ಈಗೀಗ ಇನಾಸ ತನ್ನ ಮನೆ ಅಂಗಳಕ್ಕೆ ಬರುವ ಭಕ್ತರು ಅಧಿಕವಾಗುತ್ತಿದುದನ್ನು ಗಮನಿಸುತ್ತ ಬಂದಿದ್ದ. ಇನಾಸ ಅವರನ್ನು ಬರಬೇಡಿ ಎಂದು ತಡೆಯಲಾರ.. ಕಾರಣ ಎಲ್ಲ ಬೇಕಾದವರು. ಊರು ಕೇರಿಯವರು. ಹಿಂದಿನಿಂದಲೂ ಈ ದೇವರನ್ನು ನಂಬಿಕೊಂಡು ಬಂದವರು. ಅಲ್ಲದೆ ಇನಾಸ ಅವನ ಹೆಂಡತಿ ಮಕ್ಕಳಿಗೂ ಈ ದೇವರು ಬೇಕು. ಬಹಳ ದಿನಗಳಿಂದ ಅವರು ಈ ಕಲ್ಲು ಕುಟಿಗನನ್ನು ನಂಬಿಕೊಂಡು ಬಂದಿದ್ದರು.
ಪಾದರಿ ಊರಿಗೆ ಬಂದ ಮೇಲೆ ಇನಾಸನ ಮನಸ್ಸಿನಲ್ಲಿ ಅಳುಕು ಬಲವಾಗುತ್ತ ಹೋಯಿತು. ತಾನು ನಿಜದೇವನಾದ ಕ್ರೈಸ್ತನನ್ನು ನಂಬುತ್ತ ಈ ಕಲ್ಲು ದೇವರಿಗೆ ಕೈ ಮುಗಿಯುತ್ತೇನಲ್ಲ ಎಂದು ಆತ ಕೊರಗುವುದಿತ್ತು. ಪ್ರತಿ ಬಾರಿ ಪಾಪನಿವೇದನೆಗೆ ಹೋದಾಗ ಈ ವಿಷಯ ಹೇಳಿ ಪಶ್ಚಾತಾಪ ಪಡುತ್ತಿದ್ದ.
“..ಈ ಇಬ್ಬರು ಯಜಮಾನರ ಸೇವೆ ಮಾಡುವುದನ್ನು ಬಿಡು” ಎಂದು ಹೇಳುತ್ತಿದ್ದರು ಪಾದರಿ.
ಕ್ರಮೇಣ ಈ ದೇವರಿಂದ ದೂರವಾಗಬೇಕು ಎಂದು ಯತ್ನಿಸಿದ್ದ. ಊದಿನ ಕಡ್ಡಿ ಹಚ್ಚಿ ಕೈ ಮುಗಿಯುವುದನ್ನು ಕಡಿಮೆ ಮಾಡಿದ್ದ. ಆಗಲೇ ಪಾದರಿ ಗೋನಸ್ವಾಲಿಸ್ ಒಂದು ದಾರಿ ತೋರಿಸಿದರು.
ಹೊಸ ಇಗರ್ಜಿಯ ಮರಗೆಲಸ ಮಾಡಲೆಂದು ಅಲ್ಲಿಗೆ ಹೋದಾಗ ಪಾದರಿ ಅವನನ್ನು ಕರೆದರು.
ಕಿವಿಗೆ ಬಳಪದ ಕಡ್ಡಿ ಸಿಕ್ಕಿಸಿಕೊಂಡು ಇನಾಸ ಹೋಗಿ ಅವರೆದುರು ನಿಂತ.
“..ಬಾ ಇನಾಸ..” ಎಂದರವರು.
“ಇಲ್ಲಿ ಇಗರ್ಜಿಯಂತೂ ಆಗತಿದೆ..ಜೊತೆಗೇನೆ ಕೇರಿಲಿ ಅಲ್ಲಿ ಇಲ್ಲಿ ಒಂದೊಂದು ಶಿಲುಬೆ ನಿಲ್ಲಿಸೋಣ ಅಂತ ಯೋಚನೆ ಮಾಡತಿದ್ದಿನಿ.” ಎಂದರವರು.
ಅಲ್ಲಲ್ಲಿ ಶಿಲುಬೆ ನಿಲ್ಲಿಸುವುದು ಘಟ್ಟದ ಕೆಳಗೆ ಸಾಮಾನ್ಯ ವಿಷಯವಾಗಿತ್ತು. ಕ್ರೀಸ್ತುವರ ಪ್ರತಿ ಮನೆಯ ಮುಂದೆ ಒಂದು ಶಿಲುಬೆ. ಗುಡ್ಡದ ಮೇಲೆ ಶಿಲುಬೆ. ತೋಟದಲ್ಲಿ ಶಿಲುಬೆ. ರಸ್ತೆ ಪಕ್ಕದಲ್ಲಿ ಶಿಲುಬೆ ಎಂದೆಲ್ಲ ನಿಲ್ಲಿಸಿ ಆಗಾಗ್ಗೆ ಅಲ್ಲಿ ಪ್ರಾರ್ಥನೆ ಸಲ್ಲಿಸುವುದು. ಸಂಜೆ ಮೇಣದ ಬತ್ತಿ ಹಚ್ಚುವುದು ಮುರುಡೇಶ್ವರ, ಹೊನ್ನಾವರ, ಭಟ್ಕಳಗಳಲ್ಲಿ ಬಹಳ ದಿನಗಳಿಂದ ನಡೆದು ಬಂದಿತ್ತು. ಇಲ್ಲಿ ಕೂಡ ಹಾಗೆಯೇ ಮಾಡುವುದು ಒಳ್ಳೆಯ ವಿಚಾರವೇ.
” ಮಾಡಬಹುದು ಪದ್ರಾಬ” ಎಂದ ಇನಾಸ.
“..ಮೊದಲು ನಿನ್ನ ಮನೆ ಅಂಗಳದಲ್ಲಿ ಒಂದು ಶಿಲುಬೆ ನಿಲ್ಲಿಸುವ ಅಂತ..ಏನಂತಿ?” ಪಾದರಿ ಅವನ ಮುಖ ದಿಟ್ಟಿಸಿದರು.
” ಆಯ್ತು ಪದ್ರಾಬ..ನನ್ನ ಒಪ್ಪಿಗೆ ಇದೆ..”
“ನಾಳೆಯಿಂದಾನೆ ಕೆಲಸ ಪ್ರಾರಂಭಿಸೋಣ..” ಎಂದರು ಪಾದರಿ.
ಇನಾಸ ಮತ್ತೆ ಇಗರ್ಜಿ ಕಟ್ಟಡದೊಳಗೆ ಹೋಗಿ ಕೆಲಸಕ್ಕೆ ತೊಡಗಿದಾಗ ತಟ್ಟನೆ ಅವನು ಗಾಬರಿಗೊಂಡ. ಅವನ ಮೈ ಕಂಪಿಸಿತು. ಸಣ್ಣಗೆ ಬೆವರಿತು. ಛೆ! ತಾನು ಒಪ್ಪಬಾರದಿತ್ತು ಎಂದು ಪೆಚಾಡಿದ. ಅಂಗಳದಲ್ಲಿ ಅದೆಷ್ಟು ದಿನಗಳಿಂದ ಕಲ್ಲು ಕುಟಿಗ ಇದ್ದಾನೆ. ಈಗ ಅವನ ಮುಂದೆ ಶಿಲುಬೆಯೇ?
“ಬೇಡ ಪದ್ರಾಬ, ಬೇಡ” ಎಂದು ಹೋಗಿ ಪಾದರಿಗೆ ಹೇಳಿ ಬಿಡಲೆ ಎಂದು ಯೋಚಿಸಿದ್ದ.
ರುದ್ರ ಮನೆ ಬಿಡುವಾಗ ಕಲ್ಲು ಕುಟಿಗನನ್ನು ಮರೆಯಬೇಡ, ಅವನು ನಿನ್ನನ್ನು ಬಿಡುವುದಿಲ್ಲ ಎಂದಿದ್ದ. ಕಲ್ಲು ಕುಟಿಗನಿಂದ ತನಗೆ ಒಳ್ಳೆಯದೇ ಆಗಿದೆ. ಈಗಲೂ ತಾನು ಭಾನುವಾರಗಳಂದು ಇಗರ್ಜಿಗೆ ಹೋಗುತ್ತೆನೆ. ಸಂಜೆ ಮನೆಯಲ್ಲಿ ತೇರ್ಸ ಮಾಡುತ್ತೇನೆ. ಬೆಳಿಗ್ಗೆ ಕಲ್ಲು ಕುಟಿಗನಿಗೆ ಊದಿನ ಕಡ್ಡಿ ಹಚ್ಚುತ್ತೇನೆ. ತನಗೆ ತನ್ನ ಕುಟುಂಬಕ್ಕೆ ಈವರೆಗೆ ಎನೂ ಕೆಡುಕಾಗಿಲ್ಲ. ಆದರೆ ನಾಳೆ ಕಲ್ಲು ಕುಟಿಗನ ಮುಂದೆ ಬೇರೊಂದು ದೇವರನ್ನು ತಂದು ನಿಲ್ಲಿಸಿದರೆ? ಬಹಳ ವಿಚಾರ ಮಾಡಿದ ಇನಾಸ. ಪಾದರಿಗಂತೂ ಬೇಡ ಅನ್ನುವಂತಿಲ್ಲ. ಮೊದಲೇ ಅವರು ತನ್ನ ಬಗ್ಗೆ ಅನುಮಾನವಿರಿಸಿಕೊಂಡಿದ್ದಾರೆ. ಮಾತು ಮಾತಿಗೆ ದೇವರ ಕಟ್ಟಳೆಯನ್ನು ಮುಂದೆ ಮಾಡುತ್ತಾರೆ. ತನ್ನ ಮನೆ ಅಂಗಳದಲ್ಲಿ ಶಿಲುಬೆ ನಿಲ್ಲಿಸುವುದು ಬೇಡವೆಂದರೆ ಉಗ್ರರಾಗುತ್ತಾರೆ ಇರಲಿ. ಏನು ಬೇಕಾದರೆ ಆಗಲಿ. ತಾನು ಪಾದರಿಯ ಇಚ್ಛೆಗೆ ವಿರುದ್ಧವಾಗಿ ಹೋಗಲಾರೆ ಎಂದು ಆತ ಯೋಚಿಸಿ ಯೋಚಿಸಿ ಅಂತಿಮವಾಗಿ ನಿರ್ಧರಿಸಿದ.
ಮಾರನೆ ದಿನ ಬೆಳಿಗ್ಗೆ ಇನಾಸ ಏಳುತ್ತಿರುವಾಗಲೇ ಸಿಮೋನನ ಎತ್ತಿನಗಾಡಿಯ ಸದ್ದಾಯಿತು. ಗಾಡಿಯಿಂದ ಆಳು ಕಲ್ಲು ಇಳಿಸಿದ. ಹಿಂದೆಯೇ ಪಾದರಿ ಕೆಲಸದಾಳುಗಳ ಜತೆ ಬಂದಾಯಿತು. ಕಲ್ಲುಕುಟುಗನಿಗೆ ತುಸು ಮುಂದೆ, ರಸ್ತೆಯ ಮೇಲೆ ಹಾದು ಹೊಗುವ ಕೇರಿಯವರಿಗೆ, ಊರಿನ ಜನರಿಗೆ ಕಾಣುವಂತೆ, ಮನೆ ಬಾಗಿಲಿಗೆ ಸರಿಯಾಗಿ ಪಾಯ ತೋಡಲು ಅವರು ಹೇಳಿದರು. ಅಲ್ಲಿ ಇದ್ದಷ್ಟೂ ಹೊತ್ತು ಪಾದರಿ ಕಲ್ಲು ಕುಟಿಗನತ್ತ ತಿರುಗಿಯೂ ನೋಡಲಿಲ್ಲ. ಆದರೆ ಏನೋ ಒಂದು ಬಗೆಯ ನೆಮ್ಮದಿ ತೃಪ್ತಿ ಅವರಲ್ಲಿತ್ತು.
ಮೂರು ದಿನಗಳಲ್ಲಿ ಅಲ್ಲಿ ಮೂರು ಅಡಿ ಎತ್ತರದ ಒಂದು ಕಟ್ಟೆ ಎದ್ದು ನಿಂತು ಬಿಟ್ಟಿತು. ಇದರ ಮೇಲೆ ಒಂದು ಅಡಿ ಎತ್ತರದ ಒಂದು ಶಿಲುಬೆ. ಕಟ್ಟೆಯ ಮೇಲೆ ಮೇಣದ ಬತ್ತಿ ಹಚ್ಚಲು ಒಂದು ತಗ್ಗು. ಶಿಲುಬೆ ಕಟ್ಟೆಗೆ ಗಾರೆ ತೆಗೆದು ಸುಣ್ಣ ಬಳಿದು ಎಲ್ಲ ಸಿದ್ಧವಾಗಲೂ ಮತ್ತೊಂದು ದಿನ ಬೇಕಾಯಿತು.
“ಶುಕ್ರವಾರ ಸಂಜೆ ಸುತಾರಿ ಇನಾಸರ ಮನೆ ಅಂಗಳದಲ್ಲಿ ಶಿಲುಬೆ ಪ್ರಾರ್ಥನೆ ಇದೆ..ಎಲ್ಲ ಬರಬೇಕು” ಎಂದು ಚಮಾದೋರ ಇಂತ್ರು ಮನೆ ಮನೆಗೆ ಹೋಗಿ ಹೇಳಿ ಬಂದ.
ಬೋನ ಮುಂಚಿತವಾಗಿ ಬಂದು ಒಂದು ಮಾವಿನ ಎಲೆ ತೋರಣ ಮಾಡಿದ. ಅಬ್ಬಲಿಗೆ ಹೂವಿನಿಂದ ಶಿಲುಬೆಯನ್ನು ಸಿಂಗರಿಸಿದ. ಶಿಲುಬೆಯ ಕಟ್ಟೆಗೂ ಚೆಂಡು ಹೂವು ಕಟ್ಟಿದ. ಮೇಣದ ಬತ್ತಿ ಹಚ್ಚಿದ.
ಇನಾಸ, ಅವನ ಹೆಂಡತಿ ಮೊನ್ನೆ, ಮಕ್ಕಳು ಸಂಭ್ರಮದಿಂದ ತಿರುಗಾಡಿದರು. ಕೇರಿ ಜನ ಬಂದರು. ಹೆಂಗಸರು ತಲೆಯ ಮೇಲೆ ಸೆರಗನ್ನು ಹೊದ್ದು ಬಂದರು. ಹುಡುಗಿಯರು ವೇಲ್ ಧರಿಸಿ ಬಂದರು. ಬಂದವರೆಲ್ಲ ಈ ಶಿಲುಬೆ ನೋಡಿ ಹಿಗ್ಗಿದರು. ಸಂತಸಪಟ್ಟರು. ಸರಿಯಾದ ಸಮಯಕ್ಕೆ ಬಂದ ಪಾದರಿ ಧೂಪ, ಪವಿತ್ರ ಜಲದಿಂದ ಶಿಲುಬೆಯನ್ನು ಮಂತ್ರಿಸಿದರು. ಅಂಗಳದಲ್ಲಿ ಶಿಲುಬೆಯ ಸುತ್ತ ಮೊಣಕಾಲೂರಿ ಜನ ಜಪಸರ ಪ್ರಾರ್ಥನೆ ಮಾಡಿದರು.
“ಜೂಜೆ ಬಾಪ ಪಾವತುಂ ಅಮ್ಮಾಂ” (ತಂದೆ ಜೋಸೆಫ಼ರೆ ನಮ್ಮನ್ನು ಕಾಪಾಡಿ) ಎಂದು ಎಲ್ಲರೂ ಒಕ್ಕೊರಲಿನ ಗಾಯನ ಮಾಡಿದರು.
ಪಾದರಿ ಗೋನಸ್ವಾಲಿಸ್ ನಾಲ್ಕು ಮಾತನಾಡಬೇಕು ಅಂದುಕೊಂಡರು. ಆದರೆ ಅಲ್ಲಿ ನೆರೆದ ಜನರ ಭಕ್ತಿಯ ಆವೇಶ ಕಂಡು ಮಾತು ಬೇಡ ಅನಿಸಿತು ಅವರಿಗೆ. ಇನ್ನು ಅಲ್ಲಿ ನಿಂತಿರುವ ಪವಿತ್ರ ಶಿಲುಬೆಯೆ ಎಲ್ಲವನ್ನೂ ಮಾಡಿಬಿಡುತ್ತದೆ ಅಂದುಕೊಂಡರು.
ಹಾಗೆಯೇ ಇನಾಸ, ಅವನ ಹೆಂಡತಿ ಮಕ್ಕಳನ್ನು ಕರೆದು, ಶಿಲುಬೆಯ ಮುಂದೆ ಮೊಣಕಾಲೂರಲು ಹೇಳಿ ಅವರನ್ನು ವಿಶೇಷವಾಗಿ ಆಶೀರ್ವದಿಸಿದರು.
“ಈ ಪವಿತ್ರ ಶಿಲುಬೆಯು ಇನ್ನು ಮುಂದೆ ನಿಮ್ಮ ಕುಟುಂಬವನ್ನು, ಈ ಕೇರಿಯನ್ನು ರಕ್ಷಣೆ ಮಾಡುತ್ತದೆ..ನೀವು ನಿತ್ಯ ಸಂಜೆ ಇದರ ಮುಂದೆ ದೀಪ ಹಚ್ಚಿ ಪ್ರಾರ್ಥನೆ ಸಲ್ಲಿಸಿ. ಇದರ ಪದತಲದಲ್ಲಿ ಯಾವುದೇ ಅಧಾರ್ಮಿಕ ಕೃತ್ಯಗಳನ್ನು ಮಾಡಬೇಡಿ…ಈ ಕುಟುಂಬದ ಏಕತೆ ಈ ಶಿಲುಬೆಯಿಂದ ಸಾಧ್ಯವಾಗುತ್ತದೆ.” ಎಂದು ನಾಲ್ಕು ಮಾತು ಹೇಳಿದರು.
ಆ ಶಿಲುಬೆ ಆ ರಸ್ತೆಗೆ ಮನೆಗೆ ಒಂದು ಶೋಭೆಯಾಗಿ ನಿಂತುಬಿಟ್ಟಿತು.
*
*
*
ಶಿಲುಬೆ ಪ್ರಾರ್ಥನೆಯಾದ ಮೂರನೇ ದಿನ ಗುರ್ಕಾರ ಸಿಮೋನ ಇಗರ್ಜಿ ಬಳಿ ನಿಂತು ಕೆಲಸದ ಮೇಲುಸ್ತುವಾರಿಯಲ್ಲಿ ತೊಡಗಿದಾಗ ಸುಣ್ಣದ ಅನ್ನಾಬಾಯಿ ಸಿಮೋನನ ಬಳಿ ಬಂದಳು.
” ಮಾಮ, ಕವಳ ಪೊತ್ತಿದೀ” (ಮಾಮ, ಎಲೆ ಅಡಿಕೆ ಚೀಲ ಕೊಡು) ಎಂದು ಕೇಳುತ್ತ ಸಿಮೋನ ಕುಳಿತ ಮರದ ಕೆಳಗೆ ತಾನು ಕುಳಿತು ಕೈಚಾಚಿದಳು. ಈ ಕೆಲಸದವರದ್ದು ಇದೊಂದು ಅಭ್ಯಾಸ. ಅದು ಹೆಣ್ಣಿರಲಿ ಗಂಡಿರಲಿ ಬಾಯಲ್ಲಿ ಕವಳ ಅಗಿಯುತ್ತಿರಬೇಕು. ಕೆಲವರು ಸ್ವಂತಕ್ಕೆ ಒಂದು ಚೀಲ ಇಟ್ಟುಕೊಂಡಿರುತ್ತಾರೆ. ಕೆಲವರು ಬೇರೆಯವರ ಮೇಲೆ ಅವಲಂಬಿಸಿಕೊಂಡಿರುತ್ತಾರೆ. ಕೆಲಸದ ನಡುವೆ ಬಿಡುವು ಮಾಡಿಕೊಂಡು ಕುಳಿತು ಎಲೆ ಅಡಿಕೆ ಮೆಲ್ಲದಿದ್ದರೆ ಅವರ ಕೆಲಸ ಮುಂದೆ ಸಾಗುವುದಿಲ್ಲ.
ಈ ಅನ್ನಾಬಾಯಿ ಹಂದಿ ಗುಸ್ತೀನನ ಹೆಂಡತಿ. ಇವನು ಗೇರುಸೊಪ್ಪೆಯಿಂದ ಇಲ್ಲಿಗೆ ಬಂದದ್ದು ಕಲ್ಲು ಕೆಲಸ ಮಾಡಲಿಕ್ಕಾದರೂ ಇವನು ಇಲ್ಲಿ ಮಾಡಿದ್ದು ಕಾಡು ಹಂದಿ ಬೇಟೆ. ಊರ ಸುತ್ತ ಒಳ್ಳೆಯ ಕಾಡಿತ್ತು. ಬಂದೂಕು ಇಟ್ಟುಕೊಂಡಿರುವ ಕೆಲವರ ಪರಿಚಯವನ್ನು ಈತ ಮಾಡಿಕೊಂಡ. ಪ್ರತಿ ಶನಿವಾರ ರಾತ್ರಿ ಒಬ್ಬರಲ್ಲಾ ಒಬ್ಬರನ್ನು ಪುಸಲಾಯಿಸಿ ಈತ ಬೇಟೆಗೆ ಕರೆದೊಯ್ಯುತ್ತಿದ್ದ. ಕಾಡು ಹಂದಿ, ಜಿಂಕೆ, ಕಡ, ಕಾಡು ಕುರಿ, ಮೊಲ, ಕಾಡು ಕೋಳಿ, ನವಿಲು ಎಂದು ಸಿಕ್ಕಿದ್ದನ್ನೆಲ್ಲ ಬೇಟೆಯಾಡುತ್ತಿದ್ದ. ಕಾಡು ಹಂದಿಯನ್ನು ಬೇಟೆಯಾಡುವುದರಲ್ಲಿ ಈತ ತುಂಬಾ ಪಳಗಿದ್ದ. ರಾತ್ರೋ ರಾತ್ರಿ ಹಂದಿಯನ್ನು ಹೊತ್ತು ತಂದು ಸುಲಿದು ಕತ್ತರಿಸಿ ಮನೆ ಹಿಂಬದಿಯಲ್ಲಿ ಪಾಲು ಹಾಕುತ್ತಿದ್ದ. ಒಂದು ಪಾಲಿಗೆ ಎರಡು ರೂಪಾಯಿ. ಭಾನುವಾರ ಬೆಳಿಗ್ಗೆ ಜನ ಪೂಜೆ ಮೂಗಿಸಿಕೊಂಡು ಮನೆಗೆ ಹೊರಟಾಗ ಕೊಪೆಲ ಬಳಿಯೇ ಈತ ಎಲ್ಲರ ಕಿವಿಗಳಲ್ಲೂ-
“…ಏಕ ವಂಟೋ ಹೋರ..ಬರೇಂ ಅಸ್ಸ” (ಒಂದು ಪಾಲು ತೆಗೆದುಕೊಂಡು ಹೋಗು ಚೆನ್ನಾಗಿದೆ) ಅನ್ನುತ್ತಿದ್ದ.
ಆದಿತ್ಯವಾರವನ್ನು ದೇವರ ದಿನವನ್ನಾಗಿ ಆಚರಿಸಬೇಕು ಎಂಬ ನಂಬಿಕೆಯ ಜೊತೆಗೇನೆ ಸೇರಿಕೊಂಡ ಇನ್ನೊಂದು ಆಚರಣೆ ಎಂದರೆ ಅಂದು ಮಾಂಸದ ಅಡಿಗೆ ಮಾಡಬೇಕು ಅನ್ನುವುದು. ಊಟಕ್ಕೆ ಮಾಂಸವಿಲ್ಲವೆಂದರೆ ಅದು ಭಾನುವಾರ ಅಲ್ಲವೇ ಅಲ್ಲ ಅನ್ನುವ ಮಟ್ಟಕ್ಕೆ ಜನ ಹೋಗಿದ್ದರು. ಕುರಿ ಮಾಂಸ ಸೇರಿಗೆ ಮೂರು ರೂಪಾಯಿ ಯಾದರೆ ಅದಕ್ಕಿಂತ ಹೆಚ್ಚಿರುವ ಹಂದಿಮಾಂಸದ ಬೆಲೆ ಎರಡು ರೂಪಾಯಿ. ಜನ ನೇರವಾಗಿ ಗುಸ್ತಿನನ ಮನೆಗೆ ಬರುತ್ತಿದ್ದರು. ಒಂದು ಎರಡು ಪಾಲು ಒಯ್ಯುತ್ತಿದ್ದರು. ಕಾಡು ಹಂದಿ ಮಾಂಸ ಊರ ಹಂದಿ ಮಾಂಸಕ್ಕಿಂತ ರುಚಿ ಶುಚಿ. ಬೆಲೆಯೂ ಕಡಿಮೆ. ಪಾಲು ಹಾಕಿದ ಗಂಟೆಯೊಳಗೆ ಮಾಂಸ ಮುಗಿದು ಹೋಗುತ್ತಿತ್ತು. ನಂತರ ಬಂದವರಿಗೆ ಗುಸ್ತೀನನ ಹೆಂಡತಿ-
“ನಾರೆ ಬಾಳ…ಜಾವ್ನಗೆಲ್ಲೆಂ”
“ಇಲ್ಲಾ ಮಗು ಮುಗಿದು ಹೋಯ್ತು” ಎಂದು ಹೇಳುತ್ತಿದ್ದಳು.
ಇತ್ತೀಚಿನ ಐದಾರು ವರ್ಷ ಇದೇ ಕೆಲಸ ಮಾಡಿಕೊಂಡಿದ್ದ ಗುಸ್ತೀನ. ಹಂದಿ ಗುಸ್ತೀನ ಎಂಬ ಹೆಸರೂ ಅವನಿಗೆ ಖಾಯಂ ಆಗಿತ್ತು. ಪಾದರಿ ಬರುವುದಕ್ಕೂ, ಜನ ಕೊಪೆಲಗೆ ಹೋಗುವುದನ್ನು ಆರಂಭಿಸುವುದಕ್ಕೂ, ಭಾನುವಾರಗಳನ್ನು ದೈವಭಕ್ತಿಯಿಂದ ಆಚರಿಸಲು ತೊಡಗಿಕೊಳ್ಳುವುದಕ್ಕೂ, ಹಂದಿ ಗುಸ್ತೀನ ಕಾಡು ಹಂದಿ, ಜಿಂಕೆಯನ್ನು ತಂದು ಪಾಲು ಮಾಡಿ ಜನರುಗೆ ಒದಗಿಸುವುದಕ್ಕೂ ತಾಳೆ ಬಿದ್ದು ಹಂದಿಗುಸ್ತೀನ ಪ್ರಖ್ಯಾತನಾಗಿದ್ದ. ಆದರ ಯಾರ ಶಿರಾಪ(ಶಾಪ) ಬಿದ್ದಿತೋ, ಹಂದಿ ಗುಸ್ತೀನ ಒಂದು ಶನಿವಾರ ಮಂಕಾಳೆ ಕಾಡಿಗೆ ಹೋದವ ಹೆಣವಾಗಿ ತಿರುಗಿ ಬಂದ. ಹಂದಿಯ ಬದಲು ಜನ ಅವನನ್ನೇ ಹೊತ್ತು ತಂದರು.
ಚಮಾದೋರ ಸ್ಮಿತ್ರಿಯಲ್ಲಿ ಹೊಂಡ ತೆಗೆದು ಮುಗಿಸಿ ಮನೆಮನೆಗೆ ಹೋಗಿ-
“ಸಂಜೆ ಹಂದಿ ಗುಸ್ತೀನನ ಮರಣ ಇದೆ.” ಎಂದು ಹೇಳಿ ಬಂದ.
ಸುತಾರಿ ಇನಾಸ ಮರಣದ ಪೆಟ್ಟಿಗೆ ಮಾಡಿದ.
ದರ್ಜಿ ಬಲಗಾಲುದ್ಧ ಬಾಲ್ತಿದಾರ ಗುಸ್ತಿನನ ಅಳತೆ ಊಹಿಸಿಕೊಂಡು ಬಿಳಿ ಶರಟು, ಇಜಾರ ಕೈ ಚೀಲ, ಕಾಲು ಚೀಲ ಹೊಲಿದ.
ಐದು ಗಂಟೆಗೆ ಪಾದರಿ, ಪೀಠ ಬಾಲಕರು, ಮಿರೋಣ ಶಿಲುಬೆ ಹಿಡಿದು ಶವ ಕೊಂಡೊಯ್ಯಲು ಗುಸ್ತೀನನ ಮನೆಗೆ ಬಂದರು. ಅವನ ಶವ ಪೆಟ್ಟಿಗೆ ಒಯ್ಯುವಾಗ ಪಸ್ಕೋಲ ಅನ್ನಾಬಾಯಿಯ ಬಳೆ ತುಂಬಿದ ಕೈಗಳನ್ನು ಶವ ಪೆಟ್ಟಿಗೆಗೆ ಬಡಿದು ಬಳೆ ಒಡೆದ. ಅವಳು ಹೋ ಎಂದು ಅತ್ತಳು.
ಗಂಡ ಸತ್ತ ನಂತರ ಅನ್ನಾಬಾಯಿ ಅನಾಥಳಾದಳು. ನಾಲ್ವರು ಮಕ್ಕಳನ್ನು ಇರಿಸಿಕೊಂಡು ಕಾಲ ನೂಕುವುದು ಕಷ್ಟವೆನಿಸಿತು. ಹಿಂದೆ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದವಳು ಈಗ ಮನೆ ಮನೆಗೆ ಸುಣ್ಣ ತೆಗೆಯಲು ಹೋಗ ತೊಡಗಿದಳು. ಈ ಕೆಲಸವಿಲ್ಲವೆಂದರೆ ನೀರು ಹೊರಲು, ಮಣ್ಣು ಕಲಿಸಲು, ಕಲಿಸಿದ ಮಣ್ಣನ್ನು ಒಯ್ದು ಕೊಡಲು ಹೋಗುತ್ತಿದ್ದಳು. ಹೆಣ್ಣು ಮಕ್ಕಳು ಮನೆಗೆಲಸ ನೋಡಿಕೊಂಡಿದ್ದರು.
ಸಿಮೋನ ಕೊಟ್ಟ ಚೀಲದಿಂದ ಎಲೆ ತೆಗೆದು ಅದರ ನಾರು ಬಿಡಿಸುತ್ತ ಅತ್ತಿತ್ತ ನೋಡಿ ಅನ್ನಾಬಾಯಿ.
“ಸಿಮೋನ ಮಾಮಾ” ಎಂದಳು. ಅವಳ ದನಿಯಲ್ಲಿ ಅಪರೂಪದ ಒಂದು ರಾಗವಿತ್ತು.
“ಏನು?”
“ಸಾಂತಾಮೋರಿ ಮಗಳು ನಾತೆಲ್ ವಿಷಯ ಗೊತ್ತ?”
“ಏನು? ಏನದು?”
“ಮನೆ ಹಿಂದಿನ ನುಗ್ಗೆ ಮರದ ಕೆಳಗೆ ಕೂತು ವಾಂತಿ ಮಾಡಿಕೊಳ್ತ ಇದ್ಲು..”
ಸಿಮೋನನ ಮೈ ಬೆಚ್ಚಗಾಯಿತು. ಮುಖ ಹೇಸಿಗೆಯಿಂದ ಮುದುಡಿಕೊಂಡಿತು. ಅನ್ನಾಬಾಯಿ ಮಾತು ಮುಂದುವರೆಸಿದಳು.
“ನಿಮಗೆ ಗಂಡಸರಿಗೆ ಗೊತ್ತಾಗೋಲ್ಲ..ಅವಳಿಗೆ ಹೊಟ್ಟೆ ಬರತಿದೆ. ಈಗಾಗಲೇ ನಾಲ್ಕು ತಿಂಗಳಾಗಿದೆ…”
ಅನ್ನಾಬಾಯಿ ಅಲ್ಲಿಗೇನೆ ನಿಲ್ಲಿಸಲಿಲ್ಲ. ಮತ್ತೂ ಮುಂದುವರೆಸಿದಳು.-
“ನೀವು ಗುರ್ಕಾರ ಅಲ್ವ..ನಿಮಗೆ ತಿಳಿದಿರಬೇಕು..ನಮ್ಮ ಸಮೋಡ್ತ ಬಗ್ಗೆ ನಿಮಗೆ ಹೆಚ್ಚು ಕಾಳಜಿ ಇರಬೇಕಲ್ಲ..”
ಎತ್ತರದ ಗೋಡೆಯ ಮೇಲೆ ನಿಂತು ಕಲ್ಲು ಕಟ್ಟುವಾಗ ಕಣ್ಣಿಗೆ ಕತ್ತಲು ಕವಿದಂತಾಯಿತು. ಸಾವರಿಸಿಕೊಂಡು ಸಿಮೋನ ಎದ್ದು ನಿಂತ. ಅನ್ನಾಬಾಯಿ ಅತ್ತ ಕೆಲಸಕ್ಕೆ ಹೋದಳು.
*
*
*
ಸಾಂತಾಮೋರಿ, ಮಗಳು ನಾತೇಲ ಇದೇನು ಮಾಡಿಕೊಂಡಳು ಎಂದು ಮನಸ್ಸು ಕಸಿವಿಸಿ ಮಾಡಿಕೊಂಡನು.
ಸಾಂತಾಮೋರಿಯನ್ನು ಇಲ್ಲಿಗೆ ಕರೆತಂದವನು ತಾನೆ. ಮೊದಲು ಒಂದೆರಡು ವರ್ಷ ಸೊನಗಾರರ ಹುಡುಗ ತಮಗೆಲ್ಲ ಅಡಿಗೆ ಮಾಡಿ ಹಾಕುತ್ತಿದ್ದ. ಅವನು ತನಗೆ ಹೇಳದೆ ಕೇಳದೆ ಹೋದ ನಂತರ ಊರಿನಲ್ಲಿ ಸಾಂತಾ ಮೋರಿ ತನ್ನ ಕಣ್ಣಿಗೆ ಬಿದ್ದಳು.
ಮುರುಡೇಶ್ವರ ಇಗರ್ಜಿ ಹಿಂಬದಿಯಲ್ಲಿ ಸಂಪಿಗೆ ಹಣ್ಣಿನ ಮುಳ್ಳಿನ ಮರದ ಕೆಳಗೆ ಇವಳ ಮನೆ. ಮುದುವೆಯಾಗಿ ಕಾಯ್ಕಿಣಿಯಿಂದ ಬಂದ ನಂತರ ಮುರುಡೇಶ್ವರ ಬಿಟ್ಟವಳಲ್ಲ ಇವಳು. ಇವಳ ಗಂಡ ಒಂದು ಹಡಗಿನಲ್ಲಿ ಬಟ್ಲರ್ ಆಗಿದ್ದ. ಈ ಹಡಗು ಭಟ್ಕಳದಿಂದ ಮುಂಬಯಿಗೆ ಓಡಾಡುತ್ತಿತ್ತು. ಮುರುಡೇಶ್ವರದ ಕಡಲ ಕಿನಾರೆಯಲ್ಲಿ ನಿಂತು ಕಡಲಲ್ಲಿ ಮುಂಬಯಿಯತ್ತ ಮುಖಮಾಡಿಕೊಂಡು ಹೋಗುವ ಹಡಗುಗಳನ್ನು ನೋಡುತ್ತ ಅದರಲ್ಲಿ ಒಂದು ತನ್ನ ಗಂಡ ಇರುವ ಹಡಗೂ ಆಗಿರಬಹುದು ಎಂದು ಎಷ್ಟೋ ಸಾರಿ ಕಲ್ಪಿಸಿಕೊಳ್ಳುತ್ತಿದ್ದಳು ಸಾಂತಾಮೋರಿ. ಗಂಡ ಮನೆ ಬಿಟ್ಟು ಹೋದವ ಮೂರು ನಾಲ್ಕು ತಿಂಗಳ ನಂತರ ಬರುತ್ತಿದ್ದ. ಬಂದವ ಹತ್ತು ಹದಿನೈದು ದಿನ ಇರುತ್ತಿದ್ದ. ಈ ಅವಧಿಯಲ್ಲಿ ತನಗೆ ಕೆಲವೆಲ್ಲ ಅಡಿಗೆ ಮಾಡುವುದನ್ನು ಈತ ಕಲಿಸುತ್ತಿದ್ದ.
ಮನೆಯಲ್ಲಿ ಇವನ ತಾಯಿ ತಂದೆ ಓರ್ವ ತಮ್ಮ ಇದ್ದರು.
ಸಾಂತಾ ಮೋರಿ ಸುಖ ನೆಮ್ಮದಿಯಿಂದಲೇ ಇದ್ದಳು. ಇಬ್ಬರು ಗಂಡು ಮಕ್ಕಳು ಓರ್ವ ಹೆಣ್ಣು ಮಗಳು ಹುಟ್ಟಿದ್ದರು. ಮಗಳಿಗೆ ಆರು ತಿಂಗಳು ಅನ್ನುವಾಗ ಕಡಲಲ್ಲಿ ದೊಡ್ಡ ತೂಫ಼ಾನು ಎದ್ದಿತು. ಸಾಂತಾಮೋರಿಯ ಗಂಡ ಇದ್ದ ಹಡಗು ಗೋವೆಯ ಬಳಿ ಒಡೆದು ಹೋಯಿತು. ಹಡಗಿನಲ್ಲಿ ಯಾರೂ ಬದುಕಲಿಲ್ಲ. ಅವರ ಶವಗಳು ಕೂಡ ದೊರೆಯಲಿಲ್ಲ.
ಸಾಂತಾಮೋರಿ ದಿಕ್ಕುಗಾಣದಾದಳು. ಹಡಗಿನ ಕಂಪನಿಯವರು ಒಂದಿಷ್ಟು ಹಣ ಕೊಟ್ಟರು. ಗಂಡ ಸಾಯುವ ಮುನ್ನ ತಮ್ಮನ ಮದುವೆ ಮಾಡಬೇಕೆಂದು ಕುಮುಟೆಯ ಒಂದು ಹೆಣ್ಣನ್ನು ನೋಡಿ ಇರಿಸಿದ್ದ. ಗಂಡನ ಆಸೆ ನೆರವೇರಲೆಂದು ಸಾಂತಾಮೋರಿ ತಾನೇ ಮುಂದೆ ನಿಂತು ಮೈದುನನ ಮದುವೆ ಮಾಡಿಸಿದಳು. ಕಂಪನಿಯವರು ಕೊಟ್ಟ ಹಣ ಇಲ್ಲಿ ಕೈಬಿಟ್ಟಿತು. ಮನೆಗೆ ಮೈದುನನ ಹೆಂಡತಿ ಬಂದಳು. ಸಾಂತಾಮೋರಿ ಅವಳ ಮಕ್ಕಳಿಗೆ ಕಷ್ಟದ ದಿನಗಳು ಆರಂಭವಾದವು.
ಊರಿನ ಪಾದರಿ, ಗುರ್ಕಾರ, ಫ಼ಿರ್ಜಂತ, ಸಾಂತಾಮೋರಿ ಅವಳ ಮಕ್ಕಳಿಗೆ ಬಂದ ಕಷ್ಟಗಳನ್ನು ದೂರ ಮಾಡಲು ನೋಡಿದರು. ಆಗಲೇ ಮಳೆಗಾಲ ಮುಗಿದು ಘಟ್ಟದ ಮೇಲೆ ಹೋಗಲು ಪೊಟ್ಲಿಗಿಟ್ಲಿ ತಯಾರು ಮಾಡಿಕೊಳ್ಳುತ್ತಿದ್ದ ಸಿಮೋನ.
“ಸಾಂತಾಮೋರಿ..ಕಷ್ಟಾನೋ ಸುಖಾನೋ ನಿನಗೊಂದು ದಾರಿ ತೋರ್ಸತೀನಿ ನನ್ನ ಜತೆ ಬಾ..” ಎಂದ.
ಗಟ್ಟಿ ಮನಸ್ಸು ಮಾಡಿ ಸಾಂತಾ ಮೋರಿ ಸಿಮೋನನ ಜತೆ ಹೊರಟಳು.
ಶಿವಸಾಗರದಲ್ಲಿ ಸಿಮೋನನ ಬಿಡಾರಕ್ಕೆ ಅನತಿ ದೂರದಲ್ಲಿ ಒಂದು ಅಂಟುವಾಳದ ಮರದ ಕೆಳಗೆ ಸಾಂತಾ ಮೋರಿಯ ಬಿಡಾರ ಎದ್ದಿತು. ಓಟೆ ಕಡ್ಡಿ ನಿಲ್ಲಿಸಿ ಮಣ್ಣು ಮೆತ್ತಿ ಗೋಡೆ ಮಾಡಿಕೊಂಡಳು. ಮೇಲೆ ಬಿದಿರ ಹಂದರ ಹಾಕಿ ಹುಲ್ಲು ಹೊದೆಸಿದಳು. ಕುಂಬಾರ ಕೇರಿಯಿಂದ ಮಡಕೆ ಕುಡಿಕೆ ತಂದಳು. ಸಿಮೋನ ಒಂದಿಷ್ಟು ಹಣ ಕೊಟ್ಟ.
“ನಾವು ಏಳೆಂಟು ಜನ ಇದೀವಿ…ನಮಗೆ ಅಡಿಗೆ ಮಾಡಿ ಹಾಕು..ನಿನ್ನ ಜೀವನಕ್ಕೆ ದಾರಿಯಾಗುತ್ತೆ..ನಮಗೂ ಅನುಕೂಲವಾಗುತ್ತೆ..” ಎಂದ ಆತ.
ಸಾಂತಾಮೋರಿಯ ಊಟದ ಮನೆ ಹೀಗೆ ಆರಂಭವಾಯಿತು.
ಘಟ್ಟದ ಕೆಳಗಿನಿಂದ ಬಂದವರಿಗೆ ಅನುಕೂಲವಾಯಿತು. ಕುಸುಬಲಕ್ಕಿಯ ಅನ್ನ, ಮೀನಿನ ಸಾರು, ನಿತ್ಯ ಬೆಳಿಗ್ಗೆ ಗಂಜಿ, ಸಾಯಂಕಾಲ ಸ್ನಾನಕ್ಕೆ ಬಿಸಿ ಬಿಸಿ ನೀರು ಇಲ್ಲಿ ಯಾರು ಮಾಡಿಕೊಡುತ್ತಾರೆ?
ತಾನು, ಮುರುಡೇಶ್ವರದ ದುಮಿಂಗ, ಫ಼ರಾಸ್ಕ ಅರ್ಥರ, ಶಿರಾಲಿಯ ಜೂಜೆ, ಗೋಮ್ಸ, ಪಾಸ್ಕಲ, ಎಡ್ಡಿ ಮೊದಲಾದವರು ಇಲ್ಲಿ ಉಳಿದರು. ಹಡಗಿನಲ್ಲಿ ಬಟ್ಲರ್ ಆಗಿದ್ದ ಗಂಡ ಹೇಳಿಕೊಟ್ಟ ಅಡಿಗೆ ಕೆಲಬಾರಿ ಪ್ರಯೋಜನಕ್ಕೆ ಬರುತ್ತಿತ್ತು. ಕೋಳಿ ಕತ್ತರಿಸಿ ಆಗಾಗ್ಗೆ ಒಳ್ಳೆಯ ಅಡಿಗೆ ಮಾಡುತ್ತಿದ್ದಳು ಸಾಂತಾಮೋರಿ.
ಮಳೆಗಾಲ ಆರಂಭವಾದಂತೆ ಕೆಲಸಗಾರರೆಲ್ಲ ಊರಿಗೆ ಹೊರಡುತ್ತಿದ್ದರು. ಆಗ ಅನಿವಾರ್ಯವಾಗಿ ಸಾಂತಾಮೋರಿ ಇಲ್ಲೇ ಉಳಿಯುತ್ತಿದ್ದಳು. ಊರು ಬಿಟ್ಟು ಬಂದ ಅವಳಿಗೆ ಅಲ್ಲಿ ಓಂದು ಮನೆ ಎಂದು ಇರಲಿಲ್ಲ.
ಒಂದು ಮಳೆಗಾಲದಲ್ಲಿ ಪಾಸ್ಕೋಲ ಮೇಸ್ತ್ರಿ ಇಲ್ಲಿಯೇ ಉಳಿದ. ಮಳೆಗಾಲದ ನಂತರ ತಾವೆಲ್ಲ ಬಂದಾಗ ಪಾಸ್ಕೋಲ ಮೇಸ್ತ್ರಿಗೂ ಸಾಂತಾಮೋರಿಗೂ ತೀವ್ರ ಸಂಬಂಧ ಬೆಳೆದುದನ್ನು ತಾನು ನೋಡಿದೆ.
ಊಟ ಮುಗಿಸಿ ಎಲ್ಲರು ತಮ್ಮ ತಮ್ಮ ಬಿಡಾರಗಳಿಗೆ ಹೋದರೂ ಪಾಸ್ಕೋಲ ಇಲ್ಲಿರುತ್ತಿದ್ದ. ಅವನು ಸ್ನಾನ ಮಾಡುವಾಗೆಲ್ಲ ಸಾಂತಾಮೋರಿ ಅವನ ಬೆನ್ನು ಉಜ್ಜಲು ಹೋಗುತ್ತಿದ್ದಳು. ಒಂದೆರಡು ಸಾರಿ ತಾನು ಪಾಸ್ಕೋಲ ಸಾಂತಾಮೋರಿಯನ್ನು ತಬ್ಬಿಕೊಂಡು ಹೊರಳಾಡುವುದನ್ನು ಕೂಡ ನೋಡಿದೆ.
ತನಗೆ ಇದು ಕೆಡುಕೆನಿಸಿತು.
ಸುಳ್ಳೋ ನಿಜವೋ ಊರಿನಿಂದ ಜನರನ್ನು ಘಟ್ಟಕ್ಕೆ ಕರೆದುಕೊಂಡು ಹೋಗಿ ಅವರನ್ನು ಕೆಡಿಸುತ್ತಾನೆ ಎಂಬ ಅಪಾದನೆ ತನ್ನ ಮೇಲಿದೆ. ಈ ಅಪಾದನೆಯ ಜತೆ ಇದೂ ಸೇರಬಾರದಲ್ಲ. ಪಾಸ್ಕೋಲ ಮದುವೆಯಾದವ. ಹೆಂಡತಿ ಮಕ್ಕಳು ಊರಲ್ಲಿದ್ದಾರೆ. ಇಲ್ಲಿ ಇವರ ಸಂಬಂಧ ಹೀಗೇ ಮುಂದುವರೆದರೆ?
ತನ್ನಿಂದ ಇದನ್ನು ಸಹಿಸಿಕೊಳ್ಳಲಾಗಲಿಲ್ಲ. ಒಂದು ದಿನ ಅವಕಾಶ ನೋಡಿ ಸಾಂತಾಮೋರಿಗೆ ಹೇಳಿದೆ-
“..ನೀನು ಮಾಡತಿರೋದು ತಪ್ಪು ಸಾಂತಾಮೋರಿ..”
ಇದು ದೇವರ ಒಂಭತ್ತನೆ ಕಟ್ಟಲೆಗೆ ವಿರೋಧ. ಮಹಾಪಾಪ ಕೂಡ..ನಾನು ನಿನ್ನನ್ನ ಈ ಕೆಲಸಕ್ಕೆ ಅಂತ ಕರಕೊಂಡು ಬಂದದ್ದಲ್ಲ..”
ಅವಳು ಅತ್ತಳು-
ಅವಳಿಗೆ ನೋವಾಯಿತು. ನಾಚಿಕೆಯಾಯಿತು.
“ಅಣ್ಣ…ನಾನು ದಾರಿ ತಪ್ಪಿದ್ದು ನಿಜ…ಇನ್ನು ಹೀಗೆ ಮಾಡಲ್ಲ..” ಎಂದಳು.
ಆಗಲೇ ತಾನು ಬೆರೊಂದು ಕೆಲಸ ಕೂಡ ಮಾಡಿದೆ. ಪಾಸ್ಕೋಲನಿಗೆ ಶಿವಸಾಗರದಲ್ಲೊಂದು ನಿವೇಶನ ಕೊಡಿಸಿದೆ. ಅಲ್ಲಿ ಆತ ಒಂದು ಮನೆಯನ್ನು ಕೂಡ ಕಟ್ಟಿದ. ಅಷ್ಟು ಹೊತ್ತಿಗೆ ತನ್ನ ಪಾಲಿನ ಗುತ್ತಿಗೆ ಕೆಲಸಗಳನ್ನು ಅವನು ಏನೋ ಉಪಾಯ ಮಾಡಿ ಕಸಿದುಕೊಂಡು ಇಲ್ಲಿ ಗುತ್ತಿಗೆದಾರ ಎನಿಸಿಕೊಂಡಿದ್ದ.
ತಾನು ಮನೆ ಮಾಡಿ ಹೆಂಡತಿ ಮಕ್ಕಳನ್ನು ಇಲ್ಲಿಗೆ ಕರೆತಂದದ್ದು ಅವನ ಅಭಿಮಾನಕ್ಕೆ ಪೆಟ್ಟು ಕೊಟ್ಟಿತೇನೋ ಅವನೂ ಅವನ ಹೆಂಡತಿ ಮಕ್ಕಳನ್ನು ಇಲ್ಲಿಗೆ ಕರೆ ತಂದ.
ಅನಂತರ ಸಾಂತಾ ಮೋರಿ ಒಳ್ಳೆಯವಳು ಎನಿಸಿಕೊಂಡಿದ್ದಾಳೆ. ಈಗ ಅವಳಿಗೆ ವಯಸ್ಸೂ ಆಗಿದೆ.
ಅವಳ ಊಟದ ಮನೆ ಮುಂದುವರೆದಿದೆ. ಗಂಡು ಮಕ್ಕಳು ಕಲ್ಲು ಕಟ್ಟುವ ಕೆಲಸ ಕಲಿತಿದ್ದಾರೆ. ಗಾರೆ ಕೆಲಸವನ್ನೂ ಕೂಡ ಚೆನ್ನಾಗಿ ಮಾಡುತ್ತಾರೆ. ಅಲ್ಲಲ್ಲಿ ಊಟದ ಹೋಟೆಲುಗಳು ಆಗಿರುವುದರಿಂದ ಇವಳಲ್ಲಿ ಊಟಕ್ಕೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಜನ ಇದ್ದಾರೆ.
ಅವರಿಗೆಲ್ಲ ಕಾಲಕಾಲಕ್ಕೆ ಊಟ ಮಾಡಿ ಹಾಕುತ್ತಾಳೆ. ಸಾಂತಾ ಮೋರಿ ಮಗಳು ನಾತೇಲ ಬಡಿಸುತ್ತಾಳೆ. ಅವರ ಜತೆ ಸಲಗೆಯಿಂದ ಮಾತನಾಡುತ್ತಾಳೆ. ನಗುತ್ತಾಳೆ. ಮಗಳ ಮದುವೆ ಮಾಡಬೇಕೆಂಬ ಆಸೆಯೂ ಸಾಂತಾ ಮೋರಿಗಿದೆ.
“ಅಣ್ಣ ಒಳ್ಳೆ ಕಡೆ ಒಂದು ನೆಂಟಸ್ತಿಕೆ ನೋಡೀ” ಎಂದು ತನಗೂ ಐದಾರು ಬಾರಿ ಹೇಳಿದ್ದಳು.
ಪಾಸ್ಕೋಲ ಕೂಡ ಹಿಂದಿನ ಆ ಸಂಬಂಧವನ್ನು ನೆನಪಿನಲ್ಲಿ ಇಟ್ಟುಕೊಂಡೋ ಏನೋ ಊರಿನಲ್ಲಿ ಕೆಲವರ ಬಳಿ ಈ ಬಗ್ಗೆ ಪ್ರಸ್ತಾಪಿಸಿದ್ದೂ ತನಗೆ ಗೊತ್ತಿದೆ.
ಆದರೆ ಈಗ ನೋಡಿದರೆ ಹುಡುಗಿ ಈ ಭಾನಗಡಿ ಮಾಡಿಕೊಂಡಿದ್ದಾಳೆ. ಜಾತಿಗೆ ಕೆಟ್ಟ ಹೆಸರು ಬಂದಿದೆ. ದೇವರ ಕಟ್ಟಲೆಯನ್ನು ಮೀರಿ ಮೋಹ ಪಾಪಕ್ಕೆ ಗುರಿಯಾಗಿದ್ದಾಳೆ. ಧರ್ಮ ದೇವರ ಹೆಸರಿಗೆ ಅಂಟಿರುವ ಈ ಕಳಂಕವನ್ನು ತಾನು ದೂರ ಮಾಡಬೇಕಲ್ಲವೇ?
ಸಿಮೋನ ಗುರ್ಕಾರನಾಗಿ ಮಾಡಬೇಕಾದ ಕೆಲಸಕ್ಕೆ ಕೈ ಹಾಕಿದ. ಸೂಲಗಿತ್ತಿ ಕತ್ರೀನ ವಿಷಯ ನಿಜ ಎಂದಳು. ಏನಾದರೂ ಔಷಧಿ ಕೊಡಿ ಎಂದು ತಾಯಿ ಮಗಳು ಬಂದಿದ್ದರು. ತಾನು-
“ನಾನು ಅದೊಂದು ಕೆಲಸ ಮಾಡುವುದಿಲ್ಲ..ಭ್ರೂಣ ಹತ್ಯೆ ಪಾಪ..ನೀವು ವ್ಯಭಿಚಾರ ಮಾಡಿ ದೇವರ ಕಟ್ಟಲೆ ಮುರಿದಿದ್ದೀರಿ..ನಾನು ದೇವ ವಾಕ್ಯ ಮುರಿಯಲಾರೆ..” ಏಂದು ಬೈದು ಕಳಿಸಿದೆ ಎಂದು ತಾಯಿ ಮಗಳು ತನ್ನಲ್ಲಿಗೆ ಬಂದುದನ್ನು ವೈಜಿಣ ಕತ್ರೀನ ವಿವರವಾಗಿಯೇ ನುಡಿದಳು.
ಹೆರಿಗೆಗೆಂದು ಜನ ಅವಳನ್ನು ಕರೆದೊಯ್ಯುವುದು ಸಹಜವಾಗಿತ್ತು. ಬಾಣಂತಿಯರು, ಗರ್ಭಿಣಿಯರು ಕೆಲ ಸಮಸ್ಯೆಗಳಿಗೆ ನಿವಾರಣೆ ಹುಡುಕಿಕೊಂಡೂ ಅವಳಲ್ಲಿ ಬರುವುದಿತ್ತು. ಅಪರೂಪಕ್ಕೊಮ್ಮೆ ಕಳ್ಳ ಬಸಿರು ಹೊತ್ತವರೂ ಅವಳ ಬಳಿ ಬರುತ್ತಿದ್ದರು. ಆದರೆ ಹೀಗೆ ಬಂದವರ ಮುಖಕ್ಕೆ ಮಂಗಳಾರತಿ ಎತ್ತಿ ಓಡಿಸುತ್ತಿದ್ದಳು ಕತ್ರೀನ.
ವ್ಯಭಿಚಾರ ಮೊದಲ ಪಾಪ. ಎರಡನೆಯ ಮಹಾಪಾಪವೆಂದರೆ ಹೊಟ್ಟೆಯಲ್ಲಿರುವ ಮಗುವನ್ನು ಕೊಲ್ಲುವುದು. ಈ ಕೆಲಸ ನಾನು ಮಾಡುವುದಿಲ್ಲ. ಅನ್ನುತ್ತಿದ್ದಳು ಕತ್ರೀನಾ. ಅವಳು ಯಾವುದೇ ಪರಿಸ್ಥಿತಿಯಲ್ಲಿ ಈ ಕೆಲಸ ಮಾಡುತ್ತಲಿರಲಿಲ್ಲ.
“ಸಾಂತಾ ಮೋರಿ ಹಾಗೂ ನಾತೇಲ ಅವಳ ಬಳಿ ಬಂದದ್ದೂ ನಿಜ. ಅವಳು ಅವರನ್ನು ಬರಿಗೈಯಲ್ಲಿ ತಿರುಗಿ ಕಳುಹಿಸಿದ್ದೂ ನಿಜವೆ. ಇದಕ್ಕಿಂತ ಬಲವಾದ ಸಾಕ್ಷಿ ಇನ್ನೇನು ಬೇಕು?”
ಸಿಮೋನ ವಿಷಯವನ್ನು ಪಾದರಿಗಳಿಗೆ ತಿಳಿಸಿ ಹೇಳಿದ. ಗುರ್ಕಾರನಾಗಿ ತನ್ನನ್ನು ಹೆಸರಿಸಲಾದ ದಿನಗಳಲ್ಲಿ ಪ್ರಾರಂಭದಲ್ಲಿಯೇ ಈ ಬಗೆಯ ಘಟನೆ ನಡೆದು ಅದನ್ನು ತನಿಖೆ ಮಾಡಿ ಪಾದರಿಗಳ ಗಮನಕ್ಕೆ ಅದನ್ನು ತಂದ ಬಗ್ಗೆ ಒಂದು ಬಗೆಯ ಹೆಮ್ಮೆಯೂ ಅವನಿಗೆ ಆಯಿತು. ಯಾವುದೇ ಸಮಾಜದಲ್ಲಿ ಇಂತಹ ಅನೈತಿಕ ಕಾರ್ಯಗಳು ನಡೆಯಬಾರದು. ಒಂದು ವೇಳೆ ನಡೆದರೆ ಈ ಕಾರ್ಯಗಳ ವಿರುದ್ಧ ಕ್ರಮ ಕೈಕೊಳ್ಳಬೇಕು. ಇದಕ್ಕೆ ಕಾರಣರಾದವರನ್ನು ದಂಡಿಸಬೇಕು. ಮತ್ತೊಬ್ಬರು ಇಂತಹ ಕೆಲಸ ಮಾಡದ ಹಾಗೆ ನೋಡಿಕೊಳ್ಳಬೇಕು. ಗುರ್ಕಾರನ ಹೊಣೆಗಾರಿಕೆ, ಜವಾಬ್ದಾರಿ ಇರುವುದೇ ಇಂತಲ್ಲಿ. ಆ ಜವಾಬ್ದಾರಿಯನ್ನು ತಾನು ಸರಿಯಾಗಿ ನೆರವೇರಿಸುತ್ತಿದ್ದೇನೆ ಅಲ್ಲವೆ?
ಸಿಮೋನ ಪಾದರಿಗಳ ಅಭಿಪ್ರಾಯಕ್ಕಾಗಿ ಅವರ ಮುಖ ನೋಡಿದ. ಪಾದರಿ ಗೋನಸ್ವಾಲಿಸ್ ತುಂಬಾ ಚಿಂತಿತರಾದರು. ಛಿ! ನಮ್ಮ ಸಮಾಜದಲ್ಲಿಯೂ ಹೀಗೆ ಆಯಿತೇ ಎಂದು ನೊಂದುಕೊಂಡರು. ಆಡಂ ಈವರನ್ನು ಸೈತಾನ ಮಹಾಪಾಪಕ್ಕೆ ಎಳೆಯುವುದರ ಮೂಲಕ ಈ ಪಾಪದ ಬೀಜವನ್ನು ಲೋಕದಲ್ಲಿ ಬಿತ್ತಿದ. ದೇವರು ಈ ಪಾಪದಿಂದ ದೂರವಿರಬೇಕೆಂದೇ ದೇವರು ಮೊಸೆಸ್ ನಿಗೆ ನೀಡಿದ ಹತ್ತು ಕಟ್ಟಲೆಗಳಲ್ಲಿ ಆರನೆಯ ಕಟ್ಟಲೆಯ ಮೂಲಕ ’ಮೋಹ ಪಾಪ ಮಾಡಬೇಡ’ ಎಂಬ ಮಾತನ್ನು ಹೇಳಿದ. ಕ್ರೀಸ್ತುವರಾದವರು ಪರಿಶುದ್ಧರಾಗಿ ಬದುಕಬೇಕು ಎಂಬುದು ಕ್ರಿಸ್ತ ಪ್ರಭುವಿನ ಆಸೆ ಕೂಡ ಆಗಿತ್ತು. ಬೈಬಲಿನ ಪ್ರಕಾರ ದೇವರ ಚಿತ್ತವೇನೆಂದರೆ ನೀವು ಶುದ್ಧವಾಗಿರಬೇಕು ಎಂಬುದೇ. ದೇವರನ್ನು ಅರಿಯದ ಅನ್ಯ ಜನಗಳಂತೆ ಕಾಮಾಭಿಲಾಷೆಗೆ ಒಳಪಡದೇ ನಿಮ್ಮಲ್ಲಿ ಪ್ರತಿಯೊಬ್ಬನೂ ಶುದ್ಧವಾದ ಮನಸ್ಸಿನಿಂದಲೂ, ಘನತೆಯಿಂದಲೂ ತನ್ನ ಶರೀರವನ್ನು ಸ್ವಾಧಿನದಲ್ಲಿರಿಸಿಕೊಳ್ಳಲು ಅರಿತಿರಬೇಕು. ದೇವರು ನಮ್ಮನ್ನು ಶುದ್ಧವಾಗಿರುವುದಕ್ಕೆ ಕರೆದಿದ್ದಾನೆ. ಹೀಗಿರುವಾಗ ಸಾಂತಾಮೋರಿಯ ಮಗಳು ನಾತೇಲ ಇದೇನು ಕಾರ್ಯ ಮಾಡಿಕೊಂಡಳು?
ತಾವು ಈ ಊರಿಗೆ ಕೇವಲ ಇಗರ್ಜಿ ಕಟ್ಟಿಸಲು ಬರಲಿಲ್ಲ. ಜನರಿಗೆ ಜಪ ಪ್ರಾರ್ಥನೆ ಹೇಳಿ ಕೊಡಲು ಬರಲಿಲ್ಲ. ಅವರಲ್ಲಿ ನೈತಿಕತೆಯನ್ನು ಇಂದ್ರಿಯ ನಿಗ್ರಹವನ್ನು ಪ್ರೇರೇಪಿಸಲು ಬಂದೆನು. ಆದರ್ಶ ದಾಂಪತ್ಯದ ಮೂಲಕ ನೀತಿಯುತ ಪ್ರಜೆಗಳನ್ನು ಅವರು ಲೋಕಕ್ಕೆ ತರುವಂತೆ ನೋಡಿಕೊಳ್ಳುವುದು ಕೂಡ ತನ್ನ ಕರ್ತವ್ಯ. ಆದರೆ ಇಂತಹ ಅನೀತಿಯುತ ಕಾರ್ಯಗಳನ್ನು ತಾನು ಖಂಡಿಸಬೇಕು ದಂಡಿಸಬೇಕು.
“ಪದ್ರಾಬ..ಏನು ಮಾಡೋಣ?”
“ಜೂಂತ ಇಟ್ಟುಕೊಳ್ಳೋಣ..ಧಾಜಣರನ್ನು ಕರೆದುಬಿಡಿ..” ಎಂದರು ಪಾದರಿ.
ವಿಚಾರಣೆಯನ್ನು ಇರಿಸಿಕೊಳ್ಳುವುದು. ಹತ್ತು ಜನರ ತೀರ್ಮಾನಕ್ಕೆ ಇಂತಹ ವಿಷಯಗಳನ್ನು ಬಿಡುವುದು ಬೇರೆ ಕಡೆಗಳಲ್ಲಿ ನಡೆದು ಬಂದಿತ್ತು. ಇಲ್ಲಿಯೂ ಅದೇ ಹಾದಿ ಹಿಡಿಯುವುದು ಎಂದರು ಪಾದರಿ.
*
*
*
ಚಮಾದೋರ ಇಂತ್ರುವಿಗೆ ಮತ್ತೆ ಒಂದು ಕೆಲಸ ಬಂದಿತು. ಆತ ಮನೆ ಮನೆಗೆ ಹೋಗಿ ಈ ಭಾನುವಾರ ಪೂಜೆಯಾದ ನಂತರ ಕೊಪೆಲಿನಲ್ಲಿ ಜೂಂತ ಇದೆ. ಮನೆಗೊಬ್ಬರಂತೆ ಬರಬೇಕು ಎಂದು ಹೇಳಿ ಬಂದ. ಹೋದಲ್ಲಿ ಏನು? ಯಾರು? ಏಕೆ? ಹೇಗೆ ಗೊತ್ತಾಯಿತು ಎಂದು ಅವನನ್ನು ನಿಲ್ಲಿಸಿಕೊಂಡು ಜನ ಕೇಳಿದರು. ಅವರಿಗೆ ಉತ್ತರ ಹೇಳಿ ಸಾಕು ಸಾಕಾಯಿತು ಇವನಿಗೆ. ಆದರೆ ಚಮಾದೋರ ಮನೆಗಳಿಗೆ ಹೋಗುವ ಮುನ್ನವೇ ಊರ ಕ್ರೀಸ್ತುವರ ನಡುವೆ ಈ ವಿಷಯ ಸಾಕಷ್ಟು ಹರಡಿಕೊಂಡಿತ್ತು. ಸಾಂತಾಮೋರಿ ಮಗಳು ಕಳ್ಳತನದಲ್ಲಿ ಬಸುರಾಗಿದ್ದಾಳೆಂಬ ವಿಷಯ ಎಲ್ಲರಿಗೂ ತಿಳಿದಿತ್ತು. ಅದು ಈಗ ಖಚಿತವಾಯಿತು.
ಕೊಪೆಲ ಹೊರಗಿನ ಚಪ್ಪರದಲ್ಲಿ ಅದು ತುಂಬಿ ಹೊರ ಚೆಲ್ಲುವಷ್ಟು ಜನ ಸೇರಿದ್ದರು. ಜನರಿಗೆ ನಿಲ್ಲಲು, ಕುಳಿತುಕೊಳ್ಳಲು ಜಾಗವಿಲ್ಲದ್ದರಿಂದ ಹೊಸದಾಗಿ ಕಟ್ಟುತ್ತಿರುವ ಇಗರ್ಜಿ ಕಟ್ಟಡದ ಜಗಲಿ, ಬಾಗಿಲಲ್ಲಿಯೂ ಜನ ನಿಂತರು.
ಪೂಜೆ ಮುಗಿಯುತ್ತದೆನ್ನುವಾಗ ಸಾಂತಾಮೋರಿ ಸೆರಗಿನಲ್ಲಿ ಮುಖ ಮುಚ್ಚಿಕೊಂಡು , ಇಡಿ ಮೈಯನ್ನು ಸೀರೆಯಲ್ಲಿ ಹುದುಗಿಸಿಕೊಂಡು, ಕಣ್ಣುಗಳನ್ನು ನೆಲಕ್ಕೆ ನಾಟಿ ಬಂದಳು. ಅವಳ ಹಿಂದೆಯೇ ನಾತೇಲ ಅಂಜಿಕೆ ನಾಚಿಕೆ ತೋರಿಸಿಕೊಳ್ಳದೆ ನಡೆದು ಬಂದಳು.
ಸಾಂತಾಮೋರಿ ನೆಲಕ್ಕೆ ಕುಸಿದುಹೋಗಿದ್ದಳು. ಇತ್ತೀಚಿನ ವರ್ಷಗಳಲ್ಲಿ ಅವಳ ಬದುಕಿಗೊಂದು ಭರವಸೆ ದೊರಕಿತ್ತು. ಸ್ವಂತ ಮನೆ ಕಟ್ಟಿಕೊಂಡಳು. ಮಗಳಿಗೆ ಬಂಗಾರ ಮಾಡಿಸಿದಳು. ಇಪ್ಪತೈದರ ವಯಸ್ಸಿಗೆ ಬಂದ ಮಗಳಿಗೆ ವರ ಹುಡುಕುತ್ತಲೇ ಇದ್ದಳು. ನಾತೇಲ ಅವನು ಬೇಡ ಇವನು ಬೇಡ ಅನ್ನುತ್ತಲೇ ಹೀಗೆ ಮಾಡಿಕೊಂಡಳು.
ಶಿವಸಾಗರಕ್ಕೆ ಬಂದ ಪ್ರಾರಂಭದ ಕೆಲ ವರ್ಷಗಳವರೆಗೆ ಪಾಸ್ಕೋಲ ಮೇಸ್ತ್ರಿ ತನ್ನ ಬೆಂಗಾವಲಿಗೆ ನಿಂತಿದ್ದ. ಅವನ ಸ್ನೆಹವೂ ತನಗಿತ್ತು. ಆದರೆ ಇದು ತಪ್ಪು ಎನಿಸಿತು. ದೇವರ ಕಟ್ಟಲೆಗೆ ವಿರೋಧ ಹೋಗಬಾರದು ಎಂದುಕೊಂಡೆ. ಹಬ್ಬಕ್ಕೆಂದು ಊರಿಗೆ ಹೋಗಿ ಪಾದರಿಯ ಬಳಿ ಪಾಪ ನಿವೇದನೆ ಮಾಡಿಕೊಳ್ಳುವಾಗ ದೇವರು ನೀಡಿದ ಆರನೆ ಕಟ್ಟಲೆಯನ್ನು ತಾನು ಮುರಿದುದನ್ನು ಹೇಳಿದೆ.
“ಅದಕ್ಕಾಗಿ ಪಶ್ಚಾತ್ತಾಪ ಪಡು ಮತ್ತೆ ಹೀಗೆ ಮಾಡಬೇಡ. ನಾವು ದೇವರ ಇಚ್ಛೆಯಂತೆ ನಡೆಯ ಬೇಕಲ್ಲದೇ ಸೈತಾನನ ಇಚ್ಛೆಯಂತೆ ನಡೆಯಬಾರದು. ಕ್ರೀಸ್ತುವರಿಗೆ ಒಂದು ರೀತಿ ನೀತಿ ಧರ್ಮವಿದೆ. ಅದು ಮೀರಿದ ದಿನ ನಾವು ಕ್ರೀಸ್ತುವರಾಗಿರುವುದಿಲ್ಲ..” ಎಂದರು ಅವರು. ನಿತ್ಯ ಒಂದು ಪರಲೋಕ ಮಂತ್ರ ಮೂರು ನಮೋ ರಾಣೆ ಮಂತ್ರ ಹೇಳಲು ತಿಳಿಸಿದರು.
ಪಾಸ್ಕೋಲ ಮೇಸ್ತ್ರಿ ತನ್ನ ಹೆಂಡತಿಯನ್ನು ಕರೆ ತಂದು ಬೇರೆ ಮನೆ ಮಾಡಿದ. ತಾನು ಮತ್ತೆ ಬೇರೆ ಗಂಡಸರತ್ತ ಕಣ್ಣು ಹಾಕಲಿಲ್ಲ.
ಆದರೆ ತನ್ನ ಮಗಳು ನಾತೇಲ ಇದೇನು ಮಾಡಿಕೊಂಡಳು. ತನ್ನ ಮುಖಕ್ಕೆ ಮಸಿ ಬಳಿದು ಬಿಟ್ಟಳಲ್ಲ.
ಸಾಂತಾಮೋರಿ ಜೂಂತ ಪ್ರಾರಂಭವಾಗುವುದನ್ನು ನಿರೀಕ್ಷಿಸುತ್ತ ಕುಳಿತಳು.
ಪಾದರಿ ನೆರವಾಗಿ ನಾತೇಲಗೇನೆ ಕೇಳಿದರು. ನಿನ್ನ ಮೇಲೆ ಬಂದಿರುವ ಆಪಾದನೆ ನಿಜವೇ ಎಂದು ಪ್ರಶ್ನಿಸಿದರು.
“ಹೌದು ಪದ್ರಾಬಾ..” ಎಂದಳು ಹುಡುಗಿ ತುಸು ಕೂಡ ಅಳುಕಿಲ್ಲದೆ.
“ಇದು ದೇವದ್ರೋಹ. ಧರ್ಮದ್ರೋಹ ಗೊತ್ತೆ?”
ಅವಳು ಉತ್ತರಿಸಲಿಲ್ಲ.
“ಇದಕ್ಕೆ ಶಿಕ್ಷೆ ಏನು ಗೊತ್ತೆ?”
ಆಗಲೂ ಉತ್ತರವಿಲ್ಲ.
“ಇದಕ್ಕೆ ಕಾರಣ ಯಾರು? ನಮ್ಮ ಜನರೆ? ಹೊರಗಿನವರೆ? ಆತನಿಗೂ ನಿನಗೂ ಸ್ನೇಹ ಪರಿಚಯ ಉಂಟೆ? ಮದುವೆಯಾಗಲೂ ಒಪ್ಪಿಕೊಂಡಿರುವಿರಾ?”
ಈ ಪ್ರಶ್ನೆಗೂ ಉತ್ತರವಿಲ್ಲ.
ಚಪ್ಪರಕ್ಕೆ ಹೊದಿಸಿದ ಬಗನಿ ಸೊಪ್ಪಿನ ಹಸಿರು ಎಲೆಯ ಮೇಲೆ ಕಣ್ಣಾಡಿಸುತ್ತ ಕುಳಿತಿದ್ದಳು ಅವಳು.
” ಅವಳು ಯಾವ ಪ್ರಶ್ನೆಗೂ ಉತ್ತರಿಸುವುದಿಲ್ಲ” ಎಂದ ಬಾಲ್ತಿದಾರ.
“….ನಿಯಮದ ಪ್ರಕಾರ ಏನು ಮಾಡಬೇಕೋ ಮಾಡಿ..”
ಕೈತಾನ ಬಾಯಲ್ಲಿ ತುಂಬಿಕೊಂಡ ತಾಂಬುಲಕ್ಕೆ ತುತಿಯ ತಡೆಯೊಡ್ಡಿ ನುಡಿದ.
“ನಿಯಮ ಗಿಯಮ ಏನಿಲ್ಲ ಜಾತಿ ಕಟ್ ಮಾಡಿ” ಎಂದ ಇನಾಸ.
” ಬೇಡ..ಹಾಗೊಂದು ಮಾಡಬೇಡಿ” ಎಂದು ಗೋಳಾಡಿದಳು ಸಾಂತಾಮೋರಿ.
” ಅವಳಿಗೆ ಮೂರು ದಿನ ಕಾಲಾವಕಾಶ ಕೊಡಿ. ಅವನು ಯಾರು ಅನ್ನೋದನ್ನ ಅವಳು ಇಲ್ಲಿ ಹೇಳೋದು ಬೇಡ…ಪಾದರಿಗಳಿಗೆ..ಗುರ್ಕಾರಗೆ ಹೇಳಲಿ..ಅವನು ನಮ್ಮವನೇ ಆಗಿದ್ರೆ ಮದುವೆ ಮಾಡೋಣ..ಬೇರೆಯವನಾಗಿದ್ರೆ ನಮ್ಮಲ್ಲಿಗೆ ಸೇರಿಸಿಕೊಂಡು ಮದುವೆ ಮಾಡೋಣ..”
ಪಾಸ್ಕೋಲ ತುಸು ಕನವರಿಸಿಯೇ ನುಡಿದು ಎಲ್ಲರ ಮುಖ ನೋಡಿದ.
ಸಿಮೊನನಿಗೆ ಇದನ್ನು ಮುಂದುವರೆಸಿಕೊಂಡು ಹೋಗುವುದು ಬೇಕಿರಲಿಲ್ಲ. ಹುಡುಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆತ ಯಾರು ಎತ್ತ ಎಂಬುದನ್ನು ಅವಳು ಹೇಳಲು ಒಪ್ಪುತ್ತಿಲ್ಲ. ಈಗಿರುವ ಒಂದೇ ದಾರಿ ಎಂದರೆ ಅವಳ ಅಪರಾಧಕ್ಕೆ ತಕ್ಕ ಶಿಕ್ಷೆ ನೀಡುವುದು. ಆ ಶಿಕ್ಷೆ ಎಂದರೆ ಸುತಾರಿ ಇನಾಸ ಹೇಳಿದ ಹಾಗೆ ಜಾತಿ ಕಟ್. ಘಟ್ಟದ ಕೆಳಗಿನ ಊರುಗಳಲ್ಲಿ ಈ ಶಿಕ್ಷೆ ಚಾಲ್ತಿಯಲ್ಲಿದೆ. ದೇವರ ಆರನೇ ಕಟ್ಟಲೆಯನ್ನು ಮೀರಿದವರನ್ನು ಜಾತಿಯಿಂದ ಹೊರ ಹಾಕಲಾಗುತ್ತದೆ. ಅಂಥವರ ಮನೆಗಳಿಗೆ ಯಾರೂ ಹೋಗುವುದಿಲ್ಲ. ಅವರನ್ನು ಯಾರೂ ತಮ್ಮ ಮನೆಗಳಿಗೆ ಸೇರಿಸುವುದಿಲ್ಲ. ಅವರಿಗೆ ಊರಿನಲ್ಲಿ ನೀರು ಸಿಗುವುದಿಲ್ಲ. ಅವರ ಮನೆಯಿಂದ ಯಾರೂ ನೀರು ತರುವುದಿಲ್ಲ. ಕೊಡುವುದು ತರುವುದು ಮಾತುಕತೆ ಸಂಭಂಧ ಯಾವುದೂ ಇಲ್ಲ. ಹೀಗೆ ಜಾತಿ ಕಟ್ ಗೆ ಒಳಗಾದವರು ಊರಿನಲ್ಲಿ ತುಂಬಾ ತೊಂದರೆ ಅನುಭವಿಸುತ್ತಾರೆ. ಅವರ ಅವಸ್ಥೆ ಕಂಡು ಉಳಿದವರು ಎಚ್ಚೆತ್ತುಕೊಳ್ಳುತ್ತಾರೆ.
ಇಲ್ಲೂ ಹಾಗೆಯೇ ಆಗಬೇಕು. ಸಾಂತಾಮೋರಿಯ ಮಗಳನ್ನು ಜಾತಿಯಿಂದ ಹೊರ ಹಾಕಬೇಕು. ಈ ಬಗ್ಗೆ ಮತ್ತೆ ಯಾವುದೇ ರೀತಿಯ ವಿಳಂಬ ಆಗಬಾರದು. ಆದರೆ ಈ ಪಾಸ್ಕೊಲ ಏನೋ ನೆಪ ಮುಂದೆ ಮಾಡಿದ್ದಾನೆ. ಉಳಿದವರು ಕೂಡ ಇದನ್ನು ಒಪ್ಪಿಕೊಳ್ಳುವಂತೆ ಕಾಣುತ್ತಿದೆ.
“ಬೇಕಿಲ್ಲ” ಎಂದ ಗುರ್ಕಾರ ಸಿಮೋನ.
ಪಾದರಿ ಗೋನಸ್ವಾಲಿಸ್ ಸಿಮೋನನತ್ತ ತಿರುಗಿ-
“ಇರಲಿ..ಪಾಸ್ಕೋಲ ಹೇಳಿದ ಹಾಗೆ ನಾವು ಮೂರು ದಿನ ಕೊಡೋಣ..” ಎಂದರು.
ಅಲ್ಲಿಗೆ ಜೂಂತ್ ಮುಗಿಯಿತು.
ತುಸು ಅವಮಾನಿತನಾಗಿಯೇ ಸಿಮೋನ ಎದ್ದ. ಜನರೆಲ್ಲ ಚದುರಿ ಹೋದರು.
ಮೂರು ದಿನಗಳ ನಂತರ ಕತೆಯೇ ಬೆರೆಯಾಗಿತ್ತು. ಏಕೆಂದರೆ ನಾತೇಲ ಮನೆಯಲ್ಲಿ ಯಾರಿಗೂ ಹೇಳದೆ ಮಾಯವಾಗಿದ್ದಳು.
“ನಾವು ತಪ್ಪು ಮಾಡಿದ್ವಿ ಪದ್ರಾಬಾ..ಆವತ್ತೇ ನಾವು ಅವಳಿಗೆ ಶಿಕ್ಷೆ ವಿಧಿಸಬೇಕಿತ್ತು” ಎಂದು ಸಿಮೋನ ಅನಂತರ ಪಾದರಿ ಗೋನಸ್ವಾಲಿಸರ ಮುಂದೆ ಹೇಳಿಕೊಂಡ.
-೮-
ಶಿವಸಾಗರದ ಸಂತ ಜೋಸೆಫ಼ರ ಇಗರ್ಜಿಯ ಕಾಮಗಾರಿ ಮುಗಿಯಲು ಎರಡು ವರ್ಷಗಳೇ ಬೇಕಾದವು. ಮೊದಲ ವರ್ಷ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಹಂಚು ಹೊದೆಸಿ ಒಳಗಿನ ಕೆಲಸವನ್ನು ಮುಂದುವರೆಸಲಾಯಿತು. ಕಂಬ, ದೇವರ ಪೀಠ, ಪುಲಪತ್ರಿ, ದಿವ್ಯಪ್ರಸಾದ ಸ್ವೀಕರಿಸುವ ವೇದಿಕೆ. ಬಾಗಿಲಲ್ಲಿ ಪವಿತ್ರ ತೀರ್ಥ ತುಂಬಿರಿಸುವ ಕರಂಡಕಗಳು ಎಂದು ಸಣ್ಣ ಪುಟ್ಟ ಗಾರೆಯ ಕೆಲಸ ಮಾಡಲು ಮತ್ತೊಂದು ವರ್ಷ ಬೇಕಾಯಿತು. ಕಾಮಗಾರಿಗೆ ಯಾವುದೇ ತೊಂದರೆಯಾಗಲಿಲ್ಲ. ಹಣದ ಕೊರತೆಯಾಗಲಿಲ್ಲ. ಇಗರ್ಜಿಯ ಜೊತೆಗೇನೆ ಗಂಟೆ ಗೋಪುರ ಕೂಡ ಎದ್ದಿತು. ಇದೇ ಸಂದರ್ಭದಲ್ಲಿ ಹಳೆಯದಾದ ಕೊಪೆಲನ್ನು ದುರಸ್ತಿಪಡಿಸಿ, ಕಿಟಕಿ ಬಾಗಿಲು ಬದಲಾಯಿಸಿ ಪಾದರಿಗಳಿಗೆ ಉಳಿಯಲು ಒಂದು ವಸತಿಗೃಹವನ್ನು ರೂಪಿಸಲಾಯಿತು. ಬಟ್ಲರ ಬೋನನಿಗಾಗಿ ಒಂದು ಅಡಿಗೆ ಮನೆಯನ್ನು ಕೂಡ ಪಾದರಿ ಬಂಗಲೆಯ ಹಿಂದೆಯೇ ಕಟ್ಟಲಾಯಿತು.
ಇಲ್ಲಿ ಇಷ್ಟೂ ಕೆಲಸ ನಡೆದಿರುವಾಗ ಊರಜನ ಬಂದು ಅಚ್ಚರಿಯಿಂದ ನೋಡಿದರು. ಊರಿನಲ್ಲಿರುವ ಇಪ್ಪತ್ತು ಮೂವತ್ತು ಕ್ರೈಸ್ತ ಕುಟುಂಬಗಳು ಏನೆಲ್ಲ ಕಟ್ಟುತ್ತಾರೆ. ಏನೆಲ್ಲ ಮಾಡುತ್ತಾರೆ ಎಂದು ಅಚ್ಚರಿಪಟ್ಟರು.
ಫ಼ಿರ್ಜಂತ ಪಾಸ್ಕೋಲನ ಸಮ್ಮುಖದಲ್ಲಿ ಒಂದು ವರ್ಷದ ಹಬ್ಬ, ಸಣ್ಣ ಪ್ರಮಾಣದಲ್ಲಿ ನಡೆದು ಹೋಯಿತು. ಹೊಸ ಇಗರ್ಜಿಯಲ್ಲಿ ಮೊದಲ ಹಬ್ಬ ಆಗುವವರೆಗೆ ಅವನೇ ಫ಼ಿರ್ಜಂತ ಆಗಿ ಮುಂದುವರೆಯಬೇಕೆಂದು ಜನ ಪಾದರಿ ಅಭಿಪ್ರಾಯ ಪಟ್ಟಿದ್ದರಿಂದ ಇನ್ನೋರ್ವ ಫ಼ಿರ್ಜಂತನನ್ನು ಆಯ್ಕೆ ಮಾಡುವ ಸಂದರ್ಭ ಬರಲಿಲ್ಲ. ಹೀಗಾಗಿ ಪಾಸ್ಕೋಲ ಇಗರ್ಜಿ ಕೆಲಸ ಮುಗಿಯುವುದನ್ನೇ ಕಾಯುತ್ತಿದ್ದ.
ಮೇ ತಿಂಗಳಲ್ಲಿ ಹಬ್ಬ ಎಂದರೆ ಏಪ್ರಿಲ್ ಗೇನೆ ಹೊಸ ಇಗರ್ಜಿಯ ಕೆಲಸ ಮುಗಿಯಿತು. ಸಂತ ಜೋಸೆಫ಼ರ ಹಳೆಯ ಇಮಾಜ ಸಣ್ಣದಾದುದರಿಂದ ಹೊಸದನ್ನು ತರಿಸಲು ಪಾದರಿ ಗೋನಸ್ವಾಲಿಸ್ ವ್ಯವಸ್ಥೆ ಮಾಡಿದರು. ಈ ಇಮಾಜಿನ ಜೊತೆ ಜೊತೆಗೇನೆ ಆಳೆತ್ತರದ ಒಂದು ಶಿಲುಬೆ, ಸಂತ ಅಂತೋನಿ, ಸಂತ ತೆರೇಜ, ಸಂತ ಫ಼ಾತಿಮಾ, ಸಂತ ಸಬಸ್ತಿಯಾನ, ಮಾತೆ ಮೆರಿ ಹೀಗೆ ಇನ್ನೂ ಕೆಲವು ವಿಗ್ರಹಗಳನ್ನು ಕೂಡ ತರಿಸಲು ಪಾದರಿ ಮುಂದಾದರು. ಈ ಎಲ್ಲ ವಿಗ್ರಹಗಳನ್ನು ಇಗರ್ಜಿಯಲ್ಲಿ ಇರಿಸಲು ಸಣ್ಣ ಸಣ್ಣ ಪೀಠಗಳನ್ನು ನಿರ್ಮಿಸಲಾಗಿತ್ತು. ಈ ಎಲ್ಲ ವಿಗ್ರಹಗಳನ್ನು ಏಸು ಪ್ರಭು ಶಿಲುಬೆ ಹೊತ್ತು ನಡೆದಾಗಿನ ಹದಿನಾಲ್ಕು ಘಟ್ಟಗಳನ್ನು ಪ್ರತಿಬಿಂಬಿಸುವ ಹದಿನಾಲ್ಕು ಪೈನೆಲಗಳನ್ನು ಉಚಿತವಾಗಿ ನೀಡಲು ಗೋವಾದ ಒಂದು ಸಂಸ್ಥೆಯು ಮುಂದೆ ಬಂದಿತ್ತು. ಗೋವಾದಿಂದ ಕಾರವಾರದವರೆಗೆ , ಅಲ್ಲಿಂದ ಗಾಡಿಯಲ್ಲಿ ವಿಗ್ರಹಗಳಿರುವ ಪೆಟ್ಟಿಗೆಗಳು ಆಗಲೇ ಹೊರಟು ಬಿಟ್ಟಿದ್ದವು.
ಇನ್ನು ಇಗರ್ಜಿಗೆ ಬೇಕಾದ ಹೂವಿನ ವಾಸುಗಳು, ಮೇಣದ ಬತ್ತಿ ಸ್ಟ್ಯಾಂಡುಗಳು, ಪೂಜಾ ಸಲಕರಣೆ, ಪಾದರಿಯ ಉಡುಗೆ ತೊಡುಗೆ, ಪೀಠದ ಮೇಲೆ ಹಾಸುವ ವಸ್ತ್ರ, ದಿವ್ಯ ಪ್ರಸಾದ ಇರುವ ಪೆಟ್ಟಿಗೆ, ಪಾದರಿಗಳಿಗೆ ಕುಳಿತುಕೊಳ್ಳಲು ಕುರ್ಚಿ, ಪಾಪ ನಿವೇದನೆ ಸಂದರ್ಭದಲ್ಲಿ ಕುಳಿತುಕೊಳ್ಳಲು-ಪಾಪ ನಿವೇದನೆ ಮಾಡಿಕೊಳ್ಳುವವರಿಗೂ ಪಾದರಿಗೂ ನಡುವೆ ತೆಳು ಪರದೇ ಇರುವಂತಹ ವಿಶೇಷ ಆಸನ, ಧೂಪದ ತೀರ್ಥದ ಬಟ್ಟಲು, ಹೀಗೆ ಸಮಸ್ತವೂ ಹೊಸದಾಗಿ ಬಂತು.
ಇದೇ ಸಂದರ್ಭದಲ್ಲಿ ಪೋರ್ಚುಗಾಲಿನಿಂದ ಪಾದರಿ ಗೋನಸ್ವಾಲಿಸ್ ರ ಕುಟುಂಬದವರು, ಅವರ ದೇವ ಪಿತ, ದೇವ ಮಾತೆಯವರು ಇಲ್ಲಿ ಕಟ್ಟಲಾಗುತ್ತಿರುವ ಹೊಸ ಇಗರ್ಜಿಯ ವಿಷಯ ತಿಳಿದು ಹಣ ಸಹಾಯ ಮಾಡಲು ಮುಂದಾದದ್ದು ಗೋನಸ್ವಾಲಿಸರಿಗೆ ಮತ್ತೂ ಹುರುಪು ತಂದಿತು. ಸೂಜಿ ಎತ್ತಿದ ಹಾಗೆ ಎಲ್ಲ ಕೆಲಸಗಳೂ ಆಗುತ್ತಿರುವುದನ್ನು ಕಂಡು ಅವರು ಸಂತಸಪಟ್ಟರು. ತಮ್ಮ ನಿತ್ಯದ ಪ್ರಾರ್ಥನೆಯಲ್ಲಿ ಅವರು ದೇವರಿಗೆ ವಿಶೇಷ ಕೃತಜ್ಞತೆಗಳನ್ನು ಅರ್ಪಿಸಿದರು.
ಊರಿನಲ್ಲಿ ಸಾಕಷ್ಟು ಬದಲಾವಣೆಗಳು ಆಗಿದ್ದವು. ಶಿವಮೊಗ್ಗದವರೆಗೆ ಬರುತ್ತಿದ್ದ ರೈಲು ಅಲ್ಲಿಂದ ಮುಂದುವರೆದು ಶಿವಸಾಗರಕ್ಕೂ ಬರತೊಡಗಿತು. ಚಾರ್ಕೋಲ ಬಸ್ಸುಗಳು ಹಿಂಬದಿಯಲ್ಲಿ ಒಂದೊಂದು ಪೀಪಾಯಿ ಕಟ್ಟಿಕೊಂಡು ಕೆಂಡ ಬೀಳಿಸುತ್ತ ತಿರುಗತೊಡಗಿದವು. ಜನರಲ್ಲಿಯ ಗ್ರಾಮೀಣತನ ಮಾಯವಾಗಿ ಆಧುನಿಕತೆ ಎಲ್ಲೆಲ್ಲೂ ತನ್ನ ಬಲೆ ಬೀಸುತ್ತಿರುವುದು ನಿಚ್ಚಳವಾಗಿ ಕಂಡಿತು. ಈ ಮಾತಿಗೆ ಶಿವಸಾಗರದ ಕ್ರೀಸ್ತುವರು ಕೂಡ ಹೊರತಾಗಿರಲಿಲ್ಲ. ಅದೇ ಎದ್ದು ನಿಲ್ಲತೊಡಗಿದ ಇಗರ್ಜಿ ಇದಕ್ಕೆ ಸಂಕೇತವಾಯಿತು.
*
*
*
ಆಗಲೇ ಇಗರ್ಜಿ ಹಬ್ಬ ಬಂದಿತು. ನಾಳೆ ಹಬ್ಬವೆಂದರೆ ಇಂದು ಬೇಸ್ಪುರ. ಇಗರ್ಜಿ ಮುಂದೆ ಒಂದು ಕಂಬ ನೆಟ್ಟು ಅದರ ಮೇಲೆ ಧ್ವಜವನ್ನು ಹಾರಿಸಿ ಹಬ್ಬದ ಆರಂಭವನ್ನು ಸಾರಲಾಯಿತು. ಹೊಸ ಇಗರ್ಜಿಯ ಮುಂದೆ ಚಪ್ಪರ, ತೋರಣ, ಒಳಗೆಲ್ಲ ಬಟ್ಟೆಯ ಬಂಟಿಂಗ್ಸಗಳು ಬಣ್ಣದ ಕಾಗದದ ಪಟ್ಟಿಗಳು, ಬಾವುಟಗಳು. ಇಗರ್ಜಿ ಹೊಸದು ಅನ್ನುವುದೇ ಒಂದು ಹೆಗ್ಗಳಿಕೆ. ಊರಿನಲ್ಲಿ ಅಷ್ಟು ಎತ್ತರದ ಅಷ್ಟು ದೊಡ್ಡದಾದ ಮತ್ತೊಂದು ಕಟ್ಟಡವಿರಲಿಲ್ಲ. ರೈಲು ನಿಲ್ದಾಣದ ಬಳಿ ನಿಂತರೆ ಇದರ ಗೋಪುರ ಕಾಣುತ್ತದೆ. ಊರ ಹೊರಗಿನ ಸೇತುವೆಯ ಬಳಿ ನಿಂತರೆ ಗೋಪುರದ ಮೇಲಿನ ಶಿಲುಬೆ ಕಾಣುತ್ತದೆ ಎಂದು ಜನ ಹೆಮ್ಮೆ ಪಟ್ಟುಕೊಂಡರು. ಸುತ್ತ ಬೆಳೆದ ಮರ ಗಿಡಗಳ ನಡುವೆ ಇಗರ್ಜಿ ಭವ್ಯವಾಗಿ ದಿವ್ಯವಾಗಿ ಕಂಡಿತು. ಇದರ ಗಂಟೆಯಂತೂ ಸುತ್ತಮುತ್ತಲಿನ ನಾಲ್ಕು ಐದು ಮೈಲಿಗಳವರೆಗೆ ಕೇಳಿಸುತ್ತಿತ್ತು. ಗಂಟೆ ಗೋಪುರದಲ್ಲಿ ಬಲವಾದ ಮರದ ತೊಲೆಗೆ ತೂಗು ಬಿದ್ದ ಗಂಟೆ ಹಗ್ಗ ಹಿಡಿದು ಎಳೆದಾಗ ಅತ್ತಿತ್ತ ಹೊರಳಾಡುವುದೇ ಒಂದು ಸೋಜಿಗದಂತೆ ಕಂಡಿತು.
ಶಿವಮೊಗ್ಗ, ತೀರ್ಥಹಳ್ಳಿ, ಹೊನ್ನಾವರ, ಕುಮಟಾ, ಸಿದ್ದಾಪುರ ಹೀಗೆ ಹೊರಗಿನಿಂದ ಬಂದ ಐವರು ಪಾದ್ರಿಗಳು, ಊರಿನ ಪಾದರಿ ಗೋನಸ್ವಾಲಿಸ್, ಆರೂಜನ ಮೊದಲು ಇಗರ್ಜಿಯನ್ನು ಮಂತ್ರಿಸಿದರು. ಗೋವಾದಿಂದ ಪ್ರಾವಿನ್ಶಿಯಲ್ ಅವರನ್ನು ಕರೆಸಬೆಕೆಂಬ ಯತ್ನ ಫಲಕಾರಿಯಾಗಲಿಲ್ಲ. ವಯಸಾಗಿದ್ದರಿಂದ ತಕ್ಕ ವ್ಯವಸ್ಥೆ ಇಲ್ಲದ್ದರಿಂದ ಅವರು ಬರಲಿಲ್ಲ. ಆದರೆ ಐವರು ಪಾದರಿಗಳು ಬಂದಿದ್ದಾರೆ ಅನ್ನುವುದೇ ಒಂದು ವಿಶೇಷವೆನಿಸಿತು.
ಫ಼ಿರ್ಜಂತ ಪಾಸ್ಕೋಲನನ್ನು ಗುರ್ಕಾರ ಸಿಮೋನ ಹೋಗಿ ಮೆರವಣಿಗೆಯಲ್ಲಿ ಕರೆತಂದ. ಸಂಗಡ ಕೇರಿಯ ಕೆಲವರಿದ್ದರು. ಹಳದಿ ಮಿಶ್ರಿತ ಕೆಂಪು ರೇಷ್ಮೆಯ ಚೌಕಾಕಾರದ ವಸ್ತ್ರದ ನಾಲ್ಕೂ ತುದಿಗೆ ನಾಲ್ಕು ಕೋಲುಗಳನ್ನು ಸಿಕ್ಕಿಸಿ ಈ ಕೋಲುಗಳನ್ನು ಎತ್ತಿ ಹಿಡಿದು, ಈ ವಸ್ತ್ರದಡಿಯಲ್ಲಿ ಫ಼ಿರ್ಜಂತನನ್ನು ನಡೆಸಿಕೊಂಡು ಬರಲಾಯಿತು. ಫ಼ಿರ್ಜಂತ ಪಾಸ್ಕೋಲ ಕೂಡ ಕಚ್ಚೆ ಪಂಜೆ, ಸರ್ಜ ಕೋಟು ಧರಿಸಿದ್ದ. ಮೇಲೆ ಫ಼ಿರ್ಜಂತುಗಳಿಗೆಂದೇ ಪಾದರಿ ಮಾಡಿಸಿದ್ದ ಕೆಂಪು ರೇಶ್ಮೆಯ ಮೇಲಂಗಿ ತೊಟ್ಟಿದ್ದ. ಕೇರಿಯ ಮೂಲಕ ಬರುವಾಗ ಅವನ ಜರ್ಬು ಬೆರೆಯಾಗಿತ್ತು. ಹೊಸ ಇಗರ್ಜಿಯ ತುಂಬ ಊರಿನವರೇ ಅಲ್ಲದೇ ತೀರ್ಥಹಳ್ಳಿ, ಕುಮಟ, ಹೊನ್ನಾವರದ ಜನಕೂಡ ತುಂಬಿದ್ದರು. ಊರಿಗೆ ರೈಲು ಬಸ್ಸು ಬಂದದ್ದು ಅನುಕೂಲವೇ ಆಗಿತ್ತು. ಇಲ್ಲದಿದ್ದರೆ ಇಷ್ಟು ಜನ ಎಲ್ಲಿ ಬರುತ್ತಿದ್ದರು?
ಶಿಲುಬೆಯಾಕಾರದ ಇಗರ್ಜಿಯಲ್ಲಿ ಮೂರೂ ಕಡೆ ಜನ. ಹೆಂಗಸರು ಮದುವೆ ಸಂದರ್ಭದಲ್ಲಿ ತಂದ ಧಾರೆ ಸೀರೆಗಳನ್ನು ಉಟ್ಟರೆ, ಗಂಡಸರು ಮದುವೆ ಕೋಟುಗಳನ್ನು ತೊಟ್ಟಿದ್ದರು. ಹುಡುಗರು, ಹುಡುಗಿಯರು ಹೊಸ ಬಟ್ಟೆ ಧರಿಸಿದ್ದರು. ಇಗರ್ಜಿಯ ತುಂಬ ದಾಂಬರು ಗುಳಿಗೆಯ ವಾಸನೆ. ಜನರ ಸಂಭ್ರಮ ಸಂತಸ.
ಬಂದ ಪಾದರಿಗಳಲ್ಲಿ ಹಿರಿಯರಾದ ಶಿವಮೊಗ್ಗೆಯ ಪಾದರಿಗಳೇ ಪ್ರಮುಖವಾಗಿ ಪೂಜೆ ಅರ್ಪಿಸಿದರು. ಉಳಿದ ಪಾದರಿಗಳು ಅವರಿಗೆ ನೆರವು ನೀಡಿದರು. ಪೂಜೆಯ ನಡುವೆ ದಿವ್ಯಪ್ರಸಾದ ಹಂಚುವುದೇ ಒಂದು ದೀರ್ಘ ಕೆಲಸವಾಯಿತು. ಬಂದವರೆಲ್ಲ ಹಿಂದಿನ ದಿನ, ಅಂದು ಬೆಳಿಗ್ಗೆ ಪಾಪ ನಿವೇದನೆ ಮಾಡಿ ಉಪವಾಸವಿದ್ದು ಭಯ ಭಕ್ತಿಯಿಂದ ದಿವ್ಯ ಪ್ರಸಾದ ಸ್ವೀಕರಿಸಿದರು. ಶಿವಮೊಗ್ಗೆಯ ಪಾದರಿ ಶೆರಮಾಂವಂಗೆ ನಿಂತವರು ಶಿವಸಾಗರದಲ್ಲಿ ಇಂತಹ ಭವ್ಯ ದಿವ್ಯ ಇಗರ್ಜಿಯನ್ನು ಕಟ್ಟಲು ಶ್ರಮಿಸಿದ ಪಾದರಿ ಗೋನಸ್ವಾಲಿಸ್ ರನ್ನು ಕೊಂಡಾಡಿದರು.
“ಇಗರ್ಜಿಗಳು ಕೇವಲ ಕಲ್ಲಿನ ಕಟ್ಟಡಗಳಲ್ಲ…ನಮ್ಮ ಏಕತೆ..ಭಕ್ತಿಯ ಸಂಕೇತಗಳು..ನಾವೆಲ್ಲ ಒಂದೆಡೆ ಸೇರಿ ಪ್ರಾರ್ಥಿಸುವುದರಿಂದ ಆ ಪ್ರಾರ್ಥನೆ ದೇವರಿಗೆ ತಲುಪುತ್ತದೆ. ಹೀಗೆ ನಾವೆಲ್ಲ ಒಂದಾಗಿ ಸೇರುವುದರಿಂದ ನಮ್ಮ ಶಕ್ತಿ ಹೆಚ್ಚಾಗುತ್ತದೆ. ನಾವು ಆತ್ಮೀಯರಾಗುತ್ತೇವೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಇದು ನೆರವು ನೀಡುತ್ತದೆ. ಇಂದು ಈ ಊರಿನ ಕ್ರೈಸ್ತ ಸಮಾಜ ತಾನೂ ಇದ್ದೇನೆ ಅನ್ನುವುದನ್ನು ಊರಿನ ಜನರಿಗೆ ತೋರಿಸಿಕೊಟ್ಟಿದೆ”. ಎಂದೆಲ್ಲ ಅವರು ಹೇಳಿದ್ದು ಜನರಿಗೆ ಹಿಡಿಸಿತು. ಜನರು ತಲೆದೂಗಿ ತಮ್ಮ ಸಮ್ಮತಿಯನ್ನು ಸೂಚಿಸಿದರು.
ಅಂದು ಕೇರಿಯಲ್ಲಿ ಕಾಡು ಹಂದಿಯ ಮಾಂಸ ಚೆನ್ನಾಗಿ ಮಾರಾಟವಾಯಿತು. ಹಂದಿ ಗುಸ್ತೀನ ಸತ್ತ ನಂತರ, ಅವನ ಜತೆ ಕಾಡಿಗೆ ಹೋಗುತ್ತಿದ್ದ. ಅಲ್ಲಿಂದ ಹಂದಿ ಜಿಂಕೆ ತರುತ್ತಿದ್ದ ಮಿಂಗೇಲಿ ಈ ಕೆಲಸವನ್ನು ಮುಂದುವರೆಸಿದ್ದ. ಹಬ್ಬದ ಹಿಂದಿನ ದಿನವೇ ಈತ ಕಾಡಿಗೆ ಹೋಗಿ ಎರಡು ಕಾಡು ಹಂದಿಗಳನ್ನು ಹೊಡೆದಿದ್ದ. ಇವನ ಮನೆ ಅಂಗಳದಲ್ಲಿ ಹಾಕಿದ ಪಾಲುಗಳು ಅರ್ಧಗಂಟೆಯಲ್ಲಿ ಖರ್ಚಾಗಿದ್ದವು. ಬೇಲಿ ಗೂಟದ ಮೆಲೆ, ಮನೆ ಮಾಡಿನ ಮೇಲೆ ಕುಳಿತು ಕೂಗಾಡುತ್ತಿದ್ದ ಕಾಗೆಗಳನ್ನು ಒಂದು ಕೈಯಿಂದ ಓಡಿಸುತ್ತ ಮಿಂಗೇಲಿ ಬಂದ ಬಂದವರಿಗೆ ಮಾಂಸದ ಪಾಲುಗಳನ್ನು ಸುವರ್ಣಗೆಡ್ಡೆ ಎಲೆಯಲ್ಲಿ ಸುತ್ತಿ ಸುತ್ತಿಕೊಟ್ಟು ಹಣ ಎಣಿಸಿದ. ಹಬ್ಬದ ದಿನವೇ ಈ ಮಾಂಸ ಸಿಕ್ಕಿದ್ದು ಜನರಿಗೆ ಸಂತಸ ತಂದಿತು.
ಬಿಳಿಯಪ್ಪನ ಸಾರಾಯಿ ಅಂಗಡಿಗೂ ಸಾಕಷ್ಟು ವ್ಯಾಪಾರವಾಯಿತು. ಬಾಟಲಿಗೆ ಭದ್ರವಾಗಿ ಬಿರಡೆ ಹಾಕಿ ಜನ ಸಾರಾಯಿಯನ್ನು ಮನೆ ಮನೆಗೆ ತಂದರು.
ಊಟಕ್ಕೆ ಕುಳಿತಾಗ ನೆಂಟರ ಕೈಗೆ ಸಾರಾಯಿ ತುಂಬಿದ ಗಿಲಾಸು ನೀಡಿ, ಅವರು-
“ದೇವ್ ಬರೆಂ ಕರುಂ” (ದೇವರು ಒಳ್ಳೆಯದನ್ನು ಮಾಡಲಿ) ಎಂದರು.
” ಹಂ..ಹಂ..ಘೆ..ಘೆ..” (ಹಾಂ ಹಾಂ ತೋಕೋ ತೋಕೋ) ಎಂದು ಮತ್ತೆ ಮತ್ತೆ ಬರಿದಾದ ಗಿಲಾಸನ್ನು ತುಂಬಿದರು.
ಇದರಿಂದ ಏನಾಯಿತೆಂದರೆ ನಾಲ್ಕು ಗಂಟೆಗೆಲ್ಲ ಬಹಳ ಜನ ಗಂಡಸರು ಕೂರಲಾಗದೆ ನಿಲ್ಲಲಾಗದೆ ತೂರಾಡಿ ಅಲ್ಲಲ್ಲಿ ಮಲಗಿಕೊಂಡರು. ಸಂಜೆ ಇಗರ್ಜಿಯಿಂದ ಪುರುಶಾಂವಂ ಹೊರಟಾಗ ಅದರಲ್ಲಿ ಬರೀ ಹೆಂಗಸರು, ಯುವಕ, ಯುವತಿಯರು, ಹೊರಗಿನಿಂದ ಬಂದ ಪಾದರಿಗಳು, ಕೆಲವರೇ ಗಂಡಸರು ಇದ್ದರು.
ದೇವರ ಪ್ರತಿಮೆಯನ್ನು ಪೀಠದ ಸಮೇತ ಗಾಡಿಯೊಂದರ ಮೇಲೆ ಇರಿಸಿ ಅದಕ್ಕೆ ಅಲಂಕಾರ ಮಾಡಿ ಜನ ಪ್ರಾರ್ಥನೆ ಮಾಡುತ್ತ, ಕೀರ್ತನೆ ಹಾಡುತ್ತ ಊರ ಪ್ರಮುಖ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ದರು. ಇಗರ್ಜಿಯಿಂದ ಹೊರಬಿದ್ದ ಮೆರವಣಿಗೆ ಎಲ್ಲ ಕ್ರೀಸ್ತುವರ ಮನೆಗಳ ಮುಂದಿನಿಂದ ಹಾದು ಪೇಟೆಯನ್ನು ಹೊಕ್ಕಿತು. ಕ್ರೀಸ್ತುವರ ಮನೆಗಳ ಮುಂದೆ ದೇವರು ಬಂದಾಗ ಜಗಲಿಯ ಮೇಲೆ ಮೇಣದ ಬತ್ತಿಗಳನ್ನು ಹಚ್ಚಲಾಯಿತಾದರೆ ಪೇಟೆಯಲ್ಲಿ ಅಂಗಡಿ ಹೋಟೆಲುಗಳವರು ದೇವರಿಗೆ ಮೇಣದ ಬತ್ತಿ ಪಾಕೆಟುಗಳನ್ನು ನೀಡಿದರು. ಹೂವಿನ ಹಾರ ಹಾಕಿದರು.
ದೇವರ ಪ್ರತಿಮೆಯ ಜೊತೆಯಲ್ಲಿ ಕ್ರೀಸ್ತುವರು ತೆಗೆದ ಪ್ರಥಮ ಮೆರವಣಿಗೆ ಇದಾಗಿದ್ದರಿಂದ ಎಲ್ಲ ಜನ ಅಂಗಡಿ ಮುಂಗಟ್ಟುಗಳ ಮೇಲೆ ನಿಂತು ನೋಡಿದರು. ಕೈ ಮುಗಿದುಕೊಂಡು, ಉರಿಯುವ ಮೆಣದ ಬತ್ತಿಗಳನ್ನು ಹಿಡಿದು ಜಪ ಹೇಳುತ್ತ ಭಯ ಭಕ್ತಿಯಿಂದ ಸಾಲುಗಟ್ಟಿ ಹೋಗುವ ಈ ಜನ ಪಟ್ಟಣಿಗರ ಗಮನ ಸೆಳೆದರು. ಮೆರವಣಿಗೆ ಹೊರಡುವ ಮುನ್ನ ಪಾದರಿ ಗೋನಸ್ವಾಲಿಸ್ ಮೆರವಣಿಗೆಯಲ್ಲಿ ಹೇಗೆ ಹೋಗಬೇಕು ಎಂದು ಹೇಳಿದ್ದು ಇಲ್ಲಿ ಫಲಪ್ರದವಾಯಿತು. ಮೆರವಣಿಗೆ ಇಗರ್ಜಿಯಿಂದ ಹೊರಟು ಮತ್ತೆ ಇಗರ್ಜಿಗೆ ಬಂದು ಸೇರುವವರೆಗೂ ಇಗರ್ಜಿಯ ಗಂಟೆ ಹೊಡೆದುಕೊಳ್ಳುತ್ತಲೇ ಇತ್ತು. ಬಟ್ಲರ ಬೋನಾ ನಡುನಡುವೆ ಸುಧಾರಿಸಿಕೊಳ್ಳುತ್ತ ಈ ಕೆಲಸ ಮಾಡಿದ. ಗುರ್ಕಾರ ಸಿಮೋನ, ಫ಼ಿರ್ಜಂತ, ಪಾಸ್ಕೋಲ ಇನ್ನೂ ಒಂದಿಬ್ಬರು ಮೆರವಣಿಗೆ ಅಸ್ತವ್ಯಸ್ಥವಾಗದಂತೆ ನೋಡಿಕೊಂಡರು.
ಆ ದಿನವೂ ಸುತಾರಿ ಇನಾಸನ ಮನೆ ಮುಂದಿನ ಶಿಲುಬೆಯ ಬಳಿಯ ದೀಪ ಉರಿಯುತಲಿತ್ತು.
ಊರಿಗೆ ಬಂದ ಪಾದರಿಗಳಿಗೆ ಭರ್ಜರಿ ಊಟವಾಯಿತು. ಹಂದಿ, ಕೋಳಿ, ಕುರಿ ಎಂದು ಮೂರ್ನಾಲ್ಕು ಬಗೆಯ ಕರ್ರಿಯನ್ನು ಬೋನ ಮಾಡಿದ್ದ. ತನ್ನೊಬ್ಬನಿಂದ ಈ ಕೆಲಸ ಮಾಡಲಾಗುವುದಿಲ್ಲವೆಂದು ಸಿಮೋನ, ಇನಾಸ, ಕೈತಾನ್, ಪಾಸ್ಕೋಲ ಇವರೆಲ್ಲರ ಮನೆಯ ಹುಡುಗಿಯರನ್ನು ಕೂಜ್ನಗೆ ಕರೆಸಿಕೊಂಡಿದ್ದ. ಈ ಹುಡುಗಿಯರು ಕೂಡ ಅತೀ ಸಂಭ್ರಮದಿಂದ ಚುರುಕಾಗಿ ಓಡಾಡುತ್ತ ಎಲ್ಲ ಕೆಲಸಗಳನ್ನು ಮಾಡಿದ್ದರು. ಬಗೆ ಬಗೆಯ ಸಾರು, ಪಲ್ಯ, ಅನ್ನ, ಚಟ್ನಿ ಎಂದು ಬಿಡುವಿಲ್ಲದೆ ದುಡಿದರು. ಈ ತಂಡದ ನೇತೃತ್ವವನ್ನು ಬಲಗಾಲುದ್ದ ಬಾಲ್ತಿದಾರನ ಮಗಳು ರೆಮೀಂದಿ ವಹಿಸಿದ್ದಳು. ಬೋನ ಮಾತು ಮಾತಿಗೆ
” ರ್ಮೇಂದಿ…ಈಗ ಇದು ಆಗಬೇಕು..ಈಗ ಅದು ಆಗಬೇಕು” ಅನ್ನುತ್ತಿದ್ದ.
ರೆಮೆಂದಿ ಕೂಡಲೇ ಬಾಣದಂತೆ ಚಿಮ್ಮಿ ಬಂದು ಆ ಕೆಲಸ ಮಾಡಿಸುತ್ತಿದ್ದಳು. ರೆಮೇಂದಿ ಉರಿಯುವ ಒಲೆಯ ಬಳಿ, ಮಾಂಸ ತುಂಡರಿಸುವಲ್ಲಿ, ಖಾರ ಅರೆಯುವಲ್ಲಿ ನಿಂತಿದ್ದರೆ, ಬೋನಾ ಅವಳನ್ನೇ ಕಣ್ಣುಗಳಲ್ಲಿ ತುಂಬಿಸಿಕೊಳ್ಳುತ್ತಿದ್ದ.
*
*
*
ಹಬ್ಬ ಮುಗಿದ ಎರಡು ದಿನಗಳ ನಂತರ ಪಾದರಿ ಗೋನಸ್ವಾಲಿಸರಿಗೆ ವಿಶ್ರಾಂತಿ ಎಂಬುದು ದೊರೆಯಿತು. ಒಂದು ಕೆಲಸವನ್ನು ಮಾಡಿ ಮುಗಿಸಿದೆ ಎಂಬ ತೃಪ್ತಿ, ಸಮಾಧಾನ. ಇಗರ್ಜಿ ಕಟ್ಟುವ ಕೆಲಸ ಅವರಿಗೆ ಹೊಸದಾಗಿತ್ತು. ಪಣಜಿಯಲ್ಲಿ ಇಂತಹ ಕಾಮಗಾರಿಯನ್ನು ಮಾಡಿಸುವ ಅವಶ್ಯಕತೆ ಇರಲಿಲ್ಲ. ಕಾರವಾರದಲ್ಲಿ ಅವರು ಪಾದರಿಗಾಗಿ ಒಂದು ಬಂಗಲೆಯನ್ನು ಕಟ್ಟಿಸಿದ್ದರು. ಹೊನ್ನಾವರದ ಮೇಲ್ ಪಾಳ್ಯದಲ್ಲಿ ಪಾದರಿಗಾಗಿ ಒಂದು ಬಂಗಲೆಯನ್ನು ಕಟ್ಟಿಸಿದ್ದರು. ಹೊನ್ನಾವರದ ಮೇಲ್ ಪಾಳ್ಯದಲ್ಲಿ ಒಂದು ಸಣ್ಣ ಕೊಪೆಲ ಇವರ ಕಾಲದಲ್ಲಿಯೇ ಆಗಿತ್ತು. ಆದರೆ ದೊಡ್ಡ ಪ್ರಮಾಣದ ಕೆಲಸವೆಂದರೆ ಇದೇನೆ. ಅಬ್ಬ! ಎಂದವರು ನಿಟ್ಟುಸಿರು ಬಿಟ್ಟರು. ಈ ಇಗರ್ಜಿ ಕಟ್ಟಿ ನಿಲ್ಲಿಸಲು ತಾವು ಮಾಡಿದ ಪ್ರಯತ್ನಗಳೆಲ್ಲ ಅವರಿಗೆ ನೆನಪಾದವು.
ನಕ್ಷೆ ತರಿಸಿದ್ದು, ಹಣಕ್ಕಾಗಿ ಮಾಡಿದ ಪ್ರಯತ್ನ, ಕಲ್ಲು ಮರಳು ಮರ ತರಿಸಿದ್ದು, ಕೆಲಸಗಾರರನ್ನು ಕರೆಸಿಕೊಂಡಿದ್ದು, ಹಗಲು ರಾತ್ರಿ ತಾನು ಕೆಲಸ ನಡೆಯುವಲ್ಲಿ ನಿಂತು ನಿರ್ದೇಶನ ನೀಡಿದ್ದು, ಈ ಬಗ್ಗೆ ನಿತ್ಯ ದೇವರಿಗೆ ಸಲ್ಲಿಸುತ್ತಿದ್ದ ಪ್ರಾರ್ಥನೆ, ಪ್ರಾರ್ಥನೆಗೆ ದೇವರು ಓಗೊಟ್ಟಂತೆ ಕೆಲಸಗಳು ಆಗುತ್ತಿದ್ದುದು. ಊರ ಇತರೇ ಮತಸ್ಥರ ಸಹಕಾರ ಬೆಂಬಲ.
ತಾನು ಇಲ್ಲಿ ಇಗರ್ಜಿಯನ್ನು ಮಾತ್ರ ಕಟ್ಟಲಿಲ್ಲ. ಅಲ್ಲವೇ? ಇಲ್ಲಿಯ ಕ್ರೈಸ್ತ ಸಮೋಡ್ತಿಯನ್ನೇ ಒಂದಾಗಿ ನಿಲ್ಲಿಸಿದೆ. ಅವರಲ್ಲಿ ಕ್ರೈಸ್ತ ಭಕ್ತಿಯನ್ನು, ಭೀತಿಯನ್ನು, ಕ್ರಿಸ್ತನ ಬಗ್ಗೆ ಅಪಾರ ನಂಬಿಕೆಯನ್ನು ಬಿತ್ತಿದೆ. ಬೆಳೆಸಿದೆ.
ಈಗ ಇಲ್ಲಿಯ ಮನೆಗಳಲ್ಲಿ ಸಾಯಂಕಾಲದ ಅಮೋರಿ, ಗಾಯನ ಕೇಳಿ ಬರುತ್ತದೆ. ಭಾನುವಾರಗಳಂದು ಇಗರ್ಜಿಗೆ ಜನ ತಾವಾಗಿ ಬರುತ್ತಾರೆ. ಶನಿವಾರ ಪಾಪ ನಿವೇದನೆಗೆ ಜನ. ಕ್ರೀಸ್ತುವರ ಮನೆಗಳಲ್ಲಿ ಕ್ರೈಸ್ತ ಪರಿಸರದ ವಾತಾವರಣ.
“ಎಲ್ಲ ನಿನ್ನ ಅನುಗ್ರಹ”
ಅವರು ತಮ್ಮ ಕೊಠಡಿಯಲ್ಲಿ ಸಂತನ ಪ್ರತಿಮೆಗೆ ಕೈ ಮುಗಿದರು. ಇಗರ್ಜಿಗೆ ಹೊಸ ಪ್ರತಿಮೆ ತಂದ ನಂತರ ಹಳೆಯದನ್ನು ಅವರು ತಮ್ಮ ಕೊಠಡಿಯಲ್ಲಿ ಇರಿಸಿಕೊಂಡಿದ್ದರು. ಇದರ ಮಗ್ಗುಲಲ್ಲಿಯೇ ಶಿಲುಬೆ ಏರಿದ ಏಸು ಪ್ರಭುವಿನ ಪ್ರತಿಮೆ. ಮತ್ತೊಂದು ಕಡೆ ಮಾತೆ ಮೇರಿ. ಇವರು ನಿತ್ಯ ಪ್ರಾರ್ಥನೆ ಮಾಡುವುದು ಈ ಪ್ರತಿಮೆ ಮುಂದೆಯೇ.
ತಟ್ಟನೆ ಅವರಿಗೆ ತಾವು ಮಾಡಬೇಕಾಗಿರುವ ಮತ್ತೊಂದು ಕೆಲಸದ ನೆನಪಾಯ್ತು.
ಬಟ್ಲರ್ ಬೋನನಿಗೊಂದು ಮದುವೆ ಮಾಡಬೇಕು. ಕಳೆದ ಸುಮಾರು ಹದಿನೆಂಟು ವರ್ಷಗಳಿಂದ ಈತ ತಮ್ಮೊಡನೆ ಇದ್ದಾನೆ. ಬೋನ ಅನಾಥನಾಗಿ ತಮ್ಮ ಬಂಗಲೆ ಬಾಗಿಲಿಗೆ ಬಂದಾಗ ಅವನಿಗೆ ಸುಮಾರು ಹತ್ತು ವರ್ಷ. ಈಗ ಅವನಿಗೆ ಇಪ್ಪತ್ತೈದು ಆಗಿದೆ. ಮದುವೆಗೆ ಸೂಕ್ತ ವಯಸ್ಸು. ನೈಸರ್ಗಿಕವಾದ ಎಲ್ಲೆ ಪ್ರಕ್ರಿಯೆಗಳಿಗೆ ಮನಸ್ಸು ಮೈ ತೆರೆದುಕೊಳ್ಳುವ ಸಮಯ. ತಾವು ಕೂಡ ಈ ವಯಸ್ಸನ್ನು ದಾಟಿ ಬಂದವರೆ. ದೇಹದ ಯಾವುದೋ ಮೂಲೆಯಲ್ಲಿ ಇಂತದ್ದೆಂದು ಹೇಳಲಾಗದ ಆಸೆಯೊಂದು ಚಿಗುರಿ ಇಡೀ ಮೈಗೆ ಅದು ಆವರಿಸಿಕೊಳ್ಳುತ್ತಿತ್ತು. ಆದರೆ ಆ ಕ್ಷಣದಲ್ಲಿ ಇದು ಸೈತಾನನ ಕೀಟಲೆ ಎನಿಸಿ ದೇವರ ಧ್ಯಾನದಲ್ಲಿ ತೊಡಗುತ್ತಿದ್ದೆ. ಇಲ್ಲವೇ ದೇವರ ಪೀಠದ ಮುಂದೆ ಹೋಗಿ ಕೂರುತ್ತಿದ್ದೆ. ಬೈಬಲಿನ ಮರೆ ಹೊಗುತ್ತಿದ್ದೆ. ಕ್ರಮೆಣ ಜಪ, ಪ್ರಾರ್ಥನೆ, ಪೂಜೆ, ದೇವರ ಸೇವೆ, ಜನರ ಶಿಕ್ಷಣ ಎಂದು ಕಾಲ ಕಳೆಯುತ್ತಿತ್ತು. ಲೈಂಗಿಕ ಆಕರ್ಷಣೆಗೂ ಪ್ರಬಲವಾದ ಬೇರೊಂದು ಉದ್ದೇಶವನ್ನು ತಾವು ಬೆಳೆಸಿಕೊಂಡಿದ್ದರಿಂದ ತಾವು ಸೈತಾನನ ಬಲೆಗೆ ಬೀಳಲಿಲ್ಲ.
ಆದರೆ ಬೋನ ಕೂಡ ತಮ್ಮಂತೆ ಬದುಕಬೇಕೆಂದು ಬಯಸುವುದು ತಪ್ಪು. ಅವನು ಪಾದರಿಯಲ್ಲ. ದೇವರ ಸೇವೆ, ಜನ ಸೇವೆಗೆ ತನ್ನ ಬದುಕನ್ನು ಮೀಸಲಿಟ್ಟವನಲ್ಲ. ತಮ್ಮ ಹಾಗೆ ಲೈಂಗಿಕ ಭಾವನೆಗಳಿಂದ ದೂರವಿರುವ ಬಗ್ಗೆ ಯಾವುದೇ ತರಬೇತಿ ಅವನಿಗೆ ಆಗಿಲ್ಲ. ಈಗೀಗ ಬೋನ ಹುಡುಗಿಯರನ್ನು ನೋಡುವ ದೃಷ್ಟಿ ಭಿನ್ನವಾಗುತ್ತಿದೆ. ತಾವು ಸಾಮಾನ್ಯವಾಗಿ ಹುಡುಗಿಯರನ್ನು ತಮ್ಮ ಕೊಠಡಿಯೊಳಗೆ ಬಿಟ್ಟುಕೊಳ್ಳುವುದಿಲ್ಲ. ಹುಡುಗಿಯರು ಚೆಲ್ಲು ಚೆಲ್ಲಾಗಿ ಆಡುತ್ತ ತಮ್ಮ ಸುತ್ತ ಯಾವತ್ತೂ ನಿಲ್ಲುವುದಿಲ್ಲ. ತಮ್ಮ ಬಳಿ ಮಾತನಾಡಲು ಬರುವುದಿಲ್ಲ. ಆದರೆ ಬೋನನ ಕೂಜ್ನಿನೊಳಗೆ ಯಾವಾಗಲೂ ಹುಡುಗಿಯರು ಇರುತ್ತಾರೆ. ಅವನಿಗೆ ಒಂದಲ್ಲಾ ಒಂದು ಕೆಲಸ ಮಾಡಿಕೊಡಲು ಧಾವಿಸಿ ಬರುತ್ತಾರೆ.
ಮುಖ್ಯವಾಗಿ ಅವರು ಒಂದು ವಿಷಯ ಗಮನಿಸಿದ್ದಾರೆ. ದರ್ಜಿ ಬಲಗಾಲುದ್ದ ಬಾಲ್ತಿದಾರನ ಮಗಳು ರೆಮೇಂದಿ ನಿತ್ಯ ಬೋನನನ್ನು ಹುಡುಕಿಕೊಂಡು ಬರುತ್ತಾಳೆ.
ಮೊನ್ನೆ ಹೀಗೇ ಆಯಿತು.
ಭಾನುವಾರಗಳಂದು ಎಲ್ಲ ಮಕ್ಕಳು, ಮದುವೆಯಾಗದ ಯುವಕ ಯುವತಿಯರು ಜ್ಞಾನೋಪದೇಶಕ್ಕೆ ಬರಲೇಬೇಕೆಂದು ತಾನು ನಿಯಮ ಮಾಡಿದ್ದೇನೆ. ಬಾರದವರಿಗೆ ಏಟು ಬಿದ್ದಿದೆ. ಅವರ ಮನೆಯಿಂದ ತಾನೇ ಕಿವಿ ಹಿಡಿದು ಎಳೆದು ತಂದಿದ್ದೇನೆ. ಬರಲಿಲ್ಲ ಎಂದರೆ ಮದುವೆ ಮಾಡುವುದಿಲ್ಲ ಎಂದಿದ್ದೇನೆ. ತಂದೆ ತಾಯಿಗಳಿಗೆ ಎಚ್ಚರಿಕೆ ಕೊಟ್ಟಿದ್ದೇನೆ. ಹೀಗಾಗಿ ಎಲ್ಲ ಮಕ್ಕಳನ್ನೂ ತಂದೆ ತಾಯಂದಿರು ಕಳುಹಿಸುತ್ತಾರೆ. ತರುಣ, ತರುಣಿಯರು ಬರುತ್ತಾರೆ.
ಭಾನುವಾರ ಬಂದ ಮಕ್ಕಳಿಗೆ ವಯಸ್ಸಿಗೆ ಅನುಗುಣವಾಗಿ ಜಪ ಪ್ರಾರ್ಥನೆ ಇತ್ಯಾದಿ ಕಲಿಯಲು ಹೇಳಿದೆ. ದೊಡ್ಡವರಿಗೆ ದೇವರ ವಾಕ್ಯ, ಬೈಬಲ್ಲಿನ ಕತೆಗಳು, ಸ್ವರ್ಗ ನರಕಗಳ ಪರಿಚಯ, ಪಾಪ, ಮಹಾಪಾಪಗಳ ವ್ಯತ್ಯಾಸ ತಿಳಿಸಿಕೊಟ್ಟೆ. ಒಂದು ಗಂಟೆಯ ಅವಧಿ ಮುಗಿಯುತೆನ್ನುವಾಗ-
“ಇನ್ನು ಸಾಕು ..ಮುಂದಿನ ವಾರ ಬರುವಾಗ ಎಲ್ಲ ಕಲಿತು ಬನ್ನಿ”
ಎಂದು ಹೇಳಿ ವಾಡಿಕೆಯಂತೆ ಎಲ್ಲರಿಗೂ ಕಿತ್ತಳೆ ತೊಳೆ ಪೆಪ್ಪರಮೆಂಟನ್ನು ಕೊಟ್ಟೆ.
“ಬೆಸಾಂವ ದಿಯಾ ಪದ್ರಾಬ..ಬೆಸಾಂವ ದಿಯಾ ಪದ್ರಾಬ..”
ಎಂದು ಕೈ ಮುಗಿದು ಆಶೀರ್ವಾದ ಕೇಳಿ ಮಕ್ಕಳೆಲ್ಲ ಹೋದರು. ತಾನು ಎಂದಿನಂತೆ ಪ್ರಾವಿನ್ಶಿಯಲಗೆ ಇಲ್ಲಿ ನಡೆದಿರುವ ಕೆಲಸ ಕಾರ್ಯಗಳ ವರದಿ ಮಾಡಲು ಕುಳಿತೆ.
ತಾನು ಬರೆಯುತ್ತಿದ್ದ ಪೆನ್ನಿನಲ್ಲಿಯ ಇಂಕು ಮುಗಿದು ಕಾಗದದ ಮೇಲೆ ಬರಿ ಗೆರೆಗಳು ಮುಡಿದವು. ಅಕ್ಷರಗಳು ಕಾಣಲಿಲ್ಲ. ಪೆನ್ನಿನ ಹೋಲ್ಡರ್ ತೆಗೆದು ಇಂಕು ಹಾಕಲು ನೋಡಿದೆ. ಹೊಲ್ಡರ್ ಸುಲಭವಾಗಿ ತಿರುಗಲಿಲ್ಲ. ಬೆರಳಿಗೆ ಸುಣ್ಣ ಹಚ್ಚಿಕೊಂಡು ತಿರುಗಿಸಿದೆ. ಬಟ್ಟೆ ಹಿಡಿದು ತಿರುಗಿಸಿದೆ. ಕೊಂಚ ಬಿಸಿ ಮಾಡಿದರೆ ಹೋಲ್ಡರ್ ಬರಬಹುದೆಂದು ಎನಿಸಿ ಎದ್ದು ಹಿಂಬದಿಯ ಅಡಿಗೆ ಮನೆಯತ್ತ ನಡೆದೆ.
ಅಡಿಗೆ ಮನೆ ಬಾಗಿಲು ಅರ್ಧ ತೆರೆದಿತ್ತು. ಒಲೆಯಲ್ಲಿ ಬೆಂಕಿ. ಪಾತ್ರೆಯಲ್ಲಿ ಮಾಂಸಕ್ಕೆ ಕುದಿ ಬಂದಿತ್ತು. ತಾವು ಪೆನ್ನನ್ನು ಬೆಂಕಿಗೆ ಹಿಡಿದು ಬಿಸಿಮಾಡುವಾಗ ಒಳ ಕೋಣೆಯಲ್ಲಿ ಯಾರೋ ನಕ್ಕರು. ಚಿರಿದರು. ನರಳಿದರು.
ಮೈ ಬೆಚ್ಚಗಾಯಿತು. ಕೆಲಸ ಮುಗಿಸಿ ಬಗ್ಗಿ ನೋಡಿದೆ.
ಬೋನನ ತೋಳಿನಲ್ಲಿ ರೆಮೇಂದಿ. ಅವಳನ್ನು ತೋಳುಗಳಲ್ಲಿ ಹಿಡಿದು ತನ್ನ ಎದೆಗೆ ಅವುಚಿಕೊಂಡು ಅವಳ ಕೆನ್ನೆ ಕಚ್ಚುತ್ತ ಅವಳ ತೋಳು ಎದೆಯ ಮೇಲೆ ಕೈಯಾಡಿಸುತ್ತಿದ್ದಾನೆ ಬೋನ.
ತುಂಬಾ ಕಷ್ಟವಾಯಿತು ಕೊಠಡಿಗೆ ತಿರುಗಿ ಬರುವುದು. ಬೋನ ಅಪರಿಚಿತನೇನೂ ಆಗಿರಲಿಲ್ಲ. ಅವನ ಗುಣ ಸ್ವಭಾವವೆಲ್ಲ ಗೊತ್ತಿತ್ತು. ಅವನ ಬಗ್ಗೆ ಗೌರವ ಪ್ರೀತಿಯೂ ಇತ್ತು. ಆದರೆ ಈಗಿನ ಅವನ ರೂಪ ಹೊಸದು. ಈ ಉದ್ರೇಕ ಆವೇಶ ಹೊಸದು. ಅಂದೇ ನಿರ್ಧರಿಸಿದೆ ಬೋನನಿಗೆ ಬೇಗನೆ ಮದುವೆ ಮಾಡಬೇಕು. ಇಲ್ಲವೆಂದರೆ ಇಲ್ಲಿ ಮತ್ತೊಂದು ಪ್ರಕರಣವಾಗುತ್ತದೆ.
ಈಗ ಇಗರ್ಜಿ ಉಗಾವಣೆ ಕೆಲಸವಾಗಿದೆ. ಮುಂದೆ ಬೋನನ ಮದುವೆ.
ಒಂದು ದಿನ ಪಾದರಿ ಗೋನಸ್ವಾಲಿಸ ಬೋನನನ್ನೇ ಮಾತಿಗೆ ಎಳೆದರು.
“ಬೋನ ಎಲ್ಲರ ಹಾಗೆ ನೀನೂ ಮದುವೆಯಾಗಬೇಕು..ಮನೆ ಮಾಡಬೇಕು..”
ಬೋನ ಕುತೂಹಲದಿಂದ ಅವರ ಮುಖ ನೋಡಿದ. ಅವನಿಗೂ ಅವರು ಹೇಳುವ ವಿಷಯದ ಬಗ್ಗೆ ಆಸಕ್ತಿ ಇದ್ದ ಹಾಗಿತ್ತು. ಮುಂದೆ ಹೇಳಿ ಎಂಬಂತೆ ಆತ ಅವರ ಮುಂದೆ ನಿಂತಿದ್ದ.
“ನಿನ್ನ ಮನಸ್ಸಿನಲ್ಲಿ ಯಾರಾದರೂ ಇದ್ದಾರೆಯೇ?”
ಬೇಕೆಂದೇ ಕೇಳಿದರವರು. ನಿಜವಾದ ಕ್ರೈಸ್ತ ಪಾದರಿಯಿಂದ ಏನನ್ನೂ ಮುಚ್ಚಿಡಲಾರ. ಬೋನ ನಿಜವನ್ನೇ ಹೇಳಿದ.
ಶಿವಸಾಗರಕ್ಕೆ ಬಂದ ದಿನದಿಂದ ಆತಾ ರೆಮೆಂದಿಯನ್ನು ನೋಡುತ್ತ ಬಂದಿದ್ದರೂ ಅವಳು ಆಕರ್ಷಕವಾಗಿ ಕಾಣತೊಡಗಿದ್ದು ಮೂರು ನಾಲ್ಕು ವರ್ಷಗಳಿಂದ. ಲಂಗ ಝಂಪರಿನಲ್ಲಿ ಅವಳ ಮೈ ಅರಳತೊಡಗಿದಾಗ, ಮುಖದಲ್ಲಿ ಕೆಂಪು ಆವರಿಸಿಕೊಂಡು, ಕಣ್ಣು ಮೂಗು ಕೆನ್ನೆಗಳಲ್ಲಿ ಬಣ್ಣ ಬರಲಾರಂಭಿಸಿದಾಗ. ಅವಳ ಮಾತು ಇಂಪಾಗಿ, ನಡಿಗೆಯಲ್ಲಿ ಬಳುಕಾಟ ಕಂಡು ಬಂದು ಅವಳು.
“ಬೋನಾ ಮಾಮ..” ಅಂದಾಗ ಇವನಲ್ಲಿ ಅವಳ ಬಗ್ಗೆ ಕುತೂಹಲ ಆಸಕ್ತಿ ಮೂಡಿತು.
ಹಿಂದೆ ಸಿಮೋನನ ಮನೆಯ ಬಳಿ ಒಂದು ಮನೆ ಮಾಡಿಕೊಂಡಿದ್ದ ಬೋನ. ಆಗ ಬಲಗಾಲುದ್ದನ ಮನೆ ಹತ್ತಿರವಾಗಿತ್ತು. ದಿನಾ ಬಲಗಾಲುದ್ಧನ ಮಗಳ ಭೇಟಿಯಾಗುತ್ತಿತ್ತು. ಇತ್ತೀಚೆಗೆ ಕೊಪೆಲ ಹತ್ತಿರವೇ ಬೋನ ತನ್ನ ಕೂಜ್ನ ಮಾಡಿಕೊಂಡ. ಆದರೇನಂತೆ ಬೇಲಿ ಸುತ್ತಿಕೊಂಡು ಕೊಪೆಲ ಎದುರಿನಿಂದ ಹಾದು ಬೋನನಲ್ಲಿಗೇ ಬರುತ್ತಾಳೆ ಹುಡುಗಿ.
“ಯಾರಾದ್ರು ನೋಡಬಹುದು..”
“ನೋಡಲಿ…ಏನೀಗ?” ಎಂದು ಕೇಳುತ್ತಾಳೆ.
ಅವಳಿಗೂ ಮನಸ್ಸಿದೆ. ತನಗೂ ಇದೆ. ಪಾದರಿ ಕೂಡ ಇದೇ ಪ್ರಸ್ತಾಪವನ್ನು ಮಾಡಿದ್ದಾರೆ. ಇನ್ನು ಮುಚ್ಚು ಮರೆ ಏಕೆ?
*
*
*
ಬಲಗಾಲುದ್ದ ಪಾದರಿ ಹೇಳಿ ಕಳುಹಿಸಿದ್ದಾರೆ ಎಂದಾಗ ಕಾಲೆಳೆದುಕೊಂಡು ಬಂದ. ಅಂಗಡಿಯಲ್ಲಿ ಕಾಜಾ ಮಡುವ ಹುಡುಗನನ್ನು ಕೂರಿಸಿ ಓಡಿ ಬಂದ. ಪೇಟೆಗೆ ಹೋಗುವ ಸಿಮೋನನ ಮಗ ಫ಼ೆಡ್ಡಿಯ ಹತ್ತಿರ ಪಾದರಿಗಳು ಬಲಗಾಲುದ್ದನಿಗೆ ಬರುವಂತೆ ಹೇಳಿ ಕಳುಹಿಸಿದ್ದರು.
ಪಾದರಿ ಹೇಳಿ ಕಳುಹಿಸಿದ್ದಾರೆಂದರೆ ಗಾಬರಿಯಾಗುವುದೇ, ಯಾರಾದರೂ ಭಾನುವಾರದ ಪೂಜೆಗೆ ಹೋಗದಿದ್ದರೆ, ಮನೆಯಲ್ಲಿ ಸಾಯಂಕಾಲದ ಪ್ರಾರ್ಥನೆ ಮಾಡದಿದ್ದರೆ, ಮಕ್ಕಳು ಜ್ಞಾನೋಪದೇಶಕ್ಕೆ ತಪ್ಪಿಸಿಕೊಂಡರೆ ಪಾದರಿ ಕೂಡಲೇ ಹೇಳಿ ಕಳುಹಿಸುತ್ತಾರೆ. ಏಕೆ ಏನು ಎಂದು ಕೇಳುತ್ತಾರೆ. ಇದನ್ನು ಮುಂದುವರಿಸದಂತೆ ಎಚ್ಚರಿಕೆ ನೀಡುತ್ತಾರೆ. ಈ ಕಾರಣದಿಂದಾಗಿ ಶಿವಸಾಗರದ ಕ್ರೀಸ್ತುವರು ಪಾದರಿ ಗೋನಸ್ವಾಲಿಸರ ಬಗ್ಗೆ ಸದಾ ಒಂದು ಭೀತಿಯ ಕಲ್ಪನೆ ಬೆಳೆಸಿಕೊಂಡಿದ್ದರು. ಇದು ತಮ್ಮ ಒಳಿತಿಗಾಗಿಯೇ ಎಂಬ ನಂಬಿಕೆಯೂ ಜನರಲ್ಲಿತ್ತು. ಒಂದು ಅರ್ಥದಲ್ಲಿ ಹೆದರಿಸಿ ಬೆದರಿಸಿ ಮಕ್ಕಳನ್ನು ಸರಿದಾರಿಗೆ ತರುವಂತೆ ಪಾದರಿ ಜನರನ್ನು ಇರಿಸಿಕೊಂಡಿದ್ದರು. ಬಂದು ಹೋಗಬೇಕಂತೆ ಎಂದಾಗ ಕಾಲುದ್ದ ಹೊರಡಲು ಇದೇ ಕಾರಣ.
ಆತ ಪೇಟೆ ಬೀದಿಯಿಂದ ಶಾಲೆ ಬಳಿ ಹೊರಳಿ ಪಳ್ಳಿ ದಾಟಿ ಇಗರ್ಜಿಯತ್ತ ಬಂದ. ಪಾದರಿಗಳ ಮನೆ ಬಾಗಿಲು ತೆರೆದಿತ್ತು.
’ಬೆಸಾಂವ ದಿಯಾ ಪದ್ರಾಬ’
ಎನ್ನುತ್ತ ಬಲಗಾಲುದ್ದ ಗೋನಸ್ವಾಲಿಸರ ಎದುರು ನಿಂತ.
” ಬನ್ನಿ ಬನ್ನಿ” ಎಂದರು ಪಾದರಿ.
“ಬರಲಿಕ್ಕೆ ಹೇಳಿದ್ದಿರಂತೆ?”
“ಹೌದು ನಿಮ್ಮ ಮಗಳ ಬಗ್ಗೆ ಮಾತನಾಡುವ ಅಂತ”
ಬಲಗಾಲುದ್ದ ಮುಖ ಕತ್ತು ಒರೆಸಿಕೊಂಡ..
“ಏನು ಮಾಡಿದ್ಲು ರೆಮೆಂದಿ..” ಆತ ನಿಜಕ್ಕೂ ಗಾಬರಿಯಾದ.
ಪಾದರಿ ನಿಧಾನವಾಗಿಯೇ ಬೋನನ ವಿಷಯ ಪ್ರಸ್ತಾಪಿಸಿದರು. ತಾವು ಸಾಕಿದ ಹುಡುಗ ತಮ್ಮ ಜತೆ ಇದ್ದಾನೆ. ಒಳ್ಳೆಯವ. ದೈವ ಭಕ್ತ. ಅವನಿಗೊಂದು ಸ್ವತಂತ್ರ ಕೆಲಸ ಹುಡುಕಿಕೊಡಲು ನೋಡುತ್ತಿದ್ದೇನೆ. ರೆಮೇಂದಿ ಅವನಿಗೆ ಸೂಕ್ತ ಹೆಂಡತಿ. ನೀವು ಒಪ್ಪಬೇಕು ಎಂದರು. ಬಾಲ್ತಿದಾರನಿಗೆ ಸಂತೋಷವಾಯಿತು. ಅವನ ಮನಸ್ಸಿನಲ್ಲಿ ಕೂಡ ಬೋನ ಇದ್ದ. ಆದರೆ ಅವನಿಗೊಂದು ಕೆಲಸವಿಲ್ಲ ಎಂಬ ಕೊರಗು. ಒಂಟಿಯಾಗಿದ್ದಾನೆ ಪಾದರಿ ಜತೆ ಸರಿ ಹೋಗುತ್ತೆ. ನಾಳೆ ಮದುವೆಯಾಗಿ ಮಕ್ಕಳಾದ ಮೇಲೆ ಪಾದರಿ ಅಷ್ಟೂ ಜನರನ್ನು ಸಾಕುತ್ತಾರೆಯೇ? ಎಂಬುದೇ ಅವನ ಸಮಸ್ಯೆಯಾಗಿ ಆತ ಮುಂದುವರಿದಿರಲಿಲ್ಲ. ಪಾದರಿಯೇ ಈಗ ಅವನಿಗೊಂದು ದಾರಿ ತೋರಿಸುವುದಾಗಿ ಹೇಳುತ್ತಿರುವುದರಿಂದ ಆ ಒಂದು ಸಮಸ್ಯೆ ಬಗೆಹರಿಯುತ್ತದೆ ಅಂದು ಕೊಂಡ ಬಾಲ್ತಿದಾರ.
“ನನಗೆ ಮನಸ್ಸಿದೆ ಪದ್ರಾಬ..”
ಎಂದು ಆತ ಕೊಂಚ ತಡೆದ. ಹೆಂಡತಿ ಅನರಿತಾ ಕಡೆಯುವರು ಸಾಕಷ್ಟು ಜನ ನೆಂಟರಿದ್ದಾರೆ. ಅವರಿಗೆಲ್ಲ ಒಂದು ಮಾತು ಕೇಳಿ ಈ ಕೆಲಸಕ್ಕೆ ಮುಂದುವರಿಯುವುದು ಸೂಕ್ತವೆನಿಸಿತು. ಅವರು ಯಾರೂ ಬೇಡ ಅನ್ನಲಿಕ್ಕಿಲ್ಲ. ಆದರೂ ಒಂದು ಮಾತು ಕೇಳಬೇಕಲ್ಲ.
“..ಹಾಗೇ ಮಾಡಿ- ನಿಧಾನ ಹೇಳಿ” ಎಂದರು ಪಾದರಿ.
ಬಲಗಾಲುದ್ದ ಬಾಲ್ತಿದಾರ ಈಗ ತುಸು ಹುಮ್ಮಸ್ಸಿನಿಂದಲೇ ಅಂಗಡಿಗೆ ಹೊರಟ. ಅಂಗಡಿಗೆ ಬಾಗಿಲು ಹಾಕಿ ಬಂದೇ ಹೆಂಡತಿಗೆ ವಿಷಯ ತಿಳಿಸುವುದು ಎಂದು ನಿರ್ಧರಿಸಿದ.
ಇತ್ತ ಬೋನ ಬಾಲ್ತಿದಾರ ಪಾದರಿಗಳಲ್ಲಿಗೆ ಬಂದುದನ್ನು , ತಿರುಗಿ ಹೋದುದನ್ನು ನೋಡಿ ಸಂತಸಪಟ್ಟ. ಅಂದು ಕುರಿ ಮಾಂಸದ ಕೀಮಾ ಮಾಡಿಸಿಕೊಂಡು ಬಂದವ ಪಾದರಿಗಳಿಗೆ ಕೀಮಾ ಉಂಡೆ ಮಾಡಲು ತೊಡಗಿದ.
ವಿಷಯ ರೆಮೇಂದಿಯಾ ಕಿವಿಗೆ ಬಿದ್ದು ಅವಳು ಬೋನನಲ್ಲಿಗೆ ಬರುವುದನ್ನೇ ಬಿಟ್ಟಳು. ಇಗರ್ಜಿಯಲ್ಲಿ ಕಂಡರೂ ನಾಚಿ ಓಡಿಹೋದಳು. ದಿವ್ಯಪ್ರಸಾದ ಸ್ವೀಕರಿಸುವಾಗ, ಕೀರ್ತನೆ ಹಾಡುವಾಗ, ಪ್ರಾರ್ಥನೆ ಮಾಡುವಾಗ, ಬೋನ ಅವಳನ್ನು ನೋಡಿಯೇ ನೋಡಿದ. ಅವಳೂ ಇವನನ್ನು ನೋಡಿ ನಕ್ಕಳು. ಆ ನಗೆಯೇ ಸಾಕಾಯಿತು ಬೋನನಿಗೆ. ಅವಳಿಗೂ ಕೂಡ.
*
*
*
ಕೆಲವೇ ದಿನಗಳಲ್ಲಿ ಬಾಲ್ತಿದಾರನ ಮನೆಯಲ್ಲಿ ರೆಮೇಂದಿಗೆ ಹೂ ಮುಡಿಸುವ ಕಾರ್ಯಕ್ರಮ.
ಸಿಮೋನ, ಅವನ ಹೆಂಡತಿ, ತಾಯಿ ಮಕ್ಕಳು ಬೋನನ ಪರವಾಗಿ ತುಪ್ಪ ಬೆಲ್ಲ ಹಾಕಿ ಕಲಸಿದ ಅವಲಕ್ಕಿ, ರವೆ, ಎಳ್ಳಿನ ಉಂಡೆ, ಅಬ್ಬಲಿಗೆ ಹೂವು ಇತ್ಯಾದಿ ಹಿಡಿದು ಬಾಲ್ತಿದಾರನ ಮನೆಗೆ ಬಂದರು. ಸಿಮೋನನ ಹೆಂಡತಿಯೇ ರೆಮೇಂದಿಗೆ ಹೂ ಮುಡಿಸಿದಳು. ಬೋನ ರೆಮೇಂದಿಗೆ ಜಪಸರವನ್ನು ಕಾಣಿಕೆ ಎಂದು ನೀಡಿದ.
ಪಾದರಿ ಸಮ್ಮುಖದಲ್ಲಿ ನೆಂಟಸ್ತಿಕೆಯೂ ಆಯಿತು.
ಮುಂದಿನ ಮೂರು ಭಾನುವಾರ, ಪೂಜೆಯ ನಡುವೆ ಪಾದರಿ ಮೂರು ಚೀಟಿಗಳನ್ನು ಓದಿದರು.
“ದೇವರ ಕೃಪೆಯಿಂದ ಬಾಲ್ತಿದಾರ ಹಾಗೂ ಅನರೀತಾರ ಮಗಳು ಕುಮಾರಿ ರೆಮೇಂದಿಯನ್ನು ಪಾದರಿಗಳ ಕುಜ್ನೇರ ಆಗಿರುವ ಕುಮಾರ ಬೆನಡಿಕ್ಟಾ ಮದುವೆಯಾಗಲಿದ್ದಾನೆ. ಈ ಮದುವೆಗೆ ಯಾವುದೇ ಅಡ್ಡಿ ಆತಂಕಗಳಿದ್ದರೆ ಇಗರ್ಜಿ ಮಾತೆಗೆ ತಿಳಿಸುವುದು ಎಲ್ಲರ ಕರ್ತವ್ಯವಾಗಿದೆ.
ಇಗರ್ಜಿಯಲ್ಲಿ ನೆರೆದ ಯುವತಿಯರು ಪಿಶ್ ಎಂದು ನಕ್ಕರು. ರೆಮೆಂದಿ ನಾಚಿ ಕೆಂಪಗಾಗಿ ಮುಖವನ್ನು ಮುಚ್ಚಿಕೊಂಡಳು. ಪ್ರಾರ್ಥನೆ ಹೇಳಿಕೊಡುತ್ತಿದ್ದ ಮಿರೋಣ್ ಬೋನಾ ತುಟಿಯಲ್ಲಿಯೇ ನಕ್ಕು ಹಿಗ್ಗಿದ.
-೯-
ಬಲಗಾಲುದ್ದ ಬಾಲ್ತಿದಾರ ಮಗಳ ಮದುವೆಯನ್ನು ಚೆನ್ನಾಗಿಯೇ ಮಾಡಿಕೊಟ್ಟ. ತನ್ನ ಮನೆಯ ಮುಂದೆಯೇ ಚಪ್ಪರ ಹಾಕಿದ. ಮನೆ ಮನೆಯಿಂದ ಪಾತ್ರೆ ತಂದು ಗಂಡಸರು ಅಡಿಗೆ ಮಾಡಿದರೆ ಹೆಂಗಸರು ಬೇರೆ ಕೆಲಸಗಳಲ್ಲಿ ನೆರವಾದರು. ಮೂರು ದಿನಗಳ ಮದುವೆ. ಶನಿವಾರದ ಊಟ, ಭಾನುವಾರದ ಧಾರೆ, ಸೋಮವಾರ ತಲೆಯ ಮೇಲೆ ನೀರು, ಒಪ್ಪಿಸಿಕೊಡುವುದು ಎಂದು ಊರ ಕ್ರೀಸ್ತುವರೆಲ್ಲ ಭಾಗವಹಿಸಿದರು. ಶಿವಸಾಗರದಲ್ಲಿ ವಾಲಗವಿತ್ತಲ್ಲದೆ ಬ್ಯಾಂಡ್ ಸೆಟ್ ಇರಲಿಲ್ಲ. ಬೋನನ ಮದುವೆಗೆ ವಾಲಗ ಊದಿಸುವುದನ್ನು ಕನಸಿನಲ್ಲೂ ಕಲ್ಪಿಸಿಕೊಳ್ಳದ ಪಾದರಿ ಗೋನಸ್ವಾಲಿಸ್ ಕಾರವಾರದಿಂದ ಮಾರ್ಟಿನ್ ಪಿರೇರನ ಬ್ರ್ಯಾಸ್ ಬಾಂಡನ್ನು ತರಿಸಿದರು. ಶಿರಸಿಯಿಂದ ಶಿವಸಾಗರಕ್ಕೆ ಬರುತ್ತಿದ್ದ ಬಸ್ಸಿನಲ್ಲಿ ಈ ಜನ ಬಂದಿಳಿದರು. ಹೊನ್ನಾವರದಿಂದ ಮದ್ದಿನ ಫ಼ರ್ನಾಂಡಿಸ ಗರ್ನೆಲು ಇತ್ಯಾದಿಗಳನ್ನು ಕಳುಹಿಸಿದ.
ಪಿರೇರನ ಬ್ರ್ಯಾಸ್ ಬ್ಯಾಂಡಿನದೇ ಒಂದು ಪ್ರಮುಖ ಆಕರ್ಷಣೆಯಾಯಿತು. ಬ್ಯಾಂಡಿನವರ ಸಮವಸ್ತ್ರ. ವಿವಿಧ ಬಗೆಯ ಅವರ ವಾದ್ಯಗಳು. ಅವರು ಹೆಜ್ಜೆ ಹಾಕುವ ರೀತಿ ಊರ ಜನರಿಗೆಲ್ಲ ಬೆರಗು ಹುಟ್ಟಿಸಿತು. ವಧು ಬಿಳಿ ಉಡುಪು ಧರಿಸಿ ವರ ಬಿಳಿ ಪಂಜೆ, ಹಸಿರ ಕೋಟು ಧರಿಸಿ ಹೊಸ ಇಗರ್ಜಿಯಲ್ಲಿ ಮದುವೆಯಾದ ಮೊಟ್ಟ ಮೊದಲ ವಧು ವರರು ಎಂಬ ಗೌರವಕ್ಕೆ ಪಾತ್ರರಾದರು. ವರನ ಮನೆಯನ್ನು ತಾತ್ಕಾಲಿಕವಾಗಿ ಸಿಮೋನನ ಮನೆಗೆ ಬದಲಾಯಿಸಿದ್ದರಿಂದ ಮನೆಯಲ್ಲೂ ಕುಳೀತು ಬ್ಯಾಂಡ್ ಬಾರಿಸಿದರು. ಸಿಮೋನನ ಮನೆಗೆ ಬದಲಾಯಿಸಿದ್ದರಿಂದ ಬ್ಯಾಂಡಿನವರು ಸಿಮೋನನ ಮನೆಗೂ ಬಂದರು.
ಹಿಂಬದಿಯಲ್ಲಿ ಸಾಕ್ಷಿಗಳನ್ನು ನಿಲ್ಲಿಸಿಕೊಂಡು ಪಾದರಿ ಗೋನಸ್ವಾಲಿಸ್ “ನಿನಗೆ ಬಾಲ್ತಿದಾರ ಹಾಗೂ ಅನರಿತಾಳ ಮಗಳು ರೆಮೇಂದಿಯ ಕೈ ಹಿಡಿಯುವ ಮನಸ್ಸಿದೆಯೇ?” ಎಂದು ಬೋನಾಗೆ ಕೇಳಿದರು. ಹಾಗೆಯೇ ರೆಮೇಂದಿಯತ್ತ ತಿರುಗಿ “ನಿನಗೆ ಬರ್ನಾಡೆಟ ಎಂಬ ಯುವಕನ ಕೈ ಹಿಡಿಯುವ ಮನಸ್ಸಿದೆಯೇ?” ಎಂದು ಕೇಳಿದರು. ಬೋನ ತಟ್ಟನೆ ಹೌದು ಎಂದ. ಆದರೆ ರೆಮೇಂದಿ ಹೌದು ಎಂದು ಹೇಳಿದ್ದು ಸಾಕ್ಷಿದಾರರಿಗೆ ಕೇಳಿಸಲಿಲ್ಲ. “ಜೋರಾಗಿ ಹೇಳು”, “ಮತ್ತೊಮ್ಮೆ ಜೋರಾಗಿ ಹೇಳು” ಎಂದದ್ದು ಪಾದರಿ. ಎರಡು ಮೂರು ಬಾರಿ ಹೇಳಿದ ನಂತರ ರೆಮೇಂದಿ “ಹೌದು” ಎಂದದ್ದು ಇಗರ್ಜಿಗೆಲ್ಲಾ ಕೇಳಿಸಿತು. ಪಾದರಿ ವಧುವರರು ತಂದ ಉಂಗುರಗಳನ್ನು ಮಂತ್ರಿಸಿ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಹೇಳಿ ಕೈಹಿಡಿದ ಸತಿ-ಪತಿಯರನ್ನು ಪಿತಸುತ ಸಾಂತುವಿನ ಹೆಸರಿನಲ್ಲೇ ಆಶೀರ್ವದಿಸಿದರು.
“ದೇವರು ಒಂದು ಗೂಡಿಸಿದವರನ್ನು ಬೇರೆ ಯಾರೂ ಅಗಲಿಸದಿರಲಿ” ಎಂದು ದೇವರ ವಾಕ್ಯವನ್ನು ನುಡಿದರು. ಪೂಜೆಯ ನಡುವೆ ಶೆರಮಾಂವಂಗೆ ನಿಂತ ಅವರು-
ಸತಿ ಪತಿಗಳ ಕರ್ತವ್ಯದ ಬಗ್ಗೆ ನಾಲ್ಕು ಮಾತುಗಳನ್ನು ಹೇಳಿದರು. ಒಬ್ಬರನ್ನೊಬ್ಬರು ಪ್ರೀತಿಸಿ, ಗೌರವಿಸಿ, ದೇವರು ನಿಮಗೆ ಕೊಡುವ ಮಕ್ಕಳನ್ನು ಒಳ್ಳೆಯ ಕ್ರೀಸ್ತುವರನ್ನಾಗಿ ಮಾಡಿ. ನಮ್ಮ ಧರ್ಮದ ಕಟ್ಟಲೆಗಳನ್ನು ಎಂದೂ ಮೀರದೆ ಆದರ್ಶ ದಂಪತಿಗಳಾಗಿ ಎಂದರು. ಏಕೋ ಅವರ ದನಿ ನಡುಗುತ್ತಿತ್ತು. ನೆಂದರ ಸಂಬೇಲನ ಮಗ ಪಣಜಿಯ ತಮ್ಮ ಬಂಗಲೆ, ಬಾಗಿಲಲ್ಲಿ ಅಳುತ್ತ ನಿಂತ ದೃಶ್ಯ ನೆನಪಿಗೆ ಬಂದಿತು. ಗೇಣಗಲದ ಕಷ್ಠಿ ಕಟ್ಟುಕೊಂಡು ಮೈ ತುಂಬ ಕಜ್ಜಿಯಾಗಿ ಆತ ಮುಟ್ಟಲೂ ಅಸಹ್ಯವಾಗಿದ್ದ. ಆದರೆ ಈಗ?
“ಪ್ರಭುವೆ ನಿನಗೆ ಸ್ತುತಿಯಾಗಲಿ..ಮನುಷ್ಯನ ಬದುಕಿನಲ್ಲಿ ಈ ಪರಿವರ್ತನೆಯನ್ನು ತಂದೆಯಲ್ಲ…ನಿನಗೆ ನಮಸ್ಕಾರ..”
ಎಂದವರು ಮನಸ್ಸಿನಲ್ಲಿಯೇ ದೇವರಿಗೆ ವಂದಿಸಿದರು.
ಬೋನ ರೆಮೇಂದಿಯರು ಉಂಗುರ ವಿನಿಮಯ ಮಾಡಿಕೊಂಡು ಪಾದರಿಗಳ ಆಶೀರ್ವಾದ ಪಡೆಯುತ್ತಿರಲು ಇಗರ್ಜಿ ಗಂಟೆ ಢಣ್ ಢಣ್ ಎಂದಿತು. ಗರ್ನಾಲುಗಳು ಹಾರಿದವು. ಪಿರೇರ ಕ್ಲಾರಿಯನೆಟ ಅನ್ನು ಸಂಭ್ರಮದಿಂದ ಊದಿದ.
ಸಿಮೋನ ಮೊದಲ ಸಾಲಿನಲ್ಲಿ ಬೀಗಿನಿಂತ. ಪಾಸ್ಕೋಲ ಮೊಣಕಾಲೂರಿದವ ಎದ್ದು ನಿಂತ. ಬಾಲ್ತಿದಾರ ಕಣ್ಣೊರೆಸಿಕೊಂಡ. ಸನಬವಿಪೆದ್ರು, ಬಳ್ಕೂರಕಾರ, ಕೈತಾನ ಮೊದಲಾದವರು ಮದುವೆಯ ಕೆಲಸ ನೆನಪಿಗೆ ತಂದುಕೊಂಡು ನಿಧಾನವಾಗಿ ಇಗರ್ಜಿಯಿಂದ ಹೊರಬಿದ್ದರು. ಹೆಂಗಸರು ಸಡಗರ ಸಂಭ್ರಮದಲ್ಲಿ ಓಲಾಡಿದರು. ಸಾಂತಾಮೋರಿ ಸಂತ ಅಂತೋನಿಯ ಪ್ರತಿಮೆಯ ಕೆಳಗೆ ಕುಳಿತವಳು ಮಗಳ ಮದುವೆ ಹೀಗೇ ಮಾಡಬೇಕೆಂದಿದ್ದೆ..ಹಾಳಾದವಳು ಹೊಟ್ಟೆ ತಂದುಕೊಂಡು ಎಲ್ಲಿಗೋ ಓಡಿ ಹೋದಳಲ್ಲ ಎಂದು ಸೆರಗನ್ನು ಬಾಯಿಗೆ ತುರುಕಿಕೊಂಡು ಬಿಕ್ಕಿದಳು. ಸುತಾರಿ ಇನ್ರಾಸ ತನ್ನ ಮಗಳ ಮದುವೆಯನ್ನು ಹೀಗೆಯೇ ಮಾಡಬೇಕು ಅಂದು ಕೊಂಡ. ಇಗರ್ಜಿಯಲ್ಲಿ ನೆರೆದ ಯುವತಿಯರು ತಲೆಯ ಮೆಲಿನ ಏವನ್ನು ಸರಿಪಡಿಸಿಕೊಂಡು ಏನೋ ಕನಸು ಕಂಡು ನಾಚಿದರು. ಯುವಕರು ಇಗರ್ಜಿಯ ಕಂಬಗಳ ಮರೆಯಲ್ಲಿ ನಿಂತು ಬಗ್ಗಿ ಬಗ್ಗಿ ಹುಡುಗಿಯರನ್ನು ಕದ್ದು ಕದ್ದು ನೋಡಿದರು. ಇಂದು ಮಾತ್ರ ಮಿರೋಣ್ ಬೋನನ ಜಾಗ ಖಾಲಿಯಾಗಿತ್ತು. ಪಾದರಿಯ ಪ್ರಾರ್ಥನೆಯನ್ನು ಪೂರ್ಣಗೊಳಿಸುವ, ಕೀರ್ತನೆ ಹೇಳುವ ಕೆಲಸವನ್ನು ಇಂದು ಸಿಮೋನನ ಮೂರನೆ ಮಗ ರಾಬರ್ಟಿ ಮಾಡಿದ. ಬೋನಾ ಈಗಾಗಲೇ ಕೆಲ ತರುಣರನ್ನು ಸಿದ್ಧಪಡಿಸಿದ್ದು ಅವರು ಈತನ ಕೆಲಸವನ್ನು ಹೀಗೆ ಮುಂದುವರಿಸಿಕೊಂಡು ಹೋಗಬಲ್ಲವರಾಗಿದ್ದರು.
ಬೋನನ ಮದುವೆಯಿಂದಾಗಿ ಪಾದರಿ ಗೋನಸ್ವಾಲಿಸರಿಗೂ ತೊಂದರೆಯಾಯಿತು. ಅವರ ಊಟ, ತಿಂಡಿಯ ವ್ಯವಸ್ಥೆಯನ್ನು ಸಿಮೋನನ ಹೆಂಡತಿ ನೋಡಿ ಕೊಂಡಳು. ಸಿಮೋನನ ಮತ್ತೋರ್ವ ಮಗ ಫ಼ೆಡ್ಡಿ ಅವರಿಗೆ ಸ್ನಾನಕ್ಕೆ ನೀರು ಕಾಯಿಸಿಕೊಟ್ಟ.
ಮೂರ ನಾಲ್ಕು ದಿನಗಳ ನಂತರ ಬೋನ ರೆಮೇಂದಿಯನ್ನು ಕರೆದುಕೊಂಡು ತನ್ನ ಮನೆಗೆ ಬಂದ. ಅವನಿಗೆ ಬಳುವಳಿಯಾಗಿ, ಮುಯ್ಯಿ ಎಂದು ಜನ ನೀಡಿದ ಪಾತ್ರೆ ಹಂಡೆ, ಪೆಟ್ಟಿಗೆ, ತಟ್ಟೆ, ಚೆಂಬು, ಹಿತ್ತಾಳೆ ಪಾತ್ರೆಗಳು ಬಲಗಾಲುದ್ದನ ಮನೆಯಲ್ಲಿಯೇ ಉಳಿದವು.
“ಅಲ್ಲಿ ಎಲ್ಲಿ ಇಡತೀಯ..ಸಣ್ಣ ಮನೆ ಅದು” ಎಂದಳು ಅವಳ ತಾಯಿ ಅನರೀತಾ.
*
*
*
ಪಾದರಿ ಗೋನಸ್ವಾಲಿಸ್ ಇಲ್ಲಿಗೆ ತಮ್ಮ ಕೆಲಸ ಮುಗಿಯಿತು ಎಂದು ಸುಮ್ಮನುಳಿಯಲಿಲ್ಲ. ಇಗರ್ಜಿಯ ಕೆಲಸಕ್ಕೆಂದು ತಂದ ಕಲ್ಲು, ಮಣ್ಣು ಉಳಿದಿತ್ತು. ಕೆಲಸಗಾರರೂ ಇದ್ದರು. ಇಗರ್ಜಿ ಮಗ್ಗುಲಲ್ಲಿ ಸಿಮಿತ್ರಿಗೆಂದು ನೀಡಲಾದ ಜಾಗದ ಸುತ್ತ ಒಂದು ಗೋಡೆ ಕಟ್ಟಿಸಿದರು. ಸಿಮಿತ್ರಿಯ ನಡುವೆ ಸರ್ವ ಆತ್ಮರ ಹಬ್ಬದ ಸಂದರ್ಭದಲ್ಲಿ ಪೂಜೆ ಮಾಡಿಸಲು ಒಂದು ಪೂಜಾ ವೇದಿಕೆಯನ್ನು ನಿರ್ಮಿಸಿದರು. ಈ ವೇದಿಕೆಯ ಹಿಂಬದಿಯಲ್ಲಿ ಎಂಟು ಅಡಿ ಎತ್ತರದ ಒಂದು ಶಿಲುಬೆ ಎದ್ದು ನಿಂತಿತು. ಹೀಗೆಯೇ ಇಗರ್ಜಿಯ ಮುಂದೆ ಮುಖ್ಯ ರಸ್ತೆಗೆ ಅಂಟಿಕೊಂಡಂತೆ ಒಂದು ಮಂಟಪವನ್ನು ಕಟ್ಟಿಸಿದರು. ಹತ್ತು ಹನ್ನೆರಡು ಅಡಿ ಎತ್ತರದ ನಿರ್ಮಾಣ. ಕೆಳಗೆ ಒಂದು ಕಟ್ಟೆ, ಅದರ ಮೇಲೆ ಗೋಪುರದ ಆಕೃತಿಯಲ್ಲಿ ಒಂದು ಮಂಟಪ. ಗಾಜಿನ ಬಾಗಿಲು. ಒಳಗೆ ಸಂತ ಜೋಸೆಫ಼ರ ಮೂರು ಅಡಿ ಎತ್ತರದ ಪ್ರತಿಮೆ. ಬಾಲ ಏಸುವನ್ನು ತೊಳುಗಳಲ್ಲಿಡಿದು ಎತ್ತಿಕೊಂಡು ನಿಂತಿರುವ ಸಂತರ ಮುಖದ ಮೇಲಿನ ಪ್ರಸನ್ನತೆ.
ಇಗರ್ಜಿಯಲ್ಲಿ ನಿಂತು ಪೂಜೆ ಪ್ರಾರ್ಥನೆ ಮುಗಿಸಿ ಹೋಗುವಾಗ ಒಂದೆರಡು ನಿಮಿಷ ಇಲ್ಲಿ ನಿಲ್ಲಿರಿ. ನಿಂತು ಒಂದು ಪರಲೋಕ ಮಂತ್ರ, ಎರಡು ನಮೋರಾಣೆ ಮಂತ್ರ ಹೇಳಿ. ಇದಕ್ಕೂ ನಿಮಗೆ ಬಿಡುವು ಇಲ್ಲವೆಂದರೆ ಪ್ರತಿಮೆಯ ಮುಂದೆ ನಿಂತು ಶಿಲುಬೆಯ ವಂದನೆ ಮಾಡಿ, ಸಂತ ಜೋಸೆಫ಼ರು ಈ ಊರಿನ ಪತ್ರೋನ. ನಿಮ್ಮನ್ನು, ನಿಮ್ಮ ಊರನ್ನು ರಕ್ಷಿಸಬೇಕಾದವರು ಅವರೆ. ಅವರನ್ನು ಗೌರವಿಸಿ, ಭಕ್ತಿಯಿಂದ ಕಾಣಿ. ಇತರ ಧರ್ಮಿಯರು ನಿಮ್ಮನ್ನು ಗಮನಿಸುವುದರಿಂದ ನಿಮ್ಮ ಭಕ್ತಿ ಸಹಜವಾಗಿರಲಿ. ಅವರಿಗೆ ಮಾರ್ಗದರ್ಶಕವಾಗಿರಲಿ ಎಂದರು ಪಾದರಿ ಗೋನಸ್ವಾಲಿಸ್.
ಇದರಿಂದಾಗಿ ಊರ ಜನ ಒಂದು ಅಭ್ಯಾಸವನ್ನು ಬೆಳೆಸಿಕೊಂಡರು. ಸಂತ ಜೋಸೇಫ಼ರ ಈ ಪ್ರತಿಮೆಗೆ ಮೇಣದ ಬತ್ತಿ ಕೊಡುವ, ಅಲ್ಲಿ ಇರಿಸಿರುವ ಗೋಲಕದಲ್ಲಿ ಹಣ ಹಾಕುವ, ಅಲ್ಲಿ ನಿಂತು ಕೈ ಮುಗಿಯುವ ಪರಿಪಾಠ ಬೆಳೆಯಿತು.
ಚಂದಾವರದ ಸಂತ ಅಂತೋನಿಯ ಹಾಗೆ, ಮಲ್ಕೋಡೀನ ಫ಼ಾತಿಮಾ ಮಾತೆಯ ಹಾಗೆ, ಮೈಸೂರಿನ ಸಂತ ಫ಼ಿಲೊಮೆನಳ ಹಾಗೆ, ಶಿವಸಾಗರದ ಸಂತ ಜೋಸೆಫ಼ರ ಹೆಸರು ಎಲ್ಲೆಲ್ಲಿಯೋ ಕೇಳಿ ಬರತೊಡಗಿತು.
ಈ ಸಂದರ್ಭದಲ್ಲಿಯೇ ಗೋವಾದ ಪ್ರಾವಿನ್ಶಿಯಲರ ಒಂದು ಪತ್ರ ಪಾದರಿ ಗೋನಸ್ವಾಲಿಸರಿಗೆ ಬಂದಿತು.
“ವಿಗಾರ, ನೀವು ಶಿವಸಾಗರದಲ್ಲಿ ಅಷ್ಟೆಲ್ಲ ಕೆಲಸ ಮಾಡಿದ್ದು ಕೇಳಿ ಸಂತೋಷವಾಯಿತು. ನಿಮ್ಮ ಸೇವೆ ಒಂದೇ ಕ್ಷೇತ್ರಕ್ಕೆ ಊರಿಗೆ ಮೀಸಲಾಗಿರಬಾರದು. ಕಾರಣ ನಿಮ್ಮನ್ನು ಶಿರಸಿಯ ಸಂತ ಅಂತೋನಿಯವರ ಇಗರ್ಜಿಗೆ ವರ್ಗ ಮಾಡುತ್ತಿದ್ದೇವೆ. ನಿಮಗೆ ವಯಸ್ಸಾಗಿರುವುದನ್ನು ಗಮನಿಸಿ ಶಿರಸಿ ಇಗರ್ಜಿಗೆ ಇಬ್ಬರು ಪಾದರಿಗಳನ್ನು ನೀಡುತ್ತಿದ್ದೇನೆ. ನೀವು ಅಲ್ಲಿ ಹಿರಿಯ ಪಾದರಿಗಳಾಗಿದ್ದು ಜನರಿಗೆ ಕ್ರಿಸ್ತನ ಪ್ರೀತಿ, ದಯೆ, ಭಕ್ತಿಯನ್ನು ತಿಳಿಸಿಕೊಡಬೇಕು…ನಿಮ್ಮ ಜಾಗಕ್ಕೆ ಭಟ್ಕಳದ ಪಾದರಿ ಮಸ್ಕರಿನಾಸರನ್ನು ಹಾಕಿದ್ದೇನೆ..”
ನಿತ್ಯ ಹೋಗಿ ಅಂಚೆ ಕಛೇರಿಯಿಂದ ಪಾದರಿಗಳ ಟಪಾಲು ತರುವುದು ಸಿಮೋನನ ಮಗ ಫ಼ೆಡ್ಡಿ, ಕೈತಾನನ ಮಗ ದುಮಿಂಗ, ಮಿಂಗೇಲಿ ಮಗ ಜಾನಿ ಇವರ ಕೆಲಸ. ನಿತ್ಯ ಅವರಿಗೆ ಟಪಾಲು ಇರುತ್ತಿತ್ತು. ಹೊರ ದೇಶಗಳಿಂದಲೂ ಪತ್ರಗಳು ಬರುತ್ತಿದ್ದವು. ಹೊರ ದೇಶದ ಪತ್ರಗಳ ಮೇಲೆ ಹಚ್ಚಿದ ಅಂಚೆ ಚೀಟಿಗಳನ್ನು ಕಲೆ ಹಾಕುವ ಹುಚ್ಚು ಈ ಹುಡುಗರಿಗೆ. ಈ ಅಂಚೆ ಚೀಟಿ ಆಸೆಗಾಗಿ ಟಪಾಲು ತರುವ ಕೆಲಸ ಮಾಡುತ್ತಿದ್ದರು. ಜತೆಗೆ ಪಾದರಿಯ ಸೇವೆ ಮಾಡುವುದೆಂದರೆ ಅವರಿಗೆ ಹುಮ್ಮಸ್ಸು ಹುರುಪು.
ಅಂದು ಈ ಹುಡುಗರು ತಂದ ಪತ್ರಗಳ ರಾಶಿಯಲ್ಲಿ ಪ್ರಾವಿನ್ಶಿಯಲ್ ರ ಪತ್ರವೂ ಇತ್ತು.
ಈ ಪತ್ರವನ್ನು ಓದಿ ಬದಿಗಿಟ್ಟರು. ಹಾಗೆಯೇ ಉಳಿದ ಪತ್ರಗಳ ಮೇಲೆ ಕಣ್ಣು ಆಡಿಸಿದರು. ತಮ್ಮ ಜೊತೆಯಲ್ಲಿ ಓದಿದ ಓರ್ವ ಮಿತ್ರ ಓರ್ವ ಉನ್ನತ ಹುದ್ದೆಗೆ ಏರಿದ್ದ ಅವನ ಪತ್ರ; ಇನ್ನೋರ್ವನ ಮಗಳ ಮದುವೆಯ ಕರೆಯೋಲೆ, ಮೂರನೆಯವ ಇಟಲಿಯ ಬಿಷಪ್ ಆಗಿದ್ದ. ಅವನ ಪಟ್ಟಾಧಿಕಾರದ ಕರೆಯೋಲೆ. ಇನ್ನೂ ಕೆಲ ಪತ್ರಗಳು. ಎಲ್ಲ ಪತ್ರಗಳನ್ನು ಓದಿ ನೋಡಿ, ಸ್ಟಾಂಪ್ ಇರುವ ಕವರುಗಳನ್ನು ಜಾನಿ, ಡುಮಿಂಗ, ಫ಼ೆಡ್ಡಿಯವರಿಗೆ ಹಂಚಿ-
“..ಹೋಗಿ ಜಗಳವಾಡಬೇಡಿ”
ಎಂದು ಹೇಳಿ ಮತ್ತೊಮ್ಮೆ ಪ್ರಾವಿನ್ಶಿಯಲ್ ಪತ್ರವ್ನ್ನು ಕೈಗೆತ್ತಿಕೊಂಡರು ಪಾದರಿ ಗೋನಸ್ವಾಲಿಸ್.
ಶಿವಸಾಗರದ ಋಣ ಮುಗಿಯಿತು. ಇನ್ನು ಇಲ್ಲಿಂದ ಹೊರಡಬೇಕು. ಶಿರಸಿ ಹೊಸದೇನಲ್ಲ. ಬಸ್ಸು ಬೇರೆ ಇದೆ. ಶಿವಸಾಗರದ ಹಾಗೆ ಇಗರ್ಜಿಯ ಪಾದರಿ ಇಲ್ಲದ ಊರಲ್ಲ. ಅಲ್ಲಿ ಬಹಳ ವರ್ಷಗಳಿಂದ ಕ್ರೀಸ್ತುವರಿದ್ದಾರೆ. ಇನ್ನೂರು ಮುನ್ನೂರು ಮನೆಗಳಿರಬಹುದು. ಸುತ್ತಮುತ್ತಲು ಹಳ್ಳಿಗಳಲ್ಲೂ ಕ್ರೀಸ್ತುವರಿದ್ದಾರೆ. ಇಲ್ಲಿ ಎಲ್ಲವನ್ನೂ ಹೊಸದಾಗಿ ಪ್ರಾರಂಭಿಸಿದೆ. ಅಲ್ಲಿ ಹಾಗಲ್ಲ, ಯಾರೋ ಪ್ರಾರಂಭಿಸಿರುವುದನ್ನು ಮುಂದುವರೆಸಬೇಕು ಅಷ್ಟೇ.
ಇಲ್ಲಿ ತಾವು ಮಾಡಿದ ಕೆಲಸದ ಬಗ್ಗೆ ತಮಗೆ ತೃಪ್ತಿ ಇದೆ. ಮತ್ತೆ ಇಲ್ಲಿ ಉಳಿಯುವ ಮನಸ್ಸಿಲ್ಲ. ಆದರೆ ಒಂದು ಕೆಲಸ ಆಗಲಿಲ್ಲ. ಬೋನನಿಗೆ ಒಂದು ದಾರಿ ತೋರಿಸಬೇಕಿತ್ತು. ರೆಮೇಂದಿ ಆರು ತಿಂಗಳ ಗರ್ಭಿಣಿ ಈಗ. ಮೊನ್ನೆ ಅವಳ ತಾಯಿ ತಂದೆ ಬಂದು ಕರೆದೊಯ್ದರು. ಇನ್ನು ಕೆಲವೇ ತಿಂಗಳಲ್ಲಿ ಬೋನ ತಂದೆಯಾಗುತ್ತಾನೆ. ಅವನನ್ನು ಶಿರಸಿಗೆ ಕರೆದೊಯ್ಯುವುದು ಸೂಕ್ತವಲ್ಲ. ಈ ಗಂಡ ಹೆಂಡತಿ ಮಗುವನ್ನು ಸಾಕುವುದು ತಮಗೆ ಕಷ್ಟವಾಗುತ್ತದೆ. ಬೋನ ಕೂಡ ಮನೆ ನೋಡಿಕೊಂಡು ತಮ್ಮ ಸೇವೆ ಮಾಡಲಾರ. ಅಲ್ಲದೆ ಶಿರಸಿಯಲ್ಲಿ ಯಾರೋ ವಯಸ್ಸಾದ ಬಟ್ಲರ್ ಅವನ ಹೆಂಡತಿ ಇದ್ದಾರೆಂದು ಕೇಳಿದೆ. ಅವರಿಗೂ ತೊಂದರೆಯಾಗುತ್ತದೆ. ಬೋನನನ್ನು ಇಲ್ಲಿಯೇ ಬಿಟ್ಟು ಹೋಗುವುದಾದರೆ ಅವನಿಗೊಂದು ದಾರಿ ತೋರಿಸಬೇಕಲ್ಲ.
ಅವನಿಗಾಗಿ ಏನಾದರೂ ಮಾಡುವ ವಿಚಾರವಿತ್ತು. ಒಂದು ಅಂಗಡಿ ಇರಿಸಿಕೊಡುವ ವಿಚಾರ ಮಾಡಿದೆ. ಎಲ್ಲಿಯಾದರೂ ಕೆಲಸ ಹುಡುಕಿ ಕೊಡೋಣ ಎಂದು ಯೋಚಿಸಿದೆ. ತನಗೆ ತೊಂದರೆಯಾಗುತ್ತದೆ ಎಂದು ಹಿಂದೇಟು ಹೊಡೆದೆ. ಈಗ ಬೇರೆ ದಾರಿ ಇಲ್ಲ ಏನಾದರೂ ಮಾಡಲೇಬೇಕು.
ಪಾದರಿ ಗೋನಸ್ವಾಲಿಸ ಈ ವಿಚಾರವನ್ನು ತಲೆಯಲ್ಲಿ ಹಾಕಿಕೊಂಡು ಯೋಚಿಸುತ್ತಿರಬೇಕಾದರೇನೆ ಅವರ ವರ್ಗಾವಣೆಯ ವಿಷಯ ಕೇರಿಗೆಲ್ಲ ತಿಳಿದು ಹೋಯಿತು.
ಗುರ್ಕಾರ ಸಿಮೋನ ಓಡಿ ಬಂದ, ಪಾಸ್ಕೋಲ ಮೇಸ್ತ್ರಿ, ಬಾಲ್ತಿದಾರ ಇನಾಸ, ಹೊಸದಾಗಿ ಶಿವಸಾಗರದಲ್ಲಿ ಮನೆ ಮಾಡಿದ ಹಸಿಮಡಲು ಪತ್ರೋಲ ದೇಡಮಂಡೆ ಸಜಾಂವ, ಶಿರಾಲಿಯ ಲಿಯಾಂವಂ, ಭಟ್ಕಳದ ಸಾನಪುತ್ತು ಡಾ.ರೇಗೋ, ಜಾನ ಡಯಾಸ ಚಾರ್ಲಿ ಕೂಡ ಬಾರದಿರಲಿಲ್ಲ.
“ಪದ್ರಾಬ….ನೀವು ಊರು ಬಿಟ್ಟು ಹೋಗಬಾರದು” ಎಂದರು ಇವರು.
“ಛೇ ಛೇ! ನಾನು ಪ್ರಾವಿನ್ಶಿಯಲ್ ಆದೇಶವನ್ನು ಮೀರಲಾರೆ…ಅವರು ನಮಗೆಲ್ಲ ಮಣಿಯಾರಿ..ಅವರ ಮಾತನ್ನ ಮೀರುವುದೆಂದರೆ ದೇವರ ವಾಕ್ಯವನ್ನು ಮೀರಿದ ಹಾಗೆ”.
“ನಾವು ಅವರಲ್ಲಿಗೆ ಹೋಗಿ ಬರತೀವಿ ಪದ್ರಾಬ..”
“ಬೇಡ ಬೇಡ…ಅದೊಂದು ಕೆಲಸ ಮಾಡಬೇಡಿ. ಇಲ್ಲಿ ನಾನು ಮಾಡಬೇಕಾದ್ದು ಮುಗಿದಿದೆ..ನನ್ನನ್ನ ಕಳಿಸಿಕೊಡಿ..”
“ಪದ್ರಾಬಾ..” ಅವರೆಲ್ಲರ ಮುಖಗಳು ಬಾಡಿದವು. ಬೋನ ಒಳ ಬಾಗಿಲಲ್ಲಿ ನಿಂತು ದೀನನಾಗಿ ನೋಡಿದ.
“ಮಸ್ಕರಿನಾಸ ಬಂದ ಕೂಡಲೇ ನಾನು ಹೊರಡ್ತೀನಿ..ನೀವು ಯಾರೂ ಬೇಸರ ಪಡಬಾರದು..” ಎಂದರು ಪಾದರಿ ವಿನಯದಿಂದ.
ಬಂದವರೆಲ್ಲ ಭಾರವಾದ ಹೃದಯಗಳನ್ನು ಹೊತ್ತು ತಿರುಗಿ ಹೋದರು. ಆದರೆ ಬಲಗಾಲುದ್ದ ಬಾಲ್ತಿದಾರ ಓರ್ವನೇ ಹಿಂದೆ ಉಳಿದ.
“ಏನು ಬಾಲ್ತಿದಾರ”
“ಒಂದು ವಿಷಯ ಪದ್ರಾಬ”
“ಏನು ಹೇಳಿ..”
“ಇನ್ನು ನನ್ನ ಅಳಿಯ ಮಗಳನ್ನ ಏನು ಮಾಡತೀರ ಪದ್ರಾಬ..”
“ಏನೂ ಯೋಚನೆ ಮಾಡಿಲ್ಲ..ಆದರೆ ಅವರನ್ನ ಇಲ್ಲಿ ಬಿಟ್ಟು ಹೋಗೋದೆ ಸೂಕ್ತ ಎನಿಸುತ್ತೆ ನನಗೆ..”
“ನನ್ನದೊಂದು ವಿಚಾರ ಇದೆ..”
“ಏನು ಹೇಳಿ..”
“ನನಗೂ ವಯಸ್ಸಾಯ್ತು..ಕಣ್ಣು ಕಾಣೋದಿಲ್ಲ..ಈ ಕಾಲು ಈಗೀಗ ತುಂಬಾ ನೋವು ಕೊಡುತ್ತೆ…ನನ್ನ ಅಂಗಡೀನ ಅಳಿಯನಿಗೇನೆ ಬಿಟ್ಟು ಕೊಡೋಣ ಅಂತ..ಅವನು ಇಲ್ಲಿ ಕುಳಿತು ವ್ಯಾಪಾರ ಮಾಡಿದರೆ ಸಾಕು..ಬಟ್ಟೆ ಹೊಲೀಲಿಕ್ಕೆ ಬೇರೆ ಜನ ಇದಾರೆ..”
ಪಾದರಿ ಗೋನಸ್ವಾಲಿಸರಿಗೆ ಸಂತಸವಾಯಿತು. ದೇವರು ಒಂದಲ್ಲಾ ಒಂದು ದಾರಿ ತೋರಿಸುತ್ತಾನೆ ಎಂಬ ವಿಶ್ವಾಸ ಅವರಿಗಿತ್ತು.
“ಬೋನನ ಅಭಿಪ್ರಾಯ ಹೇಗೆ?”
“ನಿಮ್ಮನ್ನ ಬಿಡಲಿಕ್ಕೆ ಅವನಿಗೂ ಮನಸ್ಸಿಲ್ಲ..ಆದರೂ ಶಿರಸಿನಲ್ಲಿ ಬಟ್ಲರ್ ಇದಾರಂತಲ್ಲ..ನಾನು ಅಲ್ಲಿಗೆ ಹೋಗಿ ಏನು ಮಾಡಲಿ ಅಂತಾನೆ..”
“ನೀವು ಹೇಳಿದ ಹಾಗೇನೆ ಮಾಡಿ ನನಗೂ ಸಂತೋಷ..ನಾನು ಅವನಿಗೆ ಅಂತ ಒಂದಿಷ್ಟು ಹಣ ತೆಗೆದು ಇಟ್ಟಿದೀನಿ…ಅದರಲ್ಲಿ ಅಂಗಡೀನ ಅಭಿವೃದ್ದಿ ಪಡಿಸಿಕೊಳ್ಳಲಿ..ಮುಖ್ಯ ಅವನು ಸುಖವಾಗಿ ಸಂತೋಷವಾಗಿ ಇರಬೇಕು..” ಎಂದರು ಪಾದರಿ. ಈ ಸಮಸ್ಯೆ ಸುಲಭವಾಗಿ ಬಗೆ ಹರಿಯಿತಲ್ಲ ಎಂಬ ಸಂತಸದಲ್ಲಿ.
*
*
*
ಸಂಜೆಯ ಐದು ಗಂಟೆಯಾಗಿರಬೇಕು. ಸರಕಾರಿ ಶಾಲೆ ಬಿಟ್ಟು ಹುಡುಗರೆಲ್ಲ ಪಾಟಿಚೀಲ ಸಮೇತ ಮನೆಗಳಿಗೆ ಬರುತ್ತಿದ್ದಾರೆ. ತಟ್ಟನೆ ಇಗರ್ಜಿ ಗಂಟೆ ಹೊಡೆದುಕೊಳ್ಳುತ್ತದೆ. ಏನು ಇದ್ದಕ್ಕಿದ್ದ ಹಾಗೆ ಗಂಟೆ ಸದ್ದು ಮಾಡುತ್ತಿದೆ ಎಂದು ಮನೆಯಲ್ಲಿಯ ಹೆಂಗಸರು ಹೊರಬರುತ್ತಿರುವಾಗ, ಶಾಲೆಯಿಂದ ಇಗರ್ಜಿಗೆ ಹೋಗಿ ಅಲ್ಲೊಂದು ಪ್ರಾರ್ಥನೆ ಸಲ್ಲಿಸಿ ಮನೆಗೆ ಬರುವ ಇಗರ್ಜಿ ಶಾಲೆ ಹುಡುಗರು..
“ನೇವ ಪದ್ರಾಬ ಈಲೋ…ನೇವ ಪದ್ರಾಬ ಈಲೊ” (ಹೊಸ ಪಾದರಿಗಳು ಬಂದರು, ಹೊಸ ಪಾದರಿಗಳು ಬಂದರು) ಎಂದು ಕೂಗುತ್ತಾ ಬಂದರು.
“ಹೌದಾ..ಹೌದಾ” ಎಂದು ಕೇರಿಯ ಜನರೆಲ್ಲ ಗಡಬಡಿಸಿದರು.
ಗುರ್ಕಾರ ಸಿಮೋನ ಯಾವುದೋ ಕೆಲಸಕ್ಕೆಂದು ಮನೆಗೆ ಬಂದವ ಮಕ್ಕಳ ಕೂಗು ಕೇಳಿ ಕೊಳೆಯಾದ ಅಂಗಿ ಕಳಚಿ ಬೇರೊಂದು ಅಂಗಿಯ ತೊಳಿನೊಳಗೆ ತೋಳು ತೂರಿಸುತ್ತ-
“ಕೇಳಸ್ತೇನೆ ಹೊಸ ಪಾದರಿ ಬಂದರಂತೆ…ನಾನು ಇಗರ್ಜಿ ಹತ್ತಿರ ಹೋಗಿ ಬರತೇನೆ..” ಎಂದು ಹೇಳಿ ರಸ್ತೆಗೆ ಇಳಿದ.
*
*
*
ಪಾದರಿ ಮಸ್ಕರಿನಾಸ ಕುಳ್ಳಗಿದ್ದರು. ಬಣ್ಣ ಕಪ್ಪು ಕೆಂಪು. ಸಣ್ಣ ಕಣ್ಣು. ಮೀಸೆ ಗಡ್ಡ ಮುಖದ ತುಂಬ. ಹೀಗಾಗಿ ಅವರು ನಗುವುದೂ ತಿಳಿಯುತ್ತಿರಲಿಲ್ಲ. ಪುಟು ಪುಟು ನಡೆದುಕೊಂಡು ಇಗರ್ಜಿ ತುಂಬಾ ಓಡಿಯಾಡುತ್ತಿದ್ದರು.
“ಇವರು ಗುರ್ಕಾರ ಸಿಮೋನ”
ಎಂದು ಗೋನಸ್ವಾಲಿಸರು ಸಿಮೋನನ ಪರಿಚಯ ಮಾಡಿಕೊಟ್ಟಾಗ-
“ಹಾಂ” ಎಂದು ಸಣ್ಣಗೆ ಚೀರಿ ಸಿಮೋನನ ಮುಖ ನೋಡಿದರು.
ಇವರು ಇಗರ್ಜಿ ಹಬ್ಬಕ್ಕೆ ಬಂದ ಗುರುತು ಸಿಕ್ಕಿತು ಸಿಮೋನನಿಗೆ.
ಕೈಗಾಡಿಯಲ್ಲಿ ಹೊಸ ಪಾದರಿ ತುಂಬಿ ತಂದ ಸಾಮಾನನ್ನು ಇಳಿಸುತ್ತಿದ್ದ ಬೋನನಿಗೆ ಸಹಾಯ ಮಾಡಲು ಸಿಮೋನ ಓಡಿದ. ಹೊಸ ಪಾದರಿ ಜೊತೆ ಬಂದ ಅವರ ಬಟ್ಲರ್ ಫ಼ರಾಸ್ಕ ಸಾಮಾನು ಇಳಿಸತೊಡಗಿದ್ದ.
ಏಕೋ ಆ ವಾತಾವರಣವೇ ಉಸಿರು ಬಿಗಿ ಹಿಡಿಯುವಂತೆ ಮಾಡಿತು. ಬೋನನ ಮುಖ ದೇವರ ಪೀಠದ ಮೇಲಿನ ಹೂದಾನಿಯಲ್ಲಿಯ ಹೂವು ಭಾನುವಾರ ನಳನಳಿಸುತ್ತಿದ್ದುದು ಮಂಗಳವಾರ ಬುಧುವಾರದ ಹೊತ್ತಿಗೆ ಸೊರಗಿ ಒಣಗಿ ಜೋತು ಬಿದ್ದಂತೆ ಆಗಿತ್ತು.
“ಈಗ ಪಾದರಿ ಒಬ್ಬರನ್ನೇ ಕಳುಹಿಸಬೇಕಲ್ಲ”
ಎಂದಾತ ತೊದಲಿದ.
ಪಾದರಿ ಗೋನಸ್ವಾಲಿಸರ ಸಮಸ್ತ ಕೆಲಸಗಳನ್ನೂ ಇವನೊಬ್ಬನೇ ಮಾಡಿಕೊಂಡು ಬಂದಿದ್ದ. ಅದು ಒಂದೆರಡು ವರ್ಷಗಳಿಂದಲ್ಲ. ಗೋವ, ಕಾರವಾರ, ಹೊನ್ನಾವರ ಈಗ ಶಿವಸಾಗರ-ಇಲ್ಲೆಲ್ಲ ಆತ ಅವರ ನೆರಳಾಗಿದ್ದ. ಒಂದೇ ಒಂದು ಬಾರಿ ಅವರು ಅದು ಸರಿಯಾಗಲಿಲ್ಲ, ಇದು ಸಿಗಲಿಲ್ಲ ಎಂದು ಗೊಣಗಲಿಲ್ಲ. ಪ್ರಾರಂಭದಲ್ಲಿ ಪಣಜಿಯ ಪಾದರಿಗಳ ಬಂಗಲೆಯ ಹಿಂದೆಯೇ ಕೂಜ್ನ ಇತ್ತು. ಅಲ್ಲೊಬ್ಬ ಕುಜ್ನೇರ. ಅವನಿಂದ ತಾನು ಎಲ್ಲ ಕಲಿತ. ಗೋನಸ್ವಾಲಿಸ ಕೂಡ ತನಗೆ ಕಲಿಸಿಕೊಟ್ಟರು. ಕೊನೆ ಕೊನೆಗೆ ಗೋನಸಾಲಿಸ್ವರ ಕೆಲಸ ತಾನೊಬ್ಬನೇ ಮಾಡಿಕೊಂಡು ಬರತೊಡಗಿದೆ.
ಅವರಿಗೆ ಬ್ರೆಡ್ ಜಾಮ ಮಾಡಿ ಕೊಡುವ, ಟೀ ಮಿಕ್ಸ್ ಮಾಡಿಕೊಡುವ, ಮೇಜಿನ ಮೇಲೆ ಅವರ ಊಟ ತಂದಿರಿಸುವ ಎಲ್ಲ ಕೆಲಸಗಳನ್ನು ತಾನು ಮಾಡುತ್ತಿದ್ದೆ. ಅವರು ಪೂಜೆಗೆ ಸಿದ್ದವಾಗುವಾಗ ತಾನು ಅಲ್ಲಿರಬೇಕು. ಅವರ ಆಲ್ಬ, ಗರ್ಡಲ್, ಮಾನಿಪಲ್, ಸ್ತೋಲ ಚಾಸುಬಲ ಬಿರೆಟ್ಟಾ ಇತ್ಯಾದಿಗಳನ್ನು ತೊಡಲು ನಾನೇ ಹಿಂದೆ ನಿಂತು ಸಹಾಯ ಮಾಡಬೇಕು. ನಂತರ ಚಾಲಿಸ, ಪಾಟೆನ, ಹೋಸ್ಟಪಾಲ ಮೊದಲಾದವುಗಳನ್ನು ಅವರ ಕೈಗೆ ಕೊಡಬೇಕು.ಸತ್ ಪ್ರಸಾದ ತುಂಬಿದ ಸಿಬೋರಿಯಂ ಅನ್ನು ಕೂಡ ತಾನೆ ಸಿದ್ಧಮಾಡಿ ಇರಿಸಬೇಕು. ತಾನು ಸ್ಯಾಕ್ರಸ್ಟಿಯಲ್ಲಿದ್ದೇನೆ ಎಂದರೆ ಅವರು ನಿಶ್ಚಿಂತರು. ಬಂಗಲೆಯಲ್ಲಿ ಕೂಡ ಕಾಲ ಕಾಲಕ್ಕೆ ಅವರ ಅವಶ್ಯಕತೆಗಳನ್ನು ನೋಡಿಕೊಳ್ಳುತ್ತಿದ್ದೆ. ನಿತ್ಯ ಮಾಂಸ, ಶುಕ್ರವಾರ ಮಾಂಸ ನಿಶಿದ್ಧಿ ದಿನವಾದ್ದರಿಂದ ಅಂದು ಮೀನು. ತಪಸ್ಸಿನ ಕಾಲದಲ್ಲಿ ಅವರು ಉಪವಾಸ ಆಚರಿಸುತ್ತಿದ್ದರು. ಆಗ ಒಂದು ಹೊತ್ತು ಗಂಜಿ. ಅವರ ಚಟುವಟಿಕೆಯ ಬದುಕಿಗೆ ನಾನು ಚಾಲನೆ ನೀಡುತ್ತಿದ್ದೆ.
ಮುಂದೆ ಅವರು ಏನು ಮಾಡುತ್ತಾರೋ? ಏಷ್ಟು ತೊಂದರೆ ಅನುಭವಿಸುತ್ತಾರೋ?
ಬೋನ ಕಣ್ಣೊರಿಸಿಕೊಂಡ.
ಆ ಪತ್ರ ಬಂದ ದಿನದಿಂದ ಅವನ ವ್ಯಥೆ ಇದೇ ಆಗಿತ್ತು.
“ಪದ್ರಾಬ..ಏನಾದರೂ ಮಾಡಿದರಾಯ್ತು…ನಾನು ನಿಮ್ಮ ಜತೆ ಬಂದು ಇರುತ್ತೇನೆ” ಎಂದಿದ್ದ.
“ದುಡುಕಬಾರದು ಬೋನ…ಹೇಗೋ ಎಲ್ಲ ನಡೆದು ಹೋಗುತ್ತದೆ..ನೀನು ಇಲ್ಲೇ ಇರು..” ಎಂದಿದ್ದರು ಅವರು.
“ನಾನು ನಂಬಿರುವ ದೇವರು ಒಂದು ದಾರಿ ತೋರಿಸುತ್ತಾನೆ..ಬಂದು ಹೋಗು ಶಿರಸಿಗೆ..” ಎಂದು ಇವನಿಗೆ ಸಾಂತ್ವನ ಹೇಳಿದ್ದರು.
ಬೋನ ಸಿಮೋನ ಹೊಸ ಪಾದರಿಗಳ ಸಾಮಾನನ್ನು ಇಳಿಸಿದರು. ಸಿಮೋನ ಹೊರಗೆ ನಿಂತಾಗ ಪಾದರಿ ಗೋನಸ್ವಾಲಿಸ್ ಹೊರಬಂದವರು..
“ಸಿಮೋನ” ಎಂದರು.
“ಪದ್ರಾಬಾ..”
“ನಾಳೆ ಬೆಳಿಗ್ಗೆ ಈ ಇಗರ್ಜಿಯಲ್ಲಿ ನನ್ನ ಕೊನೆಯ ಪೂಜೆ ಸಲ್ಲಿಸಿ..ಏಳುವರೆ ಬಸ್ಸಿಗೆ ನಾನು ಹೊರಡತೇನೆ..ನಿನ್ನ ಗಾಡಿಯಲ್ಲಿ ನನ್ನ ಸಾಮಾನುಗಳನ್ನು ಬಸ್ ಸ್ಟ್ಯಾಂಡಿನವರೆಗೆ ತಂದು ಹಾಕುವ ವ್ಯವಸ್ಥೆ ಮಾಡು..” ಎಂದರು ಗೋನಸ್ವಾಲಿಸ್.
ಸಿಮೋನ ಏನೂ ನುಡಿಯಲಿಲ್ಲ. ಅವನ ತುಟಿಗಳು ಅಂಟಿಕೊಂಡಿದ್ದವು. ಗಂಟಲ ನರ ಬಿಗಿದುಕೊಂಡಿತ್ತು.
ಪಾದರಿ ಗೋನಸ್ವಾಲಿಸ ಊರ ಜನರ ಮೇಲೆ ಬೀರಿದ ಪ್ರಭಾವ ಎಂತಹದು ಎಂಬುದನ್ನು ಬಹಳ ಹತ್ತಿರದಿಂದ ನೋಡಿದವ ಸಿಮೋನ.
ಪಾದರಿ ಗೋನಸ್ವಾಲಿಸರಿಗೆ ಸಿಟ್ಟು ಬರುತ್ತಿತ್ತು. ಅದು ಒಂದೇ ಕಾರಣಕ್ಕಾಗಿ. ದೇವರ ಬಗ್ಗೆ ಗೌರವ, ಭಕ್ತಿ ಇರಿಸಿಕೊಳ್ಳದವರನ್ನು, ಇಗರ್ಜಿಗೆ ಬಾರದವರನ್ನು ಅವರು ಎಂದೂ ಕ್ಷಮಿಸುತ್ತಿರಲಿಲ್ಲ. ತಟ್ಟನೆ ಬೆತ್ತವನ್ನು ಸೆಳೆದು ಹೊಡೆಯಲು ಕೂಡ ಅವರು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಆದರೆ ಇದರ ಪರಿಣಾಮ ವಿಪರೀತವಾದಾಗ ನೊಂದುಕೊಳ್ಳುತಿದ್ದರು.
ಭಟ್ಕಳದ ಗ್ಯಾಬ್ರಿಯೆಲನಿಗೆ ಅವರು ಮೂರು ನಾಲ್ಕು ಬಾರಿ ಭಾನುವಾರಗಳಂದು ಪೂಜೆಗೆ ಬರುವಂತೆ ಹೇಳಿದ್ದರು. ಆತ ಕೂಡ “ಬರತೀನಿ ಪದ್ರಾಬ” “ಬರತೀನಿ ಪದ್ರಾಬ” ಎಂದು ಹೇಳುತ್ತಿದ್ದನಲ್ಲದೆ, ಪೂಜೆಗೆ ಬರುತ್ತಿರಲಿಲ್ಲ. ಒಂದು ದಿನ ಬಾಚಿ ಹೆಗಲಿಗೇರಿಸಿಕೊಂಡು ಹೋಗುವಾಗ ಪಾದರಿಗಳ ಕೈಗೆ ಸಿಕ್ಕಿಬಿದ್ದ. ಅವನ ಹೆಗಲ ಮೇಲಿನ ಬಾಚಿ ಕಿತ್ತು ಎಸೆದು ಅವನ ಬೆತ್ತಲೆ ಕಾಲು ತೊಡೆಗಳ ಮೇಲೆ ಚರ್ಮ ಕಿತ್ತು ಬರುವಂತೆ ಪಾದರಿ ಹೊಡೆದರು. ಆ ನೋವಿನಲ್ಲೇ ಆತ ಇಗರ್ಜಿಗೂ ಬಂದ. ಸಂಜೆ ಅವನ ಕಾಲಿನ ಗಾಯಗಳು ವೃಣವಾಗಿ ಬಾತುಕೊಂಡಿವೆ ಎಂಬುದು ಗೊತ್ತಾಗಿ ಪಾದರಿ ಅವನ ಮನೆಗೆ ಓಡಿದರು.
“ಗಾಬ್ರು..ಗಾಬ್ರೆ..” ಎಂದು ಅವನ ಕೈ ಹಿಡಿದು, ಮುಖ ತಡವಿ ತಾವೇ ಗಾಯಗಳಿಗೆ ಔಷಧಿ ಹಚ್ಚಿದರು. ನಾಲ್ಕು ದಿನ ನಿತ್ಯ ಗಾಬ್ರಿಯೆಲ್ಲನನ್ನು ಕಂಡು ಬಂದರು.
“ನನಗೆ ಸಿಟ್ಟು ತಡೆಯಲಾಗಲಿಲ್ಲ” ಎಂದು ಅವನ ಎದುರು ಹೇಳಿದಾಗ ಗಾಬ್ರಿಯೆಲ್
“ನನ್ನದೇ ತಪ್ಪು ಪದ್ರಾಬ. ನಾನು ಇಗರ್ಜಿಗೆ ಬರುವುದನ್ನು ತಪ್ಪಿಸಿಕೊಳ್ಳಬಾರದಿತ್ತು..” ಎಂದ.
ಪಾದರಿ ಗೋನಸ್ವಾಲಿಸರ ಈ ಸಿಟ್ಟು ಕೋಪವನ್ನು ಜನ ಸಹಿಸಿಕೊಂಡಿದ್ದರು. “ರಾಗಿಷ್ಟ ಪಾದರಿ” ಎಂದು ಅವರನ್ನು ಕರೆದರು. ಅವರ ’ದೈವ ಭಕ್ತಿ, ಪ್ರೀತಿ, ಸ್ನೇಹ ’ ಎಲ್ಲರನ್ನೂ ಕಟ್ಟಿಹಾಕಿತ್ತು.
ಹೊರಗೆ ಉಗ್ರವಾಗಿ ಕಾಣುತ್ತಿದ್ದ ಅವರ ವ್ಯಕ್ತಿತ್ವ ದೇವರ ಪೀಠದ ಮೇಲೆ ಭಕ್ತಿಯ ಪ್ರವಾಹದಲ್ಲಿ ತೇಲಿ ಹೋಗುತ್ತಿತ್ತು. ಅವರು ದೇವರನ್ನು ಸ್ತುತಿಸುವಾಗ, ಜಪ ಹೇಳಿ ಕೊಡುವಾಗ, ದಿವ್ಯ ಪ್ರಸಾದವನ್ನು ಎತ್ತಿ ಎತ್ತಿ ಹಿಡಿದಾಗ, ದಿವ್ಯ ಪ್ರಸಾದವನ್ನು ಹಂಚುವಾಗ, ಪ್ರವಚನ ನೀಡುವಾಗ ದೇದಿಪ್ಯಮಾನವಾಗಿ ಕಂಗೊಳಿಸುತ್ತಿದ್ದರು. ಅವರ ದನಿ, ಹಾವ ಭಾವಗಳಲ್ಲಿ, ಕಣ್ಣುಗಳಲ್ಲಿ ಅವರು ಆಶೀರ್ವದಿಸುವಾಗ ಅವರು ಬೇರೆಯೇ ಆಗಿ ಕಾಣುತ್ತಿದ್ದರು.
ಅವರ ಈ ಭಕ್ತಿಯೇ ಜನರನ್ನು ಇಗರ್ಜಿಗೆ ಬರುವಂತೆ ಮಾಡಿತ್ತು. ಹೆದರಿಸಿ ಬೆದರಿಸಿ ಜನರನ್ನು ಇಗರ್ಜಿಗೆ ಕರೆತಂದ ಪಾದರಿ ನಂತರ ಅವರನ್ನು ಇಲ್ಲಿ ಬಂಧಿಸಿಟ್ಟಿದ್ದು ಈ ಭಕ್ತಿಯಿಂದ.
ಇಂತಹಾ ಪಾದರಿ ಈಗ ಊರು ಬಿಟ್ಟು ಹೊರಟಿದ್ದಾರೆ ಎಂದು ಸಿಮೋನ ಕಣ್ಣೊರೆಸಿಕೊಂಡ.
ಗೋವೆಯ ಪ್ರಾವಿನ್ಶಿಯಲರ ಪತ್ರ ಗೋನಸ್ವಾಲಿಸರಿಗೆ ಬಂದು ಅವರು ಶಿರಸಿಗೆ ಹೋಗುವುದು ಖಚಿತವಾದಾಗ ಊರಿನ ಕ್ರೀಸ್ತುವರೆಲ್ಲ ಸಿಮೋನನ ಮನೆಯಲ್ಲಿ ಸೇರಿದರು. ಚಮಾದೋರ ಕೇರಿಯ ಧಾಜಣರಿಗೆ ಸುದ್ದಿ ಮುಟ್ಟಿಸಿ ಬಂದಿದ್ದ.
“ಪಾದರಿಗಳಿಗೆ ವರ್ಗವಾಗಿದೆ..ಅವರು ಹೋಗುತ್ತಿದ್ದಾರೆ…ನಾವು ಏನಾದರೂ ಮಾಡಬೇಕಲ್ವ?”
ಎಂದು ಸಿಮೋನ ನೆರೆದವರನ್ನು ಕುರಿತು ಹೇಳಿದಾಗ ಎಲ್ಲರೂ-
“ಹೌದು..ಹೌದು” ಎಂದರು.
ಆದರೆ ಏನು ಮಾಡಬೇಕೆಂಬುದು ಯಾರಿಗೂ ಗೊತ್ತಿರಲಿಲ್ಲ.
ಸಿಮೋನನಿಗೆ ಆಗಲಿ, ಬಾಲ್ತಿದಾರ, ಪಸ್ಕೋಲ, ಕೈತಾನರಿಗೇ ಆಗಲಿ ಕೆಲಸ ಮಾಡಿ ಗೊತ್ತಿತ್ತೆ ಹೊರತು, ಏನ ಮಾಡಬೇಕು? ಹೇಗೆ ಮಾಡಬೇಕು ಎಂಬಂತಹ ಜ್ಞಾನ ಇರಲಿಲ್ಲ. ಈ ಕೆಲಸ ಮಾಡಿ ಎಂದರೆ ಅವರು ಮಾಡುತ್ತಿದ್ದರಷ್ಟೇ. ಪಾದರಿ ಗೋನಸ್ವಾಲಿಸರು ಬರುವ ತನಕ ಈ ಜನ ತಮ್ಮ ಅನಕ್ಷರತೆ, ಅಜ್ಞಾನ, ಕೀಳರಿಮೆಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಪುರಸಭೆಯಲ್ಲಿ ಇವರ ಕೆಲಸ ಆಗುತ್ತಿರಲಿಲ್ಲ. ಯಾವುದೇ ಸರ್ಕಾರಿ ಕಛೇರಿಗಳ ಪರಿಚಯ ಇವರಿಗಿರಲಿಲ್ಲ. ಗೋನಸ್ವಾಲಿಸ ಬಂದ ನಂತರ ತಮ್ಮ ತೊಂದರೆ ಕಷ್ಟ ಹೇಳಿಕೊಳ್ಳಲು ತತ್ ಕ್ಷಣದ ಓರ್ವ ವ್ಯಕ್ತಿ ಅವರಿಗೆ ಸಿಕ್ಕಿದ್ದರು.
“ಪದ್ರಾಬಾ..ಹೇಗೆ ಆಗಬೇಕು” ಎಂದು ಇವರು ಗೋನಸ್ವಾಲಿಸರ ಬಳಿ ಹೋದರೆ ಅವರು-
“ಹೌದಾ ಸರಿ ಬಿಡು ನಾನು ಹೋಗಿ ಮಾಡಿಸಿಕೊಂಡು ಬರತೀನಿ. ನೀನು ಸಂಜೆ ಬಾ..” ಎಂದು ಆತನನ್ನು ಕಳುಹಿಸಿ ಪಾದರಿ ತಾವೇ ಹೋಗಿ ಆ ಕೆಲಸಮಾಡಿಕೊಂಡು ಬರುತ್ತಿದ್ದರು.
ಹೀಗಾಗಿ ಶಿವಸಾಗರದ ಮೂಲ ನಿವಾಸಿಗಳಾದ ಕ್ರೀಸ್ತುವರು ಒಂದು ಬಗೆಯ ಅಜ್ಞಾನದಲ್ಲಿಯೇ ಉಳಿದರು. ಇದ್ದುದರಲ್ಲಿ ಸಿಮೋನ ಮೇಸ್ತ್ರಿ ಕೊಂಚ ಚಾಲಾಕಿನವನಾಗಿದ್ದ. ಆದರೆ ಅವನಿಗೂ ಕೆಲವೊಂದು ವಿಷಯಗಳಲ್ಲಿ ಏನು ಮಾಡಬೇಕೆಂಬುದು ತಿಳಿಯುತ್ತಿರಲಿಲ್ಲ.
ಪಾದರಿ ಗೋನಸ್ವಾಲಿಸರಿಗೆ ವರ್ಗವಾಗಿದೆ ಎಂದಾಗ ಅವರನ್ನು ಉತ್ತಮ ರೀತಿಯಲ್ಲಿ ಬೀಳ್ಕೊಡಬೇಕು ಎಂದವರು ಬಯಸಿದರು. ಆದರೆ ಈ ಸಮಾರಂಭವನ್ನು ಏರ್ಪಡಿಸುವುದು ಹೇಗೆ” ಎಂಬುದು ಅವರಿಗೆ ಯಾರಿಗೂ ಹೊಳೆಯಲಿಲ್ಲ. ಈವರೆಗೆ ಅಂತಹ ಒಂದು ಸಂದರ್ಭವೇ ಬಂದಿರಲಿಲ್ಲವೆ?
ಕೊನೆಗೆ ಅವರು ಅದೇ ಬಂದು ಊರಿನಲ್ಲಿ ನೆಲಸಿದ ರೆಗ್ಯೊಡಯಾಸ್, ವಿನ್ಸೆಂಟರ ನೆರವನ್ನು ಪಡೆಯಬೇಕಾಯಿತು.
*
*
*
ಪಾದರಿ ಗೋನಸ್ವಾಲಿಸರ ವರ್ಗಾವಣೆಯ ಪ್ರಸಂಗ ನಡೆಯಲು ಕೆಲವೇ ದಿನಗಳಿವೆ ಅನ್ನುವಾಗ ಊರ ರಾಮಣ್ಣನ ಛತ್ರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಒಂದು ಕಛೇರಿಯನ್ನು ತೆರೆದಿತ್ತು. ಎರಡು ಮೂರು ವರ್ಷಗಳಿಗೊಮ್ಮೆ ಬಂದು ಪೀಡಿಸುತ್ತಿದ್ದ ಪ್ಲೇಗು, ಕಾಲರಾ, ಸಿಡುಬು ಮುಂತಾದ ಕಾಯಿಲೆಗಳನ್ನು ಮೂಲೋತ್ಪಾಟನೆ ಮಾಡಲು ಕೆಲವು ವೈದ್ಯರು, ಸಿಬ್ಬಂದಿಗಳವರು ಚಾಲಕರು ಇಲ್ಲಿಗೆ ಬಂದು ಇಳಿದರು. ಇವರಲ್ಲಿ ಡಾಕ್ಟರ್ ರೇಗೊ, ಹೆಲ್ತ ವಿಸಿಟರ್ ವಿನ್ಸೆಂಟ, ಡ್ರೈವರ್ ಚಾರ್ಲಿ, ಆಫ಼ೀಸ್ ಮ್ಯಾನೇಜರ್ ಜಾನ್ ಡಯಾಸ್ ಮೊದಲಾದವರೂ ಇದ್ದರು. ಶಿವಸಾಗರದಲ್ಲಿ ಈಗಾಗಲೇ ಇದ್ದ ಕ್ರೀಸ್ತುವರು ಹೀಗೆ ಬಂದವರನ್ನು ’ಬಾಮಣರು’ ಎಂದು ಗುರುತಿಸುವುದರ ಜೊತೆಗೆ ಅವರನ್ನು ಆಸಕ್ತಿ ಕುತೂಹಲದಿಂದ ನೋಡುವಂತಾಯಿತು.
ಬಂದವರೆಲ್ಲ ಸಿಮೋನನ ಮನೆ ಇರುವ ರಸ್ತೆ ಬಿಟ್ಟು ಇದರ ಹಿಂದಿನ ರಸ್ತೆಯಲ್ಲಿ ಮನೆಗಳನ್ನು ಬಾಡಿಗೆಗೆ ಹಿಡಿದು ಉಳಿದರು. ಈ ಜನ ತುಸು ಬೆಳ್ಳಗೆ ಇದ್ದುದರ ಜೊತೆಗೆ ಇವರೆಲ್ಲ ವಿದ್ಯಾವಂತರಾಗಿದ್ದರು. ಅತ್ಯಾಧುನಿಕವಾದ ರೀತಿಯಲ್ಲಿ ಉಡುಗೆ ತೊಡುಗೆ ಧರಿಸುತ್ತಿದ್ದರು. ಇವರ ಮಾತಿನ ರೀತಿ ಧಾಟಿ ಬೇರೆಯಾಗಿತ್ತು. ಶಿವಸಾಗರದಲ್ಲಿದ್ದ ಕ್ರೀಸ್ತುವರ ಮನೆಗಳಲ್ಲಿ ಊಟದ ಮೇಜು, ಕಬ್ಬಿಣದ ಬೀರುಗಳು, ಸೈಕಲ್ ಗಳು ಇರಲಿಲ್ಲವಾದರೆ ಅವೆಲ್ಲ ಇವರ ಮನೆಗಳಲ್ಲಿದ್ದವು.
ಡಾಕ್ಟರ್ ರೇಗೋ ಹೆಂಡತಿ ಕೂದಲು ಕತ್ತರಿಸಿಕೊಂಡು ತುಟಿಗೆ ಕೆಂಬಣ್ಣ, ಕೆನ್ನೆಗೆ ಕೆಂಪು ಹಚ್ಚಿಕೊಳ್ಳುತ್ತಿದ್ದಳು. ಮ್ಯಾನೇಜರ ಜಾನ್ ಡಯಾಸ್ ನ ಹೆಂಡತಿ ಕ್ಕೊಡ ಹೀಗೆಯೇ ಹೆಗಲ ಮೇಲೆ ತುಂಡು ಕೂದಲು ಬಿಟ್ಟುಕೊಂಡು ಮೊಣಕಾಲು ಕಾಣುವ ಹಾಗೆ ಲಂಗ ಧರಿಸಿ, ಹಿಮ್ಮಡಿ ಎತ್ತರವಿರುವ ಚಪ್ಪಲಿ ತೊಟ್ಟು ಕೈಯಲ್ಲೊಂದು ಚೀಲ ಹಿಡಿದು ಕೊಪೆಲಗೆ ಬರತೊಡಗಿದಳು.
ಇವರೆಲ್ಲ ಕೊಂಕಣಿಗಿಂತಲೂ ಇಂಗ್ಲೀಷನ್ನು ಹೆಚ್ಚು ಹೆಚ್ಚಾಗಿ ಬಳಸುತ್ತಿದ್ದರು.
ಮನೆಯಲ್ಲಿ ನಾಯಿಗಳನ್ನು ಸಾಕಿಕೊಂಡಿದ್ದರು.
ಈ ನಾಯಿಗಳಿಗೆ ಟೈಗರ್, ಟಾಮಿ, ರೂಬಿ ಎಂದೆಲ್ಲ ಹೆಸರು ಇಟ್ಟಿದ್ದರು. ಅಲ್ಲದೆ ಈ ನಾಯಿಗಳ ಕೂಡ ಇಂಗ್ಲೀಷಿನಲ್ಲಿ ಮಾತನಾಡುತ್ತಿದ್ದರು.
ಇಗರ್ಜಿ ಸುತ್ತಲಿನ ಬೀದಿಗಳಲ್ಲಿ ಸದಾ ಬೊಗಳುತ್ತ ಕಚ್ಚಾಡುತ್ತ ತಿರುಗಾಡುವ ಕಂತ್ರಿ ನಾಯಿಗಳೇ ಅಲ್ಲಿಯ ಕ್ರೀಸ್ತುವರು ಸಾಕಿಕೊಂಡ ನಾಯಿಗಳಾಗಿದ್ದವು. ಈ ನಾಯಿಗಳಿಗೆ ಇಲ್ಲಿಯವರು ಹಂಡ ಪುಂಡ, ಮಾರ್ಸೆಲ, ಟಿಪ್ಪು ಎಂದು ಹೆಸರಿಟ್ಟಿದ್ದರು. ಆದರೆ ಟೈಗರ್ ಟಾಮಿಗಳು ಬಂದ ನಂತರ ಈ ಹಂಡ ಬಂಡಗಳನ್ನು ಸಾಕಿಕೊಂಡವರು ನಾಚಿದರು.
ಮಂಗಳೂರು, ಬೆಂಗಳೂರು, ಮೈಸೂರಿನಿಂದ ವರ್ಗವಾಗಿ ಬಂದ ಈ ಹೊಸ ಕ್ರೀಸ್ತುವರು ಹಳಬರನ್ನು ಬೇರೆ ಬೇರೆ ಕಾರಣಗಳಿಗೆ ಬೇರೊಂದು ರೀತಿಯಲ್ಲಿ ನೋಡ ತೊಡಗಿದ್ದು ಕೂಡ ನಿಜವೆ.
ಇದರ ಬೆನ್ನಲ್ಲೇ ರಾಮಣ್ಣನ ಛತ್ರದಲ್ಲಿ ಕಛೇರಿ ತೆರೆದು ಕೆಲಸ ಆರಂಭಿಸಿದವರು ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ಆರಂಭಿಸಿದರು.
ಈ ಕಛೇರಿಯ ವ್ಯಾನುಗಳ ಓಡಾಟ ಊರ ತುಂಬಾ ಅಧಿಕವಾಯಿತು. ಇಲಿ ಬೋನುಗಳನ್ನು ಮನೆ ಮನೆಗಳಿಗೆ ಹಂಚಿದರು. ಇಲಿ ಹಿಡಿದು ತಂದರೆ ಇಲಿಗೆ ನಾಲ್ಕು ಆಣೆ ಕೊಡುವುದು. ಮನೆಗಳಿಗೆ ಸೈನೋಗ್ಯಾಸ್ ಹೊಡೆಯುವುದು ಮೊದಲಾದ ಚಟುವಟಿಕೆಗಳನ್ನು ಇವರು ಆರಂಭಿಸಿದರು. ಈ ಚಟುವಟಿಕೆಗಳ ಹಿಂದಿದ್ದವರು ಡಾಕ್ಟರ್ ರೇಗೋ, ವಿನ್ಸೆಂಟ್, ಚಾರ್ಲಿ ಮುಂತಾದವರು. ಈ ಚಟುವಟಿಕೆಗಳ ಮೂಲಕ ಪ್ಲೇಗು, ಸಿಡುಬು ಮುಂತಾದ ಕಾಯಿಲೆಗಳ ಬಗ್ಗೆ ತೀರಾ ಭಿನ್ನವಾದ ಒಂದು ಅಭಿಪ್ರಾಯವನ್ನು ಜನರಲ್ಲಿ ಮೂಡಿಸಲು ಇವರು ಶಕ್ತರಾದರು.
ಈ ಜನ ಶಿವಸಾಗರದ ಹೊಸ ಇಗರ್ಜಿಯಲ್ಲಿಯೂ ಕೆಲ ಅಪರೂಪದ ಪದ್ದತಿಗಳನ್ನು ಜಾರಿಗೆ ತಂದಿದ್ದರು. ತ್ರಿಕೋಣಾಕಾರದ ಇಗರ್ಜಿಯ ಒಂದು ಕಡೆ ಹೊಸದಾಗಿ ಕುಳಿತುಕೊಳ್ಳುವ ಒಂದು ಬೆಂಚು ಕಂಡು ಬಂದಿತು. ಡಾಕ್ಟರ್ ರೇಗೋ, ಅದನ್ನು ಅಲ್ಲಿಗೆ ತಂದು ಹಾಕಿಸಿದರು. ಇದರ ಮೇಲೆ ಅವರು, ಅವರ ಹೆಂಡತಿ ಮೇಡಂ ನ್ಯಾಸ್ಸಿ, ಹೆಲ್ತ್ ಆಫ಼ೀಸಿನ ಮ್ಯಾನೇಜರ್ ಜಾನ್ ಡಯಾಸ್ ಅವನ ಹೆಂಡತಿ ಸಿಲ್ವಿಯ ಕುಳಿತುಕೊಂಡು ಪೂಜೆ ಕೇಳುವ ಪರಿಪಾಠ ಜಾರಿಗೆ ಬಂತು. ಇಗರ್ಜಿಯ ಪ್ರಾರ್ಥನೆ ಕೊಂಕಣಿಯಲ್ಲಿ ಮಾತ್ರ ನಡೆಯುತ್ತಿದ್ದ ಕಡೆ ಈ ಭಾನುವಾರ ಇಂಗ್ಲೀಷ ಸೇರಿಕೊಂಡಿತು. ಡಾಕ್ಟರ್ ರೇಗೋ, ಜಾನ್ ಡಯಾಸ್, ವಿನ್ಸೆಂಟ್ ಚಾರ್ಲಿ ಮೊದಲಾದವರೆಲ್ಲ ಎಲ್ಲರಿಗಿಂತಲೂ ಮೊದಲು ಹೋಗಿ ದಿವ್ಯ ಪ್ರಸಾದ ಸ್ವೀಕರಿಸುವುದು ಚಾಲ್ತಿಗೆ ಬಂದಿತು.
ಬೋನನ ಕೀರ್ತನೆ ಗಾಯನಕ್ಕೆ ತನ್ನ ಪಿಟೀಲಿನ ಹಿನ್ನೆಲೆಯನ್ನು ನೀಡುತ್ತಿದ್ದ ಜಾನ ಡಯಾಸನ ತಂದೆ, ವಲೇರಿಯನ್ ಡಯಾಸ ನಿಧಾನವಾಗಿ ಬೋನನನ್ನು ಮೂಲೆಗೆ ತಳ್ಳುವ ಯತ್ನ ಮಾಡತೊಡಗಿದಂತಿತ್ತು. ಮಂಗಳೂರಿನ ಒಂದು ಇಗರ್ಜಿಯಲ್ಲಿ ಕ್ವಾಯರ್ ಮಾಸ್ಟರ್ ಆಗಿದ್ದರಿಂದ ಈ ಕೆಲಸ ಅವನಿಗೆ ಸುಲಭ ಕೂಡ ಆಗಿತ್ತು.
ಈ ಬಾಮಣರು ಸ್ಥಳೀಯ ಕ್ರೀಸ್ತುವರನ್ನು ಮೂರ್ಖರು, ದಡ್ಡರು, ಅನಕ್ಷರಸ್ಥರು ಎಂದು ಪರಿಗಣಿಸಿ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ತಮ್ಮ ಕೈ ಮೇಲಾಗುವಂತೆ, ತಮ್ಮ ಮಾತು ನಡೆಯುವಂತೆ ನೋಡಿಕೊಳ್ಳಲಾರಂಭಿಸಿದರು.
ಪಾದರಿ ಗೋನಸ್ವಾಲಿಸರ ಹತ್ತಿರ ಇಂಗ್ಲೀಷಿನಲ್ಲಿ ಮಾತನಾಡುವ ಈ ಜನ ಅವರಿಗೆ ಆತ್ಮೀಯರಾದಂತೆ ಹತ್ತಿರದವರಾಗಿ ಮಾರ್ಪಟ್ಟಂತೆ ಕಂಡು ಬಂದು ಸ್ಥಳಿಯರು ಸಹಜವಾಗಿ ಹಿಂದೆ ಸರಿಯತೊಡಗಿದರು.
ಆಗಲೇ ಪಾದರಿ ಗೋನಸ್ವಾಲಿಸರಿಗೆ ಶಿರಸಿಗೆ ವರ್ಗವಾದ ಸುದ್ದಿ ಬಂದಿತು. ಅವರನ್ನು ಬೀಳ್ಕೊಡಲು ಒಂದು ಸಭೆ ಇರಿಸಿಕೊಂಡ ಬಗ್ಗೆ ಊರಿನ ಚಮಾದೋರ ಇಂತ್ರು ಮನೆಮನೆಗೆ ಹೋಗಿ ಹೇಳಿದಂತೆಯೆ ಡಾಕ್ಟರ್ ರೇಗೋ, ಜಾನ ಡಯಾಸ, ವಲೇರಿಯನ, ವಿನ್ಸೆಂಟ, ಚಾರ್ಲಿ ಇವರಿಗೂ ಹೇಳಿದ.
ಊರಿನ ಕ್ರೀಸ್ತುವರ ಮಾತು, ವರ್ತನೆ, ಅವರ ರೀತಿ ನೀತಿಯ ಬಗ್ಗೆ ಅಂತಹ ಗೌರವ ಇರಿಸಿಕೊಂಡಿರದ ಡಾಕ್ಟರ್ ರೇಗೋ, ಜಾನ ಡಯಾಸ ಮತ್ತಿತರರು ಪಾದರಿ ಗೋನಸ್ವಾಲಿಸರಿಗಾಗಿ ಸಭೆಗೆ ಬಂದರು. ಊರವರೆಲ್ಲ ಕುಳಿತು ಏನೋ ಒಂದು ತೀರ್ಮಾನ ಮಾಡುವಾಗ ತಾವು ಅಲ್ಲಿ ಇಲ್ಲದಿದ್ದರೆ ಹೇಗೆ ಎಂದೇ ಅವರೆಲ್ಲ ಸಭೆಗೆ ಆಗಮಿಸಿದರು.
ಆದರೆ ಇಲ್ಲಿ ನೋಡಿದರೆ ಈ ಜನರಿಗೆ ಏನೂ ಗೊತ್ತಿರುವಂತಿಲ್ಲ. ಏನಾದರೂ ಮಾಡಬೇಕು ಅನ್ನುತ್ತಾರೆ. ಅದೇನು? ಹೇಗೆ ಮಾಡಬೇಕು ಗೊತ್ತಿಲ್ಲ. ಇಂತಹ ವಿಷಯಗಳಲ್ಲಿ ಅನುಭವವಿಲ್ಲ. ಬೇಕಾದ ವಿದ್ಯಾ ಅರ್ಹತೆ ಇಲ್ಲ.
ಕೊನೆಗೆ ಡಾಕ್ಟರ್ ರೇಗೋ ಎದ್ದು.
“…ಹೊಸ ಪಾದರಿಗಳು ಬಂದ ನಂತರ ಇವರು ಹೋಗುವುದು ಖಚಿತ..ಇವರಿಗೆ ನಾವು ನಮ್ಮ ನೆನಪಿಗಾಗಿ ಏನಾದರೂ ಕೊಡಬೇಕು..ನೀವೆಲ್ಲ ಹಣ ಹಾಕಿದರೆ ಒಂದು ಬೆಳ್ಳಿಯ ಪೂಜಾ ಪಾತ್ರೆಯನ್ನು-ಪಾಟಿನ್-ಕೊಡುವುದು ಸೂಕ್ತ..” ಎಂದು ಹೇಳಿದ್ದು ಎಲ್ಲರಿಗೂ ಸರಿ ಎನಿಸಿ-
“ಹಾಗೇ ಮಾಡೋಣ..ಹಣದ ಚಿಂತೆ ಮಾಡಬೇಡಿ…ನಿಮ್ಮಿಂದಾದಷ್ಟು ಕೊಡಿ..” ಎಂದ ಗುರ್ಕಾರ ಪಾಸ್ಕೋಲ ಕೂಡ ತನ್ನ ದನಿ ಸೇರಿಸಿದ…ಬಾಮಣ ಪಂಗಡದವರು ಕೈ ಎತ್ತಿದರು.
ಶಿವಸಾಗರದ ಜಗನ್ನಾಥ ಶೇಟ್ ಕೆಲವೇ ದಿನಗಳಲ್ಲಿ ಆಕರ್ಷಕವಾದ ಪಾಟೆನ ಒಂದನ್ನು ಮಾಡಿಕೊಟ್ಟ ಕೂಡ. ಊರ ಕ್ರೀಸ್ತುವರು ಡಾ. ರೇಗೋ ಸಲಹೆಯಂತೆ ಮಾಡಿಸಿದ ಬೆಳ್ಳಿಯ ಪೂಜಾ ಪಾತ್ರೆಯನ್ನು ನೋಡಿ ಸಂತಸಪಟ್ಟರು.
*
*
*
ಪಾದರಿ ಮಸ್ಕರಿನಾಸ ಊರಿಗೆ ಬಂದ ಮಾರನೇ ದಿನಬೆಳಿಗ್ಗೆ ಇಗರ್ಜಿಯಲ್ಲಿ ವಿಶೇಷ ಪೂಜೆಯೊಂದನ್ನು ಇರಿಸಿಕೊಳ್ಳಲಾಗಿತ್ತು. ಬೋನ ಫ಼ೆಡ್ಡಿ, ಜಾನಿ ಮೊದಲಾದವರನ್ನು ಕರೆದುಕೊಂಡು ಅಲ್ತಾರನ್ನು ಸಂದರವಾಗಿ ಸಜ್ಜುಗೊಳಿಸಿದ. ಒಳಗೆ ಇರಿಸಿದ ಏಳೆಂಟು ಬತ್ತಿ ಸ್ಟ್ಯಾಂಡುಗಳನ್ನು ತಂದು ಮೇಣದ ಬತ್ತಿ ಹೊತ್ತಿಸಿದ. ಹೂವಿನ ಕರಂಡಕಗಳನ್ನು ಇರಿಸಿದ. ದಿವ್ಯ ಪ್ರಸಾದದ ಪೆಟ್ಟಿಗೆಗೆ ಹೊಸ ಮುಸುಕು ಹಾಕಿದ. ಪೂಜಾ ಸಂದರ್ಭದಲ್ಲಿ ಹಾಡಲೆಂದು ಕೆಲ ಹುಡುಗಿಯರಿಗೂ ಜೊತೆಗೆ ಕರೆಸಿಕೊಂಡ.
ಎಂದಿನಂತೆ ಪಾದರಿ ಗೋನಸ್ವಾಲಿಸ್ ಭಕ್ತಿಯಿಂದ ಪೂಜೆಯನ್ನು ಅರ್ಪಿಸಿದರು.
ಊರಿನ ಎಲ್ಲ ಕ್ರೀಸ್ತುವರ ಮುಖಗಳೂ ಅಲ್ಲಿ ಕಂಡು ಬಂದವು.
ಭಾನುವಾರಗಳಂದು ಬಾಚಿ ಹೆಗಲಿಗೇರಿಸಿ ಕೆಲಸಕ್ಕೆ ಹೊರಟು ಗೋನಸ್ವಾಲಿಸರಿಂದ ನಾಗರ ಬೆತ್ತದ ಏಟು ತಿಂದು ಪೂಜೆಗೆ ಬಂದವರು. ಮನೆಬಾಗಿಲಲ್ಲಿಯೇ ಪಾದರಿಯ ಕೈಗೆ ಸಿಕ್ಕಿ ಬಿದ್ದವರು.
“ಏನು ಇಗರ್ಜಿಗೆ ಬರೋದಿಲ್ವ?” ಎಂದು ಕೇಳಿಸಿಕೊಂಡು ಬಂದವರು.
ಪಾದರಿಗಳ ಪಾಮಿಸ್ತ್ರಿಗೆ, ಬಾಯಿಗೆ, ಕಣ್ಣಿನ ನದರಿಗೆ, ಪಾದರಿಗಳ ಶೆರಮಾಂವಂಗೆ ಹೆದರಿಕೊಂಡವರು.
“ನೀವು ಪೂಜೆಗೆ ಬರಲಿಲ್ಲ ಅಂದರೆ ನೀವು ಕ್ರೀಸ್ತುವರಲ್ಲ. ನಿಮಗೆ ಮದುವೆ ಇಲ್ಲ. ನಿಮ್ಮ ಮಕ್ಕಳಿಗೆ ಜ್ಞಾನ ಸ್ನಾನವಿಲ್ಲ. ಅಷ್ಟೇ ಅಲ್ಲ ಸತ್ತರೆ ನಿಮಗೆ ಸಿಮಿತ್ರಿಯಲ್ಲಿ ಜಾಗವಿಲ್ಲ…” ಎಂಬ ಪಾದರಿಗಳ ಮಾತನ್ನು ಕೇಳಿದವರು.
” ಇಗರ್ಜಿ ಮಾತೆಯ ಕಟ್ಟಲೆ ಮುರಿಯುವುದು ಪಾಪ…ನಿಮಗೆ ರೌರವ ನರಕ ಕಾದಿದೆ.” ಎಂಬ ಮಾತಿಗೆ ಭೀತಿಗೊಂಡವರು.
ಎಲ್ಲ ಬಂದರು.
ಇಗರ್ಜಿ ತುಂಬಿ ಹೋಯಿತು. ಮೂರೂ ಬಾಗಿಲಲ್ಲಿ ಒಳಹೋಗಲು ಜಾಗವಿಲ್ಲದ ಹಾಗೆ ಜನ ನಿಂತರು.
ಪೂಜೆಯ ನಡುವೆ ಪಾದರಿ ಗೋನಸ್ವಾಲಿಸ್ ಹೆಚ್ಚು ಮಾತನಾಡಲಿಲ್ಲ.
“ಇಲ್ಲಿ ನಾನು ಏನಾದರೂ ಮಾಡಿದ್ದರೆ ಅದಕ್ಕೆ ದೇವರ ಪ್ರೇರಣೆ ಕಾರಣ..ದೈವಭಕ್ತಿ ಕಾರಣ..ಕ್ರಿಸ್ತ ಪ್ರಭುವಿನ ಅಪೇಕ್ಷೆಯನ್ನು ನೆರವೇರಿಸಲು ನಾನು ಯತ್ನಿಸಿದೆ..ಅವನ ದಯೆಯಿಂದ ಕೆಲಸ ಸಾಧ್ಯವಾಯಿತು. ಮುಂದೆ ಕೂಡ ನೀವು ಸೈತಾನನ ಶೋಧನೆಗೆ ಒಳಪಡದೆ..ದಿವ್ಯ ಜೀವನವನ್ನು ಮುಂದುವರೆಸಿ..” ಎಂದರು.
ಪೂಜೆಯ ನಂತರ ಪಾದರಿ ಮಸ್ಕರಾನಿಸ್ ಜನರ ಪರವಾಗಿ ಅವರಿಗೆ ಬೆಳ್ಳಿಯ ಪೂಜಾ ಪಾತ್ರೆಯನ್ನು ನೀಡಿದನು. ಈ ಪಾತ್ರೆಯನ್ನು ಸ್ವೀಕರಿಸುವಾಗ ಮಾತ್ರ ಗೋನಸ್ವಾಲಿಸರ ಕಣ್ಣುಗಳು ತುಂಬಿ ಬಂದವು.
*
*
*
ಅಂದು ಶಿವಸಾಗರದ ಬಸ್ ನಿಲ್ದಾಣದಲ್ಲಿ ಜನ ಒಂದು ಅಪರೂಪದ ದೃಶ್ಯವನ್ನು ಕಂಡರು. ಊರಿನ ಕ್ರೈಸ್ತರೆಲ್ಲ ಅಲ್ಲಿ ನೆರೆದಿದ್ದರು. ಇಗರ್ಜಿಗೆ ಬಂದ ಜನ ನೇರವಾಗಿ ಅಲ್ಲಿಗೆ ನಡೆದು ಬಂದಿದ್ದರು.
ಈ ಜನರ ನಡುವೆ ಇನ್ನೂ ಕೆಲವರನ್ನು ಪಾದರಿ ಗೋನಸ್ವಾಲಿಸ್ ಕಂಡರು.
ಪುರಸಭೆಯ ಅಧಿಕಾರಿ ನೌಕರರು, ಊರಿನ ವಕೀಲರು, ವೈದ್ಯರು, ಪೇಟೆ ಬೀದಿಯ ವ್ಯಾಪಾರಿಗಳು, ಕೂಲಿಕಾರರು, ಇವರನ್ನೆಲ್ಲ ಅಲ್ಲಿ ಕಂಡು ಗೋನಸ್ವಾಲಿಸರು ಅಚ್ಚರಿಪಟ್ಟರು. ತಾನು ಈ ಜನರಿಗಾಗಿ ಏನೂ ಮಾಡಲಿಲ್ಲವೆ ಎಂದು ಬೆರಗಾದರು.
ಸಾಲು ಸಾಲಾಗಿ ನಿಂತ ಅವರು ಹಾಕಿದ ಹಾರಗಳಿಂದ ಇವರ ಕುತ್ತಿಗೆ ತುಂಬಿ ಹೋಯಿತು. ಪಾದರಿ ಅವರೆಲ್ಲರ ಕೈಗಳನ್ನು ಪ್ರೀತಿಯಿಂದ ಕುಲಕಿದರು.
ಅವರ ನಡುವೆ ಗಾಡಿ ಮಂಜಣ್ಣನ ತಾಯಿ ರುದ್ರಮ್ಮನನ್ನೂ ಅವರು ಕಂಡರು.
“ಬುದ್ದಿ..” ಎಂದು ಅವಳು ಏನನ್ನೋ ಹೇಳಲು ಹೋದಳು.
ಎಲ್ಲಿಂದಲೋ ಬಂದ ಈ ಪಾದರಿ ಇಲ್ಲಿ ಮಾಡಿದ ಕೆಲಸಗಳನ್ನು ಅವಳು ನೋಡಿದವಳಾಗಿದ್ದಳು. ಇಗರ್ಜಿಯ ದೊಡ್ಡ ಗಂಟೆ ಇಡೀ ಊರಿಗೇನೆ ಕೇಳಿಸುತ್ತಿತ್ತು. ಇಗರ್ಜಿಯಲ್ಲಿ ಹಬ್ಬವೆಂದರೆ ಊರವರೆಲ್ಲ ಮೇಣದ ಬತ್ತಿ ನೀಡಲು ಮುಂದಾಗುತ್ತಿದ್ದರು. ಪ್ಲೇಗು ಮಾರಿ ಬಂದರೆ ಕಿರಸ್ತಾನದ ದೇವರ ಮೆರವಣಿಗೆ ಊರ ಬೀದಿಗಳಲ್ಲಿ ನಡೆದು ಇಗರ್ಜಿಗೆ ಬರುತ್ತಿತ್ತು. ಹೀಗೆ ತುಂಬಾ ಕೆಲಸಗಳು ಆಗಿದ್ದವು. ಇವುಗಳಿಗೆಲ್ಲ ಕಾರಣ ಇವರು.
” ರುದ್ರಮ್ಮ..”
ಪಾದರಿ ಗೋನಸ್ವಾಲಿಸ ರುದ್ರಮ್ಮನ ಕೈ ಹಿಡಿದುಕೊಂಡರು. ಅಂದು ಕೊಪೆಲಿನ ಎದುರು ಅವಳು ಆಡಿದ ಮಾತನ್ನು ಅವರು ಮರೆತಿರಲಿಲ್ಲ. ಎಷ್ಟೋ ಬಾರಿ ತನಗೆ ಈ ಮಾತು ಅರ್ಥವಾಗುವುದಿಲ್ಲವೇನೋ ಅನಿಸಿತ್ತು. ಈ ಮಾತನ್ನು ಒಪ್ಪಿಕೊಳ್ಳಲು ಕೂಡ ಅವರು ಸಿದ್ದವಿರಲಿಲ್ಲ. ಆದರೂ ಸಾಮಾನ್ಯ ಹೆಂಗಸಾದ ರುದ್ರಮ್ಮನ ವ್ಯಕ್ತಿತ್ವ ದೊಡ್ಡದು ಅನ್ನುವುದರಲ್ಲಿ ಅವರಿಗೆ ಅನುಮಾನವಿರಲಿಲ್ಲ.
“ರುದ್ರಮ್ಮ….ಹೋಗಿ ಬರತೀನಿ” ಎಂದರವರು.
“..ಹೋಗ ಬನ್ನಿ ಬುದ್ದಿ..ನಿಮಗೆ ಒಳ್ಳೇದಾಗಲಿ” ಏಂದಳವಳು.
ನೆರಿಗೆ ಗಟ್ಟಿದ ಅವಳ ಕೆನ್ನೆಗಳ ಮೇಲಿನಿಂದ ನೀರ ಹನಿಗಳು ಉದುರಿದವು. ಮುಂದಿನ ಕ್ಷಣದಲ್ಲಿ ತಮ್ಮ ಹೃದಯವೂ ಕರಗಿ ನೀರಾಗಿ ಹೊರ ಉಕ್ಕುತ್ತದೆ ಅನಿಸಿ ಅವರು ಅಲ್ಲಿಂದ ಕದಲಿದರು.
ಶಿವಸಾಗರಕ್ಕೆ ತಾನು ಓರ್ವ ಅಪರಿಚಿತನಾಗಿ ಬಂದಿದ್ದೆ. ಅಂದು ಯಾರೂ ತನ್ನನ್ನು ಗುರುತಿಸಿರಲಿಲ್ಲ. ಆದರೆ ಇಂದು?
ಸುತ್ತ ನಿಂತ ಜನರನ್ನು ನೋಡಿ ಅವರು ಮಾತು ಮರೆತರು.
ತನ್ನನ್ನು ಬೀಳ್ಕೊಡಲೆಂದು ಬಂದು ನಿಂತ ಇತರೇ ಜನರನ್ನು ಮಾತನಾಡಿಸಲೆಂದು ಅವರ ಬಳಿ ಹೋದರು. ಅವರೆಲ್ಲರನ್ನೂ ಕಂಡು ಮಾತನಾಡಿಸಿ ಬಂದರು. ಸಿಮೋನನ ಎತ್ತಿನ ಗಾಡಿಯಲ್ಲಿಯ ಸಾಮಾನನ್ನು ಶಿರಸಿಯ ಬಸ್ಸಿಗೆ ಏರಿಸಲಾಯಿತು. ಬಸ್ಸಿಗೆ ಪಾದರಿ ಗೋನಸ್ವಾಲಿಸರ ಹಿಂದೆಯೆ ಸಿಮೋನ, ಬೋನ, ಪಾಸ್ಕೋಲ, ಬಾಲ್ತಿದಾರ ಮೊದಲಾದವರೂ ಹತ್ತಿ ಕುಳಿತರು.
“ಬೇಡ ನೀವೆಲ್ಲ ಯಾಕೆ?” ಎಂದು ಪಾದರಿ ಹೇಳಿದರೂ ಆ ಜನ ಕೇಳಲಿಲ್ಲ.
“ನಿಮಗೆ ಶಿರಸಿಗೆ ಮುಟ್ಟಿಸಿಯೇ ನಾವು ತಿರುಗಿ ಬರತೇವೆ…” ಎಂದರವರು.
ಕೆಳಗೆ ನಿಂತ ಗಂಡಸರ ಮುಖಗಳಲ್ಲಿ ಬೆಳಕು ಇರಲಿಲ್ಲ. ಹೆಂಗಸರು ಅಳುತ್ತಿದ್ದರು. ಯುವಕ ಯುವತಿಯರು ಬೆಪ್ಪಾಗಿ ನಿಂತಿದ್ದರು.
ಬಸ್ಸಿನ ಕಂಡೆಕ್ಟರ್ ಹಿಂಬದಿಯಲ್ಲಿ ಡಬ್ಬಿಗೆ ಹೊಸದಾಗಿ ಇದ್ದಿಲು ತುಂಬಿ ಗಾಳಿಯನ್ನು ಪಂಪ ಮಾಡಿದ. ಚಾಲಕನ ಪಕ್ಕದಲ್ಲಿ ಯಾವಾಗಲೂ “ಕಾದಿರಿಸಲಾಗಿದೆ” ಎಂಬ ಬರಹದೊಡನೆ ಖಾಲಿಯಾಗಿಯೇ ಇರುತ್ತಿದ್ದ. ಸೀಟು ಪಾದರಿಗಳಿಗೆ ಬಿಟ್ಟು ಕೊಡಲಾಯಿತು. ಇದರ ಹಿಂದಿನ ಉದ್ದ ಸಾಲಿನಲ್ಲಿ ಸಿಮೋನ ಮತ್ತಿತರರು ಕುಳಿತರು.
ಏಜಂಟು ಎಲ್ಲರಿಗೂ ಟಿಕೇಟು ಕೊಟ್ಟು ತಲೆ ಎಣಿಸಿ ರೈಟ್ ಎಂದಾಗ ಏಳು ಮುಕ್ಕಾಲು ಆಗಿತ್ತು.
ನಿಧಾನವಾಗಿ ಬಸ್ಸು ಮುಂದಿನ ಚೌಕದಲ್ಲಿ ಕಣ್ಮರೆಯಾಗಿದ್ದೇ ನಿಲ್ದಾಣದಲ್ಲಿ ತುಂಬಿಕೊಂಡ ಜನ ಚದುರತೊಡಗಿದರು. ಸೂರ್ಯ ಮೇಲೇರಿದ್ದರೂ ಮಂಜು ದಟ್ಟವಾಗಿ ಊರನ್ನು ತಬ್ಬಿಕೊಂಡಿತ್ತು.
*
*
*
ಎಲ್ಲವನ್ನೂ ಕಳೆದುಕೊಂಡವನಂತೆ ಭಾರವಾದ ಮನಸ್ಸಿನಿಂದ ಶಿವಸಾಗರಕ್ಕೆ ಬಂದ ಬೋನ ಮಾಡಿದ ಕೆಲಸವೆಂದರೆ ಅಡಿಗೆ ಮನೆಯಲ್ಲಿದ್ದ ತನ್ನ ವಸ್ತುಗಳನ್ನು ತನ್ನ ಮಾವನ ಮನೆಗೆ ಸಾಗಿಸಿದ್ದು.
ಹೆಂಡತಿ ರೆಮೇಂದಿ ಅಲ್ಲಿದ್ದಳು. ಮಗನಿಗೆ ಕೆಲ ತಿಂಗಳುಗಳಾಗಿದ್ದವು.
ಬಾಲ್ತಿದಾರ-
“ಬೇರೆ ಮನೆಗಿನೆ ಮಾಡೋದು ಯಾಕೆ? ನನ್ನ ಅಂಗಡೀನ ನೀವೇ ನೋಡಿಕೊಳ್ಳಿ..ನಮ್ಮ ಮನೇನೆ ನಿಮ್ದು ಅಂತ ತಿಳಿಕೊಳ್ಳಿ.”
ಎಂದು ಬೇರೆ ಹೇಳಿದ್ದ.
ಹೋಗಿ ಹೋಗಿ ಮಾವನ ಮನೆ ಸೇರಿಕೊಳ್ಳಬೇಕೆ ಎಂಬ ಪ್ರಶ್ನೆ ಬೋನನನ್ನು ಕಾಡದಿರಲಿಲ್ಲ.
ಇನ್ನು ಜೀವನಕ್ಕೆ ಬೇರೊಂದು ದಾರಿ ಕಂಡುಕೊಂಡಾಗಿದೆ. ಬಾಲ್ತಿದಾರನ ಅಂಗಡಿಯನ್ನೇ ತಾನೀಗ ನೋಡಿಕೊಳ್ಳುತ್ತಿದ್ದೇನೆ. ಇನ್ನು ಅವರ ಮನೆಯಲ್ಲಿರುವುದರಲ್ಲಿ ಏನು ತಪ್ಪು ಅಂದುಕೊಂಡ ಬೋನ ಅಡಿಗೆ ಮನೆಯನ್ನು ಫ಼ರಾಸ್ಕನಿಗೆ ಬಿಟ್ಟು ಕೊಟ್ಟ. ಪಾದರಿಯ ಹಿಂದೆಯೇ ಬಂದ ಫ಼ರಾಸ್ಕ ತನ್ನ ಹೆಂಡತಿ ಕೂಡ ಬರಲಿದ್ದಾಳೆ ಎಂದು ಹೇಳಿದ್ದರಿಂದ ಬೋನನಿಗೆ ಬೇರೆ ದಾರಿ ಉಳಿದಿರಲಿಲ್ಲ.
ಮಧ್ಯಾಂತರ……….
” ಅವತ್ತು ಹೀಗೆ ನಾನು ಶಿವಸಾಗರಾನ ಬಿಟ್ಟೆ” ಎಂದರು ಪಾದರಿ ಗೋನಸ್ವಾಲಿಸ್.
ಕತೆ ಕೇಳುತ್ತ ಕುಳಿತ ನಾನು ಅವರು ಮಾಡಿದ ಕೆಲಸ ಊಹಿಸಿಕೊಂಡು ಅಚ್ಚರಿಪಟ್ಟೆ. ಯಾವುದೋ ದೇಶದಲ್ಲಿ ಹುಟ್ಟಿ ಇನ್ನೆಲ್ಲಿಗೋ ಬಂದು ಇಲ್ಲಿಯ ಜನರಿಗಾಗಿ ಇಷ್ಟೆಲ್ಲ ಮಾಡಿದ ಅವರ ಬಗ್ಗೆ ನನ್ನಲ್ಲಿ ಅಭಿಮಾನ ಹುಟ್ಟಿತು ಕೂಡ.
ಪಾದರಿ ಗೋನಸ್ವಾಲಿಸ್ ನಂತರ ಶಿರಸಿಗೆ ಬಂದರು. ಅಲ್ಲಿ ಐದು ವರ್ಷ. ಅಲ್ಲಿಂದ ಸಿಂಗನಮನೆ, ಫ಼ತ್ತೇ ಪೇಟೆ, ಮಡಿಕೇರಿ, ಸುಳ್ಯ, ಈ ಊರುಗಳಲ್ಲಿ ಕೂಡ ಅಷ್ಟೇ ನಿಷ್ಠೆ, ಬಿಗಿ. ನಾಗರ ಬೆತ್ತ ಪಾಮಿಸ್ತ್ರಿಯನ್ನು ಅವರು ದೂರ ಇಡಲಿಲ್ಲ.
ನಡುವೆ ಏನೇನೋ ಬದಲಾವಣೆಗಳಾದವು.
ಗೋವೆಯ ಪ್ರಾವಿನ್ಶಿಯಲ್ಲರ ಆಡಳಿತದಿಂದ ಈ ಪ್ರದೇಶ ಪ್ರತ್ಯೇಕವಾಯಿತು. ಪೋರ್ಚುಗೀಸರು ಗೋವೆ ಬಿಟ್ಟು ಹೋದರು. ಅವರು ಗೋವೆ ಬಿಡುವ ಮುನ್ನ ಇಲ್ಲಿದ್ದ ವಿದೇಶೀ ಪಾದರಿಗಳಿಗೆ ಅವರವರ ತಾಯಿನಾಡಿಗೆ ಹೋಗಲು ಒಂದೊಂದು ಅವಕಾಶ ಮಾಡಿಕೊಟ್ಟರು. ಪಾದರಿ ಗೋನಸ್ವಾಲಿಸರಿಗೂ ಪ್ರಾವಿನ್ಶಿಯಲ್ ಅವರಿಂದ ಒಂದು ಪತ್ರ ಬಂದಿತು.
“ನೀವು ಗೋವೆಗೆ ಬರಬಹುದು. ಬೇಕೆಂದರೆ ಪೋರ್ಚುಗಲ್ಲಿಗೂ ತಿರುಗಿ ಹೋಗಬಹುದು..ಏನು ಮಾಡುತ್ತೀರಿ ತಿಳಿಸಿ.” ಗೋನಸ್ವಾಲಿಸ್ ವಿಚಾರ ಮಾಡಿದರು.
ಪೋರ್ಚುಗಲ್ ಈಗ ತನಗೆ ಅಪರಿಚಿತ. ಹತ್ತಿರದ ಬಂಧುಗಳು ಯಾರೂ ಇಲ್ಲ. ದೂರದವರು ಎಷ್ಟೆಂದರೂ ದೂರದವರೆ. ಬೇಡ ಅನಿಸಿತು ಅವರಿಗೆ. ಗೋವೆ ಕೂಡ ದೂರವಾಗಿತ್ತು. ಗೋವೆಯನ್ನು ಬಿಟ್ಟು ಇಂದು ಮೂವತ್ತು ನಾಲವತ್ತು ವರ್ಷಗಳಾಗಿದ್ದವು. ಗೋವೆಯಲ್ಲಿ ಕ್ರೈಸ್ತ ಧರ್ಮ ಭದ್ರವಾಗಿ ತಳವೂರಿದೆ. ಆದರೆ ಇಲ್ಲಿ ಅದು ತಳ ಊರಬೇಕಾಗಿದೆ. ಶಿವಸಾಗರ, ಶಿರಸಿ, ಸಿಂಗನಮನೆಗಳಲ್ಲಿ ತಾನು ಮನಸ್ಸಿಗೆ ತೃಪ್ತಿಕರವಾಗಿ ಕೆಲಸ ಮಾಡಿದ್ದೇನೆ. ಮುಂದೂ ಇಲ್ಲಿಯೇ ಇರೋಣ. ಅವರು ಗೋವೆಗೂ ತಾನು ಬರುವುದಿಲ್ಲ ಎಂದು ತಿಳಿಸಿದರು. ಇಲ್ಲಿಯ ಡಯಾಸಿಸನಲ್ಲಿ ತಮ್ಮನ್ನು ಸೇರಿಸಿಕೊಳ್ಳುವಂತೆ ಇಲ್ಲಿಯ ಬಿಶಪ್ ಗಳಿಗೆ ಬರೆದರು. ಅವರ ಕೋರಿಕೆಗೆ ಮನ್ನಣೆ ಸಿಕ್ಕಿತು. ಗೋನಸ್ವಾಲಿಸ್ ಇಲ್ಲಿಯವರೇ ಆದರು.
ಕೊನೆಯದಾಗಿ ಅವರು ಇಗರ್ಜಿಯ ಪಾದರಿಯಾದುದು ಸುಳ್ಯದಲ್ಲಿ. ಪೂಜೆ, ಪಾಪ ನಿವೇದನೆ, ದಿವ್ಯ ಪ್ರಸಾದ ನೀಡುವುದು ಎಂದೆಲ್ಲ ಕೆಲಸ ಮಾಡಲಾಗುವುದಿಲ್ಲ ಎಂದಾಗ ಅವರು ಸುಳ್ಯದಿಂದ ನೇರವಾಗಿ ವೃದ್ದಾಶ್ರಮ ಸೇರಿದರು. ಅಲ್ಲೂ ಪೂಜೆ, ಪ್ರಾರ್ಥನೆ ಮುಂದುವರೆದಿತ್ತು. ಆದರೆ ಜನ ಬರುತ್ತಿರಲಿಲ್ಲ. ಊರಿನ ಸಮಸ್ಯೆ, ಕುಟುಂಬದ ಸಮಸ್ಯೆ ತಮ್ಮ ಬಳಿ ತರುತ್ತಿರಲಿಲ್ಲ. ಪೂಜೆಗೆ ಬನ್ನಿ ಎಂದು ಜನರಿಗೆ ಹೇಳುವುದಿರಲಿಲ್ಲ. ಒಂದು ಬಗೆಯ ವಿಶ್ರಾಂತ ನಿವೃತ್ತ ಜೀವನ. ತಮ್ಮ ಬಗ್ಗೆಯೇ ಚಿಂತನೆ ಮಾಡುವುದು. ವಿಶೇಷವೆಂದರೆ ಪ್ರಾರ್ಥನೆ ಮಾಡುವಾಗ ಜನರಿಗಾಗಿ, ಬಿಶಪ್, ಪೊಪ್ ಗುರುಗಳಿಗಾಗಿ ಬೇಡಿಕೊಳ್ಳುವುದು.
ಹಿಂದೆ ಕೆಲಸ ಮಾಡಿದ ಊರುಗಳಿಂದ ಕೆಲವರು ಯಾವಾಗಲೋ ಒಂದು ಸಾರಿ ಬರುತ್ತಿದ್ದರು. ಆ ಊರಿನ ತುಂಡು ತುಂಡು ಸುದ್ದಿಗಳು ತಿಳಿದು ಬರುತ್ತಿದ್ದವು.
“ಅವರು ಹೇಗಿದ್ದಾರೆ? ಇವರು ಹೇಗಿದ್ದಾರೆ?” ಎಂದು ಕೇಳುತ್ತಿದ್ದರು.
ಉತ್ತರ ಕಿವಿಗೆ ಬಿದ್ದಾಗ ತಪ್ಪಿ ಹೋದ ಕೊಂಡಿ ಸೇರಿಕೊಂಡಂತಾಗಿ ಮನಸ್ಸಿಗೆ ನೆಮ್ಮದಿಯಾಗುತ್ತಿತ್ತು.
“ದೇವರು ಎಲ್ಲರನ್ನ ಸುಖವಾಗಿಡಲಿ” ಎಂದು ಹಾರೈಸುತ್ತಿದ್ದರು. ಈ ಹಾರೈಕೆಯೊಂದೇ ಈಗ ಇರುವುದು. ಜನರಿಗೆ ಒಳ್ಳೆಯದಾಗಲಿ ಎಂದೇ ಅಲ್ಲವೆ ತಾನು ಈವರೆಗೆ ದುಡಿದದ್ದು? ಎಲ್ಲ ಜನ ಕ್ರಿಸ್ತ ಪ್ರಭು ತೋರಿದ ಮಾರ್ಗದಲ್ಲಿ ನಡೆಯಲೆಂದು ಬಯಸಿದೆ. ಜನರನ್ನು ತಾನು ದಂಡಿಸಿದ್ದು ಕೂಡ ಈ ಉದ್ದೇಶದಿಂದಲೇ. ಈ ಉದ್ದೇಶ ಯಾವ ಪ್ರಮಾಣದಲ್ಲಿ ಈಡೇರಿದೆಯೋ ನೋಡಬೇಕು.
ಪಾದರಿ ಗೋನಸ್ವಾಲಿಸ್ ಮಾತು ನಿಲ್ಲಿಸಿ ಹೊರಗೆ ದೃಷ್ಟಿ ಬೀರಿದರು.
ಶಿವಸಾಗರ ದೂರದಲ್ಲಿ ಕಂಡಿತು. ತಾರಸಿ ಕಟ್ಟಡಗಳು, ನೀರಿನ ಟ್ಯಾಂಕುಗಳು. ಆಂಟೆನಾಗಳು ಡಿಶ್ ಗಳು ಕಂಡವು.
“ಓ! ಊರು ದೊಡ್ಡದಾಗಿದೆ..ಬದಲಾಗಿದೆ” ಎಂದರು ಗೋನಸ್ವಾಲಿಸ್.
ತಟ್ಟನೆ ಅವರು ಮುಂದೆ ಚಿಮ್ಮಿದರು.
“ನೋಡು ಸನ್ ಅಲ್ಲಿ ನೋಡು” ಅವರು ತೋರು ಬೆರಳನ್ನು ಕಾರಿನಿಂದ ಹೊರಗೆ ತೋರಿ ಕೂಗಿಕೊಂಡರು.
“.ಇಗರ್ಜಿ ಗೋಪುರ ಕಾಣುತ್ತೆ ನೋಡು” ತಟ್ಟನೆ ಅವರು ಹಣೆ, ಎದೆ, ಭುಜಗಳಿಗೆ ಬಲಗೈ ಬೆರಳುಗಳನ್ನು ಮುಟ್ಟಿಸಿ ಶಿಲುಬೆ ವಂದನೆ ಮಾಡಿದರು.
ಹೌದು ಗೋಪುರದ ಮೇಲಿನ ಶಿಲುಬೆ ಸ್ಪಷ್ಟವಾಗಿ ಕಾಣುತ್ತಿತ್ತು. ಸಂಜೆ ಸೂರ್ಯನ ಕೆಂಪು ಬೆಳಕು ಗೋಪುರದ ಮೇಲೆ ಮೈ ಚೆಲ್ಲಿತ್ತು.
“ದೇವರು ದೊಡ್ಡವನು” ಎಂದು ತೊದಲಿದರು ಗೋನಸ್ವಾಲಿಸ್.
“ಹೀಗೆ ಊರ ನಡುವೆ ನಮ್ಮ ಇಗರ್ಜಿ ಎಲ್ಲ ಕಟ್ಟಡಗಳಿಗೂ ಮಿಗಿಲಾಗಿ ಎತ್ತರವಾಗಿ ನಿಲ್ಲಬೇಕು ಅನ್ನುವ ಆಸೆ ನನಗಿತ್ತು…ನಾನು ದೊಡ್ಡ ಪ್ರಮಾಣದ ಇಗರ್ಜಿ ಕಟ್ಟಲಿಕ್ಕೂ ಅದೇ ಕಾರಣ..ಇಗರ್ಜಿ! ಈವತ್ತು ಹಾಗೇ ನಿಂತಿದೆ..ದೇವರ ಕರುಣೆ ಅಪಾರವಾದದ್ದು..” ಎಂದರವರು ಕುತ್ತಿಗೆಯಲ್ಲಿನ ಶಿಲುಬೆಯನ್ನು ತುಟಿಗೊತ್ತಿಕೊಂಡು.
ಕಾರು ಮುಂದೆ ಸಾಗಿತು.
“ಊರು ಬೆಳೆದಿದೆ..ರಸ್ತೆಗಳನ್ನು ಗುರುತು ಹಿಡಿಯಲಿಕ್ಕೆ ಆಗೋಲ್ಲ..” ಎಂದರು ಗೋನಸ್ವಾಲಿಸ್.
ಊರ ನಡುವಣ ಹೆದ್ದಾರಿಯೊಂದು ಇಗರ್ಜಿಯವರೆಗೂ ಹೋಗಿ ಅಲ್ಲಿಂದ ಮುಂದೆ ಹೊರಳಿತ್ತು. ಕಾರು ಇಗರ್ಜಿಯ ಕಡೆ ತಿರುಗಿತು. ನಾನು ನಡುವೆ ಅರಸೀಕೆರೆಯಿಂದ ಶಿವಸಾಗರದ ಪಾದರಿಗೆ ದೂರವಾಣಿ ಮಾಡಿ ತಿಳಿಸಿದ್ದೆ. ಕಾರು ನೋಡಿ ಅವರು ಓಡಿ ಬಂದರು. ಜೊತೆಗೆ ಊರಜನ. ಇಗರ್ಜಿಯ ಮುಂದೆ ಚಪ್ಪರ ಹಾಕುವ ಕಾರ್ಯದಲ್ಲಿ ತೊಡಗಿದ್ದವರೂ ಸರಿದು ನಿಂತರು.
ಕಾರಿನಿಂದ ಪಾದರಿ ಗೋನಸ್ವಾಲಿಸ್ ಇಳಿಯುತ್ತಿರಲು ಇಗರ್ಜಿಯ ದೊಡ್ಡ ಗಂಟೆ ಢಣಾ ಢಣ ಢಣಾ ಢಣ ಎಂದು ಸದ್ದು ಮಾಡಿತು. ಜನರ ನಡುವಿನಿಂದ ಎಪ್ಪತ್ತರ ಗಡಿ ದಾಟಿರುವ ಓರ್ವ ಮುಂದೆ ಬಂದು
“ಪದ್ರಾಬ..” ಎಂದು ಗೋನಸ್ವಾಲಿಸರ ಕೈ ಹಿಡಿದುಕೊಂಡ.
“ಬೋನಾ..ಬೋನಾ..” ಎಂದು ಗೋನಸ್ವಾಲಿಸರು ಅವನನ್ನು ಅಪ್ಪಿಕೊಂಡರು. ಅವರ ಕಣ್ಣುಗಳು ಮಂಜಾದವು.
ಬೆತ್ತ ಊರಿಕೊಂಡೇ ಗೋನಸ್ವಾಲಿಸ ಇಗರ್ಜಿಯಲ್ಲಿ ತಿರುಗಾಡಿದರು. ಮೂಲೆ ಮೂಲೆಗೆ ಹೋಗಿ ಅಲ್ಲಿರಿಸಿದ ಪ್ರತಿಮೆಗಳನ್ನು ಕಂಡರು. ಮೇಲೆ ಪಂಕಗಳು ತಿರುಗುತಿದ್ದವು. ಗೋಡೆಗಳು ಬಣ್ಣದಿಂದ ಮಿಂಚುತ್ತಿದ್ದವು. ಸಾಲು ಸಾಲಾಗಿ ಆಸನಗಳನ್ನು ಇರಿಸಿತ್ತು. ಬರಲಿರುವ ಹಬ್ಬಕ್ಕಾಗಿ ಇಗರ್ಜಿ ಅಲಂಕೃತಗೊಂಡಿತ್ತು. ಹೆಬ್ಬಾಗಿಲಿನಿಂದ ಸಂತ ಜೋಸೇಫ಼ರ ಮಂಟಪದ ವರೆಗೂ ಬಣ್ಣದ ಬಾವುಟಗಳು ತೂಗು ಬಿದ್ದಿದ್ದವು. ಪಾದರಿ ಗೋನಸ್ವಾಲಿಸ ಮಂಟಪದವರೆಗೂ ಹೋಗಿ ದೇವರನ್ನು ಸ್ತುತಿಸಿ ಬಂದರು. ಬೋನ ಅವರ ಜೊತೆಗೇನೆ ಇದ್ದ.
ಬಂಗಲೆಯಲ್ಲಿ ರಾತ್ರಿಯ ಊಟವಾಯಿತು.
ಬಂಗಲೆ ಮುಂದಿನ ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ಪಾದರಿ ಕುಳಿತರು.
“ಕುಳಿತುಕೋ ಸನ್” ಎಂದು ನನಗೂ ಹೇಳಿದರು.
ನಾನೂ ಒಂದು ಕುರ್ಚಿ ತಂದುಕೊಂಡು ಕುಳಿತೆ.
“ಬೋನಾ ಬಾ” ಎಂದು ದೂರ ನಿಂತ ಬೋನನನ್ನ ಕರೆದರು. ಆತ ಬಂದು ಅಷ್ಟು ದೂರದಲ್ಲಿ ಕುಳಿತ.
“ನಾನು ಶಿವಸಾಗರ ಬಿಟ್ಟು ಇಪ್ಪತ್ತು ಇಪ್ಪತೈದು ವರ್ಷ ಆಗಿ ಹೋಯಿತು ಅಲ್ವೆ?” ಎಂದು ಕೇಳಿದರು.
“ಹೌದು ಪದ್ರಾಬ..ನೀವು ಹೋಗಬೇಕಾದರೇನೆ ಪಾದರಿ ಮಸ್ಕರಿನಾಸ್ ಬಂದಿದ್ದರು..” ಎಂದು ಬೋನ ಹಳೆಯದನ್ನು ನೆನಪು ಮಾಡಿಕೊಂಡ.
-೧-
ಭಾನುವಾರ ೮ ಗಂಟೆಗೆ ಪ್ರಾರಂಭವಾದ ಗಾಯನ ಪೂಜೆ ಒಂಬತ್ತೂವರೆಗೆ ಮುಗಿದು ಮನೆಗೆ ಹೊರಟ ಜನ ಸಂತ ಜೋಸೆಫ಼ರ ಮಂಟಪದೆದುರು ನಿಂತು ಪ್ರಾರ್ಥನೆ ಸಲ್ಲಿಸಿ, ಅವರಿವರ ಕ್ಷೇಮ ಸಮಾಚಾರ, ಉಟ್ಟ ಸೀರೆ, ಮಾಡಿಸಿದ ಆಭರಣ, ನಾಪತ್ತೆಯಾದ ಸಾಂತಾಮೋರಿ ಮಗಳು ನಾತೇಲ ಪತ್ತೆಯಾಗಿರುವುದು, ಸಾನಬಾವಿ ಪೆದ್ರು ಹೆಂಡತಿ ಸೊಗಸಾಗಿ ಎಲ್ಲರ ಹಾಗೆ ಕೊಂಕಣಿ ಮಾತನಾಡಲು ಕಲಿತಿರುವುದು, ಮಿರೋಣ್ ಬೋನನ ಹೆಂಡತಿಗೆ ಈಗೀಗ ತುಸು ಜಂಬ ಬಂದಿರುವುದು ಹೀಗೆ ನಾನಾ ವಿಷಯಗಳ ಬಗ್ಗೆ ಮಾತನಾಡುತ್ತ ಇಗರ್ಜಿ ಮುಂದೆ ನಿಂತಿರುವಾಗ ಹುಸೇನ ಸಾಬಿಯ ಜಟಕಾ ಗಾಡಿ ಬಂದು ಇಗರ್ಜಿಯ ಮುಂದೆ ನಿಂತು ಬಿಟ್ಟಿತು.
“ಯಾರು ಯಾರು” ಎಂದು ಜನ ನೋಡುತ್ತಿರಲು ಯುವತಿಯೇ ಅನ್ನಬಹುದಾದ ಹೆಂಗಸೋರ್ವಳು ಗಾಡಿಯಿಂದ ಇಳಿದು ಒಂದು ಸಣ್ಣ ಟ್ರಂಕು, ಚೀಲವನ್ನು ಇಳಿಸಿಕೊಂಡು ಗಾಡಿಯವನ ಹತ್ತಿರ ಚೌಕಾಶಿ ಮಾಡಿ ಅವನಿಗೆ ಹಣ ಕೊಟ್ಟು ಟ್ರಂಕನ್ನು ಗಂಟನ್ನು ಒಂದೊಂದು ಕೈಯಲ್ಲಿ ಹಿಡಿದು ಇಗರ್ಜಿ ಮುಂದಿನ ಪಾದರಿ ಮನೆಯತ್ತ ತಿರುಗುತ್ತಿರಲು ಅದೆಲ್ಲೋ ಇದ್ದ ಬಟ್ಲರ್ ಓಡಿ ಬಂದು ಈ ಎರಡನ್ನೂ ಅವಳ ಕೈಯಿಂದ ತೆಗೆದುಕೊಂಡಾಗ ಯಾರು ಯಾರು ಎಂದು ಪ್ರಶ್ನಾರ್ಥಕ ಚಿಹ್ನೆಗಳನ್ನು ಮುಖದ ಮೇಲೆ ಮೂಡಿಸಿಕೊಂಡ ಜನಕ್ಕೆ ಉತ್ತರ ಸಿಕ್ಕಿತು.
“ಬಟ್ಲರ್ ಹೆಂಡತಿ..” ಎಂದರು ಯಾರೋ.
ಇಗರ್ಜಿಗೆ ಬಂದ ಕ್ರೀಸ್ತುವರು ಎರಡು ಹೋಳಾಗಿ ಓಡೆದುಕೊಂಡರು. ಇಗರ್ಜಿಯ ಬಲಗಡೆಯಿದ್ದ ಮನೆಗಳಲ್ಲಿ ಇದ್ದವರೆಲ್ಲ ಆ ಕಡೆಗೆ, ಎಡಗಡೆ ಸಾಲಿನ ಮನೆಗಳವರು ಆ ಕಡೆ ಹೊರಳಿಕೊಂಡರೆ ಹಿಂಬದಿಯ ಮನೆಗಳವರಲ್ಲಿ ಕೆಲವರು ಆ ಗುಂಪನ್ನು ಕೆಲವರು ಈ ಗುಂಪನ್ನು ಸೇರಿಕೊಂಡರು. ಈ ಹಿಂಬದಿ ಸಲಿನವರು ಯಾವ ಕಡೆಯಿಂದ ಹೋದರೂ ಒಂದೇ ದಾರಿಯನ್ನು ಕ್ರಮಿಸಬೇಕಾಗುತ್ತಿತ್ತು.
ಕ್ರೀಸ್ತುವರ ಕೇರಿ ತೀರಾ ದೊಡ್ಡದೇನೂ ಆಗಿರಲಿಲ್ಲ. ಶಿವಸಾಗರದ ಎರಡು ಮೂರು ರಸ್ತೆಗಳಲ್ಲಿ ಕ್ರೀಸ್ತುವರ ಮನೆಗಳು ಹರಡಿಕೊಂಡಿದ್ದವು. ನಿತ್ಯ ಅವರನ್ನು ಇವರು ಇವರನ್ನು ಅವರು ನೋಡುವುದು ಇತ್ತು.
ಆದರೆ ಭಾನುವಾರಕ್ಕೆ ಬೇರೆಯೇ ಆದ ಒಂದು ಮಹತ್ವವಿತ್ತು. ಇಗರ್ಜಿಯಲ್ಲಿ ಎಲ್ಲ ಜನ ಒಟ್ಟಿಗೇನೆ ಸೇರುತ್ತಾರೆ. ಭೇಟಿಯಾಗುತ್ತಾರೆ. ಮಾತನಾಡಲು ಸಿಗುತ್ತಾರೆ ಎಂಬುದೇ ಮುಖ್ಯ ವಿಷಯವಾಗಿತ್ತು. ಭಾನುವಾರಗಳಂದು ಮಾತ್ರ ಇಗರ್ಜಿಯಲ್ಲಿ ಎರಡು ಪೂಜೆಗಳು. ನಿತ್ಯದ ಸಾಧಾರಣ ಪೂಜೆ ಬೆಳಿಗ್ಗೆ ಆರು ಗಂಟೆಗಾದರೆ ಭಾನುವಾರದ ಗಾಯನ ಪೂಜೆ ಎಂಟು ಗಂಟೆಗೆ. ಸಾಧಾರಣ ಪೂಜೆ ಅರ್ಧ ಗಂಟೆಯಲ್ಲಿ ಮುಗಿಸಿದರೆ ಗಾಯನ ಪೂಜೆಗೆ ಒಂದೂವರೆ ಗಂಟೆ.
ದಿವ್ಯ ಪ್ರಸಾದ ಸ್ವೀಕಾರಿಸುವವರು ಅದನ್ನು ತೆಗೆದುಕೊಳ್ಳುವ ತನಕ ಉಪವಾಸವಿರಬೇಕಾದ್ದು ಪದ್ದತಿ. ಗಾಯನ ಪೂಜೆಗೆ ಬಂದು ಪ್ರಸಾದ ಸ್ವೀಕರಿಸುವವರು ಗಂಜಿ ನೀರು ಕುಡಿದು ಉಪವಾಸ ಮುರಿಯುವುದು ಹತ್ತು ಗಂಟೆಗೆ. ಅಲ್ಲಿಯ ತನಕ ಉಪವಾಸ ಮಾಡಲಾರದ ಮುದುಕರು, ವಯಸ್ಸಾದವರು ಬೆಳಿಗ್ಗೆ ನಡೆಯುವ ಸಾಧಾರಣ ಪೂಜೆಗೆ ಬಂದು ಪ್ರಸಾದ ಸ್ವೀಕರಿಸಿ ಹೋಗುತ್ತಿದ್ದರು. ಉಪವಾಸ ಇರಬಲ್ಲ ಹೆಂಗಸರು, ಗಂಡಸರು , ಯುವಕ ಯುವತಿಯರು ಗಾಯನ ಪೂಜೆಗೆ ಬರುತ್ತಿದ್ದರು.
ಗಾಯನ ಪೂಜೆಗೆ ಬಂದ ಹಾಗಾಯಿತು. ಯಾರು ಬಂದಿದ್ದಾರೆ, ಯಾರು ಬಂದಿಲ್ಲ, ಯಾರಿಗೆ ಏನಾಯಿತು ಎಂದೆಲ್ಲ ವಿಷಯ ಸಂಗ್ರಹಿಸಿದ ಹಾಗೂ ಆಯಿತು, ಪೂಜೆ ಆಲಿಸಿದ ಪುಣ್ಯ ಕೂಡ ದೊರೆಯಿತು ಎಂಬುದು ಹಲವರ ಆಂಬೋಣವಾಗಿತ್ತು. ಹೀಗೆ ಇಗರ್ಜಿಗೆ ಬಂದವರಿಗೆ ಒಂದಲ್ಲಾ ಒಂದು ವಿಷಯವಂತೂ ಸಿಗುತ್ತಿತ್ತು. ತಮ್ಮ ಗುಂಪಿನಲ್ಲಿ ಇಲ್ಲದವರ ಬಗ್ಗೆ ಮಾತನಾಡುತ್ತ ಅವರು ಸಾಗುತ್ತಿದ್ದರು. ಎರಡು ಹೋಳಾಗಿ ಮನೆಯತ್ತ ಹೊರಟವರು ತಮ್ಮ ಜತೆ ಸೇರಿಕೊಳ್ಳದ ಮೂರನೆಯ ಗುಂಪಿನ ಬಗ್ಗೆಯೂ ಗಮನ ಹರಿಸಿದರು.
ಡಾಕ್ಟರ್ ರೇಗೋ ಇಗರ್ಜಿಯಿಂದ ಹೊರ ಬಂದು ಚಿರೋಟಿಗೆ ಬೆಂಕಿ ಮುಟ್ಟಿಸಿ ಕ್ವಾಯರ ಮಾಸ್ಟರ್ ವಲೇರಿಯನ ಹತ್ತಿರ ಮಾತನಾಡುತ್ತ ನಿಂತಿದ್ದರು. ರೇಗೋ ಹೆಂಡತಿ ಮ್ಯಾನೇಜರ ಡಯಾಸನ ಹೆಂಡತಿಯ ಹತ್ತಿರ ಮಾತಿಗೆ ತೊಡಗಿದ್ದಳು. ಡ್ರೈವರ್ ಚಾರ್ಲಿ ತನ್ನ ಹೆಂಡತಿ ಮಕ್ಕಳ ಜತೆ ಪಾದರಿ ಬಂಗಲೆ ಬಳಿ ನಿಂತಿದ್ದ. ವಿನ್ಸೆಂಟ ತನ್ನ ತಾಯಿ ತಂಗಿಯರ ಜತೆ ಸಂತ ಜೋಸೆಫ಼ರ ಮಂಟಪದೆದುರು ನಿಂತು ಪ್ರಾರ್ಥನೆಗೆ ತೊಡಗಿದ್ದ.
ಎಲ್ಲರೂ ಕೋಟು, ಪ್ಯಾಂಟು, ಟೈಗಳಲ್ಲಿ ಮಿರುಗುತ್ತಿದ್ದರು. ಕಾಲಿಗೆ ಹೊಳೆಯುವ ಕಪ್ಪು ಬೂಟುಗಳು. ಇವರ ಕಡೆಯಿಂದ ಬೀಸಿ ಬರುವ ಗಾಳಿಯಲ್ಲಿ ಏನೋ ಪರಿಮಳ. ಇವರ ಹೆಂಗಸರಂತೂ ಯುರೋಪಿಯನ ಹೆಂಗಸರ ಹಾಗೆ ತುಟಿ, ಕೆನ್ನೆಗಳಿಗೆ ಕೆಂಪು ಬಳಿದುಕೊಂಡು, ಹಿಮ್ಮಡಿ ಉದ್ದದ ಬೂಟು ತೊಟ್ಟು, ತಲೆಗೂದಲು ಕತ್ತರಿಸಿಕೊಂಡು ಕಿಲ ಕಿಲ ನಗುವುದು, ಬಳಕುವುದು ಎಷ್ಟೊಂದು ಚಂದ ಅಲ್ಲವೇ?
ಡಾಕ್ಟರ್ ರೇಗೋ, ಜಾನ ಡಯಾಸನ ಮಕ್ಕಳೆಲ್ಲ ಬೆಂಗಳೂರು, ಮಂಗಳೂರನಲ್ಲಿ ಓದುತ್ತಿವೆಯಂತೆ. ಇಲ್ಲಿ ಅಂತಹ ಶಾಲೆಗಳು ಇಲ್ಲದಿರುವುದರಿಂದ ಮಕ್ಕಳನ್ನು ಅಲ್ಲಿ ಬಿಟ್ಟಿದ್ದಾರೆ.
ಡಾಕ್ಟರ್ ರೇಗೋಗೆ ಇಲ್ಲಿಯ ಇಗರ್ಜಿ ಕೂಡ ಮನಸ್ಸಿಗೆ ಬಂದಿಲ್ಲ.
“ನೀವು ಏನೇ ಹೇಳಿ ಫ಼ಾದರ್..ಇಂಗ್ಲೀಷ ಮಾಸ ಕೇಳಲಿಲ್ಲ ಅಂದರೆ ನನಗೆ ಸಮಾಧಾನವೇ ಆಗುವುದಿಲ್ಲ”.
ಎಂದು ರೇಗೋ ಪಾದರಿ ಮಸ್ಕರಿನಾಸರಿಗೆ ಹೇಳಿದ್ದನ್ನು ಸಿಮೋನನ ಮಗ ವಿಕ್ಟರ ಕೇಳಿಸಿಕೊಂಡು ಬಂದು ತಾಯಿಗೆ ಹೇಳಿದ್ದು ಈಗ ಊರಿಗೆಲ್ಲ ತಿಳಿದಿದೆ.
ಈ ಎಲ್ಲ ಜನರಿಗೂ ಈ ಕೊಂಕಣಿ ಪೂಜೆ ಹೊಸದಂತೆ. ವಿಚಿತ್ರವಾಗಿ ಕೇಳುತ್ತದಂತೆ. ಏನಿದ್ದರೂ ಇಂಗ್ಲೀಷಿನಲ್ಲಿ ಪೂಜೆ ನಡೆಯಬೇಕು. ಇಂಗ್ಲೀಷಿನಲ್ಲಿ ಪ್ರಾರ್ಥನೆ ಮಾಡಬೇಕು ಅಂದರೆ ಅದು ದೇವರಿಗೆ ತಲುಪುತ್ತದೆ ಅನ್ನುತ್ತಾರೆ ಇವರು.
ಈ ವಿಷಯ ಕೂಡ ತಮಗೆ ಹೊಸದೆ.
ಕಲ್ಲು ಕೆತ್ತುವ, ಕಲ್ಲು ಕಟ್ಟುವ ತಮಗೂ ಇವರಿಗೂ ಎಂತಹ ವ್ಯತ್ಯಾಸವಲ್ಲವೇ?
“ಅವರೆಲ್ಲ ಬಾಮಣರು..ನಮಗಿಂತ ಶ್ರೇಷ್ಠರು.”
ಇರಬಹುದು ಅಂದುಕೊಳ್ಳುತ್ತಾರೆ. ಇಲ್ಲವೆಂದರೆ ಪ್ಲೇಗು ಕಾಲರಾದಂತಹ ಕಾಯಿಲೆಗಳನ್ನು ಊರಿನಿಂದ ಓಡಿಸಲು ಇವರು ಬರುತ್ತಿದ್ದರೆ!
ಮನೆಗಳತ್ತ ಹೊರಟವರು ಇವರ ಬಗ್ಗೆಯೇ ಮಾತನಾಡುತ್ತಾರೆ.
ಇವರ ಉಡಿಗೆ ತೊಡಿಗೆ ಮಾತು ದಿವ್ಯಪ್ರಸಾದ ಸ್ವೀಕರಿಸಿ ಬರುವಾಗಿನ ಭಕ್ತಿ, ಪಾದರಿಗಳ ಹತ್ತಿರ ಇವಿರಿಗಿರುವ ಸಲಿಗೆ, ಪಾದರಿ ಇವರಿಗೆ ನೀಡುವ ಗೌರವ, ಇತ್ಯಾದಿ ವಿಷಯಗಳು ಇಲ್ಲಿ ಪ್ರಧಾನವಾಗಿ ಗಮನಕ್ಕೆ ಬರುತ್ತವೆ.
ಅವರವರ ಮನೆಗಳು ಬರುವ ತನಕ ಇದೇ ಮಾತಾಯಿತು. ಇಂದು ಈ ಮಾತುಗಳ ಜತೆಗೆ ಅದೇ ತಾನೆ ಜಟಕಾದಲ್ಲಿ ಬಂದಿಳಿದ ಹೆಂಗಸಿನ ವಿಷಯವೂ ಬಂದಿತು.
“ಪಾದರಿಗಳೇ ಮಾಡಿಸಿದ್ದಂತೆ ಈ ಮದುವೇನ” ಎಂದಳು ಸಿಮೋನನ ಹೆಂಡತಿ ಅಪ್ಪಿಬಾಯಿ.
ಎಲ್ಲ ಹೆಂಗಸರೂ ಅವಸರದಲ್ಲಿ ಇದ್ದರು. ಭಾನುವಾರ ಪೂಜೆ ಮುಗಿದ ತಕ್ಷಣ ಹುಡುಗ ಹುಡುಗಿಯರು ದತೋರ್ನ ಕಲಿಯಲು ಇಗರ್ಜಿಗೆ ಹೋಗಬೇಕಿತ್ತು. ಹೀಗೆ ಹೋಗದವರಿಗೆ ಪಾಮಿಸ್ತ್ರಿಯ ಏಟು, ಮೊಣಕಾಲೂರಿ ನಿಲ್ಲುವುದು, ರಾಗಿಯ ಮೇಲೆ ಮೊಣಕಾಲೂರುವುದು. ಇಗರ್ಜಿ ತೊಳೆಯುವುದು ಮೊದಲಾದ ಶಿಕ್ಷೆಗಳು ಕಾದಿರುತ್ತಿದ್ದವು. ಹೀಗಾಗಿ ಹುಡುಗ ಹುಡುಗಿಯರು, ಮದುವೆಯಾಗದ ಯುವಕ ಯುವತಿಯರು ಪೂಜೆ ಮುಗಿಸಿಕೊಂಡು ಮನೆಗೆ ಬಂದು ತಿಂಡಿ ಕಾಫ಼ಿ ಮುಗಿಸಿ ಮತ್ತೆ ಇಗರ್ಜಿಗೆ ಹೋಗಲು ಅವಸರ ಮಾಡುತ್ತಿದ್ದರು. ಹೀಗಾಗಿ ಹೆಂಗಸರೆಲ್ಲ ಗಡಿಬಿಡೀಯಲ್ಲಿ ಮನೆಗಳತ್ತ ಧಾವಿಸಿದರು. ನಡುವೆ ಅದು ಇದು ಮಾತನಾಡಲು ಅವಕಾಶ ಮಾಡಿಕೊಂಡರು.
ಅಲ್ಲದೆ ಪೂಜೆ ಮುಗಿದದ್ದೇ! ಎಲ್ಲ ಗಂಡಸರೂ ಮಾರ್ಕೆಟಗೆ ಹೋಗುವುದು ಭಾನುವಾರದ ರೂಢಿ. ಅವರು ಮಾಂಸ ತೆಗೆದುಕೊಂಡು ಬರುವಷ್ಟರಲ್ಲಿ ಖಾರ ಅರೆದಿಡಬೇಕು. ಊಟದ ಜೊತೆಗೆ ದೋಸೆಯನ್ನೋ ಇಡ್ಡಲಿಯನ್ನೋ ಮಾಡಬೇಕು. ಭಾನುವಾರಗಳಂದು ಊಟಕ್ಕೆ ತುಸು ತಡವಾಗುವುದು ಸಹಜವೆ ಆದರೂ ಅಡಿಗೆ ಆಗಬೇಕು.
ಮಾತು ನಿಲ್ಲಿಸಿ ಹೆಂಗಸರು ಉಟ್ಟ ಸೀರೆಗಳನ್ನು ಸಡಲಿಸಿ ಬೇರೆ ಸೀರೆ ಉಡುತ್ತ ಕೆಲಸ ಆಗಬೇಕು. ಕೆಲಸ ಆಗಬೇಕು ಅನ್ನುವಾಗ ಇಗರ್ಜಿಯಿಂದ ಜ್ಞಾನೋಪದೇಶದ ಗಂಟೆ ಕೇಳಿಸಿತು.
*
*
*
ಇಗರ್ಜಿಯಲ್ಲಿ ಕಿರು ಪ್ರಾರ್ಥನೆ ಮುಗಿಸಿ ಪಾದರಿ ಮಸ್ಕರಿನಾಸ ತಮ್ಮ ಬಂಗಲೆಗೆ ಬಂದರು.
ಶಿವಸಾಗರಕ್ಕೆ ಬಂದ ಪಾದರಿ ಮಸ್ಕರಿನಾಸ ತಮ್ಮ ಬಂಗಲೆಗೆ ಬಂದರು.
ಶಿವಸಾಗರಕ್ಕೆ ಬಂದ ಪಾದರಿ ಮಸ್ಕರಿನಾಸ ಅವರಿಗೆ ಊರನ್ನು ನೋಡಿ, ಇಗರ್ಜಿಯನ್ನು ನೋಡಿ ಸಂತಸವಾಯಿತಾದರೆ ತಾವು ಇರಬೇಕಾಗಿರುವ ಮನೆ ನೋಡಿ ಮುಜುಗರವಾಯಿತು.
ಭಟ್ಕಳ ಅಂತಹಾ ದೊಡ್ಡ ಪಟ್ಟಣವೇನೂ ಆಗಿರಲಿಲ್ಲ. ಅವರು ಇದ್ದುದು ಕೂಡ ಊರ ಹೊರಗಿನ ಒಂದು ಪ್ರದೇಶದಲ್ಲಿ. ತೆಂಗಿನ ಮರಗಳ ನಡುವೆ ಹುದುಗಿದ್ದ ಇಗರ್ಜಿ. ಮುಂದೆ ಹಳ್ಳಿಮನೆಗಳು. ಹಿಂದೆ ಉದ್ದಕೆ ಮಲಗಿದ್ದ ಒಂದು ಗುಡ್ಡ ಸಣ್ಣ ಇಗರ್ಜಿ. ಆದರೆ ಐದು ವರ್ಷ ಅಲ್ಲಿದ್ದ ಅವರು ತಮ್ಮದಾಗಿ ಒಂದು ಬಂಗಲೆ ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬಂಗಲೆಯ ಸುತ್ತ ಒಂದು ಹೂದೋಟ. ಹಿಂದೆ ಎಲ್ಲ ವ್ಯವಸ್ಥೆಗಳಿರುವ ಒಂದು ಅಡಿಗೆ ಮನೆ ಎಂದೆಲ್ಲ ಅವರು ಮಾಡಿಕೊಂಡಿದ್ದರು.
ಆದರೆ ಇಲ್ಲಿಯ ತಮ್ಮ ಈಗಿನ ಮನೆ ಹಿಂದಿನ ಕೊಪೆಲ. ನಡುವೆ ಒಂದು ಪರದೆ ಹಾಕಿ ಪಾದರಿ ಮಲಗುವ ಕೋಣೆಯನ್ನು ಪ್ರತ್ಯೇಕವಾಗಿ ಮಾಡಿಕೊಂಡಿದ್ದರು. ಪಾದರಿ ಮನೆ ಎಂದರೆ ದನದ ಕೊಟ್ಟಿಗೆಯ ಹಾಗಿತ್ತು. ನೆಲಕ್ಕೆ ಶಗಣಿ, ಮಣ್ಣಿನ ಗೋಡೆಗಳು, ಮೇಲೆ ಹಂಚು, ಒಂದು ಲಕ್ಷಣವಿಲ್ಲ, ವ್ಯವಸ್ಥೆ ಇಲ್ಲ. ಛೇ ಎಂದು ತಲೆ ಕೊಡವಿದರು ಮಸ್ಕರಿನಾಸ.
ಪಾದರಿ ಗೋನಸ್ವಾಲಿಸರ ಬಳಿ ಈ ಬಗ್ಗೆ ಮಾತನಾಡಲು ಅವರು ಹೋಗಲಿಲ್ಲ. ಸದಾ ಇಗರ್ಜಿ ದೇವರು ಜನ ಎಂದು ದುಡಿಯುತ್ತಿದ್ದ ಈ ವ್ಯಕ್ತಿ ತಮ್ಮ ಬಗ್ಗೆ ಏನೂ ಮಾಡಿಕೊಂಡಿರಲಿಲ್ಲ. ಆದರೆ ಮುಂದೆ ಹೀಗೆ ಆಗಬಾರದು. ಈ ಊರಿನಲ್ಲಿ ಮತ್ತೆ ಐದು ಆರು ವರ್ಷ ಇರಬೇಕಾದ ತಾವು ತಮ್ಮ ಉಳಿಯುವಿಕೆಗೆ ಒಳ್ಳೆಯದೊಂದು ಏರ್ಪಾಟು ಮಾಡಿಕೊಳ್ಳದಿದ್ದರೆ ಹೇಗೆ?
ಹೀಗೆಂದೇ ಅವರು ಗುರ್ಕಾರ ಸಿಮೋನನನ್ನು ಹೇಳಿ ಕರೆಸಿಕೊಂಡರು.
“ಸಿಮೋನ ಮಾಮ..ನಿಮ್ಮ ಊರಿನಲ್ಲಿ ಪಾದರಿ ಸುಖವಾಗಿ ಇರಬಾರದು ಅಂತೀರಾ ನೀವು?” ಎಂದು ಕೇಳಿದರು.
“ಯಾಕೆ ಪದ್ರಾಬ?” ಎಂದ ಆತ ಗಾಬರಿಯಿಂದ.
“ಇದೇನು ಪಾದರಿ ಮನೇನ ಇಲ್ಲವೆ ಗ್ರೊಟ್ಟೋನ? ನೆಲ ಸರಿ ಇಲ್ಲ ಗೋಡೆ ಸರಿ ಇಲ್ಲ..ಬೇರೆ ಕೊಠಡಿಗಳಿಲ್ಲ..”
ಸಿಮೋನ ಮುಂದೆ ಏನು ಹೇಳಬೇಕು ಎಂಬುದು ಅರಿಯದೆ ನಿಂತಾಗ ಮಸ್ಕರಿನಾಸದಲ್ಲಿ –
“….ಈಗೊಂದು ಕೆಲಸ ಮಾಡೋಣ..ಇದು ಹೀಗೇ ಇರಲಿ..ಇದರ ಪಕ್ಕದಲ್ಲಿ ಒಂದು ಕಟ್ಟಡ ಕೆಲಸ ಶುರುಮಾಡಿ ಅದಕ್ಕೆ ತಗುಲಿಕೊಂಡಂತೆ ಕೂಜ್ನ ಕಟ್ಟಿ..”
“ಪದ್ರಾಬ…ಹಣ..” ಎಂದು ರಾಗ ಎಳೆದ ಸಿಮೋನ….
“ನಾನು ಅದರ ವ್ಯವಸ್ಥೆ ಮಾಡತೇನೆ..ನೀವು ಕೆಲಸ ಪ್ರಾರಂಭಿಸಿ..” ಎಂದರು ಅವರು.
ಅವರ ಮಾತಿನಂತೆಯೇ ಸಿಮೋನ ಕೆಲಸ ಪ್ರರಂಭಿಸಿದ. ಇಗರ್ಜಿ ಕೆಲಸಕ್ಕೆಂದು ತರಿಸಿದ ಕಲ್ಲು, ಮರ ಇನ್ನೂ ಉಳಿದಿತ್ತು. ಇಗರ್ಜಿ ಕೆಲಸ ಮಾಡಲು ಬಂದವರಲ್ಲಿ ಕೆಲವರಂತೂ ಆಗಲೇ ಶಿವಸಾಗರದವರೇ ಆಗಿದ್ದರು. ಒಂದು ಭಾನುವಾರ ಸಿಮೋನ ಬಂಗಲೆ ಕೆಲಸ ಆರಂಭಿಸಿದ.
ತಮ್ಮ ಬಂಗಲೆ ಸಿದ್ದವಾಗುವ ಮುನ್ನವೇ ಪಾದರಿಗಳ ಬಂಗಲೆ ಎಂಬ ಮಾತನ್ನು ಮಸ್ಕರಿನಾಸ ಜನರ ಬಾಯಲ್ಲಿ ಚಾತಿಗೆ ತಂದರು. ’ಜನ ಪಾದರಿ ಮನೆ’ ’ಪಾದರಿ ಮನೆ’ ಎಂದು ಕರೆಯುವುದು ಅವರಿಗೆ ಸರಿ ಎನಿಸುತ್ತಿರಲಿಲ್ಲ.
ಸಿಮೋನನ ಮನೆ, ಇಂತ್ರು ಮನೆ, ಬಾಲ್ತಿದಾರನ ಮನೆ ಅನ್ನುವ ಹಾಗೆ ಇದು ಏನು ಪಾದರಿ ಮನೆ? ಪಾದರಿ ಬಂಗಲೆಯಲ್ಲಿ ಇರಬೇಕಲ್ಲವೇ? ಹೀಗೆಂದೇ ಅವರು ಮಾತಿನ ನಡುವೆ, ಸೆರಮಾಂವಂ ನಡುವೆ ಪಾದರಿ ಬಂಗಲೆ ಎಂಬ ಮಾತನ್ನೇ ಬಳಸುತ್ತ ಈ ಮಾತಿನ ಮೇಲೆ ಹೆಚ್ಚು ಒತ್ತು ನೀಡತೊಡಗಿದರು. ಜನ ಕ್ರಮೇಣ ಹೀಗೆಯೇ ಹೇಳತೊಡಗಿದರು.
ಸಿಮೋನ ಪಾದರಿ ಕೊಟ್ಟ ನಕ್ಷೆಯ ಪ್ರಕಾರ ಒಂದು ವೆರಾಂಡ, ಹಾಲು, ಎರಡು ಬೆಡ್ ರೂಮುಗಳು, ಒಂದು ಸಿಟ್ಟಿಂಗ, ಹಿಂಬದಿಯಲ್ಲಿ ಊಟದ ಮನೆ, ಅದರಾಚೆಗೆ ಅಡಿಗೆ ಮನೆ ಎಂದು ವಿಸ್ತಾರವಾದ ಕಟ್ಟಡಕ್ಕೆ ತಳಪಾಯ ಹಾಕಿ ಗೋಡೆ ಎಬ್ಬಿಸ ತೊಡಗಿದ. ಗೋವಾದ ಪ್ರಾವಿನ್ಶಿಯಲ್ ಅವರಿಗೆ ಬರೆದು, ತಮ್ಮ ಪರಿಚಯದ ಇನ್ನೂ ಕೆಲವರಿಗೆ ಸಂಪರ್ಕಿಸಿ ಮಸ್ಕರಾನಿಸ ಬಂಗಲೆಗೆ ಹಣ ತರಿಸಿಕೊಳ್ಳತೊಡಗಿದರು. ತಮ್ಮ ಬಂಗಲೆಯ ನಿರ್ಮಾಣ ತ್ವರಿತಗತಿಯಲ್ಲಿ ಆಗುತ್ತಿದೆ ಎಂಬ ಸಂತಸ, ತೃಪ್ತಿ ಅವರಲ್ಲಿ ಮೂಡಿತು. ಎದ್ದು ನಿಂತ ಬಂಗಲೆಯನ್ನು ಒಂದು ಬಾರಿ ನೋಡಿ. ಹಳೆ ಕಟ್ಟಡ ಹೊಕ್ಕಾಗ ಒಳಗೆ ಬಳೆಯ ಸದ್ದಾಗಿ-
“…ಫ಼ರಾಸ್ಕ…ಕೋಣ್ರೆ..ಭೀತರ?” ಎಂದು ಕೇಳಿದರು.
(ಫ಼ರಾಸ್ಕ ಒಳಗೆ ಯಾರೋ?) ಎಂಬ ಅವರ ಪ್ರಶ್ನೆಗೆ ಫ಼ರಾಸ್ಕ ಉತ್ತರ ಕೊಡಲಿಲ್ಲ. ಅದರ ಬದಲು ಅವನ ಹೆಂಡತಿ ರಜೀನಾ-
“ಹಾಂವುಂ ಪದ್ರಾಬ” (ನಾನು ಪದ್ರಾಬ) ಎಂದು ಹೇಳುತ್ತ ಪರದೆ ಸರಿಸಿ ಈ ಬದಿಗೆ ಬಂದಳು.
“ಅರೆ ಯಾವಾಗ ಬಂದದ್ದು?” ಎಂದವರು ಕೇಳಿದರು ರಜೀನಾಳ ಮುಖವನ್ನು ಕಣ್ಣರಳಿಸಿ ನೋಡುತ್ತ.
*
*
*
ಫ಼ರಾಸ್ಕ ಅಭ್ಯಾಸ ಬಲದಿಂದೆಂಬಂತೆ ಹತ್ತೂವರೆಗೆ ಒಂದು ಬಾರಿ ಇಗರ್ಜಿಯ ಗಂಟೆ ಹೊಡೆದು ಎಲ್ಲ ಮಕ್ಕಳಿಗೆ ಜ್ಞಾನೋಪದೇಶಕ್ಕೆ ಬರುವಂತೆ ತಿಳಿಸಿ ಕೈಯಲ್ಲಿ ಚೀಲ ಹಿಡಿದು ಮಾಂಸ ತರಲು ಹೊರಟ. ಆತನ ಚಡ್ಡಿ ಜೇಬಿನಲ್ಲಿ ಚಿಲ್ಲರೆ ಹಣ ಭಾರದಿಂದ ತೂಗಾಡುತಲಿತ್ತು. ಪಾದರಿಯ ಬಟ್ಲರ್ ಆಗಿ ಸೇರಿಕೊಂಡ ನಂತರ ಇದೊಂದು ಹಿಂಸೆ ಅವನನ್ನು ಕಾಡುತ್ತ ಬಂದಿತು. ಮಾಂಸ ತರಲು ಎಲ್ಲರೂ ಎಂಟಾಣೆ, ಒಂದು ರೂಪಾಯಿ ತೆಗೆದುಕೊಂಡು ಹೋದರೆ ತಾನು ಒಯ್ಯುತ್ತಿದ್ದುದು ಬಿಲ್ಲೆ, ಅರ್ಧ ಆಣೆ, ಆಣೆ, ಎರಡಾಣೆ. ಒಂದೊಂದು ಬಾರಿ ಬರೀ ಬಿಲ್ಲೆ ಅರ್ಧ ಆಣೆಗಳೇ ಇರುತ್ತಿದ್ದವು. ಮಾಂಸದ ಅಂಗಡಿಯಲ್ಲಿ ಈ ಬಿಲ್ಲೆಗಳನ್ನು ಎಂಟು ಎಂಟು ಆಣೆ ಮೊತ್ತದಲ್ಲಿ ಗುಪ್ಪೆ ಇರಿಸಿದಾಗ ಅಂಗಡಿಯಾತ-
“..ಫ಼ರಾಸ್ಕ ಇದು ಎಂತದ್ದು ಮಾರಾಯ..ಬಿಲ್ಲೆ ವ್ಯವಹಾರ..ನಾವು ಬೇರೆಯವರಿಗೆ ಕೊಡೋದು ಹ್ಯಾಗೆ?” ಎಂದು ಕೇಳುತ್ತಿದ್ದ.
ಈ ಪರಿಸ್ಥಿತಿ ಇಂದಿಗೂ ಮುಂದುವರೆದಿತ್ತು. ಪಾದರಿ ಕಾಣಿಕೆ ಡಬ್ಬಿಯಲ್ಲಿ ಪ್ರತಿ ಭಾನುವಾರ ಸಂಗ್ರಹವಾಗುತ್ತಿದ್ದ ಹಣವನ್ನು ತೆಗೆದು ಒಂದೆಡೆ ಎಣಿಸಿ ಇಡುತ್ತಿದ್ದರು. ಪೂಜೆಯ ನಡುವೆ ತಾನೇ ಕಾಣಿಕೆ ಡಬ್ಬಿ ಹಿಡಿದು ಜನರ ನಡುವೆ ಹೋಗುತ್ತಿದ್ದೆ. ಪ್ರತಿಯೊಬ್ಬರ ಮುಂದೆಯೂ ಹೋಗಿ ಡಬ್ಬಿ ಹಿಡಿಯುವುದು ಅನಾನೂಕುಲವಾಗಿದ್ದರಿಂದ ತಗಡಿನ ಡಬ್ಬಿಗೆ ಉದ್ದವಾದ ಒಂದು ಕೋಲನ್ನು ಜೋಡಿಸಲಾಗಿತ್ತು. ಈ ಕೋಲನ್ನು ತುದಿಯಲ್ಲಿ ಹಿಡಿದು ಎಷ್ಟು ದೂರ ಬೇಕಾದರೂ ಕಾಣಿಕೆ ಡಬ್ಬಿಯನ್ನು ಚಾಚಬಹುದಾಗಿತ್ತು. ಹೀಗೆ ತಾನು ಚಾಚಿದ ಡಬ್ಬಿಗೆ ಜನ ಹಣ ಹಾಕುತ್ತಿದ್ದರು. ಎಂಟಾಣಿ ಒಂದು ರೂಪಾಯಿ ಹಾಕುವವರು ಬೆರಳ ತುದಿಯಲ್ಲಿ ಅದನ್ನು ಹಿದಿದುಕೊಂಡು ಗತ್ತಿನಿಂದ ಎಲ್ಲರಿಗೂ ಕಾಣಲಿ ಎಂಬಂತೆ ಡಬ್ಬಿಯೊಳಗೆ ಟೊಣಕ ಎನಿಸಿದರೆ ಬಿಲ್ಲೆ ಅರ್ಧ ಆಣೆ ಹಾಕುವವರು ಮೂರು ಬೆರಳುಗಳ ನಡುವೆ ಅದನ್ನು ಮುಚ್ಚಿ ಇರಿಸಿಕೊಂಡು ಟೊಣಕ ಅನಿಸುತ್ತಿದ್ದರು. ಕೆಲವರಿಗೆ ಹಣ ಹಾಕುವುದಕ್ಕಿಂತ ಈ ಸದ್ದು ಬರುವುದೇ ಮುಖ್ಯವೆನಿಸುತ್ತಿತ್ತು. ಹೀಗಾಗಿ ಕಾಣಿಕೆ ಡಬ್ಬಿಯಲ್ಲಿ ಸವೆದು ಹೋದ ಬಿಲ್ಲೆ, ಹುಡುಗರ ಸೊಂಟಕ್ಕೆ ಕಟ್ಟಿದ ಬಿಲ್ಲೆ, ಬೇರೆ ಯಾವುದೋ ದೇಶದ್ದು. ಹೈದರಾಲಿ ಕಾಲದ್ದು ಇಲ್ಲವೇ ಬಿಲ್ಲೆಯ ಹಾಗೆಯೇ ಇರುವ ತಗಡಿನ ಚೂರು ಕೂಡ ಸಿಗುತ್ತಿತ್ತು. ಎಲ್ಲ ಮಕ್ಕಳೂ ಇಗರ್ಜಿಗೆ ಹೊರಡುವಾಗ.
“ಬಾಬಾ ಇಜ್ಮೋಲಾಕ ದುಡ್ಡು” ಎಂದು ಹೇಳುತ್ತಿದ್ದರು. ಕಾಣಿಕೆಗೆ ಹಣವಿಲ್ಲದೆ ಇಗರ್ಜಿಗೆ ಹೋಗಲೇ ಬಾರದು ಎಂಬುದು ಮಕ್ಕಳ ಅಭಿಪ್ರಾಯ. ತಂದೆ ತಾಯಂದಿರು ಕೂಡ-
“ಘೆಪುತ್ರ…, ಇಜ್ಮೋಲ ಡಬ್ಬೀಕ ಘಾಲ..” (ತೊಕೋ ಮಗ ಕಾಣಿಕೆ ಡಬ್ಬಿಗೆ ಹಾಕು) ಎಂದು ಮನೆಯಲ್ಲಿರುವ ಎಲ್ಲ ಮಕ್ಕಳಿಗೂ ಬಿಲ್ಲೆ, ಅರ್ಧ ಆಣೆ ಕೊಡುತ್ತಿದ್ದರು. ಎಲ್ಲ ಮಕ್ಕಳೂ ತಪ್ಪದೆ ಹಣ ಹಾಕುತ್ತಿದ್ದರು. ಎಲ್ಲೋ ಕೆಲ ಮಕ್ಕಳು ಮಂಡಕ್ಕಿ, ಉಂಡೆ, ಬೆಲ್ಲದ ಮಿಠಾಯಿ ಕೊಂಡು ತಿನ್ನುತ್ತಿದ್ದರು. ತಾನು ಹಣ ಹಾಕಿಲ್ಲ ಎಂಬುದು ಎಲ್ಲಿ ತಂದೆ ತಾಯಂದಿರು ಗಮನಿಸುತ್ತಾರೋ ಎಂದು ಈ ಮಕ್ಕಳು ಬೆರಳುಗಳ ನಡುವೆ ಏನೋ ಒಂದನ್ನು ಮುಚ್ಚಿ ಇರಿಸಿಕೊಂಡು ಟೊಣಕ್ ಎಂದು ಶಬ್ದ ಮಾಡುತ್ತಿದ್ದರು.
ಇದು ಬಟ್ಲರ್ ಫ಼ರಾಸ್ಕನಿಗೆ ತೊಂದರೆಯನ್ನುಂಟು ಮಾಡುತ್ತಿತ್ತು. ಹೀಗೆಂದು ಬೇರೊಂದು ದಾರಿ ಅವನಿಗೆ ಕಂಡಿರಲಿಲ್ಲ. ಕೆಲ ಬಾರಿ ಅಂಗಡಿಗಳವರಿಗೆ ಆತ ಚಿಲ್ಲರೆ ಕೊಟ್ಟು ಗಟ್ಟಿ ರೂಪಾಯಿ ತರುತ್ತಿದ್ದ. ಅದು ಭಟ್ಕಳದಲ್ಲಿ ಸಾಧ್ಯವಾಗುತ್ತಿತ್ತು. ಕಾಣಿಕೆ ಡಬ್ಬಿ ತುಂಬಾ ಹಣ ಸಂಗ್ರಹವಾಗಿ ಡಬ್ಬಿಯನ್ನು ಒಂದು ಕೈಯಲ್ಲಿ ಹಿಡಿಯಲು ಕಷ್ಟವಾಗುತ್ತಿತ್ತು. ಕೋಲನ್ನು ಜನರತ್ತ ಬಾಚಲು ಆಗದೆ ಆತ ಸ್ಯಾಕ್ರಿಷ್ಟಿಗೆ ಬಂದು ಬೇರೊಂದು ಡಬ್ಬಿ ಒಯ್ಯುವುದೂ ಇತ್ತು. ಆದರೆ ಇಲ್ಲಿ ಅಂತಹ ಪರಿಸ್ಥಿತಿ ಬರಲಿಲ್ಲ. ಡಬ್ಬಿ ಕೂಡ ತುಂಬುತ್ತಿರಲಿಲ್ಲ.
ಮಾರ್ಕೆಟಿನತ್ತ ಹೋಗುತ್ತ ಡಬ್ಬಿಯ ನೆನಪು ಬಂದದ್ದರಿಂದ ಹಿಂದೆಯೇ ಬೇರೊಂದು ವಿಷಯ ಅವನಿಗೆ ನೆನಪಾಯಿತು.
ಭಟ್ಕಳದಿಂದ ಇಲ್ಲಿಗೆ ಬಂದದ್ದಾಯಿತು. ಪಾದರಿಗಳ ಬಂಗಲೆ ಹಿಂದಿನ ಅಡಿಗೆ ಮನೆಯನ್ನು ತನ್ನ ವಶಕ್ಕೆ ತೆಗೆದುಕೊಂಡೆ. ಹಿಂದಿನ ಕುಜ್ನೇರ ಬೋನ ಎಲ್ಲವನ್ನೂ ತನಗೆ ಒಪ್ಪಿಸಿ ಅವನ ಮಾವನ ಮನೆಗೆ ಹೋದ. ಅಡಿಗೆ ಮನೆಯಲ್ಲಿ ಹೇಳಿಕೊಳ್ಳುವಷ್ಟು ಪಾತ್ರೆಗಳು ಇರಲಿಲ್ಲ. ಪಿಂಗಾಣಿ ತಟ್ಟೆ, ಕಪ್ಪುಗಳು, ಪೋರ್ಕ, ಚಾಕು, ಚಮಚಗಳು ಐದಾರು ಸೆಟ್ಟಿನಷ್ಟು ಇದ್ದವು. ಅಡಿಗೆ ಮಾಡುವ ಪಾತ್ರೆಗಳು ಕೂಡ. ಪಾದರಿಗಳಲ್ಲಿ ಈ ಬಗ್ಗೆ ಹೇಳಿದಾಗ ಅವರು-
“ಇಲ್ಲಿ ಏನಿದೆ ಅಂತ..ಎಲ್ಲ ತರಿಸೋಣ ಸ್ವಲ್ಪ ದಿನ ಹೋಗಲಿ..” ಎಂದಿದ್ದರು.
ಆಗಲೆ ತಾನು ಇನ್ನೊಂದು ವಿಷಯ ಗಮನಿಸಿದೆ. ಪೂಜೆಯ ನಡುವೆ ಕೀರ್ತನೆಯನ್ನು ಆರಂಭಿಸಿ, ಜನ ಅದನ್ನು ಹಾಡುತ್ತಿರಲು ಬೋನ ಅದೆಲ್ಲೋ ಇರಿಸಿದ ಕಾಣಿಕೆ ಡಬ್ಬಿ ಹಿಡಿದು ಕಾಣಿಕೆ ಸಂಗ್ರಹಿಸಲು ಹೊರಟ. ಮೊದಲಿನಿಂದ ನಡೆದು ಬಂದದ್ದು ಮುಂದುವರೆಯಲಿ ಅಂದುಕೊಂಡು ತಾನು ಸುಮ್ಮನಾದೆ.
ಒಂದೆರಡು ವಾರ ಇದು ಹೀಗೆಯೇ ಸಾಗಿತ್ತು.
ಮಾರನೇ ಭಾನುವಾರ ಪಾದರಿ-
’ಫ಼ರಾಸ್ಕ’ ಎಂದರು.
“ಫ಼ಾದರ್..” ಎಂದು ಹೋಗಿ ಅವರ ಮುಂದೆ ನಿಂತೆ.
“ಕಾಣಿಕೆ ಡಬ್ಬೀನ ನೀನು ತೆಗೆದುಕೊಂಡು ಹೋಗಲ್ವ?”
“ಇಲ್ಲ ಫ಼ಾದರ್..ಮಿರೋಣ ಬೋನ ಆ ಕೆಲಸ ಮಾಡತಿದ್ದಾನೆ” ಮಸ್ಕರಿನಾಸ ಕೊಂಚ ಯೋಚಿಸಿದರು.
“ಇಗರ್ಜಿ ತುಂಬ ಜನ ಇರ್ತಾರೆ…ಆದರೆ ಡಬ್ಬಿಯಲ್ಲಿ ಹಣ ಸಂಗ್ರಹವಾಗೋದು ಕಡಿಮೆ..”
ಎಂದರವರು. ಬೋನ ತಂದು ಒಳಗೆ ಇರಿಸಿದ ಡಬ್ಬಿಯಲ್ಲಿಯ ಹಣವನ್ನು ಮೇಜಿನ ಮೇಲೆ ರಾಶಿ ಹಾಕಿಕೊಂಡು ಅವರು ಲೆಕ್ಕ ಹಾಕಿ ನೋಡಿದ್ದರು.
“ಹೌದು ಪದ್ರಾಬ?”
“ಹೌದು ಮುಂದಿನ ಭಾನುವಾರದಿಂದ ಈ ಕೆಲಸ ನೀನು ಮಾಡು..”
“ಅಲ್ಲ ಪದ್ರಾಬ..”
“ನಾನು ಹೇಳತಿದೀನಲ್ಲ..”
ಈಗ ಈ ಕೆಲಸ ತನ್ನ ಪಾಲಿಗೆ ಬಂದಿದೆ. ಸಂಗ್ರಹವಾಗುತ್ತಿರುವ ಹಣದ ಬಗ್ಗೆ ಪಾದರಿ ಏನೂ ಹೇಳಿಲ್ಲ. ಹಿಂದಿಗಿಂತ ಈಗ ಹೆಚ್ಚು ಹಣ ಸಂಗ್ರಹವಾಗುತ್ತಿರಬಹುದು. ತನಗೆ ಮಾತ್ರ ಈ ಬಿಲ್ಲೆ ಲೆಕ್ಕ ಮಾಡುವುದು ತಪ್ಪಿಲ್ಲ.
ಬಟ್ಲರ್ ಫ಼ರಾಸ್ಕ ಮಾಂಸದ ಮಾರುಕಟ್ಟೆಯೊಳಗೆ ಕಾಲಿಟ್ಟ. ಸಾಲು ಸಾಲಾಗಿ ಅಂಗಡಿಗಳಿದ್ದರೂ ಮೂರು ಕಡೆಗಳಲ್ಲಿ ಮಾತ್ರ ಮೂರು ಕುರಿಗಳನ್ನು ತೂಗು ಹಾಕಲಾಗಿದ್ದು, ಚರ್ಮ ಸುಲಿದು ಚರಬಿಯನ್ನು ಮಾಂಸದ ಮೇಲೆ ಹೊದಿಸಿದ್ದರು. ಗಿರಾಕಿಯೋರ್ವ ಮಾರುಕಟ್ಟೆಯೊಳಗೆ ಕಾಲಿಟ್ಟ ತಕ್ಷಣ-
“ಬನ್ನಿ ಸ್ವಾಮಿ..ಬನ್ನಿ”
“ಒಳ್ಳೆ ಮಾಂಸ ಕೊಡತೀನ ಬನ್ನಿ”
“ಕಂಬಳಿ ಕುರಿ ಮಾಂಸ ಮಾತ್ರ ಕೊಡತೀನಿ ಬನ್ನಿ” ಎಂದು ಕೂಗುವುದು ಅಲ್ಲಿಯ ರೂಢಿ.
ಫ಼ರಾಸ್ಕ ಅಲ್ಲಿ ಕಾಣಿಸಿಕೊಂಡ ಕೂಡಲೇ ಯಾರೂ ಕೂಗಲಿಲ್ಲ. ಏಕೆಂದರೆ ಈತ ನಿತ್ಯದ ಗಿರಾಕಿ. ಈತ ಕೊಂಡೊಯ್ಯುವುದು ಅರ್ಧ ಸೇರು ಮಾಂಸ. ಜೊತೆಗೆ ಅದು ಬೇಡ ಇದು ಹಾಕಿ ಎಂಬ ಚೌಕಾಶಿ. ಕೊನೆಯಲ್ಲಿ ಕೊಡುವ ಬಿಲ್ಲೆಗಳ ಗುಪ್ಪೆ.
“..ಹಾಂ..ಹುಸೇನಿ ನೋಡಪ್ಪ..ನಿನ ಗಿರಾಕಿ” ಎಂದ ಓರ್ವ ಅಂಗಡಿಯವ.
“..ಬನ್ನಿ..ಬನ್ನಿ…ಏನು ಬರೀ ಬಿಲ್ಲೇನೋ..ಇಲ್ಲ ನೋಟುಗೀಟು ತಂದಿದೀರೋ…” ಎಂದು ಹುಸೇನಿ ಫ಼ರಾಸ್ಕನನ್ನು ಸ್ವಾಗತಿಸಿದ.
*
*
*
ಇಲ್ಲಿ ಜ್ಞಾನೋಪದೇಶ ಕಲಿಯಲು ಬಂದ ಮಕ್ಕಳಿಗೆ ಯುವಕ ಯುವತಿಯರಿಗೆ ಒಂದು ಸಂತಸದ ಸುದ್ದಿ ಕಾದಿತ್ತು.
ದತೋರ್ನ ಕಲಿಸಲು ಬರುವ ಪಾದರಿ ಎಲ್ಲಿ ಪರಲೋಕ ಮಂತ್ರ, ನಮೋರಾಣೆ ಮಂತ್ರ, ಪರಮ ತ್ರಿತ್ವರ ಪ್ರಾರ್ಥನೆ ಕೇಳುತ್ತಾರೋ ಎಂದು ಮಕ್ಕಳು ಹೆದರಿಕೊಂಡಿದ್ದರೆ, ಯುವಕ ಯುವತಿಯರು ದೇವರ ಹತ್ತು ಕಟ್ಟಲೆಗಳು ಇಗರ್ಜಿ ಮಾತೆಯ ಕಟ್ಟಲೆಗಳು. ಪಾಪ ನಿವೇದನಾ ಪ್ರಾರ್ಥನೆ, ಪಶ್ಚಾತ್ತಾಪದ ವಿಧಾನ. ಇತ್ಯಾದಿಗಳನ್ನು ಪೂರ್ಣವಾಗಿ ಒಪ್ಪಿಸಲು ಎಲ್ಲಿ ಹೇಳುತ್ತಾರೋ ಎಂದು ಅಂಜಿದ್ದರು.
ಆದರೆ ಈಗೀನ ದತೋರ್ನ ಎಂದರೆ ಹಿಂದಿನಷ್ಟು ಹೆದರಿಕೆಯಾಗುತ್ತಿರಲಿಲ್ಲ. ಹಿಂದೆ ಪಾದರಿ ಗೋನಸ್ವಾಲಿಸರು ಎಲ್ಲ ಕ್ರೀಸ್ತುವರ ಮಕ್ಕಳೂ ದತೋರ್ನಗೆ ಬರಲೇ ಬೇಕೆಂದು ಹೇಳುತ್ತಿದ್ದರು. ಒಂದು ವಾರ ಯಾರಾದರೂ ತಪ್ಪಿಸಿಕೊಂಡರೆ ಮುಂದಿನ ವಾರ ಅವರಿಗೆ ಪಾಮಿಸ್ತ್ರೀಯ ಶಿಕ್ಷೆ ಕಾದಿರುತ್ತಿತ್ತು. ಕೇರಿಯಲ್ಲಿ ತಿರುಗಾಡುವಾಗ ಈ ಹುಡುಗ ಎದುರಾದರೆ-
“ನೀನು ದರ್ತೋರ್ನಗೆ ಬರಲಿಲ್ಲ. ಯಕೆ?” ಎಂದು ಕೇಳಿ ಬಗ್ಗಿ ತೊಡೆಗೆ ಕೈ ಹಾಕುತ್ತಿದ್ದರು. ತೊಡೆಯ ಮಾಂಸ ಹಿಡಿದು ಎಳೆದು ಅಲ್ಲಿ ಕಪ್ಪೆ ಮೂಡುವಂತೆ ಮಾಡುತ್ತಿದ್ದರು.
ದತೋರ್ನಗೆ ಬಂದರೂ ಶ್ರದ್ಧೆ ಆಸಕ್ತಿಯಿಂದ ಕಲೆಯಬೇಕು. ಈ ವಾರ ಕಲಿಸಿದ್ದನ್ನು ಮುಂದಿನವಾರ ಒಪ್ಪಿಸಬೇಕು. ಒಂದು ಸಾಲು, ಒಂದು ಶಬ್ದ ಮರೆತರೂ ಶಿಕ್ಷೆ. ಬೆಳಿಗ್ಗೆ ಎದ್ದಾಗಿನ ಪ್ರಾರ್ಥನೆ, ಊಟ ಮಾಡುವ ಮುನ್ನ ಹೇಳುವ ಪ್ರಾರ್ಥನೆ, ನಂತರ ಕೃತಜ್ಞತೆ. ರಾತ್ರಿ ಮಲಗುವಾಗ ಹೇಳುವ ಜಪ, ದಿವ್ಯ ಸಂಸ್ಕಾರಗಳೆಷ್ಟು? ದೇವರ ಕಟ್ಟಲೆಗಳೆಷ್ಟು? ತ್ರಿತ್ವ ಎಂದರೇನು? ಜ್ಞಾನಸ್ನಾನ ವೆಂದರೇನು? ಎಂದು ಅವರು ಕೇಳುವ ಪ್ರಶ್ನೆಗಳಿಗೆಲ್ಲ ಕೂಡಲೇ ಉತ್ತರ ಹೇಳಬೇಕು. ಹೇಳದಿದ್ದರೆ, ಗೊತ್ತಿಲ್ಲವೆಂದರೆ, ತಪ್ಪು ಹೇಳಿದರೆ ದಂಡನೆ.
ಈ ಎಲ್ಲ ಕಾರಣಗಳಿಂದ ದತೋರ್ನ ಎಂದರೆ ಹುಡುಗರಿಗೆ ಸಿಂಹ ಸ್ವಪ್ನ ಬರುವಂತಿಲ್ಲ ಬರದೆ ಇರುವಂತಿಲ್ಲ.
ಆದರೆ ಈ ಭೀತಿ ಈಗ ಕಡಿಮೆಯಾಗಿತ್ತು.
ಭಾನುವಾರ ಪೂಜೆ ಆದ ನಂತರ ಮಕ್ಕಳಿಗೆ ದತೋರ್ನ ಹೇಳಿಕೊಡಬೇಕು ಎಂಬುದು ಒಂದು ನಿಯಮ. ಪಾದರಿ ಮಸ್ಕರಿನಾಸ ಹೇಳಿಕೊಡುತ್ತಿದ್ದರು. ಅದು ಬರುತ್ತದೆಯೇ? ಇದು ಬರುತ್ತದೆಯೇ ಎಂದು ಕೇಳುತ್ತಿದ್ದರು. ಹಾಗೆಂದರೇನು? ಹೀಗೆಂದರೇನು? ಎಂದು ಪ್ರಶ್ನಿಸುತ್ತಿದ್ದರು. ಗೊತ್ತಿಲ್ಲ ಎಂದರೆ ಕಲಿತು ಬಾ ಎಂದು ಹೇಳುತ್ತಿದ್ದರು. ಕೆಲ ಬಾರಿ ಏಟೂ ಬೀಳುತ್ತಿತ್ತು. ಬೈಯುವುದೂ ಇತ್ತು.
ಒಂದೊಂದು ಭಾನುವಾರ ಅರ್ಧ ಗಂಟೆಯ ತರಗತಿ ನಡೆಸಿ-
“ಹಾಂ ಇನ್ನು ಹೊರಡಿ..ಮುಂದಿನ ಭಾನುವಾರ ಬನ್ನಿ” ಎಂದು ಹೇಳುತ್ತಿದ್ದರು.
ಇಲ್ಲವೇ ಮಕ್ಕಳು ಯುವಕರನ್ನೆಲ್ಲ ಹೋಗುವಂತೆ ಹೇಳಿ ಹುಡುಗಿಯರನ್ನಷ್ಟೇ ಇರಿಸಿಕೊಂಡು ಅವರಿಗೆ ಗಾಯನ ಕೀರ್ತನೆಗಳನ್ನು ಹೇಳಿಕೊಡುತ್ತಿದ್ದರು. ಈ ಪಾದರಿ ಬಂದ ಮೇಲೆ ಹುಡುಗಿಯರು ಕೆಲ ಹೊಸ ಕೀರ್ತನೆಗಳನ್ನು ಹಾಡುಗಳನ್ನು ಹೇಳಲು ಪ್ರಾರಂಭಿಸಿದ್ದರು. ಕೈಯಲ್ಲಿ ಒಂದು ಬೆತ್ತ ಹಿಡಿದುಕೊಂಡು ಎಲ್ಲಿ ಏರಿಸಬೇಕು. ಎಲ್ಲಿ ಇಳಿಸಬೇಕು ಎಂಬುದನ್ನು ಹಾಡಿ ತೋರಿಸುತ್ತಿದ್ದರು. ಕೆಲ ಬಾರಿ ಕೈಯಲ್ಲಿ ವಾಯಲಿನ ಹಿಡಿದು ಕಮಾನನ್ನು ತಂತಿಗಳ ಮೇಲೆ ಎಳೆಯುತ್ತ ಬಾರಿಸಿ ತೋರಿಸುತ್ತಿದ್ದರು. ಹುಡುಗಿಯರು ತಪ್ಪಿದಾಗ ಕಾಲುಗಳನ್ನು ನೆಲಕ್ಕೆ ಬಡಿದು, ಎರಡೂ ಕೈಗಳನ್ನು ಕೊಡವಿ-
“..ಹೋ..ಎಲ್ಲ ಕೆಟ್ಟು ಹೋಯ್ತು..ಎಲ್ಲ ನಾಶವಾಯ್ತು..” ಎಂದು ದೊಡ್ಡ ಸ್ವರದಲ್ಲಿ ಕೂಗಿ ಗದ್ದಲವೆಬ್ಬಿಸಿ ಹುಡುಗಿಯರು ಬೆರಗಾಗುವಂತೆ ಮಾಡುತ್ತಿದ್ದರು. ಮುಂದಿನ ಕ್ಷಣದಲ್ಲಿ ಹುಡುಗಿಯರು ಗೊಳ್ಳನೆ ನಕ್ಕಾಗ ಇವರೂ ಅವರ ಜತೆ ಸೇರಿಕೊಳ್ಳುತ್ತಿದ್ದರು.
ಇಂದು ಜ್ಞಾನೋಪದೇಶ ಕಲಿಯಲು ಬಂದ ಮಕ್ಕಳು ಇಗರ್ಜಿಯ ಬಾಲಕನಿಯಲ್ಲಿ ಅದು ಇದು ಮಾತನಾಡುತ್ತ ಕುಳಿತಿರಲು ಪಾದರಿ ಮಸ್ಕರಿನಾಸ ಅವಸರದಲ್ಲಿಯೇ ಬಂದರು.
“ಹಂ…ಎಲ್ರು ಬಂದಿದೀರಾ?..” ಎಂದು ಎಲ್ಲರ ಮುಖ ನೋಡಿದ್ದಾರು.
“ಪರಲೋಕ ಮಂತ್ರ ಎಲ್ಲರಿಗೂ ಹೇಳಲಿಕ್ಕೆ ಬರುತ್ತೆ ಅಲ್ವೆ?” ಎಂದು ಸಣ್ಣವರ ಬಳಿ ಹೋಗಿ ಕೇಳಿದರು.
“ದೇವರ ಕಟ್ಟಲೆಗಳು ಎಷ್ಟು ಗೊತ್ತಲ್ಲ? ಇಗರ್ಜಿ ಮಾತೆಯ ಕಟ್ಟಲೆಗಳು ಗೊತ್ತಲ್ಲ?” ಎಂದು ಹುಡುಗರ ಬಳಿ ಹೋಗಿ ಪ್ರಶ್ನಿಸಿದರು.
“ಲಿಲ್ಲಿ ನಿನಗೆ ಪಾಪನಿವೇದನಾ ಪ್ರಾರ್ಥನೆ ಬಾಯಿಪಾಠ ಬರುತ್ತೆ ಅಲ್ಲವೇ?”
“ಜಿಲ್ಲಿ ನಿನಗೆ ದೇವದೂತರು ಕಲಿಸಿದ ವಿಶ್ವಾಸದ ಪ್ರಾರ್ಥನೆ ಸಂಪೂರ್ಣವಾಗಿ ಬರುತ್ತದೆ ಅಲ್ಲವೆ?” ಎಂದು ಪ್ರತಿ ಹುಡುಗಿಯ ಬಳಿ ನಿಂತು ಕೇಳಿದರು.
“ಹಾಂ..ಹಾಂ..ಎಲ್ಲ ಚೆನ್ನಾಗಿ ಕಲೀರಿ.”
ಎಂದು ಕಿಟಕಿಯ ಬಳಿ ಹೋಗಿ ತಮ್ಮ ಬಂಗಲೆಯತ್ತ ನೋಡಿದರು. ತಿರುಗಿ ಬಂದು ತ್ರಿತ್ವಕ್ಕೆ ಸ್ತುತಿ ಮಾಡಿ ನಿಮ್ಮ ನಿಮ್ಮ ಮನೆಗಳಿಗೆ ಹೋಗಿ..ಮುಂದಿನವಾರ ಮಾತ್ರ ಜ್ಞಾನೋಪದೇಶಕ್ಕೆ ಯಾರೂ ತಪ್ಪಿಸಿಕೊಳ್ಳಬೇಡಿ..” ಎಂದರು.
ಅಷ್ಟೂ ಹುಡುಗರು ಒಂದೇ ಬಾರಿಗೆ ಆನಂದಾತಿರೇಕದಿಂದ ಹೋ ಎಂದು ಕೂಗಿಕೊಳ್ಳುವರು. ಆದರೆ ಕಷ್ಟ ಪಟ್ಟು ತಡೆದುಕೊಂಡರು. ಕಾರಣ ಎದುರು ಪಾದರಿ. ತಾವಿರುವುದು ಇಗರ್ಜಿ . ಆದರೂ ಈ ಸಂತಸವನ್ನು, ಸಡಗರವನ್ನು ನಡಿಗೆಯ ಮೂಲಕ, ಕೈ ಬೀಸುವುದರ ಮೂಲಕ, ಇಗರ್ಜಿಯೊಳಗೆ ಹೋಗುವ ರಭಸದ ಮೂಲಕ ವ್ಯಕ್ತಪಡಿಸುತ್ತ ಹುಡುಗರು ಇಗರ್ಜಿಯನ್ನು ಪ್ರವೇಶಿಸಿದರು.
ಪಾದರಿ ಮಸ್ಕರಿನಾಸ ಇಗರ್ಜಿಯಿಂದ ಹೊರ ಬೀಳುವಾಗ ಒಳಗಿನಿಂದ-
-ಪಿತನಿಗೂ, ಸುತನಿಗೂ ಸ್ವಿರಿತು ಸಾಂತ್ರುವಿಗೂ ಸ್ತೋತ್ರವುಂಟಾಗಲಿ! ಆದಿಯಲ್ಲಿದ್ದ ಹಾಗೆ ಈಗಲೂ ಯಾವಾಗಲೂ ಸದಾಕಾಲದಲ್ಲಿಯೂ ಸ್ತೋತ್ರ ಉಂಟಾಗಲಿ”
ಎಂಬ ದನಿ ಇಪ್ಪತ್ತು ಮೂವತ್ತು ಸ್ವರಗಳ ಮೂಲಕ ಒಂದಾಗಿ ಕೇಳಿ ಬಂದು ಅಂತ್ಯದಲ್ಲಿ-
“ಅಮೆನ” ಅನ್ನುವುದರ ಮೂಲಕ ಕೊನೆಯಾಯಿತು.
ಮಕ್ಕಳು ಇಗರ್ಜಿಯಿಂದ ಹೊರಬಿದ್ದರು.
ಅಂದು ಯಾವ ಮಕ್ಕಳೂ ಕೂಡಲೇ ಮನೆಗೆ ಹೋಗಲಿಲ್ಲ.
ಸಾಮಾನ್ಯವಾಗಿ ಭಾನುವಾರಗಳಂದು ಜ್ಞಾನೋಪದೇಶ ಮುಗಿಸಿಕೊಂಡು ಅವರೆಲ್ಲ ಮನೆಗೆ ಹೋಗುವ ಹೊತ್ತಿಗೆ ಫ಼ರಾಸ್ಕ ಮಧ್ಯಾಹ್ನದ ಪ್ರಾರ್ಥನೆಯ ಗಂಟೆ ಹೊಡೆಯುತ್ತಿದ್ದ ಆದರೆ ಇಂದು ಇಷ್ಟು ಬೇಗನೆ ಮನೆಗೆ ಹೋಗಿ ಏನು ಮಾಡುವುದು? ಒಂದು ವೇಳೆ ಹೋದರೂ ಮನೆಯಲ್ಲಿ ಅಪ್ಪ ಅಮ್ಮ-
“..ಏನು ಬೇಗ ಬಂದೆ? ಇಗರ್ಜಿಗೆ ಹೋಗಲಿಲ್ವ? ದತೋರ್ನ ಇಲ್ವ?..ಇಲ್ಲ ಏನೋ ನೆಪ ಮಾಡಿಕೊಂಡು ತಪ್ಪಿಸಿಕೊಂಡು ಬಂದಿದ್ದೀಯ?” ಎಂದೆಲ್ಲ ಕೇಳುತ್ತಾರೆ. ಅವರಿಗೆ ಸಮಾಧಾನ ಹೇಳುವುದೇ ಆಗುತ್ತದೆ.
ಇಲ್ಲವೆ ಬಂದೆಯಲ್ಲ ಏನಾದರೂ ಕೆಲಸ ಮಾಡು ಎಂದು ಹೇಳುತ್ತಾರೆ.
ಈ ರಗಳೆಯೇ ಬೇಡ ಎಂದು ಒಬ್ಬೊಬ್ಬರು ಒಂದೊಂದು ಕೆಲಸ ಆರಿಸಿಕೊಂಡರು.
ನೆಲದ ಮೇಲೆ ಗೆರೆಗಳನ್ನೆಳೆದು ಕುಂಟಬಿಲ್ಲೆ ಆಡತೊಡಗಿದರು. ಅಮಟೆ,ಯೆಸ್, ಅಮಟೆ,ಯೆಸ್ ಎಂದು ಒಂಟಿಕಾಲಿನಲ್ಲಿ ಕುಂಟತೊಡಗಿದರು.
ಕೆಲವರು ಐಸ್ ಪೈಸ್ ಆಡಲು ತೊಡಗಿದರು.
ಕೆಲವರಿಗೆ ಜೂಟಾಟ.
ಇಗರ್ಜಿ ಹಿಂಬದಿಯಲ್ಲಿ ನೆಲಕ್ಕೆ ತಾಗುವಂತೆ ಬೆಳೆದ ಮಾವಿನ ಮರಗಳನ್ನೇರಿ ಮರಕೋತಿ ಆಡಲು ಒಂದು ತಂಡ ಸಿದ್ಧವಾಯಿತು.
ಗಂಟೆ ಗೋಪುರ ಕೆಳಗೆ ಯುವತಿಯರು ಲಂಗ ಹರಡಿ ಕೊಂಡು ಕುಳಿತರು.
ಯುವಕರು ಹಲಸಿನ ಮರದ ದಟ್ಟ ನೆರಳಿನಲ್ಲಿ ಕುಳಿತರು.
ಬಟ್ಲರ ಫ಼ರಾಸ್ಕ ಮಾರ್ಕೆಟಿನಿಂದ ಬಂದ.
ಮತ್ತೇನೋ ತರಲು ಪೇಟೆಗೆ ಹೋದ.
ಆಡಿ ಕುಣಿದು ಹಾರಿ ನೆಗೆದು ದಣಿವಾಗಿದ್ದರಿಂದ, ಹೊಟ್ಟೆ ಹಸಿಯತೊಡಗಿದ್ದರಿಂದ ಹುಡುಗ ಹುಡುಗಿಯರು ಒಬ್ಬೊಬ್ಬರಾಗಿ ಅಲ್ಲಿಂದ ಕಾಣೆಯಾಗತೊಡಗಿದರು.
ಫ಼ರಾಸ್ಕ ಮಧ್ಯಾಹ್ನದ ಪ್ರಾರ್ಥನೆಯ ಗಂಟೆ ಹೊಡೆಯಲು ಗಂಟೆ ಗೋಪುರದ ಬಳಿ ಬಂದಾಗ ಅಲ್ಲಿ ಯಾರೂ ಇರಲಿಲ್ಲ.
ಬಂಗಲೆ ಮುಂದಿನ ಚಪ್ಪರದಲ್ಲಿ ಪಾದರಿ ಮಸ್ಕರಿನಾಸ ಮರದ ಆರಾಮಾಸಾನದ ಮೇಲೆ ಕೈ ಕಾಲುಗಳನ್ನು ಚಾಚಿಕೊಂಡು ವಿಶ್ರಾಂತಿ ಪಡೆಯುತ್ತಿದ್ದರು.
“ಢಣ್…ಢಣ್…ಢಣ್”
“ಢಣ್….ಢಣ್…ಢಣ್”
ಮೂರು ಬಾರಿ ಮೂರು ಮೂರರಂತೆ ಗಂಟೆ ಹೊಡೆದು ಕೊಂಡಿತು. ನಂತರ ಢಣಾಢಣ ಢಣಾಢಣ ಎಂದು ನಿಲ್ಲಿಸದೆ ಗಂಟು ಸದ್ದು ಮಾಡಿತು. ಅಂಗಳದಲ್ಲಿ, ಮನೆಯಲ್ಲಿ, ರಸ್ತೆಯ ಮೇಲೆ ಇದ್ದ ಕ್ರಿಸ್ತುವರು ಶಿಲುಬೆಯ ಗುರುತು ಮಾಡಿದರು. ಮನೆಗಳಲ್ಲಿ ಮೇಣದ ಬತ್ತಿ ಹಚ್ಚಿ ಪ್ರಾರ್ಥನೆ ಮಾಡತೊಡಗಿದರು.
-೨-
ಶಿವಸಾಗರದ ಪೇಟೆ ಚೊಕದಲ್ಲಿ ಮೊದಲನೆಯದು ’ಸಂತ ಜೋಸೆಫ಼ರ ಬಟ್ಟೆ ಅಂಗಡಿ’ ಬೋನನದ್ದು. ಬೆಳಿಗ್ಗೆ ಎಂಟುವರೆಗೆಲ್ಲ ಮನೆಯಿಂದ ಹೊರಟು, ಇಗರ್ಜಿ ಬಳಿ ಹೊರಳುವಾಗ ಅಲ್ಲಿಯ ಜೋಸೆಫ಼ರ ಮಂಟಪದ ಮುಂದೆ ನಿಂತು ಒಂದು ಪರಲೋಕ ಮಂತ್ರ, ಮೂರು ನಮೋರಾಣೆ ಮಂತ್ರ ಹೇಳಿ ಜೋಸೆಫ಼ರ ಪ್ರತಿಮೆಯ ಪಾದಗಳನ್ನು ಮುಟ್ಟಿ ಬೆರಳುಗಳನ್ನು ತುಟಿಗೆ ಹಚ್ಚಿಕೊಂಡು, ಆಸ್ಪತ್ರೆ ಬಳಿ ಎಡಕ್ಕೆ ತಿರುಗಿ ಎದುರಾಗುವ ಹಲವರನ್ನು ಮಾತನಾಡಿಸಿ, ಹಲವರಿಗೆ ನಮಸ್ಕಾರ ಹೇಳಿ ಆತ ಅಂಗಡಿ ಬಾಗಿಲು ತೆರೆಯುತ್ತಾನೆ. ಅವನಿಗಿಂತಲೂ ಮುಂಚೆ ಅಲ್ಲಿಗೆ ಬಂದು ನಿಂತ ಚಿಪ್ಪಿಗರ ನಾಮದೇವ, ಲಕ್ಷ್ಮಣ, ಕಾಜಾ ಮಾಡುವ ಇಂತ್ರು ಮಗ ಬಸ್ತು ಮೂವರೂ ಅಂಗಡಿ ಬೀಗ ತೆಗೆದು, ಹಲಗೆಗಳನ್ನು ತೆಗೆದು ಪಕ್ಕದಲ್ಲಿ ಜೋಡಿಸಿ ನಿಲ್ಲಿಸುತ್ತಾರೆ. ಬೋನ ಒಳಗೆ ಹೋಗಿ ಮೇಜು, ಬೀರುಗಳನ್ನು ಒರೆಸಿ, ಚಪ್ಪಲಿ ಕಳಚಿ ಅಂಗಡಿಯ ನಡುವಣ ಗೋಡೆಯ ಮೇಲಿನ ಕ್ರಿಸ್ತನ ಪಟದ ಎದುರು ಮೇಣದ ಬತ್ತಿ ಹಚ್ಚಿ ಕೈ ಮುಗಿದ ಒಂದೆರಡು ನಿಮಿಷ ನಿಲ್ಲುತ್ತಾನೆ.
ಅಷ್ಟರಲ್ಲಿ ನಾಮದೇವ ಮುಂತಾದವರು ಹೊಲಿಗೆ ಯಂತ್ರ ಒರೆಸಿ ಪೆಟ್ಟಿಗೆಯಲ್ಲಿಯ ಹೊಸ ಬಟ್ಟೆ, ಅಳತೆ ಬಟ್ಟೆ-ಅರ್ಧ ಹೊಲಿದ ಬಟ್ಟೆಗಳನ್ನು ಹೊರತೆಗೆದು, ಯಂತ್ರವನ್ನು ಒಂದೆರಡು ಬಾರಿ ತುಳಿದು, ಎಣ್ಣಿ ಹಾಕಿ ಸದ್ದು ಮಾಡುತ್ತಾರೆ. ಅಷ್ಟು ಹೊತ್ತಿಗೆ ಪೇಟೆಯಲ್ಲಿ ಜನರ ಓಡಾಟ ಆರಂಭವಾಗಿ ಯಾರೋ ಜವಳಿ ಕೊಳ್ಳಲು, ಬಟ್ಟೆ ಹೊಲೆಯಲು ಹಾಕಲು ಅಂಗಡಿಯೊಳಗೆ ಬರುತ್ತಾರೆ.
“ಬನ್ನಿ..” ಎಂದು ಬೋನ ಅವರನ್ನು ಸ್ವಾಗತಿಸುತ್ತಾನೆ.
ಯಾರೂ ಇಲ್ಲವೆಂದರೆ ಪಕ್ಕದ ದಿನಸಿ ಅಂಗಡಿಯ ವಿಶ್ವನಾಥ ಶೆಟ್ಟಿ, ಇಲ್ಲ ಎದುರು ಅಂಗಡಿಯ ಸೈಕಲ್ ನಾಗಪ್ಪ-
“ಏನು ಸಾಹುಕಾರ್ರೆ ಕೂತು ಬಿಟ್ಟಿರಿ..” ಎಂದು ಇವನ ಅಂಗಡಿಗೆ ಬರುತ್ತಾರೆ.
ಈಗ ಊರಿನವರಿಗೆ ಬೋನ-
“ಜವಳಿ ಅಂಗಡಿ ಬೋನ ಸಾಹುಕಾರ್ರು” ಎಂದೇ ಪ್ರಖ್ಯಾತನಾಗಿದ್ದಾನೆ.
ಬಲಗಾಲುದ್ದ ಬಾಲ್ತಿದಾರ ಮನೆಬಿಟ್ಟು ಬರುವುದಿಲ್ಲ. ಕಾಲೆಳೆದುಕೊಂಡು ಬರಬೇಕು ಎಂಬುದು ಒಂದು ಕಷ್ಟವಾದರೆ ಬಂದವರನ್ನೆಲ್ಲ ಸುಧಾರಿಸಿ ಕಳುಹಿಸುವುದು ಮತ್ತೊಂದು ಕಷ್ಟ. ಇಡೀ ದಿನ ನಿಂತು ಬಟ್ಟೆ ಥಾನುಗಳನ್ನು ತೆಗೆದು, ದರ ಹೇಳಿ, ಅಳತೆ ಮಾಡಿ, ಚೌಕಾಶಿ ಮಾಡುವವರ ಹತ್ತಿರ ಮಾತನಾಡಿ ಅವರನ್ನು ಕಳುಹಿಸುವುದು ಈಗೀಗ ಆಗುತ್ತಿರಲಿಲ್ಲ. ಬಟ್ಟೆ ಹೊಲಿಯುವುದನ್ನು ಆತ ಹಿಂದೆಯೇ ಬಿಟ್ಟು ಬಿಟ್ಟಿದ್ದ. ಕಣ್ಣು ಮಂದವಾಗತೊಡಗಿದಾಗ ಬಟ್ಟೆ ಹೊಲಿಯಲು ಬೇರೆಯವರನ್ನು ಇರಿಸಿಕೊಂಡು ಈತ ಜವಳಿ ವ್ಯಾಪಾರ ಮಾಡತೊಡಗಿದ್ದ. ರೆಮೇಂದಿಯ ಮದುವೆಯಾಗಿ ಬೋನ ಅಂಗಡಿಗೆ ಬಂದ ನಂತರ ಈ ಕೆಲಸ ಕೂಡ ಸಾಕು ಎನಿಸಿದ್ದರಿಂದ ಆತ ಬೋನನಿಗೆ-
“..ಅಲ್ಲ ಇನ್ನು ನೀವೇ ಅಂಗಡಿ ನೋಡಿಕೊಳ್ಳಿ” ಎಂದ.
“ಇದು ನನಗೆ ಹೊಸದು..” ಎಂದು ಬೋನ ನುಡಿದಾಗ..
“ನಾನು ನಾಲ್ಕು ದಿನ ನಿಮ್ಮ ಜತೆ ಇರತೀನಿ ಬಿಡಿ” ಎಂದು ಹೇಳಿದ್ದ. ಅಂತೆಯೇ ನಾಲ್ಕು ದಿನ ಅಂಗಡಿಯಲ್ಲಿ ಕುಳಿತು ಇವನೇ ವ್ಯಾಪಾರ ಮಾಡುತ್ತ ಎಲ್ಲವನ್ನೂ ಬೋನನಿಗೆ ಹೇಳಿ ಕೊಟ್ಟಿದ್ದ.
ಪಾದರಿ ಗೋನಸ್ವಾಲಿಸರ ಬಟ್ಲರ್ ಆಗಿದ್ದ ಬೋನ ಜವಳಿ ಅಂಗಡಿ ಮಾಲೀಕನಾದದ್ದು ನಾಲ್ಕು ದಿನ ತಮಾಷೆಯ ವ್ಯಂಗ್ಯ ವಿಷಯವಾಗಿತ್ತು. ಪಾದರಿಗಳು ಕೊಟ್ಟ ಹಣದಿಂದ ಬೋನ ಅಂಗಡಿಯಲ್ಲಿ ಕೆಲ ಬದಲಾವಣೆ ಮಾಡಿದ, ಬಟ್ಟೆ ಇರಿಸಲು ಹೊಸ ಗಾಜಿನ ಬೀರು ತರಿಸಿದ. ತಾನು ಕುಳಿತುಕೊಳ್ಳಲು ಒಂದು ಆಸನ ಮೇಜು ಮಾಡಿಸಿದ. ಈವರೆಗೆ ಅಂಗಡಿಗೊಂದು ಹೆಸರು ಇರಲಿಲ್ಲ. ಊರಿನ ಪಾತ್ರೋನ ಆದ ಸಂತ ಜೋಸೆಫ಼ರ ಹೆಸರನ್ನೇ ಅಂಗಡಿಗೆ ಇರಿಸಿದ. ಮೊದಲು ತಮಾಷೆ ಮಾಡಿದ ಜನ ಕ್ರಮೇಣ ತಾವು ಮಾತನಾಡುತ್ತಿದ್ದ ಎಲ್ಲ ವಿಷಯಗಳನ್ನು ಮರೆತರು…ಅಂಗಡಿ ಸಾಹುಕಾರ ಎಂದು ಕರೆಸಿಕೊಳ್ಳುವುದು ಸುಲಭವಾಗಿರಲಿಲ್ಲ. ಸಿಮೋನ, ಪಾಸ್ಕೋಲ ಮುಂತಾದವರನ್ನು ಜನ ಮೇಸ್ತ್ರಿ ಎಂದು ಒಪ್ಪಿಕೊಂಡಿದ್ದರಾದರು ಇವರ ಕೆಲಸ ಕಲ್ಲು ಕೆತ್ತುವುದು, ಕಲ್ಲು ಕಟ್ಟುವುದು, ಸಂಜೆಯಾದ ತಕ್ಷಣ ಮೈತುಂಬ ಕೆಂಬಣ್ಣ ಮಾಡಿಕೊಂಡು ಮನೆಗೆ ಬರುತ್ತಾರೆ. ಆದರೆ ಈತ ಹಾಗಲ್ಲ ಇಡೀ ದಿನ ಗಲ್ಲದ ಮೇಲೆ ಕುಳಿತು ಹಣ ಎಣಿಸಿಕೊಳ್ಳುತ್ತಾನೆ. ಊರಿನ ಇತರೆ ಅಂಗಡಿಗಳವರು ಇವನನ್ನು ತಮ್ಮ ಸರಿ ಸಮಾನರೆಂದು ತಿಳಿಯುತ್ತಾರೆ. ಹೀಗಾಗಿ ಬೋನನ ಸ್ಥಾನ ಅಂತಸ್ಥ ಹೆಚ್ಚಿತು. ಪಾದರಿಗಳ ಬಟ್ಲರ್ ಆಗಿ ಇಗರ್ಜಿಯ ಮಿರೋಣ ಅಗಿ ಜನರಿಗೆ ಚಿರಪರಿಚಿತನಾಗಿದ್ದ ಈತ ಅನಂತರ ಮತ್ತೂ ಗೌರವಕ್ಕೆ ಪಾತ್ರನಾದ.
ಆದರೆ ಒಂದು ವಿಷಯಕ್ಕೆ ಈತ ತುಂಬಾ ನೊಂದುಕೊಂಡ. ಬಾಲ್ತಿದಾರ ಅಂಗಡಿಗೆ ಬರುವುದು ನಿಲ್ಲಿಸಿ, ತಾನೆ ಅಂಗಡಿಯ ಸಮಸ್ತ ಜವಾಬ್ದಾರಿಯನ್ನು ನಿರ್ವಹಿಸಲಾರಂಭಿಸಿದ ನಂತರವೂ ಇಗರ್ಜಿಯ ಕೆಲಸ ಕಾರ್ಯಗಳ ಬಗ್ಗೆ ನಿರ್ಲಕ್ಷ್ಯ, ತಿರಸ್ಕಾರ ವ್ಯಕ್ತಪಡಿಸಿರಲಿಲ್ಲ ಈತ. ಅದು ದೇವರ ಕೆಲಸ, ಅದು ಮಾಡುವುದರಲ್ಲಿ ಯಾವುದೇ ಸಣ್ಣತನ, ಕೀಳರಿಮೆ ಇಲ್ಲ ಅಂದುಕೊಂಡಿದ್ದ. ಹಿಂದಿನಂತೆಯೆ ಬಾಗಿಲು ತೆಗೆ, ಗಂಟೆ ಹೊಡಿ, ದೇವರ ಪೀಠದ ಮೇಲೆ ಹೊಸ ಬಟ್ಟೆ ಹಾಸು, ಮೇಣದ ಬತ್ತಿ ಹಚ್ಚಿಡು, ಹೂದಾನಿಗಳನ್ನು ಸಜ್ಜು ಮಾಡು ಎಂದು ಆಸಕ್ತಿಯಿಂದ ಕೆಲಸ ನಿರ್ವಹಿಸುತ್ತಿದ್ದ.
ಇಲ್ಲಿಯ ಕೆಲವೊಂದು ಕೆಲಸಗಳು ಕ್ರಮೇಣ ಕಷ್ಟಕರವೆನಿಸಿದವು. ಮನೆಯಿಂದ ಬಂದು ಇದನ್ನೆಲ್ಲ ಮಾಡಬೇಕಲ್ಲ ಅಂದುಕೊಂಡಾಗ ಫ಼ರಾಸ್ಕ ಈ ಕೆಲಸಗಳನ್ನು ತನ್ನ ಕೈಗೆತ್ತಿಕೊಂಡ. ಇಗರ್ಜಿಯ ಬಳಿಯೇ ಇರುತ್ತಿದ್ದ ಅವನಿಗೆ ಈ ಎಲ್ಲ ಕೆಲಸಗಳನ್ನು ಮಾಡುವುದು ಸುಲಭವೂ ಆಗಿತ್ತು. ಆದರೂ ಮಿರೋಣ ಕೆಲಸವನ್ನು ಈಗ ಮುಂದುವರೆಸಿದ. ಜತೆಗೆ ಪೂಜೆಯ ನಡುವೆ ಜನರಿಂದ ಕಾಣಿಕೆ ಸಂಗ್ರಹಿಸುವ ಕೆಲಸವನ್ನೂ.
ಎಲ್ಲ ಇಗರ್ಜಿಗಳಲ್ಲೂ ಈ ಸೇವೆ ಮಾಡಲು ಎಲ್ಲರಿಗೂ ಅವಕಾಶವಿರಲಿಲ್ಲ. ಪಾದರಿಗೆ ಹತ್ತಿರವಿರುವವರು, ಜನರ ಗೌರವಕ್ಕೆ, ನಂಬಿಕೆಗೆ ಅರ್ಹರಾಗಿರುವವರು, ಪ್ರಾಮಾಣಿಕರು ಈ ಕಾರ್ಯ ಮಾಡುತ್ತಿದ್ದರು. ಹಿರಿಯರು, ವಯಸ್ಸಾದವರು, ವಿಶೇಷವಾಗಿ ಗುರ್ಕಾ ಇಲ್ಲವೆ ಮಿರೋಣ ಕಾಣಿಕೆ ಡಬ್ಬಿಯನ್ನು ಹಿಡಿದು ಜನರಿಂದ ಕಾಣಿಕೆ ಸಂಗ್ರಹಿಸುವುದಿತ್ತು. ಅಂತೆಯೇ ಬೋನ ತನ್ನ ಪಾಡಿನ ಕೆಲಸವನ್ನು ಮುಂದುವರೆಸಿದ್ದ.
ಒಂದು ದಿನ ಆತ ಕಾಣಿಕೆ ಡಬ್ಬಿಯನ್ನು ಪಾದರಿ ಮಸ್ಕರಿನಾಸರ ಬಂಗಲೆಯಲ್ಲಿ ಇರಿಸಿ ತಿರುಗಿ ಹೊರಟಾಗ ಅವರು
“ಬರ್ನಾಡೆಟ..” ಎಂದು ಕರೆದರು.
“ಪದ್ರಾಬ..” ಆತ ನಿಂತ.
“ಅಲ್ಲ ಇಲ್ಲಿಯ ಜನರಿಗೆ ಇಜ್ಮೋಲ ಹಾಕುವ ಅಭ್ಯಾಸವಿಲ್ಲವೇನು?” ಅಚ್ಚರಿಯಾಯಿತು ಬೋನನಿಗೆ. ಈವರೆಗೆ ಈ ಬಗ್ಗೆ ಆತ ವಿಚಾರ ಮಾಡಿರಲಿಲ್ಲ. ಪಾದರಿ ಗೋನಸ್ವಾಲಿಸ್ ಎಂದೂ ಇಂತಹ ಪ್ರಶ್ನೆ ಕೇಳುತ್ತಿರಲಿಲ್ಲ. ಎರಡು ಮೂರು ತಿಂಗಳಿಗೊಮ್ಮೆ ತುಂಬಿಕೊಂಡಿರುವ ಕಾಣಿಕೆ ಡಬ್ಬಿಗಳ ಬೀಗ ತೆಗೆದು ಚಿಲ್ಲರೆಯನ್ನು ಅಂಗಡಿಗಳಿಗೆ ಕೊಟ್ಟು ಗಟ್ಟಿ ರೂಪಾಯಿ ತರಲು ಹೇಳುತ್ತಿದ್ದರು. ಆ ಕೆಲಸವನ್ನು ತಾನು ಮಾಡುತ್ತಿದ್ದೆ.
“ಪದ್ರಾಬ..ಹಣ..” ಎಂದು ನೋಟುಗಳನ್ನು ಗಟ್ಟಿ ನಾಣ್ಯಗಳನ್ನು ಅವರ ಮುಂದಿರಿಸಿದಾಗ ಅವರು
“ಸರಿ” ಅನ್ನುತ್ತಿದ್ದರು.
ಆದ್ರೆ ಈಗ ಇದೇನು ಇಂತಹಾ ಪ್ರಶ್ನೆ?
“ಎಲ್ಲ ಜನ ಕಾಣಿಕೆ ಹಾಕತಾರೆ ಪದ್ರಾಬ..”
“ಆದರೂ ಜನ ತುಂಬಾ ಇರತಾರೆ..ಕಾಣಿಕೆ ಕಡಿಮೆ ಇರುತ್ತೆ..”
ಪಾದರಿ ಮಸ್ಕರಿನಾಸರ ಮಾತಿನಲ್ಲಿ ಯಾವುದೋ ಕೆಟ್ಟ ವಾಸನೆ ಮೂಗಿಗೆ ಹೊಡೆದು ಬೋನ ಕಸಿವಿಸಿಗೊಂಡ. ಇಗರ್ಜಿಗೆ ಬರುವ ಜನ ಕಾಣಿಕೆ ಡಬ್ಬಕ್ಕೆ ಹಣ ಹಾಕುತ್ತಾರೆ. ಆದರೆ ಅದು ಪಾದರಿಯ ಕೈಗೆ ಬರುವಷ್ಟರಲ್ಲಿ ಹಣ ಮಾಯವಾಗಿರುತ್ತದೆ ಎಂಬುದು ಇವರ ಅಭಿಪ್ರಾಯವಾಗಿರಬಹುದೆ? ಕೆಲ ಇಗರ್ಜಿಗಳಲ್ಲಿ ಹೀಗೂ ಆಗುವುದನ್ನು ತಾನು ಬಲ್ಲೆ. ಕಾಣಿಕೆ ಡಬ್ಬಿಯ ಬೀಗದ ಕೈ ಮಿರೋಣ ಇಲ್ಲವೇ ಗುರ್ಕಾರ ಇರಿಸಿಕೊಂಡು ಈ ಡಬ್ಬಿಯಿಂದ ಹಣ ತೆಗೆಯುವುದೂ ಉಂಟು. ಈ ಬಗೆಯ ಅನುಮಾನಕ್ಕೆ ಆಸ್ಪದವಿಲ್ಲದ್ದರಿಂದ ಬೀಗದ ಕೈ ತನ್ನ ಬಳಿಯಿತ್ತು. ಹೊಸ ಪಾದರಿ ಬಂದ ತಕ್ಷಣ ಬೀಗದ ಕೈಯನ್ನು ಅವರಿಗೆ ಒಪ್ಪಿಸಿದ್ದೆ. ಆದರೂ ಈ ಅಪವಾದವೇ? ಬೇರೊಂದು ಬೀಗದ ಕೈ ಇರಿಸಿಕೊಂಡು ತಾನು ಈ ಕೆಲಸ ಮಾಡುತ್ತಿರುವುದಾಗಿ ಪಾದರಿ ನಂಬುತ್ತಿರಬಹುದೆ?
ಆ ವಾರವಿಡೀ ಯೋಚಿಸಿದ ಬೋನ.
ನಂತರದ ಭಾನುವಾರ, ಬೆಳಿಗ್ಗೆ ಇಗರ್ಜಿಗೆ ಬಂದಾಗ ಪಾದರಿ-
’ಬೆರ್ನಾಡೆಟ’ ಎಂದರು.
“ಪದ್ರಾಬ”
“ಇವತ್ತಿನಿಂದ ಇಜ್ಮೋಲಿನ ಡಬ್ಬೀನಾ ಫ಼ರಾಸ್ಕ ತೊಕೊಂಡು ಹೋಗಲಿ..”
ಒಂದೆರಡು ನಿಮಿಷ ಏನೂ ಮಾತನಾಡಲಾಗಲಿಲ್ಲ ಬೋನನಿಂದ. ನಂತರ
“ಆಯ್ತು ಪದ್ರಾಬ” ಎಂದ ಆ ಭಾನುವಾರ ಏಕೋ ತಾನು ಭಾಗವಹಿಸಿದ ಪೂಜೆ ಅಪೂರ್ಣ ಎನಿಸಿತು.
ಮನೆಗೆ ಹೋದಾಗ ರೆಮೇಂದಿ-
“ಏನು ಹಾಗೆ..ಅವನು ಕಾಣಿಕೆ ಡಬ್ಬಿ ಹಿಡಿದುಕೊಂಡು ಬಂದಿದ್ದ” ಎಂದು ಕೇಳಿದಳು.
“ಇನ್ನು ಮುಂದೆ ಹಾಗೇನೆ” ಎಂದ ಬೋನ. ಆದರೆ ಈ ನೋವು ಕಡಿಮೆಯಾಗುತ್ತಿದೆ ಅನ್ನುವಾಗ ಬೇರೊಂದು ನೋವನ್ನು ಅವನು ಎದುರಿಸಬೇಕಾಯಿತು.
ಪಾದರಿ ಗೋನಸ್ವಾಲಿಸರು ಊರು ಬಿಡುವ ಸಂದರ್ಭದಲ್ಲಿ ಬಂದು ಊರು ಸೇರಿಕೊಂಡ ವಲೇರಿಯನ ಡಯಾಸ ಇಗರ್ಜಿಯ ಗಾಯನಕ್ಕೆ ಪಿಟೀಲಿನ ನೆರವು ನೀಡುತ್ತಿದ್ದವನು ಕ್ರಮೇಣ ಎಲ್ಲ ವಿಷಯಗಳಲ್ಲೂ ಮೂಗು ಹಾಕತೊಡಗಿದ. ಪಾದರಿ ಗೋನಸ್ವಾಲಿಸ್ ಹೋಗಿ ಪಾದರಿ ಮಸ್ಕರಿನಾಸ ಬಂದ ನಂತರವಂತೂ ಇವನ ಪ್ರಾಬಲ್ಯ ಹೆಚ್ಚತೊಡಗಿತು.
ಪೂಜೆಗೆ ಮುನ್ನ ಜಪ ಹೇಳಿಕೊಡುವುದನ್ನು ಈತ ಚಾಲ್ತಿಗೆ ತಂದ. ಪೂಜಾ ಸಮಯದಲ್ಲಿ ಜನ ಯಾವಾಗ ನಿಲ್ಲಬೇಕು, ಯಾವಾಗ ಕೂರಬೇಕು ಎಂಬುದನ್ನು ತನ್ನ ಕೈಲಿರುವ ಕೀರ್ತನೆಗಳ ಪುಸ್ತಕದ ಮೇಲೆ ಟಪ ಎಂದು ಹೊಡೆದು ಜನರಿಗೆ ತಿಳಿಸುವ ಒಂದು ಕ್ರಮ ರೂಢಿಗೆ ಬಂದಿತು. ಇಗರ್ಜಿಯಲ್ಲಿ ತೂಕಡಿಸುವ, ತಂಟೆ ಮಾಡುವ, ಮಾತನಾಡುವ ಮಕ್ಕಳ ತಲೆಗೆ ಈ ಪುಸ್ತಕದಿಂದಲೇ ಹೊಡೆದು ಬುದ್ಧಿ ಕಲಿಸತೊಡಗಿದ. ಬೋನನಿಗೆ ಗೊತ್ತಿಲ್ಲದ ಕೆಲ ಕೀರ್ತನೆಗಳನ್ನು ಹಾಡತೊಡಗಿದ. ಹ್ಯಾಗೋ ಇವನ ಕಡೆಯವರಾಗಿ ಡಾಕ್ಟರ್ ರೇಗೊ, ಜಾನ ಡಯಾಸ ಮತ್ತಿತರರು ಇದ್ದುದರಿಂದ ಈ ಕೀರ್ತನೆಗಳನ್ನು ಹಾಡುವವರೂ ಇವನಿಗೆ ಸಿಕ್ಕರು. ಈ ಕೀರ್ತನೆಗಳು ಇವರ ಜನರಿಗೆ ಹಿಡಿಸಿದ್ದರಿಂದಲೂ ಇವನಿಗೆ ಅನುಕೂಲವಾಯಿತು. ಪೂಜೆಯ ನಡುವೆ ಬೋನ ಒಂದು ಕೀರ್ತನೆ ಹಾಡಬೇಕೆಂದಿರುವಾಗ ಈತ ಬೇರೊಂದು ಕೀರ್ತನೆ ಎತ್ತಿಕೊಂಡು ಬೋನನನ್ನು ಗಲಿಬಿಲಿಗೊಳಿಸಿದ. ಹೀಗೆ ಐದಾರು ಬಾರಿ ಆಗಿ ಕೊನೆಗೆ ಬೋನ ಹಾಡುವುದನ್ನು ವಲೇನಿಯನಗೇನೆ ಬಿಟ್ಟುಕೊಡುವ ಪರಿಸ್ಥಿತಿ ಬಂದಿತು.
ಬೋನನಲ್ಲಿ ಒಂದು ಬಗೆಯ ವಿನಯವಿತ್ತು. ತಾನು ಪಾದರಿ ಗೋನಸ್ವಾಲಿಸರ ಬಟ್ಲರ್ ಆಗಿದ್ದವ ಎಂಬ ಭಾವನೆ ಇತ್ತು. ನಾನು ಮಾಡುತ್ತಿರುವುದು ದೇವರ ಸೇವೆ ಎಂಬ ಭಕ್ತಿ ಇತ್ತು. ಹೀಗಾಗಿ ಆತ ಇಗರ್ಜಿಯಲ್ಲಿ ಎಂದೂ ಅಹಂಕಾರ, ಆಟಾಟೋಪ ಗಳನ್ನು ಪ್ರದರ್ಶಿಸುತ್ತಿರಲಿಲ್ಲ. ಭಯ ಭಕ್ತಿಯಿಂದ ಮೆಲುದನಿಯಲ್ಲಿಯೇ ವರ್ತಿಸುತ್ತಿದ್ದ. ಆದರೆ ವಲೇರಿಯನ ಇದಕ್ಕೆ ವಿರುದ್ಧವಾಗಿದ್ದ. ಆತ ಹಿಂದೆಲ್ಲ ಈ ಕಾರ್ಯವನ್ನು ಸಾಕಷ್ಟು ಮಾಡಿದ್ದರಿಂದ ಏನೋ ಅಧಿಕಾರ ವಾಣಿಯಿಂದ ತನ್ನ ಕೆಲಸ ಮಾಡಲಾರಂಬಿಸಿದ. ಟಪಟಪ್ ಎಂದು ಬೂಟುಗಾಲಿನಿಂದ ನೆಲ ಒದೆಯುತ್ತ ಆತ ಇಗರ್ಜಿಯಲ್ಲಿ ತಿರುಗಾಡುತ್ತಿದ್ದರೆ ಜನ ಬೆಚ್ಚಿ ಬೀಳುತ್ತಿದ್ದರು.
ಒಂದು ದಿನ ಪಾದರಿ ಮಸ್ಕರಿನಾಸ ಬೋನನನ್ನು ಕರೆದು-
“ಇನ್ನು ಮುಂದೆ ಮಿರೋಣ ಕೆಲಸ ಅವರು ಮಾಡಲಿ..ಅವರಿಗೆ ಎಲ್ಲ ಗೊತ್ತಿದೆ..” ಎಂದರು.
ಬೋನ ಎರಡನೇ ಮಾತನಾಡಲಿಲ್ಲ. ಅಂದಿನಿಂದ ಆತ ಬಾಗಿಲ ಬಳಿ ಪವಿತ್ರ ಜಲ ಇರಿಸುವ ಕರಂಡಕದ ಬಳಿ ತನಗೊಂದು ಜಾಗ ಮಾಡಿಕೊಂಡ.
“ಬೋನ ಯಾಕೆ ಹೀಗಾಯಿತು?” ಎಂದು ಕೇಳಿದವರಿಗೆ-
“ಇರಲಿ ಬಿಡಿ..ಯಾರು ಮಾಡಿದರೇನು?” ಎಂದು ಉತ್ತರಿಸಿದ. ಆದರೆ ಅವನ ಹೃದಯದ ಈ ನೋವು ಕಡಿಮೆಯಾಗಲು ದಿನಗಳೇ ಬೇಕಾದವು.
ಬಹಳ ಜನ ಈ ವಿಷಯವನ್ನು ಪ್ರಸ್ತಾಪಿಸಿದರು.
ಗುರ್ಕಾರ ಸಿಮೋನ, ಪಾಸ್ಕೋಲ ಮೇಸ್ತ್ರಿ, ಕೈತಾನ, ಇಂತ್ರು, ಕೊನೆಗೆ ಸುಣ್ಣದ ಅನ್ನಾಬಾಯಿ ಕೂಡ ಈ ವಿಷಯವನ್ನು ಅಲ್ಲಲ್ಲಿ ಎತ್ತಿ ಮಾತನಾಡಿಕೊಂಡರು.
ಬಹಳ ವರ್ಷಗಳಿಂದ ಕಾಣಿಕೆ ಡಬ್ಬಿ ಹಿಡಿದು ಜನರ ನಡುವೆ ಬಂದು ಕಾಣಿಕೆ ಸಂಗ್ರಹಿಸುತ್ತಿದ್ದ ಬೋನನ ಬದಲಿಗೆ ಫ಼ರಾಸ್ಕ ಬರತೊಡಗಿದ್ದ. ಬೋನ ಎಂದೂ ಕಾಣಿಕೆ ಹಾಕುವಂತೆ ಜನರನ್ನು ಬಲಾತ್ಕರಿಸುತ್ತಿರಲಿಲ್ಲ. ಕಾಣಿಕೆ ಹಾಕಬೇಕೆನ್ನುವವರು ಕೈ ಚಾಚಿದರೆ ಈತ ಅವರತ್ತ ಹೋಗುತ್ತಿದ್ದ. ಆದರೆ ಫ಼ರಾಸ್ಕ ಪ್ರತಿಯೊಬ್ಬರ ಮುಂದೆ ಕಾಣಿಕೆ ಡಬ್ಬಿ ಹಿಡಿದು ಕುಲುಕಿಸಿ ಅವರಿಂದ ಹಣ ಕೀಳುವಂತೆ ವರ್ತಿಸತೊಡಗಿದ.
ಮಿರೋಣ ಬೇರೊಂದು ರೀತಿಯಲ್ಲಿ ಜನರನ್ನು ಹದ್ದು ಬಸ್ತಿನಲ್ಲಿ ಇಡತೊಡಗಿದ. ದಿವ್ಯ ಪ್ರಸಾದ ಸ್ವೀಕರಿಸಲು ಹೋಗುವವರನ್ನು ಸಾಲಾಗಿ ಹೋಗಿ. ನಿಧಾನ ಹೋಗಿ ಅವರದ್ದು ಆಗಲಿ ನಿಲ್ಲಿ ಎಂದು ತಡೆಯುವುದು, ಮಕ್ಕಳ ಕಿವಿ ಹಿಂಡುವುದು, ಹೆಂಗಸರನ್ನು ಬೈಯುವುದು. ಗಂಡಸರಿಗೆ-
“ನಿಮಗೆ ಅಷ್ಟೂ ತಿಳಿಯುವುದಿಲ್ಲವೇ?” ಎಂದು ವಿನಾಕಾರಣ ಗದರಿಸುವುದು ಮಾಡತೊಡಗಿದ. ಫ಼ರಾಸ್ಕ, ವಲೇರಿಯನ ಡಯಾಸ ಈರ್ವರನ್ನೂ ಜನ ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ಹೀಗೆಂದು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡರು ಕೂಡ.
ಈ ವಿಷಯ ಬೋನನವರೆಗೂ ಬಂದಿತು. ಆದರೆ ಬೋನ ಇದನ್ನು ಬೆಳೆಸಲು ಹೋಗಲಿಲ್ಲ.
“ಹೋಗಲಿ ಬಿಡಿ ಪಾದರಿಗಳಿಗೆ ಯಾರ ಮೇಲೆ ನಂಬಿಕೆ ಇದೆಯೋ ಅವರೇ ಈ ಕೆಲಸ ಮಾಡಿದರೆ ಚೆಂದ..” ಎಂದ.
ಈ ನೋವನ್ನು ನುಂಗಿಕೊಂಡು ಉಳಿದ ಬೋನ.
ತಟ್ಟನೆ ಅವನಿಗೆ ಹಿಂದಿನದೆಲ್ಲ ನೆನಪಿಗೆ ಬರುತ್ತಿತ್ತು. ತಾಯಿ ತನ್ನನ್ನು ಬಿಟ್ಟು ಹೋದದ್ದರ ಅಸ್ಪಷ್ಟ ನೆನಪು. ನಂತರ ಪಾದರಿ ಗೋನಸ್ವಾಲಿಸರು ತಾಳ್ಮೆಯಿಂದ, ಪ್ರೀತಿಯಿಂದ ತನ್ನನ್ನು ಬೆಳೆಸಿದ್ದು. ಅವರಿಂದಲೇ ತನಗೊಂದು ವ್ಯಕ್ತಿತ್ವ ಬಂದದ್ದು ಪಾದರಿಯ ಸೇವೆ. ಆ ಮೂಲಕ ಇಗರ್ಜಿ ಮಾತೆಯ ಸೇವೆ ತಾನು ತೊಡಗಿದ್ದು. ಕ್ರಿಸ್ತ ಪ್ರಭುವಿನ ಮೇಲೆ ತನ್ನ ನಂಬಿಕೆ ಗಾಢವಾಗುತ್ತ ಹೋದದ್ದು. ನಿತ್ಯ ಪ್ರಾರ್ಥನೆ, ಭಾನುವಾರದ ಪೂಜೆ, ಪಾಪ ನಿವೇದನೆ, ದಿವ್ಯಪ್ರಸಾದ ಸ್ವೀಕಾರ ಇತ್ಯಾದಿಗಳಿಂದ ಬದುಕಿಗೊಂದು ಅರ್ಥ ಭರವಸೆ ಮೂಡಿದ್ದು. ದಿನಗಳು ಉರುಳಿದ ಹಾಗೆ ಪೂರ್ವ ನಿಶ್ಚಿತವೆಂಬಂತೆ ತನ್ನ ಜೀವನ ಒಂದು ದಾರಿ ಹಿಡಿದಿರುವುದು. ಇಲ್ಲಿ ಗೌರವ, ಮಾನ, ಸನ್ಮಾನ, ಸಂತಸ, ಶ್ರೀಮಂತಿಕೆ ಎಲ್ಲವೂ ಒದಗಿ ಬಂದಿದೆ. ಈ ನಡುವೆ ಇಂತಹ ಸಣ್ಣ ಪುಟ್ಟ ವಿದ್ಯಮಾನಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಡಬಾರದು ಅಂದುಕೊಂಡ ಆತ. ದೇವರ ಮನಸ್ಸಿನಲ್ಲಿ ಏನಿದೆಯೋ ಅದು ಆಗುತ್ತದೆ. ಹೀಗಾಯಿತಲ್ಲ ಎಂದು ಕೊರಗುವುದು ಏಕೆ? ಯಾರೋ ಬಂದರೆಂದು ಬೋನ ಏಳುತ್ತಾನೆ.
“ಬನ್ನಿ…ಏನು ಬೇಕು” ಎಂದು ಕೇಳುತ್ತಾನೆ.
ಹತ್ತಿರದ ಮಡೆನೂರಿನವರು ಮದುವೆ ಜವಳಿ ತೆಗೆಯಲೆಂದು ಅಂಗಡಿಗೆ ಬಂದು ನುಗ್ಗಿದರು. ಅಧಿಕ ಸಂಖ್ಯೆಯ ಹೆಂಗಸರು, ಅವರ ಜತೆ ಮಕ್ಕಳು, ಮೂರು ನಾಲ್ಕು ಜನ ಗಂಡಸರು, ಬೋನನ ಅಂಗಡಿ ತುಂಬಿ ಹೋಯಿತು. ಗಲಾಟೆಯೋ ಗಲಾಟೆ. ಸೀರೆ ಪಂಚೆ, ಅಂಗಿ ಬಟ್ಟೆ, ಚಡ್ಡಿ ಬಟ್ಟೆ, ನಿತ್ಯ ಉಡುವುದು ಧಾರೆ ಸೀರೆ ಎಂದು ಬಟ್ಟೆಯನ್ನು ಹೊರತೆಗೆದು ಮುಂದೆ ರಾಶಿ ಹಾಕಿಕೊಂಡರು. ಬೆಲೆ ಬಾಳುವ ಸೀರೆಗಳನ್ನು ಗಂಟು ಕಟ್ಟಿ ಇರಿಸಿದ್ದು ಆ ಗಂಟುಗಳನ್ನೂ ಬಿಚ್ಚಿ ನೋಡಿದರು. ಜರಿ, ಅಂಚು, ಮೈ, ಸೆರಗು ಎಂದೆಲ್ಲ ಪರೀಕ್ಷೆಯಾಯಿತು. ದಾರ ಎಳೆದು ಕಡ್ಡಿ ಗೀರಿ ಪರೀಕ್ಷೆ ಮಾಡಿದರು. ಒಳಗೆ ಬೆಳಕಿಲ್ಲವೆಂದು ಹೊರಗೆ ಕೊಂಡೊಯ್ದು ಬಿಸಿಲಲ್ಲಿ ನೋಡಿದರು.
“ಅಪ್ಪಿ..ಇದು ಗನಾಗೈತೇನೆ?”
“ತೆಂಗಿ ಇದು ಆದೀತೇನೋ ನೋಡೆ”
“ಅವ್ವ..ಇದಕೇ ಏನಾಗೈತೆ?”
“ಚಿಗವ್ವ ಇದು ಆಗಾಕಲ್ಲೇ”
ಎಂದು ಪರಸ್ಪರ ಕೇಳಿದರು.
ಊಟವನ್ನು ಮರೆತು ಜವಳಿಯ ನಡುವೆ ಮಾತನಾಡುತ್ತ ಕುಳಿತರು. ಮಕ್ಕಳಿಗೆ ಹಾಲು ಕುಡಿಸಿದರು. ಇವರು ಕವಳ ಜಗಿದರು. ಗಂಡಸರು ಹೊರ ಹೋಗಿ ಬಂದರು. ಮೂರು ಗಂಟೆಗೆ ವ್ಯಾಪಾರ ಮುಗಿದು-
’ಏಷ್ಟಾತು ನೋಡ್ರಿ..ದರ ನೋಡಿ ಹಾಕಿ..ಮದುವೆ ಜವಳೀನೆಲ್ಲ ನಾವು ಇಲ್ಲೇ ಕೊಂಡಿದೀವಿ..” ಎಂದ ಯಜಮಾನ.
ಬೋನ ಕುಳಿತು ಪಟ್ಟಿ ಮಾಡಿದ. ಇಷ್ಟು ಹಣವಾಯಿತು ಎಂದ. ಅಲ್ಲೂ ಅವರು ಚೌಕಾಶಿ ಮಾಡಿದರು. ನಂತರ ಯಜಮಾನ ಎದ್ದು ನಿಂತ. ಚೀಲದಿಂದ ತೆಂಗಿನಕಾಯಿ ವಿಳೇದೆಲೆ ಅಡಕೆ ತೆಗೆದು ಮುಂದೆ ಚಾಚಿದ. ಬೋನ ಅದನ್ನು ಬೊಗಸೆಯೊಡ್ಡಿ ತೆಗೆದುಕೊಂಡ. ಒಂದು ಬಿಳಿ ವಸ್ತ್ರದಲ್ಲಿ ಕಟ್ಟಿದ ಜವಳಿಯ ಗಂಟನ್ನು ಯಜಮಾನನ ಕೈಗಿತ್ತ. ಅವರು ಹಣ ಎಣಿಸಿ ಕೊಟ್ಟು ಅಂಗಡಿಯಿಂದ ಹೊರಟರು. ಪ್ರಾರಂಭದಲ್ಲಿ ಇದೆಲ್ಲ ವಿಚಿತ್ರವೆನಿಸುತ್ತಿತ್ತು ಬೋನನಿಗೆ. ಮದುವೆ ಜವಳಿಕೊಳ್ಳಲು ಬಂದವರು ಅದೊಂದು ಪವಿತ್ರ ಕಾರ್ಯ ಎಂದು ತಿಳಿಯುತ್ತಿದ್ದರು. ಬೋನ ಈಗ ಅದಕ್ಕೆ ಹೊಂದಿಕೊಂಡಿದ್ದ. ಅವರು ಕೊಟ್ಟ ಹಣವನ್ನು ಟ್ರೆಜರಿಯಲ್ಲಿರಿಸಿ ಕಿಲಿ ತಿರುಗಿಸಿ ಏಳುತ್ತಿರಲು ಅಂಗಡಿ ಬಾಗಿಲಲ್ಲಿ ಮತ್ತಾರೋ ಕಾಣಿಸಿಕೊಂಡರು. ತಿರುಗಿ ನೋಡಿದರೆ ಗುರ್ಕಾರ ಸಿಮೋನ.
“ಬನ್ನಿ ಸಿಮೋನ ಮಾಮ” ಎಂದು ಎದ್ದು ನಿಂತ ಬೋನ.
ಸಿಮೋನನ ಮುಖ ಎಂದಿನಂತಿರಲಿಲ್ಲ. ಎಲ್ಲಿಯೋ ಕೆಲಸದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದವ ಅಲ್ಲಿಂದಲೇ ಬಂದಂತಿತ್ತು. ಕಾಲಿನ ಚಪ್ಪಲಿಗಳಿಗೆ ಕೆಂಪು ಮಣ್ಣು ಮೆತ್ತಿಕೊಂಡಿತ್ತು. ಅವನು ಉಟ್ಟ ಬಟ್ಟೆಯೂ ಮಲಿನವಾಗಿತ್ತು. ಮುಖ್ಯವಾಗಿ ಏನೋ ಸಿಟ್ಟು ಉದ್ವೇಗದಿಂದ ಆತ ತುಸು ಕೆಂಪೇರಿದ್ದ.
“ಕುತ್ಕೊಳಿ” ಎಂದು ಮರದ ಕುರ್ಚಿಯನ್ನು ಮುಂದೆ ಮಾಡಿದ ಬೋನ. ಸಿಮೋನ ಕುಳಿತ. ಅತ್ತ ಇತ್ತ ನೋಡಿದ. ರಸ್ತೆಯ ಮೇಲಿನ ಚಟುವಟಿಕೆಗಳನ್ನು ಗಮನಿಸಿದ. ನಂತರ ತಾನು ಹೇಳಲು ಬಂದ ವಿಷಯವನ್ನು ಹೇಳಲೇಬೇಕೆಂಬ ಒತ್ತಡದಿಂದ
“ಬೋನಾ..” ಎಂದ.
ಪಾದರಿ ಗೋನಸ್ವಾಲಿಸ್ ಇರುವ ತನಕ ಕುಜ್ನೇರ ಬೋನನನ್ನು ಬೇರೊಂದು ಹೆಸರಿನಿಂದ ಕರೆಯಬೇಕಾಗಿರಲಿಲ್ಲ. ಆತ ಊರಿನ ಎಲ್ಲರ ಪಾಲಿಗೂ ಬೋನಾ ಆಗಿದ್ದ. ಆದರೆ ಈಗ ಆತ ಬೋನಾ ಸಾಹುಕಾರ, ಬಲಗಾಲುದ್ಧ ಬಾಲ್ತಿದಾರನ ಅಳಿಯ. ಊರಿನಲ್ಲಿ ಅವನಿಗೆ ಹೆಚ್ಚಿನ ಸ್ಥಾನಮಾನಗಳಿವೆ. ಊರ ಇತರೇ ಜಾತಿಯವರು ಅವನನ್ನು ತುಂಬಾ ಗೌರವದಿಂದ ಕಾಣುತ್ತಾರೆ. ಹೀಗಾಗಿ ಸಿಮೋನನಿಗೆ ಬೋನನನ್ನು ಹಿಂದಿನಂತೆ ಕರೆಯಲು ಮುಜುಗರವಾಗುತ್ತದೆ. ಇತರರು ಎದಿರು ಇದ್ದಾಗ ಅವನು ಏಕವಚನದಲ್ಲಿ ಕರೆಯಲು ಮಾತ್ರ ಇಷ್ಟ ಪಡುವುದಿಲ್ಲ. ಅವರಿಬ್ಬರೇ ಇದ್ದಾಗ ಮಾತ್ರ ಬೋನ ಅನ್ನುತ್ತಾನೆ. ಈ ಎರಡು ಅಕ್ಷರಗಳನ್ನು ಉಚ್ಚರಿಸುವಾಗಲೂ ಅವುಗಳಲ್ಲಿ ಏನೋ ಒಂದು ಮಾಧುರ್ಯ ತುಂಬುತ್ತಾನೆ.
“ಹೇಳಿ ಸಿಮೋನ ಮಾಮ ಏನು ವಿಷಯ?”
“ಆ ಕೈತಾನ ನಿನ್ನಲ್ಲಿಗೆ ಬಂದಿದ್ದನೇನು?”
“ಯಾರು ಅಂಕೋಲದ ಕೈತಾನನ?”
ಊರಿನಲ್ಲಿ ಇಬ್ಬರು ಕೈತಾನನಿರುವುದು ಒಂದು ಸಮಸ್ಯೆಯೆ. ಓರ್ವ ಬಳ್ಕೂರಿನವ ಇನ್ನೋರ್ವ ಅಂಕೋಲದವ. ಅಂಕೋಲದ ಕೈತಾನ ತಟ್ಟನೆ ಎಲ್ಲರ ಗಮನಕ್ಕೂ ಬರುತ್ತಿದ್ದ. ಭಾರಿ ವಂಚನೆಗೆ ಒಳಗಾಗಿ ತಂದೆಯ ಆಸ್ತಿಯಲ್ಲಿ ಒಂದು ತೆಂಗಿನಮರವೂ ಸಿಗದೆ ಕಲ್ಲು ಕೆತ್ತುವ ಕಷ್ಟದ ಕೆಲಸ ಮಾಡಿಕೊಂಡು ಬರುತ್ತಿದ್ದ ಕೈತಾನ.
ಮನೆ ತುಂಬ ಹೆಣ್ಣು ಮಕ್ಕಳಾಗಿದ್ದರು. ಕೊನೆಯವನಾಗಿ ಮಗ ದುಮಿಂಗ ಹುಟ್ಟಿದ್ದ. ಒಬ್ಬೊಬ್ಬರಾಗಿ ಹೆಣ್ಣು ಮಕ್ಕಳ ಮದುವೆ ಮಾಡಿ ಅವರವರ ಗಂಡಂದಿರ ಮನೆಗೆ ಕಳುಹಿಸಿದ್ದ. ಕೊನೆಯ ಮಗಳ ಮದುವೆ ಮಾಡಬೇಕಿತ್ತು. ಮಗ ಓದಿನಲ್ಲಿ ತುಸು ದಡ್ಡ. ಹೆಣ್ಣು ಮಕ್ಕಳ ಮದುವೆಯ ಹಿಂದೆಯೇ ಅವರ ಹೆರಿಗೆಯ ಹೊರೆ ಬೇರೆ. ಬಾಣಂತನ, ಮಗುವಿನ ನಾಮಕರಣ ಎಲ್ಲ ಮುಗಿಸಿ ಮಗಳನ್ನು ತಿರುಗಿ ಗಂಡನ ಮನೆಗೆ ಕಳುಹಿಸುವಷ್ಟರಲ್ಲಿ ಕೈತಾನ ಒಣಗಿದ ಕುಂಬಳ ಬಳ್ಳಿಯಂತೆ ನೆಲ ಹಿಡಿಯುತ್ತಿದ್ದ.
ಆತ ನಾಲ್ಕನೇ ಮಗಳು ಸಿಲ್ವಿಯಾಳ ಮದುವೆ ಮಾಡಿದ್ದ. ಹಳೆಯ ಕೊಪೆಲಿನಲ್ಲಿ ಪಾದರಿ ಗೋನಸ್ವಾಲಿಸ್ ಅವಳ ಮದುವೆಯನ್ನೂ ಮಾಡಿದ್ದರು. ಮಗಳನ್ನು ಹೆರಿಗೆಗೆ ಕರೆತಂದೂ ಆಯಿತು. ವೈಜೀಣ್ ಕತ್ರೀನ ಬಂದು ಮಗಳ ಹೆರಿಗೆಯನ್ನು ಮಾಡಿದಳು. ಮನೆಯಲ್ಲಿ ಸಂತಸ ಸಂಭ್ರಮ. ಮೊಮ್ಮಗನ ಅಳುವಿನಿಂದ ಮನೆ ತುಂಬಿಕೊಂಡಿತು.
ನಲವತ್ತನೆಯ ದಿನ ದಬಾಜಿನಿಂದ ಮೊಮ್ಮಗನ ನಾಮಕರಣ ಇರಿಸಿಕೊಳ್ಳಬೇಕು ಎಂದು ಕೈತಾನ ನಿರ್ಧರಿಸಿದ. ಮಗುವಿನ ದೇವಪಿತ ದೇವಮಾತೆಯಾಗಲು ಸಾನಬಾವಿ ಪೆದ್ರು ಅವನ ಹೆಂಡತಿ ಫ಼್ಲೊರಿನಾ ಮುಂದೆ ಬಂದರು. ಮಗುವಿಗಾಗಿ ಅವರು ಒಂದು ಬಂಗಾರದ ಉಂಗುರವನ್ನು ಮಾಡಿಸಿದರು. ಚಮಾದೋರ ಇಂತ್ರು ಮನೆ ಮನೆಗೆ ಹೋಗಿ ’ಮಗುವಿನ ಅಜ್ಜ ಅಜ್ಜಿ ಉಪಕಾರ ಬೇಡಿದ್ದಾರೆ. ಈವತ್ತು ಮಧ್ಯಾಹ್ನ ಮಗುವನ್ನು ತೊಟ್ಟಿಲಿಗೆ ಹಾಕುತ್ತಾರಂತೆ, ನೀವೆಲ್ಲ ಬರಬೇಕು ಎಂದು ವಿನಂತಿ ಮಾಡಿಕೊಂಡಿದ್ದಾರೆ’ ಎಂಬ ಹೇಳಿಕೆಯನ್ನು ನೀಡಿ ಬಂದ.
ಗುರುವಾರ ಊರಿಗೆ ರೈಲು ಬಂದ ಸ್ವಲ್ಪ ಹೊತ್ತಿಗೆಲ್ಲ ಸುತಾರಿ ಇನಾಸನ ಮಗ ಡೈಮಂಡನ ಪಿತಳೀ ಬ್ಯಾಂಡಿನ ಸದ್ದು ಕೇಳಿಸಿತು.
ಪಾದರಿ ಗೋನಸ್ವಾಲಿಸ್ ಇಲ್ಲಿ ಮಾಡಿದ ಮತ್ತೊಂದು ಕೆಲಸವೆಂದರೆ ಊರಿಗೆ ಪಿತಳೀ ಬ್ಯಾಂಡನ್ನು ತರಿಸಿದ್ದು. ಕಾರವಾರದ ಮಾರ್ಟಿನ ಪಿರೇರನ ಬ್ರ್ಯಾಸ ಬ್ಯಾಂಡ್ ಊರಿಗೆ ಬಂದದ್ದು ಬೋನ ರೆಮೇಂದಿಯರ ಮದುವೆಗೆ. ಇದಕ್ಕೂ ಮೊದಲು ಇಂತಹ ಬ್ಯಾಂಡು ಊರಿನಲ್ಲಿ ಇರಲಿಲ್ಲ. ಊರಿನಲ್ಲಿ ಇದ್ದುದು ಅರಮನೆ ಕೇರಿಯ ವಾಲಗ ಒಂದೇ. ಪೇಂ ಡುಂ ಡುಂ ಎಂದು ಎಲ್ಲೋ ಅಪರೂಪಕ್ಕೊಮ್ಮೆ ಹಿಂದುಗಳ ಮದುವೆ, ಉತ್ಸವಗಳಲ್ಲಿ ಇದು ಕೇಳಿ ಬರುತ್ತಿತ್ತು. ಕ್ರೀಸ್ತುವರು ಇದನ್ನು ಬಳಸುತ್ತಿರಲಿಲ್ಲ. ಪಾದರಿ ಊರಿಗೆ ಬರುವ ಮುನ್ನ ಒಮ್ಮೆ ಸಿಮೋನ ಮೇಸ್ತ್ರಿ ಈ ವಾಲಗವನ್ನು ತರಿಸಿದ್ದ. ಅವನ ಹಿರಿಯ ಮಗ ರಾಬರ್‍ಟನನ್ನು ತೊಟ್ಟಿಲಿಗೆ ಹಾಕುವಾಗ ಈ ವಾಲಗದವರು ಮನೆಬಾಗಿಲಿಗೆ ಬಂದು ಪೇಂ ಎಂದು ಊದಿದ್ದರು. ಇದನ್ನು ಗಮನಿಸಿದ ಅವನ ತಾಯಿ-
“ಸಿಮೋನ..ಇದೆಲ್ಲ ಕೂಡದು..ನಾವು ಈ ಬಗೆಯ ವಾದ್ಯಗಳನ್ನು ಬಳಸಬಾರದು..” ಎಂದು ಹೇಳಿದ ನಂತರ ಮತ್ತೆ ಯಾವ ಕ್ರೀಸ್ತುವರೂ ವಾಲಗ ತರಿಸಿರಲಿಲ್ಲ.
ಮಾರ್ಟಿನ ಪಿರೇನನ ಬ್ಯಾಂಡು, ಅದರ ವೈಭವ, ಶ್ರೀಮಂತಿಕೆ, ಬ್ಯಾಂಡು ಬಾರಿಸುವವರ ಶಿಸ್ತಿನ ನಡಿಗೆ ನೋಡಿದ ಮೇಲೆ ಊರವರಿಗೆ ಈ ಬ್ಯಾಂಡಿನ ಹುಚ್ಚು ಹಿಡಿಯಿತು. ಇಂತಹ ಒಂದು ಬ್ಯಾಂಡಿದ್ದರೆ ಎಷ್ಟು ಚಂದ ಎಂದವರು ವಿಚಾರ ಮಾಡಿದರು. ಜನರ ಹಾಗೆಯೇ ಪಾದರಿ ಗೋನಸ್ವಾಲಿಸ್ ಕೂಡ ಯೋಚಿಸಿ ಒಂದು ದಿನ ಸುತಾರಿ ಇನಾಸನ ಮಗ ರೈಮಂಡಗೆ-
“ನೀನು ಬ್ಯಾಂಡಕಾರ ಆಗತೀಯ?” ಎಂದು ಕೇಳಿದರು.
ಮಾರ್ಟಿನ ಪಿರೇರ ಬಂದು ಹೋದ ನಂತರ ಕ್ರೀಸ್ತುವರ ಮಕ್ಕಳೆಲ್ಲ ಮನೆಯ ಹಿಂದೆ ಮುಂದೆ ಕುಳಿತು ಡಬ್ಬಿ ಬಡಿಯುವುದು, ಹೆಬ್ಬೆರಳನ್ನು ಬಾಯಿಗೇರಿಸಿಕೊಂಡು ಉಳಿದ ಬೆರಳುಗಳನ್ನು ಕುಣಿಸುತ್ತ ಕ್ಲಾರಿಯೋನೆಟ ಬಾರಿಸುವುದು ಹೆಚ್ಚಾಗಿತ್ತು. ಈ ಹುಚ್ಚನ್ನು ತುಂಬಾ ಹಚ್ಚಿಕೊಂಡವ ರೈಮಂಡ-
’ಓ..’ ಎಂದು ಕುಣಿದಾಡಿದ.
ಪಾದರಿ ಅವನನ್ನು ಕಾರವಾರಕ್ಕೆ ಕಳುಹಿಸಿಯೂ ಆಯಿತು. ಒಂದು ತಿಂಗಳಲ್ಲಿ ತಿರುಗಿ ಬಂದ ಅವನ ಕೈಯಲ್ಲಿ ಕ್ಲಾರಿಯೋನೆಟ್, ಹಿತ್ತಳೆಯ ಡ್ರಮ್ಮು, ಸೈಡ್ ಡ್ರಮ್ಮು ತಾಳಗಳಿದ್ದವು. ಊರಿನಲ್ಲಿಯೇ ಒಂದಿಬ್ಬರಿಗೆ ಡ್ರಮ್ಮು ಸೈಡ್ ಸೈಡ್ ಡ್ರಮ್ಮು ಹೊಡೆಯುವುದನ್ನು ಕಲಿಸಿ ಆತ ಬ್ಯಾಂಡಕಾರ ಆದ. ಊರಿಗೆ ಇಂಗ್ಲೀಷ ಬ್ಯಾಂಡು ಬಂದಿತು. ಪಾದರಿಯೇ ಬ್ಯಾಂಡು ಹೊಡೆಯುವ ಹುಡುಗರಿಗೆ ಹಳದಿ ಸಮವಸ್ತ್ರವನ್ನೂ ಹೊಲಿಸಿ ಕೊಟ್ಟರು. ಹೊಸ ಇಗರ್ಜಿಯಲ್ಲಿ ಪೂಜೆಯಾದಾಗ ಈ ಬ್ಯಾಂಡಿನವರು ಮೊದಲ ಬಾರಿಗೆಂಬಂತೆ ಬ್ಯಾಂಡು ಬಾರಿಸಿದರು. ಈಗ ಕೇರಿಯಲ್ಲಿ ಏನೇ ಆದರೂ ಬ್ಯಾಂಡು ಬೇಕು.
ಕೈತಾನ ಕೂಡ ರೈಮಂಡನಿಗೆ ಎಂಟು ದಿನಗಳ ಮೊದಲೇ ಹೇಳಿ ಇರಿಸಿದ್ದ. ರೈಮಂಡ್ ಕೆಲಸಕ್ಕೆಂದು ಅಲ್ಲಿ ಇಲ್ಲಿ ಹೋಗುವ ತನ್ನ ಹುಡುಗರಿಗೂ ಹೇಳಿ ಕಳುಹಿಸಿದ್ದ. ಬೆಳಿಗ್ಗೆ ಹಳದಿ ಸಮವಸ್ತ್ರ ಧರಿಸಿ ಇವರು ಕೈತಾನನ ಮನೆಯ ಮುಂದೆ ಸಿದ್ಧರಾದರು.. ಡರ್ರರ್ರ ಢಂ ಡರ್ರರ್ರ ಢಂ ಎಂದು ಡ್ರಮ್ಮನ್ನು ಬಾರಿಸಿ ಕೇರಿಗೆಲ್ಲ ರೋಮಾಂಚನವಾಗುವಂತೆ ಮಾಡಿದರು. ಮಕ್ಕಳೆಲ್ಲ ಮನೆಗಳಿಂದ ಹೊರಗೋಡಿ ಬಂದವು.
ಈ ಸಮಾರಂಭಕ್ಕೆಂದೇ ಬಂದ ಸಿಲ್ವಿಯಾಳ ಅತ್ತೆ ಮಗುವನ್ನು ಎತ್ತಿಕೊಂಡಳು. ಅವಳ ಜತೆ ದೇವಪಿತ ದೇವಮಾತೆಯರು, ರೀಟಾಳ ತಾಯಿ, ತಂದೆ, ಕೇರಿಯ ಇತರರು, ಬಂಧು ಬಳಗದವರು. ಎಲ್ಲರೂ ರೈಮಂಡಿನ ಬ್ಯಾಂಡಿನ ಸದ್ದಿಗೆ ಅನುಗುಣವಾಗಿ ಹೆಜ್ಜೆ ಹಾಕುತ್ತ ಇಗರ್ಜಿಯತ್ತ ಹೊರಟರು. ಕೊಟ್ಟಿಗೆಯಿಂದ ಹೊರ ಬಂದ ಒಂದೆರಡು ದನಗಳು ಬ್ಯಾಂಡಿನ ಸದ್ದಿಗೆ ಬೆದರಿ ಕಿವಿ ನಗುರಿಸಿ ಕಣ್ಣರಳಿಸಿ, ಬಾಲ ಎತ್ತಿಕೊಂಡು ಹುಚ್ಚುಹುಚ್ಚಾಗಿ ನೆಗೆದು ಮೆರವಣಿಗೆಯಲ್ಲಿ ಇದ್ದವರನ್ನು ಹೆದರಿಸಿ ನೆಗೆ ಹಾರಿದವು.
ಮೆರವಣಿಗೆ ಇಗರ್ಜಿಯ ಒಳ ಹೊಕ್ಕಿತು.
ಕೈತಾನ ತನ್ನ ಬೀಗರ ಜತೆ ಪಾದರಿಯ ಬಳಿ ಹೋದ. ಫ಼ರಾಸ್ಕನ ಹೆಂಡತಿ ಬಾವಿಯ ಬಳಿ ಸೀರೆಯನ್ನು ತೊಡೆ ಕಾಣುವ ಹಾಗೆ ಎತ್ತಿ ಕಟ್ಟಿ ಬಟ್ಟೆ ಒಗೆಯುತ್ತಿದ್ದಳು. ಪಾದರಿ ಮಸ್ಕರಿನಾಸರು ಬಂಗಲೆ ಮುಂದೆ ಕುಳಿತು ಅಂದಿನ ಪತ್ರಿಕೆ ಓದುತ್ತಿದ್ದರು. ಕೈತಾನ ಬಳಿ ಬಂದುದನ್ನು ನೋಡಿ ಅವರು-
“ಕೋಣ್ರೆ?”
(ಯಾರು?) ಎಂದು ಕೇಳಿದರು.
ಅವರದು ಅದೊಂದು ಪದ್ಧತಿ. ಏನು ಬಂದದ್ದು ಎಂದು ಕೇಳುವುದರ ಬದಲು ಅವರು ಹೀಗೆ ಕೇಳುತ್ತಾರೆ ಎಂಬುದು ಊರಿಗೆಲ್ಲಾ ಗೊತ್ತಿತ್ತು.
“..ನಮ್ಮ ಮಗುವಿಗೆ ಜ್ಞಾನಸ್ನಾನ ಆಗಬೇಕಿತ್ತು ಪದ್ರಾಬ..”
ಪೇಪರನ್ನು ಮುಂದಿನ ಟೀಪಾಯಿಗೆ ಬಡಿದು ಪಾದರಿ ಬೆಂಕಿ ತುಳಿದ ಗರ್ನೇಲಿನಂತೆ ಸಿಡಿದರು.
“…ಜ್ಞಾನ ಸ್ನಾನ! ಯಾರಿಗೆ ಕೇಳಿ ಮಗೂನ ಕರಕೊಂಡು ಬಂದೆ ನೀನು? ಇದಕ್ಕೊಂದ್ ನೀತಿ ನಿಯಮ ಇಲ್ಲ..ನಿಮಗೆ ತೋಚಿದಾಗ ಬರೋದಕ್ಕೆ ಇದೇನು ಮೀನು ಮಾರ್ಕೇಟ್ಟ..” ಅವರು ಎದ್ದು ನಿಂತು ಅತ್ತಿತ್ತ ಹೆಜ್ಜೆ ಹಾಕಿದರು. ನೆಲವನ್ನು ಕಾಲಿನಿಂದ ಒದ್ದು ಗುದ್ದಿ ಕುಣಿದಾಡಿದರು.
“..ನನಗೆ ಗೊತ್ತಾಗಲಿಲ್ಲ ಪದ್ರಾಬ..” ಕೈತಾನ ಕೈ ಹಿಸುಕಿಕೊಂಡ.
“..ಹ್ಯಾಗೆ ಗೊತ್ತಾಗಬೇಕು..ಪಾದರಿ ಅಂದರೆ ನಿಮ್ಮ ಮನೆ ಕೆಲಸದ ಆಳು..ನೀವು ಬಂದ ಕೂಡಲೇ ನಿಮ್ಮ ಸೇವೆಗೆ ಆತ ಸಿದ್ಧನಾಗಬೇಕು..ಅಲ್ಲ..”
“ಹಾಗಲ್ಲ ಪದ್ರಾಬ..” ಕೈತಾನ ಮತ್ತೂ ದೀನನಾದ.
ಶಿವಸಾಗರದ ಕ್ರೀಸ್ತುವರಿಗೆ ಇದೆಲ್ಲ ಹೊಸದಾಗಿತ್ತು. ಪಾದರಿಗಳ ಬಗ್ಗೆ ಅಪಾರವಾದ ಗೌರವವಿರಿಸಿಕೊಂಡ ಅವರು, ಪಾದರಿಗಳು ಸದಾ ತಮ್ಮ ನೆರವಿಗೆ ಲಭ್ಯವಾಗುತ್ತಾರೆ ಎಂದು ತಿಳಿದಿದ್ದರು.
ಹಂದಿಗುಸ್ತೀನನ ತಾಯಿ ಮಧ್ಯರಾತ್ರಿ ಒಂದು ಗಂಟೆಗೆ ಗೊರಗೊರ ಸದ್ದು ಮಾಡಿ ಅಕ್ಕಿಯ ತಿಳಿಗಂಜಿಕೂಡ ಒಳಗೆ ಹೋಗದ ಪರಿಸ್ಥಿತಿ ಉದ್ಭವವಾದಾಗ ಸಿಮೋನ ಆಕೆಗೆ ಅಂತಿಮ ಅಭ್ಯಂಜನ ಕೊಡಿಸಲು ಪಾದರಿ ಗೋನಸ್ವಾಲಿಸರಲ್ಲಿಗೆ ಓಡಿದ್ದ. ಕೇರಿಯ ನಾಯಿಗಳೆಲ್ಲ ಬೋ ಎಂದು ಬೊಬ್ಬೆ ಹೊಡೆಯುತ್ತಿರಲು ಗೋನಸ್ವಾಲಿಸರು ತೀರ್ಥದ ಬಟ್ಟಲು, ದಿವ್ಯಪ್ರಸಾದದ ಕೈ ಪೆಟ್ಟಿಗೆ, ಪರಿಶುದ್ಧ ಎಣ್ಣೆಯ ಕುಡಿಕೆ ಹಿಡಿದು ಓಡಿ ಬಂದರು. ಗುಸ್ತೀನನ ತಾಯಿಯ ಮೈಮೇಲೆ ಪ್ರಜ್ಞೆ ಇರಲಿಲ್ಲ. ಪಾಪ ನಿವೇದನೆ ಮಾಡಿಕೊಳ್ಳುವ ಸ್ಥಿತಿಯಲ್ಲಿ ಇರದ ಆಕೆ ಇನ್ನೇನು ಕೊನೆಯ ಉಸಿರನ್ನು ಎಳೆಯುತ್ತಿದ್ದಳು. ಕೂಡಲೇ ಪಾದರಿಗಳು ಅವಳು ಮಾಡಿರುವ ಪಾಪಗಳಿಗಾಗಿ ಕ್ಷಮಿಸಿ, ಅವಳ ಹಣೆಗೆ ಪವಿತ್ರ ತೈಲವನ್ನು ಲೇಪಿಸಿ, ಅವಳಿಗೆ ದಿವ್ಯಪ್ರಸಾದವನ್ನು ನೀಡಿ-
“ಕರ್ತರಾದ ಏಸು ಕ್ರಿಸ್ತರೆ, ನೀವು ಪುನರುತ್ಥಾನವೂ ಜೀವವೂ ಆಗಿರುತ್ತೀರಿ. ಈಕೆಗೆ ಕಠಿಣ ವ್ಯಾಧಿಯು ಬಂದು ಮರಣಾವಸ್ಥೆಯಲ್ಲಿರುವಾಗ ಈ ಅಂತಿಮ ಅಭ್ಯಂಜನದಿಂದ ಈಕೆ ಬಲಪಡೆದು, ಪವಿತ್ರ ತೈಲದ ಲೇಪನದಿಂದಲೂ ದಿವ್ಯಪ್ರಸಾದದ ಸ್ವೀಕಾರದಿಂದಲೂ ನಿಮ್ಮ ಸ್ನೇಹದಲ್ಲಿ ಮರಣ ಹೊಂದಿ ನಿತ್ಯ ಜೀವಕ್ಕೆ ಏಳುವಂತಾಗಲಿ,
ಎಂದು ಪ್ರಾರ್ಥಿಸಿದ್ದರಲ್ಲದೆ,
ಆ ರಾತ್ರಿ ದುಃಖಿತರಾದವರ ನಡುವೆ ಬಹಳ ಹೊತ್ತು ಕಳೆದಿದ್ದರು.
ಇಂತಹ ಹಲವಾರು ಘಟನೆಗಳನ್ನು ಕಂಡ ಶಿವಸಾಗರದ ಕ್ರೀಸ್ತುವರು ಪಾದರಿಗಳಿಗೂ ಒಂದು ಸಮಯ ಸಂದರ್ಭ ಇರುತ್ತದೆ ಎಂಬ ವಿಷಯವನ್ನು ಮರೆತಿದ್ದರು.
ಆದರೆ ಈಗ ಪಾದರಿ ಮಸ್ಕರಿನಾಸರ ಮಾತು ಕೇಳಿದ ಮೇಲೆ ತಾನು ತಪ್ಪು ಮಾಡಿದೆ ಎನಿಸಿತು ಕೈತಾನನಿಗೆ. ಬೀಗರ ಎದುರು ತನಗೆ ಅವಮಾನವಾಯಿತು ಎಂದು ಆತ ಪೇಚಾಡಿಕೊಂಡ.
“ಪದ್ರಾಬ..ನಿಮಗೆ ಮೊದಲು ತಿಳಿಸಬೇಕಿತ್ತು..ತಿಳಿಸಲಿಲ್ಲ ಕ್ಷಮಿಸಿ..” ಎಂದು ಬೇಡಿಕೊಂಡ.
ಮಸ್ಕರಿನಾಸರ ಕೋಪ ಇಳಿಯಿತು.
“ಹುಂ”
ಎಂದು ಹೂಂಕರಿಸಿ ಅವರು ಒಳ ಹೋದರು. ಅವರು ತಿರುಗಿ ಬಂದಾಗ ಅವರ ಕೈಯಲ್ಲಿ ಒಂದು ದಪ್ಪ ಪುಸ್ತಕವಿತ್ತು.
*
*
*
ಪಾದರಿ ಮಸ್ಕರಿನಾಸ ಇಲ್ಲಿಗೆ ಬಂದಾಗ ಮಾಡಿದ ಮೊದಲ ಕೆಲಸ ಅದು. ಐನೂರು ಆರುನೂರು ಪುಟಗಳಿರುವ ದಪ್ಪ ರಟ್ಟಿನ ಒಂದು ಪುಸ್ತಕ ತರಿಸಿ ಪ್ರತಿ ಪುಟದ ತುದಿಯಲ್ಲೂ ಕೇರಿಯಲ್ಲಿರುವ ಒಂದೊಂದು ಕ್ರೈಸ್ತ ಕುಟುಂಬದ ವಿವರಗಳನ್ನು ಬರೆದಿದ್ದರು. ಕುಟುಂಬಕ್ಕೆ ಒಂದು ಪುಟ ಮೀಸಲು. ಈ ಪುಟದಲ್ಲಿ ಕುಟುಂಬದ ಹಿರಿಯ, ಯಜಮಾನಿ, ಮಕ್ಕಳು, ಅವರ ಹೆಸರು, ವಯಸ್ಸು, ನಂತರ ಪ್ರತಿ ವರುಷ ಅವರು ಇಗರ್ಜಿಗೆ ನೀಡಿದ ಅನ್ಯಾಲ ಕಾಯಿದೆಯ ಮೊಬಲಗು, ಹಬ್ಬಕ್ಕೆ ನೀಡಿದ ದೇಣಿಗೆ, ಇಗರ್ಜಿ ಕೆಲಸಗಳಿಗಾಗಿ ಕೊಟ್ಟ ಹಣ ಇತ್ಯಾದಿಗಳಿಗೆ ಪುಟದಲ್ಲಿ ಜಾಗವನ್ನು ಮೀಸಲಾಗಿಟ್ಟಿದ್ದರು.
ಇಂತಹ ದಾಖಲೆಗಳ ಪುಸ್ತಕವಿದೆಯೆ ಎಂದು ಅವರು ಗೋನಸ್ವಾಲಿಸರನ್ನು ಕೇಳಿದಾಗ ಅವರು-
“ಇಲ್ಲ..ಇದೀಗ ಇಲ್ಲೊಂದು ವ್ಯವಸ್ಥೆ ರೂಪುಗೊಳ್ಳುತ್ತಿದ್ದೆ..ಮುಂದೆ ಇದನ್ನೆಲ್ಲ ಮಾಡಬಹುದು..” ಎಂದಿದ್ದರು.
ಇದನ್ನು ಈಗಾಗಲೇ ಮಾಡಬೇಕಿತ್ತು. ಕ್ರೀಸ್ತುವರ ಕೇರಿ ಇದೆ. ಇಗರ್ಜಿ ಇದೆ. ಸಿಮಿತ್ರಿ ಇದೆ. ಪಾದರಿ ಇದ್ದಾರೆ. ಗುರ್ಕಾರ, ಮಿರೋಣ ಇದ್ದಾರೆ. ಇದು ಆಗಿಲ್ಲ ಎಂದರೆ ಏನು ಅರ್ಥ? ಕ್ರೀಸ್ತುವರ ಎಲ್ಲ ಆಧ್ಯಾತ್ಮಿಕ ಬೇಡಿಕೆಗಳನ್ನು ಇಗರ್ಜಿ, ಅಲ್ಲಿಯ ಪಾದರಿ ನೆರವೇರಿಸಬೇಕು. ಈ ಪಾದರಿ, ಇಗರ್ಜಿಯನ್ನು ಕ್ರೀಸ್ತುವರು ಪೋಷಿಸಿ ರಕ್ಷಿಸಿಕೊಂಡು ಬರಬೇಕಾಗಿಲ್ಲವೇ? ಬೇರೆ ಊರುಗಳಲ್ಲಿ ಪ್ರತಿ ಕುಟುಂಬದವರೂ ಇಗರ್ಜಿಗೆ ಇಂತಿಷ್ಟು ಹಣವನ್ನು ಅನ್ವಾಲ್ ಕಾಯಿದೆ ರೂಪದಲ್ಲಿ ಕೊಡಬೇಕೆಂದಿದೆ. ಪ್ರತಿ ಹಬ್ಬಕ್ಕೆ ಹಣ ಕೊಡಬೇಕು. ಹೊಸ ಇಗರ್ಜಿ ಕಟ್ಟಲು ಇತರೆ ಕಾಮಗಾರಿಗಳಿಗೆ ಹಣ ಕೊಡಬೇಕು. ಇಲ್ಲಿ ಈ ಪದ್ಧತಿಯನ್ನು ಜಾರಿಗೆ ತಂದಿಲ್ಲವೇ? ಹಿಂದೆ ಏನೋ ಆಯಿತು. ಮುಂದೆ?
ಕೂಡಲೇ ಮಸ್ಕರಿನಾಸ ಈ ವಹಿಯನ್ನು ತೆರೆದರು. ಅಷ್ಟೇ ಅಲ್ಲ, ಇಗರ್ಜಿಯಲ್ಲಿ ಶೆರಮಾಂವಂಗೆ ನಿಂತಾಗ ಪ್ರತಿ ಕ್ರೀಸ್ತುವರು ಇಗರ್ಜಿಗೆ ಸಲ್ಲಿಸಬೇಕಾದ ಅನ್ಯಾಲ ಕಾಯಿದೆಯನ್ನು ವರ್ಷಕ್ಕೊಮ್ಮೆ ಸಲ್ಲಿಸಲು ಹೇಳಿದರು. ಗುರ್ಕಾರನನ್ನು ಕರೆದು-
“ನೀವೂ ಜನರಿಗೆ ಹೇಳಬೇಕು..ಇಗರ್ಜಿಯ ಹಣವನ್ನು ಅವರು ಇಗರ್ಜಿಗೆ ಕೊಡಬೇಕಲ್ಲವೇ?” ಎಂದರು.
ಈ ಅನ್ವಾಲ ಕಾಯಿದೆ ನೀಡುವ ಕ್ರಮ ಬೇರೆ ಊರುಗಳಲ್ಲಿಯೂ ಇತ್ತು. ಹೊನ್ನಾವರ, ಮುರ್ಡೇಶ್ವರ, ಭಟ್ಕಳಗಳ ಜನರಿಗೂ ಇದು ಪರಿಚಿತವಾಗಿತ್ತು. ಕೊಡೋಣ ಎಂದರು ಜನ. ಆದರೆ ಯಾರೂ ಕೊಡಲಿಲ್ಲ. ತಾವಾಗಿ ಕೊಡಲು ಮುಂದಾಗಲಿಲ್ಲ. ಆಗ ಪಾದರಿ ಮಸ್ಕರಿನಾಸ ಒಂದು ದಾರಿ ಕಂಡು ಹಿಡಿದರು.
ಕೈತಾನನ ಮೊಮ್ಮಗನಿಗೆ ಜ್ಞಾನಸ್ನಾನ ಕೊಡಿ ಎಂದು ಬಂದಾಗ ಅವರಿಗೆ ಇದು ನೆನಪಾಯಿತು.
ಪುಸ್ತಕದ ಹಾಳೆಗಳನ್ನು ತಿರುವಿ ಹಾಕಿ ಕೈತಾನನ ಹೆಸರಿರುವ ಪುಟ ಬಂದಾಗ ಅವರು-
“ನೀನು ಹದಿನೈದು ವರ್ಷಗಳ ಅನ್ವಾಲ ಕಾಯಿದೆ ಕೊಡಬೇಕು..ಐದು ವರ್ಷಗಳ ಹಬ್ಬದ ಕಾಣಿಕೆ ಕೊಡಬೇಕು..ಇಗರ್ಜಿ ಕಟ್ಟಲಿಕ್ಕೆ ನೀನು ಏನೂ ಕೊಟ್ಟಿಲ್ಲ..” ಎಂದರು.
ಪಾದರಿ ಶಿವಸಾಗರಕ್ಕೆ ಬಂದು ಹದಿನೈದು ವರ್ಷಗಳು ಉರುಳಿದ್ದವು. ಹೊಸ ಇಗರ್ಜಿಯಾಗಿ ಐದು ವರ್ಷ ಆಗಿತ್ತು. ಪ್ರತಿ ವರುಷ ಇಗರ್ಜಿ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿತ್ತು. ಈ ಅವಧಿಯ ಹಣವನ್ನು ಜನರಿಂದ ವಸೂಲು ಮಾಡಬೇಕೆಂದು ಅವರು ನಿರ್ಧರಿಸಿದ್ಧರು. ಅನ್ವಾಲ ಕಾಯಿದೆ ವರ್ಷಕ್ಕೆ ಇಪ್ಪತ್ನಾಲ್ಕು ರೂಪಾಯಿ. ಹಬ್ಬದ ಕಾಣಿಕೆ ವರ್ಷಕ್ಕೆ ಹತ್ತು, ಇಗರ್ಜಿ ಕಟ್ಟೋಣಕ್ಕೆ ನೂರು ಹೀಗೆ ಸುಮಾರು ಐನೂರು ರೂಪಾಯಿಗಳನ್ನು ಅವರು ಬರೆದಿಟ್ಟಿದ್ದರು.
“ನೋಡು ಕೈತಾನ..ಐನೂರು ರೂಪಾಯಿ ಕಟ್ಟು..ನಿನ್ನ ಮೊಮ್ಮಗನಿಗೆ ನಾನು ಜ್ಞಾನಸ್ನಾನ ಕೊಡತೀನಿ.” ಎಂದರವರು ಯಾವುದೇ ಮುಲಾಜು, ಭೀಡೆ ಇಲ್ಲದೆ..
“ಇಗರ್ಜಿಗೆ ಬರಬೇಕಾದ ಹಣ ಪರಿಹಾರವಾಗದೆ ಇಗರ್ಜಿಯ ಯಾವ ಸವಲತ್ತೂ ಜನರಿಗೆ ದೊರಕೋದಿಲ್ಲ..” ಅವರು ದೃಢ ನಿರ್ಧಾರದಲ್ಲಿ ಹೇಳಿದರು.
ಕೈತಾನ ನಿಂತಲ್ಲಿಯೇ ಕರಗಿ ಕರಗಿ ಹೋಗತೊಡಗಿದ. ತನ್ನ ಇಡೀ ದೇಹ ಕುಬ್ಜವಾಗುತ್ತ ಬಂದು ಹಿಡಿಯಾಗಿ ಮಣ್ಣಿನಲ್ಲಿ ಮಣ್ಣಾಗಿ ಹೋದಂತೆ ಅವನಿಗೆ ಭಾಸವಾಯಿತು. ತಾನು ಇದೇನು ಕೇಳುತ್ತಿದ್ದೇನೆ ಎಂದು ಗಾಬರಿಗೊಂಡ. ಶಿವಸಾಗರದ ಪುರಸಭೆ ಊರ ನಾಲ್ಕೂ ದಿಕ್ಕಿನಲ್ಲಿ ನಾಲ್ಕು ಸುಂಕದ ಕಟ್ಟೆಗಳನ್ನು ತೆರೆದು ಅಲ್ಲಿಂದ ಊರ ಒಳಗೆ ಬರುವ ಗಾಡಿಗಳವರು ಸುಂಕಕೊಡಬೇಕೆಂಬ ನಿಯಮ ಮಾಡಿತ್ತು. ಈ ಸುಂಕದ ಕಟ್ಟೆಯ ಬಳಿ ಕೊಡಲು ಒಂದಾಣೆ ಇಲ್ಲದೆ ಗಾಡಿಗಳವರು ಗಾಡಿಬಿಟ್ಟುಕೊಂಡು ಗೋಳಾಡುತ್ತ ನಿಲ್ಲುವುದನ್ನು ಆತ ಹಲವು ಬಾರಿ ಕಂಡಿದ್ದ. ಈಗ ತನ್ನದೂ ಅದೇ ಅವಸ್ಥೆಯಾಯಿತೆ? ಮನೆಯಲ್ಲಿ ಊರ ಕ್ರೀಸ್ತುವರ ಊಟದ ವ್ಯವಸ್ಥೆ ಆಗುತ್ತಿದೆ. ಜನ ಬರುತ್ತಿರಬಹುದು. ಇಲ್ಲಿ ಇಗರ್ಜಿಯಲ್ಲಿ ಮೊಮ್ಮಗನನ್ನು ಎತ್ತಿಕೊಂಡು ತನ್ನ ಬೀಗತಿ ಕಾಯುತ್ತಿದ್ದಾಳೆ. ಪೆದ್ರು ಅವನ ಹೆಂಡತಿ ಕಾಯುತ್ತಿದ್ದಾರೆ. ಬ್ಯಾಂಡಿನವರು ಇಗರ್ಜಿ ಹೊರಗೆ ನಿಂತಿದ್ದಾರೆ. ಇಲ್ಲಿ ಪಾದರಿ ಅನ್ವಾಲ ಕಾಯಿದೆ ಬಾಕಿ ಉಳಿದಿದೆ. ಕೊಟ್ಟರೆ ಮುಂದಿನ ಕೆಲಸ ಅನ್ನುತ್ತಿದ್ದಾರೆ. ಅದೂ ಹತ್ತು ಐವತ್ತು ರೂಪಾಯಿಯಲ್ಲ. ಐನೂರು ರೂಪಾಯಿ.
ತಾನು ಹಿಂದೆಯೇ ಕೊಡಬೇಕಿತ್ತು. ಕೊಡಲಿಲ್ಲ. ಕೊಡಬಾರದು ಅನ್ನುವುದು ತನ್ನ ಉದ್ದೇಶವಾಗಿರಲಿಲ್ಲ. ಅಷ್ಟು ಇಷ್ಟು ಕೊಡೋಣ ಅಂದು ಕೊಂಡಿದ್ದೆ. ಊರ ಎಲ್ಲ ಕ್ರೀಸ್ತುವರ ಇರಾದೆ ಕೂಡ ಇದೇನೆ. ಯಾರು ತಾನೆ ದೇವರ ಹಣ ಬಾಕಿ ಉಳಿಸಿ ಕೊಳ್ಳುತ್ತಾರೆ. ಆದರೆ ಈ ತಪ್ಪಿಗೆ ಈ ಶಿಕ್ಷೆಯೆ? ಅಳಿಯ ಬೀಗರ ಸಮ್ಮುಖದಲ್ಲಿ ಈ ದಂಡನೆಯೆ?
“ಪದ್ರಾಬಾ..” ಎಂದು ಗೋಗರೆದ ಕೈತಾನ. ತಟ್ಟನೆ ತೆಗೆದು ಕೊಡಲು ಅವನಲ್ಲಿ ಹಣವಾದರೂ ಎಲ್ಲಿತ್ತು? ಹಿಂದಿನಿಂದ ತಂದುಕೊಡುವೆ ಎಂದು ಹೇಳಲಾದರೂ ಅವಕಾಶವಿತ್ತೆ? ಅಷ್ಟು ಹಣವನ್ನು ಇಂದಲ್ಲ ನಾಳೆ ತರುವುದೂ ಕಷ್ಟವೆ. ಹಾಗಾದರೆ ಬೇರೆ ದಾರಿ ಏನಿದೆ? ಸುತ್ತ ಕತ್ತಲೆ ಕವಿದು ದಾರಿಗಾಗಿ ಹುಡುಕಾಡುವ ಪರಿಸ್ಥಿತಿ ಬಂದು ಊರಿನ ಪಾತ್ರೋನ ಸಂತ ಜೋಸೆಫ಼ರೆ, ಚಂದಾವರ ಸಂತ ಫ಼್ರನ್ಸಿಸರೆದ, ಮೈಸೂರಿನ ಸಂತ ಫ಼ಿಲೋಮೆನಾ ನೀವೇ ಕಾಪಾಡಬೇಕು ಎಂದು ಹೃದಯ ಚೀರುತ್ತಿರಲು ಕೈತಾನನ ಬೀಗ, ಅವನ ಅಳಿಯನ ತಂದೆ ಹೊನ್ನಾವರದ ಲಾದ್ರು ಫ಼ರ್ನಾಂಡಿಸ ಸೊಂಟದ ಕಪ್ಪು ಬೆಲ್ಟಿನ ಪಾಕೇಟಿನ ಗುಂಡಿಯೊತ್ತಿ ತೆರೆದುಕೊಂಡ ಪಾಕೇಟಿನೊಳಗಿಂದ ಐದು ನೂರರ ನೋಟುಗಳನ್ನು ಹೊರತೆಗೆದು-
“ಪದ್ರಾಬ..ತೊಕೊಳ್ಳಿ ದುಡ್ಡು..” ಎಂದ.
ಕೈತಾನ ಬೇಡ ಬೇಡ ಎನ್ನಲಾಗದೆ ಕಂಗಾಲಾಗಿ ನೋಡುತ್ತಿರಲು ಪಾದರಿ ಮಸ್ಕರಿನಾಸರು ಕೈ ಚಾಚಿ ಹಣ ತೆಗೆದುಕೊಂಡು ಒಳ ಬಾಗಿಲತ್ತ ತಿರುಗಿ-
“ಫ಼ರಾಸ್ಕ..ಒಂದು ಜ್ಞಾನೋಪದೇಶವಿದೆ..ಸ್ಯಾಕ್ರಿಷ್ಟ ಬಾಗಿಲು ತೆಗಿ..ಇಗರ್ಜಿನಲ್ಲಿ ಅಲ್ತಾರ ಮುಂದೆ ಮೇಣದ ಬತ್ತಿ ಹಚ್ಚು..” ಎಂದು ಉತ್ಸಾಹದಿಂದ ಪುಟಿದೆದ್ದರು.
“ಈಗ ಮಾತುಬೇಡ..ಬನ್ನಿ..” ಎಂದು ಕೈತಾನನ ಬೀಗ ಅವನನ್ನು ಎಳೆದುಕೊಂಡು ಅಲ್ಲಿಂದ ಹೊರಟ.
*
*
*
ಏನೂ ಆಗಿಲ್ಲ ಎಂಬಂತೆ ಪಾದರಿ ಇಗರ್ಜಿಗೆ ಬಂದರು. ಮಗುವಿನ ಜ್ಞಾನಸ್ನಾನ ಆಗುತ್ತಿದೆ ಅನ್ನುವಾಗ ಇಗರ್ಜಿಯ ಗಂಟೆ ಸದ್ದು ಮಾಡಿತು. ಗರ್ನೆಲ ಸಿಡಿಯಿತು. ರೈಮೆಂಡ ಕ್ಲಾರಿಯೋನೆಟ್ಟಿನ ಗುಂಡಿಗಳನ್ನು ಅದುಮಿ ಕೇರಿಗೆಲ್ಲ ಕೇಳಿಸುವಂತೆ ಕೊಂಕಣಿ ಗೀತೆಯೊಂದನ್ನು ನುಡಿಸಿದ. ಮರಿಯಾಣ ಎಂಬ ನಾಮಕರಣವನ್ನು ಜೊತೆಗೆ ಅಜ್ಜನ ಹೆಸರನ್ನು ಪಡೆದ ಮಗು ಅಜ್ಜಿಯ ಕೈಯಲ್ಲಿ ಬ್ಯಾಂಡಿನ ಸದ್ದಿಗೆ ಎಚ್ಚೆತ್ತು ಮಿಸುಕಾಡುತ್ತ ಮನೆಯತ್ತ ತಿರುಗಿತು.
“..ನೀವು ನನ್ನ ಮರ್ಯಾದೆ ಉಳಿಸಿದಿರಿ..ಅದು ನಾನು ಕೊಡಬೇಕಾದ ಹಣ..ನೀವು ಊರಿಗೆ ತಿರುಗಿ ಹೋಗುವಷ್ಟರಲ್ಲಿ ನಾನು ಹಣಾನ ನಿಮಗೆ ತಲುಪಿಸುತ್ತೇನೆ..”
ಎಂದು ಸಂತ ಜೋಸೆಫ಼ರ ಮಂಟಪದ ಬಳಿಯೇ ಕೈತಾನ ಲಾದ್ರು ಫ಼ರ್ನಾಂಡಿಸನ ಕೈ ಕುಲುಕಿದ. ಹೀಗೆ ಅವನ ಕೈ ಕುಲುಕುವಾಗ ಲಾದ್ರು ಫ಼ರ್ನಾಂಡಿಸನ ಕೈ ಮೇಲೆ ಎರಡು ಬಿಸಿ ಹನಿಗಳು ಬಿದ್ದು ಆತ-
“ಇರಲಿ..ಇರಲಿ..” ಎಂದ ತುಸು ಭಾವಪರವಶನಾಗಿ..
“ಈ ಪದ್ರಾಬಾಗಳು ಈಗೀಗ ಹೀಗೆ ಆಗತಿದಾರೆ..ಇಲ್ಲಿ ಅಂತ ಅಲ್ಲ ಎಲ್ಲಾ ಕಡೇನು ಇದೇ ಕತೆ..ಇವರಿಗೆ ದಿನಾ ಹೋದ ಹಾಗೆ ಹಣಾನೇ ಮುಖ್ಯ ಆಗತಿದೆ..” ಎಂದ ಲಾದ್ರು ಫ಼ರ್ನಾಂಡಿಸ.
ನಾಮಕರಣಗೊಂಡು ಕ್ರೈಸ್ತ ಪ್ರಭುವಿನ ತೆಕ್ಕೆಗೆ ಬಂದ ಮಗು ಮನೆ ಸೇರಿಕೊಂಡಿತು. ಕೈತಾನ ಅಡಿಗೆ ವ್ಯವಸ್ಥೆ, ಬಂದವರು ಕುಳಿತುಕೊಳ್ಳಲು ಮಾಡಬೇಕಾದ ವ್ಯವಸ್ಥೆ ಎಲ್ಲ ನೋಡಿಕೊಳ್ಳಲು ಅತ್ತಿತ್ತ ತಿರುಗಾಡುತ್ತಿರುವಾಗ ತನ್ನ ಮನೆಗೆ ಬಂದು ತಿರುಗಿ ಹೋಗುತ್ತಿರುವ ಗುರ್ಕಾರ ಸಿಮೋನ ಅವನಿಗೆ ಕಂಡ.
“ಸಿಮೋನ..ಮರೀಬಾರದು..” ಎಂದ ಕೈತಾನ ಅವನನ್ನು ನಿಲ್ಲಿಸಿಕೊಂಡು. ಊಯ್ಟಕ್ಕೆ ಬರಲು ಮರೆಯ ಬೇಡ ಎಂಬುದು ಅವನ ಮಾತಿನ ಅರ್ಥ.
“ಕೈತಾನ..ಸಾಧ್ಯವಾದರೆ ಬರತೀನಿ..ನನ್ನ ಹೆಂಡತಿ ತಾಯಿ ಮಕ್ಕಳಂತೂ ಬರತಾರೆ..ಬೇಜಾರು ಮಾಡಿಕೋ ಬೇಡ..ಸಂಜೆ ಇಲ್ಲ ನಾಳೆ ಬಂದು ಮಗೂಗೆ ಆಶೀರ್ವಾದ ಮಾಡತೀನಿ..” ಎಂದ ಸಿಮೋನ.
“ಆಯ್ತು..ಆಯ್ತು..ಸಾಧ್ಯವಾದರೆ ಬಾ..”
ಇಲ್ಲಿಗೇನೆ ಮಾತು ಮುಗಿಸಲು ಆಗಲಿಲ್ಲ ಕೈತಾನನ ಕೈಲಿ. ಮುಖದ ಮೇಲೆ ನಗೆ ಇದ್ದರೂ ಹೃದಯದಲ್ಲಿ ನೋವಿತ್ತು.
“ಸಿಮೋನ ನಾನು ನಿನಗೆ ಹೇಳದೆ ಇರಲಾರೆ..ಆ ಸಂತ ನನ್ನ ಮರ್ಯಾದೆ ಉಳಿಸಿದ ಈವತ್ತು…” ಎಂದ ಕೈತಾನ ಗದ್ಗದಿತನಾಗಿ.
“ಏನಾಯ್ತು..ಏನಾಯ್ತು..”
ಸಿಮೋನನ ಜತೆ ನಾಲ್ಕು ಹೆಜ್ಜೆ ಇರಿಸಿ..ಇಗರ್ಜಿಯ ಕಾಂಪೌಂಡಿನ ಈ ಬದಿಯಲ್ಲಿ ಹಲಸಿನ ಮರದ ನೆಳಲಿಗೆ ನಿಂತು ಕೈತಾನ ಸೂಕ್ಷ್ಮವಾಗಿ ಹೇಳಿದ. ಮತ್ತೊಮ್ಮೆ ಅವನ ಕಣ್ಣುಗಳಲ್ಲಿ ನೀರು ಹಣಕಿತು.
“ಹೌದೆ..ಹೌದೆ..” ಎಂದು ಸಿಮೋನ ಕೂಡ ಪೇಚಾಡಿದ.
“ಹೌದು..ಸಾಯಂಕಾಲದೊಳಗೆ ನಾನು ಐನೂರು ರೂಪಾಯಿ ಹಿಂತಿರುಗಿಸಬೇಕು..ನನ್ನ ಮರ್ಯಾದೆ ಪ್ರಶ್ನೆ.”
“ಅದರ ಬಗ್ಗೆ ಚಿಂತೆ ಮಾಡಬೇಡ..ನಾನು ಜವಳಿ ಅಂಗಡಿ ಬೋನನಿಗೆ ಹೇಳತೇನೆ..ನಡಿ..ಈ ಕೆಲಸ ಒಂದು ಮುಗಿಸು. ದೇವರು ಎಲ್ಲವನ್ನು ನಡೆಸಿ ಕೊಡತಾನೆ ಹೋಗು.”
ಕೈತಾನನನ್ನು ಅತ್ತ ಕಳುಹಿಸಿ ಸಿಮೋನ ತಾನು ಕೆಲಸ ಹಿಡಿದಲ್ಲಿಗೆ ನಡೆದ.
ಮಧ್ಯಾಹ್ನ ಪೇಟೆಗೆ ಬಂದವ ನೇರವಾಗಿ ಬೋನನ ಅಂಗಡಿಗೆ ಬಂದ. ಸಿಮೋನ ಯಾವ ಕಾರಣದಿಂದ ಬೇಕಾದರೂ ಪೇಟೆಗೆ ಬರಲಿ ಆತ ಬೋನನ ಅಂಗಡಿಗೆ ಬರಲೇಬೇಕು.
“ಆ ಕೈತಾನ ನಿನ್ನಲ್ಲಿಗೆ ಬಂದಿದ್ದನೇನು?” ಎಂದು ಕೇಳುತ್ತ ಮರದ ಕುರ್ಚಿ ಎಳೆದುಕೊಂಡು ಕುಳಿತ.
ಎಲ್ಲವನ್ನು ವಿವರವಾಗಿ ಹೇಳಿ.
“ಅವನು ಬಂದರೆ ಅವನಿಗೊಂದು ಐನೂರು ರೂಪಾಯಿಕೊಡು..ಇಂದಲ್ಲ ನಾಳೆ ಅವನು ಪರತ ಕೊಡತಾನೆ.” ಎಂದ ಸಿಮೋನ.
“ಪಾದರಿಗಳು ಹೀಗೆ ಮಾಡಿದ್ದು ಮಾತ್ರ ಸರಿಯಲ್ಲ” ಎಂದ ಬೋನ.
“ನಾವು ಆ ಪಾದರಿಗಳನ್ನು ನೋಡಿದ್ವಿ..ಈಗ ಇವರನ್ನು ನೋಡತಿದೀವಿ..ಮುಂದೆ ಮತ್ತೆ ಯಾರು ಯಾರು ಬರತಾರೊ..” ಎಂದು ಎದ್ದ ಸಿಮೋನ.
ಬೋನ ಕೈತಾನನ ದಾರಿ ಕಾಯುತ್ತ ಕುಳಿತ. ತುಸು ಬೇಸರ ವಿಷಾದದಿಂದ.
-೩-
ಶುಕ್ರವಾರ ಬಂತೆಂದರೆ ಸುತಾರಿ ಇನಾಸನ ಮನೆ ಮುಂದೆ ಚಟುವಟಿಕೆಗಳು ಪ್ರಾರಂಭವಾಗುತ್ತವೆ. ಅವನ ಮೂಕಿ ಹೆಂಡತಿ ಮೊನ್ನೆ. ಸಿಮೋನನ ಮನೆ ಹಿಂಬದಿಯ ಕೊಟ್ಟಿಗೆಗೋ ಇಲ್ಲವೆ ಮರಿಯಮ್ಮನ ಮನೆ ಕೊಟ್ಟಿಗೆಗೋ ಹೋಗಿ ಶಗಣಿ ತರುತ್ತಾಳೆ. ಇಡೀ ಅಂಗಣವನ್ನು ಸಾರಿಸುತ್ತಾಳೆ. ಬೇಲಿ ಬದಿಯಲ್ಲಿ ಬೆಳೆದ ಗಿಡಗಳನ್ನು ಕಿತ್ತು ಎಸೆಯುತ್ತಾಳೆ. ಇನಾಸನ ಎರಡನೇ ಮಗ ಪಾಸ್ಕು ಶಿಲುಬೆಯ ಮುಂದೆ ಈವರೆಗೆ ಜನ ಹೊತ್ತಿಸಿ ಹೆಪ್ಪುಗಟ್ಟಿ ಹೋದ ಮೇಣದ ಬತ್ತಿಯ ಮೇಣವನ್ನು ಕಿತ್ತು ತೆಗೆಯುತ್ತಾನೆ. ಇನಾಸನ ಎರಡನೇ ಮಗ ಪಾಸ್ಕು ಶಿಲುಬೆಯ ಮುಂದೆ ಈವರೆಗೆ ಜನ ಹೊತ್ತಿಸಿ ಹೆಪ್ಪುಗಟ್ಟಿ ಹೋದ ಮೇಣದ ಬತ್ತಿಯ ಮೇಣವನ್ನು ಕಿತ್ತು ತೆಗೆಯುತ್ತಾನೆ. ಇನಾಸನ ಹೆಣ್ಣು ಮಕ್ಕಳು ಸಂಜೆ ಹೊತ್ತಿಗೆ ಅಬ್ಬಲಿಗೆ ಹೂವಿನ ಹಾರಕಟ್ಟಿ ಶಿಲುಬೆಗೆ ಅಲಂಕಾರ ಮಾಡುತ್ತಾರೆ. ಆರು ಗಂಟೆಗೆಲ್ಲ ಒಬ್ಬರಾಗಿ ಇಬ್ಬರಾಗಿ ಹೆಂಗಸರು ಬರುತ್ತಾರೆ. ಮಕ್ಕಳು ಬಂದು ಮೊದಲೇ ರಸ್ತೆಯ ಮೇಲೆ ಗಲಾಟೆ ಮಾಡುತ್ತಿರುತ್ತವೆ. ಮೊನ್ನೆ ಮನೆಯೊಳಗಿನಿಂದ ಈಚಲ ಚಾಪೆಗಳನ್ನು ತಂದು ತಂದು ಅಂಗಳದಲ್ಲಿ ಹಾಸಿ ಬಂದವರಿಗೆ ಕುಳಿತುಕೊಳ್ಳುವಂತೆ ಸಂಜ್ಞೆ ಮಾಡುತ್ತಾಳೆ.
ಪಾದರಿ ಗೋನಸ್ವಾಲಿಸ್ ಕಟ್ಟಿಸಿದ ಈ ಶಿಲುಬೆ ಕೇರಿಯ ಜನರನ್ನು ಕಾಪಾಡುತ್ತ ಅವರ ಮನಸ್ಸಿನಲ್ಲಿ ದೈವ ಭಕ್ತಿಯನ್ನು ಸ್ಫುರಿಸುತ್ತ ನಿಂತಿದೆ. ಶಿಲುಬೆಯ ಹಿಂಬದಿಯಲ್ಲಿ ಅನ್ನುವಹಾಗಿದ್ದ ಕಲ್ಲು ಕುಟಿಗ ಜನರ ಮನಸ್ಸಿನಿಂದ ಮರೆಯಾಗುವಂತೆಯೇ ತಾನಿದ್ದ ಜಾಗದಿಂದಲೂ ಕಾಣೆಯಾಗಿದ್ದಾನೆ.
ಶಿಲುಬೆ ಇಲ್ಲಿ ಎದ್ದುನಿಂತ ನಂತರವೂ ಕಲ್ಲುಕುಟಿಗನಿಗೆ ಊದಿನಕಡ್ಡಿ, ಹೂವು ಕುಂಕುಮದ ಸೇವೆ ಸಲ್ಲುತ್ತಿತ್ತು. ಬಂದ ಜನ ಕಲ್ಲು ಕುಟಿಗನಿಗೆ ಊದಿನಕಡ್ಡಿ ಹಚ್ಚಿ ಶಿಲುಬೆ ದೇವರಿಗೆ ಮೇಣದ ಬತ್ತಿ ಹಚ್ಚಿ ಒಟ್ಟಿಗೇನೆ ಇಬ್ಬರಿಗೂ ಕೈ ಮುಗಿದು ಹೋಗುತ್ತಿದ್ದರು. ಆಸುಪಾಸಿನಲ್ಲಿದ್ದ ಕೆಲವೇ ಹಿಂದುಗಳು ಕಲ್ಲು ಕುಟಿಗನನ್ನು ಸುಲಭವಾಗಿ ಮರೆಯಲಿಲ್ಲ. ಆದರೆ ಕ್ರೀಸ್ತುವರು ಮರೆಯಬೇಕಾಯಿತು. ಇನಾಸನ ಹೆಂಡತಿ ಮಕ್ಕಳು ನಿತ್ಯ ಸಂಜೆ ಅಂಗಳದಲ್ಲಿಯೇ ಜಪ, ತೇರ್ಸ ಮಾಡತೊಡಗಿದ್ದು ಕಲ್ಲು ಕುಟಿಗನನ್ನು ಇವರಿಂದ ದೂರ ಮಾಡಿತು.
ಪಾದರಿ ಗೋನಸ್ವಾಲಿಸ್ ಪ್ರತಿ ಶುಕ್ರವಾರ ಕೇರಿಯ ಎಲ್ಲ ಜನ ಇಲ್ಲಿ ಬಂದು ಸೇರಿ ಜಪಸರ ಪ್ರಾರ್ಥನೆ ಮಾಡಬೇಕೆಂದು ಹೇಳಿದ್ದು, ಎಷ್ಟೋ ಬಾರಿ ಅವರೇ ಬಂದು ಪ್ರಾರ್ಥನೆ ಕಲಿಸುತ್ತಿದ್ದುದು, ಶಿಲುಬೆಯ ಮೇಲೆ ಜನರ ಭಕ್ತಿ ಅಧಿಕವಾಗಲು ಕಾರಣವಾಯಿತು. ಆಗಲೂ ಕಲ್ಲು ಕುಟಿಗ ಅಲ್ಲಿ ಇದ್ದ. ನೆಲಮಟ್ಟದಿಂದ ತುಸು ಮೇಲೆ ಮೂಡಿನಿಂತ ಆ ಕಲ್ಲನ್ನು ಇನಾಸ ನಿತ್ಯ ನೋಡುತ್ತಲಿದ್ದ. ಆದರೆ ಒಂದು ದಿನ ಬೆಳಿಗ್ಗೆ ಕೈ ಕಾಲು ಮುಖ ತೊಳೆದು ಶಿಲುಬೆಗೆ ಕೈ ಮುಗಿದು ಬಗ್ಗಿ ನೋಡಿದಾಗ ಅಲ್ಲಿ ಹಸಿ ಮಣ್ಣು ಕಂಡಿತು. ಅಷ್ಟಗಲ ಜಾಗವನ್ನು ಕೆದರಿ ಕೆತ್ತಿ ಸಣ್ಣದೊಂದು ತಗ್ಗನ್ನು ಅಲ್ಲಿ ಮಾಡಲಾಗಿತ್ತು.
“ದೇವರೇ..” ಎಂದು ಚೀರಿದ ಇನಾಸ.
“ಇದೇನು ಆಯಿತು..” ಎಂದು ಅವನ ಮುಖ ವಿವರ್ಣವಾಯಿತು. ರುದ್ರ ಬಿಟ್ಟು ಹೋದ ಅವನ ದೇವರು ಅಲ್ಲಿ ಇರಲಿಲ್ಲ. ’ದೇವರೆ ಇದರಲ್ಲಿ ನನ್ನ ಪಾತ್ರ ಏನಿಲ್ಲ..ಇದು ಯಾವುದೂ ನನಗೆ ಗೊತ್ತಿಲ್ಲ’. ಎಂದು ಆತ ಕೆನ್ನೆ ತಟ್ಟಿಕೊಂಡ.
ಕೂಡಲೇ ಒಳ ಹೋಗಿ ಮೇಣದ ಬತ್ತಿ ಹಚ್ಚಿ ತಂದು ಶಿಲುಬೆಯ ಮುಂದೆ ಹಚ್ಚಿ-
“ದೇವರೆ..ನೀನೇ ಕಾಪಾಡಬೇಕು” ಎಂದ.
ಮನಸ್ಸಿನ ಮೂಲೆಯಲ್ಲಿ ಏನೋ ಭೀತಿ ಆತಂಕ ಇದ್ದೇ ಇತ್ತು. ಕಲ್ಲು ಕುಟಿಗ ಅಷ್ಟೊಂದು ಸುಲಭವಾಗಿ ತೆಗೆದು ಹಾಕುವ ದೈವವಲ್ಲ ಅನ್ನುತ್ತಿದ್ದ ರುದ್ರ. ಆದರೂ ಅಂತಹದೇನೂ ಆಗಲಿಲ್ಲ. ಅದರ ಬದಲು ಶಿಲುಬೆ ದೇವರು ಕೇರಿಯಲ್ಲೆಲ್ಲ ಬೇಕಾದವನಾದ. ಎಲ್ಲ ಜನ ಚೌಡಿಯನ್ನು ಮರೆತಂತೆ ಕಲ್ಲುಕುಟಿಗನನ್ನೂ ಮರೆತರು.
ಪಾದರಿ ಮಸ್ಕರಿನಾಸ ಬಂದದ್ದೇ ಬೇರೊಂದು ನಿಯಮ ಜಾರಿಗೆ ತಂದರು. ತಿಂಗಳಿಗೊಮ್ಮೆ ಒಂದೊಂದು ಮನೆಯವರು ಇಲ್ಲಿ ಜಪಸರ ಪ್ರಾರ್ಥನೆ ಮಾಡಬೇಕು ಎಂದರು. ತಿಂಗಳ ಮೊದಲ ಶುಕ್ರವಾರ ಒಂದು ಮನೆಯವರಿಂದ ಪ್ರಾರ್ಥನೆ. ಉಳಿದ ಮನೆಗಳವರೆಲ್ಲ ಬರಬೇಕು, ಪ್ರಾರ್ಥನೆಯಲ್ಲಿ ಪಾಲುಗೊಳ್ಳಬೇಕು. ಅಂತ್ಯದಲ್ಲಿ ಬಂದವರಿಗೆ ಅಲ್ಪ ಉಪಹಾರದ ವ್ಯವಸ್ಥೆಯನ್ನು ಮಾಡಬಹುದು. ಇದು ಕಡ್ಡಾಯವೇನಿಲ್ಲ. ಅವಲಕ್ಕಿ, ಮಂಡಕ್ಕಿ ಏನಾದರೂ ಕೊಡಿ. ಮುಖ್ಯವಾಗಿ ಪ್ರತಿ ತಿಂಗಳೂ ಎಲ್ಲ ಸೇರಿ ಇಲ್ಲಿ ಪ್ರಾರ್ಥನೆ ಮಾಡಿ ಎಂದರು. ಶುಕ್ರವಾರದ ಸಾಮಾನ್ಯ ಪ್ರಾರ್ಥನೆ, ತಿಂಗಳ ವಿಶೇಷ ಆರಾಧನೆ. ನಿತ್ಯದ ಜಪ ಎಂದೆಲ್ಲ ಶಿಲುಬೆ ದೇವರ ಬಳಿ ಜನ ಕಲೆಯುವುದು ನಿತ್ಯದ ವಿಷಯವಾಯಿತು.
ಒಂದು ದಿನ ಸಿಮೋನ ಶಿಲುಬೆಯ ಪ್ರಾರ್ಥನೆ ಇರಿಸಿಕೊಂಡ. ಶಿಲುಬೆಗೆ ಭರ್ಜರಿ ಅಲಂಕಾರ. ಸಾಲು ಸಾಲು ಮೇಣದ ಬತ್ತಿಗಳು ಸುತ್ತ ಮಾವಿನ ಎಲೆ ತೋರಣ. ಪ್ರಾರ್ಥನೆ ಮುಗಿಯುವಾಗ ಹರಿವಾಣಗಳಲ್ಲಿ ತುಪ್ಪದ ಅವಲಕ್ಕಿ ಬಂದಿತು. ತುಂಡು ಬಾಳೆ ಎಲೆಯಲ್ಲಿ ಎಲ್ಲರಿಗೂ ಸಾಕು ಸಾಕು ಅನ್ನುವಷ್ಟು ಅವಲಕ್ಕಿ ನಂತರ ಲೋಟಗಳಲ್ಲಿ ಕಾಫ಼ಿ, ನೀರು.
ಮುಂದಿನ ತಿಂಗಳು ಎಮ್ಮೆ ಮರಿಯ ನಂತರ ಸಾನಬಾವಿ ಪೆದ್ರು ಮನೆ ಮನೆಗೆ ಹೋಗಿ ಜನರನ್ನು ಕರೆಯುವುದು.
“ಈವತ್ತು ನಮ್ಮ ಪ್ರಾರ್ಥನೆ..ಬರಬೇಕು”
“ಮರಿಬೇಡಿ ಆಯ್ತ?”
ಚಮಾದೋರ್ ಇಂತ್ರು ಮೂಲಕ ಹೇಳಿ ಕಳುಹಿಸುವುದು. ಮನೆ ಮನೆಯವರೇ ಬಂದು ಶಿಲುಬೆಯ ಸುತ್ತ ಅಲಂಕರಿಸುವುದು.
ಪಾಸ್ಕೋಲ ಮೇಸ್ತ್ರಿ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಇನಾಸನ ಮಗನಿಗೇನೆ ಹೇಳಿ ಬ್ಯಾಂಡ್ ಬಾರಿಸಿದ್ದೂ ಆಯಿತು. ಅವಲಕ್ಕಿ ಬದಲು ಎಳ್ಳಿನ ಉಂಡೆ ಹಂಚಿದ್ದೂ ಆಯಿತು. ಪ್ರಾರ್ಥನೆ ಮಾಡುವವರ ಪ್ರತಿಷ್ಠೆಯ ಜತೆಗೆ ಈ ಶಿಲುಬೆ ದೇವರ ಪ್ರತಿಷ್ಠೆಯೂ ಹೆಚ್ಚಿತು.
ಹೀಗಾಗಿ ತಿಂಗಳ ಮೊದಲ ಶುಕ್ರವಾರ ಇಲ್ಲಿ ಒಂದು ಪರಿಸೆ ಸೇರಲಾರಂಬಿಸಿತು.
ಅಂತಹ ಒಂದು ಶುಕ್ರವಾರ ಪಾದರಿ ಮಸ್ಕರಿನಾಸರೂ ಅಲ್ಲಿಗೆ ಬಂದರು. ಅಲ್ಲಿ ಸೇರಿದ ಜನರನ್ನು ನೋಡಿದ ಮೇಲೆ ಅವರ ತಲೆಯಲ್ಲಿ ಒಂದು ವಿಚಾರ ಹೊಕ್ಕಿತು. ಈ ವಿಚಾರ ಹೊಕ್ಕಿದ್ದೆ ಅವರು ಗುರ್ಕಾರ ಸಿಮೋನನಿಗೆ ಹೇಳಿ ಕಳುಹಿಸಿದರು.
“ಬೆಸಾಂವಂ ದಿಯಾ ಪದ್ರಾಬ” ಎಂದು ಸಿಮೋನ ಬಂದು ಕೈಮುಗಿದ.
“ಅಲ್ಲ ಸಿಮೋನ, ಇನಾಸನ ಮನೆ ಮುಂದೆ ಒಂದು ಶಿಲುಬೆ ಇರಿಸಿದ್ದಾರಲ್ಲ..ಅದು ಯಾರು ಕಟ್ಟಿಸಿದ್ದು?”
ಇನಾಸನ ಮನೆಯ ಮುಂದೆ ಶಿಲುಬೆ ಕಟ್ಟಿಸಿದ ಬಗ್ಗೆ ಇಗರ್ಜಿಯಲ್ಲಿ ದಾಖಲೆ ಇತ್ತು. ಅದನ್ನು ಈಗಾಗಲೇ ಮಸ್ಕರಿನಾಸ ಓದಿದ್ದರು. ಆದರೂ ಈ ವಿಚಾರಕ್ಕೆ ಬೇರೊಂದು ರೂಪ ಕೊಡುವ ಅಭಿಪ್ರಾಯ ಅವರದ್ದಾಗಿತ್ತು. ಹೀಗೆಂದೇ ಅವರು ಈ ವಿಷಯವನ್ನು ಪ್ರಸ್ತಾಪಿಸಿದರು.
“ಇಗರ್ಜಿಯಿಂದಾನೆ ಅಲ್ಲಿ ಶಿಲುಬೆ ಇತ್ಯಾದಿ ಕಟ್ಟಿಸಿದ್ದು ಪದ್ರಾಬಾ..” ಎಂದ ಆತ.
ಅವನಿಗಂತೂ ಗೊತ್ತಿತ್ತಲ್ಲ.
“ಅಂದರೆ ಅದು ಇಗರ್ಜಿ ಆಸ್ತಿ ಅಲ್ಲವೆ?” ಎಂದು ಅವರು ಹೇಳಿದಾಗ ಅವರ ಮಾತಿನ ತಲೆ ಬುಡ ಸಿಮೋನನಿಗೆ ಆಗಲಿಲ್ಲ. ಪಾದರಿ ಈ ವಿಷಯವನ್ನು ಒಂದೆರಡು ಮಾತಿನಲ್ಲಿ ಮುಗಿಸಿಬಿಟ್ಟರು. ಆದರೆ ಮುಂದೊಂದು ದಿನ ಅವರು ಸಿಮೋನನನ್ನು ಕರೆದುಕೊಂಡು ಇನಾಸನ ಮನೆಗೆ ಬಂದರು. ಓರ್ವ ಆಳನ್ನು ಒಂದೆರಡು ಸಲಕರಣೆಗಳನ್ನು ತರಲು ಅವರು ಹೇಳಿದ್ದರು. ಅವರ ಕೈಯಲ್ಲಿ ಕಬ್ಬಿಣದ ಒಂದು ಕರಂಡಕ ಕೂಡ ಇತ್ತು. ಅದಕ್ಕೊಂದು ಬೀಗ ಬೇರೆ.
ಸಿಮೋನನಿಗೆ ಎಲ್ಲ ಅರ್ಥವಾಯಿತು. ಪಾದರಿಗಳ ಅಭಿಪ್ರಾಯದಂತೆ ಕಬ್ಬಿಣದ ಕರಂಡಕನ್ನು ಆತ ಶಿಲುಬೆಯ ಕೆಳಗೆ ಕಲ್ಲು ಕೊರೆದು ಕೂಡಿಸಿ ಗಾರೆ ಮಾಡಿದ. ಅದರ ಮುಚ್ಚಳ ತೆಗೆದು ನೋಡಿ ಪರೀಕ್ಷೆ ಮಾಡಿ ಪಾದರಿ ಬೀಗ ಜಡಿದರು. ಇನಾಸನ ಮಕ್ಕಳನ್ನು ಕರೆದು ಪಾದರಿ-
“ಇದನ್ನು ನೋಡಿಕೊಳ್ಳಿ..” ಎಂದರು.
ಅದರ ಬೀಗದ ಕೈ ಮಾತ್ರ ಪಾದರಿಗಳ ಬಳಿ ಉಳಿಯಿತು.
ಅನಂತರದ ಶುಕ್ರವಾರ ಜಪಸರ ಪ್ರಾರ್ಥನೆಗೆ ಬಂದ ಜನ. ಮೇಣದ ಬತ್ತಿ ಹಚ್ಚಲು ಬಂದವರು. ಶಿಲುಬೆ ದೇವರಿಗೆ ಹೂವು, ಮೇಣದ ಬತ್ತಿ ನೀಡಲು ಬಂದವರು ತಮ್ಮ ಕೆಲಸ ಮುಗಿಸಿ ಕೈ ಮುಗಿದು ಈ ಗೋಲಕಕ್ಕೆ ಹಣ ಹಾಕಲು ಮರೆಯಲಿಲ್ಲ.
ಇನಾಸ ಇದ್ದನ್ನು ವಿಪರೀತವಾಗಿ ತೆಗೆದುಕೊಳ್ಳಲಿಲ್ಲ. ಆದರೆ ಅವನ ಎರಡನೇ ಮಗ ಪಾಸ್ಕು ಕಾಣಿಕೆ ಡಬ್ಬಿಯನ್ನು ಅದಕ್ಕೆ ತೂಗು ಬಿದ್ದ ಬೀಗವನ್ನು ನೋಡಿ ಮುಖಗಂಟು ಮಾಡಿಕೊಂಡ.
*
*
*
ಪಾದರಿ ಮಸ್ಕರಿನಾಸರು ಊರಿಗೆ ಬಂದ ಮೇಲೆ ಇನ್ನೂ ಕೆಲವರ ಮುಖದ ಮೇಲೆ ಹೀಗೆ ಗಂಟುಗಳು ಬಿದ್ದಿದ್ದವು.
ಮಸ್ಕರಿನಾಸರು ಪ್ರತಿ ಭಾನುವಾರ ಪೂಜೆಯ ನಡುವೆ ಶರಮಾಂವಂಗೆ ನಿಂತವರು-
“ನೀವು ಯಾರೂ ಅನ್ವಾಲ ಕಾಯಿದೆ ಕೊಡುತ್ತಿಲ್ಲ”
“ನೀವು ಕಾಣಿಕೆ ಡಬ್ಬಿಗೆ ಹಣ ಹಾಕುವುದಿಲ್ಲ”
“ನೀವು ಕಾಣಿಕೆ ಡಬ್ಬಿಗೆ ಸವಕಲು ನಾಣ್ಯ. ಯಾವುದೋ ಕಾಲದ ಕಾಸು ಬಿಲ್ಲೆ ಹಾಕುತ್ತೀರಿ”.
“ನೀವು ಸತ್ತವರ ಆತ್ಮಕ್ಕೆ ಪಾಡು ಪೂಜೆಗಳನ್ನು ಕೂಡಿಸುವುದಿಲ್ಲ.” ಎಂದ ಪದೇ ಪದೇ ಹೇಳುವುದು ಬಹಳ ಜನ ಕ್ರೀಸ್ತುವರಿಗೆ ಹಿಡಿಸುತ್ತಿರಲಿಲ್ಲ.
ಈ ಪಾದರಿಗೆ ದುಡ್ಡಿನ ರಾಹು ಬಡಿದಿದೆ ಎಂದೂ ಕೆಲವರು ಇಳಿ ದನಿಯಲ್ಲಿ ಮಾತನಾಡಿಕೊಂಡರು.
ಪಾದರಿ ಚಾಲ್ತಿಗೆ ತಂದ ಮತ್ತೂ ಒಂದು ಕಾರ್ಯಕ್ರಮವೆಂದರೆ ಇಗರ್ಜಿಯಲ್ಲಿ ಕಾಯಿಪಲ್ಲೆಗಳ ಹರಾಜು.
ಒಂದು ಭಾನುವಾರ ಅವರು ಜನರಿಗೆ ಹೇಳಿದರು-
“ನೀವು ನಿಮ್ಮ ಮನೆಗಳಲ್ಲಿ ಏನಾದರೂ ಬೆಳೆಯಬಹುದು..ತೆಂಗಿನಕಾಯಿ..ತರಕಾರಿ..ಹಣ್ಣು..ಮೊದಲ ಫ಼ಸಲನ್ನು ನೀವು ದೇವರಿಗೆ ನೀಡಬೇಕು..ಅದು ಇಗರ್ಜಿಗೆ ತಂದುಕೊಡಬೇಕು.”
ಇದು ಜನರಿಗೆ ಸರಿಎನಿಸಿತು.
ಪ್ರಥಮ ಫ಼ಲ ದೇವರಿಗೆ ಕೊಡುವುದು ಸೂಕ್ತ. ಒಳ್ಳೆಯ ಸಲಹೆ. ಅವರು ತೆಂಗಿನಕಾಯಿ, ಕುಂಬಳಕಾಯಿ, ಹೀರೆಕಾಯಿ, ಐವತ್ತು ತೊಂಡೇಕಾಯಿ, ಪಡುವಲ ಕಾಯಿ, ಹಲಸಂದೆ, ಚೌಳೀಕಾಯಿ, ಬೀನ್ಸು ಎಂದೆಲ್ಲ ಹೆಗಲಮೇಲೆ ಹೊತ್ತು, ಚೀಲದಲ್ಲಿ ತುಂಬಿಕೊಂಡು ಇಗರ್ಜಿಗೆ ಬಂದರು. ಎಲ್ಲ ಕ್ರೀಸ್ತುವರ ಮನೆಗಳ ಹಿಂದೆ ಹಿತ್ತಲಿತ್ತು. ಮುಂದೆಯೂ ಜಾಗವಿತ್ತು. ಬಿಡುವಾದಾಗ ಅದು ಇದು ಬೆಳೆಸುತ್ತಿದ್ದರು. ಹಬ್ಬಿಸಿದ ಬಳ್ಳಿಗಳಿಗೆ, ಬೆಳೆಸಿದ ಗಿಡಗಳಿಗೆ ಅದು ಇದು ಬೆಳೆಸುತ್ತಿದ್ದರು. ಹೀಗೆ ಹೂವು, ಕಾಯಿ ಬಿಟ್ಟಾಗ ಸಂತಸವಾಗುತ್ತಿತ್ತು. ಅದನ್ನು ದೇವರಿಗೆ ಕೊಡಿ ಎಂದಾಗ ಅವರು ಸಂಭ್ರಮ ಪಡುತ್ತಿದ್ದರು. ಹೆಮ್ಮೆಯಿಂದ ತಂದು ದೇವರ ಪೀಠದ ಮುಂದೆ ಇಡುತ್ತಿದ್ದರು.
ಪೂಜೆ ಮಾಡುವಾಗ ಪಾದರಿ ಮಸ್ಕರಿನಾಸರು ಇದನ್ನೆಲ್ಲ ನೋಡಿದರು. ಪ್ರಾರಂಭದಲ್ಲಿ ಪವಿತ್ರ ಜಲವನ್ನು ಜನರ ಮೇಲೆ ಸಿಂಪಡಿಸುವಾಗ ಒಂದು ಕ್ಷಣ ನಿಂತು ಈ ತರಕಾರಿಯ ಮೇಲೂ ಜಲವನ್ನು ಸಿಂಪಡಿಸಿದರು. ಪೂಜೆಯ ನಡುವೆ
’ಮೋಗಾಚ ಕ್ರೀಸ್ತಾಂವಾನುಂ’ (ಪ್ರೀತಿಯ ಕ್ರೀಸ್ತುವರೆ) ಎಂದು ಸಂಬೊಧಿಸಿ ಅವರು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ನೀವು ಬೆಳೆದ ಫ಼ಸಲಿನ ಮೊದಲ ಫ಼ಲವನ್ನು ದೇವರಿಗೆ ಕೊಡುವುದರ ಮೂಲಕ ದೇವರಿಗೆ ಕೃತಜ್ಞತೆ ಅರ್ಪಿಸಿದ್ದೀರಿ. ನಿಮ್ಮ ಈ ಕೃತಜ್ಞತೆ ನಿಮಗೆ ನೂರು ಪಟ್ಟಾಗಿ ಹಿಂತಿರುಗುತ್ತದೆ..ಈ ಬಗ್ಗೆ ನಿಮಗೆ ಸಂದೇಹ ಬೇಡ..” ಎಂದರು. ಹಾಗೆಯೇ-
“ಪೂಜೆಯ ನಂತರ ನಿಮ್ಮ ಕಾಣಿಕೆಯನ್ನು ಗುರ್ಕಾರ ಹರಾಜು ಹಾಕುವರು..ನೀವು ಇದನ್ನು ಒಂದು ವಸ್ತು ಎಂದು ತಿಳಿಯದೆ ದೇವರ ಪ್ರಸಾದ ಎಂದು ತಿಳಿದು ಬೆಲೆ ಕಟ್ಟಿ ತೆಗೆದುಕೊಳ್ಳಿರಿ..’ ಎಂದೂ ಹೇಳಿದರು.
ಪೂಜೆ ಮುಗಿದ ನಂತರ ಬಹಳ ಜನ ಉಳಿದರು.
ಇಗರ್ಜಿಯ ಹೊರ ಬಲಕಾಂನಲ್ಲಿ ಗುರ್ಕಾರ ಸಿಮೋನ ತರಕಾರಿ ಮುಂದಿರಿಸಿಕೊಂಡು ಹರಾಜು ಹಾಕಿದ. ಕುಂಬಳಕಾಯಿ, ಸೌತೆಕಾಯಿ ಇತ್ಯಾದಿಗಳು ಹೆಚ್ಚಿನ ಬೆಲೆಗೇನೆ ಹೋದವು. ಪಾಸ್ಕೋಲ, ಬಾಲ್ತಿದಾರ, ಪೆದ್ರು, ಕೈತಾನ, ಸಾನಪುತ್ರು ಮೊದಲಾದವರು ಪೈಪೋಟಿಯ ಮೇಲೆ ಬೆಲೆ ಏರಿಸಿದರು. ಇದು ಕೇವಲ ತರಕಾರಿಯಲ್ಲ ದೇವರ ಪ್ರಸಾದ ಎಂಬುದು ಒಂದು ಕಾರಣವಾದರೆ ಬೆಲೆ ಏರಿಸಿದವನು ಪೆದ್ರು, ಕೈತಾನ ನಾನು ಅವನಿಗಿಂತ ಏನು ಕಡಿಮೆ ಎಂಬುದು ಮತ್ತೊಂದು ಕಾರಣವಾಯಿತು.
“ಹೋಗಲಿ..ಹಣ ಇಗರ್ಜಿಗೇನೆ ಅಲ್ವೆ?” ಎಂದು ಪಾಸ್ಕೋಲ ಮೇಸ್ತ್ರಿ ಐದು ರೂಪಾಯಿ ಎಂದ.
’..ಹೌದು..ನೀವು ಹೇಳುವುದು ಸರಿ..ನಂದು ಎಂಟು ರೂಪಾಯಿ’ ಎಂದು ಕೂಗಿದ ವಿನ್ಸೆಂಟ್.
ನಿಂತು ನೋಡುವವರಿಗೆ ಮೋಜೆನಿಸಿತು. ಹಣ ಎಣಿಸಲು ಕುಳಿತ ಪಾದರಿಗಳ ಬಟ್ಲರ ಫ಼ರಾಸ್ಕ ಎಲ್ಲ ಮುಗಿದಾಗ ನೂರ ಹತ್ತು ರೂಪಾಯಿ ಎಂಟಾಣೆ ಎಣಿಸಿದ.
“ರಜೀನಾ ಇದನ್ನ ಒಳಗಿಡು” ಎಂದು ಪಾದರಿ ಮಸ್ಕರಿನಾಸರು ಫ಼ರಾಸ್ಕ ಹೆಂಡತಿಯ ಕೈಗೆ ಹಣ ನೀಡಿದರು.
ಎಮ್ಮೆ ಮರಿಯ-
“ಆ ಪಾದರಿ ಹಾಗೆ ಈ ಪಾದರಿ ಹೀಗೆ” ಎಂದು ಎಮ್ಮೆಗಳನ್ನು ಕೊಟ್ಟಿಗೆಯಿಂದ ಹೊರಬಿಡುತ್ತ ನುಡಿದಳು.
ಬೋನ ಇಗರ್ಜಿಯಲ್ಲಿ ದಿವ್ಯಪ್ರಸಾದ ಸ್ವೀಕರಿಸಿ ಬಂದವನು ಮೊದಲು ಒಂದು ಗುಟುಕು ಗಂಜಿ ನೀರು ಕುಡಿದು, ಉಪವಾಸ ಮುರಿದು ನಂತರ ತಿಂಡಿ ತಿನ್ನಲು ಕುಳಿತವ-
“ಇದೆಲ್ಲ ಗೋನಸ್ವಾಲಿಸರ ಮನಸ್ಸಿಗೆ ಬರತಿರಲಿಲ್ಲ.” ಎಂದ.
ಸಿಮೋನ ಹಣ ಎಣಿಸಿಕೊಂಡು ಫ಼ರಾಸ್ಕ ಪಾದರಿ ಬಂಗಲೆಗೆ ಹೋದ ನಂತರ ಪೀಠದತ್ತ ತಿರುಗಿ ಶಿಲುಬೆಯ ಗುರುತು ಮಾಡಿ ಮನೆಯತ್ತ ತಿರುಗಿದ. ಇಗರ್ಜಿ ಮುಂದಿನ ಸಂತರ ಮಂಟಪದ ಬಳಿ ನಿಂತು ಕಿರು ಪ್ರಾರ್ಥನೆ ಮಾಡಲು ಆತ ಮರೆಯಲಿಲ್ಲ. ಮನೆಗೆ ಬಂದಾಗ ಹೆಂಡತಿ ಅಪ್ಪಿಬಾಯಿ ಎದುರು ದಿಕ್ಕಿನಿಂದ ಬಂದು ಅಂಗಳ ದಾಟಿದಳು. ಇಗರ್ಜಿಗೆ ಹೋಗುವಾಗ ಉಟ್ಟ ಸೀರೆಯನ್ನು ಅವಳಿನ್ನೂ ಬಿಚ್ಚಿರಲಿಲ್ಲ. ತೊಟ್ಟ ಆಭರಣಗಳನ್ನು ತೆಗೆದಿರಲಿಲ್ಲ್. ಕಾಪು, ಕೆನ್ನೆಸರಪಳಿ, ಮುಡಿ ಮುಳ್ಳು, ಕೈ ಬಳೆಗಳಲ್ಲಿ ಅವಳು ಹುಡುಗಿಯಂತೆಯೇ ಕಾಣುತ್ತಿದ್ದಳು.
“..ಏನು..ಇಗರ್ಜಿಗೆ ಬಂದೋರೆಲ್ಲ ಮನೆ ಸೇರಿ ಅಡಿಗೆ ಮುಗಿಸಿರಬೇಕು..ನೀನೇನು ಇನ್ನೂ ಮನೆ ಸೇರುವ ವಿಚಾರದಲ್ಲಿ ಇಲ್ಲವಲ್ಲ..” ಎಂದ ಗುರ್ಕಾರ ಸಿಮೋನ.
“ಹಾಗೆ ಏನಿಲ್ಲ..ಇನಾಸಜ್ಜಿ ಹಾಸಿಗೆ ಹಿಡಿದಿದ್ದಾರೆ ಅಂತ ಕೇಳ್ದೆ..ಈವತ್ತು ಅವರು ಇಗರ್ಜಿಗೂ ಬರಲಿಲ್ಲ..ನೋಡಿಕೊಂಡು ಬರೋಣ ಅಂತ ಹೋಗಿದ್ದೆ..”
ಇನಾಸಜ್ಜಿ ಎಂದ ಕೂಡಲೆ ಸಿಮೋನನ ಮುಖದ ಮೇಲಿನ ಭಾವನೆ ಬದಲಾಯಿತು.
“ಹೌದಲ್ಲ..ಹೇಗಿದಾಳೆ ಅಜ್ಜಿ..”
“ಗುರುತು ಪರಿಚಯ ಹಿಡೀತಾರೆ..ಆದರೆ ಸಾವು ಹತ್ತಿರ ಬಂದಿರೋದು ಅವರಿಗೆ ಗೊತ್ತಾಗಿದೆ..ಶುಕ್ರವಾರ ಶುಕ್ರವಾರ ಅಂತ ಹೇಳ್ತಿರತಾರೆ…” ಎಂದಳು ಅಪ್ಪಿ.
“ನಾನೂ ಹೋಗಿ ಬರಬೇಕು..ದೈವಭಕ್ತಿ ಮುದುಕಿ” ಎಂದ ಸಿಮೋನ ತನ್ನ ಸರ್ಜಕೋಟನ್ನು ತೆಗೆಯುತ್ತ.
“ಅಲ್ಲ..ಹರಾಜಿನಲ್ಲಿ ನೀವು ಏನೂ ಹಿಡಿಲಿಲ್ವ?” ಅವಳು ಬಳ್ಕೂರಕಾರ ಮನೆಗೆ ಹೋಗಿ ತಿರುಗಿ ಬರುವಾಗ ಹಲವರು ಹೆಗಲ ಮೇಲೆ, ಕೈಯಲ್ಲಿ ಇಗರ್ಜಿಯಲ್ಲಿ ಹರಾಜು ಕೂಗಿ ತೆಗೆದುಕೊಂಡ ಹೀರೆಕಾಯಿ, ಕುಂಬಳಕಾಯಿ ಹಿಡಿದುಕೊಂಡು ಹೋಗುತ್ತಿರುವುದನ್ನು ನೋಡಿದ್ದಳು. ಇಗರ್ಜಿಯಲ್ಲಿ ಪಾದರಿ ದಿವ್ಯ ಪ್ರಸಾದವನ್ನು ಭಯ ಭಕ್ತಿಯಿಂದ ಹಿಡಿದುಕೊಳ್ಳುವಂತೆ ಇವರು ತರಕಾರಿಯನ್ನು ಹಿಡಿದುಕೊಂಡಿದ್ದರು.
“..ಇಗರ್ಜಿನಲ್ಲಿ ಹರಾಜಿಗೆ ಹಿಡಿದದ್ದು” ಎಂದು ಬೇರೆ ಕೇಳದಿದ್ದರೂ ಹೇಳಿದ್ದರು. ಹರಾಜು ಮಾಡಲು ನಿಂತ ತನ್ನ ಗಂಡ ಏನಾದರೂ ತರಬಹುದು ಅಂದುಕೊಂಡಿದ್ದಳು ಅಪ್ಪಿ. ಮಾಂಸ ತರಲು ಮಗ ವಿಕ್ಟರ್ ಗೆ ಹೇಳಿ ಹೋಗಿದ್ದಳು. ಆತ ಮಾಂಸ ತರುತ್ತಾನೆ. ಪಲ್ಯ ಮಾಡಲು ಗಂಡ ತರುವ ತರಕಾರಿ ಅಂದುಕೊಂಡು ಬಂದರೆ, ಗಂಡ ಬರಿಗೈಯಲ್ಲಿ ಬಂದಿದ್ದ.
“..ಹುಂ..ನನಗ್ಯಾಕೋ..ಈ ಹರಾಜು ಪರಾಜು ಹಿಡಿಸಲಿಲ್ಲ..” ಎಂದ ಸಿಮೋನ.
ಮುಂದೆ ಮಾತು ಬೆಳೆಸುವುದು ಬೇಡವೆನಿಸಿ,
ಅಪ್ಪಿಬಾಯಿ ಅಡಿಗೆ ಕೆಲಸಕ್ಕೆ ತೊಡಗಿದಳು.
“ಸಿಮೋನ ಎಂದಿನ ಉಡುಪು ಧರಿಸಿ ಹೊರಬಂದವ “ಅಪ್ಪಿ ನಾನು ಬಳ್ಕೂರಕಾರ ಮನೆಗೆ ಹೋಗಿ ಬರತೀನಿ..” ಎಂದು ಹೇಳಿ ರಸ್ತೆಗೆ ಇಳಿದ.
*
*
*
ಬಳ್ಕೂರಕಾರ ಕೈತಾನನ ಅತ್ತೆ ಅಸಾಧಾರಣ ದೈವ ಭಕ್ತೆ. ಬಳ್ಕೂರಿಗೆ ಹತ್ತಿರದ ಗುಂಡಬಾಳೆ ಅವಳ ಊರು. ಅವಳ ಜೀವಮಾನದ ಮುಕ್ಕಾಲು ಭಾಗ ಕಳೆದು ಹೋದದ್ದು ಗುಂಡಬಾಳೆ ಇಗರ್ಜಿಯಲ್ಲಿ. ಮನೆಯಲ್ಲಿ ಹೊರಬಂದು ಒಳ ಹೋಗುವಾಗೊಮ್ಮೆ ಅವಳು ಗೋಡೆಯ ಮೇಲಿನ ಅಲ್ತಾರಿನತ್ತ ತಿರುಗಿ ಕೈಬೆರಳುಗಳನ್ನು ದೇವರತ್ತ ಚಾಚಿ ಆ ಬೆರಳುಗಳಿಗೆ ಮುತ್ತಿಕ್ಕಬೇಕು. ಆಗಾಗ್ಗೆ ಕುತ್ತಿಗೆಯಲ್ಲಿಯ ಅರ್ಲೂಕಿಗೆ ಅವಳು ಮುತ್ತು ಕೊಡಬೇಕು. ಇಗರ್ಜಿಗೆ ಹೋಗುವಾಗ ಹಳೆ ಪದ್ದತಿಯಂತೆ ಸೀರೆಯ ಮೇಲೆ ಬಿಳಿಯ ವಸ್ತ್ರ ಉಟ್ಟೆ ಹೋಗಬೇಕು. ಅಲ್ಲಿ ಬಾಗಿಲಲ್ಲಿಯ ಪವಿತ್ರ ಜಲವನ್ನು ತುಟಿ, ಹಣೆ, ಭುಜಗಳಿಗೆ ಹಚ್ಚಿಕೊಂಡು, ಒಳಹೋಗಿ ನೆಲದ ಮೇಲೆ ಶಿಲುಬೆಯ ಗುರುತು ಬರೆದು ಅದಕ್ಕೆ ಮುತ್ತಿಟ್ಟು ಮುಂದಿನ ಪ್ರಾರ್ಥನೆಗೆ ಅವಳು ತೊಡಗಿಕೊಳ್ಳಬೇಕು.
ಗಂಡ ಇರುವ ತನಕ ಭಾನುವಾರ ಪೂಜೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ಗಂಡ ಸತ್ತ ನಂತರ ನಿತ್ಯ ಇಗರ್ಜಿಗೆ ಹೋಗುವುದನ್ನು ರೂಢಿಸಿಕೊಂಡಳು. ಬೆಳಕು ಹರಿಯುವಾಗ ಇಗರ್ಜಿಯ ಗಂಟೆ ಕೇಳಿದ್ದೇ ಅವಳು ಇಗರ್ಜಿಗೆ ಹೋಗುತ್ತಿದ್ದಳು. ದಿನದಲ್ಲಿ ಮೂರು ಬಾರಿ ಪ್ರಾರ್ಥನೆ. ಸಂಜೆ ಜಪಸರ ಪ್ರಾರ್ಥನೆ. ನಲವತ್ತು ದಿನಗಳ ತಪಸ್ಸಿನ ಕಾಲದಲ್ಲಿ ಉಪವಾಸ. ಶಿಲುಬೆಯ ಹಾದಿಯಲ್ಲಿ ಭಾಗವಹಿಸಿ ಕ್ರಿಸ್ತನ ಕಷ್ಟಗಳಿಗಾಗಿ ನೋವು ಅನುಭವಿಸುವುದು. ಹೀಗೆ ಅವಳ ಬದುಕಿನ ತುಂಬ ದೇವರು, ದೇವರ ಧ್ಯಾನ ತುಂಬಿಕೊಂಡಿತ್ತು.
ಇದ್ದ ಒಬ್ಬಳೆ ಮಗಳು ನಮಾಮೋರಿಯನ್ನು ಬಳ್ಕೂರಿನ ಕೈತಾನನಿಗೆ ಕೊಟ್ಟು ಮದುವೆ ಮಾಡಿದಳು. ಗುಂಡಬಾಳೆಯ ತನ್ನ ಮನೆಯಲ್ಲಿ ಒಂಟಿಯಾಗಿ ಉಳಿದಳು.
“ಅತ್ತೆ ಬಳ್ಕೂರಿಗೆ ಬಂದು ಬಿಡು..ಇಲ್ಲಿ ಒಬ್ಬಳೇ ಯಾಕೆ ಇರೋದು?” ಎಂದರೆ-
“ಇಲ್ಲಪ್ಪ..ನಿನ್ನ ಊರಲ್ಲಿ ಒಂದು ಇಗರ್ಜಿನೇ ಒಬ್ಬ ಪಾದರೀನೆ?” ಎಂದು ಕೇಳಿದಳು.
ಮಗಳ ಹೆರಿಗೆಯನ್ನು ಅವಳು ಇಲ್ಲಿಯೇ ಮಾಡಿದಳು. ಆಗ ಮೂರು ತಿಂಗಳು ಪ್ರತಿ ಭಾನುವಾರ ಹರಕಂತಾರರ ಕನ್ನನ ದೋಣಿಯಲ್ಲಿ ಗುಂಡಬಾಳೆಗೆ ಹೋಗಿ ಪೂಜೆ ಕೇಳಿಕೊಂಡು ಬರುತ್ತಿದ್ದಳು. ಇನಾಸಜ್ಜಿ ಮಗಳ ಹೆರಿಗೆಯಾಗಿ ಮೊಮ್ಮಕ್ಕಳು ದೊಡ್ಡವರಾದಂತೆ ಇನಾಸಜ್ಜಿ ಮತ್ತೆ ಗುಂಡಬಾಳೆಗೆ ಹೋದಳು. ಅಲ್ಲಿ ಅವಳದ್ದೇ ಆದ ಆಸ್ತಿಯೇನೂ ಇರಲಿಲ್ಲ. ದೊಡ್ಡ ಶಾನುಭೋಗರ ತೆಂಗಿನ ತೋಟವನ್ನು ಅವಳ ಗಂಡ ನೋಡಿಕೊಂಡಿದ್ದ. ಸಣ್ಣ ಬಿಡಾರದಲ್ಲಿ ಗಂಡ ಹೆಂಡತಿ ಮಗಳು ವಾಸಿಸುತ್ತಿದ್ದರು. ಅವನು ಸತ್ತ ನಂತರ ಅದೇ ಬಿಡಾರದಲ್ಲಿ ತಾಯಿ, ಮಗಳು ಮುಂದುವರೆದರು. ಮಗಳ ಮದುವೆಯಾದ ನಂತರ ಈಕೆಗೆ ಅಲ್ಲಿ ಕೆಲಸವೇನಿಲ್ಲ. ಬಿದ್ದ ಮಡಲುಗಳನ್ನು ಹೆಣೆಯುವುದು, ತೆಂಗಿನ ಸಿಪ್ಪೆಯ ನಾರು ಬಿಡಿಸಿ ಹಗ್ಗ ಹೆಣೆಯುವುದು. ಅವರವರ ಮನೆಗೆಲಸ. ದೇವರ ಧ್ಯಾನ. ಯಾರಿಗೂ ಹೊರೆಯಾಗಿ ಇದ್ದವಳಲ್ಲ ಇವಳು. ಇವಳ ಮೇಲೆಯೇ ಸುತ್ತಲಿನ ಹತ್ತು ಹಳ್ಳಿಗಳ ಜನ ನಿಂತಿದ್ದರು.
ಮದ್ದುಕೊಡುವುದು ಇನಾಸಜ್ಜಿಯ ಒಂದು ಹವ್ಯಾಸ. ನಿತ್ಯ ಮನೆ ಬಾಗಿಲಿಗೆ ಹತ್ತು ಜನ ಬರುತ್ತಾರೆ.
ಮಗುವಿಗೆ ಸನ್ನಿ.
ಹುಡುಗನಿಗೆ ಜ್ವರ.
ಹುಡುಗಿಗೆ ಗಂಟಲ ನೋವು.
ಮನೆ ಯಜಮಾನಿಗೆ ವಾಂತಿ.
ಮನೆ ಹೆಂಗಸಿಗೆ ಮೂರ್ಛೆ.
ಅಜ್ಜಿ ವಿವರ ಕೇಳುತ್ತಾಳೆ. ಕೂಡಲೆ ಬೇರೆ ಸೀರೆಯುಟ್ಟು ತೋಟದ ಹಿಂದಿನ ಕಾಡಿಗೆ ಹೋಗುತ್ತಾಳೆ. ಅಲ್ಲಿಂದ ಬಂದವಳೆ-
“..ನಡೀರಿ ..ಹೋಪ” ಎಂದು ಬಂದವರ ಜತೆ ಹೊರಡುತ್ತಾಳೆ. ಇಲ್ಲವೆ ಯಾವುದೋ ಬೇರು, ತೊಗಟೆ ಕೊಟ್ಟು ಕಷಾಯ ಮಾಡಿ ಕುಡಿಸಲು ತೇದಿ ತಿನ್ನಿಸಲು ಹೇಳುತ್ತಾಳೆ-
“ಉಪ್ಪು ಖಾರ ಕೂಡದು..” ಅನ್ನುತ್ತಾಳೆ.
ಬಂದವರಿಂದ ಅವಳು ತೆಗೆದುಕೊಳ್ಳುವುದು ಎರಡು ಎಲೆ ಒಂದು ಅಡಿಕೆ ಎರಡಾಣೆಯ ಒಂದು ಪಾವಲಿ. ಕೆಲವರಿಂದ ಇದೂ ಇಲ್ಲ.
ಬೇರೆ ಸಂದರ್ಭಗಳಲ್ಲಿ ಅಂಗಳದಲ್ಲಿ ಕುಳಿತು ಮಡಿಲು ಹೆಣೆಯುತ್ತಾಳೆ. ಹಗ್ಗ ಹೊಸೆಯುತ್ತಾಳೆ. ಕೊಳೆತ ತೆಂಗಿನ ಸಿಪ್ಪೆಯಿಂದ ನಾರು ಬಿಡಿಸುತ್ತಾಳೆ. ಆಗಾಗ್ಗೆ ಜಪ, ಪ್ರಾರ್ಥನೆ, ಕುತ್ತಿಗೆಯಲ್ಲಿಯ ದೇವರ ಪದಕಕ್ಕೇ ಮುತ್ತುಕೊಡುವುದು, ಇಗರ್ಜಿಗೆ ಹೋಗಿ ಬರುವುದು ತೋಟದ ಮೂಲಕ ತಿರುಗಾಡುವವರನ್ನು-
“..ಅಪ್ಪಿ..ಯಾರೇ? ತಿಮ್ಮ ಮಗಳಾ?”
“ಕುಪ್ಪ ಪೇಟೆಗೆ ಹೊಂಟ್ಯ ಮಗ?”
“ಶರಾವತಿ..ಮಗಳು ಮೈ ನೆರೆದ್ಲೋ ಹೆಂಗೆ?”
“ಜೂಜ..ಹೆಂಡತಿ ಚೆಂದಾಗಿದಾಳ”
“ಮೇಸ್ತ್ರ..ಗಾಯ ಮಾಗಬೇಕು ಅಂದ್ರೆ ನೀನು ಹೆಂಡ ಕುಡಿಯೋದ್ನ ನಿಲ್ಸು ಮಾರಾಯ..” ಎಂದೆಲ್ಲ ಮಾತನಾಡುವುದು.
ಹೀಗೆಯೇ ಗುಂಡ ಬಾಳೆಯಲ್ಲಿ ಅವಳ ದಿನಗಳು ಉರುಳಿದವು. ವಾರದಲ್ಲಿ ಎರಡು ದಿನ ಬಳ್ಕೂರಿಗೂ ಬಂದು ಮಗಳ ಮನೆಯಲ್ಲಿ ಒಂದು ಹೊತ್ತು ಇದ್ದು ಹಿಂತಿರುಗುತ್ತಿದ್ದಳು ಅವಳು.
ಆಗಲೆ ಅಳಿಯ ಕೈತಾನ ಘಟ್ಟದ ಮೇಲೆ ಹೋಗುವ ವಿಚಾರ ಹೇಳಿದ. ಬಹಳ ದಿನಗಳಿಂದ ಆತ ಒಂದು ವಿಷಯ ಗಮನಿಸುತ್ತ ಬಂದಿದ್ದ. ಮಳೆಗಾಲ ಕಡಿಮೆಯಾಗಿ ಕಡಲಲ್ಲಿ ತೂಫ಼ಾನು ಮರೆಯಾಗಿ ದೋಣಿಗಳ ಓಡಾಟ ಆರಂಭವಾದಂತೆ ಹೊನ್ನಾವರದಿಂದ ಬರುವ ದೋಣಿಗಳಲ್ಲಿ ಬಹಳ ಜನ “ಘಟ್ಟಕ್ಕೆ ಹೋಗುತ್ತೇನೆ” “ಘಟ್ಟಕ್ಕೆ ಹೋಗುತ್ತೇನೆ” ಎಂದು ಹೇಳಿಕೊಂಡು ಹೋಗುತ್ತಿದ್ದರು. ಮಳೆಯ ಮೋಡಗಳು ತಲೆಯ ಮೇಲೆ ತೂಗಾಡುತ್ತಿವೆ ಅನ್ನುವಾಗ ಈ ಜನ ಪರತು ಬರುತ್ತಿದ್ದರು. ಇದೇನು ಕತೆ ಎಂದು ಆತ ಒಂದಿಬ್ಬರನ್ನು ಕೇಳಿದ.
“ಅರೆ..ನಿಮಗೆ ಗೊತ್ತಿಲ್ದ? ಈ ಜನ ದುಡ್ಡು ಮಾಡಾಕೆ ಹೋತಾರೆ.ದುಡ್ಡು.” ಎಂದಿದ್ದರು ಅವರು.
ಕೆಲವರನ್ನು ಈತ ಪರೀಕ್ಷೆ ಮಾಡಿಯೂ ನೋಡಿದ. ಅವರೆಲ್ಲ ದುಡ್ಡು ಮಾಡಿದ್ದರು..ಹೆಂಡತಿ ನಮಾಮೋರಿ ಜತೆ ಪ್ರಸ್ತಾಪಿಸಿದ.
ಬಳ್ಕೂರಿನಲ್ಲಿ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅಪರೂಪಕ್ಕೆ ಕೆಲಸ ಸಿಗುತ್ತಿತ್ತು. ಬೇರೆ ಸಂದರ್ಭಗಳಲ್ಲಿ ದೋಣಿಗಳಿಗೆ ಸುಪಾರಿ ತುಂಬುವುದು, ತೆಂಗಿನಕಾಯಿ ಸುಲಿಯುವುದು, ಎಣ್ಣೆ ಗಾಣ ಆಡಿಸುವುದು ಎಂದು ಅದು ಇದು ಕೆಲಸ ಮಾಡಬೇಕಾಗುತ್ತಿತ್ತು. ಮನೆಯಲ್ಲಿ ತಿನ್ನಲು ಐದು ಬಾಯಿಗಳು-ಹಾಡ ಹಾಡ (ತೆಗೆದುಕೊಂಡು ಬಾ ತೆಗೆದುಕೊಂಡು ಬಾ) ಅನ್ನುತ್ತಿರಲು ಇವನು ಎಲ್ಲಿಂದ ತಂದಾನು? ಹೆಂಡತಿ ಕೂಡ ’ನೋಡಿ’ ಎಂದಳು. ಆದರೆ ಗುಂಡುಬಾಳೆಯ ಈ ಮುದುಕಿ ತಟ್ಟನೆ ಒಪ್ಪಿಗೆ ಕೊಡಲಿಲ್ಲ.
“ಹ್ಯಾಗೋ ಆಗುತ್ತೆ..ಇಲ್ಲೇ ಇದ್ರೆ ಆಗಲಿಕ್ಕಿಲ್ಲ” ಎಂದು ಕೇಳಿದಳು ಅವಳು.
ಕೊನೆಗೆ ಅಳಿಯ ಓರ್ವನೇ ಹೋಗುತ್ತೇನೆ ಎಂದಾಗ “ಹೋಗಿ ಬನ್ನಿ..ದೇವರು ಒಳ್ಳೆಯದನ್ನು ಮಾಡತಾನೆ” ಎಂದಳು. ಅವಳಿಗೂ ಮಗಳ ಬದುಕು ಹಸನಾಗಲಿ ಎಂಬ ಆಸೆ ಇತ್ತು.
*
*
*
ಬಳ್ಕೂರಕಾರ ಕೈತಾನ ಶಿವಸಾಗರಕ್ಕೆ ಬಂದ. ಸಿಮೋನ ಕರೆದು ಅವನಿಗೆ ಕೆಲಸ ಕೊಟ್ಟ. ಸೇತುವೆ ನಿರ್ಮಾಣ, ಸರಕಾರಿ ಕಟ್ಟಡಗಳು, ಸಾಹುಕಾರಿ ಕಟ್ಟಡಗಳು ಎಂದು ಸಾಕಷ್ಟು ಕೆಲಸಗಳಿದ್ದವು. ಅಲ್ಲೆಲ್ಲ ಕಲ್ಲು ಕೆತ್ತುತ್ತ, ವಾರಕ್ಕೊಮ್ಮೆ ಸೈದೂರನ ಕುಲುಮೆಯಲ್ಲಿ ಬಾಚಿ ಸರಿಪಡಿಸಿಕೊಳ್ಳುತ್ತ ಸಾಂತಾಮೋರಿ ಮನೆಯಲ್ಲಿ ಊಟ ಮಾಡಿಕೊಂಡು ಆತ ಉಳಿದ.
ಒಂದು ಎರಡು ವರುಷ ಇಲ್ಲಿ ಇರಬೇಕು ಎಂದು ಬಂದವ ಕೊನೆಗೆ ಶಿವಸಾಗರದಲ್ಲಿಯೇ ತಾನು ಉಳಿಯಬೇಕೆಂದು ವಿಚಾರ ಮಾಡಿದ. ಕೊಪೆಲಗೆ ಹತ್ತಿರವೇ ಒಂದು ಜಾಗ ಕೂಡ ಅವನಿಗೆ ಮಂಜೂರಾಯಿತು. ಅವನೇ ಮನೆ ಕಟ್ಟಿದ. ಹೆಂಡತಿ ಮಕ್ಕಳನ್ನು ಇಲ್ಲಿಗೆ ಕರೆತಂದ.
ಗುಂಡಬಾಳೆಗೆ ಹೋಗಿ ಇನಾಸಜ್ಜಿಗೂ ಶಿವಸಾಗರಕ್ಕೂ ಬರಲಿಕ್ಕೆ ಹೇಳಿದ-
“ಅತ್ತೆ ಬಂದು ಬಿಡು ಹೋಗೋಣ” ಎಂದ.
ಇಷ್ಟು ಹೊತ್ತಿಗೆ ಇನಾಸಜ್ಜಿಯ ಕೈಯಲ್ಲೂ ಏನೂ ಮಾಡಲಾಗುತ್ತಿರಲಿಲ್ಲ. ಕಾಡಿಗೆ ಹೋಗಿ ಸೊಪ್ಪು, ಬೇರು ಹುಡುಕಿ ತರಲು ಕಷ್ಟವಾಗುತ್ತಿತ್ತು. ಮಡಲು ಹೆಣೆಯುತ್ತಿದ್ದಳಲ್ಲದೆ, ತೆಂಗಿನ ನಾರು ಬಿಡಿಸಿ ಹಗ್ಗ ಹೆಣೆಯಲು ಆಗುತ್ತಿರಲಿಲ್ಲ. ದೊಡ್ಡ ಶಾನುಭೋಗರು ಯಾವುದೋ ಅಭಿಮಾನದಿಂದ ಅಕ್ಕಿ ಅದು ಇದು ಕೊಡುತ್ತಿದ್ದರು. ಗುಂಡಬಾಳೆಯ ಇಗರ್ಜಿಯೊಂದೇ ಅವಳಿಗೆ ಆಧಾರ. ಎರಡನೆಯ ಆಧಾರವೆಂದರೆ ಬಳ್ಕೂರಿನ ಮಗಳು, ಅಳಿಯ, ಮೊಮ್ಮಕ್ಕಳು. ಈಗ ಅವರೂ ದೂರವಾಗುತ್ತಾರೆ ಅಂದಾಗ ಮನಸ್ಸು ಖಾಲಿ ಖಾಲಿಯಾದಂತೆ ಭಾಸವಾಯಿತು. ಇಲ್ಲಿ ಏನಿದೆ ಎಂದು ತಾನಿರಬೇಕು ಎಂದು ಒಂದು ಕ್ಷಣ ಯೋಚಿಸಿದಳು. ಅಳಿಯನಂತೂ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಮೊಮ್ಮಕ್ಕಳೂ ಕೂಡ. ಅವರ ಜತೆಗೇನೆ ಕೊನೆಯ ದಿನಗಳನ್ನು ಕಳೆಯುವುದು ಅಂದುಕೊಂಡ ಅವಳು-
“ಹೌದು ಕೈತಾನ..ಅಲ್ಲಿ ಇಗರ್ಜಿ ಪಾದರಿ ಅಂತ ಇದ್ದಾರೆ ಅಲ್ವ?” ಎಂದು ಸಹಜವಾಗಿ ಕೇಳಿದಳು.ಇಗರ್ಜಿ ಇಲ್ಲದ ಪಾದರಿ ಇಲ್ಲದ ಊರುಗಳೂ ಇರುತ್ತವೆ ಅಲ್ಲವೇ? ಈಗ ಇಗರ್ಜಿ ಹೊನ್ನಾವರ ಗುಂಡುಬಾಳೆಯಲ್ಲಿದೆ ಆದರೆ ಬೇರೆ ಕೆಲ ಊರುಗಳಲ್ಲಿ ಇಲ್ಲ. ಅಲ್ಲಿ ಹೇಗೋ ಯಾರಿಗೆ ಗೊತ್ತು?
ಅವಳ ಮಾತಿಗೆ ಕೈತಾನ ನಕ್ಕ.
“ಇಲ್ಲ ಅತ್ತೆ ನಮ್ಮವರ ಮನೆಗಳು ಹತ್ತು ಹದಿನೈದಿವೆ. ಒಂದು ಕೊಪೆಲ ಇದೆ. ಪಾದರಿ ಮಾತ್ರ ಇಲ್ಲ..ಮುಂದೆ ಬರಬಹುದು..”
“ಹಾಗಾದ್ರೆ ನಾನು ಬರೋದಿಲ್ಲ” ಎಂದು ಬಿಟ್ಟಳು ಇನಾಸಜ್ಜಿ.
ಇಗರ್ಜಿ ಪಾದರಿ ಇಲ್ಲದ ಊರಿಗೆ ಹೋಗಿ ದೈವಿಕತೆಯ ಗಂಧಗಾಳಿ ಇಲ್ಲದಲ್ಲಿ ಬದುಕಲು ಅವಳು ಸಿದ್ಧಳಿರಲಿಲ್ಲ.
“ಈವತ್ತಲ್ಲ ನಾಳೆ ಇಗರ್ಜಿಯಾಗುತ್ತೆ ಅತ್ತೆ” ಎಂದು ಕೈತಾನ ಹೇಳಿದರೂ ಅವಳು ಕೇಳಲಿಲ್ಲ.
“ಅದು ಆಗಲಿ..ನಾನು ಬರತೀನಿ” ಎಂದು ಬಿಟ್ಟಳು.
ಕೈತಾನ ಶಿವಸಾಗರಕ್ಕೆ ಬಂದು ಬಳ್ಕೂರಕಾರ ಆದ. ಅವನ ಹೆಂಡತಿ ಬಳ್ಕೂರಕಾರ ಹೆಂಡತಿಯಾದಳು. ಮಕ್ಕಳು ಬಳ್ಕೂರಕಾರ ಮಕ್ಕಳಾದರು.
ಇಲ್ಲಿಗೆ ಬಂದದ್ದು ಬಳ್ಕೂರಕಾರಗೆ ಒಳಿತಾಯಿತು. ಆತ ಒಳ್ಳೆಯ ಹಣ ಮಾಡಿದ. ಮಕ್ಕಳು ವಿದ್ಯಾವಂತರಾಗುತ್ತಿದ್ದಾರೆ. ಮನೆಯನ್ನು ಹೊಸದಾಗಿ ಕಟ್ಟಿಸಿದ್ದಾನೆ. ಮನೆಯಲ್ಲಿ ಮೇಜು, ಕುರ್ಚಿ, ಮಂಚಗಳನ್ನೆಲ್ಲ ಮಾಡಿಸಿದ್ದಾನೆ. ಈಗ ಕಲ್ಲು ಕೆತ್ತುವ ಕೆಲಸ ಬಿಟ್ಟು ಮೇಸ್ತ್ರಿಯ ಕೆಲಸಕ್ಕೆ ತೊಡಗಿದ್ದಾನೆ. ಊರಿನಲ್ಲಿ ಇಗರ್ಜಿ ಬೇರೆ ಆಗಿದೆ. ಪಾದರಿ ಗೋನಸ್ವಾಲಿಸ್ ಬಂದಿದ್ದಾರೆ.
ಅವನಿಗೆ ತಟ್ಟನೆ ಇನಾಸಜ್ಜಿಯ ನೆನಪಾಗಿದೆ. ಅವನ ಹೆಂಡತಿ ನಮಾಮೋರಿ ಒಂದು ಬಾರಿ “ಇಲ್ಲಿ ಇಗರ್ಜಿ ಎಲ್ಲ ಆಗಿದೆ..ಅಮ್ಮ ಬರತಿದ್ಲೋ ಏನೋ..” ಎಂದು ಹೇಳಿದ್ದು ಕೂಡ ಕೈತಾನ ಈ ವಿಷಯ ಮರೆಯದಂತೆ ಮಾಡಿತು.
ಅತ್ತೆಯನ್ನು ನೋಡುವ ನೆಪದಲ್ಲಿ ಗುಂಡಬಾಳೆಗೆ ಹೋದ ಕೈತಾನ ಅಲ್ಲಿಂದ ತಿರುಗಿ ಬರುವಾಗ ಇನಾಸಜ್ಜಿಯನ್ನು ಕರೆತಂದ. ದೋಣಿಯಲ್ಲಿ ಅನಂತರ ಬಸ್ಸಿನಲ್ಲಿ ಜಪಸರದ ಮಣಿಗಳನ್ನು ಎಣಿಸುತ್ತ ಬಂದ ಇನಾಸಜ್ಜಿ ಶಿವಸಾಗರದ ಇಗರ್ಜಿಯನ್ನು ನೋಡಿ ಸಂತಸಪಟ್ಟಳು. ಮಗಳು ಮೊಮ್ಮಕ್ಕಳನ್ನು ನೋಡಿಯೂ ಅವಳಿಗೆ ಆನಂದವಾಯಿತು.
ಗುಂಡಬಾಳೆಯಲ್ಲಿಯ ಅವಳ ದಿನಚರಿ ಇಲ್ಲಿಯೂ ಹಾಗೆಯೇ ಮುಂದುವರೆಯಿತು.
ನಿತ್ಯ ಬೆಳಿಗ್ಗೆ ಇಗರ್ಜಿಗೆ ಹೋಗುತ್ತಿದ್ದ ಸಿಮೋನನ ತಾಯಿ, ವೈಜೀಣ್ ಕತ್ರೀನರ ಜತೆ ಇನಾಸಜ್ಜಿಯೂ ಸೇರಿಕೊಂಡಳು.
ಮೊದಲ ದಿನ ಇಗರ್ಜಿಗೆ ಹೋಗಿ ಬಂದ ಅಜ್ಜಿ ಗೋನಸ್ವಾಲಿಸ್ ರನ್ನು ತುಂಬಾ ಮೆಚ್ಚಿಕೊಂಡಳು.
“ಈ ಪಾದರಿಗಳು ತುಂಬಾ ದೈವಭಕ್ತರು…ಅವರು ಅರ್ಪಿಸುವ ಪೂಜೆಯನ್ನು ಕೇಳೋದೇ ಒಂದು ಪುಣ್ಯ..” ಎಂದಳವಳು.
ಅವರ ಕೋಪ, ಸಿಟ್ಟು, ಅವರ ನಾಗರಬೆತ್ತ, ಪಾಮಿಸ್ತ್ರಿ ಹಿಡಿದು ಹೊಡೆಯುವುದು ಅವಳ ಗಮನಕ್ಕೇನೆ ಬರಲಿಲ್ಲ. ಇದು ಅನಿವಾರ್ಯ ಎನಿಸಿತ್ತೇನೋ ಅವಳಿಗೆ. ಅವಳು ದಿವ್ಯಪ್ರಸಾದ ಸ್ವೀಕರಿಸುತ್ತ ಉಳಿದುಬಿಟ್ಟಳು.
ಆದರೆ ಮಸ್ಕರಿನಾಸರು ಊರಿಗೆ ಬಂದ ನಂತರ ಮಾತ್ರ ಅವಳ ಪ್ರತಿಕ್ರಿಯೆ ಬೇರೆಯಾಗಿತ್ತು.
“ಈ ಪಾದರಿ ಯಾಕೆ ಪದೇ ಪದೇ ಜನರ ಕಡೆ ತಿರುಗಿ ನೋಡೋದು ..” ಎಂದವಳು ಕೇಳುತ್ತಿದ್ದಳು.
“ಬರೀ ಕಾಣಿಕೆ ಕಾಣಿಕೆ ಅಂತಾರೆ ಪಾದರಿ..” ಎಂದು ರಾಗ ಎಳೆದರು.
ಆದರೂ ಅವಳ ನಿತ್ಯದ ಭೇಟಿ ನಿಲ್ಲಲಿಲ್ಲ. ಮನೆಯಲ್ಲಿ ಪೂಜೆ ಪ್ರಾರ್ಥನೆ ಬಿಡಲಿಲ್ಲ. ಶುಕ್ರವಾರದ ಶಿಲುಬೆಯ ಪ್ರಾರ್ಥನೆ ನಿಲ್ಲಿಸಲಿಲ್ಲ.
ಆದರೆ ಈಗ ಒಂದು ತಿಂಗಳಿಂದ ಅವಳು ಹಾಸಿಗೆ ಬಿಟ್ಟು ಏಳುತ್ತಿಲ್ಲ. ಮಗಳು ಅಳಿಯ ಅಕ್ಕಪಕ್ಕದ ಮನೆಗಳವರು ಅವಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ಸರಕಾರಿ ವೈದ್ಯರೂ ಮನೆಗೆ ಬಂದು ನೋಡಿದ್ದಾರೆ.
“ಕಾಯಿಲೆ ಏನಿಲ್ಲ..ವಯಸ್ಸಾಯಿತಲ್ಲ” ಎಂದವರು ಹೇಳಿದ್ದಾರೆ.
ಇನಾಸಜ್ಜಿಗೆ ತೊಂಬತ್ತು ಆಗಿದೆ. ಮಲಗಿದಲ್ಲಿಯೇ ಕರಗಿ ಹೋಗಿದ್ದಾಳೆ ಆಕೆ. ಎಲ್ಲರ ಗುರುತು ಹಿಡಿಯುತ್ತಾಳೆ, ಮಾತನಾಡಿಸುತ್ತಾಳೆ. ಕೆಲ ಬಾರಿ ಎಲ್ಲ ಮರೆತು ಹೋದಂತೆ ಪಿಳಿ ಪಿಳಿ ನೋಡುತ್ತಾಳೆ.
ಸಿಮೋನ ಮನೆ ಬಾಗಿಲಿಗೆ ಬರುತ್ತಿದ್ದಂತೆಯೇ ಬಳ್ಕೂರಕಾರ್ ಎದುರಾದ.
“ಬನ್ನಿ ..ಗುರ್ಕಾರ ಮಾಮ” ಎಂದ.
“ಯಾರು ಸಿಮೋನನ?” ಎಂದು ಕೇಳಿದಳು ಮುದುಕಿ.
“ನಿನ್ನ ಹೆಂಡತಿ ಬಂದು ನೋಡಿಕೊಂಡು ಹೋದಳು” ಎಂದು ನಕ್ಕಳು.
“ಮಕ್ಕಳೆಲ್ಲ ಚೆನ್ನಾಗಿದಾರ? ಮಗಳ ಮದುವೆ ಮಾಡಬೇಕಾ?” ಎಂದೆಲ್ಲ ವಿಚಾರಿಸಿದಳು.
ಒಳ್ಳೆ ಕಡೆ ನೋಡಿ ಮದುವೆ ಮಾಡು..ನಾನು ಇರೋದಿಲ್ಲ ಮದುವೆ ನೋಡಲಿಕ್ಕೆ?..ನಾನು ಹೊರಟೆ” ಎಂದಳು ಯಾವುದೇ ಉದ್ವೇಗ ಉದ್ವಿಗ್ನತೆಗೆ ಒಳಗಾಗದೆ.
“ನಮಾಮೋರಿ..ಕುಡಿಲಿಕ್ಕೆ ಏನಾದರೂ ಮಾಡಿಕೊಡು” ಎಂದು ಮಗಳಿಗೆ ಕೂಗಿ ಹೇಳಿದಳು.
“ಶುಕ್ರವಾರ ಶಿಲುಬೆ ಪ್ರಾರ್ಥನೆ ಬಂದಿದೆ..” ಎಂದೇನೋ ಹೇಳಲು ಹೋಗಿ ಮಾತು ನಿಲ್ಲಿಸಿದಳು. ಸಿಮೋನ ಸುಮ್ಮನೆ ಕೊಂಚ ಹೊತ್ತು ಕುಳಿತಿದ್ದು ನಮಾಮೋರಿ ತಂದುಕೊಟ್ಟ ಕಾಫ಼ಿ ಕುಡಿದು ಎದ್ದು ಬಂದ.
*
*
*
ಉದ್ದ ಸಾಲಿನ ಮೂರನೆ ಮನೆ ಸುತಾರಿ ಇನಾಸನದಾದರೆ ಅಡ್ಡ ಸಾಲಿನ ಮೂರನೇ ಮನೆ ಬಳ್ಕೂರಕಾರನಾದು. ಶುಕ್ರವಾರ ಸಂಜೆ ಅಲ್ಲಿ ಪರಲೋಕ ಮಂತ್ರ ಹೇಳಿದರೆ, ಕೀರ್ತನೆ ಹಾಡಿದರೆ ಅದು ಇಲ್ಲಿ ನೇರವಾಗಿ ಕೇಳುತ್ತದೆ. ನಲವತ್ತು ಐವತ್ತು ಜನ ಸೇರಿ ಹಾಡುವುದರಿಂದ ಸಂಜೆಯ ಮೌನದಲ್ಲಿ ಇಂಪಾಗಿ ಕೇಳಿಸುತ್ತದೆ.
ಈ ಶಿಲುಬೆ ಪ್ರಾರ್ಥನೆಗೆ ಮುಂಚಿತವಾಗಿಯೇ ಕೈತಾನ ಪಾದರಿ ಮಸ್ಕರಿನಾಸರನ್ನು ಮನೆಗೆ ಕರೆಸಿಕೊಂಡಿದ್ದ.
“..ನಮ್ಮ ಅತ್ತೆಗೊಂದು ಅಂತ್ಯಾಭ್ಯಂಜನ ನೀಡಿಬಿಡಿ ಪದ್ರಾಬ..” ಎಂದು ಹೇಳಿದ್ದ.
ಅವನಿಗೆ ಏನೋ ಅನುಮಾನ. ಸಂಜೆಯ ರೈಲು ಊರು ಬಿಡುವಾಗ ಈ ಮುದುಕಿಯೂ ಹೊರಟು ಬಿಡುತ್ತಾಳೇನೋ ಎಂಬ ಆತಂಕ.
ಹೀಗಾಗಿ ಪಾದರಿ ಬಂದರು.
ಪಾಪ ನಿವೇದನೆಗೆ ಕಿವಿಗೊಟ್ಟರು.
ದಿವ್ಯಪ್ರಸಾದ ನೀಡಿದರು.
ಪರಿಶುದ್ಧ ಎಣ್ಣೆಯನ್ನು ಇನಾಸಜ್ಜಿಯ ಹಣೆಯ ಮೇಲೆ ಲೇಪಿಸಿ-
“ಈ ಲೇಪನದಿಂದಲೂ ತಮ್ಮ ಮಹತ್ವಾಕಾಂಕ್ಷೆಯಿಂದಲೂ, ಕರ್ತರು ನಿನ್ನ ಪಂಚೇಂದ್ರಿಯಗಳಿಂದ ನೀನು ಮಾಡಿದ ಪಾಪಗಳನ್ನು ಕ್ಷಮಿಸಲಿ” ಎಂದರು.
ಅವರು ತಮ್ಮ ಕೆಲಸಮುಗಿಸಿ ಹೋಗುತ್ತಿರಲು ಇನಾಸನ ಮನೆ ಮುಂದಿನಿಂದ ಪ್ರಾರ್ಥನೆ ಕೇಳಿ ಬರತೊಡಗಿತು.
ಅಜ್ಜಿ ಆಲಿಸುತ್ತ ಕುಳಿತಳು.
ಬೆನ್ನಿಗೆ ಕೊಟ್ಟ ತಲೆದಿಂಬನ್ನು ತೆಗೆಯಲು ಬಂದ ಮಗಳಿಗೆ ಬೇಡ ಎಂದವಳು ತಿಳಿಸಿದಳು. ತಲೆದಿಂಬಿನ ಅಡಿಯಿಂದ ಜಪಸರ ತೆಗೆದು, ಅದರಲ್ಲಿಯ ಶಿಲುಬೆಗೆ ಮುತ್ತಿಟ್ಟು ಮಣಿ ಮಣಿ ಎಣಿಸತೊಡಗಿದಳು.
ಏಳು ಗಂಟೆಗೆ ರೈಲು ಶಿವಮೊಗ್ಗೆಗೆ ಹೊರಟಿದ್ದು ಕೂ ಎಂದಿತು. ಇಲ್ಲಿ ಜನ ಕೀರ್ತನೆ ಹಾಡುತ್ತಿದ್ದರು.
ಇನಾಸಜ್ಜಿ ನಿಧಾನವಾಗಿ ಪಕ್ಕಕ್ಕೆ ಹೊರಳಿದಳು.
*
*
*
ಬೆಳಿಗ್ಗೆ ಸಿಮಿತ್ರಿಯಲ್ಲಿ ಹೊಂಡ ತೋಡಲೆಂದು ಅನುಮತಿ ಕೇಳಲು ಚಮಾದೋರ ಇಂತ್ರು ಪಾದರಿಗಳ ಬಂಗಲೆ ಬಳಿ ಹೋದ. ತನ್ನ ಸಂಗಡಿಗನನ್ನು ಸಲಕರಣೆಗಳ ಸಹಿತ ಸಿಮಿತ್ರಿಗೆ ಕಳುಹಿಸಿ ಇಂತ್ರು ಪಾದರಿಗಳ ಎದುರು ಹೋಗಿ ನಿಂತ.
ಮರಣದ ಗಂಟೆ ಕೂಡ ಆಗಲೇ ಸದ್ದು ಮಾಡುತಲಿತ್ತು.
“ಕೋಣ್ರೆತೋ?” ಎಂದು ಎಂದಿನಂತೆ ಕೇಳುತ್ತ ಬಂದರು ಪಾದರಿ.
ಫ಼ರಾಸ್ಕನ ಹೆಂಡತಿ ರಜೀನಾ ಕೆಂಪು ಸೀರೆಯುಟ್ಟು ಅಲ್ಲೆಲ್ಲ ತಿರುಗಾಡುತ್ತಿದ್ದಳು.
“ಪದ್ರಾಬಾ..ಬಳ್ಕೂರಕಾರ ಅತ್ತೆ ತೀರಿಕೊಂಡರಲ್ಲ” ಎಂದು ಪೀಠಿಕೆ ಹಾಕಿದ ಇಂತ್ರು.
“ಹೌದು ಏನೀಗ?” ಏಕೋ ಅವರ ಮಾತು ಗಡುಸಾಗಿತ್ತು.
“ನಾನು ಹೊಂಡ ತೆಗೀಲಿಕ್ಕೆ ಹೊರಟಿದ್ದಿ”
“ಅವರಿಗೆ ಇಲ್ಲಿ ಬರಲಿಕ್ಕೆ ಹೇಳು. ಅವರಿಂದ ಇಗರ್ಜಿಗೆ ಬರಬೇಕಾದ ಬಾಕಿ ಯಾರಂತೆ ಕೊಡೋದು” ಎಂದರು ಪಾದರಿ ಮಸ್ಕರಿನಾಸ ತುಸು ಒರಟಾಗಿ. ಇಂತ್ರು ಎರಡು ನಿಮಿಷ ನಿಂತು ಅಲ್ಲಿಂದ ಹೊರಟ.
*
*
*
ಸುತಾರಿ ಇನಾಸನ ಮಗ ಪಾಸ್ಕು ತಂದೆಯ ಕೆಲಸ ಮುಂದುವರೆಸಿದವ ಬಳ್ಕೂರಕಾರ ಮನೆ ಅಂಗಳದಲ್ಲಿಯೇ ಮರಣದ ಪೆಟ್ಟಿಗೆ ಮಾಡತೊಡಗಿದ. ಜನ ಬಂದು ಬಂದು ಹೋಗುತ್ತಿದ್ದರು. ಇನಾಸಜ್ಜಿಗೆ ಸ್ನಾನ ಮಾಡಿಸಿ ಬಿಳಿ ಸೀರೆ ಉಡಿಸಿ ತಂದು ಮಲಗಿಸಲಾಗಿತ್ತು. ಎಷ್ಟೋ ವರ್ಷಗಳಿಂದ ಅವಳ ಸಂಗಾತಿಯಾಗಿದ್ದ ಜಪಸರವನ್ನು ಜೋಡಿಸಿದ ಅವಳ ಕೈಗೆ ಸುತ್ತಲಾಗಿತ್ತು. ಜಪಸರದಲ್ಲಿನ ಬೆರಳುದ್ದದ ಶಿಲುಬೆ ಎದ್ದು ಕಾಣುತ್ತಿತ್ತು. ಶಾಂತಳಾಗಿ ಮಲಗಿದ್ದಳು ಅಜ್ಜಿ. ಬಂದ ಜನತಂದ ಹೂವು, ಮೇಣದ ಬತ್ತಿ ಪ್ಯಾಕೇಟುಗಳನ್ನು ಶವದ ಬಳಿ ಇರಿಸಿ, ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಗಂಡಸರು ಅಂಗಳದಲ್ಲಿ ಹಾಕಿದ ಅಡ್ಡ ಬೆಂಚಿನ ಮೇಲೆ ಕುಳಿತು ಅಲ್ಲಲ್ಲಿ ನಿಂತು ಮಾತಿಗೆ ತೊಡಗಿದ್ದರು. ಸಾವಿನ ಕರಿ ನೆರಳು ಅಲ್ಲೆಲ್ಲ ತೆಳುವಾಗಿ ಹರಡಿಕೊಂಡಿತು.
ಇಂತ್ರು…ದಣಪೆ ದಾಟಿ ಒಳಬಂದವನೇ ಸಿಮೋನ, ಬೋನರ ಜತೆ ಮಾತನಾಡುತ್ತ ನಿಂತಿದ್ದ ಬಳ್ಕೂರಕಾರನನ್ನು ಕರೆದ.
“..ಏನು ಇಂತ್ರು..ಕೆಲಸ ಆಯಿತೆ?” ಎಂದು ಅಲ್ಲಿಂದಲೇ ಕೇಳಿದ ಸಿಮೋನ.
“ಅಲ್ಲ ಅದೇನೋ ಇಗರ್ಜಿಗೆ ಕೊಡಬೇಕಾದ ಬಾಕಿ ಇದೆಯಂತಲ್ಲ..ಅದು ಕೊಡದೆ ಹೊಂಡ ತೆಗೀಲಿಕ್ಕೆ ಅನುಮತಿ ಕೊಡಲ್ವಂತೆ ಪಾದರಿಗಳು” ಎಂದು ಇಂತ್ರು ದೊಡ್ಡ ದನಿಯಲ್ಲಿ ಹೇಳುತ್ತಿರಲು ಅಲ್ಲಿ ಸೇರಿದವರೆಲ್ಲ ಕೇಳುತ್ತ ನಿಂತರು.
ಬಳ್ಕೂರಕಾರ್ ಕೂಡಲೇ ಎಚ್ಚೆತ್ತ. ಈ ಪ್ರಸಂಗವನ್ನು ಬೆಳೆಯಲು ಬಿಡಬಾರದು ಎನಿಸಿ ಆತ ಮನೆಯಿಂದ ಹೊರಟ. ಸಿಮೋನ, ಬೋನ ಕೂಡ ಅವನಿಗೆ ಜತೆಯಾದರು.
ಪಾದರಿ ಮಸ್ಕರಿನಾಸ ಸಹಜವಾಗಿ ಎಂಬಂತೆ ಅನ್ವಾಲ ಕಾಯಿದೆಯ ವಹಿ ತೆಗೆದರು.
“ನೋಡಿ ವರ್ಷಕ್ಕೊಂದು ಸಾರಿ ಕೊಡಬೇಕಾದ್ದನ್ನ ಕೊಟ್ಟರೆ ಈ ಎಲ್ಲ ರಗಳೆಗಳೂ ಇರೋದಿಲ್ವೆ..ನಮ್ಮ ಜನರಿಗೆ ಎಲ್ಲದಕ್ಕೂ ಹಣ ಇರುತ್ತೆ..ಇಗರ್ಜಿಗೆ ಕೊಡಲಿಕ್ಕೆ ಮಾತ್ರ ಇರಲ್ಲ..” ಎಂದು ಕೇಳುತ್ತ ಬಳ್ಕೂರಕಾರ ಕೊಟ್ಟ ಹಣವನ್ನು ಲೆಕ್ಕ ಮಾಡಿ ಅದಕ್ಕೊಂದು ರಶೀದಿ ಬರೆದುಕೊಟ್ಟರು.
ಸಿಮೋನನಿಗಾಗಲಿ, ಬೋನನಿಗಾಗಲಿ ಅಲ್ಲಿ ಮತ್ತೊಂದು ಮಾತು ಹೇಳಲು ಅವಕಾಶವಾಗಲಿಲ್ಲ.
ಇಂತ್ರು ಸಿಮಿತ್ರಿಯತ್ತ ತಿರುಗಿದ್ದನ್ನು ನೋಡಿ ಈ ಮೂವರೂ ಕೇರಿಗೆ ಹಿಂತಿರುಗಿದರು.
ಇನಾಸಜ್ಜಿಯನ್ನು ಮಣ್ಣಿಗೆ ತಲುಪಿಸಲು ಊರ ಕ್ರೀಸ್ತುವರೆಲ್ಲ ಬಂದರು.
ವಿಶೇಷವಾಗಿ ಗಮನ ಸೆಳೆದವರೆಂದರೆ ಬಾಮಣ ಪಂಗಡದವರು, ಹೆಂಗಸರು ಗಂಡಸರಾಗಿ ಎಲ್ಲರೂ ಕರಿ ಬಟ್ಟೆ ಧರಿಸಿ, ಕೈ ಮುಂದೆ ಕಟ್ಟಿಕೊಂಡು, ಇಂಗ್ಲೀಷಿನಲ್ಲಿ ಜಪ ಮಾಡುತ್ತ ಶವದ ಹಿಂದೆಯೇ ನಡೆದು ಬಂದದ್ದು ಉಳಿದ ಕ್ರೀಸ್ತುವರ ಮೆಚ್ಚುಗೆ ಗಳಿಸಿತ್ತು.
*
*
*
ಇನಾಸಜ್ಜಿ ತೀರಿಕೊಂಡ ಕೆಲವೇ ದಿನಗಳಲ್ಲಿ ಇಗರ್ಜಿಯ ಗಂಟೆ ಮರಣ ಸೂಚಕವಾದ ಸದ್ದನ್ನು ಮತ್ತೊಮ್ಮೆ ಮಾಡಿ-
“ಯಾರು..ಯಾರಂತೆ?” ಎಂದು ಕೇರಿಯ ಜನ ಮನೆಯಿಂದ ಹೊರಬಂದು ಇಗರ್ಜಿಯತ್ತ ನೋಡುವಂತೆ ಮಾಡಿತು.
ಬಲಗಾಲುದ್ಧ ಬಾಲ್ತಿದಾರ ಈಗ ನಾಲ್ಕು ತಿಂಗಳಿಂದ ಹಾಸಿಗೆ ಹಿಡಿದಿದ್ದ. ಅವನ ಕತೆ ಮುಗಿದು ಹೋಯಿತು ಎನ್ನುವಂತಾಗಿ ಪಾದರಿ ಮಸ್ಕರಿನಾಸ ಹೋಗಿ ಆತನಿಗೆ ಅಂತ್ಯಾಂಭ್ಯಂಜನ ನೀಡಿ ಬಂದಿದ್ದರು. ಪೆಟ್ಟಿಗೆ ಮಾಡುವವರು, ಬಟ್ಟೆ ಹೊಲಿಯುವವರು, ಸಮಾಧಿ ತೋಡುವವರು ಇಂದು ನಾಳೆ ಎಂದು ಕ್ಷಣಗಳನ್ನು ಎಣಿಸುತ್ತಿದ್ದಾಗ ಬಾಲ್ತಿದಾರ..
“ರೇಮೆಂದಿ..” ಎಂದು ಮಗಳ ಹೆಸರನ್ನು ಹಿಡಿದು ಕೂಗುತ್ತ ಎದ್ದು ಕುಳಿತಿದ್ದ
“ಹೋ..ಈ ಮುದುಕ ಇಷ್ಟು ಬೇಗ ಸಾಯೋದಿಲ್ಲಪ್ಪ..” ಎಂದು ಜನ ಮಾತನಾಡಿಕೊಂಡರು.
ಬಾಲ್ತಿದಾರ ಕಾಲೆಳೆದುಕೊಂಡು ಜಗಲಿಗೆ ಬಂದ. ಅಂಗಳಕ್ಕೂ ಬಂದ. ಮೊಮ್ಮಗನ ಜತೆ ಮಾತನಾಡಿದ. ಅಳಿಯನ ಸಂಗಡ ಹರಟೆ ಹೊಡೆದ. ಸಿಮೋನ, ಪಾಸ್ಕೋಲ ಹೋದಾಗ ಅವರೊಂದಿಗೂ ಅದು ಇದು ಪ್ರಸ್ತಾಪ ಮಾಡಿದ. ನಾಲ್ಕನೆಯ ದಿನ ಮತ್ತೆ ಹಾಸಿಗೆ ಹಿಡಿದ.
ಹೀಗೆಯೇ ಆಟವಾಡಿದವ ಒಂದು ದಿನ ಗೊರಗೊರ ಎಂದು ಸದ್ದು ಮಾಡಿ ಕತ್ತು ಹೊರಳಿಸಿದ.
ಎಂದಿನಂತೆ ಸಿಮೋನ ಓಡಿ ಬಂದ.
ಶಿರಾಲಿಯಿಂದ ಕರೆತಂದ ಈತನಿಗೆ ತಾನು ಜವಳಿ ಅಂಗಡಿ ಭುಜಂಗನಲ್ಲಿ ಕೆಲಸ ಕೊಡಿಸಿದ್ದನ್ನು ಸಿಮೋನ ಮರೆತಿರಲಿಲ್ಲ. ಕಲ್ಲು ಮಣ್ಣಿನ ಕೆಲಸ ಮಾಡಲಾಗದ ಈತ ದರ್ಜಿಯಾದ. ಜವಳಿ ಅಂಗಡಿ ಮಾಲಿಕನಾದ. ಬೋನ ಅಳಿಯನಾಗಿ ಬಂದ ನಂತರ ಇವನ ಅಂಗಡಿಯೂ ಅಭಿವೃದ್ದಿ ಹೊಂದಿತು. ಅಳಿಯ ಮಗ ಒಳ್ಳೆಯ ರೀತಿಯಲ್ಲಿದ್ದಾರೆ ಎಂಬ ಸಂತಸವೂ ಇವನಲ್ಲಿತ್ತು.
“ಎಲ್ಲ ಆಯಿತು ಸಿಮೋನ..ಈ ಹುಡುಗನದೊಂದು ಮದುವೆ ನೋಡಬೇಕು ಅಂತ ಆಸೆ..” ಎಂದು ಹೇಳುತ್ತಿದ್ದ ಆಗಾಗ್ಗೆ.
“ನೋಡುವಿಯಂತೆ..ಆ ಇಗರ್ಜಿ ಸಂತನನ್ನು ಕೇಳಿಕೊ..ಅವನು ಒಪ್ಪಿದರೆ ಇದು ಕಷ್ಟ ಅಲ್ಲ..” ಎಂದು ಹೇಳುತ್ತಿದ್ದೆ ತಾನು, ಈಗೀಗ ಬಾಲ್ತಿದಾರ ಸದಾ ಜಪಸರ ಹಿಡಿದು ಕೂರುತ್ತಿದ್ದ. ಆಗದಿದ್ದರೂ ಭಾನುವಾರ ಇಗರ್ಜಿಗೆ ಬರುತ್ತಿದ್ದ. ಆದರೆ ಇಗರ್ಜಿ ಸಂತನಿಗೆ ಇವನು ಇರುವುದು ಬೇಕಿರಲಿಲ್ಲವೇನೋ. ಆತ ಬಾಲ್ತಿದಾರನನ್ನು ತನ್ನಲ್ಲಿಗೆ ಕರೆದುಕೊಂಡ.
ಸಿಮೋನ ಬೋನನ ಮನೆಗೆ ಹೋದಾಗ ಬಾಲ್ತಿದಾರನ ಹೆಂಡತಿ ಅನರಿತಾ ಗಂಡನ ಶವದ ಮೇಲೆ ಬಿದ್ದು ಹೊರಳಾಡುತ್ತಿದ್ದಳು.
“..ಅಣ್ಣಾ..ನನಗಿನ್ನು ಯಾರಿದಾರೆ..ನನ್ನದೆಲ್ಲ ಹೋಯ್ತು..” ಎಂದವಳು ನೆಲಕ್ಕೆ ಹಣೆ ಚಚ್ಚಿಕೊಳ್ಳುವಾಗ ಸಿಮೋನ-
“ಅನರಿತಾ..ಸಾಕು ಮಾಡು…ಯಾರೂ ಇಲ್ಲ ಅಂತ ಹೇಳಬೇಡ..ದೇವರ ಹಾಗಿರೋ ಅಳಿಯ ಇದಾನೆ..ಮಗಳು ಇದಾಳೆ..ಮೊಮ್ಮಗ ಇದ್ದಾನೆ…ಏನು ಮಾತು ಅಂತ ಹೇಳ್ತಿಯಾ..ನೀನೇನು ಇಲ್ಲಿ ಖಾಯಂ ಆಗಿ ಇರಲಿಕ್ಕೆ ಬಂದವಳ..ನಿನ ಗಂಡನಿಗೆ ಬೇಗನೆ ಸದ್ಗತಿ ಸಿಗಲಿ ಅಂತ ಬೇಡಿಕೋ..” ಎಂದು ದನಿ ಎತ್ತರಿಸಿ ಕೂಗಾಡಿದ.
ಅನರಿತಾ ನಿಧಾನವಾಗಿ ಚೇತರಿಸಿಕೊಂಡು ಕುಳಿತಳು.
ಮನೆ ಮನೆಗಳಿಂದ ಬಂದವರು ಅಲ್ತಾರಿನ ಮುಂದೆ ಮೇಣದ ಬತ್ತಿ ಹಚ್ಚಿ ತೇರ್ಸ, ಕೀರ್ತನೆಯಲ್ಲಿ ತೊಡಗಿದರು.
ಬೋನ ಕಾಲಕಾಲಕ್ಕೆ ಇಗರ್ಜಿಗೆ ಕೊಡಬೇಕಾದುದನ್ನೆಲ್ಲ ಕೊಡುತ್ತ ಬಂದದ್ದರಿಂದ ಪಾದರಿ ಮಸ್ಕರಿನಾಸ ಯಾವುದೇ ತಕರಾರು ಮಾಡದೆ ಶವಸಂಸ್ಕಾರಕ್ಕೆ ಮುಂದಾದರು.
ಬಲಗಾಲುದ್ದನ ಹೆಂಡತಿ ಅನರಿತಾ ತುಸು ಮಂಕಾದಳು. ನಿಧಾನವಾಗಿ ಅವಳು ಕೂಡ ಜಪಸರ ಪ್ರಾರ್ಥನೆ, ಇಗರ್ಜಿಗೆ ಹೋಗುವುದು ಎಂದು ದೇವರತ್ತ ತಿರುಗಿಕೊಂಡಳು.
ಆದರೆ ಮನೆಗೆ ಹೊಸದಾಗಿ ಬಂದ ಮೊಮ್ಮಗ ಅವಳ ಸಮಯವನ್ನೆಲ್ಲ ತೆಗೆದುಕೊಳ್ಳತೊಡಗಿದ್ದ. ಫ಼ಿಲಿಪ್ಪ ತಾಯಿಯ ಬಣ್ಣವನ್ನು ತಂದೆಯ ಮುಖ ಚಹರೆಯನ್ನು ಪಡೆದಿದ್ದ.ಸದಾ ಚಟುವಟಿಕೆಯಲ್ಲಿರುವ ತುಂಟ. ಅವನಿಗೆ ನಿದ್ದೆಯೇ ಕಡಿಮೆ ಅನ್ನುವುದು ಅವನ ತಾಯಿಯ ದೂರು.
ಬೆಳಿಗ್ಗೆ ಇಗರ್ಜಿ ಗಂಟೆ ಆಗುತ್ತಿರುವಂತೆಯೇ ಎದ್ದು ಮಲಗಿದವರನ್ನೆಲ್ಲ ಎಚ್ಚರಿಸಿ ಅವರ ಹಾಸಿಗೆಯಿಂದ ಇವರ ಹಾಸಿಗೆಗೆ ತಿರುಗಾಡೀ ಎಲ್ಲರೂ ಎದ್ದು ಕೂಡುವಂತೆ ಮಾಡುತ್ತಿದ್ದ.
ಫ಼ಿಲಿಪ್ಪ ಬೋನ ರೇಮೇಂದಿಗಿಂತಲೂ ತನ್ನ ಅಜ್ಜಿಗೇನೆ ಹೆಚ್ಚಾಗಿ ಹಚ್ಚಿಕೊಂಡದ್ದು ಅವಳು ತನ್ನ ಗಂಡನನ್ನು ಮರೆಯಲು ಕಾರಣವಾಯಿತು.
-೪-
ಇನಾಸಜ್ಜಿಯ ತಿಂಗಳ ಪೂಜೆಯನ್ನು ಬಳ್ಕೂರಕಾರ ಒಳ್ಳೆಯ ರೀತಿಯಲ್ಲಿಯೇ ಇರಿಸಿಕೊಂಡ. ಬೆಳಿಗ್ಗೆ ಇಗರ್ಜಿಯಲ್ಲಿ ಇರಿಸಿಕೊಂಡು ಪಾಡುಪೂಜೆ ಹನ್ನೆರಡು ರೂಪಾಯಿಯ ಗಾಯನ ಪೂಜೆಯೇ. ಮಿರೋಣ ವಲೇರಿಯನ ಪಿಟಿಲು ಬಾರಿಸಿಕೊಂಡು ಹಲವು ಕೀರ್ತನೆಗಳನ್ನು ಹಾಡಿದ. ಪಾದರಿ ಮಸ್ಕರಿನಾಸ ಕರಿ ಉಡುಪು ಧರಿಸಿ ಪೂಜಾ ಸಲ್ಲಿಸಿದರು. ಇಗರ್ಜಿಯ ನಡುವೆ ಅಲ್ತಾರನ ಮುಂದೆ ಕಪ್ಪು ಬಟ್ಟೆ ಹೊದಿಸಿದ ಶವಪೆಟ್ಟಿಗೆಯನ್ನು ಇರಿಸಲಾಗಿತ್ತು. ಪೂಜೆಯ ನಂತರ ಬಳ್ಕೂರಕಾರ, ಅವನ ಹೆಂಡತಿ ಮಕ್ಕಳು, ಪೂಜೆಗೆ ಬಂದ ಇನ್ನೂ ಹಲವರು ಇಗರ್ಜಿಯ ಹಿಂಬದಿಯಿಂದ ಸಿಮಿತ್ರಿಗೆ ಹೋದರು. ಇನಾಸಜ್ಜಿಯ ಸಮಾಧಿಯ ಮೇಲೆ ಮೇಣದ ಬತ್ತಿ ಹಚ್ಚಿ ಇರಿಸಿದರು. ಪಾದರಿ ಮಸ್ಕರಿನಾಸರೂ ಅಲ್ಲಿಗೆ ಬಂದರು. ಅಲ್ಲಿ ಮತ್ತೆ ಪ್ರಾರ್ಥನೆಯಾಯಿತು. ಕುಟುಂಬದ ಎಲ್ಲರಿಗೂ ಒಳ್ಳೆಯದನ್ನು ಮಾಡುವಂತೆ ಇನಾಸಜ್ಜಿಯ ಆತ್ಮವನ್ನು ಕೇಳಿಕೊಳ್ಳಲಾಯಿತು. ಏಕೆಂದರೆ ಅವಳು ಈಗ ದೇವರಿಗೆ ಹತ್ತಿರವಾಗಿದ್ದಾಳೆ ಅಲ್ಲವೆ?
ಬಳ್ಕೂರಕಾರ ಮನೆಯಲ್ಲಿ ಮಧ್ಯಾಹ್ನದ ಊಟ. ಒಂದು ಬಾಳೆ ಎಲೆಯಲ್ಲಿಒಂದು ಎಡೆ ತೆಗೆದಿರಿಸಿ ಅದನ್ನು ಸಿಮೋನನ ಮನೆಯ ಬೆಳ್ಳಿಗೆ ಕೊಡಲಾಯಿತು. ನಂತರ ಗಂಡಸರ ಪಂಕ್ತಿಗೆ ಸಿಮೋನನೇ ಮುಂದೆ ನಿಂತು ಶರಾಬು ಹಂಚಿದ. ಊಟದ ಎಲೆಯ ಮುಂದೆ ಕುಳಿತ ಪ್ರತಿಯೊಬ್ಬರೂ ಶರಾಬಿನ ಗ್ಲಾಸನ್ನು ತೆಗೆದುಕೊಂಡು ಎರಡು ಹನಿ ಶರಾಬನ್ನು ನೆಲಕ್ಕೆ ಚಲ್ಲಿ ಗ್ಲಾಸನ್ನು ಹಿಡಿದುಕೊಂಡು-
ನಮ್ಮನ್ನು ಅಗಲಿಹೋದ ಇನಾಸಜ್ಜಿಗಾಗಿ, ಈ ಕುಟುಂಬದ ಅಗಲಿದ ಆತ್ಮಗಳಿಗಾಗಿ ಒಂದು ಪರಲೋಕ ಒಂದು ನಮೋರಾಣೆ ಮಂತ್ರ ಅರ್ಪಿಸೋಣ ಎಂದು ಹೇಳಿ ಅದನ್ನು ಮುಗಿಸಿ ಎಲ್ಲರತ್ತ ತಿರುಗಿ.
“ಹ್ವಾಯ..ದೇವ ಬರೆಂ ಕರುಂ” (ದೇವರು ಒಳ್ಳೆಯದನ್ನು ಮಾಡಲಿ) ಎಂದು ಹೇಳಿ ಗ್ಲಾಸನ್ನು ಬರಿದಾಗಿಸಿ ಬಳ್ಕೂರಕಾರಗೆ ಹಿಂತಿರುಗಿಸಿದರು.
ಅದೇ ಗ್ಲಾಸು ಎಲ್ಲರ ಕೈಗೂ ಹೋಯಿತು.. ಮತ್ತೆ ಪ್ರಾರ್ಥನೆ. ದೇವರು ಒಳ್ಳೆಯದನ್ನು ಮಾಡಲಿ ಎಂಬ ಹಾರೈಕೆ.
ಬಳ್ಕೂರಕಾರ ಎರಡು ಮೂರು ಬಾರಿ ಬೇಡ ಬೇಡ ಅನ್ನುತ್ತಿದ್ದರೂ ಗ್ಲಾಸನ್ನು ತುಂಬಿಕೊಟ್ಟ. ಅವನ ಹೆಂಡತಿ ನಮಾಮೋರಿ-
“ಮಾವ ಊಟ ಮಾಡಿ”
“ದೊಡ್ಡಪ್ಪ ಊಟ ಮಾಡಿ”
“ಅಣ್ಣ ನಾಚಿಕೋ ಬೇಡ”
“ತಮ್ಮ ಹೊಟ್ಟೆಗೆ ಕಮ್ಮಿ ಮಾಡಕೋಬಾರದು” ಎಂದು ಹೇಳಿ ಮತ್ತೆ ಮತ್ತೆ ಬಡಿಸಿದಳು. ಆಗ ಊಟಕ್ಕೆ ರಂಗೇರಿತು. ಮಾತುಗಳು ಕೊಂಚ ಬಿರುಸಾದವು.
ಪಾಸ್ಕೋಲ ಮೇಸ್ತ್ರಿ ಹಣೆಯ ಮೇಲೆ ಬಂದು ಬಿದ್ದ ಕೂದಲನ್ನು ಹಿಂದೆ ತಳ್ಳಿ-
“ಗುರ್ಕಾರ ಸಿಮೋನ..ನೀನು ಏನೇ ಹೇಳು..ಈ ಪಾದರಿ ನನ್ನ ಮನಸ್ಸಿಗೆ ಬರಲಿಲ್ಲ..” ಎಂದ.
“ನನ್ನ ಮನಸ್ಸಿಗೂ..” ಅಂಕೋಲದ ಕೈತಾನ ನಡುವೆ ಬಾಯಿ ಹಾಕಿದ.
“ಯಾಕೆ ಮನಸ್ಸಿಗೆ ಬರಲಿಲ್ಲ..ನಿನಗೆ ಗೊತ್ತಲ್ಲ..ಈತ ನಮ್ಮ ಬೀಗರ ಎದುರು ನನ್ನನ್ನು ಮೂರು ಕಾಸಿನವನಾಗಿ ಮಾಡಿಬಿಟ್ಟ..ಬೋನ ಸಾಹುಕಾರ ಇಲ್ಲದಿದ್ದಿದ್ದರೆ ನನ್ನ ಗತಿ ಏನಾಗುತ್ತಿತ್ತೊ..” ಎಂದು ಆತ ಒತ್ತರಿಸಿ ಬಂದ ನೋವನ್ನು ತಡೆದುಕೊಳ್ಳುತ್ತ ತೊದಲಿದ.
ಕೈತಾನ ಮೊಮ್ಮಗನನ್ನು ನಾಮಕರಣಕ್ಕೆ ಕರೆದೊಯ್ದದ್ದು. ಅಲ್ಲಿ ಪಾದರಿ ಬಾಕಿ ಕೇಳಿದ್ದು. ಕೈತಾನನ ಬೀಗರು ಹಣ ಕೊಟ್ಟದ್ದು. ಬೋನ ಸಾಹುಕಾರನಿಂದ ಸಾಲ ತಂದು ಆತ ಹಣ ಹಿಂದಿರುಗಿಸಿದ್ದು. ಈ ಬಗ್ಗೆ ಕೈತಾನನ ಬೀಗರು –
“ಪಾದರಿಗಳು ಹೀಗೂ ಇರತಾರೆಯೇ” ಎಂದು ಹೇಳಿದ್ದು ಊರಿಗೆಲ್ಲಾ ಗೊತ್ತಾಗಿತ್ತು.
“ಛೆ ಛೆ ಛೆ” ಎಂದು ಉಳಿದವರು ಲೊಚಗುಟ್ಟಿದರು.
“ನಾನು ಹೇಳತೀನಿ ಕೇಳು ಸಿಮೋನ” ತನ್ನ ಮಾತು ಮುಗಿದಿಲ್ಲ ಎಂಬಂತೆ ನಡುವೆ ಧುಮುಕಿದ ಪಾಸ್ಕೋಲ-
“..ಈ ಹಿಡಿ ಅಕ್ಕಿ ಪಾದರಿಗೆ ಹಣ ಎಷ್ಟಿದ್ದರೂ ಸಾಲದು ಮಾರಾಯ..ಇವನ ಹೊಸ ಪಿಲಾನ ಏನು ಗೊತ್ತ?”
ಆತ ಎಲ್ಲರ ಮುಖ ನೋಡಿದ.
“ಏನು ಏನು?” ಬಾಲ್ತಿದಾರ ಕುರಿಯ ಎಲುಬು ಚೀಪುತ್ತ ಕೇಳಿದ.
ಪಾದರಿ ಮಸ್ಕರಿನಾಸರಿಗೆ ’ಹಿಡಿ ಅಕ್ಕಿ ಪಾದರಿ’ ಎಂಬ ಹೆಸರು ಹೊಸದಾಗಿ ಬಿದ್ದಿತ್ತು. ಮನೆ ಹೆಂಗಸರಿಗೆಲ್ಲ ಅವರು ಒಂದು ಸಲಹೆ ನೀಡಿದರು.
“ನೀವು ದಿನಾ ಅನ್ನ ಮಾಡಲು ಅಕ್ಕಿ ಹಾಕುತ್ತೀರಲ್ಲ..ಅದರಲ್ಲಿ ಒಂದು ಹಿಡಿ ತೆಗೆದು ಬೇರೆ ಇಡಿ..ಒಂದು ವಾರಕ್ಕೆ ಹದಿನಾಲ್ಕು ಅಡಿ ಆದರೆ ಅರ್ಧ ಸೇರು ಆಗಬಹುದು. ಭಾನುವಾರ ಪೂಜೆಗೆ ಬರುವಾಗ ಅದನ್ನು ತಂದು ಇಗರ್ಜಿಗೆ ಕೊಡಿ..ನಿಮಗೆ ದೇವರ ಆಶೀರ್ವಾದ ದೊರೆಯುತ್ತದೆ.”
ಪಾದರಿ ಮಾತಲ್ಲವೇ? ಹೆಂಗಸರು ಇಗರ್ಜಿಗೆ ಬರುವಾಗ ಬಿಳಿ ವಸ್ತ್ರದಲ್ಲಿ ಸಣ್ಣ ಕೈಚೀಲದಲ್ಲಿ ಅಕ್ಕಿ ತಂದರು. ದೇವರ ಪೀಠದ ಮುಂದೆ ರಾಶಿ ಹಾಕಿದರು. ಪೂಜೆಯ ನಂತರ ಅದನ್ನು ತರಕಾರಿಯ ಜತೆ ಹರಾಜು ಹಾಕಲಾಯಿತು. ಜನರಿಗೆ ದೇವರ ಆಶೀರ್ವಾದ ಲಭ್ಯವಾಯಿತು. ಇಗರ್ಜಿಗೆ ಹಣ ಬಂದಿತು. ಪಾದರಿ ಮಸ್ಕರಿನಾಸ ಅವರಿಗೆ ಹಿಡಿ ಅಕ್ಕಿ ಪಾದರಿ ಎಂಬ ಹೆಸರು ಬಿದ್ದಿತು.
“ಈಗ ಮತ್ತೆ ಏನು ಉಪಾಯ ಹುಡುಕಿದ್ದಾರೆ ಈ ಪಾದರಿ?”
ಎಲ್ಲ ತಲೆ ಎತ್ತಿ ಪಾಸ್ಕೋಲನ ಮುಖ ನೋಡಿದರು.
“ನಿಮಗೆ ಬೇಕಾಗಿರೋ ಮೇಣದ ಬತ್ತಿನ ಇಗರ್ಜಿನಲ್ಲಿ ಕೊಂಡುಕೊಳ್ಳಿ ಅಂತ ಪಾದರಿ ಹೇಳೋದು ಯಾಕೆ ಗೊತ್ತೆ?”
ಪಾಸ್ಕೋಲ ಸುತ್ತ ಕುಳಿತವರ ಮುಂದೆ ಇನ್ನೊಂದು ಸವಾಲು ಇರಿಸಿದ.
“ಯಾಕೆ ಯಾಕೆ?” ಮತ್ತೆ ಪ್ರಶ್ನೆಗಳು ಕೇಳಿ ಬಂದವು.
ಹೋದ ಭಾನುವಾರ ಪಾದರಿ ಹೀಗೊಂದು ಫ಼ರಮಾನ ಹೊರಡಿಸಿದ್ದರು.
“ಪ್ರಿಯ ಕ್ರೀಸ್ತುವರೆ..ನೀವು ಮೇಣದ ಬತ್ತಿಗಳನ್ನು ಅಂಗಡಿಯಲ್ಲಿ ಕೊಳ್ಳುವುದರ ಬದಲು ಇನ್ನು ಮುಂದೆ ಇಗರ್ಜಿಯಲ್ಲಿ ಕೊಳ್ಳಿ..ಮಿರೋಣ ಆಗಲಿ ಕುಜ್ನೇರ ಆಗಲಿ ನಿಮಗೆ ಬೇಕಾದ ಮೇಣದ ಬತ್ತಿಗಳನ್ನು ನಿಮಗೆ ಕೊಡತಾರೆ..ಅಲ್ಲಿ ಕೊಡುವಷ್ಟೇ ಹಣಾನ ನೀವು ಇಲ್ಲಿ ಕೊಟ್ಟರಾಯ್ತು..” ಎಂದಿದ್ದರು ಅವರು.
ಪಾದರಿಯ ಮಾತಲ್ಲವೆ? ಯಾರೂ ಇದರ ಬಗ್ಗೆ ಹೆಚ್ಚು ಯೋಚಿಸಲು ಹೋಗಲಿಲ್ಲ. ಕೆಲವರು ಕೂಡಲೇ ಹಣಕೊಟ್ಟು ಮೇಣದ ಬತ್ತಿಗಳನ್ನು ಕೊಂಡು ಕೊಂಡರು. ಆದರೆ ಈಗ ಪಾಸ್ಕೋಲ ಮೇಸ್ತ್ರಿ ಇದರ ಗುಟ್ಟು ಹೊರಗೆ ಎಳೆದ.
ಕ್ರೀಸ್ತುವರು ಮಾತ್ರವಲ್ಲದೆ ಇತರೆ ಮತಸ್ಥರು ಕೂಡ ಸಂತ ಜೋಸೆಫ಼ರ ಮಂಟಪಕ್ಕೆ ಇಗರ್ಜಿಗೆ ಬೇರೆ ಬೇರೆ ಸಂತರಿಗೆ ಮೇಣದ ಬತ್ತಿಗಳನ್ನು ಕೊಡುವ ಪದ್ದತಿಯನ್ನು ರೂಢಿಸಿಕೊಂಡಿದ್ದರು. ಮಕ್ಕಳಿಗೆ ಕಾಯಿಲೆಯಾದರೆ, ಏನೋ ಕೆಡುಕಾದರೆ, ಒಳ್ಳೆಯದಾಗಬೇಕು ಎಂದೆನಿಸಿದರೆ, ಎತ್ತಿಗೋ ದನಕ್ಕೋ ತೊಂದರೆ ಉಂಟಾದರೆ ಕೂಡಲೆ ಜನ-
“ಶಿಲುಬೆ ದೇವರಿಗೆ ಮೇಣದ ಬತ್ತಿ ಕೊಡತೇನೆ” ಎಂದು ಹೇಳುತ್ತಿದ್ದರು.
ಈ ದೇವರು ಹಣ್ಣು, ಕಾಯಿ, ಉದ್ದಿನಕಡ್ಡಿ, ಕರ್ಪೂರ ಸ್ವೀಕರಿಸುವುದಿಲ್ಲ ಎಂಬುದು ಅವರಿಗೆ ಗೊತ್ತಿತ್ತು. ಹೀಗೆ ಹರಕೆ ಹೇಳಿಕೊಂಡವರು ಮೇಣದ ಬತ್ತಿಗಳನ್ನು ಬಂಡಲಗಟ್ಟಲೆ ತಂದು ದೇವರ ಮುಂದೆ ಹಚ್ಚಿ ಕೈ ಮುಗಿದು ಹೋಗುತ್ತಿದ್ದರು. ಈ ಬತ್ತಿಗಳು ಸಾಲು ಸಾಲಾಗಿ ಉರಿದು, ಕರಗಿದ ಮೇಣ ಅಲ್ಲೆಲ್ಲ ಗಟ್ಟಿಯಾಗಿ ನಿಂತಿರುತ್ತಿತ್ತು.
ಮಸ್ಕರಿನಾಸ ಬಂದ ಕೂಡಲೆ ಮೇಣದ ಬತ್ತಿಗಳನ್ನು ಉರಿಸುವುದನ್ನು ನಿಲ್ಲಿಸಿದರು. ದೇವರಿಗೆ ಮೇಣದ ಬತ್ತಿ ಕೊಟ್ಟರೆ ಸಾಕು. ಹಚ್ಚಲೇಬೇಕೆಂದಿಲ್ಲ ಎಂದರು. ಒಂದೆರಡು ಮೇಣದ ಬತ್ತಿಗಳನ್ನು ಬಂಡಲಗಟ್ಟಲೆ ತಂದು ದೇವರ ಮುಂದೆ ಸದಾ ಹಚ್ಚಿಡಿ ಉಳಿದ ಬತ್ತಿ ಬಂಡಲುಗಳನ್ನು ಹಾಗೆಯೇ ತೆಗೆದಿಡಿ ಎಂದು ಅಲ್ಲಿರುವ ಹುಡುಗರಿಗೆ ಹೇಳಿದರು.
ಜನ ಈ ಹೊಸ ಪದ್ದತಿಗೆ ಹೊಂದಿಕೊಂಡರು. ಮೇಣದ ಬತ್ತಿ ದೇವರಿಗೆ ತಲುಪಿಸಿದರಾಯಿತು. ಹಚ್ಚುವ ಕೆಲಸ ಅವರು ಮಾಡುತ್ತಾರೆ ಎಂದು ಜನ ತಿಳಿದರು.
ಇದರಿಂದಾಗಿ ಇಗರ್ಜಿಯಲ್ಲಿ ಮೇಣದ ಬತ್ತಿ ಬಂಡಲುಗಳು ರಾಶಿ ಬಿದ್ದಿದ್ದವು. ಆಗ ಪಾದರಿ ಮಸ್ಕರಿನಾಸರು ನಿಮಗೆ ಬೇಕಾದ ಮೇಣದ ಬತ್ತಿಗಳನ್ನು ಇಗರ್ಜಿಯಲ್ಲಿ ಕೊಳ್ಳಿರಿ ಎಂದರು.
“ಗೊತ್ತಾಯ್ತ ನಿಮಗೆ?” ಎಂದು ಮೀಸೆ ಕುಣಿಸಿದ ಪಾಸ್ಕೋಲ ಮೇಸ್ತ್ರಿ.
“ಹೌದು..ಈ ಪಾದರಿ ಹೀಗೆ ಹಣ ಮಾಡತಾನಲ್ಲ..ಅದು ಯಾರಿಗೆ? ಇವನಿಗೇನು ಸಂಸಾರನೆ? ಮಕ್ಕಳೆ?”
ಆ ವರೆಗೆ ಸುಮ್ಮನೆ ಕುಳಿತ ಸಾನಬಾವಿ ಪೆದ್ರು ಮುಖ್ಯವಾದ ಪಾಯಿಂಟ್ ಎತ್ತಿದ. ಈಗಾಗಲೇ ಓರ್ವ ಮಗನ ತಂದೆಯಾಗಿದ್ದ ಅವನಿಗೆ ತಾಪತ್ರಯಗಳು ಪ್ರಾರಂಭವಾಗಿದ್ದವು. ಕೆಲಸಕ್ಕೆ ಹೋಗುವುದು ಬೇಡ ಎಂದು ರಂಗಿಯನ್ನು ಮನೆಯಲ್ಲಿಯೇ ಇರಿಸಿಕೊಂಡಿದ್ದ. ಊರಿನಲ್ಲಿ ಕಲ್ಲು ಕೆಲಸದವರ ಸಂಖ್ಯೆ ಅಧಿಕವಾಗಿತ್ತು. ಹೊಸದಾಗಿ ಮಲೆಯಾಳಿ ಮೇಸ್ತ್ರಿಗಳು ಬಂದು ಸೇರಿಕೊಂಡು ಕ್ರೈಸ್ತ ಮೇಸ್ತ್ರಿಗಳ ಕೆಲಸಕ್ಕೇನೆ ಕಲ್ಲು ಹಾಕಿದ್ದರು. ಆದಾಯ ಕಡಿಮೆಯಾಗುತ್ತಿದೆ ಅನ್ನುವಾಗ ಪಾದರಿಗಳು ಅನ್ವಾಲ ಕಾಯಿದೆ..ಹಬ್ಬದ ವಂತಿಗೆ..ಪೂಜೆಗೆ ಹಣ..ಕಾಣಿಕೆ ಡಬ್ಬಿಗೆ ಹಣ..ಹಿಡಿ ಅಕ್ಕಿ ಎಂದೆಲ್ಲ ಹಣ ಕೇಳುತ್ತಿದ್ದರು. ಹೀಗೆಂದೇ ಸಿಡಿಮಿಡಿಗೊಂಡ ಪೆದ್ರು ಹೀಗೊಂದು ಪ್ರಶ್ನೆ ಕೇಳಿದ.
ಆಗಲೇ ಬಳ್ಕೂರಕಾರ ನಾಲ್ಕನೇ ಬಾರಿ ಬಾಟಲಿ ಗ್ಲಾಸಿನ ಜತೆ ಹೊರಬಂದು ಊಟ ಮಾಡುತ್ತಿರುವವರ ನಡುವೆ ನಿಂತ.
“..ಅದು..ನಾನು ಹೇಳತೇನೆ…” ಎಂದ ಹಸಿಮಡಲು ಪಾತ್ರೋಲ.
ಈತ ಶಿವಸಾಗರಕ್ಕೆ ಹೊಸದಾಗಿ ಎಂದರೆ ಇಗರ್ಜಿ ಕಟ್ಟಲು ಬಂದವರಲ್ಲಿ ಇವನೂ ಒಬ್ಬ. ಹೀಗೆ ಬಂದವ ಶಿವಸಾಗರದ ನಯ ನಾಜೂಕುತನ, ನಾಗರೀಕತೆ, ಪಟ್ಟಣದ ಸೊಬಗಿಗೆ ಮರುಳಾಗಿ ಇಲ್ಲಿಯೇ ಮನೆ ಮಾಡಿದ. ಊರಿನಿಂದ ಹೆಂಡತಿ ಮಕ್ಕಳನ್ನು ಕರೆತಂದ. ಈಗ ಈ ಊರಿನವನೆ ಈತ. ಆದರೆ ಹಸಿ ಮಡಲು ಪತ್ರೋಲ ಎಂಬ ಹೆಸರು ಇವನನ್ನು ಬಿಟ್ಟಿಲ್ಲ.
ಮುರುಡೇಶ್ವರದ ಚಂದ್ರ ಹಿತ್ತಲಿನಲ್ಲಿ ಇವನ ಮನೆ. ಒಡೆಯರ ಐನೂರು ಆರುನೂರು ತೆಂಗಿನ ಮರಗಳನ್ನು ನೋಡಿಕೊಂಡಿದ್ದ ಇವನ ಅಜ್ಜ ಹಸಿ ಮಡಲು ಲಾದ್ರು. ಇವನ ತೋಟದ ಮನೆಯಲ್ಲಿ ನಡೆಯುತ್ತಿದ್ದ ಮುಖ್ಯ ಉದ್ಯಮವೆಂದರೆ ಮಡಲು ಹೆಣೆಯುವುದು. ತೆಂಗಿನ ಹೆಡೆ ಬಿದ್ದ ತಕ್ಷಣ ಇಲ್ಲವೆ ಕಾಯಿ ಕೀಳಲು ಮೇಲೆ ಹತ್ತಿದಾಗ ಬೇಡದ ಗರಿ ನೋಡಿ ಕತ್ತರಿಸಿ ಕೆಳಗೆ ಹಾಕಿ ಅದನ್ನು ಹೆಣೆಯುವುದು. ಹೆಣೆದು ಹೆಣೆದು ಮಡಲಿನ ರಾಶಿಯನ್ನು ಒಂದೆಡೆ ಒಟ್ಟುವುದು. ಮನೆಗೆ ಹೊದಿಸಲು, ಬಚ್ಚಲಿಗೆ ಮರೆಯಾಗಿ ಕಟ್ಟಲು, ಚಪ್ಪರದ ಮೇಲೆ ಹಾಸಲು, ನೆಲಕ್ಕೆ ಹಾಸಲು ಇದು ಬಳಕೆಯಾಗುತ್ತಿತ್ತು. ಮೀನಿನ ಅಂಗಡಿಗಳವರು, ಜಾತ್ರೆ ಅಂಗಡಿಗಳವರು, ಗುಡಿಸಲು ಕಟ್ಟುವವರು ಬಂದು ಈ ಮಡಲನ್ನು ಕೊಂಡುಕೊಳ್ಳುತ್ತಿದ್ದರು. ಮನೆಯಲ್ಲಿ ಲಾದ್ರು, ಅವನ ಹೆಂಡತಿ, ಹೆಂಡತಿಯ ತಂಗಿ, ಲಾದ್ರುವಿನ ತಾಯಿ, ಅವನ ಅಣ್ಣನ ಹೆಂಡತಿ, ಹೀಗೆ ಏಳೆಂಟು ಜನರಿಗೆ ಇದೇ ಕೆಲಸ. ಯಾರಿಗೇ ಆಗಲಿ ಮಡಲು ಬೇಕೆಂದರೆ ಅವರು ಇವನಲ್ಲಿಗೆ ಬರುತ್ತಿದ್ದರು. ಲಾದ್ರು ನಂತರ ಅವನ ಮಗ ಇದನ್ನು ಮುಂದುವರೆಸಿದ. ಆದರೆ ಪಾತ್ರೋಲ ಇಲ್ಲಿಗೆ ಬಂದದ್ದರಿಂದ ಅಲ್ಲಿ ಈ ಕೆಲಸ ಸೊರಗಿತು. ಆ ಹೆಸರು ಮಾತ್ರ ಇವನಿಗೆ ಖಾಯಂ ಆಯಿತು.
ಪಾದರಿಗೆ ಹಣ ಏಕೆ ಎಂಬ ಪ್ರಶ್ನೆ ಬಂದಾಗ ಅದನ್ನು ನಾನು ಹೇಳುತ್ತೇನೆ ಎಂದು ಪಾತ್ರೋಲ ಮುಂದೆ ಬರಲು ಒಂದು ಕಾರಣವಿತ್ತು. ಇವನ ಹೆಂಡತಿ ಭಟ್ಕಳದವಳು. ಪಾದರಿ ಮಸ್ಕರಿನಾಸರ ಬಟ್ಲರ್ ಫ಼ರಾಸ್ಕ ಏನಿದ್ದಾನೆ ಅವನ ಹತ್ತಿರದ ಸಂಬಂಧಿ ಇವನ ಹೆಂಡತಿ.
ಈ ಫ಼ರಾಸ್ಕನಿಗೆ ಮದುವೆ ಮಾಡಿದವರೇ ಪಾದರಿ ಮಸ್ಕರಿನಾಸ್. ಫ಼ರಾಸ್ಕ ಭಟ್ಕಳದ ಇಗರ್ಜಿಯ ಬಟ್ಲರ್ ಆಗಿದ್ದವ. ಬಹಳ ವರ್ಷಗಳಿಂದ ಮಸ್ಕರಿನಾಸರು ಅಲ್ಲಿಗೆ ಬರುವುದಕ್ಕೂ ಮೊದಲು ಅವನು ಅಲ್ಲಿಯ ಬಟ್ಲರೇ. ಮಸ್ಕರಿನಾಸ ಅಲ್ಲಿಗೆ ಬಂದದ್ದು ಸುಂಕೇರಿಯಿಂದ. ಬಂದವರೇ ಬಟ್ಲರ್ ಮದುವೆ ಬಗ್ಗೆ ಗಡಿಬಿಡಿ ಮಾಡಿದರು. ಫ಼ರಾಸ್ಕನಿಗೆ ಭಟ್ಕಳ, ಶಿರಾಲಿ, ಮುರುಡೇಶ್ವರ, ಹೊನ್ನಾವರದಲ್ಲಿ ಹೆಣ್ಣು ಕೊಡುವವರು ಇರಲಿಲ್ಲ ಎಂದಲ್ಲ, ಇದ್ದರು, ಆದರೆ ಮಸ್ಕರಿನಾಸರು ಸುಂಕೇರಿಯಿಂದ ಒಂದು ಹೆಣ್ಣನ್ನು ತಂದರು. ಈಗ ಇಲ್ಲಿಗೂ ಈ ಬಟ್ಲರನನ್ನು ಅವನ ಹೆಂಡತಿಯನ್ನು ಕರೆತಂದಿದ್ದಾರೆ.
“..ಈ ಬಗ್ಗೆ ನಾನು ವಿಶೇಷವಾಗಿ ಹೇಳೋದು ಏನಿಲ್ಲ..” ಎಂದು ಬೇರೆ ಹಸಿಮಡಲು ಪಾತ್ರೋಲ ನುಡಿದ.
“ಹಣ ಯಾಕೆ ಅಂತ ಕೇಳಿದ್ರಲ್ಲ ಅದಕ್ಕೆ ಹೇಳತೇನೆ. ಈ ಫ಼ರಾಸ್ಕನ ಹೆಂಡತಿ ರಜೀನಾ ಇದ್ದಾಳಲ್ಲ ಅವಳ ತಮ್ಮ ವಕೀಲ ಓದ್ತಿದಾನೆ..ಎಲ್ಲಿ? ಮುಂಬೈನಲ್ಲಿ..ಅವನನ್ನು ನಮ್ಮ ಪಾದರಿ ಓದಸ್ತಿದಾರೆ..ಈಗ ತಿಳೀತಲ್ಲ..” ಎಂದು ಪಾತ್ರೋಲ ನಾಲ್ಕನೇ ಗ್ಲಾಸಿಗೆ ಕೈ ಒಡ್ಡಿದ.
ಒಂದೇ ಗ್ಲಾಸನ್ನು ಮುಗಿಸಿ ಊಟ ಮಾಡುತ್ತಿದ್ದ ಬೋನ ಸಣ್ಣದಾಗಿ ಕೆಮ್ಮಿದ-
“ಇನ್ನು ಈ ವಿಷಯ ಬೇಡ” ಎಂದು ಆತ ನುಡಿದ.
“ಪಾದರಿ ಅಂದರೆ ದೇವರ ಮಣಿಯಾರಿ..ಅವರು ನಮಗೋಸ್ಕರ ಇದಾರೆ..ನಾವು ಅವರಿಗೋಸ್ಕರ ಅಲ್ಲ..ಅವರನ್ನು ನೋಡಿಕೊಳ್ಳೋನು ದೇವರು..ಅವನಿಗೆ ಬಿಡೋಣ..”
ಅರ್ಧ ಅಮಲಿನಲ್ಲಿದ್ದವರು, ಅದೇ ಅಮಲೇರುತ್ತಿದ್ದವರು ಈ ಮಾತಿಗೆ ತಲೆದೂಗಿದ್ದರು. ಸಿಮೋನ ಕೂಡ-
“ಅದು ಖರೆ..ಬೋನ ಸಾಹುಕಾರ್ರು ಹೇಳುವ ಮಾತು ಒಪ್ಪಬೇಕಾದ್ದೆ..” ಎಂದ.
ಬಳ್ಕೂರಕಾರಗೂ ಮಾತು ಈ ದಿಕ್ಕಿನಲ್ಲಿ ಸಾಗುವುದು ಬೇಕಿರಲಿಲ್ಲ.
“ಮಾತು ಸಾಕು ಊಟ ಮಾಡಿ” ಎಂದೂ ಅವನು ಹೇಳಿದ.
ಊಟ ಮುಂದುವರೆಯಿತು. ಬಳ್ಕೂರಕಾರ್ ಕರೆದ ಎಲ್ಲರೂ ಊಟಕ್ಕೆ ಬಂದಿದ್ದರು. ಆದರೆ ಅವನಿಗೆ ಬೇಸರವಾದುದೆಂದರೆ ಬಾಮಣರು ಯಾರೂ ಅವನ ಮನೆಯತ್ತ ಸುಳಿದಿರಲಿಲ್ಲ.
…ಇರಲಿ…ಎಂದು ಆತ ನೊಂದುಕೊಂಡ.
ಇನಾಸಜ್ಜಿಯ ತಿಂಗಳ ಪೂಜೆ ಮುಗಿಯುತ್ತಿದ್ದಂತೆಯೇ ನವೆಂಬರ ತಿಂಗಳು ಬಂದಿತು.
*
*
*
ನವೆಂಬರ ತಿಂಗಳ ಮೊದಲ ವಾರದಲ್ಲಿಯೇ ಸರ್ವ ಆತ್ಮರ ಹಬ್ಬ . ಸಿಮಿತ್ರಿಯಲ್ಲಿರುವ ಎಲ್ಲ ಸಮಾಧಿಗಳನ್ನು ಸಂಬಂಧಪಟ್ಟವರು ಶುಚಿಮಾಡಿ ಸುತ್ತ ಬೆಳೆದ ಪೊದೆ ಗಿಡಗಳನ್ನು ಕತ್ತರಿಸಿ, ಸುತ್ತ ಶಗಣಿ ಸಾರಿಸಿ, ಸಮಾಧಿಗಳಿಗೆ ಸುಣ್ಣ ಬಳಿದು, ತಲೆಯ ಬಳಿ ನೆಟ್ಟ ಶಿಲುಬೆ ಮುರಿದು ಬಿದ್ದಿದ್ದರೆ ಅದನ್ನು ಸರಿ ಮಾಡಿ, ಸಮಾಧಿ ಮಂತ್ರಿಸಲು ಬರುವ ಪಾದರಿಗಾಗಿ ಕಾಯುವುದು ಒಂದು ಪದ್ಧತಿ. ಇದರ ಹಿಂದಿನ ದಿನ ರಾತ್ರಿ ಮನೆಗಳಿಗೆ ಆಲ್ಮ(ಆತ್ಮ)ಗಳು ಬರುತ್ತವೆ ಎಂಬುದು ಒಂದು ನಂಬಿಕೆ. ಆಲ್ಮಗಳಿಗಾಗಿಯೇ ಅಡಿಗೆ ಮಾಡಿರಿಸಿ ವಿಶೇಷವಾಗಿ ಪಾಯಸ ಮಾಡಿ ಅದನ್ನು ಯಾರಿಗೂ ಬಡಿಸದೆ ಹಾಗೆಯೇ ಇರಿಸುವುದು ಕೂಡ ಒಂದು ಪದ್ಧತಿ. ಪಾಯಸ ಬಡಿಸು ಬಡಿಸು ಎಂದು ಹಟ ಹಿಡಿದ ಮಕ್ಕಳಿಗೆ-
“ಇಲ್ಲ ಮಗ ರಾತ್ರಿ ಅಜ್ಜ ಬರತಾರೆ..ಅಜ್ಜಿ ಬರತಾಳೆ ಅವರು ಊಟ ಮಾಡಿ ಹೋದ ನಂತರ ಬೆಳಿಗ್ಗೆ ನಾವು ಊಟ ಮಾಡೋಣ..” ಎಂದು ತಾಯಂದಿರು ಸಮಾಧಾನ ಹೇಳುವುದು ಎಲ್ಲ ಕ್ರೀಸ್ತುವರ ಮನೆಗಳಲ್ಲೂ ನಡೆದು ಬಂದಿತ್ತು. ಮನೆಯ ಸಣ್ಣ ಮಕ್ಕಳು ನಂಬುತ್ತಿದ್ದರು ಕೂಡ.
ಅದೇ ದಿನ ದೊಡ್ಡವರ ಕೆಲಸವೆಂದರೆ ಸಮಾಧಿ ಸರಿಪಡಿಸುವುದು.
ಶಿವಸಾಗರದ ಸಿಮಿತ್ರಿಯಲ್ಲಿ ಆಗಲೇ ಸಾಕಷ್ಟು ಸಮಾಧಿಗಳು ತಲೆ ಎತ್ತಿದ್ದವು. ಸಿಮಿತ್ರಿಯಲ್ಲಿ ಸುತ್ತ ಪಾಗಾರ ಹಾಕಲಾಗಿತ್ತು. ಪಾದರಿ ಗೋನಸ್ವಾಲಿಸ್ ಎತ್ತರದ ಒಂದು ಶಿಲುಬೆಯನ್ನು, ಒಂದು ವೇದಿಕೆಯನ್ನು ಮಾಡಿಸಿದ್ದರು. ಪ್ಲೇಗು ಮಾರಿಗೆ ಬಲಿಯಾದ ಜೂಜನ ಸಮಾಧಿಯೇ ಸಿಮಿತ್ರಿಯ ಮೊದಲ ಸಮಾಧಿಯಾದದ್ದು ಒಂದು ವಿಪರ್ಯಾಸವೆ. ಜೂಜ ಸತ್ತ ಸುಮಾರು ಆರು ತಿಂಗಳ ನಂತರ ಶಿರಾಲಿಯ ತಾರಿ ಬಾಗಿಲಿನಿಂದ ಅವನ ತಾಯಿಯ ಅಣ್ಣ ತಮ್ಮಂದಿರು ಎಂದು ಈರ್ವರು ಬಂದು ಊರಿನಲ್ಲಿ ಗಲಾಟೆ ಬೇರೆ ಮಾಡಿದ್ದರು.
“ನಮ್ಮವನು ಅಂತ ಅವನಿದ್ದ..ಅವನ ಹೊಂಡಕ್ಕೆ ಹಿಡಿ ಮಣ್ಣು ಹಾಕಲಿಕ್ಕೆ ನೀವು ನಮಗೆ ಅವಕಾಶ ಮಾಡಿಕೊಡಲಿಲ್ಲ..ನೀವು ನಮಗೊಂದು ಮಾತು ಹೇಳಿ ಕಳುಹಿಸಲಿಲ್ಲ..” ಎಂದು ಸಿಮೋನ ಜೂಜೆಯ ಕತೆಯನ್ನು ವಿಸ್ತಾರವಾಗಿ ಹೇಳಿದ.
ಅರಮನೆ ಕೊಪ್ಪದ ಜೂಜನ ಮನೆಯನ್ನು ರಿಪೇರಿ ಮಾಡಿ, ಅದನ್ನು ಯಾರೋ ಸಾಹೇಬರಿಗೆ ಕುರಿ ದೊಡ್ಡಿ ಮಾಡಿಕೊಳ್ಳಲು ಬಾಡಿಗೆಗೆ ಕೊಟ್ಟು, ತಿಂಗಳ ಬಾಡಿಗೆ ಎಂದು ಒಂದೂವರೆ ಸಾವಿರ ರೂಪಾಯಿಗಳನ್ನು ಮುಂಗಡ ತೆಗೆದುಕೊಂಡ ಹೊರಟ ಅವರು ಮಾಡಿದ್ದ ಒಂದು ಕೆಲಸವೆಂದರೆ ಜೂಜನ ಸಮಾಧಿಯನ್ನು ಕಲ್ಲಿನಿಂದ ಕಟ್ಟಿ, ಕಲ್ಲಿನ ಶಿಲುಬೆ ಇರಿಸಿ ಹೋದದ್ದು. ಹೀಗಾಗಿ ಸಿಮಿತ್ರಿಯ ಮೊದಲ ಸಮಾಧಿ ಒಳ ಹೋದ ತಕ್ಷಣ ಕಣ್ಣಿಗೆ ಬೀಳುತ್ತಿತ್ತು.
ಈ ಸಮಾಧಿಯ ಸಾಲಿನಲ್ಲಿಯೇ ಗಾಡಿ ಸಿಮೋನನ ತಾಯಿಯ ಸಮಾಧಿ ಕೂಡ ಮೊನ್ನೆ ಮೊನ್ನೆ ಕಾಣಿಸಿಕೊಂಡಿತ್ತು. ಮಗನನ್ನು ಮೊಮ್ಮಕ್ಕಳನ್ನು ಬಿಟ್ಟಿರಲಾರದ ಈ ಮುದುಕಿ ಮುರುಡೇಶ್ವರದಿಂದ ಇಲ್ಲಿಗೆ ಬಂದು, ನಿತ್ಯ ಮೊಮ್ಮಕ್ಕಳಿಗೆ ಜಪ, ಪ್ರಾರ್ಥನೆ ಹೇಳಿಕೊಟ್ಟು, ಪಾದರಿ ಊರಿಗೆ ಬಂದ ನಂತರ ಪ್ರತಿದಿನ ಬೆಳಿಗ್ಗೆ ತಪ್ಪದೆ ಪೂಜೆ ಕೇಳಿ ಒಂದು ಅರ್ಥದಲ್ಲಿ ದೈವಿಕ ಬದುಕನ್ನು ಸಾಗಿಸಿ ಭಾಗ್ಯವಂತ ಮರಣವನ್ನೇ ಅನುಭವಿಸಿದಳು.
ಬೂದಿ ಬುಧುವಾರದಿಂದ ಆರಂಭವಾಗುವ ತಪಸ್ಸಿನ ಕಾಲವನ್ನು ಕಟ್ಟು ನಿಟ್ಟಾಗಿ ಆಚರಿಸಿದಳು. ಉಪವಾಸ ಹಿಡಿದಳು. ವಯಸ್ಸಾದವರು ಉಪವಾಸ ಇರಬೇಕಾಗಿಲ್ಲ ಎಂದು ಪಾದರಿ ಹೇಳಿದರೂ ಇವಳು ಕೇಳಿರಲಿಲ್ಲ. ಈ ಕಾಲದಲ್ಲಿ ಹೂ ಮುಡಿಯ ಬೇಡಿ ಎಂದು ಸೊಸೆಗೆ ಕೇರಿಯ ಹೆಣ್ಣುಮಕ್ಕಳಿಗೆ ಹೇಳಿದಳು. ಮನೆಯಲ್ಲಿ ಸೀಟಿ ಹೊಡೆಯಬೇಡಿ, ಹಾಡು ಹೇಳಬೇಡಿ, ಕೇಕೆ ಹಾಕಿ ನಗಬೇಡಿ ಎಂದು ಮೊಮ್ಮಕ್ಕಳಿಗೆ ಹೇಳಿದಳು. ಪ್ರತಿ ಶುಕ್ರವಾರ ಇಗರ್ಜಿಗೆ ಹೋಗಿ ಶಿಲುಬೆಯ ಹಾದಿಯಲ್ಲಿ ಪಾಲ್ಗೊಂಡಳು. ಈ ಅವಧಿಯಲ್ಲಿ ಹೇಳುವ ಎಲ್ಲ ಕೀರ್ತನೆಗಳನ್ನು ನೋವು, ವಿಷಾದದ ದನಿಯಲ್ಲಿ ಹೇಳುವಂತೆ ಮಕ್ಕಳಿಗೆ ಸಲಹೆ ನೀಡಿದಳು. ಕ್ರಿಸ್ತ ಪ್ರಭು ಅವನ ಜೀವಿತದ ಈ ನಲವತ್ತು ದಿನ ಏನೆಲ್ಲ ನೋವು, ಹಿಂಸೆ, ಅವಮಾನಗಳನ್ನು ಎದುರಿಸಿದನೋ ಅದನ್ನೆಲ್ಲ ಸ್ಮರಿಸಿಕೊಳ್ಳುವಂತೆ ಪದೇ ಪದೇ ಮೊಮ್ಮಕ್ಕಳಿಗೆ ಹೇಳಿದಳು. ಶುಭ ಶುಕ್ರವಾರದಂದು ಕ್ರಿಸ್ತಪ್ರಭುವನ್ನು ಶಿಲುಬೆಗೆ ಏರಿಸಿದ ಘಟನೆಯನ್ನು ಪಾದರಿ ಗೋನಸ್ವಾಲಿಸ್ ಇಗರ್ಜಿಯಲ್ಲಿ ತಿಳಿಸಿಕೊಟ್ಟರು. ಈ ಘಟನೆಯನ್ನು ವಿವರಿಸುತ್ತ ಅವರ ಧ್ವನಿ ಗದ್ಗದಿತವಾಯಿತು. ಮಾತು ನಿಲ್ಲಿಸಿ ಅವರು ಎರಡು ನಿಮಿಷ ನಿಂತರು. ನಿಲುವಂಗಿಯ ಜೇಬಿನಿಂದ ಬಿಳಿವಸ್ತ್ರ ತೆಗೆದು ಕಣ್ಣೊರೆಸಿಕೊಂಡರು. ಸೆರಮಾಂವಂ ಕೇಳುತ್ತ ಕುಳಿತವರ ಅನುಭವ ಕೂಡ ಇದೇ ಆಯಿತು.
ಶಿಲುಬೆಗೆ ಏರಿಸಿದ ಕ್ರಿಸ್ತನ ಪ್ರತಿಮೆಗೆ ಎಲ್ಲ ಮುತ್ತಿಟ್ಟು ಮನೆಗೆ ಬಂದರು.
ಆ ರಾತ್ರಿ ಏಕೋ ಸಿಮೋನನ ತಾಯಿ ಎದ್ದು ಕುಳಿತಳು.
“ಸಿಮೋನ ಮಕ್ಕಳೆಲ್ಲ ಮಲಗಿದ್ದಾರಾ?” ಎಂದು ಕೇಳಿದರು.
ಸಿಮೋನನಿಗೆ ಅನುಮಾನವಾಗಿ ಆತ ಮಕ್ಕಳನ್ನು, ಹೆಂಡತಿಯನ್ನು ಕೂಗಿ ಎಬ್ಬಿಸಿ ಅವರನ್ನು ತಾಯಿಯ ಬಳಿ ಕರೆತರುವಷ್ಟರಲ್ಲಿ ಈ ಮುದುಕಿ ಎದ್ದು ದೇವರ ಪೀಠದ ಬಳಿ ಹೋಗಿದ್ದವಳು ಅಲ್ಲೇ ಕುಸಿದಿದ್ದಳು.
ಶಿವಸಾಗರದ ಸಿಮಿತ್ರಿಗೆ ಇನ್ನೊಂದು ಸೇರ್ಪಡೆಯಾಯಿತು. ಸಿಮೋನ ತಾಯಿಗಾಗಿ ಕಲ್ಲಿನ ಸಮಾಧಿ ಕಟ್ಟಿಸಿದ.
ಬಳ್ಕೂರಿನ ಕೈತಾನನ ಅತ್ತೆ ಗಂಡಬಾಳೆಯ ಇನಾಸಜ್ಜಿ ಕೊನೆಗಾಲದಲ್ಲಿ ಇಲ್ಲಿ ಬಂದು ಸತ್ತಳು. ಇವಳ ಸಮಾಧಿ ಕಟ್ಟಿಸಿ ಬಳ್ಕೂರಕಾರ ಅತ್ತೆಗೊಂದು ಶಾಶ್ವತ ಸ್ಥಾನ ಕಲ್ಪಿಸಿಕೊಟ್ಟ.
ಹೀಗೆಯೇ ಪಾಸ್ಕೋಲ ಮೇಸ್ತ್ರನ ಹೆಂಡತಿ ರೀತಾಳ ತಮ್ಮ ಬಹಳ ವರ್ಷ ಹೆಸರು ಗೊತ್ತಿಲ್ಲದ ಒಂದು ಕಾಯಿಲೆಯಿಂದ ಸತ್ತು ಸಿಮಿತ್ರಿ ಸೇರಿಕೊಂಡ.
ಊರಿಗೆಲ್ಲ ಆಗಾಗ್ಗೆ ಕಾಡು ಹಂದಿ ಮಾಂಸವನ್ನೋ ಜಿಂಕೆ ಮಾಂಸವನ್ನೋ ಬೇಟೆಯಾಡಿ ತಂದು ಪಾಲು ಮಾಡಿ ಮಾರುತ್ತಿದ್ದ ಹಂದಿಗುಸ್ತೀನ ಕೂಡ ಇಲ್ಲಿಯೇ ಇದ್ದ. ಬಲಗಾಲುದ್ದ ಬಾಲ್ತಿದಾರನ ಸಮಾಧಿ ಕೂಡ ಇದೇ ಸಾಲಿನಲ್ಲಿತ್ತು.
ಊರಿನ ಹೊಸ ಇಗರ್ಜಿ ಕಟ್ಟಲೆಂದೇ ಬಂದು ಶಿವಸಾಗದವನೇ ಆಗಿ ಹೋದ ಭಟ್ಕಳದ ಸಾನ್ ಪುತ್ತು ಮೂರು ತಿಂಗಳು ಕ್ಷಯರೋಗದಿಂದ ನರಳಿ, ಗುಣಕಾಣದೆ ಸತ್ತಿದ್ದ. ಅವನನ್ನು ಕೂಡ ಈ ಸಿಮಿತ್ರಿಯಲ್ಲಿಯೇ ಮಣ್ಣು ಮಾಡಲಾಗಿತ್ತು.
ಮೊನ್ನೆ ಮೊನ್ನೆ ಬಂದ ಹೆಲ್ತ ವಿಸಿಟರ್ ವಿನ್ಸೆಂಟನ ಮಾವ ಅಳಿಯನ ಮನೆಗೆ ಬಂದವ, ಬಂದ ಮೂರನೇ ದಿನ ಕುಡಿದದ್ದು ಜಾಸ್ತಿಯಾಗಿ ಸತ್ತಿದ್ದ. ಮೊದಲಿನಿಂದಲೂ ಅತಿಯಾಗಿ ಕುಡಿಯುತ್ತಿದ್ದ ಆತ ಶಿವಸಾಗರಕ್ಕೆ ಬಂದವನೇ ಕುಡಿಯಲಾರಂಭಿಸಿ, ಕೊನೆಗೆ ಅದು ಹೆಚ್ಚಾಗಿ ಪ್ರಾಣ ಬಿಟ್ಟಿದ್ದ. ಅವನ ಶವವನ್ನು ದೂರದ ಮಂಗಳೂರಿಗೆ ಒಯ್ಯುವ ಅನುಕೂಲತೆ ಇಲ್ಲದ್ದರಿಂದ ಅವನನ್ನು ಇಲ್ಲಿ ಹುಗಿಯಲಾಗಿತ್ತು. ವಿನ್ಸೆಂಟ್ ತನ್ನ ಮಾವನ ಸಮಾಧಿಯನ್ನು ಉಳಿದೆಲ್ಲ ಸಮಾಧಿಗಿಂತಲೂ ಉತ್ತಮವಾಗಿ ಭವ್ಯವಾಗಿ ಕಟ್ಟಿಸಿ ಸಮಾಧಿಯ ಶಿಲುಬೆಗಲ್ಲಿನ ಮೇಲೆ ತನ್ನ ಮಾವನ ಹೆಸರನ್ನು, ಹುಟ್ಟಿದ ತಾರೀಖನ್ನು ಸತ್ತ ತಾರೀಖನ್ನು ಬರೆಸುವುದರ ಜೊತೆಗೆ-ನಿಮ್ಮ ನೆನಪು ಸದಾ ನಮ್ಮಲ್ಲಿ ಹಸಿರಾಗಿರುತ್ತದೆ ಎಂದು ಇಂಗ್ಲೀಷಿನಲ್ಲಿ ಬರೆಸಿದ್ದ. ಶಿವಸಾಗರದ ಸಿಮಿತ್ರಿಯಲ್ಲಿ ಹೀಗೆ ಬರೆಸಲಾದ ಸಮಾಧಿ ಇದೊಂದೆ ಆಗಿತ್ತು.
ಹೀಗೆ ಸಿಮಿತ್ರಿಯಲ್ಲಿ ಇಪ್ಪತ್ತು ಇಪ್ಪತೈದು ಸಮಾಧಿಗಳು ಎದ್ದು ನಿಂತಿದ್ದವು. ಒಂದೆರಡು ಸಮಾಧಿಗಳು ಕಟ್ಟಿಸದೇ ಇದ್ದುದರಿಂದ ನೆಲಮಟ್ಟಕ್ಕೆ ಇಳಿದು ನಾಶವಾಗಿದ್ದವು. ಕೆಲವು ಸಮಾಧಿಗಳ ಬಳಿ ನೆಟ್ಟ ಶಿಲುಬೆ ಮುರಿದಿತ್ತು.
ಮುಖ್ಯವಾಗಿ ಸಿಮಿತ್ರಿಯ ತುಂಬ ಗಿಡ, ಪೊದೆಗಳು, ತುಂಬೆ ಗಿಡಗಳು, ಕಾಡು ಬಳ್ಳಿ ಹಬ್ಬಿತ್ತು. ನಾಳೆ ಸಮಾಧಿಗಳ ಪೂಜೆ ಮಾಡಬೇಕೆಂದರೆ ಸಿಮಿತ್ರಿ ಮೊದಲು ಶುಚಿಯಾಗಬೇಕು. ಸಮಾಧಿಗಳನ್ನು ಸಂಬಂಧಪಟ್ಟವರು ನೋಡಿಕೊಳ್ಳುತ್ತಾರೆ. ಆದರೆ ಸಿಮಿತ್ರಿಯನ್ನು ಶುಚಿ ಮಾಡುವವರು ಯಾರು?
ಪಾದರಿ ಮಸ್ಕರಿನಾಸ ಇದಕ್ಕೊಂದು ದಾರಿ ಕಂಡು ಹಿಡಿದರು. ಹಿಂದಿನ ಭಾನುವಾರ ಜ್ಞಾನೋಪದೇಶಕ್ಕೆ ಬಂದ ಯುವಕರಿಗೆ-
“ನೀವು ಈ ಬಾರಿ ಸಿಮಿತ್ರಿ ಶುಚಿ ಮಾಡಬೇಕು..ಶನಿವಾರ ಸರ್ವ ಆತ್ಮರ ಹಬ್ಬ..ಶುಕ್ರವಾರ ನೀವೆಲ್ಲ ಈ ಕೆಲಸ ಮಾಡಬೇಕು..” ಎಂದರು. ಹಾಗೆಯೇ ಜನರನ್ನು ಕುರಿತು ಇಗರ್ಜಿಯಲ್ಲಿ-
“ಯಾರ ನೆಂಟರ ಇಷ್ಟರ ಸಮಾಧಿಗಳು ಸಿಮಿತ್ರಿಯಲ್ಲಿವೆಯೋ ಅವರೆಲ್ಲ ಅಂತಹ ಸಮಾಧಿಗಳನ್ನು ಶುಚಿ ಮಾಡಿ, ಸುಣ್ಣ ಬಣ್ಣ ಮಾಡಿಸಿ..ಬಂಗಲೆಗೆ ಬಂದು ಹೆಸರು ಹೇಳಿ ಒಂದು ರೂಪಾಯಿ ಕೊಟ್ಟು ಚೀಟಿ ಮಾಡಿಸಿ..ನಾನು ಸಮಾಧಿ ಮಂತ್ರಿಸಲು ಬಂದಾಗ ಹೀಗೆ ಯಾರ ಚೀಟಿ ಇದೆಯೋ ಅಂತಹ ಸಮಾಧಿಗಳನ್ನು ಮಾತ್ರ ಮಂತ್ರಿಸುತ್ತೇನೆ..ಸಮಾಧಿಗಳ ಮೇಲೆ ಮೇಣದ ಬತ್ತಿ ಹಚ್ಚಿ ಹೂವು ಹಾಕಿ ನೀವು ನಿಮ್ಮ ನಿಮ್ಮ ಸಂಬಂಧಿಗಳ ಸಮಾಧಿ ಬಳಿ ಕಾದು ನಿಂತಿರಬೇಕು. ಸಮಾಧಿ ಮಂತ್ರಿಸುವ ಸಂದರ್ಭದಲ್ಲಿ ಗೌರವ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿ ಅಂದರೆ ಸತ್ತು ಪುಲಗತ್ತಿಯಲ್ಲಿರುವ ಆತ್ಮಗಳಿಗೆ ಬೇಗನೆ ಸದ್ಗತಿ ದೊರೆಯುತ್ತದೆ”. ಎಂದು ಹೇಳಿದ್ದರು.
ಜ್ಞಾನೋಪದೇಶ ನಡೆಯುವಾಗ ಪಾದರಿಗಳು ಕೇವಲ ಯುವಕರಿಗೇನೆ ಕೆಲಸ ಹೇಳಿದ್ದು ಯುವತಿಯರಿಗೆ ಸಂತೋಷವನ್ನುಂಟು ಮಾಡಿತು. ಹೀಗಾಗಿ ಯುವತಿಯರ ನಡುವೆ ಇದ್ದ ಪಾಸ್ಕೋಲನ ಮಗಳು ಜೊಸೆಫ಼ಿನ, ಸುತಾರಿ ಇನಾಸನ ಕೊನೆಯ ಮಗಳು ಪಾವಲೀನಾ, ಎಮ್ಮೆ ಮರಿಯಳ ಮಗಳು ಫ಼ಿಲೋಮೆನಾ.
“ಪದ್ರಾಬಾ,…ಪದ್ರಾಬಾ..ನಮಗೆ ಏನೂ ಕೆಲಸ ಇಲ್ಲವೇ?” ಎಂದು ಕೇಳಿದರು.
ಈ ಹುಡುಗಿಯರ ತಂಡ ಯಾವಾಗಲೂ ಪಾದರಿ ಮಸ್ಕರಿನಾಸರ ಸುತ್ತ ಘೇರಾಯಿಸಿಕೊಂಡಿರುತ್ತಿತ್ತು. ಹಾ ಹೂ ಎಂದು ಕೂಗುತ್ತ ಅವರ ಹೊಟ್ಟೆ, ಬೆನ್ನು ತೋಳುಗಳನ್ನು ತೋರು ಬೆರಳಿನಿಂದ ತಿವಿಯುತ್ತ, ಕೈಯಲ್ಲಿ ಬೆತ್ತ ಹಿಡಿದು ಅವರತ್ತ ಬೆತ್ತ ಬೀಸಿದಂತೆ ಹೆದರಿಸುತ್ತ ತರುಣಿಯರ ತಂಡದ ಚೀತ್ಕಾರಕ್ಕೆ ಹುಸಿ ಮುನಿಸಿಗೆ ನಗೆಗೆ ಕಾರಣವಾಗುತ್ತಿದ್ದರು, ಪಾದರಿ ಮಸ್ಕರಿನಾಸ.
ಸರ್ವ ಆತ್ಮರ ಹಬ್ಬದ ಸಂದರ್ಭದಲ್ಲಿ ಹುಡುಗರಿಗೆ ಮಾತ್ರ ಕೆಲಸ ಹೇಳಿದರಲ್ಲ ಎಂದು ಇವರಿಗೆ ಸಂತಸವಾದರೂ, ಈ ನೆಪದಲ್ಲಿ ಇಗರ್ಜಿಗೆ ಬರುವ, ಇಲ್ಲಿ ತಿರುಗಾಡುವ ಅವಕಾಶ ತಪ್ಪಿ ಹೋಯಿತಲ್ಲ ಎಂದು ವ್ಯಥೆಯಾಯಿತು. ಹೀಗೆಂದೇ ಫ಼ಿಲೋಮೆನಾ ಬಾಯಿ ಬಿಟ್ಟು ಕೇಳಿದಳು. ಜೋಸೆಫ಼ಿನ ಪಾವಲಿನಾ ತಮ್ಮ ದನಿ ಸೇರಿಸಿದರು.
“…ಹೋ!” ಎಂದು ಅಚ್ಚರಿ ವ್ಯಕ್ತಪಡಿಸಿದರು ಪಾದರಿ.
“..ನೀವೂ ಬರಬೇಕು..ನನ್ನ ಜತೆ..ಸಮಾಧಿ ಮಂತ್ರಿಸುವಾಗ ಕೀರ್ತನೆ ಹೇಳಲಿಕ್ಕೆ ನೀವು ಬೇಕು..” ಎಂದರು.
“ಬರ್ತೀರಿ ಅಲ್ಲ? ಎಂದು ಬೇರೆ ಕೇಳಿದರು.
“ಬರ್ತೀವಿ..ಬರ್ತೀವಿ..”
ಎಂದು ರಾಗವಾಗಿ ಎಲ್ಲ ಹುಡುಗಿಯರೂ ಒಂದೇ ಸಾರಿ ಆಲಾಪಿಸಿದರು.
*
*
*
ಜ್ಞಾನೋಪದೇಶ ಮುಗಿದು ಮಕ್ಕಳು, ಯುವಕ ಯುವತಿಯರು ಚದುರಿ ಹೋಗತೊಡಗಿದಾಗ ಸುತಾರಿ ಇನಾಸನ ಮಗ ಪಾಸ್ಕು ಕೊಂಚ ಹಿಂದೆಯೇ ಉಳಿದ. ಎಲ್ಲ ಯುವಕರೂ ಇಗರ್ಜಿಯಿಂದ ಹೊರಬಿದ್ದ ನಂತರ ಹೊರಬಂದ ಹುಡುಗಿಯರ ತಂಡ ಕೂಡ ಎರಡು ಮೂರು ಗುಂಪುಗಳಾಗಿ ಒಡೆದುಕೊಂಡು ಪಾಸ್ಕೋಲ ಮೇಸ್ತ್ರಿಯ ಕೊನೆಯ ಮಗಳು ಜೋಸೆಫ಼ಿನ್ ಇಗರ್ಜಿ ಬಾವಿಯತ್ತ ತಿರುಗಿ-
“ನಾನು ಹೀಗೇ ಬರತೀನಿ ಕಣೆ ಫ಼ಿಲೋಮಿನಾ” ಎಂದು ಹೇಳಿ ಇಗರ್ಜಿ ಬಾವಿಯತ್ತ ತಿರುಗಿದಾಗ ಗಂಟೆಯ ಗೋಪುರದ ಕೆಳಗೆ ನಿಂತ ಪಾಸ್ಕುವಿನ ಮೈ ಎಲ್ಲ ಬಿಸಿಯಾಗಿ ಎದೆ ಬಡಿದುಕೊಳ್ಳತೊಡಗಿತು. ಜತೆಗೆ ಅಪಾರ ಸಂತೋಷವೂ ಆಯಿತು.
ಪಾದರಿ ಗೋನಸ್ವಾಲಿಸರು ಶಿವಸಾಗರ ಬಿಡುವ ಮುನ್ನ ಮಾಡಿದ ಇನ್ನೊಂದು ಕೆಲಸವೆಂದರೆ ಇಗರ್ಜಿಯ ಬಲ ಪಾರ್ಶ್ವದಲ್ಲಿ ಪಾಸ್ಕೋಲ ಮೇಸ್ತ್ರಿಯ ಮನೆಯ ನೇರಕ್ಕೆ ಒಂದು ಬಾವಿ ತೆಗೆಸಿದ್ದು. ಮೊದಲೆಲ್ಲ ಗಾಡಿ ಸಿಮೋನನ ಮನೆಯ ಬಾವಿಯಿಂದಲೇ ಬೋನನೀರು ತರುತ್ತಿದ್ದ. ಇಗರ್ಜಿಯ ಸುತ್ತ ಬೇಲಿ ಕಟ್ಟಿದ ಮೇಲೂ ಇಲ್ಲಿಂದಲೇ ನೀರು ತರುವ ಅವನ ಕಾಯಕ ಮುಂದುವರೆದಿತ್ತು. ಇಲ್ಲಿ ಇಗರ್ಜಿ ಕೆಲಸ ಪ್ರಾರಂಭವಾದಾಗ ಆ ಕಾಮಗಾರಿಗೆ ಸಿಮೋನ ಗಾಡಿಯಲ್ಲಿ ಊರ ಕೆರೆಯಿಂದ ನೀರು ತರಿಸಿ, ತಾತ್ಕಾಲಿಕವಾಗಿ ಕಟ್ಟಲಾದ ನೆಲ ಟ್ಯಾಂಕಿಯಲ್ಲಿ ಅದನ್ನು ತುಂಬಿ ಇರಿಸಿಕೊಳ್ಳುತ್ತಿದ್ದ.
ಇಗರ್ಜಿ ಕಟ್ಟಿ ಮುಗಿದ ನಂತರ ಇಗರ್ಜಿಗೆ ಒಂದು ಬಾವಿ ಇದ್ದರೆ ಅನುಕೂಲ ಎನಿಸಿತು ಗೋನಸ್ವಾಲಿಸರಿಗೆ. ಹಸಿರು ಕಡ್ಡಿ ಹಿಡಿದು ಜಲ ನೋಡುವ ಓರ್ವರು ಇಗರ್ಜಿಯ ಸುತ್ತ ತಿರುಗಾಡಿ ಕೊನೆಗೆ ಬಲ ಪಾರ್ಶ್ವದಲ್ಲಿ ತುಸು ದೂರ ಒಂದು ಜಾಗ ಗುರುತಿಸಿದರು. ಅಲ್ಲಿ ಬಾವಿ ತೆಗೆದಾಗ ಒಳ್ಳೆಯ ನೀರು ಸಿಕ್ಕಿತು. ಇಗರ್ಜಿಯ ನೀರಿನ ಸಮಸ್ಯೆ ಕೊನೆಗೂ ಬಗೆಹರಿಯಿತು. ಆದರೆ ಇಲ್ಲಿ ಬಾವಿಯಾದದ್ದು, ಬಾವಿಯಲ್ಲಿ ಹೇರಳ ನೀರಿರುವುದು, ಬಾವಿಯ ಆಚೆಗೆ ಇರುವ ಎರಡು ಮೂರು ಮನೆಗಳವರಿಗೆ ಆಸೆ ಕೆರಳಿಸಿತು.
ಜಿಲ್ಲಾಧಿಕಾರಿ ಮೆಗ್ಗಾನ ಸಾಹೇಬ ಇಗರ್ಜಿಗೆ ಬಂದು ಹೋದ ನಂತರ ಇಗರ್ಜಿ ಕೇರಿಯಲ್ಲಿ ಒಂದು ಸರಕಾರಿ ಬಾವಿ ತೋಡಲಾಗಿದ್ದರೂ ಅದರಲ್ಲಿ ನೀರು ತುಂಬಾ ಆಳದಲ್ಲಿತ್ತು. ಬೆಳಗಿನ ಜಾವ ಸೇದುಕೊಂಡರೆ ನೀರು ಸಿಗುತ್ತಿತ್ತಲ್ಲದೆ ಅನಂತರ ಕೊಡಪಾನದ ಬದಲು ತಂಬಿಗೆ ಹಾಕಿ ನೀರನ್ನು ಗೋರಬೇಕಾಗುತ್ತಿತ್ತು. ಹೀಗಾಗಿ ಸಾನ ಬಾವಿ ಪೆದ್ರು, ಪಾಸ್ಕೋಲ ಮೇಸ್ತ್ರಿ,ಬಲಗಾಲುದ್ಧ ಬಾಲ್ತಿದಾರ, ಬಳ್ಕೂರಕಾರ ಮೊದಲಾದವರೆಲ್ಲ ಸರಕಾರಿ ಬಾವಿ ಆಯಿತೆಂದು ಸಂತಸ ಪಟ್ಟವರು. ಆ ಬಾವಿಯ ಕತೆ ಹೀಗಾದುದರಿಂದ ಮತ್ತೆ ಹಿಂದಿನಂತೆಯೇ ಸಿಮೋನ ಮೇಸ್ತ್ರನ ಬಾವಿ, ಎಮ್ಮೆ ಮರಿಯಾಳ ಬಾವಿ, ಈ ತುದಿಯಲ್ಲಿ ಮಿಂಗೇಲಿ ಬಾವಿ ಎಂದು ನೀರಿಗೆ ಹೋಗತೊಡಗಿದರು.
ಆದರೆ ಇಗರ್ಜಿ ಜಾಗದಲ್ಲಿ ಒಂದು ಬಾವಿ ಆದದ್ದು, ಪಾದರಿ ಅವರ ಬಟ್ಲರ್ ಗೆ ಹೆಚ್ಚು ನೀರಿನ ಅವಶ್ಯಕತೆ ಇಲ್ಲದೆ ಬಾವಿ ಸದಾ ತುಂಬಿರುವುದು ನೀರಿಗಾಗಿ ಪರದಾಡುತ್ತಿದ್ದವರಿಗೆ ಸಂತಸವನ್ನುಂಟು ಮಾಡಿತು. ಆದರೆ ನಡುವೆ ಬೇಲಿ ಇತ್ತು. ಒಂದು ಕಂದಕವಿತ್ತು. ಪಾದರಿಯ ಹೆದರಿಕೆ ಬೇರೆ. ಕೊನೆಗೆ ಪಾಸ್ಕೋಲ ಮೇಸ್ತ್ರಿ ಧೈರ್ಯ ಮಾಡಿ ಗೋನಸ್ವಾಲಿಸರಲ್ಲಿ ಬಂದ.
“ಪದ್ರಾಬಾ..” ಎಂದ.
“ಕೋಣ್ರೆ ತೋ..” ಎಂದವರು ಕೇಳಿದರು, ಟಪಾಲು ನೋಡುತ್ತ ಕುಳಿತವರು.
“ನಾನು ಪದ್ರಾಬ ಪಾಸ್ಕೋಲ”
“ಹಾಂ..ಏನು?”
ವಿನಯದಿಂದಲೇ ಪಾಸ್ಕೋಲ ತನ್ನ ಹಾಗೂ ಅಕ್ಕಪಕ್ಕದ ಮನೆಗಳವರ ನೀರಿನ ತಾಪತ್ರಯ ತೋಡಿಕೊಂಡ.
“ಹಾ..ಹೇಳು ಏನು ಮಾಡಬೇಕು”? ಅವನನ್ನೇ ಕೇಳಿದರು ಅವರು.
“ಅಲ್ಲಿ ಓಡಾಡಲಿಕ್ಕೆ ಒಂದು ದಣಪೆ ಇಟ್ಟರೆ ನಮಗೆ ನೀರು ಸಿಗುತ್ತಿತ್ತು”
“ನೀರು ತೊಗೊಂಡು ಹೋಗಿ..ಅದು ಇಗರ್ಜಿ ಬಾವಿ..ಧಾಜಣರಿಗೆ ಸೇರಿದ್ದು..ಆದರೆ..” ಅವರು ಮಾತು ನಿಲ್ಲಿಸಿದರು.
ಮತ್ತೆ ಜನ ಚೌಡಿ ಬನಕ್ಕೆ ಬರತೊಡಗಿದರೆ?
“ಇಲ್ಲ..ಪದ್ರಾಬ..ನೀರಿಗಲ್ಲದೇ ನಾವು ಬೇರೆ ಯಾವ ಕಾರಣಕ್ಕೂ ಅಲ್ಲಿಂದ ಬರೋದಿಲ್ಲ..” ಎಂದ ಆತ.
ಅಂತೆಯೇ ಅಲ್ಲೊಂದು ದಣಪೆ ತೆರೆದುಕೊಂಡಿತ್ತು. ಆ ನಾಲ್ಕು ಮನೆಗಳವರು ನೀರು ಕೊಂಡೊಯ್ಯತೊಡಗಿದರು. ಆದರೆ ಕ್ರಮೇಣ ಅಲ್ಲೊಂದು ಕಾಲು ದಾರಿ ಮೈತಳೆಯಿತು. ಇಗರ್ಜಿಗೆ ಬರುವವರು, ಇಗರ್ಜಿಯಿಂದ ಹೋಗುವವರು ಹೀಗೆಯೇ ತಿರುಗಾಡಲಾರಂಭಿಸಿದರು. ಪಾದರಿ ಮಸ್ಕರಿನಾಸ ಬಂದ ನಂತರವಂತೂ ಈ ದಾರಿ ಮತ್ತೂ ತೆರೆದುಕೊಂಡು ಅಗಲವಾಯಿತು.
ಹೀಗೆಂದು ಹಿಂದಿನಂತೆಯೇ ಪೊದೆಗಳು, ಮರಗಳು, ಗಿಡಗಳು, ಬಿದಿರ ಹಿಂಡು ಇದ್ದೇ ಇತ್ತು. ಸುತ್ತು ಬಳಸಿಕೊಂಡು ಬರುವುದರ ಬದಲು ಇದು ಸಮೀಪವಾಗಿದ್ದರಿಂದ ಇಗರ್ಜಿ ಸುತ್ತಲಿನ ಸಮೀಪದ ಏಳೆಂಟು ಮನೆಗಳವರು, ಮಕ್ಕಳು ಇದನ್ನೇ ಬಳಸಿಕೊಳ್ಳತೊಡಗಿದರು.
*
*
*
ಜೋಸೆಫ಼ಿನಾ ತಲೆಯ ಮೇಲಿನ ಏವ್ ತೆಗೆದು ಮಡಚಿ ಕೈಯಲ್ಲಿರಿಸಿಕೊಂಡು ಕಾಲುದಾರಿಯತ್ತ ತಿರುಗಿ ಅಷ್ಟು ದೂರ ಹೋದವಳು ತುಸು ತಡೆದು ನಿಂತಳು. ಹಿಂದಿನಿಂದ ಪಾಸ್ಕು ಬಂದು ಅವಳ ಜತೆ ಸೇರಿಕೊಂಡ-
” ಈದತೋರ್ನ ಯಾವಾಗ ಮುಗಿಯುತ್ತೆ ಅನ್ನಿಸಿ ಬಿಡುತ್ತೆ ಅಲ್ಲ?” ಎಂದು ಆತ ತಟ್ಟನೆ ಮಾತಿಗೆ ತೊಡಗಿದಾಗ.
ಇಬ್ಬರೂ ಕಾಲುದಾರಿ ಬಿಟ್ಟು ವಿಶಾಲವಾಗಿ ನೆಲದವರೆಗೂ ರೆಂಬೆಕೊಂಬೆ ಬಿಟ್ಟು ಹರಡಿಕೊಂಡ ಮಾವಿನ ಮರದ ಮರೆಗೆ ಸರಿದರು.
“..ದತೋರ್ನ ಕಲೀಬೆಕಲ್ಲ”
“ಏನದು ಕಲಿತದ್ದೆ ಕಲಿಯೋದು..ದೇವರ ಹತ್ತು ಕಟ್ಟಲೆಗಳು..ಇಗರ್ಜಿ ಮಾತೆಯ ಕಟ್ಟಲೆಗಳು..ಪಾಪ ನಿವೇದನಾ ಪ್ರಾರ್ಥನೆ. ದೇವದೂತರು ಕಲಿಸಿದ ವಿಶ್ವಾಸದ ಪ್ರಾರ್ಥನೆ..ಥೂ! ಥೂ! ಬೇಸರ ಬಂದು ಹೋಗುತ್ತೆ..”
ಮಾವಿನ ಮರದ ಸಣ್ಣ ರೆಂಬೆ ಮುರಿದು ಎಲೆಗಳನ್ನು ಹರಿದು ಚೆಲ್ಲುತ್ತ ಸಿಡಿಮಿಡಿಗೊಂಡ ಪಾಸ್ಕು.
“ದತೋರ್ನಗೆ ಬರಲಿಲ್ಲ ಅಂದರೆ ನಾಳೆ ಮದುವೆ ಇಲ್ಲ..ಮದುವೆ ಬೇಕು ಅನ್ನೋದಾದ್ರೆ ದತೋರ್ನ ಕಲೀಬೇಕು.”
ನಗು ನಗುತ್ತ ಕೆಣಕಿದಳು ಜೋಸೆಫ಼ಿನಾ.
ಕೆಲವೇ ತಿಂಗಳ ಹಿಂದೆ ಸಾಂತಾ ಮೋರಿ ಮಗ ಬಸ್ತು ಸಿದ್ಧಾಪುರದ ಹುಡುಗಿಯನ್ನು ಮದುವೆಯಾಗಲು ಹೊರಟಿದ್ದ. ಮದುವೆ ಸಿದ್ಧಾಪುರದಲ್ಲಿ. ಆದರೆ ನಿಯಮದ ಪ್ರಕಾರ ಇಲ್ಲಿಯ ಪಾದರಿ ಚೀಟಿಕೊಡಬೇಕು. ಈ ಚೀಟಿ ತೆಗೆದುಕೊಂಡು ಹೋಗಿ ಅಲ್ಲಿಯ ಪಾದರಿಗೆ ಕೊಟ್ಟರೆ ಮದುವೆ.
ಬಸ್ತು ಮಸ್ಕರಿನಾಸರ ಬಳಿ ಹೋಗಿ
“ಪದ್ರಾಬ…ಚೀಟಿ ಕೊಡಿ” ಎಂದು ಕೇಳಿದಾಗ ಅವರು-
“ಸಾಂತಾಮೋರಿ ಎರಡು ವರ್ಷದಿಂದ ಅನ್ವಾಲ ಕಾಯಿದೆ ಕೊಟ್ಟಿಲ್ಲ..” ಎಂದು ಮೊದಲ ತಕರಾರು ತೆಗೆದರು. ನಂತರ “ನೀನು ಪ್ರತಿ ಭಾನುವಾರ ಇಗರ್ಜಿಗೆ ಬರುವುದಿಲ್ಲ”. ಇದು ಎರಡನೇ ತಕರಾರು.
“ವರ್ಷಕ್ಕೆ ಒಂದು ಸಾರಿಯಾದರೂ ಪಾಪ ನಿವೇದನೆ ಮಾಡಿ ದಿವ್ಯಪ್ರಸಾದ ಸ್ವೀಕರಿಸಬೇಕು ಎಂಬುದು ಇಗರ್ಜಿ ಮಾತೆಯ ಕಟ್ಟಲೆ..ಅದನ್ನು ಈಡೇರಿಸುತ್ತಿದ್ದೀಯಾ?” ಎಂದು ಮೂರನೇ ಪ್ರಶ್ನೆ ಕೇಳಿದರು.
ಈ ಮೂರೂ ಪ್ರಶ್ನೆಗಳನ್ನು ಕೇಳಿಯೂ ಬಸ್ತು ನೀಡಿದ ಉತ್ತರಗಳನ್ನು ಒಪ್ಪಿಕೊಂಡ ಮಸ್ಕರಿನಾಸರು-
“ಅದೆಲ್ಲ ಸರಿ..ನಿನಗೆ ಎಲ್ಲ ಜಪಮಂತ್ರಗಳು ಬರುತ್ತಾ? ಎಲ್ಲಿ ಪರಲೋಕ ಮಂತ್ರ ಹೇಳು..ದೇವರ ಹತ್ತು ಕಟ್ಟಲೆಗಳನ್ನು ಹೇಳು? ಪಾಪ ನಿವೇದನಾ ಪ್ರಾರ್ಥನೆ ಹೇಳು” ಎಂದು ಕೇಳಿ ಬಸ್ತುವನ್ನು ಗೊಂದಲದಲ್ಲಿ ಕೆಡವಿದರು. ಅವನಿಗೆ ಎಲ್ಲವೂ ಚೆನ್ನಾಗಿ ಬರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು-
“ನಾಳೆಯಿಂದ ಬಾ..ಎಲ್ಲ ಕಲಿತ ನಂತರ ನಿನಗೆ ಚೀಟಿ..” ಎಂದು ನುಡಿದು ಬಿಟ್ಟರು.
ಬಸ್ತು ನಿತ್ಯ ಕೆಲಸ ಮುಗಿಸಿಕೊಂಡು ಬಂದು ಪಾದರಿಯ ಬಂಗಲೆಗೆ ಹೋಗುವುದನ್ನು ನೋಡಿ ಜನ ನಕ್ಕರು. ಏಪ್ರಿಲ್ ತಿಂಗಳಲ್ಲಿ ತಪಸ್ಸಿನ ಕಾಲ ಮುಗಿದ ಕೂಡಲೇ ಆಗಬೇಕಾದ ಬಸ್ತು ಮದುವೆ ಮಳೆಗಾಲದ ಜೂನ್ ತಿಂಗಳಲ್ಲಿ ಆಗಿ ಜನ-
“ದತೋರ್ನ ಕಲೀದಿದ್ದರೆ ಹೀಗೆ..ಪಾಯಸ ಮಳೆನೀರಿನಿಂದ ತೆಳ್ಳಗಾಗಿ ಹೋಗುತ್ತೆ..” ಎಂದು ನಕ್ಕರು.
ಇದು ಎಲ್ಲ ಯುವಕ ಯುವತಿಯರಿಗೂ ಒಂದು ಎಚ್ಚರಿಕೆಯಾಯಿತು.
“ಅದು ಹೌದು” ಎಂದ ಪಾಸ್ಕು ಬಸ್ತುವಿಗಾದ ಅವಸ್ಥೆಯನ್ನು ನೆನಸಿಕೊಂಡು
ಪಾಸ್ಕು ಹಾಗೂ ಜೋಸೆಫ಼ಿನ ಮದುವೆ ಬಗ್ಗೆ ಮಾತನಾಡುವಲ್ಲಿ ಒಂದು ಉದ್ದೇಶವಿತ್ತು. ತಾವಿಬ್ಬರೂ ಮುಂದೆ ಮದುವೆಯಾಗಬೇಕೆಂದು ಇವರು ನಿರ್ಧರಿಸಿದ್ದರು. ಇಬ್ಬರ ನಡುವೆ ಬಹಳ ದಿನಗಳಿಂದ ನಡೆದು ಬಂದ ಸ್ನೇಹ ಅವರಿಗೆ ಗೊತ್ತಿಲ್ಲದೇನೆ ಪ್ರೇಮವಾಗಿ ಪರಿವರ್ತನೆ ಹೊಂದಿತ್ತು. ಚಿಕ್ಕಂದಿನಿಂದಲೂ ಇವರು ಒಟ್ಟಿಗೇನೆ ಆಟವಾಡಿಕೊಂಡು ಬೆಳೆದಿದ್ದರು. ಒಂದೆರಡು ವರ್ಷ ಶಾಲೆಗೂ ಒಟ್ಟಿಗೇನೆ ಹೋಗಿ ಬಂದಿದ್ದರು. ಪಾದರಿ ಗೋನಸ್ವಾಲಿಸ್ ಶಿವಸಾಗರಕ್ಕೆ ಬರುವ ಹೊತ್ತಿಗೆ ಇಲ್ಲಿಯ ಕ್ರೀಸ್ತುವರು ತಮ್ಮ ಹಿರಿಯ ಮಕ್ಕಳನ್ನು ತಮ್ಮ ಜತೆಗೇನೆ ಕೆಲಸಕ್ಕೆ ಕರೆದೊಯ್ಯುವುದನ್ನು ಅಭ್ಯಾಸ ಮಾಡಿದ್ದರು. ಈ ಮಕ್ಕಳು ಕೂಡ ತಂದೆಯ ಕೆಲಸವನ್ನೇ ಕಲಿತು ಅದನ್ನೇ ಮುಂದುವರಿಸುವ ನಿರ್ಧಾರ ಕೂಡ ಮಾಡಿದ್ದರು. ಹೀಗಾಗಿ ಶಾಲೆಗೆ ಹೋಗುವ ಕ್ರೀಸ್ತುವರ ಮಕ್ಕಳು ಯಾರೂ ಆಗ ಇರಲಿಲ್ಲ.
ಪಾದರಿ ಗೋನಸ್ವಾಲಿಸ್ ಬಂದವರೇ ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ ಎಂದಾಗ ಸಿಮೋನ, ಇನಾಸ, ಮರಿಯ, ಪಾಸ್ಕೋಲ, ಬಾಲ್ತಿದಾರ, ಕೈತಾನ ಮೊದಲಾದವರು ತಮ್ಮ ಮಕ್ಕಳಲ್ಲಿ ತೀರಾ ಚಿಕ್ಕವರಾಗಿದ್ದವರನ್ನು ಶಾಲೆಗೆ ಸೇರುವ ವಯಸ್ಸಿನ ಒಳಗೆ ಇದ್ದವರನ್ನು ಶಾಲೆಗೆ ಕಳುಹಿಸಲು ಯತ್ನಿಸಿದರು. ಆದರೆ ಈ ಕ್ರಿಯೆ ಈ ಮಕ್ಕಳ ಪಾಲಿಗೆ ಹೊಸದಾಗಿತ್ತು. ಹಳ್ಳಿಗೆ ಅನತಿ ದೂರದಲ್ಲಿದ್ದ ಮಂಕಾಳೆ ಹಳ್ಳದಲ್ಲಿ ಏಡಿ ಹಿಡಿಯುತ್ತ, ಕಂಬಳಿಕೊಪ್ಪದ ಬ್ಯಾಣದಲ್ಲಿ ಕಾಡು ಗೇರು ಹಣ್ಣು, ಕವಳಿ ಹಣ್ಣು, ನೇರಲೆ ಹಣ್ಣು ಆರಿಸುತ್ತ, ಕೊಪೆಲ ಹಿಂಬದಿಯಲ್ಲಿ ಮರಕೋತಿ ಆಡುತ್ತ, ಮನೆ ಅಂಗಣದಲ್ಲಿ ಕುಂಟಾ ಬಿಲ್ಲೆ, ಜಗಲಿಯ ಮೇಲೆ ಎತಗಲ್ಲಾಟ, ಚೆನ್ನಮಣೆ, ಕವಡೆ ಆಡುತ್ತ ಕಾಲ ಕಳೆಯುತ್ತಿದ್ದ ಈ ಮಕ್ಕಳು ಇಗರ್ಜಿಗೆ ಹೋಗುವುದನ್ನು ರೂಢಿಸಿಕೊಳ್ಳುವುದೇ ಕಷ್ಟವಾಯಿತು. ಇವರು ಶಾಲೆಗೆ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಲಿಲ್ಲ. ಹೋದರೂ ಒಂದು ವರ್ಷ ಆರು ತಿಂಗಳು ಹೋಗಿ ಬಿಟ್ಟರು.
ಕ್ರೀಸ್ತುವರ ಮಕ್ಕಳಲ್ಲಿ ನಿರಂತರವಾಗಿ ಶಾಲೆಗೆ ಹೋದವರೆಂದರೆ ಸಿಮೋನನ ಮೂರನೇ ಮಗ ಫ಼ೆಡ್ಡಿ, ಪಾಸ್ಕೋಲನ ಮಗ ಅಂತೋನಿ, ಬಳ್ಕೂರಕಾರರ ಮಗ ಸಾಮ್ಸನ್, ಇಂತ್ರು ಮಗ ಸಿರಿಲ, ಇವರಲ್ಲೂ ಒಂದಿಬ್ಬರು ಶಾಲೆ ಬಿಟ್ಟರು. ಉಳಿದವರೆಲ್ಲ ತಂದೆಯ ಕೆಲಸ ಕಲಿಯುತ್ತ, ಪೋಲಿ ತಿರುಗುತ್ತ, ಪಾದರಿಗಳ ಕೆಲಸ ಮಾಡುತ್ತ ಉಳಿದರು.
ಪಾಸ್ಕೋಲನ ಮಗಳು ಜೋಸೆಫ಼ಿನ ಪ್ರೈಮರಿ ನಾಲ್ಕನೇ ತರಗತಿ ತನಕ ಓದಿ ಬಿಟ್ಟಳು. ಸುತಾರಿ ಇನಾಸನ ಮಗ ಪಾಸ್ಕು ಮಿಡಲ್ ಸ್ಕೂಲಿಗೆ ಹೋಗಿ ಅಲ್ಲಿ ಟೋಪಿ ಮೇಸ್ಟ್ರಿಗೆ ಬೈದು ಓಡಿ ಬಂದ. ಸ್ವಲ್ಪ ಅಣ್ಣನ ಬ್ಯಾಂಡ್‌ಸೆಟ್ಟಿನೊಂದಿಗೆ ತಾಳ ಬಾರಿಸಲು ಹೋದ. ಅದೂ ಬೇಸರವಾಯಿತು. ಕೊನೆಗೆ ತಂದೆಯ ಉಳಿ, ಗರಗಸ ಹಿಡಿದು ಕೆಲಸ ಕಲಿತ. ಅಷ್ಟು ಹೊತ್ತಿಗೆ ತನ್ನ ಮನೆಯಿಂದ ಎರಡೇ ಮನೆಗಳ ಆಚೆಗಿದ್ದ ಪಾಸ್ಕೋಲನ ಮಗಳು ಜೋಸೆಫ಼ಿನ ದುಂಡು ದುಂಡುಗೆ ಬೆಳೆದಿರುವುದು ಇವನಿಗೆ ಆಕರ್ಷಕವಾಗಿ ಕಂಡಿತು. ಮೊದಲೇ ಪರಿಚಯವಿದ್ದುದರಿಂದ ಮಾತನಾಡುವುದು ಕಷ್ಟವಾಗಲಿಲ್ಲ. ಪ್ರತಿ ಭಾನುವಾರ ಜ್ಞಾನೊಪದೇಶದ ನೆಪದಲ್ಲಿ ಒಂದೆರಡು ಗಂಟೆ ಒಟ್ಟಿಗೇನೆ ಕಳೆಯುತ್ತಿದ್ದರು. ಇಗರ್ಜಿಯಲ್ಲಿ ಪೂಜೆಯ ಸಂದರ್ಭದಲ್ಲಿ ಅವಳು ದಿವ್ಯ ಪ್ರಸಾದ ಸ್ವೀಕರಿಸಲು ಹೊಗುವಾಗ ಈತ ನೋಡುತ್ತಿದ್ದ. ಕೀರ್ತನೆ ಹಾಡುವಾಗ ಅವಳು ಇವನತ್ತ ದೃಷ್ಟಿ ಹಾಯಿಸಿ ನಗುತ್ತಿದ್ದಳು.
ಕ್ರಮೇಣ ಮಾತನಾಡಬೇಕು. ಹತ್ತಿರವಿರಬೇಕು ನೋಡಬೇಕು, ನಗಬೇಕು ಎಂಬ ಮನೋವಾಂಛೆ ಹೆಚ್ಚತೊಡಗಿತು. ಅದಕ್ಕಾಗಿ ಸಮಯ ಸಂದರ್ಭಗಳನ್ನು ಉಪಯೋಗಿಸಿಕೊಳ್ಳುವುದು, ಸೃಷ್ಟಿಸಿಕೊಳ್ಳುವುದು ಪ್ರಾರಂಭವಾಯಿತು.
“ಆ ವಿಷಯ ಹಾಗಿರಲಿ….ಶುಕ್ರವಾರ ಬೆಳಿಗ್ಗೆ ಬೇಗ ಬಂದು ಬಿಡು…ಸಿಮಿತ್ರಿ ಹತ್ತಿರ” ಎಂದ ಪಾಸ್ಕು, ಮದುವೆಯ ವಿಷಯ ಪಕ್ಕಕ್ಕಿರಿಸಿ.
“ಬೆಳಿಗ್ಗೆ ಯಾಕೆ..ಪದ್ರಾಬ ಸಮಾಧಿ ಮಂತ್ರಿಸಲಿಕ್ಕೆ ಬರತಾರಲ್ಲ..ಅವರ ಜತೆ ಬಂದರೆ ಸಾಕಲ್ಲ..” ಎಂದಳು ಜೊಸೆಫ಼ಿನಾ. ಪಾದರಿ ಕೂಡ ಹಾಗೆಯೇ ಹೇಳಿದ್ದರಲ್ಲ.
“ಬೆಳಿಗ್ಗೆ ಬಾ..ನಾವೆಲ್ಲ ಸೇರಿ ಸಿಮಿತ್ರಿ ಕ್ಲೀನ್ ಮಾಡೋಣ..” ಎಂದ ಆತ ಏನೋ ಆಸೆಯಿಂದ.
“ಅದೆಲ್ಲ ನಿಮ್ಮ ಕೆಲಸ..”
“ಮತ್ತೆ ನಿಮ್ಮ ಕೆಲಸ ಏನು? ಪಾದರಿ ಲೋಬ ಹಿಡಿದುಕೊಂಡು ಡ್ಯಾನ್ಸ್ ಮಾಡೋದ?” ಎಂದ ಸಿಡುಕಿನಿಂದ.
ಈ ಹುಡುಗಿಯರು ಅದರಲ್ಲೂ ತನ್ನ ಜೋಸೆಫ಼ಿನ ಪಾದರಿಯ ಭುಜಕ್ಕೆ ಅಂಟಿ ನಿಂತು ನಗುವುದು, ಕೇಕೆ ಹಾಕುವುದು, ಅವನಿಂದ ತಿವಿಸಿಕೊಳ್ಳುವುದು ಇವನಿಗೆ ಹಿಡಿಸುತ್ತಿರಲಿಲ್ಲ. ಮುಖ್ಯವಾಗಿ ಈ ಪಾದರಿಯ ಬಗ್ಗೇನೆ ಅವನಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ.
ಈ ಹಿಂದೆ ಆಗಿ ಹೋದ ತಪಸ್ಸಿನ ಕಾಲದ ಕೊನೆಯ ದಿನಗಳಲ್ಲಿ ಆತ ಕಂಡ ದೃಶ್ಯವನ್ನು ಮರೆಯಲಾರದವನಾಗಿದ್ದ. ಶುಭ ಶುಕ್ರವಾರ ಏಸು ಪ್ರಭುವಿನ ವಧೆಯಾಗಿತ್ತು. ಮತ್ತೆ ಪ್ರಭು ಪುನರುತ್ಥಾನವಾಗುವವರೆಗೆ ಲೋಹದ ಗಂಟೆ ಹೊಡೆಯುವಂತಿರಲಿಲ್ಲ. ಈ ಮೂರು ದಿನ ಬಾರಿಸಲೆಂದೇ ಒಂದು ಮರದ ಗಂಟೆಯನ್ನು ಮಾಡಿ ತನಗೆ ನೀಡಿ-
“ತೊಕೊಂಡು ಹೋಗಿ ಪದ್ರಾಬಾಗೆ ಕೊಡು” ಎಂದು ಹೇಳಿದ್ದ.
ಹಲ್ಲುಗಳಿರುವ ಒಂದು ಹಿಡಿ. ಅದಕ್ಕೆ ತೂಗು ಬಿದ್ದಿರುವ ಒಂದು ಹಲಗೆ ಹಿಡಿಯನ್ನು ಹಿಡಿದು ಬೀಸುತ್ತ ತಿರುಗಿಸಿದರೆ ಈ ಹಲಗೆ ಹಲ್ಲುಗಳಿಗೆ ತಾಗಿ ಕಿರ್ರ ಎಂದು ಸದ್ದು ಮಾಡುತ್ತಿತ್ತು. ಈ ಹಿಂದೆ ಇದ್ದು ಮುರಿದು ಹೋದ ಅದನ್ನು ಅಪ್ಪ ಸರಿ ಮಾಡಿದ್ದ. ಇದನ್ನು ಇಗರ್ಜಿಯ ಸುತ್ತ ತಿರುಗಿಸುತ್ತ ಮೂರು ಸುತ್ತು ಬಂದರೆ ಇಗರ್ಜಿಯ ಆಸುಪಾಸಿನ ಮನೆಗಳಿಗೆ ಕೇಳಿಸಿ ಜನ ಇಗರ್ಜಿಗೆ ಬರುತ್ತಿದ್ದರು.
ಈ ಮರದ ಗಂಟೆ ಹಿಡಿದು ತಾನು ಮೊದಲು ಇಗರ್ಜಿಗೆ ಹೋದೆ. ಇಗರ್ಜಿಯಲ್ಲಿ ಎಲ್ಲ ದೇವರ ಪ್ರತಿಮೆಗಳಿಗೂ ಮುಸುಕು ಹಾಕಲಾಗಿತ್ತು. ಇಗರ್ಜಿಯಲ್ಲಿಯ ಬಣ್ಣದ ತೋರಣಗಳನ್ನು ತೆಗೆಯಲಾಗಿತ್ತು. ಶಿಲುಬೆಗೇರಿಸಿದ ಏಸುವಿನ ಪ್ರತಿಮೆಯ ಎದುರು ಕೆಲವರು ದುಃಖ ವೇದನೆಯಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಪಾದರಿ ಅಲ್ಲಿ ಎಲ್ಲೂ ಕಾಣದ್ದರಿಂದ ತಾನು ಬಂಗಲೆಗೆ ಹೋದೆ.
ಬಂಗಲೆಯ ಬಾಗಿಲು ಅರ್ಧ ತೆರೆದುಕೊಂಡಿತ್ತು. ’ಪದ್ರಾಬ’ ಎಂದು ಕೂಗುತ್ತ ಬಾಗಿಲು ತಳ್ಳಿಕೊಂಡು ಒಳಹೋದೆ. ಪಾದರಿಗಳ ಜೊತೆಗಿದ್ದ ರಜೀನಾ ಗಾಬರಿಯಿಂದ ಎದ್ದು ಒಳಗೆ ಓಡಿ ಹೋದಳು. ಧಡಬಡಿಸಿ ಎದ್ದು ನಿಂತ ಪಾದರಿ-
“..ಯಾರು? ಏನು?” ಎಂದು ಕೇಳಿದರು.
ಮರದ ಗಂಟೆಯನ್ನು ಅವರ ಮುಂದೆ ಇರಿಸಿ ಬಂದೆ.
ತನ್ನ ಮೈ ಬೆವೆತು ಹೋಗಿತ್ತು. ತಾನೂ ಗಾಬರಿಯಾಗಿದ್ದೆ. ಅದೇ ಹೊಸ ಅನುಭವಗಳಿಗೆ ಹಾತೊರೆಯುತ್ತಿದ್ದ ತಾನು ಒಂದು ಕ್ಷಣ ವಿಚಲಿತನಾಗಿದ್ದೆ. ನೇರ ಬಂದವನೇ ಮನೆ ಜಗಲಿಯ ಮೇಲೆ ಕುಳಿತೆ. ಅಂಗಳದಲ್ಲಿ ಶಿಲುಬೆಗೆ ಅಪ್ಪ ಸುಣ್ಣ ಬಳಿಯುತ್ತಿದ್ದ. ಈಸ್ಟರ ಬಂತೆಂದು ಮನೆಗೆಲ್ಲ ಸುಣ್ಣ ಬಣ್ಣ ಆಗುತ್ತಲಿತ್ತು.
“ಕೊಟ್ಟೆಯಾ?” ಎಂದು ಕೇಳಿದ.
“ಹುಂ..” ಎಂದೆ.
ಅಪ್ಪನಿಗೆ ಈ ವಿಷಯ ಹೇಳಬೇಕು ಎನಿಸಿತು, ಹೇಳಲಿಲ್ಲ. ಈ ದೊಡ್ಡವರೇ ಒಂದು ರೀತಿ. ಇದೇ ಪಾದರಿ ತಮ್ಮ ಮನೆ ಅಂಗಳದಲ್ಲಿ ಯ ಶಿಲುಬೆ ದೇವರ ಮುಂದೆ ಕಬ್ಬಿಣದ ಕಾಣಿಕೆ ಡಬ್ಬಿ ತಂದಿರಿಸಿದಾಗ ತಾನು ಅಪ್ಪನ ಎದುರು ಕೂಗಾಡಿದ್ದೆ.
“ಪಾದರಿ ಇದನ್ನ ಯಾಕೆ ಇಲ್ಲಿ ತಂದಿಡಬೇಕು?” ಎಂದು ಕೇಳಿದ್ದೆ.
ವಾರಕ್ಕೊಮ್ಮೆ ಆತ ಬಂದು ಪೆಟ್ಟಿಗೆಯಿಂದ ಹಣ ತೆಗೆದುಕೊಂಡು ಹೋಗುವುದು ತನಗೆ ಸರಿ ಕಂಡಿರಲಿಲ್ಲ. ಶಿಲುಬೆಯ ರಕ್ಷಣೆ ಮಾಡುವವರು, ಅದರ ಮುಂದೆ ಮೇಣದ ಬತ್ತಿ ಹಚ್ಚಿ ಅದಕ್ಕೆ ಸುಣ್ಣ ಬಳಿದು, ಕೆಳಗೆ ಶಗಣಿ ಸಾರಿಸಿ ಬರುವವರಿಗೆ ವ್ಯವಸ್ಥೆ ಮಾಡಿಕೊಡುವವರು ನಾವು. ಹಣ ಮಾತ್ರ ಪಾದರಿಗೆ? ಎಂದು ಕೇಳಿದಾಗ ಅಪ್ಪ-
“..ಪಾದರಿಗಳ ಬಗ್ಗೆ ಹಾಗೆಲ್ಲ ಮಾತನಾಡಬಾರದು ಪಾಸ್ಕು..” ಎಂದಿದ್ದ.
ಈಗಲೂ ಹಾಗೆಯೇ ಆತ ಹೇಳುತ್ತಾನೆ. ಪಾದರಿ ಎಂದರೆ ಅಪ್ಪನಿಗೆ ಮಾತ್ರವಲ್ಲ ಊರ ಎಲ್ಲರಿಗೂ ದೇವರ ಪ್ರತಿರೂಪ. ಅವರ ಬಗ್ಗೆ ಭಿನ್ನವಾಗಿ ವಿಚಾರ ಮಾಡಲು ಅವರು ಸಿದ್ಧರಿಲ್ಲ. ಹೀಗೆಂದೇ ಮರದ ಗಂಟೆಯ ಪ್ರಕರಣವನ್ನು ತಾನು ಯಾರಿಗೂ ಹೇಳಲಿಲ್ಲ. ಆದರೆ ಪಾದರಿಯನ್ನು ನೋಡಿದಾಗಲೆಲ್ಲ ಮೈ ಉರಿಯುತ್ತದೆ. ಈ ಹುಡುಗಿಯರು ಅವನ ಸುತ್ತ ಕುಣಿಯುವುದನ್ನು ಕಂಡಾಗ ಸಿಟ್ಟು ಬರುತ್ತದೆ. ಈ ಹುಡುಗಿಯರಿಗೂ ಏನೂ ಗೊತ್ತಾಗುವುದಿಲ್ಲ. ಈಗ ಜೋಸೆಫ಼ಿನ ಕುಣಿಯುತ್ತಿಲ್ಲವೆ?
“..ಏನೀಗ? ಅವರು ಪಾದರಿ ಅಲ್ವ?” ಎಂದು ತಿರುಗಿ ಕೇಳಿದಳು ಜೋಸೆಫ಼ಿನಾ.
“ಸರಿ..ನಾನು ಬರತೀನಿ..ನಿನಗೆ ಮನಸ್ಸಿದ್ದರೆ ಬೆಳಿಗ್ಗೆ ಬಾ..ನಾನು ಅಲ್ಲಿ ಇರತೀನಿ”.
ಎಂದವನೇ ಪಾಸ್ಕು ಅಲ್ಲಿಂದ ಹೊರಟ. ಅವನಿಗೆ ಜೊಸೆಫ಼ಿನಳ ಮೇಲೆ ಸಿಟ್ಟು ಬಂದಿರಲಿಲ್ಲ. ಸಿಟ್ಟು ಬಂದದ್ದು ಪಾದರಿ ಮಸ್ಕರಿನಾಸರ ಮೇಲೆ.
*
*
*
ಪಾದರಿ ಮಸ್ಕರಿನಾಸರ ಮಾತಿಗೆ ಬೆಲೆ ಕೊಟ್ಟಂತೆ ಎಲ್ಲ ಯುವಕರು ಬೆಳಗಾಗುತ್ತಿರಲು ಸಿಮಿತ್ರಿಯ ಬಳಿ ಹಾಜರಾದರು. ಕತ್ತಿ, ಕುಡುಗೋಲು, ಗುದ್ದಲಿ ಹೊತ್ತುಕೊಂಡೇ ಅವರು ಬಂದರು. ಬಟ್ಲರ್ ಫ಼ರಾಸ್ಕ ಬಂದು ಸಿಮಿತ್ರಿಯಲ್ಲಿ ಏನು ಮಾಡಬೇಕು ಎಂಬುದನ್ನು ಹೇಳಿದ. ಸಿಮಿತ್ರಿಯೊಳಗೆ ಪ್ರವೇಶ ಮಾಡುವಲ್ಲಿ ಬೆಳೆದ ಗಿಡ, ಪೊದೆ ಸವರಿ ಬಿಡಿ ಎಂದ. ನಂತರ ಪ್ರತಿ ಸಮಾಧಿಯ ಬಳಿ ಹೋಗಲು ದಾರಿ ಮಾಡಿ. ಅಲ್ಲೆಲ್ಲ ಹುಲ್ಲು ಕೆತ್ತಿ ಹಾಕಿ. ಪೊದೆ ಬೆಳೆದಿದ್ದರೆ ತೆಗೆಯಿರಿ ಎಂದ.
ಪಾಸ್ಕು ಅವನ ಸ್ನೇಹಿತರು ಕೈಗೆ ಹತ್ಯಾರಗಳನ್ನು ಎತ್ತಿಕೊಂಡರು. ಶರಟು ತೆಗೆದು ಮರದ ರೆಂಬೆಗಳಿಗೆ ತೂಗು ಹಾಕಿ, ಥು ಎಂದು ಅಂಗೈಗಳ ಮೇಲೆ ಉಗಿದುಕೊಂಡು ಸಲಿಕೆ, ಗುದ್ದಲಿ ಹಿಡಿದರು.
ಪಾಸ್ಕು ತಲೆ ಎತ್ತಿ ನೋಡಿದ. ಯಾವ ಹುಡುಗಿಯರೂ ಬರಲಿಲ್ಲ. ಜೋಸೆಫ಼ಿನಾ ಕೂಡ ಬರಲಿಲ್ಲ.
ಜನ ಬಂದು ತಮ್ಮ ತಮ್ಮ ಬಂಧುಗಳು ಸಮಾಧಿಗಳನ್ನು ಸರಿಪಡಿಸತೊಡಗಿದರು. ಅಲ್ಲೂ ಕೂಡ ಹುಲ್ಲು ಕೀಳುವ, ಶಗಣೆ ಸಾರಿಸುವ, ಸುಣ್ಣ ತೆಗೆಯುವ ಕೆಲಸ ಆರಂಭವಾಯಿತು.
ಜೋಸೆಫ಼ಿನಾ ಬರಬಹುದು ಅಂದುಕೊಂಡಿದ್ದ ಪಾಸ್ಕು. ಈವತ್ತು ಇಲ್ಲಿಗೆ ಬರಲು ಯಾರೇ ತರುಣ ತರುಣಿಯರಿಗೆ ಅಡ್ಡಿ ಇರಲಿಲ್ಲ. ಸಿಮಿತ್ರಿಯಲ್ಲಿ ಸಮಾಧಿಗಳನ್ನು ಪಾದರಿ ಮಂತ್ರಿಸುತ್ತಾರೆಂಬುದು, ಸಿಮಿತ್ರಿಯಲ್ಲಿ ಜ್ಞಾನೋಪದೇಶಕ್ಕೆ ಬರುವವರೇ ಶುಚಿ ಮಾಡಬೇಕು ಎಂಬುದು ಎಲ್ಲರಿಗೂ ಗೊತ್ತಿತ್ತು. ನಿರೀಕ್ಷಿಸಿದ ಹಾಗೆ ಕೆಲ ಹುಡುಗಿಯರು ಬಂದು ಅದು ಇದು ಕಿತ್ತು ಹುಡುಗರ ಹತ್ತಿರ ನಿಂತು ಮಾತನಾಡಿಯೂ ಹೋಗಿದ್ದರು. ಆದರೆ ಜೋಸೆಫ಼ಿನಾ ಮಾತ್ರ ಬರಲಿಲ್ಲ.
ಪಾಸ್ಕು ಹಾಗೂ ಜೋಸೆಫ಼ಿನಾ ಬಹಳ ಸಾರಿ ಇಲ್ಲಿಗೆ ಬಂದಿದ್ದರು.
ಸಿಮಿತ್ರಿಯ ಹೊರಗೋಡೆಯ ಮಗ್ಗುಲಲ್ಲಿ ಪೊದೆ ಪೊದೆಯಾಗಿ ಬೆಳೆದಿರುವ ತುಂಬೆ ಗಿಡಗಳಲ್ಲಿ ಅರಳುವ ನೀಲಿ ಹೂವುಗಳಿಂದ ಮಕರಂದ ಹೀರಲು ಕರೀ ದುಂಬಿಗಳು ಹೇರಳವಾಗಿ ಬರುತ್ತಿದ್ದವು. ಇವುಗಳಲ್ಲಿ ಭೀಮ ಎಂಬ ಕಪ್ಪು ದುಂಬಿಯನ್ನು ಹಿಡಿದು ಅದರ ಕಾಲಿಗೆ ದಾರಕಟ್ಟಿ ಹಾರ ಬಿಡುವುದು ಹುಡುಗರ ಒಂದು ಹವ್ಯಾಸವಾಗಿತ್ತು. ಪಾಸ್ಕು ಇಂತಹ ಮೂರು ನಾಲ್ಕು ಭೀಮ ದುಂಬಿಗಳನ್ನು ಬೆಂಕಿಪೆಟ್ಟಿಗೆಯಲ್ಲಿ ಹಾಕಿ ಇರಿಸಿಕೊಳ್ಳುತ್ತಿದ್ದ. ತಿನ್ನಲೆಂದು ಚೆಂಡು ಹೂವಿನ ಸೊಪ್ಪನ್ನು ಕೂಡ ಈ ಪೆಟ್ಟಿಗೆಯಲ್ಲಿ ಹಾಕುತ್ತಿದ್ದ. ಈ ಭೀಮನನ್ನು ಹಿಡಿಯಲು ಆತ ಬಂದಾಗೆಲ್ಲ ಜೋಸೆಫ಼ಿನಾ ಅವನ ಹಿಂದಿರುತ್ತಿದ್ದಳು. ಇಗರ್ಜಿಗೆ ಪೂಜೆಗೆ, ಪಾಪ ನಿವೇದನೆಗೆ, ಇಗರ್ಜಿ ಗುಡಿಸಿ ತೊಳೆಯಲು, ಇಗರ್ಜಿಯ ಪೀಠದ ಮೇಲಿರಿಸುವ ಮೇಣದ ಬತ್ತಿ ಸ್ಟ್ಯಾಂಡು, ಹೂವಿನ ದಾನಿಗಳನ್ನು ಬೆಳಗಲು, ಜ್ಞಾನೋಪದೇಶಕ್ಕೆ ಇಲ್ಲಿ ಬಂದಾಗಲೆಲ್ಲ ಅವರು ದುಂಬಿ ಹಿಡಿಯಲು ಬರುವುದಿತ್ತು. ಇಲ್ಲಿ ಆಡಿ ಓಡಿ ನೆಗೆದು, ಪಾಸ್ಕು ಜೋಸೆಫ಼ಿನಾಳನ್ನು ಹೆದರಿಸಿ ಬೆದರಿಸಿ, ಅರ್ಧ ಗಂಟೆ ಕಳೆದು ಹಿಂದಿರುಗುತ್ತಿದ್ದರು. ಅದನ್ನೆಲ್ಲ ನೆನಸಿಕೊಳ್ಳುತ್ತ ಪಾಸ್ಕು ಕೆಲಸ ಮಾಡಿದ.
ಹನ್ನೆರಡು ಗಂಟೆಗೆ ಇಗರ್ಜಿಯ ಗಂಟೆ ಸದ್ದು ಮಾಡಿತು. ನಿಂತಲ್ಲೆ ಎಲ್ಲರೂ ಶಿಲುಬೆಯ ವಂದನೆ ಮಾಡಿದರು. ಕೆಲವರು ಜಪ ಮಾಡಿದರು.
ಜೋಸೆಫ಼ಿನಾ ಮಾತ್ರ ಬರಲಿಲ್ಲ.
*
*
*
ಸಂಜೆಯಾಗುತ್ತಿರಲು ಸಿಮಿತ್ರಿಯಲ್ಲಿ ಜನ ಸಂದಣಿ ಅಧಿಕವಾಯಿತು. ಸಮಾಧಿಗಳೆಲ್ಲ ಹೂವು ಬಣ್ಣದ ಕಾಗದಗಳಿಂದ ಸಿಂಗರಿಸಲ್ಪಟ್ಟವು. ಮೇಣದ ಬತ್ತಿಗಳನ್ನು ಶಿಲುಬೆಯ ಕೆಳಗೆ ಅಂಟಿಸಿ ಅವುಗಳನ್ನು ಹೊತ್ತಿಸಲು ಪಾದರಿ ಬರಲೆಂದು ಜನ ಕಾದರು. ಬೆಳಿಗ್ಗೆ ಪೂಜೆ ಮುಗಿಸಿಕೊಂಡು ಮನೆಗೆ ಹೋದವರು ಊಟ ಮುಗಿಸಿಕೊಂಡು ಮತ್ತೆ ಸಂಜೆ ಬಂದರು. ಸಮಾಧಿಗಳನ್ನು ಮಂತ್ರಿಸ ಬಯಸುವವರು ಪಾದರಿಗಳ ಬಂಗಲೆಗೆ ಹೋಗಿ ಹಣ ಕಟ್ಟಿ ಚೀಟಿ ತಂದರು. ಚೀಟಿ ಹಿಡಿದುಕೊಂಡು ಸಮಾಧಿಗಳ ಬಳಿ ಕಾದು ನಿಂತಾಗ ಪಾದರಿ ಬಂದರು.
ಅವರ ಹಿಂದೆ ಹುಡುಗಿಯರ ಹಿಂಡು.
ಜತೆಗೆ ಪಿಟೀಲು ಹಿಡಿದ ವಲೇರಿಯನ್ ಡಯಾಸ್, ಪಾಸ್ಕು ಹಾಗೂ ಇತರ ತರುಣರು ಕೂಡ ಈ ತಂಡದಲ್ಲಿ ಸೇರಿಕೊಂಡರು.
ಪಾದರಿ ಮಸ್ಕರಿನಾಸ ಒಂದೊಂದೇ ಸಮಾಧಿಯ ಬಳಿ ನಿಂತು ಚೀಟಿ ಕೈಗೆ ತೆಗೆದುಕೊಂಡು ಸಮಾಧಿಯನ್ನು ಪವಿತ್ರ ಜಲದಿಂದ ಮಂತ್ರಿಸಿದರು. ಸಾಮೂಹಿಕ ಪ್ರಾರ್ಥನೆ ನಡೆಯಿತು. ಕೀರ್ತನೆಗಳನ್ನು ಹಾಡಲಾಯಿತು. ಜನ ಕೂಡ ಎಲ್ಲ ಸಮಾಧಿಗಳ ಬಳಿ ಸೇರಿ ತಾವೂ ಪ್ರಾರ್ಥನೆಯಲ್ಲಿ ಸೇರಿಕೊಂಡರು.
ಆಗೆಲ್ಲ ಪಾಸ್ಕು ಗುಂಪಿನ ನಡುವೆ ನಿಂತು ಪಾದ್ರಿಗೆ ಹತ್ತಿರದಲ್ಲಿದ್ದ ಜೋಸಿಫ಼ಿನಾಳನ್ನು ನೋಡಿದ. ಅವಳೂ ಇವನನ್ನು ನೋಡಿ ನಕ್ಕಳು. ತಲೆಯ ಮೇಲಿನ ಏವ್ ಸರಿಪಡಿಸಿಕೊಂಡು ತುಟಿ ಕಚ್ಚಿಕೊಂಡಳು. ಶಿಲುಬೆಯ ಗುರುತು ಮಾಡುತ್ತ ಕತ್ತು ಹೊರಳಿಸಿದಳು. ಪಾಸ್ಕು ಮುಖ ಮಾತ್ರ ಬಿಗಿದುಕೊಂಡೇ ಇತ್ತು. ಹುಡುಗಿಯರ ಮುಖ ನೋಡುತ್ತ, ನಗುತ್ತ ಪುಟ ನೆಗೆಯುತ್ತ ಸಮಾಧಿಯಿಂದ ಸಮಾಧಿಗೆ ನಡೆದ ಪಾದರಿ ಮಸ್ಕರಿನಾಸರನ್ನೇ ದುರುಗುಟ್ಟಿ ನೋಡುತ್ತ ಆತ ಆ ಗುಂಪನ್ನು ಹಿಂಬಾಲಿಸಿದ.
ಎಲ್ಲ ಸಮಾಧಿಗಳನ್ನು ಮಂತ್ರಿಸಿ ಆಯಿತು. ಕೊನೆಯದಾಗಿ ಒಂದು ಪ್ರಾರ್ಥನೆ ಸಲ್ಲಿಸಲು ಜನ ಸಮಾಧಿಗಳನ್ನು ದಾಟಿಕೊಂಡು ಸಿಮಿತ್ರಿಯ ಪ್ರವೇಶ ದ್ವಾರದ ಬಳಿ ಇದ್ದ ಶಿಲುಬೆಯ ವೇದಿಕೆಯತ್ತ ನಡೆಯಲಾರಂಭಿಸಿದರು. ಆಗ ಕೊಂಚ ನೂಕು ನುಗ್ಗಲಾಯಿತು. ಬೆಳೆದ ಗಿಡಗಳ ನಡುವೆ ದಾರಿ ಮಾಡಿಕೊಳ್ಳುವಾಗ ಒಬ್ಬರಿಗೆ ಒಬ್ಬರು ಅಡ್ಡಿ ಬಂದರು. ಪಾಸ್ಕು ನೇರವಾಗಿ ಪಾದರಿ ಮಸ್ಕರಿನಾಸರ ನಿಲುವಂಗಿಯನ್ನು ತುಳಿದದ್ದರಿಂದ ಅವರು ಶಿರಾಲಿ ಜೂಜನ ಸಮಾಧಿಯ ಮೇಲೆ ಬೋರಲಾಗಿ ಬೀಳಬೇಕಿದ್ದವರು ಮುಗ್ಗರಿಸಿ ಸಮಾಧಿಯ ಶಿಲುಬೆಯನ್ನು ಹಿಡಿದು ಸಾವರಿಸಿಕೊಂಡು ನಿಂತರು. ಅದೇ ತಮ್ಮನ್ನು ದಾಟಿದ ಪಾಸ್ಕುವಿನ ತೋಳು ಹಿಡಿದು ಅವರು.
“ಏಯ್ ಲುಸಿಫ಼ೇರ್…ಕಣ್ಣು ಕಾಣೋದಿಲ್ವ ನಿನಗೆ?” ಎಂದು ಅಬ್ಬರಿಸಿದರು.
ಪಾಸ್ಕು ಇದನ್ನು ನಿರೀಕ್ಷಿಸಿದ್ದನೋ ಇಲ್ಲವೋ ಅಂತು ಲುಸಿಫ಼ೇರ ಎಂದು ಪಾದರಿ ತನ್ನನ್ನು ಕರೆದರಲ್ಲ ಎಂಬುದೇ ಅವನಿಗೆ ಸಾಕಾಯಿತು.
ಮುಂದೆ ಹೋದ ಆತ ತಟ್ಟನೆ ತಿರುಗಿ ನಿಂತನು. ಬೀಳಲಿದ್ದ ಪಾದರಿಯನ್ನು ಹುಡುಗಿಯರೆಲ್ಲ ತಡೆದು ನಿಲ್ಲಿಸಿದ ಹಾಗೆ ಮಸ್ಕರಿನಾಸರ ಸುತ್ತ ಈ ಹುಡುಗಿಯರು ನಿಂತಿರಲು, ಪ್ರಧಾನವಾಗಿ ಜೋಸೆಫ಼ಿನಾ ಮಸ್ಕರಿನಾಸರ ಬಲಗಡೆಯಲ್ಲಿ ಕಾಣಿಸಿಕೊಳ್ಳಲು ಪಾಸ್ಕು ಕೈಚಾಚಿ ಪಾದರಿಗಳ ಎದೆಯ ಮೇಲೆ ಅಂಗೈ ಊರಿ-
“ಲುಸಿಫ಼ೇರ್ ನಾನಲ್ಲ..ನೀನು..”
ಅನ್ನುತ್ತಿರಲು ಪಾದರಿ ಮಸ್ಕರಿನಾಸರ ಪಾಸ್ಕುವಿನ ಕೆನ್ನೆಗೆ ಅಪ್ಪಳಿಸಲು ಕೈ ಎತ್ತುತ್ತಿರಲು ಪಾಸ್ಕು ಕೈ ಬೀಸಿ ಆಯಿತು.
ಇಗರ್ಜಿಯಿಂದ ಸಾಯಂಕಾಲದ ಪ್ರಾರ್ಥನಾ ಗಂಟೆ ಕೇಳಿ ಬರುತ್ತಿರಲು ಇಲ್ಲಿ ಸಿಮಿತ್ರಿಯಲ್ಲಿ ಶಿಲುಬೆಯ ವೇದಿಕೆಯ ಬಳಿ ಶಿವಸಾಗರದ ಕ್ರೈಸ್ತರು, ಬಾಮಣ ಪಂಗಡದವರು.
“..ಜೇಜು ಅಮ್ಕಾಂರಾಕ್”
“ದೇವರೇ ನಮ್ಮನ್ನು ರಕ್ಷಿಸು”
“ಮೈ ಲಾರ್ಡ್ ಸೇವ್ ಅಸ್” ಎಂದು ಚೀರಿ ದಿಙ್ಮೂಢರಾಗಿ ನಿಂತರು.
-೫-
“ನಿಮ್ಮ ನಡುವೆಯೇ ಓರ್ವ ಅಂತಃ ಕ್ರಿಸ್ತ ಹುಟ್ಟಿಕೊಂಡಿದ್ದಾನೆ” ಎಂದು ಪಾದರಿ ಮಸ್ಕರಿನಾಸ ನುಡಿದಾಗ ಇಗರ್ಜಿಯಲ್ಲಿ ಕುಳಿತ ಜನರ ಮೈ ಮೇಲೆ ಹಾವು ಹರಿದಾಡಿತು. ಹಿಂದಿನ ಸಂಜೆ ನಡೆದ ಘಟನೆಗೆ ಎಲ್ಲರೂ ಸಾಕ್ಷಿಗಳಾಗಿದ್ದರು. ಕೆಲಸ ಕಾರ್ಯಗಳಿಗೆ ಹೋದ ಗಂಡಸರಿಗೆ ಮನೆಯಲ್ಲಿ ಹೆಂಗಸರು ಹೀಗೆ ಹೀಗೆ ಎಂದು ಹೇಳಿದರು. ಸಿಮೋನ, ಇನಾಸ, ಪೆದ್ರು, ಪಾಸ್ಕೋಲ, ಕೈತಾನ ಮೊದಲಾದವರಿಗೆ ಪೇಟೆ ಚೌಕದಲ್ಲಿಯೇ ವಿಷಯ ತಿಳಿದುಹೋಯಿತು.
“ಬೋನ ಸಾಹುಕಾರ್ರೆ ಯಾರೋ ನಿಮ್ಮ ಪಾದರೀನ ಹೊಡೆದರಂತೆ ಹೌದೆ?” ಎಂದು ಸೈಕಲ್ ಶಾಪ್ ನಾಗಪ್ಪ ಬೋನನ ಅಂಗಡಿಗೇನೆ ಬಂದು ಕೇಳಿದಾಗ ಬೋನ ಗಾಬರಿಗೊಂಡ. ಗೋಡೆ ಮೇಲಿನ ದೇವರ ಪಟ ಕಿತ್ತು ತಲೆಯ ಮೇಲೆ ಬಿದ್ದಂತಾಗಿ ಆತ ಕೂಡಲೆ ಅಂಗಡಿಯಿಂದ ಹೊರ ಬಂದ. ಬಾಚಿಯನ್ನು ಹೆಗಲ ಮೇಲೆ ಹೇರಿಕೊಂಡು ಅವಸರದಲ್ಲಿ ಹೊರಟ ಬಳ್ಕೂರಕಾರ್ ಕೈತಾನನ ಮಗನನ್ನು ನೋಡಿ, ’ಅರೇ ದುಮಿಂಗಾ? ಯೋ ಹಂಗಾ?” ಎಂದು ಕೂಗಿದ.
ಬಳಿ ಬಂದ ದುಮಿಂಗನಿಗೆ ಮಾತ್ರ ಕೇಳುವ ಹಾಗೆ-
“ಏನದು ಗಲಾಟೆ ಇಗರ್ಜಿ ಹತ್ತಿರ?” ಎಂದು ಕೇಳಿದ.
“ನನಗೂ ಗೊತ್ತಿಲ್ಲ..ಚಾ ಹೋಟೆಲಿನ ಹತ್ತಿರ ಮಾತನಾಡಿ ಕೊಳತಿದ್ರು..ಇನಾಸನ ಮಗ ಪಾಸ್ಕು ಪದ್ರಾಬ ಅವರನ್ನ ಹೊಡೆದನಂತೆ..” ಎಂದ ಆತ.
ಅರ್ಧ ಗಂಟೆ ಮುಂಚಿತವಾಗಿಯೇ ಅಂಗಡಿ ಬಾಗಿಲು ಹಾಕಿ ಕೇರಿಗೆ ಬಂದ ಬೋನ. ಅವನಂತೆಯೇ ಉಳಿದವರೂ ಅಲ್ಲಿ ಸೇರಿದ್ದರು. ಸಿಮೋನ ಆಗಲೆ ಬಂದು ಮನೆಗೆ ತಲುಪಿದ್ದ.
ಏನು ನಡೆಯಿತು ಎಂಬುದು ತಿಳಿಯಿತು. ಕೂಡಲೆ ಹೋಗಿ ಪಾದರಿ ಮಸ್ಕರಿನಾಸರನ್ನು ಮಾತನಾಡಿಸಬೇಕು ಎಂಬ ವಿಚಾರ ಬಂದಾಗ ಇನ್ನರೋ.
“ಅವರು ಪ್ರಾರ್ಥನೆ ಮಾಡಿದ್ದೇ ಹೋಗಿ ಬಂಗಲೆ ಒಳಗೆ ಸೇರಿಕೊಂಡು ಬಾಗಿಲು ಹಾಕಿಕೊಂಡರು” ಎಂದರು.
ಇಡೀ ಕೇರಿಗೇನೆ ಬರ ಸಿಡಿಲು ಬಡಿದಂತೆ ಆಗಿತ್ತು. ಆ ದೃಶ್ಯವನ್ನು ಕಣ್ಣಾರೆ ಕಂಡವರು ತಮ್ಮ ಕಣ್ಣೆದುರು ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಒಂದೆರಡು ನಿಮಿಷ ತೆಗೆದುಕೊಂಡಿದ್ದರು. ಪಾದರಿ ಮುಗ್ಗರಿಸಿದ್ದು, ಶಿಲುಬೆ ಹಿಡಿದು ನಿಂತು ಪಾಸ್ಕುವನ್ನು ಹಿಡಿದುಕೊಂಡದ್ದು, ಏನೋ ಹೇಳಿದ್ದು, ಆತ ತಿರುಗಿದ್ದು, ಮುಂದಿನ ಕ್ಷಣದಲ್ಲಿ ರಪರಪನೆ ಪಾದರಿಗಳ ಕೆನ್ನೆಗೆ ಪಾಸ್ಕು ಹೊಡೆದದ್ದು , ದೇವರ ಲಾರ್ಡು ಎಂದೆಲ್ಲ ಜನ ಕೂಗುತ್ತಿರಲು ಇನಾಸನ ಹೆಂಡತಿ ಮೊನ್ನೆ ಕೂಗುತ್ತ ತನ್ನ ಮಗನ ಮುಖ ಮೈ ಮೇಲೆ ಗುದ್ದುತ್ತ ಆತನನ್ನು ಸಿಮಿತ್ರಿಯ ಹೊರಗೆ ತಳ್ಳಿಕೊಂಡು ಹೋದದ್ದು, ಪಾದರಿಗಳು ವೇದಿಕೆಯನ್ನೇರಿ ಶಿಲುಬೆಯ ಮುಂದೆ ಮೊಣಕಾಲೂರಿದ್ದು ಎಲ್ಲ ಕೆಲವೇ ನಿಮಿಷಗಳಲ್ಲಿ ನಡೆದು ಹೋಗಿತ್ತು.
ಎಲ್ಲ ಜನ ನಾಲಿಗೆ ಒಣಗಿ ಹೋಗಿ, ಉಸಿರಾಟ ನಿಂತಂತಾಗಿ, ಕಲ್ಲು ಕಂಬಗಳ ಹಾಗೆ ನಿಂತಿರಲು ಶಿಲುಬೆಯ ಮುಂದೆ ಮೊಣಕಾಲೂರಿದ ಪಾದರಿ ಮಸ್ಕರಿನಾಸ ಎದ್ದು ನಿಂತು ಹಣೆ, ಎದೆ, ಭುಜಗಳ ಮೇಲೆ ಶಿಲುಬೆಯ ಗುರುತು ಬರೆದುಕೊಂಡು-
“ತಂದೆಯ ಮಗನ ಸ್ಪಿರಿತು ಸಾಂತುವಿನ ಹೆಸರಿನಲ್ಲಿ” ಎಂದಾಗ ಜನ ಎಚ್ಚೆತ್ತಿದ್ದರು. ನಂತರ ನಿಧಾನವಾಗಿ ಪ್ರಾರ್ಥನೆಗೆ ತೊಡಗಿದ್ದರು.
ಪ್ರಾರ್ಥನೆ ಮುಗಿದ ನಂತರ ಪಾದರಿ ಅಲ್ಲಿ ನಿಲ್ಲಲಿಲ್ಲ. ಯಾರ ಹತ್ತಿರವೂ ಮಾತನಾಡಲಿಲ್ಲ. ಎಲ್ಲರಿಗಿಂತಲೂ ಮುಂದೆ ಹೋಗಿ ಬಂಗಲೆ ಸೇರಿಕೊಂಡರು.
ಜನ ಕೇರಿಗೆ ಬಂದರು.
ಹೀಗೆ ಈವರೆಗೆ ಎಲ್ಲಿಯೂ ನಡೆದಿರಲಿಲ್ಲ. ನಡೆಯಲೂ ಸಾಧ್ಯವಿಲ್ಲ. ಅಷ್ಟೇ ಅಲ್ಲ ಹೀಗೆ ನಡೆಯಬಾರದು.
ಏಕೆಂದರೆ ಮನುಷ್ಯರಿಗೆ ಸತ್ಯವನ್ನು ಭೋದಿಸಲು, ದಿವ್ಯ ಜೀವನವನ್ನು ಅವರಿಗೆ ತಂದುಕೊಡಲು, ದೇವರ ಮಕ್ಕಳಾಗಿ ಜೀವಿಸುವುದಕ್ಕೆ ಅವರಿಗೆ ಸಹಾಯ ಮಾಡಲು, ಮಹಾ ಯಾಜಕರಾದ ಏಸು ಪ್ರಭು ಇಗರ್ಜಿ ಮಾತೆಗೆ ಪಾದರಿಗಳನ್ನು ದಯಪಾಲಿಸಿದ್ದಾರೆ. ಈ ಪಾದರಿಗಳು ದೇವರ ಪ್ರತಿನಿಧಿ. ಕ್ರಿಸ್ತ ಪ್ರಭುವಿಗೆ ಸೇವಕರು. ಕ್ರೀಸ್ತುವರಿಗೆ ಹಲವು ಸಂಸ್ಕಾರಗಳನ್ನು ನೀಡುತ್ತ ಅವರ ಬದುಕನ್ನು ಆಧ್ಯಾತ್ಮಿಕ ಜೀವನವನ್ನು ಗಟ್ಟಿಗೊಳಿಸುವವರು ಈ ಪಾದರಿ.
ಈ ಕಾರಣದಿಂದಲೇ ಪಾದರಿಗಳ ಬಗ್ಗೆ ಕ್ರೀಸ್ತುವರಿಗೆ ಅಪಾರ ಗೌರವ. ರಸ್ತೆಯಲ್ಲಿ ಎದುರಾದರೆ ಮಣ್ಣಿನಲ್ಲಿ ಮೊಣಕಾಲೂರಿ ದೇವರ ಆಶೀರ್ವಾದ ಬೇಡುತ್ತಾರೆ. ಅವರಿಗೆ ಗೌರವ ನೀಡುತ್ತಾರೆ. ಯಾವ ಕಾರಣಕ್ಕೂ ಅವರ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಅವರ ಲೋಪ ದೋಷಗಳ ಬಗ್ಗೆ ವ್ಯಂಗ್ಯ ಮಾಡುವುದಿಲ್ಲ. ತಂದೆ ಎಂದು ಅವರನ್ನು ಕರೆಯುತ್ತಾರೆ. ಅಂತಹ ಆತ್ಮದ ತಂದೆಯನ್ನು ನಿನ್ನೆ ಮೊನ್ನೆಯ ಈ ಹುಡುಗ ಹೊಡೆಯುವುದೇ?
ಎಲ್ಲೆಲ್ಲೂ ಇದೇ ಮಾತಾಯಿತು.
ಮರಿಯ ದನಕರು, ಎಮ್ಮೆಗಳಿಗೆ ಹುಲ್ಲು ಹಾಕುವುದನ್ನು ಮರೆತಳು. ಸಾಂತಾಮೋರಿ ಕುದಿ ನೀರಿಗೆ ಅಕ್ಕಿ ಹಾಕುವುದನ್ನು ಮರೆತಳು. ಸಾಂತಾಮೋರಿ ಕುದಿ ನೀರಿಗೆ ಅಕ್ಕಿ ಹಾಕುವುದನ್ನು ಮರೆತಳು. ಪೆದ್ರು ಹೆಂಡತಿ ರಂಗಿ-
“ದೇವರೇ ಹೀಗೂ ಉಂಟ” ಎಂದಳು.
ವೈಜಿಣ್ ಕತ್ರೀನ್-
“ದೇವರೆ ನಾನು ಇದೇನು ಕೇಳುತ್ತಿದ್ದೇನೆ” ಎಂದು ಮೂಗಿನ ಮೇಲೆ ಬೆರಳಿರಿಸಿಕೊಂಡಳು. ಬೆಳಿಗ್ಗೆ ಪೂಜೆಗೆ ಹೋದ ಅವಳು ಸಂಜೆ ಸಿಮಿತ್ರಿಗೆ ಹೋಗಿರಲಿಲ್ಲ. ಈಗೀಗ ಇಗರ್ಜಿಗೆ ಹೋಗಿ ಬರುವುದೇ ಶ್ರಮದಾಯಕವಾಗುತ್ತಿತ್ತು. ಹೀಗೆಂದೇ ಆತ್ಮಗಳಿಗೆ ಶಾಂತಿಕೋರಲು ಅವಳು ಹೋಗಿರಲಿಲ್ಲ. ಈ ಸುದ್ದಿ ಕೇಳಿದ ಮೇಲೆ ಅಲ್ಲಿಗೆ ಹೋಗದಿದ್ದುದು ಒಳ್ಳೆಯದಾಯ್ತು ಅಂದುಕೊಂಡಳು.
ಮನೆಗಳ ದೇವರ ಪೀಠದ ಮುಂದೆ ಮೇಣದ ಬತ್ತಿಗಳು ಉರಿಯಲಿಲ್ಲ. ಹೊರಗೆ ಬಿಟ್ಟ ಕೋಳಿಗಳನ್ನು ಜನ ಗೂಡಿಗೆ ತುಂಬಿ ಗೂಡಿನ ಬಾಗಿಲು ಹಾಕಲಿಲ್ಲ. ಅಡಿಗೆ ಮನೆಯಲ್ಲಿ ಒಲೆಗೆ ಬೆಂಕಿ ಮಾಡಲಿಲ್ಲ. ಸಿಮಿತ್ರಿಯ ಪ್ರಾರ್ಥನೆಗೆ ಹೋಗಿ ಬಂದವರು ಬೇರೆ ಸೀರೆ ಉಡಲಿಲ್ಲ. ಹುಡುಗಿಯರು ಬಟ್ಟೆ ಬದಲಾಯಿಸಲಿಲ್ಲ. ಎಲ್ಲ ಕಡೆ ಇದೇ ಮಾತು ನಡೆಯುತ್ತಿರಲು ಕೆಲಸಕ್ಕೆ ಹೋದ ಗಂಡಸರೂ ಧಾವಿಸಿ ಬಂದರು.
ಇನಾಸ ಕೆಲಸಕ್ಕೆ ಹೋಗುತ್ತಿರಲಿಲ್ಲ. ಭಾರವಾದ ಕೆಲಸಗಳನ್ನು ಮಾಡಲು ಅವನಿಂದ ಆಗುತ್ತಿರಲಿಲ್ಲ. ಇಂದು ಹಬ್ಬ ಬೇರೆ. ದೊಡ್ಡ ಹಬ್ಬ ಅಲ್ಲವಾದರೂ ಸರ್ವ ಆತ್ಮಗಳಿಗೆ ಸದ್ಗತಿ ಕೋರುವ ಹಬ್ಬವೆಂದು ಮನೆಯಲ್ಲಿಯೇ ಇದ್ದ. ಸಂಜೆ ಸಿಮಿತ್ರಿಗೆ ಹೋಗುವುದೂ ಬೇಡವೆನಿಸಿತ್ತು.
ಹೆಂಡತಿ ಮೊನ್ನೆ ಜರಿ ಸೀರೆಯುಟ್ಟು ಅಬ್ಬಲಿಗೆ ಮುಡಿದು ತಾನು ಪ್ರಾರ್ಥನೆಗೆ ಹೋಗುವುದಾಗಿ ಸಂಜ್ಞೆ ಮಾಡಿ ಹೇಳಿ ಹೋದಳು. ಇಗರ್ಜಿ ಗಂಟೆ ಹೊಡೆದ ಕೊಂಚ ಹೊತ್ತಿಗೆ ಮಗನನ್ನು ಹೊಡೆಯುತ್ತ ದಬ್ಬುತ್ತ ತಾನೂ ಕೆಟ್ಟದಾಗಿ ಕಿರುಚುತ್ತ ಬಂದಾಗ ಇನಾಸನಿಗೆ ಅಚ್ಚರಿಯಾಯಿತು.
ಪಾಸ್ಕು ಮುಖ ಮುಚ್ಚಿಕೊಂಡು ಬಂದವನೇ ಮನೆಯೊಳಗೆ ಸೇರಿಕೊಂಡ. ಮೊನ್ನೆ ಜಗಲಿಯ ಮೇಲೆ ಕುಳಿತು ಹೋ ಎಂದಳು.
ಎಲ್ಲದಕ್ಕೂ ಅವಳು ಒಂದೊಂದು ಸಂಕೇತ ಇರಿಸಿಕೊಂಡಿದ್ದಳು. ಇಗರ್ಜಿ ಅನ್ನುವುದಕ್ಕೆ ಶಿಲುಬೆಯ ಗುರುತು. ಪ್ರಾರ್ಥನೆ ಅನ್ನುವುದಕ್ಕೆ ಕೈ ಮುಗಿಯುವುದು. ಪೂಜೆ ಅನ್ನುವುದಕ್ಕೆ ನಾಲಿಗೆ ಹೊರಹಾಕಿ ದಿವ್ಯಪ್ರಸಾದ ಸ್ವೀಕರಿಸುವುದು ಹೀಗೆ, ತನಗೆ ಮಾತ್ರ ಅರ್ಥವಾಗುವ ಸಂಕೇತಗಳು ಇವು. ಪಾದರಿ ಅನ್ನುವುದಕ್ಕೇ ಅವಳು ಎತ್ತರದ ವ್ಯಕ್ತಿ ಎಂದು ಕೈ ಮಾಡಿ ತೋರಿಸಿ ನಂತರ ಕನ್ನಡಕದ ಗುರುತು ಹೇಳುತ್ತಿದ್ದಳು. ಈಗ ಮಾತಿನ ನಡುವೆ ಐದಾರು ಬಾರಿ ಪಾದರಿ ಪಾದರಿ ಎಂದು ಹೇಳಿ ಕೆನ್ನೆಗೆ ಬಡಿದಂತೆ ತೋರಿಸಿ ಒಳಗೆ ಸೇರಿಕೊಂಡ ಮಗನತ್ತ ಬೆರಳು ಮಾಡಿದಳು.
“ಏನು ಇವನು ಪದ್ರಾಬಾಗೆ ಹೊಡೆದನೆ?” ಎಂದು ಇನಾಸ ಬೆರಗಾಗಿ ಬೆದರಿ ಎದ್ದು ನಿಂತು ಗದರಿಸಿ ಕೇಳಿದ.
“ಹೌದು ಹೌದು” ಎಂದು ತಲೆಯಾಡಿಸಿದಳು ಮೊನ್ನೆ. ಅವಳ ಕಣ್ಣುಗಳಿಂದ ನೀರು ಕೂಡ ಧುಮುಕಿತು.
“ಪಾಸ್ಕು..ಏನಾಯ್ತು?” ಎಂದು ಇನಾಸ ಒಳ ಹೋಗಿ ಮಗನ ಎದುರು ನಿಂತು ಅಬ್ಬರಿಸಿದ. ಆತ ಮಾತನಾಡದೆ ಕುಳಿತಾಗ ಏನೋ ಆಗಿದೆ ಎಂಬುದು ಖಚಿತವಾಯ್ತು.
ಸಿಮಿತ್ರಿಯ ಬಳಿ ಏನು ನಡೆಯಿತೆಂಬುದು ವಿವರವಾಗಿ ಇನಾಸನಿಗೆ ತಿಳಿದುಬಂದದ್ದು ಅಲ್ಲಿ ಪ್ರಾರ್ಥನೆ ಮುಗಿಸಿಕೊಂಡು ಕೇರಿಯ ಜನ ತಿರುಗಿ ಬಂದಾಗಲೇ. ಪಾಸ್ಕು ಪಾದರಿಗಳಿಗೆ ಹೊಡೆದನೆಂಬುದಂತೂ ನಿಜವಾಗಿತ್ತು. ಅವರು ಲುಸಿಫ಼ೆರ್ ಎಂದು ಇವನನ್ನು ಬೈದದ್ದು. ಇವನು ಅದಕ್ಕೆ ನೀಡಿದ ಪ್ರತಿಕ್ರಿಯೆ ತಿಳಿಯಿತು. ಪಾಸ್ಕು ಅಷ್ಟು ದೂರ ಹೋಗಬಾರದಿತ್ತು. ಆದರೆ ಇದು ಇಂದೇ ಆಕಾರ ಪಡೆದ ಕ್ರಿಯೆಯಲ್ಲ. ಪಾಸ್ಕು ಯಾವತ್ತಿನಿಂದಲೋ ಪಾದರಿ ಮಸ್ಕರಿನಾಸರ ವಿರುದ್ಧ ಒಂದಲ್ಲಾ ಒಂದು ವಿಷಯ ಹೇಳುತ್ತ ಬಂದಿದ್ದ. ಆ ವಿಷಯ ಇಂದು ಹೀಗೆ ಸ್ಪೋಟಗೊಂಡಿದೆ.
ಇನಾಸ ಹೋಗಿ ಮಗನನ್ನು ಕೇಳಬೇಕೆಂದು ಬಯಸಿದ. ಆದರೆ ಅಷ್ಟುಹೊತ್ತಿಗೆ ಅವನ ಸಿಟ್ಟು ಕ್ರೋಧವೆಲ್ಲ ಇಳಿದು ಹೋಗಿತ್ತು.
ಮಗ ಹೀಗೆ ಮಾಡಬಾರದಿತ್ತು ಎಂದು ಈತ ಪೇಚಾಡುತ್ತ ಕುಳಿತನಲ್ಲದೆ ಮಗನನ್ನು ಇದಕ್ಕಾಗಿ ದಂಡಿಸಬೇಕು. ಏಕೆ ಹೀಗೆ ಮಾಡಿದೆ ಎಂದು ಕೇಳಬೇಕು ಎಂದು ಅವನಿಗೆ ಅನಿಸಲಿಲ್ಲ.
ನಿಧಾನವಾಗಿ ಕತ್ತಲು ಗಾಢವಾಯಿತು. ರಾತ್ರಿಯ ಗಂಟೆಗಳು ಉರುಳಿದವು. ಒಂದು ಬಗೆಯ ವಿಷಾದ ಉಸಿರುಗಟ್ಟಿಸುವ ವಾತಾವರಣ ಇಗರ್ಜಿಯ ಸುತ್ತ ಹಬ್ಬಿಕೊಂಡಿತು.
ಮಾರನೆ ದಿನ ಬೆಳಿಗ್ಗೆ ಪ್ರಾರ್ಥನೆಯ ಗಂಟೆಯಾಯಿತು. ನಂತರ ಸಾದಾ ಪೂಜೆಯ ಗಂಟೆ.
ಭಾನುವಾರದ ವಿಶೇಷ ಪೂಜೆಯ ಗಂಟೆ.
ಘಂಟಾನಾದದಲ್ಲಿ ಕೂಡ ಎಂದಿನ ಲವಲವಿಕೆ ಇಂಪು ಇರಲಿಲ್ಲ. ಜನ ಆತಂಕದಿಂದಲೇ ಇಗರ್ಜಿಗೆ ಹೋದರು. ಬಾಗಿಲಲ್ಲಿಯ ಪವಿತ್ರ ಜಲವನ್ನು ಪ್ರೋಕ್ಷಿಸಿಕೊಂಡು, ಗಂಡಸರು ತಲೆಯ ಮೇಲಿನ ಟೋಪಿ ತೆಗೆದು, ಹೆಂಗಸರು ತಲೆಯುಡುಗೆ ಧರಿಸಿ, ಸೀರೆ ಸೆರಗನ್ನು ಎಳೆದುಕೊಂಡು ಒಳ ಹೋದರು. ಪ್ರಾರ್ಥನೆ, ಕೀರ್ತನೆ, ಪಾದರಿ ಪೀಠಬಾಲಕರ ಜತೆ ಅಲ್ತಾರಿಗೆ ಬಂದು ಪೂಜೆಯನ್ನು ಆರಂಭಿಸಿದರು. ಅವರು ಎಂದಿನಂತಿದ್ದರು. ಅದೇ ಚುರುಕು, ಅದೇ ಮುಖಭಾವ, ಏನೂ ಆಗಿಲ್ಲ ಎಂಬಂತೆ.
ಪೂಜೆಯ ನಡುವೆ ದಿವ್ಯಪ್ರಸಾದದ ಮೇಜಿಗೆ ಒರಗಿ ಅವರು ನಿಂತರು.ಇಡೀ ಇಗರ್ಜಿಯ ತುಂಬ ದೃಷ್ಟಿ ಬೀರಿದರು. ಕೈಲಿದ್ದ ಕರವಸ್ತ್ರವನ್ನು ಮೇಲಂಗಿಯ ತೆರೆದ ತೋಳಿನೊಳಗೆ ತುರುಕಿಸಿದರು. ಆಳವಾಗಿ ಉಸಿರೆಳೆದುಕೊಂಡರು.
“ಮೊಗಚಾ ಕ್ರೀಸ್ತಾಂವನೂಂ” (ಪ್ರೀತಿಯ ಕ್ರೀಸ್ತುವರೆ) ಎಂದರು. ತುಸು ತಡೆದು ಅವರೆಂದರು.-
“ನಿಮ್ಮ ನಡುವೆಯೇ ಓರ್ವ ಅಂತಃಕ್ರಿಸ್ತ ಹುಟ್ಟಿಕೊಂಡಿದ್ದಾನೆ.”
ಹತ್ತಿಯ ಬಿಳಿ ಉಂಡೆಯಂತಿದ್ದ ಮುಗಿಲು ತಟ್ಟನೆ ಕಡು ಕಪ್ಪಾಗಿ, ಭಾರವಾಗಿ ಭರ್ಜಿಯಂತಹ ಒಂದು ಹೊನ್ನ ಶೂಲ ಅದರ ಒಡಲಿಂದ ಚಿಮ್ಮಿ ನೆಲಕ್ಕೆ ಅಪ್ಪಳಿಸಿತು. ಜನ ಬೆಚ್ಚಿದರು.
“ಕ್ರಿಸ್ತನನ್ನು ವಿರೋಧಿಸುವವರು, ಕ್ರಿಸ್ತ ಪ್ರಭುವಿನ ಪ್ರತಿನಿಧಿಗಳನ್ನು ಅವಮಾನಿಸುವವರು, ಪ್ರಭುವಿನ ಬೋಧನೆ ತತ್ವಗಳನ್ನು ಅವಹೇಳನಗೊಳಿಸುವವರು ನಿಮ್ಮ ನಡುವಿನಿಂದಲೇ ಹುಟ್ಟಿ ಬರುತ್ತಾರೆ ಎಂಬ ವಾಕ್ಯ ಪವಿತ್ರ ಗ್ರಂಥದಲ್ಲಿದೆ. ಈ ವಾಕ್ಯ ನಿಜವಾಗಿದೆ. ಯಾವ ತಂದೆಯೂ ರೊಟ್ಟಿಯನ್ನು ಕೇಳಿದ ಮಗನಿಗೆ ಕಲ್ಲನ್ನು, ಮೀನನ್ನು ಕೇಳಿದ ಮಗನಿಗೆ ಹಾವನ್ನು ಕೊಡುವುದಿಲ್ಲ. ನಿಮ್ಮೆಲ್ಲರನ್ನು ಪ್ರೀತಿ, ಮಮತೆ ದೈವ ಭಕ್ತಿಯನ್ನು ನೀಡಿ ಸಾಕುತ್ತಿರುವ ನಿಮ್ಮ ತಂದೆಗೆ ನೀವು ಏನು ಕೊಟ್ಟಿರುವಿರಿ ಯೋಚನೆ ಮಾಡಿ..”
ಪಾದರಿ ಮಸ್ಕರಿನಾಸರು ಕ್ಷಣ ಕ್ಷಣಕ್ಕೂ ಕೋಪಿಷ್ಟರಾಗುತ್ತ ಅಕ್ಕಪಕ್ಕದಲ್ಲಿ ಬೆಳೆದಿರುವ ಹುಲ್ಲು ಪೊದೆಗಳನ್ನು ತನ್ನ ಒಡಲೊಳಗೆ ಸೆಳೆದುಕೊಂಡು ಹೊತ್ತಿ ಉರಿಯುವ ಕಾಡು ಗಿಚ್ಚಿನಂತೆ ಚಟಪಟಿಸುತ್ತ ಮಾತನಾಡಿದರು. ಸಾಮಾನ್ಯವಾಗಿ ಬೈಬಲಿನ ಒಂದು ಪ್ರಸಂಗವನ್ನು ಆರಿಸಿಕೊಂಡು ಅದನ್ನೇ ವಿಸ್ತರಿಸಿ, ವಿಶ್ಲೇಷಿಸಿ ಜನತೆಗೆ ಸಂದೇಶ ನೀಡುವ ಕೆಲಸವನ್ನು ಅಂದು ಮಾಡದೆ ಕ್ರಿಸ್ತ ವಿರೋಧಿ ಧೋರಣೆಯ ಕುರಿತೇ ಸ್ವಲ್ಪ ಹೊತ್ತು ಮಾತನಾಡಿ ಕೊನೆಯಲ್ಲಿ.
“ಪ್ರೀತಿಯ ಕ್ರೀಸ್ತುವರೆ..ನಿಮ್ಮ ಕಣ್ಣೆದುರು ಒಂದು ಅಕೃತ್ಯ ನಡೆದಿದೆ…ಈ ಬಗ್ಗೆ ನೀವು ಏನು ತೀರ್ಮಾನ ಕೈ ಕೊಳ್ಳುತ್ತೀರಿ ಎಂಬುದನ್ನು ನಾನು ಕಾದು ನೋಡುತ್ತೇನೆ..ಧರ್ಮ ಸಮ್ಮತವಾದ ಒಂದು ತೀರ್ಮಾನವನ್ನು ಕೈಕೊಳ್ಳಲು ಕ್ರಿಸ್ತ ಪ್ರಭುವು ನಿಮಗೆ ಮನಸ್ಸನ್ನು ಶಕ್ತಿಯನ್ನು ನೀಡಲೆಂದು ನಾನು ಅವನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ..” ಎಂದು ತಮ್ಮ ಶೆರಮಾಂವಂ ಮುಗಿಸಿದರು.
ಪಾದರಿ ಈ ಎಲ್ಲ ಮಾತುಗಳನ್ನು ಆಡುವುದರ ಮೂಲಕ ಜನರ ಹೆಗಲ ಮೇಲೇನೆ ಒಂದು ಹೊರೆ ಹೊರಿಸಿದ್ದರು. ಸುತಾರಿ ಇನಾಸನ ಮಗ ಪಾಸ್ಕುವಿನಿಂದ ಪಾದರಿಗಳ ಅವಮಾನವಂತೂ ಆಗಿತ್ತು. ಅವರಿಗೆ ನೋವಾಗಿತ್ತು. ಇದರ ಪರಿಹಾರ ಹೇಗೆ ಎಂಬುದನ್ನು ಜನ ನಿರ್ಧರಿಸಬೇಕಿತ್ತು. ಇಗರ್ಜಿಯಿಂದ ಹೊರ ಬಂದ ಜನ ಅಲ್ಲಲ್ಲಿ ನಿಂತು ಇದೇ ವಿಷಯ ಮಾತನಾಡಿದರು. ಪಾಸ್ಕೋಲ, ಕೈತಾನ, ಬಾಲ್ತಿದಾರ ಮೊದಲಾದವರು ಗುರ್ಕಾರ ಸಿಮೋನನನ್ನು ಹುಡುಕಿಕೊಂಡು ಬಂದರು. ಮಿರೋಣ ವಲೇರಿಯನ ಜಾನಡಯಾಸ್ ವಿನ್ಸೆಂಟ್, ಜಾನಿ ಸಂತ ಜೋಸೆಫ಼ರ ಮಂಟಪಕ್ಕೆ ಅನತಿ ದೂರದಲ್ಲಿ ಒಂದೆಡೆ ನಿಂತರು. ಗುಡ್ ಮಾರ್ನಿಂಗ್ ಹೇಳುತ್ತ ಹೋಗಿ ಇವರ ಜತೆ ಸೇರಿಕೊಂಡರು.
ಈ ಬಗ್ಗೆ ಏನು ಮಾಡುವುದು ಎಂದು ಪಾದರಿ ಮಸ್ಕರಿನಾಸರನ್ನು ಕೇಳುವಂತಿರಲಿಲ್ಲ. ಅವರು ಈಗ ವಿಷಯವನ್ನು ಜನರ ನಿರ್ಧಾರಕ್ಕೆ ಬಿಟ್ಟು ತಾವು ದೂರ ಸರಿದಿದ್ದರು. ಎಲ್ಲ ಜನ ಗುರ್ಕಾರನ ಮುಖ ನೋಡುವ ಪರಿಸ್ಥಿತಿ ಉದ್ಭವವಾಗಿತ್ತು.
ನಿನ್ನೆ ರಾತ್ರಿಯೇ ಗುರ್ಕಾರ ಸಿಮೋನ ಇನಾಸನ ಮನೆಗೆ ಹೋಗಿದ್ದ.
“ಪಾಸ್ಕು ಎಂತಹ ಕೆಲಸ ಮಾಡಿಬಿಟ್ಟೆಯಲ್ಲ” ಎಂದು ಪಾಸ್ಕುವನ್ನು ಎದುರು ಕೂಡಿಸಿಕೊಂಡು ಸಿಮೋನ ಗೋಳಾಡಿದ್ದ.
ಈ ಪಾದರಿಯ ಬಗ್ಗೆ ತನಗಾಗಲಿ, ಊರಿನಲ್ಲಿ ಇತರ ಯಾರಿಗೇ ಆಗಲಿ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಹೀಗೆಂದು ತಮ್ಮ ಅಭಿಪ್ರಾಯವನ್ನು ಅಸಹನೆಯಿಂದ ಹೀಗೆ ವ್ಯಕ್ತಪಡಿಸಬೇಕೆಂದು ಯಾರೂ ಬಯಸಿರಲಿಲ್ಲ. ಪಾದರಿ ಏನೆಂದರೂ ದೇವರ ಪ್ರತಿನಿಧಿ. ತಮಗೂ ದೇವರಿಗೂ ನಡುವೆ ಸಂಬಂಧ ಸೇತುವೆಯಾಗಿ ನಿಂತಿರುವಾತ. ಆತನ ಮಾತು ಕೇಳಿಕೊಂಡು, ಹಿಂಸೆಯಾದರೆ ಸಹಿಸಿಕೊಂಡು ಹೋಗುವುದೇ ಸೂಕ್ತ ಎಂದು ಎಲ್ಲ ಜನ ನಿರ್ಧರಿಸಿದ್ದರು. ಊರಿನಲ್ಲಿ ಈ ಪಾದರಿ ಬಂದ ನಂತರ ಕಿರಿ ಕಿರಿಯುಂಟು ಮಾಡುವ ಹಲವು ಪ್ರಸಂಗಗಳು ನಡೆದಿದ್ದರೂ ಜನ ಅವುಗಳನ್ನು ನುಂಗಿಕೊಂಡಿದ್ದರು. ಆದರೂ ಈ ಹುಡುಗ ಹೀಗೆ ಮಾಡಿಬಿಟ್ಟನಲ್ಲ ಎಂದು ಸಿಮೋನ ಪೇಚಾಡಿದ.
ಪಾಸ್ಕು ತಾನು ತಪ್ಪು ಮಾಡಿಲ್ಲ, ತಪ್ಪು ಏನಿದ್ದರೂ ಪಾದರಿಗಳದ್ದು ಎಂದು ಹೇಳಲು ಬಾಯಿ ತೆರೆದನಾದರೂ ಸಿಮೋನ ಅದಕ್ಕೆ ಆಸ್ಪದ ಕೊಡಲಿಲ್ಲ.
“ನೀನು ದುಡುಕಬಾರದಿತ್ತು..ಅವರು ಲುಸಿಫ಼ೇರ ಅಂದರು..ಒಂದು ಏಟು ಹೊಡೆದರು. ಏನಾಯಿತು? ನಮ್ಮ ಆತ್ಮದ ತಂದೆ ಅಧ್ಯಾತ್ಮದ ಗುರು..ಅವರಿಗೆ ತಗ್ಗಿ ಬಗ್ಗಿ ನಾವು ನಡೆಯಬೇಕಲ್ಲವೇ? ” ಎಂದು ಪಾಸ್ಕುಗೇನೆ ಉಪದೇಶ ನೀಡಿದ.
“ನಿನ್ನ ಮನೆಗೆ ಎಂತಹ ಗೌರವ ಇದೆಯಲ್ಲ ಊರಿನಲ್ಲಿ..” ಎಂದು ಬೇರೆ ಮನೆಯ ಹಿರಿಮೆ ಬಗ್ಗೆ ಹೇಳಿದ.
ಸುತಾರಿ ಇನಾಸನ ಮನೆ ಈಗ ಒಂದು ಪವಿತ್ರ ತಾಣವಾಗಿತ್ತು. ತೇರ್ಸಗೆ ಬರುವವರು, ಮೇಣದ ಬತ್ತಿ ಕೊಡಲು ಬರುವವರು, ರಸ್ತೆಯ ಮೇಲೆ ಹೋಗುವಾಗ ನಿಂತು ಶಿಲುಬೆಯ ಗುರುತು ಮಾಡುವವರು ಹೆಚ್ಚಾಗಿದ್ದಾರು. ಖುರ್ಸಾ ಘರ್(ಶಿಲುಬೆಯ ಮನೆ) ಎಂಬ ಆಡ್ಡ ಹೆಸರು ಬಿದ್ದಿತ್ತು ಈ ಮನೆಗೆ. ಈ ಒಂದು ಪ್ರಕರಣದಿಂದಾಗಿ ಮನೆಯ ಹೆಸರೇ ಹಾಳಾಯಿತಲ್ಲ ಎಂದು ಆತ ವಿವರವಾಗಿ ಹೇಳಿದ.
“ಏನು ಮಾಡೋಣ ಇನಾಸ?” ಎಂದು ಇನಾಸನ ಮುಖ ನೋಡಿದ…
ತಾನಾಯಿತು ತನ್ನ ಕೆಲಸವಾಯಿತು ಮನೆ ಅಂಗಳದ ಶಿಲುಬೆಯಾಯಿತು ಎಂದು ಒಂದು ರೀತಿಯ ಸಂತನ ಬದುಕನ್ನು ಸಾಗಿಸಿದ್ದ ಇನಾಸ. ಅವನ ಹೆಂಡತಿ ಮೂಕಿಯಾಗಿದ್ದರಿಂದಲೋ ಏನೋ ಕೇರಿಯ ಉಸಾಬರಿಗೂ ಈಗೀಗ ಹೋಗುತ್ತಿರಲಿಲ್ಲ. ಹೆಣ್ಣು ಮಕ್ಕಳು ಕೂಡ ಅಷ್ಟೆಯೇ ಊರ ಅಡಿಕೆ ಮಂಡಿಯಲ್ಲಿ ಅಡಕೆ ಆರಿಸುವ ಕೆಲಸ ಮಾಡಿಕೊಂಡು ತನಗೆ ತಮಗೆ ಏನು ಬೇಕೋ ಅದನ್ನೆಲ್ಲ ಮಾಡಿಕೊಂಡಿದ್ದರು. ಇಬ್ಬರಿಗೂ ನೆಂಟಸ್ತಿಕೆಯಾಗಿತ್ತು. ಕೊನೆಯವಳಾದ ಪಾವೇಲಿನ ಕೂಡ ಒಳ್ಳೆಯ ಹುಡುಗಿಯೇ. ಇನಾಸನ ಹಿರಿಯ ಮಗ ಬ್ಯಾಂಡ್ ಸೆಟ್ ಇರಿಸಿಕೊಂಡು ತನ್ನ ಜೀವನಕ್ಕೊಂದು ದಾರಿ ಕಲ್ಪಿಸಿಕೊಂಡಿದ್ದ. ಈ ಪಾಸ್ಕು ಕೂಡ ತಂದೆಯ ಕೆಲಸವನ್ನು ಮುಂದುವರೆಸಿಕೊಂಡು ಒಳ್ಳೆಯ ಹೆಸರು ಮಾಡಿದ್ದ. ಈಗ ಇದೊಂದು ಕಳಂಕ ಅಂಟಿಕೊಂಡಿತೆ?
ಇನಾಸ ಕಣ್ಣೊರೆಸಿಕೊಂಡು ಸಿಮೋನನನ್ನೇ ಕೇಳಿದ.
“ಏನು ಮಾಡೋಣ ಹೇಳು ಸಿಮೋನ. ಮಗ ಮಾಡಿದ ತಪ್ಪಿಗೆ ಶಿಲುಬೆಯ ಮೇಲೆ ಮೊಳೆ ಹೊಡೆಸಿಕೋ ಅಂದರೂ ನಾನು ಸಿದ್ಧ..” ಎಂದ ಆತ ನೋವನ್ನು ತಡೆದುಕೊಳ್ಳಲಾರದೆ.
“ನೋಡೋಣ..ನೋಡೋಣ..” ಎಂದು ಸಿಮೋನ ರಾತ್ರಿ ಇನಾಸನ ಮನೆಯಿಂದ ತಿರುಗಿಬಂದಿದ್ದ.
ಈಗ ಭಾನುವಾರದ ಬೆಳಿಗ್ಗೆ ಪೂಜೆ ಮುಗಿದ ನಂತರ ಸಿಮೋನ ಹತ್ತು ಜನರಿಗೆ ಉತ್ತರ ಕೊಡಬೇಕಾಯಿತು. ಪಾಸ್ಕೋಲ-
“ಏನಾದರೊಂದು ತೀರ್ಮಾನ ಮಾಡಿ” ಎಂದ.
ಸಿಮೋನ ಸುತ್ತಲೂ ಸೂಕ್ಷ್ಮವಾಗಿ ಗಮನಹರಿಸಿದ. ಇಗರ್ಜಿಗೆ ಬಂದ ಎಲ್ಲ ಗಂಡಸರೂ ಅಲ್ಲಲ್ಲಿ ಗುಂಪುಗೂಡಿ ನಿಂತಿದ್ದರು. ಯುವಕರೂ ಇದ್ದರು. ಹೆಂಗಸರು, ಮಕ್ಕಳು, ಯುವತಿಯರು ನಿಧಾನವಾಗಿ ಕರಗಿ ಹೋಗಲಾರಂಭಿಸಿದರು. ಚಮಾದೋರ ಇಂತ್ರು ಗುರ್ಕಾರನ ಬಾಯಿಯಿಂದ ಬರುವ ಮಾತಿಗಾಗಿ ಎಂಬಂತೆ ಅವನ ಹತ್ತಿರವೇ ನಿಂತಿದ್ದ.
ಸಿಮೋನ, ಪಾತ್ರೋಲ, ಬೋನ, ಬಾಲ್ತಿದಾರ, ಕೈತಾನ ಎಂದು ಬಳಿ ಇದ್ದ ಕೆಲ ಹಿರಿಯರ ಬಳಿ ಸಮಾಲೋಚನೆ ನಡೆಸಿದ.
ಮಧ್ಯಾಹ್ನ ಮೂರು ಗಂಟೆಗೆ ಇಗರ್ಜಿಯಲ್ಲಿ ಒಂದು ಸಭೆ ಕರಿಯಬೇಕೆಂಬ ನಿರ್ಧಾರವಾಯಿತು. ಅಂತೆಯೇ ಇಂತ್ರುಗೆ ಎಲ್ಲರಿಗೂ ವಿಷಯ ತಿಳಿಸಲು ಹೇಳಲಾಯಿತು. ಏನೋ ಒಂದು ತೀರ್ಮಾನವಾಗಬಹುದು ಎಂಬ ಆಶಯದೊಂದಿಗೆ ಇಗರ್ಜಿಗೆ ಬಂದು ಉಪವಾಸವಿದ್ದು ದಿವ್ಯ ಪ್ರಸಾದ ಸ್ವೀಕರಿಸಿದ ಜನ ಉಪವಾಸ ಮುರಿಯಲು ಮನೆಗಳತ್ತ ತಿರುಗಿದರು. ಆದರೆ ಯಾರಲ್ಲೂ ಉತ್ಸಾಹವಿರಲಿಲ್ಲ.
*****
ಮುಂದುವರೆಯುವುದು
ಕೀಲಿಕರಣ ದೋಷ ತಿದ್ದುಪಡಿ: ನಸೀರ್ ಅಹಮದ್, ರಾಮದಾಸ್ ಪೈ