ಕನ್ನಡ ಸಾಹಿತ್ಯ ಪರಿಷತ್: ಮರುಹುಟ್ಟು ಯಾಕೆ ಬೇಕು?

ಕನ್ನಡ ಸಾಹಿತ್ಯ ಪರಿಷತ್ ಕಳೆದ ಶತಮಾನದ ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿ ಬೆಳೆದ ಸಂದರ್ಭಕ್ಕೂ ಈಗ ೨೦೦೨ನೇ ಇಸವಿಯಲ್ಲಿ ನಡೆಯುತ್ತಿರುವ ೬೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಮ್ಮ ನಾಡಿನ ಸಾಂಸ್ಕೃತಿಕ ಅವಶ್ಯಕತೆಗೂ ಇರುವ ವ್ಯತ್ಯಾಸವನ್ನು ಗ್ರಹಿಸದೆ ಸಾಹಿತ್ಯ ಪರಿಷತ್ ಬಗ್ಗೆ ಮಾಡುವ ಟೀಕೆಯೂ ಅರ್ಥಪೂರ್ಣವಾಗಲಾರದು. ಒಂದು ಸಂಸ್ಥೆ ದಶಕಗಳ ಕಾಲ ಬೆಳೆಯುತ್ತಾ ಬರಬೇಕಾದರೆ ಅದು ಕೇವಲ ಸರಕಾರಿ ಸಂಪರ್ಕದಿಂದ ಮಾತ್ರ ಸಾಧ್ಯವಿಲ್ಲ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜನರೊಂದಿಗೆ ಒಡನಾಟವಿಲ್ಲದೆ ಸಂಸ್ಥೆಯೊಂದು ಬೆಳೆಯಲಾರದು. ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಸಂದರ್ಭದಲ್ಲೂ ಶ್ರೇಷ್ಠತೆಯೇ ಜಯಗೊಳಿಸುತ್ತದೆ ಎಂದೂ ನಂಬಬೇಕಿಲ್ಲ. ಹೀಗೆ ಶ್ರೇಷ್ಠತೆಯನ್ನು ಕಡೆಗಣಿಸುವುದೂ ಕೆಲವೊಮ್ಮೆ ಪ್ರಭು ವರ್ಗವನ್ನು (ಅರಿಸ್ಟಾಕ್ರಸಿ) ನಿಯಂತ್ರಿಸುವ ಪ್ರಜಾಪ್ರಭುತ್ವದ ಕ್ರಮವೂ ಆಗಿ ಪರಿಣಮಿಸುತ್ತದೆ.

ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟುವ ಕಾಲದ ಆದರ್ಶ ಇಂದಿನ ಗುರಿ ಅಲ್ಲ. ಡಿ.ವಿ.ಜಿ ಅವರ ಜ್ಞಾಪಕ ಚಿತ್ರ ಶಾಲೆಯನ್ನು ಓದಿದರೆ ಎ.ಆರ್. ಕೃಷ್ಣಶಾಸ್ತ್ರಿ, ಬೆಳ್ಳಾವೆ, ಟಿ.ಎಸ್ ವೆಂಕಣ್ಣಯ್ಯ ಇವರೆಲ್ಲಾ ಯಾವ ಕ್ರಮದಲ್ಲಿ ಪರಿಷತ್ತನ್ನು ಕಟ್ಟಲು ದುಡಿದರು, ಕನ್ನಡದ ಜೊತೆ ಒಂದು ನಾಡನ್ನು ಕಟ್ಟಲು ಕನ್ನಡದ ಅನೇಕ ಹಿರಿಯ ಚೇತನಗಳು ಹೇಗೆ ದುಡಿದರು, ನಿಸ್ವಾರ್ಥದಿಂದ ಒಂದು ಆದರ್ಶಕ್ಕಾಗಿ ಯಾವೆಲ್ಲ ರೀತಿ ಶ್ರಮ ವಹಿಸಿದರು ಎಂಬುದೂ ತಿಳಿಯುತ್ತದೆ.

ಬರಹಗಾರರು ಇರುವ ಸಂಸ್ಥೆ ನಿರಂತರವಾಗಿ ಒಂದು ಒತ್ತಡವನ್ನು ಎದುರಿಸಬೇಕಾಗುತ್ತದೆ. ಏಕಾಂತದಲ್ಲಿ ಸೃಷ್ಟಿಗೊಳ್ಳುವ ಬರವಣಿಗೆಯ ಅಂತರಂಗದ ಅವಶ್ಯಕತೆಗೂ ಜನರನ್ನು ಒಡಗೊಂಡಿರುವ ಸಮ್ಸ್ಥೆಯ ಬಾಹ್ಯ ಸಂಘಟನಾ ಅವಶ್ಯಕತೆಗೂ ಇರುವ ವ್ಯತ್ಯಾಸದಲ್ಲೆ ಈ ಒತ್ತಡ ನಿರ್ಮಾಣವಾಗುತ್ತದೆ. ಸಾಧಿಸಬೇಕಾದ ಆದರ್ಶ, ಅನಿವಾರ್ಯವಾದೊಂದು ಸಾಂಸ್ಕೃತಿಕ ಸಂದರ್ಭ, ಇನ್ನಾರದೋ ಸಂಘಟನಾ ಚಾತುರ್ಯದ ನಾಯಕತ್ವ, ಹೀಗೆ ಅನೇಕ ಚಾರಿತ್ರಿಕ, ಸಾಂದರ್ಭಿಕ ಅನಿವಾರ್ಯತೆಯ ಶಿಶುವಾಗಿ ಅನೇಕ ಸಲ ಸಂಸ್ಥೆಗಳು ಬೆಳೆಯುತ್ತವೆ. ಇದನ್ನೆ ೬೯ನೇ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಯು.ಆರ್.ಅನಂತಮೂರ್ತಿಯವರು ೧೯೯೭ರಷ್ಟು ಹಿಂದೆಯೆ ಕನ್ನಡ ಸಾಹಿತ್ಯ ಪರಿಷತ್ ವಜ್ರ ಮಹೋತ್ಸವ ಆಚರಿಸಿದ ಸಂದರ್ಭದಲ್ಲಿ ಹೇಳಿದ್ದಾರೆ.

ಏಕಾಂಗಿತನ

ಬರಹಗಾರನೊಬ್ಬನ ‘ಏಕಾಂಗಿತನ’ದ ಶಕ್ತಿ ಅವನ ಸೃಜನಶೀಲತೆಯ ಹಿನ್ನೆಲೆಯಲ್ಲಿ ಇರುತ್ತದೆ. ಏಕಾಂಗಿತನದಲ್ಲಿ ಸೃಷ್ಟಿಕಾರ್ಯ ನಡೆದರೂ, ಇದನ್ನು ಜನರಿಗೆ ತಲುಪಿಸಬೇಕು, ಸಮಾಜ ಒಳ್ಳೆಯ ಸಾಹಿತ್ಯವನ್ನು ಸ್ವೀಕರಿಸಬೇಕು ಎಂಬ ಪ್ರಜ್ಞೆ ಲೇಖಕನನ್ನು ಸಾಮಾಜಿಕನನ್ನಾಗಿ ಮಾಡುತ್ತದೆ. ಭಿನ್ನಾಭಿಪ್ರಾಯದ ಸಂವಾದವೇ ಸಾಹಿತ್ಯ ವಿಮರ್ಶೆಯ ಚಲನಶೀಲತೆ. ಆದ್ದರಿಂದ ಲೇಖಕನಿಗೆ ಸಾಹಿತ್ಯವನ್ನು ಜೀವಂತವಾಗಿಡಲು ಅಪ್ರಿಯವಾಗಿ ನಡೆದುಕೊಳ್ಳುವ ಧೈರ್ಯವಿರಬೇಕಾಗುತ್ತದೆ.

ಆದರೆ ವಜ್ರಮಹೋತ್ಸವದ ಸಂದರ್ಭದಲ್ಲಿ ಆಡಳಿತ ವರ್ಗದ ಜೊತೆ ಅಪ್ರಿಯವಾಗಬಲ್ಲ ಧೈರ್ಯ ಪರಿಷತ್ತಿಗೆ ಇಲ್ಲ ಎಂಬುದೇ ಅನಂತಮೂರ್ತಿಯವರ ಆಕ್ಷೇಪವಾಗಿತ್ತು. ಪರಿಷತ್ತು ಹುಟ್ಟಿದ ಸಂದರ್ಭದಲ್ಲಿ ಕನ್ನಡದ ಅಗತ್ಯಕ್ಕಾಗಿ ಅಪ್ರಿಯವಾಗಬಲ್ಲ ಧೈರ್ಯ ಹೊಂದಿತ್ತು. ಮಹಾರಾಷ್ಟ್ರದ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಸರ್ವಾಧಿಕಾರದ ವಿರುದ್ಧ ಶ್ರೀಮತಿ ದುರ್ಗಾ ಭಾಗವತ ಅಧ್ಯಕ್ಷ ಸ್ಥಾನದಿಂದ ಆಡಿದ ಮಾತುಗಳನ್ನು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಮ್ಮ ಸಂಸ್ಥೆಗಳಿಂದ ಆಡುವುದು ಸಾಧ್ಯವಾಗದಿದ್ದುದು ಶೋಚನೀಯ ಎಂದು ಅನಂತಮೂರ್ತಿಯವರು ಪರಿಷತ್ತಿನ ಬಗ್ಗೆ ಆಗ ಹೇಳಿದ ಮಾತುಗಳು:

‘ಉತ್ಸಾಹಶೀಲರಾದ ಪರಿಷತ್ತಿನ ಅಧ್ಯಕ್ಷ ಶ್ರೀ.ಜಿ. ನಾರಾಯಣರು ನಿಘಂಟು ಇತ್ಯಾದಿ ಕೆಲಸಗಳನ್ನು ಸಾಧ್ಯವಿದ್ದಷ್ಟು ದಕ್ಷತೆಯಿಂದ ಮಾಡುತ್ತಿಲ್ಲವೆಂದಲ್ಲ. ಆದರೆ ಅವರು ನಮ್ಮ ರಾಜಕಾರಣಿಗಳನ್ನು ಇದಕ್ಕಾಗಿ ಅನುಸರಿಸಬೇಕಾದ್ದನ್ನು ಗಮನಿಸಿದಾಗ ಬೇಸರವಾಗುತ್ತದೆ. ಆಗಬೇಕಾದ ಕೆಲಸಕ್ಕೆ ಇಷ್ಟೆಲ್ಲ ರಾಜಕಾರಣ ಪ್ರಜಾತಂತ್ರದಲ್ಲೂ ಅಗತ್ಯವೆ? ಶ್ರೀ.ಜಿ. ನಾರಾಯಣರು ಹೆಚ್ಚು ಸ್ವತಂತ್ರರಾಗಬೇಕೆಂದು ಲೇಖಕರು ಈ ವಜ್ರಮಹೋತ್ಸವ ಸಂದರ್ಭದಲ್ಲಿ ಒತ್ತಾಯಪಡಿಸಬೇಕು. ಅದು ಅವರಿಗೂ ಒಳ್ಳೆಯದು. ಪರಿಷತ್ತಿಗೂ ಒಳ್ಳೆಯದು.’

ಎಚ್ಚರಿಕೆಯ ಘಂಟೆ

ಸಾಂಸ್ಕೃತಿಕ ರಾಜಕಾರಣವನ್ನು ಪ್ರಭುತ್ರ ಸದಾ ಕಿರುಗಣ್ಣಿನ ಪರೀಕ್ಷೆಯಲ್ಲಿ ಇಟ್ಟಿರುತ್ತದೆ. ಪ್ರಭುತ್ವದ ತೋರುಗಾಣುವಿಕೆಗೆ, ಬೌದ್ಧಿಕವಲಯದ ಪರೋಕ್ಷ ನಿಯಂತ್ರಣಕ್ಕೆ ಇದು ಆಡಳಿತದ ಅವಶ್ಯಕತೆ, ಆದರೆ ಆಮಿಶಗಳನ್ನು ಮೀರಿ ಸಾಂಸ್ಕೃತಿಕ ವಲಯ ಸದಾ ಸನ್ನದ್ಧ ಜಾಗ್ರತ ಸ್ಥಿತಿಯಲ್ಲಿರಬೇಕಾಗುತ್ತದೆ. ಹಾಗಾಗದಾಗ ಚಿಂತನಶೀಲರು ಎಚ್ಚರಿಕೆಯ ಘಂಟೆಯನ್ನು ಬಾರಿಸುವುದು ಅನಿವಾರ್ಯ. ಇಂತಹ ಎಚ್ಚರಿಕೆಯ ಘಂಟೆಗಳನ್ನು ಬಾರಿಸಿದವರು ಸಂಸ್ಥೆಗಳನ್ನು ತಿರಸ್ಕರಿಸಿದ್ದಾರೆ ಎಂದು ಭಾವಿಸಬೇಕಾಗಿಲ್ಲ. ಫೊ. ಗೋಪಾಲಕೃಷ್ಣ ಅಡಿಗ, ಡಾ ಯು.ಆರ್. ಅನಂತಮೂರ್ತಿ, ಡಾ. ಚಂದ್ರಶೇಖರ ಪಾಟೀಲ ಇವರು ಮತ್ತು ಇಂತಹ ಅನೇಕರು ಪರಿಷತ್ತಿನ ಸಂದರ್ಭದಲ್ಲಿ ಎಚ್ಚರಿಕೆಯ ಘಂಟೆಯನ್ನು ಬಾರಿಸುತ್ತಾ ಬಂದಿದ್ದಾರೆ. ಡಾ. ಪಾಟೀಲರು ಬಳಿಕ ಪರಿಷತ್ತಿನ ಅಧ್ಯಕ್ಷ ಪದವಿಗೆ ಸ್ಪರ್ಧಿಸಿದರು. ಡಾ. ಅನಂತಮೂರ್ತಿ ಈ ಸಲದ ಅಧ್ಯಕ್ಷರು. ೧೯೭೯ರಲ್ಲಿ ಧರ್ಮಸ್ಥಳದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಫ್ರೊ. ಗೋಪಾಲಕೃಷ್ಣ ಅಡಿಗರು ತಮ್ಮ ಭಾಷಣದ ಮೊದಲಿಗೆ ಹೀಗೆ ಹೇಳಿದರು:

‘ಅಧ್ಯಕ್ಷನಾಗಿ ಆಯ್ಕೆ ಅನಿರೀಕ್ಷಿತ ಪ್ರಸಂಗ. ಅದನ್ನು ಒಂದು ಗೌರವವೆಂದು, ಕನ್ನಡ ಜನತೆ ತೋರಿದ ಮನ್ನಣೆಯೆಂದು ಭಾವಿಸಿ ವಿನಯದಿಂದ ಸ್ವೀಕರಿಸಿದ್ದೇವೆ. ನಮ್ಮ ದೇಶದಲ್ಲಿ ಯಾವುದೂ ಈಗ ಯೋಗ್ಯತೆಯ ತೂಕದ ಮೇಲೆ ನಡೆಯುತ್ತಿಲ್ಲವಾಗಿ ಸಾಹಿತ್ಯವೂ ಈ ಸಾಮಾನ್ಯ ಸೂತ್ರಕ್ಕೆ ಹೊರತಾಗಿಲ್ಲವಾದ್ದರಿಂದ ಇದು ನಿಜವಾದ ಯೋಗ್ಯತೆಗೆ ಸಂದ ಗೌರವವೋ ಎಂಬ ಸಂದೇಹಕ್ಕೆ ಆಸ್ಪದವಿದೆ…..ಜನಶಕ್ತಿಯ ಮುಂದೆ ಈ ಜಗತ್ತಿನಲ್ಲಿ ಇನ್ನು ಯಾವ ಶಕ್ತಿಯೂ ಇಲ್ಲ. ಅದೃಶ್ಯ ಶಕ್ತಿಗಳು ಕೆಲಸ ಮಾಡುವುದು ಜನಶಕ್ತಿಗಳ ಮೂಲಕವೇ’.

ಅದೃಶ್ಯಶಕ್ತಿಗಳ ವೇದಿಕೆ

ಇಂದು ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ಅದೃಶ್ಯ ಶಕ್ತಿಗಳ ವೇದಿಕೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡಲು ಶಕ್ತವೇ ಎಂಬುದು ಮುಖ್ಯ ಪ್ರಶ್ನೆ. ಸಾಹಿತ್ಯ ಸಮ್ಮೇಳನದಲ್ಲಿ ಜಾತ್ರೆಯ ರೀತಿ ಜನ ಸೇರುತ್ತಾರೆ. ಸಾಮಾನ್ಯ ಓದುಗರ ಉತ್ಸಾಹ, ಉಲ್ಲಾಸ, ಉಮೇದುಗಳು, ಹರಳುಗತ್ಟುತ್ತವೆ. ದೂರದ ಊರಿನವರಿಗೆ ಹೆಸರು ಕೇಳಿದ, ಓದಿ ಮಾತ್ರ ತಿಳಿದ ಎಷ್ಟೋ ಸಾಹಿತಿಗಳನ್ನು ನೋಡುವ; ಅವರ ಮಾತು ಕೇಳುವ ಅವಕಾಶವಾಗುತ್ತದೆ. ನಾನು ಒಂಬತ್ತನೇ ಕ್ಲಾಸಿನಲ್ಲಿ ಓದುತ್ತಿದ್ದಾಗ ನಮ್ಮ ಊರಿನಿಂದ ಎರಡು ತಾಲ್ಲೂಕುಗಳ ಆಚೆ ಇದ್ದ ಕಾರ್ಕಳದಲ್ಲಿ ನಡೆದ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ದಿ.ಜಿ.ಪಿ.ರಾಜರತ್ನಂ ಬರುತ್ತಾರೆ ಎಂದು ಬಹುಕಷ್ಟಬಿದ್ದು ಹೋದ್ದು ಇನ್ನೂ ನೆನಪಿದೆ. ರಾಜರತ್ನಂ ಅವರನ್ನು ನೋಡುವುದು ಅವರ ಭಾಷಣ ಕೇಳುವುದೇ ಆ ಪ್ರಯಾಣದ ಮುಖ್ಯ ಉದ್ದೇಶ. ಆ ತನಕ ನಾನು ರಾಜರತ್ನಂ ಅವರನ್ನು ನೋಡಿರಲಿಲ್ಲ.

ಸಾಹಿತ್ಯ ಸಮ್ಮೇಳನ ಒಂದು ಜಾತ್ರೆ ರೀತಿಯಲ್ಲಿ ಬಹುಶಃ ನಮ್ಮ ದೇಶದಲ್ಲಿ ಮಾತ್ರ ನಡೆಯುವುದೋ ಏನೋ. ಆದರೆ ಜನ ಹೀಗೆ ಉಲ್ಲಸಿತರಾಗಿ ಸೇರುವ ಅವಕಾಶ ಸಮಂಜಸ ಸಂವಹನಕ್ಕೆ ಬಳಕೆಯಾದರೆ ಚೆನ್ನ ಎಂದು ಪರಿಷತ್ತನ್ನು ಟೀಕಿಸುವವರೂ ಹೇಳುತ್ತಾರೆ. ಅನಂತಮೂರ್ತಿಯವರು ಈ ಬಾರಿ ಅಧ್ಯಕ್ಷರಾದುದನ್ನು ತಮ್ಮ ಇತ್ತೀಚಿನ ಲೇಖನದಲ್ಲಿ ಪ್ರಸ್ತಾಪಿಸುತ್ತಾ ವಿಚಾರವಾದಿ ಪ್ರೊ.ಕೆ.ರಾಮದಾಸ ಅವರೂ ಕೂಡಾ ಹೀಗೆ ಒಟ್ಟಾಗಿ ಜನ ಸೇರುವ ಅವಕಾಶವನ್ನು ಹೇಗೆ ಜನೋಪಯೋಗಿ ಸಂವಹನ ಸಾಧ್ಯತೆಯಾಗಿ ಬಳಸಿಕೊಳ್ಳಬಹುದು ಎಂದು ಚಿಂತಿಸುತ್ತಾರೆ.

ಅನಂತಮೂರ್ತಿಯವರನ್ನು ಕಳೆದವಾರ ದೂರದರ್ಶನಕ್ಕಾಗಿ ಸಂದರ್ಶಿಸುವಾಗ, ಸಮ್ಮೇಳನದಲ್ಲಿ ಹೀಗೆ ಜನ ಜಾತ್ರೆ ನೆರೆದಾಗ ಹೇಳಬೇಕಾದ್ದನ್ನು ಬಹಳ ತೆಳ್ಳಗೆ ಮಾಡಿ (ಆi-ಟuಣe) ಹೇಳಬೇಕಾದ ಒತ್ತಾಡ ಉಂಟಾಗುವುದಿಲ್ಲವೆ ಎಂದು ಕೇಳಿದೆ. ಅನಂತಮೂರ್ತಿಯವರ ಚಿಂತನೆ ಆ ನಿಟ್ಟಿನಲ್ಲಿ ನಿರ್ಧಿಷ್ಟ. ಹೇಳಬೇಕಾದ್ದನ್ನು ಹೇಳಬೇಕಾದ ಸ್ಪಷ್ಟತೆಯಲ್ಲಿ ಹೇಳಬೇಕು. ಅದರಲ್ಲಿ ಸ್ವಲ್ಪ ಎಲ್ಲರಿಗೂ ತಲುಪುತ್ತದೆ. ಹೇಳಿದ ವಿಚಾರ ಅಷ್ಟು ಜನರಲ್ಲಿ ಕೆಲವರಿಗಾದರೂ ಗಾಢವಾಗಿ ತಟ್ಟಿದರೆ ವಿಚಾರ ಪ್ರವಾಹ ಪ್ರಾರಂಭವಾದಂತೆ. ಜನರಿಗೆ ತಿಳಿವಳಿಕೆ, ಮಾಹಿತಿ ನೀಡಿ, ಅವರನ್ನು ಸನ್ನದ್ಧರಾಗಿ ಮಾಡುವುದೂ ಒಂದು ಅವಶ್ಯಕತೆ ಎಂದ ಅನಂತಮೂರ್ತಿ, ದಿವಂಗತ ಗೋಪಾಲಗೌಡರು ತಮ್ಮ ಭಾಷಣಗಳಲ್ಲಿ ತೀರಾ ಮುಗ್ಧ ಜನರಿಗೆ ಯಾವ ರೀತಿ ಡಾರ್ವಿನ್ನನ ವಿಕಾಸವಾದದಿಂದ ತಮ್ಮ ಭಾಷಣವನ್ನು ಪ್ರಾರಂಭಿಸುತ್ತಿದ್ದರು ಎಂಬ ವಿವರ ನೀಡಿದರು. ಜನರಲ್ಲಿ ವೈಚಾರಿಕತೆಯನ್ನು ಮೂಡಿಸಲು ನಾಯಕನೊಬ್ಬ ಅನುಸರಿಸುತ್ತಿದ್ದ ಅನೇಕ ಮಾರ್ಗಗಳಲ್ಲಿ ಅದೂ ಒಂದು. ಹಾಗೆಯೇ ಲೇಖಕನೊಬ್ಬನೂ ನಾಗರಿಕನಾಗಿ ಸಮಾಜಕ್ಕೆ ಸಲ್ಲಿಸಬೇಕಾದ ಕರ್ತವ್ಯಗಳಿವೆ. ಅದನ್ನು ಪೂರೈಸುವುದೂ ಲೇಖಕನೊಬ್ಬನ ಕರ್ತವ್ಯ ಎಂದು ಅನಂತಮೂರ್ತಿ ಭಾವಿಸುತ್ತಾರೆ.

ಜಾಗತೀಕರಣದ ಸಂದರ್ಭ

ಬಹುಶಃ ಇಂದಿನ ಜಾಗತೀಕರಣದ ಸಂದರ್ಭ ನಮ್ಮ ಸಾಂಸ್ಕೃತಿಕ ಬೇರುಗಳನ್ನು ಅಲ್ಲಾಡಿಸುತ್ತಿವೆ. ಜಗತ್ತಿನಾದ್ಯಂತ ಇಂದಿನ ಸಂಪರ್ಕ ಸಾಧನಗಳ ಸಹಾಯದಿಂದ ಒಂದೇ ಮಟ್ಟವನ್ನೂ ಒಂದೇ ಸಂಸ್ಕೃತಿಯ ಹರಹನ್ನೂ ತರಲು ಅದು ಪ್ರಯತ್ನಿಸುತ್ತದೆ. ಕನ್ನಡ ಸಂಸ್ಕೃತಿಯೂ ಈ ಧಾಳಿಗೆ ಹೊರತಲ್ಲ. ಅಂತಹ ಒಂದು ಜಾಗತೀಕರಣದ ಸಾಂಸ್ಕೃತಿಕ ಧಾಳಿಯನ್ನು ಎದುರಿಸಲು ಸಾಹಿತ್ಯ ಸಮ್ಮೇಳನದಂತಹ ಸಂದರ್ಭಗಳನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಲು ಸಾಧ್ಯ ಎಂದು ನಾವು ಈಗ ಚಿಂತಿಸುವ ಕಾಲ ಬಂದಿದೆ. ಏಕರೂಪಿ ಸಂಸ್ಕೃತಿಯ ಪ್ರಭಾವವನ್ನು ತಡೆಯಲು ಅದೃಶ್ಯ ಜನಶಕ್ತಿಯ ವೇದಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವ ಅಗತ್ಯ ಇಂದು ಹೆಚ್ಚಿದೆ.

ಒಂದು ಆರೊಗ್ಯವಂತ ಸಾಂಸ್ಕೃತಿಕ ಸಂದರ್ಭದಲ್ಲಿ ಭಿನ್ನಾಭಿಪ್ರಾಯ, ಘರ್ಷಣೆಗಳು ಅನಿವಾರ್ಯ. ಅದು ಆರೋಗ್ಯಕಾರಿ ವಿಮರ್ಶಾ ಪ್ರಜ್ಞೆಯನ್ನು ಬೆಳೆಸಬೇಕು. ಸಂಸ್ಥೆಯೊಂದರ ಸಂದರ್ಭದಲ್ಲೂ ಅದು ನಡೆದಿದೆ. ನಡೆಯುತ್ತದೆ. ಸಾಹಿತ್ಯ ಪರಿಷತ್ತಿನ ಸಂದರ್ಭದಲ್ಲೇ ಇಂತಹ ಅನೇಕವನ್ನು ಪಟ್ಟಿ ಮಾಡಬಹುದು.

೧. ಕಡೆಂಗೋಡ್ಲು ಶಂಕರ ಭಟ್ಟರು ಅಧ್ಯಕ್ಷರಾಗಿದ್ದ ಕಾರವಾರ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರು ನವ್ಯ ಸಾಹಿತ್ಯದ ಮೇಲೆ ಹರಿಹಾಯ್ದರು. ಸಿಂಹದ ಗವಿಯನ್ನು ಪ್ರವೇಶಿಸುವ ಬಲಿ ಪಶುವಿನಂತೆ ಆ ಸಂದರ್ಭದಲ್ಲಿ ಮಾತನಾಡಿದವರು ಡಾ.ಬಿ.ಸಿ.ರಾಮಚಂದ್ರ ಶರ್ಮರು. ಇತ್ತೀಚೆಗೆ ಜಿ.ಎಚ್ ನಾಯಕರು ಬರೆದ ಒಂದು ಲೇಖನದಲ್ಲಿ ಆ ಬಳಿಕ, ಅದೇ ಸಮ್ಮೇಳನದಲ್ಲಿ ಡಾ. ಶಿವರಾಮ ಕಾರಂತರು ಬೇಂದ್ರೆಯವರ ವಿಚಾರವನ್ನು ಒಪ್ಪದೆ ಯಾವ ರೀತಿ ಉತ್ತರ ನೀಡಿದರು ಎಂದು ತಿಳಿಸಿದ್ದಾರೆ.

೨. ಅ.ನ.ಕೃ.ಅವರು ಅಧ್ಯಕ್ಷರಾದ ಮಣಿಪಾಲ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲೂ ವಿವಾದ ಉಂಟಾಯಿತು. ಕೀರ್ತನ ಕೇಸರಿ ಶ್ರೀ ಶಿವಮೂರ್ತಿಶಾಸ್ತ್ರಿಗಳು ಪರಿಷತ್ತಿನ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದರು.

೩. ದೇ.ಜ.ಗೌ. ಬೆಂಗಳೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಅಸಮಧಾನದ ಹೊಗೆಯೆದ್ದಿತು. ಲಂಕೇಶ್ ಮೊದಲಾದವರು ಕರಪತ್ರ ಇತ್ಯಾದಿ ಹಂಚಿದರು. ಆಯ್ಕೆಯ ಮೂಲ್ಯಮಾಪನವನ್ನು ಗುರಿಯಾಗಿಟ್ಟುಕೊಂಡು ಅಡಿಗರು ಒಂದು ಲೇಖನ ಬರೆದರು. ವೈ.ಎನ್.ಕೆ.ಆಗ ಪ್ರಜಾವಾಣಿಯಲ್ಲಿದ್ದರು. ಪ್ರಜಾವಾಣಿ ಲೇಖನಗಳು ಪರ ವಿರೋಧ ಘರ್ಷಣೆಗೆ ವೇದಿಕೆಯಾಯಿತು.

೪. ಅಡಿಗರು ಧರ್ಮಸ್ಥಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರು. ಅದನ್ನು ಪ್ರತಿಭಟಿಸಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಿತು.

೫. ಆರ್.ಸಿ.ಹಿರೇಮಠರು ಸಮ್ಮೇಳನದ ಅಧ್ಯಕ್ಷರಾದರು. ವಿರೋಧವಾಗಿ ‘ಜಾಗ್ರತ ಸಾಹಿತ್ಯ ಸಮಾವೇಶ’ವು ನಡೆಯಿತು. ಪರ್ಯಾಯವಾಗಿ ನಡೆದ ಜಾಗ್ರತ ಸಾಹಿತ್ಯ ಸಮಾವೇಶದಲ್ಲಿ ಕರ್ನಾಟಕದಾಧ್ಯಂತ ಇದ್ದ ಪ್ರಗತಿಪರ ಸಾಹಿತಿಗಳು, ಚಿಂತಕರ ಪರವಾಗಿ ಮುಂಚೂಣಿಯಲ್ಲಿ ಅನಂತಮೂರ್ತಿ, ಅಡಿಗ, ಲಂಕೇಶ್, ತೇಜಸ್ವಿ, ದೇವನೂರು, ಕೆ.ವಿ.ಸುಬ್ಬಣ್ಣ, ಡಿ.ಆರ್., ಕಿ.ರಂ., ಶೂದ್ರ ಶ್ರೀನಿವಾಸ, ಕೆ.ರಾಮದಾಸ, ಡಾ.ಸಿದ್ಧಲಿಂಗಯ್ಯ, ವೈದೇಹಿ ಮುಂತಾದವರು ಇದ್ದರು.

೬. ತುಮಕೂರು ಸಾಹಿತ್ಯ ಸಮ್ಮೇಳನಕ್ಕೆ ಡಾ.ಯು.ಆರ್. ಅನಂತಮೂರ್ತಿ ಅಧ್ಯಕ್ಷರಾಗಿ ಆಯ್ಕೆಯಾದರು ಅವರ ಆಯ್ಕೆಯ ಸುದ್ದಿ ಹೊರಬಿದ್ದ ಕ್ಷಣದಿಂದ ಒಂದಲ್ಲ ಒಂದು ವಿವಾದ, ಚರ್ಚೆ ನಡೆಯುತ್ತಲೇ ಇದೆ. ಆಯ್ಕೆ ಸರ್ವಾನುಮತ ಹೌದೋ ಅಲ್ಲವೋ ಎಂಬುದರಿಂದ ಉಂಟಾದ ವಿವಾದ ಒಂದಕ್ಕಿನ್ನೊಂದು ಸೇರಿ ಚರ್ಚೆ ಬೆಳೆಯುತ್ತಲೇ ಇದೆ. ಡಾ.ಆರ್.ಸಿ. ಹಿರೇಮಠರ ಬಗ್ಗೆ ಅನಂತಮೂರ್ತಿ ಹೇಳಿದರು ಎನ್ನಲಾದ ಮಾತಿನ ಬಗ್ಗೆ ಪ್ರೊ. ಚೆನ್ನವೀರ ಕಣವಿಯವರೂ ಸೇರಿದಂತೆ ಧಾರವಾಡ ಕಡೆಯ ಐವತ್ತು ಮಂದಿ ಬರಹಗಾರರು ಮತ್ತು ಸಾಹಿತ್ಯ ಪರಿಚಾರಕರು ವಿರೋಧಿಸಿ ಪತ್ರಿಕಾ ಹೇಳಿಕೆ ನೀಡಿದರು. ‘ಸಾಹಿತ್ಯ ಭಾಷೆಯ ಮೂಲಕ ಸಂಬಂಧಗಳನ್ನು ಆಚರಿಸುವ ಕ್ರಮವೇ ಸಮಷ್ಟಿರೂಪದ್ದು’. ಕನ್ನಡ ಪರಂಪರೆಯನ್ನು ತನ್ನ ಅನನ್ಯತೆಯಿಂದ ಒಂದುಗೂಡಿಸುವ ಪ್ರಕ್ರಿಯೆಯನ್ನು ತಮ್ಮ ಅಪ್ರಬುದ್ಧ ಜಾತಿ ಸೂತಕ ನೆಲೆಯಲ್ಲಿ ಐವತ್ತು ಮಂದಿ ಬರಹಗಾರರು ವಿರೋಧಿಸುವುದು ಸರಿಯಲ್ಲ ಎಂದು ಹಂಪಿಯಿಂದ ಡಾ. ಕರಿಗೌಡ ಬೀಚನಹಳ್ಳಿ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಹಾಗೂ ಇನ್ನೂ ಅನೇಕರು ತಮ್ಮ ಪ್ರತಿಕ್ರಿಯೆಯನ್ನು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.

ಹೀಗೆ ಅನೇಕ ಚರ್ಚೆ ವಿವಾದಗಳನ್ನು ಪಟ್ಟಿ ಮಾಡಬಹುದು. ಆದರೆ ಮುಖ್ಯವಿಚಾರ ಸಾಹಿತ್ಯ ಪ್ರಸಾರ ಹಾಗೂ ಪ್ರಚಾರದ ಉದ್ದೇಶಕ್ಕೆ ಜನಸಮುದಾಯವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದೇ ಆಗಿದೆ. ಕನ್ನಡ ಬರಹಗಾರ ಕೆ. ಸತ್ಯನಾರಾಯಣ ಸಾಹಿತ್ಯ ಪರಿಷತ್ತೂ ಸೇರಿದಂತೆ ಕನ್ನಡಕ್ಕಾಗಿ ಸಾರ್ವಜನಿಕ ಹಣದ ಹತ್ತಾರು ಸಂಸ್ಥೆಗಳು ಇರುವುದು ಅವಶ್ಯವೆ ಎಂದು ಕೇಳಿದ್ದಾರೆ. ಅಕಾಡೆಮಿ ಕನ್ನಡ ಪ್ರಾಧಿಕಾರ, ವಿಶ್ವವಿದ್ಯಾನಿಲಯಗಳು, ಪುಸ್ತಕ ಪ್ರಾಧಿಕಾರ, ಹೀಗೆ ಹಬ್ಬಿರುವ ಸಂಸ್ಥೆಗಳು ಇಂದು ಪರಸ್ಪರ ಪೂರಕವಾಗಿ ಒಂದು ಸರಣಿಯನ್ನು ರೂಪಿಸಿಕೊಂಡು ಸಾರ್ವಜನಿಕ ಹಣ ಹಾಳಾಗದಂತೆ ಕನ್ನಡದ ಸಾಂಸ್ಕೃತಿಕ ಸಂದರ್ಭದಲ್ಲಿ ತೊಡಗಿಕೊಳ್ಳಬೇಕಾಗಿದೆ.

ಬಹುಶಃ ಸರಕಾರ ಖರ್ಚುಮಾಡುವ ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಸಂಸ್ಕೃತಿಗಾಗಿ ಖರ್ಚು ಮಾಡುವ ಹಣವೇನೂ ದೊಡ್ಡ ಮೊತ್ತವಲ್ಲ. ಆದರೂ ವ್ಯಯವಾಗುವ ಸಾರ್ವಜನಿಕ ಹಣದಿಂದ ಕನ್ನಡ ನಾಡು ನುಡಿಗೆ ಹೆಚ್ಚಿನ ಲಾಭವಾಗಬೇಕು. ಯಾವುದಾದರೂ ಅವಶ್ಯಕ, ಸಾಧ್ಯವಾಗುವ ಕೆಲವೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದನ್ನು ಅನುಷ್ಠಾನಗೊಳಿಸಲು ನಮ್ಮ ಶಕ್ತಿಯನ್ನು ಏಕಾಗ್ರತೆಗೊಳಿಸಬೇಕಾದ ಅವಶ್ಯಕತೆಯಿದೆ. ಉದಾಹರಣೆಗೆ ಪ್ರತಿ ಊರಿಗೊಂದು ಉತ್ತಮ ಗ್ರಂಥಾಲಯ. ಅಲ್ಲಿ ಎಲ್ಲಾ ಮುಖ್ಯ ಕನ್ನಡ ಪುಸ್ತಕಗಳೂ ಸಿಗುವ ವ್ಯವಸ್ಥೆ. ನಗರದ ಗ್ರಂಥಾಲಯಗಳಿಗೆ ಸಾಕಷ್ಟು ಕನ್ನಡ ಪುಸ್ತಕಗಳ ಪ್ರತಿಗಳು, ಪತ್ರಿಕೆಗಳು ಲಭ್ಯ ಇರುವ ವ್ಯವಸ್ಥೆ, ಇತ್ಯಾದಿ.

ನೀನಾಸಮ್ ಸಾಧನೆ

ನಮ್ಮ ಕಣ್ಣೆದುರಿಗೇ ನೀನಾಸಂ ನಂತಹ ಒಂದು ಸಂಸ್ಥೆ ಬಹು ಸಣ್ಣ ಬಂಡವಾಳದಲ್ಲಿ ರಾಜ್ಯಾದ್ಯಂತ ಅನೇಕ ಸಾಂಸ್ಕೃತಿಕ, ಸಾಹಿತ್ಯಿಕ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ ಉದಾಹರಣೆಗಳಿವೆ. ತನಗೆ ಮ್ಯಾಗ್‌ಸೆಸೆ ಬಂದ ಮೊತ್ತದಿಂದ, ಕೆ.ವಿ.ಸುಬ್ಬಣ್ಣ ಸ್ಥಾಪಿಸಿದ ನೀನಾಸಂ ಪ್ರತಿಷ್ಠಾನ ರಾಜ್ಯಾದ್ಯಂತ ಅನೇಕ ಸಂಸ್ಕೃತಿ ಶಿಬಿರಗಳನ್ನು ನಡೆಸುತ್ತಾ ಇದೆ. ಬಹು ಸಣ್ಣ ಮೊತ್ತದ ಹಣ, ದೊಡ್ಡ ಪಮಾಣ. ಚಿಕ್ಕಪುಟ್ಟ ಊರು ಹಳ್ಳಿಗಳಲ್ಲೂ ಅದು ಅಧ್ಯಯನ ಶಿಬಿರ ನಡೆಸಿದೆ, ನಡೆಸುತ್ತಾ ಇದೆ.

ಇಂದಿನ ಬದಲಾದ ಸಂದರ್ಭದಲ್ಲಿ ಸಾಂಸ್ಕೃತಿಕ ವಿಕೇಂದ್ರೀಕರಣದ ಜ್ವಲಂತ ಉದಾಹರಣೆಯಂತಿರುವ ನೀನಾಸಂನಂತಹ ಸಂಸ್ಥೆಗಳಿಂದ ಅನೇಕ ವಿದ್ಯಮಾನಗಳನ್ನು ಕಲಿಯುವುದಿದೆ. ಸಾಹಿತ್ಯ ಪರಿಷತ್ತು, ಅಕಾಡೆಮಿ, ಪ್ರಾಧಿಕಾರ, ವಿಶ್ವವಿದ್ಯಾನಿಲಯಗಳು ಇಂದು ಕನ್ನಡ ಸಂಸ್ಕೃತಿಯ ಕಾಯಕಲ್ಪಕ್ಕಾಗಿ ಹತ್ತಿರ ಬರಬೇಕಾಗಿದೆ. ಸಾಂಸ್ಕೃತಿಕ ವಿಕೇಂದ್ರೀಕರಣದ ಅನೇಕ ಸಾಧ್ಯತೆಗಳನ್ನು ತೋರಿಸಿದ ನೀನಾಸಂ ಮೊದಲಾದ ಸಂಸ್ಥೆಗಳು ನಡೆಸಿಕೊಟ್ಟ ಕಾರ್ಯಕ್ರಮಗಳ ಮಾದರಿಗಳಿಂದ ಇನ್ನೂ ಹೊಸರೀತಿಯ ಕಾರ್ಯಕ್ರಮಗಳನ್ನು ನಾವು ರೂಪಿಸಿಕೊಳ್ಳಬೇಕಾಗಿದೆ. ಜಾತ್ರೆಯಂತೆ ಸೇರುವ ಜನರ ಸಾಹಿತ್ಯಿಕ ಉಲ್ಲಾಸವನ್ನು ಉಳಿಸುವ ಚಿಂತನೆಯನ್ನು ಪ್ರೇರೇಪಿಸುವ ಅನೇಕ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಅಂತಹ ಒಮ್ದು ಹೊಸ ಹುಟ್ಟಿನ ನಾಯಕತ್ವ ವಹಿಸುವ ಶಕ್ತಿ ಈಗ ಇರುವ ಸಂಸ್ಥೆಗಳಿಂದ ಬಂದಿತೋ ಅಥವಾ ಜನರು ಅಂತಹದೊಂದು ನಾಯಕತ್ವವನ್ನು ಸಾಂಸ್ಕೃತಿಕ ಚಳವಳಿಯೊಮ್ದರಲ್ಲಿ ಹುಟ್ಟಿಸಿಕೊಳ್ಳಬೇಕೋ ಏನು ಎಂಬುದು ನಮ್ಮೆಲ್ಲರ ಮುಂದಿರುವ ಪ್ರಶ್ನೆ.

-ಫೆಬ್ರವರಿ ೨೦೦೨
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.