ಆತನ ಕೆನ್ನೆ ಮೇಲೆ ಇಳಿದಿದ್ದ ನೀರನ್ನು ಚೌಕದಿಂದ ಹೊರೆಸುತ್ತಾ ಸಮಾಧಾನಿಸಲು ತೊಡಗಿದ.ಕೂಲಿಗೆ ಹೋಗಿದ್ದ ಅವರಿವರೆಲ್ಲ ಮನೆ ತುಂಬಿಕೊಂಡರು. ಮಧ್ಯಾಹ್ನದ ಹಸಿವು ಮರೆಸಲು ಇರುತ್ತಿದ್ದ ಟೀ ಬೋಂಡವನ್ನು ಅಂಗಡಿಯಿಂದ ತಂದು ಮೊದಲೇ ಇವನಿಗೆ ಕೊಟ್ಟು ತಿನ್ನಿಸಿ ಸಮಾಧಾನ ಮಾಡಬೇಕೆಂದು ಅವನ ಅಜ್ಜಿ ಅಣಿಯಾಗಿ ಮುಂದೆ ಬಂದು ಪ್ರೀತಿಯಿಂದ ಕರೆಯುತ್ತಾ ‘ಬಾಪ್ಪಾ ಬಾ, ಅತ್ತೂ ಕರ್ದು ಇಂಗ್ಮಾಡೂಕೆ ಏನಪ್ಪಾ ಕಟ್ಟ ನಿನ್ಗೆ. ತಕೋ, ತಿನ್ನು ತಿನ್ನು’ ಎಂದು ಬೋಂಡ ಟೀಯನ್ನು ಮುಂದಿಟ್ಟಳು. ಹೂವ ಇವಾವುದಕ್ಕೂ ಸೊಪ್ಪು ಹಾಕದೆ ಕೊಸರಾಡಿ ಅಂಗಡಿಯಿಂದ ಕೊಂಡು ತಂದಿದ್ದ ಟೀಯನ್ನು ಕಾಲಿಂದ ತಳ್ಳಿ ಉರುಳಿಸಿಬಿಟ್ಟ. ಆ ಜೀವಿಗಳ ಹೊಟ್ಟೆ ಹಸಿವನ್ನು ಮರೆಸಬೇಕಿದ್ದ ಟೀ ತೊಪ್ಪೆ ನೆಲದ ಮೇಲೆ ಹರಿದು ನೆಲದ ಬಾಯಲ್ಲಿ ಅವಿತುಕೊಂಡಿತು. ‘ಇಂಗ್ಮಾಡುದ್ನಲ್ಲಾ’ ಎಂದು ಸಿಟ್ಟೆದ್ದು ಅವನ ಅಜ್ಜಿ ‘ಥೂತ್ ಸನಿಗೇಡಿದೆ ವೋಗು. ಇದ್ಯಾವ್ ರೋಗಂದಾರು. ಅನಿಸೀಸೀ” ಮುಖ ನೋಡ್ರಪ್ಪ ಮುಖವಾ, ಊರಗಲ ಬಾಯ್ ಕಿಸ್ಕಂದು ವಂಗ್ಲೋ ಅಂತ ಬಡ್ಕತದೆ. ಯಾರ್ ಸತ್ತೋಗಿದ್ದಾರೋ ಕಾಣ್‌ನಲ್ಲಪಾ ; ಏನ್ ನಿಮ್ಮವ್ವ ಸತ್ತೋಗಿದ್ದಾಳ್‌ಲಾ?’ ಎಂದು ಮುಖಕ್ಕೆ ತಿವಿದು ಒಂದೆಡೆ ಮಂಕಾಗಿ ಕುಳಿತಳು. ಟೀ ತಪ್ಪಿ ಹೋಗಿದ್ದರಿಂದ ಎಲ್ಲರಿಗೂ ಹಸಿವಿನಿಂದ ಹೂವನ ಬಗ್ಗೆ ಸಿಟ್ಟು ಏರಿತು. ಇನ್ನೂ ಅಳುತ್ತಲೇ ಇದ್ದ ಅವನ ರಾಗಕ್ಕೆ ಪಕ್ಕದ ಮನೆಯವಳು ಬಂದು ‘ಅತ್ತೆಯೋವ್ ; ಇವುಂದೇನಂತಾ ನೋಡ್ರವ್ವಾ. ಈ ಅಮಾಸೆ ದಿನ್ದೇಲಿ ಇಂಗ್ ಗೋಳಾಡುದು ಏನ್ ವೊಳ್ಳೆದಂತಾ ತಿಳ್ಕಂಡಿದ್ದೀರಾ’ ಎಂದು ಹೇಳಿ ಅವನ ಅಳ ನಿಲ್ಲಿಸಿ ಎಲ್ಲರ ಮೆಚ್ಚಿಗೆ ಪಡೆದು ; ಕೇರಿಯಲ್ಲಿ ಹೂವ ತನ್ನೊಬ್ಬಳ ಮಾತನ್ನೇ ಕೇಳುತ್ತಾನೆ ಎಂದು ಪ್ರದರ್ಶಿಸಲು ಪ್ರಯತ್ನಿಸಿದಳು. ‘ಮೊಗಾ ಯಾರೊಡುದ್ರಪ್ಪಾ. ಮಾತಾಡಪ್ಪಾ”. ನೋಡ್ದಾ ನೋಡ್ದಾ” ನಿನ್ ಬೆಲ್ಲ ಚೀಪ್ಕತೀನಿ ಸುಂನಿರಪ್ಪಾ’ ಎಂದು ಎಳೆದುಕೊಂಡು ಆತನ ಬಾಯಿಂದ ಸದ್ದು ಹೊರಬರದಿರಲಿ ಎಂಬಂತೆ ತನ್ನ ಎದೆಗೆ ಅವನ ಮುಖವನ್ನು ಒತ್ತಿಹಿಡಿಹುಕೊಂಡಳು. ತಕ್ಷಣವೇ ‘ಅಯ್ಯೋ ಸ್ಸು””’ ಎಂದು ಹೌಹಾರಿ ನೋವಿನಿಂದ ‘ಹಾಳಾದೋನೆ ವೋಗು, ಇದೇನ್ ಬಂದಿದ್ದದೋ ನಿನ್‌ನೆಲ್‌ಪಟ್ವಡಿಯಾ’ ಅಲ್ಲಳ್ನೋವಂಗೆ ಮೊಲೆ ಕಚ್ ಬುಡ್ನಲ್ರವ್ವಾ’ ಎಂದು ಸಿದ್ದಿಯ ಕಡೆ ತಿರುಗಿ – ‘ಇದೆಂತಾ ಮಗನ್ನಾ ಎತ್ತಿದ್ದೀಯಮ್ಮೀ. ಅಯ್ಯಯ್ಯೋ, ನೋಡವ್ವಾ ಯಂಗ್ ಅಲ್ಲಳ್ನೋವಂಗೆ ಕಚ್ಚವನೆ’ ಎಂದು ತನ್ನ ಮೊಲೆಗಳನ್ನು ತೋರಿಸತೊಡಗಿದಳು.
ಸಿದ್ದಿ ತನ್ನ ಮಗನ ರಂಪ ಕಂಡು ಏನೂ ಮಾಡಲಾರದೆ ‘ತೊಟ್ಲಲ್ಲಿದ್ದಾಗ್ಲೇ ಕತ್ ಚಿಮ್ಮಿ ಸಾಯಿಸ್‌ಬೇಕು ಅನ್ಕಂಡಿದ್ದೆ. ಏನ್ ಮಾಡ್ಲವ್ವಾ, ಗ್ರಾಚಾರ ಹಿಡ್ಕಂದದೆ ಅವುನಿಂದ ನಾ ಬದ್ಕುವಂಗಿಲ್ಲ’ ಎಂದು ಹಣೆ ಹಣೆ ಚಚ್ಚಿಕೊಂಡು ಧಾರಂದಕ್ಕೆ ತಲೆ ಆನಿಸಿ ತದೇಕಚಿತ್ತದಿಂದ ಎತ್ತಲೋ ನೋಡುತ್ತಾ. .. ‘ಈ ಮಗನಾ ಎರುವಾಗ ಎಂತಾ ಬಾಧೆ ತಿಂದೆ. ಸತ್ತೇ ವೋಯ್ತಳೆ ಅಂತಾ ಎಲ್ರೂ ಮ್ತಿದ್ರಲ್ಲಾ. ಎತ್ಮೇಲಾದ್ರೂ ಆಳಾದ್ ಗಂಡ ಅನ್ನಿಸ್ಕೋನು ಬಾಣಂತನಾ ಅಂತ ಒಂದಿನಾರೂ ಸೀಗ್ಡಿ ಕರ್ಮೀನು ಅಂತಾ ತಂಡ್ಕೊಡ್ಲಿಲ್ಲ. ಒಂದೆಣ್ಣೆ ಒಂದೂಟ ಅಂತಾ ಮಾಡ್ಲಿಲ್ಲ. ಯಾವ್ ನನ್ ಸವುತಿಯೂ ಎಂಗಿದ್ದೀಯಮ್ಮಿ ಅನ್ಲಿಲ್ಲಾ. ನನುಗ್ ನಾನೇ ಈದ್ ನಾಯಂಗೆ ಏನೂ ತಿನ್ನುಕಿಲ್ದೆ, ಕೊಳ್ತ್‌ಬಾಡ್ನೇ ಅವ್ರಿವ್ರು, ಎಲ್ಲೋ ಸತ್ ದನುದ್ನೆ ತಂದ್ಕೊಟ್ಟುದಾ ತಿನ್ಕಂದು ಇವ್ನ ಸಾಕುದ್ನಲ್ಲಾ. ಚನ್ನಗೆ ಎಂಜ್ಲೆಂಡ್ವ ನೆಕ್ಕ ಬಂದು ‘ಇದೂ” ನನ್ನುಗುಟ್ಟಿದ್ದದೆ ಈ ಕರಿ ಮೋರೆ ವೊತ್ತಿರುದು’ ಅಂತ ಒಂದ್ವಾರವಾದ್ರೂ ಒಂದಿನ್‌ವಾದ್ರೂ ಎತ್ತಿ ಮುತ್ತಿಕ್ಕದಕ್ಕೆ ಬುಟ್ ಬುಟ್ಟಾ ಗಂಡಾ ಅನ್ನಿಸ್ಕೋನು..ಹಾಳಾದೆಲಿ ಒಂತೊಟ್ಟೂ ಹಾಲಿಲ್ದೆ ವಂಗ್ಲೋ ಅಂತ ಆಗಲೂ ಇಂಗೇ ಬಡ್ಕತಿದ್ನಲ್ಲಾ. .. ಏನ್ ಕೊಡ್ಲಿಲ್ಲ ಅಂತ ಇಂಗತ್ತನು. ಯಾವ್ ಬಾಡ್ಮಡ್ಕಂದು ಅನ್ನ ಮಾಡ್ಕಂದು ತಿಂಡಿಮಾಡ್ಕಂದು ; ಬನ್ನಿಂತ್ರನೂ ಕೊಡ್ದಂಗೇನಾರ ನಾವೇ ತಿನ್ಕಂದಿದೇವಾ’ ಎಂದು ತನಗೆ ಅನಿಸಿದಂತೆಲ್ಲ ಲೆಕ್ಕ ಹಾಕತೊಡಗಿದಳು. ಆದರೂ ಅಳುವಿಗೆ ನಿಖರ ಕಾರಣ ಯಾರಿಗೂ ಗೊತ್ತಾಗಿಲ್ಲ.ಹೂವ ಮುಸುಮುಸುನೆ ಏರಿಳಿದ ದೀರ್ಘ ಉಸಿರುಬಿಡುತ್ತಾ ವದ್ದಾಡ ತೊಡಗಿದ. ಮನೆಯ ಮುರುಕಲು ಹೆಂಚುಗಳಿಂದ ಕೊರೆವ ಬಿಸಿಲ ಕಿರಣಗಳು ಸುಸ್ತಾಗಿ ಹೆಪ್ಪುಗಟ್ಟಿದ ತೋಯ್ದಿದ್ದ ಅವನ ಮುಖದ ಮೇಲೆ ಬಿದ್ದು ವಿಚಿತ್ರ ರೂಪವನ್ನು ಆರೋಪಿಸಿದ್ದವು. ಅವನ ವರ್ತನೆ ವಿಚಿತ್ರ ಪ್ರಾಣಿಯಂತೆ ಕಂಡು ಎಲ್ಲರೂ ಗಬರಿಯಗಿ ಅಲ್ಲಲ್ಲಿದ್ದವರು ಬಂದು ನೋಡಿದರು. ಜಡ್ಡು ತತ್ತರಿಸಿ ಹೋಗಿದ್ದ ಆ ಮನೆಯ ಜನರ ನಂಬಿಕೆಗಳು ತಳಾಮಳಗೊಂಡು ಏನೋ ಗ್ರಹಿಸಿ : ‘ದೇವ್ರೇನಾದ್ರೂ ಬಂದಿದ್ದದೇ ನೋಡ್ರಪ್ಪಾ’ ಎಂದರು. ಹೀಗೆ ಹಿಂದೆ ಯಾವಾಗಲೋ ಒಮ್ಮೆ ದೊಡ್ಡವರನ್ನು ಅನುಕರಿಸಿ ಹೂವ ದೇವರು ಬಂದಿದೆ ಎಂಬ ಆಟಆಡಿ ಎಲ್ಲರಿಗೂ ಬೆರಗು ಹುಟ್ಟಿಸಿ ಆಗ ನಂಬಿಸಿ ಬಿಟ್ಟಿದ್ದ. ಆ ನೆನಪಲ್ಲೇ ಈಗ ಆ ಮನೆಯ ಜನ ತರ್ಕಿಸಿ ಇವನ ಮೇಲೆ ಯಾವುದೋ ಹೊರಗಿನ ದೇವರು ಬಂದಿರಬಹುದೆಂದು ತೀರ್ಮಾನಿಸಿದರು.
ಹೂವನ ವಿಕಾರ ಕಂಡವರು ‘ಇರಬೇಕು, ಇಂಗೇ ವತರಿಂದ್ಲು ಚಂಡಿ ಇಡ್ಕಂಡು ಏಟ್ಗೂ ಪಾಟ್ಗೂ ಯಾರ್ಗೂ ಜಗ್‌ದಂಗೆ ಇರ್ಬೇಕಂದ್ರೆ : ಇದು ದೇವ್ರೇ ಆಗಿರ್‌ಬೋದು’ ಎಂದು ಹೆದರಿ ಎಲ್ಲರೂ ಅವನ ಎದುರು ಬಂದು ಮೂಕವಿಸ್ಮಿತರಾದರು. ಹೂವ ಮೆಲ್ಲಗೆ ಎದ್ದು ಕುಳಿತು ಎಲ್ಲರೂ ಸೇರಿ ತನಗೆ ಹೊಡೆಯಲು ಬಂದಿದ್ದಾರೋ? ಎಂದುಕೊಂಡು ಅಳು ತಗ್ಗಿಸಿ ಕೆಂಪಾಗಿ ಊದಿಕೊಂಡಿದ್ದ ಕಣ್ಣುಗಳನ್ನು ವಕ್ರವಾಗಿ ಎಲ್ಲರ ಮೇಲೂ ಬೀರಿದ.
ಅವನ ಅಜ್ಜಿ ದೀರ್ಘದಂಡ ನಮಸ್ಕಾರ ಹಾಕಿ ಗಂಧದ ಕಡ್ಡಿ ಹಚ್ಚಿ ಹಣೆಗೆ ಕುಂಕುಮ ಹಚ್ಚಿ ಭಯಭಕ್ತಿಯಿಂದ ‘ಸ್ವಾಮಿ” ನನ್ನಪ್ನೆ ಎಲ್ಲಾ ತಪ್ನೂ ವಟ್ಕಾಕಂಡು ಈ ಪಾಪಿಗೋಳ ನೋಡೂಕೆ ಕೊನೆಗೂ ಬಂದ್ಯಲ್ಲಾ’ ಎಂದು ಆರಭಿಸಿ ಈ ದೇವರು ತಮಗಾಗಿ ಏನನ್ನಾದರೂ ದರಿತೋರುತ್ತದೆಂಬಂತೆ ಬಗ್ಗಿ ನಿಂತಳು. ಎಲ್ಲ ಜನ್ ಈಗ ವಿಚಿತ್ರ ಮುಖಾಮುಖಿಯಲ್ಲಿ ದೇವರ ಕೈಯಲ್ಲಿ ಸೆರೆಸಿಕ್ಕಂತೆ ತತ್ತರಿಸಿ : ಅದು ಏನಾದರೂ ಮಾತಾಡಲಿ ಎಂದು ಕಾದರು. ಹೂವ ಏನನ್ನೂ ಕಾಣದವನಾಗಿ : ಸ್ವತಃ ತನ್ನ ಈ ದೀರ್ಘ ದುಃಖಕ್ಕೂ ಕಾರಣ ಗೊತ್ತಗದಗಿ : ವಾಸ್ತವವ್ವು ಮರೆತು ನಿಚ್ಚಳವಾಗಿ ಸದ್ದಿಲ್ಲದೆ ಕಣ್ಣೀರು ಇಳಿಸತೊಡಗಿದ. ಅವನ ತಾತ ನಡುಗುವ ಸ್ವರದಲ್ಲಿ ‘ದೇವ್ರೇ ಅಳುವಂತಾ ತಪ್ಪು ನಾವೇನ್ ಮಾಡಿದ್ದೆವೋ ಕಾಣ್‌ನಲ್ಲಪ್ಪಾ’ ಎಂದು ದೇವರು ಮಾತನಾಡುತ್ತದೆಂದು ಅವನೂ ಕಾದ. ಹೂವನ ಅವ್ವ ತನ್ನ ಮಗನ ಮೇಲೆ ದೇವರೇ ಬಂದಿದೆ ಎಂದು ತಿಳಿದು ಬೆಳಿಗ್ಗೆ ಕಾಣದೆ ಕತ್ತು ಹಿಸುಕಲು ಹೋಗಿದ್ದೆನಲ್ಲಾ ಎಂದು ಬೆವರತೊಡಗಿದಳು. ‘ನನ್ನಪ್ನೇ ಈ ವುಳಗೋಳ ಸಕನೆ ಪರೀಕ್ಸೆ ಮಾಡ್ಬೇಡ. ನೀವೆ ಇಂಗತ್ರೆ ಇನ್ನು ನಮ್ಮಂಥ ನರಪ್ರಾಣಿಗೋಳ ಪಾಡೇನು. ಹಾಳಾದ್ ಕಣ್ಣೆಲಿ ನೋಡಿ ನೋಡಿ ಇದೆಲ್ಲಾ ಸಾಕಾಗೋಗದೆ. ಎನಾರ ಒಂದ್ ವಚನ ಕೊಡಿ. ನಮ್ಮ್ ತಪ್ಪ್ ತಿದ್ತಿ ಒಂದ್ ಸಮಾಚಾರ ಏಳಿ ಎಂದು ಬೇಡಿಕೊಂಡ. ತಾತನ ಮುಖವನ್ನು ಹೂವ ದಿಟ್ಟಿಸಿದ. ಯಾರಿಗೂ ಯಾವ ಉತ್ತರವೂ ಬರಲಿಲ್ಲ. ಹೊಳೆಯಲಿಲ್ಲ. ದೇವರು ಮುನಿದಿದ್ಡಾನೆ ಎಂದೆನ್ನುಕೊಳ್ಳುತ್ತಿರುವಂತೆಯೇ ಹೂವನ ಚಿಕ್ಕಪ್ಪ ‘ನೀವು ಮಾತಾಡ್ದೆ ಇದ್ರೆ ನಾವು ಮೆಣುಸುನ್ ಕಾಯ್ ವಗೆ ಕೊಡ್ತೀವಷ್ಟೆ’ ಎಂದು ದೇವರನ್ನೇ ಹೆದರಿಸಿದ. ಹೂವನ ಕೊನೆಯ ತಂಗಿ ಇದೆಲ್ಲವೂ ಸಾಕ್ಷಿಯೆಂಬಂತೆ ಜರ್ಜರಿಳತಳಾಗಿ ಅಳುವ ಮನಸ್ಸಿಂದ ನೋಡುತ್ತ ಸಿದ್ದಿಯ ಮರೆಯಲ್ಲಿ ಕುಳಿತಿದ್ದಳು. ಒಬ್ಬೊಬ್ಬರೂ ಆ ಸಮೂಹದಲ್ಲಿ ತರತರದಲ್ಲಿ ಕಲ್ಪಿಸುತ್ತಾ ಈ ಬಗ್ಗೆ ಯೋಚಿಸತೊಡಗಿದರು. ಹೆಂಗಸರು ಇದು ಹೆಣ್ಣು ದೈವವೋ ಗಂಡು ದೈವವೋ ವಿಚಾರ ಮಾಡಿ ಅಳೋದ್ರಿಂದ ಇದು ಹೆಣ್ಣು ದೈವವೇ ಇರಬೇಕೆಂದು ಕಂಡು ಹಿಡಿದು ಈಗ ಇನ್ನೊಂದು ಬಗೆಯಾಗಿ ದೇವರ ಎದಿರು ಮಾತನಾಡಲು ತೊಡಗಿದರು.
ಇಷ್ಟಾದರೂ ಹೂವ ಅಳುವುದನ್ನು ಬಿಟ್ಟಿರಲಿಲ್ಲ. ಶಬ್ದವಿಲ್ಲದೆಯೇ ಉಮ್ಮಳದ ದುಕ್ಕಳಿಕೆಯನ್ನು ಎದೆಗೆ ಗುದ್ದಿಕೊಳ್ಳುತ್ತಾ ಕಣ್ಣೀರು ಹರಿಸುತ್ತಾ ‘ನಂಗೆ ನೀರು ಬೇಕು’ ಎಂದ. ಮುಂಜಾವಿನಿಂದ ಆತ ಏನನ್ನೂ ತಿಂದಿರಲಿಲ್ಲ. ಕುಡಿದಿರಲಿಲ್ಲ. ಅತ್ತೂ ಅತ್ತೂ ಸುಸ್ತಾಗಿದ್ದ. ದಢಾರೆಂದು ಹೋಗಿ ಅವನ ಅವ್ವ ಕಂಚಿನ ದೊಡ್ಡ ತಪ್ಪಲೆಯಲ್ಲಿ ನೀರು ತಂದಿಟ್ಟಳು. ಹೂವ ಮೇಲೂ ಕೆಳಗೂ ಉಸಿರಾಡುತ್ತಾ ನಡುಗುವ ಕೈಗಳಿಂದ ಗಟಗಟ ಕುಡಿಯಲು ತಪ್ಪಲೆ ಮೇಲೆ ಎತ್ತಿ ಹಿಡಿಯಲಾರದೆ ದಢಕ್ ಎಂದು ಬೀಳಿಸಿ ಮೈ ತುಂಬಾ ನೀರು ಚೆಲ್ಲಿಕೊಂಡು ಆ ತಪ್ಪಲೆ ಬಂಡಿಯಂತೆ ಢಣಾರೆಂದು ಬಿದ್ದು ಜಾರಿ ಅಷ್ಟು ದೂರ ಹೋಗಿ ನಿಂತಿತು. ಏನೋ ಕೆಟ್ಟದಾಯಿತು ಎಂದುಕೊಂಡರು.
ಅಂತೂ ಹೊತ್ತು ಏರುತ್ತಾ ಹೋಯಿತು. ಹೂವನ ಕಣ್ಣುಗಳು ಅವನ ದುಃಖಕ್ಕೆ ನೀರಿನ ಹಾಡು ಹೇಳುತ್ತಿದ್ದವು. ಹಣೆಗೆ ಹಚ್ಚಿದ ಅಷ್ಟು ಕುಂಕುಮವೂ, ಬೆವರೂ, ನೀರೂ, ಕಣ್ಣೀರೂ ಎಲ್ಲ ಮಿಶ್ರಗೊಂಡು ಮುಖದ ತುಂಬಾ ಹರಡಿ ಮುಡಿ ಬಿಟ್ಟಿದ್ದ ಅವನ ಕೋಮಲ ಅಷ್ಟೂ ಕೂದಲು ಕುಣಿಯುತ್ತಾ ಹೆದರಿಸುವಂತೆ ಮಾರ್ಪಾಟಾಗಿದ್ದವು. ಎಷ್ಟೋ ಹೊತ್ತಾದ ಮೇಲೆ ಹೂವ ‘ಇನ್ಮೇಲೆ ನಾ ಅಳೂದಿಲ್ಲ ವಲದತಕೆ ವೋಯ್ತೀನಿ’ ಎಂದ. ಆತನ ಚಿಕ್ಕಪ್ಪ ಸಿಟ್ಟೆದ್ದು ‘ಬಂದ್ಮೇಲೆ ಒಂದು ವಾಕ್ಷ ಕೊಟ್ಟು ವೋಗ್‌ಬೇಕು. ವತಾರದಿಂದ ಇಂಗ್ ಮಾಡ್‌ಬುಟ್ಟು ಈಗ ಏನೂ ಯೇಳ್ದೆ ವೊಂಟೋದ್ರೆ ನಾನಂತೂ ಬಿಡೂದಿಲ್ಲ’ ಎಂದು ಎಚ್ಚರಿಸಿದ.
ಹೂವನಿಗೆ ದಟ್ಟ ಭೀತಿ ಮುಸುಕಿಕೊಂಡಿತು. ಓಡಿಹೋಗಲೂ ಎಲ್ಲೂ ಜಾಗ ಇಲ್ಲ ಎನಿಸಿತು. ಎದುರಿಗೆ ಭದ್ರವಾದ ಪಡೆಯಂತೆ ಸುತ್ತಲೂ ಮನೆ ಜನವೆಲ್ಲ ಕೂತಿದ್ದು ಅವನ ಮನೆಯ ಗೋಡೆಗಳು ಸುತ್ತುವರಿದಿದ್ದವು. ಅವನ ಕಣ್ಣುಗಳು ಸುಸ್ತಾಗಿ ತನ್ನ ಮನಸ್ಸನ್ನು ತಾನೆ ಹಿಡಿದಿಡಲು ಆಗದಾಗಿ ಎಲ್ಲೋ ತಾನು ಒಂದು ಪಾತಾಳದಲ್ಲಿ ಕುಸಿಯುತ್ತಿರುವನೆಂಬ ಭ್ರಮೆ ಹುಟುತಿರುವಂತಾಗಿ ಅವನ ಕಲ್ಪನೆಗಳೆಲ್ಲ ಕೊಚ್ಚಿ ಆಳ ಆಳಕ್ಕೆ ಅಳಿದವನಂತೆ ; ಯವುದೋ ಕಾಣದ ದಾರಿಯಲ್ಲಿ ತಾನೊಬ್ಬನೇ ಕತ್ತಲೆಯಲ್ಲಿ ಓಡುತ್ತಿದ್ದರೂ, ಅಲ್ಲೇ ನಿಂತೇ ಇರುವಂತೆ ಅಗುತ್ತ ಆಗುತ್ತಾ ಆಗುತ್ತಾ” ಯಾರೋ ಅಟ್ಟಿಸಿಕೊಂಡು ಬಂದಂತಾಗಿ ; ತನ್ನ ಪ್ರಜ್ಞೆಯನ್ನು ಕಳೆದುಕೊಂಡು ತನಗೆ ಗೊತ್ತಿಲ್ಲದ ವಿಚಿತ್ರ ರೀತಿಯಲ್ಲಿ ಎದುರು ಕುಳಿತಿದ್ದ ಜನರೊಡನೆ ಸಂವಾದಿಸತೊಡಗಿದ.
‘ನಂಗೆ ಸುತ್ತ ಯಮುನ್‌ಪಟ್ಣದೋರು ಇಡ್ಕತಾವ್ರೆ. ಕಿರೀಟ ಹಾಕಂದು ಬಾಣ್ದೆಲೇ ನಿಂತ್ಕಂಡು ‘ಹಿಡೀರಿ ಅವುನಾ ಹಿಡೀರಿ’ ಅವರವ್ವನ್ಗೆ ಹೇಳಿ ನಿನ್ ಮಗುನ್ನಾ ಕರ್ಕವೋಯ್ತಿದ್ದೀವಿ ಅಂತಾ ತಿಳಿಸಿ. ಯಾವ್ದೇ ಅರಕೆ ಕಟ್ಕಂದಿದ್ರೂ ಯಾವ್ ದೇವುರ್ನೇ ಬೇಡ್ಕಂದ್ರೂ ಬಿಡಬೇಡಿ ಎಳ್ಕಬನ್ನಿ’ ಅಂತಾ ಬತ್ತಾವ್ರೆ. ಏನೇನೋ ಯೇಳ್ತಾವ್ರೆ. .. ‘ಅವುನ್ ತಾತ ಇದ್ದಾನಲ್ಲ ಅವುನ್ಗೇ ಇನೂ ಅಯಸ್ಸಿದೆ ಆ ಮನೇಲಿ ಈ ಹುಡುಗ್ನ ಕಂಡ್ರೆ ಬಲೇ ಆಸೆ ಇದೆ. ಅವುನು ಅನ್ಕಂದಿರಬಹುದು. ಈ ಹುಡುಗ್ನಾ ದೊಡ್ದಾಗಿ ಓದ್ಸಿ ಇಡೀ ಊರ್ಗೇ ರಾಜನಂಗೆ ಮೆರಿಸ್‌ಬೇಕು ಅಂತಾ ಅಂಗೆಲ್ಲ ಅಂತಾ ಅಂಗೆಲ್ಲ ಕನಸ್ ಕಾಣ್‌ಬೇಡ ಅಂತ ಅವುನ್ ಕನುಸ್‌ಗೋಗಿ ಯೇಳ್‌ಬುಡಿ., ಆ ಮನೇಲಿರೋ ಜನವೆಲ್ಲಾ ಸತ್ರೂ ಈ ಮುದ್ಕ ಅಂಗೇ ಉಳ್ಕಂಡು ಎಲ್ರೂ ತಿಥಿ ಮಾಡುಕ್ಕೆ, ಎಲ್ರೂ ದುಃಖಾನು ಲೆಕ್ಕ ಹಾಕೂಕೆ ಇರ್ಬೇಕಾಗದೆ.’ ಅಂತಾವ್ರೆ. ನಂಗೆ ಯೆದುರ್ಕೆ ಆಯ್ತದೆ ಯವ್ವೋ ಅವುರೆಲ್ಲಾ ಬತ್ತಾವ್ರೆ. ನಿನ್ನಾ ಕೇಳ್ತಾವ್ರೆ. ಮಾಯದ ಬೂದಿ ಎರಚಿ ಹಿಡೀರಿ ಅವನಾ, ಅವನ ತಾಯೀನಾ ಹಿಡ್ಕೋಕ್ಕೆ ಹೋಗ್ತಿದ್ದಾನೆ ; ಅವಳಿಂದ ಬಚಾವಾಗೂಕೆ ನೋಡ್ತಾವ್ನೆ’ ಅಂತಾ ಕೂಗ್‌ತಾವ್ರೆ. ‘ಅವುನ್ ತಾಯಿ ಅವಳ ಗಂಡನಿಂದ ಎಷ್ಟೋ ಶಿಕ್ಷೆಪಟ್ಟು ಸಾಯೋತನಕ ಆ ನರಕದ ಮನೆಯಲ್ಲೇ ಇನ್ನೂ ಸಾಯಬೇಕಾಗದೆ. ..’ ‘ತಗೊಳ್ಳಿ ಈ ಹಗ್ಗನ. .. ಎಸಿರಿ ಅವುನ್ ಕುತ್‌ಗೇ ಅಂತಾವು. .. ಅವ್ವೋ ಅವ್ವೋ. ..’ ಎಂದು ಪ್ರಜ್ಞೆಯಿಲ್ಲದೆ ಹೊರಳಾಡಿ ಮತ್ತೆ ಮೆಲ್ಲಗೆ ಉಸಿರಾಡುತ್ತ ನಿಧಾನಕ್ಕೆ ಕಣ್ಣು ತೆರೆಯುವುದನ್ನು ಮಾಡುತ್ತಾ ನಿಶ್ಶಬ್ದನಾದ.
ಎಂದೋ ಯಮಲೋಕದ ಕತೆಗಳನ್ನೆಲ್ಲ ಕೇರಿಯಲ್ಲಿ ಹಲವಾರು ಬಾರಿ ಎಷ್ಟೋ ಸಾರಿ ಕನಸು ಕಂಡು ಹೆದರಿ ಹೆದರಿ ನಡುಗುತ್ತಿದ್ದ ಹೂವ ಈ ಕ್ಷಣದಲ್ಲೇ ತನ್ನ ಅಚೇತನದಲ್ಲಿ ತುಂಬಿದ್ದ ಭೀತಿಗಳೆಲ್ಲವನ್ನೂ, ಆ ಅಳಲನ್ನೂ, ತಾನು ಆ ಮನೆಯ ಕೇರಿಯ, ಊರಬೀದಿ, ಮನೆ, ಎಲ್ಲೆಂದರಲ್ಲಿ ಏನೆಲ್ಲ ಕಂಡು ಉಂಡು ಬೆದರಿ ಅಸ್ವಸ್ಥನಾಗಿದ್ದವನು, ತನ್ನ ಅಳು ಎಲ್ಲೆಲ್ಲೋ ಹೋಗಿ ತನ್ನನ್ನು ಎಲ್ಲೆಲ್ಲೋ ಹೀಗೆ, ಹೀಗೆ ಬಿಸಾಡುತ್ತದೆಂದು ; ಆ ಹೂವನಿಗೆ ಗೊತ್ತಿರಲಿಲ್ಲ. ಮನೆಯ ಜನ ಆ ಗೊಂದಲದಲ್ಲಿ ಸಿಲುಕಿ ‘ಓಹೋ ದೇವರೋ ಇಲ್ಲವೆ ಯಮರಾಜರೋ ಬಂದು ಇಂಗೇ ಈ ಮನೆಗೂ ಆ ನರಕಕ್ಕೂ ಏನೇನೋ ಏಳ್ತಾ, ನಮ್ಮ ಹುವನ್ನ ಕರ್ಕವೋಗುಕೆ ಬಂದವ್ರೆ’ ಎಂದು ತರ್ಕಿಸಿದರು.
‘ಸ್ವಾಮಿ ಯಾವ್ ಪಾಪ ಮಾಡಿದ್ದದು ಅಂತಾ ಈ ಕಂದನ್ನಾ ಕರ್ಕವೋಗ್ ಬೇಕೂ ಅಂತಿದ್ದೀರಿ. ಅರ್‌ಗಿಸಾ ಇದಾಗುದಿಲ್ಲ. ಇನ್ನೂ ನಾನಿಲ್ಲಿ ಸಾಯ್ತಾ ಇರೂ ಮುದ್ಕ ಇದ್ದೀನಲ್ಲಾ: ನನ್ನ ಕರ್ಕಂಡು, ಇವನ್ನ ಬುಟ್‌ಬುಡಿ’ ಎಂದು ತಾವೆಲ್ಲ ಯಾವುದೋ ಮಹಾ ತಪ್ಪಿಗೆ ಸಿಕ್ಕಿದ್ದು, ಆ ತಪ್ಪಿಗೆ ತಾನೇ ಶಿಕ್ಷೆಗೆ ಒಳಗಾಗಿ ಸಾಯಲು ಸಿದ್ದ, ಎಂಬಂತೆ ನಿವೇದಿಸಿ ಕೊಂಡ. ಹೂವ ಮೆಲ್ಲಗೆ ಎಚ್ಚರವಾಗಿದ್ದ.ಹೀಗೆ ಹೂವ ಇಡೀ ಮನೆಗೆ ಒಂದು ಬಿಡಿಸಲಾಗದ ಒಗಟಾಗಿ, ಆ ಒಗಟೇ ಅವರ ವಸ್ತುವಾಗಿ ಬದುಕಾಗಿದೆಯೋ ಎಂಬಂತೆ ಇನ್ನೂ ಹುಡುಕಾಡುತ್ತಿರುವಾಗಲೂ ಸೂರ್ಯ ಏರಿಏರಿ ಇಳಿದಿಳಿದು ಸಂಜೆಯ ತಂಗಾಳಿಯನ್ನು ಚೆಲ್ಲುವ ತವಕದಲ್ಲಿದ್ದ. ಮನೆಯ ಜನ ಕದಲದಂತೆ ಉಚ್ಚೆ ಬಂದರೂ ಬಿಗಿ ಹಿಡಿದು ಕುಳಿತಿದ್ದರು. ಎಲ್ಲೋ ಪ್ರತ್ಯಕ್ಷವಾಗಿ ಇನ್ನೇಲ್ಲೋ ಅದೃಶ್ಯನಾಗಿ ಮತ್ತೆಲ್ಲೋ ಕೂಗುಹಾಗಿ ಹೇಗೇಗೋ ಇರುತ್ತಿದ್ದ ಹೂವನ ಅಪ್ಪ ಈಗ ಇದ್ದಕಿದ್ದಂತೆಯೇ ಆ ಮನೆಯ ದೊಡ್ಡ ಹಜಾರದಲ್ಲಿ ಪ್ರತ್ಯಕ್ಷನಾದ. ಎಲ್ಲರತ್ತ ಕುಡಿದು ಮಂಜಾಗಿದ್ದ ಕಣ್ಣುಗಳನ್ನು ಹರಿಸಿ ‘ಏನಿದೆಲ್ಲಾ’ ಎಂದುಕೊಂಡು ಹೂವನ ಮೇಲೆ ದೃಷ್ಟಿಹರಿಸಿ ಎಂತದೋ ಇಲ್ಲಿ ಘಟಿಸಿದೆ ಎನ್ನುತ್ತಾ ‘ಯಾಕಿಂಗ್ ಕುಂತಿದ್ದೀರಿ. ಏನಿದು. ’ ಎಂದು ಎಲ್ಲರನ್ನು ಕೇಳಿದ. ಹೂವನ ಅವ್ವಾ ‘ಏನಾದದೋ ಕಾಣ್‌ನಲ್ಲೋ ಭಗವಂತಾ’ ಎಂದು ನಿಟ್ಟುಸಿರು ಬಿಟ್ಟು ; ‘ಎಲ್ಲಾನು ಬಂದಿರು ಆ ದೇವ್ರೆ ನೋಡ್ಕಲಿ’ ಎಂದುಕೊಂಡಳು.
ಹೂವನ ಅಪ್ಪ ದೊಡ್ಡದಾಗಿ ತೇಗಿ ‘ಬಿಡ್ರಮ್ಮಿ ಇಲ್ಲಿ ಜಾಗವ್ವಾ”. ನಾಮೂ ಒಂದ್ ಮಾತು ಕೇಳ್ಮ; ದೇವ್ರೇನೀಲದು ಅನ್ನುದಾ. ’ ಎನ್ನುತ್ತಾ ನುಗ್ಗಿದ. ಯಾರೋ ತಡೆದರು ‘ಕುಡ್ದಿದಿಯೆ ಬ್ಯಾಡಾ. ದೇವ್ರು ಅನ್ನೋ ಬಯಾ ಇಲ್ಲುವೆ’ ಎಂದರು.ಲೆಕ್ಕಿಸದೆ ಮುಂದೆ ಹೋಗಿ ನಮಸ್ಕರಿಸಿ ‘ಎಲ್ಲಿಯಳವ್ವಾ ನೀನು ವತಾರಿಂದ್ಲೂ ನನ್ಮಗುನ್ ಮ್ಯಾಲೆ ಬಂದಿದಿಯಂತಲ್ಲಾ ; ಅದೂ ಬ್ಯಾರೆ ಅವುನಾ ಕರ್ಕಂಡೋಗ್ ಬೇಕಂತಿದ್ದಿಯೇ’ ಎಂದು ತೂರಾಡಿ ನಿಂತ.
ಅಲ್ಲಿ ಈಗ ಇದ್ದದ್ದೇ ಬೇರೆ. ತಂದೆಯ ಅಗಲವಾದ ಮುಖ, ಕೆಂಪನೆ ಮೇಣಸಿನ ಹಣಿನಂತೆ ಹೊಳೆವ ಕಣ್ಣುಗಳು, ಮಾತು ಮಾತಿಗೂ ಕುಣಿಯುವ ಮೀಸೆ, ಕ್ಷಣಕ್ಷಣವೂ ಬೀಸಾಡುವ ಬಲಿಷ್ಟ ಕೈಗಳು ಹೂವನಿಗೆ ಇನ್ನಿಲ್ಲದ ಭಯ ತರಿಸಿ, ದುಕ್ಕುದುಕ್ಕಳಿಸುತ್ತಾ ಇನ್ನೆಲ್ಲಿ ತನ್ನನ್ನು ತುಳಿದೇ ಸಾಯಿಸಿಬಿಡುವನೋ ಎಂದು ತತ್ತರಿಸುತ್ತಾ ಗಡಗಡ ನಡುಗುತ್ತಾ – ‘ಇನ್ಮೇಲೆ ಅಳೊಲೆ. ವಡೀಬ್ಯಾಡ. ಹೆಚ್ಚಿಗೇನಾರ ವೊಡುದ್ರೆ ನಾ ಎತ್ತಗರ ವೊಂಟೋಯ್ತೀನಿ’ ಎಂದು ಒಂದು ಕೈಯಲ್ಲಿ ಬಾಯಿ ಮುಚ್ಚಿಕೊಂಡರೂ, ಬಿಡದಂತೆ ನುಗ್ಗುವ ದುಕ್ಕಳಿಕೆಯ ದುಃಖವನ್ನು ಅತಿ ಸಾಹಸದಿಂದ ಒಳಕ್ಕೇ ನುಂಗಿಕೊಳ್ಳುತ್ತ ತನ್ನ ಅಪ್ಪನನ್ನು ಬೇಡಿಕೊಂಡ. ಅವನ ಅಪ್ಪನಿಗೆ ಇದೇನೋ ಕಾಟ ಎನಿಸಿ ‘ದೇವ್ರು ಬಂದ್ರೆ ವತಾರಿಂದ ಸಂದ್ಗಂಟ ಇರೂದಿಲ್‌ವಲ್ಲಾ’ ವಡೀಬ್ಯಾಡಾ, ವಡುದ್ರೆ ಎತ್ತಗರ ಎದುಬುಡ್ತೀನಿ ಅಂತಾವ್ನಲ್ಲಾ’ ಎಂದು ಮನದಲ್ಲೇ ಅಂದುಕೊಂಡು – ‘ಹೇಯ್ ಒಂದೇ ಮಾತ್ನಲ್ಲಿ ವುತ್ರಾಕೊಡು, ಯಾರು ನೀನು’ ಎಂದು ಕಿರುಚಿದ. ಹೂವ ಅಷ್ಟಕ್ಕೇ ಭೀತಿಯಿಂದ ಉಚ್ಚೆ ಉಯ್ದುಕೊಂಡು ‘ನಿನ್ ದಮ್ಮಯ್ಯ ವಡೀಬ್ಯಾಡ, ವಂಟೋಯ್ತೀನಿ . .. ವಲುತ್ತಾ’ ‘ಹಾಂ”””’ ಎಂದು ಹೂಂಕರಿಸೋ ಅವನ ಹಾವಾಭಾವಗಳಿಗೆ ಹೂವ ಮತ್ತೂ ನಡುಗಿ ಹೊರಗೆ ಓಡಿಹೋಗಲು ಎದ್ದು ನಿಂತು ಪ್ರಯತ್ನಿಸುತ್ತಿರುವಂತೆಯೇ ಅವನ ಅಪ್ಪ ‘ಲೇಯ್ ಹೇಳು ನೀನು ದೇವ್ರೋ ದೆವ್ವನೋ’ ಎಂದು ಮುಡಿಬಿಟ್ಟಿದ್ದ ಉದ್ದನೆಯ ಕೂದಲನ್ನು ಮುಂಗೈಗೆ ನುಲಿದು ಜಡಿದು ಕೇಳಿದ. ಎಲ್ಲರಿಗೂ ಈಗ ಅನುಮಾನವಾಗತೊಡಗಿತ್ತು. ಅವನ ಅವ್ವ ಕಣ್ಣೀರು ತುಂಬಿಕೊಳ್ಳುತ್ತಾ ವತಾರಿಂದ ತನ್ನ ಮಗ ತಿಂದ ಏಟುಗಳು, ಬೈಸಿಕೊಂಡ ಬೈಗಳು, ಈಗ ಅವನ ಅಪ್ಪನ ಎದಿರು ‘ಒಡೀಬ್ಯಾಡಾ ನಿನ್ನ ದಮ್ಮಯ್ಯ’ ಎಂದು ಬೇಡಿಕೊಳ್ಳುತ್ತಿರುವ ಬಗೆಯನ್ನು ಕಂಡು ದುಃಖ ತಡೆಯಲಾಗದೆ ಮರೆಯಲ್ಲಿ ನಿಂತು ಬಿಕ್ಕತೊಡಗಿದಳು. ಹೂವ ಹಿಂಸೆಯಿಂದ ಬಿಡಿಸಿಕೊಳ್ಳಲಾಗದೆ ಕಿಟಾರೆಂದು ಕಿರುಚಿಕೊಂಡ. ಅಕ್ಕಪಕ್ಕದ ಜನರೂ, ಬೀದಿ ಜನರೂ ಈಗ ಎಲ್ಲೠ ಆ ಶಬ್ದಕ್ಕೆ ಸೇರಿದರು. ಮಗ ಮತ್ತು ಅಪ್ಪ ಇಬ್ಬರೂ ಎರಡು ಬಗೆಯಲ್ಲಿ ಕಿರುಚಿಕೊಳ್ಳುತ್ತಿದ್ದರು. ಅವನ ಅಪ್ಪನಿಗೆ ಈಗ ಯಾವ ಅನುಮಾನವೂ ಉಳಿದಿರಲಿಲ್ಲ. ಇದು ದೆವ್ವ ಎಂತಲೇ ತೀರ್ಮಾನಿಸಿದ. ಹೂವನಿಗೆ ದೇವರು ಬಂತೋ, ದುಃಖ ಬಂತೋ, ಸಾವು ನೋವು ಅಸಾಧ್ಯ ವಿಷಾದ ಬಂತೋ ಯಾವುದೂ ಕೇಡ ಅಲ್ಲಿ ಯಾರಿಗೂ ಗೊತ್ತಾಗಲಿಲ್ಲ. ಆದರೂ ಎಲ್ಲರೂ ಎದ್ದು ನಿಂತು ‘ಗಾಳಿ ಕಣ್ರಪ್ಪೋ, ಗಾಳಿ. ಗಾಳಿ ಮೆಟ್ಕಂದದೆ ವೂವ್ರುನ್‌ಗೇ’ ಎಂದು ಮಾತನಾಡಿಕೊಂಡರು. ‘ಈ ಅನ್ನಾಡಿಗೋಳು ವತಾರಿಂದ ದೇವ್ರಂತೆ, ಶನಿಯಂತೆ, ಅಮ್ಮನಂತೆ ಅಂತಾ ಕುಂತವರೆ ; ಗಾಳಿಗುಟ್ಟ ಇಡೀಲಾರ್ದೆ’ ಎಂದು, ತನ್ನ ಮಗನನ್ನು ಮುರಿದುಕೊಳ್ಳಲು ಓಈ ದುಷ್ಟ ಶಕ್ತಿ ಬಂದಿದೆ ಎನ್ದು ಹೂವನ ಅಪ್ಪ ಬೆಂಕಿಯಂತೆ ಉರಿಯುತ್ತಾ ‘ಬೇವುನ್ ಸೊಪ್ಪೆ ವುಣುಸೆ ಚೆಬೆನೋ ಮುರ್ಕ ಬನ್ನಿ’ ಎಂದು ಕೂಗಿದ.
‘ಬುಟ್ ಬುಡೂ” ಅಳೊಲೇ, ವಂಟೋಯ್ತೀನಿ’ ಎಂದ ಈ ಹೂವನ ಮಾತಷ್ಟೆ ಎಲ್ಲರಿಗೂ ಸಾಕ್ಷಿಯಾಗಿ ಬೇಕಾಗಿದ್ದದ್ದು. ‘ನೋಡ್ದಾ – ಯಂಗ್ ಬಿಚ್ಚದು ಬಾಯ’ ವೊಂಟೋದದಂತೆ ಎಲ್ಲೋ’ ಎಂದು ಈ ಉದ್ದ ಮುಡಿಯ ನುಲಿಯುತ್ತಾ ಕುಕ್ಕರಿಸಿದ. ಬೇವಿನ ದೊಡ್ಡ ಕೋಲುಗಳನ್ನು ಯಾರೋ ಅಲ್ಲಿ ಹಿತ್ತಲಲ್ಲಿ ರಭಸವಾಗಿ ಮುರಿದು ಕೊಟ್ಟರು. ಬುಗುಬುಗುನೇ ಆ ಹೂವನ ಸುತ್ತಿಸಿ ಬಡಿಯುತ್ತಾ ‘ಏಳು ಎಲ್ಲಿದ್ದೇ ಎಲ್ ಸಿಕ್ಕಾ ಇವ್ನು. ಯಾಕ್ ಬಂದೆ, ಯಾರುನ್ನಾ ಕರ್ಕೊಂಡೋಗ್‌ಬೇಕನ್ಕಂದಿದ್ದಿಯೇ’ ಎಂದು ಹೂವನ ಅಪ್ಪ ಕುಣಿದಾಡಿದ. ಇದೆಲ್ಲವನ್ನೂ ನೋಡಿ ಅವನ ಅವ್ವ ಅಳಲಾರದೆ ಅಳತೊಡಗಿದಳು. ಇಡೀ ಮನೆ ಈಗ ಭೂತ ಅವರೂಪವಾಗಿ ಏರ್ಪಟ್ಟಿತು. ಹೂವನ ತಾತ ‘ಮೆತ್ಗೊಡೀಯೋ, ಎಳೇಮೈ ತಡಿಲಾರ್ದು ಏಟಾ, ಅಯ್ಯೋ ಮೆತ್ಗೆಕಲಾ, ಅಟ್‌ಮ್ಯಾಕೆ ಎತ್ತಿ ಕುಕ್ಕುದ್ರೆ ಬದ್ಕನ್ಲಾ’ ಎಂದು ಆ ದೇವರು, ಆ ದೆವ್ವ ಆ ಹೂವ, ಆ ಅಪ್ಪ, ಆ ಜನ, ಆ ಅರ್ಥ ಕಳಕೊಂಡ ಆ ಕ್ಷಣ ವಾತಾವರಣದಲ್ಲಿ ಅಲುಬತೊಡಗಿದ. ಹೂವನ ಅವ್ವ ನೋಡಲಾರದೆ ‘ಅಯ್ಯೋ ಭಗವಂತಾ, ಈ ಕೋಲ್ಲೆನೆಲಾ ನೋಡುಕೆ ಆಗುದಿಲ್ಲ, ಕರ್ಕೊಳ್ಳೋ ನಿನ್ ಮಗುನ್ ತಿನ್ನಾ’ ಎಂದು ಅಳ ತೊಡಗಿದಳು.
ಏಟುಗಳಿಂದ ಬಿಡಿಸಿಕೊಳ್ಳಲು ಹೂವ ‘ಅಪ್ಪೋ, ವಡೀಬ್ಯಾಡ ಸತ್ತೋಯ್ತೀನಿ. ನೀನೇಳ್ದಂಗೆ ಕೇಳ್ತೀನಿ ವಡೀಬ್ಯಾಡಾ ಬಿಟ್‌ಬುಡು’ ಎಂದು ಅಂಗಲಾಚಿದ. ಅವನ ಅಪ್ಪ ಹೂಂಕರಿಸಿ ‘ಹೊಂಟೋದೀಯಾ ಇನ್‌ಮ್ಯಾಲೆ ಯಾವತ್ತೂ ಇಂಗ್ ಮಾಡೋಲ್ಲ. ಇತ್ತಗ್ ತಲೆ ಆಕೋಲ್ಲಾ’ ಎಂದು ಕೇಳುತ್ತಿರುವಂತೆಯೇ, ‘ಅಳೋದಿಲ್ಲ. ಇನ್ಮೆಲೆ ಯಾವತ್ತೂ ಅಳೂದಿಲ್ಲ. ಇನ್ನೊಂದ್ಸಲ ಇಂಗ್ ಮಾಡುದ್ರೆ ಸಾಯಿಸ್ ಬುಡು’ ಎಂದು ಯಾತನೆಯಿಂದ ಬೇಡಿದ. ‘ನಿನ್ನ ಅಟ್ಟೂ ಸುಲ್‌ಬೇಟೀಲಿ ಬಿಟ್ಟೆನೆ. ಬನ್ನಿ ಮರುತ್ತಕೆ ’ ಎಂದು ಹಜಾರದಿಂದ ಹೊರಕ್ಕೆ ಮೆಟ್ಟಿಲಮೇಲೆ ದರದರ ಎಳೆದುಕೊಂಡು ‘ನನ್ ಮಗ್ನಾ ಮುರ್ಕೋಕ್ ಬಂದಿದ್ದಾ, ಅಷ್ಟು ಸುಲಬ್ರೇಟೆಲಿ ನನ್ ಮಗ್ನ ಬಿಟ್‌ಕೊಟ್ಟೇನೋ ಮುರ್ಕ ವೋಗೂಕೆ ನಿನ್ಗೆ’ ಎಂದು ಅಮಲಿನಲ್ಲಿ ಹೂವನ ಅಪ್ಪ ಮತ್ತೂ ಹೊಡೆಯತೊಡಗಿದ. ಒಂದು ಏಟಿಗೆ ‘ಲವ್ವೊ, ಲಪ್ಪೋ’ ಎನ್ನುತ್ತಾ ಇನ್ನೊಂದೇಟಿಗೆ ‘ಲಮ್ಮೋ ಲತ್ತೆಯೋ, ಲಕ್ಕೋ’ ಎನ್ನುತ್ತಾ ‘ಯಾರಾರ ಬಿಡುಸ್ರೀ’ ಎನ್ನುತ್ತಾ ಅಳುತ್ತಾ ಅಪ್ಪನ ಬಿಗಿಯಾದ ಹಿಡಿತದಲ್ಲಿ ಹುಳುವಿನಂತೆ ಒದ್ದಾಡತೊಡಗಿದ. ಅವನ ಅಪ್ಪನ ವಿಕಾರ ಕೋಪದ ಎದಿರು ಯಾರೂ ಮುಂದೆ ಬರುತ್ತಿಲ್ಲ. ‘ಕಬ್ಬಿಣ ಬಗ್ಗೋರ್ಗೆ ಬಗ್ಗುದು, ನೋಡ್ದಾ ಗಾಳಿಯ ಎಂಗ್ ಇಡ್ದ ?’ ಎಂದು ಹೂವನ ಅಪ್ಪ ದೆವ್ವ ಬಿಡಿಸುವುದರಲ್ಲಿ ಪಡೆದಿದ್ದ ಬಿರುದುಗಳನ್ನು ನೆನೆಸಿಕೊಂಡರು. ಮತ್ತೆ ಕೆಲವರು ‘ಆ ಏಟೆಲ್ಲ ಗಾಳಿಗೆ ತಾನೆ. ಅದು ವಂಟೋದ್ ಮ್ಯಾಕೆ ಆ ನೂವು ಇರೂದಿಲ್ಲ’ ಎನ್ನುತ್ತಿದ್ದರು.
ಹೊತ್ತು ಇಳಿದು ಹೋಗಿತ್ತು. ‘ನಿನ್ನ ಬನ್ನಿ ಮರುತ್ತಾವು, ಮೊಳೆವೊಡ್ದು ಕಟ್ಟಾಕ್ದೆ ಇಂಗೇ ಬಿಟ್ರೆ ತಿರ್ಗಾ ಬತ್ತೀಯೆ ?’ ಎನ್ನುತ್ತಾ ಬನ್ನಿ ಮರಕ್ಕೆ ಕೂದಲು ಕಿತ್ತು ಅದಕ್ಕೆ ಮೊಳೆ ಜಡಿದು ಬಿಟ್ಟರೆ, ಆ ದೆವ್ವವನ್ನು ಯಾರೂ ಬಿಡಿಸಲಾರದ ಹಾಗೆ ಕಟ್ಟುಹಾಕಿಬಿಟ್ಟಿವೊ ಎಂಬ ನಂಬಿಕೆಯಲ್ಲಿ ಹೂವನ ಅಪ್ಪ ವಿಕಾರವಾಗಿ ದರದರ ಎಳೆದು ಬೀದಿಗೆ ಹೊರಟ. ಕತ್ತಲು ಕವಿಯುತ್ತಿತ್ತು. ಜನವೆಲ್ಲ ‘ಇದು ಎಂತಾ ರಾಕಾಸಿ ಗಾಳಿಯಪ್ಪಾ ವತಾರಿಂದ ಬಿಡ್ದೆ ಅದಲ್ಲಾ’ ಎನ್ನುತ್ತಿದ್ದರು.
ಹೂವನ ತಾತ ‘ಇನ್ನೂ ಎಟ್ಟಿದ್ದದೋ ಅಟ್ಟೂ ಅಗೋಗ್ಲಿ. ಈ ಜೀವ ಅನ್ನುದು ನಮ್ಮ ಬದ್ಕುಕೇ ಬಿಡೋಲ್ಲ. ಕುಯ್ಕನ್‌ಕುಯ್ಕಂದು ನಂನೆ ತಿಂತದೆ’ ಎಂದು ಅವನ ಮಗನ ರಭಸವಾದ ಹೆಜ್ಜೆಗಳನ್ನು ಹಿಂಬಾಲಿಸಿದ. ಎಲ್ಲರೂ ಬನ್ನಿ ಮರದ ಬಳಿ : ಊರ ಹೊರಭಾಗಕ್ಕೆ ಬಂದರು. ‘ವಂಟೋಯ್ತಿನಿ’ ಅಂತಾ ಭಾಷೆ ಕೊಡು ಎಂದು ಹೂವನ ಅಪ್ಪ ಹೂವನಿಂದ ಭಾಷೆ ತೆಗೆದುಕೊಂಡ. ಅಪ್ಪನ ಮಾತಿಗೆ ತಕ್ಕಂತೆ ಹೂಂಗುಟ್ಟಿ ಅದರಂತೆ ಹಾಡಿದರೆ ಈಗ ತಾನು ಬದುಕಲು ಸಾಧ್ಯ ಎಂಬಂತೆ ಹೂವ ವದ್ದಾಡುತ್ತಿದ್ದ. ‘ನೀನು ಏಳುತ್ತಕ್ಕೆ ವಂಟೋಯ್ತೀನಿ, ಇನ್ ಮ್ಯಾಲೆ ಅಳೊಲೆ’ ಎಂದಿದ್ದೇ ತಡ, ಉದ್ದ ಮುಡಿಯನ್ನು ನುಲಿದಿದ್ದವನು ಪಟಕ್ಕೆಂದು ಎತ್ತಿ ಕುಕ್ಕರಿಸಿ ಹೂವನ ಸಮೇತ ಎಳೆದಾಡಿ ಜಡಿದ. ಕೈತುಂಬಾ ಅಷ್ಟೂ ಕೂದಲೂ ಪತ್ ಎಂದು ಬಂದವು. ಕೂದಲ ಬುಡದಿಂದ ರಕ್ತ ಹರಿಯುತ್ತಾ ಹರಿಯುತ್ತಾ ಹೂವನ ಪಾ ಕುಣಿಯುತ್ತಾ, ಈ ದೆವ್ವವನ್ನು ಗೆದ್ದೇ ಎಂಬ ಉತ್ಸಾಹದಲ್ಲಿ ಬನ್ನಿ ಮರಕ್ಕೆ ಮೊಳೆ ಜಡಿಯುತ್ತಿದ್ದಂತೆಯೇ ಹೂವ ಪೂರ್ಣವಾಗಿ ಪ್ರಜ್ಞೆ ಕಳೆದುಕೊಂಡು ಬಿದ್ದ. ಹೂವನನ್ನೂ ಯಾರೋ ಇಬ್ಬರುಊ ಹೊತ್ತುಕೊಂಡರು. ‘ಆಯ್ತು ನಡೀರಿ’ ಎಂದು ಊರಿಗೆ ಹೊರಟರು. ಕತ್ತಲು ಮೆತ್ತಿಕೊಳ್ಳುತ್ತಿತ್ತು. ಸ್ಮಶಾನ ಮೌನವೋ ಇಲ್ಲವೇ ಸ್ಮಾಶಾನದಿಂದ ಹಿಂದಿರುಗಿ ಬರುತ್ತಿರುವವರಂತೆಯೇ ಎಲ್ಲರೂ ನಡೆಯುತ್ತಿದ್ದರು. ಅಸ್ಪಷ್ಟ ಬೆಳಾಕಿಗೆ ಪ್ರಜ್ಞೆಇಲ್ಲದ ಹೂವನ ಕೈಕಾಲುಗಳು ತೇಲಾಡುತ್ತಿದ್ದವು. ಅವನ ಅವ್ವ ಎಲ್ಲವನ್ನೂ ನೋಡಿ ನೋಡಿ ಬೇಸತ್ತು ; ಈ ಮಗನ ಅಳು ನಿಲ್ಲಿಸಲು ಆ ಮುಂಜಾವು ಅಳು ನಿಲ್ಲಿಸಲು ಕುತ್ತಿಗೆ ಹಿಚುಕಲು ಹೋಗಿದ್ದವಳು-ಎಲ್ಲವನ್ನು ನೆನೆಸಿಕೊಂಡು ಇದ್ದಕಿದ್ದಂತೆ ಇಡೀ ಆ ಬಯಲು, ಕತ್ತಲು ಎಲ್ಲವೂ ಬಿರಿಯುವ ಹಾಗೆ ಈ ಅಳು ನಿಲ್ಲಿಸೋಕ್ಕೆ ಇನ್ನು ಸಾಧ್ಯವೇ ಇಲ್ಲ ಎಂಬಂತೆ ಮಗನನ್ನು ನೋಡುತ್ತಾ ಅಳತೊಡಗಿದಳು.
*****