ಆ ಪಟ್ಟಣ ವರದಾ ನದಿಯ ದಂಡೆಯ ಮೇಲಿರುವುದು ಹೊರಗಿನವರಿಗಷ್ಟೇ ಏಕೆ ಆ ಊರಿನ ಜನರಿಗೇ ಗೊತ್ತಿರಲಿಲ್ಲ. ಆ ನದಿಯೇ ಅಷ್ಟು ಅಪರಿಚಿತವೆಂದಮೇಲೆ, ಅದರ ದಂಡೆಯ ಮೇಲಿದ್ದ ಶನೀಶ್ವರನ ಗುಡಿಯು ಪ್ರಸಿದ್ಧವಾಗುವುದು ದೂರದ ಮಾತಾಯಿತು. ಗುಡಿಯ ಒಂದು ಪಕ್ಕದಲ್ಲಿ ವಿಶಾಲವಾದ ಅರಳೀಮರ; ಇನ್ನೊಂದು ಪಕ್ಕದಲ್ಲಿ ಅರಳೀಕಟ್ಟೆಗೆ ಹೊಂದಿಕೊಂಡಂತೆಯೇ ನಾಡ ಹೆಂಚಿನ ಪುಟ್ಟ ಮನೆ. ಒಂದು ಕಾಲದಲ್ಲಿ, ಅದರ ಹೊರಜಗುಲಿಯಲ್ಲಿ ಕುಲುಮೆಯೊಂದು ಸದಾ ಉಸುರುತ್ತಿತ್ತು. ಇನ್ನೊಂದು ಮೂಲೆಯಲ್ಲಿ ಗೋಣಿ ತಾಟಿನ ಮೇಲೆ, ಉಳಿ, ಚಾಣ, ಬೈರಿಗೆ, ಸುತ್ತಿಗೆ…ಇವೆಲ್ಲವುಗಳ ಒಡೆಯನೇ, ವಿಠಲಾಚಾರಿ. ಅವನ ಖಾಸಗೀ ಜೀವನದ ಬಗ್ಗೆ ಆ ಊರಿನ ಯಾರಿಗೂ ಏನೂ ನಿಖರವಾಗಿ ಗೊತ್ತಿಲ್ಲ; ಇನ್ನು, ಅವನ ಹೆಂಡತಿ ಮಕ್ಕಳ ವಿವರಗಳನ್ನು ಯಾರೂ ‘ಖಾಸಗಿ‘ಯೆಂದು ಪರಿಗಣಿಸಲಾರರು-ಅಲ್ಲವೆ? ಅವನಿಗೆ ಮದುವೆಯಾದ ಶುರುವಿನಲ್ಲೇ ಅವನ ಹೆಂಡತಿ ಅದ್ಯಾರದ್ದೋ ಜೊತೆ ಓಡಿಹೋಗಿದ್ದಳು. ಆದ್ದರಿಂದ ಅವನು ಅತ್ತ ಸಂಸಾರಿಯೂ ಅಲ್ಲ-ಇತ್ತ ಬ್ರಹ್ಮಚಾರಿಯೂ ಅಲ್ಲ.
ವಿಠಲಾಚಾರಿಯ ಹಲವು-ಹತ್ತು ಕಸುಬುಗಳಲ್ಲಿ ಪ್ರಮುಖವಾದುದೆಂದರೆ, ಮರದ ಕೆಲಸ. ಶನೀಶ್ವರನ ಗುಡಿಯ ಹಿಂಭಾಗದ ಅಗ್ರಹಾರದ ಮನೆ-ಮನೆಗಳಲ್ಲಿ, ಅವನ ಕುಶಲ ಕುಸುರಿಗೆ ಸಾಕ್ಷಿಯಾಗಿ, ಕೆತ್ತನೆಯ ಕಂಬಗಳು, ವಾಸ್ತುಬಾಗಿಲು, ದೇವರ ಮಂಟಪಗಳು ವರ್ಷಾನುವರ್ಷಗಳಿಂದ ಉಳಿದುಕೊಂಡು ಬಂದಿವೆ. ಇದೂ ಅಲ್ಲದೆ, ಅವನು ಕಂಚು, ತಾಮ್ರ, ಹಿತ್ತಾಳೆ, ಬೆಳ್ಳಿ,ಬಂಗಾರ ಪಂಚಲೋಹದ ದೇವರ ಮೂರ್ತಿಗಳನ್ನೂ, ಘಂಟೆ, ಆರತಿ, ಕೌಳಿಗೆ-ಉದ್ಧರಣೆ ಮುಂತಾದ ಪೂಜಾ ಸಾಮಗ್ರಿಗಳನ್ನೂ ತಯಾರುಮಾಡಿ ಕೊಡುತ್ತಿದ್ದ. ಅವನು ತನ್ನ ಶ್ರದ್ಧಾ-ಭಕ್ತಿಗಳನ್ನೇ ಆವಾಹನೆ ಮಾಡಿ, ಎರಕ ಹೊಯ್ಯುತ್ತಿದ್ದನೋ ಏನೊ ಆ ಮೂರ್ತಿಗಳಂತೂ ಅಷ್ಟೊಂದು ಸುಂದರವಾಗಿ ಜೀವತುಂಬಿಕೊಂಡಿರುತ್ತಿದ್ದವು!
ಆದರೆ, ಕಾಲ ಬದಲಾದಂತೆ, ಜನರ ಆಸಕ್ತಿಯೂ ಬದಲಾಗಿ, ವಿಠಲಾಚಾರಿಯ ಕುಸುರಿ ಕೆಲಸಗಳಿಗೆ ಬೇಡಿಕೆ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆಯಾಗಿ, ಉಳಿ-ಚಾಣಗಳು ತುಕ್ಕು ಹಿಡಿದವು; ಎರಕದ ಅಚ್ಚುಗಳು ಮುಕ್ಕಾದವು; ಕುಲುಮೆ-ಅಗ್ಗಿಷ್ಟಿಕೆಗಳು ತಣ್ಣಗಾಗಿಬಿಟ್ಟವು. ಆದ್ದರಿಂದ ಅವನ ನಿತ್ಯಕರ್ಮ
ಗಳಲ್ಲೂ ಬದಲಾವಣೆಗಳಾದವು. ಅವನು ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ‘ದೇಶಾವರ‘ ಮಾಡತೊಡಗಿದ. ಜನರು ಅಷ್ಟೊ-ಇಷ್ಟೊ ಹಣವನ್ನೋ, ಅಡಿಕೆಯನ್ನೋ ಕೊಡುತ್ತಿದ್ದರು. ಇದು ಅವನಿಗೆ ಶಾಖಾಯ ಲವಣಾಯ ಸಾಕಾಗುತ್ತಿತ್ತು. ಕೊನೆ-ಕೊನೆಗೆ ಈ ತಿರುಪೆಯ ಬದುಕೂ ಕಷ್ಟವೆನ್ನಿಸಿತೋ ಏನೊ ಬಹಳಷ್ಟು ಹೊತ್ತು, ಶನೀಶ್ವರನ ಗುಡಿಯಲ್ಲಿಯೇ ಕಳೆಯುತ್ತಿದ್ದ. ದಿನವೂ ಮುಂಜಾನೆ ಗುಡಿಯ ಸುತ್ತ ಕಸ ಹೊಡೆಯುತ್ತಿದ್ದ. ಹತ್ತಿಪ್ಪತ್ತು ಮೆಟ್ಟಿಲುಗಳನ್ನು ಇಳಿದು, ಕೆಳಗೆ ಹರಿಯತ್ತಿದ್ದ ವರದಾ ನದಿಯಿಂದ ನೀರನ್ನು ತಂದು ಗುಡಿಯ ಅಂಗಳವನ್ನೆಲ್ಲಾ ತೊಳೆಯುತ್ತಿದ್ದ. ಎದುರಿಗಿನ ಕರವೀರದ ಗಿಡಗಳಿಂದ ಹೂವುಗಳನ್ನು ಕೊಯ್ದು ಕಟ್ಟೆಯ ಮೇಲೆಲ್ಲಾ ಇಡುತ್ತಿದ್ದ. ಪೂಜೆಗೆಂದು, ಹರಿಭಟ್ಟರು ಬಂದು, ಗುಡಿಯ ಕೀಲಿಯನ್ನು ತೆಗೆಯುತ್ತಿದ್ದಂತೆಯೇ, ವಿಠಲಾಚಾರಿಯು, ಗುಡಿಯ ಒಳಗೆಲ್ಲಾ ಹರಡಿಕೊಂಡಿರುತ್ತಿದ್ದ ಇಲಿ-ಬಾವಲಿಗಳ ಹಿಕ್ಕಿಗಳನ್ನು ಗುಡಿಸಿ, ಶುದ್ಧಗೊಳಿಸುತ್ತಿದ್ದ. ಗರ್ಭಗುಡಿಯೊಂದನ್ನು ಮಾತ್ರ ಹರಿಭಟ್ಟರು ತಮ್ಮ ಪೂಜೆಗೂ ಮುನ್ನ ಸ್ವಚ್ಛ ಗೊಳಿಸಿಕೊಂಡರೆ ಸಾಕಿತ್ತು. ಅವರು ಪೂಜೆಯನ್ನು ಮುಗಿಸಿ ಹೋಗುವಾಗ ಇವನ ಕೈಗೆ ಹಾಕುತ್ತಿದ್ದ ಒಂದೆರೆಡು ಬಾಳೆಹಣ್ಣು ಮುಂತಾದ ಪ್ರಸಾದವೇ ಅವನ ಮುಂಜಾವಿನ ಉಪಾಹಾರ. ಹೀಗೆ ಇನ್ನೂ ಕೆಲವು ವರ್ಷಗಳು ಕಳೆದವು. ವಿಠಲಾಚಾರಿಗೆ ಈ ಊರೇ ಬೇಸರವಾಯಿತೇನೊ-ಇದ್ದಕ್ಕಿದ್ದಂತೆ, ನಾಪತ್ತೆಯಾಗಿಬಿಟ್ಟ. ಅವನು ಹೀಗೆ ಊರು ಬಿಟ್ಟು ಹೋಗುವುದು ಇದೇ ಮೊದಲ ಬಾರಿಯೇನೂ ಆಗಿರಲಿಲ್ಲ. ಕೊಲ್ಲೂರಿಗೊ, ಕೊಡಚಾದ್ರಿಗೋ, ಹೋದನೆಂದರೆ, ತಿಂಗಳುಗಟ್ಟಲೆ ಬರುತ್ತಿರಲಿಲ್ಲ. ಒಂದು ವರ್ಷವಾಯಿತು, ಎರಡಾಯಿತು, ನಾಲ್ಕು, ಎಂಟು, ಹತ್ತು ವರ್ಷಗಳಾದವು. ವಿಠಲಾಚಾರಿ ಬರಲೇ ಇಲ್ಲ. ಇಷ್ಟರಲ್ಲಿ ಅವನ ಬಗ್ಗೆ ಅನೇಕ ಕತೆಗಳೂ ಹುಟ್ಟಿಕೊಂಡುಬಿಟ್ಟಿದ್ದವು. ಕೆಲವು ರೋಚಕವಾಗಿಯೂ, ಕೆಲವು ಬೀಭತ್ಸವಾಗಿಯೂ, ಇನ್ನೂ ಕೆಲವು ಕರುಣಾಜನಕವಾಗಿಯೂ, ಕತೆ ಹೇಳುವವರ ಕಲ್ಪನಾಶಕ್ತಿಗೆ ಅನುಗುಣವಾಗಿ ಬೆಳದುಕೊಂಡವು. ಕಾಲಕ್ರಮೇಣ ಜನರು ಕಥಾನಾಯಕನ್ನೂ, ಕತೆಗಳನ್ನೂ ಮರೆತುಬಿಟ್ಟರು…
ನಿಮಗೇ ಗೊತ್ತು-ನಮ್ಮ ದೇಶದಲ್ಲಿ, ನೂರಾರು ವರ್ಷಗಳಿಂದ ಏನೂ ಬದಲಾಗದೆ, ಹಾಗೆಯೇ ಹಾಳುಬಿದ್ದಿದ್ದ ಅನೇಕ ಗುಡಿ-ಗೋಪುರಗಳ ಅದೃಷ್ಟ ಇದ್ದಕ್ಕಿದ್ದಂತೆ ಇತ್ತೀಚೆಗೆ ಖುಲಾಯಿಸುತ್ತಿದೆ. ಯಾರೋ ಒಂದಿಷ್ಟು ಕಾರ್ಯಕರ್ತರು, ಸ್ವಯಂಸೇವಕರು ಒಂದಾಗುತ್ತಾರೆ; ದಾನಿಗಳು ಮುಂದೆ ಬರುತ್ತಾರೆ; ಕೋಳು ಮುರಿದ ಹಾಳು ಗುಡಿಗಳು ಜೀರ್ಣೋದ್ಧಾರವಾಗಿ ಕಂಚಿನ ಕಳಸ ಹೊತ್ತುಕೊಂಡು ದಿನ ಬೆಳಗಾಗುವುದರಲ್ಲಿ ಮಂದಿರಗಳಾಗಿ ನಿಂತುಬಿಡುತ್ತವೆ! ‘ಬಿಕೋ‘ ಎನ್ನುತ್ತಿದ್ದ ಅವು, ಭಜನೆ, ಪೂಜೆ, ಹೋಮ-ಹವನಗಳಿಂದ ಲಗಲಗಿಸುತ್ತವೆ. ದೇವರು ಇನ್ನೂ ಅದೃಷ್ಟವಂತನಾಗಿದ್ದರೆ, ಪಲ್ಲಕ್ಕಿ ಉತ್ಸವಗಳು, ಜಾತ್ರೆ, ರಥೋತ್ಸವಗಳೂ ಪ್ರಾರಂಭವಾಗುತ್ತವೆ. ಹೀಗೆ ಬದಲಾಗುತ್ತಿದ್ದ ಕಾಲವನ್ನೂ, ದೇಶವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದವರಲ್ಲಿ ಶನೀಶ್ವರ ಗುಡಿಯ ಅರೆಕಾಲಿಕ ಅರ್ಚಕರಾಗಿದ್ದ ಹರಿಭಟ್ಟರೂ ಒಬ್ಬರು. ಅವರು ಊರಿನ ಪ್ರಸಿದ್ಧವಾದ ಮಾರಿಕಾಂಬ ದೇವಸ್ಥಾನದಲ್ಲಿ ಪ್ರಮುಖ ಅರ್ಚಕರಾಗಿದ್ದರು. ಆದರೆ, ಆ ದೇವಸ್ಥಾನದಲ್ಲಿ ಇವರ ಪೂಜೆ ನಡೆಯುತ್ತಿತ್ತೇ ವಿನ: ಮಾತು ನಡೆಯುತ್ತಿರಲಿಲ್ಲ. ಇದಕ್ಕೆ ದೇವಸ್ಥಾನದ ಕಮಿಟಿಯ ವ್ಯವಹಾರದ ಅತಿ ಪಾರದರ್ಶಕತೆ ಹಾಗೂ ‘ಬಿಗಿ‘ ನಿಲುವು ಕಾರಣವಾಗಿತ್ತು. ಮಾತು ಮಾತಿಗೆ ಕಮಿಟಿಯ ಸಭೆ-ಸರ್ವಾನುಮತದ ತೀರ್ಮಾನ, ಪೈಸೆ-ಪೈಸೆಗೆ ಲೆಕ್ಕ, ಬಿಲ್ಲು-ರಶೀದಿ… ಇವೆಲ್ಲವುಗಳಿಂದ ಅವರು ರೋಸಿಹೋಗಿದ್ದರು. ‘ಭಕ್ತರು ಭಕ್ತಿಯಿಂದ ದೇವರಿಗೆ ಅರ್ಪಿಸುವ ಹಣಕ್ಕೆ ರಶೀದಿ ಕೊಡಲು ನಾವು ಯಾರು? ದೇವರ ಸೇವೆಗೆ ಮಾಡಿದ ಕೆಲಸ-ಕಾರ್ಯಗಳಿಗೆಲ್ಲಾ ಲೆಕ್ಕವಿಡುವುದು, ಅದರ ತಪಾಸಣೆ ಮಾಡುವುದು ಎಂದರೇನು? ದೇವಾಲಯಗಳು ಅಂದರೆ, ಮುನ್ಸಿಪಾಲಿಟಿಯೆ ಅಥವಾ ತಾಲ್ಲೂಕು ಕಚೇರಿಗಳೆ?‘ ಇಂಥ ಪ್ರಶ್ನೆಗಳನ್ನು ಹರಿಭಟ್ಟರು, ಗಟ್ಟಿಯಾಗಿ ತಮ್ಮಲ್ಲಿಯೇ ಕೇಳಿಕೊಳ್ಳುತ್ತಿದ್ದರು. ಹೀಗೊಂದು ದಿನ, ಶನೀಶ್ವರನಿಗೆ ಪೂಜೆಯನ್ನು ಮುಗಿಸುತ್ತಾ, ‘ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ‘ ಎಂದು ಸಾಷ್ಟಾಂಗ ಹಾಕಿದರು. ಹಾಗೆ ಅವರು ಬಹಳ ಹೊತ್ತು ದೇವರ ಮುಂದೆ ಮಲಗಿಯೇ ಇದ್ದರು. ಆದರೆ, ಅವರು ನಮಸ್ಕಾರ ಮುಗಿಸಿ ಮೇಲೇಳುವಾಗ ಲಘುವಾಗಿದ್ದರು-ಗೆಲುವಾಗಿದ್ದರು. ಶನೀಶ್ವರನು ಅವರ ಕಿವಿಯಲ್ಲಿ ಒಂದು ಅಭಯ ಸೂತ್ರವನ್ನು ಉಸುರಿದ್ದ: “ಹರಿ, ನೀನು ನನ್ನನ್ನು ಉದ್ಧರಿಸು; ನಾನು ನಿನ್ನನ್ನು ಉದ್ಧರಿಸುತ್ತೇನೆ“ ಎಂದು! ಹರಿಭಟ್ಟರಿಗೆ ಎಲ್ಲವೂ ಅರ್ಥವಾಗಿ ಹೋಗಿತ್ತು. ಬೇಗಬೇಗನೆ ಮಾರಿಕಾಂಬೆಯ ಪೂಜೆ ಮುಗಿಸಿ, ಭಕ್ತಾದಿಗಳಿಗೆ ತೀರ್ಥ-ಪ್ರಸಾದ ಕೊಡಲು, ತಮ್ಮ ಮಗ ರಾಜೇಶನನ್ನು ಕೂರಿಸಿ, ಸೈಕಲ್ಲು ಹತ್ತಿ ಹಿಂಗಾರಕೊಡಿಗೆ ತಿರುಮಲ ಹೆಗಡೆಯವರ ಮನೆಗೆ ಹೊರಟರು. ಅದು ಕಲ್ಲು-ಮುಳ್ಳುಗಳ ಕಾಲುದಾರಿ; ಸುಡು-ಬಿಸಿಲು; ಆದರೂ ಹರಿಭಟ್ಟರಿಗೆ ಬಳಲಿಕೆಯೆನಿಸಲಿಲ್ಲ. ದಾರಿಯುದ್ದಕ್ಕೂ ಅವರ ಕನಸುಗಳು ಬೆಳೆದು, ಸಾಲುಮರಗಳಾಗಿ ನಿಂತು, ನೆರಳು-ಗಾಳಿಯ ಚಾಮರಸೇವೆ ನಡೆಸಿದ್ದವು…
‘ನನಗೆ ಈಗಾಗಲೇ ಅರವತ್ತು ವರ್ಷಗಳಾಗಿವೆ; ಮಗಳ ಮದುವೆ ಮತ್ತು ನಾಡ ಹೆಂಚಿನ ನನ್ನ ಪೂರ್ವಜರ ಮನೆಗೆ ಮಂಗಳೂರು ಹೆಂಚನ್ನು ಹಾಕಿಸಿದ್ದು ಬಿಟ್ಟರೆ, ಇನ್ನಾವ ಸಾರ್ಥಕ ಕಾರ್ಯವೂ ನನ್ನಿಂದ ಸಾಧ್ಯವಾಗಿಲ್ಲ. ಎಸೆಸ್ಸೆಲ್ಸಿ ನಪಾಸಾದ ಮಗ ಹೊನ್ನಾವರಕ್ಕೆ ಹೋಗಿ, ಶಂಭುಹೆಗಡೆಯವರ ಯಕ್ಷಗಾನ ಶಾಲೆಯನ್ನು ಸೇರಿಕೊಂಡವನು ಮೂರೇ ದಿನಕ್ಕೆ ಓಡಿಬಂದ. ಒಂದಿಷ್ಟುದಿನ ಗೋಕರ್ಣಕ್ಕೆ ಹೋಗಿ ಮಂತ್ರ ಕಲಿಯುವ ಶಾಸ್ತ್ರ ಮುಗಿಸಿ, ಮನೆ ಸೇರಿಕೊಂಡವನು ಹೊರಗೆ ಹೋಗಲೇ ಇಲ್ಲ. ಸಣ್ಣ-ಪುಟ್ಟ ಪೌರೋಹಿತ್ಯಕ್ಕೆ ‘ಪಡಚಾಕರಿ‘ಯಾಗಿ ಹೋಗುವುದನ್ನು ಬಿಟ್ಟರೆ ದುಡಿಮೆ ಏನೂ ಇಲ್ಲ. ನಾನು ಬದುಕಿರುವವರೆಗೇನೋ ಸರಿ. ಮುಂದೆ ಹೆಂಡತಿ ಮಕ್ಕಳಾದ ಮೇಲೆ? ಮಾರಿಕಾಂಬ ದೇವಿಯ ಪೂಜೆಯನ್ನು ನನ್ನ ನಂತರ ಈ ಕಮಿಟಿಯು, ನನ್ನ ಮಗನಿಗೆ ಖಂಡಿತಾ ಕೊಡಲಾರದು. ಒಮ್ಮೆ, ಈ ಶನೀಶ್ವರನ ಗುಡಿಯೇನಾದರೂ ಜೀರ್ಣೋದ್ಧಾರವಾದರೆ, ಸಾಕಷ್ಟು ಭಕ್ತಾದಿಗಳೂ ಬಂದಾರು. ನನ್ನ ಮಗನ ಯಜಮಾನಿಕೆಯಲ್ಲಿ, ದೊಡ್ಡ-ದೊಡ್ಡ ಪೂಜೆ, ಹೋಮ-ಹವನಗಳು ನಡೆದಾವು, ಹಣವೂ ಬಂದೀತು. ಅಲ್ಲದೆ, ಇದಕ್ಕೆ, ಕಮಿಟಿಯ ರಗಳೆಯೂ ಇಲ್ಲ‘
ಹರಿಭಟ್ಟರು ಯೋಚಿಸುತ್ತಾ ಇದ್ದಂತೆ ತಿರುಮಲ ಹೆಗಡೆಯವರ ಮನೆಯ ಅಂಗಳಕ್ಕೇ ಬಂದು ಬಿಟ್ಟಿದ್ದರು. ಅವರ ಮನೆಯೆದುರು ಮರದ ಬುಡದಲ್ಲಿ ಸೈಕಲ್ಲು ನಿಲ್ಲಿಸಿ, ಒಳ ನಡೆದರು. ತಿರುಮಲ ಹೆಗಡೆಯವರ ಮನೆ ಮಾತ್ರ ದೊಡ್ಡದಲ್ಲ-ಅವರ ಮನಸ್ಸೂ ದೊಡ್ಡದು-ಕೈಗಳೂ ದೊಡ್ಡವು! ಹರಿಭಟ್ಟರು ಅವರಲ್ಲಿ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಹೆಗಡೆಯವರು ಹೇಳಿದರು: “ನಿಮ್ಮ ಸಂಕಲ್ಪವೇನೋ ಒಪ್ಪುವಂಥದ್ದೆ. ಆದರೆ, ಆ ಶನೀಶ್ವರನ ಗುಡಿಯನ್ನು ದೊಡ್ಡದು ಮಾಡಲಿಕ್ಕೆ ಜಾಗ ಎಲ್ಲಿದೆ ಹೇಳಿ? ಎದುರಿಗೆ ವರದಾ ನದಿ; ಹಿಂಬದಿಗೆ ಅಗ್ರಹಾರ; ಎಡಕ್ಕೆ ಅರಳೀ ಕಟ್ಟೆ; ಇನ್ನು ಬಲಕ್ಕೆ…ಅದ್ಯಾರದ್ದೋ ಮನೆ..“ ಹರಿಭಟ್ಟರಿಗೆ ಈ ಸಮಸ್ಯೆ ಮೊದಲೇ
ಗೊತ್ತಿತ್ತು; ಹಾಗೆಯೇ ಅದಕ್ಕೆ ಪರಿಹಾರವೂ ಕೂಡ ಅವರಲ್ಲಿಯೇ ಇತ್ತು: “ಹೆಗಡೆಯವರೆ, ಗುಡಿಯ ಪಕ್ಕದಲ್ಲಿರುವುದು ಯಾರ ಮನೆಯೂ ಅಲ್ಲ. ಅದು ಆ ವಿಠಲಾಚಾರಿಯ ಹಾಳು ಕುಲುಮೆಯಾಗಿತ್ತು-ಅಷ್ಟೆ. ಇನ್ನು, ಆ ಕುಲುಮೆಯೂ ಉರಿಯದೆ ಹತ್ತು ವರ್ಷಗಳಾಗಿ ಹೋದವು. ಅವನಂತೂ ಎಲ್ಲಿಗೆ ಸತ್ತನೋ ಎನೋ. ಈಗ ಅಲ್ಲಿ, ಹಗಲು ಪೋಕರಿ ಹುಡುಗರು ಹೆಂಡ ಕುಡಿಯೋದು, ಇಸ್ಪೀಟು ಆಡೋದು ಮಾಡ್ತಾ ಇರ್‍ತಾರೆ. ಇನ್ನು ರಾತ್ರಿಯಂತೂ ಅಲ್ಲಿ ಏನೇನು ನಡೆಯುತ್ತೋ ಆ ಶನೀಶ್ವರನಿಗೇ ಗೊತ್ತು! ಅಂತೂ, ಭಟ್ಟರ ಮನವಿಯ ಸಾರಾಂಶ ಇಷ್ಟೆ: ಈಗ ವಿಠಲಾಚಾರಿಯ ಬಿಡಾರವಿರುವ ಜಾಗದಲ್ಲಿ ವಿಶಾಲವಾದ ಚಂದ್ರಶಾಲೆಯನ್ನು ನಿರ್ಮಿಸಿ, ಗುಡಿಯನ್ನು ಜೀರ್ಣೋದ್ಧಾರ ಮಾಡಿ ಆಕರ್ಷಕಗೊಳಿಸುವುದು. ಯಾಕೊ ಏನೊ ಭಟ್ಟರ ಸಲಹೆ ಹೆಗಡೆಯವರಿಗೆ ಸರಿ ಕಾಣಲಿಲ್ಲ. ಆದರೂ ಅವರು ಕೊನೆಯದಾಗಿ ಇಷ್ಟು ಭರವಸೆಯನ್ನು ಕೊಟ್ಟರು:“ನೋಡಿ, ಭಟ್ಟರೆ, ಯಾವುದಕ್ಕೂ ಮೊದಲು ನೀವು, ಮುನ್ಸಿಪಾಲಿಟಿಯನ್ನೂ, ಮುಜರಾಯಿಯವರನ್ನೂ ಕೇಳಿ; ಅವರೆಲ್ಲಾ ಒಪ್ಪಿದರೆ ಸರಿ. ಆಮೇಲೆ ನೀವೇ ಅಗ್ರಹಾರದ ಮೂರು ನಾಲ್ಕು ಜನರನ್ನು ಸೇರಿಸಿಕೊಂಡು, ಗುಡಿಯ ಜೀರ್ಣೋದ್ಧಾರ ಸಮಿತಿಯನ್ನು ಮಾಡಿ; ನಾನೂ ಬೇಕಾದರೆ ಬರ್‍ತೇನೆ. ಒಟ್ಟಿಗೇ ಕೂತು ಪ್ಲಾನು ಮಾಡೋಣ. ಇನ್ನು, ದುಡ್ಡಿನ ಬಗ್ಗೆ ನೀವು ತಲೆ ಕೆಡಿಸಿಕೊಳ್ಳೋದು ಬೇಡ-ದೇವರಿದ್ದಾನೆ“. ಹೆಗಡೆಯವರು ತಮ್ಮ ಮಾತಿನ ಕೊನೆಯಲ್ಲಿ ಹೇಳಿದ್ದಷ್ಟೆ ಭಟ್ಟರಿಗೆ ಬೇಕಾದದ್ದು. ಅದರ ಬಲವೊಂದಿದ್ದರೆ, ಮುಜರಾಯಿ-ಪುರಸಭೆ ಯಾವ ಲೆಕ್ಕ? ಅಲ್ಲದೆ ಯಾರುತಾನೆ ಆ ಶನೀಶ್ವರನನ್ನು ಎದುರುಹಾಕಿಕೊಂಡಾರು? ಹರಿಭಟ್ಟರು ಖುಷಿಯಿಂದ ಹೊರಟು, ಸೈಕಲ್ಲಿನ ಹತ್ತಿರ ಬಂದು ನೋಡುತ್ತಾರೆ-ಸೀಟಿನ ಮೇಲೆಲ್ಲ ಕಾಗೆಗಳ ಉಚ್ಛಿಷ್ಟ! ಭಟ್ಟರಿಗೆ ಸೈಕಲ್ಲನ್ನು ಮುಟ್ಟುವ ಮಸ್ಸಾಗಲಿಲ್ಲ. ಆದರೆ, ಕಾಗೆಯೆಂದರೆ ಏನು? ವಾಯಸ ದೇವ! ಶನೀಶ್ವರನ ವಾಹನ! ಅದರ ಅಮೇಧ್ಯವೂ ಪ್ರಸಾದವಷ್ಟೆ! ತಮ್ಮ ದೋತ್ರದಿಂದಲೇ ಅದನ್ನು ಒರೆಸಿದರು. ಲಗುಬಗೆಯಿಂದ ಸೈಕಲ್ಲು ತುಳಿಯತ್ತಾ ಮನೆಯಕಡೆ ಹೊರಟರು.
ಕಮಿಟಿಯಾಯಿತು; ಹೆಗಡೆಯವರೇ ಅಧ್ಯಕ್ಷರು, ಭಟ್ಟರು ಕಾರ್ಯದರ್ಶಿಗಳು. ಸಂಬಂಧಪಟ್ಟ ಇಲಾಖೆಗಳಿಂದ ಪರವಾನಿಗಿಯೂ ಆಯಿತು. ಬರೀ ಐದಾರು ತಿಂಗಳಲ್ಲಿ ಶನಿ ಗುಡಿಯು ‘ಶ್ರೀ ಶನೀಶ್ವರ ದೇವಸ್ಥಾನ‘ವಾಯಿತು. ಎಲ್ಲರ ನಿರೀಕ್ಷೆಗೂ ಮೀರಿ ಹೋಮ-ಹವನಾದಿಗಳು, ಪಲ್ಲಕ್ಕಿ ಉತ್ಸವ ಹಾಗೂ ಯುಗಾದಿಯ ಮರುದಿನವೇ ಜಾತ್ರೆಯೂ ಆಗಿಹೋಯಿತು. ದೇವಸ್ಥಾನದ ಕಮಿಟಿಯು, ಹರಿಭಟ್ಟರು ಆಶಿಸಿದಂತೆ ಅವರ ಮಗ ರಾಜೇಶನನ್ನು ದೇವಸ್ಥಾನದ ಖಾಯಂ ಅರ್ಚಕನಾಗಿ ನೇಮಕಮಾಡಿತು. ಜಾತ್ರೆಯ ದಿನ ಬೆಳಗ್ಗೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ರಾಜೇಶನ ಮೈಮೇಲೆ ಸ್ವತ: ಶನೀಶ್ವನೇ ಬಂದು ಭಕ್ತಾದಿಗಳ ಹೆಸರನ್ನು ಬಿಡಿ ಬಿಡಿಯಾಗಿ ಕೂಗಿ ಹರಸಿಯೂಬಿಟ್ಟ! ಆ ಕ್ಷಣದಿಂದಲೇ ಶನೀಶ್ವರನಿಗೆ ಶುಕ್ರದೆಸೆ ತಿರುಗಿತು.
‘ಸಣ್ಣಭಟ್ಟರ ಮೈಮೇಲೆ ಶನಿದೇವರು ಬರ್‍ತದೆ.. ಇದ್ದದ್ದನ್ನು ಇದ್ದಹಾಗೇ ಹೇಳ್ತದೆ. ಎಂಥಾ ಬಿಗಿಯಾದ ಪ್ರಶ್ನೆಯೇ ಆಗಿರಲಿ ಕರೆಕ್ಟಾಗಿ ಉತ್ತರ ಹೇಳ್ತದೆ..‘ ಎಂಬ ಮಾತು ದಿನ-ವಾರಗಳಲ್ಲಿ ಜನಜನಿತವಾಗಿಬಿಟ್ಟಿತು. ಇಡೀ ಪೇಟೆಯವರು, ಸುತ್ತಮುತ್ತಲ ಹಳ್ಳಿಯವರೂ ಅಲ್ಲದೆ ಅಕ್ಕ-ಪಕ್ಕದ ತಾಲೂಕಿನವರೂ ರಾಶಿ ರಾಶಿಯಾಗಿ ಬರಲು ಪ್ರಾರಂಬಿsಸಿದರು. ಶನಿವಾರವಂತೂ ದೇವಸ್ಥಾನದ ಮುಂದೆ ಸಂತೆಯೇ ನೆರೆಯುತ್ತಿತ್ತು. ಊರಿನ ಶ್ರೀಮಂತರು ಸರದಿಯಲ್ಲಿ ಭಕ್ತರಿಗೆ ಉಚಿತ ಭೋಜನದ ವ್ಯವಸ್ಥೆಯನ್ನೂ ಮಾಡಿ ಕೃತಾರ್ಥರಾಗತೊಡಗಿದರು. ಅಡಿಕೆ ಬೆಳೆಗಾರರ ಸಂಘದವರು ಶನಿದೇವರಿಗೆ ಬಂಗಾರದ ಮುಖವಾಡವನ್ನು ಮಾಡಿಸಿಕೊಡಬೇಕೆಂಬ ಮನವಿಯೊಂದಿಗೆ ದೇವಸ್ಥಾನದ ಕಮಿಟಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡಿದರು. ಈಗ ಹರಿಭಟ್ಟರು ತಮ್ಮ ಬಹುತೇಕ ಸಮಯವನ್ನು, ಮಗನಿಗೆ ಸಹಾಯಕರಾಗಿ ಶನೀಶ್ವರನ ದೇವಸ್ಥಾನದಲ್ಲೇ ಕಳೆಯತೊಡಗಿದರು. ಅವರಿಗೆ ಮಾರಿಕಾಂಬ ದೇವಾಲಯದಲ್ಲೇ ಅರೆಕಾಲಿಕ ಪೂಜೆಯಾಗಿಬಿಟ್ಟಿತು. ಆದರೂ ಕೆಲವೊಮ್ಮೆ ಅಗ್ರಹಾರದಿಂದ ನಾಲ್ಕಾರು ಪುರೋಹಿತರನ್ನು ದಿನದ ಲೆಕ್ಕದಲ್ಲಿ ನೇಮಿಸಿಕೊಳ್ಳುತ್ತಿದ್ದರು. ಹೀಗೆ, ಶನೀಶ್ವರನ ನೆರಳಿನಲ್ಲಿ ಹರಿಭಟ್ಟರ ಕುಟುಂಬವಷ್ಟೇ ಅಲ್ಲ ಎಲ್ಲರ ಬದುಕೂ ಬಂಗಾರವಾಗ ತೊಡಗಿತು. ಆದರೆ ಈ ಊರಿನ ಜನಜೀವನದ ಅನೇಕ ಏಳುಬೀಳುಗಳನ್ನು ಸಾವಿರಾರು ವರ್ಷಗಳಿಂದ ನೋಡುತ್ತಿದ್ದ ಆ ವರದೆ ಮಾತ್ರ ಇವನ್ನೆಲ್ಲಾ ನೋಡಿಯೂ ನೋಡದಂತೆ ನಿರ್ಲಿಪ್ತಳಾಗಿ ಶನೀಶ್ವರನ ಪಾದತಳದಲ್ಲಿ ಹರಿದು ಸಾಗುತ್ತಲೇ ಇದ್ದಳು.
ಅದೊಂದು ಶನಿವಾರ. ರಾಜೇಶನು ಬೆಳಗಿನ ಜಾವದಲ್ಲೇ ಎದ್ದು ಇನ್ನೂ ಅರಳುತ್ತಿದ್ದ ತುಂಬೆ ಹೂವುಗಳನ್ನು ಕೊಯ್ದುತಂದು ಗರ್ಭ-ಗುಡಿಯ ಮಂದ ಬೆಳಕಿನಲ್ಲಿ ಪೂಜೆಗೆ ಅಣಿಮಾಡುತ್ತಿದ್ದ. ಇದ್ದಕ್ಕಿದ್ದಂತೆ ದೇವಸ್ಥಾನದ ಮುಖ ಮಂಟಪಕ್ಕೆ ನೇತುಹಾಕಿದ್ದ ಘಂಟೆ ಒಮ್ಮೆ ‘ಢಾಣ್‘ ಎಂದು ಬಡಿದುಕೊಂಡಿತು. ಅಲ್ಲಿ ಅಷ್ಟು ಹೊತ್ತಿನಲ್ಲಿ ಶನೀಶ್ವರನನ್ನಲ್ಲದೆ, ಇನ್ನಾರನ್ನೂ ನಿರೀಕ್ಷಿಸದಿದ್ದ ರಾಜೇಶ, ಇದ್ದಕ್ಕಿದ್ದಂತೆ ‘ಕುಮೀಟು‘ ಬಿದ್ದು ಘಂಟೆಯನ್ನೊಮ್ಮೆ ನೋಡಿದ. ಅದು ತನಗೆ ಏನೂ ಸಂಬಂಧ ಇಲ್ಲವೆನ್ನುವಂತೆ ಸುಮ್ಮನೆ ನೇತಾಡುತ್ತಿತ್ತು! ಈಗ ಅವನ ದೃಷ್ಟಿ ಘಂಟೆಯ ಕೆಳಗೆ ಕರಿಶಿಲೆಯ ಜಠಾಧಾರಿ ಮೂರ್ತಿಯಂತೆ ನಿಂತಿದ್ದ ಆಕಾರದ ಕಡೆ ಹೊರಳಿತು. ರಾಜೇಶನಿಗೆ ಇದ್ದಕ್ಕಿದ್ದಂತೆ ಪರಶಿವನೇ ಪ್ರತ್ಯಕ್ಷನಾದಂತೆನಿಸಿ ಹೊರಗೆ ಬಂದು ಲೈಟು ಹಾಕಿದ. ಆ ಪ್ರಕಾಶಮಾನವಾದ ವಿದ್ಯುದ್ದೀಪದಲ್ಲಿ ಬೆಳಗಿದವನು-ವಿಠಲಾಚಾರಿ! ಹಿಂದಿನಂತೆ ಕುರುಚಲು ಕರಿ-ಬಿಳಿ ಗಡ್ಡದ ಬದಲು ಈಗ ರೇಶಿಮೆಯಂತೆ ಬೆಳ್ಳಗೆ ಹೊಳೆಯುತ್ತಿದ್ದ ನೀಳವಾದ ಗಡ್ಡ; ತಲೆಯ ಹಿಂಬದಿಗೆ ಕಟ್ಟುತ್ತಿದ್ದ ಜುಟ್ಟು, ಈಗ ನೆತ್ತಿಯ ಮೇಲೆ ಜಟೆಯಾಗಿದೆ; ಕೊಳಕು ಅಂಗಿ-ಪಂಚೆಯ ಬದಲು ಶುಭ್ರ ಕಾವಿ ವಸನ. ನೆರಿಗೆ ಮೂಡಿದ ಮುಖದಲ್ಲಿ ಪ್ರಜ್ವಲಿಸುವ ಕಣ್ಣುಗಳು; ತುಸು ಬಾಗಿದ ಬೆನ್ನು. ಖಂಡಿತ ಇವನು ವಿಠಲಾಚಾರಿಯೇ! ಆತನಿಗೆ ರಾಜೇಶನ ಪರಿಚಯವಿದ್ದಿರಲಿಕ್ಕಿಲ್ಲ. ಅವನು ಊರು ಬಿಡುವಾಗ ಇವನಿನ್ನೂ ಶಾಲೆಗೆ ಹೋಗುತ್ತಿದ್ದ ಚಡ್ಡಿ-ಹುಡುಗ. ಆದರೆ, ರಾಜೇಶನಿಗೆ ಒಮ್ಮೆಲೇ ವಿಠಲಾಚಾರಿಯ ಗುರುತು ಸಿಕ್ಕಿಬಿಟ್ಟಿತು. ಯಾಕೋ ಏನೋ ಅವನಿಗೆ ಒಮ್ಮೆಲೇ ಇಡೀ ಜಂಘಾಬಲವೇ ಉಡುಗಿಹೋದಂತಾಯಿತು. ತಾನು ಬಿಳಿಚಿಕೊಂಡದ್ದನ್ನು ತೋರಿಸಿಕೊಳ್ಳದೆ ಅವನೆಂದ: “ ಓಹ್ ಆಚಾರ್ರು! ಈಗ ಬಂದದ್ದ? ಬಹಳ ಸಂತೋಷ! ನಾನು ಹರಿಭಟ್ಟರ ಮಗ. ನೋಡಿ, ನೀವು ಹೋದ ಮೇಲೆ ದೇವಸ್ಥಾನ ಎಷ್ಟು ಬೆಳೆದುಬಿಟ್ಟಿದೆ…!“ ವಿಠಲಾಚಾರಿ ಮಾತನಾಡಲಿಲ್ಲ. ಒಮ್ಮೆ ದೇವಸ್ಥಾನದ ಸುತ್ತೆಲ್ಲಾ ಕಣ್ಣುಹಾಯಿಸಿ ಗರ್ಭ ಗುಡಿಯ ಹೊಸಿಲಿಗೆ ಬಂದು ನಿಂತ. ಅದೇ ಶನೀಶ್ವರ! ಈಗ ರಾಜೇಶ ಉತ್ಸಾಹದಿಂದ ನಂದಾದೀಪದ ಬತ್ತಿಯನ್ನು ಉದ್ದವಾಗಿ ಎಳೆದು ದೊಡ್ಡ ಬೆಳಕು ಮಾಡಿದ. ಹೌದು ಅದೇ ಶನೀಶ್ವರ! ಏನೇನೂ ವ್ಯತ್ಯಾಸವಿಲ್ಲ! ಕಪ್ಪನೆಯ ಒರಟು ಶಿಲೆಯಲ್ಲಿ ಕೆತ್ತಿದ ಒಂದೂವರೆ-ಎರಡು ಅಡಿ ಎತ್ತರದ ವಿಗ್ರಹ.. ವಿಠಲಾಚಾರಿ ಗರ್ಭಗುಡಿಯ ಹೊಸಿಲಿಗೆ ತಲೆಯಿಟ್ಟು ಸಾಷ್ಟಾಂಗ ನಮಸ್ಕಾರ ಮಾಡಿದ. ಸ್ವಲ್ಪ ಸಮಯದ ನಂತರ ಮೇಲಕ್ಕೆದ್ದು ದೇವಸ್ಥಾನದ ಸುತ್ತೆಲ್ಲಾ ಕಣ್ಣು ಹಾಯಿಸಿದ…
‘ಫಳ-ಫಳ‘ ಹೊಳೆಯುತ್ತಿದ್ದ ಕರಿಶಿಲೆಯ ಗೋಡೆ; ನುಣ್ಣಗೆ ಬೆಳ್ಳಗೆ ನಿಂತ ಸಾಲು ಕಂಬಗಳು…ಹೆಜ್ಜೆಯಿಟ್ಟರೆ ಎಲ್ಲಿ ಕೊಳೆಯಾಗಿ ಬಿಡುವುದೋ ಎಂಬಂತೆ ಥಳಥಳಿಸುತ್ತಿದ್ದ ನಾಜೂಕಾದ ಪಿಂಗಾಣಿಯ ಹಾಸುಬಿಲ್ಲೆಗಳು.. ದಿಕ್ಕು-ದಿಕ್ಕುಗಳಲ್ಲಿ ಬೆಳಗಲು ಸಿದ್ಧವಾಗಿ ಕುಳಿತಿದ್ದ ವಿವಿಧ ಮಾದರಿಯ ವಿದ್ಯುದ್ದೀಪಗಳು..ದುಂಡಾದ ಅಕ್ಷರಗಳಲ್ಲಿ ಬರೆದ ವಿವಿಧ ಪೂಜೆ, ಅರ್ಚನೆ, ಪ್ರಸಾದಗಳ ದರಗಳ ಬೋರ್ಡು.. ಹುಬ್ಬಳ್ಳಿಯ ‘ಆರಾರ್ ಟ್ರೆಝರಿ ಕಂಪೆನಿ‘ಯ ಲಾಂಛನವಿದ್ದ ದೊಡ್ಡ ಕಾಣಿಕೆ ಡಬ್ಬಿ.. ಭಕ್ತಾದಿಗಳ ತಲೆಗೆ ಹೊಡೆದುಬಿಡುತ್ತವೇನೋ ಎನ್ನುವಂತೆ ನೆತ್ತಿಯ ಮೇಲೆ ತೂಗಾಡುತ್ತಿದ್ದ ವಿವಿಧ ಗಾತ್ರದ ಘಂಟೆಗಳು.. ವಿಠಲಾಚಾರಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಹೊರಗೆ ಬಂದ. ಮೊದಲು ತನ್ನ ಮನೆಯಿದ್ದ ಸ್ಥಳದಲ್ಲೀಗ ವಿಶಾಲವಾದ ಚಂದ್ರಶಾಲೆ..ನೂರಿನ್ನೂರು ಜನರಿಗೆ ಒಟ್ಟಿಗೇ ಊಟಕ್ಕೆ ಕೂರಿಸಬಹುದು.. ಓಹ್! ಇಲ್ಲೊಂದು ಹೋಮಕುಂಡ..! ಹೌದು. ಇಲ್ಲೆ ಇವನ ಪುಟ್ಟ ಕುಲುಮೆ ಇದ್ದದ್ದು… ಅದರ ಆಚೆ ಮೂಲೆಯಲ್ಲಿ ಅಗ್ಗಿಷ್ಟಿಕೆ.. ಇನ್ನೂ ಮುಂದೆ ಹೋದ; ಇದು ತನ್ನ ಒಳಮನೆ.. ಮಲಗುವ ಕೋಣೆ.. ಈಗ ಆ ಮುಂಡು ಗೋಡೆಗಳಿಲ್ಲ ಅಷ್ಟೆ. ಅವನು ಹೆಜ್ಜೆಗಳನ್ನು ಬಿರ-ಬಿರನೆ ಹಾಕಿದ. ಹಿಂಬದಿಗೆ ಬಂದ. ಭೋಜನಶಾಲೆ… ಹಾಗೇ ಬಲಕ್ಕೆ ಹೊರಳಿದ; ವಿಶಾಲವಾದ ಜಗುಲಿ; ಪೇರಿಸಿಟ್ಟ ನೂರಾರು ಕುರ್ಚಿಗಳು ಹಾಗೂ ಉದ್ದನೆಯ ಊಟದ ಮೇಜುಗಳು… ಇನ್ನೂ ಮುಂದೆ, ಹೊರಗೆ ಬಂದುಬಿಟ್ಟ. ಇಲ್ಲ-ಅವನಿನ್ನೂ ಒಳಗೇ ಇದ್ದ!
“ಶನೀಶ್ವರ ದೇವಸ್ಥಾನದ ಆಡಳಿತ ಮಂಡಳಿ ಆಪಿsಸು -ಅಪ್ಪಣೆ ಇಲ್ಲದೆ ಒಳಗೆ ಪ್ರವೇಶವಿಲ್ಲ“
ಇನ್ನೂ ಮುಂದೆ ಹೊರಟ.. ಅರೆ! ಇಲ್ಲೊಂದು ಅರಳಿಯ ಮರವಿತ್ತಲ್ಲವೆ! ಹೌದು..ಇಲ್ಲಿಯೇ ಇತ್ತು.. ದೊಡ್ಡ-ದೊಡ್ಡ ಕಲ್ಲುಗಳ ಕಟ್ಟೆಯೂ ಇತ್ತಲ್ಲವೆ? ವಿಠಲಾಚಾರಿಗೆ ನಂಬಲಾಗಲಿಲ್ಲ. ಅಥವಾ ತಾನು ಅಪ್ರದಕ್ಷಿಣೆ ಹಾಕಿ ಅರಳೀಮರ ಮಾಯವಾಗಿಬಿಟ್ಟಿತೋ ಹೇಗೆ? ಅವನು ಗಲಿಬಿಲಿಗೊಂಡ. ದೇವಸ್ಥಾನದ ಎದುರು ನಿಂತು, ಕೆಳಗಿನ ಕಲ್ಲಿನ ಸೋಪಾನಗಳನ್ನು ನೋಡಿದ.. ತಳದಲ್ಲಿ ವರದೆ ತುಂಬಿ ಹರಿಯುತ್ತಿದ್ದಳು…ಆಚೆ ದಡದಲ್ಲಿ ಸೊಂಪಾಗಿ ಬೆಳದು ಗೊನೆತುಂಬಿ ನಿಂತ ಅಡಿಕೆ ತೋಟ. ಅದಕ್ಕೂ ಆಚೆ ನಸುಗೆಂಪು ಬಣ್ಣದ ದಿಗಂತ…ವಿಠಲಾಚಾರಿ ನೋಡುತ್ತಲೇ ನಿಂತ…
ಅವನ ಬೆನ್ನಿಗೆ ಮಾರುತಿ ವ್ಯಾನು ಬಂದು ನಿಂತಾಗಲೇ ಎಚ್ಚರ! ಹರಿಭಟ್ಟರು, ಶಾಮೈತಾಳರು, ವರದಾಚಾರ್ಯರು, ರಾಘವರಾಯರು..ಒಬ್ಬೊಬ್ಬರೇ ವ್ಯಾನಿನಿಂದಿಳಿದು ಬಂದರು. ಎಲ್ಲವೂ ಇವನಿಗೆ ಪರಿಚಿತ ಮುಖಗಳೆ. ಇನ್ನೂ ಹಣ್ಣಾಗಿದ್ದಾರೆ-ತನ್ನಂತೆ! ವ್ಯಾನನ್ನು ತಿರುಗಿಸಿ, ಕೊನೆಯಲ್ಲಿ ಇಳಿದು ಬಂದವನೊಬ್ಬನೆ-ಯುವಕ. ಅರೆ! ಅವನು ಆಗ ಗರ್ಭಗುಡಿಯಲ್ಲಿದ್ದವನಲ್ಲವೆ? ಹರಿಭಟ್ಟರೇ ಮಾತನ್ನು ಪ್ರಾರಂಬಿsಸಿದರು:
“ಏನಾ ವಿಟ್ಲ, ಯಾವತ್ತು ಬಂದೆಯೋ ಮಾರಾಯ? ಬಾ, ಒಳಗೆ ನೋಡು..ಹಾಳು ಗುಡಿಯನ್ನು ಹ್ಯಾಗೆ ಕಟ್ಟಿದೀವಿ ಅಂತ..“
ಶಾಮೈತಾಳರು ಮುಂದುವರಿಸಿದರು: “ಇಡೀ ಪ್ಯಾಟೇಲಿ, ಇಷ್ಟು ದೊಡ್ಡ ದೇವಸ್ಥಾನ ಯಾವುದಿದೆ ಹೇಳು-ನೋಡೋಣ?“
ವಿಠಲಾಚಾರಿಯ ಉತ್ತರಕ್ಕೆ ಕಾಯದೆ ರಾಘವರಾಯರೆಂದರು:
“ನೋಡು, ವಿಠಲ, ಅಲ್ಲಿ, ನಿನ್ನ ಬಿಡಾರ ಇತ್ತಲ್ಲ? ಅದು, ಹಂಗೆ ಹಾಳು ಬಿದ್ದುಹೋಗಿತ್ತು. ನೀನು ಬರ್‍ತೀಯೇನೊ ಅಂತ ಕಾದವಿ. ನೀನು ಬರಲೇ ಇಲ್ಲ.. ಸರಿ. ದೇವರ ಕೆಲಸ ನಿಲ್ಲಿಸಬಾರದು, ನಿಂಗೆ ಆಮೇಲೆ ಹೇಳಿದರೆ ಸರಿ ಅಂತ ದೇವಸ್ಥಾನಕ್ಕೆ ಸೇರಿಸಿಕೊಂಡಿದೀವಿ..“. ಇನ್ಯಾರೊ ಸೇರಿಸಿದರು: “ನಿನ್ನನ್ನೇನು ಬೀದಿಪಾಲು ಮಾಡೋದಿಲ್ಲಪ್ಪ. ಕಮಿಟಿಯಿಂದ ಪರಿಹಾರ ಧನ ಕೊಡತೀವಿ; ಮುನ್ಸಿಪಾಲಿಟಿಯಿಂದ ಒಂದು ಪಿs ಸೈಟನ್ನೂ ಕೊಡಸ್ತೀವಿ..“.
ಈಗ ಹರಿಭಟ್ಟರು ಕೊನೆಯದಾಗಿ ಕೇಳಿದರು:
“ನಿನ್ನ ಕಬೂಲು ಇದೆ ತಾನೆ?“
ವಿಠಲಾಚಾರಿ, ದಿಗಂತವನ್ನು ನೋಡುತ್ತಲೇ ಉತ್ತರಿಸಿದ:
“ಸ್ವಾಮಿ, ನೀವೆಲ್ಲಾ ದೊಡ್ಡವರು; ನಿಮಗೆ ಹೇಳಲಿಕ್ಕೆ ನಾನು ಎಷ್ಟರವನು? ನನ್ನ ಸ್ವಂತದ್ದು ಅಂತ ಜಾಗ ಇಲ್ಲಿ ಎಲ್ಲಿತ್ತು-ಹೇಳಿ? ಅದೇ ಅಲ್ಲಿ..ಹೋಮಕುಂಡ ಇದೆಯಲ್ಲಾ-ಅಲ್ಲಿಯಾ? ಅಥವಾ ಭೋಜನಶಾಲೆ ಇದೆಯಲ್ಲ-ಅಲ್ಲಿಯಾ?.. ಹ್ಹ! ಆ ಜಾಗವನ್ನು ದೇವರಿಗೆ ಬಿಟ್ಟುಕೊಡಲಿಕ್ಕೆ ನಾನು ಯಾರು? ಅಥವಾ ತೆಗೆದುಕೊಳ್ಳಲಿಕ್ಕೆ ನೀವು ಯಾರು? ಅದು ದೇವರದ್ದೇ ಅಲ್ಲವಾ ಐತಾಳರೆ? ನಿಮ್ಮೆಲ್ಲರ ಕಣ್ಣಿಗೆ ನಾನು ದೇವರಿಗೇ ಜಾಗವನ್ನು ಬಿಟ್ಟುಕೊಡುವಷ್ಟು ದೊಡ್ಡವನಾಗಿ ಕಂಡೆನೆ?“
ಅಲ್ಲಿ ನಿಂತಿದ್ದ ಹಿರಿಯರಿಗೆಲ್ಲ ವಿಠಲಾಚಾರಿ ನಗದಿದ್ದರೂ ನಕ್ಕಂತೆ ಕಾಣಿಸಿತು; ತಾವು ನಾಚಿಕೊಳ್ಳದಿದ್ದರೂ ನಾಚಿಕೊಂಡಂತೆನಿಸಿತು.
ಇನ್ನು ಅವನೊಂದಿಗೆ ಮಾತನಾಡಬೇಕಾದದ್ದು ಏನೂ ಉಳಿದಿರಲಿಲ್ಲ. ಆದರೆ, ಅವನನ್ನು ಹಾಗೆಯೇ ಬಿಟ್ಟು ಹೊರಡುವುದೂ ಅವರಿಗೆ ಸರಿಯೆನಿಸಲಿಲ್ಲ. ಅಷ್ಟರಲ್ಲಿ ಗರ್ಭಗುಡಿಯ ಗಂಟೆಯ ಶಬ್ದವಾಯಿತು. ಯಾವಾಗಲೋ ಎನೊ ಹರಿಭಟ್ಟರ ಮಗ, ಗರ್ಭಗುಡಿಗೆ ತೂರಿಕೊಂಡು ಪೂಜೆಯನ್ನು ಪ್ರಾರಂಬಿsಸಿಬಿಟ್ಟಿದ್ದ. ಎಲ್ಲರೂ ಅತ್ತ ಹೆಜ್ಜೆ ಹಾಕಿದರು. ವರದಾಚಾರ್ಯರು ವಿಠಲಾಚಾರಿಯನ್ನು ಕೈಹಿಡಿದು ಗರ್ಭಗುಡಿಯ ಬಾಗಿಲಿನ ಎದುರು ನಿಲ್ಲಿಸಿ, ತಾವು ಒಳಗೆ ಹೋಗಿ ವಿದ್ಯುದ್ದೀಪವನ್ನು ಬೆಳಗಿದರು. ಇಡೀ ಗರ್ಭಗುಡಿ ಪ್ರಕಾಶಮಾನವಾಯಿತು!
“ಭಟ್ಟರೆ, ಶನೀಶ್ವರ ಎಲ್ಲಿ?“ ಇದ್ದಕ್ಕಿದ್ದಂತೆ ವಿಠಲಾಚಾರಿ ಕೇಳಿದ:
ಎಲ್ಲರನ್ನೂ ಚಕಿತರಾದರು ಅರೆ! ವಿಠಲಾಚಾರಿಗೆ ಏನಾಯಿತು!? ಆಗ ಹರಿಭಟ್ಟರು, ದೇವರನ್ನು ತೋರಿಸುತ್ತಾ ಹೇಳಿದರು:
“ಅಲ್ಲೋ ವಿಠಲಾ, ಇಲ್ಲಿ ನೋಡೋ, ಇವನೇ ಅಲ್ಲವೇನೋ ಶನೀಶ್ವರ? ನನ್ನ ಮಗ ಈಗತಾನೆ, ಈ ದೇವರಿಗೆ, ಸ್ನಾನ ಮಾಡಿಸಿ, ಬಂಗಾರದ ಮುಖವಾಡ ಹಾಕಿದ್ದಾನೆ-ಅಷ್ಟೆ; ಇವತ್ತು ಶನಿವಾರ ಅಲ್ಲವೆ? ವಿಶೇಷ ಪೂಜೆ! ನೀನು ಇನ್ನೊಂದು ಸ್ವಲ್ಪ ಹೊತ್ತು ಇಲ್ಲೇ ಇರು, ನಿನಗೇ ತಿಳಿಯುತ್ತೆ-ಎಷ್ಟು ಜನ ಬಂದು ಸೇರ್‍ತಾರೆ ಅಂತ.“
ಈಗ ರಾಘವರಾಯರ ಸರದಿ; ಅವರೆಂದರು: “ನೋಡು, ದೇವರ ಮುಖವಾಡ ಹ್ಯಾಗಿದೆ ಅಂತ! ಅಡಿಕೆ ಬೆಳೆಗಾರರ ಸಂಘದವರು ಮಾಡಿಸಿಕೊಟ್ಟಿದ್ದು. ಒಂದು ಲಕ್ಷ ರೂಪಾಯಿಗಳದ್ದು!“.
ಈಗ ರಾಜೇಶ ದೊಡ್ಡ-ದೊಡ್ಡ ದಾಸವಾಳದ ಹೂವುಗಳನ್ನು ಶನೀಶ್ವರನಿಗೆ ಮುಡಿಸುತ್ತಿದ್ದ. ವಿಠಲಾಚಾರಿ ನಿಧಾನವಾಗಿ ಕೇಳಿದ:
“ಹರಿಭಟ್ಟರೆ, ಶನೀಶ್ವರನ ಮುಖಕ್ಕೆ, ಈ ತಗಡನ್ನು ಮುಚ್ಚಿದ್ದೀರಲ್ಲ-ಅದನ್ನು ಅವನು ಕೇಳಿದ್ದನಾ?“ ವರದಾಚಾರರು ಹೇಳಿದರು: “ಏನು ಮಾತು ಅಂತ ಆಡತೀಯ, ವಿಠಲ? ದೇವರು ಯಾವತ್ತೂ ಕೊಡೋನೇ ಹೊರತು ಬೇಡೋನಲ್ಲ“. ಇನ್ಯಾರೋ ಮುಂದುವರಿಸಿದರು: “ಆದರೆ, ಅವನನ್ನು ಅಲಂಕರಿಸಿ, ಅರ್ಚಿಸಿ ನಾವು ಪುಣ್ಯ ಕಟ್ಟಿಕೊಳ್ಳೋದಲ್ಲವೆ?“.
ವಿಠಲಾಚಾರಿ ಸಮಾಧಾನದಿಂದಲೆ ಕೇಳಿದ,
“ಹೌದು ಸ್ವಾಮಿ, ಆದರೆ, ಅಂಥ ಸುಂದರವಾದ ಕಲ್ಲಿನ ವಿಗ್ರಹಕ್ಕೆ, ಹಿತ್ತಾಳೆ ತಗಡನ್ನು ಮುಚ್ಚೀದ್ದೀರಲ್ಲ, ಇದು ಅವನಿಗೆ ಬೇಕಿತ್ತಾ?“
ಶಾಮೈತಾಳರಿಗೆ, ವಿಠಲಾಚಾರಿಯ ಮಾತು ಅತಿಯೆನಿಸಿತು; ಅವರೆಂದರು:
“ಏನು ಮಾತು ವಿಠಲಾ, ನೀನು ಆಡತಾ ಇರೋದು? ಇದು ಬಂಗಾರದ ಮುಖವಾಡ; ಲಕ್ಷಾಂತರ ರೂಪಾಯದ್ದು! ಹರಿಭಟ್ಟರ ಮಗನೇ ಸ್ವತ: ಉಡುಪಿಗೆ ಹೋಗಿ ಬಂಗಾರದ್ದನ್ನೇ ಮಾಡಿಸಿಕೊಂಡು ಬಂದಿದ್ದಾನೆ; ನಿನಗೆ ಕಣ್ಣು ಮಂಜಾಗಿರಬೇಕು. ಇನ್ನೊದು ಸಾರಿ ನೋಡು“.
“ಸ್ವಾಮೀ, ನಾನು ನಿಮಗಿಂತ ಒಂದೆರಡು ವರ್ಷ ಚಿಕ್ಕವನಿರಬಹುದು; ಆದರೆ, ಇಂಥ ನೂರು ದೇವರುಗಳಿಗೆ ಮುಖವಾಡವನ್ನು ಎರಕ ಹೊಯ್ದುಕೊಟ್ಟವನು. ನೀವು ನನಗೆ ಅಪಮಾನ ಮಾಡಿ- ಅಡ್ಡಿಯಿಲ್ಲ. ಆದರೆ, ನನ್ನ ವೃತ್ತಿಗೆ ಅಗೌರವ ಮಾಡಬೇಡಿ-ದಯಮಾಡಿ“.
ಇಷ್ಟೂ ಹೊತ್ತೂ ವಿಠಲಾಚಾರಿಯ ಮಾತುಗಳಲ್ಲಿ ನೋವು ಇತ್ತೇ ವಿನ: ವ್ಯಂಗ್ಯವಾಗಲಿ, ಅಪಹಾಸ್ಯವಾಗಲಿ, ಸಿಟ್ಟಾಗಲಿ, ಇರಲಿಲ್ಲ; ಅವನ ಪ್ರಶ್ನೆಗಳಲ್ಲಿ, ನಿಖರವಾಗಿ ಉತ್ತರ ತಿಳಿದವರು ಮಾಡುವ ತನಿಖೆಯ ಧಾಟಿಯೂ ಇರಲಿಲ್ಲ. ಆದಾಗ್ಯೂ, ರಾಜೇಶ ಕಿರಿಕಿರಿಗೊಂಡ:
“ ಅಪ್ಪಯ್ಯ, ಬೆಳಗಾತು; ಇವತ್ತು ವಿಶೇಷ ಪೂಜೆ, ಹೋಮ ಬೇರೆ ಇದ್ದು; ಬ್ಯಾಗನೆ ಮನೀಗೆ ಹೋಗಿ ಸ್ನಾನ ಮಾಡ್ಕಂಡು ಬನ್ನಿ; ಈ ಪಿರ್ಕಿ ಹತ್ರ ಎಂತಾ ಮಾತು?“
ರಾಜೇಶನ ಮಾತು ಮುಗಿಯುತ್ತಿದ್ದಂತೆಯೇ ವಿಠಲಾಚಾರಿಯ ಕಾಲುಗಳು ಗರ್ಭಗುಡಿಯ ಒಳಗಿದ್ದವು. ಅವನು ತನ್ನ ಎರಡೂ ಕೈಗಳಿಂದ ಒಮ್ಮೆಲೇ ಶನೀಶ್ವರನ ಮುಖವಾಡವನ್ನು ಕೈಗೆತ್ತಿಕೊಂಡು ಹರಿಭಟ್ಟರ ಮುಖಕ್ಕೆ ಹಿಡಿದು ಹೇಳಿದ:
“ಅಂಥ ಸುಂದರವಾದ ಮೂರ್ತಿಯನ್ನು ಈ ಜುಜುಬಿ ಹಿತ್ತಾಳೆ ತಗಡಿನಲ್ಲಿ ಮುಚ್ಚಿ, ‘ಬಂಗಾರದ್ದು‘ ಅಂತಿದ್ದೀರಲ್ಲ; ಈ ವಯಸ್ಸಿನಲ್ಲಿ ನಿಮ್ಮಂಥವರು ಮಾಡೋ ಕೆಲಸವಾ ಇದು?“.
ಸುತ್ತು-ಮುತ್ತ ನಿಂತಿದ್ದ ಹಿರಿಯರಿಗೆ ಆ ಕೂಡಲೆ ಅವನ ಮಾತುಗಳು ಅರ್ಥವಾಗಲಿಲ್ಲ. ಗರ್ಭ
ಗುಡಿಯಲ್ಲಿದ್ದ ರಾಜೇಶನು ವಿಠಲಾಚಾರಿಯ ಕೈಯಿಂದ ಮುಖವಾಡವನ್ನು ಕಸಿದುಕೊಳ್ಳಲು ಹೊರಗೆ ನುಗ್ಗಿ ಬಂದ. ಆದರೆ, ಅಷ್ಟರಲ್ಲಿ ಅವನು ಆ ಮುಖವಾಡವನ್ನು ಹೊರಗೆ ಎಸೆದುಬಿಟ್ಟಿದ್ದ. ಅದು “ಡಣ್..ಡಣ್..“ ಎಂದು ಸದ್ದುಮಾಡುತ್ತಾ ದೇವಸ್ಥಾನದ ಒಂದೊಂದೇ ಸೋಪಾನದಿಂದ ಉರುಳುತ್ತಾ ಕೊನೆಗೆ ವರದಾ ನದಿಗೆ ಬಿದ್ದು ಮುಳುಗಿಹೋಯಿತು. ಇದರಿಂದ ರಾಜೇಶನ ಸಿಟ್ಟು ನೆತ್ತಿಗೇರಿತು: “ಥೂ! ದರಿದ್ರಗೆಟ್ಟವನೆ, ಅಂತಹ ಬಂಗಾರದ ಮುಖವಾಡವನ್ನು ಎಸೆದೆಯಲ್ಲ ನಿನಗೆ ರೌರವ ನರಕ ತಪ್ಪಿದ್ದಲ್ಲ-ನೋಡು“ ಎಂದು, ಅವನನ್ನು ಹೊಡೆಯಲು ಹೋದ. ಅಷ್ಟರಲ್ಲಿ ಅಲ್ಲಿದ್ದ ಹಿರಿಯರು ಅವನನ್ನು ತಡೆದರು. ವಿಠಲಾಚಾರಿ ಏನೂ ಮಾತಾಡದೆ ದೇವರ ಮೂರ್ತಿಯನ್ನೇ ನೋಡುತ್ತಿದ್ದ. ಆಗ, ಹರಿಭಟ್ಟರು, “ವಿಠಲಾ, ನಮ್ಮ ಮೇಲಿನ ಸಿಟ್ಟನ್ನು ದೇವರಮೇಲೆ ತೀರಿಸಿಕೊಳ್ಳೋದಲ್ಲ; ದೇವರೇನೂ ನಮ್ಮ ಖಾಸಗೀ ಸ್ವತ್ತೆ?“.
ಈಗಲೂ ವಿಠಲಾಚಾರಿ ಮಾತನಾಡಲಿಲ್ಲ. ರಾಜೇಶ ಏದುಸಿರಿನ ನಡುವೆ ಹೇಳಿದ:
“ವಿಠಲಾಚಾರಿ ಅದನ್ನು ಯಾಕೆ ನೀರಿಗೆ ಎಸ್ದ ಗೊತ್ತಾ? ತನ್ನ ಸುಳ್ಳನ್ನ ಮುಚ್ಚಿಕೊಳ್ಳೋಕೆ. ಒಟ್ಟು ಏನೋ ಹೇಳಿಕೊಂಡುಬಿಟ್ಟ-ಭಾರಿ ಬುದ್ಧಿವಂತನ ಹಾಗೆ. ಅದನ್ನ ಸಾಬೀತುಪಡಿಸಬೇಕಾಗುತ್ತೆ ಅಂತ ನೀರಿನಲ್ಲಿ ಮುಳುಗಿಸಿಬಿಟ್ಟ; ಇನ್ನು, ಅವನು ಹೇಳಿದ್ದೇ ಸತ್ಯವಾಗಿ ಉಳಿಯುತ್ತೆ, ನೋಡಿ?!“. ವಿಠಲಾಚಾರಿ ಒಮ್ಮೆ ದೇವರ ಕಡೆ ಮತ್ತೊಮ್ಮೆ ಹೊರಗೆ ನೋಡಿದನೇ ವಿನ: ಮಾತನಾಡಲಿಲ್ಲ. ಇವೆಲ್ಲದ್ದರಿಂದ ಮನನೊಂದ ಶಾಮೈತಾಳರು ಹೇಳಿದರು,
“ದೇವರಿಗೆ ಇಂಥ ಅಪಮಾನ ಮಾಡಬಾರದಿತ್ತು; ಇದರಿಂದ ಊರಿಗೆ ಒಳ್ಳೆಯದಾಗೋಲ್ಲ“.
ಈ ಮಾತನ್ನು ತಮಗೇ ಹೇಳಿದರೆಂದುಕೊಂಡು ಹರಿಭಟ್ಟರು ಹಾಗೂ ರಾಜೇಶ ಮುಖ-ಮುಖ ನೋಡಿಕೊಂಡರು. ವಿಠಲಾಚಾರಿಯು, ನಿಧಾನವಾಗಿ ದೇವಸ್ಥಾನದ ಹೊರಗೆ ಬಂದು, ಒಂದೊಂದೇ ಮೆಟ್ಟಿಲುಗಳನ್ನು ಇಳಿಯತೊಡಗಿದ. ಹಾಗೆ ಇಳಿಯುತ್ತಿದ್ದಂತೆ ಅವನ ಹೆಜ್ಜೆಗಳ ವೇಗ ಹೆಚ್ಚಾಗಿ, ಇನ್ನೇನು ನಾಲ್ಕಾರು ಮೆಟ್ಟಿಲುಗಳಿವೆ ಎನ್ನುವಷ್ಟರಲ್ಲಿ ‘ಚಂಗನೆ‘ ನೀರಿಗೆ ಹಾರಿಯೇಬಿಟ್ಟ. ಅಷ್ಟರ
ಲ್ಲಾಗಲೇ, ಶನೀಶ್ವರನ ಪೂಜೆಗೆಂದು ಭಕ್ತಾದಿಗಳೂ ನೆರೆದಿದ್ದರು. ನೋಡುನೋಡುತ್ತಿದ್ದಂತೆಯೇ, ವಿಠಲಾಚಾರಿ ನೀರಿನಲ್ಲಿ ಮುಳುಗಿಹೋದ. ಇನ್ನೇನು ಮುಳುಗಿಯೇ ಬಿಟ್ಟನೆಂದು ಜನರು ಅಂದುಕೊಳ್ಳುವಷ್ಟರಲ್ಲಿ, ಅವನು ತನ್ನ ಒಂದು ಕೈಯಿಂದ ಮುಖವಾಡವನ್ನೆತ್ತಿ, ಮೆಟ್ಟಿಲುಗಳ ಮೇಲೆ ಜೋರಾಗಿ ಎಸೆದ. ರಾಘವರಾಯರು ಮೆಟ್ಟಿಲುಗಳನ್ನಿಳಿದು ಅದನ್ನು ತೆಗೆದುಕೊಳ್ಳಲು ಬಗ್ಗಿದ್ದರಷ್ಟೆ, ರಾಜೇಶನು ರಭಸದಲ್ಲಿ ಬಂದು ಅದನ್ನು ತೆಗೆದುಕೊಂಡು ಅಷ್ಟೇ ವೇಗದಲ್ಲಿ ಗರ್ಭಗುಡಿಯ ಒಳಗೆ ತೂರಿಕೊಂಡು ಅದನ್ನು ಶನೀಶ್ವರನಿಗೆ ಹಾಕಿಯೇಬಿಟ್ಟ! ನೆರೆದಿದ್ದ ಭಕ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಕೆಲವರು ನೆತ್ತಿಯ ನೇರಕ್ಕೆ ತೂಗುತ್ತಿದ್ದ ಘಂಟೆಗಳತ್ತ ಕೈಗಳನ್ನೆತ್ತಿ ಸೇವೆಸಲ್ಲಿಸಿದರು!
ಈ ಗದ್ದಲದ ನಡುವೆ ಯಾರೂ ವಿಠಲಾಚಾರಿಯನ್ನು ಲಕ್ಷಿಸಲೇ ಇಲ್ಲ. ಅಂದಿನ ಶನೀಶ್ವರನ ವಿಶೇಷ ಪೂಜೆಯ ನಂತರವೂ ಕೂಡ ಯಾರೂ ಅವನನ್ನು ನೋಡಲಿಲ್ಲ. ಆಮೇಲೆ ಜನರು ತಮ್ಮತಮ್ಮಲ್ಲೇ ಅಂದುಕೊಂಡರು: ‘ಅವನಿಗೆ ಒಮ್ಮೆ ಈಜಲು ಬರುತ್ತಿದ್ದರೆ ದಡ ಸೇರಿ ದೇಶಾಂತರ ಹೋಗಿರುತ್ತಾನೆ;ಅದಿಲ್ಲವಾದರೆ, ನದಿಯಲ್ಲಿ ಮುಳುಗಿ ವರದಾಂಬಿಕೆಗೆ ಆಹುತಿಯಾಗಿರುತ್ತಾನೆ-ಅಷ್ಟೆ!‘
ಇತ್ತೀಚೆಗಂತೂ ಶನೀಶ್ವರ ದೇವಸ್ಥಾನವು ತುಂಬಾ ಅಬಿsವೃದ್ಧಿಹೊಂದಿದೆ. ಈಗ ಅಲ್ಲಿ ಶನಿವಾರವಷ್ಟೇ ಅಲ್ಲ, ಎಲ್ಲಾ ದಿನಗಳಲ್ಲೂ ಭಕ್ತಾದಿಗಳು ಭಾರೀ ಸಂಖ್ಯೆಯಲ್ಲಿ ನೆರೆಯುತ್ತಾರೆ. ಕಳೆದ ವಾರವಷ್ಟೆ ಮುಜರಾಯಿ ಮಂತ್ರಿಗಳು ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದರು. ಮುಂದಿನ ತಿಂಗಳಿನಿಂದ, ಯಾತ್ರಾರ್ಥಿಗಳಿಗಾಗಿ ವಿಶೇಷ ಬಸ್ಸು, ಬೆಂಗಳೂರಿನಿಂದ ಹೊರಟು, ಈ ದೇವಸ್ಥಾನದ ಎದುರೇ ಬಂದು ನಿಲ್ಲುತ್ತದೆ. ಹೋಮ-ಹವನ, ವಿಶೇಷ ಪೂಜೆ ಮಾಡಿಸುವವರು ಮುಂಚಿತವಾಗಿಯೇ ದೇವಸ್ಥಾನದ ಆಡಳಿತಾದಿsಕಾರಿಗಳಿಗೆ ಬರೆದುಕೊಳ್ಳಬೇಕು. ಅಥವಾ ಅಂತರ್ಜಾಲದಲ್ಲಿ, ‘ರಾಜೇಶ್ವರ ಎಟ್ ಇಂಡಿಯಾ ಡಾಟ್ ಕಾಮ್‘ ನಲ್ಲೂ ಸಂಪರ್ಕಿಸಬಹುದು.
*****
ಈ ಕತೆಗಳ ಸಹವಾಸವೆ ಸಾಕು – ಸಂಕಲನದಿಂದ
ಕೃಪೆ: ಛಂದ ಪುಸ್ತಕ