ಬಿಡುಗಣ್ಣ ಬಾಲೆ

ಬಿಡುಗಣ್ಣ ಬಾಲೆ ನೀನಾವ ಬೆಳುದಿಂಗಳನು
ಬಂಧಿಸಿಹೆ ಕಣ್ಣ ನುಣ್ಪೊಗರಿನಲ್ಲಿ?
ಹೂಬಟ್ಟಲಿಂದ ಹಿಂದಿರುಗುತಿಹ, ಝೇಂಕಾರ
ಗೈಯುತಿಹ ಭೃಂಗ ಕಣ್ಣಾಲಿಯಲ್ಲಿ.

ಅಮಿತ ಸುಖ ಸೂಸುತಿದೆ ನವನವೋನ್ಮೇಷದಲಿ
ನೋಟ ನಿಬ್ಬೆರಗಿನಲಿ, ನೀರವದಲಿ;
ದಿವ್ಯ ಬಯಕೆಯ ಹಣ್ಣು ಹಾಲಾಗಿ ಜೇನಾಗಿ
ಸುರಿಯುತಿದೆ ನುಣ್ಗದಪಿನಾಸರೆಯಲಿ.

ಕಣ್ಣೆವೆಗಳೆತ್ತುತಿರೆ: ನವಿಲುಗರಿ ಛಾಯೆಯೋ
ಮೇಣದರ ಮಾಯೆಯೋ, ಲಾಸ್ಯವೇನೊ;
ತಂಗೊಳದ ತಡಿಯಿಂದ ತೂರಿಬಹ ತಂಬೆಲರೊ
ಎದೆಗಲಂಪಿನ ಪೆಂಪ ಪೂಸುತಿಹುದು.

ಲಾಲಿತ್ಯ ಲತೆಯಾಗಿ ತುಟಿಗಳಲಿ ಪಲ್ಲವಿಸಿ
ಗಲ್ಲದಲಿ ಹೂವಾದ ರೂಹಾಗಿದೆ;
ಇಲ್ಲದಿರೆ ಲಾವಣ್ಯದಗ್ಗಳಿಕೆಯೆರಕದಲಿ
ಚೆಲುವಿಕೆಯ ಚರಸುಧಾಮೂರ್ತಿಯಾದೆ.

ಬಿಡುಗಣ್ಣ ಕಡೆಯಂಚಿನಂಚಿನಾಕಡೆಯಲ್ಲಿ
ಏನಿಹುದು! ಏನಿಹುದು? ಬಲ್ಲರಾರು;
ಬಾಳ ತೊಳೆತೊಳದು ಬೆಳಬೆಳಗಿಸುವ ಕಾಂತಿಯೋ
ಧೃತಿಗೆಡದ ದೀಧಿತಿಯೊ, ಪಡೆದರಾರು?
*****