ಇಗರ್ಜಿ ಸುತ್ತಲಿನ ಹತ್ತು ಮನೆಗಳು – ೨

-೪-

ಪಾದರಿ ಗೋನಸಾಲ್ವಿಸ್ ಶಿವಸಾಗರಕ್ಕೆ ಬಂದ ಕೆಲವೇ ವಾರಗಳಲ್ಲಿ ಅಲ್ಲಿಯ ಕ್ರೀಸುವರನ್ನು ತಪ್ಪದೆ ಕೊಪೆಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅವರ ಮತ್ತೊಂದು ಮುಖವನ್ನು ಬಹಳ ಬೇಗನೆ ಜನ ಕಂಡಿದ್ದರು.

ಪ್ರಾರಂಭದಲ್ಲಿ ಪಾದರಿ ಗೋನಸಾಲ್ವಿಸ್ ರಿಗೆ ಕೋಪವೇ ಬರುವುದಿಲ್ಲ ಅಂದುಕೊಂಡ ಜನ ಕ್ರಮೇಣ ಅವರ ಉಗ್ರರೂಪವನ್ನು ಕಂಡರು.
ಭಾನುವಾರಗಳಂದು ಇಗರ್ಜಿಯ ಎರಡನೇ ಗಂಟೆ ಆಗುತ್ತಿದೆ ಅನ್ನುವಾಗ ಬಿಳಿ ನಿಲುವಂಗಿ ಧರಿಸಿ, ಗರ್ಡಲ್ ಕಟ್ಟಿಕೊಂಡು ಕುತ್ತಿಗೆಯಲ್ಲಿ ಗೇಣುದ್ದದ ಕರಿ ಮರದ ಶಿಲುಬೆ ಧರಿಸಿ ಅವರು ಕೊಪೆಲನಿಂದ ಹೊರ ಬೀಳುತ್ತಿದ್ದರು. ಅವರ ಕೈಯಲ್ಲಿ ಅತ್ತಿತ್ತ ಬಳಕಾಡುವ ನಾಗರಬೆತ್ತವಿರುತ್ತಿತ್ತು.
ಯಾರು ಕೊಪೆಲಿಗೆ ತಾವಾಗಿ ಬರುವುದಿಲ್ಲವೋ ಅವರನ್ನು ಕೊಪೆಲಗೆ ಎಳೆದು ತರುವ ಕೆಲಸ ತಮ್ಮದು ಎಂದು ಅವರು ಹೇಳಿ ಬಿಟ್ಟಿದ್ದರು. ಸಿಮೋನ, ಪಾಸ್ಕೋಲ, ವೈಜೀಣ್ ಕತ್ರೀನ ಇನ್ನೂ ಕೆಲವರು ತಾವಾಗಿ ಕೊಪೆಲಗೆ ಪೂಜೆ ಕೇಳಲು ಬರುತ್ತಿದ್ದರು. ಉಳಿದ ಮನೆಗಳ ಮುಂದೆ ಪಾದರಿಗಳು ಕಾಣಿಸಿಕೊಳ್ಳುತ್ತಿದ್ದರು.
ಹೀಗಾಗಿ ಭಾನುವಾರಗಳಂದು ಎಲ್ಲ ಕ್ರೀಸುವರ ಮನೆಗಳಲ್ಲೂ ಗಡಿಬಿಡಿ ಗದ್ದಲ. ಈವರೆಗೆ ಯಾವುದೇ ಚಿಂತೆ ಇಲ್ಲದೆ ತಮ್ಮ ಪಾಡಿಗೆ ತಾವು ಮಲಗಿಕೊಂಡಿರುತ್ತಿದ್ದವರು ಈಗ ಶನಿವಾರದಿಂದಲೇ ಈ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ.
ಶನಿವಾರ ಸ್ನಾನ. ಇರುವ ಬಟ್ಟೆಗಳಲ್ಲಿ ಒಳ್ಳೆಯದನ್ನು ಒಗೆದು ಒಣಗಿಸಿಕೊಳ್ಳುವುದು. ಸಂಜೆ ಪಾಪ ನಿವೇದನೆ.
“ನಾಳೆ ಮೀಸಗೆ ಹೋಗಬೇಕಲ್ಲ ಅದ್ಕೆ”
“ಭಾನುವಾರದ ಪೂಜೆ ತಪ್ಪ್ಸಿಕೊಳ್ಳಬಾರದಲ್ಲ”
“ಪಾದರಿಗಳು ಬಂದು ಕರೆಯೋದಕ್ಕಿಂತ ನಾವೇ ಹೋಗೋದು ಒಳ್ಳೆದಲ್ವೆ?“ಎಂಬ ಮಾತುಗಳು ಕೇಳಿ ಬರುತ್ತವೆ.
ಆದರೂ ಎಮ್ಮೆ ಮರಿಯ ಧಡಬಡಿಸಿ ಏಳುತ್ತಾಳೆ.
ಏಳು ಎಮ್ಮೆಗಳಿಗೆ ಹಾಲು ಕರೆದು, ಹಾಲನ್ನು ಮಕ್ಕಳ ಮೂಲಕ ವರ್ತನೆ ಮನೆಗಳಿಗೆ ಕಳುಹಿಸಿ, ಎಮ್ಮೆಗಳಿಗೆ ಹುಲ್ಲು ಮತ್ತೊಂದು ಹಾಕಿ ಕೊಟ್ಟಿಗೆಯಿಂದ ಅವುಗಳನ್ನು ಹೊರ ಹಾಕಿ ತಲೆಗೂದಲು ಬಾಚಿಕೊಂಡು ಹೊಸ ಸೀರೆಯುಟ್ಟು ಅವಳು ಕೊಪೆಲಿಗೆ ಹೋಗದಿದ್ದರೆ ಪಾದರಿ ಮನೆಬಾಗಿಲಲ್ಲಿ ಕಾಣಿಸಿಕೊಳ್ಳುತ್ತಾರಲ್ಲ!
ಕಾಯ್ಕಿಣಿಯಲ್ಲಿ ನಿಶ್ಚಿಂತೆಯಿಂದ ಇದ್ದೆವು ತಾವು, ಅಂದುಕೊಳ್ಳುತ್ತಾಳೆ. ಗಂಡ ಸಂತಿಯಾಗ ಇಬ್ಬರು ಮಕ್ಕಳು ಒಡೆಯರ ತೆಂಗಿನ ತೋಟದ ಅಂಚಿನಲ್ಲಿ ಸೋಗೆ ಗುಡಿಸಲು ಕಟ್ಟಿಕೊಂಡು ತೋಟ ನೋಡಿಕೊಂಡಿದ್ದರು. ಜೊತೆಗೆ ಗಂಡ ಕಲ್ಲು ಕಟ್ಟಲು ಭಟ್ಕಳ, ಮುರುಡೇಶ್ವರ ಎಂದೆಲ್ಲ ಹೋಗುತ್ತಿದ್ದ. ಕೈ ತುಂಬ ಕೂಲಿ ದೊರೆಯುತ್ತಿತ್ತು. ಗಂಡನಿಗೆ ಮನೆ ಕಟ್ಟಿಸಿದವರು “ಘರ ಉಗ್ತಾವಣೆ“ದಿವಸ ಪಂಚೆ, ಅಂಗಿ ಬಟ್ಟೆ ತೆಂಗಿನ ಕಾಯಿ ಎಲೆ ಹತ್ತು ರೂಪಾಯಿ ಇನಾಮೂ ಕೊಡುತ್ತಿದ್ದರು. ಭಟ್ಕಳದ ಕೊಲಂಬೋ ಸಾಹೇಬರು ಗಂಡನಿಗೆ ಅವರ ಬಂಗಲೆ ಕಟ್ಟಿದ್ದಕ್ಕೆ ಬಂಗಾರದ ಉಂಗುರ ಕೊಟ್ಟಿದ್ದರು.
ಆಗ ಕೆಲವರು ಕಲ್ಲಿನ ಕೆಲಸ ಮಾಡಲು ಘಟ್ಟದ ಮೇಲೆಹೋಗಲಾರಂಭಿಸಿದರು. ಇವರೆಲ್ಲ ಮಳೆಗಾಲ ಮುಗಿಯಿತು ಅನ್ನುವಾಗ ತಿರುಗಿ ಬರುತ್ತಿದ್ದರು. ಬರುವಾಗ ಮಕ್ಕಳಿಗೆ ಬಟ್ಟೆ, ಹೆಂಡತಿಗೆ ಸೀರೆ, ಬಂಗಾರ, ಹಣ ತರುತ್ತಿದ್ದರು. ಆಗಾಗ್ಗೆ ಅಲ್ಲಿಂದ ಬರುವವರ ಸಂಗಡ ಹಣ ಕಳುಹಿಸುವುದೂ ಇತ್ತು. ಗಂಡ ಏಕೋ ಈ ಬಗ್ಗೆ ಯೋಚಿಸಲಿಲ್ಲವೇ ಎಂದು ಮರಿಯ ವಿಚಾರ ಮಾಡುತ್ತಿರಬೇಕಾದರೇನೆ ಒಂದು ದಿನ ಗಂಡ ಮನೆಗೆ ಬಂದವನೇ-
“ಮರಿಯಾ..“ಎಂದ
“ಏನು? ”
“ಸಿಮೋನ ಘಟ್ಟದ ಮೇಲಕ್ಕೆ ಕರಿತಿದ್ದಾನೆ”
“ಸುಮಾರು ಜನ ಇಲ್ಲಿಂದ ಹೋಗಿದಾರೆ, ಅಲ್ವ?”
“ಹೌದು ಭಟ್ಕಳ, ಮುರುಡೇಶ್ವರದಿಂದ ಹೋಗಿದ್ದಾರೆ..ಸಿಮೋನ ಅಲ್ಲಿ ಇಮಾರತಗಳನ್ನು ಕಟ್ಟಸ್ತಾನೆ…ಇಲ್ಲಿಂದ ಹೋದವರಿಗೆಲ್ಲ ವಾರಕ್ಕೆ ಒಂದು ದಿನ ಬಟವಾಡೆಯಾಗುತ್ತೆ..”
ಕೊಂಚ ತಡೆದು ಸಂತಿಯಾಗ
“ಇಲ್ಲಿ ನಮ್ಮದು ಅಂತ ಏನಿದೆ ಮರಿಯಾ..ಒಡೆಯನ ತೋಟ ನೋಡಿಕೊಳ್ಳಲಿಕ್ಕೆ ನಾವು ಇಲ್ಲಿರೋದು..ಒಡೆಯ ಇಲ್ಲಿಂದ ಹೊರಡು ಅಂದರೆ ಹೊರಡಬೇಕು..ನಾವೂನು ಇಲ್ಲೊಂದು ಮನೆಗಿನೆ ಅಂತ ಮಾಡಿಕೊಳ್ಳದಿದ್ದರೆ ಹ್ಯಾಗೆ..”
ಗಂಡ ಏನೇನೋ ಕನಸುಗಳನ್ನು ಕಟ್ಟಿದ. ಒಡೆಯನ ತೋಟ ನೋಡಿಕೊಂಡು, ಬೀಳುವ ಮಡಲು ಬೊಂಡೆ ಆರಿಸಿಕೊಂಡು ಎಷ್ಟು ದಿನ ಇರುವುದು ಎಂದು ಕೇಳಿದ. ಇಲ್ಲಿ ಸಿಗುವ ಕೂಲಿ ಅಲ್ಲಿಗಲ್ಲಿಗೆ ಆಗುತ್ತದೆ. ನಾಲ್ಕು ಕಾಸು ಹೆಚ್ಚು ಸಿಗಬೇಕೆಂದರೆ ಘಟ್ಟದ ಮೇಲಕ್ಕೇನೆ ಹೋಗಬೇಕು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ.
“ಹೋಗಿ ಬನ್ನಿ….ನಾನಿಲ್ಲಿ ನೋಡ್ಕೋತೀನಿ“ಎಂದಳು ಮರಿಯ.
ಮರಿಯ ಗಟ್ಟಿ ಹೆಂಗಸು. ಹಸಿ ಮಡಲು ಹೆಣೆದು ಮಾರಿ ಹಣ ಮಾಡುತ್ತಾಳೆ. ಕತ್ತದ ಹುರಿ ಮಾಡುತ್ತಾಳೆ. ಅವರಿವರ ಗದ್ದೆಗಳಿಗೆ ನಾಟಿಗೆ ಕೊಯಿಲಿಗೆ ಹೋಗುತ್ತಾಳೆ. ಇಬ್ಬರು ಮಕ್ಕಳನ್ನು ನೋಡಿಕೊಂಡು ಅವಳು ಇಲ್ಲಿರುತ್ತಾಳೆ. ತಾನು ಘಟ್ಟದ ಮೇಲಿನಿಂದ ದುಡಿದು ತರುವುದು ಎಂದು ಸಂತಿಯಾಗ ನಿರ್ಧರಿಸಿದ. ಮತ್ತೊಂದು ಚಳಿಗಾಲ ಬಂತು ಎನ್ನುವಾಗ ಆತ ಸಿಮೋನನ ಜೊತೆ ಘಟ್ಟ ಏರಿದ.
ಸಿಮೋನ ತನ್ನ ಜೊತೆಯಲ್ಲಿ ಏಳೆಂಟು ಜನರನ್ನು ಕರೆ ತಂದಿದ್ದ. ಸಾನಬಾವಿ ಪೆದ್ರು, ಪಾಸ್ಕೊಲ, ಗುಂಡುಬಾಳೆ ಗ್ಯಾಬ್ರೆಲ್, ಮುರುಡೇಶ್ವರದ ಇಂತ್ರು, ಜೂರ್ನಿ, ಅಂಡೆಮರಿಯಾಣ, ಡೊಂಕೆಬಸ್ತು, ಬಾಳ ಅನ್ನುವ ಓರ್ವ ಹುಡುಗ. ಈ ಬಾಳ ಉಳಿದವರಿಗೆಲ್ಲ ಅಡಿಗೆ ಮಾಡಿ ಹಾಕುತ್ತಿದ್ದ.
ಶಿವಸಾಗರದ ಹಳ್ಳಿಗೆ ಅನತಿ ದೂರದಲ್ಲಿ ಒಂದು ಬಿಡಾರ ಕಟ್ಟಿಕೊಂಡು ಇವರಿದ್ದರು.
ಸಿಮೋನ ಶಿವಸಾಗರದಕೆರೆಯ ಹತ್ತಿರವೇ‌ಒಂದು ದೊಡ್ಡ ಇಮಾರತಿನ ಕಟ್ಟೋಣದಲ್ಲಿ ತೊಡಗಿದ್ದ. ಊರ ಹೊರಗಿನಿಂದ ಕಲ್ಲು ತೆಗೆದು ಇಲ್ಲಿ ತಂದು ಕಟ್ಟಬೇಕಿತ್ತು. ಕಲ್ಲು ತೆಗೆಯುವ, ತೆಗೆದ ಕಲ್ಲನ್ನು ಕೆತ್ತುವ, ಕೆತ್ತಿದ ಕಲ್ಲನ್ನು ಕಟ್ಟುವ ಮೊದಲಾದ ಕೆಲಸಗಳಿಗೆ ತುಂಬಾ ಜನ ಬೇಕಾಗುತ್ತಿತ್ತು. ಊರಿನಿಂದ ಕರೆತಂದವರ ಜೊತೆಗೆ ಸ್ಥಳಿಯರು ಕೆಲವರನ್ನು ಸಿಮೋನ ನೇಮಿಸಿಕೊಂಡಿದ್ದ. ನೀರು ತಂದು ಹಾಕಲು, ಕಲಿಸಿದ ಮಣ್ಣು, ಗಾರೆ ತಂದು ಕೊಡಲು ಹೆಂಗಸರಿದ್ದರು. ಇಮಾರತನ್ನು ಕಟ್ಟಿಸುತ್ತಿದ್ದ ಹೆಗಡೆ ವಾರಕ್ಕೊಮ್ಮೆ ಸಿಮೋನನಿಗೆ ಹಣಕೊಡುತ್ತಿದ್ದ. ಸಂತೆಯ ದಿನ ಸಿಮೋನ ಕೆಲಸಗಾರರಿಗೆ ಬಟವಾಡೆ ಮಾಡುತ್ತಿದ್ದ.
ಬಾಳ ಬೆಳಿಗ್ಗೆ ಎದ್ದು ಕುಸುಬಲಕ್ಕಿ ಗಂಜಿಮಾಡುತ್ತಿದ್ದ. ಜೊತೆಗೆ ಒಣಗಿದ ಬಂಗಡೆ ಮೀನು. ಒಲೆಗೆ ಹಾಕಿ ಸುಟ್ಟರೆ ಅದರ ಪರಿಮಳ ಹತ್ತು ಮನೆಗಳ ಆಚೆಗೆ ಹೋಗುತ್ತಿತ್ತು. “ಸಮುದ್ರಕ್ಕೆ ಬೆಂಕಿ ಬಿದ್ದಿದೆ“ಎಂದು ಎಲ್ಲರೂ ಮಾತನಾಡಿಕೊಂಡು ನಗುತ್ತಿದ್ದರು. ಗಂಜಿ ಊಟ ಮುಗಿಸಿಕೊಂಡು ಕಲ್ಲು ತೆಗೆಯುವವರು ಕ್ವಾರಿಗೆ, ಕಲ್ಲು ಕೆತ್ತುವವರು, ಕಟ್ಟುವವರು ಇಮಾರತಿಗೆ ಹೋಗುತ್ತಿದ್ದರು. ಹುಡುಗ ಬಾಳ ಹನ್ನೆರಡು ಗಂಟೆಗೆ ಅಂಬಲಿ ತೆಗೆದುಕೊಂಡು ಹೋಗುತ್ತಿದ್ದ. ಎರಡು ಮೂರು ಗಿಳಾಸು ಅಂಬಲಿ ಕುಡಿದು, ಕವಳ ತಿಂದು ಎಲ್ಲರೂ ಕೆಲಸಕ್ಕೆ ತೊಡಗಿಕೊಳ್ಳುತ್ತಿದ್ದರು. ಸಂಜೆ ಮನೆಯಲ್ಲಿ ಮತ್ತೆ ಊಟ ಬಂಗಡೆ ಮೀನು.
ಮನೆಗೆ ಬಂದ ತಕ್ಷಣ ಸ್ನಾನ.
ಸಿಮೋನ ಒಬ್ಬನೇ, ಕಿಟಕಿಯ ಬಳಿ ಒಂದು ಶಿಲುಬೆ ಇರಿಸಿ ಮೇಣದ ಬತ್ತಿ ಹಚ್ಚಿ ಪ್ರಾರ್ಥನೆ ಮಾಡುತ್ತಿದ್ದ ಇವನ ಜತೆ ಸೇರಿಕೊಳ್ಳುವವರು ಕಡಿಮೆ.
ಎಂಟು ತಿಂಗಳು ಶಿವಸಾಗರದಲ್ಲಿ ಕೆಲಸ. ಮಳೆಗಾಲ ಬಂತು ಅನ್ನುವಾಗ ಊರಿಗೆ.
ಹೀಗೇ ಐದಾರು ವರ್ಷ ನಡೆಯಿತು.
ಸಿಮೋನ ಇಲ್ಲೊಂದು ಮನೆ ಕಟ್ಟಿದ, ಅವನ ಹೆಂಡತಿ ಮಕ್ಕಳು ತಾಯಿ ಇಲ್ಲಿಗೆ ಬಂದರು. ಸಾನಬಾವಿ ಪೆದ್ರು, ಸಾಸ್ಕೋಲ ಕೂಡ ಮನೆ ಮಾಡಿದರು.
ಸಂತಿಯಾಗ ಊರಿಗೆ ಹೋದವ
“ಮರಿಯ..“ಎಂದ
“ಏನು?”
“ನಾನೂ ಮನೆ ಮಾಡತೇನೆ ನೀನೂ ಬಂದು ಬೀಡು ಮಕ್ಕಳ ಜೊತೆ”
“ಹೌದಾ”
ಅವಳ ಮುಖ ಅರಳಿತು.
ಇಲ್ಲಿ ಮಕ್ಕಳನ್ನು ಇರಿಸಿಕೊಂಡು ಬದುಕು ಮಾಡುವುದು ಅವಳಿಗೆ ಕಷ್ಟಕರವೆನಿಸಿತ್ತು. ಸಂತಿಯಾಗ ಶಿವಸಾಗರಕ್ಕೆ ಹೋಗಿ ಬರಲು ಪ್ರಾರಂಭಿಸಿದ ನಂತರ ಮನೆಯಲ್ಲಿ ಮಕ್ಕಳ ಸಂಖ್ಯೆಯೂ ಅಧಿಕವಾಗಿತ್ತು. ಇಬ್ಬರ ಬದಲು ಈಗ ಮೂವರು ಮನೆಯಲ್ಲಿ ಅಧಿಕವಾಗಿದ್ದರು. ಸಂತಿಯಾಗ ಆಗಾಗ್ಗೆ ಅವರಿವರ ಹತ್ತಿರ ಹಣ ಕಳುಹಿಸುತ್ತಿದ್ದ. ಬರುವಾಗ ಹಣ ತರುತ್ತಿದ್ದ. ಇದರಲ್ಲಿ ಏನನ್ನೂ ಉಳಿಸಲು ಆಗಿರಲಿಲ್ಲ. ಇಲ್ಲಿ ತಮ್ಮದಾದ ಒಂದು ಮನೆಯನ್ನು ಮಾಡುವ ಕನಸು ಕನಸಾಗಿಯೇ ಉಳಿದಿತ್ತು.
“ಮಾಡಿ..ನಾವೂ ಬರತೇವೆ“ಎಂದಳು ಮರಿಯ.
ಸಂತಿಯಾಗ ನಗರಸಭೆಗೊಂದು ಅರ್ಜಿ ಹಾಕಿ ಸಿಮೋನನ ಮನೆ ಪಕ್ಕದಲ್ಲಿಯೇ ಒಂದು ನಿವೇಶನ ಕೊಂಡ. ಸಣ್ಣದೊಂದು ಬಿಡಾರ ಕಟ್ಟಿದ. ಮಣ್ಣಿನಗೋಡೆ ಬಿದಿರ ಮಾಡು ಮೇಲೆ ಸೋಗೆ ಹೋದಿಸಿದ. ತಗಡಿನ ಬಾಗಿಲು, ಬೇರೆ ಮನೆಗಳು ಕೂಡ ಹೀಗೆಯೇ ಇದ್ದವಲ್ಲ.
ಗೇರಸೊಪ್ಪೆಯವರೆಗೆ ಡೋಣಿ ಅಲ್ಲಿಂದ ಎತ್ತಿನಗಾಡಿ. ಅವರು ಶಿವಸಾಗರಕ್ಕೆ ಬಂದಾಗ ಮರಿಯಾಗೆ ಅವಳ ಮಕ್ಕಳಿಗೆ ಸಂತೋಷವಾಯಿತು. ಶಿವಸಾಗರ ಏನೆಂದರೂ ಪೇಟೆ. ಇಲ್ಲಿಯ ಜನರ ರೀತಿ ನೀತಿ ಬೇರೆಯಾಗಿತ್ತು. ಸಾಲು ಸಾಲಾಗಿದ್ದ ಅಂಗಡಿಗಳ ಪೇಟೆ ಆಕರ್ಷಕವಾಗಿತ್ತು. ಅಲ್ಲದೇ ಇಲ್ಲಿ ತಾವು ಮಾತ್ರ, ತಮ್ಮವರು ಬೇರೆ ಯಾರೂ ಇಲ್ಲ ಎಂಬ ಕೊರತೆ ಅವರಿಗೆ ಕಾಣಲಿಲ್ಲ. ಏಕೆಂದರೆ ಹಳ್ಳಿಯ ಹತ್ತಿರವೇ ಮತ್ತೂ ಮೂರು ನಾಲ್ಕು ಮನೆಗಳು ಇದ್ದವು. ಸಿಮೋನ, ಸಾನಬಾವಿ ಪೆದ್ರು. ಪಾಸ್ಕೊಲರ ಬಿಡಾರಗಳಿದ್ದವು. ಇದರಿಂದ ಇವರಿಗೆ ಅನುಕೂಲವೂ ಆಯಿತು.
ಒಂದು ಕೊರತೆ ಎಂದರೆ ಶಿವಸಾಗರದಲ್ಲಿ ಇಗರ್ಜಿ ಇರಲಿಲ್ಲ. ಭಾನುವಾರದ ಪೂಜೆಗೆ ದಿವ್ಯ ಪ್ರಸಾದ ಸ್ವೀಕಾರಕ್ಕೆ ಅವಕಾಶವಿರಲಿಲ್ಲ. ಇದೊಂದು ದೊಡ್ಡ ಕೊರತೆ ಎನಿಸಿತು.
ಇದನ್ನು ತುಂಬಿಕೊಳ್ಳಲು ಮನೆಯಲ್ಲಿಯೇ ಪ್ರಾರ್ಥನೆ ತೇರ್ಸ ಮಾಡುವುದನ್ನು ರೂಢಿಗೆ ತಂದರೂ ಇದು ಬಹಳ ದಿನ ನಡೆಯಲಿಲ್ಲ.
ಸಿಮೋನ ಶೆಟ್ಟಿಹಳ್ಳಿ ಶ್ರೀಮಂತರ ಮಹಡಿ ಮನೆ ಕಟ್ಟಿಸುತ್ತಿದ್ದ. ಎಂದಿನಂತೆ ಸಂತಿಯಾಗ ಅರವತ್ತು ಅಡಿ ಎತ್ತರದ ಗೋಡೆಯ ಮೇಲೆ ನಿಂತು ಕಲ್ಲು ಕಟ್ಟುತ್ತಿದ್ದ. ಅದೇನಾಯಿತೋ ತಲೆಗೆ ಕತ್ತಲೆ ಬರುತ್ತಿದೆ ಎಂದು ಕೆಳಗಿನಿಂದ ಕಲ್ಲು ಕೊಡುತ್ತಿದ್ದವನಿಗೆ ಹೇಳುತ್ತಲೆ, ಅಲ್ಲಿಂದ ಕೆಳಗೆ ಬಿದ್ದ. ಬಿದ್ದವನು ಕೂಡಲೇ ತಲೆಯೊಡೆದು ಸತ್ತ. ಅವನ ಶವವನ್ನು ಮನೆಗೆ ಹೊತ್ತು ತಂದರು.
ಶಿವಸಾಗರದಲ್ಲಿ ಸತ್ತ ಕ್ರೀಸುವರನ್ನು ಮಣ್ಣು ಮಾಡಲು ಸಿಮಿತ್ರಿ ಇಲ್ಲ. ಈ ಕೆಲಸ ನಿರ್ವಹಿಸಲು ಪಾದರಿ ಇಲ್ಲ.
ಏನು ಮಾಡಬೇಕು?
ಕ್ರಿಸ್ತುವನೊಬ್ಬನಿಗೆ ಯಾವುದೇ ಸಂಸ್ಕಾರ ನೀಡದೆ ಎಲ್ಲೋ ಒಂದು ಕಡೆ ಹುಗಿಯುವುದೆ?
ಸಿಮೋನ ಬಂದು ದಾರಿ ತೋರಿಸಿದ.
ಅವನು ಅದೇ ಹೊಸದಾಗಿ ಗಾಡಿ ಕೊಂಡಿದ್ದ. ಆತನ ಎತ್ತುಗಳು ಬಲವಾಗಿದ್ದವು. ಮಂಜಣ್ಣ ಅನ್ನುವವ ಈ ಗಾಡಿ ಎತ್ತುಗಳನ್ನು ನೋಡಿಕೊಳ್ಳುತ್ತಿದ್ದ.
ಗಂಡನ ಶವವನ್ನು ಗಾಡಿಯಲ್ಲಿ ಹಾಕಿಕೊಂಡು ತಾನು ಊರಿಗೆ ಹಿಂತಿರುಗಿದೆ. ಮಕ್ಕಳೂ ಜೊತೆಗಿದ್ದರು. ಮುರುಡೇಶ್ವರ ಇಂತ್ರು ಜೊತೆಗೆ ಬಂದ.
ಊರಿನಲ್ಲಿ ಬಂಧುಗಳೆಲ್ಲ ಓಡಿ ಬಂದರು. ಪಾದರಿಗಳೂ ಸಿಕ್ಕರು. ಸಿಮಿತ್ರಿಯಲ್ಲಿ ಹೊಂಡ ತೆಗೆಯಲಾಯಿತು. ಗಂಡನಿಗೆ ಒಳ್ಳೆಯ ಮರಣ ಪ್ರಾಪ್ತವಾಯಿತು. ಬಂಧು ಬಳಗದವರು, ಪಾದರಿ ಕೂಡ ಸಂತಿಯಾಗನ ಶವವನ್ನಿ ಇಷ್ಟು ದೂರ ತಂದದ್ದು ಒಳ್ಳೆಯದಾಯಿತು ಎಂದರು. ಗಂಡನ ಹೆಸರಿನಲ್ಲಿ ಮೂರು ದಿನ , ಹನ್ನೊಂದು ದಿನ, ತಿಂಗಳ ಪೂಜೆ ಮಾಡಿಸಿದೆ.
ಮುಂದೆ?
ಸಂತಿಯಾಗ ಕಟ್ಟಿದ ಮನೆ ಶಿವಸಾಗರದಲ್ಲಿತ್ತು. ಕಾಯ್ಕಿಣಿಯಲ್ಲಿ ತನ್ನದು ಅನ್ನುವುದು ಎನೂ ಇರಲಿಲ್ಲ. ತೆಂಗಿನ ತೋಟವನ್ನು ಕೂಡ ಒಡೆಯರು ನೋಡಿಕೊಳ್ಳಲು ಬೇರೆ ಯಾರಿಗೋ ವಹಿಸಿದ್ದರು. ಬಂಧು ಬಳಗದವರು ತಿಂಗಳ ಪೂಜೆಗೆ ಬಂದವರು ಊಟ ಮಾಡಿ ತಿರುಗಿ ಹೋದರು. ಸಂತಿಯಾಗನ ಚಿಕ್ಕಪ್ಪ ಜೇಮ್ಸ-
“..ನೀನು ಮುಂದೇನು ಮಾಡುವಾಕೆ?’ ಎಂದು ಕೇಳಿದರು.
ಇವಳು ಎಲ್ಲಿ ಅಲ್ಲಿಯೇ ಉಳಿದುಬಿಡುತ್ತಾಳೋ ಎಂಬ ಅಂಜಿಕೆ ಅವರಿಗೆ.
“ನಾನು ಘಟ್ಟದ ಮೇಲೆ ಹೋಗತೀನಿ”. ಎಂದಳು.
ಮರಿಯ ಗೇರುಸೊಪ್ಪೆಗೆ ಬಂದ ಗಾಡಿಯೊಂದನ್ನೇರಿ ಅವಳು ತಿರುಗಿ ಶಿವಸಾಗರಕ್ಕೆ ಬಂದಳು.
ಅವಳು ಊರಿಗೆ ಬಂದ ಎರಡನೇ ದಿನ ಶೆಟ್ಟಿಹಳ್ಳಿ ಸಾಹುಕಾರರಂತೆ , ಅವರು ಕಮಾನು ಗಾಡಿಯಲ್ಲಿ ಕುಳಿತು ಅವಳ ಮನೆಗೆ ಬಂದರು.
“…ಹೀಗೆ ಆಗಬಾರದಿತ್ತು“ಎಂದರು
“ಮನೆ ತುಂಬ ಮಕ್ಕಳು ಎಂದು ಕೇಳಿದೆ. ಮುಂದೆ ಏನು ಮಾಡತೀಯ?“ಎಂದು ಪ್ರಶ್ನಿಸಿದರು.
ಹೋಗುವಾಗ ತನ್ನ ಕೈಗೆ ನೂರು ರೂಪಾಯಿ ಕೊಟ್ಟು ಹೋದರು.
ತಾನು ಬದುಕಲು ಒಂದು ದಾರಿ ಕಂಡುಕೊಳ್ಳಬೇಕಿತ್ತು.
ಗಾಡಿ ಮಂಜಣ್ಣನ ತಾಯಿ ರುದ್ರಮ್ಮ ತನ್ನ ಕಷ್ಟ ಸಂಕಟಗಳಿಗೆ ನೆರವಾಗುತ್ತಿದ್ದವಳು-
“ಮರಿಯಮ್ಮ….ಮನೆಯಾಗೆ ಒಂದೆರಡು ಎಮ್ಮೆ ಕಟ್ಟು. ನಿನ್ನ ಕುಟುಂಬಕ್ಕೊಂದು ದಾರಿ ಆಗತೈತೆ“ಎಂದಳು.
ತಾನು ಎರಡು ಎಮ್ಮೆ ಕೊಂಡೆ. ಅವುಗಳ ಚಾಕರಿಗೆ ತೊಡಗಿದೆ. ಹಾಲು ಮಾರಾಟ ಪ್ರಾರಂಭಿಸಿದೆ.
ಸಂತಿಯಾಗ ಕೊನೆಯದಾಗಿ ತನಗೊಂದು ಉಪಕಾರ ಮಾಡಿ ಹೋಗಿದ್ದ. ಅವನು ತೀರಿಕೊಂಡ ಆರು ತಿಂಗಳ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದೆ.
ಆಗ ಕೂಡ ತನಗೆ ನೆರವಾದವಳು ರುದ್ರಮ್ಮ
“ಈ ದರಿದ್ರದ್ದು ಯಾಕೆ ಹುಟ್ಟಿತು“ಎಂದಾಗ ರುದ್ರಮ್ಮ-
“…ಚಲೋದಾಯ್ತು ಬಿಡು..ನಿನ್ನ ಮನೆಗೊಂದು ಹೆಣ್ಣು ಬೇಕಿತ್ತು….ಮಾಲಕ್ಷ್ಮೀ ಬಂದಾಳೆ..ಅಪದ್ಧ ನುಡಿಬ್ಯಾಡ”.
ಎಂದು ಮಗುವನ್ನು ಎತ್ತಿಕೊಂಡು ಮುತ್ತಿಟ್ಟಳು.
ರುದ್ರಮ್ಮ ತನಗೆ ಮಾಡಿದ ಉಪಕಾರವನ್ನು ಎಂದೂ ಮರೆಯದಾದಳು ಮರಿಯ. ಜಾತಿಯವಳಲ್ಲ. ರಕ್ತ ಸಂಬಂಧ ಮೊದಲೇ ಅಲ್ಲ. ಆದರೆ ತನಗೆ ನೋವು ಕಾಣಿಸಿಕೊಂಡ ಕ್ಷಣದಿಂದ ಮಗುವನ್ನು ಹೆರುವ ತನಕ ತನ್ನ ಮಗ್ಗುಲನ್ನು ಬಿಟ್ಟು ಏಳಲಿಲ್ಲ ಈ ಮುದುಕಿ. ನಂತರ ಕೂಡ ತನಗೆ ಸ್ನಾನ ಮಗುವಿಗೆ ಸ್ನಾನ ಎಂದು ಮನೆಯಲ್ಲಿಯೇ ಉಳಿದಳು. ಹುಡುಗರು ಹಾಲು ಕರೆಯುವುದು, ಒಯ್ದು ಕೊಡುವುದು ಎಂದೆಲ್ಲ ಮಾಡಿದರು. ಮೂರು ತಿಂಗಳಿಗೇನೆ ತಾನು ಎದ್ದು ಕೆಲಸಕ್ಕೆ ತೊಡಗಿದಾಗ ರುದ್ರಮ್ಮ-
“ಹಸಿಮೈ….ಮಲಕ್ಕೋ ನೀನು“ಎಂದಳು.
ಒಂದು ವರ್ಷದವರೆಗೆ ಮಗಳ ಜ್ಞಾನಸ್ನಾನ ಮಾಡಿಸಲಾಗಲಿಲ್ಲ. ಗಂಡನ ವರ್ಷದ ಪೂಜೆಗೆ ಊರಿಗೆ ಹೋದಾಗ ಅಲ್ಲಿ ಮಗಳಿಗೆ ಫ಼ಿಲೋಮೆನಾ ಎಂದು ಹೆಸರಿಡಲಾಯಿತು. ಊರಿಗೆ ಬಂದದ್ದೆ ರುದ್ರಮ್ಮ-
“ಮಗೂಗೆ ಏನು ಹೆಸರಿಟ್ಟೆ ಮರಿಯಮ್ಮ?“ಎಂದು ಕೇಳಿದಳು.
“ಫ಼ಿಲೋಮೆನಾ ಅಂತ“ಎಂದೆ ತಾನು.
ಈ ಹೆಸರು ಮಾತ್ರ ರುದ್ರಮ್ಮನ ಬಾಯಲ್ಲಿ ಪಿಲ್ಲಮ್ಮ ಎಂದಾಯಿತು.
ಸಿಮೋನ ಹೊಸದಾಗಿ ಗಾಡಿ ಕೊಂಡು, ಗಾಡಿಗೆಂದು ಎರಡು ಎತ್ತು ತಂದಾಗ ಅವುಗಳನ್ನು ನೋಡಿಕೊಳ್ಳಲು ಗಾಡಿ ಹೊಡೆಯಲು ಯಾರನ್ನಾದರೂ ಇರಿಸಿಕೊಳ್ಳುವುದು ಅವನಿಗೆ ಅನಿವಾರ್ಯವಾಯಿತು. ಆಗ ಅವನಿಗೆ ಸಿಕ್ಕವ ಮಂಜ. ಮಂಜ ಹತ್ತಿರದ ಬರದೊಳ್ಳಿಯವ. ಅಲ್ಲಿ ಕೂಲಿನಾಲಿ ಮಾಡಿಕೊಂಡಿದ್ದವ. ಎತ್ತು ಸಾಕುವುದು. ಗಾಡಿ ಹೊಡೆಯುವುದು ಅವನಿಗೆ ಗೊತ್ತಿತ್ತು.
“ಆ ಕೆಲಸ ನನಗೆ ಬುಡಿ..“ಎಂದ ಆತ.
ಸಿಮೋನ ಅವನನ್ನು ಈ ಕೆಲಸಕ್ಕೆ ನೇಮಿಸಿಕೊಂಡ. ಕಾಮಗಾರಿ ನಡೆಯುವ ಸ್ಥಳಕ್ಕೆ ಕಲ್ಲು, ಮಣ್ಣು, ಮರಳು ಸಾಗಿಸಲು ಅವನಿಗೆ ಗಾಡಿ ಬೇಕಾಗುತ್ತಿತ್ತು. ಯಾವುದೇ ತಕರಾರು ಇಲ್ಲದೇ ಕೆಲಸ ಮಾಡಿಕೊಂಡು ಹೋಗುತ್ತಿದ್ದ ಮಂಜ.
“..ಸಾಹುಕಾರ್ರೆ ದಿನಾ ಹಳ್ಳಿಯಿಂದ ಬರಬೇಕು…ನನಗೆ ಇಲ್ಲೇ ಎಲ್ಲಾರ ಒಂದ ಮನೆ ಕೊಡ್ಸಿ ಬುಡಿ“ಎಂದು ದುಂಬಾಲು ಬಿದ್ದ.
ಸಿಮೋನನ ಮನೆ ಹಿಂಬದಿಯಲ್ಲಿಯ ಒಂದು ಜಾಗವನ್ನು ಸಿಮೋನ ಮೊನ್ನೆ ಮೊನ್ನೆ ಯಾರಿಂದಲೋ ಕೊಂಡಿದ್ದು ಅಲ್ಲಿ ಒಂದು ಹುಲ್ಲಿನ ಗುಡಿಸಲನ್ನು ಆತ ಕಟ್ಟಿದ್ದ.
“ಅಲ್ಲಿ ಇರು ನೋಡುವ“ಎಂದ ಸಿಮೋನ.
ಮಂಜನಿಗೆ ಸಂತಸವಾಯಿತು. ಅವನು ತನ್ನ ಹೆಂಡತಿ ಮಕ್ಕಳು ತಾಯಿಯ ಜತೆ ಈ ಮನೆಗೆ ಬಂದದ್ದೂ ಆಯಿತು. ರುದ್ರಮ್ಮ ಮಂಜನ ತಾಯಿ. ನಡು ವಯಸ್ಸು ಗಟ್ಟಿ ಮುಟ್ಟಾಗಿದ್ದಳು. ಕಣ್ಣು ಕಿವಿ ಎಲ್ಲ ಚುರುಕು. ಎಲೆ ಅಡಿಕೆ ಚೀಲವನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಹೊರಟರೆ, ಐದಾರು ಮನೆಗಳನ್ನು ಸುತ್ತಿ, ಅಲ್ಲಿರುವವರನ್ನೆಲ್ಲ ಮಾತನಾಡಿಸಿ, ಅವರಿವರ ಕೆಲಸ ಮಾಡಿಕೊಟ್ಟು ಮಕ್ಕಳನ್ನು ಆಡಿಸಿ ಮನೆಗೆ ಬರುತ್ತಿದ್ದಳು.
ಯಾರಾದರೂ ಅಯ್ಯೋ ಎಂದರೆ ರುದ್ರಮ್ಮ ಅಲ್ಲಿ ಹಾಜರ್.
ಅವಳಿಗೆ ಆ ಜಾತಿ ಈ ಜಾತಿ ಎಂದು ಏನಿಲ್ಲ. ಅವರ ಮನೆಗೆ ಹೋಗಬಾರದು, ಇವರ ಮನೆಯಲ್ಲಿ ತಿನ್ನಬಾರದು ಎಂದಿಲ್ಲ.
“ತೆಗಿ ಅತ್ಲಾಗೆ ಎಲ್ರು ಮನುಷ್ಯರೇಯ“ಎಂದು ಮಾತು ಮಾತಿಗೆ ಹೇಳುತ್ತಾಳೆ.
ಸಿಮೋನನ ಅಕ್ಕ ಪಕ್ಕದ ಮನೆಗಳಲ್ಲಿರುವ ಕಿರಿಸ್ತಾನರ ಹೆಂಗಸರ ಪಾಲಿಗೆ ರುದ್ರಮ್ಮ ಸದಾ ನೆರವಾಗುತ್ತಾಳೆ.
ಏನು ಆಗಬೇಕು ಎಂದು ಅವಳು ಯಾವತ್ತೂ ಕೇಳುವುದಿಲ್ಲ. ನೇರವಾಗಿ ಹೋಗಿ ಕೆಲಸಕ್ಕೆ ಕೈ ಹಾಕುತ್ತಾಳೆ.
ಬಾಣಂತಿ ಗರ್ಭಿಣಿ ಅಂದರಂತೂ ಇವಳ ಹೃದಯ ಕರಗಿ ನೀರಾಗುತ್ತದೆ. ಮಕ್ಕಳೆಂದರೆ ಪ್ರಾಣ ಬಿಡುತ್ತಾಳೆ.
ಮರಿಯಮ್ಮನಿಗೆ ಬಂದ ಕಷ್ಟ ನೋಡಿ ತುಂಬಾ ನೊಂದವಳು ರುದ್ರಮ್ಮ.
“ಆ ದೇವ್ರು ಹಿಂಗೆ ಮಾಡೋದ?“ಎಂದು ದೇವರನ್ನೇ ಬೈಯ್ದಳು. ಮರಿಯಳ ಬೆಂಬಲಕ್ಕೆ ನಿಂತಳು. ಅವಳಿಗೆ ಎಮ್ಮೆ ಕೊಡಿಸಿದಳು. ಮನೆಯ ಹಿಂದೆ ಕೊಟ್ಟಿಗೆ ಕಟ್ಟಿಸಲು ನೆರವಾದಳು.
“…..ಆ ಯಮರಾಯ ಬರೋಗಂಟ ಬದುಕಾಕೇ ಬೇಕು…ಸೋತು ಸುಣ್ಣ ಆಗಬಾರದು“ಎಂದು ಅವಳಲ್ಲಿ ಧೈರ್ಯ ತುಂಬಿದಳು.
ಮರಿಯಳ ಗಂಡ ಸತ್ತ ನಂತರ ಅವಳಿಗೆ ಹುಟ್ಟಿದ ಮಗುವನ್ನು ಇವಳೇ ನೋಡಿಕೊಂಡಳು. ಮಗು ರಚ್ಚು ಹಿಡಿದರೆ ದೃಷ್ಠಿ ತೆಗೆದಳು.
ಮಗುವಿಗೆ ಸಿಡುಬಾದರೆ ಊರ ಮಾರಮ್ಮನಿಗೆ ಹರಕೆ ಹೊತ್ತು ಇವಳೇ ಹೋಗಿ ಹಣ್ಣು ಕಾಯಿ ಮಾಡಿಸಿಕೊಂಡು ಬಂದು ಮಗುವಿನ ಮೈಗೆ ಭಂಡಾರ ಪೂಸಿದಳು.
ಮಗು ನಿದ್ದೆಯಲ್ಲಿ ಎದ್ದು ಕಿರುಚಿಕೊಂಡರೆ ಧೂಪದ ಮರದ ಭೂತಕ್ಕೆ ತೆಂಗಿನ ಕಾಯಿ ಸುಲಿದು ಇಟ್ಟಳು.
ಮಗು ಬಿಳಿಚಿಕೊಂಡು ಸಣ್ಣಗಾಗಿದೆ ಎಂದು ಕೋಣನ ಕಟ್ಟೆ ತಾಯಿತ ತಂದು ಮಗುವಿನ ಸೊಂಟಕ್ಕೆ ಕಟ್ಟಿದಳು.
ಇದನ್ನೆಲ್ಲ ನೋಡುತ್ತಿದ್ದ ಮರಿಯ ಬೇಡ ಅನ್ನಲಿಲ್ಲ. ಮಗುವಿಗೆ ಒಳಿತಾದರೆ ಸಾಕು ಎಂದು ನಂಬಿದಳು. ರುದ್ರಮ್ಮನ ಈ ಆಚರಣೆ ಇತರೆಯವರಿಗೂಸರಿ ಎನಿಸಿತು. ಮರಿಯಳ ಮನೆ ಅಕ್ಕ ಪಕ್ಕದವರೂ ಹೀಗೆಯೇ ಮಾಡಿದರು.
ಮರಿಯಳ ಮನೆಯಲ್ಲಿಯ ಎಮ್ಮೆಗಳ ಸಂಖ್ಯೆ ಅಧಿಕವಾಯಿತು. ಹಾಲು ಕರೆದು, ಎಮ್ಮೆ ತೊಳೆದು ಅವುಗಳಿಗೆ ಹಿಂಡಿ ಹುಲ್ಲು ಹಾಕಿ ನೋಡಿಕೊಳ್ಳುವುದೇ ಒಂದು ಕೆಲಸವಾಯಿತು. ಇದರ ಜೊತೆಗೆ ಮಕ್ಕಳನ್ನು ಸಂಬಾಳಿಸಿಕೊಂಡು ಹೋಗುವುದು. ಏನೇನೋ ಕಷ್ಟ ತಾಪತ್ರಯಗಳು.
ಊರಿನಲ್ಲಿ ಸಿಮೋನ ಕೊಪೆಲ ಕಟ್ಟಿದ್ದ. ಅಲ್ಲಿ ಜಪ ತೇರ್ಸ ನಡೆಯಿತು.ಮನೆಯಲ್ಲೂ ಜಪಪ್ರಾರ್ಥನೆ ಮಾಡುತ್ತಿದ್ದಳು. ಕ್ರಮೇಣ ಇದೆಲ್ಲ ದೂರವಾಯಿತು. ತನ್ನ ಕುತ್ತಿಗೆಯಲ್ಲಿಯ ಶಿಲುಬೆಯೊಂದನ್ನು ಬಿಟ್ಟರೆ ತಾನು ತನ್ನ ಮಕ್ಕಳು ಎಲ್ಲವನ್ನೂ ಕೈ ಬಿಟ್ಟೆವು.
ಆದರೆ ಈಗ ಊರಿಗೆ ಪಾದರಿ ಬಂದನಂತರ ಮತ್ತೆ ಅದೆಲ್ಲ ನೆನಪಾಗುತ್ತಿದೆ.
ಹೌದು ಎಂತಹಾ ತಪ್ಪು ಮಾಡಿದೆ. ಕ್ರಿಸ್ತ ಪ್ರಭುವನ್ನು ಮೇರಿ ಮಾತೆಯನ್ನು ಮರೆತೆನೆ? ಈಗ ಮನಸ್ಸು ಭೀತಿಯಿಂದ ಕಂಪಿಸುತ್ತಿದೆ. ಪಾದರಿಗಳ ಕೆಂಗಣ್ಣು ದೇಹದ ರೋಮ ರೋಮಗಳನ್ನು ದಹಿಸುತ್ತಿದೆ.
ಈಗಾಗಲೇ ಪಾದರಿ ಏಳೆಂಟು ಜನ ಹುಡುಗರನ್ನು ಪೂಜೆಗೆ ಬರಲಿಲ್ಲ, ಜ್ಞಾನೋಪದೇಶಕ್ಕೆ ಬರಲಿಲ್ಲ ಅನ್ನುವ ಕಾರಣಕ್ಕೆ ಹೊಡೆದಿದ್ದಾರೆ. ಸಣ್ಣ ಹೆಡೆ ಇರುವ ಮಾರುದ್ಧದ ನಾಗರಬೆತ್ತ ಅವರ ಕೈಲಿರುತ್ತದೆ. ಒಂದು ತುದಿ ಬಿರುಸು ಇನ್ನೊಂದು ತುದಿ ಸಪೂರ. ಅದನ್ನು ಹಿಡಿದು ಚಾಟಿಯಂತೆ ಪಾದರಿ ಬೀಸುತ್ತಾರೆ.
ಪಾಸ್ಕೋಲನ ಮಗ ಆಂತೋನಿ, ಸುತಾರಿ ಇನಾಸನ ಮಗ ಪಾಸ್ಕು, ಇಂತ್ರು ಮಗ ಸಿರೀಲ, ಕೈತಾನನ ಮಗ ದುಮಿಂಗ ಎಲ್ಲರೂ ಏಟು ತಿಂದಿದ್ದಾರೆ. ಕಾಲ ಮೀನ ಖಂಡದ ಮೇಲೆ ಬೆತ್ತ ಕೆಂಪಗೆ ಬೆರಳಷ್ಟು ದಪ್ಪಗೆ ಮೂಡಿದೆ.
“ಅಯ್ಯಯ್ಯೋ ಸತ್ತೆ….ಸತ್ತೆ“ಎಂದವರು ಬೊಬ್ಬೆ ಹೊಡೆದಿದ್ದಾರೆ. ಅಜ್ಜಿಯರು ಬಾವಿಗೆ ಕೊಬ್ಬರಿ ಎಣ್ಣೆ ಸವರಿದ್ದಾರೆ.
ಯಾರೂ ತುಟಿ ಎರಡು ಮಾಡಿಲ್ಲ.
ಪಾದರಿಗಳ ವಿರುದ್ಧ ಮಾತನಾಡುವುದಂಟೆ?
ಪಾದರಿ ಗೋನಸಾಲ್ವಿಸ್ ದೊಡ್ಡವರನ್ನೂ ಬಿಟ್ಟಿಲ್ಲ.
ಭಾನುವಾರ ಬಾಚಿ ಹೇಗಲೇರಿಸಿಕೊಂಡು ಕೆಲಸಕ್ಕೆ ಹೊರಟವರನ್ನು ಅಡ್ಡಗಟ್ಟಿದ್ದಾರೆ. ಅವರ ಕೈಯಿಂದ ಬಾಚಿ ಕಸಿದುಕೊಂಡಿದ್ದಾರೆ. ಹೊಡೆದೇ ಬಿಡುವ ಹಾಗೆ ಬೆತ್ತ ಬೀಸಿ ಕುಣಿದಾಡಿದ್ದಾರೆ.
“ನಿಮಗೆ ದೇವರು ಅಂತ ಒಬ್ಬ ಇದ್ದಾನೆ. ನಿಮಗೆ ಹೊಟ್ಟೆ ಮುಖ್ಯ ಆಯ್ತೇ? ನೀವೆಲ್ಲ ಅನುಭವಾಡ್ತಿಗಳ? ಭಾನುವಾರವನ್ನು ಪವಿತ್ರ ದಿನವೆಂದು ತಿಳಿದು ಆಚರಿಸಬೇಕು ಅನ್ನೋದು ನಿಮಗೆ ಗೊತ್ತಿಲ್ಲವೇ? ನೀವು ದೇವರ ಆಜ್ಞೆಯನ್ನು ಇಗರ್ಜಿ ಮಾತೆಯ ಕಟ್ಟಳೆಯನ್ನು ಮುರಿಯುವುದೇ? ನಿಮಗೆಲ್ಲ ಶಾಶ್ವತವಾದ ನರಕವಲ್ಲದೆ ಬೇರೇನೂ ದೊರೆಯುವುದಿಲ್ಲ…“ಎಂದೆಲ್ಲ ಕೂಗಾಡಿದ್ದಾರೆ ಪಾದರಿ ಗೋನಸಾಲ್ವಿಸ್.
ಕೆಲವೇ ದಿನಗಳಲ್ಲಿ ಶಿವಸಾಗರ ಕ್ರೀಸುವರಿಗೆ ಅದು ಹೇಗೋ ಮರೆತು ಹೋದ ಎಲ್ಲ ವಿಷಯಗಳೂ ನೆನಪಿಗೆ ಬಂದಿವೆ. ಶಿಲುಬೆಯ ವಂದನೆಯಿಂದ ತೇರ್ಸ, ಪ್ರಾರ್ಥನೆ, ಊಟಕ್ಕೆ ಮುನ್ನ ಅರ್ಪಿಸುವ ಕೃತಜ್ಞತೆ. ಮಲಗುವ ಮುನ್ನ ಹೇಳುವ ಪ್ರಾರ್ಥನೆ. ಪಾಪ ನಿವೇದನಾ ಕ್ರಮ. ದಿವ್ಯ ಪ್ರಸಾದವನ್ನು ಸ್ವೀಕರಿಸುವ ಭಕ್ತಿ ಎಲ್ಲವೂ ಅವರ ನೆನಪಿಗೆ ಬಂದಿದೆ. ಇಲ್ಲವೆ ಮರೆತು ಹೋದುದನ್ನು ಅವರು ಮತ್ತೆ ಸ್ಮರಿಸಿ ಕೊಂಡಿದ್ದಾರೆ. ನೆನಪಿಗೆ ತಂದುಕೊಂಡಿದ್ದಾರೆ. ದೇವರು ಧರ್ಮದ ಗೊಡವೆ ಇಲ್ಲದೆ ಬದುಕಿದ್ದವರು ದೇವರತ್ತ ತಿರುಗಿಕೊಂಡಿದ್ದಾರೆ. ಪಾದರಿ ಗೋನಸಾಲ್ವಿಸ್ ಕೈಯಲ್ಲಿಯನಾಗರಬೆತ್ತವನ್ನು ಝಳಪಿಸುತ್ತಾರೆ. ಅದರ ಎರಡೂ ತುದಿಗಳನ್ನು ಹಿಡಿದು ಕಮಾನಿನಂತೆ ಬಗ್ಗಿಸಿ ಆಟವಾಡುತ್ತಾರೆ.
ಈಗ ಭಾನುವಾರಗಳಂದು ಕೊಪೆಲನ ಹೊರಗೂ ಜನ ನಿಲ್ಲುತ್ತಾರೆ. ಎರಡನೆ ಗಂಟೆ ಆಯಿತು ಅನ್ನುವಾಗ ಅವಸರ ಅವಸರದಲ್ಲಿ ಸೀರೆ ಸುತ್ತಿಕೊಂಡು ತಲೆಯ ಮೇಲೆ ಸೆರಗು ಎಳೆದುಕೊಳ್ಳುತ್ತ- ಹುಡುಗಿಯರು ವೇಲ್ ಧರಿಸುತ್ತ ಕೊಪೆಲನತ್ತ ಓಡುತ್ತಾರೆ. ಹುಡುಗರು ಅರ್ಧ ಗಂಟೆಯಮೊದಲೇ ಬರಬೇಕೆಂದು ಪಾದರಿ ಹೇಳಿದ್ದಾರೆ. ಕೊಪೆಲಗೆ ಯಾರು ಬಂದಿದ್ದಾರೆ? ಯಾರು ಬಂದಿಲ್ಲ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಾರೆ. ಎರಡನೇ ಗಂಟೆಯಾದ ನಂತರ ಕೈಯಲ್ಲಿ ಬೆತ್ತ ಹಿಡಿದು ಕ್ರೀಸುವರ ಮನೆಗಳ ಸುತ್ತ ಒಂದು ಸುತ್ತು ಬರುವುದನ್ನು ಅವರು ನಿಲ್ಲಿಸಿಲ್ಲ.
ಹೀಗಾಗಿ ಮರಿಯ ಗಡಿಬಿಡಿ ಮಾಡಿ ಮನೆಗೆಲಸ ಮುಗಿಸಿ ಹೊರಡುತ್ತಾಳೆ. ಉಳಿದ ಮನೆಗಳಲ್ಲೂ ಈ ಅವಸರ ಕಾಣಿಸಿಕೊಳ್ಳುತ್ತದೆ. ಬೇಗನೆ ಏಳದ ಮಕ್ಕಳನ್ನು‌ಎಚ್ಚರಿಸುವ-
“ಊಟ್ರೆ..ಇಗರ್ಜಿಕ ಓಸ್ರೆ..“(ಏಳೋ ಇಗರ್ಜಿಗೆ ಹೋಗೋ) ಎಂಬ ಮಾತು ಎಲ್ಲ ಮನೆಗಳಲ್ಲಿ ಕೇಳಿ ಬರುತ್ತದೆ.
ಈ ಪರಿವರ್ತನೆ ಕಂಡು ಸಿಮೋನ ಅಚ್ಚರಿ ಪಡುತ್ತಾನೆ.
“ಪದ್ರಬಾ ಇದೊಂದು ಪವಾಡ“ಅನ್ನುತ್ತಾನೆ ಆತ.
*
*
*
ಶಿವಸಾಗರದಲ್ಲಿ ಕ್ರೀಸುವರ ಸಂಖ್ಯೆ ಕಡಿಮೆ ಇದ್ದರೂ ಅವರಲ್ಲಿ ದೈವಭಕ್ತಿ ದೈವಭೀತಿ ಇರಬೇಕೆಂದು ಬಯಸಿದವ ಆತ. ಮೊದಲಿನಿಂದಲೂ ಅವನು ದೈವಭಕ್ತ. ಅವನ ಮನೆಯಲ್ಲಿ ದಿನದಲ್ಲಿ ಮೂರು ಬಾರಿ ಪ್ರಾರ್ಥನೆ ತಪ್ಪಿದ್ದಲ್ಲ. ಭಾನುವಾರಗಳಂದು ಪೂಜೆಗೆ ತಪ್ಪಿಸಿಕೊಂಡೇ ಅವನಿಗೆ ಗೊತ್ತಿರಲಿಲ್ಲ. ಇಲ್ಲಿಗೆ ಬಂದ ನಂತರ ಇದೇ ಒಂದು ವ್ಯಥೆಯಾಗಿತ್ತು. ಬರುವಾಗ ಜೊತೆಯಲ್ಲಿ ಒಂದು ದೇವರ ಪ್ರತಿಮೆಯನ್ನು ಆತ ತಂದಿದ್ದ. ತಾನಿರುವ ಬಿಡಾರದಲ್ಲಿಯೇ ಅದನ್ನು ಇರಿಸಿ ಮೇಣದ ಬತ್ತಿ ಹಚ್ಚಿ ಇತರೆ ಕೆಲಸಗಾರರ ಸಂಗಡ ಪ್ರಾರ್ಥನೆ ಸಲ್ಲಿಸುತ್ತಿದ್ದ. ಆದರೆ ಉಳಿದವರಿಗೂ ತನ್ನಷ್ಟೇ ಶೃದ್ಧೆ ಆಸಕ್ತಿ ಇರಲು ಸಾಧ್ಯವೆ? ಕೆಲವರು ಎನೋ ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು.
ಊರಿನಲ್ಲಿ ಕ್ರೀಸುವರ ಸಂಖ್ಯೆ ಹೆಚ್ಚಿತು. ಮೂರು ನಾಲ್ಕು ಮನೆಗಳಾದವು. ಘಟ್ಟದ ಕೆಳಗಿನಿಂದ ಕೆಲಸಕ್ಕೆಂದು ಬಂದವರ ಸಂಖ್ಯೆಯೂ ಅಧಿಕವಾಗಿತ್ತು. ತನ್ನ ಜನ ಕ್ರಿಸ್ತನ ಮೇಲಿನ ವಿಶ್ವಾಸದಿಂದ ದೂರವಾಗಿ ಅವಿಶ್ವಾಸಿಗಳ ದೇವರುಗಳನ್ನು ನಂಬತೊಡಗಿದಾಗ ಈ ಜನರನ್ನು ಒಂದೆಡೆ ಕೂಡಿಸಿ ಇಡಬೇಕು ಅನಿಸಿತು ತನಗೆ. ಆಗಲೇ ಕೇರಿಯ ನಡುವೆ ಒಂದು ಕೊಪೆಲ ಕಟ್ಟುವ ವಿಚಾರ ಮನಸ್ಸಿನಲ್ಲಿ ಸುಳಿಯಿತು. ಕೂಡಲೇ ತಾನು ಕಾರ್ಯೋನ್ಮುಖನಾದೆ. ಶಾನುಭೋಗರಿಗೆ ನಾಲ್ಕು ವಿಳೇದೆಲೆ, ಅಡಕೆ, ಎಂಟಾಣೆ ಪಾವಲಿ ಒಯ್ದು ಕೊಟ್ಟು ಒಂದು ಅರ್ಜಿ ಬರೆಸಿದೆ.
ಒಂದು ದಿನ ಈ ಅರ್ಜಿ ಹಿಡಿದು ಪುರಸಭೆಗೆ ಹೋದೆ.
“ಏನು ಮೇಸ್ತ್ರಿ ಬಂದಿ?“ಎಂದು ಕೇಳಿದರು, ಪುರಸಭೆ ಪ್ರೆಸಿಡೆಂಟರು.
“ಒಡೆಯ ನಮಗೊಂದು ಜಾಗ ಕೊಟ್ಟರೆ ಸಣ್ಣದೊಂದು ಗುಡಿ ಕಟ್ಟತಿದ್ವಿ?”
“ಆಯ್ತು ಕೊಡೋಣ”
ಜಾಗ ಮಂಜೂರಾಯಿತು.
ತಾವೆಲ್ಲ ಕಟ್ಟಡದ ಕೆಲಸ ಮಾಡುವವರೇ ಇದ್ದುದರಿಂದ ಕೊಪೆಲ ಏಳುವುದು ತಡವಾಗಲಿಲ್ಲ. ವಾರಕ್ಕೊಂದು ದಿನ ಎಲ್ಲ ಕೆಲಸಗಾರರೂ ಕೈಹಾಕಿ ಕೊಪೆಲ ಸಿದ್ಧಪಡಿಸಿದ್ದಾಯ್ತು. ಸುತಾರಿ ಇನಾಸ ಕೊಪೆಲಗೆ ಮುಂದಿನ ಬಾಗಿಲು ಮಾಡಿಕೊಟ್ಟ. ಕಿಟಕಿ ಕೂರಿಸಿದ. ಬಿದಿರು ಬೊಂಬು ಬಳಸಿ ಮಾಡು ಏರಿಸಿ ಹುಲ್ಲು ಹೊದೆಸಿದ್ದಾಯಿತು. ತಾಂಬಟಗಾರ ಮೊಯಿದ್ದಿನ ಸಾಬಿ ಕೊಪೆಲಗೆಂದು ಒಂದು ಗಂಟೆ ನೀಡಿದ. ಊರಿಗೆ ಹೋದಾಗ ಇಗರ್ಜಿ ಪಾದರಿಗೆ ಕೊಪೆಲ ವಿಷಯ ಹೇಳಿದೆ. ನೀವೆಲ್ಲ ಕಾರ್ಮಿಕರು. ನಿಮ್ಮ ಹಾಗೆಯೇ ಸುತಾರಿ ಕೆಲಸ ಮಾಡಿಕೊಂಡು ದೈವಭಕ್ತಿಯಿಂದಬದುಕು ಸಾಗಿಸಿದ ಸಂತ ಜೋಸೆಫ಼ರೇ ನಿಮ್ಮ ಪಾತ್ರೋನ ಆಗಿರಲಿ. ಅವರ ಕೃಪೆ ಸದಾ ನಿಮ್ಮ ಮೇಲಿರಲಿ ಎಂದು ಅವರೇ ಸಂತ ಜೋಸೆಫ಼ರ ವಿಗ್ರಹವನ್ನು ಪವಿತ್ರೀಕರಿಸಿ ನೀಡಿದರು. ಪ್ರತಿಮೆಯನ್ನು ತಂದು ವೈಭವದಿಂದ ಪ್ರತಿಷ್ಠಾಪಿಸಿದೆವು.
ಊರಿಗೊಂದು ಕೊಪೆಲ ಆಯಿತು. ಗಂಟೆ ಬಂದಿತು. ಪಾತ್ರೋನನ ಪ್ರತಿಮೆ ಪ್ರತಿಷ್ಠಾಪನೆಯೂ ಆಯಿತು. ಆದರೆ ಜನ ಬರಬೇಕಲ್ಲ. ಪ್ರತಿ ಭಾನುವಾರ ತಾನು, ತನ್ನ ಹೆಂಡತಿ, ತಾಯಿ, ಈ ಕೊಪೆಲಗೆ ಹೋಗುತ್ತಿದ್ದೆವು. ಹಿಂದಿನ ದಿನ ಹೆಂಡತಿ ಹೋಗಿ ಕೊಪೆಲಿನ ಬಾಗಿಲು ತೆಗೆದು, ಶಗಣಿ ಸಾರಿಸಿ ಬರುತ್ತಿದ್ದಳು. ಭಾನುವಾರ ದೇವರ ಮುಂದೆ ಮೇಣದ ಬತ್ತಿ ಹಚ್ಚಿ, ದೇವರಿಗೆ ಹೂವೇರಿಸಿ ತಾವೆಲ್ಲ ಪ್ರಾರ್ಥನೆ ಸಲ್ಲಿಸುತ್ತಿದ್ದೆವು. ತಮ್ಮ ಜತೆ ಪಾಸ್ಕೋಲ, ಕೈತಾನ್, ಸಲ್ವಾದೋರ್ ಎಂದೆಲ್ಲ ಇತರೆ ಮನೆಗಳವರೂ ಬರುತ್ತಿದ್ದರು.ಕ್ರಮೇಣ ಈ ಸಂಖ್ಯೆ ಕಡಿಮೆಯಾಗತೊಡಗಿತು. ಕೊಪೆಲಗೆ ಬನ್ನಿ ಒಟ್ಟಿಗೇ ಎಲ್ಲರೂ ಪ್ರಾರ್ಥನೆ ಮಾಡೋಣ ಎಂದು ತಾನು ಜನರಿಗೆ ಹೇಳಿದೆ, ಹೀಗೆ ಎಷ್ಟು ದಿನ ಹೇಳಲು ಸಾಧ್ಯ? ಅಲ್ಲದೆ ಹೀಗೆ ಹೇಳಲು ತನಗೆ ಅಧಿಕಾರವಾದರೂ ಏನಿದೆ? ಜನ ತನ್ನ ಮಾತಿನ ಬಗ್ಗೆ ಅನಾದಾರ ತೋರಿದರು. ಕೊಪೆಲ್ ಕಟ್ಟಿದೆನೆಂಬ ಸಂತೋಷವೂ ಬಹಳ ದಿನ ಉಳಿಯಲಿಲ್ಲ. ಊರಿನಲ್ಲಿಯ ಕ್ರೈಸ್ತರು ಕೊಪೆಲಗೆ ಬರುವುದಿರಲಿ ಮನೆಯಲ್ಲಿ ಕೂಡ ಅಮೋರಿ, ತೇರ್ಸ ಮಾಡದೆ ಅಕ್ರೈಸ್ತರಾಗಿ ಬಾಳ ತೊಡಗಿದರು.
ಆದರೆ ಈಗ ಪಾದರಿ ಗೋನಸಾಲ್ವಿಸ್ ಬಂದದ್ದೆ ಎಂತಹ ಬದಲಾವಣೆಯಾಯಿತಲ್ಲ. ಸಿಮೋನನಿಗೆ ಸಂತೋಷವಾಯಿತು. ತನ್ನ ಸಂತೋಷವನ್ನು ಪಾದರಿಗಳ ಜತೆ ಹಂಚಿಕೊಂಡ ಕೂಡ.
*
*
*
ಒಂದು ಭಾನುವಾರ ಕೊಪೆಲ ತುಂಬಿಕೊಂಡ ಜನ ಹೊರಗೆ ಕಟ್ಟಿದ ಚಪ್ಪರದಲ್ಲೂ ನಿಂತು ಪೂಜೆ ಆಲಿಸಿದರು. ಈ ದೃಶ್ಯ ಕಂಡು ಪಾದರಿ ಗೋನಸಾಲ್ವಿಸ್ ತುಂಬಾ ಸಂತಸಪಟ್ಟರು. ಸಿಮೋನನಿಗೂ ಇದು ಸಂತಸದ ವಿಷಯವಾಗಿತ್ತು.
“ಪದ್ರಬಾ..ದೇವರು ನಮ್ಮ ಕಡೆ ಇದಾನೆ“ಎಂದ ಸಿಮೋನ ತನ್ನ ಕನಸು ನನಸಾಯಿತೇನೋ ಎಂಬಂತೆ.
ಆದರೆ ಅವನ ಮನಸ್ಸಿನಲ್ಲಿ ಒಂದು ವಿಷಯವಿತ್ತು.
ಕ್ರೀಸುವರ ಪಾಲಿಗೆ ಅಷ್ಟೇನೂ ಹಿತಕರವಲ್ಲದ ವಿಷಯ.
ಈ ವಿಷಯವನ್ನು ಯಾವುದಾದರೂ ರೀತಿಯಲ್ಲಿ ಪಾದರಿಗಳ ಗಮನಕ್ಕೆ ತರಬೇಕೆಂದು ಸಿಮೋನ ಬಯಸಿದ್ದೂ ಇತ್ತು. ಆದರೆ ಈ ವಿಷಯವನ್ನು ಅವರಿಗೆ ನೇರವಾಗಿ ಹೇಳುವುದು ಹೇಗೆ ಎಂಬ ಚಿಂತೆಯಲ್ಲಿ ಅವನಿರಬೇಕಾದರೇನೆ ಪಾದರಿ ಗೋನಸಾಲ್ವಿಸ್ ತಾವೇ ಖುದ್ದಾಗಿ ಈ ಸಂಗತಿಯನ್ನು ಗಮನಿಸಿಬಿಟ್ಟರು.
ಕೊಪೆಲನಿಂದ ಕ್ರೀಸುವರ ಮನೆಗಳಿಗೆ ಬರುವವರು ಒಂದು ಕಾಲು ದಾರಿಯನ್ನು ಬಳಸುತ್ತಿದ್ದರು. ಕೊಪೆಲನ ಮಗ್ಗುಲಲ್ಲಿ ಕಾಣಿಸಿಕೊಂಡ ಈ ದಾರಿ ಹಲವು ಪೊದೆ ಮರಗಳ ನಡುವೆ ಹಾದು ಸಿಮೋನನ ಮನೆಗೆ ಬಂದು ತಲುಪುತ್ತಿತ್ತು. ಇದು ಹಿಂದೆ ಸಿಮೋನ ಕೊಪೆಲಿಗೆ ಬರಲು ಮಾಡಿಕೊಂಡ ದಾರಿ. ಪಾದರಿಗಳು ಬಂದ ನಂತರ ಕೊಪೆಲಿಗೆ ಬರುವವರು ಕೊಪೆಲಿನಿಂದ ಕೇರಿಗೆ ಹೋಗುವವರು ಇದೇ ದಾರಿಯನ್ನು ಬಳಸತೊಡಗಿದ್ದರು. ಪಾದರಿ ಗೋನಸಾಲ್ವಿಸ್ ಕೂಡ ಸಿಮೋನನ ಮನೆಗೆ ಹೋಗಲು, ಉಳಿದ ಕ್ರೀಸುವರ ಮನೆಗಳತ್ತ ಹೋಗಲು ಇದೇ ದಾರಿಯನ್ನು ಬಳಸುತ್ತ ಬಂದಿದ್ದರು. ಅಡಿಗೆಯಾಳು ಬೋನ ಪಾದರಿಗಳಿಗೆ ಬೇಕಾದ ಊಟ, ತಿಂಡಿ ಮಾಡಿಕೊಂಡು ಈ ದಾರಿಯಲ್ಲಿಯೇ ಬರುತ್ತಿದ್ದುದರಿಂದ ಈ ದಾರಿ ಸಾಕಷ್ಟು ಸವೆದಿತ್ತು.
ಸಿಮೋನನ ಮನೆಯಿಂದ ಕೊಪೆಲಿನತ್ತ ಹೊರಳಿಕೊಂಡ ಈ ದಾರಿ ಕೊಂಚ ದೂರ ಹೋದ ಕೂಡಲೇ ಮತ್ತೊಂದು ಟಿಸಿಲಾಗಿ ಒಡೆದುಕೊಂಡಿತ್ತು.
ಈ ಟಿಸಿಲು ಕೆಲ ಗಿಡ ಪೊದೆಗಳ ನಡುವೆ ಮಾಯವಾಗಿತ್ತು. ಆ ದಾರಿ ಕೂಡ ಜನ ತಿರುಗಾಡಿದ್ದರಿಂದಲೋ ಏನೋ ಸಾಕಷ್ಟು ಸವೆದಿತ್ತು.
ಕೊಪೆಲಿನತ್ತ ಹೋಗುವ ಒಂದು ಕಾಲು ದಾರಿ ನಡುವೆ ಕವಲು ಒಡೆದುಕೊಂಡದ್ದು ಏಕೋ ಪಾದರಿ ಗೋನಸಾಲ್ವಿಸ್ ರಿಗೆ ಸರಿ ಎನಿಸಲಿಲ್ಲ. ಈ ದಾರಿ ಎಲ್ಲಿಗೆ ಹೋಗುತ್ತದೆ ಎಂಬ ಕುತೂಹಲ ಅವರನ್ನು ಕಾಡಿತು.
ಒಂದು ದಿನ ಸಿಮೋನನ ಮನೆಯಿಂದಕೊಪೆಲಿಗೆ ಹೊರಟ ಇವರು ಈ ಕೂಡು ದಾರಿಯ ಬಳಿ ನಿಂತರು. ಕೊಪೆಲಿನ ದಾರಿ ಬಿಟ್ಟು ಎರಡನೇ ದಾರಿ ಹಿಡಿದರು. ಗೇರು, ಮಾವು, ಹಲಸು, ಧೂಪ, ನೇರಳೆ ನಂದಿ ಮರಗಳನ್ನು ದಾಟಿ, ಬಿದಿರ ಮೆಳೆ ಲಾಂಟಾನು ಪೊದೆಗಳನ್ನು ತಳ್ಳಿಕೊಂಡು ಗೂಢವಾಗುತ್ತ ಗುಪ್ತವಾಗುತ್ತ ಹೋದ ಹಿಂಡಿಲುಗಳ ನಡುವೆ ಅವರು ನುಗ್ಗಿ ತೆರೆದುಕೊಂಡ ಅಷ್ಟಗಲ ಜಾಗಕ್ಕೆ ಬಂದು ನಿಂತರು. ಅಲ್ಲಿ ಒಂದು ಕಲ್ಲಿನ ಚೌಕಾಕಾರ. ನಡುವೆ ಎರಡು ಎರಡೂವರೆ ಅಡಿ ಎತ್ತರದ ಒಂದು ಕಲ್ಲಿನ ವಿಗ್ರಹ. ಅದರ ತುಂಬಾ ಕುಂಕುಮ ಹೂವು ಬಾಳೆ ಸಿಂಗಾರ ಇತ್ಯಾದಿ. ಊದಿನ ಕಡ್ಡಿಯ ಪರಿಮಳ ಎಣ್ಣೆಯ ಜಿಡ್ಡು.
ಛೇ ಎಂದು ಪೇಚಾಡಿಕೊಂಡರು ಪಾದರಿ.
ಇದು ಕ್ರೀಸುವರ ನಡುವೆ, ಕೊಪೆಲಗೆ ಸನಿಹದಲ್ಲಿ ಇರಬೇಕಿತ್ತೆ? ನಿಜ ದೇವನನ್ನು ನಂಬುವ ಜನ ಪಾದರಿಯ ಅಂಕೆ ಇಲ್ಲದ್ದರಿಂದ ಈ ದೇವರನ್ನು ನಂಬುತ್ತಿರಬಹುದೆ?
ಕೊಪೆಲಗೆ ಬಂದ ಅವರು ಸಂಜೆ ಸಿಮೋನನಿಗೆ
“ಸಿಮೋನ ಅದೇನು ಕತೆ?“ಎಂದು ಕೇಳಿದರು.
ಸಿಮೋನ ಅಂಜುತ್ತ ಅಳುಕುತ್ತ ಹೇಳತೊಡಗಿದ.
ಮೊದ ಮೊದಲು ಕ್ರೀಸುವರು ಯಾರೂ ಈ ದೇವರಿಗೆ ನಡೆದುಕೊಳ್ಳುತ್ತಿರಲಿಲ್ಲ. ಆದರೆ ಕ್ರಮೇಣ ಕ್ರೈಸ್ತ ಧರ್ಮದ ಪ್ರಭಾವ ಅವರಿಂದ ದೂರವಾಗಿ ಸುತ್ತಲಿನ ಜನರ ನಂಬಿಕೆ, ಆಚರಣೆಗಳು ಅವರ ಗಮನಕ್ಕೆ ಬಂದಾಗ ಅವರು ಅರೆ ಮನಸ್ಸಿನಿಂದ ಅಲ್ಲಿಗೆ ಹೋಗತೊಡಗಿದರು. ಮಕ್ಕಳಿಗೆ ಬಂದ ತೀವ್ರವಾದ ಕಾಯಿಲೆ. ದೊಡ್ಡವರ ಕಷ್ಟ ಸಂಕಟಗಳು. ಮನೆಗೆ ಬಂದ ಆಪತ್ತು ಅವರನ್ನು ಚೌಡಿಯಲ್ಲಿಗೆ ಕರೆದೊಯ್ದವು. ಊರಿನಲ್ಲಿ ತಮ್ಮ ದೇವರ ಆಲಯ ಇಲ್ಲದಿದ್ದುದು, ಪಾದರಿ ಇಲ್ಲದಿದ್ದುದು ಇದಕ್ಕೆ ಕಾರಣವಾಯಿತು. ಕೊಪೆಲ ಕಟ್ಟಿದ ನಂತರವೂ ಜನರಿಗೆ ಚೌಡಿವನವೇ ಪವಿತ್ರ ತಾಣವಾಗಿ ಉಳಿಯಿತು.
ಎಲ್ಲ ಕ್ರೀಸುವರ ಮನಸ್ಸಿನಲ್ಲೂ ಒಂದು ಅಳುಕಿತ್ತು. ಹಿಂಜರಿಕೆ ಇತ್ತು. ತಾವು ಮಾಡುತ್ತಿರುವುದು ತಪ್ಪು ಎಂಬ ಆತಂಕವಿತ್ತು. ಆದರೂ ಅವರು ಅತ್ತ ಹೋದರು. ಅವರಿಗೆ ಬೇರೆ ದಾರಿ ತಾನೆ ಎನಿತ್ತು?
ತಾನು ಎಷ್ಟೋ ಬಾರಿ
“ಬಿಡಿ ಈ ಸೈತಾನನ ಕೆಲಸ“ಎಂದೆ.
ಬೈಯ್ದೆ..ಬಾಯಿ ಮಾಡಿದೆ.
ಆದರೂ ಜನ ಕದ್ದು ಮುಚ್ಚಿ ಹೋಗುತ್ತಿದ್ದರು. ಕೆಲವರಿಗೆ ಇದರಿಂದ ಒಳ್ಳೆಯದೂ ಆಯಿತು.
ಚೌಡಮ್ಮನ ವಿಷಯ ಹೇಳ ಹೊರಟ ಆತನಿಗೆ ತಟ್ಟನೆ ಹಲವಾರು ಘಟನೆಗಳು ನೆನಪಾದವು. ಆತ ಕ್ರೈಸ್ತ ಧರ್ಮವನ್ನು ಬಿಟ್ಟು ಒಂದಿಷ್ಟೂ ಅತ್ತ ಕದಲಿದವನಲ್ಲ. ಮುರುಡೇಶ್ವರದಲ್ಲಿ ಅವನ ಮನೆಯ ಹತ್ತಿರವೇ ನಾಗಬನವಿತ್ತು. ಭೂತರಾಯನ ಕಟ್ಟೆ ಇತ್ತು. ಹತ್ತಿರದ ಗುಡಿಗೆ ನಿಮಿತ್ತ ನೋಡಲು, ಪ್ರಶ್ನೆ ಕೇಳಲು ಜನ ಹೋಗುತ್ತಿದ್ದರು. ಕ್ರೀಸುವರು ಕೂಡ ಅವರಿವರ ಮೂಲಕ ತೆಂಗಿನಕಾಯಿ ಕಳುಹಿಸುವುದು, ಕೋಳಿ ಕೊಡಿಸುವುದು ಮಾಡುತ್ತಿದ್ದರು. ಆದರೆ ಇಂತಹ ವ್ಯವಹಾರಗಳಲ್ಲಿ ಸಿಮೋನನಿಗೆ ಆಸಕ್ತಿ ಇರಲಿಲ್ಲ. ನಂಬಿಕೆಯೂ ಇರಲಿಲ್ಲ. ಹೀಗಾಗಿ ಅವುಗಳಿಂದ ಆತ ದೂರವಿದ್ದ.
ಇಲ್ಲಿ ಕೂಡ ಜನರ ವರ್ತನೆ ಅವನನ್ನು ಕಸಿವಿಸಿಗೆ ಕೋಪಕ್ಕೆ ಒಳಪಡಿಸುತ್ತಿತ್ತು. ಆದರೆ ತನ್ನ ಅಸಹಾಯಕತೆ ಅವನಿಗೆ ಗೊತ್ತಿತ್ತು. ಕ್ರೀಸುವರ ನಡುವೆ ದೇವರಿರಲಿ ಎಂದೇ ಆತ ಕೊಪೆಲ ಕಟ್ಟಿದ್ದು. ಅದೂ ಪ್ರಯೋಜನವಾಗಲಿಲ್ಲ. ಕ್ರೀಸುವರೇ ಚೌಡಿಯನ್ನೋ ಕಲ್ಲು ಕುಟಿಗನನ್ನೋ ನಂಬಿ ಬದುಕುತ್ತಿರುವುದು ಅವನಿಗೆ ಗೊತ್ತಿತ್ತು. ಈ ಶಕ್ತಿಗಳಿಂದ ಕೆಲವರಿಗೆ ಒಳ್ಳೆಯದೂ ಆಗಿದೆಯೇ ಎಂದು ಆತ ವಿಚಾರ ಮಾಡುವುದೂ ಇತ್ತು. ಏಕೆಂದರೆ ಅಂಕೋಲೆ ಕೈತಾನ ಒಂದು ಉದಾಹರಣೆಯಾಗಿ ಅವನ ಮುಂದೆ ಸದಾ ಇರುತ್ತಿದ್ದ.
ಅಂಕೋಲೆ ಕೈತಾನನಿಗೆ ತುಂಬಾ ಅನ್ಯಾಯವಾಗಿತ್ತು.
ಅಂತೋಲದ ಕೆಳ ಹಿತ್ತಲಿನಲ್ಲಿ ಮುನ್ನೂರು ತೆಂಗಿನ ಮರಗಳ ಒಡೆಯ. ಅವನ ತಂದೆ ತೊದಲು ಬಸ್ತಿಯಾಂವ. ಅವನು ಮಾತನಾಡುವಾಗ ತೊದಲುತ್ತಿದ್ದುದರಿಂದ ಅವನಿಗೆ ಈ ಅಡ್ಡ ಹೆಸರು. ಕೈತಾನ ಬಸ್ತಿಯಾಂವಗೆ ಓರ್ವನೆ ಮಗ. ಆದರೆ ಮಗಪ್ರೌಢಾವಸ್ಥೆಗೆ ಬರುವಷ್ಟರಲ್ಲಿ ಅವನ ತಂದೆ ಆಸ್ತಿ ಹೆಂಗಸೊಬ್ಬಳ ಪಾಲಾಗಿತ್ತು. ಬಸ್ತಿಯಾಂವ ಕುಡಿಯುವುದು ಅತಿಯಾಗಿ ಕಡಲಕಿನಾರೆಯ ಹೆಂಡದಂಗಡಿಸೇರಿದ್ದ. ಅಲ್ಲೇ ಕುಡಿದು ಅಲ್ಲೆ ಬಿದ್ದುಕೊಂಡಿರುವುದು. ಆ ಹೆಂಗಸು ಇಷ್ಟಕ್ಕೇ ಅನುಕೂಲ ಮಾಡಿಕೊಟ್ಟಿದ್ದಳು.
ಆ ಹೆಂಗಸು ಅವಳ ಕಡೆಯವರೂ ಸೇರಿ ಬಸ್ತಿಯಾಂವನನ್ನು ಹೆಂಡದದಾಸನನ್ನಾಗಿ ಮಾಡುವುದರ ಜೊತೆಗೆ ಕೈತಾನನನ್ನು ಅನಾಥನನ್ನಾಗಿ ಮಾಡುವುದರಲ್ಲಿ ಯಶಸ್ವಿಯಾದರು. ಇಗರ್ಜಿ ಪಾದರಿ ಊರಿನ ಗುರ್ಕಾರ, ಮಿರೋಣ ಎನೇನೋ ಯತ್ನ ಮಾಡಿದರು. ಅಂಕೊಲದ ಸಂತನಿಗೆ ಮೇಣದ ಬತ್ತಿ ಹಚ್ಚಿ ಕೈತಾನ ಬೇಡಿಕೊಂಡ ಕೂಡ. ಕೊನೆಗೆ ಅವರಿವರ ಮನೆ ಜಗಲಿಯ ಮೇಲಿದ್ದುಕೊಂಡು ಕಲ್ಲು ಕೆತ್ತುವ ಚಾಕರಿ ಮಾಡತೊಡಗಿದ ಕೈತಾನ. ಕೆಲಸ ಚೆನ್ನಾಗಿ ಕಲಿತ. ಒಂದು ಸ್ಥಿತಿಗೆ ಬಂದಾಗ ಊರವರು ಸೇರಿ ಅವನಿಗೊಂದು ಮದುವೆ ಮಾಡಿದರು. ಹೆಂಡತಿ ಬಂದ ನಂತರ ಊರಿನಲ್ಲಿಯೇ ಮನೆ ಮಾಡಿದ.
ಆದರೆ ಅಂಕೊಲೆಯಲ್ಲಿ ಇರಲು ಮನಸ್ಸು ಒಪ್ಪಲಿಲ್ಲ. ಅಲ್ಲಿಯ ಜನ ಮಾತ್ರವಲ್ಲ, ತೆಂಗು ಮಾವಿನ ಮರಗಳು ಕೊನೆಗೆ ತೆಂಗಿನ ತೋಟದ ನೆಲಬಾವಿಯ ನೀರೆತ್ತುವ ಏತಗಳು ಮನೆ ಮನೆಗಳಲ್ಲಿದ್ದ ಗಾಣಗಳು ತನ್ನನ್ನು ನೋಡಿ ನಗುತ್ತಿರುವಂತೆ ಭಾಸವಾಯಿತು.
“ಇವನನ್ನು ಕಾಣಿ ಮಾರಾಯ್ರೆ..ಕೆಳಹಿತ್ತಲಿನ ಒಡೆಯ ಅಲ್ದ ಇವನು? ಕಾಣಿ ಕಾಣಿ ಬಾಚಿತಗಂಡು ಮುಕುಳಿ ಮ್ಯಾಲ ಮಾಡಿ ಕಲ್ಲು ಕೆತ್ತೋದ ಕಾಣಿ“ಎಂದು ಎಲ್ಲರೂ ಮಾತನಾಡಿಕೊಳ್ಳುವುದು ಕಿವಿಗೆ ಬಿದ್ದಿತು. ಈ ಬಗೆಯ ಮಾತು ಕೇಳಲಾಗದೆ ಕೊರಗುವಾಗ ಪಾಸ್ಕೋಲ ಮೇಸ್ತ್ರಿ ಘಟ್ಟದ ಮೇಲೆ ಬರುವಿಯಾ ಅಂದ. ಈತ ಶಿವಸಾಗರಕ್ಕೆ ಬಂದ. ಒಂದೆರಡು ವರ್ಷ ಹೆಂಡತಿಯನ್ನು ಅಂಕೋಲೆಯಲ್ಲಿಯೇ ಇರಿಸಿದ. ಇದೂ ಬೇಸರವೆನಿಸಿತು.
“ಕಾಸಿಲ್ವ..ನಡಿ ಹೋಗೋಣ”
ಎಂದು ಅವಳನ್ನು ಕರೆದುಕೊಂಡು ಶಿವಸಾಗರಕ್ಕೆ ಬಂದ. ಬಂದದ್ದು ಒಳ್ಳೆದಾಯ್ತು. ಕೈತುಂಬಾ ಹಣ ಮಾಡಿದ. ಮನೆಕಟ್ಟಿದ, ಮಕ್ಕಳಾದರು.
“ಕಾಸಿಲ್ಡ ಇನ್ನೂ ನಾನು ಆ ಕಡೆ ತಲೆ ಇಟ್ಟು ಮಲಗೋದಿಲ್ಲ..“ಎಂದ ಇಲ್ಲಿಗೆ ಬಂದ ಮೇಲೆ ಕೇವಲ ಹೆಣ್ಣುಗಳಾದವು. ಮೇರಿ, ಅಪ್ಪಿ ಕೊಸೆಸಾಂವ, ಸಿಲ್ವಿಯ, ಪ್ರೆಸಿಲ್ವ ಆದರೆ ಅವನಿಗೆ ಗಂಡು ಬೇಕಿತ್ತು. ಈ ಕಾರಣದಿಂದಲೆ ಆತ ಸಿಡುಕನಾದ. ಅಪಾರ ಸಿಟ್ಟು ಬರತೊಡಗಿತು. ಕಲ್ಲು ಕೆತ್ತಿ ಕೆತ್ತಿ ತೋಳು ಬಲಿಷ್ಠವಾಗಿತ್ತು. ಕೈಗಳು ಒರಟಾಗಿದ್ದವು. ರಪ್ಪನೆ ಕೈ ಎತ್ತಿ ಹೊಡೆಯುತ್ತಿದ್ದ.
“ಏನೇ ಇದು ಶನಿ ಸಂತಾನ“ಎಂದು ಹೆಂಡತಿಯನ್ನು ಬೈದ. ಸಂಜೆ ಕುಡಿದು ಬಂದು ಹೊಡೆದ.
ಅವಳು ಯಾವ ಯಾವ ದೇವರಿಗೋ ಹರಕೆ ಹೊತ್ತಳು. ಗಂಡಾಗಲಿಲ್ಲ. ಮಂಜನ ತಾಯಿ ರುದ್ರಮ್ಮ ಒಮ್ಮೆಬಂದಳು-
“ಕಾಸಿಬಾಯಿ..ಯಾಕೆ ಮಕ್ಕಳಿಗೆ ಹೊಡೆಯೋದು?“ಎಂದು ಕೆಳಿದಳು.
“ಹೊಡೆಯೋದಲ್ಲಮನೆ ಹಿಂದೆ ತಗ್ಗು ತೋಡಿ ಹುಗಿಬೇಕು“ಎಂದಳು ಕಾಸಿಲ್ಡಾ. ವಿವರವಾಗಿ ತನ್ನ ಗೋಳು ತೋಡಿ ಕೊಂಡಳು. ಗಂಡನ ಸಿಟ್ಟಿಗೆ ಕಾರಣ ಹೇಳಿದಳು.
“ಒಂದು ಕೆಲಸ ಮಾಡು ಕಾಸಿಬಾಯಿ”
“ಎನು ಹೇಳು ರುದ್ರಮ್ಮ”
“ಪ್ರತಿ ಶನಿವಾರ ಚೌಡಮ್ಮನಿಗೆ ಹಾಲು ಎರೀರಿ ತೆಂಗಿನಕಾಯಿ ಒಡೀರಿ..”
“ನಾವು ಅದೆಲ್ಲ ಮಾಡೋ ಹಂಗಿಲ್ಲ”
“ಸರಿಬಿಡು..ಆ ಬಾಲ್ತಿದಾರ..ಮಿಂಗೇಲಪ್ಪ ಎಮ್ಮೆ ಮರಿಯ ಎಲ್ರು ಕಿರಸ್ತಾನರೇ ಅಲ್ವ?“ದಾರಿಗೆ ಬಂದಳು ಕಾಸಿಲ್ಡ.
ಪ್ರತಿ ಶನಿವಾರ ರುದ್ರಮ್ಮ ಚೌಡಿಗೆ ಹಾಲು ಎರೆದು ಬಂದಳು. ಕಾಯಿ ಒಡೆದು ಬಂದಳು. ಮೂರು ನಾಲ್ಕು ಬಾರಿ ಅತ್ತಿತ್ತ ನೋಡಿ ಅಲ್ಲಿಗೆ ಕಾಸಿಲ್ಡ ಹೋಗಿಯೂ ಬಂದಳು. ಆದರೂ ಅವಳಿಗೊಂದು ಅಳುಕು. ಅಂಕೋಲದ ಇಗರ್ಜಿಯಲ್ಲಿ ಅವಳ ತಂದೆ ಮಿರೋಣ ಆಗಿದ್ದ. ಮನೆಯಲ್ಲಿ ಪ್ರಾರ್ಥನೆ ಜಪ ಹೆಚ್ಚು. ದೈವ ಭಕ್ತಿ ಅಧಿಕ. ಇಲ್ಲಿಗೆ ಬಂದ ನಂತರವೂ ಮನೆಯಲ್ಲಿ ಮೋರಿ ಮಾಡುತ್ತಾಳೆ. ದೇವರ ಮುಂದೆ ಮೇಣದ ಬತ್ತಿ ಹಚ್ಚುತ್ತಾಳೆ.
ತಾನು ಹೀಗೆ ಮಾಡುವುದೆ ಎಂದು ಚಿಂತಿಸಿದಳು. ಆದರೂ ಈ ದೇವರಿಂದ ತನಗೆ ಗಂಡು ಮಗುವಾಗಬಹುದು ಎಂಬ ಆಸೆ. ಚಂದಾವರ ಮೇಲ್ಕೋಡಿನ ದೇವರಿಗೆ ಹರಕೆ ಮಾಡಿಕೊಂಡರೂ ಆದದ್ದು ಹೆಣ್ಣೆ. ಆ ದೇವರು ಕೊಡದಿರುವುದನ್ನು ಈ ದೇವರು ಕೊಡದಿದ್ದೀತೆ ಎಂದು ಮುಗ್ಧಳಾಗಿ ಯೋಚಿಸಿದಳು.
ಎಂಟು ತಿಂಗಳಾಗಿದ್ದಾಗ ಒಂದು ದಿನ ಮನೆಗೆ ಬಂದ ರುದ್ರಮ್ಮ ಇವಳನ್ನು ದಿಟ್ಟಿಸಿ ನೋಡಿದಳು.
“ಹೊಟ್ಟೆಯಾಗೆ ಮಗ ಅವ್ನೆ“ಎಂದಳು.
“ನಿನಗೆ ಹೇಗೆ ಗೊತ್ತು..”
“ಹೊಟ್ಟೆ ದೊಡ್ಡದಾಗೈತೆ..ಮುಖ ಕೆಂಪಗಾಗೈತೆ…ದೇಹ ಬಾಡಿ ಸೊರಗೈತೆ. ಇದೆಲ್ಲ ಗಂಡಾಗೋ ಲಕ್ಷಣ ಎಂದಳವಳು.
ಹಾಗೆಯೇ ಆಗಲಿ ಅಂದುಕೊಂಡಳು ಕಾಸಿಲ್ಡ.
ನಡು ರಾತ್ರಿಯಲ್ಲಿ ನೋವು ಕಂಡು ಬಂದು ಗಂಡ ಹೋಗಿ ಕತ್ರಿನಳನ್ನು ಕರೆ ತಂದ. ಅವಳು ಬಂದವಳೇ ಪರೀಕ್ಷೆ ಮಾಡಿ.
“ಕೈತಾನ ಎಲೆ‌ಅಡಿಕೆ ತರಿಸು..ಹೆರಿಗೆ ಆಗಲಿಕ್ಕೆ ತಡ ಇದೆ.“ಎಂದು ಹೇಳಿ ಗೂಡನ್ನೇರಿ ಕುಳಿತಳು.
ಅವಳು ಹೇಳಿದಂತೆಯೇ ಕೊಂಚ ಹೊತ್ತಿನಲ್ಲಿ ಕಾಸಿಲ್ಡಳ ಹೆರಿಗೆಯೂ ಆಯಿತು.
ಹುಟ್ಟಿದ್ದು ಗಂಡು ಮಗು.
“ಗಂಡು ಮಗ ಹುಟ್ಟಿದಾನೆ..ಗಂಡು ಮಗ“ಎಂದು ಅಲ್ಲಿ ನೆರೆದ ಹೆಂಗಸರೆಲ್ಲ ಬೊಬ್ಬೆ ಹೊಡೆದರು. ಅದೆಲ್ಲೋ ಗಂಟು ಮುಖ ಹಾಕಿಕೊಂಡು ಕುಳಿತ ಕೈತಾನ ಓಡಿಬಂದ. ಅವನು ಪ್ರಾರಂಭದಲ್ಲಿ ಈ ಮಾತನ್ನೇ ನಂಬಲಿಲ್ಲ. ಅವನಿಗೆ ತುಂಬಾ ಸಂತೋಷವಾಗಿತ್ತು. ದೇವರಿಗೆ ಕೃತಜ್ಞತೆ ಹೇಳಬೇಕೆಂಬ ವಿಚಾರ ಮನದಲ್ಲಿ ಹೊಳೆದಾಗ ಮಂಜನ ತಾಯಿ ರುದ್ರಮ್ಮ ಓಡಿ ಬಂದಳು.
“ಚೌಡಮ್ಮ ಕೈ ಬಿಡಾಕಿಲ್ಲ ಅನ್ನೊದು ನಂಗೆ ಗೊತ್ತಿತ್ತು..ಅವಳ ಅನುಗ್ರಹ ಇದು..“ಎಂದು ಅವಳು ಎಳೆ ಹುಡುಗಿಯಂತೆ ಸಂಭ್ರಮಿಸಿದಳು.
ಅವಳು ಹೇಳಿದ ಈ ಮಾತು ಅಲ್ಲಿದ್ದವರಿಗೆಲ್ಲ ಕೇಳಿಸಿತು. ಇದ್ದರೂ ಇರಬಹುದು ಅಂದುಕೊಂಡರು ಅವರು. ಏಕೆಂದರೆ ಈ ಹಿಂದೆ ಗಂಡು ಕೊಡು ಎಂದು ಕಾಸಿಲ್ಡ ಕೈತಾನ ಈರ್ವರು ಯವು ಯವುದೋ ದೇವರಿಗೆ ಹರಕೆ ಹೊತ್ತಿದ್ದರು. ಗೋವಾ, ಚಂದಾವರ, ಮಲ್ಕೋಡ ಎಂದು ಹಲವರಿಗೆ ಕೇಳಿಕೊಂಡಿದ್ದರು. ಅವರು ಯಾರೂ ಅವರಿಗೆ ಗಂಡನ್ನು ಕೊಟ್ಟಿರಲಿಲ್ಲ. ಆದರೆ ಈ ಬಾರಿ ಕಾಸಿಲ್ಡ ಕೈತಾನರ ಹರಕೆ ಸತ್ಯವಾಗಿತ್ತಲ್ಲ.
ಹೆರಿಗೆ ನಂತರ ತಾಯಿ ಮನೆಗೆ ಹೋದ ಕಾಸಿಲ್ಡ ಮಗನಿಗೆ ದುಮಿಂಗ ಎಂಬ ಹೆಸರನ್ನಿಡಲು ಹೆಳಿದಳು. ಇದಕ್ಕೆ ಕೈತಾನನ ಒಪ್ಪಿಗೆಯೂ ಇತ್ತು. ವಿಚಿತ್ರವೆಂದರೆ ಹುಡುಗ ಊರಿಗೆ ತಿರುಗಿ ಬಂದ ನಂತರ ಮಾತ್ರ್ ಅವನ ಹೆಸರು ಚೌಡಪ್ಪ ಎಂದಾಯಿತು. ಒಳಗೊಳಗೆ ಮಾತನಾಡಿಕೊಂಡ ಜನ ಹೀಗೇ ಕರೆಯತೊಡಗಿದರು. ಕೈತಾನನ ಮಗನಿಗೆ ಹೊರಗೊಂದು ಹೆಸರು ಒಳಗೊಂದು ಹೆಸರು ಬಳಕೆಗೆ ಬಂದಿತು.
ಹೆಸರು ಏನೇ ಆಗಲಿ ಅವನ ಕುಟುಂಬ ಸಂತಸದಲ್ಲಿತ್ತು. ತಪ್ಪದೆ ದೇವಿಗೆ ಹಣ್ಣು ಕಾಯಿ ನೀಡುವುದು ಮಗುವಿಗೆ ಎನೇ ಆದರೂ ದೇವಿಯ ಬಂಡಾರ ತಂದು ಬಳಿಯುವುದು ಮುಂದುವರೆಯಿತು.
ಪಾದರಿಗಳು ಊರಿಗೆ ಬಂದ ನಂತರ ಕಾಸಿಲ್ಡಾ ಕೈತಾನರಿಗೆ ತುಸು ಅಳುಕು ಕಾಡಲಾರಂಭವಾಯಿತು. ಮನೆಯಲ್ಲಿ ದೇವರ ಪ್ರತಿಮೆ ಇರಿಸಿದರು. ಮೇಣದ ಬತ್ತಿ ಹಚ್ಚಿ ಪ್ರಾರ್ಥನೆ ಸಲ್ಲಿಸತೊದಗಿದರು. ಪೂಜೆ ಪಾಪ ನಿವೇದನೆ ಆರಂಭವಾಯಿತು.
ಆದರೆ ಅಂತರಂಗದಲ್ಲಿ ದೇವಿಯ ಮೇಲಿನ ಭಕ್ತಿ ಗೌರವ ಕಡಿಮೆಯಾಗಲಿಲ್ಲ.
“ಹುಡುಗನಿಗೆ ನಮ್ಮ ಹೆಸರಿನಿಂದಾನೇ ಕರೀರಿ..ದುಮಿಂಗ ಅಂತ ಅವನಿಗೆ ನಾವು ಹೆಸರು ಇಟ್ಟಿದೀವಿ ಅಲ್ವ?
ಎಂದು ಗಂಡ ಹೆಂಡತಿ ಎಲ್ಲರಿಗೂ ಹೇಳಿದರು.
*
*
*
ಇಂತಹ ಹಲವಾರು ಪ್ರಕರಣಗಳು ಈ ಹಿಂದೆ ಆಗಿವೆ. ಕೊಪೆಲ ಹಿಂದಿನ ಕಾಡಿನಲ್ಲಿಯ ದೇವತೆ ಈ ಕೇರಿಯ ಜನರಿಗೆ ಒಳಿತನ್ನು ಮಾಡಿದ್ದಾಳೆ. ಅದನ್ನು ಅವರು ಮರೆಯಲಾರರು.
“ಮರೆಯೋದು ಕಷ್ಟ ಪದ್ರಾಬ“ಎಂದ ಸಿಮೋನ ಪಾದರಿಗಳಿಗೆ ಇರುವ ವಿಷಯ ತಿಳಿಸಿ.
“ನೋಡುವ“ಎಂದರು ಪಾದರಿ ಗೋನಸಾಲ್ವಿಸ್.
ಔಡಲಮರದ ಚೌಡಮ್ಮನ ಹಾಗೆಯೇ ಅವರನ್ನು ಬಹಳವಾಗಿ ಕಾಡುತ್ತಿದ್ದ ಬೇರೊಂದು ದೇವರು ಕೂಡ ಶಿವಸಾಗರದ ಕ್ರೀಸುವರ ನಡುವೆ ಇತ್ತು.
ಸುತಾರಿ ಇನಾಸನ ಮನೆ ಮುಂದಿನ ಕಲ್ಲು ಕುಟಿಗ ಅವರ ಕಣ್ಣು ಕುಕ್ಕುತ್ತ ಬಂದಿದ್ದ. ಒಂದು ಭಾನುವಾರ ಎಂದಿನಂತೆ ನಿಲುವಂಗಿ ಧರಿಸಿ ಅವರು ಕೈಯಲ್ಲಿ ನಾಗರಬೆತ್ತ ಹಿಡಿದು ಕೇರಿಯತ್ತ ಹೊರಟರು. ಕ್ರೀಸ್ತುವರು ಭಾನುವಾರಗಳಂದೋ ಕೆಲಸಕ್ಕೋ ಮತ್ತೆಲ್ಲಿಗೋ ಹೋಗದೆ ಬೆಳಿಗ್ಗೆ ಪೂಜೆಗೆ ಬರುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದರು. ಆದರೂ ಈ ಅಭ್ಯಾಸ ಜನರಿಂದ ಹೊರಟು ಹೋಗಬಾರದು. ಇನ್ನು ಪಾದರಿ ತಮ್ಮ ಮನೆಗಳ ಬಳಿ ಬರುವುದಿಲ್ಲ ಎಂಬ ಅಭಿಪ್ರಾಯ ಜನರ ಮನಸ್ಸಿನಲ್ಲಿ ಮೂಡಬಾರದು ಎಂಬ ಕಾರಣಕ್ಕೆ ಭಾನುವಾರದ ತಮ್ಮ ಭೇಟಿಯನ್ನು ಅವರು ನಿಲ್ಲಿಸಿರಲಿಲ್ಲ. ಮನೆ ಮನೆಗೆ ಹೋಗಿ-
“ಕೋಣ್ರೆ..ಮಿಸಾಕ್ ಏಯಾ“(ಯಾರೋ ಪೂಜೆಗೆ ಬನ್ನಿ) ಎಂದು ಮನೆಯ ಒಳಗಿದ್ದವರಿಗೆ ಕೇಳಿಸುವಂತೆ ಹೇಳಿ ಮುಂದೆ ಸಾಗುತ್ತಿದ್ದರು.
ಅಂದು ಸಿಮೋನನ ಮನೆ ದಾಟಿ ಸುತಾರಿ ಇನಾಸನ ಮನೆಗೆ ಬರಬೇಕು ಅನ್ನುವಾಗ ಸ್ನಾನ ಮುಗಿಸಿ ಶುಭ್ರ ಬಟ್ಟೆ ಧರಿಸಿ ಇನಾಸ ಅವನ ಮನೆ ಅಂಗಳದಲ್ಲಿ ನಿಂತಿದ್ದ. ಆದರೆ ಅವನು ಪಾದರಿ ಗೋನಸಾಲ್ವಿಸ್ ರಿಗೆ ವಿಚಿತ್ರವಾಗಿ ಕಾಣುವ ಒಂದು ಭಂಗಿಯಲ್ಲಿ ನಿಂತಿದ್ದ. ಅವನ ಮುಗಿದ ಕೈಬೆರಳುಗಳ ನಡುವೆ ಒಂದು ಉರಿಯುವ ಊದಿನಕಡ್ಡಿ ಇತ್ತು. ಅವನ ಮನೆಯ ಅಂಗಳದಲ್ಲಿನ ಕಲ್ಲು ಕುಟಿಗನಿಗೆ ಆತ ಕೈಮುಗಿದು ಪ್ರಣಾಮ ಸಲ್ಲಿಸುತಲಿದ್ದ.
*
*
*
ಸುತಾರಿ ಇನಾಸ ಘಟ್ಟದ ಕೆಳಗಿನ ಮೂಡ್ಕಣಿಯಿಂದ ಶಿವಸಾಗರಕ್ಕೆ ಬಂದು ಈಗ ಕೆಲ ವರುಷಗಳು ಉರುಳಿವೆ. ಸಿಮೋನ ಇಲ್ಲಿಗೆ ಬಂದ ಕೆಲವೇ ತಿಂಗಳುಗಳ ನಂತರ ಇವನೂ ಬಂದಿದ್ದ.
ಇನಾಸನ ತಂದೆ ಲುವಿಸ್ ಮೂಡ್ಕಣಿಯ ಕಾಮತರ ತೆಂಗಿನ ತೋಟ ನೋಡಿಕೊಂಡಿದ್ದ. ಇನಾಸನ ತಂದೆಯ ಜತೆ ಕೆಲಸ ಮಾಡುವುದರ ಬದಲು ಆಚಾರಿ ನಾರಾಯಣನ ಹತ್ತಿರ ಬಡಗಿಯ ಕೆಲಸ ಕಲಿಯಲೆಂದು ಹೋದ.
“ಸಂತ ಜೋಸೆಫ಼ರೂ ಬಡಗಿಗಳಾಗಿದ್ದರು..ಅವರ ಕೆಲಸವನ್ನೇ ನೀನೂ ಕಲಿತ ಹಾಗೆ ಆಯಿತು ಬಿಡು“ಎಂದು ಊರಿನ ಕ್ರೀಸ್ತುವರು ಇನಾಸನ ಬೆನ್ನು ತಟ್ಟಿದರು.
ಕೆಲಸ ಸಂತ ಜೋಸೆಫ಼ರದಾದರೂ ಇವನ ಹೊಟ್ಟೆ ತುಂಬುವುದು ಕಷ್ಟವಾಯಿತು. ಅಲ್ಲಿ ಇಲ್ಲಿ ದೋಣಿ ಕಟ್ಟಲೆಂದು ಹೋದ. ಭಟ್ಕಳ-ಶಿರಾಲಿ, ಕಾಯ್ಕಿಣಿಗಳಲ್ಲಿ ತಿರುಗಾಡಿದ. ಮಳೆಗಾಲದಲ್ಲಿ ಕೆಲಸವಿಲ್ಲದೆ ಕುಳಿತು ತಂದೆಯಿಂದ ಬೈಸಿಕೊಂಡ. ಒಂದು ದಿನ ಗೆರುಸೊಪ್ಪೆ ವಿಟ್ಠಲ ಶೆಟ್ಟರ ಮನೆ ಕೆಲಸಕ್ಕೆಂದು ದೋಣಿ ಹತ್ತಿ ಹೊರಟಾಗ ದೋಣಿಯಲ್ಲಿ ಸಿಮೋನ ಕಂಡ. ಇನಾಸನ ಕುತ್ತಿಗೆಯಲ್ಲಿಯ ಶಿಲುಬೆ ಕಂಡ ಸಿಮೋನ-
“ತುಕಾ ಖೈಂ ಜಾಲ್ಲೆಂ?“(ನಿಂಗೆ ಎಲ್ಲಿ ಆಯಿತು) ಎಂದು ಕೇಳಿದ.
ಇನಾಸ ಊರಿನ ಹೆಸರು ಹೇಳಿದ. ಕೆಲಸವಿಲ್ಲದೆ ತಾನಿಲ್ಲಿ ಪರದಾಡುವ ವಿಷಯವನ್ನೂ ತಿಳಿಸಿದ ಇನಾಸ. ಸಿಮೋನನಿಗೂ ಘಟ್ಟದ ಮೇಲೆ ಬಂದು ಕೆಲಸ ಮಾಡುವ ಬಡಗಿಗಳ ಅವಶ್ಯಕತೆ ಇತ್ತು. ಅವನು-
“ಘಟ್ಟದ ಮೇಲೆ ಬಂದು ಬಿಡು..ಅಲ್ಲಿ ಮಸ್ತ ಕೆಲಸ ಇದೆ..“ಎಂದ. ಇನಾಸ ತನ್ನ ಗರಗಸ ಉಳಿ ಕೊಡತಿ ಹಿಡಿದುಕೊಂಡು ಘಟ್ಟ ಹತ್ತಿದ. ಸಿಮೋನ ಅವನಿಗೆ ಕೆಲಸ ನೀಡಿದ. ಸಾಂತಾಮೋರಿ ಮನೆಯಲ್ಲಿ ಒಂದೆರಡು ವರ್ಷ ಊಟ ಮಾಡಿದ. ಒಮ್ಮೆ ಊರಿಗೆ ಹೋದಾಗ ಅವನ ತಾಯಿ ಇವನ ಸೋದರ ಮಾವ ಮುಂದೆ ನಿಂತು ಹಡಿನಬಾಳದ ತೊನ್ನು ಬಡಕ ಪೆದ್ರುವಿನ ಮಗಳನ್ನು ತಂದು ಇವನಿಗೆ ಮುದುವೆ ಮಾಡಿ-
“..ಇನ್ನು ನೀನಿದ್ದೀಯ..ನಿನ್ನ ಹೆಂಡತಿ ಇದಾಳೆ..ಏನು ಬೇಕಾದರೂ ಮಾಡಿಕೊಳ್ಳಿ..“ಎಂದು ಕೈಬಿಟ್ಟ. ಇವನ ಹೆಂಡತಿ ಮಾತ್ರ ಮೂಕಿ.
ಈಗ ಸಾಂತಾ ಮೋರಿ ಮನೆ ಬಿಡಲೇ ಬೇಕಾಯಿತು. ಶಿವಸಾಗರದಲ್ಲಿ ಕೈತುಂಬಾ ಕೆಲಸವಿತ್ತು. ಕಾಡಿನಲ್ಲಿ ಭರ್ಜರಿ ಮರ ಸಿಗುತ್ತಿದ್ದುದರಿಂದ ಮನೆ ತುಂಬಾ ಕಂಬಗಳು, ತೊಲೆಗಳು ಬಾಗಿಲು ಮರದ ಪಣತ, ಪೆಟ್ಟಿಗೆ ಸ್ನಾನದ ಬಾನಿ, ಗಾಡಿ ಎಂದೆಲ್ಲ ಮಾಡಿಸುತ್ತಿದ್ದರು ಜನ. ಕೈ ತುಂಬಾ ಕಾಸು ಓಡಾಡುತ್ತಿತ್ತು. ಆಗ ಇನಾಸ ಬೇರೊಂದು ಮನೆ ಮಾಡಲು ಹೊರಟ.
“ಇನಾಸಣ್ಣ..ನಮ್ಮ ಮನೆ ಆದೀತೋ ನೋಡು..ನಾನು ಕೊಡತೇನೆ“ಎಂದ ರುದ್ರ.
ರುದ್ರ ಸಾಗರದಲ್ಲಿ ಸುಣ್ಣದ ವ್ಯಾಪಾರ ಮಾಡುತ್ತಿದ್ದ. ಹೊನ್ನಾಳಿಯಿಂದ ಸುಣ್ಣ ತಂದು ಇಲ್ಲಿ ಮಾರುತ್ತಿದ್ದ. ಕೆಲ ಸಾಬರು ಕೂಡ ಈ ವ್ಯಾಪಾರ ಪ್ರಾರಂಭಿಸಿದ್ದರಿಂದ ರುದ್ರನಿಗೆ ಅಷ್ಟೊಂದು ವ್ಯಾಪಾರವಿರಲಿಲ್ಲ. ಕಾರಣ ಆತ ತನ್ನ ಊರಾದ ಹೊನ್ನಾಳಿಗೇನೆ ತಿರುಗಿ ಹೋಗುವ ವಿಚಾರದಲ್ಲಿದ್ದ.
ಇನಾಸ ಹೋಗಿ ರುದ್ರನ ಮನೆ ನೋಡಿದ. ಸಿಮೋನನ ಮನೆಯ ಹತ್ತಿರವೇ ಒಂದು ಹುಲ್ಲಿನ ಗುಡಿಸಲು. ಅಂಗಳದಲ್ಲಿ ಕುಂಕುಮ ಬಳಿದ ಒಂದು ಕಲ್ಲು.
ಮನೆ ಇನಾಸನ ಮನಸ್ಸಿಗೆ ಬಂದಿತು. ಆತ ಆ ಮನೆಯನ್ನು ಕೊಂಡು ಕೊಂಡ.
“ಅಣ್ಣಾ..ಈ ಕಲ್ಲು ಕುಟಿಗನನ್ನು ಮಾತ್ರ ತೆಗಿಬೇಡ..ದಿನಾ ಒಂದು ಊದಿನ ಕಡ್ಡಿ ಹಚ್ಚಿ ಕೈಮುಗಿ. ನಿನಗೆ ಒಳ್ಳೆದಾಗುತ್ತೆ“ಎಂದ ರುದ್ರ.
ಇನಾಸ ತಲೆದೂಗಿದ. ಅವನಿಗೆ ತಟ್ಟನೆ ಊರಿನಲ್ಲಿಯ ನಾಗಬನದ ನೆನಪಾಯಿತು. ಹೊಸ ಮನೆಗೆ ಹೆಂಡತಿಯನ್ನು ಕರೆತಂದ. ಬಾಯಿ ಬಾರದ ಆಕೆ ಬುದ್ದಿವಂತೆ. ತುಂಬಾ ಚಾಲೂಕು. ನೋಡಲು ಸುಂದರಿ. ಕೈಸನ್ನೆ ಬಾಯಿಸನ್ನೆಯಲ್ಲಿಯೇ ಊರನ್ನು ಒಂದು ಮಾಡಿ ಬರುತ್ತಿದ್ದಳು.
ಇನಾಸ ಕಲ್ಲು ಕುಟಿಗನಿಗೆ ಕೈ ಮುಗಿಯುವುದು ಬಿಡಲಿಲ್ಲ. ಅವನಿಗಂತೂ ಒಳ್ಳೆಯದಾಯಿತು. ಮದುವೆಯಾದ ಹತ್ತು ಹನ್ನೆರಡು ವರ್ಷಗಳಲ್ಲಿ ಮೊನ್ನೆ(ಮೂಕಿ) ಹೆಂಡತಿ ಅವನಿಗೆ ಇಬ್ಬರು ಗಂಡು ಮಕ್ಕಳನ್ನು ಮೂವರು ಹೆಣ್ಣು ಮಕ್ಕಳನ್ನು ನೀಡಿದಳು. ಈಗಲೂ ಅವಳು ಕಳಕಳಿಯಾಗಿದ್ದಾಳೆ. ಸಂಜೆ ಕೆಲಸ ಮುಗಿಸಿ ಬರುವ ಗಂಡನ ಬೆನ್ನಿಗೆ ಬಿಸಿ ಬಿಸಿ ನೀರು ಸುರುವಿ ತಿಕ್ಕುತ್ತಾಳೆ.
*
*
*
ಶಿವಸಾಗರಕ್ಕೆ ಬಂದ ಬಹಳ ದಿನಗಳವರೆಗೆ ಇನಾಸನ ಕುತ್ತಿಗೆಯಲ್ಲಿ ಶಿಲುಬೆಯಿತ್ತು. ಎರಡು ಮೂರು ವರ್ಷಕ್ಕೊಮ್ಮೆ ಊರಿಗೆ ಹೋದಾಗ ಮನೆಯಲ್ಲಿ ಆಮೋರಿ ಮಾಡುತ್ತಿದ್ದ. ಇಗರ್ಜಿಗೆ ಹೋಗುತ್ತಿದ್ದ. ಕ್ರಮೇಣ ಇದು ದೂರವಾಯಿತು. ಶಿಲುಬೆಯ ದಾರ ಲಡ್ಡಾಗಿ ಶಿಲುಬೆ ಬಿದ್ದು ಹೋಯಿತು. ಮದುವೆ ನಿಗದಿಯಾದಾಗ ಊರಿನಲ್ಲಿ ಪಾದರಿ ಪರಲೋಕ ಮಂತ್ರ ನಮೋರಾಣಿ ಮಂತ್ರ ಮಾತ್ರ ಬರುತ್ತೆ ಅಲ್ವ? ಎಂದು ಕೇಳಿದ್ದ.
“ನೀವು ಊರು ಬುಟ್ಟು ಹೋದವರು ಎಲ್ಲ ಮರೀತಿರಾ“ಎಂದು ಬೇರೆ ಕಟುಕಿದ್ದ.
ಮದುವೆಯಾಗಿ ಬರುವವರೆಗೂ ಸಾಂತಮೋರಿ ಮನೆಯಲ್ಲಿಯ ದೇವರ ಪೀಠದ ಮುಂದೆ ಉರಿಯುತ್ತಿರುವ ಮೇಣದ ಬತ್ತಿ ಕಂಡು ನಿಂತಲ್ಲಿಯೇ ಒಂದು ಕ್ಷಣ ಶಿಲುಬೆಯ ಗುರುತು ಮಾಡಿ ಕೈಬೆರಳ ತುದಿಗೆ ಮುತ್ತಿಡುತ್ತಿದ್ದ. ಹೊಸ ಮನೆಗೆ ಬಂದ ನಂತರ ಈ ಅಭ್ಯಾಸ ಕಡಿಮೆಯಾಯಿತು. ಹೆಂಡತಿ ಆಗಾಗ್ಗೆ ಹೆರಿಗೆಗೆಂದು ತಾಯಿಯ ಮನೆಗೆ ಹೋಗುತ್ತಿದ್ದಳು. ದೇವರ ಗೂಡಿನೆದುರು ಮೇಣದ ಬತ್ತಿ ಹಚ್ಚಲು ನೆನಪಾಗುತ್ತಿರಲಿಲ್ಲ. ಆದರೆ ಬೆಳಿಗ್ಗೆ ಎದ್ದ ತಕ್ಷಣ ಕೈ ಕಾಲು ಮುಖ ತೊಳೆದು ಕಲ್ಲು ಕುಟಿಗನಿಗೆ ಕೈ ಮುಗಿಯುವುದನ್ನು ಈತ ಮರೆಯಲಿಲ್ಲ.
ಒಂದೊಂದೇ ಮಗುವನ್ನು ಹೊತ್ತು ತಂದ ಮೊನ್ನೆ ಕೂಡ ಪ್ರಾರಂಭದಲ್ಲಿ ಜಪ ಮಾಡುತ್ತಿದ್ದವಳು ಕ್ರಮೇಣ ಅವಳೂ ನಿಲ್ಲಿಸಿದಳು. ತಮ್ಮ ಕುಟುಂಬವನ್ನು ಅಂಗಳದಲ್ಲಿಯೇ ಇರುವ ಈ ದೇವರು ಹ್ಯಾಗೂ ಕಾಪಾಡುತ್ತಿದ್ದಾನೆ ಎಂದು ಅವರು ತಿಳಿದುಕೊಂಡರೋ ಎನೋ ಅಂತು ಹೊಸಮನೆ ಕೊಂಡಾಗ ಇರಲಿ ಎಂದು ಇನಾಸ ಮಾಡಿದ ದೇವರ ಗೂಡಿನಲ್ಲಿಯ ಹಳೆಯ ಇಮಾಜ ಎಂದೋ ಬಿದ್ದು ಒಡೆದು ಹೋಗಿತ್ತು. ಬೇರೆಯದನ್ನು ತರಬೇಕು ತರಬೇಕು ಅಂದರೆ ಆಗಿರಲಿಲ್ಲ. ಈಗ ಪಾದರಿ ಗೋನಸಾಲ್ವಿಸ್ ಬಂದ ನಂತರ ಅವರೇ ತಂದು ಇರಿಸಿದ ಸಂತ ಅಂತೋನಿಯ ವಿಗ್ರಹ ಅಲ್ಲಿದೆ. ಪಾದರಿ ಬಂದ ನಂತರ ಅಮೋರಿ, ತೇರ್ಸ ಪ್ರಾರಂಭವಾಗಿದೆ. ಹೀಗೆಂದು ಕಲ್ಲು ಕುಟಿಗನನ್ನು ಮರೆಯಲು ಉಂಟೆ?
ಪಾದರಿ ಸಣ್ಣಗೆ ಕೆಮ್ಮಿದರು.
ಇನಾಸ ಧಡ ಬಡಿಸಿ ಊದಿನ ಕಡ್ದಿ ದೇವರ ಮುಂದೆ ಹಚ್ಚಿ-
“ಬೆಸಾಂವಂ ದಿಯಾ ಪದ್ರಬಾ“ಎಂದು ಪಾದರಿಗೆ ಕೈ ಮುಗಿದ.
“ಪೂಜೆಗೆ ಬರೋದಿಲ್ವೆ?”
“ಬಂದೇ ಪದ್ರಬಾ ಹೊರಟಿದ್ದೆ“ಎಂದ ಆತ.
*
*
*
ಅಂದು ಪಾದರಿ ಗೋನಸಾಲ್ವಿಸ್ ಪ್ರವಚನ ನೀಡಿದ್ದು ದೇವರ ಹತ್ತು ಕಟ್ಟಳೆಗಳ ಬಗ್ಗೆ. ಸಿನಾಯ ಪರ್ವತದ ಮೇಲೆ ಮೋಸೆಸನ ಕೈಗೆ ದೇವರು ಬರೆಸಿ ನೀಡಿದ ಎರಡು ಕಲ್ಲಿನ ಫಲಕಗಳಲ್ಲಿಯ ಕಟ್ಟಳೆಗಳಲ್ಲಿ ಮೊದಲನೆಯದು-
“ದೇವರೊಬ್ಬರನ್ನೆ ಆರಾಧಿಸಿ. ಎಲ್ಲಕ್ಕಿಂತ ಹೆಚ್ಚಾಗಿ ಅವರನ್ನು ಗೌರವಿಸಿ“ಎಂಬುದು.
ಯಾವ ಕಾರಣಕ್ಕೂ ಈ ಕಟ್ಟಲೆಯನ್ನು ಕ್ರೀಸ್ತುವರು ಮೀರಬಾರದು. ಒಬ್ಬ ಮನುಷ್ಯ ಇಬ್ಬರು ಯಜಮಾನರನ್ನು ಸೇವಿಸಲಾರ. ಅಂತೆಯೇ ಒಬ್ಬನಿಗೆ ಇಬ್ಬರು ದೇವರು ಇರುವುದೂ ಸಾಧ್ಯವಿಲ್ಲ. ದೇವರು ಒಬ್ಬನೆ. ಅದು ಏಸು ಪ್ರಭು ಹೇಳಿದ ದೇವರು. ಅವನನ್ನು ನಾವು ಆರಾಧಿಸಬೇಕು. ಗೌರವಿಸಬೇಕು. ಸ್ತುತಿಸಬೇಕು. ತಲೆಬಾಗಬೇಕು. ನಮಗೆ ಬೇರೊಬ್ಬ ದೇವರಿಲ್ಲ. ಸುಳ್ಳು ದೇವರುಗಳನ್ನು ನಂಬುವವರು, ನರಕದ ಅಗ್ನಿಗೆ ಬೀಳುವರು.
ಈ ಮಾತುಗಳನ್ನು ಹೇಳುವಾಗ ಪಾದರಿ ಗೋನಸಾಲ್ವಿಸ್ ರ ಮನಸ್ಸಿನಲ್ಲಿ ಇದ್ದುದು ರುದ್ರನ ಮನೆಯ ಕಲ್ಲು ಕುಟಿಗ ಹಾಗೂ ಔಡಲಮರದ ಚೌಡಮ್ಮ. ಅವಕಾಶ ಸಿಕ್ಕಾಗ ಈ ಎರಡನ್ನೂ ಕ್ರೀಸ್ತುವರ ಮನಸ್ಸಿನಿಂದ ದೂರ ಮಾಡಬೇಕು ಎಂದು ಅವರು ಮತ್ತೊಮ್ಮೆ ಅಂದುಕೊಂಡರು.

-೫-

ಪಾದರಿ ಗೋನಸಾಲ್ವಿಸ್ ಊರಿಗೆ ಬಂದ ನಂತರ ಮಾಡಿದ ಕೆಲಸಗಳಲ್ಲಿ ಇನ್ನೂ ಒಂದು ಎಂದರೆ ಸಾನಬಾವಿ ಪೆದ್ರು ಮನೆಯಲ್ಲಿ ತಂದಿರಿಸಿಕೊಂಡ ಹೆಂಗಸನ್ನು ಕ್ರಿಶ್ಚಿಯನ್ ಮಾಡಿದ್ದು.
ಪೆದ್ರು ಶಿರಾಲಿ ಹತ್ತಿರದ ಸಾನಬಾವಿಯವನು. ಅವನನ್ನು ಶಿವಸಾಗರಕ್ಕೆ ಕರೆತಂದಾತ ಸಿಮೋನ. ಕಲ್ಲು ಕೆತ್ತುವುದರಲ್ಲಿ ಪೆದ್ರು ನಿಸ್ಸೀಮ. ಕಾಲುಗಳ ನಡುವೆ ಕಲ್ಲನ್ನು ನಿಲ್ಲಿಸಿಕೊಂಡು ಬಾಗಿ ನಿಂತು ಬಾಚಿಯಿಂದ ಚಕಚಕನೆ ಅವನು ಕಲ್ಲನ್ನು ಕೆತ್ತುವುದೇ ನೋಡಲು ಒಂದು ಚೆಂದ. ಅವನು ಕೆತ್ತಿ ಇರಿಸಿದ ಕಲ್ಲುಗಳ ಮೇಲೆ ಕೈ‌ಇರಿಸಿದರೆ ಕೈ ಜಾರುತ್ತಿತ್ತು. ಅಷ್ಟು ನಯಸ್.
ಶಿವಸಾಗರಕ್ಕೆ ಬಂದ ಮೂರುನಾಲ್ಕು ವರ್ಷ ಇವನು ಸರಿಯಾಗಿದ್ದ. ಕ್ರಮೇಣ ಇವನ ತುಟಿಯ ಮೇಲೆ ಮೀಸೆ ಕಾಣಿಸಿಕೊಂಡಿತು. ತೋಳು ಎದೆ ಹಿಗ್ಗಿ ಬಲಿಷ್ಠವಾಯಿತು. ಕೆಲಸ ನಡೆಯುವಲ್ಲಿ ನೀರು ತಂದು ಹಾಕುವ, ಮಣ್ಣು ಕಲಿಸುವ ಹೆಂಗಸರನ್ನು ಕುತೂಹಲ ಆಕರ್ಷಣೆಯಿಂದ ನೋಡತೊಡಗಿದ. ಅವರ ಮುಖ ಮೈ ಕುಲುಕಾಟದಲ್ಲಿ ಇವನಿಗೆ ಏನೋ ಆಕರ್ಷಣೆ ಕಂಡಿತು. ಅವರ ಜತೆ ಮಾತನಾಡುವುದು, ಅವರನ್ನು ರೇಗಿಸುವುದು ಮಾಡತೊಡಗಿದ. ಅವನ ಈ ಪ್ರವೃತ್ತಿ ಅಧಿಕವಾದಾಗಲೇ ರಂಗಿ ಎಂಬ ಯುವತಿಯೋರ್ವಳು ಅವನ ಕಣ್ಣಿಗೆ ಬಿದ್ದಳು.
ಆರು ಏಳನೇ ವಯಸ್ಸಿಗೆಲ್ಲ ರಂಗಿಗೆ ಮದುವೆಯಾಗಿತ್ತು. ಅವಳ ಸೋದರ ಮಾವನನ್ನೇ ಕೊಟ್ಟು ಮದುವೆ ಮಾಡಿದ್ದರು. ಗಂಡ ಮದುವೆ ಅಂದರೆ ಏನು ಎಂಬುದು ತಿಳಿಯದೆ ಆಟವಾಡಿಕೊಂಡೇ ದೊಡ್ಡವಳಾಗಿದ್ದಳು ರಂಗಿ. ಅವಳು ಮೈ ನೆರೆದ ನಂತರ ಗಂಡನ ಮನೆಗೆ ಬಂದದ್ದೂ ಆಯಿತು. ಶಿವಸಾಗರದ ಟೋಲನಾಕಾದ ಬಳಿ ಅವಳ ಗಂಡನ ಮನೆ. ಗಾಡಿಯಲ್ಲಿ ಮಣ್ಣು ಹೊಡೆಯುವ ಕೆಲಸ ಅವಳ ಗಂಡನದು. ಮನೆಕಟ್ಟಲು ಬೇಕಾದ ಕೆಂಪುಮಣ್ಣನ್ನು ಅಲ್ಲಲ್ಲಿ ಗುಡ್ಡಗಳಿಂದ ಕಡಿದು ಗಾಡಿಯಲ್ಲಿ ತುಂಬಿ ತಂದು ಮನೆ ಕಟ್ಟುವಲ್ಲಿ ಸುರಿದರೆ ಗಾಡಿಗಿಷ್ಟು ಎಂದು ಹಣ ಸಿಗುತ್ತಿತ್ತು. ಅವನ ಕೆಲಸಕ್ಕೇನೂ ತೊಂದರೆ ಇರಲಿಲ್ಲ. ಎಲ್ಲೆಲ್ಲೂ ಮನೆಗಳು ಆಗುತ್ತಿದ್ದುದರಿಂದ-
“ಹನುಮಂತ..ಮಣ್ಣು ಬೇಕಲ್ಲ..“ಎಂದು ಜನ ಮನೆ ಬಾಗಿಲಿಗೆ ಬರುತ್ತಿದ್ದರು.
ಮಣ್ಣನ್ನು ಕೊಂಚ ದೂರದಿಂದ ತರಬೇಕು ಅನ್ನುವುದೇ ಒಂದು ಕೊರತೆ.
ಆದರೂ ಆತ ಮಣ್ಣು ಸರಬರಾಜು ಮಾಡುತ್ತಿದ್ದ. ಮನೆಗೆ ಹೆಂಡತಿ ಬಂದ ಮೇಲಂತೂ ಹನುಮ ಇನ್ನೂ ಹುರುಪಿನಲ್ಲಿದ್ದ. ಪೆದ್ರು ಸಣ್ಣದೊಂದು ಕೆಲಸವನ್ನು ಗುತ್ತಿಗೆಗೆ ಹಿಡಿದಿದ್ದ. ಮೀನು ಸಾಹೇಬರ ಮನೆ ಕೆಲಸ. ಕಲ್ಲಿಗೆ ಒಬ್ಬರಿಗೆ ಹೇಳಿ ಮಣ್ಣಿಗೆ ಹನುಮಂತನಿಗೆ ಹೇಳಿದ್ದ. ಮನೆ ಕಟ್ಟುವಲ್ಲಿ ಕಲ್ಲು ಬಂದು ಬಿದ್ದು ಅದನ್ನು ಕೆತ್ತಿ ಜೋಡಿಸಿ ಇರಿಸಲಾಗಿತ್ತು. ಪಾಯತೋಡಿ ಮುಗಿದಿತ್ತು. ಕಲ್ಲು ಕಟ್ಟುವವರಿಗೆ ’ಈ ಸೋಮವಾರದಿಂದ ಬರಲು ಹೇಳಿ ಆಗಿತ್ತು. ಆದರೆ ಶನಿವಾರವಾದರೂ ಮಣ್ಣು ಬಂದು ಬೀಳಲಿಲ್ಲ.’
ಪೆದ್ರು ಟೋಲನಾಕಾದ ಹನುಮಂತನ ಮನೆಗೇನೆ ಹೋದ. ಹನುಮಂತ ಇರಲಿಲ್ಲ. ಅವನ ಹೆಂಡತಿ ರಂಗಿ ತೆಂಗಿನ ಮರದಡಿಯಲ್ಲಿ ತೆಂಗಿನ ಸೋಗೆಯ ಮರೆಯಲ್ಲಿ ತುಂಡು ಸೀರೆ ಸುತ್ತಿಕೊಂಡು ಸ್ನಾನ ಮಾಡುತ್ತಿದ್ದಳು. ಅವಳ ಎದೆ ತೊಡೆಗಳನ್ನು ಮುಚ್ಚುವುದರ ಬದಲು ತೆರೆದು ತೋರಿಸುತ್ತ ಒದ್ದೆಯಾದ ಬಿಳಿ ವಸ್ತ್ರ ಅವಳ ಮೈಗೆ ಅಂಟಿಕೊಂಡಿತ್ತು. ಸೋಗೆಯ ಮರೆಯಿಂದ ತಲೆಯನ್ನು ಮಾತ್ರ ಅವಳು ಹೊರಹಾಕಿ,
“ಅವರಿಲ್ಲ“ಎಂದಳು.
ಹರಿದು ಅಲ್ಲಲ್ಲಿ ಕಿಂಡಿಯಾಗಿದ್ದ ಸೋಗೆಯ ಮರೆಯಿಂದ ಅವಳ ದೇಹದ ದರ್ಶನವಾಗಿ ಪೆದ್ರು ನೆಲಕ್ಕೆ ಕಾಲು ಅಂಟಿಕೊಂಡಂತಾಗಿ ನಿಂತಲ್ಲಿಯೇ ನಿಂತ.
“ಮಣ್ಣು ಹೇಳಿದ್ದೆ..ಹೇಳಿ ಎಂಟು ದಿನ ಆಯ್ತು“ಎಂದು ರಾಗ ಎಳೆದ ಪೆದ್ರು.
“ಮರೆತಿರಬಹುದು ಬೈದು ನಾ ಹೇಳತೇನೆ“ಎಂದಳವಳು ಹಿಂದಿನಂತೆಯೇ ತಂಗಾಳಿಗೆ ಎಳೆ ಬಿಸಿಲಿಗೆ ಮೈಯೊಡ್ಡಿ ನಿಂತು.
“ನಾಳೆ ಸಂಜಿಯೊಳಗೆ ಎರಡು ಗಾಡಿ ಮಣ್ಣು ಬೇಕು ಅಂತ ಹೇಳು..“ಎಂದು ಹೇಳಿ ಪೆದ್ರು ಅಲ್ಲಿಂದ ಕದಲಿದ.
“ಅಲ್ಲಾ..“ದನಿ ಅವನನ್ನು ಹಿಡಿದು ನಿಲ್ಲಿಸಿತು.
“ಯಾರು ಬಂದಿದ್ರು ಅಂದ್ರೆ..”
“ಪೆದ್ರು…ಅಂತ ಹೇಳು. ಸಾನಬಾವಿ ಪೆದ್ರು..ಮೀನು ಸಾಹೇಬರ ಮನೆ ಕಟ್ಟಲಿಕ್ಕೆ ಅಂತ ಹೇಳು..”
ಇಷ್ಟನ್ನು ಮಾತನಾಡುತ್ತ ಮತ್ತೊಮ್ಮೆ ಹರಿದು ಚಿಂದಿಯಾದ ಮಡಲಿನೊಳಗೆ ದೂರದಿಂದ ಇಣುಕಿದ ಪೆದ್ರು.
“ಆತು…ಹೇಳತೇನೆ“ಎಂದಳವಳು.
ಹನುಮಂತನಿಗೆ ಅವಳು ಹೇಳಿದಳೇನೋ ಭಾನುವಾರ ಕತ್ತಲಾಗುವಷ್ಟರಲ್ಲಿ ಎರಡು ಗಾಡಿ ಕೆಂಪು ಮಣ್ಣು ಬಂದು ಮೀನು ಸಾಹೇಬರು ಮನೆ ಕಟ್ಟುವಲ್ಲಿ ರಾಶಿ ಬಿದ್ದಿತು.
ಪೆದ್ರು ಮೀನು ಸಾಹೇಬರ ಮನೆ ಕೆಲಸವನ್ನೇನೋ ಪ್ರಾರಂಭಿಸಿದ. ಮನೆ ತಳಪಾಯ ಮೀರಿ ಮೇಲೆದ್ದಿತು. ಗೋಡೆಗಳು ತಲೆ ಎತ್ತಿನಿಂತವು. ಬಡಗಿಗಳು ಮಾಡು ಏರಿಸಲೆಂದು ಶುಭದಿನ ನೋಡಬೇಕೆಂದರು. ಮುಂದಿನ ಬಟವಾಡೆಯ ದಿನಮಣ್ಣಿನ ಬಾಬ್ತು ಹಣ ಕೊಡುವುದಾಗಿ ಪೆದ್ರು ಹನುಮಂತನಿಗೆ ಹೇಳಿದ. ಬುಧವಾರ ಸಂಜೆ ಅದಾರೋ ಒಂದು ಸುದ್ದಿ ತಂದರು. ಮಂಕಾಳೆ ಗುಡ್ಡಕ್ಕೆ ಮಣ್ಣು ಕಡಿಯಲು ಹೋದ ಹನುಮಂತ ಗುಡ್ಡ ಕಡಿದು ಅದರ ಅಡಿಗೆ ಸಿಕ್ಕಿದ್ದ. ಶಿವಸಾಗರದಿಂದ ಹನುಮಂತನನ್ನು ಬಲ್ಲವರೆಲ್ಲ ಮಂಕಾಳೆಗೆ ಧಾವಿಸಿ ಹೋಗಿದ್ದರು. ಆದರೆ ಹನುಮಂತನ ಶವ ದೊರೆತದ್ದು ಮಾತ್ರ ಎರಡು ದಿನಗಳ ನಂತರವೆ. ಗುಡ್ಡ ಕುಸಿದು ಬಿದ್ದೆಡೆಯಲ್ಲಿ ಹನುಮಂತನ ಹೆಂಡತಿ ರಂಗಿ, ಅವಳ ತಾಯಿ ತಂದೆ ಗೋಳಾಡುತ್ತಲಿದ್ದುದೇ ಎಲ್ಲರ ಕಣ್ಣುಗಳಲ್ಲೂ ನೀರು ತರಿಸುವ ವಿಷಯವಾಯಿತು.
ಪೆದ್ರು ಮಣ್ಣಿನ ಬಾಬ್ತು ಹನುಮಂತನಿಗೆ ಕೊಡಬೇಕಾಗಿರುವ ಹಣ ಕೊಡಲು ಒಂದು ತಿಂಗಳ ನಂತರ ಟೋಲನಾಕಾದ ಮನೆಗೆ ಹೋದಾಗ ರಂಗಿ ಇನ್ನೂ ಚೇತರಿಸಿಕೊಂಡಿರಲಿಲ್ಲ. ಅವಳ ಮೈ ಬಾಡಿತು. ಕಣ್ಣುಗಳು ಆಳದಲ್ಲೆಲ್ಲೋ ಮಂಕಾಗಿ ಉರಿಯುತ್ತಿತ್ತು.
ರಂಗಿ ಪೆದ್ರು ಕೊಟ್ಟ ಹಣವನ್ನು ಜಗುಲಿಯ ಮೇಲಿರಿಸಿ ಮುಸುಮುಸು ಅತ್ತಳು. ಪೆದ್ರು ಮನಸ್ಸು ಹಿಂಡಿದಂತಾಗಿ ಅಲ್ಲಿಂದ ತಿರುಗಿ ಬಂದ. ಆದರೆ ರಂಗಿಯನ್ನು ಮರೆಯಲು ಅವನಿಂದ ಆಗಲಿಲ್ಲ. ಆಗಾಗ್ಗೆ ಅವಳು ಕಣ್ಣಿಗೆ ಬೀಳುವುದೂ ಇತ್ತು. ಹೀಗೆ ಅವಳನ್ನು ನೋಡಿದಾಗಲೆಲ್ಲ ಪೆದ್ರು ಒಂದು ಬಗೆಯ ಗೊಂದಲಕ್ಕೆ ಈಡಾಗುತ್ತಿದ್ದ. ತಟ್ಟನೆ ಅವನ ಮೈ ಬಿಸಿ ಏರುತ್ತಿತ್ತು. ನಡಿಗೆಯ ವಿಧಾನದಲ್ಲಿ ಏರು ಪೇರಾಗುತ್ತಿತ್ತು. ಅವಳ ದುಂಡು ಮುಖ, ಕುಲುಕಾಡುವ ಕುಚಗಳು ಇವನನ್ನು ಕೆಣಕುತ್ತಿದ್ದವು. ಮೈ ನರಗಳು ಬಿಗಿಯಾಗಿ ಎಳೆದು ಕಟ್ಟಿ ಮೀಟಿದ ಹಾಗೆ ಆತ ತಡಬಡಿಸುತ್ತಿದ್ದ. ಜೊತೆಗೆ ಮದುವೆಯಾದ ಹೊಸದರಲ್ಲಿಯೇ ಇವಳಿಗೆ ಹೀಗೆ ಆಗಬೇಕೆ ಎಂಬ ನೋವು ಕಾಣಿಸಿಕೊಳ್ಳುತ್ತಿತ್ತು. ಈ ಎಲ್ಲ ಭಾವನೆಗಳಿಗೆ ಬಲಿಯಾಗಿ ಅವಳನ್ನು ಅದೊಂದು ರೀತಿಯಲ್ಲಿ ನೋಡುತ್ತಿದ್ದ. ಮಾತನಾಡಿಸುತ್ತಿದ್ದ.
ಕೆಲವೇ ದಿನಗಳಲ್ಲಿ ರಂಗಿ-
“ಅಣ್ಣಾ“ಎಂದು ಅವನ ಬಳಿಗೇನೆ ಬಂದಳು.
“ನನಪಾಡು ಹಂಗಾಯ್ತು ಹೊಟ್ಟೆ ಒಂದೈತೆ ಏನಾರ ಕೆಲಸ ಕೊಡಿ“ಎಂದು ಅವನ ಎದುರು ನಿಂತು ಅಂಗಲಾಚಿದಳು.
ಅವನು ಅವಳಿಗೆ ನೀಡಬಹುದಾಗಿದ್ದ ಕೆಲಸವೆಂದರೆ ಮಣ್ಣು ಕಲಿಸಲು ನೀರು ತರುವುದು. ಮಣ್ಣು ಕಲಿಸುವುದು. ಹಿಂದೆಲ್ಲ ಈ ಕೆಲಸ ಮಾಡಿದವಳೆ ರಂಗಿ. ಗಂಡನ ಜೊತೆಗೂ ಹೋಗಿ ಕೆಲಸ ಮಾಡುತ್ತಿದ್ದಳು ಆದರೆ ಆಗೆಲ್ಲ ಜೊತೆಗೆ ಗಂಡ ಇರುತ್ತಿದ್ದ ಈಗ?
’ನಾಳೆಯಿಂದ ಬಾ’ ಎಂದ ಪೆದ್ರು.
ಅವನಿಗೆ ಕೈತುಂಬ ಕೆಲಸವಿತ್ತು. ಮೀನು ಸಾಹೇಬರ ಮನೆ ಕೆಲಸದ ಕಟ್ಟೋಣ ಮುಗಿದು, ಬ್ರಾಹ್ಮಣರ ಕೇರಿಯಲ್ಲಿ ಒಂದು ಮಹಡಿ ಮನೆ ಕಟ್ಟಲು ಆತ ಆರಂಭಿಸಿದ್ದ. ತನ್ನಲ್ಲಿ ಕೆಲಸ ಮಾಡಲೆಂದು ಕೊನೆ ಮನೆ ಬಿಕಾರೋ ಅವನ ಮಗ ಸಂತಿಯಾಗನನ್ನು ಕರೆಸಿಕೊಂಡಿದ್ದ. ಇತರೆ ಕೆಲಸಗಳಿಗೆ ರಂಗಿ ಬಂದಳು. ಪೆದ್ರು ಕೂಡ ಗೋಡೆಯನ್ನೇರಿ ಕಲ್ಲು ಕಟ್ಟುತ್ತಿದ್ದ.
“ರಂಗಿ ಮಣ್ಣು ತಾ ಮಣ್ಣು..“ಎಂದು ಮೇಲೆ ನಿಂತು ಕೂಗುತ್ತಿದ್ದ.
ರಂಗಿ ಬಳುಕುವ ಏಣಿ ಹಿಡಿದು ತಲೆಯ ಮೇಲೆ ಮಣ್ಣು ತುಂಬಿದ ಬಾಂಡಲಿ ಇರಿಸಿಕೊಂಡು ಮೇಲೆ ಹತ್ತುತ್ತಿದ್ದಳು. ಅರೆ ಕಟ್ಟಿ ಮುಗಿದ ಗೋಡೆಯ ಮೇಲೆನಿಂತ ಪೆದ್ರು ಬಗ್ಗಿ ಅವಳ ತಲೆಯ ಮೇಲಿನ ಬಾಂಡಲಿ ತೆಗೆದುಕೊಂಡು ಆಗಲೇ ಬರಿದಾದ ಇನ್ನೊಂದು ಬಾಂಡಲಿಯನ್ನು ಅವಳ ಕೈಗೆ ನೀಡುತ್ತಿದ್ದ. ಈ ಕೆಲಸ ನಿರಂತರವಾಗಿ ಮುಂದುವರೆಯುತ್ತಿತ್ತು. ನಡುವೆ ದಣಿವಾರಿಸಿಕೊಳ್ಳಲು ಪೆದ್ರು ಕೆಳಗೆ ಇಳಿದು ಬರುತ್ತಿದ್ದ. ಕೆತ್ತಬೇಕಾದ ಕಲ್ಲುಗಳ ಮೇಲೆ ಕುಳಿತು ಅದೆಲ್ಲೋ ಇರಿಸಿದ ಎಲೆ ಅಡಿಕೆ ಚಂಚಿ ತೆಗೆದು ತಂಬಾಕು ಅಡಿಕೆಯನ್ನು ಬಾಯಿಗೆಸೆದುಕೊಂಡು, ಚಿಪ್ಪಿನ ಸುಣ್ಣವನ್ನು ಸುಣ್ಣದ ಕಾಯಿಂದ ತೆಗೆದು ಎಲೆಗೆ ಬಳಿಯುತ್ತ ಇರಬೇಕಾದರೆ ರಂಗಿ ಅವನ ಬಳಿ ಬರುತ್ತಿದ್ದಳು. ಅವಳು ಕೇಳದಿದ್ದರೂ ಅವಳಿಗೆ ಒಂದು ಎಲೆ ಅರ್ಧ ಅಡಿಕೆ ಕೊಟ್ಟು- ಇಕಾ- ಎಂದು ಸುಣ್ಣದ ಕಾಯನ್ನು ಅವಳತ್ತ ಚಾಚುತ್ತಿದ್ದ. ಅಷ್ಟು ದೂರ ನಿಂತ ಅವಳು ಎಲೆ ಅಡಿಕೆ ಹಾಕಿಕೊಳ್ಳುತ್ತಿರಲು ಇವನು ಅವಳನ್ನೇ ನೋಡುತ್ತಿದ್ದ.
ಬ್ರಾಹ್ಮಣರ ಮನೆ ಕೆಲಸ ಮುಗಿಯಿತು. ಪೆದ್ರು ಬೇರೊಂದು ಕಡೆ ಕೆಲಸ ಹಿಡಿದ. ರಂಗಿ ಅಲ್ಲಿಗೂ ಬಂದಳು. ಅಷ್ಟು ಹೊತ್ತಿಗೆ ರಂಗಿ ಪೆದ್ರು ಹತ್ತಿರ ಹತ್ತಿರ ಬಂದಿದ್ದರು.
“ಮನೆಯಾಗೆ ಇರೋದು ಕಷ್ಟ ಆಗೈತೆ“ಎಂದಳು ರಂಗಿ ಒಂದು ದಿನ ಎಲೆ ಅಡಿಕೆ ಜಗಿಯುತ್ತ ಕುಳಿತ ಪೆದ್ರುಗೆ.
“..ಏನಾಯ್ತು?”
“ಅವರ ದೂರದ ಸಂಬಂಧಿಯೊಬ್ಬ ತುಂಬಾ ಕಾಟ ಕೊಡತಿದಾನೆ“ಎಂದಳು ರಂಗಿ.
ಒಂಟಿ ಹೆಣ್ಣು! ಗಂಡನನ್ನು ಕಳೆದುಕೊಂಡಾಕೆ. ಯಾವ ಗೂಳಿಯೂ ಬಾಯಿ ಹಾಕಿ ಮೇಯದಿರುವುದರಿಂದ ಸೊಂಪಾಗಿ ಬೆಳೆದು ನಿಂತಿದ್ದಾಳೆ. ಹನುಮಂತನ ದೂರದ ನೆಂಟ ವೀರಭದ್ರ ಒಂದಲ್ಲಾ ಒಂದು ನೆಪ ಮಾಡಿಕೊಂಡು ಮನೆಗೆ ಬರುತ್ತಾನೆ. ಇವಳನ್ನು ಮಾತಿಗೆ ಎಳೆಯುತ್ತಾನೆ. ಅವನು ನೋಡುವ ರೀತಿಯೇ ಮೈಮೇಲೆ ಮುಳ್ಳು ಏಳಿಸುತ್ತದೆ. ಈ ಹಿಂಸೆಯಿಂದ ತೊಳಲಾಡುವ ರಂಗಿ ಒಂದೆರಡು ಬಾರಿ ಪೆದ್ರುವಿನೆದುರು ತನ್ನ ಗೋಳು ತೋಡಿಕೊಂಡಳು. ಅವನು ತಾನೆ ಏನು ಮಾಡಿಯಾನು? ಹೌದಾ..ಎಂದಷ್ಟೇ ಕೇಳಿದ. ಬೇರೆನಾದರೂ ಮಾಡಲು ಒಂದು ಅವಕಾಶ ಬೇಕಲ್ಲ.
ಒಂದು ರಾತ್ರಿ ಪೆದ್ರು ಊಟ ಮುಗಿಸಿ ಮಲಗಿದ್ದ. ಊಟ ಎಂದರೆ ಅವನೇ ಬೇಯಿಸಿಕೊಳ್ಳುವ ಕುಸುಬಲಕ್ಕಿಯ ಗಂಜಿ ಜೊತೆಗೆ ಸುಟ್ಟುಕೊಂಡ ಬಂಗಡೆ ಮೀನು.. ಘಟ್ಟ ಹತ್ತಿ ಮೇಲೆ ಬಂದ ಆತ ಕೆಲ ದಿನ ಊಟದ ಮನೆ ಮರಿಯಳಲ್ಲಿ ಊಟಮಾಡುವುದಿತ್ತು. ಮರಿಯ ಒಬ್ಬರಿಗೊಂದು ಇನ್ನೊಬ್ಬರಿಗೆ ಇನ್ನೊಂದು ಮಾಡುವುದು ಇವನ ಗಮನಕ್ಕೆ ಬಂದಿತು. ಕಂತ್ರಾಟುದಾರ ಎಂದು ಹೆಸರು ಪಡೆದ ಸಿಮೋನನಿಗೆ ಬಿಸಿ ಬಿಸಿ ಬಂಗಡೆ ಮೀನಿನ ಸಾರನ್ನು ಬಡಿಸುವ ಈಕೆ ತನಗೆ ತನ್ನಂತಹ ಇತರೆ ಕೆಲಸಗಾರರಿಗೆ ಹಿಂದಿನ ರಾತ್ರಿ ಉಳಿದ ತರ್‍ಲೆ ಮೀನಿನ ಹಳಸಿದ ಸಾರನ್ನು ಬಡಿಸುತ್ತಿದ್ದಳು. ಇದೇ ಕಾರಣಕ್ಕೆ ತನಗೂ ಅವಳಿಗೂ ಜಗಳವಾಗಿ ತಾನು ಅವಳ ಮನೆ ಬಿಟ್ಟೆ. ಸಿಮೋನನ ಮನೆ ಸಾಲಲ್ಲಿ ಕೊನೆಯದಾಗಿ ಉಳಿದ ಜಾಗದಲ್ಲಿ ಈತ ಮನೆ ಕಟ್ಟಿದ. ಹುಲ್ಲು ಹೊದೆಸಿ ಮಣ್ಣಿನ ಗೋಡೆ ಏರಿಸಿ ಅದಕ್ಕೆ ಮನೆ ಎಂದು ಕರೆದು ಅಲ್ಲಿ ಸೇರಿಕೊಂಡಿದ್ದ. ಅಲ್ಲಿಯೇ ಗಂಜಿ ಬೇಯಿಸಿಕೊಂಡು ಇರತೊಡಗಿದ. ಮರಿಯಾನ ಮನೆಬಿಟ್ಟ ನಂತರ ಈತ ಸಿಮೋನನ ಕೆಲಸಕ್ಕೆ ಹೋಗುವುದನ್ನೂ ನಿಲ್ಲಿಸಿದ. ತಾನು ಸ್ವತಂತ್ರವಾಗಿ ಕೆಲಸ ಹಿಡಿಯತೊಡಗಿದ. ಅಲ್ಲಿ ಇಲ್ಲಿ ಕೆಲಸ ಹಿಡಿದು ಕೈಯಲ್ಲಿ ನಾಲ್ಕು ಕಾಸು ಓಡಾಡ ತೊಡಗಿದಾಗಲೇ ರಂಗಿ ಬಂದು ಮನೆ ಸೇರಿಕೊಂಡಳು.
ಆ ರಾತ್ರಿ ಗಂಜಿ ಉಂಡು ಮಲಗಿದಾತನಿಗೆ ಯಾರೋ ಬಾಗಿಲು ತಟ್ಟಿ ಎಬ್ಬಿಸಿದ ಹಾಗಾಯಿತು.
ಬಾಗಿಲ ಹಲಗೆಗೆ ಒಳಗಿನಿಂದ ಕಟ್ಟಿದ ಹಗ್ಗ ಬಿಚ್ಚಿ ಯಾರು ಎಂದು ಬಗ್ಗಿಸಿ ನೋಡಿದ. ರಂಗಿ ಥರಗುಟ್ಟಿ ನಡಗುತ್ತ ಒಳ ಬಂದು ಬಾಗಿಲು ಹಾಕಿಕೊಂಡಳು.
ಪೆದ್ರು ಚಿಮಣಿಗೆ ಬೆಂಕಿ ಕಡ್ಡಿ ಗೀರಿ ಹಚ್ಚಿದ ಮಸಕು ಬೆಳಕಿನಲ್ಲಿ ರಂಗಿ ಹೋಗಿ ಮೂಲೆಯಲ್ಲಿ ಮುದುಡಿ ಕುಳಿತಿದ್ದಳು.
“ಏನಾತು?”
“ಆ ದುಸ್ಮಾನ ನನ್ನ ಬೆನ್ನು ಹತ್ತಾನೆ“ಎಂದು ಕಣ್ಣಲ್ಲಿ ನೀರು ತಂದು ಕೊಂಡಳು ರಂಗಿ. ಪೆದ್ರೂ ಏನೂ ಮಾತನಾಡಲಿಲ್ಲ. ಎದ್ದು ಹೋಗಿ ಬಾಗಿಲ ಹಲಗೆಗೆ ದಾರ ಕಟ್ಟಿ ಬಂದನಷ್ಟೆ.
*
*
*
ರಂಗಿ ಕಿರಸ್ತಾನದವನ ಮನೆ ಸೇರಿಕೊಂಡಿರುವ ವಿಷಯ ಅವಳ ಜಾತಿಯವರಿಗೆಲ್ಲ ತಿಳಿದು ಹೋಯಿತು. ವೀರಭದ್ರ ಯಾವತ್ತೋ ಪೆದ್ರುವನ್ನು ಹೀಗೆಂದೇ ನಿಲ್ಲಿಸಿಕೊಂಡು ಬೈಯ್ದು ಪೆದ್ರುವಿನಿಂದ ಏಟು ತಿಂದ.
ರಂಗಿಯನ್ನು ಮತ್ತೆ ಯಾರೋ ತಡೆದು ನಿಲ್ಲಿಸಿ ಏನೇ ರಂಗಿ ಹಿಂಗ ಮಾಡಬುಟ್ಟಿ ಅಂದಾಗ ಅವಳು ಬಾಲ ತುಳಿಸಿಕೊಂಡ ಬೆಕ್ಕಿನ ಹಾಗೆ ಕಿಸ್ಸನೆ ತಿರುಗಿ ಬಿದ್ದಳು-
“ಆ ವೀರಭದ್ರನ ಸೂಳೆ ಆಗಾಕಿಂತ..ಇದು ಚಲೋ ಅಲ್ವ?“ ಎಂದವಳು ಕೇಳಿದಳು.
ಕ್ರಿಶ್ಚಿಯನ್ನರ ನಡುವೆಯೂ ಈ ಮಾತು ಕೇಳಿ ಬಂದಿತು. ಘಟ್ಟ ಇಳಿದು ಸಾನಬಾವಿಗೆ ಹೋದ ಯಾರೋ ಅವನ ಮನೆಗೂ ವಿಷಯ ತಿಳಿಸಿದರು. ಇಲ್ಲಿ ಕೂಡ ಸಿಮೋನ ಮತ್ತಿತರರು ಛಿ! ಛಿ! ಎಂದರು.
“ಆದದ್ದು ಆಯ್ತು..ಅವಳನ್ನು ನಮ್ಮ ಜಾತಿಗೆ ಸೇರ್ಸಿಬಿಡು“ಎಂದು ಪರಿಹಾರ ಸೂಚಿಸಿದರು.
ಸಿಮೋನ ಮುರುಡೇಶ್ವರಕ್ಕೆ ಹೋದಾಗ ಅಲ್ಲಿ ಶಿರಾಲಿಯ ಪಾದರಿಗೂ ಈ ವಿಷಯ ತಿಳಿಸಿ ಆ ಹೆಂಗಸನ್ನು ಜಾತಿಗೆ ಸೇರಿಸಿಕೊಳ್ಳಲು ನೋಡಿದ. ಆದರೆ ಪೆದ್ರು ತಪ್ಪಿಸಿಕೊಂಡು ತಿರುಗಾಡುತ್ತಿದ್ದ.
ಆದರೆ ಈಗ ಊರಿಗೆ ಪಾದರಿ ಬಂದ ನಂತರ ಪೆದ್ರು ಸಿಕ್ಕಿಬಿದ್ದ. ಭಾನುವಾರ ಬೆಳಿಗ್ಗೆ ಹೆಗಲ ಮೇಲೆ ಬಾಚಿ ಹೇರಿ ಸಿಕೊಂಡು ದನದ ಆಸ್ಪತ್ರೆ ಕಟ್ಟಲು ಹೊರಟ ಪೆದ್ರುವನ್ನು ಪಾದರಿ ಗೋನಸಾಲ್ವಿಸ್ ಕೊತ್ವಾಲ ಕಟ್ಟೆಯ ದೂಪರ ಮರದ ಬಳಿ ಹಿಡಿದು ಬಿಟ್ಟರು. ಎಲೆ ಅಡಿಕೆ ಜಗಿದು ಬಾಯಲ್ಲಿಯ ತಾಂಬುಲವನ್ನು ಪೊದೆಯೊಂದರ ಬಳಿ ಪಿಚಕಾರಿಯಂತೆ ತೂಪಿ ಇನ್ನೇನು ಮುಂದಿನ ತಿರುವಿನಲ್ಲಿ ಮಾಯವಾಗಬೇಕು ಅನ್ನುವಾಗ ಬೇರೊಂದು ದಿಕ್ಕಿನಿಂದ ಬಂದ ಪಾದರಿ-
“ಕೋಣ್ರೇ ತೋ..”(ಯರೋ ಅದು) ಎಂದು ಕೇಳಿ ಓಡುವ ಹಸುವಿನ ಹಗ್ಗಕ್ಕೆ ಕುಣಿಕೆ ಹಾಕಿ ಹಗ್ಗ ಎಳೆದು ನಿಲ್ಲಿಸಿಬಿಟ್ಟರು.
ಕೆಂಪಗಿದ್ದರು ಪಾದರಿ ಗೋನಸಾಲ್ವಿಸ್. ಬಿಳಿ ನಿಲುವಂಗಿಯೊಳಗೆ ಧಗಧಗನೆ ಉರಿಯುವ ಬೆಂಕಿಯಂತೆ ನಿಂತಿದ್ದರು. ಅವರ ಕೈಲಿದ್ದ ನಾಗರ ಬೆತ್ತ ಕೂಡ ಬೆಂಕಿಯ ಈಟಿಯಂತೆ ಕಂಡಿತು. ಕಣ್ಣುಗಳಲ್ಲಿ ಕೆಂಡದ ಮಳೆ.
ಅವರು ನೇರವಾಗಿ ಬಂದವರೇ ಇವನ ಹೆಗಲ ಮೇಲಿನ ಬಾಚಿಗೆ ಕೈ ಹಾಕಿದರು. ತಾನು ತುಂಬಾ ಬಲಾಢ್ಯ ಅಂದುಕೊಂಡಿದ್ದ ಪೆದ್ರು ಪಾದರಿ ಕೈ ಹಾಕಿ ಬಾಚಿ ಕಿತ್ತುಕೊಂಡ ರಭಸಕ್ಕೆ ಹಿಂದೆ ಮುಂದೆ ಮುಗ್ಗರಿಸಿ ನಿಂತ.
“ಭಾನುವಾರವೂ ನಿನಗೆ ಹೊಟ್ಟೆಯ ಚಿಂತೆಯೆ?“ಅವರು ಗುಡುಗಿದರು.
“ನೀನು ದೇವರ ಧ್ಯಾನ ಮಾಡುವುದು ಯಾವಾಗ? ಭಾನುವಾರಗಳನ್ನು ದೇವರ ಧ್ಯಾನ ಸ್ಮರಣೆಗಾಗಿ ಮೀಸಲಾಗಿಡಬೇಕೆಂಬ ವಿಷಯವನ್ನು ಮರೆತು ಬಿಟ್ಟೆಯೋ ಹೇಗೆ? ಈವರೆಗೆ ನೀವೆಲ್ಲ ಅನಬಾವಾಡ್ತಿಗಳಾಗಿ ಬದುಕಿದ್ರ..ಇನ್ನು ನೀವು ಹಾಗೆ ಇರೋದಕ್ಕೆ ನಾನುಬಿಡೋದಿಲ್ಲ”.
ಇಗರ್ಜಿಯಲ್ಲಿನ ಪುಲಪತ್ರಿಯನ್ನೇರಿನಿಂತ ಪಾದರಿಯಂತೆ ಅವರು ಅಲ್ಲಿ ದೊಡ್ಡ ದನಿಯಲ್ಲಿ ಮಾತನಾಡತೊಡಗಿದಾಗ ಪೆದ್ರುವಿನ ಕೈಕಾಲುಗಳೆಲ್ಲ ತಣ್ಣಗಾದವು.
“ಚೂಕ್ ಜಾಲಿ ಪದ್ರಾಬ..ಚೂಕ್ ಜಾಲಿ“ತಪ್ಪಾಯಿತು ಪಾದರಿಗಳೆ ತಪ್ಪಾಯಿತು ಎಂದು ಆತ ತೊದಲಿದ.
“ಈವತ್ತು ಕೆಲಸ ಬೇಡ ನಡಿ ಇಗರ್ಜಿಗೆ“ಎಂದರು ಪಾದರಿ.
ಒಡೆಯನ ಆದೇಶ ಕಿವಿಗೆ ಬಿದ್ದ ನಾಯಿ ತನ್ನ ಬಾಲವನ್ನು ತೊಡೆ ಸಂದಿಗೆ ಸಿಕ್ಕಿಸಿಕೊಂಡು ತಿರುಗಿ ಹೋದ ಹಾಗೆ ಪೆದ್ರು ಪಾದರಿ ಕೈಯಿಂದ ಬಾಚಿ ತೆಗೆದು ಕೊಂಡು ಮನೆಯತ್ತ ತಿರುಗಿದ. ಕೈ ಕಾಲಿಗೆ ಮುಖಕ್ಕೆ ನೀರು ತಗುಲಿಸಿ ಇದ್ದುದರಲ್ಲಿ ತುಸು ಬೆಳ್ಳಗಿದ್ದ ಪಂಚೆ ಪೈರಾಣಗಳನ್ನು ತೊಟ್ಟು ಇಗರ್ಜಿಗೆ ಹೊರಟನು.
ಈ ಇಗರ್ಜಿಗೆ ಹೋಗುವುದು ಊರು ಬಿಟ್ಟು ಬಂದ ನಂತರ ನಿಂತು ಹೋಗಿತ್ತು. ಮಳೆಗಾಲದಲ್ಲಿ ಊರಿಗೆ ಹೋದಾಗ ಹಬ್ಬ ಮದುವೆ ಎಂದು ಘಟ್ಟ ಇಳಿದಾಗ ಇಗರ್ಜಿಗೆ ಹೋಗಬೇಕಾಗುತ್ತಿತ್ತು. ಒಂದು ವೇಳೆ ಇಗರ್ಜಿಗೆ ಹೋಗದೇನೆ ಅಂಗಳ ಜಗಲಿಯ ಮೇಲೆ ಕುಳಿತರೆ ಇಗರ್ಜಿಗೆ ಹೊರಟವರು ನೇರವಾಗಿಯೇ “ಏನೋ ಇಗರ್ಜಿಗೆ ಬರೋದಿಲ್ವ?“ಎಂದು ಕೇಳುತ್ತಿದ್ದರು. ಪಾದರಿ ಗಮನವಿರಿಸಿ ನೋಡಿ ಇಗರ್ಜಿಗೆ ಬಾರದವರನ್ನು ವಿಚಾರಿಸಿಕೊಳ್ಳುತ್ತಿದ್ದ. ಆದಿತ್ಯವಾರವನ್ನು ದೈವ ಭಕ್ತಿಯಿಂದ ಆಚರಿಸಲಿಲ್ಲ ಅನ್ನುವುದು ಒಂದು ಪಾಪವಾಗಿ ಮನಸ್ಸನ್ನು ಕಾಡುತ್ತಿತ್ತು. ಹೀಗೆಂದೇ ಆತ ಇಗರ್ಜಿಗೆ ಹೋಗಿ ಬರುವುದನ್ನು ಒಂದು ಪದ್ದತಿಯನ್ನಾಗಿ ಮಾಡಿಕೊಂಡು ಆಚರಿಸಿಕೊಂಡು ಬಂದಿದ್ದ.
ಆದರೆ ಕೆಲಸದ ಬೆನ್ನು ಹತ್ತಿ ಇಲ್ಲಿಗೆ ಬಂದ ಮೇಲೆ ಈ ಒಂದು ವಿಧಿ ಇರಲಿಲ್ಲ. ಸಿಮೋನ ಕೊಪೆಲ ಕಟ್ಟೋಣ ಎಂದಾಗ ನಾನೂ ಹೋಗಿ ಕೆಲಸಕ್ಕೆ ಕೈ ಹಾಕಿದ್ದುಂಟು. ಇಲ್ಲಿ ಪಾದರಿಯ ಹುಡುಕುಗಣ್ಣು ತನ್ನ ಮೇಲೆ ಇಲ್ಲದ್ದರಿಂದ ಈತ ಪೂಜೆ ಮರೆತಿದ್ದ. ಆದರೆ ಈಗ ಮತ್ತೆ ಅದು ಪ್ರಾರಂಭವಾದಂತಿತ್ತು. ಇಗರ್ಜಿಗೆ ಹೋಗುವ ಸಮಯದಲ್ಲಿಯೇ ತೊಟ್ಟು ನಂತರ ತೆಗೆದಿರಿಸುತ್ತಿದ್ದ ಕೋಟು, ಶರಟು, ಪಂಚೆ ಊರಿನಲ್ಲಿ ನುಸಿಗುಳಿಗೆ ಇರಿಸಿದ ಟ್ರಂಕಿನಲ್ಲಿ ಸುರಕ್ಷಿತವಾಗಿದೆ. ಇಲ್ಲಿ ಒಂದು ಪಂಚೆ ಪೈರಾಣ- ಸಾಕಷ್ಟು ಚೆನ್ನಾಗಿರುವುದು ತೊಟ್ಟು ಆತ ಹೊರಟ.
ರಂಗಿ ಇವನು ತಿರುಗಿ ಬಂದದ್ದು, ಬೇರೆ ಉಡುಪು ಧರಿಸಿ ಹೊರಟಿದ್ದು ನೋಡಿ ಅಚ್ಚರಿಪಟ್ಟಳು. ಹಿಂದಿನ ರಾತ್ರಿ ತೆಗೆದಿರಿಸಿದ ಮೂರು ಮಡಿಕೆ ಕುಡಿಕೀರಡು ಸಿಲವಾರದ ತಟ್ಟೆಗಳನ್ನು ಹೊರ ತರುತ್ತಿದ್ದ ಅವಳು ಕುತೂಹಲದಿಂದ ಕೇಳಿದಳು.
“ಅಲ್ಲಾ..ಎಲ್ಲಿಗೆ?”
ಅಣ್ಣಾ ಎನ್ನುವುದನ್ನು ಅವಳು ಯಾವತ್ತೋ ಬಿಟ್ಟಿದ್ದಳು. ವೀರಭದ್ರನ ಆಕ್ರಮಣದಿಂದ ತಪ್ಪಿಸಿಕೊಂಡು ಬಂದು ಪೆದ್ರುವಿನ ಮನೆ ಸೇರಿಕೊಂಡ ಆಕೆ ಒಂದೆರಡು ದಿನಗಳಲ್ಲಿ ಅವನ ತೋಳುಗಳೊಳಗೆ ಸೇರಿಕೊಂಡು ಅವನ ಉದ್ರೇಕ ಹಸಿವಿಗೆ ತನ್ನನ್ನು ತಾನು ತೆರೆದು ಕೊಟ್ಟು ತನ್ನ ದೇಹದ ಮಿಡಿತದ ಜೊತೆಗೆ ಸುಖವಾಗಿ ನರಳಿದ್ದಳು. ಅನಂತರ ಪೆದ್ರುವನ್ನು ಹಿಂದಿನಂತೆ ಕರೆಯಲು ಅವಳ ಮನಸ್ಸೂ ಒಪ್ಪಲಿಲ್ಲ.
ಪೆದ್ರು ಕಿರಸ್ತಾನರವನು ಎಂಬುದು ಅವಳಿಗೆ ಗೊತ್ತಿತ್ತು. ಆದರೆ ಈ ಮನೆ ಸೇರಿಕೊಂಡು ಅವನ ತೋಳುಗಳಲ್ಲಿ ಕರಗಿ ಒಂದಾಗಿ ಹೋದ ನಂತರ ಅವಳಿಗೆ ಈ ವಿಷಯ ನೆನಪಿಗೇನೆ ಬರಲಿಲ್ಲ. ಏಕೆಂದರೆ ಅವನ ಮಾತು ವರ್ತನೆ ಉಡಿಗೆ‌ಅವನು ತನ್ನನ್ನು ಬಳಸಿಕೊಳ್ಳುವ ರೀತಿ ಪ್ರೀತಿ ಮಾಡುವ ಪರಿ ಈ ಯಾವುದರಲ್ಲೂ ಬೇರೊಂದು ರೀತಿ ಇದೆ ಎಂದು ಅವಳಿಗೆ ಅನ್ನಿಸಲಿಲ್ಲ.
ಪೆದ್ರುವಿನ ಜತೆ ಬಾಳುವೆ ಮಾಡುವಾಗಲೇ ಸಿಮೋನನ ಹೆಂಡತಿ ಬೇರೆ ಕೆಲ ಕಿರಸ್ತಾನರ ಹೆಂಗಸರು- ನೀನು ನಮ್ಮವಳಲ್ಲ ಎಂಬ ಅರ್ಥ ಬರುವ ಹಾಗೆ ಮಾತನಾಡುತ್ತಿದ್ದುದು ಉಂಟು. ಆದರೆ ಇದರ ತಲೆಬುಡ ಅವಳಿಗೆ ತಿಳಿಯುತ್ತಿರಲಿಲ್ಲ.
ಇತ್ತೀಚೆಗೆ ಊರಿಗೆ ಒಬ್ಬ ಪಾದರಿಗಳು ಬಂದಿದ್ದರು. ಅಲ್ಲೊಂದು ಮನೆಯಿಂದ ಗಂಟೆಯ ಶಬ್ದ ಕೇಳಿಸುತ್ತಿತ್ತು. ಕಿರಸ್ತಾನರೆಲ್ಲ ಅಲ್ಲಿಗೆ ಹೋಗುತ್ತಿದ್ದರು. ಆ ಪಾದರಿಗಳೂ ತನ್ನ ಮನೆಗೆ ಬಂದು-ಪೆದ್ರು ಇಲ್ಲವೇ ಎಂದು ಕೇಳಿ ಹೋಗಿದ್ದರು. ತನ್ನ ಮನೆಯ ತುಂಬ ಯಾವುದನ್ನೋ ಅವರು ಹುಡುಕಾಡಿದ್ದರು. ಆದರೂ ತನಗೇನೂ ತೊಂದರೆಯಾಗಲಿಲ್ಲ. ಟೋಲನಾಕಾದ ಆ ಮನೆಯಲ್ಲಿದ್ದಾಗ ಹಬ್ಬ ಜಾತ್ರೆ ಮಾಡುತ್ತಿದ್ದೆ. ಇಲ್ಲಿ ಅದು ನಿಂತು ಹೋಯಿತು. ಆದರೆ ಈ ಮನೆಗೆ ಅನತಿ ದೂರದಲ್ಲಿಯ ಚೌಡಿಗೆ ಕೈ ಮುಗಿದು ಕುಂಕುಮ ಹಣೆಗೆ ಹಚ್ಚಿಕೊಂಡು ಬರುವ ಪದ್ದತಿ ನಡೆದಿದೆ. ಆ ಚೌಡಮ್ಮ ಈವರೆಗೆ ಕಾಪಾಡಿದ್ದಾಳೆ. ಮುಂದೂ ಕಾಪಾಡಿದರೆ ಸಾಕು ಎಂದು ನಿಶ್ಚಿಂತೆಯಿಂದ ಇದ್ದಳು ರಂಗಿ.
ಆಗಲೇ ಅವಳು ಪೆದ್ರು ಇಗರ್ಜಿಗೆ ಹೋದುದನ್ನು ಕಂಡಳು. ಒಂದೆರಡು ದಿನಗಳ ನಂತರ ಆ ಪಾದರಿಗಳು ಮನೆಗೆ ಬಂದರು. ಅವರು ಬರುವ ಮುನ್ನವೇ ಪೆದ್ರು ದೇವರದೊಂದು ಪ್ರತಿಮೆ ತಂದು ಗೋಡೆ ಗೂಡಿನಲ್ಲಿ ಇರಿಸಿದ್ದ. ಗೋಡೆಗೆ ಒಂದೆರಡು ದೇವರ ಪಟಗಳು ತೂಗಿ ಬಿದ್ದವು. ಪೆದ್ರು ತನ್ನ ಕುತ್ತಿಗೆಯಲ್ಲಿ ಒಂದು ಪದಕ ತೂಗು ಹಾಕಿಕೊಂಡ. ಸಂಜೆ ಕೆಲಸ ಮುಗಿಸಿಕೊಂಡು ಬಂದವನು ಗೋಡೆ ಗೂಡಿನ ಮುಂದೆ ಮೇಣದ ಬತ್ತಿ ಹಚ್ಚಿದ. ಮೊಣಕಾಲೂರಿ ಹಣೆ, ಭುಜ, ಎದೆ ಮುಟ್ಟಿಕೊಂಡು ಎನೋ ಪ್ರಾರ್ಥನೆ ಮಾಡಿದ.
“ಏನು?“ಎಂದು ಕೇಳಿದಳು ರಂಗಿ. ಇದೆಲ್ಲ ಏನು ಎಂಬ ಅರ್ಥದಲ್ಲಿ.
“ನಮ್ಮ ಊರಾಗೆ ನಾನು ಇದ್ನೆಲ್ಲ ಮಾಡತಿದ್ದೆ…ಇನ್ನು ಇದನ್ನ ಇಲ್ಲೂ ಮಾಡಬೇಕು..ಪಾದರಿಗಳು ಬಂದ ಮೇಲೂ ನಾವು ಇದನ್ನೆಲ್ಲ ಮಾಡದಿದ್ರೆ ತಪ್ಪಾಗುತ್ತೆ..”
ತುಸು ತಡೆದು ಅವನು ರಂಗಿಗೆ ಹೇಳಿದ-
“..ನೀನೂ ಇದ್ನೆಲ್ಲ ಕಲೀಬೇಕು..”ತಲೆ ದೂಗಿದಳು ರಂಗಿ. ಪೆದ್ರು ಏನು ಹೇಳಿದರೂ ಮಾಡಲು ಅವಳು ಸಿದ್ಧಳಾಗಿದ್ದಳು. ಪೆದ್ರು ತಾನು ಘಟ್ಟ ಹತ್ತಿ ಬಂದ ಕೂಡಲೆ ಇದನ್ನೆಲ್ಲ ಏಕೆ ಬಿಡಬೇಕಾಯಿತು ಎಂದು ವಿಚಾರ ಮಾಡಿದ. ಈ ಒಂದೆರಡು ವಾರಗಳಲ್ಲಿ ಪಾದರಿ ಇಗರ್ಜಿಯಲ್ಲಿ ಮಾಡಿದ ಪ್ರವಚನ ಅವನ ಮೇಲೆ ಪರಿಣಾಮವನ್ನುಂಟು ಮಾಡಿತ್ತು. ಹಿಂದೆ ಅವನಲ್ಲಿ ನೆಲಸಿ, ಗುಪ್ತವಾಗಿದ್ದ ಸಂಸ್ಕಾರ ಜಾಗ್ರತವಾಗಿತ್ತು. ಪಾದರಿ ಗೋನಸಾಲ್ವಿಸ್ ರ ಮಾತು ಕೂಡ ಅವನನ್ನು ಸರಿದಾರಿಗೆ ತಂದಿತ್ತು. ಅವರ ಕೈಲಿದ್ದ ನಾಗರ ಬೆತ್ತ ಈಗಾಗಲೇ ಕೆಲವರ ತೊಡೆ ಬೆನ್ನುಗಳನ್ನು ಮೂಸಿನೆಕ್ಕಿ ನೋಡಿತ್ತು. ಅದು ತನ್ನತ್ತ ಬಳುಕಿ ಬರುವುದು ಅವನಿಗೆ ಬೇಕಾಗಿರಲಿಲ್ಲ. ಊರಿಗೆ ಪಾದರಿ ಬಂದ ನಂತರ ಪೆದ್ರು ಮತ್ತೆ ದೈವಭಕ್ತನಾದ.
ಆದರೆ ಪಾದರಿ ಗೋನಸಾಲ್ವಿಸ್ ಮತ್ತೂ ಒಂದು ಮಾತನ್ನು ಅವನಿಗೆ ಹೇಳಿದ್ದರು.
“ನಿನ್ನ ಮನೆಯಲ್ಲಿರೋ ಹೆಂಗಸು ನಮ್ಮ ಧರ್ಮಕ್ಕೆ ಬರಬೇಕು ಅಂದರೆ ಮಾತ್ರ ನಿನ್ನನ್ನ ನಮ್ಮ ಸಮೋಡ್ತಿಯಲ್ಲಿ ನಾವು ಇರಿಸಿಕೊಳ್ಳುತ್ತೇವೆ. ಇಲ್ಲಾ ಅಂದರೆ ನಿನ್ನನ್ನ ಸಮೋಡ್ತಿಯಿಂದ ಹೊರ ಹಾಕಬೇಕಾಗುತ್ತೆ..”
ಗೋನಸಾಲ್ವಿಸ್ ರಂಗಿಯ ಬಗ್ಗೆ ಎಲ್ಲ ಮಾಹಿತಿ ಕಲೆ ಹಾಕಿದ್ದರು. ಸಿಮೋನ ಮತ್ತು ಉಳಿದವರು ಹೀಗೆ ಹೀಗೆ ಎಂದು ಅವರಿಗೆ ಹೇಳಿದ್ದರು. ಊರಿಗೆ ಬಂದ ಹೊಸದರಲ್ಲಿ ಪೆದ್ರು ಮನೆಗೆ ಹೋದಾಗ ಆ ಮನೆಯಲ್ಲಿ ಸಾಮಾನ್ಯವಾಗಿ ಕ್ರೀಸ್ತುವರ ಮನೆಯಲ್ಲಿ ಕಾಣಬರುವ ಸಂಕೇತಗಳೂ ಇರಲಿಲ್ಲ. ಪೆದ್ರು ಕೂಡ ಈ ಮಾತಿಗೆ ಪೂರಕವಾಗಿದ್ದ. ರಂಗಿಗೆ ಕ್ರೈಸ್ತನ ಸರ್ವ ಶ್ರೇಷ್ಠ ಮತದ ಬಗ್ಗೆ ಏನೂ ಗೊತ್ತಿರಲಿಲ್ಲ. ಈ ಕುಟುಂಬವನ್ನು ಹೀಗೆಯೇ ಬಿಟ್ಟರೆ ಕ್ರೈಸ್ತ ಸಮುದಾಯಕ್ಕೇನೆ ನಷ್ಟವಾಗುತ್ತದೆಂಬುದು ಪಾದರಿಗಳಿಗೆ ಖಚಿತವಾಯಿತು. ನಾಶವಾಗುತ್ತಿರುವ ಕ್ರೈಸ್ತತನವನ್ನು ಉಳಿಸಲು ಅವರು ಪಣತೊಟ್ಟರು. ಪೆದ್ರು ಇಗರ್ಜಿಗೆ ಬರುವಂತಾದ. ಮುಂದಿನದಾಗಿ ರಂಗಿಯನ್ನು ಅವರು ಕ್ರೀಸ್ತುವಳನ್ನಾಗಿಸುವ ಕಾರ್ಯಕ್ಕೆ ತೊಡಗಿದರು.
ಸಹಜವಾಗಿ ಎಂಬಂತೆ ಪೆದ್ರುವಿನ ಮನೆಗೆ ಹೋದಾಗ ಆತ ಇರಲಿಲ್ಲ. ಆ ಹೆಂಗಸು ಅಡಕೆ ಹಾಳೆಯ ತುಂಡನ್ನು ಕೈಯಲ್ಲಿ ಹಿಡಿದುಕೊಂಡು ಸೀರೆಯನ್ನು ಮೊಣ ಕಾಲವರೆಗೆ ಎತ್ತಿಕಟ್ಟಿ ಅಂಗಳಕ್ಕೆ ಶಗಣಿ ಸಾರಿಸುತ್ತಿದ್ದವಳು, ಸೀರೆ ಬಿಟ್ಟು ಕೈತೊಳೆದುಕೊಂಡು-
“ಬನ್ನಿ ಪದ್ರಬಾ..“ಎಂದಳು.
ಅವಳಲ್ಲಿಯ ವಿನಯ, ಭಕ್ತಿ, ಭೀತೆ ಇವರಿಗೆ ಸಂತಸವನ್ನು ತಂದುಕೊಟ್ಟಿತು. ಹಸಿ ಹಸಿಯಾಗಿದ್ದ ಶಗಣೆ ತುಳಿದುಕೊಂಡು ಜಗಲಿಯನ್ನೇರಿ, ಕೋಳಿಗೂಡಿನ ಮೇಲೆ ಕುಳಿತರು.
“..ಪೆದ್ರು..ಕೆಲಸಕ್ಕೆ ಹೋಗಿದ್ದಾನಾ?”
“ಹೌದು ಪದ್ರಬಾ..ಮುಂಗರವಳ್ಳಿ ಗೌಡರ ಮನೆಕೆಲಸ..“ಎಂದಳವಳು ಜಗಲಿಯ ಅಂಚಿಗೆ ಮೈ ಮುದುರಿ ನಿಂತು.
“……..ಹುಂ…”ಪಾದರಿ ನಿಧಾನವಾಗಿ ಬೂಟ್ಸು ಕಳಚಿದರು. ಕಾಲುಚೀಲ ತೆಗೆದರು.
“ನಾನೊಂದು ಪ್ರಾರ್ಥನೆ ಮಾಡಬೇಕು“ಎಂದು ಎದ್ದರು.
ರಂಗಿ ಧಡಬಡಿಸಿ ಒಳ ಹೋದಳು. ಒಲೆಯ ಬಳಿ ಬೆಂಕಿ ಪೊಟ್ಟಣವಿರಲಿಲ್ಲ. ಹಾಗೆಯೇ ಪಕ್ಕದ ಮನೆಗೆ ಧಾವಿಸಿದಳು. ಇನಾಸನ ಹೆಂಡತಿ ಭತ್ತ ಕುಟ್ಟುತ್ತಿದ್ದಳು. ಅವಳಿಗೆ ಸಂಜ್ಞೆಯ ಮೂಲಕ ಬೆಂಕಿಪೆಟ್ಟಿಗೆ ಬೇಕು ಎಂದಳು. ಮೊದಲು ಅವಳಿಗೆ ಅರ್ಥವಾಗಲಿಲ್ಲ. ಇವಳಿಗೆ ಅರ್ಥವಾಗುವ ಹಾಗೆಹೇಳಲು ಅವಳಿಗೆ ಬರಲಿಲ್ಲ. ಅವಸರ ಬೇರೆ. ಕೊನೆಗೆ ಅವಳೇ ಊಹಿಸಿಕೊಂಡು ಬೆಂಕಿಪೊಟ್ಟಣ ತಂದುಕೊಟ್ಟಳು. ಮತ್ತೆ ಮನೆಗೆ ಓಟ. ಪಾದರಿ ದೇವರ ಪೀಠದ ಮುಂದೆ ನಿಂತಿರಲು ರಂಗಿ ಮೇಣದ ಬತ್ತಿಯ ತುದಿಗೆ ಬೆಂಕಿ ಮುಟ್ಟಿಸಿದಳು.
“ತಂದೆಯ ಮಗನ ಸ್ಪಿರಿತು ಸಾಂತುವಿನ ಹೆಸರಿನಲ್ಲಿ ಅಮೇನ.“ಎಂದು ಶಿಲುಬೆಯ ಗುರುತು ಮಾಡಿ ಪಾದರಿ ದೊಡ್ಡ ದನಿಯಲ್ಲಿ
“ನಮ್ಮ ಪ್ರಭುವೆ…ನಮ್ಮ ಪ್ರಭುವೆ..ಈ ಮನೆಯ ಮೇಲೆ ನಿಮ್ಮ ಕೃಪಾಕಟಾಕ್ಷವಿರಲಿ..“ಎಂದು ಬೇಡಿಕೊಂಡು ಪರಲೋಕ ಮಂತ್ರವನ್ನು ಹೇಳತೊಡಗಿದರು. ರಂಗಿ ಬಾಗಿಲ ಬಳಿ ಕೇಳುತ್ತ ನಿಂತಳು.
ಕೆಲ ಹೊತ್ತು ಪ್ರಾರ್ಥನೆಯಲ್ಲಿ ಕಳೆದು ಹೋಯಿತು.
ಪ್ರಾರ್ಥನೆಯ ಅಂತ್ಯದಲ್ಲಿ ಮತ್ತೊಮ್ಮೆ ಶಿಲುಬೆಯ ಗುರುತು ಮಾಡಿ ಪಾದರಿ ಗೋನಸಾಲ್ವಿಸ್ ಮನೆಯ ಹೊರಬಂದರು. ಜಗಲಿಯ ಮೇಲೆ ಕುಳಿತುಕೊಳ್ಳುತ್ತ ಬಾಗಿಲಲ್ಲಿ ನಿಂತ ರಂಗಿಯತ್ತ ಅವರು ತಿರುಗಿದರು.
“…ಈ ಮನೇಲಿ ನೀನು ಹೀಗೆಯೇ ಎಷ್ಟು ದಿನ ಅಂತ ಇರತೀಯ?”ಆಕೆ ತಬ್ಬಿಬ್ಬಾದಳು.
“ನಮ್ಮ ಧರ್ಮದ ರೀತ್ಯಾ ನೀನು ಅಕ್ರೈಸ್ತಳಾಗಿ ಈ ಮನೇಲಿ ಇರಬಾರದು..ಇದರಿಂದ ಪೆದ್ರುಗೂ ತೊಂದರೆ ನಿನಗೂ ಕಷ್ಟ…ನೀನು ನಮ್ಮ ಧರ್ಮಕ್ಕೇನೆ ಸೇರಿಕೊಂಡರೆ..ನಿನಗೂ ಗೌರವ..ನಾಳೆ ಹುಟ್ಟುವ ಮಕ್ಕಳಿಗೂ ಅನುಕೂಲ. ಮುಖ್ಯವಾಗಿ ನೀವು ಗೌರವದಿಂದ ಬದುಕಲಿಕ್ಕೆ ಕಾರಣವಾಗುತ್ತೆ..”
ರಂಗಿಯ ಮನಸ್ಸಿನಲ್ಲಿ ಈ ವಿಷಯ ಬಂದಿರಲಿಲ್ಲ ಎಂದಲ್ಲ. ಹನುಮಂತನ ಸಾವಿನ ನಂತರ ಅವಳು ನಿಜಕ್ಕೂ ಅನಾಥಳಾಗಿದ್ದಳು. ರಸ್ತೆಯ ಮೇಲೆ ಬಿದ್ದ ವಸ್ತುವಿನಂತೆ ಅವಳನ್ನು ನೋಡತೊಡಗಿದ್ದರು ಜನ. ಪೆದ್ರು ಅವಳಿಗೆ ರಕ್ಷಣೆ ಕೊಟ್ಟರೂ ಊರಿನಲ್ಲಿ ಆ ಕೇರಿಯಲ್ಲಿ ಅಂತಹ ಗೌರವ ಅವಳಿಗೆ ಲಭ್ಯವಾಗಿರಲಿಲ್ಲ. ಕಿರಸ್ತಾನರ ಗಂಡಸಿನ ಜತೆ ಇರುವವಳು ಎಂಬ ಕಾರಣಕ್ಕೆ ಅವಳ ಜನ ಅವಳನ್ನು ಹೀನಾಯವಾಗಿ ಕಂಡರೆ ಹಿಂದು ಹೆಂಗಸನ್ನು ಇಟ್ಟುಕೊಂಡವನು ಎಂದು ಪೆದ್ರುವನ್ನು ಅವರವರೇ ದೂರ ಮಾಡಿದ್ದರು.
ಇಷ್ಟಾದರೂ ಈ ಪಾದರಿ ಪೆದ್ರುವನ್ನು ಕೈ ಬಿಡಲಿಲ್ಲ. ಈ ಪಾದರಿ ಬಂದ ನಂತರ ಈ ಮನೆಯಲ್ಲಿ ದೇವರದೊಂದು ಪ್ರತಿಮೆ ಬಂದಿತು. ಪೆದ್ರು ಭಾನುವಾರಗಳಂದು ಕೊಪೆಲಿಗೆ ಹೋಗಿ ಬರತೊಡಗಿದ. ಈ ಬದಲಾವಣೆ ಅವನ ಸಂತೋಷ ನೆಮ್ಮದಿಯನ್ನು ಹೆಚ್ಚಿಸಿತು. ಇಷ್ಟಾದರೂ ತಾನು ಅವನಿಂದ ಈ ಮನೆಯಿಂದ ಅವನ ದೇವರು ಧರ್ಮ ಪ್ರಾರ್ಥನೆಯಿಂದ ದೂರ ಉಳಿದಂತೆ ಭಾಸವಾಗುತ್ತಿದೆ. ಆತ ರಂಗಿ ಎಂದು ಕರಿದಾಗಲೆಲ್ಲ ತನಗೆ ಕಸಿವಿಸಿಯಾಗುತ್ತದೆ. ಏಕೆಂದರೆ ಯಾವ ಕ್ರೀಸ್ತುವರ ಮನೆಯ ಹೆಂಗಸರಿಗೂ ಇಂತಹ ಹೆಸರಿಲ್ಲ.
ಕೇರಿಯಲ್ಲಿರುವ ಕತ್ರೀನ ಬಾಯಿ, ರೆಮೇಂದಿ, ಫ಼ಿಲೊಮೆನಾ, ತೆರೆಜಾ, ರೋಜಿ, ಜಿಲ್ಲಿ ಮೊದಲಾದವರೆಲ್ಲ ಈಗ ಭಾನುವಾರ ಬೆಳಿಗ್ಗೆ ತಲೆಯ ಮೇಲೆ ಸಿಂಗರಿಸಿಕೊಂಡು ಕೊಪೆಲಗೆ ಹೋಗುವುದು ಹತ್ತಿರದಿಂದ ನೋಡುತ್ತಿದ್ದೇನೆ. ತಾನು ಮನೆಯಲ್ಲಿ ಉಳಿದು ಇದನ್ನು ದೂರದಿಂದ ನೋಡುವುದು ಬೇರೆ ತನ್ನ ಒಂಟಿತನವನ್ನು ಎತ್ತಿ ತೋರಿಸುತ್ತದೆ. ಈ ಹಿಂಸೆಯಿಂದ ದೂರವಾಗಬೇಕು.
“ನಾನು ಏನು ಮಾಡಲಿ ಪದ್ರಾಬ..?“
“ಏಸು ಪ್ರಭು ಎಲ್ಲರಿಗೂ ಒಂದು ದಾರಿ ತೋರಿಸಿದ್ದಾರೆ..ನೀನು ಆ ದಾರಿಯನ್ನು ಸ್ವೀಕರಿಸಲಿಕ್ಕೆ ಸಿದ್ಧಳಾಗು.“ಎಂದು ಹುರುಪಿನಿಂದ ಎದ್ದರು ಪಾದರಿ.
ಸಿಮೋನನ ಹಿರಿಯ ಮಗಳು ಫ಼ಿಲೋಮೆನಾ ನಿತ್ಯ ಒಂದು ಗಂಟೆ ರಂಗಿಗೆ ಶಿಲುಬೆಯ ವಂದನೆಯ ಮೊದಲಾದ ಮಂತ್ರಗಳನ್ನು, ಅವುಗಳ ಅರ್ಥ, ಮಹತ್ವವನ್ನು ಹೇಳಿಕೊಡತೊಡಗಿದಳು. ಮೊಣಕಾಲೂರಿ ಪ್ರಾರ್ಥನೆ ಮಾಡುವುದು, ಜಪಸರ ಪ್ರಾರ್ಥನೆ ಎದ್ದಾಗ, ಊಟಕ್ಕೆ ಕುಳಿತಾಗ, ಮಲುಗುವಾಗ ಮಾಡಬೇಕಾದ ಪ್ರಾರ್ಥನೆ ಎಲ್ಲವನ್ನು ರಂಗಿ ಬಹಳ ಬೇಗನೆ ಕಲಿತಳು.
ಈ ಎಲ್ಲ ಬಗೆಗಳಲ್ಲಿ ದೇವರೊಡನೆ ಸಂಪರ್ಕವಿರಿಸಿಕೊಳ್ಳಬಹುದೆಂಬ ಕಲ್ಪನೆಯೇ ಅವಳಲ್ಲಿ ಇರಲಿಲ್ಲ. ಔಡಲ ಮರದ ಚೌಡಮ್ಮನಿಗೆ ಅವಳು ಕೈಮುಗಿಯುತ್ತಿದ್ದಳು. ಇನಾಸನ ಮನೆಯ ಕಲ್ಲು ಕುಟಿಗನಿಗೆ ಹೂವಿನ ಕಡ್ಡಿ ಹಚ್ಚುತ್ತಿದ್ದಳು. ಕಾಪಾಡು, ಒಳ್ಳೆಯದನ್ನು ಮಾಡು ಎಂದು ಕೇಳಿಕೊಳ್ಳುತ್ತಿದ್ದಳು. ಆದರೆ ಪ್ರತಿಯೊಂದು ವಿಧಾನಕ್ಕೂ ಒಂದು ರೀತಿ, ಪ್ರಾರ್ಥನೆ ಇದೆ ಎಂಬುದು ಇದೀಗ ತಿಳಿದು ಬಂದು ಅವಳು ರೋಮಾಂಚನಗೊಂಡಳು.
ಶಿವಸಾಗರದ ಕ್ರೀಸುವರ ಮನೆಗಳಲ್ಲಿ ಸಾಯಂಕಾಲದ ಜಪಸರ ಪ್ರಾರ್ಥನೆಯ ಕಾಲದಲ್ಲಿ ಇಂಪಾದ ಕೀರ್ತನೆಗಳು ಕೇಳಿ ಬರತೊಡಗಿದ್ದವು. ಕೊಪೆಲಿನಲ್ಲಿ ಸಂಜೆಯ ಪ್ರಾರ್ಥನೆಯ ಗಂಟೆಯಾದ ಸ್ವಲ್ಪ ಹೊತ್ತಿಗೆಲ್ಲ ಮನೆಗಳಲ್ಲಿ ಗಡಿಬಿಡಿ ಗದ್ದಲ. ತಾಯಿ ಮಕ್ಕಳನ್ನು ಕರೆಯುವುದು, ಮೇಣದ ಬತ್ತಿ ಹಚ್ಚಿ ಅನ್ನುವುದು. ಸಾಮೂಹಿಕವಾಗಿ ಮೊಣಕಾಲೂರಿ ಪ್ರಾರ್ಥನೆ ಮಾಡುವುದು. ರಾಗವಾಗಿ ಕೀರ್ತನೆ ಹಾಡುವುದು, ಪ್ರಾರ್ಥನೆಯ ನಂತರ ಕಿರಿಯರೆಲ್ಲ ಹಿರಿಯರ ಎದುರು ನಿಂತು-
“ಮಾಂಯಂ ಬೆಸಾಂವಂದೀ”
“ಬಾಬಾ ಬೆಸಾಂವಂದೀ”
“ದಾದಾ ಬೆಸಾಂವಂದೀ“ಎಂದು ತಾಯಿ , ತಂದೆ ಅಣ್ಣ, ದೊಡ್ಡಮ್ಮ ಎಲ್ಲರ ಹತ್ತಿರ ದೇವರ ಆಶೀರ್ವಾದ ಕೇಳುವುದು. ಅದೊಂದು ರೀತಿಯಲ್ಲಿ ಚನ್ನಾಗಿ ಕಾಣುತ್ತಿತ್ತು ಆಕೆಗೆ.
ಈ ಎಲ್ಲ ಕಾರಣಗಳಿಂದಾಗಿ ರಂಗಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಲು ಮಾನಸಿಕವಾಗಿಯೂ ಸಿದ್ಧಳಾದಳು.
ಪಾದರಿ ಗೋನಸಾಲ್ವಿಸರಿಗೆ ಸಂತಸವಾಯಿತು. ಹಿಂದೊಮ್ಮೆ ಬೋನನನ್ನು ಕ್ರಿಸ್ತನ ಆಶ್ರಯಕ್ಕೆ ಬರಮಾಡಿಕೊಂಡ ಅವರು ಈಗ ಈ ರಂಗಿಯನ್ನು ಕೊಪೆಲಿನೊಳಗೆ ಕರೆಸಿಕೊಳ್ಳಲು ಉತ್ಸುಕರಾದರು.
ಇವಳಿಗೆ ಜ್ಞಾನ ಸ್ನಾನದೊಡನೆ ಪಾಪ ನಿವೇದನೆ, ದಿವ್ಯ ಪ್ರಸಾದ ಸ್ವೀಕಾರ ಮುಂತಾದ ಸಂಸ್ಕಾರಗಳನ್ನು ನೀಡುವುದರ ಜೊತೆಗೆ ಪೆದ್ರುವಿನ ಜೊತೆಗೆ ಮದುವೆ ಮಾಡುವ ಕಾರ್ಯವನ್ನು ಕೈಗೊಳ್ಳಲು ಅವರು ಮುಂದಾದರು. ಕ್ರಿಸ್ತ ಪ್ರಭು ಸ್ಥಾಪಿಸಿದ ಜ್ಞಾನ ವಿವಾಹಗಳು ಇದ್ದುದರಿಂದ ಇವುಗಳನ್ನು ಪಡೆಯದೆ ಯಾರು ಕೂಡ ನಿಜ ಕ್ರೀಸರಾಗುತ್ತಿರಲಿಲ್ಲ.
ರಂಗಿಗಾಗಿ ಪಾದರಿ ಗೋನಸಾಲ್ವಿಸ್ ಫ಼್ಲೋರಿನಾ ಎಂಬ ಸುಂದರ ಹೆಸರನ್ನು ಆಯ್ಕೆ ಮಾಡಿದರು. ಜ್ಞಾನಸ್ನಾನದ ಸಂದರ್ಭದಲ್ಲಿ ದೇವ ಪಿತ ದೇವ ಮಾತೆಯಾಗಿ ಇರಲು ಸುತಾರಿ ಇನಾಸ, ಅವನ ಹೆಂಡತಿ ಮುಂದೆ ಬಂದರು. ಉಳಿದ ದಿವ್ಯ ಸಂಸ್ಕಾರಗಳು ಕೂಡ ಇದೆ ಸಂದರ್ಭದಲ್ಲಿ ಅವಳಿಗೆ ನೀಡಲಾಯಿತು. ಈ ವರೆಗೆ ಪೆದ್ರು ಇಟ್ಟುಕೊಂಡ ಹೆಂಗಸಾಗಿದ್ದ ರಂಗಿ ಅಂದಿನಿಂದ ಅವನ ಹೆಂಡತಿಯಾದಳು. ಈ ಮಾತಿಗೆ ಊರು ಕೇರಿ ಮುಖ್ಯವಾಗಿ ಏಸು ಪ್ರಭುವಿನ ಒಪ್ಪಿಗೆ ದೊರಕಿತ್ತು. ಏನೋ ಒಂದು ಬಗೆಯ ಅಳುಕು ಆತಂಕದಲ್ಲಿಯೇ ಈ ವರೆಗೆ ಬದುಕಿದ್ದ ರಂಗಿ, ಪೆದ್ರು ಇಬ್ಬರ ಹೃದಯಗಳೂ ಹಗುರವಾದವು.

-೬-

ಸಾನಬಾನಿ ಪೆದ್ರು ಹೆಂಡತಿ ರಂಗಿ ಫ಼್ಲೋರಿನಾ ಆದದ್ದು ಸಿಮೋನನಿಗೆ ಸಂತೋಷವನ್ನುಂಟುಮಾಡಿತು. ಈ ಕಾರ್ಯ ನಡೆಯುವಾಗ ಊರ ಕ್ರೀಸುವರೆಲ್ಲ ಕೊಪೆಲಿನಲ್ಲಿದ್ದರು. ಈಗ ಕೊಪೆಲಿಗೆ ಹೋಗುವವರ ಸಂಖ್ಯೆ ಅಧಿಕವಾಗಿತ್ತು. ಭಾನುವಾರ ಬಂತು ಎಂದರೆ ಜನ ಬೇರೆಲ್ಲ ಕೆಲಸ ಮರೆತು ಅತ್ತ ಹೋಗುತ್ತಿದ್ದರು. ದಿವ್ಯ ಪ್ರಸಾದ ಸ್ವೀಕರಿಸುವವರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಪಾದರಿ ಗೋನಸಾಲ್ವಿಸರು ಕ್ರೀಸುವವರಲ್ಲಿ ಮತ್ತೆ ಕ್ರೈಸ್ತ ಪ್ರೆಮವನ್ನು, ದೈವ ಭಕ್ತಿಯನ್ನು ಜಾಗೃತಗೊಳಿಸಿದ್ದರು. ಜೊತೆಗೆ ರಂಗಿಯಂತಹ ಅಕ್ರೈಸ್ತ ಹೆಣ್ಣು ಮಗಳನ್ನು ಕ್ರಿಸ್ತನ ಮಡಿಲಿಗೆ ಹಾಕಿದರು. ಸಿಮೋನನಿಗೆ ತಾನು ಕೂಡ ಇಂತಹ ಒಂದು ಪ್ರಯತ್ನ ಮಾಡಿದ್ದು ನೆನಪಿಗೆ ಬಂತು.
ತಾನು ಶಿವಸಾಗರಕ್ಕೆ ಪ್ರತಿ ಮಳೆಗಾಲ ಮುಗಿದ ನಂತರ ಘಟ್ಟವೇರಿ ಬರುತ್ತಿದ್ದ ಪ್ರಾರಂಭವಾದ ದಿನಗಳು ಇಲ್ಲಿ ಕೆಲಸ ಮಾಡಲೆಂದು ಸಾನಬಾವಿ ಪೆದ್ರು, ಪಾಸ್ಕೋಲ, ಗಾಬ್ರಿಯೆಲ, ಇಂತ್ರು ಮುಂತಾದವರನ್ನು ತನ್ನ ಜೊತೆ ಕರೆಯುತ್ತಿದ್ದೆ. ಹೀಗೆ ಬರುವಾಗ ಹೊನ್ನಾವರದಲ್ಲಿ ಬಾಳ ಎಂಬ ಹುಡುಗ ಸಿಕ್ಕ. ಬಂದರಿನಲ್ಲಿ ಅಳುತ್ತ ಕುಳಿತಿದ್ದ.
“ಅಣ್ಣಾ ನಾನೂ ಬತ್ತೆ..“ಎಂದು ಬೆನ್ನು ಹತ್ತಿದ. ಅಲ್ಲಿಯೇ ಇದ್ದ ಕತ್ತದ ಹುರಿ ಸಾಬಿ-
“ಸಿಮೋನ ಅವನ್ನ ಕರೆದುಕೊಂಡೋಗು ಮಾರಾಯ ಅವನ ಮಲತಾಯಿ ಕೈಯಿಂದ ಅವನನ್ನು ಬಿಡಿಸು“ಎಂದ.
ಹುಡುಗ ತೀರ ಚಿಕ್ಕವನೇನಲ್ಲ..ಹದಿನೈದು ಹದಿನಾರು ವರ್ಷ. ಏಳೆಂಟು ಜನ ತನ್ನ ಜೊತೆ ಬರುತ್ತಾರೆ. ಅವರ ಅಡಿಗೆ ಊಟ ಸ್ನಾನದ ವ್ಯವಸ್ಥೆ ತಾನೆ ಮಾಡಬೇಕು. ಆಗಿನ್ನೂ ಸಾಂತಾಮೋರಿ ಶಿವಸಾಗರಕ್ಕೆ ಬಂದಿರಲಿಲ್ಲ. ಹುಡುಗ ಇರಲಿ ಅಂದುಕೊಂಡ.
“..ತಮ್ಮ..ಬತ್ತೀಯ ಬಾ..“ಎಂದು ಅವನನ್ನು ದೋಣಿಗೇರಿಸಿಕೊಂಡಿದ್ದ. ಹುಡುಗ ಶಿವಸಾಗರಕ್ಕೆ ಬಂದ ಪಳ್ಳಿಯ ಬಳಿ ತಾವು ಮಾಡಿಕೊಂಡಿದ್ದ ಬಿಡಾರದಲ್ಲಿ ಉಳಿದು ಮನೆಗೆಲಸ ಮಾಡಿಕೊಂಡು ಇರತೊಡಗಿದ.
ಬೆಳಿಗ್ಗೆ ಗಂಜಿ, ಮಧ್ಯಾಹ್ನದ ಊಟ, ರಾತ್ರಿಯ ಊಟ, ಸಂಜೆ ನೀರು ಕಾಯಿಸಿಡುವುದು ಹೀಗೆ ಏಳೆಂಟು ಜನರಿಗೆ ಬೇಕಾದ ಅನುಕೂಲತೆ ಮಾಡಿಕೊಟ್ಟು ತನ್ನ ಜೊತೆಯಲ್ಲಿದ್ದ. ಮಳೆಗಾಲ ಪ್ರಾರಂಭವಾಗಿ ಊರಿಗೆ ಹೋದರೆ ಈ ಹುಡುಗ ತನ್ನ ಮನೆಗೂ ಬಂದ. ಮನೆಯಲ್ಲಿ ಅವನ ತಂದೆ ಎರಡನೆ ಮದುವೆಯಾಗಿದ್ದು ಇವನು ಮನೆ ಬಿಡಲು ಕಾರಣವಾಗಿತ್ತು. ಮನೆಗೆ ಹೋಗು, ಮತ್ತೆ ಘಟ್ಟಕ್ಕೆ ಹೋಗುವಾಗ ಬರುವಿಯಂತೆ ಎಂದರೂ ಈತ ಒಪ್ಪಿಕೊಳ್ಳುತ್ತಿರಲಿಲ್ಲ.
ಹೀಗೆ ಒಂದು ವರ್ಷ ತನ್ನ ಜೊತೆಗಿದ್ದ.
ಆಗ ತನ್ನ ಮನಸ್ಸಿಗೊಂದು ಆಸೆ ಚಿಗುರಿತು. ಬಾಳ ಕೊಂಕಣಿ ಮಾತನಾಡುತ್ತಾನೆ. ಸೊನಗಾರರ ಹುಡುಗ. ಇಂದಲ್ಲ ನಾಳೆ ಅವನಿಗೆ ತನ್ನ ಕೆಲಸ ಕಲಿಸಬೇಕು. ತಾನೇ ಮುಂದೆ ನಿಂತು ಮದುವೆ ಮಾಡಬೇಕು. ಅವನ ಕಡೆಯವರು ಎಂದು ಯಾರೂ ಬಂದಿಲ್ಲ. ಬರುವ ಸೂಚನೆಗಳೂ ಕಾಣುತ್ತಿಲ್ಲ. ಅವನನ್ನು ಏಕೆ ತನ್ನ ಧರ್ಮಕ್ಕೆ ಸೇರಿಸಿಕೊಳ್ಳಬಾರದೆಂದು ಸಿಮೋನ ವಿಚಾರ ಮಾಡಿದ. ಒಂದು ಆತ್ಮವನ್ನು ಕ್ರಿಸ್ತನಿಗಾಗಿ ಗೆದ್ದುಕೊಳ್ಳುವುದು ಪವಿತ್ರ ಕೆಲಸವೇ ಅಲ್ಲವೇ? ಅವಿಶ್ವಾಸಿಗಳನ್ನು ನಿಜ ದೇವರತ್ತ ಕರೆತನ್ನಿರಿ ಎಂದು ಕ್ರಿಸ್ತನೇ ಹೇಳಿಲ್ಲವೇ?
ಸಿಮೋನ ತನ್ನ ಕೆಲಸ ಆರಂಭಿಸಿದ. ಬಾಳನಿಗೆ ಶಿಲುಬೆಯ ಗುರುತು ತೆಗೆಯುವುದರಿಂದ ಹಿಡಿದು ಉಳಿದೆಲ್ಲಾ ಜಪ, ಪ್ರಾರ್ಥನೆಗಳನ್ನು ಹೇಳಿಕೊಟ್ಟ. ಇವುಗಳನ್ನು ಕಲಿಯುವುದರಲ್ಲಿ ಏಕೋ ಅವನು ಅಷ್ಟೊಂದು ಆಸಕ್ತಿ ತೊರುತ್ತಿರಲಿಲ್ಲ. ಆದರೂ ಸಿಮೋನ ತಾನು ಪ್ರಾರ್ಥನೆ ಮಾಡುವಾಗ ತನ್ನ ಮಗ್ಗುಲಲ್ಲಿ ಮೊಣಕಾಲು ಹಾಕುವ ಹಾಗೆ ಹೇಳಿ ಅವನಿಗೆ ಎಲ್ಲವನ್ನು ಹೇಳಿಕೊಟ್ಟ. ಊರಿಗೆ ಹೋದಾಗ ಐದಾರು ಬಾರಿ ಇಗರ್ಜಿಗೂ ಕರೆದೊಯ್ದು ಪಾದರಿ ಬಳಿ ಹೋಗಿ “ಹೀಗೆ ಹೀಗೆ ಇವನಿಗೊಂದು ಜ್ಞಾನ ಸ್ನಾನ ಮಾಡಬೇಕು ಫ಼ಾದರ್“ಎಂದು ಹೇಳಿದ.
ಜ್ಞಾನಸ್ನಾನದ ದಿನ ಕೂಡ ನಿಗದಿಯಾಯ್ತು. ದೇವ ಪಿತ ದೇವ ಮಾತೆಯರಾಗಲು ಸಿಮೋನನ ಹೆಂಡತಿಯ ತಮ್ಮ ಅವನ ಹೆಂಡತಿ ಮುಂದೆ ಬಂದರು. ನಾಳೆ ಜ್ಞಾನಸ್ನಾನವೆಂದರೆ ಇಂದು ರಾತ್ರಿ ಬಾಳ ಮನೆಯಿಂದ ಕಾಣೆಯಾದ. ರಾತ್ರಿ ಕಡಲ ಕಿನಾರೆಗೆ ಹೋದವ ತಿರುಗಿ ಬರಲಿಲ್ಲ.
ಮುರುಡೇಶ್ವರದ ಪಾದರಿ-
“ಸಿಮೋನ ಮೇಸ್ತ್ರಿ..ಎಲ್ಲಿ ನಿಮ್ಮ ಹುಡುಗ?“ಎಂದು ಐದಾರು ಬಾರಿ ಕೇಳಿದ. ಆದರೆ ಕಾಣೆಯಾದ ಬಾಳ ಮಾತ್ರ ಮತ್ತೆ ಕಾಣಿಸಿಕೊಳ್ಳಲಿಲ್ಲ. ಹೊನ್ನಾವರ, ಮುರುಡೇಶ್ವರ, ಶಿರಾಲಿಗಳಲ್ಲೆಲ್ಲ ಸಿಮೋನ ಬಾಳನಿಗಾಗಿ ಹುಡುಕಾಡಿದ.
ಅವನನ್ನು ತಾನು ಚೆನ್ನಾಗಿಯೇ ನೋಡಿಕೊಂಡಿದ್ದೆ. ಕೂಲಿ ಕೊಡುತ್ತಿದ್ದೆ. ಊಟ ಬಟ್ಟೆಗೆ ಕಡಿಮೆ ಮಾಡಿರಲಿಲ್ಲ. ಅವನನ್ನು ನಿಜ ದೇವನ ಕೃಪೆಗೆ ಪಾತ್ರನನ್ನಾಗಿ ಮಾಡಲು ಹೊರಟಾಗ ಆತ ಹೊರಟು ಹೋದದ್ದು ಮಾತ್ರ ವಿಚಿತ್ರವೆನಿಸಿತು. ಅವನು ಹೀಗೆ ಏಕೆ ಮಾಡಿದ ಎಂಬುದು ಈ ವರೆಗೂ ತನಗೆ ಅರ್ಥವಾಗಲಿಲ್ಲ. ಆದರೆ ರಂಗಿ ಸಹಜವಾಗಿ ಫ಼್ಲೋರಿನಾ ಆದಳು. ಬಾಳ ಅಂದು ತನ್ನ ಮಾತಿಗೆ ಒಪ್ಪಿಕೊಂಡು ಜೊಸೇಫ಼ನೋ, ಆಂತೋನಿಯೊ ಆಗಿದ್ದಿದ್ದರೆ ಇಂದು ಮದುವೆಯಾಗಿ ತನ್ನದೇ ಆದ ಕುಟುಂಬ, ಮನೆ ಮಾಡಿಕೊಂಡು ಇರುತ್ತಿದ್ದ. ಈಗ ಎಲ್ಲಿದ್ದಾನೋ? ಎನು ಮಾಡುತ್ತಿದ್ದಾನೋ? ಎಂದು ನಿಡುಸುಯ್ದ ಸಿಮೋನ.
ರಂಗಿ ಫ಼್ಲೋರಿನಾ ಆದಳು. ಅಗಲಿ ಹೋದ ಕ್ರೀಸುವರೆಲ್ಲ ಒಂದೆಡೆ ಸೇರಲಾರಂಭಿಸಿದರು. ಪಾದರಿ ಗೋನಸಾಲ್ವಿಸನ ಕಾರವಾರದಿಂದ ಕೊಪೆಲಗೆ ದೊಡ್ಡ ದುಂಡು ಗಂಟೆ ತರಿಸಿದರು. ಈ ಗಂಟೆಯನ್ನು ತೂಗು ಹಾಕಲು ಒಂದು ಗಂಟೆ ಗೋಪುರವನ್ನು ಕಟ್ಟಬೇಕೆಂಬ ವಿಚಾರ ಬಂದಿತು. ಸಣ್ಣ ಪ್ರಮಾಣದ ಕೊಪೆಲ ಎದುರು ದೊಡ್ಡ ರೀತಿಯಲ್ಲಿ ಗಂಟೆ ಗೋಪುರ ರಚಿಸುವುದು ಚೆನ್ನಾಗಿ ಕಾಣುವುದಿಲ್ಲ ಎಂಬ ಅಭಿಪ್ರಾಯ ಬಂದಾಗ –
“ಹಾಗಾದರೆ ದೊಡ್ಡ ಇಗರ್ಜಿಯನ್ನೇ ಕಟ್ಟೋಣ“ಎಂದರು ಜನ.
“ಊರಿನಲ್ಲಿ ಇಪ್ಪತ್ತು ಮನೆಗಳಿವೆ..ಕಲ್ಲು ಕೆತ್ತುವವರು, ಕಟ್ಟುವವರು, ಗಾರೆ ಕೆಲಸದವರು. ಬಡಗಿಗಳು ಇಲ್ಲಿದ್ದೀರಿ. ಹೆಂಗಸರು ಹೆಣ್ಣಾಳುಗಳ ಕೆಲಸ ಮಾಡಲಿ..ನಾನು ಹಣದ ವ್ಯವಸ್ಥೆ ಮಾಡುತ್ತೇನೆ. ನೀವು ಕೆಲಸಕ್ಕೆ ಕೈ ಹಾಕಿ..ಇಗರ್ಜಿ ಕಟ್ಟಿ ಬಿಡೋಣ ಅದರ ಜೊತೆಗೇನೆ ಗಂಟೆ ಗೋಪುರವನ್ನು ಕೂಡ“ಎಂದು ಪಾದರಿ ಹುರಿದುಂಬಿಸಿದರು.
ಈ ಮಾತು ಒಂದು ಆಕೃತಿಯನ್ನು ಪಡೆಯುತ್ತಿದೆ ಅನ್ನುವಾಗ ಪಾದರಿ ಗೋನಸಾಲ್ವಿಸರು ಊರಿನ ಪುರಸಭೆಗೆ ತಿರುಗಾಡತೊಡಗಿದರು.
ಹಿಂದೆ ಪುರಸಭೆಯವರು ಊರಿನ ಕ್ರೈಸ್ತ ಸಮುದಾಯಕ್ಕೆಂದು ಮಸೀದಿಯಿಂದ ಸಾಕಷ್ಟು ದೂರದಲ್ಲಿ ಸಣ್ಣದೊಂದು ನಿವೇಶನ ಕೊಟ್ಟಿದ್ದರು. ಅಲ್ಲಿ ಈಗ ಕೊಪೆಲ ಎದ್ದು ನಿಂತಿದೆ. ಆದರೆ ನಾಳೆ ಇಲ್ಲಿ ದೊಡ್ಡ ಪ್ರಮಾಣದ ಇಗರ್ಜಿಯನ್ನು ಕಟ್ಟುವ ವಿಚಾರವಿದೆ. ಇಗರ್ಜಿಗೆ ಈ ಸ್ಥಳ ಸಾಲದು. ಹಾಗೆಯೇ ಇಲ್ಲಿ ಶಾಲೆ, ಪಾದರಿ ಬಂಗಲೆ ಇತ್ಯಾದಿಗಳು ಆಗಬೇಕು. ಕ್ರೀಸ್ತುವವರಿಗಾಗಿ ಸಣ್ಣ ಪ್ರಮಾಣದ ಸಿಮಿಟ್ರಿಯು ಈಗ ಕೊಪೆಲ ಬಳಿಯೇ ತಲೆ ಎತ್ತಿದೆ. ಈ ಸಿಮಿಟ್ರಿಗೂ ಜಾಗ ಬೇಕು. ಕಾರಣ ಈಗ ಕೊಪೆಲನ ಸುತ್ತ‌ಏನು ಏಳೆಂಟು ಎಕರೆ ಜಾಗವಿದೆ ಅದನ್ನು ಕ್ರೈಸ್ತ ಸಮುದಾಯಕ್ಕೇನೆ ನೀಡಿ ಎಂದು ಒಂದು ಅರ್ಜಿ ಬರೆದುಕೊಂಡು ಪಾದರಿ ಗೋನಸಾಲ್ವಿಸರು ಪುರಸಭೆ ಅಧ್ಯಕ್ಷರು ಸದಸ್ಯರು ಮುಖ್ಯಾಧಿಕಾರಿಗಳು ಎಂದು ಎಲ್ಲರನ್ನೂ ಕಂಡರು.
ಗಾಜು ಗಣ್ಣಿನ, ಕೆಂಪು ಮುಖದ ಕಪ್ಪು ಚೂಪು ಗಡ್ಡದ ಒಂದು ವ್ಯಕ್ತಿ ತಮ್ಮ ಎದುರು ಬಂದು ಕುಳಿತು ಇಂಗ್ಲೀಷಿನಲ್ಲಿ ಮಾತನಾಡುತ್ತ ನಡು ನಡುವೆ ವಿಚಿತ್ರವಾದ ಧಾಟಿಯಲ್ಲಿ ಕನ್ನಡ ಶಬ್ದಗಳನ್ನು ಉಚ್ಚರಿಸುತ್ತ-
“..ಜಾಗ..ನಮಗೆ ಕೊಡಿ..“ಎಂದು ಹೇಳುವುದು ಅಧ್ಯಕ್ಷರು ಸದಸ್ಯರ ಮನಸ್ಸಿನಲ್ಲಿ ಕರುಣೆ ಪ್ರೀತಿಯನ್ನು ಹುಟ್ಟಿಸಿತು.
ಈ ಮನುಷ್ಯ ಯಾವುದೋ ದೇಶದವನು. ಇಲ್ಲಿ ಬಂದಿದ್ದಾನೆ. ಇಲ್ಲಿಯ ಜನರಿಗಾಗಿ ಏನೇನೋ ಮಾಡುತ್ತಿದ್ದಾನೆ. ದೇವಸ್ಥಾನ ಕಟ್ಟಲು, ಹೆಣ ಹುಗಿಯಲು, ಶಾಲೆ ನಿರ್ಮಿಸಲು ಜಾಗ ಕೇಳುತ್ತಿದ್ದಾನೆ. ನಿತ್ಯ ಬರುತ್ತಾನೆ. ವಿನಯದಿಂದ ನಿಲ್ಲುತ್ತಾನೆ. ನಮಸ್ಕಾರ ಎಂದು ಕೈ ಮುಗಿಯುತ್ತಾನೆ. ಚೆನ್ನಾಗಿದ್ದೀರಾ ಎಂದು ಕೇಳುತ್ತಾನೆ. ಕೈ ಹಿಡಿದು ಕುಲುಕುತ್ತಾನೆ. ಬೇಸರಪಟ್ಟುಕೊಳ್ಳುವುದಿಲ್ಲ. ಗೊಣಗುವುದಿಲ್ಲ. ಇವನಿಗೆ ಸಿಟ್ಟು ಬರುವುದಿಲ್ಲ. ಶಾಂತಿಯಿಂದ ತಾಳ್ಮೆಯಿಂದ ಕಾಯುತ್ತಾನೆ. ಕೊಡಿ ಕೊಡಿ ಎಂದು ಬೇಡಿಕೊಳ್ಳುತ್ತಾನೆ.
ಪುರಸಭೆ ಅಧಿಕಾರಿ ನೌಕರರು ಈ ಅರ್ಜಿಯ ಮೇಲೆ ಷರಾ ಬರೆಯುತ್ತಾರೆ. ಅಧ್ಯಕ್ಷರು ಸದಸ್ಯರು ಒಪ್ಪಿಗೆ ನೀಡುತ್ತಾರೆ. ಅರ್ಜಿ ಜಿಲ್ಲಾಧಿಕಾರಿಗಳಿಗೆಹೋಗುತ್ತದೆ. ಅಲ್ಲಿ ಕುಳಿತಿರುವ ಮೆಗ್ಗಾನ ಸಾಹೇಬ “ತಾನು ಬಂದು ನಿವೇಶನ ನೋಡುವುದಾಗಿ“ತಿಳಿಸುತ್ತಾನೆ.
ಒಂದು ದಿನ ಮೆಗ್ಗಾನ ಸಾಹೇಬ ಕುದುರೆ ಸಾರೋಟಿನಲ್ಲಿ ಕೂತು ಬರುತ್ತಾನೆ. ಕೊಪೆಲನ ಎದುರು ನಿಂತು ಹ್ಯಾಟ್ ತೆಗೆದು ಕಂಕುಳಲ್ಲಿ ಇರಿಸಿಕೊಂಡು ದೇವರತ್ತ ತಿರುಗಿ ಶಿಲುಬೆಯ ವಂದನೆ ಮಾಡುತ್ತಾನೆ. ಅಲ್ಲಿ ನೆರೆದ ಕ್ರೀಸ್ತುವರು ತಮ್ಮವನೇ ಆದ ಮೆಗ್ಗಾನ ಸಾಹೇಬನ ಬಣ್ಣ, ದಿರಿಸು, ಮಾತು ಅವನ ಠಾಕುಠೀಕಿನ ನಡಿಗೆಗೆ ಬೆರಗಾಗುತ್ತಾರೆ.
ಕೊಪೆಲ ಹೊರಗೆ ಹಾಕಿರುವ ಚಪ್ಪರಕ್ಕೆ ಹಸಿರು ಹೊದೆಸಿ ಅಲ್ಲಿ ಒಂದು ಮೇಜು, ನಾಲ್ಕು ಕುರ್ಚಿ ಇರಿಸಿ ಮೆಗ್ಗಾನ ಸಾಹೇಬರಿಗೆ ಕೂಡಿಸಿ ಕ್ರೀಸ್ತುವರು ಹಾರ ಹಾಕುತ್ತಾರೆ. ಪಾದರಿ ಗೋನಸಾಲ್ವಿಸ್ ಇಂಗ್ಲೀಷಿನಲ್ಲಿ ಮಾತನಾಡುತ್ತಾರೆ. ಮೆಗ್ಗಾನ ಸಾಹೇಬ ಕೂಡ ಇಂಗ್ಲೀಷಿನಲ್ಲಿಯೇ ಉಚ್ಚರಿಸುತ್ತಾನೆ. ಈ ಇಬ್ಬರ ಇಂಗ್ಲೀಷ್ ಅಲ್ಲಿ ನೆರೆದ ಕ್ರೀಸ್ತುವರಿಗೂ, ಪುರಸಭೆ ಅಧ್ಯಕ್ಷ ಸದಸ್ಯರಿಗೂ ಊರಿನ ಬಹುತೇಕ ಜನರಿಗೂ ಅರ್ಥವಾಗುವುದಿಲ್ಲ. ಆದರೆ ಅವರೆಲ್ಲ ಇಂಗ್ಲೀಷ ಭಾಷೆಯ ವೇಗ, ಧಾಟಿ, ಮಾತಿನ ರೀತಿ ಆ ಶಬ್ದಗಳ ಉಚ್ಚಾರ, ತುಟಿಯ ಚಲನೆ, ಕಣ್ಣಿನ ಹೊರಳುವಿಕೆ ಇತ್ಯಾದಿಗಳಿಗೆ ಮರುಳಾಗಿ ಚಪ್ಪಾಳೆ ತಟ್ಟುತ್ತಾರೆ.
“ಗುಡ್..ಗುಡ್“ಎಂದು ತಲೆದೂಗಿ ಮೆಗ್ಗಾನ ಸಾಹೇಬ ಹೊರಡುತ್ತಾನೆ.
ಶಿವಸಾಗರದ ಕ್ರೀಸ್ತುವರು ಮೊದಲ ಬಾರಿಗೆ ಹೆಮ್ಮೆ ಅಹಂಕಾರದಿಂದ ಬೀಗುತ್ತಾರೆ. ಪಾದರಿ ಗೋನಸಾಲ್ವಿಸ್ ನಿಜಕ್ಕೂ ದೊಡ್ಡವರು ಅನಿಸುತ್ತದೆ ಅವರಿಗೆ. ಅವರು ಇಲ್ಲಿಗೆ ಬಂದದ್ದರಿಂದ ಅಲ್ಲವೇ ಈ ಸಾಹೇಬ ಇಲ್ಲಿಯವರೆಗೆ ಆಗಮಿಸಿದ್ದು. ತಮ್ಮ ಮಾತು ಕೇಳಿದ್ದು. ತಮ್ಮ ಕೆಲಸ ಮಾಡಿಕೊಡುವುದಾಗಿ ಮಾತು ಕೊಟ್ಟಿರುವುದು. ಸರಕಾರವೇ ತಮ್ಮವರದ್ದು ಎಂಬುದು ಈಗ ಖಚಿತವಾಯಿತಲ್ಲ. ಆ ಸಾಹೇಬನ ಹಾಗೆ ಮಾತನಾಡಲು ಈ ಊರಿನಲ್ಲಿ ಬೇರೆ ಯಾರಿಗಾದರೂ ಸಾಧ್ಯವೇ, ತಮ್ಮ ಪಾದರಿಗಳನ್ನು ಬಿಟ್ಟು! ಅದೇನು ಮಾತು ಠೀವಿ!
ಜನ-ಕ್ರೀಸುವರು- ನಾಲ್ಕು ದಿನ ಇದೇ ಮಾತನಾಡಿಕೊಂಡರು. ಕೆಲವೇ ದಿನಗಳಲ್ಲಿ ಇವರು ಕೇಳಿದಷ್ಟೂ ಜಾಗ ಇವರದ್ದಾಯಿತು. ಜೊತೆಗೆ ಕೊಪೆಲ ಮುಂದಿನ ಬಯಲು. ಕೊಪೆಲ ಪಾರ್ಶ್ವದ ಜಾಗ ಕೂಡ ಕ್ರೈಸ್ತ ಸಮುದಾಯಕ್ಕೆ ನೀಡಬೇಕೆಂದೂ ಈ ಪ್ರದೇಶದಲ್ಲಿಯೇ ಕ್ರೀಸುವರಿಗಾಗಿ ಮನೆ ನಿವೇಶನಗಳನ್ನು ಕೊಡಬೇಕೆಂದೂ ಇದನ್ನು ಕ್ರಿಶ್ಚಿಯನ್ ಕೇರಿ ಎಂದು ಅಧಿಕೃತವಾಗಿ ಕರೆದು, ಈ ಕೇರಿಯಲ್ಲಿ ಕುಡಿಯುವ ನೀರಿನ ಬಾವಿ, ರಸ್ತೆ ಇತ್ಯಾದಿ ಸೌಲಭ್ಯಗಳನ್ನು ಒದಗಿಸಬೇಕೆಂದೂ ಸರಕಾರಿ ಆದೇಶ ಜಿಲ್ಲಾಧಿಕಾರಿಗಳ ಮೂಲಕ ಜಾರಿಯಾಯಿತು. ಪಾದರಿ ಗೋನಸಾಲ್ವಿಸ್ ಈ ಸುದ್ದಿಯನ್ನು ಇಗರ್ಜಿಯಲ್ಲಿ ಸ್ವಲ್ಪದರಲ್ಲಿ ತಿಳಿಸಿ-
“..ಮೊಗಾಚ ಕ್ರಿಸ್ತಾವನೂಂ( ಪ್ರೀತಿಯ ಕ್ರೀಸ್ತುವರೆ) ನಿಮ್ಮ ದೈವ ಭಕ್ತಿ, ಪ್ರಾರ್ಥನೆ, ಬೇಡಿಕೆ ದೇವರ ಕಿವಿಗೆ ಬಿದ್ದಿದೆ ಅನ್ನುವುದಕ್ಕೆ ಬೇರೆ ನಿದರ್ಶನ ಬೇಕೆ?“ಎಂದು ಕೇಳಿದರು.
ಅಂದು ಶಿವಸಾಗರದ ಕ್ರೀಸ್ತುವರು ಮತ್ತೊಮ್ಮೆ ಹೆಮ್ಮೆ ಪಟ್ಟುಕೊಂಡರು. ದೇವರು ತಮ್ಮ ಪರವಾಗಿದ್ದಾನೆ ಎಂಬುದು ಅವರಿಗೆ ಖಚಿತವಾಯಿತು.
*
*
*
ಕೊಪೆಲ ಸುತ್ತಲಿನ ಜಾಗ ತಮ್ಮದಾದ ಕೂಡಲೇ ಪಾದರಿ ಗೋನಸಾಲ್ವಿಸ ಮಾಡಿದ ಮೊದಲ ಕೆಲಸವೆಂದರೆ ಈ ಜಾಗವನ್ನು ಗುರುತಿಸಿ ಬೇಲಿ ಹಾಕಿದ್ದು. ಒಂದು ಭಾನುವಾರ ಕ್ರೀಸ್ತುವರೆಲ್ಲ ಈ ಕೆಲಸ ಮಾಡಬೇಕು ಎಂಬ ಕರೆ ಕೊಟ್ಟರು ಪಾದರಿ.
“ಭಾನುವಾರಗಳಂದು ಎಲ್ಲರೂ ವಿಶ್ರಾಂತಿ ಪಡೆಯಬೇಕು. ಬೇರೇನೂ ಕೆಲಸ ಮಾಡಬಾರದು ಎಂಬ ನಿಯಮವಿದೆಯಾದರೂ..ಇದು ದೇವರ ಕೆಲಸ ಇಗರ್ಜಿ ಕೆಲಸ..ಪುರಸಭೆಯವರು ಇಗರ್ಜಿಗೆಂದು ನೀಡಿರುವ ಈ ಜಾಗದ ಸುತ್ತ ನಾವು ಬೇಲಿ ಹಾಕಿ ಅದನ್ನು ನಮ್ಮದಾಗಿ ಮಾಡಿಕೊಳ್ಳದಿದ್ದರೆ ಯಾರೂ ಬಂದು ಅಲ್ಲಿ ಮನೆ ಕಟ್ಟಬಹುದು..ಕಾರಣ ದೇವರ ಕೆಲಸ ಮಡಲು ಯಾವುದೇ ನಿರ್ಬಂಧವಿಲ್ಲ..ಎಲ್ಲ ದೊಡ್ಡವರು, ಯುವಕರು, ಹೆಂಗಸರು ಕೂಡ ಬಂದು ಈ ಕೆಲಸ ಮುಗಿಸಿ“ಎಂದರು ಪಾದರಿ.
ಜನ ಭಾನುವಾರದ ಪೂಜೆ ಮುಗಿಸಿಕೊಂಡು ಮನೆಗಳಿಗೆ ಹೋಗಿ ಗಂಜಿ ತಿಂಡಿ, ಕಾಫ಼ಿ ಮುಗಿಸಿ ಮತ್ತೆ ಕೊಪೆಲ್ ಬಳಿ ಬಂದಾಗ ಪಾದರಿ ಗೋನಸಾಲ್ವಿಸ್ ನಿಲುವಂಗಿಯನ್ನು ಎತ್ತಿಕಟ್ಟಿ ಕೈಯಲ್ಲಿ ಕತ್ತಿ ಹಿಡಿದು ಕೆಲಸಕ್ಕೆ ಕೈಹಾಕಿ ಆಗಿತ್ತು. ಈ ಹಿಂದೆಯೇ ತಂದು ಹಾಕಿದ ಬೇಲಿ ಗೂಟ, ಬೊಂಬು, ಬಳ್ಳಿಗಳ ರಾಶಿ ಕೊಪೆಲನ ಹಿಂಬದಿಯಲ್ಲಿ ಬಿದ್ದಿತ್ತು.
ಎರಡು ಮೂರು ಭಾನುವಾರಗಳು ಕಳೆಯುವಷ್ಟರಲ್ಲಿ ಕೊಪೆಲ ಸುತ್ತ ಭದ್ರವಾದ ಬೇಲಿ ಎದ್ದು ನಿಂತಿತು. ಬೇಲಿಯ ಆ ಬದಿಗೆ ಒಂದು ಖಂದಕ ತೋಡಿ, ದನಕರುಗಳು ಒಳಗೆ ನುಗ್ಗದ ಹಾಗೆ ಮಾಡಿದ್ದೂ ಆಯಿತು. ಈವರೆಗೆ ಯಾವ ಕಡೆಯೆಂದರೆ ಆ ಕಡೆಯಿಂದ ಮರಗಿಡ ಬಳಸಿಕೊಂಡು ಪೊದೆಗಳ ನಡುವಿನಿಂದ ನಡೆದು ಇಗರ್ಜಿಗೆ ಬರುತ್ತಿದ್ದವರೆಲ್ಲ ಈಗ ಕೊಪೆಲ ಸುತ್ತಲಿನ ಬೇಲಿಯನ್ನು ಸುತ್ತಿಕೊಂಡು ಮುಂಬದಿಯಿಂದಲೇ ಬರಬೇಕಾಯಿತು. ಮುಂಬದಿಯಲ್ಲಿ ಕೂಡ ಗಳಹಾಕಿ ದಣಪೆಯನ್ನು ನಿರ್ಮಿಸಿದರು.
“ಪದ್ರಾಬಾ…ಈಗ ನಮಗೆ ದೂರ ಆಯ್ತು“ಎಂದು ಸಾಂತಾಮೋರಿ, ಪಾಸ್ಕೋಲ ಮೇಸ್ತ, ಬಲಗಾಲುದ್ದ, ಬಳ್ಕೂರಕಾರ, ಕೈತಾನ ಮೊದಲಾದವರು ನುಡಿದಾಗ ಪಾದರಿ ಗೋನಸ್ವಲಿಸ್-
“ಹೌದು ಸ್ವರ್ಗದ ದಾರಿ ದೂರ..ಸುತ್ತು ಬಳಸಿನದು..ನರಕದ ದಾರಿ ಹತ್ತಿರದ್ದು..“ಎಂದು ನಕ್ಕರು. ಒಂದು ಕಾರಣಕ್ಕೆ ಅವರಿಗೆ ಸಂತಸವಾಗಿತ್ತು.
ಕ್ರೀಸ್ತುವರು ಯಾರೂ ಈಗ ಔಡಲ ಮರದ ಚೌಡಮ್ಮನಲ್ಲಿಗೆ ಹೋಗುವಂತಿರಲಿಲ್ಲ. ಹೋದರೂ ಅವರು ಇಗರ್ಜಿ ಮುಂದಿನಿಂದ, ಕೊಪೆಲನಲ್ಲಿರುವ ಪಾದರಿ ಕಣ್ಣಿಗೆ ಬೀಳದೆ ಹೋಗಲಾಗುತ್ತಿರಲಿಲ್ಲ.
ಕೊಪೆಲ ಸುತ್ತ ಬೇಲಿ ಎದ್ದು ನಿಂತ ನಂತರ, ಕ್ರೀಸುವರ ಮನಸ್ಸಿನಲ್ಲಿ ಕೂಡ ಕೆಲ ಬದಲಾವಣೆಗಳಾದವು. ಬಹಳ ವರ್ಷಗಳಿಂದ ಕಷ್ಟ ಬಂದಾಗ, ಕಾಯಿಲೆಯಾದಾಗ, ಮನೆಯತ್ತ ಏನಾದರೂ ತೊಡಕು ಆತಂಕ ಬಂದಾಗ ಅವರು ಸಹಜವಾಗಿ ಔಡಲ ಮರದಲ್ಲಿಗೆ ಓಡುತ್ತಿದ್ದರು. ಹಾಲು ಎರೆಯುವ, ತೆಂಗಿನಕಾಯಿ ಒಡೆಯುವ, ಊದಿನ ಕಡ್ಡಿ ಅರ್ಪಿಸುವ, ಅಲ್ಲಿಯ ಪ್ರಸಾದ ತಂದು ಹಚ್ಚಿಕೊಳ್ಳುವ ಕೆಲಸ ಮಾಡುತ್ತಿದ್ದರು. ಈಗ ಅವರ ಈ ಅಭ್ಯಾಸಕ್ಕೆ ತಡೆಯೊದಗಿತು. ತಾವು ನೇರವಾಗಿ ಕೊಪೆಲನ ಸಂತ ಜೋಸೆಫ಼ರನ್ನು ನಂಬುವುದೇ ಸೂಕ್ತ ಎಂಬ ನಿರ್ಧಾರಕ್ಕೂ ಅವರು ಬಂದರು. ಪಾದರಿ ಗೋನಸಾಲ್ವಿಸ್ ಹೀಗಾಯಿತಲ್ಲ ಎಂದು ಸಂತಸಪಟ್ಟರು.
ಕೊಪೆಲ ಇರುವ ಜಾಗದಲ್ಲಿ ದೊಡ್ಡ ಪ್ರಮಾಣದ ಇಗರ್ಜಿ ಕಟ್ಟುವ ಕೆಲಸವನ್ನೂ ಅವರು ಯಾವಾಗಲೋ ಆರಂಭಿಸಿದ್ದರು.
ಪಣಜಿಯ ಒಂದು ಆರ್ಕಿಟೆಕ್ಟಿನವರಿಗೆ ಬರೆದು ಅಲ್ಲಿಯ ಬಾಲ ಏಸುವಿನ ಇಗರ್ಜಿಯ ನಕ್ಷೆ ಕಳುಹಿಸಲು ತಿಳಿಸಿದ್ದರು. ಅಷ್ಟು ದೊಡ್ಡದಲ್ಲವಾದರೂ ಸುಮಾರು ಐನೂರು ಜನ ಕುಳಿತುಕೊಳ್ಳಬಹುದಾದ ಕಟ್ಟಡ. ಶಿಲುಬೆಯಾಕಾರದಲ್ಲಿ ಅದು ಇರಬೇಕು. ನಟ್ಟ ನಡುವೆ ಅಲ್ತಾರ. ಉಳಿದ ಮೂರು ಕಡೆಗಳಲ್ಲಿ ಜನರಿಗೆ ಪ್ರಾರ್ಥನಾ ಸ್ಥಳ. ಹಿಂಬದಿಯಲ್ಲಿ ಪಾದರಿಯ ಕೊಠಡಿ. ಅಲ್ತಾರಿನ ಅಕ್ಕ ಪಕ್ಕದಲ್ಲಿ ಎರಡು ಬಾಗಿಲುಗಳು. ಅಲ್ತಾರಿನ ಮುಂದೆ ಮೂರು ಕಡೆಗಳಲ್ಲಿ ವೃತ್ತಾಕಾರದ ದಿವ್ಯ ಪ್ರಸಾದ ಸ್ವೀಕರಿಸುವ ಕಟಕಟೆ. ಇದನ್ನು ಅಲ್ತಾರನ್ನು ಒಳಮಾಡಿಕೊಂಡು ಒಂದು ಕಮಾನು ಈ ಕಮಾನು ಮೂರು ಕಡೆಗಳಲ್ಲಿ ಇರಬೇಕು. ಇಗರ್ಜಿಯ ಮುಂದಿನ ಗೋಡೆ ತ್ರಿಕೋಣಾ ಕೃತಿಯಲ್ಲಿ ಮೇಲೆ ಹೋಗಬೇಕು. ಇಂತಹ ಮೂರು ತ್ರಿಕೋನಗಳಲ್ಲಿ ನಡುವಿನದು ಹೆಚ್ಚು ಎತ್ತರ. ಇದರ ಮೇಲೆ ಒಂದು ಶಿಲುಬೆ. ಈ ಇಗರ್ಜಿಯ ಮಗ್ಗಲಲ್ಲಿಯೇ ಗಂಟೆ ಗೋಪುರ ನಡುವಿನ ತ್ರಿಕೋನಕ್ಕಿಂತ ತುಸು ಸಣ್ಣದು.
ಈ ನಕ್ಷೆಯನ್ನು ತರಿಸಿಕೊಳ್ಳುವುದರ ಜೊತೆಗೆ ಅವರು ಹಣದ ಬಗ್ಗೆಯೂ ಕೆಲಸ ಮಾಡತೊಡಗಿದ್ದರು. ಗೋವಾದ ಪ್ರಾವಿನ್ಶಿಯಲ್ ರಿಗೆ ತಮ್ಮ ಯೋಜನೆಯ ಬಗ್ಗೆ ಬರೆದಿದ್ದರು. ಪಣಜಿಯ ಶ್ರೀಮಂತರಿಗೆ, ಕಾರ್ಖಾನೆ ಮಾಲೀಕರಿಗೆ, ಹಡಗು ಕಂಪನಿ ಮಾಲಿಕರಿಗೆ, ಬ್ರೆಡ್ಡು, ಬಿಸ್ಕೇಟ್ ಫ಼್ಯಾಕ್ಟ್ರಿಯವರಿಗೆ, ಪಾನೀಯಗಳ ಅಂಗಡಿ, ಉತ್ಪಾದಕರಿಗೆ, ಹೋಟೆಲುಗಳವರಿಗೆ, ಅಲ್ಲಿರುವ ಎಲ್ಲರಿಗೂ ವಿವರವಾಗಿ ಬರೆದಿದ್ದರು.
ಇಲ್ಲಿಯ ಕ್ರೀಸುವರ ಪರಿಚಯ, ಅವರ್ ಸ್ಥಿತಿಗತಿ ಅವರು ಇದೀಗ ಎಚ್ಚೆತ್ತುಕೊಂಡಿರುವುದು ಶಿವಸಾಗರವನ್ನು ನಾಳೆ ಪ್ರಬಲವಾದ ಒಂದು ಕ್ರೈಸ್ತ ಕೇಂದ್ರವನ್ನಾಗಿ ರೂಪಿಸಬೇಕೆಂಬ ತಮ್ಮ ಇರಾದೆ, ಹೀಗೆ ಮಾಡಬೇಕೆಂದರೆ ಇಲ್ಲಿ ಒಂದು ಇಗರ್ಜಿ ಕಟ್ಟಬೇಕೆಂಬ ತಮ್ಮ ಆಸೆ ಎಲ್ಲದರ ಬಗ್ಗೆ ಬರೆದು-
“ಕ್ರಿಸ್ತೇಸುವಿನ ಧರ್ಮವನ್ನು ಮಲೆನಾಡಿನ ಈ ಒಳ ಪ್ರದೇಶದಲ್ಲಿ ನೆಲೆಯೂರಿಸಲು ಸಹಕರಿಸಿ“ಎಂದು ಕೋರಿದ್ದರು.
ಪಣಜಿಯ ಹತ್ತು ವರ್ಷಗಳ ತಮ್ಮ ಸೇವಾ ಅವಧಿಯಲ್ಲಿ ತಮ್ಮಿಂದ ಯಾರೆಲ್ಲ ಅನುಕೂಲ ಪಡೆದಿದ್ದರೋ, ನಾಮಕರಣ, ಮದುವೆ ಎಂದು ತಾನು ಯಾರಿಗೆಲ್ಲ ಸಹಾಯ ಮಾಡಿದ್ದೇನೋ, ಯಾವ ಜನರಿಗೆ ತಾನು ಸೆರಮಾಂವಂ ನೀಡುವುದರ ಮೂಲಕ ಪೂಜೆ ಮಾಡುವುದರ ಮೂಲಕ ಆಶೀರ್ವಾದದ ಮೂಲಕ ಶುಭ ಕೋರಿದ್ದೆನೋ, ದೇವರ ಕೃಪೆ ದೊರಕಿಸಿ ಕೊಟ್ಟಿದ್ದೆನೋ ಅವರಿಗೆಲ್ಲ ಬರೆದರು. ಹಾಗೆಯೇ ಕಾರವಾರ, ಹೊನ್ನಾವರಗಳಲ್ಲಿದ್ದವರನ್ನೂ ಮರೆಯಲಿಲ್ಲ. ಅಲ್ಲಿಂದ ಒಳ್ಳೆಯ ಪ್ರತಿಕ್ರಿಯೆಯೂ ಇತ್ತು.
ಇಷ್ಟಾದರೂ ಒಂದು ವಿಷಯದ ಬಗ್ಗೆ ಪಾದರಿ ಗೋನಸಾಲ್ವಿಸರಿಗೆ ನಿರಾಶೆ ಇತ್ತು. ಶಿವಸಾಗರದಲ್ಲಿಯ ಎಲ್ಲ ಕ್ರೀಸ್ತುವರನ್ನೂ ಕಂಡು ಅವರು ಮಾತನಾಡುತ್ತಿದ್ದರು. ಇಗರ್ಜಿಗೆ ಬಾರದವರೆಲ್ಲ ಬರಲು ಆರಂಭಿಸಿದ್ದರು. ಊರಿನ ಕ್ರೀಸ್ತುವರ ಮುಖಗಳೆಲ್ಲ ಅವರಿಗೆ ಚಿರಪರಿಚಿತವಾಗಿದ್ದವು. ಪ್ರತಿ ಮನೆಯಲ್ಲಿಯ ಹೆಂಗಸರು ಮಕ್ಕಳನ್ನು ಅವರು ನೆನಪಿನಲ್ಲಿಟ್ಟುಕೊಂಡಿದ್ದರು.
ಯಾರೇ ಆಗಲಿ ಕಂಡ ಕೂಡಲೆ-
“ಕೋಣ್ರೆ…ಇಂತ್ರು?”
“ಕೋಣ್ರೆ..ಪಾಸ್ಕೋಲ?”
“ಕೋಣ್ರೆ..ಸಲಾದೋರ್?“ಎಂದು ಕೇಳುತ್ತಿದ್ದರು. ಯಾರು ಇಂತ್ರುವೇ? ಯಾರು ಪಾಸ್ಕೋಲನೇ? ಯಾರು ಸಲ್ವಾದೋರನೆ ಎಂದು ಕೇಳಿ ಕಂಡಾತನ ಹೆಸರನ್ನು ಖಚಿತ ಪಡಿಸಿಕೊಳ್ಳುತ್ತಿದ್ದರು. ಹೆಂಗಸರು ಮಕ್ಕಳನ್ನು ಕೂಡ ಹೀಗೆಯೇ ಹೆಸರು ಹಿಡಿದು ಕೂಗುತ್ತಿದ್ದರು. ಮಾತನಾಡಿಸುತ್ತಿದ್ದರು. ಅವರ ಈ ಸ್ವಭಾವದಿಂದಾಗಿ ಶಿವಸಾಗರದ ಕ್ರೀಸ್ತುವರೆಲ್ಲ ಅವರಿಗೆ ಪ್ರಿಯವಾಗಿದ್ದರು. ಆತ್ಮೀಯರಾಗಿದ್ದರು.
ಆದರೆ ಶಿರಾಲಿಯ ಜೂಜೆ ಒಬ್ಬನೇ ಅವರ ಕೈಗೆ ಸಿಕ್ಕಿರಲಿಲ್ಲ.
ಈ ಜೂಜೆಯ ಬಗ್ಗೆ ಸಿಮೋನ ಹಿಂದೆಯೇ ಹೇಳಿದ್ದ.
ಶಿರಾಲಿಯ ತಾರಿ ಬಾಗಿಲಿನ ಜೂಜ ಶಿವಸಾಗರಕ್ಕೆ ಬಂದು ಬಹಳ ವರ್ಷಗಳಾಗಿದ್ದವು. ಈತ ಇಲ್ಲಿಗೆ ಬರಲೂ ಕೂಡ ಸಿಮೋನನೆ ಕಾರಣ. ಆರಂಭದಲ್ಲಿ ಈತ ಸಿಮೋನನ ಜೊತೆಗೆನೆ ಇದ್ದ. ಅನಂತರ ಹಳ್ಳಿಗಳಲ್ಲಿ ತಾನೇ ಕೆಲಸ ಹುಡುಕಿಕೊಂಡು ಅಲ್ಲಿ ಹೋಗಿ ಉಳಿದ. ಹೆಗ್ಗೋಡು, ಭೀಮನಕೋಣೆ, ಪುರಪ್ಪೆಮನೆ, ಸಿರವಂತೆ, ಹೊಸಮನೆ, ಅಂಬಳಿಕೊಪ್ಪ ಎಂದೆಲ್ಲ ಹಳ್ಳಿ ಹಳ್ಳಿ ತಿರುಗತೊಡಗಿದ. ಜೂಜನಿಗೂ ಉಳಿದವರಿಗೂ ಇದ್ದ ಸಂಪರ್ಕ ತಪ್ಪಿ ಹೋಯಿತು. ಶಿರಾಲಿಯ ತಾರಿಬಾಗಿಲಿನಲ್ಲಿ ಜೂಜೆಯ ತಾಯಿಯೊಬ್ಬಳೇ ಇದ್ದಳು.
“ನನ್ನ ಮಗನ್ನ ನೀನು ಅದೆಲ್ಲಿಗೋ ಕರಕೊಂಡು ಹೋದೆ..ಅವನು ನಮ್ಮನ್ನೆಲ್ಲ ಮರೆತು ಬಿಟ್ಟ.“ಎಂದು ಜೂಜನ ತಾಯಿ ಸಿಮೋನ ಅವಳ ಕೈಗೆ ಒಂದೆರಡು ನೋಟು ತುರುಕಿ-
“..ಮಾಯಿ ನನಗೇನೆ ಅವನು ಸಿಗೋದಿಲ್ಲ..ಯಾವುದೋ ಹಳ್ಳೀಲಿ ಇದ್ದಾನಂತೆ..ಈ ಬಾರಿ ಅವನಿಗೆ ಹೇಳತೇನೆ..“ಅನ್ನುತ್ತಿದ್ದ.
ಘಟ್ಟವೇರಿ ಹೋದ ನಂತರ ಅವನು ಸಿಗುತ್ತಿರಲಿಲ್ಲ. ಅವನ ಕೆಲಸದಲ್ಲಿ ಅವನು ಇವನ ಕೆಲಸದಲ್ಲಿ ಇವನು ತೊಡಗಿಕೊಂಡು ಈ ವಿಷಯ ಮರೆತು ಹೋಗುತ್ತಿತ್ತು.
ಪಾದರಿಗಳು ಈ ಊರಿಗೆ ಬರುತ್ತಿದ್ದಂತೆಯೇ ತಿಳಿದು ಬಂದ ವಿಷಯವೆಂದರೆ ಶಿರಾಲಿ ಜೂಜ ಶಿವಸಾಗರದಲ್ಲಿಯೇ ಇದ್ದುಕೊಂಡು ಹಳ್ಳಿ ಕೆಲಸಗಳಿಗೆ ಹೋಗಿ ಬರುತ್ತಿದ್ದಾನೆ ಎಂಬುದು. ಸಿಮೋನ ಮತ್ತೂ ವಿವರವಾಗಿ ಈ ವಿಷಯವನ್ನು ಪರಿಶೀಲಿಸಿದಾಗ ಅವನಿಗೆ ತಿಳಿದುಬಂದ ವಿಷಯವೆಂದರೆ ಜೂಜ ಬೇರೊಂದು ಜಾತಿಯ ಹೆಂಗಸನ್ನು ಇರಿಸಿಕೊಂಡು ತನ್ನ ಊರು, ಧರ್ಮ, ಜಾತಿಯನ್ನು ಸಂಪೂರ್ಣವಾಗಿ ಮರೆತಿರುವುದು.
ಶಿರಾಲಿಯಲ್ಲಿ ಆತನ ತಾಯಿ ಸತ್ತು ಹೋಗಿ ಕೆಲ ವರುಷಗಳು ಆಗಿದ್ದವು. ಜೂಜ ಮತ್ತೆಂದೂ ಸಿಮೋನನನ್ನು ಹುಡುಕಿಕೊಂಡು ಬಂದಿರಲಿಲ್ಲ. ಇಷ್ಟು ಹೊತ್ತಿಗೆ ತಾನು ಓರ್ವ ಕ್ರೈಸ್ತ ಎಂಬುದನ್ನೂ ಆತ ಮರೆತಿರಬಹುದು. ಹೀಗೆಂದು ಅವನನ್ನು ಅವನ ಪಾಡಿಗೆ ಬಿಡಲುಂಟೆ?
ಪಾದರಿ ಗೋನಸಾಲ್ವಿಸರು ಊರಿನಲ್ಲಿ ಮತ್ತೆ ಕ್ರೈಸ್ತ ಪರಿಸರವನ್ನು ನಿರ್ಮಾಣ ಮಾಡುತ್ತಿರಲು ಸಿಮೋನನಿಗೆ ತಟ್ಟನೆ ಜೂಜನ ನೆನಪಾಯಿತು. ಸಾನಬಾವಿ ಪೆದ್ರುವನ್ನು ಪಾದರಿ ಗೋನಸಾಲ್ವಿಸ್ ರು ಕ್ರಿಸ್ತನ ಪ್ರಭಾವಲಯದೊಳಗೆ ಕರೆ ತಂದಂತೆ ಜೂಜನನ್ನು ತರಬಹುದು ಎಂದು ಆಶಿಸಿ ಸಿಮೋನ ಪಾದರಿಗಳಲ್ಲಿ ಜೂಜೆಯ ಬಗ್ಗೆ ಪ್ರಸ್ತಾಪಿಸಿದನು.
“ಒಬ್ಬ ಮಾತ್ರ ನಮ್ಮ ಕೈತಪ್ಪಿ ಹೋದಂತಿದೆ ಪದ್ರಾಬ..“ಎಂದ ಒಂದು ದಿನ ಸಿಮೋನ.
“ಯಾರು? ಯಾರದು?“ಎಂದು ಕೇಳಿದರು ಗೋನಸಾಲ್ವಿಸ್.
“ಜೂಜ ಅಂತ ಶಿರಾಲಿಯವ..ಈಗ ಐದಾರು ವರ್ಷಗಳಿಂದ ಅವನು ನಮ್ಮಿಂದ ದೂರ ಆಗಿದ್ದಾನೆ.”
“ಅವನೀಗ ಎಲ್ಲಿದ್ದಾನೆ?”
“ಅರಮನೆ ಕೊಪ್ಪ ಅಂತ ಊರ ಹೊರಗೆ ಒಂದು ಕೇರಿ..ಅಲ್ಲಿದ್ದಾನೆ ಅಂತ ಕೇಳಿದೆ. ಮನೆಕಟ್ಟಿಕೊಂಡಿದಾನಂತೆ..ಗಿರಿಜಾ ಶೆಡ್ತಿ ಅಂತ ಒಂದು ಹೆಂಗಸು ಅವನ ಜತೆ ಇದಾಳಂತೆ..ನಾನೂ ಒಂದೆರಡು ಸಾರಿ ಅವನನ್ನ ನೋಡಿ ಬರಲಿಕ್ಕೆ ಪ್ರಯತ್ನ ಮಾಡಿದೆ. ಅವನು ಸಿಗಲಿಲ್ಲ..“ಎಂದು ಸಿಮೋನ ಜೂಜಿನ ಬಗ್ಗೆ ವಿವರವಾಗಿಯೇ ಹೇಳಿದ.
“ಹೌದಾ..ನೋಡೋಣ ಹಾಗಾದರೆ“ಎಂದರು ಪಾದರಿ ಗೋನಸಾಲ್ವಿಸ್.
ಇಂತಹ ವಿಷಯಗಳಲ್ಲಿ ಅವರು ನಿರಾಸಕ್ತಿ ತೋರಿಸುವವರಲ್ಲ. ನಿತ್ಯದ ತಮ್ಮ ಪ್ರಾರ್ಥನೆಯಲ್ಲಿ ಹಿಂಡನ್ನು ಅಗಲಿ ಹೋದ ಜೂಜನ ಪುನರ್ ಸೇರ್ಪಡೆಗಾಗಿ ಒಂದು ಪರಲೋಕ ಮಂತ್ರ ಎರಡು ನಮೋರಾಣೆ ಮಂತ್ರಗಳನ್ನು ದೇವರಿಗೆ ಸಲ್ಲಿಸಿ ಮೂರನೇ ದಿನದಿಂದ ಅವರು ಕಾರ್ಯೋನ್ಮುಖರಾದರು. ಬೋನನನ್ನು ಜತೆಗೆ ಕರೆದುಕೊಂಡು ಅವರು ಅರಮನೆ ಕೊಪ್ಪಕ್ಕೂ ಹೋದರು. ಜೂಜನ ಮನೆಯನ್ನೂ ಹುಡುಕಿ ತೆಗೆದರು. ಆ ಹೆಂಗಸು ಮನೆಯೊಳಗಿನಿಂದ ಬಗ್ಗಿ ನೋಡಿ-
“ಅವರು ಇಲ್ಲ..“ಎಂದು ನುಡಿದು ಬಾಗಿಲು ಹಾಕಿಕೊಂಡಳು. ಎಲ್ಲಿ ಹೋಗಿದ್ದಾನೆ. ಎಷ್ಟು ಹೊತ್ತಿಗೆ ಬರುತ್ತಾನೆ? ಎಂಬ ಪ್ರಶ್ನೆಗೆ ಅವಳು ಉತ್ತರ ಕೊಡುವ ಗೋಜಿಗೇನೆ ಹೋಗಲಿಲ್ಲ.
“ನನಗೆ ಗೊತ್ತಿಲ್ಲ“ಎಂದಷ್ಟೇ ಹೇಳಿ ಅವಳು ಮತ್ತೊಮ್ಮೆ ಮರೆಯಾದಳು.
ಇಂದಲ್ಲ ನಾಳೆ ಜೂಜನನ್ನು ಕಂಡು ಮಾತನಾಡಬೇಕು ಅನ್ನುವಾಗ ಐದಾರು ವರ್ಷಗಳ ನಂತರ ಊರಿನಲ್ಲಿ ಪ್ಲೇಗು ಕಾಣಿಸಿಕೊಂಡಿತು.
ಮನೆ ಮನೆಗಳಲ್ಲಿ ಇಲಿಗಳು ಬೀಳತೊಡಗಿದವು. ಊರಲ್ಲಿದ್ದ ಇಲಿಗಳು ಕಾಡಿಗೆ ಓಡಿ ಹೋಗುವ ದೃಶ್ಯ ಸಾಮಾನ್ಯವಾಯಿತು. ಹೀಗೆ ಓಡಿ ಹೋಗುವ ಇಲಿಗಳನ್ನು ಮಕ್ಕಳು ಅಟ್ಟಿಸಿಕೊಂಡು ಹೋಗಿ ಚಚ್ಚಿದರು. ಹಿಂದೆಯೇ ಅಗ್ರಹಾರದಲ್ಲಿ ಒಬ್ಬರು. ಸಾಬರ ಕೇರಿಯಲ್ಲಿ ಇಬ್ಬರು. ಚಮಗಾರ ಕೇರಿಯಲ್ಲಿ ಒಬ್ಬರು, ಬೋವೇರ ಕೇರಿಯಲ್ಲಿ ಒಬ್ಬರು ತೊಡೆ ಸಂದಿಯಲ್ಲಿ ಕಂಕುಳ ಸಂದಿಯಲ್ಲಿ ಗಂಟು ಕಾಣಿಸಿಕೊಂಡು ನರಳುತ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿತು.
ಶಿವಸಾಗರಕ್ಕೆ ಪ್ಲೇಗು ಹೊಸದಾಗಿರಲಿಲ್ಲ. ಮೂರು ನಾಲ್ಕು ವರ್ಷಗಳಿಗೊಮ್ಮೆ ಈ ರೋಗ ತಪ್ಪದೆ ಬರುತ್ತಿತ್ತು. ಇಲಿಯ ಮೇಲಿನ ಒಂದು ಜಾತಿಯ ಚಿಗಟದಿಂದ ಬರುವ ಈ ರೋಗವನ್ನು ಪ್ಲೇಗು ಮಾರಿ ಎಂದೇ ಜನ ಕರೆಯುತ್ತಿದ್ದರು. ಮೈಯಲ್ಲಿ ಗೆಡ್ಡೆ ಕಾಣಿಸಿಕೊಂಡು, ವಿಪರೀತನೋವು ಜ್ವರ ಬಂದು ಕೆಲದಿನ ನರಳಿ ಜನ ಸಾಯುತ್ತಿದ್ದರು. ಹಿಂದೆ ಸಣ್ಣದಾಗಿದ್ದ ಊರನ್ನು ಬಿಟ್ಟು ಊರ ಹೊರಗಿನ ಬಯಲಿನಲ್ಲಿ ಗುಡಿಸಲು ಹಾಕಿಸಿಕೊಂಡು ಜನ ವಾಸಿಸುತ್ತಿದ್ದರು. ಈಗ ಊರು ದೊಡ್ಡ ಪ್ರಮಾಣದಲ್ಲಿ ಬೆಳೆದಿರುವುದರಿಂದ ಹೀಗೆ ಊರು ಬಿಡುವುದು ಸಾಧ್ಯವಿರಲಿಲ್ಲ. ಹೀಗಾಗಿ ಜನ ಮನೆಗಳಲ್ಲಿಯೇ ಇದ್ದು ಔಷಧೋಪಚಾರಗಳಿಗೆ ಒಳಗಾಗುತ್ತಿದ್ದರು. ಸರಕಾರ ಕೂಡ ಸೂಜಿಮದ್ದು ಗುಳಿಗೆ ಔಷಧಿ ಎಂದು ರೋಗವನ್ನು ತಹಬಂದಿಗೆ ತರುವ ಯತ್ನ ಮಾಡುತ್ತಿತ್ತು.
ಈ ಬಾರಿ ರೋಗ ಕಾಣಿಸಿಕೊಂಡಿದೆ ಎಂದ ಕೂಡಲೆ ಪುರಸಭೆಯವರು ಕಾರ್ಯತತ್ಪರರಾದರು. ಮನೆ ಮನೆಗೆ ಸೈನೋಗ್ಯಾಸ ಹೊಡೆಯುವ, ಶಾಲಾ ಮಕ್ಕಳಿಗೆ ಸೂಜಿ ಮದ್ದು ನೀಡುವ ಕೆಲಸ ಪ್ರಾರಂಭವಾಯಿತು. ಊರ ನಡುವಣ ಮಾರಿ ಗುಡಿಗೆ ಭಕ್ತರ ಸಂಖ್ಯೆ ಅಧಿಕವಾಯಿತು. ಪ್ಲೇಗು ಮಾರಿ ಊರಿಗೆ ಬಂದಿದೆ ಅಂದ ಕೂಡಲೇ ಕೆಲ ಭಕ್ತರು ಮಾರಮ್ಮನದೊಂದು ಜಾತ್ರೆ ಮಾಡಿಸಬೇಕೆಂಬ ಠರಾವು ಮಾಡಿ ಅದಕ್ಕಾಗಿ ಸಿದ್ಧತೆಗೆ ತೊಡಗಿದರು. ಕುರಿ, ಕೋಣ, ಕೋಳಿಗಳ ಬಲಿಯಿಂದ ಮಾರಿ ಸಂಪ್ರೀತಳಾಗುತ್ತಾಳೆಂದು ಜನ ಕೋಳಿ ಬಲಿ ಕೊಡುವ ಹರಕೆ ಹೊತ್ತರು. ಮಾರಮ್ಮನ ಗದ್ದುಗೆಗೆ ಬಂದು ನಿತ್ಯ ಪೂಜೆ ಮಾಡಿಸಿಕೊಂಡು ಹೋಗುವವರು ಹೆಚ್ಚಾದರು.
“ಶ್ರೀಪಾದ ಜೋಯಿಸರಿಗೆ ಪ್ಲೇಗಂತೆ..”
“ರಹಮಾನ ಸಾಹೇಬರ ತೊಡೆ ಸಂದಿಯಲ್ಲಿ ಬಾವು ಎದ್ದಿದೆಯಂತೆ..”
“ತಿಮ್ಮಾ ಬೋವಿ ಆಗಲೋ ಈಗಲೋ ಕೊನೆ ಉಸಿರು ಬಿಡೋ ಹಾಗೆ ಆಗಿದಾನೆ..”
“ರಾಮುಲು ಜ್ವರ ಅಂತ ಮಲಗಿದ್ದಾನೆ”.
ಎಂಬ ಸುದ್ದಿಗಳು ಅಲ್ಲಲ್ಲಿ ಹರಡಿ ಜನ ಭೀತಿಗೊಂಡರು. ಆಗಲೇ ಮಾಸೂರು ಶೆಟ್ಟರ ಮನೆ ಕಟ್ಟಿಸುತ್ತಿದ್ದ ಸಿಮೋನನ ಕಿವಿಗೂ ಒಂದು ಸುದ್ದಿ ಬಿದ್ದಿತು.
“ಅರಮನೆ ಕೊಪ್ಪದ ಜೂಜಪ್ಪನಿಗೆ ಮಾರಿಬೇನೆ ಅಂತೆ..”
ಸಿಮೋನ ಗಾಬರಿಗೊಂಡ. ಊರಿಗೆ ಪ್ಲೇಗು ಕಾಣಿಸಿಕೊಂಡಿದೆ ಅಂದಾಗಲೇ ಆತ ಆತಂಕಗೊಂಡಿದ್ದ. ಹಿಂದೆಲ್ಲ ಒಂದೆರಡು ಬಾರಿ ಪ್ಲೇಗು ಬಂದಾಗ ರಾತ್ರೋ ರಾತ್ರಿ ಆತ ಘಟ್ಟ ಇಳಿದು ಹೋಗಿದ್ದ. ಅವನ ಸಂಗಡ ಇತರರು ಕೂಡ ಗಾಡಿಗಳನ್ನೇರಿದ್ದರು. ಸಾಂತಾಮೋರಿಯ ಊಟದ ಮನೆ ಬರಿದಾಗಿತ್ತು. ಸಾಮಾನ್ಯವಾಗಿ ಬೇಸಿಗೆಯ ಅಂತ್ಯ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕಾಯಿಲೆಯ ಪ್ರಖರತೆ ಒಂದೆರಡು ಮಳೆ ಬೀಳುತ್ತಿದೆ ಅನ್ನುವಾಗ ಕಡಿಮೆಯಾಗುತ್ತಿತ್ತು. ಹೇಗೂ ಮಳೆಗಾಲದಲ್ಲಿ ತಾವು ಊರಿಗೆ ಹೋಗಬೇಕು, ಈಗಲೇ ಏಕೆ ಹೋಗಬಾರದು ಎಂದು ಘಟ್ಟದ ಮೇಲೆ ಬಂದವರು ಯೋಚಿಸಿ ತಮ್ಮ ಊರುಗಳಿಗೆ ಹಿಂತಿರುಗುತ್ತಿದ್ದರು.
ಆದರೆ ಈಗ ಹಾಗೆ ಮಾಡುವಂತಿಲ್ಲ.
ಇಲ್ಲಿ ಮನೆ ಕಟ್ಟಿದ್ದೇವೆ. ಹೆಂಡತಿ ಮಕ್ಕಳು ಇಲ್ಲಿದ್ದಾರೆ. ಎತ್ತು ದನಕರ ಸಾಕಿದ್ದೇವೆ. ಎಲ್ಲವನ್ನೂ ಬಿಟ್ಟು ಹೋಗುವಂತಿಲ್ಲ. ದೇವರು ನಡೆಸಿದಂತೆ ಆಗುತ್ತದೆ ಎಂದು ಜನ ಉಳಿದರು. ಆದರೆ ಪ್ಲೇಗು ಮನೆಯ ಸುತ್ತ ಕೇರಿಯಲ್ಲಿ ಊರಿನಲ್ಲಿ ಕರಿಯ ಉಡುಪು ಧರಿಸಿ ತಿರುಗಾಡುತ್ತಲಿತ್ತು.
ತಮ್ಮವನೇ ಆದ ಜೂಜ ಪ್ಲೇಗಿಗೆ ಬಲಿಯಾಗಿದ್ದಾನೆ ಎಂದಾಗ ಸಿಮೋನ ಪಾದರಿಗಳ ಬಳಿ ಓಡಿ ಬಂದ.
“ಪದ್ರಾಬಾ..ಜೂಜನಿಗೆ ಪ್ಲೇಗಂತೆ..“ಎಂದ.
“ದೇವರೇ..”
ಅವರೂ ಗಡಿಬಿಡಿಗೊಂಡರು. ಈ ಕಾಯಿಲೆಯ ತೀವ್ರತೆ ಅವರಿಗೂ ಗೊತ್ತಿತ್ತು.
ಕಾಯಿಲೆ ಮಲಗಿದವರನ್ನು ಹೋಗಿ ನೋಡಬೇಕು ಎಂಬುದು ಇಗರ್ಜಿ ಮಾತೆ ಕಲಿಸುವ ಒಂದು ಪಾಠ. ರೋಗಿಷ್ಠರ ಸೇವೆ ಮಾಡಬೇಕೆಂಬುದು ಕ್ರಿಸ್ತ ಪ್ರಭು ಹೇಳಿದ ಮಾತು ಕೂಡ. ರೋಗದಿಂದ ನರಳುವವರ, ನೊಂದವರ, ಬೆಂದವರ ಸೇವೆಯನ್ನು ನೀವು ಮಾಡಿದರೆ ಅದು ನನ್ನ ಸೇವೆ ಮಾಡಿದ ಹಾಗೆ ಎಂದು ಏಸು ಹೇಳಿರುವಾಗ ಜೂಜನನ್ನು ಹೋಗಿ ನೋಡುವುದುತಮ್ಮ ಕರ್ತವ್ಯ ಅಂದುಕೊಂಡರು ಗೋನಸಾಲ್ವಿಸ್. ಅಲ್ಲದೇ ಆತನನ್ನು ಹೋಗಿ ನೋಡಲು, ಅವನನ್ನು ಮತ್ತೆ ಕ್ರಿಸ್ತಪ್ರಭುವಿನ ತೆಕ್ಕೆಗೆ ತೆಗೆದುಕೊಳ್ಳಲು ಇದು ಸೂಕ್ತ ಸಮಯ ಕೂಡ. ಹೀಗೆಂದೇ ಅವರು ಸಿಮೋನನಿಗೆ-
“ನಾನು ನೋಡಿ ಬರತೀನಿ“ಎಂದರು.
ಮಾತಿನಂತೆಯೇ ಬೋನನನ್ನು ಕರೆದುಕೊಂಡು ಅವರು ಜೂಜೆಯ ಮನೆಗೆ ಹೋದರು ಕೂಡ.
ಅರಮನೆ ಕೊಪ್ಪದ ಆ ಮನೆಯ ಬಾಗಿಲು ತೆರೆದಿತ್ತು. ಮನೆಯೊಳಗೆ ಗಾಳಿ ಬೆಳಕು ಸುಳಿಯುತ್ತಿರಲಿಲ್ಲ. ಮೂಲೆ ಮೂಲೆಯಲ್ಲಿ ಯಾವುದೋ ನಿಟ್ಟುಸಿರು, ನರಳಾಟ ಗುಪ್ಪೆಯಾಗಿ ಬಿದ್ದಂತೆ ತೋರುತ್ತಿತ್ತು. ಒಳಹೋಗಿ ನಿಂತ ಒಂದೆರಡು ನಿಮಿಷಕ್ಕೆ ಅಲ್ಲಿಯದೆಲ್ಲವೂ ನಿಚ್ಚಳವಾಗಿ ಹಾಸಿದ ಈಚಲ ಚಾಪೆಯ ಮೇಲೆ ಒಂದು ವ್ಯಕ್ತಿ ಕಂಡು ಬಂದಿತು. ದೇವಾ, ಮಾರಿಯ, ಬಾಬಾ ಎಂದು ದೇವರನ್ನು ತಾಯಿಯನ್ನು ತಂದೆಯನ್ನು ಕ್ಷೀಣ ದನಿಯಲ್ಲಿ ಕರೆಯುತ್ತಿತ್ತು. ಆ ವ್ಯಕ್ತಿ ಈ ಕ್ಷೀಣ ದನಿ ಬಿಟ್ಟರೆ ಆತನಲ್ಲಿ ಬೇರೆ ಚಟುವಟಿಕೆಗಳು ಇರಲಿಲ್ಲ.
“ಜೂಜ..“ಎಂದರು ಗೋನಸಾಲ್ವಿಸ್ ಅವನತ್ತ ಬಗ್ಗಿ.
ಬಾವಿಯ ತಳದಲ್ಲೆಲ್ಲೋ ನೀರು ತುಳುಕಾಡಿದಂತೆ ಅವನ ಕಣ್ಣುಗಳು ತೆರೆದುಕೊಂಡವು. ಗೊರ ಗೊರ ಸದ್ದು ಮಾಡಿ ಆತ ಯಾರು ಎಂದು ಕೇಳಿದ ಗಿರಿಜಾ ಗಿರಿಜಾ ಎಂದು ಕರೆದು ಅತ್ತಿತ್ತ ನೋಡಿದ. ಚಾಪೆ ಹೊಲಸಾಗಿತ್ತು. ದುರ್ಗಂಧ ಅವನ ಸುತ್ತ ಅಮರಿಕೊಂಡಿತ್ತು. ಕೈಯೊಂದನ್ನು ತೊಡೆಯ ಸಂದಿಗೆ ಒತ್ತಿಕೊಂಡು ಅವನು ಅಮ್ಮಾ ಎಂದು ನರಳಿದ.
“ಜೂಜ..ದೇವರಿದ್ದಾನೆ ನಿನಗೆ ಏನೂ ಆಗೋಲ್ಲ”
ಎಂದು ಗೋನಸಾಲ್ವಿಸ್ ಅವನ ಕೈಹಿಡಿದುಕೊಂಡರು. ಆತ ಆ ನೋವು ಯಾತನೆಯ ನಡುವೆಯೂ ತನ್ನ ಮೇಲೆ ಬಗ್ಗಿಕೊಂಡ ಆ ಮುಖವನ್ನು ನೋಡಿದ. ಅವರ ಕುತ್ತಿಗೆಯಲ್ಲಿಯ ಶಿಲುಬೆ ಅರೆ ಬರೆ ಬೆಳಕಿನಲ್ಲಿ ಮಿಂಚಿತು.
ಬೋನ ಅಕ್ಕ ಪಕ್ಕದ ಮನೆಗಳಿಗೆ ಹೋಗಿ ಬಂದ.
ಜೂಜನ ಜತೆಯಲ್ಲಿದ್ದ ಆ ಗಿರಿಜಾ ಶೆಡ್ತಿ ಎಂಬ ಹೆಂಗಸು ಬಟ್ಟೆಯ ಗಂಟೊಂದನ್ನು ಎದೆಗವಚಿಕೊಂಡು ಹೊರಟು ಹೋಗಿ ನಾಲ್ಕು ದಿನಗಳಾಗಿದ್ದವು. ಒಂದು ದಿನ ಹೊರಬಂದು ಜಗಲಿಯ ಮೇಲೆ ಕುಳಿತಿದ್ದ ಜೂಜ ಮತ್ತೆ ಹೊರಬಂದಿರಲಿಲ್ಲ. ಆ ಮನೆಯೊಳಗೆ ಬೇರೆ ಯಾರೂ ಪ್ರವೇಶಿಸಿರಲಿಲ್ಲ. ಹೊರ ಬಂದು ಕುಳಿತಾಗ ಆತ ತೊಡೆಸಂದಿಯಲ್ಲಿ ಎದ್ದಿರುವ ಬಾವಿನ ಬಗ್ಗೆ ಅವರಿವರಿಗೆ ಹೇಳಿದ್ದ. ಇದೇ ಮೂಲ ಕಾರಣವಾಗಿ ಜನ ಆ ಮನೆಯತ್ತ ಬರುವುದನ್ನು ನಿಲ್ಲಿಸಿದ್ದರು. ಇನ್ನೂ ಒಂದೆರಡು ದಿನ ನೋಡಿ ಆ ಮನೆಗೆ ಬೆಂಕಿ ಹಚ್ಚಿಬಿಡಬೇಕು ಎಂದೂ ಮಾತನಾಡಿಕೊಂಡಿದ್ದರು. ಏಕೆಂದರೆ ಪ್ಲೇಗು ಮಾರಿ ಬಂದವರು ಯಾರೂ ಬದುಕುವುದಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು.
“ಈವಾಗ ನೀವಾರ ಏನ ಮಾಡತೀರ..ಆ ರೋಗ ನಿಮಗೂ ಬರತದೆ..ಅದಕ್ಕೆ ಔಷಧಿ ಗಿವಸದಿ ಮಾಡಿದ್ರೆ ಅಮ್ಮನಿಗೆ ಕೋಪಬತ್ತದೆ..ನಿಮ್ಮ ಪಾಡಿಗೆ ನೀವು ಹೋಗ್ರಿ..“ಎಂದರು ಜನ.
ಆದರೆ ಗೋನಸಾಲ್ವಿಸ್ ಬೋನ ಹೋಗಲಿಲ್ಲ.
ಗೋನಸಾಲ್ವಿಸರು ಮನೆಯ ಗೋಡೆ ಗೂಡಿನಲ್ಲಿ ಒಂದು ಶಿಲುಬೆ ಇರಿಸಿ ಅದರ ಮುಂದೆ ಮೇಣದ ಬತ್ತಿ ಉರಿಸಿದರು. ಅಲ್ಲಿ ಮೊಣಕಾಲೂರಿ ದೊಡ್ಡ ದನಿಯಲ್ಲಿ ದೇವರ ಪ್ರಾರ್ಥನೆ ಮಾಡಿದರು. ಈವರೆಗೆ ನಿನ್ನನ್ನು ಅಗಲಿ ದೂರ ಉಳಿದ ಈ ಸಹೋದರ ಈಗ ನಿನ್ನ ಮಡಿಲಿಗೆ ಮತ್ತೆ ಬಂದು ಬಿದ್ದಿದ್ದಾನೆ. ಇವನ ಸಂಕಟವನ್ನು ಸಹಿಸುವ ಶಕ್ತಿ ಇವನಿಗೆ ನೀಡು ಈತನನ್ನು ಗುಣಪಡಿಸು. ಹಲವು ರೋಗಗಳಿಂದ ನರಳುತ್ತಿದ್ದವರನ್ನು ನೀನು ಗುಣಪಡಿಸಿದ ಹಾಗೆ ಈತನನ್ನೂ ರೋಗದಿಂದ ಮುಕ್ತಿಗೊಳಿಸು ಎಂದು ಏಸು ಪ್ರಭುವಿನಲ್ಲಿ ಬೇಡಿಕೊಂಡರು. ಇವರು ಆರಂಭಿಸಿದ ಪರಲೋಕ, ನಮೋರಾಣಿ ಮಂತ್ರಗಳನ್ನು ಬೋನಾ ಮುಗಿಸಿದ.
ದೇಹದ ನರನರಗಳನ್ನು ಕೊಯ್ಯುತ್ತಿದ್ದ ನೋವಿನ ನಡುವೆಯೂ ಜೂಜ ಗೂಡಿನಲ್ಲಿಯ ಶಿಲುಬೆಯನ್ನು ನೋಡಿದ. ಉರಿಯುವ ಮೇಣದ ಬತ್ತಿಯ ಕುಡಿಯನ್ನು ದಿಟ್ಟಿಸಿದ.
“ದೇವಾ..“ಎಂದು ಅತ್ತ.
ಬೋನ ಬಿಸಿ ನೀರಿನಿಂದ ಅವನ ಮೈ ಒರೆಸಿದ.
ತಿಳಿಗಂಜಿ ಮಾಡಿ ಕುಡಿಸಿದ.
ಪಾದರಿ ತಂದ ಮದ್ದನ್ನು ಮಾಡಿದ.
ಮನೆಯನ್ನು ಶುಚಿ ಮಾಡಿದ.
ಸಂಜೆ ಸಿಮೋನ ಅಲ್ಲಿಗೆ ಬಂದ. ಅವನ ಹಿಂದೆಯೇ ಪಾಸ್ಕೋಲ, ಇಂತ್ರು, ಕೈತಾನರೂ ಬಂದರು. ಸಿಮೋನನ ತಾಯಿಯೂ ಬಂದಳು.ಗುಸ್ತಿನನ ತಾಯಿಯೂ ಬಂದಳು.ಹೀಗೆ ಬಂದವರೆಲ್ಲ ಶಿಲುಬೆಯ ಮುಂದೆ ಮೊಣಕಾಲೂರಿ ಬೇಡಿಕೊಂಡರು. ಇವರೆಲ್ಲರಿಗೂ ಪ್ಲೇಗೂ ಮಾರಿಯ ಬಗ್ಗೆ ಭೀತಿ ಇತ್ತಾದರೂ ಇವರು ಪಾದರಿ ಗೋನಸಾಲ್ವಿಸ್ ರ ಮಾತಿಗೆ ಬೆಲೆ ಕೊಟ್ಟರು.
ಊರಿನಲ್ಲಿ ಹೊಸದಾಗಿ ಕೆಲವರಲ್ಲಿ ಕಾಯಿಲೆ ಕಾಣಿಸಿಕೊಂಡಿತು. ಇಲಿಗಳು ಬೀಳುವುದು ಕಡಿಮೆಯಾಗಲಿಲ್ಲ. ಶಾಲೆಗಳಿಗೆ ರಜೆ ಕೊಡಲಾಯಿತು. ಊರಿನಲ್ಲಿ ಮಾರಿಯಮ್ಮನ ಜಾತ್ರೆ ಮಾಡಲು ತರಾತುರಿಯ ಸಿದ್ಧತೆ ನಡೆಯಿತು. ಅಂಗಡಿಗಳನ್ನು ಹಾಕಲು ಸರ್ಕಾರ ಅನುಮತಿ ಕೊಡದೇ ಹೋದಾಗ ಜನ ಮಾರಮ್ಮನಿಗೆ ಹಣ್ಣು ಕಾಯಿ ಒಪ್ಪಿಸಲು ಮುಂದಾದರು. ಕೋಳಿ ಕುರಿ ಕೊಡುವ ಹರಕೆ ಹೇಳಿಕೊಳ್ಳಲು ಕೂಡ ಮುಂದಾದರು.
ಈ ಸಂದರ್ಭದಲ್ಲಿಯೇ ಒಂದು ವಿಷಯ ಪಾದರಿ ಗೋನಸಾಲ್ವಿಸರ ಗಮನಕ್ಕೆ ಬಂದಿತು. ಕ್ರೀಸುವರಲ್ಲಿ ಕೆಲವರು ಮಾರಿ ಗುಡಿಯತ್ತ ಹೋಗಿ ಬರುತ್ತಿರುವ ಸುದ್ದಿ ಅವರ ಕಿವಿಗೆ ಬಿದ್ದಿತು. ಊರಿನಲ್ಲಿ ಪ್ಲೇಗು ಕಾಣಿಸಿಕೊಂಡು ಒಂದಿಬ್ಬರು ಸತ್ತಿದ್ದರು. ಹಲವರು ಹೊಸದಾಗಿ ಈ ರೋಗದಿಂದ ಪೀಡಿತರಾಗಿ ನರಳುತ್ತಿದ್ದರು. ಊರ ಮೇಲೆಯೇ ಪ್ಲೇಗು ಮಾರಿ ಎಂಬ ಕರಿಮೋಡ ಕವಿದುಕೊಂಡು ಊರು ಪಾರ್ಶ್ವ ರೋಗಕ್ಕೆ ಬಲಿಯಾದಂತೆ ಬಳಲತೊಡಗಿತ್ತು. ಈ ಪರಿಸ್ಥಿತಿಯಿಂದ ಊರಿನ ಕ್ರೀಸ್ತುವರನ್ನು ಪಾದರಿ ಗೋನಸಾಲ್ವಿಸ್ ರಕ್ಷಿಸಬೇಕಿತ್ತು.
ಭಾನುವಾರವೇ ಗೋನಸಾಲ್ವಿಸ್ ಶೆರಮಾಂವಂ ನಡುವೆ ಒಂದು ಪ್ರಕಟಣೆಯನ್ನು ನೀಡಿದರು.
ಊರಿನಲ್ಲಿ ಮಾರಕ ಕಾಯಿಲೆ ಹರಡುತ್ತಿದೆ. ಈ ಕಾಯಿಲೆ ಹರಡದ ಹಾಗೆ ಒಂದು ನವೇನ ಆರಂಭಿಸುತ್ತಿದ್ದೇನೆ.ಈ ಸೋಮವಾರದಿಂದ ಮುಂದಿನ ಮಂಗಳವಾರದವರೆಗೆ ಒಂಬತ್ತು ದಿನ ಈ ನವೇನ ನಡೆಯುತ್ತದೆ. ಪ್ರತಿದಿನ ಸಾಯಂಕಾಲ ಐದುವರೆಗೆ ಇಗರ್ಜಿಯಿಂದ ಸಂತ ಸಬಸ್ತಿಯಾನರ ಪ್ರತಿಮೆಯ ಮೆರವಣಿಗೆ ಇಗರ್ಜಿ ಕೇರಿಯಲ್ಲಿ ಆಸುಪಾಸಿನ ರಸ್ತೆಗಳಲ್ಲಿ ನಡೆಯುತ್ತದೆ. ನಂತರ ಇಗರ್ಜಿಯಲ್ಲಿ ವಿಶೇಷ ಪ್ರಾರ್ಥನೆ. ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಬಲ್ಲ ಶಕ್ತಿ ಇರುವ ಸಂತನ ಕೃಪೆಯಿಂದ ಊರಿಗೆ ಆತಂಕವನ್ನು ಒಡ್ಡಿರುವ ಈ ರೋಗ ಕಡಿಮೆಯಾಗುತ್ತದೆ.”
ಪಾದರಿಗಳ ಈ ಪ್ರಕಟಣೆ ಕ್ರೀಸ್ತುವರು ಮನಸ್ಸಿನಲ್ಲಿ ಒಂದು ವಿಶ್ವಾಸವನ್ನು, ನಂಬಿಕೆಯನ್ನು ಹುಟ್ಟಿಸಿತು.
ಮಾರನೇ ದಿನದಿಂದಲೇ ಸಂತ ಸಬಸ್ತಿಯಾನನ ಪ್ರತಿಮೆ ಇರುವ ಚರೇಲನ್ನು ಹಿಡಿದುಕ್ರೀಸ್ತುವರು ಮೆರವಣಿಗೆ ಮಾಡಿದರು. ಮೆರವಣಿಗೆ ಕ್ರೀಸುವರ ಕೇರಿಯಿಂದ ಅಕ್ಕ ಪಕ್ಕದ ಒಂದೆರಡು ರಸ್ತೆಗಳಿಗೂ ಹೊರಳಿ ಕೊಪೆಲಗೆ ಹಿಂತಿರುಗಿತು. ಹೆಂಗಸರು, ಗಂಡಸರು, ಮಕ್ಕಳು ಭಯ ಭಕ್ತಿಯಿಂದ ಈ ಪುರುಶಾಂವ್ಂ ನಲ್ಲಿ ಭಾಗವಹಿಸಿದರು. ಉದ್ದಕ್ಕೂ ಜಪ ಮಾಡುತ್ತ ನಡುವೆ ಕೀರ್ತನೆ ಹಾಡುತ್ತ ಹೊರಟ ಚರೇಲನ ದೇವರಿಗೆ ಹಿಂದುಗಳು ಮೇಣದ ಬತ್ತಿಯನ್ನು ಹೂವಿನಹಾರವನ್ನು ಸಲ್ಲಿಸಿದರು. ಕೊಪೆಲನಲ್ಲಿ ನಂತರ ಸಾಮೂಹಿಕ ಪ್ರಾರ್ಥನೆ ಕೂಡ ನಡೆಯಿತು.
ಒಂಬತ್ತು ದಿನಗಳ ಈ ನವೇನ ಮುಗಿಯುವಾಗ ಹೊಸದಾಗಿ ಪ್ಲೇಗು ರೋಗ ಊರಿನಲ್ಲಿ ಕಾಣಿಸಿಕೊಳ್ಳಲಿಲ್ಲ. ಸರಕಾರ ಪುರಸಭೆಯವರು ಶ್ರಮಿಸಿ ರೋಗವನ್ನು ಹತೋಟಿಗೆ ತಂದರು. ಆದರೆ ಒಂದು ಕಾರಣಕ್ಕೆ ಪಾದರಿ ಗೋನಸಾಲ್ವಿಸ್ ರಿಗೆ ನಿರಾಶೆಯಾಯಿತು. ದುಖಃ ಕೂಡ ಆಯಿತು.
ಏಳೆಂಟು ದಿನ ನರಳಿದ ಜೂಜ ಕೊನೆಗೊಂದು ದಿನ ಪಾದರಿಗಳ ಕೈ ಹಿಡಿದುಕೊಂಡ.
“ಪದ್ರಬಾ ನಾನು ತಪ್ಪು ಮಾಡಿದೆ..“ಎಂದ. ಒಂದು ಅರ್ಥದಲ್ಲಿ ಆತ ಪಾಪ ನಿವೇದನೆ ಮಾಡಿಕೊಳ್ಳಲು ಬಂದವನಂತೆ ತನ್ನ ಮನಸ್ಸಿನಲ್ಲಿರುವುದನ್ನೆಲ್ಲ ತೋಡಿಕೊಂಡ. ಊರು ಬಿಟ್ಟಿದ್ದು.. ತಾಯಿಯನ್ನು ನೋಡಲು ಹೋಗದಿದ್ದುದು, ದೇವರು, ಇಗರ್ಜಿ, ದಿವ್ಯ ಪ್ರಸಾದ ಸ್ವೀಕಾರ ಮೊದಲಾದ ಸಂಸ್ಕಾರಗಳಿಂದ ದೂರ ಉಳಿದದ್ದು. ಬೇರೊಂದು ಜಾತಿಯ ಹೆಂಗಸನ್ನು ಇರಿಸಿಕೊಂಡದ್ದು. ಕೊನೆಗೆ ಅವಳು ಓಡಿ ಹೋದದ್ದು ಎಲ್ಲ ಹೇಳಿ ಅತ್ತ.
“..ನೀನು ಮಾಡಿರುವ ತಪ್ಪುಗಳಿಗಾಗಿ ನಿಜವಾಗಿಯೂ ಪಶ್ಚಾತ್ತಾಪ ಪಟ್ಟಿದ್ದಲ್ಲಿ ತಂದೆಯ ಮಗನ ಸ್ಪಿರಿತು ಸಾಂತುವಿನ ಹೆಸರಿನಲ್ಲಿ ನಾನು ಅವುಗಳನ್ನು ಕ್ಷಮಿಸಿದ್ದೇನೆ. ನಿನ್ನಲ್ಲಿ ದೇವರ ಕೃಪೆಯು ಸದಾ ಪ್ರಜ್ವಲಿಸುತ್ತಿರಲಿ..“ಎಂದು ಆಶೀರ್ವದಿಸಿದರು.
ಹಾಗೆಯೇ ಅವನಿಗೆ ದಿವ್ಯಪ್ರಸಾದವನ್ನು ನೀಡಿ ಅವನ ಅಂತ್ಯಾಭ್ಯಂಜನವನ್ನು ಕೂಡ ಮುಗಿಸಿದರು. ಜೂಜೆ ಕೊನೆಗಾಲ ಬರುತ್ತಿದೆ ಅನ್ನುವಾಗ ಮತ್ತೆ ಕ್ರಿಸ್ತನ ಕೃಪೆಗೆ ಒಳಗಾದದ್ದು ಅವರಿಗೆ ಸಂತಸವನ್ನು ತಂದಿತು. ನಾನು ದೈವ ಭಕ್ತರನ್ನಲ್ಲಾ ಪಾಪಿಗಳನ್ನು ಕರೆಯಲು ಬಂದಿದ್ದೇನೆ ಎಂದು ಏಸು ಪ್ರಭು ಹೇಳಿದ ಮಾತು ಅವರ ನೆನಪಿಗೆ ಬಂದಿತು.
ಅವರು ಅಂದುಕೊಂಡಂತೆಯೇ ಜೂಜೆ ಮಾರನೇ ದಿನ ಬೆಳಿಗ್ಗೆ ಇರಲಿಲ್ಲ. ಕೊಪೆಲನ ಮರಣದ ಗಂಟೆ ಕೇರಿಗೆಲ್ಲ ಈ ವಿಷಯ ತಿಳಿಸಿತು.
ಶಿರಾಲಿಯ ಜೂಜನ ಶವ ಸಂಸ್ಕಾರವನ್ನು ಕೊಪೆಲನ ಮಗ್ಗುಲಲ್ಲಿ ಮೀಸಲಾಗಿರಿಸಿದ ಸಿಮಿತ್ರಿಯಲ್ಲಿ ಮಾಡಲಾಯಿತು.
ಅವನ ಶವವನ್ನು ಮಣ್ಣಿಗೆ ಇಳಿಸುವ ಮುನ್ನ ಪಾದರಿ ಗೋನಸಾಲ್ವಿಸ್-
“ಪ್ರೀತಿಯ ಕ್ರೀಸ್ತುವರೆ….ಯಾರು ಪ್ರಭು ಏಸುವಿನತ್ತ ತಿರುಗಿಕೊಳ್ಳುತ್ತಾರೋ..ಅವರಿಗೆ ಒಳ್ಳೆಯ ಮರಣ ಲಭ್ಯವಾಗುತ್ತದೆ ಅನ್ನುವುದಕ್ಕೆ ಸಹೋದರ ಜೂಜೆಯ ಮರಣ ಒಂದು ಉದಾಹರಣೆ..ಇಲ್ಲದಿದ್ದಲ್ಲಿ ಅವನ ಶವ ಸಂಸ್ಕಾರ ಹೇಗೆ ಆಗುತ್ತಿತ್ತು ಎಂಬುದನ್ನು ನೀವು ಬಲ್ಲಿರಿ“ಎಂದು ಹೇಳಿದ ಮಾತಿಗೆ ಜನ ತಲೆದೂಗಿದರು.

-೭-

ಕೊಪೆಲನ್ನು ತಾತ್ಕಾಲಿಕವಾಗಿ ಹಾಗೆಯೇ ಇರಿಸಿಕೊಂಡು ಅದರ ಪಕ್ಕದಲ್ಲಿ ದೊಡ್ಡ ಪ್ರಮಾಣದ ಇಗರ್ಜಿ ಕಟ್ಟುವ ಕೆಲಸ ಅರಂಭವಾಯಿತು. ಪಣಜಿಯಿಂದ ಬಂದ ನಕ್ಷೆಯನ್ನು ಎದುರು ಇರಿಸಿಕೊಂಡು ಆ ಪ್ರಕಾರವೇ ಕಟ್ಟಡದ ಕೆಲಸವನ್ನು ಶುರುಮಾಡಲಾಯಿತಾದರೂ ಇಗರ್ಜಿ ಕೆಲಸಕ್ಕೆ ಬೇಕಾದಷ್ಟು ಕೆಲಸಗಾರರ ಕೊರತೆ ಎದ್ದು ಕಂಡಿತು. ಶಿವಸಾಗರದಲ್ಲಿ ಹಾಲಿ ನಡೆಯುತ್ತಿದ್ದ ಕಾಮಗಾರಿಗಳು ಹೇರಳವಾಗಿದ್ದವು. ಊರಿನಲ್ಲಿ ಇದ್ದವರು ಈ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸಲು ಒಪ್ಪಿಕೊಂಡಿದ್ದರು. ಸಿಮೋನನ ಕೈಯಲ್ಲೂ ಕೆಲ ಕೆಲಸಗಳಿದ್ದರೂ ಅವನು ಇಗರ್ಜಿ ಕೆಲಸ ಮಾಡಿಸಲು ಮುಂದಾಗಿದ್ದ. ಅವನಿಗೂ ಕೆಲಸಗಾರರ ಕೊರತೆ ಇರುವುದು ಕಂಡಿತು.
“ಪದ್ರಾಬಾ ನಾನು ಊರಿಗೆ ಹೋಗಿ ಜನರನ್ನ ಕರೆ ತರತೇನೆ“ಎಂದ ಆತ ಪಾದರಿ ಗೋನಸಾಲ್ವಿಸರ ಬಳಿ.
“ಹಾಗೆ ಮಾಡಿ..“ಎಂದರವರು.
ಮಲೆನಾಡಿನಲ್ಲಿ ಮಳೆಗಾಲದಲ್ಲಿ ಕೆಲಸ ಮಾಡುವಂತಿರಲಿಲ್ಲ. ಉಳಿದ ಎಂಟು ತಿಂಗಳುಗಳಲ್ಲಿ ತ್ವರಿತವಾಗಿ ಯಾವುದೇ ಕೆಲಸವನ್ನು ಮಾಡಿ ಮುಗಿಸಬೇಕಾಗುತ್ತಿತ್ತು. ಇಗರ್ಜಿ ಕಟ್ಟಡ ಕಟ್ಟಲು ಕಡಿಮೆ ಎಂದರೆ ಹತ್ತು ಹದಿನೈದು ಜನ ಬೇಕು. ಬಡಗಿಗಳೂ ಬೇಕು. ಇವರಲ್ಲಿ ಕೆಲವರನ್ನಾದರೂ ಕರೆತರಲು ಸಿಮೋನ ಮುರುಡೇಶ್ವರ, ಭಟ್ಕಳಗಳಿಗೆ ಹೋಗಿ ಬಂದ.
ಘಟ್ಟದ ಮೇಲೆ ಬಂದು ಕೆಲಸಮಾಡಿ ಹಣ ಸಂಪಾದಿಸುವ ಆಕರ್ಷಣೆ ಕಡಿಮೆ ಏನೂ ಆಗಿರಲಿಲ್ಲ. ಸಾಂತಾಮೋರಿ ಮನೆಯಲ್ಲಿ ಈಗಲೂ ಹತ್ತು ಹದಿನೈದು ಜನ ಇದ್ದರು. ಹಳಬರು ಶಿವಸಾಗರದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿರಲು ಹೊಸಬರು ಘಟ್ಟದ ಕೆಳಗಿನಿಂದ ಬರುತ್ತಿದ್ದರು. ಹಣ ಮಾಡಿಕೊಂಡ ಕೆಲವರು ಊರನ್ನು ಬಿಟ್ಟು ಬರಲು ಮನಸ್ಸಿಲ್ಲದೆ ಅಲ್ಲಿಯೇ ಉಳಿಯುತ್ತಿದ್ದರು. ವರ್ಷಗಳು ಉರುಳಿದ ಹಾಗೆ ಅಲ್ಲಿಂದ ಇಲ್ಲಿಗೆ ಬಂದು ನೆಲಸುವವರ ಸಂಖ್ಯೆ ಹೆಚ್ಚಾಗುತಲಿತ್ತು. ಸಾಂತಾಮೋರಿಗಂತೂ ಯಾವುದೇ ರೀತಿಯಲ್ಲಿ ಸಂಪಾದನೆ ಕಡಿಮೆ ಆಗಿರಲಿಲ್ಲ. ಇಲ್ಲಿ ಇಗರ್ಜಿ ಕೆಲಸ ಆರಂಭವಾಗುತ್ತಿದ್ದಂತೆಯೆ ಸಿಮೋನ ಊರಿನಿಂದ ಇನ್ನೂ ಕೆಲವರನ್ನು ಕರೆತಂದ.
ಹಸಿ ಮದಲು ಪತ್ರೋಲ, ದೇಡ ಮಂಡೆ ಸಂಜಾಂವ, ಶಿರಾಲಿಯ ಲಿಂಯಾಂವ, ಭಟ್ಕಳದ ಸಾನಪುತ್ತು, ಮುರುಡೇಶ್ವರ ಮಠದ ಹಿತ್ತಲಿನ ಬಿಕಾರಿ, ಚಂದ್ರ ಹಿತ್ತಲಿನ ಸಂತಿಯಾಗ, ಪೇಟೆ ಹೊಂಡದ ಸಾನಪ್ಪ ಎಂದೆಲ್ಲ ಹತ್ತು ಹನ್ನೆರಡು ಜನ ಈ ವರುಷ ಶಿವಸಾಗರಕ್ಕೆ ಬಂದರು. ಸುತಾರಿ ಜಾನಿ, ಸುತಾರಿ ಫರಾಸ್ಕರೂ ಬಂದರು. ಇವರೆಲ್ಲರಿಗೂ ಶಿವಸಾಗರದಲ್ಲಿ ನೆಂಟರಿದ್ದರು. ಗುರುತು ಪರಿಚಯದವರಿದ್ದರು. ಸಿಮೋನ ಕೇರಿಯಲ್ಲಿ ಒಂದು ಮನೆಯನ್ನೂ ಗೊತ್ತು ಮಾಡಿಕೊಟ್ಟ. ಇಗರ್ಜಿಯ ತಳಪಾಯ ತೋಡುವ ಕೆಲಸ ಪ್ರಾರಂಭವಾಗುತ್ತಿದ್ದಂತೆಯೇ ಪಾದರಿ ಗೋನಸಾಲ್ವಿಸ್ ಪ್ರಾರ್ಥನೆ ಸಲ್ಲಿಸಿದರು. ಕ್ರೀಸ್ತುವರೆಲ್ಲ ಅಂದು ಅಲ್ಲಿ ಸೇರಿದ್ದರು. ಸಮೋಡ್ತಿಯ ಪ್ರಮುಖರೂ ಹಾಜರಿದ್ದರು.
ಪಾದರಿ ಗೋನಸಾಲ್ವಿಸ್ ಇಗರ್ಜಿ ಕಟ್ಟುವುದರತ್ತ ಗಮನ ಹರಿಸಿದ ಹಾಗೆಯೇ ಶಿವಸಾಗರದ ಕ್ರೈಸ್ತ ಸಮೋಡ್ತಿಯನ್ನು ವ್ಯವಸ್ಥಿತವಾಗಿ ರೂಪಿಸಲು ಕ್ರಮ ಕೈಗೊಂಡಿದ್ದರು. ಗೋವೆ, ಕಾರವಾರ, ಹೊನ್ನಾವರಗಳಲ್ಲಿ ಕ್ರೈಸ್ತ ಸಮುದಾಯದ ಒಳಿತಿಗಾಗಿ ದುಡಿಯುವ ಕೆಲ ವ್ಯಕ್ತಿಗಳನ್ನು ಕಾಣಬಹುದಿತ್ತು. ಗುರ್ಕಾರ, ಮಿರೋಣ, ಫ಼ಿರ್ಜಂತ್, ಚಾಮಾದೋರ್ ಎಂದೆಲ್ಲ ಸಮಾಜ ಸೇವಕರು ಇದ್ದರು. ಶಿವಸಾಗರದಲ್ಲಿಯೂ ಈ ವ್ಯವಸ್ಥೆ ಮಾಡಬೇಕಿತ್ತು. ಊರಿಗೊಬ್ಬ ಪಾದರಿ ಇರುತ್ತಾನಾದರು
ಅವನೇ ಎಲ್ಲವನ್ನೂ ಮಾಡಲಾರ. ಜನರ ಆಧ್ಯಾತ್ಮಿಕ ವಿಷಯಗಳನ್ನು ಆತ ಗಮನಿಸಬಹುದು ಲೌಕಿಕ ತಾಪತ್ರಯಗಳನ್ನಲ್ಲ. ಹಾಗೆಯೇ ಜನರ ನಡುವಿನಿಂದ ಕೆಲವರನ್ನು ಆಯ್ಕೆ ಮಾಡಿ ಅವರಿಗೆ ಜವಾಬ್ದಾರಿ ಕೊಟ್ಟರೆ ಜನರಿಗೂ ಸಂತಸವಾಗುತ್ತದೆ. ಹೀಗೆಂದೇ ಸಿಮೋನ ಹಾಗೂ ಬೋನನನ್ನು ಮುಂದಿರಿಸಿಕೊಂಡು ಅವರು ಈ ಕೆಲಸ ಮಾಡಿದರು.
ಸಿಮೋನನಿಗೆ ಊರಿನಲ್ಲಿ ಹೆಚ್ಚು ಗೌರವವಿತ್ತು. ಕೇರಿಯ ಜನ ಅವನ ಮಾತಿಗೆ ಬೆಲೆಕೊಡುತ್ತಿದ್ದರು. ಅವನ ಬಗ್ಗೆ ಗೌರವವಿರಿಸಿಕೊಂಡಿದ್ದರು. ಬಹಳ ವರ್ಷಗಳಿಂದ ಆತ ಶಿವಸಾಗರದಲ್ಲಿ ಇದ್ದುದರಿಂದ ಅವನಿಗೆ ಅಲ್ಲಿಯ ಎಲ್ಲ ಕ್ರೀಸ್ತುವರ ಪರಿಚಯವೂ ಇತ್ತು. ಇಗರ್ಜಿ ದೇವರು, ಧರ್ಮ, ಪಾದರಿಗಳ ಬಗ್ಗೆಯೂ ಅಪಾರವಾದ ಮಮತೆ, ಭಕ್ತಿ ಇರಿಸಿಕೊಂಡಿದ್ದ ಆತ. ಊರ ಕ್ರೀಸುವರು ಅವನನ್ನು ಆಗಲೇ ಹಿರಿಯನೆಂದು ಒಪ್ಪಿಕೊಂಡಿದ್ದರು. ಅವನನ್ನೇ ಗುರ್ಕಾರ ಎಂದು ಕರೆಯಲು ಪಾದರಿ ಬಯಸಿದರು.
“ಇಲ್ಲಿ ಕೊಪೆಲ ಆಗಲಿಕ್ಕೆ ನಿಮ್ಮ ಪ್ರಯತ್ನ ಕಾರಣ. ಮುಂದೆ ಕೂಡ ನೀವೇ ಜನರ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ದೇವರ, ಇಗರ್ಜಿಯ ಸೇವೆ ಮಾಡಬೇಕು.”ಎಂದು ಪಾದರಿ ನುಡಿದಾಗ ಸಿಮೋನ ಮರು ಮಾತನಾಡದೆ ಒಪ್ಪಿಕೊಂಡ. ಪಾದರಿ ಗೋನಸಾಲ್ವಿಸ್ ಸುಳ್ಳನ್ನೇನು ಹೇಳಲಿಲ್ಲ ಅಂದುಕೊಂಡ ಆತ. ಈ ಊರಿಗೆ ದೊಡ್ಡ ಪ್ರಮಾಣದಲ್ಲಿ ಕ್ರೀಸ್ತುವರು ಬರಲು ಇಲ್ಲಿ ಕೊಪೆಲ ಆಗಲು, ಪಾದರಿ ಬರಲು ಕೊಪೆಲಗೊಂದು ನಿವೇಶನ ಸಿಗಲು ತಾನು ಕಾರಣ ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಮುಂದು ಕೂಡ ತನ್ನಿಂದ ಆಗಬೇಕಾದ್ದು ಬಹಳವಿದೆ. ಪಾದರಿಗಳು ತನ್ನನ್ನು ಗುರ್ಕಾರ್ ಪದವಿಗೆ ಆಯ್ಕೆ ಮಾಡಿ ಒಳಿತನ್ನೇ ಮಾಡಿದ್ದಾರೆ ಎಂಬುದು ಅವನ ಅಭಿಪ್ರಾಯವಾಗಿತ್ತು.
ಗುರ್ಕಾರ ನಂತರ ಮಿರೋಣನ ನೇಮಕವಾಗಬೇಕಿದೆ ಎಂದರವರು. ಸಾಮಾನ್ಯವಾಗಿ ಈ ಸ್ಥಾನಕ್ಕೆ ಜನ ತಾವಾಗಿ ಬರುತ್ತಾರೆ. ಇಗರ್ಜಿಯ ಎಲ್ಲ ಚಟುವಟಿಕೆಗಳಿಗೆ ಅಲ್ಲಿ ಹೇಳುವ ಕೀರ್ತನೆಗಳಿಗೆ ಆರಾಧನೆಯ ಸಂದರ್ಭದ ಎಲ್ಲ ಕ್ರಿಯೆಗಳಿಗೆ ಈ ಮಿರೋಣ್ ಪೂರಕನಾಗಿರುತ್ತಾನೆ. ಯಾವ ಸಂದರ್ಭದಲ್ಲಿ ಯಾವ ಕೀರ್ತನೆ ಹೇಳಬೇಕು. ಪಾದರಿಯ ಯಾವ ಮಾತಿಗೆ ಏನು ಉತ್ತರ ಹೇಳಬೇಕು. ಯಾವಾಗ ಮೊಣಕಾಲೂರಬೇಕು. ಯಾವಾಗ ಎದ್ದು ನಿಲ್ಲಬೇಕು ಎಂಬಿತ್ಯಾದಿಗಳ ಸೂಚನೆಯನ್ನು ಈತ ನೀಡುತ್ತಾನೆ. ಮಿರೋಣ್ ವಿದ್ಯಾವಂತನಾಗಿರಬೇಕು. ಇಗರ್ಜಿಯಲ್ಲಿ ಹೇಳುವ ಕೀರ್ತನೆಗಳ ಪರಿಚಯ ಅವನಿಗಿರಬೇಕು. ಜಪ, ಮಂತ್ರ, ಪ್ರಾರ್ಥನೆ ಹೇಳಿ ಕೊಡಬೇಕು. ಇಗರ್ಜಿಗೆ ಬರುವ ಅಷ್ಟೂ ಜನರನ್ನು ತನ್ನ ಹತೋಟಿಯಲ್ಲಿ ಇರಿಸಿಕೊಳ್ಳುವ ಜಾಣ್ಮೆ ಅವನಿಗಿರಬೇಕು. ಇಂತಹ ಜನ ಯಾರಿದ್ದಾರೆ ಎಂದು ಪಾದರಿ ಸಿಮೋನನನ್ನು ಕೇಳಿದರು. ಬಹಳ ಊರುಗಳಲ್ಲಿ ಈ ಎಲ್ಲ ವಿಷಯಗಳಲ್ಲಿ ಅರಿವು ಇರುವಾತ ತಾನಾಗಿ ಮಿರೋಣ ಆಗುತ್ತಾನೆ. ಜನ ಇದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಇಲ್ಲಿ ಇದೇ ತಾನೆ ಊರಿನ ಕ್ರೈಸ್ತ ಸಮುದಾಯ ಚಿಗುರಿಕೊಳ್ಳುತ್ತಿದೆ. ಪಾದರಿಗಳು ಊರಿಗೆ ಹೊಸದಾಗಿ ಬಂದಿದ್ದಾರೆ. ಎಲ್ಲವೂ ಈಗ ಆಗಬೇಕಾಗಿದೆ. ಅಂದರೆ ಮಿರೋಣ್ ಯಾರು?
“ಅಂತಹಾ ವ್ಯಕ್ತಿ ಇಲ್ಲಿ ಯಾರೂ ಇಲ್ಲ ಪದ್ರಾಬ“ಎಂದ ಸಿಮೋನ ಮಾತನ್ನು ಅಲ್ಲಿಗೆ ನಿಲ್ಲಿಸದೆ ಆತ ಮುಂದುವರೆಸಿದ.-
“ಆದರೆ ನಿಮ್ಮ ಕುಜ್ನೇರ ಬೋನ ಈ ಕೆಲಸ ಮಾಡಬಹುದು “ಎಂದ ಸಿಮೋನ.
ಪಾದರಿ ಗೋನಸಾಲ್ವಿಸರಿಗೆ ಸಿಮೋನನ ಮಾತು ಸೂಕ್ತವೆನಿಸಿತು. ಈ ಹಿಂದೆ ಗೋವಾ, ಕಾರವಾರ, ಹೊನ್ನಾವರಗಳ ಇಗರ್ಜಿಯಲ್ಲಿ ಪಿಟೀಲು ಇಲ್ಲವೇ ಪಿಯಾನೋ ಬಾರಿಸುವವರೇ ಕೀರ್ತನೆಗಳನ್ನು ಹಾಡುವ, ಜಪ ಹೇಳಿಕೊಡುವ ಕೆಲಸ ಮಾಡಿಕೊಂಡು ಬರುತ್ತಿದ್ದರು. ಹೀಗಾಗಿ ಬೋನ ಈ ಕೆಲಸಗಳಲ್ಲಿ ತನ್ನನ್ನು ತೊಡಗಿಸಿ ಕೊಳ್ಳುತ್ತಿರಲಿಲ್ಲ.
ಆದರೆ ಆತ ಇಲ್ಲಿಗೆ ಬಂದ ನಂತರ ಎಲ್ಲವನ್ನೂ ಹೊಸದಾಗಿ ಆರಂಭಿಸಬೇಕಿದ್ದರಿಂದ ಗೋನಸಾಲ್ವಿಸ್ ಅವನಿಗೆ ಕೀರ್ತನೆ ಹಾಡುವ ಮಂತ್ರಗಳನ್ನು ಪುನರುಚ್ಚರಿಸುವ ಕೆಲಸ ಮಾಡಲು ತಿಳಿಸಿದ್ದರು. ಆತ ಶೃದ್ಧೆ ಭಕ್ತಿಯಿಂದ ಈ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದ ಕೂಡ. ಆದರೆ ಅವನ ಕೆಲಸ ಬೇರೆಯಾಗಿತ್ತು. ಕುಜ್ನೇರನನ್ನು ಎಲ್ಲಿಯೂ ಯಾರೂ ಮಿರೋಣ ಎಂದು ಕರೆಯುತ್ತಿರಲಿಲ್ಲ. ಈಗ ಕರೆಯಬೇಕೆ ಎಂಬ ಪ್ರಶ್ನೆ ಅವರನ್ನು ಕಾಡುತ್ತಿತ್ತು.
ಮತ್ತೋರ್ವ ಮಿರೋಣ ಎಲ್ಲ ತಿಳಿದವ ಬರುವ ತನಕ ಬೋನಾ ಆ ಕೆಲಸ ಮಾಡಲಿ ಎಂದವರು ವಿಚಾರ ಮಾಡಿದರು.
ಸಿಮೋನ ಬೋನನ ಹೆಸರು ಹೇಳಿದಾಗ-
“ಆಗಲಿ ಎಷ್ಟು ದಿನ ಸಾಧ್ಯವೋ ಅಷ್ಟುದಿನ ಅವನು ಕೆಲಸ ಮಾಡಲಿ“ಎಂದರು.
ಗೋವಾದಲ್ಲಿ ಲಾವೋದ ಎಂಬ ಮತ್ತೊಂದು ಹುದ್ದೆಯಿತ್ತು. ಹಣಕಾಸಿನ ಜವಾಬ್ದಾರಿ ಹೊತ್ತುಕೊಳ್ಳುವವನೂ ಓರ್ವ ಇದ್ದ. ಈ ಹುದ್ದೆಗಳು ಇಲ್ಲಿ ಬೇಡ ಅಂದು ಕೊಂಡರು ಪಾದರಿ. ಆದರೂ ಶಿವಸಾಗರದ ಕ್ರೀಸ್ತುವರ ನಡುವೆ ಸಿಮೋನನ ನಂತರ ಬಲಾಢ್ಯನಾಗಿದ್ದ ಪಾಸ್ಕೋಲ ಮೇಸ್ತ್ರಿಗೆ ಏನಾದರೊಂದು ಪದವಿಕೊಡಬೇಕಿತ್ತು.
“ಪಾಸ್ಕೋಲ ಮೇಸ್ತ್ರಿಯನ್ನ ಈ ಬಾರಿ ಫ಼ಿರ್ಜಂತ ಎಂದು ನೇಮಿಸೋಣ“ಎಂದರು ಗೋನಸಾಲ್ವಿಸ್.
ಇನ್ನು ಮುಂದೆ ವರ್ಷಕ್ಕೊಮ್ಮೆ ಇಗರ್ಜಿ ಹಬ್ಬವನ್ನು ಆಚರಿಸಬೇಕು. ಈ ಹಬ್ಬ ಈ ಫ಼ಿರ್ಜಂತನ ಅಧ್ಯಕ್ಷತೆಯಲ್ಲಿ ನಡೆಯತಕ್ಕದ್ದು. ಮೆರವಣಿಗೆಯಲ್ಲಿ ಅವನನ್ನು ಕರೆತಂದು ಅವನ ಸಮ್ಮುಖದಲ್ಲಿ ಪೂಜೆ ಮತ್ತೊಂದು ನಡೆಯುತ್ತದೆ. ವರ್ಷವೆಲ್ಲ ಅವನಿಗೆ ಗೌರವ ಲಭ್ಯವಾಗುತ್ತದೆ. ಬೇಕೆಂದರೆ ಮುಂದಿನ ವರ್ಷಕ್ಕೆ ಪಿರ್ಜಂತನನ್ನು ಬದಲಾಯಿಸಬಹುದು. ಬೇಡವೆಂದರೆ ಒಬ್ಬನೇ ಮುಂದುವರಿಯಬಹುದು ಎಂದು ಪಾದರಿ ವಿವರಣೆ ನೀಡಿದರು.
ಸಿಮೋನ ಒಂದು ರೀತಿಯಲ್ಲಿ ಗೊಂದಲಕ್ಕೆ ಬಿದ್ದ. ಗುರ್ಕಾರ ದೊಡ್ಡವನೋ ಫ಼ಿರ್ಜಂತ ದೊಡ್ಡವನೋ ತಟ್ಟನೆ ತೀರ್ಮಾನಿಸಲು ಆಗಲಿಲ್ಲ. ತನ್ನ ಊರಿನಲ್ಲಿ ಈ ಎಲ್ಲ ಪದವಿ ಗೌರವಗಳು ಇದ್ದರೂ ಅವುಗಳ ಸ್ಥಾನಮಾನದ ಬಗ್ಗೆ ಅವನಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಇವನು ಅಲ್ಲಿ ಇದ್ದುದೆ ಕಡಿಮೆಯಾದರೆ, ಇವುಗಳ ಬಗ್ಗೆ ಆಸಕ್ತಿಯೂ ಅವನಿಗೆ ಇರಲಿಲ್ಲ. ಯಾರೋ ಗುರ್ಕಾರ್ ಆಗಿ ಯಾರೋ ಫ಼ಿರ್ಜಂತ್ ಆಗಿ ಎಲ್ಲವನ್ನೂ ನಡೆಸಿಕೊಂಡು ಹೋಗುತ್ತಿದ್ದರು. ಈಗ ಈ ಪದವಿ, ಗೌರವ ತನಗೇನೆ ಲಭ್ಯವಾದಾಗ ಆತ ಯೋಚಿಸಬೇಕಾಯಿತು. ಮಾತಿನ ನಡುವೆಯೇ ಫ಼ಿರ್ಜಂತಿಗಿಂತ ಗುರ್ಕಾರನ ಹುದ್ದೆಗೆ ಗೌರವ ಹೆಚ್ಚು ಎಂಬುದನ್ನು ಆತ ಕಂಡುಕೊಂಡ.
ಕೊನೆಯದಾಗಿ
“ಚಾಮಾದೋರ್ ಯಾರು?“ಎಂದು ಪಾದರಿ ಸಿಮೋನನ ಮುಖ ನೋಡಿದರು.
ಈತ ತಳವಾರ ಇದ್ದ ಹಾಗೆ. ಇಗರ್ಜಿಗೆ ಸಂಬಂಧಪಟ್ಟ ಸುದ್ದಿಗಳನ್ನು ಜನರಿಗೆ ತಿಳಿಸುವಾತ: ಮರಣದ ಸುದ್ದಿ, ಎಷ್ಟು ಹೊತ್ತಿಗೆ ಶವವನ್ನು ಮಣ್ಣು ಮಾಡಲಾಗುತ್ತದೆ, ಎಂಬ ಸುದ್ದಿ, ಮದುವೆಯ ಕರೆ ನೀಡುವುದು. ಜೂಂತ ಇದ್ದಾಗ ಜನರನ್ನು ಅದಕ್ಕೆ ಕರೆತರುವುದು ಇವನ ಕೆಲಸ. ಈತ ಚೂಟಿಯಾಗಿರಬೇಕು, ವಿಧೇಯನಾಗಿರಬೇಕು. ನಮ್ರನಾಗಿರಬೇಕು. ಹೀಗಿರುವವರು ಯಾರಿದ್ದಾರೆ?
ಈತ ಸೇವಕನಾಗಿರುವುದರಿಂದ ಶ್ರೀಮಂತನೂ ಆಗಿರಬಾರದು. ಇಂತಹ ಕೆಲಸ ಮಾಡಲು ಹಿಂಜರಿಯುವವ, ನಾಚಿಕೊಳ್ಳುವವ ಆಗಿರಬಾರದು. ಈ ಕೆಲಸ ಮಾಡಿದ್ದಕ್ಕೆ ಸಂಬಂಧಪಟ್ಟವರು ಹಣ ಕೊಡುತ್ತಾರೆ. ಇಗರ್ಜಿಯಿಂದಲೂ ಹಣ ಸಂದಾಯವಾಗುತ್ತದೆ. ಆದರೆ ಕೆಲಸಮಾಡುವವರು ಬೇಕಲ್ಲ.
“ಬಾವಿ ಕಟ್ಟೆ ಇಂತ್ರು ಆಗಬಹುದೇನೋ“ಎಂದ ಸಿಮೋನ.
ಕೊಪೆಲನ ಒಂದು ಪಾರ್ಶ್ವದ ಸಾಲು ಮನೆಗಳಲ್ಲಿ ಮೊದಲನೆಯ ಮನೆ ಸಿಮೋನನದಾದರೆ ಇನ್ನೊಂದು ಪಾರ್ಶ್ವದ ಮೊದಲ ಮನೆ ಇಂತ್ರುವಿನದು. ಈ ಇಂತ್ರು ಶಿವಸಾಗರಕ್ಕೆ ಬರಲು ಕೂಡ ಸಿಮೋನ ಕಾರಣ. ಇಂತ್ರು ಒಳ್ಳೆಯ ಕೆಲಸಗಾರ. ಸ್ನೇಹ ಜೀವಿ. ಆದರೆ ತುಂಬಾ ಭೋಳೆ ಸ್ವಭಾವದವ. ಇವನ ಅಣ್ಣ ಇವನ ಪಾಲಿನ ಆಸ್ತಿಯನ್ನೆಲ್ಲ ತನ್ನದನ್ನಾಗಿ ಮಾಡಿಕೊಂಡು ಇವನಿಗೆ ಏನೂ ಇಲ್ಲ ಎಂದು ಮಾಡಿದಾಗ ಈತ ಸಿಮೋನನ ಜತೆ ಘಟ್ಟ ಹತ್ತಿದ. ಹೀಗೆ ಬಂದವ ಮತ್ತೆ ಊರಿಗೆ ಹೋಗಲಿಲ್ಲ.
“ಊರಿಗೆ ಬರತಿಯೇನೋ ಇಂತ್ರು “ಎಂದು ಕೇಳಿದರೆ-
“..ಇಲ್ಲ ಯಾಕೆ ಬರಲಿ?“ಎಂದು ಕೇಳುತ್ತಿದ್ದ.
ಸಿಮೋನ ಒಂದು ದಿನ ಕೂರಿಸಿಕೊಂಡು
“ಇಂತ್ರು ನಿನ್ನ ಅಣ್ಣ ನಿನಗೆ ಮೋಸ ಮಾಡಿದ. ಅವನ ಮೇಲೆ ಒಂದು ಖಟ್ಲೆ ಹಾಕು..ಕೋರ್ಟಿಗೆ ಎಳಿ“ಎಂದರೂ ಇಂತ್ರ ತಣ್ಣಗೆ
“ದೇವರಿದಾನೆ ಬಿಡಿ ಸಿಮೋನ ಮಾಮಾ, ಕೋರ್ಟು ಖಟ್ಲೆಯಾಕೆ?“ಎಂದು ಮರು ಪ್ರಶ್ನೆ ಮಾಡಿದ್ದ.
ಇಂತ್ರು ಕೆಲಸ ಮಾಡುವುದರಲ್ಲಿ ಪ್ರಾಮಾಣಿಕ. ಇದು ಮಾಡು ಅಂದರೆ ಅದನ್ನು ಮಾಡುತ್ತಾನೆ. ಕೆಲಸ ನಡೆಯುವಲ್ಲಿ ಕಲ್ಲು ಕಟ್ಟುತ್ತಾನೆ. ಕಲ್ಲು ಹೋರುತ್ತಾನೆ. ಮಣ್ಣು ಕಲಿಸುತ್ತಾನೆ. ಮಣ್ಣು ತಂದುಕೊಡುತ್ತಾನೆ. ನೀರು ಸೇದುತ್ತಾನೆ. ಗಾರೆ ಅರೆಯಲು ಎತ್ತು ಹೂಡಿದರೆ ಎತ್ತುಗಳನ್ನು ಹೊಡೆಯುತ್ತಾನೆ. ಕೊನೆಗೆ ಹೊಸದಾಗಿ ಮಾಡಿದ ಸಿಮಿತ್ರಿಯಲ್ಲಿ ಯಾರನ್ನಾದರೂ ಹುಗಿಯಬೇಕೆಂದರೆ ಹೊಂಡ ತೋಡಲು ಓಡುತ್ತಾನೆ. ಸತ್ತವರ ಶವ ಸಂಸ್ಕಾರವಾಗುವ ತನಕ ಇದ್ದು ಎಲ್ಲ ರೀತಿಯಲ್ಲಿ ನೆರವಾಗುತ್ತಾನೆ.
“ಆಯ್ತು..“ಎಂದರು ಪಾದರಿ ಗೋನಸಾಲ್ವಿಸ್.
*
*
*
ಮುಂದಿನ ಭಾನುವಾರವೇ ಕೊಪೆಲನಲ್ಲಿ ಹೊಸ ಪ್ರಕಟಣೆ ಕೂಡ ಆಯಿತು. ಇನ್ನು ಮುಂದೆ ಕ್ರೈಸ್ತ ಸಮುದಾಯದ ಏಕತೆ, ಅಭಿವೃದ್ದಿಗಾಗಿ ಕೆಲವರನ್ನು ಆಯ್ಕೆ ಮಾಡಲಾಗಿದೆ. ಸಮಸ್ತ ಜನ ಅವರೊಂದಿಗೆ ಸಹಕರಿಸಬೇಕು ಎಂದು ಪಾದರಿ ವಿನಂತಿ ಮಾಡಿಕೊಂಡರು. ಗುರ್ಕಾರ, ಫ಼ಿರ್ಜಂತ, ಚಮಾದೋರ, ಮಿರೋಣ ಮುಂತಾದ ಹೆಸರು ಹುದ್ದೆಗಳು ಜನರಿಗೆ ಪರಿಚಿತವಾಗಿದ್ದವು. ಮುರುಡೇಶ್ವರ, ಹೊನ್ನಾವರ, ಅಂಕೋಲ ಮತ್ತಿತರ ಊರುಗಳಲ್ಲಿ ಇವರೆಲ್ಲ ಇದ್ದರು. ಇವರ ಕಾರ್ಯಕ್ಷೇತ್ರಗಳ ಪರಿಚಯವೂ ಜನರಿಗಿತ್ತು.ಆದರೆ ಇಲ್ಲಿ ಇವರಾರೂ ಇರಲಿಲ್ಲ. ಈವರೆಗೆ ಶಿವಸಾಗರದ ಕ್ರೈಸ್ತ ಸಮುದಾಯ ನಿಜಕ್ಕೂ ಯಾರ ಗಣನೆಗೂ ಬಂದಿರಲಿಲ್ಲ. ನಾವೆಲ್ಲ ಒಂದು ಎಂಬ ಭಾವನೆಯೂ ಜನರಲ್ಲಿ ಮೂಡಿರಲಿಲ್ಲ. ಘಟ್ಟದ ಕೆಳಗಿನಿಂದ ಬಂದು ನಾಲ್ಕು ದಿನ ಇದ್ದು ನಾಲ್ಕು ಕಾಸು ಸಂಪಾದಿಸಿಕೊಂಡು ಹೋಗುವುದು ಎಂಬ ಲೆಕ್ಕದಲ್ಲಿಯೇ ಜನ ಇದ್ದರು. ನಾನು ಭಟ್ಕಳದವ, ನಾನು ಶಿರಾಲಿಯವ, ನಾನು ಅಂಕೋಲದವ ಎಂದು ಬೇರೆ ಊರುಗಳ ಹೆಸರನ್ನು ಹೇಳುತ್ತಿದ್ದರಲ್ಲದೆ ನಾವು ಶಿವಸಾಗರದವರು ಎಂಬ ಮಾತು ಬಾಯಲ್ಲಿ ಬರುತ್ತಿರಲಿಲ್ಲ. ಇಲ್ಲಿ ಬಂದು ಮನೆ ಮಾಡಿದ ನಂತರವೂ ಬೆಕ್ಕಿನ ಬಿಡಾರ ಬೇರೆ ಅನ್ನುವ ಹಾಗೆ ಎಲ್ಲ ಇದ್ದರು. ಆದರೆ ಈಗ ಈ ಅಭಿಪ್ರಾಯ ಬದಲಾಯಿತು.
ಸಿಮೋನನನ್ನು ಗುರ್ಕಾರ ಎಂದು ಎಲ್ಲರೂ ಒಪ್ಪಿಕೊಂಡರು.
“ಊರಿನ ಹಿರಿಯ…ಅವರಲ್ಲದೆ ಬೇರೆ ಯಾರು ಆಗಲಿಕ್ಕೆ ಸಾಧ್ಯ?“ಎಂದು ತಲೆದೂಗಿದರು.
ಬೋನ ಈಗ ಮಿರೋಣ ಎಂದಾಗಲೂ ಯಾರೂ ತಕರಾರು ಮಾಡಲಿಲ್ಲ. ಈಗಾಗಲೇ ಅವನು ಇಲ್ಲಿ ’ಲಾನ ಪದ್ರಬಾ’(ಸಣ್ಣ ಪಾದರಿ) ಎಂಬ ಹೆಸರು ಪಡೆದಿದ್ದ. ಚಮಾದೋರನ ಕೆಲಸವನ್ನು ಇಂತ್ರು ಮಾಡುತ್ತಾನೆ ಎಂದಾಗ.
“ಹಂ…ಸರಿಯಾಗಿ ಹುಡುಕಿದಾರೆ ಇವನನ್ನು“ಎಂದರು.
ಆದರೆ ಪಾಸ್ಕೋಲ ಮೇಸ್ತ್ರಿ ಫ಼ಿರ್ಜಂತ ಎಂದಾಗ ಕೆಲವರ ಮುಖದ ಮೇಲೆ ಗಂಟುಗಳು ಬಿದ್ದವು. ಹಣೆಯಲ್ಲಿ ಗೆರೆಗಳು ಮೂಡಿದವು.
“ಯಾಕೆ ಕೈತಾನ ಇದಾನೆ, ಬಾಲ್ತಿದಾರ ಇದಾನೆ..ಇನಾಸ ಇದಾನೆ..“ಎಂದು ಅಪಸ್ವರವೆತ್ತಿದರು.
“ಒಂದು ವರ್ಷ ಅಲ್ವ..ಈ ಬಾರಿ ಹಬ್ಬ ಆದರೆ..ಬೇರೆ ಫ಼ಿರ್ಜಂತ..ಇದೇನು ಶಾಶ್ವತ ಅಲ್ಲ ಬಿಡಿ..“ಎಂದು ತಮಗೆ ತಾವೇ ಸಮಾಧಾನ ಹೇಳಿಕೊಂಡರು.
ಆದರೆ ಸಿಮೋನನನ್ನು ಗುರ್ಕಾರನನ್ನಾಗಿ ಮಾಡಿದ್ದು ಪಾಸ್ಕೋಲನಿಗೆ ಹಿಡಿಸಲಿಲ್ಲ.
“ಅವನಿಗೆ ಅದೇನು ಗೊತ್ತಿದೆ ಅಂತ ಈ ಪದವಿ?..ಅವನು ಇಗರ್ಜಿಗೆ ಏನು ಮಾಡಿದನಂತೆ..”
ಎಂದೆಲ್ಲ ಆತ ಮನೆ ಜಗಲಿಯ ಮೇಲೆ ನಿಂತು ಗೊಣಗಿದ. ಅವನ ಹೆಂಡತಿ ರೀತಾ-
“ಹೋಗಲಿ ಬಿಡಿ..ಪಾದರಿಗಳ ಮಾತಿಗೆ ಹೀಗೆಲ್ಲ ಅಡ್ಡ ಹೇಳಬಾರದು.ಊರೇ ಒಪ್ಪಿಕೊಂಡಿರುವಾಗ ನಮ್ಮದೇನು?“ಎಂದಳು.
ಪಾಸ್ಕೋಲ ಸುಮ್ಮನಾದ. ಹೇಗೂ ಅವನಿಗೂ ಒಂದು ಗೌರವದ ಸ್ಥಾನ ದೊರಕಿತ್ತಲ್ಲ.
*
*
*
ಜಂಬಿಟ್ಟಿಗೆ ಕಲ್ಲಿನ ಗೋಡೆಗಳು, ಕಂಬ, ಕಮಾನುಗಳು ಏಳುತ್ತಿರಲು ಈ ಮಳೆಗಾಲ ಬರುವಷ್ಟರಲ್ಲಿ ತೊಲೆ ಏರಿಸಿ, ಪಟ್ಟಿ ಹೊಡೆದು ಹಂಚು ಹೊದೆಸಿ ಬಿಡಬೇಕೆಂದು ಸುತಾರಿಗಳು ಕೆಲಸ ಮಾಡತೊಡಗಿದರು. ಗೋನಸಾಲ್ವಿಸರ ಪ್ರಯತ್ನದಿಂದ ಹಣ ಯಥೇಚ್ಚವಾಗಿ ಹರಿದು ಬಂದಿತು. ಕಲ್ಲು, ಮರ, ಸುಣ್ಣ, ಮರಳು ಎಂದು ಬೇಕಾದ ಸಾಮಾನು ಬಂದು ರಾಶಿ ಬಿದ್ದಿತು. ಕೂಲಿಯವರು ಮೈಬಗ್ಗಿಸಿ ದುಡಿದರು. ಪಾದರಿ ನಿಲುವಂಗಿ ಮೇಲೆತ್ತಿ ಕಟ್ಟಿಕೊಂಡು ಅಲ್ಲಿಯೇ ನಿಂತರು. ಸಿಮೋನ ಬೇರೆ ಕೆಲಸಗಳನ್ನು ನೋಡಿಕೊಳ್ಳಲು ತನ್ನ ಮಗ ವಿಕ್ಟರಗೆ ಹೇಳಿ ಇಗರ್ಜಿಯ ಬಳಿಯೇ ಉಳಿದುಬಿಟ್ಟ.
ಈ ನಡುವೆ ಎರಡು ಘಟನೆಗಳು ಅಲ್ಲಿ ನಡೆದವು. ಒಂದು ಸುತಾರಿ ಇನಾಸನ ಮನೆಯ ಮುಂದೆ ದೇವರ ಶಿಲುಬೆ ನಿಲ್ಲಿಸಿದ್ದು. ಎರಡನೆಯದು ಸಾಂತಾ ಮೊರಿ ಮಗಳನ್ನು ಜಾತಿಕಟ್ ಮಾಡಿದ್ದು.
ಇಗರ್ಜಿ ಜಾಗದಲ್ಲಿ ಬೇಲಿ ಹಾಕಿ ಕಂದಕ ತೋಡಿ ಜನ ಒಳಗೆ ಬಾರದಂತೆ ಮಾಡಿದ್ದು ಫಲಕಾರಿಯಾಯಿತು. ಕ್ರೀಸ್ತುವರು ಔಡಲ ಮರದ ಚೌಡಿಯನ್ನು ನಿಧಾನವಾಗಿ ಮರೆತರು. ಚೌಡಿ ಬನಕ್ಕೆ ಹೋಗಬೇಕೆಂದರೆ ಕೊಪೆಲ ಮುಂಬದಿಯಿಂದಲೇ ಹೋಗಬೇಕಾದ್ದು ಅನಿವಾರ್ಯವಾಗಿ ಜನ ಈ ಧೈರ್ಯ ಮಾಡಲಿಲ್ಲ. ಪ್ರತಿ ಭಾನುವಾರ ಪಾದರಿ ಕೊಪೆಲನಲ್ಲಿ ಏಕ ಮಾತ್ರ ನಿಜ ದೇವರನ್ನು ನಂಬಿರಿ ಎಂದು ದೇವರ ಹತ್ತು ಕಟ್ಟಳೆಗಳಲ್ಲಿ ಮೊದಲನೆಯದರ ಬಗ್ಗೆ ಹೇಳಿ ಹೇಳಿ ಜನ ಬೇರೊಂದು ದೇವರನ್ನು ಮರೆತರು.
ಬೇಲಿ ಹಾಕುವಾಗ ಪಾದರಿಗಳಿಗೆ ಒಂದು ಭಯವಿತ್ತು. ಚೌಡಿಯನ್ನು ನಂಬುವ , ಪೂಜಿಸುವ ಇತರೇ ಜನ ಈ ಬೇಲಿಗೆ ತಕರಾರು ಮಾಡಬಹುದೇ? ಏಕೆಂದರೆ ಈ ದೇವರನ್ನು ಸ್ಥಾಪಿಸಿಕೊಂಡದ್ದೇ ಆ ಜನ. ಅವರ ನಂಬಿಕೆ ಆರಾಧನೆಗೆ ತೊಂದರೆಯಾಗಿ ಅವರು ಇವರ ಕ್ರಮದ ವಿರುದ್ಧ ಪ್ರತಿಭಟಿಸಿದರೆ? ಆದರೆ ಅಲ್ಲಿ ಬೇಲಿ ಎದ್ದು ನಿಂತ ನಂತರ ಯಾರೂ ತೊಂದರೆ ಮಾಡಲಿಲ್ಲ. ಜಿಲ್ಲೆಯಿಂದ ಮೆಗ್ಗಾನ ಸಾಹೇಬರು ಸ್ವತಃ ಇಗರ್ಜಿಗೆ ಬಂದದ್ದು. ಆ ಜಾಗವನ್ನು ಮಂಜೂರು ಮಾಡಿದ್ದು. ಸರಕಾರವೇ ಆಗಿರುವ ಮೆಗ್ಗಾನ ಸಾಹೇಬರು ಇಗರ್ಜಿಯ ಪರ ಇರುವುದು ಈ ಸಾಮಾನ್ಯ ಜನರಿಗೆ ಭೀತಿಯನ್ನುಂಟು ಮಾಡಿತ್ತು. ಆದರೂ ಪಾದರಿ ಗೋನಸಾಲ್ವಿಸರು ಎಂದಿಗೂ ಮರೆಯಲಾರದಂತಹ ಒಂದು ಘಟನೆ ಮಾತ್ರ ನಡೆಯಿತು.
ಗಾಡಿ ಮಂಜಣ್ಣನ ತಾಯಿ ರುದ್ರಮ್ಮ ಯಾವತ್ತಿನಿಂದಲೂ ಗೋನಸಾಲ್ವಿಸರ ಗಮನ ಸೆಳೆದಿದ್ದಳು. ಕ್ರೀಸ್ತುವರ ಮನೆಗಳಲ್ಲಿ ತಿರುಗಾಡಿಕೊಂಡಿದ್ದ ಈ ಹೆಂಗಸನ್ನು ಕೂಡ ತಮ್ಮವಳೇ ಅಂದುಕೊಂಡಿದ್ದರು ಪಾದರಿ. ಒಂದು ಬಾರಿ ಕುತೂಹಲ ತಡೆಯಲಾರದೆ-
“ಸಿಮೋನ….ಈಕೆಗೆ ಯಾರ ಮನೆಯಾಯಿತು?“ಎಂದು ಕೆಳಿದ್ದರು.
ಈಕೆ ಬಾಲ್ತಿದಾರನ ಇಲ್ಲವೇ ಕೈತಾನನ ತಾಯಿ ಇರಬೇಕು ಎಂಬುದು ಅವರ ವಾದ. ಅವರ ಪ್ರಶ್ನೆಗೆ ಸಿಮೋನ-
“ಇವಳು ನಮ್ಮ ಗಾಡಿ ಮಂಜನ ತಾಯಿ ರುದ್ರಮ್ಮ..“ಎಂದಾಗ ಅವರು-
“ಹೌದಾ..“ಎಂದು ಸುಮ್ಮನಾಗಿದ್ದರು.
ಆದರೂ ಅವಳ ವರ್ತನೆ, ಮನೋಭಾವ ಅವರನ್ನು ಆಕರ್ಷಿಸಿತ್ತು. ಕೇರಿಯಲ್ಲಿ ಯಾರಿಗೆ ಏನೇ ಆಗಲಿ ಅದು ತನಗೇ ಆದಂತೆ ಆತಂಕಪಡುತ್ತಿದ್ದಳು ಈಕೆ.
ಇಗರ್ಜಿಯ ಸುತ್ತ ಬೇಲಿ ಎದ್ದು ನಿಂತು ಎಂಟು ದಿನಗಳಾಗಿದ್ದವು. ಪಾದರಿ ಮುಂದಿನ ದಣಪೆಗೆ ಕಂಬ ಹುಗಿದು ದನಕರು ಒಳಗೆ ಬಾರದಂತೆ ವ್ಯವಸ್ಥೆ ಮಾಡುತ್ತಿದ್ದರು. ಕೇರಿಯ ಒಂದಿಬ್ಬರು ಹುಡುಗರು ಜತೆಗಿದ್ದರು.
ಆಗ ರುದ್ರಮ್ಮ ಕೊಪೆಲನ ಎದುರು ಕಾಣಿಸಿಕೊಂಡಳು.
ಎಂದಿನಂತೆ ಗೋನಸಾಲ್ವಿಸರತ್ತ ತಿರುಗಿ-
“ನಮಸ್ಕಾರ ಬುದ್ಧಿ“ಎಂದವಳು ಕೈ ಮುಗಿದಳು.
ಎಲೆ ಅಡಿಕೆ ತಿಂದು ಕಪ್ಪು ವರ್ಣಕ್ಕೆ ತಿರಗಿದ ಅವಳ ಹಲ್ಲುಗಳನ್ನೇ ನೋಡುತ್ತ ಪಾದರಿ ಗೋನಸಾಲ್ವಿಸ್.
“ಹಂ…ಹಂ..“ಎಂದು ನಮಸ್ಕಾರಕ್ಕೆ ಪ್ರತಿಯಾಗಿ ಕೈ ಎತ್ತಿದರು.
ಅವರು ರುದ್ರಮ್ಮನ ಕೈಯಲ್ಲಿ ಒಂದು ತೆಂಗಿನಕಾಯಿ ಊದಿನಕಡ್ಡಿ ಇರುವುದನ್ನು ಕಂಡರು. ಒಂದು ಕ್ಷಣ ಅವರಿಗೆ ದಿಗಿಲಾಯಿತು. ಹೀಗೆಂದೇ ಅವರು-
“..ಏನು ಏನು ರುದ್ರಮ್ಮ?” ಎಂದು ಕೇಳಿದರು.
ನಮ್ಮ ಮಂಜನ ಮಗ ರಾತ್ರಿ ಎಲ್ಲ ಕಿರಿಕಿರಿ ಮಾಡತಿದೆ..ನಿದ್ದೆ ಮಾಡಲ್ಲ..ಊಟ ಮಾಡಲ್ಲ..ಏನಾರ ಗಾಳಿಗೀಳಿ ತಾಗೈತೇನೋ..”
ತನ್ನ ಪಾಡಿಗೆ ತಾನೇ ಮಾತನಾಡಿಕೊಳ್ಳುವಂತೆ ನುಡಿಯುತ್ತ ಅವಳು ದಣಪೆ ದಾಟಿದಳು.
ಆಗ ಪಾದರಿ ಗೋನಸ್ವಾಲಿಸರಿಗೆ ಒಂದು ವಿಷಯ ಖಚಿತವಾಗಿ ಹೋಯಿತು. ಈಕೆ ತೆಂಗಿನಕಾಯಿ ಊದಿನಕಡ್ಡಿ ಹಿಡಿದು ಚೌಡಿ ಬನಕ್ಕೇನೆ ಹೋಗುತ್ತಿದ್ದಾಳೆ. ದಣಪೆ ಹಾದು ಕೊಪೆಲ ಮುಂದಿನಿಂದ ಇವಳು ಅಲ್ಲಿಗೆ ಹೋಗಿ ದೇವರಿಗೆ ಊದಿನ ಕಡ್ಡಿ ಹಚ್ಚಿ ತೆಂಗಿನಕಾಯಿ ಒಡೆದು ಕೈ ಮುಗಿದು ಬರುತ್ತಾಳೆ. ಎಂದರೆ ಉಳಿದ ಜನರೂ ಇವಳನ್ನು ಅನುಸರಿಸಿ ಬಿಟ್ಟರೆ! ಬೇಲಿ ಕಟ್ಟಿ ತಾನು ಮುಚ್ಚಿದ ದಾರಿ ಇಲ್ಲಿ ತೆರೆದುಕೊಂಡರೆ? ಅವರು ಗಾಬರಿಗೊಂಡರು. ತಮ್ಮ ಪ್ರಯತ್ನವೆಲ್ಲ ಅಸಫಲವಾಯಿತಲ್ಲ ಎಂದು ಪೇಚಾಡಿಕೊಂಡರು.
ದಣಪೆ ದಾಟಿ ಕೊಪೆಲಿನತ್ತ ಹೊರಟ ಆ ಹೆಂಗಸನ್ನು ತಡೆಯಲು ಕೂಡ ಅವರಿಂದ ಆಗಲಿಲ್ಲ. ಹೇಗೆ ತಡೆಯುವುದು? ಏನೆಂದು ತಡೆಯುವುದು? ಅವರು ದಿಕ್ಕುಗಾಣದೆ ಯೋಚಿಸುತ್ತ ನಿಂತಿರಲು ರುದ್ರಮ್ಮ ಕೊಪೆಲ ಬಾಗಿಲ ಬಳಿ ಒಂದು ಕ್ಷಣ ನಿಂತಳು. ಹೀಗೆ ನಿಂತವಳು ಅದನ್ನು ದಾಟಿ ಮುಂದೆ ನಾಲ್ಕು ಹೆಜ್ಜೆ ಇರಿಸಿದಳು. ಮತ್ತೆ ನಿಂತಳು.
ಪಾದರಿ ಗೋನಸ್ವಾಲಿಸ್ ನೋಡುತ್ತಿರಲು ರುದ್ರಮ್ಮ ಕೊಪೆಲನ ಒಳಗೆ ಕಾಲಿರಿಸಿದಳು.
ಪಾದರಿ ಗೋನಸ್ವಾಲಿಸ್ ಮತ್ತೂ ಗೊಂದಲಕ್ಕೆ ಒಳಗಾದರು. ದಣಪೆಯ ಬಳಿಯಿಂದ ಅವರು ಕೊಪೆಲಿನತ್ತ ಹೆಜ್ಜೆ ಹಾಕಿದರು.
ರುದ್ರಮ್ಮ ದೇವರ ಪೀಠದತ್ತ ತಿರುಗಿ ಕೈ ಮುಗಿದಳು. ಅಲ್ಲಿಯೇ ಉರಿಯುತ್ತಿದ್ದ ಮೇಣದ ಬತ್ತಿಯಿಂದ ಊದಿನ ಕಡ್ಡಿ ಹೊತ್ತಿಸಿದಳು. ಅದನ್ನು ಕೈಯಲ್ಲಿ ಹಿಡಿದು ಮತ್ತೆ ಕೈ ಮುಗಿದಳು. ತೆಂಗಿನಕಾಯನ್ನು ಸಂತ ಜೋಸೆಫ಼ರ ಪ್ರತಿಮೆಯ ಮುಂದೆ ಇಟ್ಟು ಊದಿನ ಕಡ್ಡಿಯನ್ನು ಗೋಡೆಗೆ ಸಿಕ್ಕಿಸಿದಳು.
ಮೊಣಕಾಲೂರಿ ಹಣೆಯನ್ನು ನೆಲಕ್ಕೆ ಹಚ್ಚಿ ಮತ್ತೆ ನಮಸ್ಕರಿಸಿದಳು.
ನಿಂತು ಕೆನ್ನೆ ತಟ್ಟಿಕೊಂಡಳು.
ಅವಳ ತುಟಿಗಳು ಅಲುಗಾಡಿದವು.
ಭಯ ಭಕ್ತಿಯಿಂದ ಕೊಪೆಲನ ಹೊರ ಬಂದಳು. ಪಾದರಿ ಗೋನಸ್ವಾಲಿಸರು ಕೊಪೆಲ ಮುಂದಿನ ಚಪ್ಪರದ ಅಡಿಯಲ್ಲಿ ನಿಂತಿರಲು ಪಾದರಿಗಳತ್ತ ತಿರುಗಿ-
“..ಎಲ್ಲ ದೇವ್ರು ಒಂದೇ ಅಲ್ವಾ..?” ಎಂದು ಹೇಳುತ್ತ ಅವಳು ದಣಪೆಯತ್ತ ನಡೆದಳು.
ಅವಳು ಹಚ್ಚಿದ ಊದಿನಕಡ್ಡಿಯ ಪರಿಮಳ ಕೊಪೆಲನ ಒಳಗಿನಿಂದ ಬಂದು ಚಪ್ಪರದಲ್ಲಿ ನಿಂತ ಪಾದರಿ ಗೋನಸ್ವಾಲಿಸ್ ರನ್ನು ತಲುಪಿತು.
ಅವಳ ಮಾತುಗಳನ್ನೇ ಮೆಲುಕು ಹಾಕುತ್ತ ಬಹಳ ಹೊತ್ತಿನವರೆಗೂ ಪಾದರಿ ಅಲ್ಲಿ ನಿಂತಿದ್ದರು.
ಇಷ್ಟಾದರೂ ಇನಾಸನ ಮನೆಯ ಅಂಗಳದಲ್ಲಿಯ ಕಲ್ಲು ಕುಟಿಗನನ್ನು ಮರೆಯಲು ಅವರಿಂದ ಆಗಲಿಲ್ಲ.
*****
ಮುಂದುವರೆಯುವುದು

ಕೀಲಿಕರಣ ದೋಷ ತಿದ್ದುಪಡಿ: ಮೀರಾ ಗಣಪತಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.